Monday, December 25, 2017

ಧರ್ಮಾಭಿಮಾನ ಇದ್ದರೆ...

                  ಫೇಸ್ ಬುಕ್ ಗಳಲ್ಲಿ ಅಥವಾ ಬ್ಲಾಗ್ ಗಳಲ್ಲಿ ಹಾಗೇ ನನ್ನ ಅನಿಸಿಕೆಗಳನ್ನು ಬರೆಯುವುದು ನನ್ನ ಹವ್ಯಾಸ. ಇವುಗಳು ಬದುಕಿನ ಸಹಚರನಿದ್ದಂತೆ. ಯಾರು ಓದುತ್ತಾರೋ ಇಲ್ಲವೋ ಎಂಬ ನಿರೀಕ್ಷೆಗಳಿಲ್ಲಿ ಇರುವುದಿಲ್ಲ. ಕೇವಲ ಗುಡ್ಡದ ತುದಿಯಲ್ಲಿ ನಿಂತು ಮನ ಬಿಚ್ಚಿದ ಮಾತುಗಳಂತೆ. ಸ್ನಾನದ ಕೋಣೆಯಲ್ಲಿ ಹಾಡುವ ಹಾಡುಗಳಂತೆ. ಅಲ್ಲಿ ಕೇಳುಗನ ಸ್ಥಾನ ಕೇವಲ ಗೌಣವಾಗಿರುತ್ತದೆ. ಹಾಗೇ ನನ್ನ ಅನಿಸಿಕೆಗಳನ್ನು ಓದಿದ ಮಿತ್ರರೊಬ್ಬರು ಕೇಳಿದರು.  " ಬರವಣಿಗೆ ಚೆನ್ನಾಗಿದೆ. ಇದೆಲ್ಲ ಹೇಗೆ ಬರೆಯುತ್ತೀರಿ? " ಎಂದು. ನಾನಂದೆ ನಾನು ಜೀವನದ ಪ್ರತಿಕ್ಷಣಗಳನ್ನು ನೋಡುವ ದೃಷ್ಟಿಕೋನವೇ ಹಾಗೆ. ಯಾಕೋ ಹಲವು ಕ್ಷಣಗಳಲ್ಲಿ ನನ್ನದೇ ಆದ ಹಲವು ಚಿಂತನೆಗಳು ಯೋಚನೆಗೆ ಬರುತ್ತವೆ. ಅದನ್ನು ಹಾಗೇ ಭಾಷೆಯ ರೂಪಕ್ಕೆ ಇಳಿಸಿ ಬರೆದು ಬಿಡುವುದು. ಯಾರಿಗೂ ತೊಂದರೆಯಾಗದೇ ಮನಸ್ಸಿಗೆ ನೋವುಂಟು ಮಾಡದ ಕಾಳಜಿಯಲ್ಲಿ ಅನಿಸಿಕೆಗಳು ವ್ಯಕ್ತವಾಗುತ್ತವೆ. ಇದಕ್ಕೆ ಪುಷ್ಟಿಕೊಡುವಂತೆ ಒಂದು ಘಟನೆ ಇದು.

ಅಂದು ನಾನು ಬೆಂಗಳೂರಿನಿಂದ ನನ್ನೂರಿಗೆ ಅಂದರೆ ಮಂಗಳೂರಿಗೆ ಹೋಗುವುದಕ್ಕೆ ರೈಲನ್ನು ಏರಿದೆ. ನನ್ನ ಆಸನ ಹುಡುಕುತ್ತಾ ಬ್ಯಾಗ್  ಹೆಗಲಿಗೇರಿಸಿ ಒಂದು ಭೋಗಿಯ ಈ ತುದಿಯಿಂದ ಆತುದಿಗೆ ಹೋಗುತ್ತಿದ್ದೆ. ಸಾಮಾನ್ಯವಾಗಿ ರೈಲಿನಲ್ಲಿ ಬದಿಯ ಆಸನವನ್ನೇ ಹೆಚ್ಚಾಗಿ ನಾನು ಆರಿಸುವುದು. ಬಹಳ ಸೌಕರ್ಯವನ್ನು ಅದರಲ್ಲಿ ಕಾಣುತ್ತೇನೆ. ಹಾಗೆ ಅರಸುತ್ತಾ ಮುಂದೆ ಹೋದಾಗ ನನಗೆ ಮೀಸಲಿರಿಸಿದ ಆಸನ ಸಿಕ್ಕಿತು. ಆದರೆ ಅಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಕುಳಿತು ದೇವರ ಪ್ರಾರ್ಥನೆ ಮೌನವಾಗಿ ಸಲ್ಲಿಸುತ್ತಿದ್ದಳು. ರೈಲಿನ ಪ್ರಯಾಣಿಸುವ ಇತರ ಯಾತ್ರಿಕರು ಅವರವರ ಪಾಡಿಗೆ ಅವರಿದ್ದರು. ಮಹಿಳೆ ಮೌನವಾಗಿ ಪ್ರಾರ್ಥನೆಯಲ್ಲಿ ತಲ್ಲೀನಳಾಗಿದ್ದರು. ನಾನು ನನ್ನ ಲಗೇಜ್ ಗಳನ್ನು ಪಕ್ಕದ ಸೀಟ್ ನಲ್ಲಿರಿಸಿ ಬೇರೆಯೇ ಸೀಟ್ ನಲ್ಲಿ ಕುಳಿತು ಸಾವರಿಸಿಕೊಳ್ಳುತ್ತಿದ್ದೆ. ಸುಮಾರು ಹೊತ್ತು ಕಳೆದ ನಂತರ ಮಹಿಳೆ ಪ್ರಾರ್ಥನೆ ಮುಗಿಸಿ ನನ್ನ ಕಡೆಗೆ ನೋಡಿದಳು. ಇದು ನಿಮ್ಮ ಸೀಟಾ ಎಂದು ಕೇಳಿದಳು ನಾನು ಹೌದೆಂದೆ. ಆಕೆ ನಗುವಿನಲ್ಲೇ ಕ್ಷಮೆ ಯಾಚಿಸಿದಂತೆ ಎದ್ದು ತನ್ನ ವಸ್ತ್ರ ಮುಂತಾದ ವಸ್ತುಗಳನ್ನು ತಾನು ಕುಳಿತುಕೊಳ್ಳುವ ಸೀಟಿನತ್ತ ಚಲಿಸಿದಳು. ನಾನು ವಿಚಲಿತನಾಗಲಿಲ್ಲ. ನಾನು ಬಂದಕೂಡಲೇ ಆಕೆಯ ಪ್ರಾರ್ಥನೆಗೆ ಭಂಗ ತರಬಹುದಿತ್ತು. ಸೀಟು ಬಿಟ್ಟುಕೊಡುವಂತೆ ಕೇಳಬಹುದಿತ್ತು. ಆದರೆ ನಾನು ಹಾಗೆ ಮಾಡದೇ ಆಕೆಯ ಕಾರ್ಯಗಳೆಲ್ಲ ಮುಗಿಯುವ ತನಕ ಕಾದು ಕುಳಿತೆ.  ನಾನು ಹಿಂದೂ ಧರ್ಮಿಯನಾದರೂ ಆಕೆಯ ಧರ್ಮವನ್ನು ಕರ್ಮವನ್ನೂ ಗೌರವದಿಂದ ನೋಡಿದೆ. ನಮ್ಮ ಧರ್ಮದ ಬಗ್ಗೆ ನಮಗೆ ಅಭಿಮಾನವಿರಬೇಕು. ಆದರೆ ಪರಧರ್ಮವನ್ನು ಕಡೆಗಣಿಸುವ ಹಾಗಿರಬಾರದು. ಇದು ನಾನು ರೂಢಿಸಿಕೊಂಡ ತತ್ವ. ಇಷ್ಟಕ್ಕೂ ಆಕೆ ಯಾರಿಗೂ ದ್ರೋಹವೆಸಗುವ ಕೆಲಸವನ್ನೇನೂ ಮಾಡುತ್ತಿರಲಿಲ್ಲ. ಆತ್ಮಾರ್ಥವಾಗಿ ತೀರಾ ವೈಯಕ್ತಿಕವಾದ ದೈವ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದಳು. ನಿಜಕ್ಕೂ ಒಂದು ಗೌರವ ಭಾವನೆ ನನ್ನಲ್ಲಿ ತಂದಿತ್ತು. ಅಷ್ಟೊಂದು ಪ್ರಯಾಣಿಕರು ಗಲಾಟೆಯ ನಡುವೆ ಆಕೆ ಶ್ರದ್ದೆಯಿಂದ ಸಲ್ಲಿಸುವ ಪ್ರಾರ್ಥನೆಯ ಬಗ್ಗೆ ನಿಜಕ್ಕೂ ಗೌರವ ಮೂಡಿತು. ನಾನು ಸೀಟಿನಲ್ಲಿ ಕುಳಿತುಕೊಳ್ಳಬೇಕಾದರೆ ಆ ಸೀಟನ್ನು ತನ್ನ ವಸ್ತ್ರದಿಂದ ಉಜ್ಜಿ ಸ್ವಚ್ಚ ಗೊಳಿಸಿ ನನಗೆ ಕುಳಿತುಕೊಳ್ಳುವಂತೆ ಹೇಳಿದಳು. ಇದು ಘಟನೆಯ ಒಂದು ಮುಖ. ನಿಜಕ್ಕಾದರೆ ನನಗೆ ಹಲವು ಧರ್ಮದ ವ್ಯಕ್ತಿಗಳು ಸ್ನೇಹಿತರಿದ್ದಾರೆ, ನನ್ನೊಂದಿಗೆ ಆತ್ಮಿಯವಾಗಿ ವ್ಯವಹರಿಸುವ ವ್ಯಕ್ತಿಗಳೀದ್ದಾರೆ. ಅವರಲ್ಲಿ ಯಾವ ಸಮಸ್ಯೆಯೂ ಇಲ್ಲದೆ ಜೀವನ ವ್ಯವಹಾರಗಳನ್ನು ನಾನು ಮಾಡುತ್ತೇನೆ. ಯಾರು ಯಾರಿಗೆ ಅನಿವಾರ್ಯರೋ ಅದು ವಿಚಾರವಲ್ಲ. ತೋಟ ನಮ್ಮದೇ ಆದರೂ ಅಲ್ಲಿ ನಮ್ಮ ಅಂಕೆಯಲ್ಲಿಲ್ಲದ ಪ್ರಾಣಿ ಪಕ್ಷಿಗಳು ಇರುತ್ತವೆ. ಮರಗಿಡ ಬಳ್ಳಿಗಳು ಇರುತ್ತವೆ. ಅವುಗಳ ನಡುವೆ ನಾವು ಜೀವಿಸುವುದಿಲ್ಲವೇ?

ಅದೇ ರೀತಿ ರೈಲು ಮುಂದೆ ಹೋಯಿತು. ಮರುದಿನ ಮುಂಜಾನೆ ನಾಲ್ಕು ಘಂಟೆಗೆ ನಿದ್ದೆಯಲ್ಲಿದ್ದ ನನಗೆ ಎಚ್ಚರವಾಯಿತು. ಯಥಾ ಪ್ರಕಾರ ನಾನು ಶೌಚಾಲಯಕ್ಕೆ ಹೋಗಿ ಹಲ್ಲುಜ್ಜಿ ಮುಖತೊಳೆದು ನನ್ನ ಸೀಟಲ್ಲಿ ಬಂದು ಕುಳಿತೆ. ನಿತ್ಯವೂ ಅದೇ ಹೊತ್ತಿನಲ್ಲಿ ಏಳುವ ನನಗೆ ಪ್ರಯಾಣದಲ್ಲಾದರೂ ರೂಢಿ ತಪ್ಪುವುದಿಲ್ಲ. ಎದ್ದು ಕುಳಿತುಕೊಳ್ಳುತ್ತೇನೆ. ಮನೆಯಲ್ಲಾದರೆ ನಿತ್ಯ ಸ್ನಾನ ಜಪ ಪೂಜೆ ಇರುತ್ತದೆ. ಪ್ರಯಾಣದಲ್ಲಿ ಅದು ಸಾಧ್ಯವಿಲ್ಲ. ರೈಲು ಸಕಲೇಶ ಪುರ ದಾಟಿ ಘಾಟ್ ರಸ್ತೆಯಲ್ಲಿ ನಿಧಾನವಾಗಿ ಸಾಗುತ್ತಿತ್ತು. ಭೋಗಿಯಲ್ಲಿ ಬಹಳಷ್ಟು ಮಂದಿ ನಿದ್ದೆಯಲ್ಲಿದ್ದರು. ನಿತ್ಯದಂತೆ ನಾನು ಕುಳಿತಲ್ಲೇ ಧ್ಯಾನಾಸಕ್ತನಾಗುತ್ತೇನೆ. ಆ ನೀರವ ಮೌನದಲ್ಲಿ ದೇವರ ಧ್ಯಾನ ಬಹಳಷ್ಟು ಶಾಂತಿಯನ್ನು ಕೊಡುತ್ತದೆ. ಹಾಗೆ ನೆಟ್ಟಗೆ ಕುಳಿತು ಕಣ್ಣು ಮುಚ್ಚಿ ಮಂತ್ರ ಜಪಿಸುತ್ತಿರುವಾಗ ಮನಸ್ಸಿನಲ್ಲಿನಲ್ಲಿ ದೈವ ಸಾನ್ನಿಧ್ಯ ಒದಗಿ ಬರುತ್ತದೆ.. ಅದೊಂದು ವಿಶಿಷ್ಟ ಅನುಭವ. ಅಲ್ಲಿಗೇ ತಲ್ಲೀನನಾಗಿಬಿಡುತ್ತೇನೆ. ಮನುಷ್ಯ ತಾನೆಷ್ಟೇ ಎಂದು ತಿಳಿದುಕೊಂಡರೂ ತನ್ನಲ್ಲಿಲ್ಲದ ತಾನಲ್ಲದ ಒಂದು ಶಕ್ತಿಯಿರುತ್ತದೆ. ಅದು ಭಗವಂತ. ಇದಕ್ಕೆ ಜಾತಿ ಧರ್ಮದ ಸೀಮೆ ಇರುವುದಿಲ್ಲ.  ಹೀಗೆ ನಾನು ನಾನು ಪ್ರಾರ್ಥನೆಯಲ್ಲಿ ತಲ್ಲೀನನಾಗಿರಬೇಕಾದರೆ ಕೆಲವರು ಆಕಡೆ ಈಕಡೆ ಸುಳಿಯುತ್ತಾರೆ. ಅದೇನೂ ತೊಂದರೆ ಅಂತ ಅನ್ನಿಸುವುದಿಲ್ಲ ಆದರೆ ಹಾಗೆ ಅತ್ತಿತ್ತ ಸುಳಿಯುವವರು ಕಣ್ಣು ಮುಚ್ಚಿ ಪ್ರಾರ್ಥನೆಯಲ್ಲಿ ತಲ್ಲೀನ ನಾಗಿ ಇರುವ ನನ್ನನ್ನು ಎಚ್ಚರಿಸಿ ಕೇಳುತ್ತಾರೆ....." ಎಲ್ಲಿಗೆ ಮುಟ್ಟಿತು? ಕುಕ್ಕೆ ಸುಬ್ರಹ್ಮಣ್ಯಕ್ಕೆ ಇನ್ನು ಎಷ್ಟು ಹೊತ್ತಿದೆ.? "

ಮೊದಲದಿನ ಅಷ್ಟೊಂದು ಮಂದಿ  ಆಚೀಚೇ ಸಂಚರಿಸುತ್ತಿದ್ದರೂ ಅಲ್ಲಿಯೇ ಪ್ರಾರ್ಥನೆ ಸಲ್ಲಿಸುತ್ತಿದ್ದ ಮಹಿಳೆಗೆ ಯಾವ ತೊಂದರೆಯನ್ನು ಮಾಡಿಲ್ಲ. ಪ್ರಾರ್ಥನೆ ಸಲ್ಲಿಸುತ್ತಿದ್ದ ಆಕೆಯನ್ನು ಎಚ್ಚರಿಸುವುದಾಗಲಿ ಆಕೆಯಲ್ಲಿ ಕೇಳುವುದಾಗಲೀ ಮಾಡಿಲ್ಲ. ಆಕೆಯ ಕೆಲಸವನ್ನು ಗೌರವದಿಂದಲೇ ಕಂಡಿದ್ದರು. ಆದರೆ ನಾನು ಪ್ರಾರ್ಥನೆ ಸಲ್ಲಿಸುವಾಗ ಅದೆಷ್ಟು ವಿಘ್ನಗಳು. ಅದೆಷ್ಟು ಅಡೆ ತಡೆಗಳು. ಅಷ್ಟಕ್ಕೂ ಹಾಗೆ ಮಧ್ಯೆ ಅದು ಇದು ಅಂತ ಕೇಳುತ್ತಿದ್ದವರು ಹಿಂದುಗಳೇ ಆಗಿದ್ದರು.

ಈ ಘಟನೆ ಬಹಳಷ್ಟು ಚಿಂತನೆಯನ್ನು ಮನಸ್ಸಿನಲ್ಲಿ ಚಿಂತಿಸುವಂತೆ ಮಾಡಿತು. ಮೊದಲಾಗಿ ನಮ್ಮ ಧರ್ಮದ ಬಗ್ಗೆ ನಮಗೆ ಅಭಿಮಾನ ಬೇಕು. ನಮ್ಮ ತಾಯಿತಂದೆಯರನ್ನು ನಾವು ಮೊದಲಿಗೆ ಗೌರವಿಸಬೇಕು. ಆನಂತರ ಲೋಕ ಗೌರವವನ್ನು ನಿರೀಕ್ಷಿಸಬೇಕು. ನಾನು ಜಪ ಮಾಡುವುದು ನೋಡಿದರೆ ತಿಳಿಯುತ್ತಿತ್ತು. ಆದರೂ ಅದು ಅವರಲ್ಲಿ ಗೌರವವನ್ನು ಮೂಡಿಸಲಿಲ್ಲ. ಜಗತ್ತಿನ ವ್ಯವಹಾರಗಳು ಅದೆಷ್ಟು ವಿಚಿತ್ರವಾಗಿರುತ್ತದೆ.

 ನಾನು ಪ್ರತಿಯೊಂದು ಧರ್ಮವನ್ನು ಗೌರವಿಸುತ್ತೇನೆ. ಇದು ಪ್ರಾಮಾಣಿಕ ಅನಿಸಿಕೆ. ಮಾತ್ರವಲ್ಲ ನನ್ನ ಧರ್ಮವನ್ನು ಅತ್ಯಂತ ಅಭಿಮಾನದಿಂದ ಅನುಸರಿಸುತ್ತೇನೆ.








Sunday, December 17, 2017

ತದೇಕ ಚಿತ್ತಂ ಧ್ಯಾನವೊಂದರ ಬಯಸಿ


ಬೆಳಗ್ಗೆ ಬೆಳಗ್ಗೆ ರಸ್ತೆಯಲ್ಲಿ ಅದೇನೋ ಗಲಾಟೆ. ಬೀದಿಯ ಮನೆಯವರು ಹೊರಬಂದು ನೋಡಿದರು. ನೋಡಲಾಗದವರು ಮನೆಯೊಳಗೇ ಕುಳಿತು ಕಿವಿಯನ್ನು ಹೊರಗೆ ತೆರೆದಿರಿಸಿದರು, ಅಥವಾ ಹೊರಗಿದ್ದವರಲ್ಲಿ ಕುತೂಹಲವನ್ನು ತಣಿಸುವ ಹವಣಿಕೆಯನ್ನು ತೋರಿತ್ತಿದ್ದರು. ಹಾಗೋ ಹೀಗೋ ಹೊರಗಿನ ವಿಚಾರ ತಿಳಿಯುವ ಒಂದು ಕೆಟ್ಟ ಕುತೂಹಲ. ಮನೆಯ ಒಳಗೆ ದೇವರ ಎದುರು ಪೂಜೆ ಜಪಗಳಲ್ಲಿ ನಿರತವಾಗಿದ್ದರೂ ಮನಸ್ಸು ಮಾತ್ರ ಹೊರಗೆ ಓಡಿಬಿಡುತ್ತದೆ. ಸಹಜವಾದ ಗುಣವಿದು. ನಾವು ಅನ್ಯರ ವಿಚಾರ ತಿಳಿದುಕೊಳ್ಳುವಲ್ಲಿ ಅತೀವ ಆಸಕ್ತಿವಹಿಸುತ್ತೇವೆ. ಅದು ಯಾವುದೇ ವಿಚಾರವಿರಲಿ, ಅವಶ್ಯಕ ಆನಾವಶ್ಯಕ ಎಂಬ ಭೇದವಿಲ್ಲ.  ಅಲ್ಲೇನಾಯಿತೋ? ಇಲ್ಲೇನಾಯಿತೋ?  ಅವರಿಗೇನಾಯಿತೋ ಹೀಗೆ ಪರರ ಚಿಂತೆಯಲ್ಲಿ ಮನಸ್ಸು ತವಕಿಸುತ್ತದೆ. ಕೆಲವೊಮ್ಮೆ ಮರುಗಲೂ ಬಹುದು, ಕೊರಗಲೂ ಬಹುದು. ಪರರ ಬಗ್ಗೆ ತಿಳಿಯುವುದಕ್ಕೆ ದಿನದ ಬಹುಪಾಲು ಸಮಯವನ್ನೂ ಮೀಸಲಿಡುತ್ತೇವೆ. ದೂರವಾಣಿ ಕರೆಮಾಡಿಯೋ. ಅಥವಾ ಅವರಿದ್ದಲ್ಲಿಗೆ ಹೋಗಿ ಕೇಳಿ ತಿಳಿದುಕೊಳ್ಳುತ್ತೇವೆ.   ಪ್ರೇಮಿಗಳು ಗುಟ್ಟಾಗಿ ವ್ಯವಹರಿಸಿದರೆ ಅದನ್ನು ತಿಳಿದು ಅದೇ ರೀತಿ ಅದನ್ನು ಹಂಚಿಕೊಳ್ಳುವ ತವಕ. ಯಾರದೋ ಯಾವುದೋ ವ್ಯವಹಾರಗಳನ್ನು ಸಂಬಂಧಗಳನ್ನು ತಿಳಿಯುವುದಕ್ಕಾಗಿ ಇನ್ನಿಲ್ಲದ ಯತ್ನ ನಡೆಸುತ್ತೇವೆ.
ವಿಚಿತ್ರವೆಂದರೆ ಪರರ ಸಂಗತಿಗಳನ್ನು ತಿಳಿಯುವುದಕ್ಕೆ ಗಂಟೆಗಳನ್ನು ಮೀಸಲಾಗಿಡುವ ನಾವು ನಮ್ಮ ಮನಸ್ಸನ್ನು ಅಥವಾ ಸ್ವತಃ ನಮ್ಮನ್ನು ತಿಳಿದುಕೊಳ್ಳಲು  ದಿನದ ಹತ್ತು ನಿಮಿಷವನ್ನು ಮೀಸಲಿಡುವುದಿಲ್ಲ. ಪರರ ವಿಚಾರ ತಿಳಿಯುವ ಕಾತರದ ಮನುಷ್ಯ  ಈ ಒಂದು ವಿಚಾರದಲ್ಲಿ   ನಿಜಕ್ಕೂ ನಿಸ್ವಾರ್ಥಿ!  ತನ್ನನ್ನು ತಾನು ಅರಿಯುವುದು ಬೇಕಿಲ್ಲ. ತನ್ನ ಬಗ್ಗೆ ತನಗೇ ಇರುವ ಔದಾಸಿನ್ಯವೇ? ಖಂಡಿತಾ ಅಲ್ಲ. ಪರರನ್ನು ತಿಳಿಯುವುದು ಸುಲಭ. ತನ್ನನ್ನು ತಾನು ತಿಳಿಯುವುದು ಮಹಾ ಕಠಿಣ. ಮತೊಬ್ಬರನ್ನು ತಿಳಿಯುವ ಆಸಕ್ತಿಯಲ್ಲಿ ತಮ್ಮನ್ನು ತಾವೇ ಮರೆತು ಬಿಡುವಷ್ಟು ಮಗ್ನರಾಗಿಬಿಡುತ್ತೇವೆ. ವಾಡಿಕೆಯಲ್ಲಿ ಹೇಳುವುದುಂಟು  ಈ ಹೆಣ್ಣು ಮನಸ್ಸನ್ನು ಅರ್ಥಮಾಡುವುದು ಕಷ್ಟ ಮಾರಾಯ್ರೆ. ಹಾಗೇ ಗಂಡು ಮನಸ್ಸಿನ ಬಗ್ಗೆಯೂ ಹೇಳುವುದುಂಟು. ಆದರೆ ಅದಾವುದೂ ಕಷ್ಟವಲ್ಲ ತನ್ನನ್ನು ತಾನು ತಿಳಿಯುವ ಹಾದಿ ಕಷ್ಟ. ಹಾಗಾಗಿ ಆ ಹಾದಿಯತ್ತ ಗಮನವೇ ಇರುವುದಿಲ್ಲ.
“ಮನಸ್ಸಿನ ಎಲ್ಲಾ ದ್ವಾರಗಳನ್ನು ಮುಚ್ಚಿದಾಗ ಅಂತರಂಗದ ಬಾಗಿಲು ತೆರೆಯಲ್ಪಡುತ್ತದೆ. ಅಂತರಂಗದ ಬಾಗಿಲಲ್ಲಿ ಭಗವಂತನ ದರ್ಶನ ಸಾಧ್ಯವಾಗುತ್ತದೆ.”  ಇದು ಆಧ್ಯಾತ್ಮಿಕ ಚಿಂತನೆ. ’ದ್ವಾರ’ ಎಂದರೆ ಎರಡೂ ಕಡೆಗೂ ತೆರೆದಿರುವ,  ಒಳಗೂ ಹೊರಗೂ ಸಂಚರಿಸುವುದಕ್ಕಿರುವ ಮಾಧ್ಯಮ.    ಆಗತಾನೆ ಹುಟ್ಟುತ್ತಿರುವ ಮಗುವಿನಲ್ಲಿ ಯಾವ ದ್ವಾರವೂ ಇರುವುದಿಲ್ಲ. ಆನಂತರ ಪ್ರಕೃತಿ ಮನಸ್ಸಿನಲ್ಲಿ ಬಾಗಿಲುಗಳನ್ನು ತೆರೆಯುತ್ತಾ ಹೋಗುತ್ತದೆ.  ಹಾಗೇ  ಮನುಷ್ಯ ವ್ಯಾವಹಾರಿಕ ಪ್ರಪಂಚದ ಒಂದೊಂದೇ ಬಾಗಿಲನ್ನು ಬಡಿಯುತ್ತಾ ಮುಂದುವರೆದು ಭಗವಂತನಿಂದ ದೂರ ಸಾಗುತ್ತಾನೆ. ಕೆಲವೊಮ್ಮೆ ಭಗವಂತನ ನೆನಪನ್ನೇ ಕಳೆದುಕೊಳ್ಳುತ್ತಾನೆ. ಆನಂತರ ಅಲ್ಲಿ ಇಲ್ಲಿ ಭಗವಂತನಿಗೆ ಹುಡುಕಾಟ. ಆದಾಗಿರಬಹುದೇ ಇದಾಗಿರಬಹುದೇ ಎಂಬ ಜಿಜ್ಞಾಸೆಯಲ್ಲಿ ಜೀವನ ಪರ್ಯಂತ ಯಾವ ಬಾಗಿಲು ಮುಚ್ಚಬೇಕು ಯಾವ ಬಾಗಿಲಲ್ಲಿ ಇಣುಕಬೇಕು ಅರಿಯದೇ ಬದುಕಿನ ಕೊನೆಯ ಬಾಗಿಲಲ್ಲಿ ಬಂದು ನಿಂತುಬಿಡುತ್ತಾನೆ. ಹೀಗೆ ವೇದಾಂತದ ಸಾರ ಸರಳ ಮಾತುಗಳಲ್ಲೇ ಅಡಕವಾಗಿರುತ್ತದೆ.
ಮನಸ್ಸಿನ ಅಷ್ಟು ಬಾಗಿಲಲ್ಲಿ ಒಂದು ಬಾಗಿಲನ್ನಾದರೂ ಮುಚ್ಚಿದರೆ ಅದೇ ಸಾಧನೆಯಾದದ್ತೀತು. ಆ ಯತ್ನದಲ್ಲೇ ಮುಂಜಾನೆ ನಾಲ್ಕಕ್ಕೆ ಎಚ್ಚರವಾಗುತ್ತದೆ. ಸ್ನಾನಾದಿ ಶೌಚಗಳನ್ನು ಮುಗಿಸಿದಾಗ ದೇಹ ಮನಸ್ಸು ಶುಭ್ರವಾದ ಅನುಭವ. ಸ್ನಾನ ಅದೂ ಮುಂಜಾನೆಯ ತಣ್ಣೀರ ಸ್ನಾನ ದೈವಿಕ ಭಾವವನ್ನು ದೇಹಾದ್ಯಂತ ಚಿಗುರಿಸುತ್ತದೆ. ತಣ್ಣೀರ ಸ್ನಾನ ಉಲ್ಲಾಸವನ್ನು ತಂದಿತ್ತರೆ ಬಿಸಿನೀರ ಸ್ನಾನ ದೇಹವನ್ನು ಮತ್ತಷ್ಟೂ ಜಡತ್ವದತ್ತ ಸೆಳೆಯುತ್ತದೆ.  ನವಿರಾದ ಮನಸ್ಸಿನೊಂದಿಗೆ ಜಪಾನುಷ್ಠಾನಕ್ಕೆ ತೊಡಗುವಾಗ ಸುತ್ತಲೂ ನೀರವ ಮೌನ. ಮನೆಯೊಳಗೆ ನಾನೊಬ್ಬನೇ ಮನದೊಳಗೇ ನಾನೊಬ್ಬನೇ ಎಂಬ ಅನುಭವ. ಯಾರೂ ಇಲ್ಲದಾಗ ಭಗವಂತನಿದ್ದಾನೆ ಎಂಬ ಮಾತು ಸತ್ಯವಾಗುತ್ತದೆ. ಏಕಾಂಗಿತನ ಎಂಬುದು ತನ್ನನ್ನು ತಾನು ಅರಿಯುವಲ್ಲಿ ಆಹ್ಲಾದತೆಯನ್ನು ಒದಗಿಸುತ್ತದೆ.  ಸಂಧ್ಯಾವಂದನೆಯ ಮೊದಲು ಯಾವ ಮಾತನ್ನೂ ಆಡುವುದಿಲ್ಲ ಇದೊಂದು ನಿಷ್ಠೆ. ಹಾಗಾಗಿ ಸಂಧ್ಯೆಗೆ ಕುಳಿತಾಗ ಓಂ ಕಾರ ಒಂದೇ ಅದಿನದ ಆದ್ಯಾಕ್ಷರವಾಗುತ್ತದೆ.
 ಪದ್ಮಾಸನದಲ್ಲಿ ಆಸೀನನಾಗಿ ಕಣ್ಣು ಮುಚ್ಚಿ ಮನಸ್ಸಿನ ಹಲವು ಬಾಗಿಲನ್ನು ಮುಚ್ಚುವ ಯತ್ನದಲ್ಲಿರುತ್ತೇನೆ.ಬಾಗಿಲು ಮುಚ್ಚಿತೋ?  ಇಲ್ಲ,  ಅರಿವಿಗೆ ಬರುವುದಿಲ್ಲ. ಮನಸ್ಸಿಗೆಷ್ಟು ದ್ವಾರವಿದೇ ಎಂಬುದನ್ನೇ ತಿಳಿಯದಿರುವಾಗ ಎಲ್ಲಾ ದ್ವಾರಗಳು ಮುಚ್ಚಿವೆ ಎಂಬ ಅರಿವಾದರೂ ಉಂಟಾಗುವುದು ಸಾಧ್ಯವೇ? ಮೊದಲು ಮನಸ್ಸು ಎಲ್ಲೆಲ್ಲಿ ಚಂಚಲವಾಗುತ್ತದೆ ಎಂಬುದನ್ನು ತಿಳಿಯಬೇಕು.  ಎಲ್ಲವನ್ನು ಮುಚ್ಚಿದ್ದೇನೆ ಎಂಬ ವಿಶ್ವಾಸದಲ್ಲಿರುವಾಗ ಮನಸ್ಸಿನ ಯಾವುದೋ ಮೂಲೆಯ ದ್ವಾರವೊಂದು ತೆರೆದುಕೊಂಡಂತಾಗುತ್ತದೆ. ಹಾಗಾದರೆ ಎಲ್ಲಾ ದ್ವಾರವೂ ಮುಚ್ಚಿದೆ ಎಂಬ ಅರಿವಾಗ ಬೇಕಾದರೆ ಅಲ್ಲಿ ಪರಮಾತ್ಮನ ರೂಪ ಸಿದ್ದಿಯಾಗಬೇಕು. ಅಂತರಂಗದಲ್ಲಿ ಪರಮಾತ್ಮನನ್ನು ಗ್ರಹಿಸಿದಾಗ  ದ್ವಾರವೆಲ್ಲವೂ ಮುಚ್ಚಲ್ಪಟ್ಟಿವೆ ಎಂದು ತಿಳಿಯಬೇಕು.  ರೂಪವಿಲ್ಲದ ಭಗವಂತನಿಗೆ ಮನಸ್ಸು ರೂಪವನ್ನು ಕಲ್ಪಿಸಿ ಅದನ್ನು ಕಾಣಬೇಕು. ಅಲ್ಲಿಗೆ ಏಕಾಗ್ರತೆ ಸಿದ್ಧಿಯಾಗುತ್ತದೆ. ಪರಿಶುದ್ದತೆ ಇದ್ದಲ್ಲಿ ಭಗವಂತ್ ಸಾನ್ನಿಧ್ಯವಿರುತ್ತದೆ. ಹಾಗಾಗಿ ಇವೆಲ್ಲವೂ ಒದಗಿ ಬರಬೇಕಾದರೆ ಮನಸ್ಸು ಶುದ್ದಿಯಾಗಿರಬೇಕು. ಇದು ಅತ್ಯವಶ್ಯ.
ಪ್ರತಿಯೊಂದರಲ್ಲೂ ಭಗವಂತನನ್ನು ಕಾಣುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಭಗವಂತನ ಬಗ್ಗೆ  ಪೂರ್ಣ ವಿಶ್ವಾಸವಿರಬೇಕು. ನಡೆ ನುಡಿಯಲ್ಲೂ ಘಟನೆ ಘಟನೆಗಳಲ್ಲೂ ಭಗವಂತನ ಅಸ್ತಿತ್ವ ಪರಿಗಣಿಸಬೇಕು. ಪ್ರಹ್ಲಾದನಿಗೆ ಸತ್ಯವಾನ್ ಸತ್ಯಸಂಕಲ್ಪ ಹರಿದರ್ಶನವಾದ ಹಾಗೆ, ಅದು ಉಗ್ರನರಸಿಂಹ ರೂಪವಾದರೂ ಕಾಣುವುದಕ್ಕೆ ಸಾಧ್ಯವಾಗುತ್ತದೆ. ಪರಮಾತ್ಮನಿಗೆ ಭೇದವಿಲ್ಲ. ಅದು ಮನುಷ್ಯ ಸೌಕರ್ಯಕ್ಕೆ ಹುಟ್ಟಿರುತ್ತದೆ. ಪ್ರಪಂಚ ಸೃಷ್ಟಿ ಅದು ಮನುಷ್ಯನ ಸೌಕರ್ಯದಲ್ಲೇ ಇರುತ್ತದೆ. ಆದರೂ ಮುಂಜಾನೆ ಭಗವಂತನಿಗೆ ಅತ್ಯಂತ ಪ್ರಿಯ ಎಂದು ಮನುಷ್ಯ ಕಲ್ಪಿಸಿಕೊಳ್ಳುತ್ತಾನೆ. ಅಂತರಗದಲ್ಲಿ ಪರಮಾತ್ಮನನ್ನು ಕಾಣುವುದು ಯಾವ ಸಮಯದಲ್ಲೂ ಕಾಣಬಹುದು. ಭಗವಂತನಿಗೆ ಭೇದವಿಲ್ಲ. ಆದರೆ ಮನುಷ್ಯನಿಗೆ ಸೌಕರ್ಯ ಮತ್ತು ಹಿತವಾಗುವುದು, ಅದು ಮುಂಜಾನೆಯಲ್ಲಿ. ದೇವಾಲಯದ ಘಂಟಾರವವಾಗಿರಬಹುದು, ಚರ್ಚ್ ಗೋಪುರದ ಗಂಟೆಯ ಮಾರ್ದನಿಯಾಗಿರಬಹುದು, ಮಸೀದಿಯಿಂದ ಕೇಳುವ ಭಗವಂತನ ಮೊರೆಯಾಗಿರಬಹುದು ಎಲ್ಲವೂ ಭಗವಂತನ ಅಸ್ತಿತ್ವವನ್ನು ಸ್ಮರಣೆಗೆ ತರಬೇಕು.ವ್ಯತಿರಿಕ್ತ ಭಾವ ನಮ್ಮ ಹಾದಿಯನ್ನು ಕಠಿಣವಾಗಿಸುತ್ತದೆ. ಯಾಕೆಂದರೆ ಗಮನ ಅತ್ತಕಡೆಯೇ ಸರಿಯುತ್ತದೆ. ಕಳೆಯುವ ಆ ಮುಂಜಾನೆ ಪುನಃ ಬರುವುದಿಲ್ಲ. ಹೊತ್ತು ಸರಿದಂತೆ ಹಳತಾಗುವ ಆ ಮುಂಜಾನೆ ಮರುದಿನ ಮತ್ತೆ ಬಂದರೂ ಕಳೆದು ಹೋದದ್ದು ಮತ್ತೆ ಬರುವುದಿಲ್ಲ. ಕಳೆದುಹೋದ ವಸ್ತು ಸಂಪತ್ತು ಪುನಃ ಹೇಗಾದರೂ ಕೈವಶಮಾಡಬಹುದು. ಕಳೆದು ಹೋದ ಪ್ರೀತಿ ವಿಶ್ವಾಸವನ್ನಾದರೂ ಮರಳಿ ಗಳಿಸಬಹುದು. ಆದರೆ ಕಳೆದು ಹೋದ ಹೊತ್ತು ಅದು ಪುನಃ ಪಡೆಯುವುದಕ್ಕೆ ಸಾಧ್ಯವಿಲ್ಲ. ಈ ಹೊತ್ತು ಕೈತಪ್ಪಿತು ಎಂದಾದರೆ ಪರಮಾತ್ಮನನ್ನು ಕಾಣುವ ಅವಕಾಶವೂ ಕಳೆದುಹೋಗಿ ವ್ಯರ್ಥವಾದಂತೆ.