Saturday, January 7, 2012

ನಂಬಿಕೆಗೆಳು ವಿಪರ್ಯಾಸಗಳು



ನಂಬುಗೆ ವಿಶ್ವಾಸ ಎಂಬ ಭಾವವನ್ನು ಮನುಷ್ಯ ಹುಟ್ಟಿದ ಕೂಡಲೇ ಬೆಳೆಸಿಕೊಳ್ಳುತ್ತಾನೆ. ಹುಟ್ಟಿದ ಮಗು ಮೊದಲು ತಾಯಿಯ ಎದೆಹಾಲನ್ನು ಚೀಪುತ್ತ ತನ್ನ ಕೈಗಳನ್ನೇ ಚೀಪತೊಡಗುತ್ತದೆ. ಆ ಕೈಗಳಲ್ಲೇ ತಿನ್ನುವ ಆಹಾರ ಸಿಗುವುದೆಂಬ ವಿಶ್ವಾಸ. ತನ್ನವ್ವ ತೋರಿದ ವ್ಯಕ್ತಿಯನ್ನು ಇವನು  ಆಪ್ಪ ಇವನು ಬಂಧು ಎಂದು ವಿಶ್ವಾಸದಿಂದ ನಂಬಿಕೆಯನ್ನು ಬೆಳೆಸುತ್ತದೆ. ಈ ನಂಬಿಕೆ ಎಂಬುದು ಹುಟ್ಟಿದಂದಿನಿಂದ ಬೆಳೆದು ಗಟ್ಟಿಯಾಗಿ ಶಿಖರವಾಗಿರುತ್ತ, ಅದರ ಕಾಠಿಣ್ಯ ಅವರವರ ಮನೋಭಾವಕ್ಕೆ ಹೊಂದಿಕೊಂಡಿರುತ್ತದೆ. ಆದರೆ ಅದು ಶಿಥಿಲಗೊಂಡು ಕುಸಿದಾಗ ಬದುಕಿನ ಅರ್ಥವೇ ಕಳೆದುಕೊಂಡಂತೆ ಭಾಸವಾಗುತ್ತದೆ.

ಈಗೀಗ ಇಂತಹ  ನಂಬಿಕೆ ವಿಶ್ವಾಸಗಳ ಗೋಡೆಗಳು ವಿವಾದದ ಗಾಳಿಯಿಂದ ಅಲುಗಾಡಿ ಕುಸಿಯತೊಡಗುತ್ತದೆ. ಇಂದು ಗಾಢವಾಗಿ ನಂಬಿ ಅಚಲವಾದದ್ದು ನಾಳೆ ಶಿಥಿಲವಾಗಿಬಿಡುತ್ತದೆ. ಜನ್ಮದಾತ ಜನಕನನ್ನು ನಂಬುವುದು ಅಮ್ಮನ ಮಾತಿನಿಂದ. ಇಂತಹ ನಂಬಿಕೆಗಳು ಕೇವಲ ನಂಬಿಕೆಗಳಲ್ಲ. ಅದು ಮೌಢ್ಯವೆಂದು ಹಾಸ್ಯಾಸ್ಪದವೆಂದು ಪರಿಗಣಿಸಿದರೆ ಬದುಕಿನ ಅರ್ಥಕ್ಕೆ ಬೇರೆಯೇ ವ್ಯಾಖ್ಯಾನವನ್ನು ಕೊಡಬೇಕಾಗುತ್ತದೆ.

ಮನಸ್ಸಿನ ಭಾವನೆಗೆಳು ಸಂಘರ್ಷಕ್ಕೆ ತುತ್ತಾದಾಗ ವಿವಾದಗಳು ಹುಟ್ಟಿಕೊಳ್ಳುತ್ತವೆ. ಅದು ಹುಟ್ಟಿಕೊಳ್ಳುವುದು ದೊಡ್ಡದಲ್ಲ ಅದನ್ನು ಬೆಳೆಸುವ ರೀತಿ ವಿಚಿತ್ರ.  ಆದರೆ ಅದು  ಮಾನವ ಸಹಜತೆಯನ್ನು ಮೀರಿ ನಿಲ್ಲುವಾಗ ಮಾತ್ರ ಕಳವಳವಾಗುತ್ತದೆ. ವೈಷಮ್ಯ ಹೆಡೆಯೆತ್ತಿ ಪೂತ್ಕರಿಸುತ್ತ ಮನುಷ್ಯ ಜೀವಗಳೊಳಗಿನ ಸಂಬಂಧಗಳೇ ಕಲುಷಿತವಾಗುತ್ತದೆ. ಹುಟ್ಟು ಸಾವಿನ ನಡುವಿನ ದಿನಗಳನ್ನು ಈ ವೈಷಮ್ಯದ ನೆರಳೂ ಮಸುಕಾಗಿಸುತ್ತದೆ. ಸತ್ತ ನಂತರ ಅಸ್ತಿತ್ವವೇ ಇಲ್ಲದ ಬದುಕು , ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿ ಸತ್ತನಂತರ ಏನು? ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದು ಬಿಡುವಾಗ, ಬದುಕಿದ ಅಷ್ಟು ದಿನ ಈ ನೆರಳಿನಲ್ಲೇ ಕಳೆಯಬೇಕೆ? ಸಾವಿನ ನಂತರ ಎಲ್ಲಾ ವಾದಗಳು ಅರ್ಥವನ್ನು ಕಳೆದುಕೊಳ್ಳುತ್ತದೆ. 

ಆಚರಣೆಯೊಂದು ಮೂಢತನದ್ದೋ ಹಾಸ್ಯಾಸ್ಪದವೋ ಅದು ಪ್ರಶ್ನೆ ಬೇರೆ. ಆದರೆ ಅದನ್ನು ಆರೋಪಿಸುವಲ್ಲಿ ಸಮಸ್ಯಾ ಪರಿಹಾರಕ್ಕೆ ಎಲ್ಲಿ ಮೀಟಬೇಕೋ ಅಲ್ಲಿ ಮೀಟದೆ ಯಾರನ್ನೋ ಗುರಿಯಾಗಿಸಿ, ವೈಷಮ್ಯದ ಕಿಚ್ಚನ್ನು ಹೆಚ್ಚಿಸುತ್ತ ಮಾನವ ಸಂಬಂಧಗಳನ್ನು ಜಟಿಲಗೊಳಿಸುವುದು ಸರಿಯೇ? ವೀಣೆಯಲ್ಲಿ ತಂತಿ ಉದ್ದವಾಗಿ ಅದರ ದೇಹ ತುಂಬ ಚಾಚಿಕೊಂಡಿರುತ್ತದೆ. ಮೀಟಬೇಕಾದ ಜಾಗದಲ್ಲಿ ಮೀಟಿದಾಗ ಸಂಗೀತದ ರಾಗ ಮಾಧುರ್ಯ ಹೊರಡುತ್ತದೆ. ಇನ್ನೇಲ್ಲೋ ಮಿಟಿದಾಗ  ಅದು ಅಪಸ್ವರವನ್ನೇ ಹೊರಡಿಸಬಲ್ಲುದು. ವಾಸ್ತವದಲ್ಲಿ ಘಟನೆಗಳು ಘಟಿಸಿ,  ವಿವಾದಗಳು ಬೆಳೆಯುವುದು  ಇದೇ ಕಾರಣದಿಂದ.

ಇಂದು ಸಮಾಜ ಹೆಚ್ಚು ಹೆಚ್ಚು ವಿದ್ಯಾವಂತ ಸಮಾಜವಾಗುತ್ತಿದೆ.  ತಿಳುವಳಿಕೆ ಅಥವ ಲೋಕ ಜ್ಞಾನವೆಂಬುದು ಕೇವಲ ಒಂದು ಕಡೆಗೆ ಅಥವಾ ಯಾರಿಗೋ ಮೀಸಲಾಗಿರುವುದಿಲ್ಲ. ಇಂದು ಜ್ಞಾನದ ಪರಿಮಳವನ್ನು ಅವರವರ ಸಾಮಾರ್ಥ್ಯಕ್ಕನುಸಾರ ಆಘ್ರಾಣಿಸಲು ಪ್ರಪಂಚ ಮುಕ್ತವಾಗಿ ತೆರೆದುಕೊಂಡಿದೆ. ತಿಳಿವಳಿಕೆ ಇಲ್ಲದಲ್ಲಿ ಅದನ್ನು ತುಂಬಿಸಿ ವಂಚಿತರಾದವರಿಗೆ ಅದನ್ನು ನೀಡಬೇಕು. ಅದಕ್ಕೆ ಇನ್ನೊಬ್ಬರನ್ನು ಹೊಣೆಯಾಗಿಸುವ ಕಾಲಮಾನ ಈಗ ಸಾಕಷ್ಟು ಬದಲಾಗಿದೆ. ಆಚರಣೆಯೊಂದು ಬಲವಂತವಾಗಿ ಹೇರಲ್ಪಟ್ಟರೆ ಅದು ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಂಡಂತೆ ಎಂಬುದು ಸರಿ. ಯೋಚಿಸುವ ಬಲವಂತವಾಗಿ ಹೇರುವ ಪರಿಸ್ಥಿತಿ ಈಗ ಇದೆಯೇ?

        ಇಂದು ಹಳ್ಳಿಕಡೆ ಒಂದು ಬಾರಿ ಹೋಗಿ ನೋಡಿದರೆ ಅರಿವಾಗುತ್ತದೆ. ಕೃಷಿಕ ಜೀವನ ಎಷ್ಟೊಂದು ದುರ್ಭರವಾಗಿದೆ ಎಂದು. ಸಾಕಷ್ಟು ದಿನಗೂಲಿ ಸಂಬಳ ಮುಂಗಡವಾಗಿ ಕೊಟ್ಟರೂ ತನ್ನ ತೋಟದ ಕೆಲಸಕ್ಕೆ, ಮಣ್ಣು ಹೊರುವುದಕ್ಕೋ, ಗೊಬ್ಬರ ಹಾಕುವುದಕ್ಕೋ, ಮರ ಹತ್ತುವುದಕ್ಕೋ ಔಷಧಿ ಸಿಂಪಡಿಸುವುದಕ್ಕೋ ಇಂದು ಯಾವ ವರ್ಗದವರೂ ಬಾರದಂತಹ ಪರಿಸ್ಥಿತಿ. ಬಂದರೂ ಇಲ್ಲಿ ಸಂಬಳ ಕೊಡುವ ಯಜಮಾನ ಕಾರ್ಮಿಕನಿಗಿಂತ ದಯನೀಯ ಸ್ಥಿತಿಗೆ ತಲಪುವಂತಶ ಸನ್ನಿವೇಶ ಇರುತ್ತದೆ.  ಸಮಯಾನುಸಾರ ಮಾಡಬೇಕಾದ ಕೆಲಸ ಸಮಯಮೀರಿ ಮಾಡಿ ನಷ್ಟ ಅನುಭವಿಸುವುದು ಮಾತ್ರವಲ್ಲ ಕೃಷಿಕ ಜೀವನವೇ ಬೇಡ ಎಂದು ವೈರಾಗ್ಯ ತಾಳುವವರು ಹಲವರು.ಬಲವಂತದಿಂದ ಅಧಿಕಾರದರ್ಪದಿಂದ ಕೆಲಸವನ್ನು ಮಾಡಿಸಿಕೊಳ್ಳಲು ಅಸಮರ್ಥನಾಗಿ ಕೈಕಟ್ಟಿ ಕುಳಿತಿರುವ  ಪರಿಸ್ಥಿತಿಯಲ್ಲಿ ಒಂದು ಆಚರಣೆ ಬಲವಂತವಾಗಿ ಹೇರಲ್ಪಟ್ಟಿದೆ ಎಂದು ಒಂದು ವರ್ಗವನ್ನು ಬೊಟ್ಟು ಮಾಡುವುದು ಎಷ್ಟು ಸರಿ? ದುಡ್ಡುಕೊಟ್ಟು ಅಥವ ಬಲವಂತದಿಂದ ಹಿಂಸೆಕೊಟ್ಟು ಇಂತಹ ಆಚರಣೆ ಮಾಡು ಎಂದು ಅಧಿಕಾರ ಚಲಾಯಿಸಿದರೆ ಇಂದಿನ ಪ್ರಜ್ಞಾವಂತ ಸಮಾಜದಲ್ಲಿ ಕೇಳುವವರು ಯಾರು?  ಒಂದುವೇಳೆ ಈ ಪ್ರಾಥಮಿಕ ತಿಳುವಳಿಕೆಯಿಂದ, ಜ್ಞಾನದ ಪರಿಧಿಯಿಂದ ಯಾರಾದರೂ ಹೊರಗಿದ್ದು ತನ್ನ ಮಾನಸಿಕ ಗುಲಾಮತನದಿಂದ  ಆ ನ್ಯೂನವಾದ ಅರಿವನ್ನು ಅವರಲ್ಲಿ ಮೂಡಿಸಬೇಕಾದ್ದು ನ್ಯಾಯ. ಯಾವುದೇ ಜ್ಞಾನದಿಂದ ಯಾರೂ ವಂಚಿತರಾಗಬಾರದು. ಬದಲಾದ ಸಮಾಜದಲ್ಲಿ ಈಗ ತುಳಿತಕ್ಕೊಳಗಾವವರು ಬದಲಾಗಿಬಿಟ್ಟಿದ್ದಾರೆ. ವಿದ್ಯೆ ಉದ್ಯೋಗ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲು ಪರೋಕ್ಷವಾಗಿ ಪ್ರತ್ಯಕ್ಷವಾಗಿ ತುಳಿತಕ್ಕೆ ಒಳಗಾಗುತ್ತಿದ್ದಾರೆ ಇದು ಕಂಡೂ ಕಾಣದಂತಿರುವ ಪರಮ ಸತ್ಯ.

        ವಿಪರ್ಯಾಸಗಳು  ಹಲವಿದೆ. ದುರಂತವೆಂದರೆ ನಂಬಿಕೆಗಳು ಹೀಗೆ  ಒಂದೊಂದಾಗಿ ಮೂಢತನದ್ದಾಗಿ ಕಂಡು ಬರುತ್ತವೆ. ಹೋಮ ಹವನಗಳನ್ನು ನಂಬಿಕೆಯಿಂದ ಮಾಡುವ ಹಾಗೆ ಇಲ್ಲ. ಹೋಮ ಹವನಗಳ ಮಾತಿರಲಿ ಅಗರಬತ್ತಿ ಹಚ್ಚಿಟ್ಟರೂ ವಾಯುಮಾಲಿನ್ಯ ಆಗಬಹುದೆಂದು ವಿವಾದವನ್ನು ಹುಟ್ಟು ಹಾಕುವ ದಿನ ದೂರವಿಲ್ಲ. ಪ್ರತಿಯೊಂದಕ್ಕೂ ವೈಜ್ಞಾನಿಕ ಕಾರಣಗಳನ್ನು ರಹಸ್ಯಗಳನ್ನು ಹುಡುಕುವ ನಾವು ಈ ಜಲ ಈ ಭೂಮಿ ಈ ಸೂರ್ಯ ಈ ರಹಸ್ಯದ ಆಳವನ್ನು ಎರಡು ಶತಮಾನ ಕಳೆದರೂ ತಿಳಿಯಲಾಗಲಿಲ್ಲ.ಯಾವ ಕಾರಣದಿಂದ ಈ ಪ್ರಪಂಚವಿದೆ?

ನಮ್ಮ ಆಚರಣೆಗೆಳು, ನಂಬಿಕೆಗಳು. ಆಚರಿಸಲ್ಪಡಬೇಕು. ಅದರಿಂದ ಪರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಹಾಗೆ ತೊಂದರೆಯಾಗುವ ಅದೆಷ್ಟು ಆಚರಣೆಗಳಿವೆ ಅದರ ವಿರುದ್ದ ಪ್ರತಿಭಟನೆಯ ಅರಿವು ಮೂಡಿಸಬೇಕು. ಯಾವುದೇ ದೇವರು ಪರರಿಗೆ ತೊಂದರೆ ಕೊಟ್ಟು ತನ್ನನು ಪೂಜಿಸುವುದನ್ನು ಬಯಸುವುದಿಲ್ಲ. ಹಿಂಸೆಯನ್ನೂ, ವೈಷಮ್ಯವನ್ನು ಮಾತ್ರವಲ್ಲ ಗುಂಪುಗಾರಿಕೆಯನ್ನು ಪ್ರಚೋದಿಸುವ ಅದೆಷ್ಟು ಆಚರಣೆಗಳಿಲ್ಲ.  ಈ ರೂಪದಲ್ಲಿ ನಡೆಯುವ  ಸಾರ್ವಜನಿಕ ಕಾರ್ಯಕ್ರಮಗಳು ಅದೆಷ್ಟು ತೊಂದರೆಗಳನ್ನು ಜನ ಜೀವನಕ್ಕೆ ಕೊಡುತ್ತಿಲ್ಲ? ಪ್ರಾಣಿಹಿಂಸೆ ನಡೆಯುವ ಅದೆಷ್ಟು ಆಚರಣೆಗಳಿವೆ. ಅದರ ವಿರುದ್ಧ ನಮ್ಮ ಪ್ರತಿಭಟನೆಯಿಲ್ಲ. ಅದು ನಮಗೆ ಭೀಭತ್ಸವಾಗಿ ಕಾಣುವುದಿಲ್ಲ. ಉದಾಹರಣೆಗೆ ನಗರಗಳಲ್ಲಿ ನಡೆಯುವ  ಸಾರ್ವಜನಿಕ ಉತ್ಸವಗಳು ರಸ್ತೆಯನ್ನು ತಡೆದು ನಿತ್ಯ ಜನಜೀವನಕ್ಕೆ ಅದೆಷ್ಟು ತೊಂದರೆಯನ್ನು ತರುವುದಿಲ್ಲ. ಬೆಂಗಳೂರಿನ ಸಾರ್ವಜನಿಕ ಉತ್ಸವಗಳು ಇದಕ್ಕೆ ಉತ್ತಮ ನಿದರ್ಶನ.  ರಸ್ತೆಗಳ ಸಂಚಾರವನ್ನೆ  ತಡೆದು ರಸ್ತೆಯಲ್ಲೇ ನಡೆಯುವ ಇಂತಹ ಉತ್ಸವಗಳ ವಿರುದ್ದ ನಮ್ಮ ಪ್ರತಿಭಟನೆಯಿಲ್ಲ. ಅವುಗಳೆಲ್ಲ ಯಾವ ರೂಪದ ನಂಬಿಕೆಗಳು? ಒಂದು ಸಾರ್ವಜನಿಕ ಕಾರ್ಯಕ್ರಮದ ಯಶಸ್ಸು ಅದು ಎಷ್ಟು ಜನರಿಗೆ ತೊಂದರೆ ಕೊಟ್ಟಿದೆ ಎಂಬ ಮಾನದಂಡದಿಂದ ಲೆಕ್ಕಹಾಕುವ ಹಾಗಿರುವಾಗ ಇದರ ವಿರುದ್ದ ನಮ್ಮ ಪ್ರತಿಭಟನೆಯಿಲ್ಲ. ಇದಲ್ಲವೇ ವಿಪರ್ಯಾಸ.

        ಆದರೂ ಇನ್ನೂ ಒಂದು ವಿಚಾರವಿದೆ ಇಂದು ಅನಾದಿಕಾಲದಿಂದಲೂ ನಡೆದು ಬಂದ ಹಲವು ಆಚರಣೆಗಳು ಅದೇ ರೂಪದಲ್ಲಿ ಉಳಿದು ಕೊಂಡೂ ಇಲ್ಲ. ಕೆಲವು ಜೀವಂತವಾಗಿ ಪೂರ್ಣವಾಗಿ ಅಪೂರ್ಣವಾಗಿ ಉಳಿದರೆ, ಇನ್ನು  ಕೆಲವು ಇಲ್ಲವಾಗಿ ಹೋಗಿದೆ. ಬಹಳಷ್ಟು  ಕ್ರಮಗಳಾಗಲಿ ವಿಧಾನಗಳಾಗಲೀ  ಅನುಕೂಲಕ್ಕೆ ತಕ್ಕಂತೆ ಸಾಂಕೇತಿಕ ವಿಧಾನಗಳಾಗಿ ಅನುಕೂಲ ಶಾಸ್ತ್ರಗಳಾಗಿ, ಕಾಲಕ್ಕನುಸಾರ ಯಾರ ಭಯವೂ ಇಲ್ಲದೆ ಬದಲಾವಣೆ ಕಂಡಿದೆ. ಎಲ್ಲವೂ ಅವರವರ ಮನೋಭಾವದ ಮತ್ತು ಅತ್ಮ ಸಂತೃಪ್ತಿಯ ಸಂಕೇತಗಳಾಗಿ ಉಳಿದಿವೆ. ನಂಬಿಕೆ ವಿಶ್ವಾಸಗಳು ಪ್ರತಿಯೊಬ್ಬನದ್ದು ಗೌರವಾರ್ಹವೇ  ಹಾಗೆಯೇ ಚಿಂತನೆಗಳಲ್ಲಿ ವೈವಿಧ್ಯತೆ ಇರುವುದು ಸಹಜ. ಮನೋಭಾವಕ್ಕೆ ಹೊಂದಿಕೊಂಡು ಹಲವು ವೆತ್ಯಾಸಗಳಿದ್ದರೂ ಒಂದು ಸಮಾಜದ ಮುಖ್ಯವಾಹಿನಿಯಲ್ಲಿ ಅದೆಲ್ಲವೂ ಒಂದಾಗಿ ಸೇರಿಕೊಳ್ಳಬೇಕು. ಒಂದು ಸ್ವಸ್ಥ ಸಮಾಜಕ್ಕೆ ಇದು ಅವಶ್ಯ. ಜ್ಞಾನಿಗಳು ತಿಳಿದವರು ನಿಸ್ವಾರ್ಥದಿಂದ ತಮ್ಮದೇ ಸಮಸ್ಯೆ ಎಂಬಂತೆ ಮುಕ್ತ ಮನಸ್ಸಿನಿಂದ ಪರಿಹಾರ ಕಾಣುವಂತಾಗಬೇಕು


        ನಮ್ಮ ಚಿಂತನೆಗಳು ನಿಸ್ವಾರ್ಥವಾಗಿರಬೇಕು. ಅದು ಪರಸ್ವಾರ್ಥಕ್ಕೋ ಇನ್ನಾವುದೋ ಪ್ರತಿಫಲಕ್ಕೋ ಅದು ಮಾಧ್ಯಮವಾಗಬಾರದು. ಸಮಾಜದ ಮುಖಗಳಾಗಿರಬೇಕಾದವರು ನಾಯಕರು ವಿಪರ್ಯಾಸವೆಂದರೆ, ಇವರು ಸಮಸ್ಯೆಯನ್ನು ಉಂಟುಮಾಡಿಯೋ,  ತೋರಿಸಿಕೊಟ್ಟೊ, ಇದನ್ನು  ತಮ್ಮ ಸ್ವಾರ್ಥದಿಂದ ತಮ್ಮ ವ್ಯವಹಾರಕ್ಕೆ ಭಂಡವಳವನ್ನಾಗಿ ಪರಿವರ್ತಿಸಿಕೊಳ್ಳುತ್ತಾರೆ. ಇಂತಹ ಸ್ವಾರ್ಥಗಳಿಂದ ಮುಕ್ತವಾಗಿ   ಈ ಸಮಸ್ಯೆಗಳು ಕಷ್ಟಗಳು ಸೌಹಾರ್ದ ರೀತಿಯಿಂದ ಬಗೆಹರಿಸಬೇಕು. ಪ್ರತಿಯೋಬ್ಬ ಮನುಷ್ಯನೂ ಮಾತ್ರವಲ್ಲ ಎಲ್ಲ ಜೀವ ಸಂಕುಲಗಳು ಬದುಕುವುದಕ್ಕಾಗಿ ಭೂಮಿಮೇಲೆ ಜನ್ಮ ತಳೆಯುತ್ತವೆ. ಯಾವುದೇ ದೇವರೂ ವೈಷಮ್ಯದ ರೂಪದ ದಾರಿಯಲ್ಲಿ ಸಾಕ್ಷಾತ್ಕರಿಸಿಕೊಳ್ಳುವುದಿಲ್ಲ. ದ್ವೇಷ ಅಸೂಯೆ ಮೋಸ ಸ್ವಾರ್ಥ ನೆಲೆಯಾದ ಮನಸ್ಸಲ್ಲಾಗಲೀ ಪ್ರದೇಶದಲ್ಲಾಗಲಿ ಭಗವಂತ ನೆಲೆಯಾಗಲಾರ.