ಇಲ್ಲಿ ಹಾಕಿರುವ ಚಿತ್ರಗಳು ಮಾವನೂರು ಬೆಟ್ಟದ ಮಲ್ಲೇಶ್ವರ ದೇವಸ್ಥಾನ. ಇದು ಬೆಂಗಳೂರಿನಿಂದ ಹಾಸನಕ್ಕೆ ಹೋಗುವಾಗ ಚೆನ್ನರಾಯ ಪಟ್ಟಣ ಕಳೆದ ಕೂಡಲೆ ಸಿಗುತ್ತದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಎಡಕ್ಕೆ ತಿರುಗಿದರೆ, ಸ್ವಲ್ಪದೂರ ಹಳ್ಳಿಯ ನಡುವಿನ ರಸ್ತೆ, ದೂರದಲ್ಲಿಸಾಲಾಗಿ ಪರ್ವತಗಳ ನಡುವೆ ಸುಜುಲೋನ್ ಕಂಪೆನಿಯ ಗಾಳಿಯಂತ್ರ ಸುತ್ತುವ ಮನೋಹರ ದೃಶ್ಯ ಕಾಣುತ್ತದೆ. ಈ ಗಾಳಿಯಂತ್ರದ ಬಳಿಯಲ್ಲೇ ಗುಡ್ಡದ ತುದಿಯಲ್ಲಿ ಈ ಮಾವನೂರು ಮಲ್ಲೇಶ್ವರ ದೇವಸ್ಥಾನ ಇದೆ. ತುದಿಗೆ ಹೋದರೆ ಸುತ್ತಮುತ್ತಲಿನ ನಯನ ಮನೋಹರ ದೃಶ್ಯ ಕಾಣುತ್ತದೆ. ಮುಂಜಾನೆ ಹೋದಾರೆ ಸೂರ್ಯೋದಯ ಸಾಯಂಕಾಲ ಹೋದರೆ ಸೂರ್ಯಾಸ್ತ ಸುಂದರವಾಗಿ ಕಾಣಬಹುದು. ನಾವು ಎರಡು ಬಾರಿ ಈ ಜಾಗ ವೀಕ್ಷಣೆ ಮಾಡಿದ್ದೇವೆ. ಮೊದಲ ಬಾರಿಗೆ ಹೋದಾಗ ಇದೇನು ಅಷ್ಟು ಪ್ರಸಿದ್ಧಿಯನ್ನು ಪಡೆದಿರಲಿಲ್ಲ. ಹೊಸದಾಗಿ
ಸುಣ್ಣ ಬಣ್ಣದಿಂದ ನವೀಕರಿಸಲಾಗಿತ್ತು. ಆಗ ಇಲ್ಲಿ ಯಾವ ಜನರ ಸಂಚಾರವಿಲ್ಲದೆ ನಿರಾಳವಾದ ಶಾಂತಿ ನೆಲೆಯಾಗಿತ್ತು. ಅದೊಂದು ಬಹಳ ಸುಂದರ ಅನುಭವ. ಅದಾಗಿ ಎರಡು ಮೂರು ವರ್ಷದ ನಂತರ, ಹಲವು ಸಲ ಅಲ್ಲಿಗೆ ಹೋಗಬೇಕೆಂದು ಬಯಸಿದರೂ ಸಮಯ ಸಿಕ್ಕಿರಲಿಲ್ಲ. ಮೊನ್ನೆ ಈ ದೇವಾಲಯದ ಕೊಪ್ಪದಿಂದ ಹಿಂತಿರುಗುವಾಗ ಮೊದಲೇ ಸಮಯ ನೋಡಿ ಸರಿಯಾಗಿ ಸೂರ್ಯಾಸ್ತದ ಸಮಯಕ್ಕೆ ಬಂದು ತಲುಪಿದೆವು. ಸುಂದರ ದೃಶ್ಯ ಮನಸೂರೆಗೊಂಡಿತ್ತು. ಆದರೆ, ಅಲ್ಲಿ ಸಾಕಷ್ಟು ವಾಹನಗಳು ನಿಂತು ಒಂದಷ್ಟು ಮಂದಿ ಇದ್ದರು.
ಕಳೆದ ಬಾರಿಯಂತೆ ಇಲ್ಲಿ ಪರಿಸರ ಶಾಂತವಾಗಿರಲಿಲ್ಲ. ಜನರ ಕಲರವ ಎಲ್ಲವನ್ನೂ ಕದಡಿತ್ತು. ಜೋರಾಗಿ ಕೇಕೆ ಮಾತುಗಳು ಆದರೆ ಪರವಾಗಿಲ್ಲವೇನೋ, ಕೆಲವರು ದೊಡ್ಡದಾಗಿ ಹಾಡು ಹಾಕಿ ವಿಚಿತ್ರವಾಗಿ ಕುಣಿಯುತ್ತಾ ರೀಲ್ಸ್ ಮಾಡುತ್ತಿದ್ದರು. ರೀಲ್ಸ್ ಮಾಡುವ ಹುಚ್ಚು ಸುಂದರ ದೇವಸ್ಥಾನಗಳನ್ನೂ ಬಿಡುವುದಿಲ್ಲ. ಅಲ್ಲಿಯ ಶಾಂತ ಪರಿಸರವನ್ನು ಆಸ್ವಾದಿಸುವುದಕ್ಕೆ ಏನೋ ಒಂದು ತೊಡಕು. ಆ ಪರಿಸರಕ್ಕೆ ಹೊಂದಿಕೊಳ್ಳದ ಉಡುಗೆ ತೊಡುಗೆಗಳು ಯಾವ ಸುಂದರ ಪರಿಸರವನ್ನು ಬಿಡದ ಈ ಮಾನವ ಧಾಳಿ ನಿಜಕ್ಕೂ ಖೇದಕರ. ಸ್ವಲ್ಪ ಹೊತ್ತು ಅಲ್ಲಿದ್ದು ಮತ್ತೆ ಅಲ್ಲಿ ನಿಲ್ಲುವುದಕ್ಕೆ ಮನಸ್ಸಾಗಲಿಲ್ಲ. ಅನ್ಯ ಪ್ರಾರ್ಥನಾ ಮಂದಿರಗಳಲ್ಲಿ ಇಂತಹ ಚಟುವಟಿಕೆಗಳನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಆದರೆ ನಮ್ಮ ಕಾಲ ಬುಡಕ್ಕೆ ನಾವೇ ಕೆಸರು ಎಳೆದು ತರುತ್ತಿದ್ದೇವೆ. ಇದು ಶೋಚನೀಯ. ಪರಸ್ಥಳಗಳಿಗೆ ಹೋದಾಗ ಅಲ್ಲಿ ಫೋಟೋಗಳನ್ನು ತೊಂದರೆಯಾಗದಂತೆ ಸ್ಮರಣೆಗಾಗಿ ತೆಗೆದುಕೊಳ್ಳುವುದರಲ್ಲಿ ತಪ್ಪಿಲ್ಲ. ಆದರೆ ಅಲ್ಲಿನ ಪರಿಸರ ಶುದ್ಧಿಯನ್ನು ಗೌರವಿಸಬೇಕಾಗಿರುವುದು ನಮ್ಮ ಕರ್ತವ್ಯ. ಇಲ್ಲವಾದರೆ ನಮಗಾಗಿ ಇವುಗಳು ಇದ್ದಂತೆ ನಮ್ಮ ಮುಂದಿನ ಜನಾಂಗಕ್ಕೆ ಇವುಗಳು ಪರಿಶುದ್ದವಾಗಿ ಇರಲಾರದು. ರೀಲ್ಸ್ ಪುಂಡರಿಂದ ಇಂತಹ ಪರಿಸರವನ್ನು ರಕ್ಷಿಸುವುದು ಆದ್ಯ ಕರ್ತವ್ಯವಾಗಬೇಕಾಗಿದೆ.











No comments:
Post a Comment