ಭಕ್ತ ಪ್ರಹ್ಲಾದನ ಕಥೆ ಪುರಾಣದಲ್ಲಿ ಕೇಳಿರಬಹುದು. ಹರ ಎನ್ನುವದರಲ್ಲೂ ಹರಿಯನ್ನೇ ಕಾಣುವ ಪ್ರಹ್ಲಾದನ ನಿರ್ಭೇದ ಭಕ್ತಿ ಒಂದು ಕಡೆ. ಹರನೊಬ್ಬನೇ ಹರಿ ಇಲ್ಲ ಎನ್ನುವ ಹಿರಣ್ಯ ಕಶಿಪುವಿನ ವಿಕಲ್ಪದ ಭಕ್ತಿ ಇನ್ನೊಂದೆಡೆ. ಭಗವಂತನ ಪೂರ್ಣ ಅರಿವು ಪ್ರಹ್ಲಾದನನ್ನು ಭಕ್ತನ ಪದವಿಗೇರಿಸಿದರೆ, ಹಿರಣ್ಯ ಕಶಿಪುವಿನ ಅಪೂರ್ಣ ಭಕ್ತಿ ನರಸಿಂಹನ ಶಿಕ್ಷೆಗೆ ಬಲಿಯಾಗುವಂತೆ ಮಾಡಿತು. ಹಿರಣ್ಯ ಕಶಿಪುವಾಗಲಿ , ಹಿರಣ್ಯಾಕ್ಷನಾಗಲೀ ಅಪ್ರತಿಮ ಭಕ್ತಿಯನ್ನು ತೋರಿದವರು. ಅಖಂಡ ತಪಸ್ಸನ್ನು ಮಾಡಿದವರು. ಆದರೆ ಅವರು ಭಗವಂತನನ್ನು ಪೂರ್ಣವಾಗಿ ತಿಳಿಯುವಲ್ಲಿ ಸೋತು ಹೋದರು. ಹರನೊಬ್ಬನೇ ಅಂತ ಹೇಳಿದ ಈ ದಾನವ ಹರನಲ್ಲಿ ಹರಿಯೂ ಇದ್ದಾನೆ ಎಂಬುದನ್ನು ತಿಳಿಯದೇ ಹೋದ. ತಪಸ್ಸು ಹಲವು ದಾನವರು ಮಾಡಿ ದೈವದ ಅನುಗ್ರಹವನ್ನು ಗಳಿಸಿರಬಹುದು. ಆದರೆ ಪರಿಣಾಮ ಮಾತ್ರ ವಿಭಿನ್ನ.
ವಿಶ್ವಾಮಿತ್ರ ಪಾಯಸವನ್ನು ತಲೆಯಲ್ಲಿಟ್ಟು ಅದು ಆರದಂತೆ ನೋಡಿ ಸಾಕ್ಷಾತ್ಕರವನ್ನು ಪಡೆದ. ಆತನಿಗೆ ಸವಿತೃ ಮಂತ್ರದ ದರ್ಶನವಾಯಿತು. ಅದೇ ಗಾಯತ್ರಿ ಮಂತ್ರವಾಯಿತು. ವಿಶ್ವಾ ಮಿತ್ರನಿಗೆ ಇಂದ್ರಿಯದಿಂದ ಅಂದರೆ ಕಣ್ಣಿನಿಂದ ದರ್ಶನ ಎನ್ನುವುದಕ್ಕಿಂತ ಆತನಿಗೆ ಅಂತೀದ್ರಿಯಕ್ಕೆ ದರ್ಶನವಾಯಿತು. ಜ್ಯೋತಿ ಸ್ವರೂಪದ ಆ ಶಕ್ತಿಯನ್ನು ಆತ ಅರ್ಥವಿಸಿಕೊಂಡ. ಭಗವಂತನ ಅಸ್ತಿತ್ವ ಇರುವುದೇ ಭಗವಂತನನ್ನು ಅರಿಯುವಲ್ಲಿ.
ನಾವು ಯಾವುದೇ ವ್ಯಕ್ತಿಯನ್ನಾಗಲೀ ವಿಷಯವನ್ನಾಗಲಿ ಸರಿ ತಿಳಿದು ಅಧ್ಯಯನ ಮಾಡಿ ನಂಬುವುದರಲ್ಲಿ ಅರ್ಥವಿದೆ. ಆ ನಂಬಿಕೆ ಶಾಶ್ವತವಾಗಿ ವಿಶ್ವಸನೀಯವಾಗಿರುತ್ತದೆ. ಆದರೆ ಸರಿಯಾದ ಜ್ಞಾನವಿಲ್ಲದೇ ಅರಿವಿಲ್ಲದೇ ನಂಬಿದಾಗ ನಮ್ಮ ತಿಳುವಳಿಕೆಯು ಅಪೂರ್ಣವಾಗಿ ನಿರ್ಧಾರಗಳಿಗೆ ಇನ್ನೊಬ್ಬರನ್ನು ಆಶ್ರಯಿಸಬೇಕಾಗುತ್ತದೆ. ಧರ್ಮ ದೇವರ ವಿಚಾರವೂ ಬಂದಾಗ ಇದೇ ಮಾತು ಅನ್ವಯವಾಗುತ್ತದೆ. ಭಗವದ್ಗೀತೆಯ ಕೊನೆಯಲ್ಲಿ ವಿಮೃಶ್ಯೇಷೇಣ ಯಥೇಚ್ಚಸಿ ತಥಾ ಕುರು , ವಿವೇಚಿಸಿ ನಿನ್ನಿಷ್ಟದಂತೆ ಮಾಡು ಅಂತ ಭಗವಂತನು ಹೇಳಿರುವಾಗ ವಿವೇಚನೆ ಅರಿವು ಎಂಬುದರ ಮೌಲ್ಯ ತಿಳಿದು ಬರುತ್ತದೆ. ಇಂದು ಅಪೂರ್ಣವಾದ ಅರಿವು ಬಹಳ ಅಪಾಯಕಾರಿ ಪೃವೃತ್ತಿಯನ್ನು ಹುಟ್ಟು ಹಾಕಿದೆ. ದೇವರು ಧರ್ಮದ ಬಗ್ಗೆ ಸರಿಯಾದ ತಿಳುವಳಿಕೆಯಿಲ್ಲ ತಮಗೆ ತೋಚಿದಂತೆ ಮೂರ್ಖತನದ ವ್ಯಾಖ್ಯಾನವನ್ನು ಹಲವರು ಮಾಡುವುದನ್ನು ಕಾಣುತ್ತಿದ್ದೇವೆ. ಪ್ರತೀ ನಾಸ್ತಿಕತೆ ಹುಟ್ಟುವುದು ಅದು ಎಂಬಲ್ಲಿಂದ. ಅದು ಎಂಬುದನ್ನು ನಂಬಿದರೆ ಅಲ್ಲಿ ನಾಸಿಕತೆ ಇರುವುದೇ ಇಲ್ಲ. ನಾಸ್ತಿಕತೆಯಲ್ಲೂ ಆಸ್ತಿಕತೆಯನ್ನು ಇಲ್ಲ ಎನ್ನುವುದಕ್ಕೆ ಸಾಧ್ಯವಿಲ್ಲ.
ಪರಮಾತ್ಮನನ್ನು ಅರಿಯಬೇಕಾದರೆ ನಮ್ಮ ಆತ್ಮವನ್ನು ಅರಿಯಬೇಕು. ಕರ್ಮದಿಂದಲೇ ಈ ಅರಿವನ್ನು ಪಡೆಯುವುದಕ್ಕೆ ಸಾಧ್ಯ. ಮೊದಲಿಗೆ ಕರ್ಮದ ಅರಿವನ್ನು ಗಳಿಸಿ ಆ ಮೂಲಕ ಜ್ಞಾನವನ್ನು ಪಡೆಯಬೇಕು. ನಾವು ಕರ್ಮಭೃಷ್ಟರಾದರೆ ಪರಮಾತ್ಮನನ್ನು ತಿಳಿಯುವುದಕ್ಕೆ ಸಾಧ್ಯವಿಲ್ಲ. ಕರ್ಮವೂ ಜ್ಞಾನದ ಉದ್ದೇಶದಿಂದ ಕೂಡಿರಬೇಕು. ಇಲ್ಲವಾದರೆ ಅಲ್ಲಿ ಸತ್ಪಲ ಇರುವುದಿಲ್ಲ. ಅರಿವಿಲ್ಲದೇ ಜ್ಞಾನದ ಉದ್ದೇಶವಿಲ್ಲದ ಕರ್ಮವು ಕೇವಲ ಕಾಟಾಚಾರವಾಗುತ್ತದೆ. ಯಾರೋ ಹೇಳಿದ್ದಾರೆ , ಯಾರೋ ಅನುಸರಿಸುತ್ತಾರೆ ಎಂದು, ನಮ್ಮ ಅರಿವಿಗೆ ಯಾರನ್ನೋ ಆಶ್ರ್ಯಯಿಸಿ ಮಾಡುವುದು ಸರಿಯಲ್ಲ. ಮೊದಲಿಗೆ ಕರ್ಮವನ್ನು ಅರಿಯಬೇಕು.
ಅಂಗಡಿಗೆ ತೀರಾ ಕಡು ಬಡವ ಭಿಕ್ಷುಕನ ರೀತಿ ಬಂದು ಅಲ್ಲಿದ್ದ ಯಾವುದೋ ಒಂದು ವಸ್ತು ಬೇಕು ಎಂದರೆ ಅಂಗಡಿಯವನು ಅದನ್ನು ಕೊಡುವ ಮೊದಲು ಗಟ್ಟಿಯಾಗಿ ಅದರ ಬೆಲೆ ಹೇಳುತ್ತಾನೆ. ಯಾಕೆಂದರೆ, ಅಷ್ಟು ಹಣ ಆತನಲ್ಲಿದೆಯೇ? ಅದನ್ನು ಕೊಂಡು ಕೊಳ್ಳೂವುದಕ್ಕೆ ಆತ ಸಮರ್ಥನೆ? ಒಂದು ವ್ಯವಹಾರ ಮಾಡುವಾಗ ಗ್ರಾಹಕನ ಬಗ್ಗೆ ಅರಿವು ಇರಬೇಕಾದದ್ದು ಆತನ ವ್ಯವಹಾರ ಧರ್ಮ. ಪ್ರತೀ ವ್ಯವಹಾರದಲ್ಲೂ ನಾವು ಇದೇ ರೀತಿ ವ್ಯವಹರಿಸುತ್ತೇವೆ. ಅದೇ ರೀತಿ ನಾವು ಮಿತ್ರರಾಗಿ ಯಾವುದೇ ವ್ಯಕ್ತಿಯನ್ನು ಅಂಗೀಕರಿಸುವಾಗ, ವಿವಾಹ ಮುಂತಾದ ಸಂಬಂಧಗಳನ್ನು ತೊಡಗಿಸುವಾಗ ಸಂಬಂಧಿಸಿದ ವ್ಯಕ್ತಿಗಳ ಪೂರ್ವಾಪರ ತಿಳಿಯುವುದಕ್ಕೆ ಪ್ರಯತ್ನಿಸುತ್ತೇವೆ. ಅದೇ ರೀತಿ ನಾವು ದೇವರನ್ನು ಅರಿತು ಪೂಜಿಸಿದಾಗ ಅದರಲ್ಲಿ ಹೆಚ್ಚು ಶ್ರದ್ಧೆ ಭಕ್ತಿಯನ್ನು ಹೊಂದುವುದಕ್ಕೆ ಸಾಧ್ಯವಾಗುತ್ತದೆ. ಯಾರೋ ಹೇಳಿದರು ಅಥವಾ ಯಾರೋ ಯಾವುದೋ ರೀಯಲ್ಲಿ ಮಾಡಿದರು ಎಂದು ಅದನ್ನು ಅನುಸರಿಸುವುದಕ್ಕಿಂತ ನಿರ್ದಿಷ್ಟವಾಗಿ ದೋಷರಹಿತವಾಗಿ ಅರಿತು ಮಾಡುವಾಗ ಅದು ಹೆಚ್ಚು ಅರ್ಥಪೂರ್ಣವಾಗುತ್ತದೆ. ಅದನ್ನೇ ಭಗವದ್ಗೀತೆಯ ಕೊನೆಯಲ್ಲಿ ಹೇಳಿದ್ದು ವಿವೇಚಿಸಿ ನಿನ್ನಿಷ್ಟದಂತೆ ನಿರ್ಧರಿಸು.
ಪರಮಾತ್ಮನನ್ನು ಅರಿತಾಗ ಆತನ ಅಸ್ತಿತ್ವ ಮತ್ತೂ ಸಮೀಪವಾಗುತ್ತದೆ. ಹಿಂದೆ ಭಗವಂತನ ದರ್ಶನಕ್ಕಾಗಿ ಆತನನ್ನು ಕಾಣುವುದಕ್ಕಾಗಿ ವರ್ಷಾನುಗಟ್ಟಲೆ ಋಷಿಗಳು ತಪಸ್ಸನ್ನು ಮಾಡುತ್ತಿದ್ದರು. ಕಾಡು ಮೇಡು ಗುಹೆ ಗಹ್ವರ ಎಲ್ಲ ಕಡೆ ಅಲೆದರು. ಯಾವುದೋ ಒಂದು ಕಾಲದಲ್ಲಿ ಕೆಲವರಿಗೆ ಭಗವಂತ ಪ್ರತ್ಯಕ್ಷವಾಗುತ್ತಿದ್ದ. ಬೌತಿಕವಾಗಿ ದೇವರನ್ನು ಕಾಣುತ್ತಾರೋ ಇಲ್ಲವೋ ಪ್ರಶ್ನೆಯಲ್ಲ. ಆದರೆ ಅವರಿಗೆ ಭಗವಂತನ ಪ್ರತ್ಯಕ್ಷ ಅನುಭವವಾಗುತ್ತಿತ್ತು. ನಮ್ಮ ಕರ್ಮದ ರೀತಿಯಲ್ಲಿ ಅದು ನಮಗೂ ಸಾಧ್ಯವಾಗಬಹುದು. ಅದಕ್ಕೆ ಕರ್ಮವನ್ನು ಅರಿತು ಆಚರಿಸಬೇಕು ಅಂತ ಜ್ಞಾನಿಗಳು ಹೇಳುತ್ತಾರೆ. ಇದೇ ಕಾರಣದಿಂದ ಭಗವಂತನನ್ನು ಜ್ಞಾನ ಸ್ವರೂಪ ಎಂದು ಹೇಳುತ್ತಾರೆ. ಜ್ಞಾನ ಎಂದರೆ ಪರಮಾತ್ಮ. ಹರಿಯೋ ಹರನೋ ಅಥವಾ ಇನ್ನಾವುದೋ ರೂಪದಲ್ಲಿ ಭಾವದಲ್ಲಿ ಇರಬಹುದು. ಅದನ್ನು ಒಂದೇ ಅಂತ ಅರಿಯುವುದರಲ್ಲಿ ಭಗವಂತನ ದರ್ಶನ ಸಾಧ್ಯವಾಗುತ್ತದೆ. ಭಗವಂತನನ್ನು ಕಾಣ ಬೇಕಿದ್ದರೆ ಕರ್ಮಶುದ್ಧಿಯಿಂದ ಮಾತ್ರ ಸಾಧ್ಯ. ಆಗ ಎಲ್ಲೋ ಇದ್ದ ಭಗವಂತ ನಮ್ಮ ದೇಹದಲ್ಲೇ ನಮ್ಮ ಮನಸ್ಸಿನಲ್ಲೇ ಕಾಣ ಬರುತ್ತಾನೆ. ಅದನ್ನೇ ಜ್ಞಾನ ಎನ್ನುವುದು. ಇದು ಆತನನ್ನು ಅರಿಯುವುದರಿಂದ ಮಾತ್ರ ಸಾಧ್ಯ.
ಇಂದು ಧರ್ಮವನ್ನು ಅರಿಯದೇ ಧರ್ಮವನ್ನು ಅನುಸರಿಸುತ್ತಿದ್ದೇವೆ. ದೇವರು ಎಂದರೇನು ತಿಳಿಯದೇ ದೇವರನ್ನು ಅರ್ಥವಿಸದೇ ದೇವರನ್ನು ನಂಬುತ್ತೇವೆ. ಇದೇ ಇಂದು ಪರಸ್ಪರ ದ್ವೇಷಕ್ಕೆ ಕಾರಣವಾಗಿದೆ. ಅಪ್ಪ ಅಮ್ಮನಿಗೆ ಒಂದೆರಡು ಮಕ್ಕಳು ಇದ್ದರೆ , ಮಕ್ಕಳು ಪರಸ್ಪರ ವಿಶ್ವಾಸದಲ್ಲಿ ಜತೆಗೆ ಇರುವುದನ್ನು ಆ ಅಪ್ಪ ಅಮ್ಮ ಬಯಸುತ್ತಾರೆ. ಹೊರತು ಮಕ್ಕಳ ಪರಸ್ಪರ ದ್ವೇಷವನ್ನಲ್ಲ. ಹತ್ತು ಮಕ್ಕಳಲ್ಲಿ ಒಬ್ಬ ಮಗುವಿಗೆ ನೋವಾದರೂ ಹೆತ್ತ ಅಪ್ಪ ಅಮ್ಮ ಸಹಿಸುವುದಕ್ಕೆ ಸಾಧ್ಯವಿಲ್ಲ. ಅಂತಹ ಅಪ್ಪ ಅಮ್ಮನಲ್ಲಿ ದೇವರನ್ನು ಕಾಣುತ್ತೇವೆ. ಆದರೆ ಅದೇ ದೇವರಿಗೆ ಏನು ಬೇಕು ಎಂಬುದನ್ನು ಮರೆಯುತ್ತೇವೆ. ಮಕ್ಕಳು ಪರಸ್ಪರ ದ್ವೇಷ ವೈಷಮ್ಯದಿಂದ ಇದ್ದರೆ ಅಪ್ಪ ಅಮ್ಮನ ಅನುಗ್ರಹ ಹೇಗೆ ಪಡೆಯಬಹುದು? ಅದೇ ರೀತಿ ಭಗವಂತನ ಅನುಗ್ರಹ. ನಾವು ಪರಸ್ಪರ ದ್ವೇಷಿಸುತ್ತಿದ್ದರೆ ಭಗವಂತನ ಮಕ್ಕಳು ನಾವು, ದೈವಾನುಗ್ರಹಕ್ಕೆ ಪಾತ್ರರಾಗುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಧರ್ಮ ಎನ್ನುವುದು ದ್ವೇಷಕ್ಕೆ ಕಾರಣವಾಗಬಾರದು. ಭಗವಂತನನ್ನೂ ಧರ್ಮವನ್ನೂ ಸರಿಯಾಗಿ ಅರಿತು ಅನುಸರಿಸಬೇಕು. ದೇವರು ಎಂದರೇನು ಮೊದಲು ಅರ್ಥವಿಸಬೇಕು. ಗುಡಿಯಲ್ಲಿ ಪ್ರಾರ್ಥನಾ ಮಂದಿರಲ್ಲಿ ಇರುವುದು ದೇವರಲ್ಲ. ಅದು ದೇವರ ಪ್ರತೀಕ ಮಾತ್ರ. ಹಾಗೆ ನೋಡಿದರೆ ದೇವರು ಸರ್ವಾಂತರ್ಯಾಮಿ. ಎಲ್ಲದರಲ್ಲೂ ಎಲ್ಲರಲ್ಲೂ ದೇವರು ಇದ್ದಾನೆ ಎಂದು ತಿಳಿವಾಗ ಅಲ್ಲಿ ವೈಷಮ್ಯಕ್ಕೆ ಆಸ್ಪದವಿರುವುದಿಲ್ಲ. ಪ್ರತೀ ಜೀವಿಗಳಲ್ಲು ಆತ್ಮ ರೂಪದಲ್ಲಿ ಪರಮಾತ್ಮನ ಅಸ್ತಿತ್ವ ಇದೆ. ಅಹಂ ಬ್ರಹ್ಮಾಸ್ಮಿ ಅಂತ ಪ್ರತಿಪಾದಿಸಿದರೂ ನಮ್ಮ ಧರ್ಮವನ್ನು ಹೀಗಳೆಯುವುದನ್ನು ಇಲ್ಲಿ ವಿಷ ಬೀಜಬಿತ್ತುವುದನ್ನು ತಡೆಯುವುದರಲ್ಲಿ ವಿಫಲರಾಗುತ್ತೇವೆ.
ಮಾವಿನ ಮರದಲ್ಲಿ ಮಾವು ಆದಂತೆ, ಕಲ್ಪ ವೃಕ್ಷದಲ್ಲಿ ತೆಂಗು ಬೆಳೆದಂತೆ ಅದು ಧರ್ಮ. ಮಾವಿನ ಮರದಲ್ಲಿ ತೆಂಗು ಬೆಳೆಯುವುದಿಲ್ಲ. ನಾವಾಡುವ ಮಾತಿನಲ್ಲಿ ವರ್ತನೆಯಲ್ಲಿ ಒಂದು ಧರ್ಮವಿದೆ. ನಮ್ಮ ಹಸಿವು ನೀರಡಿಕೆ ದೇಹದ ಭಾಷೆಗಳಲ್ಲಿ ಒಂದು ಧರ್ಮವಿದೆ. ಧರ್ಮವೆಂದರೆ ಅದು ನಿಯತಿ. ಧರ್ಮ ದ್ವೇಷವನ್ನು ನಾಶವನ್ನೂ ಬಯಸುತ್ತದೆ ಎಂದಾದರೆ ಅದು ಧರ್ಮವಲ್ಲ. ಧರ್ಮದ ಮರ್ಮವನ್ನೂ ನಾವು ತಿಳಿಯದೇ ಆಚರಿಸುತ್ತಿದ್ದೇವೆ. ನಮ್ಮ ಧರ್ಮ ಶ್ರೇಷ್ಠ ಅಂತ ಹುಂಬತನದಿಂದ ವರ್ತಿಸುತ್ತೇವೆ. ನಮ್ಮ ಧರ್ಮದ ಬಗ್ಗೆ ಅಭಿಮಾನ ಅರಿವು ಇರಬೇಕು. ಆದರೆ ಅದು ಮತ್ತೊಂದು ಧರ್ಮವನ್ನು ಗೌರವಿಸುವ ಅರಿವಿನಲ್ಲೂ ಇರುತ್ತದೆ. ರೈತನೊಬ್ಬ ಮುಂಜಾನೆ ಎದ್ದು ಹೊಲಕ್ಕೆ ಉಳುಮೆಗೆ ಹೋಗುವಾಗ ಆಕಾಶದಲ್ಲಿರುವ ಸೂರ್ಯನನ್ನು ನೋಡಿ ನಮಸ್ಕರಿಸುತ್ತಾನೆ. ಆತನಿಗೆ ಮಂತ್ರವಾಗಲಿ ಶ್ಲೋಕವಾಗಲಿ ತಿಳಿದಿರುವುದಿಲ್ಲ. ಅದೇ ರೀತಿ ಮಂತ್ರವನ್ನು ಶ್ಲೋಕವನ್ನು ತಿಳಿದವನು ಅರ್ಘ್ಯವನ್ನು ಅರ್ಪಿಸಿ ಸೂರ್ಯನನ್ನು ಆರಾಧಿಸಬಹುದು. ಆದರೆ ರೈತನ ನಮಸ್ಕಾರಕ್ಕೂ ವೇದೋಕ್ತವಾಗಿ ಬಿಡುವ ಅರ್ಘ್ಯಕ್ಕೂ ಯಾವುದೇ ವೆತ್ಯಾಸವಿಲ್ಲ. ಎರಡೂ ಸೂರ್ಯನ ಆರಾಧನೆ. ಮೊದಲು ದೇವೆರು ಎಂಬುದನ್ನು ನಾವು ಅರ್ಥವಿಸಬೇಕು. ಯಾವುದೋ ಒಂದು ನಮಗರಿವಿಲ್ಲದ ಶಕ್ತಿಗೆ ನಾವು ಇಟ್ಟ ಹೆಸರೆ ದೇವರು. ನಮಗೆ ಹುಟ್ಟಿದ ಮಗುವನ್ನು ಪ್ರೀತಿಯಿಂದ ಹಲವು ಹೆಸರುಗಳಲ್ಲಿ ಕರೆವಂತೆ ಭಗವಂತನಿಗೆ ಹಲವು ಹೆಸರು ಇದೆ. ಹಲವರು ಹಲವು ಹೆಸರಿಂದ ಕರೆದರೂ ಅಲ್ಲಿರುವ ಶಕ್ತಿ ಒಂದೇ.
ಸತ್ಯವನ್ನು ಹೇಳುವುದಕ್ಕು ಸತ್ಯವನ್ನು ಅರಿಯುವುದಕ್ಕೂ ವೆತ್ಯಾಸವಿದೆ. ಸತ್ಯವನ್ನು ನಾವು ಅರಿಯಬೇಕು. ಸತ್ಯದ ಮೌಲ್ಯಮಾಪನವನ್ನು ಮಾಡಬೇಕು. ಅದೇ ರೀತಿ. ದೇವರನ್ನು ಕಾಣುವುದಕಿಂತಲೂ ದೇವರನ್ನು ಅರಿಯುವುದರಲ್ಲಿ ಹೆಚ್ಚು ಸತ್ವವಿದೆ. ಆಗ ದೇವರ ಸಾನ್ನಿಧ್ಯ ಸಾಮೀಪ್ಯ ಒದಗಿ ಬರುತ್ತದೆ. ನಮ್ಮಲಿ ವಿಪುಲವಾದ ದೊಡ್ಡ ಸಂಪತ್ತು ಇರಬಹುದು. ಯಾವುದೋ ಬಂಗಾರದ ವಸ್ತು ಇರಬಹುದು. ಆದರೆ ಆ ಸಂಪತ್ತಿನ ಅಥವ ಬಂಗಾರದ ಮೌಲ್ಯ ತಿಳಿಯದೇ ಇದ್ದರೆ ಅದು ಇದ್ದರೆ ಏನೂ ಪ್ರಯೋಜನವಿಲ್ಲ. ಮಂಗನ ಕೈಯಲ್ಲಿ ಮಾಣಿಕ್ಯ ಇದ್ದಂತೆ. ಶುಭ್ರವಾದ ವಸ್ತ್ರ ನಮ್ಮಲ್ಲಿದ್ದರೆ ಅದನ್ನು ಸ್ವಚ್ಛವಾಗಿ ಇರಿಸಿಕೊಳ್ಳುವುದಕ್ಕೆ ನಾವು ಅಸಮರ್ಥರಾದರೆ ಅದು ಇದ್ದೇನು ಪ್ರಯೋಜನ. ಆ ಶುಭ್ರವಸ್ತ್ರವೂ ಮೌಲ್ಯ ರಹಿತವಾಗಿ ಅದರ ಬೆಲೆಯನ್ನು ಕಳೆದುಕೊಳ್ಳುತ್ತದೆ. ಸಂಪತ್ತಿನ ಅರಿವಿದ್ದಾಗ ಮಾತ್ರ ಸಂಪತ್ತಿನ ಮೌಲ್ಯ ಅರಿವಾಗುತ್ತದೆ. ದೇವರು ಧರ್ಮವೂ ಅದರ ಅರಿವಿದ್ದರೆ ಮಾತ್ರ ಅದರ ಮೌಲ್ಯ ಲಭ್ಯವಾಗುತ್ತದೆ.
ದೇವರನ್ನು ಪೂಜಿಸಿ ಪ್ರಾರ್ಥಿಸುವುದಕ್ಕಿಂತ ಮೊದಲು ದೇವರನ್ನು ಅರಿಯುವ ಜ್ಞಾನದ ಅವಶ್ಯಕತೆ ಇದೆ. ಇಂದಿನ ಕಾಲಕ್ಕೆ ಅದು ಅನಿವಾರ್ಯ. ಓಂ ಶಾಂತಿಃ ಶಾಂತಿಃ ಶಾಂತಿಃ ಎಂಬ ಶಾಂತಿ ಮಂತ್ರದ ತಾತ್ಪರ್ಯವೂ ಜ್ಞಾನವೇ ಆಗಿದೆ. ಶಂ ಎಂದರೆ ಆನಂದ ತಿ ಜ್ಞಾನ ಅಂತ ಅಂದರೆ ಅಂತಿಮ ತುದಿ. ಆನಂದ ತುತ್ತ ತುದಿಯಲ್ಲಿ ಸಿಗುವ ಜ್ಞಾನದಲ್ಲಿ ಶಾಂತಿ ಇದೆ. ಈ ಜ್ಞಾನಕ್ಕೆ ನಮ್ಮ ಸನಾತನ ಧರ್ಮ ಕೊಡುವ ಮಹತ್ವ ಅದು. ಮಂತ್ರ ರೂಪದಲ್ಲಿ ನಾವು ಭಗವಂತನನ್ನು ಬೇಡಿಕೊಳ್ಳುವುದೆಂದರೆ ಹೇ ಭಗವಂತ ನಿನ್ನನ್ನು ಅರಿಯುವ ಬುದ್ದಿಯನ್ನು ಶಕ್ತಿಯನ್ನು ಕೊಡು ಎಂದು ಬೇಡುತ್ತೇವೆ. ಜ್ಞಾನವೇ ಭಗವಂತ. .

No comments:
Post a Comment