Saturday, March 13, 2021

ಭಾವೈಕ್ಯ - ಭೇದ ಭಾವ

 

    ಯಾವುದೋ ದೇವಸ್ಥಾನಕ್ಕೆ ಹೋಗಿ ಬಂದ ಮಿತ್ರರೊಬ್ಬರು ಹೇಳಿದರು, ಅಲ್ಲಿ ನಿತ್ಯ ಗಣಪತಿ ದೇವರೇ ಇರುತ್ತಿತ್ತು. ಈ ಸಲ ಗಣಪತಿ ಅಂತ ನಮಸ್ಕಾರ ಮಾಡಿದೆ. ಮತ್ತೆ ನೋಡಿದರೆ ಅಲ್ಲಿ ಬೇರೆ ಯಾವುದೋ ಸುಬ್ರಹ್ಮಣ್ಯ ಹೀಗೆ ಯಾವುದೋ ಇತ್ತು.  ಗಣಪತಿ ದೇವರಿಗೆ ಮಾತ್ರ ನಮಸ್ಕರಿಸುವ ನಮಸ್ಕಾರ ಯಾವುದು ಅಂತ ಮತ್ತೆ ಯೋಚಿಸುವ. ಆದರೆ ನಾನು ಹೇಳಿದೆ, ಯಾಕೆ ಯೋಚನೆ ಸುಬ್ರಹ್ಮಣ್ಯನನ್ನೇ ಗಣಪತಿ ಅಂತ  ಕರೆದರಾಯಿತು. ಅದರಲ್ಲೇನು? ನಾನು ಕೊಟ್ಟ ಉತ್ತರ ಮೇಲ್ನೋಟಕ್ಕೆ ಸರಳವಾದರೂ ಅದರಲ್ಲಿ ಅವ್ಯಕ್ತವಾಗಿ ಆಧ್ಯಾತ್ಮಿಕ ಚಿಂತನೆ ಇತ್ತು. ಯಾಕೋ ದೇವರ ವಿಚಾರ ಬಂದಾಗ ನನಗೆ ಈ ಅಧ್ಯಾತ್ಮಿಕ ಚಿಂತೆ ಬಿಟ್ಟು ಆಚೆಗೆ ಯೋಚಿಸುವುದು ಕಷ್ಟವಾಗುತ್ತದೆ. ಮನುಷ್ಯ ಮೂರ್ಖನೋ ಮನುಷ್ಯನನ್ನು ಸೃಷ್ಟಿಸಿದ ಭಗವಂತನ ಇಚ್ಛೆಯ ವೆತ್ಯಾಸವೊ ತಿಳಿಯುವುದಿಲ್ಲ. ಹೀಗೆ ದೈವ ವೆತ್ಯಾಸದಲ್ಲಿ ಆಗುವ ಸಂಘರ್ಷ ಮನುಷ್ಯನ ಅಸ್ತಿತ್ವವನ್ನೇ ಪ್ರಶ್ನಿಸುತ್ತದೆ. 


ಇತ್ತಿಚೆಗೆ ಒಂದು ವಿವಾದ ಶಿವಫೂಜೆಯೋ ವಿಷ್ಣು ಪೂಜೆಯೋ? ಯಾವ ವಿಧಾನ?  ವಿವಾದ ತಾರಕಕ್ಕೆ ಏರುತ್ತದೆ? ವೈಷ್ಣವ ಶೈವ ಇದರ ಮೂಲ ವೆತ್ಯಾಸದ ಬಗ್ಗೆ ನನಗೆ ಇನ್ನೂ ಸಂದೇಹವಿದೆ. ಒಬ್ಬ ಪರಮಾತ್ಮ ಅದು ಹೇಗೆ ಭಿನ್ನವಾಗುತ್ತಾನೆ? ಭಾವ ವೆತ್ಯಾಸ. ಹೇಗೂ ಇರಲಿ ನನ್ನ ಅಜ್ಞಾನ ಇದ್ದರೂ  ಇರಬಹುದು. ಆದರೂ ಶಿವ ವಿಷ್ಣು ವಿವಾದಕ್ಕೆ ಕೊನೆಯಲ್ಲಿ ನ್ಯಾಯಾಲಯವೇ ಪ್ರವೇಶ ಮಾಡುತ್ತದೆ. ನ್ಯಾಯಾಲಯಕ್ಕೆ ಆಧ್ಯಾತ್ಮದ ಅರಿವು ಉಂಟೋ,  ಇಲ್ಲವೊ,  ಅದನ್ನು ದೃಷ್ಟಿಯಲ್ಲಿಟ್ಟು ನ್ಯಾಯಾಲಯ ಪ್ರವರ್ತಿಸಬಹುದೋ ಇಲ್ಲವೊ ತಿಳಿಯದು. ಆದರೆ ಇಲ್ಲಿ ನ್ಯಾಯಾಲಯ ಮಧ್ಯ ಪ್ರವೇಶ ಮಾಡುವುದು ಮನುಷ್ಯನ ಜಗಳ ನೋಡುವಾಗ! ಆದರೂ ನಮಗೆ ತೀರ್ಮಾನ ಬೇಕು. ತೀರ್ಮಾನವಾಗುವುದು ಶಿವ ಹೆಚ್ಚೋ ವಿಷ್ಣು ಹೆಚ್ಚೋ ಅಲ್ಲ. ನಮ್ಮ ಆರಾಧನೆ ತಪ್ಪೋ ಸರಿಯೋ ಇದರ ನಿರ್ಣಯವಲ್ಲ. ಮತ್ತೆ ಯಾವ ನಿರ್ಣಯ. ಮನಸ್ಸಿನ ವಿಕಲ್ಪ. ವಾಸ್ತವದಲ್ಲಿ ಅದಷ್ಟೇ ತೀರ್ಮಾನಿಸಲ್ಪಡುತ್ತದೆ.  ನಮ್ಮ ನಮ್ಮ ಭಾವ ವೆತ್ಯಾಸಗಳು ಗೆಲ್ಲುತ್ತವೆ ಇಲ್ಲ ಸೋಲುತ್ತದೆ. ಆದರೆ ದೈವತ್ವದಲ್ಲಿ ಇದು ಪ್ರಭಾವ ಶೂನ್ಯವಾಗಿರುತ್ತದೆ. ,ಮನುಷ್ಯನನ್ನು ದೇವರು ಸೃಷ್ಟಿಸಬಹುದು. ಆದರೆ ಮನುಷ್ಯ ದೇವರನ್ನು ಸೃಷ್ಟಿಸಿದರೆ ಅದು ಅಜ್ಞಾನವಾಗುತ್ತದೆ. 


ವಾದ ವಿವಾದದ ಬಗ್ಗೆ ಚರ್ಚೆಯಲ್ಲ. ಅದರ ಬಗ್ಗೆ ಸ್ವಾರಸ್ಯವೇ ಕಾಣುವುದಿಲ್ಲ. ಯಾಕೆಂದರೆ,   ದೇವರು ಅಂತ ಹೇಳುವಾಗ ಅಲ್ಲಿ ಎಲ್ಲವೂ ಒಂದಾಗಿ ಕಂಡಂತೆ. ಮನುಷ್ಯ ತನ್ನಲ್ಲಿ ಪರರಲ್ಲಿ ಮಾತ್ರವಲ್ಲ ವೆತ್ಯಾಸ ಗುರುತಿಸುವುದು, ಪರಮಾತ್ಮನಲ್ಲೂ ಗುರುತಿಸುತ್ತಾನೆ. ಅದು ಮನುಷ್ಯ ಸಹಜ ಚಿಂತನೆ. ಧ್ಯಾನದಲ್ಲಿ ಇದಾವುದು ಭಿನ್ನವಾಗಿ ಗೋಚರಿಸುವುದಿಲ್ಲ.   ಗೋಚರಿಸಿದರೆ ಅದು ಏಕಾಗ್ರತೆ ಕಳೆದುಕೊಂಡಂತೆ. ಶಿವನೋ ವಿಷ್ಣುವೋ ಗಣಪತಿಯೋ ಸುಬ್ರಹ್ಮಣ್ಯನೋ  ಈ ಗೊಂದಲದಲ್ಲಿಯೇ ಮನಸ್ಸು ಇರುತ್ತದೆ ಹೋರತು ಪರಮಾತ್ಮ ಸಾಕ್ಷಾತ್ಕಾರ ಸಾಧ್ಯವಾಗುವುದಿಲ್ಲ.  ಇಲ್ಲಿ ಎಲ್ಲವೂ ಒಂದೇ  ಅದೇ ಎರಡಲ್ಲದ ಅದ್ವೈತ ಅಂತ ಭಾವನೆ. ಜನಪ್ರಿಯ ನಟನೊಬ್ಬ ರಂಗದ ಮೇಲೆ, ಇಂದು ವಿಷ್ಣುವಾಗಿ ಅಭಿನಯಿಸಬಹುದು. ನಾಳೆ ಶಿವನಾಗಿ , ಮತ್ತೊಂದು ದಿನ ಯಾವುದೋ ರಕ್ಕಸನಾಗಿ ಅಥವಾ ಇನ್ನಾವುದೋ ವೇಶವಾಗಿ ಅಭಿನಯಿಸಬಹುದು. ಎಲ್ಲದರಲ್ಲೂ  ಪ್ರೇಕ್ಷಕನಿಗೆ ಗೋಚರವಾಗುವುದು ನಟನ ವ್ಯಕ್ತಿತ್ವ . ಆನಂತರ ಪಾತ್ರದ ವ್ಯಕ್ತಿತ್ವ. ಹೀಗೆ ದೇವರು ಒಬ್ಬ ಜನಪ್ರಿಯ ನಟನಾಗುತ್ತಾನೆ. ನಾವು ನಟನನ್ನೆ ಗುರುತಿಸಬೇಕು. ವೇಶವನ್ನಲ್ಲ. ರಂಗದಲ್ಲಿ ನಟನನ್ನು ಗುರುತಿಸುವವನು ಆ ರಂಗದ ಸ್ಥಿರ ಪ್ರೇಕ್ಷಕನಾಗಿರುತ್ತಾನೆ ಎಂಬುದು ಸತ್ಯ.  ಯಾವಾಗಲೊ ಒಂದು ಸಲ ಬಂದು ನೋಡುವವನಿಗೆ ನಟನ ಪರಿಚಯ ಸಿಗುವುದಿಲ್ಲ. ಹೀಗಾಗಿ ಧ್ಯಾನ ಎಂಬುದು ಅವಿರತ ಸಾಧನೆಯಾಗುತ್ತದೆ.  


ರಸ್ತೆಯಲ್ಲಿ ಹೋಗುವಾಗ ಯಾರೋ ಒಬ್ಬ ಹಳೆಯ ಪರಿಚಿತ ಸಿಗುತ್ತಾನೆ. ಅತನಿಗೆ ನಿಮ್ಮ ಪರಿಚಯ ಸಿಗುವುದಿಲ್ಲ. ನಿಮಗೆ ಹೌದೋ ಅಲ್ಲವೋ ಎಂಬ ಅನುಮಾನ ಇರುತ್ತದೆ. ಆತ ಹತ್ತಿರ ಬಂದಾಗ ಆತನ ಹೆಸರನ್ನು ಯೋಚಿಸುತ್ತಾ ಉಳಿಯುವುದಲ್ಲ. ಯಾವುದಾದರೂ ರೂಪದಲ್ಲಿ ಉಚ್ಚಾರದಲ್ಲಿ ಆತನನ್ನು ಕರೆದು ಗಮನ ಸೆಳೆಯಬೇಕು. ಆತನ ಹೆಸರೇನೋ ಅಂತ ಯೋಚಿಸುತ್ತಾ ಇದ್ದರೆ ಆತ ನಿಮ್ಮಿಂದ ಸರಿದು ಮುಂದೆ ಹೋಗಬಹುದು. 

    ಪರಮಾತ್ಮನನ್ನು ಯಾವುದೇ ಹೆಸರಿನಿಂದ ಕರೆದರೂ ಅಲ್ಲಿ ಪರಮಾತ್ಮ ಎಂಬ ಭಾವ ಅತ್ಯವಶ್ಯ. ವಾಸ್ತವದಲ್ಲಿ ದೇವರ ಹೆಸರು ಕಳ್ಳನಿಗೂ ಇರುತ್ತದೆ. ಅದೇ ಹೆಸರು  ಸತ್ಯವಂತನಿಗೂ ಇರುತ್ತದೆ. 


ಮುಂಜಾನೆ ಮೊದಲ ಜಾವದಲ್ಲೇ ಎದ್ದು  ಶುಚಿಯಾಗಿ,    ಉದಯಿಸಲಿರುವ ಸೂರ್ಯನನ್ನೇ ಸ್ಮರಿಸಿ ಅರ್ಘ್ಯ ಆಚಮನಾದಿಗಳನ್ನು ಪೂರೈಸಿ ದೇಹದೊಂದಿಗೆ ಮನಸ್ಸೂ ಶುದ್ಧೀಕರಣವಾಯಿತು ಎಂಬ ಭಾವದಲ್ಲಿ ಗಾಯತ್ರೀ ಮಂತ್ರದ ಧ್ಯಾನದಲ್ಲಿ ತಲ್ಲೀನವಾಗುವಾಗ, ಸುತ್ತಲೂ ನೀರವ ಮೌನ ಅಲ್ಲೊಂದು ಇಲ್ಲೊಂದು  ಚಿಕ್ಕ ಪುಟ್ಟ ಸದ್ದು ಬಿಟ್ಟರೆ ತನ್ನ ಉಸಿರಿನ ಸದ್ದು ಮಾತ್ರ ಕೇಳಿಸುತ್ತದೆ. ಪೂರಕ ರೇಚಕದ ಉಸಿರಿನಲ್ಲೇ ಮಗ್ನವಾಗಿ ಕಣ್ಣು ಮುಚ್ಚುವಾಗ ಮನಸ್ಸಿನ ಭಾವನೆಗಳೆಲ್ಲ ಶೂನ್ಯವಾಗುತ್ತದೆ. ಸುಖ ದುಃಖ ನೊವು ಯಾವುದೂ ಇಲ್ಲದ ಹಂತಕ್ಕೆ ಮನಸ್ಸು ಎಳೆಯುತ್ತಾ ಇರುತ್ತದೆ. ಯಾಕೆಂದರೆ ಅಲ್ಲಿ ಅದಾವುದಕ್ಕೂ ಸ್ಪಂದನೆ ಇರುವುದಿಲ್ಲ.  ಧ್ಯಾನ ಎಂದರೆ ಅದು. ಅಲ್ಲಿ ಯಾವುದೇ ಬೇಡಿಕೆಗಳು ಇರುವುದಿಲ್ಲ. ಯಾವುದೇ ಪೂರೈಕೆಯ ಹಂಬಲ ಇರುವುದಿಲ್ಲ. ದೇಹವಿಡೀ ಸ್ವತಂತ್ರವಾದ ಅನುಭವ. ಕೇವಲ ನಾನು. ಅದು ಎಲ್ಲಿ ಕಳೆದು ಹೋಗುತ್ತದೋ ಎಂಬ ಅರಿವು ಇರುವುದಿಲ್ಲ. ಇಷ್ಟರಲ್ಲೇ ಪರಮಾತ್ಮನ ದರ್ಶನವಾದಂತೆ, ಅಥವಾ ಮನಸ್ಸು ಹೇಳುತ್ತದೆ ಆ ದಿವ್ಯ ಅನುಭೂತಿಯೇ ಪರಮಾತ್ಮ. ಅನುಭವಿಸು.  ರೂಪ ಭಾವವಿಲ್ಲದ ಅಗೋಚರ ಶಕ್ತಿ ಮನಸ್ಸಿನ ಭಾವನೆಗೆ ಮಾತ್ರ ಸ್ಪಂದಿಸುತ್ತದೆ. ದರ್ಶನ ಕೊಡುತ್ತದೆ. ಎಲ್ಲವನ್ನು ಬದಿಗಿಟ್ಟಷ್ಟೂ ಇಲ್ಲಿ ಅನುಭವ ಹೆಚ್ಚಾಗುತ್ತದೆ. ಹೇಗೆ ಸರೋವರದ ತುಂಬಿದ ನೀರಲ್ಲಿ ಮುಳುಗುತ್ತೇವೊ ಹಾಗೆ ನಾವು ಕುಗ್ಗಿದಷ್ಟು ಈ ಅನುಭೂತಿ ಹೆಚ್ಚುತ್ತಾ ಹೋಗುತ್ತದೆ. ನಿಜವಾದ ಭಕ್ತಿ ಎಂದರೆ ಹಾಗೆ. ಅಲ್ಲಿ ದೇವರಲ್ಲಿ ಬೇಡಿಕೊಳ್ಳುವುದು ಏನೂ ಇರುವುದಿಲ್ಲ.  ಪುಟ್ಟ ಮಗು ನಿದ್ದೆಯಿಂದ ಎದ್ದು ಅಳುತ್ತದೆ.  ಒಂದು ಅಳುವಿಗೆ ಅಮ್ಮ ಬರುವುದಿಲ್ಲ. ಮತ್ತೂ ಜೋರಾಗಿ ಅಳುತ್ತದೆ. ಅಮ್ಮ ಇಲ್ಲ. ಮತ್ತೂ ಕಿರುಚುವಾಗ ಅಮ್ಮ ಓಡೋಡಿ ಬರುತ್ತಾಳೆ.  ಮಗುವಿಗೆ ಏನೋ ಬೇಕೆಂದು ...ಹಾಲು ಕೊಡುತ್ತಾಳೆ...ಮಗು ಬೇಡ ಅಂತ ತಲೆ ವಾಲಿಸುತ್ತದೆ. ಆಟ ಬೇಕಾ? ಅದೂ ಬೇಡ ಮಗುವಿಗೆ ಯಾವುದು ಬೇಕು ಎಂದು ಯೋಚಿಸಿದರೆ ಯಾವುದೂ ಬೇಡ. ಆದರೂ ಅದು ಅತ್ತಿತು. ಅದು ಬೆಚ್ಚಗೆ ಅಮ್ಮನನ್ನು ತಬ್ಬಿ ಹಿಡಿದು ಅಮ್ಮನ ತೋಳಲ್ಲಿ ಹಾಗೇ ಸುಮ್ಮನಾಗುತ್ತದೆ. ಹೀಗೆ ಯಾವುದೇ ವಾಂಛೆಯಿಲ್ಲದ ಒಂದು ಬಯಕೆ. ಧ್ಯಾನ ಮಗುವಿನ ಮನಸ್ಥಿತಿಗೆ ಸಮನಾಗಿರುತ್ತದೆ. 


ಮನಸ್ಸಿನಲ್ಲಿ ಬಯಕೆಯನ್ನು ಇರಿಸಿಕೊಂಡು ಹರಕೆ ಹಾಕಿ ಈ ಬಯಕೆ ಆಶೆಗಳನ್ನು ಪೂರೈಸಿಕೊಡು ಅಂತ ಪರಮಾತ್ಮನಿಗೆ ಕೈ ಮುಗಿಯುವಾಗ, ನಮ್ಮ ಗಮನವೆಲ್ಲ ನಮ್ಮ ಆಶೆಗಳಲ್ಲೇ ಕೇಂದ್ರೀಕೃತವಾಗುತ್ತದೆ. ಅದು ಸಾಧು ಅಸಾಧುವೋ ಎಂಬ ಆತಂಕ ಎದುರಾಗುತ್ತದೆ. ಆ ಬಯಕೆ ಈಡೇರುತ್ತದೊ ಇಲ್ಲವೋ ಎಂಬ ಸಂದೇಹದಲ್ಲಿ ಭಕ್ತಿ ಗಾಢವಾದಂತೆ ಭಾವಿಸಿದರೂ ಅಲ್ಲಿ ಪರಮಾತ್ಮ ಅಸ್ತಿತ್ವ ಇರುವುದಿಲ್ಲ.  ಹಲವು ಸಲ ಈ ಅ ಬಯಕೆಗಳಿಗೆ ಹೊಂದಿಕೊಂಡು ಮನಸ್ಸು ಉದ್ವಿಗ್ನವಾಗಿರುತ್ತದೆ. ಸಿಟ್ಟು ದುಃಖ ಸಂತೋಷ ಹೀಗೆ ಯಾವುದೋ ಭಾವ ಮನಸ್ಸನ್ನು ವ್ಯಾಪಿಸಿರುತ್ತದೆ. ಆದರೆ ನಿಜವಾದ ಪರಮಾತ್ಮ ಅನುಭೂತಿ ಬರಬೇಕಾದರೆ ಈ ಎಲ್ಲ ಬಯಕೆ ದುಮ್ಮಾನ ಸಂಕಟಗಳಿಂದ ಆಚೆಗೆ ನಮ್ಮ ಮನಸ್ಸು ಸೆಳೆಯಲ್ಪಡಬೇಕು. ಅದು ಭಾವ ರಹಿತವಾಗಿ ಸಂಪೂರ್ಣ ಖಾಲಿಯಾಗಬೇಕು. ಪರಿಶುದ್ಧವಾದ ಹಾಲನ್ನು ಪಾತ್ರೆ ಸ್ವಚ್ಛಗೊಳಿಸಿ ಹಾಕಿದಂತೆ,  ಯಾವುದೇ ಒಂದು ಕಲ್ಮಷ ಇದ್ದರೂ ಹಾಲು ಕೆಟ್ಟು ಹೋಗುತ್ತದೆ. ಇಲ್ಲಿ ಪರಮಾತ್ಮ ಸದೃಶ ಹಾಲು ಹಾಕಬೇಕಾದರೆ ನಮ್ಮ ಮನಸ್ಸು ಕಲ್ಮಷರಹಿತವಾಗಬೇಕು. ಭಾವರಹಿತವಾಗಿರಬೇಕು. ಕ್ರೋಧ, ದುಃಖ, ನಗು ಹೀಗೆ ಯಾವುದೇ ಭಾವೋದ್ವೇಗ ರಹಿತವಾಗಬೇಕು.   ಅನ್ಯಥಾ ಪರಮಾತ್ಮ ದರ್ಶನ ಸಾಧ್ಯವಾಗುವುದಿಲ್ಲ. ಎಲ್ಲ ಬಯಕೆಯನ್ನು ಇಲ್ಲವಾಗಿಸಿ ತೆದೇಕ ಚಿತ್ತದಿಂದ ಉಸಿರಲ್ಲೇ ಕೇಂದ್ರೀಕರಿಸಿ ಅಲ್ಲೇ ಲೀನವಾಗುವಾಗ ನಮ್ಮೋಳಗೇ ಉಂಟಾಗುವ ದಿವ್ಯ ಅನುಭವ ಅದೇ ಅದೇ  ಅದ್ವೈತ ಅನುಭವ. ಇಲ್ಲಿ ಎರಡು ಇರುವುದಕ್ಕೆ ಸಾಧ್ಯವಿಲ್ಲ. ಒಂದೇ ಒಂದೇ. ಧ್ಯಾನ ಎಂದರೆ ಲೀನವಾಗುವುದು. ಲೀನ ತಲ್ಲೀನವಾಗಬೇಕು. 

ಸತ್ಯಂ ಶಿವಂ ಸುಂದರಂ






Wednesday, January 27, 2021

ರಾಮ ಸರ್ವಾಂತರ್ಯಾಮಿ


"ನಮ್ಮ ಮನಸ್ಸಿನಲ್ಲಿ ಇಲ್ಲದೇ ಇರುವ ಪರಮಾತ್ಮನನ್ನು ನಾವು ಸರ್ವಾಂತರ್ಯಾಮಿ ಎನ್ನುತ್ತಿದ್ದೇವೆ.  "

 

ಚಿತ್ರಕಾರನಿಗೆ ಧನ್ಯವಾದಗಳು

ಸತ್ಯ ಕಹಿ ಅಂತ ಮೂರ್ಖರು ಹೇಳುವ ಮಾತು. ಸತ್ಯ ಕಹಿಯೂ ಅಲ್ಲ ಸಿಹಿಯೂ ಅಲ್ಲ ಅದು ಕೇವಲ ಸತ್ಯವಾಗಿಯೇ ಇರುತ್ತದೆ. ಹಾಗಾಗಿಯೇ ಅದು ಸತ್ಯ ಎಂದಾಗುವುದು. ಸತ್ಯವನ್ನು ಕಹಿ ಅಂತ ಅರಗಿಸಿಕೊಳ್ಳಲಾಗದೇ ಇರುವಲ್ಲಿ ಸತ್ಯದ ಹಿನ್ನೆಲೆಯನ್ನು ತರ್ಕಿಸಲಾಗುತ್ತದೆ. ಪರೀಕ್ಷಾ ರಂಗದಲ್ಲಿ ಕರ್ಣ ಅರ್ಜುನನಿಗೆ ಸಮದಂಡಿಯಾಗಿ ಪ್ರದರ್ಶನ ನೀಡಿದ್ದು ಸತ್ಯ. ಆದರೆ ಆ ಸತ್ಯ ಅಲ್ಲಿ ಅಪ್ರಸ್ತುತವಾಗಿ ಕರ್ಣನ ಹಿನ್ನೆಲೆಯನ್ನು ಕೆದಕಲಾಯಿತು. ತೀರ ಅವಶ್ಯಕವಿದ್ದಲ್ಲಿ ಈ ಸತ್ಯವನ್ನು ಕೆದಕುವುದಿಲ್ಲ.  ಸತ್ಯ ಯಾವಾಗಲೂ ಅಬಾಧಿತವಾಗಿರುವುದು. ಅದು ಬಾಧೆಗೆ ಒಳಗಾದಂತೆ ಭಾಸವಾಗುವುದು ನಮ್ಮ ದೃಷ್ಟಿಯಿಂದ.

ರಾಮನು ಕಾಡಿಗೆ ಹೋದನು. ರಾಮ ಎಂದು ಬರುವಾಗ ಅಲ್ಲಿ ಅಯೋಧ್ಯೆಗಿಂತಲೂ ಮೊದಲು ಸ್ಮರಣೆಗೆ ಬರುವುದೆಂದರೆ ಅದು ಕಾಡು. ಹಾಗಾಗಿ ರಾಮನು ಕಾಡಿಗೆ ಹೋದನು. ಮೂರ್ಖನಾದವನು ಚಿಂತಿಸುವ ರೀತಿಯೇ ಬೇರೆ. ರಾಮ ಇದ್ದನೇ?  ರಾಮಾಯಣ ನಡೆದದ್ದು ನಿಜವೇ? ಕಾಡಿನಲ್ಲಿ ಇದ್ದದ್ದು ಸತ್ಯವೇ? ಹೀಗೆ ರಾಮನ ಹಿಂದಿನ ಸತ್ಯವನ್ನೇ ಕೆದಕುವುದು.ಯಾಕೆಂದರೆ ರಾಮನ ಅಸ್ತಿತ್ವ ಸಹಿಸುವುದಕ್ಕೆ ಆಸಾಧ್ಯವಾಗುತ್ತದೆ. ರಾಮನ ಅಸ್ತಿತ್ವದ ಬಗ್ಗೆ ಚಿಂತಿಸುವ ಮೊದಲು ರಾಮ ತತ್ವವನ್ನು ಯೋಚಿಸಬೇಕು. ರಾಮನಿಗಿಂತಲೂ ಸತ್ಯ ರಾಮ ತೋರಿಸಿದ ತತ್ವಗಳು. ಈ ತತ್ವಗಳು ಕಹಿಯಾಗುವಾಗ ರಾಮ ಎನ್ನುವುದು ಸುಳ್ಳಾಗಿ ಭಾಸವಾಗುತ್ತದೆ.

ರಾಮ ಕಾಡಿಗೆ ಹೋದನು.  ರಾಮನಿಗೆ ಜನನದಿಂದ ಕಾಡು ಹತ್ತಿರವಾಗಿರುತ್ತದೆ. ರಾಮ ಕಥೆಯಲ್ಲಿ ಕಾಡು ಒಂದು ಪ್ರಮುಖ ಅಂಶವಾಗಿದೆ.  ರಾಮಾಯಣದ ಪ್ರತಿಹಂತದಲ್ಲು ಒಂದಲ್ಲ ಒಂದು ವಿಧದಲ್ಲಿ ವ್ಯಕ್ತಿತ್ವ ಕಾಡಿಗೆ ಅಂಟಿಕೊಂಡೇ ಇರುತ್ತದೆ. ಆದಿಯಲ್ಲಿ ಯಜ್ಞ ರಕ್ಷೆಗೆ  ವಿಶ್ವಾಮಿತ್ರರು ಕಾಡಿಗೆ ಕರೆದೊಯ್ಯುತ್ತಾರೆ. ನಂತರ ವನವಾಸ. ಇಲ್ಲಿರುವ ತತ್ವ ರಾಮನಿಗೆ ಕಾಡು ಎಷ್ಟು ಹತ್ತಿರವಾಗಿದೆ ಎಂದಾಗಿರುತ್ತದೆ. ಸೀತೆಯನ್ನು ಕಾಡಿಗೆ ಅಟ್ಟಿದನು. ಸೀತೆಗೆ ಅನ್ಯಾಯವಾಯಿತು. ಹೆಣ್ಣು ಯಾವತ್ತಿದ್ದರೂ ಶೋಷಿತಳು ಹೀಗೆ ವಿಶ್ಲೇಷಿಸುವಾಗ ರಾಮನಿಗೂ ಕಾಡಿಗೂ ಇರುವ ಸಂಬಂಧವನ್ನು ಯೋಚಿಸುವುದಿಲ್ಲ. ಯಾಕೆಂದರೆ ತತ್ವ ಕಠಿಣವಾದಾಗ ಅದರ ಹಿಂದಿನ ಸತ್ಯ ಕಹಿಯಂತೆ ಭಾಸವಾಗುತ್ತದೆ. 

ಬಾಲ್ಯದಲ್ಲಿ ನಾನು. ಸಿನಿಮಾಕ್ಕೆ ಹೋಗಿದ್ದೆ. ಸಿನಿಮಾ ಎಂದರೆ ಏನು ಅಂತ ತಿಳಿಯದು. ತೆರೆಯ ಮೆಲೆ ಚಿತ್ರ ವಿಚಿತ್ರ ನೋಡಿ ಬೆರಗಾದೆ. ಚಿತ್ರದ ಕಥೆಯ ಬಗ್ಗೆ ಯೋಚಿಸಲಿಲ್ಲ. ವಿರಾಮದ ವೇಳೆಯಲ್ಲಿ ಟಾಕೀಸ್ ಹಿಂಭಾಗ ಹೋಗಿ ನೋಡಿದೆ...ಸಿನಿಮಾದಲ್ಲಿ ಬಂದ ಮಂದಿ ಅಲ್ಲೆಲ್ಲಾದರೂ ಕಾಣ ಸಿಗುತ್ತಾರೆಯೇ? ನನ್ನಂತೆ ಹಲವರು ಇಣುಕಿ ನೋಡುತ್ತಿದ್ದರು...! ನಮಗೆ ಕಥೆಗಿಂತಲೂ ವಿಚಿತ್ರವಾದ ವಿಷಯ ಬೇರೆಯೇ ಆಗಿತ್ತು. ಸಿನಿಮಾದಲ್ಲಿ ಯಾವ ಸಂದೇಶ ಬಂದರೇನು? ನಮಗದು ಬೇಡ. ನಾವು ತೆರೆಯ ಹಿಂದಿನ ಸತ್ಯ ಹುಡುಕುತ್ತಾ ಹೋದೆವು.

            ಶ್ರೀ ರಾಮನಿಗೆ ಆಯೋಧ್ಯಾ ನಗರಕ್ಕೂ ದಂಡಕಾರಣ್ಯಕ್ಕೂ ವೆತ್ಯಾಸವೇ ಇರಲಿಲ್ಲ.  ಶರೀರಾದ್ಯಂತದಲ್ಲಿ ಮೇಲೆ ಇರುವ ಕೈಗೂ  ಕೆಳಗಿರುವ ಪಾದಕ್ಕೂ ವೆತ್ಯಾಸ ಕಲ್ಪಿಸುವವನು ಮೂರ್ಖನಾಗುತ್ತಾನೆ. ನೋವಾದರೆ ಕೈಗಾದರೇನು ಕಾಲಿಗಾದರೇನು ಸಹಿಸುವುದು ದೇಹವೇತಾನೇ? ಸಮಸ್ತ ಭೂಮಿಯೇ  ಶ್ರೀರಾಮನಿಗೆ ದೇಹವಿದ್ದಂತೆ.  ಇಂದು ಜನಪ್ರತಿನಿಧಿಗಳಾದ ಕೂಡಲೇ ರಾಜಧಾನಿಯನ್ನೇ ಸ್ವಂತ ಮನೆಯಂತೆ ಕಾಣುವ ಮಂದಿಗೆ ರಾಮನ ಈ ತತ್ವದ ಆಳ ಅರಿವಾಗುವುದಿಲ್ಲ.  ಕಾಡಿಗೆ ಹೋಗುವಲ್ಲಿ ಕೈಕೇಯಿ ಮಂಥರೆ ಇದಾವುದೂ ಮುಖ್ಯವೆನಿಸಲಿಲ್ಲ.  ಪಿತೃವಾಕ್ಯ ಎಂಬುದು ಒಂದು ತತ್ವವಾದರೆ ಕಾಡು ತನ್ನದೆಂಬ ಕರ್ತವ್ಯ ಮಮಕಾರ ಇನ್ನೊಂದೆಡೆ. ಹಾಗಾಗಿ ಅಯೋಧ್ಯೆಯ ಬೀದಿಗಳಂತೆ ದಂಡಕಾರಣ್ಯದ ಗುಡ್ಡ ಕಣಿವೆಗಳು.

ಯಾರೋ ಒಬ್ಬ ಯಃಕಶ್ಚಿತ್  ಅಗಸನ ಮಾತನ್ನು ಕೇಳಿ ಸೀತೆಯನ್ನು ಕಾಡಿಗೆ ಬಿಟ್ಟ. ಇದು ಅಮಾನವೀಯತೆ ಅಂತ ಬಣ್ಣಿಸುವುದು ಸುಲಭ.  ಸೀತೆಯನ್ನು ಬೇರೆಲ್ಲೂ ಬಿಡಲಿಲ್ಲ, ತನಗೆ ಪ್ರಿಯವಾದ ಕಾಡನ್ನೇ ಆಯ್ಕೆ ಮಾಡಿದ್ದ. ತನ್ನೊಂದಿಗಿನ ಹದಿನಾಲ್ಕು ವರ್ಷದ ವನವಾಸದಲ್ಲಿ ಕಾಡು ಎಂದರೇನೆಂದು ಆಕೆಗೆ ಶ್ರೀರಾಮ ತೋರಿಸಿಕೊಟ್ಟ ಮೇಲೆ ಕಾಡಿಗೆ ಬಿಡುವ ತತ್ವವೇ ಪವಿತ್ರವಾಗಿರುತ್ತದೆ. ಅರಸನಾದವನು  ಕೇವಲ ಒಬ್ಬ ಮನುಷ್ಯನ ಮಾತಿಗೆ ಮನ್ನಣೆ ಕೊಡುತ್ತಾನೆ ಎಂದರೆ ಈಗಿನ ಆಢಳಿತ ಮಂದಿಗಳನ್ನು ನೋಡಿ ಕೇಳಬೇಕಾದವರ ಮಾತೇ ಇವರಿಗೆ ಕೇಳಿಸುವುದಿಲ್ಲ.!! ರಾಮನ ತತ್ವ ಇನ್ನೂ ಆಳಕ್ಕೆ ಯೋಚಿಸಬೇಕು. ಶ್ರೀ ರಾಮ ಕೇವಲ ರಾವಣ ಸಂಹಾರಕ್ಕಾಗಿ ಬರಲಿಲ್ಲ. ಸೀತೆಯನ್ನು ವರಿಸುವುದಕ್ಕಾಗಿ ಅವತರಿಸಲಿಲ್ಲ ತಾನು ಅಧಿಕಾರದಲ್ಲಿದ್ದರೇನು, ತನ್ನ ಅಷ್ಟೂ ಮಂದಿ ಪ್ರಜೆಗಳಲ್ಲಿ ಒಬ್ಬ ತನ್ನ ಬಗ್ಗೆ ಅಪಸ್ವರ ಎತ್ತುತ್ತಾನೆ ಎಂದಾಗ ರಾಮ ಅದಕ್ಕೆ ಪೂರಕವಾಗಿಯೇ ತನ್ನ ನಡೆಯನ್ನು ತೋರಿಸಿದ. ಉನ್ನತವಾದ ಸ್ಥಾನ ಉನ್ನತಿಯನ್ನು ತೋರುವುದೆಂದರೆ ಹೀಗೆ. ನಾವು ಉನ್ನತವಾದ ಸ್ಥಾನದಲ್ಲಿ ಎಲ್ಲರಿಗೂ ಕಾಣುವಂತಿರುವಾಗ ಬಹುಮತವನ್ನು ಪರಿಗಣಿಸುವುದಲ್ಲ, ಸರ್ವಾನುಮತವನ್ನು ಅಂಗೀಕರಿಸಬೇಕು. ರಾಮ ಮತ್ತು ರಾಮನ ಹಾದಿಯನ್ನು ಅನುಸರಿಸುವಾಗ ಈ ಅಂಶಗಳೇ ಪ್ರಧಾನವಾಗಿರುತ್ತವೆ. ತಮ್ಮ ಬಗೆಗಿನ ಒಂದು ಅಪಸ್ವರವನ್ನೂ ಮನ್ನಿಸಬೇಕಾಗುತ್ತದೆ. ಇದನ್ನು ರಾಮ ತಾನು ಆಚರಿಸಿ ತೋರಿಸಿದರೆ ಇಂದಿನ ಉನ್ನತ ವ್ಯಕ್ತಿಗಳನ್ನು ಗಮನಿಸಿ ರಾಮನ ಅನುಸರಣೆಗೆ ಎಷ್ಟು ಮನ್ನಣೆ ಒದಗಿಸುತ್ತಾರೆ ಎಂದು ಅರಿವಾಗುತ್ತದೆ.   ಸ್ವರವೋ ಅಪಸ್ವರವೊ ವಿರುದ್ಧವಾಗಿದ್ದವುಗಳನ್ನು ದಮನ ಮಾಡಲಾಗುತ್ತದೆ. ರಾಮನ ಮಹಿಮೆಯನ್ನು ಹೊಗಳಿ ದೇವರೆಂದು ಪೂಜಿಸುವಾಗ ರಾಮ ಅಗಸನ ವಿಚಾರದಲ್ಲಿ ನಡೆದುದನ್ನು ಗಮನಿಸಬೇಕು.  ರಾಮ ಭಜನೆಗಿಂತ ರಾಮ ತತ್ವವನ್ನು ಅನುಸರಿಸಬೇಕು. ಅದುವೇ ಶ್ರೇಷ್ಠ. ಮತ್ತದು ಬಹಳ ಕಷ್ಟ.

ರಜನೀಶರ ಪುಸ್ತಕ ಒಂದರಲ್ಲಿ ಓದಿದ ನೆನಪು. ಎಲ್ಲಿ ಕಾಮವಿರುತ್ತದೋ ಅಲ್ಲಿ ರಾಮನಿರುವುದಿಲ್ಲ. ಬಹಳ ಸರಳವಾದ ತತ್ವ ಇದು.  ರಾಮ ಎಂದರೆ ಪರಮಾತ್ಮ. ಎಲ್ಲಿವರೆಗೆ ನಮ್ಮ ದೇಹದಲ್ಲಿ ಕಾಮನೆ ಇರುವುದೋ ಅಲ್ಲಿ ತನಕ ರಾಮನ ಅಸ್ತಿತ್ವ ಇರುವುದಿಲ್ಲ. ಕಾಮ ಎಂದರೆ ಎಲ್ಲ ವಾಂಛಿತ ಬಯಕೆಗಳು.   ದೇಹದ ಬಯಕೆಗಳನ್ನು ದೂರ ಮಾಡುವುದೇ ಧ್ಯಾನ. ಧ್ಯಾನವೆಂದರೆ ಕೇವಲ ಸ್ಮರಣೆಯಲ್ಲ. ನಮ್ಮೆಲ್ಲ ಬಯಕೆಗಳನ್ನು ದೌರ್ಬಲ್ಯವನ್ನು ದೂರವಾಗಿಸುವ ಕ್ರಿಯೆ.  ಆ ಧ್ಯಾನವೇ  ನಮ್ಮ ದೇಹದೊಳಗಿನ ರಾಮನನ್ನು ತೋರಿಸುತ್ತದೆ. ಆದರೆ ರಾಮನ ಮುಂದೆ ನಿಂತಾಗ ನಮ್ಮ ಎಲ್ಲಾ ಬಯಕೆಗಳೂ ಪ್ರಕಟಗೊಳ್ಳುತ್ತವೆ. ಪರಮಾತ್ಮ ಎಂದರೆ ನಮ್ಮ ಆಶೆಗಳನ್ನು ತೀರಿಸುವ ಎಜಂಟ್ ಆಗಿರುತ್ತಾನೆ. 

ಇದೀಗ ಐತಿಹಾಸಿಕವಾಗಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ರಾಮ ಮಂದಿರ ನಿರ್ಮಿಸುವಾಗ ರಾಮ ತತ್ವದ ಅರಿವು ಉಂಟಾಗಬೇಕು.  ಅದರ ಅನುಸರಣೆಯ ಜಾಗ್ರತಿಯೂ ನಮ್ಮಲ್ಲಿ ಮೊಳಗಬೇಕು.  ನಮ್ಮ ಮನಸ್ಸಿನಲ್ಲೇ ರಾಮ ಇಲ್ಲದಿದ್ದರೆ ರಾಮ ಸರ್ವಾಂತರ್ಯಾಮಿಯಾಗುವುದಕ್ಕೆ ಹೇಗೆ ಸಾಧ್ಯ?  ರಾಮನನ್ನು ಅರಿತು ರಾಮ ತತ್ವವನ್ನು ಅರಿತಾಗ ನಿಜಕ್ಕೂ ಶ್ರೀರಾಮ ಸರ್ವಾಂತರ್ಯಾಮಿಯಾಗುತ್ತಾನೆ.

 

ಜೈ ಶ್ರೀರಾಮ

 

Saturday, January 9, 2021

ಸಹ ಭೋಜನ ಸಹ ಜೀವನ

 


ನಮ್ಮೂರಲ್ಲಿರುವ ಪ್ರಸಿದ್ಧ ಕ್ಷೇತ್ರವೊಂದಕ್ಕೆ ಹೋಗಿದ್ದೆ. ಹಾಗು ಹೀಗು ಬಸ್ಸು ದೇವಸ್ಥಾನದ ಬಳಿ ಬಂದು ನಿಂತಿತು. ಭರ್ತಿಯಾಗಿದ್ದ ಬಸ್ಸು  ಕ್ಷಣ ಮಾತ್ರದಲ್ಲಿ ಖಾಲಿಯಾಯಿತು.  ಬಸ್ ಇಳಿದವರೆ ಹೆಚ್ಚಿನವರು ದೇವಸ್ಥಾನಕ್ಕೆ ನಡೆದು ಹೋದರು ಎನ್ನುವುದಕ್ಕಿಂತ ದೌಡಾಯಿಸಿಯೇ ಬಿಟ್ಟರು. ಅದೇನು ಧಾವಂತ!   ಓಡುವವರನ್ನು ಕಂಡಾಗ ಒಂದಂತೂ ಸ್ಪಷ್ಟ....ಇವರಲ್ಲಿ ದೇವರನ್ನು ಕಾಣುವ ಆತುರ ಖಂಡಿತಾ ಇರಲಾರದು....ಆದರೂ ಧಾವಂತ. ಅವಸರ. ಧಾವಂತದ ಕಾರಣವೋ ಏನೋ ಕೈಕಾಲು ತೊಳಿಯುವಲ್ಲೂ  ಜಂಗುಳಿ ನೂಕು ನುಗ್ಗಾಟ, ಎದುರಿದ್ದವನು ಒಂದಿಷ್ಟು ನಿಧಾನವಾದರೆ ಭುಗಿಲೇಳುವ ಅಸಹನೆ, ಮನಸ್ಸಿನ ಶಾಂತಿಗೆ ದೇವಾಲಯಕ್ಕೆ ಬಂದಿದ್ದೇನೆ ಎಂಬುದನ್ನೂ ಮರೆತು ಶಾಂತಿ ನೆಮ್ಮದಿಯನ್ನು ಕಳೆದುಕೊಳ್ಳುವುದನ್ನು ಕಾಣುವಾಗ ಅಯ್ಯೋ ದೇವರೆ ಅಂತ ಉದ್ಗಾರ ಬರುತ್ತದೆ.

                ಒಂದು ದಿನ ಕೃಷ್ಣ ರಾಜ ಮಾರುಕಟ್ಟೆಗೆ ಹೋಗಿದ್ದೆ. ಈ ಮಾರುಕಟ್ಟೆಯ ಸ್ಥಿತಿ ಹೇಗಿರುತ್ತದೆ ಹೋದವರಿಗೆ ಗೊತ್ತಿರಬಹುದು. ಪ್ರತಿಯೊಬ್ಬನೂ ಜೀವನದಲ್ಲಿ ಒಂದು ಸಲವಾದರೂ   ಕಾಶಿಗೆ ಹೇಗೆ ಭೇಟಿ ಕೊಡಬೇಕೋ ಹಾಗೇ ಈ ಕೆ ಆರ್ ಮಾರುಕಟ್ಟೆಗೂ ಬೇಟಿ ಕೊಡಬೇಕು. ಯಾಕೆಂದರೆ ಎರಡರಲ್ಲೂ ಜೀವನ ಮೌಲ್ಯ ಅರಿವಿಗೆ ಬರುತ್ತದೆ. ಒಂದು ಆಧ್ಯಾತ್ಮಿಕವಾದರೆ, ಇನ್ನೊಂದು ತೀರಾ ಲೌಕಿಕ. ಮಾರುಕಟ್ಟೆ ಬಹುರಾತ್ರಿಯವರೆಗೂ ಚಟುವಟಿಕೆಯಿಂದ ಇದ್ದು ಮುಂಜಾನೆ ನಾಲ್ಕು ಗಂಟೆಗೆ ವ್ಯವಹಾರ ಆರಂಭವಾಗುತ್ತದೆ. ಜನ ಸೇರುತ್ತಾರೆ. ಇದರ ನಡುವೆ ದಿನದ ಇಪ್ಪತ್ತನಾಲ್ಕು ಘಂಟೆ ಇಲ್ಲೇ ವಾಸ ಇಲ್ಲೇ ನಿದ್ದೆ ಇಲ್ಲೇ ಆಹಾರ ಅಂತ ಕಳೆಯುವವರು ಇದ್ದಾರೆ.  ಜನ್ಮ ಪರ್ಯಂತ ಬೇರೆ ಲೋಕದ ಅರಿವಿಲ್ಲದಂತೆ ಇರುವ ಜೀವನ. ಸ್ನಾನ ಊಟ ಯಾವುದಕ್ಕೂ ನಿಗದಿಯಿಲ್ಲದ ಜೀವನ. ಒಂದಿಷ್ಟು ತರಕಾರಿ ಹಣ್ಣು ಇಟ್ಟುಕೊಂಡು ಸಣ್ಣ ತುಂಡು ಬಟ್ಟೆ ಹಾಸಿ ಆ ಗೊಚ್ಚೆಯಲ್ಲೇ ವ್ಯಾಪಾರ, ಮತ್ತೆ ಅಲ್ಲೇ ನಿದ್ದೆ ಅಲ್ಲೇ ಊಟ. ಅವರು ನಿದ್ರಿಸುವಾಗ ಗಮನಿಸುತ್ತೇನೆ ಏನೊಂದು ಸಂತೃಪ್ತಿ. ಹಲವು ಸಲ ಇವರನ್ನು ನೋಡುವಾಗ ಅನಿಸುತ್ತದೆ ಹೊರಗೊಂದು ಲೋಕ ಇದೆ ಅಂತ ಇವರಿಗೆ ಅರಿವಿಲ್ಲವೇನೋ? ಸದಾ ಎನಾದರೊಂದು ಮಾರಾಟ ಮಾಡುತ್ತಲೋ ಏನಾದರೂ ದುಡಿಮೆ ದುಡಿಯುತ್ತಲೋ  ಇರುವ ಈ ಮಂದಿಗೆ ನಿಂತ ನೆಲವೇ ಎಲ್ಲವೂ. ಸಾಮಾನ್ಯವಾಗಿ ಯಾವ ತೀರ್ಥ ಕೇತ್ರ ದರ್ಶನದಲ್ಲೂ ಸಿಗದ ನೆಮ್ಮದಿ ಆ ಬಿಸಿಲು ಮಳೆ ಎನ್ನದೇ ಗೊಚ್ಚೆಯಲ್ಲಿ ಮಲಗಿದಾಗ ಸಿಗುತ್ತದೆ ಎಂದರೆ ಇದೆಂತಹ ಲೌಕಿಕ ಜೀವನ?

                  ಮಾರುಕಟ್ಟೆ ಸುತ್ತಿ ಅನಿವಾರ್ಯವಾಗಿ ಅಲ್ಲಿ ಶೌಚಾಲಯಕ್ಕೆ ಹೋದೆ.   ಮಹಾ ನರಕದರ್ಶನ. ಕಾಲು ಇಡುವುದಕ್ಕೂ ಅನುಮಾನ. ಕಣ್ಣು ಹಾಯಿಸಿದಲ್ಲೆಲ್ಲಾ   ಕೇವಲ ಜಲಬಾಧೆಯ ಜನರು,  ಅಲ್ಲಿ ಹೊಳೆಯಂತೆ ಹರಿಯುವುದು ನೀರಲ್ಲ ಅಂತ ಗೊತ್ತಿದ್ದರೂ ಕಣ್ಣು ಮುಚ್ಚಿ ಯಾವ ಅನಿವಾರ್ಯತೆಗೋ ಬಾಧೆಯನ್ನು ತೀರಿಸಿ ಬಂದು ಬಿಡುವ ಧಾವಂತದಲ್ಲಿ ಇದ್ದರೆ ಅಲ್ಲೇ ಜೀವನ ಎಂಬಂತೆ ಶೌಚಾಲಯದ ಮಂದಿಯ ಸಂಸಾರ ಅಲ್ಲೇ ಇರುತ್ತದೆ. ಒಬ್ಬಾತ ಅಲ್ಲೇ ಕುಳಿತು ಊಟ ಮಾಡುತ್ತಿದ್ದಾನೆ. ಛೇ, ನಾವು ಉಗುಳುವುದಕ್ಕೂ ಹೇಸಿಗೆ ಪಡುವ ಜಾಗದಲ್ಲಿ ಯಾವುದೇ ಅಸಹ್ಯ ಭಾವನೆ ಇಲ್ಲದೇ ಆತ ಊಟ ಮಾಡುತ್ತಿದ್ದಾನೆ. ಇಲ್ಲೂ ಅದೆ ಹೊಟ್ಟೆ ತುಂಬುತ್ತಿದ್ದಂತೆ ಏನು ಸಂತೃಪ್ತಿ.ಸಾಮಾಜಿಕ ಮೌಲ್ಯಗಳು ಹಲವು ಸಲ ಮನಸ್ಸಿನ ಭಾವಕ್ಕೆ ಹೊಂದಿಕೊಂಡೇ ಇರುತ್ತವೆ. ಮನುಷ್ಯ ಅದರ ವ್ಯಾಪ್ತಿಯನ್ನು ತಿಳಿಯದೆ ಸಂದಿಗ್ಧಕ್ಕೆ ಒಳಗಾಗುತ್ತಾನೆ. ಹಲವು ಸಲ ಯೋಚಿಸಿದ್ದಿದೆ,  ಆತ ಈಗ ಜತೆಯಲ್ಲೇ ಊಟಮಾಡೋಣ ಅಂತ ಕರೆದರೆ ಏನಾದೀತು?  ಜಾತ್ಯಾತೀತ ಅಂತ ಹೇಳಿ ಅಂದುಕೊಂಡರೂ  ಜತೆಯಲ್ಲಿ ಊಟ ಮಾಡುವವರೆಷ್ಟು?   ಈತನ ಜತೆ ಕುಳಿತು ಊಟ ಮಾಡದೇ ಇದ್ದರೆ ಅದು ಪಂಕ್ತಿಭೇದವಾಗುತ್ತದೆ.  ನಾನು ಪಂಕ್ತಿ ಭೇದಕ್ಕೆ ಪರವೂ ಅಲ್ಲ ವಿರೋಧವೂ ಅಲ್ಲ. ನಿಜವಾಗಿ ಮನಸ್ಸಿನ ಭಾವ,  ಅದು ಸಂಸ್ಕಾರವನ್ನು ನಿರ್ಣಯಿಸುತ್ತದೆ. ಆ ಸಂಸ್ಕಾರ ಜೀವನವನ್ನು ರೂಪಿಸುತ್ತದೆ ಎಂದು ನಂಬಿದವನು.

                 ಮನುಷ್ಯ ಹುಟ್ಟುತ್ತಿದ್ದಂತೆ ಅವನ ಸುತ್ತ ಒಂದು ಸಂಸ್ಕಾರದ ವರ್ತುಲವೂ ಸುತ್ತಿಕೊಳ್ಳುತ್ತದೆ. ಇದರಲ್ಲಿ ವೈವಿಧ್ಯ ಇರಬಹುದು. ವಿದೇಶದಲ್ಲಿ ಬೆಳೆಯುವ  ಗಿಡತುಂಬ ಫಸಲು ಕೊಡುವ ಆ ಗಿಡವನ್ನು ನಮ್ಮ ದೇಶಕ್ಕೆ ತಂದು ನೆಟ್ಟರೆ ಅದು ಫಲ ಕೊಡುವುದು ಬಿಡಿ ಒಂದು ಚಿಗುರು ಹುಟ್ಟುವುದಿಲ್ಲ. ಯಾಕೆಂದರೆ ಅದಕ್ಕೊಂದು ಸಂಸ್ಕಾರವಿರುತ್ತದೆ. ಒಂದು ಸಲ ನಾಯಿಗಳನ್ನು ಮಾರಾಟ ಮಾಡುವ ಮನೆಯೊಂದಕ್ಕೆ ಹೋಗಿದ್ದೆ. ಅಲ್ಲಿ ಸೈಬೀರಿಯನ್ ತಳಿ ನಾಯಿಯೊಂದನ್ನು ನೋಡಿದ್ದೆ. ಸರಿ ಸುಮಾರು ಒಂದು ಲಕ್ಷ ರೂಪಾಯಿಯಷ್ಟು ಬೆಲೆಯ ನಾಯಿ ಅದು. ರಂಗು ರಂಗಾಗಿ ಹಂಸದಂತೆ ನಡೆದು ಬಂದು ಮೈಮೇಲೆ ಹತ್ತಿದ್ದರೆ ಆಳೆತ್ತರದ ನಾಯಿಗೆ ಭಾರವೇ ಇಲ್ಲದ ಅನುಭವ. ಆ ನಾಯಿಗೆ ಉಳಿದುಕೊಳ್ಳುವುದಕ್ಕೆ ಹವಾನಿಯಂತ್ರಿತ ಕೋಣೆ. ಉಳಿದ ನಾಯಿಗಳು ....ಹೇಗೋ ಬೇಕೋ ಹಾಗೆ.  ಸೈಬೀರಿಯನ್ ನಾಯಿ ಬದುಕಬೇಕಿದ್ದರೆ ಅದಕ್ಕೆ ಹವಾನಿಯಂತ್ರಿತ ಕೋಣೆ ಬೇಕು. ಅದಕ್ಕೆ ಹುಟ್ಟಿನಿಂದ ಬಂದ ಸಂಸ್ಕಾರ. ಹಾಗಂತ ಬೇರೆ ನಾಯಿ ಜತೆ ಭೇದ ಮಾಡುವುದು ಸರಿಯಲ್ಲ ಅಂತ ಅದನ್ನು ಬೇರೆ ನಾಯಿಗಳ ಜತೆ ಮಿಶ್ರ ಮಾಡಿದರೆ ಒಂದು ವಾರಕ್ಕಿಂತ ಹೆಚ್ಚು ಅದು ಬದುಕುಳಿಯುವುದಿಲ್ಲ.

 

ರಕ್ತದೊತ್ತಡ, ಅಸ್ತಮಾ ಸಕ್ಕರೆ ಖಾಯಿಲೆ ಹೀಗೆ  ತಪಾಸಣೆಗೆ ಹೋಗುವವರನ್ನು ಕಾಣುವಾಗ ಇದಾವುದೂ ತಿಳಿಯದೆ ರಸ್ತೆಯ ಅಲೆಮಾರಿಗಳನ್ನು ಕಾಣಬಹುದು. ಇವರಿಗೆ ಎಲ್ಲಿ ರಕ್ತದೊತ್ತಡ?  ಎಲ್ಲಿ ಸಕ್ಕರೆಖಾಯಿಲೆ?  ಅಂತಹ ಬಾಧೆ ಇದೆ ಅಂತ ತಿಳಿಯದೇ ಇದ್ದವರು ಹಲವರು. ಬಾಧೆ ಇದ್ದರೂ ಅದು ಏನು ಅಂತ ತಿಳಿಯದವರು.

 

                ಹುಟ್ಟುವಾಗಲೇ ಜತೆಗೇ ಬರುವ ಈ ಸಂಸ್ಕಾರ ಜೀವನದುದ್ದಕ್ಕೂ ಸವಾಲಾಗಿಯೇ ಹಲವು ಸಲ ಎದುರು ನಿಲ್ಲುತ್ತದೆ. ಅದನ್ನು ಉಳಿಸಿಕೊಂಡು ಜೀವ ಉಳಿಯಬೇಕಿದ್ದರೆ ಹೋರಾಟವೇ ಮಾಡುವಂತ ಸ್ಥಿತಿ ಬರುತ್ತದೆ. ಅದು ತಪ್ಪೋ ಸರಿಯೋ ವಿವೇಚನೆಯಲ್ಲ.  ಆದರೆ ವಾಸ್ತವ ಎಂಬುದು ಇಲ್ಲಿ ಮನಸ್ಸಿನ ಭಾವಕ್ಕೆ ಹೊಂದಿಕೊಂಡೇ ಇರುತ್ತದೆ. ಯಾರೋ ಒಬ್ಬ ಶೌಚಾಲಯದಲ್ಲೇ ಊಟ ಮಾಡಬಹುದು. ನಮಗೆ ಮಾಡಲಿಕ್ಕೆ ಅಸಾಧ್ಯವಾಗಬಹುದು. ಅದು ಭೇದ ಅಂತ ವರ್ಗೀಕರಿಸುವಾಗ  ಈ ಚಿಂತನೆ ಒಂದಿಷ್ಟು ಗೊಂದಲವನ್ನು ಸೃಷ್ಟಿಸುತ್ತದೆ. ನೀರಲ್ಲೇ ಬೆಳೆದ ಮೀನು ನೀರಲ್ಲೇ ಬದುಕಬೇಕು. ಮೀನು ನೀರಲ್ಲಿ ಬದುಕು ಕಾಣುತ್ತದೆ. ನೀರಿಂದ ಹೊರಬಂದರೆ? ಹೀಗೆ ಜೀವ ಸಂಸ್ಕಾರ ಎಂಬುದು ಅದು ಶೋಷಣೆ ಅಂತ ಒಂದೇ ಸವನೆ ಪ್ರತ್ಯೇಕಿಸುವುದಕ್ಕೆ ಸಾಧ್ಯವಿಲ್ಲ.

 

                ‘ಪಂಕ್ತಿ ಭೇದ..’  ಹಲವು ಸಲ ವಿವಾದಕ್ಕೆ ಕಾರಣವಾಗುವ ವಿಚಾರ. ಇದೆ ಅವೈಜ್ಞಾನಿಕ, ಅಮಾನವೀಯ ಹೀಗೆಲ್ಲ ವಿಶ್ಲೇಷಣೆ ಮಾಡಬಹುದು. ನಿಜಕ್ಕೂ ಇದು ಸತ್ಯ. ಆದರೆ ವಾಸ್ತವದ ವಿಚಾರಗಳು ಅಷ್ಟು ಸುಲಭದಲ್ಲಿ ನಿರ್ಣಯಿಸಲ್ಪಡುವುದಿಲ್ಲ. ಪಂಕ್ತಿ ಭೇದ ಇಲ್ಲದೇ ಒಟ್ಟಿಗೆ ಕುಳಿತು ಊಟ ಮಾಡಿದ ತಕ್ಷಣ ಅದು ಜಾತ್ಯಾತೀತವಾಗುವುದಿಲ್ಲ. ಬ್ರಾಹ್ಮಣ ಎಂದಾಕ್ಷಣ ಈಗೀಗ ಬ್ರಾಹ್ಮಣರೇ ಅಸ್ಪೃಶ್ಯರಂತೆ ಭಾಸವಾಗುತ್ತದೆ. ಯಾಕೆಂದರೆ ಬ್ರಹ್ಮ ಜೀವನ ಅ ರೀತಿಯಲ್ಲೂ ಸವಾಲನ್ನು ಎದುರಿಸಬೇಕಾಗುತ್ತದೆ.  ಇದೆಷ್ಟು ಸರಿಯೋ ತಪ್ಪೋ ಎನ್ನುವ ವಿಶ್ಲೇಷಣೆಗಿಂತ , ಹುಟ್ಟಿದ ಪ್ರತಿಯೊಬ್ಬರಿಗೂ ಅವರವರ ನಂಬಿಕೆ ವಿಶ್ವಾಸಕ್ಕೆ ಅನುಸಾರವಾಗಿ ಬದುಕುವ ಹಕ್ಕು ಇರುತ್ತದೆ. ಯಾರನ್ನೂ ಬೇಕಾದರೂ ಆರಾಧಿಸು, ಏನು ಬೇಕಾದರೂ ಆಚರಿಸು ಇನ್ನೊಬ್ಬರಿಗೆ ತೊಂದರೆಯಾಗದಂತೆ ಇರಬೇಕು. ಅಷ್ಟಾಗಿಯೂ ಬ್ರಾಹ್ಮಣ ಅವನ ಪಾಡಿಗೆ ಆತ ಯಜ್ಞೋಪವೀತ ಧರಿಸಿ ಓಡಾಡುತ್ತಾನೆ ಎಂದರೆ ಹಲವರ ಕಣ್ಣು ಕೆಂಪಗಾಗುತ್ತದೆ. ಹೀಗೆ ಪ್ರತ್ಯೇಕವಾದ ವಸ್ತುವನ್ನು ಧರಿಸಿ ಓಡಾಡುವುದು ಬ್ರಾಹ್ಮಣ ಮಾತ್ರವಲ್ಲ.ಹಲವು ಮತದಲ್ಲೂ ವಿವಿಧ ರೀತಿಯಲ್ಲಿ ಇದು ಇರುತ್ತದೆ. ಆದರೆ ಬ್ರಾಹ್ಮಣ ಮಾತ್ರ ಪ್ರಶ್ನಾರ್ಹವಾಗುತ್ತಾನೆ ಮತ್ತು ಅಪಹಾಸ್ಯಕ್ಕೆ ಈಡಾಗುತ್ತಾನೆ. ಹಣೆಗೆ ನಾಮ ಧರಿಸಿದರೂ ಅಪ ಹಾಸ್ಯ ಜುಟ್ಟು ಬಿಟ್ಟರೂ ಹಾಸ್ಯ ಕಚ್ಚೆ ಪಂಚೆ ಧರಿಸಿದರೂ  ಹಾಸ್ಯ. ಈ ಅಪಹಾಸ್ಯಕ್ಕೆ ಹೊಂದಿಕೊಂಡು ಹಲವರು ಜನಿವಾರ ಮನೆಯಲ್ಲಿ ಇಟ್ಟು, ಹಣೆಯ ನಾಮ ಉಜ್ಜಿ ಓಡಾಡುವುದನ್ನು ಸ್ವತಃ ಕಂಡಿದ್ದೇನೆ. ಇದರ ಬಗ್ಗೆ ಅನುಕಂಪವಿದೆ.  ನಿಜಕ್ಕಾದರೆ ಇದೆಲ್ಲ ಅಪಹಾಸ್ಯವಲ್ಲ.

                 ಕೆಲವೊಮ್ಮೆ ಹೀಗೂ ಆಗುತ್ತದೆ.  ನಾನು ಹುಟ್ಟಿದಂದಿನಿಂದ ಬ್ರಾಹ್ಮಣ ಎನ್ನುವ ಕಾರಣಕ್ಕೆ ಅವಮಾನಿಸಲ್ಪಡಲಿಲ್ಲ. ಬದಲಿಗೆ ನನ್ನಲ್ಲಿ ವಂಚನೆ ಸುಳ್ಳು  ದುರ್ವರ್ತನೆ  ತೋರಿದಾಗ ನಾನು ಬ್ರಾಹ್ಮಣ ಎನ್ನುವ ಪರಿಗಣನೆಯೂ ನಷ್ಟವಾಗುತ್ತದೆ. ಇಲ್ಲಿ ಅವಮಾನಿಸಲ್ಪಡುವುದು ಬ್ರಾಹ್ಮಣ್ಯವಲ್ಲ. ಯಾಕೆಂದರೆ ಬ್ರಾಹ್ಮಣನಾದವನಿಗೆ ಮಾನ ಅಪಮಾನ ಎಲ್ಲವೂ ಒಂದೇ ಆಗಿರುತ್ತದೆ. ಆ ಮಟ್ಟಕ್ಕೆ ಆತ ತಲುಪಿದಾಗ ಮಾತ್ರವೇ ಆತ ಬ್ರಾಹ್ಮಣನಾಗುತ್ತಾನೆ. ಇದು ತತ್ವ.

                 ಒಂದು ಸಲ ನಾನು ಬೆಂಗಳೂರಿನ ವಾಣಿಜ್ಯ ತೆರಿಗೆ ಕಛೇರಿಗೆ ಪಂಚೆ ಉಟ್ಟುಕೊಂಡು ಹೋಗಿದ್ದೆ.  ನಿಜಕ್ಕೂ ನನಗೆ ಪಂಚೆ ಉಡುವುದೆಂದರೆ ಬಹಳ ಇಷ್ಟ. ನಮ್ಮೂರ  ಹೈಸ್ಕೂಲಿನಿಂದಲೆ ತೊಡಗಿಕೊಂಡ ಅಭ್ಯಾಸವದು. ಬೆಂಗಳೂರಲ್ಲಿ ಪಂಚೆ ಉಡುವುದು...ದೊಡ್ಡ ಅನಾಗರೀಕತೆ ಅಂತ ತಿಳಿಯುತ್ತಾರೆ. ಕಚೇರಿಗೆ ಪಂಚೆಯಲ್ಲಿ ಬಂದ ನನ್ನನ್ನು ಪರಿಚಿತರು ಕೇಳಿದರು ಏನು ಭಟ್ರೆ ಊಟ ಉಂಟಾ?  ಪಂಚೆ ಉಟ್ಟವರು ಮಾತ್ರ ಊಟ ಮಾಡುವುದೇ? ಪಂಚೆ ಉಟ್ಟು ಪೂಜೆಗೆ ಆರಾಧನೆಗೆ ಹೋದರೆ ಅದು ಊಟಕ್ಕೆ ಹೋದ ಹಾಗೆ ಹೇಗಾಗುತ್ತದೆ? ವಿಚಿತ್ರ. ಇಷ್ಟಕ್ಕೂ ನಾನು ಪಂಚೆ ಉಟ್ಟು ಹೋಗಬಾರದು ಎಂಬ ಅಲಿಖಿತ ನಿಯಮದಂತೆ ಭಾಸವಾಯಿತು. 

 ಪಂಕ್ತಿ ಭೇದ ಇದನ್ನು ಭೇದ ಅಂತ ಕರೆಯುವ ಬದಲಾಗಿ ಆತ ಬೇರೆ ಊಟಕ್ಕೆ ಕುಳಿತ ಅಂತ ಮಾಡಬೇಕು. ಇದೊಂದು ರೀತಿಯ ವರ್ಗ ಸಂಘರ್ಷ. ಅದನ್ನು ಕೇವಲ ಒಂದು ಜಾತಿಗೆ ಸೀಮಿತ ಗೊಳಿಸದೆ ನಮ್ಮ ಪರಿಸರ ಸಮಾಜವನ್ನು ಗಮನಿಸಿ ನೋಡಬೇಕು. ತನ್ನ ಮೇಲಧಿಕಾರಿಯ ಜತೆ ಕುಳಿತು ಎಷ್ಟು ಜನ ಊಟ ಮಾಡಬಹುದು? ಕಛೇರಿಯಲ್ಲೇ ಕಾಣಬಹುದು. ಹೊರಗಿದ್ದವನು ಕುಡಿಯುವಂತೆ ಒಳಗೆ ಕುಳಿತ ಮೇಲಧಿಕಾರಿ ಕುಡಿಯುವುದಿಲ್ಲ. ಆತನಿಗೆ ಪ್ರತ್ಯೇಕ ವ್ಯವಸ್ಥೆ ಇರುತ್ತದೆ. ಇಲ್ಲಿ ಕೆಲಸಕ್ಕೆ ಬಾರದ  ಸಹ ಪಂಕ್ತಿ ಸಹ ಭೋಜನ ಬೇರೆ ಕಡೆಯಲ್ಲಿ ಯಾಕೆ ಬೇಕಾಗಿದೆ?  ಸಾರ್ವಜನಿಕದ ಹಲವು ವಿಚಾರಗಳಲ್ಲಿ ಖಾಸಗೀತನ ಇರುವುದಿಲ್ಲವೇ ಅದರಂತೆ ಇದು.

 ಬೇರೆ ಪಂಕ್ತಿಯಲ್ಲಿ ಕುಳಿತು ಊಟಮಾಡಬಹುದು, ಅದಕ್ಕೆ ಆತ ನಿಜವಾಗಿಯೂ ಬ್ರಾಹ್ಮಣನಾಗಿರಬೇಕು. ಬ್ರಹ್ಮ ಪದ ಏನೂ ಅಂತ ಅರಿವಿರಬೇಕು.  ಉಚ್ಚಿಷ್ಟ  ಅಪವಿತ್ರ ಇವುಗಳಿಂದ ದೂರವಿರಬೇಕು.  ಈಗ ಸಹ ಭೋಜನ ಪಂಕ್ತಿ ಭೇದ ಅಂತ ಜತೆಯಲ್ಲೇ ಕುಳಿತು ಊಟಮಾಡಬಹುದು. ಆದರೆ ವಿವಾದ ಇಲ್ಲಿಗೇ ನಿಲ್ಲುವ ಭರವಸೆ ಇರಲಾರದು.  ಸಹಭೋಜನ ಇನ್ನು ಮುಂದಕ್ಕೆ ಒಂದೇ ಬಾಳೆ ಎಲೆ ಆಗಬಾರದೇಕೆ ಎಂಬ ವಿಪ್ಲವವೂ ಬಂದರೂ ಬರಬಹುದು. ಒಂದೇ ತಟ್ಟೆಯಲ್ಲಿ ಊಟ...!

                 ನನ್ನ ಅನಿಸಿಕೆಯಂತೆ ಪಂಕ್ತಿ ಭೇದ ನಿಜಕ್ಕೂ ಅಮಾನವೀಯ.  ಆದರೂ ನಾನು ಅದರ ಪರವಾಗಿಯೂ ಇಲ್ಲ ವಿರೋಧವಾಗಿಯು ಇಲ್ಲ. ಇದೆಲ್ಲ ಅನಗತ್ಯ ವಿವಾದಗಳು ಅಂತಲೇ ಭಾಸವಾಗುತ್ತದೆ. ಬ್ರಾಹ್ಮಣ ಬೇರೆ ಕುಳಿತು ಊಟ ಮಾಡಬಹುದು. ಅದರಲ್ಲಿ ತಪ್ಪೇನಿಲ್ಲ. ನನ್ನ ಅನಿಸಿಕೆ ಅಂದರೆ ಇಷ್ಟೆ ಆತ ಆಚಾರದಿಂದ ಬ್ರಾಹ್ಮಣನಾಗಿರಬೇಕು.  ಹಸ್ತೋದಕ  ಕೇವಲ ಇನ್ನೊಬ್ಬರಿಗೆ ತೋರಿಸುವುದಕ್ಕೆ ಆಚರಿಸುವಂತಹ ಅಭಿನಯ ಕ್ರಿಯೆಯಲ್ಲ.  ಮನೆಯಲ್ಲಿ ಅಥವಾ ಎಲ್ಲೇ ಮಾಡಿದರೂ ಉಣ್ಣುವ ಮೊದಲು ಅದನ್ನು ಒದಗಿಸಿದ ಆ  ಪರಮಾತ್ಮ ಸ್ಮರಣೆ ಅದು ಕರ್ತವ್ಯ. ಇದನ್ನು ಪ್ರತಿಯೊಬ್ಬನೂ ಮಾಡಬೇಕು. ಆಚಾರ ಬೇರೆ ಇದ್ದರೂ ಅದು ಅನಿವಾರ್ಯ ಕರ್ತವ್ಯವಾಗಬೇಕು. ಯಾಕೆಂದರೆ ನಮ್ಮ ಆಚಾರ ವಿಚಾರಗಳು ಕೇವಲ ಅಭಿನಯವಾಗುತ್ತದೆ. ಅದು ಕೇವಲ ಒಂದು ಜಾತಿಯನ್ನು ಪಂಗಡವನ್ನು ಹೊಂದಿಕೊಂಡು ಇರುವುದಿಲ್ಲ. ಎಲ್ಲರಲ್ಲೂ ಇದನ್ನು ಕಾಣಬಹುದು. ಜಾತ್ಯಾತೀತ ಎಂಬುದು ಮನಸ್ಸಿನಿಂದ ಬರುವುದನ್ನು ಒಪ್ಪಿಕೊಳ್ಳಬಹುದು. ಆದರೆ ಅದು ಅಭಿನಯವಾದರೆ, ಬ್ರಾಹ್ಮಣ ಬೇರೆ ಕುಳಿತು ಊಟ ಮಾಡುವುದರಲ್ಲಿ ತಪ್ಪೇನಿಲ್ಲ.  ಒಟ್ಟಿಗೆ ಕುಳಿತು ಊಟ ಮಾಡಿದ್ದರಲ್ಲಿ ಜಾತಿ ಏನೂ ಹೋಗುವುದಿಲ್ಲ. ಹಾಗೆ ಜಾತ್ಯಾತೀತ ಪಟ್ಟವೂ ಸಿಗುವುದಿಲ್ಲ. ಯಾಕೆಂದರೆ ಇಲ್ಲಿ ಮನಸ್ಸಿನ ಭಾವನೆ ಮುಖ್ಯ. ಅದನ್ನೇ ಕಾಯಾ ವಾಚಾ ಮನಸಾ ಅಂತ ಹೇಳಿದ್ದು. ಒಂದೇ ಜಾತಿ ಒಂದೇ ಮತ ಅಂತ ಒಟ್ಟಿಗೆ ಊಟಕ್ಕೆ ಕುಳಿತಾಗ ಒಬ್ಬರನ್ನೊಬ್ಬರು ತಳ್ಳಿ ಜಗಳವಾಡಿ ಊಟಕ್ಕೆ ಕುಳಿತದ್ದನ್ನು ಕಾಣಬಹುದು.       ಪಂಕ್ತಿ ಭೇದಕ್ಕಿಂತ ಗಂಭೀರ ಈ ಮಾನಸಿಕ ಅಸಮಾನತೆ. ಅಸಹಿಷ್ಟುತೆ ಅಸಹನೆ ಇವುಗಳೆಲ್ಲ ಇದ್ದಲ್ಲಿ ಸಮಾನತೆ ಎಂಬುದು ಕೇವಲ ಅಭಿನಯವಗುತ್ತದೆ. ಪಂಕ್ತಿ ಭೇದ ಜಾತಿ ಭೇದ....ಇದು ಕೇವಲ  ಒಬ್ಬ ಬಡ ಬ್ರಾಹ್ಮಣನಿಗೆ ಮಾತ್ರವೇ ಎದುರಾಗುವ ಸವಾಲುಗಳು.   ಒಬ್ಬ ಶ್ರೀಮಂತ ಧನಿಕನಾದ  ಬ್ರಾಹ್ಮಣ ಇವುಗಳನ್ನೆಲ್ಲ ಮಾಡಿದರೂ....ಅದನ್ನು ಓಲೈಸುವ ಜಾತ್ಯಾತೀತರೂ ಇರಬಹುದು. ಇದೆಲ್ಲ ಸಮಾಜದ ಅಸಮಾನತೆಗಳ ಪ್ರತೀಕ. ಬಡ ಬ್ರಾಹ್ಮಣ ಕೇವಲ  ಸಮಾಜದಲ್ಲಿ ಮಾತ್ರವಲ್ಲ ನಿಂದನೆಗೆ ಒಳಗಾಗುವುದು.  ದೈಹಿಕವಾದ ಆಚರಣೆಗಿಂತ ನಾವು ಮನಸ್ಸಿನಿಂದ ವರ್ಗ ಭೇದವನ್ನು ತೋರೆಯಬೇಕು. ಮನಸ್ಸಿನ ಭೇದವನ್ನು ಇರಿಸಿ ಜತೆಯಲ್ಲಿ ಕುಳಿತು ಊಟ ಮಾಡಿದರೂ ಒಂದೇ ಸೂರಿನಡಿ ಜೀವನ ಮಾಡಿದರೂ ಏನೂ ಪ್ರಯೋಜನವಿಲ್ಲ. ಮನಸ್ಸಿನಲ್ಲಿರುವ  ಅಸಮಾನತೆ ಮೊದಲು ದೂರವಾಗಬೇಕು. ಸಾಮಾಜಿಕ ಜೀವನದ ಹಲವು ಸ್ತರಗಳಲ್ಲಿ ಅಸಮಾನತೆಯನ್ನು ಕಾಣಬಹುದು. ಮಾನುಷಿಕ ಪರಿಗಣನೆಯೇ ಇಲ್ಲದ ವರ್ಗಭೇದವನ್ನು ಕಾಣಬಹುದು. ಅವುಗಳು ದೂರಾಗಬೇಕು. ಆಗ ಈ ಪಂಕ್ತಿ ಭೇದ ಎಂಬ ವಿಚಾರಕ್ಕೆ ಆಸ್ಪದವೇ ಉಳಿಯುವುದಿಲ್ಲ. ಇಲ್ಲವಾದರೆ ಇವುಗಳೆಲ್ಲ ಕೇವಲ ಅಭಿನಯವಾಗುತ್ತದೆ.

 ನಾವೆಲ್ಲ ಒಂದಾಗಿ ಕುಳಿತು ಊಟುಮಾಡುವುದಕ್ಕಿಂತ , ಒಂದಾಗಿ ಸ್ನೇಹದಿಂದ ಸೌಹಾರ್ದದಿಂದ ಬದುಕಬೇಕಾಗಿರುವುದು ಇಂದಿನ ಪರಿಸ್ಥಿತಿಗೆ ಅನಿವಾರ್ಯ. ಜಾತಿ ಭೇದ ಎಂಬುದು ಕೇವಲ ಒಂದು ಜಾತಿಗೆ ಸೀಮಿತವಾಗಿಲ್ಲ. ಮನುಷ್ಯತ್ವ ಮನುಷ್ಯನೇ ಮೊದಲು ಕಾಣಬೇಕು.  

 

 

 

 

 

 

 

 

               

 

               

Wednesday, December 16, 2020

ಬಾವನ ಮಗಳು ಭಾವನ....

 

            ಒಂದು ವರ್ಷದ ನಂತರ ಮಲೆನಾಡಿಗೆ  ಹೆಜ್ಜೆ ಇರಿಸಿದೆ.  ಕೊರೋನ ಕಾಲದಲ್ಲಿ ಎಲ್ಲವನ್ನೂ ಕಳೆದುಕೊಂಡೆ ಎಂಬ ಭಾವನೆಯ ನಡುವೆ ಈ ಮಲೆನಾಡ ಕೊಪ್ಪಕ್ಕೆ ಬಂದರೆ ,  ಕಳೆದು ಹೊದವುಗಳನ್ನು ಕೈಸೆರೆ ಮಾಡಿಕೊಂಡ ಅನುಭವ. ಈ ಬಾರಿ ಅದೇ,  ಒಂದು ಮಲೆನಾಡ ಮದುವೆ.‌ ಆ ಚಿತೋಹಾರಿ‌ ಅನುಭವಗಳಿಗೆ ಸಹಜವಾಗಿ ಮನಸ್ಸು ತೆರೆದಿತ್ತು. ಆದರೆ ಕಾಲ ಎಂಬುದು ಒಂದಿದೆ   ಎಂಬುದನ್ನು ಮನಸ್ಸು ಮರೆತಿತ್ತು. 

 

            ನಮ್ಮ ತಲಮಕ್ಕಿ‌ ಮನೆ ಕೊಪ್ಪದಿಂದ ಗಾವುದ ದೂರದ ಪುಟ್ಟ ಹಳ್ಳಿ. ಹೇಳಿ ಕೇಳಿ‌ ಮಲೆನಾಡ ಟಿಪಿಕಲ್ ಉಪ್ಪರಿಗೆ ಮನೆ.‌ ಯಾವುದೇ ಅತಿಥಿ ಬಂದರೂ ಅತಿಥೇಯರಾಗಿ ಸಂಭ್ರಮಿಸುವ ಮಂದಿಯರ ಮದುವೆ ಎಂದರೆ ಕೇಳಬೇಕೆ? ಇದನ್ನು ಕಂಡಾಗ,  ಜಗತ್ತಿನಲ್ಲಿ ನಿಯಂತ್ರಣಕ್ಕೆ ಸಿಗದ ವಸ್ತುವೆಂದರೆ ಅದು ಭಾವನೆ...ಅದಿಲ್ಲಿ ನಿಯಂತ್ರಣವಿಲ್ಲದ ಹುಚ್ಚುಗುದುರೆಯಾಗುತ್ತದೆ.  ದೀರ್ಘವಾದ ನನ್ನ  ಜೀವನದಲ್ಲಿ ಕೂಡಾ ಇಲ್ಲಿ ಹಲವಾರು ವಿವಾಹಗಳನ್ನು ಕಂಡಿದ್ದೇನೆ. ಹಲವಲ್ಲಿ ಸಂಭ್ರಮಿಸಿದ್ದೇನೆ. ಇವಿಷ್ಟೇ ಆದರೆ ಈ ಅನುಭವ ಕಥನದಲ್ಲೇನಿದೆ? 

 

            ಇಂದಿನ ಕೌಟುಂಬಿಕ ಸ್ಥಿತಿಯಲ್ಲಿ ಮನೆ ಚಿಕ್ಕದಾಗುತ್ತದೆ, ಸಂಸಾರ ಮಾತ್ರ ಬೆಳೆದು ದೊಡ್ಡ ಆಗುತ್ತಿದೆ. ಮನೆ ಅಂತ ಹೇಳಿದ್ದು..‌ ಮನೆಯಲ್ಲಿ ಉಳಿವ ಮನೆ ಮಂದಿಯ ಸಂಖ್ಯೆಯನ್ನು.ದೊಡ್ಡದಾದ ಮನೆಯಲ್ಲಿ ಚಿಕ್ಕದಾಗಿರುವ ಈ ಮನೆ ಮಂದಿಗೆ ಮದುವೆಯಂತಹ ಸಂದರ್ಭವೂ ಅತಿ ಸಂಭ್ರಮ.

 

            ಮೂವತ್ತು ವರ್ಷಗಳ ಕೆಳಗೆ ಈ ಸಂಭ್ರಮದ ಪರಿಚಯವಾಯಿತು. ಆಗ ಸ್ವತಃ ವಿವಾಹವಾಗಿ ಹೊಸ ಸಂಭಂಧ ಬೆಸೆಯುವ ನನಗೆ ಎಲ್ಲವೂ ಸಂಭ್ರಮವಾಗಿ ಕಾಣುವುದು ಸಹಜ. ಆದರೆ ಪ್ರತೀ ಸನ್ನಿವೇಶದಲ್ಲೂ ಇದನ್ನು ಕಾಣುವಾಗ ಇದರೊಳಗಿರುವ ಸನ್ಮನಸ್ಸು ಸದ್ಭಾವನೆ ಎಲ್ಲವೂ ತನ್ನದೇ ಎಂಬಂತೆ ಕಾಣುವ ತುಡಿತದಲ್ಲಿ  ಎಲ್ಲವೂ ತನ್ನದೆಂಬ ಸ್ವಾರ್ಥವೂ ನಿಸ್ವಾರ್ಥವಾಗುತ್ತದೆ. ಯಾಕೋ ಎಲ್ಲ ದುಗುಡಗಳನ್ನು ಕಟ್ಟಿ ತಂದು ಇಲ್ಲಿ ಚೆಲ್ಲಿ ಬಿಡಬೇಕು ಎಂದನಿಸುತ್ತದೆ.  ಹೇಗಿದ್ದರೂ ಎಲ್ಲೋ ಹುಟ್ಟಿ ಬೆಳೆದ ನಾನೂ ಇಲ್ಲಿನ ವೃಕ್ಷಕ್ಕೆ ಕಸಿ ಕಟ್ಟಿದ ಬಿಳಲು.

 

            ಇದೀಗ ಮಗಳು ಭಾವನ ಕಣ್ಣೆದುರೆ ಶಿಶುವಾಗಿ  ಮಡಿಲಲ್ಲಿ ನಲಿದಾಡಿ ಎದೆ ಮಟ್ಟಕ್ಕೆ ಬೆಳೆದು ನಿಂತ ಸುಂದರಿ. ಈ ದಿನಗಳೇ ಹೀಗೆ,  ಸರಿದು ಹೋದ ಮೇಲೆ ನೆನಪುಗಳನ್ನು ಕಟ್ಟಿ ಕೊಡುತ್ತವೆ.  ಪುಟ್ಟ ಮಗುವಾಗಿ ಓಡಾಡುತ್ತಿದ್ದ ಬೆಳೆದು ಬೊಗಸೆ ಕಂಗಳ ಚೆಲುವೆಯಾಗಿ ಭುಜದಿಂದ ಎತ್ತರ ಬೆಳೆದು ಬಿಟ್ಟಿದ್ದಳು. ಈಗ  ಭಾವನ ಸರ್ವಾಲಂಕಾರೆಯಾಗಿ ರಂಗಿನ ಚಪ್ಪರದಲ್ಲಿ ರಂಗು ರಂಗಿನ ಕನಸುಗಳೊಂದಿಗೆ ಹಸೆಮಣೆ ತುಳಿದು ಪುಷ್ಪಾಹಾರಕ್ಜೆ ತಲೆ ಬಗ್ಗಿಸಿದಾಗ ನನ್ನ ನೆನಪು ಹಿಂದಕ್ಕೆ ಓಡುತ್ತದೆ.  ಈ ಹಿಂದೆ ಮೂವತ್ತು ವರ್ಷಗಳ ಕೆಳಗೆ ಹೀಗೆ ಕಂಪಿಸಿದ ಕೈ ನನ್ನ ಕೊರಳ ಬಳಿಗೂ ಬಂದಿತ್ತು. ಅದೇ ಜಾಗ ಅದೇ ರೀತಿ. ಇದೇ ಮನೆಯಲ್ಲಿ ನಾನೂ ಗೃಹಸ್ಥನಾಗಿ ಹೆಜ್ಜೆ ಇಟ್ಟದ್ದು ಇನ್ನೂ ಹಚ್ಚ ಹಸಿರಾಗಿದೆ. ಹಾಗಾಗಿ ಇಲ್ಲಿನ ಮದುವೆ ಎಂದರೆ ನನ್ನ ಕನಸಿನ ಮೆಲುಕು ಹಾಕುವಿಕೆಯೇ ಆಗಿರುತ್ತದೆ.  ವಿಶಾಲವಾದ ಮನೆ ಅಲ್ಲಿ ಮದುವೆ ಎಂದರೆ ಕೈಯಲ್ಲಿ ಹೂ ಎತ್ತಿಕೊಂಡಂತೆ ನಡೆದು ಬಿಡುತ್ತದೆ. ಅದು ನಮಗೆ ಕಾಣುವವರಿಗೆ ಮಾತ್ರ. ಆದರ ಹಿಂದೆ ಮನೆ ಮಂದಿಗಳ  ಪರಿಶ್ರಮ ಅಪಾರ. ಆ ಪರಿಶ್ರಮದ ಸವಾಲನ್ನೂ  ನಗುತ್ತಾ ಸ್ವೀಕರಿಸುವ ಇವರೆಲ್ಲರ  ಮನೋಭಾವ ಹಾಗಾಗಿಯೇ ಇಲ್ಲಿ ಮದುವೆ ಎಂದರೆ ಅದು ಕೇವಲ ಮದುವೆಯಾಗುವುದಿಲ್ಲ. ಹುಳಿ ಖಾರ  ಸಿಹಿ ಎಲ್ಲವೂ ಹಿತವಾಗಿ ಸೇರಿದ ರಸಪಾಕವೇ ಆಗಿಬಿಡುತ್ತದೆ.  ಕುಟುಂಬವರ್ಗದವರಿಗೆಲ್ಲ ತಲಮಕ್ಕಿ ಎಂಬುದು ತಮ್ಮ ಸಮಸ್ಯೆಗಳಿಗೆ ಕೊನೆಯ ಪರಿಹಾರ ಹಾದಿಯಾಗಿದೆ. ಹಾಗಾಗಿ ಇಲ್ಲಿ ಇಂತಹ ಕಾರ್ಯಗಳಲ್ಲಿ ಇಲ್ಲಿನ ದಾತೃತ್ವ ಗುಣವನ್ನು ಕಾಣಬಹುದು.

             

            ಹೆಣ್ಣೆಂದರೆ  ಅಂಗಳದ ವೃಂದೆಯಂತೆ. ವೃಂದಾ ಎಂದರೆ ತುಳಸಿ.  ಆಕೆ ಇರುವಲ್ಲೆಲ್ಲಾ ವೃಂದಾವನದ ಹಚ್ಚ ಹಸಿರು.   ಪುಟ್ಟ ತುಳಸೀ ಗಿಡವನ್ನು ಕಿತ್ತು ಸಂಬಂಧಗಳ ನೆನಪುಗಳ ಹಿಡಿ ಮಣ್ಣನ್ನು ಜತೆಯಾಗಿಸಿ ಮತ್ತೊಂದು ಮನೆಯಂಗಳಕ್ಕೆ ಬಂದಾಗ ಹೆಣ್ಣಿಗೆ ಕನಸಿರುತ್ತದೆ. ಜವಾಬ್ದಾರಿಯೂ ಹೆಗಲಿಗೇರಿರುತ್ತದೆ. ಮತ್ತೊಂದು ಅಂಗಳದಲ್ಲಿ ಗಿಡವಾಗಿ ಬೆಳೆಯಬೇಕಾದವಳು ಹೆಣ್ಣು. ತುಳಸಿಯಂತೆ ಪೂಜನೀಯಳು.  ಭಾವನ ಹೆಣ್ಣಾದಳು ತುಳಸಿಯಾದಳು. ಮತ್ತೊಂದು ಅಂಗಳದ ಗಿಡವಾದಳು. ಸುಂದರವಾದ ಕಟ್ಟೆಯನು ಕಟ್ಟಿ ತಂಬಿಗೆ ನೀರನ್ನು ಎರೆದು ಬೆಳೆಸುವ ಕೈಗಳಿಗೆ ನಡೆದು  ಹೋದಳು ಭಾವನ.

 

            ಮದುವೆ ಮನೆಯ ವಾಲಗದ ಗದ್ದಲ ಪುರೋಹಿತರ ಮಂತ್ರ ಘೋಷದ ನಡುವೆ ಕೈ ಹಿಡಿದ ಸಹಚರ, ಈ  ಎಲ್ಲಾ ಸಂಭ್ರಮ ಬದಿಗಿರಿಸಿ ಪುಟ್ಟ ಕಂದನ ಬಳಿಗೆ ಬಂದು ಆಕೆ ಲಲ್ಲೆಗರೆದಾಗ ಈ ಹೆಣ್ಣ ಕಣ್ಣಹಿಂದಿರುವ ಕನಸದೇನಾಗಿರಬಹುದು? ಭರವಸೆ ಏನಿರಬಹುದು? ಹೆಣ್ಣು ಕೇವಲ ಹೆಣ್ಣಲ್ಲ ಆಕೆ ಪ್ರಕೃತಿಯಲ್ಲವೇ ಅಂತ ತೋರಿತು. ಪುಟ್ಟ ಭಾವನ ಮೈಕೈ ತುಂಬಿಕೊಂಡು ಬಂಗಾರದ ಸೀರೆಯುಟ್ಟು  ಸರ್ವಾಲಂಕಾರೆಯಾಗಿದ್ದರೂ  ತನ್ನದೆಲ್ಲವನ್ನು ಮರೆತು ಪುಟ್ಟ ಮಗುವನ್ನು ಮುದ್ದಿಸುವಾಗ ಹೆಗಲ ಮೇಲೆ ಹೊತ್ತಿರುವ ಜವಾಬ್ದಾರಿಯ  ಭರವಸೆ ಆ ಕಣ್ಣಲ್ಲಿ ತುಂಬಿತ್ತು. ಕೊಪ್ಪದ ಮನೆಯಲ್ಲಿ ಸದಾ ಮರೆಯಲ್ಲೇ ಕಳೆಯುತ್ತಿದ್ದ ಚೆಲುವೆ  ಭಲೇ ಗಟ್ಟಿಗಿತ್ತಿ ಅಂದುಕೊಂಡೆ.

 

            ತಲಮಕ್ಕಿಯಲ್ಲಿ ಮದುವೆ ಎಂದರೆ ಸಿನಿಮಾದ ಚಿತ್ರಕಥೆಯಂತೆ. ಅದು ಹೀಗೆ ಹೀಗೆ ಅಂತ ಮೊದಲೇ ಬರೆದಿಟ್ಟ  ಸ್ಕೃಪ್ಟಿನಂತೆ  (Script) ನಂತೆ  ಶಿಸ್ತು ಬದ್ಧ.ಕೆಲವು ಪಾತ್ರಗಳು ಹೀಗೆ ಇರುತ್ತವೆ ಅಂತ ಮೊದಲೇ ಊಹಿಸಬಹುದು. ಇಲ್ಲಿ ಇಂದೂ ಹಾಗೆ,  ಏನೆಲ್ಲ ಆಗಬೇಕೊ ಅದೆಲ್ಲ ಸಹಜವಾಗಿ ನಡೆಯಿತು. ಊಟ ಉಪಹಾರ ತಿನ್ನುವ ಮೊದಲೇ ಸ್ವಾದ ರುಚಿಯಾದ ಅನುಭವ. ಆ ಉಪಚಾರ ಸತ್ಕಾರಕ್ಕೆ ನಮ್ಮೊಳಗಿನ ಅತಿಥಿ ಜಾಗೃತನಾಗಿಬಿಡುತ್ತಾನೆ.  ಸತ್ಕಾರ ಸತ್ಕಾರ್ಯವಾಗುವುದು ಮನಸ್ಸಿನಲ್ಲಿ ಸತ್ ಅಂದರೆ ಸತ್ಯ ಇದ್ದಾಗ ಮಾತ್ರ. ಮನಸ್ಸಿನಲ್ಲಿ ಕೈ ಹಿಸುಕುವ ಅಸಹನೆ ಇದ್ದರೆ ಸತ್ಕಾರ ಸತ್ಕಾರ್ಯವಾಗುವುದಿಲ್ಲ.  ಇವರಲ್ಲಿ ವಿದುರನ ಕುಡುತೆ ಹಾಲಿನ ಪ್ರಜ್ಞೆ ಸದಾ ಎಚ್ಚರವಾಗಿರುವುದೇ ಒಂದು ವಿಚಿತ್ರ.

 

            ಈ ಬಾರಿಯ ಮದಯವೆಯೂ ಬಿಟ್ಟ ಸಿನಿಮಾ ರೀಲಿನಂತೆ ಮಧ್ಯಾಹ್ನದ ಪ್ರದರ್ಶನದಂತೆ ರಾತ್ರಿಯ ದೇಖಾವೆ ಕೂಡ ಇತ್ತು. ವೆತ್ಯಾಸವೇ ಇಲ್ಲ. ಅದೇ ಸಂಭ್ರಮ ಅದೇ ಸತ್ಕಾರ. ಕೃಷ್ಣನೆದುರು ನಿಂತ ವಿದುರನಂತೆ. ಆದರೆ ಈ ಬಾರಿ ಒಂದು, ಮೂವತ್ತು ವರ್ಷಗಳ ಹಿಂದಿನ ಅದೇ ಮುಖಗಳು ಚಪ್ಪರ ತುಂಬಾ ಕಂಡವು. ಯುವಕರ ಸಂಖ್ಯೆ ತೀರಾ ಚಿಕ್ಕದು. ಮದುವೆಗೆ ಬಂದವರಲ್ಲಿ ಯಾರೆಲ್ಲ  ನವತರುಣರು  ಅಂತ ಕೇಳಿದರೆ ಮದುಮಗ ಮದುಮಗಳು ಎಂದು ಹೇಳುವ ಸ್ಥಿತಿ. ಕಾಲ ಬದಲಾಗಿದೆ. ಈ ಬಾರಿ ಯುವ ಜನರ ಕೊರತೆ ಎದ್ದು ಕಾಣುತ್ತಿತ್ತು.ಈಗೀಗ ಇಂತಹ ಕಾರ್ಯಕ್ರಮಗಳಲ್ಲಿ ಹೊಸ ತಲೆಮಾರಿಗೆ ಆಸಕ್ತಿ ಬಹಳ ಕಡಿಮೆಯಾಗಿದೆ.   ಬದಲಾದ ಕೆಲಸದ ಸಮಯ, ಅದರ ಒತ್ತಡ ಒಂದೆಡೆಯಾದರೆ, ಮದುವೆ ಎಂದರೆ ಬೋರು ಎಂಬ ಮನೋಭಾವವೂ ಕೇಳಿಬರುತ್ತದೆ.

 

            ಹೌದು, ನಮ್ಮ ಮದುವೆ ಕಾರ್ಯಕ್ರಮಗಳು ಬೋರು ಹೊಡೆಸುತ್ತವೆ. ಯಾಕೆಂದರೆ ಸದಾ ಚಟುವಟಿಕೆಯಲ್ಲಿರಬೇಕಾದ ಕೈಗಳು ನಿಸ್ತೇಜವಾದಂತೆ, ಯುವಕರು ಯುವತಿಯರು ಮಾಡಬೇಕಾದ ಕೆಲಸಗಳು ಗಣನೀಯವಾಗಿ ಕಡಿಮೆಯಾಗಿದೆ. ಈಗ ಕ್ಯಾಟರಿಂಗ್ ನಿಂದ ತೊಡಗಿ ಚಪ್ಪರ ಅಲಂಕಾರ ಮದುವೆ ಪರಿಕರಗಳೆಲ್ಲವನ್ನೂ ಒದಗಿಸುವ ಕಾಂಟ್ರಾಕ್ಟರು ಇದ್ದಾರೆ. ಮೊದಲು ಮದುವೆ ಮನೆಯಲ್ಲೇ ಎಲ್ಲರೂ ಸೇರಿ ಮಾಡುತ್ತಿದ್ದ ಅಡುಗೆಯನ್ನು ಕಂಡವನು ನಾನು.  ಈಗ ಮಧ್ಯಾಹ್ನ ಅಥವಾ ಹೊತ್ತಿಗೆ ಸರಿಯಾಗಿ ಆಹಾರ ಎಲ್ಲೋ ಸಿಧ್ದವಾಗಿ ಕೈಸೇರತ್ತದೆ. ತರಕಾರಿ ಹೆಚ್ಚುವ ಅಥವಾ ಇತರ ಚಟುವಟಿಕೆಗಳು ಶೂನ್ಯವಾಗಿವೆ. ಮದುವೆ ಕಾರ್ಯಕ್ರಮ ನಿರ್ವಹಿಸುವ ಮನೆಯವರಿಗೂ ಈಗಿನ ಈ ಹೊಸ ವ್ಯವಸ್ಥೆಗಳು ಅನುಕೂಲಕಾರವಾಗಿಯೇ ಇರುವಾಗ ಅದಕ್ಕೆ ಮೊರೆ ಹೋಗುವುದು ಸಹಜ. ಪರಿಣಾಮ ಎಲ್ಲರೂ ಸೇರಿ ತರಕಾರಿ ಹೆಚ್ಚುವ ಕೆಲಸವಾಗಲೀ ಇತರ ಕೆಲಸಗಳಾಗಲೀ ಇಲ್ಲದೆ ಬಂದ ಆಪ್ತರು ಸುಮ್ಮನೇ ಇರುವ ಪರಿಸ್ಥಿತಿ ಬಂದಿದೆ‌. ಪರಿಣಾಮದಲ್ಲಿ ಮದುವೆ ಎಂಬುದು ಬೋರು ಎಂಬಂತಾಗಿದೆ. ಚಪ್ಪರ ಅಲಂಕಾರ, ಆಸನ ಇನ್ನಿತರ ವ್ಯವಸ್ಥೆ ಊಟದ ಉಪಚಾರ ಎಲ್ಲವೂ ಕಾಂಟ್ರಾಕ್ಟ್ ರೂಪದಲ್ಲಿ ಒದಗಿ ಬರುತ್ತದೆ. ಹಲವು ಕಡೆಗಳಲ್ಲಿ ಅರ್ಚಕರೂ ಅಗ್ನಿಕುಂಡ ದರ್ಭೆ ಪಾತ್ರೆ ಪಗಡಿ ಹೀಗೆ ಏನೆಲ್ಲ ಬೇಕೋ ಅದೆಲ್ಲವನ್ನು ಪಟ್ಟಿಮಾಡಿಕೊಂಡು ತರುತ್ತಾರೆ. ಒಪ್ಪಂದದಂತೆ ಒಂದಷ್ಟು ದುಡ್ಡು ಕೊಟ್ಟರಾಯಿತು. ವಿಡಂಬನೆ ಎಂದರೆ ತನ್ನ ಪಾಲಿನ ದಾನವನ್ನೂ ತಾನೇ ಆಯ್ಕೆ ಮಾಡಿ ದುಡ್ಡುಕೊಟ್ಟು ತರುವುದು.  ಇದೆಲ್ಲ ಮದುವೆಯಂತಹ ಭಾವನಾತ್ಮಕ ಕಾರ್ಯಕ್ರಮವನ್ನು ಯಾಂತ್ರೀಕೃತಗೊಳಿಸಿವೆ. ಎಲ್ಲವನ್ನೂ ಕಾಂಟ್ರಾಕ್ಟ್ ಕೊಡುವಾಗ ಮದುವೆಯಾಗುವ  ಗಂಡು ಹೆಣ್ಣು ಮದುವೆ ಎಂಬುದನ್ನುಕಾಂಟ್ರಾಕ್ಟ್ ಅಂತ ತಿಳಿಯುವುದರಲ್ಲಿ ತಪ್ಪೇನಿದೆ? ಅವಿಷ್ಕಾರ ಎಂಬ ಮದ್ಯ ಬಹಳಬೇಗ ತನ್ನ ನಶೆಯನ್ನು  ತೋರಿಸುತ್ತದೆ.

 


            ತಕ್ಕಮಟ್ಟಿಗೆ ಆವಿಷ್ಕಾರ ಗಳು ಕಾಲಗತಿಗೆ ಅನಿವಾರ್ಯ ವಾಗಿ ಇದ್ದರೂ ತಲಮಕ್ಕಿ ಮದುವೆ ಬಹಳ ಸಾಂಪ್ರದಾಯಿಕವಾಗಿತ್ತು.ಮನೆಯಲ್ಲಿ ಆದುದರಿಂದ ಅದರ ಸಂಭ್ರಮ  ಉಲ್ಲಸಿತವಾಗಿತ್ತು. ಮನೆ ಮಂದಿಯ ಉಪಚಾರ ಕಾಳಜಿ ಹೃದ್ಯವಾಗಿ ಮದುವೆಯನ್ನು ಸಂಭ್ರಮಿಸುವಂತೆ ಮಾಡಿತ್ತು.  ಹಿಂದಿನಂತೆ ಇಂದೂ ಪುರೋಹಿತರು ಬರಿಗೈಯಲ್ಲಿ ಬರುತ್ತಾರೆ!!

 

             ಸಾಮಾನ್ಯವಾಗಿ ಮದುವೆ ಮುಗಿದು ಹೆಣ್ಣು ಗಂಡಿನೊಡನೆ ಹಜ್ಜೆ ಇಡುವಾಗ ತನ್ನ ಹೆತ್ತವರನ್ನೂ ಒಡಹುಟ್ಟಿದವರನ್ನೂ ಒಡನಾಡಿಗಳನ್ನೂ  ನೆನೆದು ಕಣ್ಣೀರು ಹಾಕುವುದು ಸಾಮಾನ್ಯ. ಹೆಣ್ಣು ಮಗಳ ಬೀಳ್ಕೊಡುಗೆ ಎಂಬುದು ಸಂಭ್ರಮದ ಮದುವೆಯಲ್ಲಿ ಕರುಳ ಹಿಂಡುವ ಸಂದರ್ಭ. ಆದರೆ ಬಾವನ ಮಗಳು ಭಾವನ ಎಲ್ಲ ದುಗುಡವನ್ನೂ ನುಂಗಿ ಗಟ್ಟಿಗಿತ್ತಿಯಾಗಿ ನಗುತ್ತಾ ಗಂಡನೊಡನೆ ಆತ್ಮವಿಶ್ವಾಸದಿಂದ ಹೆಜ್ಜೆ ಇಟ್ಟದ್ದು ಅತಿ ವಿಶೇಷ ವಾಗಿತ್ತು. ಆಕೆಯ ಅಪ್ಪ ನನ್ನ ಬಾವನೂ ಯೋಜನಾಬದ್ಧವಾಗಿ ಮಗಳ ಮದುವೆ ಮುಗಿಸಿದ ನಿರಾಳತೆಯಲ್ಲಿದ್ದರು ಮದುವೆ ಇವಿಷ್ಟು ವೈಶಿಷ್ಟ್ಯ ವನ್ನು ತುಂಬಿ ಯಶಸ್ವಿಯಾಗಿ ಮಂಗಳವಾಯಿತು. ಅವಿಷ್ಕಾರಗಳ ನಡುವೆಯೂ ತಲಮಕ್ಕಿ ಮದುವೆ ಇನ್ನೂ ಅದೇ ಸೊಗಡನ್ನು ಒಂದಷ್ಟು ಉಳಿಸಿಕೊಂಡಿದೆ. ಇದು ಉಳಿಯಬೇಕು ಎಂಬ ಆಶಯ ಎಲ್ಲರಲ್ಲೂ ಇದೆ. ಎಲ್ಲವನ್ನು ಸುಲಲಿತವಾಗಿ ನಿರ್ವಹಿಸಿ ತಮ್ಮ ಜೀವನದ ಮಹತ್ತರ ಜವಾಬ್ದಾರಿಯನ್ನು ನಿರ್ವಹಿಸಿದ ಬಾವ ದಂಪತಿಯರು ದಣಿವಿನಲ್ಲೂ ಸುಖವನ್ನು ಕಂಡರು.

 


 

ಕೊನೆಯಲ್ಲಿ ವಿದಾಯ ಹೇಳುವಾಗ ಬಾವನ ಮಗಳು‌ ಭಾವನ ಕಾಲಿಗರಗಿದಾಗ ಭಾವನಾತ್ಮಕವಾಗಿಯೇ ಎದೆಗೊತ್ತಿ ನಮ್ಮ ಮನೆ ಹೆಣ್ಣು ಮಗಳನ್ನು ಹರಸಿದೆ. ಸಹಚರನೊಂದಿಗಿನ ಹೊಸ ಬದುಕಿನಲ್ಲಿ ಸ್ನೇಹ ಸೌಹಾರ್ದ ಸಮೃದ್ಧಿಯಾಗಲಿ.ಬಾವನ ಮಗಳು ಭಾವನ ಸುಖಿಯಾಗಿರಲಿ.  

Thursday, December 3, 2020

ಹೇ ಭಗವಂತಾ..

ಹೇ ಭಗವಂತಾ..

 ಎಂಬ ಒಂದು ಉದ್ಗಾರ ಅತೀತವಾದ ಶಕ್ತಿಗೆ ದ್ಯೋತಕವಾಗಿ ನಮ್ಮಿಂದ ಹೊರಹೊಮ್ಮುತ್ತದೆ. ಭಗಂತ, ಪರಮಾತ್ಮ ದೇವರು ಹೀಗೆ ಅರ್ಥಗರ್ಭಿತವಾದ ಹೆಸರು ಹಲವು ಇರಬಹುದು. ಮನಸ್ಸಿಗೆ ಹತ್ತಿರವಾಗದೇ ಇದ್ದಾಗ ಇವೆಲ್ಲ ಕೇವಲ ಹೆಸರುಗಳಾಗುತ್ತವೆ.  ಪರಮಾತ್ಮ ರೂಪದಿಂದ ಭಾವದಿಂದ ವಿಶ್ವಾಸದಿಂದ ಮನಸ್ಸಿನಲ್ಲಿ ಭದ್ರವಾದ ಭಾವನೆಗಳು ಹಲವಿರಬಹುದು. ಆದರೆ ಈ ಭಾವನೆಗಳು ನಮ್ಮಲ್ಲಿ ತಾದಾತ್ಮ್ಯವನ್ನು ಆತ್ಮ ಸಂಬಂಧವನ್ನು ಹುಟ್ಟಿಸುತ್ತದೆ ಎಂಬುದು ಮನಸ್ಸಿನ ಏಕಾಗ್ರತೆಯನ್ನು ಹೊಂದಿಕೊಂಡಿರುತ್ತದೆ.

 

ನಾವು ಯಾರೊಂದಿಗೋ ಮಾತನಾಡುತ್ತಿರುತ್ತೇವೆ. ಆತನಿಗೊಂದು ಕರೆ ಬರುತ್ತದೆ. ಅಥವಾ ಅಲ್ಲೇ ಇದ್ದ ಮತ್ತೊಬ್ಬ ವ್ಯಕ್ತಿ ಆತನನ್ನು ಮಾತಿಗೆಳೆಯುತ್ತಾನೆ. ಅದುವರೆಗೆ ಆತ್ಮೀಯವಾಗಿ ಗಹನವಾಗಿ ಮಾತನಾಡುತ್ತಿದ್ದ ಆತನ ಗಮನ ಒಂದಿಷ್ಟು ಆಕಡೆಗೆ ಸೆಳೆಯಲ್ಪಡುತ್ತದೆ. ನಮ್ಮ ಮಾತುಗಳನ್ನು ಕೇಳುತ್ತಿದ್ದವನು ಹಾಗೇ ಮತ್ತೊಂದು ಕಡೆಗೆ ಹೂಂ ಗುಟ್ಟುತ್ತಾ ನಮ್ಮನ್ನು ಕಾಯಿಸುತ್ತಾನೆ. ಅಥವಾ ಆತನ ಪೋನ್ ಸಂಭಾಷಣೆ ಮುಗಿಯುವುದನ್ನೇ ಕಾಯುತ್ತಿರುತ್ತೇವೆ.  ಆಗ ನಮಗೆ ಒಂದು ರೀತಿ ಅವಮಾನವಾದಂತಾಗುತ್ತದೆ. ನನ್ನ ಮಾತಿಗೆ ಈತನ ಗಮನ ಇಲ್ಲ ಎಂಬ ಅನುಮಾನ ಉಂಟಾಗುತ್ತದೆ. ಅಸಮಾಧಾನ ಉಂಟಾಗಿ ಅತೃಪ್ತಿ ಉಂಟಾಗುತ್ತದೆ.  ಈಗೀಗಲಂತೂ ಮೊಬೈಲ್ ಎಂಬ ಸಾಧನ ನಿತ್ಯ ಕೈ ಆಯುಧದಂತೆ ಕೈಯಲ್ಲಿರುವಾಗ ನಮ್ಮಲ್ಲಿ ಮಾತನಾಡುತ್ತಿದ್ದಂತೆ ಎಲ್ಲೆಂದರಲ್ಲಿ ಆತನಿಗೆ ಕರೆ ಬರುತ್ತದೆ. ನಮ್ಮ ಮಾತಿಗೆ ಸಹಜವಾಗಿ ತಡೆಯಾಗುತ್ತದೆ. ಇದೊಂದು ಅಸಮಾಧಾನವನ್ನು ಸೃಷ್ಟಿಸುತ್ತದೆ. ಇನ್ನೊಬ್ಬರೊಡನೆ ವ್ಯವಹರಿಸುವಾಗ ನಮಗೇ ಇಷ್ಟು ಕಿರಿ ಕಿರಿಯಾಗಬೇಕಾದರೆ ನಮ್ಮ ನಡವಳಿಕೆಯಲ್ಲೂ ನಾವೂ ಅಷ್ಟೆ ಪರಿಶುದ್ದಿಯಾಗಬೇಕಲ್ಲ?

ಸ್ನಾನ ಮಾಡಿ ಮಡಿ ಉಟ್ಟು ನಾಮ ಬಳಿದು ಭಕ್ತಿಯಿಂದ ( ಇದು ಕೇವಲ ಅಭಿನಯಮಾತ್ರ ಅಂತ ಸ್ವಲ ಗಂಭೀರವಾಗಿ ಯೋಚಿಸಿದರೆ ಅರಿವಾಗುತ್ತದೆ.) ಸಂಧ್ಯಾವಂದನೆ ಅಥವಾ ಪೂಜೆಗೆ ಅಣಿಯಾಗುತ್ತೇವೆ. ದೀಪ ಹಚ್ಚುವಾಗಲೇ ಮನೆ ಮಂದಿಯೊಂದಿಗೆ ಮಾತುಕತೆ ಜಗಳ ಅಥವಾ ಇನ್ನೇನೋ ಮತ್ತೊಂದು ವ್ಯವಹಾರ ಇದ್ದೇ ಇರುತ್ತದೆ. ಅಲ್ಲೇ ಇದ್ದ ಮೊಬೈಲ್ ರಿಂಗ್ ಆಗುತ್ತದೆ, ಇಲ್ಲ ಕಣ್ಣಿಗೆ ಬೀಳುತ್ತದೆ. ಮೊಬೈಲ್ ಎಂಬ ವಸ್ತು ಹೇಗೆಂದರೆ ಅದು ಕಣ್ಣಿಗೆ ಬಿದ್ದಾಗ ಎತ್ತಿಕೊಳ್ಳಬೇಕು. ಅದರ ಲಾಕ್ ತೆರೆದು ಸಹಜವಾಗಿ ವಾಟ್ಸಪ್, ಫೇಸ್ ಬುಕ್ ಮೇಸೆಜ್ ಇವಿಷ್ಟು ನೋಡಲೇ ಬೇಕು. ನಾವು ಹೊರಟ ಕೆಲಸ ಎನೋ ನಾವು ಮಾಡುತ್ತಿರುವುದೇನೋ. ದೇವರು ಅಂತ ನಾವು ಭಾವನೆ ಏನಿರುತ್ತದೆಯೋ ಅದಕ್ಕೆ ನಮ್ಮ ಆದ್ಯತೆ ಕಡಿಮೆಯಾಗಿರುತ್ತದೆ.   ಅಷ್ಟಾಗಿ ನಮ್ಮದು ನಮ್ಮ ಮಟ್ಟಿಗೆ ಭಕ್ತಿಯ ಪರಾಕಾಷ್ಠೆಯಾಗಿರುತ್ತದೆ. ನಮ್ಮ ಕ್ರಿಯೆ ಹೇಗಿರುತ್ತದೆ ಎಂದರೆ, ದೀಪ ಹಚ್ಚದೇ ಇದ್ದರೆ ಪೂಜೆ ಮಾಡದೇ ಇದ್ದರೆ ದೇವರು ಎಲ್ಲಿ ಕೋಪಿಸುತ್ತಾನೋ ಎಂಬ ಭಾವ ಇರುತ್ತದೆ. ಇದು ಭಕ್ತಿಯಲ್ಲದೆ ಕೇವಲ ಭಯ. ಭಯದಲ್ಲಿ ಭಕ್ತಿ ಇರುವುದಕ್ಕೆ ಸಾಧ್ಯವಿದೆಯೇ? ಯೋಚಿಸುವ ನಮ್ಮ ಕ್ರಿಯೆ ದೇವರನ್ನು ಅವಹೇಳನ ಮಾಡಿದಂತೆ ಅಲ್ಲವೇ. ದೇವರು ಎಂದರೆ ಕೇವಲ ನಮ್ಮ ನಂಬಿಕೆಯ ಸಂಕೇತ. ನಮ್ಮ ನಂಬಿಕೆಗೆ ನಾವು ಅವಹೇಳನ ಮಾಡುತ್ತೇವೆ ಎಂದಾದರೆ ನಮ್ಮ ವ್ಯಕ್ತಿತ್ವ ಎಂತಹುದು?  ನಾವು ನಮ್ಮ ಪರಿಸರವನ್ನು ಹೇಗೆ ಗೌರವದಿಂದ ಕಾಣಬಲ್ಲೆವು?

ಮನೆಯಲ್ಲಿ ಪುಟ್ಟ ಮಗುವಿರುತ್ತದೆ. ಊಟ ಮಾಡುವುದಕ್ಕೆ ಅದು ಒಪ್ಪದೆ ಹಟ ಮಾಡುತ್ತದೆ. ಆಗ ಅಮ್ಮ ಸಹಜವಾಗಿ ಹೇಳುವ ಮಾತು ಇರುತ್ತದೆ. ನೋಡು ಊಟ ಮಾಡು ಇಲ್ಲಾದರೆ ಮಾಮಿ(ದೇವರು) ಶಾಪ ಕೊಡ್ತಾನೆ....ದೇವರು ಎಂದರೆ ಭಕ್ತಿಯ ಬದಲು ಭಯವನ್ನೇ ಹುಟ್ಟಿಸುತ್ತೇವೆ. ಒಂದು ರೀತಿಯ ಭಯೋತ್ಪಾದನೆ. ದೇವರು ದೆಂದರೆ ಭಯ ಭಕ್ತಿ ಬೇಕು ಎನ್ನುವಾಗ ಭಕ್ತಿ ಬೇಕು ಆದರೆ ಭಯ ಅದು ಯಾಕೋ ನಮ್ಮ ಮತ್ತು ನಮ್ಮ ಆತ್ಮದ ಮಾನಸಿಕ ಸಂಬಂಧವನ್ನು ದೂರ ಮಾಡುತ್ತದೆ. ಹೀಗೆ ನಮ್ಮ ಮನಸ್ಸಿನೊಳಗೆ ಇಳಿಯುವುದುನ್ನು ನಾವು ಬಾಲ್ಯದಿಂದಲೇ ಕಳೆದುಕೊಳ್ಳುತ್ತೇವೆ.  ದೇವರಲ್ಲಿ ತಾದಾತ್ಮ್ಯವಾದ ಸಂಬಂಧ  ಮೂಡಬೇಕಾದರೆ ಭಯಕ್ಕಿಂತ ಭಕ್ತಿ ಅತ್ಯವಶ್ಯ. ಭಯವಿಲ್ಲದ ಭಕ್ತಿಯಾಗಬೇಕು. ಯೋಚಿಸಿ ಪ್ರೀತಿಯಿಂದ ಕಥೆ ಹೇಳಿ ನಕ್ಕು ನಗಿಸುವ ಅಜ್ಜ ಇಷ್ಟವಾಗುತ್ತಾರೆ, ಹೊರತು ಅದೇ ಅಜ್ಜ ಸಿಡಿ ಮಿಡಿಗೊಂಡು ಬೈಯುತ್ತಿದ್ದರೆ...ಆ ಅಜ್ಜ ಎಷ್ಟೇ ದೊಡ್ಡವರಾಗಲಿ ಮಕ್ಕಳಿಗೆ ಇಷ್ಟವಾಗುವುದಿಲ್ಲ.

ಯಾವುದೇ ಕಾರ್ಯ ಮಾಡುವಾಗ ನಾವು ನಮ್ಮ ಮನಸ್ಸಿಗೆ ಕೇಳಿಕೊಳ್ಳಬೇಕು. ಆ ಕಾರ್ಯವನ್ನು ನಾವೇಕೆ ಮಾಡುತ್ತೇವೆ.? ಮಗುವನ್ನು ಎತ್ತಿ ಆಡಿಸುತ್ತೇವೆ. ಯಾಕೆ ಆಡಿಸುತ್ತಿದ್ದೇವೆ? ಮಗುವನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದೇವೆ. ಯಾಕೆ? ಹೀಗೆ ನಮ್ಮ ಪ್ರತಿಯೊಂದು ಕೆಲಸದಲ್ಲೂ ಉದಾತ್ತವಾದ ಕಾರಣಗಳಿರಬಹುದು. ಅದೇ ರೀತಿ ದೇವರ ಮುಂದೆ ನಿಂತು ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ. ದೇವರಿಗೆ ಕೈ ಮುಗಿದು ಕಣ್ಣು ಮುಚ್ಚುತ್ತೇವೆ..ಮನಸ್ಸಿಗೆ ಕೇಳಿಬಿಡುವ ನಾವೇಕೆ ಕೈ ಮುಗಿದು ನಿಂತುಕೊಂಡಿದ್ದೇವೆ? ಯಾಕೆಂದರೆ ನಮ್ಮ ಮನಸ್ಸು ಬೇರೆನನ್ನೋ ಯೋಚಿಸುತ್ತಿದೆ.  ಯಾರೊಂದಿಗೋ ನಾವು ಮಾತನಾಡುತ್ತಿರಬಹುದು. ಕೈ ಮುಗಿಯುವುದು ಯಾಕೆ? ಕೈ ಮುಗಿಯುವಾಗಲೂ ಆತ್ಮವಂಚನೆ!!

ಸಂಧ್ಯಾವಂದನೆಗೆ ಕುಳಿತುಬಿಡುತ್ತೇವೆ. ಆಚಮನ ಮಾಡಿ ಸಂಕಲ್ಪ ಮಾಡಬೇಕಾದರೆ ಯಥಾ ಪ್ರಕಾರ ಮನೆಯ ಹೊರಗೆ ಯಾರೋ ಬಂದಿರುತ್ತಾರೆ, ಇಲ್ಲ ಮೊಬೈಲ್ ಫೋನ್ ಸದ್ದು ಮಾಡುತ್ತದೆ. ನಾವು ಎಲ್ಲವನ್ನು ಬಿಟ್ಟು ಹೊರಬರುತ್ತೇವೆ. ಇಲ್ಲ ಅಲ್ಲಿಂದಲೇ ಕೂಗಿ ಹೇಳುತ್ತೇವೆ. ಯಾರದು ? ನೋಡು. ಮತ್ತದೇ ದೇವರಿಗೆ ಅವಮಾನ ಮಾಡುತ್ತಿದ್ದೇವೆ.  ದಿನದ ಇಪ್ಪತ್ತನಾಲ್ಕು ಗಂಟೆಯಲ್ಲಿ ಒಂದು ಹತ್ತು ನಿಮಿಷ ನಾವು ಸಂಪೂರ್ಣವಾಗಿ ಸಮಯವನ್ನು ಪರಮಾತ್ಮನಿಗೆ ಮೀಸಲಾಗಿ ಇಡುವುದಕ್ಕೆ ಸಾಧ್ಯವಿಲ್ಲವಾದರೆ ಆ ಭಕ್ತಿಯಾಗಲೀ ಭಯವಾಗಲೀ ಕೇವಲ ಅಭಿನಯವಲ್ಲವೇ? ಯಾರಿಗೋ ತೋರಿಸುವುದಕ್ಕೆ ಅಥವಾ ಹೇಳಿಕೊಳ್ಳುವುದಕ್ಕೆ, ಇಲ್ಲಾ,  ನಮ್ಮ ಮನಸ್ಸಿನ ತೃಪ್ತಿಗೆ ನಮ್ಮ ಕ್ರಿಯೆಯಾಗಿರುತ್ತದೆ. ನಮ್ಮ ತೃಪ್ತಿ ಎಂಬುದು ಸ್ವಾರ್ಥದ ಒಂದು ಅಲ್ಲೂ ನಮ್ಮ ಸ್ವಾರ್ಥವೇ ಮುಖ್ಯ. ಸಂಧ್ಯಾವಂದನೆ ಅಥವ ನಿತ್ಯ ಪ್ರಾರ್ಥನೆ ಅದು ನಮ್ಮ ಕರ್ತವ್ಯವಾಗಿರುತ್ತದೆ. ಯಾಕೆಂದರೆ ಅಲ್ಲಿ ಯಾವುದೇ ಬೇಡಿಕೆ ಇರಬಾರದು. ಸ್ವಾರ್ಥವಿರಬಾರದು.  ಆವಾಗಲೇ ಅದು ಕರ್ತವ್ಯವಾಗುತ್ತದೆ. ಮಾಡುವ ಕೆಲಸ ಕರ್ಮ ಎಂದಾಗುತ್ತದೆ. ಅದನ್ನೆ ಕರ್ಮಣ್ಯೆ ವಾಧಿಕರಸ್ಥೆ ಅಂತ ಪರಮಾತ್ಮ ಹೇಳಿರುವುದು. ಆದರೆ ನಾವು ಮಾಡುವ ಯಾವುದೇ ಕೆಲಸವನ್ನು ಯಾಕಾಗಿ ಮಾಡುತ್ತಿದ್ದೇವೆ ಅಂತ ಕೇಳುವುದಿಲ್ಲ. ಸಹಜವಾಗಿ ಅದು ಒಂದು ಅಭಿನಯವೇ ಆಗಿರುತ್ತದೆ. ದೇವರು ಎಂಬ ಭಾವನೆಯಲ್ಲಿ ನಾವಾಡುವ ದೊಡ್ಡ ನಾಟಕ.

ಇಂದು ಮನುಷ್ಯನಿಗೆ ಆವಶ್ಯವಿರುವುದು ನಿರಾಳತೆ. ಯಾರಲ್ಲೇ ಕೇಳಿ ಎಷ್ಟು ನೆಮ್ಮದಿಯಿಂದ ಇದ್ದವರು ಸಿಗುವುದು ಕೆಲವು ಮಂದಿ. ಅಷ್ಟರಲ್ಲೂ ಅವರು ಅನುಭವಿಸುವ ನಿರಾಳತೆ ಕೇವಲ ಲೌಕಿಕ ಜೀವನಕ್ಕೆ ಹೊಂದಿಕೊಂಡು ಅದು ಸೀಮಿತವಾಗಿರುತ್ತದೆ. ನಿಜವಾದ ನಿರಾಳತೆ ಪರಿಚಯವೇ ಇರುವುದಿಲ್ಲ. ಹಾಗಾದರೆ ಅದೆಲ್ಲಿ ಸಿಗುತ್ತದೆ. ನಮ್ಮೊಳಗೇ ಇರುತ್ತದೆ.

ಬಹಳ ವರ್ಷದಿಂದ ಶೀತ ನೆಗಡಿ ಅಲರ್ಜಿಯಿಂದ ತೊಂದರೆ ಅನುಭವಿಸುತ್ತಿದ್ದ ನಾನು ಶಾಶ್ವತ ಸಮಸ್ಯೆ ಪರಿಹಾರಕ್ಕೆ  ಇತ್ತೀಚೆಗೆ ವೈದ್ಯರ ಬಳಿಗೆ ಹೋದೆ. ಅದು ಹೋಮಿಯೊ ಪತಿ ವೈದ್ಯರು. ಅದರ ಕ್ರಮದಂತೆ ನನ್ನ ಚರಿತ್ರೆಯನ್ನು, ನನ್ನ ಜೀವನ ಶೈಲಿಯನ್ನು ನನ್ನ ಮನಸ್ಥಿತಿಯನ್ನು ಎಲ್ಲಾ ತಿಳಿದುಕೊಂಡರು. ಒಂದಷ್ಟು ಔಷಧಿ ಕ್ರಮದಂತೆ ನೀಡಿದರು. ಎರಡು ವಾರ ಕಳೆದೆ ಔಷಧಿ ಪರಿಣಾಮಕಾರಿ ಅಂತ ಅನ್ನಿಸಲಿಲ್ಲ. ನನಗೆ ಅರಿವಿತ್ತು. ಅದು ಔಷಧಿಯ ಅಥವಾ ಚಿಕಿತ್ಸೆಯ ತೊಂದರೆಯಲ್ಲ. ಅದು ನನ್ನದೇ ತೊಂದರೆ. ಅದಕ್ಕೆ ಹೊಂದಿಕೊಂಡೇ ವೈದ್ಯರು ಹೇಳಿದರು.

" ನಿಮ್ಮ ಜೀವನ ಶೈಲಿಗೆ ಈ ಅಲರ್ಜಿ ಬರಬಾರದಿತ್ತು. ಅದ್ಭುತ ಜೀವನವನ್ನು ಜೀವಿಸುತ್ತಿದ್ದೀರ. ಎರಡು ಗಂಟೆ ಯೋಗ, ಧ್ಯಾನ, ನಿಯಮಿತ ಆಹಾರ ಸಹಜ ನಡವಳಿಕೆ ಹೀಗೆ ಅಧ್ಬುತ ಜೀವನ. ಆದರೂ ನಿಮ್ಮಲ್ಲಿ ರೋಗನಿರೋಧಕ ಶಕ್ತಿಯ ಕೊರತೆ ಇದೆ. ನಾವು ಅದಷ್ಟನ್ನೇ ಚಿಕಿತ್ಸೆ ಕೊಟ್ಟು ನೋಡಬಹುದು. ಆದರೆ ನಿಮ್ಮ ಮನಸ್ಸಿನ ಯೋಚನೆಗಳನ್ನು ಚಿಂತೆಗಳನ್ನು ನೀವು ದೂರವಿಡಬೇಕು. ಅರ್ಥಾತ್ ಯೋಚಿಸುವುದನ್ನು ಬಿಡಬೇಕು. ನಿವೆಷ್ಟು ಯೋಚಿಸುವುದನ್ನು ಕಡಿಮೆ ಮಾಡುತ್ತೀರೋ ಅಷ್ಟು ಬೇಗ ನಿಮ್ಮ ಅಲರ್ಜಿಯಿಂದ ಹೊರ ಬರುತ್ತೀರಿ. ನಂತರ ನಿಮಗೆ ಔಷಧಿಯ ಅವಶ್ಯಕತೆ ಇರುವುದಿಲ್ಲ."  ಎಂತಹಾ ಸಲಹೆ? ಯೋಚನೆ ಬೇಡಾ ಎನ್ನುವ ನನಗೇ ಮತ್ತಷ್ಟು ಯೋಚನೆಯಾಯಿತು. ಇದಕ್ಕೆ ಒಂದೇ ಪರಿಹಾರ ನಿರಾಳತೆ ಒದಗಿಸಿಕೊಳ್ಳಬೇಕು. ನಾನೆಷ್ಟು ಚಿಂತಿಸುವುದನ್ನು ಕಡಿಮೆ ಮಾಡುತ್ತೇನೊ ಅಷ್ಟು ನನ್ನಲ್ಲಿ ಆಮ್ಲಜನಕ ತುಂಬಿಕೊಳ್ಳುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮುತ್ತಿನಂತಹ ಸಲಹೆ.  ಹಾಗಾಗಿ ಮತ್ತಷ್ಟು ಅ ಬಗ್ಗೆ ಉದ್ಯುಕ್ತನಾದೆ. ನಾನು ಯಾರಿಂದ ಸಮಸ್ಯೆ ಅನುಭವಿಸುತ್ತೇನೋ ಎಲ್ಲರಲ್ಲೂ ಸಹಜವಾಗಿ ವ್ಯವಹರಿಸುವುದಕ್ಕೆ ಅಭ್ಯಾಸ ಮಾಡತೊಡಗಿದೆ. ಈಗ ಅದೇ ಹಾದಿಯಲ್ಲಿದ್ದೇನೆ. ನಿರಾಳತೆಯನ್ನು ಅನುಭವಿಸುತ್ತಿದ್ದೇನೆ. 

ದೇವರು  ಎಂಬ ಪರಮಾತ್ಮನಿಗೆ ಹಲವು ಹೆಸರುಗಳಿರಬಹುದು. ಎಲ್ಲದಕ್ಕೂ ಗಹನವಾದ ಗಂಭೀರವಾದ ಅರ್ಥವಿರಬಹುದು. ಅದೆಲ್ಲವನ್ನು ಬದಿಗಿರಿಸಿ, ಯಾಕೆಂದರೆ ಪರಮಾತ್ಮ ಚಿಂತನೆಯೊಂದೇ  ಪರ್ಯಾಪ್ತವಾದ ನಿರಾಳತೆಯನ್ನು ಒದಗಿಸಬಲ್ಲುದು. 

ಹೀಗೆ  ನಮ್ಮ ಮನೆಯಲ್ಲಿ ಪುಟ್ಟ ಮಗುವಿರುತ್ತದೆ. ಅದಕ್ಕೆ ನಿಜವಾದ ಹೆಸರು ಒಂದಿರುತ್ತದೆ. ಅದು ಸುಂದರವಾಗಿರುತ್ತದೆ. ಆದರೂ ನಾವು ಮುದ್ದಾಗಿ ಇನ್ನೊಂದು ಹೆಸರಿನಿಂದ ಕರೆಯುತ್ತೇವೆ....ತುಕ್ಕು ಪಕ್ಕು ಹೀಗೆ. ಅದು ನಮ್ಮ ಮನಸ್ಸಿಗೆ ಹಿತವಾದ ಅನುಭವವನ್ನು ಕೊಡುವ ಹೆಸರು. ಹಲವು ಸಲ ಆ ಹೆಸರಿನಿಂದ ಕರೆದರೆ ಮಾತ್ರಾ ಮಗು ನಗುತ್ತಾ ಹತ್ತಿರ ಬರುತ್ತದೆ. ಮುದ್ದಿಸಿಕೊಳ್ಳುತ್ತದೆ.  ನಿಜವಾದ ಹೆಸರಿಗಿಂತಲೂ ಈ ಮುದ್ದಾದ ಅಡ್ಡ ಹೆಸರೇ ಭಾವನಾತ್ಮಕವಾದ ಮಾನಸಿಕ ಸಂಭಂಧವನ್ನು ಹೊಂದಿರುತ್ತದೆ. ಹಲವು ಸಲ ಮಗು ಬೆಳೆದು ದೊಡ್ಡವನಾದರೂ ಈ ಅಡ್ಡ ಹೆಸರು ಶಾಶ್ವತವಾಗಿ ಆ ಮಾನಸಿಕ ಸಂಬಂಧಕ್ಕೆ ಸಾಕ್ಷಿಯಾಗಿರುತ್ತದೆ. ವಿಚಿತ್ರವೆಂದರೆ ಆ ಹೆಸರಿಗೆ ಅರ್ಥವೇ ಇರುವುದಿಲ್ಲ!

ಹೀಗೆ ಮುಖ್ಯವಲ್ಲದ ಅರ್ಥವಿಲ್ಲದ ಹೆಸರು ಬದುಕಿಗೆ ಪ್ರಧಾನವಾಗುವುದು ಅದರ ಅರ್ಥದಿಂದ ಅಲ್ಲ. ಅದರ ಭಾವದಿಂದ. ಯೋಚಿಸೋಣ ನಾವು ದೇವರನ್ನೂ ಇದೇ ಭಾವದಿಂದ ಒಂದು ಮುದ್ದಾದ ಹೆಸರನ್ನು ಹಿಡಿದು ಕರೆಯಬಾರದೇಕೆ?  ಬಹಿರಂಗವಾಗಿ ಅಲ್ಲದೇ ಇದ್ದರೆ ಕೇವಲ ನಮ್ಮ ಮನಸ್ಸಿನ ಒಳಗಿನಿಂದ ನಮ್ಮ ಭಗವಂತನನ್ನು ಕರೆಯಬಾರದೇಕೆ. ಈಗ ಮನಸ್ಸಿನಲ್ಲೇ ಉದ್ಗರಿಸಿ ಹೇ ಭಗವಂತ.. ಇಲ್ಲಿ ಕೃಷ್ಣನೂ ಇಲ್ಲ ಈಶ್ವರನೂ ಇಲ್ಲ ಯಾರೂ ಇಲ್ಲದ ಒಂದು ಆತ್ಮ ಸಂಬಂಧ ತಾದಾತ್ಯ್ಮವಾಗಿ ಬೆಳೆಯುತ್ತದೆ. ಮಾತ್ರವಲ್ಲ ಇದು ನಿಮ್ಮ ಉಳಿದೆಲ್ಲ ಕ್ರಿಯೆಯಿಂದಲು ನಿಮ್ಮನ್ನು ದೂರವಾಗಿರಿಸುತ್ತದೆ. ಮುಖ್ಯವಾಗಿ ಅದು ಉಚ್ಚರಿಸಿದಂತೆ ನಮ್ಮ ಮನಸ್ಸಿನಲ್ಲಿ ಭಗವಂತನಿದ್ದಾನೆ ಎಂಬ ಅನುಭವ ದಟ್ಟವಾಗುತ್ತದೆ.

ಪ್ರತಿಯೊಬ್ಬರ ಮನಸ್ಸಿನಲ್ಲೂ  ದೇವರಿದ್ದಾನೆ. ಆತ್ಮ ಎಂದರೆ ಪರಮಾತ್ಮ. ದೇಹ ಮನಸ್ಸು ಆತ್ಮ ಹೀಗೆ ಯೋಚಿಸುವುದೇ ಆಧ್ಯಾತ್ಮ. ಆಧ್ಯಾತ್ಮದಲ್ಲಿ ದೇವರು ಎಂಬುದು ಹೊರಗಿಲ್ಲ. ನಮ್ಮೊಳಗೇ . ಜ್ಞಾನಿಗಳು ಹೇಳುತ್ತಾರೆ. ಆಧ್ಯಾತ್ಮ ಅಂದರೆ ಏನು? ಇದುವೇ ಅದು. ಅದುವೇ ಇದು. ಈ ದೇಹವೇ ಪರಮಾತ್ಮ. ಆ ಪರಮಾತ್ಮನೇ ಈ ದೇಹ. ಅದನ್ನೇ ಅದ್ವೈತ ಎಂದು ಕರೆದರು.  ಬಹಳ ಸರಳವಾಗಿದೆ. ಮಾತ್ರ ಅಷ್ಟೆ ಕ್ಲಿಷ್ಟವಾಗಿದೆ. ಯಾಕೆಂದರೆ ನಮ್ಮ ದೇಹ ಮತ್ತು ಆತ್ಮದ ನಡುವೆ ಈ ಪ್ರಪಂಚ ಬೆಳೆದು ಬಿಟ್ಟಿದೆ. ಅದರ ವ್ಯವಹಾರ ತುಂಬಿಕೊಂಡಿದೆ. ನಾವು ಅದರಿಂದ ಹೊರಬರಬೇಕು. 

ಮನಸ್ಸಿನಲ್ಲಿ ಪರಮಾತ್ಮ ಇದ್ದಾನೆ. ನಮ್ಮೊಳಗೇ ದೇವರಿದ್ದಾನೆ. ಹೀಗೆ ಆಧ್ಯಾತ್ಮ ದಿವ್ಯ ತತ್ವವನ್ನು ಅರಿತಿದ್ದರೂ ನಾವು ಅದನ್ನು ನಂಬಿಕೊಂಡಂತೆ ಇರುವುದಿಲ್ಲ. ಯಾಕೆ ದೇವರನ್ನು ನಮ್ಮೊಳಗೆ ಇದ್ದಾನೆ ಎಂದು ನಾವು ಭಾವಿಸುತ್ತಿಲ್ಲ? ಕಾರಣ ಸುಲಭ... ದೇವರು ನಮ್ಮೊಳಗೆ ಇರುವಾಗ ನಾವು ಪ್ರಾಮಾಣಿಕರಾಗಿರಬೇಕಾಗುತ್ತದೆ. ಸತ್ಯವಂತರಾಗಿರಬೇಕಾಗುತ್ತದೆ. ಪವಿತ್ರ ಮನಸ್ಸು ಇರಬೇಕಾಗುತ್ತದೆ. ಸನ್ಮನಸ್ಸು ಸಚ್ಚಿಂತನೆ ಸದುದ್ದೇಶ, ಸತ್ ಸಂಕಲ್ಪ ಇರಬೇಕಾಗುತ್ತದೆ. ನಮ್ಮ ಜೀವನದಲ್ಲಿ ಅದನ್ನು ಕೈ ಬಿಡುತ್ತೇವೆ. ವಂಚನೆ ಸುಳ್ಳು ಇವುಗಳನ್ನೇ ನೆಚ್ಚಿಕೊಂಡು ನಾವು ಅಪ್ರಾಮಾಣಿಕರಾಗಿ ದೇವರನ್ನು ನಮ್ಮ ಒಳಗಿನಿಂದ ಹೊರ ಹಾಕುತ್ತೇವೆ. ಅಥವಾ ನಮ್ಮೊಳಗೆ ದೇವರಿದ್ದಾನೆ ಎಂದು ನಾವು ಯೋಚಿಸುವುದಿಲ್ಲ. ಅದ್ವೈತವನ್ನು ಬೋಧಿಸುವ ಆದಿ ಶಂಕರನನ್ನು ಮಹಾ ಗುರುವಾಗಿ ಕಾಣುತ್ತೇವೆ. ಆದರೆ ಅದ್ವೈತ  ಎಂಬುದು ನಮ್ಮ ಅನುಭವದಲ್ಲಿ ಇರುವುದಿಲ್ಲ. ದೇವರನ್ನು ಒಳಗಿನಿಂದ ತೆಗೆದು ದೂರದಲ್ಲಿ ಎಲ್ಲೋ ಇರಿಸಿ ಅಧ್ದೂರಿಯಿಂದ ವಿಜ್ರಂಭಣೆಯಿಂದ ಪೂಜೆ ಮಾಡುತ್ತೇವೆ. ನಮ್ಮೊಳಗಿನ ದೇವರಿಗಿಂತಲೂ ಆ ದೇವರನ್ನೆ ಹೆಚ್ಚು ನಂಬಿಕೊಳ್ಳುತ್ತೇವೆ. ಅಥವ ನಮ್ಮ ಮನಸ್ಸಿನ ದೇವರು ಅದೇ ಎಂದು ಭ್ರಮಾಧೀನರಾಗಿಬಿಡುತ್ತೇವೆ. ಯಾಕೆಂದರೆ ದೇವರನ್ನು ನಮ್ಮೊಳಗೆ ಇರಿಸುವ ಪ್ರಾಮಾಣಿಕತೆ ನಮ್ಮಲ್ಲಿ ಇದೆ ಎಂಬ ಭರವಸೆಯೇ ನಮ್ಮಲ್ಲಿ ಇರುವುದಿಲ್ಲ.

ಎಲ್ಲ ಪೂಜೆ ಪುನಸ್ಕಾರಗಳಿಂದಲು ನಾಮ ಸ್ಮರಣೆ ಅತ್ಯಂತ ಶ್ರೇಷ್ಠ. ದಾಸ ವರೇಣ್ಯರೂ ಸ್ವತಃ ಅನುಭವಿಸಿ ಹೇಳಿದ ಮಾತು. ಹನುಮನ ಕಥೆ, ಪ್ರಹ್ಲಾದ ಮಾರ್ಕಾಂಡೇಯರ ಕಥೆ ಇದನ್ನೇ ಹೇಳುತ್ತವೆ. ಈ ಭಕ್ತ ವರೇಣ್ಯರು ಯಾವ ಪೂಜೆಯನ್ನೂ ಮಾಡಲಿಲ್ಲ. ಯಾವ ಹರಕೆಯನ್ನು ಹೊರಲಿಲ್ಲ. ಯಾವ ದೇಗುಲಕ್ಕೂ ಪ್ರದಕ್ಷಿಣೆ ಬರಲಿಲ್ಲ. ಕೇವಲ ಪರಮಾತ್ಮನ ಸ್ಮರಣೆ ಮಾತ್ರ. ದೇವಾಲಯ ಎಂಬುದು ಭಕ್ತಿ ಮಾರ್ಗಕ್ಕೆ ಒಂದು ಪರಿಕರ. ಆದರೆ ಈ ಭಕ್ತಿ ಮಾರ್ಗದಲ್ಲಿ ನಾವೆಷ್ಟು ವಿಚಲಿತರಾಗುತ್ತೇವೋ ಅಷ್ಟು ಆ ಮಾರ್ಗ ಕ್ರಮವನ್ನು ಕಠಿಣಗೊಳಿಸುತ್ತದೆ. ದೇಹದ ಮೇಲೆ ನಾವೆಷ್ಟು ಆಡಂಬರದ ಉಡುಪು ಆಭರಣವನ್ನು ತೊಡುತ್ತೇವೋ ಅಷ್ಟು ನಮ್ಮನ್ನು ನಾವು ಕಳೆದುಕೊಳ್ಳುತ್ತೇವೇ. ಹಾಗಂತ ಲೌಕಿಕ ಪ್ರಪಂಚದಲ್ಲಿ ಎಲ್ಲವನ್ನು ಕಳೆದುಕೊಳ್ಳುವುದು ಸಭ್ಯತೆಯೂ ಅಲ್ಲ. ಆದರೂ ಮನಸ್ಸಿನಿಂದ ನಾವು ಎಲ್ಲವನ್ನು ಕಳೆದುಕೊಳ್ಳಬಹುದು. ಅರ್ಥಾತ್ ನಮ್ಮ ಆರಾಧನೆ ಕ್ರಮಗಳು ಸರಳವಾಗಬೇಕು. ಆಡಂಬರದ ಭಕ್ತಿ ಪರಮಾತ್ಮನ ಇರವನ್ನು ಮರೆಮಾಚುತ್ತದೆ. ನಾವು ಯಾವುದನ್ನೋ ಭಗವಂತ ದೇವರು ಎಂದು ಯೋಚಿಸಿ ನಿಜವಾದ ಪರಮಾತ್ಮ ಅನುಗ್ರಹದಿಂದ ದೂರಾಗುತ್ತಿದ್ದೇವೆ.