Sunday, September 13, 2026

ಸ್ನೇಹ ನರ್ತನ

 

ನಗರದ ಕೇಂದ್ರ ಸ್ಥಳ ಮೆಜೆಸ್ಟಿಕ್ ನಲ್ಲಿ ಒಂದು ಸಲ ಕಂಡ ಮನುಷ್ಯರು ಬದುಕಿನಲ್ಲಿ  ಮತ್ತೊಂದು ಸಲ ಕಾಣುವ ಭರವಸೆಯೇ ಇರುವುದಿಲ್ಲ. ನಗರದ ಜೀವನ ಎಂದರೆ ಅದೇ ಬಗೆಯಲ್ಲಿರುತ್ತದೆ. ಇಲ್ಲಿ ಪರಿಚಯ ಸ್ನೇಹ ಎಂಬುದು ಮರೀಚಿಕೆಯಂತೆ. ಅದು ಸಮೀಪ ಸುಳಿಯುವುದಕ್ಕೆ ಋಣಾನುಬಂಧವಿರಬೇಕು. ಉತ್ತಮ ಸಹೃದಯ  ಸ್ನೇಹ  ಎಂಬುದು ಸಹೋದರ ಬಾಂಧವ್ಯಕ್ಕಿಂತಲೂ ಗಾಢವಾಗಿರುತ್ತದೆ.  ದಶಕಗಳ ಹಿಂದೆ ಮಗನ ಕಾಲೇಜು ಬಳಿಗೆ ಆತನನ್ನು ಬಿಡುವುದಕ್ಕೆ ಹೋಗುವಾಗ ಪುಟ್ಟ ಬಾಲಕಿಯೊಬ್ಬಳು ಆಗಾಗ ಮಗನೊಂದಿಗೆ ನಗುಮುಖದಿಂದ ಎದುರಾಗಿದ್ದಳು. ಆಗ ಬಂದು ಹಿಂದೆ ಸರಿಯುವ ನಿಲ್ದಾಣದಂತೆ ಈ ಭೇಟಿ  ಭಾವಿಸಿದರೆ ಈ ಬಂಧ ಸೌಹಾರ್ದ  ಸ್ನೇಹ ಸಂಭಂಧಂತೆ ಬಳಿಯಲ್ಲೇ ನೆಲೆಯಾಗಿಬಿಟ್ಟಿತು. ಈಗ ಆ ಬಾಲಕಿ ಅಂಬಿಕ ಪ್ರೌಢೆಯಾಗಿ ಚಾರ್ಟರ್ಡ್ ಎಕೌಂಟಂಟ್ ಆಗಿ ಅದೇ ನಗುವಿನಲ್ಲಿ ಎದುರುಗೊಂಡಾಗ ಸ್ನೇಹ ಹೇಗೆ ಹುಟ್ಟಿಕೊಳ್ಳುತ್ತದೆ ಎಂಬುದು ಅಚ್ಚರಿಯಾಗುತ್ತದೆ.  ಅದೇ ಅಂಬಿಕ ಎಂಬ ಬಾಲೆ ವಿದ್ಯಾವಂತೆ ಮಾತ್ರವಲ್ಲ ಹಲವು ಭರತ ನಾಟ್ಯ ಸಂಗೀತ ಕೆಲೆ ಸಾಹಿತ್ಯ ಯೋಗಾಭ್ಯಾಸದ  ಹವ್ಯಾಸ ಬೆಳೆಸಿಕೊಂಡಿದ್ದಾಳೆ. 

ಉತ್ತಮ  ಹವ್ಯಾಸ ಎಂಬುದು ಅದೂ ಸಂಗೀತ ನಾಟ್ಯ ಕಲೆ ಇವುಗಳು ನಮ್ಮನ್ನು ಬಂಧುವಿನಂತೆ ನಮ್ಮ  ಏಕಾಂತಕ್ಕೆ ಅರ್ಥವನ್ನು ಒದಗಿಸುತ್ತವೆ.  ಸಹಜವಾಗಿ ಕೆಲವು ಹವ್ಯಾಸವನ್ನು  ಸಂಗಾತಿಯನ್ನಾಗಿಸಿಕೊಂಡು ಏಕಾಂತವೂ ಒಂದು  ಯೋಗ ಎಂದು ತಿಳಿಯುವ ನನಗೆ ಈ ಬಾಲೆ ಮೈಗೂಡಿಸಿದ ಹವ್ಯಾಸ  ಶಾಸ್ತ್ರೀಯ ಸಂಗೀತವನ್ನೂ ಸಹ ಕಲಿತಿರುವ ಈಕೆಯ ಬಗ್ಗೆ ಗೌರವ ಭಾವವನ್ನು ತಳೆಯುವಂತೆ ಮಾಡಿತ್ತು. ನಿನ್ನೆ ಭಾನುವಾರ ಅಂದರೆ ದಿನಾಂಕ ೧೩-೦೯-೨೦೨೬ ರಂದು ಮಲ್ಲೇಶ್ವರಂ ಸೇವಾಸದನದಲ್ಲಿ   ಲಾಸ್ಯಾನುಭೂತಿ ೨೦೨೬ ಇದರ ಆಶ್ರಯ್ದಲ್ಲಿ ಉಳಿದ ವಿದ್ಯಾರ್ಥಿಗಳ ಜತೆಗೆ    ಬೆಳಗ್ಗೆ  ಈಕೆಯ ಭರತನಾಟ್ಯದ ಕಾರ್ಯಕ್ರಮವಿತ್ತು. ಬಹಳ ಆಸಕ್ತಿ ವಹಿಸಿ ಸಮಯ ಒದಗಿಸಿಕೊಂಡು ಕುಟುಂಬ ಸಹಿತ ಪತ್ನಿ ಮಗನೊಂದಿಗೆ ಕಾರ್ಯಕ್ರಮಕ್ಕೆ ತುಸು ಮುಂಚಿತವಾಗಿ ಹೋದೆ. ಸೇವಾ ಸದನದಲ್ಲಿ ಸಾಕಷ್ಟು ಜನಸಂದಣಿ ನೆರೆದಿತ್ತು. ಉತ್ತಮ ಸಹೃದಯ ಪ್ರೇಕ್ಷಕರ ವಾತಾವರಣ. ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾದರೆ ಕಾರ್ಯಕ್ರಮ ಅರ್ಧ ಯಶಸ್ವಿಯಾದಂತೆ. ಶಿಸ್ತು ಬದ್ದ ಕಾರ್ಯಕ್ರಮ. ಹಲವಾರು ಪುಟಾಣಿ ಮಕ್ಕಳಿಂದ ತೊಡಗಿ ಹಿರಿಯ ಕಲಾದರು ಒಟ್ಟು ಗೂಡಿ ಒದಗಿಸಿದ ಕಾರ್ಯಕ್ರಮ ನಯನ ಮನೋಹರವಾಗಿ ಹಿತವಾದ ಅನುಭವವನ್ನು ನೀಡಿತ್ತು.





ಭರತ ನಾಟ್ಯದ ಹಿನ್ನೆಲೆ ವಾದನಕ್ಕೆ ಹೆಸರಾಂತ ಸಂಗೀತಗಾರರ ಸಹಭಾಗಿತ್ವ ಕಾರ್ಯಕ್ರಮದ ಯಶಸ್ಸಿನ ಒಂದು ಅಂಗವಾಗಿತ್ತು. ವಿದ್ವಾನ ಚೇತನ ನಾಗರಾಜ ವಿದ್ವಾನ್ ಅರ್ಚನ  ಹೆ ಆರ್ ಗಾಯನವಿದ್ದರೆ, ಪಕ್ಕವಾದ್ಯದಲ್ಲಿ ಕೊಳಲುವಾದನಕ್ಕೆ ವಿದ್ವಾನ್ ವರುಣ್ ಹಾಗೂ ವಿದ್ವಾನ್ ಗುರುದತ್ ಕೆ ಆರ್ ಸಮರ್ಥವಾಗಿ ಹಿನ್ನೆಲೆ ಸಂಗೀತವನ್ನು ಒದಗಿಸಿದರು. ಅದರಲ್ಲೂ ಮೋಹನ ರಾಗ ಮತ್ತು ಶಂಕರಾಭರಣಂ  ಹಾಗೂ ಕಾಪೀ ರಾಗದ  ಜಗದೋಧ್ಧಾರನ ಕೊನೆಯಲ್ಲಿ ಅತ್ಯಂತ ಮೆರುಗನ್ನು ಕೊಟ್ಟ ತಿಲ್ಲಾನ ಅದ್ಭುತವಾಗಿ ಮೂಡಿಬಂತು. ಉತ್ತಮವಾದ ಕಾರ್ಯಕ್ರಮದ ಪ್ರಸ್ತುತಿ. ಜತೆಯಲ್ಲಿ ಸಹ ಕಾರ್ಯಕರ್ತರ ಅರ್ಪಣೆ ಕಾಳಜಿ ಎದ್ದು ಕಾಣುತ್ತಿತ್ತು. ಬಹುತೇಕ ಮಹಿಳೆಯರೇ ತುಂಬಿದ ಕಾರ್ಯಕ್ರಮ ಹಬ್ಬದ ವಾತಾವರಣವನ್ನು ನೀಡಿತ್ತು.   ಉತ್ತಮವಾದ ಕಾರ್ಯಕ್ರಮದ ಯಶಸ್ಸಿಗೆ ಹಲವರ ಬಹಳ ದಿನಗಳ ಪರಿಶ್ರಮವಿರುತ್ತದೆ. ಅದೆಲ್ಲವೂ ಕಾರ್ಯಕ್ರಮದ ವ್ಯಾಪಕವಾಗಿ ವ್ಯಕ್ತವಾಗಿತ್ತು.   ಆಕೆಯ ಕುಟುಂಬದ ವರ್ಗದ ಹಲವರನ್ನು ಭೇಟಿಯಾಗುವ ಅವಕಾಶ ಮತ್ತು ಜತೆಯಲ್ಲಿ ಕಳೆದ ರಸಮಯ ಘಳಿಗೆ ಬದುಕಿನ ಒಂದಿಷ್ಟು ಸಮಯವನ್ನು ಸ್ಮರಣೀಯವಾಗಿಸಿತು.  ಆಕೆಗೂ ಬಂಧುವರ್ಗದವರಿಗೂ ಶುಭ ಹಾರೈಸಿದೆವು. 

ಶಾಸ್ತ್ರೀಯ ಸಂಗೀತ ಭರತನಾಟ್ಯದಂತಹ ಕಾರ್ಯಕ್ರಮಗಳು ಅಪ್ಪಟ ಭಾರತೀಯ ಸಭ್ಯ ಸಂಸ್ಕೃತಿಯ ಪ್ರತೀಕ. ಉತ್ತಮ ಪ್ರೇಕ್ಷಕ ಕೇವಲ ಕರತಾಡನಕ್ಕೆ ಸೀಮಿತವಾದರೆ ಅದು ಕಾರ್ಯಕ್ರಮದ ಸಭ್ಯತೆಗೆ ಸಾಕ್ಷಿಯಾಗುತ್ತದೆ. ಇವುಗಳು ಲಭ್ಯವಾದಾಗ ಆಯೋಜಕರ ಪರಿಶ್ರಮ ಸಾರ್ಥಕವಾಗುತ್ತದೆ.  ಕಾರ್ಯಕ್ರಮವನ್ನು ಒದಗಿಸಿದ ಎಲ್ಲ ಭಾರವಾಹಿಗಳಿಗೂ ನಾಟ್ಯಾನುಭೂತಿ ಬಳಗಕ್ಕೆ ಹೃದಯ ತುಂಬಿದ ಕೃತಜ್ಞತೆಗಳು. 



No comments:

Post a Comment