ಇತ್ತೀಚೆಗೆ ಬಿಡುಗಡೆಯಾದ ಸಂಶಯಂ ಎನ್ನುವ ಮಲಯಾಳಂ ಸಿನಿಮಾ ನೋಡಿದೆ. ಮಾರ್ಮಿಕ ಕಥಾ ಹಂದರ ಭಾವಾನಾತ್ಮಕ ಸಂಭಂಧಗಳ ಸರಳ ಸುಂದರ ಕಥೆಯ ಚಲನ ಚಿತ್ರವಿದು. ಹೊಸದಾಗಿ ಮದುವೆಯಾದ ನಾಯಕ ನಾಯಕಿಗೆ ಬಹಳ ಕಾಲ ಮಕ್ಕಳಾಗದೇ ಕೊನೆಗೆ ಆಕೆ ಗರ್ಭವತಿಯಾಗಿ ಮಗುವನ್ನು ಪಡೆಯುತ್ತಾಳೆ. ಎರಡು ವರ್ಷ ಕಳೆದ ನಂತರ ಆಕೆಗೆ ಆ ಮಗು ತನ್ನದಲ್ಲ ಎಂಬ ಸಂಶಯ ಬರುತ್ತದೆ. ಆಕೆ ಪ್ರಸವಿಸಿದ ಅದೇ ಅಸ್ಪತ್ರೆಯಲ್ಲಿ ಆ ಸಮಯ ಐದಾರು ಮಕ್ಕಳ ಜನನವಾಗಿರುತ್ತದೆ. ಹಾಗಾಗಿ ಅಲ್ಲಿ ಅದಲು ಬದಲಾಗಿರುವ ಸಾಧ್ಯತೆ ಇರುತ್ತದೆ. ಅಲ್ಲಿಂದ ಆ ಮಗುವಿನ ಅಪ್ಪ ಅಮ್ಮ ಯಾರು? ಎಂಬ ಹುಡುಕಾಟ. ಕೊನೆಯಲ್ಲಿ ಆಕೆ ಹೆತ್ತ ಮಗುವಿನ ಪತ್ತೆಯಾಗುತ್ತದೆ. ನ್ಯಾಯಾಲಯದಲ್ಲಿ ಮೊಕದ್ದಮೆಯೂ ದಾಖಲಾಗುತ್ತದೆ. ಡಿ ಎನ್ ಎ ಪರೀಕ್ಷೆ ಮಾಡಿದಾಗ ಈಕೆಯ ಸಂಶಯ ನಿಜವಾಗಿ ನಿಜವಾದ ಮಗುವನ್ನು ಪಡೆಯುವಂತೆ ನ್ಯಾಯಲಯ ತೀರ್ಪುಕೊಡುತ್ತದೆ. ಅಲ್ಲಿಂದಲೇ ನಿಜವಾದ ಸಮಸ್ಯೆ ಎದುರಾಗುವುದು. ಆ ಮಗುವನ್ನು ಬದಲಾಯಿಸುವುದು ಹೇಗೆ? ಅದರ ಮತ್ತೊಂದು ಅಪ್ಪ ಅಮ್ಮ ಅದನ್ನು ಕೊಡುವುದಕ್ಕೆ ಸಿದ್ದರಿರುವುದಿಲ್ಲ. ಮೇಲಾಗಿ ಅವರು ಮುಸ್ಲಿಂ ...ಹೀಗೆಲ್ಲ ಸಮಸ್ಯೆಗಳಿದ್ದರೂ ನ್ಯಾಯಾಲಯದ ತೀರ್ಪು ಗೌರವಿಸಲೇ ಬೇಕು. ಮಗುವನ್ನು ಬದಲಾಯಿಸುವಾಗ ...ತಾಯಂದಿರೇನೋ ಬದಲಿಸಿಕೊಳ್ಳಬಹುದು. ಆದರೆ ಆ ಮಗುವಿಗೆ ಇದರ ಅರಿವು ಇರಬಹುದೇ? ಅದಾಗಲೇ ತನ್ನ ಅಮ್ಮ ಇದೇ ಅಂತ ಭಾವನಾತ್ಮಕವಾಗಿ ಆ ಮಗು ತಿಳಿಯದೇ ಸಂಬಂಧ ಬೆಳೆಸಿರುತ್ತದೆ. ಅದಕ್ಕೆ ನ್ಯಾಯಾಲಯವಾಗಲಿ ಈ ಅಮ್ಮಂದಿರ ಭಾವನೆಯಾಗಲೀ ಪರಿವೆ ಇರುವುದಿಲ್ಲ. ಇಲ್ಲಿ ಮಗುವಿನ ಮಾನಸಿಕ ನೆಲೆಗೆ ಗೌರವ ಎಲ್ಲಿಂದ ಬರಬೇಕು? ತನ್ನದಲ್ಲದ ಅಮ್ಮನನ್ನು ಅಮ್ಮನೇ ಅಂತ ಅದು ಮಾನಸಿಕವಾಗಿ ಒಪ್ಪಿಕೊಂಡಿರುತ್ತದೆ. ದೈಹಿಕ ಸಂಬಂಧಗಳಿಗಿಂತಲೂ ಮಾನಸಿಕ ಸಂಭಧಗಳು ಭಾವನೆಗಳಿಗೆ ಹೆಚ್ಚು ಮೌಲ್ಯ. ಆದರೆ ಅದು ನಾನು ಹೆತ್ತ ಮಗುವಲ್ಲ ಯಾರೋ ಹೆತ್ತ ಮಗು ಎಂದು ಮನಸ್ಸಿಗೆ ಭಾವನೆ ಬಂದಾಗ ಮಗುವನ್ನು ಒಪ್ಪಿಕೊಂಡು ಆ ಮಗುವಿನಂತೆ ಸಂಭಂಧ ಬೆಸೆಯುವುದಕ್ಕೆ ಅಮ್ಮನಿಗೆ ಸಾಧ್ಯವಾಗುವುದಿಲ್ಲ.
ವಾಸ್ತವದ ಸ್ಥಿತಿ ಮತ್ತು ಸತ್ಯ ಹೇಗೆ ಇರಲಿ ಮನಸ್ಸಿಗೆ ಹೀಗೆ ಎಂಬ ಭಾವನೆ ಬಂದು ಬಿಟ್ಟರೆ ಅಲ್ಲಿ ದೇಹ ಸಹಕರಿಸುವುದಿಲ್ಲ. ಅದು ನನ್ನದಲ್ಲ ಈ ಭಾವನೆ ಒಂದೇ ಸಾಕಾಗುತ್ತದೆ. ಅದು ಅಮ್ಮನಿಗಾದರೂ ಮಗುವಿಗಾದರೂ ಅಷ್ಟೇ.
ಮೊದಲು ಊರ ಮನೆಯಲ್ಲಿ ನಾಯಿಯನ್ನು ಸಾಕುತ್ತಿದ್ದೆವು. ನಾಯಿಗೆ ಊಟ ಹಾಕುವುದಕ್ಕೆ ಒಂದು ಹಳೆಯ ತಟ್ಟೆ ಇರುತ್ತಿತ್ತು. ಆ ತಟ್ಟೆ ಎಷ್ಟೇ ಶುಚಿಯಾಗಿರಲಿ, ಅದನ್ನು ಕಾಲಿಂದ ತಳ್ಳಿ ಅದಕ್ಕೆ ಅನ್ನ ಆಹಾರ ಹಾಕುತ್ತಿದ್ದೆವು. ಇಲ್ಲಿ ಆ ಪಾತ್ರೆ ನಾಯಿ ಉಂಡ ಪಾತ್ರೆ ಎಂಬುದಷ್ಟೇ ಮುಖ್ಯವಾಗುತ್ತಿತ್ತು. ಅದು ಮನುಷ್ಯರು ಕೈಯಿಂದ ಮುಟ್ಟುವಂತಹುದಲ್ಲ. ಮನಸ್ಸಿನ ಭಾವನೆ ಅದೊಂದು ವಿಚಿತ್ರ ಕಲ್ಪನೆ. ನಮ್ಮದು ಅಥವಾ ನಮ್ಮದಲ್ಲ ಈ ಭಾವನೆಗಳ ವೆತ್ಯಾಸದಲ್ಲಿ ನಮ್ಮ ಪ್ರವೃತ್ತಿ ಇರುತ್ತದೆ.
ಕೆಲವೊಮ್ಮೆ ಯಾವುದೇ ಕಾರ್ಯ ಕೆಲಸಗಳು ಇದೇ ಬಗೆಯಲ್ಲಿ ವರ್ಗೀಕರಿಸಲ್ಪಡುತ್ತದೆ. ಅದು ಸತ್ಕಾರ್ಯ ಅಥವ ದುಷ್ಕಾರ್ಯ, ಇಲ್ಲಿ ಕಾರ್ಯ ಮುಖ್ಯವಾಗುವುದಿಲ್ಲ. ಅದು ಮಾಡುವ ವ್ಯಕ್ತಿ ಅಥವಾ ಸನ್ನಿವೇಶ ಮುಖ್ಯವಾಗುತ್ತದೆ. ಒಂದು ಒಳ್ಳೆಯ ಸತ್ಕಾರ್ಯ...ನಮಗೆ ಆಗದೇ ಇದ್ದವರು ಮಾಡಿದಾಗ ಅದನ್ನು ಒಪ್ಪಿಕೊಳ್ಳುವುದಕ್ಕೆ ಮನಸ್ಸು ಸಿದ್ದರಿರುವುದಿಲ್ಲ. ಅದೇ ಬಗೆಯಲ್ಲಿ ಯಾವುದೇ ಕೆಟ್ಟ ಕೆಲಸವನ್ನು ನಮ್ಮ ಇಷ್ಟವಿದ್ದವರು ಮಾಡುವಾಗ ಅದನ್ನು ಕೆಟ್ಟದ್ದು ಎಂದು ಹೇಳುವುದರಲ್ಲಿ ಆತ್ಮವಂಚನೆ ಎದುರಾಗುತ್ತದೆ. ಅದು ಕೆಲಸದ ಮೇಲಿನ ಭಾವವಲ್ಲ. ಕೇವಲ ಮನುಷ್ಯ ಸಂಬಂಧದ ಮೇಲಿನ ಭಾವ. ಕಾರ್ಯ ಒಂದೇ ಇರುತ್ತದೆ, ಮಾಡುವ ವ್ಯಕ್ತಿ ಬೇರೆ ಬೇರೆಯಾಗಿರುತ್ತದೆ.
ಅಷ್ಟಾಂಗ ಯೋಗದಲ್ಲಿ ಒಂದು ನಿಯಮವಿದೆ ಅಹಿಂಸೆ. ಅಂದರೆ ಹಿಂಸೆಯನ್ನು ಮಾಡದೇ ಇರುವುದು. ಇಲ್ಲಿ ಹಿಂಸೆ ಎಂಬುದು ಮನಸ್ಸಿನ ಹಿಂಸಾತ್ಮಕ ಮನೋಭಾವವನ್ನು ಹೊಂದಿದೆ. ಅಹಿಂಸೆ ಎನ್ನುವುದು ಮಾಂಸಾಹಾರಿಯಾಗುವುದರಲ್ಲಿ ಇಲ್ಲ. ಮೇಲ್ನೋಟಕ್ಕೆ ನೋಡುವಾಗ ಸಸ್ಯಹಾರಿಯಾಗುವುದರಲ್ಲಿ ಅಹಿಂಸಾ ಗುಣವಿರುತ್ತದೆ. ಆದರೆ ವಾಸ್ತವದಲ್ಲಿ ಮಾಂಸಾಹಾರಿಯಾಗಿದ್ದರೂ ಅಹಿಂಸಾ ಗುಣವನ್ನು ಅಳವಡಿಸಿಕೊಳ್ಳಬಹುದು. ಹಿಂಸೆ ಅದು ಮನಸ್ಸಿನ ಭಾವದಲ್ಲಿರುತ್ತದೆ ಹೊರತು ಕೃತ್ಯದಲ್ಲಿ ಇರುವುದಿಲ್ಲ. ಯಾರಿಗೂ ಮನಸ್ಸಿನಿಂದಲೂ ಹಿಂಸಾತ್ಮಕ ಚಿಂತನೆಯಿಂದ ನೋವಾಗದಂತೆ ವರ್ತಿಸುವುದು ಅಹಿಂಸಾ ಗುಣವಾಗಿರುತ್ತದೆ. ಹಿಂಸೆ ಎಂಬುದು ಪ್ರವೃತ್ತಿಗಿಂತಲೂ ಮನೋಭಾವದಿಂದ ಕೂಡಿರುತ್ತದೆ. ಹಿತೈಷಿಗಳು ಪ್ರೀತಿಯಿಂದ ಕೆಟ್ಟದಾಗಿ ಗದರಿದರೂ ಅದು ಬೈಗುಳವಾಗುವುದಿಲ್ಲ. ಅಥವಾ ದ್ವೇಷದಿಂದ ಶತ್ರುಗಳು ವ್ಯಂಗ್ಯವಾಗಿ ಹೊಗಳಿದರೂ ಅದು ಸ್ತುತಿಯಾಗುವುದಿಲ್ಲ. ಮನೋಭಾವ ಎಂಬುದು ಪ್ರವೃತ್ತಿಗೆ ಪೂರಕವಾಗಿರುವುದಿಲ್ಲ. ಅದು ವ್ಯಕ್ತಿರಿಕ್ತವಾಗಿರುತ್ತದೆ.
ಯಾವುದೋ ಒಂದು ಹಾಡು ಯಾರಿಗೋ ಇಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ಮೊತ್ತೊಬ್ಬರಿಗೆ ಇಷ್ಟವಾಗುವುದಿಲ್ಲ. ಹಾಡಿನ ಭಾವಾರ್ಥವಾಗಲಿ, ಹಾಡಿನ ಸಂದೇಶವಾಗಲಿ, ಹಾಡಿನ ರಾಗ ತಾಳವಾಗಲೀ ಕಾರಣವಾಗದೇ ಯಾರೋ ಇಷ್ಟ ಪಟ್ಟಿದ್ದಾರೆ ಎನ್ನುವುದಕ್ಕೆ ಅದನ್ನು ಹಾಡುವುದಕ್ಕೆ ಕೇಳುವುದಕ್ಕೆ ಬಯಸುವುದಿಲ್ಲ. ಕೇವಲ ಮನಸ್ಸಿನ ಭಾವ ಮಾತ್ರ. ಯಾವುದೋ ಹಾಡು ಯಾರೋ ದ್ವೇಷಿಸಿದ ಮಾತ್ರಕ್ಕೆ ಅದು ಕೆಟ್ಟ ಹಾಡಾಗುವುದಿಲ್ಲ. ನಮ್ಮ ಮೆಚ್ಚಿನ ನಟ ಕೆಟ್ಟ ಸಿನಿಮಾದಲ್ಲಿ ನಟಿಸಿದರೂ ಅದು ಕೆಲವು ಸಲ ಇಷ್ಟವಾಗುತ್ತದೆ. ಅಭಿಮಾನದಲ್ಲಿ ಕೆಟ್ಟದ್ದು ಎಂಬುದು ಮುಚ್ಚಿ ಹೋಗುತ್ತದೆ. ಹೆತ್ತ ತಾಯಿಗೆ ಹೆಗ್ಗಣ ಮುದ್ದು ಎಂದಾಗುವುದು ಇದೇ ಭಾವದಲ್ಲಿ. ಯಾವುದೋ ಒಂದು ನಮಗೆ ಇಷ್ಟವಾಗುತ್ತದೆ. ಮತ್ತೊಬ್ಬರಿಗೆ ಇಷ್ಟವಾಗಲಿಲ್ಲ ಎನ್ನುವುದಕ್ಕೆ ನಮ್ಮ ಇಷ್ಟವೆಂಬುದು ಮೌಲ್ಯರಹಿತವಾಗುವುದಿಲ್ಲ. ಮತ್ತೊಬ್ಬರ ಮನಸ್ಸನ್ನಷ್ಟೇ ಪರಿಗಣಿಸಿ ನಮ್ಮ ಇಷ್ಟವನ್ನು ನಾವು ಗೌರವಿಸಿಬಿಡುವುದರಲ್ಲಿ ಆತ್ಮ ತೃಪ್ತಿ ಇರುತ್ತದೆ. ನಲ್ಲ ಪ್ರೀತಿಯಿಂದ ಕೊಟ್ಟ ಒಂದು ಸಣ್ಣ ಹೂವು ಅವ್ಯಕ್ತವಾದ ಪರಿಮಳವನ್ನು ಬೀರಿದಂತೆ ಇಲ್ಲಿ ಪ್ರೀತಿ ಮಾತ್ರ ಗೌರವಿಸಲ್ಪಡುತ್ತದೆ. ಪ್ರೀತಿ ಎಂಬ ಭಾವ ಮಾತ್ರ ಪ್ರೇಮಿಯದಾಗಿರುತ್ತದೆ.
No comments:
Post a Comment