Sunday, June 19, 2011

ಧ್ಯಾನ ಯೋಗ

ಭಗವಂತ ಸೃಷ್ಟಿಸಿದ ಅಧ್ಬುತ ಮತ್ತು ಶ್ರೇಷ್ಠ ಜೀವಿಗಳಲ್ಲಿ ಮನುಷ್ಯನ ಸೃಷ್ಟಿಯೇ ಶ್ರೇಷ್ಠವಾದದ್ದು. ಭಗವಂತನಿಗೆ ಮನುಷ್ಯನ ಮೇಲೆ ಎಷ್ಟೊಂದು ಅಕ್ಕರೆ!!!  ತನ್ನ ಸೃಷ್ಟಿಗೆ ಕಾರಣವಾದ ಭಗವಂತನನ್ನು ಯಾವ ರೂಪದಲ್ಲೆ ಆಗಲಿ ಸ್ಮರಿಸಿ ಈ ಮಾನವ ಜನ್ಮ ಸಾರ್ಥಕಗೊಳಿಸುವುದು ಅನಿವಾರ್ಯ ಕರ್ಮಗಳಲ್ಲಿ ಒಂದು. ಪ್ರತಿಯೋಬ್ಬ ಮಾನವನ ನಿತ್ಯಕರ್ಮಾನುಷ್ಠಾನದ ಆದ್ಯತಾಭಾಗವೇ ಈ ಭಗವಂತನ ಸ್ಮರಣೆ. ಭಗವಂತನ ಸ್ಮರಣೆಯ ಸುಲಭಸಾಧನವೇ ಧ್ಯಾನ. ಅದು ಏಕ ಮನಸ್ಸಿನ ಧ್ಯಾನ.ಯಾವುದೇ ಕಾಲಮಾನಾಕ್ಕೂ ಇದು ಅನಿವಾರ್ಯವಾಗಿದೆ.

ಯೋಗಾಭ್ಯಾಸದಲ್ಲಿ ಧ್ಯಾನಕ್ಕೆ ವಿಶೇಷವಾದ ಸ್ಥಾನವಿದೆ. ಯೋಗ ಎಂದಾಕ್ಷಣ ಶಬ್ದಾರ್ಥವೇನೇ ಇರಲಿ ಮೊದಲು  ಮನಸ್ಸಿನಲ್ಲಿ ಉಂಟಾಗುವ ಭಾವನೆಯ ಸ್ವರೂಪವೇ ಧ್ಯಾನ ಮುದ್ರೆ. ಮನುಷ್ಯನ ಬದುಕಿಗೆ ಅವ್ಯಕ್ತವಾದ ಶಕ್ತಿಯನ್ನ ತುಂಬುವ ಚಿಲುಮೆಯೇ ಈಧ್ಯಾನ. ಇದರ ಆವಶ್ಯಕತೆ ಹಲವು ರೀತಿಯಲ್ಲಿ ಅಖ್ಯಾನಿಸರಬಹುದು. ಆದರೆ ಧ್ಯಾನ ಎಂಬುದು ಸ್ಥಿರತೆಯ ಸಂಕೇತ. ಮನಸ್ಸಿನ ಸ್ಥಿರತೆಯನ್ನು ಮೂಡಿಸುವುದಕ್ಕೆ ಅಥವಾ ಕಾಪಾಡುವುದಕ್ಕೆ ಧ್ಯಾನ ಅತ್ಯುತ್ತಮ ಸಾಧನ. ಧ್ಯಾನದ ಮತ್ತೊಂದು ರೂಪವೆ ಯೋಗ ಅಂತಲೂ ಗುರುತಿಸುವುದನ್ನು ಕಾಣಬಹುದು. ಧ್ಯಾನ ತಪಸ್ಸು ಪೂಜೆ ಆಹ್ನಿಕಗಳು ಹೀಗೆ ಭಗವಂತನ ಉಪಾಸಾನೆಗೆ ಹಲವು ಮಾರ್ಗಗಳಿದ್ದರೂ ಧ್ಯಾನದಷ್ಟು ಸುಲಭ ಮತ್ತು ಶ್ರಮ ರಹಿತ ಸಾಧನ ಬೇರೆ ಇಲ್ಲ ಎಂದೇ ನನ್ನ ಅನಿಸಿಕೆ. ಇದನ್ನು ಶ್ರಮರಹಿತ ಎಂದು ಹೇಳುವುದಕ್ಕೆ ಹಲವು ಕಾರಣಗಳಿವೆ. ಆರಂಭದಲ್ಲಿ ಇದು ಶ್ರಮ ದಾಯಕವೆಂದು ಕಂಡರೂ ಇದು ಮನಸ್ಸು ಶರೀರ ಇದನ್ನು ರೂಢಿಸಿಕೊಂಡ ಮೇಲೆ ಧ್ಯಾನವೆಂಬುದು ಪರಿಶ್ರಮವಿಲ್ಲದೆ ಮಾಡುವ ಪರಿಕ್ರಮ.
.
ಮನಸ್ಸಿನ ಚಾಂಚಲ್ಯವನ್ನು ತೊಲಗಿಸಿ ಏಕಮುಖದಲ್ಲಿ ಸಾಗುವ ಪ್ರಕ್ರಿಯೆ ಇದು. ಇದಕ್ಕೆ ಸಹಕಾರಿಯಾಗುವುದು ಪ್ರಾಣಾಯಾಮ.ಮೊದಲೆಲ್ಲ ಅಧ್ಬುತ ಸಾಧನೆಯನ್ನು ಮಾಡಬಲ್ಲ ಋಷಿಮುನಿಗಳಿಗೋ ಬೈರಾಗಿಗಳಿಗೊ ಸಿದ್ದಿಸಬಹುದಾದ ಈ ಕ್ರಿಯೆ ಅಷ್ಟು ಆಳವಾಗಿ ನಿಖರವಾಗಿ ಅಲ್ಲದಿದ್ದರೂ ತುಂಬ ಸರಳವಾಗಿ ಅನುಸರಿಸಬಹುದು. ನಿದ್ರೆಯಲ್ಲಿ ಇರುವಾಗ ಯಾವುದೋ ಭ್ರಮಾಲೋಕದಲ್ಲಿ ಇರುವ ನಮ್ಮ ಸುಪ್ತ ಮನಸ್ಸು ಎಚ್ಚರಗೊಂಡಾಗ ಒಮ್ಮಿಂದೊಮ್ಮೆಲೆ ರಂಗದ ಮೇಲೆ ಬದಲಾದ ದೃಶ್ಯದಂತೆ ವಾಸ್ತವ ಪ್ರಪಂಚಕ್ಕೆ ಕಾಲಿಡುತ್ತದೆ. ದೇಹ ಎಷ್ಟು ಆಲಸಿಯಾಗಿ ಜಡವಾಗಿರುವುದೋ ಮನಸ್ಸು ಗೊಂದಲಗೊಂಡು ಆಲಸ್ಯದ ಜತೆಗೆ ಮುಂದಿನ ಪ್ರಚೋದನೆಗಾಗಿ ಚಂಚಲಮುಖಿಯಾಗಿರುತ್ತದೆ. ಹಾಗಾಗಿ, ನಗರದ ಯಾವುದೋ ಹಲವು ರಸ್ತೆಗಳು ಒಂದಾಗಿ ಸೇರುವ ಕೇಂದ್ರದಲ್ಲಿ  ಯಾವ ದಿಕ್ಕಿಗೆ ಮುಖ ಮಾಡಿ ಪಯಣಿಸಬೇಕೆಂದು ಗೊಂದಲಕ್ಕೆ ಒಳಗಾದಂತೆ ಮನಸ್ಸು ಹಲವು ಚಿಂತನೆಗಳ ಧಾಳಿಯಿಂದ ಚಿಂತನೆಯನ್ನು ಯಾವ ದಿಕ್ಕಿಗೆ ಹರಿಸಬೇಕೆಂಬ ಗೊಂದಲದಲ್ಲಿರುತ್ತದೆ. ಆವಾಗ ಮನಸ್ಸನ್ನು ಕ್ರಿಯಾತ್ಮಕವಾಗಿ ಸಿದ್ದಪಡಿಸಿ ತುಕ್ಕು ಹಿಡಿದ ಆಯುಧವನ್ನು ಸಾಣೆಗೊಳಿಸಿ ಹರಿತಗೊಳಿಸಿದಂತೆ ಪ್ರಚೋದನೆಗೊಳಿಸುವುದೇ ಈ ಧ್ಯಾನ. ಸುಪ್ರಚೋದನೆ ಮನಸ್ಸಿನಲ್ಲಿ ಉಂಟಾಗಬೇಕಾದರೆ ಧ್ಯಾನ ಅತ್ಯಾವಶ್ಯ. ಧ್ಯಾನಗೈದ ಮನಸ್ಸಲ್ಲಿ ಉದ್ಭವಿಸಿದ ಪ್ರಚೋದನೆಯೂ ಆಷ್ಟೇ ಶಾಂತವಾಗಿರುತ್ತದೆ.

ಈ ಧ್ಯಾನದ ಕ್ರ್ಯಿಯಾತ್ಮಕವನ್ನು ಯೋಗಾಭ್ಯಾಸದ ಮೂಲಕ ಸರಳವಾಗಿ  ಸಾಧ್ಯವಾದಷ್ಟು ಮಟ್ಟಿಗೆ ಹೇಗೆ ಅಳವಡಿಸಬಹುದು.ಎಂಬುದರ ಸ್ವಾನುಭವದ ನಿವೇದನೆ ಇದು. ಹಾಗೆಂದು ಇದು ದೊಡ್ಡ ಸಾಧಕನ ಮಾತಲ್ಲ. ಸಾಧನೆಯಮಟ್ಟಿನಲ್ಲಿ ತೀರಾ ತೃಣಸದೃಶ ಅನ್ನಬಹುದಾದ ಅನುಭವ ಇದು. ಮಾತ್ರವಲ್ಲ ಇದರ ಆವಶ್ಯಕತೆಯನ್ನು ನನಗಾಗಿ ಹೇಗೆ ಕಂಡುಕೊಂಡೆ, ಇದರ ಮಧುರ ಸುಖಾನುಭವ ನನಗಾದ ಬಗೆ ಹೇಗೆ ಎಂಬುದೇ ಇದರ ಮೂಲ ಉದ್ದೇಶ.

ಆತ್ಮ ಮತ್ತು ಪರಮಾತ್ಮನ ಬಗ್ಗೆ ಈ ಮೊದಲಿನ ಅನುಭವ ಹೇಳಿದಂತೆ ಇದು ಸಹ. ಪರಿಶುದ್ದ  ಅರೋಗ್ಯವಂತ ದೇಹದಲ್ಲಿ ಆತ್ಮದ ಸಾನ್ನಿಧ್ಯ ಹೇಗೆ ಸಿದ್ದಿಸುತ್ತದೋ ಹಾಗೆ ಇಲ್ಲೀಯೂ ಪರಿಶುದ್ದ ದೇಹ ಮಾತ್ರವಲ್ಲ ಕಲ್ಮಶಗೊಂಡ ಮನಸ್ಸನ್ನು ಶುದ್ಧೀಕರಿಸುವುದೇ ಈ ಧ್ಯಾನದ ಮೂಲಕ. ಬೇರೆ ಯಾವ ಮಾರ್ಗದಲ್ಲೂ ಮನಸ್ಸು ಹೃದಯ ಈ ರೀತಿಯಲ್ಲಿ ಶುದ್ಧಿಯಾಗಲಾರದು. ಜಿಮ್ ಎರೊಬಿಕ್ ಹೀಗೆ ದೇಹ ದಂಡನೆಯ ದೈಹಿಕ ಆರೋಗ್ಯವನ್ನು ಕಾಪಾಡುವ ಹಲವು ವ್ಯಾಯಮ ವಿಧಾನಗಳಿರಬಹುದು. ಯಾವುದರಲ್ಲೂ ಮನಸ್ಸಿಗೆ ಧ್ಯಾನ ಮೂಲಕ ಸಿಕ್ಕಿದ ಪ್ರಚೋದನೆ ಸಿಗದು. ದೈಹಿಕ ವ್ಯಾಯಾಮದಿಂದ ದೇಹದ ಭುಜದ ಸ್ನಾಯುಗಳನ್ನು ಬಲವಾಗಿಸಿ ದೃಢಕಾಯವಾದ ಗಟ್ಟಿ ಶರೀರದಲ್ಲಿರುವ ಮನಸ್ಸಿನ ಪ್ರಚೋದನೆ ಹೇಗಿರಬಹುದು? ದೈತ್ಯ ದೇಹಿ ರಕ್ಕಸನಿಗೆ ವರಬಲ ಸಿಕ್ಕಿದಾಗ ಹೇಗೆ ಹಿಂಸಾತ್ಮಕವಾದ ಅತನ ದಾನವ ಮನಸ್ಸು ಒಳಗಾಗುತ್ತದೋ ಅದೇ ರೀತಿ, ಶಕ್ತಿಯುತವಾಗಿ ದೈತ್ಯವಾದ ಶರೀರಕ್ಕೆ ಎರಿದ ಮದ ಇಳಿಸುವ ಪ್ರಚೋದನೆ ಸಹಜವಾಗಿ ಹಿಂಸಾತ್ಮಕವಾಗಿಯೇ ಇರುತ್ತದೆ. ದೈಹಿಕ ಶಕ್ತಿಯಿಂದ ಎಲ್ಲವನ್ನು ಅಡಗಿಸುವ ಪ್ರಚೋದನೆಯದು. ಯೋಗಭ್ಯಾಸದಿಂದ ಧ್ಯಾನಯುಕ್ತವಾದ ಮನಸ್ಸಿನಿಂದ ಪ್ರಶಾಂತಗೊಂಡ ಮನಸ್ಸಿನಲ್ಲಿ ಸಹಜವಾಗಿ ಯಾವ ಬಗೆಯ ಪ್ರಚೋದನೆ ಉಂಟಾಗಬಹುದು ಎಂಬುದನ್ನು ಸುಲಭವಾಗಿ ಊಹಿಸಬಹುದು. ಶಾಂತಾವಾಗಿ ಇನ್ನೊಬ್ಬನನ್ನು ಗೆಲ್ಲುವ ಪ್ರಚೋದನೆ ಇರಬಹುದು. ಆ ಪ್ರಚೋದನೆ ಹಿಂಸ್ರವಾಗಿರದೆ  ಆತನ ಶರೀರವನ್ನು ಗೆಲ್ಲಬಯಸದೆ ಆತನ ಮನಸ್ಸನ್ನೇ ಗೆಲ್ಲಬಯಸುತ್ತದೆ. ಇದಲ್ಲವೇ ನಿಜವಾದಗೆಲುವು. ಅದಕ್ಕಾಗಿಯೇ ಹಿಂದೂ ಭಾರತ ಸಂಸ್ಕೃತಿಯೇ ಶಾಂತವಾಗಿ ಶಾಂತಿ ಮಂತ್ರವನ್ನು ಪಠಿಸುತ್ತದೆ. ಅದಕ್ಕಾಗಿ ಓಂ ಶಾಂತಿಃ ಶಾಂತಿಃ ಶಾಂತಿಃ ಎಂಬ ಶಾಂತಿ ಮಂತ್ರದ ಉಗಮಕ್ಕೆ ಇದುವೇ ನಿದರ್ಶನ. ಚಾಂಚಲ್ಯತೆ ತುಂಬಿದ ಮನಸ್ಸಿನಲ್ಲಿ ಭಗಂವತನ ಸಾನ್ನಿಧ್ಯ ಇರದು. ವ್ಯಾಕುಲತೆಯೇ ತುಂಬಿದ  ದುಮ್ಮಾನದಲ್ಲಿರುವ ಮನಸ್ಸು ಸದಾ ಜ್ವಾಲಾಮುಖಿಯಂತೆ ಸುಪ್ತವಾದ ಉದ್ವಿಗ್ನ ಯೋಜನೆಯನ್ನೆ ಮಾಡಿಕೊಂಡಿರುತ್ತದೆ. ವ್ಯಾಕುಲತೆಯನ್ನು ಬಿಟ್ಟ ಪ್ರಶಾಂತವಾದ ಸರೋರವರದಂತಿರುವ ಮನಸ್ಸಿನಲ್ಲಿ ಭಗಂತನ ನೆಲೆಯಾಗುತ್ತದೆ. ಭಗವಂತನಿರುವ ಮನಸ್ಸಿನ ಪ್ರಚೋದನೆಯೂ ಭಗವಂತ ರೂಪಿಯಾಗಿರುವುದು ಸಹಜವಲ್ಲವೆ? ಆದುದರಿಂದ ಧ್ಯಾನ ಮುಖಿಗಳಾಗಿ ಮನಸ್ಸಿನ ವ್ಯಾಕುಲತೆಯನ್ನು ದೂರಿಕರಿಸುವುದು ಅತ್ಯವಶ್ಯ. ಇದು ಏಕ ಕಾಲದಲ್ಲಿ ಒಂದಾಗಿಯೇ ಉಂಟಾಗುವ ಕ್ರಿಯೆ. ಅದಕ್ಕಾಗಿ ಮೊದಲು ಮನಸ್ಸಿನ ಕಲ್ಮಶವನ್ನು ದೂರಿಕರಿಸಬೇಕು. ಕಲ್ಮಶರಹಿತ ಮನಸ್ಸಾಗಬೇಕು.

ಈ ಧ್ಯಾನದ ಪರಿಕ್ರಮಕ್ಕೆ ಮನಸ್ಸನ್ನು ಸಿದ್ದಪಡಿಸುವಿಕೆ ಕೂಡ ತುಂಬ ಸರಳ. ಯೋಗಾಭ್ಯಾಸದ ಪ್ರಥಮಾರ್ಧವೇ ಇದು. ನಾವು ಮನೆ ಕಟ್ಟುವಾಗ ಅದಕ್ಕಾಗಿ ಹಲವು ಬಾರಿ ಯೋಚಿಸಿ ನೀಲ ನಕ್ಷೆಯನ್ನು ಸಿದ್ದಪಡಿಸುತ್ತೇವೆ. ಅಥವಾ ಮನೆಯನ್ನು ಕೊಂಡುಕೊಳ್ಳುವಾಗಲೂ ಅತ್ತ ಇತ್ತ ಒಳಗೆ ಹೊರಗೆ ನೋಡಿ ಕೊಳ್ಳುತ್ತೇವೆ. ಆಡುಗೇ ಕೋಣೆ ಹೀಗಿರಬೇಕು. ಶಯ್ಯಾಗಾರ ವಿಶಾಲಾವಾಗಿ ಗಾಳಿ ಬೆಳಕು ಸಿಗುವಂತಿರಬೇಕು. ವಿಶಾಲವಾದ ಚಾವಡಿಯಿರಬೇಕು. ಸಾಕಷ್ಟು ದೊಡ್ಡದಾದ ಸ್ನಾನ ಇತ್ಯಾದಿಯ ಕೋಣೆಯಿರಬೇಕು .. ದೇವರ ಕೋಣೇ ಇಂತಹ ದಿಕ್ಕಿನಲ್ಲಿ ಹೀಗೆ ಇರಬೇಕು.. ಈ ಆವಶ್ಯಕತೆಗಳಲ್ಲಿ ಒಂದನ್ನು ಸೇರಿಸುವುದು  ತೀರಾ ಅತ್ಯಾವಶ್ಯ ಎಂದೆನಿಸುತ್ತದೆ. ಅದೇ ಧ್ಯಾನ ಯೋಗಕ್ಕೆ ಸೂಕ್ತವಾದ ಜಾಗ. ತಕ್ಕ ಮಟ್ಟಿಗೆ ವಿಶಾಲವಾದ ಗಾಳಿ ಬೆಳಕು ಯಥೇಚ್ಚವಾಗಿರುವ ಶುಭ್ರವಾದ ಒಂದು ಕೋಣೆ.ಸೂರ್ಯೋದಯದ ಹೊಂಗಿರಣಗಳು ಬೀಳುವಂತಿದ್ದರೆ ಅತ್ಯಂತ ಸೂಕ್ತ.

         ಮುಂಜಾನೆಯ ಹೊತ್ತು ಧ್ಯಾನಕ್ಕೆ  ಅತ್ಯಂತ ಸೂಕ್ತವಾದ ಕಾಲ.ದೇಹ ಮನಸ್ಸನ್ನು ತೊಡಗಿಸುವುದು ಅತ್ಯಂತ ಸುಲಭ. ಸ್ನಾನ ಮಾಡಿ ಶುಚಿಯಾಗಿ ಬರಿದಾದ ಹೊಟ್ಟೆಗೆ ಕೇವಲ ನೀರನ್ನು ಸೇವಿಸಿ,  ಸ್ವಲ್ಪವಾದರೂ ನೀರು ಸೇವಿಸಿದರೆ ಎಲ್ಲವೂ ತಣ್ಣಗಾದ ಅನುಭವವಾಗುತ್ತದೆ. ಸಾಧ್ಯವಾದಷ್ಟು ಮಟ್ಟಿಗೆ ಶುಭ್ರವಾಗಿ ಗಾಳಿ ಬೆಳಕಿರುವ ಕೋಣೆಯ ಮಧ್ಯಭಾಗದಲ್ಲಿ ಜಮಖಾನೆ ಅಥವಾ ಚಾಪೆ ಇನ್ನಿತರ (ಹಾಸಿಗೆಯಲ್ಲದೆ) ಹಾಸನ್ನು ಹಾಸಿ ಮಧ್ಯ ಭಾಗದಲ್ಲಿ ಪದ್ಮಾಸನದಲ್ಲಿ ಅಥವಾ ವಜ್ರಾಸನ...ಇನ್ನಿತರ ಸುಖಾಸನ.... ಇಲ್ಲಿ ಗಮನಾರ್ಹವೆಂದರೆ  ಸೊಂಟದಿಂದ ಮೇಲೆ ನೇರವಾಗಿ ಸ್ಥಿರವಾಗಿ ಕುಳಿತುಕೊಳ್ಳುವುದು. ಈ ಸ್ಥಿರತೆಯೇ ಮಾನಸಿಕ ಸ್ಥಿರತೆಯನ್ನು ಮೊದಲಾಗಿ ಒದಗಿಸುತ್ತದೆ.

ನೇರವಾಗಿ ಅಲುಗಾಡದೆ ಸ್ಥಿರವಾಗಿ ಕುಳಿತ ನಂತರ ಕೈಯನ್ನು ಚಿನ್ ಮುದ್ರೆಯಲ್ಲಿರಿಸುವುದು. ಹೆಬ್ಬರಳು ಮತ್ತು ತೋರು ಬೆರಳನ್ನು ಸಾಧ್ಯವಾದಷ್ಟು ಬಿಗಿಯಾಗಿ ಸ್ಥಿರವಾಗಿ ಹಿಡಿದುಕೊಳ್ಳುವುದು. ನಿಧಾನವಾಗಿ ಕಣ್ಣರೆಪ್ಪೆಗಳನ್ನು ಮುಚ್ಚಿ ಕಣ್ಣೀನ ದೃಷ್ಟಿಯನ್ನು ಭ್ರೂ ಮಧ್ಯಕ್ಕೆ ಹೊಂದಿಸುವುದು. ಇದು ಒಂದೇ ಬಾರಿಗೆ ಸಿದ್ದಿಸದೆ ಇದ್ದರು ಪ್ರಯತ್ನಿಸುತ್ತಾ ಇದ್ದಲ್ಲಿ ಸಾಧನೆ ಕಷ್ಟವಲ್ಲ. ಮನಸ್ಸಿನ ಎಲ್ಲಾ ಯೋಚನೆಯನ್ನು  ಬದಿಗಿರಿಸಲು ಯತ್ನಿಸುವುದು.. ಸುತ್ತಲೂ ಕೇಳುವ ಹಕ್ಕಿಗಳ ಕಲರವ ವಾಹನ ಅಥವಾ ಇನ್ನಿತರ ಸದ್ದು ಗದ್ದಲದ ಕಡೆಗೆ ಔದಾಸಿನ್ಯವನ್ನು ತೋರುತ್ತ ಅದರತ್ತ ಗಮನ ಹರಿಸದಿರುವುದು.ತಮ್ಮ ಎಲ್ಲಾ ಗಮನವನ್ನು ಯೋಚನೆಯನ್ನು ಉಸಿರಿನತ್ತ ಕೇಂದ್ರೀಕರಿಸುತ್ತಾ  ದೀರ್ಘವಾದ ಉಸಿರನ್ನು ನಿಧಾನವಾಗಿ ಸಾವಧಾನದಲ್ಲಿ ತಡೆ ಇಲ್ಲದೆ ಒಳಕ್ಕೆ ಎಳೆದು ಕೊಳ್ಳುವುದು.ಹೀಗೆ ಒಳಕ್ಕೆಳೆದುಕೊಂಡಾಗ ಚೈತನ್ಯರೂಪವಾದ ಆಮ್ಲಜನಕವನ್ನು ಸಾಧ್ಯವಾದಷ್ಟು ಹೃದಯಕ್ಕೆ ತುಂಬಿಸಿಕೊಳ್ಳುತ್ತಿದ್ದೇವೆ ಎಂಬ ಭಾವನೆಯನ್ನು ಮನಸ್ಸಿನಲ್ಲಿ ಉಂಟುಮಾಡಿಕೊಂಡು ನಂತರ ನಿಧಾನವಾಗಿ ಉಸಿರನ್ನು ದೀರ್ಘವಾಗಿ ತಡೆಯಿಲ್ಲದೆ ಬಿಡುತ್ತಾ ನಿರಾಳತೆಯನ್ನು ಅನುಭವಿಸುವುದು. ಒಂದು ಬಾರಿಯ ಉಸಿರಿಗೆ  .  ಅದು ಎಷ್ಟು ಅವಧಿಯನ್ನು ತೆಗೆದುಕೊಂಡಿತೋ ಅಷ್ಟೇ ಅವಧಿಯನ್ನು ಹೊರಬಿಡುವ ಉಸಿರಲ್ಲೂ ತೆಗೆದು ಕೊಳ್ಳಲು ಪ್ರಯತ್ನಿಸುತ್ತಾ ಅದರತ್ತ ಗಮನ ಹರಿಸಬೇಕು. ಬೆನ್ನು ಸೊಂಟ ಒಟ್ಟಿನಲ್ಲಿ ದೇಹವೇ ನೇರವಾಗಿ ಸೆಟೆದು ನಿಂತಿರುವುದನ್ನು ಸಡಿಲ ಪಡಿಸದೇ ಇರಬೇಕು.ಒಂದು ಬಾರಿ ಅನುಲೋಮ ವಿಲೋಮ ಆದಕೂಡಲೆ ಎದೆ ಬಡಿತ ಕೇಳಲಾರಂಭಿಸುತ್ತದೆ. ದೀರ್ಘವಾದ ಉಸಿರಾಟಕ್ಕೆ ಹೃದಯ ಸ್ಪಂದನೆಯದು. ಇದೇ ಎಕಾಗ್ರತೆಯಿಂದ ಎಲ್ಲವನ್ನು ಮರೆತ್ತು ಕೇವಲ ಉಸಿರಿನತ್ತವೇ ಕೇಂದ್ರೀಕರಿಸಿ ನಿಧಾನವಾಗಿ ೨೦-೨೧ ಬಾರಿ ಉಸಿರನ್ನು ತೆಗೆದಾಗ ಸಮ್ಮೋಹನಕ್ಕೆ ಒಳಗಾದ ಅನುಭವಾಗಿ ನಿಲುಮೆ ಸ್ಥಿರವಾಗಿರುತ್ತದೆ.ಮನಸ್ಸು ಹೃದಯ ಶರೀರ ಶುಷ್ಕವಾದ ಅನುಭವಾಗುತ್ತದೆ. ಇದೇ ಸ್ಥಿಯಲ್ಲಿ ಕುಳಿತುಕೂಳ್ಳುವುದೇ ಯೋಗ ಎಂದು ಕರೆಸಲ್ಪಡುತ್ತದೆ.  ನಿಧಾನವಾದ ತಡೆಯಿಲ್ಲದ ನಿಃಶಬ್ಧ ಹಾಗು  ನಿಧಾನವಾದ ಉಸಿರಾಟ ಪ್ರಕ್ರಿಯೆ ಮುಂದುವರಿದಂತೆ ಹೃದಯ ಸ್ಪಂದಿಸುತ್ತ ದೇಹ ಮನಸ್ಸು ಉಲ್ಲಸಿತವಾಗುತ್ತದೆ. ಓಂಕಾರವನ್ನು  ಐದಾರು ಬಾರಿ ಗಂಟೆಯ ನಿನಾದದಂತೆ ಉಚ್ಚರಿಸಿದಂತೆ ಯೋಗದ ಪ್ರಥಮ ಮೆಟ್ಟಿಲನ್ನು ಏರಿನಿಂತಹಾಗೆ ಅಗುತ್ತದೆ. ಆರಂಭದಲ್ಲಿ ಈ ಹಂತವೇ ತುಂಬ ಕಠಿಣ ಅಂತೆನಿಸಿದರೂ ೨-೩ ದಿನದಲ್ಲಿ ಗಮನಾರ್ಹವಾದ ಸಾಧಾನೆಯನ್ನು ಸಾಧಿಸಬಹುದು. ಮುಂಜಾನೆಯ ಹೊತ್ತು ವಾತಾವರಣದಲ್ಲಿ ಸಹಜವಾಗಿ ಆಮ್ಲಜನಕದ ಪ್ರಮಾಣ ಹೆಚ್ಚಿರುತ್ತದೆ. ಹಾಗಾಗಿ ಅಧಿಕವಾದ ಆಮ್ಲಜನಕ ಹೃದಯವನ್ನು ಸೇರುತ್ತ ದೇಹದ ಚೈತನ್ಯವನ್ನು ಅಧಿಕಗೊಳಿಸಿ ದಿನಪೂರ್ತಿಯ ಚಟುವಟಿಕೆಗೆ ಬೇಕಾದಷ್ಟು ಶಕ್ತಿ ಸಂಚಯನವಾಗುವಂತಾಗುತ್ತದೆ.  ಹೀಗೆ ಸರಳವಾಗಿ ಸುಲಭವಾಗಿ ನಿರಾಯಾಸವಾಗಿ ಯಾವುದೇ ವಯೋಮಾನದವರು ಮಾಡಬಹುದಾದ ಈ ಧ್ಯಾನಯೋಗ ಮನಸ್ಸಿನ ಭಾವನೆಗೆ ಸೌಮ್ಯವಾದ ರೂಪವನ್ನು ಕೊಡುತ್ತದೆ. ದೇಹಕ್ಕೂ ಮನಸ್ಸಿಗೂ ಪ್ರಕೃತಿಗೂ ಇರುವ ಅವಿನಾಭಾವ ಸಂಬಂಧವನ್ನು ವ್ಯಕ್ತ ಪಡಿಸುತ್ತದೆ. ಮನುಷ್ಯ ಪ್ರಕೃತಿಯ ಒಂದು ಅಂಗ. ಈ ಪ್ರಕೃತಿ ಮನಸ್ಸು ಮತ್ತು ದೇಹದ ಸ್ಪಂದನೆಯ ಭಾಷೆಯ ಅರಿವಾದಾಗ ನಾವೇನ್ ನಮ್ಮ ದೇಹ ಏನು ನಮ್ಮ ಮನಸ್ಸೇನು ಅತ್ಮವೇನು ನಮ್ಮ ಭಾವನೆಯ ಉತ್ಪತ್ತಿ ಮತ್ತು ನಿಯಂತ್ರಣ ಹೇಗೆ .ಎಲ್ಲವೂ ಅರಿವಾದ ಹಾಗಾಗುತ್ತದೆ. ಪಾರಮಾರ್ಥಿಕ ಸತ್ಯದ ಅರಿವು ಸ್ವಲ್ಪ ಸ್ವಲ್ಪವೆ ಅರಿವಿಗೆ ಬರುತ್ತದೆ. ಇದಕ್ಕೆ ಯಾವುದೇ ಗ್ರಂಥವಾಗಲಿ ಪುಸ್ತಕವಾಗಲಿ ಅಧ್ಯಯನ ಮಾಡುವ ಆವಶ್ಯಕತೆ ಇರುವುದಿಲ್ಲ ತುಂಬ ಸರಳವಾದ ಸುಲಭವಾದ ವಿಧಾನದಲ್ಲಿ ಮಹತ್ವವಾದ ಸಾಧನೆಯನ್ನು ಮಾಡಿದ ಅನುಭವವಾಗುತ್ತದೆ. ಮನಸ್ಸಿನ ವ್ಯಗ್ರತೆ ಮರೆಯಾಗಿ ಸೌಮ್ಯತೆ ನೆಲೆಯಾಗುತ್ತದೆ. ಜೀವರಾಶಿ ಮಾತ್ರವಲ್ಲ ಸಮಷ್ಟಿಯಲ್ಲಿ ಪ್ರಕೃತಿಯ ಬಗ್ಗೆ ಅವ್ಯಕ್ತ ಮೋಹ ಉಂಟಾಗುತ್ತದೆ. ಮನುಷ್ಯ ಮನುಷ್ಯರ ನಡುವಿನ ದ್ವೇಷ ಅಸೂಯೆ ವೈಷಮ್ಯ ಮಾಯವಾದ ಅನುಭವಾಗಿ ಶಾಂತಿ ಮಂತ್ರದ  ಸಾರ್ಥಕತೆಯ ನಿಜ ಅರ್ಥ ಸ್ಪುರಿಸುತ್ತದೆ. ಹೊಸ ಜ್ಞಾನ ಪ್ರವಾಹಕ್ಕೆ ನಮ್ಮ ಹೃದಯ ಸರೋವರವಾಗುತ್ತದೆ.



Thursday, June 9, 2011

ಆತ್ಮವೆಂದರೆ ಪರಮಾತ್ಮ.


.ಯೋಗೇನ ಚಿತ್ತಸ್ಯ ಪದೇನ ವಾಚಾಂ ಮಲಂ ಶರೀರಸ್ಯಚ  ವೈದ್ಯಕೇನ
ಯೋಪಾ ಕರೋತ್ತಂ  ಪ್ರವರಂ ಮುನೀನಾಂ  ಪತಂಜಲೀಂ ಪ್ರಾಂಜಲೀಂ ರಾನತೋಸ್ಮಿ

ಪತಂಜಲೀ ಮಹರ್ಷಿಯ ಸ್ಮರಣೆಯನ್ನು ಯೋಗಾಭ್ಯಾಸದ ಮೊದಲು ಮಾಡುತ್ತಿದಂತೆ ಮುಂಜಾನೆಯ ಶಾಂತ ನೀರವ ಮೌನಕ್ಕೆ ಮನಸ್ಸು ಸ್ಪಂದಿಸತೊಡಗುತ್ತದೆ. ಉದಿಸುವ ಭಾಸ್ಕರನಿಗೆ ನಮ್ಮ ಮುಖದ ಶಕುನವನ್ನು ತೋರಿಸುವ ಪ್ರಯತ್ನ. ಅದಕ್ಕಾಗಿ ಸೂರ್ಯೋದಯದ ಮೊದಲು ಏಳುವುದು ಅನಿವಾರ್ಯ. ಮಾತ್ರವಲ್ಲ ನಮ್ಮ ಹಿಂಬಾಲಕರು ನಮಗಿಂತ ಮೊದಲು ಸಿದ್ದವಿದ್ದರೆ ನಮ್ಮಲ್ಲಿ ಉತ್ಸಾಹ ಮೂಡುವುದಿಲ್ಲವೇ.? ಹಾಗಾಗಿ ನಿತ್ಯ ಬದುಕಿನಲ್ಲಿ ಪ್ರತಿಯೊಂದು ಜೀವಿಯೂ ಸೂರ್ಯನ ಹಿಂಬಾಲಕರಾಗಿ ದಿನ ಕಳೆಯುತ್ತಾರೆ. ಹಾಗಾಗಿ ಸೂರ್ಯನಿಗಿಂತ ಮೊದಲು ನಮ್ಮ ದಿನ ಆರಂಭವಾಗಬೇಕು.  ನಿತ್ಯ ಕರ್ಮಗಳನ್ನು ಪೂರೈಸಿ , ಕಣ್ಣಿಗೆ ಕಂಡಷ್ಟು ಸೂರ್ಯೊದಯವನ್ನು ಕಂಡು ಸೂರ್ಯನ ಬಗೆಗಿನ ಮಿಕ್ಕ ಕಲ್ಪನೆಯನ್ನು ಮನದಲ್ಲೆ ಮಾಡಿದಾಗ ದಿನದಾರಂಭವಾಗುತ್ತದೆ. ಬದುಕಿನಲ್ಲಿ ಮತ್ತೊಂದು ಹೊಸದಿನದ ಆರಂಭ.

ಯೋಗ ಎಷ್ಟೊಂದು ಅರ್ಥ ಪೂರ್ಣ ಪದಪ್ರಯೋಗ. ಮಾನಸಿಕ ಹಾಗು ದೈಹಿಕ ಅರೋಗ್ಯವನ್ನು ಕಾಪಾಡಿಕೊಳ್ಳುವುದೇ ಒಂದು ಯೋಗ. ಅದು ಸುಲಭದಲ್ಲಿ ಲಭ್ಯವಾಗಬೇಕಾದರೆ ಈ ಯೋಗದ ಸಾಧನೆಯನ್ನು ಮಾಡಬೇಕು. ಸರಳವಾದ ವ್ಯಾಯಾಮ,ಸರಳವಾದ ಮನಸ್ಸು , ಸರಳವಾದ ಜೀವನ ಶೈಲಿ, ಸರಳವಾದ ಬದುಕು ಹೀಗೆ ಎಲ್ಲವೂ ಒಂದು ಸರಳರೂಪದಲ್ಲಿ ಸರಳ ರೇಖೆಯಲ್ಲಿರುತ್ತದೆ. ಇಲ್ಲವಾದರೆ ಮನಸ್ಸು ದೇಹ ಬದುಕು ಹೀಗೆ ಎಲ್ಲವೂ ವಕ್ರ ವಕ್ರವಾಗಿಬಿಡುತ್ತದೆ.

ಬಾಲ್ಯದಲ್ಲಿ ಶಾಲಾ ಮೈದಾನದಲ್ಲಿ ವಿವಿಧ ವ್ಯಾಯಾಮಕ್ಕಾಗಿ ನಮ್ಮನ್ನು ಸಾಲಾಗಿ ಶಿಸ್ತಿನಲ್ಲಿ ನಿಲ್ಲಿಸುತ್ತಿದ್ದರು. ಕಾಣುವುದಕ್ಕೆ ಸುಂದರವಾದ ನೋಟ. ಆದರೂ ಸಾಲಾಲ್ಲಿ ನಿಂತಿದ್ದ  ಅಷ್ಟೂ ಹೊತ್ತಿನಲ್ಲಿ ಒಂದಿಷ್ಟಾದರೂ ನಿಂತಿದ್ದ ಸಾಲಿನಿಂದ ಸ್ವಲ್ಪ ಜರಗಿ ನಿಲ್ಲೋಣ, ಒಂದು ಬಾರಿ ಈ ಶಿಸ್ತಿನ ಪರಿಧಿಯಿಂದ ಆಕಡೆ ಸರಿಯೋಣ ಅಂತ ಮನಸ್ಸಿಗೆ ಅನ್ನಿಸಿಬಿಡುತ್ತದೆ. ಇದು ಸಹಜ. ಹಾಗಾಗಿ ಒಂದು ಶಿಸ್ತಿನ ಬದುಕು ಜೀವನ ಶೈಲಿ ಅಳವಡಿಸಿಕೊಳ್ಳುವಾಗ ಅದರಿಂದ ಸ್ವಲ್ಪ ವಿಚಲಿತರಾಗಿ ಒಂದಿಷ್ಟು ಬದಲಾಯಿಸೋಣ ಅಂತ ಮನಸ್ಸು ಪ್ರೇರೇಪಿಸುತ್ತದೆ. ಅದರ ಆಕರ್ಷಣೆಯೇ ಅಂಥಹುದು. ಆತ್ಮ ಅಂದರೆ ಪರಮಾತ್ಮ ದೇಹದ ಚೇತನ ಎಂದು ಕರೆಸಲ್ಪಡುತ್ತದೆ. ಪರಿಶುದ್ದವಾದ ಸ್ಥಳದಲ್ಲಿ ಪರಮಾತ್ಮ ನೆಲೆಸಿರುತ್ತಾನೆ. ಅತ್ಯಂತ ಸರಳವಾದ ಮಾತಿದು.  ಅದಕ್ಕೆ ಅಲ್ಲವೇ ದೇವಾಲಯದ ಪರಿಸರ ಪರಿಶುದ್ದವಾಗಿಯೂ ಪವಿತ್ರವಾಗಿಯೂ ಇರುವುದು. ಅಥವಾ ಇರಿಸಲು ಪ್ರಯತ್ನಿಸುವುದು.  ಎಲ್ಲಿ ಪರಿಶುದ್ದತೆ ಪಾವಿತ್ರ್ಯತೆ ಇರುವುದೋ ಅಲ್ಲಿ ದೇವರು ನೆಲೆಸಿರುತ್ತಾನೆ. ಇದು ಕೇವಲ ನಂಬಿಕೆಯಲ್ಲ. ಆತ್ಮ ಪರಮಾತ್ಮವೆಂದು ಭಾವಿಸುವಾಗ ಅ ಜೀವಾತ್ಮ ಶರೀರದಲ್ಲಿ ನೆಲೆಸಿರಬೇಡವೆ. ದೇಹದಲ್ಲಿ ಚಲನೆಯನ್ನು ತರಬಲ್ಲ ಆತ್ಮ ಯಾವಾಗ ಶರೀರವನ್ನು ತೊರೆಯುವುದೋ ಆವಾಗ ಶರೀರ ಚೇತನಾಶೀಲವನ್ನು ಕಳೆದು ನಿಶ್ಚಲವಾಗಿ ಜಡವಾಗಿಬಿಡುತ್ತದೆ. ಪ್ರತಿಯೊಂದು ಚರ ವಸ್ತುಗಳೂ ಈ ಪರಮಾತ್ಮನ ಇರುವಿಕೆಯನ್ನು ಅವಲಂಬಿಸಿವೆ. ಪರಮಾತ್ಮನ ನೆಲೆಗೆ ಪರಿಶುದ್ದವಾದ, ರೋಗರಹಿತ ಅಂದರೆ ಅರೋಗ (ಇದು ಆರೋಗ್ಯ ಎಂದು ವಿಶೇಷಿಸಲ್ಪಡುತ್ತದೆ) ವಾದ ದೇಹ ಅತ್ಯವಶ್ಯ ಪರಿಶುದ್ದ ದೇಹ ಮನಸ್ಸನ್ನು ಆತ್ಮ ರೂಪವಾದ ಪರಮಾತ್ಮನಾದ ದೇವರಿಗೆ ಒದಗಿಸಬೇಕಾದುದು ಆವಶ್ಯಕ. ಅದು ಪರಮಾತ್ಮ ನೀಡುವ ಮೋಕ್ಷ ಲಕ್ಷ್ಯವೂ ಆಗಿಬಿಡುತ್ತದೆ. ಇದಕ್ಕಾಗಿಯೆ ಪತಂಜಲೀ ಮಹರ್ಷಿಯ ಯೋಗಮಾರ್ಗವೇ ಸೂಕ್ತ. ಶರೀರವನ್ನು ರೋಗರಹಿತವನ್ನಾಗಿಸುವುದೇ ಈ ಯೋಗ ಸಾಧನೆಯ ಮೂಲಕ. ತನ್ಮೂಲಕ ಪರಮಾತ್ಮನ ಸಾನ್ನಿಧ್ಯ ಪ್ರಾಪ್ತಿಯಾಗುತ್ತದೆ.

ಯೋಗದಲ್ಲಿ ಹಲವುವಿಧಗಳಿರಬಹುದು. ಅದನ್ನೆಲ್ಲ ಸಾಧಿಸುವುದು ಅತ್ಯಂತ ಕಠಿಣವೂ ಆಗಬಹುದು. ಆದರೆ ಪತಂಜಲೀ ಮಹರ್ಷಿ ತೋರಿಸಿಕೊಟ್ಟ ಪ್ರಾಣಾಯಾಮವೇ ಮೊದಲಾದ ಸರಳ ವಿಧಾನವನ್ನು ಯಾರೂ ಸುಲಭದಲ್ಲಿ ಅಳವಡಿಸಬಹುದು. ಇದು ಧರ್ಮಾತೀತವೂ ಕಾಲಾತೀತವೂ ಆಗಿರುತ್ತದೆ. ನಾವು ಶ್ರಧ್ಹೆಯಿಂದ ಅನುಸರಿಸುವುದು ಮಾತ್ರ ಮುಖ್ಯ. ಯಾವುದೇ ಸಮಯದಲ್ಲಿ ಮಾಡಬಲ್ಲಂತಹ ಯೋಗವಿಧಾನಗಳು ಇಂದು ಬಳಕೆಯಲ್ಲಿವೆ.  ಆದರೂ ಆ ಬಗ್ಗೆ ನಮ್ಮ ಲಕ್ಷ್ಯ ವಿರುವುದಿಲ್ಲ.

ಹಲವರಲ್ಲಿ ನನ್ನ ಅನುಭವಗಳನ್ನು  ಹಲವರಲ್ಲಿ ಹೇಳಿದಾಗ ಹಲವರ ಅಭಿಪ್ರಾಯಗಳು ಎಷ್ಟೊಂದು ಹಾಸ್ಯಾಸ್ಪದವಾಗಿ ಕಾಣುತ್ತದೆ. ಸಾರ್ವತ್ರಿಕವಾದ ಕೆಲವು ಅಭಿಪ್ರಾಯಗಳೂ ಸಮಯವಿಲ್ಲ, ಕಲಿಬೇಕು, ಆಗುತ್ತಿಲ್ಲ.. ಹೀಗೆ.  ಒಬ್ಬರ ಮನೆಗೆ ಸಾಯಂಕಾಲದ ವೇಳೆ ಭೇಟಿಕೊಟ್ಟಾಗ ಬಂದ ಮಾತು ತೀರವಿಚಿತ್ರವಾಗಿ ಕಂಡಿತು. ಸಾಯಂಕಾಲದ ಟೀ.ವಿ. ಪರಂಪರೆಯಲ್ಲಿ ಮುಳುಗಿ ತಮ್ಮ ಮನಸ್ಸನ್ನು ಕೆಡಿಸಿಕೊಂಡವರೊಬ್ಬರು ಸಮಯವಿಲ್ಲ ಎಂದು ಹೇಳಿದುದು. ದಿನಾ ಬರುವ ಬದುಕು ಎಂಬ  ಒಂದು ಸೀರಿಯಲ್ ಮತ್ತು ಈ, ಒಂದು ಸೀರಿಯಲ್ ಮಾತ್ರವೇ ನಾನು ನೋಡುವುದು ಅದೊಂದು  ನೋಡದಿದ್ದರೆ ಆಗುವುದಿಲ್ಲ. ಅದಕ್ಕೆ ಕನಿಷ್ಠವೆಂದರು ಇವರು ಅರ್ಧ ಗಂಟೆಯಿಂದ ಮೇಲಿನ ಸಮಯ ಮೀಸಲಿಡುತ್ತಾರೆ ಎಷ್ಟು ವಿಚಿತ್ರವಲ್ಲವೇ?ಮನುಷ್ಯನ ಬದುಕು ದಿಕ್ಕು ತಪ್ಪಿ ಹಳಿ ತಪ್ಪಿ ಹೋಗುತ್ತಿರುವಾಗ ಇವರಿಗೆ ಟೀವಿ ಬದುಕು ವಿನ ಚಿಂತೆ...!!!

ಇನ್ನೊಬ್ಬರದು ಇನ್ನೊಂದು ಬಗೆ ಯೋಗ ಪ್ರಾಣಾಯಾಮದ ಬಗ್ಗೆ ಹೇಳಿದಾಗ ತಮ್ಮ ಉಸಿರಾಡುವ ಉಸಿರಿನ ಬಗ್ಗೆ ತುಂಬ ಗಂಭೀರರಾಗುವ ಎದೆ ಹಿಡಿದು ದೀರ್ಘ ಶ್ವಾಸ ಬಿಡುತ್ತ  ಇವರು ಮತ್ತೆ ಯಥಾಪ್ರಕಾರ ಅದನ್ನು ಮರೆತು ಬಿಡುತ್ತಾರೆ. ಒಬ್ಬರ ಮನೆಯ ಬೀರುವಿನಲ್ಲಿ ಕಂಡ ಕಫ್ ಸೀರಪ್ ಗಳ ಬಾಟಲ್ ಮತ್ತು ಪ್ಯಾರಸಿಟಮಲ್ ಮಾತ್ರೆಗಳನ್ನು ಕಂಡು ನಾನು ಹೇಳಿದೆ ಯೋಗಾಭ್ಯಾಸ ಮಾಡಿದರೆ ಇದನ್ನೆಲ್ಲ ತರುವ ಅಗತ್ಯವೇ ಇಲ್ಲ ಎಂದು. ವಿಚಿತ್ರವಾಗಿ ನನ್ನನ್ನು ನೋಡಿದರು.ನನ್ನ ಮಾತೆ ಹಾಸ್ಯಾಸ್ಪದವಾಗಿ ಕಂಡು ಅದನ್ನು ನಂಬುವ ಸ್ಥಿತಿ ಅವರಲ್ಲಿ ಇಲ್ಲವಾಗಿತ್ತು. ಈ ನೋವಿನ ಮಾತ್ರೆ ಔಷಧಿಗಳು ಎಷ್ಟೊಂದು ಅನಿವಾರ್ಯ ಅಂಗವಾಗಿದೆ?

ನಮಗೆ ಎಲ್ಲದಕ್ಕೂ ಸಮಯವಿದೆ, ಊಟಕ್ಕೆ ನಿದ್ದೆಗೆ ಸಮಯವಿದೆ ಆದರೆ ಒಂದಿಷ್ಟು ಹೊತ್ತು ಈ ಕಾರ್ಯಕ್ಕೆ ಮಾತ್ರ ಸಮಯವೆ ಸಿಗುವುದಿಲ್ಲ. ದೈಹಿರೋಗ ಭಾಧೆಯಿಂದ ವೈದ್ಯರ ಸಲಹೆ ಮೇಲೆ ಹಾಸಿಗೆಯಲ್ಲಿ ಮಲಗಿ ವಿರಾಮ ತೆಗೆದುಕೊಳ್ಳುವುದಕ್ಕೆ ಅನಿವಾರ್ಯವಾಗಿ ನಾವು ಸಮಯ ಮಾಡಿಕೊಳ್ಳಬೇಕಾಗುತ್ತದೆ ಇದರ ಅರಿವೆ ಇಲ್ಲ ನಮಗೆ. ಹಲವರಿಗೆ ಮುಂಜಾನೆ ಬೇಗನೆ ಏಳುವುದೆಂದರೆ ಯಾವುದೋ ಶಿಕ್ಷೆ ಅನುಭವಿಸಿದಂತೆ. ನಿದ್ದೆ ಕಡಿಮೆ ಆದರೆ ತಲೆನೋವು ಬರುತದೆ ವಾಂತಿ ಬರುತ್ತಿದೆ ಎಂಬ ಸಬೂಬುಗಳನ್ನು ಕೊಡುವವರು ಇದ್ದಾರೆ. ನಾನು ಮಾಡಿದ ಯೋಗಾಭ್ಯಾಸದ ಸಲಹೆ ಸ್ವೀಕರಿಸದೆ ಮತ್ತೆ ಯಥಪ್ರಕಾರ ತಲೆನೋವು ಬಂದ ಕೂಡಲೆ ಮಾತ್ರೆಗೆ ಶರಣಾಗುವವರು ಇದ್ದಾರೆ. ಗಮನಿಸಿ ಯಾವುದೇ ತಲೆನೋವು, ಶೀತ ವ್ಯಾಧಿಯನ್ನು ಶಾಶ್ವತವಾಗಿ ದೂರವಿಡಬಲ್ಲ ಮಾತ್ರೆ ಔಷಧಿಯೇ ಇಲ್ಲ. ಆದರೆ ಯೋಗಾಭ್ಯಾಸದಿಂದ ಇದು ಸಾಧ್ಯ...ಆದರೂ ಅದು ನಮಗೆ ಬೇಡವಾಗಿದೆ. ಈ ಬಗೆಯ ಮಾತುಗಳೇ ರುಚಿಸುವುದಿಲ್ಲ.

 ಅನುಭವದಿಂದ ಹೇಳುವುದಾದರೆ ಯೋಗಾಭ್ಯಾಸ ತೊಡಗಿಸಿದ ಮೇಲೆ ನನಗೆ ನೆಗಡಿ ಜ್ವರ ಇತ್ಯಾದಿಗಳು ಆಗಿಲ್ಲ. ಯಾವುದೇ ನೋವು ನಿವಾರಕ ಆಂಟಿ ಬಯೊಟೆಕ್ ಆಗಲಿ ಪ್ಯಾರಸಿಟಮಲ್ ಆಗಲಿ ತೆಗೆದುಕೊಳ್ಳುವ ಪ್ರಮೇಯವೇ ಬಂದಿಲ್ಲ. ಮೊದಲೆಲ್ಲ ತಿಂಗಳಿಗೊಂದೆರಡು ಸಲ ಜ್ವರ ಶೀತ ಎಂದು ಬಳಲುತ್ತಿದ್ದ ನನಗೆ ಇದು ಮಹಾಸಾಧನೆಯಂತೆ ತೋರುತ್ತದೆ. ಬೆಂಗಳೂರು ಮಾತ್ರವಲ್ಲ ಇಂದು ಯಾವುದೇ ನಗರವಾದರು ಹಲವು ನೈರ್ಮಲ್ಯದ ಸಮಸ್ಯೆಯನ್ನು ಎದುರಿಸುತ್ತದೆ. ಫ್ಲೈ ಒವರ್..ಮೆಟ್ರೋರೈಲು ಕಟ್ಟಡ ಕಾಮಗಾರಿಗಳು ನಡೆಯದ ಸ್ಥಳಗಳಿಲ್ಲ. ಸಹಜವಾಗಿ ಅಸ್ಥಮ ಅಲರ್ಜಿಯಂತಹ ಖಾಯಿಲೆಗಳು ಸರ್ವೇ ಸಾಮಾನ್ಯವಾಗಿದೆ. ಧೂಳಿನ ಅಲರ್ಜಿಯ ತೊಂದರೆಯಿಂದ ನಾನು ಎಷ್ಟು ತೊಂದರೆಗೊಳಗಾಗುತ್ತಿದ್ದೆನೆಂದರೆ ..  ಮನೆ ಬಿಟ್ಟು ಹೊರಗೆ ರಸ್ತೆಗಿಳಿದ ತಕ್ಷಣವೇ ನಿರಂತರವಾಗಿ ಬರುವ ಸೀನು ಕಣ್ಣುರಿಗಳು ಇಂದು ಹೇಳ ಹೆಸರಿಲ್ಲದೆ ಮಾಯವಾಗಿಬಿಟ್ಟಿದೆ. ಇದಕ್ಕಾಗಿ ಔಷಧೋಪಚಾರ ವೈದ್ಯರನ್ನು ಕಾಣುವುದು ಇದೆಲ್ಲ ಇಲ್ಲವೇ ಇಲ್ಲ. ಇದೆಲ್ಲ ನನ್ನ ಸರಳವಾದ ಯೋಗಾಭ್ಯಾಸದಿಂದ ಸಾಧ್ಯವಾಯಿತು. ದುಶ್ಟಟಗಳು ಇರದ ಮನುಷ್ಯ ಬಹಳ ವಿರಳ.. ನಾನು ಇದಕ್ಕೆ ಅತೀತನಾಗಿಲ್ಲ. ಆದರೆ ಎಲ್ಲವನ್ನೂ ಮೆಟ್ಟಿನಿಲ್ಲುವ ಬಗೆ ಈ ಯೋಗಾಭ್ಯಾಸದಿಂದ ಸಾಧ್ಯವಾಯಿತು. ತ್ರಿಕಾಲದಲ್ಲಿ ತೆಗೆದು ಕೊಳ್ಳುವ ಆಹಾರವಲ್ಲದೆ ಬೇರೆ ಸಮಯ ಮೀರಿದ ಆಹಾರಕ್ಕೆ ನಿಮಗೆ ಮನಸ್ಸಲ್ಲಿ ಪ್ರಚೋದನೆಯೇ ಬಾರದು. ಸಾಯಂಕಾಲದ ಉಪಾಹಾರ ಆರೋಗ್ಯವನ್ನು ಎಷ್ಟು ಅಸ್ಥಿರಗೊಳಿಸುತ್ತದೆ ಎಂದು ಬಹಳ ಜನರಿಗೆ ಅರಿವಿಲ್ಲ. ಸಾಯಂಕಾಲ ರಸ್ತೆಗಿಳಿದೊಡನೆ ಇಂದು ಫಾಸ್ಟ ಫುಡ್  ಪಾನಿ ಪೂರಿ ಹೋಟೆಲುಗಳು ಅಲ್ಲದೆ ರಸ್ತೆ ಬದಿ ಆಹಾರ ಸಿದ್ದ ಮಾಡುವ ವ್ಯಾಪಾರಿಗಳು ಭರದಿಂದ ಕಾರ್ಯಪ್ರವ್ ತ್ತರಾಗುವುದನ್ನು ಕಾಣಬಹುದು. ಇವುಗಳೆಲ್ಲ ಹೊಟ್ಟೆಯೊಳಗೆ ಗ್ಯಾಸ್ ತುಂಬಿಸುವ ರೀಫಿಲ್ಲಿಂಗ್ ಕಾರ್ಖಾನೆಯಂತೆ ಭಾಸವಾಗುತ್ತದೆ. ಮನೆಯಲ್ಲೇ ಆದರೂ ಸಾಯಂಕಾಲದ ಘನ ಆಹಾರ ಅರೋಗ್ಯಕ್ಕೆ ಒಳ್ಳೆಯದಲ್ಲ. ಇದೆಲ್ಲ ರೂಢಿಮಾಡಿಕೊಳ್ಳಲು ಯೋಗಾಭ್ಯಾಸಕ್ಕಿಂತ ಉತ್ತಮ ದಾರಿ ಬೇರೆ ಇಲ್ಲ. ಜಿಮ್ ..ಸಾಲ್ಸಾ.. ಅಥವಾ ಏರೋಬಿಕ್ ನಲ್ಲಿ ಆಹಾರ ನಿಯಂತ್ರಣ ಕಡ್ಡಾಯ. ಇದನ್ನು ಡಯಟ್ ಎಂದು ಕರೆದು ಆಹಾರ ಮಿತಿಯಲ್ಲಿ ತಿನ್ನುವಂತೆ ನಿರ್ಬಂಧಿಸುತ್ತಾರೆ. ಆದರೆ ನೀವು ಯೋಗಾಸನ ಮಾಡಲು ತೊಡಗಿದರೆ ಇದನ್ನು ಹೇಳಬೇಕೆಂದಿಲ್ಲ ಅನವಶ್ಯಕ ಆಹಾರಕ್ಕೆ ಮನಸ್ಸಿನಲ್ಲಿ ಬಯಕೆಯೇ ಉಂಟಾಗುವುದಿಲ್ಲ. ಅಲ್ಲಿ ತಿನ್ನಬೇಕು ಎಂಬ ಮನದಾಶೆಯನ್ನು ಹತ್ತಿಕ್ಕಿಕೊಂಡು ಡಯಟ್ ಮಾಡುತ್ತೇವೆ. ವಿವಿಧ ಬಗೆಯ  ಡಯಟ್ ಆಹಾರಕ್ಕೆ ಧನ ವ್ಯಯ ಮಾಡುತ್ತೇವೆ. ಆದರೆ ಈ ಯೋಗಭ್ಯಾಸದಲ್ಲಿ ಮನಸ್ಸಿನ ಭಾವನೆ ಹತ್ತಿಕ್ಕಿಕೊಳ್ಳುವ ಪ್ರಮೇಯವೇ ಇಲ್ಲ. ಮಾತ್ರವಲ್ಲ ಅನಾವಶ್ಯಕ ಧನವ್ಯಯವೂ ಇಲ್ಲ. ಮನಸ್ಸು ದೇಹ ನಿರಾಳಾವಾಗಿ ನಿಯಂತ್ರಣದಲ್ಲೇ ಇರುತ್ತದೆ.  ಆದರೂ ಇಂದು ಹೊರಗಿನ ಜಾಹೀರಾತಿಗೆ ಮರುಳಾಗುವುದೇ ಅಧಿಕ.

 ಒಂದೆರಡು ತಿಂಗಳಾದರು ಯೋಗ ತರಬೇತಿಯನ್ನು ಸೂಕ್ತ ಗುರುಗಳಲ್ಲಿ ಕಲಿತುಕೊಳ್ಳುವುದು ಅತ್ಯವಶ್ಯ. ಪುಸ್ತಕ ಓದಿ ಅಥವಾ ಟಿ.ವಿ. ವೀಡಿಯೋ ನೋಡಿ ಮಾಡುವುದು ಅಷ್ಟೊಂದು ಸೂಕ್ತವಲ್ಲ. ತಪ್ಪಿಲ್ಲದೆ ಮಾಡುವ ವಿಧಾನ ಅತ್ಯಂತ ಹೆಚ್ಚಿನ ಪ್ರತಿಫಲವನ್ನು ಕೊಡುತ್ತದೆ. ಪ್ರಾಣಾಯಾಮ ಎಂದೊಡನೆ ಮೂಗಿನ ಹೊಳ್ಳೆಗಳಿಂದ ಗಾಳಿಯನ್ನು ಬಿಡುವುದು ಎಂಬ ತಪ್ಪು ಕಲ್ಪನೆಯಿದೆ. ಇದು ತೀರ ಕ್ಷುಲ್ಲಕವಾದ ಕಲ್ಪನೆ. ಸರಿಯಾದ ಗುರುಮುಖೇನ ಅಭ್ಯಾಸ ಮಾಡಿ ಅದನ್ನು ಸಾಧಿಸಿದವರಿಗೆ ಮಾತ್ರವೇ ಇದರ ಅರಿವಾಗಬಹುದು. ಬರೀ ಒಂದು ಉಸಿರಿನ ವಿಧಾನದಲ್ಲೇ ನಾವು ಊಹಿಸದ ಸಂಗತಿಗಳಿವೆ.

ಬಾಲ್ಯದಲ್ಲಿ ಯೋಗಾಸನ ಎಂದರೆ ನನ್ನಲ್ಲಿ ಒಂದು ತಪ್ಪು ಕಲ್ಪನೆಯಿತ್ತು.  ವಿವಿಧ ದೇಹದಂಡನೆಯ ದೇಹ ಬಾಗಿಸುವಿಕೆಯ ಕಸರತ್ತು ಇದು ಎಂದು ಭಾವಿಸಿದ್ದೆ. ಕೆಲವೇ ಮಂದಿಗಳಿಗಾಗಿ ಎಂಬ ನನ್ನ ತಪ್ಪು ಕಲ್ಪನೆ ಅದು ಕಲಿವಾಗಲೇ ಅರಿವಾದದ್ದು.ಬಹಳ ಸರಳವಾದ ಮತ್ತು ಅಷ್ಟೇ ಪ್ರಭಾವ ಪೂರ್ಣ ಆಸನಗಳು ಉಪಯುಕ್ತ ವಾದ ಸರಳ ಪ್ರಾಣಾಯಾಮ ಕ್ರಿಯೆ ಇಷ್ಟೊಂದು ಸುಲಭವೇ ಎಂದು ಸೋಜಿಗಪಡುವಂತಾಯಿತು.ಯೋಗಾಸನದಲ್ಲಿ ಅತಿ ಮುಖ್ಯ ಖಡ್ಡಾಯ ಆಸನದಲ್ಲಿ ಒಂದು ಶವಾಸನ. ಎಷ್ಟೊಂದು ಸರಳವಾದ ಆಸನ. ಶವದಂತೆ ಅಲುಗಾಡದೆ ಚಲನರಹಿತವಾಗಿ ಮಲಗುವುದೇ ಶವಾಸನ. ಇಲ್ಲಿ ದೇಹಮಾತ್ರ ನಿಶ್ಚಲವಾಗಿರುವುದಿಲ್ಲ ಮನಸ್ಸು ಕೂಡ ನಿಶ್ಚಿಂತೆಯಿಂದ ನಿರಾಳವಾಗಿರುವ ಆಸನವಿದು. ಹತ್ತರಿಂದ ಹದಿನೈದು ನಿಮಿಷದ ಈ ಆಸನ ಮಾಡಿದವನಿಗೆ ಮಾತ್ರ ಇದರ ಅನುಭವವನ್ನು ಹೇಳುವುದು ಸಾಧ್ಯ. ಇದು ದೇಹದ ಮನಸ್ಸಿನ ಅರೋಗ್ಯಕ್ಕೆ ಅತ್ಯಂತ ಸಹಕಾರಿ. ಬಹಳ ಜನರಲ್ಲಿ ತಪ್ಪು ಕಲ್ಪನೆ ಇದೆ.. ವಿಶ್ರಾಂತಿ ತೆಗೆದುಕೊಳ್ಳುವುದೆಂದರೆ ಮಲಗಿ ನಿದ್ದೆ ಮಾಡುವುದು. ಅದು ನಿಜವಾಗಿ ವಿಶ್ರಾಂತಿ ಎನಿಸಿಕೊಳ್ಳುವುದಿಲ್ಲ. ಕೇವಲ ನಿದ್ದೆ ಮತ್ತು ಜಾಡ್ಯದದ ಸಂಕೇತವಷ್ತೇ.. ದಿನಕ್ಕೊಂದು ಸಲವಾದರೂ ಶವಾಸನ ಮಾಡಿದರೆ ಅದುವೇ ಸರಿಯಾದ ವಿಶ್ರಾಂತಿ.!!! ಇಲ್ಲಿ ದೇಹ ಮಾತ್ರವಲ್ಲ ಮನಸ್ಸಿಗೂ ವಿಶ್ರಾಂತಿ. ನಿದ್ರಿಸುವಾಗ ಯಾವುದೋರಿತಿಯಲ್ಲಿ ಮಲಗಿ ಅತ್ತ ದೇಹಕ್ಕೂ ವಿಶ್ರಾಂತಿ ಯಿಲ್ಲ ಬಗೆ ಬಗೆಯ ಭಾವನೆಯಿಂದ ಮನಸ್ಸಿಗೂ ವಿಶ್ರಾಂತಿಯಿಲ್ಲ. ಅದರೂ ಅದು ವಿಶ್ರಾಂತಿ ... ರೆಸ್ಟು..   ಇಂತಹ ಇನ್ನೇಷ್ಟೊ ಸ್ವ ಅನುಭವಗಳು ನನ್ನ ಯೋಗಾಭ್ಯಾಸದಿಂದ ಲಭ್ಯವಾಗಿದೆ ಇಂದು ಇದರ ಬಗ್ಗೆ ಹೇಳುವಾಗ ಅತ್ಯಂತ ಅಭಿಮಾನ ಮನಸ್ಸಿನಲ್ಲಿ ಉಂಟಾಗುತ್ತದೆ. ಇನ್ನೂ ಇಂತಹ ಅನುಭವಗಳನ್ನು ಹಂಚಿಕೊಳ್ಳೋಣ. ನನ್ನ ಅನುಭವ ಹೇಗನಿಸಿತು.?        

ದೇಹಶುದ್ದಿ ಹೃದಯ ಶುದ್ದಿ ಇರುವಲ್ಲಿ ಆತ್ಮ ಸದಾಜಾಗೃತವಾಗಿರುತ್ತದೆ. ಆತ್ಮವನ್ನು ಜಾಗ್ರತಗೊಳಿಸುವುದೆಂದರೆ ಪರಮಾತ್ಮನನ್ನು ಸಾಕ್ಷಾತ್ಕಾರಗೊಳಿಸಿದಂತೆ. ದೇಹದಂಡನೆಯಲ್ಲ.. ಮನಸ್ಸಿನ ಭಾವನೆಯ ಹರಣವಿಲ್ಲ .. ಹಿಂಸೆ.. ಕ್ರೊಧಕ್ಕೆ ಎಡೆಯಿಲ್ಲ.ಸದಾ ಶಾಂತವಾದ ಮನಸ್ಸು ಶಾಂತ ಮೂರ್ತಿ ಪರಮಾತ್ಮನ ಸಾನಿಧ್ಯದಲ್ಲಿರುತ್ತದೆ.

ತಮಸೋಮಾ ಜ್ಯೋತಿರ್ಗಮಯ  

ಅಸತೋಮಾ ಸತ್ಯಮಯ

ಮೃತ್ಯೋರ್ಮಾ ಅಮೃತಂಗಮಯ..

ಓಂ.. ಶಾಂತಿ: ಶಾಂತಿ: ಶಾಂತಿ: ......                           


ತಮಸ್ಸಿನಿಂದ ಬೆಳಕಿನೆಡೆಗೆ.. ಅಸತ್ಯದಿಂದ ಸತ್ಯದೆಡೆಗೆ  .... ಮೃತ್ಯುವಿನಿಂದ ಅಮೃತತ್ವದೆಡೆಗೆ.. ಶಾಂತಿ.. ಶಾಂತಿ... ಶಾಂತಿ