Monday, October 23, 2017

ಭ್ರಾಮರೀ ಪ್ರಾಣಾಯಾಮ


ಬಸ್ಸು ಇನ್ನೇನು ಕೊನೆಯ ನಿಲ್ದಾಣವನ್ನು ತಲುಪುತ್ತಿದ್ದಂತೆ ಪ್ರಯಾಣಿಕರೆಲ್ಲರೂ ಇಳಿಯಲು ಉದ್ಯುಕ್ತರಾದರು. ಅದುವರೆಗೂ ಯಾವುದೋ ಯೋಚನಾಲಹರಿಯಲ್ಲಿ ವಿಹರಿಸುತ್ತಿದ್ದ ನಾನು ದಿಗ್ಗನೆ ಎದ್ದು ನಿಂತೆ. ಅದಾಗಲೇ ಬಸ್ಸು ನಿಂತು ಒಬ್ಬೊಬ್ಬರಾಗಿ ಇಳಿದು ಹೋಗುತ್ತಿದ್ದರು. ನಾನು ಮುಂದಡಿಯಿಡುತ್ತಿದ್ದಂತೆ ನನ್ನ ಹೆಗಲು ಒತ್ತಿದ ಅನುಭವಾಯಿತು. ಅರೇ..ಬಸ್ ಗಳಲ್ಲಿ ಜೇಬು ಕಳ್ಳರ ಕರಾಮತ್ತಿನ ಕಥೆಯನ್ನು ಕೇಳಿ ತಿಳಿದ ನಾನು ನನ್ನ ಜೇಬನ್ನು ಕೈಯಲ್ಲಿ ಭದ್ರವಾಗಿ ಹಿಡಿದು ಬಸ್ ಬಾಗಿಲ ಬಳಿಗೆ ಬಂದೆ. ಆಗಲೂ ಕೈಯೊಂದು ಹೆಗಲ ಮೇಲೆ  ಮೃದುವಾಗಿ ಒತ್ತಿದ ಅನುಭವ. ಯಾರು ಎಂದು ನೋಡುವಷ್ಟು ವೇಳೆಯಿಲ್ಲ. ಬಸ್ ಇಳಿದು ಹಿಂದೆ ತಿರುಗಿ ನೋಡಿದರೆ ಮಧ್ಯವಯಸ್ಕ ವ್ಯಕ್ತಿ ದೈನ್ಯದಿಂದ ನೋಡಿ ಸ್ವಲ್ಪ ಇರಿ ಸರ್ ಅಂದ.
ಮಧ್ಯ ವಯಸ್ಕ ವ್ಯಕ್ತಿ. ಸಂಭಾವಿತನಂತೆ ಕಾಣುತ್ತಿದ್ದ. ಲಕ್ಷಣವಾಗಿದ್ದ. ಆತ ಮುಂದುವರೆಸಿ ಹೇಳಿದ” …ಸರ್ ತಲೆಗೆ ಚಕ್ಕರ್ ಬಂತು” . ಎನ್ನುತ್ತಾ ಮತ್ತು ಹೆಗಲ ಮೇಲೆ ಇನ್ನೂಭಾರವಾಗಿ ಕೈಯೂರಿದ.   ನಾನು ನಿಧಾನವಾಗಿ ಕೈ ಹೆಗಲಿಂದ ತೆಗೆದು ಆತನ ತೋಳು ಆಧರಿಸಿ ಅಲ್ಲೇ ದೂರದಲ್ಲಿದ್ದ ಕಟ್ಟೆಯೊಂದರಲ್ಲಿ ಕೂರಿಸಿದೆ. ಆತ ಹೇಳಿದ್ದಿಷ್ಟು.




ಇಂದು ಬೆಳಗ್ಗೆ ಬೇಗನೆ ಮನೆ ಬಿಟ್ಟಿದ್ದ. ಗಡಿಬಿಡಿಯಲ್ಲಿ ರಕ್ತದ ಒತ್ತಡದ ಮಾತ್ರೆ ತೆಗೆದುಕೊಳ್ಳುವುದನ್ನು ಬಿಟ್ಟು ಬಿಟ್ಟಿದ. ಇದೀಗ ರಕ್ತದ ಒತ್ತಡ ಅಧಿಕವಾಗಿ ತಲೆ ತಿರುಗಿ ತಡಬಡಿಸುತ್ತಿದ್ದಾನೆ. ನನ್ನ ಬ್ಯಾಗ್ ನಲ್ಲಿಂದ ನೀರು ತೆಗೆದುಕೊಟ್ಟೆ ಒಂದಷ್ಟು ಗುಟುಕು ಕುಡಿದ.
ಆತ ಹೇಳಿದಸರ್ ಬಿ ಪಿ ಮಾತ್ರೆ ತಂದುಕೊಡ್ತೀರಾ? ಒಂದು ಸಹಾಯ ಮಾಡಿ.ಮತ್ರೆಯ ಹೆಸರು ಹೇಳಿದ. ಅಲ್ಲೆ ದೂರದಲ್ಲಿದ್ದ ಔಷಧಿ ಅಂಗಡಿಯಿಂದ ಮಾತ್ರೆ ತಂದುಕೊಟ್ಟು ತೆಗೆದುಕೊಳ್ಳುವಂತೆ ಹೇಳಿದೆ. ಸ್ವಲ್ಪ ಹೊತ್ತು ಅಲ್ಲೆ ಇದ್ದು ಅತನಿಗೆ ಭ್ರಾಮರೀ ಪ್ರಾಣಾಯಮ ಒಂದೆರಡು ಸಲ ಮಾಡಿಸಿದೆ. ಆತ ತುಸು ಹಗುರವಾದಂತೆ ಕಂಡ.

ತುಸು ಆರಾಮದಂತೆ ಕಂಡನಂತರಮನೆಗೆ ಕರೆ ಮಾಡಿ   ಹೇಳಬೇಕೆ ?”  ಎಂದು ಕೇಳಿದೆ.  “. ಅದೇನು ಬೇಡ. ಮನೆಯಲ್ಲಿ ಪತ್ನಿಯೊಬ್ಬಳೇ ಆಕೆ ಗಾಬರಿಯಾಗಬಹುದು. ಇದೀಗ ಸರಿಯಾಗ್ತದೆ. ನೀವು ನಿಮ್ಮ ಕೆಲಸಕ್ಕೆ ಹೋಗಬಹುದು. ತುಂಬಾ ಥಾಂಕ್ಸ್ ಅಂತ ಹೇಳಿದ

ಮನುಷ್ಯನ ಆರೋಗ್ಯದ ಬಗ್ಗೆ ಒಂದಷ್ಟು ಯೋಚನೆಗಳು ಬಂದುವು. ಯಮರಾಜ ಬಿಟ್ಟು ಹೋದ ವ್ಯಕ್ತಿಯನ್ನು ಕಂಡ ಅನುಭವವಾಯಿತು. ರಕ್ತದೊತ್ತಡ….ಇದು ಕಾಯಿಲೇಯೆ ಅಲ್ಲದ ಒಂದು ಕಾಯಿಲೆ. ನಿರ್ಲಕ್ಷ ಮಾಡಿದರೆ ಇದಕ್ಕಿಂತ ಅಪಾಯಕಾರಿ ಬೇರೆ ಇಲ್ಲ. ಸಾಮಾನ್ಯವಾಗಿ ಬೇಗನೇ ಸಿಟ್ಟಾಗುವವರಿಗೆಅವನಿಗೆ ಬಿ. ಪಿ ಉಂಟು ಮಾರಾಯ್ರೆ. ಲಾಗ ಹಾಕ್ತಾನೆ.” ಅಂತ ಹೇಳುತ್ತೇವೆ. ರಕ್ತದೊತ್ತಡ. ನಿವಾರಿಸಿಕೊಳ್ಳುವ ಸಮಸ್ಯೆಯಲ್ಲ. ಯಾವುದೇ ಔಷಧಿಯಾದರೂ ಕೇವಲ ನಿಯಂತ್ರಣವೇ ಹೊರತು ನಿವಾರಣೆಯಲ್ಲ. ರಕ್ತದೊತ್ತಡ ಅಥವಾ ಯಾವುದೇ ಬಗೆಯ ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಸಾಧ್ಯವಿದ್ದರೆ ಅದು ನಮ್ಮ ಜೀವನ ಶೈಲಿಯಿಂದ ಮಾತ್ರ. ಆ ಜೀವನ ಶೈಲಿ ರೂಢಿಯಾಗುವುದಿದ್ದರೆ ಅದು ನಿರಂತರ ಯೋಗಾಭ್ಯಾಸದಿಂದ ಮಾತ್ರ ಸಾಧ್ಯ.

ಭ್ರಾಮರೀ ಪ್ರಾಣಾಯಾಮ. ಇದು ಭ್ರಮರದಂತೆ ಸದ್ದು ಮಾಡುತ್ತಾ ದೇಹದಲ್ಲಿ ಕಂಪನವನ್ನು ಸೃಷ್ಟಿಸುವ ಒಂದು ಬಗೆಯ ಪ್ರಾಣಾಯಾಮ.ನೇರವಾಗಿ ಕುಳಿತು  ಮೂರು ನಾಲ್ಕು ಸಲ ದೀರ್ಘವಾದ ಉಸಿರನ್ನು ಎಳೆದು ಮನಸ್ಸನ್ನು ದೇಹವನ್ನು ಸಮತೋಲನಕ್ಕೆ ತಂದು ಕೊಳ್ಳಬೇಕು. ದೀರ್ಘ ಶ್ವಾಸದಿಂದ ಹೃದಯದ ಬಡಿತವೂ ಸ್ಥಿಮಿತಗೊಳ್ಳುತ್ತದೆ. ನಂತರ ಎರಡು ಕೈಯ ಹೆಬ್ಬೆರಳಿನಿಂದ ಕಿವಿಯನ್ನು ಬಿಗಿಯಾಗಿ ಮುಚ್ಚಿ ಮಧ್ಯದ ಬೆರಳಿನಿಂದ ಕಣ್ಣುಗಳನ್ನು ಮುಚ್ಚಬೇಕು ತೋರು ಬೆರಳು ಹುಬ್ಬುಗಳ ಬಳಿಯಿದ್ದರೆ ಉಳಿದ ಬೆರಳು ಮೂಗಿನ ಅಕ್ಕ ಪಕ್ಕ ಮೃದುವಾಗಿ ಒತ್ತುತ್ತಿರಬೇಕು. ಮುಚ್ಚಿದ ಕಣ್ಣಿನ ದೃಷ್ಟಿಯನ್ನು ಹುಬ್ಬುಗಳೆರಡರ ನಡುವೆ ಕೇಂದ್ರಿಕರಿಸಬೇಕು. ಈಗ ದೀರ್ಘ ಶ್ವಾಸ ಎಳೆದು ಉಸಿರನ್ನು ಬಿಡುವಾಗ ಬಹಳ ಮೃದುವಾಗಿ  ಓಂ ಕಾರದ ಸದ್ದನ್ನು ನಾಸಿಕದಲ್ಲಿ  ಮಾಡುತ್ತಿರಬೇಕು. ಕಪಾಲದಲ್ಲಿ ಒತ್ತಡದಿಂದ ಹೆಚ್ಚಾದ ರಕ್ತ ಚಲನೆಯು ಸಮತೋಲನಕ್ಕೆ ಬರುತ್ತದೆ. ಒತ್ತಡವನ್ನು ನಿಯಂತ್ರಿಸುವುದಕ್ಕೆ ಸರಳವಾದ ಮತ್ತು ಅಷ್ಟೇ ಪರಿಣಾಮಕಾರಿ ಪ್ರಾಣಾಯಾಮವಿದು. ಇದನ್ನು ಎಲ್ಲಿ ಬೇಕಾದರೂ ಮಾಡಬಹುದು. ಕಛೇರಿಯಲ್ಲಿ ಕುಳಿತಿರುವಾಗ , ಪ್ರಯಾಣಿಸುವಾಗ ಹೇಗೆ ಬೇಕಾದಲ್ಲಿ ಮಾಡಿಕೊಳ್ಳಬೇಕು . ಭ್ರಮರದಂತೆ ಸದ್ದು ಮಾಡಿ ಕಂಪನದೊಂದಿಗೆ ಮಾಡುವುದರಿಂದಲೇ ಇದನ್ನು ಭ್ರಾಮರೀ ಪ್ರಾಣಾಯಾಮ ಎನ್ನುತ್ತಾರೆ.

ತೀವ್ರವಾದ ಶರೀರದ ಚಟುವಟಿಕೆ ಇದ್ದಾಗ, ವ್ಯಾಯಾಮ ಮಾಡಿ ಕೊನೆಯಲ್ಲಿ ಈ ಪ್ರಾಣಾಯಾಮ ಆಚರಿಸಿದರೆ ರಕ್ತದ ಪರಿಚಲನೆ ಸ್ಥಿರವಾಗುತ್ತದೆ. ಮನಸ್ಸು ಅರಳುತ್ತದೆ. ದೇಹದಲ್ಲಿ ಹೊಸ ಹುರುಪು ಚಿಗುರುತ್ತದೆ. ದೇಹಾದ್ಯಂತ ಹೊಸ ಚೈತನ್ಯ ಸ್ಪುರಿಸುತ್ತದೆ. ಮನಸ್ಸು ಎಷ್ಟೇ ಒತ್ತಡದಲ್ಲಿರಲ್ಲಿ ಕ್ಷಣ ಮಾತ್ರದಲ್ಲಿ ಶಾಂತವಾಗುತ್ತದೆ. ನಮ್ಮ ಯೋಚನೆಗಳ ಜಿಗುಟುತನ ಕಡಿಮೆಯಾಗುತ್ತದೆ. ಮಾನಸಿಕ ಒತ್ತಡ ಅತಿಯಾದಾಗ ಇದನ್ನು ಮಾಡುವುದರಿಂದ ಎಲ್ಲಾ ಒತ್ತಡವನ್ನು ನಿವಾರಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಪ್ರತಿ ನಿತ್ಯ ಯೋಗಾಭ್ಯಾಸದಲ್ಲಿ ಇದನ್ನು ಈ ಭ್ರಾಮರೀ ಪ್ರಾಣಾಯಾಮ ಮಾಡುವುದರಿಂದ ರಕ್ತ ಪರಿಚಲನೆಯಲ್ಲಾಗುವ ಏರು ಪೇರನ್ನು ಸುಸ್ಥಿಗೆ ತರುವುದು ಸಾಧ್ಯವಾಗುತ್ತದೆ. ಮನಸ್ಸುಜಡತ್ವದಿಂದ ಹೊರಬಂದು ಹೊಸ ಉತ್ಸಾಹದಲ್ಲಿ ಪುಟಿದೇಳುತ್ತದೆ.

ಇಂದು ಖಾಯಿಲೆ ವ್ಯಾಧಿ ತಿಳಿಯುವ ಮೊದಲೇ ಔಷಧಿ ಸೇವಿಸುವ ಚಟ. ಶೇಕಡ ತೊಂಬತ್ತೈದು ಮಂದಿಯೂ ಔಷಧವಿಲ್ಲದೇ ದಿನ ಕಳೆಯಲಾರರು. ಬರುವ ರೋಗವನ್ನು ತಡೆದು ಇರುವ ರೋಗವನ್ನು ಇನ್ನಿಲ್ಲದಂತೆ ದೂರಮಾಡುವ ಯೋಗಾಭ್ಯಾಸ ಬಹಳ ಸರಳವಾದ ವಿಧಾನಗಳಿಂದ ಕೂಡಿದೆ. ಅದರಲ್ಲಿ ಒಂದು ಈ ಭ್ರಾಮರೀ ಪ್ರಾಣಾಯಾಮ.ಕೆಲವು ಘಳಿಗೆಗಳಲ್ಲಿ ನಮ್ಮ ದೇಹದಲ್ಲಿ ಆಗುವ ಪರಿಣಾಮಕ್ಕೆ ನಾವೇ ಸಾಕ್ಷಿಯಾಗುವುದು ಅದ್ಭುತ ಅನುಭವವನ್ನು ಕೊಡುತ್ತದೆ. ಯೋಗಾಭ್ಯಾಸವೆಂದು ಕಠಿಣವಲ್ಲ. ಅದು ಸರಳ ಜೀವನ ವಿಧಾನ. ಹಲವರು ಸಮಯವಿಲ್ಲ ಎಂದಷ್ಟೇ ಕಾರಣವಿಟ್ಟು ಯೋಗಾಭ್ಯಾಸದಿಂದ ದೂರವಿರುತ್ತಾರೆ. ಆದರೆ ಯೋಗಾಭ್ಯಾಸಕ್ಕೆ ತೊಡಗುವಲ್ಲಿ ಸಮಯಕ್ಕಿಂತಲೂ ಬೇಕಾಗಿರುವುದು ಶ್ರದ್ಧೆ ಸಮರ್ಪಣಾ ಭಾವ. ಶ್ರದ್ಧೆಯೊಂದಿದ್ದರೆ ಎಂತಹಾ ಎಡೆಬಿಡದ ಕೆಲಸಗಳ ನಡುವೆಯೂ ಯೋಗಾಭ್ಯಾಸಕ್ಕೆ ಸಮಯ ಹೊಂದಿಸುವಂತೆ ಮನಸ್ಸು ಪ್ರೇರೇಪಣೆಯನ್ನು ಕೊಡುತ್ತದೆ.ಮನಸ್ಸಿನಲ್ಲಿ ಯೋಗ ಜೀವನದ ಬಗೆಗಿನ ತುಡಿತವನ್ನು ಸದಾ ಜಾಗೃತವಾಗಿಸುತ್ತದೆ.

          

Saturday, October 21, 2017

ಬೆನ್ನ ಹಿಂದಿನ ಪಟಾಕಿ



              ನಮ್ಮ ಬಾಲ್ಯದ ದಿನಗಳವು. ಎಪ್ಪತ್ತು ಎಂಭತ್ತರ ದಶಕದ ಒಳಗಿನ ದಿನಗಳು.  ಪೈವಳಿಕೆಯ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ದಿನಗಳು. ಹಲವಾರು ಬಾಡಿಗೆ ಮನೆಗಳು ವಿವಿಧ ವರ್ಗದ ವಿವಿಧ ಭಾಷೆಯ ಜನಗಳು ಒಟ್ಟಾಗಿ ಬದುಕುತ್ತಿದ್ದ ಪರಿಸರವದು. ಹಿಂದು ಮುಸ್ಲಿಂ ಕ್ರಿಶ್ಚನ್ ಹೀಗೆ ಯಾವುದೇ ಜಾತಿಗೂ ಸೀಮಿತವಾಗಿ ಉಳಿಯದ ಜನಗಳು ಅಲ್ಲಿದ್ದ ಎರಡು ಮೂರು ಕಟ್ಟಡಗಳಲ್ಲಿ ಒಂದಾಗಿ ವಾಸಿಸುತ್ತಿದ್ದರು. ಅದರಲ್ಲಿ ಸರಕಾರಿ ನೌಕರಿಂದ ತೊಡಗಿ ಕೃಷಿಕಾರ್ಮಿಕರು, ದಿನಗೂಲಿಗಳು ವ್ಯಾಪಾರಿಗಳು ಹೀಗೆ ವಿವಿಧ ವೃತ್ತಿಯ ಜನಗಳ ಸಾಮರಸ್ಯದ ವಾತಾವರಣ. ಆಗ ಹಲವು ಹಬ್ಬಗಳು ಬರುತ್ತಿದ್ದರು. ಎಲ್ಲ ಹಬ್ಬಗಳು ಬಂದಾಗಲೂ ನಮಗೆ ಶಾಲೆಗೆ ರಜವಿದ್ದುದರಿಂದ ಅದೊಂದು ಬಗೆಯಲ್ಲಿ ಮಜವಾಗಿಯೇ ಕಳೆಯುತ್ತಿದ್ದವು. ಯಾಕೆಂದರೆ ಅಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಮಕ್ಕಳೂ ಇರುತ್ತಿದ್ದರು. ಆಟವಾಡುವಾಗ ಎಲ್ಲಿಯ ಜಾತಿ? ಎಲ್ಲಿಯ ಪಂಗಡ? ಸಾಮಾನ್ಯ ಎಲ್ಲರೂ ಬಡವರ್ಗದ ಮಕ್ಕಳೇ ಆಗಿದ್ದರು. ಅಲ್ಲಿ ನೀರಿಗಾಗಿ ಸರಕಾರಿ ಬಾವಿ, ಸ್ನಾನಕ್ಕೆ ಸಾಮೂಹಿಕ ಕೆರೆ.  ಆಟವಾಡಲೂ ಸಾಮೂಹಿಕ ಮನೆಯ ಜಗಲಿ ಮನೆಯಂಗಳ. ಎಲ್ಲವೂ ಸಾಮೂಹಿಕವಾಗಿ ಮನೆಯೊಳಗೆ ಮಾತ್ರ ಖಾಸಗೀತನವಿರುತ್ತಿತ್ತು. ಅಲ್ಲಿಯೂ ಕೆಲವೊಮ್ಮೆ ಖಾಸಗೀತನ ಕಡಿಮೆಯಾಗುತ್ತಿದ್ದುದು ಸುಳ್ಳಲ್ಲ. 
ಹಬ್ಬಗಳು ಬಂದಾಗ ಅದರಲ್ಲೂ ದೀಪಾವಳಿ ಹಬ್ಬದ ಬಗ್ಗೆ ವಿಶೇಷವಾಗಿ ಹೇಳಲೇಬೇಕು. ಹಿಂದುಗಳ ವಿಶೇಷ ಹಬ್ಬ. ಅದರಲ್ಲು ತುಳುವರ ಭಾಷೆಯಲ್ಲಿ ಹೇಳುವುದಾದರೆ ’ಪರ್ಬ". ಬೇರೆ ಯಾವುದೇ ಹಬ್ಬಗಳಿದ್ದರೂ ದೀಪಾವಳಿಯನ್ನು ಮಾತ್ರವೇ ಪರ್ಬ ಅಂತ ಕರೆಯುವುದು.  ಎಷ್ಟೆ ಬಡತನವಿದ್ದರೂ ಒಂದಷ್ಟು ಸಿಹಿ ಅಡುಗೆ ಹೊಟ್ಟೆ ತುಂಬ ಊಟ  ದೇವರಿಗೆ ವಿಶೇಷ ಪೂಜೆ ಯಲ್ಲದೇ ಇದ್ದರೂ ವಿಶೇಷ ಭಜನೆ ಇದೆಲ್ಲದರ ನಡುವೆ ನಮಗೆ ವಿಶೇಷವಾಗಿ ಇದ್ದದ್ದು ಸಿಡಿ ಮದ್ದು ಪಟಾಕಿ ಸಿಡಿತ. ಹಾಗೋ ಹೀಗೋ ಹೊಂದಿಸುತ್ತಿದ್ದ ಎರಡು ಮೂರು ರೂಪಾಯಿಗೆ ಸಿಗುವ ಪಟಾಕಿ ತಂದು ಅದನ್ನು ಇನ್ನೆಲ್ಲಿ ಮುಗಿದು ಹೋಗುತ್ತದೋ ಅಂತ ಒಂದೊಂದನ್ನೆ ತಡರಾತ್ರಿವರೆಗೂ ಉರಿಸಿ ಮರುದಿನಕ್ಕೂ ಒಂದಿಷ್ಟು ಉಳಿಸುತ್ತಿದ್ದೆವು. ಒಂದು ಮನೆಗೆ ಪಟಾಕಿ ತಂದರೆ ಎಲ್ಲ ಮನೆಯ ಮಕ್ಕಳೂ ಬಂದು ಸೇರುತ್ತಿದ್ದುದು ಸಾಮಾನ್ಯ. ಮಾತ್ರವಲ್ಲ ಮಧ್ಯಾಹ್ನ ಪಟಾಕಿ ತಂದರೆ ರಾತ್ರಿಯಾಗುವ ಮೊದಲೇ ಪಟಾಕಿ ಉರಿಸುವಂತೆ ಒತ್ತಾಯ ಬೇರೆ. ಹಾಗೋ ಹೀಗೋ ರಾತ್ರಿಯಾಯಿತೋ ಒಂದು ಪಟಾಕಿ ಉರಿಸಲು ಹತ್ತು ಮಕ್ಕಳು ಸೇರುತ್ತಿದ್ದೆವು. ಅದರಲ್ಲಿ ಜಾತಿ ಭೇದವಿಲ್ಲ. 
ಮನೆಯ ಸಮೀಪ ಹಲವಾರು ಅಂಗಡಿಗಳಿದ್ದುವು. ಅಲ್ಲೂ ಅಷ್ಟೇ ಹಿಂದುಗದ್ದು ಮುಸ್ಲಿಂ ಹೀಗೆ ಹಲವು ಜನಗಳ ಅಂಗಡಿಗಳು ಹೋಟೇಲುಗಳು ಗೂಡಂಗಡಿಗಳು ಇದ್ದವು. ದೀಪಾವಳಿ ಬಂದಾಗ ಅಂಗಡಿ ಪೂಜೆಯ ಗಲಾಟೆ. ಕೆಲವು ಅಂಗಡಿಗಳಲ್ಲಿ ಮಾರಾಟಕ್ಕೆ ಅಂತ ಪಟಾಕಿ ತಂದಿರಿಸುತ್ತಿದ್ದರು. ಅಂಗಡಿ ಪೂಜೆಗೂ ಅದನ್ನೇ ಉರಿಸುತ್ತಿದ್ದರು. ಅಂಗಡಿಯಾತ  ಉಳಿದ ಪಟಾಕಿ ಎಲ್ಲ ಉರಿಸುವುದು ಎಂದು ಹೇಳಿದರೂ ಹಾಗೆ ಮಾಡುತ್ತಿರಲಿಲ್ಲ. ನಾವು ಕೊನೆಯದಿನ ಉಳಿದ ಎಲ್ಲ ಪಟಾಕಿ ಹೊಡೆಯುವ ಆಶೆ ನಿರೀಕ್ಷೆಯಲ್ಲೇ ಕಳೆಯುತ್ತಿದ್ದೆವು.   ಎಷ್ಟೇ ತಡ ಅಂತ ಹೇಳಿದರು ರಾತ್ರಿ ಎಂಟು ಗಂಟೆಗೆ ಅಂಗಡಿ ಬಜಾರ್ ಎಲ್ಲ ಬಾಗಿಲು ಹಾಕುತ್ತಿದ್ದವು. ಅಂಗಡಿ ಪೂಜೆ ಇದ್ದರೂ ಅಷ್ಟೇ. 

ಪಟಾಕಿ ಉರಿಸುವುದರಲ್ಲೂ ಅಷ್ಟೇ  ಆಗ ದೀಪಾವಳಿಗಷ್ಟೇ ಪಟಾಕಿ ಹೊಡೆಯುತ್ತಿದ್ದುದು.  ಉಳಿದಂತೆ ಕ್ರಿಶ್ಚನ್ ಕುಟುಂಬಗಳು ದೂರದ ಚರ್ಚ್ ನಲ್ಲಿ ಹೊಸ ವರ್ಷಾಚರೆಣೆಗೋ ಸಾಂತ್ ಮಾರಿಗೋ ಗೊತ್ತಿಲ್ಲ ಒಂದಷ್ಟು ಪಟಾಕಿ ಹೊಡೆಯುತ್ತಿದ್ದುದನ್ನು ಹೇಳಿದ್ದು ಕೇಳಿದ್ದೆ. ದೀಪಾವಳಿಗೆ ಪಟಾಕಿ ಹಿಂದುಗಳು ಹೊಡೆಯುತ್ತಿದ್ದಾಗ ವಠಾರದಲ್ಲಿದ್ದ ಮುಸ್ಲಿಂ ಮಕ್ಕಳು ದುಂಬಾಲು ಬಿದ್ದು ಪಟಾಕಿಯನ್ನು ಕೇಳಿ ಪಡೆದು ಇಲ್ಲವೇ ಅಂಗಡಿಯಿಂದ ತಂದು ಉರಿಸಿತ್ತಿದ್ದರು. ಅಲ್ಲಿ ಹಬ್ಬದ ಆಚರಣೆಗಿಂತಲೂ ಪಟಾಕಿ ಉರಿಸಿ ಆನಂದಿಸುವುದೇ ಮುಖ್ಯವಾಗಿರುತ್ತಿತ್ತು. ಅಂಗಡಿ ಪೂಜೆಯಾದಾಗಲೂ ಅಂಗಡಿಯಾತ ಒಂದಷ್ಟು ಓಲೆ ಪಟಾಕಿ , ಬೀಡಿ ಪಟಾಕಿ ದುರುಸು ಬಾಣಗಳನ್ನು ಮಕ್ಕಳ ಕೈಗೆ ಕೊಡುತ್ತಿದ್ದ. ಇಲ್ಲು ಅಷ್ಟೆ ಎಲ್ಲಾ ಜಾತಿಯ ಮಕ್ಕಳು ಸೇರುತ್ತಿದ್ದರು. ನಮಗಾದರೋ ಮನೆಯಲ್ಲಿ ಒಂದಷ್ಟು ಪಟಾಕಿ ದೀಪಾವಳಿ ಲೆಕ್ಕದಲ್ಲಿ ಉರಿಸುತ್ತಿದ್ದುದರಿಂದ ಅಂಗಡಿಯವರ ಪಟಾಕಿಗೆ ಕೈಯೊಡ್ಡುವ ಪ್ರಶ್ನೆ ಇರುತ್ತಿರಲಿಲ್ಲ. ಅದರೆ ಎಲ್ಲಾ ಮಕ್ಕಳಿಗೆ ಹಾಗಲ್ಲವಲ್ಲ? ದೀಪಾವಳಿ ಆಚರಣೆ ಕೇವಲ ಹಿಂದುಗಳ ಆಚರಣೆಯಾದುದರಿಂದಲೋ ಏನೋ ಬೇರೆ ಮಕ್ಕಳೂ ಆಶೆ ಕಣ್ಣುಗಳಿಂದ ನೋಡುತ್ತಿದ್ದರು. ಜತೆಯಲ್ಲೇ ಸೇರುತ್ತಿದ್ದವು.   ಕೆಲವು ಮಕ್ಕಳು    ಹತ್ತು ಪಟಾಕಿ ಕೊಟ್ಟರೆ ಎರಡು ಮೂರು ಪಟಾಕಿ ಹೊಡೆದು ಮಿಕ್ಕುಳಿದುದನ್ನು ಕಿಸೆಯೊಳಗೆ ಇರಿಸುತ್ತಿದ್ದರು. ಎಲ್ಲವೂ ಮಕ್ಕಳಾಟ.  ನಂತರ ಅಂಗಡಿಯಾತ ಪೂಜೆ ಎಲ್ಲ ಮುಗಿಸಿ ಅಂಗಡಿ ಮುಂಗಟ್ಟು ಎಲ್ಲ ಮುಚ್ಚಿ ಹೊದನಂತರ ತಡರಾತ್ರಿವರೆಗೂ ಮುಚ್ಚಿಟ್ಟು  ತಂದ ಪಟಾಕಿಯನ್ನು ಟಪ್ ಟಪ್   ಉರಿಸುತ್ತಿದ್ದರು.  ಇದನ್ನು ನಾವು ಎಷ್ಟೊ ಸಲ ಮಾಡಿದ್ದಿದೆ. 
ಆನಂತರ ಕಾಲ ಬದಲಾಯಿತು. ಹಿಂದುಗಳ ಅದೂ ದೀಪಾವಳಿಗಷ್ಟೇ ಸೀಮಿತವಾಗಿದ್ದ ಪಟಾಕಿ ನಂತರ ರಂಜಾನ್ ಬಕ್ರೀದ್ ಹಬ್ಬಗಳಂದೂ ಸದ್ದು ಮಾಡತೊಡಗಿದವು. ಪಟಾಕಿ ಸದ್ದಿನೊಂದಿಗೆ ಮಕ್ಕಳ ಕೇಕೆ ಸದ್ದು ಕೇಳಿಸತೊಡಗಿದವು. ಆನಂತರ  ದೀಪಾವಳಿ ಬಿಟ್ಟು ಎಲ್ಲ ಸಂದರ್ಭದಲ್ಲೂ ಪಟಾಕಿ ಉರಿಸುವುದನ್ನು ಕಂಡಿದ್ದೇವೆ. ಕ್ರಿಸ್ ಮಸ್ ಹೊಸ ವರ್ಷಾಚರಣೆಯಲ್ಲೂ ಪಟಾಕಿ ಸದ್ದು ಮಾಡುತ್ತದೆ.  ಹೆಚ್ಚೇಕೆ ದೂರದ ಶಾರ್ಜಾದಲ್ಲೋ ಇನ್ನೆಲ್ಲೋ ಭಾರತ ಪಾಕಿಸ್ತಾನ ಕ್ರಿಕೇಟ್ ಪಂದ್ಯವಾಗುತ್ತಿದ್ದರೆ,  ಭಾರತದ ಬ್ಯಾಟ್ಸ್ ಮನ್ ಗಳು  ಔಟಾಗುತ್ತಿದ್ದರೆ ಇಲ್ಲಿ ನಮ್ಮೂರಲ್ಲಿ ಪಟಾಕಿ ಉರಿಸಿ ಸಂಭ್ರಮಿಸುವುದನ್ನು ಕಣ್ಣಾರೆ ಕಂಡಿದ್ದೇವೆ.  ವಿಚಿತ್ರವೆಂದರೆ   ಪಟಾಕಿಯಲ್ಲೂ ಹಲವು ದುರಂತಗಳು ಅವಘಡ ಗಳು ಆಗಿರುವುದನ್ನು ಕಂಡಿದ್ದೇವೆ. ಕೇಳಿದ್ದೇವೆ. ಎಲ್ಲಕ್ಕಿಂತಲೂ ದೊಡ್ಡ ದುರಂತ ಎಂದರೆ ಈಗ...ಪಟಾಕಿ ಉರಿಸುವುದನ್ನು ಕೇವಲ ಹಿಂದುಗಳಿಗೆ ಸೀಮಿತವಾಗಿರಿಸಿ ಹಿಂದುಗಳನ್ನಷ್ಟೇ ಗುರಿಯಾಗಿಸುವುದು. ಇದಕ್ಕಿಂತ ದೊಡ್ಡ ವಿಪರ್ಯಾಸದ ದುರಂತ ಬೇರೆ ಇಲ್ಲ.  ಹಿಂದುಗಳ ಹಬ್ಬದಲ್ಲಿ ಆಚರಣೆಯಾಗುತ್ತಿದ್ದ ಪಟಾಕಿ ಸಿಡಿತ ರಂಜಾನ್ ನಲ್ಲೂ ಅನುಕರಣೆಯಾಗುತ್ತಿತ್ತು. ಕ್ರಿಸ್ಮಸ್ ನಲ್ಲೂ ಅನುಕರಣೆಯಾಗುತ್ತಿತ್ತು. ಇದನ್ನು ಅನುಕರಣೆ ಎಂದು ಹೇಳುವ ಹಾಗಿಲ್ಲ. ಅದು ಕೇವಲ ಒಂದು ಸಂಭ್ರಮಾಚರಣೆ. ಇಂದು ನಿಷೇಧಿಸುವುದಾದರೆ ಅಥವಾ ವಿರೋಧಿಸುವುದಾದರೆ ಈ ಎಲ್ಲ ಸಂಭ್ರಮಾಚರಣೆಯನ್ನೂ ಅದರಲ್ಲೂ ಪಾಕಿಸ್ತಾನ ಗೆಲ್ಲುವಾಗ ಇಲ್ಲಿ ಪಟಾಕಿ ಉರಿಸುವ ಸಂಭ್ರಮಾಚರಣೆಯನ್ನೂ ವಿರೋಧಿಸಬೇಕು. 
ಇದು ಯಾವುದೇ ಜಾತಿ ಪಂಗಡವನ್ನು ಉದ್ದೇಶಿಸಿಯಲ್ಲ. ಕೇವಲ ಸಮಾಜದ ವಕ್ರತೆಯನ್ನು ತೋರಿಸುವುದಷ್ಟೇ ಉದ್ದೇಶ. ನಿಷೇಧಿಸುವುದಿದ್ದರೆ ಪಟಾಕಿ ಉರಿಸುವುದನ್ನೇ ನಿಷೇಧಿಸಬೇಕು. ಅದರಲ್ಲೂ ನಗರದಲ್ಲಿ ಅದು ದೀಪಾವಳಿಗೆ ಮಾತ್ರವಲ್ಲ ಹೆಣ ಹೊತ್ತೊಯ್ಯುವಾಗ ವಾಹನ ಸಂಚಾರಕ್ಕೆ ತೊಂದರೆಯಾಗುವಂತೆ ಮಾಡುವ ಪಟಾಕಿ ಉರಿಸುವುದನ್ನೂ ನಿಷೇಧಿಸಬೇಕು. ಹೊಸ ಸಿನಿಮಾ ಬಿಡುಗಡೆಯಾದಾಗ ಸಿನಿಮಾನಟ ಬಂದಾಗ, ಶತದಿನ ಆಚರಿಸುವಾಗಲೂ ಪಟಾಕಿ ನಿಷೇಧವಾಗಬೇಕು. ಎಲ್ಲಕ್ಕಿಂತ ಮೊದಲೂ ಜನ ನಾಯಕರು ಚುನಾವಣೆಯಲ್ಲಿ ಗೆದ್ದಾಗ  ಹೊಸ ಸರಕಾರ ರಚನೆಯಾದಾಗ, ಜನರಿಗೆ ವಂಚನೆ ಮಾಡಿ ಜೈಲಿಗೆ ಹೋಗಿ ಬೇಲ್ ಮೇಲೆ ಬಿಡುಗಡೆಯಾಗುವಾಗಲೂ  ಪಟಾಕಿ ಉರಿಸುವುದನ್ನು ಮೊದಲು ನಿಷೇಧಿಸಬೇಕು. ಇದಕ್ಕೆ ಜಾತಿ ಭೇದ ಸಲ್ಲದು. ಎಲ್ಲಕ್ಕಿಂತ ಮೊದಲಾಗಿ ಪಟಾಕಿ ಎಂದೊಡನೆ ಹಿಂದುಗಳನ್ನು ಗುರಿಯಾಗಿಸುವುದು ನಿಲ್ಲಬೇಕು. ಹೀಗೆ ಬೆನ್ನಿನ ಹಿಂದೆ ಪಟಾಕಿ ಉರಿಸಿ ಅಂದ ನೋಡುವ ಎಲ್ಲರಿಗೂ ಇದು ಅನ್ವಯವಾಗುತ್ತದೆ. 

Tuesday, October 17, 2017

ಹೊಟ್ಟೆ ಬಟ್ಟೆಯ ನಡುವೆ

ಮಂಗಳೂರು ಎಕ್ಸ್ ಪ್ರೆಸ್ ಹಾಗೋ ಹೀಗೋ ಕ್ರಾಸಿಂಗ್ ಎಂಬ ಬಾಧೆಗಳನ್ನು ಕಳೆದು ಬೆಂಗಳೂರಿನ  ಸಿಟೀ ರೈಲ್ವೇ ಸ್ಟೇಷನ್ ನ ಐದನೇ ಪ್ಲಾಟ್ ಫಾರಂಗೆ ಬಂದು ನಿಂತಿತು. ಕೊಂಕಣ ಸುತ್ತಿ ಮೈಲಾರಕ್ಕೆ ಎಂಬ ಹಾಗೆ,  ಕೊಂಕಣದಿಂದ ಘಟ್ಟ ಹತ್ತುವುದಾದರೂ ಸುತ್ತು ಹೊಡೆದು ಬರುವಲ್ಲಿ ರೈಲು ಬಹಳ ತಡವಾಗಿತ್ತು. ಭಟ್ಟರು ಬಸ್ ನಲ್ಲಿ ಬರುವವರಿದ್ದರೂ ಮಗಳು ರೈಲಿನಲ್ಲಿ ಒತ್ತಾಯದಿಂದ ಬರುವಂತೆ ಹೇಳಿದ್ದಳು. ವಯಸ್ಸಾಗಿದ್ದುದರಿಂದಲೂ ರೈಲು ಪ್ರಯಾಣವೇ ಸೂಕ್ತ ಎಂದುಕೊಂಡು ರೈಲು ಹತ್ತಿದ್ದರು. ಆದರೆ ತಡವಾಗಿ ಹೋದಾಗ ಸ್ವಲ್ಪ ಆತಂಕವಾಗಿದ್ದರೂ ಅದುವರೆಗಿನ್ ಸುಖವಾದ ಪ್ರಯಾಣ ನೆನಸಿ ಮನಸ್ಸು ಹಗುರಾಯಿತು. ರೈಲು ಪ್ಲಾಟ್ ಫಾರಂ ತುದಿಯಲ್ಲಿ ಹೊಕ್ಕುವ ಮೊದಲೇ  ಇಳಿಯುವವರು ಬ್ಯಾಗ್ ಮಕ್ಕಳೊಂದಿಗೆ ಬಾಗಿಲ ಬಳಿ ಗುಂಪುಗೂಡಿದ್ದರು. ರೈಲು ಹತ್ತಿದ ಒಡನೆ ತಮ್ಮ ಸೀಟನ್ನು ಹಿಡಿಯುವ ತವಕ. ಸೀಟು ಸಿಕ್ಕ ಒಡನೇ ಅದು ತಮ್ಮ ವಂಶಪರಂಪರೆಯ ಸೊತ್ತೋ ಎನ್ನುವ ಮೋಹ. ಇದೀಗ ಇಳಿದು ಹೋಗುವಾಗ ಕುಳಿತ ಆಸನ ತಿರುಗಿ ನೋಡದಷ್ಟು ನಿರ್ಲಿಪ್ತತೆ.
ಎಲ್ಲರೂ ಇಳಿದ ನಂತರ ಭಟ್ಟರು ತಾಳ್ಮೆಯಿಂದ ರೈಲು ಇಳಿದರು. ಕೈಯಲ್ಲಿ ಒಂದು ಕೈಚೀಲ ಹೆಗಲಲ್ಲಿ ಒಂದು ಬ್ಯಾಗ್. ಮಗಳ ಮನೆಗೆ ಹೋಗುವುದರಿಂದ ಹೆಚ್ಚೇನು ಬಟ್ಟೆಗಳ ಅವಶ್ಯವಿಲ್ಲದೇ ಬ್ಯಾಗ್  ಚಿಕ್ಕದೇ ಹಿಡಿದಿದ್ದರು. ಆದರೆ ಹೆಂಡತಿ ಕಟ್ಟಿಕೊಟ್ಟ ಪುಡಿ, ಮಿಡಿ ಉಪ್ಪಿನಕಾಯಿಗಳಿಂದ ಕೈಚೀಲ ತುಂಬಿ ಹೋಗಿತ್ತು. ಹಲಸಿನ ಹಣ್ಣಿನ ಸೊಳೆಯೂ ಇದೆ ಎಂದು ರಾತ್ರಿ ಘಮ್ಮೆನಿಸುವಾಗಲೇ ಅರಿವಾದದ್ದು ಹಾಗೆ ಹೀಗೆ ಎಂದರೂ ತುಸು ಭಾರ ಹೆಚ್ಚಿದಂತೆ ಅನಿಸಿತು..   ಆದರೂ ನಿಧಾನವಾಗಿ ಹಿಡಿದು ಹೊರಗೆ ಹೆಜ್ಜೆ ಹಾಕಿದಾಗ ಭೋಗಿಯಲ್ಲಿ ಜತೆಗೇ ಇದ್ದ ಯುವಕನೊಬ್ಬ ತನ್ನ ಕೈಚೀಲ ಹಿಡಿದುಕೊಂಡು ಸಹಾಯ ಹಸ್ತ ನೀಡಿದ. ಸಂತೋಷದಿಂದ ಆತನ ಹಿಂದೆ ಹೆಜ್ಜೆ ಹಾಕಿ ಹೊರ ಬಂದರು. ಮೊದಲು ಆತ ಕೂಲಿಯವನೋ ಎಂದು ಗಾಬರಿಯಾಯಿತು. ನಂತರ ಭೋಗಿಯಲ್ಲಿ ಪಕ್ಕದ ಸೀಟಲ್ಲಿ ಕಂಡ ಮುಖ. ಬೆಂಗಳೂರಿಗೆ ಹಲವು ಸಲ ಬಂದಿದ್ದರೂ ಈ ರೀತಿ ಅನುಭವ ಆಗಿರಲಿಲ್ಲ. ಎನೇ ಆದರೂ ಊರಿನ ಜನ ಊರಿನ ಜನವೇ ಎಂದುಕೊಂಡರು.
ಎಲ್ಲಿ ನಿಮ್ಮ ಊರು? ಅಂತ ಕೇಳಿದರು....” ಬಟ್ರೆ ಎನ್ನ ಪುತ್ತೂರು...” ಅಂತ ಸಾಕ್ಷಿ ಒದಗಿಸುವುದಕ್ಕೆ ಮತ್ತು ನಿಮ್ಮವನು ಎನ್ನುವುದಕ್ಕೆ ತುಳುವಿನಲ್ಲೇ  ರಾಗ ಎಳೆದ ಯುವಕ. ಮುಖನೋಡಿ ಬಟ್ರೆ ಅಂತ ಹೇಳಿದಾಗ ಮಂದ ಹಾಸ ಮೂಡಿತು. ಹಾಗೇ ಅದು ಇದು ಮಾತನಾಡುತ್ತಾ ನಿಲ್ದಾಣ ಪ್ರವೇಶ ದ್ವಾರಕ್ಕೆ ಬಂದು ನಿಂತರು. ಆತ ಬ್ಯಾಗ್ ಅಲ್ಲಿ ಇಟ್ಟು “ ಒಂತೆ ಅರ್ಜಂಟ್ ಉಂಡು ತೂಕ ...”  ಅಂತ ಹೇಳಿ ಹೋದ. ಭಟ್ಟರು ಒಂದು ಸಲ ಸುತ್ತಲೂ ನೋಡಿದರು. ಅಟೋ ಡ್ರೈವರ್ ಒಬ್ಬ ಹತ್ತಿರ ಬಂದು ಎಲ್ಲಿಗೆ ಸಾರ್? ಆಟೋಬೇಕಾ ?” ಅಂತ ದುಂಬಾಲು ಬಿದ್ದ. ಚಾಮರಾಜ ಪೇಟೆಆಶ್ರಮಅಂತ ಹೇಳಿದಾಗ ಬನ್ನಿ ಬನ್ನಿ ಅಂತ ಕರೆದು ಕೊಂಡು ಹೋಗಿ ದೂರದಲ್ಲಿ ಗುಂಪಿನಲ್ಲಿ ಇದ್ದ ಯಾವುದೋ ಆಟೋದಲ್ಲಿ ಕೂರಿಸಿದ. ಮಗಳು ಬರುತ್ತಿದ್ದಳೋ ಏನೋ? ಅಂದುಕೊಂಡರು ಬೆಳಗಿನ ಹೊತ್ತಿನ ಆಕೆಯ ಗಡಿಬಿಡಿ ನೆನಸಿ ನಾನೇ ಬರುತ್ತೇನೆ ಎಂದಿದ್ದರು.
ಆಟೋ ಸ್ಟಾರ್ಟ್ ಮಾಡಬೇಕಾದರೆ ಏಷ್ಟಾಗ್ತದೆ? ಅಂತ ಖಾತರಿ ಪಡಿಸುವುದಕ್ಕೆ ಕೇಳಿದರು. “ ನೂರೈವತ್ಟು ಕೋಡಿ ಸಾರ್ಭಟ್ಟರು ಚೌಕಾಶಿಗೆ ಇಳಿಯಲಿಲ್ಲ. ಆಟೋ ಸ್ಟಾರ್ಟ್ ಆದಕೂಡಲೇ ಬಾಹುಕನ ರಥದಂತೆ ಹಾರತೊಡಗಿತು. ಹೋಗುತ್ತಲೇ ಕೇಳಿದಯಾವೂರು ಸಾರ್ ತಮ್ಮದು. ಮಂಗಳೂರಾಅಂದ. ಭಟ್ಟರು ಹೂಂ ಗುಟ್ಟಿದರು.ಹತ್ತು ನಿಮಿಷದಲ್ಲಿ ಬುಲ್ ಟೆಂಪಲ್ ರಸ್ತೆಗೆ ಬಂದು ಮುಟ್ಟಿತು. ಆಶ್ರಮ ಮುಟ್ಟುತ್ತಿದ್ದಂತೆ ದಾರಿ ಹೇಳುತ್ತಾ ಹೋದರು. ಮುಂದೆ ಹೋಗಿ ಬಲಕ್ಕೆ ತಿರುಗಿ ಎಡಕ್ಕೆ ಹೀಗೆ ಹೇಳುತ್ತಾ ಮಗಳ ಮನೆಯ ಬಳಿಗೆ ಬಂದಾಯಿತು. ಬ್ಯಾಗ್ ಚೀಲ ತೆಗೆದು ಕೆಳಗಿರಿಸಿ ಕಿಸೆಯಿಂದ ನೂರೈವತ್ತು ತೆಗೆದು ಕೈಗೆ ಇರಿಸಿದಾಗ ಆತ ರಾಗ ಎಳೆದ….” ಸಾರ್ ನೂರೈವತ್ತು ಸಾಲಲ್ಲ. ಇನ್ನೊಂದು ಇಪ್ಪತ್ತು ಕೊಡಿ.”ಇಷ್ಟು ದೂರ ಬಂದೆ.” ಅಂತ ಗೊಣಗುವುದಕ್ಕೆ ಶುರು ಹಚ್ಚಿದ. ಬೆಳಗ್ಗೆ ಬೆಳಗ್ಗೆ ಚರ್ಚೆ ಯಾಗೆ ಅಂತ ಇಪ್ಪತ್ತು ಸೇರಿಸಿ ಕೊಟ್ಟು ಆಟೋದಿಂದ ಕೆಳಗಿಳಿದರು.
ಕೈ ಚೀಲ ಭಾರವಾಗಿತ್ತು. ಆಟೊ ಡ್ರೈವರ್ ಗೆ ಅದೇನೂ ಕಂಡಿತೋ, “ಎಲ್ಲಿ ಸಾರ್ ಮನೆ ಅಂತ ಕೇಳಿದ.” ಹತ್ತಿಪ್ಪತ್ತು ಹೆಜ್ಜೆ ದೂರ ಇದ್ದ ಮನೆ ತೋರಿಸಿದರು. “ಇಲ್ಲಿಕೊಡಿ ಸಾರ್”  ಅಂತ ಕೈ ಚೀಲ ಹೊತ್ತುಕೊಂಡು ಮನೆಯವರೆಗೂ ಹಿಂಬಾಲಿಸಿದ.  ಬಹುಶಃ ಕೇಳಿದ ದುಡ್ಡು ಕೊಟ್ಟಿದ್ದಕ್ಕೋ ಏನೋ?
ಮನೆ ಒಳಗೆ ಹೋದವರೆ ಬಟ್ಟರು ಚಾಲಕನನ್ನು ಒಳಗೆ ಕರೆದರು “ ಬಾರಪ್ಪ ...ಇಲ್ಲಿ ಇಡು “ ಆತ ಇನ್ನೇನು ಹೊರಡುವುದರಲ್ಲಿದ್ದಾಗ “ ಇರಪ್ಪ ಮೊದಲು ಮನೆಗೆ ಬಂದಿದ್ದಿಯಾ ಇರು.. ಎಂದು ಅಲ್ಲೇ ಇದ್ದ ಚೆಯರ್ ತಳ್ಳಿ ಕೂರಿಸಿದರು. ಚಾಲಕ ತಬ್ಬಿಬ್ಬಾದ. ಆದರೂ ಅದೇನೋ ಸುತ್ತ ಮುತ್ತ ನೋಡಿ ಕುಳಿತಾಗ ಭಟ್ಟರು ಒಳಗೆ ಹೋಗಿ ಅದೇನೋ ಹೇಳಿದರೋ ಮಗಳು ತಟ್ಟೆಯಲ್ಲಿ ಬಿಸಿ ದೋಸೆ..ಚಟ್ನಿ ಒಂದು ಲೋಟ ನೀರು ತಂದಿರಿಸಿದಳು. ಚಾಲಕ ಮತ್ತೂ ಅಚ್ಚರಿಯಿಂದ ನೋಡಿದ. ಭಟ್ಟರೆಂದರು “..ತಗೊಳ್ಳಪ್ಪಾ. ಮೊದಲ ಸಲ ಮನೆಗೆ ಬಂದಿದ್ದಿಯಾ ಹಾಗೇ ಹೋಗಬರಾದು. ತಗೋ” ಚಾಲಕನಿಗೆ ನಂಬಲಾಗಲಿಲ್ಲ. ಸಂಕೋಚದಿಂದಲೇ ಮೊದಲು ನೀರು ಖಾಲಿ ಮಾಡಿಬಿಟ್ಟ. ದೋಸೆ ತುಂಡು ಬಾಯಿಗಿಡುತ್ತಲೇ ಲೋಟತುಂಬ ಕಾಪಿಯೂ ಬಂತು. ನಿಜಕ್ಕು ತಲೆ ತಿರುಗುವ ಪರಿಸ್ಥಿತಿ ಆಟೋ ಚಾಲಕನದ್ದು. ಇದುವರೆಗೆ ಆತನ ಬಾಡಿಗೆ ಕೇಳಿ ಮೂರ್ಛೆ ಹೋದವರಿದ್ದರೋ ಏನೋ ಇದೀಗ ಆತನ ಸರದಿ. ಆತ ತಿನ್ನುತ್ತಿದ್ದಂತೆ ಭಟ್ಟರು ಹೇಳಿದರು ನಮ್ಮಲ್ಲಿ ಮನೆಗೆ ಬಂದವರನ್ನು ಹಾಗೆ ಖಾಲಿ ಹೊಟ್ಟೆಯಲ್ಲಿ ಕಳಿಸುದಿಲ್ಲ.  ಅಟೋ ಚಾಲಕ ಹಾಂ ಹೂಂ ಇಷ್ಟನ್ನೇ ಹೇಳಿ. ಗಬ ಗಬ ತಿಂದ. ಬೆಳಗಿನಿಂದಲೂ ಎನೂ ತಿನ್ನದವರಂತೆ ತಿಂದು ಕಾಪಿ ಕುಡಿದ. ತಟ್ಟೆ ಲೋಟ ಎತ್ತಿ ತೋರಿಸಿದ. ಭಟ್ಟರು ಅಲ್ಲಿರಲಿ. ಕೈ ತೊಳೆಯುವ ಜಾಗ ತೋರಿದರು. ಕೈತೊಳೆದು ಮುಖ ಬಾಯಿ ಉಜ್ಜಿಕೊಳ್ಳುತ್ತಾ   " ಬರ್ಲಾ ಸಾರ್ " ಅಂತ ಹೋರಗೆ ನಡೇದು ರಸ್ತೆಗೆ ಕಾಲಿಟ್ಟು ಏನೋ ಯೋಚಿಸಿದ. ಹಾಗೆ ನಿಧಾನವಾಗಿ ಬಂದು ಭಟ್ಟರ ಕೈಗೆ ನೂರು ರೂಪಾಯಿ ಕೊಡುತ್ತಾ ಹೇಳಿದ.

" ಸರ್ , ಆಟೋ ಚಾರ್ಚ್ ಅಲ್ಲಿಂದ ಇಲ್ಲಿವರೆಗೆ ನ್ಯಾಯವಾಗಿ  ಎಪ್ಪತ್ತೇ ರೂಪಾಯಿ ಸಾರ್.  ಏನೋ ತಪ್ಪು ಮಾಡಿಬಿಟ್ಟೆ ಹೆಚ್ಚು ತಗೊಂಡೆ. ಅದು ಬೇಡ ಸರ್ ಅದೂ ನಿಮ್ಮಂಥವರಿಂದ ತೆಗೊಂಡ್ರೆ ದೇವರು ಮೆಚ್ಚಲ್ಲ. ಈ ದುಡ್ಡು ಮನೆಗೆ ತಗೊಂಡು ಹೋಗಿ ನನ್ನ ಮಕ್ಕಳು ತಿಂದರೂ ಉದ್ದಾರ ಆಗಲ್ಲ ಸರ್ ತಗೋಳಿ  ಏನೋ ಸರ್ ಹೊಟ್ಟೆಗೆ ತುತ್ತು ನಿಮ್ಮ ಕೈಯಿಂದ ತಿಂದರೆ ಅದೇ ಹೊಟ್ಟೆ ಪಾಡಿನ ದುಡಿಮೆ ನಮ್ಮದು ನಿಮ್ಮಂಥೋರು ಇನ್ನೂ ಹುಟ್ಟಿ ಬರಬೇಕು ಸಾರ್"

ಅಂತ ಭಟ್ಟರ ಕೈಯಲ್ಲಿರಿಸಿದ.       

ನಂತರ ಕಾಲು ಮುಟ್ಟಿ ನಮಸ್ಕರಿಸಿ

" ಸರ್ ಆಶಿರ್ವಾದ ಮಾಡಿ ಸರ್.  ನೀವು ತಂದೆ ಸಮ"
ಕಾಲು ಮುಟ್ಟಿದವನೇ ಹಾಗೆ ಎದ್ದು ನಿಧಾನವಾಗಿ ಅಟೋದೆಡೆಗೆ ನಡೆದು ಹೋದ.

ಇದನ್ನು ಕಥೆಯಾಗಿ ಸ್ವೀಕರಿಸುವುದೋ   ಘಟನೆಯಾಗಿ ಸ್ವೀಕರಿಸುವುದೋ ಓದುಗನ ತೀರ್ಮಾನ.  ಇದು ಹೊಟ್ಟೆ ಬಟ್ಟೆಯ ನಡುವಿನ ಜೀವನ