ಮೊನ್ನೆ ಒಬ್ಬರು ವ್ಯಕ್ತಿ ನನ್ನ ಬಳಿಗೆ ಬಂದಿದ್ದರು. ಅವರಿಗೆ ಮಾಂಸಾಹಾರಿ ಹೋಟೇಲ್ ಇದೆ. ಯಾವುದೋ ಜಿ ಎಸ್ ಟಿ ಕೆಲಸಕ್ಕೆ ಬಂದಿದ್ದರು. ಅವರು ಹೇಳಿದ ಒಂದು ಮಾತು ನನಗೆ ಬಹಳ ಚಿಂತಿಸುವಂತೆ ಮಾಡಿತು. ಅವರು ಹೇಳಿದರು. ನಮಗೆ ಭಾಷೆ ಧರ್ಮ ಎಲ್ಲವೂ ಮುಖ್ಯವಾಗುತ್ತದೆ. ಆದರೆ ನಮ್ಮ ಜೀವನ ಮುಖ್ಯವಾಗುವುದಿಲ್ಲ. ಹಿಂದಿಯವರು ಅಥವಾ ಉತ್ತರ ಭಾರತದವರು ಅಂತ ಇಲ್ಲಿ ಹೀನಾಯವಾಗಿ ಕಾಣುತ್ತಾರೆ. ಭಾಷೆ ಬರುವುದಿಲ್ಲ. ಅಥವಾ ಕನ್ನಡ ಮಾತನಾಡುವುದಿಲ್ಲ ಎಂದು ಹಳಿಯುತ್ತಾರೆ. ಆದರೆ ಬೆಂಗಳೂರಿನ ಅಷ್ಟೂ ಹೋಟೆಲ್ ಉಸಿರುರಾಡುತ್ತಿರುವುದು ಇವರಿಂದಾಗಿ. ಬೇರೆ ರಾಜ್ಯದಿಂದ ಉದ್ಯೋಗ ಅಥವಾ ವಿದ್ಯೆಗಾಗಿ ಇಲ್ಲಿ ಬಂದು ಪಿಜಿ ಬಾಡಿಗೆ ಮನೆ ಮಾಡಿ ನೆಲಸುತ್ತಾರೆ. ಅವರಿಗೆ ಈ ಹೋಟೆಲ್ ಗಳೇ ಆಹಾರಕ್ಕೆ ಆಧಾರ. ಅವರ ವ್ಯಾಪಾರವೇ ನಮಗೆ ಮುಖ್ಯವಾಗುತ್ತದೆ. ಇಲ್ಲಿನವರೂ ಹೋಟೆಲಿಗೆ ಬರುತ್ತಿದ್ದರೂ...ಉತ್ತರ ಅನ್ಯ ರಾಜ್ಯದವರ ವ್ಯಾಪಾರ ಬಹಳ ಮುಖ್ಯವಾಗುತ್ತದೆ. ಅದು ಬೆಂಗಳೂರಾದರೂ ಅಷ್ಟೆ ಮಂಗಳೂರಾದರೂ ಅಷ್ಟೇ.
ಆ ವ್ಯಕ್ತಿ ಹೇಳಿದ್ದರಲ್ಲಿ ಬಹಳಷ್ಟು ನಿಜಾಂಶ ಅಂತ ತೋರಿತು. ಹೌದು, ಬೆಂಗಳೂರಲ್ಲಿ ಪಿಜಿಯಲ್ಲೋ ಬಾಡಿಗೆ ಮನೆಯಲ್ಲಿ ಕುಳಿತು ಸ್ವಂತ ಅಡುಗೆ ಮಾಡಲಾಗದವರಿಗೆ ಅಥವಾ ಇನ್ನಿತರ ಕಾರಣಗಳಿಗೆ ಅವರಿಗೆ ಹೋಟೇಲ್ ಗಳೇ ಆಶ್ರಯ. ಇದನ್ನು ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ. ಮಂಗಳೂರಿನಂತಹ ನಗರದಲ್ಲೂ ಅಷ್ಟೇ ಅನ್ಯ ರಾಜ್ಯದವರ ವ್ಯವಹಾರ ಸಾಕಷ್ಟು ಇದೆ. ಹಾಗಾಗಿ ಆತ ಹೇಳಿದ್ದು ನಮಗೆ ಭಾಷೆ ಮುಖ್ಯವಾಗುತ್ತದೆ ಜೀವನ ಮುಖ್ಯವಾಗುವುದಿಲ್ಲ. ವಾಸ್ತವದಲ್ಲಿ ಊರಿನ ಭಾಷೆ ಸಂಸ್ಕೃತಿ ನಿಜವಾಗಿಯೂ ಮುಖ್ಯವಾಗುತ್ತದೆ. ಅದರ ಜತೆ ಧರ್ಮವೂ ಮುಖ್ಯವಾಗುತ್ತದೆ. ಆದರೆ ಜೀವನ ಎಂಬುದು ವಾಸ್ತವದ ಸತ್ಯಕ್ಕೆ ಸಾಕ್ಷಿಯಾಗಿ ಹಾಗೇ ಉಳಿಯುತ್ತದೆ. ಧರ್ಮ ಭಾಷೆಯನ್ನು ದ್ವೇಷಿಸಬೇಕು ಎಂದೇನಲ್ಲ, ಆದರೆ ಇವೆರಡನ್ನು ಗೌರವಿಸಿ ಹೊಂದಿಕೊಳ್ಳುವ ಜೀವನ ಗೋಚರಿಸುವುದಿಲ್ಲ.
ಈಗ ಭಾಷೆ ಧರ್ಮವನ್ನು ಹೇಳಿಕೊಂಡು ಆಗುವ ಗಲಭೆಗಳು ಸಮರಗಳು ನೋಡುವಾಗ ಮುಂದೆ ಜೀವನ ದುರ್ಭರವಾಗುವುದರಲ್ಲಿ ಯಾವ ಸಂದೇಹವೂ ಉಳಿದಿಲ್ಲ. ಹೊಟ್ಟೆಯ ಹಸಿವನ್ನೂ ಮರೆತು ಇದು ಮುಖ್ಯವಾಗುತ್ತದೆ. ಹಸಿವು ಹೋಗಲಿ ಹಲವು ನಂಬುವ ಭಗವಂತನೂ ಮರೆತು ಹೋಗಿಬಿಡುತ್ತಾನೆ. ಎರುತ್ತಿರು ಡಾಲರ್ ಬೆಲೆಯ ಬಗ್ಗೆ ಹೇಳುತ್ತೇವೆ. ಜಿಡಿಪಿಯ ಕುರಿತು ಚರ್ಚಿಸುತ್ತೇವೆ. ಏರುವ ಜೀವನಾವಶ್ಯಕ ವಸ್ತುಗಳ ಬೆಲೆಯನ್ನು ಹೇಳುತ್ತೇವೆ. ಆದರೆ ಆದರೆ ಭಾಷೆ ಧರ್ಮಗಳ ಬಗ್ಗೆ ಹೋರಾಡುವಾಗ ಇವೆರಡೂ ಜ್ಞಾಪಕಕ್ಕೆ ಬರುವುದಿಲ್ಲ. ಇದು ವಾಸ್ತವ. ಧರ್ಮಕ್ಕಾಗಿ ಜೀವ ಕೊಡುತ್ತೇವೆ ಎಂದು ಹೇಳಬಹುದು. ಪ್ರಾಣಕ್ಕಿಂತ ಭಾಷೆಯೇ ಪ್ರಧಾನ ಹೇಳಬಹುದು. ಆದರೆ ಯೋಚಿಸಿ ಪ್ರಾಣ ಎಂಬುದು ಇಲ್ಲದಿದ್ದರೆ ಇವೆರಡೂ ಅನುಭವಕ್ಕೆ ಬರುವುದಿಲ್ಲ. ಮರಣಾನಂತರ ಏನು ಎಂಬುದು ಎಂದು ಉತ್ತರ ಇಲ್ಲದೇ ಇರುವಾಗ ತಿಳಿದಿರುವ ಈ ಸಾವಿನ ಮೊದಲಿನ ಜೀವನದ ಮೌಲ್ಯ ತಿಳಿದುಕೊಳ್ಳಬೇಕು. ಭಾಷೆ ಧರ್ಮ ಈ ಎರಡರ ವೆತ್ಯಾಸಗಳನ್ನು ಬ್ರೀಟೀಷರು ತೋರಿಸಿಕೊಟ್ಟು ಅದನ್ನೇ ಕೊನೆಯ ತನಕ ಜೀವಂತ ವಿರಿಸಿ ನಮ್ಮನ್ನು ಆಳಿದರು. ಬ್ರೀಟೀಷರು ಹೋದರು....ಆದರೆ ಈ ವಿಷಬೀಜ ಇಲ್ಲೇ ಬಿಟ್ಟು ಹೋದರು. ಹಸಿವಿನ ಹೋರಾಟಕ್ಕಿಂತಲೂ ಭಾಷೆ ಧರ್ಮ ರಾಜಕೀಯದ ಹೋರಾಟವೇ ಅಧಿಕವಾಗುತ್ತದೆ. ಅದುವೇ ಜೀವನವಾಗಿ ಮುಖ್ಯವಾದ ಜೀವನವೇ ಮರೆತು ಹೋಗಿದೆ.
ಈ ಚಿಂತನೆಗಳಲ್ಲಿ ಸರಿ ಎಂದು ಹೇಳದ ವಿಚಾರಗಳು ಬಹಳಷ್ಟು ಇರಬಹುದು. ಆದರೆ ಇರುವ ವಿಚಾರಗಳು ಮಾತ್ರ ಗಂಭೀರವಾಗಿ ಚಿಂತಿಸುವಂತೆ ಮಾಡುತ್ತದೆ
No comments:
Post a Comment