Monday, December 3, 2012

ಯೋಗಕ್ಷೇಮ “ಯೋಗಃ ಕರ್ಮಸು ಕೌಶಲಂ"



ಜ್ಞಾನಿಗಳು ಹೇಳುವ ಮಾತು “ಯೋಗ ಅಂದರೆ ನಮ್ಮಲ್ಲಿಲ್ಲದ ಒಳ್ಳೆಯದನ್ನು ಹೊಂದುವಂತದ್ದು. ಕ್ಷೇಮ ಎಂದರೆ ಅದನ್ನು ಸರಂಕ್ಷಿಸಿಡುವುದು.”  ನಮಗಿಷ್ಟವಾದ ಯಾವುದೇ ವಸ್ತುವಾದರೂ ಅದನ್ನು ಬಹಳ ಆಸಕ್ತಿಯಿಂದ ಹೊಂದಿಸುತ್ತೇವೆ. ಮತ್ತು ಅದನ್ನು ಆಸಕ್ತಿಯಿಂದ ಸಂರಕ್ಷಿಸುತ್ತೇವೆ. ಅದನ್ನು ಪಡೆದುಕೊಳ್ಳುವ ಸಾಧಿಸುವ ಪರಿ ವಿಭಿನ್ನವಾಗಿರುತ್ತದೆ. ನಂತರ ಅದನ್ನು ಸಂರಕ್ಷಿಸುವ ರೀತಿ ಕೂಡ ವಿಭಿನ್ನ. ಪ್ರಾಣಾಯಮ, ಆಸನ ಇವು ಯೋಗವನ್ನು ಸಿದ್ಧಿಸುವ ದಾರಿಯಾಗಿ ಅದನ್ನು ಹೊಂದಿದ ನಂತರ ನಿಶ್ಚಲ ನಿರ್ವಿಕಾರ ಸ್ಥಿರವಾದ ಸ್ಥಿತಿಗೆ ಯೋಗ ಸ್ಥಿತಿ ಅಂತಲೂ ಹೇಳಬಹುದು. ಯೋಗ ಇದನ್ನುಸಿದ್ಧಿಸಿದ ಮೇಲೆ ಕ್ಷೇಮದ ಬಗ್ಗೆ ಯೋಚಿಸುವ ಆವಶ್ಯಕತೆಯಿಲ್ಲ ಅನಿಸುತ್ತದೆ. ಯಾಕೆಂದರೆ ಆಸ್ಥಿತಿಯೇ ಎಲ್ಲವನ್ನು ರಕ್ಷಿಸುತ್ತದೆ. ಮತ್ತೆ ಬೇರೆ ಸಂರಕ್ಷಣೆ ಯಾಕೆ ಬೇಕು?

ಈ ಯೋಗ ಗಮ್ಯ ಮಾರ್ಗದಲ್ಲಿ ಅಂತ್ಯವಿಲ್ಲದ ಪಯಣ. ಪ್ರತಿಹಂತವು ಹೊಸ ಒಳಿತನ್ನು ಹೊಂದುವ ಯೋಗ. “ಯೋಗಃ ಕರ್ಮಸು ಕೌಶಲಂ” ಎಂದು ಶ್ರೀಕೃಷ್ಣ ಪರಮಾತ್ಮ ಹೇಳಿದ ಮಾತು. ಒಳ್ಳೆಯದನ್ನು ಪಡೆಯುವ ಕೆಲಸದಲ್ಲಿ ಅದು ಯಾವುದೇ ಆದರೂ ಅದನ್ನು ಪ್ರಾಮಾಣಿಕತೆಯಿಂದ ಮತ್ತು ಶ್ರದ್ದೆಯಿಂದ ಮಾಡು. ಆಗ ಯೋಗ ಸಿದ್ಧಿಯಾಗುತ್ತದೆ. ಯೋಗ ಎಂದರೆ ಕೇವಲ ಪ್ರಾಣಾಯಾಮ ಆಸನಗಳು ಅಲ್ಲ. ಅದೊಂದು ಜೀವನ ಶೈಲಿ.  ಕಲಾತ್ಮಕ ಸರಳ ಬದುಕಿನ ಶೈಲಿ. ಅದನ್ನು ಗಮಿಸುವ ಮಾರ್ಗವೇ ಈ ಪ್ರಾಣಾಯಾಮ ಆಸನ ಇತ್ಯಾದಿ.

ಒಳ್ಳೆಯ ಉದ್ದೇಶ ಸಾಧನೆಗೆ ಹಲವನ್ನು ನಾವು ಮಾಡಬಹುದು. ಉತ್ತಮ ದುಡಿಮೆಯನ್ನು ಮಾಡಬಹುದು. ಶ್ರಧ್ಧೆಯಿಂದ ವಿದ್ಯೆಯನ್ನು ಕಲಿಯಬಹುದು. ವಿದ್ಯಾದಾನ ಮೊದಲಾದವನ್ನು ನಿಸ್ವಾರ್ಥದಿಂದ ಮಾಡಬಹುದು. ಆದರೆ ಪ್ರತಿಫಲ ಒಳ್ಳೆಯದೇ ಸಿಗುವುದೆಂದು ಭರವಸೆಯಿಲ್ಲ. ಒಳ್ಳೆಯದು ಪಡೆಯಬಹುದು ಎಂಬ ಆಶಯ ಮಾತ್ರ. ಆದರೆ ಪ್ರಾಣಾಯಾಮ, ಆಸನ ಎಂಬ ಯೊಗದೀಕ್ಷೆಯ ಸಾಧನೆ ಮಾತ್ರ ಒಳ್ಳೆಯದನ್ನೆ ತರುತ್ತದೆ. ಇದರಲ್ಲಿ ಕಲ್ಮಶವಿಲ್ಲ.

ಬಹಳಷ್ಟು ಸಾಧನೆ ಮಾಡಿ ದೊಡ್ಡ ಕಲಾವಿದ ಎನ್ನಿಸಿಕೊಳ್ಳಬಹುದು. ಕಲಾವಿದನೊಳಗಿನ ಕಲೆಯನ್ನೂ,  ಕಲಿತ ವಿದ್ಯೆಯನ್ನೂ ಯಾರು ಅಪಹರಿಸಲಾರರು ಇದು ನಿಜ. ಆದರೆ ಅದರ ಬಗ್ಗೆ ಮತ್ಸರವನ್ನು ತಾಳಲಾರರು ಎಂಬುದಕ್ಕೆ ಭರವಸೆ ಇಲ್ಲ. ನಮ್ಮ ವಿದ್ಯೆಗೆ ಅಥವ ಕಲೆಗೆ ನಾವು ಅಭಿಮಾನ ಪಟ್ಟಂತೆ ಇನ್ನೊಬ್ಬ ಮತ್ಸರಿಸುವ ಸಂಭವವೂ ಇದೆ. ಆದರೆ ಯೋಗ ಮಾರ್ಗದಲ್ಲಿ ಗಳಿಸಿದ ಉತ್ತಮ ಜೀವನ ಶೈಲಿಯಾಗಲೀ ಅಥವಾ ರೋಗ ರಹಿತ ಶರೀರ ಪ್ರಕೃತಿಗೆ ಯಾರೂ ಮತ್ಸರಿಸುವ ಹಾಗಿಲ್ಲ. ಯಾಕೆಂದರೆ ಇದು ಅಂತರಂಗದ ಅನುಭವ. ನಾನು ನಿರೋಗಿಯಾಗಿದ್ದೇನೆ!ಯಾವುದೇ ರೋಗ ನನ್ನಲ್ಲಿಲ್ಲ!! ವಯೋಸಹಜ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಸ್ಥಿರವಾಗಿ ಪಾಲನೆ ಮಾಡಿದ್ದೇನೆ.!! ಹೀಗೆ ಅನ್ನಿಸಿಕೊಳ್ಳುವುದು ಅಂತರಂಗದ ಭಾವ. ಇದು ಪ್ರಕಾಶಕ್ಕೆ ವ್ಯಕ್ತಪಡಿಸಬೇಕಾಗಿಯೂ ಇಲ್ಲ.  

ಅರೋಗ್ಯ ಎನ್ನುವುದು ಅರೋಗ ಸ್ಥಿತಿಯನ್ನು ಸೂಚಿಸುತ್ತದೆ. ರೋಗ ರಹಿತ ಸ್ಥಿತಿ. ಸಮತೋಲನ ಇಲ್ಲದೇ ರೋಗ ಆವರಿಸುವಾಗ ವೈದ್ಯರು ಹೇಳುತ್ತಾರೆ... ಬೆಳಗ್ಗೆ ಎದು ವಾಕಿಂಗ್ ಜಾಗಿಂಗ್ ಕಡ್ಡಾಯ. ವ್ಯಾಯಾಮ ಮಾಡಿ ಇತ್ಯಾದಿ ಇತ್ಯಾದಿ. ರೋಗಕ್ಕೆ ಭಯಪಟ್ಟು,  ದುರ್ವಿಧಿಯನ್ನು ಹಳಿಯುತ್ತಾ ಮುಂಜಾನೆ ಬೇಗನೆ ಎದ್ದು ವಾಕಿಂಗ್ ಜಾಗಿಂಗ್ ವ್ಯಾಯಾಮ ಇದು ಹೀಗೆ ಎಂದು ನಿಯಮದಲ್ಲಿ ಇರುವುದು ಬಹಳ ಕಡಿಮೆ. ಬೆಳಕು ಸರಿದರೂ ಚಳಿಗೆ ಮುದುರಿ ಬೆಚ್ಚಗೆ ಮಲಗಿದವರ ಆರೋಗ್ಯದ ಬಗ್ಗೆ ಕರುಬುತ್ತೇವೆ. ಛೇ ಯಾಕಾದರೂ ರೋಗ ಬಂತೋ ಎಂದು ಮರುಗುತ್ತೇವೆ. ಬೇಕೋ ಬೇಡವೋ ಅಂತೂ ಬೆಳಗಿನ ಧಾವಂತ ಮುಗಿಸಿಬಿಟ್ಟು ಸುಸ್ತಾಗಿ ಕುಳಿತುಬಿಡುತ್ತೇವೆ. ನಿರಾಳತೆಯ ಸುಖ ಅಪರೂಪ.  ಇದಾವ ಭಾವವೂ ಇಲ್ಲದ ಯೋಗಸ್ಥಿತಿ ಮುಂಜಾನೆ ಸರಿದೇ ಬಿಟ್ಟಿತಲ್ಲ.  ಇನ್ನು ನಾಳೆಯ ಸೂರ್ಯೋದಯಕ್ಕೆ ಕಾಯಕಬೇಕು ಎಂಬ ಭಾವವನ್ನು ತರುತ್ತದೆ. ವಾಕಿಂಗ್ ಜಾಗಿಂಗ್ ವ್ಯಾಯಾಮದ ದೇಹದಂಡನೆಯಿಂದ ದೇಹವೇನೋ ದಂಡಿಸಲ್ಪಡುತ್ತದೆ. ಮನಸ್ಸಿನ ಮೂಲೆಯ ಕೊರಗು ಮಾತ್ರ ಹಾಗೆ ಉಳಿದುಬಿಡುತ್ತದೆ. ಗಮನಿಸಿ... ಬರೀ ದೇಹ ದಂಡನೆ. ಮನುಷ್ಯನ ಹಿಂಸಾ ಪ್ರವೃತ್ತಿ ಇಲ್ಲಿಯೂ ವ್ಯಕ್ತವಾಗುತ್ತದೆ. ನಮ್ಮ ದೇಹ ನಾವೇ ದಂಡಿಸಿ ನಮ್ಮ ಆತ್ಮಕ್ಕೆ ಉಗ್ರತೆಯ ದರ್ಶನ ನಮಗರಿವಿಲ್ಲದೇ ಮಾಡುತ್ತೇವೆ. ಇದು ಒಂದು ರೀತಿಯ ಹಿಂಸಾ ತೃಪ್ತಿ. ಸ್ಯಾಡಿಸ್ಟ್ ಚಿಂತನೆಯಲ್ಲ ಎಂದು ಹೇಗೆ ಹೇಳುವುದು? ತಾಯಿ ತಂದೆಯ ಶುಕ್ಲ ಶೋಣಿತ ಸಂಯೋಗ ರೂಪದಲ್ಲಿ ಅತ್ಮದೊಂದಿಗೆ ಭೂಮಿಗೆ ಇಳಿದ ದೇಹವಿದು. ತನ್ನ ಎದೆಯ ರಕ್ತವನ್ನು ಅಮೃತವಾಗಿಸಿ ತಾಯಿ ಈ ದೇಹವನ್ನು ಬೆಳೆಸುತ್ತಾಳೆ.  ಒಂದೊಂದೇ ಬೆಳವಣಿಗೆಯಲ್ಲಿ ಸಂತಸ ಪಡುತ್ತಾಳೆ.. ಆ ದೇಹವನ್ನು ನಾವು ವಾಕಿಂಗ್ ಜಾಗಿಂಗ್ ರೂಪದಲ್ಲಿ ಹಿಂಸಿಸುತ್ತೇವೆ. ಎಂತಹ ಮನೋಭಾವ ಇದು?  ಯೋಗಸ್ಥಿತಿಯಲ್ಲಿ ದೇಹ ದಂಡನೆಯಿಲ್ಲ. ವ್ಯಗ್ರತೆಯ ರೂಪವಿಲ್ಲ.  ಶಾಂತ ಚಿತ್ತದ ನಿರಾಳತೆಯ ಸಹಕಾರ ಮಾತ್ರ. ಮುಂಜಾನೆ ಏಳಬೇಕಲ್ಲ ಎಂಬ ಔದಾಸಿನ್ಯವಿಲ್ಲ. ಮೊದಲ ದಿನವೇ ನಾಳಿನ ಮುಂಜಾನೆಯ ರೋಮಾಂಚನಕ್ಕೆ ಮನಸ್ಸು ಹಾತೊರೆಯುತ್ತದೆ.  ಮುಸುಕೆಳೆದು ಮುದುರಿ ಮಲಗಿದವರತ್ತ ಅನುಕಂಪ ತೋರಿ  ಗೆಲುವಿನ ನಗೆ ಬೀರುತ್ತೇವೆ.


ನಮ್ಮ ಸಂಗಾತಿಗೆ ಮತ್ತು ಮಕ್ಕಳಿಗೆ ನಾವು ನೀಡುವ ದೊಡ್ದ ಉಡುಗೊರೆ ಎಂದರೆ ನಾವು ಸ್ವತಃ ಆರೋಗ್ಯವಾಗಿರುವುದು. ನಮ್ಮ ಮೇಲಿನ ಪ್ರೀತಿ ಮಮತೆಗೆ ನಮ್ಮನ್ನು ಸಹಿಸುವಂತಾಗಬಾರದು. ಮನೆಯಲ್ಲಿ ಕುಟುಂಬದಲ್ಲಿ ನಿಟ್ಟುಸಿರಿನ ದುಮ್ಮಾನದ ಬಿಗುವಿರದೆ ನಮ್ಮ ಇರವೆಂಬುದು ಚಿತೋಹಾರಿಯ ಕ್ಷಣಗಳಾಗಬೇಕು. ಯೋಗ ಸ್ಥಿತಿ ಇದನ್ನು ಸಾಧ್ಯವಾಗಿಸುತ್ತದೆ


ಯೋಗ ಸ್ಥಿತಿಯ ಅಂತರಂಗದ ಭಾವ ನಮ್ಮ ನಡೆ ನುಡಿಯಲ್ಲಿ ಅಭಿವ್ಯಕ್ತಿಸುತ್ತದೆ. ಹಸಿವಾದಾಗ ಉಣ್ಣುತ್ತೇವೆ. ಉಂಡನಂತರ ಹೊಟ್ಟೆ ತುಂಬಿದ ಸುಖ ಅನುಭವಕ್ಕೆ ಬರುತ್ತದೆ. ತಿಳಿದವರು ಹೇಳಿದ್ದಾರೆ...ಯಾವನೇ  ಆದರೂ ಯಾವುದನ್ನು ಕೊಟ್ಟರೂ ಸಾಕು ಎನ್ನದೇ ಇದ್ದರೆ ಅವನಿಗೆ ತಿನ್ನುವಷ್ಟು ಹೊಟ್ಟೆ ತುಂಬುವಷ್ಟು ಆಹಾರಕೊಡು. ಹೊಟ್ಟೆ ತುಂಬಿದ ಮೇಲೆ ಬೇಕು ಎಂದು ತಿನ್ನುವುದು ಸಾಧ್ಯವಿಲ್ಲದಾಗಿ  “ ಸಾಕು.. “ ಎನ್ನಲೇಬೇಕಲ್ಲವೇ? ಮನುಷ್ಯ ಸಾಕು ಎನ್ನುವುದು ಒಂದು ಊಟ ಹಾಕಿದಾಗ ಇಲ್ಲವೇ ಹೊಡೆತ ತಿನ್ನುವಾಗ. ಹಾಗೇನೇ ರತಿವಿಲಾಸದಲಿ ಮೌರ್ಧನ್ಯತೆಗೆ ತಲುಪಿ ತೃಪ್ತರಾಗಿ ಸಾಕು ಎನ್ನಬಹುದು.  ಇದೆಲ್ಲವೂ ಮನಸ್ಸು ದೇಹದ ಅನಪೇಕ್ಷಿತ ವರ್ತನೆ. ಯೋಗ ಸ್ಥಿತಿಯಲ್ಲಿ ಸಾಕು ಎಂಬ ಭಾವ ಬರುವುದಿಲ್ಲ ಹಾಗೆಂದು ಅತೃಪ್ತಿಯ ಅಸಮಧಾನವೂ ಸುಳಿಯುವುದಿಲ್ಲ. ಸಾಕು ಬೇಕುಗಳು ಒಟ್ಟಾಗಿ ಇರುವ ಚರಮ ಸ್ಥಿತಿ ಇದೊಂದೇ. ಅದಕ್ಕೆ ಇದು ನಿರ್ವಿಕಾರ ಚಿತ್ತದೆ ಸ್ಥಿರವಾದ ಸ್ಥಿತಿ. ಯೋಗ ಸ್ಥಿತಿ.

Sunday, September 16, 2012

ದೇವರಿದ್ದಾನೆಯೇ???



          ತಮ್ಮನ ಮಗನೊಂದಿಗೆ ಹೊರಟು ಹೊಂಡಾ ಆಕ್ಟಿವ ಸ್ಟಾರ್ಟ್  ಮಾಡಿ ಏರಿಕುಳಿತೆ. ಒಂದು ಬಾರಿ ವಾಹನಕ್ಕೆ  ಕೈಮುಟ್ಟಿ ನಮಸ್ಕರಿಸಿದೆ. ಇದು ನಾನು ರೂಢಿಸಿಕೊಂಡ ಒಂದು ಕ್ರಮ. ನನ್ನ ಈ ಕ್ರಮ ಬಾಲಕನಿಗೆ ಕೌತುಕದ ವಿಷಯವಾಗುತ್ತದೆ. ಹಲವು ಸಲ ಆತ ಹೇಳಿದ್ದಿದೆ. ಬೇರೆ ಯಾರು ಮಾಡದ ಕ್ರಮವನ್ನು ನಾನು ಅನುಸರಿಸುತ್ತಿದ್ದೇನೆ. ಇದು ಅವನ ಅಭಿಪ್ರಾಯ. ಹಲವರು ಹೀಗೆ ಮಾಡುತ್ತಿದ್ದರೂ ಅದವನ ಗಮನಕ್ಕೆ ಬಾರದಿರಬಹುದು. ಇರಲಿ ,  ಮತ್ತೆ ನಿಧಾನವಾಗಿ ಮುಂದಕ್ಕೆ ಹೋಗುತ್ತಿದ್ದಂತೆ ಹಿಂದೆ ಕುಳಿತ ಬಾಲಕ ಪ್ರಶ್ನಿಸತೊಡಗಿದ. “ ಒಂದು ವೇಳೆ ನಮಸ್ಕರಿಸುವುದು ಮರೆತರೆ., ಮುಂದೆಹೋಗಿ ನಂತರ ಎಲ್ಲಾದರೂ ನಮಸ್ಕರಿಸ ಬಹುದೇ?”  ಏನೆಂದು ಉತ್ತರಿಸುವುದು. ಸಣ್ಣ ಮಕ್ಕಳ ಕೌತುಕದ ವಿಚಾರಗಳಿಗೆ ಅದೇ ಮಟ್ಟದಲ್ಲಿ ಪ್ರತಿಕ್ರಿಯಿಸಬೇಕು ಅವರಲ್ಲಿ ಒಂದಾಗಿ  ಆ ಚಿಂತನೆಗೆ ಸರಿಯಾದ ಹಾದಿಯನ್ನು ತೋರುವ ಪ್ರಯತ್ನ ನಮ್ಮದಾಗಬೇಕು. ಸಮಯಕ್ಕೆ ತಕ್ಕಂತೆ ಎನಾದರೂ ಒಂದು ಹೇಳಿ ಸಾಗ ಹಾಕಿ ಅಥವ ಗದರಿಯೋ, ಔದಾಸಿನ್ಯದಿಂದಲೋ ವ್ಯವಹರಿಸಬಹುದು. ಆದರೆ ಅದರಲ್ಲೇನು ಸ್ವಾರಸ್ಯ ಇದೆ ಹೇಳಿ?
ನಾನೆಂದೆ  “ ಜ್ವರವೋ ಹೊಟ್ಟೆನೋವೋ ಆದರೆ ಡಾಕ್ಟರ್ ಮಾತ್ರೆ ಕೊಡುತ್ತಾರೆ... ಬೆಳಗ್ಗೆ ಎದ್ದು ತಿಂಡಿ ತಿಂದ ಮೇಲೆ ತಿನ್ನು ಅಂತ ಹೇಳುವುದಿಲ್ಲವೇ?  ಬೆಳಗ್ಗೆ ತಿಂಡಿ ತಿಂದ ಮೇಲೆ ಮರೆತು ಹೋದರೆ ಏನು ಮಾಡ್ತಿಯಾ?   ಒಂದು ವೇಳೆ ತುಸು ಹೊತ್ತಾದ ಮೇಲೆ ನೆನಾಪಾದಾಗ ಮಾತ್ರೆ ತೆಕ್ಕೊಳ್ಳುವುದಿಲ್ಲವಾ? ಹಾಗೆ...ನಮಸ್ಕಾರ ಏನು ಯಾವಾಗಲೂ ಮಾಡಬಹುದು. ಮಾಡುವುದರಿಂದ ಒಂದು ಸಮಾಧಾನ... ಮಾಡಿಲ್ಲವಲ್ಲ ಎಂದು ಗ್ರಹಿಸುವುದಕ್ಕಿಂತ ಯಾವಾಗಲಾದರೂ ಮಾಡುವುದು ಅಲ್ವಾ...”
ಬಾಲಕ ಸಮಾಧಾನಗೊಂಡ ಆದರೆ ಮತ್ತೊಂದು ಬಾಣಕ್ಕೆ ನಾನು ಉತ್ತರಿಸಬೇಕಾಯಿತು...
“ದೊಡ್ಡಪ್ಪಾ... ದೇವರಿದ್ದಾನೆಯೇ?” 
ಎಲಾ  ಇವನೇ? ವಯಸ್ಸಿಗೆ ಮೀರಿದ ಪ್ರಶ್ನೆ ಎಂದು ಅಂಗೀಕರಿಸಬೇಕೆ ಬೇಡವೇ? ಏನೆಂದು ಉತ್ತರಿಸಬಹುದು? ನೀವಾದರೆ ಏನು ಮಾಡುವಿರಿ? ಪ್ರಶ್ನೆಗಿಂತ ಇಲ್ಲಿ ಉತ್ತರಿಸುವುದೇ ಜಿಜ್ಞಾಸೆಯುಳ್ಳದ್ಧಾಗಿದೆ. ಮತ್ತು ಮುಂದರಿಸಿದ....” ಫೇಸ್ ಬುಕ್ ಫ್ರೆಂಡ್ ಕಮೆಂಟ್ ಹಾಕಿದ್ದಾನೆ...ದೇವರಿಲ್ಲ ಅದೆಲ್ಲ ಸುಳ್ಳು ಅಂತ...there is no God   ಈಗ ಅನಿಸತೊಡಗಿ ವಿಷಯ ಮತ್ತೂ ಗಂಭೀರವಾಗಿದೆ ಅನ್ನಿಸಿತು. ಏನೆಂದು ಉತ್ತರಿಸ ಬಲ್ಲಿರಿ? ಆತ ನನ್ನಲ್ಲಿ ಅಂತಹ ಪ್ರಶ್ನೆ ಇಡುವ ಉದ್ದೇಶವೇ ಅದು. ಅದಕ್ಕೆ ರೋಚಕವಾಗಿ ಉತ್ತರವನ್ನು ದೊಡ್ಡಪ್ಪ ಹೇಳುತ್ತಾರೆ. ನೋಡೋಣ ಏನೆಂದು ಉತ್ತರಿಸುವುದು? ನಾವು ಜಿಕ್ಕವರಿರುವಾಗ ಹೀಗೆ ಕೇಳಿದರೆ,
“ ಏನೋ ಪೆದಂಬು   ಮಾತಾಡ್ತಿಯಾ?” ಇನ್ನು ತುಸು ಸಮಾಧಾನದಲ್ಲಿ ಆದರೆ ದೇವಸ್ಥಾನದ ಗುಂಡದಲ್ಲಿ ಇರುವುದೇನು.. ಅದೇ ದೇವರು.. ಇಲ್ಲ ದೇವರ ಪೋಟೋ ತೋರಿಸಿ ಅದೇ ದೇವರು..
ಇದೆಲ್ಲ ತಾತ್ಕಾಲಿಕ ಉತ್ತರಗಳು. ಉತ್ತರದಿಂದ ಮತ್ತೂ ಹಲವು ಬಾಲಿಷವಾದ ಪ್ರಶ್ನೆಗಳು ಬೌದ್ದಿಕ ಪ್ರಶ್ನೆಗಳು ನಮ್ಮ ಬುದ್ದಿಗೆ ಸವಾಲಾಗಬಹುದು. ಆದರೆ ಇಲ್ಲಿ ಬಾಲ ಬುದ್ದಿಗೆ ಮತ್ತೂ ಸಾಣೆ ಹಾಕುವ ಕೆಲಸ ಆಗಬೇಕು. ಆದೂ ಆತನ ವಯಸ್ಸಿಗನುಗುಣವಾಗಿ ಇದು ಮುಖ್ಯ.
ನಾನು ಹೇಳಿದೆ “ ದೇವರು ಇದ್ದಾನೆಯೋ ಅಥವಾ ಇಲ್ಲವೋ ಎನ್ನುವುದಕ್ಕಿಂತ ಹಾಗೆ ಹೇಳಿದರೆ ಏನು ಅಂತ ತಿಳಿದುಕೊಳ್ಳಬೇಕು. ಅಲ್ವ?” ಬಾಲಕ ಈ ಚುರುಕಾದ.. ಹೌದಲ್ಲ ತಾನು ಯೋಚಿಸಿರದ ವಿಷಯ ದೊಡ್ಡಪ್ಪ ಹೇಳುತ್ತಿದ್ದಾರೆ.
“ ದೇವರು ಎಂದರೆ ಅದಕ್ಕೆ ರೂಪವಿಲ್ಲ ಅಕಾರವಿಲ್ಲ .ಗುಣಮಾತ್ರ..”
“ ಅಂದರೆ..? .” ಬಾಲಕನಿಗೆ ಅರ್ಥವಾಗಲಿಲ್ಲ.
“ ಈಗ ನೋಡು ನೀರು.. ಅದಕ್ಕೆ ಆಕಾರ ಉಂಟ? ನೀನು  ಲೋಟದಲ್ಲಿ ಹಾಕಿದರೆ ಲೋಟದ ಹಾಗೆ ಕಾಣುತ್ತದೆ. ತಂಬಿಗೆಯುಲ್ಲಿ ಹಾಕಿದರೆ ತಂಬಿಗೆಯಾಗುತ್ತದೆ ಚೆಲ್ಲಿದರೆ ಇನ್ನೇನೋ ಆಗುತ್ತದೆ. ಚೆಲ್ಲಿದ್ದು ಸ್ವಲ್ಪ ಹೊತ್ತು ಬಿಟ್ಟರೆ ಅದು ಆವಿಯಾಗಿ ಕಣ್ಣಿಗೆ ಕಾಣುವುದೇ ಇಲ್ಲ...”
ಬಾಲಕನ ತಲೆ ಚುರುಕಾಗಿ ಕೆಲಸ ಮಾಡತೊಡಗಿತು. ಜಿಜ್ಞಾಸೆಗೆ ಉತ್ತರ ಅವನೇ ಉತ್ತರಿಸುವ ಪ್ರಯತ್ನ ನನ್ನದು. “ಹಾಗೆಂದು ನೀರೆಂದರೆ ದೇವರು ಅಂತ ಅಲ್ಲ...ಲೋಟದಂತೆ ತಂಬಿಗೆಯಂತೆ...ಒಂದೊಂದು ಬಗೆಯಲ್ಲಿ ಯಾಕೆ ಕಾಣಬೇಕು ಹೇಳು?”
 “ ದೇವರೆಂದರೆ ಅದುವೇ, ಒಬ್ಬೊಬ್ಬರಿಗೆ ಒಂದೊಂದು ಬಗೆಯಲ್ಲಿ ಕಾಣುತ್ತದೆ.. ಕೆಲವರಿಗೆ ಕಲ್ಲಿನಲ್ಲಿ ಕಾಣುತ್ತದೆ ಅದಕ್ಕೆ ಆಕಾರ ಕೊಟ್ಟು ದೇವಸ್ಥಾನದಲ್ಲಿಟ್ಟಿ ಪೂಜೆ ಮಾಡ್ತಾರೆ ಅಲ್ವಾ?”
“ ಹೌದು..ನಿಜವಾಗಿ ಅದು ಕಲ್ಲು ಅಲ್ವಾ ದೊಡ್ಡಪ್ಪ...ದೇವರ ಫೋಟೋ ದ ಒಳಗೂ ಅದೆ ಬರೀ ಕಾಗದ ...” ಈಗ ವಾಸ್ತವ ಏನು ಯಾಕೆ ಎಂದು ಉತ್ತರಿಸಬೇಕು.
“ ಹೌದಪ್ಪ...ದೇವರು ಎಂದರೆ ಅಷ್ಟೆ ಅದೊಂದು ಶಬ್ದ ಅಂತ ಮೊದಲು ತೆಕ್ಕೊ.. ಅಮೇಲೆ ಅದಕ್ಕೆ ಅರ್ಥ ಹುಡುಕು.. ಎನಾದರು ತಿಂದರೆ ನಾಲಿಗೆಗೆ ರುಚಿಯಾಗುತ್ತದೆ.. ರುಚಿ ಅಂದ್ರೆ ಏನು? ತೋರಿಸು ನೋಡುವ...”
“ ದೊಡ್ಡಪ್ಪ ಯು ಆರ್ ಗ್ರೇಟ್ ಒಳ್ಳೇ ಎಕ್ಸಾಂಪಲ್ ಕೊಡ್ತಿರ”
“ ಮೈಮೇಲೆ ಗಾಯ ಆಗ್ತದೆ ಗಾಯ ಕಾಣ್ತದೆ ರಕ್ತ ಕಾಣ್ತದೆ ಆದರೆ ನೋವು.. ಅದಕ್ಕೆ ರೂಪ ಉಂಟಾ? ನೋವನ್ನು ತೋರಿಸು ನೋಡುವ”
“ ಹೌದು ..ಅದು ಕಾಣುದಿಲ್ಲ ಆದ್ರೆ ನೋವು ಆಗ್ತದೆ..”
“ದೇವರೆಂದರೆ..ಹಾಗೆ.. ಅದು ಒಂದು ವಸ್ತುವಲ್ಲ....ಅದಕ್ಕೆ ರೂಪ ಆಕಾರವಿಲ್ಲ.. ನೀನು ಯಾವ ರೂಪದಲ್ಲಿ ಕಾಣ್ತಿಯೋ ಆ ರೂಪದಲ್ಲಿ ಅದು ಸಿಗ್ತದೆ. ಅಪ್ಪ ಅಮ್ಮನಿಗೆ ನಮಸ್ಕಾರ ಮಾಡುದು ಯಾಕೆ ಹೇಳು? ಅವರು ನಿನ್ನ ಹಾಗೆ ಕೈಕಾಲು ದೇಹ ಇರುವ  ಮನುಷ್ಯರಲ್ವ?”
“ಅದು ದೇವರು ಅಂತ ಗ್ರಹಿಸಿ ನಮಸ್ಕಾರ ಮಾಡುದು..” ಈಗ ಒಂದು ಹಂತಕ್ಕೆ ಬಂತು..
“ ಹಾಗೆ ಅಪ್ಪ ಅಪ್ಪನ ರೂಪದಲ್ಲಿ ಕಾಣುವ ದೇವರು.. ದೇವಸ್ಥಾನದ ಕಲ್ಲಿನ ರೂಪದಲ್ಲಿ, ಫೋಟೋದ ಒಳಗೆ ಕಾಣುವ ದೇವರು.. ಈಗ ಹೇಳು ದೇವರು ಅಂದರೆ...ಯಾರಿಗೆ ಹೇಗೆ ಬೇಕೋ ಹಾಗೆ ಕಾಣ್ತಾನೆ. ವಿದ್ಯಾರ್ಥಿಗೆ ವಿದ್ಯೆಯ ರೂಪದಲ್ಲಿ ಪುಸ್ತಕದ ರೂಪದಲ್ಲಿ ಶಾಲೆಯ ರೂಪದಲ್ಲಿ ಗುರುಗಳ ರೂಪದಲ್ಲಿ ಹೀಗೆ ಪ್ರತಿಯೊಂದರಲ್ಲೂ ದೇವರು ಕಾಣುತ್ತಾನೆ. ಕೊನೆಗೆ ಎಲ್ಲದರಲ್ಲು ನನ್ನ ಒಳಗೆ ನಿನ್ನ ಒಳಗೆ ದೇವರಿದ್ದಾನೆ ಅಲ್ವ...”
“ ದೊಡ್ಡಪ್ಪ ದೇವರು ಎಂದರೆ ಒಂದು ಪವರ್ ಇದ್ದ ಹಾಗೆ ಅಲ್ವ?”
ಈಗ ಅರ್ಥವಾಯಿತು ಅಂತ ನಾನು ಗ್ರಹಿಸಿದೆ.
“ ದೊಡ್ದಪ್ಪ ನೀವು ಅಷ್ಟು ಚಂದ ಉಧಾಹರಣೆ ಎಲ್ಲ ಕೊಟ್ಟು ಎಲ್ಲ ಹೇಳ್ತಿರಲ್ಲ... ಪಾಠ ಹೇಳಿಕೊಡುವಾಗಲೂ ಹಾಗೆ ಒಳ್ಳೆ ಉಧಾಹರಣೆ ಹೇಳ್ತೀರ ಇದೆಲ್ಲ ಎಲ್ಲಿ ಕಲಿತದ್ದು..?
“ ನೋಡಪ್ಪ ಇದು ಸುತ್ತ ಮುತ್ತಲು ಕಂಡಿತು.” ಮತ್ತೂ ಒಂದು ಹೇಳಿದೆ ...” ನೋಡು ನಾನು ಯಕ್ಷಗಾನ ಎಲ್ಲ ನೋಡುದು ಕೇಳುದು ಯಾಕೆ ಹೇಳು ಅದರಲ್ಲಿ ಇಂತಹ ವಿಚಾರಗಳೇ ಇರುತ್ತದೆ. ಹಾಗೆ ಈ ಉಧಾಹರಣೆ ಎಲ್ಲಾ ಯೋಚನೆಗೆ ಬರುತ್ತದೆ.”
“ ಹೌದಾ... ಅಯ್ಯೋ... ನಾನು ಯಕ್ಷಗಾನ ಬರೀ ಡಬ್ಬ ಅಂದ್ಕೊಂಡಿದ್ದೇ. ಎನೋ ಹಾಡ್ತಾರೆ ನಲಿತಾರೆ ಅಂತ...”
ಆಗ ನಾನು ಹೇಳಿದೆ...ನೋಡಪ್ಪ  “ ಶಾಲೆಯಲ್ಲಿ ಗುರುಗಳು ಪಾಠ ಮಾಡ್ತಾರೆ, ಎಲ್ಲರೂ ಕೇಳ್ತಾರೆ ಹೌದಲ್ವ..ಅದ್ರೆ ಕೆಲವರಿಗೆ ಅರ್ಥ ಆಗ್ತದೆ. ಅವರು ಪರೀಕ್ಷೆಯಲ್ಲಿ ಒಳ್ಳೆ ಉತ್ತರ ಬರೆದು ಪಾಸಾಗ್ತರೆ. ನಿನಗೆ ಅರ್ಥ ಆದ ಹಾಗೆ ಇನ್ನೊಬ್ಬರಿಗೆ ಆಗ್ತದ? ಆಗುದಿಲ್ಲ ಆಗ ಅವರು ಫೇಲ್ ಆಗ್ತಾರೆ.ಹಾಗದ್ರೆ ಹೇಳು ಗುರುಗಳು ಮಾಡಿದ ಪಾಠ ಬರೀ ಡಬ್ಬ ಅಂತ ಫೇಲಾದವರು ಹೇಳಬಹುದಾ? ಅವರಿಗೆ ಅರ್ಥ ಆಗಿಲ್ಲ.. ಅಥವ ಗುರುಗಳು ಏನು ಹೇಳ್ತಾರೆ ಎಂದು ಅವರು ಕೇಳ್ಳಿಕ್ಕೆ ಹೋಗಿಲ್ಲ..ಅಲ್ವ.? ಹಾಗೆ....ಪ್ರತಿಯೋಂದು.
“ರಿಯಲೀ ದೊಡ್ದಪ್ಪ ನೀವು ಹೇಳುದು ವಿವರಿಸುವುದು ಎಕ್ಸಲೆಂಟ್...”
ಬಾಲಕ ಸಮಾಧಾನ ಗೊಂಡ ಅಂತ ನಾನು ತಿಳಿದುಕೊಂಡಿದ್ದೇನೆ.








Sunday, July 1, 2012

ಮನದೊಳಗಿನ ಖಾಸಗೀತನ



ಬಹಳ ಅಪರೂಪದ ಸ್ನೇಹಿತ ಸಿಕ್ಕಿದ. ಮಂದಹಾಸದ ವಿನಿಮಯ. ಬದಲಾದ ಪ್ರಕೃತಿಯ ಔಪಚಾರಿಕತೆಯ ವಿನಿಮಯ. ಭಾವ ವೆತ್ಯಾಸ ಇರಬಹುದು. ಅಂತರಂಗದ ನಿಜವಾದ ಸ್ನೇಹ ಪರಿವರ್ತಿಸುವುದಿಲ್ಲ. ಅದೇ ಸ್ನೇಹ. ಮನಸ್ಸು ಪುಳಕಗೊಂಡ ಹಲವು ಅನುಭವಗಳು.
 ಅತ್ಯಂತ ಆಸಕ್ತಿಯಿಂದ ಮನೆಗೆ ಕರೆದ.ಆದರೆ ಅವಕಾಶ ಸಿಗಬೇಕಲ್ಲ. ಮತ್ತೆ ನನಗನಿಸಿತು ನಾನೂ ಮನೆಗೆ ಕರೆಯ ಬೇಕಿತ್ತು, ಕರೆದಿದ್ದೆ ಆದರೆ ಆ ಕರೆಯೊಲೆಯ ಅಕ್ಷರಗಳನ್ನು ದಪ್ಪಗಾಗಿಸಲಿಲ್ಲ(BOLD)ವಲ್ಲ ಎಂದುಕೊಂಡೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಉಪಚಾರಗಳಂತಹ ವಿಷಯದಲ್ಲಿ ನಾನು ಬಹಳ ಹಿಂದೆ. ಇಂತಹ ಔಪಚಾರಿಕ ಸಾಂಪ್ರದಾಯದಲ್ಲೂ ತೋರಿಕೆಯ ವರ್ತನೆಯನ್ನು ಅಭಿನಯಿಸಲು ಮನಸ್ಸು ಒಪ್ಪಿಕೊಳ್ಳುವುದಿಲ್ಲ. ಇವುಗಳನ್ನು ಅದಷ್ಟು ಮಿತವಾಗಿ ಉಪಯೋಗಿಸುವ ಸ್ವಭಾವ ನನ್ನದು.  ಏನಿದ್ದರೂ ಅದು ಮನಸ್ಸಿನೊಳಗೇ ಹೃದಯ ಪ್ರಾಮಾಣಿಕವಾಗಿ ವ್ಯವಹರಿಸುವಾಗ ಬಹಿರಂಗ ಮಾತು ದೇಹ ಅದರ ಸಂಕೇತವಾಗಿದ್ದರೆ ಸಾಲದೇ?
ಮಿತ್ರ ಆಮಂತ್ರಿಸಿಯಾಗಿದೆ. ಅದೂ ಮನೆಯಲ್ಲಿನ ಒಂದು ಸಮಾರಂಭಕ್ಕೆ. ಪ್ರಥಮ ಭೇಟಿಯಲ್ಲಿ ಮಾತನಾಡಲಾಗದೇ ಉಳಿದ್ದು ಬಹಳಷ್ಟು ಇತ್ತು. ಅನಿರೀಕ್ಷಿತ ಭೇಟಿ ಹಾಗಿರುವಾಗ ಜ್ಞಾಪಕಕ್ಕೆ ಸಿಲುಕದೇ ಉಳಿಯುವಂತಹ ವಿಚಾರಗಳೇ ಜಾಸ್ತಿ. ಮಿತ್ರನ ಆಮಂತ್ರಣ ಮನ್ನಿಸುತ್ತ  ಅವನ ಮನೆಗೆ ಭೇಟಿ ಇತ್ತಾಗ  ಮನಸ್ಸಿನ ಲೆಕ್ಖಾಚಾರದ ಮಾತುಗಳ ಗಂಟನ್ನು ಬಿಚ್ಚುವ ಪ್ರಮೇಯವೇ ಬರಲಿಲ್ಲ. ಬಂದ ಬಂಧು ಬಾಂಧವರು ಮಿತ್ರರು... ಒಟ್ಟಿನಲ್ಲಿ ಮಿತ್ರ ಅದರತೆಯನ್ನು ತನ್ನ ಸ್ನೇಹದ ತಟ್ಟೆಯಿಂದ ಸ್ವಲ್ಪ ಸ್ವಲ್ಪವೇ ಹಂಚುತ್ತಾ ಬಹಳ ಗಡಿಬಿಡಿಯಲ್ಲೇ ಇದ್ದ. ಕೊನೆಯಲ್ಲಿ ಆದಿನದ ಕಾರ್ಯಕ್ರಮ ಮುಗಿದು ಎಲ್ಲರೂ ಹೊರಟಾಗ ನಾನು ಹೊರಟು ಮಿತ್ರನಿಗೆ ವಿದಾಯ ಹೇಳುವಾಗ ಬಹಳ ಮಂದಹಾಸದಿಂದ ಮಿತ್ರನೆಂದ
“ಇವತ್ತು ಮಾತಾಡುವುದಕ್ಕೆ ಸಾಧ್ಯವಿಲ್ಲ ಎಲ್ಲ ಗಡಿಬಿಡಿ ಮುಗೀಲಿ ಒಂದು ದಿನ ಇಬ್ಬರೂ ಕುಳಿತುಬಿಡುವ”
ನಮ್ಮೊಳಗಿನ ಖಾಸಗೀತನ ಎಂದರೆ ಇದೇ ಅಲ್ಲವೇ?  ಅಪರೂಪದ ಮಿತ್ರನಿಗೆ ಒಂದಿನಿತು ಮಾತಿಗೂ ಸಮಯ ವಿಲ್ಲವೆಂದರೆ ಅದು ಯಾರ ತಪ್ಪು ಅಲ್ಲ ವ್ಯವಹಾರಿಕ ಜೀವನದ ಸಂದರ್ಭಗಳು ನಮಗರಿಯದೇ ನಮ್ಮನ್ನು ನಿಯಂತ್ರಿಸಿಬಿಡುತ್ತವೆ. ಹೌದು, ಇಂದು ಈ ಜನಜಂಗುಳಿ ಸದ್ದುಗದ್ದಲದ ನಡುವೇ ನಮ್ಮದೇನನ್ನೋ ಕಳೆದುಕೊಂಡ ಅನುಭವವಾಗುವಿದಿಲ್ಲವೇ? ಆದರೂ ಅದೇ ಅನಿವಾರ್ಯತೆ ಎಂಬಲ್ಲಿಗೆ ಮಹತ್ವವನ್ನು ಪಡೆಯುತ್ತದೆ. ಹೀಗಾಗಿ ನಾನು ವಿಶೇಷವಿಲ್ಲದ ದಿನಗಳನ್ನೆ ಬಯಸುವಂತಾಗಿದ್ದೇನೆ. ಅವಿತುಕೊಂಡ ಸಹಜವಾದ ಲೋಕ ತೆರೆದುಕೊಳ್ಳುವುದು ಇಲ್ಲೇ. ಸಡಗರದ ಸಂತಸದ ಕ್ಷಣಗಳಲ್ಲಿ ಆ ಸಂಭ್ರಮ ಸವಿಯಲು ಎಲ್ಲರೂ ಇರಬೇಕೆನ್ನುವುದು ಸಹಜ. ಆದರೆ ನನಗೆ ಅಂತರಂಗದ ತನ್ನತನ ಎಲ್ಲೋ ತೆಗೆದಿಟ್ಟ ಅನುಭವಾಗುತ್ತಿದೆ. ಇಂತಹ ವಾತಾವರಣದಲ್ಲೂ ಒಂದು ಅಸಹನೀಯತೆ ಬೇಡವೆಂದರೂ ಸುಳಿಯುತ್ತದೆ. ಎಲ್ಲವೂ ಬಲವಂತದಿಂದ ಶಿಷ್ಟಾಚಾರದ ಸೆರಗಿನೊಳಗೆ ಅವಿತಿರಿಸಲ್ಪಡುತ್ತವೆ. ರಂಗದ ಮೇಲಿನ ವೇಷಗಳಂತೆ ಎಲ್ಲವೂ ಅಭಿನಯದ ಕ್ಷಣಗಳಾಗುತ್ತವೆ.
ಯಾವಾಗಲೂ ಭಿನ್ನ ಮುಖದಲ್ಲಿ ಚಿಂತಿಸುವವ ವಿಶಿಷ್ಟ ವ್ಯಕ್ತಿ ಎನಿಸಲ್ಪಡುತ್ತಾನೆ. ಇದು ನನ್ನಲ್ಲಿನ ವಿಶಿಷ್ಟತೆಯೆಂದು ಅನಿಸುವುದಿಲ್ಲ. ಹಲವರ ಅಂತರಂಗದ ಒಳಗೆ ಇದೇ ತಳಮಳಿಸುತ್ತಿರಬಹುದು. ಇದು ಅದರ ಒಂದು ಸಣ್ಣ ರೂಪ. ಮೃಗಾಲಯದ ಕತ್ತಲೆಯ ಕೋಣೆಯೊಳಗಿನ ವಿಚಿತ್ರ ಮೃಗ ಅವಿತುಕೊಂಡು ತನ್ನನ್ನು ಸ್ವಲ್ಪ ಮಾತ್ರವೇ ತೋರಿಸಿಕೊಂಡ ಹಾಗೆ. ಕೂತೂಹಲದಿಂದ ಚಿಂತನೆಯನ್ನು ಗಮನಿಸುವ ಮನಸ್ಸಿದ್ದರೆ ಗಮನಿಸಬಹುದು.
ನಾನು ಮನಸ್ಸು ಬಯಸಿ ಹಾರ್ದಿಕವಾಗಿ ಹೋಗುವುದು ಇಂತಹ ಸಹಜ ಲೋಕಕ್ಕೆ. ಅದು ನೆಂಟರ ಮನೆಯೇ ಆಗಲೀ...ಸ್ನೇಹಿತರ ಮನೇಯೇ ಆಗಲಿ ನಿತ್ಯದ ಬದುಕು ನಿಜವಾದ ಜೀವನ ದರ್ಶನವನ್ನೂ ಸಜತೆಯೊಂದಿಗೆ ಮಾಡುತ್ತದೆ. ಸಹಜ ದಿನಗಳಲ್ಲಿ ಯಾರ ಮನೆಗೆ ಹೋದರೂ ಅಲ್ಲಿ ಸಹಜತೆಯ ಅನುಭವವಾಗುತ್ತದೆ. ಅತ್ಮೀಯರಾದರೆ ಸ್ನೇಹದ ಸಿಂಚನ ಅತಿಯಾಗಿ ಅನುಭವಕ್ಕೆ ಬರುತ್ತದೆ.ಆದರ ಉಪಚಾರ ಮಾತುಕತೆಗೆ ಇಲ್ಲಿ ಪಾಲುದಾರಿಕೆ ಇರುವುದಿಲ್ಲ. ಅತ್ಮೀಯರು ಮತ್ತಷ್ಟೂ ಹತ್ತಿರವಾಗುತ್ತಾರೆ ಮತ್ತು ಖಾಸಗಿಯಾಗಿ ತೆರೆದುಕೊಳ್ಳುತ್ತಾರೆ ಎಂದು ನನ್ನ ಅನಿಸಿಕೆ. ಬಂಧುಗಳಾಗಲೀ ಮಿತ್ರರಾಗಲಿ ನಮ್ಮ ಬೇಟಿಯನ್ನು ಬಹಳಷ್ಟು ಜ್ಞಾಪಿಸುವಂತೆ ಸ್ಮರಣೀಯವಾಗಿಸುತ್ತಾರೆ. ವಿಶೇಷ ದಿನಗಳಲ್ಲಿ ಎಲ್ಲೋ ಕಳೆದು ಹೋದದ್ದು, ಮರೆಯಾಗಿ ಉಳಿದದ್ದು ಇಲ್ಲಿ ಗೋಚರವಾಗುತ್ತವೆ.
ಪಕ್ವಾನ್ನದ ಷಡ್ರಸ ಭೋಜನಕ್ಕಿಂತ ನಿತ್ಯದ ಕುಚ್ಚಿಲಕ್ಕಿ ತಂಬುಳಿ ಚಟ್ನಿಯ ರುಚಿ ಮರೆಯದಂತಹ  ಸವಿಯ ಲೇಪನವನ್ನು  ನಾಲಗೆಯಮೇಲೆ ಪಸರಿಸಿಬಿಡುತ್ತದೆ. ಉಣ್ಣುವುದರಲ್ಲಿ ಯಾವುದೇ ಗೊಂದಲವಿಲ್ಲದೆ ತೃಪ್ತಿಯ ಊಟ ತಿಂಡಿಯನ್ನು ಸವಿಯುತ್ತೇವೆ. ಅತಿಥಿ ಮತ್ತು ಅತಿಥೇಯ ಸಂಕ್ಯೆಯಲ್ಲಿ ಆದಷ್ಟು ಕಡಿಮೆ ಇದ್ದಷ್ಟು ಅಲ್ಲಿ ಸ್ನೇಹ ಹೆಚ್ಚಾಗಿ ಬಳಕೆಯಾಗುತ್ತದೆ ಎಂದು ನನ್ನ ನಂಬಿಕೆ. ಸ್ವಚ್ಚಂದ ವಿಹರಿಕೆ ಕ್ಷೇತ್ರ  ಹೆಚ್ಹು ಅನುಕೂಲವಾಗಿರುತ್ತದೆ. ನಾವು ಅತಿಥಿ ಯಾ ಅತಿಥೇಯರಾದಾಗಲೂ ಮೂರನೆಯದಾಗಿ ಒಂದು ಪಾತ್ರ ಅಲ್ಲಿದ್ದರೆ ಒಂದು ರೀತಿಯ ಅನಗತ್ಯ ಅಸಹಜ ಸನ್ನಿವೇಶ ಒದಗಿಯೇ ಒದಗುತ್ತದೆ. ಹಾಗಾಗಿ ಎಲ್ಲವಿಧದಲ್ಲೂ ಜನಜಂಗುಳಿಯಿಂದ ದೂರ ಉಳಿದು ಖಾಸಗೀತನವನ್ನು ಮುಕ್ತವಾಗಿ ಅನುಭವಸಲು ಉದ್ಯುಕ್ತನಾಗುತ್ತೇನೆ.
ಇದು ವ್ಯಕ್ತಿವಿಚಾರದ ಭೇಟಿಯಾಗಿ ಮಾತ್ರವಲ್ಲ ಒಂದು ಸಾರ್ವಜನಿಕ ಪ್ರದೇಶಕ್ಕೆ ಹೋದಾಗಲೂ ಖಾಸಗೀ ವಲಯವನ್ನೇ ಆರಿಸಿಕೊಳ್ಳುವುದು ಹೆಚ್ಚು. ದೇವಸ್ಥಾನಗಳಿಗೆ ಹೋದಾಗ ಇದು ಬಹಳ ಅರ್ಥಪೂರ್ಣವಾಗಿ ಪರಿಣಾಮ ಬೀರುತ್ತದೆ. ದೊಡ್ಡ ದೊಡ್ಡ ಕ್ಷೇತ್ರ ದರ್ಶನಕ್ಕಿಂತ ಹಳ್ಳಿಯಲ್ಲಿರುವ ಪುಟ್ಟ ಗುಡಿ ಅಥವ ಅದಷ್ಟು ನಿಶ್ಯಬ್ದವಾಗಿರುವ ದೇವಾಲಯಗಳ ದರ್ಶನ ಮತ್ತು  ಪರಿಸರ ಅತ್ಯಂತ ಭಾವಪೂರ್ಣವಾಗಿರುತ್ತದೆ. ಇಲ್ಲಿ ಭಗವಂತನ ಸಾಮಿಪ್ಯ ಅತ್ಯಂತ ಹತ್ತಿರವಾದ ಅನುಭವ.. ಸರತಿಯ ಸಾಲಿನಲ್ಲಿ ಗಂಟೆ ಗಟ್ಟಲೆ ನಿಲ್ಲುವ ಜಂಝಾಟವಿಲ್ಲ. ದೇವರ ದರ್ಶನ ಮನದುಂಬಿ ಮಾಡಿ ಆ ಪ್ರಸನ್ನತೆಯನ್ನು ಸಾಕ್ಷಾತ್ಕರಿಸಿಕೊಳ್ಳಬಹುದು. ದೇವರ ದೃಷ್ಠಿ ಏಲ್ಲರ ಮೇಲೆ ಸಮಾನವಾಗಿದ್ದರೂ, ಯಾರೂ ಇಲ್ಲದ ಶಾಂತ ಪರಿಸರದಲ್ಲಿ ಮನಸ್ಸಿನ ಭಾವ ಭಿನ್ನವಾಗಿರುತ್ತದೆ. ನಮ್ಮ ದುಗುಡ ದುಮ್ಮಾನಗಳ ಮನವಿಗೆ ದೇವನ ಕಿವಿ ತೆರೆದುಕೊಂಡಿರುವ ಅನುಭವಾಗುತ್ತದೆ. ನಮ್ಮದೆಲ್ಲವನ್ನು ಹೃದಯದಿಂದ ಅರ್ಪಿಸುವ ಮನೋಭಾವ ಬರುತ್ತದೆ. ಕ್ಷೇತ್ರ ದೊಡ್ಡದಾದಂತೆ ನಮ್ಮ ದೇವರ ನಡುವಿನ ಖಾಸಗೀತನದ ಭಾವ ಕಡಿಮೆಯಾಗುತ್ತದೆ. ಇದು ಒಂದು ಭಾವ ಆದರೂ... ಮನಸ್ಸು ಹಾತೋರೆಯುವುದು ಶಾಂತ ಪರಿಸರದ ಶಾಂತ ಮೂರ್ತಿಯ ದರ್ಶನವನ್ನು.
ನಮ್ಮೂರಿನ ದೇವಾಲಯದಲ್ಲಿ ಜನಜಂಗುಳಿಯ ಜಾತ್ರೆ ಸೇರುವುದು ವರ್ಷದ ಒಂದೆರಡು ದಿನದ ಉತ್ಸವದಲ್ಲಿ. ಆದಿನಗಳಲ್ಲಿ ಬಾಹ್ಯ ಸಂಭ್ರಮ ಸಡಗರ ಇದ್ದರೂ ಮನಸ್ಸು ಭಕ್ತಿಯಿಂದ ಸ್ಪಂದಿಸುವುದು ಅಲ್ಲಿಗೆ ನಿತ್ಯದ ಪೂಜಾದರ್ಶನಕ್ಕೆ ಹೋದಾಗ. ಹಾಗಾಗಿ ನಮ್ಮ ಬಾಯಾರಿನ  ಆವಳ ಮಠದ ದುರ್ಗಾ ಪರಮೇಶ್ವರಿಯ ಸನ್ನಿಧಿಗೂ ನಾನು ಹೋಗಬಯಸುವುದು ನಿತ್ಯ ದಲ್ಲಿ. ಸರಳವಾದ ಭೋಜನ ಪ್ರಸಾದದ ಅದ್ಭುತ ಸ್ವಾದಾನುಭವದ ಜತೆಗೆ ಯಾವುದೇ ಆಡಂಬರ ಔಪಚಾರಿಕತೆಗೆ ಅತೀತವಾಗಿರುವ ಭಕ್ತಿ ಭಾವದಲ್ಲಿ ಪ್ರತೀ ಸಲ  ದೇವರ ಎದುರು ಒಂದು ಘಳಿಗೆ ನಿಂತಾಗಲೂ ಹೃದಯ ತುಂಬಿ ಕಣ್ಣುಗಳು ಭಾರವಾಗುತ್ತವೆ. ಈ ಭಾವ ಬೇರೆಲ್ಲೂ ಬಾರದಿರುವ ಕಾರಣವಾದರೂ ಏನು ಅದೇ ಮನದೊಳಗಿನ ಖಾಸಗೀತನ.
ಆವಳ ಮಠದ ಸುಂದರ ಪರಿಸರ 
 ನಮ್ಮೂರಿನ ದೇವಾಲಯಕ್ಕೆ ನಿತ್ಯದಲ್ಲಿ ಹೋಗುವಾಗ ಬರುವ ಭಕ್ತಿಭಾವ ಪ್ರಸಿದ್ದ ದೊಡ್ಡ ಕ್ಷೇತ್ರ ಹೋದಾಗ ಬರುವುದೇ ಇಲ್ಲ. ಆ ಜನಜಂಗುಳಿಯಲ್ಲಿ ಸಿಕ್ಕಿ ಹಾಕಿದ ಭಕ್ತಿಭಾವ ಮನಸ್ಸಲ್ಲಿ ಮೂಡಿಸಿವುದು ಬಹಳ ಶ್ರಮದಾಯಕ. ಊರ ಸಣ್ಣ ದೇವಾಲಯದಲ್ಲಿ ಸಿಕ್ಕಿದ ಸಂತೃಪ್ತಿ  ಎಲ್ಲೂ ಸಿಗದಿರುವ ಕಾರಣವಾದರೂ ಏನು ಅದೇ ಮನದೊಳಗಿನ ಖಾಸಗೀತನ. ಪರಿಶುದ್ದ ಪ್ರಶಾಂತ ಪರಿಸರದಲ್ಲಿ ಕೇವಲ ನಾವುಗಳೇ ಇದ್ದಾಗ ಭಗವಂತನಲ್ಲಿ ನಡೆಸುವ ಮೌನದ ಸಂಭಾಷಣೆ ಹೊರಜಗತ್ತಿಗೆ ಕೇಳಿಸದೇ ಇದ್ದರೂ ಅದು ಮನದಾಳಕ್ಕೆ ಇಳಿದುಬಿಡುತ್ತದೆ.




Monday, June 25, 2012

ಮನೆಯು ಚಿಕ್ಕದಾಗಿರಬೇಕು ಮನವು ದೊಡ್ಡದಾಗಿರಬೇಕು



“ಮನೆ ಚಿಕ್ಕದಾದರೂ ಪರವಾಗಿಲ್ಲ ಮನಸ್ಸು ದೊಡ್ಡದಾಗಿರಬೇಕು” ಎಂಬ ಮಾತು ಜನ ಜನಿತ. ಬಹಳ ಸರಳವಾದ ತತ್ವವಾದರೂ ಅದರ ಆಶಯ ಬಹಳ ಹಿರಿದು. ದೊಡ್ಡದಾದ ಮನೆಯಿದೆ.... ಅದರಲ್ಲಿ ವಾಸವಾಗಿದ್ದೇವೆ,  ಬದುಕು ಎಷ್ಟು ಯಾಂತ್ರಿಕವಾಗಿರುತ್ತದೆ ಎಂದು ಕಲ್ಪಿಸಿ.  ಮನೆಯ ಮಂದಿ ಪರಸ್ಪರ ಭೇಟಿಯಾಗುವುದೇ ಬಹಳ ಅಪರೂಪವಾಗಿರುತ್ತದೆ. ದೊಡ್ಡ ಮನೆಯ ಆ ತುದಿಯ ಕೊಣೆಯಲ್ಲಿ ಅಕ್ಕನೋ ತಮ್ಮನೋ ಇದ್ದು ಇನ್ನೋಂದು ತುದಿಯ ಕೋಣೆಯಲ್ಲಿ ಅಪ್ಪ ಮಾವ ಹೀಗೆ ಬಹಳ  ಚಿಕ್ಕದಾದರೂ  ಅಂತರದಲ್ಲೇ ಅಥವಾ ಒಂದು ರೀತಿಯ ಮರೆಯಲ್ಲೇ ದಿನ ಕಳೆಯುತ್ತಿದ್ದೇವೆ. ಪರಸ್ಪರ ಭೇಟಿ ಬಹಳ ಕಡಿಮೆಯಾಗಿರುತ್ತದೆ. ಮಾತ್ರವಲ್ಲ ಕೆಲವು ಸಲ  ಮನೆಯೊಳಗೆ ಮೊಬೈಲ್ ಮೂಲಕವೇ ಮಾತನಾಡುವ ಸಂದರ್ಭಗಳನ್ನು ಕಲ್ಪಿಸಿ ಮನೆಯೊಳಗೆ ಇದ್ದು ಒಂದು ರೀತಿಯ ಅಂತರದಲ್ಲೇ ದಿನಕಳೆಯುತ್ತಿದ್ದೇವೆ.
ಅದೇ ಚಿಕ್ಕದಾದ ಮನೆಯನ್ನು ಕಲ್ಪಿಸಿ.. ಪರಸ್ಪರ ಮುಖದರ್ಶವನ್ನು ತಪ್ಪಿಸಿಕೊಳ್ಳುವ ಹಾಗಿಲ್ಲ.. ದೇಹಾಂತರವಿದ್ದರೂ ಬಹಳ ಹತ್ತಿರದಲ್ಲೇ ಪಿಸುದನಿಯ ಅಂತರದಲ್ಲೇ ಇರುತ್ತೇವೆ. ಇಲ್ಲಿ ಹತ್ತಿರ ಹತ್ತಿರ ಎಲ್ಲವೂ ಹತ್ತಿರ ಕೊನೆಗೆ ಮನಸ್ಸು ಮನಸ್ಸಿನ ನಡುವೆ ಕಡಿಮೆಯ ಅಂತರ. ಬಾಲ್ಯದಲ್ಲಿ ನಾವು ಆಟವಾಡುತ್ತಾ  ನೆಲದಲ್ಲಿ ಸ್ವಲ್ಪ ನೀರನ್ನು ವೃತ್ತಾಕಾರ ಇರುವಂತೆ ಚೆಲ್ಲಿ... ಸ್ವಲ್ಪ ಅಂತರ ವಿದ್ದು ಇನ್ನೊಂದು ವೃತ್ತಾಕರದಲ್ಲಿ ಚೆಲ್ಲಿ ಮಧ್ಯೆ ಬೆರಳಿನಿಂದ ಅದೇ ನೀರಿನ ಗೆರೆಯನ್ನು ಎಳೆಯುತ್ತಿದ್ದೆವು. ಸ್ವಲ್ಪ ಹೊತ್ತಿನಲ್ಲೇ ಎರಡು ನೀರಿನ  ವೃತ್ತಾಕಾರ.. ಪರಸ್ಪರ ಒಂದಾಗಿ ಬಿಡುತ್ತಿದ್ದವು. ಇದೊಂದು ಆಟ ಆದರೆ ಬದುಕಿನ ಸತ್ಯ ಇದರಲ್ಲಿ ಅಡಗಿದೆ. ನೀರೆಂದರೆ ಮನಸ್ಸಿನ ಹಾಗೆ ಅಂತರ ಕಡಿಮೆಯಾದಾಗ ಮನಸ್ಸು ಒಂದಾಗಿ ಆ ಮನಸ್ಸು ದೊಡ್ಡದಾಗುತ್ತದೆ. ಒಂದರ್ಥದಲ್ಲಿ ಸಣ್ಣ ಮನೆಯಲ್ಲಿ ದೇಹ ದೇಹಗಳ ನಡುವೆ ಮನಸ್ಸು ಮನಸ್ಸಿನ ನಡುವೆ ಅಂತರ ಕಡಿಮೆ ಇದ್ದು  ಮನಸ್ಸು ಒಂದೇ ಆಗಿ ದೊಡ್ಡದಾಗಿರುತ್ತದೆ. ದೊಡ್ಡ ಮನೆಯಲ್ಲಿ.... ಮನೆ ದೊಡ್ಡದಾಗಿರುತ್ತದೆ .. ಸಹಜವಾಗಿ ಎಲ್ಲವೂ ಅಂತರದಲ್ಲೇ ಇದ್ದು .. ಮನಸ್ಸು ಚಿಕ್ಕದಾಗಿರುತ್ತದೆ..
ನೀರು...ಇದು.. ಯಾವುದೇ ಆಕಾರದಲ್ಲಿ ಇರಬಹುದು... ಮನಸ್ಸು ಹಾಗೇ ಯಾವುದೇ ಆಕಾರದಲ್ಲಿ ಇರಬಹುದು.. ಅದಕ್ಕೆ ಆಕಾರ ಕೊಡುವುದು ಸುತ್ತಲಿನ ಪರಿಸರ. ಎರಡು ನೀರಿನ ನಡುವಣ ಅಂತರ ಕಡಿಮೆಯಾದರೆ .. ಕೊನೆಗೆ ಎರಡು  ಇದ್ದದ್ದು ಒಂದಾಗುತ್ತದೆ. ಹಾಗೇ...
 ಮನಸ್ಸಿನ ನಡುವೆ ಅಂತರ ಕಡಿಮೆಯಾದಷ್ಟು ಪರಸ್ಪರ ಸೇರಿದ ಮನಸ್ಸು ದೊಡ್ಡದಾಗಿರುತ್ತದೆ. 

Friday, May 25, 2012

ಉಸಿರೇ ಉಸಿರಾಗುವಾಗ



ದರ್ಶನ ನಿದರ್ಶನವಾದ ಅನುಭವ. ಆದರೆ ನಿದರ್ಶನವಾಗಬೇಕಿದ್ದರೆ ದರ್ಶನವಾಗಬೇಕಿಲ್ಲ. ಅನುಭವವಾದರೂ ಅದು ನಿದರ್ಶನವಾಗಿಬಿಡುತ್ತದೆ. ಗಾಳಿ ಬೀಸುತ್ತದೆ. ದೇಹಕ್ಕೆ ಅದರ ಅನುಭವ. ಇಲ್ಲಿ ದರ್ಶನವಿಲ್ಲ. ಆದರೆ ಗಾಳಿ ಬೀಸುವಿಕೆಗೆ ಒಂದು ನಿದರ್ಶನವಾಗುತ್ತದೆ. ಉಸಿರು ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ದೇಹಕ್ಕೆ ಅದರ ಅನುಭವ ಆಗದಿರುತ್ತದೆಯೇ? ಉಸಿರ ಅನುಭವ ದೇಹಕ್ಕೆ ಆಗಬೇಕು. ಆದರೆ ಪರರಿಗಲ್ಲ. ತನ್ನ ಉಸಿರಾಟದ ಅನುಭವ ಪರರಿಗಾದರೆ ಅದು ಒಂದೋ ಬಿಸಿ ಉಸಿರು ಅಥವಾ ಅದು ಉಸಿರೆಂದೆಣಿಸದೆ ಗೊರಕೆ ಎನಿಸಲ್ಪಡುತ್ತದೆ.
ನಮ್ಮ ಉಸಿರು ನಮಗೆ ಕೇಳಿಸದಂತಿದ್ದರೆ ಅದು ಅರೋಗ್ಯವಂತ ಉಸಿರು... ನಮ್ಮ ಉಸಿರ ಸದ್ದು ನಮಗೆ ಕೇಳಿಸಿದರೆ ಸ್ವಲ್ಪ ಸಮಸ್ಯೆ ಇದೆ ಎಂದು ಅರ್ಥ. ಅದೇ ನಮ್ಮ ಉಸಿರು ಇನ್ನೊಬ್ಬರಿಗೆ ಕೇಳುವಂತಿದ್ದರೆ ಆಗ ಚಿಕಿತ್ಸೆ ಬೇಕು ಎಂಬ ಅರ್ಥ.ನಮ್ಮ ಉಸಿರು ಪರರಿಗೆ ತೊಂದರೆಯನ್ನು ಕೊಡುತ್ತಿದ್ದರೆ ಇದು ಗೊರಕೆ ಎನಿಸಿ ಚಿಕಿತ್ಸೆ ಅನಿವಾರ್ಯವಾಗುತ್ತದೆ
ನಮ್ಮ ಸುತ್ತಲು ಗಾಳಿ ಇದೆ. ಆದರೆ ಅನುಭವದ ರೀತಿ ಹಲವಿದೆ.ಸ್ತಬ್ಧ ವಾತಾವರಣದಲ್ಲೂ  ಬಾಹ್ಯ ಶರೀರಕ್ಕೆ ಅನುಭವಾಗದೇ ಇದ್ದರು ಉಸಿರ ಚಲನೆಯ ಮೂಲಕ ದೇಹಕ್ಕೆ ಅನುಭವವಾಗುತ್ತದೆ. ಸ್ವಲ್ಪ ತಣ್ಣನೆಯ ಗಾಳಿ ದೇಹಕ್ಕೆ ಪರಿಸರಕ್ಕೆ ಹಿತವಾದ ಅನುಭವವನ್ನು ನೀಡಿದರೆ ಬಿರುಗಾಳಿ ಸುತ್ತಲ ಪರಿಸರದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸುತ್ತದೆ. ಅದೇ ಬಗೆಯಲ್ಲಿ ನಮ್ಮ ಉಸಿರು. ಹೃದಯಕ್ಕೆ ರಭಸವಾಗಿ ಸೇವಿಸಿದರೆ ಇದೇ ರೀತಿಯ ಅಲ್ಲೋಲ ಕಲ್ಲೋಲಕ್ಕೆ ಹೃದಯವು ಒಳಗಾಗುತ್ತದೆ. ಹೃದಯದ ಕ್ರಿಯೆಗಳ  ಮೇಲೆ ತೀವ್ರವಾದ ಒತ್ತಡ  ಹೇರಲ್ಪಡುತ್ತದೆ. ಶಭ್ದದಿಂದ ಕೂಡಿದ ಹಾಗೂ  ವೇಗದ ಉಸಿರಾಟ ಹೃದಯಕ್ಕೆ ಘಾಸಿಯನ್ನೇ ಉಂಟುಮಾಡುತ್ತದೆ.  ನಿಧಾನವಾದ ಮತ್ತು ಕ್ರಮಬದ್ದ ಉಸಿರಾಟ ನಿಶಃಬ್ದ ವಾಗಿದ್ದು ಹೃದಯವನ್ನು ಸುಸ್ಥಿತಿಯಲ್ಲಿಡುತ್ತದೆ. ತಾಳ...ಜಾಗಟೆ..ಘಂಟೆ ಇದನ್ನು ಮೆಲುವಾಗಿ ಬಾರಿಸಿದಾಗ ಹೊರಡುವ ನಿನಾದ ಗಮನಿಸಿ... ಕಂಪನದ ಅನುಭವದ ಅವಧಿ ಎಷ್ಟಿರುತ್ತದೆ. .. ಅದೇ ರೀತಿ ಅದನ್ನು ಜೋರಾಗಿ ಬಡಿದಾಗ ಅದರಿಂದ ಹೊರಡುವ ಕರ್ಕಶ ದ್ವನಿಯ ಕಂಪನದ ಅವಧಿ ಏಷ್ತಿರುತ್ತದೆ.. ... ಮೆಲುವಾದ ಸಾವಧಾನವಾದ ದೀರ್ಘ ಉಸಿರೂ ಹೃದಯಕ್ಕೆ ಬಡಿದಾಗ ಇದೇ ಅನುಭವಾಗುತ್ತದೆ. ಅದರ ಪರಿಣಾಮ ಕಂಪನ ದೇಹಾದ್ಯಂಬ ಬಹಳ ಸಮಯ ಇರುತ್ತದೆ.. ಪ್ರಾಣಾಯಾಮದ ಪರಿಣಾಮವೂ ಇದೇ ರೀತಿಯಲ್ಲಿ ಆಗುತ್ತದೆ.
ನಿದ್ರಿಸುವಾಗ ಗೊರಕೆಯಿಂದ ಕೂಡಿದ ಉಸಿರಾಟಕ್ಕೆ ಶ್ವಾಸ ನಾಳಗಳ ತಡೆಗಳೇ ಕಾರಣ. ಸ್ವಚ್ಚವಾದ ವಾಯು ಯಾವುದೇ ತಡೆಗಳಿಲ್ಲದೇ    ಶ್ವಾಸಕೋಶಕ್ಕೆ ಸೇರಬೆಕು. ಪ್ರಾಣಾಯಾಮ ಮೊತ್ತ ಮೊದಲ ಆದ್ಯತೆಯೇ ಇದು.  ನಿಧಾನವಾದ ಮತ್ತು ದೀರ್ಘವಾದ ಉಸಿರಾಟ ಹೃದಯವು ಒತ್ತಡ ರಹಿತವಾಗಿ ಕೆಲಸ ಮಾಡುವುದನ್ನು ಪ್ರೇರೆಪಿಸುತ್ತದೆ. ದೇಹ ದಣಿದಾಗ ಅಯಾಚಿತವಾಗಿ ನಿಟ್ಟುಸಿರು ಹೊರಬರುವುದು ಇದೇ ಕಾರಣದಿಂದ. ಅದಕ್ಕಾಗಿ ದಣಿದಾಗ ಐದಾರು ಬಾರಿ ದೀರ್ಘ ಉಸಿರಾಟವನ್ನು ನಡೆಸಿದರೆ ಅಮ್ಲಜನಕ ಹೃದಯಕ್ಕೆ ಸೇರಿ ದೇಹದ ರಕ್ತ ಪರಿಚಲನೆ ಚುರುಕಾಗಿ ದೇಹದಲ್ಲಿ ಹೊಸಚೈತನ್ಯ ತುಂಬಿ ಆಯಾಸ ಪರಿಹಾರವಾಗುತ್ತದೆ.
ವಾಕಿಂಗ್ ಜಾಗಿಂಗ್ ವ್ಯಾಯಾಮಗಳು ದೇಹಕ್ಕೆ ಉತ್ತಮವಾದರೂ ವೇಗವಾದ ಉಸಿರಾಟ ಉತ್ತಮವಲ್ಲ. ಪ್ರಾಣಾಯಾಮದೊಂದಿಗೆ ಇವುಗಳನ್ನು ರೂಡಿಸಿಕೊಂಡರೆ ಮೊದಲಾಗುವ ಪರಿಣಾಮದಿಂದ ಹತ್ತರಷ್ಟು ಪರಿಣಾಮವನ್ನು ಪಡೆಯಬಹುದು. ಅಂದರೆ ಪ್ರಾಣಾಯಾಮ ಮಾಡಿ  ಹತ್ತು ನಿಮಿಷ ನಡಿಗೆಯನ್ನು ಮಾಡಿದರೆ ಒಂದು ಘಂಟೆಯ ನಡಿಗೆಯ ಪರಿಣಾಮವನ್ನು ಪಡೆಯಬಹುದು. ಕ್ರಮ ಬದ್ದ ಉಸಿರಾಟವೇ ಇದಕ್ಕೆ ಕಾರಣ. ಪ್ರತಿ ದಿನ ಹದಿನೈದರಿಂದ ಇಪ್ಪತ್ತು ನಿಮಿಷಗಳಷ್ಟು ಸಮಯವನ್ನು ಪ್ರಾಣಾಯಮಕ್ಕೆ ಮೀಸಲಿರಿಸಿ ಅಭ್ಯಾಸವನ್ನು ಮಾಡಿದರೆ ಉಸಿರಾಟದಲ್ಲಿ ಗಮನಾರ್ಹ ಬದಲಾವಣೆಯೊಂದಿಗೆ ದೈಹಿಕ  ಮತ್ತು ಮಾನಸಿಕ ಆರೋಗ್ಯ ಸಹಜವಾಗಿ ಉತ್ತಮಗೊಳ್ಳುತ್ತದೆ.  
          ಶಬ್ದದಿಂದ ಕೂಡಿದ ಉಸಿರಾಟ ಇದೆ ಎಂದರೆ ಖಂಡಿತವಾಗಿಯೂ ಆತನ ಅರೋಗ್ಯ ಸರಿಯಾಗಿಲ್ಲ ಎಂದು ತಿಳಿಯಬಹುದು.  ಆ ವ್ಯಕ್ತಿ ಹೃದಯ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಶ್ವಾಸ ಕೋಶದ ಕಾಯಿಲೆಯಿಂದ ಬಳಲುತ್ತಿದ್ದಾನೆ ಇಲ್ಲವೇ ಅದರ ಹತ್ತಿರವೇ ಇದ್ದಾನೆಂದು ತಿಳಿದುಕೊಳ್ಳಬಹುದು. ಪ್ರಾಣಾಯಾಮದಿಂದ ಇದರಲ್ಲಿ ಗಮನಾರ್ಹ ಬದಲಾವಣೆಯನ್ನು ತರಬಹುದು. ಉಬ್ಬಸ ಅಸ್ತಮದಂತಹ  ಅಲರ್ಜಿಯಂತಹ ಕಾಯಿಲೆ  ಇದಕ್ಕೆ ಉತ್ತಮ ನಿದರ್ಶನ.  ಇದು ಉಸಿರಾಟದ ಮೇಲೇಯೆ ಪರಿಣಾಮವನ್ನು ಬೀರುತ್ತದೆ ಹಾಗಾಗಿ ಜೀವನವೇ ದುಸ್ತರವೆನಿಸಿ ವ್ಯಕ್ತಿ ಖಿನ್ನತೆಯಿಂದಲೂ ಮತ್ತು ನಂತರ ಬರುವ ಇತರ ದೈಹಿಕ ಕಾರಣಗಳಿಂದ ಬಳಲಬಹುದು. ಸರಳವಾದ ಪ್ರಾಣಾಯಾಮ ಯಾವ ರೀತಿಯಲ್ಲಿ ಪರಿಣಾಮವನ್ನು ಉಂಟು ಮಾಡುತ್ತದೆ ಎಂಬುದನ್ನು ಅನುಭವಿಸಿ ತಿಳಿಯಬಹುದಾಗಿದೆ. ಮುಖ್ಯವಾದುದನ್ನು ಉಸಿರಿಗೆ ಹೋಲಿಸುವುದುಂಟು. ಅದು ನನ್ನ ಉಸಿರು ಎಂದು. ಆದರೆ ಆ ಉಸಿರು ಪ್ರಧಾನವಾಗುವುದು ಅದರ ಬಗ್ಗೆ ಗಮನ ಹರಿಸಿದಾಗ. ಉಸಿರೇ ಉಸಿರಾಗುವುದು ಎನ್ನಬಹುದೇ?