ಜಗತ್ತಿನಲ್ಲಿ ಧರ್ಮವೇ ಶ್ರೇಷ್ಠ. ಆದರೆ ಧರ್ಮ ಅಂದರೆ ಇಂದು ವಿಪರೀತ ಅರ್ಥದಿಂದ ಭಾವನೆ ಸಂಘರ್ಷಗಳಿಗೆ ಕಾರಣವಾಗಿ ಅದರ ನಿಜವಾದ ಅರ್ಥವೇ ಕಳೆದು ಹೋದಂತೆ ಭಾಸವಾಗುತ್ತದೆ. ಕೇವಲ ಅರ್ಥ ಮಾತ್ರ ಕಳೆದು ಹೋದದ್ದಲ್ಲ. ಧರ್ಮ ಎಂಬುದು ನಮ್ಮ ಬದುಕಿನಿಂದ ದೂರಾಗಿ ಹೋಗಿದೆ ಎನ್ನಬೇಕು. ಸಾಮಾನ್ಯವಾಗಿ ನಮ್ಮ ಆಡು ಮಾತಿನಲ್ಲಿ ಧರ್ಮ ಎಂದರೆ ಉಚಿತ ಎಂಬ ಅರ್ಥವನ್ನೂ ಕಾಣಬಹುದು. ಧರ್ಮಕ್ಕೆ ಸಿಗುವ ಯಾವುದೋ ವಸ್ತು. ಇನ್ನು ಭಿಕ್ಷುಕನಾದವನು ಧರ್ಮ ಮಾಡಿ ಅಂತ ಭಿಕ್ಷೆ ಬೇಡುತ್ತಾನೆ. ಇಲ್ಲಿ ಧರ್ಮ ಎಂದರೆ ದಾನವೇ ಧರ್ಮ ಎಂದು ಹೇಳುವುದು. ಆದರೆ ದಾನ ಎಂದರೆ ಉಚಿತವಾಗಿ ಕೊಡುವ ಕಾರಣ ಅದುವೇ ಧರ್ಮವಾಗಿ ಬದಲಾಗಿ ಹೋಗಿದೆ. ನಾವು ಬಾಲಕರಾಗಿದ್ದಾಗ ಧರ್ಮಸ್ಥಳದಲ್ಲಿ ಎಲ್ಲವು ಧರ್ಮಕ್ಕೆ ಅಂತ ಮಾತು ಇತ್ತು. ಅಲ್ಲಿ ಊಟ ಉಚಿತ, ಉಳಿಯುವುದಕ್ಕೆ ವಸತಿ ಉಚಿತ, ವಸ್ತ್ರ ಉಚಿತ ಇನ್ನು ಮುಂದಕ್ಕೆ ಹೋಗಿ ಅಲ್ಲಿ ಉಚಿತವಾಗಿ ಸಾಮೂಹಿಕ ವಿವಾಹವನ್ನೂ ಮಾಡುತ್ತಾರೆ. ಇನ್ನು ಉಚಿತವಾಗಿ ದಾನ ಮಾಡುತ್ತಾರೆ. ಹಾಗಾಗಿ ಅದು ಧರ್ಮಸ್ಥಳ ಅಂತ ಎಂಬ ಕಲ್ಪನೆಯಿತ್ತು. ಆದರೆ ಧರ್ಮ ಎಂಬುದು ಅದು ಉಚಿತ ಎಂಬ ಅರ್ಥವಲ್ಲ. ಸ್ಥೂಲಾರ್ಥದಲ್ಲಿ ಧರ್ಮ ಎಂದರೆ ನಿಯಮ. ಯಾವುದೋ ಒಂದು ವ್ಯಕ್ತಿ ಅಥವಾ ವ್ಯವಸ್ಥೆ ಧರ್ಮದಲ್ಲಿದೆ ಎಂದರೆ ನಿಯಮದೊಳಗಿದೆ ಎಂದರ್ಥ. ನಿಯಮಕ್ಕೆ ಒಡೆಯನೆಂದರೆ ಯಮ. ಲೋಕಕ್ಕೆ ಸಮಯವನ್ನು ತೋರಿಸುವ, ಸಮಯದ ಪರಿಪಾಲನೆಗೆ ಮೂರ್ತ ಸ್ವರೂಪನಾದ ಸೂರ್ಯನ ಮಗ. ಯಾವ ವ್ಯಕ್ತಿಯೂ ನಿಯಮ ಮೀರಿ ಬದುಕಿದರೂ ಯಮ ನಿಯಮವನ್ನು ಮೀರುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಹಾಗಾಗಿ ಯಮ ಎಂದರೆ ಅದು ನಿಯಮ.
ಯಾವುದೇ ವ್ಯಕ್ತಿಗೂ ನಿಯಮವನ್ನು ಆತ ಬಿಟ್ಟರೂ ನಿಯಮ ಅವನನ್ನು ಬಿಡಲಾರದು. ಪುರಾಣದಲ್ಲಿ ರಾಕ್ಷಸರು ಮರಣ ಬಾರದಿರಲಿ ಎಂಬ ಒಂದೇ ವರವನ್ನು ಕೇಳುತ್ತಿದ್ದರು. ಆದರೆ ಆ ನಿಮಯ ಬಂಧನದಿಂದ ಯಮ ಪಾಶದ ಪರಿಧಿಯಿಂದ ಯಾರಿಂದಲೂ ಹೊರಗುಳಿಯುವುದಕ್ಕೆ ಸಾಧ್ಯವಾಗಲೇ ಇಲ್ಲ.
ಮಹಾ ಭಾರತದ ದುರ್ಯೋಧನನ ಸಹಚರರಲ್ಲಿ ಅತ್ಯಂತ ಪ್ರಧಾನ ವ್ಯಕ್ತಿ ಎಂದರೆ ಅದು ಕರ್ಣ. ಮಹಾ ವೀರ, ಮಹಾ ಶೂರ ಮಹಾದಾನಿ, ಪರಶುರಾಮರ ಶಿಷ್ಯ. ಶೈಶವದಲ್ಲೇ ಗರ್ಭದಿಂದ ಬೇರ್ಪಟ್ಟು ಕರುಳ ಬಳ್ಳಿ ಬೇರ್ಪಡುವ ಮೊದಲೇ ಹೆತ್ತ ತಾಯಿಯಿಂದ ದೂರಾಗಿ ಅನಾಥನಾಗಿ ಬೆಳೆದವನು. ಸೂತನಾಗಿ ಬದುಕಿ ಸದಾ ಅವಮಾನ ದಿಂದ ಬೆಂದು ಬದುಕಿದರೂ ಛಲದಿಂದ ಮಹಾರಥಿ ಎಂದು ಕರೆಸಿಕೊಂಡವನು. ಮಹಾ ಸ್ವಾಮಿ ಭಕ್ತ. , ಹಲವು ಸಲ ಕರ್ಣನ ವ್ಯಕ್ತಿತ್ವ ಅತ್ಯಂತ ಶ್ರೇಷ್ಠವಾಗಿ ಕಾಣುತ್ತದೆ. ದುರಂತ ನಾಯಕನಂತೆ ಕಾಣುತ್ತೇವೆ. ಆದರೆ ಒಬ್ಬ ವ್ಯಕ್ತಿ ಆತನಲ್ಲಿ ಧಾರ್ಮಿಕತೆ ಇಲ್ಲದೇ ಇದ್ದರೆ ಆತ ಎಷ್ಟು ಉತ್ತಮನಾದರೂ ಆತ ದುಷ್ಟನಾಗುತ್ತಾನೆ. ಕರ್ಣ ಉತ್ತಮನಾಗಿರಬಹುದು ಆದರೆ ತುಂಬಿದ ಸಭೆಯಲ್ಲಿ ದ್ರೌಪದಿಯ ವಸ್ತ್ರವನ್ನು ಸೆಳೆಯುವಂತೆ ದುರ್ಯೋಧನನಿಗೆ ಚಿತಾವಣೆಯನ್ನು ಕೊಟ್ಟಾಗ ಆತನ ಎಲ್ಲ ಧಾರ್ಮಿಕತೆಯೂ ಅಧಃಪತನವನ್ನು ಹೊಂದುತ್ತದೆ. ಧರ್ಮ ಎಂಬುದು ಎಲ್ಲದಕ್ಕಿಂತಲೂ ಮಿಗಿಲಾದುದು. ಕುರುಕ್ಷೇತ್ರ ಯುದ್ದದಲ್ಲಿ ಚಂದ್ರವಂಶದ ಕುಡಿ ವೀರ ಅಭಿಮನ್ಯು ವೀರಾವೇಶದಿಂದ ಹೋರಾಡುವಾಗ , ಸ್ವತಃ ಸೋತು ಹೋದ ಕರ್ಣ ಹಿಂದಿನಿಂದ ಅಭಿಮನ್ಯುವಿನ ಬಿಲ್ಲನ್ನು ತುಂಡರಿಸುತ್ತಾನೆ. ಧರ್ಮದ ಹಾದಿಯನ್ನು ಬಿಟ್ಟ ಕರ್ಣ ಒಳ್ಳೆಯವನಾಗುವುದಕ್ಕೆ ಹೇಗೆ ಸಾಧ್ಯ? ಯಾವಾಗ ಜೀವನದಲ್ಲಿ ಧಾರ್ಮಿಕತೆ ನಾಶವಾಗುತ್ತದೋ ಅಲ್ಲಿ ಪತನ ನಿಶ್ಚಿತ ವಾಗುತ್ತದೆ.
ಅದೇ ರೀತಿ ರಾಮಾಯಣದಲ್ಲಿನ ರಾವಣ. ಮೂರುಲೋಕವನ್ನೇ ನಡುಗಿಸಿದ ದಶಕಂಠ. ರಾವಣೋ ಲೋಕ ರಾವಣ. ಅಸುರನಾದರೂ ಆತ ಜನ್ಮದಿಂದ ಬ್ರಾಹ್ಮಣನಾಗಿರುತ್ತಾನೆ. ಕೈಲಾಸ ಗಿರಿಯನ್ನು ಎತ್ತಿ ಶಿವನ ಅನುಗ್ರಹಕ್ಕೆ ಪಾತ್ರನಾದ ಮಹಾ ಶಿವ ಭಕ್ತ. ತ್ರಿಲೋಕವನ್ನು ಕಂಪಿಸುವಂತೆ ಮಾಡಿದ ಮಹಾ ವೀರ. ಅಸುರ ಶ್ರೇಷ್ಠ. ಶ್ರೇಷ್ಠತೆ ವರಿಷ್ಠತೆ ಗರಿಷ್ಠತೆ ಎಷ್ಟಿದ್ದರೇನು ಧಾರ್ಮಿಕತೆ ಇಲ್ಲದಿದ್ದರೆ ಎಲ್ಲವೂ ನಿಷ್ಫಲ. ಯಾವಾಗ ಸೀತೆಯನ್ನು ಅಪಹರಿಸಿದನೋ ಅವನ ಧಾರ್ಮಿಕತೆ ನಾಶವಾಯಿತು. ಮತ್ತು ಆತ ಅಧಃ ಪತನಕ್ಕೆ ಜಾರಿಹೋದ. ಮಾಹಾ ಪತಿವೃತೆಯಾದ ಮಂದೋದರಿಯನ್ನು ಪಡೆದರೂ ಆತ ಪರಸ್ತ್ರೀ ವ್ಯಾಮೋಹಕ್ಕೆ ಸಿಲುಕಿ ಧರ್ಮಕ್ಕೆ ವಿರೋಧವಾಗಿ ನಡೆದುಕೊಂಡ. ಅಲ್ಲಿಂದ ಆತನ ಪತನ ಆರಂಭವಾಯಿತು. ಕರ್ಣನಲ್ಲೂ ರಾವಣನಲ್ಲೂ ಉತ್ತಮ ಯೋಗ್ಯತೆಗಳು ಇರಬಹುದು. ಆದರೆ ಧರ್ಮದ ದೃಷ್ಟಿಯಲ್ಲಿ ಅವರು ಅಪರಾಧಿಗಳಾಗುತ್ತಾರೆ.
ಯತೋ ಧರ್ಮಸ್ತತೋ ಜಯಃ
ಧರ್ಮ ಎಲ್ಲಿದೆಯೋ ಅಲ್ಲಿ ಜಯವಿದೆ. ರಾಮಾಯಣವಾಗಲೀ ಮಹಾ ಭಾರತವಾಗಲೀ ಧರ್ಮವೇ ಶ್ರೇಷ್ಠ. ಧರ್ಮದ ಚಿಂತನೆಗೆ ಸಲ್ಲುವ ಮಹತ್ವವಿದು. ಇಲ್ಲಿ ಜಯ ಎಂದರೆ ಕೇವಲ ಯುದ್ದದ ಜಯವಲ್ಲ. ಯಶಸ್ಸು ಮೋಕ್ಷ ಇವುಗಳನ್ನೂ ಜಯ ಎಂದು ಪರಿಗಣಿಸಬೇಕು. ಧಾರ್ಮಿಕತೆ ಎಂಬುದು ಬದುಕಿನ ಉತ್ಕರ್ಷಕ್ಕೆ ಕಾರಣವಾಗುತ್ತದೆ. ಧರ್ಮದಲ್ಲಿ ಸತ್ಯ ಅಡಕವಾಗಿದೆ. ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತಃ ಅಂತ ಭಗವದ್ಗೀತೆಯಲ್ಲಿ ಭಗವಂತ ಧರ್ಮದ ಬಗ್ಗೆ ಆತನ ನಿರ್ಣಯವನ್ನು ಸಾರಿದ್ದಾನೆ
ವ್ಯಕ್ತಿ ಎಷ್ಟೇ ಉತ್ತಮನಾಗಿರಲಿ. ಸತ್ಯವಂತ ದಾನ ಶೂರ ಹೀಗೆ ಸದ್ಗುಣಗಳು ಏನಿದ್ದರೂ ಧಾರ್ಮಿಕತೆ ಇಲ್ಲದಿದ್ದರೆ ಆತನ ಸದ್ಗುಣಗಳು ಆತನನ್ನು ರಕ್ಷಿಸಲಾರವು. ಯಾವುದೋ ಪಾಪ, ವಂಚನೆ ದ್ರೋಹದ ದುಷ್ಟಕೃತ್ಯ ಮಾಡಿದ ನಂತರ ಸತ್ಕಾರ್ಯದಿಂದ ಅದನ್ನು ತೊಳೆದು ಕಳೆಯುವುದಕ್ಕೆ ಸಾಧ್ಯವಿಲ್ಲ. ಮಾಡಿದ ಪಾಪದ ಫಲ ಅನುಭವಿಸಿಯೇ ತೀರಬೇಕು. ಯಾವುದೋ ಪುಣ್ಯಕಾರ್ಯ ಮಾಡಿದ ಪಾಪಕ್ಕೆ ಪ್ರಾಯಶ್ಚಿತವಾಗುವುದಿಲ್ಲ. ಹಾಗಾದರೆ ಧರ್ಮ ಎಂದರೆ ಯಾವುದು? ಈ ಪ್ರಕೃತಿಯೊಂದಿಗೆ ಬದುಕುವುದೇ ಧರ್ಮ . ಪ್ರಕೃತಿ ಎಂದರೆ ಭಗವಂತನನ್ನು ಅರಿಯಲು ಇರುವ ಸಾಧನ. ಪ್ರಕೃತಿಯಲ್ಲಿ ಎಲ್ಲವೂ ಒಂದು ಧರ್ಮದ ಪರಿಧಿಯೊಳಗೆ ಇರುತ್ತದೆ. ಭೂಮಿ ಸೂರ್ಯನಿಗೆ ಪ್ರದಕ್ಷಿಣೆ ಬರುವುದರಲ್ಲೂ ಒಂದು ನಿಯಮವಿದೆ. ನಿಯಮವೇ ಧರ್ಮ. ಮಾವಿನ ಮರದಲ್ಲಿ ಮಾವು ತೆಂಗಿನ ಮರದಲ್ಲಿ ತೆಂಗು ಬೆಳೆಯುವುದು ಪ್ರಕೃತಿ ಧರ್ಮ. ಅದರಂತೇ ಜೀವನದಲ್ಲಿ ಧಾರ್ಮಿಕತೆ ಅತ್ಯಂತ ಅವಶ್ಯ. ಒಂದು ಹೆಣ್ಣನ್ನು ಬಯಸಿ ವರಿಸುವುದು ಪ್ರಕೃತಿ ಧರ್ಮ. ಆದರೆ ಹಲವು ಹೆಣ್ಣನ್ನು ಬಯಸುವುದು ಧಾರ್ಮಿಕತೆಗೆ ವಿರುದ್ದವಾಗುತ್ತದೆ.
ರಾಮಾಯಣದಲ್ಲಿ ಶ್ರೀರಾಮ ಭಗವಂತನ ಅವತಾರವಾದರೂ ಆತನು ಮನುಷ್ಯ ಧರ್ಮಕ್ಕೆ ವಿರುದ್ದವಾಗಿ ಬದುಕಲಿಲ್ಲ. ಧರ್ಮಕ್ಕಾಗಿ ಪಿತೃವಾಕ್ಯ ಪರಿಪಾಲನೆಗಾಗಿ ಪದ ತ್ಯಾಗ ಮಾಡಿ ಆತ ಕಾಡಿಗೆ ಹೋದ. ಆತನಿಗೆ ದಶರಥನ ಹಿರಿಯ ಪುತ್ರನಾಗಿ ಅಧಿಕಾರ ಒದಗಿಬಂತು. ಆತ ಸಿಂಹಾಸನ ಏರಬಹುದಿತ್ತು. ದಶರಥ ತಂದೆಯಾದರೂ ರಾಮ ಕಾಡಿಗೆ ಹೋಗು ಎಂದು ಆತ ನೇರವಾಗಿ ಹೇಳಲಿಲ್ಲ. ಅಥವಾ ರಾಮ ಕಾಡಿಗೆ ಹೋಗಲಿ ತಂದೆ ಎಂದೂ ಬಯಸಲಿಲ್ಲ. ಆದರೆ ಅದೇ ತಂದೆಯಾದ ದಶರಥ ಮಾತು ಕೊಟ್ಟ . ಆ ಮಾತನ್ನು ಸತ್ಯವಾಗಿಸುವುದಕ್ಕೆ ಮತ್ತು ಪಿತೃ ವಚನ ಪಾಲನೆಗೆ ರಾಮ ಕಾಡಿಗೆ ಹೋದ. ರಾಮನಿಗೆ ತನ್ನ ತಂದೆಯ ತಪ್ಪನ್ನು ವಿಮರ್ಶಿಸಬಹುದಿತ್ತು. ಯಾವುದೋ ಕಾಲದಲ್ಲಿ ತಂದೆ ಕೊಟ್ಟ ಮಾತು ತನಗೆ ಬಾಧಕವಲ್ಲ ಎಂದು ತಳ್ಳಿಹಾಕಬಹುದಿತ್ತು. ನಾಳೆಯ ದಿನ ರಾಮನಿಗೆ ಪಟ್ಟಾಭಿಷೇಕ ಎಂದು ಹೇಳಿದ ದಶರಥ ಮರುದಿನ ಮೌನಕ್ಕೆ ಜಾರಿದ. ತಾನು ಅರಿವಿಲ್ಲದೇ ಅಂಧನಾಗಿ ಸುತ್ತಿದ ಸುಳಿಗೆ ತಾನೇ ಸಿಲುಕಿಕೊಂಡ. ಋಷಿ ವರೇಣ್ಯ ವಸಿಷ್ಠರೂ ಪಟ್ಟಾಭಿಷೇಕಕ್ಕೆ ಮುಹೂರ್ತ ನಿರ್ಣಯಿಸಿದರು. ಮುಹೂರ್ತವೇನೋ ನಿರ್ಣಯಿಸಿದರು, ಆದರೆ ಅದೇ ಮುಹೂರ್ತ ನೆರವೇರಲಿಲ್ಲ. ಅದು ನೆರವೇರುವುದಿಲ್ಲ ಎಂದು ಅವರಿಗೆ ಅರಿವಿತ್ತೋ ಇಲ್ಲವೋ...ಆದರೆ ಅವರ ನಿರ್ಣಯವೇ ನಡೆಯಲಿಲ್ಲ.
ತನ್ನದೇ ಪಟ್ಟಾಭಿಷೇಕದ ಸಂದರ್ಭದಲ್ಲಿ ರಾಮ ನಡೆದುಕೊಂಡ ರೀತಿ ಆ ಸ್ಥಿತ ಪ್ರಜ್ಞತೆ ಆದರ್ಶಮಯ. ಆತ ಉದ್ವೇಗ ರಹಿತವಾಗಿ ವರ್ತಿಸಿದ. ಈ ಸಂದಿಗ್ಧದಲ್ಲಿ ತನ್ನ ತಂದೆ ಮಾತು ಕೊಟ್ಟದ್ದೇ ನಿಯಮ ಬಾಹಿರ ಎನ್ನಬಹುದಿತ್ತು. ಕೇವಲ ಹೆಂಡತಿಯ ಮೋಹದ ಬಲೆಗೆ ಸಿಲುಕಿ ಕೊಟ್ಟ ಮಾತು ತನಗೆ ಬಾಧಕವಲ್ಲ ಎಂದು ವಿರೋಧಿಸಬಹುದಿತ್ತು. ಆದರೆ ಹಿರಿಯರನ್ನು ಪ್ರಶ್ನಿಸುವುದು ವಿಮರ್ಷಿಸುವುದು ಧಾರ್ಮಿಕತೆಯಲ್ಲ. ಧರ್ಮ ಅದನ್ನು ಪುರಸ್ಕರಿಸುವುದಿಲ್ಲ. ಧಾರ್ಮಿಕತೆ ಹೇಗೆ ಇರಬೇಕು ಎಂಬುದನ್ನು ರಾಮನ ವ್ಯಕ್ತಿತ್ವ ತೋರಿಸಿಕೊಡುತ್ತದೆ. ಧರ್ಮ ಜಿಜ್ಞಾಸೆ ವ್ಯಕ್ತಿತ್ವವನ್ನು ನಿರ್ಣಯಿಸುತ್ತದೆ. ಕೊನೆಯಲ್ಲಿ ತಮ್ಮ ಲಕ್ಷ್ಮಣ ನಿಯಮ ಏನು ಹೇಳುತ್ತದೆ ಎಂಬುದನ್ನೂ ಹೇಳಿದ ಮಾತುಗಳು ಧರ್ಮ ಚಿಂತನೆಗೆ ಕಾರಣವಾಗುತ್ತದೆ. ರಾಮ ಹಕ್ಕಿನಿಂದ ಪಟ್ಟವನ್ನೇರಬೇಕು. ಧಶರಥನ ಹಿರಿಯ ಪುತ್ರ ಮಾತ್ರವಲ್ಲ, ವಸಿಷ್ಠರಿಂದ ಮಂತ್ರಿ ಮಹೋದಯರಿಂದ ತೊಡಗಿ ಸಮಸ್ತ ಅಯೋಧ್ಯೆಯೇ ರಾಮನ ಪಟ್ಟಾಭಿಷೇಕಕ್ಕೆ ಕಾದು ಕುಳಿತಿದೆ. ಇಂತಹ ಸಮಯದಲ್ಲಿ ರಾಮ ಪ್ರಜಾಧರ್ಮವನ್ನು ಪಾಲಿಸಿ ಪಟ್ಟವನ್ನು ಏರಬೇಕು. ಆಗ ರಾಮ ಹೇಳಿದ ಒಂದು ಮಾತು " ಧರ್ಮೋ ಹಿ ಪರಮೋ ಲೋಕೇ ಧರ್ಮೇ ಸತ್ಯಂ ಪ್ರತಿಷ್ಠಿತಮ್ । ಧರ್ಮಸಂಶ್ರಿತಮೇತಚ್ಚ ಪಿತುರ್ವಚನಮುತ್ತಮಮ್ " ಅಂದರೆ ಈ ಲೋಕದಲ್ಲಿ ಧರ್ಮಕ್ಕಿಂತ ಶ್ರೇಷ್ಠವಾದುದು ಯಾವುದೂ ಇಲ್ಲ. ಧರ್ಮದ ಒಳಗೆ ಸತ್ಯವು ನಿಂತಿದೆ. ಧರ್ಮವನ್ನು ಆಧರಿಸಿದ ತಂದೆಯ ಮಾತನ್ನು ಗೌರವಿಸಿ, ಅದನ್ನು ಪಾಲಿಸುವುದು ಶ್ರೇಷ್ಠವಾದ ಕರ್ತವ್ಯ. ಧಾರ್ಮಿಕತೆ ರಾಮನ ಪ್ರತಿ ಹೆಜ್ಜೆಯಲ್ಲೂ ಗುರುತಿಸಬಹುದು.
ರಾಮ ಮತ್ತು ಕೃಷ್ಣ ಅವತಾರಗಳು ಬದುಕಿನಲ್ಲಿ ಧರ್ಮ ಹೇಗಿರಬೇಕು ಎಂದು ಭಗವಂತ ತೋರಿಸಿಕೊಟ್ಟ ಅವತಾರಗಳು. ಧರ್ಮದ ರಕ್ಷಣೆಯೊಂದೇ ಈ ಅವತಾರದ ಉದ್ದೇಶ. ತಂದೆಗೆ ಹೇಗೆ ಮಗನಾಗಿರಬೇಕು, ಹೆಂಡತಿಗೆ ಹೇಗೆ ಗಂಡನಾಗಿರಬೇಕು. ಸಹೋದರನಿಗೆ ಹೇಗೆ ಸಹೋದರನಾಗಿರಬೇಕು, ಪ್ರಜೆಗಳಿಗೆ ರಾಜನಾದವನು ಹೇಗಿರಬೇಕು. ಮಿತ್ರನಾಗಿ ಹೇಗಿರಬೇಕು, ಮಾತ್ರವಲ್ಲ ರಾವಣನಂತಹ ವೈರಿಗಳಿಗೆ ಹೇಗೆ ಪ್ರತಿಸ್ಪರ್ಧಿಯಾಗಿರಬೇಕು ಎಂಬುದನ್ನೂ ಶ್ರೀ ರಾಮ ತೋರಿಸಿದ. ರಾಜ ಧರ್ಮ ಪುತ್ರ ಧರ್ಮ ಪತಿ ಧರ್ಮ ಮಾತ್ರವಲ್ಲ ಶತ್ರು ಧರ್ಮ ಇದನ್ನು ತೋರಿಸಿಕೊಟ್ಟದ್ದು ರಾಮನ ಅವತಾರ. ರಾಮಾವತಾರದಲ್ಲಿ ರಾಮ ತಾನು ಸ್ವತಃ ಧರ್ಮವನ್ನು ಆಚರಿಸಿ ತೋರಿಸಿದ.
ತಂದೆಗೆ ಮೂನ್ನೂರಕ್ಕು ಹೆಚ್ಚು ಸತಿಯರಿದ್ದೂ ತಾನು ಮಾತ್ರ ಏಕ ಪತ್ನೀವೃತವನ್ನು ಪಾಲಿಸಿದ. ರಾವಣ ಸಂಹಾರವಾದನಂತರ ಸೀತೆಯನ್ನು ಸ್ವೀಕರಿಸುವಾಗ ಅಗ್ನಿ ಪರೀಕ್ಷೆಯನ್ನು ಒಡ್ಡಿದ ಎಂಬ ಅಪವಾದವಿದೆ. ಆದರೆ ವಾಸ್ತವದಲ್ಲಿ ಸೀತೆಯೆ ಸ್ವತಃ ಅಗ್ನಿ ಪರೀಕ್ಷೆಗೆ ತನ್ನನ್ನು ತಾನು ಒಡ್ಡಿಕೊಂಡಳು. ಲಂಕಾದಹನವಾದಾಗ ಲಂಕೆಯೇ ದಹಿಸಿದರೂ ಅಗ್ನಿ ಸೀತೆಯನ್ನು ದಹಿಸಲಿಲ್ಲ. ಹೀಗೆ ರಾಮನ ಮೇಲಿನ ಅಪವಾದಗಳಿಗೆ ಹಲವು ಸಮರ್ಥನೆಗಳು ಸಿಗುತ್ತವೆ. ಸೀತೆಯನ್ನು ಕಾಡಿಗೆ ಅಟ್ಟಿದ ಎಂಬ ಅಪವಾದಕ್ಕೂ ಸಮರ್ಥನೆಗಳು ಸಿಕ್ಕಿದರೂ, ಇದು ನಡೆಯುವ ಉತ್ತರಕಾಂಡ ಮೂಲ ರಾಮಾಯಣದಲ್ಲಿಲ್ಲ ಎಂಬುದು ಒಂದು ಸಮರ್ಥನೆಯಾದರೆ, ಸೀತೆಗೆ ಕಾಡಿನ ಜೀವನ ಎಂಬುದು ಹೊಸತಲ್ಲ. ವನವಾಸದ ಮೊದಲ ಅವಧಿಯಲ್ಲಿ ರಾಮನ ಜತೆಗೆ ದಂಡಕಾರಣ್ಯದಲ್ಲಿ ಬದುಕಿದ ಸೀತೆ ಕಾಡು ಎಂಬುದು ಕಠಿಣವಾಗಿಲ್ಲ. ಸೀತೆಗೆ ಕಾಡು ಎಂಬುದು ಇಷ್ಟ. ಇದು ವೈಯಕ್ತಿಕವಾಗಿ ಶ್ರೀರಾಮನಿಗೆ ಅರಿವಿತ್ತು. ಮಾತ್ರವಲ್ಲ ಸ್ವತಃ ಭೂಮಿ ಸಂಜಾತೆಗೆ ಭೂಮಿ ಎಂದರೆ ತವರು ಮನೆ ಇದ್ದಂತೆ. ತುಂಬು ಗರ್ಭಿಣಿಗೆ ತಾಯಿ ಮನೆ ಇದ್ದಂತೆ ಕಾಡು. ರಾಮ ಕಾಡಿಗೆ ಹೊರಟಾಗ ಸೀತೆ ರಾಮನ ಜತೆಗೆ ಬಂದಳು, ಆದರೆ ಸೀತೆ ಕಾಡಿಗೆ ರಾಮ ಬರಲಿಲ್ಲ ಎಂಬ ಅಪವಾದವಿದೆ. ಆದರೆ, ಅದಕ್ಕೂ ಮೊದಲು ಶ್ರೀರಾಮ ಅಯೋಧ್ಯೆಯ ಪಟ್ಟ ಏರಿ ಆಳುತ್ತೇನೆ ಎಂದು ಮಾತು ಕೊಟ್ಟಿದ್ದ. ಕೊಟ್ಟ ಮಾತನ್ನು ಉಳಿಸುವುದು ಮತ್ತು ರಾಜ ಧರ್ಮ ಪಾಲಿಸುವುದು ಅತ್ಯಂತ ಅವಶ್ಯ. ಹೀಗೆ ರಾಮ ಧರ್ಮವನ್ನು ತನ್ನ ಬದುಕಾಗಿಸಿದ. ಸ್ವತಹ ದೇವರಾದರೂ ಧರ್ಮಕ್ಕೆ ಚ್ಯುತಿ ಬಾರದಂತೆ ಬದುಕಿ ಆದರ್ಶವನ್ನು ತೋರಿಸಿಕೊಟ್ಟ. ಪುರುಷೋತ್ತಮನೆನೆಸಿಕೊಂಡ.
ವಾಲಿ ಪ್ರಕರಣದಲ್ಲಿ ವೀರ ಕ್ಷತ್ರಿಯನಾದ ರಾಮ ಮರೆಯಲ್ಲಿ ನಿಂತು ಬಾಣ ಪ್ರಯೋಗಿಸಿ ವಾಲಿಯನ್ನು ಸಂಹರಿಸಿದರೂ ಆತನ ಧಾರ್ಮಿಕತೆಗೆ ಹಲವು ಸಮರ್ಥನೆಗಳು ಸಿಗುತ್ತವೆ. ವಾಲಿ ತನ್ನ ತಮ್ಮನ ಸತಿಯನ್ನು ವಶ ಪಡಿಸಿ ಬಳಿಯಲ್ಲಿರಿಸಿಕೊಂಡಿದ್ದ. ವಾನರ ಪದ್ದತಿಯಲ್ಲಿ ಇದು ನ್ಯಾಯಯುತವಾಗಿದ್ದರೂ ಇದು ಮೃಗಗಳಿಗೆ ಅನ್ವಯವಾಗುವ ನಿಯಮ. ಆದರೆ ವಾಲಿ ಒಬ್ಬ ಅವಕಾಶವಾದಿಯಾಗಿದ್ದ. ತನಗೆ ಬೇಕಾದಾಗ ಮನುಷ್ಯರ ನಿಯಮವನ್ನೂ ಇನ್ನು ಕೆಲವುದಕ್ಕೆ ಮೃಗದ ನಿಯಮವನ್ನೂ ಮುಂದಿಡುತ್ತಿದ್ದ. ಮೃಗದಂತಿರುವ ಅವನ ವ್ಯವಹಾರಕ್ಕೆ ಮೃಗ ಬೇಟೆಯಂತೇ ರಾಮ ನಿರ್ಣಯಿಸಿ ವಾಲಿಯ ಮೇಲೆ ಶರ ಪ್ರಯೋಗ ಮಾಡಿದ್ದ.
ರಾಮಾವತಾರದಲ್ಲಿ ಸ್ವತಃ ಶ್ರೀರಾಮ ಧರ್ಮವನ್ನು ಪಾಲಿಸಿದುದರಿಂದ ಧರ್ಮದ ಅನುಭವ ಗಂಭೀರ ಅನಿಸಿದರೂ, ಕೃಷ್ಣಾವತಾರದಲ್ಲಿ ಅದು ರಾಮಾವತಾರಕ್ಕಿಂತಲೂ ಹೆಚ್ಚು ಪ್ರಖರವಾಗುತ್ತದೆ. ಇದು ನನ್ನ ಅನಿಸಿಕೆ. ರಾಮಾಯಣದಲ್ಲಿ ರಾಮನಿಗೆ ಮಾತ್ರ ಸೀಮಿತವಾಗಿದ್ದ ಧರ್ಮಪಾಲನೆ ಕೃಷ್ಣಾವತಾರದಲ್ಲಿ ಶ್ರೀಕೃಷ್ಣ ಪ್ರತಿಯೊಬ್ಬರನ್ನು ಧರ್ಮದ ತಕ್ಕಡಿಯಲ್ಲಿ ತೂಗುತ್ತಿದ್ದ. ಸ್ವತಃ ಶ್ರೀಕೃಷ್ಣನ ಹಾದಿ ಮಾತ್ರ ಮೇಲ್ನೋಟಕ್ಕೆ ತುಂಬ ಭಿನ್ನವಾದಂತೆ ಅನಿಸುತ್ತದೆ. ಲೌಕಿಕವಾಗಿ ಯೋಚಿಸುವಾಗ ಶ್ರೀಕೃಷ್ಣ ಕಳ್ಳನಾಗಿದ್ದ, ಬಹು ಪತ್ನಿತ್ವ ಇತ್ತು. ಹೆಣ್ಣುಗಳನ್ನು ಅಪಹರಿಸುತ್ತಿದ್ದ. ಇದೆಲ್ಲವನ್ನು ಆಳವಾಗಿ ವಿವೇಚಿಸುವಾಗ ಶ್ರೀಕೃಷ್ಣ ಧರ್ಮವನ್ನು ಇನ್ನೂ ಪ್ರಖರವಾಗಿ ಕಾರ್ಯರೂಪಕ್ಕೆ ತಂದಂತೆ ಭಾಸವಾಗುತ್ತದೆ. ಹಾಗಾಗಿ ಯತೋ ಧರ್ಮಸ್ತತೋ ಜಯಃ ಯತೋ ಧರ್ಮಃ ತತೋ ಕೃಷ್ಣಃ ಅಂತ ಹೇಳಿದ.
ಶ್ರೀಕೃಷ್ಣನ ಧರ್ಮದ ನಿರ್ಣಯದಲ್ಲಿ ಪರಮ ಭಾಗವತ ಭೀಷ್ಮರನ್ನೂ ಆತ ಬಿಡಲಿಲ್ಲ. ಪ್ರತಿಯೊಬ್ಬರ ಧರ್ಮದ ಹಾದಿಯನ್ನು ಗಂಭೀರವಾಗಿ ಗಮನಿಸುತ್ತಿದ್ದ. ಸ್ವತಃ ಅಧರ್ಮಿಯಾಗಿದ್ದ ಅಂತ ವಾದಿಸುವವರು ಇದ್ದಾರೆ. ಶ್ರೀಕೃಷ್ಣ ಕದಿಯುತ್ತಿದ್ದ. ಎಂಬ ಅಪವಾದವಿದೆ. ವಿವೇಚನೆಯಿಂದ ನೋಡಿದರೆ ಶ್ರೀಕೃಷ್ಣ ಕಳ್ಳ ಎನ್ನುವುದಕ್ಕೆ ಯಾವ ಸಾಕ್ಷ್ಯವೂ ಸಿಗುವುದಿಲ್ಲ. ಶ್ರೀಕೃಷ್ಣ ಬೆಣ್ಣೆ ಕದ್ದ ಎಂದು ಹೇಳುವುದಿದ್ದರೆ, ನಂದಗೋಪನ ಅರಮನೆಯಲ್ಲಿ ಬೆಳೆಯುತ್ತಿದ್ದ ಕೃಷ್ಣನಿಗೆ ಬೆಣ್ಣೆ ಕದಿಯುವ ಆವಶ್ಯಕತೆಯಾದರೂ ಏನು ಎಂಬ ಪ್ರಶ್ನೆ ಬರುತ್ತದೆ. ಹಾಗಿದ್ದಲ್ಲಿ ಅಲ್ಲಿ ಧರ್ಮ ಪಾಲನೆಯಲ್ಲಿ ಕೊರತೆ ಇದೆ ಅಂತಲೇ ಭಾಸವಾಗುತ್ತದೆ. ಒಂದೋ ಅನ್ಯಾಯವಾಗಿ ಬೆಣ್ಣೆ ಮಾರುತ್ತಿದ್ದರು. ಇನ್ನು ಮುಂದಕ್ಕೆ ಗೋಪಿಕೆಯರ ಸೀರೆ ಕದ್ದ ಎಂಬ ಅಪವಾದವೂ ಇದೆ. ವಾಸ್ತವದಲ್ಲಿ ಗೋಪಿಕೆಯರು ಜಲಕ್ರೀಡೆಯಾಡುತ್ತಿದ್ದರು. ನದಿಯಲ್ಲಿ ವಿವಸ್ತ್ರವಾಗಿ ಸ್ನಾನ ಮಾಡಬಾರದು ಎಂಬ ಶಾಸ್ತ್ರ ವಿದ್ದು ಅದು ಧರ್ಮಕ್ಕೆ ವಿರುಧ್ಧವಾಗಿರುತ್ತದೆ. ಹೀಗೆ ಇನ್ನು ಹಲವು ದೃಷ್ಟಿಕೋನಗಳು ಶ್ರೀಕೃಷ್ಣನ ಧರ್ಮ ದೃಷ್ಟಿ ಗಮನಕ್ಕೆ ಬರುತ್ತದೆ. ಅಲ್ಲಿ ಧರ್ಮ ಹೆಚ್ಚು ಪ್ರಖರವಾಗಿರುವುದು ಕಂಡು ಬರುತ್ತದೆ. ಶ್ರೀರಾಮನಲ್ಲಿ ಧರ್ಮ ಪ್ರತ್ಯಕ್ಷ ಆಚರಣೆಗೆ ಬಂದರೆ ಶ್ರೀಕೃಷ್ಣಾವತಾರಕ್ಕಾಗುವಾಗ ಅದು ಪರೋಕ್ಷ ಆಚರಣೆಯಾಗುತ್ತದೆ. ಧಾರ್ಮಿಕತೆಯಿಂದ ದೂರ ಇದ್ದವರನ್ನು ಯಾವುದೇ ದಾಕ್ಷಿಣ್ಯವಿಲ್ಲದೇ ಶ್ರೀಕೃಷ್ಣ ಶಿಕ್ಷಿಸುತ್ತಿದ್ದ. ಮಾವನಾದ ಕಂಸನನ್ನು ಕೊಂದ ಎಂದು ಹೇಳುವಲ್ಲಿ, ತಾಯಿಯನ್ನು ಸೆರೆಯಲ್ಲಿಟ್ಟ ಹೀಗೆ ಏನೇನೋ ಕಾರಣಕ್ಕಿಂತಲೂ ವಸುದೇವ ದೇವಕಿಯರನ್ನು ಸೆರೆಯಲ್ಲಿಟ್ಟು ಕಂಸ ಸಾವನ್ನು ಗೆಲ್ಲುವುದಕ್ಕೆ ಯತ್ನಿಸಿದ. ಸಾವನ್ನು ಗೆಲ್ಲುವುದೆಂದರೆ ಯಮನನ್ನು ಸೋಲಿಸಿದಂತೆ. ಅದರೆ ನಿಯಮವನ್ನು ಮೀರಿದಂತೆ. ಹುಟ್ಟಿದ ಪ್ರತಿಯೊಬ್ಬರೂ ಸಾವಿನಲ್ಲಿ ನಿಯಮವನ್ನು ಅನುಸರಿಸಲೇ ಬೇಕು. ಹಾಗಾಗಿ ಕಂಸ ವಧೆಯಲ್ಲಿ ಕೃಷ್ಣನ ಧರ್ಮಪಾಲನೆ ಹೆಚ್ಚು ಪ್ರಖರವಾಗುತ್ತದೆ.
ರಾಮವಾತಾರದಲ್ಲಿ ಶ್ರೀರಾಮ ಅರಮನೆಯಲ್ಲಿ ರಾಜಕುಮಾರನಾಗಿ ಹುಟ್ಟಿದ. ಆನಂತರ ಹಲವಾರು ಕಷ್ಟ ನಷ್ಟಗಳನ್ನು ಅನುಭವಿಸಿದ. ಅರಮನೆಯನ್ನು ತ್ಯಜಿಸುವಂತಾಯಿತು. ಕಾಡಿನ ವಾಸ ಅಲ್ಲೂ ಪತ್ನಿ ವಿಯೋಗ ಹೀಗೆ ಕೊನೆಯ ತನಕವೂ ಕಷ್ಟಕರವಾದ ಹಾದಿಯಲ್ಲಿ ಧರ್ಮಪಾಲನೆಯನ್ನು ಮಾಡಿ ನಂತರ ಪಟ್ಟಾಭಿಷಿಕ್ತನಾಗಿ ಉತ್ತುಂಗವನ್ನು ಅನುಭವಿಸಿದ. ಆದರೆ ಕೃಷ್ಣಾವತಾರದಲ್ಲಿ ಇದಕ್ಕಿಂತ ಭಿನ್ನ, ಶ್ರೀಕೃಷ್ಣ ಸೆರೆಮನೆಯಲ್ಲಿ ಹುಟ್ಟಿದ. ತೀರ ಬಡತನದಲ್ಲಿದ್ದ ಗೋಪಾಲಕರ ಒಡನಾಡಿಯಲ್ಲಿ ಬೆಳೆದ. ತನ್ನ ಲೀಲೆಯನ್ನು ತೋರಿಸಿ ಹಲವಾರು ಅಧರ್ಮಿಗಳನ್ನು ನಾಶ ಮಾಡಿದ. ಎಲ್ಲಿ ಧರ್ಮದ ನೆಲೆಯಿದೆಯೋ ಅಲ್ಲಿ ತನ್ನ ಅಸ್ತಿತ್ವವನ್ನು ತೋರಿಸಿದ. ಎರಡು ಅವತಾರವೂ ಧರ್ಮ ಅಂದರೆ ಏನು ಮತ್ತು ಅದರ ಪಾಲನೆ ಹೇಗೆ. ಈಬಗೆಯಲ್ಲಿ ಧರ್ಮ ಸಂಸ್ಥಾಪನೆಗೆ ಆದ್ಯತೆಯನ್ನು ಕಾಣಬಹುದು.
ಧರ್ಮ ಎಲ್ಲಿದೆಯೋ ಅಲ್ಲಿ ಜಯವಿದೆ. ಧರ್ಮದ ಚಿಂತನೆಗೆ ಸಲ್ಲುವ ಮಹತ್ವವಿದು. ಇಲ್ಲಿ ಜಯ ಎಂದರೆ ಕೇವಲ ಯುದ್ದದ ಜಯವಲ್ಲ. ಯಶಸ್ಸು ಮೋಕ್ಷ ಇವುಗಳನ್ನೂ ಜಯ ಎಂದು ಪರಿಗಣಿಸಬೇಕು. ಜಯ ಎಂದರೆ ಅಲ್ಲಿ ಸಂಘರ್ಷದ ಪ್ರತಿಕ. ಈ ಬದುಕಿನ ದುರಿತದ ಸಂಘರ್ಷವನ್ನು ಮೀರಿ ನಾವು ಮೋಕ್ಷವನ್ನು ಕಂಡೆವು ಎಂದಾದರೆ ಅದು ನಿಜವಾದ ಜಯ. ಹಾಗಾಗಿ ಭಗವಂತನ ಹೆಸರಿನ ಜತೆಗೆ ಜಯ ಎಂಬ ಶಬ್ದವು ಸೇರಿಕೊಂಡಿದೆ. ಆಧ್ಯಾತ್ಮಿಕ ದೃಷ್ಟಿಯಿಂದ ದುಃಖ, ಮೋಹ ಮತ್ತು ಅಜ್ಞಾನಗಳನ್ನು ಮೀರಿ ಮೋಕ್ಷವನ್ನು ಪಡೆಯುವುದೂ ಪರಮ ಜಯವೆಂದು ಪರಿಗಣಿಸಬಹುದು. ಇಲ್ಲಿ ಧಾರ್ಮಿಕತೆ ಎಂಬುದು ಬದುಕಿನ ಉತ್ಕರ್ಷಕ್ಕೆ ಕಾರಣವಾಗುತ್ತದೆ. ಧರ್ಮದಲ್ಲಿ ಸತ್ಯ ಅಡಕವಾಗಿದೆ. ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತಃ ಅಂತ ಭಗವದ್ಗೀತೆಯಲ್ಲಿ ಭಗವಂತ ಹೇಳಿದ. ಧರ್ಮ ಎಲ್ಲಿದೆಯೋ ಅಲ್ಲಿ ಜಯವಿದೆ ಯಥೋ ಧರ್ಮಃ ತತೋ ಕೃಷ್ಣಃ . ಹೀಗೆ ಪಾಂಡವ ಪಕ್ಷಪಾತಿಯಾದ. ಧರ್ಮದ ಚಿಂತನೆಗೆ ಸಲ್ಲುವ ಮಹತ್ವವಿದು. ಇಲ್ಲಿ ಜಯ ಎಂದರೆ ಕೇವಲ ಯುದ್ದದ ಜಯವಲ್ಲ. ಯಶಸ್ಸು ಮೋಕ್ಷ ಇವುಗಳನ್ನೂ ಜಯ ಎಂದು ಪರಿಗಣಿಸಬೇಕು. ಧಾರ್ಮಿಕತೆ ಎಂಬುದು ಬದುಕಿನ ಉತ್ಕರ್ಷಕ್ಕೆ ಕಾರಣವಾಗುತ್ತದೆ. ಧರ್ಮದಲ್ಲಿ ಸತ್ಯ ಅಡಕವಾಗಿದೆ. ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತಃ ಅಂತ ಭಗವದ್ಗೀತೆಯಲ್ಲಿ ಭಗವಂತ ಧರ್ಮದ ಬಗ್ಗೆ ಆತನ ನಿರ್ಣಯವನ್ನು ಉದ್ಘಾಟಿಸಿದ್ದಾನೆ.
ಜಾತಿ ವರ್ಣದ ವೆತ್ಯಾಸ ತಿಳಿಯದೆ ಎಲ್ಲದಕ್ಕೂ ಧರ್ಮದ ಬಣ್ಣ ಬಳಿಯುವುದು ಧರ್ಮದ ಚಿಂತನೆಯ ಕೊರತೆಯನ್ನು ತೋರಿಸುತ್ತದೆ. ಜಾತಿ ಎಂದರೆ ಹುಟ್ಟಿನಿಂದ ಬರುವುದು. ವರ್ಣವೆಂದರೆ ಆನಂತರ ತರಿಸಿಕೊಳ್ಳುವುದು ಅಥವಾ ಜೀವನ ನಿರ್ವಹಣೆಗೆ ಆಯ್ಕೆ ಮಾಡಿಕೊಳ್ಳುವುದು. ವರ್ಣ..ಎಂಬ ಶಬ್ದಾರ್ಥವೂ ತರಿಸಿಕೊಳ್ಳುವುದು ಎಂದಾಗಿದೆ. ಮನುಷ್ಯ ಜೀವನ ಕ್ರಮಕ್ಕೆ ಹಲವು ನೀತಿ ನಿಯಮಗಳು ಅತ್ಯವಶ್ಯ. ಆ ನಿಯಮವನ್ನು ಅಳವಡಿಸಿರುವುದೇ ಇಂದು ನಾವು ಕಾಣುವ ಧರ್ಮ. ಹಲವು ಧರ್ಮಗಳು ತನ್ನದೇ ನಿಯಮಗಳನ್ನು ಹೊಂದಿರುತ್ತವೆ. ಆದುರಿಂದಲೇ ಅದು ಧರ್ಮ ಎನಿಸಲ್ಪಡುತ್ತದೆ. ಧರ್ಮ ಎಂದರೆ ಮನುಷ್ಯನ ಜೀವನ ಉತ್ಕರ್ಷಕ್ಕೆ ಇಟ್ಟುಕೊಂಡ ನಿಯಮದ ಪರಿಧಿ. ಅದರಲ್ಲಿ ಮೇಲು ಕೀಳು ಯಾವುದೂ ಇಲ್ಲ.

No comments:
Post a Comment