ಮತ್ತೊಮ್ಮೆ ಅನ್ನಿಸುತ್ತಿದೆ ಬಾಲಕನಾಗಲೇ....
ಬತ್ತಿ ಹೋಗದ ಆ ಕನಸುಗಳು
ಚಿಗುರೊಡೆಯುತ್ತಿರುವ ಆ ನೂರಾರು ಆಶೆಗಳು
ಬಾಲಕನಾಗಲು ಹವಣಿಸುತ್ತಿರುವ ಈ ದಿನಗಳು....
ಮತ್ತೊಮ್ಮೆ ಬಾಲ್ಯವನ್ನು ನೆನಪಿಸುತ್ತಿದೆ.
ಒಸರು ಕೆಸರೆನ್ನದೇ ನೀರಾಟದ ದಿನಗಳು,
ಬಿಸಿಲು ಮಳೆ ಎನ್ನದೆ ಅಲೆದ ಬೀದಿ ಗುಡ್ಡಗಳು
ನಾಳೆ ಎಂಬ ಸುಂದರ ದಿನಗಳ ನಿರೀಕ್ಷೆ
ಬದುಕಿನ ಪ್ರತಿಹಂತದ ಪರೀಕ್ಷೆ
ಮತ್ತೊಮ್ಮೆ ಅನ್ನಿಸುತ್ತಿದೆ ಬಾಲಕನಾಗಲೇ
ಬಾಲ್ಯದ ಕನಸು ಕಾಣುವುದದೆಷ್ಟು ಸುಲಭ
ನನಸಾಗದ ಭಯವಿಲ್ಲ ನಿರಾಶೆಯ ಮಡುವಿಲ್ಲ
ಇಂದಲ್ಲ ನಾಳೆ ಎಂಬ ನಿರೀಕ್ಷೆಯ ಭರವಸೆಗಳು
ಮತ್ತೊಮ್ಮೆ ಅನಿಸುತ್ತಿದೆ ಬಾಲಕನಾಗಲೇ
ತನ್ನ ಓಟದಲ್ಲಿ ಕಾಣುವ ವಾಹನಗಳ ಓಟ
ಆಟಿಕೆಯ ಲೋಕದ ಕಲ್ಪನೆಯ ಆಟ
ಮರೆತು ಹೋಗದು ಬಾಲ್ಯದಲಿ ಕಲಿತ ಪಾಠ
ಮತ್ತೊಮ್ಮೆ ಅನಿಸುತ್ತಿದೆ ಬಾಲಕನಾಗಲೇ
No comments:
Post a Comment