Tuesday, August 26, 2025

ದೈವಾಗಮನ....


. ಯಾವುದೇ ಹಬ್ಬ ಹರಿದಿನ ಬರಲಿ ನಮ್ಮ ಮನೆಯ ರಸ್ತೆಯಲ್ಲಿ ಮೊದಲ ದಿನವೇ  ಒಂದು ಸಡಗರ ಆರಂಭವಾಗುತ್ತದೆ. ಅದೇನು ನಮ್ಮ ರಸ್ತೆಗೆ ಮಾತ್ರ ಸೀಮಿತವಲ್ಲ. ಎಲ್ಲ ಕಡೆಯೂ ಇರುತ್ತದೆ. ರಾತ್ರಿಯಾಗುತ್ತಿದ್ದಂತೆ ಮನೆಯ ಎದುರು ಗುಡಿಸಿ ನೀರು ಹಾಕಿ ಸ್ವಚ್ಛ ಮಾಡುತ್ತಾರೆ. ಮತ್ತೆ ರಂಗೋಲಿ ಹಾಕುತ್ತಾರೆ. ಇದು ಹಬ್ಬ ಹರಿದಿನ ಅಂತ ಅಲ್ಲ ಹಲವು ಸಲ ದಿನ ನಿತ್ಯವೂ ಇದೂ ಕೆಲವು ಕಡೆ ಇರುತ್ತದೆ. ವಿಚಿತ್ರವೆಂದರೆ ಮೊದಲ ದಿನ ರಾತ್ರಿ ಈ ಕೆಲಸ ಮಾಡುವುದು ಒಂದು ಅಪಭ್ರಂಶ ಎಂಬಂತೆ ನನಗೆ ಭಾಸವಾಗುತ್ತದೆ. ಸಂಪ್ರದಾಯದ ಪ್ರಕಾರ ರಾತ್ರಿ ಪೊರಕೆ ಉಪಯೋಗಿಸುವ ಹಾಗಿಲ್ಲ. ಆದರೂ ನಗರದ ಜೀವನ ಕ್ರಮದಲ್ಲಿ ಕೆಲವನ್ನು ಪಾಲಿಸುವುದು ಸಾಧ್ಯವಾಗುವುದಿಲ್ಲ ಎನೋ ಸತ್ಯ. ಆದರೆ ಅದರ ಬಗ್ಗೆ ಗಮನ ಹರಿಸಿ ಒಂದಿಷ್ಟು ಪ್ರಯತ್ನ ಮಾಡಬಹುದು. ಹೋಗಲಿ ರಾತ್ರಿ ರಂಗೋಲಿ ಹಾಕುವುದು ಮಾತ್ರ ವಿಚಿತ್ರ ಎನಿಸುತ್ತದೆ.  ಇದು ಬೆಂಗಳೂರಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯ. ಹಲವು ಸಲ ಇದನ್ನು ಕಾಣುವಾಗ ಯಾವ ಉದ್ದೇಶಕ್ಕೆ ರಂಗೋಲಿ ಹಾಕುತ್ತಾರೆ ಎಂದು ಆಶ್ಚರ್ಯವಾಗುತ್ತದೆ. 

ನಮ್ಮ ಸಂಪ್ರದಾಯ ಪರಂಪರೆಯಲ್ಲಿ ಬಳಕೆಯಲ್ಲಿ ಬರುವ ಹಲವು ಪವಿತ್ರ ಕಾರ್ಯಗಳಿಗೆ ಅಂತರಾರ್ಥ ಇರುತ್ತದೆ.  ಮಾಡುವ ಕಾರ್ಯ ಹೊರ ನೋಟಕ್ಕೆ ಒಂದು ಕಂಡರೆ ಅದರ ಒಳನೋಟ ಬೇರೆಯೇ ಇರುತ್ತದೆ. ಅದನ್ನು ಮನಗಂಡು ನಾವು ಅದನ್ನು ಗೌರವಿಸಿ ನಡೆದು ಕೊಂಡರೆ ನಾವು ಮಾಡುವ ಆಚರಿಸುವ ಕಾರ್ಯಗಳಿಗೆ ಅರ್ಥ ಒದಗಿಬರುತ್ತದೆ. ಸಂಪ್ರದಾಯವನ್ನು ಮೀರಿ ಯಾವುದನ್ನು ಮಾಡಿದರೂ ಯಾರೇನೂ ಪ್ರಶ್ನಿಸುವುದಕ್ಕಿಲ್ಲ. ಮಾಡುವ ಸ್ವಾತಂತ್ರ್ಯ ಇದ್ದೇ ಇರುತ್ತದೆ. ಶೌಚಾಲಯದಲ್ಲಿ ಕುಳಿತು ಊಟವನ್ನೂ ಮಾಡಬಹುದು. ಮಾಡುವವರ ಸ್ವಾತಂತ್ರ್ಯ ಅಷ್ಟೇ. 

ರಂಗೋಲಿ ಹಾಕುವ ಕ್ರಮ ಎಂದರೆ ಮುಂಜಾನೆ ಸೂರ್ಯ ಉದಿಸುವ ಮೊದಲು ಹಾಕಬೇಕು.  ಸೂರ್ಯೋದಯದಲ್ಲಿ ಭಗವಂತನ ಆಗಮಿಸುತ್ತಾನೆ. ಸೂರ್ಯ ಕಿರಣಗಳೊಂದಿಗೆ ಸುಂದರವಾದ ರಂಗೋಲಿ ಹಾಕಿದರೆ ಅದು ಮುಂಜಾನೆ ಆಗಮಿಸುವ ಸಂಚರಿಸುವ  ಭಗವಂತನಿಗೆ ಅಥವಾ ಒಳ್ಳೆಯ ಶಕ್ತಿಗೆ, ಧನಾತ್ಮಕ ಚಿಂತನೆಗಳಿಗೆ ಸ್ವಾಗತ ಕೋರಿದಂತೆ. ಆದರೆ ರಾತ್ರಿ ರಂಗೋಲಿ ಹಾಕಿದರೆ..ರಾತ್ರಿ  ಋಣಾತ್ಮಕ ಪ್ರತೀಕವಾದ ಬೂತ ಪ್ರೇತ ದೆವ್ವ ಎಂಬ ಅಸುರೀಭಾವಗಳು ಸಂಚರಿಸುವುದನ್ನು ಸ್ವಾಗತಿಸಿದಂತೆ. ಭಗವಂತನ ಬದಲು ಪ್ರೇತ ಪಿಶಾಚಿಗಳನ್ನು ಮನೆಯೊಳಗೆ ಆಹ್ವಾನಿಸಿದಂತಾಗುತ್ತದೆ. ಆದರೆ ಇದನ್ನೆ ತಾಳ್ಮೆಯಿಂದ ಅರ್ಥವಿಸುವ ಗೋಜಿಗೆ ಹೋಗುವುದಿಲ್ಲ. ಒಟ್ಟು ಆಚರಿಸಬೇಕು. ಮೊದಲ ರಾತ್ರಿಯೇ ಹಾಕುವುದರಿಂದ ಮುಂಜಾನೆ ಬೇಗನೆ ಏಳುವ ಅವಶ್ಯಕತೆ ಇರುವುದಿಲ್ಲ. ಇಷ್ಟಕ್ಕೂ ನಾವು ರಂಗೋಲಿ ಹಾಕುವ ಉದ್ದೇಶವಾದರೂ ಏನು ಎಂಬುದು ತಿಳಿದಿರಬೇಕು.  ಹೀಗಾಗಿಯೇ ನಾವೇಷ್ಟು ಉತ್ಕೃಷ್ಟ ಕೆಲಸಗಳನ್ನು ಮಾಡಿದರೂ ಅಸುರೀ ಭಾವ ತಾಂಡವವಾಡುತ್ತದೆ. ನಮ್ಮ ಮನಸ್ಸು ಸದಾ ಅಶಾಂತಿಯಿಂದ ತುಂಬಿರುತ್ತದೆ ಮನೆ ಮನಗಳಲ್ಲಿ ಶಾಂತಿ ಸಮಾಧಾನ ಎಂಬುದು ಗಗನ ಕುಸುಮವಾಗುತ್ತದೆ. ನಾವು ನಾಗರೀಕರಾಗುವುದು ಎಂದರೆ ಪರಂಪರೆಯಲ್ಲಿ ಬಂದ ವಿಶಿಷ್ಟ ಶ್ರೇಷ್ಠ ಪದ್ದತಿಗಳನ್ನು ವಿರೋಧಿಸುವುದೇ ಆಗಿರುತ್ತದೆ. ಅದನ್ನು ವಿರೋಧಿಸಿ ನಡೆದುಕೊಂಡರೆ ನಾವು ನಾಗರೀಕರಾಗಿದ್ದೇವೆ ಎಂದು ಅರ್ಥವಿಸಬೇಕು. 


Saturday, August 9, 2025

ಪುರ್ಸಾದ


ಮೊನ್ನೆ ನಮ್ಮ ಬೀದಿಯಲ್ಲಿ ದೇವಿಯ ಉತ್ಸವ ಆಯಿತು.  ಯಾರೋ ಅಲ್ಲಿದ್ದವರು ಪ್ರಸಾದ ಆತನ ಭಾಷೆಯಲ್ಲಿ ಹೇಳುವುದಾದರೆ ಪುರ್ಸಾದ ತಂದು ಕೊಟ್ಟನು.  ಹೇಳುವುದು ಹೇಗೆ ಹೇಳಿದರೂ ಅದರಲ್ಲಿ ಅಭ್ಯಂತರವಿಲ್ಲ. ಕೇಳುವವನಿಗೆ ಅರ್ಥವಾದರೆ ಸಾಕು. ನಾನು ನನಗೆ ಬೇಡ ಅಂತ ಹೇಳಿದೆ. ಅಬ್ಬಾ ಏನು ದುರಹಂಕಾರ ಎನ್ನಬಹುದು. ಇಲ್ಲಾ ನಾಸ್ತಿಕ ಎನ್ನಬಹುದು. ನಾಸ್ತಿಕತೆಯಲ್ಲು ಆಸ್ತಿಕತೆ ಇದೆ ಅಂತ ಪ್ರತಿಪಾದಿಸುವವನು ನಾನು. ಪ್ರಸಾದ ತಂದವನು ವಿಚಿತ್ರವಾಗಿ ನೋಡಿದ.  ಇದು ಪುರ್ಸಾದ ಅಂತ ರಾಗ ಎಳೆದ. ನನಗೆ ಬೇಡ. ಈ ಜಗತ್ತಿನಲ್ಲಿ ಸಿಗುವ ಎಲ್ಲವೂ ಭಗವಂತನ ಪ್ರಸಾದ ಅಂತ ನಾನು ಹೇಳಿದೆ. ಭೂಮಿಯ ಹನಿ ಹನಿ ನೀರೂ ಭಗವಂತನ ಪ್ರಸಾದ ಅಂತ ವಿಶಾಲ ಭಾವದಲ್ಲಿ ತಿಳಿವಾಗ ಈ ಪ್ರಸಾದ ಬೇಡ ಅಂತ ಹೇಳುವುದಕ್ಕೆ ಕಾರಣ ಉಂಟು. ದೇವರು ಎಂದರೆ ಪವಿತ್ರತೆಯ ಸಂಕೇತ. ಅಲ್ಲಿ ಅದರ ಲೋಪ ಬಹಳಷ್ಟು ಸಂಭವಿಸಿದ್ದು ಮಾತ್ರವಲ್ಲ ಮನಸ್ಸಿಗೆ ಬಹಳಷ್ಟು ವಿಷಮ ಅಂತ ಅನ್ನಿಸಿದೆ. 

ಇಲ್ಲಿಯ ಚಿತ್ರಗಳನ್ನು ಒಮ್ಮೆ ಗಮನಿಸಿದರೆ ಸಾಕು,  ನನ್ನ ಭಾವನೆಗಳಿಗೆ ಒಂದಿಷ್ಟು ಅರ್ಥ ಕಾಣಬಹುದು. ಅದೇನೋ ಪ್ರಸಾದ ಅಂತ ಬೇಯಿಸುತ್ತಾರೆ, ಇದು ನಮ್ಮ ಮನೆಯಂಗಳದಲ್ಲಿ ತಯಾರಿಸಿದ  ನೈವೇದ್ಯದ ಚಿತ್ರಗಳು.  ಬೆಂಗಳೂರಿನ ಹಲವು ಉತ್ಸವಗಳ ಕಥೆ ಇದುವೇ ಆಗಿರುತ್ತದೆ. ಇಲ್ಲಿ ತೆರೆದ ಪ್ರದೇಶದಲ್ಲಿ ಬೇಯಿಸುತ್ತಾರೆ. ಸ್ಥಳಾಭಾವ ಇರಬಹುದು. ಇನ್ನು ನೈವೇದ್ಯ ಅಂತ ಮಾಡುವಾಗ ನಮ್ಮೂರ ಕಡೆ ದೇವರಿಗೆ ನೈವೇದ್ಯವಾಗುವುದಕ್ಕೆ  ಅಥವಾ ಪ್ರಸಾದ ಅಂತ ಸ್ವೀಕರಿಸುವಾಗ ಈರುಳ್ಳಿ ಬೆಳ್ಳುಳ್ಳಿ ಹಾಕುವ ಕ್ರಮ ಇಲ್ಲ. ಅದು ಹೇಗೂ ಇರಲಿ. ಆಯಾಯ ಪ್ರದೇಶದ ಸಂಸ್ಕಾರ. ಆದರೆ ದೇವರಿಗೆ ಅಂತ ಮಾಡುವಾಗ ಒಂದಷ್ಟು ಶುಚಿತ್ವ ಅದಕ್ಕೂ ಮೇಲೂ ಪಾವಿತ್ರ್ಯತೆ ಅನ್ನುವುದು ಇರಬೇಕು. ಇದನ್ನು ಸಿದ್ದ ಪಡಿಸುವವರೂ ಹಾಗೆ ಸ್ನಾನ ಮಾಡುವ ಕ್ರಮ ಇದೆಯೋ ಇಲ್ಲವೋ ಅಂತ ನೋಡುವಾಗ ಅನ್ನಿಸುತ್ತದೆ. ಬಾಯಲ್ಲಿ ಧೂಮ ಮಾಡುತ್ತಾ ಸಿದ್ದ ಪಡಿಸುವ ಆಹಾರದ ರುಚಿಯನ್ನು ನೋಡುತ್ತಾ ಮಾಡುವುದನ್ನು ನೋಡಿದರೆ ಪ್ರಸಾದವಾದರೂ ಸೇವಿಸುವ ಮನಸ್ಸು ಹೇಗಾಗಬಹುದು. 

ಇಲ್ಲಿ ತಯಾರಿಸಿದ ಅದೇನೋ ಅನ್ನ, ಬಹುಶಃ ಮೊಸರನ್ನ ಇರಬೇಕು. ಮೊದಲ ದಿನ ತಯಾರಿಸಿಟ್ಟು ಹೋಗಿದ್ದರು. ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಮುಚ್ಚಿ ಹೋಗಿದ್ದರು ಏನೋ ಸತ್ಯ.  ಆದರೆ ಮುಂಜಾನೆ ನಾನು ಮುಂಜಾನೆ ನೋಡುವಾಗ ನಾಯಿ ಬೆಕ್ಕು ಹೆಗ್ಗಣ ಅಲ್ಲೇ ಓಡಾಡುತ್ತಿದ್ದವು. ಇನ್ನು ನಾಯಿ ಕೇವಲ ಮೂಸುತ್ತದೆ ಎಂದು ವಿಶ್ವಾಸ ಇಟ್ಟರೆ ಅದು ಮೂರ್ಖತನವಾಗಬಹುದು. ಅದು ತನ್ನ ಸಹಜ ಸ್ವಭಾವವನ್ನು ಹುಟ್ಟುಗುಣವನ್ನು ಬಿಟ್ಟು ಬಿಟ್ಟರೆ ಅದು ಶ್ವಾನವಾಗುವುದಿಲ್ಲ.  ಮರುದಿನ ಅದನ್ನೇ ಪ್ರಸಾದ ಅಂತ ಕೊಡುವಾಗ ಅಯ್ಯೋ ಪಾಪ ಎನಿಸಿತು. ನಮ್ಮಮ್ಮ ಹೇಳಿದರು ಹಾಗೇ ಅಂತ ಇಲ್ಲಿ ಯಾವುದನ್ನು ಬಿಡುವುದಕ್ಕೆ ಸಾಧ್ಯವಿದೆ? ಅದನ್ನೆಲ್ಲ  ನೋಡಿದರೆ ತಿನ್ನುವುದಕ್ಕೆ ಯಾವುದೂ ಸೂಕ್ತವಲ್ಲ. ನೋಡಿದರೂ ನೋಡದಂತೆ ಇರಬೇಕು. ಹಲವು ಸಲ ನಮ್ಮ ಬಳಿಗೆ ಬರುವಾಗ ಸ್ವಚ್ಛವಾಗಿರುವ ಭಾವನೆ ಬಂದರೆ ಸಾಕು. ಮತ್ತೆ ದೇವರು ಎಂದರೆ ಅದು ನಮ್ಮ ಮನಸ್ಸಿನ ಭಾವನೆಗೆ ಸೀಮಿತವಾಗಿರುತ್ತದೆ. ಹಾಗಂತ ... ಹೀಗಾಗಿದೆ ಅಂತ ದೇವರು ಬಂದು ಹೇಳುವುದಿಲ್ಲ. ತನಗೇನು ಬೇಕೋ ಅಂತ ಯಾವ ದೇವರು ಹೇಳುವುದಿಲ್ಲ. ದೇವರು ಇರುವುದೇ ಭಕ್ತನ ಎಣಿಕೆಯಲ್ಲಿ. ಹಾಗಾಗಿ ತಾನೇನು ತನ್ನ ಮನಸ್ಸು ಪ್ರವೃತ್ತಿ ಏನು, ಅದಕ್ಕೆಹೊಂದಿಕೊಂಡು ದೇವರು ಇರುತ್ತಾನೆ. ಯಾಕೆಂದರೆ ನಮ್ಮ ಎಣಿಕೆಯಂತೆ ನಮ್ಮ ಮಕ್ಕಳೇ ಇರುವುದಿಲ್ಲ. ಹಾಗಾಗಿ ದೇವರಲ್ಲಿ ಅದನ್ನು ಕಂಡು ಅದನ್ನೇ ದೇವರಿಗೆ ಸಲ್ಲಿಸುವುದು.

ಆಹಾರ ತಯಾರಿಸಿದ ಪಾತ್ರೆಗಳನ್ನು ರಾತ್ರೆ ಹಾಗೇ ಬಿಟ್ಟು ಹೋಗಿದ್ದರು. ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಉಳಿದ ಅನ್ನ ಆಹಾರ ಹಾಗೇ ಉಳಿದಿತ್ತು. ಅದನ್ನು ತಿನ್ನುವುದಕ್ಕೆ ಬಂದ ನಾಯಿ ಆ ಪಾತ್ರೆಯ ಒಳಗೆ ಇಳಿದು ತಿನ್ನುತ್ತಿತ್ತು. ಮರುದಿನ ಅದೇ ಪಾತ್ರೆಯಲ್ಲಿ ಪ್ರಸಾದ ಸಿದ್ಧವಾಗುತ್ತಿತ್ತು. ಇದನ್ನು ಕಣ್ಣಾರೆ ಕಂಡ ಮೇಲೆ  ಯಾವ ದೇವರ ಪ್ರಸಾದವಾದರೂ ತಿನ್ನುವ ಧೈರ್ಯ ಆ ಭಗವಂತನಿಗೂ ಒದಗಿಸುವುದಕ್ಕೆ ಸಾಧ್ಯವಿಲ್ಲ. ಇನ್ನು ಈ ಆಹಾರ ತಿಂದರೆ ಆಗುವ ದೊಡ್ಡ ಉಪಕಾರವೆಂದರೆ ಭಗವಂತನ ಬಳಿಗೆ ಬೇಗನೇ ಹೋಗಿ ತಲಪಬಹುದು.  

             ದೇವರ ಪ್ರಸಾದ ಸೇವಿಸಿ ಪ್ರಾಣ ವಿಷ ಪ್ರಾಶಾನವಾಗಿ ಆಸ್ಪತ್ರೆ ಸೇರಿದ , ವೈಕುಂಠ ದರ್ಶನ ಮಾಡಿದ ನಿದರ್ಶನ ಹಲವಿದೆ. ಈ ರೀತಿ ಪ್ರಸಾದ ಸಿದ್ದವಾದರೆ ಸೇರುವ ಅವಧಿ ಕಡಿಮೆಯಾಗಿಬಿಡುತ್ತದೆ. ಹಾಗಾಗಿ ಕಾನೂನು ಇದೆ. ಪ್ರಸಾದ ವಿತರಣೆಯ ಮೊದಲು ಸಂಬಂಧ ಪಟ್ಟ ಇಲಾಖೆ ಮೊದಲು ಪರೀಕ್ಷೆ ಮಾಡಬೇಕು. ದೇವರ ನೈವೇದ್ಯ ದೇವರಿಗೆ ಅರ್ಪಣೆಯಾಗುವ ಮೊದಲು ರುಚಿ ನೋಡಬಾರದು. ಆದರೆ ನಮ್ಮ ಭಾವನೆಗಳಿಗೆ ಆಚರಣೆಗಳಿಗೆ ಮೌಢ್ಯದ ಲೇಪನ ಬಳಿದು ನಂಬಿಕೆಯನ್ನು ಮೊದಲೇ ನಾಶಮಾಡುವ ಸನ್ನಿವೇಶದಲ್ಲಿ ಪ್ರಸಾದ ಎಂಜಲಾಗಿ ಅರ್ಪಿಸುವ ಅನಿವಾರ್ಯತೆಯನ್ನು ನಾವೇ ಸೃಷ್ಟಿ ಮಾಡುತ್ತಿದ್ದೇವೆ. ಒಳ್ಳೆ ಶ್ರದ್ಧೆಯಿಂದ ಪರಿಶುದ್ದವಾಗಿ ನೈವೇದ್ಯ ಸಿದ್ದ ಪಡಿಸುವವರಿಗೆ  ನಿಯಮ ಭಾವನೆಗೆ ಧಕ್ಕೆಯನ್ನು ತಂದು ಕೊಡುತ್ತದೆ. ಆದರೆ ಅದಾವುದರ ಪರಿವೆ ಇಲ್ಲದೇ ಈ ರೀತಿ ಪ್ರಸಾದ ಸಿದ್ಧಪಡಿಸುವವರು ಉಳಿದ ಭಾವನೆಗೆ ಧಕ್ಕೆ ತರುವ ಕೆಲಸವನ್ನು ಮಾಡುತ್ತಾರೆ. 

ದೇವರು ಎಂದರೆ ಅದು ಪವಿತ್ರ ಸ್ಥಾನ. ಎಲ್ಲವನ್ನೂ ನುಂಗಿ ತಾನು ಸ್ವಚ್ಛವಾಗಿರುವ ಅಗ್ನಿಯಂತೆ. ಅಗ್ನಿ ಎಲ್ಲವನ್ನೂ ಸುಡುತ್ತದೆ. ಹವಿಸನ್ನೂ ಸುಟ್ಟಂತೆ ಕಸ ಮಾಲಿನ್ಯವನ್ನೂ ಸುಟ್ಟು ಬಿಡುತ್ತದೆ, ಆ ಪಾವಿತ್ರ್ಯತೆ ನಮ್ಮ ಭಾವದಲ್ಲಿರಬೇಕು. ಜೀವನ ಎಂದರೆ ಎಲ್ಲ ದುರಿತವನ್ನೂ ಕಳೆದು ಪರಿಶುದ್ದತೆಯ ಕಡೆಗೆ ಹೋಗುವ ಯಾನ. ಅದೊಂದು ಸಂಕ್ರಮಣದ ಕಡೆಗೆ ಚಲಿಸುವ ಪ್ರಯಾಣ, ಹಾಗಾಗಿ ದೇವರಿಗೆ ಸಂಬಂಧಿಸಿದ್ದೆಲ್ಲವೂ ಪರಿಶುದ್ದವಾಗಿ ಇರಬೇಕು ಎಂದು ತಿಳಿಯುತ್ತೇವೆ. ಸ್ನಾನ ಪಾನ ಎಲ್ಲವೂ ಇದರ ಸಂಕೇತ. ದೇವರು ಎಂಬುದು ಅಪವಿತ್ರವಾದರೆ ನಮ್ಮನ್ನು ಪವಿತ್ರಗೊಳಿಸುವ ಬೇರೆ ಯಾವ ಶಕ್ತಿಯೂ ಇರುವುದಿಲ್ಲ.  ಮೈ ತೊಳೆಯುವ ಮಾರ್ಜಕವೇ ಕೊಳೆ ಹಿಡಿದು ಮಲಿನವಾದರೆ ಇನ್ನು ನಮ್ಮ ಮೈ ಸ್ವಚ್ಛವಾಗುವ ಬಗೆಯಾದರೂ ಹೇಗೆ? ಮಣ್ಣು ಹೇಗಿದ್ದರೂ ಮಣ್ಣೇ. ಮಣ್ಣಲ್ಲಿ ಮಣ್ಣಾಗಿ ಹೋಗುವ ಈ ದೇಹ ಮನಸ್ಸು ಆತನಕ ಪವಿತ್ರವಾಗಿ ಇರಬೇಕು. ಅದು ಆ ಭಗವಂತನ ಇಚ್ಚೆಗೆ ಆತ ಪ್ರಸಾದಿಸಿದ ಈ ಜನ್ಮಕ್ಕೆ ನಾವು ಸಲ್ಲಿಸುವ ಕೃತಜ್ಞತೆ.

Saturday, August 2, 2025

ಮುಖವಾಡ

 

"ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವ ಮೊದಲ ವ್ಯಕ್ತಿಗಳೆಂದರೆ ಹೆತ್ತ ಅಪ್ಪ ಅಮ್ಮ"


ಒಬ್ಬ ಗಣ್ಯ ಅಪರಾಧಿಗೆ ಶಿಕ್ಷೆಯಾದಾಗ ವಾರ್ತಾ ಮಾಧ್ಯಮಗಳು ಹಲವು ಗಣ್ಯ ವ್ಯಕ್ತಿಗಳ ಅಭಿಪ್ರಾಯ ಕೇಳುವುದು ಸಾಮಾನ್ಯವಾಗಿದೆ. ಅಭಿಪ್ರಾಯ ಏನೇ ವ್ಯಕ್ತವಾಗಲೀ ಇದರಲ್ಲೊಂದು ಅಂತರ್ಗತ ಭಾವವನ್ನು ಹುಡುಕಬಹುದು. ಒಂದಿಷ್ಟು ಗಣ್ಯವ್ಯಕ್ತಿಗಳೂ ಸಹ ಆತ್ಮಾವಲೋಕನ ಮಾಡಿಕೊಳ್ಳಬಹುದಾದ ಸೂಕ್ಷ ಅವಕಾಶ ಇದು. ನಮ್ಮ ವ್ಯವಸ್ಥೆ ಹೇಗಿದೆ ಎಂದರೆ, ಇಲ್ಲಿ ಸಿಕ್ಕಿಬಿದ್ದವನು ಮಾತ್ರಾ ಅಪರಾಧಿ. ಸಿಕ್ಕಿ ಹಾಕದ ಅಪರಾಧಿಗಳು ಮುಖವಾಡ ಹೊತ್ತು ನಮ್ಮ ನಡುವೆ ಸಂಭಾವಿತರಾಗಿಬಿಡುತ್ತಾರೆ. ಒಬ್ಬ ಕಳ್ಳ ಸಿಕ್ಕಿಬಿದ್ದಾಗ ಮತ್ತೊಬ್ಬ ಕಳ್ಳನೂ ಹಿಡಿದು ಬಡಿದಂತೆ ಮುಖವಾಡಗಳು ಬೇಕಾ ಬಿಟ್ಟಿಯಾಗಿ ಬಿಕರಿಯಾಗಿಬಿಡುತ್ತವೆ. 

ನಿನ್ನೆ ನಡೆದ ಪ್ರಕರಣ ನಿಜಕ್ಕೂ ಒಂದು ಅವಿಸ್ಮರಣೀಯ ಪ್ರಕರಣ. ಒಬ್ಬನಿಗೆ ಶಿಕ್ಷೆಯಾಯಿತು ಏನೋ ನಿಜ. ಆದರೆ ಅದು ಹಲವು ಚಿಂತನೆಗಳಿಗೆ ಅವಕಾಶ ಕೊಡುತ್ತದೆ.  ದೂರು ಕೊಟ್ಟ ಆ ಅವಿದ್ಯಾವಂತ ಹೆಣ್ಣನ್ನು ಇಲ್ಲಿ ಮೊದಲು ಅಭಿನಂದಿಸಬೇಕು. ಅಚಲವಾಗಿ ನಿಂತ ಆಕೆಯ ಎದೆಗಾರಿಕೆಯೊಂದೇ ಈ ಶಿಕ್ಷೆಯ ಪರಿಣಾಮಕ್ಕೆ ಮೂಲ ಕಾರಣ. ಆಕೆ ಅನುಭವಿಸಿದ ನೋವು ಎಂತಹುದಿರಬಹುದು? ಯಾರಾದರೊಬ್ಬರು ನಮ್ಮ ಮೈಯನ್ನು ನಮ್ಮ ಅನುಮತಿಯಿಲ್ಲದೇ  ಸ್ಪರ್ಶಿಸಿದರೆ ಹಲವು ಸಲ ನಮಗೆ ಅಸಹ್ಯವಾಗಿಬಿಡುತ್ತದೆ. ನಮ್ಮ ಮೈ ಯಾರು ಮುಟ್ಟಬೇಕೋ ಬೇಡವೋ ಅದನ್ನು ನಿರ್ಧರಿಸುವ ಸ್ವಾತಂತ್ರ್ಯ ನಮ್ಮದೇ ಆಗಿರುವಾಗ , ಒಂದು ಲೈಂಗಿಕ ದೌರ್ಜನ್ಯ ಸಹಿಸಿ ಮತ್ತದನ್ನು ಪ್ರತಿಭಟಿಸುವುದು ನಿಜಕ್ಕೂ ಆತ್ಮಾಭಿಮಾನದ ಪ್ರಶ್ನೆ.   ಆಕೆಯ ನೋವು ಅವಮಾನ  ಇವುಗಳಿಗೆಲ್ಲ ಈ ಶಿಕ್ಷೆ ತೃಪ್ತಿಯನ್ನಂತೂ ಕೊಡುವುದಕ್ಕೆ ಸಾಧ್ಯವಿಲ್ಲ. ಕೇವಲ ಸಾಂತ್ವನ ಮಾತ್ರ. ಯಾಕೆಂದರೆ ಬದುಕು ಎಂಬುದೇ ಹಾಗೆ. ಅದು ಮುರುಟಿ ಹೋದರೆ ಯಾವ ಧೈರ್ಯ ಸ್ಥಿತ ಪ್ರಜ್ಞತೆ ಇದ್ದರೂ ಸಂತುಲನೆಗೆ ತರುವುದಕ್ಕೆ ಸಾಧ್ಯವಾಗುವುದಿಲ್ಲ.  ಕಳೆಯಿತೋ ಹೋಯಿತು ಎನ್ನುವ ಹಾಗೆ ಇರುತ್ತದೆ.  ಆದರೆ ಎನೂ ಆಗಲಿಲ್ಲ ಬದುಕು ಅಷ್ಟೇ ಅಲ್ಲ ಎಂಬುದನ್ನು ಪರಿಸರ ತೋರಿಸಿಕೊಡುವ ಅನಿವಾರ್ಯತೆ ಇದೆ. 

  ಹುಲಿ ಹಸಿವಿನಿಂದ ಒಂದು ಜಿಂಕೆಯ ಮೇಲೆ ಬಿದ್ದಾಗ ಹುಲಿಯ ಹಸಿವಿನ ಬಗ್ಗೆ ಅನುಕಂಪ ಮೂಡುವುದಿಲ್ಲ. ಆದರೆ ಜಿಂಕೆಯ ಅಸಹಾಯಕತೆಯಬಗ್ಗೆ ಮನಸ್ಸು ಮರುಗುತ್ತದೆ. ಆದರೆ ಮನುಷ್ಯನ ಈ ವಿಕೃತಿಯ ಹುಲಿಯಂತೆ  ಹಸಿವು ಕಾರಣವಲ್ಲ. ವಿಪರ್ಯಾಸವೆಂದರೆ ಶಿಕ್ಷೆ ಏನೋ ಸಿಕ್ಕಿತು. ನ್ಯಾಯಾಂಗ ಬಲಿಷ್ಠವಾಗಿ ಜಯವನ್ನು ಗಳಿಸಿತೇನೋ ಸತ್ಯ. ಆದರೆ ಇದೇ ನ್ಯಾಯ ಪರ್ಯಾಪ್ತವಲ್ಲ. ಸಿಕ್ಕಿಹಾಕಿಕೊಳ್ಳದ ಇದಕ್ಕಿಂತಲೂ ಕ್ರೂರವಾದ ಅಪರಾಧಿಗಳು ಏಷ್ಟೋ ಇದ್ದಾರೆ. ಇವುಗಳು ಪಾಠ ಅಂತ ನಾವು ತಿಳಿದುಕೊಂಡರೂ ಈ ಪಾಠ ಯಾರು ಕಲಿಯುತ್ತಾರೋ ಎಂಬುದು ಅಷ್ಟೇ ವಿಡಂಬನೆಯಾಗಿಬಿಡುತ್ತದೆ. ಆ ಹೆಣ್ಣು ಧೈರ್ಯದಿಂದ ದೂರು ಕೊಟ್ಟ ಕಾರಣ ಶಿಕ್ಷೆಯ ತನಕ ಪ್ರಕರಣ ಬಂದು ಅಂತ್ಯ ಕಂಡಿತು. ಇಲ್ಲವಾದರೆ? ಹಾಗಾಗಿ ದೂರು ಕೊಡುವ ಅವಕಾಶ ಹಕ್ಕು ಇದ್ದರೂ ಅದನ್ನು ಉಪಯೋಗಿಸುವ ಅರ್ಹತೆ ಮಾತ್ರ ಲಭ್ಯವಾಗುವುದು ಅಪರೂಪ. ನಮ್ಮ ವ್ಯವಸ್ಥೆ ಹಾಗಿದೆ. ಸಿಕ್ಕಿದ ಜಯ, ಸಾಬೀತಾದ ಅಪರಾಧವೂ ಹಲವು ಸಲ ದೌರ್ಜನ್ಯಕ್ಕೆ ಒಳಗಾದವರ ಮುಂದಿನ ಬದುಕನ್ನು ಕಮರಿಸಿಬಿಡುತ್ತದೆ. ಸುತ್ತ ಮುತ್ತಲಿನ ಬಂಧು ಬಳಗವೂ ದೂರವಾಗುವ ಸಂಭವ ಇರುತ್ತದೆ. ಯಾಕೆಂದರೆ ಈ ಮರ್ಯಾದೆ ಎಂಬ ಪ್ರಶ್ನೆಯೇ ಹಾಗೆ , ಆದ ಘಟನೆ ಹತ್ತು ಜನರಿಗೆ ತಿಳಿಯದೇ ಇರಲಿ ಎಂಬ ಆತಂಕದಲ್ಲೇ ಮರೆಯಾಗಿಬಿಡುತ್ತದೆ. 

ಅಪರಾಧಿಗೆ ಶಿಕ್ಷೆಯಾಯಿತು. ಒಂದು ಹೆಣ್ಣು ದೌರ್ಜನ್ಯಕ್ಕೆ ಒಳಗಾದರೂ ಅಪರಾಧಿಯ ಪರ ವಾದಿಸಿದ್ದು ಒಂದು ಸುಶಿಕ್ಷಿತ ಹೆಣ್ಣೇ ಎಂದು ತಿಳಿಯುವಾಗ ವಿಚಿತ್ರ ಎನಿಸುತ್ತದೆ. ಇದೇ ದೌರ್ಜನ್ಯ ವಾದಿಸುವವರಿಗೆ ಅಥವ ಅವರ ಸಂಭಂಧಿಕರಿಗೆ ನಡೆದಲ್ಲಿ ಅವರ ಈ ವಾದ ಯಾವ ರೂಪವನ್ನು ಪಡೆಯಬಹುದು. ವಾದ ಗೆಲ್ಲುವುದಕ್ಕೆ ಒದಗಿಸುವ ಸಮರ್ಥನೆ ನೋಡುವಾಗ ಅಯ್ಯೋ ಮನುಷ್ಯ ಯಾವ ವೇಷವನ್ನು ಹಾಕಬಲ್ಲ ಎಂದನಿಸುತ್ತದೆ. ಪ್ರಾಣಿಗಳೂ ಅದೂ ಗೋಸುಂಬೆಯಾದರೂ ರೂಪ ಬದಲಿಸುವುದಿಲ್ಲ. ಆದರೆ ಮನುಷ್ಯ ಮಾತ್ರ ತನ್ನ ರೂಪವನ್ನು ಬದಲಿಸುತ್ತಾ ಇರುತ್ತಾನೆ.  ಯಾರಿಗೋ ಒಬ್ಬರಿಗೆ ಶಿಕ್ಷೆಯಾಗುವಾಗ ಆಗುವ ಸಂತೋಷ, ಶಿಕ್ಷೆಯಿಂದ ತಪ್ಪಿಸ್ಕೊಳ್ಳುವ ಮುಖವಾಡ ಧಾರಿಗಳನ್ನು ನೋಡುವಾಗ ಆ ಸಂತೋಷ ಉಳಿಯುವುದಿಲ್ಲ. ನ್ಯಾಯ ಜಯ ಸಾಧಿಸಿದೆ ಎಂದನಿಸುವುದಿಲ್ಲ.  ಶಿಕ್ಷೆ ಪ್ರಾಯಶ್ಚಿತ್ತ ಅಂತ ತಿಳಿಯುವವರಿದ್ದಾರೆ. ಆದರೆ ಈ  ಅಪರಾಧಿಯ ಮುಖವನ್ನು ನೋಡುವಾಗ ಹಾಗೆ ಅನಿಸುವುದೇ ಇಲ್ಲ. ಸಭ್ಯನಂತೆ ಮುಖವಾಡ ಧರಿಸುವಾಗ ಇವರಿಗೆ ಯಾವ ಶಿಕ್ಷೆ ಸಿಕ್ಕಿದರೂ ಇವರು ಬದಲಾಗುವುದಿಲ್ಲ ಎಂದನಿಸುತ್ತದೆ. 

ಒಬ್ಬ ಅಪರಾಧಿ ಹೇಗೆ ಹುಟ್ಟಿಕೊಳ್ಳುತ್ತಾನೋ ಎಂಬುದು ವಿಚಿತ್ರ ಸಂಗತಿ. ಯಾವ ತಾಯಿಯೂ ತಾನು ಅಪರಾಧಿಗೆ ಜನ್ಮ ಕೊಡಬೇಕು ಎಂದು ಬಯಸುವುದಿಲ್ಲ. ಅದು ಮಹಿಷಾಸುರನ ತಾಯಿಯಂಥವರಿಂದ ಮಾತ್ರ ಸಾಧ್ಯ. ಆದರೂ ಹುಟ್ಟಿದ ನಂತರ ಅಪರಾಧಿಗಳಾಗುತ್ತಾರೆ. ತಂದೆ ತಾಯಿ ಕಾರಣವೋ ಪರಿಸರ ಕಾರಣವೋ ಅಂತು ಅಪರಾಧ ಉಳಿದವರ ಬದುಕನ್ನು ನಾಶಮಾಡಿಬಿಡುತ್ತದೆ. ಉಳಿದವರ ಬದುಕು ಮಾತ್ರವಲ್ಲ...ಒಬ್ಬ ಅಪಾರಾಧಿ ಸೆರೆ ಮನೆಯತ್ತ ಮುಖ ಮಾಡಿದಾಗ ಅನಿಸುವುದು ಛೇ ಹೆತ್ತ ಅಪ್ಪ ಅಮ್ಮನಿಗೆ ಹೇಗೆ ಅನಿಸಬಹುದು ಅಂತ ಯೋಚನೆ ಬಂದು ಬಿಡುತ್ತದೆ. ಯಾಕೆಂದರೆ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವ ಮೊದಲ ವ್ಯಕ್ತಿಗಳೆಂದರೆ ಹೆತ್ತ ಅಪ್ಪ ಅಮ್ಮ. ಇದೇ ಕಾರಣಕ್ಕೆ ಹಲವು ಸಲ ಈ ತಪ್ಪನ್ನು ಮುಚ್ಚಿಡುವುದಕ್ಕೆ ಹೆತ್ತಕರುಳು ಯತ್ನ ಮಾಡುತ್ತದೆ. ಆದರೆ ಒಂದು ಕರುಳಿನ ನೋವು ಮತ್ತೊಂದು ಕರುಳಿನ ನೋವನ್ನು ಅರಿಯುವುದೇ ಇಲ್ಲ.