Saturday, August 1, 2026

ಧಿಯೋಯೋನಃ ಪ್ರಚೋದಯಾತ್

 ಗಾಯತ್ರಿಮಂತ್ರದಲ್ಲಿ ಕೊನೆಯ ಶಬ್ದಗಳು ಧಿಯಃ ಯಃ ನಃ ಪ್ರಚೋದಯಾತ್. ಒಟ್ಟಿಗೆ ಧಿಯೋಯೋನಃ ಪ್ರಚೋದಯಾತ್. ಅಂದರೆ ನಮಗೆ ಜ್ಞಾನವನ್ನು ಕರುಣಿಸು. ಇದು ಗಾಯತ್ರಿ ಮಂತ್ರದ ಅದ್ಭುತ ಸಾಲುಗಳು.  ಮನುಷ್ಯ ದೇವರನ್ನು ಅರಿಯಬೇಕು.  ಆಗ ಅದರಲ್ಲಿ ಅರ್ಪಣಭಾವ ಬರುತ್ತದೆ. ಯಾರೋ ಹೇಳಿದರು ಅನುಸರಿಸಿದರು ಎಂದಲ್ಲ. ಅದನ್ನೇ ಧೀಮಹಿ ಎನ್ನುವುದು. ಧಿಯೋಯೋನಃ ಪ್ರಚೋದಯಾತ್ ಹೇಳುವಲ್ಲಿ ಒಬ್ಬನೇ ಆದರೂ ಆತ ನಮಗೆ ಎಂದು ಹೇಳುತ್ತಾನೆ. ನಮಗೆ ಒಳ್ಳೆ ಬುದ್ದಿಯನ್ನು ಕೊಡು ಎಂದು ಒಬ್ಬನೇ ಕುಳಿತು ಮನಸ್ಸಿನಲ್ಲಿ ಧ್ಯಾನ ಮಾಡುತ್ತಾನೆ.  ಇದು ಗಹನವಾದ ವಿಚಾರವನ್ನು ಹೇಳುತ್ತದೆ. ಬುದ್ದಿಯನ್ನು ಕೇವಲ ನಮಗಾಗಿ ಕೊಟ್ಟರೆ ಮತ್ತೊಬ್ಬನಿಗೆ ಬುದ್ದಿ ಇಲ್ಲದಾಗುತ್ತದೆ. ಪರೋಕ್ಷವಾಗಿ ಅದು ನಮಗೆ ಬಾಧಕವಾಗಬಹುದು. ಹಾಗಾಗಿ ಎಲ್ಲರಿಗೂ ಬುದ್ಧಿಯನ್ನು ಜ್ಞಾನವನ್ನು ಕೊಡು. ಹೊರತು ಸಂಪತ್ತನ್ನು ಕೇಳುವುದಿಲ್ಲ. ಬುದ್ಧಿಗಿರುವ ಮಹತ್ವ ಅದು. ನಾವು ಧನಿಕರಾಗುವಾಗ ನಮ್ಮ ಪಕ್ಕದಲ್ಲಿರುವವನೂ ಧನಿಕನಾಗಲಿ ಎಂದು ಬಯಸುವುದರಲ್ಲಿ ವಿಶ್ವ ಬಂಧುತ್ವವಿದೆ. 

ಬಹುಶಃ ಯಾವುದೇ ಧರ್ಮದಲ್ಲೂ ನನಗೆ ಕೊಡು ಅಂತ ಭಗವಂತನಲ್ಲಿ ಬೇಡುವುದಿರಬಹುದು ಗೊತ್ತಿಲ್ಲ. ನನಗೆ ವರಕೊಡು. ನನಗೆ ಒಳ್ಳೆಯದು ಮಾಡು. ನನ್ನನ್ನು ಉದ್ದರಿಸು ಹೀಗೆ ತನ್ನ ಪರಿಮಿತಿಯಲೇ ಬೇಡಿಕೆ ಇರುತ್ತದೆ.   ನಮಗೆ ಕೊಡು ಅಂತ ಕೇಳುವುದರಲ್ಲಿ ಸನಾತನ ಧರ್ಮದ ಸತ್ವ ಅಡಗಿದೆ ಎನ್ನಬೇಕು. ಹಾಗಾಗಿಯೇ ಭಾರತದ ಆಧ್ಯಾತ್ಮಿಕ ತತ್ವಗಳು ಇಂದು ಜಗತ್ತಿಗೆ ಗುರುಸ್ಥಾನವನ್ನು ಕಲ್ಪಿಸಿದೆ ಎನ್ನಬೇಕು. ನನಗೆ ಎನ್ನುವುದಕ್ಕಿಂತ ನಮಗೆ ಎನ್ನುವುದರಲ್ಲಿ ಸಮಷ್ಟಿಯ ತ್ಯಾಗ ಮನೋಭಾವ ಇದೆ. ಯೋಗ ತರಗತಿಯ ಆರಂಭದ ದಿನಗಳಲ್ಲಿ ನಮ್ಮ ಯೋಗ ಗುರು ತಾಡಪತ್ರಿಯವರು ಒಂದು ಮಾತು ಹೇಳಿದ್ದರು ಈಗಲೂ ನೆನಪಿದೆ. ನಿಮ್ಮ ನೆರೆ ಮನೆಯವನು ನಿಮ್ಮನ್ನು ದ್ವೇಷಿಸುತ್ತಿದ್ದರೆ, ಬೇರೆ ಏನು ಬೇಡ ಆತನನ್ನು ಯೋಗ ತರಗತಿಗೆ ಕರೆದು ಕೊಂಡು ಬನ್ನಿ. ಯೋಗಭ್ಯಾಸ ಮಾಡುವಂತೆ ಪ್ರೇರೇಪಿಸಿ. ನಿಮ್ಮ ಮೇಲಿನ ದ್ವೇಷವನ್ನು ಮಾತ್ರವಲ್ಲ ದ್ವೇಷ ಎಂಬ ವಸ್ತುವನ್ನೇ ಮರೆತು ಬಿಡುತ್ತಾನೆ. ಭಾರತಕ್ಕೆ ಸಮಷ್ಟಿಯ ಈ ನಮ್ಮ ಎನ್ನುವ ಭಾವನೆ ರಕ್ತಗತವಾಗಿರುವುದೇ ಈ ಸನಾತನ ಯೋಗ ಧರ್ಮದಿಂದ ಎನ್ನಬೇಕು. ವಿಶ್ವಕ್ಕೆ ಶಾಂತಿ ಮಂತ್ರವನ್ನು ತೋರಿಸಿಕೊಟ್ಟ ಭಾರತ. ಯಾರೋ ಒಬ್ಬ ಮಹನಿಯರು ಹೇಳಿದ್ದು, ಭಾ ಎಂದರೆ ಬೆಳಕು ರತಿ ಎಂದರೆ ಆಸಕ್ತಿ. ಬೆಳಕಿನಲ್ಲಿ ಆಸಕ್ತನಾಗಿ ಜಗತ್ತಿಗೆ ಜ್ಯೋತಿಯ ಬೆಳಕನ್ನು ತೋರಿಸಿದ ದೇಶವೇ ಭಾರತ. ಇದು ಭಾರತಕ್ಕೆ ಗುರುತ್ವ ವನ್ನು ಕಲ್ಪಿಸಿದೆ. ಗುರುತ್ವ ಎಂದರೆ ಗಮನ, ದರ್ಶನದ ಸ್ಥಾನ. ಇದು ಯಾವುದೋ ವ್ಯಕ್ತಿಗೆ ಸಂಭಂದಿಸಿ ಹೇಳಿದುದಲ್ಲ. ಇಲ್ಲಿ ಹುಟ್ಟಿದ ಮಹನೀಯರೆಲ್ಲ ಈ ಸ್ಥಾನಕ್ಕೆ ಗೌರವವನ್ನು ಕೊಡುವಲ್ಲಿ ಪ್ರಯತ್ನಿಸಿದ್ದಾರೆ. 

ವಿಶ್ವ ಗುರು ಎಂದು ಯಾವುದೋ ವ್ಯಕ್ತಿಯನ್ನು ಅಭಿಮಾನದಿಂದ ಕರೆಯಬಹುದು. ಆದರೆ ಆ ವ್ಯಕ್ತಿ ಎಂದಿಗೂ ಇದನ್ನು ಪ್ರತಿಪಾದಿಸಲಿಲ್ಲ.  ಯಾರದೋ ಅಭಿಮಾನ ಈಬಗೆಯಲ್ಲಿ ವ್ಯಕ್ತವಾಗುತ್ತದೆ.  ಅದು ಆ ಗುರುತ್ವವನ್ನು ಹೃಸ್ವ ಮಾಡಿ ಸಣ್ಣದಾಗಿಸುತ್ತದೆ. ವ್ಯಕ್ತಿಯೊಬ್ಬನಿಂದ ಸಮಷ್ಟಿಯಾಗುವುದಿಲ್ಲ. ನಾವು ನಮ್ಮದು ಎಂದಾಗಲೇ ಶಿಷ್ಯ ಗುರುವಿನ ಸಂಭಂಧ ಏರ್ಪಡುತ್ತದೆ. ಅದು ಭಾರತೀಯತೆ. ಗುಡ್ಡದಲ್ಲಿ ಯಾವುದೋ ಭಾಗದಲ್ಲಿ ಎರಡು ಹೆಗ್ಗಣ ಇದೆ ಎಂದು ಗುಡ್ಡವನ್ನೇ ಜರಿಯುವುದಲ್ಲ. ಇಂದು ಧರ್ಮದ ಅರಿವಿಲ್ಲದೇ ಅದನ್ನು ಜರಿಯುತ್ತಾರೆ. ತಮಗೆ ತಿಳಿಯಲಾಗದ ಹಪಹಪಿಕೆ, ಮತ್ತು ತಮ್ಮ ಅಸಮರ್ಥತೆಗೆ ಇಡೀ ಧರ್ಮವನ್ನು ದೂರುವುದು ಅಜ್ಞಾನದ ಸಂಕೇತ. ಹಾಗಾಗಿಯೇ ನಂಬುವ ನಮಗು ನಂಬದೇ ಇರುವ ಪಾಮರನಿಗೂ ಬುದ್ದಿ ಜ್ಞಾನವನ್ನು ಕರುಣಿಸು ಅಂತ ಧಿಯೋಯೋನಃ ಪ್ರಚೋದಯಾತ್ ಅಂತ ಬೇಡಿಕೊಳ್ಳುವುದು. ಹಾಗಾಗಿಯೇ ಹಿಂದು ಧರ್ಮ ವಿರೋಧಿಗಳನ್ನು ಹೊಟ್ಟೆಯಲ್ಲಿಟ್ಟು ಪೋಷಿಸಿದಂತೆ ಬೇರೆಯಾವ ಧರ್ಮವೂ ವಿರೋಧಿಗಳನ್ನುಇರಿಸಿಕೊಳ್ಳುವುದಿಲ್ಲ. ಯಾವುದೇ ಧರ್ಮವನ್ನು ಇಲ್ಲಿ ಕೀಳಾಗಿ ಕಾಣುವುದಿಲ್ಲ. ನಮ್ಮ ಧರ್ಮವೂ ಪರಧರ್ಮವೂ ಬೆಳೆಯಲಿ. ಭಗವಂತನನ್ನು ಆರಾಧಿಸುವ ಮತ್ತು ಆರಾಧಿಸದೇ ಇರುವ ಎಲ್ಲರೂ ಇಲ್ಲಿ ಸಮಾನರು. ಭಾರತ ಸಾರುವು ವಸುಧೈವ ಕುಟುಂಬಕಂ ತತ್ವವೇ ಇದು. 

No comments:

Post a Comment