Monday, December 2, 2013

ಜನನಿ ಜನಕರು ಯಾರು?




ಒಂದು ಸಿನಿಮಾ ಕಥೆಯಿಂದ ಆರಂಭಿಸುವ. ಒಂದು ಪುಟ್ಟ ಮಗು ಬೆಳೆದು ದೊಡ್ಡದಾಗುತ್ತದೆ. ಮನೆಯಲ್ಲಿ ಅಪ್ಪ ಅಮ್ಮನ ಮುಂದಿನ ಕಂದಮ್ಮ. ಒಂದು ದಿನ ದೂರದ ಸಂಬಂಧಿಯೊಬ್ಬ ಬಂದು ಮಗುವಿಗೆ ಹೇಳುತ್ತಾನೆ. ಇದು ನಿನ್ನ ಹೆತ್ತ ಅಪ್ಪ ಅಮ್ಮ ಅಲ್ಲ. ನಿನ್ನನ್ನು ಹೆತ್ತವರು ಬೇರೆ ಇದ್ದಾರೆ.  ಕೆಲವು ಘಟನೆಗಳ ನಂತರ ಆ ಮಗುವಿನ ಸಾಕು ಅಪ್ಪ ಅಮ್ಮನೇ ಆ ಮಗುವನ್ನು ಅದರ ಹೆತ್ತವರಿಗೆ ಒಪ್ಪಿಸುತ್ತಾರೆ. ಆದರೆ ಆ ಮಗು ಹೆತ್ತ ಅಪ್ಪ ಅಮ್ಮನನ್ನು ಮನಸಾರೆ ಒಪ್ಪಿಕೊಳ್ಳುವುದೇ ಇಲ್ಲ. ತನ್ನ ಅರಿವಿಗೆ ಬಂದಂದಿನಿಂದ ಸಾಕಿದ ತನ್ನ ಅಪ್ಪ ಅಮ್ಮನೊಂದಿಗೆ ಕಳೆದ ಒಂದೊಂದೇ ಘಟನೆಗಳನ್ನು ಕನವರಿಸುತ್ತದೆ. ಹೆತ್ತವರು ಈಗ ಯಾವ ಪ್ರೀತಿ ಮಮತೆ ತೋರಿದರೂ ತುಲನೆಯಿಂದ ಮೊದಲ ಅಪ್ಪ ಅಮ್ಮನ ಪ್ರೀತಿಯೇ ಬೇಕೆಂದೆನಿಸುತ್ತದೆ. ಸತ್ಯ ಯಾವುದೋ ಅದರ ಬಗ್ಗೆ ಅದು ಯೋಚಿಸುವುದಿಲ್ಲ. ಮನಸ್ಸಿನ ವಿಶ್ವಾಸ ವಂಚಿಸಲ್ಪಡುವುದನ್ನು ಅದು ಸ್ವೀಕರಿಸಲಾರದೇ ಹೋಗುತ್ತದೆ. ತನ್ನನ್ನು ಪ್ರೀತಿಯಿಂದ ತುತ್ತು ಕೊಟ್ಟು ಸಾಕಿದ ಅಪ್ಪ ಅಮ್ಮನ ಸಂಬಂಧವನ್ನು ಅದು ಕೊನೆಗೂ ಬಿಟ್ಟಿರದೇ ಆ ಮಧುರ ವಿಶ್ವಾಸವನ್ನು ಜೋಪಾನವಾಗಿಡುತ್ತದೆ. .....

ಮನುಷ್ಯ ಹೆಚ್ಚು ಹೆಚ್ಚು ಜಿಜ್ಞಾಸೆಗೊಳಗಾದಂತೆ ವಿವಾದವನ್ನು ಹುಟ್ಟಿಸುವುದು ಈಗ ಸಾಮಾನ್ಯವಾಗಿಬಿಟ್ಟಿದೆ. ಬೇರೆಲ್ಲ ಭಾವನೆಗಳನ್ನು ಈ ವಿವಾದ ಬೆಲೆಕೊಟ್ಟು ಕೊಂಡಂತೆ ವರ್ತಿಸುತ್ತಾನೆ. ಇತ್ತೀಚೆಗೆ ಉಡುಪಿ ಶ್ರೀಕೃಷ್ಣ ದೇವರು ಕೂಡ ಕೃಷ್ಣ ಅಲ್ಲ ಸುಬ್ರಹ್ಮಣ್ಯ ಎಂಬ ವಿವಾದವೂ ಒಂದು ಮೂಢತನದ ಪರಮಾವಧಿ ಎಂದು ಕೆಲವೊಮ್ಮೆ ಅನಿಸುತ್ತದೆ. "ದೇವರು ಒಬ್ಬ ನಾಮ ಹಲವು" ಎಂಬ ಮಾತಿದೆ. ಭಗವದ್ಗೀತೆಯೊಂದಿಗೆ ವಿಶ್ವರೂಪವನ್ನು ಪಾರ್ಥನಿಗೆ ತೋರಿಸಿದ ಭಗವಂತ " ಈ ಜಗತ್ತಿನ ಚರಾಚರ ವಸ್ತುಗಳೂ ನನ್ನ ಪ್ರತೀಕ. ಎಲ್ಲದರಲ್ಲೂ ಎಲ್ಲರ ಆತ್ಮದಲ್ಲಿ ನಾನಿದ್ದೇನೆ ಎನ್ನುವ ತತ್ವವನ್ನು ಸಾರುತ್ತಾನೆ. " ಆದರೆ ಮನುಷ್ಯನ ಮೌಢ್ಯ ನಂಬಿಕೆಯನ್ನೇ ಮೋಸ ಎಂದು ವಿವಾದ ಹುಟ್ಟುಹಾಕುವುದಲ್ಲದೇ ಆ ನಂಬಿಕೆಯ ಜತೆಗೂ ಆಟವಾಡುತ್ತಾನೆ. ಕಪಟ ಇಲ್ಲದ ನಿರ್ಮಲ ಮನಸ್ಸಿಗೆ ದೇವರು ಯಾವುದಾದರೇನು? ಶಿವನೋ ಹರಿಯೋ ದುರ್ಗೆಯೋ ಗಣಪತಿಯೋ ಎಲ್ಲವೂ ಭಗವಂತನ ರೂಪ ಸಾದೃಶಗಳು. ಅದನ್ನು ಅರಿಯದೇ ಅಂದರ ಹಿಂದೆ ಸಂಶೋಧನೆಗೆ ತೊಡುಗುವುದು ಮೂಢತನ ಅನ್ನಿಸುತ್ತದೆ.

ಹುಟ್ಟಿ ಬೆಳೆದು ಪ್ರೌಢಾವಸ್ತೆಗೆ ಬಂದಮೇಲೆ ಹುಟ್ಟಿನಿಂದ ನಂಬಿಕೊಂಡು ಬಂದ ನಂಬುಗೆಯ ಅಸ್ತಿತ್ವವನ್ನು ಅಲುಗಾಡಿಸಿದರೆ ಏನು ಪ್ರಯೋಜನ? ತಾನೇ ಕೊಟ್ಟ ರೂಪವನ್ನು ಬದಲಿಸಿ ಅದಲ್ಲ ಇದು ಎಂದು ರೂಪಿಸಿದ ಹಾಗೆ. ಬಾಳ ಸಂಗಾತಿಯನ್ನೂ ಏನೇನೋ ಕಾರಣ ಕೊಟ್ಟು ಬದಲಿಸಿಕೊಂಡಹಾಗೆ. ಯಾವುದರಲ್ಲೂ ಏಕರೂಪದ ತೃಪ್ತಿಯನ್ನು ಅನುಭವಿಸದ ಚಪಲ ಮನಸ್ಸು. ತಾನು ಹೆಜ್ಜೆ ಇರಿಸಿದಲ್ಲಿ, ಮನಸ್ಸು ಓಡಿಸಿದಲ್ಲಿ  ವಿವಾದತನ್ನ ಅಸ್ತಿತ್ವವನ್ನೇ ಸ್ವತಃ ವಿವಾದಕ್ಕೆ ನೂಕುವ ಈ ಚಾಪಲ್ಯಕ್ಕೆ ಮೌಢ್ಯ ಅಲ್ಲದೆ ಬೇರೆ ಏನು ಹೇಳಲು ಸಾಧ್ಯ?


Saturday, November 23, 2013

ಕೇಕ್ ನಲ್ಲಿ ಕಂಡ ವೇದಾಂತ


ಒಂದು ಮಗುವಿನ ಹುಟ್ಟು ಹಬ್ಬ ಸಮಾರಂಭ. ಬಹಳಷ್ಟು ಜನ ಅಭ್ಯಾಗತರು ಆಗಮಿಸಿದ್ದರು. ಸಹಜವೆಂಬಂತೆ ಮಗುವಿನಿಂದ ತುಂಡರಿಸಲು ದೊಡ್ಡದಾದ ಕೇಕ್ ಒಂದನ್ನು ತಂದಿರಿಸಿದ್ದರು. ಕೇಕ್ ನೋಡಲು ಬಹಳ ಸುಂದರವಾಗಿತ್ತು. ಬಣ್ಣ ಬಣ್ಣದ ಹೂವಿನ ಆಕಾರದಲ್ಲಿ ಮಾಡಿದ ಕೇಕ್ ವೈವಿಧ್ಯಮಯ ರುಚಿಯನ್ನು ತನ್ನಲ್ಲಿ ಅಡಗಿಸಿತ್ತು. ಕೇಕ್ ನ ಒಂದೊಂದು ಅಂಗವೂ ಬೇರೆ ಬೇರೆ ಬಣ್ಣದಿಂದ ರುಚಿಯಿಂದ ಕೂಡಿತ್ತು.  ಈ ಕೇಕ್ ನಲ್ಲಿ ವೇದಾಂತವೇ? ಹೌದು ? ಮಗು ಅದನ್ನು ಕತ್ತರಿಸಿ ಒಬ್ಬೊಬ್ಬರಿಗೆ ಹಂಚಿದಾಗ, ಬಂದವರು ತಮಗೆ ಸಿಕ್ಕಿದ ತುಂಡನ್ನು ಸಂತೋಷದಿಂದ ಆಪ್ಯಾಯಮಾನವಾಗಿ ತಿನ್ನುವುದನ್ನು ಕಂಡಾಗ ನಿಗೂಢವಾದಂತೆ ಬಾಸವಾದ ವೇದಾಂತ ಒಂದು ಕಂಡ ಅನುಭವವಾಯಿತು.

ನಿಜಕ್ಕೂ ಪ್ರಕೃತಿ ಎಂದರೆ ಹೀಗೇನೆ. ಜೀವನದ ಹಿರಿದಾದ ತತ್ವಗಳು ಬಹಳ ಸರಳವಾಗಿ ಕಂಡು ಬರುತ್ತವೆ ಅದನ್ನು ಕಂಡುಕೊಳ್ಳುವ ಬಗೆಯಲ್ಲಿ ಉಂಟು.  ಆ ಒಂದು ಕೇಕ್ ಪೂರ್ಣವಾಗಿ ಭಗವಂತನ ರೂಪದಲ್ಲಿ. ಹೌದಲ್ಲ?. ಅದು ಹೇಗೆ? ಬಹಳ ಸರಳವಾಗಿದೆ.

ಬೃಹದಾಕಾರದ ಕೇಕ್ ಕತ್ತರಿಸಿ ಒಬ್ಬೊಬ್ಬರಿಗೆ ಬೇರೆ ಬೇರೆ ರೂಪದಲ್ಲಿ ಹಂಚಿದಂತೆ ಭಗವಂತನ ದರ್ಶನವಾಗುವುದಿಲ್ಲವೆ. ಇಲ್ಲಿ ಕೇಕ್ ನ ತುಂಡು ಬೇರೆ ಬೇರೆ ರೂಪದಲ್ಲಿ ಸಿಕ್ಕಿದಾಗ ತಮ್ಮ ಕೈಗೆ ಸಿಕ್ಕಿದ್ದನ್ನು ಖುಷಿಯಿಂದ ಸ್ವೀಕರಿಸಿ ತೃಪ್ತಿಯಿಂದ ತಿಂದು ಆ ಸ್ವಾದವನ್ನು ಸವಿದಂತೆ. ಕೇಕ್ ನ ಅಲಂಕಾರದಲ್ಲಿದ್ದ  ಹೂವಿನ ಭಾಗ ಒಬ್ಬನಿಗೆ ಸಿಕ್ಕಿದರೆ ಅದರ ಎಲೆಯ ಭಾಗ ಇನ್ನೊಬ್ಬನಿಗೆ ಹಾಗೆ ಅಲ್ಲಿ ಚಿತ್ರಿಸಿದ ಹಣ್ಣು ಅಥವಾ ಇನ್ನೊಂದು ಬಗೆಯ ಹೂವು ಮತ್ತೊಬ್ಬನಿಗೆ. ಹೀಗೆ ದೊಡ್ಡದಾದ ಕೇಕ್ ನ ವಿವಿಧ ಅಂಗಗಳು ವಿವಿಧ ರೂಪದಲ್ಲಿ ಕೈ ಸೇರಿದಾಗ ಒಂದು ವೇದಾಂತ ಸರಳ ಸಿದ್ಧಾಂತ ಗೋಚರವಾಯಿತು. ವಿವಿಧ ಜಾತಿ ಪಂಗಡಗಳಿಗೆ ಬೇರೆ ಬೇರೆ ಮನೋಭಾವಕ್ಕೆ ಕಂಡು ಬರುವ ಭಗವಂತನಂತೆ ಆ ಕೇಕ್ ಕಂಡು ಬಂತು. ಭಗವಂತನೋಬ್ಬನೇ..ದೇವರೊಬ್ಬನೇ ರೂಪ ಹಲವು ಕಾಣುವ ಭಾವ ಹಲವು. ಅದು ಇಲ್ಲಿ ಭಾಸವಾಯಿತು. ನಮ್ಮ ಕೈಗೆ ಬಂದ ಕೇಕ್ ನ ತುಂಡನ್ನು ಸ್ವೀಕರಿಸಿದಂತೆ ಪೂರ್ಣ ಕೇಕ್ ನ ಸ್ವಾದವನ್ನು ಆ ಒಂದು ತುಂಡಿನಲ್ಲಿ ಅನುಭವಿಸುವುದಿಲ್ಲವೇ?

ಭಗವಂತನೂ ಇದೇ ರೂಪದಲ್ಲಿ ಪಡೆದು ನಾವು ಜೀವಿಸುತ್ತೇವೆ. ಒಬ್ಬನಿಗೆ ಹರನಾಗಿ ಇನ್ನೊಬ್ಬನಿಗೆ ಹರಿಯಾಗಿ.. ರಾಮನಾಗಿ ಕೃಷ್ಣನಾಗಿ  ಕುಮಾರನಾಗಿ ಗಣಪತಿಯಾಗಿ, ಅದೆಷ್ಟು ಬಗೆಯಲ್ಲಿ? ದಶಾವತಾರಿಯಾದ ಶ್ರೀಮನ್ನಾರಾಯಣ ಮೂಲತಃ ಒಂದುಭಾವ ರೂಪ ಹಲವು ಎಂದು ತೋರಿದನಲ್ಲವೇ. ಶಿವನಾದರೂ ತನ್ನ ಹಲವು ಬಗೆಯ ನಾಮಸದೃಶ ರೂಪದಿಂದ ಅನುಗ್ರಹಿಸುವುದಿಲ್ಲವೇ. ಮಂಜುನಾಥನಾಗಿ ರುದ್ರನಾಗಿ ಶಿವನಾಗಿ ಹೀಗೆ ಪರಮಾತ್ಮ ದರ್ಶನಕ್ಕೆ ರೂಪ ಹಲವು. ದೇವಿಯಾಗಿ ಲಕ್ಷ್ಮಿಯಾಗಿ ಶಾರದೆಯಾಗಿ ಅಂಬಿಕೆಯಾಗಿ ಮಹಾಮಾಯೆಯ ರೂಪ ಹಲವು. ಸರ್ವರೂಪವೂ ಮೂಲದಲ್ಲಿ ಒಂದಾಗಿ ನಮ್ಮ ಭಾವಕ್ಕೆ ಭಿನ್ನವಾಗಿ ಕಂಡಂತೆ. ಮನಕೊಬ್ಬ ಮನೆಗೊಬ್ಬ ದೇವರು. ಕೌಟುಂಬಿಕವಾಗಿ ಕಂಡುಕೊಳ್ಳುವ ವೈವಿಧ್ಯಮಯ ದೇವರರೊಬ್ಬನೇ.  ಒಬ್ಬರಿಗೆ ಕುಲದೇವರು ಸುಬ್ರಹ್ಮಣ್ಯನಾದರೆ ಇನ್ನೊಬ್ಬರಿಗೆ ಉಗ್ರನರಸಿಂಹ ಮತ್ತೊಬ್ಬರಿಗೆ ದುರ್ಗೆ..ವಿಷ್ಣು ರುದ್ರ ...ಅಹಾ ಈ ವೈವಿಧ್ಯಕ್ಕೆ ಏಣೆಯುಂಟೆ?

ಇದು ಕೇವಲ ಒಂದು ಸಂಸ್ಕೃತಿಗೆ ಸೀಮಿತವಾಗಿಯಲ್ಲ. ಹಿಂದು ಮುಸ್ಲಿಂ ಕ್ರೈಸ್ತ ಪ್ರಪಂಚದ ಎಲ್ಲ ಜೀವರಾಶಿಗೂ ವಿವಿಧತೆಯಲ್ಲಿ ಮೂಲ ಭಗವಂತನೋಬ್ಬನೇ? ಹುಟ್ಟುವಾಗ ಹುಟ್ಟಿದ ಜನ್ಮಗರ್ಭವನ್ನು ಅನುಸರಿಸಿ ನಮಗೆ ಸಿಗುವ ಭಗವಂತನ ರೂಪ ಬೇರೆ ಬೇರೆ. ಕೇಕ್ ನ ತುಂಡಿನಂತೆ. ಅದು ಹೂವಾಗಿ ಹಣ್ಣಾಗಿ ಎಲೆಯಾಗಿ ಎನೂ ಇಲ್ಲ ಬರಿ ತಿನಿಸಾಗಿ ಏನಾದರೇನೂ ಮೂಲರೂಪದ ಭಾವವೊಂದೇ? ಇಲ್ಲಿ ಹಿರಿತನದ ವಾದವಿಲ್ಲ. ಮೂಲ ರೂಪದ ತಿನಿಸನ್ನು ವಿವಿಧ ರೂಪದಲ್ಲಿ ಸವಿದಂತೆ ಪರಮಾತ್ಮ. ಇಲ್ಲಿ ನಮ್ಮ ಕೈಗೆ ಬಂದ ಕೇಕ್ ನ ಭಾಗವನ್ನು ನಾವೇಷ್ಟು ವಿಶ್ವಾಸದಿಂದ ಸವಿಯುತ್ತೇವೆ? ಇದು ನನ್ನದು ಎಂಬ ಭಾವದಲ್ಲಿ ಬಾಯಿಗಿರಿಸಿ ಮಧುರಾನುಭವವನ್ನು ಹೊಂದುತ್ತೇವೆ. ವಾಸ್ತವದಲ್ಲಿ ಭಗವಂತನ ತತ್ವವೂ ಇದಕ್ಕೆ ಭಿನ್ನವಾಗಿಲ್ಲ.

ಹಿಂದುವಾಗಲಿ ಮುಸ್ಲಿಂ ನಾಗಲೀ ಇನ್ನಾವುದೇ ಜಾತಿಯಾಗಲೀ ಹೆಚ್ಚೇಕೆ ಈ ಜೀವರಾಶಿಯ ಒಂದು ಪ್ರಾಣಿಯಾಗಲಿ ಪಡೆಯುವ ಭಗವಂತನ ರೂಪ ಹಲವಿರಬಹುದು. ಆದರೆ ಮೂಲದಲ್ಲಿರುವ ಆ ಸ್ವಾದ ಅದೊಂದೇ. ಅದು ಪರಮಾತ್ಮ. ಇದನ್ನು ಅರಿಯದೇ ನಮ್ಮದು ಶ್ರೇಷ್ಠ ಎಂದು ನಮ್ಮ ಕೈಗೆ ಬಂದ ಕೇಕ್ ತುಂಡನ್ನು ನಾವು ಹೇಳಿಕೊಂಡು ಹೋಗುವುದು ಅರ್ಥಹೀನ. ಅಲ್ಲಿ ನಾವು ಅಪ್ಯಾಯ ಮಾನತೆಯಿಂದ ಬಾಯಿಗಿಟ್ಟು ರುಚಿಯನ್ನು ಸವಿದಂತೆ ಭಗವಂತ. ಲೋಕೋ ಭಿನ್ನ ರುಚಿ ಎಂಬಂತೆ ಹುಟ್ಟಿದಮೇಲಿನ ವಿವಿಧ ಭಾವಕ್ಕೆ ಅನುಸರಿಸಿ ಕಾಣುವ ಭಗವಂತನ ರೂಪವೂ ಹಲವು.

ವಿವಿಧತೆಯ ಭಾವ ಹಲವು ರೂಪ ಒಂದೇ ಎಂಬುದನ್ನು ಹಲವು ದೇವರನ್ನು ಪೂಜಿಸುವ ಹಿಂದುಗಳು ಮೊದಲೇ ಸ್ವೀಕರಿಸಿಯಾಗಿದೆ. ಹಿಂದುಗಳಲ್ಲಿ ಅದೆಷ್ಟು ದೇವರು ಎಂದು ಅದನ್ನು ನಿರ್ಲಕ್ಷ್ಯದಿಂದ ತಾತ್ಸಾರಿಸುವ ಹಾಗಿಲ್ಲ. ನಾಮ ರೂಪ ಹಲವು ಭಗವಂತನೊಬ್ಬನೇ ಎನ್ನುವ ಸಮಷ್ಟೀ ತತ್ವ ಪ್ರತಿಪಾದನೆ ಇಲ್ಲಿದೆ. ವೈಷ್ಣವವನೋ ಶೈವನೋ ಅಥವಾ ಇನ್ನಾವನೋ ಇಲ್ಲಿ ಹುಟ್ಟಿ ಬಂದ ಮೇಲೆ ಪಡೆದಂತಹ  ರೂಪ ಭಿನ್ನ. ಆ ಭಗವಂತ ತನ್ನ ರೂಪವನ್ನು ಪ್ರತೀ ಕೈಗೆ ಭಿನ್ನವಾಗಿ ದಯಪಾಲಿಸಿದ ಹಾಗೆ. ಕೇಕ್ ತುಂಡನ್ನು ನಮ್ಮ ಕೈ ಸ್ವೀಕರಿಸಿದ ಹಾಗೆ ಮತ್ತೆ ನಾವು  ಅದನ್ನೇ ನಂಬಿಕೊಂಡ ಹಾಗೆ ಭಗವಂತನನ್ನು ನಾವು ಅನುಸರಿಸಿತ್ತೇವೆ.  

ಕೈಗೆ ಬಂದ ಕೇಕ್ ತುಂಡನ್ನು ಸವಿದು ಅದರ ರುಚಿ ವರ್ಣಿಸುವುದಿಲ್ಲವೇ? ಈ ಭಾಗದ ರುಚಿ ಹೀಗಿದೆ. ಅಂತೇ ಇನ್ನೊಬ್ಬರಲ್ಲಿ ವಿಚಾರಿಸುತ್ತೇವೆ. ನಿಮ್ಮ ಕೈಗೆ ಸಿಕ್ಕಿದ ತುಂಡಿನ ರುಚಿ ಹೇಗೆ? ಕೆಲವೊಮ್ಮೆ ಅವರ ಕೈಯೊಳಗಿನ ತುಂಡಿನ ಕಿಂಚಿತ್ ಭಾಗವನ್ನೂ ನಾವು ಸವಿದೂ ನೋಡಿಬಿಡುತ್ತೇವೆ. ಜಾತಿ ಧರ್ಮದ ತಳ ಹದಿಯ ತತ್ವ ಇದೇ. ಮೂಲದಲ್ಲಿ ಒಂದೇ. ಎಲ್ಲವೂ ಕೈಯಿಂದ ಬಾಯಿಯೊಳಗೆ ನಾಲಗೆಗೆ ಬಿದ್ದ ಹಾಗೆ. ಸ್ವಾದದ ಅಭಿರುಚಿಯನ್ನು ಹೊಂದಿಕೊಂಡಿದೆ.

ಕೆಲವೊಮ್ಮೆ ಹೀಗೂ ಇರುತ್ತದೆ. ಈ ಕೇಕ್ ತುಂಡು ಹಂಚುವುದು, ಈ ಸಂಪ್ರದಾಯ ಇದೆಲ್ಲ ಮೂಢನಂಬಿಕೆ ಎಂದು ಈ ವೇದಾಂತದ ಹತ್ತಿರ ಕೆಲವರು ಸುಳಿಯುವುದೇ ಇಲ್ಲ. ತಾವು ಸವಿಯದೇ ಅದರ ಸ್ವಾದ ಇಷ್ಟೇ ಎಂದು ಲೆಕ್ಕ ಹಾಕಿ ಅಂದಾಜಿಸುವವರು ಇದ್ದಾರಲ್ಲವೇ? ಇನ್ನು ಕೆಲವರು “ ಕೇಕ್ ಸಸ್ಯಾಹಾರವಲ್ಲ” ಎಂದು ಅದನ್ನು ತಿನ್ನದೇ ಯುಕ್ತಿವಾದವನ್ನು ಹೇಳುವ ನಿರೀಶ್ವರವಾದಿಗಳೂ ಇರುತ್ತಾರೆ.

ಹೇಗೆ ಪೂರ್ಣವಾದ ಕೇಕ್ ನ್ನು  ನಾವು ಸವಿಯಲು ಸಾಧ್ಯವಿಲ್ಲವೋ ಅದರಂತೆ ಪೂರ್ಣವಾದ ಭಗವಂತನನ್ನು ಅರಿಯುವುದು ಸಾಧ್ಯವಾಗುವುದಿಲ್ಲ. ನಮ್ಮ ಅರಿವು ಏನಿದ್ದರೂ ನಮ್ಮ ಕೈಯೊಳಗೆ ಇದ್ದುದಕ್ಕೇ ಸೀಮಿತ.


Friday, November 8, 2013

ನಂಬಿಕೆಗೆ ಕೊನೆಯುಂಟೇ?


“ಆಗಮಾರ್ಥಂತು ದೇವನಾಂ ಗಮನಾರ್ಥಂತು ರಾಕ್ಷಸಾಂ ಕುರುವೆ ಘಂಟಾರವಂ ತತ್ರ ದೇವತಾಹ್ವಾನ ಲಕ್ಷಣಂ”
ಇದು ಘಂಟಾನಾದದ ಬಗ್ಗೆ ಇರುವ ಒಂದು ನಂಬಿಕೆ. ದೇವರನ್ನು ಸ್ವಾಗತಿಸುವುದಕ್ಕೆ ಅಥವಾ ಘಂಟಾನಾದ ಮೊಳಗಿದಲ್ಲಿ ದೇವರ ಅಸ್ತಿತ್ವ ಮೂಡಿ ಅಲ್ಲಿದ್ದ ಕ್ಷುದ್ರ ಶಕ್ತಿಗಳು ಅಂದರೆ ರಕ್ಕಸರು ನಿರ್ಗಮನ ವಾಗುತ್ತಾರೆ. ಹಾಗಾಗಿ ಘಂಟಾರವ ಎಲ್ಲಿರುತ್ತದೋ ಅಲ್ಲಿ ದೇವರ ಆಗಮನವಾಗಿ ಅಸುರಿ ಶಕ್ತಿ ನಿರ್ಗಮನವಾಗುತ್ತದೆ. ಇದು ಉಪಾಸಕನ ಒಂದು ನಂಬಿಕೆ.. ಅವರವರ ಮನಸ್ಸಿನ ನಂಬಿಕೆ ಅವರವರ ಮನದೊಳಗೆ ಇರುತ್ತದೆ. ಇನ್ನೊಬ್ಬರ ಮೇಲೆ ಹೇರುವ ಅನಿವಾರ್ಯತೆ ನಿಜವಾದ ಉಪಾಸಕನಿಗೆ ಇರುವುದೇ ಇಲ್ಲ ಆದರೆ ಅಸುರೀ ಶಕ್ತಿ ಪಾರಮ್ಯ ಮೆರೆದು ಆಳುವುದಕ್ಕೆ ತೊಡಗಿತು ಎಂದಾಗ.. ಉದಾಹರಣೆಗೆ ಪುರಾಣದಲ್ಲಿ ಬರುವಂತೆ ಮಹಿಷ, ಹಿರಣ್ಯಾಕ್ಷ ಹಿರಣ್ಯ ಕಷ್ಯಪು ಮುಂತಾದ ಅಸುರರಿಗೆ ಘಂಟಾರವ ಕೇಳಿದಾಗ ಅಲ್ಲಿರಲಾಗದೆ ಪಲಾಯನ ಮಾಡುವ ಪ್ರಮೇಯ ಉಂಟಾಗುತ್ತಿತ್ತು. ಆ ಸಮಯದಲ್ಲಿ ಅವರ ಅಳ್ವಿಕೆಯಲ್ಲವೇ ಒಂದು ಶಾಸನವನ್ನು ಮಾಡಿದರೂ ಗಂಟೆ ಬಾರಿಸುವುದು ಶಾಸನಾತ್ಮಕವಾಗಿ ಅಪರಾಧ. ಘಂಟೆಯ ದ್ವನಿಯಲ್ಲೂ ತೊಂದರೆ ಅನುಭವಿಸುವವರು ರಕ್ಕಸರೇ ಅಲ್ಲವೇ? ಅವರ ಆಡಳಿತದಲ್ಲಿ ಘಂಟಾರವ ನಿಷೇಧಿಸಲ್ಪಡುತ್ತದೆ.
ಮನುಷ್ಯ ಹುಟ್ಟಿದ ಕೂಡಲೇ ಅವನ ಜತೆ ಒಂದು ನಂಬಿಗೆಯ ಒಂದು ತಂತುವು ಉತ್ಪತ್ತಿಯಾಗುತ್ತದೆ. ಸ್ವಾಭಾವಿಕವಾಗಿ  ಹುಟ್ಟಿದ ಕೂಡಲೆ ಮಗುವಿಗೆ ಮೊದಲ ದರ್ಶನ ತನ್ನ ತಾಯಿಯದ್ದು. ಆನಂತರ ತಂದೆಯದ್ದು. ಆದರೆ ಆ ತಂದೆಯನ್ನು ತೋರಿಸುವುದು ಹೆತ್ತ ಅಮ್ಮ. “ ನೋಡು ಇದು ನಿನ್ನ ಅಪ್ಪ” ಮಗುವು ಅಷ್ಟೆ ಅಲ್ಲಿಂದ ನಂಬುಗೆ ಎಂಬ ಭಾವವನ್ನು ಬೆಳೆಸುತ್ತದೆ.ಯಾಕೆ ಅದಕ್ಕೆ ಅಮ್ಮನ ಮೇಲೆ ನಂಬಿಕೆ. ಅದು ಅದರ ಮನಸ್ಸಿನಲ್ಲಿ ಉಂಟಾಗುವ ಪ್ರೇರಣೆ. ಅಮ್ಮನನ್ನು ನಾನು ಹೇಗೆ ವಿಶ್ವಾಸದಿಂದ ಕಾಣಬಹುದೋ ಹಾಗೆ ಅಮ್ಮ ತೋರಿದ ವ್ಯಕ್ತಿ ನನ್ನ ಅಪ್ಪ.  ಈ ನಂಬಿಗೆ ಜೀವನ ಪರ್ಯಂತ ಉಳಿಯುತ್ತದೆ. ವಿಪರ್ಯಾಸವೆಂದರೆ ಭ್ರಾಂತಿಗೊಳಗಾದ ಪ್ರಪಂಚದಲ್ಲಿ  ಈ ನಂಬಿಕೆಯೂ ಮೂಢ ನಂಬಿಕೆ ಎಂದು ಕರೆಯಲ್ಪಟ್ಟರೆ ನಂಬಿಕೊಂಡು ಬಂದ ನಂಬಿಕೆಯನ್ನು ಹೇಗೆ ಹೊಸಕಿ ಹಾಕುವುದು?
ನಂಬಿಕೆ ವಿಶ್ವಾಸ ಅದು ಅಪರಾಧ ಎಂದು ಪರಿಗಣಿತವಾಗುವುದು ಯಾವಾಗ? ಆ ಭಾವನೆಯನ್ನು ಬಲವಂತವಾಗಿ ಹೇರಲ್ಪಟ್ಟಾಗ. ತನ್ನಮ್ಮ ಎಂದಂತೆ ಇವನು ತನ್ನಪ್ಪ ಎಂದು ಸ್ವತಃ  ನಂಬಿಕೊಳ್ಳುವುದು ಅದು ಅಪರಾಧವಾಗುವುದಿಲ್ಲ ಬದಲಾಗಿ ಇನ್ನೊಬ್ಬನಿಗೆ ಈ ನಂಬಿಕೆಯನ್ನು ಹೇರುವಾಗ... ಅವನ ನಂಬಿಕೆಯ ಬೇರನ್ನು ಅಲುಗಾಡಿಸುವಾಗ ಅದು ಅಪರಾಧವಾಗುತ್ತದೆ. ನಂಬಿಕೆಯ ಬೇರನ್ನು ಪ್ರಶ್ನಿಸುವಾಗ ಅದು ಅಪರಾಧವಾಗುತ್ತದೆ. ಈ ವೆತ್ಯಾಸದ ಸೂಕ್ಷ್ಮವನ್ನು ವಿದ್ಯಾವಂತರಾದವ ತನ್ನ ವಿದ್ವತ್ ಜ್ಞಾನದಿಂದ ಅರ್ಥೈಸಿಕೊಳ್ಳಬೇಕು.
“ನಾನು ದೇವರನ್ನು ನಂಬುತ್ತೇನೆ.  ನಾನು ಇಂತಹ ಶಕ್ತಿಯ ಅಸ್ತಿತ್ವದಲ್ಲಿ ವಿಶ್ವಾಸ ಇರಿಸಿದ್ದೇನೆ.” ಹೀಗೆ ದೇವರನ್ನು ನಂಬುವವನು ಅವನ ಪಾಡಿಗೆ ನಂಬಿಕೊಂಡರೆ ಅದನ್ನು ಎಷ್ಟೇ ಬಲವಂತವಾಗಿ ಶಿಕ್ಷಿಸಿ ಕಿತ್ತೆಸೆಯುವ ಪ್ರಯತ್ನ ಮಾಡಿದರೂ ಆ ಭಾವ ಅವನ ಮನದ ಮೂಲೆಯಲ್ಲಿ ಎಲ್ಲೋ ಇದ್ದೇ ಇರುತ್ತದೆ.  ಆದರೆ ಆತ ತಾನು ನಂಬಿಕೊಳ್ಳುತ್ತ ತನ್ನ ನಂಬಿಕೆಯನ್ನು ಪರರ ಮೇಲೆ ಹೇರಿದಾಗ ಅವನದ್ದು ಅಪರಾಧವಾಗುತ್ತದೆ. ಅಂತೆ ಈತನ ನಂಬಿಕೆಯನ್ನು ಬಲವಂತವಾಗಿ ಕಿತ್ತೆಸೆಯುವವನದ್ದು ಕೂಡ ಅಪರಾಧವಾಗುತ್ತದೆ. ಇದು ಸಾಮಾನ್ಯ ನ್ಯಾಯ. ಇದರ ಸೂಕ್ಷ್ಮ ವೇ ಅರ್ಥವಾಗದವನು ಇದನ್ನು ಮೂಢನಂಬಿಕೆ ಎಂದು ಕರೆದು ನಿಷೇಧಿಸಿದರೆ ಇದಕ್ಕೆ ಮೂರ್ಖತನ ಅಲ್ಲದೇ ಬೇರೆನು ಶಬ್ದವಿದೆ ಕರೆಯಲು?

ನಮ್ಮ ಮನೆಯಲ್ಲಿ ನಾವೊಂದು ನಿಯಮ ಮಾಡಿರುತ್ತೇವೆ. ನಮ್ಮ ಮನೆಯಲ್ಲವೇ. ....ಚಪ್ಪಲಿ ಹಾಕಿ ಒಳಗೆ ಬರಬಾರದು. ಮನೆಯೊಳಗೆ ಉಗುಳ ಬಾರದು. ಮನೆಯಲ್ಲಿ ನಾವು ಹೀಗೆಯೇ ಆಹಾರವನ್ನು ಸೇವಿಸುವುದು. ಅದು ಮನೆಯಲ್ಲಿ ಇರುವ ಎಲ್ಲ ಮಂದಿಯೂ ಒಪ್ಪಿಕೊಂಡು ಸಹಬಾಳ್ವೆಯನ್ನು ನಡೆಸುವಾಗ ಮನೆಯ ಹೊರಗಿದ್ದವನು ಅದನ್ನು ಅಕ್ಷೇಪಿಸುವುದು ಸಾಧ್ಯವಾಗುತ್ತದೆಯೇ? ಅವನು ಆ ಮನೆಯೊಳಗೆ ಪ್ರವೇಶಿಸಬೇಕಾದರೆ ಚಪ್ಪಲಿ ಕಳಚಿಯೇ ಪ್ರವೇಶಿಸಬೇಕು. ಅದು ಅವನ ಅಗತ್ಯವನ್ನು ಸಂಬಂಧಿಸಿ ಇರುತ್ತದೆ. ಹೊರತಾಗಿ ಆ ಮನೆಯ ನಿಯಮ ಅದು ಕಾನೂನು ಬಾಹಿರ ಎಂದರೆ ಏನನ್ನಬೇಕು? ಸಾರ್ವಜನಿಕ ನ್ಯಾಯಕ್ಕೂ ಒಂದು ಪರಿಧಿ ಎಂಬುದು ಇದೆಯಲ್ಲ? ಆ ಪರಿಧಿಯನ್ನು ಮೀರಿದಾಗ ಅದು ಸ್ವಾತಂತ್ರ್ಯ ಹರಣವಾಗುತ್ತದೆ. ಸರ್ವಾಧಿಕಾರವಾಗುತ್ತದೆ. ನಮ್ಮಹಸು ನಮಗೆ ಅಮೃತವನ್ನೇ ಕೊಡುತ್ತದೆ. ಅದು ನಮ್ಮ ನಂಬುಗೆ. ಅದು ವಿಷವನ್ನೇ ಕಕ್ಕುತ್ತದೆ ಎಂದು ಹೇಳೀದರೆ..ಹೇಳುವವರು ಹೇಳಲಿ ನಮ್ಮ ನಂಬಿಕೆ ನಮ್ಮ ಮನದ ಮೂಲೆಯಲ್ಲಾದರೂ ನಂಬಿಕೊಂಡು ಬರುತ್ತೇವೆ. ಇದುವೇ ಜೀವನದ ಅಂತರಂಗ ಸತ್ಯ.

Thursday, July 4, 2013

ದೇಹಾಂತರದ ಪಯಣ

   


    ನನ್ನ ಬಾಲ್ಯದ ಒಂದು ಘಟನೆ. ನಮ್ಮ ಊರಿನ ದೊಡ್ಡ ಮನೆಯಲ್ಲಿ ಬಾವಿಯೊಂದನ್ನು ತೊಡುವ ಬಗ್ಗೆ ಹಿರಿಯರು ನಿರ್ಧರಿಸಿಬಿಟ್ಟರು. ಇನ್ನೇನು ನೀರು ತೋರಿಸುವುದಕ್ಕೊಸ್ಕರ ಒಬ್ಬರು ಬಂದೇ ಬಿಟ್ಟು ಕೈಯಲ್ಲಿ ಬೆತ್ತವೊಂದನ್ನು ಹಿಡಿದುಕೊಂಡು ಕೈ ಅತ್ತಿತ್ತ ತಿರುಗಿಸುತ್ತಾ ಗುಡ್ಡೆ ಎಲ್ಲ ತಿರುಗಿ ತಿರುಗಿ ಪಾದೆ ಕಲ್ಲಿನ ಮೇಲೆ ನಿಂತು ಅಲ್ಲೇ ಗುರುತು ಮಾಡಿಬಿಡುವಂತೆ ಹೇಳಿದರು. ಕರ್ರಗಿನ ಪಾದೆ ಆ ಬೇಸಿಗೆ ಕಾಲದ ಬಿಸಿಲಿಗೆ ಕಾದು ಬರಿ ಕಾಲಲ್ಲಿ ನಿಲ್ಲುವ ಹಾಗಿರಲಿಲ್ಲ. ಸುಡುತ್ತಿತ್ತು. ನಮಗೆಲ್ಲ ಅಶ್ಚರ್ಯ. ಇಲ್ಲಿ  ಈ ಕಲ್ಲಿನಲ್ಲಿ ನೀರು ಸಿಗುವುದೇ? ಮಣ್ನಿನ ಅಂಶ ಲವಲೇಶವೂ ಇಲ್ಲದ ಈ ಬರಡು ಜಾಗದಲ್ಲಿ ನೀರು ಸಿಗಬಹುದೇ? ಆಶ್ಚರ್ಯ. ನಮಗೆಲ್ಲಿ ಅರಿವಿತ್ತು. ಪ್ರಕೃತಿ ಇಂತಹ ಹಲವು ವಿಸ್ಮಯ ನಿಗೂಢತೆಗಳನ್ನು ಬಸಿರಲ್ಲಿರಿಸಿದೆ ಎಂದು.

    ಬಾವಿ ತೋಡುವ ಕೆಲಸ ಆರಂಭವಾಯಿತು. ಅಲ್ಲಿ ನೆಲವನ್ನು ಸಾಕಷ್ಟು ಸಜ್ಜುಗೊಳಿಸಿ ವೃತ್ತಾಕಾರದಲ್ಲಿ ಆಕಾರವನ್ನು ಒಂದೆರಡು ಆಳುಗಳು ಅಗೆಯುವುದಕ್ಕೆ ಆರಂಭಿಸಿದರು.ನಾಲ್ಕುಸಲ  ಗುದ್ದಲಿ ಎತ್ತಿ ಅಗೆದಾಗ ಸಣ್ಣ ಚಿಪ್ಪು ಹಾರಿ ಬರುತ್ತಿತ್ತು ಇಂತಹ ಕಠಿಣ ಸ್ಥಳದಲ್ಲಿ ನೀರು ಸಿಗಬಹುದೇ ನಮಗೆಲ್ಲ ಆಶ್ಚರ್ಯವಾಗುತ್ತಿತ್ತು. ಪ್ರಕೃತಿಯ ವಿಸ್ಮಯಕ್ಕೆ ಕುತೂಹಲವಾಗುತ್ತಿತ್ತು. ದಿನವಿಡೀ ಅಗೆದರೂ ಅರ್ಧ ಅಡಿಗಿಂತ ಹೆಚ್ಚು ಅಗೆಯಲು ಸಾಧ್ಯವಾಗದ ಸ್ಥಳದಲ್ಲಿ ನೀರಿದೆ ! ಎಂತಹ ವಿಸ್ಮಯ. ದಿನ ಕಳೆದಂತೆ ಕಲ್ಲಿನಂಶ ಕಡಿಮೆಯಾಗಿ ಕಲ್ಲು ಮೆತ್ತಗಾಗುವ ಭಾಸವಾಗುತ್ತಿತ್ತು.. ಕಲ್ಲು ಕರಗಿ ಮಣ್ಣಾದಂತೆ ನಿಧಾನವಾಗಿ ಭೂಗರ್ಭದೊಳಗೆ ನೀರಿನ ಗಮ್ಯದೆಡೆಗಿನ ಪಯಣ ಸಾಗುವಂತಿತ್ತು. ಆರಂಭದಲ್ಲಿ ಇರದಿದ್ದ ವಿಶ್ವಾಸ, ವಿಸ್ಮಯ ವಾಸ್ತವದಲ್ಲಿ ಸತ್ಯವಾಗುವ ಭಾವನೆಯನ್ನು ಮೂಡಿಸಿತು. ಕಲ್ಲು ಕರಗಿ ಮಣ್ಣಾಗಿ ಮುಂದೊಂದು ದಿನ ಅಂತರಂಗ ಗಂಗೆಯ ದರ್ಶನವಾದಾಗ ಸಂತಸಕ್ಕೆ ಪಾರವಿರಲಿಲ್ಲ

    ಪ್ರಕೃತಿ ಕಲಿಸುವ ಇಂತಹ ನಿದರ್ಶನ ಪಾಠಗಳನ್ನು ಗಮನಿಸುವ ಪ್ರಜ್ಞೆ ನಮ್ಮಲ್ಲಿರಬೇಕು. ಐದಾರು ವರ್ಷದ ಹಿಂದೆ ಯೋಗಾಭ್ಯಾಸಕ್ಕೆ ತೊಡಗಿಕೊಂಡಾಗ ದೇಹಕ್ಕೆ ಅಂಟಿಕೊಂಡ ರೋಗಗಳಿಂದ ಮೋಕ್ಷಸಾಧನೆಯಾಗಬಹುದು ಎಂಬ ನೀರೀಕ್ಷೆಯಿರಲಿಲ್ಲ. ಬರಡು ಬಂಡೆಯಂತಿದ್ದ ನೆಲದಲ್ಲಿ ಗಂಗೆ ದರ್ಶನವಾದೀತೇ ಅನುಮಾನ ಗಾಢವಾಗಿತ್ತು. ಅದರೆ ರೋಗ ದೇಹಕ್ಕೆಂದೇನು ಮನಸ್ಸಿಗೂ ಅಂಟಿಕೊಂಡಿತ್ತು ಎಂದು ಈಗ ಅನ್ನಿಸತೊಡಗಿದೆ. ಯೋಗಾಭ್ಯಸದ ವೈಶಿಷ್ಟ್ಯವೇ ಅಂತಹುದು. ಆರಂಭದ ಒಂದು ತಿಂಗಳು ಉತ್ಸಾಹವಿಲ್ಲದ ಯಾಂತ್ರಿಕ ಯೋಗಾಭ್ಯಾಸವಾದರೆ ಆನಂತರ ಕೆಲವು ದಿನ ತುಸು ಉತ್ಸಾಹ ಮೊಳೆಯಿತೆನ್ನಬಹುದು. ಮನೆಯ ಒಂದು ಕೋಣೆಯನ್ನು ಶುಭ್ರವಾಗಿ ಸಜ್ಜಾಗಿಸುತ್ತೀರಿ, ಕೋಣೆಯ ಇಂಚಿಚಿಂಚು ಕಸತೆಗೆದು ಧೂಳು ಒರೆಸಿ ಗುಡಿಸಿ ಶುಭ್ರವಾಗಿ ಕಾಣುವಂತೆ ಮಾಡಿದ ಮೇಲೆ ಅಲ್ಲಿ ಒಂದು ಕಸ ಅಥವಾ ಕೊಳೆಯುಂಟಾದರೆ  ಮನಸ್ಸಿಗೆ ಆ ಕಸವನ್ನು ಅಥವಾ ಕಲ್ಮಶವನ್ನು ತೆಗೆದೆಸೆವ ಪ್ರೇರಣೆಯುಂಟಾಗುತ್ತದೆ. ಆ ಕೊಳಕು ಕೋಣೆಯ ಯಾವುದೇ ಮೂಲೆಯಲ್ಲಿದ್ದರೂ ಏನೋ ಒಂದು ಕಿರಿ ಕಿರಯನ್ನು ನಾವು ಅನುಭವಿಸಿ ಅದನ್ನು ತೆಗೆದು ಶುಭ್ರ ಮಾಡಿದಾಗ ಒಂದು ರೀತಿಯ ನಿರಾಳತೆ ಮನಸ್ಸಿಗೆ ಉಂಟಾಗುತ್ತದೆ. ಆ ಕಸ ಸ್ವಲ್ಪವೇ ಆದರೂ ಕೊಳಕಿನ ಕಲೆ ಚಿಕ್ಕದೇ ಆದರೂ ಅದಿರುವವರೆಗೆ ಮನಸ್ಸು ಒಂದು ರೀತಿಯ ಅಸಹನೆಯನ್ನು ಅನುಭವಿಸುತ್ತದೆ. ಯೋಗಾಭ್ಯಾಸ ಮಾಡುವಾಗಲೂ ಇದೇರೀತಿಯ ಅನುಭವ. ನಮಗಂಟಿದ ದುಶ್ಚಟಗಳಂತಹ ಕಲ್ಮಶವನ್ನು ನಾವೇ ದೂರ ಮಾಡುವ ಪ್ರೇರಣೆಯಾಗುತ್ತದೆ. ಶುಭ್ರವಾದ ಕೋಣೆಯಿಂದ ಕಸವನ್ನು ಎತ್ತಿ ಬೀಸಾಕಿದಂತೆ ದುಶ್ಚಟಗಳು ಒಂದೊಂದಾಗಿ ನಮ್ಮಿಂದ ದೂರವಾಗುತ್ತದೆ. ಆ ಪ್ರೇರಣೆ ಮನಸ್ಸಿನ ಆಳದಿಂದ ಉಂಟಾಗಿ ನಾವೇ ಚಕಿತರಾಗುವಂತೆ ಅದು ಸ್ಥಿರವಾಗಿ ನೆಲೆ ನಿಲ್ಲುತ್ತದೆ. ದುಶ್ಚಟಗಳು ಕೇವಲ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಅಂಟಿಕೊಂಡಿದೆ ಎಂಬ ಅರಿವಾಗುವಾಗ ಮನಸ್ಸು ಆ ಕಲ್ಮಶವನ್ನು ತೊಡೆದು ಹಾಕಿ ಹೊಸ ಮನುಷ್ಯತ್ವದತ್ತ ಸೆಳೆಯುತ್ತದೆ.

    ದುಶ್ಚಟಗಳು ಹೆಚ್ಚು ಕಡಿಮೆ ಸಾಮಾನ್ಯ ಮನುಷ್ಯನಾದವನಿಗೆ ಎಲ್ಲರಲ್ಲೂ ಇರುತ್ತದೆ. ಸ್ವಭಾವತಃ ಪ್ರಾಮಾಣಿಕ ಮನಸ್ಸು ಅದನ್ನು ಒಪ್ಪಿಕೊಂಡು ಅದರಿಂದ ಮುಕ್ತವಾಗುತ್ತ ಯೋಚಿಸುವ ಪ್ರೇರೇಪಣೆ ಯೋಗದಿಂದ ಸಾಧ್ಯವಾಗುತ್ತದೆ. ದುಶ್ಚಟಗಳು ನನಗೂ ಅಂಟಿಕೊಂಡಿತ್ತು ಎಂದು ಪ್ರಾಮಾಣಿಕವಾಗಿ ಹೇಳಬಲ್ಲೆ. ಮಾನಸಿಕವಾಗಲೀ ದೈಹಿಕವಾಗಲೀ ಇದ್ದಂತಹ ಚಟಗಳನ್ನು ತೊಡೆದು ಹಾಕುತ್ತ ಶುಭ್ರ ತನುಮನದಿಂದ ಪ್ರಪ್ಪುಲ್ಲತೆಯತ್ತ ಸಾಗುವಾಗ ಅಧಿಕವಾಗುವ ಆ ಅತ್ಮವಿಶ್ವಾಸ ಹೊಸ ಬದುಕಿನ ಅಶಾಭಾವವನ್ನು ಮತ್ತಷ್ಟು ಬಿಗಿಯಾಗಿಸುತ್ತದೆ. ಪ್ರಫುಲ್ಲ ಮನಸ್ಸಿನಿಂದ ನಾನು ಎಲ್ಲದರಿಂದ ಮುಕ್ತನಾಗುತ್ತೇನೆ ಎಂದು ಹೇಳುವ ಆ ಅತ್ಮ ವಿಶ್ವಾಸದಭಾವ ಇದೆಯಲ್ಲ, ಅದು ಎಷ್ಟು ದೃಢವಾಗಿರುತ್ತದೆ ಎಂದರೆ ಆ ಚಟಗಳ ಸೋಂಕು ಕೂಡ ಮೈಲಿಗೆಯಾಗಿ ಭಾಸವಾಗುತ್ತದೆ. ಪರಿಶುಭ್ರ ವ್ಯಕ್ತಿತ್ವ ನಮ್ಮದು ಎಂಬ ಭಾವ ಸ್ಪುರಣೆಯಾಗುತ್ತದೆ. ಇಷ್ಟು ವರ್ಷದವರೆಗೂ ಇಲ್ಲದ ಈ ಪ್ರೇರಣೆ ಈಗ ಎಲ್ಲಿಂದ ಬಂತು? ಅದು ನಮ್ಮ ಅಂತರಾತ್ಮದಲ್ಲೇ ಹುದುಗಿತ್ತು ಎಂಬುದನ್ನು ನಾವು ಮರೆತಿದ್ದೆವು ಎಂಬುದನ್ನು ತೋರಿಸಿಬಿಡುತ್ತದೆ.

    ಪ್ರತಿಯೊಬ್ಬ ಮನುಷ್ಯನ ಆತ್ಮ ನಿಜವಾಗಿಯೂ  ಜನ್ಮತಹ ಪರಿಶುಭ್ರವಾಗಿರುತ್ತದೆ.  ಅಂತರಾತ್ಮದಲ್ಲಿ ಅವರರವರ ಮಟ್ಟಿಗೆ ತಾವು ಶುಭ್ರಮನಸ್ಸಿನವರು. ಆ ಸುಪ್ತ ಪ್ರಜ್ಞೆ ಅಂತರಾತ್ಮದಲ್ಲಿ ಸದಾ ಜಾಗ್ರತವಾಗಿರುತ್ತದೆ. ನಾನು ಒಳ್ಳೆಯವ ಎಂದು ತನ್ನ ಮನಸ್ಸು ಸದಾ ಹೇಳುತ್ತಿರುತ್ತದೆ. ಆದರೆ ಹೊರ ಪ್ರಪಂಚಕ್ಕೆ ಮಾತ್ರ ಅದರ ಪ್ರೇರಣೆಯಾಗುವುದೇ ಇಲ್ಲ. ಸುಪ್ತವಾಗಿರುವ ಗುಣ ಪೂರ್ಣವಾಗಿ ಪ್ರಕಾಶಕ್ಕೆ ಬರುವುದೇ ಇಲ್ಲ. ಹೊಸ ಗಣಕ ಯಂತ್ರ (ಕಂಪ್ಯೂಟರ್) ತಂದು ಉಪಯೋಗಿಸುತ್ತೇವೆ. ಹಲವಾರು ಪ್ರೋಗ್ರಾಂಗಳನ್ನು ತುಂಬಿಸುತ್ತೇವೆ. ಹಲವು ಸಲ ಪ್ರೋಗ್ರಾಂಗಳ ಅವಿರತ ದುಡಿಮೆಯಿಂದ ಸ್ತಭ್ದವಾಗತೊಡಗಿದಾಗ ಅದನ್ನು ಫ಼ಾರ್ಮೇಟ್ ಮಾಡಿ ಹೊಸದರಂತೆ ಅಣಿಗೊಳಿಸುತ್ತೇವೆ. ಪಾರ್ಮೇಟ್ ಮಾಡಿದ ಕಂಪ್ಯೂಟರ್ ಶುರುವಿಗೆ ಏಷ್ಟು ವೇಗವಾಗಿ ಪ್ರತಿಕ್ರಿಯಿಸುತ್ತದೆ ಎಂದರೆ ಆಶ್ಚರ್ಯವಾಗಿಬಿಡುತ್ತದೆ. ನಂತರ ಒಂದೊಂದಾಗಿ ಪ್ರೊಗ್ರಾಂಗಳನ್ನು ಏರಿಸುತ್ತಾ ಅದನ್ನು ಒಂದು ರೀತಿಯಲ್ಲಿ ರಾಡಿ ಎಬ್ಭಿಸುತ್ತೇವೆ. ನಮ್ಮ ದೇಹವೂ ಹಾಗೇ, ಜನಿಸಿದಾಗ ಪರಿಶುಭ್ರವಾಗಿದ್ದು ನಂತರ ಬದುಕಿನ ರಸ್ತೆಯಲ್ಲಿ ಸಾಗುತ್ತಿದ್ದಂತೆ ರಸ್ತೆಯ ಧೂಳನ್ನೂ ಪರಿಸರದ ಮಾಲಿನ್ಯವನ್ನು ಅಂಟಿಸಿಕೊಂಡು ಕೆಲವೊಮ್ಮೆ ಸ್ಥಬ್ಧವಾಗಿಬಿಡುತ್ತದೆ. ಕಂಪ್ಯೂಟರನ್ನು ಪಾರ್ಮೇಟ್ ಮಾಡಿ ಹೊಸದಾಗಿ ಸಜ್ಜುಗೊಳಿಸುವಂತೆ ನಮ್ಮನ್ನು ನಾವು ಸಿದ್ದ ಪಡಿಸಿಕೊಳ್ಳುವುದಿಲ್ಲ. ಇಂದು ಬಹಳಷ್ಟು ಬದುಕು ದುರ್ಭರವಾಗುವುದು ಇದೇ ಕಾರಣದಿಂದ. ಯೋಗಾಭ್ಯಾಸ ಪ್ರತಿದಿನ ನಮ್ಮ ಮನಸ್ಸು ಮತ್ತು ದೇಹವನ್ನು ಫಾರ್ಮೇಟ್ ಮಾಡಿ ಪರಿಶುಭ್ರ ವ್ಯಕ್ತಿತ್ವವನ್ನು ರೂಪಿಸಿತ್ತದೆ. ಅದಕ್ಕಾಗಿಯೇ "ಯೋಗಃ ಕರ್ಮಸುಕೌಶಲಂ" ಅಂತ ಹೇಳುವುದು.    

    ಈ ವಾಸ್ತವ ಪ್ರಪಂಚವನ್ನೂ ಮಿಥ್ಯಾ ಪ್ರಪಂಚ ಎನ್ನುತ್ತಾರೆ. ತನ್ನ ಅಸ್ತಿತ್ವದ ಬಗ್ಗೆ ವಿಶ್ವಾಸ ಇಲ್ಲದವನೂ ನಾಳಿನ ಬಗ್ಗೆ ಕನಸನ್ನು ಕಾಣುವತ್ತಾ   ಆಶಾಭಾವದಿಂದ ಬದುಕುತ್ತಾನೆ. ವಿಚಿತ್ರ. ಕಣ್ಣಿಗೆ ಕಾಣುವುದೇಲ್ಲವೂ ವಾಸ್ತವದಲ್ಲಿ ಬೇರೆಯೇ ಆಗಿರುತ್ತದೆ. ರಾತ್ರಿ ವಾಹನದ ಬೆಳಕಿಗೆ ದೂರದಲ್ಲಿ ಯಾವುದೋ ವಸ್ತು ಯಾವುದೋ ರೂಪದಲ್ಲಿ ಕಾಣಿಸುತ್ತದೆ. ಆದರೆ ಹತ್ತಿರ ಹೋದಾಗ ಅದರ ನೈಜತೆ ಬಗ್ಗೆ ಅರಿವಾಗುತ್ತದೆ.  ಜೀವನದ ಸತ್ಯ ಏನು? ಬರಡು ನೆಲದ ಒಳಗಿನ ಸತ್ಯ ಏನು? ಹಲವು ಸಲ ಜೀವನದಲ್ಲಿ ನಾವು ಚಿಂತಿತರಾಗುವುದುಂಟು. ನಮ್ಮನ್ನು ಯಾರೂ ಅರ್ಥೈಸುವುದಿಲ್ಲ. ನಮ್ಮ ಬಗ್ಗೆ ಯಾರಿಗೂ ತಿಳಿದಿಲ್ಲ. ನಮ್ಮನ್ನು ನಾವೇ ಅರ್ಥ ಮಾಡಿಕೊಳ್ಳದೇ ಇನ್ನೊಬ್ಬರ ಬಗ್ಗೆ ಅರೋಪಿಸುತ್ತೇವೆ. ನಮ್ಮೊಳಗಿನ ನಾವೇನು ಎಂದು ನಮಗೇ ತಿಳಿದಿರುವುದಿಲ್ಲ. ಯೋಗದ ಮಹತ್ವವೇ ಅದು ನಾವೇನು ಎಂದು ಅದು ಸ್ಪಷ್ಟ ಪಡಿಸುತ್ತಾ ಹೋಗುತ್ತದೆ. ಕನ್ನಡಿಯ ಮುಂದೆ ನಿಂತು ಕನ್ನಡಿಯ ಪ್ರತಿಬಿಂಬವನ್ನು ನೋಡುತ್ತಾ ಯೋಚಿಸಿ ನಾನೇನು? ನಾನೇನನ್ನು ನೋಡುತ್ತಿದ್ದೇನೆ? ನಾನೆಂದರೆ ಈ ನಾಮಾಂಕಿತದಿಂದ ಏನಾಗಿದ್ದೇನೆ ಅದುವೇ? ಅಲ್ಲ ಈ ದೇಹವೇ ? ಆಲ್ಲ ಈ ದೇಹದೊಳಗಿನ ಜೀವಸೆಲೆಯೇ? ದೇಹದ ನರನಾಡಿಗಳಲ್ಲಿ ರಕ್ತ ಸಂಚರಿಸುತ್ತದೆ. ಹೃದಯ ಉಸಿರಾಡುತ್ತದೆ. ಹೊಟ್ಟೆ ಹಸಿದು ತುಂಬಿಕೊಂಡು ಮತ್ತೆ ಪುನಃ ಹಸಿಯುತ್ತದೆ. ಯಾಕೆ ಹೀಗೆ? ಉತ್ತರ ಗೊತ್ತಿಲ್ಲ..ಗೊತ್ತಿಲ್ಲ..ಹೀಗೆ ಈ ಗೊತ್ತಿಲ್ಲಗಳಿಗೆ ಸರಳವಾದ ಉತ್ತರವನ್ನು ಯೋಗಾಭ್ಯಾಸ ನೀಡುತ್ತದೆ.

    ಇತ್ತೀಚೆಗೆ ನನ್ನ ದೂರದ ತಂಗಿಯೊಬ್ಬಳು ದೂರದ ಗೋವಾದಿಂದ ಬಂದಳು. ನನ್ನನ್ನು ನೋಡದೆ ನಾಲ್ಕೈದು ವರ್ಷ ಕಳೆದಿರಬಹುದು. ನನ್ನನ್ನು ಕಂಡವಳೇ ಆಶ್ಚರ್ಯದಿಂದ ಉದ್ಗರಿಸಿದಳು. ಬಹಳ ವರ್ಷದಿಂದ ನನ್ನನ್ನು ಕಂಡುದಕ್ಕೆ ಉದ್ಗರಿಸಿದ್ದಲ್ಲ. ನನ್ನ ಮುಖ ಏಕೆ ಬೆಳ್ಳಗಾಗಿದೆ?. ಏಕೆ ಹೋಳೆಯುತ್ತಿದೆ.? ಈ ಪ್ರಸನ್ನತೆಗೆ ಕಾರಣ ಏನು? ನನ್ನ ಬೆನ್ನು ನಾನು ತಟ್ಟಿಕೊಂಡ ಹಾಗೆಂದು ತಿಳಿವ ಹಾಗಿಲ್ಲ. ದಢೂತಿ ದೇಹ.. ಅರ್ಥ ಮೊಣಕಾಲಿನ ವರೆಗೆ ಬಗ್ಗಿದರೂ ನೇರವಾಗಿ ನಿಲ್ಲುವುದಕ್ಕೆ ಪ್ರಯಾಸ ಪಡುವ ದೇಹ? ದಿನದ ಸ್ವಲ್ಪ ಹೊತ್ತಿನಲ್ಲೇ ಬಸವಳಿದ ಅಯಾಸಗೊಂಡ ಮುಖ ಈಗ, ದಿನ ಮುಗಿದರೂ ಲವಲವಿಕೆಯ ಉತ್ಸಾಹವನ್ನು ತೋರಿಸುತ್ತಿದೆ ಏಕೆ? ನನ್ನ ಬಗ್ಗೆ ನಾನು ಪವಾಡವನ್ನು ಕಂಡದ್ದಲ್ಲ ವಿಸ್ಮಯವಾಗಿ ಭೂಗರ್ಭ ಜಲದ ವಿಸ್ಮಯತೆಯನ್ನು ನನ್ನಲ್ಲಿ ಕಂಡುಕೊಂಡಳು. ಹೌದಲ್ಲ,  ನಾನೆಂದೆ ಬರಡು ಬಂಡೆಯಂತಹ ನನ್ನ ದೇಹದಲ್ಲಿ ನೀರಿನ ಸೆಲೆಯ ದರ್ಶನ ಈಗ ಆಗುತ್ತಿದೆ. ಅದಕ್ಕಾಗಿ ನಾನು ಏನೂ ಮಾಡಿಲ್ಲ. ಕೇವಲ ಶ್ರದ್ಧೆಯಿಂದ ಪ್ರಯತ್ನಿಸಿದೆ. ಬಂಡೆಯ ಮೇಲೆ ಬಾವಿ ಅಗೆದಂತೆ..ಸ್ವಲ್ಪ ಸ್ವಲ್ಪವೇ ಚಿಪ್ಪು ಚಿಪ್ಪು ಅಗೆಯುತ್ತಾ ಸಾಗಿದೆ. ಬಾವಿ ತೆಗೆಯುವಾಗ ನೀರು ಸಿಗಬಹುದೆಂಬ ಆಶಾಭಾವವಾದರೂ ಇತ್ತು.. ಆದರೆ ನಾನು ಯೋಗ ಜೀವನವನ್ನು ತೊಡಗಿಸಿದಾಗ ಯಾವುದೇ ಆಶಾಭಾವದ ನಿರೀಕ್ಷೆಯೂ ಇರಲಿಲ್ಲ. ಕೇವಲ ಶ್ರದ್ದೆ ಮತ್ತು ಪ್ರಾಮಾಣಿಕತೆ ಮಾತ್ರ ಇದ್ದದ್ದು. ಬಾವಿಯೊಳಗೆ ಸ್ವಲ್ಪ ಸ್ವಲ್ಪವೇ ಇಳಿದಂತೆ ನನ್ನ ದೇಹದೊಳಕ್ಕೆ ನನ್ನ ಆತ್ಮದೊಳಗೆ ಸಂಚರಿಸುತ್ತಾ ಸಾಗಿದೆ. ಆ ಪಯಣದ ಅನುಭವ ವಿಸ್ಮಯವನ್ನು ಉಂಟು ಮಾಡಿದೆ.ಗಮ್ಯವಿಲ್ಲದ ಈ ಪಯಣ ಇನ್ನು ಏನನ್ನೆಲ್ಲ ತೋರಿಸುತ್ತದೋ ಕಾತರದಿಂದ ಕಾತರಿಸುತ್ತ ಮತ್ತಷ್ಟು ಶ್ರದ್ದೆ ವಿಶ್ವಾಸದಿಂದ ಒಂದೊಂದೇ ಹೆಜ್ಜೆಗಳನ್ನು ಇಡುತ್ತಾ ಸಾಗುತ್ತಿದ್ದೇನೆ. ಈ ಪಯಣವನ್ನು ನೀವು ಆರಂಭಿಸುವ ಬಯಕೆ ನಿಮ್ಮಲ್ಲಿದೇಯೇ.... ಇದ್ದರೆ ಬಹಳ ಸುಲಭ..ಕೇವಲ ಶ್ರದ್ದೆಯೊಂದು ಇದ್ದರೆ ಸಾಕು.




Sunday, March 3, 2013

ಅಪ್ಪ ಅಮ್ಮನೆಂಬ ಉದಾತ್ತ ಭಾವ



ನಿತ್ಯ ಸಂಧ್ಯೆಯಲ್ಲಿ ಒಂದು ಸಂಕಲ್ಪ ಮಂತ್ರವಿದೆ, ಮಮೋಪಾತ್ತ ದುರಿತಕ್ಷಯದ್ವಾರ ಪರಮೇಶ್ವರ ಪ್ರೀತ್ಯರ್ಥಂ.... ಎನ್ನುತ್ತಾ ಗಾಯತ್ರೀ ಜಪದ ಸಂಕಲ್ಪವನ್ನು ಮಾಡುತ್ತೇವೆ. ಅಂದರೆ ನಮ್ಮ ದುರಿತಗಳು ಕಷ್ಟಗಳು ಕ್ಷಯಿಸಲಿ ಎಂದು ಪರಮೇಶ್ವರನ ಪ್ರೀತಿಗಾಗಿ,,,ಎಂದರ್ಥ ಎಷ್ಟು ಜನ ಇದನ್ನು ಅರ್ಥವಿಸಿ ಹೇಳುತ್ತಾರೋ? ಒಟ್ಟು ಅರಿಯದ ಮಂತ್ರವಾಗಿ ಒಂದಷ್ಟು ವಟಗುಟ್ಟುತ್ತ ಹೇಳುತ್ತಾರೆ. ಅದೆಲ್ಲ ಇಲ್ಲಿ ಅಪ್ರಸ್ತುತ. ಇಲ್ಲಿ ಪ್ರಸ್ತುತವಾಗುವುದು , ಹಲವು ಸಲ ನಮ್ಮ ಉದಾತ್ತ ತತ್ವಗಳು ಎಷ್ಟು ಸರಳವಾಗಿ ಬಿಂಬಿಸಲ್ಪಟ್ಟಿದೆ ಎಂಬುದು, ಇದು ಬಹಳ ಆಶ್ಚರ್ಯವಾಗುತ್ತದೆ. ನಾವೇನು ಎಂದು ಅರಿವಾದರೂ ಮಕ್ಕಳು ಕಣ್ಣ ಮುಚ್ಚೆ ಆಡಿದಂತೆ ಅದರತ್ತ ಗಮನವೇ ಹರಿಸುವುದಿಲ್ಲ. ನಾವು ಮಗುವಾಗಿ ಅಮ್ಮನ ಮಡಿಲ ತುಂಬುವಾಗ ನಮ್ಮಮ್ಮ ನಮ್ಮನ್ನು ಅಪ್ಪನಿಗೆ ತೋರಿಸಿ ಮುದ್ದಿಸಿಬಿಡುತ್ತಾಳೆ. ಅಪ್ಪ ಅಮ್ಮನನ್ನೂ ಮಗುವನ್ನು ಒಟ್ಟಾಗಿ ಪ್ರೀತಿಯಿಂದ ನೋಡುತ್ತಾನೆ. ಲೋಕ ಸಂಬಂಧೀ ಉದಾತ್ತತೆ ಆರಂಭವಾಗುವುದು ಇಲ್ಲಿಂದಲೇ. ಈ ತ್ರಿಕೋನ ಸಂಬಂಧ ಹಲವು ವಿಧದಲ್ಲಿ ತತ್ವರೂಪದಲ್ಲಿ ಕಂಡು ಬರುತ್ತವೆ. ಇಲ್ಲವಾದರೆ ಪರಮೇಶ್ವರನ ಪ್ರೀತ್ಯರ್ಥ . ಗಾಯತ್ರೀ ಜಪ ಹೇಗಾಗಲು ಸಾಧ್ಯ?

ಗಾಯತ್ರೀ ಜಪದ ಸಂಕಲ್ಪದಲ್ಲಿ ಪರಮೇಶ್ವರನ ಪ್ರೀತಿ ಅಡಗಿರುವ ತಾತ್ಪರ್ಯ ಬಹಳ ಸರಳವೂ ವಿಚಿತ್ರವೂ ಆದ ಉದಾತ್ತತೆ. ಪರಮೇಶ್ವರ ಅಂದರೆ ಲೋಕದದ ತಂದೆ. ಜಗದೀಶ್ವರ. ಅವನ ಮಡದಿ ಅಂದರೆ ನಮ್ಮ ತಾಯಿ ಗಾಯತ್ರಿದೇವಿ. ಒಂದು ಕುಟುಂಬ ಚಿತ್ರದಲ್ಲೂ ಹಾಗೆ. ನಮ್ಮ ಅಮ್ಮನ ಸೆರಗು ಹಿಡಿದರೆ ಅಪ್ಪ ತನ್ನಿಂತಾನಾಗಿ ಒಲಿಯುತ್ತಾನೆ. ಅಮ್ಮನ ಒಲವು ಗಳಿಸುವುದು ಸುಲಭ. ಅಮ್ಮನ ಪ್ರೀತಿ ಹರಿಯುವ ತೊರೆಗೆ ಅಡೆತಡೆಗಳು ಇಲ್ಲ. ಸುತ್ತು ಬಳಸಿ ಈ ತೊರೆ ಹರಿಯುವುದಿಲ್ಲ. ನೇರವಾಗಿ ನಮ್ಮ ಹೃದಯಕ್ಕೆ ಹರಿಯುತ್ತದೆ. ಅಪ್ಪನ ಪ್ರೀತಿಗೆ ಇದೊಂದು ಉಪಾಧಿಯಾಗಿ ಕಂಡಾಗ ಒಂದು ಸಂತೃಪ್ತ ಕುಟುಂಬದ ಸಂಬಂಧ ಅರಿವಾಗುತ್ತದೆ. ಒಂದು ಕೌಟುಂಬಿಕ ಜೀವನದ ಸ್ಥಿರತೆ ಅಪ್ಪನೊದಗಿಸಿದರೆ ಅಮ್ಮ ಅದಕ್ಕೆ ಪೋಷಣೆಯಾಗುತ್ತಾಳೆ. ನಮ್ಮ ಮತ್ತು ಅಪ್ಪನ ನಡುವಿನ ಸಂಬಂಧ ಜೀವನದ ಭಗವತ್ ಸಂಬಂಧ ಇದ್ದ ಹಾಗೆ.

ಜೀವನದಲ್ಲಿ ಯಾವುದೇ ಉಪಾಸನೆ ಅದು ಭಗವಂತನ ಕಡೆಗೆ. ಉತ್ತಮ ಜೀವನವನ್ನು ಹೊಂದುವುದು ಉಪಾಸನೆ ಇದ್ದಂತೆ. ಉತ್ತಮ ಜೀವನಕ್ಕೆ ಹಲವು ಅನುಕೂಲಗಳು ನಮ್ಮಮುಂದಿರುತ್ತವೆ. ಅದು ಭಂಡವಾಳ ಇಲ್ಲದ ವ್ಯಾಪಾರದಂತೆ. ಭಂಡವಾಳ ಇದ್ದರೂ ಅದು ಅಂತರಂಗದ ಮನೋಭಾವ ಮಾತ್ರವೇ ಭಂಡವಾಳವಾಗಿರುತ್ತದೆ. ಒಂದು ಪರಿಶುದ್ದ ದೇಹ ಹೊಂದಿರುವುದಕ್ಕೆ ಕೆಲವೊಮ್ಮೆ ಕಷ್ಟವಾಗುತ್ತದೆ. ಅದು ಅಸಾಧ್ಯವೂ ಆಗಬಹುದು. ಆದರೆ ಒಂದು ಪರಿಶುದ್ದ ಮನಸ್ಸು ನಮ್ಮದಾಗುವುದಕ್ಕೆ ಯಾವುದೇ ಕಷ್ಟವಾಗುವುದಿಲ್ಲ. ನಮ್ಮ ಚಿಂತೆಗೆ ಪರರನ್ನು ಹೊಣೆಯಾಗಿಸದ ಮನಸ್ಸು ನಮ್ಮದಾಗಬೇಕು ತಾತ್ಪರ್ಯ ಒಂದು ಮನಸ್ಸು ಉತ್ತಮ ಜೀವನದ ಭಂಡವಾಳವಾಗಬಹುದು. ಅ ದ್ವಾರಾ ಭಗವಂತನ ಉಪಾಸನೆಯಲ್ಲಿ ತೊಡಗಬಹುದು. ನಾವು ನಮ್ಮಮ್ಮನನ್ನು ಪ್ರೀತಿಸುವುದು ಇಲ್ಲಿಯ ಪ್ರೀತಿಯ ಭಂಡವಾಳವನ್ನು ತೊಡಗಿಸಿ ಅಮ್ಮನ ಮಮತೆ ಗಳಿಸಿ ಅಪ್ಪನ ಒಲವನ್ನು ಸಂಪಾದಿಸುತ್ತೇವೆ. ಸಾಮಾನ್ಯವಾಗಿ ಅಪ್ಪ ಪರೋಕ್ಷವಾದ ಮಾರ್ಗದ ಗುರಿಯಾದರೆ ಅಮ್ಮ ನಮ್ಮ ರಸ್ತೆಗೆ ನೇರವಾಗಿ ನಿಂತಿರುತ್ತ ಅಪ್ಪನ ಮಾರ್ಗದ ರುಚಿಯನ್ನು ತೋರಿಸುತ್ತಾಳೆ. ಸಂಧ್ಯ ಕರ್ಮಗಳಾಗಲೀ ಇನ್ನಿತರ ನಿತ್ಯ ಧ್ಯಾನ ಆಹ್ನಿಕಗಳಾಗಲೀ ಇದೇ ತತ್ವದ ಮೇಲೆ ನಿಂತಿರುತ್ತದೆ. ಜೀವನ ಕ್ರಮದ ಭಿನ್ನತೆ ಇದ್ದರೂ ಇದರ ಮೂಲ ತತ್ವಭಾವವೂ ಒಂದೇ. ಅದೇ ಉದಾತ್ತವಾಗಿ ನಮ್ಮೆದುರು ನಿಂತಿದೆ.

ನಮ್ಮ ಅಪ್ಪ ಅಮ್ಮ ನಮಗಾಗಿ ಏನೂ ಮಾಡಿಲ್ಲ. ಎಲ್ಲ ನಾವೇ ಮಾಡಿದ್ದೇವೆ ಎಂಬ ಭಾವ ಹಲವು ಸಲ ಕಾಡುತ್ತದೆ. ಪಿತೃ ಕರ್ಮ ಅನಿವಾರ್ಯವಾಗುವಾಗಲೂ ಈ ಭಾವದಿಂದ ಹೊರಗೆ ಬಾರದೇ ಟಿಕೇಟ್ ಇಲ್ಲದ ಕೌಂಟರ್ ಮುಂದೆ ನಿಂತಂತೆ ನಿಂತಿರುತ್ತೇವೆ. ಲೌಕಿಕ ಪ್ರಪಂಚದ ಭಾವ ಇದು. ಮಕ್ಕಳ ಶಾಲಾ ಅಳತೆ ಪಟ್ಟಿಯ ( ಸ್ಕೇಲ್ ನ) ಎರಡು ಭಾಗದಲ್ಲು ಸ್ವಲ್ಪ ಜಾಗ ಖಾಲಿ ಇದ್ದು ಆನಂತರ ಅಳತೆಗಳ ಮೌಲ್ಯ ಗುರುತಿಸಿದಂತೆ ಹುಟ್ಟಿದ ನಂತರದ ಬದುಕು ಅರಂಭದಲ್ಲೂ ಅಂತ್ಯದಲ್ಲೂ ಸ್ವಲ್ಪ ಜಾಗ ಖಾಲಿ. ಅ ಖಾಲಿಯಾದ ಜಾಗವೇ ಸ್ಥಾಯಿಯಾಗಿ ಅರಂಭದಲ್ಲು ಅಂತ್ಯದಲ್ಲೂ ಜೀವನದ ಎಲ್ಲವೂ ಆಗಿರುತ್ತದೆ ಎಂಬ ಅರಿವೇ ನಮಗಾಗುವುದಿಲ್ಲ. ಖಾಲಿಯಾದರೂ ಅಪ್ಪ ಅಮ್ಮ ಈ ಖಾಲಿಯಾದ ಸ್ಥಾನವಾದರೂ ಎಲ್ಲವೂ ಅಗಿರುತ್ತಾರೆ. ಖಾಲಿಯಿಂದ ಆರಂಭಿಸಿ ನಂತರ ಹಲವು ಸಂಭಂಧಗಳನ್ನು ಹುಟ್ಟಿಸುತ್ತ ಆ ಸಂಬಂಧಗಳೊಳಗೆ ಸುತ್ತಾಡಿ ಬಿಡುತ್ತೇವೆ. ಗತಿಸಿದ ಹಿರಿಯರ ಸಂಬಂಧವನ್ನು ಕಲ್ಪಿಸಿದರೆ ನಮ್ಮ ಸಂಭಂಧದ ಶೂನ್ಯತೆ ಅರಿವಾಗುತ್ತದೆ. ಆ ಜೀವ ಸಂಭಂಧ ಸಿಗದೆ ತಡಕಾಡುವಂತಾಗುವುದಿಲ್ಲವೇ. ಖಾಲಿಯಿಂದ ಆರಂಭವಾದ ಜೀವನದ ಅಳತೆ ಪಟ್ಟಿ ಮತ್ತೆ ಅದರಲ್ಲೇ ಮುಂದುವರಿಸುತ್ತೇವೆ. ನಿಮ್ಮ ಅಮ್ಮನನ್ನು ನೀವು ಪ್ರೀತಿಸುವಲ್ಲಿ ಅಪ್ಪನ ಸ್ವಾರ್ಥವೂ ಇದ್ದಲ್ಲಿ ಸುಂದರ ಕುಟುಂಬದ ಪರಿಕಲ್ಪನೆಯಾಗುತ್ತದೆ.

ಒಬ್ಬರು ಗಣಪತಿಯನ್ನು ಸ್ತುತಿಸಬಹುದು ಮತ್ತೊಬ್ಬ ಕೃಷ್ಣನನ್ನೋ ಈಶ್ವರನನ್ನೋ ಅಥವಾ ಸುಬ್ರಹ್ಮಣ್ಯನನ್ನು ಹೀಗೆ ಅವರವರ ಮನಸ್ಸಿಗೆ ಇಷ್ಟವಾದಂತೆ ದೇವರನ್ನು ಇಷ್ಟ ದೈವ ಎಂದು ಸ್ತುತಿಸಬಹುದು. ಎಲ್ಲವೂ ಒಂದೇ ಎಂಬ ಭಾವ ನಿಜವಾಗುವುದು ಈ ಎಲ್ಲ ಸ್ಥಾನಗಳು ಭಗವಂತ ಸಾನ್ನಿಧ್ಯದ ಉಪಾಧಿಗಳು ಎಂದು ತಿಳಿಯುವಾಗ . ನಮ್ಮ ಆತ್ಮವನ್ನು ಸದಾ ಜಾಗ್ರತವಾಗಿರಿಸುವಲ್ಲಿ ಮತ್ತು ಭಗವಂತನ ಗಮ್ಯವನ್ನು ಸೇರುವಲ್ಲಿ ಎಲ್ಲವೂ ಸಹಕರಿಸುತ್ತವೆ. ನಿತ್ಯ ಭಗವಂತನ ಸ್ಮರಣೆಯನ್ನು ಮಾಸದಂತೆ ಈ ಸ್ಥಾನಗಳಲ್ಲಿ ಅರಿಕೆಯನ್ನು ನಾವು ಮಾಡುವುದಷ್ಟೇ.

ನನ್ನಮ್ಮನಲ್ಲೂ ಅಷ್ಟೇ, ಅಮ್ಮನನ್ನು ಕಂಡಲ್ಲಿ ಅಪ್ಪನನ್ನು ಕಂಡ ಅನುಭವ. ಪಂಚ ಭೂತಗಳಿಂದ ಆವೃತವಾದ ಈ ಶರೀರಕ್ಕೆ ಅಮ್ಮ ಒಂದು ರಹದಾರಿಯಂತೆ. ಆ ಅಮ್ಮನ ಸ್ಥಾನ ಪೂಜನೀಯವಾಗಿ ಅಪ್ಪನನ್ನು ಸ್ಮರಿಸುವುದು. ಅಪ್ಪ ಜತೆಗಿಲ್ಲ ಆ ಭಗವಂತನೇ ಜನಕನಾಗಿ ಅದಕ್ಕೆ ಅಮ್ಮ ಪೂರಕವಾದ ಮಾರ್ಗವಾಗಿಬಿಡುತ್ತಾಳೆ. ಅಮ್ಮನಲ್ಲಿ ದೈವತ್ವವನ್ನು ಕಾಣುವ ಬಗೆಯಿದು.

ಹಲವು ಸಲ ಭಗವಂತನ ಸ್ಥಾನವನ್ನೂ ಭಗವಂತನೇ ಬದುಕಿನಲ್ಲಿ ಕಲ್ಪಿಸಿಕೊಡುತ್ತಾನೆ. ಮೊದಲಾಗಿ ಹೆತ್ತವ್ವೆ ನಂತರ ತಂದೆ. ಇವುಗಳಲ್ಲದೇ ಕೆಲವೊಮ್ಮೆ ದೈವ ಕಲ್ಪ ಬೇರೆಬಗೆಯಲ್ಲಿ ಆಗುವುದುಂಟು. ಅದನ್ನು ಗುರುತಿಸುವ ಕಣ್ಣಿರಬೇಕು. ನನ್ನ ಮಡದಿಯ ಸ್ಥಾನವನ್ನು ತುಂಬಿಸಿದ ನನ್ನತ್ತೆ. ವಾಸ್ತವದಲ್ಲಿ ಅತಿಶಯ ಅನ್ನಿಸಿದರೂ, ಗಂಭೀರನಾಗಿ ಹೇಳಬಲ್ಲೆ ಭಾವದಿಂದಲೂ ಕಲ್ಪದಿಂದಲೂ ನನ್ನ ಶ್ರೇಯಸ್ಸನ್ನು ಬಯಸಿದ್ದಲ್ಲದೇ ಬೇರೇನೂ ಇಲ್ಲ. ಈ ಸ್ವಾರ್ಥ ಪ್ರಪಂಚದಲ್ಲಿ ಹಲವು ವ್ಯಕ್ತಿತ್ವ ದರ್ಶನವಾಗುವುದುಂಟು. ಅದನ್ನೆಲ್ಲ ಕಣ್ಣಾರೆ ಕಂಡಾಗ ನಿಜವಾಗಿ ಅನ್ನಿಸುತ್ತದೆ ನನ್ನತ್ತೆ ಜಗನ್ಮಾತೆ. ಹೀಗೆ ಭಗವಂತ ಎರಡು ಸ್ಥಾನಗಳನ್ನು ಹೆತ್ತವ್ವೆಯ ರೂಪದಲ್ಲಿ ಮತ್ತು ಅತ್ತೆಯ ರೂಪದಲ್ಲಿ ತೋರಿಸಿಕೊಟ್ಟಾಗ ಅನಿಸುವುದು ಅವರಿಗಾಗಿ ನಾನೇನು ಮಾಡಬಲ್ಲೆ? ನನ್ನ ದುಗುಡ ದುಮ್ಮಾನಗಳನ್ನು ಬದಿಗಿರಿಸಿ ನನ್ನ ನಿಜರೂಪವನ್ನಷ್ಟೇ ತೋರಬಲ್ಲೇ. ಐಹಿಕ ಜಗತ್ತಿನ ಈ ಪ್ರಾಪಂಚಿಕ ಸಂಪತ್ತನ್ನು ನನ್ನ ಮೂಲಕ ಬಯಸದ ಆ ಮನಸ್ಸು.. ಭಗವಂತನೂ ಅದೇ ಎಲ್ಲವೂ ಅವನದೇ ಆಗಿರುವಾಗ ಅವನು ಬಯಸುವುದೇನು ಬಂತು. ಅದಕ್ಕಾಗಿ ಅತ್ತೆ ಮನೆಗೆ ಹೋದರೆ ಬೇರೆಲ್ಲೂ ಹೋಗದೆ ಅಲ್ಲೆ ಪಟ್ಟಾಗಿ ಕುಳಿತು ಬಿಡುತ್ತೇನೆ. ಇದ್ದ ಅಷ್ಟು ಹೊತ್ತು ಜತೆಯಾಗಿ ಕಳೆಯುವ ಯತ್ನ ಮಾಡುತ್ತೇನೆ. ಯಾಕೆ? ಹೆತ್ತವ್ವೆಯ ಸಾನ್ನಿಧ್ಯ ನಿತ್ಯ ಮನೆಯಲ್ಲಿ ದೊರಕುತ್ತದೆ. ಹಾಗಾಗಿ ಈ ಸ್ಥಾನ ಸಿಗುವಾಗ ಅದರಿಂದ ವಂಚಿತನಾಗಲಾರೆ. ಈ ಭಗವತ್ಕಲ್ಪ ಸ್ಥಾನಗಳು ಭಗವಂತನ ಹಾದಿಯನ್ನು ಸ್ಪಷ್ಟಗೊಳಿಸುತ್ತವೆ.

ಪರಮೇಶ್ವರನ ಪ್ರೀತಿಗಾಗಿ ಗಾಯತ್ರೀ ಜಪ ಹೇಗೆ ಪ್ರಸ್ತುತವಾಗುವುದೋ ಹಾಗೆ ಉದಾತ್ತ ತತ್ವಗಳು ಜೀವನದುದ್ದಕ್ಕೂ ತಾರೆಗಳಂತೆ ಗೋಚರಿಸುತ್ತ ಇರುತ್ತದೆ. ನಮ್ಮ ಗಮನ ಅತ್ತ ಹರಿಸಬೇಕು ಆಷ್ಟೇ.




Tuesday, January 8, 2013

ಬಿಡದೆ ಕಾಡುವ ಪ್ರಶ್ನೆಗಳು


 ಕೆಲವು ಘಟನೆಗಳು ಹಲವು ಸಲ ಜಿಜ್ಞಾಸೆಗಳಾಗಿಯೇ ಉಳಿದು ಬಿಡುತ್ತವೆ. ಹೀಗೇಕೆ ಅರ್ಥವಾಗದೇ ಬರೀ ಪ್ರಶ್ನೆಯಾಗುವುದೇಕೊ ಅರ್ಥವಾಗುವುದಿಲ್ಲ. ಇತ್ತಲಾಗಿ ಒಂದು ಸಲ ರಾತ್ರಿ ರೈಲಿನಲ್ಲಿ ಪಯಣಿಸುತ್ತಿದ್ದೆ. ಮಂಗಳೂರಿಗೆ ಹೋಗುವ ಬಂಡಿಯದು. ರೈಲಿನ ಕೆಲವು ಸೀಟುಗಳು ಖಾಲಿ ಇದ್ದುವು. ಒಂದೊಂದು ಭೋಗಿಯಲ್ಲಿ ಕೆಲವು ಕೋಣೆಗಳು ಖಾಲಿ ಇದ್ದಂತೆ ನಿಶ್ಯಭ್ದವಾಗಿತ್ತು. ರಾತ್ರಿ ಹೊತ್ತು ಬಹಳಷ್ಟು ಸರಿದಿತ್ತು. ಇದ್ದ ಬಹಳಷ್ಟು ಜನ ಸೀಟು ಬಿಡಿಸಿ ರೈಲಿನ ಜೋಗುಳಕ್ಕೆ ಕಿವಿಕೊಟ್ಟಿದ್ದರು. ನನ್ನದು ಕೆಳ ಬದಿಯ ಸೀಟು. ಪಕ್ಕದ ಸೀಟುಗಳೆರಡರಲ್ಲಿ ಗಂಡು ಹೆಣ್ಣು ಜೋಡಿಯೊಂದು ಪಿಸುಗುಟ್ಟುತ್ತಾ ಇದ್ದಿತ್ತು. ಅದೇನು ಮಾತೋ ... ರೈಲಿನ ಬಹಳಷ್ಟು ಪ್ರಯಾಣಿಕರು ಗಮನಿಸುವಷ್ಟರ ಮಟ್ಟಿಗೆ ತುಸು ಹೆಚ್ಚೇ ಇವರ ಹೃದಯ ವಿನಿಮಯ ನಡೆಯುತ್ತಿತ್ತು. ಸಭ್ಯತೆ ಎಂಬ ಒಂದು ನಾಗರೀಕ ಭಾವನೆ ಇದ್ದರೆ.. ಕೆಲವೊಮ್ಮೆ ಇದು ಇದೆ ಅಂತ ತಿಳಿದುಕೊಳ್ಳುವುದು ಅಪರಾಧವಾಗಿಬಿಡುತ್ತದೆ. ಅದರ ಎಲ್ಲೆ ಮೀರಿದ ವರ್ತನೆ. ಈಗೀಗ ಎಲ್ಲ ಅಭಾಸಗಳು.. ಕೇವಲ ವಿರೋಧಾಭಾಸಗಳೇ ಇದನ್ನೂ ಹಾಗೇ ತಿಳಿಯಬಹುದು. ಕೆಲವೊಮ್ಮೆ ಇಂತಹ ಸಂದರ್ಭದಲ್ಲಿ ಜಿಜ್ಞಾಸೆಗಳು ಮೂಡುತ್ತವೆ... ಬಹುಶಃ ಎಕಾಂತದಲ್ಲಿ, . ಅಂತರಂಗದಲ್ಲಿ, . ಅಂದರೆ ಮನೆಯ ಅಂತಃ ಪುರದಲ್ಲಿ ಪರಸ್ಪರ ಘರ್ಷಣೆ ಜಗಳ.. ಏನು ಅಂತರಂಗದಲ್ಲಿ ಇರಬೇಕೋ ಅದು ಬಹಿರಂಗದಲ್ಲಿರುತ್ತವೆಯೋ ಎನೋ? ಒಟ್ಟು ಜಿಜ್ಞಾಸೆ.. ಸಾಮಾನ್ಯವಾಗಿ ಹೆಣ್ಣು ಸುಂದರ ಹೂವಿಗೆ ಹೋಲಿಸುತ್ತಾರೆ..ಹಲವು ಕಾರಣಗಳಿರಬಹುದು.. ಮುಟ್ಟಿದರೆ ನಲುಗಿ ಬಿಡುವ ಮೃದು ಕುಸುಮ .. ಮೈಮೇಲೆ ಅದ್ದಿಕೊಂಡರೂ ತುಸು ನಲುಗದ ಹಾಗೆ ವಾಸ್ತವವಾಗುವಾಗ ಯಾಕೆ ಹೀಗೆ? ಸಹಜತೆಯನ್ನು ಮೀರಿದ ಚೆಲ್ಲಾಟ ಇಂದ್ರಿಯತ್ವದ ನಿಗ್ರಹಕ್ಕೆ ಪರೀಕ್ಷೆಯನ್ನು ತಂದೊಡ್ದುತ್ತವೆ.. ಇರಲಿ..

ಮನಸ್ಸನ್ನು ಸ್ವಲ್ಪ ಉಲ್ಲಸಿತವಾಗಿಸುವುದಕ್ಕೆ ವಾಯು ವಿಹಾರಕ್ಕೆ..ಹೋದರೆ ಇನ್ನೂ ಹೈಸ್ಕೂಲು ಮುಗಿಸಿದ ಪಡ್ಡೆಗಳು ಸಿನಿಮಾದ ಯುಗಳ ದೃಶ್ಯದ ಅನುಕರಣೆ ಮಾಡುವುದು ಮಾತ್ರವಲ್ಲ ತಂತ್ರಜ್ಞಾನದ ಸದುಪಯೋಗವನ್ನು ಮಾಡುವುದು.. ತಮ್ಮ ಮೊಬೈಲ್ ನಲ್ಲಿ ತಮ್ಮ ಬಾವೋದ್ವೇಗವನ್ನು ಸೆರೆ ಹಿಡಿವ ಕಸರತ್ತು ಪುನಃ ತಲೆಯೆತ್ತುವ ಜಿಜ್ಞಾಸೆ ವಯೋಸಹಜವಾಗಿ ಪ್ರಕಟವಾಗಬೇಕಾದದ್ದು ಯಾಕೆ ಬೇಗನೇ ಪ್ರಕಟವಾಗುತ್ತದೆ? ಇರಲಿ..

ಮನೆಯಲ್ಲಿ ಎಲ್ಲರೂ ಟೀವಿಯಲ್ಲಿ ಬರುವ ಸಿನಿಮಾ ಹಾಡು ನರ್ತನ ನೋಡುತ್ತಿದ್ದಾರೆ.. ಹುಡುಗ ಪ್ಯಾಂಟ್ ಶರ್ಟ್.. (ಹೀಗೆ ಹೇಳಿದರೆನೇ ಸೂಕ್ತ) ಧರಿಸಿ.. ದೇಹ ಬಹುಭಾಗ ತೋರಿಸಲು ನಾಚಿಕೊಂಡಿದ್ದಾನೋ.. ಅಥವಾ ಪೂರ್ಣ ದಿರಿಸಿನಲ್ಲಿ ಇರುವುದು ಅಸಭ್ಯತೆಯೋ ಯಾಕೆಂದರೆ ಅಸಭ್ಯತೆಯ ದರ್ಶನ ನಮಗೆ ಪ್ರಿಯವಾಗುತ್ತದೆ..! ಹೀಗೆ ಪೂರ್ಣ ಉಡುಗೆಯಲ್ಲೇ ಇದ್ದರೆ.. ಆತನ ಕನಸಿನ ಕನ್ಯೆ ಪ್ರೇಯಸಿ .. ಇದಕ್ಕೆ ತದ್ವಿರುದ್ದವಾಗಿ ಯಾಕೆ ಇರುತ್ತಾಳೋ ತಿಳಿಯದು.. ಬಹಳಷ್ಟನ್ನು ಪ್ರಿಯತಮನಿಗೆ ತೋರಿಸುವ ತುಡಿತವೋ ಅಲ್ಲ ಕನಸಿನ ಕನ್ಯೆಯ ಕನಸನ್ನು ಹುಡುಗ ಕಾಣುವ ಪರಿಯೋ ಅಂತು ಅಂತರಂಗ ಬಹಿರಂಗ ಒಂದಾಗಿದ್ದಂತೆ ತೋರುತ್ತಿತ್ತು ..ಅಗಲೂ ಜಿಜ್ಞಾಸೆ ಯಾಕೆ ಹೀಗೆ? ಇರಲಿ

ಹೊರ ಪ್ರಪಂಚದಲ್ಲಿ ಹೀಗೆ ಬಹಿರಂಗವಾಗುವ ಅಂತರಂಗ ಸತ್ಯಗಳು ಇಂದ್ರಿಯ ನಿಗ್ರಹಕ್ಕೆ ಸವಾಲನ್ನು ತಂದೊಡ್ಡುವಾಗ ಅನ್ನಿಸುತ್ತದೆ ಇಲ್ಲಿ ಅತಿಯೆನಿಸುವ ಆಚಾರಸಂಹಿತೆ ಇದೆಯೇ? ಅಚಾರ ಮೀರುವುದೇ ಪ್ರಕೃತಿ ಸಹಜ ಅಂತ ಅನ್ನಿಸುವುದು ಯಾಕೆ? ನೋಡುವ ಕಣ್ಣಿಗೆ ಚಿಕಿತ್ಸೆ ತೆಗೆದು ಕೊಳ್ಳೋಣ ವೆಂದರೂ....ಜಿಜ್ಜಾಸೆಗಳು ಕಾಡುತ್ತವೆಯಲ್ಲ....

ಕಳ್ಳತನ ಅಪರಾಧ.. ಕಾನೂನು ವಿರೋಧವಾದದ್ದು.. ಕಳ್ಳತನ ಮಾನಸಿಕ ರೋಗದಿಂದ ಬರುತ್ತದೆ ಚಿಕಿತ್ಸೆ ಅನಿವಾರ್ಯ....ಹೌದು. ಆದರೆ ಕಳ್ಳತನ ಅಪರಾಧ.. ಹಾಗಾಗಿ ಕಳ್ಳ ಮನೆಗೆ ಬಂದು ಕದಿಯಲಾರ ಬಂದರೆ ಅವನಿಗೆ ಮಾನಸಿಕ ಚಿಕಿತ್ಸೆ ಅಗತ್ಯ .. ಎಂದು ಭಾವಿಸಿ ಮನೆಯ ಬಾಗಿಲು ಭದ್ರ ಪಡಿಸದೇ ಇರಬಹುದೇ? ಬಾಗಿಲು ತೆರೆದಿಟ್ಟು ಕಳ್ಳ ಅಪರಾಧ ಮಾಡಿದ್ದಾನೆ ಎನ್ನಬಹುದೇ? ಕೆಲವೊಮ್ಮೆ ಜಿಜ್ಞಾಸೆ ಹೀಗೂ ಕಾಡುತ್ತದೆ....

ಕೇವಲ ತಮ್ಮ ಉದ್ವೇಗ ಭಾವನೆಗಳನ್ನು ತಡೆ ಹಿಡಿಯಲಾಗದೇ ಇರುವಾಗ ಇನ್ನೂಬ್ಬರ ಭಾವೋದ್ವೇಕಕ್ಕೆ ಪರೀಕ್ಷೆಯನ್ನಿಟ್ಟು.. ಆ ಭಾವೋದ್ವೇಗವನ್ನು ಅಪರಾಧ ಎಂದು ಹೇಳುವುದು ಹೇಗೆ?
ಹೀಗಿದ್ದರೂ ಅಪರಾಧ ನಿಜಕ್ಕೂ ಅಮಾನುಷವೇ.. ಬಹಳ ಕ್ರೂರ.. ಅದರೂ.. ಒಂದು ಜಿಜ್ಞಾಸೆ ಅಲ್ಲದೆ ಮತ್ತೇನು.

ಇನ್ನೂ ಈ ಜಿಜ್ಞಾಸೆಗಳು ಮೊಳಕೆಯೊಡೆದರೆ ಅದು ಹೀಗೆ ವ್ಯಕ್ತವಾದರೆ.. ನನಗೂ ಚಿಕಿತ್ಸೆಯ ಅನಿವಾರ್ಯತೆ ಉಂಟೋ ಎನೋ..ಕೊನೆಗೆ ಅದೂ ಒಂದು ಜಿಜ್ಞಾಸೆ..!!!