Thursday, November 29, 2018

ಅಮ್ಮಾ ಎಂದರೆ...




ಬಾಲ್ಯದಲ್ಲಿನ  ಒಂದು ಘಟನೆ ನೆನಪಾಗುತ್ತದೆ.  ನಾವಾಗ ಪೈವಳಿಕೆ ಲಾಲ್ ಭಾಗ್ ನ ಬಾಡಿಗೆ ಮನೆಯಲ್ಲಿದ್ದೆವು. ಬಾಡಿಗೆ  ಮೆನೆ ಎಂದರೆ ಒಂದೇ ಕೊಣೆಯ ಮನೆ. ಅದಕ್ಕೆ ಹೊಂದಿಕೊಂಡು ಶಿಥಿಲವಾದ ಜೋಪಡಿಯಂತೆ ಇನ್ನೊಂದು ಮಾಡು ಇತ್ತು. ಅದನ್ನು ಮನೆ ಎಂದು ಕರೆಯುವುದು ಕಷ್ಟ. ಮನೆ ಎಂದು ಅಂದುಕೊಂಡರೆ ಸುಖ.  ನಮ್ಮ ಮನೆಯ ಒಂದಷ್ಟು ದೂರ ಶಾನುಭೋಗರ ಮನೆ. ಅವರ ಹೆಸರೇನು ಎಂದು ನೆನಪಿಲ್ಲ. ಹೆಸರಿಗಿಂತಲೂ ಶ್ಯಾನು ಭೋಗರ ಮನೆ ಎಂದೇ ಚಿರ ಪರಿಚಿತ.  ರಸ್ತೆಯ ಪಕ್ಕದಲ್ಲೇ ಇರುವ ಮನೆ ನಮ್ಮ ಮನೆಯಿಂದ ಒಂದಷ್ಟು ದೂರವೇ ಇತ್ತು. ಇಂದು ಆ ಮನೆಯ  ಪಕ್ಕದಲ್ಲಿ ಸಾಗುವಾಗ ಆ ವಯೋ ವೃದ್ಧ ಶ್ಯಾನುಭೋಗರ ನೆನಪಾಗುತ್ತದೆ.  ಅಲ್ಲಿಯ ಹಟ್ಟಿ(ಕೊಟ್ಟಿಗೆ)ಯಲ್ಲಿ ಬಹಳಷ್ಟು ದನಗಳಿದ್ದುವು.  ಅಲ್ಲಿಂದ ನಮ್ಮಮ್ಮ ಒಂದು ಕರುವನ್ನು ಕೊಂಡು ತಂದರು.   ಆಗ ಮನೆಯಲ್ಲಿ ಚಕ್ಕುಲಿ ವ್ಯಾಪಾರವಿತ್ತು. ಚಕ್ಕುಲಿಗೆ ಹಾಕುವ ಅಕ್ಕಿ ತೊಳೆದ ಕಲಗಚ್ಚು ನಾವು ಎಸೆಯುತ್ತಿದ್ದೆವು. ಆ ಕಲಗಚ್ಚನ್ನು ಕೊಡುವುದಕ್ಕಾಗಿಯೇ ಹಸು ಕರುವನ್ನು ತಂದಿದ್ದೆವು. ತಂದ ಕರುವನ್ನು ಕಟ್ಟುವುದಕ್ಕೆ ಹಟ್ಟಿ ಇಲ್ಲ. ಮನೆಯಲ್ಲಿ ಜಾಗವೂ ಇರಲಿಲ್ಲ. ಎದುರು ಇದ್ದ ಪುಟ್ಟ ಜಗಲಿಯಲ್ಲಿ ಕಟ್ಟುತ್ತಿದ್ದೆವು. ಅದೆಷ್ಟು ಸಂಭ್ರಮ? ಆಗೆಲ್ಲ  ಪುಟ್ಟ ಕರುವಿನ ಜತೆಯೇ ಮಲಗುತ್ತಿದ್ದೆವು.  ಆ ಕರುವನ್ನು ಬೆಳಗ್ಗೆ ಮೇಯುವುದಕ್ಕಾಗಿ ಹೊರಗೆ ಬಿಟ್ಟು ಬಿಡುತ್ತಿದ್ದೆವು. ಅಲ್ಲಿ ಸುತ್ತ ಮುತ್ತಲಿನವರೆಲ್ಲ ಹೀಗೆ ತಮ್ಮ ಹಸುಗಳನ್ನು ಬಿಟ್ಟು ಬಿಡುತ್ತಿದ್ದರು. . ಹತ್ತಿರದಲ್ಲೇ ಇದ್ದ ಬೋಳಂಗಳ ಮೈದಾನಿನ ಹುಲ್ಲುಗಾವಲಿಗೆ ಈ ದನಗಳೆಲ್ಲ ಹಿಂಡು ಹಿಂಡಾಗಿ ಹೋಗುತ್ತಿದ್ದವು.  ಬೋಳಂಗಳ ಹುಲ್ಲುಗಾವಲು ಹಸುಗಳ ಡೈನಿಂಗ್ ಟೇಬಲ್ ಇದ್ದಂತೆ.  ಸಾಯಂಕಾಲವಾಗುತ್ತಿದ್ದಂತೇ ಹೊಟ್ಟೆ ತುಂಬಿಸಿಕೊಂಡ ದನಗಳು ಮನೆಗೆ ವಾಪಾಸಾಗುತ್ತಿದ್ದವು.  ಅದೆಲ್ಲ ಭಾವನಾತ್ಮಕ ಸುಂದರ ದೃಶ್ಯಗಳು.

ನಮ್ಮ ಪುಟ್ಟ ಕರು, ಕೊಂಡು ತಂದ ಆರಂಭದ ಒಂದೆರಡು ವಾರ ಮನೆಗೆ ಬರುತ್ತಿರಲಿಲ್ಲ. ಆಗ ನಾವು ಅದನ್ನು ಹುಡುಕಿಕೊಂಡು ಹೋಗಿ ತರಬೇಕಾಗುತ್ತಿತ್ತು. ಒಂದು ದಿನ ಸಾಯಂಕಾಲ ನಾವು ಹೋದಾಗ ತಡವಾಗಿಬಿಟ್ಟಿತು. ಸಂಜೆ ಕತ್ತಲಾವರಿಸಿತ್ತು.  ಒಂದು ರೀತಿಯ ಆತಂಕ. ಆ ಪುಟ್ಟ ಕರು ಎಲ್ಲಿ ಹೋಗಿರಬಹುದು? ಯಾರಾದರೂ ಕದ್ದು ಒಯ್ದಿರಬಹುದೇ? ಈಗಿನಂತೆ ಅಂದು ದನಗಳ್ಳರ ಹಾವಳಿ ಇರಲಿಲ್ಲ. ಆದರೂ ನಮ್ಮ ಕರು ಎಲ್ಲಿ ಹೋಯಿತು?  ಬೋಳಂಗಳದ ಮೈದಾನು ಶಾಲಾ ಮೈದಾನು ಹೀಗೆ ಎಲ್ಲ ಕಡೆ ಹುಡುಕಿದೆ. ಕರು ಸಿಗಲಿಲ್ಲ. ಕೊನೆಯಲ್ಲಿ ಶಾನುಭೋಗರ ಮನೆಗೆ ಹೋದೆ. ಕೊನೆಯ ಪ್ರಯತ್ನವದು.  ಅಲ್ಲಿ ಮನೆಯ ಅಮ್ಮ ಹಟ್ಟಿಯ ಬಾಗಿಲು ತೆಗೆದು ತೋರಿಸಿದರು. ನಮ್ಮ ಪುಟ್ಟ ಗಂಗಮ್ಮ ತಾಯಿಯ ಜತೆಯಲ್ಲಿ ನಿಂತಿತ್ತು. ತಾಯಿ ಕರುವಿನ ಮೈ ನೆಕ್ಕುತ್ತಿತ್ತು.   ಛೇ...ಎಂತಹ ಸುಂದರ ದೃಶ್ಯವದು?   ಬೆಳಗ್ಗೆ ಕರುವನ್ನು  ಬಿಟ್ಟರೆ  ಅಲ್ಲಿ ಬರುತ್ತಿದ್ದ ದನದ ಹಿಂಡಿನ ಜತೆ ಅದು ತನ್ನ ತಾಯಿಯನ್ನು ಅರಸಿಕೊಳ್ಳುತ್ತಿತ್ತು. ಕಾಣುವುದಕ್ಕೆಲ್ಲ ಒಂದೇ ರೀತಿ ಇರುತ್ತಿದ್ದ ಕಪ್ಪು ಬಣ್ಣದ ದನಗಳ ನಡುವೆ ಅದಕ್ಕೆ ಅದರ ತಾಯಿ ಸಿಗುತ್ತಿತ್ತು. ಅದೆಷ್ಟೋ ಕರುಗಳನ್ನು ಹಾಕಿದ್ದ ಅ ಮಹಾ ಹಸು ತನ್ನ ಕಂದನನ್ನು ನೆಕ್ಕುತ್ತಾ ಇತ್ತು.  ನಿಜಕ್ಕೂ ಅದು ನಮ ಆಶ್ಚರ್ಯದ ಸಂಗತಿಯಾಗಿತ್ತು. ಹುಲ್ಲು ಮೇಯಲು ಹೋದ ಕರು ತಾಯಿಯನ್ನು ಹುಡುಕಿ  ಮತ್ತೆ ಪುನಃ ಸಾಯಂಕಾಲ ತಾಯಿ ಜತೆಯಲ್ಲೇ ಪೂರ್ವಾಶ್ರಮಕ್ಕೆ ಬರುತ್ತಿತ್ತು.  ತಾಯಿಯ ಜತೆ ಇದ್ದ ಹಸುಕರುವನ್ನು ತರುವುದಕ್ಕೆ ಮನಸ್ಸಾಗುತ್ತಿರಲಿಲ್ಲ. ಆದರೆ ತರದೇ ಬೇರೆ ವಿಧಿ ಇರಲಿಲ್ಲ. ಕೈಯಲ್ಲಿದ್ದ ಹಗ್ಗವನ್ನು ಹಸುವಿನ ಕೊರಳಿಗೆ ಬಿಗಿಯುತ್ತಿದ್ದಂತೆ ಅದು ವಿಧಿ ಇಲ್ಲದೆ ನಮ್ಮನ್ನು ಅನುಸರಿಸುತ್ತಿತ್ತು.  ಆ ಕರು ದೊಡ್ಡದಾಗಿ  ಹಸುವಾಗಿ ಹಲವು ಸಲ ಕರು ಹಾಕುವ ವರೆಗೂ ನಮ್ಮ ಜತೆಯಲ್ಲೇ ಇತ್ತು.  ಬಾಲ್ಯದ ನಮ್ಮ ಶರೀರ ಒಂದಷ್ಟು ದಿನ ಆ ಹಾಲನ್ನೇ ಹೀರಿ ಬೆಳೆದಿತ್ತು. 

ಆಗತಾನೇ ಹುಟ್ಟಿದ ಮಗು ತಾಯಿಯನ್ನು ಕಳೆದುಕೊಳ್ಳುತ್ತದೆ. ಆ ಮಗು ಒಂದೇ ಸವನೆ ಅಳುತ್ತದೆ. ಮನೆಯವರು ಎಷ್ಟೇ ದುಡ್ಡು ಕೊಟ್ಟು ಹಾಲು ತಂದು ಬಾಟಲಿಗೆ ಹಾಕಿ ಕೊಟ್ಟರೂ ಮಗು ಕುಡಿಯುವುದಿಲ್ಲ. ಅಳು ನಿಲ್ಲಿಸುವುದಿಲ್ಲ. ಪಕ್ಕದ ಮನೆಯ   ಹೆಂಗಸು ಮನೆಯೊಳಗಿನ  ಸಮಸ್ಯೆ ತಿಳಿದು ಬರುತ್ತಾಳೆ. ಪುಟ್ಟ ಶಿಶುವಿಗೆ ತನ್ನ ಎದೆ ಹಾಲನ್ನು ಕುಡಿಸುತ್ತಾಳೆ ಮಗು ಅಳು ನಿಲ್ಲಿಸುತ್ತದೆ. ಆ ತೊಟ್ಟು ಹಾಲಿನ ಮೌಲ್ಯ ಮಗುವಿಗೂ ತಿಳಿಯುವುದಿಲ್ಲ. ಕೊಟ್ಟ ಹೆಂಗಸೂ ಲೆಕ್ಕ ಹಾಕುವುದಿಲ್ಲ. ಲೆಕ್ಕವಿಲ್ಲದೇ ಇದ್ದರೆ ಎನಂತೆ?   ಅದಕ್ಕೆ ಮೌಲ್ಯವೂ ಇಲ್ಲವೇ?  ವಾಸ್ತವದಲ್ಲಿ ಮೌಲ್ಯ ನೋಡದೇ ಇದ್ದರೂ ಮೌಲ್ಯವನ್ನು ತಿಳಿಯುವ ಆವಶ್ಯಕತೆಯೂ  ಇರುವುದಿಲ್ಲ.  ಆ ಅವಶ್ಯಕತೆ ಒದಗಿ ಬಂದರೆ ಅದು ಆತ್ಮ ಸಾಕ್ಷಿ.  ಈ ಘಟನೆ ಮಿತ್ರನ ಮನೆಯಲ್ಲಿ ಕಣ್ಣಾರೆ ಕಂಡಿದ್ದೆ. ತಾಯಿ ಮಗು ಈ ಪ್ರಪಂಚ ಕಂಡ ಅತ್ಯಂತ ನಿಗೂಢ ಸಂಬಂಧ.

ಮಂಗಳೂರಿನ ಮಿಲಾಗ್ರಿಸ್ ಹತ್ತಿರದ ಬಸ್ ಸ್ಟಾಪ್ ನಲ್ಲಿ ತಲಪಾಡಿಗೆ ಹೋಗುವ  ನಲ್ವತ್ತೆರಡು ನಂಬರ್ ಬಸ್ ಕಾಯುತ್ತಾ   ನಿಂತಿದ್ದೆ.  ಅದು ಎಪ್ಪತ್ತರ ದಶಕದ ಸಮಯ.  ಊರಿಗೆ ಅಂದರೆ ಪೈವಳಿಕೆಗೆ ಹೋಗಬೇಕೆಂದರೆ ತಲಪಾಡಿಗೆ ಹೋಗಿ ಅಲ್ಲಿಂದ ಬೇರೆ ಬಸ್ಸು ಹಿಡಿದು ಹೋಗಬೇಕಿತ್ತು.  ಆಗ ತಲಪಾಡಿಗೆ ಹೋಗುವ ಬಸ್ ಗಳು ಈಗಿನಂತೆ ಲೈಟ್ ಹೌಸ್ ಹಿಲ್ ಗುಡ್ಡ ಹತ್ತಿ ಹೋಗುತ್ತಿರಲಿಲ್ಲ. ಬದಲಿಗೆ ಕೆಳಗಿನಿಂದ ಅರವಿಂದ್ ಮೋಟಾರ್ಸ್ ಪಕ್ಕದಲ್ಲೇ ಹೋಗಿ ಜ್ಯೋತಿ ವೃತ್ತ ಸೇರುತ್ತಿತ್ತು.  ಸಾಮಾನ್ಯವಾಗಿ ಸ್ಟೇಟ್ ಬ್ಯಾಂಕ್ ಹೋಗಿ ಅಲ್ಲಿಂದಲೇ ಬಸ್ ಹಿಡಿಯುವ ನಾನು ಅಂದು ಮಿಲಾಗ್ರಿಸ್ ಬಳಿ ನಿಂತಿದ್ದೆ. ನಾವು ಸಣ್ಣ ಮಕ್ಕಳು ಮನೆಯಿಂದ ಹೊರಡುವಾಗಲೇ ಬಸ್ ಹೊರಡುವಲ್ಲಿಂದ ಅಂದರೆ ಸ್ಟೇಟ್ ಬ್ಯಾಂಕ್ ನಿಂದ ಬಸ್ಸು ಹಿಡಿಯುವಂತೆ ಹೇಳುತ್ತಿದ್ದರು. ಅದೇ ನಾವು ಹಿರಿಯವರೊಂದಿಗೆ ಬಂದರೆ ಅವರು ಎಲ್ಲೆಂದರಲ್ಲಿ ಹತ್ತಿಕೊಂಡು ಹೋಗುವುದನ್ನು ಕಂಡು ನಾನೂ ದೊಡ್ಡವನಾಗಿದ್ದೇನೆ ಎಂಬ ಭ್ರಮೆಯಲ್ಲಿ ಸ್ಟೇಟ್ ಬ್ಯಾಂಕ್ ಹೋಗದೇ ಇಲ್ಲಿ ಕಾದು ಕುಳಿತಿದ್ದೆ. ತುಸು ಹೊತ್ತಿನಲ್ಲೇ ನಲ್ವತ್ತೆರಡು ನಂಬರ್ ನ ಸಿಟಿ ಬಸ್ ಬಂತು.  ಬಸ್ ಬಹಳಷ್ಟು ಖಾಲಿ ಇದ್ದದ್ದು ನೋಡಿ ಸಂತೋಷವಾಯಿತು. ಕಿಟಿಕಿ ಪಕ್ಕದ ಸೀಟ್ ನಲ್ಲಿ ಕುಳಿತೆ. ಬಸ್ ನಗರ ಬಿಟ್ಟು  ನೇತ್ರಾವತಿ ಹೊಳೆ ದಾಟಿದರೂ ಬಸ್ ಬಹಳಷ್ಟು ಖಾಲಿಯಾಗಿಯೇ ಇತ್ತು. ಆಗ ಬಸ್ ನಲ್ಲಿ ಕೆಲವರು, ಕೇರಳ ಬಂದ್  ನ ಬಗ್ಗೆ ಮಾತನಾಡುತ್ತಿದ್ದರು. ಹೌದು,  ಅಂದು ಕೇರಳ ಬಂದ್, ಮತ್ತು  ಬಸ್ ಸ್ಟ್ರೈಕು. ತಲಪಾಡಿಯಿಂದ ಆಕಡೆ ಹೋಗುವುದಕ್ಕೆ  ಬಸ್ಸುಗಳು ವಾಹನಗಳು ಇರಲಿಲ್ಲ. ಅಷ್ಟರವೆರೆಗೂ ಖುಷಿಯಲ್ಲಿದ್ದ ನನಗೆ ಗಾಬರಿ ಶುರುವಾಯಿತು. ಅರೇ ತಲಪಾಡಿಯಿಂದ ಮುಂದೆ ಹೇಗೆ? ಕೋಟೇ ಕಾರು ಬೀರಿ ಕಳೆದು ತಲಪಾಡಿ ಹತ್ತಿರವಾಗುತ್ತಿದ್ದಂತೆ ಬಸ್  ಇರಲಪ್ಪಾ ಅಂತ ಬೇಡಿಕೊಂಡೆ. 

ಬಸ್ ತಲಪಾಡಿಗೆ ಬಂದು ತಲಪಿದಾಗ ಆಕಾಶವೇ ಕಳಚಿ ಬಿದ್ದಂತಾಯಿತು. ಊಹಿಸಿದಂತೆ ಅತ್ತ ಕೇರಳಕ್ಕೆ ಹೋಗುವ ಬಸ್ಸು ಇರಲಿಲ್ಲ. ಬಸ್ಸು ಇಳಿದು ಸುತ್ತ ಮುತ್ತ ನೋಡಿದೆ. ಅದಾಗಲೇ ಬಿಸಿಲು ಪ್ರಖರವಾಗಿತ್ತು. ಏನು ಮಾಡುವ? ನಡೆಯದೆ ಬೇರೆ ವಿಧಿ ಇರಲಿಲ್ಲ. ಯೋಚಿಸಿದಷ್ಟು ಮತ್ತೂ ಹೊತ್ತು ತಡವಾಗುವುದೇ ವಿನಾ ಸಮಸ್ಯೆ ಪರಿಹಾರವಾಗುವುದಿಲ್ಲ. ತಲಪಾಡಿಯಿಂದ ಪೈವಳಿಕೆ ಕಡೆಗೆ ನಡೆಯುವುದಕ್ಕೆ ಶುರು ಮಾಡಿದೆ.  ಅದು ದೂರ ಸರಿ ಸುಮಾರು ಇಪ್ಪತ್ತು ಕಿಲೋಮೀಟರ್. ಚಿಕ್ಕ ಬಾಲಕ ನಾನು. ರಸ್ತೆಯಲ್ಲಿ ವಾಹನ ಸಂಚಾರವೇ ಇಲ್ಲ. ಅಕ್ಕ ಪಕ್ಕದಲ್ಲಿ ಅಂಗಡಿಗಳೂ ಇರಲಿಲ್ಲ. ರಸ್ತೆಯಲ್ಲಿ ಅಲ್ಲಲ್ಲಿ ಕಲ್ಲು ಮರ ಅಡ್ಡವಿರಿಸಿದ್ದರು.   ತುಸು ದೂರ ನಡೆಯುವಷ್ಟರಲ್ಲಿ ಬಾಯಾರಿಕೆಯಾಗುವುದಕ್ಕೆ ಆರಂಭಿಸಿತು.   ಅಂಗಡಿ ಹೋಟೇಲು ಇಲ್ಲವಾದರೆ ನೀರು ಎಲ್ಲಿಂದ? ಈಗಿನಂತೆ ನೀರಿನ ಬಾಟಲ್ ಜಮಾನವಲ್ಲ.  ಒಂದು ತಾಸು ನಡೆದಾದ ಮೇಲೆ ರಸ್ತೆಯಿಂದ ಬಹುದೂರ ಒಂದು ಗೂಡಂಗಡಿ ಕಂಡು ಅತ್ತ ಹೋದರೆ ಅದು ಮುಸ್ಲಿಂ ಬ್ಯಾರಿಯ ಅಂಗಡಿ. ಸಣ್ಣ ಬಾಗಿಲು ತೆರೆದು ವ್ಯಾಪಾರ ಮಾಡುತ್ತಿದ್ದ. ನಾನು ಬಾಳೆ ಹಣ್ಣು ತೆಗೆದುಕೊಂಡು, ನೀರು ಇದೆಯಾ ಅಂತ ಕೇಳಿದರೆ ಆತ ಹಿಂದೆ ಮನೆಯ ಕಡೆ ಕೈ ತೋರಿಸಿದ.  ಅಂಗಡಿಯ ಹಿಂದೆ ಅವನದ್ದೇ ಮನೆ ಇತ್ತು. ಅಲ್ಲಿ ನೀರು ಕೇಳಿದೆ. ಮನೆಯಾಕೆ ವೃದ್ದೆ ತಂಬಿಗೆಯಲ್ಲಿ ನೀರು ತಂದಿಟ್ಟಳು ಒಂದೆರಡು ಲೋಟ ನೀರು ಕುಡಿದು ಬಾಳೆಹಣ್ಣು ತಿನ್ನುತ್ತಿದ್ದಂತೆ ದಣಿವಾರಿಸಿತು. ಈಗ ಆ ಅಂಗಡಿಯೂ ಇಲ್ಲ. ಆ ಮನೆಯೂ ಇಲ್ಲ. ಆದರೂ ಆ ಹಾದಿಯಲ್ಲಿ ಹೋಗುತ್ತಿರಬೇಕಾದರೆ ಆ ಘಟನೆ ನೆನಪಾಗುತ್ತದೆ. ಆ ಉರಿ ಬಿಸಿಲಲ್ಲಿ ಕುಡಿದ ತಂಬಿಗೆ ನೀರು ಅದು ಇಂದೂ ಹೃದಯದಲ್ಲಿ ತೇವವನ್ನು ಉಳಿಸಿಕೊಂಡಿದೆ.  ಈ ಘಟನೆಗೂ ಉಳಿದ ಘಟನೆಗೂ ಏನೂ ಹೊಂದಿಕೆ ಇಲ್ಲ. ಆದರೂ ಬಿಸಿಲ  ಝಳಕ್ಕೆ ತಂಪೆರೆದ ಆ ಹೆಣ್ಣನ್ನು ನಾನು ಮರೆಯಲಾರೆ.

ಅಂದು ಬಾಯಾರಿಕೆಗೆ ನೀರು ಎಲ್ಲಿಂದ ಬಂತು? ಹೇಗೆ ಸಿಕ್ಕಿತು ? ನೀರಿನ ಮೂಲದ ಬಗ್ಗೆ ಮನಸ್ಸು ಯೋಚಿಸಲಿಲ್ಲ. ಒಣಗಿದ ಗಂಟಲಿಗೆ ಸುರಿದ ನೀರು ಜಗತ್ತಿನ ಎಲ್ಲ ಸುಖವನ್ನೂ ನೀಡಿತ್ತು. ಈಗ ಅಲ್ಲೇನಿಂತು,   ಮಿನರಲ್ ವಾಟರ್,  ಎಳನೀರೋ ದುಡ್ಡು ಕೊಟ್ಟು ಕುಡಿಯಬಹುದು. ಅದರೂ ಅಂದು ಸಿಕ್ಕಿದುದರ ಮೌಲ್ಯ ಅದನ್ನು ಸ್ವಯಂ ನಾನೇ ನಿರ್ಧರಿಸಬೇಕು. ಇದನ್ನೇ ಆತ್ಮ ಸಾಕ್ಷಿ ಎನ್ನುವುದು.  ಇದು ಕೇವಲ ನನ್ನ ಅನುಭವಕ್ಕೆ ಸೀಮಿತ.

ರಾಮಾಯಣ ಬರೆದ ವಾಲ್ಮೀಕಿಯ ಕಥೆ ಯಾರಿಗೆ ಗೊತ್ತಿಲ್ಲ?  ರಾಮ ನಾಮ ಸಾಕ್ಷಾತ್ಕಾರದಲ್ಲಿ ಆತ್ಮ ಸಾಕ್ಷಿಯನ್ನು ಕಂಡ ಪುಣ್ಯಾತ್ಮ.  ಕಾಡಿನಲ್ಲಿ ಅತ್ತಿತ್ತ ಹೋಗುವವರನ್ನು ಹಿಂಸಿಸಿ ಸಂಪತ್ತನ್ನು ಸೂರೆ ಹೊಡೆದು ಮನೆಯಲ್ಲಿ ಹೆಂಡತಿ ಮಕ್ಕಳಿಗೆ ತಂದು ಕೊಡುತ್ತಿದ್ದ.  ಗಂಡ ಎಲ್ಲಿಂದ ಹೇಗೆ ತಂದೆ?  ಎಂದು ಹೆಂಡತಿ ಕೇಳಲಿಲ್ಲ. ಮಕ್ಕಳು ಅಪ್ಪ ಏನು ಮಾಡುತ್ತಾನೆ ಎಂದೂ ನೋಡಲಿಲ್ಲ. ಬಂದದ್ದನ್ನು ಉಂಡು ಸುಖವಾಗಿದ್ದರು. ಕೊನೆಯಲ್ಲಿ ನಾರದ ಮುನಿಗಳು ಬರುತ್ತಾರೆ. ಮತ್ತೆ ಗೊತ್ತೇ ಇದೆ. ತಾನು ತನ್ನ ಹೆಂಡತಿ ಮಕ್ಕಳಿಗಾಗಿ ದರೋಡೆ ಮಾಡಿದ್ದರೂ ಸಿಕ್ಕಿದ ಸಂಪತ್ತಿನಲ್ಲಿ ಪಾಲು ಪಡೆಯುವ ಹೆಂಡತಿ ಗಳಿಸಿದ ಪಾಪಕ್ಕೆ ಕೇವಲ ತನ್ನೇನ್ನೇ ಹೊಣೆಯಾಗಿಸುತ್ತಾಳೆ. ಪಾಪದ ಉರುಳು ತನ್ನ ಕೊರಳನ್ನು ಮಾತ್ರ ಬಿಗಿಯುತ್ತದೆ. ಅದನ್ನು ಕಟ್ಟಿದ ಮರವೋ ಗೆಲ್ಲೋ ಯಾವುದಕ್ಕೂ ಪಾಪಾಭೀತಿ ಇರುವುದಿಲ್ಲ.  ನಾರದನಿಂದ ಜ್ಞಾನೋದಯವಾಗುತ್ತದೆ.  ಆತ್ಮ ಸಾಕ್ಷಿ ಜಾಗೃತವಾಗುತ್ತದೆ. ವ್ಯಾವಹಾರಿಕ ಪ್ರಪಂಚದ ಸತ್ಯ ಇದು. ಎಲ್ಲ ಸಂಭಂಧಗಳಲ್ಲಿ  ವ್ಯವಹಾರ ನೈಪುಣ್ಯತೆ ಮಾತ್ರವೇ ಇರುತ್ತದೆ.  ಎಲ್ಲ ಸಂಬಂಧಗಳೂ ಈ  ಒಂದು ಪರಿಧಿಯೊಳಗೇ ವ್ಯವಹರಿಸುತ್ತದೆ. ಆದರೂ ತಾಯಿ ಮಗುವಿನ ಸಂಬಂಧ ಈ ವ್ಯವಹಾರಗಳನ್ನೆಲ್ಲ ಮೀರಿ ನಿಲ್ಲುವಂತೆ ಭಾಸವಾಗುತ್ತದೆ.  ಅಲ್ಲಿ ವ್ಯಾವಹಾರಿಕ ಮೌಲ್ಯವಿರುವುದಿಲ್ಲ. ಮಲಗಿದಲ್ಲೇ ಮಲ ವಿಸರ್ಜಿಸಿದ ಮಗುವನ್ನಾಗಲೀ ಮನುಷ್ಯನನ್ನೇ ಆಗಲಿ ತಾಯಿಯಾದವಳು ಹೇಸಿಗೆ ಪಟ್ಟುಕೊಳ್ಳುವುದಿಲ್ಲ. ಸಾಯೋವರೆಗೂ ತನ್ನ ಜೀವ ಭಾವದ ಭಾಗವಾಗಿ ಆ ಮಗುವನ್ನು ಕಾಣುತ್ತಾಳೆ.  ಹಾಗಾಗಿ ಏನೇ ಆದರೂ ಪ್ರತಿಯೊಬ್ಬನಿಗೂ ತಾಯಿ ಮುಂದೆ ನಿಂತಾಗ “ಆತ್ಮಸಾಕ್ಷಿ” ಜಾಗ್ರತವಾಗುತ್ತದೆ.  ಅಮ್ಮನ್ನ ಕಣ್ಣೀರನ್ನು ಕಂಡೇ  ಆಟದ ಕಡು ದುರುಳ ಮಹಿಷಾಸುರ ಸ್ವರ್ಗಲೋಕಕ್ಕೆ ಧಾಳಿ ಇಡುತ್ತಾನೆ. ಅಮ್ಮ ಎಂದರೆ ಅದು ತುಲನೆ ಮಾಡಲಾಗದ ವಸ್ತು, ಕಲ್ಪಿಸಲಾಗದ ಕಲ್ಪನೆ. ನಿಲುಕಲಾರದ ಭಾವ.


Wednesday, November 21, 2018

ಆರಾಧಿಸುವೆ ಮದನಾರಿ....

"ಆರಾಧಿಸುವೆ ಮದನಾರಿ ಆದರಿಸೂ ನೀ ದಯೆ ತೋರಿ...", ಈ ಜನಪ್ರಿಯ ಗೀತೆಯನ್ನು ಇತ್ತೀಚೆಗೆ   ರಿಯಾಲಿ
ಟಿ ಶೋ ಒಂದರಲ್ಲಿ ಗಾಯಕನೊಬ್ಬ ಹಾಡಿದ. ಹಾಡು ಮುಗಿಯುತ್ತಿದ್ದಂತೆ ಕಿವಿಗಡಚಿಕ್ಕುವಂತೆ ಚಪ್ಪಾಳ ಶಿಳ್ಳೆ ಮೊಳಗಿತು. ಜನಪ್ರಿಯವಾದ ಹಾಡೆಂದರೆ ಟಿ. ವಿ ಯಲ್ಲಿ ಇದು ಸಾಮಾನ್ಯ. ಕೆಲವೊಮ್ಮೆ ಈ ಚಪ್ಪಾಳೆ ದೃಶ್ಯವನ್ನು ಮಾತ್ರಾ ಚಿತ್ರೀಕರಿಸಿ ಅದನ್ನು ಬೇಕಾದಲ್ಲಿಗೆ ಜೋಡಿಸಿ ಪ್ರಸಾರ ಮಾಡುತ್ತಾರೆ. ಇದನ್ನು ತಿಳಿಯದ ಪ್ರೇಕ್ಷಕ ಮೂರ್ಖನಾಗುತ್ತಾನೆ. ಹೀಗಿದ್ದರೂ ಈ ಹಾಡು ಅತ್ಯಂತ ಸರ್ವಾಂಗ ಸುಂದರ ಅನುಮಾನವಿಲ್ಲ.  ಇದು ಹೆಸರಾಂತ ಚಲನಚಿತ್ರ "ಬಬ್ರುವಾಹನ" ಚಿತ್ರದ ಜನಪ್ರಿಯ ಗೀತೆ. ಹಿನ್ನೆಲೆಯಲ್ಲೂ ಮುನ್ನೆಲೆಯಲ್ಲೂ ಅಂದರೆ ಚಿತ್ರದಲ್ಲೂ ಡಾ| ರಾಜ್ ಕುಮಾರ್ ಹಾಡಿದ್ದಾರೆ. ಅಧ್ಬುತವಾಗಿ ಚಿತ್ರಿಸಲ್ಪಟ್ಟ ಈ ಗೀತೆ ಅಂದು ಬಹಳ ಜನಪ್ರಿಯವಾಗಿತ್ತು.  ಈದೀಗ ಯುವ ಗಾಯಕನೊಬ್ಬ ಸುಂದರವಾಗಿ ಹಾಡಿದ. ಸಹಜವಾಗಿ ಕಾರ್ಯಕ್ರಮದ ನಿರ್ಹಾಕಿ ಕೇಕೆ ಹಾಕಿ ಅಭಿನಂದನೆ ಸಲ್ಲಿಸುತ್ತಾಳೆ. ಜತೆಗೆ ಅಲ್ಲಿದ್ದ ತೀರ್ಪುಗಾರರೂ ತಮ್ಮ ಅಭಿಪ್ರಾಯವನ್ನು ಹರಿಯಬಿಡುತ್ತಾರೆ. ಆದರೆ,

ಆರಾಧಿಸುವೆ ಮದನಾರಿ ಎಂಬ ಹಾಡು... ವರನಟ, ಪದ್ಮಭೂಷಣ   ಡಾ . ರಾಜ್ ಕುಮಾರ್ ಎಂದು  ಒಂದಷ್ಟು ಹೊಗಳಿಕೆ ಹಿರಿಯ ನಟನಿಗೆ ಸಲ್ಲಿಸುತ್ತಾಳೆ. ಒಂದು ಐದಾರು ಸಲವಾದರೂ ರಾಜ್ ಕುಮಾರ್ ಎಂದು ಹೊಗಳುತ್ತಾಳೆ.  ರಾಜ್ ನಟಿಸಿರುವ ಬಬ್ರುವಾಹನ  ಚಲನ ಚಿತ್ರ ಎಂಬುದಾಗಿಯೂ ಹೊಗಳುತ್ತಾಳೆ. ಜನಪ್ರಿಯ ನಟನ ಹೆಸರು ಹೇಳಿದಂತೆಲ್ಲ ಮತ್ತೆ ಚಪ್ಪಾಳೆಯ ಸುರಿಮಳೆ.  ಈ ಯಥಾವತ್ ಚಪ್ಪಾಳೆಯೂ ಪ್ರತ್ಯೇಕವಾಗಿ ಚಿತ್ರಿಕರಿಸಿರುವುದು ಹಲವು ಸಲ ವ್ಯಕ್ತವಾಗುತ್ತದೆ. ಇರಲಿ  ಇದರ ಬಗ್ಗೆ ಆಕ್ಷೇಪವೇನಿಲ್ಲ. ಹೊಗಳ ಬೇಕಾದ ವಿಷಯಗಳು ಹೊಗಳಲೇಬೇಕು. ಪ್ರಶಂಸಾರ್ಹವಾದ ವಿಚಾರಗಳನ್ನು ಮುಕ್ತವಾಗಿ ಪ್ರಶಂಸಿಸುವುದು ಪ್ರಾಮಾಣಿಕತೆಯ ಲಕ್ಷಣ. ಆದರೆ ಒಂದು ವಿಚಾರದ ಬಗ್ಗೆ ಹೊಗಳುವಾಗ ಆ ವಿಚಾರದ ಬಗ್ಗೆ ಗಹನವಾಗಿ ತಿಳಿದುಕೊಳ್ಳಬೇಕು. ಮತ್ತು ಅದಕ್ಕೆ ಪ್ರಾಮಾಣಿಕವಾದ ನ್ಯಾಯವನ್ನು ಒದಗಿಸಬೇಕು. ಇಲ್ಲವಾದರೆ ನಮ್ಮ ಹೊಗಳಿಗೆ ಎಂಬುದು ಪೂರ್ವಾಗ್ರಹ ಪ್ರೇರಿತವಾಗಿ ಯಾವುದೋ ಒಂದು ಸ್ವಾರ್ಥದಿಂದ ಕೂಡಿರುತ್ತದೆ ಎಂಬುದೇ ಸತ್ಯ.

ಈ ಮದನಾರಿ ಹಾಡನ್ನು ಶ್ರೀ ಡಾಕ್ಟರ್ ರಾಜ್ ರವರು ಅಧ್ಬುತವಾಗಿ ಸುಂದರವಾಗಿ ಹಾಡಿದ್ದಾರೆ ಅನುಮಾನವೇ ಇಲ್ಲ. ಇಂದಿಗೂ ಆ ಹಾಡನ್ನು ಕೇಳುವಾಗ ತುಂಬ ಸಂತೋಷವಾಗುತ್ತದೆ. ಆದರೆ ಹೊಗಳಿಕೆ ಎಂಬುದು ಕೇವಲ ರಾಜ್ ಕುಮಾರ್ ಗೆ ಮಾತ್ರ ಮೀಸಲಾಗಿರಿಸಿದರೆ ಆ ಹಾಡಿಗೆ ಸಂಪೂರ್ಣ ನ್ಯಾಯ ಸಲ್ಲುವುದಿಲ್ಲ.   ಈ ಹಾಡನ್ನು ರಚಿಸಿದವರು ಶ್ರೀ  ಹುಣಸೂರು ಕೃಷ್ಣ ಮೂರ್ತಿಯಾದರೆ ಈ ಹಾಡನ್ನು ಸಂಗೀತ ನೀಡಿ ಸಂಯೋಜಿಸಿದವರು ಪ್ರಸಿದ್ದ ಸಂಗೀತ ನಿರ್ದೇಶ ಟಿ. ಜಿ. ಲಿಂಗಪ್ಪ ಅವರು.  ಅಲ್ಲಿ ಸೇರಿದ ಅಷ್ಟು ಜನ ತೀರ್ಪುಗಾರರಾಗಲಿ, ಕಾರ್ಯಕ್ರಮದ ನಿರ್ವಾಹಕಿಯಾಗಲಿ ಇತರರೇ ಆಗಲಿ ಒಂದೇ ಒಂದು ಸಲವೂ ಹಾಡಿನ ಸಂಗೀತ ನಿರ್ದೇಶಿಸಿದ ಟಿ. ಜಿ ಲಿಂಗಪ್ಪ ಅವರ ಹೆಸರನ್ನು ಹೇಳಲಿಲ್ಲ. ಮಾತ್ರವಲ್ಲ ಹಾಡನ್ನು ರಚಿಸಿದ ಕವಿ ಹುಣಸೂರು ಅವರ ಹೆಸರನ್ನೂ ಹೇಳಲಿಲ್ಲ. ಇನ್ನೊಂದು ಪ್ರಮುಖ ಅಂಶವೆಂದರೆ ಅಲ್ಲಿ ಸೇರಿರುವವರು ಅಷ್ಟೂ ಮಂದಿ ಸ್ವತಃ ಗಾಯಕರು ಮತ್ತು ಸಂಗೀತಗಾರರೂ ಆಗಿರುತ್ತಾರೆ. ಹಾಗಾದರೆ ಇವರ ಹೊಗಳಿಕೆಯ ಹಿಂದೆ ಒಂದು ಸ್ವಾರ್ಥವಿದೆ ಎಂದರೆ ಅದನ್ನು ತಪ್ಪು ಅಂತ ಹೇಳುವುದಕ್ಕೆ ಸಾಧ್ಯವಿಲ್ಲ. ಸ್ವತಹ ಕಲಾವಿದರೇ ಹೀಗೆ ಪೂರ್ವಾಗ್ರಹ ಪ್ರೇರಿತರಾಗಿ ವರ್ತಿಸಿದರೆ ಅವರು ಅನುಸರಿಸುವ ಆರಾಧಿಸುವ ಕಲಾಮಾತೆಗೆ ಗೌರವ ಸಲ್ಲಿಸಿದಂತಾಗುವುದೇ?

ಒಬ್ಬ ಗಾಯಕ ಒಂದು ಹಾಡನ್ನು ಹಾಡುತ್ತಾನೆ ಎಂದಾದರೆ ಆ ಹಾಡಿನ ಹಿಂದೆ ಹಲವರ ಪರಿಶ್ರಮವಿರುತ್ತದೆ. ಎಲ್ಲರನ್ನೂ ಸ್ಮರಿಸುವುದಕ್ಕೆ ಸಾಧ್ಯವಿಲ್ಲ. ಆದರೆ ಆ ಹಾಡಿನ ಸಂಗೀತವನ್ನು ಸಂಯೋಜನೆ ಮಾಡಿ ನಿರ್ದೇಶಿಸಿದ ಕಲಾವಿದನಿಗೆ ಒಂದು ಗೌರವ ಸಲ್ಲಿಸದೇ ಇರುವುದು ನ್ಯಾಯವೆನಿಸುವುದಿಲ್ಲ. ಯಾರೋ ಓರ್ವ ಸಾಮಾನ್ಯ ಮನುಷ್ಯ ಕೇಳುಗನಾದವನು  ಹೀಗೆ ಮಾಡಿದರೆ ಮನ್ನಿಸಬಹುದು ಆದರೆ, ಸ್ವತಃ ಕಲಾವಿದರಾಗಿರುವ ವ್ಯಕ್ತಿಗಳು ಹೀಗೆ ವರ್ತಿಸುವುದು ಸರಿಯಲ್ಲ. 

ಒಂದು ಹಾಡಿಗೆ ಸಂಬಂಧಿಸಿದಂತೆ ಸಂಗೀತ ನಿರ್ದೇಶಕ ಮತ್ತು ಹಾಡನ್ನು ಬರೆದ ಕವಿ ತಂದೆ ತಾಯಿ ಸ್ಥಾನದಲ್ಲಿರುತ್ತಾರೆ. ಆನಂತರದ  ಮಗುವಿನ  ಸ್ಥಾನ ಗಾಯಕನಿಗೆ.  ಮಗು ತನ್ನ ಹೆತ್ತವರನ್ನು ಹೇಗೆ ಶಾಶ್ವತ ಗೊಳಿಸುತ್ತದೆಯೋ ಹಾಗೆ ಗಾಯಕ . ಆ ಹಾಡನ್ನು ಸುಂದರವಾಗಿ ಹಾಡಿ ಅಪ್ಪ ಅಮ್ಮನ ಹೆಸರನ್ನು ಶಾಶ್ವತಗೊಳಿಸಬೇಕು. ಆದರೆ ಇಲ್ಲಿ ಮಗುವನ್ನು ಹೊಗಳಿ ಅಟ್ಟಕ್ಕೇರಿಸಿದರೆ ಹುಟ್ಟಿಗೆ ಕಾರಣವಾದ ಅಪ್ಪ ಅಮ್ಮನನ್ನೇ ಮರೆತುಬಿಡುತ್ತಾರೆ. ಅಲ್ಲಿ ಹಾಡಿದ ಸ್ಪರ್ಧಿಯಾದ ಗಾಯಕನೊಬ್ಬ ತನಗೊದಗಿದ ಆ ಅವಕಾಶಕ್ಕೆ ತನ್ನ ಅಪ್ಪ ಅಮ್ಮನನ್ನು ಸ್ಮರಿಸುವಾಗ ತಾನು ಹಾಡಿದ ಹಾಡಿನ ನೈಜ ಅಪ್ಪ ಅಮ್ಮನನ್ನು ಮರೆತಿರುತ್ತಾನೆ.  ಯಾಕೆಂದರೆ ಗಾಯಕನನ್ನು ಹೊಗಳಿದರೆ ಪ್ರೇಕ್ಷಕನ ಭಾವನೆ ಕೆರಳುತ್ತದೆ. ಪ್ರೇಕ್ಷಕ ಹುಚ್ಚೆದ್ದು ಕೆರಳಿದರೆ ಕಾರ್ಯಕ್ರಮ ಯಶಸ್ವಿಯಾದಂತೆ. ವಾಸ್ತವದಲ್ಲಿ ಇವರು ಆ ಗಾಯಕ ರಾಜ್ ಕುಮಾರ್  ಪ್ರತಿಭೆಗೂ ಗೌರವ ಸಲ್ಲಿಸಿದಂತಾಗುವುದಿಲ್ಲ. ಆದರ ಪರಿಜ್ಞಾನ ಅವರಿಗಿಲ್ಲ ಎಂದು ವಿಷಾದಿಸಬೇಕಾಗುತ್ತದೆ. 

ಆರಾಧಿಸುವೇ ಮದನಾರಿ ಎಂಬ ಹಾಡಿನ ರಚನೆ ಸುಂದರವಾದ ಕನ್ನಡ ಕಾವ್ಯಸೃಷ್ಟಿಯಂತೆ ಮೂಡಿ ಬಂದಿರುತ್ತದೆ.  ಅದರ ಪ್ರತಿಯೊಂದು ಶಬ್ದಗಳ ಅರ್ಥ ಆಳ ವಿಸ್ತಾರವನ್ನು ಅ ಶಬ್ದಗಳನ್ನು ಸುಂದರವಾಗಿ ಉಪಯೋಗಿಸಿ ಹಾಡನ್ನು ಶ್ರೀಮಂತ ಗಾನವಾಗುವಂತೆ ಮಾಡಿದ್ದನ್ನು ನಾವು ಸ್ಮರಿಸಲೇಬೇಕು.  ಕವಿಯ ಸೌಂದರ್ಯ ಪ್ರಜ್ಞೆ ರಸಿಕತೆ ಪ್ರತೀ ಪದದಲ್ಲೂ ವ್ಯಕ್ತವಾಗುತ್ತದೆ. " ಮೈದೋರಿ ಮುಂದೆ ಸಹಕರಿಸು ಆ ಮಾರನುರವಣೇ ಪರಿಹರಿಸು" ಎಂಬ ವಾಕ್ಯವಿದೆ. ಅಲ್ಲಿ ಸೇರಿದ ಏಷ್ಟು ಮಂದಿಗೆ ಈ ವಾಕ್ಯದ ಅರ್ಥವನ್ನು ವಿವರಿಸುವುದಕ್ಕೆ ಸಾಧ್ಯವಿದೆಯೋ ದೇವರೆ ಬಲ್ಲ. ಅಷ್ಟಿದೆ ಕನ್ನಡ ಭಾಷಾ ಜ್ಞಾನ. "ಆ ಮಾರನುರವಣೇ ..." ಎಂದರೆ ಅರ್ಥವೇನು? ಈ ರೀತಿಯ ಪದಗಳ ಅರ್ಥ ಸೂಕ್ಷ್ಮವನ್ನು ಅರಿತರೆ ಆ ಕವಿಯ ಶ್ರಮವೂ ಪ್ರತಿಭೆಯೂ ಅರ್ಥವಾಗಬಹುದು.  ಆ ಪ್ರತಿಭೆಗೆ ತಕ್ಕ ಮನ್ನಣೆಯೂ ಸಿಗಬಹುದು. ಆದರೆ ಕೇವಲ ಭಾಷಾಭಿಮಾನ ಇದ್ದರೆ ಸಾಲದು.  ಅದನ್ನು ಅರ್ಥವಿಸುವ ಭಾಷಾಜ್ಞಾನವೂ ಇರಬೇಕು.ಕನ್ನಡ ಸರಳ ಸುಂದರ ಭಾಷೆ, ಅದರ ಸೌಂದರ್ಯ ಅರ್ಥವಾಗಬೇಕಾದರೆ ಅದನ್ನು ತುಸುವಾದರು ಇಂತಹ ಪದಗಳನ್ನು ಹಾಡುಗಳನ್ನು  ಅರ್ಥವಿಸುವಷ್ಟು ಕನ್ನಡ ಭಾಷೆ ಗೊತ್ತಿರಬೇಕು.   ಅದರಂತೆ ಈ ಹಾಡಿನ ಅಂಗುಲ ಅಂಗುಲದುದ್ದಕ್ಕೂ ಬೆಸೆಯುವ ಸಂಗೀತ ಅದೆಷ್ಟು ಶ್ರೀಮಂತವಾಗಿದೆ ಎಂದರೆ ಅದನ್ನು ರಸಿಕನಾದವನು ಅರ್ಥವಿಸಿಯಾನು. ಕೇವಲ ಪೂರ್ವಾಗ್ರಹದಿಂದ ನಮ್ಮ ಅಭಿಮಾನವನ್ನು ಒತ್ತೆ ಇಡುವ ಅರಸಿಕರಿಗೆ ಇದು ಅರ್ಥವಾಗಲಾರದು. ಇಂದಿಗೂ ಆ ಹಾಡು ಪ್ರತಿಸಲ ಕೇಳುವುದಕ್ಕೆ ಮನಸ್ಸು ಬಯಸುತ್ತಿದ್ದರೆ ಅದಕ್ಕೆ ಮುಖ್ಯವಾಗಿ ಹಾಡಿನ ಸಂಗೀತ ಮತ್ತು ರಚನೆಯೇ ಕಾರಣ. ಆನಂತರದ ಗೌರವ ಗಾಯಕನಿಗೆ  ಸಲ್ಲಿಕೆಯಾಗುತ್ತದೆ.

ನಮ್ಮಲ್ಲಿ ಪ್ರತಿಭೆಯಿದೆ ಜ್ಞಾನವಿದೆ. ಅದನ್ನು ಅನುಭವಿಸುವ ರಸಿಕತೆಯೂ ಇದೆ. ಆದರೆ ಇದೆಲ್ಲವೂ ಗ್ರಹಿಸಿಕೊಳ್ಳಬೇಕಾದರೆ ಪೂರ್ವಾಗ್ರಹ ಪೀಡಿತ ಮನಸ್ಸನ್ನು ಶುದ್ದೀಕರಿಸಿಕೊಳ್ಳಬೇಕಾಗಿದೆ.  ಕೊನೆಯಲ್ಲಿ ಒಂದು ಪ್ರಶ್ನೆ   "ಮೈದೋರಿ ಮುಂದೆ ಸಹಕರಿಸು ಆ ಮಾರನುರವಣೇ ಪರಿಹರಿಸು"  ಎಂಬ ವಾಕ್ಯಾರ್ಥ  ಹೇಳಬಹುದೇ?


Saturday, November 10, 2018

ಕಾನೂನು ಪಾಲನೆ ಇದು ಯಾವಾಗ?


ಮೊನ್ನೆ ಒಂದು ದಿನ ಯಾವುದೋ ವಾರ್ತಾ ವಾಹಿನಿಯಲ್ಲಿ ಮಹಿಳೆಯೊಬ್ಬಳು ಬಿಸಿ ಬಿಸಿ ವಾದ ಮಂಡಿಸುತ್ತಿದ್ದಳು. ಶಬರಿ ಮಲೆ ಕ್ಷೇತ್ರದಲ್ಲಿ ಮಹಿಳೆಯರಿಗೂ ಪ್ರವೇಶ ಒದಗಿಸಬೇಕು. ಆ ಮೂಲಕ ಭಾರತದ ಉಚ್ಚನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು. ಈ ಮೂಲಕ ಭಾರತದ ಸಂವಿಧಾನವನ್ನೂ ಕಾನೂನನ್ನು ಗೌರವಿಸಬೇಕು. ಮಹಿಳೆಯ ಮಾತಿಗೆ ಸರ್ವಥಾ ಆಕ್ಷೇಪವಿಲ್ಲ. ಸ್ವತಃ ಈ ಮಹಿಳೆ ತಮ್ಮ ನಿತ್ಯ ಜೀವನದಲ್ಲಿ ಎಷ್ಟು ಕಾನೂನನ್ನು ಗೌರವಿಸುತ್ತಾರೆ ಎಂಬುದನ್ನು ಆತ್ಮ ವಂಚನೆಯಿಲ್ಲದ ಅವಲೋಕಿಸಿ ಈ ಮಾತನ್ನು ಆಡಿದ್ದರೆ  ಅದಕ್ಕೆ ಪೂರ್ಣ ಸಹಮತವಿದೆ.  ಕಾನೂನನ್ನು ಸಂವಿಧಾನವನ್ನು  ಭಾರತದ ನಾಗರೀಕನಾದವನು  ಒಪ್ಪಿಕೊಳ್ಳಲೇಬೇಕು. ಶಬರಿ ಮಲೆ ಕ್ಷೇತ್ರದ ಪ್ರವೇಶದ ಬಗೆಗಿನ ಚರ್ಚೆ ಒತ್ತಟ್ಟಿಗಿರಲಿ. ಆದರೆ ನಾವು ಕಾನೂನನ್ನು ಎಲ್ಲಿ ಹೇಗೆ ಎಷ್ಟು ಗೌರವಿಸುತ್ತೇವೆ ಎಂದು ಪರಾಂಬರಿಸಿದರೆ ವಿಚಿತ್ರವೆನಿಸುತ್ತದೆ. 

  ಒಂದು ದಿನ ಸಿಗ್ನಲ್ ಒಂದರಲ್ಲಿ ಎಡಬಾಗಕ್ಕೆ ತಿರುವು ಮುಕ್ತವಿಲ್ಲದೇ ಇದ್ದುದರಿಂದ ಹಸುರು ದೀಪ ಬೆಳಗುವುದಕ್ಕೆ ಕಾಯುತ್ತಾ ನಿಂತಿದ್ದೆ. ಹಿಂದಿನಿಂದ ಒಂದೇ ಸವನೆ ಹಾರನ್ ಕೇಳಿದಾಗ ಹಿಂದಿರುಗಿ ನೋಡಿದೆ. ಮಹಿಳೆಯೊಬ್ಬರು ತಮ್ಮ ದ್ವಿಚಕ್ರ ವಾಹನವನ್ನು ಮುಂದೆ ಚಲಾಯಿಸುವುದಕ್ಕೆ ನನ್ನ ವಾಹನ ತುಸು ಜರಗಿಸುವಂತೆ ಕೇಳಿಕೊಂಡರು. ನಾನು ಕೇಳಿದರೂ ಕೇಳಿಸದಂತೆ ಸುಮ್ಮನೆ ನಿಂತೆ. ಆಕೆ ನಂತರ ಹಾರನ್ ಮಾಡುವುದನ್ನು ಬಿಟ್ಟು  ಸಾರ್...ಅಂಕಲ್ ಎನ್ನುತ್ತಾ  ಅಸಹನೆಯಿಂದಲೇ ಕೇಳಿಕೊಂಡಳು. ನಾನು ಆ ಕಡೆಗೆ ಗಮನವೇ ಕೊಡದೆ ನನ್ನ ಪಾಡಿಗೆ ಇದ್ದೆ. ನಂತರ ಅಕೆ ಅದು ಹೇಗೋ ಸ್ವಲ್ಪ ಜಾಗ ಮಾಡಿಕೊಂಡು ಕೆಂಪು ದೀಪ ಇನ್ನೂ ಉರಿಯುತ್ತಿದ್ದಂತೆ ಮುಂದೆ ವಾಹನ ಓಡಿಸಿದಳು. ಮಹಿಳೆಯನ್ನು ಕಂಡರೆ ಸುಶಿಕ್ಷಿತ ಮಹಿಳೆಯಂತೆ ಭಾಸವಾಯಿತು.  ಇಂತಹ ಅನುಭವಗಳು ಹೊಸದೇನಲ್ಲ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಇದು ವಿಚಿತ್ರವಾಗಿ ವಿಪರ್ಯಾಸವಾಗಿ ಭಾಸವಾಗುತ್ತದೆ.  ಖಡ್ಡಾಯವಾಗಿ ಪಾಲನೆ ಮಾಡಲೇಬೇಕಾದಂತಹ ಕಾನೂನನ್ನು ಇಲ್ಲಿ ಉಲ್ಲಂಘನೆ ಮಾಡಿವುದು ಮಾತ್ರವಲ್ಲ ಅದನ್ನು ಅವಹೇಳನ ಮಾಡಲಾಗುತ್ತದೆ. ರಸ್ತೆ ಬದಿಯಲ್ಲಿ ಪೋಲೀ ಸ್ ಇದ್ದಲ್ಲಿ ಮಾತ್ರವೇ ರಸ್ತೆ ನಿಯಮಗಳನ್ನು ಪಾಲಿಸುವಂತಹ ರೀತಿಯನ್ನು ಕಾಣುತ್ತೇವೆ. ಕೊನೆಯಲ್ಲಿ ಇಂತಹ ವ್ಯಕ್ತಿಗಳೇ ಉಚ್ಚನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು ಎನ್ನುವುದನ್ನೂ ಕಾಣಬಹುದು. 

ಸಾರ್ವಜನಿಕವಾಗಿ ಧೂಮಪಾನ ಮಾಡಬಾರದು. ಶಿಕ್ಷಾರ್ಹ ಅಪರಾಧ. ಈ ಕಾನೂನು ಎಷ್ಟು ಗೌರವಿಸಲ್ಪಟ್ಟಿದೆ? ರಸ್ತೆ ಬದಿಯಲ್ಲಿ ನಿಂತು ಕೈಯಲ್ಲಿ ಸಿಗರೇಟ್ ಉರಿಸಿ ಹೊಗೆ ಬಿಡುತ್ತಾ ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸಬೇಕು ಎನ್ನುತ್ತಾ ತಾವು ಕಾನೂನಿನ ಪಾಲಕರಂತೆ ಹೇಳುವುದು ಎಷ್ಟರ ಮಟ್ಟಿಗೆ ಸರಿ? 

ನಿನ್ನೆ ತಾನೆ ದೀಪಾವಳಿ ಕಳೆಯಿತು. ಹಗಲು ರಾತ್ರಿ ಎನ್ನದೆ ಕಿವಿ ಬಿರಿದು ಹೋಗುವಂತೆ ಪಟಾಕಿ ಸುಡು ಮದ್ದನ್ನು ಉರಿಸಿದ್ದಾಯಿತು. ಎಂಟು ಘಂಟೆಯಿಂದ ಹತ್ತರ ತನಕ ಮಾತ್ರ ಪಟಾಕಿ ಉರಿಸಬಹುದು ಎಂಬ ಸುಪ್ರೀಂ ಕೋರ್ಟು ತೀರ್ಪು ಗೌರವಿಸಬೇಕೆಂಬುದು ಮರೆತು ಹೋಯಿತು.  ಊರು ಹೊತ್ತಿ ಉರಿಯಲಿ, ಮನೆ ಮಂದಿ ತಿನ್ನುವುದಕ್ಕೆ ಆಹಾರವಿಲ್ಲದೇ ಉಡುವುದಕ್ಕೆ ಬಟ್ಟೆಯಿಲ್ಲದೇ ಹೋಗಲಿ ಪಟಾಕಿಯಂತು ಸುಡಲೇಬೇಕೆಂಬ ಭಾವನೆ ಜನರಲ್ಲಿದೆ.  ರಾತ್ರಿ ಹನ್ನೆರಡು ಕಳೆದರೂ ಕೇಳುವ ಪಟಾಕಿ ಸದ್ದಿಗೆ ಅದೆಷ್ಟು ಜನರು ಹೃದ್ರೋಗಿಗಳು ಪುಟ್ಟ ಕಂದಮ್ಮಗಳು ವಯೋ ವೃದ್ಧರು ಸಂಕಟ ಪಡುವುದು ಕಾಣುವುದಿಲ್ಲ.  ಪಟಾಕಿ ಜ್ವಾಲೆಗೆ ಶಾಶ್ವತವಾಗಿ ಕುರುಡರಾಗಿ ಹೋದಂತಹ ಅದೆಷ್ಟೋ ಮಕ್ಕಳು ಇದ್ದಾರೆ. ಪ್ರತಿ ವರ್ಷವೂ ಕಣ್ಣು ಕಳೆದುಕೊಂಡು ಅಂಗಹೀನರಾಗುವುದನ್ನು ಕಾಣುತ್ತೇವೆ. ಆದರೂ ಪಟಾಕಿ ಸದ್ದು ಮಾತ್ರ ಕೇಳುತ್ತಲೇ ಇರುತ್ತದೆ. ನಾವು ರೂಪಿಸುವ ಕಾನೂನೇ ಹಾಗಿರುತ್ತದೆ. ಸಂಪೂರ್ಣ ನಿಷೇಧಿಸಬೇಕಾದುದನ್ನು ಸ್ವಲ್ಪ ನಿಷೇಧಿಸಿ ಮೀಸೆ ಹೊಕ್ಕಿಸುವುದಕ್ಕೆ ಅವಕಾಶ ಮಾಡಿಬಿಡುತ್ತೇವೆ.  ಕಾನೂನು ಉಲ್ಲಂಘನೆಗೆ ಅದಷ್ಟೇ ಸಾಕಾಗುತ್ತದೆ.  

ಕಾನೂನು ಪಾಲನೆ ಮಾಡುವವನು ಹಳ್ಳಿಗಮಾರನೋ ಎಂಬಂತೆ ನೋಡುತ್ತಾರೆ. ಕಾನೂನು ಉಲ್ಲಂಘನೆ ಮಾಡಿದವನು ಅತಿ ಬುದ್ದಿವಂತ ನಾಗರೀಕನಂತೆ ಕಾಣುತ್ತಾರೆ. ರಸ್ತೆ ಬದಿಗೆ ಪೋಲಿಸ್ ನಿಂತಿದ್ದರೆ ಮಾತ್ರ ತಲೆಗೆ ಹೆಲ್ಮೆಟ್, ಭುಜ ಸೀಟ್ ಬೆಲ್ಟ್ ಬೇಕು. ಕೆಲವು ಪೋಲೀಸರೇ ಹೆಲ್ಮೆಟ್ ಇಲ್ಲದೇ ವಾಹನ ಚಲಾಯಿಸುತ್ತಾ  ಕಾನೂನು ಪಾಲನೆ ಮಾಡುವುದನ್ನು ಕಾಣುತ್ತೇವೆ. ಇಲ್ಲೆಲ್ಲೂ ಗೌರವ ಕಾಣದ ಕಾನೂನು ಶಬರಿಮಲೆ ವಿಷಯ ಬರುವಾಗ ಗೌರವಿಸಲೇ ಬೇಕಾದ ಅನಿವಾರ್ಯತೆಗೆ ಒಳಗಾಗುತ್ತದೆ. ಮುಖ್ಯವಾಗಿ ನಮ್ಮಲ್ಲಿ ಸಾರ್ವಜನಿಕ ಪ್ರಜ್ಞೆ ಜಾಗೃತವಾಗಬೇಕು. ಪ್ರತಿಯೊಂದು ವಿಷಯಕ್ಕೂ ವಿದೇಶಿಯರನ್ನು ಅನುಕರಿಸುವ ನಾವು ಕಾನೂನು ಪಾಲನೆಯಲ್ಲಿ ಮಾತ್ರ ವಿದೇಶಿ ಸಂಸ್ಕಾರವನ್ನು ವಿರೋಧಿಸುತ್ತೇವೆ. 

ಕಾನೂನು ಎಂಬುದು ಬೇಕಾದಂತೆ ಉಪಯೋಗಿಸಿಕೊಳ್ಳುವ ಬೇಕಾದಲ್ಲಿ ಅನುಕೂಲ ಒದಗಿಸುವ ವಸ್ತುವಾಗಿ ಬಳಸಲ್ಪಡುತ್ತದೆ.  ಭಾರತ ಸಂವಿಧಾನದ ನೂರೆಂಟು ಕಾನೂನುಗಳನ್ನು ಪೂರ್ಣವಾಗಿ ದುರ್ಬಳಕೆ ಮಾಡಿಕೊಂಡು ಕೆಲವೊಂದು ಕಾನೂನನ್ನು ತಮಗೆ ಬೇಕಾದಂತೆ ಉಪಯೋಗಿಸಿಕೊಳ್ಳುತ್ತೇವೆ. ಸ್ತ್ರೀಯರನ್ನು ರಕ್ಷಿಸಬೇಕಾದಂತಹ ವರದಕ್ಷಿಣೆ ವಿರೋಧಿ ಕಾನೂನು ಅಮಾಯ ಪುರಷರ ಬದುಕನ್ನೂ ನಾಶ ಮಾಡುವಲ್ಲಿಯೂ ಬಳಸಲ್ಪಡುತ್ತದೆ. ಕಾನೂನು ಸಂವಿಧಾನ ಗೌರವಿಸಲ್ಪಡಲೇಬೇಕು.  ಅದು ಕೇವಲ  ಅಂಬೇಡ್ಕರ್ ಬರೆದಿದ್ದಾರೆ ಎಂಬ ಒಂದು ಕಾರಣಕ್ಕೆ ಗೌರವಿಸಿದರೆ ಸಾಲದು. ಅದು ಯಾರೇ ಬರೆದಿರಲಿ ಭಾರತೀಯ ಸಂವಿಧಾನ ಪ್ರಜಾಪ್ರಭುತ್ವದ ಸ್ವತಂತ್ರ ಭಾರತದ ಸಂಕೇತವಾಗಿ ಗೌರವಿಸಲ್ಪಡಬೇಕು. ಕಾನೂನನ್ನು ಗೌರವಿಸಲೇ ಬೇಕು ಎಂಬ ಖಡ್ಡಾಯ ಕಾನೂನನ್ನು ರೂಪಿಸಬೇಕಾದ ಆನಿವಾರ್ಯತೆ ಇದೆ. 


Tuesday, November 6, 2018

ಸಮಾನತೆ.....



            ಇಂದು ಹೆಣ್ಣು ಗಂಡು ಸಮಾನತೆಗಾಗಿ ಹೋರಾಡುವ ಸನ್ನಿವೇಶಗಳನ್ನು ದಿನ ನಿತ್ಯವೆಂಬಂತೆ ಕಾಣುತ್ತೇವೆ. ಯಾವುದೇ ಮನುಷ್ಯರಿಗಾಗಲೀ ಪ್ರಾಣಿಗಾಗಲೀ ಭೂಮಿಯಲ್ಲಿ ಹುಟ್ಟಿದ ಮೇಲೆ ಬದುಕಿಗಾಗಿ ಹೋರಾಟ ಅನಿವಾರ್ಯ. ಅದು ಕಾಡಿನಲ್ಲಾಗಲೀ ಊರಲ್ಲಾಗಲೀ ಹೋರಾಟ ಇಲ್ಲದ ಬದುಕು ಇಂದು ಕಲ್ಪಿಸುವುದು ಅಸಾಧ್ಯ. ಹಾಗಿರುವಲ್ಲಿ ಗಂಡು ಹೆಣ್ಣು ಮಾಡುವ ಹೋರಾಟ ಇದು ಬದುಕಿಗಾಗಿ ಅಲ್ಲ. ಸಮಾನತೆಗಾಗಿ.  ಇದು ಎಷ್ಟು ಅನಿವಾರ್ಯವೋ ಅದು ವಿಷಯವಲ್ಲ. ಆದರೆ ಕೆಲವು ಅನುಭವಗಳು ಈ ಹೋರಾಟದ ಹಾದಿಯನ್ನು ವಿಸ್ಮಯದಿಂದ ಗಮನಿಸುವಂತೆ ಮಾಡುತ್ತವೆ.  ಸಮಾನತೆ ಅದು ಮನುಷ್ಯನಿಗೆ ಮಾತ್ರವಲ್ಲ, ಭೂಮಿಯಲ್ಲಿ ಹುಟ್ಟುವ ಪ್ರತಿಯೊಂದು ಜೀವಿಗೂ ಅವಶ್ಯಕ. ಯಾಕೆಂದರೆ ಯಾವುದೇ ಜೀವಿಯಾಗಲೀ ಭೂಮಿಯಲ್ಲಿ ಹುಟ್ಟುವುದು ಬದುಕುವುದಕ್ಕಾಗಿಯೇ ಹೊರತು ಸಾಯುವುದಕ್ಕಾಗಿ ಅಲ್ಲ.

            ಅಂದು ಬೆಳಗ್ಗೆ ಪೀಣ್ಯದಲ್ಲಿರುವ ಚಾಲನಾ ಪರವಾನಗಿ ಪರೀಕ್ಷಾ ( driving license test) ಮೈದಾನಿಗೆ ಹೋಗಿದ್ದೆ.  ನನ್ನ ಪತ್ನಿಗೆ ಅಂದು ಚಾಲನ ಪರವಾನಗೀ ಪರೀಕ್ಷೆ ಇತ್ತು. ಒಂದು ಬದಿಯಲ್ಲಿ ಒಂದಷ್ಟು ಬೆಂಚುಗಳನ್ನು ಸಾಲಾಗಿರಿಸಿ ಬಂದವರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿದ್ದರು. ಸರಿ ನಮ್ಮ ಸರದಿಗಾಗಿ ಅಲ್ಲಿ ನಾವು ಕುಳಿತಿದ್ದೆವು. ಯಾವುದೋ ಪತ್ರಿಕೆ ಹಿಡಿದು ಓದುತ್ತಿದ್ದೆ. ಅದರಲ್ಲೇ ತಲ್ಲೀನನಾಗಿದ್ದ ನನಗೆ ಒಮ್ಮೇಲೆ ಗಾಬರಿಯಾಗುವ ಸ್ಥಿತಿ ಬಂದು. ತರುಣಿಯೊಬ್ಬಳು ಅದೇ ಬೆಂಚ್ ನಲ್ಲಿ ನನ್ನ ಪಕ್ಕವೇ  ಕುಳಿತು ತನ್ನ ಚೂಡಿಯ ಶಾಲನ್ನು ಹಾರಿಸಿದಾಗ ಅದು ರಪ್ಪನೇ ನನ್ನ ಮುಖವನ್ನೂ ಮುಚ್ಚಿತ್ತು. ಗಾಬಾರಿಯಾಗಿ ಒಂದರೆಕ್ಷಣ ಅವಾಕ್ಕಾದೆ.. ಆಕೆಯ ಶಾಲನ್ನು ಆತ್ತ ಸರಿಸಿ ನಾನು ಮತ್ತಷ್ಟು ಸರಿದು ಕುಳಿತೆ. ತುಸು ಹೊತ್ತಿನಲ್ಲೇ ಆಕೆಯ ಜಡೆ ನನ್ನ ಹೆಗಲ ಮೇಲೆ ರಾಚಿತ್ತು.  ಒಂದಷ್ಟು ಅಸಹನೆಗೊಂಡರೂ ಮೌನವಾಗಿಯೇ ಇದ್ದೆ. ಆ ತರುಣಿ ಬೇರೆ ಯಾರೂ ಅಲ್ಲ. ಪ್ರಸಿದ್ದ ಟೀವಿ ಸೀರಿಯಲ್ ನಟಿ. ಇಂದಿಗೂ ಆಕೆಯ ಹೆಸರು ಗೊತ್ತಿಲ್ಲ. ಟೀವಿಯಲ್ಲಿ ಆಕೆಯ ಮುಖವನ್ನು ಅಷ್ಟೊ ಇಷ್ಟೋ ಕಂಡ ನೆನಪು. ಸಾಮಾನ್ಯವಾಗಿ ಸೀರಿಯಲ್ ನಲ್ಲಿ ತಲೆತುಂಬ ಹೂ ಮುಡಿದು ಅಪ್ಪಟ ಗರತಿಯಂತೇ ಕಂಡು ಬರುವ ಈಕೆ ಇಲ್ಲಿ ಅದಕ್ಕೆ ತೀರ ತದ್ವಿರುದ್ದವಾಗಿದ್ದಳು.  ಸಾರ್ವಜನಿಕವಾಗಿ ಹೀಗೆ ವ್ಯಕ್ತಿ ಭೇದವಿಲ್ಲದೇ ತಮ್ಮ ಮೈ ಮೇಲೆ ಬಿದ್ದಂತೆ ವ್ಯವಹರಿಸುವುದು ನನಗಂತೂ ಸಹ್ಯವಾಗಲಿಲ್ಲ

ಇನ್ನೊಂದು ಘಟನೆ, ವ್ಯಕ್ತಿಯೊಬ್ಬರ ಆದಾಯ ತೆರಿಗೆ ಸಲ್ಲಿಸುವ ಕೆಲಸದಲ್ಲಿ ಅವರನ್ನು ಭೇಟಿಯಾಗುವುದಕ್ಕೆ ಬೆಂಗಳೂರಿನ ಜಯನಗರದ ಮನೆಗೆ ಹೋಗಿದ್ದೆ. ವಿಳಾಸ ದಾರಿ ಹೇಳಿ ಅವರು ಅಲ್ಲಿಗೆ ಬರುವಂತೆ ಹೇಳಿದ್ದರು. ಒಂದಷ್ಟು ದಾಖಲಾತಿಗಳನ್ನು ತರುವ ಉದ್ದೇಶದಿಂದ ಅಲ್ಲಿಗೆ ವಿಳಾಸ ಹುಡುಕಿಕೊಂಡು ಅವರ ಮನೆಗೆ ಹೋಗಿದ್ದೆ. ಆ ವ್ಯಕ್ತಿ ಟೀವಿ ಸಿನಿಮಾ ಕ್ಷೇತ್ರದಲ್ಲಿ ದುಡಿಯುವ ಯಾವುದೋ ತಂತ್ರಜ್ಞರಾಗಿದ್ದರು.  ಉತ್ತಮ ಸಂಭಾವಿತ ವ್ಯಕ್ತಿ. ಈ ಮೊದಲೇ ಹಲವು ಸಲ ಭೇಟಿಯಾಗಿದ್ದೆ.  ಅವರ ಮನೆ ಹುಡುಕುತ್ತಾ ಮನೆಯ ಒಳ ಹೊಕ್ಕ ಮೇಲೆ ತಿಳಿದದ್ದು , ಅದು ಅವರ ಮನೆಯಲ್ಲ. ಅಲ್ಲಿ ಯಾವುದೋ ಸೀರಿಯಲ್ ಅಥವಾ ಸಿನಿಮಾ  ಶೂಟಿಂಗ್  ನಡೆಯುತ್ತಿತ್ತು. ಆ ವ್ಯಕ್ತಿ ಶೂಟಿಂಗ್ ಕೆಲಸದ ಗಡಿಬಿಡಿಯಲ್ಲಿ ನಿರತರಾಗಿದ್ದರು. ನನಗೆ   ತುಸು ಹೊತ್ತು ಕಾಯುವಂತೆ ಹೇಳಿ ತನ್ನ ಕೆಲಸದತ್ತ ಹೋದರು. ಶೂಟಿಂಗ್,  ನನಗೆ ಅದು ತೀರ ಹೊಸದು. ಹಾಗಾಗಿ ಸ್ವಲ್ಪ ಕುತೂಹಲದಿಂದಲೆ ಮನೆಯೊಳಗೆ ಒಂದು ಹಾಲ್ ನಲ್ಲಿ ನಡೆಯುತ್ತಿದ್ದ  ಶೂಟಿಂಗ್ ನ್ನು ತನ್ಮಯನಾಗಿ ನೋಡುತ್ತಿದ್ದೆ.   ಅಲ್ಲಿ ಸುತ್ತಲೂ ನನ್ನಂತೆ ಬಹಳ ಮಂದಿ ನಿಂತಿದ್ದರು. ನಾನೂ ಅವರ ಜತೆಯಲ್ಲೇ ನಿಂತು ಶೂಟಿಂಗ್ ನೋಡುತ್ತಿದ್ದರೆ, ಆ ಜನಗಳ ಎಡೆಯಲ್ಲಿ ನನ್ನ ಹೆಗಲ ಮೇಲೆ ಮೃದುವಾದ ಕೈಯೊಂದು ಬಂದು ಬಿತ್ತು. ಗಾಬರಿಯಾಗಿ ತಿರುಗಿ ನೋಡಿದೆ ಒಬ್ಬಳು ತರುಣಿ, ಆಕೆಯೂ ಯಾವುದೋ ನಟೀ ಮಣಿ ಇರಬೇಕು. ಮುಖ ನೋಡಿದೆ. ಪರಿಚಯವೇ ಇಲ್ಲ.  ಅಕೆ ಕಿರುನಗು ಬೀರಿ ಮತ್ತೂ ಶೂಟಿಂಗ್ ನೋಡುತ್ತಾ ಅದರಲ್ಲೆ ಮಗ್ನಳಾಗಿ ಹೋದಳು. ನಾನು ತುಸು ಹಿಂದೆ ಸರಿದು ಆಕೆಗೆ ಮುಂದೆ ಹೋಗುವುದಕ್ಕೆ ಅನುವಾಗುವಂತೆ ಸ್ಥಳ ಬಿಟ್ಟು ಕದಲಿದೆ.  ನಂತರ ಆಕೆ ಅಲ್ಲಿಯ ಕೆಲಸ ಕಾರ್ಯಗಳಲ್ಲಿ ನಿರತಳಾದಳು,

. ಈ ಎರಡು ಘಟನೆ ವಿಚಿತ್ರ ಅನುಭವವನ್ನು ನೀಡಿದ್ದು ಬೇರೆ ವಿಚಾರ. ಆದರೆ ಆ ಸಿನಿಮಾ ಸೀರಿಯಲ್ ಕ್ಷೇತ್ರವನ್ನೇ ಅನುಮಾನದಿಂದ ನೋಡುವಂತೆ ಮಾಡಿದ್ದು ಸುಳ್ಳಲ್ಲ. ಹಾಗೆಂದು ಇಡೀ ಕ್ಷೇತ್ರವನ್ನೇ ಹೇಳುವುದಲ್ಲ. ಇದು ಕೇವಲ ನನಗಾದ ಅನುಭವ. ಈ ಎರಡು ಘಟನೆಯಲ್ಲಿ ಆ ಎರಡು ಹೆಣ್ಣುಗಳಂತೆ ಈ ಅಪರಿಚಿತರಲ್ಲಿ,  ನಾನು ನಡೆದುಕೊಂಡಿದ್ದರೆ, ಇಂದು ಮೀಟೂ ವಿನ ಒಬ್ಬ ಆರೋಪಿ ನಾನಾಗಿ ಹೋಗುತ್ತಿದ್ದೇನೋ ಎಂದು ಅನ್ನಿಸುತ್ತದೆ. ಇಂದು ಮೀಟು ಎಂಬ ಅಭಿಯಾನದಲ್ಲಿ ಮೀಟುತ್ತಾ ಮೀಟುತ್ತಾ ಹೊರಡುವ ಅಪಸ್ವರ ಮನುಷ್ಯ ವಿಕಾರಗಳನ್ನು ತೋರಿಸುತ್ತದೆ. ಯಾವತ್ತೋ  ದೇಹದಲ್ಲಿ ಆದ ಗಾಯ ವಾಸಿಯಾದಂತೆ ಇದ್ದು ಬಹಳ ಸಮಯದ ನಂತರ ಕೀವು ತುಂಬಿ ವೃಣವಾಗುವಂತೆ ಮೀಟು ವಿನಲ್ಲಿನ ಪ್ರಕರಣಗಳು ಮನುಷ್ಯ ಸ್ವಾರ್ಥವನ್ನು ಬಿಂಬಿಸುತ್ತವೆ.  ಅರೋಪದ ಸತ್ಯಾಸತ್ಯದ ಬಗೆಗಿನ ಮಾತಲ್ಲ. ಈ ಅಭಿಯಾನದ ಬಗ್ಗೆಯೂ ಅಲ್ಲ. ಆದರೆ ಗಂಡು ಹೆಣ್ಣು ಎಂಬ ವೆತ್ಯಾಸದ ಬಗೆಗಿನ ಒಂದೆರಡು ವಿಚಾರಗಳು.

ಸಮಾನತೆ  ಸ್ವಾತಂತ್ರ್ಯ ಪ್ರತಿಯೊಬ್ಬರೀಗೂ ಅತ್ಯವಶ್ಯ. ಇದರಲ್ಲಿ ಗಂಡು ಹೆಣ್ಣೆಂಬ ಭೇದವಿಲ್ಲ. ಯಾಕೆಂದರೆ ಶೋಷಣೆ ದೌರ್ಜನ್ಯ ಎಂಬುದು ಎರಡೂ ವರ್ಗದಲ್ಲಿ ಸರ್ವೇ ಸಾಮಾನ್ಯ. ಬೆಳ್ಳಗಿದ್ದವರ ದೇಹದಲ್ಲಿ ಆದ ಗಾಯ ಕಣ್ಣಿಗೆ ರಾಚುವಂತೆ ಗೋಚರಿಸಿದರೆ ಕರಿ ದೇಹದ ಮೇಲಿನ ಗಾಯ ಹುಣ್ಣಾಗಿ ರಕ್ತ ಒಸರಿದರೂ ಕಾಣುವುದಿಲ್ಲ. ಇಷ್ಟೇ ವೆತ್ಯಾಸ.   ದೌರ್ಜನ್ಯ ಶೋಷಣೆಯನ್ನು ಸಹಿಸಿಕೊಂಡು ಏನೂ ಆಗಿಲ್ಲವೆಂಬಂತೆ ಬದುಕುವ ಹಲವರನ್ನು ಕಾಣಬಹುದು. ಇದಕ್ಕೆ ಗಂಡು ಹೆಣ್ಣಿನ ವೆತ್ಯಾಸವಿಲ್ಲ. ದೌರ್ಜನ್ಯದ ರೂಪಗಳು ಬೇರೆ ಬೇರೆ ಇರಬಹುದು. ಆದರೆ ಪರಿಣಾಮ ಮಾತ್ರ ಒಂದೇ, ಸುಖ ಶಾಂತಿಯಿಂದ ಕಳೆಯುವ ಸರ್ವ ಹಕ್ಕನ್ನೂ ಗಳಿಸಿರುವ  ಮನುಷ್ಯ ಅದಿಲ್ಲದೇ ದಿನಗಳ ಬಹುಪಾಲನ್ನೂ ಕಳೆಯುತ್ತಾನೆ. ಡೋಲು ಅಥವಾ ಚೆಂಡೆಗೆ ಕೋಲಿನಿಂದ ಬಡಿಯುವಾಗ ಎಲ್ಲರಿಗೂ ಕಾಣುತ್ತದೆ, ಸ್ವರವೂ ಕೇಳಿಸುತ್ತದೆ. ಮೃದಂಗ ತಬಲೆಗೆ ಬಾರಿಸಿದ ಪೆಟ್ಟು ಕಾಣುವುದೇ ಇಲ್ಲ...ಸ್ವರವೂ ಕೇಳಿಸುವುದಿಲ್ಲ.  ಗಮನ ಹರಿಸಿ ನೋಡಬೇಕಾಗುತ್ತದೆ.   ಇಂದು ಸಮಾನತೆಗಿಂತ ಮನುಷ್ಯನಿಗೆ ಬೇಕಾಗಿರುವುದು ಪ್ರೇಮ ಸೌಹಾರ್ದತೆ ಮಾತ್ರ. ಪ್ರೀತಿ ವಿಶ್ವಾಸ ಸೌಹಾರ್ದತೆ ಇಲ್ಲದ ಜೀವನದಲ್ಲಿ ಯಾವ ಸುಖ ಶಾಂತಿ ನೆಮ್ಮದಿ ಸಿಗಲಾರದು. ಮತ್ತು ಸಿಗುವ ಸಮಾನತೆ ಅದು ಬದುಕಿನ ಸಮಾನತೆಯಾಗಿರುವುದೂ ಇಲ್ಲ.  

ಇಷ್ಟಕ್ಕೂ ಸಮಾನತೆ ಎಂಬುದು ಏನು? ಅದರ ಬಗ್ಗೆ ಖಚಿತವಾದ ನಿರ್ದಿಷ್ಟವಾದ ನಿಲುವು ಇರುವುದಿಲ್ಲ. ಅಸಮತೋಲನವೇ ಪ್ರಕೃತಿಯ ವೈಶಿಷ್ಟ್ಯತೆ.  ಈ ಅಸಮತೋಲನವನ್ನು ಸಮಾನವಾಗಿ ಸ್ವೀಕರಿಸುವುದೇ ಸಮಾನತೆ.  ಆದರೆ ಇಂದು ಎಲ್ಲೆಲ್ಲಿ ಹೇಗೆ ಬೇಕಾದರೆ ಹಾಗೆ ತಮಗೆ ಅನುಕೂಲವಾಗುವಂತೆ ಚಿಂತಿಸುವ ಆಧುನಿಕ ತತ್ವವೇ  ಸಮಾನತೆ.  ಪ್ರತಿಶತ ನೂರರಷ್ಟು ಸಂಪೂರ್ಣ ಒಬ್ಬರ ಹಾಗೆ ಇನ್ನೊಬ್ಬರು ಇರುವುದಕ್ಕೆ ಸಾಧ್ಯವೇ ಇಲ್ಲ. ಹುಟ್ಟಿಸಿದ ಮಗುವಿಗೆ ಹೆತ್ತ ತಾಯಿ ರಕ್ತವನ್ನೇ ಕೊಡುವುದಕ್ಕೆ ಸಾಧ್ಯವಾಗುವುದಿಲ್ಲ. ಇದು ಅಸಮಾನತೆಯಲ್ಲವೇ ?  ಹುಟ್ಟಿಸಿದ ಪರಮಾತ್ಮನಿಗೂ ಸಮಾನತೆ ಸಾಧ್ಯವಾಗಿಲ್ಲ ಎಂದಾದರೆ ಮನುಷ್ಯ ಅದಕ್ಕೆ ಹೋರಾಡುವುದರಲ್ಲಿ ಅರ್ಥವೇನಿದೆ? ಒಬ್ಬಾತ ಬುದ್ದಿವಂತನೂ ವಿದ್ಯಾವಂತನೂ ಆಗಿ ಬೆಳೆಯುತ್ತಾನೆ. ಆತ ಸಣಕಲ ದೇಹದವನಾಗಿರುತ್ತಾನೆ.  ಇನ್ನೊಬ್ಬ ದೈಹಿಕವಾಗಿ ಗಟ್ಟಿ ಮುಟ್ಟಾಗಿ ಕುಸ್ತಿ ಪಟುವಾಗಿ ಬೆಳೆಯುತ್ತಾನೆ. ಇಬ್ಬರೂ ಸಮಾನರಾಗಿರುವುದಕ್ಕೆ ಸಾಧ್ಯವಿಲ್ಲ.  ಗಂಡು ಗಂಡಿನಲ್ಲಿ ಹೆಣ್ಣು ಹೆಣ್ಣಿನಲ್ಲೇ ಸಮಾನತೆ ಇಲ್ಲ. ಮತ್ತೆ ಗಂಡು ಹೆಣ್ಣಿನ ನಡುವಿನ  ಸಮಾನತೆಯ ಹೋರಾಟ ಯಾವುದಕ್ಕೆ?       ಹಾಗಾಗದರೆ ಸಮಾನತೆ ಬೇಡವೇ? ಅದನ್ನು  ವಿವೇಚನೆಯಿಂದ ಗಳಿಸಬೇಕು.  

ಸಮಾನತೆ ಎಂದರೆ ಧರಿಸುವ ಬಟ್ಟೆಯಿಂದ ಬರುವುದಿಲ್ಲ. ಗಂಡಿನಂತೆ ಹೆಣ್ಣು ಉಡುಗೆ ತೊಟ್ಟರೆ ಸಮಾನತೆ ಸಾಧ್ಯವಾಗುವುದಿಲ್ಲ. ಅಥವಾ ಹೆಣ್ಣಿನಂತೆ ಗಂಡೂ ಆಗುವುದಕ್ಕೆ ಸಾಧ್ಯವಿಲ್ಲ. ಅದೇ ರೀತಿ ಮಾಡುವ ಉದ್ಯೋಗದಲ್ಲಿ ಬರುವುದಿಲ್ಲ. ಹೀಗೆ ಒಬ್ಬರಿಗೆ ಇನ್ನೊಬ್ಬರು ಸಮಾನವಾಗುವುದಕ್ಕೆ ಸಾಧ್ಯವೇ ಇಲ್ಲ. ಪ್ರತಿಯೊಬ್ಬನೂ ತಿಳಿದುಕೊಳ್ಳಬೇಕಾದ ವಿಚಾರವೆಂದರೆ ನನ್ನ ಹಾಗೆ ನಾನೊಬ್ಬನೇ. ಬೇರೆ ಇರುವುದಕ್ಕೆ ಸಾಧ್ಯವಿಲ್ಲ. ರೂಪದಿಂದಲೋ ಭಾವದಿಂದಲೋ ಇನ್ನಾವುದೇ ಗುಣಗಳಿಂದಲೋ ಒಂದೇ ರೀತಿ ಇದ್ದರೆ ಅದು ಸಂಪೂರ್ಣ ಸಮಾನತೆಯಾಗುವುದಿಲ್ಲ.  ಗಂಡು ಅಡುಗೇ ಕೋಣೆ ಹೊಕ್ಕರೆ ಅದು ಸಮಾನತೆಯ ಸಾಧನೆಯೂ ಅಲ್ಲ. ಹೆಣ್ಣು ಉದ್ಯೋಗಿಯಾಗಿ ಮನೆಯಿಂದ ಹೊರ ನಡೆದರೂ ಸಮಾನಾತೆಯಾಗುವುದಿಲ್ಲ. ಬದಲಿಗೆ ಪರಸ್ಪರ ಸಹಕಾರವಿದ್ದಲ್ಲಿ ಯಾವುದೇ ಮಾಡಿದರೂ ಅದು ಸಮಾನತೆಯಾಗುತ್ತದೆ. ಹೆಣ್ಣು ಗಂಡಿನ ಅರ್ಹತೆಗಳೇ ಬೇರೆ. ಇಲ್ಲಿ. ಹಾಗಿರುವಾಗ ಅರ್ಹತೆಯ ಸಮಾನತೆ ಹೇಗೆ ಸಾಧ್ಯವಾಗುತ್ತದೆ.?

ಬುದ್ದಿವಂತನಿಂದ ಬುದ್ದಿಯನ್ನು ಕುಸ್ತಿಪಟು ಪಡೆದುಕೊಂಡು, ಕುಸ್ತಿ ಪಟುವಿನಿಂದ ದೈಹಿಕ ಸಾಮಾರ್ಥ್ಯವನ್ನು ಬುದ್ದಿವಂತನು ಪಡೆದುಕೊಳ್ಳಬೇಕು. ಅದರ ಅರ್ಥ ತನ್ನ ಕೊರತೆಯನ್ನು ಒಪ್ಪಿಕೊಂಡು ಇನ್ನೊಬ್ಬನ ಅರ್ಹತೆಯನ್ನು ಗೌರವಿಸುವುದೇ ಆಗಿದೆ. ಇದನ್ನೇ ಸಮಾನತೆ ಎನ್ನುವುದು.  ಗಂಡು ತನ್ನ ಕೊರತೆಯನ್ನು ಒಪ್ಪಿಕೊಳ್ಳಬೇಕು ಹೆಣ್ಣು ತನ್ನ ಕೊರತೆಯನ್ನು ಒಪ್ಪಿಕೊಳ್ಳಬೇಕು. ತನ್ನಲ್ಲಿರುವ ಯೋಗ್ಯತೆಯನ್ನು ವಿನಿಯೋಗ ಮಾಡಬೇಕು. ಇದನ್ನೆ ಸೌಹಾರ್ದತೆ ಎನ್ನುವುದು. ಸೌಹಾರ್ದವಾಗಿ ಇದ್ದುದನ್ನು ಉಪಯೋಗಿಸುವಾಗ ಪ್ರಕೃತಿಯ ಧರ್ಮ ಪಾಲಿಸಿದಂತಾಗುತ್ತದೆ. ಇಬ್ಬರಲ್ಲಿಯೂ ಹೊಂದಾಣಿಕೆಯ ಸಂತುಲನೆ ಇರುವಾಗ ಸಮಾನತೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಗಂಡು ಹೆಣ್ಣು ಎಂಬುದು ಭೇದವಿಲ್ಲ.  ಗಂಡಾದರೂ ಹೆಣ್ಣಾದರೂ ಅದು ಮನುಷ್ಯ ಜೀವಿ. ಮನುಷ್ಯ ಜೀವಿಗೆ ಮನುಷ್ಯತ್ವ ಅಂದರೆ ಮಾನವೀಯತೆ ಇರಬೇಕಾಗಿರುವುದು ಅತ್ಯಂತ ಅವಶ್ಯ. ಮಾನವೀಯತೆ ಇಲ್ಲದವರು ಮನುಷ್ಯ ಅಂತ ಆನ್ನಿಸಿಕೊಳ್ಳುವುದಾದರೂ ಹೇಗೆ?  ಮಾನವೀಯತೆಯನ್ನು ತಳ್ಳಿ ಹಾಕಿ ಸಿಗುವ ಸಮಾನತೆ ಅದು ಮನುಷ್ಯನಾದವನಿಗೆ ಬೇಕಾಗಿರುವುದಿಲ್ಲ. ತನ್ನಲ್ಲೇನೋ ಊನವಾಗಿದೆ. ತಾನು ವಂಚಿತನಾಗಿದ್ದೇನೆ ಕಳೆದುಕೊಂಡಿದ್ದೇನೆ ಎಂಬ ಭಾವನೆಗಳೇ ಹಲವು ಸಲ ಮನಸ್ಸಿನಲ್ಲಿ ಅತೃಪ್ತಿಯನ್ನು  ಹುಟ್ಟಿಸಿ ಶಾಂತಿಯನ್ನು ಕದಡಿಸುತ್ತದೆ. ಧನಾತ್ಮಕ ಚಿಂತನೆ ಇರುವಲ್ಲಿ ಕಳೆದುಕೊಂಡದ್ದರ ಬಗ್ಗೆ ವಂಚಿಸಲ್ಪಟ್ಟ ಬಗ್ಗೆ ಯೋಚನೆ ಇರುವುದಿಲ್ಲ. ಕಿಂಚಿತ್ತಾದರೂ ಸಿಕ್ಕಿದ ಲಾಭದ ಬಗ್ಗೆ ಮನಸ್ಸು ಯೋಚಿಸುತ್ತದೆ.  ಒಂದಿಷ್ಟು ಸುಖ ಸಂತೋಷಕ್ಕೆ ಮನುಷ್ಯ ಬಹಳಷ್ಟು ಕಷ್ಟಗಳನ್ನೂ ನಷ್ಟಗಳನ್ನೂ ಸಹಿಸಿಕೊಳ್ಳುತ್ತಾನೆ.
ಅಸಮಾನತೆ ಎಂಬುದು ಪ್ರಕೃತಿಯ ಒಂದು ಅಂಗ. ಮಾರ್ಜಾಲ ವ್ಯಾಘ್ರದ ವೆತ್ಯಾಸದಂತೆ ಸಹಜತೆಯಿಂದ ಬದುಕುವುದರಲ್ಲಿ ಪ್ರಕೃತಿ ಧರ್ಮವಿರುತ್ತದೆ.  . ಸಹಜವಾಗಿ ಸೌಹಾರ್ದತೆ ಪ್ರೀತಿಯಿಂದ ಆದನ್ನು ಅನುಭವಿಸುವ ಮನೋಭಾವ ಇರಬೇಕು. ಇಲ್ಲವಾದರೆ ಅದು ಕೇವಲ ಸಮಾನತೆಯಾಗಬಹುದೇ ಹೊರತು ಅದು ಪರಿಪೂರ್ಣ ಬದುಕಾಗುವುದಿಲ್ಲ.  ಸಮಾನತೆ ಎಂದರೆ ಸ್ವಚ್ಛಂದ ಮನಸ್ಸಿನ ಭಾವನೆಯ ಮತ್ತೊಂದು ರೂಪ. ಆ ನಿಟ್ಟಿನಲ್ಲಿ ಒಂದು ಬದುಕನ್ನು ಸ್ವಚ್ಛಂದವಾಗಿ ನಿರಾಳವಾಗಿ ಅನುಭವಿಸಬೇಕಾದರೆ ಸಿಗಬೇಕಾದ ಸಮಾನತೆಯಲ್ಲೂ ಸೌಹಾರ್ದತೆ ಅತ್ಯವಶ್ಯ.

ಬಲ ಇದ್ದವನೇ ದೊಡ್ಡವನು. ಇದು  ಅರಣ್ಯ ನ್ಯಾಯ. ಇದು ನಾಗರೀಕ ಸಮಾಜದಲ್ಲೂ  ಈ ನ್ಯಾಯ ಅನ್ವಯವಾಗುವುದು ವಿಪರ್ಯಾಸ. ಅಸಮಾನತೆಯ ಅನುಭವಕ್ಕೆ ಇದು ಪೂರಕ. ಹಾಗಾಗಿ ಮಹಿಳೆ ಅಬಲೆಯಾಗಿ,   ಶೋಷಿತೆಯಾಗಿ ಸಮಾಜದಲ್ಲಿ ಗುರುತಿಸಲ್ಪಡುತ್ತಾಳೆ.  ನಾಗರೀಕತೆ ಬೆಳೆದರೂ ಸಹ ದೌರ್ಜನ್ಯ ಸುಸಂಸ್ಕೃತ  ಸಮಾಜಕ್ಕೆ ಸವಾಲಾಗಿರುತ್ತದೆ. ದೌರ್ಜನ್ಯದ ರೂಪಗಳು ಹಲವಾರಿದ್ದರೂ ಸಹ ಇಲ್ಲಿ  ಬದುಕಿನ ಸ್ವಾತಂತ್ರ್ಯವೆಂಬುದು ಪ್ರಶ್ನಾರ್ಹವೇ ಆಗಿರುತ್ತದೆ. ಶೋಷಣೆ ಎಂಬ ಧ್ವನಿಯಲ್ಲಿ ಮೊದಲು ಕಾಣುವ ಮುಖ ಮಹಿಳೆಯದ್ದೇ ಆಗಿರುತ್ತದೆ. ಶೋಷಣೆಯ ಕೂಗಿಗೆ ಮಹಿಳೆಯೇ ಮುಖವಾಣಿಯಾಗಿ ಬಿಂಬಿಸಲ್ಪಡುತ್ತದೆ. ಆದರೆ ಇಂದು ದೌರ್ಜನ್ಯ ಎಂಬುದು ಕೇವಲ ಮಹಿಳೆಯರ ಮೇಲೆ ಮಾತ್ರ ನಡೆಯುವುದಲ್ಲ. ದೈಹಿಕವಾಗಿ ಅಬಲೆಯಾಗಿರುವ ಕಾರಣ ಶೋಷಣೆ ಎಂದರೆ ಅದು ಮಹಿಳೆಯರೆ ಮೇಲೆ ಮಾತ್ರ ಆಗುವುದಕ್ಕೆ ಸಾಧ್ಯ ಎಂಬ ಪ್ರತೀತಿ ಇರುತ್ತದೆ. ಆದರೆ ಬಲ ಹೀನತೆ ಎಂಬುದು ಕೇವಲ ದೈಹಿಕ ಸ್ಥಿತಿಗೆ ಸೀಮಿತವಾಗಿರುವುದಲ್ಲ. ಮಾನಸಿಕ ಸ್ಥಿತಿಗೂ ಅನ್ವಯವಾಗುತ್ತದೆ. ಭಾವನಾತ್ಮಕ ಮನಸ್ಸು ದೌರ್ಜನ್ಯಕ್ಕೆ ಮೊದಲ ಎರೆಯಾಗಿಬಿಡುತ್ತದೆ. ಅದಕ್ಕೆ ಗಂಡು ಹೆಣ್ಣಿನ ಭೇದವಿಲ್ಲ.  ಇಂದು ಗಂಡೂ ಸಹ ದೌರ್ಜನ್ಯಕ್ಕೆ ಒಳಗಾಗುವುದು ಸರ್ವೇಸಾಮಾನ್ಯ ಎಂಬಂತಾಗಿದೆ. ದೌರ್ಜನ್ಯ ಎಸಗುವ ನಿಟ್ಟಿನಲ್ಲಿಯೂ ಗಂಡು ಹೆಣ್ಣು ಒಂದು ಸಮಾನತೆಯನ್ನು ಸ್ಥಾಪಿಸಿರುವುದು ವಿಪರ್ಯಾಸವೇ ಸರಿ.  ಈ ಕೌಟುಂಬಿಕ ಸಂಭಂಧಗ ಅಳಿವು ಉಳಿವಿನ ಸಂಘರ್ಷದಲ್ಲಿ ಹಲವು ಹೃದಯಗಳು ಮೌನವಾಗಿವೆ.  

ಇಂದು ಗಂಡು ಹೆಣ್ಣಿನ ಸಮಾನತೆ ಎಂಬುದು ಸಾಮಾಜಿಕ ಬದ್ದತೆಯಾಗಬಹುದು. ಹೆಣ್ಣಿನಲ್ಲಿ ಸಮಾನತೆಗೆ ಬಯಸುವ ತುಡಿತವೂ ಅಧಿಕವಾಗಿರುತ್ತದೆ. ದೈಹಿಕವಾಗಿ ಮಾನಸಿಕವಾಗಿ ಹೆಣ್ಣು ಸರ್ವಶಕ್ತಳು ಎಂದು ಸಮಾಜಕ್ಕೆ ಹಲವು ಸಂದರ್ಭಗಳಲ್ಲಿ ತೋರಿಸಿ ಆಗಿ ಹೋಗಿದೆ. ಹೆಣ್ಣು ಸರ್ವಶಕ್ತಳು ಅನುಮಾನವಿಲ್ಲ. ಭಾರತೀಯ ಸನಾತನ ಸಂಸ್ಕೃತಿಯೇ ಇದನ್ನು ತೋರಿಸಿಕೊಟ್ಟಿರುತ್ತದೆ. ಆದರೂ ಸಮಾನತೆಯ ಸಮರವೆಂಬುದು ನಿರಂತರವಾಗಿ ಹೋರಾಟವನ್ನು ಮುಂದುವರೆಸುತ್ತದೆ. ಅದರ ಅನಿವಾರ್ಯತೆಯೂ ಇರಬಹುದು. ಆದರೆ ತಮಗೆ ಸಿಗುವ ಹಕ್ಕಿಗೆ ಮತ್ತೊಬ್ಬರ ದೌರ್ಜನ್ಯದ ಬೆಲೆಯನ್ನು ಕೊಡುವುದು ನ್ಯಾಯವಲ್ಲ. ಹೆಣ್ಣಿಗಾಗಲೀ ಗಂಡಿಗಾಗಲೀ ದಮನದಿಂದ ಸಿಗುವುವ ಹಕ್ಕು ಸಾರ್ಥಕತೆಯನ್ನು ತರಲಾರದು.
ಪ್ರಕೃತಿಯೇ ವಿಧಿಸಿದ ನಿಯಮಗಳಿಗೆ ಸಮಾನತೆಯ ತೇಪೆ ಹಾಕುವುದು ಸಾಧ್ಯವಾಗದು. ಹುಲಿ ಹುಲಿಯಾಗಿಯೇ ಬದುಕುತ್ತದೆ. ಹಸು ಹಸುವಾಗಿಯೇ ಬದುಕುತ್ತದೆ. ಸಮಾನತೆಯ ಹಕ್ಕು  ಬದುಕುವ ಹಕ್ಕು ಪ್ರತಿಯೊಬ್ಬರಿಗೂ ಇರುತ್ತದೆ. ಮನುಷ್ಯ ತನ್ನ ಮಾನಸಿಕ ಸಂಬಂಧವನ್ನು ಬಲಪಡಿಸಿಕೊಳ್ಳಬೇಕು. ಮಾನಸಿಕ ಸಂಬಂಧ ಬಲಿಷ್ಠವಾದಾಗ ಯಾವ ಸಮಾನತೆಯೂ ಸಹ ಅನಿವಾರ್ಯವಾಗುವುದಿಲ್ಲ. ಕೊಡುಕೊಳ್ಳುವ ವ್ಯವಹಾರವೇ ಪ್ರಪಂಚದ ನಿಯಮ.  ತನ್ನಲ್ಲಿಲ್ಲದೇ ಇರುವುದನ್ನು ಕೊಂಡುಕೊಂಡು ತನ್ನಲ್ಲಿ ಇಲ್ಲದನ್ನು ಕೊಡುವುದೇ ಜೀವನ. ಅದಕ್ಕಾಗಿಯೇ ಇಹಲೋಕ ಜೀವನವನ್ನು ಒಂದು ವ್ಯಾಪಾರವಾಗಿಯೇ ಕಂಡು ಗತಿಸಿದಾಗ ಅವರು ಇಹಲೋಕ ವ್ಯಾಪಾರ ಮುಗಿಸಿದರು ಎನ್ನುವುದು.  ಸಂತುಲನೆಯ ವ್ಯವಹಾರವೇ  ಜೀವನ ಸಾರ್ಥಕತೆಯ ಸಂಕೇತ.







Sunday, October 7, 2018

ಸಮರಸವೇ ಸರಸ



                ಒಂದಿಷ್ಟು ದೇಹ ಅಡ್ಡಾಗುವುದಕ್ಕೆ ಜಾಗ ಸಿಕ್ಕಿದಾಗ ಆತನಿಗೆ ಹಾಯೆನಿಸಿತು. ಹೆಗಲಲ್ಲಿದ್ದಒಂದು ವರ್ಷದ   ಪುಟ್ಟ ಕಂದಮ್ಮ ಅದಾಗಲೇ ನಿದ್ದೆಗೆ ಜಾರಿದ್ದ. ದಿನವಿಡೀ ಸುತ್ತಾಡಿದ ಸುಸ್ತು ನಿದ್ದೆಗೆ ಜಾರುವಂತೆ ಮಾಡಿತ್ತು.  ಹಾಸಿದ್ದ ಜಮಖಾನೆ ಮೇಲೆ ಹೊದಿಕೆ ಹೊದ್ದು ತಾನೂ ಮಲಗಿದ. ಪುಟ್ಟನ ಮೇಲೆ ಒಂದು ಕೈಯಿರಿಸಿ ಹಾಗೇ ನಿದ್ದೆಗೆ ಜಾರಿದ. ಅದು ಮದುವೆ ಮನೆ. ಹಾಗಾಗಿ ಮನೆತುಂಬ ಅತಿಥಿಗಳು, ಸಡಗರ ಓಡಾಟ ಇದರಲ್ಲೇ ದಿನಕಳೆದು ಇದೀಗ ವಿಶ್ರಾಂತಿಯ ಸಮಯ ಬೇಡವೆಂದರೂ ನಿದ್ದೆ ಕಣ್ಣಿಗೆ ಒತ್ತಿಬರುತ್ತದೆ. ಕೆಲವರಂತೂ ಅಪರೂಪಕ್ಕೆ ಸಿಕ್ಕಿದ ನೆಂಟರು ಗೆಳೆಯರು ಇವರ ಜತೆಗಿನ ಘಳಿಗೆಗಳನ್ನು ಹಾಗೇ ನಿದ್ದೆಯಲ್ಲಿ ಕಳೆಯುವುದಕ್ಕೆ ಇಷ್ಟವಿಲ್ಲದೇ ಎಚ್ಚರದಲ್ಲೇ ಇದ್ದರು. ಒಟ್ಟು ಸೇರಿದ ಸಡಗರದಲ್ಲಿ ಮಾತು ಆಟ ಗಲಾಟೆ ಅಂತೂ ಮದುವೆ ಮನೆ ಎಂದರೆ ವಿವಿಧ ಸಂವೇದನೆಯ ಸಮಾಗಮ. ಕೆಲಸವಿದೆಯೋ ಇಲ್ಲವೋ ಸುಮ್ಮನೇ ಇದ್ದರೂ ಭಾವನೆಗಳ ತಾಕಲಾಟಗಳಲ್ಲೇ ದೇಹ ಮನಸ್ಸು ದಣಿದಿತ್ತು.

                ಇಂದಿನ ದಿನ ಇಲ್ಲಿಗೆ ಮುಗಿಸಿ ಇಷ್ಟು ಸಾಕು ಮಾಡಿ ಆತ ಮನೆಯ ಮೇಲೆ ತಾರಸಿಯ ಮೂಲೆಯೊಂದರಲ್ಲಿ ಮಲಗಿದ್ದ. ತಾರಸಿ ಮೇಲೆ ಶಾಮಿಯಾನ ಹಾಕಿದ್ದರು.  ದೀಪ ಆರಿಸಿ ಕೆಲವರಂತು ನಿದ್ದೆಗೆ ಹೋಗಿದ್ದರು. ಆತನಿಗಂತೂ ದೇಹ ಮಾತ್ರವಲ್ಲದೆ ಮನಸ್ಸು ಬಹಳಷ್ಟು ದಣಿದಿದ್ದು ಮನೆಯ ಮಲಗು ಕೋಣೆ ಪದೇ ಪದೇ ನೆನಪಿಗೆ ಬರುತ್ತಿತ್ತು. ಹಾಗೇ ಜೊಂಪು ಹತ್ತಿದಂತೆ ಬೆಳಗಿನಿಂದ ಓಡಾಡಿದ ಮಾತನಾಡಿದ  ಗುಂಗು ನಿದ್ದೆಯಲ್ಲೂ ಕಾಡುತ್ತಿತ್ತು. ಪುಟ್ಟ ಮಗ್ಗುಲಿಗೆ ಹೊರಳುತ್ತಿದ್ದಂತೆ ಎಚ್ಚರವಾಗುತ್ತಿತ್ತು.

ಮದುವೆ ಮನೆಗೆ ಹೆಂಡತಿ ಮಗುವಿನ ಜತೆಗೆ ಇಂದು ಮುಂಜಾನೆಯೇ ಬಂದಿದ್ದ. ಹೆಂಡತಿಯ ತವರು ಮನೆಯದು. ಒಂದೆರಡು ದಿನ  ಮೊದಲೇ ಎಂದರೂ ಆತ ಬರುವುದಕ್ಕೆ ಸಾಧ್ಯವಾಗಿದ್ದು ಮದುವೆಯ ಮೊದಲ ದಿನ. ಮನೆ ಹೊಕ್ಕ ಕೂಡಲೆ ಆಕೆ ಮಗುವನ್ನು ಈತನ ತೋಳಿಗೆ ಸೇರಿಸಿ ಮನೆಯೊಳಗೆ ಅದೆಲ್ಲಿ ಮಾಯವಾಗಿಬಿಟ್ಟಳೋ?  ತಿಳಿಯದಾಯಿತು. ಅಕ್ಕಂದಿರು ನಾದಿನಿಯರು ಅಮ್ಮ ಚಿಕ್ಕಮ್ಮ ದೊಡ್ಡಮ್ಮ ಇನ್ನೂ ಹಿನ್ನೆಲೆಯಲ್ಲಿದ್ದ ಪಾತ್ರಗಳೆಷ್ಟೋ?   ಪರಿಚಯವೂ ಇಲ್ಲ,  ಅವುಗಳ ನಡುವೆಯೆ ತನ್ನಾಕೆ ರಂಗವೇರಿ ಪಾತ್ರವಾಗಿಬಿಟ್ಟಳು.  ಎಲ್ಲಾ ಹೊಸ ಮುಖಗಳನ್ನು ಕಂಡ ಈ  ಪುಟ್ಟ ಹೆಗಲು ಬಿಟ್ಟು ಇಳಿಯಲಾರ. ಒಂದೇ ಸವನೆ ಹಟಮಾಡುವುದಕ್ಕೆ ತೊಡಗಿದ. ಮಗುವನ್ನು  ಕಂಡವರೆಲ್ಲಾ  ಒಂದಷ್ಟು ರಮಿಸುವುದಕ್ಕೆ ಯತ್ನಿಸಿದರೂ ಪುಟ್ಟ ಕೇಳಬೇಕಲ್ಲ?  

 ಮೆನೆಯೊಳಗಿನಿಂದ ಹೊರ ಬಂದು ರಸ್ತೆಗಿಳಿದ.  ಮನೆಯೊಳಗಿನ ಬಿಸಿ ಉಸಿರ ತಾಪ ಕಡಿಮೆಯಾಗಿ,  ಒಂದಷ್ಟು ಹಾಯೆನಿಸಿತು. ಪುಟ್ಟನೂ ಒಂದಷ್ಟು ಹೊರಗಿನ ದೃಶ್ಯ ನೋಡಿ ಅಳು ನಿಲ್ಲಿಸಿದ. ಹಾಗೆ ಅತ್ತಿತ್ತ ಹೆಜ್ಜೆ ಇಕ್ಕಿದ. ಅದು ತುಸು ಹೊತ್ತು ಅಷ್ಟೇ  ಪುಟ್ಟನನ್ನು ಎತ್ತಿದ ಕೈ ಸುಸ್ತಾಗತೊಡಗಿತು. ಮೈ ಬೆವರಲಾರಂಭಿಸಿತು. ಎಲ್ಲಿ ಇಳಿಸಿದರೂ ಪುಟ್ಟ ಮಗು ಕೈಬಿಟ್ಟು ಇಳಿಯಲಿಲ್ಲ.  ಬದಲಿಗೆ ಅಮ್ಮ ಎಲ್ಲಿ? ಎಂದು ರಾಗ ಎಳೆಯುವುದಕ್ಕೆ ತೊಡಗಿದ. ಇನ್ನು ಸಾಕಾಯಿತು ಎಂದುಕೊಂಡು ಆಕೆಯನ್ನು ಅರಸುತ್ತಾ ಮನೆಯೊಳಗೆ ಬಂದ. ಮನೆಯೊಳಗೆ ಬಹುತೇಕ ಲಲನೆಯರ ಗಡಣವೇ ತುಂಬಿತ್ತು. ಆ ಕೋಣೆ ಈ ಕೋಣೆ ಎಲ್ಲ ಹುಡುಕಿದ. ಆಕೆಯ ಮುಖವನ್ನು ಕಾಣದೇ ಹೋದ. ಅವರಲ್ಲಿ ಇವರಲ್ಲಿ ಕೇಳಿದ. ಊಹೂಂ, ಆಕೆಯನ್ನು ಕಾಣುವುದು ಸಾಧ್ಯವಾಗದೇ ಹೋಯಿತು. ಹೋಗಲಿ ಇದೀಗ ಬೆಳಗಿನ ಉಪಾಹಾರ ಆಗಬೇಕಿದೆ. ಆಗ ಆಕೆ ಖಂಡಿತಾ ಸಿಗಬಹುದು ಎಂದು ಕೊಂಡು ಪುನಃ ಮನೆಯಂಗಳಕ್ಕೆ ಇಳಿದ.

ಅಲ್ಲೆ ಇದ್ದ ಸಂಭಂಧಿಗಳು ಮಾತಿಗಿಳಿದರೂ ಮಾತನಾಡುವಷ್ಟು ಉತ್ಸಾಹವಾಗಲೀ ಚೈತನ್ಯವಾಗಲಿ ಇರಲಿಲ್ಲ. ಯಥಾ ಪ್ರಕಾರ ಕಾಗೆ ಗುಬ್ಬಚ್ಚಿಯನ್ನು ಪುಟ್ಟನಿಗೆ ತೋರಿಸಿ ಸಾಂತ್ವನ ಪಡಿಸುವ ಯತ್ನಮಾಡಿದರೂ ಪುಟ್ಟ ಮತ್ತೂ  ಬುದ್ದಿವಂತನಾದ. ಅತ್ತಿತ್ತ ಸುಳಿಯುವಾಗ ಉಪಾಹಾರಕ್ಕೆ ಕರೆಬಂದು ಎಲ್ಲರೂ ಅತ್ತಕಡೆಗೆ ಹೋದರು. ಮದುವೆ ಮನೆಯ ಉಪಾಹಾರ ಎಲ್ಲರು ಅದೂ ಇದು ಹರಟೆ ಹೊಡೆಯುತ್ತಿರಬೇಕಾದರೆ,  ಈತ ಆಕೆಯನ್ನು ಅರಸಿದ. ಇಲ್ಲ, ಆಕೆ ಎಲ್ಲೂ ಕಣ್ಣಿಗೆಬೀಳಲಿಲ್ಲ.  ತುಂಡು ಬಾಳೆ ಎಲೆಯ ಮುಂದೆ ಕುಳಿತುಕೊಂಡು ಪುಟ್ಟನಿಗೂ ತಿನ್ನಿಸುವ ಪ್ರಯತ್ನ ಮಾಡಿದ. ಒಂದೆರಡು ತುತ್ತು ತಿಂದ ಪುಟ್ಟ ಅಮ್ಮ ಎಲ್ಲಿ?   ಅಂತ ಅದೇ ಶ್ರುತಿಯನ್ನು ಹಿಡಿದೆಳೆದ.  ಈಗ ತನ್ನಿಂತಾನೆ ಅಸಮಾಧಾನ ಬೇಡವೆಂದರೂ ಸುಳಿಯಲಾರಂಬಿಸಿತು. ಎಲ್ಲಿ ಹೋದಳಪ್ಪ ಈಕೆ. ಮಗುವಿನ ಹಸಿವಾದರೂ ನೆನಪಿಗೆ ಬರಬೇಕಲ್ಲ.?  ಆಕೆಯಿಲ್ಲದೇ ಉಪಾಹಾರ ಶಾಸ್ತ್ರವಾಯಿತು.

ಯಥಾ ಪ್ರಕಾರ ಪುಟ್ಟನನ್ನು ಎತ್ತಿಕೊಂಡು ರಸ್ತೆಯ ತುದಿಯವರೆಗೂ ನಡೆದು ನಿಧಾನಕ್ಕೆ ನಡೆದ. ರಸ್ಥೆಯಂಚಿನ ಅಂಗಡಿಗೆ ತೆರಳಿದ. ಅಲ್ಲೇನೋ ಕಂಡ ಪುಟ್ಟ ಬೇಕೆಂದಾಗ ಅದನ್ನು ತೆಗೆಸಿಕೊಟ್ಟ. ಹಾಗೂ ಹೀಗೂ ಒಂದಷ್ಟು ಹೊತ್ತು ಕಳೆಯಿತು. ಊಟದ ಹೊತ್ತಾಗುತ್ತಿದ್ದಂತೆ ಮತ್ತೆ ಬಂದ. ಒಂದಷ್ಟು ಜನ  ಅಮ್ಮಂದಿರು ತಟ್ಟೆಯಲ್ಲಿ ಅನ್ನ ಪಾಯಸ ಹಾಕಿ ಮಕ್ಕಳಿಗೆ ತಿನ್ನಿಸುವುದನ್ನು ಕಂಡ. ಈಗ ಎಲ್ಲಾದರೂ ಸಿಕ್ಕಿಯಾಳು ಎಂದು ಮನೆಯೆಲ್ಲ ಹುಡುಕಿದ. ಕೊನೆಗೆ ಕೋಣೆಯೊಂದರಲ್ಲಿ ಆಕೆಯ ಸ್ವರ ಕೇಳಿ ಅತ್ತ ಹೋದರೆ,  ಅಕ್ಕೆಯ ಸುತ್ತ ಒಂದಷ್ಟು ಹೆಂಗಳೆಯರು. ಹತ್ತಿರ ಹೋಗುವುದಾಅರೂ ಹೇಗೆ. ಕೊನೆಗೆ ಕಣ್ಣಲ್ಲೇ ಕರೆದ. ಕಣ್ಣಿನ ಕರೆಗಾಗುವಷ್ಟು ಅವಳ ಗಮನ ತನ್ನೆಡೆ ಬಿತ್ತಲ್ಲ ಎಂಬ ಸಮಾಧಾನ ಆತನದ್ದು. ಹತ್ತಿರಬಂದವಳೆ...ಒಬ್ಬಿಬ್ಬರಿಗೆ ತನ್ನ ಮನೆಯವರು ಎಂದು ಪರಿಚಯಿಸುವಷ್ಟರಲ್ಲೇ ಆತನೊಡನಿರುವ ಆಕೆಯ   ಮಾತು ಕತೆ ಮುಗಿಯಿತು. ಮಗುವಿನ ಕೊಳೆಯಾದ ಬಟ್ಟೆಯನ್ನು ಬೇರೆ ಬದಲಿಸಿ ಮಗುವನ್ನು ಸ್ವಲ್ಪ ನೋಡಿಕೊಳ್ಳೀ ಎಂದು ರಾಗದ ಬೇಡಿಕೆ ಸಲ್ಲಿಸಿ...ಅ ಕೆಲಸ ಈ ಕೆಲಸ ಅಂತ ಅಲ್ಲಿಂದ ಸಾಗ ಹಾಕಿದಾಗ ಬೇಡವೆಂದರೂ ಪುಟ್ಟನನ್ನು  ಹೆಗಲಿಗೇರಿಸಿ ಅಲ್ಲಿಂದ ಕದಲಿದ.

ಮಧ್ಯಾಹ್ನದ ಊಟದ ಹೊತ್ತಾದರೂ ಊಹೂಂ ಆಕೆ ಮತ್ತೆ ಕಣ್ಣಿಗೆ ಬೀಳಲಿಲ್ಲ. ಪುಟ್ಟನಿಗೆ   ಊಟ ಕೊಡುವಷ್ಟರಲ್ಲಿ ಸುಸ್ತಾಗಿ ಹೋಯಿತು. ಬಹಳಷ್ಟು ದಂಪತಿಗಳು ಜತೆಯಲ್ಲೇ ಊಟಕ್ಕೆ ಕುಳಿತದ್ದನ್ನು ಕಂಡು ಒಂದಷ್ಟು ದೂರಕ್ಕೆ ಕಣ್ಣಾಡಿಸಿದ. ಇಲ್ಲ ಆಕೆ ಕಾಣಲಿಲ್ಲ. ಮನಸ್ಸು ಸ್ವಲ್ಪ ತಳಮಳಿಸಿತು. ಸ್ವಲ್ಪ ಅಸಮಾಧಾನ  ಆವರಿಸಿಕೊಂಡಿತು. ನಂತರ ಆಕೆಯನ್ನರಸುವುದನ್ನು ಬಿಟ್ಟು ಬಿಟ್ಟ. ಪುಟ್ಟನನ್ನು ಎತ್ತಿಕೊಂಡು ಒಂದು ಸುತ್ತು ಪೇಟೆಗೆ ಹೋಗಿಬಂದ. ಐಸ್ಕ್ರೀಂ  ಚಾಕಲೇಟ್ ಗೆ ಪುಟ್ಟನ ಅಳು ನಿಂತಿತು.  ಸಿಟ್ಟಿನ ಜಾಗದಲ್ಲಿ ಮೊಂಡುತನ ಆವರಿಸಿತು. ಹಾಗೇ ದಿನ ಕಳೆಯಿತು.

ಆದಿನ ಕಳೆದ ಬಗೆಯಲ್ಲಿ ತಳಮಳಿಸಿದ ಮನಸ್ಸು ನಿದ್ದೆಯನ್ನು ಬೇಗನೇ ಸ್ವೀಕರಿಸಲಿಲ್ಲ. ಮನಸ್ಸು  ಸುಪ್ತ ಕನಸಲ್ಲಿ ಎಚ್ಚರವಾಗುತ್ತದೆ. ಮತ್ತದೇ ದಿನದ  ಗದ್ದಲದಲ್ಲಿ ಕಳೆದ ಹೊತ್ತು,   ಕೇಕೆ ನಗು ಅಳು ಅದೂ  ಇದು ಮತ್ತೂ  ಮತ್ತೂ  ಧಾಳಿ ಇಡುತ್ತ ಮಂಪರು ನಿದ್ದೆಯ ಕನಸಲ್ಲಿ ಪುನಃ ಶ್ ವಕ್ಕರಿಸತೊಡಗಿತು. ಅದೆಷ್ಟು ಹೊತ್ತಾಗಿತ್ತೋ ತಿಳಿಯದು ಮದುವೆ ಮನೆಯ ಗದ್ದಲ ಕಡಿಮೆಯಾಗುತ್ತಾ ಕೊನೆಯಲ್ಲಿ ಪಿಸುಮಾತಿಗೆ ಇಳಿದು ಬಿಟ್ಟು  ಇನ್ನೇನು ನೀರವ ಮೌನವೇ ಆವರಿಸಿತು. ಮನೆಯ ಸುತ್ತ ಹಾಕಿದ ಮಿಣುಕು ದೀಪಗಳ ಮಾಲೆ ಮಿನುಗುತ್ತಾ ಆರುತ್ತಾ ಜೀವಂತಿಕೆಯ ಅಸ್ತಿತ್ವವನ್ನು ಸಾರುತ್ತಿದ್ದಂತೇ  ಮನೆಯಿಡೀ ನಿದ್ದೆಗೆ ಜಾರಿತು.

ಶಾಮಿಯಾನದ ಕೆಳಗೆ ಬಹಳಷ್ಟು ಜನ್ನ ನಿದ್ದೆಗೆ ಜಾರಿದ್ದರು. ಕೆಲವು ಗೊರಕೆಯ ಸದ್ದು ಬಿಟ್ಟರೆ ಮತ್ತೆ ನೀರವ ಮೌನ.  ಆಗ  ಘಲ್  ಘಲ್ ಅಂತ ಬಳೆಯ ಸದ್ದು ಅಲ್ಲಿನ  ಮೌನವನ್ನು ಭೇದಿಸುವಂತೆ ಕೇಳಿಸುತ್ತಿತ್ತು. ಯಾರೋ ಚಪ್ಪರದ ಅಂಚಿನಲ್ಲಿ ಮೆತ್ತಗೆ ಓಡಾಡಿದಂತೆ ಭಾಸವಾಗಿ ಹೆಜ್ಜೆ ಸದ್ದು ಗಾಢವಾಗುತ್ತಾ ಹತ್ತಿರ ಬಂದದ್ದೇ ಅರಿವಿಗೆ ಬಾರಲಿಲ್ಲ. ನಿದ್ದೆಯಲ್ಲೇ ಹೆಜ್ಜೆಯ ಸದ್ದು ಬಳೆಯ ಸದ್ದು ಕನಸಿನಂತೆ ಭಾಸವಾಗುತ್ತಿದ್ದರೆ,  ಮೆತ್ತಗೆ ಕೈ ತಲೆಯನ್ನು ತಡವಿ ಪುಟ್ಟನ  ಮೇಲಿನ  ಕೈಯ್ಯನ್ನು ಸರಿಸಿದಾಗ ಎಚ್ಚರವಾಯಿತು. ಆ ಕತ್ತಲೆಯಲ್ಲೂ ಶರೀರದ ಗಂಧ ಹೇಳಿತು,  ಇದು ಆಕೆಯೇ....! ಆಕೆ ಹುಡುಕುತ್ತಾ ಹತ್ತಿರ ಬಂದಿದ್ದಳು. ಬಂದಾಕೆ   ಕತ್ತಲಿನಲ್ಲಿ ಕತ್ತಿನ ಬಳಿ ಪಿಸುಗುಟ್ಟಿದಾಗ ಈತನದ್ದು ಮೌನವೇ ಉತ್ತರ.  ಪಿಸುಗುಟ್ಟುತ್ತಾ ಹೇಳೀದಳು....” ನೀವು ಇಲ್ಲಿ ಮಲಗಿದ್ದೀರಾ ? ಎಷ್ಟೊಂದು ಹುಡುಕಿದೆ?”  ಇಲ್ಲ ಆತ ಮಗುವಿನ ಮೇಲಿನ ತೋಳನ್ನು ಮತ್ತಷ್ಟು ಒತ್ತಿ ಹಿಡಿದು ಮೊಂಡನಾಗಿ ಹೋದ.  ದಿನದ ತಾಪ ಕುದಿಯುವ ಬಿಂದು ದಾಟಿತ್ತು. ಇನ್ನು ಬರೀ ಹೆಬೆ ಮಾತ್ರ ಉಳಿದಿತ್ತು.

ಆಕೆಯಲ್ಲಿ  ಸಾಂತ್ವನದ ಮಾತಿರಲಿಲ್ಲ. ಕೇವಲ   ಮಗುವಿನ ಮೇಲಿನ  ಕೈ ಸರಿಸಿ ಮುಖವನ್ನು ಹತ್ತಿರ ತಂದಳು. ಆತ ಮುಖವನ್ನು ಅತ್ತ ತಳ್ಳಿ ಮಗ್ಗುಲು ಬದಲಿಸಿದ.  ಆಕೆಗೆ ಅರಿವಾಯಿತು. ರಾಯರ ಸಿಟ್ಟು.  ಯಥಾ ಪ್ರಾಕಾರ ಆತನ ಕೂದಲಲ್ಲಿ ಬೆರಳಾಡಿಸಿ ಸಿಟ್ಟನ್ನು ತಣಿಸುವ ಯುತ್ನ ಮಾಡಿದಳು. ಪಿಸುಮಾತಿನಲ್ಲಿ ಮೆತ್ತಗೆ ಹೇಳಿದಳು ...”ತುಂಬ ಕೆಲಸ ಇತ್ತು. ಅಮ್ಮ ಅವರು ಇವರು ಬಿಡೋದೇ ಇಲ್ಲ.....ಇವತ್ತೊಂದು ದಿನ ಅಲ್ವಾ?”  ಕೂದಲಲ್ಲಿ ಬೆರಳಾಡಿಸುತ್ತ ಪುಟ್ಟನನ್ನು  ತಡವರಿಸಿದಳು. ಮಗುವನ್ನು ಆಚೆ ಸರಿಸಿ ಮಗ್ಗುಲಲ್ಲೇ ಮಲಗಿದಾಗ ಈತ ಮೊಂಡು ತನ ಕರಗಿತು. ಸಿಟ್ಟು ನಿದ್ದೆ ಎರಡೂ  ಹಾರಿ ಹೋಯಿತು. ಹಾಗೆ ಆಕೆಯನ್ನು ತನ್ನತ್ತ ಸೆಳೆದ. ಆಕೆ ಪ್ರೀತಿಯಿಂದಲೇ ಆತನನ್ನು ದೂರ ತಳ್ಳಿ ಪುಟ್ಟನನ್ನು ತಬ್ಬಿ ಮಲಗಿದಳು.

ಇಂತಹ ಘಟನೆಗಳು ಗಂಡ ಹೆಂಡಿರ ನಡುವೆ ಸಾಮಾನ್ಯ. ಸರಸ ವಿರಸಗಳು ಕೌಟುಂಬಿಕ ಜೀವನ ಮಾಲೆಯ ನಡುವಿನ ಗಂಟುಗಳಂತೆ ಒಂದರ ನಂತರ ಇನ್ನೊಂದು ಬಂದೇ ಬರುತ್ತವೆ. ಮನಸ್ಸು ಸುಸ್ಥಿರವಾಗಿದ್ದಾಗ ಯಾವುದೇ ಅಹಿತಕರ ನಡವಳಿಕೆಯೂ ಗಂಭೀರವೆನಿಸುವುದಿಲ್ಲ. ಮನಸ್ಸು ಅಸಂತುಲನೆಗೆ ಒಳಗಾಗುವಾಗ ಇನ್ನೊಬ್ಬರ ನಡವಳಿಕೆಗಳು ವರ್ತನೆಗಳು ನಮ್ಮ  ಮನಸ್ಸಿನ ಭಾವನೆಗಳನ್ನು ನಿಯಂತ್ರಿಸುತ್ತವೆ.  ಅಥವಾ ನಮ್ಮ ಮನಸ್ಸಿನ ಭಾವನೆಗಳು ಇನ್ನೊಬ್ಬರ ನಿಯಂತ್ರಣದಲ್ಲಿರುತ್ತವೆ.

ಗಂಡ ಬಯಸುತ್ತಾನೆ ಆಕೆ ತನಗೆ ಬೇಕಾದಂತೆ ತನ್ನಿಷ್ಟದಂತೆ ನಡೆಯಬೇಕು . ಹೆಂಡತಿಯೂ ಸಹ ಇದನ್ನೇ ಬಯಸುವುದಿಲ್ಲ ಎನ್ನುವ ಹಾಗಿಲ್ಲ. ಆಕೆಯದ್ದೂ ಅಷ್ಟೇ. ತನ್ನಿಷ್ಟಕ್ಕೆ ಬೇಕಾದಂತೆ ಆತನ ವರ್ತನೆ ಇರಬೇಕು. ನಡೆಯಬೇಕು. ಹೀಗೆ,

ಗಂಡಾಗಲೀ ಹೆಣ್ಣಾಗಲೀ,  ಆತ ಅಥವಾ ಆಕೆ ತನಗೆ ಬೇಕಾದಂತೆ ನಡೆದುಕೊಳ್ಳಬೇಕು ಎಂದು ತಿಳಿಯುವುದರಲ್ಲೇ ಒಂದು ದಾಸ್ಯ ಅಥವಾ ಗುಲಾಮೀತನದ ಸುಪ್ತವಾಸನೆ ಇರುತ್ತದೆ. ಅದಕ್ಕೆ ಹೊರ ಭಾವದಲ್ಲಿ ಹಲವು ಬಣ್ನಗಳಿರಬಹುದು. ಅದು ಪ್ರೀತಿ ಮಣ್ಣು ಮಸಿ ಅಂತ. ಏನಿದ್ದರೂ ಅದು ಸೂಕ್ಷ್ಮ ಮನದ ಸ್ವಾರ್ಥ.   ಪರಸ್ಪರ ಮನಸ್ಸಿನ ಸುಪ್ತ ಭಾವನೆಗಳೇನೇ ಇರಲಿ ಆಕೆ ಅಥವಾ ಆತ,  ತನಗೆ ತೃಪ್ತಿಯಾಗುವಂತೆ ನಡೆದುಕೊಳ್ಳಬೇಕು. ಇದೊಂದು  ಮಾನಸಿಕ ದಾಸ್ಯದ ಹೇರಿಕೆಯನ್ನು ತೋರಿಸುತ್ತದೆ. ಇದರಿಂದ ತುಸು ಸರಿದು ಅತ್ತ ನೋಡಿದರೆ ಮಾನಸಿಕ ದಾಸ್ಯ ಏನು ಎಂಬುದು ಅರಿವಾಗುತ್ತದೆ.

ಹೆಂಡತಿ ಆಕೆಗೆ ಮನಸ್ಸಿಲ್ಲದೇ ಇದ್ದರೂ ಪರವಾಗಿಲ್ಲ ಆಕೆ ತನ್ನಾಶೆ ಬಯಕೆಗಳಂತೆ ನಡೆಯಬೇಕು ಇದನ್ನು ಗಂಡ ಬಯಸಿದರೆ ಹೆಂಡತಿಯೂ ಇದೇ ತರಹದ ಬಯಕೆಗಳನ್ನು ಹೊಂದಿರುತ್ತಾಳೆ. ಮನವೊಪ್ಪದೇ ಇದ್ದರೂ ತನ್ನನ್ನು ತೃಪ್ತಿ ಪಡಿಸುವುದಕ್ಕೋಸ್ಕರವಾದರೂ ನಡೆದುಕೊಳ್ಳಬೇಕು ಎಂದು ಬಯಸುವುದು ಇನ್ನೊಂದು ಮನಸ್ಸನ್ನು ದಾಸ್ಯಕ್ಕೆ ಎಳೆಯುವುದಕ್ಕೆ ಸಮಾನ.  ಅದನ್ನೇ ,   ಆಕೆ ಅಥವಾ ಆತ ಒಪ್ಪಿಕೊಂಡು ಮನಸಾರೆ ತೃಪ್ತಿ ಪಡಿಸುವುದಕ್ಕೆ ನಡೆದುಕೊಂಡರೆ ಅಲ್ಲಿ ದಾಸ್ಯವಿರುವುದಿಲ್ಲ, ಸಹಕಾರ ಇರುತ್ತದೆ. ಅದು ಕೇವಲ ಸಹಕಾರವಾಗಿರುವುದಿಲ್ಲ ಅದರಿಂದ ಆಚೆಗಿನ ಮಾನಸಿಕ ಸಂಭಂಧಗಳನ್ನು ಹೇಳುತ್ತದೆ. ಸಹಾಕಾರ ಮತ್ತು ದಾಸ್ಯದಲ್ಲಿ ಕ್ರಿಯೆಗಳು ಒಂದೇ ಆದರು ಭಾವವೆತ್ಯಾಸವಿರುತ್ತದೆ.   

ಮತ್ತೊಬ್ಬರು ನಮಗೆ ಬೇಕಾದಂತೆ ನಡೆದುಕೊಂಡರೆ ಚೆನ್ನ. ಆಗ ನಾನೂ ನಡೆದುಕೊಳ್ಳಬಹುದು. ಇದು ಸದ್ಭಾವನೆಯ ಸಹಜ ಕಲ್ಪನೆಯೇ ಆಗಿದ್ದರೂ,  ಅಲ್ಲಿ ಸೂಕ್ಷ್ಮವಾದ ಬಲವಂತದ ಬಂಧನವಿರುತ್ತದೆ. ತಾಯಿಯಾದವಳು ಮಗುವನ್ನು ಪ್ರೀತಿಯಿಂದ ಸಾಕುತ್ತಾಳೆ. ತನ್ನದೇ ಎದೆಹಾಲನ್ನು ನೀಡಿ ಬೆಳೆಸುತ್ತಾಳೆ. ತನಗೇನೂ ಕೊಡದೇ ಇದ್ದರೂ ಪರವಾಗಿಲ್ಲ ಮಗು ಸುಖದಲ್ಲಿರಬೇಕೆಂದು ಬಯಸುತ್ತಾಳೆ. ಇದರಲ್ಲಿ ಯಾವ ದಾಸ್ಯದ ಕಟ್ಟು ಪಾಡು ಇಲ್ಲ. ಅದೇ ಮಗ ತನಗೆ ಬೇಕಾದಂತೆ ನಡೆದುಕೊಳ್ಳಬೇಕು ಎನ್ನುವಹಾಗಿದ್ದರೆ ಅಲ್ಲಿ ಸೂಕ್ಷ್ಮ ದಾಸ್ಯ ಇದ್ದೇ ಇರುತ್ತದೆ. ಅದನ್ನು ಬೇರೆ ಯಾವ ಕಲ್ಪನೆಯಲ್ಲೇ ಕರೆದುಕೊಂಡರೂ ಅದರ ಮೂಲ ಭಾವ ಅದೇ ಆಗಿರುತ್ತದೆ. ಇದು ಕೇವಲ ಗಂಡ ಹೆಂಡತಿ ಮಾತ್ರವಲ್ಲ ಅಣ್ಣ ತಮ್ಮ ಅಪ್ಪ ಮಗ..ಹೀಗೆ ಸಂಭಂಧವನ್ನು ಮೀರಿ ಮನುಷ್ಯ ಮನುಷ್ಯರ ನಡುವಿನ ಭಾವನೆಗಳಿಗೂ ಅನ್ವಯವಾಗುತ್ತದೆ.  

ಮತ್ತೊಬ್ಬರು ತನಗೆ ಬೇಕಾದಂತೆ ನಡೆದುಕೊಳ್ಳಬೇಕು, ಎಂಬ ಭಾವನೆ ಪ್ರತಿಯೊಂದು ಸಂಬಂಧಗಳ ನಡುವೆ ಇದ್ದೆ ಇರುತ್ತದೆ. ಆದರೆ  ತನಗೆ ಬೇಕಾದಂತೆ ನಡೆದುಕೊಳ್ಳಬೇಕು ಎಂಬುದು ಹೆಚ್ಚಾಗಿರುವುದು ಗಂಡ ಹೆಂಡತಿಯರ ನಡುವೆ ಮಾತ್ರ ಇದು ಅಪ್ಪಟ ಸತ್ಯ. ಮನಸ್ಸಿಲ್ಲದೇ ಮಾಡಿದ ಸೇವೆಯಿಂದ ಗಂಡಾಗಲೀ ಹೆಣ್ಣಾಗಲೀ ಯಾವ ತೃಪ್ತಿಯನ್ನು ಅನುಭವಿಸುವುದಕ್ಕೆ ಸಾಧ್ಯವಿರುತ್ತದೆ?  ಯಾವುದೂ ಇಲ್ಲ. ಆದರೂ ಅನುಭವಿಸಬೇಕು. ಅದನ್ನೇ ದಾಸ್ಯದ ಹೇರಿಕೆ ಎನ್ನುವುದು. ಅದು ಸೂಕ್ಷ್ಮ ವಾಗಿರಬಹುದು.  ಆದರೆ ಮನಸ್ಸಿಲ್ಲದೆಯೋ ಅಥವ ಅರೆ ಮನಸ್ಸಿನಿಂದಲೋ  ಇಲ್ಲ ಕೇವಲ ಒಲಿಸಿಕೊಳ್ಳಬೇಕೆಂಬ ಸ್ವಾರ್ಥದಿಂದಲೋ ಮಾಡಿದಂತಹ ಸೇವೆಯನ್ನು ಮುಕ್ತ ಮನಸ್ಸಿನಿಂದ ನಮಗೆ  ಅನುಭವಿಸುವುದಕ್ಕೆ ಸಾಧ್ಯವಿದೆಯೇ? ಓಂದು ಸನ್ಮನಸ್ಸಿಗೆ ಸಾಧ್ಯ ಇಲ್ಲ ಎನ್ನಬೇಕು.   ಅದನ್ನು ಅನುಭವಿಸುವಾಗ ಮನಸ್ಸಿನ ಮೂಲೆಯೊಂದರಲ್ಲಿ ಸೂಕ್ಷ್ಮವಾದ ಒಂದು ಅತೃಪ್ತಿ ಇದ್ದೇ ಇರುತ್ತದೆ .  ಹಾಗಾಗಿ ಸ್ವಲ್ಪವೂ ಅತೃಪ್ತಿಯಿಲ್ಲದೇ ಗಂಡನಾಗಲೀ ಹೆಂಡತಿಯಾಗಲೀ ಮಾಡಿದಂತಹ ಸೇವೆಯನ್ನು ಪರಸ್ಪರ ಅನುಭವಿಸುವುದು ಒಂದು ಪರಮ ಸುಖ. ಯಾವುದೇ ಹಂಗಿಲ್ಲದೇ ಅನುಭವಿಸುವ ನಿರಾಳ ಸುಖವದು. ಇದನ್ನೆ ಸರಸ ಎನ್ನುವುದು. ಸರಸ ಎಂದರೆ ಸಮ ಭಾವದ ಸಮ ಭಾರದ ಸಮ ರುಚಿಯ೦ ಸಮ ಕಲ್ಪನೆಯ  ಸಮ ಆಸ್ವಾದನೆಯ ಸಮ ಜೀವನದ ರಸ. ಇಲ್ಲಿ ಎಲ್ಲವು ಸಮವಾಗಿರುತ್ತದೆ. ಹಾಗಿದ್ದರೆ ಮಾತ್ರ ಅದು ಸರಸವಾಗಿರುತ್ತದೆ.  







Saturday, September 29, 2018

ನಮ್ಮ ಬೋಳಂಗಳ


        
            ಪರಮಾತ್ಮನ ನಿಯಮಗಳಿಗೆ ಮನುಷ್ಯ ಬದ್ದನಾಗಿರುತ್ತಾನೋ ಹೇಳುವುದು ಕಷ್ಟ,   ಆದರೆ ಪರಮಾತ್ಮನನ್ನೇ ತನ್ನ ನಿಯಮಗಳಿಗೆ ಒಳಪಡುವಂತೆ ಮಾಡುವಲ್ಲಿ ಮನುಷ್ಯ ಪ್ರಯತ್ನ ನಿರಂತರವಾಗಿರುತ್ತದೆ.  ಒಂದು ಸೇರು ಅನ್ನ ಕೊಡುವಲ್ಲಿ ಒಂದು ಮುಷ್ಟಿ ಅಕ್ಕಿ ಕೊಟ್ಟು ಪರಮಾತ್ಮನನ್ನು ತೃಪ್ತಿ ಪಡಿಸಿ ತಾನು ತೃಪ್ತನಾಗುವಾಗ ಮನುಷ್ಯ ಯೋಚಿಸುವುದು ಎಲ್ಲದಕ್ಕಿಂತಲೂ ಭಕ್ತಿ ಮುಖ್ಯ. ಹಲವು ಸಲ ತನ್ನಲ್ಲಿಲ್ಲದ ವಸ್ತುವಿನ ಮೇಲೆ ಮನುಷ್ಯನಿಗೆ ಅಚಲ ವಿಶ್ವಾಸ.  ಹಾಗಾಗಿ ಭಕ್ತಿಭಾವ ಇಲ್ಲದವನೂ ಸಹ  ಭಕ್ತಿಯೇ ಮುಖ್ಯ ಎಂದುಕೊಂಡು ಒಂದು ಮುಷ್ಟಿ ಅಕ್ಕಿ ಇಟ್ಟು ಭಗವಂತ ನನ್ನಿಂದ ಇಷ್ಟೇ ಸಾಧ್ಯ ಎಂದು ಪರಮಾತ್ಮನನ್ನು ತನ್ನ ನಿಯಮಗಳಿಗೆ ಒಳಪಡಿಸುತ್ತಾನೆ. ದೇವರೇನು ಬಂದು ನಿಂತು ನ್ಯಾಯ ಕೇಳುವುದಿಲ್ಲ. ಆದರೆ ಮನುಷ್ಯ ತನ್ನ ಜೀವನಾನುಭವದಿಂದ ನ್ಯಾಯ ಅನ್ಯಾಯ  ತನ್ನ ತಿಳುವಳಿಕೆಯಲ್ಲಿ ಕಂಡುಕೊಳ್ಳುತ್ತಾನೆ.  ಭಕ್ತಿ ಎಂಬುದು ಆಳ ಅಗಲ ವಿಸ್ತಾರ ವರಿಯದ ಒಂದು ಭಾವ. ಅದರ ಪರೀಕ್ಷೆಯಿರುವು ಅಂತರಂಗದಲ್ಲಿರುವ ಪ್ರಾಮಾಣಿಕತೆಯಲ್ಲಿ
  ಬೋಳಂಗಳ ಭೂತಸ್ಥಾನ  ಚಿತ್ರ ಕೃಪೆ ಹರ್ಷರಾಜ್ 
ಮಾತ್ರ. ಹಾಗೆ ನೋಡಿದರೆ ಭಗವದ್ಗೀತೆಯಲ್ಲಿ ಪರಮಾತ್ಮ ಹೇಳುತ್ತಾನೆ. ಯಾವುದೇ ಭಾವವಿಲ್ಲದೆ ಉದ್ವೇಗ ದುಃಖ ಸಂತೋಷ ರಹಿತ ಮನಸ್ಸಿನಿಂದ ಆರಾಧಿಸಿದಲ್ಲಿ ಮಾತ್ರವೇ ಅಲ್ಲಿ ನನ್ನ ಅನುಗ್ರಹವಿರುತ್ತದೆ. ಭಕ್ತಿ ಭಾವ ಅತಿಯಾಗಿ ಉದ್ವೇಗದಿಂದ ಕಣ್ಣೀರು ಹಾಕಿ ಪರಮಾತ್ಮನಿಗೆ ನಮಸ್ಕರಿಸಿದರೂ ಅದು ಭಕ್ತಿಯೂ ಆಗುವುದಿಲ್ಲ. ನಿಜಾರ್ಥದ ಪರಮಾತ್ಮನ ಸಾಕ್ಷಾತ್ಕರವೂ ಸಾಧ್ಯವಾಗುವುದಿಲ್ಲ.

            ನಮ್ಮೂರು ಪೈವಳಿಕೆ ಗ್ರಾಮದಲ್ಲಿ ಚಿಕ್ಕ ಹಳ್ಳಿಯೊಂದಿದೆ. ಬೋಳಂಗಳ. ಹೆಸರೇ ಸೂಚಿಸುವಂತೆ ಇಲ್ಲಿ ಜನವಾಸವಿಲ್ಲ. ಬೋಳಾದ ದೊಡ್ಡ ಮೈದಾನದಂತಹ ಪ್ರದೇಶ ಅದರಂಚಿಗೆ ತಾಗಿಕೊಂಡಂತೆ ಒಂದು ಭೂತಸ್ಥಾನ. ತೀರ ನಿರ್ಜನ ಪ್ರದೇಶ. ಆಕಡೆ ಈಕಡೆ ಅಡ್ಡಾಡುವವರೂ ಸಹ ಸಿಗುವುದು ಕಡಿಮೆ. ಎಂದಾದರೊಮ್ಮೆ ಇಲ್ಲಿರುವ ಕಾಣಿಕೆ ಡಬ್ಬಿಗೆ ಹರಕೆ ಒಪ್ಪಿಸಲು ಕೆಲವರು ಬರುವುದುಂಟು.  ಅತ್ಯಂತ ಪುರಾತನ ಭೂತಸ್ಥಾನ. ಇದರ ಐತಿಹ್ಯ ಚರಿತ್ರೆಯ ಬಗ್ಗೆ ಅರಿವಿರದಿದ್ದರೂ ಬಾಲ್ಯದಿಂದಲೇ ನಮಗೆ ಭೂತ ಎಂದರೆ ಭಯ ಭಕ್ತಿಯನ್ನು ಹುಟ್ಟುಹಾಕಿಸಿದಂತಹ ಸ್ಥಳವಿದು.  ಉಪ್ಪಳ ಕನ್ಯಾನ ರಸ್ತೆಯಲ್ಲಿ ಕವಲೊಡೆಯುವ ಚಿಪ್ಪಾರು ರಸ್ತೆಯ ಒತ್ತಿನಲ್ಲೇ ಈ ಕ್ಶೇತ್ರ ಸಿಗುತ್ತದೆ.  ಬೋಳಂಗಳವಾದರೂ ಇದು ನಯನ ಮನೋಹರ ಜಾಗವೆಂಬುದರಲ್ಲಿ ಅನುಮಾನವಿಲ್ಲ. ಸಾಯಂಕಲ ಇಲ್ಲ ಮುಂಜಾನೆ ಹೊತ್ತು ಇಲ್ಲಿ ಹೋಗಿ ಪಕ್ಕದಲ್ಲೇ ಇರುವ ಗುಡ್ಡದ ತುದಿಯಲ್ಲಿ ನಿಂತು ದೂರದ ಪಡುವಣ ಕಡಲನ್ನು ಕಾಣುವಾಗ ನಿಜಕ್ಕೂ ಇಲ್ಲಿ ಪರಮಾತ್ಮನ  ಪ್ರಕೃತಿಯ ಅಸ್ತಿತ್ವ ಇದೆ ಅಂತ ಅನ್ನಿಸುತ್ತದೆ.  ಅದು ಭಾವಜೀವಿಗಳಿಗಾದರೆ ಜನ ಸಾಮಾನ್ಯರಿಗೆ ಇರುವ ವಿಶೇಷ ಒಂದಿದೆ.  ಇಲ್ಲಿ ವರ್ಷಕ್ಕೊಮ್ಮೆ ನೇಮ (ಉತ್ಸವ) ಬಿಟ್ಟರೆ ಬಹುತೇಕ ಇಲ್ಲಿ ಚಟುವಟಿಕೆಗಳೇ ಇರುವುದಿಲ್ಲ. ಆದರೂ ಈ ಕ್ಷೇತ್ರದ ಬಗ್ಗೆ ಊರ ಪರ ಊರಿನವರು ಇರಿಸಿಕೊಂಡ ವಿಶ್ವಾಸ ಮಾತ್ರ ಆಶ್ಚರ್ಯ ಹುಟ್ಟಿಸುತ್ತದೆ. ಜಾತಿ ಭೇದವಿಲ್ಲದೆ  ಈ ವಿಶ್ವಾಸ ಇಂದಿಗೂ ನೆಲೆ ನಿಂತಿದೆ. ಅದಕ್ಕೊಂದು ನಿದರ್ಶನವಿದೆ.

            ಬಾಲ್ಯದಲ್ಲಿರುವಾಗ ಭೂತ ಎಂದರೇನು ಎಂಬ ಪ್ರಶ್ನೆಗೆ ನಮಗೆ ಉತ್ತರವಾದದ್ದು ಈ ಬೋಳಂಗಳದ ದೈವ.  ಇದರ ಉತ್ಸವವೂ ಬಹಳ ವಿಚಿತ್ರ. ಇದು ವರ್ಷಕ್ಕೊಮ್ಮೆ ಸಾಮಾನ್ಯವಾಗಿ ಪೆಬ್ರವರಿ ತಿಂಗಳಲ್ಲಿ ಜರಗುತ್ತದೆ. ಊರ ಉತ್ಸವವಾದರೂ ಇದರ ಸರಳತೆ ಅತ್ಯಂತ ವಿಶಿಷ್ಟ. ಎಲ್ಲ ಭೂತ ನೇಮದಂತೆ ಇದಲ್ಲ. ಸಾಯಂಕಾಲ ನಾಲ್ಕುಘಂಟೆಯ ಸುಮಾರಿಗೆ ಆರಂಭವಾಗುವ ಉತ್ಸವ ಸೂರ್ಯಾಸ್ತವಾಗುತ್ತಿದ್ದಂತೆ ಮುಗಿದು ಹೋಗುತ್ತದೆ. ಕೆಲವೇ ಘಳಿಗೆಗಳಷ್ಟು ಹೊತ್ತು ನಡೆಯುವ ಈ ಊರ ಜಾತ್ರೆ ಅತ್ಯಂತ ವಿಶಿಷ್ಟವಾಗುವುದು ಇನ್ನೊಂದು ವಿಚಾರಕ್ಕೆಕ್. ಇದು ಅತ್ಯಂತ ರೋಚಕ ವಿಷಯ. ಬಹುಶಃ ಇದುವೇ  ಬೋಳಂಗಳದ ವಿಶೇಷ ಮತ್ತು ವಿಚಿತ್ರ .
           
            ಉತ್ಸವದ ದಿನ ಮಧ್ಯಾನದ ಸುಡು ಬಿಸಿಲು ಕಡಿಮೆಯಾಗುತ್ತಿದ್ದಂತೆ ಅಕ್ಕ ಪಕ್ಕದ ಊರವರು ಬೋಳಂಗಳದತ್ತ ಆಗಮಿಸುತ್ತಾರೆ. ಸರಿ ಸುಮಾರು ಐನೂರು ಜನ ಸೇರಬಹುದೇನೋ. ಇಲ್ಲಿರುವುದು ಸಣ್ಣದಾದ ಒಂದು ಅವರಣ ಅದರೊಳಗೊಂದು ಗುಡಿ. ಗುಡಿ ಬಹಳ ಹಳೆಯದಾಗಿದೆ. ಸ್ವಲ್ಪ ಶಿಥಿಲವೂ ಆಗಿದೆ.  ಸಾಯಂಕಾಲವಾಗುತ್ತಿದ್ದಂತೆ  ಸಂತೆ ಇಡುವವರು ಜಾತ್ರೆಗೆ ಸೇರುವ ಊರವರು ಬ್ಯಾಂಡು ವಾದ್ಯದ ಗದ್ದಲ ಇಷ್ಟರಲ್ಲೇ ಭೂತದ ನೇಮ ಮುಗಿದು ಹೋದರು ಜನರ ಭಕ್ತಿ ವಿಶ್ವಾಸ ಇದಕ್ಕಿಂತಲೂ ಮಿಕ್ಕಿ ಅಗಾಧವಾದೆ. ಶುರುವಾಗಿ ಕೇವಲ ಎರಡು ಮೂರು ಘಂಟೆಯಲ್ಲಿ ಮುಗಿಯುವ ಉತ್ಸವ ಇಷ್ಟಕ್ಕೆ ಇದರ ಮಹತ್ವ ಸೀಮಿತವಾಗುವುದಿಲ್ಲ. ಇಲ್ಲಿರುವ ಮತ್ತೊಂದು ವಿಚಿತ್ರವೆಂದರೆ ಈಗಿನ ಕಾಲದಲ್ಲೂ ಇದನ್ನು ನಂಬುವುದು ಕಷ್ಟ ಆದರೂ ಇದು ಅಸ್ತಿತ್ವದಲ್ಲಿದೆ.
           
            ಕೆಲವು ಘಳಿಗೆಯ ಉತ್ಸವಕ್ಕೆ ಹೆಂಗಸರು ಅಂದರೆ ಸ್ತ್ರೀಯರು ಹೋಗುವಂತಿಲ್ಲ. ಯಾರೂ ಸಹ ಹೋಗುವುದೂ ಇಲ್ಲ. ಈ ಭೂತದ ನೇಮೋತ್ಸವವನ್ನು ಹೆಂಗಸರು ಹೆಣ್ಣು ಮಕ್ಕಳು ನೋಡುವಂತಿಲ್ಲ. ಹಾಗಾಗಿ ಇಲ್ಲಿ ಕೇವಲ ಪುರುಷರು ಮಾತ್ರವೇ ಬರುತ್ತಾರೆ. ಇದು ಕೇವಲ ಹಿಂದುಗಳ ನಂಬಿಕೆಯಲ್ಲ ಮುಸ್ಲಿಮ್  ಕ್ರಿಶ್ಚನ್ ಎಲ್ಲರೂ ಭಯ ಭಕ್ತಿಯಿಂದ  ಈ ನಿಯಮವನ್ನು ಪಾಲಿಸುತ್ತಾ ಬಂದಿದ್ದಾರೆ. ಹಾಗಾಗಿಯೆ ಉತ್ಸವದ ದಿನ ಬೆಳಗ್ಗಿನಿಂದಲೆ ಇಲ್ಲೇ ಹಾದು ಹೋಗುವ ದಾರಿಯಲ್ಲೂ ಸಹ ಯಾವುದೇ ಸ್ತ್ರೀಯರು ಸಂಚರಿಸುವುದಿಲ್ಲ.  ಹೆಣ್ಣುಗಳು ಈ ಭೂತವನ್ನು ನೋಡಿದರೆ ಏನಾಗುತ್ತದೆ ಎಂದು ಪೆದಂಬು ಪ್ರಶ್ನೆಸುವವರಿಗೆ ಉತ್ತರ ಒಂದೇ ಕಲ್ಲಾಗಿ ಹೋಗುತ್ತಾರೆ. ಬಹಳ ಹಿಂದೆ ಒಬ್ಬಾಕೆ ಭೂತ ಕಟ್ಟುವವನ ಹೆಂಡತಿಯೇ ಕಲ್ಲಾಗಿ ಹೋದ ಕಥೆಯನ್ನು ಊರ ಹಿರಿಯರು ಹೇಳುತ್ತಾರೆ. ಹೆಣ್ಣುಗಳಿಂದ ದೂರವಿರುವ ಈ ದೈವ ವೆಂದರೆ ಬಾಲ್ಯದಿಂದಲೇ ನಮಗೆ ಭಯ ಭಕ್ತಿಯನ್ನು ಮೂಡಿಸಿದ್ದಂತೂ ಸತ್ಯ. ನಮಗೆಂದೇನು ಊರಲ್ಲಿ ಎಲ್ಲರಿಗೂ  ಈ ಭಯ ಭಕ್ತಿ ನಂಬಿಕೆ ಇಂದಿಗೂ ಅಚಲವಾಗಿ ಅಸ್ತಿತ್ವದಲ್ಲಿದೆ.   ಎಷ್ತೇ ಕುತೂಹಲವಿದ್ದರೂ ಇದನ್ನು ಪರೀಕ್ಷಿಸುವ ಸಾಹಸ ಯಾರೂ ಮಾಡಿಲ್ಲ.

            ಇದೀಗ ಶಬರಿಮಲೆಯ ಸ್ತ್ರೀ ಪ್ರವೇಶ ವಿಚಾರ ಬಹಳ ಚರ್ಚಿತ ವಿಷಯ. ಶಬರಿಮಲೆ ಕೇವಲ ಇಷ್ಟಕ್ಕೇ ಅಲ್ಲ ಇಂತಹ ಇನ್ನೂ ಹಲವು ವಿಚಾರಗಳಿಗು ಕಥೆಗಳಿಗೂ ಪ್ರಸಿದ್ದ. ಆದರು ನಂಬುಗೆ ವಿಶ್ವಾಸಗಳು ಅದು ಮನುಷ್ಯನ ಭಾವನೆಗೆ ಸೀಮಿತವಾಗಿರುತ್ತದೆ. ಅದಕ್ಕೆ ನಿದರ್ಶನ ಈ ಸ್ತ್ರೀ ಪ್ರವೇಶ.  ಯಾವುದು ಸರಿ ಯಾವುದು ತಪ್ಪು ಎಂದು ವಿಶ್ಲೇಷಿಸುವುದು ನಮ್ಮ ಜ್ಞಾನಕ್ಕೂ ನಂಬುಗೆಗೂ ಸೀಮಿತವಾಗಿರುತ್ತದೆ. ನ್ಯಾಯಾಲಯ ಇದೀಗ ಎಲ್ಲ ಸ್ತ್ರೀಯರೂ ಪ್ರವೇಶಿಸಬಹುದು ಎಂದು ತೀರ್ಪನ್ನು ಇತ್ತಿದೆ. ಸ್ತ್ರೀಯರಿಗೆ ಪ್ರವೇಶವಿಲ್ಲ ಎಂಬ ನಿಯಮವನ್ನಷ್ಟೇ ನ್ಯಾಯಾಲಯ ತೆಗೆದು ಹಾಕಿದೆ. ಹೊರತು ಯಾವುದೇ ಸ್ತ್ರೀಯನ್ನು ಶಬರಿಮಲೆಯ ಬಾಗಿಲಲ್ಲಿ ನಿಲ್ಲಿಸಿ ಒಳಗೆ ತಳ್ಳಲಿಲ್ಲ. ಇದು ಗಮನಾರ್ಹ. ಅಥವಾ ಸ್ತ್ರೀಗಳು ಹೋಗಲೇ ಬೇಕು ಎಂಬ ನಿಯಮವನ್ನು ಮಾಡಲಿಲ್ಲ .  ಅಥವಾ ಮಾಡುವಂತೆಯೂ ಇಲ್ಲ. ವಿಷಯ ವಿವಾದ ಉಂಟುಮಾಡಿ ರೋಚಕತೆಯನ್ನು ಸೃಷ್ಟಿಸುವಾಗ ಈ ವಿಚಾರಗಳು ಗಮನಾರ್ಹವಾಗುತ್ತದೆ.  ಶಬರಿಮಲೆಯಲ್ಲಿ ಸ್ತ್ರೀ ಯರು ಹೋಗಬಹುದು ಬಿಡಬಹುದು, ಹೋದರೆ ಏನು ಎಂದು ಪರೀಕ್ಷಿಸಲೂ ಬಹುದು. ಬ್ರಹ್ಮಚಾರಿಯಾಗಿಯೇ ಇರುತ್ತೇನೆ ಎಂದ ಅಯ್ಯಪ್ಪನಿಗೆ ಸವಾಲನ್ನೂ ಎಸೆಯಬಹುದು. ಆದರೆ ಪ್ರಕೃತಿಯೇ ವಿಧಿಸುವ ನಿಯಮಗಳನ್ನು ಮನುಷ್ಯ ಅರ್ಥವಿಸಿಕೊಳ್ಳುವುದಿಲ್ಲ. ಅರ್ಥವಿಸಿಕೊಂಡರೂ ಅದು ತನಗೆ ಬೇಕಾದಂತೆ ರೂಪಿಸಿಕೊಳ್ಳುತ್ತಾನೆ.  ಅಂತಾರಾಷ್ತ್ರೀಯವಾಗಿ ಸುದ್ದಿ ಮಾಡಿ ವಿವಾದ ಸೃಷ್ಟಿಸಿದ  ಈ ಎಲ್ಲ  ವಿಚಾರಗಳ ಮಧ್ಯೆಯೂ ನಮ್ಮ ಬೋಳಂಗಳ ನನಗೆ ವಿಚಿತ್ರವಾಗಿ ಕಾಣುತ್ತದೆ.   ಶಬರಿ ಮಲೆ ಪ್ರವೇಶಕ್ಕೆ ಹಾತೊರೆದ ಮಹಿಳಾ ಮಣಿಗಳು ನಮ್ಮ ಬೋಳಂಗಳದ ದೈವಕ್ಕೂ ಪ್ರಶ್ನೆಯಾಗುತ್ತಾರೋ ಗೊತ್ತಿಲ್ಲ. ಆದರೆ ನಮ್ಮ ನಂಬಿಕೆ ವಿಶ್ವಾಸಗಳ ಆವರಣದಲ್ಲೇ ಬದುಕುವ ಮನುಷ್ಯ ಇದರ ಬಗ್ಗೆ ಗಂಭೀವಾಗಿ  ಯೋಚಿಸುವ ಅಗತ್ಯವಿಲ್ಲ. ದೈವೇಚ್ಚೇ ಹೇಗೋ ಯಾರಿಗೆ ಗೊತ್ತು?  ಭೂತ ನೋಡಿ ದೇಹದಿಂದ ಕಲ್ಲಾಗುತ್ತಾರೋ ಗೊತ್ತಿಲ್ಲ. ಆದರೆ ಮನಸ್ಸಿನಿಂದ ಕಲ್ಲಾಗಿ ಮನಸ್ಸೇ ಕಲ್ಲಾಗಿ ಬಿಡುತ್ತಾರೆ.  ಯಾಕೆಂದರೆ ನಂಬಿಕೆಗಳು ನಂಬಿಕೆಗಳಾಗಿ ಮನುಷ್ಯನ ಜೀವನ ದಾರಿಯನ್ನು ನಿರ್ಣಯಿಸುತ್ತವೆ. ಅದನ್ನು ಬದಲಿಸುವುದೆಂದರೆ ಅದು ಕಲ್ಲು ಮನಸ್ಸಿನಿಂದ ಮಾತ್ರ ಸಾಧ್ಯ.  ಯಾಕೆಂದರೆ ಬೋಳಂಗಳದಲ್ಲಿ ಅಂಗಳ ಮಾತ್ರ ಬೋಳಾಗಿರಬಹುದು. ಭಾವನೆಗಳಲ್ಲ ಅದು ಯಥೇಚ್ಛವಾಗಿದೆ.
           

Monday, September 3, 2018

ಸ್ಮರಣೆಯ ದಿವ್ಯಾನುಭವಗಳು




ಹೀಗೆ ಹಲವು ವರ್ಷಗಳ ಹಿಂದೆ ತುಸು ಸಮೀಪದ ಅದೇ ಊರಿನ  ಮನೆಯ ಮಗುವೊಬ್ಬಳು  ನಮ್ಮ ಮನೆಗೆ ಬಂದು ತುಂಡು ಕಾಗದ ಒಂದನ್ನು ಕೊಟ್ಟು ಹೋದಳು. ಕಾಗದದಲ್ಲಿ ಭಟ್ಟರೊಬ್ಬರು  ಸಂಕ್ಷೇಪವಾಗಿ ಹೇಳಿದ್ದರು. ನನ್ನನ್ನು ಕಾಣುವುದಕ್ಕಾಗಿ ಇಬ್ಬರು ಮಹನೀಯರು ಮನೆ ಹುಡುಕಿಕೊಂಡು ನಮ್ಮ ಮನೆಗೆ ಬಂದಿದ್ದಾರೆ. ಅವರನ್ನು ಬಂದು ಕರೆದುಕೊಂಡು ಹೋಗಬಹುದು. ಆ ಮಗುವಿನ ಮನೆಯವರು ಆ ಭಟ್ಟರ ಮನೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಹಾಗೆ ಅವರ ಕೈಯಲ್ಲೇ ಕೊಟ್ಟು ಕಳುಹಿಸಿದ್ದರು. ಸರಿ ನನ್ನ ತಾಯಿ ಹೋಗಿ ಆ ಇಬ್ಬರು ವ್ಯಕ್ತಿಗಳನ್ನು ಕರೆದುಕೊಂಡು ಬಂದರು. ಅದು ನನ್ನ ಮತ್ತು ಆ ವ್ಯಕ್ತಿಗಳ ಪ್ರಥಮ ಭೇಟಿ. ಕೆಲವು ಘಟನೆಗಳು ಬದುಕಿನ ಕಥೆಗಳನ್ನೇ ಬರೆಯುತ್ತವೆ. ಅದು ಆದೇ ರೀತಿಯದಾಗಿತ್ತು. ಬಂದವರು ಹೆಣ್ಣು ಹೆತ್ತ ತಂದೆಯಾದರೆ ಇನ್ನೊಬ್ಬರು ಅವರ ಭಾವ.
ಯಾವುದೋ ಒಂದು ಸಣ್ಣ ಪತ್ರಿಕೆಯಲ್ಲಿ ಸಣ್ಣ ವಿವಾಹವೇದಿಕೆ ಎಂಬ ಸಣ್ಣ ಅಂಕಣವೊಂದಿತ್ತು.  ಸರಳವಾಗಿ ವರದಕ್ಷಿಣೆ ರಹಿತವಾಗಿ ಮದುವೆಯಾಗುವ ಗಂಡು ಹೆಣ್ಣಿಗೆ ಆ ಅಂಕಣ ಮಾಧ್ಯಮವಾಗಿತ್ತು. ಯೌವನದ ಹುರುಪಿನಲ್ಲೋ ಹುಡುಗು ಬುದ್ದಿಯಲ್ಲೋ ಆ ಪತ್ರಿಕೆ ನಾನು ಒಂದಷ್ಟು ಗೀಚಿ ಬರೆದಿದ್ದೆ. ಅದು ಗಂಭೀರತೆಯನ್ನು ಪಡೆದು ನನ್ನನ್ನು ಬೇಟಿಯಾಗುವುದಕ್ಕೆ ಇವರಿಬ್ಬರು ಬಂದಿದ್ದರು. ಇಬ್ಬರೂ ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿಗಳು. ದೂರದ ಮಲೆನಾಡು ಪ್ರದೇಶದಿಂದ ಬಂದಿದ್ದರು ಭಾಷೆ ಸಂಸ್ಕೃತಿ ಅದಿನ ಒಂದಷ್ಟು ನಮಗೆಲ್ಲ ವಿಶೇಷವಾಗಿತ್ತು. ಕಾಣುವುದಕ್ಕೆ ಸಾಕಷ್ಟು ಅನುಕೂಲವಂತರು.  ನಮ್ಮದು ಹುಲ್ಲು ಹಾಸಿನ ಗುಡಿಸಲು ಮನೆ. ಜತೆಯಲ್ಲೇ ಮನೆಯಲ್ಲೇ ಒಂದು ಸಣ್ಣ ವ್ಯಾಪಾರ. ಹಾಗೇ ನನ್ನ ಬಗ್ಗೆ ತಿಳಿದುಕೊಂಡರು, ಮಾತುಕತೆಯಾಡಿ  ನನ್ನನ್ನು ಅವರ ಮನೆಗೆ ಬರುವಂತೆ ಆಮಂತ್ರಿಸಿದರು. ನನಗೆ ನಿರೀಕ್ಷೆಗಳಿರಲಿಲ್ಲ. ಆದರೆ ಆಶೆಗಳಿದ್ದುವು. ಹೇಳಿದಂತೆ ಹೋದೆ. ಭೇಟಿ ಕೊಟ್ಟೆ. ಅದು ನನ್ನ ಬದುಕಿನ ಪ್ರಮುಖ ಬೇಟಿಯಾಗಿ ನಂತರ ಬದಲಾಗಿ ಹೋದದ್ದು ಬದುಕಿನ ಇತಿಹಾಸ. ಇಂದು ಅದೇ ಮನೆಯ ಹೆಣ್ಣು ನನ್ನೊಂದಿಗೆ ಬದುಕು ನಡೆಸುತ್ತಿದ್ದಾಳೆ.  ಇಂದಿಗೂ ಆ ಪ್ರಥಮ ಭೇಟಿ ಅಚ್ಚಳಿಯದೇ ಉಳಿದಿದೆ. ಅಂದು ಅದೇ ಶುಭ್ರ ಪಂಚೆ ಅಂಗಿಯಲ್ಲಿ ಬಂದ ನನ್ನ ಭಾವೀ ಮಾವ ಒಂದು ಸರಳ ಸಜ್ಜನಿಕೆಯ ವ್ಯಕ್ತಿ.
ಅರ್ಹತೆ ಮತ್ತು ಯೋಗ್ಯತೆ ಇವೆರಡೂ ವಿಭಿನ್ನ ಗುಣಗಳು. ಯೋಗ್ಯತೆ ಸ್ವಂತ ಗುಣದಿಂದ ಒದಗಿಬಂದರೆ ಅರ್ಹತೆ ಹಿರಿಯರಿಂದ ಬರುತ್ತದೆ. ಇದು ತಾತ್ವಿಕವಾದ ಸಿದ್ದಾಂತ. ಆದರೆ ಇವೆರಡೂ ಹೊಂದಿರದ ವ್ಯಕ್ತಿತ್ವ ಏನಾದರೂ ಪಡೆಯುವುದಕ್ಕೆ ಸಾಧ್ಯವೇ?   ಆದರೆ ಬದುಕಿನ ಘಟನೆಗಳು ಇವುಗಳನ್ನು ಸಾಧ್ಯವಾಗಿಸುತ್ತವೆ. ಬದುಕನ್ನು ಅವಲೋಕಿಸುವಾಗ ಈ ಸತ್ಯ ಗೋಚರವಾಗುತ್ತದೆ.
ಹೆಣ್ಣು ಹೆತ್ತ ತಂದೆ ಅಂದರೆ ಕನ್ಯಾಪಿತೃ  ತನ್ನ ಮಗಳನ್ನು ಒಬ್ಬಾತನಿಗೆ ಕೊಡುವಾಗ ಇದೇ ಪ್ರಶ್ನೆ ಎದುರಾಗುತ್ತದೆ. ಹುಡುಗನಿಗೇನಿದೆ? ಸಹಜವಾಗಿ ತನ್ನ ಮಗಳ ಬದುಕಿನ ಸಾರ್ಥಕತೆಯನ್ನು ಯಾವೊಬ್ಬ ಹೆಣ್ಣು ಹೆತ್ತ ತಂದೆ ಬಯಸದೇ ಇರುವುದಿಲ್ಲ. ತನ್ನ ಮಗುವಿನ ಭವಿಷ್ಯಕ್ಕಾಗಿ ಕೂಡಿಟ್ಟ ಒಂದಷ್ಟು ಸಂಪತ್ತನ್ನೂ ತನ್ನ ಬದುಕನ್ನೂ ಇದಕ್ಕೆ ವಿನಿಯೋಗಿಸುವ ಹೆಣ್ಣು ಹೆತ್ತ ಮನುಷ್ಯ,  ಹೆಣ್ಣು ಮಗುವಿನ ಬದುಕಿನ ಮೇಲೆ ಅತಿಯಾದ ಆಕಾಂಕ್ಷೆಯನ್ನು ನಿರೀಕ್ಷೆಯನ್ನೂ ಹೊತ್ತಿರುತ್ತಾನೆ. ಹಾಗಾಗಿ ಹೆಣ್ಣು ಪಡೆದ ಗಂಡಿನ ಅರ್ಹತೆ ಯೋಗ್ಯತೆ ಎರಡೂ ಪ್ರಧಾನ ಅಂಶಗಳಾಗುತ್ತವೆ.
ಬಹಳ ಹಿಂದಿನ ದಿನಗಳವು. ದೇಹದಲ್ಲಿ ತೋಳ್ಬಲ ಮನಸ್ಸಿನಲ್ಲಿ ಇಚ್ಛಾಶಕ್ತಿ ಅಲ್ಲದೇ ಬೇರೆ ಭಂಡವಾಳವೇ ಇಲ್ಲ. ಕೈ ಇಕ್ಕುವ ಅಂಗಿಯ ಜೇಬು ಮೇಲಿನಿಂದ ತೆರೆದುಕೊಂಡಂತೆ ಕೆಳಗಿನಿಂದಲೂ ತೆರೆದುಕೊಂಡಿರುತ್ತದೆ.    ಕೈ ಬೆರಳು ಜೇಬಿನಲ್ಲಿ ತಡಕಾಡಿದರೆ ಶೂನ್ಯವೇ ಅನುಭವ. ಅಂತಹ ದಿನಗಳಲ್ಲಿ ಇರುವ ವ್ಯಕ್ತಿತ್ವಕ್ಕೆ ಅರ್ಹತೆಯೂ ಇಲ್ಲ ಯೋಗ್ಯತೆಯೂ ಇಲ್ಲ. ಅಂತಹಾ ದಿನಗಳಲ್ಲಿ ನನ್ನ ಮಡದಿ ನನ್ನ ಕೈ ಹಿಡಿದು ಬದುಕಿನ ಹೆಜ್ಜೆಗೆ ಜತೆಯಾದವಳು. ನನ್ನ ಹೆಜ್ಜೆ ಗುರುತು ಬಿದ್ದೆಡೆಯಲ್ಲಿ ತನ್ನ ಪಾದವನ್ನು ಒತ್ತುವಾಗ ಆಕೆಯಲ್ಲಿದ್ದ ಆತ್ಮವಿಶ್ವಾಸ ಗಂಡನಾದ ನನಗೆ ಅತೀವ ಆತ್ಮ ಸ್ಥೈರ್ಯವನ್ನು ಒದಗಿಸಿತ್ತು. ಆಕೆಯಲ್ಲಿದ್ದ ಆತ್ಮ ವಿಶ್ವಾಸ ಹುಟ್ಟಿಕೊಂಡದ್ದೇ ಹಾಗೆ. ಅದು ಹೆತ್ತ ತಂದೆಯ ಮೇಲಿನ ವಿಶ್ವಾಸ. ಇವೆರಡೂ ಸೇರಿದಾಗ ಗಂಡನಾದವನ ಜವಾಬ್ದಾರಿ ಬಹಳಷ್ಟು ಗುರುತರವಾಗುತ್ತದೆ. ಈ ಅರಿವು ಸದಾ ನನ್ನನ್ನು ಜಾಗ್ರತನನ್ನಾಗಿಸಿತ್ತು.
ಅರ್ಹತೆ ಯೋಗ್ಯತೆ ಎರಡೂ ಇಲ್ಲದ ನನಗೆ ಎಲ್ಲವೂ ನಿನ್ನಲ್ಲಿದೆ ಎಂದು ಅಳಿಯದೇವರಂತೆ ನೋಡಿ,  ದೈವತ್ವವನ್ನು ನನ್ನಲ್ಲಿ ಕಂಡುಕೊಂಡ ನನ್ನ ಮಾವನ ವ್ಯಕ್ತಿತ್ವ ನಿಜಕ್ಕೂ ದೈವೀ ಸಂಭೂತ. ಏನೂ ಇಲ್ಲದ ನನ್ನ ಶೂನ್ಯ ಕೈಗಳಲ್ಲಿ ಹೆಣ್ಣಿನ ಕೈ ಇಟ್ಟು ಮಗಳನ್ನು ಧಾರಾದತ್ತವಾಗಿ ನೀಡಿದಾಗ ಜವಾಬ್ದಾರಿಯ ಭಾರಕ್ಕೆ ಕೈ ಕಂಪಿಸಿದರೂ ಮಾವನ ಆತ್ಮ ವಿಶ್ವಾಸದ ಆಶೀರ್ವಾದ ಮುಂದಿನ ಬದುಕಿನಲ್ಲಿ ಭದ್ರವಾದ ಹೆಜ್ಜೆಯನ್ನು ಊರುವುದಕ್ಕೆ ಸಹಕರಿಸಿತು. ಬಾಸಿಂಗ ಕಟ್ಟಿ ಹೆಣ್ಣಿನ ಹಾರಕ್ಕೆ ಕೊರಳೊಡ್ಡಿದಾಗ ಹಾರದ ಭಾರಕ್ಕೆ ತಲೆ ಬಾಗಲಿಲ್ಲ. ಬದಲಿಗೆ  ಮಾವನ ಹೃದಯವಂತಿಕೆಗೆ  ಶಿರ ಬಾಗಿತ್ತು. ತೋಳು ವಿಶಾಲವಾಗಿ ಹೆಣ್ಣನ್ನು ಬರಸೆಳೆದಿತ್ತು.  ಅಂದಿನಿಂದ ಇಂದಿನವರೆಗೂ ಆ ಪ್ರೀತಿ ಆ ವಿಶ್ವಾಸ ಅ ಮಧುರ ಅನುಭವವನ್ನು ಎಲ್ಲವನ್ನೂ ಉಂಡು ಗ್ರಹಸ್ಥನಾಗಿ ತುಂಬು ಸಂಸಾರಿಯಾಗಿ ಬಾಳುವೆ ನಡೆಸಿದ್ದೇನೆ. ಇದು ಆತ್ಮ ವಿಶ್ವಾಸದ ಹೆಗ್ಗಳಿಕೆಯ ಮಾತು.
ಹೆಣ್ಣು ಮಗಳೆಂದರೆ ಆಕೆ ತಾಯಿಗಿಂತಲೂ ತಂದೆಗೆ ಹೆಚ್ಚು ಹತ್ತಿರವಾಗುತ್ತಾಳೆ.  ಅದು  ಏಕ ಮಾತ್ರ ಹೆಣ್ಣು ಮಗಳೆಂದರೆ ಆ ಬಂಧನ ಇನ್ನೂ ಪಕ್ವವಾಗಿರುತ್ತದೆ. ಇದು ಅತಿಶಯವಲ್ಲ.   ಹೆಣ್ಣುಮಗಳ ಮತ್ತು ಹೆತ್ತ ತಂದೆಯ ಅನುಬಂಧ ಹೆಣ್ಣಿಗೂ ಹೆತ್ತ ತಂದೆಗೆ ಮಾತ್ರ ಅದರ ಆಳದ ಅರಿವಿರುತ್ತದೆ. ಇದೆಲ್ಲವನ್ನೂ  ಮೀರಿಸಿ ಹೆಣ್ಣು ಗಂಡಿನ ಜತೆಯಾಗುತ್ತಾಳೆ ಎಂದಾದರೆ ತಂದೆಯ ಅದೇ ಸುರಕ್ಷೆಯನ್ನು ಪ್ರೀತಿಯನ್ನೂ ಹೆಣ್ಣು ಬಯಸುತ್ತಾಳೆ.   ತಂದೆ ಈ ವಿಶ್ವಾಸವನ್ನು ಮಗಳಲ್ಲಿ ಮೂಡಿಸಿ ನೋಡು ಇದು ನನ್ನ ಅಳಿಯ, ನಿನ್ನ ಬದುಕಿನ್ನು ಅಲ್ಲಿದೆ,   ಎಂದು ತೊರಿಸಿಕೊಡುತ್ತಾನೆ. ಈ ಎರಡು ಕರ್ತವ್ಯವನ್ನು ಅತ್ಯಂತ ಜತನದಿಂದ ನನ್ನ ಮಾವ ಮಾಡಿ ಕೃತಾರ್ಥತೆಯನ್ನೂ ಉದಾರತೆಯನ್ನೂ ತೋರಿದವರು.
ನಾವು ತೋಳ್ಬಲದಿಂದ ಬುದ್ದಿ ಮತ್ತೆಯಿಂದ ಅದೆಷ್ಟನ್ನೋ ಆರ್ಜಿಸಿ ಶ್ರೀಮಂತರಾಗಬಹುದು. ಆದರೆ ಒಳ್ಳೆಯ ವ್ಯಕ್ತಿ ಸಂಬಂಧ ಪಡೆಯುವುದಕ್ಕೆ ಅದೃಷ್ಟವಿರಬೇಕು. ಆ ಅದೃಷ್ಟ ನನ್ನ ಜತೆಗಿತ್ತು. ಸುಮಾರು ಇಪ್ಪತ್ತೆಂಟು ವರ್ಷದ ಸುದೀರ್ಘ ಒಡೆನಾಟದಲ್ಲಿ  ಅ ಮನೆಯ ಅಂಗವಾಗಿ ಬೆಳೆದೆ.  ನನ್ನ ಮಾವನ ಮನೆಗೆ ನಾನೊಬ್ಬನೇ ಒಬ್ಬ ಅಳಿಯ.  ಆ ಸಂಬಂಧ ಮಾಧುರ್ಯ ಅಳಿಯದಂತೆ ಮಾಸದಂತೆ ಉಳಿದುಕೊಂಡಿದೆ ಎಂದರೆ ಇದರಲ್ಲಿ ಮಾವನ ಮನೆಯವರ ಹೃದಯವಂತಿಕೆ ಅತಿ ಹೆಚ್ಚು.
ಅದೆಷ್ಟೋ  ಹೆಣ್ಣು ಹೆತ್ತ ಮನೆಯವರನ್ನು ಕಂಡಿದ್ದೇನೆ. ಹಲವು ಕಡೆ ವ್ಯಾವಹಾರಿಕ ಪ್ರಪಂಚದ ಕಟು ಸತ್ಯದಂತೆ ಸಂಬಂಧಗಳು ಕೇವಲ ಸಂಬಂಧವಾಗಿ ವಿಡಂಬನೆಯ ದ್ವೇಷದ ಅಸೂಯೆಯ ಕಥೆಗಳನ್ನು ಕಂಡಿದ್ದೇನೆ. ಆದರೆ ಇದಾವುದರ ಕಿಂಚಿತ್ ಅನುಭವವೂ ಸೋಕದಂತೆ ಮನೆಯಲ್ಲಿ ನಾನು ಒಬ್ಬನಾಗಿ ಅದೇ ಪ್ರೀತಿ ವಿಶ್ವಾಸ ಉಳಿಸಿಕೊಂಡು ಮನೆಯ ಅಂಗವಾಗಿ ಬದುಕಿರುವುದರಲ್ಲಿ ನನ್ನ ಮಾವನ ವ್ಯಕ್ತಿತ್ವ ಗಾಢವಾದ ಪರಿಣಾಮವನ್ನು ಬೀರಿದೆ.  ನೆನಸಿಕೊಂಡರೆ ಬಿಚ್ಚಿಕೊಳ್ಳುವ ಹಲವು ಘಟನೆಗಳು ಹೃದಯವನ್ನು ಭಾರವಾಗಿಸಿ ಕಣ್ಣನ್ನು ತೇವವಾಗಿಸುತ್ತದೆ. ನಾನೇನು ಮಾಡಿದರೂ ಇದು ನನ್ನ ಮಗಳ ಗಂಡ ಎಂದು ಎದೆಗವಚಿಕೊಳ್ಳುವ  ನಿಸ್ವಾರ್ಥ ಮನಸ್ಸು. ಈ  ಸ್ವಾರ್ಥವಿಲ್ಲದ ಪ್ರೀತಿ ವಿಶ್ವಾಸ ತೋಳ್ಪಲದಿಂದ ಗಳಿಸಲಾಗದೇ ಇದ್ದುದನ್ನು ತೋರಿಸಿಕೊಟ್ಟಿದೆ.  ಒಳ್ಳೆಯ ಗಂಡನ ಮನೆ ತಮ್ಮ ಮನೆಯ ಹೆಣ್ಣು ಮಗಳಿಗೆ ಸಿಗಬೇಕು. ಇದು ಎಲ್ಲ ಹೆಣ್ಣು ಹೆತ್ತವರ ಸಹಜ ಆಶಯ. ಅದು ಒದಗಿ ಬರುವುದು ಅದೃಷ್ಟದಿಂದ. ಅಂತೆಯೇ ಒಳ್ಳೆಯ ಮಾವನ ಮನೆ ಎಂಬುದು ಗಂಡಿನ ಅತ್ಯಂತ ದೊಡ್ಡ ಭಾಗ್ಯ. ಅದನ್ನು ಪಡೆದ ಮಹಾ ಅದೃಷ್ಟ ನನ್ನ ಜತೆಗಿದೆ.
ಏನೂ ಇಲ್ಲದ ನನ್ನಲ್ಲಿ ಎಲ್ಲವನ್ನೂ ಕಂಡು ಎಲ್ಲವನ್ನೂ ತುಂಬಿಕೊಂಡು ಆಶೀರ್ವದಿಸಿದ ಮಾವ ಇನ್ನು ಕೇವಲ ನೆನಪಾಗಿ ಹೋಗಿದ್ದಾರೆ. ನೆನಪಿನ ಪುಟಗಳನ್ನು ಬರೆಯುವುದಕ್ಕೆ ಕೈಗಳು ಓಡುತ್ತಿಲ್ಲ. ಮನಸ್ಸಿನ ಕಲ್ಪನೆಗಳು ನಾಗಾಲೋಟದಿಂದ ಘಟನೆಗಳನ್ನು ಸ್ಮರಿಸುತ್ತವೆ. ಮೊನ್ನೆ ಅಂದರೆ ದಿನಾಂಕ ೨೬.೦೮.೨೦೧೮ ರಂದು ತನ್ನ ಕೊನೆಯ ಉಸಿರನ್ನು ಚೆಲ್ಲಿ ನಮ್ಮನ್ನೆಲ್ಲ ಅಗಲಿದ್ದ ಸತ್ಯವನ್ನು ಮನಸ್ಸು ನಂಬುತ್ತಿಲ್ಲ. ಅಂತಹ ಮಧುರ ನೆನಪುಗಳು ಮಾವ ಉಳಿಸಿ ಹೋಗಿದ್ದಾರೆ. ಜೀವನ ಪರ್ಯಂತ ಯಾರನ್ನೂ ದ್ವೇಷಿಸದ ಎಲ್ಲರಲ್ಲೂ ಒಂದಾಗಿ ಬೆರೆಯುವ ಚಟುವಟಿಕೆಯ ಉತ್ಸಾಹಿ ಮಾವ ಇನ್ನಿಲ್ಲವೆಂದರೆ ನಂಬುವುದಾದರೂ ಹೇಗೆ.?
ಹುಟ್ಟು ಹಲವು ಪ್ರಶ್ನೆಗಳನ್ನು ಹುಟ್ಟಿಸಿದರೆ ಸಾವು ಎಲ್ಲ ಪ್ರಶ್ನೆಗಳಿಗೂ ಉತ್ತರವಂತೆ. ವೇದಾಂತಿಗಳ ಮಾತು. ಉತ್ತರವಿಲ್ಲದ ಪ್ರಶ್ನೆಗಳು ಮಾವನಲ್ಲಿ ಇರಲಿಲ್ಲ.  ಮಾವನ ಪ್ರೀತಿ ಪ್ರಶ್ನೆಗಳಿಲ್ಲದ ಉತ್ತರಗಳಾಗಿದ್ದವು.  ಅದರ ಮಾರ್ದವತೆ ಇನ್ನು ನೆನಪು ಮಾತ್ರ. ಮನೆಯ ಮೂಲೆ ಮೂಲೆಯಲ್ಲೂ ತಡಕಾಡಿದಷ್ಟೂ ನೆನಪುಗಳನ್ನು ಮಾವ ತುಂಬಿಸಿಬಿಟ್ಟಿದ್ದಾರೆ. ಇನ್ನು ಮೂಲೆ ಮೂಲೆ ತಡಕಾಡಿ ಒಂದೊಂದನ್ನೇ  ತೆಗೆದು ಸ್ಮರಿಸಿಕೊಳ್ಳುವುದಷ್ಟೇ ಉಳಿದು ಹೋಗಿದೆ.
ಸುರಿಯುವ  ಒಂದು ತೊಟ್ಟು ಕಂಬನಿ ಸಾವಿರದ ಕಥೆಯನ್ನು ಹೇಳಿದರೆ ಮಾವನ ಬದು ಸಾವಿರದ ನೆನಪನ್ನು ಸಾರುತ್ತದೆ.  ಮಾವನ ಆತ್ಮಕ್ಕೆ ಶಾಂತಿಯನ್ನು ಕೋರುವುದರಲ್ಲಿ ಒಂದು ಕೃತಾರ್ಥತೆ. ಒಂದು ಬದ್ದತೆ ಇದೆ. ಅದೇ ಹಸಿರು . ಅದೇ ಉಸಿರು.