ಹಬ್ಬ ಬಂತೆಂದರೆ ಹಲವು ಬಗೆಯ ಸಡಗರ. ಮನುಷ್ಯನಿಗೆ ದೇವರು ಧರ್ಮ ಆಚರಣೆ ಹೀಗೆ ಇವುಗಳಲ್ಲಿರುವ ಭಾವನಾತ್ಮಕ ಸಂಬಂಧ ವಿಶ್ವಾಸ ಪ್ರಕಟವಾಗುವ ಸಂದರ್ಭವಿದು. ಇವುಗಳನ್ನು ಉಪಯೋಗಿಸಿ ಜೀವನ ಮಾರ್ಗ ಕಂಡವರು ಹಲವರು. ಆದರೆ ಇವುಗಳ ನಡುವೆ ನಾವು ಮೂರ್ಖರಾಗುವುದು ನಮಗೆ ತಿಳಿಯುವುದೇ ಇಲ್ಲ. ಮೊನ್ನೆ ಹೀಗೆ ನಮ್ಮ ಮನೆ ಬಳಿಯ ಒಂದು ರಸ್ತೆಯಲ್ಲಿ ಮುಂಜಾನೆ ಸಂಚರಿಸುತ್ತಿದ್ದೆ. ಮುಂಜಾನೆ ನಿರ್ಮಾನುಷ್ಯವಾಗಿತ್ತು. ಮಾತ್ರವಲ್ಲ ರಸ್ತೆ ಕೆಲವು ಕಡೆ ಕಸಗಕಡ್ಡಿಗಳನ್ನು ಬಿಟ್ಟರೆ ಬಹುತೇಕ ಸ್ವಚ್ಛವಾಗಿತ್ತು. ಅದೇ ಒಂದೆರಡು ದಿನ ಕಳೆದು ಇದೇ ರೀತಿ ಮುಂಜಾನೆ ಬಂದರೆ ಇಲ್ಲಿ ಹೆಜ್ಜೆ ಇಡಲು ಸಾಧ್ಯವಾಗದಷ್ಟು ಕಸದ ರಾಶಿಯನ್ನೇ ಕಾಣಬಹುದು. ಎರಡು ದಿನದಲ್ಲೆ ಹಬ್ಬ ಬಂದುಬಿಡುತ್ತದೆ. ರಸ್ತೆಯಲ್ಲೇ ಒಂದೆಡೆ ಕಾಲುದಾರಿಯಲ್ಲೆ ದೇವರ ದೊಡ್ಡ ಪ್ರತಿಮೆಗಳನ್ನು ಇಡಲಾಗಿತ್ತು. ಮತ್ತು ಅದಕ್ಕೆ ಟರ್ಪಾಲನ್ನು ಹೊದಿಸಿ ಮುಚ್ಚಲಾಗಿತ್ತು. ಎರಡು ದಿನ ಕಳೆದರೆ ಯಾರದೋ ದೇವರ ಕೋಣೆಯಲ್ಲಿ, ಸಾರ್ವಜನಿಕ ಉತ್ಸವಗಳಲ್ಲಿ ರಸ್ತೆಗಳಲ್ಲಿ ಈ ಪ್ರತಿಮೆಗಳು ಸಡಗರದ ಪೂಜೆಯನ್ನು ನಮಸ್ಕಾರಗಳನ್ನು ಸ್ವೀಕರಿಸುತ್ತವೆ. ಹಬ್ಬದ ಮೊದಲ ದಿನ ಇರುವ ಬಾಳೆಮರ, ಹೂವು ಇವುಗಳ ರಾಶಿ ಹಬ್ಬದ ಅದೇ ಮರುದಿನ ಕಸದ ರೂಪದಲ್ಲಿ ರಸ್ತೆಯಲ್ಲೇ ಬಿದ್ದಿರುತ್ತವೆ. ಆ ಕಸದ ರಾಶಿ ನೋಡುವಾಗ ಈ ಹಬ್ಬಗಳು ಯಾಕಾಗಿ ಬರುತ್ತವೆ ಎಂದು ಯೋಚಿಸುವಂತಾಗುತ್ತದೆ. ಒಂದೇ ದಿನಕ್ಕೆ ಬೆಲೆಯನ್ನು ಕಳೆದುಕೊಳ್ಳುತ್ತವೆ. ಮೇಲೆ ನಿರ್ವಹಣೆ ಮಾಡಲಾಗದಷ್ಟು ಕಸದ ರಾಶಿ. ಹಬ್ಬದ ಘಳಿಗೆಯ ವರೆಗೂ ಬಾಳೆಗಿಡ ತೋರಣದ ಸೊಪ್ಪುಗಳನ್ನು ರಸ್ತೆಯಲ್ಲಿ ರಾಶಿಹಾಕಿ ಅದಕ್ಕೆ ಬೆಲೆ ಹೇಳಿದರೆ ಹಬ್ಬದ ನಂತರ ಅದನ್ನು ಅಲ್ಲೇ ಬಿಟ್ಟು ಜವಾಬ್ದಾರಿಯೇ ಇಲ್ಲದಂತೆ ಹೋಗುವ ಮನುಷ್ಯರ ಹೊಟ್ಟಪಾಡಿಗೆ ಮರುಕ ಹುಟ್ಟುತ್ತದೆ. ಹಬ್ಬವನ್ನು ನಾವೇಕೆ ಭಗವಂತನಿಗೆ ಪ್ರಿಯವಾಗಿ ಆಚರಿಸಬಾರದು? ನಮ್ಮ ಪರಿಸರ ಪ್ರಕೃತಿಯೂ ಭಗವಂತನ ಸ್ವರೂಪ. ಎಲ್ಲಿ ದೇವರನ್ನು ಕಾಣಬೇಕೋ ಅಲ್ಲಿ ನಮಗೆ ದೇವರು ಸಿಗುವುದಿಲ್ಲ. ಇದ್ದರೂ ಕಾಣುವುದಿಲ್ಲ. ಭಕ್ತಿಯ ವಿಷಯದಲ್ಲಿ ನಮಗಿರುವಷ್ಟು ಭಕ್ತಿ ಉಳಿದವರಲ್ಲಿ ಇಲ್ಲ ಎಂದು ತಿಳಿಯುವವರು ನಾವು.
ಹಬ್ಬ ಎಂದರೆ ಇದೆಲ್ಲ ಸಹಜ. ಆದರೆ ವಿಷಯ ಅದಲ್ಲ. ರಸ್ತೆಯಲ್ಲಿ ಹೊದಿಕೆ ಹೊದಿಸಿದ ಮೂರ್ತಿಗಳನ್ನು ನೋಡುವಾಗ, ಬೀದಿಯ ಬೀಡಾಡಿ ನಾಯಿಗಳು ಅಲ್ಲೇ ಇದ್ದವು. ಕೆಲವು ಅದರ ಬುಡದಲ್ಲೇ ಬೆಚ್ಚಗೆ ಮಲಗಿದರೆ ಇನ್ನು ಕೆಲವು ಅದಕ್ಕೆ ಮಲೀನ ಮಾಡುತ್ತಿದ್ದವು. ನಾಯಿಗಳಲ್ಲವೇ ಎಲ್ಲಿ ಅದಕ್ಕೆ ಹಿತವೆನಿಸುತ್ತದೋ ಅಲ್ಲಿ ಮೂಸಿ ಕಾಲೆತ್ತಿ ತನ್ನ ಚಟವನ್ನು ನಿವಾರಿಸಿಕೊಳ್ಳುತ್ತವೆ. ಮೊಬೈಲ್ ನಲ್ಲಿ ಚಿತ್ರಿಕರಿಸಬೇಕೆಂದಿದ್ದೆ. ಆದರೆ ನನಗೆ ನೋಡುವುದಕ್ಕಾಗಲಿಲ್ಲ. ಮತ್ತೋಂದು ರಸ್ತೆಗೆ ಬಂದರೆ ಅಲ್ಲೊಂದು ಹೂವಿನ ಗಾಡಿ ಇತ್ತು. ಅದರ ಮಾಲೀಕನ ಮನೆಯ ಬಳಿಯಲ್ಲೇ ಇರಿಸಿದ್ದು ಅದರ ಮೇಲೆ ನಾಯಿಗಳು ಮಲಗಿತ್ತು. ಮರುದಿನ ಅದೇ ಗಾಡಿಯಲ್ಲಿ ಹೂವಿನ ರಾಶಿ ಹಾಕಿ ಮಾರಾಟ ಮಾಡುತ್ತಾನೆ.
ಪ್ರತೀ ಹಬ್ಬದ ದಿಗಳಲ್ಲಿ ಇಂತಹ ದೃಶ್ಯ ಸರ್ವೇ ಸಾಮಾನ್ಯ. ದೇವರ ಆರಾಧಿಸುವವರಿಗೆ ಇದೆಲ್ಲ ಗಂಭೀರ ಎನಿಸುತ್ತದೋ ಇಲ್ಲ, ಗೊತ್ತಿದ್ದೂ ಗೊತ್ತಿಲ್ಲದಂತೆ ಇರುತ್ತಾರೋ ತಿಳಿಯದು. ದೇವರು ಎಂದರೆ ಪಾವಿತ್ರ್ಯತೆಯ ಸಂಕೇತ. ನಮ್ಮ ಮನಸ್ಸು ನಮ್ಮ ಕೃತಿ ಪ್ರವೃತ್ತಿ ಶುದ್ಧವಾಗಿದ್ದರೆ ಪರಮಾತ್ಮನ ಅಸ್ತಿತ್ವ ನಮ್ಮಲ್ಲಿರುತ್ತದೆ. ದೇವರ ಅನುಗ್ರಹವಾಗುತ್ತದೆ. ಪಾವಿತ್ರ್ಯ ಎಲ್ಲಿರುವುದಿಲ್ಲವೋ ಅಲ್ಲಿ ಭಗವಂತನ ಅಸ್ತಿತ್ವ ಇರುವುದಿಲ್ಲ.
ಹೂವು ಹಣ್ಣು ತರಕಾರಿ ಪ್ರತಿಮೆ ಮಾರಾಟ ಮಾಡುವುದು ಹೊಟ್ಟೆಪಾಡು. ಆದರೆ ಮಾಡುವ ವೃತ್ತಿಯಲ್ಲಿ ಒಂದಿಷ್ಟು ಉದ್ದೇಶ ಶುದ್ದಿ ಇರಬೇಕು. ಯಾಕಾಗಿ ಮಾರಾಟಮಾಡುತ್ತಿದ್ದೇವೆ? ಯಾವ ನಂಬಿಕೆಯ ಭಾವನೆಯ ಮೇಲೆ ನಮಗೆ ತುತ್ತು ಅನ್ನವನ್ನು ಭಗವಂತ ಕರುಣಿಸುತ್ತಾನೆ? ಈ ಪ್ರಜ್ಞೆ ಇಲ್ಲದಿದ್ದರೆ ಅದು ದ್ರೋಹವಾಗುತ್ತದೆ. ಕರ್ಮ ಭ್ರಷ್ಟತೆಯಾಗುತ್ತದೆ. ನಾವು ಎಲ್ಲದರಲ್ಲೂ ಎಲ್ಲಾ ಕಡೆಯಲ್ಲೂ ಪರಿಶುದ್ದತೆಯನ್ನು ಕಾಣುವುದಕ್ಕೆ ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ. ಕಮಲ ಹುಟ್ಟುವುದು ಕೆಸರಲ್ಲಿ. ಆದರೆ ಕಮಲದ ಹೂವು ಅಪವಿತ್ರವಲ್ಲ. ದನದ ಹಾಲು ಕೆಚ್ಚಲಿನಿಂದ ಬರುವುದು. ದನ ಎಲ್ಲೋ ಮಲಗಿರುತ್ತದೆ. ಆದರೂ ಅದು ಪವಿತ್ರ. ಹೂವು ಹಣ್ಣು ತೆಂಗಿನಕಾಯಿ ಎಲ್ಲೋ ಹೇಗೋ ಬಿದ್ದಿರುತ್ತದೆ. ಆದರೂ ಒಂದು ಸಲ ತೊಳೆದು ಸ್ವಚ್ಛಗೊಳಿಸಿದರೆ ಅದು ಪರಿಶುದ್ಧ ಎಂಬ ಭಾವನೆ ಇರುತ್ತದೆ. ಇಲ್ಲಿ ಹೂವು ಪ್ರತಿಮೆಗಳ ಅವಸ್ಥೆ ಹೀಗಾಗವುವುದರಲ್ಲಿ ನಮ್ಮ ಪಾವಿತ್ರ್ಯತೆ ಎಂಬುದು ಪ್ರಶ್ನೆಯಾಗುತ್ತದೆ. ಪ್ರತಿ ಅಣು ರೇಣು ತೃಣ ಕಾಷ್ಠಗಳಲ್ಲಿ ದೇವರನ್ನು ಕಾಣುವ ನಾವು ದೇವರ ಪಾವಿತ್ಯ್ರತೆಯನ್ನು ಬೇಕೆಂದೇ ಕಳೆಯುತ್ತೇವೆ. ಯಾಕೆಂದರೆ ನಮಗೆ ನಮ್ಮ ತೃಪ್ತಿ ಮಾತ್ರ. ಕಾರ್ಯದ ಪರಿಶುದ್ದತೆ ಅವಶ್ಯಕತೆ ಇರುವುದಿಲ್ಲ. ಸಂಕಲ್ಪ ಶುದ್ದಿ ಇಲ್ಲ. ರಾಶಿ ರಾಶಿ ಹೂವು ಹಣ್ಣು ಇದ್ದರೇನೆ ಭಗವಂತನ ಅನುಗ್ರಹ ಎಂಬ ಭಾವನೆ ನಮ್ಮಲ್ಲಿದೆ. ನಮಗಿಲ್ಲದ ಆಡಂಬರವನ್ನು ದೇವರಲ್ಲಿ ಕಾಣುವುದು. ಅರ್ಥ ಶೂನ್ಯ.
ಒಂದು ಸಲ ಬೆಂಗಳೂರಿನಿಂದ ಊರಿಗೆ ಬಸ್ಸಿನಲ್ಲಿ ಹೋಗಿದ್ದೆ. ಬೆಳಗ್ಗೆ ಬಸ್ಸು ನಿಲ್ದಾಣದಲ್ಲಿ ನಿಂತಿತ್ತು. ನಾನು ಬಸ್ ಒಳಗಿನಿಂದಲೇ ಹೊರಗೆ ನೋಡುತ್ತಿದ್ದೆ. ಬಸ್ ಮೇಲೆ ಇದ್ದ ಹೂವಿನ ಮೂಟೆಯನ್ನು ಅಲ್ಲೇ ನಿಲ್ದಾಣದಲ್ಲಿ ಬಸ್ಸಿನವರು ಇಳಿಸಿದರು. ಯಾರಿಗೋ ಹೂವಿನ ವ್ಯಾಪಾರಿಗೆ ಸೇರಿದ್ದು. ಅದನ್ನು ಒಯ್ಯಬೇಕಾದವರು ಇನ್ನೂ ಬಿಂದಿರಲಿಲ್ಲ. ತುಸು ಹೊತ್ತಿನಲ್ಲೇ ಅಲ್ಲೇ ಇದ್ದ ಬೀಡಾಡಿ ನಾಯಿ ಬಂದು ಸುತ್ತು ಹೊಡೆದು ಮೂಸಿತು. ಮೂಸಿದ ಮಾತ್ರಕ್ಕೆ ನಾಯಿ ಸುಮ್ಮನಿರುವುದಿಲ್ಲ. ಆದಿನ ಆ ಊರಲ್ಲಿದ್ದ ಎಲ್ಲಾ ಮನೆ ಮಠದ ದೇವರಿಗೆ ಇದೇ ಪವಿತ್ರ ಹೂ.! ನಮ್ಮ ದೇವರು ನಮ್ಮ ಭಾವನೆ ಇದು ಮೊದಲು ಸ್ವತಃ ನಮಗೇ ಪವಿತ್ರವಾಗಿರಬೇಕಾಗಿರುವುದು. ನಮ್ಮ ಭಾವನೆಗೆ ನಾವೇ ಗೌರವಿಸಿಕೊಳ್ಳದೇ ಇದ್ದರೆ ಉಳಿದವರಿಂದ ಅದನ್ನು ನಿರೀಕ್ಷೆ ಮಾಡಬಾರದು.
ನಗರದ ಮಾರುಕಟ್ಟೆಗೆ ಹೋದರೂ ಹಲವೆಡೆ ಯಾವುದೋ ಮೋರಿಯ ಮೇಲೆ ಹೂವಿನ ರಾಶಿ ಹಾಕಿರುತ್ತಾರೆ. ಕೆಳಗ ಗಲೀಜಲ್ಲಿ ಬಿದ್ದ ಹೂವನ್ನು ಯಾವುದೇ ಭಾವನೆ ಇಲ್ಲದೆ ಪುನಃ ಮೇಲೆ ಎತ್ತಿಡುತ್ತಾರೆ. ನಂತರ ಅದೇ ಹೂ ದೇವರ ಮೇಲಿರುತ್ತದೆ.
ಹಬ್ಬ ಹರಿದಿನ ಆಚರಣೆ ಮಾಡಬೇಕು. ಭಗವಂತನ ಆರಾಧನೆ ಬದುಕಿಗೆ ಸಿಗುವ ಒಂದು ಚೈತನ್ಯ.. ಸಾಲಸೋಲ ಮಾಡಿಯಾದರೂ ಹಬ್ಜ ಆಚರಿಸುತ್ತಾರೆ. ಬಂಧು ಬಾಂಧವರು ಕುಟುಂಬದವರು ಒಟ್ಟು ಸೇರುವುದಕ್ಕೆ ಇದುವೇ ಒಂದು ಕಾರಣವಾಗುತ್ತದೆ. ಆದರೆ ಆಡಂಬರ ಆಚರಣೆ ಅವಶ್ಯಕತೆ ಇದಯೇ ಎಂಬುದನ್ನು ಪ್ರಶ್ನೆ ಮಾಡಬೇಕು. ಪಕ್ಕದ ಮನೆಯವರು ಎರಡು ದಿನ ಗಣಪತಿ ಪೂಜೆ ಮಾಡಿದರೆ, ನಾವು ಮೂರು ದಿನ ಅಂತ ಸ್ಪರ್ಧೆಗೆ ಇಳಿದು ಬಿಡುತ್ತೇವೆ. ರಾಶಿ ರಾಶಿ ಹೂ ಹಣ್ಣು ತಂದು ಹಲವು ಸಲ ಅದನ್ನು ವ್ಯರ್ಥವೇ ಮಾಡುತ್ತೇವೆ. ಹೆಚ್ಚು ಖರ್ಚು ಮಾಡದಿದ್ದರೆ ದೇವರ ಅನುಗ್ರಹ ಆಗುವುದೇ ಇಲ್ಲವೇನೋ ಎಂಬ ಭ್ರಮೆಯಲ್ಲಿರುತ್ತೇವೆ. ಆದರೆ ವಾಸ್ತವ ಅದಲ್ಲ. ಎಲ್ಲವೂ ಢಂಬಾಚಾರ. ದೇವರು ಒಲಿಯುವುದು ನಮ್ಮ ಕರ್ಮ ಶುದ್ಧಿಗೆ. ಪವಿತ್ರ ಭಕ್ತಿಗೆ. ಕೇವಲ ಪ್ರಹ್ಲಾದನ ನಾಮಸ್ಮರಣೆಗೆ ಹರಿ ಉಗ್ರ ನರಸಿಂಹನಾಗಿ ಅನುಗ್ರಹಿಸುತ್ತಾನೆ. ಪ್ರಹ್ಲಾದ ಅದ್ಧೂರಿಯ ಯಾಗ ಪೂಜೆ ಮಾಡಿದ ನಿದರ್ಶನವಿಲ್ಲ. ಆದರೂ ಆತನಿಗೆ ಭಗವಂತ ದರ್ಶನ ಕೊಡುತ್ತಾನೆ. ಕೇವಲ ಭಕ್ತಿಗೆ ಶಿವ ಮಾರ್ಕಾಂಡೇಯನಿಗೆ ಜೀವದಾನ ಮಾಡುತ್ತಾನೆ. ಆತ ಅದ್ದೂರಿ ಪೂಜೆ ಮಾಡಲಿಲ್ಲ. ಕೇವಲ ಏಕಾಂತದಲ್ಲಿ ತಪಸ್ಸು ಮಾಡಿದ. ಧ್ಯಾನ ಮಾಡಿದ. ಆದುದರಿಂದ ಹಬ್ಬ ಆಚರಿಸೋಣ. ಸರಳವಾಗಿ ಆಚರಿಸುವ. ಒಂದು ನೀರಿನ ಕಲಶ ಇಟ್ಟು ಪೂಜೆ ಮಾಡಿದರೂ ಆಲ್ಲಿ ಗಣೇಶನನ್ನು ಕಾಣುವುದಕ್ಕೆ ಸಾಧ್ಯವಾಗುತ್ತದೆ. ಪರಿಸರ ಮಾಲಿನ್ಯವೂ ಇಲ್ಲ. ಆಡಂಬರ ಕೇವಲ ನಮ್ಮ ಮನಸ್ಸಿನ ಭಾವನೆ. ಶ್ರೀಕೃಷ್ಣ ಒಂದು ರುಕ್ಮಿಣಿಯ ತುಳಸಿ ಎಲೆಗೆ ತನ್ನ ಭಾರವನ್ನೂ ತೂಗಿಸಿದ. ಎಲ್ಲ ದೃಷ್ಟಾಂತಗಳು ನಮ್ಮ ಮುಂದಿವೆ. ಒಳ್ಳೆಯ ಆರಾಧನೆ ಮಾಡೋಣ. ಮೂರ್ಖತನ ಬೇಡ. ನಾವು ಮೂರ್ಖರಾಗುವುದು ಭಗವಂತನಿಗೂ ಇಷ್ಟವಿರುವುದಿಲ್ಲ. ನಾಮಸ್ಮರಣೆಯೊಂದೇ ಭಗವಂತನ ಅನುಗ್ರಹಕ್ಕೆ ಸಾಧ್ಯವಾಗುತ್ತದೆ.


No comments:
Post a Comment