Thursday, July 30, 2026

ವಿದ್ಯಾ ವಜನ !


ಗ್ರಾಮೀಣ  ಪ್ರದೇಶದಲ್ಲಿ ಒಂದು ದಿನ ಬ್ಯಾಂಕ್ ಲೆಕ್ಕ ಪರಿಶೋಧನೆ (Audit) ಗೆ ಹೋಗಿದ್ದೆ. ಅಲ್ಲಿ ಒಬ್ಬ ಗ್ರಾಹಕ ಬಹಳ ಧನಿಕ. ಆಗಾಗ  ಹತ್ತು ಬೆರಳಿಗೆ ವಜ್ರದ ಉಂಗುರ, ಕೊರಳಿಗೆ ಚಿನ್ನದ ನಾಯಿ ಸಂಕೊಲೆ ಧರಿಸಿ ಬರುತ್ತಿದ್ದ.  ಅತ್ಯಂತ ಪ್ರತಿಷ್ಠಿತ ವ್ಯಕ್ತಿ ಕಾಣಬೇಕು. ಬಿಳಿ ಬಿಳಿ ಖಾದಿ  ವಸ್ತ್ರ ತೊಟ್ಟವನು, ಮಲಯಾಳಂ ನಲ್ಲಿ ಹೇಳುವಂತೆ ವೆಳ್ಳಿ ಮೂಂಗ  ಅಂದರೆ ಬಿಳಿ ಗೂಬೆ, ಈತ ಒಂದು ರಾಜಕೀಯ ವ್ಯಕ್ತಿ. ಯಾವಾಗಲೂ ಒಂದಿಬ್ಬರು ಜತೆಗೆ ಇರುತ್ತಿದ್ದರು. ಅದಿನ ಆತ ಒಬ್ಬನೇ ಬಂದಿದ್ದ. ಆತನಿಗೆ ದೊಡ್ಡ ಮೊತ್ತದ ನಗದು ಹಣ ಬ್ಯಾಂಕ್ ನಿಂದ ತೆಗೆದುಕೊಳ್ಳುವುದಿತ್ತು. ಮ್ಯಾನೇಜರ್ ಗೆ ಮೊದಲೇ ಕರೆ ಮಾಡಿ ಹೇಳಿರ ಬೇಕು. ಬ್ಯಾಂಕ್ ನಲ್ಲಿ ದೊಡ್ಡ ಮೊತ್ತದ ಹಣ ಇಲ್ಲದೇ ಇದ್ದರೆ ದೊಡ್ಡ ಮೊತ್ತದ ಹಣ ತೆಗೆದುಕೊಳ್ಳುವಾಗ ಮೊದಲೇ ತಿಳಿಸಿರಬೇಕಾಗುತ್ತದೆ. ಹಲವು ಸಲ ಹತ್ತಿರದ ಶಾಖೆಯಿಂದ ಇವುಗಳನ್ನು ವ್ಯವಸ್ಥೆ ಮಾಡುತ್ತಾರೆ.  ಆದಿನ ಬಂದವನಿಗೆ ಚೆಕ್ ಬರೆಯಬೇಕಿತ್ತು. ಹಲವು ಸಲ ಇಂತಹ ವ್ಯಕ್ತಿಗಳಿಗೆ ಸಹಿ ಬಿಟ್ಟು ಇನ್ನೇನು ಬರೆಯುವುದಕ್ಕೆ ಬರುವುದಿಲ್ಲವೋ ಇಲ್ಲ, ಹಾಗೆ ಬರೆಯುವುದು ಪ್ರತಿಷ್ಠೆಗೆ ತೊಂದರೆಯೋ ಗೊತ್ತಿಲ್ಲ. ದೊಡ್ಡ ಮೊತ್ತದ ಚೆಕ್ ಬರೆಯಬೇಕಿತ್ತು. ಬ್ಯಾಂಕ್ ಸಿಬ್ಬಂದಿ ಬರೆಯಬಾರದು. ಮಾತ್ರವಲ್ಲ ಆದಿನ ಸಿಬ್ಬಂದಿಗಳ ಸಂಖ್ಯೆ ತೀವ್ರವಾಗಿ ಕಡಿಮೆ ಇತ್ತು. ಮ್ಯಾನೆಜರ್, ಒಬ್ಬರು ಗುಮಾಸ್ತ ಕ್ಯಾಶಿಯರ್ ಮತ್ತೆ ಜವಾನ ಬಿಟ್ಟರೆ ಯಾರೂ ಇರಲಿಲ್ಲ. ಹಾಗಾಗಿ ಇದ್ದ ಸಿಬ್ಬಂದಿಗಳಿಗೆ ತುರಿಸುವುದಕ್ಕೂ ಸಮಯ ಇಲ್ಲದ ಸ್ಥಿತಿ.  


ಸರಿ ನಾನು ಬ್ಯಾಂಕ್ ಕೌಂಟರ್ ಹತ್ತಿರವೇ ಕಂಪ್ಯೂಟರ್ ನಲ್ಲಿ ಏನೋ ಪರಿಶೋಧನೆಯಲ್ಲಿದ್ದೆ. ಆತ ನನ್ನಲ್ಲಿ ಬಂದು ಬರೆದು ಕೊಡುವಂತೆ ಕೇಳಿದ. ನನಗೂ ಮುಖ್ಯವಾಗಿ ಸಮಯ ಇರಲಿಲ್ಲ. ಬ್ಯಾಂಕ್ ಆಡಿಟ್ ಗೆ ಹೋದಾಗ ಈ ರೀತಿ ಹಲವರು ಕೇಳಿಕೊಂಡು ಬರುವುದುಂಟು. ನಮ್ಮಲ್ಲಿ ಎಷ್ಟು ವಿದ್ಯಾವಂತರಿಗೂ ಕೆಲವರಿಗೆ ಈ ಬಾಂಕ್ ಚಲನ್ ಅಥವಾ ಚೆಕ್ ತುಂಬಿಸುವುದಕ್ಕೆ ಬರುವುದಿಲ್ಲ.  ಚಲನ್ ಬರೆಯುವಾಗ ಹಲವಾರು ತಪ್ಪುಗಳು, ಕೆಲವೊಮ್ಮೆ ಒಂದರಡು ಚಲನ್ ವ್ಯರ್ಥವಾಗುವುದು ಸರ್ವೇ ಸಾಮಾನ್ಯ. ಇಂತಹ ಪ್ರಾಥಮಿಕ ಅರಿವಿಲ್ಲದಿರುವ ವಿದ್ಯಾವಂತರು ಇದ್ದಾರೆ. ಈಗೀಗ ಈ ಚಲನ್ ಬರೆಯುವ ವ್ಯವವಾರ ಕಡಿಮೆಯಾಗಿದೆ. ಹೋಗಲಿ,  ಬ್ಯಾಂಕ್ ಆಡಿಟ್ ಗೆ ಹೋದಾಗ ಹೀಗೆ ಕೇಳಿದರೆ ನಾನು ಬರೆದುಕೊಡುವುದಕ್ಕೆ ಒಪ್ಪುವುದಿಲ್ಲ. ನನ್ನ ಪ್ರಕಾರ ಅದು ನಮ್ಮ ವೃತ್ತಿಗೆ ಸರಿ ಹೊಂದುವುದಿಲ್ಲ. ಇಲ್ಲ ಸರ್ ನಾನು ಬರೆಯಬಾರದು ಎಂದು ನಾನು ನಯವಾಗಿ ತಿರಸ್ಕರಿಸಿದೆ, ನನಗೂ ಈ ರಾಜಕೀಯ  ಬಿಳಿ ಮರಿಗಳು ಅಷ್ಟಕ್ಕಷ್ಟೇ. ಕೊನೆಗೆ ಆತ ನನ್ನ ಪಕ್ಕವೇ ಕುಳಿತು ನನ್ನಲ್ಲಿ ಕೇಳಿ ಬರೆಯುವುದಕ್ಕೆ ತೊಡಗಿದ.   ಬೆಲೆ ಬಾಳುವ ಪೆನ್ನು ಇತ್ತು. ಆದರೆ ಆತನಿಗೆ ಬರೆಯುವಾಗ ಕೈ ಕಂಪಿಸುತ್ತಿತ್ತು. ಪೆನ್ನು ಯಾವ ಕಾರಣಕ್ಕೆ ಇಟ್ಟುಕೊಂಡಿದ್ದಾನೋ ಅಂತ ಅನಿಸಿತು. ಎರಡು ಕೋಟಿ ದೊಡ್ಡ ಮೊತ್ತದ ಹಣ ಪಡೆಯಬೇಕಿತ್ತು. ನಾನು ಹೇಳುತ್ತಾ ಹೋದೆ ದಿನಾಂಕ, ನಂತರ ಹಣ ಪಡೆಯುವಾತನ ಜಾಗದಲ್ಲಿ ಬರೆಯಬೇಕಾದನ್ನು ಹೇಳಿದೆ. ಎರಡು ಕೋಟಿ ಸಂಖ್ಯೆಯನ್ನು ಬರೆಯುವುದಕ್ಕೆ ಹೇಳಿದೆ. ಪುಣ್ಯಾತ್ಮನಿಗೆ ಕೋಟಿಯಲ್ಲಿ ಎಷ್ಟು ಸೊನ್ನೆ ಇದೆ ಅಂತ ಗೊತ್ತಿಲ್ಲ. ಎರಡು ಕೋಟಿಯ ಬದಲು ಇಪ್ಪತ್ತು ಲಕ್ಷ ಬರೆದಿದ್ದ! ಅಷ್ಟಾದ ಮೇಲೆ ಅಕ್ಷರದಲ್ಲಿ ಬರೆಯಬೇಕಾದರೂ ಒದ್ದಾಡಿದ. ಒಂದು ಚೆಕ್  ವ್ಯರ್ಥವಾಗಿ ಪುನಃ ಬರೆಯಬೇಕಾಯಿತು. ಕೊನೇಗೆ ಯಾರೂ ಓದಲಾಗದ ಸಹಿಯನ್ನು ಗೀಚುವುದಕ್ಕೆ ಅದು ಹೇಗೋ ಕಲಿತಿದ್ದ.  ತಮ್ಮಲ್ಲಿರುವ ಸಂಪತ್ತಿನ ಮೌಲ್ಯ ತಿಳಿಯದೇ ಇದ್ದರೆ ಆ ಸಂಪತ್ತಿಗೆ ಬೆಲೆಯೇ ಇಲ್ಲ. ನಾಯಿ ಕೊರಳಿಗೆ ಚಿನ್ನದ ಸಂಕಲೆ ಹಾಕಿ ಕಟ್ಟಿದರೂ ಅದಕ್ಕೆ ಅದು ಕೇವಲ ಸಂಕಲೆ. ಮತ್ತು ಕೇವಲ ಒಂದು ಬಂಧನ. 

ಇಂತಹ ವ್ಯಕ್ತಿಗಳಿಗೆ ಮೈತುಂಬ ಚಿನ್ನ ಇರುತ್ತದೆ. ಬೆಲೆ ಬಾಳುವ ಪೆನ್ನು ಮೊಬೈಲ್  ವಾಚು ಉಡುಪು ಚಪ್ಪಲಿ ಎಲ್ಲಾ ಇರುತ್ತದೆ. ಅದು ಭಾರವಾಗುವುದಿಲ್ಲ. ಅದರೆ ಇವರಿಗೆ ತಲೆಯಲ್ಲಿ ವಿದ್ಯೆಯ ವಜನ್ ಅಂದರೆ ಭಾರ ಇರುವುದಿಲ್ಲ. ಅಷ್ಟಾಗಿ ಈತ ರಾಜಕೀಯ ಗಣ್ಯವ್ಯಕ್ತಿ. ಬಹುಶಃ ಪಂಚಾಯತ್ ಸದಸ್ಯನೋ ಅಧ್ಯಕ್ಷನೋ ಏನೋ ಆಗಿರಬೇಕು. ಯಾರಿಗೆ ಗೊತ್ತು, ಮುಂದೆ ಈತ ಶಿಕ್ಷಣ ಮಂತ್ರಿಯೂ ಆಗಬಹುದು. ಇಲ್ಲ ಮುಖ್ಯಮಂತ್ರಿ ಅಥವಾ ಪ್ರಧಾನಿಯೂ ಆಗಬಹುದು. ನಮ್ಮ ಭಾರತವಲ್ಲವೇ?  ಇವರಿಗೆ ವಿದ್ಯೆಯ ಭಾರ ತಾಳಿಕೊಳ್ಳುವುದು ಕಷ್ಟವಾಗುತ್ತದೆ. ಕೊನೆ ಪಕ್ಷ ವಿದ್ಯೆಗೆ ಬೆಲೆಕೊಡುವ ಮನೋಭಾವವೂ ಇರುವುದಿಲ್ಲ. ವಿದ್ಯಾವಂತರನ್ನು ಕಂಡರೂ ಸಹಿಸುವುದಕ್ಕೆ ಕಷ್ಟವಾಗುತ್ತದೆ. ನಮ್ಮಲ್ಲಿರುವ ಸೊತ್ತಿನ  ಬೆಲೆ ನಮಗೆ ತಿಳಿಯದೇ ಇದ್ದರೆ ಆ ಸೊತ್ತು ಇದ್ದೇನು ಪ್ರಯೋಜನ. ಸುಂದರವಾದ ಹೆಣ್ಣು ಪತ್ನಿ ಇದ್ದರೂ ಧೂಮ ಪಾನ ಮದ್ಯಪಾನದ ವ್ಯಸನದಲ್ಲಿ ಸುಂದರ ಹೆಂಡತಿ ಕೂಡ ಕೇವಲ ಹೆಸರಿಗಷ್ಟೆ ಆಗಿ ಇದ್ದಂತೆ. 


No comments:

Post a Comment