Wednesday, December 31, 2025

ಕಳೆದು ಹೋದ ದಿನ

ಎರಡು ವರ್ಷದ ಹಿಂದೆ ಗೋವಾದಲ್ಲಿರುವ  ನನ್ನ ಹತ್ತಿರದ ಸಹೋದರ ಸಂಬಂಧಿಯೊಬ್ಬರು ಅವರ ಸಹೋದರ  ಮೃತ ಪಟ್ಟ ವಾರ್ತೆ ಕರೆ ಮಾಡಿ ಹೇಳೀದರು. ಜತೆಗೆ ಆ ಸಹೋದರ ಬಹಳ ದುಃಖದಲ್ಲಿ ವಿಷಾದ ಭರಿತರಾಗಿ ಒಂದು ಸಂದೇಶ ಕಳುಹಿಸಿದರು. ನಾವು ಆತನನ್ನು ಕಳೆದುಕೊಂಡೆವು. (we lost him). ಎಂದೆಂದೂ ಭರಿಸಲಾಗದ ನಷ್ಟದ ದುಃಖ ಅವರ ಸಂದೇಶದಲ್ಲಿ ವ್ಯಕ್ತವಾದಾಗ ನನಗೂ ಕಣ್ಣಂಚು ಒದ್ದೆಯಾದ ಅನುಭವವಾಯಿತು. ಬಹುಶಃ ಪೂರ್ಣಾಯುಷ್ಯದ ಜೀವನ ಕಳೆದು ಮೃತ ಪಟ್ಟಿದ್ದರೆ ಹೀಗೆ ಹೇಳುತ್ತಿರಲಿಲ್ಲವೇನೋ.  

ತಮ್ಮ ವಯಸ್ಸಿಗಿಂತಲೂ ಕೆಳಗಿನವರು ಅಥವಾ ನಮ್ಮ ಸಮವಯಸ್ಕರು ಇನ್ನಿಲ್ಲ ಎನ್ನುವಾಗ ನಾವೂ ಅಧೀರರಾಗಿಬಿಡುತ್ತೇವೆ. ಯಾಕೆ ಹೀಗೆ ಅಂತ ಕಾರಣ ಹುಡುಕುತ್ತೇವೆ. ಹಲವು ಸಲ ಇದು ಸ್ವಯಂಕೃತ ಅಪರಾಧ ಎನ್ನುವಾಗ ಪರಿತಪಿಸುತ್ತೇವೆ. ಈಗತ್ತಿನಲ್ಲಿ ಗಳಿಸುವುದಕ್ಕೆ ಏನು ಇರುವುದಿಲ್ಲ. ಎಲ್ಲವನ್ನು ಕಳೆದುಕೊಳ್ಳುವುದೇ ಜಗತ್ತಿನ ನಿಯಮ. ಆದರೂ ಅವಾಸ್ತವಿಕವಾಗಿ ಕಳೆದುಕೊಳ್ಳುವಾಗ ನಮ್ಮಲ್ಲಿ ಅಪರಾಧಿ ಭಾವ ಮೂಡುವುದು ಸಹಜ. ನಾವು  ಆತನನ್ನು ಕಳೆದುಕೊಂಡೆವು ಅಂತ ಸಹೋದರ ಹೇಳುವಾಗ ಆತನ ನಷ್ಟಕ್ಕೆ ಕೇವಲ ಜಗತ್ತಿನ ನಿಯಮ ಕಾರಣವಾಗುವುದಿಲ್ಲ. ಕಾರಣ ಇಷ್ಟೆ, ಮೃತ ವ್ಯಕ್ತಿ ನಾಲ್ಕು ದಶಕದ ಬದುಕನ್ನೂ ಕಳೆಯುವ ಮೊದಲೆ ಬದುಕನ್ನು ಕಳೆಯುವುದಕ್ಕೆ ಆತನ ಮದ್ಯವ್ಯಸನವೇ ಕಾರಣ. ಕರೆ ಮಾಡಿದಾಗ ನಿನ್ನೆ ಅತನನ್ನ ಕಳೆದುಕೊಂಡೆವು ಅಂತ ದುಃಖದಲ್ಲಿ ಹೇಳುವಾಗ ನಾನು ಹೇಳಿದೆ ಸತ್ಯ ಅದಲ್ಲ.. ಆತನನ್ನು ಕೆಲವು ವರ್ಷಗಳ ಹಿಂದೆ ಕಳೆದುಕೊಂಡಾಗಿದೆ. ಈಗ ಅದು ಕೇವಲ ವಾಸ್ತವಿಕ ಸತ್ಯವಾಗಿದೆ. ಯಾಕೆಂದರೆ ಮದ್ಯ ಸೇವನೆ ಅತನನ್ನು ಎಂದೋ ಮಾನಸಿಕವಾಗಿ ನಮ್ಮಿಂದ ದೂರ ಮಾಡಿತ್ತು. 

ಒಂದು ಕುಟುಂಬದಲ್ಲಿ ಒಬ್ಬ ಮದ್ಯ ವ್ಯಸನಿ ಇದ್ದರೆ ಆತ ಇದ್ದರೂ ಇಲ್ಲದಂತೆ. ಹಿಂದೆ ಒಂದು ಸಲ ಮದುವೆ ಕಾರ್ಯಕ್ರಮಕ್ಕೆ ಗೋವಕ್ಕೆ ಹೋಗಿದ್ದೆ. ಆ ಮದುವೆಯ ಮದುಮಗಳು ನಮ್ಮೂರಿನವಳು. ಸಹಜವಾಗಿ ಆಕೆಯ ಕೆಲವು ಸಂಭಂಧಿಗಳು ಜತೆಗೆ ವಾಹನದಲ್ಲಿ ಬಂದಿದ್ದರು. ವಿಚಿತ್ರವೆಂದರೆ ಮದುವೆ ಎಂಬುದು ಅವರಿಗೆ ಗೋವಕ್ಕೆ ಹೋಗುವುದಕ್ಕೆ ಒಂದು ಕಾರಣವಾಗಿತ್ತು. ಏನನ್ನು ಕಾಣಬೇಕಿತ್ತೋ ಅದನ್ನು ಕಾಣದೇ ಇನ್ನೆನೋ ಒಂದರ ಭ್ರಮೆಯಲ್ಲಿ ಮುಳುಗಿಬಿಡುವುದು ಗೋವದ ಆಕರ್ಷಣೆ ಇರಬೇಕೇನೋ.  ಗೋವದ ಸೀಮೆ ಪ್ರವೇಶಿಸಿದ ನಂತರ ಅವರಲ್ಲಿ ಹಲವರು ಗೋವೆಯ ಪ್ರವೇಶದ ಉದ್ದೇಶವನ್ನು ಬಿಚ್ಚಿಟ್ಟರು. ಹೋದದ್ದು ವಿವಾಹ ಕಾರ್ಯಕ್ರಮಕ್ಕೆ,  ಆದರೆ ಗೋವಾದ ಮದ್ಯದ ಪ್ರಭಾವದಿಂದ ವಿವಾಹ ಕಾರ್ಯಕ್ರಮದ ಒಂದು ಘಳಿಗೆಯಲ್ಲೂ   ಅವರ ಅಸ್ತಿತ್ವ ಇರಲಿಲ್ಲ. ಹಗಲು ರಾತ್ರಿ ನಿಶೆ ಏರಿಸಿ ಮುಖ ತೋರಿಸುವ ಯೋಗ್ಯತೆಯಿಂದ ವಂಚಿಸಲ್ಪಟ್ಟು ಕಾರ್ಯಕ್ರಮದಿಂದ ಸೇರಿದ ಬಂಧು ಬಳಗದಿಂದ ಅವರು ದೂರವೇ ಉಳಿದರು. ಮದ್ಯ ಎಂಬುದು ಹತ್ತಿರವಾದಾಗ ಲೋಕ ಅವರಿಂದ ದೂರವಾಗಿಬಿಟ್ಟಿತು.  ಮದ್ಯ ವ್ಯಸನ ಎಲ್ಲವನ್ನೂ ದುಃಖವನ್ನು ಮರೆಸುವುದಕ್ಕೆ, ಸುಖದ ಉತ್ತುಂಗದ ಶಿಖರಕ್ಕೆ ಒಯ್ಯುವುದಕ್ಕೆ ಕಾರಣವಾಗುತ್ತದೆ. ಆದರೆ ನಶೆ ಮಾನಸಿಕವಾಗಿ ಇಹವನ್ನು ಮರೆಸಿ ದೂರ ಮಾಡುವಾಗ ನಮ್ಮವರಿಂದ ದೂರಾಗುತ್ತೇವೆ ಎಂಬುದನ್ನೂ ಮರೆಸಿಬಿಡುತ್ತದೆ. 

ಒಂದು ಮನೆಯಲ್ಲಿ ಒಬ್ಬ ಮದ್ಯವ್ಯಸನಿ ಇದ್ದರೆ, ಆತ ಯಾವ ಸುಖವನ್ನು ಅನುಭವಿಸುತ್ತಾನೋ ತಿಳಿಯದು, ಆದರೆ ಆತನ ಸಂಸಾರ ಮಾತ್ರ ಹಲವು ಸುಖಗಳಿಂದ ದೂರಾಗುತ್ತದೆ. ಎಂದೂ ಕೌಟುಂಬಿಕವಾಗಿ ದೂರಾಗಿ ಪ್ರತ್ಯೇಕವಾಗುವಾಗ ಕುಟುಂಬ ಎಲ್ಲವನ್ನೂ ಕಳೆದುಕೊಂಡು ಬಿಡುತ್ತದೆ. ಸಂಸಾರದಲ್ಲಿ ಎಲ್ಲರೂ ಹತ್ತಿರವಾದರೂ ಈತ ಮಾತ್ರ ಎಲ್ಲರಿಂದಲೂ ದೂರಾಗಿ ಉಳಿದುಬಿಡುತ್ತಾನೆ. ಎಂದಿಗೂ ಸಂಸಾರದ ಅಂಗವಾಗಿ ಆತ ಉಳಿದುಬಿಡುವುದಿಲ್ಲ. ಎಲ್ಲ ಇದ್ದಂತೆ ಇದ್ದರೂ ಎಲ್ಲದರಿಂದಲೂ ಕಳೆದು ಬಿಡುವ ಈ ಮದ್ಯ ಎಲ್ಲವನ್ನು ಕಸಿದುಕೊಳ್ಳುತ್ತದೆ.   ವಿವಾಹ ಇತ್ಯಾದಿ ಸುಖ ಸಂಭ್ರಮದಲ್ಲಿ  ಕುಟುಂಬ ಇದ್ದರೆ ಮದ್ಯ ವ್ಯಸನ ಎಲ್ಲರಿಂದಲೂ ಆತನನ್ನು ಪ್ರತ್ಯೇಕಿಸುತ್ತದೆ. ಇದ್ದರೂ ಇರದಂತೆ ಮದ್ಯ ಎಲ್ಲವನ್ನೂ ಕಳೆದುಕೊಳ್ಳುವಂತೆ ಮಾಡಿಬಿಡುತ್ತದೆ. 

ಇದೀಗ ಹೊಸ ವರ್ಷದ ಸಂಭ್ರಮ. ಎಲ್ಲಾ ದಿನಗಳಂತೆ ಇದೂ ಒಂದು ಕತ್ತಲು ಬೆಳಕಿನ ದಿನ. ಹಳೆಯದಿನಗಳ ಜತೆ ಮತ್ತೊಂದನ್ನು ಸೇರಿಸಿ ಕಳೆವಾಗ ಎಲ್ಲವನ್ನೂ ಕಳೆದು ಬಿಡುವ ಸಂಭ್ರಮದಲ್ಲಿ ಜಗತ್ತನ್ನೂ ಕಳೆದುಕೊಳ್ಳುವ ಆತುರ. ಎಲ್ಲವನ್ನು ಕಳೆದುಕೊಳ್ಳುವುದೇ ಬದುಕು ಎನ್ನುವಾಗ ಎಲ್ಲವನ್ನು ಕಳೆದುಕೊಳ್ಳುವ ನಡುವೆ ಯಾವುದನ್ನೋ ಗಳಿಸುವ ಉನ್ಮಾದ ಸ್ಥಿತಿಯಲ್ಲಿ ಈ ವರ್ಷಾಂತ್ಯದ ಇರುಳು ಕಳೆದು ಬಿಡುತ್ತದೆ. ನಮ್ಮನ್ನು ಆಳುವ ಸರಕಾರಕ್ಕೂ ಇದೊಂದು ಆತುರ. ಹನಿ ಹನಿ ಮದ್ಯದಲ್ಲೂ ಸರಕಾರ ಜೀವ ಹನಿಯನ್ನು ಹುಡುಕುತ್ತದೆ. ಉನ್ಮಾದ ಅವಸ್ಥೆಯಲ್ಲಿ ಎಲ್ಲವನ್ನು ಕಳೆದುಬಿಡಲಿ ಎಂದು ಬಯಸುತ್ತದೆ. ಎಷ್ಟು ವಿಚಿತ್ರ. ಕೈ ಹಿಡಿವ ಕೈಗಳೇ ಮದ್ಯದ ಪ್ರವಾಹದಲ್ಲಿ ಕೈಬಿಟ್ಟು ಕೇಕೆ ಹಾಕಿದಂತೆ. ಮದ್ಯ ಎಲ್ಲವನ್ನು ಎಲ್ಲವನ್ನು ಕಳೆದುಬಿಡುತ್ತದೆ. 


ಹೊಸ ವರುಷ ಕಳೆದುದನ್ನು ಮತ್ತೆ ಕೊಡಲಿ  ಎಂಬ ಆಶಯ. ಇದಕ್ಕೆ  ಮದ್ಯ ಎರವಾಗದಿರಲಿ. 



  

Friday, December 19, 2025

ವಿಡಂಬನೆಯ ಚಕ್ರವರ್ತಿ...ಶ್ರೀನಿವಾಸನ್

"ಎಡಾ ವಿಜಯ..." ಎಂಬ ಕರೆಗೆ ಧ್ವನಿಗೂಡಿಸುವ ನಾಡೋಡಿಕ್ಕಾಟ್ಟು ಎಂಬ ಸಿನಿಮಾದ ವಿಜಯನ ಪಾತ್ರ ನೋಡಿ ಆನಂದಿಸದ ಕೇರಳಿಗನಿರಲಾರನು. ಒಂದು ಅದ್ಭುತ ಸಿನಿಮಾದ ಮುಖ್ಯ ಜೀವಾಳ ಎಂದರೆ ಆ ಬುದ್ದಿವಂತ ವ್ಯಕ್ತಿ ನಟ , ನಿರ್ದೇಶಕ, ಚಿತ್ರಕಥೆಗಾರ ಶ್ರೀನಿವಾಸನ್. ನಾಡೋಕ್ಕಾಟ್ಟು ಎಂಬ ಸಿನಿಮಾ ಹಲವು ಭಾಷೆಗಳಿಗೆ ತರ್ಜುಮೆಯಾದ ಸಿನಿಮಾದ ಚಿತ್ರಕಥೆ ಅಂದರೆ ಸ್ಕ್ರಿಪ್ಟ್ ನ ಬರದ ಶ್ರೀನಿವಾಸ್ ಇನ್ನಿಲ್ಲ ಎಂಬ ವಾರ್ತೆ ಕೇಳುವಾಗ ಈತನ ಹಲವು ಸಿನಿಮಾಗಳು ಕಣ್ಣಮುಂದೆ ತೇಲಿಬಂತು. 

ನಾಡೋಡಿಕ್ಕಾಟು ಅದರ ದ್ವಿತೀಯ ಭಾಗ ಪಟ್ಟಣ ಪ್ರವೇಶಂ ನಂತರ ಅಕ್ಕರೆ ಅಕ್ಕರೆ...ಈ ಎಲ್ಲಾ ಸಿನಿಮಾ ನೋಡಿದವರು ಶ್ರೀನಿವಾಸನ್ ನಿರ್ವಹಿಸಿದ ವಿಜಯ ಪಾತ್ರವನ್ನುಮರೆಯುವುದಕ್ಕೆ ಸಾಧ್ಯವಿಲ್ಲ.  ನೋಡುವುದಕ್ಕೆ ಸಿನಿಮಾ ನಟನಿಗೆ ಇರಬೇಕಾದ ಸೌಂದರ್ಯವಾಗಲೀ ಗ್ಲಾಮರ್ ಆಗಲಿ ಇಲ್ಲದ ಸುಮ್ಮನೇ ಕಂಡರೆ ಪೆದ್ದು ಪೆದ್ದು ಎಂಬಂತೆ ಕಾಣುವ ಒಬ್ಬ ವ್ಯಕ್ತಿ ಮಲಯಾಳ ಚಿತ್ರರಂಗದ ಬುದ್ಧಿವಂತ ವ್ಯಕ್ತಿ ಎಂದು ಕರೆಸಿಕೊಳ್ಳುತ್ತನೆ ಎಂದರೆ ಈತನ ಅದ್ಭುತ ಪ್ರತಿಭೆಯ ಅರಿವಾಗಬಹುದು. ಮಲಯಾಳಂ ನ ಸಹಜವಾದ ನವಿರು ಹಾಸ್ಯಕ್ಕೆ ಹೊಸ ಆಯಾಮವನ್ನು ಒದಗಿಸಿದ ವ್ಯಕ್ತಿ ಶ್ರೀನಿವಾಸನ್. ಈತನ ಹಾಸ್ಯ ಸಂಭಾಷಣೆ ಎಂದರೆ ಅದು ವಿಡಂಬನಾತ್ಮಕವಾಗಿ, ಮನಸ್ಸನ್ನು ಹೊಕ್ಕು ಕರುಳನ್ನೇ ಇರಿದುಬಿಡುತ್ತದೆ. ಅಂತಹ ಹರಿತ ಮೊನಚು ಹಾಸ್ಯಕ್ಕೆ ಈತನ ಪಾತ್ರಗಳು ಪ್ರಸಿದ್ಧಿಯನ್ನು ಪಡೆದಿತ್ತು. ಸಹಜವಾಗಿ ಮಾತನಾಡುವಾಗಲೂ ಈತರ ವಿಡಂಬನೆಗಳಿಂದ  ವಿಶಿಷ್ಟ ಮಾತುಗಾರಿಕೆಗೆ ಶ್ರೀನಿವಾಸ್ ಹೆಸರುವಾಸಿ. ಎಂಭತ್ತರ ದಶಕಗಳಲ್ಲಿ  ಮಲಯಾಳಂ ಸಿನಿಮಾಕ್ಕೆ ಹೊಸ ಆಕರ್ಷಣೆಯನ್ನು ಈತನ ಸಿನಿಮಾಗಳು ಒದಗಿಸಿಕೊಟ್ಟಿತ್ತು. ಮಲಯಾಳಂ ಸಿನಿಮಾ ರಂಗದ ಒಬ್ಬ ಜೀನಿಯಸ್ ವ್ಯಕ್ತಿ ಎಂದರೆ ತಪ್ಪಾಗಲಾರದು. 

ಮಲಯಾಳಂ ಸಿನಿಮಾಗಳೆಂದರೆ ಅಲ್ಲಿ ಮೊದಲು ಪ್ರಾಮುಖ್ಯತೆ ಪಡೆಯುವುದು ಕಥೆ ಮತ್ತು ಚಿತ್ರಕಥೆ. ಅಲ್ಲಿನ ಸಿನಿಮಾಗಳ ನಿಜವಾದ ಕಥಾನಾಯಕ ಎಂದರೆ ಆ ಸಿನಿಮಾದ ಕಥಾವಸ್ತು. ಆನಂತರ ಯಾವುದೇ ಮುಲಾಜಿಲ್ಲದೆ ಆ ಕಥೆಯ ಪಾತ್ರಗಳಿಗೆ ಅತ್ಯಂತ ಸೂಕ್ತ ನಟನಟಿಯರ ಆಯ್ಕೆ. ಅದೇ ಮಲಯಾಳಂ ಸಿನಿಮಾದ ಯಶಸ್ಸಿನಗುಟ್ಟು. ಉಳಿದೆಲ್ಲ ಕಡೆ ನಟನ ದಿನ ಅವಕಾಶಗಳು ಮೊದಲು ನಿರ್ಣಯಿಸಲ್ಪಟ್ಟರೆ ಮತ್ತೆ ಅದಕ್ಕೆ ಹೊಂದಿಕೊಂಡು ಕಥೆ ರಚಿಸುವ ಮತ್ತು ಅದನ್ನು ಆಗಾಗ ಅವರ ಮರ್ಜಿಗೆ ಅನುಸರಿಸಿ ಬದಲಾಯಿಸುವ ವಾಡಿಕೆ ಇದ್ದರೆ ಮಲಯಾಳಂ ನಲ್ಲಿ ಅದರ ಕಥೆಯೇ ಮೊದಲು ಜೀವಾಳವಾಗುತ್ತದೆ. ಈ ಕಥೆ ಚಿತ್ರಕಥೆಗೆ ಹೆಸರಾದವರು ಎಂ ಟಿ ವಾಸುದೇವ ನಾಯರ್ ಅಂತೆ ಶ್ರೀನಿವಾಸನ್ ನಂತರ ಇವರಂತಹ ಹಲವು ಪ್ರತಿಭೆಗಳು ಮಲಯಾಳಂ ಸಿನಿಮಾರಂಗದ ಅದ್ಭುತ ಸೊತ್ತುಗಳು. 

ಶ್ರೀನಿವಾಸನ್ ಸಿನಿಮಾಗಳು ಮತ್ತು ಕಥಾ ಪಾತ್ರಗಳು ನಮ್ಮ ಜನಜೀವನಕ್ಕೆ ಹಿಡಿದ ಕನ್ನಡಿಯಂತೆ ಇರುತ್ತಿದ್ದವು. ಒಂದು ಸಿನಿಮಾ ನೋಡಿ ಹೊರಬಂದರೆ ಆ ಸಿನಿಮಾದ ಕಥಾ ಪಾತ್ರಗಳನ್ನು ನಮ್ಮ ಸುತ್ತ ಮುತ್ತಲು ಧಾರಾಳವಾಗಿ ಕಂಡು ಬಂದು ನೋಡಿದ ಸಿನಿಮಾ ಕೇವಲ ಸಿನಿಮಾವಾಗಿ ಭಾಸವಾಗದೇ ಅದು ನಿಮ್ಮ ಜೀವನದ ಅಂಗವಾಗಿ ಜೀವನವೇ ಎಂಬಂತೆ ಭಾಸವಾಗುತ್ತಿದ್ದವು. ಭ್ರಾಮಕ ಜಗತ್ತಿನ ನೈಜ ಕಥಾಪಾತ್ರಗಳು ನೈಜತೆಗೆ ಹತ್ತಿರವಾಗಿರುತ್ತಿದ್ದವು. 

ಶ್ರೀನಿವಾಸನ್ ಹಲವು ಸಿನಿಮಾಗಳು ನಮ್ಮ ನನಪಿನ ಪರದೆಯಲ್ಲಿ ಅಚ್ಚಳಿಯದ ಪ್ರಭಾವವನ್ನು  ಉಂಟು ಮಾಡಿ ಶಾಶ್ವತವಾಗಿ ನೆಲೆನಿಲ್ಲುತ್ತವೆ. ಅದರ ಛಾಯೆಯ ನೆರಳು ಎಂದಿಗೂ ಮಾಸುವುದಕ್ಕೆ ಸಾಧ್ಯವಿಲ್ಲ. ನಾಡೋಡಿಕ್ಕಾಟು, ಸಂದೇಶಂ, ಕಥ ಪರಯುಂಬೋಳ್, ಮಯಯತ್ತು ಮುಂಬೆ, ಅಯಾಳ್ ಕಥ ಎಳುದುಗೆಯಾಣ, ಪೊನ್ಮುಟ್ಟ ಯಿಡುನ್ನ ತಾರಾವು, ವಿದ್ಯಾರಂಭಂ, ತಳಯಾಣ ಮಂತ್ರಂ. ಚಿಂತಾವಿಷ್ಟಮಾಯ ಶ್ಯಾಮಲ, ವಡಕ್ಕು ನೋಕ್ಕು ಯಂತ್ರಂ, ಞಾನ್ ಪ್ರಕಾಶನ್, ಟಿ ಪಿ ಬಾಲಗೋಲನ್ ಎಂ ಎ, ಗಾಂಧಿನಗರ್ ಸೆಕೆಂಡ್ ಸ್ಟ್ರೀಟ್, ಸನ್ಮನಸ್ಸುಳ್ಳವರ್ಕ್ ಸಮಾಧಾನಂ, ಭಾಗ್ಯವಾನ್,  ಓಡರುದಮ್ಮಾವ,  ಅರಂ + ಅರಂ+ ಕಿನ್ನಾರಂ, ಮುಕುಂದೇಟ್ಟಾಅ ಸುಮಿತ್ರ ವಿಳಿಕ್ಕುನ್ನು, ತೇನ್ ಮಾವಿನ್ ಕೊಂಬತ್ತ್ , ಚಂದ್ರಲೇಖ, ಚಿಂತಾವಿಷ್ಟಮಾಯ ಶ್ಯಾಮಲ,  ಮುಂತಾದ ಸಿನಿಮಾಗಳನ್ನು ಇಂದಿಗೂ ಮಲಯಾಳಿ ಪ್ರೇಕ್ಷಕ ಮರೆಯುವುದಕ್ಕೆ ಸಾಧ್ಯವಿಲ್ಲ.  ಖ್ಯಾತ ನಟ ಮೋಹನ್ ಲಾಲ್ ಜತೆಗಾರಿಕೆಯಲ್ಲಿ ಹಲವು ಮರೆಯಲಾಗದ ಸಿನಿಮಾಗಳು ಬಂದಿವೆ. ಇವರಿಬ್ಬರ ಜತೆಗಾರಿಕೆ ಸಿನಿಮಾಗಳಿ ಹೊಸ ಮೆರುಗನ್ನು ತಂದುಕೊಡುತ್ತಿದ್ದವು. 

ವಿಡಂಬನಾತ್ಮಕ ನವಿರು ಹಾಸ್ಯಕ್ಕೆ ಶ್ರೀನಿವಾಸನ್ ಹೆಸರುವಾಸಿ. ಸಿನಿಮಾ ನೋಡಿದಾಗ ಪಕ್ಕನೆ ನಗು ಬರದೇ ಇದ್ದರೂ ಮತ್ತೆ ಮತ್ತೆ ಚಿಂತಿಸಿ ನಗುವ ಹಾಸ್ಯಗಳು. ಮಲಯಾಳಂ ಖ್ಯಾತ ನಿರ್ದೇಶಕ ಸತ್ಯನ್ ಅಂತಿಕಾಡ್ ಜತೆಗಾರಿಕೆಯಲ್ಲಿ ಹಲವು ಉತ್ತಮ ಸಿನಿಮಾಗಳು ಬಂದಿವೆ. ಅದರಂತೆ ಪ್ರಿಯದರ್ಶನ್ ಜತೆಯಲ್ಲಿ ಹಲವಾರು ಸಿನಿಮಾಗಳು ಜನಪ್ರಿಯವಾಗಿವೆ. 

ಒಂದು ರೀತಿಯಲ್ಲಿ ಮಲಯಾಳಂ ಮಾತ್ರವಲ್ಲ ಭಾರತೀಯ ಚಿತ್ರರಂಗದ ವಿಶಿಷ್ಟವ್ಯಕ್ತಿ ಶ್ರೀನಿವಾಸನ್ ಎಂದರೆ ತಪ್ಪಲ್ಲ. ಇನ್ನು ಬಿಟ್ಟು ಹೋದ ಸಿನಿಮಾಗಳಷ್ಟೇ ಸೀಮಿತವಾಗಿ ಶ್ರೀನಿವಾಸನ್ ನೆನಪುಗಳನ್ನು ಒದಗಿಸಿ ನಮ್ಮಿಂದ ಮರೆಯಾಗಿದ್ದಾರೆ. ಅಗಲಿದ ಆತ್ಮಕ್ಕೆ ಚಿರಶಾಂತಿಯನ್ನು ಭಗವಂತ ಕರುಣಿಸಲಿ. 

Saturday, November 29, 2025

ಗಾಯತ್ರಿ ಪುರಶ್ಚರಣ


 


ಇತಿ ತೇ ಜ್ಞಾನಮಾಖ್ಯಾತಂ ಗುಹ್ಯದ್ಗುಹ್ಯತರಂ ಮಯಾ|

ವಿಮೃಶ್ಯೈ  ತದಶೇಷೇಣ ಯಥೇಚ್ಛಸಿ ತಥಾ ಕುರು||

(ಹೀಗೆ ನಿನಗೆ ರಹಸ್ಯಕ್ಕಿಂತಲೂ ರಹಸ್ಯವಾದ ಜ್ಞಾನವನ್ನು ನನ್ನಿಂದ ವಿರಸಲ್ಪಟ್ಟಿದೆ. ಇದನ್ನು ಪೂರ್ಣವಾಗಿ ವಿಮರ್ಶಿಸಿ ವಿವೇಚಿಸಿ ನಿನ್ನಿಚ್ಛೆಯಂತೆ ಆಚರಿಸು. )

ಇದು ಭಗವದ್ಗೀತೆಯ ಅಂತ್ಯದಲ್ಲಿ ಹೇಳಿರುವ ಶ್ಲೋಕಗಳಲ್ಲಿ ಒಂದು. ಭಗವಂತನು ಅದುವರೆಗೆ ಗೀತೆಯ ಸಾರವನ್ನು ಅರ್ಜುನನಿಗೆ ಬೋಧಿಸಿ ಆನಂತರ ವಿವೇಚನೆ ಮಾಡಿ ಇದನ್ನು ಅನುಸರಿಸು ಅಂತ ಹೇಳುತ್ತಾನೆ. ಭಗವಂತ ಸ್ವತಃ ಹೇಳಿದರೂ ಅದನ್ನು ಅರಿತು ವಿವೇಚಿಸುವ ಅವಕಾಶವನ್ನು ಅರ್ಜುನನಿಗೆ ಕೊಡುತ್ತಾನೆ. ಅಂದರೆ ಪ್ರತಿಯೊಂದು ಕಾರ್ಯವನ್ನು ಅರಿತು ವಿವೇಚಿಸಿ ಮಾಡಬೇಕು ಎನ್ನುವುದೇ ಸಾರ.  ಯಾವುದೇ ಕಾರ್ಯವೂ ಅರಿತು ವಿವೇಚಿಸಿ ಮಾಡಿದಾಗ ಅದು ಅರ್ಥ ಪೂರ್ಣವಾಗುತ್ತದೆ.  ಇಲ್ಲದೇ ಇದ್ದರೆ ಅದು ಕೇವಲ ಕಾಟಾಚಾರದ ಕೆಲಸವಾಗಿ ಪರಿಣಾಮಕಾರಿಯಾಗದೇ ಉಳಿಯುತ್ತದೆ. ಕಾಟಾಚಾರದಲ್ಲಿ ಮಾಡುವ ಕೆಲಸದಲ್ಲಿ ಚಿತ್ತ ವೃತ್ತಿಯಲ್ಲಿ ನಿರತವಾಗಿ ಅದು ಏಕಾಗ್ರತೆಯನ್ನು ಕೊಡದೇ ಕಾರ್ಯರೂಪದಲ್ಲಿ ಅದು ಪರಿಣಾಮಕಾರಿಯಾಗುವುದಿಲ್ಲ. ನಾವು ಯಾವುದಕ್ಕಾಗಿ ಸಂಕಲ್ಪಿಸಿ ಮಾಡುತ್ತೇವೆ ಅದು ಫಲಕಾರಿಯಾಗುವುದಿಲ್ಲ. ದೇವರನ್ನು ಪ್ರಾರ್ಥಿಸುವ ಮೊದಲು ದೇವರನ್ನು ಅರಿತು ಆನಂತರ ಪ್ರಾರ್ಥಿಸಿದರೆ ಪ್ರಾರ್ಥನೆಯಲ್ಲಿ ಏಕಾಗ್ರತೆ ಬರುತ್ತದೆ. ನಮ್ಮ ಎಷ್ಟೋ ಕಾರ್ಯಗಳು ಯಾರೋ ಹೇಳಿದ್ದಾರೆ, ಯಾರದೋ ಆದೇಶ ಇದೆ ಅಂತ ನಾವು ಮಾಡುವಾಗ ಆ ಕಾರ್ಯದ ಆಳ ವಿಸ್ತಾರವನ್ನು ತಿಳಿದಿರುವುದಿಲ್ಲ. ಅದರ ಪಾವಿತ್ರ್ಯತೆಯನ್ನು ತಿಳಿಯದೆ ತೋಚಿದಂತೆ ಮಾಡುವುದರಿಂದ ಅದು ಕೇವಲ ಕಾಟಾಚಾರ ಮತ್ತು ಢಂಬಾಚಾರವಾಗುತ್ತದೆ.  ಹಾಗಾಗಿ ಗಾಯತ್ರೀ ಪುರಶ್ಚರಣದ ಈ ದಿವ್ಯ ಕಾರ್ಯದಲ್ಲಿ ಗಾಯತ್ರಿ ಮಂತ್ರದ ಬಗ್ಗೆ ಪ್ರಾಥಮಿಕ ಅರಿವನ್ನು ಯಥಾ ಶಕ್ತಿ ಯಥಾ ಜ್ಞಾನದಿಂದ ವಿವರಿಸುವ ಒಂದು ಪ್ರಯತ್ನ ಇದು. 

ಗಾಯತ್ರಿ ಮಂತ್ರ ವಾಸ್ತವದಲ್ಲಿ ಇದು ಗಾಯತ್ರಿ ಮಂತ್ರ ಎನ್ನುವುದು ಕೇವಲ ವಾಡಿಕೆಯಲ್ಲಿ ಬಂದ ಹೆಸರಾಗಿದೆ. ಇದು ಮೂಲತಃ ಸವಿತೃ ಮಂತ್ರ.  ಉದಾಹರಣೆಗೆ..ಗಣಪತಿ ಸ್ತುತಿ ಇದೆ, ಗಣಾನಾಂತ್ವಾ ಗಣಮತಿಂ ಹವಾ ಮಹೆ ಎನ್ನುವ ಮಂತ್ರ ಅಥವಾ ಗಜಾನನಂ ಭೂತ ಗಣಾಧಿ ಸೇವಿತಂ ಎನ್ನುವ ಶ್ಲೋಕ ಯಾವ ದೇವರಸ್ತುತಿ ಎಂದು ಅರ್ಥವಾಗುತ್ತದೆ. ಅದೇ ರೀತಿ ಸರ್ವ ಮಂಗಲ ಮಾಂಗಲ್ಯೆ..ಇದು ದೇವಿ ಸ್ತುತಿ ಎಂದು ಹೇಳಬಹುದು. ಯಾಕೆಂದರೆ ಅಲ್ಲಿ ಆಯಾಯಾ ದೇವರ ಹೆಸರು ಉಲ್ಲೇಖವಾಗುತ್ತದೆ. ಆದರೆ " ಓಂ ಭೂರ್ಭುವಸ್ವಃ ತತ್ಸ ವಿತುರ್ ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋಯೋನಃ ಪ್ರಚೋದಯಾತ್| " ಇಲ್ಲಿ ಗಾಯತ್ರಿ ದೇವಿಯ ಅಥವಾ ಇನ್ನು ಯಾವುದೇ ಸ್ತ್ರೀ ದೈವದ ಹೆಸರೇ ಉಲ್ಲೇಖಿಸಲ್ಪಡುವುದಿಲ್ಲ. ತತ್ ಸವಿತಾ  ಜಗತ್ತನ್ನು ಸೃಷ್ಟಿಸಿದ ತಂದೆಯೇಅಂತ ಸೂರ್ಯನ ಉಲ್ಲೇಖವಾಗುವುದರಿಂದ ಇದನ್ನು ಮೂಲತಃ  ಸವಿತೃ ಮಂತ್ರ ಅಂತಲೇ ಕರೆಯುವುದು. ವಾಡಿಕೆಯಲ್ಲಿ ಇದು ಗಾಯತ್ರೀ ಮಂತ್ರವಾಗಿ ಪರಿಗಣಿಸಲ್ಪಟ್ಟಿತು. 

ಬ್ರಹ್ಮ ಋಷಿ ವಿಶ್ವಾಮಿತ್ರ ಈ ಮಂತ್ರದ ದೃಷ್ಟಾರ. ಹಾಗಾಗಿ ಗಾಯಂತ್ರಿ ಮಂತ್ರದ ಜಪಾನುಷ್ಠಾನದಲ್ಲಿ ವಿಶ್ವಾಮಿತ್ರನನ್ನು ಸ್ಮರಿಸುವುದು ನಿಯಮ. ಈ ಮಂತ್ರದ ದೃಷ್ಟಾರನಾದ ಬಳಿಕ ಕೌಶಿಕ ವಿಶ್ವಾಮಿತ್ರನಾದ. ಮಿತ್ರ ಅಂದರೆ ಸೂರ್ಯನನ್ನು ಉದ್ದೇಶಿಸಿ ಹೇಳುವುದು. ಮಿತ್ರ ಎಂದರೆ ಜ್ಞಾನವನ್ನು ಕೊಡುವವನು.  ಮಿತಿ ಅಂದರೆ ಜ್ಞಾನ ಬೆಳಕಿನ ಮೂಲಕ ಅಂದರೆ ಜ್ಯೋತಿ ಸ್ವರೂಪದ ಮೂಲಕ ಅರಿವನ್ನು ಒದಗಿಸುವುದೇ ಈ ಮಂತ್ರದ ತಾತ್ಪರ್ಯ. ಭಗವಂತ ಎಂದರೆ ಜ್ಯೋತಿ ಸ್ವರೂಪ. ಆದು ಈ ಮಂತ್ರದಲ್ಲಿ ವ್ಯಕ್ತವಾಗುತ್ತದೆ. ಜಗತ್ತಿನ ಎಲ್ಲ ಜ್ಯೋತಿಗೂ ಮೂಲ ಸ್ವರೂಪ ಭಗವಾನ ಭಾಸ್ಕರ. ದ್ವಾದಶಾದಿತ್ಯರರಲ್ಲಿ ಎರಡು ಜನ ಮೂಲ ಸ್ವರೂಪಗಳು. ಒಂದು ಸೂರ್ಯ ಇನ್ನೊಂದು ವರುಣ ದೇವ. ಸೂರ್ಯ ಹಗಲಿನ ದೇವತೆಯಾದರೆ ವರುಣ ರಾತ್ರಿಯ ದೇವತೆ. ಹಾಗಾಗಿ ಮುಂಜಾನೆ ಸೂರ್ಯನಿಗೆ ಅರ್ಘ್ಯ ಸಮರ್ಪಿಸಿದರೆ ಸಾಯಂ ಸಂಧ್ಯೆಯಲ್ಲಿ ವರುಣನಿಗೆ ಅರ್ಘ್ಯ ಸಲ್ಲಿಸುವುದು. ಸಮದ್ರವನ್ನೇ ಆರಿಸಿ ಹೀರಿಕೊಳ್ಳುವ ಸೂರ್ಯನಿಗೆ ಒಂದು ಬೊಗಸೆ ಅರ್ಥ್ಯದಿಂದ ಪರಿಣಾಮ ಏನು ಎಂದು ಯೋಚಿಸಿದರೆ ಗಾಯತ್ರಿ ಮಂತ್ರದ ಮಹತ್ವ ಅರಿವಾಗುತ್ತದೆ.  ಹೀಗೆ ಈ ಮಂತ್ರದ ವೈಶಿಷ್ಟ್ಯತೆ ಸಾಕಷ್ಟು ಇದೆ. ಇದನ್ನು ಅಧ್ಯಯನ ಮಾಡಿ ತಿಳಿದುಕೊಳ್ಳಬಹುದು.  ನನ್ನದೇನೂ ಇಲ್ಲವೂ ನಿನ್ನದೇ ಎನ್ನುವುದರ ಸಂಕೇತವೇ ಈ ಅರ್ಘ್ಯ ಸ್ಸಲ್ಲಿಕೆ. ಇದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯ. ಹಾಗಾಗಿ ಸಂಧ್ಯಾ ವಂದನೆ  ಆಚರಿಸುವ ಉದ್ದೇಶ ಕೇವಲ ನಮ್ಮ ದುರಿತವನ್ನು ಕಳೆಯುವುದು ಹೊರತು ಇಲ್ಲಿ ಯಾವುದೇ ಬಯಕೆಗಳು ಹರಕೆಗಳು ಇರುವುದಿಲ್ಲ. ಇದರ ಸಂಕಲ್ಪದಲ್ಲಿ ಮಮೋಪಾತ್ತ ದುರಿತಕ್ಷಯದ್ವಾರ  ಸಂಕಲ್ಪಿಸಿ ಹೇಳುವುದು ಕ್ರಮ. ಸಂಧ್ಯಾವಂದನೆ ಬೇರೆ ಯಾವುದೇ ಫಲಾಪೇಕ್ಶೆಯಲ್ಲಿ ಮಾಡದೇ ಇದು ನಿತ್ಯ ಆಚರಿಸಲೇಬೇಕಾದ ಕರ್ಮ ಎನಿಸಲ್ಪಡುತ್ತದೆ. 

ಓಂ ಭೂರ್ ಭುವ ಸ್ವಃ ಅಂದರೆ ಇದು ಮೂರು ವ್ಯಾಹೃತಿ ಅಂತ ಕರೆಯಲಾಗುತ್ತದೆ. ಓಂ ಕಾರದ ಬೀಜಾಕ್ಷರದಿಂದ ತೊಡಗಿ, ಭೂ.. ಅಂದರೆ ಭೂಮಿ, ಭುವಃ ಅಂದರೆ ಆಕಾಶ, ನಂತರ ಸ್ವಃ ಅಂದರೆ ಸ್ವರ್ಗ...ಇದು ಒಂದು ಜ್ಯೋತಿಸ್ವರೂಪನಾದ ಭಗವಂತನಲ್ಲಿ ಬೇಡಿಕೊಳ್ಳುವುದು.. ಭೂಮಿ ಆಕಾಶ ಸ್ವರ್ಗದಲ್ಲಿ ತತ್ ಸವಿತಾ ..ಅಂದರೆ ಆ ಸೂರ್ಯನಲ್ಲಿ ತಂದೆಯನ್ನು ಕಂಡು ಹೇಳುವುದು, ವರೇಣ್ಯಂ ಅಂದರೆ ಅತ್ಯಂತ ಶ್ರೇಷ್ಠವಾದ ಭರ್ಗೋ ಅಂದರೆ ಜ್ಯೋತಿ ಸ್ವರೂಪ ಆ ಜ್ಯೋತಿಯನ್ನೆ ದೇವ ಎಂದು ಪರಿಗಣಿಸಿ ಆ ಪರಬ್ರಹ್ಮನ ಕುರಿತಾಗಿ ತನ್ನ ಶ್ರೇಯಸ್ಸಿಗಾಗಿ ಆ ಜ್ಞಾನವನ್ನು ಪ್ರಚೋದಿಸು ಅಂತ ಈ ಮಂತ್ರದ ತಾತ್ಪರ್ಯ. ಪ್ರಚೋದಯಾತ್ ಎನ್ನುವುದಕ್ಕೆ ಆ ಜ್ಯೋತಿ ಸ್ವರೂಪಕ್ಕೆ ನಮಸ್ಕರಿಸುತ್ತೇನೆ ಅಂತಲೂ ಇದೆ. .  ಸೂರ್ಯನ ಬೆಳಕಿನಲ್ಲಿ ಭಗವಂತನು ಅಡಗಿದ್ದಾನೆ. ಆ ಬೆಳಕನ್ನು ಸರಿಸಿ ಭಗವಂತನ ಸ್ವರೂಪವನ್ನು ತೋರಿಸು ಅಂತಲೂ ಈ ಮಂತ್ರದ ವಿಶ್ಲೇಷಣೆ ಇದೆ. ಭಗವಂತ ಎಂದರೆ ಜ್ಞಾನಸ್ವರೂಪ ಆ ಜ್ಞಾನದ  ದರ್ಶನವೇ ಈ ಗಾಯತ್ರೀ ಮಂತ್ರ. ಧಿಯಃ ಯಃ ನಃ ಪ್ರಚೋದಯಾತ್ ಆ ಧೀಶಕ್ತಿ ನನ್ನ ಮನಸ್ಸಿನಲ್ಲಿ ಇಳಿದು ನನ್ನ ಮನಸ್ಸಿನಲ್ಲಿ ಒಳ್ಳೆಯದು ಏನಿದೆಯೋ ಅದಕ್ಕೆ ಪ್ರಚೋದನೆಯಾಗಲಿ. 

  ಗಾಯತ್ರೀ ಮಂತ್ರದ ವಿಶೇಷತೆ ಎಂದರೆ ದೈವದ ಸ್ವರೂಪವನ್ನು ಪೂರ್ಣವಾಗಿ ನಮ್ಮ ಕಲ್ಪನೆಗೆ ಬಿಟ್ಟು ನಮ್ಮ ಆತ್ಮಸ್ವರೂಪವನ್ನೇ ನಾವು ಜಾಗೃತಗೊಳಿಸಿ ಅದರಲ್ಲೇ ಭಗವಂತನನ್ನು ಕಾಣುವುದಾಗಿದೆ. ಸಮುದ್ರದ ಮುಂದೆ ನಿಂತು ಸಮುದ್ರವನ್ನು ನೋಡಿದಂತೆ. ಕೇವಲ ನಮ್ಮ ದೃಷ್ಟಿಗೆ ಎಷ್ಟು ಸಾಧ್ಯವೋ ಅಷ್ಟು ಮಾತ್ರ ನಮ್ಮಿಂದ ನೋಡಬಹುದು. ಪೂರ್ಣವಾದ ಸಮುದ್ರವನ್ನು ನೋಡುವುದಕ್ಕೆ ನಮಗೆ ಸಾಧ್ಯವಾಗುವುದಿಲ್ಲ. ಆದರೆ ಮನಸ್ಸಿನಿಂದ ಗ್ರಹಿಸಬಹುದು.  ಅದಕ್ಕೆ ಜ್ಞಾನ ಬೇಕು. 

ಇನ್ನು ಇಪ್ಪತ್ತನಾಲ್ಕು ಅಕ್ಷರಗಳು ಗಾಯತ್ರೀ ಮಂತ್ರದಲ್ಲಿ ಇದೆ. ಇವುಗಳ ಬಗ್ಗೆ ಹಲವು ವ್ಯಾಖ್ಯಾನಗಳು ಅಧ್ಯಯನದಲ್ಲಿ ವೇದ್ಯವಾಗುತ್ತದೆ. ಗಾಯತ್ರೀ ಮಂತ್ರದ ಒಂದೊಂದು ಅಕ್ಷರದ ಉಚ್ಚಾರಣೆಯ ಪರಿಣಾಮ ನಮ್ಮ ದೇಹದಲ್ಲಿ ಮನಸ್ಸಿನಲ್ಲಿ ಹಲವು ಪರಿಣಾಮವನ್ನು ಉಂಟು ಮಾಡುತ್ತದೆ. ಹನ್ನೊಂದು ಇಂದ್ರಿಯಗಳು, ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯದ ಮೇಲೆ ಇದು ನಿಯಂತ್ರಣ ಸಾಧಿಸುತ್ತದೆ.  ನಮ್ಮ ದೇಹದ ನಾಡಿಯ ಮೇಲೆ ಪರಿಣಾಮ ಬೀರುತ್ತದೆ. ನಾಡಿಯಲ್ಲಿ ಚೈತನ್ಯ ಪ್ರಚೋದಿಸಲ್ಪಡುತ್ತದೆ. ನಮ್ಮ ದೇಹದಲ್ಲಿ 72000 ನಾಡಿಗಳು ಇವೆ. ಅಂದರೆ ಒಂದು ಸಾವಿರ ಸಂಖ್ಯೆಯಲ್ಲಿ  ಗಾಯತ್ರೀ  ಜಪ ಮಾಡಿದಾಗ  ಇಪ್ಪತ್ತನಾಲ್ಕು ಸಾವಿರ  ನಾಡಿ ಶಕ್ತಿಯನ್ನು ಪಡೆದು ಕೊಂಡು ಜಾಗೃತವಾಗುತ್ತದೆ.  ಮೂರು ಹೊತ್ತು ಒಂದು ಸಾವಿರದಂತೆ ದಿನಕ್ಕೆ ಮೂರು ಸಾವಿರ ಮಂತ್ರ ಜಪವನ್ನಷ್ಟೆ ಮಾಡುವುದಕ್ಕೆ ಮನುಷ್ಯ ದೇಹಕ್ಕೆ ಸಾಮಾರ್ಥ್ಯವಿರುತ್ತದೆ. ಅದಕ್ಕಿಂತ ಹೆಚ್ಚಿಗೆ ಜಪವನ್ನು ಮಾಡಿದರೆ ಆ ಶಕ್ತಿಯನ್ನು ತಾಳಿಕೊಳ್ಳುವುದಕ್ಕೆ ಮನುಷ್ಯನಿಗೆ ಸಾಧ್ಯವಿಲ್ಲ. ಇದು ಹಲವು ಸಲ ಚಿತ್ತ ವಿಕಲ್ಪಕ್ಕೆ ಇನ್ನಿತರ ತೊಂದರೆಗೂ ಕಾರಣವಾಗಬಲ್ಲುದು. ಇದಕ್ಕೆ ಹಲವು ಸಾಕ್ಷಿಗಳು ಇವೆ.  ಹಾಗಾಗಿ ಗಾಯತ್ರಿ ಮಂತ್ರದ ಜಪವನ್ನು ದಿನಕ್ಕೆ ಮೂರು ಸಾವಿರಕ್ಕಿಂತ ಅಧಿಕ ಹೇಳುವುದು ಅಷ್ಟು ಸೂಕ್ತ ಅಲ್ಲ ಅಂತ ವಿದ್ವಾಂಸರು ಹೇಳುತ್ತಾರೆ

ಇನ್ನು ಈ ಗಾಯತ್ರಿ ಮಂತ್ರದ ಅರ್ಥವನ್ನು ಅರಿತು ನಾವು ಇದರ ಜಪವನ್ನು ಮಾಡಿದರೆ ನಮಗೆ ಅದರ ಮಹತ್ವದ ಅರಿವಾಗಿ ಅದರಲ್ಲಿ ಏಕಾಗ್ರತೆ ಒದಗಿ ಬರುತ್ತದೆ ಮಾತ್ರವಲ್ಲ ಅದು ಕೇವಲ ಕಾಟಾಚಾರದ ಜಪವಾಗಿರುವುದಿಲ್ಲ. ವಾಸ್ತವದಲ್ಲಿ ನಮ್ಮ ಸಂಧ್ಯಾವಂದನೆಯಂತಹ ನಿತ್ಯ ಕರ್ಮಗಳು ದಿನಾ ಚರ್ವಿತ ಚರ್ವಣವಾಗುವುದರಿಂದ ಮತ್ತು ಅದರ ಬಗ್ಗೆ ವಿವೇಚನೆ ಇಲ್ಲದಿರುವುದರಿಂದ ಅದು ಕೇವಲ ಕಾಟಾಚಾರವಾಗಿರುತ್ತದೆ. ಆದರೂ ನಿತ್ಯ ಸಂಧ್ಯಾವಂದನೆಯಲ್ಲಿ ಹತ್ತು ನಿಮಿಷ ಧ್ಯಾನ ಪ್ರಕ್ರಿಯೆಯನ್ನು ಸೇರಿಸಿದರೆ ಅದು ಪ್ರತಿನಿತ್ಯ ಹೊಸ ಅನುಭವವನ್ನು ಕೊಡುವುದರಿಂದ ಚರ್ವಿತ ಚರ್ವಣವಾಗುವುದಿಲ್ಲ. 

  ಸಾಮಾನ್ಯವಾಗಿ ನಿತ್ಯ ಸಂಧ್ಯಾವಂದನೆಯಲ್ಲಿ ನೂರ ಎಂಟು ಸಲ ಗಾಯತ್ರಿ ಜಪ ಮಾಡಬೇಕು ಎನ್ನುವುದಿದೆ. ಆದರೆ ಸಮಯದ ಅಭಾವದಿಂದ ಇನ್ನಿತರ ಕಾರಣಗಳಿಂದ ಕೇವಲ ಹತ್ತು ಸಲವಾದರೂ ಹೇಳಬೇಕು ಎನ್ನುವುದು ನಿಯಮ. ಆದರೆ ಇದು ಹೇಗಾಗಿದೆ ಎಂದರೆ,  ಹತ್ತಕ್ಕಿಂತ ಒಂದು ಬಾರಿಯೂ ಹೆಚ್ಚಿಗೆ ಹೇಳದೆ ಇರುವಂತಹ ಕಾಟಾಚಾರ ಬಳಕೆಯಲ್ಲಿದೆ. ಇದರಿಂದ ಏನು ಸತ್ಫಲ ಸಿಗಬಹುದು?  ಇನ್ನು ಸಂಧ್ಯಾವಂದನೆ ಆಚರಿಸುವ ರೀತಿಯೂ ಅದೇ ರೀತಿಯಲ್ಲಿ   ಎನೋ ಒಂದು ಬೆಳಗ್ಗೆ ಹತ್ತು ನಿಮಿಷದ ಕೆಲಸ ಅಂತ ಸೀಮಿತ ಗೊಳಿಸುತ್ತಾರೆ. ಮುಖ್ಯವಾಗಿ ಏಕಾಗ್ರತೆ ಇಲ್ಲ. ಸ್ವಚ್ಚ ಮನಸ್ಥಿತಿ ಇಲ್ಲ. ಕೇವಲ ಯಾಂತ್ರಿಕ ಕ್ರಿಯೆ. ಸ್ನಾನ ಮಾಡಿ,  ಮಡಿಯಲ್ಲಿ ಯಾರನ್ನುಮುಟ್ಟದೇ ಶುಭ್ರವಾಗಿ , ಮನಸ್ಸಿನಿಂದಲು ಅಷ್ಟೇ ಶುಭ್ರವಾಗಿ ಯಾವುದೇ ಮನೋವಿಕಾರವಿಲ್ಲದೇ ಇದನ್ನು ಮಾಡಬೇಕು. ಮಡಿ ಎಂದರೆ ಭಗವಂತನಿಗೆ ಸಮೀಪವಾಗುವದು ಎಂದರ್ಥ. ಮಡಿ ಕೇವಲ ದೇಹದಿಂದ ಮಾತ್ರವಲ್ಲ ಮನಸ್ಸಿನಿಂದಲೂ ಮಡಿಯಾಗಬೇಕು. ಏಕಾದಶ ಇಂದ್ರಿಯಗಳಿಂದಲೂ ನಾವು ಪರಿಶುದ್ದರಾಗಬೇಕು.  ಮನುಷ್ಯನ ಜನ್ಮವೇ ಪರಿಶುದ್ದಿಯೆಡೆಗೆ ಸಾಗುವ ಅರ್ಥವಿರುವುದರಿಂದ ಮಡಿ ಎಂಬುದಕ್ಕೆ ವಿಶೇಷ ಮಹತ್ವ ಸನಾತನ ಧರ್ಮ ಸಂಸ್ಕೃತಿಯಲ್ಲಿದೆ. ಸಂಧ್ಯಾವಂದನೆ ಇದು ಶ್ರದ್ಧೆಯಿಂದ ಮಾಡುವ ಕೆಲಸ. ಆದರೆ ನಮ್ಮ ಜೀವನ ಶೈಲಿ ಹೇಗಾಗಿದೆ ಎಂದರೆ,  ಸಂಧ್ಯಾವಂದನೆ ಸಮಯ ಇರುವಾಗ ಮಾಡುವ ಕರ್ಮವಾಗಿದೆ. ಜನಿವಾರ ಅವಶ್ಯ ಇರುವಾಗ ಧರಿಸುವ ಆಭರಣವಾಗಿದೆ.  ಅದನ್ನು ಆಭರಣ ಅಂತ ಉಪಮೆ ಕರಿಸುವುದು ತಪ್ಪು.  ತೆಗೆಯಲೇ ಬಾರದು ಅದೂ ಭಾರವಾಗುವುದಾದರೆ ಬ್ರಾಹ್ಮಣ್ಯ ಎಂಬ ಶಬ್ದಕ್ಕೆ ಅರ್ಥ ಎಲ್ಲಿಯದು? ಇನ್ನು ಸಂಧ್ಯಾವಂದನೆ ಆಚರಿಸುವಾಗಲೂ ಯಾರಲ್ಲೋ ಮಾತನಾಡುತ್ತ ಮೊಬೈಲ್ ಗೆ ಅಥವಾ ಇನ್ನಿತರ ಕರೆಗಳಿಗೆ ಕಿವಿಗೊಡುತ್ತ ಬಿಡುವಾದಾಗ ಮಾಡುವ ಕಾರ್ಯ ಸಂಧ್ಯಾವಂದನೆಯಾಗಿದೆ. ಬೆಳಗ್ಗೆ ಎಚ್ಚರವಾದ ತಕ್ಷಣ ಯಾರಲ್ಲೂ ಮಾತನಾಡದೆ ಪರಿಶುದ್ದನಾಗಿ ಸಂಧ್ಯೆಯನ್ನು ಮಾಡಬೇಕು. ಅದು ಆದ್ಯ ಕರ್ತವ್ಯ.  ದಿನದ ಇಪ್ಪತ್ತನಾಲ್ಕು ಘಂಟೆಗಳಲ್ಲಿ ಹತ್ತು ನಿಮಿಷ ಕೇವಲ ಇದಕ್ಕಾಗಿ ಮೀಸಲಿಡಲಾಗದ ಸ್ಥಿತಿಯಲ್ಲಿ ಸಂಧ್ಯಾವಂದನೆ ಮಾಡುವುದಾದರೆ  ಇದು ಶ್ರದ್ಧೆ ಎನಿಸುವುದಿಲ್ಲ. ಪ್ರಾಣಾಯಾಮ ಅಂತ ಮೂಗಿನಲ್ಲಿ ಕೈ ಹಿಡಿದು ಮಂತ್ರ ಉಚ್ಚರಿಸಿದರೆ ಅದು ಪ್ರಾಣಾಯಾಮವಾಗುವುದಿಲ್ಲ ಎಂಬ ಪರಿಜ್ಞಾನ ನಮ್ಮಲ್ಲಿರಬೇಕು. ಆಚಮನ ಪ್ರಾಣಾಯಾಮದ ವಿಧಾನ ಮತ್ತು ಅದರ ಅರ್ಥವನ್ನು ಮೊದಲು ತಿಳಿಯಬೇಕು. ಅದರ ಉದ್ದೇಶವನ್ನು ಅರ್ಥವಿಸಿಕೊಳ್ಳಬೇಕು. ಇವೆರಡೂ ಅಂತರಂಗವನ್ನು ಶುದ್ಧಿಗೊಳಿಸುವ ಕ್ರಿಯೆಗಳು.  ಗಡಿಬಿಡಿಗೆ ಹೆಗಲ ಮೇಲೆ ಜನಿವಾರ ಅಲ್ಲದೆ ಒಂದು ಶಲ್ಯ ಇರಲೇಬೇಕು. ಇಲ್ಲವಾದರೆ ಅದು ಅಪರ ಕ್ರಿಯೆಯಾಗಿಬಿಡುತ್ತದೆ. ಹಾಗಾಗಿ ಸಂಧ್ಯಾವಂದನೆಯ ಮಹತ್ವ ತಿಳಿಯದೇ ಸಂಧ್ಯಾವಂದನೆ ಮಾಡಿದ ಹಾಗೆ ಗಾಯತ್ರೀ ಜಪವೂ ತನ್ನ ಮಹತ್ವವನ್ನು ಕಳೆದುಕೊಳ್ಳಬಹುದು. ಬ್ರಾಹ್ಮಣ ಎಂದರೆ  ಪರಬ್ರಹ್ಮದ ಅನ್ವೇಷಣೆ.  ಬ್ರಾಹ್ಮಣ  ಅದರ ಅನ್ವೇಷಣೆಯಲ್ಲೇ ಸಾಗುವವನು ಎಂದು ತಿಳಿಯಲಾಗುತ್ತದೆ. 

ಯಾವುದೇ ಕಾರ್ಯವಾದರೂ ನಾವು ಅದರ ಮಹತ್ವವನ್ನು ಅರಿತು ಶ್ರಧ್ದೆಯಿಂದ ಆಚರಿಸಬೇಕು. ಜ್ಞಾನಸ್ವರೂಪವೇ ಭಗವಂತ ಸ್ವರೂಪ. ಅದನ್ನೇ ಜ್ಞಾನೊದಯ ಅಂತ ಕರೆಯುತ್ತಿದ್ದರು. ಇದನ್ನು ತಿಳಿಯದೇ ಮಾಡಿದರೆ ಅದು ಕೇವಲ ಕಾಟಾಚಾರವಾಗುತ್ತದೆ. ಬ್ರಾಹ್ಮಣ ಎಂದರೆ ಕೇವಲ ಬ್ರಾಹ್ಮಣನಾಗಿ ಜನ್ಮದಿಂದ ಬರುವ ಪದವಿಯಲ್ಲ. ಆಚರಣೆಯಿಂದ ಲಭ್ಯವಾಗುವಂತಹ ಪದವಿ. ಜನ್ಮದಿಂದ ಕ್ಷತ್ರಿಯನಾಗಿ ತನ್ನ ಸಾಧನೆಯಿಂದ ಬ್ರಹ್ಮ ಪದವಿಗೇರಿದ ವಿಶ್ವಾಮಿತ್ರನೇ ಇದಕ್ಕೆ ಸಾಕ್ಷಿ. ನನ್ನ ಪ್ರಕಾರ ಮನುಷ್ಯನಾದವನು ನಾಲ್ಕು ವಿಷಯಗಳಲ್ಲಿ ಕಾಟಾಚಾರವನ್ನು ತೋರಬಾರದು. ಒಂದು ಸಂಧ್ಯಾವಂದನೆ ಜತೆಯಲ್ಲಿ   ಯೋಗಾಭ್ಯಾಸ ಇವೆರಡೂ ಮನಸ್ಸನ್ನೂ ಬದುಕನ್ನೂ ರೂಪಿಸುವ ವಿಷಯಗಳು ಇನ್ನು ಮೂರನೆಯದು ಪಿತೃ ಕಾರ್ಯ ಪ್ರತಿಯೊಬ್ಬನೂ ಅದರಲ್ಲಿ ಬ್ರಾಹ್ಮಣನೆನಿಸಿದನು ಪಿತೃಗಳಿಗೆ ಪಿಂಡದಾನವನ್ನು ಮಾಡಬೇಕು. ಮತ್ತು ತಿನ್ನುವ ಆಹಾರ ಮತ್ತು ಅದನ್ನು ತಯಾರಿಸುವುದು. ಇವುಗಳು ಕೇವಲ ಕಾಟಾಚಾರವಾದರೆ ಮನುಷ್ಯನ ಬದುಕಿಗೆ ಅರ್ಥವೇ ಇರುವುದಿಲ್ಲ. 

ಮನು ಎಂದರೆ ಮನನ.. ಮನಸ್ಸಿನ ಒಳಗಿನ ಅರಿವು. ಮನುಷ್ಯನಿಗೆ ಮಾತ್ರವೇ ಈ ಯೋಚನೆಯ ಶಕ್ತಿ ಇರುತ್ತದೆ. ಮನು ಇದರ ಬಗ್ಗೆ ತಿಳಿಯದೇ ಮೂರ್ಖರಂತೆ ಮನುವಿನ  ಬಗ್ಗೆ ವಿಚಿತ್ರ ವ್ಯಾಖ್ಯಾನಗಳನ್ನು ಮಾಡುತ್ತಾರೆ. ಮನು ಎಂದರೆ ತಿಳಿದುಕೊ ಅಂದರೆ ಇದು ಜ್ಞಾನದ ಸಂಕೇತ. ಎಲ್ಲಿ ಅರಿವು ಇರುತ್ತದೋ ಅಲ್ಲಿ ಭಗವಂತನಿದ್ದಾನೆ. 

ಮೇಲೆ ಹೇಳಿದ ವಿಷಯಗಳು ಕೇವಲ ನನ್ನ ಜ್ಞಾನಕ್ಕೆ ಸೀಮಿತವಾದ ವಿಚಾರಗಳು. ಈ ಜ್ಞಾನಕ್ಕೆ ಮಿಗಿಲಾಗಿ ಇನ್ನೂ ಇವೆ. ಹೇಳಿದ ವಿಚಾರಗಳಲ್ಲಿ ತಪ್ಪು ಇದ್ದರೂ ಅದರ ಹಿಂದೆ ಇರುವ ಭಾವ ಒಂದೇ ನಾವು ಭಗವಂತನನ್ನು ಅರಿತು ಆರಾಧಿಸುವುದರಲ್ಲಿ ಹೆಚ್ಚು ಪರಿಣಾಮವಿದೆ. ನಮ್ಮ ಹೆತ್ತ ಅಪ್ಪ ಅಮ್ಮನನ್ನು ಅರಿತು ನಾವು ಅವರಲ್ಲಿ ನಡೆದುಕೊಳ್ಳುವಂತೆ ಅದರಲ್ಲಿ ಬದುಕಿನ ಸಾರ್ಥಕತೆ ಇರುತ್ತದೆ. 


ಓಂ ಶಾಂತಿಃ ಶಾಂತಿಃ ಶಾಂತಿಃ


 


Wednesday, November 26, 2025

ಭಗವಂತನ ಅರಿವು



ಭಕ್ತ ಪ್ರಹ್ಲಾದನ ಕಥೆ ಪುರಾಣದಲ್ಲಿ ಕೇಳಿರಬಹುದು. ಹರ ಎನ್ನುವದರಲ್ಲೂ ಹರಿಯನ್ನೇ ಕಾಣುವ ಪ್ರಹ್ಲಾದನ ನಿರ್ಭೇದ ಭಕ್ತಿ ಒಂದು ಕಡೆ. ಹರನೊಬ್ಬನೇ ಹರಿ ಇಲ್ಲ ಎನ್ನುವ ಹಿರಣ್ಯ ಕಶಿಪುವಿನ ವಿಕಲ್ಪದ ಭಕ್ತಿ ಇನ್ನೊಂದೆಡೆ.  ಭಗವಂತನ ಪೂರ್ಣ ಅರಿವು ಪ್ರಹ್ಲಾದನನ್ನು ಭಕ್ತನ ಪದವಿಗೇರಿಸಿದರೆ, ಹಿರಣ್ಯ ಕಶಿಪುವಿನ ಅಪೂರ್ಣ ಭಕ್ತಿ ನರಸಿಂಹನ ಶಿಕ್ಷೆಗೆ  ಬಲಿಯಾಗುವಂತೆ ಮಾಡಿತು. ಹಿರಣ್ಯ ಕಶಿಪುವಾಗಲಿ , ಹಿರಣ್ಯಾಕ್ಷನಾಗಲೀ ಅಪ್ರತಿಮ ಭಕ್ತಿಯನ್ನು ತೋರಿದವರು. ಅಖಂಡ ತಪಸ್ಸನ್ನು ಮಾಡಿದವರು. ಆದರೆ ಅವರು ಭಗವಂತನನ್ನು ಪೂರ್ಣವಾಗಿ ತಿಳಿಯುವಲ್ಲಿ ಸೋತು ಹೋದರು. ಹರನೊಬ್ಬನೇ ಅಂತ ಹೇಳಿದ ಈ ದಾನವ ಹರನಲ್ಲಿ ಹರಿಯೂ ಇದ್ದಾನೆ ಎಂಬುದನ್ನು ತಿಳಿಯದೇ ಹೋದ. ತಪಸ್ಸು ಹಲವು ದಾನವರು ಮಾಡಿ ದೈವದ ಅನುಗ್ರಹವನ್ನು ಗಳಿಸಿರಬಹುದು. ಆದರೆ ಪರಿಣಾಮ ಮಾತ್ರ ವಿಭಿನ್ನ. 

ವಿಶ್ವಾಮಿತ್ರ ಪಾಯಸವನ್ನು ತಲೆಯಲ್ಲಿಟ್ಟು ಅದು ಆರದಂತೆ ನೋಡಿ ಸಾಕ್ಷಾತ್ಕರವನ್ನು ಪಡೆದ. ಆತನಿಗೆ  ಸವಿತೃ ಮಂತ್ರದ ದರ್ಶನವಾಯಿತು. ಅದೇ ಗಾಯತ್ರಿ ಮಂತ್ರವಾಯಿತು. ವಿಶ್ವಾ ಮಿತ್ರನಿಗೆ  ಇಂದ್ರಿಯದಿಂದ ಅಂದರೆ ಕಣ್ಣಿನಿಂದ ದರ್ಶನ ಎನ್ನುವುದಕ್ಕಿಂತ ಆತನಿಗೆ ಅಂತೀದ್ರಿಯಕ್ಕೆ ದರ್ಶನವಾಯಿತು. ಜ್ಯೋತಿ ಸ್ವರೂಪದ ಆ ಶಕ್ತಿಯನ್ನು ಆತ ಅರ್ಥವಿಸಿಕೊಂಡ. ಭಗವಂತನ ಅಸ್ತಿತ್ವ ಇರುವುದೇ ಭಗವಂತನನ್ನು ಅರಿಯುವಲ್ಲಿ. 

ನಾವು ಯಾವುದೇ ವ್ಯಕ್ತಿಯನ್ನಾಗಲೀ ವಿಷಯವನ್ನಾಗಲಿ ಸರಿ ತಿಳಿದು ಅಧ್ಯಯನ ಮಾಡಿ ನಂಬುವುದರಲ್ಲಿ ಅರ್ಥವಿದೆ. ಆ ನಂಬಿಕೆ ಶಾಶ್ವತವಾಗಿ ವಿಶ್ವಸನೀಯವಾಗಿರುತ್ತದೆ.  ಆದರೆ ಸರಿಯಾದ ಜ್ಞಾನವಿಲ್ಲದೇ ಅರಿವಿಲ್ಲದೇ ನಂಬಿದಾಗ ನಮ್ಮ ತಿಳುವಳಿಕೆಯು ಅಪೂರ್ಣವಾಗಿ ನಿರ್ಧಾರಗಳಿಗೆ ಇನ್ನೊಬ್ಬರನ್ನು ಆಶ್ರಯಿಸಬೇಕಾಗುತ್ತದೆ.  ಧರ್ಮ ದೇವರ ವಿಚಾರವೂ ಬಂದಾಗ ಇದೇ ಮಾತು ಅನ್ವಯವಾಗುತ್ತದೆ. ಭಗವದ್ಗೀತೆಯ ಕೊನೆಯಲ್ಲಿ ವಿಮೃಶ್ಯೇಷೇಣ ಯಥೇಚ್ಚಸಿ ತಥಾ ಕುರು , ವಿವೇಚಿಸಿ ನಿನ್ನಿಷ್ಟದಂತೆ ಮಾಡು ಅಂತ ಭಗವಂತನು ಹೇಳಿರುವಾಗ ವಿವೇಚನೆ ಅರಿವು ಎಂಬುದರ ಮೌಲ್ಯ ತಿಳಿದು ಬರುತ್ತದೆ. ಇಂದು ಅಪೂರ್ಣವಾದ ಅರಿವು ಬಹಳ ಅಪಾಯಕಾರಿ ಪೃವೃತ್ತಿಯನ್ನು ಹುಟ್ಟು ಹಾಕಿದೆ. ದೇವರು ಧರ್ಮದ ಬಗ್ಗೆ ಸರಿಯಾದ ತಿಳುವಳಿಕೆಯಿಲ್ಲ ತಮಗೆ ತೋಚಿದಂತೆ ಮೂರ್ಖತನದ ವ್ಯಾಖ್ಯಾನವನ್ನು ಹಲವರು ಮಾಡುವುದನ್ನು ಕಾಣುತ್ತಿದ್ದೇವೆ. ಪ್ರತೀ ನಾಸ್ತಿಕತೆ ಹುಟ್ಟುವುದು ಅದು ಎಂಬಲ್ಲಿಂದ. ಅದು ಎಂಬುದನ್ನು ನಂಬಿದರೆ ಅಲ್ಲಿ ನಾಸಿಕತೆ ಇರುವುದೇ ಇಲ್ಲ. ನಾಸ್ತಿಕತೆಯಲ್ಲೂ ಆಸ್ತಿಕತೆಯನ್ನು ಇಲ್ಲ ಎನ್ನುವುದಕ್ಕೆ ಸಾಧ್ಯವಿಲ್ಲ. 

ಪರಮಾತ್ಮನನ್ನು ಅರಿಯಬೇಕಾದರೆ ನಮ್ಮ ಆತ್ಮವನ್ನು ಅರಿಯಬೇಕು. ಕರ್ಮದಿಂದಲೇ ಈ ಅರಿವನ್ನು ಪಡೆಯುವುದಕ್ಕೆ  ಸಾಧ್ಯ. ಮೊದಲಿಗೆ ಕರ್ಮದ ಅರಿವನ್ನು ಗಳಿಸಿ ಆ ಮೂಲಕ ಜ್ಞಾನವನ್ನು ಪಡೆಯಬೇಕು. ನಾವು ಕರ್ಮಭೃಷ್ಟರಾದರೆ ಪರಮಾತ್ಮನನ್ನು ತಿಳಿಯುವುದಕ್ಕೆ ಸಾಧ್ಯವಿಲ್ಲ. ಕರ್ಮವೂ ಜ್ಞಾನದ ಉದ್ದೇಶದಿಂದ ಕೂಡಿರಬೇಕು. ಇಲ್ಲವಾದರೆ ಅಲ್ಲಿ ಸತ್ಪಲ ಇರುವುದಿಲ್ಲ. ಅರಿವಿಲ್ಲದೇ  ಜ್ಞಾನದ ಉದ್ದೇಶವಿಲ್ಲದ ಕರ್ಮವು ಕೇವಲ ಕಾಟಾಚಾರವಾಗುತ್ತದೆ. ಯಾರೋ ಹೇಳಿದ್ದಾರೆ , ಯಾರೋ ಅನುಸರಿಸುತ್ತಾರೆ ಎಂದು, ನಮ್ಮ ಅರಿವಿಗೆ ಯಾರನ್ನೋ ಆಶ್ರ್ಯಯಿಸಿ ಮಾಡುವುದು ಸರಿಯಲ್ಲ. ಮೊದಲಿಗೆ ಕರ್ಮವನ್ನು ಅರಿಯಬೇಕು. 

ಅಂಗಡಿಗೆ ತೀರಾ ಕಡು ಬಡವ ಭಿಕ್ಷುಕನ ರೀತಿ ಬಂದು ಅಲ್ಲಿದ್ದ ಯಾವುದೋ ಒಂದು ವಸ್ತು ಬೇಕು ಎಂದರೆ ಅಂಗಡಿಯವನು ಅದನ್ನು ಕೊಡುವ ಮೊದಲು ಗಟ್ಟಿಯಾಗಿ ಅದರ ಬೆಲೆ ಹೇಳುತ್ತಾನೆ. ಯಾಕೆಂದರೆ, ಅಷ್ಟು ಹಣ ಆತನಲ್ಲಿದೆಯೇ? ಅದನ್ನು ಕೊಂಡು ಕೊಳ್ಳೂವುದಕ್ಕೆ ಆತ ಸಮರ್ಥನೆ?  ಒಂದು ವ್ಯವಹಾರ ಮಾಡುವಾಗ ಗ್ರಾಹಕನ ಬಗ್ಗೆ  ಅರಿವು ಇರಬೇಕಾದದ್ದು ಆತನ ವ್ಯವಹಾರ ಧರ್ಮ. ಪ್ರತೀ ವ್ಯವಹಾರದಲ್ಲೂ ನಾವು ಇದೇ ರೀತಿ ವ್ಯವಹರಿಸುತ್ತೇವೆ.  ಅದೇ ರೀತಿ ನಾವು ಮಿತ್ರರಾಗಿ ಯಾವುದೇ ವ್ಯಕ್ತಿಯನ್ನು ಅಂಗೀಕರಿಸುವಾಗ, ವಿವಾಹ ಮುಂತಾದ ಸಂಬಂಧಗಳನ್ನು ತೊಡಗಿಸುವಾಗ ಸಂಬಂಧಿಸಿದ ವ್ಯಕ್ತಿಗಳ ಪೂರ್ವಾಪರ ತಿಳಿಯುವುದಕ್ಕೆ ಪ್ರಯತ್ನಿಸುತ್ತೇವೆ. ಅದೇ ರೀತಿ ನಾವು ದೇವರನ್ನು ಅರಿತು ಪೂಜಿಸಿದಾಗ ಅದರಲ್ಲಿ ಹೆಚ್ಚು ಶ್ರದ್ಧೆ ಭಕ್ತಿಯನ್ನು ಹೊಂದುವುದಕ್ಕೆ ಸಾಧ್ಯವಾಗುತ್ತದೆ. ಯಾರೋ ಹೇಳಿದರು ಅಥವಾ ಯಾರೋ ಯಾವುದೋ ರೀಯಲ್ಲಿ ಮಾಡಿದರು ಎಂದು ಅದನ್ನು ಅನುಸರಿಸುವುದಕ್ಕಿಂತ ನಿರ್ದಿಷ್ಟವಾಗಿ ದೋಷರಹಿತವಾಗಿ  ಅರಿತು ಮಾಡುವಾಗ  ಅದು ಹೆಚ್ಚು ಅರ್ಥಪೂರ್ಣವಾಗುತ್ತದೆ. ಅದನ್ನೇ ಭಗವದ್ಗೀತೆಯ ಕೊನೆಯಲ್ಲಿ ಹೇಳಿದ್ದು ವಿವೇಚಿಸಿ ನಿನ್ನಿಷ್ಟದಂತೆ ನಿರ್ಧರಿಸು. 

ಪರಮಾತ್ಮನನ್ನು ಅರಿತಾಗ ಆತನ ಅಸ್ತಿತ್ವ ಮತ್ತೂ ಸಮೀಪವಾಗುತ್ತದೆ. ಹಿಂದೆ ಭಗವಂತನ ದರ್ಶನಕ್ಕಾಗಿ ಆತನನ್ನು ಕಾಣುವುದಕ್ಕಾಗಿ ವರ್ಷಾನುಗಟ್ಟಲೆ ಋಷಿಗಳು ತಪಸ್ಸನ್ನು ಮಾಡುತ್ತಿದ್ದರು. ಕಾಡು ಮೇಡು ಗುಹೆ ಗಹ್ವರ ಎಲ್ಲ ಕಡೆ ಅಲೆದರು.  ಯಾವುದೋ ಒಂದು ಕಾಲದಲ್ಲಿ ಕೆಲವರಿಗೆ ಭಗವಂತ ಪ್ರತ್ಯಕ್ಷವಾಗುತ್ತಿದ್ದ. ಬೌತಿಕವಾಗಿ ದೇವರನ್ನು ಕಾಣುತ್ತಾರೋ ಇಲ್ಲವೋ ಪ್ರಶ್ನೆಯಲ್ಲ. ಆದರೆ ಅವರಿಗೆ ಭಗವಂತನ ಪ್ರತ್ಯಕ್ಷ ಅನುಭವವಾಗುತ್ತಿತ್ತು. ನಮ್ಮ ಕರ್ಮದ ರೀತಿಯಲ್ಲಿ ಅದು ನಮಗೂ ಸಾಧ್ಯವಾಗಬಹುದು. ಅದಕ್ಕೆ ಕರ್ಮವನ್ನು ಅರಿತು ಆಚರಿಸಬೇಕು ಅಂತ ಜ್ಞಾನಿಗಳು ಹೇಳುತ್ತಾರೆ. ಇದೇ ಕಾರಣದಿಂದ  ಭಗವಂತನನ್ನು ಜ್ಞಾನ ಸ್ವರೂಪ ಎಂದು ಹೇಳುತ್ತಾರೆ. ಜ್ಞಾನ ಎಂದರೆ ಪರಮಾತ್ಮ. ಹರಿಯೋ ಹರನೋ ಅಥವಾ ಇನ್ನಾವುದೋ ರೂಪದಲ್ಲಿ ಭಾವದಲ್ಲಿ ಇರಬಹುದು. ಅದನ್ನು ಒಂದೇ ಅಂತ ಅರಿಯುವುದರಲ್ಲಿ ಭಗವಂತನ ದರ್ಶನ ಸಾಧ್ಯವಾಗುತ್ತದೆ.  ಭಗವಂತನನ್ನು ಕಾಣ ಬೇಕಿದ್ದರೆ ಕರ್ಮಶುದ್ಧಿಯಿಂದ ಮಾತ್ರ ಸಾಧ್ಯ. ಆಗ ಎಲ್ಲೋ ಇದ್ದ ಭಗವಂತ ನಮ್ಮ ದೇಹದಲ್ಲೇ ನಮ್ಮ ಮನಸ್ಸಿನಲ್ಲೇ ಕಾಣ ಬರುತ್ತಾನೆ. ಅದನ್ನೇ ಜ್ಞಾನ ಎನ್ನುವುದು. ಇದು ಆತನನ್ನು ಅರಿಯುವುದರಿಂದ ಮಾತ್ರ ಸಾಧ್ಯ. 

ಇಂದು ಧರ್ಮವನ್ನು ಅರಿಯದೇ ಧರ್ಮವನ್ನು ಅನುಸರಿಸುತ್ತಿದ್ದೇವೆ. ದೇವರು ಎಂದರೇನು ತಿಳಿಯದೇ ದೇವರನ್ನು ಅರ್ಥವಿಸದೇ ದೇವರನ್ನು ನಂಬುತ್ತೇವೆ. ಇದೇ ಇಂದು ಪರಸ್ಪರ ದ್ವೇಷಕ್ಕೆ ಕಾರಣವಾಗಿದೆ. ಅಪ್ಪ ಅಮ್ಮನಿಗೆ ಒಂದೆರಡು ಮಕ್ಕಳು ಇದ್ದರೆ , ಮಕ್ಕಳು ಪರಸ್ಪರ ವಿಶ್ವಾಸದಲ್ಲಿ ಜತೆಗೆ ಇರುವುದನ್ನು ಆ ಅಪ್ಪ ಅಮ್ಮ ಬಯಸುತ್ತಾರೆ. ಹೊರತು ಮಕ್ಕಳ ಪರಸ್ಪರ ದ್ವೇಷವನ್ನಲ್ಲ. ಹತ್ತು ಮಕ್ಕಳಲ್ಲಿ ಒಬ್ಬ ಮಗುವಿಗೆ ನೋವಾದರೂ ಹೆತ್ತ ಅಪ್ಪ ಅಮ್ಮ ಸಹಿಸುವುದಕ್ಕೆ ಸಾಧ್ಯವಿಲ್ಲ. ಅಂತಹ ಅಪ್ಪ ಅಮ್ಮನಲ್ಲಿ ದೇವರನ್ನು ಕಾಣುತ್ತೇವೆ. ಆದರೆ ಅದೇ ದೇವರಿಗೆ ಏನು ಬೇಕು ಎಂಬುದನ್ನು ಮರೆಯುತ್ತೇವೆ. ಮಕ್ಕಳು ಪರಸ್ಪರ ದ್ವೇಷ ವೈಷಮ್ಯದಿಂದ ಇದ್ದರೆ ಅಪ್ಪ ಅಮ್ಮನ ಅನುಗ್ರಹ ಹೇಗೆ ಪಡೆಯಬಹುದು? ಅದೇ ರೀತಿ ಭಗವಂತನ ಅನುಗ್ರಹ. ನಾವು ಪರಸ್ಪರ ದ್ವೇಷಿಸುತ್ತಿದ್ದರೆ ಭಗವಂತನ ಮಕ್ಕಳು ನಾವು,  ದೈವಾನುಗ್ರಹಕ್ಕೆ ಪಾತ್ರರಾಗುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಧರ್ಮ ಎನ್ನುವುದು ದ್ವೇಷಕ್ಕೆ ಕಾರಣವಾಗಬಾರದು.  ಭಗವಂತನನ್ನೂ ಧರ್ಮವನ್ನೂ ಸರಿಯಾಗಿ ಅರಿತು ಅನುಸರಿಸಬೇಕು. ದೇವರು ಎಂದರೇನು ಮೊದಲು ಅರ್ಥವಿಸಬೇಕು. ಗುಡಿಯಲ್ಲಿ ಪ್ರಾರ್ಥನಾ ಮಂದಿರಲ್ಲಿ ಇರುವುದು ದೇವರಲ್ಲ. ಅದು ದೇವರ ಪ್ರತೀಕ ಮಾತ್ರ. ಹಾಗೆ ನೋಡಿದರೆ ದೇವರು ಸರ್ವಾಂತರ್ಯಾಮಿ. ಎಲ್ಲದರಲ್ಲೂ ಎಲ್ಲರಲ್ಲೂ ದೇವರು ಇದ್ದಾನೆ ಎಂದು ತಿಳಿವಾಗ ಅಲ್ಲಿ ವೈಷಮ್ಯಕ್ಕೆ ಆಸ್ಪದವಿರುವುದಿಲ್ಲ. ಪ್ರತೀ ಜೀವಿಗಳಲ್ಲು ಆತ್ಮ ರೂಪದಲ್ಲಿ ಪರಮಾತ್ಮನ ಅಸ್ತಿತ್ವ ಇದೆ. ಅಹಂ ಬ್ರಹ್ಮಾಸ್ಮಿ ಅಂತ ಪ್ರತಿಪಾದಿಸಿದರೂ ನಮ್ಮ ಧರ್ಮವನ್ನು ಹೀಗಳೆಯುವುದನ್ನು  ಇಲ್ಲಿ ವಿಷ ಬೀಜಬಿತ್ತುವುದನ್ನು ತಡೆಯುವುದರಲ್ಲಿ ವಿಫಲರಾಗುತ್ತೇವೆ. 

ಮಾವಿನ ಮರದಲ್ಲಿ ಮಾವು ಆದಂತೆ, ಕಲ್ಪ ವೃಕ್ಷದಲ್ಲಿ ತೆಂಗು ಬೆಳೆದಂತೆ ಅದು ಧರ್ಮ. ಮಾವಿನ ಮರದಲ್ಲಿ ತೆಂಗು ಬೆಳೆಯುವುದಿಲ್ಲ. ನಾವಾಡುವ ಮಾತಿನಲ್ಲಿ ವರ್ತನೆಯಲ್ಲಿ ಒಂದು ಧರ್ಮವಿದೆ. ನಮ್ಮ ಹಸಿವು ನೀರಡಿಕೆ ದೇಹದ ಭಾಷೆಗಳಲ್ಲಿ ಒಂದು ಧರ್ಮವಿದೆ. ಧರ್ಮವೆಂದರೆ ಅದು ನಿಯತಿ. ಧರ್ಮ ದ್ವೇಷವನ್ನು ನಾಶವನ್ನೂ ಬಯಸುತ್ತದೆ ಎಂದಾದರೆ ಅದು ಧರ್ಮವಲ್ಲ. ಧರ್ಮದ ಮರ್ಮವನ್ನೂ ನಾವು ತಿಳಿಯದೇ ಆಚರಿಸುತ್ತಿದ್ದೇವೆ. ನಮ್ಮ ಧರ್ಮ ಶ್ರೇಷ್ಠ ಅಂತ ಹುಂಬತನದಿಂದ ವರ್ತಿಸುತ್ತೇವೆ. ನಮ್ಮ ಧರ್ಮದ ಬಗ್ಗೆ ಅಭಿಮಾನ ಅರಿವು ಇರಬೇಕು. ಆದರೆ ಅದು ಮತ್ತೊಂದು ಧರ್ಮವನ್ನು ಗೌರವಿಸುವ ಅರಿವಿನಲ್ಲೂ ಇರುತ್ತದೆ. ರೈತನೊಬ್ಬ ಮುಂಜಾನೆ ಎದ್ದು ಹೊಲಕ್ಕೆ ಉಳುಮೆಗೆ ಹೋಗುವಾಗ ಆಕಾಶದಲ್ಲಿರುವ ಸೂರ್ಯನನ್ನು ನೋಡಿ ನಮಸ್ಕರಿಸುತ್ತಾನೆ. ಆತನಿಗೆ ಮಂತ್ರವಾಗಲಿ ಶ್ಲೋಕವಾಗಲಿ ತಿಳಿದಿರುವುದಿಲ್ಲ. ಅದೇ ರೀತಿ ಮಂತ್ರವನ್ನು ಶ್ಲೋಕವನ್ನು ತಿಳಿದವನು ಅರ್ಘ್ಯವನ್ನು ಅರ್ಪಿಸಿ ಸೂರ್ಯನನ್ನು ಆರಾಧಿಸಬಹುದು. ಆದರೆ ರೈತನ ನಮಸ್ಕಾರಕ್ಕೂ  ವೇದೋಕ್ತವಾಗಿ ಬಿಡುವ ಅರ್ಘ್ಯಕ್ಕೂ ಯಾವುದೇ ವೆತ್ಯಾಸವಿಲ್ಲ. ಎರಡೂ ಸೂರ್ಯನ ಆರಾಧನೆ. ಮೊದಲು ದೇವೆರು ಎಂಬುದನ್ನು ನಾವು ಅರ್ಥವಿಸಬೇಕು. ಯಾವುದೋ ಒಂದು ನಮಗರಿವಿಲ್ಲದ ಶಕ್ತಿಗೆ ನಾವು ಇಟ್ಟ ಹೆಸರೆ ದೇವರು. ನಮಗೆ ಹುಟ್ಟಿದ ಮಗುವನ್ನು ಪ್ರೀತಿಯಿಂದ ಹಲವು ಹೆಸರುಗಳಲ್ಲಿ ಕರೆವಂತೆ ಭಗವಂತನಿಗೆ ಹಲವು ಹೆಸರು ಇದೆ. ಹಲವರು ಹಲವು ಹೆಸರಿಂದ ಕರೆದರೂ ಅಲ್ಲಿರುವ ಶಕ್ತಿ ಒಂದೇ. 



ಸತ್ಯವನ್ನು ಹೇಳುವುದಕ್ಕು ಸತ್ಯವನ್ನು ಅರಿಯುವುದಕ್ಕೂ ವೆತ್ಯಾಸವಿದೆ. ಸತ್ಯವನ್ನು ನಾವು ಅರಿಯಬೇಕು. ಸತ್ಯದ ಮೌಲ್ಯಮಾಪನವನ್ನು ಮಾಡಬೇಕು. ಅದೇ ರೀತಿ. ದೇವರನ್ನು ಕಾಣುವುದಕಿಂತಲೂ ದೇವರನ್ನು ಅರಿಯುವುದರಲ್ಲಿ ಹೆಚ್ಚು ಸತ್ವವಿದೆ. ಆಗ ದೇವರ ಸಾನ್ನಿಧ್ಯ ಸಾಮೀಪ್ಯ ಒದಗಿ ಬರುತ್ತದೆ.  ನಮ್ಮಲಿ ವಿಪುಲವಾದ ದೊಡ್ಡ ಸಂಪತ್ತು ಇರಬಹುದು. ಯಾವುದೋ ಬಂಗಾರದ ವಸ್ತು ಇರಬಹುದು. ಆದರೆ ಆ ಸಂಪತ್ತಿನ ಅಥವ ಬಂಗಾರದ ಮೌಲ್ಯ ತಿಳಿಯದೇ ಇದ್ದರೆ ಅದು ಇದ್ದರೆ ಏನೂ ಪ್ರಯೋಜನವಿಲ್ಲ. ಮಂಗನ ಕೈಯಲ್ಲಿ ಮಾಣಿಕ್ಯ ಇದ್ದಂತೆ. ಶುಭ್ರವಾದ ವಸ್ತ್ರ ನಮ್ಮಲ್ಲಿದ್ದರೆ ಅದನ್ನು ಸ್ವಚ್ಛವಾಗಿ ಇರಿಸಿಕೊಳ್ಳುವುದಕ್ಕೆ ನಾವು ಅಸಮರ್ಥರಾದರೆ ಅದು ಇದ್ದೇನು ಪ್ರಯೋಜನ. ಆ ಶುಭ್ರವಸ್ತ್ರವೂ ಮೌಲ್ಯ ರಹಿತವಾಗಿ ಅದರ ಬೆಲೆಯನ್ನು ಕಳೆದುಕೊಳ್ಳುತ್ತದೆ. ಸಂಪತ್ತಿನ  ಅರಿವಿದ್ದಾಗ ಮಾತ್ರ ಸಂಪತ್ತಿನ ಮೌಲ್ಯ ಅರಿವಾಗುತ್ತದೆ.  ದೇವರು ಧರ್ಮವೂ ಅದರ ಅರಿವಿದ್ದರೆ ಮಾತ್ರ ಅದರ ಮೌಲ್ಯ ಲಭ್ಯವಾಗುತ್ತದೆ. 

ದೇವರನ್ನು ಪೂಜಿಸಿ ಪ್ರಾರ್ಥಿಸುವುದಕ್ಕಿಂತ ಮೊದಲು ದೇವರನ್ನು ಅರಿಯುವ ಜ್ಞಾನದ ಅವಶ್ಯಕತೆ ಇದೆ. ಇಂದಿನ ಕಾಲಕ್ಕೆ ಅದು ಅನಿವಾರ್ಯ. ಓಂ ಶಾಂತಿಃ ಶಾಂತಿಃ ಶಾಂತಿಃ ಎಂಬ ಶಾಂತಿ ಮಂತ್ರದ ತಾತ್ಪರ್ಯವೂ ಜ್ಞಾನವೇ ಆಗಿದೆ.  ಶಂ ಎಂದರೆ ಆನಂದ ತಿ ಜ್ಞಾನ ಅಂತ ಅಂದರೆ ಅಂತಿಮ ತುದಿ. ಆನಂದ ತುತ್ತ ತುದಿಯಲ್ಲಿ ಸಿಗುವ ಜ್ಞಾನದಲ್ಲಿ ಶಾಂತಿ ಇದೆ. ಈ ಜ್ಞಾನಕ್ಕೆ ನಮ್ಮ ಸನಾತನ ಧರ್ಮ ಕೊಡುವ ಮಹತ್ವ ಅದು. ಮಂತ್ರ ರೂಪದಲ್ಲಿ ನಾವು ಭಗವಂತನನ್ನು ಬೇಡಿಕೊಳ್ಳುವುದೆಂದರೆ ಹೇ ಭಗವಂತ ನಿನ್ನನ್ನು ಅರಿಯುವ ಬುದ್ದಿಯನ್ನು ಶಕ್ತಿಯನ್ನು ಕೊಡು ಎಂದು ಬೇಡುತ್ತೇವೆ. ಜ್ಞಾನವೇ ಭಗವಂತ. .


Sunday, November 16, 2025

ಅಶ್ವ ಮೇಧ

 


ಅಂದು ಬೆಳಗಿನ ಉಪಾಹಾರಕ್ಕೆ ಸಿದ್ದ ಮಾಡುತ್ತಿದ್ದೆ. ಅದಾಗಲೇ ನಿತ್ಯದ  ಯೋಗಾಭ್ಯಾಸ ಮುಗಿಸಿ ಯಾವುದೋ ನಶೆ ಹಿಡಿದವನಂತೆ ಇದ್ದೆ. ಕಾರಣ ಎಂದೂ ಇಲ್ಲದ ಅದ್ಭುತ ಅನುಭವದ ಗುಂಗಿನಲ್ಲೇ ಇದ್ದೆ. ಇದೇನು ವಿಶೇಷವಲ್ಲ. ಅಂದು ಏನು ಮಾಡಬೇಕು ಎಂಬ ಯೋಚನೆ ಮೊದಲೇ ಯೋಚಿಸಿಲ್ಲ. ಆದರೆ ಅಡುಗೆ ಕೋಣೆ ಹೊಕ್ಕಿದಾಕ್ಷಣ  ಉಪ್ಪಿಟ್ಟು ಮಾಡಿ ದೊಡ್ಡಪ್ಪ ಅಂತ ಮಗಳು ಗೋಗರೆದಾಗ ಸರಿ ಅದನ್ನೇ ಮಾಡೋಣ ಎಂದುಕೊಂಡೆ. ಯಾಕೆಂದರೆ ಒಬ್ಬರಾದರೂ ಗ್ರಾಹಕರು ಇದ್ದರೆ ಕದಮುಚ್ಚಿದ ಅಂಗಡಿಯನ್ನಾದರೂ ತೆರೆದು ಸಾಮಾಗ್ರಿ ಕೋಡೋಣ ಎಂಬ ಪ್ರಚೋದನೆ ಎಂಥವನಿಗಾದರೂ ಬಂದೆ ಬರುತ್ತದೆ. ಅದಕ್ಕೆ ಕೇವಲ ವ್ಯವಹಾರದ ಲಾಭವಲ್ಲ. ಅದು ಮನಸ್ಸಿಗೆ ಕೊಡುವ ತೃಪ್ತಿಯೇ ಬೇರೆ. ಪಾಜಕ ಕೆಲಸವನ್ನು ಹವ್ಯಾಸವಾಗಿಯೋ ಅನಿವಾರ್ಯ ವೃತ್ತಿಯಾಗಿಯೋ ಮಾಡಿಕೊಂಡವರಿಗೆ ಇದರ ಆಳ ಬಹಳ ಅರ್ಥವಾಗುತ್ತದೆ. ಒಬ್ಬರಾದರೂ ಹಪ ಹಪಿಕೆಯಲ್ಲಿ ನಿರೀಕ್ಷಿಸುತ್ತಾರೆ ಎಂದಾಕ್ಷಣ ನಾವು ಮಾಡುವ ವೃತ್ತಿಯಲ್ಲಿ ಹೆಚ್ಚು ಬದ್ದತೆ ತಾನಾಗಿ ಮೂಡಿಬರುತ್ತದೆ. ಬೇರೆ ಯಾವುದೋ ತಿಂಡಿಯನ್ನು ಇದಕ್ಕಿಂತಲೂ ರುಚಿಯಾದ ನನಗಿಷ್ಟವಾದ ತಿಂಡಿಯನ್ನು ಮಾಡಬಹುದಿತ್ತು, ಆದರೆ ಅದು ಕೇವಲ ನನಗಷ್ಟೇ ಸಂತೃಪ್ತಿಯನ್ನು ಕೊಡಬಹುದು. ಆದರೆ ಆಕೆಯ ಉಪ್ಪಿಟ್ಟಿನ ಬಹಯಕೆ ಹಾಗೇ ಉಳಿದುಬಿಟ್ಟರೆ ಅಲ್ಲಿ ನನಗಿಷ್ಟವಾದ ತಿಂಡಿ ಯಾವುದೇ ಆಗಿರಲಿ ಅದು ಪೂರ್ಣ ತೃಪ್ತಿಯನ್ನು ಒದಗಿಸಲಾರದು. ಎಂತಹ ಗಡಿಬಿಡಿಯ ಹೊತ್ತಿನಲ್ಲೂ ಆಕೆಯ ಆಶೆಗಳನ್ನುಸಹಜವಾಗಿ ಪೂರೈಸುವವ ನನಗೆ ಉಪ್ಪಿಟ್ಟು ಉತ್ತಮ ಅಂತ ಅನ್ನಿಸಿಬಿಟ್ಟಿತು.  ಅಯಾರಾದರೂ ನಮ್ಮ ಕೃತಿಯ ನಿರೀಕ್ಷೆಯಲ್ಲಿ ಇದ್ದರೆ ಅದನ್ನು ಪೂರೈಸುವುದರಲ್ಲಿ ಒಂದು ಬಗೆಯ ತೃಪ್ತಿ. ಒಬ್ಬ ಪಳಗಿದ ಅಡುಗೆಯವನು ದಿನವಿಡೀ ಕೆಲಸ ಮಾಡಿ ಸುಸ್ತಾದರೂ ಯಾರದರೂ ಒಬ್ಬ ಬಂದು ಇಷ್ಟವಾದ ತಿಂಡಿಯ ಬಯಕೆಯನ್ನು ಹೇಳಿದರೆ ನಡುರಾತ್ರಿಯಾದರೂ ಅದನ್ನು ಮಾಡಿಕೊಟ್ಟು ಬಿಡುವ ಎಂಬ ಉತ್ಸಾಹ ಪುಟಿದೆದ್ದುಬಿಡುತ್ತದೆ. ಮೊದಲೇ ಬೆಳಗ್ಗಿನ ಅತ್ಯುತ್ಸಾಹದಲ್ಲಿದ್ದ ನನಗೆ ಮತ್ತೆ ಕೇಳಬೇಕೆ. 

ಉಪ್ಪಿಟ್ಟು ತಯಾರಿ ನನ್ನದೇ ಒಂದು ವಿಧಾನ ಇದೆ. ಯಾವುದೇ ತಿಂಡಿಯಾದರೂ ಅತ್ಯಂತ ತ್ವರಿತವಾಗಿ ಮಾಡುವ ಶೈಲಿ ನನ್ನದು. ಸಾಮಾನ್ಯವಾಗಿ  ಒಂದು ಘಂಟೆಗೆ ಊಟ ಮಾಡಬೇಕಿದ್ದರೆ ಅರ್ಧ ಘಂಟೆ  ಮೊದಲು ಅಡುಗೆ ತಯಾರಿಗೆ  ತೊಡಗುತ್ತೇನೆ. ಯಾವುದೇ ಮಾಡುವುದಿದ್ದರೂ ಅದಕ್ಕೊಂದು ಸಣ್ಣ ಯೋಜನೆ ಮೊದಲೇ ಸಿದ್ದವಾಗಿಬಿಡುತ್ತದೆ. ಹಾಗೇ ಉಪ್ಪಿಟ್ಟನ್ನು ಮಾಡುತ್ತಿದ್ದೆ. ಮೇಲುನೋಟಕ್ಕೆ ಉಪ್ಪಿಟ್ಟು ಒಂದು ಯಕಃಶ್ಚಿತ್ ಸಾಮಾನ್ಯ ಉಪಾಹಾರ.  ಹೆಚ್ಚಿನ ಮನೆಗಳಲ್ಲಿ ಏನೂ ಮಾಡಲು ಸಾಧ್ಯವಗದೇ ಇದ್ದಾಗ, ಅಥವಾ ತುಂಬ ಕೆಲಸ ಇದ್ದಾಗ ಮಾಡಬಹುದಾದ ಉಪಾಹಾರ ತಿಂಡಿ. ಆದರೆ ನಮ್ಮಲ್ಲಿ ಇದು ಕೇವಲ ಉಪ್ಪಿಟ್ಟಲ್ಲ. ಮಾತ್ರವಲ್ಲ ಹಾಗೆ ಕಾಟಾಚಾರಕ್ಕೆ ಉಪ್ಪಿಟ್ಟು ಅಂತ ಮಾಡಿದರೆ ಅದನ್ನು ಯಾರೂ ಇಷ್ಟಪಡುವುದಿಲ್ಲ. ಉಪ್ಪಿಟ್ಟು ಎಂದಾಕ್ಷಾಣ ಉಪ್ಪಿಟ್ಟಾ... ಅಂತ ರಾಗ ಎಳೆಯುವವರೇ ಹೆಚ್ಚು. ನಮ್ಮಲ್ಲಿ ಉಪ್ಪಿಟ್ಟು ಮಾಡಿದರೆ ಅದರ ಒಂದು ಕಾಳು...ಬಿಡದೇ ನೆಕ್ಕಿ ತಿನ್ನುವುದು ಈ ಉಪ್ಪಿಟ್ಟಿನ ವೈಶಿಷ್ಟ್ಯತೆ . ಹಾಗಾಗಿ ಆಕೆ ಉಪ್ಪಿಟ್ಟು ಮಾಡಿ ಅಂತ ತನ್ನ ಬಯಕೆ ವ್ಯಕ್ತ ಪಡಿಸಿದ್ದಳು. ನಾವು ಮಾಡಿದ ತಿಂಡಿ ತಿನಸು ಹೆತ್ತವರಿಗೆ ಹೆಗ್ಗಣ ಮುದ್ದು ಅಂತ ಹಲವು ಸಲ ಹೇಗಿದ್ದರೂ ಇಷ್ಟವಾಗುವುದುಂಟು. ಆದರೆ ನಾವು ಮಾಡಿದ್ದು ಇನ್ನೊಬ್ಬರಿಗೆ ಇಷ್ಟವಾಗುವುದಿದ್ದರೆ ಅದರಲ್ಲಿರುವ ಖುಷಿಯೇ ಬೇರೆ.  ಆದರೆ ವಾತಾವರಣ ಒಂದೇ ರೀತಿ ಇರುವುದಿಲ್ಲ. ಕೆಲವರು ಎಷ್ಟು ಹೊತ್ತಾದರೂ ಕಾಯುವುದಕ್ಕೆ ಸಿದ್ದವಿದ್ದರೆ ಇನ್ನು ಕೆಲವರು ಇದಕ್ಕೆ ವಿಪರೀತವಾಗಿಬಿಡುತ್ತಾರೆ.  

ತಯಾರಿಸುವ ಊಟ ಉಪಹಾರಕ್ಕೆ ಯಾರಾದರೂ ಆತುರದಿಂದ ಕಾಯುತ್ತಿದ್ದರೆ ಅಡುಗೆ ಮಾಡುವವರಿಗೂ ಒಂದು ರೀತಿಯ ಒತ್ತಡವೂ ಇರುತ್ತದೆ. ಆದರೆ ಎಲ್ಲರೂ ಒಂದೇ ರೀತಿ ಆಗುವ ತನಕ ಕಾಯುವುದಿಲ್ಲ. ಕೆಲವರು ಮಾಡುವವರು ಏನೇ ಮಾಡಲಿ ತಾನು ಮಾತ್ರ ಇದ್ದುದನ್ನು ತಿಂದು ಹೋಗಿಬಿಡುತ್ತೇನೆ ಎಂಬ ಮನೋಭಾವ ಇರುತ್ತದೆ.  ಅಡುಗೆಯವರು ಏನೂ ಮಾಡಲಿ ಅದರಬಗ್ಗೆ ತೆಲೆಕೆಡಿಸಿಕೊಳ್ಳುವುದಿಲ್ಲ.  ಮಾಡುವ ತಿಂಡಿಯ ಬಗ್ಗೆ ನಿರಾಸಕ್ತಿಯೋ ಅಥವಾ ಅದರ ಬಗ್ಗೆ ಕಾಳಜಿ ಗೌರವ ಇರುವುದಿಲ್ಲ.  ಮಾಡುವವರಿಗೆ ಇದು ಮತ್ತೊಂದು ರೀತಿಯ ಒತ್ತಡವನ್ನು ತರುತ್ತದೆ.  ಮಾಡುವವರ ಬಗ್ಗೆ ಮಾಡುವುದರ ಬಗ್ಗೆ ಗೌರವ ಇದ್ದರೆ ಎಂತಹಾ ಸ್ಥಿತಿಯಲ್ಲೂ ತಿಂಡಿ ಆಗುವ ತನಕ ತಾಳ್ಮೆಯಿಂದ ಕಾಯುತ್ತಾರೆ. ಮೊದಲೆಲ್ಲ ಹೀಗೆ ಒತ್ತಡವಿದ್ದರೆ ನಾನು ಸಿಡಿಮಿಡಿಗೊಳ್ಳುತ್ತಿದ್ದೆ. ಹಲವು ಸಲ ಇದು ಕಲಹಕ್ಕೂ ಕಾರಣವಾಗುತ್ತಿತ್ತು. ಈಗ ಆ ಮನೋಭಾವ ಸಾಕಷ್ಟು ಬದಲಾಗಿದೆ. ನಾನು ಮಾಡುವ ತಿಂಡಿಯ ಬಗ್ಗೆ ಅಡುಗೆಯ ಬಗ್ಗೆ ಆಸಕ್ತಿ ಗೌರವ ಇದ್ದವರು ಕಾಯುತ್ತಾರೆ ಎಂದು ಯೋಚಿಸುತ್ತೇನೆ.  ಅದರ ಬಗ್ಗೆ ಆಸಕ್ತಿ ಗೌರವ ಇಲ್ಲದವರು ಹೋಗಲಿ ಬಿಡಿ ಎಂದುಕೊಂಡು ನಿರಾತಂಕವಾಗಿ ಶಾಂತ ಚಿತ್ತದಿಂದ ನನ್ನ ಕಾರ್ಯದಲ್ಲಿ ಮಗ್ನನಾಗಿಬಿಡುತ್ತೇನೆ. ಇದು ಮನಸ್ಸಿಗೆ ಹೆಚ್ಚು ನೆಮ್ಮದಿಯನ್ನು ಕೊಡುತ್ತದೆ. ಕಾರಣ ಯೋಗಾಭ್ಯಾಸದಿಂದ ಬದಲಾದ ಜೀವನ ಶೈಲಿ. 

ಈದಿಗ ಜೀವನ ಬಹುಪಾಲು ಅವಧಿಯನ್ನು ಯೋಗಜೀವನದಲ್ಲಿ ಕಳೆದ ಸಂತೃಪ್ತಿ ಇದೆ. ಹಾಗೊಮ್ಮೆ ಬದುಕಿನತ್ತ ತಿರುಗಿ ಸಿಂಹಾವಲೋಕನ ಮಾಡಿಕೊಂಡಾಗ ನಾನು ಸ್ವತಃ ಬದಲಾಗಿದ್ದೇನೋ ಇಲ್ಲ ಯೋಗಜೀವನ ನನ್ನನ್ನು ಬದಲಿಸಿದೆಯೋ ಎನ್ನುವುದಕ್ಕೆ ಸ್ಪಷ್ಟ ಉತ್ತರ ಸಿಗುವುದಿಲ್ಲ. ಆದರೂ ಯೋಗಾಭ್ಯಾಸ ಸಾಕಷ್ಟು ಬದಲಾವಣೆಯನ್ನು ತಂದಿದೆ ಎಂಬುದಷ್ಟು ಸತ್ಯ.  ಮುಂಜಾನೆ ನಸುಕಿನಲ್ಲಿ ಪರಿಸರವೆಲ್ಲ ನಿದ್ರಾವಶದಲ್ಲಿರುವಾಗ ತಪ್ಪದೇ ಎಚ್ಚರಗೊಳ್ಳುತ್ತೇನೆ. ಮನಸ್ಸಿನ ತುಡಿತವೇ ಇದಕ್ಕೆ ಕಾರಣ. ನೀರವ ವಾತಾವರಣದಲ್ಲಿ ಧ್ಯಾನ ಮಗ್ನನಾಗಿ ವ್ಯಕ್ತವಾಗದ ಅನುಭವವನ್ನು ಪಡೆಯುವಲ್ಲಿ ಮನಸ್ಸಿನಲ್ಲಿ ಕಾತುರತೆ ತುಂಬಿರುತ್ತದೆ. ಮನೆಯ ಹೊರ ಜಗಲಿಯಲ್ಲಿ ಭಗವಂತನ ಪ್ರಾರ್ಥನೆಗೆ ಕುಳಿತುಬಿಟ್ಟರೆ ಆ ಸಮಯ ಮತ್ತೆ ಸಿಗದು ಎಂಬ ಭಾವ. ನಿರ್ಮಾನುಷ್ಯವಾದ ರಸ್ತೆ ಹೊರಗಡೆ. ಅದೆಷ್ಟು ಮೌನ ಆವರಿಸುತ್ತದೆ ಎಂದರೆ ಮೈಲು ದೂರದಲ್ಲಿ ಆಗುವ ಸಣ್ಣ ಸದ್ದೂ ಕೇಳಿಸುತ್ತದೆ. ಅಕ್ಕ ಪಕ್ಕದ ಮನೆಯಲ್ಲಿ ನಿದ್ರಿಸಿದವರ ಗೊರಕೆ ಏದುಸಿರಿನ ಸದ್ದೂ ಕೇಳಿಸುತ್ತದೆ. ಹೀಗಿದ್ದರೂ ಯಾರೋ ಒಂದಿಬ್ಬರು ಎದ್ದುಬಿಡುತ್ತಾರೆ . ದೊಡ್ಡದಾಗಿ ಮಾತನಾಡುತ್ತಾರೆ. ಇಲ್ಲ ವಸ್ತುಗಳನ್ನು ಎತ್ತಿಡುವುದೋ , ವಾಹನವನ್ನು ಚಲಾಯಿಸುವುದೋ ಏನೋ ಸದ್ದುಗಳು ನನ್ನಏಕಾಗ್ರತೆಗೆ ಪರೀಕ್ಷೆಯನ್ನು ಒಡ್ಡುತ್ತವೆ.  ಆರಂಭದ ದಿನಗಳಲ್ಲಿ ಈ ಚಲವಲನ ಮತ್ತು ಸದ್ದು ಗದ್ದಲಕ್ಕೆ ಸಿಟ್ಟು ಬರುತ್ತಿತ್ತು. ದೊಡ್ಡದಾಗಿ ಮಾತನಾಡುತ್ತ ಸದ್ದು ಗದ್ದಲಕ್ಕೆ ಕಾರಣರಾದವರ ಮೇಲೆ ರೇಗಿಬಿಡುವ ಮನಸ್ಸಾಗುತ್ತಿತ್ತು. ಒಂದಿಷ್ಟೂ ಸಾಮಾನ್ಯ ಜ್ಞಾನವೂ ಇಲ್ಲದ ಜನಗಳು. ಕೊನೇ ಪಕ್ಷ ಎಲ್ಲರೂ ನಿದ್ರಿಸಿರುತ್ತಾರೆ ಎಂಬುದನ್ನು ಮರೆತ ಇವರ ಬಗ್ಗೆ ಸಿಟ್ಟು ಬರುತ್ತಿತ್ತು. ಮುಂಜಾನೆ ಏಳುವುದಲ್ಲ..ಮೊದಲು ನಾವು ಏನು ಮಾಡುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಮೊದಲಿಗೆ ಎಲ್ಲರೂ ನಿದ್ದೆಯಲ್ಲಿದ್ದಾರೆ ಎಂಬ ಪ್ರಜ್ಞೆ ಇರಬೇಕು. ಆದರೆ ನಮ್ಮಲ್ಲಿ ಮೂರ್ಖತನ ಇದ್ದೇ ಇರುತ್ತದೆ. ನಾವು ನಮಗೆ ನಿದ್ದೆ ಬರದೇ ಇರುವುದರ ಬಗ್ಗೆ ಚಿಂತಿಸುವಾಗ ಉಳಿದವರ ನಿದ್ರೆಯ ಬಗ್ಗೆ ಯೋಚಿಸುವುದಿಲ್ಲ.  ನನ್ನ ಏಕಾಗ್ರತೆಗೆ ಈ ಎಲ್ಲಾ ಸದ್ದುಗಳು ಪರೀಕ್ಷೆ ಒಡ್ಡಿದಾಗ ಮೊದಲೆಲ್ಲ ಬಹಳಷ್ಟು ವ್ಯಾಕುಲತೆ ಅನುಭವಿಸುತ್ತಿದ್ದೆ. ಉದ್ವಿಗ್ನನಾಗುತ್ತಿದ್ದೆ.  

ಮನಸ್ಸಿನ ಉದ್ವಿಗ್ನತೆಯನ್ನು ಯಾರು ಜಯಿಸುತ್ತಾನೋ ಆತನಿಗೆ ಯಾವ ಪರೀಕ್ಷೆಯೂ ಇರುವುದಿಲ್ಲ. ಉದ್ವಿಗ್ನ ಉದ್ರೇಕ ಎದುರಾದಾಗ ಅರೇ ನಾನೇಕೆ ಮುಂಜಾನೆ ಏಳುತ್ತಿದ್ದೇನೆ?  ಎಂದು ನನಗೆ ನಾನೇ ಪ್ರಶ್ನಿಸುತ್ತೇನೆ. ಯಾವುದೋ ಸದ್ದಿನ ಬಗ್ಗೆ, ಯಾರದೋ ಮನೋಭಾವದ ಕುರಿತು ಯೋಚಿಸುವುದರಲ್ಲಿ ನನ್ನ ಅಮೂಲ್ಯ ಘಳಿಗೆಗಳು ಕಳೆದು ಹೋಗುತ್ತವೆ. ಯಾರೋ ನಮ್ಮ ಏಕಾಗ್ರತೆಗೆ ತೊಂದರೆ ಕೊಡುತ್ತಾರೆ ಎಂದಾಕ್ಷಣ ಅವರಲ್ಲಿ ಹೋಗಿ ಹೇಳಬಹುದು. ಕೆಲವರು ಅದನ್ನು ಮನ್ನಿಸಿ ನಮಗಾಗಿ ಸದ್ದು ಗದ್ದಲಮಾಡದೇ ಬಲವಂತವಾಗಿ ನಿಶ್ಯಬ್ದರಾಗಿ ಇರಬಹುದು. ಅದರಿಂದ ನಮ್ಮ ಮನಸ್ಸಿಗೆ ಮತ್ತಷ್ಟು ಅಸಹನೆಯಾಗುತ್ತದೆ. ನಮ್ಮಿಂದಾಗಿ ಅವರಿಗೂ ತೊಂದರೆ. ನಮ್ಮ ಕಾರ್ಯದ ಬಗ್ಗೆ ಅವರಿಗೆ ಗೌರವ ಇದ್ದರೆ ಅವರಾಗಿಯೇ ಸುಮ್ಮನೆ ಕುಳಿತುಬಿಡಬಹುದು. ಗೌರವ ಇಲ್ಲ ಎಂದಿದ್ದರೆ ಅವರಿಂದ ಬಲವಂತವಾಗಿ ಗೌರವವನ್ನು ಬಯಸಿ ಕಿತ್ತುಕೊಳ್ಳುವುದು ನಮ್ಮ ಮೂರ್ಖತನ. ಸದ್ದು ಗದ್ದಲ ಅವರ ಮೂರ್ಖತನವಾದರೆ, ಇನ್ನೊಬ್ಬರ ಮೂರ್ಖತನ ಅಳೆಯುವಲ್ಲಿ ನಮ್ಮ ಮೂರ್ಖತನ ನಮಗೆ ಅರಿವಾಗುವುದಿಲ್ಲ.  ಹಾಗಾಗಿ ಈಗ ಯಾರೋ ಮಾಡಿದ ಸದ್ದು ಗದ್ದಲಕ್ಕೆ ನನ್ನ ಮನಸ್ಸು ವಿಚಲಿತವಾಗುವುದಿಲ್ಲ. ಆ ಸದ್ದು ನನ್ನ ಹೃದಯದ ಬಡಿತದ ಸದ್ದಿನ ಎದುರು ಕರಗಿ ಹೋಗುತ್ತದೆ. ಯಾರೋ ಮಾಡಿದ ಸದ್ದಿನ ಬಗ್ಗೆ ಯೋಚಿಸುವುದು ವ್ಯರ್ಥ. ಹಲವು ಸಲ ಮೊದಲ ತಿಂದ ಆಹಾರ ಪಚನವಾಗದೇ ನಮ್ಮ ಹೊಟ್ಟೆಯೇ ಸದ್ದು ಮಾಡಬಹುದು. ಹಾಗಾಗಿ ನಿಶ್ಯಬ್ದ ಇದ್ದರೆ ಮನಸ್ಸು ಅನುಭವಿಸುತ್ತದೆ. ಇಲ್ಲಾ ಅದರಿಂದ ದೂರವಾಗುವುದಕ್ಕೆ ಪ್ರಯತ್ನಿಸುತ್ತದೆ. ಪ್ರತಿಭಟನೆಯಂತೂ ಇಲ್ಲ. ಪ್ರತಿಭಟನೆ ಇದ್ದರೆ ಅದು ನಮ್ಮ ಮನಸ್ಸಿನ ಉದ್ವಿಗ್ನತೆಗೆ ಕಾರಣವಾಗಬಹುದು. 

ನನ್ನಲ್ಲಿನ ಯೋಗ ಜೀವನಕ್ಕೆ ಈಗ ಹೆಚ್ಚುಕಡಿಮೆ ಯೌವನಾವಸ್ಥೆ. ಎರಡು ದಶಕಗಳು ಕಳೆದುವು. ಈಗ ಅದೂ ಪ್ರೌಢವಾಗಿದೆ. ಬದುಕಿನಲ್ಲಿ ಯೌವನ ಎಂದರೆ  ತನಗೆ ಬೇಕಾಗಿರುವುದನ್ನು ತಾನು ಸಂಪಾದಿಸಿ ಸ್ವಾವಲಂಬಿಯಾಗುವುದು. ಹೀಗಿ ಯೋಚಿಸುವಾಗ ನನಗೆ ಬೇಕಾದ ಮೌನವನ್ನು ನಿಶ್ಯಬ್ದವನ್ನು ನಾನು ಸಂಪಾದಿಸಿಕೊಳ್ಳಬಲ್ಲೆ ಎಂಬ ಆತ್ಮವಿಶ್ವಾಸ ಜಾಗೃತವಾಗುತ್ತದೆ. ಶಂ ಎಂದರೆ ಸಂಸ್ಕೃತದಲ್ಲಿ ಆನಂದ ಎನ್ನುವುದನ್ನು ಕೇಳಿದ್ದೆನೆ.  ಆ ಆನಂದವೇ ಶಾಂತಿಗೆ ಕಾರಣವಾಗುತ್ತದೆ. ಎಚ್ಚರ ನಿದ್ರೆ ಮತ್ತು ಸ್ವಪ್ನ ಈ ಮೂರು ಅವಸ್ಥೆಗಳು. ಹಾಗಾಗಿ ಮೂರು ಬಾರಿ ಉಚ್ಚರಿಸುವ ಓಂ ಶಾಂತಿ.. ಎಂಬ ಶಾಂತಿ ಮಂತ್ರ ಎಚ್ಚರದಲ್ಲು ಸ್ವಪ್ನ ನಿದ್ರಾವಸ್ಥೆಯಲ್ಲೂ ನಮಗೆ ಆನಂದವಿರಲಿ ಎಂದು ಬಯಸುವುದು. ನಮ್ಮ ಆನಂದ ನಮ್ಮ ಕೈಯಲ್ಲೇ  ಇದೆ. ಅದನ್ನು ಇನ್ನೊಬ್ಬರು ಕಸಿಯುವುದಕ್ಕೆ ಸಾಧ್ಯವಿಲ್ಲ. ಹೀಗೆ ತಿಳಿದಾಗ ಯಾವ ಸದ್ದು ಗದ್ದಲವೂ ಪರಿಣಾಮ ಬೀರುವುದಿಲ್ಲ. ಮನಸ್ಸು ಉದ್ವಿಗ್ನವಾಗುವುದಿಲ್ಲ.  ಹಾಗಾಗಿ ಅಡುಗೆ ಮಾಡುವಾಗ ಹೇಗೆ ನಿರ್ವಿಕಲ್ಪ ಭಾವದಿಂದ ಆನಂದವನ್ನು ಅನುಭವಿಸುತ್ತೇನೋ ಅದೇ ರೀತಿ ಮುಂಜಾನೆ ಧ್ಯಾನದಲ್ಲೂ ಅದೇ ರೀತಿ ಆನಂದವನ್ನು ಅನುಭವಿಸುತ್ತೇನೆ. ಯಾರಲ್ಲೂ ಬೇಡಿಕೆಯೂ ಬೇಡ ಆಗ್ರಹವೂ ಬೇಡದ ಒಂದು ವೈರಾಗ್ಯ. ಯೋಗದಲ್ಲಿ ವೈರಾಗ್ಯ ಅಥವ ಸನ್ಯಾಸ ಎಂದರೆ ಎಲ್ಲವನ್ನೂ ಬಿಟ್ಟು ಪಲಾಯನ ಮಾಡುವುದಲ್ಲ. ಎಲ್ಲವೂ ಇದ್ದುಕೊಂಡೇ ಅದರಿಂದ ದೂರವಾಗಿ ನಿರ್ವಿಕಲ್ಪ ಭಾವದಿಂದ ಇದ್ದು ಬಿಡುವುದು. ಸಿಕ್ಕಿದರೆ ಅನುಭವಿಸುವುದು,  ಸಿಗದಿದ್ದರೆ ಅದಕ್ಕೆ ಹತಾಶರಾಗದೇ ಅದನ್ನು ಬಯಸದೇ ತಟಸ್ಥವಾಗಿರುವುದು. ಇದು ಮನಸ್ಸಿನ ಆತಂಕವನ್ನು ದೂರ ಮಾಡುತ್ತದೆ. 

ಯೋಗ  ಎಂದರೆ ಚಿತ್ತವೃತ್ತಿಯಿಂದ ದೂರ ಇರುವುದು. ಮನಸ್ಸು ಬುದ್ಧಿಯ ನಿಯಂತ್ರಣದಲ್ಲಿರುವುದು. ಮನಸ್ಸು ಎಂದರೆ ಮರ್ಕಟನಂತೆ. ಅದನ್ನು ಎಷ್ಟು ಅವಧಿ ನಾವು ಕಟ್ಟಿ ಹಾಕುತ್ತೇವೆಯೋ ಅಷ್ಟು ಹೊತ್ತು ನಾವು ಆನಂದವನ್ನು ಅನುಭವಿಸಬಹುದು. ನಮ್ಮ ಆತ್ಮ ರಥಿಕನಾದರೆ, ನಮ್ಮ ಪಂಚೇದ್ರಿಯಗಳು ಆ ರಥದ ಕುದ್ರೆಗಳು. ಬುದ್ದಿ ಸಾರಥಿಯ ಸ್ಥಾನದಲ್ಲಿರುತ್ತದೆ. ವಿಚಲಿತಕ್ಕೆ ಕಾರಣವಾಗುವ ಇಂದ್ರಿಯ ಅನುಭವವನ್ನು ನಿಯಂತ್ರಣದಲ್ಲಿರಿಸುವುದೇ ಜೀವನ ಯಜ್ಞ.  ಇಂದ್ರಿಯಗಳೇ  ಈ ಯಜ್ಞದ ಅಶ್ವಗಳು. ಅದನ್ನುನಿಯಂತ್ರಿಸಿದರೆ ಬದುಕೆಂಬ ಅಶ್ವಮೇಧದ ಪೂರ್ಣಾಹುತಿಯನ್ನು ಕೊಡುವ ಸಾಮಾರ್ಥ್ಯ ನಮ್ಮಲ್ಲಿ ಮೂಡುತ್ತದೆ. ಇದುವೆ  ಬದುಕಿನ ಅಶ್ವಮೇಧ. 




Friday, November 7, 2025

ಆವಳ ಮಠಾನ್ನು ಜವಣ ಗಮ್ಮತ

  "ಆವಳ ಮಠಾನ್ನು ಜವಣ ಗಮ್ಮತ.." ಮೊದಲು ನಮ್ಮೂರಲ್ಲಿ ಜನಜನಿತವಾದ ಮಾತು. ಅಂದರೆ ಆವಳ ಮಠದಲ್ಲಿ ಊಟ ಚೆನ್ನಾಗಿತ್ತು ಎಂದರ್ಥ. ಕರಾಡ ಬ್ರಾಹ್ಮಣರ ಮರಾಠ ಭಾಷೆ ಅದು. ಜವಣ ಹೇಳಿದರೆ ಕೊಂಕಣಿ ಭಾಷೆಯಂತೆ ಊಟ. ಆದರೆ ಹಲವರ ಕಲ್ಪನೆಯಲ್ಲಿ ಅದು ಕೇವಲ ಊಟ ಅಲ್ಲ. ಭರ್ಜರಿ ಭೂರಿ ಭೋಜನ. ಜವಣ ಅಂತ ಹೇಳಿದ ಕೂಡಲೇ ಹಲವರ ಬಾಯಲ್ಲಿ ಈಗಲೂ ನೀರು ಒಸರಿಬಿಡುತ್ತದೆ.  ಆ ದೇವಸ್ಥಾನದ ಮಹಿಮೆ ಅದು ಎಂದುಕೊಂಡರೂ, ನಮ್ಮ ವಿಪ್ರ ವೃಂದ ಊಟಕ್ಕೆ ಕೊಡುವ ಪ್ರಾಮುಖ್ಯತೆ ಅದು. ಪೂಜೆಯಂತೆ  ಊಟವೂ ಒಂದು ಸೇವೆಯಂತೆ.‌ ನಮ್ಮೂರಿನ ಹಲವು ದೇವಸ್ಥಾನದಂತೆ ನಮ್ಮ ಆವಳ ಮಠದ ಊಟಕ್ಕೂ ಒಂದು ವೈಶಿಷ್ಟ್ಯತೆ ಇದೆ. ಹೇಳಿ ಕೇಳಿ ಇದು ದುರ್ಗಾಪರಮೇಶ್ವರಿ ಸನ್ನಿಧಾನ, ಅಂದರೆ ಸಾಕ್ಷಾತ್ ಅನ್ನ ಪೂರ್ಣೆಯ ಕ್ಷೇತ್ರ. ಹಾಗಿರುವಾಗ ಅಲ್ಲಿ ಅನ್ನ ಎಂದರೆ ಅದು ನೈವೇದ್ಯ. ಇಲ್ಲಿ ಬಾಳೆ ಎಲೆಗೆ ಬಡಿಸುವಾಗಲೂ ಕೇಳುವುದು, ನೈವೇದ್ಯ ಬೇಕೆ? ಅಂತ  ಕೇಳುತ್ತಾರೆ. ಇಲ್ಲಿ ನಿತ್ಯದಲ್ಲೂ ಮಧ್ಯಾಹ್ನ ಮತ್ತು ರಾತ್ರಿಯ  ಮುಖ್ಯ ನೈವೇದ್ಯವೇ ಅನ್ನ. ಹಾಗಾಗಿ ಇಲ್ಲಿ‌ ಪ್ರತಿನಿತ್ಯವೂ ಊಟ ಇರಲೇಬೇಕು. 


ಸಾಂಪ್ರದಾಯಿಕವಾಗಿ , ಕೊಪ್ಪರಿಗೆಯಲ್ಲಿ ತಯಾರಿಸುವ ಇಲ್ಲಿನ ನೈವೇದ್ಯದ ಸುವಾಸನೆಯೇ ಹಸಿವನ್ನು ಕೆರಳಿಸಿ ಬಿಡುತ್ತದೆ.  ಉತ್ಸವಾದಿಗಳಲ್ಲಿ ವಿಶೇಷವಾಗಿ ಸಿದ್ದಪಡಿಸುವ ಊಟದ ವೈಶಿಷ್ಟ್ಯತೆ ಒಂದಾದರೆ,   ಇಲ್ಲಿನ ನಿತ್ಯದ ಅಡುಗೆಯ ರುಚಿಯೇ ಹಲವು ಸಲ ಅದರ ಸರಳತೆಯಿಂದ ಬೇರೆ ರೀತಿಯಲ್ಲಿ ಇಷ್ಟವಾಗುತ್ತದೆ. ಕೇವಲ ಚಟ್ನಿ ತಂಬುಳಿ ಅಥವಾ ತುಂಬ ಸರಳವಾದ ಸಾರು ಇವುಗಳ ರುಚಿಗೆ ಮಾರು ಹೋಗದವರಿಲ್ಲ. ಆಡಂಬರದ ಭೂರಿ ಭೋಜನಕ್ಕಿಂತಲೂ ಈ ಸರಳ ಸಾತ್ವಿಕ ಆಹಾರವನ್ನು ಸವಿಯುವುದೆಂದರೆ ಅದು ನಿಜವಾಗಿಯೂ ಅನ್ನ ಪೂರ್ಣೆಯ ಪ್ರಸಾದ. ಇದರ ವೈಶಿಷ್ಟವೆಂದರೆ ಹೊಟ್ಟೆ ತುಂಬ ಉಂಡರೂ ದೇವಸ್ಥಾನದ ಹೊರಾವರಣ ದಾಟಿ ಮುಂದೆ ಬರಬೇಕೆಂದರೆ ಅದು ಕರಗಿ ಬಿಟ್ಟಿರುತ್ತದೆ. ಒಂದಿಷ್ಟೂ ಕರುಳಿಗೆ ಶ್ರಮವೆನಿಸದ ಈ ಅನ್ನ ನೈವೇದ್ಯವೂ ಒಂದು ಮಹಿಮಾನ್ವಿಶೇಷವಾಗಿರುತ್ತದೆ. 

ದೇವಸ್ಥಾನದಲ್ಲಿ ಬಲಿವಾಡು ಸೇವೆ ಅತ್ಯಂತ ಮಹತ್ವ.  ಅಕ್ಕಿ ತೆಂಗಿನಕಾಯಿ  ಕಾಣಿಕೆಯನ್ನು ಸಲ್ಲಿಸಿ ಅನ್ನ ಪ್ರಸಾದ ಸ್ವೀಕರಿಸುವುದೆಂದರೆ ಅದೊಂದು ಮಹತ್ವದ ಸರಳ ಸೇವೆ. ಮೊದಲೆಲ್ಲ ದೇವಸ್ಥಾನದ ಪರಿಸರದಲ್ಲಿ ಅಥವಾ ತೋಟದಲ್ಲಿ ಸಿಗುವ ಗೆಡ್ಡೆ ಗೆಣಸು ಸೊಪ್ಪು ತರಕಾರಿಗಳೇ ಇಲ್ಲಿ ಅಡುಗೆಗೆ ಬಳಸುತ್ತಿದ್ದರು. ಹಲವು ಸಲ ಬರುವ ಭಕ್ತರಿಗೆ ಇಂತಹ ಅಡುಗೆ ಮತ್ತು ಅದರ ರುಚಿ ಸ್ವಾದಕ್ಕೆ ಅಚ್ಚರಿಯಾಗುತ್ತಿತ್ತು. ಈ ಗೆಡ್ಡೆಗೆಣಸಿನಲ್ಲೂ ಹಸಿರೆಲೆ ಚಿಗುರಲ್ಲಿ  ಈ ಬಗೆಯ ರುಚಿ ಸಾಧ್ಯವಾ ಅಂತ ಅಚ್ಚರಿಪಡುತ್ತಿದ್ದರು. ಮೊದಲೆಲ್ಲ ಇಲ್ಲಿ ಸಾಂಪ್ರದಾಯಿಕ ತರಕಾರಿಗಳೇ ಅಡುಗೆಗೆ ಉಪಯೋಗಿಸುತ್ತಿದ್ದರು. ಇಲ್ಲೇ ಪರಿಸರದಲ್ಲಿ ಅಥವಾ ದೇವಸ್ಥಾನದ ಭಕ್ತರ ಮನೆಗಳಲ್ಲಿ ಬೆಳೆಸುತ್ತಿದ್ದ ಕುಂಬಳ ಬಾಳೆ, ತೊಂಡೆ ಬೆಂಡೆ ಹೀಗೆ ಇವುಗಳನ್ನು ಮೀರಿ ವಾಣಿಜ್ಯ ತರಕಾರಿಗಳಾದ ಬಟಾಟೆ ಟೊಮೆಟೊಗಳನ್ನು ಇಲ್ಲಿ ಕಾಣುವುದಕ್ಕೆ ಸಾಧ್ಯವಿರಲಿಲ್ಲ. ಯಾಕೆಂದರೆ ಆ ಕಾಲದಲ್ಲಿ ಇದು ಸುಲಭದಲ್ಲಿ ಲಭ್ಯವೂ ಇರಲಿಲ್ಲ, ಮತ್ತೊಂದು ಇದಕ್ಕೆ ಅನಾವಶ್ಯಕ ವೆಚ್ಚ.  ಮಾತ್ರವಲ್ಲ ಆ ಕಾಲದ ಜನರಿಗೆ ಇದರಲ್ಲಿ ಯಾವ ವೈಶಿಷ್ಟ್ಯವೂ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಹಲವು ಕಾರಣಗಳಿಂದ ಅದು ಅನಿವಾರ್ಯವೂ ಹೌದು. ನವರಾತ್ರಿಯ ಒಂಭತ್ತು ದಿನಗಳಲ್ಲಿ ಬೇರೆ ಬೇರೆ ಮನೆತನದವರು ಆ ಒಂದು ದಿನದ ಖರ್ಚು ವೆಚ್ಚಗಳನ್ನು ನೋಡಿ ಬೇಕಾದ ಅಕ್ಕಿ ತೆಂಗಿನ ಕಾಯಿ ತರಕಾರಿ ಒದಗಿಸುತ್ತಿದ್ದರು. ಈಗಲೂ ಅದೇ ಪದ್ಧತಿ ಅಷ್ಟೋ ಇಷ್ಟು ಇದ್ದರೂ  ಈಗ ತರಕಾರಿಗಾಗಿ ಸಾಕಷ್ಟು ಹಣವನ್ನು ವ್ಯಯಿಸುವ ಅನಿವಾರ್ಯತೆ ಇದೆ. ಕಾರಣ ಈಗ ಕೃಷಿ ಮಾಡುವ ಹೊಲ ತೋಟದ ವಿಸ್ತಾರ ಕಡಿಮೆಯಾಗಿದೆ. ಮನೆ ಮನೆಗಳಲ್ಲಿ ತರಕಾರಿ ಬೆಳೆಯುವ ಪರಿಸ್ಥಿತಿ ಎಂದೋ ದೂರಾಗಿದೆ. ಆದರೂ ಇಲ್ಲಿನ ಊಟದ ಮಹತ್ವ ಮೊದಲಿಗಿಂತಲೂ ಅಧಿಕವಾಗಿದೆ. ಹಾಗಾಗಿ ಇಲ್ಲಿ ಬರುವವರ ಭಕ್ತವೃಂದವೇ ಕಾರಣ.  ಬಾಲ್ಯದಲ್ಲಿ ಈ ದೇವಸ್ಥಾನಕ್ಕೆ ಹೋಗಬೇಕಾದರೆ ಸುತ್ತಲಿನ ಹೊಲ ಗದ್ದೆ ತೋಟ ಹಾದು ಹೋಗಬೇಕಿತ್ತು. ಆಗ ಈ ಗದ್ದೆಯ ಹಸುರಿನ ನಡುವೆ ಹೆಜ್ಜೆ ಹಾಕಿ ನಡೆದುಕೊಂಡು ಹೋಗುವುದೇ ಒಂದು ಸಂಭ್ರಮ. 

ಹಸಿವಿನ ಶಮನಕ್ಕೆ ನಮ್ಮಲ್ಲಿ ವಿಶೇಷ ಮಹತ್ವವಿದೆ. ಹಾಗೆ ನೋಡಿದರೆ ನಮಗೆ ಬಾಧಿಸುವ ಪ್ರತೀ ಬಾಧೆಯ ಶಮನವೂ ನಮ್ಮ ಸಂಸ್ಕೃತಿಯಲ್ಲಿ ಪ್ರಾಧಾನ್ಯತೆಯನ್ನು ಪಡೆದಿದೆ. ರೋಗ ಬಾಧೆಯಾಗಿರಬಹುದು, ದಾಹ ಬಾಧೆಯಾಗಿರಬಹುದು ಇವುಗಳನ್ನು ಶಮನ ಮಾಡುವುದನ್ನು ದಾನರೂಪದಲ್ಲಿ ಸೇವಾ ರೂಪದಲ್ಲಿ ಕಂಡುಕೊಂಡ ಸಂಸ್ಕೃತಿ ನಮ್ಮದು. ಮಲಯಾಳಂ ನಲ್ಲಿ ಒಂದು ಮಾತಿದೆ ಅತ್ತಾಯ ಪಟ್ಟಿನಿಕ್ಕಾರ್ ಉಂಡೋ ಅಂತ . ಇದನ್ನು ರಾತ್ರಿ ಮನೆಯ  ಹೊರಗಿನ ಬಾಗಿಲು ಹಾಕುವಾಗ ಕೇಳುವ ಸಂಪ್ರದಾಯ. ಅಂದರೆ ಹೊರಗೆ ಯಾರಾದರೂ ಹಸಿವಾದವರು ಇದ್ದಾರೆಯೇ ? ನಮ್ಮ ಹಸಿವನ್ನು ನೀಗಿಸುವ ಮೊದಲು ಬೇರೆ ಹಸಿವಿನಿಂದ ಬಳಲುವವರ ಬಾಧೆಯನ್ನು ಮೊದಲು ಪರಿಹರಿಸಬೇಕು. ಇದು ನಮ್ಮ ನಮ್ಮ ಸಂಸ್ಕಾರ. ಹಾಗಾಗಿಯೇ ನಮ್ಮ ದೇವಸ್ಥಾನಗಳಲ್ಲಿ  ಹೊತ್ತು ಹೊತ್ತಿಗೆ ಪ್ರತಿ ನಿತ್ಯವೂ ಭೋಜನ ಪ್ರಸಾದವಿರುತ್ತದೆ.  ತೀರಾ ಹಿಂದುಳಿದ ಒಂದು ಸಣ್ಣ ಹಳ್ಳಿಯ ಈ ದೇವಸ್ಥಾನದಲ್ಲೂ ಇದು ಹಿಂದಿನಿಂದಲೂ ಆಚರಣೆಯಲ್ಲಿ ಇದೆ. 

ಸುಮಾರು ಅರ್ಧ ಶತಮಾನಗಳ ಕಾಲ ಇಲ್ಲಿನ ಭೋಜನ ಪ್ರಸಾದವನ್ನು ಸ್ವೀಕರಿಸಿದ್ದೇನೆ. ಪ್ರತಿ ಬಾರಿಯೂ ಇಲ್ಲಿ ಒಂದು ಹಿಡಿಯಷ್ಟಾದರೂ ಪ್ರಸಾದವನ್ನು ಸ್ವೀಕರಿಸುವಲ್ಲಿ ಸಿಗುವ ತೃಪ್ತಿಯನ್ನು ಅನುಭವಿಸಿದ್ದೇನೆ. ಬುದ್ದಿ ಬಲಿಯುವ ಮೊದಲಿನ ಬಾಲ್ಯದಲ್ಲಿ ಇಲ್ಲಿ ಉಂಡ ಊಟದಂತೆ ಅದು ಈಗಲೂ ಅದೇ ಅನುಭವನ್ನು ನೀಡುತ್ತ ಬಂದಿದೆ. ಈಗಲೂ ಇಲ್ಲಿನ ನೈವೇದ್ಯವನ್ನು ಉಂಡಮೇಲೆ ಅದೇ ಬಗೆ ತೃಪ್ತಿಯನ್ನು ಅನುಭವಿಸುವಾಗ ಆವಳ ಮಠದ ಊಟ ಗಮ್ಮತ್ತಾಗಿದೆ ಎನ್ನುವಲ್ಲಿ ಯಾವ ಅತಿಶಯವೂ ಇರುವುದಿಲ್ಲ. ಅದು ಇಲ್ಲಿ ಸಹಜವಾದ ಕ್ಷೇತ್ರಗುಣ. ದಿವ್ಯ ಪ್ರಸಾದದ ಮಹಿಮೆ ಅಂದಿನಿಂದ ಇಂದಿನವರೆಗೂ ಅದರ ಅನುಭವ ಅವರ್ಣನೀಯ.  ಎಲ್ಲ ವೈಶಿಷ್ಟ್ಯಗಳಂತೆ ಇಲ್ಲಿನ ಅನ್ನ ಪ್ರಸಾದದ ಊಟವೂ ಒಂದು ದೊಡ್ಡ ಆಕರ್ಷಣೆ. ಒಂದು ಹೊತ್ತು ಗೋಪುರದಲ್ಲಿ ಕುಳಿತು ಉಂಡು ತೃಪ್ತರಾಗುವುದೆಂದರೆ ಅದು ಪೂರ್ವ ಜನ್ಮದ ಸುಕೃತದ ಫಲ. 

ಬಾಲ್ಯದ ದಿನಗಳಲ್ಲಿ ದೇವಸ್ಥಾನ ಎಂದು ಕಲ್ಪನೆಗೆ ಬಂದರೆ ಚಿತ್ತಭಿತ್ತಿಯಲಿ ಮೊದಲು ಚಿತ್ರಣವಾಗುವುದು ನಮ್ಮ ಆವಳ ಮಠ. ದೇವಸ್ಥಾನ ಎಂದು ಹಿರಿಯರು ತೋರಿಸಿದ್ದೇ ಇಲ್ಲಿಯ ಗರ್ಭಗುಡಿ ಗೋಪುರಗಳನ್ನು. ಪ್ರಸಾದವೆಂದರೆ ಇಲ್ಲಿನ ಸರಳ ಸಾತ್ವಿಕ ಅನ್ನ ನೈವೇದ್ಯವನ್ನು. ಇಂದಿಗೂ ಆ ಪಾವಿತ್ರ್ಯತೆ ಆ ಗೌರವ ಹಾಗೇ ಉಳಿದುಕೊಂಡಿದೆ ಎಂದರೆ ಅದು ನಡೆದುಕೊಂಡು ಬಂದ ರೀತಿಯಲ್ಲಿದೆ. ತಲೆ ಮಾರು ಬದಲಾಗಿರಬಹುದು. ಇಲ್ಲಿನ ವ್ಯವಸ್ಥೆಗಳು ಹಾಗೆ ಹೀಗೆ ಅಂತ ಬದಲಾಗಿರಬಹುದು. ಆದರೆ ಅನ್ನ ಪ್ರಸಾದದ ಪಾವಿತ್ರ್ಯತೆ ಅದು ಬದಲಾಗಿಲ್ಲ. 

ಈಗ ಕಾಲ ಬಹಳಷ್ಟು ಬದಲಾಗಿದೆ. ನಮ್ಮ ಕಣ್ಣೆದುರೇ ಎರೆಡೆರಡು ತಲೆ ಮಾರು ಸಂದು ಹೋಗಿದೆ. ಹಾಗಂತ ಸಂದು ಹೋದವರು ಬಿಂಬಿಸಿ ಹೋದ ನೆನಪುಗಳು ಹಾಗೇ ಉಳಿದಿವೆ. ಅನ್ನ ಪ್ರಸಾದದ ಮುಷ್ಠಿಯೊಳಗಿನ ತುತ್ತುಗಳಂತೆ ಅವುಗಳೂ ಅಸಂಖ್ಯ. ತಿನ್ನುವ ಪ್ರತಿ ಧಾನ್ಯದಲ್ಲೂ ತಿನ್ನುವಾತನ ಹೆಸರು ಇರುತ್ತದೆಂಬ ನುಡಿಯಂತೆ, ಇಲ್ಲಿ ತಿನ್ನುವ ಪ್ರತಿ ತುತ್ತಿನಲ್ಲಿ ಸಂದು ಹೋದ ನೆನಪುಗಳು ಬರೆಯಲ್ಪಟ್ಟಿದೆ. ತಿಂದ ಅನ್ನ ಕರಗಿ ಹೋದರೂ ನೆನಪು ಅದೆಂದಿಗೂ ಮಾಸುವುದಿಲ್ಲ. ಮೊದಲು  ಒಂದು ಹೊತ್ತಿನ ಊಟ ಮಾಡುವುದಕ್ಕೂ ತತ್ವಾರ ಇತ್ತು. ಆಗ ಇಂತಹ ದೇವಾಲಯಗಳು ಅಷ್ಟೋ ಇಷ್ಟೋ ಹಸಿವನ್ನು ನೀಗಿಸುತ್ತಿತ್ತು. ಇಂದು ಅಂತಹ ಪರಿಸ್ಥಿತಿ ಬಹಳ ಕಡಿಮೆ. ಆದರೆ ವಿಪರ್ಯಾಸವೆಂದರೆ ಇಂದು ದೇವಸ್ಥಾನದ ಇಂತಹ ವ್ಯವಸ್ಥೆಗಳ ವ್ಯವಹಾರ ಬಹಳ ಪರಿಶ್ರಮದಿಂದ ಕೂಡಿರುತ್ತದೆ. ನಿತ್ಯ ಪೂಜೆ ಅಥವಾ ಇನ್ನಿತರ ಕೆಲಸಗಳ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದೆಂದರೆ ಹಲವಾರು ತ್ಯಾಗಗಳಿಗೆ ಸಿದ್ದರಾಗಬೇಕಾಗಿದೆ. ನಿತ್ಯ ಪೂಜೆಯನ್ನು ಒಪ್ಪಿಕೊಂಡ ಅರ್ಚಕನಿಗೆ ತನ್ನ ಸ್ವಂತ ಕುಟುಂಬದ ಹಲವು ಕಾರ್ಯಗಳಿಗೆ ಗಮನಹರಿಸುವುದಕ್ಕೆ ಅದಕ್ಕೆ ಸಮಯವನ್ನು ವಿನಿಯೋಗಿಸುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಇದಕ್ಕೆ ರಜೆ ಇಲ್ಲ. ಮೂರು ಹೊತ್ತು ಪೂಜೆ ಅದಕ್ಕೆ ಹೊಂದಿಕೊಂಡ ಕಾರ್ಯಗಳು ನಡೆಯಬೇಕಾಗಿರುವುದು ದೇವತಾ ಕಾರ್ಯದ ಅಗತ್ಯವಾಗಿರುತ್ತದೆ. ಹಾಗಾಗಿ ಇದನ್ನು ಒಪ್ಪಿಕೊಳ್ಳುವವರೂ ಇರುವುದಿಲ್ಲ. ಯಾವುದೋ ಸಂಬಂಧಗಳಿಂದ ಶ್ರಧ್ದಾ ಭಕ್ತಿಯಿಂದ ಅದನ್ನು ಕರ್ತವ್ಯ ಎಂಬಂತೆ ನಿರ್ವಹಿಸುವ ಕಾರಣ ಸೂಕ್ತವಾಗಿ ಇವುಗಳು ನಿರಂತರ ನಡೆದುಕೊಂಡು ಹೋಗುತ್ತವೆ. ಇದು ಆದಾಯದ ಮೂಲವಾಗಿ ಪರಿಗಣಿಸಲ್ಪಡುವುದೇ ಇಲ್ಲ. ಹೆಚ್ಚಿನ ಕಡೆಗಳಲ್ಲಿ ತಟ್ಟೆಕಾಸು ಎಂಬ ಪ್ರತೀತಿ ಇದೆ. ಅದು ಅರ್ಚಕರ ಆದಾಯ. ಆದರೆ ಇಲ್ಲಿ ಬರುವ ಎಲ್ಲಾ ಸಂಗ್ರಹವೂ ನಿಷ್ಕಾಮ ಕರ್ಮದ ಪ್ರತೀಕವಾಗಿ ದೇವಸ್ಥಾನದ ಭಂಡಾರವನ್ನು ಸೇರುತ್ತದೆ. ಈ ಕ್ಷೇತ್ರದ ವೈಶಿಷ್ಟ್ಯತೆಗಳಲ್ಲಿ ಇದೂ ಒಂದು. ಎಲ್ಲರೂ ಸೇರಿಕೊಂಡು ಎಲ್ಲರೂ ಒಂದಾಗಿ ಕೇವಲ ದೈವಾನುಗ್ರಹದ ಫಲಾಪೇಕ್ಷೆಯನ್ನು ಮಾತ್ರ ಬಯಸಿ ನಡೆಸಿಕೊಡುವ ಸೇವೆಯಲ್ಲಿ ಒಂದು ಧನ್ಯತೆ ಇದೆ. ಈ ಧನ್ಯತೆಗೆ ಒಂದು ಬಳಗವೇ ಇದೆ. 


Sunday, November 2, 2025

ದೇವರು ಎಂಬ ವಿಶ್ವಾಸ



 " ದೇವರು ಧರ್ಮವನ್ನು ಏನೆಂದು ತಿಳಿಯದೇ ಅದಕ್ಕೆ ಹೋರಾಡುತ್ತೇವೆ. "


ಮೊನ್ನೆ ನಮ್ಮ ಗ್ರಾಹಕರೊಬ್ಬರನ್ನು, ನಮ್ಮ ವೃತ್ತಿ ರೀತಿಯಲ್ಲಿ ಹೇಳುವುದಾದರೆ ನಮ್ಮ ಕ್ಲೈಂಟ್ (client) , ತಿಂಗಳ ಜಿ ಎಸ್ ಟಿ ಪಾವತಿಸುವಂತೆ ಕರೆ ಮಾಡಿದೆ. ಪ್ರತೀ ತಿಂಗಳು ನಾನು ಹೇಳುವ ಮೊದಲೇ ಕೃತ್ಯ ನಿಷ್ಠೆಯಿಂದ ಪಾವತಿಸುತ್ತಿದ್ದರು. ಮಾತ್ರವಲ್ಲ ಅವರು ಅನ್ಯ ಧರ್ಮಿಯರು.   ಹಿಂದುವಲ್ಲದವರನ್ನು ಅನ್ಯಧರ್ಮಿಯರು ಅಂತ ನನ್ನ ವೈಯಕ್ತಿಕ ನೆಲೆಯಲ್ಲಿ ಕರೆಯಬೇಕು. ಆದರೆ ವಾಡಿಕೆಯಲ್ಲಿ ಹಾಗಿಲ್ಲ ಎಂಬುದು ಮತ್ತೊಂದು ಸಂಗತಿ.  ನಮ್ಮ ಹತ್ತಿಪ್ಪತ್ತು ವರ್ಷಗಳ ವ್ಯಾವಹಾರಿಕ ಸಂಭಂಧ. ಬಹುಶಃ ನಾನು ಬೆಂಗಳೂರಿಗೆ ಬಂದಂದಿನಿಂದ ಇವರು ನನ್ನ ಗ್ರಾಹಕರು. ನನ್ನಿಂದ ಹಲವಾರು ಸರಕಾರಿ ಸಂಬಂಧೀ ಕೆಲಸಗಳನ್ನು ಮಾಡಿಸುತ್ತಾರೆ. ಹಾಗಾಗಿ ಅವರ ಜಿಎಸ್ ಟಿ ಕೆಲಸವನ್ನು ನಾನೇ ಮಾಡುತ್ತಿದ್ದೇನೆ.   ಒಳ್ಳೆಯ ವ್ಯಕ್ತಿ. ಹಾಗಾಗಿಯೇ ಈ ದೀರ್ಘಕಾಲೀನ ವ್ಯವಹಾರ ಮುಂದುವರೆದಿದೆ. ಅವರೇ ಹೇಳುವಂತೆ ನನ್ನ ಮೇಲೆ ಅವರಿಗೆ ಅಪರಿಮಿತ ವಿಶ್ವಾಸವಿದೆ. ನನಗೆ ಕೊಡುವ ಸೇವಾ ಶುಲ್ಕದಲ್ಲಿ ಯಾವುದೇ ಚರ್ಚೆ ತಕರಾರು ಇಲ್ಲದೇ ಪಾವತಿಸುತ್ತಿದ್ದಾರೆ.   ಅವರದೊಂದು ಮಾಂಸಾಹಾರಿ ಹೋಟೆಲು.  ಮೊನ್ನೆ  ಕರೆ ಮಾಡಿದಾಗ ಹೇಳಿದರು, " ಸರ್,  ಹಬ್ಬಗಳ ಸರಣಿ...ಸಹಜವಾಗಿ ನಮಗೆ ವ್ಯಾಪಾರ ಬಹಳ ಕಡಿಮೆ ಇದೆ. ಅದನ್ನು ಹೇಗಾದರೂ ನಿಭಾಯಿಸಬಹುದು, ಆದರೆ ಈ ದೇಣಿಗೆಯ  ಹಾವಳಿ ತುಂಬಾ ಇದೆ ಸರ್, ಗಲ್ಲಿ ಗಲ್ಲಿಯಲ್ಲಿ ಗಣೇಶ ಕೂರಿಸುತ್ತಾರೆ, ದಸರ ದೀಪಾವಳಿ ಅಂತ ಮಾಡುತ್ತಾರೆ. ಬಂದು ಹಣ ಕೇಳುತ್ತಾರೆ. ನನ್ನ ಧರ್ಮ ಬೇರೆ, ಆದರೂ ನನಗೆ ಕೊಡಬಾರದು ಅಂತೇನಿಲ್ಲ. ದೇವರು ಹೇಗಿದ್ದರೂ ಅದು ದೇವರ ಕೆಲಸ ಅಂತ ಕೊಡಬಹುದು. ಆದರೆ, ಅವರು ಐದು ಸಾವಿರ ಹತ್ತು ಸಾವಿರ ಅಂತ ಕೇಳಿದರೆ ನಾನು ಹೇಗೆ ಕೊಡುವುದು.? ಮೊದಲೇ ವ್ಯಾಪಾರ ಕಡಿಮೆ. ನನ್ನ ಸಾಮಾರ್ಥ್ಯಕ್ಕೆ ಅನುಸಾರವಾಗಿ ಅಷ್ಟೋ ಇಷ್ಟೋ ಕೊಟ್ಟರೆ ಹೋಗಲಿ ಅನ್ನಬಹುದು ಆದರೆ ಇಷ್ಟೇ ಕೊಡಬೇಕು ಅಂತ ದೌರ್ಜನ್ಯ ಮಾಡಿದರೆ ಹೇಗೆ? ನೋಡಿ ಜಿಎಸ್ ಟಿ ಕಟ್ಟೋದಕ್ಕೆ ನಾನು ಸಾಲ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಇದೆ. " 

ಗಣೇಶ ಹಬ್ಬಕ್ಕೂ ಇಮಾಂ ಸಾಬಿಗೂ ಎತ್ತಣಿಂದ ಸಂಬಂಧ ಅಂತ ಹಳೆಯ ಮಾತು ಇದೆ. ಇದು ಅದೇ ತರಹ. ನಾವು ಧರ್ಮದಿಂದ ದೂಷಿಸಬಹುದು. ಆದರೆ ನಮ್ಮ ಧರ್ಮಾಚರಣೆಗೆ ಅನ್ಯ ಧರ್ಮೀಯರಿಂದ ದೇಣಿಗೆ ಸಂಗ್ರಹಿಸುವುದು ತಪ್ಪು.  ಹೋಗಲಿ ಕೇಳಿದರೂ..ಇಷ್ಟೇ ಕೊಡಬೇಕು ಎಂದು ದಬ್ಬಾಳಿಕೆ ಮಾಡುವುದು ಎಷ್ಟು ಸರಿಯಲ್ಲ.  ದೈವ ವಿಶ್ವಾಸ  ನಂಬಿಕೆ ಎಂಬುದು ತೀರ ವೈಯಕ್ತಿಕ ವಿಚಾರ. ಒಬ್ಬನನ್ನು ಅವನ ವೈಯಕ್ತಿಕ ವಿಚಾರವನ್ನು ಹೇಳಿ ಅವನನ್ನು ಅಪರಾಧಿಯನ್ನಾಗಿಯೋ ಅಥವಾ ದೂರೀಕರಿಸುವುದು ಸರಿಯಲ್ಲ. ಇದು ನನ್ನ ಅಭಿಮತ. ವ್ಯಕ್ತಿಗತ ವಿಚಾರಗಳು ಸ್ವಭಾವಗಳು ಪರ ಪೀಡನೆಯಾಗದೇ ಇದ್ದರೆ ಅವರನ್ನು ದೂರ ಮಾಡುವುದರಲ್ಲಿ ಅರ್ಥವಿಲ್ಲ. ವೈಯಕ್ತಿಕ ವಿಚಾರ ಭಿನ್ನತೆ ಹಲವು ಇರುತ್ತದೆ. ಒಂದು ಮರ ಹಣ್ಣೇ ಕೊಡುವುದಿಲ್ಲ ಎಂದು ಅದನ್ನು ಕಡಿಯುವುದು ಸರಿಯೇ? ಏನು ಮಾಡೋಣ ಇದು ಪ್ರಕೃತಿ. ನಾವೂ ಅದರ ಅಂಗ. ಒಬ್ಬ ಕಳ್ಲನೋ ಕಾಮುಕನೋ ಅದು ಆತನ ವ್ಯಕ್ತಿಗತವಾಗಿದ್ದರೂ ಅದು ಪರಪೀಡನೆಯಾಗುತ್ತದೆ. ಅಂಥವರನ್ನು ದೂರ ಮಾಡಬೇಕು ಸರಿ.  ಅದರೆ ಒಬ್ಬ ವೈಯಕ್ತಿಕವಾಗಿ ಹಲವು ದೌರ್ಬಲ್ಯಗಳನ್ನು ಅನುಭವಿಸಬಹುದು. ಆತನ ವಿಶ್ವಾಸಗಳು ನಂಬಿಕೆಗಳು ನಡವಳಿಕೆಗಳು ಬೇರೆಯೇ ಇರಬಹುದು. ಅದನ್ನು ಆಕ್ಷೇಪಿಸುವುದು ಸರಿಯಲ್ಲ.  ವೈಚಾರಿಕ ಭಿನ್ನತೇ ದ್ವೇಷಕ್ಕೆ ಕಾರಣವಾಗಬಾರದು. ದೇವರು ಧರ್ಮ ಏನೆಂದು ತಿಳಿಯದೇ ಅದಕ್ಕಾಗಿ ಹೋರಾಡುತ್ತಾರೆ.  ಆ ಅಜ್ಞಾನವೇ ದ್ವೇಷಕ್ಕೆ ಕಾರಣವಾಗುತ್ತದೆ.  ದೇವರನ್ನು ನಂಬಿದಷ್ಟು ಅದು ಏನೆಂಬುದನ್ನು ನಂಬುವುದಿಲ್ಲ. ದೇವರಿಗಿಂತಲೂ ನಮ್ಮ ಅಹಂಭಾವವೇ ಮುಖ್ಯವಾಗುತ್ತದೆ ಹೊರತು ದೇವರು ಧರ್ಮ ಮುಖ್ಯವಾಗುವುದಿಲ್ಲ. ಅಹಂಕಾರವನ್ನು ತ್ಯಜಿಸಿದಲ್ಲಿ ಮಾತ್ರವೇ ಭಗವಂತನನ್ನು ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ಭಗವದ್ಗೀತೆಯ ತತ್ವಮಸಿ ಎಂಬ ತತ್ವ ಅದು. ನಮ್ಮಲ್ಲಿರುವ ಉದಾತ್ತ ತತ್ವಗಳು  ಗ್ರಂಥದಿಂದ ಹೊರಗೆ ಬರುವುದಿಲ್ಲ.

ಇತ್ತೀಚೆಗೆ ನಮ್ಮ ಬೀದಿಯಲ್ಲಿ ಗಣೇಶನನ್ನು ಕೂರಿಸುವುದಕ್ಕೆ ದೇಣಿಗೆ ಸಂಗ್ರಹಕ್ಕೆ ಹುಡುಗರು ಬಂದಿದ್ದರು. ನಾನು ಹೇಳಿದೆ,  ಹೀಗೆ ರಸ್ತೆಯಲ್ಲಿ ದೇವರನ್ನು ಕೂರಿಸುವುದರಲ್ಲಿ ನನಗೆ ನಂಬಿಕೆ ಇಲ್ಲ. ನನ್ನನ್ನು ವಿಚಿತ್ರವಾಗಿ ನೋಡಿದರು. ಒಬ್ಬ ದೈವ ದ್ವೇಷಿಯಂತೆ ಕಂಡಿತು. ಧರ್ಮ ವಿರೋಧಿ ಅನ್ನಿಸಿದರೂ ಅನ್ನಿಸಿರಬಹುದು. ಮನೆಯಲ್ಲಿ ಎರಡು ಹೊತ್ತು ನೂರೆಂಟು ಗಾಯತ್ರೀ ಜಪ ಮಾಡುವವನು ನಾನು ಅದು ಅವರಿಗೆಲ್ಲಿ ಆರಿವಾಗಬೇಕು? ಅವರವರ ಚಿಂತನೆಯ ರೀತಿಯಲ್ಲಿ ನಂಬಿದರೆ ಮಾತ್ರ ಅವರು ದೈವ ಭಕ್ತರು ಎನಿಸಿಕೊಳ್ಳುತ್ತಾರೆ.  ಇಲ್ಲಿ ದೇವರನ್ನು ನಂಬುವುದು ಎಂದರೆ ಅದು ಪ್ರದರ್ಶನಕ್ಕೆ ಯೋಗ್ಯವಾಗಿರಬೇಕು. ಯಾರದರೂ ನಮ್ಮನ್ನು ಗಮನಿಸುತ್ತಾರೆ ಎಂದಿದ್ದರೆ, ನಮ್ಮದು ಒಂದೆರಡು ನಮಸ್ಕಾರ ಪ್ರದಕ್ಷಿಣೆ ಹೆಚ್ಚಿರುತ್ತದೆ. ನಮ್ಮ ದಾನ ಧರ್ಮಗಳು ದೊಡ್ಡದಾಗಿರುತ್ತದೆ. ಯಾರೋ ನೊಡುತ್ತಾರೆ ಎಂದು ನಾವು ನಮಸ್ಕಾರ ಮಾಡಿದರೆ, ಆ ನಮಸ್ಕಾರದ ಪುಣ್ಯ ಫಲ ಯಾರಿಗೆ ಸಲ್ಲಬೇಕು?  ಮಾಡುವವನಿಗೋ ನೋಡುವವನಿಗೋ? ಈ ಸೂಕ್ಷ್ಮ ಅರ್ಥವಾಗಬೇಕಾದರೆ ತಲೆಯಲ್ಲಿ ಬುದ್ದಿಯ ವಾಸವಿರಬೇಕು. 

ದೇವರ ಬಗ್ಗೆ ಹೇಳಿದರೆ ದೇವರು ಶಾಪ ಕೊಟ್ಟುಬಿಡುತ್ತಾನೆ ಎಂದು ಭಯ ಹುಟ್ಟಿಸಿಬಿಡುತ್ತಾರೆ. ಭಯದಿಂದ ದೇವರ ಭಕ್ತಿ ಪ್ರಚೋದನೆಗೊಂಡರೆ ಅದು ಭಕ್ತಿ ಹೇಗಾಗುತ್ತದೆ. ಭಯ ಎಂಬುದು ತಾತ್ಕಾಲಿಕ.  ಭಯ ಕರಗಿದಾಗ ನಂಬಿಕೆಯೂ ಕಳೆದು ಹೋಗಬಹುದು. ನಾವು ಯಾವುದೋ ಭ್ರಮೆಗೊಳಗಾಗಿ ಯಾವುದನ್ನೂ ಮಾಡಬರದು. ಭ್ರಮೆ ಕರಗಿದಾಗ ಆ ಕಾರ್ಯದ ಮಹತ್ವವೂ ಹೋಗಿಬಿಡುತ್ತದೆ.  ಉದಾಹರಣೆಗೆ ನಾಳೆ ರೋಗಬರುತ್ತದೆ ಸಾಯುತ್ತೇನೆ ಅಂತ ಭ್ರಮೆಯಲ್ಲಿ ಯೋಗಾಭ್ಯಾಸ ಮಾಡಬಾರದು.  ಯೋಗಾಭ್ಯಾಸ ಅದು ಭ್ರಮಾತ್ಮಕ ಕ್ರಿಯೆಯಲ್ಲ. ಅದು ದೇಹದ ಹಸಿವನ್ನು ನೀಗಿಸುವಂತೆ ಜೀವನದ ಸಹಜ ಕ್ರಿಯೆಯಾಗಬೇಕು. ಹಾಗಾಗಿ ಅದನ್ನು ಸಹಜಯೋಗ ಎನ್ನುವುದು. ಬದುಕಿನ ಪ್ರತಿಯೊಂದು ಕರ್ಮವೂ ಭ್ರಮೆಯಿಂದ ಮಾಡಬಾರದು. 

ದೇವರು ಎಂಬುದು ಒಂದು ದಿವ್ಯ ಅನುಭವ. ಆ ದೇವರು ಎಲ್ಲೂ ಕಾಣುವುದಿಲ್ಲ. ನಾವು ಕಾಣಬೇಕು. ವಿವೇಕಾನಂದರು ಹೇಳಿದ್ದಾರೆ, ದೇವರು ಎಲ್ಲೂ ವ್ಯಕ್ತವಾಗುವುದಿಲ್ಲ. ನಾವು ಈ ಪ್ರಕೃತಿಯನ್ನು ಸೇವಿಸುವುದರಲ್ಲಿ ಎಲ್ಲರ ಸೇವೆ ಮಾಡುವುದರಲ್ಲಿ ಭಗವಂತನಿದ್ದಾನೆ. ಪ್ರತಿಯೊಬ್ಬರಲ್ಲು ಆತ್ಮ ರೂಪದಲ್ಲಿ ದೇವರು ಇರುತ್ತಾನೆ. ಆತನ ಸೇವೆ ಮಾಡುವುದೆಂದರೆ ದೇವರ ಸೇವೆ ಮಾಡಿದಂತೆ. ಇಂತಹ ಉದಾತ್ತ ತತ್ವಗಳನ್ನು ಪ್ರತಿಪಾದಿಸುವ ನಮ್ಮ ಧರ್ಮದಲ್ಲಿ ಹೀಗೆ ನಮ್ಮ ಆಚರಣೆಗೆ ಪರಧರ್ಮೀಯರನ್ನು ಪೀಡಿಸುವುದೆಂದರೆ ಅದು ಅಕ್ಷಮ್ಯ.  ಅಹಂ ಬ್ರಹ್ಮಾಸ್ಮಿ ಅಂತ ಶಂಕರಾಚಾರ್ಯರು ಬೋಧಿಸಿದರೂ ಎಲ್ಲರಲ್ಲು ಬಹ್ಮನ ಅಸ್ತಿತ್ವವನ್ನು ಕಾಣದೇ ಶಂಕರಾಚಾರ್ಯರನ್ನು ಗುರು ಅಂತ ಪೂಜಿಸುವುದರಲ್ಲಿ ಅರ್ಥವಿಲ್ಲ. ನಮ್ಮಲ್ಲೋಂದು ಭಾವವಿದೆ, ಯಾರಿಗೋ ವಂಚನೆ ಮಾಡಿದ್ದು, ಅಥವಾ ಕಸಿದು ಕಿತ್ತು ಪಡೆದ ಅಪರಾಧಗಳ  ಪ್ರಾಯಶ್ಚಿತ್ತ ಅದನ್ನು ದೇವರಿಗೆ ಅರ್ಪಿಸಿವುದರಲ್ಲಿದೆ. ಹೇಗೋ ಅನ್ಯಾಯದಿಂದ ಸಂಪತ್ತನ್ನು ಸಂಪಾದಿಸಿ ದೇವರ ಹುಂಡಿಗೆ ಹಾಕಿದರೆ ನಾವು ಪಾಪದಿಂದ ಮುಕ್ತರಾಗುತ್ತೇವೆ. ಆದರೆ ದೇವರಿಗೆ ಅರ್ಪಿಸುವುದು ಪವಿತ್ರವಾಗಿರಬೇಕಾದರೆ ಅದು ಯಾರನ್ನೂ ಹಿಂಸಿಸದೆ, ಸತ್ಯ ನ್ಯಾಯದಿಂದ ಸಂಪಾದಿಸಿರಬೇಕು. ಈ ಪರಿಜ್ಜಾನ ಮೂಡುವ ತನಕ ಎಷ್ಟು ದೊಡ್ಡ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದರೂ ಮೂರ್ತಿಯ ಗಾತ್ರದಷ್ಟೇ ನಮ್ಮ ಪಾಪವೂ ಬೆಳೆಯಬಹುದೇ ಹೊರತು ಪುಣ್ಯ ಸಂಚಯನ ಸಾಧ್ಯವಿಲ್ಲ. 


Thursday, October 16, 2025

ನಮಗೊಂದೇ ಭಾಷೆ

  ಸಂಸ್ಕೃತ ಭಾಷೆ ಬ್ರಾಹ್ಮಣ ಭಾಷೆ ಅಂತ ಒಂದು ಯಾರೋ ಪುಣ್ಯಾತ್ಮನೊಬ್ಬ ಬರೆದಿರುವುದನ್ನು ಓದಿದೆ. ಬಹುಶಃ ವೈದಿಕ ಪೂಜಾವಿಧಾನಗಳಲ್ಲಿ ಇದರ ಬಳಕೆ ಹೆಚ್ಚು ಇರುವುದರಿಂದ ಮತ್ತು ಯಾರಿಗೂ ಸುಲಭದಲ್ಲೇ ಅರ್ಥವಾಗದೇ ಇರುವುದರಿಂದ ಒಂದು ರೀತಿಯ ಮತ್ಸರದಲ್ಲಿ ಹೀಗೆ ಅಪಾದಿಸುವುದುಂಟು. ಏನಿದ್ದರೂ ಬ್ರಾಹ್ಮಣರನ್ನು ದೂಷಿಸಿದರೆ ಯಾವ ಪರಿಣಾಮವೂ ಇರುವುದಿಲ್ಲ ಎಂಬ ನಿರ್ಭಯತ್ವದ ಭಾವ ಇದೆ.  ಕನ್ನಡದ ಬಗ್ಗೆ ಅಭಿಮಾನದಲ್ಲಿ ಹೀಗೆ ಹೇಳಿದರೆ ಆ ಅಭಿಮಾನ ತಪ್ಪು ಎನ್ನುವ ಹಾಗಿಲ್ಲ. ಆದರೆ ವಿವೇಚನೆಯಿಂದ ಕಂಡರೆ ಇದರ ಮಿಥ್ಯಾಂಶ ಅರಿವಿಗೆ ಬರುತ್ತದೆ. ಕನ್ನಡ ಶಬ್ದ ಕೋಶದಲ್ಲಿ ಅಥವಾ ನಾವು ಆಡುವ ಕನ್ನಡ ಭಾಷೆಯಲ್ಲಿ  ಸಂಸ್ಕೃತ ಶಬ್ದಗಳನ್ನು ತೆಗೆದು ಹಾಕಿದರೆ ಅಲ್ಲಿ ಎಷ್ಟು ಕನ್ನಡ ಶಬ್ದಗಳು ಉಳಿಯಬಹುದು ಅಂತ ನೋಡಿದರೆ ಕೆಲವೇ ಕೆಲವು ಉಳಿಯಬಹುದು. ಇದು ಕನ್ನಡ ಸಂಸ್ಕೃತ ವಿದ್ವಾಂಸರಒಬ್ಬರು ಹೇಳಿದ ಮಾತು. ಹಾಗಿದ್ದರೆ ಕೇವಲ ಸಂಸ್ಕೃತದ ದ್ವೇಷ ಮಾತ್ರ ಇಲ್ಲಿ ಕಾಣಬಹುದು. ನಮ್ಮ ಭಾಷೆ ಉಳಿಯಬೇಕಾದರೆ ಮತ್ತೊಂದು ಭಾಷೆಯನ್ನು ನಾಶ ಮಾಡಿ ಉಳಿಸಬಹುದು ಎಂದು ತಿಳಿದರೆ ಅದು ಮೂರ್ಖತನವಾದೀತು. ಭಾಷೆ ಉಳಿಯಬೇಕಿದ್ದರೆ ಅದನ್ನು ಪರಿಶುದ್ದವಾದ ಉಪಯೋಗದಲ್ಲಿ ಉಳಿಸುವ ಪ್ರಯತ್ನ ಮಾಡಬೇಕು. ತಮಿಳು ನಾಡಿನಲ್ಲಿ ಹಿಂದಿ ಭಾಷೆ ನಿಷೇಧ ಮಾಡುವ ಸಮಾಚಾರ ಕೇಳಿಬಂತು. ಇದು ಕೂಡ ಇದೇ ಮಾದರಿಯಾಗಿರುತ್ತದೆ. ಯಾರೋ ಭಾಷೆಯನ್ನು ಮಾತನಾಡುವ ವ್ಯಕ್ತಿಗಳು ಮಾಡಿದ್ದಕ್ಕೆ ಭಾಷೆಯನ್ನು ದ್ವೇಷಿಸುವುದಾದರೆ ಸ್ವತಃ ತಮಿಳು ಕೂಡ ದ್ವೇಷಕ್ಕೆ ಕಾರಣವಾಗಬಹುದು. 

ಬಳಕೆಯಲ್ಲಿ ಭಾಷೆ ಉಳಿಯಬೇಕು. ಆದರೆ ಇದೇ ಮಾತನ್ನು ಬೆಂಗಳೂರಿನ ಕನ್ನಡಕ್ಕೆ ಹೋಲಿಸಿದರೆ ವಿಚಿತ್ರವೆನಿಸುತ್ತದೆ. ಇಲ್ಲಿಯ ಭಾಷೆಯ ಬಳಕೆ ಹೇಗಿರುತ್ತದೆ ಎಂದರೆ " ನನಗೆ ಮನೆಯಲ್ಲಿ ಕುಕ್ಕಿಂಗ್ ಗೆ ಸಾಮಾನು ಮುಗಿದಿತ್ತು, ಹಾಗೆ ಬ್ಯಾಗ್ ಹಿಡಿದು ಮಾರ್ಕೆಟ್ ಗೆ ಹೋದೆ. ವೆಜಿಟೇಬಲ್ ಪರ್ಚೇಸ್ ಮಾಡಿದೆ. ಗ್ರೋಸರಿ ಪರ್ಚೇಸ್ ಮಾಡಿದೆ." ಹೀಗೆ ಇರುತ್ತದೆ. ಕೇವಲ ಕ್ರಿಯಾ ಪದಕ್ಕೆ ಮಾತ್ರ ಕನ್ನಡ ಸೀಮಿತವಾಗುತ್ತದೆ. ದಿನಸಿ ತರಕಾರಿ ಕೊಂಡುಕೊಂಡೆ ಅಂತ ಹೇಳದೆ ಆಡಿದ ಮಾತಿನಲ್ಲಿ ಕನ್ನಡವಲ್ಲದ ಯಾವೂದೋ  ಪಿರಂಗಿ ಭಾಷೆ ಉಪಯೋಗಿಸುವುದಕ್ಕೆ ಸಾಧ್ಯವಿದ್ದರೆ, ನಮ್ಮ ಭಾರತದದ ಹಿಂದಿ ಯಾಕೆ ಬೇಡವಾಗುತ್ತದೆ?  ಅಲ್ಲಿನ ವ್ಯಕ್ತಿಗಳು ಕಾರಣವೆ?  ಹಾಗೆ ವ್ಯಕ್ತಿಗಳನ್ನು ದ್ವೇಷಿಸುವುದಿದ್ದರೆ ಹಿಂದಿ ಮಾತನಾಡುವ ಮಂದಿಗಿಂತಲೂ ,  ಮೂರು ಶತಮಾನ ನಮ್ಮ ಸ್ವಾತಂತ್ರ್ಯವನ್ನು ಕಸಿದು ಗು್ಲಾಮರನ್ನಾಗಿ ಮಾಡಿದ ಇಂಗ್ಲೀಷರನ್ನು  ದ್ವೇಷಿಸುವುದರಲ್ಲಿ ಹೆಚ್ಚು ಅರ್ಥವಿದೆ.  ಇನ್ನು ಸಂಸ್ಕೃತದ ದ್ವೇಷವೂ ಅದೇ ರೀತಿ. ಯಾವುದೋ ಕಾಲದಲ್ಲಿ ಹೇಗೋ ಇತ್ತು ಎನ್ನುವುದಕ್ಕೆ ಈಗಿನ ಬ್ರಾಹ್ಮಣರನ್ನು ದ್ವೇಷಿಸಬೇಕು ಎನ್ನುವ ಕಾರಣದಿಂದ  ಸಂಸ್ಕೃತವೂ...ದ್ವೇಷಕ್ಕೆ ಕಾರಣವಾಗುತ್ತದೆ. ಹಾಗೆ ನೋಡಿದರೆ... ಬುದ್ದ ಮತ್ತು ಜೈನರು ಸಂಸ್ಕೃತವನ್ನು ಹೆಚ್ಚು ಬಳಕೆ ಮಾಡಿರುತ್ತಾರೆ. ಹಾಗಾಗಿ ಜೈನರನ್ನು ಬುದ್ದರನ್ನು ದ್ವೇಷಿಸಿದರೆ ನಮ್ಮ ದೇಶವನ್ನು ನಾವು ಅಭಿಮಾನ ಪ್ರೀತಿಯಿಂದ ಕಂಡಂತಾಗುವುದಿಲ್ಲ.  

ನಿಜಕ್ಕಾದರೆ ಭಾಷೆಯನ್ನು ದ್ವೇಷಿಸುವುದಲ್ಲ. ಯಾವುದೋ ಭಾಷೆ ಉಪಯೋಗ ಶೂನ್ಯವಾಗಬೇಕಾದರೆ ಮೊದಲು ನಮ್ಮ ಭಾಷೆಯನ್ನು ಪರಿಶುದ್ದಿಗೊಳಿಸಬೇಕು. ಅದನ್ನೇ ಶುಭ್ರವಾಗಿ ಬಳಸಬೇಕು. ನಮ್ಮಲ್ಲಿರುವ ಕೆಟ್ಟಗುಣವನ್ನು ಕಳೆಯಬೇಕಾದರೆ ಉಳಿದ ವ್ಯಕ್ತಿಗಳನ್ನು ನಾವು ದ್ವೇಷಿಸಿ ದೂರ ಮಾಡುವುದರಲ್ಲಿ ನಮ್ಮ ಕೆಟ್ಟಗುಣ ಬದಲಾಗಲು ಸಾಧ್ಯವಿಲ್ಲ. ನಾನು ಬ್ಯಾಗ್ ಹಿಡಿದುಕೊಂಡು ಶಾಪಿಂಗ್ ಗೆ ಹೋದೆ ಅಂತ ಹೇಳುವಾಗ ಶುದ್ಧವಾದ ಕನ್ನಡಕ್ಕೆ ಯಾವ ನ್ಯಾಯ ಸಲ್ಲುತ್ತದೆ.? 

ಇತ್ತೀಚೆಗೆ ನನ್ನ ಮಗನ ಸಹಪಾಠಿಯೊಬ್ಬ ನನ್ನ ಲೇಖನಗಳನ್ನು ಓದಿ , ಆತ ಅಭಿಪ್ರಾಯ ಹೇಳಿದ. " ಸಾರ್, ನಿಮ್ಮ ಲೇಖನ ಚೆನ್ನಾಗಿದೆ. ಆದರೆ ಆ ಶಬ್ದಗಳು ನಿಮಗೆ ಎಲ್ಲಿ ಸಿಗ್ಗುತ್ತದೆ ? ಅರ್ಥ ಮಾಡಿಕೊಳ್ಳುವುದು ತುಂಬ ಕಷ್ಟ ವಾಗುತ್ತದೆ. " ನಾನೇನು ಕನ್ನಡ ವಿದ್ವಾಂಸನೇನೂ ಅಲ್ಲ. ನನಗೆ ತಿಳಿದ ಸೀಮಿತ ಜ್ಞಾನದಲ್ಲೇ ಬರೆದ ಕನ್ನಡವನ್ನು ಅರ್ಥವಿಸುವುದಕ್ಕೆ ಕಷ್ಟವಾಗುತ್ತದೆ ಎಂದಾದರೆ ಕನ್ನಡ ಕನ್ನಡವಾಗಿ ಉಳಿದಿದೆ ಎನ್ನುವುದಕ್ಕೆ ಯಾವ ಆಧಾರವಿದೆ? ನಮ್ಮ ಭಾಷೆ ಉಳಿಯಬೇಕು. ಅದು ಇನ್ನೊಂದು ಭಾಷೆಯ ನಾಶದಲ್ಲಿ ನಮ್ಮ ಭಾಷೆ ಉಸಿರಾಡಬಾರದು. ಅಥವಾ ಉಳಿದ ಭಾಷೆ ನಿರ್ನಾಮವಾದರೆ ನಮ್ಮ ಭಾಷೆ ಉಳಿಯುತ್ತದೆ ಎಂದು ಭಾವಿಸಿದರೆ ಅದು ಅರಣ್ಯದ ನ್ಯಾಯವಾಗುತ್ತದೆ. ಒಂದು ಗಿಡ ಬೆಳೆಯಬೇಕಾದರೆ ಸುತ್ತಮುತ್ತಲಿನ ಹಲವು ಗಿಡವನ್ನು ನಾಶ ಮಾಡಬೇಕು.  ಇದು ಕಾಡಿನ ನ್ಯಾಯ.  ಬೀದಿಯಲ್ಲಿದ್ದ ಎರಡು ಅಂಗಡಿಯಲ್ಲಿ ,ಮತ್ತೊಂದು  ಅಂಗಡಿ ಮುಚ್ಚಿದರೆ ತನ್ನ ಅಂಗಡಿಗೆ ಹೆಚ್ಚು ವ್ಯಾಪಾರವಾಗುತ್ತದೆ ಎಂದು ಬಯಸಿದರೆ ಅದು ಸಾಧುವಾಗಲಾರದು. ಬದಲಿಗೆ ನಮ್ಮ ಅಂಗಡಿಯಲ್ಲಿ ಜನೋಪಯೋಗಿಯಾಗುವಂತೆ ಪ್ರಾಮಾಣಿಕವಾಗಿ ವ್ಯಾಪಾರ ಮಾಡಬೇಕು. ಹೊರತು ಮತ್ತೊಂದು ಅಂಗಡಿ ಮುಚ್ಚಿಸುವುದಲ್ಲ. ಮತ್ತೊಬ್ಬನನ್ನು ಅರೆ ಹೊಟ್ಟೆ ಮಾಡಿ ನಾವು ಹೊಟ್ಟೆ ತುಂಬಿಸಿಕೊಂಡರೆ ಅದು ನ್ಯಾಯವಾಗುವುದಿಲ್ಲ. ಜಗಳ ಮಾಡಿ ಪರಸ್ಪರ ಬೈದಾಡಿಕೊಂಡು ಗೆಲ್ಲುವುದಕ್ಕೆ ಹೊರಟೆರೆ ಆ ಬೈಗುಳಗಳಲ್ಲಿ ಕೆಟ್ಟಭಾಷೆಯೇ ಬಳಕೆಯಾಗುತ್ತದೆ. ಅದು ಸುಸಂಸ್ಕೃತ ಭಾಷೆಯಾಗುವುದಿಲ್ಲ. 


ಈ ದ್ವೇಷ ಎಂಬುದು ಕೇವಲ ಭಾಷೆಗೆ ಮಾತ್ರ ಸೀಮಿತವಾಗಿಲ್ಲ. ನಾವು ಬೆಳೆಯುವುದಕ್ಕೆ ಪ್ರಕೃತಿಯನ್ನು ನಾಶ ಮಾಡುತ್ತೇವೆ. ನಮ್ಮ ಧರ್ಮ ಉಳಿಸುವುದಕ್ಕೆ ಮತ್ತೊಂದು ಧರ್ಮವನ್ನು ದ್ವೇಷಿಸಿ ನಾಶ ಮಾಡುತ್ತೇವೆ. ಇತ್ತೀಚೆಗೆ ಒಬ್ಬರು ಮುಸ್ಲಿಂ ವ್ಯಕ್ತಿ ನನ್ನ ಬಳಿಗೆ ಬಂದಿದ್ದರು. ಅವರ ತೆರಿಗೆಗೆ ಮತ್ತು ಸರಕಾರಿ ಕೆಲಸಕ್ಕೆ ಸಂಭಂಧಿಸಿದ ಹಲವು ಕೆಲಸಗಳನ್ನು ನಾನೇ ಮಾಡಿಕೊಡುತ್ತೇನೆ. ನನ್ನ ಮೇಲೆ ಅದು ಯಾಕೋ ಅವರಿಗೆ ಅತೀವ ವಿಶ್ವಾಸ. ಒಂದು ಸಲ ಬಂದವರು ಹೇಳಿದರು, "ದೇವರನ್ನು ಭಕ್ತಿಯಿಂದ ನಂಬುವವರು ಮೋಸ ಮಾಡುವುದಿಲ್ಲ.  ನಿಮ್ಮಲ್ಲಿ ನನಗೆ ತುಂಬ ವಿಶ್ವಾಸ  ಇದೆ. " ಅವರು ದೇವರು ಅಂತ ಹೇಳಿದ ದೇವರು ಅದು ಒಬ್ಬನೇ.  ಅವರ ದೇವರು  ನನ್ನ ದೇವರು ಎಂಬ ಭೇದವಿಲ್ಲ.  ಇಲ್ಲಿ ನಂಬಿಕೆಯ ವಿಧ ಮಾತ್ರ ವೆತ್ಯಾಸ. ಮತ್ತೊಂದು ಧರ್ಮವನ್ನು ನಾಶ ಮಾಡಿ ನಮ್ಮ ಧರ್ಮವನ್ನು ಉಳಿಸುತ್ತೇವೆ ಎಂದು ತಿಳಿದರೆ ಅಲ್ಲಿ ದ್ವೇಷ ಮಾತ್ರ ಇರುತ್ತದೆ. ಎಲ್ಲಿ ದ್ವೇಷದ ಕಲ್ಮಶ ವಿರುತ್ತದೋ ಅಲ್ಲಿ ಪರಿಶುದ್ದತೆ ಇರುವುದಕ್ಕೆ ಸಾಧ್ಯವಿಲ್ಲ. ದೇವರ ಅಸ್ತಿತ್ವವೂ ಇರುವುದಿಲ್ಲ.  


ಪ್ರಾಣಿಗಳಲ್ಲಿ ಮನುಷ್ಯನಿಗೆ ಇರುವ ಮುಖ್ಯ ಪ್ರತ್ಯೇಕ ವೈಶಿಷ್ಟ್ಯವೆಂದರೆ ಮಾತಾಡುವ ಅರ್ಹತೆ. ಅದಕ್ಕೆ ಮುಖ್ಯ ಉಪಾಧಿ ಎಂದರೆ ಅದು ಭಾಷೆ. ಈ ಭಾಷೆ ದ್ವೇಷಕ್ಕೆ ಕಾರಣವಾಗುವುದಾದರೆ, ಆ ಅರ್ಹತೆಯನ್ನು ಕಲ್ಪಿಸಿದ ಭಗವಂತನ ಕಾರುಣ್ಯವನ್ನು ದೂಷಿಸಿದಂತೆ. ಈ ಅರ್ಹತೆಗೆ ನಾವು ಯೋಗ್ಯರಾಗಿರುವುದಿಲ್ಲ. ಮನುಷ್ಯನ ಜೀವನದ ಮೂಲ ಭೂತ ಆಧಾರವಾಗಿ ಭಗವಂತನನ್ನು ಕಾಣುವ ಓಂ ಕಾರ ಭಾಷೆ ಯಾವುದು? ಹೋಗಲಿ ಭಾಷಾಭಿಮಾನದ ಅತಿರೇಕದಲ್ಲಿ , ಗಣೇಶನನ್ನು ಕೂರಿಸಿ ಹೇಳುವ  "ಗಣಪತಿ ಬಪ್ಪ ಮೋರೆಯಾ "  ದ ಭಾಷೆ ಯಾವುದು?  ಇವುಗಳೆಲ್ಲ ನಮ್ಮ ದ್ವಂದ್ವ ನಿಲುವಿನ ಅಪಸವ್ಯಗಳು. ಸಸ್ಯಾಹಾರಿ ಮಾಂಸ ಬೇಡ ರಸ ಮತ್ರ ಆದೀತು ಅಂತ ಹೇಳುವ ನ್ಯಾಯ. ಯಾವುದೋ ಭಾಷೆಯ ಬಗ್ಗೆ ದ್ವೇಷದಲ್ಲಿ ವಿಮರ್ಶಿಸುವಾಗ ಮೊದಲು ನಮ್ಮ ಮಾತುಗಳನ್ನು ನಾವು ಪರಿಶುದ್ದಿಗೊಳಿಸಬೇಕು. ಇಷ್ಟಕ್ಕೂ ನಮಗೆ ಕೇವಲ ಮಾತನಾಡುವ ಅರ್ಹತೆ ಇದೆ, ಆದರೆ ಇದನ್ನು ಕಳೆದುಕೊಂಡ ಮೂಗನಿಗೆ ಯಾವ ಭಾಷೆ ...ಆತ ಕನ್ನಡದಲ್ಲೂ , ಅತ್ತ ತಮಿಳುನಾಡಿನಲ್ಲೂ ಆತನ ಭಾಷೆ ಒಂದೇ ಆಗಿರುತ್ತದೆ. ಮನಸ್ಸಿನಲ್ಲಿ ಕನ್ನಡವೋ ತಮಿಳೋ ಇರಬಹುದು..ಆದರೆ ಅದು ವ್ಯಕ್ತವಾಗುವುದು ಅರ್ಥವಾಗುವುದು ಎದುರು ಕೇಳುವವನ ಭಾಷೆಯನ್ನು ಅನುಸರಿಸಿರುತ್ತದೆ. ಅಲ್ಲಿ ಭಾಷಾಭೇದವೇ ಇರುವುದಿಲ್ಲ. ಭಾಷೆಯಿಂದ ನಾವು ವಿಶಾಲವಾಗಬೇಕು. ನಮ್ಮ ಜ್ಞಾನ ವೃದ್ದಿಗೆ ಅದು ಉಪಯೋಗಿಸಲ್ಪಡಬೇಕು. ಇಲ್ಲವಾದರೆ ನಾವು ನಮ್ಮ ಭಾಷೆಯಲ್ಲಿರುವುದನ್ನು ಮಾತ್ರವೇ ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ಒಂದು ರೀತಿಯ ಬಾವಿಯೊಳಗಿನ ಮಂಡೂಕದ ಬದು. ನಮ್ಮ ಮಂಗಳೂರಿಗೆ ಹೋದರೆ ಇದನ್ನು ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ಹಲವು ಭಾಷೆಗೆ ಸಹಕಾರಿಯಾಗಿ ಇಲ್ಲಿ ತುಳು ಭಾಷೆ ನೆಲದ ಭಾಷೆ. ಅದರಲ್ಲಿ ಕನ್ನಡವೂ ಇದೆ ಹಿಂದಿ ಕೊಂಕಣಿ ಇಂಗ್ಲೀಷ್ ಎಲ್ಲ ಇದ್ದರೂ ತುಳು ತನ್ನ ಸ್ವಂತಿಕೆಯನ್ನು ಬಿಟ್ಟಿಲ್ಲ. ಅದನ್ನೇ ಮಾತನಾಡಬೇಕು ಎಂದು ಅಲ್ಲಿ ದೌರ್ಜನ್ಯ ಮಾಡುವುದಿಲ್ಲ. ಜನ ನಮ್ಮದೇ ಭಾಷೆ ಅಂತ ಅಭಿಮಾನದಲ್ಲೇ ಮಾತನಾಡುತ್ತಾರೆ. ಅದು ತಿಳಿಯದವರಲ್ಲಿ ಹೃದಯದ ಆತ್ಮೀಯತೆ ಇರುವುದಿಲ್ಲ.  ಅಲ್ಲಿಯ ಸ್ನೇಹ ಆದರ ಬೇಕಾದರೆ ಯಾವುದೇ ಬಲವಂತ ವಿಲ್ಲದೇ ಆ ಭಾಷೆಯನ್ನು ಕಲಿತು ಅಲ್ಲಿನವರಾಗಿದ್ದರೆ ನಿಮಗೆ ಅರಿಯದೆ ಅಲ್ಲಿನವರ ಹೃದಯದಲ್ಲಿ ಸ್ಥಾನ ಪಡೆಯಬಹುದು. ಹೀಗೆ ಭಾಷೆ ಎಂಬುದು ಸ್ನೇಹಕ್ಕೆ ಕಾರಣವಾಗಬೇಕು.  ಎಷ್ಟು ಭಾಷೆ ಇದ್ದರೂ ನಮಗೊಂದೇ ಭಾಷೆ ಇರಬೇಕು. ಅದು ಮನುಷ್ಯತ್ವದಿಂದ ಕೂಡಿರಬೇಕು. 

                           


Monday, October 6, 2025

ಅಮ್ಮನ ಮಡಿಲೂ, ರಾಮನ ಅಳಿಲೂ,

 



ಅಮ್ಮ....ಮಕಾರದ ರೂಪಾಂತರದ ಎರಡಕ್ಷರದ ಶಬ್ದ. ಓಂಕಾರದ ಅಂತ್ಯದ ಮಕಾರಕ್ಕೂ ಅಮ್ಮದ ಮಕಾರಕ್ಕೂ ಪರಬ್ರಹ್ಮ ಸ್ವರೂಪದ ಸಾಮ್ಯತೆ ಇದೆ.  ಎರಡರಲ್ಲೂ ಎಲ್ಲಾ ಜೀವಜಾಲಕ್ಕೂ ಒಂದು ದಿವ್ಯವಾದ ಸಂಬಂಧವಿದೆ. ಈ ಸಂಬಂಧವಿಲ್ಲದ ಜೀವಿಗಳು ಭೂಮಿಯಲ್ಲಿ ಇರುವುದು ಸಾಧ್ಯವಿಲ್ಲ. ಅಮ್ಮನಂತಹ ಸ್ಥಾನ ಎಲ್ಲ ಜೀವಜಾಲದ ಮೂಲ ಪ್ರೇರಣೆ. ಇದನ್ನೇ ಮಾತೃ ಸಂಭಂಧ. ಇದುವೇ ಮೂಲ ಸಂಬಂಧ.  ಯಾವ ಜೀವದಲ್ಲಿ  ನೋಡಿದರೂ ಅಲ್ಲೊಂದು ಪ್ರೀತಿ ಪ್ರೇಮಕ್ಕಿಂತ ಅತೀತವಾಗಿ ಭಾವನಾತ್ಮಕ ಸಂಬಂಧವಿದೆ. ಅಮ್ಮನ ಶಿಕ್ಷೆ ರಕ್ಷೆಗೆ ಸಮನಾದ ಒಂದು ಭಾವಕ್ಕೆ ಆ ಕ್ರಿಯೆಗೆ ಸಮ ತೂಗಿಸಬಲ್ಲ   ಭಾವನೆ ಮತ್ತೊಂದು ಇರುವುದಕ್ಕೆ ಸಾಧ್ಯವಿಲ್ಲ.  ಹೆತ್ತ ಅಮ್ಮ ಮುದ್ದಿಸಿದಷ್ಟೇ ಸಲೀಸಾಗಿ ಹೊಡೆದು ಶಿಕ್ಷಿಸಬಲ್ಲಳು.  ಶಿಕ್ಷೆಕೊಟ್ಟರೂ ಅಲ್ಲಿ ದ್ವೇಷವಿಲ್ಲ. ಆ ಶಿಕ್ಷೆಯ ಮತ್ತೊಂದು ಪಕ್ಕದಲ್ಲಿ ರಕ್ಷೆಯೂ ಇರುತ್ತದೆ.   ಅಂ ಎನ್ನುವ ಅಂಕಾರವೇ ಆ ರೀತಿಯಲ್ಲಿರುತ್ತದೆ. ಅದನ್ನೆ ಮಮಕಾರ ಎನ್ನುವುದು. ಬಹುಶಃ ಯವುದೇ ಪ್ರಾಣಿಯೂ ಈ ಮಮಕಾರದ ಪರಿಧಿಯಿಂದ ಆಚೆಗೆ ಇರುವುದಕ್ಕೆ ಸಾಧ್ಯವಿಲ್ಲ. ಮಮ ಎಂದರೆ ನನ್ನದು ಎಂದರ್ಥ. ಹಾಗಾಗಿ ಅಮ್ಮನ ಪ್ರೀತಿಗೆ ಮತ್ತೂಂದು ಅನ್ವರ್ಥವೇ ಮಮಕಾರ. ಅಲ್ಲಿ ಇರುವ ನನ್ನದು ಎಂಬ ಪರಿಪೂರ್ಣ ಭಾವನೆ, ಆಕೆಯಲ್ಲಿರುವ ನನ್ನ ಕಂದ ನನ್ನ ದೇಹದ ಭಾಗ ಎಂಬ ಭಾವ ಬೇರೆ ಎಲ್ಲೂ ಕಾಣುವುದಕ್ಕೆ ಸಾಧ್ಯವಿಲ್ಲ. ಮನುಷ್ಯ ಬದುಕು ಕಟ್ಟಿಕೊಳ್ಳುವುದು ಈ ಮಮಕಾರವೆಂಬ ಸ್ವಾರ್ಥವಲ್ಲದ ನನ್ನದು ಎಂಬ ಭಾವನೆಯ ನೆರಳಲ್ಲಿ. ಬಹುಶಃ ಅಮ್ಮನ ಈ ’ನನ್ನದು’  ಎಂಬ ಭಾವನೆಯ ಪ್ರೇರಣೆ ಇಲ್ಲ ಎಂದು ಇರುತ್ತಿದ್ದರೆ ಈ ಜೀವಜಾಲದ ಪೋಷಣೆ ರಕ್ಷಣೆ ಸಾಧ್ಯವಿರುತಿರಲಿಲ್ಲ. ಅದು ಅಮ್ಮನ ನಿಸ್ವಾರ್ಥದ ಮಮಕಾರ. ಅಮ್ಮನ ಅಕ್ಕರೆಯ ಪ್ರೀತಿಯಲ್ಲಿ ಯಾವ ಸ್ವಾರ್ಥವೂ ಇರುವುದಿಲ್ಲ. ಸ್ವಾರ್ಥವಿದ್ದರೆ ಅದು ಅಮ್ಮನ ಪ್ರೀತಿ ಎಂದೆನಿಸುವುದೇ  ಇಲ್ಲ. ಜಗತ್ತಿನಲ್ಲಿ ಎಲ್ಲಾ ಪ್ರೀತಿಯಲ್ಲಿ ಸೂಕ್ಷ್ಮವಾಗಿಯಾದರೂ ಒಂದು ಸ್ವಾರ್ಥ ವಿರುತ್ತದೆ. ಆದರೆ ಅಮ್ಮನ ಪ್ರೀತಿಯಲ್ಲಿ...ಮಮಕಾರ ಬಿಟ್ಟು ಬೇರೆ ಸ್ವಾರ್ಥವಿರುವುದಕ್ಕೆ ಸಾಧ್ಯವಿಲ್ಲ. ಕಾರಣ.. ಇಷ್ಟೆ ತನ್ನ ದೇಹದ ಭಾಗದ ನೇರ ಸಂಭಂಧ ಅಮ್ಮನಿಗೆ  ಆ ಮಗುವಿನೊಂದಿಗೆ ಇರುತ್ತದೆ. 


        ವರ್ಷ ಋತುವಿನ ಬಿಡದ ಮಳೆ ಕಳೆದು ಶರದೃತುವಿಗೆ ನವರಾತ್ರಿಯ ಸಂಭ್ರಮ ಸ್ವಾಗತಿಸುವಾಗ ಅಬ್ಬ ಮಳೆಯಿಂದ ಬಿಡುಗಡೆಯಾದ ಅನುಭವ. ಪ್ರತೀ ಸಲವೂ ನವರಾತ್ರಿ ಬರುವಾಗ ಹಲವು ನಿರೀಕ್ಷೆಯ ಜತೆಗೆ ಊರಿಗೆ ಹೋಗುವ ಸಿದ್ದತೆಯೊಂದು ಇರುತ್ತದೆ. ಮೊದಲಿನಿಂದಲೂ ಮಳೆಕಳೆದು ಚಳಿಗಾಲಕ್ಕೆ ಸನಿಹವಾಗುವಾಗ ಈ  ನವರಾತ್ರಿಯನ್ನು ಹೊತ್ತು ಬರುವ ಈ ಶರದೃತು  ಎಂದರೆ ಒಂದು ಸಂಭ್ರಮ. ಹನಿ ಹನಿ ಮಂಜಿನಲ್ಲಿನ ಈ ಹಬ್ಬ ಅಂದಿಗೂ ಇಂದಿಗೂ ಅದೇ ಸೌಂದರ್ಯ.  ನಮ್ಮೂರಲ್ಲಿ ಉಳಿದೆಲ್ಲ ಹಬ್ಬಗಳು ಮನೆಯಲ್ಲಿ ಆಚರಿಸಿದರೆ...ನವರಾತ್ರಿಗೆ ಯಾವ ದೇವಸ್ಥಾನಕ್ಕೆ ಹೋಗುವುದು ಎಂದು ಯೋಚಿಸುತ್ತೇವೆ. ಯಾಕೆಂದರೆ ಎಲ್ಲಾ ಹಬ್ಬಗಳು ಒಂದೆರಡು ದಿನ ಇದ್ದರೆ ಈ ನವರಾತ್ರಿ ಒಂದು ಪಕ್ಷದಷ್ಟೂ ವಿಸ್ತರಿಸಿ ಪಾಡ್ಯದಿಂದ ಅರಳುವ ಚಂದ್ರನ ಜತೆಗೆ ಮನಸ್ಸೂ ಅರಳುತ್ತಾ ಸಾಗುತ್ತದೆ. ಒಂದು ರೀತಿಯಲ್ಲಿ ಮನಸ್ಸು ಮಳೆಯಲ್ಲಿ ತೊಯ್ದು ಶುದ್ದವಾದಂತೆ ಶುದ್ದ ಮನಸ್ಸಿನಲ್ಲಿ ದೈವ ಸಾನ್ನಿಧ್ಯ ನೆರವೇರುತ್ತದೆ.  ದೈವತ್ವದ ಈ  ಅನುಭವವಾಗಬೇಕಾದರೆ ಆ ಅವಧಿಯಲ್ಲಿ ಒಂದಾದರೂ ಕ್ಷೇತ್ರದರ್ಶನ ಮಾಡಬೇಕು ಎಂಬುದು ಹಲವರ ಹಂಬಲ. ಇಲ್ಲಿ  ಪ್ರತಿಯೊಬ್ಬರೂ ಪರಸ್ಪರ ಭೇಟಿಯಾಗುವಾಗ   ಈ ಸಲ ನವರಾತ್ರಿಗೆ ಎಲ್ಲಿಗೆ ಎಂದು ಕೇಳುವುದು ಸಹಜ.   ಆದರೆ ನನ್ನಲ್ಲಿ ಕೇಳುವಾಗ ಪ್ರಶ್ನೆಯೊಂದಿಗೆ ಉತ್ತರವೂ ಸಿದ್ಧವಾಗಿರುತ್ತದೆ. ಈ ಸಲ ನವರಾತ್ರಿಗೆ ಆವಳ ಮಠಕ್ಕೆ ಹೋಗುವುದಿಲ್ಲವಾ? ಉತ್ತರದ ಜತೆಗೆ ಪ್ರಶ್ನೆ ಬರುವುದು ಹೀಗೆ. ಯಾಕೆಂದರೆ ಈ ಮಠದ ಜತೆಗೆ ಇರುವ ಅವಿನಾಭಾವ ಸಂಬಂಧ ಎಂದರೆ ಅತಿಶಯವಲ್ಲ. 

ಆವಳ ಮಠ...ನಮ್ಮೂರಿನ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ.  ನಮ್ಮೂರಿನಲ್ಲಿ ಹಲವು ದುರ್ಗಾ ಪರಮೇಶ್ವರಿ ದೇವಾಲಯಗಳಂತೆ ಇದು ಒಂದು. ಆದರೆ ನನಗೆ ಇದೆಲ್ಲಕ್ಕಿಂತ ಮಿಗಿಲಾದ ಸಂಭಂಧವೆಂದರೆ ಇದು ಬಾಲ್ಯದ ಹಲವು ನೆನಪುಗಳೊಂದಿಗೆ ಬೆಸುದುಕೊಂಡ ಪವಿತ್ರ ಕ್ಷೇತ್ರ. ಇಲ್ಲಿ ಭಕ್ತಿಯೊಂದಿಗೆ ಆ ನೆನಪುಗಳು ಮರುಕಳಿಸುವಾಗ ಹೃದಯ ಭಾರವಾಗುತ್ತದೆ. ಮತ್ತೆ ತರಲಾಗದ ನೆನಪುಗಳು ಅದು ಕೇವಲ ವೈಯಕ್ತಿಕ ಅನುಭವಕ್ಕೆ ಸೀಮಿತವಾಗುತ್ತದೆ. ಹೆಚ್ಚಾಗಿ ನನಗೆ ಜನಸಂದಣಿಯ ದೇವಸ್ಥಾನಗಳು ಭಕ್ತಿಯನ್ನು ಪ್ರಚೋದಿಸುವುದಿಲ್ಲ. ಅಲ್ಲಿ ಹೋದಾಗ ಭಕ್ತಿಯ ಜತೆಗೆ ಭಾವನೆಗಳು ಹಂಚಿ ಚದುರಿ ಹೋಗಿಬಿಟ್ಟು ಮನಸ್ಸು  ಖಾಲಿಯಾಗಿ ಕೇವಲ ಯಾಂತ್ರಿಕವಾಗುತ್ತದೆ. ಭಾವನೆಗಳು ಇಲ್ಲದಿದ್ದರೆ ನಂತರದ ಕ್ರಿಯೆಗಳು ಯಾಂತ್ರಿಕ. ಈ ಯಾಂತ್ರಿಕತೆಯಿಂದ ದೂರಾಗಿ ಸಹಜ ಅನುಭವವನ್ನು ತುಂಬಿಕೊಡುವ ಕ್ಷೇತ್ರವೆಂದರೆ ಅದು ಬಾಲ್ಯದಿಂದ ಬೆಸೆದುಕೊಂಡ ಆವಳ ದುರ್ಗಾಪರಮೇಶ್ವರಿ ದೇವಸ್ಥಾನ. ಇಲ್ಲಿನ ಪರಿಸರದ ಪ್ರತಿಯೊಂದು ಭಾಗದಲ್ಲೂ ಹಲವು ನೆನಪುಗಳಿವೆ.

ಮೊನ್ನೆ ಮೊನ್ನೆ ಕಳೆದ ನವರಾತ್ರಿಯ ಕೊನೆಯ ಎರಡು ದಿನ ಅಲ್ಲಿಯೇ ಕಳೆಯುವ ಅವಕಾಶ ಒದಗಿಬಂತು. ಮೊದಲು ಬಹುತೇಕ ಕೇವಲ ಎಣ್ಣೇ ದೀಪದ ಬೆಳಕಿನಲ್ಲೇ ಕಳೆದು ಹೋಗುತ್ತಿದ್ದ ನವರಾತ್ರಿ ಈಗ ದೇವಸ್ಥಾನ ಮೂಲೆ ಮೂಲೆಯಲ್ಲೂ ವಿದ್ಯುದ್ದೀಪ ಝಗಮಗಿಸುತ್ತದೆ. ವಿಶಾಲವಾದ ದೇವಸ್ಥಾನದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಬೇಕಾದರೆ ಪುಟ್ಟ ಕೈ ದೀಪವನ್ನು ಹಿಡಿದು ಕೊಂಡು ಹೋಗುತ್ತಿದ್ದೆವು. ಹಲವು ಸಲ ಒಬ್ಬರೇ ಸುತ್ತಾಡುವುದಕ್ಕೆ ಭಯವಾಗುವಷ್ಟು ಕತ್ತಲೆ ಆವರಿಸಿರುತ್ತಿತ್ತು. ರಾತ್ರಿ ದೀಪದ ಬೆಳಕಿನಲ್ಲಿ ತರಕಾರಿ ಹೆಚ್ಚುವುದು ದೇವರ ಪ್ರಸಾದ ಸಿದ್ದ ಪಡಿಸುವ ಅನುಭವ ಈಗ ಊಹಿಸುವುದಕ್ಕೂ ಸಾಧ್ಯವಿಲ್ಲ.  ನನಗೆ ಇನ್ನೂ ನೆನಪಿದೆ ದೇವಸ್ಥಾನ ಸುತ್ತಲೂ ಗೋಡೆಗೆ ಅಂಟಿಸಿದ ಕಲ್ಲಿನ ದೀಪಕ್ಕೆ ಎಣ್ಣೆ ಬತ್ತಿ ಹಾಕಿ ಉರಿಸುತ್ತಿದ್ದೆವು. ಈಗ ಆಜಾಗದಲ್ಲಿ ವಿದ್ಯುತ್ ದೀಪ ಬೆಳಗುತ್ತದೆ.  

ಬಾಲ್ಯದಲ್ಲಿ ಎರಡು ವರ್ಷ ಇಲ್ಲಿ ದೇವರ ಸೇವೆ ಮಾಡಿದ್ದೆ. ಆಗ ದೇವಸ್ಥಾನದಲ್ಲಿ ಅಧುನಿಕ ಸೌಕರ್ಯ ಒಂದೂ ಇರಲಿಲ್ಲ. ಹೊರ ಜಗತ್ತಿಗೆ ಯಾವ ಸಂಪರ್ಕವೂ ಇಲ್ಲದ ಪ್ರದೇಶವಾಗಿತ್ತು ಮೈಲಿ . ದೂರದ ಬಾಯಾರು ಪದವಿನಲ್ಲಿ  ಬಸ್ಸು ಇಳಿದು ಅರ್ಧ ತಾಸು ನಡೆದುಕೊಂಡು  ದೇವಸ್ಥಾನಕ್ಕೆ ಬರಬೇಕಿತ್ತು. ಗುಡ್ಡ ತೋಟ ಗದ್ದೆ ದಾಟಿ ಹಸಿರಿನ ನಡುವೆ ಬರುವ ಒಂದು ಅನುಭವ ವಿಶೇಷವಾಗಿತ್ತು. ಆಗ ವಾಹನಗಳನ್ನು ಕಾಣುವುದಕ್ಕಲ್ಲ ಕೇವಲ  ಸದ್ದು ಕೇಳಬೇಕಾದರೆ ಅರ್ಧ ತಾಸು ನಡೆದು ಹೋಗಬೇಕಿತ್ತು. ಹೀಗಾಗಿ ಯಾವ ಸದ್ದು ಗದ್ದಲವಿಲ್ಲದ ಪರಿಸರವಾಗಿ ಒಂದು ರೀತಿಯ ಶಾಂತ ಪ್ರದೇಶವಾಗಿತ್ತು. ಈಗ ದೇವಸ್ಥಾನದ ಅಂಗಳದವರೆಗೂ ವಾಹನ ಬರುತ್ತದೆ. ಒಂದೂ ವಾಹನ ಕಾಣದ ಕಾಲ ಒಂದಾದರೆ, ಈಗ ನವರಾತ್ರಿಯಲ್ಲಿ  ಆಯುಧ ಪೂಜೆಗೆ ವಾಹನ ಸಾಲುಗಟ್ಟಿ ನಿಂತಿರುತ್ತದೆ.


ಬಾಲ್ಯದಲ್ಲಿ ಮನೆಯಿಂದ ದೂರವಾಗಿ ಒಂದೆರಡು ವರ್ಷ ಹಗಲು ರಾತ್ರಿ ಇಲ್ಲೇ ಕಳೆದಿದ್ದೆ. ದೇವರ ನೈವೇದ್ಯ ಬಿಟ್ಟರೆ ಬೇರೆ ಏನೂ ಇರುತ್ತಿರಲಿಲ್ಲ.ಆಗ ಪೂಜೆಗೆ ಇರುತ್ತಿದ್ದ ಗೋಪಣ್ಣನ ಜತೆ ಮೂರು ಹೊತ್ತು ಸ್ನಾನ ಮಾಡಿ ದೇವರ ಸೇವೆ ಮಾಡುತ್ತಿದ್ದೆ. ಮೂರು ಹೊತ್ತು ಗುಂಪೆ ಪರ್ವತದ ತಡಿಯಿಂದ ಹರಿದು ಬರುವ ತಣ್ಣೀರಿಗೆ ತಲೆಕೊಟ್ಟು ಸ್ನಾನ ಮಾಡುತ್ತಿದ್ದೆ .  ಈಗಲೂ ನಾನು ನಿತ್ಯ ತಣ್ಣೀರ ಸ್ನಾನ ಮಡುತ್ತಿದ್ದರೆ ಅದಕ್ಕೆ ಕಾರಣ ನಿತ್ಯವೂ ಇಲ್ಲಿ ಸ್ನಾನ ಮಡುತ್ತಿದ್ದ ತೀರ್ಥ ಸ್ನಾನವೇ ಕಾರಣ. 


  ಪ್ರತಿ ನಿತ್ಯ   ನೈವೇದ್ಯಕ್ಕೆ ಸಿದ್ದ ಪಡಿಸುವುದು, ಪಂಚಕಜ್ಜಾಯಕ್ಕೆ ನೆರವಾಗುವುದು, ಅನ್ನ ನೈವೇದ್ಯಕ್ಕೆ ಬೆಂಕಿ ಹಾಕಿ ಅದನ್ನು ಅಣಿಗೊಳಿಸುವುದು, ದೇವರ ಪೂಜೆಗೆ ಹೂವು ಮತ್ತೀತರ ವಸ್ತುಗಳನ್ನು ಅಣಿಗೊಳಿಸುವುದು...ಹೀಗೆ ಆ ವಯಸ್ಸಿನಲ್ಲಿ ಸಾಧ್ಯವಾಗುವ ಕೆಲಸಗಳನ್ನು ಮಾಡುತ್ತಿದ್ದೆ. ಈಗ ಅಲ್ಲಿಗೆ ಹೋದಾಗ ಅಲ್ಲಿ ಕೇವಲ ಲಂಗೋಟಿ ತುಂಡು ಬೈರಾಸಿನಲ್ಲಿ  ಓಡಾಡಿದ ಆ ದಿನಗಳು ನೆನಪಾಗಿಬಿಡುತ್ತವೆ. ರಾತ್ರಿ ಎಷ್ಟೋ ಸಲ ನಾನು ಒಬ್ಬನೇ ಆ ದೇವಸ್ಥಾನದಲ್ಲಿ ಮಲಗಿದ್ದೆ. ಈಗ ಅದನ್ನು ಕಲ್ಪಿಸುವುದೂ ಕಷ್ಟವಾಗುತ್ತದೆ. ಯಾವ ಜನಸಂಚಾರವೂ ಇಲ್ಲದ ಆ ಕಾಲದಲ್ಲಿ ಅಲ್ಲಿ ಹಗಲು ಕಳೆಯುವುದೂ ಒಂದು ವಿಚಿತ್ರ ಅನುಭವ. ಮಧ್ಯಾಹ್ನದ ಪೂಜೆ ಮುಗಿಸಿ ಊಟಕ್ಕೆ ಚಟ್ನಿಯೋ ಸಾರು ಪಲ್ಯ ಸಿದ್ದ ಪಡಿಸಿ ಊಟ ಮಾಡುತ್ತಿದ್ದೆವು. ಆಗ ಭೀಮ ಗಾತ್ರದ ರುಬ್ಬುವ ಕಲ್ಲಿನಲ್ಲಿ ತೆಂಗಿನ ಕಾಯಿ ಅರೆದು ಅಡಿಗೆ ಮಾಡಿದ ಅನುಭವ,  ಈಗ ನನ್ನ ಹೊಟ್ಟೆಗೆ ಬೇಕಾದದ್ದನ್ನು ಮಾಡಿ ತಿನ್ನುವ ಸ್ವಾವಲಂಬೀ ಗುಣವನ್ನು ಬೆಳೆಸುವುದಕ್ಕೆ ಆಗಿನ ಆ  ಶಿಕ್ಷಣ ಕಾರಣವಾಗಿದೆ. ಈಗಲೂ ನನ್ನ ಹಸಿವಿಗೆ ನಾನೇ ಬೇಯಿಸಿ ತಿನ್ನುವ ಪ್ರವೃತ್ತಿ ಇದೆ. ಇದನ್ನು ಒದಗಿಸಿದ್ದು ಬಾಲ್ಯದ ನನ್ನ ಈ ದೇವಸ್ಥಾನದ ಜೀವನ. ಆಗ ಪೂಜೆಗಿದ್ದ ಗೋಪಣ್ಣ ಪ್ರೀತಿಯಿಂದ ಹೇಳಿ,  ಕೆಲವೊಮ್ಮೆ ಗದರಿ ಬೇಕಾದ ರೀತಿಯಲ್ಲಿ ನನ್ನಿಂದ ಕೆಲಸವನ್ನು ಮಾಡಿಸಿ ಒಂದು ರೀತಿಯಲ್ಲಿ ಆ ದೇವರಿಗೆ ನನ್ನಿಂದ ಒಂದಷ್ಟು ಸೇವೆ ಲಭ್ಯವಾಗುವ ಹಾಗೆ ಮಾಡಿದ್ದರು. ಈಗ ಅವರಿಲ್ಲ. ಆದರೆ ಅಲ್ಲಿಗೆ ಹೋದಾಗ ಆ ನೆನಪೆಲ್ಲ ಮರುಕಳಿಸುತ್ತದೆ. ದೇವಸ್ಥಾನ ಗೋಪುರದಲ್ಲಿ ಉಂಡದ್ದು ನಿದ್ದೆ ಮಾಡಿದ್ದು ಆಟ ಆಡಿದ್ದು ಕನಸು ಕಂಡದ್ದು  ಆ ದಿನಗಳನ್ನು ಎಂದಿಗೂ ಮರೆಯುವುದಕ್ಕೆ ಸಾಧ್ಯವಿಲ್ಲ. 


ಬೆಳಗ್ಗೆ ನಿದ್ದೆ ಬಿಟ್ಟು ಎದ್ದ ಕೂಡಲೇ ಸ್ನಾನ ಮಾಡಿ ದೇವಸ್ಥಾನದ ಒಳಗೆ ಹೋಗಿ ರುದ್ರ ಮಂತ್ರ ಪಠಿಸುವುದು, ನನ್ನಿಂದ ಆದ ಚಾಕರಿಯನ್ನು ಮಾಡುವುದು ಹೀಗೆ ಹಗಲು ಇರುಳೆನ್ನದೆ ಕಳೆದ ದಿನಗಳು ಇಂದು ದೇವರ ಭಕ್ತಿಯಲ್ಲದ ಇನ್ನೊಂದು ಬಾಂಧವ್ಯವನ್ನು ಸ್ಮರಣೆಗೆ ತರುತ್ತದೆ. ಮಧ್ಯಾಹ್ನದ ವಿಪರೀತ ಕಾಡುವ ಹಸಿವಿನಲ್ಲಿ ಅಲ್ಲಿ ಬಡಿಸಿದ  ನೈವೇದ್ಯ ಜತೆಗೆ ಚಟ್ನಿ ತಂಬುಳಿ ಸಾರಿನ ಸರಳವಾದ ಊಟ ಅದರ ರುಚಿ ಇನ್ನೂ ಮಾಸಿಲ್ಲ. ಈಗಲೂ ಹಸಿವಾಗುವಾಗ ಮಠದ ಊಟದ ರುಚಿ ನೆನಪಿಗೆ ಬಂದು ಅದಕ್ಕೆ ಸರಿಸಾಟಿಯಾದ ಆಹಾರ ಮತ್ತೊಂದು ಇಲ್ಲ ಎಂಬ ಭಾವನೆ ಬರುತ್ತದೆ. ಮಠದ ಬಾಲ್ಯದ ಜೀವನದ ನೆನಪಿಗಾಗಿ ಈಗಲೂ ಬಾಳೆಕಾಯಿ ಪಲ್ಯ,  ಚಟ್ನಿ ತಂಬುಳಿ ಮಾಡಿ ಊಟ ಮಾಡುತ್ತೇನೆ.  ಮೊದಲು ಮಠದಲ್ಲಿ ಒಂದು ತರಕಾರಿಯನ್ನೂ ಆಂಗಡಿಯಿಂದ ತರುತ್ತಿದ್ದ ಸಂಭವ ಇರುತ್ತಿರಲಿಲ್ಲ. ಮಧ್ಯಾಹ್ನದ ಹೊತ್ತಿಗೆ ತೋಟಕ್ಕೆ ಹೋಗಿ ಅಲ್ಲಿದ್ದ ಬಾಳೆಕಾಯಿ ಅಥವ ಸೊಪ್ಪು ತರಕಾರಿ ತಂದು ಅಡುಗೆ ಮಾಡಿ ಊಟ ಮಾಡುತ್ತಿದ್ದೆವು. ಆಲುಗಡ್ಡೆ ಟೊಮೆಟೊ ಕಂಡ ನೆನಪೇ ಇರುತ್ತಿರಲಿಲ್ಲ. ಈಗ ನವರಾತ್ರಿ ಇದಿಲ್ಲದೆ ಅಡುಗೆಯೇ ಇಲ್ಲ ಎಂಬಂತಹ ಬದಲಾವಣೆ ಆಗಿ ಹೋಗಿದೆ. ನಿಜಕ್ಕೂ ಆಗಿನ ದೇವಸ್ಥಾನದ ಆ ಊಟ ಅಮೃತ ಸದೃಶ.  ಯಾವ ಕಲ್ಮಶವೂ ಇಲ್ಲದ ಪರಿಶುದ್ದ ಆಹಾರ. 


ದೇವಾಲಯ ಈಗ ಆಧುನಿಕತೆಯ ಸ್ಪರ್ಶದಲ್ಲಿ ನಳನಳಿಸುತ್ತದೆ. ಮೊದಲು ಇದ್ದ ಸೆಗಣಿ ಸಾರಿಸಿದ ನೆಲ ಮಣ್ಣಿನ ವಾಸನೆ ಈಗ ಇಲ್ಲ. ಎಲ್ಲೆಂದರಲ್ಲಿ ನಳ್ಳಿ ತಿರುಗಿಸಿದರೆ ನೀರು , ಅಧುನಿಕ ಅಡುಗೆ ಪಾತ್ರೆ ಸಜ್ಜೀಕರಣ ಇವುಗಳ ನಡುವೆ ಹಳೆಯ ನೈವೇದ್ಯದ ಘಂ ಎನ್ನುವ ಸುವಾಸನೆ ಕಳೆದು ಹೋಗಿದೆ. ಆದರೆ ಆ ನೆನಪುಗಳು ಇನ್ನೂ ಹಸಿರಾಗಿಇದೆ. ಇಂದಿನ ತಲೆಮಾರಿಗೆ ಅದನ್ನು ವರ್ಣಿಸಿದರೂ ಅರ್ಥವಾಗದ ಆನುಭವಗಳ ಮಾರ್ದವತೆ ಕೇವಲ ಕಥೆಯ ಸನ್ನಿವೇಶಗಳಂತೆ ಭಾಸವಾಗಬಹುದು. 


ಪ್ರತೀ ಸಲ ನವರಾತ್ರಿ ಬರುವಾಗ ಇಲ್ಲಿ ಒಂದೆರಡು ದಿನವಾದರೂ ಇದ್ದು ದೇವರ ಸೇವೆಯ ಜತೆಗೆ ಹಿಂದಿನ ನೆನಪುಗಳಿಗೆ ಒಂದಷ್ಟು ತೀರ್ಥ ಸಿಂಪಡಿಸಿ ಅದನ್ನು ಹಸಿರಾಗಿ ಇರುವಂತೆ ಮಾಡುವ ನಿರೀಕ್ಷೆ ಇರುತ್ತದೆ.  ಆದರೆ ಅದು ಸಾಧ್ಯವಾಗುವುದಿಲ್ಲ. ಆದರೂ ಈ ಬಾರಿ ಎರಡು ದಿನ ದೇವರ ಸೇವೆಯಲ್ಲಿ ಕಳೆದೆ.  ಮರುಭೂಮಿಯ ಓಯಸಿಸ್ ನ  ನೀರಹನಿಯ ಅನುಭವಗಳಂತೆ ಒಂದಷ್ಟು ಹಳೆಯ ನೆನಪುಗಳು ಹಾದು ಹೋಯಿತು. ಅಮ್ಮನ ಎದೆಹಾಲಿನ ನೆನಪು ಬದುಕಿನಾದ್ಯಂತೆ ಇರುವಂತೆ  ಈ ಅಮ್ಮನ ಮಡಿಲಿನ ನೆನಪುಗಳು ಎದೆಹಾಲಿನ ಮಾರ್ದವತೆಯನ್ನು ಒದಗಿಸಿದವು. 


ಎರಡು ದಿನ ಸಮೀಪ ಸಂಬಂಧಿ ಶ್ರೀ ಲಕ್ಷ್ಮೀನಾರಾಯಣ ಭಟ್ಟರ ಮನೆಯಲ್ಲಿ ಉಳಿದುಕೊಂಡಿದ್ದೆ. ಮನೆಯ ಹತ್ತಿರವೇ ನಾಗಬನ ಇದ್ದು ಒಂದು ರೀತಿಯಲ್ಲಿ ಅರಣ್ಯದ ವಾತಾವರಣ ಕಲ್ಪಿಸಿತ್ತು. ನಾನು ಉಳಿದುಕೊಳ್ಳುವ ಜಾಗದಲ್ಲಿ ಮುಂಜಾನೆಯ ಶಾಂತ ಪರಿಸರದದ ಮೌನವನ್ನು ಅನುಭವಿಸುವುದಕ್ಕೆ ಬಯಸುವವನು. ಅದಕ್ಕೆ ಇಲ್ಲಿ ಮುಕ್ತ ಅವಕಾಶವಿತ್ತು. ಮುಂಜಾನೆ ನಾಲ್ಕು ಘಂಟೆಗೆ ಎದ್ದು ಸಂಧ್ಯಾವಂದನೆಗೆ ಕುಳಿತಾಗ ಆ ಮೌನವೇ ಭಗವಂತನ ರೂಪದಲ್ಲಿ ಪ್ರತ್ಯಕ್ಷವಾದಂತೆ ಭಾಸವಾಯಿತು. ಭಗವಂತನಿಗೆ ರೂಪವಿಲ್ಲ ಭಾವವಿಲ್ಲ, ಗುಣವಿಲ್ಲ...ಆದರೆ ಇಲ್ಲಿ ಸುತ್ತಲ ಪರಿಸರದ ಮೌನವೇ ದೈವದ ಅರಿವನ್ನು ಒದಗಿಸಿ ಭಗವಂತನ ಅಸ್ತಿತ್ವವನ್ನು ಹೃದಯಕ್ಕೆ ರವಾನಿಸಿತ್ತು.  ನಾನು ಎಲ್ಲೇ ಉಳಿದುಕೊಂಡರೂ ಮುಂಜಾನೆ ಯೋಗಾಭ್ಯಾಸಕ್ಕೆ ಅನುಕೂಲವನ್ನು ಮೊದಲು ಬಯಸುತ್ತೇನೆ. ಮನೆಯ ಮೇಲೆ ಅದಕ್ಕೆ ಮುಕ್ತವಾದ ವಾತಾವರಣ , ನಿಜಕ್ಕೂ ನಾನು  ಆ ಮನೆಯವರಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು. ನನಗೆ ಮುಕ್ತವಾಗಿ ಸರ್ವಸ್ವತಂತ್ರವಾಗಿ ಇರುವುದಕ್ಕೆ, ನನ್ನದೇ ಮನೆ ಎನ್ನುವ ಭಾವನೆ ಬರುವುದಕ್ಕೆ ಸಹೃದಯದ ಸೌಕರ್ಯವನ್ನು ಒದಗಿಸಿದ್ದರು. 


ಮನೆಯಲ್ಲಿ ನಿತ್ಯ ಕರ್ಮದ ರೂಪದಲ್ಲಿ ಮಾಡುವ ದೇವರ ಪೂಜೆ ಪುನಸ್ಕಾರಗಳು ಸಂಧ್ಯಾವಂದನೆ ನಿತ್ಯ ವಿಧಿಗಳು ನಿತ್ಯದ ಬದುಕಿಗೆ ಚೈತನ್ಯವನ್ನು ಒದಗಿಸಿದರೆ, ಹೀಗೆ ಅಲಭ್ಯವಾದ ಅವಕಾಶಗಳು ಸಿಕ್ಕಿ ಒಂದು ದೇವಸ್ಥಾನದಲ್ಲಿ ಉಳಿದುಕೊಂಡು ಅಲ್ಲಿಯವನಾಗಿ ಇರುವುದು ವರ್ಷದಾದ್ಯಂತೆ ಚೈತನ್ಯವನ್ನು ಒದಗಿಸುತ್ತವೆ. ಯಾವುದೇ ಮಾನಸಿಕ ಒತ್ತಡವಿಲ್ಲದೆ ಸರ್ವವೂ ದೇವರ ಕ್ರಿಯೆಯಲ್ಲಿ ದೇವರಿಗೆ ಸಮರ್ಪಿಸುವುದು ನಿಷ್ಕಾಮ ಕರ್ಮಕ್ಕೆ ಪ್ರೇರಣೆಯಾಗುತ್ತದೆ. ದೈವಕಾರ್ಯದಲ್ಲಿ ಯಾವ ವೃತ್ತಿಯನ್ನಾಗಲಿ ಭೇದವಿಲ್ಲದೆ ಶುದ್ದ ವೈರಾಗ್ಯದಿಂದ ಮಾಡುವಾಗ ಅಲ್ಲೊಂದು ಆತ್ಮ ತೃಪ್ತಿ ಇರುತ್ತದೆ. ಆವಳದ ಈ ದೇವಸ್ಥಾನದಲ್ಲಿ ಎರಡು ದಿನ  ಅದನ್ನು ಯಥೇಚ್ಛವಾಗಿ ಅನುಭವಿಸಿದೆ. ಎರಡು ದಿನ ಅಮ್ಮನ ಮಡಿಲಲ್ಲಿ ರಾಮನ ಅಳಿಲಾದ ಧನ್ಯತೆಯನ್ನು ಹೊತ್ತು ವಿದಾಯವನ್ನು ಹೇಳಿ ಅಲ್ಲಿನ ಅರ್ಚಕರು ನನಗಾಗಿ ಹೃದಯ ತುಂಬಿ ಪ್ರಾರ್ಥಿಸುವಾಗ ಒಂದು ಘಳಿಗೆ ನನಗೆ ಧನ್ಯತೆಯಲ್ಲಿ ಮಾತು ಹೊರಡದೆ ಹೃದಯ ಭಾರವಾಯಿತು. ಇನ್ನೂ ಮುಂದಕ್ಕೆ ಇದಕ್ಕಿಂತಲ್ಲೂ ಹೆಚ್ಚು ಸೇವೆಯನ್ನು ಒದಗಿಸುವ ಚೈತನ್ಯ ಲಭ್ಯವಾಗಲಿ ಎಂಬ ಮನದಾಶೆ ಮನದಾಳದಲ್ಲಿ ಸ್ಥಿರವಾಗಿ ಬೇರುಬಿಟ್ಟಿತು. 






Thursday, September 25, 2025

ನಮ್ಮದಲ್ಲ

ಇತ್ತೀಚೆಗೆ ಬಿಡುಗಡೆಯಾದ ಸಂಶಯಂ ಎನ್ನುವ ಮಲಯಾಳಂ ಸಿನಿಮಾ ನೋಡಿದೆ. ಮಾರ್ಮಿಕ ಕಥಾ ಹಂದರ ಭಾವಾನಾತ್ಮಕ ಸಂಭಂಧಗಳ ಸರಳ ಸುಂದರ ಕಥೆಯ ಚಲನ ಚಿತ್ರವಿದು. ಹೊಸದಾಗಿ ಮದುವೆಯಾದ ನಾಯಕ ನಾಯಕಿಗೆ ಬಹಳ ಕಾಲ ಮಕ್ಕಳಾಗದೇ ಕೊನೆಗೆ ಆಕೆ ಗರ್ಭವತಿಯಾಗಿ ಮಗುವನ್ನು ಪಡೆಯುತ್ತಾಳೆ. ಎರಡು ವರ್ಷ ಕಳೆದ ನಂತರ ಆಕೆಗೆ ಆ  ಮಗು ತನ್ನದಲ್ಲ ಎಂಬ ಸಂಶಯ ಬರುತ್ತದೆ. ಆಕೆ ಪ್ರಸವಿಸಿದ ಅದೇ ಅಸ್ಪತ್ರೆಯಲ್ಲಿ ಆ ಸಮಯ ಐದಾರು ಮಕ್ಕಳ ಜನನವಾಗಿರುತ್ತದೆ. ಹಾಗಾಗಿ ಅಲ್ಲಿ ಅದಲು ಬದಲಾಗಿರುವ ಸಾಧ್ಯತೆ ಇರುತ್ತದೆ.  ಅಲ್ಲಿಂದ ಆ ಮಗುವಿನ ಅಪ್ಪ ಅಮ್ಮ ಯಾರು? ಎಂಬ ಹುಡುಕಾಟ.  ಕೊನೆಯಲ್ಲಿ ಆಕೆ ಹೆತ್ತ ಮಗುವಿನ ಪತ್ತೆಯಾಗುತ್ತದೆ. ನ್ಯಾಯಾಲಯದಲ್ಲಿ ಮೊಕದ್ದಮೆಯೂ ದಾಖಲಾಗುತ್ತದೆ.  ಡಿ ಎನ್ ಎ ಪರೀಕ್ಷೆ ಮಾಡಿದಾಗ ಈಕೆಯ ಸಂಶಯ ನಿಜವಾಗಿ ನಿಜವಾದ ಮಗುವನ್ನು ಪಡೆಯುವಂತೆ ನ್ಯಾಯಲಯ ತೀರ್ಪುಕೊಡುತ್ತದೆ. ಅಲ್ಲಿಂದಲೇ ನಿಜವಾದ ಸಮಸ್ಯೆ ಎದುರಾಗುವುದು. ಆ  ಮಗುವನ್ನು ಬದಲಾಯಿಸುವುದು ಹೇಗೆ? ಅದರ ಮತ್ತೊಂದು ಅಪ್ಪ ಅಮ್ಮ ಅದನ್ನು ಕೊಡುವುದಕ್ಕೆ ಸಿದ್ದರಿರುವುದಿಲ್ಲ. ಮೇಲಾಗಿ ಅವರು ಮುಸ್ಲಿಂ ...ಹೀಗೆಲ್ಲ ಸಮಸ್ಯೆಗಳಿದ್ದರೂ ನ್ಯಾಯಾಲಯದ ತೀರ್ಪು ಗೌರವಿಸಲೇ ಬೇಕು. ಮಗುವನ್ನು ಬದಲಾಯಿಸುವಾಗ ...ತಾಯಂದಿರೇನೋ ಬದಲಿಸಿಕೊಳ್ಳಬಹುದು. ಆದರೆ ಆ ಮಗುವಿಗೆ ಇದರ ಅರಿವು ಇರಬಹುದೇ? ಅದಾಗಲೇ ತನ್ನ ಅಮ್ಮ ಇದೇ ಅಂತ ಭಾವನಾತ್ಮಕವಾಗಿ ಆ ಮಗು ತಿಳಿಯದೇ ಸಂಬಂಧ ಬೆಳೆಸಿರುತ್ತದೆ. ಅದಕ್ಕೆ ನ್ಯಾಯಾಲಯವಾಗಲಿ ಈ ಅಮ್ಮಂದಿರ ಭಾವನೆಯಾಗಲೀ ಪರಿವೆ ಇರುವುದಿಲ್ಲ. ಇಲ್ಲಿ ಮಗುವಿನ ಮಾನಸಿಕ ನೆಲೆಗೆ ಗೌರವ ಎಲ್ಲಿಂದ ಬರಬೇಕು? ತನ್ನದಲ್ಲದ ಅಮ್ಮನನ್ನು ಅಮ್ಮನೇ ಅಂತ ಅದು ಮಾನಸಿಕವಾಗಿ ಒಪ್ಪಿಕೊಂಡಿರುತ್ತದೆ. ದೈಹಿಕ ಸಂಬಂಧಗಳಿಗಿಂತಲೂ ಮಾನಸಿಕ ಸಂಭಧಗಳು ಭಾವನೆಗಳಿಗೆ ಹೆಚ್ಚು ಮೌಲ್ಯ. ಆದರೆ ಅದು ನಾನು ಹೆತ್ತ ಮಗುವಲ್ಲ ಯಾರೋ ಹೆತ್ತ ಮಗು ಎಂದು ಮನಸ್ಸಿಗೆ ಭಾವನೆ ಬಂದಾಗ ಮಗುವನ್ನು ಒಪ್ಪಿಕೊಂಡು ಆ ಮಗುವಿನಂತೆ ಸಂಭಂಧ ಬೆಸೆಯುವುದಕ್ಕೆ ಅಮ್ಮನಿಗೆ ಸಾಧ್ಯವಾಗುವುದಿಲ್ಲ. 

ವಾಸ್ತವದ ಸ್ಥಿತಿ ಮತ್ತು ಸತ್ಯ ಹೇಗೆ ಇರಲಿ ಮನಸ್ಸಿಗೆ ಹೀಗೆ ಎಂಬ ಭಾವನೆ ಬಂದು ಬಿಟ್ಟರೆ ಅಲ್ಲಿ ದೇಹ ಸಹಕರಿಸುವುದಿಲ್ಲ. ಅದು ನನ್ನದಲ್ಲ ಈ ಭಾವನೆ ಒಂದೇ ಸಾಕಾಗುತ್ತದೆ. ಅದು ಅಮ್ಮನಿಗಾದರೂ ಮಗುವಿಗಾದರೂ ಅಷ್ಟೇ. 

ಮೊದಲು ಊರ ಮನೆಯಲ್ಲಿ ನಾಯಿಯನ್ನು ಸಾಕುತ್ತಿದ್ದೆವು. ನಾಯಿಗೆ ಊಟ ಹಾಕುವುದಕ್ಕೆ ಒಂದು ಹಳೆಯ ತಟ್ಟೆ ಇರುತ್ತಿತ್ತು. ಆ ತಟ್ಟೆ ಎಷ್ಟೇ ಶುಚಿಯಾಗಿರಲಿ, ಅದನ್ನು ಕಾಲಿಂದ ತಳ್ಳಿ ಅದಕ್ಕೆ ಅನ್ನ ಆಹಾರ ಹಾಕುತ್ತಿದ್ದೆವು. ಇಲ್ಲಿ ಆ ಪಾತ್ರೆ ನಾಯಿ ಉಂಡ ಪಾತ್ರೆ ಎಂಬುದಷ್ಟೇ ಮುಖ್ಯವಾಗುತ್ತಿತ್ತು. ಅದು ಮನುಷ್ಯರು ಕೈಯಿಂದ ಮುಟ್ಟುವಂತಹುದಲ್ಲ. ಮನಸ್ಸಿನ ಭಾವನೆ ಅದೊಂದು ವಿಚಿತ್ರ ಕಲ್ಪನೆ. ನಮ್ಮದು ಅಥವಾ ನಮ್ಮದಲ್ಲ ಈ ಭಾವನೆಗಳ ವೆತ್ಯಾಸದಲ್ಲಿ ನಮ್ಮ ಪ್ರವೃತ್ತಿ ಇರುತ್ತದೆ.  

ಕೆಲವೊಮ್ಮೆ ಯಾವುದೇ ಕಾರ್ಯ ಕೆಲಸಗಳು ಇದೇ ಬಗೆಯಲ್ಲಿ ವರ್ಗೀಕರಿಸಲ್ಪಡುತ್ತದೆ. ಅದು ಸತ್ಕಾರ್ಯ ಅಥವ ದುಷ್ಕಾರ್ಯ, ಇಲ್ಲಿ ಕಾರ್ಯ ಮುಖ್ಯವಾಗುವುದಿಲ್ಲ. ಅದು ಮಾಡುವ ವ್ಯಕ್ತಿ ಅಥವಾ ಸನ್ನಿವೇಶ ಮುಖ್ಯವಾಗುತ್ತದೆ. ಒಂದು ಒಳ್ಳೆಯ ಸತ್ಕಾರ್ಯ...ನಮಗೆ ಆಗದೇ ಇದ್ದವರು ಮಾಡಿದಾಗ ಅದನ್ನು ಒಪ್ಪಿಕೊಳ್ಳುವುದಕ್ಕೆ ಮನಸ್ಸು ಸಿದ್ದರಿರುವುದಿಲ್ಲ. ಅದೇ ಬಗೆಯಲ್ಲಿ ಯಾವುದೇ ಕೆಟ್ಟ ಕೆಲಸವನ್ನು ನಮ್ಮ ಇಷ್ಟವಿದ್ದವರು ಮಾಡುವಾಗ ಅದನ್ನು ಕೆಟ್ಟದ್ದು ಎಂದು ಹೇಳುವುದರಲ್ಲಿ ಆತ್ಮವಂಚನೆ ಎದುರಾಗುತ್ತದೆ. ಅದು ಕೆಲಸದ ಮೇಲಿನ ಭಾವವಲ್ಲ. ಕೇವಲ ಮನುಷ್ಯ ಸಂಬಂಧದ ಮೇಲಿನ ಭಾವ.  ಕಾರ್ಯ ಒಂದೇ ಇರುತ್ತದೆ, ಮಾಡುವ ವ್ಯಕ್ತಿ ಬೇರೆ ಬೇರೆಯಾಗಿರುತ್ತದೆ. 

ಅಷ್ಟಾಂಗ ಯೋಗದಲ್ಲಿ ಒಂದು ನಿಯಮವಿದೆ ಅಹಿಂಸೆ. ಅಂದರೆ ಹಿಂಸೆಯನ್ನು ಮಾಡದೇ ಇರುವುದು. ಇಲ್ಲಿ ಹಿಂಸೆ ಎಂಬುದು ಮನಸ್ಸಿನ ಹಿಂಸಾತ್ಮಕ ಮನೋಭಾವವನ್ನು ಹೊಂದಿದೆ. ಅಹಿಂಸೆ ಎನ್ನುವುದು ಮಾಂಸಾಹಾರಿಯಾಗುವುದರಲ್ಲಿ ಇಲ್ಲ. ಮೇಲ್ನೋಟಕ್ಕೆ ನೋಡುವಾಗ ಸಸ್ಯಹಾರಿಯಾಗುವುದರಲ್ಲಿ ಅಹಿಂಸಾ ಗುಣವಿರುತ್ತದೆ. ಆದರೆ ವಾಸ್ತವದಲ್ಲಿ ಮಾಂಸಾಹಾರಿಯಾಗಿದ್ದರೂ ಅಹಿಂಸಾ ಗುಣವನ್ನು ಅಳವಡಿಸಿಕೊಳ್ಳಬಹುದು. ಹಿಂಸೆ ಅದು ಮನಸ್ಸಿನ ಭಾವದಲ್ಲಿರುತ್ತದೆ ಹೊರತು ಕೃತ್ಯದಲ್ಲಿ ಇರುವುದಿಲ್ಲ. ಯಾರಿಗೂ ಮನಸ್ಸಿನಿಂದಲೂ ಹಿಂಸಾತ್ಮಕ ಚಿಂತನೆಯಿಂದ ನೋವಾಗದಂತೆ ವರ್ತಿಸುವುದು ಅಹಿಂಸಾ ಗುಣವಾಗಿರುತ್ತದೆ. ಹಿಂಸೆ ಎಂಬುದು ಪ್ರವೃತ್ತಿಗಿಂತಲೂ ಮನೋಭಾವದಿಂದ ಕೂಡಿರುತ್ತದೆ. ಹಿತೈಷಿಗಳು  ಪ್ರೀತಿಯಿಂದ ಕೆಟ್ಟದಾಗಿ ಗದರಿದರೂ ಅದು ಬೈಗುಳವಾಗುವುದಿಲ್ಲ. ಅಥವಾ ದ್ವೇಷದಿಂದ ಶತ್ರುಗಳು ವ್ಯಂಗ್ಯವಾಗಿ ಹೊಗಳಿದರೂ ಅದು ಸ್ತುತಿಯಾಗುವುದಿಲ್ಲ.  ಮನೋಭಾವ ಎಂಬುದು ಪ್ರವೃತ್ತಿಗೆ ಪೂರಕವಾಗಿರುವುದಿಲ್ಲ. ಅದು ವ್ಯಕ್ತಿರಿಕ್ತವಾಗಿರುತ್ತದೆ. 

ಯಾವುದೋ ಒಂದು ಹಾಡು ಯಾರಿಗೋ ಇಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ಮೊತ್ತೊಬ್ಬರಿಗೆ ಇಷ್ಟವಾಗುವುದಿಲ್ಲ. ಹಾಡಿನ ಭಾವಾರ್ಥವಾಗಲಿ, ಹಾಡಿನ ಸಂದೇಶವಾಗಲಿ, ಹಾಡಿನ ರಾಗ ತಾಳವಾಗಲೀ ಕಾರಣವಾಗದೇ ಯಾರೋ ಇಷ್ಟ ಪಟ್ಟಿದ್ದಾರೆ ಎನ್ನುವುದಕ್ಕೆ ಅದನ್ನು ಹಾಡುವುದಕ್ಕೆ ಕೇಳುವುದಕ್ಕೆ ಬಯಸುವುದಿಲ್ಲ. ಕೇವಲ ಮನಸ್ಸಿನ ಭಾವ ಮಾತ್ರ. ಯಾವುದೋ ಹಾಡು ಯಾರೋ ದ್ವೇಷಿಸಿದ ಮಾತ್ರಕ್ಕೆ ಅದು ಕೆಟ್ಟ ಹಾಡಾಗುವುದಿಲ್ಲ.  ನಮ್ಮ ಮೆಚ್ಚಿನ ನಟ ಕೆಟ್ಟ ಸಿನಿಮಾದಲ್ಲಿ ನಟಿಸಿದರೂ ಅದು ಕೆಲವು ಸಲ ಇಷ್ಟವಾಗುತ್ತದೆ. ಅಭಿಮಾನದಲ್ಲಿ ಕೆಟ್ಟದ್ದು ಎಂಬುದು ಮುಚ್ಚಿ ಹೋಗುತ್ತದೆ.  ಹೆತ್ತ ತಾಯಿಗೆ ಹೆಗ್ಗಣ ಮುದ್ದು ಎಂದಾಗುವುದು ಇದೇ ಭಾವದಲ್ಲಿ. ಯಾವುದೋ ಒಂದು ನಮಗೆ ಇಷ್ಟವಾಗುತ್ತದೆ. ಮತ್ತೊಬ್ಬರಿಗೆ ಇಷ್ಟವಾಗಲಿಲ್ಲ ಎನ್ನುವುದಕ್ಕೆ ನಮ್ಮ ಇಷ್ಟವೆಂಬುದು ಮೌಲ್ಯರಹಿತವಾಗುವುದಿಲ್ಲ. ಮತ್ತೊಬ್ಬರ ಮನಸ್ಸನ್ನಷ್ಟೇ ಪರಿಗಣಿಸಿ ನಮ್ಮ ಇಷ್ಟವನ್ನು ನಾವು ಗೌರವಿಸಿಬಿಡುವುದರಲ್ಲಿ ಆತ್ಮ ತೃಪ್ತಿ ಇರುತ್ತದೆ. ನಲ್ಲ ಪ್ರೀತಿಯಿಂದ ಕೊಟ್ಟ ಒಂದು ಸಣ್ಣ ಹೂವು ಅವ್ಯಕ್ತವಾದ ಪರಿಮಳವನ್ನು ಬೀರಿದಂತೆ ಇಲ್ಲಿ ಪ್ರೀತಿ ಮಾತ್ರ ಗೌರವಿಸಲ್ಪಡುತ್ತದೆ. ಪ್ರೀತಿ ಎಂಬ ಭಾವ ಮಾತ್ರ ಪ್ರೇಮಿಯದಾಗಿರುತ್ತದೆ. 


Saturday, September 20, 2025

ದಾದಾ ಫಾಲ್ಕೆ ಮೋಹನ್ ಲಾಲ್

ಭರತಂ‌ , ವಾನ ಪ್ರಸ್ಥಂ  ಎಂಬ ಮಲಯಾಳಂ ಸಿನಿಮಾ ನೋಡಿದವರಿಗೆ ಮೋಹನ್ ಲಾಲ್ ಎಂಬ ದೈತ್ಯ ಪ್ರತಿಭೆಯ ಅರಿವಾಗಬಹುದು. ಈ  ಎರಡೂ ಸಿನಿಮಾಗಳಲ್ಲಿನ ಶ್ರೇಷ್ಠ ಅಭಿನಯಕ್ಕಾಗಿ  ಪಡೆದ  ಮೋಹನ್ ಲಾಲ್ ಎರಡೂಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಅಪರೂಪದ ನಟ. ಇವೆರಡೂ ಸಿನಿಮಾಗಳು ಕೇವಲ‌ ಪ್ರತಿಭಾ ನಿದರ್ಶನ ಎನ್ನಬೇಕು.‌ಪಟ್ಟಿ ಮಾಡುತ್ತಾ ಹೋದರೆ ಯಾವುದು ಉತ್ತಮ‌ ಎಂಬ ಆಯ್ಕೆ ಸುಲಭ ಸಾಧ್ಯವಲ್ಲ. 

       ಕಿರೀಟಂ, ಚೆಂಗೋಲ್, ಕಿಲುಕ್ಕಂ  ವಂದನಂ ದಶರಥಂ, ಸದಯಂ, ಪವಿತ್ರಂ, ಪಿಂಗಾಮಿ, ಸನ್ಮನಸ್ಸುಳ್ಳವರ್ಕು ಸಮಾಧಾನಂ, ನಾಡೋಡಿಕ್ಕಾಟು, ಕಳಿಪ್ಪಾಟಂ, ಮಿಥುನಂ, ಚಂದ್ರಲೇಖ, ತನ್ಮಾತ್ರ ಹೀಗೆ ಹೇಳುತ್ತಾ ಹೋದರೆ ಅದಕ್ಕೆ  ಅಂತ್ಯವಿಲ್ಲ ಎಂದನಿಸುತ್ತದೆ. ಎಲ್ಲವೂ ಅತ್ಯುತ್ತಮ‌ ನಟನೆಗೆ ಸಾಕ್ಷಿಯಾದ ಚಿತ್ರಗಳು. ದಶಕಗಳ ಹಿಂದೆ ಇವುಗಳನ್ನು ನೋಡಿ ವಾರಗಳ ಕಾಲ‌ ಅದರ ನಶಾವಲಯಲ್ಲಿ ಹುದುಗಿ ಹೋದದ್ದು ಇನ್ನೂ ನೆನಪಲ್ಲಿದೆ. ಅಭಿನಯವೆಂದರೆ ಅದು ಮಾದರಿಯಾಗಬಲ್ಲ ನಟನಾ ಕೌಶಲವನ್ನು  ಹೊಂದಿದ ಪ್ರತಿಭಾವಂತ ಈ‌ ನಟನೆಗೆ ಮಾರು ಹೋಗದವರಿಲ್ಲ.  ಸರ್ವಾಂಗವೂ ಅಭಿನಯಕ್ಕೆ ಅರ್ಪಿಸಿಕೊಂಡ ಅದ್ಭುತ ನಟನಾಶೈಲಿಗೆ ಸಹಜವಾಗಿ ಚಲನಚಿತ್ರದ ಅತ್ಯುನ್ನತ ದಾದಾ ಸಾಹೆಬ್ ಪ್ರಶಸ್ತಿ ಒಲಿದು ಬಂದಿದೆ. ಈತನ ಪ್ರತಿಭೆಗೆ ಎಂದೋ ಇದು ಸಿಗಬೇಕಿತ್ತು, ಈಗ ಸಿಕ್ಕಿದೆ. ನಿಜಕ್ಕೂ ಲಾಲೇಟ್ಟ ಇದಕ್ಕೆ ಅರ್ಹ‌ ವ್ಯಕ್ತಿ ಎ‌ನ್ನುವುದಕ್ಕೆ ಎರಡು ಮಾತಿಲ್ಲ. 

       ಮಲಯಾಳಂ‌ ಚಿತ್ರರಂಗ ಎಂದರೆ‌ ಪ್ರತಿಭಾ ಸಂಪತ್ತಿನ  ಗಡಣವೇ  ತುಂಬಿದ ಕ್ಷೇತ್ರ. ಇಲ್ಲಿ ನೈಜ ಅಭಿನಯಕ್ಕೆ ಕಠಿಣ ಸ್ಪರ್ಧೆ ಸದಾ ಎದುರಾಗುತ್ತಿದೆ.‌ ಅಂತಹ ಕ್ಷೇತ್ರದಲ್ಲಿ ತನ್ನ ಪ್ರತಿಭೆಗೆ ಹಸರಾದ ಸಂಪೂರ್ಣ ನಟ ಮೋಹನ್ ಲಾಲ್ ಎಂಬುದರಲ್ಲಿ ಎರಡು ಮಾತಿಲ್ಲ. 

       ಎಲ್ಲಾ ಚಿತ್ರರಂಗಗಳೂ ಇಂದು ಸಂಕ್ರಮಣ ಸ್ಥಿತಿಯನ್ನು ಎದುರಿಸುತ್ತದೆ.‌ಇಂದು ಇರುವ ಸ್ಥಿತಿ ನಾಳೆ ಇಲ್ಲ. ಥಿಯೇಟರ್ ಗಳಿಗೆ ಜನ‌ಬರುತ್ತಿಲ್ಲ. ಮನೆಯಲ್ಲೇ ಕುಳಿತು ಅಚ್ಚ ಹೊಸ ಮತ್ತು ತೀರಾ ಹಳೆಯ ನೋಡಬಲ್ಲ ಅವಕಾಶ. ಬೆರಳೆಣಿಕೆಯಲ್ಲಿ ಹೊರ ಬರುವ ಸಿನಿಮಾಗಳು ಹೀಗೆ ಇಂದು ಸಿನಿಮಾ ಎಂದರೆ ಮೊದಲಿನ ಆಕರ್ಷಣೆಯನ್ನು ಕಳೆದುಕೊಂಡಿದೆ. ಅದರಲ್ಲೂ ವರ್ಷಕ್ಕೆ ಹಲವು ಸಿನಿಮಾಗಳನ್ನು ಕೊಡುತ್ತಿದ್ದ ಸೂಪರ್ ಸ್ಟಾರ್ ನಟರು, ಲೀಡ್ ರೋಲ್ ಗಳಿಗಷ್ಟೇ   ಸೀಮಿತವಾಗಿರುವುದರಿಂದ    ಇಂದು ಮೂಲೆ ಸೇರಿ ಹೆಸರಿಗಷ್ಟೇ ಸ್ಟಾರ್ ಅಗಿದ್ದಾರೆ. ಹೆಸರಾಂತ ನಟರ ಹೊಸ ಸಿನಿ‌ಮ ಬಿಡುಗಡೆಯಾಗಿ ಜಮಾನವೇ ಕಳೆದುಹೋಗಿದೆ. ಇಂತಹ ಪರಿಸ್ಥತಿಯಲ್ಲೂ ಮೋಹನ್ ಲಾಲ್ ಹೊಸ ಸಿನಿಮಾಗಳು ಬಿಡಗಡೆಯಾಗಿ ದುಡ್ಡು ಬಾಚುತ್ತಿವೆ ಎಂದರೆ ಮೋಹನ್ ಲಾಲ್ ವರ್ಚಸ್ಸು ಇನ್ನೂ ಹಸಿರಾಗಿರುವುದಕ್ಕೆ, ಎಂತಹಾ ಪಾತ್ರವನ್ನೂ ಲೀಲಾಜಾಲವಾಗಿ ಮಾಡಬಲ್ಲ ಆತನ ಪ್ರತಿಭೆಯೇ ಸಾಕ್ಷಿ.  ಎಂದಿನಂತೆ ಈ ವರ್ಷವೂ ಆತನ ಸಿನಿಮಾಗಳು ಹಿಟ್ ಆಗುತ್ತಿವೆ ಎಂದರೆ... ದಾದಾ ಸಾಹೇಬ್ ಗರಿ ಎಲ್ಲೋ ಅಕಾಶದಲ್ಲಿ ವಿಹರಿಸುತ್ತಾ ಈಗ ಮೋಹನ್ ಲಾಲ್ ತಲೆಯಲ್ಲಿ ಬಂದು ಕುಳಿತಿದೆ. 


         ಒಬ್ಬ ನಟ ಪರಿ ಪೂರ್ಣ ಎಂದಾಗಬೇಕಾದರೆ ಕೇವಲ ಸ್ಟಾರ್ ಗಿರಿ ಸಾಲದು. ಹುಚ್ಚು ಅಭಿಮಾನ ಸಾಲದು. ಯಾವುದೇ ಪಾತ್ರ, ಅದು ಕಥಾನಯಕ ಅಥವಾ ಖಳ ಪಾತ್ರವೇ ಅಗಲಿ   ಇಮೇಜ್ ತೊರೆದು  ಲೀಡ್  ರೋಲ್ ಗೆ ಅಡರದೆ ಪಾತ್ರೋಚಿತ ನಟನೆ ಮಾಡಬಲ್ಲವನಾಗಿರಬೇಕು.‌ಹಾಗಾಗಿಯೇ ಈ ಪರಿಪಕ್ವ ನಟನ ಸಿನಿಮಾ ಎಂದರೆ ಈಗಲು ಜನಾಕರ್ಷಣೆಯನ್ನು ಗಳಿಸಿದ ಇಂತಹ ನಟನಿಗೆ ಈಗ ಪಾಲ್ಕೆ ಗರಿ ಒಲಿದು ಬಂದಿರುವುದು ಕೇವಲ ಅದೃಷ್ಟವೋ ವಶೀಲಿ ಬಾಜಿಯೋ ಖಂಡಿತಾ ಅಲ್ಲ. ಇದು ದೈವದತ್ತ ಪ್ರತಿಭೆಗೆ ಒಲಿದ ಪುರಸ್ಕಾರ.‌ಇದು ಇನ್ನೂ ಹುದುಗಿರುವ ಪ್ರತಿಭೆಗೆ ಪ್ರೇರಣೆಯಾಗಲಿ ಎಂಬುದಷ್ಟೇ ಈ ಸಹಜ ನಟನ ಸಹಜಾಭಿಮಾನಿಗಳ ಆಶಯ.





Saturday, September 6, 2025

ಧರ್ಮ‌ಪರಿಷ್ಕಾರ

    ಹಿಂದೂ ಧರ್ಮದಲ್ಲಿ ಯಾರೂ ಗಂಭೀರವಾಗಿ ಯೋಚಿಸದ ಒಂದು ಗುಣವಿದೆ. ಅದು ಸಂಪೂರ್ಣ ಗ್ರಾಹ್ಯ ಸ್ವಭಾವ ಎಂದರೆ, ಪರಧರ್ಮವನ್ನು ಗ್ರಹಿಸುವ ಮತ್ತು ಗೌರವಿಸುವ ಗುಣ. ಹಾಗಾಗಿ ಇದು ಸಹಸ್ರ ಶತಮಾನಕ್ಕಿಂತ ಹಳೆಯದಾದ ತತ್ವಗಳನ್ನು ಉಳಿಸಿಕೊಂಡು ಸತತವಾಗಿ ಪರಿಷ್ಕಾರಕ್ಕೆ ಒಳಗಾಗಿದೆ. ಹಲವು ಸಲ ಈ ಪರಿಷ್ಕಾರಗುಣ ಈ ಧರ್ಮವನ್ನು ತಾತ್ಸಾರದಿಂದ ಕಾಣುವಂತೆ ಮಾಡಿದೆ. ಅದು ಸಹಜ ಹಲವು ಸಲ ನಮ್ಮ ಸದ್ಗುಣ ಸನ್ಮನಸ್ಸೂ ತಾತ್ಸರಾಗಳಿಗೆ ತುತ್ತಾಗಿ ಅವಗಣಿಸಲ್ಪಡುವುದು ಸಹಜವಾಗಿದೆ.ಅದರಂತೆ ನಮ್ಮ ಮೂರ್ಖ ರಾಜಕಾರಿಣಿಗಳ ಹಲವು ಚಿಂತಕರ ಪ್ರವೃತ್ತಿಯೂ ಇದೇ ಬಗೆಯಲ್ಲಿರುತ್ತದೆ. ಅವರಿಗೆ ಗ್ರಾಹ್ಯ ಗುಣಗಳ ಅರಿವೇ ಇಲ್ಲ.

       ಎಲ್ಲಿ ಧರ್ಮಗಳು ಪರಸ್ಪರ ಸಮಾನವಾಗಿ...ಈ ಸಮಾನವಾಗಿ ಎಂಬುದನ್ನು ಒತ್ತಿ ಹೇಳಬೇಕಿದೆ, ಅದು ಸಮಾನವಾಗಿ ಗೌರವಿಸಲ್ಪಡುವುದೋ ಅಲ್ಲಿ ಧರ್ಮಗಳ‌ ತತ್ವ ಜೀವಂತವಾಗಿ ಆನಷ್ಠಾನದಲ್ಲಿರುರುತ್ತದೆ.. ಆದರೆ ಮೂರ್ಖರಿಗೆ ಇದು ಅರ್ಥವಾಗುವುದಿಲ್ಲ. ಹಾಗಾಗಿ ತಿದ್ದುಪಡಿ ಸಮಾನತೆ ಎಲ್ಲವನ್ನೂ ಹಿಂದೂ ಧರ್ಮದಲ್ಲಿ ಅರೋಪಿಸಿಬಿಡುತ್ತಾರೆ. ಇವರ ಬಗೆಯಲ್ಲಿ ಹಿಂದೂ ಧರ್ಮ‌ಮಾತ್ರ ಬದಲಾಗಿ ಪರಿಷ್ಕರಿಸಬೇಕಾದ ಗುಣಗಳನ್ನು ಹೊಂದಿದೆ.ಆದರೆ ಪ್ರತಿಯೊಂದು ಧರ್ಮದಲ್ಲೂ ಧನಾತ್ಮಕ ಋಣಾತ್ಮಕ ಗುಣಗಳಿವೆ. ಅದನ್ನು ಒಪ್ಪಿಕೊಳ್ಳುವ ಪ್ರಾಮಣಿಕತೆ ಇರಬೇಕು ಅಷ್ಟೇ. ಆದರೆ ಧಾರ್ಮಿಕ ನಿರಪೇಕ್ಷತೆಗೆ ಪಕ್ಷಪಾತ ಶಾಪವಾಗಿ ಪರಿಣಮಿಸುವಾ ಹಿಂದೂ ಧರ್ಮ ಗುರಿಯಾಗುತ್ತದೆ.

         ಪರಧರ್ಮವನ್ನು ಗೌರವಿಸುವಾಗ ನಮ್ಮ ದರ್ಮದ ಶ್ರೇಷ್ಠ ತೆಯನ್ನು ಬಿಂಬಿಸಬೇಕು ಎನ್ನವ ಸಾಮನ್ಯ ಜ್ಞಾನವೂ ಇಲ್ಲದೇ ಹಿಂದೂ ಧರ್ಮವನ್ನು ಅವಗಣಿಸುವ ಈ ಭ್ರಷ್ಟ ಜಾತ್ಯಾತೀತ ತತ್ವದ ಢಾಂಭಿಕತನವನ್ನು ಅರಿಯಬೇಕು. ಅನ್ಯ ಧರ್ಮದ ಆಚರಣೆಯಲ್ಲಿ ನಮ್ಮ ಧರ್ಮವನ್ನು ಒತ್ತೆ ಇಡುವಾಗ ಅನ್ಯ ಧರ್ಮವನ್ನು ಇಲ್ಲೂ ಒತ್ತೆ ಇರಿಸಿಕೊಳ್ಳಬಹುದಾದ ಸಮಾನ ಸೌಹಾರ್ದತೆಯನ್ನು ಅಳವಡಿಸುವುದು ಧಾರ್ಮಿಕ ಅವಕಾಶವಾಗಬೇಕು. ಆದರೆ ಪರಮ ಸ್ವಾರ್ಥದ ಪಕ್ಷಪಾತದಲ್ಲಿ ಇದನ್ನೆಲ್ಲ‌ ಚಿಂತಿಸುವ ಮನೋಭಾವದ ಕೊರತೆಯಾಗಿದೆ. ಇದನ್ನು ಪರಮ‌ ಮೂರ್ಖತನ ಎನ್ನಬೇಕು. ಬಲವಂತದಿಂದ ಕುಂಕುಮ‌ ತಿಲಕ ಇರಿಸಿದರೂ ಬಲವಂತದಿಂದ ಟೋಪಿ ಧರಿಸಿದರೂ ಅದು ಧಾರ್ಮಿಕ ಆಷರಣೆಯಾಗುವುದಿಲ್ಲ. ಕೇವಲ ಆಷಾಢಭೂತಿತನದ ಮೂರ್ಖತನವಾಗುತ್ತದೆ

Tuesday, August 26, 2025

ದೈವಾಗಮನ....


. ಯಾವುದೇ ಹಬ್ಬ ಹರಿದಿನ ಬರಲಿ ನಮ್ಮ ಮನೆಯ ರಸ್ತೆಯಲ್ಲಿ ಮೊದಲ ದಿನವೇ  ಒಂದು ಸಡಗರ ಆರಂಭವಾಗುತ್ತದೆ. ಅದೇನು ನಮ್ಮ ರಸ್ತೆಗೆ ಮಾತ್ರ ಸೀಮಿತವಲ್ಲ. ಎಲ್ಲ ಕಡೆಯೂ ಇರುತ್ತದೆ. ರಾತ್ರಿಯಾಗುತ್ತಿದ್ದಂತೆ ಮನೆಯ ಎದುರು ಗುಡಿಸಿ ನೀರು ಹಾಕಿ ಸ್ವಚ್ಛ ಮಾಡುತ್ತಾರೆ. ಮತ್ತೆ ರಂಗೋಲಿ ಹಾಕುತ್ತಾರೆ. ಇದು ಹಬ್ಬ ಹರಿದಿನ ಅಂತ ಅಲ್ಲ ಹಲವು ಸಲ ದಿನ ನಿತ್ಯವೂ ಇದೂ ಕೆಲವು ಕಡೆ ಇರುತ್ತದೆ. ವಿಚಿತ್ರವೆಂದರೆ ಮೊದಲ ದಿನ ರಾತ್ರಿ ಈ ಕೆಲಸ ಮಾಡುವುದು ಒಂದು ಅಪಭ್ರಂಶ ಎಂಬಂತೆ ನನಗೆ ಭಾಸವಾಗುತ್ತದೆ. ಸಂಪ್ರದಾಯದ ಪ್ರಕಾರ ರಾತ್ರಿ ಪೊರಕೆ ಉಪಯೋಗಿಸುವ ಹಾಗಿಲ್ಲ. ಆದರೂ ನಗರದ ಜೀವನ ಕ್ರಮದಲ್ಲಿ ಕೆಲವನ್ನು ಪಾಲಿಸುವುದು ಸಾಧ್ಯವಾಗುವುದಿಲ್ಲ ಎನೋ ಸತ್ಯ. ಆದರೆ ಅದರ ಬಗ್ಗೆ ಗಮನ ಹರಿಸಿ ಒಂದಿಷ್ಟು ಪ್ರಯತ್ನ ಮಾಡಬಹುದು. ಹೋಗಲಿ ರಾತ್ರಿ ರಂಗೋಲಿ ಹಾಕುವುದು ಮಾತ್ರ ವಿಚಿತ್ರ ಎನಿಸುತ್ತದೆ.  ಇದು ಬೆಂಗಳೂರಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯ. ಹಲವು ಸಲ ಇದನ್ನು ಕಾಣುವಾಗ ಯಾವ ಉದ್ದೇಶಕ್ಕೆ ರಂಗೋಲಿ ಹಾಕುತ್ತಾರೆ ಎಂದು ಆಶ್ಚರ್ಯವಾಗುತ್ತದೆ. 

ನಮ್ಮ ಸಂಪ್ರದಾಯ ಪರಂಪರೆಯಲ್ಲಿ ಬಳಕೆಯಲ್ಲಿ ಬರುವ ಹಲವು ಪವಿತ್ರ ಕಾರ್ಯಗಳಿಗೆ ಅಂತರಾರ್ಥ ಇರುತ್ತದೆ.  ಮಾಡುವ ಕಾರ್ಯ ಹೊರ ನೋಟಕ್ಕೆ ಒಂದು ಕಂಡರೆ ಅದರ ಒಳನೋಟ ಬೇರೆಯೇ ಇರುತ್ತದೆ. ಅದನ್ನು ಮನಗಂಡು ನಾವು ಅದನ್ನು ಗೌರವಿಸಿ ನಡೆದು ಕೊಂಡರೆ ನಾವು ಮಾಡುವ ಆಚರಿಸುವ ಕಾರ್ಯಗಳಿಗೆ ಅರ್ಥ ಒದಗಿಬರುತ್ತದೆ. ಸಂಪ್ರದಾಯವನ್ನು ಮೀರಿ ಯಾವುದನ್ನು ಮಾಡಿದರೂ ಯಾರೇನೂ ಪ್ರಶ್ನಿಸುವುದಕ್ಕಿಲ್ಲ. ಮಾಡುವ ಸ್ವಾತಂತ್ರ್ಯ ಇದ್ದೇ ಇರುತ್ತದೆ. ಶೌಚಾಲಯದಲ್ಲಿ ಕುಳಿತು ಊಟವನ್ನೂ ಮಾಡಬಹುದು. ಮಾಡುವವರ ಸ್ವಾತಂತ್ರ್ಯ ಅಷ್ಟೇ. 

ರಂಗೋಲಿ ಹಾಕುವ ಕ್ರಮ ಎಂದರೆ ಮುಂಜಾನೆ ಸೂರ್ಯ ಉದಿಸುವ ಮೊದಲು ಹಾಕಬೇಕು.  ಸೂರ್ಯೋದಯದಲ್ಲಿ ಭಗವಂತನ ಆಗಮಿಸುತ್ತಾನೆ. ಸೂರ್ಯ ಕಿರಣಗಳೊಂದಿಗೆ ಸುಂದರವಾದ ರಂಗೋಲಿ ಹಾಕಿದರೆ ಅದು ಮುಂಜಾನೆ ಆಗಮಿಸುವ ಸಂಚರಿಸುವ  ಭಗವಂತನಿಗೆ ಅಥವಾ ಒಳ್ಳೆಯ ಶಕ್ತಿಗೆ, ಧನಾತ್ಮಕ ಚಿಂತನೆಗಳಿಗೆ ಸ್ವಾಗತ ಕೋರಿದಂತೆ. ಆದರೆ ರಾತ್ರಿ ರಂಗೋಲಿ ಹಾಕಿದರೆ..ರಾತ್ರಿ  ಋಣಾತ್ಮಕ ಪ್ರತೀಕವಾದ ಬೂತ ಪ್ರೇತ ದೆವ್ವ ಎಂಬ ಅಸುರೀಭಾವಗಳು ಸಂಚರಿಸುವುದನ್ನು ಸ್ವಾಗತಿಸಿದಂತೆ. ಭಗವಂತನ ಬದಲು ಪ್ರೇತ ಪಿಶಾಚಿಗಳನ್ನು ಮನೆಯೊಳಗೆ ಆಹ್ವಾನಿಸಿದಂತಾಗುತ್ತದೆ. ಆದರೆ ಇದನ್ನೆ ತಾಳ್ಮೆಯಿಂದ ಅರ್ಥವಿಸುವ ಗೋಜಿಗೆ ಹೋಗುವುದಿಲ್ಲ. ಒಟ್ಟು ಆಚರಿಸಬೇಕು. ಮೊದಲ ರಾತ್ರಿಯೇ ಹಾಕುವುದರಿಂದ ಮುಂಜಾನೆ ಬೇಗನೆ ಏಳುವ ಅವಶ್ಯಕತೆ ಇರುವುದಿಲ್ಲ. ಇಷ್ಟಕ್ಕೂ ನಾವು ರಂಗೋಲಿ ಹಾಕುವ ಉದ್ದೇಶವಾದರೂ ಏನು ಎಂಬುದು ತಿಳಿದಿರಬೇಕು.  ಹೀಗಾಗಿಯೇ ನಾವೇಷ್ಟು ಉತ್ಕೃಷ್ಟ ಕೆಲಸಗಳನ್ನು ಮಾಡಿದರೂ ಅಸುರೀ ಭಾವ ತಾಂಡವವಾಡುತ್ತದೆ. ನಮ್ಮ ಮನಸ್ಸು ಸದಾ ಅಶಾಂತಿಯಿಂದ ತುಂಬಿರುತ್ತದೆ ಮನೆ ಮನಗಳಲ್ಲಿ ಶಾಂತಿ ಸಮಾಧಾನ ಎಂಬುದು ಗಗನ ಕುಸುಮವಾಗುತ್ತದೆ. ನಾವು ನಾಗರೀಕರಾಗುವುದು ಎಂದರೆ ಪರಂಪರೆಯಲ್ಲಿ ಬಂದ ವಿಶಿಷ್ಟ ಶ್ರೇಷ್ಠ ಪದ್ದತಿಗಳನ್ನು ವಿರೋಧಿಸುವುದೇ ಆಗಿರುತ್ತದೆ. ಅದನ್ನು ವಿರೋಧಿಸಿ ನಡೆದುಕೊಂಡರೆ ನಾವು ನಾಗರೀಕರಾಗಿದ್ದೇವೆ ಎಂದು ಅರ್ಥವಿಸಬೇಕು. 


Saturday, August 9, 2025

ಪುರ್ಸಾದ


ಮೊನ್ನೆ ನಮ್ಮ ಬೀದಿಯಲ್ಲಿ ದೇವಿಯ ಉತ್ಸವ ಆಯಿತು.  ಯಾರೋ ಅಲ್ಲಿದ್ದವರು ಪ್ರಸಾದ ಆತನ ಭಾಷೆಯಲ್ಲಿ ಹೇಳುವುದಾದರೆ ಪುರ್ಸಾದ ತಂದು ಕೊಟ್ಟನು.  ಹೇಳುವುದು ಹೇಗೆ ಹೇಳಿದರೂ ಅದರಲ್ಲಿ ಅಭ್ಯಂತರವಿಲ್ಲ. ಕೇಳುವವನಿಗೆ ಅರ್ಥವಾದರೆ ಸಾಕು. ನಾನು ನನಗೆ ಬೇಡ ಅಂತ ಹೇಳಿದೆ. ಅಬ್ಬಾ ಏನು ದುರಹಂಕಾರ ಎನ್ನಬಹುದು. ಇಲ್ಲಾ ನಾಸ್ತಿಕ ಎನ್ನಬಹುದು. ನಾಸ್ತಿಕತೆಯಲ್ಲು ಆಸ್ತಿಕತೆ ಇದೆ ಅಂತ ಪ್ರತಿಪಾದಿಸುವವನು ನಾನು. ಪ್ರಸಾದ ತಂದವನು ವಿಚಿತ್ರವಾಗಿ ನೋಡಿದ.  ಇದು ಪುರ್ಸಾದ ಅಂತ ರಾಗ ಎಳೆದ. ನನಗೆ ಬೇಡ. ಈ ಜಗತ್ತಿನಲ್ಲಿ ಸಿಗುವ ಎಲ್ಲವೂ ಭಗವಂತನ ಪ್ರಸಾದ ಅಂತ ನಾನು ಹೇಳಿದೆ. ಭೂಮಿಯ ಹನಿ ಹನಿ ನೀರೂ ಭಗವಂತನ ಪ್ರಸಾದ ಅಂತ ವಿಶಾಲ ಭಾವದಲ್ಲಿ ತಿಳಿವಾಗ ಈ ಪ್ರಸಾದ ಬೇಡ ಅಂತ ಹೇಳುವುದಕ್ಕೆ ಕಾರಣ ಉಂಟು. ದೇವರು ಎಂದರೆ ಪವಿತ್ರತೆಯ ಸಂಕೇತ. ಅಲ್ಲಿ ಅದರ ಲೋಪ ಬಹಳಷ್ಟು ಸಂಭವಿಸಿದ್ದು ಮಾತ್ರವಲ್ಲ ಮನಸ್ಸಿಗೆ ಬಹಳಷ್ಟು ವಿಷಮ ಅಂತ ಅನ್ನಿಸಿದೆ. 

ಇಲ್ಲಿಯ ಚಿತ್ರಗಳನ್ನು ಒಮ್ಮೆ ಗಮನಿಸಿದರೆ ಸಾಕು,  ನನ್ನ ಭಾವನೆಗಳಿಗೆ ಒಂದಿಷ್ಟು ಅರ್ಥ ಕಾಣಬಹುದು. ಅದೇನೋ ಪ್ರಸಾದ ಅಂತ ಬೇಯಿಸುತ್ತಾರೆ, ಇದು ನಮ್ಮ ಮನೆಯಂಗಳದಲ್ಲಿ ತಯಾರಿಸಿದ  ನೈವೇದ್ಯದ ಚಿತ್ರಗಳು.  ಬೆಂಗಳೂರಿನ ಹಲವು ಉತ್ಸವಗಳ ಕಥೆ ಇದುವೇ ಆಗಿರುತ್ತದೆ. ಇಲ್ಲಿ ತೆರೆದ ಪ್ರದೇಶದಲ್ಲಿ ಬೇಯಿಸುತ್ತಾರೆ. ಸ್ಥಳಾಭಾವ ಇರಬಹುದು. ಇನ್ನು ನೈವೇದ್ಯ ಅಂತ ಮಾಡುವಾಗ ನಮ್ಮೂರ ಕಡೆ ದೇವರಿಗೆ ನೈವೇದ್ಯವಾಗುವುದಕ್ಕೆ  ಅಥವಾ ಪ್ರಸಾದ ಅಂತ ಸ್ವೀಕರಿಸುವಾಗ ಈರುಳ್ಳಿ ಬೆಳ್ಳುಳ್ಳಿ ಹಾಕುವ ಕ್ರಮ ಇಲ್ಲ. ಅದು ಹೇಗೂ ಇರಲಿ. ಆಯಾಯ ಪ್ರದೇಶದ ಸಂಸ್ಕಾರ. ಆದರೆ ದೇವರಿಗೆ ಅಂತ ಮಾಡುವಾಗ ಒಂದಷ್ಟು ಶುಚಿತ್ವ ಅದಕ್ಕೂ ಮೇಲೂ ಪಾವಿತ್ರ್ಯತೆ ಅನ್ನುವುದು ಇರಬೇಕು. ಇದನ್ನು ಸಿದ್ದ ಪಡಿಸುವವರೂ ಹಾಗೆ ಸ್ನಾನ ಮಾಡುವ ಕ್ರಮ ಇದೆಯೋ ಇಲ್ಲವೋ ಅಂತ ನೋಡುವಾಗ ಅನ್ನಿಸುತ್ತದೆ. ಬಾಯಲ್ಲಿ ಧೂಮ ಮಾಡುತ್ತಾ ಸಿದ್ದ ಪಡಿಸುವ ಆಹಾರದ ರುಚಿಯನ್ನು ನೋಡುತ್ತಾ ಮಾಡುವುದನ್ನು ನೋಡಿದರೆ ಪ್ರಸಾದವಾದರೂ ಸೇವಿಸುವ ಮನಸ್ಸು ಹೇಗಾಗಬಹುದು. 

ಇಲ್ಲಿ ತಯಾರಿಸಿದ ಅದೇನೋ ಅನ್ನ, ಬಹುಶಃ ಮೊಸರನ್ನ ಇರಬೇಕು. ಮೊದಲ ದಿನ ತಯಾರಿಸಿಟ್ಟು ಹೋಗಿದ್ದರು. ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಮುಚ್ಚಿ ಹೋಗಿದ್ದರು ಏನೋ ಸತ್ಯ.  ಆದರೆ ಮುಂಜಾನೆ ನಾನು ಮುಂಜಾನೆ ನೋಡುವಾಗ ನಾಯಿ ಬೆಕ್ಕು ಹೆಗ್ಗಣ ಅಲ್ಲೇ ಓಡಾಡುತ್ತಿದ್ದವು. ಇನ್ನು ನಾಯಿ ಕೇವಲ ಮೂಸುತ್ತದೆ ಎಂದು ವಿಶ್ವಾಸ ಇಟ್ಟರೆ ಅದು ಮೂರ್ಖತನವಾಗಬಹುದು. ಅದು ತನ್ನ ಸಹಜ ಸ್ವಭಾವವನ್ನು ಹುಟ್ಟುಗುಣವನ್ನು ಬಿಟ್ಟು ಬಿಟ್ಟರೆ ಅದು ಶ್ವಾನವಾಗುವುದಿಲ್ಲ.  ಮರುದಿನ ಅದನ್ನೇ ಪ್ರಸಾದ ಅಂತ ಕೊಡುವಾಗ ಅಯ್ಯೋ ಪಾಪ ಎನಿಸಿತು. ನಮ್ಮಮ್ಮ ಹೇಳಿದರು ಹಾಗೇ ಅಂತ ಇಲ್ಲಿ ಯಾವುದನ್ನು ಬಿಡುವುದಕ್ಕೆ ಸಾಧ್ಯವಿದೆ? ಅದನ್ನೆಲ್ಲ  ನೋಡಿದರೆ ತಿನ್ನುವುದಕ್ಕೆ ಯಾವುದೂ ಸೂಕ್ತವಲ್ಲ. ನೋಡಿದರೂ ನೋಡದಂತೆ ಇರಬೇಕು. ಹಲವು ಸಲ ನಮ್ಮ ಬಳಿಗೆ ಬರುವಾಗ ಸ್ವಚ್ಛವಾಗಿರುವ ಭಾವನೆ ಬಂದರೆ ಸಾಕು. ಮತ್ತೆ ದೇವರು ಎಂದರೆ ಅದು ನಮ್ಮ ಮನಸ್ಸಿನ ಭಾವನೆಗೆ ಸೀಮಿತವಾಗಿರುತ್ತದೆ. ಹಾಗಂತ ... ಹೀಗಾಗಿದೆ ಅಂತ ದೇವರು ಬಂದು ಹೇಳುವುದಿಲ್ಲ. ತನಗೇನು ಬೇಕೋ ಅಂತ ಯಾವ ದೇವರು ಹೇಳುವುದಿಲ್ಲ. ದೇವರು ಇರುವುದೇ ಭಕ್ತನ ಎಣಿಕೆಯಲ್ಲಿ. ಹಾಗಾಗಿ ತಾನೇನು ತನ್ನ ಮನಸ್ಸು ಪ್ರವೃತ್ತಿ ಏನು, ಅದಕ್ಕೆಹೊಂದಿಕೊಂಡು ದೇವರು ಇರುತ್ತಾನೆ. ಯಾಕೆಂದರೆ ನಮ್ಮ ಎಣಿಕೆಯಂತೆ ನಮ್ಮ ಮಕ್ಕಳೇ ಇರುವುದಿಲ್ಲ. ಹಾಗಾಗಿ ದೇವರಲ್ಲಿ ಅದನ್ನು ಕಂಡು ಅದನ್ನೇ ದೇವರಿಗೆ ಸಲ್ಲಿಸುವುದು.

ಆಹಾರ ತಯಾರಿಸಿದ ಪಾತ್ರೆಗಳನ್ನು ರಾತ್ರೆ ಹಾಗೇ ಬಿಟ್ಟು ಹೋಗಿದ್ದರು. ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಉಳಿದ ಅನ್ನ ಆಹಾರ ಹಾಗೇ ಉಳಿದಿತ್ತು. ಅದನ್ನು ತಿನ್ನುವುದಕ್ಕೆ ಬಂದ ನಾಯಿ ಆ ಪಾತ್ರೆಯ ಒಳಗೆ ಇಳಿದು ತಿನ್ನುತ್ತಿತ್ತು. ಮರುದಿನ ಅದೇ ಪಾತ್ರೆಯಲ್ಲಿ ಪ್ರಸಾದ ಸಿದ್ಧವಾಗುತ್ತಿತ್ತು. ಇದನ್ನು ಕಣ್ಣಾರೆ ಕಂಡ ಮೇಲೆ  ಯಾವ ದೇವರ ಪ್ರಸಾದವಾದರೂ ತಿನ್ನುವ ಧೈರ್ಯ ಆ ಭಗವಂತನಿಗೂ ಒದಗಿಸುವುದಕ್ಕೆ ಸಾಧ್ಯವಿಲ್ಲ. ಇನ್ನು ಈ ಆಹಾರ ತಿಂದರೆ ಆಗುವ ದೊಡ್ಡ ಉಪಕಾರವೆಂದರೆ ಭಗವಂತನ ಬಳಿಗೆ ಬೇಗನೇ ಹೋಗಿ ತಲಪಬಹುದು.  

             ದೇವರ ಪ್ರಸಾದ ಸೇವಿಸಿ ಪ್ರಾಣ ವಿಷ ಪ್ರಾಶಾನವಾಗಿ ಆಸ್ಪತ್ರೆ ಸೇರಿದ , ವೈಕುಂಠ ದರ್ಶನ ಮಾಡಿದ ನಿದರ್ಶನ ಹಲವಿದೆ. ಈ ರೀತಿ ಪ್ರಸಾದ ಸಿದ್ದವಾದರೆ ಸೇರುವ ಅವಧಿ ಕಡಿಮೆಯಾಗಿಬಿಡುತ್ತದೆ. ಹಾಗಾಗಿ ಕಾನೂನು ಇದೆ. ಪ್ರಸಾದ ವಿತರಣೆಯ ಮೊದಲು ಸಂಬಂಧ ಪಟ್ಟ ಇಲಾಖೆ ಮೊದಲು ಪರೀಕ್ಷೆ ಮಾಡಬೇಕು. ದೇವರ ನೈವೇದ್ಯ ದೇವರಿಗೆ ಅರ್ಪಣೆಯಾಗುವ ಮೊದಲು ರುಚಿ ನೋಡಬಾರದು. ಆದರೆ ನಮ್ಮ ಭಾವನೆಗಳಿಗೆ ಆಚರಣೆಗಳಿಗೆ ಮೌಢ್ಯದ ಲೇಪನ ಬಳಿದು ನಂಬಿಕೆಯನ್ನು ಮೊದಲೇ ನಾಶಮಾಡುವ ಸನ್ನಿವೇಶದಲ್ಲಿ ಪ್ರಸಾದ ಎಂಜಲಾಗಿ ಅರ್ಪಿಸುವ ಅನಿವಾರ್ಯತೆಯನ್ನು ನಾವೇ ಸೃಷ್ಟಿ ಮಾಡುತ್ತಿದ್ದೇವೆ. ಒಳ್ಳೆ ಶ್ರದ್ಧೆಯಿಂದ ಪರಿಶುದ್ದವಾಗಿ ನೈವೇದ್ಯ ಸಿದ್ದ ಪಡಿಸುವವರಿಗೆ  ನಿಯಮ ಭಾವನೆಗೆ ಧಕ್ಕೆಯನ್ನು ತಂದು ಕೊಡುತ್ತದೆ. ಆದರೆ ಅದಾವುದರ ಪರಿವೆ ಇಲ್ಲದೇ ಈ ರೀತಿ ಪ್ರಸಾದ ಸಿದ್ಧಪಡಿಸುವವರು ಉಳಿದ ಭಾವನೆಗೆ ಧಕ್ಕೆ ತರುವ ಕೆಲಸವನ್ನು ಮಾಡುತ್ತಾರೆ. 

ದೇವರು ಎಂದರೆ ಅದು ಪವಿತ್ರ ಸ್ಥಾನ. ಎಲ್ಲವನ್ನೂ ನುಂಗಿ ತಾನು ಸ್ವಚ್ಛವಾಗಿರುವ ಅಗ್ನಿಯಂತೆ. ಅಗ್ನಿ ಎಲ್ಲವನ್ನೂ ಸುಡುತ್ತದೆ. ಹವಿಸನ್ನೂ ಸುಟ್ಟಂತೆ ಕಸ ಮಾಲಿನ್ಯವನ್ನೂ ಸುಟ್ಟು ಬಿಡುತ್ತದೆ, ಆ ಪಾವಿತ್ರ್ಯತೆ ನಮ್ಮ ಭಾವದಲ್ಲಿರಬೇಕು. ಜೀವನ ಎಂದರೆ ಎಲ್ಲ ದುರಿತವನ್ನೂ ಕಳೆದು ಪರಿಶುದ್ದತೆಯ ಕಡೆಗೆ ಹೋಗುವ ಯಾನ. ಅದೊಂದು ಸಂಕ್ರಮಣದ ಕಡೆಗೆ ಚಲಿಸುವ ಪ್ರಯಾಣ, ಹಾಗಾಗಿ ದೇವರಿಗೆ ಸಂಬಂಧಿಸಿದ್ದೆಲ್ಲವೂ ಪರಿಶುದ್ದವಾಗಿ ಇರಬೇಕು ಎಂದು ತಿಳಿಯುತ್ತೇವೆ. ಸ್ನಾನ ಪಾನ ಎಲ್ಲವೂ ಇದರ ಸಂಕೇತ. ದೇವರು ಎಂಬುದು ಅಪವಿತ್ರವಾದರೆ ನಮ್ಮನ್ನು ಪವಿತ್ರಗೊಳಿಸುವ ಬೇರೆ ಯಾವ ಶಕ್ತಿಯೂ ಇರುವುದಿಲ್ಲ.  ಮೈ ತೊಳೆಯುವ ಮಾರ್ಜಕವೇ ಕೊಳೆ ಹಿಡಿದು ಮಲಿನವಾದರೆ ಇನ್ನು ನಮ್ಮ ಮೈ ಸ್ವಚ್ಛವಾಗುವ ಬಗೆಯಾದರೂ ಹೇಗೆ? ಮಣ್ಣು ಹೇಗಿದ್ದರೂ ಮಣ್ಣೇ. ಮಣ್ಣಲ್ಲಿ ಮಣ್ಣಾಗಿ ಹೋಗುವ ಈ ದೇಹ ಮನಸ್ಸು ಆತನಕ ಪವಿತ್ರವಾಗಿ ಇರಬೇಕು. ಅದು ಆ ಭಗವಂತನ ಇಚ್ಚೆಗೆ ಆತ ಪ್ರಸಾದಿಸಿದ ಈ ಜನ್ಮಕ್ಕೆ ನಾವು ಸಲ್ಲಿಸುವ ಕೃತಜ್ಞತೆ.

Saturday, August 2, 2025

ಮುಖವಾಡ

 

"ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವ ಮೊದಲ ವ್ಯಕ್ತಿಗಳೆಂದರೆ ಹೆತ್ತ ಅಪ್ಪ ಅಮ್ಮ"


ಒಬ್ಬ ಗಣ್ಯ ಅಪರಾಧಿಗೆ ಶಿಕ್ಷೆಯಾದಾಗ ವಾರ್ತಾ ಮಾಧ್ಯಮಗಳು ಹಲವು ಗಣ್ಯ ವ್ಯಕ್ತಿಗಳ ಅಭಿಪ್ರಾಯ ಕೇಳುವುದು ಸಾಮಾನ್ಯವಾಗಿದೆ. ಅಭಿಪ್ರಾಯ ಏನೇ ವ್ಯಕ್ತವಾಗಲೀ ಇದರಲ್ಲೊಂದು ಅಂತರ್ಗತ ಭಾವವನ್ನು ಹುಡುಕಬಹುದು. ಒಂದಿಷ್ಟು ಗಣ್ಯವ್ಯಕ್ತಿಗಳೂ ಸಹ ಆತ್ಮಾವಲೋಕನ ಮಾಡಿಕೊಳ್ಳಬಹುದಾದ ಸೂಕ್ಷ ಅವಕಾಶ ಇದು. ನಮ್ಮ ವ್ಯವಸ್ಥೆ ಹೇಗಿದೆ ಎಂದರೆ, ಇಲ್ಲಿ ಸಿಕ್ಕಿಬಿದ್ದವನು ಮಾತ್ರಾ ಅಪರಾಧಿ. ಸಿಕ್ಕಿ ಹಾಕದ ಅಪರಾಧಿಗಳು ಮುಖವಾಡ ಹೊತ್ತು ನಮ್ಮ ನಡುವೆ ಸಂಭಾವಿತರಾಗಿಬಿಡುತ್ತಾರೆ. ಒಬ್ಬ ಕಳ್ಳ ಸಿಕ್ಕಿಬಿದ್ದಾಗ ಮತ್ತೊಬ್ಬ ಕಳ್ಳನೂ ಹಿಡಿದು ಬಡಿದಂತೆ ಮುಖವಾಡಗಳು ಬೇಕಾ ಬಿಟ್ಟಿಯಾಗಿ ಬಿಕರಿಯಾಗಿಬಿಡುತ್ತವೆ. 

ನಿನ್ನೆ ನಡೆದ ಪ್ರಕರಣ ನಿಜಕ್ಕೂ ಒಂದು ಅವಿಸ್ಮರಣೀಯ ಪ್ರಕರಣ. ಒಬ್ಬನಿಗೆ ಶಿಕ್ಷೆಯಾಯಿತು ಏನೋ ನಿಜ. ಆದರೆ ಅದು ಹಲವು ಚಿಂತನೆಗಳಿಗೆ ಅವಕಾಶ ಕೊಡುತ್ತದೆ.  ದೂರು ಕೊಟ್ಟ ಆ ಅವಿದ್ಯಾವಂತ ಹೆಣ್ಣನ್ನು ಇಲ್ಲಿ ಮೊದಲು ಅಭಿನಂದಿಸಬೇಕು. ಅಚಲವಾಗಿ ನಿಂತ ಆಕೆಯ ಎದೆಗಾರಿಕೆಯೊಂದೇ ಈ ಶಿಕ್ಷೆಯ ಪರಿಣಾಮಕ್ಕೆ ಮೂಲ ಕಾರಣ. ಆಕೆ ಅನುಭವಿಸಿದ ನೋವು ಎಂತಹುದಿರಬಹುದು? ಯಾರಾದರೊಬ್ಬರು ನಮ್ಮ ಮೈಯನ್ನು ನಮ್ಮ ಅನುಮತಿಯಿಲ್ಲದೇ  ಸ್ಪರ್ಶಿಸಿದರೆ ಹಲವು ಸಲ ನಮಗೆ ಅಸಹ್ಯವಾಗಿಬಿಡುತ್ತದೆ. ನಮ್ಮ ಮೈ ಯಾರು ಮುಟ್ಟಬೇಕೋ ಬೇಡವೋ ಅದನ್ನು ನಿರ್ಧರಿಸುವ ಸ್ವಾತಂತ್ರ್ಯ ನಮ್ಮದೇ ಆಗಿರುವಾಗ , ಒಂದು ಲೈಂಗಿಕ ದೌರ್ಜನ್ಯ ಸಹಿಸಿ ಮತ್ತದನ್ನು ಪ್ರತಿಭಟಿಸುವುದು ನಿಜಕ್ಕೂ ಆತ್ಮಾಭಿಮಾನದ ಪ್ರಶ್ನೆ.   ಆಕೆಯ ನೋವು ಅವಮಾನ  ಇವುಗಳಿಗೆಲ್ಲ ಈ ಶಿಕ್ಷೆ ತೃಪ್ತಿಯನ್ನಂತೂ ಕೊಡುವುದಕ್ಕೆ ಸಾಧ್ಯವಿಲ್ಲ. ಕೇವಲ ಸಾಂತ್ವನ ಮಾತ್ರ. ಯಾಕೆಂದರೆ ಬದುಕು ಎಂಬುದೇ ಹಾಗೆ. ಅದು ಮುರುಟಿ ಹೋದರೆ ಯಾವ ಧೈರ್ಯ ಸ್ಥಿತ ಪ್ರಜ್ಞತೆ ಇದ್ದರೂ ಸಂತುಲನೆಗೆ ತರುವುದಕ್ಕೆ ಸಾಧ್ಯವಾಗುವುದಿಲ್ಲ.  ಕಳೆಯಿತೋ ಹೋಯಿತು ಎನ್ನುವ ಹಾಗೆ ಇರುತ್ತದೆ.  ಆದರೆ ಎನೂ ಆಗಲಿಲ್ಲ ಬದುಕು ಅಷ್ಟೇ ಅಲ್ಲ ಎಂಬುದನ್ನು ಪರಿಸರ ತೋರಿಸಿಕೊಡುವ ಅನಿವಾರ್ಯತೆ ಇದೆ. 

  ಹುಲಿ ಹಸಿವಿನಿಂದ ಒಂದು ಜಿಂಕೆಯ ಮೇಲೆ ಬಿದ್ದಾಗ ಹುಲಿಯ ಹಸಿವಿನ ಬಗ್ಗೆ ಅನುಕಂಪ ಮೂಡುವುದಿಲ್ಲ. ಆದರೆ ಜಿಂಕೆಯ ಅಸಹಾಯಕತೆಯಬಗ್ಗೆ ಮನಸ್ಸು ಮರುಗುತ್ತದೆ. ಆದರೆ ಮನುಷ್ಯನ ಈ ವಿಕೃತಿಯ ಹುಲಿಯಂತೆ  ಹಸಿವು ಕಾರಣವಲ್ಲ. ವಿಪರ್ಯಾಸವೆಂದರೆ ಶಿಕ್ಷೆ ಏನೋ ಸಿಕ್ಕಿತು. ನ್ಯಾಯಾಂಗ ಬಲಿಷ್ಠವಾಗಿ ಜಯವನ್ನು ಗಳಿಸಿತೇನೋ ಸತ್ಯ. ಆದರೆ ಇದೇ ನ್ಯಾಯ ಪರ್ಯಾಪ್ತವಲ್ಲ. ಸಿಕ್ಕಿಹಾಕಿಕೊಳ್ಳದ ಇದಕ್ಕಿಂತಲೂ ಕ್ರೂರವಾದ ಅಪರಾಧಿಗಳು ಏಷ್ಟೋ ಇದ್ದಾರೆ. ಇವುಗಳು ಪಾಠ ಅಂತ ನಾವು ತಿಳಿದುಕೊಂಡರೂ ಈ ಪಾಠ ಯಾರು ಕಲಿಯುತ್ತಾರೋ ಎಂಬುದು ಅಷ್ಟೇ ವಿಡಂಬನೆಯಾಗಿಬಿಡುತ್ತದೆ. ಆ ಹೆಣ್ಣು ಧೈರ್ಯದಿಂದ ದೂರು ಕೊಟ್ಟ ಕಾರಣ ಶಿಕ್ಷೆಯ ತನಕ ಪ್ರಕರಣ ಬಂದು ಅಂತ್ಯ ಕಂಡಿತು. ಇಲ್ಲವಾದರೆ? ಹಾಗಾಗಿ ದೂರು ಕೊಡುವ ಅವಕಾಶ ಹಕ್ಕು ಇದ್ದರೂ ಅದನ್ನು ಉಪಯೋಗಿಸುವ ಅರ್ಹತೆ ಮಾತ್ರ ಲಭ್ಯವಾಗುವುದು ಅಪರೂಪ. ನಮ್ಮ ವ್ಯವಸ್ಥೆ ಹಾಗಿದೆ. ಸಿಕ್ಕಿದ ಜಯ, ಸಾಬೀತಾದ ಅಪರಾಧವೂ ಹಲವು ಸಲ ದೌರ್ಜನ್ಯಕ್ಕೆ ಒಳಗಾದವರ ಮುಂದಿನ ಬದುಕನ್ನು ಕಮರಿಸಿಬಿಡುತ್ತದೆ. ಸುತ್ತ ಮುತ್ತಲಿನ ಬಂಧು ಬಳಗವೂ ದೂರವಾಗುವ ಸಂಭವ ಇರುತ್ತದೆ. ಯಾಕೆಂದರೆ ಈ ಮರ್ಯಾದೆ ಎಂಬ ಪ್ರಶ್ನೆಯೇ ಹಾಗೆ , ಆದ ಘಟನೆ ಹತ್ತು ಜನರಿಗೆ ತಿಳಿಯದೇ ಇರಲಿ ಎಂಬ ಆತಂಕದಲ್ಲೇ ಮರೆಯಾಗಿಬಿಡುತ್ತದೆ. 

ಅಪರಾಧಿಗೆ ಶಿಕ್ಷೆಯಾಯಿತು. ಒಂದು ಹೆಣ್ಣು ದೌರ್ಜನ್ಯಕ್ಕೆ ಒಳಗಾದರೂ ಅಪರಾಧಿಯ ಪರ ವಾದಿಸಿದ್ದು ಒಂದು ಸುಶಿಕ್ಷಿತ ಹೆಣ್ಣೇ ಎಂದು ತಿಳಿಯುವಾಗ ವಿಚಿತ್ರ ಎನಿಸುತ್ತದೆ. ಇದೇ ದೌರ್ಜನ್ಯ ವಾದಿಸುವವರಿಗೆ ಅಥವ ಅವರ ಸಂಭಂಧಿಕರಿಗೆ ನಡೆದಲ್ಲಿ ಅವರ ಈ ವಾದ ಯಾವ ರೂಪವನ್ನು ಪಡೆಯಬಹುದು. ವಾದ ಗೆಲ್ಲುವುದಕ್ಕೆ ಒದಗಿಸುವ ಸಮರ್ಥನೆ ನೋಡುವಾಗ ಅಯ್ಯೋ ಮನುಷ್ಯ ಯಾವ ವೇಷವನ್ನು ಹಾಕಬಲ್ಲ ಎಂದನಿಸುತ್ತದೆ. ಪ್ರಾಣಿಗಳೂ ಅದೂ ಗೋಸುಂಬೆಯಾದರೂ ರೂಪ ಬದಲಿಸುವುದಿಲ್ಲ. ಆದರೆ ಮನುಷ್ಯ ಮಾತ್ರ ತನ್ನ ರೂಪವನ್ನು ಬದಲಿಸುತ್ತಾ ಇರುತ್ತಾನೆ.  ಯಾರಿಗೋ ಒಬ್ಬರಿಗೆ ಶಿಕ್ಷೆಯಾಗುವಾಗ ಆಗುವ ಸಂತೋಷ, ಶಿಕ್ಷೆಯಿಂದ ತಪ್ಪಿಸ್ಕೊಳ್ಳುವ ಮುಖವಾಡ ಧಾರಿಗಳನ್ನು ನೋಡುವಾಗ ಆ ಸಂತೋಷ ಉಳಿಯುವುದಿಲ್ಲ. ನ್ಯಾಯ ಜಯ ಸಾಧಿಸಿದೆ ಎಂದನಿಸುವುದಿಲ್ಲ.  ಶಿಕ್ಷೆ ಪ್ರಾಯಶ್ಚಿತ್ತ ಅಂತ ತಿಳಿಯುವವರಿದ್ದಾರೆ. ಆದರೆ ಈ  ಅಪರಾಧಿಯ ಮುಖವನ್ನು ನೋಡುವಾಗ ಹಾಗೆ ಅನಿಸುವುದೇ ಇಲ್ಲ. ಸಭ್ಯನಂತೆ ಮುಖವಾಡ ಧರಿಸುವಾಗ ಇವರಿಗೆ ಯಾವ ಶಿಕ್ಷೆ ಸಿಕ್ಕಿದರೂ ಇವರು ಬದಲಾಗುವುದಿಲ್ಲ ಎಂದನಿಸುತ್ತದೆ. 

ಒಬ್ಬ ಅಪರಾಧಿ ಹೇಗೆ ಹುಟ್ಟಿಕೊಳ್ಳುತ್ತಾನೋ ಎಂಬುದು ವಿಚಿತ್ರ ಸಂಗತಿ. ಯಾವ ತಾಯಿಯೂ ತಾನು ಅಪರಾಧಿಗೆ ಜನ್ಮ ಕೊಡಬೇಕು ಎಂದು ಬಯಸುವುದಿಲ್ಲ. ಅದು ಮಹಿಷಾಸುರನ ತಾಯಿಯಂಥವರಿಂದ ಮಾತ್ರ ಸಾಧ್ಯ. ಆದರೂ ಹುಟ್ಟಿದ ನಂತರ ಅಪರಾಧಿಗಳಾಗುತ್ತಾರೆ. ತಂದೆ ತಾಯಿ ಕಾರಣವೋ ಪರಿಸರ ಕಾರಣವೋ ಅಂತು ಅಪರಾಧ ಉಳಿದವರ ಬದುಕನ್ನು ನಾಶಮಾಡಿಬಿಡುತ್ತದೆ. ಉಳಿದವರ ಬದುಕು ಮಾತ್ರವಲ್ಲ...ಒಬ್ಬ ಅಪಾರಾಧಿ ಸೆರೆ ಮನೆಯತ್ತ ಮುಖ ಮಾಡಿದಾಗ ಅನಿಸುವುದು ಛೇ ಹೆತ್ತ ಅಪ್ಪ ಅಮ್ಮನಿಗೆ ಹೇಗೆ ಅನಿಸಬಹುದು ಅಂತ ಯೋಚನೆ ಬಂದು ಬಿಡುತ್ತದೆ. ಯಾಕೆಂದರೆ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವ ಮೊದಲ ವ್ಯಕ್ತಿಗಳೆಂದರೆ ಹೆತ್ತ ಅಪ್ಪ ಅಮ್ಮ. ಇದೇ ಕಾರಣಕ್ಕೆ ಹಲವು ಸಲ ಈ ತಪ್ಪನ್ನು ಮುಚ್ಚಿಡುವುದಕ್ಕೆ ಹೆತ್ತಕರುಳು ಯತ್ನ ಮಾಡುತ್ತದೆ. ಆದರೆ ಒಂದು ಕರುಳಿನ ನೋವು ಮತ್ತೊಂದು ಕರುಳಿನ ನೋವನ್ನು ಅರಿಯುವುದೇ ಇಲ್ಲ. 


Tuesday, July 22, 2025

ತೆರಿಗೆ

        ಮೊನ್ನೆ ಟಿವಿ ಚರ್ಚೆಯಲ್ಲಿ ಯಾರೋ ಒಬ್ಬರು ಹೇಳಿದ ನೆನಪು  " ಯಾವುದೇ ಸರಕಾರ ಇದ್ದರೂ ಯು ಪಿ ಐ ಪಾವತಿ ವಿಧಾನ ಬರುತ್ತಿತ್ತು. ಬದಲಾವಣೆ ಅಭಿವೃದ್ದಿ ಜಗದ ನಿಯಮ. ಇದಕ್ಕೆ ಯಾರೂ ಕಾರಣರಲ್ಲ. ಮೋದಿ ಕಡಿದು ಗುಡ್ಡೆ ಹಾಕಿದ್ದು ಏನೂ ಇಲ್ಲ." ಆಗ ಸರಿ ಅಂತ ತೋಚಿರಬಹುದು. ಹೌದಲ್ವ...ಎಷ್ಟೋ ಬದಲಾಗಿದೆ, ಹಾಗೇ ಇದು..ಆದರೆ ಇವತ್ತು ಅದೇ ಯುಪಿಐ ಬಗ್ಗೆ...ಅದನ್ನು ಬಳಕೆ ತಂದದ್ದೇ ಮೋದಿ. ಅದರಿಂದಲೇ ಹೀಗೆಲ್ಲ ಆಯಿತು ಅಂತ.  ಇದರಲ್ಲಿ ವಿಶೇಷವೇನೂ ಇಲ್ಲ.ಯಾವುದೇ ಆದರೂ ನಮಗೆ ಅನುಕೂಲವಾದರೆ ಅದರೆ ಪ್ರಯೋಜನ ಪಡೆಯುತ್ತೇವೆ. ಸಮಸ್ಯೆ ಎದುರಾದಾಗ ಎಲ್ಲ ತಪ್ಪುಗಳನ್ನು ಅದರ ಮೇಲೆ ಹಾಕಿಬಿಡುತ್ತೇವೆ. ಯಾವುದನ್ನೇ ಆದರೂ ಉಪಯೋಗಿಸುವಾಗ ವಿವೇಚನೆ ಎಂಬುದು ಅತೀ ಮುಖ್ಯ. ನಮ್ಮ ನಿರ್ಧಾರಗಳು ನಮ್ಮ ನಡೆಗಳು ವಿವೇಚನ ರಹಿತವಾದರೆ ನಮ್ಮ ತಪ್ಪುಗಳು ಗೋಚರಿಸುವ ಬದಲು ಮತ್ತೊಬ್ಬರು ಅಪರಾಧಿಗಳಾಗಿಬಿಡುತ್ತಾರೆ. 


ಮೊದಲಿನಿಂದಲೂ ನಮಗೆ ತೆರಿಗೆ ಕಟ್ಟುವುದೆಂದರೆ ಅದು ನಷ್ಟದ ಬಾಬ್ತು. ನನ್ನ ವೃತ್ತಿಯಲ್ಲಿ ಈಗ ಬಹುಪಾಲು ಜನರು ತೆರಿಗೆ ಕಟ್ಟುವ ಅರಿವಿನಿಂದ  ಕಾಳಜಿಯಿಂದ ಬರುವುದಿಲ್ಲ. ತೆರಿಗೆ ಎಂಬ ಭೂತವನ್ನು ಹೇಗೆ ಕಟ್ಟಿಹಾಕಬಹುದು ಎಂಬ ಯೋಚನೆಯಲ್ಲೇ ಬರುತ್ತಾರೆ. ನಾವು ಓಡಾಡುವ ರಸ್ತೆ, ವಿದ್ಯುತ್ ನೀರಾವರಿ ಇವುಗಳೆಲ್ಲ ಕೇವಲ ಉಚಿತವಾಗಿ ಪ್ರಕೃತಿಯಿಂದ ಸಿಗುವುದು ಅಂತ ತಿಳಿಯುತ್ತೇವೆ. ಹೆಚ್ಚೇಕೆ...ಸರಕಾರ ಕೊಡುವ ಉಚಿತ ಯೋಜನೆಗಳು ನಾವು ಕಟ್ಟಿದ ತೆರಿಗೆಯಿಂದಲೇ ಬರುತ್ತದೆ ಎಂಬುದನ್ನೂ ಮರೆತು ಬಿಡುತ್ತೇವೆ. ಹಾಲು ಎಲ್ಲಿಂದಲೂ ಬರಲಿ ಹಸುವಿನ ಪರಿವೆ ನಮಗೇಕೆ? 

ಮಾರಾಟ ತೆರಿಗೆ ಅದೇನು ಈಗ ಹೊಸತಲ್ಲ. ಆದರೆ ಈಗ ಅದರೆ ಹರಿತ ಅನುಭವಕ್ಕೆ ಬರುತ್ತದೆ. ಯಾರೋ ಇದ್ದವರು ತೆರಿಗೆ ಕಟ್ಟುತ್ತಾರೆ ಎಂಬ ಅನಾಸಕ್ತಿ ಇದುವರೆಗೆ ಇತ್ತು. ಈಗ ಏಲ್ಲೋ ಬಂದ ಕೊರೋನ ನಮ್ಮ ಮನೆಬಾಗಿಲಿಗೆ ಬಂದಹಾಗೆ ಹೌಹಾರಿ ಬಿಡುತ್ತಾರೆ. ಕೊನೆ ಪಕ್ಷ ನಾವು ತೆರಿಗೆ ಕಟ್ಟುವ ನಮ್ಮಿಂದಲೂ ಸರಕಾರ ತೆರಿಗೆ ಕೇಳುತ್ತದೆ ಎಂಬ ಸ್ಥಿತಿಗೆ ನಾವು ಬಂದೆವಲ್ಲಾ ಎಂದು ತಿಳಿದುಕೊಳ್ಳುವ ಅದರಿಂದ ಒದಗಿದ ಘನತೆಯ ಬಗ್ಗೆ ಯೋಚಿಸುವುದಿಲ್ಲ. ನಮ್ಮ ಘನಗೆಗೆ ವಿನಾಕಾರಣ ಖರ್ಚುಮಾಡುವ ನಮಗೆ ತೆರಿಗೆ ಮಾತ್ರ ನಷ್ಟದ ಬಾಬತ್ತಾಗಿ ಕಾಣುತ್ತದೆ. 

ಮಾರಾಟ ತೆರಿಗೆ ಒಂದು ಇಪ್ಪತ್ತು ವರ್ಷದ ಹಿಂದಕ್ಕೆ ಹೋಗಿ ನೋಡಿದರೆ ಆಗಲೂ ಇತ್ತು , ಎಳು ಲಕ್ಷ ವ್ಯಾಪಾರವಹಿಟು ಮಾಡಿದರೆ ಮಾರಾಟ  ತೆರಿಗೆಯ ವ್ಯಾಪ್ತಿಯಲ್ಲಿ ಖಡ್ಡಾಯ ನೊಂದನಿ ಮಡಿಸಿ ಸರಕಾರಕ್ಕೆ ತೆರಿಗೆ ಪಾವತಿಸಬೇಕು ಈಗ ಅದೇ ಪರಿಮಿತಿ 40  ಲಕ್ಷ ತಲುಪಿದೆ. 

ನಾಣ್ಯ ರಾಶಿಹಾಕಿ ಕೈಗೆ ಸಿಕ್ಕಿದ ಹಣವನ್ನು ಬಾಚಿಕೊಳ್ಳಿ ಎಂದರೆ ನಾವು ನಮ್ಮ ಹತ್ತೂ ಬೆರಳುಗಳನ್ನು ಎಷ್ಟು ಸಾಧ್ಯವೋ ಅಷ್ಟು ನಾಣ್ಯವನ್ನು ವಶಪಡಿಸಿಕೊಳ್ಳುತ್ತೇವೆ. ಕೈಬೆರಳ ಸಂಧಿಯಿಂದಿ ನಾಣ್ಯ ಹೊರಬರದಂತೆ ಪ್ರಯತ್ನ ಮಾಡುತ್ತೇವೆ. ತೆರಿಗೆ ಸಂಗ್ರಹ ಎಂದರೆ ಹೆಚ್ಚು ಕಮ್ಮಿ ಇದೇ ವಿಧಾನವನ್ನು ಹೋಲುತ್ತದೆ. ಸರಕಾರ ತನ್ನ ಬೆರಳುಗಳನ್ನು ಅರಳಿಸಿ ಎಷ್ಟು ಅಷ್ಟು ತೆರಿಗೆ ಸಂಗ್ರಹಿಸುವುದಕ್ಕೆ ನೋಡುತ್ತದೆ. ಅದನ್ನು ತಪ್ಪು ಎನ್ನುವುದಕ್ಕೆ ಸಾಧ್ಯವೆ? ಅದು ಸಂವಿಧಾನದ ಗೌರವ ಇದ್ದವರಿಗೆ ಇಂತಹ ಮಾತುಗಳು ಬರುವುದಿಲ್ಲ. ತೆರಿಗೆ ಎಂಬುದು ಸುಮ್ಮನೇ ಬರುವುದಿಲ್ಲ. ಅದರೆ ಹಿಂದೆ ಹಲವರ ಪರಿಶ್ರಮ ಇರುತ್ತದೆ. ಅದು ಸಂವಿಧಾನಕ್ಕೆ ಅನುಗುಣವಾಗಿ ಇರುತ್ತದೆ. ಕೇಂದ್ರ ಅಥವಾ ರಾಜ್ಯ ಸರಕಾರವನ್ನು ದೂರುವಾಗ ಈ ಸಂವಿಧಾನವನ್ನು ತಿಳಿದಿರಬೇಕು. 

ಈ ವರ್ಷ ಆದಾಯ ತೆರಿಗೆ ಮಿತಿ ಹನ್ನೆರಡು ಲಕ್ಷ ಇದೆ. ಹಾಗಂತ ನಾವು ಮಿತಿ ಮೀರಿ ಆದಾಯ ತೋರಿಸಿದರೆ ಈವರೆಗೆ ನಾವು ಏನು ಮಾಡುತ್ತಿದ್ದೀರಿ ಅಂತ ಸರಕಾರ ಕೇಳುವುದಿಲ್ಲ ಎಂದು ಏನು  ಭರವಸೆ ಇದೆ. ಇಲ್ಲಿ ವಿವೇಚನೆ ಅತೀ ಮುಖ್ಯ. ತೆರಿಗೆ ಕಟ್ಟುವುದಕ್ಕೆ ಹಿಂಜರಿಯುವಾಗ ನಲ್ವತ್ತು ಲಕ್ಷ ಕೇವಲ ಸಣ್ಣ ಮೊತ್ತ ಎಂದಾಗುವುದಿಲ್ಲ. ಆಷ್ಟು ಸಂಪಾದಿಸುವವನು ತೆರೆಯ ಮರೆಗೆ ಹೇಗೆ ಸರಿದು ಹೋಗಬಲ್ಲ. ತೆರಿಗೆ ಕಟ್ಟುವುದನ್ನು ಕಟ್ಟಲೇ ಬೇಕು. ಅದನ್ನೆಂದೂ ಕಳಚಿ ಹಾಕುವುದಕ್ಕೆ ಸಾಧ್ಯವಿಲ್ಲ. ಆದರೆ ಒಂದು ಇಷ್ಟು ಕಷ್ಟ ಪಟ್ಟು ತೆರಿಗೆ ಕಟ್ಟುವಾಗ, ಅದೇ ತೆರಿಗೆ ಹಣವನ್ನು ಯಾವುದೇ ನಾಚಿಕೆ ಮರ್ಯಾದೆ ಇಲ್ಲದೆ ದುಂದು ವೆಚ್ಚ ಮಾಡುವ ಮಂತ್ರಿ ಹಾಸಕರನ್ನು ಕಾಣಬಹುದು. ಈ ತೆರಿಗೆ ಹಣ ಜನಸಾಮಾನ್ಯರನ್ನು ಹಿಂಡಿ ಬಂದ ಹಣ ಎಂಬ ಸಾಮಾನ್ಯ ಪ್ರಜ್ಞೆಯನ್ನಾದರೂ ಈ ಸರಕಾರದ ಅಂಗಗಳು ಅರಿಯಬೇಕಿದೆ.