Saturday, April 4, 2026

ಹಾಸ್ಯಗಾನ

ಯಕ್ಷಗಾನ ಅಭಿಮಾನಿಯಾಗಿದ್ದರೆ , ಅಂತರ್ಜಾಲದಲ್ಲಿ ಒಂದೆರಡು ಯಕ್ಷಗಾನ ತುಣುಕುಗಳನ್ನು ನೋಡಿದರೆ ಮತ್ತೆ ಹಲವಾರು ಶಿಫಾರಸು, (recommendation) ವೀಡಿಯೋಗಳು ನಿಮ್ಮ ಆಸಕ್ತಿಯನ್ನು ಹೆಚ್ಚಿಸಿ  ಕಣ್ಸೆಳೆಯುವ ಪ್ರಯತ್ನ ಮಾಡುತ್ತದೆ. ಅವುಗಳನ್ನು ಅನುಮೋದಿಸಿ ನೋಡಿದಾಗ ಮತ್ತಷ್ಟು ಹೆಚ್ಚುತ್ತದೆ. ಇದು ಯೂಟ್ಯೂಬ್, ಫೇಸ್ ಬುಕ್ ಇನ್ಸ್ಟಾ ಗ್ರಾಂ ಗೂ ವಿಸ್ತರಿಸುತ್ತದೆ.  ಅಂತರ್ಜಾಲದ ಒಂದು ವಿಧದ ಸೇವೆಯ ರೀತಿ ಇದು. ಈ ಬಗೆಯಲ್ಲಿ ಬರುವ ಹಲವಾರು ಯಕ್ಷಗಾನಗಳ ಇತ್ತೀಚಿನ ಗುಣಗಳು ಒಂದೇ...ಅದು ಹಾಸ್ಯ ಪ್ರಧಾನ. ಯಕ್ಷಗಾನದಲ್ಲಿ ಎಲ್ಲಾ ರಂಗಗಳಿಗಿಂತಲೂ ವಿಭಿನ್ನ ಹಾಸ್ಯ ಇಲ್ಲಿರುವುದಂತೂ ಸತ್ಯ. ಆದರೆ ಯಕ್ಷಗಾನ ಎಂದೂ ಹಾಸ್ಯ ಪ್ರಧಾನವಾಗಿರಲಿಲ್ಲ. ಈಗ ಯಕ್ಷಗಾನಕ್ಕಿಂತಲೂ ಹಾಸ್ಯವೇ ಪ್ರಧಾನವಾಗಿ ಇನ್ನಿಲ್ಲದ ಕ್ರೀಡಾಂಗಣವಾಗಿ ಯಕ್ಷಗಾನ ಬದಲಾಗಿ ಹೋಗಿದೆ. ನಕ್ಕು ನಗಿಸುವ ಹಾಸ್ಯ, ಹೊಟ್ಟೆ ಹುಣ್ಣಾಗಿಸುವ ಹಾಸ್ಯ ಹೀಗಿ ತರಹೇವಾರಿ ತಲೆ ಬರಹದಲ್ಲಿ   ಹಲವಾರು ವೀಡಿಯೋಗಳು ಪ್ರಸಾರವಾಗುತ್ತವೆ. ಯಕ್ಷಗಾನ ಬಯಲಾಟದ ಒಂದು ಕರಪತ್ರ ನೋಡಿದೆ, ಪ್ರಸಂಗದ ಕೆಳಗೆ ಹಾಸ್ಯ ಪ್ರಧಾನ ಕಥಾನಕ ಅಂತ ಬರೆದಿತ್ತು. ಯಕ್ಷಗಾನಗಳಲ್ಲಿ ಹಾಸ್ಯವೇ ಪ್ರಧಾನವಾಗುವ ಆವಶ್ಯಕತೆ ಈಗ ಬಂದಿದೆ. ಕಾರಣ ಇಷ್ಟೆ ಯಕ್ಷಗಾನದಲ್ಲಿ ಆಕರ್ಷಣೆಯ ಕೊರತೆ.  ಹಾಗಾದರೆ ಯಕ್ಷಗಾನ ಎಂದರೆ ಹಾಸ್ಯ ಮಾತ್ರವೇ ಇರುವ ಜೋಕರ್ ಗಳ ಆಟವೇ? ಇಷ್ಟೇ ಅಲ್ಲ ದೇವೇಂದ್ರನಾಗಿ ನಕ್ಕು ನಗಿಸುವ ಹಾಸ್ಯ ಎಂಬ ತಲೆ ಬರಹ ಕಂಡರೆ ಗಂಭೀರವಾಗಿ ಯೋಚಿಸುವ ಅಂತ ಅನ್ನಿಸುವುದಿಲ್ಲವೇ? ಯಕ್ಷಗಾನದಲ್ಲಿ ದೇವೇಂದ್ರ ನಕ್ಕು ನಗಿಸುವ ಜೋಕರ್ ಆಗಿದ್ದು ಯಾವಾಗಿನಿಂದ? ಎಲ್ಲೊ ಅಲ್ಲೊಂದು ಇಲ್ಲೊಂದು ಗಂಭೀರ ಸಂಭಾಷಣೆಯಲ್ಲಿ ಹಾಸ್ಯದ ಚತುರ ಮಾತುಗಳಿದ್ದರೂ, ಎಲ್ಲೊ ಅಪರೂಪಕ್ಕೆ ಮೇಳದ ಹಾಸ್ಯಗಾರ ಇದನ್ನು ಮಾಡಿದರೂ,  ದೇವೇಂದ್ರ ಎಂದಿಗೂ ಹಾಸ್ಯಗಾರನಾಗಿರುವ  ಪಾತ್ರವಲ್ಲ.  


ಇಲ್ಲಿ ದೇವೇಂದ್ರನೂ ಹಾಸ್ಯ ರಾಮ ಕೃಷ್ಣನೂ ಹಾಸ್ಯ ಮುಂದೊಂದು ದಿನ ಸೀತೆ ದೇವಿಯಂತಹ ಪಾತ್ರಗಳೂ ಸಹ ಹಾಸ್ಯ ಪಾತ್ರಗಳಾಗಬಹುದು. ಮೊದಲೆಲ್ಲ ಒಂದು ಮೇಳದಲ್ಲಿ ಒಬ್ಬನೇ ಹಾಸ್ಯಗಾರನಿರುತ್ತಿದ್ದ. ಯಕ್ಷಗಾನದಲ್ಲಿ ಹಾಸ್ಯಗಾರನಿಗೆ ಒಂದು ಮಹತ್ವದ ಸ್ಥಾನವಿದೆ. ಅದು ಕಲಾವಿದನಾಗಿ ಮಾತ್ರ ಹೊರತು ಹಾಸ್ಯದಿಂದ ಅಲ್ಲ. ಒಂದು ಪ್ರಸಂಗ ನಿರ್ವಹಣೆಯಲ್ಲಿ ಹಾಸ್ಯಗಾರ ಮುಖ್ಯಪಾತ್ರಧಾರಿಗಿಂತಲೂ ಅತಿ ಮುಖ್ಯವಾಗಿಬಿಡುತ್ತಾನೆ.  ಹಾಸ್ಯಗಾರ ಕೇವಲ ಹಾಸ್ಯದ ಪಾತ್ರವಷ್ಟೇ ಅಲ್ಲ ಸಂದರ್ಭೋಚಿತವಾಗಿ ಬಣ್ಣದ ವೇಷದಿಂದ ಸ್ತ್ರೀ ವೇಷದ ವರೆಗೂ ನಿರ್ವಹಿಸಿ ಪ್ರಸಂಗವನ್ನು ಸಸೂತ್ರವಾಗಿ ನಡೆಸುವುದಕ್ಕೆ ಸಹಕಾರಿಯಾಗಿ ಇಡೀ ಪ್ರಸಂಗದ ಸೂತ್ರಧಾರಿಯಾಗುತ್ತಿದ್ದ. ಹಿಮ್ಮೆಳ ಮುಮ್ಮೇಳ ಎರಡರಲ್ಲೂ ಸಮಾನ ಸಾಮಾರ್ಥ್ಯವನ್ನು ಪಡೆದಿರುತ್ತಿದ್ದ.  ಅದಲ್ಲದೇ ಹಲವಾರು ಅಧಿಕೃತ ಅನಧಿಕೃತ ಜವಾಬ್ದಾರಿಗಳು ಹಾಸ್ಯಗಾರನೆಂಬ ವ್ಯಕ್ತಿಯ ಮೇಲೆ ಇರುತ್ತಿದ್ದವು. ಆದರೆ  ಈಗ ಒಂದು ಚಿಕ್ಕ ಮೇಳವೇ ಆದರೂ ಅದರಲ್ಲಿ ಎರಡು ಜನ ಹಾಸ್ಯಗಾರರಿತ್ತಾರೆ.  ಇವರು ಹಾಸ್ಯವನ್ನಲ್ಲದೇ ಬೇರೆ ಯಾವ ಜವಾಬ್ದಾರಿಯನ್ನು ನಿರ್ವಹಿಸುವುದು ಕಂಡು ಬರುವುದಿಲ್ಲ. ಯಾಕೆಂದರೆ ಈ ಜವಾಬ್ದಾರಿಗಳ ಅರಿವೇ ಇರುವುದಿಲ್ಲ. 

ನವರಸಗಳಲ್ಲಿ ಹಾಸ್ಯರಸ ಅತ್ಯಂತ ಮಹತ್ವ. ಎಲ್ಲರೂ ಒಂದಷ್ಟು ಹೊತ್ತು ನಗುವುದಕ್ಕೆ ಬಯಸುತ್ತಾರೆ. ನಿತ್ಯ ಜೀವನದ ದುಃಖ ಕಷ್ಟಗಳನ್ನು ಮರೆಯುವುದಕ್ಕೆ ಯತ್ನಿಸುತ್ತಾರೆ. ಹಾಗಂತ ಕೇವಲ ನಗುವೊಂದೇ ಸಾಕಾಗುವುದಿಲ್ಲ. ಮನಸ್ಸನ್ನು ಮುದಗೊಳಿಸುವುದು ಭಾವನೆಗಳು. ಅಲ್ಲಿ ಶೃಂಗಾರ ರೌದ್ರ ಕರುಣ ವೀರ ಎಲ್ಲದಕವು ಭಾವನೆಗಳ ಜೀವಕ್ಕೆ ಕಾರಣವಾಗುತ್ತದೆ. ಪ್ರೇಕ್ಷಕ ಕೇವಲ ಹಾಸ್ಯವನ್ನೇ ಬಯಸುತ್ತಾನೆ  ಎಂದರೆ ದೇವೇಂದ್ರನಿಂದಲೂ ಹಾಸ್ಯವನ್ನು ನಿರೀಕ್ಷಿಸುವ ಮಟ್ಟಿಗೆ ಯಕ್ಷಗಾನ ಬಂದು ನಿಂತಿದೆ ಎಂದರೆ ಯಾರನ್ನು ಕಾರಣಾವಾಗಿಸಬೇಕು? ಅದನ್ನು ನೀಡುವ ಕಲಾವಿದನೇ, ಅಲ್ಲ ಕೈತಟ್ಟಿ ನಗುವ ಪ್ರೇಕ್ಷಕನನ್ನೇ?  ಪ್ರೇಕ್ಷಕ ಬಯಸುತ್ತಾನೆ ಎಂದು ಯಕ್ಷಗಾನ ಮಾತ್ರ ಬದಲಾಗಿಲ್ಲ, ಹಾಸ್ಯದ ವಿಧಾನಗಳು ಬದಾಲಾಗಿಬಿಟ್ಟಿದೆ. ಹಾಸ್ಯ ಎಂದರೆ ಲೇವಡಿಯಾಗುವಷ್ಟರ ಮಟ್ಟಿಗೆ ಹಾಸ್ಯ ಬದಲಾಗಿದೆ. ನಗುವಿಗೂ ಒಂದು ಮೌಲ್ಯವಿದೆ. ಹಾಗಾಗಿ ಅದು ಮಿತವಾಗಿ ಬಳಸಲ್ಪಡಬೇಕು. ಹುಚ್ಚನೂ ನಗುತ್ತಾನೆ.  ಹುಚ್ಚನ್ನು ತೃಪ್ತಿ ಪಡಿಸುಮಟ್ಟಕ್ಕೆ ಅಥವ ಅದಕ್ಕೆ ಸೀಮಿತವಾಗಿ ಹಾಸ್ಯ ಬಳಕೆಯಾದರೆ ಹಾಸ್ಯಕ್ಕೆ ಮೌಲ್ಯ ಸಿಗಲಾರದು. ಹಿಂದೆ ಒಂದು ಸಲ ಕೆಲವು ಯಕ್ಷಗಾನ ಧ್ವನಿ ಸುರುಳಿಗಳು ಬಂದಿತ್ತು. ಕೀಳು ಹಾಸ್ಯವನ್ನೇ ಪ್ರಧಾನವಾಗಿಸಿದ ಯಕ್ಷಗಾನ ಸುರುಳಿಗಳು. ಆಗ ಇದನ್ನು ಆಕ್ಷೇಪಿಸಿದ್ದರು. ಈಗ ಕಾಲ ಬದಲಾಗಿದೆ ಸಂಪೂರ್ಣ ಯಕ್ಷಗಾನವೇ ಹಾಸ್ಯಮಯವಾಗುವ ಕಾಲ ಸನ್ನಿಹಿತವಾಗಿದೆ ಎನ್ನಬೇಕು. ಯಕ್ಷಗಾನ ಜೋಕರ್ ಗಳ ಆಟವಾಗಿ ಪ್ರೇಕ್ಷಕ ನಿರೀಕ್ಷಿಸುತ್ತಿದ್ದಾನೆ ಎಂದರೆ ಅತಿಶಯವಾಗಲಾರದು. 

No comments:

Post a Comment