Saturday, April 25, 2009

ಜಗತ್ತು ತೀರ ಚಿಕ್ಕದಾಗುತ್ತಿದೆಯೇ

ಮೊನ್ನೆ ಹೀಗೆ ಅಂತರ್ಜಾಲದ ಆರ್ಕುಟ್ ಜಾಲದಲ್ಲಿ ವಿಹರಿಸುತ್ತಿರುವಾಗ ಒಬ್ಬ ಗೆಳೆಯನ ಪರಿಚಯವಾಯಿತು. ನಿತ್ಯ ನಿಗದಿತ ಸಮಯದಲ್ಲಿ ನಮ್ಮ ಭೇಟಿ ಮುಂದುವರಿಯಿತು ಸ್ನೇಹವು ಹವ್ಯಾಸವಾದಾಗ ಇಂತಹ ಚಟುವಟಿಕೆ ಕೆಲವೊಮ್ಮೆ ಮನಸ್ಸಿಗೆ ಮುದನೀಡುತ್ತದೆ. ಮಾತನಾಡಲು ಯಾವುದೇ ಪರಿಧಿಯಾಗಲಿ ಇಲ್ಲ. ಹೀಗೆ ಸ್ನೇಹ ಸೇತು ಬಲಿಯುವ ಮೊದಲು "ಕೇಳಿದೆ ಈಗ ಎಲ್ಲಿದ್ದಿ ಮಾರಾಯ? " ಅವಾಗ ರಾತ್ರಿ ೯ ತಾಸು ಆಗಿರಬಹುದು.. ಆತ ಹೇಳಿದ " ಕ್ಯಾಲಿಪೋರ್ನಿಯದಲ್ಲಿದ್ದೇನೆ " ಅಂತ. ಅದೇ ಇಂತಹ ಉತ್ತರಗಳು ಈವಾಗ ಸಾಮಾನ್ಯವಾಗಿಬಿಟ್ಟಿದೆ. ಜಗತ್ತಿನ ಯಾವುದೇ ತಾಣದಿಂದ ಕ್ಷಣ ಮಾತ್ರದಲ್ಲಿ ಪುಕ್ಕಟೆಯಾದ ಸಂಪರ್ಕ ತಾಣಗಳು ಈಗ ಬೇಕಾದಷ್ಟಿವೆ. ಆವಾಗ ಅನ್ನಿಸಿ ಬಿಡುತ್ತದೆ ಜಗತ್ತು ತೀರ ಚಿಕ್ಕದಾಗುತ್ತಿದೆಯೇ?

ಮೊದಲು ಇಂಥಹ ಸಂಪರ್ಕಗಳು ತೀರ ದುರ್ಲಭವಾಗಿದ್ದವು. ಊರಿಗೆ ಒಂದೇ ಫೋನ್ ಇರುವುದು. ಅದುವೇ ಹಲವರಿಗೆ PP Number ಆಗಿ ಉಪಯೋಗಕ್ಕೆ ಬರುತ್ತಿದ್ದವು. ಕರೆ ಮಾಡುವವರು ಮೊದಲಾಗಿ ಸೂಚನೆ ಕೊಟ್ಟೋ ಅಥವಾ ಪೂರ್ವ ನಿಗದಿಯಂತೆ ಈ ಒಂದು ಫೋನ್ ಮುಖಾಂತರವೇ ಸಂಪರ್ಕಿಸುತ್ತಿದ್ದುದು. ಕರೆ ಮಾಡುವವರ ಕರೆಗಾಗಿ ಫೋನ್ ಮಾಲಕರಿಗೆ ಕರೆ ಕರೆ ಯಾದರೂ ಪರವಾಗಿಲ್ಲ ತಾಸುಗಟ್ಟಲೆ ಕಾದು ಕುಳಿತು ಬೇಕಾದವರನ್ನು ಸಂಪರ್ಕಿಸಿ ಹೋಗುತ್ತಿದ್ದರು. ನಾನು ಹೀಗೆ ಹಲವು ಬಾರಿ ಕಾದು ಕುಳಿತದ್ದು ಇನ್ನು ನೆನಪಿದೆ. ಅಷ್ಟು ದುಬಾರಿ ಹಾಗು ವಿಲಾಸಿಯಾದ ಸಂಪರ್ಕ ಇಂದು ಇಷ್ಟು ಸುಲಭವಾಗಿದೆ. ಬೇಕಾದ ಕ್ಷಣದಲ್ಲಿ ಜಗತ್ತಿನ ಯಾವುದೇ ಮೂಲೆಯಲ್ಲಿರಲಿ ಸಂಪರ್ಕಿಸಬಹುದಾದ ಇಂದಿನ ತಾಂತ್ರಿಕತೆ ಜಗತ್ತನ್ನು ಮುಷ್ಟಿಯೊಳಗೆ ಇರುವಂತೆ ಮಾಡಿದೆ. ಜಗತ್ತು ಮಾತ್ರವೇ ಚಿಕ್ಕದಾಗಿರುವುದು? ಯೋಚಿಸಿ..

ಅಂತರಜಾಲದಲ್ಲಿ ಪರಿಚಯವಾದವರು ಹೀಗೆ ಸ್ವ ಪರಿಚಯ ಹೇಳುತ್ತಾ ಕೊನೆಗೆ ನೀವು ಈಗ ಎಲ್ಲಿದ್ದೀರಾ ಎಂದು ಕೇಳುವಾಗ ಗಾಬರಿಯಾಗುತ್ತದೆ.. ಕೆನಡಾ ಅಥವಾ ಅಮೇರಿಕ ವಿಶ್ವದ ಇನ್ನಿತರ ಯಾವುದೊ ತಮಗೆ ತಿಳಿಯದ ಲೋಕವನ್ನು ಹೇಳಿ ಸಾವಿರಾರು ಮೈಲಿ ದೂರ ಇರುವುದನ್ನು ಜಂಭದಿಂದಲೋ ನೋವಿನಿಂದಲೋ ಹೇಳುವುದನ್ನೇ ಕೇಳಬಹುದು. ಇದು ಇಂದಿನ ತಾಂತ್ರಿಕತೆ ಜಗತ್ತಿನ ವೈಶಾಲ್ಯವನ್ನು ಕಡಿಮೆ ಮಾಡಿದ್ದನ್ನು ತೋರಿಸುತ್ತದೆ.

ಇಷ್ಟೇಯೇ.. ಇಂದು ಹಳ್ಳಿ ಜೀವನ ಆ ಮುಗ್ಧತನ ಎಲ್ಲ ಕಡಿಮೆಯಾಗುತ್ತಾ ಜತೆಗೆ ಹೃದಯ ವೈಶಾಲ್ಯವೂ ಕಡಿಮೆಯಾಗುದನ್ನು ಕಾಣಬಹುದು. ಮಾತಾ ಪಿತೃಗಳ ಸಂಬಂಧ ಮಕ್ಕಳೊಂದಿಗೆ ಸಂಕುಚಿತಗೊಳ್ಳುತ್ತಿದೆ. ಮೊದಲು ಕಣ್ಣೆದುರೇ ತಮ್ಮ ಮಕ್ಕಳ ಎಲ್ಲ ಚಟುವಟಿಕೆಯನ್ನು ಕಾಣುವ ಅವಕಾಶ ಇರುವಾಗ ಈಗ ಪ್ರೈಮರಿ ಶಾಲಾ ಹಂತದಲ್ಲೇ ಮಕ್ಕಳು ತಂದೆ ತಾಯಿಂದ ದೂರವಾಗಿ ಜೀವನ ಪರ್ಯಂತ ಅವರದ್ದೇ ಆದ ಪರಿಧಿಯಲ್ಲಿ ಬೆಳೆಯುವುದನ್ನು ಕಾಣಬಹುದು. ಮನೆಯೊಳಗಿನ ಕೌಟುಂಬಿಕ ಸಂಭಂಧಗಳು ಸಂಕೀರ್ಣವಾಗುತ್ತ ಸಾಗಿ ಕೇವಲ ಸಂಬಂಧಗಳು ಹೇಳಿ ತೋರಿಸುವುದಕ್ಕೆ ಮಾತ್ರ ಸೀಮಿತವಾಗಿದೆ. ಇದು ಜಗತ್ತಿನ ಸಂಕುಚಿತವನ್ನು ಸಾರುತ್ತಿದೆಯೇ?ಇದು ದೈಹಿಕ ಅಥವಾ ರಕ್ತ ಸಂಭಂಧವಾಗಿರಬಹುದು, ಆದರೆ ಮಾನಸಿಕ ಸಂಬಂಧಗಳೂ ಕೂಡ ಸಂಕುಚಿತತೆಯನ್ನೇ ಸಾರುವಾಗ ಜಗತ್ತು ತೀರ ಚಿಕ್ಕದಾಗುತ್ತಿದೆಯೇ ಭ್ರಮಿಸಬಹುದೇ?

ಒಂದು ಗಂಡು ಮಗುವನ್ನು ಹೆತ್ತು ತಮ್ಮ ಸಮಸ್ತ ಕನಸಿನ ಸಾಕಾರ ಮೂರ್ತಿಯೋ ಎಂಬಂತೆ ಮುದ್ದಾಗಿ ಪ್ರೀತಿಯಿಂದ ಸಾಕಿ ಬೆಳೆಸುವ ಮಾತಾಪಿತ್ರ್ ಗಳು ಅವುಗಳ ಲಾಲನೆ ಪಾಲನೆ ಬೆಳವಣಿಗೆಯಲ್ಲಿ ಸುಖ ಸಂತೋಷವನ್ನು ಕಾಣುತ್ತ ಮನೆಯ ಬಹುಮುಖ್ಯ ಅಂಗ ಎಂಬಂತೆ ಜೋಪಾನದಿಂದ ನೋಡಿಕೊಳ್ಳುತ್ತಾರೆ. ಮಗು ಬೆಳೆದು ದೊಡ್ಡ ಆಗುತ್ತದೆ ತಾಯಿಯ ಕನಸನ್ನು ಸಾಕಾರಗೊಳಿಸುವನೋ ಎಂಬ ಭ್ರಮೆಯನ್ನು ಮೂಡಿಸುವಂತೆ ಅವನ ಪ್ರಕೃತಿ ಗೋಚರಿಸಿ ಮತ್ತು ಹಿರಿಯರಿಗೆ ಅಭಿಮಾನ ಪೂರ್ವಕನಾಗಿ ಬೆಳೆಯುತ್ತಾ.. ಅದು ಒಂದು ಹಂತಕ್ಕೆ ಮುಟ್ಟುತ್ತದೆ.. ಒಂದೋ ಆತನಿಗೆ ಬೆಂಗಳೂರು ಅಥವಾ ಮುಂಬಯಿಯಂತಹ ನಗರದಲ್ಲಿ ಉದ್ಯೋಗ ದೊರಕುತ್ತದೆ. ಪ್ರತಿ ತಿಂಗಳೋ ಅಥವಾ ನಿಗದಿತ ಸಮಯದಲ್ಲೋ ಆತನ ಆಗಮನ ಊರಿಗೆ ಆಗುತ್ತದೆ. ಮನೆಯ ಸಮಸ್ತ ಕಾರ್ಯದಲ್ಲೂ ಮುತುವರ್ಜಿ ಕಾಣುತ್ತದೆ. ಇಂಥ ಸಕಲಗುಣ ಸಂಪನ್ನನಿಗೆ ಒಂದು ಮದುವೆ ಆಗದಿದ್ದರೆ ಹೇಗೆ? ಸಮಸ್ತವೂ ಜಾಲಾಡಿ , ಇದರಲ್ಲಿ ತಂದೆಯಾದವನಂತು ತನ್ನ ಮದುವೆಗೂ ಇಷ್ಟು ಆಯ್ಕೆ ಎಂಬ ಗೊಂದಲದಲ್ಲಿ ಸಿಗದೇ ಇದ್ದರು ಮಗನ ಮದುವೆ, ಮುದ್ದಾಗಿ ಸಾಕಿದ್ದೇವೆ ಒಳ್ಳೆ ನೌಕರಿಯಲ್ಲಿದ್ದಾನೆ ಮನೆಗೆ ಬೇಕಾದ ಹಾಗೆ ಇದ್ದ ಚಿನ್ನದಂತ ಹುಡುಗನಿಗೆ ಸಾಮನ್ಯ ಹುಡುಗಿ ಸಾಕೇ ಎಂಬಲ್ಲಿವರೆಗೆ ಚಿಂತಿಸಿ ಒಂದು ಹುಡುಗಿಯೊಂದಿಗೆ ಮದುವೆಯೂ ಆಗಿಬಿಡುತ್ತದೆ.

ಮೊದಲು ಅವನಿಗಾಗಿ ಒಂದು ಕೋಣೆ ಮತ್ತಿತರ ಕೆಲವು ವಸ್ತುಗಳು ಮೀಸಲಾಗಿರುತ್ತವೆ. ಹೆತ್ತವರು ಅದರಲ್ಲಿ ಅವನನ್ನೇ ಕಂಡು ಪ್ರೀತಿಯಿಂದ ಜೋಪಾನ ಮಾಡಿ ಇಡುತ್ತಾರೆ. ನಿತ್ಯ ಶುಭ್ರಗೊಳಿಸಿ ಒಪ್ಪ ಓರಣವಾಗಿ ನೋಡಿಕೊಳ್ಳುತ್ತಾರೆ. ಯಾವುದೊ ಒಂದು ವಸ್ತು ವರ್ಷದಲ್ಲಿ ಕೇವಲ ಮೂರು ಸಲ ಉಪಯೋಗವಾದರೂ ಅವನಿಗೋಸ್ಕರ ಪ್ರತಿ ದಿನ ಎದಿರು ನೋಡುವಂತೆ ಇರುತ್ತದೆ.ಅದೆಲ್ಲ ಮೊದಲಿನಂತೆ ಇದ್ದರೂ ಮದುವೆಯಾಯಿತೋ ಅಲ್ಲಿಂದ ಚಿತ್ರಣವೇ ಬದಲಾಗಿ ಬಿಡುತ್ತದೆ. ಮೊದಲೇ ನೆಂಟನ ಹಾಗೆ ಇದ್ದ ಮಗ, ಅದರ ತೀರ ಮೂರ್ತ ಸ್ವರೂಪವಾಗಿಬಿಡುತ್ತಾನೆ.ಮೊದಲು ನಗರದಿಂದ ಊರಿಗೆ ಹೋಗುವಾಗ ನೇರವಾಗಿ ತನ್ನ ಮನೆಗೆ ಹೋಗುತ್ತಿದ್ದವ ಅಲ್ಲಿಂದ ದೂರವಾದರು ಪರವಾಗಿಲ್ಲ ಹೆಂಡತಿಯೊಂದಿಗೆ ಮಾವನ ಮನೆಗೆ ಹೋಗಿ ಅಲ್ಲಿ ತಂಗಿದ್ದು, ಅವನ ಸರ್ವ ವಸ್ತುಗಳು ಮಾವನ ಮನೆಯಲ್ಲೇ ಶಾಶ್ವತ ಜಾಗವನ್ನು ನಿಗದಿಗೊಳಿಸುವಂತೆ ಮಾಡುತ್ತದೆ. ಆನಂತರ ತನ್ನ ಮನೆಗೆ ತಾಯಿಯಿದ್ದಲ್ಲಿಗೆ ಬರುತ್ತಾನೆ.ಅದೂ ವಿಧೇಯ ಮಗನಂತೆ. ಮಹಾ ತಾಯಿಯದರೋ ಅದೇ ದೊಡ್ಡ ಸೌಭಾಗ್ಯವೆಂಬಂತೆ ಮಗನನ್ನು ಪ್ರೀತಿಯಿಂದ ಕಾಣುತ್ತಲೇ. ಇತ್ತ ಮಗನ ಮನಸ್ಸು ಮಾವನ ಮನೆಯನ್ನೇ ಶಾಶ್ವತ ಎಂಬಂತೆ ತಿಳಿದುಕೊಂಡಿರುವ ವಿಷಯ ತಾಯಿಗೆ ನಗಣ್ಯವಾಗಿಬಿಡುತ್ತದೆ. ಮಗ ಬಂದಿದ್ದ ಎಂಬುದೇ ಪ್ರಾಮುಖ್ಯವಾಗಿಬಿಡುತ್ತದೆ. ಇಂತಹ ಮಹಾ ಮನಸ್ಕ ತಾಯಿಯನ್ನು ನೋಡುವ ಅಥವಾ ಮಾತನಾಡುವ ಆವಶ್ಯಕತೆ ತನ್ನ ಪತ್ನಿಗೆ ಉಂಟು ಮಾಡುವಲ್ಲಿ ಮಗ ತೀರ ವಿಫಲನಾಗಿಬಿಡುತ್ತಾನೆ. ಅವನ ಮಟ್ಟಿಗೆ ಜಗತ್ತು ಚಿಕ್ಕದಾಗಿಬಿಡುವ ಸಂಗತಿ ಅವನಿಗೆ ಗಮನಕ್ಕೆ ಬರುವುದಿಲ್ಲ. ತನ್ನ ಬಾಳಸಂಗತಿಯನ್ನು ಹೆತ್ತು ಸಲಹಿ ಕೊಟ್ಟ ಮಹಾ ತಾಯಿಯನ್ನು ನೋಡುವ ಮನಸ್ಸು ಸ್ವತಹ ಆ ಹೆಣ್ಣಿಗೆ ಬಂದರೆ ಜಗತ್ತಿನ ವೈಶಾಲ್ಯ ಅವಳ ಅರಿವಿಗೆ ಬರುತ್ತದೆ. ಆದರೆ ಅಂತಹ ಮನಸ್ಸು ಹೊಂದದೆ ಇರುವುದು ಯಾವುದರ ಸಂಕೇತ?ಯಾವುದೇ ತಾಯಿ ತಂದೆಯರು ಮಕ್ಕಳಿಂದ ಏನೂ ಬಯಸುವುದಿಲ್ಲ. ಕೇವಲ ಅವರ ಸುಖ ಸಂತೋಷವನ್ನೇ ಕಾಣುತ್ತಾರೆ. ಮಕ್ಕಳ ಮನಸ್ಸು ಒಂದಿಷ್ಟು ನೊಂದುಕೊಂಡರು ಅದರ ಪರಿಹಾರಕ್ಕೆ ತುಡಿಯುತ್ತದೆ. ಸೀರೆ , ಚಿನ್ನ ಅಥವಾ ಇನ್ನಿತರ ಯಾವುದೇ ವಸ್ತುಗಳನ್ನು ತಾಯಿಯಾದವಳು ಬಯಸುವುದಿಲ್ಲ. ಮಗನನ್ನು ಹಸನ್ಮುಖಿಯಾಗಿ ನೋಡುವುದೇ ಆಕೆಯ ಪರಮ ಧ್ಯೇಯವಾಗಿಬಿಡುತ್ತದೆ. ಇದು ಅರ್ಥೈಸುವ ಮನೋಭಾವ ಮಕ್ಕಳಿಗೆ ಇರುವುದೇ ಇಲ್ಲ. ಜಗತ್ತು ಚಿಕ್ಕದಾದರೂ ಮನಸ್ಸು ಚಿಕ್ಕದಾಗುವಾಗ ಹೃದಯ ವೈಶಾಲ್ಯ ಕುಗ್ಗಿದಾಗ ತಾಯಿ ತಂದೆಯರು ಗೌಣವಾಗಿಬಿಡುತ್ತಾರೆ .ಸ್ನೇಹ ಸಂಬಂಧಗಳು ನಮ್ಮ ವರ್ತನೆಯ ಸಂಕೇತ. ಪರರ ಮನಸ್ಸಿನಲ್ಲಿ ತಮ್ಮನ್ನು ಆವಾಹಿಸಿ ನೋಡಿದಾಗ ಮಾತ್ರ ಮುಕ್ತ ಸ್ನೇಹದ ಸಿಂಚನ ಅನುಭವಿಸಲು ಸಾಧ್ಯ. ಇಂದಿನ ಯಾಂತ್ರಿಕ ಬದುಕಿನಲ್ಲಿ ಈ ಸ್ನೇಹ ಸಲುಗೆ ಎಂಬುದು ಒಂದು ಪ್ರದರ್ಶನದ ಭಾವನೆಯಗುತ್ತಿದೆ. ಕೈಹಿಡಿದ ಹೆಣ್ಣು ಇದನ್ನು ತುಸುವಾದರೂ ಗಂಡನ ತಾಯಿಬಗ್ಗೆ ಯೋಚಿಸಿ ಒಂದು ಘಳಿಗೆ ತಾಯಿಯ ಕ್ಷೇಮವನ್ನು ತಿಳಿಯಲು ಸ್ಪಂದಿಸಿದರೆ ಸಾಕು ನಿಜವಾದ ಸ್ವರ್ಗ ಸುಖ ಅನುಭವಿಸಲು ಸಾಧ್ಯ.ಇದು ಏಕ ಪಕ್ಷಿಯವಾದ ಪ್ರಸ್ತಾವನೆ ಯಲ್ಲ ಹಲವು ಅಪವಾದಗಳು ಇರಬಹುದು ಆದರೆ ಅದು ತುಂಬಾ ಕ್ಷೀಣ. ಬಹುಶಃ ಅದು ಜಗತ್ತಿನ ಗಾತ್ರ ಚಿಕ್ಕದಾದ ಲಕ್ಷಣ.

ಹೆಣ್ಣು ಹೆತ್ತ ತಾಯಿ ತಂದೆಯರು ಇದರ ಬಗ್ಗೆ ಆಸಕ್ತಿ ವಹಿಸಿ ತಾವು ಹೆತ್ತ ಮಕ್ಕಳಿಗೆ ಅರುಹಬೇಕು. ಅದು ಅರುಹಿ ಕೇಳದಿದ್ದರೆ ಅದು ಯಾವುದರ ತಪ್ಪು.ಮಾವನ ಮನೆ ಕ್ಷಣಿಕವಾದರೂ ತನ್ನದೆಂಬ ಅಭಿಮಾನ ಅಲ್ಲಿ ಹಿರಿದಾಗುತ್ತದೆ. ಅತ್ತೆ ಮಾವನ ಮನ ಗೆಲ್ಲುವುದಕ್ಕೆ ಯೋಚಿಸುವ ಮಗನ ಮನಸ್ಸು ನಿಸ್ವಾರ್ಥಿ ತಾಯಿ ತಂದೆಯ ಮನಸ್ಸುಗೆಲ್ಲುವ ಯೋಚನೆಯನ್ನೇ ಮಾಡುವುದಿಲ್ಲ. ಇಂದಿನ ತಾಂತ್ರಿಕತೆಯಲ್ಲಿ ಜಗತ್ತಿನ ಯಾವ ಮೂಲೆಯೂ ಕೈಗೆ ಎಟುಕುವಂತೆ ಇದ್ದರು, ತಮ್ಮದೆಂಬ ಮನಸ್ಸಿನ ಮೂಲೆ ಕೈಗೆ ಸಿಗದೇ ದೂರವಾಗುವುದು ಎಂತಹ ದುರಂತ. ಹೃದಯ ವೈಶಾಲ್ಯತೆ ಮೆರೆದು ಜತೆಗೆ ಬಾಳುವವರ ಮನಸ್ಸು ಗೆಲ್ಲುವುದು ಕೇವಲ ಶ್ರೀಮಂತಿಕೆಯ ಕೊಡುಗೆಯಿಂದಲ್ಲ, ತಮ್ಮ ಮನ್ನಸ್ಸಿನ ವೈಶಾಲ್ಯದ ವ್ಯವಹಾರದಿಂದ. ಮನಸ್ಸನ್ನು ಗೆಲ್ಲುವುದಕ್ಕೆ ಬಳುವಳಿಯ ಕೊಡುಗೆಗಿಂತಲೂ ಮಾನಸಿಕ ಕೊಡುಗೆಯೇ ಮುಖ್ಯ. ಒಂದು ಯಂತ್ರದ ಯಾವುದೊ ದೋಷಕ್ಕೆ ಯಾವುದೊ ಸ್ಕ್ರೂ ಬೋಲ್ಟ್ ಗಟ್ಟಿ ಮಾಡುವಾಗ ಅವಶ್ಯ ಇದ್ದ ಭಾಗವನ್ನೇ ಗಟ್ಟಿ ಮಾಡುವುದು ಬಿಟ್ಟು ಇನ್ನಾವುದೋ ಭಾಗಕ್ಕೆ ಮನ ಮಾಡುವುದು ಎಸ್ಟೊಂದು ಗೊಂದಲವನ್ನು ಉಂಟು ಮಾಡುತ್ತದೆ.

ಸಹಜವಾದ ಸರಳ ಬದುಕು ಇಂದಿನ ಈ ಜಗತ್ತಿನಲ್ಲಿ ವಿರಳವಾಗಿ ಮನಸ್ಸು ಮನಸ್ಸನ್ನು ದೂರ ಮಾಡುತ್ತಿದೆ. ಜಗತ್ತು ತೀರ ಚಿಕ್ಕದಾದರೂ ಮನಸ್ಸಿನ ನಡುವಿನ ಅಂತರ ಬೆಳೆಯುತ್ತಾ ಹೋಗುತ್ತಿದೆ.

Friday, April 17, 2009

ನಾನೆಂಬ ವ್ಯಕ್ತಿ


ವ್ಯಕ್ತಿಯೊಬ್ಬನು ಸಮಾಜಕ್ಕೆ ಹೊರೆಯಾದರೆ ಹೇಗೆ? ತನ್ನ ಪರಿಸರ ತನ್ನವರು ತನ್ನಂತೆ ಇರುವವರು ಹೀಗೆ ವಿಭಿನ್ನರೊಳಗೆ ಜೀವಿಸುವಾಗ ಹೊಂದಾಣಿಕೆ ಮಾಡಿಕೊಂಡರೆ ಹೊರೆಯಾಗಲಾರ. ಪರರಿಗೆ ಉಪಕಾರ ಮಾಡಲು ಸಾಮರ್ಥ್ಯವೋ ಮನಸ್ಸೋ ಸ್ವಭಾವವೋ ಇರದು . ಆದರೆ ತೊಂದರೆ ಕೊಡದೆ ಬದುಕಬಹುದಲ್ಲವೇ. ಆತ್ಮ ಮನ್ನಸ್ಸು ಗ್ರಹಿಕೆ ಪ್ರತಿಯೊಬ್ಬನಲ್ಲೂ ಇರುತ್ತದೆ. ತಾನು ನಿರಾಳವಾಗಿ ಬದುಕಬೇಕೆಂದೇ ಎಲ್ಲರ ಬಯಕೆ. ಆದರೆ ಅದು ಸಾಧ್ಯವಾಗುವುದು ತುಂಬ ಕಷ್ಟ. ಪರಹಿತ ವಲ್ಲದಿದ್ದರೂ ಪರ ಅಹಿತವಾಗದೆ ಇದ್ದರೆ ಅ ಮಟ್ಟಿಗೆ ನಿರಾಳವಾಗಿರಬಹುದಲ್ಲವೇ?

ಒಂದು ರಸ್ತೆಯಲ್ಲಿ ಗಮಿಸುವಾಗ ಹಲವರು ನಮ್ಮಂತೆ ಗಮಿಸುವವರು ಇರುತ್ತಾರೆ . ಒಂದು ಹೆಜ್ಜೆ ಒಂದು ಜಾಗದಲ್ಲಿ ಇರಿಸಿದಾಗ ಯೋಚಿಸಿ ಒಂದು ಕ್ಷಣಕ್ಕೆ ಅ ಜಾಗದ ಒಡೆಯ ನೀವು.. ಮರುಕ್ಷಣ ನಿಮ್ಮ ಹಿಂದೆ ಬರುವಾತ ಯಾರೋ ಒಬ್ಬ ಅಪರಿಚಿತ ಅದನ್ನು ಆಕ್ರಮಿಸಿ ಅವನದ್ದಾದ ಒಂದು ಕ್ಷಣ ಅವನಿಗೆ ಸಿಗಬಹುದು. ಹೀಗೆ ಯೋಚಿಸಿದರೆ ಈ ಭೂಮಿ ಮೇಲಿನ ಜೀವನ ಕೂಡ ಅದೇ ಅಲ್ಲವೇ.? ಆಕ್ರಮಣ ಪಲಾಯನ..ನಿಜಕ್ಕೂ ನಗು ಬರುತ್ತಿಲ್ಲವೇ. ಇಂದು ನೀವು ಉಳಕೊಂಡ ನಡೆದಾಡಿದ ಸ್ಥಳ.. ಮುಂದೊಂದು ಸಮಯ ಯಾರದ್ದೋ ಆಗಿರುತ್ತದೆ. ಅದುಯಾರೋ ಆಗಿರಬಹುದು. ಬಸ್ಸಿನಲ್ಲಿ ಪ್ರಯಾಣಿಸುವ ಸಮಯ ಬಂದಾಗ. ಬಸ್ಸಿಗೆ ಕಾದು ಸುಸ್ತಾದಾಗ ಒಂದು ಬಸ್ಸು ಬಂದರೆ ಸಾಕು ಬಸ್ಸು ಬಂದಮೇಲೆ ಹತ್ತಿದರೆ ಸಾಕು ನಂತರ ನಿಲ್ಲಿಕ್ಕೆ ಜಾಗ ಸಿಕ್ಕಿದರೆ ಸಾಕು ಅನಂತರ ಒಂದು ಆಸನ ಅದು ಅರ್ಧವಾದರೂ ಪರವಾಗಿಲ್ಲ ಸಿಕ್ಕಿದ್ರೆ ಸಾಕು ಆಮೇಲೆ... ಸಿಕ್ಕಿದ ಆಸನದಲ್ಲಿ ಕಿಟಿಕಿ ಭಾಗ ಸಿಕ್ಕಿದರೆ ಸಾಕು ಮರುಕ್ಷಣ ಅ ಜಾಗದಲ್ಲಿ ನಾವು ಇರೋದಿಲ್ಲ ಹೀಗಿದ್ದರೂ ಏನು ವ್ಯಾಮೋಹ.? ಇನ್ನೊಬ್ಬನನ್ನು ತಳ್ಳಿ ಬಿಟ್ಟು ಸ್ಥಳವನ್ನು ಆಕ್ರಮಿಸುವ ನಮ್ಮ ಮನಸ್ಸು ಒಂದು ಸಲ ನೋಡಿ.. ಹೇಗಿದೆ? ಇದೆಲ್ಲ ಸಹಜ ಅನಿವಾರ್ಯತೆಗಳು ಅದರೂ ಯೋಚಿಸುವಾಗ ತುಂಬ ಕ್ಷುಲ್ಲಕವಾಗಿ ಕಾಣುತ್ತದೆ.

ಸಾರ್ವಜನಿಕವಾಗಿ ಉಪಯೋಗಿಸುವ ವಸ್ತುಗಳು ಉಧಾಹರಣೆ ರಸ್ತೆಯಲ್ಲಿ ನನೋಬ್ಬ್ಬ ಹೋದರೆ ಸಾಕು .. ಸಕಲೇಶ್ ಪುರ ಘಾಟ್ ರಸ್ತೆಯಲ್ಲಿ ಒಂದು ಸಲ ಕಾರಿನಲ್ಲಿ ಹೋದಾಗ ಘಾಟ್ ಬ್ಲಾಕ್.. ಯಾವುದೊ ಕಾರಣಕ್ಕೆ.. ನಾವು ಏನು ಗ್ರಹಿಸಬಹುದು ಹೇಳಿ.. ನಮ್ಮ ಒಂದು ಕಾರು ಹೋಗುವಸ್ತು ಜಾಗ ಸಿಕ್ಕಿದ್ದರೆ ..ಹೀಗೆ.. ಪ್ರತಿ ಘಟನೆಯಲ್ಲಿ ಯೋಚಿಸುವ ಶಕ್ತಿ ಬೇಕು. ಹಿಂದೆ ಇರುವವನು ಇದ್ದೆ ರಸ್ತೆಯಲ್ಲಿ ಬರಬೇಕು.. ಅವನು ತೀರ ಅಗತ್ಯಗಳನ್ನು ಹೊಂದಿರುತ್ತಾನೆ. ..

ಹೀಗೆ ಪರರಿಗೆ ಉಪಕಾರ ಮಾಡದಿದ್ದರೂ ಪರವಾಗಿಲ್ಲ ತೊಂದರೆ ಯಂತೂ ಮಾಡದೇ ಬದುಕಬಹುದಲ್ಲವೇ. ಪರರಿಗೆ ಚಿಂತೆ ಕೊಡದವನು ನಿಶ್ಚಿಂತ. ಏನೆ ಅದರೂ ಸ್ವ ಲಾಭ ಮಾತ್ರ ಚಿಂತಿಸುವವನು ಇದು ಎಷ್ಟು ಸಮಯ ಸಾಗಬಹುದು ಎಂಬ ಚಿಂತೆಯಲ್ಲೇ ಮುಳುಗಿರುತ್ತಾನೆ.

ನೋವಿನ ಚೀಲಗಳು......

ನೋವು ಎಂಬ ಶಬ್ದವೇ ಅಪ್ಯಾಯಮಾನವಾದದ್ದು ಎಂದೆ ನನ್ನ ಅನಿಸಿಕೆ. ಸುಖ ಸಂತೋಷ ಇಲ್ಲದಿದ್ದ ವ್ಯಕ್ತಿ ಸಿಗಬಹುದು ಆದರೆ ನೋವಿಲ್ಲದ ವ್ಯಕ್ತಿ ಬಹುಶ: ಸಿಗಲಾರ. ಸ್ನೇಹಿತರ ನೋವು ಹಂಚಿಕೊಳ್ಳುವುದೇ ಒಂದು ಹಿತವಾದ ಅನುಭವ. ಒಬ್ಬ ಸ್ನೇಹಿತ ತಮ್ಮಲ್ಲಿ ನೋವು ತೋಡಿಕೊಂಡರೆ ನಾವೇ ಏನೋ ಮಹಾನ್ ವ್ಯಕ್ತಿ ಅದ ಅನುಭವ ಅಲ್ಲವೇ? ಮಾತ್ರವಲ್ಲ ಅದರಿಂದಲೇ ಸ್ನೇಹ ಸಂಬಂಧ ಬಲಗೊಳ್ಳುವುದು. ಹೀಗೆ ನೋವು ಎಂಬ ಭಾವನೆಗೆ ಹಾಗು ಪರರು ನೀಡಿದ ನೋವಿಗೆ ಹೃದಯದಲ್ಲಿ ತುಸುವಾದರೂ ಮೀಸಲಿಡುವ ಜಾಗವೇ ನೋವಿನ ಚೀಲಗಳು ಎಂದು ಹೇಳಬಹುದೇನೋ.

ಒಂದು ಹೊಸ ವ್ಯಕ್ತಿ ಪರಿಚಯವಾದಾಗ ಪರಿಚಯ ಸ್ನೇಹಕ್ಕೆ ತಿರುಗಿದಾಗ ಸ್ನೇಹದ ಜತೆಗೆ ನೋವಿನ ಚೀಲ ತುಂಬಿಕೊಳ್ಳಲು ಶುರುವಾಗಿಬಿಡುತ್ತದೆ. ಈ ನೋವಿನ ಚೀಲ ಎಷ್ಟು ದೊಡ್ಡದಿದೆಯೋ ಅಥವಾ ಗಾತ್ರವನ್ನು ಎಷ್ಟು ಹಿಗ್ಗಿಸಬಹುದೋ ಅಷ್ಟು ನಿಮ್ಮ ಸ್ನೇಹ ವಲಯ ವಿಕಸನ ಗೊಳ್ಳುತ್ತದೆ. ಸಾಂಸಾರಿಕವಾಗಿಯು ಅಸ್ಟೆ. ಜೀವನದಲ್ಲಿ ಪ್ರತಿಶತ ಸುಖವೇ ತುಂಬಿರಲು ಸಾಧ್ಯವೇ?ತಮ್ಮ ಆಪ್ತರಿಗೊಸ್ಕರ ನೋವು ಸಹಿಸಿಕೊಳ್ಳುವುದು ಒಂದು ಹಿತವಾದ ಅನುಭವ. ತಾಯಿಗೆ ತನ್ನ ಮಗುವಿನ ಜತೆಗಿನ ಸಂಬಂಧದ ತಳಹದಿಯೇ ನೋವು. ಎಂಥ ಹಿತಕರ ನೋವನ್ನು ಅನುಭವಿಸಿ ತನ್ನದ್ದಾದ ಮಗುವಿನ ಜನ್ಮಕ್ಕೆ ಕಾರಣಳಾಗುತ್ತಾಳೆ. ಜಗತ್ತಿನ ಆಗು ಹೋಗುಗಳಲ್ಲಿ ಇಂಥಹ ನೋವುಗಳು ಪ್ರಧಾನ ಪತ್ರವಹಿಸುತ್ತವೆಯಲ್ಲವೇ?ಉದರದಲ್ಲಿ ಭ್ರೂಣ ಬೆಳೆದಂತೆ ನೋವಿನ ಚೀಲದಲ್ಲಿ ನೋವಿನ ಪದರ ಕೂಡ ಬೆಳೆಯುತ್ತಾ ಹೋಗುತ್ತದೆ. ಹುಟ್ಟಿದ ಮಗುವಿನಿಂದ ಮುಂದೆ ನೋವೋ ಸುಖವೋ ದೇವರೇ ಬಲ್ಲ.. ಅದರೂ ಈ ನೋವನ್ನು ಎಷ್ಟು ಹಿತವಾಗಿ ಅನುಭವಿಸುತ್ತಾಳೆ. ಈ ಹೆಣ್ಣಿನ ಸ್ಥಾನ ನೋವಿನಲ್ಲಿ ವಿಶೇಷ ಮಹತ್ವ ಪಡೆದಿದೆ. ಹುಟ್ಟಿದ ಮನೆಯಲ್ಲಿ ತಿಳುವಳಿಕೆ ಬರುವವರೆಗೆ ತನ್ನದೇ ಮನೆ ಎಂಬ ಬಾಂಧವ್ಯದ ಸಂವೇದನೆ ಅನುಭವಿಸುತ್ತಾ ಬೆಳೆಯುತ್ತಾಳೆ. ಬೆಳೆಯುತ್ತಿದ್ದಂತೆ ಪರಿಸರ ಪರಿಸ್ಥಿತಿಗೆ ಬದಲಿಸಿಕೊಂಡು ಇನ್ನೊಂದು ಮನೆಯ ಅವಿಭಾಜ್ಯ ಅಂಗವಾಗಿ ಬಿಡುತ್ತಲೇ.. ಅವಳ ಅಂತರಂಗದ ನೋವಿನ ಚೀಲ ಅವಾಗಲೇ ತುಂಬಿ ಕೊಳ್ಳಲು ಶುರುವಾಗಿಬಿಡುತ್ತದೆ. ಗಂಡು ಜೀವಕ್ಕೆ ಈ ನೋವಿನ ಅನುಭವ ತುಂಬ ವಿರಳ. ಇನ್ನೊಂದು ಮನೆಯಲ್ಲಿ ನೋವೋ ನಲಿವೋ ಬೆಳದು ಬರುತ್ತಾಳೆ ತನ್ನ ಇನಿಯನ ನೋವಿಗೆ ಸ್ಪಂದನೆ ತೋರಿಸುವಳೋ ಇಲ್ಲವೊ, ಒಡನಾಡಿಯ ನೋವಿನಲ್ಲಿ ಭಾಗಿಯಾಗುವಳೋ ಇಲ್ಲವೊ ಆದರೆ ತನ್ನ ಸ್ವಂತ ನೋವಿನ ಚೀಲವನ್ನು ತುಂಬಿಸಿಕೊಳ್ಳುತ್ತಾ ಇನ್ನೊಂದು ಪರಿಸರದ ಅಂಗವಾಗಿಬಿಡುತ್ತಾಳೆ.
ಹೆತ್ತ ಮಗು ದೊಡ್ಡದಾಗಿ..ಗಂಡಾದರೆ ಒಂದು ವಿಧ ಹೆಣ್ಣಾದರೆ ಒಂದು ವಿಧ ಎಲ್ಲೊ ಅವಳ ನೋವಿನ ಚೀಲ ಖಾಲಿ ಅಂಥ ಅನಿಸೋದೇ ಇಲ್ಲ. ಹೆತ್ತ ಕರುಳ ಕುಡಿಯ ನೋವಿಂದ ತನ್ನ ಚೀಲವನ್ನು ಭರ್ತಿಗೊಳಿಸಿ ತನ್ನ ನೋವನ್ನು ತನ್ನಲ್ಲೇ ಐಕ್ಯಗೊಳಿಸಿಬಿಡುತ್ತಾಳೆ.

ನಮಗೆ ಏನಿದ್ದರೂ, ವಿಪುಲ ಸಂಪತ್ತಿನ ಅನುಭೋಗಿಗಳಾಗಿ ಜೀವನ ಸವೆಸುತ್ತಿದ್ದರೂ ತಮ್ಮ ಆಂತರ್ಯದ ನೋವು ಹಂಚಿಕೊಳ್ಳಲು ಯಾರು ಸಿಗದಿದ್ದರೆ ಎಲ್ಲವೂ ಗೌಣವಾಗಿಬಿಡುತ್ತದೆ. ಹಂಚಿಕೊಳ್ಳಲಾಗದ ಈ ನೋವಿಂದ ವಿಲಿವಿಲಿ ಒದ್ದಾಡುವ ಮನಸ್ಸಿನ ತುಮುಲ ಏನಿದ್ದರೂ ತುಂಬಿಕೊಂಡ ನೋವಿನ ಚೀಲದ ಸಂವೇದನೆಯಾಗಿಬಿಡುತ್ತದೆ. ನೋವಿನ ಚೀಲದ ಗಾತ್ರ ದೊಡ್ದದಾದಷ್ಟು ವ್ಯಕ್ತಿ ತ್ಯಾಗಮಯಿ ಆಗಿಬಿಡುತ್ತಾನೆ.ಮಹಾನ್ ಚಿಂತಕರ ಚಿಂತನೆಯಲ್ಲಿ ಈ ನೋವಿನ ಚೀಲ ಪ್ರಧಾನ ಪಾತ್ರವಹಿಸಿದೆ.

ತನ್ನ ಒಡನಾಡಿಗಳಿಂದ ನೋವು, ತಾನು ಜನ್ಮ ಕೊಟ್ಟವರಿಂದ ನೋವು, ಸ್ನೇಹಿತರಿಂದ ನೋವು ಹೀಗೆ ನೋವಿನ ಈ ಚೀಲ ಸದಾ ಕ್ರಿಯಾ ಶೀಲವಾಗಿರುತ್ತದೆ.

ನಮ್ಮ ಸಂಸ್ಕೃತಿಯ ರಾಯಭಾರಿಗಳು...





ಇತ್ತೀಚಿಗೆ ಓರ್ವರ ಮನೆಗೆ ಹೋಗಿದ್ದೆ... ಅವರು ಒಂದು ಮಟ್ಟಿಗೆ ಆತ್ಮೀಯರು ಆಗಿದ್ದರು. ಮಾತುಗರ ನಾನು ಹೀಗಾಗಿ ಕೆಲವೊಂದು ಸಲ ಸಹಜವಾಗಿ ಇಂಥವರು ನನಗೆ ಗಂಟು ಬೀಳುವುದುಂಟು. ನಾನು ಯಾಕೆ ಹೀಗೆ ಹೇಳಿದೆನೆಂದು ಮುಂದೆ ನಿಮಗೆ ಒಂದು ಮಟ್ಟಿಗೆ ಊಹಿಸಲೂ ಬಹುದು. ತೀರ ಅತ್ಮಿಯರಲ್ಲದಿದ್ದರೂ ನಮ್ಮಲ್ಲಿ ಸಲುಗೆಗೆ ಕೊರತೆಯಿಲ್ಲ. ಮತ್ತೆ ನನ್ನ ಸ್ವಭಾವವೂ ಅವರಿಗೆ ಇಷ್ಟವೋ ಏನೋ , ಮನೆಗೆ ನಾನು ಹೋದಾಗ ಸರಿ ಸುಮಾರು ರಾತ್ರಿ ೯ ಆಗಿರಬೇಕು. ಮೊದಲೇ ರಸಿಕ ಸ್ವಭಾವದವರು.. ಸಲುಗೆಯಿಂದಲೇ ನನಗೆ ಒಳಗೆ ಕರೆದು ಸೋಫಾ ತೋರಿಸಿದರು. ಯಾವುದೊ ಟಿವಿ ಕಾರ್ಯಕ್ರಮ ನೋಡುತ್ತಿದ್ದರು...

ವಾಚಾಳಿಯಾದ ನನಿಗೂ ಅವರಿಗೂ ಮಾತು ಶುರುವಾಯಿತು.. ಅಗೋಳ ಪರ್ಯಂತ ವಿಚಾರಗಳಿಗೆ ಕೊರತೆ ಎಂಬುದು ಇದೆಯೇ.? ಅದೂ ರಸಿಕರಾಗಿದ್ದಲ್ಲಿ. ಆ ವಿಚಾರ ಇರಲಿ ಜನಪ್ರಿಯ ವಾಹಿನಿಯೊಂದರ ಜನಪ್ರಿಯ ಕಾರ್ಯಕ್ರಮ ನೋಡುತ್ತಿದ್ದ ಇವನ ಟಿವಿ ನೋಡುವ ಪ್ರವೃತ್ತಿ ಯಾಕೋ ವಿಚಿತ್ರ ಅನಿಸಿತು..!!! ಅದು ಕನ್ನಡದ ಜನಪ್ರಿಯ ವಾಹಿನಿ ಸಂಗೀತಕ್ಕಾಗಿ ಹುಟ್ಟಿಕೊಂಡ ಚಾನಲ್ ಅದರ ಹಾಡಿನ ಕಾರ್ಯಕ್ರಮ ಬರ್ತಾ ಇತ್ತು.. ಯಾವುದೊ ಚಿತ್ರ ಗೀತೆ.. ( ಇವರಿಗೆ ಸಂಗೀತ ಕಲೆ ಭಾಷಾಭಿಮಾನ ಇರುವುದು ಚಲನ ಚಿತ್ರದಲ್ಲಿ ಮಾತ್ರ.!!!! ಹಾಗಾಗಿ ಸಂಗೀತ ಸೇವೆ ಎಂದು ಚಿತ್ರ ಗೀತೆ ಪ್ರಸಾರ ಮಾಡ್ತಾರೆ.!!) ಬರ್ತಾ ಇತ್ತು.. ಈ ಪುಣ್ಯಾತ್ಮ ಚಿತ್ರ ಗೀತೆ ಹಾಕಿ ! ಗೀತೆ ಶುರುವಾದ ತತ್ಕ್ಷಣ ಬದಲಾಯಿಸುತ್ತಿದ್ದ.. ಉದ್ಘೋಷಕಿ ಬಂದು ಪ್ರೆಕ್ಷಕರಲ್ಲ್ಲಫೋನ್ ಮೂಲಕ ಅದೂ ಇದೂ ಹರಟುತ್ತ ಇದ್ದ ಹಾಗೆ ಪುನ ಅದೇ ಚಾನಲ್ ಇಡುತ್ತಿದ್ದ..!!! ಮಾಮೂಲಿನಂತೆ ಜಾಹಿರಾತು ಹಾಡು ಬರುತ್ತಿದ್ದ ಹಾಗೆ ಚಾನಲ್ ಬದಲಾವಣೆ..ನನಗೆ ಸೋಜಿಗವಾಯಿತು ಕೆ .. ಯಾಕೆ ಹೀಗೆ. ನಿಜಕ್ಕೂ ಆಶ್ಚರ್ಯ.. ಯಾಕಪ್ಪ ಹೀಗೆ..? ಹೆಚ್ಚಾಗಿ ಸಿನಿಮ ಹಾಡು ನೋಡುವುದಕ್ಕಾಗಿಯೇ ಕುಳಿತು ಇನ್ನಿತರ ದೃಶ್ಯಗಳು ಬಂದಾಗ ಚಾನಲ್ ಬದಲಾಯಿಸುವುದನ್ನು ನೋಡಿದ್ದೇನೆ .. ಇದು ವಿಚಿತ್ರ ಕಂಡಿತುಕೇಳಿಬಿಟ್ಟೆ .. ಯಾಕೆ ಹೀಗೆ.
ಅವನೆಂದ ಉತ್ತರ ಕೇಳಿ ತುಸು ಯೋಚಿಸುವಂತಾಯಿತು. ಹೇಳಿದ ವಿಚಾರ ಇಷ್ಟೇ. ಅ ಕಾರ್ಯಕ್ರಮದ ನಿರೂಪಕಿ, ವೀಕ್ಷಕರೊಂದಿಗೆ ದೂರವಾಣಿಯಲ್ಲಿ ಹರಟುವ ಆಕೆ. ಬಿಗಿಯಾದ ಟೀ ಶರ್ಟು ಹಾಕಿ ತನ್ನ ಸಂಪತ್ತೆಲ್ಲವನ್ನೂ ಧಾರೆ ಎರೆದು.. ದೂರ ವಾಣಿಯಲ್ಲಿ ಹರಟುವುದನ್ನು ಪುಣ್ಯಾತ್ಮ ಬಿಟ್ಟ ಕಣ್ಣಿಂದ ನೋಡುತಿದ್ದ.. !!!! ಮತ್ತೂ ಹೇಳಿದ ಈ ಚಾನಲ್ ಗಳ ಇಂಥ ಕಾರ್ಯಕ್ರಮದಲ್ಲಿ ಇದನ್ನು ನೋಡುವುದೇ ಒಂದು ಖುಷಿ.. ಹೇಗಿದೆ? ಅವನು ಹೇಳಿದ್ದು ತುಸು ನನಗೂ ನಿಜ ಅನ್ನಿಸಿತು ನೋಡಿ ಆತ ನೋಡುತ್ತಿದ್ದ
ಅವಳ ಮೈ ಬಿಗಿಯಾದ ಉಡುಗೆ ನೋಡಿ ಎಷ್ಟು ಜನ ಪ್ರೇಕ್ಷಕರು ರಸಿಕರಾಗಬಹುದು? ಇದು ನಮ್ಮ ನಮ್ಮ ಸಂಸ್ಕೃತಿ. ಅರ್ಧ ಗಂಟೆ ಅವಧಿಯಲ್ಲಿ ಆ ಕಾರ್ಯಕ್ರಮ ಮುಗಿಯಿತು... ಪುನಃ ಇನ್ನೊಂದು ಅದೇ ಬಗೆಯ ಇನ್ನೊಂದು ಕಾರ್ಯಕ್ರಮ ಈಗ ನಿರೂಪಕಿ ಬೇರೆ.. ನಿರೂಪಕಿಯನ್ನು ಮಾತ್ರ ನೋಡುವಂತ ಕಾರ್ಯಕ್ರಮ ... ಹಾಗಿತ್ತು ಅವಳ ಉಡುಗೆ.. ಅಲ್ಲ ಡ್ರೆಸ್..






ಇವು ಎರಡೂ ಕಾರ್ಯಕ್ರಮಗಳು ಒಂದರ ಹಿಂದೆ ಒಂದು ಪ್ರಸಾರವದವುಗಳು.ನೋಡಿದಾಗ ನಮ್ಮ ಸಂಸ್ಕೃತಿಯಸಂಸ್ಕೃತಿಯನ್ನು ಬಿಂಬಿಸುವಂತಹ ಕಾರ್ಯಕ್ರಮಗಳೇ ಅಲ್ಲವೇ ನಮ್ಮ ಸಂಸ್ಕೃತಿಯ ರಾಯಭಾರಿಗಳು ಮಾಡುವುದು? ಹಾಗಿದ್ದರೆ ಇದೆ ನಮ್ಮ ಸಂಸ್ಕೃತಿಯೆಂದು ನಾವು ತೃಪ್ತಿಪಡಬೇಕು.
ರಾಯಭಾರಿಗಳಾದ ಇವರುಗಳ ಬೌದ್ದಿಕ ದಿವಾಳಿತನಕ್ಕೆ ಏನು ಹೇಳಲಿ... ಚಲನ ಚಿತ್ರ ಗೀತೆಯ ಮೂಲಕ ಸಂಗೀತ ಕಲಾಸೇವೆಯನ್ನು ಮಾಡುವ ಮಹಾನ್ ಕಲಾ ಪೋಷಕರ ಕಲಾಸೇವೆ ಈ ಮಟ್ಟಕ್ಕೆ ಇಳಿಯಿತೇ.. ಇದರಲ್ಲಿ ದುಡ್ಡಿನ ವಾಸನೆ ಅಲ್ಲದೆ ಬೇರೆ ಏನಾದರೂ ಕಾಣಬಹುದೇ?ಇಂತಿಂತಹ ಹೊತ್ತಿನಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಿಗೆ ಹೀಗೆ ಉಡುಗೆ ತೊಡುಗೆ ಗಳಿರಬೇಕು ಎಂಬ ಅನಧಿಕೃತ ನಿಯಮವನ್ನು ಅಳವಡಿಸಿಕೊಂಡ ಹಾಗೆ ಈ ಕಾರ್ಯಕ್ರಮಗಳಿರುತ್ತವೆ. ಇಂತಹ ಆಕರ್ಷಣೆ ಆ ಕಾರ್ಯಕ್ರಮಗಳಿಗಿರಬೇಕು, ಅದನ್ನು ಪ್ರಪಂಚದ ೮ ನೇ ಅದ್ಭುತ ನೋಡುತ್ತೆವೋ ಎಂಬ ಭಾವದಲ್ಲಿ ನೋಡುವ ಪ್ರೇಕ್ಷಕರು.ಇನ್ನು ಈ ನಿರೂಪಕಿಯರ ಭಾಷಾಪ್ರೇಮವೋ, ಅತ್ಯದ್ಭುತ. ಕನ್ನಡದ ನಿತ್ಯ ಶ್ರಾದ್ದ ಮಾಡುವ ಇದಕ್ಕೆ ಅಂತ್ಯ ಇಲ್ಲವೇ.. ಮಾತುಕತೆ ಶುರು ಆಗೋದೇ.. " ನೀವು ಯಾವ ಫಿಲ್ಮ್ ನೋಡ್ತೀರ? ಮನೆಯಲ್ಲಿ ಯಾವ

Language use ಮಾಡ್ತಿರ.. ಮಮ್ಮಿ ಏನ್ ಮಾಡ್ತಾರೆ ಡಾಡಿ ಎಲ್ಲಿ ವರ್ಕ್ ಮಾಡ್ತಾರೆ.? " ಅಪ್ಪಿತಪ್ಪಿ ಕೆಲವೊಮ್ಮೆ ತಮ್ಮ ಭಾಷಾಜ್ಞಾನ ಪ್ರದರ್ಶನ ಮಾಡುವ ಇವರು ಕನ್ನಡ ಪ್ರೇಮಕ್ಕಾಗಿ ಅದ್ಬುತ ಪದ ಪ್ರಯೋಗ ಮಾಡುತ್ತಾರೆ.. ಅವಾಗ ಪ್ರಾಣಾಕ್ಷರಗಳ ಪ್ರಾಣವೇ ಹೋಗಿರುತ್ತದೆ.. ಇದು ಹೆಚ್ಚಿನ ಎಲ್ಲ ಕನ್ನಡ ವಾಹಿನಿಗಳಲ್ಲಿ ಕಂಡುಬರುವ ಸಣ್ಣದಾಗಿ ಕಾಣುವ ದೊಡ್ಡ ಸಮಸ್ಯೆ.ಮನರಂಜನೆ ಹೆಸರಲ್ಲಿ ಮಾಡುವುದೇನನ್ನು? ನಮ್ಮ ಸಂಸ್ಕೃತಿಯ ಬಗ್ಗೆ ತೀರ ಕೀಳಾಗಿ ವ್ಯವಹರಿಸುವ ಇವರಿಗೆ ಭಾಷಾ ಪ್ರೇಮವಾಗಲಿ.. ಅದು ಏನೆಂದು ತಿಳಿದಿದಿಯೇ?

ಶ್ರೀ ಬಿ ವಿ ಕಾರಂತರು ಯಕ್ಷಗಾನ ಸರಣಿಯನ್ನು ಟಿವಿ ಮಾದ್ಯಮದಲ್ಲಿ ತಂದರು. ರಾಜ್ಯ ನೆಲದ ಸಂಸ್ಕೃತಿಯನ್ನು ಬಿಂಬಿಸುವ ಕನ್ನಡ ಭಾಷಾಶುದ್ದಿಯಾಗಲಿ, ಪುರಾಣಿಕ ಪ್ರಜ್ಞೆಯಾಗಲಿ, ನಮ್ಮ ಸಂಸ್ಕೃತಿಯ ಜೀವಾಳ ಏನು ಅದನ್ನು ನಿರೂಪಿಸುವ ಇ ಯಕ್ಷಗಾನ ಸರಣಿ ಪೂರ್ಣವಾಗಿ ಪ್ರಸಾರವಾಗಲಿಲ್ಲ.. ಕಾರಂತರು ಕಂಬನಿ ತುಂಬಿ ತೀವ್ರ ವಿಷಾದದಿಂದ ಇದನ್ನು ನಿಲ್ಲಿಸಿದ ಕಾರಣವೇನು? ಜಾಹಿರಾತು ಪ್ರಾಯೋಜಕರ ಕೊರತೆ.. ಆದರೆ ಇಂಥ ಒಂದು ಸಂಸ್ಕೃತಿಯ ಅವಹೇಳನಕ್ಕೆ ಇವರಿಗೆ ಪ್ರಾಯೋಜಕರ ಕೊರತೆ ಇಲ್ಲವಾಗಿದ್ದು ಕಾಲದ ಮಹಿಮೆ ಅಲ್ಲದೆ ಮತ್ತೇನು? ಇಲ್ಲವಾದರೆ ಕಾರ್ಯಕ್ರಮ ನಿರೂಪಕಿಯರ ಈ ಬಗೆಯ ಪ್ರದರ್ಶನಕ್ಕೆ ಕಾರಣವಾದರೂ ಏನು? ತಡ ರಾತ್ರಿ ವರೆಗೂ ಪ್ರಸಾರವಾಗುವ ಇಂಥ ಕಾರ್ಯಕ್ರಮಗಳಿಗೆ ಹೀಗೆ ಇರಬೇಕೆ? ಸತ್ವ ಹೀನ ಕಾರ್ಯಕ್ರಮವನ್ನು ಜನಪ್ರಿಯಗೊಳಿಸಿ ಇಂಥ ಟಿವಿ ವಾಹಿನಿಗಳು ಹಣ ಮಾಡುವ ದಂಧೆಗೆ ಏನು ಹೇಳಬಹುದು. ತುಸು ಗಮನಿಸಿ ಇಲ್ಲಿರುವರ ಎಲ್ಲ ಫೋಟೋಗಳಲ್ಲಿ ನೋಡಿದಾಗ ಈ ನಿರೂಪಕಿಯರ ಬಗ್ಗೆ ಒಳ್ಳೆ ಭಾವನೆ ಮನಸ್ಸಿನಲ್ಲಿ ಹುಟ್ಟಬಹುದೇ? ಮನಸಿನ ಚಿಂತನೆಗೆ ಗ್ರಾಸವನ್ನು ಒದಗಿಸಬಲ್ಲ ಕಾರ್ಯಕ್ರಮಗಳು ಇವರಿಗೆ ಬೇಡ.. ಪ್ರೇಕ್ಷಕರನ್ನು ಅವರ ಮನಸನ್ನು ಭಾವನೆಗಳನ್ನು ಹುಚ್ಚೆಬ್ಬಿಸಿ ಜೇಬು ತುಂಬಿಸಿಕೊಳ್ಳುವ ಇವರಿಗೆ ಬುದ್ದಿ ಬರುವುದು ಯಾವಾಗ?

ಕನ್ನಡದ ಗಂಡು ಕಲೆ ಎಂದು ಕರೆಸಲ್ಪಡುವ ಯಕ್ಷಗಾನದಂತಹ ಶ್ರೀಮಂತ ಕಲೆಗೆ ಇಂದು ಯಾವ ಸ್ಥಿತಿ ಬಂದೊದಗಿದೆ. ಯಕ್ಷಗಾನ ಅಡಿಸುವವನು ದುಡ್ಡು ಮಾಡುವ ಉದ್ದೇಶದಿಂದ ಅಡಿಸುತ್ತಾನೆ ಎಂದು ಹೇಳುವ ಕಾಲ ಎಂದೋ ಕಳೆದು ಹೋಯಿತು.. ಏನೋ ಹುಚ್ಚು ಎಂದು ಹೇಳುವ ಕಾಲ ಈಗಯಕ್ಷಗಾನ ಇದ್ದರೆ ಕಲಾವಿದರೇ ಪ್ರೇಕ್ಷಕರಾಗಿ ಉಳಿವಂಥಹ ಸಂದಿಗ್ದ ಸ್ಥಿತಿಯಲ್ಲಿ ಯಕ್ಷಗಾನವಿದೆ. ಭರತನಾಟ್ಯ ಶಾಸ್ತ್ರೀಯ ಸಂಗೀತ ಇವರಿಗೆ ಬೇಡ. ಚಡ್ಡಿ ಹಾಕಿ ಮೈ ಕುಲುಕಿಸುವ ಕಾರ್ಯಕ್ರಮಗಳೇ ಬೇಕು.. ಅದಕ್ಕಾಗಿ ತಮ್ಮ ಕಂದಮ್ಮಗಳನ್ನು ಎಷ್ಟು ಖರ್ಚು ಮಾಡಿಯಾದರೂ ತರಬೇತಿ ಕೊಡಿಸುತ್ತಾರೆ. ಅದಕ್ಕಾಗಿ ರಿಯಾಲಿಟಿ ಶೋ ಎಂಬ ಅನರ್ಥ ಪರಂಪರೆ ಬೇರೆ.. ಸಂಗೀತ ಎಂದರೆ..ಅದು ಚಲನ ಚಿತ್ರ ಗೀತೆ ಮಾತ್ರ ..ಭಾಷಾಭಿಮಾನ ಇರುವುದು ಕನ್ನಡ ಚಲನ ಚಿತ್ರ ನೋಡಿದರೆ ಮಾತ್ರ ಎಂಬ ಹಾಗಿದೆ.ನಮ್ಮ ಸಾಂಸ್ಕೃತಿಕ ದೀವಾಳಿತನದ ದ್ಯೋತಕವೇ ಈಗಿನ ಟಿವಿ ಚಾನಲ್ ಗಳು ? ಅಲ್ಲ ರಾಯಭಾರಿಗಳೇ?

ವೀರ ಯೋಧ


ಆಸರೆಯ ಬೇಡಿ ವೀರ ಯೋಧನಲ್ಲಿ
ಕೈಸೆರೆ ನೀಗೆಂದ ಪಶುವಿನಲ್ಲಿ
ನಾನಿಹೆನು ಕಂಕಣಬದ್ದನಾಗಿ
ದೀಕ್ಷೆಯಿದು ಎನ್ನ ಪ್ರಾಣವು ನಿನ್ನ ರಕ್ಷೆಗಾಗಿ
ಅಭಯ ನೀಡಿಹನು ಈ ಜೀವ ಮುಡಿಪಿನ್ನು
ವೀರ ಕುವರನ ವಚನವ ನೋಡು ನೀನು
ಕಣ್ಣಲ್ಲಿ ಕಣ್ಣಾಗಿ ಮಣ್ಣಲ್ಲಿ ಮಣ್ಣಾಗಿ
ಸಾರ್ಥಕವು ಈ ಬದುಕು ನಿನ್ನ ಸೇವೆಯಲ್ಲಿ..
ಮನದೊಡಲ ಭಾವನೆಗೆ ಪಶುವು ವಶವಾಗಿ
ತನ್ನೊಡಲ ಕಂಬನಿಯ ನೀಡಿ ಹರಸಿತು
ಮತ್ತೊಮ್ಮೆ ಜನಿಸಯ್ಯ ವೀರ ಕುವರ
ಧನ್ಯವಾಗಲಿ ಬದುಕು ನಿನ್ನ ರಕ್ಷೆಯಲ್ಲಿ

ಹೆಣ್ಣಾಗಿ ಭ್ರೂಣ





ವಿಕ್ರಯಕ್ಕಿವೆ ಹೆಣ್ಣು ಭ್ರೂಣಗಳು
ಕ್ರಯಿಸುವವರು ಇರುವರೇ ಸಕ್ರಿಯವಾಗಿ
ಕ್ರಯ ವಿಕ್ರಯಗಳ ನಡುವೆ ಚೌಕಾಶಿಯಾಗಿ
ಅಕ್ಕರೆಯ ಭ್ರೂಣದ ಒಡೆಯರಾಗಿ.



ಆ ಯುಗವು ಸಂದಿತು ಹೊಸ ಯುಗವು ಉದಿಸಿತು
ಯುಗ ಯುಗದ ಕಥೆಯು ಬದಲಾಯಿತು.
ಭ್ರೂಣ ಶೋಧನೆಯ ಹೊಸಹಾದಿ ತುಳಿದಿರಲು
ಬೇಡಿಕೆಯ ಮಜಲುಗಳು ತೋರಿಬರಲು.

ನಾಶ ಗೈದಿರಲು ಅಂದು ಪಳೆಯುಳಿಕೆಗಳು ಇಂದು
ವೇಷ ಧರಿಸಬೇಕಿನ್ನು ಜೀವ ಬೆರಳೆಣಿಕೆಗಿನ್ನು
ಹೆಣ್ಣು ಹೊನ್ನು ಮಣ್ಣು ಈ ಮೂರರಲಿ
ಉಳಿದಿರುವುದೇ ಎರಡು ಅಯ್ಕೆಗಿನ್ನು

ಹೆಣ್ಣು ಜನ್ಮವು ಸಾಕು ಎಂದಳಾ ಹೆಣ್ಣು
ಸಾಕುವೆವು ಎಂದರೂ ಎಲ್ಲಿ ಹೆಣ್ಣು ?
ಭ್ರೂಣಕ್ಕೆ ಬರಗಾಲ ಬಂತೆ ಈಗ
ಈ ಕಾಲ ಕಳೆಯಲಿ ಹರಸಿ ಬೇಗ.

ನನ್ನ ವಿದ್ಯಾರ್ಜನೆಯ ಒಂದು ಸೋಪಾನ














ನನ್ನ ಬದುಕಿನ ಮಹತ್ವದ ಹಲವು ವರ್ಷಗಳನ್ನು ಈ ಸರಕಾರಿ ಪ್ರೌಢ ಶಾಲೆಯಲ್ಲಿ ಕಳೆದಿದ್ದೇನೆ. ಅ ಸುಂದರ ಬಾಲ್ಯದ ಸವಿನೆನಪುಗಳ ಮಜಲುಗಳು ಸ್ಮರಣೆಯಲ್ಲಿ ಮೈಮನ ಪುಳಕಗೊಳ್ಳುವುದು. ಪ್ರತಿಯೋರ್ವನಿಗೂ ತಾನು ವಿದ್ಯಾರ್ಜನೆ ಮಾಡಿದ ಶಾಲೆ ಸ್ವಯಂ ಅಭಿಮಾನ ಉಳ್ಳದ್ದೆ ಆಗಿರುತ್ತದೆ. ಯಾವುದೇ ವಿದ್ಯಾರ್ಥಿಗೂ ಇದು ಮಹತ್ವದ ಹಂತ. ಹಾಗಾಗಿ ಈ ಪ್ರೀತಿ ಅಭಿಮಾನ ಎಂಬುದು ವ್ಯಕ್ತಿಗತವಾದ ಸಾಧನೆಯ ಮಾನದಂಡಕ್ಕೆ ಅನುಗುಣವಾಗಿಲ್ಲ.ಅಂದರೆ ಎಷ್ಟೋ ಜನ ಅಲ್ಲಿ ಕಲಿತಿರಬಹುದು. ಮತ್ತು ಕಲಿತಂಥ ವಿದ್ಯೆ ಕೆಲವರಿಗೆ ಎಷ್ಟು ಏನು ಎಂಬುದು ಮುಖ್ಯವಾಗಿರುವುದಿಲ್ಲ. ಬುದ್ದಿವಂತ ವಿದ್ಯಾರ್ಥಿ, ಉತ್ತಮವಾಗಿ ತೆರ್ಗದೆಯದ ವಿದ್ಯಾರ್ಥಿ, ಅಥವಾ ಅಲ್ಲಿಯ ವಿದ್ಯಾರ್ಜನೆಯಲ್ಲಿ ಯಶಸ್ಸು ಅಪಯಶಸ್ಸು ಕಂಡಿರಲಿ, ಈ ಅಭಿಮಾನ ಎಂಬುದು ಇದ್ದೆ ಇರುತ್ತದೆ. ಯಾಕೆಂದರೆ ಅಲ್ಲಿ ಕಳೆದ ದಿನಗಳು ಹಾಗಿರುತ್ತದೆ. ನನ್ನ ಮಟ್ಟಿಗೆ ಮಾತ್ರ ನಾನು ಕಲಿತದ್ದು ಎಷ್ಟು ಎಂಬುದರ ಬಗ್ಗೆ ಯೋಚಿಸುವುದಿಲ್ಲ. ಇನ್ನೊ ಹಸಿ ಹಸಿಯಾಗಿ ನೆನಪಿದೆ.

ಮಂಗಳೂರಿನ ಶಾಲೆಯಿಂದ ಪ್ರಾಥಮಿಕ ಹಂತ ಮುಗಿಸಿ ಕಾರಣಾಂತರದಿಂದ ಈ ಶಾಲೆಗೆ ಬಂದು ಸೇರಿದ್ದು. ಆವಾಗ ಶ್ರೀ ಅಚ್ಚುತ ಶೆಣೈ ಮುಖ್ಯ ಅಧ್ಯಾಪಕರಾಗಿದ್ದರು. ಕರ್ನಾಟಕದಿಂದ ಬಂದು ಇಲ್ಲಿ ಸೇರುವ ವಿದ್ಯಾರ್ಥಿಗಳಿಗೆ ಒಂದು ಪ್ರವೇಶ ಪರೀಕ್ಷೆ ಬರೆಯುವ ಅವಶ್ಯಕತೆ ಇತ್ತು. ಹಾಗಾಗಿ ಆರನೇ ತರಗತಿಗೆ ಸೇರಬೇಕಾದರೆ ನಾನು ಕೂಡ ಪರೀಕ್ಷೆ ಬರೆಯುವ ಹಾಗಾಯಿತು. ಆವಾಗ ಕೆಲವು ವರ್ಷಗಳ ಶಾಲಾ ಜೀವನದಿಂದ ದೂರವಿದ್ದವನು ನಾನು. ಇದಕ್ಕೆ ಹಲವು ಕಾರಣಗಳಿದ್ದುವು.ಆರನೇ ತರಗತಿ ಅರ್ಧದಲ್ಲೇ ನಿಲ್ಲಿಸಿ ಕೆಲವು ಸಮಯ ಕಳೆದು ನಂತರ ಇಲ್ಲಿ ಶಾಲೆಗೆ ಸೇರಿದವನು.ಹಾಗಾಗಿ ಪರೀಕ್ಷೆ ಬರೆಯಬೇಕಾದರೆ ತುಂಬ ಕಷ್ಟ ಪಟ್ಟೆ. ಹೇಗೂ ಕಷ್ಟದಲ್ಲಿ ಪಾಸು ಅದೇ ಅಂತ ಹೇಳುವುದಕ್ಕಿಂತ ನನ್ನನ್ನು ಪಾಸು ಮಾಡಿದರು ಅಂಥ ಹೇಳಿದರೆನೆ ಸೂಕ್ತ. ಹಾಗಿತ್ತು ನನ್ನ ಸ್ಥಿತಿ. ಅವಾಗ ಅಚ್ಚ್ಯುತ ಶೆಣೈ ಒಂದು ಮಾತು ಹೇಳಿದರು " ಒಳ್ಳೆ ಕಲೀಬೇಕು. SSLC ಯಲ್ಲಿ first class ತೆಗಿಬೇಕು." ಮುಂತಾಗಿ ಹುರಿದುಂಬಿಸಿ ಸೇರಿಸಿಕೊಂಡಿದ್ದರು. ತೀರ ದಡ್ಡನಾಗಿದ್ದವನು ನಾನು,SSLC ಯಲ್ಲಿ first class ಮಾತ್ರವಲ್ಲ ಎಲ್ಲದರಲ್ಲೂ 75% ಅಂಕಗಳೊಂದಿಗೆ ತೇರ್ಗಡೆಯಾಗಬೇಕಾದರೆ ಅದಕ್ಕೆ ಕಾರಣ ನಾನಲ್ಲ ಎಂಬ ಪ್ರಜ್ಞೆ ಈಗಲೂ ಇದೆ. ಅಂದಿನ ಶಿಕ್ಷಕ ಶಿಕ್ಷಕಿಯರು.. ಆ ವಾತವರಣ ಉಲ್ಲಸಿತವಾಗಿತ್ತು. ಎಲ್ಲ ಶಿಕ್ಷಕ ವ್ರಿಂದವೂ ನನ್ನಲ್ಲಿ ಸ್ನೇಹ ಸಲುಗೆಯಿಂದಲೇ ಇದ್ದವರು. ಎಲ್ಲರೂ ಆತ್ಮೀಯವಾಗಿ ವ್ಯವರಿಸಿದ್ದು ಆವಾಗಿನ ದಿನಗಳು ಬಹುಶ: ಈಗಿನ ವಿದ್ಯಾರ್ಥಿಗಳಿಗೆ ಸಿಗಲಾರದೇನೋ ಅಂದುಕೊಂಡಿದ್ದೇನೆ.


ಇಂತಹ ಶಾಲೆ ಈಗ ಸ್ವರ್ಣ ಮಹೋತ್ಸವದ ಸಂಭ್ರಮವನ್ನು ಆಚರಿಸುತ್ತಿದೆ. ನಾನು ವಿದ್ಯಾರ್ಥಿಯಾಗಿದ್ದಾಗ ರಜತ ಮಹೋತ್ಸವವನ್ನು ಆಚರಿಸಿತ್ತು.. ಅದಂತೂ ಸಂಭ್ರದ ಮೇರು ಕ್ಷಣಗಳು. ರಜತ ಸ್ವರ್ಣ ಎರಡನ್ನೂ ಸವಿಯುವ ಸುಯೋಗ ನಮ್ಮದಾಗಲಿದೆ.

Thursday, April 16, 2009

ಹೀಗೊಂದು ಮರೆಯಲಾಗದ ಅನುಭವ

ಹೀಗೊಂದು ಮರೆಯಲಾಗದ ಅನುಭವ

ಇದೊಂದು ನಂಬಲಾಗದ ಘಟನೆ. ಬಹುಷಃ ತರ್ಕಗಳು ಏನಿದ್ದರೂ ನಾನು ನನ್ನ ಅನುಭವವನ್ನು ಮಾತ್ರವೇ ಹೇಳುವುದು. ಇದು ಪ್ರಚಾರಕ್ಕಾಗಿ ಅಗಲಿ ಅಥವಾ ಬೇರೆ ಸ್ವ ಸಾಧನೆಗಾಗಿ ಅಗಲಿ ಹೇಳಿಕೊಳ್ಳುವುದಲ್ಲ. ನಾನು ಸ್ವತಹ ಅನುಭವಿಸಿ ಮನಸ್ಸಿನ ಗೊಂದಲವನ್ನಷ್ಟೇ ಇಲ್ಲಿ ವಿವರಿಸುತ್ತ ಇದ್ದೇನೆ.

ಕಳೆದ ಮಂಗಳವಾರ ಅಂದರೆ ದಿನಾಂಕ ೧೭-೦೨-೨೦೦೯ ರಂದು ನಾನು ಮಂಗಳೂರಿನ ಬಂಧುಗಳ ಮನೆಗೆ ಚಂಡಿಕಾ ಹವನದ ನಿಮಿತ್ತ ಹೋಗಿ ಬರುವ ಸಂದರ್ಭ.ನಾನು ಹಾಗು ನನ್ನ ಸಂಬಂಧಿಗಳು ಒಟ್ಟು ನಾಲ್ಕು ಮಂದಿ ಮಾರುತಿ ಕಾರ್ ನಲ್ಲಿ ಬೆಂಗಳೂರು ಕಡೆಗೆ ಬರುತ್ತಾ ಇದ್ದೆವು. ಹೋಗುವಾಗ ಶಿರಾಡಿ ಘಾಟ್ ಮೂಲಕ ಹೋದವರು ಬರುವಾಗಲೂ ಅಲ್ಲೇ ಬರೋಣವೆಂದು ನೆಲ್ಯಾಡಿ ಕೊಕ್ಕಡ ಕ್ರಾಸ್ ತನಕ ಬಂದಾಗ ಘಟ ರಸ್ತೆ ಸಂಪೂರ್ಣ ಬ್ಲಾಕ್ ಆಗಿ ವಾಹನಗಳು ಸಾಲು ಗಟ್ಟಿ ನಿಂತಿದ್ದವು.ಮಾರುತಿ ಕಾರ್ ಸ್ವತಹ ನಾನೇ ಚಲಾಯಿಸುತ್ತಿದ್ದೆ. ನನ್ನ ಪಕ್ಕ ನನ್ನ ಭಾವ ಹಾಗೆ ಹಿಂದಿನ ಸೀಟಿನಲ್ಲಿ ಇಬ್ಬರು ಕುಳಿತಿದ್ದರು.ನನ್ನನ್ನು ಉಳಿದು ಅವರೆಲ್ಲ ವೃತ್ತಿಪರ ಪುರೋಹಿತರಾಗಿದ್ದರು. ರಸ್ತೆ ಬ್ಲಾಕ್ ನೋಡಿ ನಾವು ಚಾರ್ಮಾಡಿ ಮೇಲೆ ಹೋಗೋಣವೆಂದು ಧರ್ಮಸ್ಥಳ ಕಡೆಗೆ ಕಾರ್ ತಿರುಗಿಸಿ, ಚಾರ್ಮಾಡಿ ಮೇಲೆ ಬಂದೆವು.

ರಾತ್ರಿಯ ಸುಮಾರು ೧೧ ಗಂಟೆಯ ಸಮಯ .ಘಾಟಿ ತಿರುವುಗಳೆಲ್ಲ ಕಳೆದು ರಸ್ತೆ ನೇರವಾಗಿ ಹೋಗುತ್ತಾ ಇತ್ತು. ಗಾಢವಾಗಿ ಇರುಳು ಹಬ್ಬಿತ್ತು. ನಿರ್ಜನ ಪ್ರದೇಶ. ಅಲ್ಲೊಂದು ಇಲ್ಲೊಂದು ಮರ ವಿರಳವಾಗಿ ಇತ್ತು. ಕಾರು ಗಂಟೆಗೆ ೮೦ ಕಿ. ಮಿ. ವೇಗದಲ್ಲಿ ನಾನು ಚಲಾಯಿಸುತ್ತಿದ್ದೆ. ತುಂಬ ದೂರದಲ್ಲಿ ಲಾರಿಯೊಂದು ನಿಧಾನವಾಗಿ ಹೋಗುತ್ತಿತ್ತು.

ನಾನು ಮುಂದಿನ ಸೀಟಿನಲ್ಲಿ ನನ್ನ ಬಳಿಯೇ ಕುಳಿತಿದ್ದ ಬಾವನಲ್ಲಿ ಸಂಧ್ಯಾ ವಂದನೆ ಹಾಗು ಇತರ ವೈದಿಕ ಕರ್ಮ ಮಂತ್ರ ಗಳ ಬಗ್ಗೆ ಚರ್ಚಿಸುತ್ತ ಅವರ ವಿದ್ವತ್ತಿನ ಅನುಭವ ವನ್ನು ಸವಿಯುತ್ತ ಇದ್ದೆ. ಏಕಾಂತ ರಾತ್ರಿ ಮಾತಾಡುವುದಕ್ಕೆ ನನಗೆ ಅತ್ಯಂತ ಪ್ರಿಯವಾದ ವಿಷಯವೇ ಸಿಕ್ಕಿತ್ತು. ಹಾಗೆ ಚರ್ಚಿಸುತ್ತ ಒಂದು ರೀತಿಯಲ್ಲಿ ಕಾಲ ಹರಣವನ್ನು ಮಾಡುತ್ತಾ ನಿರ್ಮಾನುಷ ರಸ್ತೆಯಲ್ಲಿ ಬರುತ್ತಾ ಇದ್ದೆವು. ಅವಾಗ ನೇರವಾದ ರಸ್ತೆ ದೂರದಲ್ಲಿ ಲಾರಿ ನಿಲ್ಲದೆ ಚಲಿಸುತ್ತ ಇತ್ತು. . ರಸ್ತೆ ಬದಿಯಲ್ಲಿ ಕಡು ಹಳದಿ ಬಣ್ಣದ ಆಕೃತಿ ಮಿರ ಮಿರ ಮಿಂಚುವುದು ದೂರದಿಂದಲೇ ನನ್ನ ಗಮನಕ್ಕೆ ಬಂತು. ಹತ್ತಿರ ಬರುತ್ತಿದ್ದ ಹಾಗೆ ಆ ಆಕೃತಿ ಒಂದು ಹೆಣ್ಣಿನ ಆಕೃತಿ. ಆಶ್ಚರ್ಯ!!! ಒಂದಕ್ಕೊಂದು ತಾಳೆಯಾಗದ ವಾತವರಣ. ಗಾಢ ಕತ್ತಲು ಒಂಟಿ ಹೆಣ್ಣು ರಸ್ತೆ ಬದಿಯಲ್ಲಿ.!!!ಕಾಲಿನ ಬುಡದಲ್ಲಿ ಎರಡು ಏರ್ ಬ್ಯಾಗ್ ಇಟ್ಟುಕೊಂಡು ಬಸ್ಸಿಗೆ ಕಾದು ನಿಂತಂತೆ ಭಾಸವಾಯಿತು. ಆ ಹೊತ್ತಿನಲ್ಲಿ ಒಂಟಿ ಹೆಣ್ಣು ಅಸಹಜ ವಾತವರಣ ಎಲ್ಲವೂ ಗೊಂದಲಮಯ, ನಂಬಲಾಗಲೇ ಇಲ್ಲ . ಒಂದು ಘಳಿಗೆ ಅನ್ನಿಸಿತು ಆ ಲಾರಿಯಿಂದ ಆಕೆ ಹಾರಿದಳೆ? ಖಂಡಿತ ಸಾಧ್ಯ ಇಲ್ಲ ಯಾಕೆಂದರೆ ನಾನು ಗಮನಿಸುತ್ತಾ ಇದ್ದೆ ಲಾರಿ ನಿಲ್ಲದೆ ಸಾಗುತ್ತಿತ್ತು. ಅಸಹಜ ಸನ್ನಿವೇಶ ಕಂಡು ಒಂದು ಘಳಿಗೆ ವಿಚಲಿತವಾಯಿತು ಮನಸ್ಸು.ಕಾರು ತೀರ ಹತ್ತಿರ ಬಂದಾಗ ಒಂದು ಅರೆ ಘಳಿಗೆ ವಾಹನ ನಿಲ್ಲಿಸಿದಂತೆ ಮಾಡಿದಾಗ ಮುಖ ಸೊಟ್ಟದು ಮಾಡಿ ಆಕೆ ಕಾರಿನ ಒಳ ಇಣುಕಿದಳು. ಕಣ್ಣೆಲ್ಲ ಕೆಂಪಗೆ ಆಗಿದ್ದುದು ಅವಾಗ ಗಮನಕ್ಕೆ ಬಂತು. ಸರ್ವಾಂಗ ಕರಿ ಕಟ್ಟಿದ ಆಕೆಯ ದೇಹ., ಅದರ ಮೇಲೆ ಫಳ ಫಳ ಹೊಳೆಯುವ ಹಳದಿ ಬಣ್ಣದ ಸೀರೆಎಂದೂ ಕಾಣದಂತಹ ಕಡು ಹಳದಿ ಬಣ್ಣ. . ದಂಗಾಗಿ ಹೋದೆವು ನಾವುಗಳು. ಬಳಿ ಕುಳಿತ ಬಾವ ಒಂದೇ ಸವನೆ ಚೀರಿದರು ಹೋಗುವ ಹೋಗುವ ಎಂದು. ನಾನು ಆ ಕ್ಷಣ ಏನು ಮಾಡಬೇಕೆಂದು ತೋಚದೆ ಕಾರಿನ ವೇಗವನ್ನು ಹೆಚ್ಚಿಸಿದೆ.ಯಾರಿರಬಹುದು ಎಂಬ ಗೊಂದಲ ಇನ್ನೂ ಕಾಡುತ್ತಾ ಇದೆ. ಕೆಲವೊಮ್ಮೆ ತುಂಬ ಹಾಸ್ಯಾಸ್ಪದ ಅನ್ನಿಸಿದರೂ ನಾನು ನೋಡಿದ್ದು ಸುಳ್ಳೇ? ಭಾವ ಚೀರಿದ್ದು ಸುಳ್ಳೇ. ಅವರು ಸುಮಾರು ದೂರದವರೆಗೂ ನಡುಗುತ್ತ ಇದ್ದರು. ಎಡಭಾಗದಲ್ಲಿ ಕುಳಿತಿದ್ದ ಕಾರಣ ನನ್ನಿಂದಲೂ ಹತ್ತಿರದಿಂದ ನೋಡಿದ್ದರು.

ಹಲವು ರೀತಿ ಯೋಚಿಸಿದೆ ಅದ್ಭುತ ಅನುಭವವನ್ನು ಹೀಗೆ ನಮೂದಿಸಿದರೆ ಸೂಕ್ತ ಅನ್ನಿಸಿತು. ಯಾರಿರಬಹುದು ಎನ್ನುವ ಗೊಂದಲಕ್ಕೆ ಉತ್ತರ ಇರಬಹುದೇ.? ಆ ಅತ್ತ ಕಾಡಿನಂತಹ ಪ್ರದೇಶದಲ್ಲಿ ಒಂಟಿ ಹೆಣ್ಣು ಗೋಚರಿಸುವ ಸನ್ನಿವೇಶ ಭಯ ಆತಂಕ ಎಲ್ಲವನ್ನೂ ಉಂಟು ಮಾಡಿದೆ. ಜತೆಯಲ್ಲಿ ತೀರದ ಕುತೂಹಲವನ್ನು ಪರಿಹರಿಸದ ಸ್ಥಿತಿ. ಈಗಿನ ಅಧುನಿಕ ಯುಗದಲ್ಲಿ ನಂಬಲಾಗದ ದೃಶ್ಯ. ಹೇಳಿದರೆ ಹಾಸ್ಯ ಮಾಡಿ ನಗಬಹುದಾದಂತ ವಿಷಯ. ಎಲ್ಲೊ ಚಿಕ್ಕವನಿರುವಾಗ ಚಂದಮಾಮದಲ್ಲಿ ಹಲವು ರಮ್ಯ ದೆವ್ವದ ಕಥೆಗಳನ್ನೂ ಓದಿದ ನೆನಪು. ಇದೂ ಹಾಗೆಯೆ? ಅಲ್ಲವಾದರೆ ಏನು? ಮನುಷ್ಯರು ಹಗಲಲ್ಲೂ ಒಂಟಿಯಾಗಿ ಹೋಗಲು ಅನುಮನಿಸುವಂತ ಸನ್ನಿವೇಶದಲ್ಲಿ ಒಂದು ಒಂಟಿ ಹೆಣ್ಣು. ಏನಿರಬಹುದು? ದೆವ್ವಗಳು ಹೆಣ್ಣಿನ ರೂಪದಲ್ಲೇ ಕಾಣುತ್ತವೆಯೇ? ಆ ಎರಡು ಬ್ಯಾಗ್ ಇನ್ನೂ ಅನುಮಾನವನ್ನು ಹೆಚ್ಚಿಸುವಂತೆ ಮಾಡಿದೆ. ಒಂದು ಒಂಟಿ ಹೆಣ್ಣು ಎಂದು ಹೇಳುವಲ್ಲಿ ಮನಸ್ಸು ಒಪ್ಪುವುದಿಲ್ಲ. ಹಾಗೆಂದು ದೆವ್ವ ಪಿಶಾಚಿ ಎನ್ನಲು ಮನಸ್ಸಿನ ವೈಚಾರಿಕತೆ ಬಿಡುವುದಿಲ್ಲ. ಏನಿರಬಹುದು? ಉತ್ತರ ಅವರವರ ಊಹೆಗೆ ಬಿಟ್ಟದ್ದು. ಏನಿದ್ದರೂ, ಒಂದು ಘಳಿಗೆ ನಕ್ಕು ಸುಮ್ಮನಾಗುವಂತಹ ವಿಚಾರ. ಘಟನೆಯನ್ನು ಯಾವ ರೀತಿ ಬೇಕಾದರೂ ಸ್ವೀಕರಿಸಬಹುದು.ಒಂದು ರೋಚಕ ಮರೆಯಲಾಗದ ಅನುಭವ ನನ್ನ ಮಟ್ಟಿಗೆ ಅದು ಅಲ್ಲಿಗೆ ಸೀಮಿತ.