Friday, August 21, 2026

ಜ್ಞಾನ ಪರವಶ



        ಮಹಾಭಾರತದಲ್ಲಿ ಏಕಲವ್ಯ ಪ್ರಸಂಗ ಬರುತ್ತದೆ. ದ್ರೋಣರಿಂದ ತಿರಸ್ಕೃತನಾದ ಒಬ್ಬ ಬೇಡ ಅವರದೇ ಮೂರ್ತಿ ಇಟ್ಟು ಅದರ ಪ್ರೇರಣೆಯಲ್ಲಿ ಧನುರ್ವೇದ ಅಭ್ಯಾಸ ಮಾಡುತ್ತಾನೆ.  ಒಂದು ಸಲ ಬೇಟೆಯಾಡುತ್ತ ಬಂದ ಅರ್ಜುನನ ನಾಯಿಯ ಬೊಗಳುವಿಕೆಯ ಧ್ವನಿಕೇಳಿ ಶಬ್ದವೇಧಿ ಯಿಂದ ನಾಯಿಯ ಬಾಯಿಗೆ ಬಾಣ ಪ್ರಯೋಗ ಮಾಡುತ್ತಾನೆ. ಇದನ್ನು ಕಂಡ ಅರ್ಜುನ ಆತನನ್ನು ಕಂಡಾಗ ದ್ರೋಣರ ಮೂರ್ತಿಯನ್ನು ಇಟ್ಟುಆತ ಬಿಲ್ಲುವಿದ್ಯೆ ಕಲಿತಿರುವುದು ಗಮನಕ್ಕೆ ಬರುತ್ತದೆ. ಕೊನೆಯಲ್ಲಿ ಇದು ದ್ರೋಣರ ಗಮನಕ್ಕೆ ಬಂದು ಅರ್ಜುನನಿಗಿಂತ ಬೇರೆ ಬಿಲ್ಲುಗಾರ ಇರಬಾರದು ಎಂಬ ಕಾರಣಕ್ಕೆ ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಪಡೆಯುತ್ತಾರೆ.  ದ್ರೋಣರು ಹೀಗೆ ಮಾಡುವುದಕ್ಕೆ ಹಲವು ಕಾರಣಗಳಿರಬಹುದು. ಹಸ್ತಿನಾವತಿಯ ಋಣ ಇರಬಹುದು. ಅರ್ಜುನನ ಮೇಲಿನ ವಾತ್ಸಲ್ಯ ಇರಬಹುದು. ಏನೇ ಇದ್ದರೂ ಈ ಪ್ರಸಂಗ ಹಲವು ಚಿಂತನೆಗಳಿಗೆ ಎಡೆ ಮಾಡಿಕೊಡುತ್ತದೆ. ಈ ಅಂಗುಷ್ಠ ಹರಣ ದ್ರೋಣರನ್ನು ಖಳನಂತೆ ಚಿತ್ರಿಸುತ್ತದೆ.  ಈಗ ಅದನ್ನು ದಲಿತ ಸಂಘರ್ಷದವರೆಗೂ ತೆಗೆದುಕೊಂಡು ಹೋಗುತ್ತಾರೆ. ಯಾವುದನ್ನೂ ಆಕ್ಷೇಪಿಸುವುದು ಕಷ್ಟವಾಗಬಹುದು. ಯಾವುದು ಸತ್ಯ ಯಾವುದು ವಾಸ್ತವ ಇದನ್ನು ತಿಳಿಯುವುದು ಹಲವು ಸಲ ಕಷ್ಟವಾಗುತ್ತದೆ. ಆದರೆ ಪುರಾಣದಲ್ಲಿ ಬರುವ ಘಟನೆಗಳಿಗೆ ಹೀಗೆ ಅಂತ ನಿರ್ದಿಷ್ಟವಾಗಿ ವ್ಯಾಖ್ಯಾನಿಸುವುದು ತಪ್ಪಾಗುತ್ತದೆ. 

  ಒಂದು  ಕ್ಷುಲ್ಲಕ ಪ್ರಾಣಿ ನಾಯಿಗೆ ಶಬ್ದವೇಧಿಯಂತಹ ಮಹಾಸ್ತ್ರವನ್ನು ಪ್ರಯೋಗಿಸಿದ ಏಕಲವ್ಯನ ಕೈಗೆ ಭೀಕರ ಮಾರಕಾಸ್ತ್ರಗಳು ಒಲಿದರೆ ಅದರ ಪರಿಣಾಮ ಏನಾಗಬಹುದು? ಅದು ದೊಡ್ಡ ಅನಾಹುತಕ್ಕೆ ಎಡೆಮಾಡಿಕೊಡಬಹುದು.   ಅರ್ಹನಲ್ಲದವನಿಗೆ ಶ್ರೀಮಂತಿಗೆ ಬಂದಂತೆ ಅದು ದುಷ್ಪರಿಣಾಮಕ್ಕೆ ಎಡೆಮಾಡಿಕೊಡುತ್ತದೆ. ಹಾಗಾಗಿ ದ್ರೋಣರು ಅರ್ಹನಲ್ಲದವನು ಇಂತಹ ಮಹಾಸ್ತ್ರಗಳನ್ನು ಪ್ರಯೋಗಿಸುವುದಕ್ಕೆ ಶಕ್ತನಾಗಬಾರದು ಎಂಬ ಕಾರಣಕ್ಕೂ ಈ ಹೆಬ್ಬೆರಳನ್ನು ದಕ್ಷಿಣೆಯಾಗಿ ಪಡೆಯುತ್ತಾನೆ. ಇಲ್ಲಿ ಜಾತಿ ಧರ್ಮ ಎಂಬಕಾರಣಕ್ಕಿಂತಲೂ ಈ ಕಾರಣವೇ ಮುಖ್ಯವಾಗುತ್ತದೆ. ಯಾವುದೇ ಒಂದು ಅಸ್ತ್ರ ಸಿದ್ದಿಸುವಾಗ ಅದನ್ನು ಪ್ರಯೋಗಿಸಿದವನಿಗೆ ಅದನ್ನು  ಉಪಸಂಹರಿಸುವ  ವಿದ್ಯೆಯೂ ತಿಳಿದಿರಬೇಕಾಗುತ್ತದೆ. ಅದಲ್ಲದೇ ಹೋದರೆ ಶತ್ರು ಸಂಹಾರವನ್ನು ಮಾಡುವ ಜತೆಗೆ ಬಾಣ ಬಿಟ್ಟವನನ್ನೇ ಅದು ಆಹುತಿ ತೆಗೆದುಕೊಳ್ಳಬಹುದು. ಅಶ್ವತ್ಥಾಮ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದಾಗ ಇದು ಅನುಭವಕ್ಕೆ ಬರುತ್ತದೆ.  ಪಕ್ಕದ ಮನೆಗೆ ಬೆಂಕಿ ಹಚ್ಚುವಾಗ ಆ ಬೆಂಕಿ ತನ್ನ ಮನೆಗೂ ಹಬ್ಬಿದರೆ ಏನಾಗಬಹುದು ಎಂಬ ಚಿಂತಿಸುವಲ್ಲಿ ಆತ ಸಮರ್ಥನಿರಬೇಕು. ಒಂದು ಮಗುವಿನ ಕೈಗೆ ಹರಿತವಾದ ಚಾಕು ಅಥವಾ ಕತ್ತಿ ಸಿಕ್ಕಿದರೆ ಏನಾಗಬಹುದು? ವಿದ್ಯಾವಂತನೆನೆಸಿಕೊಳ್ಳುವುದು ಮುಖ್ಯವಾಗುವುದಿಲ್ಲ. ಆ ವಿದ್ಯೆ ಹೇಗೆ ಸದ್ವಿನಿಯೋಗವಾಗುತ್ತದೆ ಎಂಬುದು ಮುಖ್ಯ. 

ನ್ಯೂಟನ್ ಕಂಡು ಹಿಡಿದ ಸೂತ್ರ ಪರಮಾಣು ಬಾಂಬಿನ ತನಕವೂ ತಲುಪಿದಲ್ಲಿ ಈ ತತ್ವವೇ ಅಡಗಿದೆ. ಇಂದು ಅದು ಭಯೋತ್ಪಾದನೆಗೂ ಕಾರಣವಾಗಿ ಜಗತ್ತನ್ನೇ ಕಾಡುತ್ತಿದೆ ಎಂದರೆ ಒಂದು ವಿದ್ಯೆ ಎಷ್ಟು ಅಮೂಲ್ಯವೋ ಅಷ್ಟೇ ಅನರ್ಹ ರ  ಕೈವಶವಾದಾಗ  ಅಪಾಯಕಾರಿಯಾಗಿ ಪರಿಣಮಿಸುತ್ತದೆ. ವಿದ್ಯೆ ಎಂಬುದು ಅರ್ಹತೆಗೆ ಪ್ರದಾನವಾಗಬೇಕು.  ಅನ್ವೇಷಣೆ ದುರಂತಕ್ಕೆ ಕಾರಣವಾದರೆ ಅದು ಹಲವು ಸಲ್ಪ ಪಶ್ಚಾತ್ತಾಪಕ್ಕೂ ಅರ್ಹವಾಗದ ದುರಂತವನ್ನು ತಂದಿಡುತ್ತದೆ. 

ಸಾಮಾನ್ಯವಾಗಿ ಪೂಜಾವಿಧಾನಗಳಲ್ಲಿ ಮಂತ್ರೋಚ್ಚಾರಕ್ಕೆ ಹೀಗೆ ನಿಯಮಗಳಿವೆ. ಮಂತ್ರಗಳು ಅದು ಕೇವಲ ಅಕ್ಷರ ಶಬ್ದಪುಂಜಗಳಲ್ಲ. ಇಂದು ಗಾಯತ್ರಿ ಮಂತ್ರ ಮೊಬೈಲ್ ಗಳ ಘಂಟೆಯಾಗಿ ಮೊಳಗುತ್ತದೆ. ಗಾಯತ್ರಿ ಮಂತ್ರ ಬಹಿರಂಗವಾಗಿ ಉಚ್ಚರಿಸಬಾರದು ಎಂಬ ನಿಯಮವಿದೆ. ಅದನ್ನು ಉಚ್ಚರಿಸುವುದಕ್ಕೆ ಗುರುಗಳ ಬೋಧನೆ, ಬ್ರಹ್ಮೋಪದೇಶದ ಆವಶ್ಯಕತೆಯೂ ಇದೆ. ಯಾವುದೇ ವಸ್ತುವು ಬೀದಿ ಬದಿಯ ಸಂತೆಯ ಸರಕಾದರೆ ಅದಕ್ಕೆ ಮೌಲ್ಯವೂ ಒದಗಿಬರುವುದಿಲ್ಲ. ಚಿನ್ನದಂಗಡಿಯೊಂದರಲ್ಲಿ ಅಭರಣವನ್ನು ಖರೀದಿಸಿದಾಗ ಅಂಗಡಿಯೊಂದರಲ್ಲಿ ಅದರ ಬೆಲೆಯನ್ನು ತೆತ್ತ ಮೇಲೆಯೂ ಆ ಅಭರಣವನ್ನು ದೇವರ ಮುಂದಿಟ್ಟು ನಮಸ್ಕರಿಸಿ ಗ್ರಾಹಕರಿಗೆ ಕೊಡುವುದನ್ನು ನೋಡಿದ್ದೇನೆ. ಅದು ಆಭರಣದ ಮೌಲ್ಯ ಮಾತ್ರವಲ್ಲ, ಅದಕ್ಕೆ ಸಲ್ಲುವ ಗೌರವ. ಬೀದಿ ಬದಿಯ ಮಾರಾಟದ ಸರಕು ತರಕಾರಿಗೂ ಹವಾನಿಯಂತ್ತಿತ ಕಪಾಟಿನ ಚಪ್ಪಲಿಗೂ ಇರುವ ವೆತ್ಯಾಸವಿದು.  ಮನುಷ್ಯನ ಆಧ್ಯಾತ್ಮಿಕ ಹಾದಿಯಲ್ಲಿ ಪರಿಶುದ್ದಿಗೆ ಕಾರಣವಾಗಬಲ್ಲ ಗಾಯತ್ರೀ ಮಂತ್ರ ಢಾಂಭಿಕ ಭಕ್ತಿಗೆ ಎರವಾಗುವುದರಲ್ಲಿ ಅದರ ಬಗೆಗಿನ ಅಜ್ಞಾನವನ್ನು ತೋರಿಸುತ್ತದೆ. ಗಾಯತ್ರೀ ಮಂತ್ರ ಪಠಣಕ್ಕೂ ಅನುಷ್ಠಾನಗಳಿಗೂ ಗೌರವಾನ್ವಿತ ನಿಯಮ ನಿಬಂಧನೆಗಳಿವೆ. ನಿಯಮ ನಿಬಂಧನೆಗಳನ್ನು ಪಾಲಿಸುವುದರಲ್ಲಿ ಅಸಡ್ಡೆಯಿರುವಾಗ  ಕೇವಲ ಮಂತ್ರದ ಬಗೆಗಿನ ಗೌರವ ಭಕ್ತಿ ಪರಿಪೂರ್ಣವಾಗುವುದಿಲ್ಲ. ಉದ್ದೇಶ ಸಂಕಲ್ಪ ಸಿದ್ಧಿಯಾಗುವುದಿಲ್ಲ. 

ಒಂದು ಮುಂಜಾನೆ ಐದು ಘಂಟೆಗೆ ನಮ್ಮ ಬೀದಿಯ ಅಂಚಿನಲ್ಲಿದ್ದ ಮಾಂಸದ ಅಂಗಡಿಯಲ್ಲಿ ಜನಗಳ ಸರದಿ ಸಾಲು ನಿಂತಿತ್ತು. ವಾರಾಂತ್ಯದ ದಿನಗಳಲ್ಲಿ ಹಲವು ಕಡೆ ಸರ್ವೇ ಸಾಮಾನ್ಯ. ಅಲ್ಲಿ ಸರದಿನಿಂತ ವ್ಯಕ್ತಿಯೊಬ್ಬನ ಮೊಬೈಲ್ ನಲ್ಲಿ ಗಾಯತ್ರಿ ಮಂತ್ರ ರಿಂಗ್ ಟೋನ್ ಆಗಿ ಕೇಳಿಸುತ್ತಿತ್ತು. ಆ ಮಂತ್ರಕ್ಕೂ ಪರಿಸರಕ್ಕೂ ಒಂದಿಷ್ಟೂ ಹೊಂದಾಣಿಕೆಯಿಲ್ಲ. ಅಪಾತ್ರದಲ್ಲಿ ಅಮೂಲ್ಯ ವಸ್ತು ಸಿಕ್ಕಿದರೆ ಹೇಗೆ ಅದು ದುರ್ಬಳಕೆಯಾಗಿ ಅಪಮೌಲ್ಯ ವಾಗುತ್ತದೆ ಎಂಬುದಕ್ಕೆ ಇದು ಸೂಕ್ತ ಉದಾಹರಣೆ. ಇದರಿಂದ ಯಾವ ಫಲಶ್ರುತಿಯೂ ಸಾಧ್ಯವಾಗುವುದಿಲ್ಲ. ಮಂತ್ರ ಪಠನಕ್ಕೆ ಅದರದ್ದೇ ಆದ ನಿಯಮಗಳು ಇರುತ್ತವೆ. ಇದು ಶಿಸ್ತು ಮತ್ತು ಪಾವಿತ್ರ್ಯತೆಯನ್ನು ಕಾಪಾಡುತ್ತವೆ. ನಾವು ಶೌಚಾಲಯದಲ್ಲಿ ಹೇಗೆ ಆಹಾರ ಸೇವಿಸುವುದಕ್ಕೆ ಒಪ್ಪಿಕೊಳ್ಳುವುದಿಲ್ಲವೋ ಅದೇ ರೀತಿ ಇದು. ಆದರೆ ಅಜ್ಞಾನಿಗಳಿಗೆ ಇದು ವೇದ್ಯವಾಗುವುದಿಲ್ಲ. ಕೇವಲ ಢಾಂಬಿಕ ಭಕ್ತಿ. ಜ್ಞಾನವನ್ನು ಪ್ರಚೋದಿಸಬೇಕಾದ ಆ ಮಂತ್ರವನ್ನು ಹೋದಲ್ಲಿ ಬಂದಲ್ಲಿ ಸರ್ವವ್ಯಾಪಿಯಾಗಿ ಕೇಳಿದರೂ ಒಂದಿಷ್ಟು ಜ್ಞಾನ ಲಭ್ಯವಾಗಲಿಲ್ಲ ಎಂದರೆ ಅದು ವಿಪರ್ಯಾಸವಲ್ಲದೇ ಮತ್ತೇನೂ ಅಲ್ಲ. 

  ನಮ್ಮ ಸನಾತನ ಧರ್ಮದ ವೇದ ಮಂತ್ರಗಳು ಬಹಳಷ್ಟು ಇಂದಿಗೂ ಅರ್ಥವಾಗದ ರಹಸ್ಯವನ್ನು ಹೊಂದಿವೆ. ಹಾಗಾಗಿ    ಅದಕ್ಕೊಂದು ಪರಿಧಿ ಶಿಸ್ತು ನಮಗೆ ತಿಳಿಯದೇ ಆಚರಣೆಗೆ ಬಂದಿವೆ. ಇಂದು ಅದನ್ನು ಸಾರಾ ಸಗಟಾಗಿ ಅಜ್ಛಾನದಿಂದ ಬದಿಗಿರಿಸಿ ಈ ಮಂತ್ರಗಳ ಮೌಲ್ಯವನ್ನು ಅಪಮೌಲ್ಯೀ ಕರಿಸುತ್ತಿದ್ದೇವೆ. ಮಂತ್ರದೊಂದಿಗೆ ಭಗವಂತನಲ್ಲಿ  ಪ್ರಾರ್ಥಿಸುತ್ತೇವೆ. ಆದರೆ ನಾವೇನು ಪ್ರಾರ್ಥಿಸುತ್ತಿದ್ದೇವೆ ಮತ್ತು ನಮ್ಮ ಮನಸ್ಸಿನ ಕಾಮನೆಗೆ ಅದು ಸೂಕ್ತವೇ ಎಂದು ಅರ್ಥವಾಗದ ಕ್ರಿಯೆಯಾಗುತ್ತದೆ. ನಿಜಕ್ಕಾದರೆ ಗಾಯತ್ರೀ ಮಂತ್ರದ ತಾತ್ಪರ್ಯ ತಿಳಿದರೆ ಅದನ್ನು ಮನಸ್ಸಿನಲ್ಲೇ ಉಚ್ಚರಿಸುವ ಪ್ರಚೋದನೆಯಾಗುತ್ತದೆ. ಅದು ಬಹಿರಂಗವಾಗಿ ಹೇಳದ ಭಗವಂತನ ಜತೆಗಿನ ಆತ್ಮೀ ಯ ಸಂಭಂದವನ್ನು ಸಾರುವ ಪ್ರಾರ್ಥನೆಯಾಗುತ್ತದೆ.  ಅದನ್ನೆಲ್ಲ ತಿಳಿಯುವ ವ್ಯವಧಾನವೂ ಇಲ್ಲ. ಬುದ್ಧಿಯೂ ಇಲ್ಲ. 

ಇಂದು ಪ್ರತಿಯೊಂದರಲ್ಲೂ ವ್ಯಕ್ತವಾಗುವ  ವಾಮ ಚಿಂತನೆ ಎಂಬುದು ಸತ್ಯದ ಮೌಲ್ಯವನ್ನು ಚಿಂತಿಸುವುದಿಲ್ಲ.  ಬ್ರಾಹ್ಮಣನಾಗಿರುವುದೆಂದರೆ ಪರಿಶ್ರಮದ ಕೆಲಸ. ಹಾಗಾಗಿಯೇ  ಅದಕ್ಕೆ ಸದಾ ಅಪವಾದ ಅಪಹಾಸ್ಯಗಳು ಎದುರಾಗುತ್ತವೆ. ಈ ಪರಿಶ್ರಮದ ನಡುವೆಯೂ ಆತ ಬಿಡದೇ ಅದರಲ್ಲೇ ಜೀವಿಸುತ್ತಾನೆ ಎಂದರೆ, ಅದು ಅಲೌಕಿಕ ಚಿಂತನೆ ಮತ್ತು ಜೀವನದ ನಿರೀಕ್ಷೆ. ಆದರೆ ಲೌಕಿಕವನ್ನೆ ಪರಮ ಸತ್ಯ ಎಂದು ತಿಳಿದವರಿಗೆ ಬ್ರಾಹ್ಮಣ ಎಂಬುದು ಅಪಹಾಸ್ಯದ ವಸ್ತುವಾಗುತ್ತದೆ. ಬ್ರಾಹ್ಮಣನಾಗಿ ಸಂಯಮದಿಂದ ಜೀವಿಸುವುದು  ಸಾಮಾನ್ಯ ಮನುಷ್ಯನಿಗೆ ಕಷ್ಟಕರ. ಆದರೆ ಬ್ರಾಹ್ಮಣನಾದವನು ಈ ಜವಾಬ್ದಾರಿಯ ಅರಿವಲ್ಲಿ ಜೀವನ ನಿರ್ವಹಿಸುವುದು ಆತನ ಕರ್ತವ್ಯ. ಬ್ರಹ್ಜಜ್ಞಾನ ವಶವಾಗಬೇಕಿದ್ದರೂ ಅದಕ್ಕೆ ಅವಕಾಶ ಮಾತ್ರವಲ್ಲ ಅರ್ಹತೆಯೂ ಇರಬೇಕು. ಅದು ಸುಲಭದಲ್ಲಿ ಲಭ್ಯವಾಗುವಂತಹುದಲ್ಲ. ಅದಕ್ಕೆ ಸತ್ಸಂಕಲ್ಪ, ಸದುದ್ದೇಶ ಸನ್ಮನಸ್ಸು ಇಂತಹ ಪರಿಶುದ್ದಿಯ ವಸ್ತುಗಳು ಪ್ರಚೋದನೆಯಾಗಬೇಕು. ಜ್ಞಾನ ಪರವಶವಾಗುವುದು ಎಂಬುದು ಇದೆ . ಆದರೆ ಜ್ಞಾನ ಎಂಬುದು ವಶವಿಲ್ಲದೆ ...ಪರರ ವಶವಾಗಿದೆ. 



No comments:

Post a Comment