Friday, June 26, 2026

ಯೋಗದಿನ

 


ಇತ್ತೀಚೆಗೆ ಯೋಗದಿನದಲ್ಲಿ ಹಲವರ ಯೋಗಾಭ್ಯಾಸ ನೋಡಿ ಒಂದೆರಡು ಅನಿಸಿಕೆಗಳು ಹೇಳಬೇಕೆಂದೆನಿಸಿತು. ಯೋಗ ದಿನ ಮೂರ್ಖದಿನವಾಗುವಂತೆ ಆಚರಿಸುವುದನ್ನು ನೋಡಿದಾಗ ವಿಷಾದವಾಗುತ್ತದೆ. ಒಂದು ದಿನ ಸಮವಸ್ತ್ರ ಹಾಕಿ ದೊಡ್ಡ ಬ್ಯಾನರ್ ಕಟ್ಟಿ ಯೋಗಾಭ್ಯಾಸ ಮಾಡುವುದರಲ್ಲಿ ಯಾವ ಪ್ರಯೋಜನವೂ ಇಲ್ಲ. ಒಂದು ದಿನಕ್ಕೆ ಸೀಮಿತವಾಗುವ ಯೋಗಭ್ಯಾಸ ನಿಜಕ್ಕೂ ಅದಕ್ಕೆ ಮಾಡುವ ಅವಮಾನವಾಗುತ್ತದೆ. 

ಯೋಗ, ಅಂತ ಹೇಳಿದ ಕೂಡಲೇ ಕೆಲವು ಆಸನ, ಮತ್ತೆ ಪ್ರಾಣಾಯಾಮ ಅಂತ ತಿಳಿದು ಅದೇ ಭ್ರಮೆಯಲ್ಲಿ ಇದ್ದು ಬಿಡುತ್ತಾರೆ. ಹಲವರು ಇದನ್ನು ಪ್ರದರ್ಶನದ ವಸ್ತುವಾಗಿ ಮಾಡಿ‌ಬಿಡುತ್ತಾರೆ. ಇನ್ನು ಕೆಲವರಿಗೆ ಇದು ಸಮಯ ಸಿಕ್ಕಾಗ ಮಾಡುವ ಕೆಲಸವಾಗಿದೆ. ಆರಂಭದ ದಿನಗಳಲ್ಲಿ ಇದು ಇಷ್ಟೇ ಅಂತ ಅನಿಸಿದರೂ, ಅಷ್ಟಕ್ಕೇ ಸೀಮಿತಗೊಳಿಸಬಾರದು. ಆದರೆ ಇಂದಿನ‌ ಫ್ಯಾಷನ್ ಯುಗದಲ್ಲಿ‌ ಅದಕ್ಕೇ ಸೀಮಿತ ವಾಗಿಸುವುದು ಮೂರ್ಖತನ ಎನ್ನಬೇಕು. 

ಯೋಗ ಮುಖ್ಯವಾಗಿ ಯಾವುದೇ ಧರ್ಮಕ್ಕೆ ಸೀಮಿತವಾಗುವ ಧಾರ್ಮಿಕ ಆಚರಣೆಯಲ್ಲ. ಆದರೆ ಸನಾತನ ಧರ್ಮ‌, ಅಂದರೆ ಅತ್ಯಂತ ಹಳೆಯ ಮನುಷ್ಯ ಜೀವನ ಧರ್ಮ‌ ಇದನ್ನೇ ಅಳವಡಿಸಿಕೊಂಡಿತ್ತು. ಇಂದು ಹಲವು ರೀತಿಯಲ್ಲಿ ಇದನ್ನು ಧಾರ್ಮಿಕ ಕ್ರಿಯೆಗೆ ಸೀಮಿತ ಗೊಳಿಸಿದ್ದೂ ಒಂದು ಬಗೆಯಲ್ಲಿ ವಿಷಾದನೀಯ ಎನ್ನಬೇಕು. ಅದು ಹಾಗೆ ಒಂದು ಧರ್ಮಕ್ಕೆ ಸೀಮಿತವಾಗುವುದಕ್ಕೆ ಕಾರಣ ಇಲ್ಲದಿಲ್ಲ. ಬಾಲ್ಯದಲ್ಲೇ ನಮಗೆ ನಮ್ಮ ಕರ್ತವ್ಯಗಳನ್ನು ಇದೇ ಬಗೆಯಲ್ಲಿ ಖಡ್ಡಾಯಗೊಳಿಸುತ್ತಾರೆ. ಅನ್ನ ಎಂಬದನ್ನು ದೇವರಾಗಿಸಿ ಅದರ ಮೌಲ್ಯವನ್ನು ಗೌರವವನ್ನು ತೋರಿಸುವ ಯತ್ನ ಮಾಡುತ್ತಾರೆ. ಅದೇ ಮುಂದೆ ಧಾರ್ಮಿಕವಾಗುತ್ತದೆ. ಇದೇ ಬಗೆಯಲ್ಲಿ ನಮಗೆ ಹಲವು‌ ಮೌಲ್ಯಗಳ ಪಾಠವಾಗುತ್ತದೆ.  ಅದೇ ಜೀವನ ಧರ್ಮವಾಗುತ್ತದೆ. 

   ಯೋಗ ಎಂದೋ ಒಂದು ದಿನದ ಆಚರಣೆಯಲ್ಲ. ಹಾಗೆ ಮಾಡಿದರೆ ಅದು ಜೀವನವನ್ನು ಅರ್ಥಮಾಡಿಕೊಳ್ಳದ ಅಜ್ಜಾನವಾಗುತ್ತದೆ. ಅಹಾರ ವಿಸರ್ಜನಾದಿಗಳು ಹೇಗೆ ಅನಿವಾರ್ಯವೋ, ಹೊತ್ತು ಹೊತ್ತಿಗೆ ಹೇಗೆ ಊಟವನ್ಮು ಮಾಡುತ್ತೀರೋ ಅದೆ ಬಗೆಯಲ್ಲಿ ಇದು ಜತೆಯಲ್ಲಿರಬೇಕು ಯಾರನ್ನೋ‌ ಮೆಚ್ಚಿಸುವುದಕ್ಕೆ ಯಾರದೋ ಮೇಲಿನ ಅಭಿಮಾನ ದರ್ಶನಕ್ಕೆ ಯೋಗಾಭ್ಯಾಸವಲ್ಲ.  ಅದೊಂದು ಜೀವನ ವಿಧಾನ. ತೆಳ್ಳಗಾಗುವುದಕ್ಕೋ, ದಪ್ಪಗಾಗುವುದಕ್ಕೋ ಅಯುರಾರೋಗ್ಯಕ್ಕೋ ಇದು ಉದ್ದೇಶವಾಗಬಾರದು. ಹಾಗಾದರೆ ಇದರ ಮೂಲ ಉದ್ದೇಶಕ್ಕೆ ಅನ್ಯಾಯವಾಗುತ್ತದೆ. ಜೀವನದ ಪ್ರತಿಯೊಂಕ್ಕೂ ಯೋಗಾಭ್ಯಾಸ ಕಣ್ಣಾಗಬೇಕು.‌ಆಗಲೇ ಜೀವ ಮತ್ತು ಆತ್ಮದ ಸಂಯೋಗವಾಗುತ್ತದೆ.

ಪ್ರತಿ ವರ್ಷವೂ ಯೋಗದಿನ ಆಚರಿಸಲ್ಪಡುತ್ತದೆ.  ನೂರಾರು ಜನ ಸೇರಿ,  ವಿಶೇಷ ಸಮವಸ್ತ್ರ ಧರಿಸಿ,  ಒಂದಷ್ಟು ಕಸರತ್ತು ಮಾಡಿ ನಾವೂ ಆರೋಗ್ಯವಂತರಾದೇವು, ಯೋಗಪಟುಗಳಾಗಿದ್ದೇವೆ ಎಂಬ ಭ್ರಮೆ ಆವರಿಸುತ್ತದೆ.  ಹೆತ್ತವರ ದಿನದಂದು ಅಪ್ಪ ಅಮ್ಮನ ನೆನಪಾದಂತೆ ಯೋಗದಿನ ಯೋಗದ ಆಚರಣೆಯಾಗುತ್ತದೆ. ಮತ್ತೆ ಮುಂದಿನ ವರ್ಷದ ತನಕವೂ ಅದರ ಜ್ಞಾಪಕವೇ ಇರುವುದಿಲ್ಲ. 

ನಿಯಮಬದ್ದವಾದ ಜೀವನಕ್ರಮವೇ ಯೋಗ. ಕಸರತ್ತು ವ್ಯಾಯಾಮ ಮಾಡುವುದಕ್ಕಿಂತಲೂ ಅಲ್ಲಿ ನಿಯಮವನ್ನು ಅನುಸರಿಸುವುದು ಪ್ರಧಾನವಾಗಿಬಿಡುತ್ತದೆ. ಚಿತ್ತವೃತ್ತಿಯಿಂದ ದೂರವಿದ್ದು ಒಂದು ಜೀವನ ಕ್ರಮವನ್ನು ಅನುಸರಿಸಬೇಕು. ಮನಸ್ಸು ನಿಯಂತ್ರಣದಲ್ಲಿರಬೇಕು. ಯೋಗದ ದಿನವೇ ಮನಸ್ಸು ನಿಯಂತ್ರಣವನ್ನು ಮೀರುತ್ತದೆ. ಏನೇನೋ ಚಿತ್ತವಿಕಾರಗಳು ಆವರಿಸಿದ್ದರೆ ಅದು ಯೋಗಾಭ್ಯಾಸವಾಗುವುದಕ್ಕೆ ಸಾಧ್ಯವಿಲ್ಲ. 

ಯೋಗಾಸನ ಅಂದರೆ ಕೆಲವೊಂದು ಭ್ರಮೆಯಿಂದ ಮೊದಲು ಹೊರಗೆ ಬರಬೇಕು. ಕೃತಿಗಿಂತಲೂ  ಶಿಸ್ತು ನಿಯಮ ಪಾಲನೆ ಇಲ್ಲಿ ಅತೀ ಮುಖ್ಯ.  ಕಷ್ಟದ ಆಸನ ಮಾತ್ರ ಯೋಗಾಸನವಲ್ಲ. ಅತ್ಯಂತ ಸರಳವಾದ ಲಘುವಾದ ಆಸನಗಳು ಹಲವು ಸಲ ಹೆಚ್ಚು ಪ್ರಯೋಜನಕಾರಿಯಾಗಿ ಪರಿಣಾಮವನ್ನು ನೀಡುತ್ತದೆ. ಮನಸ್ಸಿಗೆ ನಿರಾಳತೆಯನ್ನು ಒದಗಿಸುತ್ತದೆ.  ಆದರೆ ಕಷ್ಟದ ಆಸನಗಳಿಗೆ ಎಲ್ಲರೂ ಹೆಚ್ಚು ಆಕರ್ಷಿತರಾಗುತ್ತಾರೆ.  ಯಾವುದೋ ಕಷ್ಟದ ಆಸನ ಮಾಡುವಾಗ ಮನಸ್ಸು ಒತ್ತಡವನ್ನು ಅನುಭವಿಸುತ್ತದೆ. ಅದು ಸಾಧ್ಯವಾಗದೇ ಇದ್ದಾಗ ಹತಾಶೆಗೊಳಗಾಗುತ್ತದೆ. ಹಾಗಾಗಿ ಸರಳವಾದ ಲಘು ಆಸನಗಳನ್ನು ನಿತ್ಯ ಮಾಡಬೇಕು.  ಇದರಲ್ಲಿ ಪರಿಣಾಮದ ಜತೆಗೆ ಮಾನಸಿಕ ನೆಮ್ಮದಿ ಇರುತ್ತದೆ. ತುಂಬ ಆಸನ ಮಾಡಿದರೆ ಹೆಚ್ಚು ಪರಿಣಾಮ ಎಂಬ ಭ್ರಮೆ ಸರಿಯಲ್ಲ. ಹತ್ತು ಹದಿನೈದು ನಿಮಿಷ ಆಸನಗಳನ್ನು ಮಾಡಿದರೆ ಧಾರಾಳವಾಗುತ್ತದೆ. ಯೋಗಾಭ್ಯಾಸ ಎಂಬುದು ಶಿಕ್ಷೆಯಲ್ಲ. ಅದು ಒಂದು ಭದ್ರವಾದ ರಕ್ಷೆ. ನಿಯಮ ಮೀರಿ ತಿಳಿಯದೇ ಇದನ್ನು ಮಾಡಿದರೆ ಇದು ಶಿಕ್ಷೆಯಾಗಿ ಪರಿಣಮಿಸುತ್ತದೆ. ಅಂತರ್ಜಾಲವನ್ನು ನೋಡಿ, ಯಾರೋ ಮಾಡಿದ್ದನ್ನು ನೋಡಿ ಯೋಗಾಭ್ಯಾಸ ಮಾಡುವುದು ದೊಡ್ಡ ತಪ್ಪು. ಯಾಕೆಂದರೆ ಪ್ರತಿಯೊಬ್ಬರ ದೇಹ ಪ್ರಕೃತಿ ವೆತ್ಯಸ್ತವಾಗಿರುತ್ತದೆ. ಪ್ರತೀ ದೇಹದ ಆವಶ್ಯಕತೆಗಳೂ ಬೇರೆ ಬೇರೆಯಾಗಿರುತ್ತದೆ. ಇದನ್ನು ತಿಳಿಯದೆ ಮಾಡುವುದು ದೊಡ್ಡ ಮೂರ್ಖತನವಾಗಬಹುದು. ಭುಜಂಗಾಸನ, ಬಾಲಾಸನ ವಜ್ರಾಸನ ಹೀಗೆ ಸರಳವಾದ ಆಸನಗಳನ್ನು ಬಿಡದೆ ಮಾಡಬೇಕು. ಇವುಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. 

ಯೋಗಾಭ್ಯಾಸ ಕೇವಲ ಒಂದೆರಡು ಘಂಟೆಯ ಕ್ರಿಯೆಯಲ್ಲ. ದಿನದ ಇಪ್ಪತ್ತನಾಲ್ಕು ಘಂಟೆಯೂ ಅದರ ಆಚರಣೆಯಾಗಬೇಕು. ಆಸನ ಪ್ರಾಣಾಯಾಮಕ್ಕಿಂತಲು ಯೋಗದ ನಿಯಮಗಳು ಅತೀ ಮುಖ್ಯ . ಯಮ ನಿಯಮ ಆಚರಿಸಿದ ನಂತರೆವೇ ಆಸನ ಪ್ರಾಣಾಯಾಮ. ನಮ್ಮ ದೈನಂದಿನ ಚಟುವಟಿಕೆಗಳು  ಸೇವಿಸುವ ಆಹಾರ ಕ್ರಮಗಳು ಇವುಗಳು ಯೋಗಾಭ್ಯಾಸಕ್ಕೆ ಪೂರಕವಾದ ಸಂಬಂಧ ಹೊಂದಿರಬೇಕು. ಮುಖ್ಯವಾಗಿ ನಾವು ಭ್ರಮೆಯಿಂದ ಹೊರಬರಬೇಕು. ಇತ್ತೀಚೆಗೆ ಯೋಗದಿನದ ಕೆಲವರ ಯೋಗಾಭ್ಯಾಸವನ್ನು ನೋಡಿದಾಗ ಇದು ಪರಮ ಮೂರ್ಖತನ ಅಂತ ಅನ್ನಿಸುತ್ತದೆ. ಮುಖ್ಯವಾಗಿ ನಾವು ಸರಳವಾಗಿರಬೇಕು. ಆಧುನಿಕ ಐಷಾರಾಮ ಜೀವನದಿಂದ ಆದಷ್ಟು ದೂರವಿರಬೇಕು. ಉಡುಗೆ ತೊಡುಗೆ ಎಲ್ಲವೂ ಸರಳವಾಗಿದ್ದಷ್ಟು ಅದು ಜೀವನಕ್ಕೆ ಹತ್ತಿರವಾಗಿ ಮನಸ್ಸಿಗೆ ನಿರಾಳತೆಯನ್ನು ಒದಗಿಸುತ್ತದೆ. 



Thursday, June 4, 2026

ಪರಿಶುದ್ದ

   

ನಮ್ಮಲ್ಲಿರುವ ಕೆಟ್ಟ ದೌರ್ಬಲ್ಯಗಳನ್ನು ದೂರ ಮಾಡುವುದೇ ಪರಿಶುದ್ದಿ

      ಮುಂಜಾನೆ ನಾಲ್ಕು ಘಂಟೆಗೆ ಎದ್ದು ಸ್ನಾನ ಮಾಡಿ ಮಡಿ ಉಟ್ಟು ಪೂಜೆಗೆ ಹೂವಿಗಾಗಿ ಮನೆಯ ಕಂಪೌಡ್ ಗೋಡೆಯ ಪಕ್ಕ ಇರುವ ಹೂವಿನ ಗಿಡದ ಬಳಿಗೆ ನಿತ್ಯದಂತೆ ಬರುತ್ತೇನೆ. ನಮ್ಮ ಬೀದಿ ಹಲವಾರು ಮನೆ ಇರುವ ಒಂದು ಬೀದಿ. ಇದು ಹಗಲಲ್ಲಿ ಸಾಕಷ್ಟು ಚಟುವಟಿಕೆಯಿಂದ ಇರುವ ಬೀದಿ. ಶಾಲೆಗೆ ಹೋಗುವ ಮಕ್ಕಳು ಶಾಲೆ ಮುಗಿಸಿ ಬಂದು ಆಟ ಆಡುತ್ತಾರೆ, ಇನ್ನು ತಳ್ಳುಗಾಡಿಯಲ್ಲಿ ತರಕಾರಿ ಮುಂತಾದವನ್ನು ತಂದು ವ್ಯಾಪಾರ ಮಾಡುವವರು ಓಡಾಡುತ್ತಾರೆ. ಕೆಲಸ ಕಛೇರಿಗೆ ಹೋಗುವವರು ಬರುವವರು, ಅವರ ವಾಹನಗಳ ಸಂಚಾರ ಬೀದಿ ಹಗಲಿಡೀ ಸದ್ದು ಮಾಡುತ್ತಿದ್ದರೆ, ಮುಂಜಾನೆ ಮಲಗಿ ನಿಶ್ಯಬ್ದವಾಗಿ ವಿಶ್ರಾಂತಿ ಮಾಡುತ್ತದೆ. ಯಾರೋಬ್ಬರೂ ಇಲ್ಲದೇ ಇದ್ದರೂ ಕೆಲವೊಮ್ಮೆ ಕೆಲವರು ಓಡಾಡಿ ಬೀದಿಯ ವಿಶ್ರಾಂತಿಯನ್ನು ಕೆಡಿಸುತ್ತಾರೆ. ನಾನು ಮುಂಜಾನೆ ಮಡಿ ಉಟ್ಟು ಹೂ ಕೊಯ್ಯುವುದಕ್ಕೆ ಬುಟ್ಟಿ ಹಿಡಿದು ಬಂದರೆ ಒಂದು ಬಾರಿ ಬೀದಿಯ ಆ ತುದಿಯಿಂದ ಈ ತುದಿಯವರೆಗೂ ನೋಡುತ್ತೇನೆ. ಈಗ ವಿಶ್ರಾಂತಿಯ ಬೀದಿ ಸುಂದರವಾಗಿ ಕಾಣುತ್ತದೆ. ಆ ನಿಶ್ಯಬ್ದ ಶಾಂತ ಪರಿಸರ ಮನಸ್ಸಿಗೆ ಒಂದು ಆಹ್ಲಾದತೆಯನ್ನು ಒದಗಿಸುತ್ತದೆ.  ನಾನು ದೇವರ ಶ್ಲೋಕವನ್ನು ಹೇಳುತ್ತಾ ಹೂವನ್ನು ಕೀಳುತ್ತಿದ್ದರೆ ಆ ಮೌನದಲ್ಲಿ ನಾನು ಮತ್ತು ಆರಧಿಸುವ ಭಗವಂತ ಮಾತ್ರವೇ ಅಂತ ಭಾವನೆ ಬಂದು ಬಿಡುತ್ತದೆ. 

ಬೀದಿ ಶಾಂತವಾದಿದ್ದರೂ ನಮ್ಮ ಮನೆಯ ಪಕ್ಕದ ಮನೆಯಲ್ಲಿ ಕೆಲವೊಮ್ಮೆ ಗದ್ದಲ ಕೇಳಿಸುತ್ತಿರುತ್ತದೆ. ಅ ಮನೆಯಲ್ಲಿ ವಾಸಿಸುವಾತ ಕೆಲವು ಸಲ ಮದ್ಯ ಸೇವಿಸಿ ಬರುವುದೇ ಬೆಳಗಿನ ಜಾವ. ನಾನು ಎದ್ದೇಳುವ ಹೊತ್ತಿಗೆ ತೂರಾಡುತ್ತಾ ದ್ವಿಚಕ್ರವಾಹನದಲ್ಲಿ ಬರುತ್ತಾನೆ. ಆ ಹೊತ್ತಿಗೆ ಮದ್ಯಪಾನ ಪರೀಕ್ಷಿಸುವ ಪೋಲೀಸರು ಯಾರೂ ಇರುವುದಿಲ್ಲ ಅಂತ ಕಾಣುತ್ತದೆ. ಅಥವಾ ಎಲ್ಲಾದರೂ ಕುಡಿದು ಎಲ್ಲೊ ಉಳಿದು ರಾತ್ರಿ ಬರಲಾಗದೇ ಹೀಗೆ ಮುಂಜಾನೆ ಎದ್ದು ಬರುತ್ತಾನೆ. ಬಂದವನು ಮಲಗಿದ್ದ ಮನೆಯಾಕೆಯನ್ನು ಬಾಗಿಲು ಜೋರಾಗಿ ಬಡಿದೇ ಎಬ್ಬಿಸುತ್ತಾನೆ. ಬಾಯಿ ತೆಗೆದರೆ ಸಾಕು ಅವಾಚ್ಯ ಶಬ್ದಗಳ ಬೈಗುಳ ಅದೂ  ಆ ಮುಂಜಾನೆ ಕೇಳಿಸುತ್ತದೆ. ಭಗವಂತನ ಸ್ಮರಣೆಯಲ್ಲಿರಬೇಕಾದ ಹೊತ್ತಿನಲ್ಲಿ ಹೀಗೆ ಅಮಲೇರಿಸಿ ಕೆಟ್ಟದಾಗಿ ಬೈಯುತ್ತಿರುವುದನ್ನು ಕಂಡರೆ ಹಲವು ಸಲ ಮನಸ್ಸು ಮರುಗುತ್ತದೆ. ಮನೆಯೊಳಗೆ ಹೋದವನೇ  ದೊಡ್ಡದಾಗಿ ಸೌಂಡ್ ಬಾಕ್ಸ್ ನಲ್ಲಿ ಸಿನಿಮಾ ಹಾಡುಗಳನ್ನು ಹಾಕುತ್ತಾನೆ. ಇಷ್ಟೂ ಕೆಟ್ಟ ಹಾಡುಗಳು ಇವೆಯೇ ಅಂತ ಅನ್ನಿಸುತ್ತದೆ. ಅದನ್ನು ರಚಿಸಿದವರ ಬಗ್ಗೆ ತಾತ್ಸಾರ ಉಂಟಾಗುತ್ತದೆ ಹಲವು ಸಲ ಇಂತಹ ಸಂದರ್ಭಗಳಲ್ಲಿ ಹಾಡುಗಳು ಕೆಟ್ಟದು ಅಂತ ಅನ್ನಿಸುತ್ತದೆ .  ಇನ್ನು ಯಾರಾದರೂ ಎದ್ದು ನಿದ್ದೆಯ ಮಂಪರಿನಲ್ಲಿ ಹೊರಗೆ ಬಂದು ಸದ್ದು ಕಡಿಮೆ ಮಾಡುವಂತೆ ಹೇಳಿದರೆ ಮುಗಿದು ಹೋಯಿತು. ಬೈಗುಳಗಳ ಸುರಿಮಳೆಯಲ್ಲಿ ಅವರ ವಂಶ ಉದ್ದಾರವಾಗುವಂತೆ ಮಾಡಿಬಿಡುತ್ತಾನೆ. ಬಾಯಿ ತೆಗೆದರ ಅವ್ವನ್ ಅಂತ ಶುರು ಮಾಡುವ ಇವನಿಂದ ಹೆತ್ತ ಅಮ್ಮನಿಗೆ ಕೆಟ್ಟ ಬೈಗುಳಗಳನ್ನು ತಿನ್ನಿಸುವುದೇಕೆ ಅಂತ ಕೆಲವರು ಅಂಜಿ ಸುಮ್ಮನಿರುತ್ತಾರೆ. ಮನೆಯ ಫ್ಯಾನ್ ಜೋರಾಗಿ ಹಾಕಿ ಬಾಗಿಲು ಮುಚ್ಚಿ ಶಬ್ದಕೇಳಿಸದಂತೆ ಪ್ರಯತ್ನಿಸುತ್ತಾರೆ. ಆತನಿಗೆ ಯಾರ ಭಯವೂ ಇಲ್ಲ. ಅವನ ಅನಾಗರೀಕತೆಗೆ ಆತನಿಗೆ ಭಯ ಪಡುವ ಅಗತ್ಯವೂ ಇರುವುದಿಲ್ಲ. ಕೆಸರಿಗೆ ಕಲ್ಲು ಎಸೆಯುವ ಪ್ರಯತ್ನ ಯಾರೂ ಮಾಡದೇ ಆತ ಸ್ಚಚ್ಛಂದವಾಗಿ ಇದ್ದುಬಿಡುತ್ತಾನೆ. 

ಇಂದೂ ಸಹ ಎಂದಿನಂತೆ ಮುಂಜಾನೆ ಮನೆ ಎದುರು ಬಂದೆ. ಬೀದಿಯ ತುದಿಯಿಂದ ಪಕ್ಕದ ಮನೆಯಾತ ಬೈಕ್ ನಲ್ಲಿ ಬರುತ್ತಿದ್ದ. ಆ ರಾತ್ರಿಯೂ ದೊಡ್ಡದಾಗಿ ಹಾರ್ನ್ ಮಾಡುತ್ತಾ ಬಂದು ಮನೆ ಎದುರು ನಿಲ್ಲಿಸಿದ. ಮೊಬೈಲ್ ನಲ್ಲಿ ಯಾರೊಂದಿಗೋ ಅರಚಿ ಮಾತನಾಡುತ್ತಿದ್ದ. ಮಾತನಾಡುತ್ತಿದ್ದುದಕ್ಕಿಂತಲೂ ಜಗಳವಾಡುತ್ತಿದ್ದ. ಆ ಕೆಟ್ಟ ಭಾಷೆ ಆ ಮುಂಜಾನೆ ಕೇಳುವುದೇ  ಒಂದು ದುರ್ದೈವ. ಬೈಕ್ ಸ್ಟಾಂಡ್ ಹಾಕಿ ನಿಲ್ಲಿಸಿದ. ಹೀಗೆ ಹೇಳುವುದಕ್ಕಿಂತ ಬೈಕ್ ತಾನಾಗಿಯೇ ಸಾವರಿಸಿ ನಿಂತುಕೊಂಡಿತು ಎಂದರೆ ಸೂಕ್ತ. ಹಾಗೇ ನಿಂತವನು ಮೊಬೈಲ್ ಸಂಭಾಷಣೆಯಲ್ಲಿ ತಲ್ಲೀನನಾದರೂ ನನ್ನೆಡೆಗೆ ನೋಡುತ್ತಿದ್ದ. ನಾನು ಆತನ ಕಡೆಗೆ ಗಮನ ಹರಿಸುವುದನ್ನು ಬಿಟ್ಟು ನನ್ನ ಕೆಲಸದಲ್ಲಿ ನಿರತನಾದೆ. ಸಾಮಾನ್ಯವಾಗಿ ನಾನು ಆತನಲ್ಲಿ ಮಾತನಾಡುವುದಕ್ಕೆ ಹೋಗುತ್ತಿರಲಿಲ್ಲ. ಏನಿದ್ದರೂ ಪರಿಚಯದ ಕಿರುನಗುವಿಗೆ ಸೀಮಿತ. ಯಾಕೆಂದರೆ ಇಂತಹ ವ್ಯಕ್ತಿಗಳಿಂದ ದೂರವಿರುವುದು ನಮ್ಮ ಸ್ವಾಸ್ಥ್ಯಕ್ಕೆ ಉಚಿತ.  ಅಪ್ಪಿ ತಪ್ಪಿ ಒಂದೆರಡು ಹೆಚ್ಚು ಮಾತನಾಡಿದರೂ ಆತನ ಸಂಸ್ಕಾರ ಹೀನ ಮಾತುಗಳನ್ನು ಅರಗಿಸಿಕೊಳ್ಳುವ ಧೈರ್ಯ ನನ್ನಲ್ಲಿ ಇಲ್ಲ.   ನಾನು ಶ್ಳೋಕ ಪಠಣದಲ್ಲಿ ತಲ್ಲೀನನಾದೆ.

ಇನ್ನೇನು ಹೂ ಕೀಳುವುದು ಮುಗಿಸಿ ಮನೆಯೊಳಗೆ ಹೋಗಬೇಕು ಎನ್ನುವಾಗ ಆತ ಮೊಬೈಲ್ ಜಗಳವನ್ನು ನಿಲ್ಲಿಸಿ ನನ್ನ ಬಳಿಗೆ ಬಂದು ಶಿರ ಸೊಂಟ ಬಗ್ಗಿಸಿ ನಮಸ್ಕರಿಸಿ, "ನಮಸ್ಕಾರ"  ಎಂದ.  ನಾನು ಗಾಬರಿಯಾದೆ. ಇದನ್ನು ನಿರೀಕ್ಷಿಸಿರಲಿಲ್ಲ. ನಾನು ಮತ್ತೂ ದೂರ ಸರಿದು ನಮಸ್ಕಾರ ಎಂದು ಮನೆಯೊಳಗೆ ಕಾಲಿಡುವುದಕ್ಕೆ ಮುಂದಾದೆ. ಆತ ಹೇಳಿದ " ನೀವೆ ಪುಣ್ಯವಂತರು ಸಾರ್, ಬೆಳ್ಳಂ ಬೆಳಗ್ಗೆ ಎದ್ದು ಸ್ನಾನ ಮಾಡಿ ಪೂಜೆ ಮಾಡ್ತೀರಾ. ನಾನು ನೋಡಿ ಜಗಳ ಮಾಡ್ತಾ ಇದ್ದೇನೆ".  ನಾನು ಹೇಳಿದೆ, " ನೀನೂ ಭಗವಂತನ ನಾಮ ಸ್ಮರಣೆ ಮಾಡು ಸಾಕು. ಬದಲಾಗ್ತಿಯಾ. ಪೂಜೆ ಏನೂ ಖಡ್ದಾಯ ಅಲ್ಲ. ಭಕ್ತಿ ಶ್ರದ್ದೆ ಮುಖ್ಯ" ನಾನು ಹೆಚ್ಚಿಗೆ ಉಪದೇಶ ಕೊಡುವ ಕೆಲಸಕ್ಕೆ ಕೈ ಹಾಕುವುದಿಲ್ಲ. ಯಾಕೆಂದರೆ ಅದೆಲ್ಲ ವ್ಯರ್ಥ. ನಾವು ಶ್ರೇಷ್ಠರು ಅಂತ ತೋರಿಸಿಕೊಡುವುದಕ್ಕೆ ಹಲವು ಸಲ ಈ ಉಪದೇಶಗಳು ಬಳಕೆಯಾಗುತ್ತವೆ. ಉಪದೇಶ ಪಡೆದವನೂ ಬದಲಾಗಲ್ಲ, ಕೊಟ್ಟವನೂ ಅತ್ಯುತ್ತಮನೇನೂ ಅಲ್ಲ.  ಇದು ವಾಸ್ತವ. 

ಆತ ನಗುತ್ತ ಹೇಳಿದ, " ಇಲ್ಲ ಸಾರ್, ನಮಗೆ ಅದಕ್ಕೆ ಮನಸ್ಸು ಬರಲ್ಲ ಸಮಯವೂ ಸಿಗೋದಿಲ್ಲ. ನಾವು ಇರೋದೆ ಹೀಗೆ.  ಏನು ಮಾಡೋದು ಹೇಳಿ" ನನಗೆ ನಗು ಬಂತು. ಹೌದು ಹೀಗೆ ಮಾಡುವವರು ಇರೋದೇ ಹೀಗೆ. ಕೆಟ್ಟದ್ದು ಅಂತ ಗೊತ್ತಿದ್ದರೂ ಅದನ್ನೇ ಮಾಡುತ್ತಾರೆ. ;ಮತ್ತದನ್ನೇ ದೊಡ್ಡ ಮನಸ್ಸಿನಿಂದ ಅಂತ ಒಪ್ಪಿಕೊಳ್ಳುತ್ತಾರೆ. ಅದೊಂದು ರೀತಿ ಕರುಣೆ ಹುಟ್ಟಿಸಿ ದುರಂತ ನಾಯಕನಾಗುವ ಮನೋಭಾವ. ಸಿನಿಮಾದಲ್ಲಿ ಸಂಭಾಷಣೆಗಳು ಇರುತ್ತವೆ. " ನಾನೆಷ್ಟು ಕೆಟ್ಟವಾಂತ ಗೊತ್ತಿಲ್ಲ. ತಲೆ ಕೆಟ್ಟರೆ ನಾನು ಏನೂ ಮಾಡುತ್ತೇನೆ. ಸುಮ್ಮನೇ ಕೆಣಕಬೇಡ" ಕೆಟ್ಟದ್ದೂ ಅಂತ ಗೊತ್ತಿದ್ದರೂ ಅದನ್ನು ಮಾಡುವುದಕ್ಕೆ ಯಾರು ಕಾರಣ? ವಂಚನೆ ಮಾಡಿ ವಿಶಾಲ  ಮನಸ್ಸಿನಿಂದ ಅದನ್ನು ಒಪ್ಪಿಕೊಳ್ಳುವುದು ಒಂದು ರೀತಿ ಉಳಿದವರನ್ನೂ ವಂಚಿಸಿದಂತೆ. ಕೆಟ್ಟದ್ದು ಮಾಡುವವರಿಗೆ ಗೊತ್ತಿರುತ್ತದೆ ನಾನು ಕೆಟ್ಟದ್ದನ್ನೇ ಮಾಡುತ್ತೇನೆ ಎಂದು. ಕಳ್ಳನಿಗೆ  ಕದಿಯುವುದು ತಪ್ಪು ಅಂತ ಗೊತ್ತಿರುತ್ತದೆ. ಅದಕ್ಕೆ ಅವನು ಕದಿಯುವಾಗ ಯಾರೂ ಇಲ್ಲದಾಗ ಕದ್ದು,  ಯಾರೂ ನೋಡದಂತೆ ಎಚ್ಚರ ವಹಿಸುತ್ತಾನೆ. ಅದರಂತೆ ಇದು. ಗೊತ್ತಿದ್ದು ಕೆಟ್ಟದ್ದು ಮಾಡುವುದಿದ್ದರೆ ಅದು ಕ್ಷಮಾರ್ಹವಾಗುವುದಿಲ್ಲ. ಆದರೂ ಅದನ್ನು ಒಪ್ಪಿಕೊಂಡು ಒಂದು ರೀತಿಯಲ್ಲಿ ಕಥಾನಾಯಕನಾಗುವ ಹಂಬಲ. 

ನಾನು ಆತನಿಗೆ ಹೇಳಿದೆ ಮನುಷ್ಯ ಒಳ್ಳೆಯವನಾಗಬೇಕಿದ್ದರೆ, ಪೂಜೆ ಹೋಮ ಹವನ ಮಾಡಲೇ ಬೇಕೆಂದೇನೂ ಇಲ್ಲ. ಅದು ವಿಧಾನ ಅಷ್ಟೇ. ವಾಲ್ಮೀಕಿ ಕೇವಲ ರಾಮ ನಾಮ ಹೇಳಿ ಮಹಾ ಋಷಿಯಾದ. ನೀನು ಅಷ್ಟೇ ಭಗವಂತನ ನಾಮ ಸ್ಮರಣೆ ಮಾಡು. ಬದಲಾಗುವ ಪ್ರಯತ್ನ ತನ್ನಿಂತಾನಾಗಿ ಪ್ರಚೋದನೆಯಾಗುತ್ತದೆ. ಅದರೆ ಅದು ಕಳ್ಳ ಕದಿಯುವುದಕ್ಕೆ ಹೋಗುವಾಗ ದೇವರ ಪ್ರಾರ್ಥನೆ ಮಾಡಿದಂತೆ ಆಗಬಾರದು ಅಷ್ಟೇ.  ಹೋಮ ಹವನ ಪೂಜೆ ಮಾಡಿದವರೆಲ್ಲರೂ ಒಳ್ಳೆಯವರು ಆಗುವುದಕ್ಕೆ ಸಾಧ್ಯವಿಲ್ಲ. ರಾಕ್ಷಸರೂ ತಪಸ್ಸು ಮಾಡಿಯೇ ಕೆಟ್ಟವರಾಗುತ್ತಿದ್ದರು. ಅದು ಅಹಂಕಾರದಿಂದ. ಮೊದಲು ನಮ್ಮೊಳಗಿರುವ ಅಹಂ ಎಂಬುದನ್ನು ಬಿಡಬೇಕು. ಅಹಂ ಎಂಬುದು ಕೆಟ್ಟದನ್ನೇ ಪ್ರಚೋದಿಸುತ್ತದೆ. ಮೊದಲು ಸನ್ಮನಸ್ಸು ಇರಬೇಕು. ಮತ್ತೆ ಸದ್ಭಾವನೆ ಇರಬೇಕು. ಮಾಡುವ ಕಾರ್ಯದಲ್ಲಿ ಉದ್ದೇಶ ಶುದ್ಧಿ ಇರಬೇಕು. ಆಗ ಕೆಟ್ಟ ಯೋಚನೆ ನಿನ್ನ ಬಳಿಗೆ ಬರುವುದಕ್ಕೂ ಹಿಂಜರಿಯುತ್ತದೆ. ನೀನು ಬಳಿಗೆ ಬರುವುದಕ್ಕೆ ಅಂಜಿದಂತೆ. ನಾನು ನಿನ್ನ ಸಂಪರ್ಕಕ್ಕೆ ಬಂದರೆ ನಾನು ಕೆಡಬಹುದು. ನನ್ನ ಪರಿಶುದ್ದಕ್ಕೆ ನಾನು ಎಲ್ಲದರಿಂದ ದೂರವಾಗಿ ಉಳಿದಂತೆ ನೀನು ಎಲ್ಲದರಿಂದ ದೂರಾಗಿ ನಿಲ್ಲು. ಪುಣ್ಯವಂತ ನಾಗುವುದಕ್ಕೆ ಬೇರೆ ಅರ್ಹತೆ ಬೇಡ. ಕೆಸರಲ್ಲಿ ಹುಟ್ಟಿದ ಕಮಲವೂ ಕೆಸರಿನಿಂದ ಹೊರಬರುವುದಕ್ಕೆ ಪ್ರಯತ್ನಿಸುತ್ತದೆ. ಆಗ ಅದಕ್ಕೆ ಸೂರ್ಯನ ದರ್ಶನವಾಗುತ್ತದೆ. ಪರಿಶುದ್ಧನಾಗುವುದೆಂದರೆ ಅದು ಭಗವಂತನ ಸಮೀಪಕ್ಕೆ ಹೋಗುವುದು ಎಂದು ಅರ್ಥ. ಹೊರತು ಅದು ಎಲ್ಲರಿಂದ ಪ್ರತ್ಯೇಕವಾಗುವುದಲ್ಲ.