ಸ್ವರ್ಗ ಲೋಕದಲ್ಲಿ ಒಂದು ದಿನ ದೇವತೆಗಳೂ ಋಷಿ ವರೇಣ್ಯರು ನೆರೆದಿದ್ದ ಸಭೆಯಲ್ಲಿ ದೇವೇಂದ್ರ ಪ್ರಶ್ನೆ ಒಂದನ್ನು ಇಡುತ್ತಾನೆ. ವರ್ತಮಾನದಲ್ಲಿ ಭೂಮಿಯ ಮೇಲೆ ಸತ್ಯವಂತರು ಯಾರು? ಈ ಪ್ರಶ್ನೆ ಬಹಳ ಕಠಿಣವಾದ ಪ್ರಶ್ನೆಯಾಗಿತ್ತು. ಆಗ ಕುಳಿತಿದ್ದ ವಸಿಷ್ಠ ಮಹಾಮುನಿಗಳು ಎದ್ದು ನಿಂತು, ಅಯೋಧ್ಯೆಯನ್ನು ಆಳುವ ಹರಿಶ್ಚಂದ್ರ ಮಹಾರಾಜನು ಪರಮ ಸತ್ಯವಂತನಾಗಿದ್ದಾನೆ. ಆಗ ವಸಿಷ್ಟರನ್ನು ದ್ವೇಷಿಸುತ್ತಿದ್ದ ವಿಶ್ವಾ ಮಿತ್ರ ಎದ್ದುನಿಂತು ವಸಿಷ್ಠರ ಈ ಅಭಿಪ್ರಾಯವನ್ನು ತೀವ್ರವಾಗಿ ಆಕ್ಷೇಪಿಸುತ್ತಾನೆ. ಆನಂತರ ಪಂಥಾಹ್ವಾನವಾಗುತ್ತದೆ. ವಿಶ್ವಾಮಿತ್ರ ಹರಿಶ್ಚಂದ್ರನನ್ನು ಪರೀಕ್ಷಿಸುವುದಕ್ಕೆ ತೊಡಗುತ್ತಾನೆ ಹರಿಶ್ಚಂದ್ರನ ಸತ್ಯ ಪರೀಕ್ಷೆಯಾಗುತ್ತದೆ.
ಇದರಲ್ಲಿ ಒಂದು ಕುಚೋದ್ಯವಿದೆ. ದೇವೇಂದ್ರನು ಎದ್ದುನಿಂತಾಗ ಹರಿಶ್ಚಂದ್ರನ ಹೆಸರು ಹೇಳಿದ ವಸಿಷ್ಠರಿಗೂ ಸ್ವತಃ ತಮ್ಮ ಸತ್ಯದ ಮೇಲೆ ಅನುಮಾನವಿತ್ತು. ಹಾಗಾಗಿ ತಮ್ಮ ಹೆಸರನ್ನು ಹೇಳದೇ ಕೇವಲ ಹರಿಶ್ಚಂದ್ರನ ಹೆಸರನ್ನು ಮಾತ್ರವೇ ಹೇಳಿದರು. ಇದು ಕೇವಲ ಕುಚೋದ್ಯವಷ್ಟೇ, ವಸಿಷ್ಠರು ಸತ್ಯವನ್ನೇ ಹೇಳುತ್ತಾರೋ ಎಂಬುದು ಇಲ್ಲಿ ಪ್ರಶ್ನೆಯಲ್ಲ. ಹಾಗಾಗಿ ಇದು ತೀರಾ ಅಪ್ರಸ್ತುತ. ಸ್ವತಃ ದೇವೇಂದ್ರನಿಗೂ ತನ್ನ ಸತ್ಯಪಾಲನೆಯಲ್ಲಿ ಅನುಮಾನವಿರಲೂ ಬಹುದು ಎಂಬುದು ಮತ್ತೊಂದು ಪ್ರಶ್ನೆ. ಆದರೆ ಮಹಾ ಮಹಾ ವ್ಯಕ್ತಿಗಳು ಸಹಿತ ಸತ್ಯವಂತರು ಯಾರು ಎಂದು ಕೇಳಿದರೆ ಸತ್ಯ ಹರಿಶ್ಚಂದ್ರ ಅಂತಲೇ ಹೇಳುತ್ತಾರೆ ಹೊರತು ಅದರ ಜತೆಗೆ ತಾವೂ ಸತ್ಯವಂತರು ಎಂದು ಹೇಳುವ ಧೈರ್ಯವಾಗಲೀ ಆತ್ಮವಿಶ್ವಾಸವಾಗಲೀ ಯಾರಿಗೂ ಇಲ್ಲ. ಸತ್ಯವಂತರಾಗುವುದು ಬಹಳ ಕಷ್ಟ. ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಸುಳ್ಳು ಹೇಳುತ್ತಾರೆ. ಇಷ್ಟು ಮಹನಿಯರು ಹುಟ್ಟಿ ಬೆಳೆದರೂ ಸತ್ಯಕ್ಕೆ ಯಾರು ಅಂತ ಕೇಳಿದರೆ ಎಲ್ಲರಿಗೂ ಹರಿಶ್ಚಂದ್ರ ಮಾತ್ರ ಸತ್ಯವಂತ. ಸತ್ಯವನ್ನು ಪರಿಪಾಲಿಸುತ್ತಿದ್ದ ಮಹಾತ್ಮ ಗಾಂಧಿಯವರು ಕೂಡಾ ಸತ್ಯಾನ್ವೇಷಣೆಯಲ್ಲಿ ಒಂದು ಸುಳ್ಳನ್ನು ಹೇಳಿದ್ದಾರೆ ಎಂದು ಪ್ರಾಮಾಣಿಕವಾಗಿ ಒಪ್ಪಿದ್ದಾರಂತೆ. ಅದ್ವೈತ ತತ್ವದಲ್ಲಿ ಸತ್ಯವನ್ನು ಇನ್ನಷ್ಟು ಆಳವಾಗಿ ಚಿಂತಿಸುವಂತೆ ಮಾಡುತ್ತದೆ. ಸತ್ಯ ಕೇವಲ ಸತ್ಯವಲ್ಲ. ನಿಜವಾದ ಸತ್ಯ ದರ್ಶನ ಅದ್ವೈತ ಸಿದ್ದಾಂತದಲ್ಲಿ ಅಡಕವಾಗಿದೆ.
ಸತ್ಯವಂತರನ್ನು ಭಗವಂತ ಹೆಚ್ಚು ಪರೀಕ್ಷಿಸುತ್ತಾನೆ ಎಂದು ವಾಡಿಕೆಯಲ್ಲಿ ಹೇಳುವುದುಂಟು. ಅರ್ಹತೆಯ ಮಾನದಂಡವೇ ಪರೀಕ್ಷೆ. ಪರೀಕ್ಷೆಯಲ್ಲಿ ತೇರ್ಗಡೆಯಾದರೆ ತಾನೇ ಪದವಿ ಲಭ್ಯವಾಗುವುದು.? ಸುಳ್ಳುಗಾರ ಪರೀಕ್ಷೆಗೆ ಅರ್ಹನಲ್ಲದ ಮೇಲೆ ಅವನ ಸತ್ಯವನ್ನು ಪರೀಕ್ಷಿಸುವ ಪ್ರಮೇಯವೇ ಇರುವುದಿಲ್ಲ. ಹಾಗಾಗಿ ಸನ್ಮನಸ್ಸಿನ ಸತ್ಯವಂತರನ್ನು ದೇವರು ಹೆಚ್ಚು ಪರೀಕ್ಷಿಸುತ್ತಾನೆ. ಯೋಗ್ಯತಾವಂತರನ್ನು ಕಾಣುವಾಗ ಯಾರಿಗಾದರೂ ಮೊದಲು ಅವರನ್ನು ಪರೀಕ್ಷಿಸುವ ಮನಸ್ಸಾಗುತ್ತದೆ. ರುಚಿಯಾದ ತಿಂಡಿಯನ್ನು ಕಂಡಾಗ ನೋಡಿ ರುಚಿಯನ್ನು ಪರೀಕ್ಷಿಸುವಂತೆ ಹಲವು ಸಲ ಈ ಪರೀಕ್ಷೆಗಳು ಅನಪೇಕ್ಷಿತವಾಗಿರಬಹುದು. ಆದರೆ ಉತ್ತಮವಾದವುಗಳು ಎಂದಿಗೂ ಪರೀಕ್ಷಾರ್ಹವಾಗಿರುತ್ತದೆ. ಪರೀಕ್ಷೆಗೂ ಅರ್ಹವಾಗುವುದು ಒಂದು ಮಾನ್ಯತೆಯಾಗಿರುತ್ತದೆ.
ಸತ್ಯ ಯಾವಾಗಲೂ ಕಹಿ ಎನ್ನುವವರು ಇದ್ದಾರೆ. ಇದು ಸ್ವಾನುಭವವೋ ಎಂಬುದು ಅನುಮಾನ. ಅದು ಕಹಿಯಾಗುವುದರಲ್ಲಿ ಒಂದು ಅಪ್ರಾಮಾಣಿಕತೆಯ ಲಕ್ಷಣವಿದೆ. ನಿಜಕ್ಕಾದರೆ, ಸತ್ಯ ಹೇಗೆ ಬಳಸುತ್ತೇವೋ ಅದಕ್ಕೆ ಹೊಂದಿಕೊಂಡು ಅದರ ರುಚಿಯ ಅನುಭವ ಇರುತ್ಯದೆ. ಸತ್ಯ ಎಂದಿಗೂ ಕಹಿಯಲ್ಲ. ನಮ್ಮ ಅನುಭವ ಕಹಿಯಾಗಿರುತ್ತದೆ. ಸತ್ಯ ಕಹಿಯೋ ಸಿಹಿಯೋ ಆದರೆ ಸತ್ಯ ಏನೆಂಬುದನ್ನು ಜಗತ್ತಿಗೆ ತಿಳಿಸಿದವರು ಜಗದ್ಗುರು ಶ್ರೀ ಶಂಕರ ಭಗವದ್ಪಾದರು. ಆದಕಾರಣವೇ ಗುರು ಶ್ರೀ ಶಂಕರಾಚಾರ್ಯರನ್ನು ಆದಿ ಶಂಕರ ಎಂದು ಕರೆದರು.
ಧರ್ಮ ಅರ್ಥ ಕಾಮ ಮತ್ತು ಮೋಕ್ಷ ಇದು ಚತುರ್ವಿಧ ಪುರುಷಾರ್ಥಗಳು. ವೇದಗಳಲ್ಲಿ ಹೇಳಿದ ರೀತಿಯಲ್ಲಿ ಜೀವನವನ್ನು ನಡೆಸುವುದು. ಜೀವನದ ಧರ್ಮ. ಆನಂತರ ಬದುಕುವುದಕ್ಕಾಗಿ ಸಂಪಾದನೆ ಇದು ಅರ್ಥ . ಧರ್ಮಾಧರಿತವಾಗಿ ಧರ್ಮಕ್ಕೆ ಅನುಸಾರವಾಗಿ ಸತ್ಯ ಪ್ರಾಮಾಣಿಕತೆಯಿಂದ ಧನ ಸಂಪತ್ತನ್ನು ಸಂಪಾದನೆ ಮಾಡುವುದು. ಇನ್ನು ಈ ಮೂಲಕ ತನ್ನ ಕಾಮನೆಗಳನ್ನು ನೀಗಿಸುವುದು. ಕಾಮನೆ ಎಂದರೆ ಕೇವಲ ಗಂಡು ಹೆಣ್ಣಿನ ಮಿಲನವಲ್ಲ. ಬದುಕಿನ ಉತ್ಕರ್ಷಕ್ಕೆ ಇಟ್ಟುಕೊಳ್ಳುವ ಬಯಕೆಗಳು. ಶಂಕರಾಚಾರ್ಯರು ಬರುವ ಮೊದಲು ಮನುಷ್ಯನ ಜೀವನ ಧರ್ಮಾಧಾರಿತವಾಗಿ ಇಷ್ಟಕ್ಕೇ ಸೀಮಿತವಾಗಿತ್ತು. ಪ್ರಾಮಾಣಿಕವಾಗಿ ಧರ್ಮದಲ್ಲಿ ಗುರುಹಿರಿಯರನ್ನು ಗೌರವಿಸುವುದು, ಆರ್ತರಿಗೆ ಸಹಾಯಮಾಡುವುದು ಸತ್ಕಾರ್ಯಗಳನ್ನು ಮಾಡುವುದು , ನಂತರ ಅದೇ ಧರ್ಮದಲ್ಲಿ ಹೇಳಿದಂತೆ ಅದೇ ಆಧಾರವಾಗಿ ಸಂಪಾದನೆ ಮಾಡುವುದು, ಆನಂತರ ಅದನ್ನು ಆಧರಿಸಿ ತನ್ನ ಕಾಮನೆಗಳನ್ನು ಈಡೇರಿಸಿಕೊಳ್ಳುವುದನ್ನು ಮಾಡುತ್ತಿದ್ದ. ವೇದದಲ್ಲಿ ಹೇಳಿದ ವೇದಾಧಾರಿತ ಬದುಕನ್ನು ನಡೆಸಿದರೆ ಸ್ವರ್ಗ ಪ್ರಾಪ್ತಿ ಎಂಬ ಭಾವನೆ ಇತ್ತು. ಇಲ್ಲಿನ ಸುಖ ಭೋಗವನ್ನು ಪರಲೋಕದಲ್ಲೂ ಅನುಭವಿಸುತ್ತೇವೆ ಎನ್ನುವ ಕಲ್ಪನೆಯಲ್ಲಿ ಬದುಕುತ್ತಿದ್ದರು ಸ್ವರ್ಗ ಎಂಬ ಕಲ್ಪನೆಯಲ್ಲಿ ಬದುಕುತ್ತಿದ್ದರು. ಅದನ್ನು ಕಣ್ಣಾರೆ ಕಾಣದೇ ಇದ್ದರು ಅದೇ ನಂಬಿಕೆ ವಿಶ್ವಾಸದಲ್ಲಿದ್ದರು. ಕಾಣದ ದೇವರಿಗೂ ರೂಪ ಕೊಟ್ಟರು. ಮತ್ತು ಅದೇ ಸರ್ವಸ್ವ ಎಂದು ನಂಬಿದರು. ಆದರೆ ಶಂಕರಾಚಾರ್ಯರು ಬಂದನಂತರ ಇದಿಷ್ಟೇ ಬದುಕಲ್ಲ..ಇದಕ್ಕಿಂತ ನಂತರದ ಬದುಕು ನಿಜವಾದ ಬದುಕು. ಅದುವರೆಗೆ ಇದ್ದ ಮೋಕ್ಷದ ಕಲ್ಪನೆಯಲ್ಲಿ ಹೊಸ ಚಿಂತನೆಗಳನ್ನು ಬೋಧಿಸಿದರು. ನಿಜಾರ್ಥದಲಿ ಮೋಕ್ಷ ಅಂದರೆ ಏನು ಎಂಬುದನ್ನು ತೋರಿಸಿಕೊಟ್ಟರು. ವೇದಗಳಲ್ಲಿ ಮನುಷ್ಯ ಹೀಗೆ ಬದುಕಬೇಕೆಂದು ಹೇಳುತ್ತದೆ. ಶಂಕರಾಚಾರ್ಯರು ವೇದದ ನಂತರದ ವೇದಾಂತದ ಬಗ್ಗೆ ಉಪದೇಶ ಮಾಡಿದರು. ಆತ್ಮ ಮತ್ತು ಬ್ರಹ್ಮ ಎರಡು ಒಂದೇ ಎನ್ನುವ ಅಹಂ ಬ್ರಹ್ಮಾಸ್ಮಿ ಎಂಬ ತತ್ವವನ್ನು ಅದ್ವೈತ ಸಿದ್ದಾಂತವನ್ನು ಸಾರಿದರು. ಅದ್ವೈತ ಎಂದರೆ ಆತ್ಮ ಬೇರೆಯಲ್ಲ ಪರಮಾತ್ಮ ಬೇರೆಯಲ್ಲ. ಎರಡೂ ಒಂದೇ. ಅದುವರೆಗೆ ಆತ್ಮ ಬೇರೆ ಪರಮಾತ್ಮ ಬೇರೆ. ಒಂದಲ್ಲ ಎರಡು ಎಂಬ ಚಿಂತನೆ ಇತ್ತು. ಅತ್ಮದ ಬಗೆಗಿನ ಕಲ್ಪನೆ ಹೊಸ ರೂಪವನ್ನು ಕೊಟ್ಟರು. ಆತ್ಮ–ಬ್ರಹ್ಮದ ಕುರಿತು ಉಪನಿಷತ್ತುಗಳಲ್ಲಿ ಈಗಾಗಲೇ ಪ್ರತಿಪಾದಿತವಾಗಿದ್ದ ತತ್ವವನ್ನು ಶಂಕರಾಚಾರ್ಯರು ಅದ್ವೈತ ವೇದಾಂತದ ಮೂಲಕ ವ್ಯವಸ್ಥಿತವಾಗಿ ವಿವರಿಸಿ, ಅದರ ಪರಮಾರ್ಥವನ್ನು ಜಗತ್ತಿಗೆ ಸ್ಪಷ್ಟಪಡಿಸಿದರು. ಶಂಕರಾಚಾರ್ಯರು ಆತ್ಮದ ಸತ್ಯದರ್ಶನವನ್ನು ಮಾಡಿಸಿದರು. ಆನಂತರ ಸತ್ಯದ ವಿಧಗಳನ್ನು ತೋರಿಸಿಕೊಟ್ಟರು. ಪರಮ ಸತ್ಯ ಯಾವುದು ಎಂದು ತೋರಿಸಿಕೊಟ್ಟರು. ಅದುವರೆಗೆ ಕಣ್ಣಿಗೆ ಕಂಡ ಸತ್ಯವಷ್ಟನ್ನೇ ಸತ್ಯ ಎಂದು ನಂಬಿ ಕಂಡು ಕೊಂಡಿದ್ದರು.
ಕಾಡಿನಲ್ಲಿ ಒಬ್ಬ ವ್ಯಾಪಾರಿ ದರೋಡೆ ಕೋರರಿಂದ ತಪ್ಪಿಸಿಕೊಂಡು ಓಡಿ ಋಷಿಯ ಆಶ್ರಮಕ್ಕೆ ಬಂದು ಅವಿತು ಕುಳಿತ. ಹಿಂಬಾಲಿಸಿಕೊಂಡು ಬಂದ ದರೋಡೆಕೋರರು ಋಷಿಯಲ್ಲಿ ವ್ಯಾಪಾರಿಯ ಬಗ್ಗೆ ವಿಚಾರಿಸಿದಾಗ, ಋಷಿ ಸತ್ಯವಂತ. ಸತ್ಯವನ್ನೇ ಹೇಳುವವನು. ಆತ ವ್ಯಾಪಾರಿ ಆಶ್ರಮದಲ್ಲಿ ಅವಿತಿರುವುದನ್ನು ಹೇಳಿದ. ನಂತರ ಏನಾಯಿತು ಎಂದು ಹೇಳಬೇಕಿಲ್ಲ. ಋಷಿ ಸತ್ಯವನ್ನೇನೋ ಹೇಳಿದ. ಆದರೆ ಅದರ ಪರಿಣಾಮವೇನು? ಹೀಗೆ ಸತ್ಯವನ್ನು ಹೇಳುವುದಲ್ಲ, ಯಾವುದು ಸತ್ಯ ಎಂಬುದನ್ನು ತಿಳಿಯಬೇಕು. ಸತ್ಯದಿಂದ ಆಗುವ ಪರಿಣಾಮವನ್ನು ಯೋಚಿಸಬೇಕು.
ಸತ್ಯದ ಅರಿವು ಎಲ್ಲರಿಗೂ ಇರಬಹುದು. ಆದರೆ ಪರಮ ಸತ್ಯದ ಬಗೆಗಿನ ಅರಿವನ್ನು ಶಂಕರಾಚಾರ್ಯರು ಪ್ರತಿಪಾದಿಸಿದರು. ಪರಮ ಸತ್ಯ ಎಂದರೆ ಬದಲಾಗದೇ ಇರುವ ಸತ್ಯವೇ ಪರಮ ಸತ್ಯ. ಸತ್ಯ ಎಂದಿಗೂ ಬದಲಾಗುವುದಿಲ್ಲ. ವಾಸ್ತವದಲ್ಲಿ ನಿತ್ಯ ಸತ್ಯ ಮತ್ತು ಅನಿತ್ಯ ಸತ್ಯ ಎರಡು ಸತ್ಯ ಗೋಚರವಾಗುತ್ತದೆ. ಆದರೂ ಸತ್ಯದಲ್ಲಿ ಮೂರು ವಿಧ. ಒಂದು ವ್ಯಾವಹಾರಿಕ ಸತ್ಯ. ಎರಡು ಪ್ರಾತಿಭಾಸಿಕ ಸತ್ಯ. ಹೀಗೆ ಸತ್ಯದ ವಿಧಗಳು ವಿಚಿತ್ರವಾಗಿದೆ. ಸತ್ಯ ಅಲ್ಲದೇ ಇದ್ದರೂ ಇದು ಸುಳ್ಳಲ್ಲ. ಆದರೂ ಅದು ಪೂರ್ಣ ಸತ್ಯವಲ್ಲ. ಕಾಣುವುದೆಲ್ಲ ಸತ್ಯವಾಗಿರಬಹುದು. ಅದೇ ಸತ್ಯವನ್ನು ನಾವು ಕಾಣಬಹುದು. ಸತ್ಯವನ್ನೇ ಹೇಳಬಹುದು. ಆದರೆ ಸತ್ಯ ಯಾವುದು ಎಂದು ಗುರುತಿಸುವುದು ಬಹಳ ಕಷ್ಟ. ವಿಚಿತ್ರ ಎನಿಸುತ್ತದೆ. ರಾತ್ರಿ ಕಾಣುವ ಹಗ್ಗವನ್ನು ಹಾವು ಎಂದು ಭಯಗ್ರಸ್ಥರಾಗಬಹುದು. ಹಾವಾಗಿ ಕಂಡದ್ದು ಸತ್ಯ. ಆದರೆ ಅದು ಹಾವಲ್ಲ ಹಗ್ಗ ಎಂಬ ಸತ್ಯ ತಿಳಿಯಬೇಕು. ಅದಕ್ಕೆ ಬೆಳಕಿನ ಜ್ಞಾನ ಹರಿಸಬೇಕು.
ಅದ್ವೈತ ತತ್ವದಲ್ಲಿ ಸತ್ಯವನ್ನು ಮೂರು ಸ್ತರಗಳಲ್ಲಿ ವಿವರಿಸಲಾಗುತ್ತದೆ—ಪ್ರಾತಿಭಾಸಿಕ ಸತ್ಯ, ವ್ಯಾವಹಾರಿಕ ಸತ್ಯ ಮತ್ತು ಪಾರಮಾರ್ಥಿಕ ಸತ್ಯ. ಸತ್ಯದ ಈ ಮೂರು ವಿಧಗಳಲ್ಲಿಪ್ರಾತಿಭಾಸಿಕ ಸತ್ಯ. ಅದು ಸ್ವಪ್ನದಲ್ಲಿ ಕಾಣುವ ಸತ್ಯ. ಇದು ಇಂದ್ರಿಯಕ್ಕೆ ಗೋಚರಿಸುವುದಿಲ್ಲ. ಆದರೆ ಮನಸ್ಸು ಇದನ್ನು ಅನುಭವಿಸುತ್ತದೆ. ನಿಜವೆಂಬ ಭ್ರಮೆಯಾಗುತ್ತದೆ. ಸ್ವಪ್ನದಲ್ಲಿ ಸಂತೋಷವೋ ದುಃಖವೋ ಅನುಭವಿಸಬಹುದು. ಸ್ವಪ್ನದಲ್ಲಿ ಮನಸ್ಸು ಎಲ್ಲವನ್ನು ಅನುಭವಿಸಬಹುದು. ಆದರೆ ವಾಸ್ತವದಲ್ಲಿ ದೇಹದ ಇಂದ್ರಿಯಗಳು ವಿಶ್ರಾಂತಿಯಲ್ಲಿರುತ್ತದೆ. ಅದು ಇಂದ್ರಿಯ ಗೋಚರದ ಅನುಭವಗಳಲ್ಲ. ಸ್ವಪ್ನದಲ್ಲಿ ಕಾಣುವ ಅನುಭವಿಸುವ ಎಲ್ಲಾ ಸತ್ಯಗಳು ಎಚ್ಚರಗೊಳ್ಳುವ ತನಕ ಮಾತ್ರ ಅಸ್ತಿತ್ವದಲ್ಲಿರುತ್ತವೆ. ಅದು ಸತ್ಯವೇ ಆದರೂ ಅದು ಪರಿಪೂರ್ಣ ಸತ್ಯವಲ್ಲ. ಸ್ವಪ್ನ ಕಂಡಿರುತ್ತೇವೆ. ಆಗ ಮಾತ್ರ ಅದು ಸತ್ಯ.
ವ್ಯಾವಹಾರಿಕ ಸತ್ಯ ಎಂದರೆ ಕಣ್ಣಿಗೆ ಕಾಣುವ ಸತ್ಯ. ಸ್ಪರ್ಶದಿಂದ ಅರಿವಾಗುವ ಸತ್ಯ. ಧ್ವನಿಯಿಂದ ಗೋಚರಿಸುವ ಸತ್ಯ ಅರ್ಥಾತ್ ಇಂದ್ರಿಯಗಳು ಗ್ರಹಿಸುವ ಸತ್ಯ. ನೋಡುವಾಗ ಸತ್ಯ ಎಂಬ ಭ್ರಮೆಯನ್ನು ಹುಟ್ಟಿಸುತ್ತದೆ. ಜಗತ್ತು ಕಾಣುತ್ತದೆ. ಮರಗಿಡ ಪರ್ವತ ಪ್ರಾಣಿ ಪಕ್ಷಿ ಜೀವ ಸಂಕುಲ ಎಲ್ಲವೂ ಕಣ್ಣಿಗೆ ಕಾಣಿಸುತ್ತದೆ. ಕಿವಿಗೆ ಕೇಳಿಸುತ್ತದೆ. ಮೈ ಸ್ಪರ್ಶಕ್ಕೆ ಅನುಭವಕ್ಕೆ ಬರುತ್ತದೆ. ನಾಲಗೆಗೆ ರುಚಿಯ ಅನುಭವವಾಗುತ್ತದೆ. ಪರಿಮಳದಿಂದ ಅನುಭವಕ್ಕೆ ಬರುತ್ತದೆ. ಎಲ್ಲವೂ ಸತ್ಯ ಆದರೆ ಇವೆಲ್ಲವೂ ಬದಲಾಗುವ ಸತ್ಯ. ಇಂದು ಇರುತ್ತದೆ. ಮರುಕ್ಷಣ ಅಥವಾ ನಾಳೆ ವರ್ಷ ತಿಂಗಳು ಕಳೆದು ಬದಲಾಗುತ್ತದೆ ಅಥವಾ ನಾಶವಾಗುತ್ತದೆ. ಎಲ್ಲವೂ ಸತ್ಯ ಆದರೆ ಅದು ಪರಮ ಸತ್ಯವಲ್ಲ. ಇಂದ್ರಿಯಗಳಿಗೆ ಗೋಚರವಾಗುವ ಎಲ್ಲ ಸತ್ಯವೂ ವ್ಯಾವಹಾರಿಕ ಸತ್ಯಗಳು. ಇಂದ್ರಿಯಗಳ ಮೂಲಕ ಮನಸ್ಸು ಗ್ರಹಿಸುತ್ತದೆ. ಇಂದ್ರಿಯ ಕೇವಲ ಮಾಧ್ಯಮವಾಗಿರುತ್ತದೆ. ಇಂದ್ರಿಯಗಳು ಸ್ಪಂದಿಸುವುದಿಲ್ಲ. ಹಲವು ಸಲ ನಮ್ಮ ಕಣ್ಣೆದುರಿಗೆ ವಸ್ತು ಇದ್ದರೂ ಮನಸ್ಸು ಅದನ್ನು ಗ್ರಹಿಸದೇ ಇದ್ದರೆ ಅದು ಕಣ್ಣಿಗೆ ಗೋಚರವಾಗುವುದೇ ಇಲ್ಲ. ತಿಂದ ವಸ್ತು ಕಹಿಯೋ ಸಿಹಿಯೋ ಆಗಿದ್ದು ಮನಸ್ಸು ಗ್ರಹಿಸದೇ ಇದ್ದರೆ ಅದರ ಅರಿವಾಗುವುದಿಲ್ಲ. ಆಹಾರ ಸೇವಿಸುವಾಗ ಆಗಿವ ತೃಪ್ತಿ ಸುಂದರವಾಗಿರುವುದನ್ನು ಕಾಣುವಾಗ ಆಗುವ ಅನುಭವ ಇವುಗಳು ಪ್ರಕೃತಿಯಲ್ಲಿ ಕಂಡುಬರುವ ಸತ್ಯಗಳು. ಇವುಗಳು ಸತ್ಯ ಎಂಬ ಭ್ರಮೆಯನ್ನು ಉಂಟು ಮಾಡುತ್ತವೆ. ಅದು ಶಾಶ್ವತವಲ್ಲ. ಅದು ಬದಲಾಗಲೂ ಬಹುದು ನಾಶವಾಗಲೂ ಬಹುದು. ಇಲ್ಲ ಹೊಸತೊಂದು ಹುಟ್ಟಿಕೊಳ್ಳಲೂ ಬಹುದು. ಇದು ಅನಿತ್ಯ ಸತ್ಯ.
ಶಂಕರಾಚಾರ್ಯರು ಪ್ರತಿಪಾದಿಸಿದಂತೆ ಒಂದು ಸತ್ಯ ಶಾಶ್ವತ ಸತ್ಯ. ಅದು ಪಾರಮಾರ್ಥಿಕ ಸತ್ಯ. ಅದು ಎಂದಿಗೂ ಬದಲಾಗುವುದೇ ಇಲ್ಲ. ಅದು ಪರಮಾತ್ಮ. ಅದಕ್ಕೆ ರೂಪವಿಲ್ಲ ಭಾವವಿಲ್ಲ. ಗುಣವಿಲ್ಲ . ಪ್ರಯತ್ನದಿಂದ ಅದನ್ನು ಮನಸ್ಸು ಕಾಣಬಹುದು. ಅದಕ್ಕೆ ಯಾವುದೇ ಇಂದ್ರಿಯಗಳ ಅವಶ್ಯಕತೆ ಇಲ್ಲ. ಮನಸ್ಸು ಆತ್ಮತತ್ತ್ವವನ್ನು ಅರಿಯಬೇಕು . ಆತ್ಮ ಪರಮಾತ್ಮದ ಜತೆ ಸಂಬಂಧ ಹೊಂದಿದೆ. ಆತ್ಮನನ್ನು ಕಂಡರೆ ಪರಮಾತ್ಮ ದರ್ಶನ ಸಾಧ್ಯವಾಗುತ್ತದೆ. ಕಣ್ಣಿಗೆ ಕಾಣುವ ಮೂರ್ತಿ ಅದು ಸತ್ಯವಲ್ಲ. ಇಂದು ಇದೆ. ನಾಳೆ ಇಲ್ಲದೇ ಇರಬಹುದು. ಇಲ್ಲ ರೂಪ ಬದಲಾಗಬಹುದು. ಹೀಗೆ ಬದಲಾಗುವುದು ಸತ್ಯವಲ್ಲ. ಬದಲಾಗದೇ ಇರುವುದೆ ಸತ್ಯ. ಅದಕ್ಕೆ ಆತ್ಮ ಎಂಬುದನ್ನು ಸತ್ಯ ಎಂದು ಹೇಳಿದರು. ಅತ್ಮ ಬದಲಾಗುವುದಿಲ್ಲ. ಆತ್ಮ ನಾಶವಾಗುವುದಿಲ್ಲ. ಒಂದು ದೇಹದಿಂದ ಇನ್ನೊಂದು ದೇಹಕ್ಕೆ ಸಂಚರಿಸುತ್ತದೆ. ದೇಹದ ಚೈತನ್ಯವೇ ಆತ್ಮ. ಎಲ್ಲರ ದೇಹದಲ್ಲಿರುವ ಆತ್ಮ ಒಂದೇ . ಆಭರಣದ ಚಿನ್ನದಂತೆ. ಚಿನ್ನದಿಂದ ಹಲವು ಆಭರಣಗಳನ್ನು ಮಾಡಿದರೂ ಅದು ಚಿನ್ನದ ಹಲವು ರೂಪಗಳು ಮಾತ್ರ. ಚಿನ್ನಕ್ಕೆ ಸಿಗುವ ಮೌಲ್ಯ ರೂಪಕ್ಕೆ ಲಭ್ಯವಾಗದೇ ಇರಬಹುದು.
ಸತ್ಯದ ವಿಧಗಳನ್ನು ತಿಳಿದಾಗ ಪಾರಮಾರ್ಥಿಕ ಸತ್ಯದ ಅರಿವಾಗುತ್ತದೆ. ಹುಟ್ಟಿನಲ್ಲಿ ಅಪ್ಪ ಅಮ್ಮ ಬಂಧು ಬಳಗ ಎಲ್ಲ ಸಂಬಂಧಗಳೂ ಸೃಷ್ಟಿಯಾಗುತ್ತವೆ. ಅದು ದೇಹದ ಸಂಬಂಧ. ದೇಹ ಹೇಗೆ ಅನಿತ್ಯ ಸತ್ಯವೋ ಅದೇ ರೀತಿ ಸಂಬಂಧಗಳೂ ಒಂದು ದಿನ ಮುಗಿದು ಹೋಗುತ್ತದೆ. ಸತ್ಯವೆಂಬುದು ನಿಗೂಢ. ವಿವೇಚನೆಗೆ ಮಾತ್ರ ಗೋಚರವಾಗುತ್ತದೆ. ಇಂದ್ರಿಯಗಳಿಗೆ ಗೋಚರಿಸುವುದಿಲ್ಲ. ಹಾಗಾಗಿ ಪರಮಾತ್ಮನನ್ನು ಮನಸ್ಸು ಅನುಭವಿಸಬೇಕಿದ್ದರೆ, ಆತ್ಮದ ಜತೆ ಸಂಬಂಧ ಹೊಂದಿರಬೇಕು. ಇಂದ್ರಿಯದ ವೃತ್ತಿಗಳಿಂದ ದೂರಾದಾಗ ಅದುವೆ ಮೋಕ್ಷ. ಅದು ಸತ್ತ ಮೇಲೆ ಸಿಗುವುದಲ್ಲ. ಅದನ್ನು ಇಲ್ಲಿಯೇ ಅನುಭವಿಸುದಕ್ಕೆ ಸಾಧ್ಯವಿದೆ. ಇಲ್ಲಿ ಯಾವುದೂ ಶಾಶ್ವತವಲ್ಲ ದೇಹ. ಸುಖ ದುಃಖಗಳೂ ಶಾಶ್ವತವಲ್ಲ. ಆತ್ಮ ಒಂದೇ ಶಾಶ್ವತ.ಶಂಕರಾಚಾರ್ಯರು ಮೊದಲಿಗೆ ಪರಮ ಸತ್ಯದ ದರ್ಶನ ಮಾಡಿಸಿದರು. ಅದಕ್ಕಾಗಿ ಅವರನ್ನು ಆದಿ ಶಂಕರ ಅಂತ ಕರೆದರು. ಪರಮಾತ್ಮ ಒಬ್ಬನೇ ಸತ್ಯ. ನಾನು ಬೇರೆಯಲ್ಲ ಆತ್ಮ ಬೇರೆಯಲ್ಲ. ಎರಡೂ ಒಂದೇ . ಆತ್ಮನೇ ಪರಮಾತ್ಮ. ಹೀಗೆ ಹೇಳುವಾಗ ಆ ದೇವರು ಈ ದೇವರು ಅಂತ ಹೇಳಲಿಲ್ಲ. ಹಾಗಾಗಿ ನಮ್ಮ ದೇವರು ಶ್ರೇಷ್ಠ ಇನ್ನೊಂದು ದೇವರು ಕನಿಷ್ಠ ಎಂಬ ತಾರತಮ್ಯವೇ ಇರುವುದಿಲ್ಲ. ದೇವರು..ಎಂದಾಗುವಾಗ ಅಲ್ಲಿ ಹೆಚ್ಚು ಸತ್ಯ ಎಂಬ ಮಾತೇ ಅಪ್ರಸ್ತುತ. ದೇವರ ಹೆಸರಲ್ಲಾಗುವ ವಿವಾದ ಕಲಹಕ್ಕೆ ಇದು ಉತ್ತರವಾಗಬಲ್ಲುದು. ಅಂದರೆ ಶಂಕರಾಚಾರ್ಯರ ತತ್ವ ತಿಳಿದಿರಬೇಕು. ತತ್ವ ತಿಳಿಯಬೇಕಿದ್ದರೆ ಅದರ ಅಧ್ಯಯನ ಅತ್ಯಗತ್ಯ. ಆದರೆ ಶಂಕರಾಚಾರ್ಯರನ್ನು ಗುರು ಸ್ಥಾನದಲ್ಲಿ ಪ್ರತಿಷ್ಠಾಪಿಸಿ ಪೂಜಿಸುತ್ತೇವೆ. ಶಂಕರ ತತ್ವವನ್ನು ತಿಳಿಯುವ ಮನಸ್ಸಾಗುವುದಿಲ್ಲ. ನಮ್ಮ ಶಿಕ್ಷಣ ವ್ಯವಸ್ಥೆಯೂ ಅದೇ ರೀತಿ, ಪ್ರೌಢ ಶಾಲೆಯ ತನಕ ಮತ್ತು ಆನಂತರವೂ ಶಂಕರಾಚಾರ್ಯರು ಕಾಲಡಿಯಲ್ಲಿ ಹುಟ್ಟಿದರು, ಮೊಸಳೆ ಕಾಲು ಹಿಡಿಯಿತು, ಸನ್ಯಾಸ ಸ್ವೀಕರಿಸಿದರು, ಅದ್ವತ ತತ್ವ ಪ್ರಚಾರ ಮಾಡಿದರು. ಇಷ್ಟೇ ಹೇಳುತ್ತದೆ ಹೊರತು, ಅದ್ವೈತ ತತ್ವ ಎಂದರೇನು ಎಂಬುದನ್ನು ಹೇಳಲಿಲ್ಲ. ಸತ್ಯ ದರ್ಶನ ಸತ್ಯದ ಪ್ರತಿಪಾದನೆಯ ಕುರಿತು ಅಧ್ಯಯನಕ್ಕೆ ಅವಕಾಶ ಕೊಡಲಿಲ್ಲ. ಅದೇ ಸಮಯದಲ್ಲಿ ಬೇರೆ ತತ್ವಗಳ ಬಗ್ಗೆ ಪಾಠ ಶಿಕ್ಷಣ ಸಿಗುತ್ತದೆ.
ಕಾಶಿಯ ಮಣಿಕರ್ಣಿಕಾದಲ್ಲಿ ಆಗುವ ಚಾಂಡಾಲ ದರ್ಶನದ ಸಂದರ್ಭದಲ್ಲಿ ಅಹಂ ಬ್ರಹ್ಮಾಸ್ಮಿ ಅಂತ ಹೇಳಿದರು. ನಾನೇ ಬ್ರಹ್ಮ. ನನ್ನೊಳಗಿನ ಆತ್ಮವೇ ಬ್ರಹ್ಮ. ಆ ಆತ್ಮ ಎಲ್ಲರಲ್ಲೂ ಇರುತ್ತದೆ. ಎಲ್ಲ ಜಾತಿ ಧರ್ಮದ ಮನುಷ್ಯರಲ್ಲೂ ಇರುವುದು ಒಂದೇ ಆತ್ಮ ಎಂದು ಹೇಳಿ ಸನಾತನ ಧರ್ಮದ ಸಮಾನತೆಯ ಪ್ರತಿಪಾದನೆಯನ್ನು ಜಗತ್ತಿಗೇ ಸಾರಿದವರು ಶಂಕರಾಚಾರ್ಯರು. ಅದರ ಬಗ್ಗೆ ಪಾಠ ಇರುವುದಿಲ್ಲ. ಆದರೆ ಪ್ರತಿ ಹಂತದಲ್ಲು ಜಾತಿ ಭೇದ, ವರ್ಣ ಭೇದ ದ ಬಗ್ಗೆ ಪಾಠ ಇರುತ್ತದೆ.
ಮನುಷ್ಯನ ಇಹ ಪರದ ಉತ್ಕ್ಷರ್ಷಕ್ಕೆ ಶಂಕರಾಚಾರ್ಯರು ತೋರಿಸಿದ ಸತ್ಯದರ್ಶನದ ಅವಶ್ಯಕತೆ ಇದೆ. ಸರಳವಾಗಿಯಾದರೂ ಅದನ್ನು ಅರಿತು ನಾವು ಭ್ರಮಾ ಲೋಕದಿಂದ ಹೊರಬರಬೇಕಿದೆ. ಆತ್ಮ ಪರಮಾತ್ಮದ ಬಗ್ಗೆ ತಿಳಿಯಬೇಕು. ಅಯುಷ್ಯ ಪರ್ಯಂತ ಅಧ್ಯಯನ ಮಾಡಿದರೂ ಮುಗಿಯದ ವಿಷಯಗಳು ಇಲ್ಲಿದೆ. ಸತ್ಯವಾನ್ ಸತ್ಯ ಸಂಕಲ್ಪ ಅಂತ ತಿಳಿದು ಸಾಗುವಾಗ ಸತ್ಯದ ಸ್ವರೂಪ ಅರಿವಾಗಬೇಕು. ಸತ್ಯವನ್ನು ಹೇಳುವುದು ಮತ್ತು ಸತ್ಯವನ್ನು ತಿಳಿಯುವುದು ಜತೆಗೇ ಸತ್ಯವನ್ನು ವಿವೇಚಿಸುವುದು ಈ ಮೂಲಕ ಪಾರಮಾರ್ಥಿಕ ಸತ್ಯದ ಜ್ಞಾನವನ್ನು ಪಡೆಯುವುದು ಶಂಕರಾಚಾರ್ಯರು ಪ್ರತಿಪಾದಿಸಿದ ಅದ್ವೈತ ಸಿದ್ಧಾಂತದ ತಿರುಳಾಗಿದೆ.











.jpg)



