ದಾದಾ ಫಾಲ್ಕೆ ಮೋಹನ್ ಲಾಲ್
ಭರತಂ , ವಾನ ಪ್ರಸ್ಥಂ ಎಂಬ ಮಲಯಾಳಂ ಸಿನಿಮಾ ನೋಡಿದವರಿಗೆ ಮೋಹನ್ ಲಾಲ್ ಎಂಬ ದೈತ್ಯ ಪ್ರತಿಭೆಯ ಅರಿವಾಗಬಹುದು. ಈ ಎರಡೂ ಸಿನಿಮಾಗಳಲ್ಲಿನ ಶ್ರೇಷ್ಠ ಅಭಿನಯಕ್ಕಾಗಿ ಪಡೆದ ಮೋಹನ್ ಲಾಲ್ ಎರಡೂಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಅಪರೂಪದ ನಟ. ಇವೆರಡೂ ಸಿನಿಮಾಗಳು ಕೇವಲ ಪ್ರತಿಭಾ ನಿದರ್ಶನ ಎನ್ನಬೇಕು.ಪಟ್ಟಿ ಮಾಡುತ್ತಾ ಹೋದರೆ ಯಾವುದು ಉತ್ತಮ ಎಂಬ ಆಯ್ಕೆ ಸುಲಭ ಸಾಧ್ಯವಲ್ಲ.
ಕಿರೀಟಂ, ಚೆಂಗೋಲ್, ಕಿಲುಕ್ಕಂ ವಂದನಂ ದಶರಥಂ, ಸದಯಂ, ಪವಿತ್ರಂ, ಪಿಂಗಾಮಿ, ಸನ್ಮನಸ್ಸುಳ್ಳವರ್ಕು ಸಮಾಧಾನಂ, ನಾಡೋಡಿಕ್ಕಾಟು, ಕಳಿಪ್ಪಾಟಂ, ಮಿಥುನಂ, ಚಂದ್ರಲೇಖ, ತನ್ಮಾತ್ರ ಹೀಗೆ ಹೇಳುತ್ತಾ ಹೋದರೆ ಅದಕ್ಕೆ ಅಂತ್ಯವಿಲ್ಲ ಎಂದನಿಸುತ್ತದೆ. ಎಲ್ಲವೂ ಅತ್ಯುತ್ತಮ ನಟನೆಗೆ ಸಾಕ್ಷಿಯಾದ ಚಿತ್ರಗಳು. ದಶಕಗಳ ಹಿಂದೆ ಇವುಗಳನ್ನು ನೋಡಿ ವಾರಗಳ ಕಾಲ ಅದರ ನಶಾವಲಯಲ್ಲಿ ಹುದುಗಿ ಹೋದದ್ದು ಇನ್ನೂ ನೆನಪಲ್ಲಿದೆ. ಅಭಿನಯವೆಂದರೆ ಅದು ಮಾದರಿಯಾಗಬಲ್ಲ ನಟನಾ ಕೌಶಲವನ್ನು ಹೊಂದಿದ ಪ್ರತಿಭಾವಂತ ಈ ನಟನೆಗೆ ಮಾರು ಹೋಗದವರಿಲ್ಲ. ಸರ್ವಾಂಗವೂ ಅಭಿನಯಕ್ಕೆ ಅರ್ಪಿಸಿಕೊಂಡ ಅದ್ಭುತ ನಟನಾಶೈಲಿಗೆ ಸಹಜವಾಗಿ ಚಲನಚಿತ್ರದ ಅತ್ಯುನ್ನತ ದಾದಾ ಸಾಹೆಬ್ ಪ್ರಶಸ್ತಿ ಒಲಿದು ಬಂದಿದೆ. ಈತನ ಪ್ರತಿಭೆಗೆ ಎಂದೋ ಇದು ಸಿಗಬೇಕಿತ್ತು, ಈಗ ಸಿಕ್ಕಿದೆ. ನಿಜಕ್ಕೂ ಲಾಲೇಟ್ಟ ಇದಕ್ಕೆ ಅರ್ಹ ವ್ಯಕ್ತಿ ಎನ್ನುವುದಕ್ಕೆ ಎರಡು ಮಾತಿಲ್ಲ.
ಮಲಯಾಳಂ ಚಿತ್ರರಂಗ ಎಂದರೆ ಪ್ರತಿಭಾ ಸಂಪತ್ತಿನ ಗಡಣವೇ ತುಂಬಿದ ಕ್ಷೇತ್ರ. ಇಲ್ಲಿ ನೈಜ ಅಭಿನಯಕ್ಕೆ ಕಠಿಣ ಸ್ಪರ್ಧೆ ಸದಾ ಎದುರಾಗುತ್ತಿದೆ. ಅಂತಹ ಕ್ಷೇತ್ರದಲ್ಲಿ ತನ್ನ ಪ್ರತಿಭೆಗೆ ಹಸರಾದ ಸಂಪೂರ್ಣ ನಟ ಮೋಹನ್ ಲಾಲ್ ಎಂಬುದರಲ್ಲಿ ಎರಡು ಮಾತಿಲ್ಲ.
ಎಲ್ಲಾ ಚಿತ್ರರಂಗಗಳೂ ಇಂದು ಸಂಕ್ರಮಣ ಸ್ಥಿತಿಯನ್ನು ಎದುರಿಸುತ್ತದೆ.ಇಂದು ಇರುವ ಸ್ಥಿತಿ ನಾಳೆ ಇಲ್ಲ. ಥಿಯೇಟರ್ ಗಳಿಗೆ ಜನಬರುತ್ತಿಲ್ಲ. ಮನೆಯಲ್ಲೇ ಕುಳಿತು ಅಚ್ಚ ಹೊಸ ಮತ್ತು ತೀರಾ ಹಳೆಯ ನೋಡಬಲ್ಲ ಅವಕಾಶ. ಬೆರಳೆಣಿಕೆಯಲ್ಲಿ ಹೊರ ಬರುವ ಸಿನಿಮಾಗಳು ಹೀಗೆ ಇಂದು ಸಿನಿಮಾ ಎಂದರೆ ಮೊದಲಿನ ಆಕರ್ಷಣೆಯನ್ನು ಕಳೆದುಕೊಂಡಿದೆ. ಅದರಲ್ಲೂ ವರ್ಷಕ್ಕೆ ಹಲವು ಸಿನಿಮಾಗಳನ್ನು ಕೊಡುತ್ತಿದ್ದ ಸೂಪರ್ ಸ್ಟಾರ್ ನಟರು, ಲೀಡ್ ರೋಲ್ ಗಳಿಗಷ್ಟೇ ಸೀಮಿತವಾಗಿರುವುದರಿಂದ ಇಂದು ಮೂಲೆ ಸೇರಿ ಹೆಸರಿಗಷ್ಟೇ ಸ್ಟಾರ್ ಅಗಿದ್ದಾರೆ. ಹೆಸರಾಂತ ನಟರ ಹೊಸ ಸಿನಿಮ ಬಿಡುಗಡೆಯಾಗಿ ಜಮಾನವೇ ಕಳೆದುಹೋಗಿದೆ. ಇಂತಹ ಪರಿಸ್ಥತಿಯಲ್ಲೂ ಮೋಹನ್ ಲಾಲ್ ಹೊಸ ಸಿನಿಮಾಗಳು ಬಿಡಗಡೆಯಾಗಿ ದುಡ್ಡು ಬಾಚುತ್ತಿವೆ ಎಂದರೆ ಮೋಹನ್ ಲಾಲ್ ವರ್ಚಸ್ಸು ಇನ್ನೂ ಹಸಿರಾಗಿರುವುದಕ್ಕೆ, ಎಂತಹಾ ಪಾತ್ರವನ್ನೂ ಲೀಲಾಜಾಲವಾಗಿ ಮಾಡಬಲ್ಲ ಆತನ ಪ್ರತಿಭೆಯೇ ಸಾಕ್ಷಿ. ಎಂದಿನಂತೆ ಈ ವರ್ಷವೂ ಆತನ ಸಿನಿಮಾಗಳು ಹಿಟ್ ಆಗುತ್ತಿವೆ ಎಂದರೆ... ದಾದಾ ಸಾಹೇಬ್ ಗರಿ ಎಲ್ಲೋ ಅಕಾಶದಲ್ಲಿ ವಿಹರಿಸುತ್ತಾ ಈಗ ಮೋಹನ್ ಲಾಲ್ ತಲೆಯಲ್ಲಿ ಬಂದು ಕುಳಿತಿದೆ.
ಒಬ್ಬ ನಟ ಪರಿ ಪೂರ್ಣ ಎಂದಾಗಬೇಕಾದರೆ ಕೇವಲ ಸ್ಟಾರ್ ಗಿರಿ ಸಾಲದು. ಹುಚ್ಚು ಅಭಿಮಾನ ಸಾಲದು. ಯಾವುದೇ ಪಾತ್ರ, ಅದು ಕಥಾನಯಕ ಅಥವಾ ಖಳ ಪಾತ್ರವೇ ಅಗಲಿ ಇಮೇಜ್ ತೊರೆದು ಲೀಡ್ ರೋಲ್ ಗೆ ಅಡರದೆ ಪಾತ್ರೋಚಿತ ನಟನೆ ಮಾಡಬಲ್ಲವನಾಗಿರಬೇಕು.ಹಾಗಾಗಿಯೇ ಈ ಪರಿಪಕ್ವ ನಟನ ಸಿನಿಮಾ ಎಂದರೆ ಈಗಲು ಜನಾಕರ್ಷಣೆಯನ್ನು ಗಳಿಸಿದ ಇಂತಹ ನಟನಿಗೆ ಈಗ ಪಾಲ್ಕೆ ಗರಿ ಒಲಿದು ಬಂದಿರುವುದು ಕೇವಲ ಅದೃಷ್ಟವೋ ವಶೀಲಿ ಬಾಜಿಯೋ ಖಂಡಿತಾ ಅಲ್ಲ. ಇದು ದೈವದತ್ತ ಪ್ರತಿಭೆಗೆ ಒಲಿದ ಪುರಸ್ಕಾರ.ಇದು ಇನ್ನೂ ಹುದುಗಿರುವ ಪ್ರತಿಭೆಗೆ ಪ್ರೇರಣೆಯಾಗಲಿ ಎಂಬುದಷ್ಟೇ ಈ ಸಹಜ ನಟನ ಸಹಜಾಭಿಮಾನಿಗಳ ಆಶಯ.
No comments:
Post a Comment