Saturday, May 23, 2026

ಚಾರ್ಲಿಯ ಹನಿ ಸುಗಂಧ

ಶ್ರಾವಣ ಕಳೆದು ಮಳೆ ವಿರಳವಾಗಿ  ತುಂತುರು ಮಳೆಯ ಶರದೃತುವಿನ ಕಾಲ. ಒಂದು ರೀತಿಯಲ್ಲಿ ಬಿಡದ ಮಳೆಯಿಂದ ಮುಕ್ತರಾಗಿ ಒಂದಷ್ಟು ಉಲ್ಲಸಿತರಾಗಿ ಹಿತವಾದ ವಾತಾವರಣವನ್ನು ಅನುಭವಿಸುವ ಋತುಮಾನ. ಋತುಸ್ನಾತೆಯಾದ ಪ್ರಕೃತಿ ಮಾತೆ ಅವಧಿ ಮುಗಿದು ಸ್ನಾನ ಮಾಡಿ ಶುಭ್ರವಾಗಿ ತಲೆಗೂದಲಿನಿಂದ ತೊಟ್ಟು ತೊಟ್ಟು ಹನಿಯನ್ನು ಸುರಿಸುತ್ತಾ ಬರುವಂತೆ ಮಳೆ ಅಗಲೋ ಈಗಲೋ ಸುರಿಯುವ ಮಳೆ  ಮನಸ್ಸಿಗೆ ಕೊಡುವ ಉತ್ಸಾಹದ ದಿನಗಳು.  ಹದಿಹರೆಯದ ಮನಸುಗಳಾದರೆ ಈ ಶರದೃತು  ಹೊಸ ಕನಸಿನ ಚಿಗುರನ್ನು ಹುಟ್ಟಿಸಿಬಿಡುತ್ತವೆ. ಅದು ಎಂಭತ್ತರ ದಶಕದ ಕೊನೆಯ ವರ್ಷಗಳು. ಅದು ಹದಿಹರಯದ ಹಸಿ ಯೌವನಿಕೆಯ ಕಾಲ. ಬದುಕನ್ನು ಸಿಹಿಯಾಗಿ ಚೂರು ಚುರು ತುಣುಕಾಗಿ ಅನುಭವಿಸುವ ಹಪ ಹಪಿಕೆ ಇದ್ದರೆ ಅದು ಹದಿ ಹರಯದ ಸಹಜ ಬಯಕೆ. 


ಹದಿಹರಯದಲ್ಲಿ ಬಡತನವಿದ್ದರೆ ಕೇವಲ ಬಾಳಸಂಗಾತಿಯ ಕನಸು ಮಾತ್ರ ಇರುವುದಿಲ್ಲ. ಭವಿಷ್ಯತ್ತಿನ ಭದ್ರತೆ ಒಂದಷ್ಟು ಧನ ಸಂಪತ್ತಿನ ಕನಸೂ ಜತೆಯಲ್ಲಿರುತ್ತದೆ. ವೈದ್ಯ ಹೃದಯದ ಬಡಿತವನ್ನು ಅಳೆದರೆ ಸಂಗಾತಿ ಹೃದಯದ ವಿಸ್ತಾರವನ್ನು ಅಳೆಯುತ್ತಾಳೆ. ಕೇವಲ ಹೃದಯದ ವೈಶಾಲ್ಯತೆ ಬದುಕಿಗೆ ಸಾಕಾಗುವುದಿಲ್ಲ.   ಈ ಪ್ರಜ್ಞೆ ಬದುಕಿನ ತಲೆಯ ಮೇಲಿರು ಭಾರವನ್ನು ಹೆಚ್ಚಿಸುತ್ತದೆ.  ತಲೆಯ  ಭಾರ, ಹೃದಯದ ಭಾವನೆ ಕಾಣುವ ಕನಸು ನಡುವಿನ ಈ ದಿನಗಳಲ್ಲಿ ಆಕೆ ಮನೆಗೆ ಬರುತ್ತಾಳೆ ಎಂಬ ಪತ್ರ ಮನೆಗೆ ಬಂದಾಗ ಕನಸು ವಾಸ್ತವದ ನನಸಿನ ಕಡೆಗೆ ಮುಖ ಮಾಡಿತ್ತು. ಕೆಲವು ದಿನಗಳ ಹಿಂದೆ ಆಕೆಯ ಮುಖಾಮುಖಿ ಭೇಟಿಯಾಗಿತ್ತು. ಆಕೆಯ ಮನೆಯನ್ನು ಮನೆ ಮಂದಿಯನ್ನು ನೋಡಿ ಛೇ ಇವುಗಳನ್ನು ತೊರೆದು ಆಕೆ ಬಂದಾಳೆ ಎಂಬ ಸಂದೇಹ ಬಾಧಿಸಿತ್ತು. ಇದೆಲ್ಲ ತೊರೆಯಬೇಕಾದರೆ ಇದಕ್ಕಿಂತ ಅಧಿಕವಾಗಿರುವದ್ದು ಬಂದು ಸೇರುವಲ್ಲಿರಬೇಕು.  ಇಲ್ಲದಿದ್ದರೆ ಅದನ್ನು ಒದಗಿಸಿ ಕೊಡಬೇಕು. ಆಗ ಬಂದ ಯೋಚನೆ, ವಾಸ್ತವವನ್ನು ತೋರಿಸಬೇಕು. ಅದನ್ನು ನೋಡಿಯೂ ಆಕೆ ಬಂದರೆ ಆಕೆಯ ಮನೆಯಲ್ಲಿರುವುದಕ್ಕಿಂತಲೂ ಹೆಚ್ಚಿಗೆ ಇಲ್ಲಿರುತ್ತದೆ ಎಂಬ ವಿಶ್ವಾಸ ಮೂಡುತ್ತದೆ. ಆನಂತರ ಇಲ್ಲಿ ಎನುಂಟು ಏನಿಲ್ಲ ಎನ್ನುವುದಕ್ಕಿಂತಲೂ ಇದ್ದುದನ್ನು ಅನುಭವಿಸುವುದಕ್ಕೆ ಮನಸ್ಸು ಸಿದ್ಧವಾಗಿರುತ್ತದೆ. 

  ಹೀಗಿದ್ದರೂ ತನ್ನ ಮನೆಯಲ್ಲಿ ಎನಿದೆ ಎನ್ನುವುದಕ್ಕಿಂತಲೂ ಎನಿಲ್ಲ ಎಂಬ ಕೊರತೆಯ ಅನ್ವೇಷಣೆಯಲ್ಲಿ ಮನಸ್ಸು ಅವಲೋಕಿಸುತ್ತದೆ. ಕೆಲವೊಮ್ಮೆ ಅದನ್ನು ಮರೆಮಾಚಲು ಪ್ರಯತ್ನಿಸುತ್ತದೆ. ಆದರೆ ಇಲ್ಲಿ ಹಾಗಿಲ್ಲ, ಮನೆ ಹೇಗಿದೆಯೋ ಹಾಗೇ ನೋಡಲಿ. ಬಂದು ಸೇರಬೇಕಾದ ಮನೆಗೆ ಯಾವುದೋ ಭ್ರಮೆಯಲ್ಲಿ ಬಂದು ಸೇರುವುದು ಬೇಡ ಎಂಬ ಪ್ರಾಮಾಣಿಕತೆ ಇಲ್ಲಿರುತ್ತದೆ. ಹಾಗಾಗಿಯೇ ವಿಶೇಷ ಸನ್ನಾಹವೇನೂ ಇರಲಿಲ್ಲ. ಒಂದಷ್ಟು ಸ್ವಚ್ಛತೆ ಬಿಟ್ಟರೆ ಮನೆ ಅದೇ ಗುಡಿಸಲಿನಂತೆ ವಿಶೇಷ ಸೌಲಭ್ಯಗಳು ಇಲ್ಲದಂತೆ.  ಹೌದು ಆಕೆ ಬಂದು ಸೇರಬೇಕು. ಅದು ಮನೆಗಿಂತಲೂ ಮನಸ್ಸಿಗೆ ಬಂದು ಸೇರಬೇಕು. ಮನೆ ನಾಳೆ ಬದಲಾಗಬಹುದು. ಆದರೆ ಮನಸ್ಸು ಅದು ಬದಲಾಗುವುದಿಲ್ಲ. ಕನಸಿನ ಸೌಧಕ್ಕಿಂತಲೂ ಮನಸ್ಸಿನ ಸೌಧ ಗಟ್ಟಿಯಾಗಿರುತ್ತದೆ. ಆಗ ಒಂದು ಅತ್ಮ ವಿಶ್ವಾಸ ಜಾಗೃತವಾಗುತ್ತದೆ. ಆಕೆಗೆ ಎಲ್ಲವನ್ನೂ ಮಿರಿದ ಪ್ರೀತಿಯನ್ನು ಪ್ರಾಮಾಣಿಕವಾಗಿ ಕೊಡಬೇಕು. ಎಲ್ಲಕ್ಕಿಂತಲೂ ಸುಲಭವಾಗಿ ಕೊಡಬಹುದಾದ ಸಾಧನವಿದ್ದರೆ ಅದು ಪ್ರೀತಿ ಮಾತ್ರ. 

ಈಗಿನಂತೆ ಆಗ ಮೌಬೈಲ್ ಇಲ್ಲ. ದೂರವಾಣಿಯಂತೂ ಹತ್ತಿರವಿಲ್ಲ. ಮುಖ್ಯ ಸಂವಹನವೆಂದರೆ ಭಾರತೀಯ ಅಂಚೆ ಮತ್ತು ಟೆಲಿಗ್ರಾಫ ಕಛೇರಿ. ಒಂದು ಪತ್ರ ಬರೆದರೆ ತಲುಪುವುದಕ್ಕೆ ಏನಿಲ್ಲವೆಂದರೂ ಐದು ಆರು ದಿನ ಬೇಕು. ಈಗ ವಿಷಯಗಳು ಬಿಸಿ  ಆರುವ ಮೊದಲೇ ಸೇರುವಲ್ಲಿ ರವಾನೆಯಾಗುತ್ತದೆ. ಆಗ ಅದರೆ ಬಿಸಿ ಆರಿಹೋಗಿ ನಂತರ ಅಲ್ಲಿ ಕೈ ಸೇರಿದಾಗ ಬಿಸಿ ಏರುವುದಿದ್ದರೂ ಸಂಗತಿ ಒಂದು ಕಡೆಗೆ ಹಳೆಯದಾಗಿಬಿಡುತ್ತದೆ. ಹಲವು ಸಲ ಏನು ಬರೆದಿದ್ದೇನೆ ಎಂಬುದೂ ಕೂಡ ಮರೆತು ಹೋಗಿರುವ ಸಂಭವವಿದೆ.  ಹಾಗಿರುವಾಗ ಆಕೆ ಬರುತ್ತಾಳೆ ಎಂಬ ಪತ್ರ ಕೈ ಸೇರಿದಾಗ ಆಕೆ ಬರುವ ತನಕ ಅದರ ಬಿಸಿ ಆರಲೇ ಇಲ್ಲ. ಆ ಭಾವನೆಗಳು ಅದರ ಬಿಸಿ ಆರುವುದಕ್ಕೆ ಬಿಡಲಿಲ್ಲ. ದಿನ ಘಳಿಗೆಯ ಅಂತರ ಕಡಿಮೆಯಾಗುವುದನ್ನೇ ಮನಸ್ಸು ಲೆಕ್ಕ ಹಾಕುತ್ತಾ ಕಳೆಯುವುದೆಂದರೆ ಅದೊಂದು ಮಧುರವಾದ ಅನುಭವ. 

ಅಂತೂ ಆ ದಿನ ಆ ಘಳಿಗೆ ಬಂತು. ಮಧ್ಯಾಹ್ನ. ಸೂರ್ಯ ನೆತ್ತಿಗೆ ಏರಿ ಬಿಸಿಯಾಗುವ ಸಮಯ. ಹೃದಯ ಬಡಿತ ಏರಿ ಶರೀರ ಬಿಸಿಯಾದರೂ ಆ ಬಿಸಿಯಲ್ಲಿ ಒಂದು ಹಿತವಾದ ಅನುಭವ. ಮಧ್ಯಾಹ್ನದ ಬಸ್ಸು...ಆ ಬಸ್ಸಿನಲ್ಲೇ ಆಕೆ ಬರುವ ನಿರೀಕ್ಷೆ ಇರುವ ಕಾರಣ ಬಸ್ಸಿನ ಹಾರನ್ ದೂರದಿಂದಲೇ ಕೇಳಿಸುತ್ತದೆ. ಅದೊಂದು ಸೂಚನೆಯಘಂಟಾನಾದಂತೆ, ಆ ಧ್ವನಿ ಈ ಕಿವಿ ಕೇಳಿದಂತೆ ಆ ಕಿವಿಯೂ ಅದೇ ಹೊತ್ತಲ್ಲಿ ಕೇಳಿರುತ್ತದೆ ಎಂಬ ಭಾವನೆಯೇ ರೋಮಾಂಚನವನ್ನು ಉಂಟು ಮಾಡುತ್ತದೆ. ಆಕೆ ಯಾವ ಯೋಚನೆಯಲ್ಲಿರಬಹುದು? ಮನೆಯ ಬಗ್ಗೆ ಇರಬಹುದೇ? ಇಲ್ಲ ಮನದ ಬಗ್ಗೆ ಇರಬಹುದೇ? ಮನಸ್ಸನ್ನು ಒಂದಷ್ಟು ಮೊದಲೇ ಅರಿತಿರುವುದರಿಂದ ಮನೆಯ ಬಗ್ಗೆ ಪರಿಸರದ ಬಗ್ಗೆ ಒಂದಷ್ಟು ಭಾವನೆಗಳು ಇರಬಹುದು. 

ಅಚ್ಚ ಬಿಳಿಸೀರೆಯಲ್ಲಿ ನಸು ಕಂದು ಹೂವನ್ನು ಚಿತ್ರಿಸಿದ ಸೀರೆಯಲ್ಲಿ ಅಪ್ಪ ಅಮ್ಮನ ಜತೆ ತೆಳು ಬಳುಕಿದ ಶರೀರದಲ್ಲಿ  ಆಕೆ ಇಳಿದು ಬರುತ್ತಿದ್ದರೆ ಆಕೆಯ ಹೆಜ್ಜೆ ಎದೆಯ ಮೇಲಿಟ್ಟಂತಾಗಿ ಹೃದಯ ಭಾರವಾದ ಅನುಭವ.  ಮೊದಲೊಮ್ಮೆ ಅಕೆಯ ಭೇಟಿಯಾಗಿರುವುದರಿಂದ ಮೊದಲ ಭೇಟಿಯ ರೋಮಾಂಚನ ಇಲ್ಲದಿದ್ದರೂ ದೇಹದ ಕಂಪನ ಒಂದಿಷ್ಟು ಅಧಿಕವಾಗಿತ್ತು.  ಅದಾಗಲೇ ಔಪಚಾರದ ಮಾತುಗಳು ಕ್ರಿಯೆಗಳು ನಡೆದು, ಅಕೆ ಮನೆಯನ್ನೇಲ್ಲಾ ಸುತ್ತಾಡಿ ನೋಡಿದಳು. ಏನು ಅನ್ನಿಸಿತೋ ಏನೋ ಅಂದುಕೊಂಡು ಮನಸೋ ಇಚ್ಛೆ ಮಾತನಾಡಬೇಕು ಅನ್ನಿಸಿತ್ತು, ಆದರೆ ಅದಕ್ಕೆ ತತ್ಕ್ಷಣಕ್ಕೆ ಅವಕಾಶ ಇರಲಿಲ್ಲ. ಬಂದ ಅತಿಥಿಗಳ ಊಟ ಉಪಚಾರ ಮುಗಿಸಿ  ಕೊನೆಯಲ್ಲಿ ಆಕೆ ಎಂದಳು ಒಂದಿಷ್ಟು ಖಾಸಗಿಯಾಗಿ  ಮಾತನಾಡಬೇಕು. ಆಕೆಯ ಧೈರ್ಯ ತನಗಿಲ್ಲದೇ ಹೋಯಿತಲ್ಲ ಎಂದನಿಸಿದರೂ ಸಂತೋಷದಿಂದ ಮನೆಯ ಹೊರಗೆ ಒಂದಷ್ಟು ದೂರದಲ್ಲಿ ಒಂದು ಬಂಡೆಯ ಮೇಲೆ ಎದುರು ಬದಿರಾಗಿ ಕುಳಿತು ಮಾತನಾಡಿದಾಗ ಆಕೆಗೆ ಮನೆ ಪರಿಸರ ಎಲ್ಲವೂ ಇಷ್ಟವಾಗಿರಬೇಕು. ಆಡುವುದಕ್ಕೆ ಹಲವಿದ್ದರೂ  ಒಂದೂ ಮಾತೂ ಹೊರಡಲಿಲ್ಲ. ಇಷ್ಟವಾಯಿತಾ ಎಂದ ಒಂದು ಪ್ರಶ್ನೆ ಬಿಟ್ಟರೆ ಆಕೆ ಮತ್ತೇನೂ ಕೇಳಿದ ನೆನಪಿಲ್ಲ.  ಆಕೆಯ ಅಮ್ಮ ಮೊದಲೇ ಹೇಳೀದ್ದರು, ತಿಳಿಗಂಜಿಯಾದರೂ ಪರವಾಗಿಲ್ಲ...ಆದರೆ ಆಕೆಯ ನೆಮ್ಮದಿ ಅತಿ ಮುಖ್ಯ. ಇದು ಅತಿಯಾದ ಆತ್ಮ ವಿಶ್ವಾಸ ತುಂಬಿದ ಮಾತುಗಳಾಗಿದ್ದವು.  ಆಗಲೇ ಮನಸ್ಸು ದೃಢವಾಗಿ ನಿರ್ಧರಿಸಿತು, ಏನೇ ಆದರು ಆಕೆಗೆ ಕಣ್ಣೀರು ಬರುವಂತೆ ಮಾಡುವುದಿಲ್ಲ.ಜೀವನದಲ್ಲಿ ನಿರ್ಧಾರ ಮಾತ್ರ ನಮ್ಮದಾಗಿರುತ್ತದೆ. ಆದರೆ ನಿಯತಿ ಅಂದರೆ ನಡೆಯುವುದು ನಮ್ಮ ವಶವಿರುವುದಿಲ್ಲ. ನಗುವಿನಂತೆ ದುಃಖವೂ ಇರುತ್ತದೆ. ಅದು ನಿಜವಾದ ಜೀವನ.  ಕಣ್ಣೀರು ಇದ್ದರೂ ಇರಬಹುದು...ಇಲ್ಲ  ಶ್ರೀರಾಮ ಪಿತೃವಾಕ್ಯ ಪರಿಪಾಲಿಸಿದಂತೆ ನನಗಾಗಿ ಕಣ್ಣೀರು ಮಿಡಿಯದೇ ಸುರಿಸದೇ ಇರಬಹುದು.  ನನ್ನ ನಿರ್ಧಾರ ಹುಸಿಯಾಗಬಾರದಲ್ಲ.  ಸದಾ ನಗುವಿನಲ್ಲೇ ಇರುವ ಆಕೆಯನ್ನು ಊಹಿಸುವುದು ಕಷ್ಟ.

ಸಾಯಂಕಾಲದ ತನಕ ಹತ್ತು ಹಲವು ಮಾತುಗಳಾದವು. ಕೊನೆಯಲ್ಲಿ ಸಮುದ್ರ ನೋಡಬೇಕು ಅನ್ನಿಸಿತು. ಮಲೆನಾಡ ಹೆಣ್ಣಿಗೆ ಅಲ್ಲಿನ  ನದಿ  ಕೆರೆ ಬಾವಿ ಬಿಟ್ಟರೆ ಬೇರೆ ಜಲರಾಶಿಯ ಪರಿಚಯವಿಲ್ಲ. ಹೊರ ಹೋಗುವುದಕ್ಕೆ ಉಡುಪು ಬದಲಿಸಿ ಹೊರಡುವಾಗ ಆಕೆ ಹತ್ತಿರ ಬಂದಳು,  ಕಸೂತಿಯಲ್ಲಿ ಅಲಂಕರಿಸಿದ ಕರವಸ್ತ್ರವನ್ನು ಕೈಯಲ್ಲಿಟ್ಟಳು. ಮೆಲ್ಲಗೆ ಕಿವಿಯಲ್ಲಿ ಪಿಸುಗುಟ್ಟಿದಳು...ನೆನಪಿಗೆ ಇರಲಿ. ಮರೆಯದ ಮನಸ್ಸಿಗೆ  ನೆನಪಿನ ರಾಶಿಯನ್ನೇ ತುಂಬಿದಾಕೆ ಆ ರಾಶಿಯನ್ನು ಮುಚ್ಚಿಕೊಳ್ಳುವುದಕ್ಕೋ ಎನೋ ಪುಟ್ಟ ಕರವಸ್ತ್ರವನ್ನು ಕೈಯಲ್ಲಿರಿಸಿದಳು. ಹಾಗೇ ಅದನ್ನು ಮುಖದ ಬಳಿಗೆ ತಂದರೆ ಚಾರ್ಲಿ ಸೆಂಟ್ ನ ಮಧುರವಾದ ಪರಿಮಳ. ಅದೆಂತಹ ಮಧುರ ಗಂಧ. ಕೋಣೆಯನ್ನೆಲ್ಲಾ ಆವರಿಸಿತ್ತು. ಮತ್ತೂ ಮತ್ತೂಮುಖದ ಬಳಿಗೆ ತಂದೆ. ಎಲ್ಲಿ ಗಂಧ ಕರಗಿ ಆವಿಯಾಗುವುದೋ ಎಂದು ಕೊಂಡು ಪುಟ್ಟ ಪೆಟ್ಟಿಗೆಯಲ್ಲಿ ಕರವಸ್ತ್ರವನ್ನು ಮುಚ್ಚಿಟ್ಟುಬಿಟ್ಟೆ. 

ಎಲ್ಲರೂ ಸಮುದ್ರಕಿನಾರೆಗೆ ತೆರಳಿದೆವು. ಒಂದು ತಾಸು ಸಾಗರದಂಚಿನ ಅಲೆಗಳ ಭೋರ್ಗರೆತ ಕಿವಿಗೆ ಅಪ್ಪಳಿಸಿದರೂ ಆಕೆಯ ಕಿಲ ಕಿಲ ನಗು ಕಿವಿಯಲ್ಲಿ ಅದು ಹೇಗೋ ಎಲ್ಲವನ್ನೂ ಮೀರಿಸಿ ಕೇಳಿಸುತ್ತಿತ್ತು. ನಂತರ ಎಲ್ಲರನ್ನೂ ಬೀಳ್ಕೊಟ್ಟು ಕತ್ತಲಾಗುತ್ತಿದ್ದಂತೆ ಮನೆಗೆ ಬಂದನಂತರ ಮತ್ತದೇ ಕರವಸ್ತ್ರದ ಪೆಟ್ಟಿಗೆಯನ್ನು ತೆರೆದು ನೋಡುವುದನ್ನು ತೆಡೆ ಹಿಡಿಯಲಾಗಲಿಲ್ಲ.  ತೆರೆದು ನೋಡಿದೆ. ಮತ್ತದೆ ಚಾರ್ಲಿಯ ಹನಿ ಸುಗಂದ....... ಇಂದಿಗೂ ಆ ಚಾರ್ಲಿಯ ಹನಿ ಸುಗಂಧದ ಪರಿಮಳವನ್ನು ಮರೆಯುವುದಕ್ಕಿಲ್ಲ.   ಒಂದು ಮಾತ್ರ ಸತ್ಯ ಬದುಕಿನಾದ್ಯಂತ ಹರಡಿದ ಮಧುರ ಸುಗಂಧಕ್ಕೆ ಆ ಚಾರ್ಲಿಯ ಸುಗಂಧವೇ ತರುಲತೆಯ ಚಿಗುರಾಗಿ ಉಳಿದುಬಿಟ್ಟಿತು. 





Wednesday, May 13, 2026

ಬ್ರಾಹ್ಮಣ

     ಬ್ರಹ್ಮಾಂಡ ಎಂಬ ಶಬ್ದವನ್ನು ಉಪಮೆಯಾಗಿ ಆಗಾಧ ಗಾತ್ರವನ್ನು ಕಲ್ಪಿಸುವುದಕ್ಕೆ ಉಪಯೋಗಿಸುತ್ತಾರೆ. ಬ್ರಹ್ಮಾಂಡ  ಗಾತ್ರ.  ಬ್ರಹ್ಮ ಎಂದರೆ ದೊಡ್ಡದು. ಅದು  ಎಂದಿಗೂ ಸಣ್ಣಗಾಗುವುದಕ್ಕೆ ಸಾಧ್ಯವಿಲ್ಲ. ಸಣ್ಣದಾದರೆ ಅದು ಬ್ರಹ್ಮವಾಗಿ ಉಳಿಯುವುದಿಲ್ಲ. ಬ್ರಹ್ಮದ ರೂಪವೇ ಬ್ರಾಹ್ಮಣ. ಆದರೆ ಇಂದು ಬ್ರಹ್ಮ ಅಥವಾ ಬ್ರಾಹ್ಮಣ ಚಿಕ್ಕದಾಗಿ ಬೆಳೆಯದಂತಹ ಅನಿವಾರ್ಯತೆಗೆ ತುತ್ತಾಗುತ್ತಾನೆ.  ಬ್ರಹ್ಮ ಇದರ ಅರ್ಥ ಏನೆಂಬುದರ ಬಗ್ಗೆ ಯೋಚಿಸುವುದಿಲ್ಲ ಯಾಕೆಂದರೆ ಅದನ್ನು ಅಳೆಯುವ ಸಾಮರ್ಥ್ಯ ಕಳೆದುಹೋಗಿರುವುದಕ್ಕೋ ಅಳೆದರೆ ತಾನು ಚಿಕ್ಕದಾಗುವ ಭಯವೋ ಅಂತೂ ಬ್ರಹ್ಮ ಸ್ವರೂಪವೇ ಸಮಸ್ಯೆ ಮಾತ್ರ ಬೃಹದಾಗಿ ತಲೆಯ ಮೇಲೆ ಕುಳಿತಂತೆ ಎಗರಾಡುವಂತಾಗಿದೆ.  ತಾವು ಸ್ವತಃ ಸಣ್ಣಗಾಗಿರುವುದಕ್ಕೋ ಏನೋ? ಬ್ರಾಹ್ಮಣ ಎಂಬ ಶಬ್ದವೇ ಬಹಿಷ್ಕರಿಸುವ ಮನಸ್ಸಾಗುತ್ತದೆ. 

ಬ್ರಾಹ್ಮಣ ಅದೊಂದು ವಿಶಿಷ್ಟ ಪದವಿ. ಬ್ರಹ್ಮ ತತ್ವ ಅರ್ಥವಾದರೆ ಮಾತ್ರ ಈ ಪದವಿಯ ಅರ್ಥವಾಗಬಹುದು. ಆದರೆ ನಮ್ಮಲ್ಲಿ ಅರ್ಥವಾಗದೇ ಇರುವುದನ್ನು ಅರ್ಥವಿಸುವ ಪ್ರಯತ್ನ ಕಷ್ಟಕರ, ಅದಕ್ಕೆ ಅದನ್ನು ಹುಳಿ ಫಲವನ್ನಾಗಿಸಿದರೆ ಅದರ ಸನಿಹದಿಂದ ದೂರವಾಗಬಹುದೆಂಬ ಭ್ರಮೆ ಆವರಿಸಿಬಿಡುತ್ತದೆ. ಕಾರಣ ಇಷ್ಟೇ ಅದರ ಸನಿಹ ಸುಳಿಯುವ ಅರ್ಹತೆಯೂ ಇಲ್ಲ. ಅದರಬಗ್ಗೆ ಮತ್ತಷ್ಟು ಭಯ ಆವರಿಸಿರುತ್ತದೆ.  ಯಾವುದೋ ಒಂದು ಪದವಿಯೋ ಅರ್ಹತೆಯೋ ಶ್ರೇಷ್ಠ ಎಂದು ಕಂಡರೆ ಒಂದೋ ಅದನ್ನುಕೈವಶ ಮಾಡಿಕೊಳ್ಳಬೇಕು. ಅದಕ್ಕೆ ಸಾಧನೆ ಬೇಕು. ಒಂದು ವೇಳೆ ಅದು ಸಾಧ್ಯವಾಗದೇ ಇರುವಾಗ ತಾನೇನೂ ಕಡಿಮೆಯಲ್ಲ ಎಂದು ತಿಳಿದುಕೊಳ್ಳುವುದು. ಇದು ಕೆಲವೊಮ್ಮೆ ಸ್ವಾಭಿಮಾನದ ಸಂಕೇತವಾದರೆ ಹಲವು ಸಲ ಇದು ಸಾಧ್ಯವಾಗದೇ ಮೈ ಪರಚಿಕೊಳ್ಳುವ ಕೀಳರಿಮೆಯಾಗಿ ಬದಲಾಗುವುದೇ ಅಧಿಕ. 

ಎಲ್ಲಾ ಜಾತಿ  ಬದಲಿಸಿ ಹೊಸ ಜಾತಿಗೆ ಬದಲಾಗಬಹುದು.‌ ಆದರೆ ಬ್ರಾಹ್ಮಣ ಯರೋ ಬಂದು ಬದಲಿಸಿ ಅಗುವುದಲ್ಲ.  ಸ್ವತಃ ಆಗುವುದು. ಅದಕ್ಕೆ ಇಚ್ಛಾ ಶಕ್ತಿ ಬೇಕು.  ಯಾರೋ ಬಂದು ಬ್ರಾಹ್ಮಣ ಮಾಡಿ ಬದಲಿಸಿದರೆ ಅದು ಹೊರಾವರಣದ ವೇಷಗಾರಿಕೆಯಷ್ಟೆ ಸಾಧ್ಯ.  ಯಾರೋ ಮಾಡುವುದಕ್ಕೆ ಅದು ಸಾಧ್ಯವಿಲ್ಲ. ‌ಒಂದು ವೇಳೆ ಮಾಡಿದರೂ ಅದು ಉಳಿಯಬೇಕೆಂದೇನೂ ಇಲ್ಲ. ಬ್ರಾಹ್ಮಣ ಆಗಬೇಕೆಂದಿದ್ದರೆ  ಬ್ರಾಹ್ಮಣನಿಗೆ  ಹೋಲಿಸುವುದಕ್ಕಿಂತ ನಾನು ಬ್ರಾಹ್ಮಣ ಅಂತ ತಿಳಿದುಕೊಳ್ಳಬೇಕು. ಮೊದಲಿಗೆ ತನ್ನಲ್ಲಿರುವ ಕೀಳರಿಮೆಯನ್ನು ಬಿಡಬೇಕು.   ಅದರೊಂದಿಗೆ ಹೋಲಿಸುವ ಕೀಳರಿಮೆ ಯಾಕೆ?  ಬ್ರಾಹ್ಮಣ ಎಂದು ತಿಳಿದು ಆ ಹಾದಿಯಲ್ಲಿ ಕಟ್ಟು ನಿಟ್ಟಾಗಿ ಬದುಕಿ‌ನೋಡಬೇಕು. ಯಾರೋ ಬಂದು ಬ್ರಾಹ್ಮಣ ಮಾಡುವುದಲ್ಲ. ಮಾಡಿದರೂ ಅದು ಬ್ರಾಹ್ಮಣ್ಯ ಆಗುವುದಿಲ್ಲ ಜಾತಿ.. ಅಂದರೆ ಹುಟ್ಟಿನಿಂದ ಬರುವದ್ದು.‌ಜಾತ ಅಂದರೆ ಹುಟ್ಟು, ಧರ್ಮ‌ಆನಂತರ ಅನುಸರಿಸಬೇಕು. ಹಾಗಾಗಿ ಜಾತದಿಂದ ಅಂದರೆ ಹುಟ್ಟಿನಿಂದ ಬಂದಿರುವುದರ ಬಗ್ಗೆ ಯೋಚಿಸದೆ ಆನಂತರ ಸಾಧಿಸಬಹುದಾದ ಧರ್ಮದ ಬಗ್ಗೆ ಯೋಚಿಸಬೇಕು. ಜಾತದಿಂದ ಇರುವುದು ಅದು ನಮ್ಮ ಕೈಯಲ್ಲಿ ಇರುವುದಿಲ್ಲ. ಅದನ್ನೇ ಭಗವಂತ ಎನ್ನುವುದು. 

ಬ್ರಾಹ್ಮಣರಿಗೂ ಬ್ರಾಹ್ಮಣ ಹಾದಿಯಲ್ಲಿ ಸಾಗುವುದು  ವರ್ತಮಾನದಲ್ಲಿ ಸುಲಭವಲ್ಲ. ಅದಕ್ಕೆ ಬದ್ದತೆ ಬೇಕು. ಒಂದು ದಿನವಾದರೂ ಇಂದ್ರನಾಗಬೇಕು, ಅರಸನಾಗಬೇಕು ಈಗಿನ ಕಾಲದಲ್ಲಿ ಒಂದು ದಿನವಾದರೂ ಪ್ರಧಾನಿಯಾಗಬೇಕು ಮಂತ್ರಿಯಾಗಬೇಕು ಎಂದು ಕನಸು ಕಾಣಬಹುದು. ಏನೋ ಅದೃಷ್ಟದಿಂದ ಒಂದು ದಿನ ಹಾಗಾಗಿ ಇರಲೂ ಬಹುದು. ಆದರೆ ಬ್ರಾಹ್ಮಣ ಎಂಬುದು ಹೇಗೋ ಬಯಸುವ ಒಂದು ದಿನದ ಪದವಿಯಲ್ಲ.  ಅದು ಅದೃಷ್ಟದ ಬಲದಿಂದ ಒಲಿಯುವ ಪದವಿಯೂ ಅಲ್ಲ. 

ಬ್ರಾಹ್ಮಣನಾಗುವುದಕ್ಕಿಂತಾ ಬ್ರಾಹ್ಮಣನಾಗಿರುವುದು ಕಷ್ಟ. ಅದಕ್ಕೆ ಪರಿಶ್ರಮ ಬೇಕು. ಬ್ರಹ್ಮ ಎಂದರೇನು ಎಂಬ ಅರಿವಿರಬೇಕು. ಬದುಕಿನ ಅಧ್ಯಯನ ಇರಬೇಕು.ಭೂಮಿಯ ಮೇಲೆ ಸುವಸ್ತು ಅಂತ ಯಾವುದಾದರೂ ಇದ್ದರೆ ಅದು ಬೇಗನೆ ಕೆಡುತ್ತದೆ. ಬ್ರಾಹ್ಮಣನಾಗುವುದಕ್ಕೆ ಒಂದೇ ಹಾದಿ ಇದ್ದರೆ , ಕೆಡುವುದಕ್ಕೆ ಹಲವಾರು ಅವಕಾಶಗಳಿರುತ್ತವೆ. ಅದರೆ ನಮ್ಮಲ್ಲಿ  ಕೆಡುವುದೇ ಶ್ರೇಷ್ಠವಾಗುವಾಗ ಬ್ರಾಹ್ಮಣ ಎಂಬುದೇ ಕೆಡುಕಾಗಿ ಕಂಡರೆ ಆಶ್ಚರ್ಯವಾಗುವುದಿಲ್ಲ. ಪಾವಿತ್ರ್ಯ ಎಂದು ಕಂಡು ಕೇಳದೆ ಅರಿವಿಲ್ಲದಿರುವಾಗ ಅಪವಿತ್ರದ ಅರಿವು ಉಂಟಾಗುವುದಿಲ್ಲ.   

ಬಾಲ್ಯದಲ್ಲಿ ಉಪನಯನ ಎನ್ನುವಾಗ ಮಕ್ಕಳಿಗೆ ತುಂಬ ಉತ್ಸಾಹ ಇರುತ್ತದೆ. ಮನೆಯಲ್ಲಿ ದೊಡ್ಡವರಂತೆ ಮಾಡಿದರೆ, ತಾನೂ ದೊಡ್ಡವನಾದೆ ಎಂದು ಬಾಲಕರು ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಆದರೆ ಉಪನಯನ ಆದ ನಂತರ ಹೊತ್ತು ಹೊತ್ತಿಗೆ ಸ್ನಾನ ಮಾಡಬೇಕು. ಸಂಧ್ಯಾವಂದನೆ ಮಾಡಬೇಕು. ಅಟೋಟಗಳಿಗೂ ನಿಬಂಧನೆ ಇರುತ್ತದೆ. ಎಲ್ಲಕ್ಕಿಂತಲೂ ಬೆಳಗ್ಗೆ ಎದ್ದು ಸ್ನಾನ ಮಾಡಿ ಜಪಮಾಡುವ ನಿಬಂಧನೆಯಲ್ಲಿ ಮಕ್ಕಳಿಗೆ ಈ ಉಪನಯನವೇ ಬೇಡ ಅನ್ನಿಸಿಬಿಡುತ್ತದೆ. ಅದರಂತೆ ಬ್ರಾಹ್ಮಣ್ಯವೂ ಆ ಪದವಿಯನ್ನು ನಿರ್ವಹಿಸುವುದೇ ಕಠಿಣ. ಸಹಪಂಕ್ತಿ ಭೋಜನ ಮಾಡಿ  ಹೆಗಲಿಗೆ ಜತೆಯಾಗಿ ಓಡಾಡಿದರೆ, ಅಥವಾ  ಜನಿವಾರ ಧರಿಸಿದರೆ ಬ್ರಾಹ್ಮಣಗನಾಗಬಹುದು ಎಂಬ ಕಲ್ಪನೆ ಇರುತ್ತದೆ. ಆದರೆ ಬ್ರಾಹ್ಮಣನಾಗುವುದು ಅಷ್ಟು ಸರಳ ಸುಲಭವಾಗಿದ್ದರೆ ಆ ಸ್ಥಾನಕ್ಕೆ ಮಹತ್ವ ಇರುತ್ತಿರಲಿಲ್ಲ. ಜತೆಯಲ್ಲಿ ಊಟ ಮಾಡಿದರೆ ಒಂದು ಹೊತ್ತಿನ ಹಸಿವು ನೀಗಬಹುದು, ಆದರೆ ಮನುಷ್ಯ ಜನ್ಮದ ಹಸಿವಿನ ಅರ್ಥವೂ ಆಗುವುದಿಲ್ಲ. ಅದು ಪರಿಹರಿಸಲ್ಪಡುವುದೂ ಇಲ್ಲ. 

ದಿಗ್ಬಲಂ ಕ್ಷತ್ರಿಯ ಬಲಂ ಬ್ರಹ್ಮ ತೇಜೋ ಬಲಂ ಬಲಂ ಎಂದು ಕೊಂಡು ಕೌಶಿಕ ಬ್ರಹ್ಮ ಋಷಿ ವಿಶ್ವಾಮಿತ್ರನಾದ. ಕ್ಷತ್ರಿಯನಾದ ಕೌಶಿಕ ರಾತ್ರಿ ಬೆಳಗಾಗುವುದರಲ್ಲಿ ಬ್ರಾಹ್ಮಣನಾಗಲಿಲ್ಲ. ಆತನನ್ನು ಯಾರೂ ಬ್ರಾಹ್ಮಣನನ್ನಾಗಿ ಪರಿವರ್ತಿಸಿ ಮತಾಂತರ ಮಾಡಿಲ್ಲ. ಸ್ವತಃ ಪರಿಶ್ರಮದಿಂದ ತಪಃ ಶಕ್ತಿಯಿಂದ ಆತ ಮಹಾ ಬ್ರಾಹ್ಮಣನಾಗಿ  ವಿಶ್ವಾಮಿತ್ರನಾಗಿ  ಬದಲಾದ.  ಆದರೆ ಇಂದು ಬ್ರಾಹ್ಮಣನಾಗಬೇಕು, ಆದರೆ ತಪಸ್ಸು ಬೇಡ , ನಿಯಮ ನಿಷ್ಠೆಗಳು ಬೇಡಾ. ಖಡ್ಡಾಯ ಅನುಷ್ಠಾನ ಬೇಡ. ಆದರೆ ಬ್ರಾಹ್ಮಣನಾಗಬೇಕು. ಇದು ಸಿನಿಮಾ ನಾಟಕದಂತೆ ಕೇವಲ ವೇಶದಿಂದ ಬ್ರಾಹ್ಮಣನಾಗಬಹುದು. ವೇಶದಿಂದ ಬ್ರಾಹ್ಮಣನಾಗುವುದಕ್ಕೂ ಕೆಲವೊಮ್ಮೆ ಅರ್ಹತೆ ಇರಬೇಕಾಗುತ್ತದೆ. 

ಬ್ರಾಹ್ಮಣನಾಗುವುದೆಂದರೆ ಸ್ವತಃ ಬ್ರಹ್ಮನಾಗುವುದು. ಸ್ವತಃ ದೇವನಾಗುವುದು. ದೇವರು ಎಂದರೆ ದೇವಾಲಯದಲ್ಲಿ ಕೇವಲ ಮೂರ್ತಿಯಾಗಿ ಇರುವುದಲ್ಲ. ದೇವರು ಎಂದರೆ ಏನು ಎಂಬುದನ್ನು ಅರಿಯಬೇಕು. ಕಣ್ಣಿಗೆ ಕಾಣದಿರುವುದೇ ದೇವರು. ದೇವರನ್ನು ಯಾರೂ ತೋರಿಸುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ದೇವರನ್ನು ಕಂಡವರು ಯಾರೂ ಇಲ್ಲ. ಕಾಣದೇ ಇರುವುದನ್ನು ತೋರಿಸುವುದಕ್ಕೆ ಹೇಗೆ ಸಾಧ್?  ಇದು ದೇವರು ಅಂತ ದೇವರನ್ನು ತೋರಿಸುವುದಕ್ಕೆ ಸಾಧ್ಯವಿಲ್ಲ. ಚರಾಚರ ವಸ್ತುಗಳಿಗಿಂತ ಅತೀತವಾಗಿರುವುದೇ ದೇವರು. ಮನುಷ್ಯ ತನ್ನ ಬುದ್ಧಿಗೆ ಸೀಮಿತವಾಗಿ ದೇವರನ್ನು ಕಲ್ಪಿಸಿಕೊಳ್ಳಬಹುದು. ಆದರೆ ದೇವರನ್ನು ಅರಿಯಬೇಕಾದರೆ ಜನ್ಮವೇ ಸಾಕಾಗುವುದಿಲ್ಲ.  ಹೊರಗೆಲ್ಲೂ ದೇವರು ಕಾಣದಿರುವಾಗ ಸ್ವತಃ ತನ್ನಲ್ಲಿರುವ ದೇವರನ್ನು ಕಂಡುಕೊಳ್ಳುವುದು. ಬ್ರಾಹ್ಮಣನೆಂದರೆ ಅದುವೆ ತನ್ನಲ್ಲೇ ದೇವರನ್ನು ಕಂಡುಕೊಳ್ಳುವುದು. ಬ್ರಾಹ್ಮಣನಿಗೆ ದೇವರನ್ನು ಅರ್ಚಿಸುವುದಕ್ಕೆ ದೇವಾಲಯ ಬೇಡ, ಮೂರ್ತಿಯ ಅವಶ್ಯಕತೆ ಇರುವುದಿಲ್ಲ. ಯಾವುದರಲ್ಲೂ ದೇವರನ್ನು ಆವಾಹಿಸುವುದಕ್ಕೆ ಸಾಧ್ಯವಿರುತ್ತದೆ. ಅರ್ಥ ಎಲ್ಲದರಲ್ಲೂ ದೇವರನ್ನು ಕಂಡು ಸ್ವತಃ ತನ್ನಲ್ಲೇ ದೇವರನ್ನು ಕಂಡು ತಾನೇ ದೇವರಾಗುವುದು. ಹಾಗಾಗಿಯೇ ಬ್ರಾಹ್ಮಣ ಎಂದರೆ ಭೂಸುರನಾಗುತ್ತಾನೆ.  ಅದು ವೃತನಿಷ್ಠನಾಗಿ ಕಠಿಣವಾದ ಸ್ಥಾನ. 

ಭೂಮಿಯ ಮೇಲೆ ತೆಂಗಿನಮರಮಾತ್ರ ಕಲ್ಪವೃಕ್ಷವಾಗುತ್ತದೆ. ಮಾವಿನ ಮರ ಕಲ್ಪವೃಕ್ಷವಾಗುವುದಿಲ್ಲ. ಅದನ್ನು ಕಲ್ಪವೃಕ್ಷ ಎಂದು ತನ್ನ ಅರಿವಿಗೆ ಸೀಮಿತವಾಗಿ ಕಲ್ಪವೃಕ್ಷ ಎಂಬಂತೆ ಭ್ರಮಿಸಬಹುದು. ಆದರೆ ತೆಂಗಿನಮರ ಕಲ್ಪವೃಕ್ಷವಾಗಿಯೇ ಉಳಿಯುತ್ತದೆ. 

Sunday, May 3, 2026

ಭಕ್ತರ ಸೇವೆ



ಮೊನ್ನೆ ಶಬರಿಮಲೆಯಾತ್ರೆಯಲ್ಲಿ ಮುಂಜಾನೆ ಸೂರ್ಯೋದಯದ ಮೊದಲು ಕತ್ತಲೆಯಲ್ಲೇ   ನಾವು ಮಲೆ ಏರುವುದಕ್ಕೆ ಶುರುಮಾಡಿದೆವು. ಹೆಚ್ಚು ಜನಸಂದಣಿ ಇರದಿದ್ದರೂ ಹಲವಾರು ಜನ ಮಲೆ ಏರುವವರು ಇದ್ದರು. ಕೆಳಗಿನಿಂದ ಮೇಲೆ ಸನ್ನಿಧಾನದವರೆಗೂ ಇದ್ದ ಧ್ವನಿ ವರ್ಧಕದಲ್ಲಿ ಖ್ಯಾತ ಗಾಯಗ ಜೇಸುದಾಸ್ ಅವರ ಭಕ್ತಿ ಗೀತೆ ಇಂಪಾಗಿ ಕೇಳಿಬುರುತ್ತಿದ್ದರೆ, ಮಲೆ ಏರುವುದಕ್ಕೆ ಭಕ್ತಿ ಪ್ರೇರಕ ಶಕ್ತಿಯಂತೆ ಪ್ರಚೋದನೆಯಾಗುತ್ತಿತ್ತು. ಬರಿಗಾಲಲ್ಲಿ ಕಲ್ಲಿನ ರಸ್ತೆಯನ್ನು, ಮೆಟ್ಟಲನ್ನು ಏರುವಾಗ ಪಾದಗಳು ನೋಯುತ್ತಿದ್ದರೂ ಅದೊಂದು ಭಕ್ತಿಯ ಭಾವ ಎಲ್ಲವನ್ನು ಮರೆಸುವಂತೆ ಮಾಡುತ್ತಿತ್ತು. ಎಲ್ಲರೂ ಏರುತ್ತಿದ್ದರೆ ಅಲ್ಲೊಂದು ಇಲ್ಲೊಂದು ಅಯ್ಯಪ್ಪ ಶರಣು ಕೂಗು ಕೇಳಿಸುತ್ತಿದ್ದದ್ದು ಬಿಟ್ಟರೆ ಏದುಸಿರೇ ಅಧಿಕ ಕೇಳಿ ಬರುತ್ತಿತ್ತು. ಮುಂಜಾನೆಯ ತಣ್ಣನೆಗಾಳಿಯನ್ನು ಭೇದಿಸಿ ಮೈಯಿಂದ ಬೆವರು ಸುರಿಯುತ್ತಿತ್ತು. 

ಅಪ್ಪಾಚಿ ಮೇಡು ಹತ್ತಿರ ಇರಬೇಕು  ನಾನು ಒಂದರ ಹಿಂದೆ ಒಂದು ಹೆಜ್ಜೆಯನ್ನು ವೇಗವಾಗಿ ಎತ್ತಿಡುತ್ತಾ ಒಂದಷ್ಟು ದೂರ ಬೇಗ ಏರಿ ಹೋಗಿ ಹಿಂದಿರುಗಿ ನೋಡಿದರೆ ನನ್ನಾಕೆ ಮತ್ತು ಮಗ ತುಂಬ ಹಿಂದುಳಿದಿದ್ದರು. ಸುಸ್ತಾದ ನನ್ನಾಕೆ ಮೆಟ್ಟಲ ಬದಿಯಲ್ಲಿದ್ದ ಕಟ್ಟೆಯಲ್ಲಿ ಸುಸ್ತಾಗಿ ಕುಳಿತಿದ್ದಳು. ಯಾರೋ ಒಬ್ಬರು ಆಕೆಗೆ ಬೀಸಣಿಕೆಯಿಂದ ಗಾಳಿ ಹಾಕುತ್ತಿದ್ದರು. ಒಂದು ಕ್ಷಣ ನೋಡಿದರೆ ಗಾಬರಿಯಾಗಬೇಕು. ಆದರೆ ಹಾಗಲ್ಲ. ಹಾಗೆ ಸುಸ್ತಾಗಿ ಯಾರಾದರೂ ಕುಳಿತರೆ ಕೆಲವರು ಬಂದು  ಗಾಳಿ ಹಾಕುತ್ತಾರೆ. ಇದೊಂದು ಬಗೆಯ ವಿಶಿಷ್ಟ ಸೇವೆ. ಶಬರಿ ಮಲೆ ಯಾತ್ರೆ ಎಂದರೆ ಹೀಗೆ ಅಲ್ಲಿ ಎಲ್ಲವೂ ಭಗವಂತನ ಸೇವೆಯಾಗುತ್ತದೆ. ಭಗವಂತನೆಂದರೆ ಭಕ್ತರ ದಾಸ. ದಾಸರ ದಾಸ ಭಗವಂತ ಎಂಬ ಮಾತು ಇದೆ. ಅದಕ್ಕೆ ಪ್ರತೀಕ ಎಂಬಂತೆ ಇಲ್ಲಿ ಭಕ್ತರ ಸೇವೆ ಮಾಡುವುದನ್ನು ಕಾಣಬಹುದು. ಹತ್ತುವ ಇಳಿಯುವ ಭಕ್ತರ ಸೇವೆ ಮಾಡುವುದು ಕೂಡ ಅಯ್ಯಪ್ಪ ಸ್ವಾಮಿಯ ಸೇವೆಯಾಗುತ್ತದೆ. ಅದರ ಮೂಲಕ ಭಗವಂತನ ಅನುಗ್ರಹ ನಿರೀಕ್ಷೆ ಇರುತ್ತದೆ. 

ಒಂದೆರಡು ಕಡೆ ಕುಡಿಯುವ ನೀರಿನ ಜತೆಗೆ ಬಿಸ್ಕತ್ ಇಟ್ಟಿದ್ದರು. ನೀವು ಎಷ್ಟಾದರೂ ಬಿಸ್ಕತ್ತ ತೆಗೆದುಕೊಂಡು ನೀರು ಕುಡಿಯಬಹುದು. ಇದು ಸಂಪೂರ್ಣ ಉಚಿತ, ಇದೊಂದು ಬಗೆ ಭಕ್ತರ ಸೇವಯ ಮುಖೇನ ದೇವರ ಸೇವೆ. ಬಿಸ್ಕ್ತತ್ತು ಹಾಕಿಟ್ಟ ಪಾತ್ರೆ ಘಳಿಗೆಯಲ್ಲಿ ಖಾಲಿಯಾಗುತ್ತಿತ್ತು ಹಾಗೆ ಅದಕ್ಕೆ ಬಿಸ್ಕತ್ತು ಸುರಿಯುತ್ತಿದ್ದರು. ನಿಜಕ್ಕೂ ಇದೊಂದು ಆಶ್ಚರ್ಯವನ್ನು ಉಂಟು ಮಾಡಿತ್ತು. ಹೀಗೆ ಶಬರಿ ಮಲೆ ಯಾತ್ರೆ ಎಂಬುದು ಹಲವು ಮರೆಯದ ಅನುಭವಗಳನ್ನು ಕಟ್ಟಿಕೊಡುತ್ತಿತ್ತು. ಒಂದು ಸಲ ಹೋಗಿ ಬರೋಣವೆಂದಿದ್ದ ನನ್ನಾಕೆ ಈಗ ಪುನಃ ಯಾವಾಗ ಹೋಗೊಣ ಎಂದು ಕೇಳುತ್ತಾಳೆ. ಶಬರಿಮಲೆ ಯಾತ್ರೆ ಎಂಬುದು ಬದುಕಿನಲ್ಲಿ  ಅನುಭವಿಸಿ ಪಡೆಯಲೇಬೇಕಾದ ಒಂದು ಅನುಭವ. 

ಯಾತ್ರೆಯುದ್ದಕ್ಕೂ ಅದು ಕೇವಲ ಅಯ್ಯಪ್ಪನ ದರ್ಶನದ ಏಕೈಕ ಉದ್ದೇಶವಾಗಿ ಕಾಣುತ್ತದೆ. ಪಂಪದಿಂದ ಮೇಲೆ ಸನ್ನಿಧಾನದ ವರೆಗೂ ಹಲವು ಬಗೆಯ ಭಕ್ತರನ್ನು ಕಾಣ ಬಹುದು. ಅಂಗ ವಿಕಲರೂ ಅಶಕ್ತರು ಒಂದೆಡೆಯಾದರೆ ಪುಟ್ಟ ಮಕ್ಕಳನ್ನೂ ತಮ್ಮ ಇರುಮುಡಿಯೊಂದಿಗೆ ಅವರ ಇರುಮುಡಿಯನ್ನು ಹೊತ್ತುಕೊಳ್ಳುವುದು ಮಾತ್ರವಲ್ಲ ಮಗುವನ್ನೂ ಹೆಗಲಲ್ಲಿ ಹೊತ್ತುಕೊಂಡು ತಮ್ಮ ಮಗುವಿಗೆ ಅಯ್ಯಪ್ಪನ ದರ್ಶನ ಮಾಡಿಸುವ ಉದ್ದೇಶದಲ್ಲಿ ಅವರು ಮಲೆಯ ಒಂದೊಂದೆ ಹೆಜ್ಜೆಗಳನ್ನು ಇಡುವುದನ್ನು ಕಾಣುವಾಗ ಇದು ಕೇವಲ ದೇವರ ದರ್ಶನವಲ್ಲ, ಬದುಕಿನ ಸರ್ವಾಂಗ ದರ್ಶನದಂತೆ ಭಾಸವಾಗುತ್ತದೆ. ಪಂಪೆಯ ನದೀ ತೀರದಲ್ಲಿ ಹಲವಾರು ಜನ ಸಿಕ್ಕ ಸಿಕ್ಕಲ್ಲಿ ನಿದ್ರಿಸುತ್ತಿದ್ದರು. ಕಪ್ಪು ಅಥವಾ ಕಾವಿಲುಂಗಿ ಧರಿಸಿ ಯಾವ ಆಡಂಬರವೂ ಇಲ್ಲದೆ ಎಲ್ಲೆಂದರಲ್ಲಿ ಬಿದ್ದಿರುತ್ತಿದ್ದರು. ತೀರ ಬಡವರು ಎಂದು ತಿಳೀದರೆ ತಪ್ಪಾದೀತು. ಯಾಕೆಂದರೆ ಅದರಲ್ಲಿ ಕೋಟ್ಯಾಧಿಪತಿ ಶ್ರೀಮಂತನೂ ಇರಬಹುದು. ತೀರ ಬಡವನೂ ಇರಬಹುದು. ಧನಿಕ ಶ್ರೀಮಂತ ಎಂಬ ಭೇದವಿಲ್ಲ.ಅಲ್ಲಿ ನಿದ್ರೆ ಹಸಿವಿಗೆ ಪ್ರಾಧಾನ್ಯತೆ ಇಲ್ಲ. ಕೇವಲ ಒಂದೇ ಗುರಿ ಅದು ಅಯ್ಯಪ್ಪ ದರ್ಶನ. ಹಾಗಾಗಿ ಶಬರಿ ಮಲೆ ಹೋಗುವಾಗ ನಿಮಗೆ ಅಲ್ಲಿ ಹಲವು ಅಸೌಕರ್ಯಗಳು ಕಾಣಬಹುದು. ಸ್ನಾನ ನಿದ್ರೆ ಆಹಾರಕ್ಕೆ ಸರಿಯಾದ ವ್ಯವಸ್ಥೆ ಇಲ್ಲದಂತೆ ಇರಬಹುದು. ಬರಿಗಾಲಲ್ಲಿ ನಡೆಯಬಹುದು.  ಎಂತಹ ಶ್ರೀಮಂತನೂ ಮನೆಯಲ್ಲಿ ಹವಾನಿಯಂತ್ರಿತ ಕೊಠಡಿಯಲ್ಲಿ ಮಲಗಿದರೂ ಇಲ್ಲಿ ಬಂದು ಬೀದಿಯಲ್ಲಿ ಮಲಗಿಬಿಡುತ್ತಾನೆ. ಕಾರಣ ಅಲ್ಲಿರುವ ಬಯಕೆ ಒಂದೇ ಅಯ್ಯಪ್ಪ ದರ್ಶನ. ಬೇರೆ ಯಾವ ಕ್ಷೇತ್ರದಲ್ಲೂ ಇದನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಮನಸ್ಸಿನ ಭಾವ ಒಂದೇ ಎಲ್ಲವೂ ನೀನೆ. ಒಂ ತತ್ವಮಸಿ.  ಸಾವಿರ ಗ್ರಂಥವನ್ನು ಅಧ್ಯಯನ ಮಾಡಿದರೂ ಸಿಗದ ಜ್ಞಾನ ಅದರ ತತ್ವ ಕೇವಲ ಒಂದು ಶಬರಿಮಲೆ ಯಾತ್ರೆಯಲ್ಲಿ ಸಿದ್ದಿಸಿಬಿಡುತ್ತದೆ. ಅಧ್ಯಾತ್ಮಿಕ ತತ್ವ ಎಂಬುದು ಸನಾತನ ಧರ್ಮದ ತತ್ವ. ಮನುಷ್ಯನ ಬದುಕಿನ ಗುರಿ ಏನು ಎಂಬುದನ್ನು ತೋರಿಸಿಕೊಡುತ್ತದೆ. ನಮ್ಮ ವಶವಿಲ್ಲದ ಅದೊಂದು ಶಕ್ತಿ ನಮ್ಮನ್ನು ನಿಯಂತ್ರಿಸುತ್ತದೆ. ಈ ಜ್ಞಾನವನ್ನು ಹೆಜ್ಜೆ ಹೆಜ್ಜೆಗೂ ಒದಗಿಸುತ್ತದೆ. ಹಿಂದೂ ಧರ್ಮ ಸನಾತನ ಧರ್ಮ ಎಂದು ಹೀಗಳೆಯುವ ಬುದ್ಧಿಜೀವಿಗಳಿರಬಹುದು. ಒಂದು ಬಾರಿ ಮಾಲೆ ಧರಿಸಿ ವೃತ ಹಿಡಿದು ಯಾತ್ರೆ ಮಾಡಿ ಅಯ್ಯಪ್ಪ ದರ್ಶನ ಮಾಡಬೇಕು. ಆಗ ಈ ತತ್ವದ ಅರಿವಾಗುತ್ತದೆ.