ಸಂಸ್ಕೃತ ಭಾಷೆ ಬ್ರಾಹ್ಮಣ ಭಾಷೆ ಅಂತ ಒಂದು ಯಾರೋ ಪುಣ್ಯಾತ್ಮನೊಬ್ಬ ಬರೆದಿರುವುದನ್ನು ಓದಿದೆ. ಬಹುಶಃ ವೈದಿಕ ಪೂಜಾವಿಧಾನಗಳಲ್ಲಿ ಇದರ ಬಳಕೆ ಹೆಚ್ಚು ಇರುವುದರಿಂದ ಮತ್ತು ಯಾರಿಗೂ ಸುಲಭದಲ್ಲೇ ಅರ್ಥವಾಗದೇ ಇರುವುದರಿಂದ ಒಂದು ರೀತಿಯ ಮತ್ಸರದಲ್ಲಿ ಹೀಗೆ ಅಪಾದಿಸುವುದುಂಟು. ಏನಿದ್ದರೂ ಬ್ರಾಹ್ಮಣರನ್ನು ದೂಷಿಸಿದರೆ ಯಾವ ಪರಿಣಾಮವೂ ಇರುವುದಿಲ್ಲ ಎಂಬ ನಿರ್ಭಯತ್ವದ ಭಾವ ಇದೆ. ಕನ್ನಡದ ಬಗ್ಗೆ ಅಭಿಮಾನದಲ್ಲಿ ಹೀಗೆ ಹೇಳಿದರೆ ಆ ಅಭಿಮಾನ ತಪ್ಪು ಎನ್ನುವ ಹಾಗಿಲ್ಲ. ಆದರೆ ವಿವೇಚನೆಯಿಂದ ಕಂಡರೆ ಇದರ ಮಿಥ್ಯಾಂಶ ಅರಿವಿಗೆ ಬರುತ್ತದೆ. ಕನ್ನಡ ಶಬ್ದ ಕೋಶದಲ್ಲಿ ಅಥವಾ ನಾವು ಆಡುವ ಕನ್ನಡ ಭಾಷೆಯಲ್ಲಿ ಸಂಸ್ಕೃತ ಶಬ್ದಗಳನ್ನು ತೆಗೆದು ಹಾಕಿದರೆ ಅಲ್ಲಿ ಎಷ್ಟು ಕನ್ನಡ ಶಬ್ದಗಳು ಉಳಿಯಬಹುದು ಅಂತ ನೋಡಿದರೆ ಕೆಲವೇ ಕೆಲವು ಉಳಿಯಬಹುದು. ಇದು ಕನ್ನಡ ಸಂಸ್ಕೃತ ವಿದ್ವಾಂಸರಒಬ್ಬರು ಹೇಳಿದ ಮಾತು. ಹಾಗಿದ್ದರೆ ಕೇವಲ ಸಂಸ್ಕೃತದ ದ್ವೇಷ ಮಾತ್ರ ಇಲ್ಲಿ ಕಾಣಬಹುದು. ನಮ್ಮ ಭಾಷೆ ಉಳಿಯಬೇಕಾದರೆ ಮತ್ತೊಂದು ಭಾಷೆಯನ್ನು ನಾಶ ಮಾಡಿ ಉಳಿಸಬಹುದು ಎಂದು ತಿಳಿದರೆ ಅದು ಮೂರ್ಖತನವಾದೀತು. ಭಾಷೆ ಉಳಿಯಬೇಕಿದ್ದರೆ ಅದನ್ನು ಪರಿಶುದ್ದವಾದ ಉಪಯೋಗದಲ್ಲಿ ಉಳಿಸುವ ಪ್ರಯತ್ನ ಮಾಡಬೇಕು. ತಮಿಳು ನಾಡಿನಲ್ಲಿ ಹಿಂದಿ ಭಾಷೆ ನಿಷೇಧ ಮಾಡುವ ಸಮಾಚಾರ ಕೇಳಿಬಂತು. ಇದು ಕೂಡ ಇದೇ ಮಾದರಿಯಾಗಿರುತ್ತದೆ. ಯಾರೋ ಭಾಷೆಯನ್ನು ಮಾತನಾಡುವ ವ್ಯಕ್ತಿಗಳು ಮಾಡಿದ್ದಕ್ಕೆ ಭಾಷೆಯನ್ನು ದ್ವೇಷಿಸುವುದಾದರೆ ಸ್ವತಃ ತಮಿಳು ಕೂಡ ದ್ವೇಷಕ್ಕೆ ಕಾರಣವಾಗಬಹುದು.
ಬಳಕೆಯಲ್ಲಿ ಭಾಷೆ ಉಳಿಯಬೇಕು. ಆದರೆ ಇದೇ ಮಾತನ್ನು ಬೆಂಗಳೂರಿನ ಕನ್ನಡಕ್ಕೆ ಹೋಲಿಸಿದರೆ ವಿಚಿತ್ರವೆನಿಸುತ್ತದೆ. ಇಲ್ಲಿಯ ಭಾಷೆಯ ಬಳಕೆ ಹೇಗಿರುತ್ತದೆ ಎಂದರೆ " ನನಗೆ ಮನೆಯಲ್ಲಿ ಕುಕ್ಕಿಂಗ್ ಗೆ ಸಾಮಾನು ಮುಗಿದಿತ್ತು, ಹಾಗೆ ಬ್ಯಾಗ್ ಹಿಡಿದು ಮಾರ್ಕೆಟ್ ಗೆ ಹೋದೆ. ವೆಜಿಟೇಬಲ್ ಪರ್ಚೇಸ್ ಮಾಡಿದೆ. ಗ್ರೋಸರಿ ಪರ್ಚೇಸ್ ಮಾಡಿದೆ." ಹೀಗೆ ಇರುತ್ತದೆ. ಕೇವಲ ಕ್ರಿಯಾ ಪದಕ್ಕೆ ಮಾತ್ರ ಕನ್ನಡ ಸೀಮಿತವಾಗುತ್ತದೆ. ದಿನಸಿ ತರಕಾರಿ ಕೊಂಡುಕೊಂಡೆ ಅಂತ ಹೇಳದೆ ಆಡಿದ ಮಾತಿನಲ್ಲಿ ಕನ್ನಡವಲ್ಲದ ಯಾವೂದೋ ಪಿರಂಗಿ ಭಾಷೆ ಉಪಯೋಗಿಸುವುದಕ್ಕೆ ಸಾಧ್ಯವಿದ್ದರೆ, ನಮ್ಮ ಭಾರತದದ ಹಿಂದಿ ಯಾಕೆ ಬೇಡವಾಗುತ್ತದೆ? ಅಲ್ಲಿನ ವ್ಯಕ್ತಿಗಳು ಕಾರಣವೆ? ಹಾಗೆ ವ್ಯಕ್ತಿಗಳನ್ನು ದ್ವೇಷಿಸುವುದಿದ್ದರೆ ಹಿಂದಿ ಮಾತನಾಡುವ ಮಂದಿಗಿಂತಲೂ , ಮೂರು ಶತಮಾನ ನಮ್ಮ ಸ್ವಾತಂತ್ರ್ಯವನ್ನು ಕಸಿದು ಗು್ಲಾಮರನ್ನಾಗಿ ಮಾಡಿದ ಇಂಗ್ಲೀಷರನ್ನು ದ್ವೇಷಿಸುವುದರಲ್ಲಿ ಹೆಚ್ಚು ಅರ್ಥವಿದೆ. ಇನ್ನು ಸಂಸ್ಕೃತದ ದ್ವೇಷವೂ ಅದೇ ರೀತಿ. ಯಾವುದೋ ಕಾಲದಲ್ಲಿ ಹೇಗೋ ಇತ್ತು ಎನ್ನುವುದಕ್ಕೆ ಈಗಿನ ಬ್ರಾಹ್ಮಣರನ್ನು ದ್ವೇಷಿಸಬೇಕು ಎನ್ನುವ ಕಾರಣದಿಂದ ಸಂಸ್ಕೃತವೂ...ದ್ವೇಷಕ್ಕೆ ಕಾರಣವಾಗುತ್ತದೆ. ಹಾಗೆ ನೋಡಿದರೆ... ಬುದ್ದ ಮತ್ತು ಜೈನರು ಸಂಸ್ಕೃತವನ್ನು ಹೆಚ್ಚು ಬಳಕೆ ಮಾಡಿರುತ್ತಾರೆ. ಹಾಗಾಗಿ ಜೈನರನ್ನು ಬುದ್ದರನ್ನು ದ್ವೇಷಿಸಿದರೆ ನಮ್ಮ ದೇಶವನ್ನು ನಾವು ಅಭಿಮಾನ ಪ್ರೀತಿಯಿಂದ ಕಂಡಂತಾಗುವುದಿಲ್ಲ.
ನಿಜಕ್ಕಾದರೆ ಭಾಷೆಯನ್ನು ದ್ವೇಷಿಸುವುದಲ್ಲ. ಯಾವುದೋ ಭಾಷೆ ಉಪಯೋಗ ಶೂನ್ಯವಾಗಬೇಕಾದರೆ ಮೊದಲು ನಮ್ಮ ಭಾಷೆಯನ್ನು ಪರಿಶುದ್ದಿಗೊಳಿಸಬೇಕು. ಅದನ್ನೇ ಶುಭ್ರವಾಗಿ ಬಳಸಬೇಕು. ನಮ್ಮಲ್ಲಿರುವ ಕೆಟ್ಟಗುಣವನ್ನು ಕಳೆಯಬೇಕಾದರೆ ಉಳಿದ ವ್ಯಕ್ತಿಗಳನ್ನು ನಾವು ದ್ವೇಷಿಸಿ ದೂರ ಮಾಡುವುದರಲ್ಲಿ ನಮ್ಮ ಕೆಟ್ಟಗುಣ ಬದಲಾಗಲು ಸಾಧ್ಯವಿಲ್ಲ. ನಾನು ಬ್ಯಾಗ್ ಹಿಡಿದುಕೊಂಡು ಶಾಪಿಂಗ್ ಗೆ ಹೋದೆ ಅಂತ ಹೇಳುವಾಗ ಶುದ್ಧವಾದ ಕನ್ನಡಕ್ಕೆ ಯಾವ ನ್ಯಾಯ ಸಲ್ಲುತ್ತದೆ.?
ಇತ್ತೀಚೆಗೆ ನನ್ನ ಮಗನ ಸಹಪಾಠಿಯೊಬ್ಬ ನನ್ನ ಲೇಖನಗಳನ್ನು ಓದಿ , ಆತ ಅಭಿಪ್ರಾಯ ಹೇಳಿದ. " ಸಾರ್, ನಿಮ್ಮ ಲೇಖನ ಚೆನ್ನಾಗಿದೆ. ಆದರೆ ಆ ಶಬ್ದಗಳು ನಿಮಗೆ ಎಲ್ಲಿ ಸಿಗ್ಗುತ್ತದೆ ? ಅರ್ಥ ಮಾಡಿಕೊಳ್ಳುವುದು ತುಂಬ ಕಷ್ಟ ವಾಗುತ್ತದೆ. " ನಾನೇನು ಕನ್ನಡ ವಿದ್ವಾಂಸನೇನೂ ಅಲ್ಲ. ನನಗೆ ತಿಳಿದ ಸೀಮಿತ ಜ್ಞಾನದಲ್ಲೇ ಬರೆದ ಕನ್ನಡವನ್ನು ಅರ್ಥವಿಸುವುದಕ್ಕೆ ಕಷ್ಟವಾಗುತ್ತದೆ ಎಂದಾದರೆ ಕನ್ನಡ ಕನ್ನಡವಾಗಿ ಉಳಿದಿದೆ ಎನ್ನುವುದಕ್ಕೆ ಯಾವ ಆಧಾರವಿದೆ? ನಮ್ಮ ಭಾಷೆ ಉಳಿಯಬೇಕು. ಅದು ಇನ್ನೊಂದು ಭಾಷೆಯ ನಾಶದಲ್ಲಿ ನಮ್ಮ ಭಾಷೆ ಉಸಿರಾಡಬಾರದು. ಅಥವಾ ಉಳಿದ ಭಾಷೆ ನಿರ್ನಾಮವಾದರೆ ನಮ್ಮ ಭಾಷೆ ಉಳಿಯುತ್ತದೆ ಎಂದು ಭಾವಿಸಿದರೆ ಅದು ಅರಣ್ಯದ ನ್ಯಾಯವಾಗುತ್ತದೆ. ಒಂದು ಗಿಡ ಬೆಳೆಯಬೇಕಾದರೆ ಸುತ್ತಮುತ್ತಲಿನ ಹಲವು ಗಿಡವನ್ನು ನಾಶ ಮಾಡಬೇಕು. ಇದು ಕಾಡಿನ ನ್ಯಾಯ. ಬೀದಿಯಲ್ಲಿದ್ದ ಎರಡು ಅಂಗಡಿಯಲ್ಲಿ ,ಮತ್ತೊಂದು ಅಂಗಡಿ ಮುಚ್ಚಿದರೆ ತನ್ನ ಅಂಗಡಿಗೆ ಹೆಚ್ಚು ವ್ಯಾಪಾರವಾಗುತ್ತದೆ ಎಂದು ಬಯಸಿದರೆ ಅದು ಸಾಧುವಾಗಲಾರದು. ಬದಲಿಗೆ ನಮ್ಮ ಅಂಗಡಿಯಲ್ಲಿ ಜನೋಪಯೋಗಿಯಾಗುವಂತೆ ಪ್ರಾಮಾಣಿಕವಾಗಿ ವ್ಯಾಪಾರ ಮಾಡಬೇಕು. ಹೊರತು ಮತ್ತೊಂದು ಅಂಗಡಿ ಮುಚ್ಚಿಸುವುದಲ್ಲ. ಮತ್ತೊಬ್ಬನನ್ನು ಅರೆ ಹೊಟ್ಟೆ ಮಾಡಿ ನಾವು ಹೊಟ್ಟೆ ತುಂಬಿಸಿಕೊಂಡರೆ ಅದು ನ್ಯಾಯವಾಗುವುದಿಲ್ಲ. ಜಗಳ ಮಾಡಿ ಪರಸ್ಪರ ಬೈದಾಡಿಕೊಂಡು ಗೆಲ್ಲುವುದಕ್ಕೆ ಹೊರಟೆರೆ ಆ ಬೈಗುಳಗಳಲ್ಲಿ ಕೆಟ್ಟಭಾಷೆಯೇ ಬಳಕೆಯಾಗುತ್ತದೆ. ಅದು ಸುಸಂಸ್ಕೃತ ಭಾಷೆಯಾಗುವುದಿಲ್ಲ.
ಈ ದ್ವೇಷ ಎಂಬುದು ಕೇವಲ ಭಾಷೆಗೆ ಮಾತ್ರ ಸೀಮಿತವಾಗಿಲ್ಲ. ನಾವು ಬೆಳೆಯುವುದಕ್ಕೆ ಪ್ರಕೃತಿಯನ್ನು ನಾಶ ಮಾಡುತ್ತೇವೆ. ನಮ್ಮ ಧರ್ಮ ಉಳಿಸುವುದಕ್ಕೆ ಮತ್ತೊಂದು ಧರ್ಮವನ್ನು ದ್ವೇಷಿಸಿ ನಾಶ ಮಾಡುತ್ತೇವೆ. ಇತ್ತೀಚೆಗೆ ಒಬ್ಬರು ಮುಸ್ಲಿಂ ವ್ಯಕ್ತಿ ನನ್ನ ಬಳಿಗೆ ಬಂದಿದ್ದರು. ಅವರ ತೆರಿಗೆಗೆ ಮತ್ತು ಸರಕಾರಿ ಕೆಲಸಕ್ಕೆ ಸಂಭಂಧಿಸಿದ ಹಲವು ಕೆಲಸಗಳನ್ನು ನಾನೇ ಮಾಡಿಕೊಡುತ್ತೇನೆ. ನನ್ನ ಮೇಲೆ ಅದು ಯಾಕೋ ಅವರಿಗೆ ಅತೀವ ವಿಶ್ವಾಸ. ಒಂದು ಸಲ ಬಂದವರು ಹೇಳಿದರು, "ದೇವರನ್ನು ಭಕ್ತಿಯಿಂದ ನಂಬುವವರು ಮೋಸ ಮಾಡುವುದಿಲ್ಲ. ನಿಮ್ಮಲ್ಲಿ ನನಗೆ ತುಂಬ ವಿಶ್ವಾಸ ಇದೆ. " ಅವರು ದೇವರು ಅಂತ ಹೇಳಿದ ದೇವರು ಅದು ಒಬ್ಬನೇ. ಅವರ ದೇವರು ನನ್ನ ದೇವರು ಎಂಬ ಭೇದವಿಲ್ಲ. ಇಲ್ಲಿ ನಂಬಿಕೆಯ ವಿಧ ಮಾತ್ರ ವೆತ್ಯಾಸ. ಮತ್ತೊಂದು ಧರ್ಮವನ್ನು ನಾಶ ಮಾಡಿ ನಮ್ಮ ಧರ್ಮವನ್ನು ಉಳಿಸುತ್ತೇವೆ ಎಂದು ತಿಳಿದರೆ ಅಲ್ಲಿ ದ್ವೇಷ ಮಾತ್ರ ಇರುತ್ತದೆ. ಎಲ್ಲಿ ದ್ವೇಷದ ಕಲ್ಮಶ ವಿರುತ್ತದೋ ಅಲ್ಲಿ ಪರಿಶುದ್ದತೆ ಇರುವುದಕ್ಕೆ ಸಾಧ್ಯವಿಲ್ಲ. ದೇವರ ಅಸ್ತಿತ್ವವೂ ಇರುವುದಿಲ್ಲ.
ಪ್ರಾಣಿಗಳಲ್ಲಿ ಮನುಷ್ಯನಿಗೆ ಇರುವ ಮುಖ್ಯ ಪ್ರತ್ಯೇಕ ವೈಶಿಷ್ಟ್ಯವೆಂದರೆ ಮಾತಾಡುವ ಅರ್ಹತೆ. ಅದಕ್ಕೆ ಮುಖ್ಯ ಉಪಾಧಿ ಎಂದರೆ ಅದು ಭಾಷೆ. ಈ ಭಾಷೆ ದ್ವೇಷಕ್ಕೆ ಕಾರಣವಾಗುವುದಾದರೆ, ಆ ಅರ್ಹತೆಯನ್ನು ಕಲ್ಪಿಸಿದ ಭಗವಂತನ ಕಾರುಣ್ಯವನ್ನು ದೂಷಿಸಿದಂತೆ. ಈ ಅರ್ಹತೆಗೆ ನಾವು ಯೋಗ್ಯರಾಗಿರುವುದಿಲ್ಲ. ಮನುಷ್ಯನ ಜೀವನದ ಮೂಲ ಭೂತ ಆಧಾರವಾಗಿ ಭಗವಂತನನ್ನು ಕಾಣುವ ಓಂ ಕಾರ ಭಾಷೆ ಯಾವುದು? ಹೋಗಲಿ ಭಾಷಾಭಿಮಾನದ ಅತಿರೇಕದಲ್ಲಿ , ಗಣೇಶನನ್ನು ಕೂರಿಸಿ ಹೇಳುವ "ಗಣಪತಿ ಬಪ್ಪ ಮೋರೆಯಾ " ದ ಭಾಷೆ ಯಾವುದು? ಇವುಗಳೆಲ್ಲ ನಮ್ಮ ದ್ವಂದ್ವ ನಿಲುವಿನ ಅಪಸವ್ಯಗಳು. ಸಸ್ಯಾಹಾರಿ ಮಾಂಸ ಬೇಡ ರಸ ಮತ್ರ ಆದೀತು ಅಂತ ಹೇಳುವ ನ್ಯಾಯ. ಯಾವುದೋ ಭಾಷೆಯ ಬಗ್ಗೆ ದ್ವೇಷದಲ್ಲಿ ವಿಮರ್ಶಿಸುವಾಗ ಮೊದಲು ನಮ್ಮ ಮಾತುಗಳನ್ನು ನಾವು ಪರಿಶುದ್ದಿಗೊಳಿಸಬೇಕು. ಇಷ್ಟಕ್ಕೂ ನಮಗೆ ಕೇವಲ ಮಾತನಾಡುವ ಅರ್ಹತೆ ಇದೆ, ಆದರೆ ಇದನ್ನು ಕಳೆದುಕೊಂಡ ಮೂಗನಿಗೆ ಯಾವ ಭಾಷೆ ...ಆತ ಕನ್ನಡದಲ್ಲೂ , ಅತ್ತ ತಮಿಳುನಾಡಿನಲ್ಲೂ ಆತನ ಭಾಷೆ ಒಂದೇ ಆಗಿರುತ್ತದೆ. ಮನಸ್ಸಿನಲ್ಲಿ ಕನ್ನಡವೋ ತಮಿಳೋ ಇರಬಹುದು..ಆದರೆ ಅದು ವ್ಯಕ್ತವಾಗುವುದು ಅರ್ಥವಾಗುವುದು ಎದುರು ಕೇಳುವವನ ಭಾಷೆಯನ್ನು ಅನುಸರಿಸಿರುತ್ತದೆ. ಅಲ್ಲಿ ಭಾಷಾಭೇದವೇ ಇರುವುದಿಲ್ಲ. ಭಾಷೆಯಿಂದ ನಾವು ವಿಶಾಲವಾಗಬೇಕು. ನಮ್ಮ ಜ್ಞಾನ ವೃದ್ದಿಗೆ ಅದು ಉಪಯೋಗಿಸಲ್ಪಡಬೇಕು. ಇಲ್ಲವಾದರೆ ನಾವು ನಮ್ಮ ಭಾಷೆಯಲ್ಲಿರುವುದನ್ನು ಮಾತ್ರವೇ ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ಒಂದು ರೀತಿಯ ಬಾವಿಯೊಳಗಿನ ಮಂಡೂಕದ ಬದು. ನಮ್ಮ ಮಂಗಳೂರಿಗೆ ಹೋದರೆ ಇದನ್ನು ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ಹಲವು ಭಾಷೆಗೆ ಸಹಕಾರಿಯಾಗಿ ಇಲ್ಲಿ ತುಳು ಭಾಷೆ ನೆಲದ ಭಾಷೆ. ಅದರಲ್ಲಿ ಕನ್ನಡವೂ ಇದೆ ಹಿಂದಿ ಕೊಂಕಣಿ ಇಂಗ್ಲೀಷ್ ಎಲ್ಲ ಇದ್ದರೂ ತುಳು ತನ್ನ ಸ್ವಂತಿಕೆಯನ್ನು ಬಿಟ್ಟಿಲ್ಲ. ಅದನ್ನೇ ಮಾತನಾಡಬೇಕು ಎಂದು ಅಲ್ಲಿ ದೌರ್ಜನ್ಯ ಮಾಡುವುದಿಲ್ಲ. ಜನ ನಮ್ಮದೇ ಭಾಷೆ ಅಂತ ಅಭಿಮಾನದಲ್ಲೇ ಮಾತನಾಡುತ್ತಾರೆ. ಅದು ತಿಳಿಯದವರಲ್ಲಿ ಹೃದಯದ ಆತ್ಮೀಯತೆ ಇರುವುದಿಲ್ಲ. ಅಲ್ಲಿಯ ಸ್ನೇಹ ಆದರ ಬೇಕಾದರೆ ಯಾವುದೇ ಬಲವಂತ ವಿಲ್ಲದೇ ಆ ಭಾಷೆಯನ್ನು ಕಲಿತು ಅಲ್ಲಿನವರಾಗಿದ್ದರೆ ನಿಮಗೆ ಅರಿಯದೆ ಅಲ್ಲಿನವರ ಹೃದಯದಲ್ಲಿ ಸ್ಥಾನ ಪಡೆಯಬಹುದು. ಹೀಗೆ ಭಾಷೆ ಎಂಬುದು ಸ್ನೇಹಕ್ಕೆ ಕಾರಣವಾಗಬೇಕು. ಎಷ್ಟು ಭಾಷೆ ಇದ್ದರೂ ನಮಗೊಂದೇ ಭಾಷೆ ಇರಬೇಕು. ಅದು ಮನುಷ್ಯತ್ವದಿಂದ ಕೂಡಿರಬೇಕು.
No comments:
Post a Comment