Saturday, May 23, 2026

ಚಾರ್ಲಿಯ ಹನಿ ಸುಗಂಧ

ಶ್ರಾವಣ ಕಳೆದು ಮಳೆ ವಿರಳವಾಗಿ  ತುಂತುರು ಮಳೆಯ ಶರದೃತುವಿನ ಕಾಲ. ಒಂದು ರೀತಿಯಲ್ಲಿ ಬಿಡದ ಮಳೆಯಿಂದ ಮುಕ್ತರಾಗಿ ಒಂದಷ್ಟು ಉಲ್ಲಸಿತರಾಗಿ ಹಿತವಾದ ವಾತಾವರಣವನ್ನು ಅನುಭವಿಸುವ ಋತುಮಾನ. ಋತುಸ್ನಾತೆಯಾದ ಪ್ರಕೃತಿ ಮಾತೆ ಅವಧಿ ಮುಗಿದು ಸ್ನಾನ ಮಾಡಿ ಶುಭ್ರವಾಗಿ ತಲೆಗೂದಲಿನಿಂದ ತೊಟ್ಟು ತೊಟ್ಟು ಹನಿಯನ್ನು ಸುರಿಸುತ್ತಾ ಬರುವಂತೆ ಮಳೆ ಅಗಲೋ ಈಗಲೋ ಸುರಿಯುವ ಮಳೆ  ಮನಸ್ಸಿಗೆ ಕೊಡುವ ಉತ್ಸಾಹದ ದಿನಗಳು.  ಹದಿಹರೆಯದ ಮನಸುಗಳಾದರೆ ಈ ಶರದೃತು  ಹೊಸ ಕನಸಿನ ಚಿಗುರನ್ನು ಹುಟ್ಟಿಸಿಬಿಡುತ್ತವೆ. ಅದು ಎಂಭತ್ತರ ದಶಕದ ಕೊನೆಯ ವರ್ಷಗಳು. ಅದು ಹದಿಹರಯದ ಹಸಿ ಯೌವನಿಕೆಯ ಕಾಲ. ಬದುಕನ್ನು ಸಿಹಿಯಾಗಿ ಚೂರು ಚುರು ತುಣುಕಾಗಿ ಅನುಭವಿಸುವ ಹಪ ಹಪಿಕೆ ಇದ್ದರೆ ಅದು ಹದಿ ಹರಯದ ಸಹಜ ಬಯಕೆ. 


ಹದಿಹರಯದಲ್ಲಿ ಬಡತನವಿದ್ದರೆ ಕೇವಲ ಬಾಳಸಂಗಾತಿಯ ಕನಸು ಮಾತ್ರ ಇರುವುದಿಲ್ಲ. ಭವಿಷ್ಯತ್ತಿನ ಭದ್ರತೆ ಒಂದಷ್ಟು ಧನ ಸಂಪತ್ತಿನ ಕನಸೂ ಜತೆಯಲ್ಲಿರುತ್ತದೆ. ವೈದ್ಯ ಹೃದಯದ ಬಡಿತವನ್ನು ಅಳೆದರೆ ಸಂಗಾತಿ ಹೃದಯದ ವಿಸ್ತಾರವನ್ನು ಅಳೆಯುತ್ತಾಳೆ. ಕೇವಲ ಹೃದಯದ ವೈಶಾಲ್ಯತೆ ಬದುಕಿಗೆ ಸಾಕಾಗುವುದಿಲ್ಲ.   ಈ ಪ್ರಜ್ಞೆ ಬದುಕಿನ ತಲೆಯ ಮೇಲಿರು ಭಾರವನ್ನು ಹೆಚ್ಚಿಸುತ್ತದೆ.  ತಲೆಯ  ಭಾರ, ಹೃದಯದ ಭಾವನೆ ಕಾಣುವ ಕನಸು ನಡುವಿನ ಈ ದಿನಗಳಲ್ಲಿ ಆಕೆ ಮನೆಗೆ ಬರುತ್ತಾಳೆ ಎಂಬ ಪತ್ರ ಮನೆಗೆ ಬಂದಾಗ ಕನಸು ವಾಸ್ತವದ ನನಸಿನ ಕಡೆಗೆ ಮುಖ ಮಾಡಿತ್ತು. ಕೆಲವು ದಿನಗಳ ಹಿಂದೆ ಆಕೆಯ ಮುಖಾಮುಖಿ ಭೇಟಿಯಾಗಿತ್ತು. ಆಕೆಯ ಮನೆಯನ್ನು ಮನೆ ಮಂದಿಯನ್ನು ನೋಡಿ ಛೇ ಇವುಗಳನ್ನು ತೊರೆದು ಆಕೆ ಬಂದಾಳೆ ಎಂಬ ಸಂದೇಹ ಬಾಧಿಸಿತ್ತು. ಇದೆಲ್ಲ ತೊರೆಯಬೇಕಾದರೆ ಇದಕ್ಕಿಂತ ಅಧಿಕವಾಗಿರುವದ್ದು ಬಂದು ಸೇರುವಲ್ಲಿರಬೇಕು.  ಇಲ್ಲದಿದ್ದರೆ ಅದನ್ನು ಒದಗಿಸಿ ಕೊಡಬೇಕು. ಆಗ ಬಂದ ಯೋಚನೆ, ವಾಸ್ತವವನ್ನು ತೋರಿಸಬೇಕು. ಅದನ್ನು ನೋಡಿಯೂ ಆಕೆ ಬಂದರೆ ಆಕೆಯ ಮನೆಯಲ್ಲಿರುವುದಕ್ಕಿಂತಲೂ ಹೆಚ್ಚಿಗೆ ಇಲ್ಲಿರುತ್ತದೆ ಎಂಬ ವಿಶ್ವಾಸ ಮೂಡುತ್ತದೆ. ಆನಂತರ ಇಲ್ಲಿ ಎನುಂಟು ಏನಿಲ್ಲ ಎನ್ನುವುದಕ್ಕಿಂತಲೂ ಇದ್ದುದನ್ನು ಅನುಭವಿಸುವುದಕ್ಕೆ ಮನಸ್ಸು ಸಿದ್ಧವಾಗಿರುತ್ತದೆ. 

  ಹೀಗಿದ್ದರೂ ತನ್ನ ಮನೆಯಲ್ಲಿ ಎನಿದೆ ಎನ್ನುವುದಕ್ಕಿಂತಲೂ ಎನಿಲ್ಲ ಎಂಬ ಕೊರತೆಯ ಅನ್ವೇಷಣೆಯಲ್ಲಿ ಮನಸ್ಸು ಅವಲೋಕಿಸುತ್ತದೆ. ಕೆಲವೊಮ್ಮೆ ಅದನ್ನು ಮರೆಮಾಚಲು ಪ್ರಯತ್ನಿಸುತ್ತದೆ. ಆದರೆ ಇಲ್ಲಿ ಹಾಗಿಲ್ಲ, ಮನೆ ಹೇಗಿದೆಯೋ ಹಾಗೇ ನೋಡಲಿ. ಬಂದು ಸೇರಬೇಕಾದ ಮನೆಗೆ ಯಾವುದೋ ಭ್ರಮೆಯಲ್ಲಿ ಬಂದು ಸೇರುವುದು ಬೇಡ ಎಂಬ ಪ್ರಾಮಾಣಿಕತೆ ಇಲ್ಲಿರುತ್ತದೆ. ಹಾಗಾಗಿಯೇ ವಿಶೇಷ ಸನ್ನಾಹವೇನೂ ಇರಲಿಲ್ಲ. ಒಂದಷ್ಟು ಸ್ವಚ್ಛತೆ ಬಿಟ್ಟರೆ ಮನೆ ಅದೇ ಗುಡಿಸಲಿನಂತೆ ವಿಶೇಷ ಸೌಲಭ್ಯಗಳು ಇಲ್ಲದಂತೆ.  ಹೌದು ಆಕೆ ಬಂದು ಸೇರಬೇಕು. ಅದು ಮನೆಗಿಂತಲೂ ಮನಸ್ಸಿಗೆ ಬಂದು ಸೇರಬೇಕು. ಮನೆ ನಾಳೆ ಬದಲಾಗಬಹುದು. ಆದರೆ ಮನಸ್ಸು ಅದು ಬದಲಾಗುವುದಿಲ್ಲ. ಕನಸಿನ ಸೌಧಕ್ಕಿಂತಲೂ ಮನಸ್ಸಿನ ಸೌಧ ಗಟ್ಟಿಯಾಗಿರುತ್ತದೆ. ಆಗ ಒಂದು ಅತ್ಮ ವಿಶ್ವಾಸ ಜಾಗೃತವಾಗುತ್ತದೆ. ಆಕೆಗೆ ಎಲ್ಲವನ್ನೂ ಮಿರಿದ ಪ್ರೀತಿಯನ್ನು ಪ್ರಾಮಾಣಿಕವಾಗಿ ಕೊಡಬೇಕು. ಎಲ್ಲಕ್ಕಿಂತಲೂ ಸುಲಭವಾಗಿ ಕೊಡಬಹುದಾದ ಸಾಧನವಿದ್ದರೆ ಅದು ಪ್ರೀತಿ ಮಾತ್ರ. 

ಈಗಿನಂತೆ ಆಗ ಮೌಬೈಲ್ ಇಲ್ಲ. ದೂರವಾಣಿಯಂತೂ ಹತ್ತಿರವಿಲ್ಲ. ಮುಖ್ಯ ಸಂವಹನವೆಂದರೆ ಭಾರತೀಯ ಅಂಚೆ ಮತ್ತು ಟೆಲಿಗ್ರಾಫ ಕಛೇರಿ. ಒಂದು ಪತ್ರ ಬರೆದರೆ ತಲುಪುವುದಕ್ಕೆ ಏನಿಲ್ಲವೆಂದರೂ ಐದು ಆರು ದಿನ ಬೇಕು. ಈಗ ವಿಷಯಗಳು ಬಿಸಿ  ಆರುವ ಮೊದಲೇ ಸೇರುವಲ್ಲಿ ರವಾನೆಯಾಗುತ್ತದೆ. ಆಗ ಅದರೆ ಬಿಸಿ ಆರಿಹೋಗಿ ನಂತರ ಅಲ್ಲಿ ಕೈ ಸೇರಿದಾಗ ಬಿಸಿ ಏರುವುದಿದ್ದರೂ ಸಂಗತಿ ಒಂದು ಕಡೆಗೆ ಹಳೆಯದಾಗಿಬಿಡುತ್ತದೆ. ಹಲವು ಸಲ ಏನು ಬರೆದಿದ್ದೇನೆ ಎಂಬುದೂ ಕೂಡ ಮರೆತು ಹೋಗಿರುವ ಸಂಭವವಿದೆ.  ಹಾಗಿರುವಾಗ ಆಕೆ ಬರುತ್ತಾಳೆ ಎಂಬ ಪತ್ರ ಕೈ ಸೇರಿದಾಗ ಆಕೆ ಬರುವ ತನಕ ಅದರ ಬಿಸಿ ಆರಲೇ ಇಲ್ಲ. ಆ ಭಾವನೆಗಳು ಅದರ ಬಿಸಿ ಆರುವುದಕ್ಕೆ ಬಿಡಲಿಲ್ಲ. ದಿನ ಘಳಿಗೆಯ ಅಂತರ ಕಡಿಮೆಯಾಗುವುದನ್ನೇ ಮನಸ್ಸು ಲೆಕ್ಕ ಹಾಕುತ್ತಾ ಕಳೆಯುವುದೆಂದರೆ ಅದೊಂದು ಮಧುರವಾದ ಅನುಭವ. 

ಅಂತೂ ಆ ದಿನ ಆ ಘಳಿಗೆ ಬಂತು. ಮಧ್ಯಾಹ್ನ. ಸೂರ್ಯ ನೆತ್ತಿಗೆ ಏರಿ ಬಿಸಿಯಾಗುವ ಸಮಯ. ಹೃದಯ ಬಡಿತ ಏರಿ ಶರೀರ ಬಿಸಿಯಾದರೂ ಆ ಬಿಸಿಯಲ್ಲಿ ಒಂದು ಹಿತವಾದ ಅನುಭವ. ಮಧ್ಯಾಹ್ನದ ಬಸ್ಸು...ಆ ಬಸ್ಸಿನಲ್ಲೇ ಆಕೆ ಬರುವ ನಿರೀಕ್ಷೆ ಇರುವ ಕಾರಣ ಬಸ್ಸಿನ ಹಾರನ್ ದೂರದಿಂದಲೇ ಕೇಳಿಸುತ್ತದೆ. ಅದೊಂದು ಸೂಚನೆಯಘಂಟಾನಾದಂತೆ, ಆ ಧ್ವನಿ ಈ ಕಿವಿ ಕೇಳಿದಂತೆ ಆ ಕಿವಿಯೂ ಅದೇ ಹೊತ್ತಲ್ಲಿ ಕೇಳಿರುತ್ತದೆ ಎಂಬ ಭಾವನೆಯೇ ರೋಮಾಂಚನವನ್ನು ಉಂಟು ಮಾಡುತ್ತದೆ. ಆಕೆ ಯಾವ ಯೋಚನೆಯಲ್ಲಿರಬಹುದು? ಮನೆಯ ಬಗ್ಗೆ ಇರಬಹುದೇ? ಇಲ್ಲ ಮನದ ಬಗ್ಗೆ ಇರಬಹುದೇ? ಮನಸ್ಸನ್ನು ಒಂದಷ್ಟು ಮೊದಲೇ ಅರಿತಿರುವುದರಿಂದ ಮನೆಯ ಬಗ್ಗೆ ಪರಿಸರದ ಬಗ್ಗೆ ಒಂದಷ್ಟು ಭಾವನೆಗಳು ಇರಬಹುದು. 

ಅಚ್ಚ ಬಿಳಿಸೀರೆಯಲ್ಲಿ ನಸು ಕಂದು ಹೂವನ್ನು ಚಿತ್ರಿಸಿದ ಸೀರೆಯಲ್ಲಿ ಅಪ್ಪ ಅಮ್ಮನ ಜತೆ ತೆಳು ಬಳುಕಿದ ಶರೀರದಲ್ಲಿ  ಆಕೆ ಇಳಿದು ಬರುತ್ತಿದ್ದರೆ ಆಕೆಯ ಹೆಜ್ಜೆ ಎದೆಯ ಮೇಲಿಟ್ಟಂತಾಗಿ ಹೃದಯ ಭಾರವಾದ ಅನುಭವ.  ಮೊದಲೊಮ್ಮೆ ಅಕೆಯ ಭೇಟಿಯಾಗಿರುವುದರಿಂದ ಮೊದಲ ಭೇಟಿಯ ರೋಮಾಂಚನ ಇಲ್ಲದಿದ್ದರೂ ದೇಹದ ಕಂಪನ ಒಂದಿಷ್ಟು ಅಧಿಕವಾಗಿತ್ತು.  ಅದಾಗಲೇ ಔಪಚಾರದ ಮಾತುಗಳು ಕ್ರಿಯೆಗಳು ನಡೆದು, ಅಕೆ ಮನೆಯನ್ನೇಲ್ಲಾ ಸುತ್ತಾಡಿ ನೋಡಿದಳು. ಏನು ಅನ್ನಿಸಿತೋ ಏನೋ ಅಂದುಕೊಂಡು ಮನಸೋ ಇಚ್ಛೆ ಮಾತನಾಡಬೇಕು ಅನ್ನಿಸಿತ್ತು, ಆದರೆ ಅದಕ್ಕೆ ತತ್ಕ್ಷಣಕ್ಕೆ ಅವಕಾಶ ಇರಲಿಲ್ಲ. ಬಂದ ಅತಿಥಿಗಳ ಊಟ ಉಪಚಾರ ಮುಗಿಸಿ  ಕೊನೆಯಲ್ಲಿ ಆಕೆ ಎಂದಳು ಒಂದಿಷ್ಟು ಖಾಸಗಿಯಾಗಿ  ಮಾತನಾಡಬೇಕು. ಆಕೆಯ ಧೈರ್ಯ ತನಗಿಲ್ಲದೇ ಹೋಯಿತಲ್ಲ ಎಂದನಿಸಿದರೂ ಸಂತೋಷದಿಂದ ಮನೆಯ ಹೊರಗೆ ಒಂದಷ್ಟು ದೂರದಲ್ಲಿ ಒಂದು ಬಂಡೆಯ ಮೇಲೆ ಎದುರು ಬದಿರಾಗಿ ಕುಳಿತು ಮಾತನಾಡಿದಾಗ ಆಕೆಗೆ ಮನೆ ಪರಿಸರ ಎಲ್ಲವೂ ಇಷ್ಟವಾಗಿರಬೇಕು. ಆಡುವುದಕ್ಕೆ ಹಲವಿದ್ದರೂ  ಒಂದೂ ಮಾತೂ ಹೊರಡಲಿಲ್ಲ. ಇಷ್ಟವಾಯಿತಾ ಎಂದ ಒಂದು ಪ್ರಶ್ನೆ ಬಿಟ್ಟರೆ ಆಕೆ ಮತ್ತೇನೂ ಕೇಳಿದ ನೆನಪಿಲ್ಲ.  ಆಕೆಯ ಅಮ್ಮ ಮೊದಲೇ ಹೇಳೀದ್ದರು, ತಿಳಿಗಂಜಿಯಾದರೂ ಪರವಾಗಿಲ್ಲ...ಆದರೆ ಆಕೆಯ ನೆಮ್ಮದಿ ಅತಿ ಮುಖ್ಯ. ಇದು ಅತಿಯಾದ ಆತ್ಮ ವಿಶ್ವಾಸ ತುಂಬಿದ ಮಾತುಗಳಾಗಿದ್ದವು.  ಆಗಲೇ ಮನಸ್ಸು ದೃಢವಾಗಿ ನಿರ್ಧರಿಸಿತು, ಏನೇ ಆದರು ಆಕೆಗೆ ಕಣ್ಣೀರು ಬರುವಂತೆ ಮಾಡುವುದಿಲ್ಲ.ಜೀವನದಲ್ಲಿ ನಿರ್ಧಾರ ಮಾತ್ರ ನಮ್ಮದಾಗಿರುತ್ತದೆ. ಆದರೆ ನಿಯತಿ ಅಂದರೆ ನಡೆಯುವುದು ನಮ್ಮ ವಶವಿರುವುದಿಲ್ಲ. ನಗುವಿನಂತೆ ದುಃಖವೂ ಇರುತ್ತದೆ. ಅದು ನಿಜವಾದ ಜೀವನ.  ಕಣ್ಣೀರು ಇದ್ದರೂ ಇರಬಹುದು...ಇಲ್ಲ  ಶ್ರೀರಾಮ ಪಿತೃವಾಕ್ಯ ಪರಿಪಾಲಿಸಿದಂತೆ ನನಗಾಗಿ ಕಣ್ಣೀರು ಮಿಡಿಯದೇ ಸುರಿಸದೇ ಇರಬಹುದು.  ನನ್ನ ನಿರ್ಧಾರ ಹುಸಿಯಾಗಬಾರದಲ್ಲ.  ಸದಾ ನಗುವಿನಲ್ಲೇ ಇರುವ ಆಕೆಯನ್ನು ಊಹಿಸುವುದು ಕಷ್ಟ.

ಸಾಯಂಕಾಲದ ತನಕ ಹತ್ತು ಹಲವು ಮಾತುಗಳಾದವು. ಕೊನೆಯಲ್ಲಿ ಸಮುದ್ರ ನೋಡಬೇಕು ಅನ್ನಿಸಿತು. ಮಲೆನಾಡ ಹೆಣ್ಣಿಗೆ ಅಲ್ಲಿನ  ನದಿ  ಕೆರೆ ಬಾವಿ ಬಿಟ್ಟರೆ ಬೇರೆ ಜಲರಾಶಿಯ ಪರಿಚಯವಿಲ್ಲ. ಹೊರ ಹೋಗುವುದಕ್ಕೆ ಉಡುಪು ಬದಲಿಸಿ ಹೊರಡುವಾಗ ಆಕೆ ಹತ್ತಿರ ಬಂದಳು,  ಕಸೂತಿಯಲ್ಲಿ ಅಲಂಕರಿಸಿದ ಕರವಸ್ತ್ರವನ್ನು ಕೈಯಲ್ಲಿಟ್ಟಳು. ಮೆಲ್ಲಗೆ ಕಿವಿಯಲ್ಲಿ ಪಿಸುಗುಟ್ಟಿದಳು...ನೆನಪಿಗೆ ಇರಲಿ. ಮರೆಯದ ಮನಸ್ಸಿಗೆ  ನೆನಪಿನ ರಾಶಿಯನ್ನೇ ತುಂಬಿದಾಕೆ ಆ ರಾಶಿಯನ್ನು ಮುಚ್ಚಿಕೊಳ್ಳುವುದಕ್ಕೋ ಎನೋ ಪುಟ್ಟ ಕರವಸ್ತ್ರವನ್ನು ಕೈಯಲ್ಲಿರಿಸಿದಳು. ಹಾಗೇ ಅದನ್ನು ಮುಖದ ಬಳಿಗೆ ತಂದರೆ ಚಾರ್ಲಿ ಸೆಂಟ್ ನ ಮಧುರವಾದ ಪರಿಮಳ. ಅದೆಂತಹ ಮಧುರ ಗಂಧ. ಕೋಣೆಯನ್ನೆಲ್ಲಾ ಆವರಿಸಿತ್ತು. ಮತ್ತೂ ಮತ್ತೂಮುಖದ ಬಳಿಗೆ ತಂದೆ. ಎಲ್ಲಿ ಗಂಧ ಕರಗಿ ಆವಿಯಾಗುವುದೋ ಎಂದು ಕೊಂಡು ಪುಟ್ಟ ಪೆಟ್ಟಿಗೆಯಲ್ಲಿ ಕರವಸ್ತ್ರವನ್ನು ಮುಚ್ಚಿಟ್ಟುಬಿಟ್ಟೆ. 

ಎಲ್ಲರೂ ಸಮುದ್ರಕಿನಾರೆಗೆ ತೆರಳಿದೆವು. ಒಂದು ತಾಸು ಸಾಗರದಂಚಿನ ಅಲೆಗಳ ಭೋರ್ಗರೆತ ಕಿವಿಗೆ ಅಪ್ಪಳಿಸಿದರೂ ಆಕೆಯ ಕಿಲ ಕಿಲ ನಗು ಕಿವಿಯಲ್ಲಿ ಅದು ಹೇಗೋ ಎಲ್ಲವನ್ನೂ ಮೀರಿಸಿ ಕೇಳಿಸುತ್ತಿತ್ತು. ನಂತರ ಎಲ್ಲರನ್ನೂ ಬೀಳ್ಕೊಟ್ಟು ಕತ್ತಲಾಗುತ್ತಿದ್ದಂತೆ ಮನೆಗೆ ಬಂದನಂತರ ಮತ್ತದೇ ಕರವಸ್ತ್ರದ ಪೆಟ್ಟಿಗೆಯನ್ನು ತೆರೆದು ನೋಡುವುದನ್ನು ತೆಡೆ ಹಿಡಿಯಲಾಗಲಿಲ್ಲ.  ತೆರೆದು ನೋಡಿದೆ. ಮತ್ತದೆ ಚಾರ್ಲಿಯ ಹನಿ ಸುಗಂದ....... ಇಂದಿಗೂ ಆ ಚಾರ್ಲಿಯ ಹನಿ ಸುಗಂಧದ ಪರಿಮಳವನ್ನು ಮರೆಯುವುದಕ್ಕಿಲ್ಲ.   ಒಂದು ಮಾತ್ರ ಸತ್ಯ ಬದುಕಿನಾದ್ಯಂತ ಹರಡಿದ ಮಧುರ ಸುಗಂಧಕ್ಕೆ ಆ ಚಾರ್ಲಿಯ ಸುಗಂಧವೇ ತರುಲತೆಯ ಚಿಗುರಾಗಿ ಉಳಿದುಬಿಟ್ಟಿತು. 





Wednesday, May 13, 2026

ಬ್ರಾಹ್ಮಣ

     ಬ್ರಹ್ಮಾಂಡ ಎಂಬ ಶಬ್ದವನ್ನು ಉಪಮೆಯಾಗಿ ಆಗಾಧ ಗಾತ್ರವನ್ನು ಕಲ್ಪಿಸುವುದಕ್ಕೆ ಉಪಯೋಗಿಸುತ್ತಾರೆ. ಬ್ರಹ್ಮಾಂಡ  ಗಾತ್ರ.  ಬ್ರಹ್ಮ ಎಂದರೆ ದೊಡ್ಡದು. ಅದು  ಎಂದಿಗೂ ಸಣ್ಣಗಾಗುವುದಕ್ಕೆ ಸಾಧ್ಯವಿಲ್ಲ. ಸಣ್ಣದಾದರೆ ಅದು ಬ್ರಹ್ಮವಾಗಿ ಉಳಿಯುವುದಿಲ್ಲ. ಬ್ರಹ್ಮದ ರೂಪವೇ ಬ್ರಾಹ್ಮಣ. ಆದರೆ ಇಂದು ಬ್ರಹ್ಮ ಅಥವಾ ಬ್ರಾಹ್ಮಣ ಚಿಕ್ಕದಾಗಿ ಬೆಳೆಯದಂತಹ ಅನಿವಾರ್ಯತೆಗೆ ತುತ್ತಾಗುತ್ತಾನೆ.  ಬ್ರಹ್ಮ ಇದರ ಅರ್ಥ ಏನೆಂಬುದರ ಬಗ್ಗೆ ಯೋಚಿಸುವುದಿಲ್ಲ ಯಾಕೆಂದರೆ ಅದನ್ನು ಅಳೆಯುವ ಸಾಮರ್ಥ್ಯ ಕಳೆದುಹೋಗಿರುವುದಕ್ಕೋ ಅಳೆದರೆ ತಾನು ಚಿಕ್ಕದಾಗುವ ಭಯವೋ ಅಂತೂ ಬ್ರಹ್ಮ ಸ್ವರೂಪವೇ ಸಮಸ್ಯೆ ಮಾತ್ರ ಬೃಹದಾಗಿ ತಲೆಯ ಮೇಲೆ ಕುಳಿತಂತೆ ಎಗರಾಡುವಂತಾಗಿದೆ.  ತಾವು ಸ್ವತಃ ಸಣ್ಣಗಾಗಿರುವುದಕ್ಕೋ ಏನೋ? ಬ್ರಾಹ್ಮಣ ಎಂಬ ಶಬ್ದವೇ ಬಹಿಷ್ಕರಿಸುವ ಮನಸ್ಸಾಗುತ್ತದೆ. 

ಬ್ರಾಹ್ಮಣ ಅದೊಂದು ವಿಶಿಷ್ಟ ಪದವಿ. ಬ್ರಹ್ಮ ತತ್ವ ಅರ್ಥವಾದರೆ ಮಾತ್ರ ಈ ಪದವಿಯ ಅರ್ಥವಾಗಬಹುದು. ಆದರೆ ನಮ್ಮಲ್ಲಿ ಅರ್ಥವಾಗದೇ ಇರುವುದನ್ನು ಅರ್ಥವಿಸುವ ಪ್ರಯತ್ನ ಕಷ್ಟಕರ, ಅದಕ್ಕೆ ಅದನ್ನು ಹುಳಿ ಫಲವನ್ನಾಗಿಸಿದರೆ ಅದರ ಸನಿಹದಿಂದ ದೂರವಾಗಬಹುದೆಂಬ ಭ್ರಮೆ ಆವರಿಸಿಬಿಡುತ್ತದೆ. ಕಾರಣ ಇಷ್ಟೇ ಅದರ ಸನಿಹ ಸುಳಿಯುವ ಅರ್ಹತೆಯೂ ಇಲ್ಲ. ಅದರಬಗ್ಗೆ ಮತ್ತಷ್ಟು ಭಯ ಆವರಿಸಿರುತ್ತದೆ.  ಯಾವುದೋ ಒಂದು ಪದವಿಯೋ ಅರ್ಹತೆಯೋ ಶ್ರೇಷ್ಠ ಎಂದು ಕಂಡರೆ ಒಂದೋ ಅದನ್ನುಕೈವಶ ಮಾಡಿಕೊಳ್ಳಬೇಕು. ಅದಕ್ಕೆ ಸಾಧನೆ ಬೇಕು. ಒಂದು ವೇಳೆ ಅದು ಸಾಧ್ಯವಾಗದೇ ಇರುವಾಗ ತಾನೇನೂ ಕಡಿಮೆಯಲ್ಲ ಎಂದು ತಿಳಿದುಕೊಳ್ಳುವುದು. ಇದು ಕೆಲವೊಮ್ಮೆ ಸ್ವಾಭಿಮಾನದ ಸಂಕೇತವಾದರೆ ಹಲವು ಸಲ ಇದು ಸಾಧ್ಯವಾಗದೇ ಮೈ ಪರಚಿಕೊಳ್ಳುವ ಕೀಳರಿಮೆಯಾಗಿ ಬದಲಾಗುವುದೇ ಅಧಿಕ. 

ಎಲ್ಲಾ ಜಾತಿ  ಬದಲಿಸಿ ಹೊಸ ಜಾತಿಗೆ ಬದಲಾಗಬಹುದು.‌ ಆದರೆ ಬ್ರಾಹ್ಮಣ ಯರೋ ಬಂದು ಬದಲಿಸಿ ಅಗುವುದಲ್ಲ.  ಸ್ವತಃ ಆಗುವುದು. ಅದಕ್ಕೆ ಇಚ್ಛಾ ಶಕ್ತಿ ಬೇಕು.  ಯಾರೋ ಬಂದು ಬ್ರಾಹ್ಮಣ ಮಾಡಿ ಬದಲಿಸಿದರೆ ಅದು ಹೊರಾವರಣದ ವೇಷಗಾರಿಕೆಯಷ್ಟೆ ಸಾಧ್ಯ.  ಯಾರೋ ಮಾಡುವುದಕ್ಕೆ ಅದು ಸಾಧ್ಯವಿಲ್ಲ. ‌ಒಂದು ವೇಳೆ ಮಾಡಿದರೂ ಅದು ಉಳಿಯಬೇಕೆಂದೇನೂ ಇಲ್ಲ. ಬ್ರಾಹ್ಮಣ ಆಗಬೇಕೆಂದಿದ್ದರೆ  ಬ್ರಾಹ್ಮಣನಿಗೆ  ಹೋಲಿಸುವುದಕ್ಕಿಂತ ನಾನು ಬ್ರಾಹ್ಮಣ ಅಂತ ತಿಳಿದುಕೊಳ್ಳಬೇಕು. ಮೊದಲಿಗೆ ತನ್ನಲ್ಲಿರುವ ಕೀಳರಿಮೆಯನ್ನು ಬಿಡಬೇಕು.   ಅದರೊಂದಿಗೆ ಹೋಲಿಸುವ ಕೀಳರಿಮೆ ಯಾಕೆ?  ಬ್ರಾಹ್ಮಣ ಎಂದು ತಿಳಿದು ಆ ಹಾದಿಯಲ್ಲಿ ಕಟ್ಟು ನಿಟ್ಟಾಗಿ ಬದುಕಿ‌ನೋಡಬೇಕು. ಯಾರೋ ಬಂದು ಬ್ರಾಹ್ಮಣ ಮಾಡುವುದಲ್ಲ. ಮಾಡಿದರೂ ಅದು ಬ್ರಾಹ್ಮಣ್ಯ ಆಗುವುದಿಲ್ಲ ಜಾತಿ.. ಅಂದರೆ ಹುಟ್ಟಿನಿಂದ ಬರುವದ್ದು.‌ಜಾತ ಅಂದರೆ ಹುಟ್ಟು, ಧರ್ಮ‌ಆನಂತರ ಅನುಸರಿಸಬೇಕು. ಹಾಗಾಗಿ ಜಾತದಿಂದ ಅಂದರೆ ಹುಟ್ಟಿನಿಂದ ಬಂದಿರುವುದರ ಬಗ್ಗೆ ಯೋಚಿಸದೆ ಆನಂತರ ಸಾಧಿಸಬಹುದಾದ ಧರ್ಮದ ಬಗ್ಗೆ ಯೋಚಿಸಬೇಕು. ಜಾತದಿಂದ ಇರುವುದು ಅದು ನಮ್ಮ ಕೈಯಲ್ಲಿ ಇರುವುದಿಲ್ಲ. ಅದನ್ನೇ ಭಗವಂತ ಎನ್ನುವುದು. 

ಬ್ರಾಹ್ಮಣರಿಗೂ ಬ್ರಾಹ್ಮಣ ಹಾದಿಯಲ್ಲಿ ಸಾಗುವುದು  ವರ್ತಮಾನದಲ್ಲಿ ಸುಲಭವಲ್ಲ. ಅದಕ್ಕೆ ಬದ್ದತೆ ಬೇಕು. ಒಂದು ದಿನವಾದರೂ ಇಂದ್ರನಾಗಬೇಕು, ಅರಸನಾಗಬೇಕು ಈಗಿನ ಕಾಲದಲ್ಲಿ ಒಂದು ದಿನವಾದರೂ ಪ್ರಧಾನಿಯಾಗಬೇಕು ಮಂತ್ರಿಯಾಗಬೇಕು ಎಂದು ಕನಸು ಕಾಣಬಹುದು. ಏನೋ ಅದೃಷ್ಟದಿಂದ ಒಂದು ದಿನ ಹಾಗಾಗಿ ಇರಲೂ ಬಹುದು. ಆದರೆ ಬ್ರಾಹ್ಮಣ ಎಂಬುದು ಹೇಗೋ ಬಯಸುವ ಒಂದು ದಿನದ ಪದವಿಯಲ್ಲ.  ಅದು ಅದೃಷ್ಟದ ಬಲದಿಂದ ಒಲಿಯುವ ಪದವಿಯೂ ಅಲ್ಲ. 

ಬ್ರಾಹ್ಮಣನಾಗುವುದಕ್ಕಿಂತಾ ಬ್ರಾಹ್ಮಣನಾಗಿರುವುದು ಕಷ್ಟ. ಅದಕ್ಕೆ ಪರಿಶ್ರಮ ಬೇಕು. ಬ್ರಹ್ಮ ಎಂದರೇನು ಎಂಬ ಅರಿವಿರಬೇಕು. ಬದುಕಿನ ಅಧ್ಯಯನ ಇರಬೇಕು.ಭೂಮಿಯ ಮೇಲೆ ಸುವಸ್ತು ಅಂತ ಯಾವುದಾದರೂ ಇದ್ದರೆ ಅದು ಬೇಗನೆ ಕೆಡುತ್ತದೆ. ಬ್ರಾಹ್ಮಣನಾಗುವುದಕ್ಕೆ ಒಂದೇ ಹಾದಿ ಇದ್ದರೆ , ಕೆಡುವುದಕ್ಕೆ ಹಲವಾರು ಅವಕಾಶಗಳಿರುತ್ತವೆ. ಅದರೆ ನಮ್ಮಲ್ಲಿ  ಕೆಡುವುದೇ ಶ್ರೇಷ್ಠವಾಗುವಾಗ ಬ್ರಾಹ್ಮಣ ಎಂಬುದೇ ಕೆಡುಕಾಗಿ ಕಂಡರೆ ಆಶ್ಚರ್ಯವಾಗುವುದಿಲ್ಲ. ಪಾವಿತ್ರ್ಯ ಎಂದು ಕಂಡು ಕೇಳದೆ ಅರಿವಿಲ್ಲದಿರುವಾಗ ಅಪವಿತ್ರದ ಅರಿವು ಉಂಟಾಗುವುದಿಲ್ಲ.   

ಬಾಲ್ಯದಲ್ಲಿ ಉಪನಯನ ಎನ್ನುವಾಗ ಮಕ್ಕಳಿಗೆ ತುಂಬ ಉತ್ಸಾಹ ಇರುತ್ತದೆ. ಮನೆಯಲ್ಲಿ ದೊಡ್ಡವರಂತೆ ಮಾಡಿದರೆ, ತಾನೂ ದೊಡ್ಡವನಾದೆ ಎಂದು ಬಾಲಕರು ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಆದರೆ ಉಪನಯನ ಆದ ನಂತರ ಹೊತ್ತು ಹೊತ್ತಿಗೆ ಸ್ನಾನ ಮಾಡಬೇಕು. ಸಂಧ್ಯಾವಂದನೆ ಮಾಡಬೇಕು. ಅಟೋಟಗಳಿಗೂ ನಿಬಂಧನೆ ಇರುತ್ತದೆ. ಎಲ್ಲಕ್ಕಿಂತಲೂ ಬೆಳಗ್ಗೆ ಎದ್ದು ಸ್ನಾನ ಮಾಡಿ ಜಪಮಾಡುವ ನಿಬಂಧನೆಯಲ್ಲಿ ಮಕ್ಕಳಿಗೆ ಈ ಉಪನಯನವೇ ಬೇಡ ಅನ್ನಿಸಿಬಿಡುತ್ತದೆ. ಅದರಂತೆ ಬ್ರಾಹ್ಮಣ್ಯವೂ ಆ ಪದವಿಯನ್ನು ನಿರ್ವಹಿಸುವುದೇ ಕಠಿಣ. ಸಹಪಂಕ್ತಿ ಭೋಜನ ಮಾಡಿ  ಹೆಗಲಿಗೆ ಜತೆಯಾಗಿ ಓಡಾಡಿದರೆ, ಅಥವಾ  ಜನಿವಾರ ಧರಿಸಿದರೆ ಬ್ರಾಹ್ಮಣಗನಾಗಬಹುದು ಎಂಬ ಕಲ್ಪನೆ ಇರುತ್ತದೆ. ಆದರೆ ಬ್ರಾಹ್ಮಣನಾಗುವುದು ಅಷ್ಟು ಸರಳ ಸುಲಭವಾಗಿದ್ದರೆ ಆ ಸ್ಥಾನಕ್ಕೆ ಮಹತ್ವ ಇರುತ್ತಿರಲಿಲ್ಲ. ಜತೆಯಲ್ಲಿ ಊಟ ಮಾಡಿದರೆ ಒಂದು ಹೊತ್ತಿನ ಹಸಿವು ನೀಗಬಹುದು, ಆದರೆ ಮನುಷ್ಯ ಜನ್ಮದ ಹಸಿವಿನ ಅರ್ಥವೂ ಆಗುವುದಿಲ್ಲ. ಅದು ಪರಿಹರಿಸಲ್ಪಡುವುದೂ ಇಲ್ಲ. 

ದಿಗ್ಬಲಂ ಕ್ಷತ್ರಿಯ ಬಲಂ ಬ್ರಹ್ಮ ತೇಜೋ ಬಲಂ ಬಲಂ ಎಂದು ಕೊಂಡು ಕೌಶಿಕ ಬ್ರಹ್ಮ ಋಷಿ ವಿಶ್ವಾಮಿತ್ರನಾದ. ಕ್ಷತ್ರಿಯನಾದ ಕೌಶಿಕ ರಾತ್ರಿ ಬೆಳಗಾಗುವುದರಲ್ಲಿ ಬ್ರಾಹ್ಮಣನಾಗಲಿಲ್ಲ. ಆತನನ್ನು ಯಾರೂ ಬ್ರಾಹ್ಮಣನನ್ನಾಗಿ ಪರಿವರ್ತಿಸಿ ಮತಾಂತರ ಮಾಡಿಲ್ಲ. ಸ್ವತಃ ಪರಿಶ್ರಮದಿಂದ ತಪಃ ಶಕ್ತಿಯಿಂದ ಆತ ಮಹಾ ಬ್ರಾಹ್ಮಣನಾಗಿ  ವಿಶ್ವಾಮಿತ್ರನಾಗಿ  ಬದಲಾದ.  ಆದರೆ ಇಂದು ಬ್ರಾಹ್ಮಣನಾಗಬೇಕು, ಆದರೆ ತಪಸ್ಸು ಬೇಡ , ನಿಯಮ ನಿಷ್ಠೆಗಳು ಬೇಡಾ. ಖಡ್ಡಾಯ ಅನುಷ್ಠಾನ ಬೇಡ. ಆದರೆ ಬ್ರಾಹ್ಮಣನಾಗಬೇಕು. ಇದು ಸಿನಿಮಾ ನಾಟಕದಂತೆ ಕೇವಲ ವೇಶದಿಂದ ಬ್ರಾಹ್ಮಣನಾಗಬಹುದು. ವೇಶದಿಂದ ಬ್ರಾಹ್ಮಣನಾಗುವುದಕ್ಕೂ ಕೆಲವೊಮ್ಮೆ ಅರ್ಹತೆ ಇರಬೇಕಾಗುತ್ತದೆ. 

ಬ್ರಾಹ್ಮಣನಾಗುವುದೆಂದರೆ ಸ್ವತಃ ಬ್ರಹ್ಮನಾಗುವುದು. ಸ್ವತಃ ದೇವನಾಗುವುದು. ದೇವರು ಎಂದರೆ ದೇವಾಲಯದಲ್ಲಿ ಕೇವಲ ಮೂರ್ತಿಯಾಗಿ ಇರುವುದಲ್ಲ. ದೇವರು ಎಂದರೆ ಏನು ಎಂಬುದನ್ನು ಅರಿಯಬೇಕು. ಕಣ್ಣಿಗೆ ಕಾಣದಿರುವುದೇ ದೇವರು. ದೇವರನ್ನು ಯಾರೂ ತೋರಿಸುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ದೇವರನ್ನು ಕಂಡವರು ಯಾರೂ ಇಲ್ಲ. ಕಾಣದೇ ಇರುವುದನ್ನು ತೋರಿಸುವುದಕ್ಕೆ ಹೇಗೆ ಸಾಧ್?  ಇದು ದೇವರು ಅಂತ ದೇವರನ್ನು ತೋರಿಸುವುದಕ್ಕೆ ಸಾಧ್ಯವಿಲ್ಲ. ಚರಾಚರ ವಸ್ತುಗಳಿಗಿಂತ ಅತೀತವಾಗಿರುವುದೇ ದೇವರು. ಮನುಷ್ಯ ತನ್ನ ಬುದ್ಧಿಗೆ ಸೀಮಿತವಾಗಿ ದೇವರನ್ನು ಕಲ್ಪಿಸಿಕೊಳ್ಳಬಹುದು. ಆದರೆ ದೇವರನ್ನು ಅರಿಯಬೇಕಾದರೆ ಜನ್ಮವೇ ಸಾಕಾಗುವುದಿಲ್ಲ.  ಹೊರಗೆಲ್ಲೂ ದೇವರು ಕಾಣದಿರುವಾಗ ಸ್ವತಃ ತನ್ನಲ್ಲಿರುವ ದೇವರನ್ನು ಕಂಡುಕೊಳ್ಳುವುದು. ಬ್ರಾಹ್ಮಣನೆಂದರೆ ಅದುವೆ ತನ್ನಲ್ಲೇ ದೇವರನ್ನು ಕಂಡುಕೊಳ್ಳುವುದು. ಬ್ರಾಹ್ಮಣನಿಗೆ ದೇವರನ್ನು ಅರ್ಚಿಸುವುದಕ್ಕೆ ದೇವಾಲಯ ಬೇಡ, ಮೂರ್ತಿಯ ಅವಶ್ಯಕತೆ ಇರುವುದಿಲ್ಲ. ಯಾವುದರಲ್ಲೂ ದೇವರನ್ನು ಆವಾಹಿಸುವುದಕ್ಕೆ ಸಾಧ್ಯವಿರುತ್ತದೆ. ಅರ್ಥ ಎಲ್ಲದರಲ್ಲೂ ದೇವರನ್ನು ಕಂಡು ಸ್ವತಃ ತನ್ನಲ್ಲೇ ದೇವರನ್ನು ಕಂಡು ತಾನೇ ದೇವರಾಗುವುದು. ಹಾಗಾಗಿಯೇ ಬ್ರಾಹ್ಮಣ ಎಂದರೆ ಭೂಸುರನಾಗುತ್ತಾನೆ.  ಅದು ವೃತನಿಷ್ಠನಾಗಿ ಕಠಿಣವಾದ ಸ್ಥಾನ. 

ಭೂಮಿಯ ಮೇಲೆ ತೆಂಗಿನಮರಮಾತ್ರ ಕಲ್ಪವೃಕ್ಷವಾಗುತ್ತದೆ. ಮಾವಿನ ಮರ ಕಲ್ಪವೃಕ್ಷವಾಗುವುದಿಲ್ಲ. ಅದನ್ನು ಕಲ್ಪವೃಕ್ಷ ಎಂದು ತನ್ನ ಅರಿವಿಗೆ ಸೀಮಿತವಾಗಿ ಕಲ್ಪವೃಕ್ಷ ಎಂಬಂತೆ ಭ್ರಮಿಸಬಹುದು. ಆದರೆ ತೆಂಗಿನಮರ ಕಲ್ಪವೃಕ್ಷವಾಗಿಯೇ ಉಳಿಯುತ್ತದೆ. 

Sunday, May 3, 2026

ಭಕ್ತರ ಸೇವೆ



ಮೊನ್ನೆ ಶಬರಿಮಲೆಯಾತ್ರೆಯಲ್ಲಿ ಮುಂಜಾನೆ ಸೂರ್ಯೋದಯದ ಮೊದಲು ಕತ್ತಲೆಯಲ್ಲೇ   ನಾವು ಮಲೆ ಏರುವುದಕ್ಕೆ ಶುರುಮಾಡಿದೆವು. ಹೆಚ್ಚು ಜನಸಂದಣಿ ಇರದಿದ್ದರೂ ಹಲವಾರು ಜನ ಮಲೆ ಏರುವವರು ಇದ್ದರು. ಕೆಳಗಿನಿಂದ ಮೇಲೆ ಸನ್ನಿಧಾನದವರೆಗೂ ಇದ್ದ ಧ್ವನಿ ವರ್ಧಕದಲ್ಲಿ ಖ್ಯಾತ ಗಾಯಗ ಜೇಸುದಾಸ್ ಅವರ ಭಕ್ತಿ ಗೀತೆ ಇಂಪಾಗಿ ಕೇಳಿಬುರುತ್ತಿದ್ದರೆ, ಮಲೆ ಏರುವುದಕ್ಕೆ ಭಕ್ತಿ ಪ್ರೇರಕ ಶಕ್ತಿಯಂತೆ ಪ್ರಚೋದನೆಯಾಗುತ್ತಿತ್ತು. ಬರಿಗಾಲಲ್ಲಿ ಕಲ್ಲಿನ ರಸ್ತೆಯನ್ನು, ಮೆಟ್ಟಲನ್ನು ಏರುವಾಗ ಪಾದಗಳು ನೋಯುತ್ತಿದ್ದರೂ ಅದೊಂದು ಭಕ್ತಿಯ ಭಾವ ಎಲ್ಲವನ್ನು ಮರೆಸುವಂತೆ ಮಾಡುತ್ತಿತ್ತು. ಎಲ್ಲರೂ ಏರುತ್ತಿದ್ದರೆ ಅಲ್ಲೊಂದು ಇಲ್ಲೊಂದು ಅಯ್ಯಪ್ಪ ಶರಣು ಕೂಗು ಕೇಳಿಸುತ್ತಿದ್ದದ್ದು ಬಿಟ್ಟರೆ ಏದುಸಿರೇ ಅಧಿಕ ಕೇಳಿ ಬರುತ್ತಿತ್ತು. ಮುಂಜಾನೆಯ ತಣ್ಣನೆಗಾಳಿಯನ್ನು ಭೇದಿಸಿ ಮೈಯಿಂದ ಬೆವರು ಸುರಿಯುತ್ತಿತ್ತು. 

ಅಪ್ಪಾಚಿ ಮೇಡು ಹತ್ತಿರ ಇರಬೇಕು  ನಾನು ಒಂದರ ಹಿಂದೆ ಒಂದು ಹೆಜ್ಜೆಯನ್ನು ವೇಗವಾಗಿ ಎತ್ತಿಡುತ್ತಾ ಒಂದಷ್ಟು ದೂರ ಬೇಗ ಏರಿ ಹೋಗಿ ಹಿಂದಿರುಗಿ ನೋಡಿದರೆ ನನ್ನಾಕೆ ಮತ್ತು ಮಗ ತುಂಬ ಹಿಂದುಳಿದಿದ್ದರು. ಸುಸ್ತಾದ ನನ್ನಾಕೆ ಮೆಟ್ಟಲ ಬದಿಯಲ್ಲಿದ್ದ ಕಟ್ಟೆಯಲ್ಲಿ ಸುಸ್ತಾಗಿ ಕುಳಿತಿದ್ದಳು. ಯಾರೋ ಒಬ್ಬರು ಆಕೆಗೆ ಬೀಸಣಿಕೆಯಿಂದ ಗಾಳಿ ಹಾಕುತ್ತಿದ್ದರು. ಒಂದು ಕ್ಷಣ ನೋಡಿದರೆ ಗಾಬರಿಯಾಗಬೇಕು. ಆದರೆ ಹಾಗಲ್ಲ. ಹಾಗೆ ಸುಸ್ತಾಗಿ ಯಾರಾದರೂ ಕುಳಿತರೆ ಕೆಲವರು ಬಂದು  ಗಾಳಿ ಹಾಕುತ್ತಾರೆ. ಇದೊಂದು ಬಗೆಯ ವಿಶಿಷ್ಟ ಸೇವೆ. ಶಬರಿ ಮಲೆ ಯಾತ್ರೆ ಎಂದರೆ ಹೀಗೆ ಅಲ್ಲಿ ಎಲ್ಲವೂ ಭಗವಂತನ ಸೇವೆಯಾಗುತ್ತದೆ. ಭಗವಂತನೆಂದರೆ ಭಕ್ತರ ದಾಸ. ದಾಸರ ದಾಸ ಭಗವಂತ ಎಂಬ ಮಾತು ಇದೆ. ಅದಕ್ಕೆ ಪ್ರತೀಕ ಎಂಬಂತೆ ಇಲ್ಲಿ ಭಕ್ತರ ಸೇವೆ ಮಾಡುವುದನ್ನು ಕಾಣಬಹುದು. ಹತ್ತುವ ಇಳಿಯುವ ಭಕ್ತರ ಸೇವೆ ಮಾಡುವುದು ಕೂಡ ಅಯ್ಯಪ್ಪ ಸ್ವಾಮಿಯ ಸೇವೆಯಾಗುತ್ತದೆ. ಅದರ ಮೂಲಕ ಭಗವಂತನ ಅನುಗ್ರಹ ನಿರೀಕ್ಷೆ ಇರುತ್ತದೆ. 

ಒಂದೆರಡು ಕಡೆ ಕುಡಿಯುವ ನೀರಿನ ಜತೆಗೆ ಬಿಸ್ಕತ್ ಇಟ್ಟಿದ್ದರು. ನೀವು ಎಷ್ಟಾದರೂ ಬಿಸ್ಕತ್ತ ತೆಗೆದುಕೊಂಡು ನೀರು ಕುಡಿಯಬಹುದು. ಇದು ಸಂಪೂರ್ಣ ಉಚಿತ, ಇದೊಂದು ಬಗೆ ಭಕ್ತರ ಸೇವಯ ಮುಖೇನ ದೇವರ ಸೇವೆ. ಬಿಸ್ಕ್ತತ್ತು ಹಾಕಿಟ್ಟ ಪಾತ್ರೆ ಘಳಿಗೆಯಲ್ಲಿ ಖಾಲಿಯಾಗುತ್ತಿತ್ತು ಹಾಗೆ ಅದಕ್ಕೆ ಬಿಸ್ಕತ್ತು ಸುರಿಯುತ್ತಿದ್ದರು. ನಿಜಕ್ಕೂ ಇದೊಂದು ಆಶ್ಚರ್ಯವನ್ನು ಉಂಟು ಮಾಡಿತ್ತು. ಹೀಗೆ ಶಬರಿ ಮಲೆ ಯಾತ್ರೆ ಎಂಬುದು ಹಲವು ಮರೆಯದ ಅನುಭವಗಳನ್ನು ಕಟ್ಟಿಕೊಡುತ್ತಿತ್ತು. ಒಂದು ಸಲ ಹೋಗಿ ಬರೋಣವೆಂದಿದ್ದ ನನ್ನಾಕೆ ಈಗ ಪುನಃ ಯಾವಾಗ ಹೋಗೊಣ ಎಂದು ಕೇಳುತ್ತಾಳೆ. ಶಬರಿಮಲೆ ಯಾತ್ರೆ ಎಂಬುದು ಬದುಕಿನಲ್ಲಿ  ಅನುಭವಿಸಿ ಪಡೆಯಲೇಬೇಕಾದ ಒಂದು ಅನುಭವ. 

ಯಾತ್ರೆಯುದ್ದಕ್ಕೂ ಅದು ಕೇವಲ ಅಯ್ಯಪ್ಪನ ದರ್ಶನದ ಏಕೈಕ ಉದ್ದೇಶವಾಗಿ ಕಾಣುತ್ತದೆ. ಪಂಪದಿಂದ ಮೇಲೆ ಸನ್ನಿಧಾನದ ವರೆಗೂ ಹಲವು ಬಗೆಯ ಭಕ್ತರನ್ನು ಕಾಣ ಬಹುದು. ಅಂಗ ವಿಕಲರೂ ಅಶಕ್ತರು ಒಂದೆಡೆಯಾದರೆ ಪುಟ್ಟ ಮಕ್ಕಳನ್ನೂ ತಮ್ಮ ಇರುಮುಡಿಯೊಂದಿಗೆ ಅವರ ಇರುಮುಡಿಯನ್ನು ಹೊತ್ತುಕೊಳ್ಳುವುದು ಮಾತ್ರವಲ್ಲ ಮಗುವನ್ನೂ ಹೆಗಲಲ್ಲಿ ಹೊತ್ತುಕೊಂಡು ತಮ್ಮ ಮಗುವಿಗೆ ಅಯ್ಯಪ್ಪನ ದರ್ಶನ ಮಾಡಿಸುವ ಉದ್ದೇಶದಲ್ಲಿ ಅವರು ಮಲೆಯ ಒಂದೊಂದೆ ಹೆಜ್ಜೆಗಳನ್ನು ಇಡುವುದನ್ನು ಕಾಣುವಾಗ ಇದು ಕೇವಲ ದೇವರ ದರ್ಶನವಲ್ಲ, ಬದುಕಿನ ಸರ್ವಾಂಗ ದರ್ಶನದಂತೆ ಭಾಸವಾಗುತ್ತದೆ. ಪಂಪೆಯ ನದೀ ತೀರದಲ್ಲಿ ಹಲವಾರು ಜನ ಸಿಕ್ಕ ಸಿಕ್ಕಲ್ಲಿ ನಿದ್ರಿಸುತ್ತಿದ್ದರು. ಕಪ್ಪು ಅಥವಾ ಕಾವಿಲುಂಗಿ ಧರಿಸಿ ಯಾವ ಆಡಂಬರವೂ ಇಲ್ಲದೆ ಎಲ್ಲೆಂದರಲ್ಲಿ ಬಿದ್ದಿರುತ್ತಿದ್ದರು. ತೀರ ಬಡವರು ಎಂದು ತಿಳೀದರೆ ತಪ್ಪಾದೀತು. ಯಾಕೆಂದರೆ ಅದರಲ್ಲಿ ಕೋಟ್ಯಾಧಿಪತಿ ಶ್ರೀಮಂತನೂ ಇರಬಹುದು. ತೀರ ಬಡವನೂ ಇರಬಹುದು. ಧನಿಕ ಶ್ರೀಮಂತ ಎಂಬ ಭೇದವಿಲ್ಲ.ಅಲ್ಲಿ ನಿದ್ರೆ ಹಸಿವಿಗೆ ಪ್ರಾಧಾನ್ಯತೆ ಇಲ್ಲ. ಕೇವಲ ಒಂದೇ ಗುರಿ ಅದು ಅಯ್ಯಪ್ಪ ದರ್ಶನ. ಹಾಗಾಗಿ ಶಬರಿ ಮಲೆ ಹೋಗುವಾಗ ನಿಮಗೆ ಅಲ್ಲಿ ಹಲವು ಅಸೌಕರ್ಯಗಳು ಕಾಣಬಹುದು. ಸ್ನಾನ ನಿದ್ರೆ ಆಹಾರಕ್ಕೆ ಸರಿಯಾದ ವ್ಯವಸ್ಥೆ ಇಲ್ಲದಂತೆ ಇರಬಹುದು. ಬರಿಗಾಲಲ್ಲಿ ನಡೆಯಬಹುದು.  ಎಂತಹ ಶ್ರೀಮಂತನೂ ಮನೆಯಲ್ಲಿ ಹವಾನಿಯಂತ್ರಿತ ಕೊಠಡಿಯಲ್ಲಿ ಮಲಗಿದರೂ ಇಲ್ಲಿ ಬಂದು ಬೀದಿಯಲ್ಲಿ ಮಲಗಿಬಿಡುತ್ತಾನೆ. ಕಾರಣ ಅಲ್ಲಿರುವ ಬಯಕೆ ಒಂದೇ ಅಯ್ಯಪ್ಪ ದರ್ಶನ. ಬೇರೆ ಯಾವ ಕ್ಷೇತ್ರದಲ್ಲೂ ಇದನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಮನಸ್ಸಿನ ಭಾವ ಒಂದೇ ಎಲ್ಲವೂ ನೀನೆ. ಒಂ ತತ್ವಮಸಿ.  ಸಾವಿರ ಗ್ರಂಥವನ್ನು ಅಧ್ಯಯನ ಮಾಡಿದರೂ ಸಿಗದ ಜ್ಞಾನ ಅದರ ತತ್ವ ಕೇವಲ ಒಂದು ಶಬರಿಮಲೆ ಯಾತ್ರೆಯಲ್ಲಿ ಸಿದ್ದಿಸಿಬಿಡುತ್ತದೆ. ಅಧ್ಯಾತ್ಮಿಕ ತತ್ವ ಎಂಬುದು ಸನಾತನ ಧರ್ಮದ ತತ್ವ. ಮನುಷ್ಯನ ಬದುಕಿನ ಗುರಿ ಏನು ಎಂಬುದನ್ನು ತೋರಿಸಿಕೊಡುತ್ತದೆ. ನಮ್ಮ ವಶವಿಲ್ಲದ ಅದೊಂದು ಶಕ್ತಿ ನಮ್ಮನ್ನು ನಿಯಂತ್ರಿಸುತ್ತದೆ. ಈ ಜ್ಞಾನವನ್ನು ಹೆಜ್ಜೆ ಹೆಜ್ಜೆಗೂ ಒದಗಿಸುತ್ತದೆ. ಹಿಂದೂ ಧರ್ಮ ಸನಾತನ ಧರ್ಮ ಎಂದು ಹೀಗಳೆಯುವ ಬುದ್ಧಿಜೀವಿಗಳಿರಬಹುದು. ಒಂದು ಬಾರಿ ಮಾಲೆ ಧರಿಸಿ ವೃತ ಹಿಡಿದು ಯಾತ್ರೆ ಮಾಡಿ ಅಯ್ಯಪ್ಪ ದರ್ಶನ ಮಾಡಬೇಕು. ಆಗ ಈ ತತ್ವದ ಅರಿವಾಗುತ್ತದೆ. 


Thursday, April 30, 2026

ಅತೃಪ್ತ ಆತ್ಮಗಳು


ಚಿತ್ರಗಳು ಮಾತೃಭೂಮಿ ಪುಟಗಳಿಂದ.

ಇತ್ತೀಚೆಗೆ ಶಬರಿಮಲೆ ಯಾತ್ರೆಯಲ್ಲಿ ನಸುಕಿಗೆ ಪಂಪಾ ನದಿ ತೀರಕ್ಕೆ ಬಂದು ತಲುಪಿದೆವು. ಪಂಪಾನದಿಯಲ್ಲಿ ಪವಿತ್ರ ಸ್ನಾನ ಮಾಡಿ ಮಲೆ ಏರುವುದಕ್ಕೆ ತೊಡಗಬೇಕಿತ್ತು. ಪಂಪಾನದಿಯಲ್ಲಿ ಸ್ನಾನ ಮಾಡಬೇಕಲ್ಲ ಎಂಬ ಆತಂಕವೇ ಮನಸ್ಸಿನಲ್ಲಿತ್ತು. ವಾಸ್ತವದಲ್ಲಿ ಈ ಆತಂಕಕ್ಕೆ ಅವಕಾಶ ಇರಬಾರದಾಗಿತ್ತು. ಹಿಂದೆ ಬಂದಾಗ ಇಲ್ಲಿನ ಪರಿಸ್ಥಿತಿ ನೋಡಿದ್ದೆ. ಎಲ್ಲೆಂದರಲ್ಲಿ ಬೇಕಾ ಬಿಟ್ಟಿಯಾಗಿ ಹಾಕಿದ  ವಸ್ತ್ರಗಳು, ಅದೂ ಒಳ ವಸ್ತ್ರ ಧೋತಿ ಇನ್ನಿತರ ಚಿಂದಿ ಚಿಂದಿ ವಸ್ತ್ರಗಳು. ಅವುಗಳನ್ನು ತುಳಿದು ಸ್ನಾನ ಮಾಡುವುದೆಂದರೆ ಇನ್ನಿಲ್ಲದ ಮಾನಸಿಕ ಹಿಂಸೆ. ಇದು ಯಾವ ದೇವರಿಗೆ ಪ್ರೀತಿ ಎಂಬಂತೆ ಪ್ರಶ್ನಿಸುವಂತಾಗುತ್ತದೆ. ನಸು ಗತ್ತಲೆಯಲ್ಲಿ ಕಾಲಿಗೆ ವಸ್ತ್ರಗಳು ಸಿಕ್ಕಿಗೊಂಡಾಗ ಅಸಹ್ಯವಾಗುತ್ತದೆ. ಆದರೆ  ಪವಿತ್ರರಾಗಬೇಕಾದರೆ ಅಲ್ಲಿ ಸ್ನಾನ ಮಾಡುವುದು ಅನಿವಾರ್ಯ. ಯಾವ ಬಗೆಯಲ್ಲಿ ಪವಿತ್ರರಾಗುವುದು ಎಂದು ಮನಸ್ಸು ಪ್ರಶ್ನಿಸುತ್ತದೆ.  ಪವಿತ್ರತೆ ಎಂಬುದು ಒಂದು ಮಾನಸಿಕ ಸ್ಥಿತಿ. ಅದು ಅನುಭವಕ್ಕೆ ಬರಬೇಕು. ಮನಸ್ಸು ಪರಿಶುದ್ದವಾಗದೇ ಇದ್ದರೆ ಪಾವಿತ್ರ್ಯತೆ ಪರಿಪೂರ್ಣವಾಗುವುದಿಲ್ಲ.  ಆದರೆ ಇಲ್ಲಿ ಮನಸ್ಸು ಆತಂಕದಿಂದ ಕ್ಷೋಭೆಗೆ ಒಳಗಾಗುತ್ತದೆ. 

ನಸುಕಿನ ಕತ್ತಲಲ್ಲಿ ಆತಂಕದಿಂದಲೇ ಹೆಜ್ಚೆ ಇಡುತ್ತಾ ಸ್ನಾನ ಘಟ್ಟದ ಮೆಟ್ಟಲು ನೋಡಿದರೆ ಮೆಟ್ಟಲಲ್ಲೆ ಚೆಲ್ಲಾ ಪಿಲ್ಲಿಯಾಗಿದ್ದ ವಸ್ತ್ರಗಳು ಪೇಸ್ಟ್  ಗುಟ್ಕಾ ಪ್ಯಾಕೆಟ್ ಗಳು. ಮಾಲೆ ಹಾಕಿದ ಮೇಲೆ ಕೆಟ್ಟದ್ದನ್ನು ಯೋಚಿಸಬಾರದು, ಕೆಟ್ಟದ್ದನ್ನು ಮಾತನಾಡಬಾರದು. ಕೆಟ್ಟ ಕಾರ್ಯ ಮಾಡಬಾರದು. ವಾಸ್ತವದಲ್ಲಿ ಇದು ಸಾಧ್ಯವಾಗದಿರುವಾಗ ಒಂದು ಸಲ ಯೋಚಿಸಿದೆ ದೇವರು ವಿಧಿಸುವ ಸತ್ವ ಪರೀಕ್ಷೆಯ ಸ್ವರೂಪ ಇದು ಒಂದು ಆಗಿರಬಹುದು. ಕೆಟ್ಟದ್ದನ್ನು ಅನುಭವಿಸುವುದೂ  ಸಹ ಒಂದು ಬಗೆಯ  ದೈವ ಪರೀಕ್ಷೆ. ಆದರೆ ಕೆಟ್ಟದನ್ನು ದಯಪಾಲಿಸುವ ಭಕ್ತರ ಮನಸ್ಥಿತಿಯಂತು ಯಾವ ದೇವ ದರ್ಶನದಲ್ಲೂ ಪರಿಹಾರವಾಗದು. ದೇವರು ಪ್ರಹ್ಲಾದನನ್ನು ಸೃಷ್ಟಿಸುವ ಮೊದಲು ಹಿರಣ್ಯಾಕ್ಷ ಹಿರಣ್ಯ ಕಶಿಪುರವರನ್ನು ಸೃಷ್ಟಿಸಿದ್ದ. ಅದು ಪುರಾಣದಲ್ಲಿ, ಆದರೆ ಇಲ್ಲಿ ಕೆಟ್ಟ ಸೃಷ್ಟಿ ಯಾಗಿ ಒಳ್ಳೆಯ ಪ್ರಹ್ಲಾದ ಸೃಷ್ಟಿ ಮಾತ್ರ ಮರೀಚಿಕೆ. 

ಎರಡು ವರ್ಷದ ಹಿಂದೆ ಕಾಶಿಗೆ ಹೋದಾಗ ಗಂಗಾಸ್ನಾನಕ್ಕೆ ತೆರಳಿದ್ದೆ. ಅಲ್ಲಿ ಸಾಕಷ್ಟು ಸ್ವಚ್ಛತೆಗೆ ಆದ್ಯತೆ ಇದ್ದರೂ ಎಲ್ಲೆಂದರಲ್ಲಿ ಹೂವು ಕೊಳೆತು ನಾರುವ ಸ್ಥಿತಿಗೆ ತಲುಪಿತ್ತು. ಮುಳುಗು ಹಾಕಿದರೆ ಅವುಗಳೆಲ್ಲ ಮೈಗೆ ಮುತ್ತಿಕೊಳ್ಳುವಾಗ ಗಂಗೆಯಲ್ಲಿ ಪವಿತ್ರರಾಗುವ ಬಗೆ ಹೇಗೆ ಅಂತ ಯೋಚಿಸುತ್ತಿತ್ತು. ಇನ್ನು ವಿಸರ್ಜಿಸಿದ ಪಿಂಡದ ಶೇಷ ಭಾಗಗಳನ್ನು ನೋಡಿದಾಗ ಗಂಗೆಯಲ್ಲೂ ಮೋಕ್ಷ ಸಿಗದ ಪ್ರೇತಾತ್ಮಗಳ ದರ್ಶನವಾದಂತಾಯಿತು. ಬಹುಶಃ ಈ ಪ್ರೇತಾತ್ಮಗಳಂತೆ ನಾವು ಗಂಗೆಯಲ್ಲಿ ಮಿಂದರೂ ಅತೃಪ್ತರಾಗಿಯೇ ಇರಬೇಕು ಅನ್ನಿಸ್ತುತ್ತಿತ್ತು. ಇನ್ನು ವಸ್ತ್ರ ಬದಲಿಸುವ ಕೋಣೆಗಳು ಅಲ್ಲಲ್ಲಿ ಇದ್ದರೂ ಅಲ್ಲಿಯೂ ಬಿಟ್ಟು ಹೋದ ವಸ್ತ್ರಗಳು ಉಡುಪುಗಳು ಸ್ನಾನ ಕೇವಲ ಸಂಕೇತವಾಗುವಂತೆ ಮಾಡಿತ್ತು. ಗಂಗೆಯಲ್ಲೂ ಪವಿತ್ರರಾಗಲು ಬಿಡದ ಜೀವಂತ ಪ್ರೇತಗಳಿಗೆ ಮೋಕ್ಷ ಯಾವಾಗ ಸಿಗಬಹುದು?

ಇಂದು ಹೆಚ್ಚಿನ ಎಲ್ಲಾ ಕ್ಷೇತ್ರಗಳ ದುರವಸ್ಥೆ ಇದು. ಧರ್ಮಸ್ಥಳ ಸುಬ್ರಹ್ಮಣ್ಯ ಮಂತ್ರಾಲಯ  ಎಲ್ಲೆಲ್ಲಿ ನದಿ ಸ್ನಾನದ ಅವಕಾಶ ಇದೆಯೋ ಅಲ್ಲೆಲ್ಲ ಮಾನವ ನಿರ್ಮಿತ ಮಾಲಿನ್ಯದ ಅವಶೇಷಗಳದೇ ಪಾರುಪತ್ಯ. ನದಿ ನೀರು ಕಾಣುವಾಗ ಸ್ಫಟಿಕದಂತೆ ಸ್ವಚ್ಛವಿದ್ದರೆ ಅದು ಪರಿಸರದೊಂದಿಗೆ ನಿತ್ಯ ಹೋರಾಟವನ್ನು ನಡೆಸಬೇಕಾಗುತ್ತದೆ. ಧರ್ಮಸ್ಥಳದಲ್ಲಂತೂ ಸ್ವಯಂ ಸೇವಕರು ಪ್ರತೀ ತಿಂಗಳು ಲೋಡುಗಟ್ಟಲೆ ವಸ್ತ್ರಗಳನ್ನು ಹೆಕ್ಕಿ ಸ್ವಚ್ಚ ಮಾಡುತ್ತಾರಂತೆ. ಇಷ್ಟಕ್ಕೆಲ್ಲ ಕಾರಣ ಮತಿಗೆಟ್ಟ ಭಕ್ತರ ಒಂದು ಬಗೆಯ ದೈವ ಸೇವೆ.  ಇವರೆಲ್ಲ ಶುಚೀರ್ಭೂತರೆಂದರೆ ತಟ್ಟಿದ ಪಾಪಕ್ಕೆ ಮುಳುಗಿ ಪವಿತ್ರರಾಗುವುದಕ್ಕೆ  ಗಂಗೆಯೂ ಸಾಲದು. 

ಪಂಪಾ ನದಿಯ ಕಥೆಯೂ ಇದೇ. ಅಲ್ಲಿ ಆಗಾಗ ಸ್ವಚ್ಛ ಮಾಡುತ್ತಾರೆ. ಆದರೆ ಹೋದ ಯಾತ್ರಿಕರು ಮಾಲೆ ಹಾಕಿದರೂ ಮುಗಿಯದ ಪಾಪ ಸೃಷ್ಟಿ ಮಾಡಿ ಪುನೀತರಾಗುತ್ತಾರೆ. ಒಂದಿಷ್ಟೂ ಪಾಪ ಪ್ರಜ್ಞೆ ಇಲ್ಲದ ಈ ಜೀವಂತ ಪಿಶಾಚಿಗಳನ್ನು ಕಾಣುವಾಗ ಇವರ ದೈವ ಭಕ್ತಿಯ ರೂಪವಾದರೂ ಯಾವ ಬಗೆಯದು ಎಂದು ಯೋಚಿಸುವಂತಾಗುತ್ತದೆ.   ದೇವರೇ ಮನಸ್ಸನ್ನಾದರೂ ನಾನು ಸ್ವಚ್ಛಗೊಳಿಸಬಲ್ಲೆ ಆದರೆ ಈ ದೇಹ ಪರಿಶುದ್ದವಾಗದು ಎಂದು ಹೇಳಿಕೊಂಡು ಪಂಪೆಯಲ್ಲಿ ಮುಳುಗಬೇಕು. ಇವರೆಲ್ಲ ಯಾಕಾಗಿ ವೃತ ಹಿಡಿಯುತ್ತಾರೋ? ಯಾಕಾಗಿ ಶಬರಿಮಲೆಗೆ ಬರುತ್ತಾರೋ ಗೊತ್ತಿಲ್ಲ. ಅಯ್ಯಪ್ಪನಾದರೂ ಇವರಿಗೆ ಪ್ರಜ್ಞಾ ಬುದ್ದಿಯನ್ನು ಒದಗಿಸದೆ ಯಾಕೆ ಮೌನವಾಗಿದ್ದಾನೆ? 

ನಮ್ಮೂರಲ್ಲಿ ಅಲ್ಲಲ್ಲಿ ನಾಗಬನ ಅಂತ ಇರುತ್ತದೆ. ಅಲ್ಲಿ ನಾಗನ ಕಲ್ಲು ನಾಗನ ಅಸ್ತಿತ್ವದ ನಂಬಿಕೆಯಲ್ಲಿ ಅದರ ಸುತ್ತಮುತ್ತ ಮರಗಳನ್ನು ಕಡಿಯದೇ ಹಾಗೇ ಬಿಡುತ್ತಾರೆ. ಆ ಬಗೆಯಲ್ಲಾದರೂ ಒಂದಿಷ್ಟು ಮರಗಳ ಸಂರಕ್ಷಣೆಯಾಗುತ್ತದೆ. ಅಲ್ಲಿನ ನಂಬಿಕೆ  ಭಯ ಅದಕ್ಕೆ ಕಾರಣ. ನಾವು ಎಲ್ಲೆಡೆ ಪರಿಸರವನ್ನು ಕೆಡಿಸಿಯಾಗಿದೆ. ಘಟ್ಟ ಪ್ರದೇಶದ ಹೆದ್ದಾರಿಯಲ್ಲಿ ಸಂಚರಿಸುವಾಗ ಬಾಟಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಇಲ್ಲದ ಪ್ರದೇಶವೇ ಸಿಗುವುದಿಲ್ಲ. ಕೊನೆ ಪಕ್ಷ ದೇವರ ಹೆಸರಲ್ಲಾದರು ನದಿಪಾತ್ರಗಳು ಸ್ವಚ್ಚವಾಗಬೇಕಿತ್ತು ಯಾವ ದೈವ ಭಯವೂ ಇವರಿಗಿಲ್ಲ,  ಇಲ್ಲಿ ಯಾವ  ದೇವ ಭಯವೂ ಇಲ್ಲದ ಭಕ್ತರು ದೇವಾಲಯಕ್ಕೆ ಹೋಗಿ ಕೈಮುಗಿಯುವ ಅವಶ್ಯಕತೆಯೇ ಉಳಿದಿರುವುದಿಲ್ಲ. 

ಮನುಷ್ಯ ಜನ್ಮದ ಗುರಿ ಎಂದರೆ ದುರಿತಗಳಿಂದ ಮೋಕ್ಷ ಹೊಂದುವುದು. ನಾನು ನನ್ನದು ಎಂಬ ಚಿತ್ತ ವೃತ್ತಿಯಿಂದ ದೂರಾಗಿ ಮನಸ್ಸು ಪರಿಶುದ್ದಗೊಳಿಸಿ ಪರಮಾತ್ಮನ ಅನುಗ್ರಹಕ್ಕೆ ಪಾತ್ರರಾಗಿ ಮೋಕ್ಷ ಸಂಪಾದಿಸುವುದು. ಆದರೆ ನಮ್ಮ ವೃತ್ತಿ ಹೇಗಿದೆ ಎಂದರೆ . ನೀರು ಇದೆ ಎಂದು ಉಪ್ಪು ತಿಂದ ಹಾಗೆ, 

 ದೇವರಿಗೆ ನಮಸ್ಕರಿಸಿದರೆ ಪಾಪವೆಲ್ಲ ಪರಿಹಾರ ಎಂಬ ಭಾವನೆ ಇರುತ್ತದೆ. ಪಾಪಕ್ಕೆ ಪರಿಹಾರ ಇದೆ ಎಂದುಕೊಂಡು ಮತ್ತಷ್ಟೂ ಪಾಪ ಮಾಡುತ್ತಾ ಬದುಕನ್ನು ಸವೆಸುತ್ತಾರೆ. ಪಾಪ ಕ್ಷಯ ಇವುಗಳೆಲ್ಲ ನಮ್ಮ ಭಾವನೆಯೋ ಅಲ್ಲಿ ವಾಸ್ತವವೋ ಗೊತ್ತಿಲ್ಲ. ಆದರೆ ಮನುಷ್ಯ ಮತ್ತು ದೈವ ಸಂಬಂಧದ ಪಾರಮಾರ್ಥಿಕ ಅರಿವು ಮನುಷ್ಯನಿಗಿಲ್ಲ. ದೇವರು ನಮ್ಮಿಂದ ಯಾವುದನ್ನೂ ಅಪೇಕ್ಷಿಸುವುದಿಲ್ಲ. ಹೂ ನೈವೇದ್ಯ ಪೂಜೆ ಯಾವುದೇ ಆದರೂ ಅಲ್ಲಿ ಕೊನೆಯದು ನಮ್ಮ ಆತ್ಮ ತೃಪ್ತಿ. ನಮ್ಮ ಕೈ ಮೀರಿದ ಶಕ್ತಿ ಒಂದಿದೆ ಎಂಬ ಭಾವ.  ನಮಗೆ ರುಚಿಯಾದದ್ದು ನಮಗೆ ಸಮ್ಮತವಾದದ್ದನ್ನೇ ನಾವು ದೇವರಿಗೆ ಅರ್ಪಿಸುತ್ತೇವೆ.  

ಗಂಗೆಯನ್ನು ಶಿರದಲ್ಲಿ ಧರಿಸಿದವನು ಗಂಗಾಧರ.  ಪವಿತ್ರ ಗಂಗೆಯನ್ನು ಶಿರದಲ್ಲಿ ಧರಿಸಿದವನಿಗೆ  ನಮ್ಮ ಬಾವಿಯ ನೀರಿನಿಂದ   ರುದ್ರಾಭಿಷೇಕ  ಮಾಡುವ ಅವಶ್ಯಕತೆ ಏನಿದೆ? ಆದರೂ ಆತನ ಅನುಗ್ರಹಕ್ಕಾಗಿ ರುದ್ರಾಭಿಷೇಕ ಮಾಡುತ್ತೇವೆ. ಇಲ್ಲಿ ಅನುಗ್ರಹ ಎಂಬುದು ನಮ್ಮ ಮನಸ್ಸಿನ ಬೇಡಿಕೆಯೇ ಹೊರತು ಅದು ಭಗವಂತನ ಆಗ್ರಹವಲ್ಲ.  ಇನ್ನು ನಾವು ಮಾಡುವ ರುದ್ರಾಭಿಷೇಕವೂ ಅದು ಕೇವಲ ನಮ್ಮ ಬಯಕೆಯೇ ಹೊರತು ಭಗವಂತನ ಬಯಕೆ ಇಲ್ಲ. ದೇವರಿಗೆ ಇಷ್ಟಾನಿಷ್ಟಗಳು ಯಾವುದೂ ಇರುವುದಿಲ್ಲ. ಎಲ್ಲದರಿಂದಲೂ ಅತೀತನಾದವನು ಭಗವಂತ. ಆದರೂ ನಮ್ಮ ಮನಸ್ಸಿನ ಬಯಕೆಯಿಂದ ಎಲ್ಲವೂ ಆಗಿರುವ ಭಗವಂತನ ಆಗ್ರಹವನ್ನು ಬಯಸುವುದು ಸಹಜ. 

ಯಾವ ಧರ್ಮವೇ ಆದರೂ ಹೇಳುವುದು ಒಂದೇ, ನಾವು ಮನಸ್ಸಿನಿಂದ ಪರಿಶುದ್ದರಾಗಬೇಕು. ಮನಸ್ಸು ಪರಿಶುದ್ದವಾಗಬೇಕಾದರೆ ನಮ್ಮ ಪರಿಸರ, ನಮ್ಮ ಜೀವನ ಪರಿಶುದ್ದವಾಗಬೇಕು. ಈ ಭಾವನೆ ಇದ್ದರೆ ನಮ್ಮ ದೇವರು, ನಮ್ಮ ದೇವಾಲಯ, ನಮ್ಮ ನದಿ ಕಾಡು ಈ ಭೂಮಿ ಸ್ವಚ್ಚವಾಗಿರುತ್ತದೆ. ಅದಲ್ಲದೇ ಇದ್ದರೆ ದೇವರ ಹೆಸರಲ್ಲಿ ನಾವು ಮತ್ತಷ್ಟು ಪಾಪಗಳನ್ನು ಮಾಡುತ್ತಾ ಆ ಪಾಪದಿಂದ ಬಿಡುಗಡೆಯಾಗದೆ ಅತೃಪ್ತ ಆತ್ಮಗಳಂತೆ  ಅಲೆದಾಡುತ್ತಾ ಇರುತ್ತೇವೆ. 

Monday, April 27, 2026

"ಜನಿವಾರ ಬೇಕೋ? ಶಿಕ್ಷಣ ಬೇಕೋ?"

  "ಜನಿವಾರ ಬೇಕೋ?  ಶಿಕ್ಷಣ ಬೇಕೋ?"  ಎಂತಹ ಮೂರ್ಖತನದ ಅನಾಗರಿಕ ಪ್ರಶ್ನೆ ಇದು. ಯಾಕೆಂದರೆ ಶಿಕ್ಷಣ ಎಂದರೆ ಏನು ಎಂದು ತಿಳಿಯದ ಅವಿವೇಕಿ, ಆದರೂ ಪರವಾಗಿಲ್ಲ, ತಾವೊಬ್ಬರೇ ಮತಿವಂತರು ಎಂದು ತಿಳಿಯುವುದಿದೆಯಲ್ಲ,  ಅದು ಅತಿ ಮೂರ್ಖತನ. ವಾಸ್ತವದಲ್ಲಿ ಇವರಲ್ಲಿ ಅಜ್ಞಾನವೇ ತುಂಬಿರುತ್ತದೆ. ಎಲ್ಲೆಂದರಲ್ಲಿ ಬೆಳೆಯುವ ಕಳೆಗಿಡಕ್ಕೂ, ಹೂದೋಟದಲ್ಲಿ ರಮ್ಯವಾಗಿ ಬೆಳೆಸುವ ಹೂವಿನ ಗಿಡಕ್ಕೂ ವೆತ್ಯಾಸ ತಿಳಿದಿರಬೇಕು. ಹೂದೋಟದಲ್ಲಿ ಶಿಸ್ತಿನಲ್ಲಿ ಬೆಳೆದು,  ಪ್ರಕೃತಿಗೆ ಸೌಂದರ್ಯದ ಕೊಡುಗೆಯನ್ನು ಪರಿಸರವನ್ನು ಸಂರಕ್ಷಿಸುವುದಕ್ಕೂ...ಯಾವುದಕ್ಕೂ ಬೇಡದಾದ, ಮಾತ್ರವಲ್ಲ ತೊಂದರೆಯನ್ನು ಕೊಡುವ ಕಳೆಗಿಡಕ್ಕೂ ಹೋಲಿಕೆ ಸರಿಯೇ? ಒಂದು ಗಿಡ ಹೂದೋಟದಲ್ಲಿ ಬೆಳೆಯುತ್ತದೆ ಎಂದಾದರೆ ಅದಕ್ಕೆ ಹುಟ್ಟಿನಿಂದಲೇ ಸಿಗುವ ಶಿಕ್ಷಣ ಸಂಸ್ಕಾರ ಕಾರಣ. ಅದು ಪರಿಸರದ ಜತೆಗೆ ಬೆಳೆಯುತ್ತದೆ. ಇನ್ನೂ ಬೇಕು ಬೇಕು ಎಂದಾಗುವಾಗ ಅದು ತನ್ನ ಸಾರ್ಥಕ ಬದುಕನ್ನು ಪರಿಸಮಾಪ್ತಿಗೊಳಿಸುತ್ತದೆ. ಶಿಕ್ಷಣದ ನಿಜವಾದ ಅರ್ಥ  ಅದು. 


ಆದರೆ ಬದಲಾದ ಮನುಷ್ಯನ ಜೀವನ ವಿಧಾನದಲ್ಲಿ ಶಿಕ್ಷಣವೂ ಬದಲಾಗಿ ಹೋದದ್ದು ದುರಂತ. ಹಾಗಿದ್ದರೂ ಶಿಕ್ಷಣ ಎಂದರೆ ಜ್ಞಾನ.  ಜ್ಞಾನ ಎಂದರೆ ಕೇವಲ ಒಳ್ಳೆಯದು ಮಾತ್ರವಲ್ಲ. ಬೆಂಕಿಯನ್ನು ತಿಳಿದಂತೆ ನೀರನ್ನೂ ಸಹ ತಿಳಿಯಬೇಕು. ನೀರು ಅಂತ ಬೆಂಕಿಯನ್ನು ಸ್ಪರ್ಶಿಸುವುದಕ್ಕೆ ಹೋದರೆ ಸುಡದೆ ಇರುವುದಿಲ್ಲ.  ಇದುವೇ ಶಿಕ್ಷಣ. ಇದು ಕೆಟ್ಟದು ಇದು ಒಳ್ಳೆಯದು ಎಂದು ತಿಳಿಸುವುದೇ ಶಿಕ್ಷಣ. ಆದರೆ ಮೂರ್ಖರಿಗೆ ಇದರ ವೆತ್ಯಾಸವೇ ತಿಳಿಯದೇ ತಮ್ಮಲ್ಲಿರುವ ಕೆಟ್ಟದನ್ನೇ ಒಳ್ಳೆಯದು ಎಂಬ ಭ್ರಮೆಯಲ್ಲಿ ಮುಳುಗಿ ಬಿಡುತ್ತಾರೆ! ಮನುಷ್ಯ ಹುಟ್ಟಿನಿಂದ ಕಲಿಯುತ್ತಾ ಸಾಗುತ್ತಾನೆ. ತಾಯಿ ತಂದೆ ಎಂಬ ಅರಿವು. ಆ ಅರಿವಿನಲ್ಲೇ ಗುರು ಎಂಬ ಅರಿವು. ಅಲ್ಲಿಂದ ಪರಮಾತ್ಮನೆಂಬ ಅರಿವು, ಜತೆಗೆ ಬದುಕಿನ ಸಾರ್ಥಕತೆಯ ಅರಿವು.  ಆದರೆ ಇದೆಲ್ಲವನ್ನೂ ಕಂದಾಚಾರ ಎಂಬ ಭ್ರಮೆಯಲ್ಲಿ ಅಪ್ಪ ಅಮ್ಮ ಗುರು ಎಂಬ ಅರಿವೇ ಇಲ್ಲದೆ ಭ್ರಮಾಧೀನ ಬದುಕನ್ನೇ ಸರ್ವಸ್ವ ಎಂದು ತಿಳಿದು ಅದರಲ್ಲೇ ಮುಳಿಗಿರುವವರಿಗೆ ಈ ಶಿಕ್ಷಣ ಎಂಬುದರ ಮಹತ್ವವಾಗಲಿ ಅರ್ಥವಾಗಲೀ ತಿಳಿಯುವುದಕ್ಕೆ ಸಾಧ್ಯವಿಲ್ಲ. ಅವರ ಮಟ್ಟಿಗೆ ಯಾವುದೋ ವಿದೇಶದ ಯಾವುದೋ ಬಾಷೆಯ ಶಿಕ್ಷಣವೇ ಸರ್ವ ಶಿಕ್ಷಣ. 

ಜನಿವಾರ ಅಂದರೆ ಯಜ್ಞೋಪವಿತ, ಉಪವೀತ ಎಂದರೆ ಉಪವಸ್ತ್ರದಂತೆ. ಯಜ್ಞ ಎಂದರೆ ತನ್ನನ್ನು ಭಗವಂತನಿಗೆ ಅರ್ಪಿಸುವ ಕ್ರಿಯೆ. ಅದಕ್ಕೊಂದು ಸಂಕೇತವೇ ಯಜ್ಞೋಪವೀತ. ಅದನ್ನು ಧರಿಸುವುದೆಂದರೆ ವೇದಾಧ್ಯಾಯನಕ್ಕೆ ಮಾನಸಿಕವಾಗಿ ಪ್ರೌಢತೆಯಿಂದ  ಸಿದ್ದವಾಗುವುದು. ಆ ವಿಶ್ವಾಸವನ್ನು ಅವಹೇಳನ ಮಾಡುವುದೆಂದರೆ ಭಗವಂತನನ್ನು ಬ್ರಹ್ಮಜ್ಞಾನದ ಶಿಕ್ಷಣವನ್ನು ಅವಹೇಳಿಸಿದಂತೆ.  ಇಷ್ಟಕ್ಕೂ ಬ್ರಹ್ಮಜ್ಞಾನದ ಅರಿವಿಗೆ ಬ್ರಹ್ಮ ಎಂದರೇನು ಎಂಬ ಅರಿವಿರಬೇಕು. ಈ ಭೂಮಿ ಸೂರ್ಯ ಇವುಗಳೆಲ್ಲ ಆ ಪರಬ್ರಹ್ಮ ಕಲ್ಪನೆಯಲ್ಲಿ ನೆಲೆಯಾಗುತ್ತವೆ. ಭೂಮಿ ತನ್ನ ಕಕ್ಶೆಯಲ್ಲಿ ತಿರುಗುತ್ತದೆ, ಅದಕ್ಕೆ ಇರುವ ಆಧಾರ ಯಾವುದು? ನಮಗೆ ತಿಳಿಯದೇ ಇರುವ ನಮಗೆ ಕಾಣದೇ ಇರುವ ಒಂದು ಶಕ್ತಿಗೆ ನಾವು ಪರಬ್ರಹ್ಮ ಎಂದೇ ನಂಬುವುದು. ಒಂದು ಸುಮಧುರ ಸಂಗೀತವನ್ನು ಕಣ್ಣಿಗೆ ಕಾಣದೇ ಇದ್ದರೂ ಅದನ್ನು ಅನುಭವಿಸುತ್ತೇವೆ. ಅದರಂತೆ ಪರಬ್ರಹ್ಮ ಸ್ವರೂಪ ಎಂಬುದು ಆನುಭವ. ಅದರ ಹಾದಿಯಲ್ಲಿ ಸಾಗುವುದಕ್ಕಿರುವ ಶಿಕ್ಷಣ ಮತ್ತದರ ಬಂಧನವೇ ಜನಿವಾರ. ಪರಬ್ರಹ್ಮ ಸ್ವರೂಪವಾದ ರಾಮನನ್ನೇ ಅವಹೇಳನ ಮಾಡುವಾಗ ಇನ್ನು ಜನಿವಾರವನ್ನು ಅವಹೇಳನ ಮಾಡುವುದರಲ್ಲಿ ಅತಿಶಯವಿರುವುದಿಲ್ಲ. ಜನಿವಾರ ಬೇಕೋ ಶಿಕ್ಷಣ ಬೇಕೋ? ಎಂಬ ಪ್ರಶ್ನೆ ಎದುರಾಗುವಾಗ ಒಂದರೊಳಗೆ ಇನ್ನೊಂದು ಇದೆ ಎಂಬ ಅರಿವಿಲ್ಲದ ಮೂರ್ಖತನದ ಪ್ರಶ್ನೆ. 

ಮನುಷ್ಯ ಜನ್ಮದಿಂದ ಅಪ್ಪ ಅಮ್ಮ ಎಂಬ ಸಂಭಂಧದಿಂದಲೇ ತನ್ನ ಬದುಕಲ್ಲಿ ತೊಡಗುತ್ತಾನೆ. ಅಪ್ಪ ಅಮ್ಮ ಎಂಬ ಗೌರವ ಆತನಿಂದಲೇ ಆರಂಭವಾಗಬೇಕು. ಯಾಕೆಂದರೆ ಆತನ ಜನ್ಮದ ಅಸ್ತಿತ್ವಕ್ಕೆ ಅಪ್ಪ ಅಮ್ಮನೇ ಮೂಲ ಕಾರಣ. ಆ ಗೌರವ ಆತನಿಗಿಲ್ಲ ಎಂದರೆ ಹೊರಗಿನಿಂದ ಆ ಗೌರವ ಸಿಗುವುದಕ್ಕೆ ಸಾಧ್ಯವಿಲ್ಲ.  ನಮ್ಮ ಕಾರ್ಯಕ್ಕೆ ನಮ್ಮ ವ್ಯಕ್ತಿತ್ವಕ್ಕೆ ಮೊದಲು ನಮ್ಮ ಗೌರವ ಸಲ್ಲಬೇಕು. ಆ ಗೌರವದಿಂದಲೇ ಅದು ಅನುಸರಿಸಲ್ಪಡಬೇಕು. ಕೇವಲ ಅಪ್ಪ ಅಮ್ಮ ಆಗಿದ್ದಾರೆ ಎಂದು ಅವರನ್ನು ಗೌರವಿಸುವುದಲ್ಲ.  ಅದು ಮಾನಸಿಕ ಸ್ವಭಾವವಾಗಬೇಕು. ಹೊರತು ಕಟ್ಟು ಪಾಡಿಗೆ ಸಿಲುಕಿಕೊಂಡರೆ ಅನಿವಾರ್ಯ ಬಂಧನವಾಗಿ ನಡುವೇ ತಿರಸ್ಕಾರವೂ ಮೂಡಿಬರಬಹುದು.  ಯಜ್ಞೋಪವೀತ ಅಥವಾ ಜನಿವಾರ ಜತೆಗೆ ಬ್ರಾಹ್ಮಣ್ಯ ಇವುಗಳೆಲ್ಲ ಅನಿವಾರ್ಯ ಕಟ್ಟುಪಾಡು ಆಗಬಾರದು. ಅದು ಮಾನಸಿಕ ಸ್ವಭಾವವಾಗಬೇಕು. ಮಾವಿನ ಮರದಲ್ಲಿ ಮಾವು ಮಾತ್ರವೇ ಅದಂತೆ ಅದು ಜನ್ಮ ಜಾತವಾಗಬೇಕು. ಜನಿವಾರದ ಬಗ್ಗೆ ಅಪಸ್ವರ  ಕೇಳುವಾಗ ನಾವು ವ್ಯಗ್ರರಾಗುವ ಮೊದಲು ನಾವೆಷ್ಟು ಅದಕ್ಕೆ ಗೌರವ ಸಲ್ಲಿಸುತ್ತಿದ್ದೇವೆ ಎಂಬ ಆತ್ಮವಂಚನೆ ಇಲ್ಲದ ಪ್ರಶ್ನೆ ಮತ್ತು ಉತ್ತರ ಕಂಡುಕೊಳ್ಳಬೇಕು. ನಮ್ಮ ಜನಿವಾರಕ್ಕೆ ನಾವೇ ಗೌರವ ಕೊಡದೇ ಇದ್ದರೆ ಊರವರಿಂದ ಅದನ್ನು ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ. 

ಮನೆಯಿಂದ ಹೊರಡುವಾಗ ಹಣೆಯ ತಿಲಕವನ್ನು ಅಳಿಸಿ ಹೋಗುವವರನ್ನು ನೋಡಿದ್ದೇನೆ. ತಿಲಕವಿದ್ದ ಮುಖ ಹೊರಗೆ ತೋರಿಸುವುದಕ್ಕೂ ಹಿಂಜರಿಕೆ. ಇನ್ನು ವಾರಾಂತ್ಯದ ಪಾರ್ಟಿಗೆ ಜನಿವಾರ ಮನೆಯ ಗೋಡೆಗೆ ನೇತು ಹಾಕಿ ಹೋಗುವವರಿದ್ದಾರೆ. ಆ ರೀತಿಯ ಪ್ರವೃತ್ತಿಗೆ ಎಲ್ಲಿಂದ ಪ್ರಚೋದನೆ ಲಭ್ಯವಾಗುತ್ತದೆ? ಯಾರು ಹೇಳಿಕೊಡುತ್ತಾರೆ? ಇನ್ನು ಸಂಧ್ಯಾವಂದನೆಯಾಗಲಿ ಪಿತೃಕ್ರಿಯೆ ಅಥವಾ ಇನ್ನಿತರ ಸಂಸ್ಕಾರಗಳನ್ನು ನಿಷ್ಠೆಯಿಂದ ಎಲ್ಲರೂ ಪಾಲಿಸುವುದಿಲ್ಲ. ಹೇಗಿದ್ದರೂ ಆಗುತ್ತದೆ. ಬೆಳಗೂ ರಾತ್ರಿಯೂ ಆಗಿ ದಿನ ಸಂದು ಹೋಗುತ್ತದೆ ಎಂಬ ಅಸಡ್ಡೆಯಿರುತ್ತದೆ. ಮೊದಲಿನಂತೆ ಬ್ರಾಹ್ಮಣ ಮನೆಯಲ್ಲೇ ಇರುವುದಿಲ್ಲ. ತನ್ನ ಮನೆ ಕುಟುಂಬವನ್ನು ಬಿಟ್ಟು ಜೀವನ ನಿರ್ವಹಣೆಗೋಸ್ಕರ ಯಾವುದೋ ವೃತ್ತಿಯಲ್ಲಿ ತೊಡಗಿಕೊಂಡ ಹಲವರು ಬ್ರಾಹ್ಮಣರಾಗಿ ಮಾತ್ರವಲ್ಲ ಬ್ರಾಹ್ಮಣ ವೇಷವನ್ನೂ ಧರಿಸುವುದಿಲ್ಲ. ಅದು ಅನಿವಾರ್ಯ ಅಂತ ಅನಿಸುವುದೇ ಇಲ್ಲ. ಇನ್ನು ಸಂಧ್ಯಾವಂದನೆ ಮಾಡಿದರೂ ಮೂರು ಹೊತ್ತು ಬಿಡಿ ಎರಡು ಹೊತ್ತು ಮಾಡುವವರು ಇಲ್ಲ. ಒಂದೇ ಹೊತ್ತು  ಮಾಡಿದರೂ ಅದರ ಮೇಲೆ ಶ್ರಧ್ದೆ ಇರುವುದಿಲ್ಲ. ಯಾವುದೋ ಕಾಟಾಚಾರಕ್ಕೆ ಒಂದಷ್ಟು ಹೊತ್ತು ಮುಗಿಸಿಬಿಡುವುದನ್ನು ನೋಡಿದ್ದೇನೆ. ಸಂಧ್ಯಾವಂದನೆಯ ಉದ್ದೇಶವೇ ತಿಳಿಯದೆ ಇರುವಾಗ ಅದರ ಬಗ್ಗೆ ಸ್ವ ಗೌರವ ಹುಟ್ಟುವುದಿಲ್ಲ. 

ಸಾಮಾನ್ಯವಾಗಿ ಎರಡು ಹೊತ್ತು ನಾನು ಸಂಧ್ಯಾವಂದನೆ ಕಟ್ಟುನಿಟ್ಟಾಗಿ ಮಾಡಿಬಿಡುತ್ತೇನೆ. ಮನೆಯಲ್ಲಿದ್ದರೆ ಅದು ಹೊತ್ತಿಗೆ ಸರಿಯಾಗಿ ಮಾಡಿದರೂ ಹಲವು ಸಲ ಕೆಲಸದ ಒತ್ತಡದಿಂದ ವೆತ್ಯಾಸವಾಗುವುದಿದೆ. ಅದು ಅಪರೂಪ. ಹೊರಗೆ ಹೋದಾಗಲೂ ಅದಕ್ಕೆ ಆದಷ್ಟು ಅನುಕೂಲವಾಗುವಂತೆ ನೋಡಿಕೊಳ್ಳುತ್ತೇನೆ. ಕೆಲವೊಮ್ಮೆ ಇದೂ ಸಾಧ್ಯವಾಗುವುದಿಲ್ಲ. ಆಗ ಅನುಭವಿಸುವ ಮಾನಸಿಕ ಹಿಂಸೆ ಒಂದು ರೀತಿಯದಾಗಿರುತ್ತದೆ. ಯಾಕೆಂದರೆ ಹಲವು ಸಲ ಪರಿಸರವೇ ಅದಕ್ಕೆ ವಿರುದ್ಧವಾಗಿರುತ್ತದೆ.  ಒಂದು ಸಲ ಯಾವುದೋ ಮದುವೆ ಕಾರ್ಯಕ್ರಮಕ್ಕೆ ಹೋದಾಗ ಮದುವೆ ಮನೆಯಲ್ಲಿ ಎಂದಿನಂತೆ ಸಾಯಂಕಾಲ ಸಂಧ್ಯಾವಂದನೆಗೆ ಅಣಿಯಾದೆ. ಆಗ ಬ್ರಾಹ್ಮಣರೆ ವಿಚಿತ್ರವಾಗಿ ನೋಡಿದ ಅನುಭವವಿದೆ. ಇದೆಲ್ಲ ಮನೆಯಲ್ಲಿ ಮಾತ್ರ ಇಟ್ಟುಕೊಂಡರೆ ಸಾಕಲ್ಲವಾ ಎಂಬ ಭಾವ. ಪರಿಸರ ಹೀಗಿರುವಾಗ ನಮಗೆ ಎದುರಾಗುವ  ಪ್ರಶ್ನೆಗಳಲ್ಲಿ ಇದೂ ಒಂದು ಜನಿವಾರ ಬೇಕೋ?  ಶಿಕ್ಷಣ ಬೇಕೋ? . ಇದನ್ನು ನಾವು ಅನಿವಾರ್ಯವಾಗಿ ಎದುರಿಸಲೇಬೇಕು. ಒಂದು ರೀತಿಯಲ್ಲಿ ಕೇಳಿ ಬೇಡಿಕೆ ಸಲ್ಲಿಸಿ ತರಿಸಿಕೊಂಡಂತೆ. 

ಹಾಗಾಗಿ   ನಮ್ಮ ತನವನ್ನು ಮೊದಲು  ನಾವು ಗೌರವಿಸಿ ಅನುಸರಿಸಿ ಉಳಿಸಿಕೊಳ್ಳಬೇಕು. ನಮ್ಮ ಅನುಸರಣೆಯಲ್ಲಿ ಉಳಿದವರಿಗೆ ಗೌರವ ಬರುವಂತೆ ಮಾಡಬೇಕು. ಊರೆಷ್ಟೇ ತೆಗಳಲಿ, ಅವಹೇಳನ ಮಾಡಲಿ ನಮ ಆತ್ಮ ಗೌರವ ಉಳಿದವರ ಹೇಳಿಕೆ ಅಭಿಪ್ರಾಯದಲ್ಲಿ ಬದಲಾಗಬಾರದು. ಯಾರೋ ಹೇಳಿದಂತೆ ನಾವು ನಡೆಯುವುದಾದರೆ ಜನ್ಮದಿಂದ ಬರುವ ಸಂಸ್ಕಾರ ಅಪ್ಪ ಅಮ್ಮ ಎಂಬ ಭಾವವನ್ನು ನಾವೇ ಬಲಿಕೊಟ್ಟಂತೆ. ಯಾರು ಏನೇ ಹೇಳಲಿ ನಮ್ಮ ಧರ್ಮವನ್ನು ನಮ್ಮ ಸಂಸ್ಕಾರವನ್ನು ಅನುಸರಿಸುವುದಕ್ಕೆ ನಮ್ಮ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಯಾರ ಅವಹೇಳನಕ್ಕೆ ಭರ್ತ್ಸನೆಗೆ ಹೆದರಿ ಅಥವಾ ನಾಜಿಕೆ ಪಟ್ಟು ಅದನ್ನು ಅನುಸರಿಸದೆ ಇರುವುದರಲ್ಲಿ ಅರ್ಥವಿಲ್ಲ. ಮಾನಸಿಕವಾಗಿ ಕಟ್ಟು ನಿಟ್ಟಿನಿಂದ ಅದನ್ನು ಅನುಸರಿಸಿಕೊಂಡರೆ ಇಂತಹ ಮೂರ್ಖತನದ ಪ್ರಶ್ನೆಗಳಿಗೆ ಉತ್ತರ ಹೇಳುವ ಆತ್ಮ ಬಲವಾದರೂ ನಮಗೆ ಒದಗಿ ಬರುತ್ತದೆ. 

Saturday, April 18, 2026

ತತ್ವಮಸಿ ಸ್ವಾಮಿಯೇ ಶರಣಂ ಅಯ್ಯಪ್ಪ

ತತ್ವಮಸಿ ಎಂಬುದು  ಉಪನಿಷತ್ ನಲ್ಲಿ ಬರುವ ವಾಕ್ಯ.  ಇದು  ಭಗವದ್ಗೀತೆಯಲ್ಲಿಯೂ  ಹೇಳಿರುವ ಒಂದು ಮಾತು. ಭಗವಂತ ಸ್ವರೂಪವನ್ನು ಎಲ್ಲವೂ ನೀನೆ ಎಂದು ತಿಳಿಯುವುದೇ ತತ್ವಮಸಿ. ಶಬರಿಮಲೆ ದರ್ಶನ ಮಾಡಿದರೆ ಅಲ್ಲಿ ಸನ್ನಿಧಾನದ ತುತ್ತ ತುದಿಯಲ್ಲಿ ಬರೆದಿರುವುದನ್ನು ಕಾಣಬಹುದು. ಅಲ್ಲಿಗೆ ಯಾತ್ರಾರ್ಥಿಗಳಾಗಿ ಭಕ್ತಿ ವಿಶ್ವಾಸದಿಂದ ಹೋದವರಿಗೆ ಈ ತತ್ವ ಮಸಿಯ ತಾತ್ಪರ್ಯ ಎಷ್ಟು ಅರ್ಥವಾಗುತ್ತದೋ ಗೊತ್ತಿಲ್ಲ, ಆದರೆ ಅವರು ನಡೆದು ಕೊಂಡು ಬಂದ ದಾರಿ, ಇಟ್ಟ ಹೆಜ್ಜೆ ಅದರ ಹಿಂದಿರುವ ವಿಶ್ವಾಸ ಈ ತತ್ವಮಸಿಯನ್ನೇ ಹೇಳುತ್ತದೆ. ಭಗವಂತ ಎಲ್ಲವೂ ನೀನೆ. ನೀನಲ್ಲದೆ ಬೇರೆ ಏನೂ ಇಲ್ಲ.  ಒಂದೆರಡು ಅಕ್ಷರಗಳ ಎಂತಹ ಭಾವನಾತ್ಮಕ ವಾಕ್ಯ?  ನಾನು ಮೊನ್ನೆ ಶಬರಿ ಮಲೆಗೆ ಹೋಗಿ ಇರುಮುಡಿಯ ಮರೆಯಲ್ಲಿ ನೋಡಿದೆ ಅದೇ ತತ್ವ ಮಸಿ. ಅದುವರೆಗೆ ಬಂದ ಹಾದಿಯ ಆಯಾಸ ಉದ್ದೇಶ ಎಲ್ಲವೂ ಫಲಪ್ರದವಾಗುವುದು ಯಾಕೆ ಎಂಬುದು ಈ ಒಂದು ಶಬ್ದದಿಂದ ಅರ್ಥವಾಗಿಬಿಡುತ್ತದೆ. ನನ್ನ ಆತ್ಮವೇ ನೀನು ಅಂದರೆ ಭಗವಂತ, ಬ್ರಹ್ಮ ಆಗಿರುವೆ ಎಂಬುದು ಸಾರಾಂಶ. ಇಲ್ಲಿ ಸರ್ವಸ್ವ ಎಂದರೆ ತುಂಬ ಸರಳ.


ಕೆಲವೆಲ್ಲ ತತ್ವಗಳು ನಮಗೆ ಅರ್ಥವಾಗುವಷ್ಟು ಜ್ಞಾನಿಗಳಾಗಿರುವುದಿಲ್ಲ. ಆದರೆ ನಮ್ಮ ಕೃತಿ ಅದೇ ಆಗಿರುತ್ತದೆ. ಹಲವು ಸಲ ಹರಿಯುವ ನದಿಗೆ  ತಾನು ಎಲ್ಲಿಗೆ ಸಂಚರಿಸುತ್ತೇನೆ, ನನ್ನ ಗಮನ ಯಾವುದು? ಎಂದು ತಿಳಿದಿರುತ್ತದೋ ಇಲ್ಲವೋ, ಆದರೂ ಅದು ಸಮುದ್ರದ ಕಡೆಗೆ ಹರಿಯುವಂತೆ, ನಮ್ಮ   ಪಯಣವೂ ನಮಗೆ ತಿಳಿಯದೆ  ಒಂದು ಗುರಿಯತ್ತ ಸರಿಯುತ್ತಲೇ ಇರುತ್ತದೆ. ನಮ್ಮ ಸನಾತನ ಧರ್ಮದ ತಳಹದಿಯೇ ಇದು.  ಹುಟ್ಟಿದ ಕೂಡಲೇ ನನ್ನ ಉಸಿರು ಅಂತ ಉಸಿರಾಡಿ, ನನ್ನ ಹಸಿವು..ಎಂದು ಅತ್ತು ಕರೆದಾಗ ಎದೆ ಹಾಲು ಕೊಟ್ಟ ಅಮ್ಮನನ್ನು ನನ್ನ ಅಮ್ಮ ಎಂದು ಒಪ್ಪಿಕೊಳ್ಳುವ ವಿಶ್ವಾಸ ಬೆಳೆದು ಬರುತ್ತಾ ಈ ನಾನು ನನ್ನದು ಎಂಬುದರ ವಿಸ್ತಾರ ದೊಡ್ಡದಾಗುತ್ತ ಹೋಗುತ್ತದೆ. ನನ್ನ ಅಮ್ಮ ನನ್ನ ಅಪ್ಪ, ನನ್ನ ಬಳಗ, ನನ್ನ ಮನೆ ನನ್ನ ಊರು ನನ್ನ ಸಂಪತ್ತು ಧನ ಕನಕ...ಎಲ್ಲವೂ ನನ್ನದು ಎಂಬ ವ್ಯಾಪ್ತಿಯಲ್ಲಿ ಬದುಕು ಹುದುಗಿ ಹೋಗುತ್ತದೆ. ಈ ನಾನು ನನ್ನದು ಎಂಬ ಭೂಮಿಯ ಮೇಲಿನ ಸಂಬಂಧದ ಪರಿಧಿ ಅರಿವಾಗುವಾಗ ಈ ತತ್ವ ಮಸಿಯ ಜ್ಞಾನ ಅರಿವಾಗುತ್ತದೆ. ಆನಂತರ ನಾನು ನನ್ನದು ಎಂಬುದು ಇರುವುದಿಲ್ಲ. ಶಬರಿಮಲೆಯ ಯಾತ್ರೆ ಈ ಜ್ಞಾನವನ್ನು ಕೃತಿಯ ಮೂಲಕ ಬೋಧಿಸುತ್ತದೆ. ಬಹುಶ ಜಗತ್ತಿನಲ್ಲಿ ಯಾವ ಧರ್ಮವೂ ಬೋಧಿಸಲಾಗದ ತತ್ವವನ್ನು ಇಷ್ಟು ಸುಲಭವಾಗಿ ಸರಳವಾಗಿ ತೀರಾ ಪಾಮರ ಅಜ್ಞಾನಿಗೂ ತಿಳಿಸುವಂತೆ  ಶಬರಿಮಲೆ ಯಾತರೆ ಮಾಡಿಬಿಡುತ್ತದೆ. ಅಲ್ಲಿ ದೇಹದ ಕಾಮನೆ ಇರುವುದಿಲ್ಲ. ಹಸಿವು ನೀರಡಿಕೆ ಮುಖ್ಯವಾಗುವುದಿಲ್ಲ. ನಿದ್ರೆಯಲ್ಲೂ ಎದೆ ಬಡಿದುಕೊಳ್ಳುತ್ತದೆ ಶರಣಂ ಅಯ್ಯಪ್ಪ. ಅಯ್ಯ ಎಂದರೆ, ಒಡೆಯ. ಅಪ್ಪ ಎಂದರೂ ಅದುವೇ ಎಲ್ಲವೂ ನೀನಾಗುವ ಈ ಅಯ್ಯಪ್ಪ ಶಬ್ದದ ಕಾಂತಿಯ ತುಡಿತ ಇರುತ್ತದಲ್ಲ ಆ ಧ್ವನಿ ಕೇವಲ ಬಾಯಿಯಿಂದ ಉದ್ಗರಿಸಲ್ಪಡುವುದಿಲ್ಲ. ಅದು ಹೃದಯದಿಂದ ಹೊರಬರುತ್ತದೆ. ಎಷ್ಟು ಸಲ ಹೇಳಿದರೂ...ಕಡಿಮೆಯಾಯಿತೆ ಎಂಬ ಭಾವ, ಒಂದು ಸಲ ಹೇಳುವ ನಿರ್ಧಾರವಿದ್ದರೆ ಅಲ್ಲಿ ಹಲವು ಬಾರಿಯ ಉದ್ಗಾರವಿರುತ್ತದೆ. ಶರಣಂ ಅಯ್ಯಪ್ಪ. ಇದನ್ನು ತಿಳಿಯಬೇಕಾದರೆ ಒಂದು ಸಲ ಮಾಲೆ ಹಾಕಿ ಇರುಮುಡಿ ಹೊತ್ತು ವೃತನಿಷ್ಠರಾಗಿ ಮಲೆ ಏರಿದರೆ ಸಾಕು ಬುದ್ದನಿಗೆ ಜ್ಞಾನೋದಯವಾದಂತೆ ಬದುಕಿನ ಜ್ಞಾನ ಅರಿವಾಗಿ ಜ್ಞಾನೋದಯವಾಗುತ್ತದೆ.  


ದೊಡ್ಡ ಗ್ರಂಥಗಳನ್ನು ವೇದ ಉಪನಿಷತ್ ಗಳನ್ನು ಓದಿಯೂ ಗಳಿಸಲಾಗದ ಜ್ಞಾನವನ್ನು ಕೃತಿಯಿಂದ ನಮ್ಮ ಕರ್ಮದಿಂದ ತಿಳಿಯ ಪಡಿಸುವುದೆ ಶಬರಿಮಲೆಯ ಯಾತ್ರೆಯ ಉದ್ದೇಶ. ಯಾವುದೇ ಜ್ಞಾನ ಇಲ್ಲದಿದ್ದರೂ ಇಲ್ಲಿ ಒದಗಿಬರುವ ಪಾರಮಾರ್ಥಿಕ ಅರಿವು ತುಂಬ ಸರಳವಾದರೂ ಬದುಕಿನ ಮರ್ಮವನ್ನು ಹೇಳಿಬಿಡುತ್ತದೆ. 

ಇಪ್ಪತ್ತು ವರುಷಗಳ ಹಿಂದೆ ಶಬರಿ ಮಲೆಗೆ ಹೋಗಿದ್ದೆ. ಆನಂತರ ಹಲವು ಸಲ ಹೋಗಬೇಕು ಎಂದುಕೊಂಡರು ಯಾಕೋ ಒದಗಿಬರುವುದಿಲ್ಲ. ಶಬರಿ ಮಲೆಗೆ ಹೋಗುವುದೆಂದರೆ ಹಾಗೆ ಅಲ್ಲಿ ನಿರ್ಧಾರ ಮಾತ್ರ ನಿಮ್ಮದಾಗಬಹುದು, ಆದರೆ ಆನಂತರ ಅದು ದೈವೇಚ್ಛೆಯಾಗಿಬಿಡುತ್ತದೆ. ಆತ ಕರೆದರೆ ಮಾತ್ರ ನಿಮಗೆ ಎಲ್ಲವೂ ಒದಗಿಬರುತ್ತದೆ. ಏನು ವಿಘ್ನ ಬಂದರು ನೀವು ಶಬರಿಮಲೆ ಮೆಟ್ಟಲು ಏರಬಹುದು. ಇಲ್ಲವಾದರೆ ಎಷ್ಟು ಪ್ರಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ. ಶ್ರೀಮಂತಿಗೆ ದೇಹಬಲ ಧನಬಲ ಯಾವುದೂ ಮುಖ್ಯವಾಗುವುದಿಲ್ಲ. ನನಗೂ ಅದೇ ಬಗೆಯ ಅನುಭವ. ಹಲವರಲ್ಲಿ ಕೇಳಿದರೂ ಇದೇ ಅನುಭವ. 

ನನ ಪತ್ನಿ ವಿಪರೀತ ಕಾಲು ನೋವಿನಲ್ಲಿ


ಕಣ್ಣೀರು ಹಾಕುವಾಗ, ಹಲವು ಚಿಕಿತ್ಸೆಗಳನ್ನು ಮಾಡಿದೆ. ಚಿಕಿತ್ಸೆ ಮಾಡುವುದು ನಮ್ಮ ಕರ್ಮ. ಆದರೆ ಅದು ಅಂತಿಮ ಪರಿಹಾರವಲ್ಲ. ಅಲ್ಲಿ ದೈವಾನುಗ್ರವೂ ಇರಬೇಕಾಗುತ್ತದೆ. ಯಾವುದೂ ಇಲ್ಲ ಎಂದನಿಸುವಾಗ ನಾನು ಹೆಂಡತಿಯಲ್ಲಿ ಹೇಳಿದೆ, ಕಾಲು ನೋವು ಗುಣವಾದರೆ ನಿನ್ನನ್ನು ಕರೆದುಕೊಂಡು ಶಬರಿಮಲೆಗೆ ಹೋಗುತ್ತೇನೆ. ಆ ಪ್ರಚೋದನೆ ಎಲ್ಲಿಂದ ಬಂತೋ ಹೇಗೆ ಬಂತೋ ಗೊತ್ತಿಲ್ಲ. ಅಂತು ಮನದಾಳದಿಂದ ಹೇಳೀದೆ. ಆ ಸಂಕಲ್ಪ ಎಷ್ಟು ನೆರವೇರಿಸಬಲ್ಲೇ ಎಂಬುದೇ ನನಗೆ ತಿಳಿದಿಲ್ಲ. ನಾನೇನು ತಿಳಿದರೂ ಅದು ನನ್ನದಲ್ಲ. ಆ ಶಕ್ತಿ ಏನು ಹೇಳಿಸುತ್ತದೋ ಏನು ಮಾಡಿಸುತ್ತದೋ ಅದೇ ಅಂತಿಮ. ಕೊನೆಗೂ ನನ್ನ ಸಂಕಲ್ಪ ಭಗವಂತ ಇಡೇರಿಸಿಕೊಂಡು ಬಿಟ್ಟ.ಅಲ್ಲಿಗೆ ನನ್ನಲ್ಲಿ ಧನ್ಯತೆ ಇದೆ. 

ಮೊನ್ನೆ ವಿಷು ಸಂಕ್ರಮಣಕ್ಕೆ ಹೊರಡುವುದಕ್ಕೆ ತಿಂಗಳ ಮೊದಲೇ ನಿರ್ಧರಿಸಿ ಬೆಂಗಳೂರಿನ ಜಾಲಹಳ್ಳಿಯ ಅಯ್ಯಪ್ಪ ಟೂರ್ಸ್ ಎಂಡ್ ಟ್ರಾವೆಲ್ಸ್ ನ್ನು ಸಂಪರ್ಕಿಸಿದೆ. ಮಿತ್ರರಾರ ನಿಡುವಜೆ ಗೋಪಾಲಕೃಷ್ಣ ಭಟ್ ವಿವರವನ್ನು ನೀಡಿ ಸಹಕರಿಸಿದ್ದರು. ಮುಂಗಡ ಕೊಟ್ಟು ಆಸನವನ್ನು ಕಾದಿರಿಸಿದರೂ ಹೋಗುವ ತೀರ್ಮಾನ ನಮ್ಮದಲ್ಲ. ಅದು ಭಗವಂತನದ್ದು. ಅಲ್ಲಿಂದಲೇ ತತ್ವಮಸಿಯ ತತ್ವ ಮನದಟ್ಟಾಗಿಬಿಡುತ್ತದೆ.

ಮೊನ್ನೆ ಒಂದು ವೋಲ್ಬೋ ಬಸ್ ನಲ್ಲಿ
ನಲ್ವತ್ತಕ್ಕೂ ಅಧಿಕ ಜನ ಮಾಲೆ ಧರಿಸಿ ಇರುಮುಡಿ ಹೊತ್ತು ಬಂದಿದ್ದರು. ಹೆಚ್ಚಿನವರೆಲ್ಲರೂ ವಯೋ ವೃದ್ದರು. ಅದರಲ್ಲು ಮಹಿಳೆಯರೆ ಅಧಿಕ. ಒಬ್ಬೊಬ್ಬರದು ಒಂದೊಂದು ಕಥೆ. ಅಷ್ಟೂ ಜನರಿಗೂ ಒಳ್ಳೆಯ ವ್ಯವಸ್ಥೆಯನ್ನು ಟ್ರಾವೆಲ್ಸ್ ಸಂಸ್ಥೆ ಮಾಡಿತ್ತು. ಇರುಮುಡಿ ಕಟ್ಟುವಲ್ಲಿಂದ ತೊಡಗಿ ಯಾತ್ರ ನಡುವೆ ಊಟ ಆಹಾರ ಎಲ್ಲವೂ ಉತ್ತಮವಾಗಿತ್ತು. ಈ ಯಾತ್ರೆಯಲ್ಲಿ ಬಹಳ ಅನುಭವ ಇದ್ದ ಸಂಸ್ಥೆ ಇದು. ಎಲ್ಲಿ ಇಳಿಯಬೇಕು? ಎಲ್ಲಿ ಉಳಿಯಬೇಕು?  ಇದೆಲ್ಲದಕ್ಕೂ ಒಂದು ಖಚಿತವಾದ ಯೋಜನೆ ಇತ್ತು. ಸಾವಿರದ ಐನೂರು ಕಿಲೋ ಮೀಟರ್ ಮಾತ್ರವಲ್ಲ ಮೂರು ದಿನದ ದೀರ್ಘವಾದ ಯಾತ್ರೆ. ನಾವು ಮನೆಯ ಒಂದಿಬ್ಬರೂ ಹೋದರೂ ಯಾತ್ರೆಯಲ್ಲಿಅದು ಇದು ಅಂತ ಅಸೌಕರ್ಯ ಅಡಚಣೆಗಳು ಸಾಮಾನ್ಯ. ಇಷ್ಟು ಜನರನ್ನು ಕರೆದುಕೊಂಡು ಸಮರ್ಥರೀತಿಯ ವ್ಯವಸ್ಥೆ ಮಾಡುವುದು ಸುಲಭದ ವಿಷಯವಲ್ಲ. ಆದರೂ ಕೆಲವೆಲ್ಲ ಸಣ್ಣ ಪುಟ್ಟ ತೊಂದರೆಗಳೂ ಇದ್ದರೂ ಅದು ತೀರ ಕಡೆಗಣಿಸಲ್ಪಡುವ ವಿಚಾರಗಳು. ಒಳ್ಳೆಯ ಯಾತ್ರೆ ಒಳ್ಳೆಯ ದರ್ಶನ ಮಾಡಿದ ತೃಪ್ತಿಕೊನೆಗೂ ಲಭ್ಯವಾಗಿದೆ ಎಂಬುದು ಮುಖ್ಯ. 

ಇಲ್ಲಿಂದ ಹೊರಟು ಗುರುವಾಯೂರು, ಆನಂತರ ಚೋಟಾನಿಕ್ಕರ ದೇವಿ ಕ್ಷೇತ್ರ ನಂತರ ಏಟ್ಟುಮಾನ್ನೂರು ಶಿವ ಕ್ಷೇತ್ರ ಅಲ್ಲಿಂದ ನಿಲಕ್ಕಲ್ ಪಂಬ ಶಬರಿ ಮಲ. ಅಲ್ಲಿಂದ ಹಿಂತಿರುಗಿ, ತಮಿಳು ನಾಡಿನ ತ್ರಿಪುರ ಕುಂಡ್ರಮ್ ಸುಬ್ರಹ್ಮಣ್ಯ ಕ್ಷೇತ್ರ, ಮಧುರೆ ಮೀನಾಕ್ಷಿ ದೇವಾಲಯ, ಕೊನೆಗೆ ಪಳನಿ ದರ್ಶನ ಮುಗಿಸಿ ಬೆಂಗಳೂರಿಗೆ.ಇಷ್ಟು ದೀರ್ಘಯಾತ್ರೆ ಮೂರು ದಿನದಲ್ಲಿ ಮುಗಿಸಿದ್ದು ದೇಹಾಯಸಕ್ಕೆ ಬಹಳಷ್ಟು ಕಾರಣವಾಯಿತು. ಒಂದು ಕಡೆಯಲ್ಲಿ ಕೆಲವು ಘಂಟೆಯ ವಿಶ್ರಾಂತಿ ಬಿಟ್ಟರೆ ಮತ್ತೆಲ್ಲವು ಪ್ರಯಾಣದಲ್ಲೇ  ಕಳೆದು ಹೋಯಿತು. ಎಲ್ಲ ಕಡೆಯಲ್ಲೂ ಊಟ ಉಪಚಾರ ಚೆನ್ನಾಗಿ ವ್ಯವಸ್ಥೆ ಮಾಡಿದ್ದರು. ಮುಖ್ಯವಾಗಿ ಅಡುಗೆ ಅನಿಲ ಸಮಸ್ಯೆಯಿಂದ ಹಲವಾರು ಹೋಟೇಲ್ ಗಳು ಮುಚ್ಚಿದ್ದವು. ಹಾಗಿ ಬಹಳ ಪರಿಶ್ರಮ ಪಟ್ಟು ಅನ್ನಾಹಾರದ ವ್ಯವಸ್ಥೆ ಮಾಡಿದ್ದರು. ಅದು ಬಹಳ ಉತ್ತಮವಾಗಿತ್ತು. 

ಎಟ್ಟುಮಾನ್ನೂರು ಮಹಾದೇವ ಕ್ಷೇತ್ರದ ಪ್ರಶಾಂತತೆ ಬಹಳ ಇಷ್ಟವಾಯಿತು.  ಸಾಕಷ್ಟು ಜನಸಂಖ್ಯೆ ಇದ್ದರೂ ಸಾಯಂಕಾಲದ ಹೊತ್ತಿನ ಇಲ್ಲಿನ ವಾತಾವರಣ ಅದ್ಭುತವಾಗಿತ್ತು. ನಮ್ಮ ಕೇರಳ ಶೈಲಿಯಾ ಆರಾಧನ ಕ್ರಮದಂತೆ ಬಾಗಿಲು ಮುಚ್ಚಿ ಮಂಗಳಾರತಿಯಾಗುವಾಗ ಬಾಗಿಲು ತೆರೆದು ದೇವರ ದರ್ಶನವಾಗುವಾಗ ಒಂದು ಅದ್ಭುತ ಭಕ್ತಿಯ ಪ್ರಚೋದನೆಯಾಗುತ್ತದೆ. 

ಈ ಪ್ರಯಾಣದ ಮುಖ್ಯ ಉದ್ದೇಶವೆಂದರೆ ಶಬರಿಮಲೆ ಅರೋಹಣ. ತಲೆಯಲ್ಲಿ ಇರುಮುಡಿ ಕಟ್ಟಿಕೊಂಡು ಮುಂಜಾನೆ ಐದು ಘಂಟೆಗೆ ನಾನು ನನ್ನ ಪತ್ನಿ ಜತೆಯಲ್ಲಿ ನನ್ನ ಎರಡನೆ ಮಗ ಎಲ್ಲರೊಂದಿಗೆ ಮಲೆ ಹತ್ತುವುದಕ್ಕೆ ಆರಂಭಿಸಿದೆವು.  ಕೆಲವುಕಡೆ ಮೆಟ್ಟಲು ಕೆಲವು ಕಡೆ ಇಳಿಜಾರು ರಸ್ತೆ ತಲೆ ಎತ್ತಿ ನೋಡಲಾಗದಷ್ಟು ಎತ್ತರದ ಬೆಟ್ಟ  ಒಂದೊಂದೆ ಹೆಜ್ಜೆಇಡುತ್ತಾ ಆಗಾಗ ಏದುಸಿರಿನೊಂದಿಗೆ  ಶರಣಂ ಅಯ್ಯಪ್ಪ ಎಂದು ಶರಣು ಕರೆಯುತ್ತಾ ಹೋಗುತ್ತಿದ್ದರೆ ಆಯಾಸ ಎನಿಸಿದರೂ ಅದರಲ್ಲೊಂದು ಸುಖ. ಏಳು ಘಂಟೆಯಷ್ಟು ಹೊತ್ತಿಗೆ ಮೇಲೆ ತಲುಪಿ ಇರುಮುಡಿ ಭಕ್ತರಿಗೆ ಮೀಸಲಾದ ಸರದಿಯಲ್ಲಿ ಸುಮಾರು ಒಂದುವರೆ ತಾಸು ನಿಲ್ಲಬೇಕಾಯಿತು. ಎರಡು ದಿನ ರಾತ್ರಿ ಸರಿಯಾಗಿ ನಿದ್ರೆ ಇಲ್ಲದೆ ಕಳೆದಿರುವುದರಿಂದಲೂ ದೇಹ ಸುಸ್ತಾಗಿ ಈಗ ಈ ಬೆಟ್ಟ ಹತ್ತಿ ಬಹಳ ಆಯಾಸ ನಿದ್ರೆ ಬಂದರೂ ಅಯ್ಯಪ್ಪಸ್ವಾಮಿಯ ದರ್ಶನಕ್ಕೆ ಹಾತೊರೆಯುತ್ತಿತ್ತು. ಸರದಿಯಂತೆ ಬಂದು ನಾವು ಮೂರು ಜನ ಹದಿನೆಂಟು ಮೆಟ್ಟಲ ಬುಡದಲ್ಲಿ ನಿಂತೆವು. ನನ್ನಾಕೆಗಂತೂ ಕುತೂಹಲದ ಭಾವನಾತ್ಮಕ ಘಳಿಗೆ,  ಆಕೆಯ ಮುಖದಲ್ಲಿದ್ದ ಉದ್ವೇಗ ಎಲ್ಲವನ್ನೂ ಹೇಗೆ ನಿಗ್ರಹಿಸಬೇಕೋ ಎಂದು ತಿಳಿಯದಂತಾಗಿದ್ದಳು. ಆಕೆಯ ಮುಖದಲ್ಲಿ ಆ ಉದ್ವೇಗವನ್ನು ಕಂಡ ಭಾವನೆ ನನಗೆ. ಕಿಕ್ಕಿರಿದ ಜನ ಜಂಗುಳಿ. ಎಲ್ಲರಿಗೂ ಅವಸರ ಉದ್ವೇಗ. ನಾವು ಹೆಜ್ಜೆ ಇಡುವ ಆ ಮೆಟ್ಟಿಲಿಗೆ ನಮಸ್ಕರಿಸುವುದಕ್ಕೂ ಸಾಧ್ಯವಾಗದಷ್ಟು ಜನ ಜಂಗುಳಿ. ಆದರೂ ಪ್ರಯತ್ನ ಮಾಡಿ , ಮೆಟ್ಟಲನ್ನು ಕಣ್ಣಿಗೊತ್ತಿ ಒಂದೋಂದೇ ಮೆಟ್ಟಲನ್ನು ಹತ್ತುವುದಕ್ಕೆ ತೊಡಗಿದೆವು.  ನಾನು ಬೇಗನೆ ಮೆಟ್ಟಲನ್ನೇರಿ ಮೊದಲು ಮೇಲಕ್ಕೆ ಹೋಗಿ ಹಿಂದಿರುಗಿ ನೋಡಿದೆ. ಕೆಳಗಿನಿಂದ ನನ್ನಾಕೆ ಹಿಂದೆ ನನ್ನ ಮಗ ಏರಿಕೊಂಡು ಬರುವುದನ್ನು ನೋಡಿ ಹೃದಯ ಭಾರವಾಯಿತು. ಇಬ್ಬರನ್ನು ಕರೆ ತಂದ ನನಗೆ ಒಂದು ಧನ್ಯತಾ ಭಾವ. ನನ್ನಾಕೆಯಂತೂ ಏದುಸಿರು ಉದ್ವೇಗ ಭರಿತವಾಗಿ ಒಂದು ಕೈಯಲ್ಲಿ ಇರುಮುಡಿಯನ್ನು ಹಿಡಿದು ಇನ್ನೊಂದು ಕೈಯಲ್ಲಿ ಮೆಟ್ಟಲನ್ನು ಹಿಡಿದೆ ಏರಿ ಹತ್ತಿರ ಹತ್ತಿರ ಬರುತ್ತಿದ್ದರೆ ಅದನ್ನು ನೋಡುವಾಗ ಅದೊಂದು ಭಾವನೆ ವರ್ಣಿಸುವುದಕ್ಕೆ ಸಾಧ್ಯವಿಲ್ಲದಾಯಿತು. ಕೊನೆಯ ಮೆಟ್ಟಲು ಏರಿ ಹತ್ತಿರ ಬಂದು ನಿಂತಾಗ ಜಗತ್ತನ್ನೇ ಮೀರಿದ ಅನುಭವ.  ನಂತರ ದರ್ಶನದ ಸರದಿ...ಅದು ಒಂದಷ್ಟು ಹೊತ್ತು. ಇನ್ನೊಂದು ಉದ್ವೇಗದ ಆರಂಭ ಕೊನೆಗೂ ಆಕೆ ದರ್ಶನ ಮಾಡಿದಾಗ ಆಕೆಯ ಆನಂದ ಸಂತೃಪ್ತಿ ಕಾಣುವುದಕ್ಕೆ ಕಣ್ಣೆರಡು ಸಾಲದಾಯಿತು. ಆಕೆ ಅಯ್ಯಪ್ಪನ ದರ್ಶನ ಮಾಡುತ್ತಿದ್ದರೆ, ನನಗೆ ಅಯ್ಯಪ್ಪನ ಜತೆಗೆ ಈಕೆಯ ಮುಖವನ್ನೂ ನೋಡುವ ಒಂದು ಭಾಗ್ಯ ಅಂತ ತಿಳಿಯಬೇಕು. 

ಎಲ್ಲಾ ಯಾತ್ರೆಗಳಂತೆ ಇಲ್ಲಿ ಹೊಸ ಜನಗಳು ಪರಿಚಯ ಅನುಭವಗಳು ಇದ್ದವು. ಎಲ್ಲವನ್ನೂ ವಿವರಿಸುವುದು ಕಷ್ಟವಾದರೆ ಎರಡು ವಿಚಾರಗಳನ್ನು ಹೇಳುವ ಮನಸ್ಸಾಗುತ್ತದೆ.  ಒಂದಂತು ನನಗೆ ತುಂಬ ಮನಸ್ಸಿಗೆ ತಟ್ಟಿದ ಘಟನೆ. 

ನಮ್ಮ ಬಳಿಯಲ್ಲೇ ಒಬ್ಬರು ವೃದ್ದ ಮಹಿಳೆ ಕುಳಿತ್ತಿದ್ದರು. ಅಂಜಲಿ ಅಂತ ಹೆಸರು. ಮೂಲತಃ ತಮಿಳು ಭಾಷೆಯ ಮಹಿಳೆ.  ನೋಡಿದರೆ ಬಹಳ ಬಡತನದ ಮಹಿಳೆ ಅಂತ ಅನ್ನಿಸುತ್ತದೆ. ತುಂಬ ಒಳ್ಳೆಯ ಮನಸ್ಸಿನ ಹೆಣ್ಣು. ಜಾಲ ಹಳ್ಳಿ ಅಯ್ಯಪ್ಪ ದೇವಸ್ಥಾನದ ಬಳಿಯಲ್ಲೇ ಸಣ್ಣ ಇಡ್ಲಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುವ ವೃತ್ತಿ. ಅಣು ರೇಣು ತೃಣಕಾಷ್ಠ ಎಂಬಂತೆ ನರ ನರದಲ್ಲೂ ಅಯ್ಯಪ್ಪ ಎನ್ನುವ ಈಕೆ ಅಯ್ಯಪ್ಪನ ಪರಮ ಭಕ್ತೆ. ಎಲ್ಲರೂ ಸ್ವಾಮಿಯೇ ಶರಣಂ ಅಯ್ಯಪ್ಪ ಎಂದರೆ...ಈಕೆ ಓ ಸಾಮಿಯೇ ಶರಣಂ ಅಯ್ಯಪ್ಪ ಎನ್ನುವಾಗ ಆ ಮುಗ್ಧ ಕರೆಯ ಆಳ ಅಳಿಯುವುದಕ್ಕೆ ಸಾಧ್ಯವಾಗುವುದಿಲ್ಲ. ತುಂಬ ಕಷ್ಟದ ಬದುಕನ್ನು ನಡೆಸುವ ಮಹಿಳೆ ಅಂತ ನೋಡಿದ ತಕ್ಷಣ ಅರಿವಾಗುತ್ತದೆ. ಎಲ್ಲಕ್ಕಿಂತಲೂ ಇಷ್ಟವಾದ ಗುಣ ಎಂದರೆ, ಏನೆ ಬಂದರೂ ಅದನ್ನು ನಗುತ್ತಾ ಸ್ವೀಕರಿಸುವ ಈಕೆಯ ಮುಖಭಾವ  ಆ ಸಮಚಿತ್ತ ನಿಜಕ್ಕೂ ಆಶ್ಚರ್ಯವಾಗುತ್ತದೆ. ಸ್ಥಿತ ಪ್ರಜ್ಞತೆ ವಿದ್ಯೆಯಿಂದ ಶ್ರೀಮಂತಿಗೆಯಿಂದ ಬರುವುದಿಲ್ಲ. ಅದು ಬದುಕಿನ ಅನುಭವದಿಂದ ಬರುತ್ತದೆ. ಆ ಬಗೆಯ ಬದುಕನ್ನು ಸಾಗಿಸಿದವಳು. ಇಷ್ಟೆ ಆದರೆ ಏನು ಅಂತೀರ, ಅಲ್ಲಿಯೂ ಒಂದು ಮುಖ್ಯ ಘಟನೆ ಇದೆ. ನಾವೆಲ್ಲ ಮಲೆ ಏರಿ ದೇವರ ದರ್ಶನ ಮಾಡಿ ಇರುಮುಡಿಯನ್ನು ಅರ್ಪಿಸುವುದಕ್ಕೆ ದೇವಾಲಯದ ಪಕ್ಕದಲ್ಲೇ ಅನ್ನದಾನ ಭವನದಲ್ಲಿ ವ್ಯವಸ್ಥೆ ಮಾಡಿದ್ದರು. ಅಲ್ಲಿಯೇ ಒಂದಷ್ಟು ತಾತ್ಕಾಲಿಕ ವಿಶ್ರಾಂತಿಯೂ ಇದ್ದ ಕಾರಣ ಎಲ್ಲರೂ ಅಲ್ಲಿ ತಂಗಿದ್ದರು. ಎಲ್ಲ ಮುಗಿಸಿ ಮಲೆ ಇಳಿದು ಎಲ್ಲರೂ ಕೆಳಗೆ ಇಳಿದು  ಪಂಪ ಬಳಿಗೆ ಬಂದಾಗ ಈಕೆ ತನ್ನ ಬ್ಯಾಗ್ ನ್ನು ಅನ್ನದಾನ ಮಂಟಪದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಲ್ಲೇ ಮರೆತು ಬಂದಿದ್ದಳು. ಅದರಲ್ಲಿ ಆಕೆಯ ಮೊಬೈಲು ಒಂದಷ್ಟು ನಗದು ಹಣ ವಸ್ತ್ರ ಇನ್ನೂ ಏನೇನು ಇತ್ತೋ ಆಕೆಗೇ ಗೊತ್ತು. 


ಪಂಪೆಯಿಂದ ಸನ್ನಿದ್ಧಾನಕ್ಕೆ ಮಲೆ ಏರುವುದೆಂದರೆ ಅದೊಂದು ದೊಡ್ಡ ಸತ್ವ  ಪರೀಕ್ಷೆ. ಬರಿಗಾಲಲ್ಲಿ ಕಣ್ಣಿಗೆ ನಿಲುಕದ ಗಿರಿಪರ್ವತವನ್ನು ಹತ್ತಬೇಕು. ಸುಡುವ ಬಿಸಿಲಲ್ಲಿ ಬರಿಗಾಲಲ್ಲಿ ಸುಡುವ ನೆಲವನ್ನು ತುಳಿದು ಹತ್ತುವುದೆಂದರೆ ಬಹಳ ಕಠಿಣ. ಸುಮಾರು ನಾಲ್ಕು ಕಿಲೋ ಮೀಟರ್ ದೂರದ ಏರುವ ಹಾದಿ. ಇದಕ್ಕೆ ಕಡಿಮೆ ಎಂದರು ಎರಡು ಘಂಟೆ ತೆಗೆದುಕೊಳ್ಳುತ್ತದೆ.  ಈಗ ಅಲ್ಲಿ ಮೆಟ್ಟಲು ಇನ್ನಿತರ ಸೌಕರ್ಯ ಮಾಡಿದರೂ ಹತ್ತುವುದು ಅಷ್ಟು ಸುಲಭವಲ್ಲ. ಧನಿಕರು ಇದಕ್ಕೆ ಢೋಲಿಯನ್ನು ಮಾಡಿಕೊಂಡರೆ, ಎಲ್ಲರೂ ನಡೆದುಕೊಂಡು  ಹೋಗಿ ಸಾರ್ಥಕತೆಯನ್ನು ಕಾಣುತ್ತಾರೆ. ನಾವು ಐದು ಘಂಟೆಗೆ ಪಂಪೆಯಿಂದ ಏರುವುದಕ್ಕೆ ಆರಂಭಿಸಿದ್ದರಿಂದ ಬಿಸಿಲ ಶಾಖ ಇಲ್ಲದೇ ಇದ್ದರೂ ತುಂಬ ದೇಹಾಯಸವಾಗಿ ಕಾಲು ನೋವು ಎದೆನೋವು ಎಲ್ಲವೂ ಕಣಿಸಿಕೊಂಡಿತ್ತು. ಎಲ್ಲವೂ ಮುಗಿಸಿ ಕೆಳಗೆ ಬಂದಾಗ ಬ್ಯಾಗ್ ಮರೆತು ಬಂದಳೆಂದರೆ ಏನು ಮಾಡಬೇಕು?  ಆಕೆ ಧೃತಿ ಗೆಡಲ್ಲಿಲ್ಲ. ಪುನಃ ಮಲೆ ಹತ್ತಿ ಅನ್ನದಾನ ಮಂಟಪದ ವಿಶ್ರಾಂತಿ ಜಾಗಕ್ಕೆ ಹೋದಾಗ ಆಕೆಯ ಬ್ಯಾಗ್ ಸುರಕ್ಷಿತವಾಗಿ ಆಕೆ ಹೇಗೆ ಇಟ್ಟಿದ್ದಳೋ ಅದೇ ರೀತಿ ಒಂದಿಷ್ಟು ಅಲುಗಾಡದೆ ಹಾಗೆ ಉಳಿದಿತ್ತು. ಅದರಲ್ಲಿ ಮೊಬೈಲ್ ಹಣ ಎಲ್ಲವೂ ಇತ್ತು. ಎಲ್ಲರಿಗೂ ಆಕೆಯ ಮೇಲೆ ಒಂದು ಬಾರಿಗೆ ಸಿಟ್ಟು ಅನುಕಂಪ ಎಲ್ಲವೂ ಬಂದಿರಬಹುದು. ಆದರೆ ಏನು ಮಾಡುವುದಕ್ಕೆ ಸಾಧ್ಯ. ಆಕೆ ನಗುಮುಖವನ್ನೇ ತೋರಿಸುವುದಲ್ಲದೇ ಬೇರೆ ಯಾವ ದುಃಖವನ್ನೂ ನೋವನ್ನು ಪ್ರಕಟಿಸಲಿಲ್ಲ. ನನಗೆ ಅದು ಬಹಳ ಅಚ್ಚರಿಯಾಗಿ ಕಂಡಿತ್ತು. ನಾನಂತೂ ಇಂತಹ ಪರಿಸ್ಥಿತಿಯಲ್ಲಿ  ಪುನಃ ಹೋಗುವ ಧೈರ್ಯವನ್ನು ಮಾಡುತ್ತಿರಲಿಲ್ಲ. ಏನು ಮಾಡುತ್ತಿದ್ದೇನೋ ಗೊತ್ತಿಲ್ಲ. ಮತ್ತೊಂದು ವಿಚಿತ್ರವೆಂದರೆ ಸಾವಿರಾರು ಗಟ್ಟಲೆ ಜನ ಓಡಾಡುವ ಜಾಗ. ಅಲ್ಲಿದ್ದ ಬ್ಯಾಗ್ ಇಟ್ಟ ರೀತಿಯಲ್ಲೇ ಇರಬೇಕೆಂದರೆ, ಅದಕ್ಕೆ ಕಾರಣ ಯಾರು?  ಅಲ್ಲಿದ್ದ ಪೋಲೀಸ್ ಸೆಕ್ಯೂರಿಟಿಯಂತೂ ಖಂಡಿತ ಅಲ್ಲ. ಅದನ್ನು ಸುರಕ್ಷಿತವಾಗಿ ಕಾದುಕೊಂಡ ಆ ಶಕ್ತಿ ಯಾವುದು? ಬೇರೆ ಯಾವುದೂ ಅಲ್ಲ, ಎಲ್ಲರಲ್ಲೂ ಇದ್ದ  ಎಲ್ಲವೂ ನೀನೆ ಎಂಬ ಭಾವವೇ ಅಲ್ಲಿ ರಕ್ಷಣೆಗೆ ಬಂತು. ಮೋಸ ವಂಚನೆ ಎಲ್ಲವನ್ನೂ ಬಿಟ್ಟು ಪರಿಶುದ್ದ ಆತ್ಮವಾಗುವ ಪ್ರಯತ್ನೆವೇ ಅಲ್ಲಿ ರಕ್ಷಣೆ ನೀಡಿತ್ತು. ಒಂದು ಕ್ಷಣಕ್ಕೆ ಆಕೆಯ ಮರೆವಿಗೆ ಸಿಟ್ಟು ಬಂದರೂ ಈ ಘಟನೆಯನ್ನು ನಾನು ಕಂಡ ಬಗೆಯೇ ಬೇರೆ. ಆಕೆಯಿಂದ ಸುಮಾರು ನಾಲ್ಕು ಘಂಟೆಯಷ್ಟು ಪ್ರಯಾಣ ವಿಳಂಬವಾದರೂ ಆಕೆಯ ಸೊತ್ತು ಸುರಕ್ಷಿತವಾಗಿ ಆಕೆಗೆ ಸಿಕ್ಕಿದ್ದು ವಿಶೇಷ ಎನಿಸಿತ್ತು. 


ಯಾತ್ರೆಯುದ್ದಕ್ಕೂ ನಮಗೆ ಮಾರ್ಗದರ್ಶಕರಾಗಿ, ಎಲ್ಲ ಸಹಕಾರವನ್ನು ನೀಡುತ್ತಾ ಜತೆಗೆ ಇದ್ದವರು ಗುರುಸ್ವಾಮಿಗಳಾದ ನಾರಾಯಣ ಸ್ವಾಮಿಯವರು. ಬಹಳ ಶಾಂತ ಸ್ವಭಾವದ ವ್ಯಕ್ತಿ. ಅಯ್ಯಪ್ಪನ ಮೇಲಿನ ಭಕ್ತಿ ಅವರ ಕೃತಿಯಲ್ಲಿ ಕಂಡು ಬರುತ್ತಿತ್ತು. ಪ್ರತಿಯೊಬ್ಬರ ಸಮಸ್ಯೆಗೂ ತಮ್ಮಿಂದಾ ಪರಿಹಾರವನ್ನು ಒದಗಿಸಿ ತಮ್ಮ ಪ್ರಯತ್ನ ಮೀರಿ ಸಹನೆಯಿಂದ ವರ್ತಿಸುತ್ತಿದ್ದರು. ಅಲ್ಲಲ್ಲಿ ಉಪಯುಕ್ತ ಸಲಹೆಗಳನ್ನು ನೀಡುತ್ತಿದ್ದರು. ಎಲ್ಲಕ್ಕಿಂತ ನಾನು ಗಮನಿಸಿದ ಗುಣವೆಂದರೆ, ಊಟವಾಗಲಿ ಉಪಹಾರವಾಗಲೀ ಎಲ್ಲರು ಮುಗಿಸಿದ ನಂತರ ತಾವು ಉಣ್ಣುವುದಕ್ಕೆ ಕುಳಿತುಕೊಳ್ಳುತ್ತಿದ್ದರು. ಪ್ರತಿಯೊಬ್ಬರನ್ನೂ ಸಹನೆಯಿಂದ ಕಾಯುತ್ತಿದ್ದರು. ಪ್ರತಿಯೊಬ್ಬ ಯಾತ್ರಾರ್ಥಿಯ ಕೊನೆಯ ತುತ್ತು ಉಂಡ ಮೇಲೆ ಇವರು ಮೊದಲ ತುತ್ತು ಬಾಯಿಗೆ ಇಡುತ್ತಿದ್ದರು. ಈ ಬದ್ದತೆ ಅತ್ಯಂತ ಶ್ರೇಷ್ಠ ಎನಿಸಿತು. 


ಅಂತೂ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದೆವು. ಮುಖ್ಯವಾಗಿ ನಾನು ದೂರದ ಯಾತ್ರೆ ದೊಡ್ಡ ದೊಡ್ಡ ದೇವಾಲಯಕ್ಕೆ ಹೋಗುವುದನ್ನು ಅಷ್ಟೊಂದು ಇಷ್ಟಪಡುವುದಿಲ್ಲ. ಕಾರಣ, ಸರಿಯಾದ ದರ್ಶನವಾಗುವುದಿಲ್ಲ. ಜನ ಜಂಗುಳಿ ಉದ್ದ ಸರದಿ ಇವುಗಳನ್ನೆಲ್ಲ ನಿಭಾಯಿಸುವುದು ತುಂಬ ಕಷ್ಟವಾಗುತ್ತದೆ. ಮುಕ್ತವಾಗಿ ಪ್ರಾರ್ಧನೆ ಸಾಧ್ಯವಾಗುವಿಲ್ಲ. ಪ್ರತಿಯೊಂದಕ್ಕೂ ಸರದಿ ನಿಲ್ಲುವ ಅನಿವಾರ್ಯತೆ ಇರುತ್ತದೆ. ಸ್ನಾನ ಸಂಧ್ಯಾದಿ ವಂದನೆಗಳು ಸಾಧ್ಯವಾಗುವುದಿಲ್ಲ. ಹಾಗಾಗಿ ಶಬರಿಮಲೆಗೆ ದೀಪಾವಳಿ ಸಮಯದಲ್ಲಿ ಅಂದರೆ ಕಾರ್ತಿಕ ಮಾಸದಲ್ಲಿ ಹೋಗಬೇಕೆಂದುಕೊಂಡಿದ್ದೆ. ಆದರೂ ಬೇಗ ಹೋಗಿ ಬರುವ ಅಂತ ನನ್ನಾಕೆಯ ಒತ್ತಾಸೆಯಿಂದ ವಿಷು ಸಂಕ್ರಮಣದ ಜನದಟ್ಟನೆಯ ಅರಿವಿದ್ದೂ ಇದೇ ಸಮಯದಲ್ಲಿ ಯಾತ್ರೆ ಮಾಡಿ ಬಂದೆವು. ನಿರೀಕ್ಷೆಯಷ್ಟು ಕಷ್ಟವಾಗಲಿಲ್ಲ. ಎಲ್ಲವೂ ಸುಗಮವಾಗಿ ನೆರವೇರಿತು. ದೇವರನ್ನು ಒಂದೆರಡು ಘಳಿಗೆ ನೋಡುವುದಕ್ಕೆ ಮಾತ್ರ ಸಾಧ್ಯವಾದರೂ ಅದೊಂದು ದೊಡ್ಡ ಸಂತೃಪ್ತಿಯನ್ನು ಒದಗಿಸಿದ ಕ್ಷಣವಾಗಿತ್ತು.  ನಿಜಕ್ಕೂ ಪರಮಾತ್ಮನನ್ನು ಹೃದಯದಲ್ಲಿ ದರ್ಶನ ಮಾಡುವ ನನ್ನ ಪ್ರವೃತ್ತಿಯಲ್ಲಿ ಈ ದೇವಾಲಯದ ಮೂರ್ತಿ ದರ್ಶನ ಕೇವಲ ಸಾಂಕೇತಿಕ. ಒಂದು ಭಕ್ತಿ ಗೌರವದ ಪ್ರತೀಕ.   ಇನ್ನು ದೇವರಲ್ಲಿ ನನಗೆ ಬೇಡುವುದಕ್ಕೇ ಏನೂ ಇರುವುದಿಲ್ಲ. ದೇವರ ಮುಂದೆ ನಿಂತಾಗ ಏನು ಬೇಡಬೇಕೆಂಬುದೇ ತಿಳಿಯುವುದಿಲ್ಲ. ಎಲ್ಲವನ್ನು ಒದಗಿಸಬಲ್ಲ ಪರಮಾತ್ಮನಲ್ಲಿ  ಬೇಡುವುದೇನುಂಟು. ನನಗೇನು ಬೇಕೋ ಅದು ಭಗವಂತನಿಗೆ ತಿಳಿದಿದೆ. ನಾನು ಅದು ಕೊಡು ಇದು ಕೊಡು ಎಂದು ಕೇಳಿದರೆ ಆ ಭಗವಂತನಲ್ಲಿ ನನಗೆ ವಿಶ್ವಾಸ ಇಲ್ಲವೇ ಎಂಬ ಅನುಮಾನ ಬಂದು ಬಿಡುತ್ತದೆ. ದೇವರಲ್ಲಿ ಇಂತಹದನ್ನು ಬೇಡುವುದೆಂದರೆ ಆ ದೇವರಲ್ಲಿ ಅವಿಶ್ವಾಸವನ್ನು ಪ್ರಕಟಿಸಿದ ಭಾವ ಉಂಟಾಗುತ್ತದೆ. ಹೇಗಿದ್ದರೂ ನನಗೆ ಕೊಡಬೇಕಾದ್ದನ್ನು ಭಗವಂತ ಕೊಡುತ್ತಾನೆ. ಅದು ಈಗಲೋ ಆಗಲೋ ತಡವಾಗಿಯಾದರೂ ಕೊಡದೆ ಇರಲಾರ. ಒಂದು ವೇಳೆ ಕೊಡಲಿಲ್ಲ ಎಂದಾದರೆ, ಆ ಭಗವಂತನಿಗೆ ಕೊಡುವುದಕ್ಕೆ ಮನಸ್ಸಿಲ್ಲದೇ ಇದ್ದದ್ದು ನನಗೆ ಬೇಡವೇ ಬೇಡ. ನನಗದರ ಅವಶ್ಯಕತೆಯೇ ಇಲ್ಲ. ಹೀಗೆ ಭಾವಿಸಿದಾಗ ಎಲ್ಲವನ್ನೂ ಪಡೆದ ಸಂತೃಪ್ತ ವ್ಯಕ್ತಿಯಾಗುತ್ತೇನೆ. ಇದಕ್ಕಿಂತ ಹೆಚ್ಚಿನದ್ದು ನನಗೇನು ಬೇಕು. ಆ ವಿಶ್ವಾಸ ಒಂದೇ ಸಾಕು. ಆಯ್ಯಪ್ಪ ದರ್ಶನವೂ ಹೀಗೆ. ಆಯ್ಯಪ್ಪನಿಗೆ ಈಯಪ್ಪನ ಮನಸ್ಸು ತಿಳಿದಿದೆ. ಅದನ್ನು ಒದಗಿಸುತ್ತಾನೆ. 


 




Saturday, April 4, 2026

ಹಾಸ್ಯಗಾನ

ಯಕ್ಷಗಾನ ಅಭಿಮಾನಿಯಾಗಿದ್ದರೆ , ಅಂತರ್ಜಾಲದಲ್ಲಿ ಒಂದೆರಡು ಯಕ್ಷಗಾನ ತುಣುಕುಗಳನ್ನು ನೋಡಿದರೆ ಮತ್ತೆ ಹಲವಾರು ಶಿಫಾರಸು, (recommendation) ವೀಡಿಯೋಗಳು ನಿಮ್ಮ ಆಸಕ್ತಿಯನ್ನು ಹೆಚ್ಚಿಸಿ  ಕಣ್ಸೆಳೆಯುವ ಪ್ರಯತ್ನ ಮಾಡುತ್ತದೆ. ಅವುಗಳನ್ನು ಅನುಮೋದಿಸಿ ನೋಡಿದಾಗ ಮತ್ತಷ್ಟು ಹೆಚ್ಚುತ್ತದೆ. ಇದು ಯೂಟ್ಯೂಬ್, ಫೇಸ್ ಬುಕ್ ಇನ್ಸ್ಟಾ ಗ್ರಾಂ ಗೂ ವಿಸ್ತರಿಸುತ್ತದೆ.  ಅಂತರ್ಜಾಲದ ಒಂದು ವಿಧದ ಸೇವೆಯ ರೀತಿ ಇದು. ಈ ಬಗೆಯಲ್ಲಿ ಬರುವ ಹಲವಾರು ಯಕ್ಷಗಾನಗಳ ಇತ್ತೀಚಿನ ಗುಣಗಳು ಒಂದೇ...ಅದು ಹಾಸ್ಯ ಪ್ರಧಾನ. ಯಕ್ಷಗಾನದಲ್ಲಿ ಎಲ್ಲಾ ರಂಗಗಳಿಗಿಂತಲೂ ವಿಭಿನ್ನ ಹಾಸ್ಯ ಇಲ್ಲಿರುವುದಂತೂ ಸತ್ಯ. ಆದರೆ ಯಕ್ಷಗಾನ ಎಂದೂ ಹಾಸ್ಯ ಪ್ರಧಾನವಾಗಿರಲಿಲ್ಲ. ಈಗ ಯಕ್ಷಗಾನಕ್ಕಿಂತಲೂ ಹಾಸ್ಯವೇ ಪ್ರಧಾನವಾಗಿ ಇನ್ನಿಲ್ಲದ ಕ್ರೀಡಾಂಗಣವಾಗಿ ಯಕ್ಷಗಾನ ಬದಲಾಗಿ ಹೋಗಿದೆ. ನಕ್ಕು ನಗಿಸುವ ಹಾಸ್ಯ, ಹೊಟ್ಟೆ ಹುಣ್ಣಾಗಿಸುವ ಹಾಸ್ಯ ಹೀಗಿ ತರಹೇವಾರಿ ತಲೆ ಬರಹದಲ್ಲಿ   ಹಲವಾರು ವೀಡಿಯೋಗಳು ಪ್ರಸಾರವಾಗುತ್ತವೆ. ಯಕ್ಷಗಾನ ಬಯಲಾಟದ ಒಂದು ಕರಪತ್ರ ನೋಡಿದೆ, ಪ್ರಸಂಗದ ಕೆಳಗೆ ಹಾಸ್ಯ ಪ್ರಧಾನ ಕಥಾನಕ ಅಂತ ಬರೆದಿತ್ತು. ಯಕ್ಷಗಾನಗಳಲ್ಲಿ ಹಾಸ್ಯವೇ ಪ್ರಧಾನವಾಗುವ ಆವಶ್ಯಕತೆ ಈಗ ಬಂದಿದೆ. ಕಾರಣ ಇಷ್ಟೆ ಯಕ್ಷಗಾನದಲ್ಲಿ ಆಕರ್ಷಣೆಯ ಕೊರತೆ.  ಹಾಗಾದರೆ ಯಕ್ಷಗಾನ ಎಂದರೆ ಹಾಸ್ಯ ಮಾತ್ರವೇ ಇರುವ ಜೋಕರ್ ಗಳ ಆಟವೇ? ಇಷ್ಟೇ ಅಲ್ಲ ದೇವೇಂದ್ರನಾಗಿ ನಕ್ಕು ನಗಿಸುವ ಹಾಸ್ಯ ಎಂಬ ತಲೆ ಬರಹ ಕಂಡರೆ ಗಂಭೀರವಾಗಿ ಯೋಚಿಸುವ ಅಂತ ಅನ್ನಿಸುವುದಿಲ್ಲವೇ? ಯಕ್ಷಗಾನದಲ್ಲಿ ದೇವೇಂದ್ರ ನಕ್ಕು ನಗಿಸುವ ಜೋಕರ್ ಆಗಿದ್ದು ಯಾವಾಗಿನಿಂದ? ಎಲ್ಲೊ ಅಲ್ಲೊಂದು ಇಲ್ಲೊಂದು ಗಂಭೀರ ಸಂಭಾಷಣೆಯಲ್ಲಿ ಹಾಸ್ಯದ ಚತುರ ಮಾತುಗಳಿದ್ದರೂ, ಎಲ್ಲೊ ಅಪರೂಪಕ್ಕೆ ಮೇಳದ ಹಾಸ್ಯಗಾರ ಇದನ್ನು ಮಾಡಿದರೂ,  ದೇವೇಂದ್ರ ಎಂದಿಗೂ ಹಾಸ್ಯಗಾರನಾಗಿರುವ  ಪಾತ್ರವಲ್ಲ.  


ಇಲ್ಲಿ ದೇವೇಂದ್ರನೂ ಹಾಸ್ಯ ರಾಮ ಕೃಷ್ಣನೂ ಹಾಸ್ಯ ಮುಂದೊಂದು ದಿನ ಸೀತೆ ದೇವಿಯಂತಹ ಪಾತ್ರಗಳೂ ಸಹ ಹಾಸ್ಯ ಪಾತ್ರಗಳಾಗಬಹುದು. ಮೊದಲೆಲ್ಲ ಒಂದು ಮೇಳದಲ್ಲಿ ಒಬ್ಬನೇ ಹಾಸ್ಯಗಾರನಿರುತ್ತಿದ್ದ. ಯಕ್ಷಗಾನದಲ್ಲಿ ಹಾಸ್ಯಗಾರನಿಗೆ ಒಂದು ಮಹತ್ವದ ಸ್ಥಾನವಿದೆ. ಅದು ಕಲಾವಿದನಾಗಿ ಮಾತ್ರ ಹೊರತು ಹಾಸ್ಯದಿಂದ ಅಲ್ಲ. ಒಂದು ಪ್ರಸಂಗ ನಿರ್ವಹಣೆಯಲ್ಲಿ ಹಾಸ್ಯಗಾರ ಮುಖ್ಯಪಾತ್ರಧಾರಿಗಿಂತಲೂ ಅತಿ ಮುಖ್ಯವಾಗಿಬಿಡುತ್ತಾನೆ.  ಹಾಸ್ಯಗಾರ ಕೇವಲ ಹಾಸ್ಯದ ಪಾತ್ರವಷ್ಟೇ ಅಲ್ಲ ಸಂದರ್ಭೋಚಿತವಾಗಿ ಬಣ್ಣದ ವೇಷದಿಂದ ಸ್ತ್ರೀ ವೇಷದ ವರೆಗೂ ನಿರ್ವಹಿಸಿ ಪ್ರಸಂಗವನ್ನು ಸಸೂತ್ರವಾಗಿ ನಡೆಸುವುದಕ್ಕೆ ಸಹಕಾರಿಯಾಗಿ ಇಡೀ ಪ್ರಸಂಗದ ಸೂತ್ರಧಾರಿಯಾಗುತ್ತಿದ್ದ. ಹಿಮ್ಮೆಳ ಮುಮ್ಮೇಳ ಎರಡರಲ್ಲೂ ಸಮಾನ ಸಾಮಾರ್ಥ್ಯವನ್ನು ಪಡೆದಿರುತ್ತಿದ್ದ.  ಅದಲ್ಲದೇ ಹಲವಾರು ಅಧಿಕೃತ ಅನಧಿಕೃತ ಜವಾಬ್ದಾರಿಗಳು ಹಾಸ್ಯಗಾರನೆಂಬ ವ್ಯಕ್ತಿಯ ಮೇಲೆ ಇರುತ್ತಿದ್ದವು. ಆದರೆ  ಈಗ ಒಂದು ಚಿಕ್ಕ ಮೇಳವೇ ಆದರೂ ಅದರಲ್ಲಿ ಎರಡು ಜನ ಹಾಸ್ಯಗಾರರಿತ್ತಾರೆ.  ಇವರು ಹಾಸ್ಯವನ್ನಲ್ಲದೇ ಬೇರೆ ಯಾವ ಜವಾಬ್ದಾರಿಯನ್ನು ನಿರ್ವಹಿಸುವುದು ಕಂಡು ಬರುವುದಿಲ್ಲ. ಯಾಕೆಂದರೆ ಈ ಜವಾಬ್ದಾರಿಗಳ ಅರಿವೇ ಇರುವುದಿಲ್ಲ. 

ನವರಸಗಳಲ್ಲಿ ಹಾಸ್ಯರಸ ಅತ್ಯಂತ ಮಹತ್ವ. ಎಲ್ಲರೂ ಒಂದಷ್ಟು ಹೊತ್ತು ನಗುವುದಕ್ಕೆ ಬಯಸುತ್ತಾರೆ. ನಿತ್ಯ ಜೀವನದ ದುಃಖ ಕಷ್ಟಗಳನ್ನು ಮರೆಯುವುದಕ್ಕೆ ಯತ್ನಿಸುತ್ತಾರೆ. ಹಾಗಂತ ಕೇವಲ ನಗುವೊಂದೇ ಸಾಕಾಗುವುದಿಲ್ಲ. ಮನಸ್ಸನ್ನು ಮುದಗೊಳಿಸುವುದು ಭಾವನೆಗಳು. ಅಲ್ಲಿ ಶೃಂಗಾರ ರೌದ್ರ ಕರುಣ ವೀರ ಎಲ್ಲದಕವು ಭಾವನೆಗಳ ಜೀವಕ್ಕೆ ಕಾರಣವಾಗುತ್ತದೆ. ಪ್ರೇಕ್ಷಕ ಕೇವಲ ಹಾಸ್ಯವನ್ನೇ ಬಯಸುತ್ತಾನೆ  ಎಂದರೆ ದೇವೇಂದ್ರನಿಂದಲೂ ಹಾಸ್ಯವನ್ನು ನಿರೀಕ್ಷಿಸುವ ಮಟ್ಟಿಗೆ ಯಕ್ಷಗಾನ ಬಂದು ನಿಂತಿದೆ ಎಂದರೆ ಯಾರನ್ನು ಕಾರಣಾವಾಗಿಸಬೇಕು? ಅದನ್ನು ನೀಡುವ ಕಲಾವಿದನೇ, ಅಲ್ಲ ಕೈತಟ್ಟಿ ನಗುವ ಪ್ರೇಕ್ಷಕನನ್ನೇ?  ಪ್ರೇಕ್ಷಕ ಬಯಸುತ್ತಾನೆ ಎಂದು ಯಕ್ಷಗಾನ ಮಾತ್ರ ಬದಲಾಗಿಲ್ಲ, ಹಾಸ್ಯದ ವಿಧಾನಗಳು ಬದಾಲಾಗಿಬಿಟ್ಟಿದೆ. ಹಾಸ್ಯ ಎಂದರೆ ಲೇವಡಿಯಾಗುವಷ್ಟರ ಮಟ್ಟಿಗೆ ಹಾಸ್ಯ ಬದಲಾಗಿದೆ. ನಗುವಿಗೂ ಒಂದು ಮೌಲ್ಯವಿದೆ. ಹಾಗಾಗಿ ಅದು ಮಿತವಾಗಿ ಬಳಸಲ್ಪಡಬೇಕು. ಹುಚ್ಚನೂ ನಗುತ್ತಾನೆ.  ಹುಚ್ಚನ್ನು ತೃಪ್ತಿ ಪಡಿಸುಮಟ್ಟಕ್ಕೆ ಅಥವ ಅದಕ್ಕೆ ಸೀಮಿತವಾಗಿ ಹಾಸ್ಯ ಬಳಕೆಯಾದರೆ ಹಾಸ್ಯಕ್ಕೆ ಮೌಲ್ಯ ಸಿಗಲಾರದು. ಹಿಂದೆ ಒಂದು ಸಲ ಕೆಲವು ಯಕ್ಷಗಾನ ಧ್ವನಿ ಸುರುಳಿಗಳು ಬಂದಿತ್ತು. ಕೀಳು ಹಾಸ್ಯವನ್ನೇ ಪ್ರಧಾನವಾಗಿಸಿದ ಯಕ್ಷಗಾನ ಸುರುಳಿಗಳು. ಆಗ ಇದನ್ನು ಆಕ್ಷೇಪಿಸಿದ್ದರು. ಈಗ ಕಾಲ ಬದಲಾಗಿದೆ ಸಂಪೂರ್ಣ ಯಕ್ಷಗಾನವೇ ಹಾಸ್ಯಮಯವಾಗುವ ಕಾಲ ಸನ್ನಿಹಿತವಾಗಿದೆ ಎನ್ನಬೇಕು. ಯಕ್ಷಗಾನ ಜೋಕರ್ ಗಳ ಆಟವಾಗಿ ಪ್ರೇಕ್ಷಕ ನಿರೀಕ್ಷಿಸುತ್ತಿದ್ದಾನೆ ಎಂದರೆ ಅತಿಶಯವಾಗಲಾರದು. 

Thursday, April 2, 2026

ಮಾವನೂರು ಬೆಟ್ಟದ ಮಲ್ಲೇಶ್ವರ ದೇವಸ್ಥಾನ

        ಇಲ್ಲಿ ಹಾಕಿರುವ ಚಿತ್ರಗಳು ಮಾವನೂರು ಬೆಟ್ಟದ ಮಲ್ಲೇಶ್ವರ ದೇವಸ್ಥಾನ. ಇದು ಬೆಂಗಳೂರಿನಿಂದ ಹಾಸನಕ್ಕೆ ಹೋಗುವಾಗ ಚೆನ್ನರಾಯ ಪಟ್ಟಣ ಕಳೆದ ಕೂಡಲೆ ಸಿಗುತ್ತದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಎಡಕ್ಕೆ ತಿರುಗಿದರೆ, ಸ್ವಲ್ಪದೂರ ಹಳ್ಳಿಯ ನಡುವಿನ ರಸ್ತೆ, ದೂರದಲ್ಲಿಸಾಲಾಗಿ ಪರ್ವತಗಳ ನಡುವೆ ಸುಜುಲೋನ್ ಕಂಪೆನಿಯ  ಗಾಳಿಯಂತ್ರ  ಸುತ್ತುವ ಮನೋಹರ ದೃಶ್ಯ ಕಾಣುತ್ತದೆ. ಈ ಗಾಳಿಯಂತ್ರದ ಬಳಿಯಲ್ಲೇ ಗುಡ್ಡದ ತುದಿಯಲ್ಲಿ ಈ ಮಾವನೂರು ಮಲ್ಲೇಶ್ವರ ದೇವಸ್ಥಾನ ಇದೆ. ತುದಿಗೆ ಹೋದರೆ ಸುತ್ತಮುತ್ತಲಿನ ನಯನ ಮನೋಹರ ದೃಶ್ಯ ಕಾಣುತ್ತದೆ. ಮುಂಜಾನೆ ಹೋದಾರೆ ಸೂರ್ಯೋದಯ ಸಾಯಂಕಾಲ ಹೋದರೆ ಸೂರ್ಯಾಸ್ತ ಸುಂದರವಾಗಿ ಕಾಣಬಹುದು.  ನಾವು ಎರಡು ಬಾರಿ ಈ ಜಾಗ ವೀಕ್ಷಣೆ ಮಾಡಿದ್ದೇವೆ. ಮೊದಲ ಬಾರಿಗೆ ಹೋದಾಗ ಇದೇನು ಅಷ್ಟು ಪ್ರಸಿದ್ಧಿಯನ್ನು ಪಡೆದಿರಲಿಲ್ಲ. ಹೊಸದಾಗಿ












ಸುಣ್ಣ ಬಣ್ಣದಿಂದ  ನವೀಕರಿಸಲಾಗಿತ್ತು. ಆಗ ಇಲ್ಲಿ ಯಾವ ಜನರ ಸಂಚಾರವಿಲ್ಲದೆ ನಿರಾಳವಾದ ಶಾಂತಿ ನೆಲೆಯಾಗಿತ್ತು. ಅದೊಂದು ಬಹಳ ಸುಂದರ ಅನುಭವ. ಅದಾಗಿ ಎರಡು ಮೂರು ವರ್ಷದ ನಂತರ, ಹಲವು ಸಲ ಅಲ್ಲಿಗೆ ಹೋಗಬೇಕೆಂದು ಬಯಸಿದರೂ ಸಮಯ ಸಿಕ್ಕಿರಲಿಲ್ಲ.  ಮೊನ್ನೆ ಈ ದೇವಾಲಯದ ಕೊಪ್ಪದಿಂದ ಹಿಂತಿರುಗುವಾಗ ಮೊದಲೇ ಸಮಯ ನೋಡಿ ಸರಿಯಾಗಿ ಸೂರ್ಯಾಸ್ತದ ಸಮಯಕ್ಕೆ ಬಂದು ತಲುಪಿದೆವು. ಸುಂದರ ದೃಶ್ಯ ಮನಸೂರೆಗೊಂಡಿತ್ತು. ಆದರೆ, ಅಲ್ಲಿ ಸಾಕಷ್ಟು ವಾಹನಗಳು ನಿಂತು ಒಂದಷ್ಟು ಮಂದಿ ಇದ್ದರು. 


ಕಳೆದ ಬಾರಿಯಂತೆ ಇಲ್ಲಿ ಪರಿಸರ ಶಾಂತವಾಗಿರಲಿಲ್ಲ. ಜನರ ಕಲರವ ಎಲ್ಲವನ್ನೂ ಕದಡಿತ್ತು. ಜೋರಾಗಿ ಕೇಕೆ ಮಾತುಗಳು ಆದರೆ ಪರವಾಗಿಲ್ಲವೇನೋ, ಕೆಲವರು ದೊಡ್ಡದಾಗಿ ಹಾಡು ಹಾಕಿ ವಿಚಿತ್ರವಾಗಿ ಕುಣಿಯುತ್ತಾ ರೀಲ್ಸ್ ಮಾಡುತ್ತಿದ್ದರು. ರೀಲ್ಸ್ ಮಾಡುವ ಹುಚ್ಚು ಸುಂದರ ದೇವಸ್ಥಾನಗಳನ್ನೂ ಬಿಡುವುದಿಲ್ಲ. ಅಲ್ಲಿಯ ಶಾಂತ ಪರಿಸರವನ್ನು ಆಸ್ವಾದಿಸುವುದಕ್ಕೆ ಏನೋ ಒಂದು ತೊಡಕು.  ಆ ಪರಿಸರಕ್ಕೆ ಹೊಂದಿಕೊಳ್ಳದ ಉಡುಗೆ ತೊಡುಗೆಗಳು ಯಾವ ಸುಂದರ ಪರಿಸರವನ್ನು ಬಿಡದ ಈ ಮಾನವ ಧಾಳಿ ನಿಜಕ್ಕೂ ಖೇದಕರ. ಸ್ವಲ್ಪ ಹೊತ್ತು ಅಲ್ಲಿದ್ದು ಮತ್ತೆ ಅಲ್ಲಿ ನಿಲ್ಲುವುದಕ್ಕೆ ಮನಸ್ಸಾಗಲಿಲ್ಲ. ಅನ್ಯ ಪ್ರಾರ್ಥನಾ ಮಂದಿರಗಳಲ್ಲಿ ಇಂತಹ ಚಟುವಟಿಕೆಗಳನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಆದರೆ ನಮ್ಮ ಕಾಲ ಬುಡಕ್ಕೆ ನಾವೇ ಕೆಸರು ಎಳೆದು ತರುತ್ತಿದ್ದೇವೆ. ಇದು ಶೋಚನೀಯ. ಪರಸ್ಥಳಗಳಿಗೆ ಹೋದಾಗ ಅಲ್ಲಿ ಫೋಟೋಗಳನ್ನು ತೊಂದರೆಯಾಗದಂತೆ ಸ್ಮರಣೆಗಾಗಿ ತೆಗೆದುಕೊಳ್ಳುವುದರಲ್ಲಿ ತಪ್ಪಿಲ್ಲ. ಆದರೆ ಅಲ್ಲಿನ ಪರಿಸರ ಶುದ್ಧಿಯನ್ನು ಗೌರವಿಸಬೇಕಾಗಿರುವುದು ನಮ್ಮ ಕರ್ತವ್ಯ. ಇಲ್ಲವಾದರೆ ನಮಗಾಗಿ ಇವುಗಳು ಇದ್ದಂತೆ ನಮ್ಮ ಮುಂದಿನ ಜನಾಂಗಕ್ಕೆ ಇವುಗಳು ಪರಿಶುದ್ದವಾಗಿ ಇರಲಾರದು. ರೀಲ್ಸ್ ಪುಂಡರಿಂದ ಇಂತಹ ಪರಿಸರವನ್ನು ರಕ್ಷಿಸುವುದು ಆದ್ಯ ಕರ್ತವ್ಯವಾಗಬೇಕಾಗಿದೆ. 


Saturday, March 14, 2026

ಕೊಲ್ಲಿಯುದ್ದದ ಒಂದು ದಿನ

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಇರಬೇಕು. ಇರಾಕ್ ಯುದ್ಧ ನಡೆದಿತ್ತು. ಇದು ಒಂದು ತಿಂಗಳಿಗಿಂತ ಹೆಚ್ಚು ನಡೆದ ಯುದ್ದ. ಆ ದಿನದ ಒಂದು ಅನುಭವ ಈಗಲೂ ನೆನಪಿದೆ.  ನಾವು ಕಾಸರಗೋಡು ಜಿಲ್ಲೆಯ ಪೈವಳಿಕೆಯಲ್ಲಿದ್ದ ಸಮಯ. ನಾನು ದೂರದ ಮಂಗಳೂರಿಗೆ ಹೋಗಬೇಕೆಂದಿದ್ದರೆ ನನ್ನ ಸ್ಕೂಟರ್ ನ್ನು ರಾಷ್ಟ್ರಿಯ ಹೆದ್ದಾರಿಯ ಉಪ್ಪಳದಲ್ಲಿ ಇಟ್ಟು ಅಲ್ಲಿಂದ ಬಸ್ಸಿನಲ್ಲಿ ಹೋಗುತ್ತಿದ್ದೆವು. ಉಪ್ಪಳದಿಂದ ಪೈವಳಿಕೆಗೆ ರಾತ್ರಿ ದಿನದ ಕೊನೆಯ ಬಸ್ಸು ಜನಪ್ರಿಯ ಒಂಭತ್ತು ಗಂಟೆಗೆ ಹೋದರೆ ಆನಂತರ ಪೈವಳಿಕೆಯ ಕಡೆಗೆ ಹೋಗಬೇಕೆಂದರೆ ಬಸ್ಸು ಇರುತ್ತಿರಲಿಲ್ಲ. ಒಂದೋ ಆಟೋ ಅದೂ ರಾತ್ರಿ ಬಂದರೆ ಅದೂ ದುಬಾರಿ ವೆಚ್ಚ. ಅದಲ್ಲದೇ ಇದ್ದರೆ ಹತ್ತು ಕಿಲೋ ಮೀಟರ್ ನಡೆದೇ ಹೋಗಬೇಕು. ಸುಮಾರು ಎರಡು ಘಂಟೆ ಅದೂ ತಡ ರಾತ್ರಿ ಯಾವುದೇ ಟಾರ್ಚ್ ಬೆಳಕು ಇಲ್ಲದೇ ನಡೆದು ಹೋಗಬೇಕಿತ್ತು. ಹೀಗಾಗಿ ಉಪ್ಪಳದಲ್ಲಿ ಕೆಲವರು ದ್ವಿಚಕ್ರವಾಹನ ಇಟ್ಟು ಮಂಗಳೂರಿಗೆ ಹೋಗುತ್ತಿದ್ದರು. ತಡ ರಾತ್ರಿಯ ತನಕವೂ ಉಪ್ಪಳದ ತನಕ ಬಸ್ಸು ಇರುತ್ತಿದ್ದುದರಿಂದ ನಿಶ್ಚಿಂತೆಯಿಂದ ಹೋಗಿ ಬರಬಹುದಿತ್ತು.  


ಆ ಕಾಲದಲ್ಲಿ ವಾಹನಕ್ಕೆ ಇಂಧನ ತುಂಬಿಸಬೇಕಾದರೆ ಈಗಿನಂತೆ ಪೆಟ್ರೋಲ್ ಬಂಕ್ ಇರಲಿಲ್ಲ. ದೂರದ ಕರ್ನಾಟಕ ಗಡಿ ಪ್ರದೇಶದ ತಲಪಾಡಿಗೆ ಹೋಗಬೇಕಿತ್ತು. ಹಲವು ಸಲ ಉಪ್ಪಳದಲ್ಲಿ ವಾಹನ ಇರಿಸುವ ಬದಲು ತಲಪಾಡಿಯ ಪೆಟ್ರೋಲ್ ಬಂಕ್ ನಲ್ಲಿ ವಾಹ ಇರಿಸಿ ಹಿಂದಿರುಗಿ ಬರುವಾಗ ವಾರಕ್ಕೆ ಆಗುವಷ್ಟು ಪೆಟ್ರೋಲ್ ತುಂಬಿಸಿ ಬರುತ್ತಿದ್ದೆವು. ಇಲ್ಲವಾದರೆ ಕಾಳಸಂತೆಯಲ್ಲಿ ಅಧಿಕ ಬೆಲೆಯ ಕಲಬೆರಕೆಯ  ಪೆಟ್ರೋಲ್ ಗತಿ. ಆ ದಿನಗಳೇ ಹಾಗಿದ್ದವು. ಈಗಿನ ತಲೆಮಾರಿಗೆ ಇದನ್ನು ಕಲ್ಪಿಸುವುದಕ್ಕೂ ಸಾಧ್ಯವಿಲ್ಲ. ಅದರಂತೆ ಆಗ ನಡೆದ ಇರಾಕ್ ಯುದ್ಧವನ್ನೂ ಕಲ್ಪಿಸಿಕೊಳ್ಳುವುದು ಕಷ್ಟದ ಮಾತು. ಆದರೂ ಇರಾಕ್ ಯುದ್ಧದಲ್ಲಿ ಇಲ್ಲಿ ಬಂದ ಕಷ್ಟಗಳು ಈಗಿನದಕ್ಕೆ ಹೋಲಿಸಿದರೆ ಬಹಳ ಕಡಿಮೆ ಎನ್ನಬೇಕು. ಮನೆಯಿಂದ ಹೊರಟವರು ಪುನಃ ಮನೆಗೆ ಬಂದು ಸೇರಿದ ಮೇಲೆಯೇ ಭರವಸೆ. ಪೆಟ್ರೋಲ್ ಆಭಾವದಿಂದ ಬಸ್ಸು ಲಾರಿಗಳು ದಾರಿ ಮಧ್ಯೆಯೇ ನಿಲ್ಲಿತ್ತಿದ್ದದ್ದು ಸಾಮಾನ್ಯ. ಪ್ರತಿ ಪೆಟ್ರೋಲ್ ಬಂಕ್ ಗಳಲ್ಲಿ ಮೈಲು ಗಟ್ಟಲೆ ವಾಹನಗಳ ಸರದಿ ಸಾಲು ನಿಂತಿರುತ್ತಿದ್ದವು. ಯಾವಾಗ ಪೆಟ್ರೋಲ್ ಡೀಸಲ್ ಸಿಗುತ್ತದೆ ಎಂಬ ಭರವಸೆಯೇ ಇರುತ್ತಿರಲಿಲ್ಲ. ಈಗಿನ ಸರಕಾರಕ್ಕೆ ದೂರುವವರು ಒಂದಿಷ್ಟು ಆದಿನಗಳನ್ನು ನೆನಪಿಸಿಕೊಂಡರೆ ಸಾಕು. ಈಗಲೂ ಸಮಸ್ಯೆಗಳು ಇವೆ. ಅದಕ್ಕೆ ಹಲವು ಕಾರಣಗಳು ಇರುತ್ತವೆ. ನಾವು ಅತಿಯಾಗಿ ಪೆಟ್ರೋಲ್ ಉತ್ಪನಗಳಿಗೆ ಅವಲಂಬಿಸಿರುವುದೇ ಕಾರಣ. ಆಗ ಹಳ್ಳಿಯ ಮನೆಗಳು ಈಗಿನಂತೆ ಅಡುಗೆ ಅನಿಲಕ್ಕೆ ಅವಲಂಬಿಸಿರಲಿಲ್ಲ. ಈಗ ಹಳ್ಳಿಯ ಮನೆಗಳು ಯಾಕೆ ದೇವಸ್ಥಾನಗಳೂ ಈ ವಾಯು ಪ್ರಭಾವಕ್ಕೆ ಒಳಗಾಗಿದೆ. 

ಗಲ್ಬ್ ಯುದ್ದದ ಸಮಯ ಆ ಒಂದು ದಿನ ಸಾಯಂಕಾಲ  ನನಗೆ ಅಗತ್ಯ ಕೆಲಸಕ್ಕಾಗಿ ಮಂಗಳೂರಿಗೆ ಹೋಗಬೇಕಿತ್ತು. ಗಲ್ಫ್ ಯುದ್ದದ ಕಾರಣ ಹಲವಾರು ಬಸ್ಸುಗಳು ತಮ್ಮ ಸಂಚಾರವನ್ನು ಸ್ಥಗಿತಗೊಳಿಸಿದ್ದವು.  ಸ್ಕೂಟರ್ ತೆಗೆದುಕೊಂಡು ಹೊರಟೆ.  ಸ್ಕೂಟರ್  ಉಪ್ಪಳದಲ್ಲಿಟ್ಟು ಮಂಗಳೂರಿಗೆ ಹೋಗಬೇಕೆಂದು ಕೊಂಡರೆ  ಪೆಟ್ರೋಲ್ ಅದಾಗಲೇ ರಿಸರ್ವ್ ಗೆ ಬಿತ್ತು.  ಇನ್ನು ತಲಪಾಡಿಯವರೆಗೆ ಹೋಗಿ ಅಲ್ಲಿ ಇಟ್ಟು ಬರುವಾಗ ಪೆಟ್ರೋಲ್ ಹಾಕಿಕೊಂಡು ಬಂದಾರಯಿತು ಎಂದುಕೊಂಡು ತಲಪಾಡಿಗೆ ಬಂದರೆ ಪಟೋಲ್ ಬಂಕ್ ನಲ್ಲಿ ಅದಾಗಲೇ ವಾಹನಗಳ ಸರದಿ ಇತ್ತು.  ಪೆಟ್ರೋಲ್ ಬಂಕ್ ನವ ನನಗೆ ಪರಿಚಯಸ್ಥ. ಆತ ಪೆಟ್ರೋಲ್ ಬರಬಹುದು ಎಂದು ಹೇಳಿದ. ಗಾಡಿಯ ಕೀ ಆತನಿಗೆ ಕೊಟ್ಟು ಪೆಟ್ರೋಲ್ ಬಂದರೆ ತುಂಬಿಸುವಂತೆ ಹೇಳಿ ಅಲ್ಲಿಂದ ಸಿಟಿ ಬಸ್ ಹತ್ತಿ ಮಂಗಳೂರಿಗೆ ಹೊರಟೆ. 

ಮಂಗಳೂರಿನಿಂದ ಕೆಲಸ ಮುಗಿಸಿ ಹಿಂತಿರುಗಿ ಬರುವಾಗ ತುಸು ತಡವೇ ಆಗಿತ್ತು. ರಾತ್ರಿಯ ಒಂಭತ್ತರ ಹತ್ತಿರ  ಬಸ್ಸು ತಲಪಾಡಿಯಲ್ಲಿ ನಿಂತಾಗ ನೋಡಿದರೆ ಪೆಟ್ರೋಲ್ ಬಂಕ್ ಮುಂದೆ ವಾಹನಗಳ ಸರದಿ ಹಾಗೇ ಇತ್ತು. ನಿರೀಕ್ಷೆಯಂತೆ ಪೆಟ್ರೋಲ್ ಬರಲಿಲ್ಲ. ಆದರೇನು ಮಾಡುವುದು. ಆಗಲೇ ರಾತ್ರಿ ಬಹಳ ಹೊತ್ತಾಗಿತ್ತು. ಇನ್ನು ಅಲ್ಲಿ ಕಾದುಕುಳಿತುಕೊಳ್ಳುವುದು ಅಸಾಧ್ಯದ ಮಾತು. ಕೈಯಲ್ಲಿ ಒಂದಿಷ್ಟು ಸಣ್ಣ ಪುಟ್ಟ ಸಾಮಾನುಗಳ ಲಗೇಜ್ ಇತ್ತು. ಏನಾದರಾಗಲೀ ಹೊರಟು ಬಿಡೋಣ ಹೋದಷ್ಟು ದೂರ ಹೋಗೋಣ ಎಂದುಕೊಂಡು ಗಾಡಿ ಸ್ಟಾರ್ಟ್ ಮಾಡಿ ಹೊರಟೆ. ಇಷ್ಟದೇವರನ್ನು ಮನಸಾರೆ ಸ್ಮರಿಸಿದೆ. ದೇವರೇ ಕ್ಷೇಮದಲ್ಲಿ ಮನೆಗೆ ಮುಟ್ಟಿಸು ಅಂತ ಬೇಡಿಕೊಂಡೆ. ದೈವಾನುಗ್ರಹ ಇದ್ದರೆ ಮನೆಗೆ ತಲುಪುತ್ತೇನೆ ಎಂದುಕೊಂಡೆ.  ಅನ್ಯಥಾ ಏನು ಮಾಡುವುದಕ್ಕೂ ನನಗೆ ಹೊಳೆಯಲಿಲ್ಲ. ಬೇರೆ ಎನು ಮಾಡುವ ಹಾಗೂ ಇರಲಿಲ್ಲ. ಒಂದೊಂದೇ ಕಿಲೋ ಮೀಟರ್ ದೂರ ಬಂದಷ್ಟು ಅಬ್ಭಾ ಎನ್ನುವ ಹಾಗಿತ್ತು. ಉಪ್ಪಳದ ತನಕ ಹೋದರೆ ಅಲ್ಲಿ ಗಾಡಿ ಇಟ್ಟು ಏನಾದರೂ ವ್ಯವಸ್ಥೆ ಮಾಡಬಹುದು ಎಂದುಕೊಂಡೆ ಉಪ್ಪಳದ ತನಕ ನಿರಾತಂಕವಾಗಿ ಬಂದಾಗ ಇನ್ನು ನಮ್ಮದೇ ಊರು ಹೋದಷ್ಟು ದೂರ ಹೋಗುವ ಖಾಲಿಯಾದರೆ ಯಾವುದಾದರು ಮನೆ ಮುಂದೆ ಗಾಡಿ ಇಟ್ಟು ಹೋದರಾಯಿತು ಎಂದು ಕೊಂಡು ಉಪ್ಪಳದಿಂದ ಪೈವಳಿಕೆ ಕಡೆ ಹೊರಟಿದ್ದೆ. ವಾಹನ ಸಂಚಾರ ತೀರ ವಿರಳವಾಗಿತ್ತು. ಗಲ್ಪ್ ಯುದ್ದ ಜನಜೀವನದ ಮೇಲೆ ಸಾಕಷ್ಟು ಪರಿಣಾಮ ಉಂಟು ಮಾಡಿತ್ತು. ಅಂಗಡಿ ಮುಂಗಟ್ಟುಗಳು ಬೇಗನೆ ಬಾಗಿಲು ಹಾಕಿದ್ದವು. ಉಪ್ಪಳದಿಂದ ಕೈಕಂಬ ..ಸೋಂಕಾಲ್ ಕುಬಣೂರು ಬೇಕೂರು ದಾಟುತ್ತಿದ್ದಂತೆ ಒಂದಷ್ಟು ಖುಷಿಯಾಯಿತು.. ಇನ್ನು ಆರೇಳು ಕಿಲೋ ಮೀಟರ್ ಪೈವಳಿಕೆ ತಲುಪಬಹುದು. ಬೇಕೂರು ಕನ್ನಟಿಪಾರ, ಜೋಡುಕಲ್ಲು ಕಳೆದು ಅಟ್ಟೇಗೋಳಿ ಚಡಾವ್ ಹತ್ತಿದ ನಂತರ ಅಬ್ಬ ಎನಿಸಿತು . ಇನ್ನು ಸ್ವಲ್ಪ ದೂರ ಅಷ್ಟೆ. ಅಟ್ಟೆಗೋಳಿ ದಾಟಿ ಬಾಯಿಕಟ್ಟೆ ದಾಟಿ ಮುಂದೆ ಬಂದರೆ ಮತ್ತೆ ನಮ್ಮೂರು ಪೈವಳಿಕೆ. ಅಲ್ಲಿಂದ ಒಂದೆರಡು ತಿರುವು ದಾಟಿದರೆ  ನಮ್ಮ ಮನೆ. ಪೈವಳಿಕೆ ಬಂದರೆ  ಅಲ್ಲಿ ಇನ್ನೂ ಅಲ್ಪ ಸ್ವಲ್ಪ ಜನ ಸಂಚಾರವಿತ್ತು. ಎಷ್ಟೆಂದರೂ ನಮ್ಮ ಪೈವಳಿಕೆ. ಅಲ್ಲಿ ತಡರಾತ್ರಿಯಾದರೂ ಯಾರಾದರೂ ಸುತ್ತಾಡಿಕೊಂಡಿರುತ್ತಾರೆ. ಗಂಟೆ ಹತ್ತು ಕಳೆದಿತ್ತು. ಅಲ್ಲಿ ತನಕ ಪೆಟ್ರೋಲ್ ಖಾಲಿಯಾಗದೇ ಇದ್ದದ್ದು ಆಶ್ಚರ್ಯ ತಂದಿತು. ಸ್ಕೂಟರ್ ನ ಮೈಲೇಜ್ ಬಗ್ಗೆ ಅಭಿಮಾನ ಉಂಟಾಯಿತು.  ಪೈವಳಿಕೆ ಬಜಾರ್ ಕಳೆದು ಗುಂಡದ ಪಾರೆ ತಿರುವು ದಾಟಿ ಒಂದಷ್ಟು ಮುಂದೆ ಬಂದರೆ ನಮ್ಮ ಮನೆ ಲಾಲ್ ಬಾಗ್. ಗುಂಡದ ಪಾರೆ ಎರು ಬಂದಾಗ ಗಾಡಿ ಸ್ತಭ್ದವಾಯಿತು. ಪೆಟ್ರೋಲ್ ಖಾಲಿಯಾಗಿತ್ತು. ಅದುವರೆಗೂ ನನ್ನನ್ನು ತಲುಪಿಸಿದ ಗಾಡಿ ಇನ್ನು ಸಾಧ್ಯವಿಲ್ಲ ಎಂದು ನಿಂತು ಬಿಟ್ಟಿತು. ಇನ್ನು ಒಂದಷ್ಟು ಇಳಿಜಾರು ರಸ್ತೆ. ಹಾಗಾಗಿ ಗಾಡಿ ಜೋರಾಗಿ ತಳ್ಳಿ ನ್ಯೂಟ್ರಲ್ ನಲ್ಲೇ ಮನೆಯ ಅಂಗಳ ತಲುಪಿ ದೊಡ್ಡ ನಿಟ್ಟು ಸಿರು ಬಿಟ್ಟೆ. 

ಈಗಿನ ಇರಾನ್ ಯುದ್ಧ ಆಗಿನ ಇರಾಕ್ ಯುದ್ದ....ಎರಡನ್ನೂ ತುಲನೆ ಮಾಡುವುದು ಸಾಧ್ಯವಿಲ್ಲ. ಆದರೆ ಆಗಿನಷ್ಟು ಕಷ್ಟ ಇನ್ನೂ ಎದುರಾಗಿಲ್ಲ. ಈಗ ಅಡುಗೆ ಅನಿಲಕ್ಕೆ ಸ್ವಲ್ಪ ಅದು ವಾಣಿಜ್ಯ ಬಳಕೆಗೆ ಸ್ವಲ್ಪ ಅವ್ಯವಸ್ಥೆ ಆಗಿದೆ. ಆದರೆ ಆ ದಿನಗಳ ಬವಣೆ ಇನ್ನು ಬಾರದಿರಲಿ ಎಂದು ಪ್ರಾರ್ಥನೆ.  ಆಗ ಯಾವ ಸರಕಾರ ಇತ್ತೋ ಈಗ ಯಾವ ಸರಕಾರ ಇದೆಯೋ ಯಾರು ಪ್ರಧಾನಿಯೋ ಇವುಗಳೆಲ್ಲ ಮುಖ್ಯವಾಗುವುದಿಲ್ಲ. ಯಾವುದಿದ್ದರು ಬರುವ ವಿಕಲ್ಪ ಪರಿಭವ ಕಷ್ಟಗಳು ಬೇರೆಯೇ ಆಗಿರುತ್ತದೆ. ಇವುಗಳು ಜಾಗತಿಕ ವಿಪತ್ತುಗಳು. ರಾಜಕೀಯ ತೆವಲಿಗಾಗಿ ನಾವು ಕೆಸರು ಎರಚಿಕೊಂಡು ನಮ್ಮ ಮನಸ್ಸನ್ನು ಮಲಿನ ಮಾಡುತ್ತಿದ್ದೇವೆ ಅಷ್ಟೆ. ಬಂದ ಕಷ್ಟವನ್ನು ಎದುರಿಸಿ ವಿಪತ್ತಿನಿಂದ ಪಾರಾಗುವ ಆತ್ಮಸ್ಥೈರ್ಯವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ನಾವು ಇಲ್ಲಿಕುಳಿತು ಯಾವುದೋ ರಾಷ್ಟ್ರದ ಪರವಾಗಿ ಚರ್ಚಿಸಬಹುದು. ಕೊನೆಗೆ ನಮಗೆ ನಮ್ಮ ಭಾರತವೇ ಬೇಕು. ಅದುವೇ ಶ್ರೇಷ್ಠ. ಎಲ್ಲದಕ್ಕಿಂತಲೂ ಗಲ್ಪ್ ನಿವಾಸಿಗಳನ್ನು  ನೋಡಿದರೆ ನಾವು ಭಾರತೀಯರು ಎಂಬ ಅಭಿಮಾನ ಮೂಡುತ್ತದೆ. ಇದು ಮುಖ್ಯ. 

  ಸ್ಕೂಟರ್ ನ ಮೈಲೇಜ್ ದೈವಾನುಗ್ರಹದ ಮೈಲೇಜ್ ಎಲ್ಲ ಸೇರಿ ಮನೆ ಸೇರಿದಾಗ ಏನೂ ತಿಂದಿಲ್ಲದಿರುವುದು ನೆನಪಾಗಿ ಹೊಟ್ಟೆ ಹಸಿವು ತಿಳಿಯಿತು. ಹೊಟ್ಟೆ ತುಂಬ ಊಟಮಾಡಿ ಮಲಗಿದವನಿಗೆ ...ದೂರದ ತಲಪಾಡಿಯ ಪೆಟ್ರೋಲ್ ಬಂಕ್ ದೃಶ್ಯ ಇನ್ನೂ ಕಣ್ಣ ಮುಂದೆ ಇದ್ದಂತೆ ಭಾಸವಾಯಿತು. 

Thursday, March 12, 2026

ಮನದ ಪಯಣ


“Every moment of worship is when your thoughts and mind turn toward God.” 

ವಿದ್ವಾಂಸರೊಬ್ಬರು ಪ್ರವಚನದಲ್ಲಿ ಹೇಳಿದ ಮಾತು ಇದು.   ನಮ್ಮ ಎಲ್ಲಾ ಚಲನವಲನಗಳಲ್ಲೂ ಭಗವಂತನ ಆರಾಧನೆ ಇದೆ. ಯಾವಾಗ ನಮ್ಮ ಮನಸ್ಸು ಭಗವಂತನ ಕುರಿತು ಚಿಂತಿಸುತ್ತದೋ ಆಗ ನಾವೇನು ಮಾಡಿದರೂ ಅದು ಭಗವಂತನ ಆರಾಧನೆಯಾಗುತ್ತದೆ. ಬೆಳಗ್ಗೆ ನಿದ್ದೆಯಿಂದ ಏಳುವಾಗ ಭಗವಂತನ ಸ್ಮರಣೆಯೊಂದು  ಮನಸ್ಸಿನ ಚಿಂತನೆಯನ್ನು ಭಗವಂತನ ಕಡೆಗೆ ಹರಿಸುತ್ತದೆ. ರಾತ್ರಿ ಮಲಗುವ ಮೊದಲು ಭಗವಂತನ ನಾಮಸ್ಮರಣೆ ಒಂದು ಸಾಕು ನಾವು ನಿದ್ರೆಯಲ್ಲೂ ಭಗವಂತನ ಆರಾಧನೆ ಮಾಡಿದಂತೆ. ಇದು ಜ್ಞಾನಿಗಳು ಹೇಳುವ ಮಾತು. 

ಕೈಯಲ್ಲಿ ಇರುವ ಆಹಾರ, ಕೈತುತ್ತು ಕೈಯಿಂದ ಬಾಯಿಗೆ ನಂತರ ಗಂಟಲಿಗೆ ಪ್ರವೇಶಿಸುವ ತನಕ ನಮ್ಮದು. ಆನಂತರ ಗಂಟಲು ಇಳಿದನಂತರ ಅದು ನಮ್ಮದಾಗಿರುವುದಿಲ್ಲ. ನಮ್ಮಲ್ಲಿ ಅಹಂ ಇರುವ ತನಕ ನಮ್ಮಲ್ಲಿ ಭಗವಂತನಿರುವುದಿಲ್ಲ.  ಎಲ್ಲಿ ನಮ್ಮ ಅಹಂಕಾರವನ್ನು ಕಳೆಯುತ್ತೇವೆಯೋ ಅಲ್ಲಿ ಭಗವಂತನ ಸಾಕ್ಷಾತ್ಕಾರವಿರುತ್ತದೆ.  ನಾನು ನಮಸ್ಕಾರ ಮಾಡುತ್ತೇನೆ ಎಂದರೂ ಅಲ್ಲಿ ಅಹಂ ಇರುತ್ತದೆ.  ನಮಸ್ಕಾರ ಎಂಬುದು ನಮ್ಮನ್ನು ಭಗವಂತನಲ್ಲಿಗೆ ಸೆಳೆಯುವ ಕ್ರಿಯೆ. ಅದು ಶರಣಾಗತಿಯ ಭಾವ. ಅಲ್ಲಿ ಅಹಂ ಇದ್ದರೆ ನಮಸ್ಕಾರ ಎಂಬುದು ಕೇವಲ ಚಮತ್ಕಾರವಾಗಿಬಿಡುತ್ತದೆ. ಚಮತ್ಕಾರ ಅದೃಷ್ಟವನ್ನು ಅವಲಂಬಿಸುವ ವಂಚನೆಯ ಹಾದಿ. ಆದರೆ ನಮಸ್ಕಾರ ಸಂಭಂಧಗಳನ್ನು ವೃದ್ಧಿಸುವ ಮೊದಲ ಮೆಟ್ಟಲು. ಭಗವಂತನ ಜತೆಗಿನ ಸಂಬಂಧ ಸೃಷ್ಟಿಯಾಗುವುದೇ ನಮಸ್ಕಾರದಿಂದ. 

ಭಗವಂತ ರೂಪ ರಹಿತ, ಗುಣರಹಿತ ಭಾವ ರಹಿತ. ಆತನಿಗೆ ಹಸಿವು ಬಾಯಾರಿಕೆಗಳಿಲ್ಲ. ಹಾಗಾದರೆ ಆತನಿಗೆ ನಾವು ಯಾಕೆ ನೈವೇದ್ಯ ಅರ್ಪಿಸಬೇಕು? ನಾವೇಕೆ ಬೇಡಿಕೊಳ್ಳಬೇಕು? ಸಕಲ ಆಗುಹೋಗುಗಳಿಗೆ ಆತನೇ ಕಾರಣೀಭೂತನಾಗುವಾಗ ಆತನ ಸಮ್ಮುಖದಲ್ಲಿನ ನಮ್ಮ ವರ್ತನೆ ಆತನಿಗಾಗಿ ಅಲ್ಲ. ಆತನ ಅನುಗ್ರಹಕ್ಕೆ ಅಂತ ನಮ್ಮ ಭಾವನೆಗಳ ಪ್ರಕಟಣೆ. ಹಸಿವು ನೀರಡಿಕೆ ಇಲ್ಲದ ದೇವರಿಗೆ ನಾವು ಎಲ್ಲವನ್ನೂ ಅರ್ಪಿಸುತ್ತೇವೆ. ಅದು ನಮ್ಮ ಮನಸ್ಸಿನ ಭಾವನೆಗೋಸ್ಕರ ನಾವು ಅರ್ಪಿಸುತ್ತೇವೆ ಹೊರತು ಅದು ಭಗವಂತನಿಗಾಗಿ ಅಲ್ಲ. ಭಗವಂತನಿಗೆ ಭಾವನೆಯೂ ಇಲ್ಲದ ಮೇಲೆ ಆತನ ತೃಪ್ತಿ ಎಲ್ಲಿದೆ. ಅಲ್ಲಿ ನಮ್ಮದೇ ಅತೃಪ್ತ ಮನಸ್ಸಿನ ಪರಿಹಾರವಿರುತ್ತದೆ. ಎಲ್ಲ ಭಾವನೆಗಳೂ ಭಗವಂತನ ಕಡೆಗೆ ಸರಿಯುತ್ತದೆ. ಅದೇ ಭಗವಂತನಿಗೆ ಸಲ್ಲುವ ಗೌರವ. 

ನಾವು ಯಾವುದೋ ದೇವರ ಚಿತ್ರದ ಮುಂದೆ ನಿಂತುಕೊಂಡು ಇಲ್ಲವೇ ದೇವರ ಮೂರ್ತಿಯ ಮುಂದೆ ನಿಂತುಕೊಂಡು ಪ್ರಾರ್ಥನೆ ಮಾಡಿದರೂ ಕಣ್ಣನ್ನು ಮುಚ್ಚಿದಾಗಲೇ ನಮಗೆ ಎದುರು ಇರುವ ಭಗವಂತನ ಪ್ರತೀಕದ ಜತೆಗೆ ಅನುಸಂಧಾನ , ಅಥವ ಸಂಭಂಧ ಸಾಧ್ಯವಾಗುತ್ತದೆ. ಭೌತಿಕವಾಗಿ ಭಗವಂತನ ಬಳಿಗೆ ನಾವು ಹೋಗುವುದಕ್ಕೆ ಸಾಧ್ಯವಿಲ್ಲ. ಮನಸ್ಸಿನಿಂದ ಮಾತ್ರವೇ  ಭಗವಂತನ ಬಳಿಗೆ ಹೋಗಬಹುದು. ಹಾಗಾಗಿ ಎದುರು ಇರುವ ಚಿತ್ರವು ಕೇವಲ ಭಗವಂತನ ಪ್ರತೀಕವಾಗುತ್ತದೆ ಹೊರತು ಬೌತಿಕವಾಗಿ ಭಗವಂತನಲ್ಲ. ಹಾಗಾಗಿ ಅದನ್ನು ಮೂರ್ತ ಸ್ವರೂಪ ಎನ್ನುವುದು. ಮೂರ್ತಿ ಎಂಬುದು ಕೇವಲ ನಮ್ಮ ಮನಸ್ಸಿನ ಪ್ರತೀಕ. ಮನಸ್ಸು ಭಗವಂತನಲ್ಲಿ ಐಕ್ಯವಾಗುವುದು ಅತೀ ಮುಖ್ಯ ಹೊರತು ಎದುರಿನ ಮೂರ್ತಿಯಲ್ಲ. ಮೂರ್ತಿ ಎಂದರೆ ಕನ್ನಡಿಯಂತೆ. ಕನ್ನಡಿ ಎದುರು ನಾವು ಯಾವುದನ್ನು ಇರಿಸುತ್ತೇವೋ ಅದರ ಪ್ರತಿಬಿಂಬ ಕನ್ನಡಿಯಲ್ಲಿ ಬರುತ್ತದೆ. 

ನಮ್ಮ ಪ್ರತಿಯೊಂದು ಚಲನೆಯೂ ಭಗವಂತನ ಕಡೆಗೆ ಆಗುವಾಗ ಅಲ್ಲಿ ನಮ್ಮ ಮನಸ್ಸಿನ ಭಾವನೆಗಳು ಮುಖ್ಯವಾಗುತ್ತದೆ. ಭಗವಂತನಿಗೆ ನಾವು ಎಷ್ಟು ಕೊಟ್ಟಿದ್ದೇವೆ,್? ಎನು ಕೊಟ್ಟಿದ್ದೇವೆ?  ಯಾರು ಕೊಟ್ಟಿದ್ದಾರೆ?  ಎಂಬುದು ಮುಖ್ಯವಲ್ಲ. ನಾವು ಹೇಗೆ ಕೊಟ್ಟಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಮನಸ್ಸಿನಿಂದ ನಾವು ತೊಟ್ಟು ನೀರನ್ನು ಅರ್ಪಿಸಿದರೂ ಅದು ಅರ್ಘ್ಯವಾಗುತ್ತದೆ. ಅರ್ಘ್ಯ ಎಂಬುದು ಅನಂತತೆಯ ಸಂಕೇತ. ಅದು ಮಿತಿಯೊಳಗೆ ಇರುವುದಿಲ್ಲ. ಅದಕ್ಕೆ ಗಾತ್ರವಿಲ್ಲ. ಅದಕ್ಕೆ ರೂಪವಿರುವುದಿಲ್ಲ. ಅಲ್ಲಿ ನಮ್ಮ ಮನಸ್ಸೇ ಮುಖ್ಯವಾಗುತ್ತದೆ. ಮನಸ್ಸಿನ ಭಾವನೆಯೇ ಮುಖ್ಯವಾಗುತದೆ. ದೇವರು ಎಲ್ಲರನ್ನೂ ಎಲ್ಲವನ್ನೂ ಸೃಷ್ಟಿ ಮಾಡುತ್ತಾನೆ. ಆದರೆ ಮನುಷ್ಯನನ್ನು ಸೃಷ್ಟಿ ಮಾಡುವಾಗ ಅಲ್ಲೊಂದು ಮನಸ್ಸನ್ನು ಇಡುತ್ತಾನೆ. ಮನಸ್ಸಿನ ತುಂಬ ಭಾವನೆಗಳನ್ನು ಬಿತ್ತುತ್ತಾನೆ. ಆ ಭಾವನೆಗಳ ಪ್ರತಿ ಚಿಗುರು ಶಾಖೆಗಳು ಭಗವಂತನ ಕಡೆಗೆ ಚಲಿಸಿದಾಗಲೇ ಭಗವಂತನಿಗೆ ಸಲ್ಲುವ ಗೌರವವಾಗುತ್ತದೆ.  ಇದು ಮನುಷ್ಯನ ಬದುಕಿನ ಪಯಣ. ಮನದ ಪಯಣ. 


Friday, February 27, 2026

ಪೃಚ್ಛಕ ಪಾರ್ಥ

 ಹಲವು ಸಲ  ಬರಹಗಳಿಗೆ ವಿಷಯ ಹೇಗೆ ಸಿಗುತ್ತದೆ ಎಂದು ಕೇಳಿದರೆ, ಅದು ಹೀಗೂ ಇರುತ್ತದೆ.  ಒಂದು ಸಲ ಭಗವದ್ಗೀತೆಯ ಪುಟಗಳನ್ನು ತಿರುವಿ ನೋಡಿದರೆ ಹಲವಾರು ಚಿಂತನೆಗಳು ಚಿಗುರೊಡೆಯುತ್ತದೆ. ಹಾಗೆ ಚಿಗುರಿದ ವಿಷಯಗಳು ಹಲವು. 



"ಕಥಂ ಭೀಷ್ಮ ಮಹಂ ಸಂಖ್ಯೇ ದ್ರೋಣಂ ಚ ಮಧುಸೂದನ |  ಇಷುಭಿಃ ಪ್ರತಿಯೋತ್ಸ್ಯಾಮಿ ಪೂಜಾರ್ಹ ವರಿಸೂದನ"

ಭಗದ್ಗೀತೆಯ ದ್ವೀತಿಯ ಅಧ್ಯಾಯದ ಸಾಂಖ್ಯಯೋಗದ ನಾಲ್ಕನೇ ಶ್ಲೋಕ. ಇದು ಅರ್ಜುನ ಶ್ರೀಕೃಷ್ಣನಲ್ಲಿ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸುವ ಮಾತು. ," ಎಲೈ ಮಧೂಸದನನೇ , ಶತ್ರುಗಳನ್ನು ನಾಶಗೋಳಿಸುವವನೇ ಪೂಜಾರ್ಹರಾಗಿರುವ ಭೀಷ್ಮ ದ್ರೋಣರನ್ನು ಕದನದಲ್ಲಿ ಬಾಣಗಳಿಂದ  ಹೇಗೆ ಹೊಡೆಯಲಿ?" 

ಭೀಷ್ಮ ದ್ರೋಣರಿಗಿಂತ ಅರ್ಜುನನಿಗೆ ಮಾನವೀಯ ಸಂಭಂದಗಳ ಅರಿವು ಮತ್ತು ಅದರಲ್ಲಿ ಗೌರವ ಇತ್ತು ಅಂತ ಮೇಲು ನೋಟಕ್ಕೆ ಅರ್ಜುನ ಹೇಳುವುದು ಸರಿ ಎಂದೆನಿಸುತ್ತದೆ, ಆದರೆ ಅರ್ಜುನನ ಚಿಂತನೆ ಅಸ್ಥಾನದ್ದು ಅಂತ ಶ್ರೀಕೃಷ್ಣ ಹೇಳುತ್ತಾನೆ. ಯಾಕೆ ಅರ್ಜುನನಿಗೆ ಮಾತ್ರ ವಿರೋಧಿ ಸ್ಥಾನದಲ್ಲಿ ಕುಳಿತ ಭೀಷ್ಮ ದ್ರೋಣ ಕೃಪರ ಮೇಲೆ ಅನುಕಂಪ ಮೂಡುತ್ತದೆ. ಅದೇ ಅನುಕಂಪ ಭೀಷ್ಮರಿಗಾಗಲೀ ದ್ರೋಣರಿಗಾಗಲೀ ಅರ್ಜುನನ ಮೇಲೆ ಅಥವಾ ಪಾಂಡವರ ಮೇಲೆ ಯಾಕೆ ಮೂಡುವುದಿಲ್ಲ? ಅವರಿಗೆ ಮಮಕಾರ ಇರಲಿಲ್ಲವೇ? ಅನುಕಂಪ ಇರಲಿಲ್ಲವೇ ? ಯಾವ ಕೊಡುಗೆಯೂ ಅಸ್ಥಾನದಲ್ಲಿ ಇರಕೂಡದು. ಇದರ ಅರಿವು ಅತೀ ಮುಖ್ಯ. ಭೀಷ್ಮ ದ್ರೋಣಾದಿಗಳಿಗೆ ಆ ಅರಿವಿನ ಜ್ಞಾನ ಇತ್ತು. ಅರ್ಜುನನ ಅನುಕಂಪ ಅಸ್ಥಾನದಲ್ಲಿತ್ತು. ಯುದ್ಧವೇ ನಿರ್ಣಯವಾಗಿ ಯುದ್ಧರಂಗಕ್ಕೆ ಬಂದ ಮೇಲೆ ಅಲ್ಲಿ ಯುದ್ದ ಮತ್ತು ವೀರೋಧಿ ಇವುಗಳಷ್ಟೇ ಮುಖ್ಯವಾಗುತ್ತದೆ. ಅರ್ಜುನ ಸಂಭಂಧಗಳನ್ನಷ್ಟೇ ನೋಡಿದ. ಆದರೆ ಕರ್ಮವನ್ನು ಮರೆತ.

ವಾಸ್ತವದ ಪ್ರಾಪಂಚಿಕ ವ್ಯವಹಾರದಲ್ಲೂ  ಹೀಗೆ, ನಮ್ಮ ಕರ್ತವ್ಯ ಪ್ರಜ್ಞೆ ಜಾಗೃತವಾಗಬೇಕು. ಪರಿಶುದ್ಧ ಹಾಲನ್ನು ಶುದ್ದವಾದ ಪಾತ್ರೆಯಲ್ಲೇ ತುಂಬಿಸಿಕೊಳ್ಳಬೇಕು. ಹಾಗಾದರೆ ಮಾತ್ರವೇ ಹಾಲು ಹಾಲಾಗಿ ಉಳಿಯುತ್ತದೆ ಇಲ್ಲವಾದರೆ ಅದು ಕೆಡುತ್ತದೆ. ಮೂರ್ಖರ ಗುಂಪಿನಲ್ಲಿ ವೇದಾಂತ ಬೋಧಿಸಿದರೆ ವೇದಾಂತವೇ ಕೆಡುಕಾಗಿ ಕಾಣಬಹುದು.ಹಾಗಾಗಿ ಅರ್ಜುನನ ಅನುಕಂಪ ಕರುಣೆ, ಗುರು ಹಿರಿಯರ ಮೇಲಿನ ಪ್ರೀತಿ ಗೌರವ  ಎಲ್ಲವೂ ಇಲ್ಲಿ ಅಪ್ರಸ್ತುತವಾಗುತ್ತದೆ. ಮಾತ್ರವಲ್ಲ ಅದು ನಿಷ್ಫಲವಾಗುತ್ತದೆ.  ಅಪ್ರಸ್ತುತವಾದ ಅರ್ಜುನನ ಸದ್ಭಾವನೆ ಏನಿದ್ದರೂ ಅದು ಆತನ ಪುರುಷತ್ವವನ್ನು ಹರಣಮಾಡಿ ಆತನಲ್ಲಿ ಷಂಡತನವನ್ನು ಪ್ರಚೋದಿಸುತ್ತದೆ. ಹಾಗಾಗಿ ಅಲ್ಲಿ ಶ್ರೀ ಕೃಷ್ಣ ಆತನ ಈ ಭಾವನಗೆಳನ್ನು ಲೇವಡಿಯಾಡುತ್ತಾನೆ.  

ಪ್ರೀತಿ ಪ್ರೇಮ ಮಮಕಾರ ಎಲ್ಲವೂ ವ್ಯಕ್ತಿ ಸನ್ನಿವೇಶ ಪರಿಸರ ನೋಡಿ ನಿರ್ಣಯಿಸಲ್ಪಡಬೇಕು. ಆಗ ಅವುಗಳಿಗೆ ಮೌಲ್ಯ ಗೌರವ ಒದಗಿಬರುತ್ತದೆ. ಇಲ್ಲವಾದರೆ ಅದರ ಅರ್ಥವೇ ಕೆಡಬಹುದು. ಪ್ರೇಮ ಕಾಮ ವಾಗಬಹುದು, ಮಮಕಾರ ಮೋಹವಾಗಬಹುದು. ಆಗ ಅಲ್ಲಿ ಕೆಡುಕುಗಳು ಗೋಚರಿಸುವುದಿಲ್ಲ. ಭೀಷ್ಮ ದ್ರೋಣರಿಗೆ ಅರ್ಜುನನ ಮೇಲೆ ಮೋಹವೂ ಮಮಕಾರವೂ ಇತ್ತು. ಆದರೆ ಅಲ್ಲಿ ಕಾಳಗದ  ಉದ್ದೇಶದಲ್ಲೇ ಬಂದವರಿಗೆ ಅದು ಅಪ್ರಸ್ತುತವಾಗಿ ಕಂಡಿತು.  

ನಮ್ಮ ಗೆಲುವನ್ನೇ ಬಯಸಿ , ನಮ್ಮ ಸುಖ ಸಂತೋಷವನ್ನು ಬಯಸುವವರ ಎದುರು ನಮ್ಮ ಸೋಲು, ನೋವನ್ನು ನಾವು ಬಹಿರಂಗ ಪಡಿಸುವುದನ್ನೂ ಬಯಸುವುದಿಲ್ಲ. ಸೋಲನ್ನು ದುಃಖವನ್ನು ತೋರಿಸದೇ ಎಲ್ಲವನ್ನು ಮರೆಮಾಚುತ್ತೇವೆ. ನಮ್ಮ ಕೊಡುಗೆಗಳನ್ನು ಮೊದಲು ನಾವು ಗೌರವಿಸಬೇಕು. ಅದು ಎಲ್ಲಿ ಹೇಗೆ ನೀಡಬೇಕು, ಹೇಗೆ ಒದಗಿಸಬೇಕು ಎಂಬುದರ ನಿರ್ಣಯ ನಮ್ಮದು. ಆದರೆ ಅದಕ್ಕೆ ಗೌರವ ನಾವು ಎಲ್ಲಿ ಹೇಗೆ ಒದಗಿಸುತ್ತೇವೆ ಎಂಬುದರಲ್ಲಿ ಸಿದ್ಧವಾಗುತ್ತದೆ.  ಭಗವಂತನೂ ಗೀತೆಯ ರಹಸ್ಯವನ್ನು ಬೋಧಿಸುವುದಕ್ಕೆ ಅರ್ಜುನನನ್ನೇ ಆರಿಸಿಕೊಂಡ. ಪರಮ ವೈಷ್ಟವ ಭಾಗವವತ ಭೀಷ್ಮನಿಗೆ ಬೋಧಿಸಲಿಲ್ಲ.

ದಾನವನ್ನು ಮಾಡುವುದು ಶ್ರೇಷ್ಠ. ಹಸಿದವನಿಗೆ ಆಹಾರ, ರೋಗಿಗೆ ಆರೈಕೆ, ಆರ್ತರಿಗೆ ಆಶ್ರಯ ಕೊಡುವುದು ಉತ್ತಮ. ಆದರೆ ಅದರ ಆಯ್ಕೆ ಇವುಗಳ ಗೌರವವನ್ನು ಹೆಚ್ಚಿಸುತ್ತದೆ. ಆರ್ಹತೆ ಇಲ್ಲದವರಿಗ ಶ್ರೇಷ್ಠವಾದುದನ್ನು ನೀಡಿದರೆ ಅದು ಶ್ರೇಷ್ಠವೆನಿಸುವುದಿಲ್ಲ. ಕಳ್ಳನಿಗೆ, ದುರ್ವ್ಯಸನಿಗೆ ಧನಸಹಾಯವನ್ನು ಮಾಡಿದಲ್ಲಿ ಅದು ವಿನಿಯೋಗವಾಗಬಹುದು ಆದರೆ ಅದು ಸದ್ವಿನಿಯೋಗವಾಗುವುದಿಲ್ಲ. ಸದ್  ಎಲ್ಲಿರುತ್ತದೆ ಅದು ಶ್ರೇಷ್ಠವಾಗಿರುತ್ತದೆ. ಎಲ್ಲಿ ಕತ್ತಲೆ ಇರುವುದೋ ಅಲ್ಲಿ ದೀಪ ಬೆಳಗಿಸಬೇಕು. ಆಗ ದೀಪದ ಬೆಳಕು ಸಾರ್ಥಕತೆಯನ್ನು ಪಡೆಯುತ್ತದೆ. ಬೆಳಕು ಇದ್ದಲ್ಲೇ ದೀಪ ಬೆಳಗಿದರೆ ಆ ದೀಪಕ್ಕೂ ಗೌರವವಿಲ್ಲ, ಬೆಳಕಿಗೂ ಮೌಲ್ಯ ಇರುವುದಿಲ್ಲ. ದಟ್ಟ ಕತ್ತಲೆಯಲ್ಲೇ ತುಂಬಿದ ಕೋಣೆಯಲ್ಲಿ ದೀಪ ಉರಿಸಿದರೂ ಹಲವು ಸಲ ಆ ಬೆಳಕು ಪರ್ಯಾಪ್ತವಾಗುವುದಿಲ್ಲ. ಆಗಲೂ ದೀಪಕ್ಕೂ ಬೆಳಕಿಗೂ ಗೌರವ ಸಿಗುವುದಿಲ್ಲ. ಹಾಗಿದ್ದಾಗ ಅಲ್ಲಿ ದೀಪ ಬೆಳಗಿಸುವುದು ಮೂರ್ಖತನವಾಗಬಹುದು. ನಿದ್ದೆ ಮಾಡಿದವರ ಎದುರು ದೀಪ ಉರಿಸಿದರೆ ನಿದ್ರಾಭಂಗವಾಗಬಹುದು. ದೀಪ ಉರಿಸುವುದಕ್ಕೆ ಕ್ಷೇತ್ರ ಸನ್ನಿವೇಶ ನೋಡಬೇಕು. ದೀಪ ಉರಿಸುವುದಷ್ಟೇ ಅಲ್ಲ. ಪ್ರಕಾಶದ ಸದ್ಬಳಕೆಯಾಗಬೇಕು. ಆಗ ಅದು ಮತ್ತಷ್ಟು ಪ್ರಕಾಶವಾಗುತ್ತದೆ. ಬಹುಶಃ ಅರ್ಜುನನಿಗಲ್ಲದೇ ಗೀತೋಪದೇಶವಾಗುತ್ತಿದ್ದರೆ ಅದು ಇಷ್ಟು ಅರ್ಥಪೂರ್ಣವಾಗುತ್ತಿರಲಿಲ್ಲವೇನೋ? ಭಗವಂತನ ಸಂಕಲ್ಪ ಇದು. ಶ್ರೀಕೃಷ್ಣನಂತಹ ಪ್ರವಾಚಕನು ಅರ್ಜುನನಂತಹ ಪೃಚ್ಛಕನೂ ಇರುವುದಕ್ಕೆ ಸಾಧ್ಯವಿಲ್ಲ. 


Saturday, February 21, 2026

ಇದು ಜೀವನ.

ಮೊನ್ನೆ ಒಬ್ಬರು ವ್ಯಕ್ತಿ ನನ್ನ ಬಳಿಗೆ ಬಂದಿದ್ದರು. ಅವರಿಗೆ ಮಾಂಸಾಹಾರಿ ಹೋಟೇಲ್ ಇದೆ. ಯಾವುದೋ  ಜಿ ಎಸ್ ಟಿ ಕೆಲಸಕ್ಕೆ ಬಂದಿದ್ದರು. ಅವರು ಹೇಳಿದ ಒಂದು ಮಾತು ನನಗೆ ಬಹಳ ಚಿಂತಿಸುವಂತೆ ಮಾಡಿತು. ಅವರು ಹೇಳಿದರು. ನಮಗೆ ಭಾಷೆ ಧರ್ಮ ಎಲ್ಲವೂ ಮುಖ್ಯವಾಗುತ್ತದೆ. ಆದರೆ ನಮ್ಮ ಜೀವನ ಮುಖ್ಯವಾಗುವುದಿಲ್ಲ. ಹಿಂದಿಯವರು ಅಥವಾ ಉತ್ತರ ಭಾರತದವರು ಅಂತ ಇಲ್ಲಿ ಹೀನಾಯವಾಗಿ ಕಾಣುತ್ತಾರೆ. ಭಾಷೆ ಬರುವುದಿಲ್ಲ. ಅಥವಾ ಕನ್ನಡ ಮಾತನಾಡುವುದಿಲ್ಲ ಎಂದು ಹಳಿಯುತ್ತಾರೆ.  ಆದರೆ ಬೆಂಗಳೂರಿನ ಅಷ್ಟೂ ಹೋಟೆಲ್ ಉಸಿರುರಾಡುತ್ತಿರುವುದು ಇವರಿಂದಾಗಿ. ಬೇರೆ ರಾಜ್ಯದಿಂದ ಉದ್ಯೋಗ ಅಥವಾ ವಿದ್ಯೆಗಾಗಿ ಇಲ್ಲಿ ಬಂದು ಪಿಜಿ ಬಾಡಿಗೆ ಮನೆ ಮಾಡಿ ನೆಲಸುತ್ತಾರೆ. ಅವರಿಗೆ ಈ ಹೋಟೆಲ್ ಗಳೇ ಆಹಾರಕ್ಕೆ ಆಧಾರ. ಅವರ ವ್ಯಾಪಾರವೇ ನಮಗೆ ಮುಖ್ಯವಾಗುತ್ತದೆ. ಇಲ್ಲಿನವರೂ ಹೋಟೆಲಿಗೆ ಬರುತ್ತಿದ್ದರೂ...ಉತ್ತರ ಅನ್ಯ ರಾಜ್ಯದವರ ವ್ಯಾಪಾರ ಬಹಳ ಮುಖ್ಯವಾಗುತ್ತದೆ. ಅದು ಬೆಂಗಳೂರಾದರೂ ಅಷ್ಟೆ ಮಂಗಳೂರಾದರೂ ಅಷ್ಟೇ. 

ಆ ವ್ಯಕ್ತಿ ಹೇಳಿದ್ದರಲ್ಲಿ ಬಹಳಷ್ಟು ನಿಜಾಂಶ ಅಂತ ತೋರಿತು. ಹೌದು, ಬೆಂಗಳೂರಲ್ಲಿ ಪಿಜಿಯಲ್ಲೋ ಬಾಡಿಗೆ ಮನೆಯಲ್ಲಿ ಕುಳಿತು ಸ್ವಂತ ಅಡುಗೆ ಮಾಡಲಾಗದವರಿಗೆ ಅಥವಾ ಇನ್ನಿತರ ಕಾರಣಗಳಿಗೆ ಅವರಿಗೆ ಹೋಟೇಲ್ ಗಳೇ ಆಶ್ರಯ. ಇದನ್ನು ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ. ಮಂಗಳೂರಿನಂತಹ ನಗರದಲ್ಲೂ ಅಷ್ಟೇ ಅನ್ಯ ರಾಜ್ಯದವರ ವ್ಯವಹಾರ ಸಾಕಷ್ಟು ಇದೆ. ಹಾಗಾಗಿ ಆತ ಹೇಳಿದ್ದು ನಮಗೆ ಭಾಷೆ ಮುಖ್ಯವಾಗುತ್ತದೆ ಜೀವನ ಮುಖ್ಯವಾಗುವುದಿಲ್ಲ. ವಾಸ್ತವದಲ್ಲಿ ಊರಿನ ಭಾಷೆ ಸಂಸ್ಕೃತಿ ನಿಜವಾಗಿಯೂ ಮುಖ್ಯವಾಗುತ್ತದೆ. ಅದರ ಜತೆ ಧರ್ಮವೂ ಮುಖ್ಯವಾಗುತ್ತದೆ. ಆದರೆ ಜೀವನ ಎಂಬುದು ವಾಸ್ತವದ ಸತ್ಯಕ್ಕೆ ಸಾಕ್ಷಿಯಾಗಿ ಹಾಗೇ ಉಳಿಯುತ್ತದೆ. ಧರ್ಮ ಭಾಷೆಯನ್ನು ದ್ವೇಷಿಸಬೇಕು ಎಂದೇನಲ್ಲ, ಆದರೆ ಇವೆರಡನ್ನು ಗೌರವಿಸಿ ಹೊಂದಿಕೊಳ್ಳುವ ಜೀವನ ಗೋಚರಿಸುವುದಿಲ್ಲ. 

ಈಗ ಭಾಷೆ ಧರ್ಮವನ್ನು ಹೇಳಿಕೊಂಡು ಆಗುವ ಗಲಭೆಗಳು ಸಮರಗಳು ನೋಡುವಾಗ ಮುಂದೆ ಜೀವನ ದುರ್ಭರವಾಗುವುದರಲ್ಲಿ ಯಾವ ಸಂದೇಹವೂ ಉಳಿದಿಲ್ಲ. ಹೊಟ್ಟೆಯ ಹಸಿವನ್ನೂ ಮರೆತು ಇದು ಮುಖ್ಯವಾಗುತ್ತದೆ. ಹಸಿವು ಹೋಗಲಿ ಹಲವು ನಂಬುವ ಭಗವಂತನೂ ಮರೆತು ಹೋಗಿಬಿಡುತ್ತಾನೆ. ಎರುತ್ತಿರು ಡಾಲರ್ ಬೆಲೆಯ ಬಗ್ಗೆ ಹೇಳುತ್ತೇವೆ. ಜಿಡಿಪಿಯ ಕುರಿತು ಚರ್ಚಿಸುತ್ತೇವೆ. ಏರುವ ಜೀವನಾವಶ್ಯಕ ವಸ್ತುಗಳ ಬೆಲೆಯನ್ನು ಹೇಳುತ್ತೇವೆ.  ಆದರೆ ಆದರೆ ಭಾಷೆ ಧರ್ಮಗಳ ಬಗ್ಗೆ ಹೋರಾಡುವಾಗ ಇವೆರಡೂ ಜ್ಞಾಪಕಕ್ಕೆ ಬರುವುದಿಲ್ಲ. ಇದು ವಾಸ್ತವ. ಧರ್ಮಕ್ಕಾಗಿ ಜೀವ ಕೊಡುತ್ತೇವೆ ಎಂದು ಹೇಳಬಹುದು. ಪ್ರಾಣಕ್ಕಿಂತ ಭಾಷೆಯೇ ಪ್ರಧಾನ ಹೇಳಬಹುದು. ಆದರೆ ಯೋಚಿಸಿ ಪ್ರಾಣ ಎಂಬುದು ಇಲ್ಲದಿದ್ದರೆ ಇವೆರಡೂ ಅನುಭವಕ್ಕೆ ಬರುವುದಿಲ್ಲ. ಮರಣಾನಂತರ ಏನು ಎಂಬುದು ಎಂದು ಉತ್ತರ ಇಲ್ಲದೇ ಇರುವಾಗ ತಿಳಿದಿರುವ ಈ ಸಾವಿನ ಮೊದಲಿನ ಜೀವನದ ಮೌಲ್ಯ ತಿಳಿದುಕೊಳ್ಳಬೇಕು.  ಭಾಷೆ ಧರ್ಮ ಈ ಎರಡರ ವೆತ್ಯಾಸಗಳನ್ನು ಬ್ರೀಟೀಷರು ತೋರಿಸಿಕೊಟ್ಟು ಅದನ್ನೇ ಕೊನೆಯ ತನಕ ಜೀವಂತ ವಿರಿಸಿ ನಮ್ಮನ್ನು ಆಳಿದರು. ಬ್ರೀಟೀಷರು ಹೋದರು....ಆದರೆ ಈ ವಿಷಬೀಜ ಇಲ್ಲೇ ಬಿಟ್ಟು ಹೋದರು. ಹಸಿವಿನ ಹೋರಾಟಕ್ಕಿಂತಲೂ ಭಾಷೆ ಧರ್ಮ ರಾಜಕೀಯದ ಹೋರಾಟವೇ ಅಧಿಕವಾಗುತ್ತದೆ. ಅದುವೇ ಜೀವನವಾಗಿ ಮುಖ್ಯವಾದ ಜೀವನವೇ ಮರೆತು ಹೋಗಿದೆ.  


ಈ ಚಿಂತನೆಗಳಲ್ಲಿ ಸರಿ ಎಂದು ಹೇಳದ ವಿಚಾರಗಳು ಬಹಳಷ್ಟು ಇರಬಹುದು. ಆದರೆ ಇರುವ ವಿಚಾರಗಳು ಮಾತ್ರ ಗಂಭೀರವಾಗಿ ಚಿಂತಿಸುವಂತೆ ಮಾಡುತ್ತದೆ

Friday, February 13, 2026

ಮತ್ತೆಂದೂ ಬರದ ಬಾಲ್ಯ

ಮತ್ತೊಮ್ಮೆ ಅನ್ನಿಸುತ್ತಿದೆ ಬಾಲಕನಾಗಲೇ....

ಬತ್ತಿ ಹೋಗದ ಆ ಕನಸುಗಳು

ಚಿಗುರೊಡೆಯುತ್ತಿರುವ ಆ ನೂರಾರು ಆಶೆಗಳು

ಬಾಲಕನಾಗಲು ಹವಣಿಸುತ್ತಿರುವ ಈ ದಿನಗಳು....

ಮತ್ತೊಮ್ಮೆ ಬಾಲ್ಯವನ್ನು ನೆನಪಿಸುತ್ತಿದೆ. 


ಒಸರು ಕೆಸರೆನ್ನದೇ ನೀರಾಟದ ದಿನಗಳು, 

ಬಿಸಿಲು ಮಳೆ ಎನ್ನದೆ ಅಲೆದ ಬೀದಿ ಗುಡ್ಡಗಳು

ನಾಳೆ ಎಂಬ ಸುಂದರ ದಿನಗಳ ನಿರೀಕ್ಷೆ

ಬದುಕಿನ ಪ್ರತಿಹಂತದ ಪರೀಕ್ಷೆ

ಮತ್ತೊಮ್ಮೆ ಅನ್ನಿಸುತ್ತಿದೆ ಬಾಲಕನಾಗಲೇ


ಬಾಲ್ಯದ ಕನಸು ಕಾಣುವುದದೆಷ್ಟು ಸುಲಭ

ನನಸಾಗದ ಭಯವಿಲ್ಲ ನಿರಾಶೆಯ ಮಡುವಿಲ್ಲ

ಇಂದಲ್ಲ ನಾಳೆ ಎಂಬ ನಿರೀಕ್ಷೆಯ ಭರವಸೆಗಳು

ಮತ್ತೊಮ್ಮೆ ಅನಿಸುತ್ತಿದೆ ಬಾಲಕನಾಗಲೇ


ತನ್ನ ಓಟದಲ್ಲಿ ಕಾಣುವ ವಾಹನಗಳ ಓಟ

ಆಟಿಕೆಯ ಲೋಕದ ಕಲ್ಪನೆಯ ಆಟ

ಮರೆತು ಹೋಗದು ಬಾಲ್ಯದಲಿ ಕಲಿತ ಪಾಠ

ಮತ್ತೊಮ್ಮೆ ಅನಿಸುತ್ತಿದೆ ಬಾಲಕನಾಗಲೇ


Monday, February 9, 2026

ಆ ಒಂದು ನೆನಪು


ಮೊನ್ನೆ  ಊರಿಗೆ ಹೋಗಿದ್ದಾಗ ಮಂಗಳೂರಿನ ನಗರ ಸಾರಿಗೆ (ಸಿಟಿ ಬಸ್ಸು) ಯಲ್ಲಿ ಹೋಗಬೇಕಾಗಿತ್ತು. ಮಂಗಳೂರಿಗೆ ಹೋದಾಗಲೆಲ್ಲ ಸಿಟಿ ಬಸ್ಸಿನಲ್ಲಿ ಸಂಚರಿಸುವುದನ್ನು ನಾನು ಸಾಕಷ್ಟು ಇಷ್ಟ ಪಡುತ್ತೇನೆ. ಯಾಕೆಂದರೆ ಬಾಲ್ಯದಿಂದ ನಡು ಯೌವನದ ತನಕವೂ ಇದ್ದ ನೆನಪುಗಳು ಯಾಕೋ ನಾನಿನ್ನೂ ಭೂಮಿಯಲ್ಲಿದ್ದೇನೆ ಎಂಬ ನೆನಪನ್ನು ತಂದುಕೊಡುತ್ತದೆ. ದುಂಬು ಪೋಲೆ ಎಂದು ಅವಸರಿಸುವ ಕಂಡಕ್ಟರ್. ಊರಿನ ಹೆಸರಿನ ಕಿರುಚಾಟ, ನೂಗು ನುಗ್ಗಲು ಒಂದಷ್ಟು ಬೆವರು ವಾಸನೆ ಎಲ್ಲವೂ ಒಂದು ರೀತಿಯ ಇಷ್ಟ ಪಡುವ ಸಂವೇದನೆಯಾಗಿ ನೆನಪುಗಳನ್ನು ಹೆಕ್ಕಿ ಹೆಕ್ಕಿ ತೆಗೆಯುತ್ತದೆ. ಮಧ್ಯವಯಸ್ಸು ಎಂದರೆ ಅಲ್ಲಿ ಹೊಸದಾಗಿ ಬರೆಯುವುದಕ್ಕೆ ಏನೂ ಇರುವುದಿಲ್ಲ. ಹಳೆಯದನ್ನು ಬರೆಯುತ್ತಾ ಮತ್ತೆ ಅಳಿಸುತ್ತಾ ಆ ನೆನಪಲ್ಲೇ ಕಳೆಯುವ ದಿನಗಳು. ಕೆಲವು ಮತ್ತೂ ಮತ್ತೂ ಕಾಡಿದರೆ, ಇನ್ನು ಕೆಲವು ಕೇವಲ ಕೆಲ ಹೊತ್ತಿನ ಕ್ಷಣಿಕ ನಗು ಮತ್ತು ಕಂಬನಿಗೆ ಸೀಮಿತವಾಗುತ್ತದೆ.  ಅಂದು ಕೂಡ ಸಿಟಿ ಬಸ್ಸಿನಲ್ಲಿ ಸಾಕಷ್ಟು ಜನಸಂದಣಿ ಇತ್ತು. ಹಂಪನಕಟ್ಟೆಯಲ್ಲಿ ಇಳಿಯುವುದಕ್ಕಿತ್ತು. ಬಸ್ಸು ಮಿಲಾಗ್ರಿಸ್ ನಲ್ಲಿ ನಿಂತ ತಕ್ಷಣ ಕೈಯಲ್ಲಿ ಹಿಡಿದ ಚಿಲ್ಲರೆ ದುಡ್ಡು ನಾನು ಇನ್ನೂ ಟಿಕೆಟ್ ತೆಗೆಯದೇ ಇರುವುದನ್ನು ನೆನಪಿಸಿತು.  ಕಂಡಕ್ಟರ್ ಗೆ ಕೊಡುವುದಕ್ಕಾಗಿ ಕೈಯಲ್ಲೇ ಹಿಡಿದುಕೊಂಡಿದ್ದೆ. ಆದರೆ ಕಂಡಕ್ಟರ್ ಹತ್ತಿರ ಬರಲೇ ಇಲ್ಲ. ಕೊನೆಗೆ ಇಳಿಯಲೇ ಬೇಕಾದಾಗ ಕಂಡಕ್ಟರ್ ಬಳಿ ಹೋಗಿ ಆತನ ಕೈಯಲ್ಲಿ ಚಿಲ್ಲರೆಯನ್ನು ಹಾಕಿದೆ. ಸುಮಾರು ದೂರದಿಂದಲೇ ಕಿಟಕಿ ಬದಿ ಕುಳಿತಿದ್ದ ನನ್ನನ್ನು ಗಮನಿಸಿದ್ದನೋ ಏನೋ ನಾನು ಆತನ ಬಳಿಗೆ ಹೋಗಿ ಪ್ರಾಮಾಣಿಕತೆಯಿಂದ ಚಿಲ್ಲರೆ ಹಣವನ್ನು ಹಾಕಿದಾಗ ಆತನ ಮುಖದಲ್ಲಿ ನಸು ನಗು ಮೂಡಿತು.  ಯಾಕೆಂದರೆ ಆ ಹಣ ಕೊಡುವುದಕ್ಕಾಗಿ ನಾನು ಒಂದಿಷ್ಟು ಕಷ್ಟ ಪಟ್ಟದ್ದು ಆತನಿಗೆ ಕಂಡಿತ್ತು. ನಾನು ಹಾಗೇ ಇಳಿದು ಹೋಗುತ್ತಿದ್ದರೆ ಆತನಿಗೆ ಗೊತ್ತಾಗುತ್ತಿರಲಿಲ್ಲ. ಆದರೂ ಚಿಲ್ಲರೆ ದುಡ್ಡಿಗಾಗಿ ನನಗೆ ವಂಚಿಸುವುದು ಸರಿಕಾಣಲಿಲ್ಲ. ಚಿಲ್ಲರೆ ದುಡ್ಡಾದರೂ ಪ್ರಾಮಾಣಿಕತೆಯ ಮೌಲ್ಯ ಕೇವಲ ಚಿಲ್ಲರೆ ಕಾಸಿನಿಂದ ಅಳೆಯುವುದಕ್ಕೆ ಸಾಧ್ಯವಿಲ್ಲ. 



ಈ ಘಟನೆಯ ಜತೆಗೆ ಹಿಂದಿನ ಬಾಲ್ಯದಲ್ಲಿ ನನ್ನ ಪ್ರಾಮಾಣಿಕತೆಗೆ ಘಾಸಿ ಮಾಡಿದ ಘಟನೆಯೊಂದು ನೆನಪಾಯಿತು. ಒಂದು ದಿನ ಬೆಳಗ್ಗೆ ಯಾವುದೋ ಸಾಮಾನು ಖರೀದಿಸುವುದಕ್ಕೆ ನಮ್ಮ ಪೈವಳಿಕೆ ನಗರದ  ಒಂದು ಅಂಗಡಿಗೆ ಹೋಗಿದ್ದೆ. ಅಂಗಡಿ ಅದೇ ತಾನೆ ತೆರೆಯುತ್ತಿದ್ದ. ಅಂಗಡಿಯವನು ಮರದ ಹಲಗೆಯ ಬಾಗಿಲು. ಒಂದೊಂದನ್ನೆ ಕಿತ್ತು ಒಂದು ಕಡೆಗೆ ಸೇರಿಸಿ ಇಡುತ್ತಿದ್ದ.  ಅದರ ನಡುವೆ  ನನಗೆ ಬೇಕಾದ ಸಾಮಾನು ಹೇಳಿದೆ. ಆತ ಅಂಗಡಿಯ ಒಳಗೆ ಹೋಗಿ ಹುಡುಕುತ್ತಿದ್ದ. ಸ್ವಲ್ಪ ಹೊತ್ತು ಹುಡುಕಾಡಿ ನಂತರ ಕೊಟ್ಟು ದುಡ್ಡು ಪಡೆದುಕೊಂಡ. ಸಾಮಾನು ಕೊಂಡು ನಮ್ಮ ಮನೆಗೆ ಬಂದೆ. ಅಲ್ಲಿಂದ ನಮ್ಮ ಮನೆಗೆ ನಡೆಉಕೊಂಡೆ ಬರಬೇಕು. ಅರ್ಧ ತಾಸು ತೆಗೆದುಕೊಂಡಿದ್ದೆ. ಮನೆಗೆ ಬಂದು ಸಾವರಿಸಿಕೊಳ್ಳುವಷ್ಟರಲ್ಲಿ ಸೈಕಲಿನಲ್ಲಿ ಅದೇ ಅಂಗಡಿಯವನು ಬಂದ. ಬಂದವನೇ ಆತನ ಅಂಗಡಿಯ ಗಲ್ಲಾ ಪೆಟ್ಟಿಗೆಯಿಂದ ಐವತ್ತು ರೂಪಾಯಿ ಕಾಣೆಯಾಗಿದೆ. ಅದನ್ನು ನಾನು ಕದ್ದಿದ್ದೇನೆ ಎಂದು ಹೇಳಿದ. ನನಗೆ ದಿಗಿಲಾಯಿತು. ಆಗ ಐವತ್ತು ರೂಪಾಯಿ ಅಂದರೆ ಈಗೀನ ಸಾವಿರ ರೂಪಾಯಿ ಮೌಲ್ಯವಾದರೂ ಆಗಬಹುದು. ನಮ್ಮಮಿತಿಯಲ್ಲಿ ಅದು ದೊಡ್ಡ ಮೊತ್ತ. ಹಾಗಾಗಿಯೇ ಆತ ಅಷ್ಟು ಗಡಿಬಿಡಿಯಲ್ಲಿ ಹುಡುಕಿ ಬಂದಿದ್ದ. 


ಐವತ್ತು ರೂಪಾಯಿ ನಾನು ಕದ್ದಿದ್ದೇನೆ ಎನ್ನುವುದಕ್ಕೆ ಮುಖ್ಯ ಕಾರಣ ನಮ್ಮ ಬಡತನ.  ಬಡತನವೇ ಕಳ್ಳತನಕ್ಕೆ ಮುಖ್ಯ ಕಾರಣ ಎಂಬುದು ಆತನ ವರ್ತನೆಯೇ ಹೇಳುತ್ತಿತ್ತು. ನಾನು ಕದ್ದಿಲ್ಲ ಎಂದು ಹೇಳಿದೆ. ಅದಾಗಲೇ ನನ್ನ ಕಣ್ಣಿಂದ ನೀರು ಸುರಿಯಲಾರಂಭಿಸಿತ್ತು. ನನಗೆ ಅರಿವಿಲ್ಲದೇ ಗದ್ಗದವಾಗಿತ್ತು. ಏನಿದ್ದರೂ ಯಾರಿಗೂ ವಂಚನೆ ಮಾಡಬಾರದು ಇದು ಅಮ್ಮ ಕಲಿಸಿಕೊಟ್ಟ ಮೊದಲ ಪಾಠ. ಅಮ್ಮ ಬಂದು ಕದಿಯಲಿಲ್ಲ ಅಂತ ಹೇಳಿದರು. ಆದರೆ ಅದನ್ನೆಲ್ಲ ಕೇಳುವುದಕ್ಕೆ ಆತ ಸಿದ್ಧನಿರಲಿಲ್ಲ. ನೆರೆಕರೆಯವರೆಲ್ಲ ನೋಡುತ್ತಿದ್ದರು. ಯಾರೂ ಪರವಾಗಿ ಮಾತನಾಡುವುದಕ್ಕೆ ಬರಲಿಲ್ಲ. ಅಥವಾ ಏನು ಎಂದು ವಿಚಾರಿಸುವುದಕ್ಕೂ ಬರಲಿಲ್ಲ. ನಾವು ಪರಿಪರಿಯಾಗಿ ಹೇಳಿದರೂ ಆತ ಕೇಳಲಿಲ್ಲ. ನಮ್ಮ ಮನೆಯ ಹತ್ತಿರವೇ ಇದ್ದ ಬೋಳಂಗಳದಲ್ಲಿ ಭೂತಸ್ಥಾನವಿತ್ತು. ಅಲ್ಲಿಗೆ ಹೋಗಿ ಪ್ರಮಾಣ ಮಾಡುವಂತೆ ಆತನೇ  ಹೇಳಿದ. ನನಗೆ ಭಯವಿರಲಿಲ್ಲ. ಕದ್ದರೆ ತಾನೆ ಭಯ. ಆದರೆ ಆತನ ಧರ್ಮದ ದೇವರು ಅದಲ್ಲ. ಆದರೂ ನನಗಿಂತ ಭೂತದ ಮೇಲೆ ಆತನಿಗೆ ನಂಬಿಕೆ ಇತ್ತೋ ಏನೋ. ನಾನು ಒಪ್ಪಿದ್ದನ್ನು ನೋಡಿ ಏನು ಅನಿಸಿತೋ ದೊಡ್ಡದಾಗಿ ಗೊಣಗಿಕೊಂಡು ಪುನಃ ಬರುವುದಾಗಿ ಹೇಳಿಕೊಂಡು ಸೈಕಲೇರಿ ಹಿಂತಿರುಗಿದ.  ಒಂದು ವೇಳೆ ಆತನ ಅಂಗಡಿಯ ಬಳಿಗೆ ಹೋಗಿದ್ದರೆ ಕಂಬಕ್ಕೆ ಕಟ್ಟಿ ಹಾಕುವುದಕ್ಕೂ ಹಿಂಜರಿಯುತ್ತಿರಲಿಲ್ಲ. ಯಾಕೆಂದರೆ ಸುತ್ತಮುತ್ತಲೂ ಎಲ್ಲ ಆತನ ಜನಗಳೆ.

ಮರುದಿನ ಅನಿವಾರ್ಯವಾಗಿ ಆತನ ಅಂಗಡಿಯ ಎದುರು ಹೋಗಬೇಕಾಗಿ ಬಂತು. ಅಲ್ಲೆ ಹೋಗುವುದಕ್ಕೆ ಭಯವಾಗುತ್ತಿತ್ತು. ಆಅರೂ ಅಳುಕುತ್ತಲೇ ಹೋದೆ. ನನ್ನನ್ನು ನೋಡಿದವನು ಬಳಿಗೆ ಕರೆದ. ಅಳುಕುತ್ತಲೇ ಹೋದೆ. ಆತ ಹೇಳಿದ ಆ ಹಣ ಸಿಕ್ಕಿತು. ಇಲ್ಲೆ ಕಸದ ಜತೆ ಬಿದ್ದಿತ್ತು. ಅಂಗಡಿ ಗುಡಿಸುವಾಗ ಸಿಕ್ಕಿತು ಅಂತ ಹೇಳಿದ. ಅವನು ಅಷ್ಟಾದರೂ ಹೇಳಿದನಲ್ಲಾ ಎಂಬುದಕ್ಕೆ ಕೃತಜ್ಛತೆ ಸಲ್ಲಿಸುವುದಷ್ಟೇ ನನಗೆ ಉಳಿದಿತ್ತು.  ಬೇರೆಯವರಾಗಿದ್ದರೆ ಆತ ಕೊಟ್ಟ ಮಾನಸಿಕ ಹಿಂಸೆ ಅಪವಾದಕ್ಕೆ ಜಗಳವಾಡಿ ಕಪಾಳ ಮೋಕ್ಷ ಮಾಡುತ್ತಿದ್ದರು. ನಾನು ಪುಟ್ಟಬಾಲಕ ಪೆಚ್ಚಾಗಿ ನೋಡುವುದಷಷ್ಟೇ ಉಳಿದಿತ್ತು. ಆತನಿಗೆ ದುಡ್ಡು ಸಿಕ್ಕಿದ್ದನ್ನು ಹೇಳದೇ ಇರಬಹುದಿತ್ತು. ಕೊನೆಗೆ ಅಷ್ಟಾದರೂ ಹೇಳಿ ನನ್ನನ್ನು ಅರೋಪ ಮುಕ್ತ ಮಾಡಿದನಲ್ಲ. ಆದರೆ ನನ್ನ ನೆರೆಯವರೆದುರು ತಲೆತಗ್ಗಿಸಿದ್ದಕ್ಕೆ ಪರಿಹಾರವಿರಲಿಲ್ಲ. ಈಗ ಆಂಗಡಿಯೂ ಇಲ್ಲ.  ಆ ವ್ಯಕ್ತಿಯೂ ಇಲ್ಲ. ಆ ಕಟ್ಟಡವೂ ಇಲ್ಲ. ಪೈವಳಿಕೆಯ ನಗರದ ರಸ್ತೆಯಲ್ಲಿ ಹೋಗುವಾಗ ಈ ಘಟನೆ ನೆನಪಾಗುತ್ತಿರುತ್ತದೆ. ಒಂದುವೇಳೆ ಆ ಹಣ ಕಸದ ಜತೆ ಸೇರಿ ಹಾಗೇ ಕಳೆದು ಹೋಗಿರುತ್ತಿದ್ದರೆ... ಆತನ ಎದುರು ನಾನು ಕಳ್ಳನೇ ಆಗಿ ಉಳಿಯುತ್ತಿದ್ದೆ. ದೇವರಿಗೆ ಅಷ್ಟಕ್ಕಾದರೂ ನಾನು ಕೃತಜ್ಞನಾಗಿರಬೇಕು. 

    ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡ ಕಳ್ಳನಿಗೂ ಆತ ಮಾಡದೇ ಇದ್ದ ಕಳ್ಳತನವನ್ನು ಆತನ ಮೇಲೆ ಆರೋಪಿಸಿದರೆ ಸಿಟ್ಟು ಬರುತ್ತದೆ. ಆದರೆ ಮಾಡದೇ ಇದ್ದ ಅಪರಾಧ ಆರೋಪಿಸಿದಾಗ ನೋವಾಗದೇ ಇರುವುದಕ್ಕೆ ಸಾಧ್ಯವಿಲ್ಲ. ಆದರೂ ಯಾವುದೋ ಒಂದು ಕಳ್ಳತನ ಅಥವಾ ಅಪರಾಧಗಳ ಆರೋಪಕ್ಕೆ ಕೊನೇ ಪಕ್ಷ ನಮ್ಮ ಜೀವನ ಪ್ರವೃತ್ತಿಯೂ ಕಾರಣವಾಗಬಾರದು. ಆರೋಪ ಬರುವುದು, ಅಥವಾ ಆರೋಪ ಸಾಬೀತಾಗುವುದು ನಮ್ಮ ಪ್ರವೃತ್ತಿಯನ್ನು ಅವಲಂಬಿಸಿರಬಾರದು. ಮತ್ತೆ ಇರುವುದು ನಮ್ಮ ಅದೃಷ್ಟ ಎಂದುಕೊಂಡಿರಬೇಕು.



Saturday, January 31, 2026

ಅಜ್ಞಾನದ ಅರಿವು

ಬ್ಯಾಂಕ್ ಲೆಕ್ಕ ಪರಿಶೋಧನೆಗೆ ಹೋಗಿರುವಾಗ ಅಲ್ಲಿ ಚಹ ಕಾಫಿ ತರಿಸಿದ್ದರು. ನನಗೆ ಬಹಳ ಒತ್ತಾಯ ಮಾಡಿ ಕೊಟ್ಟರು. ನಾನು ಈ ರೀತಿಯ ಪಾನೀಯ ಸೇವನೆಯ ಅಭ್ಯಾಸವನ್ನು ಬಿಟ್ಟು ದಶಕಗಳೇ ಕಳೆದಿದೆ. ನಾನು ಬೇಡ ಎಂದು ನಿರಾಕರಿಸಿದೆ. ಕೆಲವರಿಗೆ ಅದೊಂದು ರೀತಿಯ ಮನೋಭಾವ. ನನಗೆ ಅಭ್ಯಾಸ ಇಲ್ಲ ಎಂದರೂ ಬಿಡದೆ ಮತ್ತೂ ಒತ್ತಾಯ ಮಾಡಿದರು. ಅವಶ್ಯಕ ಇಲ್ಲದೇ ಇರುವುದನ್ನು ಸೇವಿಸುವುದಕ್ಕೆ ಒಂದೋ ಅದರ ಬಗ್ಗೆ ತೀವ್ರವಾದ ಆಶೆ ಹುಟ್ಟಬೇಕು. ಇಲ್ಲ ಅದು ತೀರ ಅನಿವಾರ್ಯ ಎನಿಸಬೇಕು. ಇದೆರಡೂ ಇಲ್ಲದಿದ್ದರೆ ಯಾರದೋ ಒತ್ತಾಯಕ್ಕೆ ಅದನ್ನು ಒಪ್ಪಿಕೊಳ್ಳುವುದು ನನಗೆ ಸರಿ ಎನಿಸುವುದಿಲ್ಲ. ನಾನು ಮತ್ತೂ ನಿರಾಕರಿಸಿದೆ. ಅದರಲ್ಲೂ ಕಾಫಿ ಚಹ ಸೇವನೆ ಬಿಟ್ಟನಂತರ ನಾನು ಅನುಭವಿಸಿದ ನಿರಾಳತೆ ಅದು ನನಗೆ ಮಾತ್ರ ಅರಿವಿದೆ. ಅದನ್ನು ಹೇಳಿದೆ . ಆದರೆ ಅವರು ಮತ್ತೂ ಉಡಾಫೆಯಿಂದ ಒಂದು ಸಲ ತೆಗೆದುಕೊಂಡರೆ ಏನಾಗುತ್ತೇ ಅಂತ ಹೇಳಿದರು. ಒಂದು ಸಲ ಆದರೇನು? ಆಸಕ್ತಿ ಇಲ್ಲದೇ ಇದ್ದರೆ ಅದನ್ನು ಕುಡಿಯುವುದರಲ್ಲಿ ಅರ್ಥವಿಲ್ಲ. ನಾನು ಮತ್ತೂ ನಿರಾಕರಿಸಿದಾಗ ಅವರು ಮತ್ತೂ ಹೇಳಿದರು ಎಲ್ಲರೂ ಕುಡಿಯುತ್ತಾರೆ . ಇದು ಕುಡಿದದ್ದರಲ್ಲಿ ಏನು ? ನಾನು ಕಾಫಿ ಚಹ ಸೇವನೆಯ ದುಷ್ಪರಿಣಾಮವನ್ನು ಹೇಳುವುದಕ್ಕೆ ಅನಿವಾರ್ಯನಾದೆ. ಹಾಗೆ ಚರ್ಚೆ ನಡೆದು ಕೊನೆಯಲ್ಲಿ ಒಂದು ಸಲ ಅವರೆಂದರು...ಏನು ಸಾರ್, ಈಗ ಇದೆಲ್ಲ ಸಾಮಾನ್ಯ. ಬ್ರಾಹ್ಮಣರು ಮಾಂಸ ತಿನ್ನುವುದಿಲ್ಲ ಅಂತ ಇದ್ದರೂ ಹಲವರು ತಿನ್ನುವರಲ್ಲ  ಎನಾಯಿತು? ಕೆಲವರಿಗೆ ತಿನ್ನುವುದಿಲ್ಲ, ಅಭ್ಯಾಸವಿಲ್ಲ ಎಂದು ಇದ್ದರೆ ಅದನ್ನು ಕೆಲವರಿಗೆ ತಿನ್ನಿಸುವ ಹಟ. ತಿಳಿಸದೇ ಅದನ್ನು ಹೇಗಾದರೂ ಮಾಡಿ ತಿಳಿಯದಂತೆ ತಿನ್ನಿಸುವ ಚಪಲ.

ಹಲವು ಸಲ ಮೂಗು ಕತ್ತರಿಸಿಕೊಂಡವನ ಕಥೆಯೊಂದು ನೆನಪಾಗುತ್ತದೆ. ಮೂಗು ಕತ್ತರಿಸಿಕೊಂಡವನು ತನಗೆ ಸ್ವರ್ಗ ಕಾಣಿಸುತ್ತದೆ ಎಂದು ಹೇಳಿ ಸಿಕ್ಕ ಸಿಕ್ಕವರಲ್ಲಿ ಮೂಗು ಕತ್ತರಿಸಿಕೊಳ್ಳುವುದಕ್ಕೆ ಹೇಳಿದ. ನಂತರ ತನ್ನಂತೆ ಸ್ವರ್ಗ ಕಾಣಿಸುತ್ತದೆ ಎಂದು ಹೇಳುವುದಕ್ಕೆ ಹೇಳುತ್ತಿದ್ದನಂತೆ. ಅದೇ ರೀತಿ ಪ್ರತಿಯೊಬ್ಬರೂ ಮೂಗು ಕತ್ತರಿಸಿಕೊಂಡು ತನ್ನಂತೆ ಆಗಲಿ ಎಂದು ಅವನ ಉದ್ದೇಶ. ನಶೆಯಲ್ಲಿದ್ದವರಿಗೆ ಉಳಿದವರೂ ನಶೆಗೆ ಒಳಗಾಗಲಿ ಎಂಬ ಹಂಬಲವಿರುತ್ತದೆ. 

ಅದೇನು ಮನೋಭಾವ ಅಂತ ತಿಳಿಯದು. ಬ್ರಾಹ್ಮಣರು ನಿಷಿದ್ಧ ಎನ್ನುವುದನ್ನು ಮಾಡುತ್ತಾರೆ ಎನ್ನುವಾಗ ಅದು ಗಂಭೀರ ಸುದ್ದಿ ಎನ್ನಿಸುವುದು ಮತ್ತದು ಕುಹಕಕ್ಕೆ ಎರೆಯಾಗುವುದು ದೌರ್ಭಾಗ್ಯ. ಗಾಂಧಿವಾದಿಗಳು ಮದ್ಯ ಮಾಂಸ ಸೇವಿಸಿದರೆ ಅದು ಕುಹಕವಾಗುವುದಿಲ್ಲ, ಆದರೆ ಬ್ರಾಹ್ಮಣರಿಗೆ ಮಾತ್ರ ಯಾರೋ ಮಾಡಿದಾಕ್ಷಣ ಅದು ಸಂಪೂರ್ಣ ವರ್ಗವನ್ನೇ ಆಕ್ಷೇಪಿಸುವುದು ತಾತ್ಸಾರವಾಗುತ್ತದೆ.  ಎಲ್ಲೊ ಕೇಳಿದ ನೆನಪು ಮಹಾತ್ಮಾ ಗಾಂಧೀಜಿ ಮದ್ಯ ಮಾಂಸ ಈ ಎರಡರ ಕಡು ವಿರೋಧಿಯಾಗಿದ್ದರು. ಅವರ ಹೆಸರನ್ನು ನಿತ್ಯ  ಪಠಿಸುವವರು, ತಾವು ಗಾಂಧೀವಾದಿಗಳು ಎಂದು ತಮ್ಮನ್ನು ಗುರುತಿಸುವವರಿಗೆ ಮದ್ಯ ಮಾಂಸ ಸೇವನೆ ಗಾಂಧೀಜಿ ವಿರೋಧಿಸುತ್ತಿದ್ದರು ಎನ್ನುವುದು ಗಂಭೀರವಾಗುವುದಿಲ್ಲ. ಜಾತ್ಯಾತೀತ ರಾಜಕಾರಣದಲ್ಲಿ, ಮತದಾನಗಳಲ್ಲಿ ಜಾತಿಯೇ ಮುಖ್ಯವಾಗುವಾಗ ಅದು ಜಾತಿಭೇದ ಎಂದೆನಿಸುವುದಿಲ್ಲ. ಜಾತಿಯವನು ಹೇಗೂ ಇರಲಿ, ಅಪರಿಚಿತನಾದರೂ ಆತ ತಮ್ಮವ ಎಂದೆನಿಸುತ್ತಾನೆ. ಇಲ್ಲೆಲ್ಲ ಜಾತಿ ಎಂಬುದು ಅರ್ಹತೆಯಾದರೆ ಬ್ರಾಹ್ಮಣ ಎನ್ನುವಾಗ ಮಾತ್ರ ಜಾತಿಯ ಭೂತ ಎದುರು ಬರುತ್ತದೆ. ಅಷ್ಟಕ್ಕೂ ಬ್ರಾಹ್ಮಣ ಎಂಬುದು ಕೇವಲ ಶಬ್ದಾರ್ಥದ ಒಂದು ಪದವಿ. ಬ್ರಹ್ಮನನ್ನು ಅರಿತವನು ಬ್ರಾಹ್ಮಣನಾಗುತ್ತಾನೆ. ಹಾಗಂಟ ಬ್ರಾಹ್ಮಣ ಎಂದು ಕರೆಯುವಾಗಲೂ ಇದು ಗೌಣವಾಗಿಬಿಡುವುದು ವಿಪರ್ಯಾಸ. 

ಗಾಂಧೀಜಿ ಅಜೀವನಾದ್ಯಂತ ರಾಮ ಭಕ್ತರಾಗಿದ್ದರು. ರಾಮಾಯಣದಿಂದ ಪ್ರೇರಿತರಾಗಿ ಆ ತತ್ವಗಳನ್ನು ಸಾಕಷ್ಟು ಅಳವಡಿಸಿಕೊಂಡಿದ್ದರು. ಅದರೆ ಆಕ್ಷೇಪಿಸುವವರಿಗೆ ರಾಮಾಯಣ ಅಥವಾ ಶ್ರೀರಾಮ ಮಾತ್ರ ಆಕ್ಷೇಪಕ್ಕೆ ಕಾರಣನಾಗುತ್ತಾನೆ ಹೊರತು ಗಾಂಧೀಜಿ ಅಲ್ಲ. ವ್ಯಾಧ ಅನಾಗರಿಕನೊಬ್ಬ ವಾಲ್ಮೀಕಿಯಾಗಿ ಮಹಾ ಋಷಿಯಾಗಿ ಬದಲಾದ.  ಕ್ಷತ್ರಿಯನಾದ ಕೌಶಿಕ ಸಾಧನೆಯಿಂದ ಬ್ರಾಹ್ಮಣನಾಗಿ  ಬ್ರಹ್ಮಋಷಿಯಾದ. ಯಾರೂ ಹುಟ್ಟಿನಿಂದ ಶ್ರೇಷ್ಠರಾಗಿಲ್ಲ. ಆನಂತರ ಕರ್ಮದಿಂದ ಶ್ರೇಷ್ಠರಾಗಿ ಬದಲಾಗಿ ಹೋದರು. ಹುಟ್ಟಿನಿಂದ ಒದಗಿಬರುವುದು ಜಾತಿ. ಆನಂತರ ಬರಿಸುವುದು ವರ್ಣ. ವರ್ಣ ಎಂದರೆ ಬರಿಸುವುದು ಎಂದರ್ಥ. ಮಲಯಾಳಂ ಭಾಷೆಯಲ್ಲೂ ವರಣಂ ಎಂದರೆ ಬಾ. ಕರೆಸಿಕೊಳ್ಳುವುದು. ಹುಟ್ಟಿನಿಂದ ಇದ್ದ ಜಾತಿ ನಂತರ ವರ್ಣದಿಂದ ಬದಲಾದರೂ ವರ್ಣದ ನಿಜವಾದ ಬಣ್ಣ ತಿಳಿಯದೇ ಪೂರ್ವಜರನ್ನು ಶಪಿಸಿ ಬಿಡುವುದು ಮನುಷ್ಯ ಹುಟ್ಟುವ ಮೊದಲು ಗರ್ಭದ ಕತ್ತಲೆಯಲ್ಲಿದ್ದರೆ ಆನಂತರವೂ ಆ ಅಂಧಕಾರದಿಂದ ಹೊರಗೆ ಬಂದಿರುವುದಿಲ್ಲ.  ವ್ಯಾಧ್ಯ ವಾಲ್ಮೀಕಿ ಮಹರ್ಷಿಯಾದ, ಆತ ಮತ್ತೆ ಹತಾಶೆಯಿಂದ ಜಿಗುಪ್ಸೆಯಿಂದ ಪುನಃ ವ್ಯಾಧನಾಗಿ ಬದಲಾದನೇ ? ಇಲ್ಲ. ಅದೇ ರೀತಿ ಕೌಶಿಕ..ವಿಶ್ವಾಮಿತ್ರ ಮಹಾ ಬ್ರಾಹ್ಮಣನಾಗಿ ಬದಲಾದ, ಬ್ರಹ್ಮ ತೇಜೋ ಬಲಂ ಎಂದು ಬದಲಾದವನು ಅದೂ ಏನೂ ಅಲ್ಲ...ವರ್ಣ ಭೇದ ಅಂತ ಜಿಗುಪ್ಸೆಯಿಂದ ಪುನಃ ಕೌಶಿಕನಾಗಿ ರಾಜನಾಗಿ ಬದಲಾಗಿಲ್ಲ. ಅಂದರೆ ಬದಲಾಗಿ ಸಿದ್ಧಿಸಿದ ಪದವಿ ಅತ್ಯಂತ ಶ್ರೇಷ್ಠ. ವಿಪರ್ಯಾಸವೆಂದರೆ ಈಗ ಈ ಪದವಿಯೇ      ಅವಹೇಳನಕ್ಕೆ ಒಳಗಾಗುತ್ತದೆ. ಬ್ರಾಹ್ಮಣನಾಗಿರುವುದೇ ಅನಿಷ್ಟ ದುರ್ದೈವ. 

ತಮಗೆ ಸಿದ್ದಿಸಲಾಗದೇ ಇರುವುದರಲ್ಲಿ ಏನೋ ಒಂದು ಕೊರತೆಯನ್ನು ಕಾಣುವ ಒಂದು ಮಾತ್ಸರ್ಯವಿದೆ. ತಮ್ಮ ಅಸಮರ್ಥತೆಯನ್ನು ಅಸಾಧ್ಯ ವೃತ್ತಿಯ ಮೇಲೆ ಆರೋಪಿಸುವುದು. ಇದೊಂದು ಅಸಹಾಯಕತೆ. ಬ್ರಾಹ್ಮಣನಾಗಿ ಇರುವುದು ಕಷ್ಟ. ಬದುಕುವುದು ಕಷ್ಟ. ಅದಕ್ಕೆ ಅದನ್ನೇ ತಿರಸ್ಕರಿಸಿ ಅದರ ಘನತೆಯನ್ನೇ ಕಳೆದರೆ ತಾವು ಶ್ರೇಷ್ಠರಾಗುವ ಮನೋಭಾವ. ಎಂದೋ ಯಾರೋ ಅಜ್ಞಾನಿಗಳು ತಮ್ಮ ಸ್ವಾರ್ಥಕ್ಕೆ ಈ ಪದವಿಯನ್ನು ದುರ್ವಿನಿಯೋಗ ಮಾಡಿದ್ದರೆ ಇಂದು ಸಮೂಹವೇ ಅದನ್ನು ಮಾಡುತ್ತಿದೆ ಎಂದು ಕಾಣುವುದು ಒಂದು ರೀತಿಯ ಅಸಹಾಯಕತೆ. ಯಾರೋ ಕೆಲವರು ಭಯೋದ್ಪಾದಕರಾದರೆ ಇಡೀ ಸಮೂಹವನ್ನು ದೂಷಿಸುವುದು ತಪ್ಪು. ಅದೇ ರೀತಿ ಯಾರೋ ಎಸಗಿದ ಕೆಲಸಕ್ಕೆ  ಎಲ್ಲಾ  ಬ್ರಾಹ್ಮಣನನ್ನು ಹಳಿಯುವುದು ತಪ್ಪು ಎಂದು ಅನಿಸಬೇಕು. ಗಾಂಧೀಜಿಯ ಒಂದೆರಡು ಚಿಂತನೆಗಳು ನಮಗೆ ಸ್ವೀಕೃತ ಅಲ್ಲದೇ ಇರಬಹುದು. ಹಾಗೆಂದು ಗಾಂಧೀಜಿಯ ಹೋರಾಟ ತತ್ವಗಳು ಎಲ್ಲವನ್ನು ದೂಷಿಸುವುದು ಸರಿಯಲ್ಲ.  ಬ್ರಾಹ್ಮಣ ತತ್ವ ಅರಿವಾದರೆ ಬ್ರಹ್ಮ ಪದವಿಯ ಆ ತೇಜೋ ಬಲದ ಅರಿವಾಗಬಹುದು. ಜ್ಞಾನವನ್ನು ಅರಿಯುವ ಸಾಮಾರ್ಥ್ಯ ಇಲ್ಲದೇ ಇರಬಹುದು. ಆದರೆ ಅಜ್ಞಾನವನ್ನು ದೂರಮಾಡುವ ಅರಿವಾದರೂ ಇರಬೇಕು. 



 

Sunday, January 25, 2026

ಭಾವ ಒಂದೇ ಸಾಲದೆ?


ಅದೊಂದು ಪುಟ್ಟ ಮನೆ. ನಗರದ ಈಗಿನ ಮನೆ ಎಂದಮೇಲೆ ಕೇಳಬೇಕೆ. ಹಾಗೆ ಹೀಗೆ ಅಂತ ಒಂದು ಕಟ್ಟಡ ಇರುತ್ತದೆ. ಅದರಲ್ಲೇ ಹೊಂದಾಣಿಕೆಯ ಬದುಕು. ಅದೇ ಸ್ವರ್ಗ. ತೀರ ಬಡವನು ಕೂಡ ಘನ ಶ್ರೀಮಂತನಿಗಿಂತ ಕಡಿಮೆ ಇಲ್ಲದಂತೆ ಉಡುಪು ತೊಟ್ಟು ರಸ್ತೆಗೆ ಬಂದನೆಂದರೆ ...ಆತನ ಮನೆಯ ಬಗ್ಗೆ ಯಾರೂ ಯೋಚಿಸುವುದಿಲ್ಲ. ಇವನು ದೊಡ್ಡ ಧನಿಕನಿರಬೇಕು ಎಂದು ಭಾವಿಸುತ್ತಾರೆ. ಇಲ್ಲಿ ಎಲ್ಲವನ್ನು ಹೊರಾವರಣದಲ್ಲೇ ನಂಬಿಬಿಡುತ್ತಾರೆ.ಅದೇ ಸತ್ಯ.


ಮನೆ ಪುಟ್ಟದು. ಅಲ್ಲಿ ಪುಟ್ಟ ಸಂಸಾರ ಇರಬೇಕೆಂದೇನೂ ಇಲ್ಲ. ಅಪ್ಪ ಅಮ್ಮ ಅಜ್ಜ ಅಜ್ಜ ಮಕ್ಕಳು, ಅದಲ್ಲದೆ ಇನ್ನೂ ಕೆಲವರು ಇರಬಹುದು. ಮನೆ ಸಂಸಾರ ಎನ್ನುವಾಗ ಹಲವು ಸ್ನೇಹ ಕಲಹ ಎಲ್ಲವೂ ಸಮ್ಮಿಳಿತವಾಗಿರುತ್ತದೆ. ಅದೇ ಸಂಸಾರ. ಅದರಲ್ಲಿ ಕೆಲವೊಮ್ಮೆ ನಿಸ್ಸಾರ ವಿಚಾರಗಳೇ ಸ್ನೇಹಕ್ಕೂ ಕಲಹಕ್ಕೂ ಕಾರಣವಾಗಿರುತ್ತದೆ. ಇಲ್ಲಿಯೂ ಹಾಗೆ ಮನೆಯಲ್ಲೊಂದು ಚಪ್ಪಲಿ ಸ್ಟಾಂಡ್ ಇತ್ತು. ಕಲಹದ ನಿಸ್ಸಾರ ಕಾರಣಕ್ಕೆ  ಅದುವೇ ಕಾರಣವಾಗಿಬಿಟ್ಟಿತು. ವಿಷಯ ಇಷ್ಟೇ. ಸುಂದರವಾದ ಆ ಚಪ್ಪಲಿ ಸ್ಟಾಂಡ್ ಹೊಸದಾಗಿ ತಂದು ಇಡುವಾಗ ಅದರ ಸ್ಥಾನದ ಬಗ್ಗೆ ಒಂದು ಚರ್ಚೆ. ಮಗನಿಗೆ ಸೊಸೆಗೆ ಅದನ್ನು ಮನೆಯ ಬಾಗಿಲ ಎದುರೆ ಇಟ್ಟು ಬಿಡಬೇಕು. ಯಾಕೆಂದರೆ ಹೊರಗೆ ಹೋಗುವಾಗ ಬರುವಾಗ ಧರಿಸುವುದಕ್ಕೆ ಕಳಚಿ ಇಡುವುದಕ್ಕೆ ಅದು ಅನುಕೂಲವಾಗುತ್ತಿತ್ತು. ಆದರೆ ಮನೆಯಲ್ಲಿ ಹಿರಿಯರು ಇದಕ್ಕೆ ತದ್ವಿರುದ್ದ. ಚಪ್ಪಲಿ ಅದು ಋಣಾತ್ಮಕ ಅಂಶ. ಮನೆಯ ಬಾಗಿಲ ಎದುರು ಅದನ್ನು ಇರಿಸಬಾರದು. ಹಿರಿಯರು ಅದಕ್ಕೆ ಸರಿಯಾದ  ಕಾರಣಗಳನ್ನು ಕೊಡುತ್ತಾರೆ.  ಋಣಾತ್ಮಕ ಅಂಶಗಳು ಮನೆಯೊಳಗೆ ಬರುತ್ತವೆ. ಮನೆಯ ಒಳಗೆ ವಾಸಿಸುವವರ ಮನಸ್ಸು ಸದಾ ಗೊಂದಲ ಆಶಾಂತಿಯಿಂದ ಕೂಡಿರುತ್ತವೆ. ಮನೆಯಲ್ಲಿ ನಿಸ್ಸಾರ ವಿಚಾರಕ್ಕೂ ಸಂಘರ್ಷ ಕಲಹ ಏರ್ಪಡುತ್ತದೆ.  

ವಿಷಯ ಯೋಚಿಸಿದರೆ ಎರಡರಲ್ಲೂ ಸತ್ಯಾಂಶ ಇತ್ತು. ಎರಡನ್ನು ಹೌದು ಎಂದೇ ಸಮ್ಮತಿಸಬೇಕು. ಆದರೆ ಕಲಹದ ನಿಸ್ಸಾರ ಕಾರಣವು ಅಲ್ಲಿನವರ ಮನಸ್ಥಿತಿಯಿಂದ ಗಂಭೀರವಾಗುತ್ತದೆ. ಸುಂದರವಾದ ಬೆಲೆಬಾಳುವ ಚಪ್ಪಲಿ ಸ್ಟಾಂಡ್ ಈ ಕ್ಷುಲ್ಲಕ ಕಾರಣಕ್ಕೆ ಎಲ್ಲೋ ಇಡುವುದಕ್ಕೆ ಮಕ್ಕಳಿಗೆ ಸಮ್ಮತವಿಲ್ಲ. ಅದು ಬಾಗಿಲ ಮುಂದೆ ಇಡುವುದಕ್ಕೆ ಹಿರಿಯರಿಗೆ ಸಮ್ಮತವಿಲ್ಲ. ಇಡಬಾರದು ಎನ್ನುವುದಕ್ಕೆ ಕಾರಣ, ಅದು ಕಲಹಕ್ಕೆ ಕಾರಣವಾಗುತ್ತದೆ. ಇಲ್ಲೇನೋಡಿ ವಿಚಿತ್ರ ಇರುವುದು. ಇಡಬೇಕು ಇಡಬಾರದು ಎನ್ನುವುದೇ ಕಲಹಕ್ಕೆ ಕಾರಣವಾದರೆ ಅಲ್ಲಿ ಮನಸ್ಥಿತಿಯೇ  ಕಲಹಕ್ಕೆ ಕಾರಣ ಎಂದು ತಿಳಿಯುವುದಕ್ಕೆ ಅರಿವು ಇರಬೇಕು. ನಮ್ಮೊಳಗಿನ ಅಹಂ ದೂರವಿಡಬೇಕು. ಎಲ್ಲಿ ಅಹಂ ಇರುವುದೋ ಅಲ್ಲಿ ಮನಸ್ಸು ಶಾಂತವಾಗಿರುವುದಕ್ಕೆ ಸಾಧ್ಯವಿಲ್ಲ. ಅಹಂ ಎಂಬುದೇ ಮನಸ್ಸಿನಲ್ಲಿಋಣಾತ್ಮಕ ಧೋರಣೆಯನ್ನು ತುಂಬಿಸುವುದಕ್ಕೆ ಕಾರಣವಾಗುತ್ತದೆ. ಅಹಂ ಮನಸ್ಸಿನಲ್ಲಿ ಅತೃಪ್ತಿಯನ್ನು ತುಂಬಿಸುತ್ತದೆ. ನಮ್ಮ ಮನಸ್ಥಿತಿ ನಿರ್ಧಾರವಾಗುವುದೇ ಅಹಂ ನಿಂದ. ಇದು ದೂರವಾದರೆ ಗಂಭೀರವಾದ ಕಾರಣಗಳು ನಿಸ್ಸಾರವಾಗಿಬಿಡುತ್ತದೆ. ಕೊನೆಗೆ ಹಿರಿಯರು ಯೋಚಿಸಿದರು. ಇದೇ ಕಲಹಕ್ಕೆ ಕಾರಣವಾಗುವುದಾದರೆ, ಈ ಭಾವನೆಯಿಂದ ಗಳಿಸುವ ಲಾಭವಾದರೂ ಏನು ಎಂದು ಚಿಂತಿಸುತ್ತಾರೆ.  ಕೊನೆಗೆ ಚಪ್ಪಲಿ ಸ್ಟಾಂಡ್ ಮನೆಯ ಬಾಗಿಲ ಮುಂದೆಯೇ ಇಡಲಾಗುತ್ತದೆ. ಕಲಹಕ್ಕೆ ಕಾರಣವೇ ಮನಸ್ಸಿನ ಭಾವ ಎಂಬುದು ವಾಸ್ತವದ ಸತ್ಯ. 

ಭಾನುವಾರದ ಪ್ರಹಸನ

ವಾರಾಂತ್ಯ ಎಂಬುದು ಪುರುಷರಿಗೆ ಒಂದು ಸತ್ವ ಪರೀಕ್ಷೆಯಂತೆ. ನಿಜವಾಗಿ ಭಾನುವಾರ ಎಂಬುದು ವಾರದ ಆರಂಭವಾದರೂ, ಶನಿವಾರದ ಜತೆಗೆ ಇದೂ ವಾಡಿಕೆಯಲ್ಲಿ ವಾರಾಂತ್ಯವಾಗುವುದುಂಟು. ವಾರವಿಡೀ ಕೆಲಸದ ಕಛೇರಿ ವ್ಯಾಪಾರ ಮತ್ತೀತರ ಒತ್ತಡದಲ್ಲೇ ಕಳೆಯುವವರಿಗೆ ವಾರಾಂತ್ಯ ಆರಂಭ ಹಲವು ಸಲ ಸತ್ವ ಪರೀಕ್ಷೆಯಾಗಿಬಿಡುತ್ತದೆ. 


ಭಾನುವಾರದ ಒಂದು ದಿನ. ಬೆಳಗ್ಗೆ ಎಂದಿನಂತೆ ಬೇಗ ಏಳುವ ಅನಿವಾರ್ಯ, ಉಳಿದ ದಿನ ಬೇಗನೇ ಎಳುವ ಅಭ್ಯಾಸದಲ್ಲಿ ಭಾನುವಾರವೂ ಐದುಘಂಟೆಗೆ ಎಚ್ಚರವಾಗಿ ನಿತ್ಯದ ಅಭ್ಯಾಸದಂತೆ ಆ ಹೊತ್ತಗೆ ಜಲಬಾಧೆ  ತಡೆಯದೆ ಶೌಚಕ್ಕೆ ಹೋಗಿ ಅದನ್ನು ತೀರಿಸಿ ಇಷ್ಟು ಬೇಗ ಏನು ಮಾಡುವುದು ಎಂದು ಕೊಂಡು ಮತ್ತೆ ಪುಣಾ ಮಲಗುದು. ಚಕಿತರಾಗಬೇಡಿ, ಕೆಲವರ ಕನ್ನಡ ಹೀಗೆ. ಪುನಃ ಎಂಬುದು ಪುಣಾ ಆಗಿ ಬಿಡುತ್ತದೆ. ಅದು ತುಳುವಿನ ಪುಣ  ಅಂದರೆ ಹೆಣ. ಪುಣ ಮಲಗುವುದಲ್ಲದೇ ಮತ್ತೇ ಎನಾಗಬೇಕು ಎಂಬುದು ಒಂದು ಪ್ರಶ್ನೆ. ಐದುಗಂಟೆಗೆ ಎದ್ದು ಪುನಃ ಮಲಗಿ ಹೆಣದಂತೆ ಆಗಲು ಇಚ್ಛೆಇಲ್ಲದೆ ಹಾಸಿಗೆಯಲ್ಲೇ ಆಕಡೆ ಈಕಡೆ ಮಗ್ಗುಲು ಬದಲಾಯಿಸಿಕೊಂಡು ಅಂತೂ ತುಸು ಹೊತ್ತಿನಲ್ಲಿ ಸಾಕಪ್ಪಾಅಂತ ಎದ್ದುಬಿಡುವುದು.  ಹೆಂಗಸರಾದರೋ...ಭಾನುವಾರ ಸಿಕ್ಕಿದ್ದೇ ಒಂದು ಅವಕಾಶ ಎಂದು ಕೊಂಡು...ಭಾನುವಾರ ಬೆಳಗಿನ ತಿಂಡಿಯ ಗಡಿಬಿಡಿ ಇಲ್ಲ ಎಂದು ಕೊಂಡು ಬಾರದ ನಿದ್ದೆಯನ್ನು ಬರಿಸಿ  ಆರಾಮವಾಗಿ ಎಂಟು ಘಂಟೆಯ ತನಕ ಮುಸುಕಿನ ಒಳಗೆ ಅವಿತುಕೊಂಡು ಬಿಡುತ್ತಾರೆ. ಹಲವು ಸಲ ಶನಿವಾರ ತಡ ರಾತ್ರಿ ತಿಂದ ಗೋಬೀ ಮಂಚೂರಿ ಕಬಾಬ್ ರೋಟಿ ಕರಿಯ ಬೆಳ್ಳಳ್ಳಿ ಘಮಲು ಬೆಳಗೆ ಹುಳಿತೇಗಿನ ಜತೆಗೆ ವಾಪಾಸು ಬಂದು ಶೌಚಾಲಯದ ವಿಶ್ರಾಂತಿ ಸಮಯವನ್ನು ದೀರ್ಘಗೊಳಿಸುತ್ತದೆ. ಈಗಂತೂ ಅಲ್ಲಿಗೂ ಮೊಬೈಲು ತೆಗೆದುಕೊಂಡು ಹೋಗಿ ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿದು ಹಂಚಿ ಹೋದ ಪೋಟೋ ವಿಡಿಯೋಗಳನ್ನು ನೋಡಿ, ನೋಡದೇ ಉತ್ತರಿಸದೇ ಹೋದ ಸಂದೇಶಗಳಿಗೆ ಪ್ರತಿಕ್ರಿಯಿಸುವ ಕೆಲಸದ ನಡುವೆ ಶೌಚ ಆಗಿದೆಯೋ ಇಲ್ಲವೋ ಎಂಬ ಅರಿವೇ ಇರುವುದಿಲ್ಲ. ಮತ್ತೂ ಬಾರದ ಬಸ್ಸಿಗೆ ನಿಲ್ದಾಣದಲ್ಲಿ ಕಾದಂತೆ ಬಹಳ ಹೊತ್ತು ಕಳೆದ ನಂತರ ಛೇ ಇನ್ನು ಬರುವುದಿಲ್ಲ ಅಂತ ಎದ್ದು ಹೊರಗೆ ಬರುವುದು ಭಾನುವಾರದ ಸಾಮಾನ್ಯ ಬೆಳಗಿನ ಕ್ರಿಯಾಭಾಗವಾಗಿರುತ್ತದೆ. 

ಆ ಭಾನುವಾರವೂ ಹಾಗೇ ಬೆಳಗ್ಗೆ ಹಾಗೋ ಹೀಗೋ ಉಪಾಹಾರ,  ಹಲವು ಸಲ ಮೊದಲ ದಿನ , ರಾತ್ರಿಗೆ ಮನೆಯಲ್ಲಿ ಯಾರೂ ಉಟ ಮಾಡದ ಕಾರಣ ಅನ್ನ ಉಳಿದಿರುತ್ತದೆ. ಹಾಗಾಗಿ ಚಿತ್ರಾನ ಉಪ್ಪಿಟ್ಟು ಖಾಯಂ ತಿಂಡಿಯಾಗಿರುತ್ತದೆ. ಅದನ್ನು ಹನ್ನೊಂದುಘಂಟೆಗೆ ಹೇಗೋ ನುಂಗಿ ಬೆಳಗಿನ ಹರಕೆ ತಡವಾಗಿ ಸಂದಾಯವಾಗುತ್ತದೆ. ನಂತರ ಮಧ್ಯಾಹ್ನದ ತನಕ, ವಾರದಲ್ಲಿ ಬಿಟ್ಟು ಉಳಿದ ಕೆಲಸಗಳು , ಹೆಚ್ಚಿನ ಸಮಯ, ಹಳೆಯ ಬಟ್ಟೆ ಹುಡುಕಿ ಸ್ವಛ್ಚ ಮಾಡುವುದು, ತೀರಾ ಮೂಲೆಯಲ್ಲಿ ಸಜ್ಜದಲ್ಲಿದ್ದ ಕಸ , ಗುಜರಿಗಳನ್ನು ವಿಲೇ ವಾರಿ ಮಾಡುವುದು ಇದೇ ಆಗಿ ಬಿಡುವುದುಂಟು. ಅಥವಾ ಏನೂ ಕೆಲಸ ಮಾಡದೇ ಮೊಬೈಲ್ ರೀಲ್ಸ್ ನೋಡುತ್ತಾ ಕಾಲ ಕಳೆವಾಗ ಹಂಡತಿಯ ಕಿರಿ ಕಿರಿ, ಈ ಪ್ರಾಣಿ ಒಂದು ಸುಮ್ಮನೇ ಕುಳಿತಿರುವ ಭಾವದಲ್ಲಿ ಅವರ ವಕ್ರದೃಷ್ಟಿಗೆ ಎರವಾಗಿ ಕುಳಿತಿರಲಾಗದೇ ಏನೋ ಒಂದು ಮಾಡುವುದುಂಟು. ಹಾಗೂ ಹೀಗೂ ಮಧ್ಯಾಹ್ನ ಊಟ ...ಬೆಳಗಿನ ಉಪಾಹಾರ ತಡವಾಗಿ ಆಗಿರುವುದರಿಂದ...ಹಸಿವಿಲ್ಲದೇ ಇದ್ದರೂ ಊಟಮಾಡಿ ಇಂದು ಭಾನುವಾರ ಎಂಬ ಭಾವದಲ್ಲಿ ಹಾಗೇ ಸೋಫಾದಲ್ಲಿ ಒಂದು ಕುಳಿತು ಮತ್ತೆ ಪುನಃ ಮೊಬೈಲ್ ರೀಲ್ಸ್ ತೀಡಿ ತೀಡಿ ನೋಡುತ್ತಾ ಇರುವುದು. ದ್ರೌಪದಿಯ ಸೀರೆಗಾದರೂ ಒಂದು ತುದಿಯಂಚು ಸಿಗಬಹುದು. ಆದರೆ ಈ ರೀಲ್ಸಗಳಿಗೆ ಅಂತ್ಯವೆಂಬುದೇ ಇಲ್ಲ. ಒಂದರ ನಂತರ ಒಂದು ...ನೋಡಿ ನೋಡಿ ಕಣ್ಣೆ ಸುಸ್ತಾಗಿ ತಲೆತುಂಬ ಬೇರೇ ಎನೂ ಇಲ್ಲದೇ ಈ ರೀಲ್ಸ್ ಗಳೇ ತುಂಬಿಬಿಡುತ್ತವೆ. 

ಸಾಯಂಕಾಲ ಏನು?  ಮತ್ತದೇ ಎನು ಮಾಡುವುದು. ಮೊಬೈಲ್ಸ್ ರೀಲ್ ನೋಡಿ ನೋಡಿ ಸಾಕಾಗಿರುತ್ತದೆ. ಮಾಡುವುದಕ್ಕೆ ಏನೂ ಇರುವುದಿಲ್ಲ ಸಮಯ ಕಳೆಯಬೇಕಲ್ಲ. ಇನ್ನು ನಿದ್ದೆ ಮಾಡಿದರೆ ರಾತ್ರೆಯ ಬಾರದ ನಿದ್ದೆ ಹಟ ಹಿಡಿದರೆ ಅಂತ ಭಯವಾಗುತ್ತದೆ. ಹಾಗೂ ಹೀಗೂ ಹೊತ್ತು ಸರಿದಾಗ ಹೆಂಡತಿ ಹಾಗೇ ಮಲ್ಲೆಶ್ವರಂ ಬಜಾರ್ ಗೆ ಹೋಗಿ ಬರೋಣ ಅಂತ ಮಕ್ಕಳ ಜತೆ ಹೊರಡುತ್ತಾಳೆ. ಅದು ಪ್ರತಿ ಭಾನುವಾರದ ಅಭ್ಯಾಸ. ಮೊದೆಲೆಲ್ಲ ಊರಲ್ಲಿ ಬಳೆ ಸರ ಕೊಳ್ಳಲು  ವರ್ಷದ ಯಾವುದೋ  ಜಾತ್ರೆ ಸಂತೆಗಾಗಿ ಕಾದುಕುಳಿತಿರುತ್ತಿದ್ದರು. ಈಗ ಹಾಗಿಲ್ಲ. ಮನೆಯಿಂದ ಬೀದಿಗೆ ಇಳಿದರೆ ...ಮಲೆಶ್ವರಂ ಎಂಟನೇ ಅಡ್ಡರಸ್ತೆಗಳಂತೆ ಬೇಕಾದಷ್ಟು ರಸ್ತೆಗಳು ಇರುತ್ತವೆ. ಅಂಗಡಿಯೋ ಬೀದಿ ಬದಿಯ ಅಂಗಡಿಯೋ ವೆತ್ಯಾಸವೇ ಇಲ್ಲದಂತೆ ಅದೂ ಇದೂ ಹರಡಿ ಹೆಂಗಳೆಯರ ಚಿತ್ತ ಸೆಳೆಯುವುದಕ್ಕೆ ಹಲವು ಅವಕಾಶಗಳು ತೆರೆದಿರುತ್ತವೆ.  ಸಾಯಂಕಾಲವಾದೊಡನೆ ಮನೆಯಲ್ಲಿ ಕುಳಿತು ಏನು ಮಾಡುವುದು ಸುಮ್ಮನೇ ಹಂಡತಿಯ ಜತೆಗೆ ಒಂದಷ್ಟು ಹೊತ್ತು ಕಳೆದ ಹಾಗಾಗುತ್ತದೆ ಎಂದು ಕೊಂಡು ಹೊರಟು ಬಿಡುವುದು. ಅಂಗಡಿಯಿಂದ ತರುವುದಕ್ಕೆ ಏನೂ ಇರುವುದಿಲ್ಲ. ಸುಮ್ಮನೇ ತಿರುಗುವುದು...ಅಷ್ಟೇ . ತಿರುಗಿ ನೊಡುವುದಕ್ಕೇನು ಟಿಕೆಟ್ ಕೊಡಬೇಕಾಗಿಲ್ಲವಲ್ಲ. ಮಾಲ್ ಸುತ್ತಾಡಿ ಮೆಲೆ ಕೆಳಗೆ ಹತ್ತಿ ಇಳಿಯುವುದು ಪರಿಸರ ಎಲ್ಲ ನೋಡಿಕೊಂಡು ಬಂದು ಬಿಡುವುದು ಅಂತ ಹೆಂಡತಿ ಮಕ್ಕಳ ಜತೆಗೆ ಬೈಕ್ ಅಥವಾ ಕಾರು ತೆಗೆದುಕೊಂಡು ಹೊರಟು ಬಿಡುವುದು.  ಒಂದಿಷ್ಟು ಪೆಟ್ರೋಲ್ ಖರ್ಚು ಮಾತ್ರ ಅಂತ ನಿರೀಕ್ಷೆ ಇರುತ್ತದೆ. ಹೆಂಡತಿ ಹೋಗುವಾಗ ಜತೆಯಲ್ಲೇ ಹೋಗುವುದು. ಏನಾದರೂ ಅವರೇ ಕೊಂಡುಕೊಳ್ಳುತ್ತಾರೆ ಅಂತ ಸುಮ್ಮನೇ ಹೊರಟು ಬಿಡುತ್ತಾರೆ. 

ಭಾನುವಾರ ಬಂದರೆ ರಸ್ತೆ ಮಾಲ್ ಅದಕ್ಕಾಗಿಯೇ ಪೂರ್ವ ಸಿದ್ಧತೆ ನಡೆಸಿರುತ್ತಾರೆ. ಎಂದಿನಂತೆ ಹೆಂಡತಿ ಮಕ್ಕಳು ಎಲ್ಲ ಸೇರಿ  ಮೊದಲ ಅಂಗಡಿಯಿಂದ ತೊಡಗಿ ಪ್ರತಿ ಅಂಗಡಿಯ ಒಳಗೆ ಹೊಕ್ಕಿ ಒಂದು ಸುತ್ತು ಇಣುಕಿ ಕೊಳ್ಳುವುದಕ್ಕೆ ಏನೂ ಇಲ್ಲದಿದ್ದರೂ ಅಲ್ಲಿ ತೂಗಿ ಹಾಕಿರುವುದನ್ನು ಹಿಂದೆ ಮುಂದೆ ತಿರುಗಿಸಿ ನೋಡಿ ಹಾಗೇ ಹೊರಬರುವುದು.  ಜತೆಯಲ್ಲಿ  ಹೋದ ಗಂಡನಿಗೂ ಇದೇ ಕೆಲಸ. ಹಾಗೇ ಅಂಗಡಿ ಅಂಗಡಿ ಸುತ್ತಾಡುವುದು. ಹೆಂಡತಿ ಅಂಗಡಿ ಒಳಗೆ ಹೋದರೆ ಗಂಡು ಹೊರಗೆ ಹಾಗೇ ಹೊರಗೆ ನಿಂತು ರಸ್ತೆಯಲ್ಲಿ ಹೋಗಿಬರುವವರನ್ನು ನಿಂತು ನೋಡುವುದಲ್ಲದೇ ಬೇರೇನೂ ಕೆಲಸ ಇರುವುದಿಲ್ಲ. ಕೆಲವೊಮ್ಮೆ ಚಿಕ್ಕ ಮಕ್ಕಳು ಇದ್ದರೆ ಹೊರಗೆ ನಿಂತು ಅವರನ್ನು ಸಂಭಾಳಿಸಿ ನಿಯಂತ್ರಿಸುವುದೇ ಹರ ಸಾಹಸವಾಗಿಬಿಡುತ್ತದೆ. ಈ ಅಂಗಡಿಗಳೂ ಹಾಗೆ ನಮ್ಮ ಅಂದಿನ ನಮ್ಮ ಹಳ್ಳಿಯ ಅಂಗಡಿಯ ಹಾಗೆ ಅಲ್ಲ. ಎಷ್ಟು ಹೊತ್ತಾದರೂ ನಿಂತೇ ಇರಬೇಕು. ಕುಳಿತುಕೊಳ್ಳುವುದಕ್ಕೆ ಎಡೆಯಿಲ್ಲ. ಹಳ್ಳಿಯ ಅಂಗಡಿಗಳಲ್ಲಾದರೆ ಮೊದಲು ಒಂದೆರಡು ಬೆಂಚು ಇಡುತ್ತಿದ್ದರು. ಹೀಗೆ ಬರುವವರಿಗೆ ಕುಳಿತುಕೊಳ್ಳೂವುದಕ್ಕೆ ಒಂದಿಷ್ಟು ಹರಟೆ ಹೊಡೆದು ಊರ ಸುದ್ದಿ ಹಂಚುವುದಕ್ಕೆ ಈ ಬೆಂಚು ಬಹಳ ಸಹಕಾರಿಯಾಗುತ್ತಿತ್ತು. ಬಸ್ ಬರುವುದಕ್ಕೆ ತಂಗುದಾಣದಲ್ಲಿ ಕಾದುಕುಳಿತುಕೊಳ್ಳುವುದಕ್ಕಿಂತ ಈ ಅಂಗಡಿ ಬೆಂಚ್ ನಲ್ಲಿ ಕುಳಿತು ಅಂಗಡಿಯವನೊಂದಿಗೆ ಊರಸುದ್ದಿ ಮಾತನಾಡುತ್ತಾ ಅದರ ನಡುವೆ ಒಂದಷ್ಟು ಚಿಲ್ಲರೆ  ವ್ಯಾಪಾರ ಬಸ್ಸು ಬರುವುದನ್ನೆ ಮರೆತು ಬಿಡುತ್ತಿದ್ದರು.   ಇಲ್ಲಿ ಹಾಗಿಲ್ಲ ಎಷ್ಟು ಹೊತ್ತಾದರು ನಿಂತೇ ಇರಬೇಕು. ಕೊಳ್ಳುವುದಕ್ಕೆ ಏನು ಇಲ್ಲದಿದ್ದರೂ,  ನಿಂತು ನಿಂತು ಕಾಲು ನೋಯುವಾಗ  ಅಲ್ಲಿ ಇಲ್ಲಿ ಇಣುಕಿ ನೋಡಿ , ಕೊನೆಗೆ ಏನೂ ಬೇಡ ಅಂತ ಸುಮ್ಮನೇ ನಿಂತು ಅಂಗಡಿಯೊಳಗೆ ಹೊಕ್ಕ ಮನೆಯವರನ್ನು ಯಾವಾಗ ಬರುತ್ತಾರೋ ಅಂತ ಕಾದು ಕುಳಿತು ನೋಡುವುದಲ್ಲದೇ ಬೇರೇನೂ ಕೆಲಸವಿರುವುದಿಲ್ಲ. 

ಹಲವಾರು ಅಂಗಡಿ ಹತ್ತಿ ಇಳಿದು ಕತ್ತಲೆ ಆವರಿಸುವಾಗ , ಇನ್ನು ಹೋಗುವ ಅಂತ ಹೊರಡುವಾಗ ಅಂಗಡಿಯಿಂದ ಏನು ಕೊಂಡುಕೊಂಡದ್ದು ಎಂದು ನೋಡಿದರೆ ಕೆಲವು ರಬ್ಬರ್ ಬ್ಯಾಂಡ್, ಕ್ಲಿಪ್ಪು ಇಷ್ಟೇ ಹತ್ತೈವತ್ತು ರೂಪಾಯಿಯ ವಸ್ತುಗಳು.  ಕೊನೆಗೆ ಇಷ್ಟು ಹೊತ್ತು ನಿಂತು ಸುಸ್ತಾಗಿರುತ್ತದೆ. ಹೆಂಡತಿ ಮಕ್ಕಳು ಗಂಡಿನ ಮುಖ ನೋಡಿ ಪಾಪ ಸುಮ್ಮನೇ ಇದ್ದಾರೆ . ಏನಾದರೂ ತಿನ್ನುವ ಮನಸ್ಸಾಗುತ್ತದೆ. ಇಷ್ಟು ಹೊತ್ತು ಹೆಂಡತಿಯೇ ಖರ್ಚು ಮಾಡಿರುತ್ತಾಳೆ ಇನ್ನೂ ಆಕೆಯೇ ದುಡ್ಡು ಕೊಡಬಹುದು ಅಂತ ಯಾವುದೋ ಬೇಲ್ ಚಾಟ್ಸ್ ಅಂಗಡಿ ಮುಂದೆ ಬರುತ್ತಾರೆ. ಅದು ಇದು ಅಂತ ಆರ್ಡರ್ ಮಾಡಿ ನಿಂತುಕೊಂಡೊ ಅಲ್ಲಿದ್ದ ಸ್ಟೂಲ್ ಮೇಲೆ ಕುಳಿತು ತಿನ್ನುವುದಾಗುತ್ತದೆ. ಇಷ್ಟಾದರೂ ಸಿಕ್ಕಿತಲ್ಲಾ ಅಂತ ಗಂಡನಿಗೆ ಆಗುವ ಸಂತೋಷ ಕೇವಲ ಕ್ಷಣಿಕ. ಅದುವರೆಗೆ ಪ್ರತಿ ಅಂಗಡಿಯಲ್ಲೂ ತನ್ನ ವ್ಯಾನಿಟಿ ಬ್ಯಾಗಿನಿಂದಲೇ ದುಡ್ಡು ಕೊಡುತ್ತಿದ್ದಾಕೆ ಈಗ  ಎಲ್ಲೋ ನೋಡುತ್ತಿದ್ದ ಗಂಡನ  ಹತ್ತಿರ ಬಂದು , ಮೊಬೈಲ್ ನೋಡಿ ಫೋನ್ ಪೇ ತೆಗೆದು ನೋಡಿ ಪಿನ್ ಹಾಕಿ ಅಂತ ಹೇಳುತ್ತಾಳೆ. ಫೋನ್ ಪೇ ತೆಗೆದು ನೋಡಿದರೆ ಅಂಗಡಿಯವನಿಗೆ ಕೊಡಬೇಕಾದ ನಾನೂರು ಐನೂರಕ್ಕೆ ಅಲ್ಲಿ ಪಿನ್ ರಿಕ್ವೆಸ್ಟ್ ಬಂದಿರುತ್ತದೆ. ಅರಳಿದ ಮುಖ ಸಣ್ಣದು ಮಾಡಿ ಪಿನ್ ಒತ್ತಿ ಬಡಪಾಯಿ ಪೋಸು ಕೊಟ್ಟು ಮನೆ ಕಡೆ ಹೊರಟು ಬಿಡುತ್ತಾರೆ. ಅಷ್ಟೆಲ್ಲ ಅಂಗಡಿ ಸುತ್ತಿದರೂ ಆಕೆಗೆ ಒಂದು ಹತ್ತು ಐವತ್ತು ಖರ್ಚಾಗಿರುತ್ತದೆ.  ಆದರೆ ಗಂಡಿನ ಪೋನ್ ಪೇಯಲ್ಲಿ ಐನೂರು ಕಳೆದಾಗಿರುತ್ತದೆ. 

ಹೀಗೆ ಒಂದು ಭಾನುವಾರದ ಸಹಜ ಪ್ರಹಸನ ಕಳೆದಿರುತ್ತದೆ.