Saturday, March 14, 2026

ಕೊಲ್ಲಿಯುದ್ದದ ಒಂದು ದಿನ

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಇರಬೇಕು. ಇರಾಕ್ ಯುದ್ಧ ನಡೆದಿತ್ತು. ಇದು ಒಂದು ತಿಂಗಳಿಗಿಂತ ಹೆಚ್ಚು ನಡೆದ ಯುದ್ದ. ಆ ದಿನದ ಒಂದು ಅನುಭವ ಈಗಲೂ ನೆನಪಿದೆ.  ನಾವು ಕಾಸರಗೋಡು ಜಿಲ್ಲೆಯ ಪೈವಳಿಕೆಯಲ್ಲಿದ್ದ ಸಮಯ. ನಾನು ದೂರದ ಮಂಗಳೂರಿಗೆ ಹೋಗಬೇಕೆಂದಿದ್ದರೆ ನನ್ನ ಸ್ಕೂಟರ್ ನ್ನು ರಾಷ್ಟ್ರಿಯ ಹೆದ್ದಾರಿಯ ಉಪ್ಪಳದಲ್ಲಿ ಇಟ್ಟು ಅಲ್ಲಿಂದ ಬಸ್ಸಿನಲ್ಲಿ ಹೋಗುತ್ತಿದ್ದೆವು. ಉಪ್ಪಳದಿಂದ ಪೈವಳಿಕೆಗೆ ರಾತ್ರಿ ದಿನದ ಕೊನೆಯ ಬಸ್ಸು ಜನಪ್ರಿಯ ಒಂಭತ್ತು ಗಂಟೆಗೆ ಹೋದರೆ ಆನಂತರ ಪೈವಳಿಕೆಯ ಕಡೆಗೆ ಹೋಗಬೇಕೆಂದರೆ ಬಸ್ಸು ಇರುತ್ತಿರಲಿಲ್ಲ. ಒಂದೋ ಆಟೋ ಅದೂ ರಾತ್ರಿ ಬಂದರೆ ಅದೂ ದುಬಾರಿ ವೆಚ್ಚ. ಅದಲ್ಲದೇ ಇದ್ದರೆ ಹತ್ತು ಕಿಲೋ ಮೀಟರ್ ನಡೆದೇ ಹೋಗಬೇಕು. ಸುಮಾರು ಎರಡು ಘಂಟೆ ಅದೂ ತಡ ರಾತ್ರಿ ಯಾವುದೇ ಟಾರ್ಚ್ ಬೆಳಕು ಇಲ್ಲದೇ ನಡೆದು ಹೋಗಬೇಕಿತ್ತು. ಹೀಗಾಗಿ ಉಪ್ಪಳದಲ್ಲಿ ಕೆಲವರು ದ್ವಿಚಕ್ರವಾಹನ ಇಟ್ಟು ಮಂಗಳೂರಿಗೆ ಹೋಗುತ್ತಿದ್ದರು. ತಡ ರಾತ್ರಿಯ ತನಕವೂ ಉಪ್ಪಳದ ತನಕ ಬಸ್ಸು ಇರುತ್ತಿದ್ದುದರಿಂದ ನಿಶ್ಚಿಂತೆಯಿಂದ ಹೋಗಿ ಬರಬಹುದಿತ್ತು.  


ಆ ಕಾಲದಲ್ಲಿ ವಾಹನಕ್ಕೆ ಇಂಧನ ತುಂಬಿಸಬೇಕಾದರೆ ಈಗಿನಂತೆ ಪೆಟ್ರೋಲ್ ಬಂಕ್ ಇರಲಿಲ್ಲ. ದೂರದ ಕರ್ನಾಟಕ ಗಡಿ ಪ್ರದೇಶದ ತಲಪಾಡಿಗೆ ಹೋಗಬೇಕಿತ್ತು. ಹಲವು ಸಲ ಉಪ್ಪಳದಲ್ಲಿ ವಾಹನ ಇರಿಸುವ ಬದಲು ತಲಪಾಡಿಯ ಪೆಟ್ರೋಲ್ ಬಂಕ್ ನಲ್ಲಿ ವಾಹ ಇರಿಸಿ ಹಿಂದಿರುಗಿ ಬರುವಾಗ ವಾರಕ್ಕೆ ಆಗುವಷ್ಟು ಪೆಟ್ರೋಲ್ ತುಂಬಿಸಿ ಬರುತ್ತಿದ್ದೆವು. ಇಲ್ಲವಾದರೆ ಕಾಳಸಂತೆಯಲ್ಲಿ ಅಧಿಕ ಬೆಲೆಯ ಕಲಬೆರಕೆಯ  ಪೆಟ್ರೋಲ್ ಗತಿ. ಆ ದಿನಗಳೇ ಹಾಗಿದ್ದವು. ಈಗಿನ ತಲೆಮಾರಿಗೆ ಇದನ್ನು ಕಲ್ಪಿಸುವುದಕ್ಕೂ ಸಾಧ್ಯವಿಲ್ಲ. ಅದರಂತೆ ಆಗ ನಡೆದ ಇರಾಕ್ ಯುದ್ಧವನ್ನೂ ಕಲ್ಪಿಸಿಕೊಳ್ಳುವುದು ಕಷ್ಟದ ಮಾತು. ಆದರೂ ಇರಾಕ್ ಯುದ್ಧದಲ್ಲಿ ಇಲ್ಲಿ ಬಂದ ಕಷ್ಟಗಳು ಈಗಿನದಕ್ಕೆ ಹೋಲಿಸಿದರೆ ಬಹಳ ಕಡಿಮೆ ಎನ್ನಬೇಕು. ಮನೆಯಿಂದ ಹೊರಟವರು ಪುನಃ ಮನೆಗೆ ಬಂದು ಸೇರಿದ ಮೇಲೆಯೇ ಭರವಸೆ. ಪೆಟ್ರೋಲ್ ಆಭಾವದಿಂದ ಬಸ್ಸು ಲಾರಿಗಳು ದಾರಿ ಮಧ್ಯೆಯೇ ನಿಲ್ಲಿತ್ತಿದ್ದದ್ದು ಸಾಮಾನ್ಯ. ಪ್ರತಿ ಪೆಟ್ರೋಲ್ ಬಂಕ್ ಗಳಲ್ಲಿ ಮೈಲು ಗಟ್ಟಲೆ ವಾಹನಗಳ ಸರದಿ ಸಾಲು ನಿಂತಿರುತ್ತಿದ್ದವು. ಯಾವಾಗ ಪೆಟ್ರೋಲ್ ಡೀಸಲ್ ಸಿಗುತ್ತದೆ ಎಂಬ ಭರವಸೆಯೇ ಇರುತ್ತಿರಲಿಲ್ಲ. ಈಗಿನ ಸರಕಾರಕ್ಕೆ ದೂರುವವರು ಒಂದಿಷ್ಟು ಆದಿನಗಳನ್ನು ನೆನಪಿಸಿಕೊಂಡರೆ ಸಾಕು. ಈಗಲೂ ಸಮಸ್ಯೆಗಳು ಇವೆ. ಅದಕ್ಕೆ ಹಲವು ಕಾರಣಗಳು ಇರುತ್ತವೆ. ನಾವು ಅತಿಯಾಗಿ ಪೆಟ್ರೋಲ್ ಉತ್ಪನಗಳಿಗೆ ಅವಲಂಬಿಸಿರುವುದೇ ಕಾರಣ. ಆಗ ಹಳ್ಳಿಯ ಮನೆಗಳು ಈಗಿನಂತೆ ಅಡುಗೆ ಅನಿಲಕ್ಕೆ ಅವಲಂಬಿಸಿರಲಿಲ್ಲ. ಈಗ ಹಳ್ಳಿಯ ಮನೆಗಳು ಯಾಕೆ ದೇವಸ್ಥಾನಗಳೂ ಈ ವಾಯು ಪ್ರಭಾವಕ್ಕೆ ಒಳಗಾಗಿದೆ. 

ಗಲ್ಬ್ ಯುದ್ದದ ಸಮಯ ಆ ಒಂದು ದಿನ ಸಾಯಂಕಾಲ  ನನಗೆ ಅಗತ್ಯ ಕೆಲಸಕ್ಕಾಗಿ ಮಂಗಳೂರಿಗೆ ಹೋಗಬೇಕಿತ್ತು. ಗಲ್ಫ್ ಯುದ್ದದ ಕಾರಣ ಹಲವಾರು ಬಸ್ಸುಗಳು ತಮ್ಮ ಸಂಚಾರವನ್ನು ಸ್ಥಗಿತಗೊಳಿಸಿದ್ದವು.  ಸ್ಕೂಟರ್ ತೆಗೆದುಕೊಂಡು ಹೊರಟೆ.  ಸ್ಕೂಟರ್  ಉಪ್ಪಳದಲ್ಲಿಟ್ಟು ಮಂಗಳೂರಿಗೆ ಹೋಗಬೇಕೆಂದು ಕೊಂಡರೆ  ಪೆಟ್ರೋಲ್ ಅದಾಗಲೇ ರಿಸರ್ವ್ ಗೆ ಬಿತ್ತು.  ಇನ್ನು ತಲಪಾಡಿಯವರೆಗೆ ಹೋಗಿ ಅಲ್ಲಿ ಇಟ್ಟು ಬರುವಾಗ ಪೆಟ್ರೋಲ್ ಹಾಕಿಕೊಂಡು ಬಂದಾರಯಿತು ಎಂದುಕೊಂಡು ತಲಪಾಡಿಗೆ ಬಂದರೆ ಪಟೋಲ್ ಬಂಕ್ ನಲ್ಲಿ ಅದಾಗಲೇ ವಾಹನಗಳ ಸರದಿ ಇತ್ತು.  ಪೆಟ್ರೋಲ್ ಬಂಕ್ ನವ ನನಗೆ ಪರಿಚಯಸ್ಥ. ಆತ ಪೆಟ್ರೋಲ್ ಬರಬಹುದು ಎಂದು ಹೇಳಿದ. ಗಾಡಿಯ ಕೀ ಆತನಿಗೆ ಕೊಟ್ಟು ಪೆಟ್ರೋಲ್ ಬಂದರೆ ತುಂಬಿಸುವಂತೆ ಹೇಳಿ ಅಲ್ಲಿಂದ ಸಿಟಿ ಬಸ್ ಹತ್ತಿ ಮಂಗಳೂರಿಗೆ ಹೊರಟೆ. 

ಮಂಗಳೂರಿನಿಂದ ಕೆಲಸ ಮುಗಿಸಿ ಹಿಂತಿರುಗಿ ಬರುವಾಗ ತುಸು ತಡವೇ ಆಗಿತ್ತು. ರಾತ್ರಿಯ ಒಂಭತ್ತರ ಹತ್ತಿರ  ಬಸ್ಸು ತಲಪಾಡಿಯಲ್ಲಿ ನಿಂತಾಗ ನೋಡಿದರೆ ಪೆಟ್ರೋಲ್ ಬಂಕ್ ಮುಂದೆ ವಾಹನಗಳ ಸರದಿ ಹಾಗೇ ಇತ್ತು. ನಿರೀಕ್ಷೆಯಂತೆ ಪೆಟ್ರೋಲ್ ಬರಲಿಲ್ಲ. ಆದರೇನು ಮಾಡುವುದು. ಆಗಲೇ ರಾತ್ರಿ ಬಹಳ ಹೊತ್ತಾಗಿತ್ತು. ಇನ್ನು ಅಲ್ಲಿ ಕಾದುಕುಳಿತುಕೊಳ್ಳುವುದು ಅಸಾಧ್ಯದ ಮಾತು. ಕೈಯಲ್ಲಿ ಒಂದಿಷ್ಟು ಸಣ್ಣ ಪುಟ್ಟ ಸಾಮಾನುಗಳ ಲಗೇಜ್ ಇತ್ತು. ಏನಾದರಾಗಲೀ ಹೊರಟು ಬಿಡೋಣ ಹೋದಷ್ಟು ದೂರ ಹೋಗೋಣ ಎಂದುಕೊಂಡು ಗಾಡಿ ಸ್ಟಾರ್ಟ್ ಮಾಡಿ ಹೊರಟೆ. ಇಷ್ಟದೇವರನ್ನು ಮನಸಾರೆ ಸ್ಮರಿಸಿದೆ. ದೇವರೇ ಕ್ಷೇಮದಲ್ಲಿ ಮನೆಗೆ ಮುಟ್ಟಿಸು ಅಂತ ಬೇಡಿಕೊಂಡೆ. ದೈವಾನುಗ್ರಹ ಇದ್ದರೆ ಮನೆಗೆ ತಲುಪುತ್ತೇನೆ ಎಂದುಕೊಂಡೆ.  ಅನ್ಯಥಾ ಏನು ಮಾಡುವುದಕ್ಕೂ ನನಗೆ ಹೊಳೆಯಲಿಲ್ಲ. ಬೇರೆ ಎನು ಮಾಡುವ ಹಾಗೂ ಇರಲಿಲ್ಲ. ಒಂದೊಂದೇ ಕಿಲೋ ಮೀಟರ್ ದೂರ ಬಂದಷ್ಟು ಅಬ್ಭಾ ಎನ್ನುವ ಹಾಗಿತ್ತು. ಉಪ್ಪಳದ ತನಕ ಹೋದರೆ ಅಲ್ಲಿ ಗಾಡಿ ಇಟ್ಟು ಏನಾದರೂ ವ್ಯವಸ್ಥೆ ಮಾಡಬಹುದು ಎಂದುಕೊಂಡೆ ಉಪ್ಪಳದ ತನಕ ನಿರಾತಂಕವಾಗಿ ಬಂದಾಗ ಇನ್ನು ನಮ್ಮದೇ ಊರು ಹೋದಷ್ಟು ದೂರ ಹೋಗುವ ಖಾಲಿಯಾದರೆ ಯಾವುದಾದರು ಮನೆ ಮುಂದೆ ಗಾಡಿ ಇಟ್ಟು ಹೋದರಾಯಿತು ಎಂದು ಕೊಂಡು ಉಪ್ಪಳದಿಂದ ಪೈವಳಿಕೆ ಕಡೆ ಹೊರಟಿದ್ದೆ. ವಾಹನ ಸಂಚಾರ ತೀರ ವಿರಳವಾಗಿತ್ತು. ಗಲ್ಪ್ ಯುದ್ದ ಜನಜೀವನದ ಮೇಲೆ ಸಾಕಷ್ಟು ಪರಿಣಾಮ ಉಂಟು ಮಾಡಿತ್ತು. ಅಂಗಡಿ ಮುಂಗಟ್ಟುಗಳು ಬೇಗನೆ ಬಾಗಿಲು ಹಾಕಿದ್ದವು. ಉಪ್ಪಳದಿಂದ ಕೈಕಂಬ ..ಸೋಂಕಾಲ್ ಕುಬಣೂರು ಬೇಕೂರು ದಾಟುತ್ತಿದ್ದಂತೆ ಒಂದಷ್ಟು ಖುಷಿಯಾಯಿತು.. ಇನ್ನು ಆರೇಳು ಕಿಲೋ ಮೀಟರ್ ಪೈವಳಿಕೆ ತಲುಪಬಹುದು. ಬೇಕೂರು ಕನ್ನಟಿಪಾರ, ಜೋಡುಕಲ್ಲು ಕಳೆದು ಅಟ್ಟೇಗೋಳಿ ಚಡಾವ್ ಹತ್ತಿದ ನಂತರ ಅಬ್ಬ ಎನಿಸಿತು . ಇನ್ನು ಸ್ವಲ್ಪ ದೂರ ಅಷ್ಟೆ. ಅಟ್ಟೆಗೋಳಿ ದಾಟಿ ಬಾಯಿಕಟ್ಟೆ ದಾಟಿ ಮುಂದೆ ಬಂದರೆ ಮತ್ತೆ ನಮ್ಮೂರು ಪೈವಳಿಕೆ. ಅಲ್ಲಿಂದ ಒಂದೆರಡು ತಿರುವು ದಾಟಿದರೆ  ನಮ್ಮ ಮನೆ. ಪೈವಳಿಕೆ ಬಂದರೆ  ಅಲ್ಲಿ ಇನ್ನೂ ಅಲ್ಪ ಸ್ವಲ್ಪ ಜನ ಸಂಚಾರವಿತ್ತು. ಎಷ್ಟೆಂದರೂ ನಮ್ಮ ಪೈವಳಿಕೆ. ಅಲ್ಲಿ ತಡರಾತ್ರಿಯಾದರೂ ಯಾರಾದರೂ ಸುತ್ತಾಡಿಕೊಂಡಿರುತ್ತಾರೆ. ಗಂಟೆ ಹತ್ತು ಕಳೆದಿತ್ತು. ಅಲ್ಲಿ ತನಕ ಪೆಟ್ರೋಲ್ ಖಾಲಿಯಾಗದೇ ಇದ್ದದ್ದು ಆಶ್ಚರ್ಯ ತಂದಿತು. ಸ್ಕೂಟರ್ ನ ಮೈಲೇಜ್ ಬಗ್ಗೆ ಅಭಿಮಾನ ಉಂಟಾಯಿತು.  ಪೈವಳಿಕೆ ಬಜಾರ್ ಕಳೆದು ಗುಂಡದ ಪಾರೆ ತಿರುವು ದಾಟಿ ಒಂದಷ್ಟು ಮುಂದೆ ಬಂದರೆ ನಮ್ಮ ಮನೆ ಲಾಲ್ ಬಾಗ್. ಗುಂಡದ ಪಾರೆ ಎರು ಬಂದಾಗ ಗಾಡಿ ಸ್ತಭ್ದವಾಯಿತು. ಪೆಟ್ರೋಲ್ ಖಾಲಿಯಾಗಿತ್ತು. ಅದುವರೆಗೂ ನನ್ನನ್ನು ತಲುಪಿಸಿದ ಗಾಡಿ ಇನ್ನು ಸಾಧ್ಯವಿಲ್ಲ ಎಂದು ನಿಂತು ಬಿಟ್ಟಿತು. ಇನ್ನು ಒಂದಷ್ಟು ಇಳಿಜಾರು ರಸ್ತೆ. ಹಾಗಾಗಿ ಗಾಡಿ ಜೋರಾಗಿ ತಳ್ಳಿ ನ್ಯೂಟ್ರಲ್ ನಲ್ಲೇ ಮನೆಯ ಅಂಗಳ ತಲುಪಿ ದೊಡ್ಡ ನಿಟ್ಟು ಸಿರು ಬಿಟ್ಟೆ. 

ಈಗಿನ ಇರಾನ್ ಯುದ್ಧ ಆಗಿನ ಇರಾಕ್ ಯುದ್ದ....ಎರಡನ್ನೂ ತುಲನೆ ಮಾಡುವುದು ಸಾಧ್ಯವಿಲ್ಲ. ಆದರೆ ಆಗಿನಷ್ಟು ಕಷ್ಟ ಇನ್ನೂ ಎದುರಾಗಿಲ್ಲ. ಈಗ ಅಡುಗೆ ಅನಿಲಕ್ಕೆ ಸ್ವಲ್ಪ ಅದು ವಾಣಿಜ್ಯ ಬಳಕೆಗೆ ಸ್ವಲ್ಪ ಅವ್ಯವಸ್ಥೆ ಆಗಿದೆ. ಆದರೆ ಆ ದಿನಗಳ ಬವಣೆ ಇನ್ನು ಬಾರದಿರಲಿ ಎಂದು ಪ್ರಾರ್ಥನೆ.  ಆಗ ಯಾವ ಸರಕಾರ ಇತ್ತೋ ಈಗ ಯಾವ ಸರಕಾರ ಇದೆಯೋ ಯಾರು ಪ್ರಧಾನಿಯೋ ಇವುಗಳೆಲ್ಲ ಮುಖ್ಯವಾಗುವುದಿಲ್ಲ. ಯಾವುದಿದ್ದರು ಬರುವ ವಿಕಲ್ಪ ಪರಿಭವ ಕಷ್ಟಗಳು ಬೇರೆಯೇ ಆಗಿರುತ್ತದೆ. ಇವುಗಳು ಜಾಗತಿಕ ವಿಪತ್ತುಗಳು. ರಾಜಕೀಯ ತೆವಲಿಗಾಗಿ ನಾವು ಕೆಸರು ಎರಚಿಕೊಂಡು ನಮ್ಮ ಮನಸ್ಸನ್ನು ಮಲಿನ ಮಾಡುತ್ತಿದ್ದೇವೆ ಅಷ್ಟೆ. ಬಂದ ಕಷ್ಟವನ್ನು ಎದುರಿಸಿ ವಿಪತ್ತಿನಿಂದ ಪಾರಾಗುವ ಆತ್ಮಸ್ಥೈರ್ಯವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ನಾವು ಇಲ್ಲಿಕುಳಿತು ಯಾವುದೋ ರಾಷ್ಟ್ರದ ಪರವಾಗಿ ಚರ್ಚಿಸಬಹುದು. ಕೊನೆಗೆ ನಮಗೆ ನಮ್ಮ ಭಾರತವೇ ಬೇಕು. ಅದುವೇ ಶ್ರೇಷ್ಠ. ಎಲ್ಲದಕ್ಕಿಂತಲೂ ಗಲ್ಪ್ ನಿವಾಸಿಗಳನ್ನು  ನೋಡಿದರೆ ನಾವು ಭಾರತೀಯರು ಎಂಬ ಅಭಿಮಾನ ಮೂಡುತ್ತದೆ. ಇದು ಮುಖ್ಯ. 

  ಸ್ಕೂಟರ್ ನ ಮೈಲೇಜ್ ದೈವಾನುಗ್ರಹದ ಮೈಲೇಜ್ ಎಲ್ಲ ಸೇರಿ ಮನೆ ಸೇರಿದಾಗ ಏನೂ ತಿಂದಿಲ್ಲದಿರುವುದು ನೆನಪಾಗಿ ಹೊಟ್ಟೆ ಹಸಿವು ತಿಳಿಯಿತು. ಹೊಟ್ಟೆ ತುಂಬ ಊಟಮಾಡಿ ಮಲಗಿದವನಿಗೆ ...ದೂರದ ತಲಪಾಡಿಯ ಪೆಟ್ರೋಲ್ ಬಂಕ್ ದೃಶ್ಯ ಇನ್ನೂ ಕಣ್ಣ ಮುಂದೆ ಇದ್ದಂತೆ ಭಾಸವಾಯಿತು. 

Thursday, March 12, 2026

ಮನದ ಪಯಣ


“Every moment of worship is when your thoughts and mind turn toward God.” 

ವಿದ್ವಾಂಸರೊಬ್ಬರು ಪ್ರವಚನದಲ್ಲಿ ಹೇಳಿದ ಮಾತು ಇದು.   ನಮ್ಮ ಎಲ್ಲಾ ಚಲನವಲನಗಳಲ್ಲೂ ಭಗವಂತನ ಆರಾಧನೆ ಇದೆ. ಯಾವಾಗ ನಮ್ಮ ಮನಸ್ಸು ಭಗವಂತನ ಕುರಿತು ಚಿಂತಿಸುತ್ತದೋ ಆಗ ನಾವೇನು ಮಾಡಿದರೂ ಅದು ಭಗವಂತನ ಆರಾಧನೆಯಾಗುತ್ತದೆ. ಬೆಳಗ್ಗೆ ನಿದ್ದೆಯಿಂದ ಏಳುವಾಗ ಭಗವಂತನ ಸ್ಮರಣೆಯೊಂದು  ಮನಸ್ಸಿನ ಚಿಂತನೆಯನ್ನು ಭಗವಂತನ ಕಡೆಗೆ ಹರಿಸುತ್ತದೆ. ರಾತ್ರಿ ಮಲಗುವ ಮೊದಲು ಭಗವಂತನ ನಾಮಸ್ಮರಣೆ ಒಂದು ಸಾಕು ನಾವು ನಿದ್ರೆಯಲ್ಲೂ ಭಗವಂತನ ಆರಾಧನೆ ಮಾಡಿದಂತೆ. ಇದು ಜ್ಞಾನಿಗಳು ಹೇಳುವ ಮಾತು. 

ಕೈಯಲ್ಲಿ ಇರುವ ಆಹಾರ, ಕೈತುತ್ತು ಕೈಯಿಂದ ಬಾಯಿಗೆ ನಂತರ ಗಂಟಲಿಗೆ ಪ್ರವೇಶಿಸುವ ತನಕ ನಮ್ಮದು. ಆನಂತರ ಗಂಟಲು ಇಳಿದನಂತರ ಅದು ನಮ್ಮದಾಗಿರುವುದಿಲ್ಲ. ನಮ್ಮಲ್ಲಿ ಅಹಂ ಇರುವ ತನಕ ನಮ್ಮಲ್ಲಿ ಭಗವಂತನಿರುವುದಿಲ್ಲ.  ಎಲ್ಲಿ ನಮ್ಮ ಅಹಂಕಾರವನ್ನು ಕಳೆಯುತ್ತೇವೆಯೋ ಅಲ್ಲಿ ಭಗವಂತನ ಸಾಕ್ಷಾತ್ಕಾರವಿರುತ್ತದೆ.  ನಾನು ನಮಸ್ಕಾರ ಮಾಡುತ್ತೇನೆ ಎಂದರೂ ಅಲ್ಲಿ ಅಹಂ ಇರುತ್ತದೆ.  ನಮಸ್ಕಾರ ಎಂಬುದು ನಮ್ಮನ್ನು ಭಗವಂತನಲ್ಲಿಗೆ ಸೆಳೆಯುವ ಕ್ರಿಯೆ. ಅದು ಶರಣಾಗತಿಯ ಭಾವ. ಅಲ್ಲಿ ಅಹಂ ಇದ್ದರೆ ನಮಸ್ಕಾರ ಎಂಬುದು ಕೇವಲ ಚಮತ್ಕಾರವಾಗಿಬಿಡುತ್ತದೆ. ಚಮತ್ಕಾರ ಅದೃಷ್ಟವನ್ನು ಅವಲಂಬಿಸುವ ವಂಚನೆಯ ಹಾದಿ. ಆದರೆ ನಮಸ್ಕಾರ ಸಂಭಂಧಗಳನ್ನು ವೃದ್ಧಿಸುವ ಮೊದಲ ಮೆಟ್ಟಲು. ಭಗವಂತನ ಜತೆಗಿನ ಸಂಬಂಧ ಸೃಷ್ಟಿಯಾಗುವುದೇ ನಮಸ್ಕಾರದಿಂದ. 

ಭಗವಂತ ರೂಪ ರಹಿತ, ಗುಣರಹಿತ ಭಾವ ರಹಿತ. ಆತನಿಗೆ ಹಸಿವು ಬಾಯಾರಿಕೆಗಳಿಲ್ಲ. ಹಾಗಾದರೆ ಆತನಿಗೆ ನಾವು ಯಾಕೆ ನೈವೇದ್ಯ ಅರ್ಪಿಸಬೇಕು? ನಾವೇಕೆ ಬೇಡಿಕೊಳ್ಳಬೇಕು? ಸಕಲ ಆಗುಹೋಗುಗಳಿಗೆ ಆತನೇ ಕಾರಣೀಭೂತನಾಗುವಾಗ ಆತನ ಸಮ್ಮುಖದಲ್ಲಿನ ನಮ್ಮ ವರ್ತನೆ ಆತನಿಗಾಗಿ ಅಲ್ಲ. ಆತನ ಅನುಗ್ರಹಕ್ಕೆ ಅಂತ ನಮ್ಮ ಭಾವನೆಗಳ ಪ್ರಕಟಣೆ. ಹಸಿವು ನೀರಡಿಕೆ ಇಲ್ಲದ ದೇವರಿಗೆ ನಾವು ಎಲ್ಲವನ್ನೂ ಅರ್ಪಿಸುತ್ತೇವೆ. ಅದು ನಮ್ಮ ಮನಸ್ಸಿನ ಭಾವನೆಗೋಸ್ಕರ ನಾವು ಅರ್ಪಿಸುತ್ತೇವೆ ಹೊರತು ಅದು ಭಗವಂತನಿಗಾಗಿ ಅಲ್ಲ. ಭಗವಂತನಿಗೆ ಭಾವನೆಯೂ ಇಲ್ಲದ ಮೇಲೆ ಆತನ ತೃಪ್ತಿ ಎಲ್ಲಿದೆ. ಅಲ್ಲಿ ನಮ್ಮದೇ ಅತೃಪ್ತ ಮನಸ್ಸಿನ ಪರಿಹಾರವಿರುತ್ತದೆ. ಎಲ್ಲ ಭಾವನೆಗಳೂ ಭಗವಂತನ ಕಡೆಗೆ ಸರಿಯುತ್ತದೆ. ಅದೇ ಭಗವಂತನಿಗೆ ಸಲ್ಲುವ ಗೌರವ. 

ನಾವು ಯಾವುದೋ ದೇವರ ಚಿತ್ರದ ಮುಂದೆ ನಿಂತುಕೊಂಡು ಇಲ್ಲವೇ ದೇವರ ಮೂರ್ತಿಯ ಮುಂದೆ ನಿಂತುಕೊಂಡು ಪ್ರಾರ್ಥನೆ ಮಾಡಿದರೂ ಕಣ್ಣನ್ನು ಮುಚ್ಚಿದಾಗಲೇ ನಮಗೆ ಎದುರು ಇರುವ ಭಗವಂತನ ಪ್ರತೀಕದ ಜತೆಗೆ ಅನುಸಂಧಾನ , ಅಥವ ಸಂಭಂಧ ಸಾಧ್ಯವಾಗುತ್ತದೆ. ಭೌತಿಕವಾಗಿ ಭಗವಂತನ ಬಳಿಗೆ ನಾವು ಹೋಗುವುದಕ್ಕೆ ಸಾಧ್ಯವಿಲ್ಲ. ಮನಸ್ಸಿನಿಂದ ಮಾತ್ರವೇ  ಭಗವಂತನ ಬಳಿಗೆ ಹೋಗಬಹುದು. ಹಾಗಾಗಿ ಎದುರು ಇರುವ ಚಿತ್ರವು ಕೇವಲ ಭಗವಂತನ ಪ್ರತೀಕವಾಗುತ್ತದೆ ಹೊರತು ಬೌತಿಕವಾಗಿ ಭಗವಂತನಲ್ಲ. ಹಾಗಾಗಿ ಅದನ್ನು ಮೂರ್ತ ಸ್ವರೂಪ ಎನ್ನುವುದು. ಮೂರ್ತಿ ಎಂಬುದು ಕೇವಲ ನಮ್ಮ ಮನಸ್ಸಿನ ಪ್ರತೀಕ. ಮನಸ್ಸು ಭಗವಂತನಲ್ಲಿ ಐಕ್ಯವಾಗುವುದು ಅತೀ ಮುಖ್ಯ ಹೊರತು ಎದುರಿನ ಮೂರ್ತಿಯಲ್ಲ. ಮೂರ್ತಿ ಎಂದರೆ ಕನ್ನಡಿಯಂತೆ. ಕನ್ನಡಿ ಎದುರು ನಾವು ಯಾವುದನ್ನು ಇರಿಸುತ್ತೇವೋ ಅದರ ಪ್ರತಿಬಿಂಬ ಕನ್ನಡಿಯಲ್ಲಿ ಬರುತ್ತದೆ. 

ನಮ್ಮ ಪ್ರತಿಯೊಂದು ಚಲನೆಯೂ ಭಗವಂತನ ಕಡೆಗೆ ಆಗುವಾಗ ಅಲ್ಲಿ ನಮ್ಮ ಮನಸ್ಸಿನ ಭಾವನೆಗಳು ಮುಖ್ಯವಾಗುತ್ತದೆ. ಭಗವಂತನಿಗೆ ನಾವು ಎಷ್ಟು ಕೊಟ್ಟಿದ್ದೇವೆ,್? ಎನು ಕೊಟ್ಟಿದ್ದೇವೆ?  ಯಾರು ಕೊಟ್ಟಿದ್ದಾರೆ?  ಎಂಬುದು ಮುಖ್ಯವಲ್ಲ. ನಾವು ಹೇಗೆ ಕೊಟ್ಟಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಮನಸ್ಸಿನಿಂದ ನಾವು ತೊಟ್ಟು ನೀರನ್ನು ಅರ್ಪಿಸಿದರೂ ಅದು ಅರ್ಘ್ಯವಾಗುತ್ತದೆ. ಅರ್ಘ್ಯ ಎಂಬುದು ಅನಂತತೆಯ ಸಂಕೇತ. ಅದು ಮಿತಿಯೊಳಗೆ ಇರುವುದಿಲ್ಲ. ಅದಕ್ಕೆ ಗಾತ್ರವಿಲ್ಲ. ಅದಕ್ಕೆ ರೂಪವಿರುವುದಿಲ್ಲ. ಅಲ್ಲಿ ನಮ್ಮ ಮನಸ್ಸೇ ಮುಖ್ಯವಾಗುತ್ತದೆ. ಮನಸ್ಸಿನ ಭಾವನೆಯೇ ಮುಖ್ಯವಾಗುತದೆ. ದೇವರು ಎಲ್ಲರನ್ನೂ ಎಲ್ಲವನ್ನೂ ಸೃಷ್ಟಿ ಮಾಡುತ್ತಾನೆ. ಆದರೆ ಮನುಷ್ಯನನ್ನು ಸೃಷ್ಟಿ ಮಾಡುವಾಗ ಅಲ್ಲೊಂದು ಮನಸ್ಸನ್ನು ಇಡುತ್ತಾನೆ. ಮನಸ್ಸಿನ ತುಂಬ ಭಾವನೆಗಳನ್ನು ಬಿತ್ತುತ್ತಾನೆ. ಆ ಭಾವನೆಗಳ ಪ್ರತಿ ಚಿಗುರು ಶಾಖೆಗಳು ಭಗವಂತನ ಕಡೆಗೆ ಚಲಿಸಿದಾಗಲೇ ಭಗವಂತನಿಗೆ ಸಲ್ಲುವ ಗೌರವವಾಗುತ್ತದೆ.  ಇದು ಮನುಷ್ಯನ ಬದುಕಿನ ಪಯಣ. ಮನದ ಪಯಣ.