Saturday, July 4, 2026

ಮಿತ್ರನ ಮೈತ್ರಿ

ಸ್ನೇಹ ಸಂಬಂಧಗಳು ಬದುಕಿನ ಅರ್ಥವನ್ನು ಕಲ್ಪಿಸುತ್ತದೆ. ಅದು ರಕ್ತ ಸಂಬಂಧಕ್ಕಿಂತ ಮಿಗಿಲಾಗಿದ್ದರೆ ಅದಕ್ಕೆ ಒಂದು ವೈಶಿಷ್ಟ್ಯವಿರುತ್ತದೆ. ಅಲ್ಲಿ ಯಾವುದೇ ಪರಿಮಿತಿ ಇಲ್ಲದೆ  ಬೆಸೆದುಕೊಂಡಿದ್ದರೆ ಅದರ ಗಾಢವಾದ ಸಂವೇದನೆಯನ್ನು ಅನುಭವಿಸಿಯೇ ತಿಳಿಯಬೇಕು. ನಿನ್ನೆ ಅಂದರೆ ದಿನಾಂಕ 03-07-2026 ರಂದು ನಮ್ಮೂರಿನ ಮಿತ್ರ , ಸದ್ಯ ಮಂಗಳೂರಲ್ಲಿ ವಾಸವಾಗಿರುವ ಜಯಶಂಕರ್ ನ ಮಗಳು ಮೈತ್ರಿಯ ವಿವಾಹ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ಒದಗಿಬಂತು. ನನ್ನ ಮತ್ತು ಜಯಣ್ಣನ ಸ್ನೇಹ ಸರಿಸುಮಾರು ಕಾಲು ಶತಮಾನಕ್ಕಿಂತಲೂ ಮಿಕ್ಕಿದ ಸ್ನೇಹ ಸಂಬಂಧ. ಶಾಲಾದಿನಗಳಲ್ಲಿ ಅಕ್ಕಪಕ್ಕ ಕುಳಿತು ಎರಡಕ್ಷರಗಳನ್ನು ಒಂದಾಗಿ ಕಲಿತವರು. 



ಜಯಣ್ಣ  ನಮ್ಮ ಕುಟುಂಬ ಮಿತ್ರ ಎಂದರೂ ಸರಿಯೇ. ನಾನೂ ಹಾಗೇ ಆತನ ಮನೆಯ ಒಂದು ಅಂಗವಾಗಿ ಸ್ನೇಹ ಬೆಸೆದುಕೊಂಡು ಬಿಟ್ಟಿದೆ. ನಮ್ಮ  ಮನೆಯವರಲ್ಲೂತೀರ ಹೇಳಲಾಗದ ಭಾವನೆಗಳನ್ನು ವೈಯಕ್ತಿ ವಿಷಯಗಳನ್ನು ಮಿತ್ರರಲ್ಲಿ ಹಂಚಿಕೊಂಡು ಬಿಡುತ್ತೇವೆ.  ಸಂಬಂಧಿಕರ ಮನೆಗೆ ಹೋಗುವುದಕ್ಕಿಂತಲೂ  ಮಿತ್ರರ ಮನೆಗೆ ಹೋಗುವುದರಲ್ಲಿ ಔಪಚಾರಿಕತೆಯ ನಿಬಂಧನೆ ಇರುವುದಿಲ್ಲ. ಒಂದು ಸಂಬಂಧಿಗಳ ಮನೆಗೆ ನಡು ರಾತ್ರಿ ಹೋಗುವುದಿದ್ದರೆ. ನೀವು ಹೋಗುವ ಮೊದಲು ಅಲ್ಲವೇ ಹೋದಕೂಡಲೇ  ರಾತ್ರಿಯೇ ಹೋದ ಕಾರಣಗಳನ್ನು ಚರಿತ್ರೆಯನ್ನೂ ವಿವರಿಸಬೇಕಾಗುತ್ತದೆ. ಅಥವಾ ಅಲ್ಲೋಂದು ಪರಿಮಿತಿ ಇರುತ್ತದೆ. ಆದರೆ ಆತ್ಮೀಯ ಮಿತ್ರನಿಗೆ ತಮ್ಮ ಪ್ರತಿಯೊಂದು ಚಲನವಲನ ಅರಿವಿರುತ್ತದೆ. ಅರಿವಿಲ್ಲದೇ ಇದ್ದರೂ ಅದನ್ನು ಹೆಚ್ಚು ವಿವರಿಸುವ ಅವಶ್ಯಕತೆ ಒದಗಿಬರುವುದಿಲ್ಲ. ಆಹಾರ ಉಪಚಾರಗಳಲ್ಲಿ ಯಾವ ಒಣ ಪ್ರತಿಷ್ಠೆಯಾಗಲೀ ನಿಬಂಧನೆಗಳ ಪರಿಮಿತಿ ಬಂಧನವಾಗಲೀ ಇರುವುದಿಲ್ಲ.  ಬಂದವರಿಗೆ ಬಲವಂತವಾಗಿ ತಿನ್ನಿಸಿಯೇ ಬಿಡಬೇಕು ಎನ್ನುವ ಕಡು ಆತಿಥ್ಯ ಇರುವುದಿಲ್ಲ. ಹೋದವನಿಗೂ ಬೇಡದೇ ಇದ್ದರೂ ತಿನ್ನಲೇ ಬೇಕೆಂಬ ದಾಕ್ಷಿಣ್ಯ ಇರುವುದಿಲ್ಲ. ಹಲವು ಸಲ ಬೇಡದೇ ಇದ್ದರೂ ತಿನ್ನಬೇಕಾಗುತ್ತದೆ. ಬೇಡದೇ ಇದ್ದರೂ ಒತ್ತಾಯದಲ್ಲಿ ತಿನ್ನಿಸಬೇಕಾಗುತ್ತದೆ. ನನ್ನದು ಇದೆಲ್ಲದಕ್ಕೂ ತದ್ವಿರುದ್ದ ಸ್ವಭಾವ. ಬೇಡದೇ ಇದ್ದರೆ ಒತ್ತಾಯಕ್ಕೆ ತಿನ್ನುವ ತಿನ್ನಿಸುವ ಉಪಚಾರ ನನಗೆ ಆಗುವುದಿಲ್ಲ. ಹಲವು ಕಡೆ ತಿನ್ನುವುದು ತಿನ್ನಿಸುವುದು ಇಲ್ಲದಿದ್ದರೆ ಬೇಜಾರು ಮಾಡಿಕೊಳ್ಳುತ್ತಾರೆ ಎಂಬ ಆತಂಕ. ಆದರೆ ಮಿತ್ರನ ಆತಿಥ್ಯವೆಂದರೆ  ಅದೊಂದು ಸ್ವಚ್ಛಂದ ಪ್ರವೃತ್ತಿ ಅಲ್ಲಿರುತ್ತದೆ. ನನ್ನ ಮತ್ತು ಜಯಣ್ಣನ ಮಿತ್ರತ್ವದಲ್ಲಿ ಯಾವ ಪರಿಮಿತಿಯೂ ಇರುವುದಿಲ್ಲ. ಏಷ್ಟೋ ಸಲ ಮಧ್ಯರಾತ್ರಿ ಮಂಗಳೂರಿನ ಹತ್ತಿರ ಬರುವಾಗ ಕರೆ ಮಾಡಿ ಹೋದದ್ದಿದೆ. ಮಂಗಳೂರಿಗೆ ಹೋದಾಗಲೇಲ್ಲ ಭೂಸ್ಪರ್ಶವಾಗುವ ಮೊದಲೆ ಜಯಣ್ಣ ನಾನಿರುವಲ್ಲಿಗೆ ಬರುತ್ತಾನೆ ಅದೊಂದು ಬಗೆಯ ಸ್ನೇಹಾದರೆ ವಿವರಿಸುವುದು ಕಷ್ಟ. 


ಜಯಣ್ಣನ ಒಬ್ಬಳೇ ಮಗಳು ಮೈತ್ರಿಯ ವಿವಾಹ ನಿನ್ನೆ ನೆರವೇರಿತು. ಬಹುಶಃ ಜಯಣ್ಣ ಮಿತ್ರತ್ವದ ಮೈತ್ರಿ ಸ್ವಭಾವ ರೂಪವೇ ಮೈತ್ರಿ. ಅಂಬೆಗಾಲಿಕ್ಕುವ ಪುಟ್ಟಶಿಶುವಿನಿಂದ ತೊಡಗಿ ಹೆಗಲೆತ್ತರಕ್ಕೆ ಬೆಳೆಯುವ ತನಕವೂ ಕಣ್ಡೆದುರೇ ಬೆಳೆದು ನಿಂತ ಮೈತ್ರಿಯ ಮದುವೆಗೆ ಮಿತ್ರನಾಗಿ ಕರೆಯದೇ ಇದ್ದರೂ ಹೋಗುವ ಬಂಧನವಿತ್ತು. ಜಯಣ್ಣದಂಪತಿಗಳು, ಮಗಳು ಮೈತ್ರಿ ಎಲ್ಲರೂ ನಮ್ಮ ಮನೆಯವರ ಮೈತ್ರಿ ವರ್ತುಲದ ಬಿಗಿ ಬಂಧನದಲ್ಲಿ ಬೆಸೆದುಕೊಂಡಿದ್ದವರು. ನಮ್ಮ ಎರಡು ಕುಟುಂಬಗಳ ನಡುವೆ ಮರೆಯಲಾಗದ ಹಲವಾರು ರಸನಿಮಿಷಗಳ ಘಳಿಗೆಗಳು ಸ್ವಯಂ (ಸೆಲ್ಫಿ) ಚಿತ್ರಗಳು ಸಾಕಷ್ಟು ಇವೆ.   ಪರಸ್ಪರ ಸಹಾಯಗಳಿಗೆ ಧನ್ಯವಾದದ ಅವಶ್ಯಕತೆಯಿಲ್ಲದ ಗಾಢವಾದ ಆತ್ಮಿಯತೆ ಇಲ್ಲಿದೆ.  ಹಾಗಾಗಿ ಮೈತ್ರಿಯ ವಿವಾಹ ಎಂದಕೂಡಲೇ ನಮ್ಮ ಮನೆಯವರೆಲ್ಲರೂ ಮದುವೆಗೆ ಹಾಜರಾದೆವು. ಮಂಗಳೂರಿನ ಜಿಟಿ ಜಿಟಿ ಮಳೆಯ ತಂಪಾದ ವಾತಾವರಣದಲ್ಲಿ ನಡೆದ ವಿವಾಹ ಮಹೋತ್ಸವ, ಜತೆಗೆ ಪುಷ್ಕಳವಾದ ರುಚಿಯಾದ ಭೋಜನ , ಮಿತ್ರನ ಆದರ ಆತಿಥ್ಯ  ಮರೆಯುವುದಕ್ಕಿಲ್ಲ. ವಿವಾಹ ಕಾರ್ಯಕ್ರಮ ಎಂದರೆ ಇಲ್ಲಿ ಉದ್ವೇಗ, ಒತ್ತಡ ಎಲ್ಲವೂ ಇರುತ್ತದೆ. ತುಂಬಿದ ಜನರನ್ನು ಸಂಪರ್ಕಿಸಿ ಕುಶಲ ವಿಚಾರಿಸಿ ಸತ್ಕರಿಸುವುದು ಸುಲಭದ ಕೆಲಸವಲ್ಲ. ಅಷ್ಟೊಂದು ಗಡಿಬಿಡಿಯಲ್ಲೂ ದೂರದಿಂದ ನಮ್ಮನ್ನು ನೋಡಿದ ಜಯಣ್ಣ ಕೈ ಬೀಸಿ ಅದೇ ಸ್ನೇಹ ಸಲುಗೆಯಿಂದ ಮಾತನಾಡಿಸಿದಾಗ ಬಹಳ ಸಂತಸವಾಯಿತು. ಪ್ರತಿಯೊಬ್ಬರ ಬಳಿಗೆ ಬಂದು ಮಿತ್ರ ದಂಪತಿ ವಿಚಾರಿಸಿ ಸತ್ಕರಿಸಿದಾಗ ಜಯಣ್ಣನ ಗೆಲುವಿನ ನಗೆ ನೋಡುವುದಕ್ಕೆ ಬಹಳ ಹಿತವೆನೆಸಿತ್ತು. ಮುದ್ದಿನ ಮಗಳ ಭವಿಷ್ಯವನ್ನು ಕಟ್ಟಿದ ಗೆಲುವಿನ ನಗೆಯದು. 

ಕೆಲಸದ ಒತ್ತಡದಲ್ಲಿ ಅಲ್ಪ ಸಮಯದ ಅವಧಿಗೆ ಮಾತ್ರವೇ ಕಾರ್ಯಕ್ರಮದ ಭಾಗವಾಗಲು ಸಾಧ್ಯವಾಯಿತು. ಸಾಲಂಕೃತ ವಧೂವರರನ್ನು ಆಶೀರ್ವದಿಸಿ ಮಗಳು ಮೈತ್ರಿಯನ್ನು ಎದೆಗಾನಿಸಿ ಹರಸಿದಾಗ ನನಗರಿವಿಲ್ಲದೇ ಎದೆ ಭಾರವಾಗಿ ಕಣ್ತುಂಬಿ ಬಂತು. ಮೈತ್ರಿ ನಿಶಾಂತ ಹೊಸಬಾಳಿಗೆ ಹೆಜ್ಜೆ ಇರಿಸಿದ  ನವ ದಂಪತಿಗಳು ಸುಖವಾಗಿ ಬಾಳಿ ಬದುಕಲಿ ಮನದಾಳದ ಆಶೀರ್ವಾದಗಳು. 


No comments:

Post a Comment