"ಜನಿವಾರ ಬೇಕೋ? ಶಿಕ್ಷಣ ಬೇಕೋ?" ಎಂತಹ ಮೂರ್ಖತನದ ಅನಾಗರಿಕ ಪ್ರಶ್ನೆ ಇದು. ಯಾಕೆಂದರೆ ಶಿಕ್ಷಣ ಎಂದರೆ ಏನು ಎಂದು ತಿಳಿಯದ ಅವಿವೇಕಿ, ಆದರೂ ಪರವಾಗಿಲ್ಲ, ತಾವೊಬ್ಬರೇ ಮತಿವಂತರು ಎಂದು ತಿಳಿಯುವುದಿದೆಯಲ್ಲ, ಅದು ಅತಿ ಮೂರ್ಖತನ. ವಾಸ್ತವದಲ್ಲಿ ಇವರಲ್ಲಿ ಅಜ್ಞಾನವೇ ತುಂಬಿರುತ್ತದೆ. ಎಲ್ಲೆಂದರಲ್ಲಿ ಬೆಳೆಯುವ ಕಳೆಗಿಡಕ್ಕೂ, ಹೂದೋಟದಲ್ಲಿ ರಮ್ಯವಾಗಿ ಬೆಳೆಸುವ ಹೂವಿನ ಗಿಡಕ್ಕೂ ವೆತ್ಯಾಸ ತಿಳಿದಿರಬೇಕು. ಹೂದೋಟದಲ್ಲಿ ಶಿಸ್ತಿನಲ್ಲಿ ಬೆಳೆದು, ಪ್ರಕೃತಿಗೆ ಸೌಂದರ್ಯದ ಕೊಡುಗೆಯನ್ನು ಪರಿಸರವನ್ನು ಸಂರಕ್ಷಿಸುವುದಕ್ಕೂ...ಯಾವುದಕ್ಕೂ ಬೇಡದಾದ, ಮಾತ್ರವಲ್ಲ ತೊಂದರೆಯನ್ನು ಕೊಡುವ ಕಳೆಗಿಡಕ್ಕೂ ಹೋಲಿಕೆ ಸರಿಯೇ? ಒಂದು ಗಿಡ ಹೂದೋಟದಲ್ಲಿ ಬೆಳೆಯುತ್ತದೆ ಎಂದಾದರೆ ಅದಕ್ಕೆ ಹುಟ್ಟಿನಿಂದಲೇ ಸಿಗುವ ಶಿಕ್ಷಣ ಸಂಸ್ಕಾರ ಕಾರಣ. ಅದು ಪರಿಸರದ ಜತೆಗೆ ಬೆಳೆಯುತ್ತದೆ. ಇನ್ನೂ ಬೇಕು ಬೇಕು ಎಂದಾಗುವಾಗ ಅದು ತನ್ನ ಸಾರ್ಥಕ ಬದುಕನ್ನು ಪರಿಸಮಾಪ್ತಿಗೊಳಿಸುತ್ತದೆ. ಶಿಕ್ಷಣದ ನಿಜವಾದ ಅರ್ಥ ಅದು.
ಆದರೆ ಬದಲಾದ ಮನುಷ್ಯನ ಜೀವನ ವಿಧಾನದಲ್ಲಿ ಶಿಕ್ಷಣವೂ ಬದಲಾಗಿ ಹೋದದ್ದು ದುರಂತ. ಹಾಗಿದ್ದರೂ ಶಿಕ್ಷಣ ಎಂದರೆ ಜ್ಞಾನ. ಜ್ಞಾನ ಎಂದರೆ ಕೇವಲ ಒಳ್ಳೆಯದು ಮಾತ್ರವಲ್ಲ. ಬೆಂಕಿಯನ್ನು ತಿಳಿದಂತೆ ನೀರನ್ನೂ ಸಹ ತಿಳಿಯಬೇಕು. ನೀರು ಅಂತ ಬೆಂಕಿಯನ್ನು ಸ್ಪರ್ಶಿಸುವುದಕ್ಕೆ ಹೋದರೆ ಸುಡದೆ ಇರುವುದಿಲ್ಲ. ಇದುವೇ ಶಿಕ್ಷಣ. ಇದು ಕೆಟ್ಟದು ಇದು ಒಳ್ಳೆಯದು ಎಂದು ತಿಳಿಸುವುದೇ ಶಿಕ್ಷಣ. ಆದರೆ ಮೂರ್ಖರಿಗೆ ಇದರ ವೆತ್ಯಾಸವೇ ತಿಳಿಯದೇ ತಮ್ಮಲ್ಲಿರುವ ಕೆಟ್ಟದನ್ನೇ ಒಳ್ಳೆಯದು ಎಂಬ ಭ್ರಮೆಯಲ್ಲಿ ಮುಳುಗಿ ಬಿಡುತ್ತಾರೆ! ಮನುಷ್ಯ ಹುಟ್ಟಿನಿಂದ ಕಲಿಯುತ್ತಾ ಸಾಗುತ್ತಾನೆ. ತಾಯಿ ತಂದೆ ಎಂಬ ಅರಿವು. ಆ ಅರಿವಿನಲ್ಲೇ ಗುರು ಎಂಬ ಅರಿವು. ಅಲ್ಲಿಂದ ಪರಮಾತ್ಮನೆಂಬ ಅರಿವು, ಜತೆಗೆ ಬದುಕಿನ ಸಾರ್ಥಕತೆಯ ಅರಿವು. ಆದರೆ ಇದೆಲ್ಲವನ್ನೂ ಕಂದಾಚಾರ ಎಂಬ ಭ್ರಮೆಯಲ್ಲಿ ಅಪ್ಪ ಅಮ್ಮ ಗುರು ಎಂಬ ಅರಿವೇ ಇಲ್ಲದೆ ಭ್ರಮಾಧೀನ ಬದುಕನ್ನೇ ಸರ್ವಸ್ವ ಎಂದು ತಿಳಿದು ಅದರಲ್ಲೇ ಮುಳಿಗಿರುವವರಿಗೆ ಈ ಶಿಕ್ಷಣ ಎಂಬುದರ ಮಹತ್ವವಾಗಲಿ ಅರ್ಥವಾಗಲೀ ತಿಳಿಯುವುದಕ್ಕೆ ಸಾಧ್ಯವಿಲ್ಲ. ಅವರ ಮಟ್ಟಿಗೆ ಯಾವುದೋ ವಿದೇಶದ ಯಾವುದೋ ಬಾಷೆಯ ಶಿಕ್ಷಣವೇ ಸರ್ವ ಶಿಕ್ಷಣ.
ಜನಿವಾರ ಅಂದರೆ ಯಜ್ಞೋಪವಿತ, ಉಪವೀತ ಎಂದರೆ ಉಪವಸ್ತ್ರದಂತೆ. ಯಜ್ಞ ಎಂದರೆ ತನ್ನನ್ನು ಭಗವಂತನಿಗೆ ಅರ್ಪಿಸುವ ಕ್ರಿಯೆ. ಅದಕ್ಕೊಂದು ಸಂಕೇತವೇ ಯಜ್ಞೋಪವೀತ. ಅದನ್ನು ಧರಿಸುವುದೆಂದರೆ ವೇದಾಧ್ಯಾಯನಕ್ಕೆ ಮಾನಸಿಕವಾಗಿ ಪ್ರೌಢತೆಯಿಂದ ಸಿದ್ದವಾಗುವುದು. ಆ ವಿಶ್ವಾಸವನ್ನು ಅವಹೇಳನ ಮಾಡುವುದೆಂದರೆ ಭಗವಂತನನ್ನು ಬ್ರಹ್ಮಜ್ಞಾನದ ಶಿಕ್ಷಣವನ್ನು ಅವಹೇಳಿಸಿದಂತೆ. ಇಷ್ಟಕ್ಕೂ ಬ್ರಹ್ಮಜ್ಞಾನದ ಅರಿವಿಗೆ ಬ್ರಹ್ಮ ಎಂದರೇನು ಎಂಬ ಅರಿವಿರಬೇಕು. ಈ ಭೂಮಿ ಸೂರ್ಯ ಇವುಗಳೆಲ್ಲ ಆ ಪರಬ್ರಹ್ಮ ಕಲ್ಪನೆಯಲ್ಲಿ ನೆಲೆಯಾಗುತ್ತವೆ. ಭೂಮಿ ತನ್ನ ಕಕ್ಶೆಯಲ್ಲಿ ತಿರುಗುತ್ತದೆ, ಅದಕ್ಕೆ ಇರುವ ಆಧಾರ ಯಾವುದು? ನಮಗೆ ತಿಳಿಯದೇ ಇರುವ ನಮಗೆ ಕಾಣದೇ ಇರುವ ಒಂದು ಶಕ್ತಿಗೆ ನಾವು ಪರಬ್ರಹ್ಮ ಎಂದೇ ನಂಬುವುದು. ಒಂದು ಸುಮಧುರ ಸಂಗೀತವನ್ನು ಕಣ್ಣಿಗೆ ಕಾಣದೇ ಇದ್ದರೂ ಅದನ್ನು ಅನುಭವಿಸುತ್ತೇವೆ. ಅದರಂತೆ ಪರಬ್ರಹ್ಮ ಸ್ವರೂಪ ಎಂಬುದು ಆನುಭವ. ಅದರ ಹಾದಿಯಲ್ಲಿ ಸಾಗುವುದಕ್ಕಿರುವ ಶಿಕ್ಷಣ ಮತ್ತದರ ಬಂಧನವೇ ಜನಿವಾರ. ಪರಬ್ರಹ್ಮ ಸ್ವರೂಪವಾದ ರಾಮನನ್ನೇ ಅವಹೇಳನ ಮಾಡುವಾಗ ಇನ್ನು ಜನಿವಾರವನ್ನು ಅವಹೇಳನ ಮಾಡುವುದರಲ್ಲಿ ಅತಿಶಯವಿರುವುದಿಲ್ಲ. ಜನಿವಾರ ಬೇಕೋ ಶಿಕ್ಷಣ ಬೇಕೋ? ಎಂಬ ಪ್ರಶ್ನೆ ಎದುರಾಗುವಾಗ ಒಂದರೊಳಗೆ ಇನ್ನೊಂದು ಇದೆ ಎಂಬ ಅರಿವಿಲ್ಲದ ಮೂರ್ಖತನದ ಪ್ರಶ್ನೆ.
ಮನುಷ್ಯ ಜನ್ಮದಿಂದ ಅಪ್ಪ ಅಮ್ಮ ಎಂಬ ಸಂಭಂಧದಿಂದಲೇ ತನ್ನ ಬದುಕಲ್ಲಿ ತೊಡಗುತ್ತಾನೆ. ಅಪ್ಪ ಅಮ್ಮ ಎಂಬ ಗೌರವ ಆತನಿಂದಲೇ ಆರಂಭವಾಗಬೇಕು. ಯಾಕೆಂದರೆ ಆತನ ಜನ್ಮದ ಅಸ್ತಿತ್ವಕ್ಕೆ ಅಪ್ಪ ಅಮ್ಮನೇ ಮೂಲ ಕಾರಣ. ಆ ಗೌರವ ಆತನಿಗಿಲ್ಲ ಎಂದರೆ ಹೊರಗಿನಿಂದ ಆ ಗೌರವ ಸಿಗುವುದಕ್ಕೆ ಸಾಧ್ಯವಿಲ್ಲ. ನಮ್ಮ ಕಾರ್ಯಕ್ಕೆ ನಮ್ಮ ವ್ಯಕ್ತಿತ್ವಕ್ಕೆ ಮೊದಲು ನಮ್ಮ ಗೌರವ ಸಲ್ಲಬೇಕು. ಆ ಗೌರವದಿಂದಲೇ ಅದು ಅನುಸರಿಸಲ್ಪಡಬೇಕು. ಕೇವಲ ಅಪ್ಪ ಅಮ್ಮ ಆಗಿದ್ದಾರೆ ಎಂದು ಅವರನ್ನು ಗೌರವಿಸುವುದಲ್ಲ. ಅದು ಮಾನಸಿಕ ಸ್ವಭಾವವಾಗಬೇಕು. ಹೊರತು ಕಟ್ಟು ಪಾಡಿಗೆ ಸಿಲುಕಿಕೊಂಡರೆ ಅನಿವಾರ್ಯ ಬಂಧನವಾಗಿ ನಡುವೇ ತಿರಸ್ಕಾರವೂ ಮೂಡಿಬರಬಹುದು. ಯಜ್ಞೋಪವೀತ ಅಥವಾ ಜನಿವಾರ ಜತೆಗೆ ಬ್ರಾಹ್ಮಣ್ಯ ಇವುಗಳೆಲ್ಲ ಅನಿವಾರ್ಯ ಕಟ್ಟುಪಾಡು ಆಗಬಾರದು. ಅದು ಮಾನಸಿಕ ಸ್ವಭಾವವಾಗಬೇಕು. ಮಾವಿನ ಮರದಲ್ಲಿ ಮಾವು ಮಾತ್ರವೇ ಅದಂತೆ ಅದು ಜನ್ಮ ಜಾತವಾಗಬೇಕು. ಜನಿವಾರದ ಬಗ್ಗೆ ಅಪಸ್ವರ ಕೇಳುವಾಗ ನಾವು ವ್ಯಗ್ರರಾಗುವ ಮೊದಲು ನಾವೆಷ್ಟು ಅದಕ್ಕೆ ಗೌರವ ಸಲ್ಲಿಸುತ್ತಿದ್ದೇವೆ ಎಂಬ ಆತ್ಮವಂಚನೆ ಇಲ್ಲದ ಪ್ರಶ್ನೆ ಮತ್ತು ಉತ್ತರ ಕಂಡುಕೊಳ್ಳಬೇಕು. ನಮ್ಮ ಜನಿವಾರಕ್ಕೆ ನಾವೇ ಗೌರವ ಕೊಡದೇ ಇದ್ದರೆ ಊರವರಿಂದ ಅದನ್ನು ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ.
ಮನೆಯಿಂದ ಹೊರಡುವಾಗ ಹಣೆಯ ತಿಲಕವನ್ನು ಅಳಿಸಿ ಹೋಗುವವರನ್ನು ನೋಡಿದ್ದೇನೆ. ತಿಲಕವಿದ್ದ ಮುಖ ಹೊರಗೆ ತೋರಿಸುವುದಕ್ಕೂ ಹಿಂಜರಿಕೆ. ಇನ್ನು ವಾರಾಂತ್ಯದ ಪಾರ್ಟಿಗೆ ಜನಿವಾರ ಮನೆಯ ಗೋಡೆಗೆ ನೇತು ಹಾಕಿ ಹೋಗುವವರಿದ್ದಾರೆ. ಆ ರೀತಿಯ ಪ್ರವೃತ್ತಿಗೆ ಎಲ್ಲಿಂದ ಪ್ರಚೋದನೆ ಲಭ್ಯವಾಗುತ್ತದೆ? ಯಾರು ಹೇಳಿಕೊಡುತ್ತಾರೆ? ಇನ್ನು ಸಂಧ್ಯಾವಂದನೆಯಾಗಲಿ ಪಿತೃಕ್ರಿಯೆ ಅಥವಾ ಇನ್ನಿತರ ಸಂಸ್ಕಾರಗಳನ್ನು ನಿಷ್ಠೆಯಿಂದ ಎಲ್ಲರೂ ಪಾಲಿಸುವುದಿಲ್ಲ. ಹೇಗಿದ್ದರೂ ಆಗುತ್ತದೆ. ಬೆಳಗೂ ರಾತ್ರಿಯೂ ಆಗಿ ದಿನ ಸಂದು ಹೋಗುತ್ತದೆ ಎಂಬ ಅಸಡ್ಡೆಯಿರುತ್ತದೆ. ಮೊದಲಿನಂತೆ ಬ್ರಾಹ್ಮಣ ಮನೆಯಲ್ಲೇ ಇರುವುದಿಲ್ಲ. ತನ್ನ ಮನೆ ಕುಟುಂಬವನ್ನು ಬಿಟ್ಟು ಜೀವನ ನಿರ್ವಹಣೆಗೋಸ್ಕರ ಯಾವುದೋ ವೃತ್ತಿಯಲ್ಲಿ ತೊಡಗಿಕೊಂಡ ಹಲವರು ಬ್ರಾಹ್ಮಣರಾಗಿ ಮಾತ್ರವಲ್ಲ ಬ್ರಾಹ್ಮಣ ವೇಷವನ್ನೂ ಧರಿಸುವುದಿಲ್ಲ. ಅದು ಅನಿವಾರ್ಯ ಅಂತ ಅನಿಸುವುದೇ ಇಲ್ಲ. ಇನ್ನು ಸಂಧ್ಯಾವಂದನೆ ಮಾಡಿದರೂ ಮೂರು ಹೊತ್ತು ಬಿಡಿ ಎರಡು ಹೊತ್ತು ಮಾಡುವವರು ಇಲ್ಲ. ಒಂದೇ ಹೊತ್ತು ಮಾಡಿದರೂ ಅದರ ಮೇಲೆ ಶ್ರಧ್ದೆ ಇರುವುದಿಲ್ಲ. ಯಾವುದೋ ಕಾಟಾಚಾರಕ್ಕೆ ಒಂದಷ್ಟು ಹೊತ್ತು ಮುಗಿಸಿಬಿಡುವುದನ್ನು ನೋಡಿದ್ದೇನೆ. ಸಂಧ್ಯಾವಂದನೆಯ ಉದ್ದೇಶವೇ ತಿಳಿಯದೆ ಇರುವಾಗ ಅದರ ಬಗ್ಗೆ ಸ್ವ ಗೌರವ ಹುಟ್ಟುವುದಿಲ್ಲ.
ಸಾಮಾನ್ಯವಾಗಿ ಎರಡು ಹೊತ್ತು ನಾನು ಸಂಧ್ಯಾವಂದನೆ ಕಟ್ಟುನಿಟ್ಟಾಗಿ ಮಾಡಿಬಿಡುತ್ತೇನೆ. ಮನೆಯಲ್ಲಿದ್ದರೆ ಅದು ಹೊತ್ತಿಗೆ ಸರಿಯಾಗಿ ಮಾಡಿದರೂ ಹಲವು ಸಲ ಕೆಲಸದ ಒತ್ತಡದಿಂದ ವೆತ್ಯಾಸವಾಗುವುದಿದೆ. ಅದು ಅಪರೂಪ. ಹೊರಗೆ ಹೋದಾಗಲೂ ಅದಕ್ಕೆ ಆದಷ್ಟು ಅನುಕೂಲವಾಗುವಂತೆ ನೋಡಿಕೊಳ್ಳುತ್ತೇನೆ. ಕೆಲವೊಮ್ಮೆ ಇದೂ ಸಾಧ್ಯವಾಗುವುದಿಲ್ಲ. ಆಗ ಅನುಭವಿಸುವ ಮಾನಸಿಕ ಹಿಂಸೆ ಒಂದು ರೀತಿಯದಾಗಿರುತ್ತದೆ. ಯಾಕೆಂದರೆ ಹಲವು ಸಲ ಪರಿಸರವೇ ಅದಕ್ಕೆ ವಿರುದ್ಧವಾಗಿರುತ್ತದೆ. ಒಂದು ಸಲ ಯಾವುದೋ ಮದುವೆ ಕಾರ್ಯಕ್ರಮಕ್ಕೆ ಹೋದಾಗ ಮದುವೆ ಮನೆಯಲ್ಲಿ ಎಂದಿನಂತೆ ಸಾಯಂಕಾಲ ಸಂಧ್ಯಾವಂದನೆಗೆ ಅಣಿಯಾದೆ. ಆಗ ಬ್ರಾಹ್ಮಣರೆ ವಿಚಿತ್ರವಾಗಿ ನೋಡಿದ ಅನುಭವವಿದೆ. ಇದೆಲ್ಲ ಮನೆಯಲ್ಲಿ ಮಾತ್ರ ಇಟ್ಟುಕೊಂಡರೆ ಸಾಕಲ್ಲವಾ ಎಂಬ ಭಾವ. ಪರಿಸರ ಹೀಗಿರುವಾಗ ನಮಗೆ ಎದುರಾಗುವ ಪ್ರಶ್ನೆಗಳಲ್ಲಿ ಇದೂ ಒಂದು ಜನಿವಾರ ಬೇಕೋ? ಶಿಕ್ಷಣ ಬೇಕೋ? . ಇದನ್ನು ನಾವು ಅನಿವಾರ್ಯವಾಗಿ ಎದುರಿಸಲೇಬೇಕು. ಒಂದು ರೀತಿಯಲ್ಲಿ ಕೇಳಿ ಬೇಡಿಕೆ ಸಲ್ಲಿಸಿ ತರಿಸಿಕೊಂಡಂತೆ.
ಹಾಗಾಗಿ ನಮ್ಮ ತನವನ್ನು ಮೊದಲು ನಾವು ಗೌರವಿಸಿ ಅನುಸರಿಸಿ ಉಳಿಸಿಕೊಳ್ಳಬೇಕು. ನಮ್ಮ ಅನುಸರಣೆಯಲ್ಲಿ ಉಳಿದವರಿಗೆ ಗೌರವ ಬರುವಂತೆ ಮಾಡಬೇಕು. ಊರೆಷ್ಟೇ ತೆಗಳಲಿ, ಅವಹೇಳನ ಮಾಡಲಿ ನಮ ಆತ್ಮ ಗೌರವ ಉಳಿದವರ ಹೇಳಿಕೆ ಅಭಿಪ್ರಾಯದಲ್ಲಿ ಬದಲಾಗಬಾರದು. ಯಾರೋ ಹೇಳಿದಂತೆ ನಾವು ನಡೆಯುವುದಾದರೆ ಜನ್ಮದಿಂದ ಬರುವ ಸಂಸ್ಕಾರ ಅಪ್ಪ ಅಮ್ಮ ಎಂಬ ಭಾವವನ್ನು ನಾವೇ ಬಲಿಕೊಟ್ಟಂತೆ. ಯಾರು ಏನೇ ಹೇಳಲಿ ನಮ್ಮ ಧರ್ಮವನ್ನು ನಮ್ಮ ಸಂಸ್ಕಾರವನ್ನು ಅನುಸರಿಸುವುದಕ್ಕೆ ನಮ್ಮ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಯಾರ ಅವಹೇಳನಕ್ಕೆ ಭರ್ತ್ಸನೆಗೆ ಹೆದರಿ ಅಥವಾ ನಾಜಿಕೆ ಪಟ್ಟು ಅದನ್ನು ಅನುಸರಿಸದೆ ಇರುವುದರಲ್ಲಿ ಅರ್ಥವಿಲ್ಲ. ಮಾನಸಿಕವಾಗಿ ಕಟ್ಟು ನಿಟ್ಟಿನಿಂದ ಅದನ್ನು ಅನುಸರಿಸಿಕೊಂಡರೆ ಇಂತಹ ಮೂರ್ಖತನದ ಪ್ರಶ್ನೆಗಳಿಗೆ ಉತ್ತರ ಹೇಳುವ ಆತ್ಮ ಬಲವಾದರೂ ನಮಗೆ ಒದಗಿ ಬರುತ್ತದೆ.

No comments:
Post a Comment