Thursday, January 28, 2010

ಯೋಗಾನುಭವ



ಅನಿಯಂತ್ರಿತ ಆಹಾರ, ಅನಿಯಮಿತ ಜೀವನ ಶೈಲಿ, ದೈಹಿಕ ಆರೋಗ್ಯದ ಕೊರತೆ ಇದರಿಂದಾಗುವ , ಮಾನಸಿಕ ದುಮ್ಮಾನ ಇವೆಲ್ಲವುಗಳು ಕಾಡಿದಾಗ ಬದುಕೇ ಕೆಲವೊಂದು ಸಲ ಹತಾಷೆಗೊಳಗಾಗುವುದು ಸಹಜ.ಮನುಷ್ಯ ಮಾತ್ರವಲ್ಲ ಪ್ರಾಣಿ ಸಹಜ ಜೀವನಕ್ಕೆ , ಆಹಾರ, ನಿದ್ರಾ ಮೈಥುನ ಚಟುವಟಿಕೆಗಳು ಎಷ್ಟು ಆವಷ್ಯಕವೋ ಅಷ್ಟೇ ಅದನ್ನು ನಿಯಮಿತವಾಗಿ ತನ್ನ ನಿಯಂತ್ರಣದಲ್ಲಿರುವುದು ಅಷ್ಟೇ ಅವಶ್ಯಕ. ಮನುಷ್ಯ ಜೀವನಕ್ಕೆ ಇದು ಹೆಚ್ಚು ಅತ್ಯಾವಶ್ಯಕ. ಇದನ್ನು ಹಲವರು ಗುರುತಿಸಿ ಬದುಕಿದ ಜೇವನದ ಸಮಯವನ್ನು ಸಾರ್ಥಕ ಮಾಡಿಸಿಕೊಳ್ಳುತ್ತಾರೆ. ನಿಯಮಿತ ಜೀವನ ಶೈಲಿಗೆ ಸನಾತರು ನೀಡಿದ ಬಳುವಳಿಯೇ ಈ ಯೋಗ. ತನ್ನ ದೇಹದ ಅಂತರಂಗದ ಭಾಷೆಯನ್ನು ಅರ್ಥೈಸಿಕೊಳ್ಳುವುದೇ ಯೋಗ ಅಂತ ನನ್ನ ಭಾವನೆ.


ಬಹುಶಃ ನನ್ನ ಬದುಕಿನಲ್ಲಿ ಇದನ್ನು ಅಳವಡಿಸಿಕೊಂಡಮೇಲೆ ಬದುಕು ಹೆಚ್ಚು ಅರ್ಥ ಪೂರ್ಣವಾದ ಅನುಭವ. ಮೊದಲಿಂದಲೂ ಯೋಗ ಧ್ಯಾನ ಏಕಾಗ್ರತೆ ಇದರ ಬಗ್ಗೆ ಹೆಚ್ಚಿನ ಅರಿವು ಇಲ್ಲದ ನನಗೆ ಕೆಲವು ಸಮಯಗಳಿಂದ ಈಚೆಗೆ ನನ್ನ ದೂರದ ( ಪ್ರಾದೇಶಿಕವಾಗಿ ಮಾತ್ರ ಮಾನಸಿಕವಾಗಿ ತೀರ ಹತ್ತಿರ) ಸ್ನೇಹಿತರ ಸಲಹೆ ಮತ್ತು ಒತ್ತಾಯ ನನ್ನನ್ನು ಯೋಗ ಶಿಕ್ಷಣಕ್ಕೆ ತೊಡಗುವಂತೆ ಮಾಡಿತು.ಅಷ್ಟು ಮಾತ್ರವಲ್ಲ ನನ್ನಲ್ಲಿ ಯೋಗದ ಬಗೆಗಿನ ಜಿಜ್ಞಾಸೆಯನ್ನು ಹುಟ್ಟು ಹಾಕಿದ ಮಹಾನ್ ವ್ಯಕ್ತಿಯೊಬ್ಬರು ಹಿರಿಯ ಯಕ್ಷಗಾನ ಕಲಾವಿದ ಶ್ರೀ ಸೂರಿಕುಮೆರಿ ಗೋವಿಂದ ಭಟ್ಟರು. ಅವರೊಂದಿಗೆ ಕಳೆದ ಕೆಲವು ಗಂಟೆಗಳಲ್ಲಿ ಯೋಗದ ಬಗ್ಗೆ ಸಂಕ್ಷೇಪವಾಗಿ ಮತ್ತು ಅಷ್ಟೇ ಸ್ಥೂಲವಾಗಿ ಮನವರಿಕೆ ಮಾಡಿದ್ದರು. ಅವರ ಜೀವನ ಕ್ರಮ ನಡವಳಿಕೆ ಎಲ್ಲವೂ ಅದಕ್ಕೆ ನಿದರ್ಶನವಾದದ್ದು ನನಗೆ ವೇದ್ಯವಾಗಿಬಿಟ್ಟಿತು. ಮೊದಲು ಇದರ ಬಗ್ಗೆ ಏನೇನೂ ಅರಿವಿಲ್ಲ. ಜಿಮ್, ಜಾಗಿಂಗ್, ವಾಕಿಂಗ್, ಹೀಗೆ ಅಧುನಿಕ ದೈಹಿಕ ದಂಡನೆ ಹಾಗು ಕಸರತ್ತಿನ ಬಗ್ಗೆ ಅಲ್ಪಸ್ವಲ್ಪ ಅರಿವು ಇತ್ತು. ಕೆಲವು ಸಮಯ ಜಿಮ್ ವ್ಯಾಯಾಮ ಶಾಲೆಗೆ ಸೇರಿ ಏದುಸಿರು ಬಿಟ್ಟಿದ್ದೆ, ಬೆವರು ಹರಿಸಿದ್ದೆ. ಆದರೆ ತೀರ ದೈಹಿಕ ದಂಡನೆ ಸಾಧ್ಯವಾಗದೆ ಅದರಲ್ಲಿ ವಿಫಲನೂ ಆಗಿದ್ದೆ. ನನ್ನ ದೈಹಿಕ ವ್ಯಾಯಾಮ ಕೇವಲ ಮುಂಜಾವಿನ ವಾಕಿಂಗ್ ಎಂಬಲ್ಲಿಗೆ ಸೀಮಿತವಾಗಿತ್ತು. ತಕ್ಕ ಮಟ್ಟಿಗೆ ಅದು ಉಲ್ಲಾಸದಾಯಕವಾಗಿದ್ದರು ಏನೋ ಒಂದು ಅಪೂರ್ಣ ಪ್ರಜ್ಞೆ ಮನಸ್ಸಿಗೆ ಕಾಡುತ್ತಿದ್ದುದು ಸುಳ್ಳಲ್ಲ. ನನ್ನ ವಿದೇಶಿ ಸ್ನೇಹಿತ, ವ್ಯಕ್ತಿ ಗತವಾಗಿ ಅಥವಾ ಮೌಖಿಕವಾಗಿ ನಾವು ಇನ್ನೂ ಅಪರಿಚಿತರೇ. ನನ್ನ ಇಂಟರ್ನೆಟ್ ಸ್ನೇಹಿತರಾದ ಹರೀಶ್ ರವರ ತೀವ್ರ ಒತ್ತಾಯ ಹಾಗು ಕೇಳಿಕೆ ಮೇರೆಗೆ ಯೋಗ ತರಗತಿಗೆ ಸೇರುವ ತೀರ್ಮಾನಕ್ಕೆ ಬಂದೆ.


ಹೀಗೆ ಮಲ್ಲೇಶ್ವರಂ ನಲ್ಲಿರುವ ಪ್ರಕೃತಿ ಜೀವನ ಕೇಂದ್ರ ಯೋಗ ಶಾಲೆಗೆ ಒಂದು ಮುಂಜಾನೆ ಹೋದೆ. ಸಾಕ್ಷಾತ್ ಯೋಗ ಗುರುಗಳಾದ ಶ್ರೀ ತಾಡಪತ್ರಿಯವರು ಅಲ್ಲಿಯ ಯೋಗದ ಶಾಲೆಯ ಗುರುಗಳು. ಎಲ್ಲರಂತೆ ನಾನು ಬೆಡ್ ಶೀಟ್ ಹಾಕಿ ವಿಶಾಲವಾದ ಮಂದಿರವೊಂದರಲ್ಲಿ ಕುಳಿತು ಯೋಗ ತರಬೇತಿಗೆ ತೊಡಗಿಕೊಂಡ ಮೊದಲ ದಿನ ಒಂದು ವಿಧದ ಕುತೂಹಲ ಇದ್ದದ್ದು ಸುಳ್ಳಲ್ಲ. ಕೇವಲ ಸರಳ ವ್ಯಾಯಾಮದಿಂದ ದೈಹಿಕ ಆರೋಗ್ಯವನ್ನು ಕಾಪಾಡುವುದು ಸಾಧ್ಯವೇ ಎಂಬ ಕುತೂಹಲ ಇಂದು ಅನುಭವವೇ ತಣಿಸಿದೆ.


ಮೊದಲ ದಿನ ಗುರೂಜಿ (ಎಲ್ಲರೂ ಗೌರವ ಪೂರ್ಣವಾಗಿ ಕರೆಯುವ ರೀತಿ ) ಚುಟುಕಾಗಿ ಯೋಗ ಧ್ಯಾನದ ಬಗ್ಗೆ ಸಂಕ್ಷೇಪವಾಗಿ ಪ್ರಸ್ತಾವನೆಯನ್ನು ಮಂಡಿಸಿದರು. ಉತ್ತಮ ಜೀವನಕ್ಕೆ ಯೋಗಾಭ್ಯಾಸ ಎಷ್ಟು ಸಹಕಾರಿ ನಿಯಮಿತವಾದ ಶಿಸ್ತುಬದ್ದ ಜೀವನ ಶೈಲಿಯಿಂದಾಗುವ ಲಾಭಗಳೇನು. ದಿನದ ಹಲವು ಚಟುವಟಿಕೆಗೆ ನಾವು ಹೇಗೆ ನಮ್ಮ ಸಮಯವನ್ನು ಮೀಸಲಿಡುತ್ತೆವೋ ಅದರಂತೆ ದಿನದ ಒಂದು ತಾಸು ಸೂರ್ಯೋದಯದ ಸಮೀಮಪದ ಅವಧಿಯನ್ನು ಮೀಸಲಿಟ್ಟರೆ ಆ ಜೀವನದ ಶೈಲಿಯನ್ನು ಅನುಭವಿಸಿ ತಿಳಿಯಬೇಕು. ಸರಳವಾದ ಜೀವನ, ಸರಳವಾದ ಆಹಾರದಿಂದ ಕೂಡಿದ ನಮ್ಮ ಜೀವನ ಶೈಲಿಯನ್ನು ನಾವು ರೂಢಿಸಿಕೊಳ್ಳಬೇಕು. ನಿರಾತಂಕವಾದ ಬದುಕು ನಮ್ಮದಾಗುತ್ತದೆ. ಪುರಾತನ ಸನ್ಯಾಸಿ ಜೇವನದಲ್ಲಿ ರೂಢಿಸಿಕೊಂಡ ಈ ಯೋಗ ಎಂಬುದು ಈಗಿನ ಈ ಅಧುನಿಕ ಯುಗದಲ್ಲೂ ಹೇಗೆ ಅರ್ಥ ಪೂರ್ಣವಾಗಿದೆ ಎಂಬುದನ್ನು ತುಂಬಾ ಸರಳವಾಗಿ ಹೇಳಿದರು. ಆದರೂ, ನನಗೆ ತುಂಬಾ ಅಪ್ಯಾಯಮಾನವಾದ ಅವರ ಒಂದು ಮಾತು ಇಂದಿಗೂ ನೆನಪಿದೆ. " ನಿಮ್ಮ ನೆರೆಯ ಅಥವಾ ದೂರದ ಯಾವುದೇ ವೈರಿಯನ್ನು ಮೊದಲು ಯೋಗ ತರಗತಿಗೆ ಸೇರುವಂತೆ ಪ್ರೇರೇಪಿಸಿ. ಆತ ನಂತರ ನಿಮ್ಮ ವೈರಿಯಾಗಿ ಉಳಿಯದೆ ವೈಷಮ್ಯವನ್ನು ದೂರಿಕರಿಸಿ ನಿಮಗೆ ಹತ್ತಿರದವನಾಗಿ ಬಿಡುವನು. " ನಿಜವಾಗಿಯೂ ಎಂತಹ ಅರ್ಥ ಪೂರ್ಣ ಮಾತು. ವಿಶ್ವಶಾಂತಿಯ ಮೂಲ ಸೆಲೆ ಇರುವುದೇ ಈ ತತ್ವದಲ್ಲಿ ಅಲ್ಲವೇ?ಇಂತಹ ವೈಷಮ್ಯ ಮಾತ್ಸರ್ಯ ರಹಿತ ಜೀವನ ಒಂದು ಸಲ ಕಲ್ಪಿಸಿದರೆ ಸಾಕು ಆ ಲೋಕವನ್ನು ಗ್ರಹಿಸಿಯೇ ರೋಮಾಂಚಗೊಳ್ಳದೇ ? ಯೋಗಾಭ್ಯಾಸದ ಮೂಲ ತಿರುಳೇ ಅದು ನಮ್ಮ ಜೀವನ ಶೈಲಿಯನ್ನೇ ಬದಲಿಸಿ ವ್ಯಕ್ತಿತ್ವ ವಿಕಸನಕ್ಕೆ ಇದರಿಂದ ಮಿಕ್ಕಿದ ವಿಧಾನವೇ ಇರದು ಎಂದೆನಿಸುತ್ತದೆ.

ಮೊದಲದಿನ ಕೆಲವು ಯೋಗಾಸನ, ಸೂರ್ಯನಮಸ್ಕಾರ ಪ್ರಾಣಾಯಾಮದ ಪಾಠವಾಯಿತು." ಸಹನಾವವತು ಸಹನೌಭುನಕ್ತು ಸಹವೀರ್ಯಂಕರವಾವಹೈ ತೇಜಸ್ವಿನಾವಧೀತಮಸ್ತು ಮಾವಿದ್ವಿಷಾವಹೈ..ಓಂ ಶಾಂತಿ: ಶಾಂತಿ: ಶಾಂತಿ: " ಎಂಬ ಭೋಜನ ವಿಧಿಯ ಶಾಂತಿ ಮಂತ್ರ ಯೋಗ ಗುರುಗಳ ಕಂಠದಿಂದ ಹೊರಬಿದ್ದು ಎಲ್ಲ ಕಂಠದಿಂದಲೂ ಮರು ಝೆ೦ಕರಿಸಿದಾಗ ಆರಂಭವಾದ ಹೊಸ ಅನುಭವ ಇಂದಿಗೂ ಅದೇ, ನಿತ್ಯವೂ ಅದೇ ಹೊಸತನವನ್ನು ಉಳಿಸಿದೆ ಎಂದರೆ ಈ ಸನಾತನ ಎಷ್ಟು ಭದ್ರವಾಗಿದೆ ಅಲ್ಲವೇ.?

ನನಗಂತೂ ಈ ಅನುಭವ ತುಂಬಾ ವಿಚಿತ್ರ ಸಂವೇದನೆಯನ್ನು ಮನಸ್ಸಿನಲ್ಲಿ ಮೂಡಿಸಿಬಿಟ್ಟಿತು ಎಷ್ಟು ಸರಳ..!!!ಹೀಗೂ ಸಾಧ್ಯವೇ...?!!!

ಯೋಗದಲ್ಲಿ ಪ್ರಾಣಾಯಾಮ ಎನ್ನುವುದು ಪ್ರಮುಖ ಅಂಗ. ಬಹುಶ ಪ್ರತಿಯೊಂದು ಉಸಿರಾಟದ ಜೀವಕ್ಕೆ ಇದು ತೀರ ಅವಶ್ಯಕ. ಮನುಷ್ಯನ ಧಾವಂತದ ವೇಗದ ಬದುಕಿಗೆ ಸಾವಧಾನದ ಮನೋಬಲವನ್ನು ತುಂಬುವ ವಿಧಾನ ಇದರ ಮೂಲ ಸೆಲೆ. ಜಿಮ್ ಆಟೋಟ ಅಥವಾ ಬೆಳಗಿನ ಜಾಗಿಂಗ್ ಎಲ್ಲದರಲ್ಲಿಯೂ ವೇಗದ ಎದುಸಿರೆ ಪ್ರಾಧಾನ್ಯ. ಆದರೆ ಇಲ್ಲಿ ಅದು ತದ್ವಿರುದ್ದ. ನಿಧಾನವಾದ ಅಷ್ಟೇ ಕರಾರುವಕ್ಕಾದ , ದೀರ್ಘ ಉಸಿರಾಟದ ಪ್ರಕ್ರಿಯೆ ಇಲ್ಲಿಯದು. ನಿರಾಳವಾದ ಅಷ್ಟೇ ನಿರಾತಂಕವಾದ ಉಸಿರಾಟ ವಿಧಾನ ಈಪ್ರಾಣಾಯಾಮದ ಮೂಲ ವಿಧಾನ. ಹಲವು ವಿಧದ ಪ್ರಾಣಾಯಾಮ ಅವುಗಳ ವಿಧಾನ ಅವುಗಳನ್ನು ಮಾಡುವುದರಿಂದಾಗುವ ಮಾನಸಿಕ ಹಾಗು ದೈಹಿಕ ಪರಿಣಾಮಗಳು ಮಾಡಿಯೇ ಅನುಭವಿಸಿ ನೋಡಬೇಕು,

ಯೋಗಾಭ್ಯಾಸದ ರೀತಿ ವಿಧಾನಗಳನ್ನು ಹೇಳುವುದು ನನ್ನ ಅರಿವಿಗೆ ಜ್ಞಾನಕ್ಕೆ ಮೀರಿದ ಕ್ರಿಯೆ. ಆದರೆ ಇದನ್ನು ಅಳವಡಿಸಿಕೊಂಡ ಮೇಲೆ ನನ್ನ ಜೀವನ ಶೈಲಿಯೇ ನನಗೆ ಬದಲಾಗಿಬಿಟ್ಟದ್ದು ನನಗಿನ್ನೂ ಸೋಜಿಗದ ವಿಷವೇ ಆಗಿದೆ. ಯೋಗ ತರಗತಿಗೆ ಹೋಗಿ ಒಂದೆರಡು ವಾರದಲ್ಲೇ ಅದರ ಪ್ರಭಾವ ನಿಧಾನವಾಗಿ ಆಗತೊಡಗಿತು. ಸರಿಯಾದ ಜೀರ್ಣ ಕ್ರಿಯೆ ಹಾಗು ಮಿತವಾದ ಹಸಿವು ಇದರಿಂದ ಎಂತಹ ಛಳಿಯ ವಾತಾವರಣದಲ್ಲೂ ಆಗಾಗ ನೀರು ಸೇವಿಸುವಂತೆ ಪ್ರೇರೇಪಣೆ. ಮತ್ತೂ ಮತ್ತು ನೀರು ಕುಡಿಯುತ್ತ ಎಲ್ಲವೂ ನಿಯಂತ್ರಣಕ್ಕೆ ಬಂದ ಭಾವನೆ. ಮೊದಲು ಒಂದರಿಂದ ಒಂದೂ ವರೆ ಲೀಟರ್ ನೀರು ಸೇವಿಸುತ್ತಿದ್ದ ನನಗೆ ದಿನಾ ಐದು ಲೀಟರ್ಗಿಂತಲೂ ಅಧಿಕ ನೀರು ಸೇವಿಸುವಂತೆ ಆದದ್ದು ಕಂಡೆ ಉತ್ಸಾಹ ಅಧಿಕವಾಗತೊಡಗಿತು. ಹಸಿವು ದೈಹಿಕ ಶ್ರಮ ಎಲ್ಲವೂ ಒಂದು ನಿಯಂತ್ರಣದಲ್ಲಿದ್ದ ಭಾವನೆ . ಊದ್ವೆಗ ರಹಿತ ಮನಸ್ಸಿನಿಂದ ದಿನವಿಡೀ ಅಂತರಿಕ ಉತ್ಸಾಹ, ನಿತ್ಯವೂ ದೇಹವನ್ನು ಬಾಧಿಸುತ್ತಿದ್ದ ಕೆಲವು ಶಮನವಾಗದ ರೋಗಗಳು ತಿಲ್ಯದೆ ಮಂಗ ಮಾಯವಾದಾಗ ಆಶರ್ಯವಾಗುತ್ತದೆ. ಯೋಗದ ಹಲವು ವಿಧಾನ , ಹಾಗು ಅವನ್ನು ಕಲಿಯಲು ಹಲವು ವಿಧಾನಗಳಿದ್ದರೂ ಕೆಲವು ತಿಂಗಳು ಗುರು ಮುಖೇನ ಕಲಿತರೆ ಅತ್ಯುತ್ತಮ. ಸರಿಯಾದ ಕ್ರಮದ ಯೋಗ ಅಧಿಕ ಹಾಗು ಪರಿಪೂರ್ಣ ಪರಿಣಾಮವನ್ನು ಕೊಡಬಲ್ಲುದು.

ನಿತ್ಯ ಯೋಗಾಭ್ಯಾಸದಿಂದ ಬದಲಾಗುವ ಜೀವನ ಶೈಲಿ ಆಹಾರ ಶೈಲಿ ಸ್ವತಹ ಅನುಭವಿಸಿದ್ದೇನೆ. ನಗರದಲ್ಲಿ ಅಥವಾ ನವೀನ ಜೀವನ ರೀತಿಯ ಕ್ರಮದಂತೆ ಸಾಯಂಕಾಲದ ಡಿನ್ನರು ಪಾರ್ಟಿಗಳಲ್ಲಿ ಮತ್ತೆ ಉತ್ಸಾಹ ಮೂಡುವುದಿಲ್ಲ. ಅನಗತ್ಯ ಆಹಾರ ತಿನ್ನುವ ಬಯಕೆಯಾಗುವುದಿಲ್ಲ. ಅತ್ಯಲ್ಪ ಆಹಾರದಿಂದ ತುಂಬುವ ಹೊಟ್ಟೆ ಆರೋಗ್ಯದ ಮೂಲ ಲಕ್ಷಣವನ್ನು ಹೇಳತೊಡಗುತ್ತದೆ. ಕೇವಲ ನಿಯಂತ್ರಣ ಭರಿತ ಉಸಿರಾಟದ ಪ್ರಕ್ರಿಯೆಗೆ ದೇಹ ಸ್ಪಂದಿಸುವುದು ನೋಡುವಾಗ ಈ ಜೀವನ ಕ್ರಮಕ್ಕೆ ಮನಸ್ಸು ಸಮಾಧಾನದ ನಿಟ್ಟುಸಿರು ಬಿಡುತ್ತದೆ.

ಎಲ್ಲಕ್ಕಿಂತಲೂ ವಿಶೇಷವಾಗಿ ನಮ್ಮಲ್ಲಿರುವ ದುಶ್ಚಟಗಳು, ದುರ್ವ್ಯಸನಗಳು ನಮ್ಮಿಂದ ಸದ್ದಿಲ್ಲದೇ ದೂರವಾಗಿಬಿದುತ್ತವೆ . ಇದು ಕೇವಲ ಧೂಮಪಾನ ಇನ್ನಿತರ ದುಶ್ಚಟಗಳನ್ನು ಮಾತ್ರವಲ್ಲದೆ ಮನಸ್ಸಿನ ನೆಮ್ಮದಿಯನ್ನು ಹದಗೆಡಿಸುವ ದುಶ್ಚಟಗಳನ್ನು ಬಳಿಗೆ ಸುಳಿಯದಂತೆ ಮಾಡಿಬಿಡುತ್ತವೆ.

ನಿತ್ಯವೂ ಮುಂಜಾನೆಯನ್ನು ಎದಿರು ನೋಡುವ ನನ್ನ ಮನಸ್ಸು ಉದಯಕಾಲದ ಆ ಮಧುರ ಸುಖಾನುಭಾವಕ್ಕೆ ಕಾದಿರುತ್ತದೆ. ನಿದ್ದೆಯನ್ನು ಗೆದ್ದ ತನು ಮನ, ಮುಂಜಾನೆಯ ನೀರವ ಮೌನದೊಂದಿಗೆ ಶ್ರುತಿಯನ್ನು ಸೇರಿಸಿ ಯೋಗ ದೀಕ್ಷೆಗೆ ಸನ್ನದ್ದವಾಗುತ್ತದೆ. ದಿನದಾರಂಭಕ್ಕೆ ಪ್ರಕೃತಿ ಕಾದಿರುವಾಗ ಆ ಏಕಾಂತದ ಪ್ರಶಾಂತ ವಾತಾವರಣದಲ್ಲಿ ಜಮಖಾನವನ್ನು ಹಾಸಿ ಪದ್ಮಾಸನದಲ್ಲಿ ಕುಳಿತು, ಕಣ್ಣು ಮುಚ್ಚಿ ಏಕಾಗ್ರತೆಗೆ ಮನಸ್ಸು ಹೊರಳಿದನಂತರ ಓಂಕಾರದೊಂದಿಗೆ ತನು ಮನ ಸುತ್ತಲಿನ ಇರವನ್ನು ಮರೆಸುತ್ತದೆ. ನಿಡಿದಾದ ಹಾಗು ನಿಧಾನವಾದ ಉಸಿರು ಉಪಕ್ರಮಿಸುವುದರೊಂದಿಗೆ ಮನಸ್ಸು ನಿದ್ಧಾನವಾಗಿ ಯೋಗ ವೆಂಬ ಅದ್ಭುತ ಲೋಕಕ್ಕೆ ಹೊಕ್ಕು ಬಿಡುತ್ತದೆ. ನಾಸಿಕದ ತುದಿಯಿಂದ
ಒಳಬಂದ ಚೈನ್ಯವಾಯು ಹೃದಯದಾಳಕ್ಕೆ ನುಗ್ಗಿ ಅಲ್ಲಿಂದ ದಿವ್ಯ ಚೇತನವನ್ನು ಶರೀರಾದ್ಯಂತ ಹರಡಿಸುತ್ತದೆ. ಪ್ರತಿ ನರಗಳಲ್ಲಿ ಹರಿಯುವ ರಕ್ತಸಂಚಾರದ ಸಂವೇದನೆಯ ಅರಿವಾಗುತ್ತಿದ್ದಂತೆ ಸ್ವರ್ಗ ಸುಖದ ಅದ್ಭುತ ಅನುಭವಕ್ಕೆ ಶರೀರ ಸಾಕ್ಷಿಯಾಗಿಬಿಡುತ್ತದೆ.ಪ್ರಾಣಾಯಾಮದ ಹಲವು ವಿಧಗಳನ್ನು ನಿರಾಳವಾಗಿ ನಿಧಾನವಾಗಿ ಮಾಡಿ ಶವಾಸನಕ್ಕೆ ಜಾರಿದಾಗ ಶರೀರಾದ್ಯಂತ ಅವ್ಯಕ್ತ ಸಂಚಲನೆಯ ಆರಂಭ. ಯಾವುದೊ ಲೋಕಕ್ಕೆ ಜಾರಿದ ಅನುಭವ. ಆರಂಭದಲ್ಲಿ ನಿದ್ರೆ ಬಂದು ಕಿರಿ ಕಿರಿ ಅನುಭವಿಸಿದ್ದರೂ , ಕ್ರಮೇಣ ಸಹಜ ಪ್ರಕ್ರಿಯೆ ಅಭ್ಯಾಸವಾಗಿದೆ. ಅಪಾದ ಮಸ್ತಕವಾಗಿ ದೇಹದ ಪ್ರತಿಯೊಂದು ಅಂಗವನ್ನು ಸ್ವತಂತ್ರವಾಗಿಸಿ ನಿಶ್ಚಲವಾದ ಭಂಗಿಯಲ್ಲಿ ನಿರಾಳ ಹಾಗು ನಿರಾತಂಕವಾಗಿ ಶವದಂತೆ ಮಲಗಿದಾಗ ಉಸಿರಾಟ ಒಂದು ಬಿಟ್ಟು ಮತ್ತೆಲ್ಲವೂ ಸ್ತಬ್ಧತೆಯನ್ನು ಸಾರುತ್ತವೆ. ಶರೀರ ಎಂಬುದು ಎಷ್ಟು ಶುಷ್ಕ ಎಂಬ ಅರಿವಾಗುತ್ತದೆ. ನಾನು ಎಲ್ಲವನ್ನು ಮರೆಸುವಂತೆ ಮಾಡುವ ಈ ಕ್ಷಣ ಸ್ವರಗ ಸುಖದ ಚರಮ ಲಕ್ಷ್ಯವನ್ನು ಭೇದಿಸಿದ ಅನುಭವಾಗಿ ನಿಧಾನವಾಗಿ ಸಹಜ ಲೋಕಕ್ಕೆ ಬಂದು ಬಿಡುವಾಗ ಸುಪ್ರಭಾತದ ಮೂಲಕ ಹೊಸ ಲೋಕ ತೆರೆದು ದಿನದಾರಂಭದಿಂದ ಮನಸ್ಸು ಪುಳಕಗೊಳ್ಳುತ್ತದೆ. .

ನಿತ್ಯ ಯೋಗ ಕರ್ಮದಿಂದ ಉಂಟಾಗುವ ಸಂವೇದನೆ ದಿನವಿಡೀ ತನು ಮನವನ್ನು ಶುಭ ಚಿಂತನೆ , ಪ್ರಚೋದನೆಗೆ ಎಡೆ ಮಾಡಿ ಕೆಳೆಯುವ ಪ್ರತಿಕ್ಷಣವನ್ನು ಅರ್ಥ ಪೂರ್ಣವಾಗಿ ಮಾಡುವಲ್ಲಿ ಅದ್ಭುತ ಸಹಕಾರವನ್ನು ನೀಡಿದರೆ ಬದುಕೆಂಬುದು ಎಷ್ಟು ನಿರಾಳವಲ್ಲವೇ.?