ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಇರಬೇಕು. ಇರಾಕ್ ಯುದ್ಧ ನಡೆದಿತ್ತು. ಇದು ಒಂದು ತಿಂಗಳಿಗಿಂತ ಹೆಚ್ಚು ನಡೆದ ಯುದ್ದ. ಆ ದಿನದ ಒಂದು ಅನುಭವ ಈಗಲೂ ನೆನಪಿದೆ. ನಾವು ಕಾಸರಗೋಡು ಜಿಲ್ಲೆಯ ಪೈವಳಿಕೆಯಲ್ಲಿದ್ದ ಸಮಯ. ನಾನು ದೂರದ ಮಂಗಳೂರಿಗೆ ಹೋಗಬೇಕೆಂದಿದ್ದರೆ ನನ್ನ ಸ್ಕೂಟರ್ ನ್ನು ರಾಷ್ಟ್ರಿಯ ಹೆದ್ದಾರಿಯ ಉಪ್ಪಳದಲ್ಲಿ ಇಟ್ಟು ಅಲ್ಲಿಂದ ಬಸ್ಸಿನಲ್ಲಿ ಹೋಗುತ್ತಿದ್ದೆವು. ಉಪ್ಪಳದಿಂದ ಪೈವಳಿಕೆಗೆ ರಾತ್ರಿ ದಿನದ ಕೊನೆಯ ಬಸ್ಸು ಜನಪ್ರಿಯ ಒಂಭತ್ತು ಗಂಟೆಗೆ ಹೋದರೆ ಆನಂತರ ಪೈವಳಿಕೆಯ ಕಡೆಗೆ ಹೋಗಬೇಕೆಂದರೆ ಬಸ್ಸು ಇರುತ್ತಿರಲಿಲ್ಲ. ಒಂದೋ ಆಟೋ ಅದೂ ರಾತ್ರಿ ಬಂದರೆ ಅದೂ ದುಬಾರಿ ವೆಚ್ಚ. ಅದಲ್ಲದೇ ಇದ್ದರೆ ಹತ್ತು ಕಿಲೋ ಮೀಟರ್ ನಡೆದೇ ಹೋಗಬೇಕು. ಸುಮಾರು ಎರಡು ಘಂಟೆ ಅದೂ ತಡ ರಾತ್ರಿ ಯಾವುದೇ ಟಾರ್ಚ್ ಬೆಳಕು ಇಲ್ಲದೇ ನಡೆದು ಹೋಗಬೇಕಿತ್ತು. ಹೀಗಾಗಿ ಉಪ್ಪಳದಲ್ಲಿ ಕೆಲವರು ದ್ವಿಚಕ್ರವಾಹನ ಇಟ್ಟು ಮಂಗಳೂರಿಗೆ ಹೋಗುತ್ತಿದ್ದರು. ತಡ ರಾತ್ರಿಯ ತನಕವೂ ಉಪ್ಪಳದ ತನಕ ಬಸ್ಸು ಇರುತ್ತಿದ್ದುದರಿಂದ ನಿಶ್ಚಿಂತೆಯಿಂದ ಹೋಗಿ ಬರಬಹುದಿತ್ತು.
ಆ ಕಾಲದಲ್ಲಿ ವಾಹನಕ್ಕೆ ಇಂಧನ ತುಂಬಿಸಬೇಕಾದರೆ ಈಗಿನಂತೆ ಪೆಟ್ರೋಲ್ ಬಂಕ್ ಇರಲಿಲ್ಲ. ದೂರದ ಕರ್ನಾಟಕ ಗಡಿ ಪ್ರದೇಶದ ತಲಪಾಡಿಗೆ ಹೋಗಬೇಕಿತ್ತು. ಹಲವು ಸಲ ಉಪ್ಪಳದಲ್ಲಿ ವಾಹನ ಇರಿಸುವ ಬದಲು ತಲಪಾಡಿಯ ಪೆಟ್ರೋಲ್ ಬಂಕ್ ನಲ್ಲಿ ವಾಹ ಇರಿಸಿ ಹಿಂದಿರುಗಿ ಬರುವಾಗ ವಾರಕ್ಕೆ ಆಗುವಷ್ಟು ಪೆಟ್ರೋಲ್ ತುಂಬಿಸಿ ಬರುತ್ತಿದ್ದೆವು. ಇಲ್ಲವಾದರೆ ಕಾಳಸಂತೆಯಲ್ಲಿ ಅಧಿಕ ಬೆಲೆಯ ಕಲಬೆರಕೆಯ ಪೆಟ್ರೋಲ್ ಗತಿ. ಆ ದಿನಗಳೇ ಹಾಗಿದ್ದವು. ಈಗಿನ ತಲೆಮಾರಿಗೆ ಇದನ್ನು ಕಲ್ಪಿಸುವುದಕ್ಕೂ ಸಾಧ್ಯವಿಲ್ಲ. ಅದರಂತೆ ಆಗ ನಡೆದ ಇರಾಕ್ ಯುದ್ಧವನ್ನೂ ಕಲ್ಪಿಸಿಕೊಳ್ಳುವುದು ಕಷ್ಟದ ಮಾತು. ಆದರೂ ಇರಾಕ್ ಯುದ್ಧದಲ್ಲಿ ಇಲ್ಲಿ ಬಂದ ಕಷ್ಟಗಳು ಈಗಿನದಕ್ಕೆ ಹೋಲಿಸಿದರೆ ಬಹಳ ಕಡಿಮೆ ಎನ್ನಬೇಕು. ಮನೆಯಿಂದ ಹೊರಟವರು ಪುನಃ ಮನೆಗೆ ಬಂದು ಸೇರಿದ ಮೇಲೆಯೇ ಭರವಸೆ. ಪೆಟ್ರೋಲ್ ಆಭಾವದಿಂದ ಬಸ್ಸು ಲಾರಿಗಳು ದಾರಿ ಮಧ್ಯೆಯೇ ನಿಲ್ಲಿತ್ತಿದ್ದದ್ದು ಸಾಮಾನ್ಯ. ಪ್ರತಿ ಪೆಟ್ರೋಲ್ ಬಂಕ್ ಗಳಲ್ಲಿ ಮೈಲು ಗಟ್ಟಲೆ ವಾಹನಗಳ ಸರದಿ ಸಾಲು ನಿಂತಿರುತ್ತಿದ್ದವು. ಯಾವಾಗ ಪೆಟ್ರೋಲ್ ಡೀಸಲ್ ಸಿಗುತ್ತದೆ ಎಂಬ ಭರವಸೆಯೇ ಇರುತ್ತಿರಲಿಲ್ಲ. ಈಗಿನ ಸರಕಾರಕ್ಕೆ ದೂರುವವರು ಒಂದಿಷ್ಟು ಆದಿನಗಳನ್ನು ನೆನಪಿಸಿಕೊಂಡರೆ ಸಾಕು. ಈಗಲೂ ಸಮಸ್ಯೆಗಳು ಇವೆ. ಅದಕ್ಕೆ ಹಲವು ಕಾರಣಗಳು ಇರುತ್ತವೆ. ನಾವು ಅತಿಯಾಗಿ ಪೆಟ್ರೋಲ್ ಉತ್ಪನಗಳಿಗೆ ಅವಲಂಬಿಸಿರುವುದೇ ಕಾರಣ. ಆಗ ಹಳ್ಳಿಯ ಮನೆಗಳು ಈಗಿನಂತೆ ಅಡುಗೆ ಅನಿಲಕ್ಕೆ ಅವಲಂಬಿಸಿರಲಿಲ್ಲ. ಈಗ ಹಳ್ಳಿಯ ಮನೆಗಳು ಯಾಕೆ ದೇವಸ್ಥಾನಗಳೂ ಈ ವಾಯು ಪ್ರಭಾವಕ್ಕೆ ಒಳಗಾಗಿದೆ.
ಗಲ್ಬ್ ಯುದ್ದದ ಸಮಯ ಆ ಒಂದು ದಿನ ಸಾಯಂಕಾಲ ನನಗೆ ಅಗತ್ಯ ಕೆಲಸಕ್ಕಾಗಿ ಮಂಗಳೂರಿಗೆ ಹೋಗಬೇಕಿತ್ತು. ಗಲ್ಫ್ ಯುದ್ದದ ಕಾರಣ ಹಲವಾರು ಬಸ್ಸುಗಳು ತಮ್ಮ ಸಂಚಾರವನ್ನು ಸ್ಥಗಿತಗೊಳಿಸಿದ್ದವು. ಸ್ಕೂಟರ್ ತೆಗೆದುಕೊಂಡು ಹೊರಟೆ. ಸ್ಕೂಟರ್ ಉಪ್ಪಳದಲ್ಲಿಟ್ಟು ಮಂಗಳೂರಿಗೆ ಹೋಗಬೇಕೆಂದು ಕೊಂಡರೆ ಪೆಟ್ರೋಲ್ ಅದಾಗಲೇ ರಿಸರ್ವ್ ಗೆ ಬಿತ್ತು. ಇನ್ನು ತಲಪಾಡಿಯವರೆಗೆ ಹೋಗಿ ಅಲ್ಲಿ ಇಟ್ಟು ಬರುವಾಗ ಪೆಟ್ರೋಲ್ ಹಾಕಿಕೊಂಡು ಬಂದಾರಯಿತು ಎಂದುಕೊಂಡು ತಲಪಾಡಿಗೆ ಬಂದರೆ ಪಟೋಲ್ ಬಂಕ್ ನಲ್ಲಿ ಅದಾಗಲೇ ವಾಹನಗಳ ಸರದಿ ಇತ್ತು. ಪೆಟ್ರೋಲ್ ಬಂಕ್ ನವ ನನಗೆ ಪರಿಚಯಸ್ಥ. ಆತ ಪೆಟ್ರೋಲ್ ಬರಬಹುದು ಎಂದು ಹೇಳಿದ. ಗಾಡಿಯ ಕೀ ಆತನಿಗೆ ಕೊಟ್ಟು ಪೆಟ್ರೋಲ್ ಬಂದರೆ ತುಂಬಿಸುವಂತೆ ಹೇಳಿ ಅಲ್ಲಿಂದ ಸಿಟಿ ಬಸ್ ಹತ್ತಿ ಮಂಗಳೂರಿಗೆ ಹೊರಟೆ.
ಮಂಗಳೂರಿನಿಂದ ಕೆಲಸ ಮುಗಿಸಿ ಹಿಂತಿರುಗಿ ಬರುವಾಗ ತುಸು ತಡವೇ ಆಗಿತ್ತು. ರಾತ್ರಿಯ ಒಂಭತ್ತರ ಹತ್ತಿರ ಬಸ್ಸು ತಲಪಾಡಿಯಲ್ಲಿ ನಿಂತಾಗ ನೋಡಿದರೆ ಪೆಟ್ರೋಲ್ ಬಂಕ್ ಮುಂದೆ ವಾಹನಗಳ ಸರದಿ ಹಾಗೇ ಇತ್ತು. ನಿರೀಕ್ಷೆಯಂತೆ ಪೆಟ್ರೋಲ್ ಬರಲಿಲ್ಲ. ಆದರೇನು ಮಾಡುವುದು. ಆಗಲೇ ರಾತ್ರಿ ಬಹಳ ಹೊತ್ತಾಗಿತ್ತು. ಇನ್ನು ಅಲ್ಲಿ ಕಾದುಕುಳಿತುಕೊಳ್ಳುವುದು ಅಸಾಧ್ಯದ ಮಾತು. ಕೈಯಲ್ಲಿ ಒಂದಿಷ್ಟು ಸಣ್ಣ ಪುಟ್ಟ ಸಾಮಾನುಗಳ ಲಗೇಜ್ ಇತ್ತು. ಏನಾದರಾಗಲೀ ಹೊರಟು ಬಿಡೋಣ ಹೋದಷ್ಟು ದೂರ ಹೋಗೋಣ ಎಂದುಕೊಂಡು ಗಾಡಿ ಸ್ಟಾರ್ಟ್ ಮಾಡಿ ಹೊರಟೆ. ಇಷ್ಟದೇವರನ್ನು ಮನಸಾರೆ ಸ್ಮರಿಸಿದೆ. ದೇವರೇ ಕ್ಷೇಮದಲ್ಲಿ ಮನೆಗೆ ಮುಟ್ಟಿಸು ಅಂತ ಬೇಡಿಕೊಂಡೆ. ದೈವಾನುಗ್ರಹ ಇದ್ದರೆ ಮನೆಗೆ ತಲುಪುತ್ತೇನೆ ಎಂದುಕೊಂಡೆ. ಅನ್ಯಥಾ ಏನು ಮಾಡುವುದಕ್ಕೂ ನನಗೆ ಹೊಳೆಯಲಿಲ್ಲ. ಬೇರೆ ಎನು ಮಾಡುವ ಹಾಗೂ ಇರಲಿಲ್ಲ. ಒಂದೊಂದೇ ಕಿಲೋ ಮೀಟರ್ ದೂರ ಬಂದಷ್ಟು ಅಬ್ಭಾ ಎನ್ನುವ ಹಾಗಿತ್ತು. ಉಪ್ಪಳದ ತನಕ ಹೋದರೆ ಅಲ್ಲಿ ಗಾಡಿ ಇಟ್ಟು ಏನಾದರೂ ವ್ಯವಸ್ಥೆ ಮಾಡಬಹುದು ಎಂದುಕೊಂಡೆ ಉಪ್ಪಳದ ತನಕ ನಿರಾತಂಕವಾಗಿ ಬಂದಾಗ ಇನ್ನು ನಮ್ಮದೇ ಊರು ಹೋದಷ್ಟು ದೂರ ಹೋಗುವ ಖಾಲಿಯಾದರೆ ಯಾವುದಾದರು ಮನೆ ಮುಂದೆ ಗಾಡಿ ಇಟ್ಟು ಹೋದರಾಯಿತು ಎಂದು ಕೊಂಡು ಉಪ್ಪಳದಿಂದ ಪೈವಳಿಕೆ ಕಡೆ ಹೊರಟಿದ್ದೆ. ವಾಹನ ಸಂಚಾರ ತೀರ ವಿರಳವಾಗಿತ್ತು. ಗಲ್ಪ್ ಯುದ್ದ ಜನಜೀವನದ ಮೇಲೆ ಸಾಕಷ್ಟು ಪರಿಣಾಮ ಉಂಟು ಮಾಡಿತ್ತು. ಅಂಗಡಿ ಮುಂಗಟ್ಟುಗಳು ಬೇಗನೆ ಬಾಗಿಲು ಹಾಕಿದ್ದವು. ಉಪ್ಪಳದಿಂದ ಕೈಕಂಬ ..ಸೋಂಕಾಲ್ ಕುಬಣೂರು ಬೇಕೂರು ದಾಟುತ್ತಿದ್ದಂತೆ ಒಂದಷ್ಟು ಖುಷಿಯಾಯಿತು.. ಇನ್ನು ಆರೇಳು ಕಿಲೋ ಮೀಟರ್ ಪೈವಳಿಕೆ ತಲುಪಬಹುದು. ಬೇಕೂರು ಕನ್ನಟಿಪಾರ, ಜೋಡುಕಲ್ಲು ಕಳೆದು ಅಟ್ಟೇಗೋಳಿ ಚಡಾವ್ ಹತ್ತಿದ ನಂತರ ಅಬ್ಬ ಎನಿಸಿತು . ಇನ್ನು ಸ್ವಲ್ಪ ದೂರ ಅಷ್ಟೆ. ಅಟ್ಟೆಗೋಳಿ ದಾಟಿ ಬಾಯಿಕಟ್ಟೆ ದಾಟಿ ಮುಂದೆ ಬಂದರೆ ಮತ್ತೆ ನಮ್ಮೂರು ಪೈವಳಿಕೆ. ಅಲ್ಲಿಂದ ಒಂದೆರಡು ತಿರುವು ದಾಟಿದರೆ ನಮ್ಮ ಮನೆ. ಪೈವಳಿಕೆ ಬಂದರೆ ಅಲ್ಲಿ ಇನ್ನೂ ಅಲ್ಪ ಸ್ವಲ್ಪ ಜನ ಸಂಚಾರವಿತ್ತು. ಎಷ್ಟೆಂದರೂ ನಮ್ಮ ಪೈವಳಿಕೆ. ಅಲ್ಲಿ ತಡರಾತ್ರಿಯಾದರೂ ಯಾರಾದರೂ ಸುತ್ತಾಡಿಕೊಂಡಿರುತ್ತಾರೆ. ಗಂಟೆ ಹತ್ತು ಕಳೆದಿತ್ತು. ಅಲ್ಲಿ ತನಕ ಪೆಟ್ರೋಲ್ ಖಾಲಿಯಾಗದೇ ಇದ್ದದ್ದು ಆಶ್ಚರ್ಯ ತಂದಿತು. ಸ್ಕೂಟರ್ ನ ಮೈಲೇಜ್ ಬಗ್ಗೆ ಅಭಿಮಾನ ಉಂಟಾಯಿತು. ಪೈವಳಿಕೆ ಬಜಾರ್ ಕಳೆದು ಗುಂಡದ ಪಾರೆ ತಿರುವು ದಾಟಿ ಒಂದಷ್ಟು ಮುಂದೆ ಬಂದರೆ ನಮ್ಮ ಮನೆ ಲಾಲ್ ಬಾಗ್. ಗುಂಡದ ಪಾರೆ ಎರು ಬಂದಾಗ ಗಾಡಿ ಸ್ತಭ್ದವಾಯಿತು. ಪೆಟ್ರೋಲ್ ಖಾಲಿಯಾಗಿತ್ತು. ಅದುವರೆಗೂ ನನ್ನನ್ನು ತಲುಪಿಸಿದ ಗಾಡಿ ಇನ್ನು ಸಾಧ್ಯವಿಲ್ಲ ಎಂದು ನಿಂತು ಬಿಟ್ಟಿತು. ಇನ್ನು ಒಂದಷ್ಟು ಇಳಿಜಾರು ರಸ್ತೆ. ಹಾಗಾಗಿ ಗಾಡಿ ಜೋರಾಗಿ ತಳ್ಳಿ ನ್ಯೂಟ್ರಲ್ ನಲ್ಲೇ ಮನೆಯ ಅಂಗಳ ತಲುಪಿ ದೊಡ್ಡ ನಿಟ್ಟು ಸಿರು ಬಿಟ್ಟೆ.
ಈಗಿನ ಇರಾನ್ ಯುದ್ಧ ಆಗಿನ ಇರಾಕ್ ಯುದ್ದ....ಎರಡನ್ನೂ ತುಲನೆ ಮಾಡುವುದು ಸಾಧ್ಯವಿಲ್ಲ. ಆದರೆ ಆಗಿನಷ್ಟು ಕಷ್ಟ ಇನ್ನೂ ಎದುರಾಗಿಲ್ಲ. ಈಗ ಅಡುಗೆ ಅನಿಲಕ್ಕೆ ಸ್ವಲ್ಪ ಅದು ವಾಣಿಜ್ಯ ಬಳಕೆಗೆ ಸ್ವಲ್ಪ ಅವ್ಯವಸ್ಥೆ ಆಗಿದೆ. ಆದರೆ ಆ ದಿನಗಳ ಬವಣೆ ಇನ್ನು ಬಾರದಿರಲಿ ಎಂದು ಪ್ರಾರ್ಥನೆ. ಆಗ ಯಾವ ಸರಕಾರ ಇತ್ತೋ ಈಗ ಯಾವ ಸರಕಾರ ಇದೆಯೋ ಯಾರು ಪ್ರಧಾನಿಯೋ ಇವುಗಳೆಲ್ಲ ಮುಖ್ಯವಾಗುವುದಿಲ್ಲ. ಯಾವುದಿದ್ದರು ಬರುವ ವಿಕಲ್ಪ ಪರಿಭವ ಕಷ್ಟಗಳು ಬೇರೆಯೇ ಆಗಿರುತ್ತದೆ. ಇವುಗಳು ಜಾಗತಿಕ ವಿಪತ್ತುಗಳು. ರಾಜಕೀಯ ತೆವಲಿಗಾಗಿ ನಾವು ಕೆಸರು ಎರಚಿಕೊಂಡು ನಮ್ಮ ಮನಸ್ಸನ್ನು ಮಲಿನ ಮಾಡುತ್ತಿದ್ದೇವೆ ಅಷ್ಟೆ. ಬಂದ ಕಷ್ಟವನ್ನು ಎದುರಿಸಿ ವಿಪತ್ತಿನಿಂದ ಪಾರಾಗುವ ಆತ್ಮಸ್ಥೈರ್ಯವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ನಾವು ಇಲ್ಲಿಕುಳಿತು ಯಾವುದೋ ರಾಷ್ಟ್ರದ ಪರವಾಗಿ ಚರ್ಚಿಸಬಹುದು. ಕೊನೆಗೆ ನಮಗೆ ನಮ್ಮ ಭಾರತವೇ ಬೇಕು. ಅದುವೇ ಶ್ರೇಷ್ಠ. ಎಲ್ಲದಕ್ಕಿಂತಲೂ ಗಲ್ಪ್ ನಿವಾಸಿಗಳನ್ನು ನೋಡಿದರೆ ನಾವು ಭಾರತೀಯರು ಎಂಬ ಅಭಿಮಾನ ಮೂಡುತ್ತದೆ. ಇದು ಮುಖ್ಯ.
ಸ್ಕೂಟರ್ ನ ಮೈಲೇಜ್ ದೈವಾನುಗ್ರಹದ ಮೈಲೇಜ್ ಎಲ್ಲ ಸೇರಿ ಮನೆ ಸೇರಿದಾಗ ಏನೂ ತಿಂದಿಲ್ಲದಿರುವುದು ನೆನಪಾಗಿ ಹೊಟ್ಟೆ ಹಸಿವು ತಿಳಿಯಿತು. ಹೊಟ್ಟೆ ತುಂಬ ಊಟಮಾಡಿ ಮಲಗಿದವನಿಗೆ ...ದೂರದ ತಲಪಾಡಿಯ ಪೆಟ್ರೋಲ್ ಬಂಕ್ ದೃಶ್ಯ ಇನ್ನೂ ಕಣ್ಣ ಮುಂದೆ ಇದ್ದಂತೆ ಭಾಸವಾಯಿತು.

No comments:
Post a Comment