Sunday, October 11, 2026

ದೇವರ ಹೆಸರಲ್ಲಿ

ದೇವರ ಹೆಸರಿನಲ್ಲಿ ನಡೆಯುವ ಆಚರಣೆಗಳು ಭಕ್ತಿ, ಶಾಂತಿ ಮತ್ತು ಸತ್ಕಾರ್ಯಗಳಿಗೆ ಪ್ರೇರಣೆಯಾಗಬೇಕೇ ಹೊರತು, ಇತರರಿಗೆ ತೊಂದರೆ ನೀಡುವ ಹಾಗೂ ವಂಚನೆಗೆ ಅವಕಾಶ ಕಲ್ಪಿಸುವ ಸಾಧನಗಳಾಗಬಾರದು.

ಇತ್ತೀಚೆಗೆ ಶಿವಮೊಗ್ಗಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದೆ. ನೇರವಾದ ರಸ್ತೆಯಲ್ಲಿ ನಮ್ಮ ಕಾರು ತುಸು ವೇಗವಾಗಿ ಸಾಗುತ್ತಿತ್ತು. ದೂರದಲ್ಲಿಯೇ ನಾಲ್ಕು ಮಂದಿ ಚಿಕ್ಕ ಬಾಲಕರು ರಸ್ತೆಗೆ ಅಡ್ಡವಾಗಿ ನಿಂತಿರುವುದು ಗಮನಕ್ಕೆ ಬಂತು. ಕಾರು ಹತ್ತಿರ ಬರುತ್ತಿದ್ದಂತೆ ಅವರು ರಸ್ತೆ ಬದಿಗೆ ಸರಿಯಬಹುದು ಎಂದು ಭಾವಿಸಿದೆ. ಆದರೆ ಕಾರು ಸಮೀಪಕ್ಕೆ ಬರುವವರೆಗೂ ಅವರು ಕದಲಲಿಲ್ಲ. ಅನಿವಾರ್ಯವಾಗಿ ಕಾರಿನ ವೇಗವನ್ನು ಕಡಿಮೆ ಮಾಡಬೇಕಾಯಿತು.


ಹತ್ತಿರ ಬಂದಾಗ ಅವರ ಕೈಯಲ್ಲಿ ರಸೀದಿ ಪುಸ್ತಕವಿರುವುದು ಕಂಡಿತು. ಅದು ಗಣೇಶೋತ್ಸವದ ಚಂದಾ ಸಂಗ್ರಹಕ್ಕಾಗಿ ಎಂಬುದು ತಕ್ಷಣವೇ ಅರ್ಥವಾಯಿತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಿ ಪೊಲೀಸರಂತೆ ರಸ್ತೆಗೆ ಅಡ್ಡವಾಗಿ ನಿಂತು ವಾಹನಗಳನ್ನು ತಡೆದು ಚಂದಾ ಸಂಗ್ರಹಿಸುತ್ತಿದ್ದರು. ಇಂತಹ ರಸ್ತೆಗಳಲ್ಲಿ ವಾಹನಗಳು ವೇಗವಾಗಿ ಸಂಚರಿಸುತ್ತವೆ. ನಾನು ಕಾರನ್ನು ನಿಧಾನಗೊಳಿಸಿದರೂ ಸಂಪೂರ್ಣವಾಗಿ ನಿಲ್ಲಿಸಲಿಲ್ಲ. ಬಾಗಿಲಿನ ಗಾಜನ್ನು ಕೆಳಗಿಳಿಸದೆ ಮುಂದೆ ಸಾಗಲು ಪ್ರಯತ್ನಿಸಿದೆ. ಕೆಲವರು ಅಡ್ಡವಾಗಿಯೇ ನಿಂತರು. ಅಪಘಾತದ ಅಪಾಯವಿದ್ದರೂ ನಿಧಾನವಾಗಿ ಕಾರು ಚಲಾಯಿಸಿಕೊಂಡು ಮುಂದೆ ಹೋದೆ.

ಯಾವುದೋ ಊರಿಗೆ ಹೋಗುವ ಅಥವಾ ಅಲ್ಲಿಂದ ಹಿಂದಿರುಗುವ ವಾಹನಗಳನ್ನು, ಅದರಲ್ಲೂ ರಾಷ್ಟ್ರೀಯ ಹೆದ್ದಾರಿಯಲ್ಲಿ, ತಡೆದು ಚಂದಾ ಸಂಗ್ರಹಿಸುವುದು ಎಷ್ಟು ಅಪಾಯಕಾರಿ ಎಂಬುದನ್ನು ಯೋಚಿಸಬೇಕು. ಇದು ಒಂದೇ ಸ್ಥಳದ ಸಮಸ್ಯೆಯಲ್ಲ. ಮುಂದೆ ಸಾಗುತ್ತಿದ್ದಂತೆ ಹಳ್ಳಿಯ ರಸ್ತೆಗಳಲ್ಲಿ ಕೂಡ ಕೈ ಅಡ್ಡಹಾಕಿ ಚಂದಾ ಕೇಳುವವರನ್ನು ಕಂಡೆ. ಇಂತಹ ಕಾರ್ಯಗಳಲ್ಲಿ ಚಿಕ್ಕಮಕ್ಕಳನ್ನು ತೊಡಗಿಸಿಕೊಳ್ಳುತ್ತಿರುವುದು ಇನ್ನೂ ಹೆಚ್ಚು ಚಿಂತಿಸಬೇಕಾದ ಸಂಗತಿ.

ಗಣೇಶೋತ್ಸವ ಬಂತೆಂದರೆ ಚಂದಾ ಸಂಗ್ರಹಿಸುವುದೇ ಒಂದು ಕಲೆಯಾಗಿ ಬಿಟ್ಟಿದೆ. ಒಂದು ಸಲ ನಮ್ಮ ಮನೆಗೆ ಚಂದಾ ಕೇಳಲು ಬಂದವರನ್ನು, “ಧ್ವನಿವರ್ಧಕ ಬಳಸದೆ ಗಣೇಶೋತ್ಸವ ಮಾಡುವುದಾದರೆ ಹಣ ಕೊಡುತ್ತೇನೆ. ಇಲ್ಲವೇ ಸಿನಿಮಾ ಹಾಡುಗಳನ್ನು ಹಾಕಬಾರದು” ಎಂದು ಕೇಳಿದ್ದೆ. ಅವರು ನನ್ನನ್ನು ವಿಚಿತ್ರವಾಗಿ ನೋಡಿದರು. ಧ್ವನಿವರ್ಧಕವಿಲ್ಲದೆ, ಸಿನಿಮಾ ಹಾಡುಗಳಿಲ್ಲದೆ ಗಣೇಶೋತ್ಸವ ಆಚರಿಸಲು ಸಾಧ್ಯವೇ ಇಲ್ಲವೇನೋ ಎಂಬಂತಿತ್ತು ಅವರ ಪ್ರತಿಕ್ರಿಯೆ. ಇಂದು ಗಣೇಶನ ಪ್ರತಿಮೆಯನ್ನು ತಂದು ಪ್ರತಿಷ್ಠಾಪಿಸುವ ಮೊದಲೇ ಧ್ವನಿವರ್ಧಕಗಳಲ್ಲಿ ಸಿನಿಮಾ ಹಾಡುಗಳನ್ನು ಜೋರಾಗಿ ಹಾಕುವುದು ಸಾಮಾನ್ಯವಾಗಿದೆ. ಧ್ವನಿವರ್ಧಕ ಮತ್ತು ದೊಡ್ಡ ಶಬ್ದದಲ್ಲಿ ಹಾಡುಗಳನ್ನು ಪ್ರಸಾರ ಮಾಡುವುದು ಗಣೇಶೋತ್ಸವದ ಅವಿಭಾಜ್ಯ ಅಂಗವೇ ಆಗಿಬಿಟ್ಟಿದೆ. ಹೀಗೆ ದೊಡ್ಡದಾಗಿ ಹಾಡು ಹಾಕುವುದು ಗಣೇಶ ಪೂಜೆಯ ಶಾಸ್ತ್ರವಾಗಿ ಹೋಗಿದೆ. 

ಸ್ವಾತಂತ್ರ್ಯಪೂರ್ವದಲ್ಲಿ ಮಹಾರಾಷ್ಟ್ರ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಗಣೇಶ ಚತುರ್ಥಿಯನ್ನು ಧಾರ್ಮಿಕ ಸಂಪ್ರದಾಯದಂತೆ ಆಚರಿಸಲಾಗುತ್ತಿತ್ತು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವವನ್ನು ಜನರನ್ನು ಒಗ್ಗೂಡಿಸುವ ಮತ್ತು ರಾಷ್ಟ್ರೀಯ ಜಾಗೃತಿಯನ್ನು ಮೂಡಿಸುವ ಮಾಧ್ಯಮವನ್ನಾಗಿ ಬಳಸಿದರು. ಜನರಲ್ಲಿ ಐಕ್ಯತೆ, ಬಂಧುತ್ವ ಮತ್ತು ಸ್ವಾತಂತ್ರ್ಯದ ಅರಿವು ಮೂಡಿಸುವಲ್ಲಿ ಈ ಆಚರಣೆ ಮಹತ್ವದ ಪಾತ್ರ ವಹಿಸಿತು. ಆದರೆ ಇಂದು ಕೆಲವು ಕಡೆಗಳಲ್ಲಿ ಇದೇ ಆಚರಣೆ ಆಡಂಬರ, ಪೈಪೋಟಿ ಮತ್ತು ಸಾರ್ವಜನಿಕರಿಗೆ ತೊಂದರೆ ನೀಡುವ ಕಾರ್ಯಕ್ರಮವಾಗಿ ರೂಪಾಂತರಗೊಳ್ಳುತ್ತಿರುವುದು ದುರಂತ. ಯಾವ ದೇವರೂ ಆಡಂಬರವನ್ನು ಬಯಸುವುದಿಲ್ಲ. ದೇವರಿಗೆ ಬೇಡವಾದದ್ದು ಮನುಷ್ಯರಿಗೆ ಬೇಕಾಗಿದೆ. ದೇವರು ಬಯಸುವ ಭಕ್ತಿ, ಶ್ರದ್ಧೆ ಮತ್ತು ಪರಿಶುದ್ಧ ಮನಸ್ಸುಗಳಿಗಿಂತ ಹೊರಗಿನ ಪ್ರದರ್ಶನಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ.

ಪ್ರತಿವರ್ಷ ಗಣೇಶೋತ್ಸವ ಬಂದಾಗ ಅದರ ಸಂತೋಷವನ್ನು ಕುಗ್ಗಿಸುವ ಸಂಗತಿಗಳಲ್ಲಿ ಬೀದಿಗಳಲ್ಲಿ ನಡೆಯುವ ಕೆಲವು ಸಾರ್ವಜನಿಕ ಗಣೇಶೋತ್ಸವಗಳೂ ಸೇರಿವೆ. ಧ್ವನಿವರ್ಧಕಗಳಲ್ಲಿ ಕಿರುಚುವಂತೆ ಕೇಳಿಸುವ ಹಾಡುಗಳೊಂದಿಗೆ ಸಂಭ್ರಮ ಆರಂಭವಾಗುತ್ತದೆ. ಭಕ್ತಿಗೀತೆಗಳ ಹೆಸರಿನಲ್ಲಿ ಕೇಳಿಬರುವ ಕೆಲವು ಹಾಡುಗಳಲ್ಲಿ ಭಕ್ತಿಭಾವಕ್ಕಿಂತ ಶಬ್ದದ ಅಬ್ಬರವೇ ಹೆಚ್ಚಾಗಿರುತ್ತದೆ. ಇಂತಹ ಹಾಡುಗಳನ್ನು ಕೇಳುವಾಗ ಹಬ್ಬದ ಸಡಗರಕ್ಕಿಂತ ಅಸಹನೆ ಹೆಚ್ಚಾಗುತ್ತದೆ. ವಿದ್ಯಾಭೂಷಣರಂತಹ ಗಾಯಕರು ಹಾಡಿರುವ ಸುಮಧುರ ಭಕ್ತಿಗೀತೆಗಳು, ಶಾಸ್ತ್ರೀಯ ಸಂಗೀತದ ಕೃತಿಗಳು ಮತ್ತು ನಾಮಸಂಕೀರ್ತನೆಗಳು ನಮ್ಮಲ್ಲಿ ಸಾಕಷ್ಟಿವೆ. ಅವುಗಳನ್ನು ಬಳಸುವುದಕ್ಕಿಂತ ಕಿವಿಗೆ ಕಿರಿಕಿರಿ ಉಂಟುಮಾಡುವ ಹಾಡುಗಳನ್ನೇ ಹೆಚ್ಚಾಗಿ ಪ್ರಸಾರ ಮಾಡುವುದು ಏಕೆ?

ಸಂಗೀತವು ಮನಸ್ಸನ್ನು ಶಾಂತಗೊಳಿಸುವ, ಭಕ್ತಿಯನ್ನು ಬೆಳೆಸುವ ಮತ್ತು ಏಕಾಗ್ರತೆಯನ್ನು ಮೂಡಿಸುವ ಸಾಧನವಾಗಬೇಕು. ಆದರೆ ಕೆಲವು ಆಚರಣೆಗಳಲ್ಲಿ ಅದು ಮನಸ್ಸನ್ನು ಉದ್ರೇಕಿಸುವ ಮಾಧ್ಯಮವಾಗುತ್ತಿದೆ. ಕಣ್ಣುಗಳಿಂದ ನೋಡುವುದು, ಕಿವಿಗಳಿಂದ ಕೇಳುವುದು ಮತ್ತು ಇತರ ಇಂದ್ರಿಯಗಳ ಮೂಲಕ ಅನುಭವಿಸುವ ಸಂಗತಿಗಳು ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಆ ಪ್ರಭಾವವನ್ನು ಸಾತ್ತ್ವಿಕತೆಯ ಕಡೆಗೆ ಕೊಂಡೊಯ್ಯುವುದು ಧಾರ್ಮಿಕ ಆಚರಣೆಗಳ ಉದ್ದೇಶವಾಗಿರಬೇಕು. ಆದರೆ ದೇವರ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಕ್ತಿಭಾವ ಮೂಡುವುದಕ್ಕೆ ಅವಕಾಶವೇ ಇಲ್ಲದಷ್ಟು ಶಬ್ದದ ಅಬ್ಬರ ಇರುವುದು ವಿಪರ್ಯಾಸ. ಗಣೇಶನಿಗೆ ದೊಡ್ಡ ಕಿವಿಗಳಿವೆ ಎಂದು ಹೇಳುತ್ತೇವೆ. ಆದರೆ ಆ ಕಿವಿಗಳನ್ನೇ ಕಿವುಡಾಗಿಸುವಷ್ಟು ಧ್ವನಿವರ್ಧಕಗಳನ್ನು ಬಳಸುವುದು ಯಾವ ರೀತಿಯ ಭಕ್ತಿ?

ದೇವರು ಶಾಂತಸ್ವರೂಪಿಯಾದರೆ, ಅವರ ಹೆಸರಿನಲ್ಲಿ ನಡೆಯುವ ಕೆಲವು ಆಚರಣೆಗಳು ಮಾತ್ರ ಏಕೆ ಇಷ್ಟೊಂದು ಗದ್ದಲದಿಂದ ಕೂಡಿರಬೇಕು? ಭಕ್ತಿಯ ವಾತಾವರಣವನ್ನು ನಿರ್ಮಿಸಬೇಕಾದ ಸಾಧನಗಳೇ ಭಕ್ತಿಭಾವವನ್ನು ನಾಶಮಾಡುತ್ತಿದ್ದರೆ, ಆ ಆಚರಣೆಯ ಉದ್ದೇಶವನ್ನೇ ನಾವು ಪ್ರಶ್ನಿಸಬೇಕಾಗುತ್ತದೆ. ಸಾಯಂಕಾಲ ಎಲ್ಲರೂ ಸೇರಿ ಸರಳವಾಗಿ ಭಜನೆ ಮಾಡಬಹುದು, ದೇವರ ನಾಮಸ್ಮರಣೆ ಮಾಡಬಹುದು, ಅರ್ಥಪೂರ್ಣವಾದ ಭಕ್ತಿಗೀತೆಗಳನ್ನು ಹಾಡಬಹುದು. ಇಂತಹ ಸರಳ ಆಚರಣೆಗಳಿಂದಲೂ ಹಬ್ಬದ ಪಾವಿತ್ರ್ಯವನ್ನು ಕಾಪಾಡಬಹುದು. ಆದರೆ ಆಡಂಬರ ಮತ್ತು ಶಬ್ದದ ಅಬ್ಬರವೇ ಹಬ್ಬದ ವೈಭವವೆಂದು ಭಾವಿಸಿದಾಗ ಇಂತಹ ವಿಚಾರಗಳಿಗೆ ಮಹತ್ವವೇ ಇರುವುದಿಲ್ಲ.

  ನಾನು ಬೆಂಗಳೂರಿಗೆ ಬಂದ ಆರಂಭದ ದಿನಗಳಲ್ಲೊಂದು ಘಟನೆ ನೆನಪಾಗುತ್ತದೆ. ನಮ್ಮ ಮನೆಯ ಎದುರಿನ ರಸ್ತೆಯಲ್ಲಿ ಕೆಲವು ಹುಡುಗರು ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಮುಂದಾದರು. ನಮ್ಮ ಊರಿನ ಸಾರ್ವಜನಿಕ ಗಣೇಶೋತ್ಸವದ ಅನುಭವವಿದ್ದುದರಿಂದ ಮನೆಯವರೆಲ್ಲರಿಗೂ ಸಂತೋಷವಾಯಿತು. ನಮ್ಮ ಮನೆಯೇ ರಸ್ತೆಯ ಕೊನೆಯಲ್ಲಿದ್ದುದರಿಂದ ಮನೆಯ ಎದುರಿನಲ್ಲೇ ಗಣೇಶನ ಪೂಜೆ ನಡೆಯುವುದು ಸಂತೋಷದ ಸಂಗತಿಯಾಗಿತ್ತು. ನಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಿದೆವು. ರಾತ್ರಿ ಪೂಜೆಗೆ ಮನೆಯಲ್ಲಿ ಅವಲಕ್ಕಿ, ಪಂಚಕಜ್ಜಾಯವನ್ನೂ ತಯಾರಿಸಿ ಕೊಟ್ಟೆವು.

ಮೊದಲೆರಡು ಮೂರು ದಿನ ಪೂಜೆ ಚೆನ್ನಾಗಿಯೇ ನಡೆಯಿತು. ಆದರೆ ಆನಂತರ ಹುಡುಗರು ತಮ್ಮ ಪಾಡಿಗೆ ತಾವು ಹೋಗತೊಡಗಿದರು. ಗಣೇಶನ ಪ್ರತಿಮೆ ಮತ್ತು ಚಪ್ಪರ ಮಾತ್ರ ಅನಾಥವಾಗಿ ಉಳಿದವು. ಮೊದಲ ದಿನ ಹಾಕಿದ್ದ ಹೂವು, ಹಣ್ಣುಗಳು ಒಣಗಿ ಕೊಳೆಯಲಾರಂಭಿಸಿದವು. ರಾತ್ರಿ ತಡವಾಗಿ ಬರುತ್ತಿದ್ದ ಹುಡುಗರು ಅಲ್ಲಿಯೇ ಮಲಗುತ್ತಿದ್ದರು. ರಸ್ತೆಯ ಕೊನೆಯಲ್ಲಿ ನಮ್ಮ ಮನೆಯಿದ್ದುದರಿಂದ ಮನೆಗೆ ಬರುವವರಿಗೆ ಮತ್ತು ಹೋಗುವವರಿಗೆ ತೊಂದರೆಯಾಗುತ್ತಿತ್ತು. ಚಪ್ಪರದ ಕಂಬಗಳು ದಾರಿಯಲ್ಲಿ ಸಂಚರಿಸುವವರಿಗೆ ಅಡ್ಡಿಯಾಗುತ್ತಿದ್ದವು. ರಾತ್ರಿ ತಡವಾಗಿ ಬಂದು ಮಲಗುತ್ತಿದ್ದ ಹುಡುಗರು ಮರುದಿನ ಬೆಳಗ್ಗೆ ಹನ್ನೊಂದು ಗಂಟೆಯಾದರೂ ಏಳುತ್ತಿರಲಿಲ್ಲ. ಈ ಪರಿಸ್ಥಿತಿ ಕ್ರಮೇಣ ನಮಗೆ ನಿತ್ಯದ ಕಿರಿಕಿರಿಯಾಗಿ ಪರಿಣಮಿಸಿತು.

ಗಣೇಶನ ವಿಸರ್ಜನೆ ಯಾವಾಗ ಎಂದು ಕೇಳಿದರೆ, “ನಾಳೆ ಮಂಗಳವಾರ, ನಾಡಿದ್ದು ದಿನ ಚೆನ್ನಾಗಿಲ್ಲ” ಎಂದು ಒಂದೊಂದು ಕಾರಣ ಹೇಳುತ್ತಾ ಒಂದು ವಾರದವರೆಗೆ ಮುಂದೂಡಿದರು. ಕೊನೆಗೂ ಒಂದು ದಿನ ವಿಸರ್ಜನೆ ನಡೆಯಿತು. ನಾವು ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಯಿತು. ಗಣೇಶನ ವಿಸರ್ಜನೆಯಾದರೂ ಚಪ್ಪರವನ್ನು ಹಾಗೆಯೇ ಬಿಟ್ಟಿದ್ದರು. ಅದರ ಕಂಬಗಳು ಮನೆಗೆ ಬರುವವರಿಗೆ, ಹೋಗುವವರಿಗೆ ತಾಗುತ್ತಿದ್ದವು. ರಾತ್ರಿ ಕೆಲವು ಹುಡುಗರು ಅಲ್ಲಿಯೇ ಮಲಗುತ್ತಿದ್ದರು. ಹಲವು ಬಾರಿ ಹೇಳಿದರೂ ಯಾರೂ ಗಮನ ಕೊಡಲಿಲ್ಲ. ಬೀದಿಯ ಇತರ ಮನೆಗಳವರಿಗೆ ಈ ತೊಂದರೆ ನೇರವಾಗಿ ಅನುಭವಕ್ಕೆ ಬರುತ್ತಿರಲಿಲ್ಲವಾದ್ದರಿಂದ, ಅದು ನಮ್ಮ ಮನೆಯ ಸಮಸ್ಯೆಯಾಗಿ ಉಳಿಯಿತು.

ಇದು ದೇವರ ವಿಷಯ. ದೇವರಿಗೆ ಸಿಟ್ಟು ಬಂದರೆ ಎಂಬ ಭಯವೂ ಮನಸ್ಸಿನಲ್ಲಿತ್ತು. ಆದರೆ ಪರಿಸ್ಥಿತಿ ಸಹಿಸಲಾಗದ ಹಂತ ತಲುಪಿದಾಗ ಕಾರ್ಪೊರೇಟರ್ ಅವರಿಗೆ ದೂರು ನೀಡಿದೆ. ಅವರು ಸಂಬಂಧಪಟ್ಟ ಹುಡುಗರಿಗೆ ಒಂದೆರಡು ಬಾರಿ ಎಚ್ಚರಿಕೆ ನೀಡಿದರೂ ಯಾವುದೇ ಪರಿಣಾಮವಾಗಲಿಲ್ಲ. ಕೊನೆಗೆ ಮಹಾನಗರ ಪಾಲಿಕೆಯ ಸಿಬ್ಬಂದಿ ವಾಹನದೊಂದಿಗೆ ಬಂದು ಚಪ್ಪರದ ಕಂಬಗಳನ್ನು ತೆರವುಗೊಳಿಸಿ, ಸ್ಥಳವನ್ನು ಸ್ವಚ್ಛಗೊಳಿಸಿದರು. ಆಗ ಕಂಡ ದೃಶ್ಯ ಮತ್ತಷ್ಟು ಬೇಸರ ಉಂಟುಮಾಡಿತು. ಚಪ್ಪರದ ಬಳಿ ಹತ್ತು ಹದಿನೈದು ಮದ್ಯದ ಬಾಟಲಿಗಳು ಬಿದ್ದಿದ್ದವು. ರಾತ್ರಿ ತಡವಾಗಿ ಅಲ್ಲಿ ನಡೆಯುತ್ತಿದ್ದ ಚಟುವಟಿಕೆಗಳ ಸ್ವರೂಪವನ್ನು ಅವು ಸೂಚಿಸುತ್ತಿದ್ದವು. ಅತ್ಯಂತ ವಿಷಾದದ ಸಂಗತಿಯೆಂದರೆ, ಅಲ್ಲಿ ಸೇರುತ್ತಿದ್ದವರಲ್ಲಿ ಇನ್ನೂ ಮೀಸೆ ಮೂಡದ ಬಾಲಕರೂ ಇದ್ದರು. ಇಂತಹ ಆಚರಣೆಗಳು ಕೆಲವರಿಗೆ ಕೆಟ್ಟ ಚಟಗಳಿಗೆ ಅವಕಾಶ ಮಾಡಿಕೊಡುವ ತಾಣಗಳಾಗುತ್ತಿದ್ದರೆ, ಅದರ ಹೊಣೆ ಯಾರದ್ದು?

ಇಷ್ಟೆಲ್ಲ ಆದರೂ ಬೀದಿಯ ಕೆಲವು ಮನೆಗಳವರು ಮಹಾನಗರ ಪಾಲಿಕೆಗೆ ದೂರು ನೀಡಿ ಚಪ್ಪರ ತೆರವುಗೊಳಿಸಿದ್ದಕ್ಕೆ ನಮ್ಮ ಮೇಲೆಯೇ ಅಸಮಾಧಾನ ವ್ಯಕ್ತಪಡಿಸಿದರು. ಅವರ ದೃಷ್ಟಿಯಲ್ಲಿ ನಾವು ದೇವರ ಕಾರ್ಯಕ್ಕೆ ಅಡ್ಡಿಪಡಿಸಿದವರಾಗಿದ್ದೆವು.

ಆ ಘಟನೆಯ ನಂತರ ನಮ್ಮ ಬೀದಿಯ ಗಣೇಶೋತ್ಸವದ ಬಗ್ಗೆ ನನಗೆ ಆಸಕ್ತಿ ಕಡಿಮೆಯಾಯಿತು. ಯಾವುದೇ ಹಣಕಾಸಿನ ಸಹಾಯವನ್ನೂ ಮಾಡಲಿಲ್ಲ. ದೇವರ ಹೆಸರಿನಲ್ಲಿ ನಡೆಯುವ ಕಾರ್ಯದಿಂದಲೇ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೆ, ಅದಕ್ಕೆ ನೆರವಾಗುವುದು ಸರಿಯಲ್ಲ ಎಂಬ ಭಾವನೆ ನನ್ನಲ್ಲಿ ಮೂಡಿತು. ನಾವು ಕೊಡುವ ಸಣ್ಣ ಮೊತ್ತವೂ ತಪ್ಪಾದ ಕಾರ್ಯಕ್ಕೆ ಪರೋಕ್ಷವಾಗಿ ಪ್ರೋತ್ಸಾಹ ನೀಡುವಂತಾಗಬಾರದು ಎಂಬುದು ನನ್ನ ನಿಲುವಾಯಿತು.

ಸರ್ವೇಷಾಮವಿರೋಧೇನ...

  ಈಗೀಗ ಗಣೇಶೋತ್ಸವವೆಂದರೆ ಸಂತೋಷಕ್ಕಿಂತ ಆತಂಕವೇ ಹೆಚ್ಚಾಗುತ್ತದೆ. ಧ್ವನಿವರ್ಧಕಗಳ ಅಬ್ಬರ, ಸಾರ್ವಜನಿಕರಿಗೆ ಉಂಟಾಗುವ ತೊಂದರೆ, ಸ್ವಚ್ಛತೆಯ ಕೊರತೆ ಮತ್ತು ಆಚರಣೆಯ ಹೆಸರಿನಲ್ಲಿ ನಡೆಯುವ ಕೆಲವು ಅನಪೇಕ್ಷಿತ ಚಟುವಟಿಕೆಗಳು ಹಬ್ಬದ ಮೂಲ ಉದ್ದೇಶವನ್ನೇ ಮರೆಮಾಡುತ್ತಿವೆ. ನಮ್ಮ ಪೂಜಾ ಕಾರ್ಯಗಳ ಆರಂಭದಲ್ಲಿ ಸಂಕಲ್ಪ ಮಾಡುವಾಗ “ಸರ್ವೇಷಾಮವಿರೋಧೇನ ಪೂಜಾಕರ್ಮ ಸಮಾರಭೇ” ಎಂಬ ಆಶಯ ವ್ಯಕ್ತವಾಗುತ್ತದೆ. ಅಂದರೆ, ಎಲ್ಲರಿಗೂ ವಿರೋಧವಾಗದಂತೆ, ಯಾರಿಗೂ ತೊಂದರೆ ಉಂಟುಮಾಡದೆ ಪೂಜಾಕಾರ್ಯವನ್ನು ಆರಂಭಿಸುತ್ತೇನೆ ಎಂಬ ಭಾವನೆ.

ಈ ಸಂಕಲ್ಪದ ಅರ್ಥವನ್ನು ನಾವು ನಿಜವಾಗಿಯೂ ಅರ್ಥಮಾಡಿಕೊಂಡಿದ್ದೇವೆಯೇ? ನಮ್ಮ ಪೂಜೆಯಿಂದ ನೆರೆಹೊರೆಯವರಿಗೆ ನಿದ್ರೆಗೆ ತೊಂದರೆಯಾಗುತ್ತಿದ್ದರೆ, ವಿದ್ಯಾರ್ಥಿಗಳಿಗೆ ಓದಲು ಸಾಧ್ಯವಾಗದಿದ್ದರೆ, ವೃದ್ಧರು ಮತ್ತು ರೋಗಿಗಳು ನೆಮ್ಮದಿಯಿಂದ ಇರಲಾಗದಿದ್ದರೆ, ರಸ್ತೆಯಲ್ಲಿ ಸಂಚರಿಸುವವರಿಗೆ ಅಪಾಯ ಉಂಟಾಗುತ್ತಿದ್ದರೆ, ಆ ಪೂಜೆಯ ಉದ್ದೇಶವನ್ನು ಮತ್ತೊಮ್ಮೆ ಪರಿಶೀಲಿಸಬೇಕಲ್ಲವೇ? ಇತರರಿಗೆ ತೊಂದರೆ ಕೊಡುವುದರಿಂದಲೇ ದೇವರ ಅನುಗ್ರಹ ದೊರೆಯುತ್ತದೆ ಎಂಬ ಭಾವನೆ ನಮ್ಮ ಆಚರಣೆಗಳಲ್ಲಿ ಮೂಡುತ್ತಿರುವುದು ವಿಷಾದನೀಯ. ಯಾವ ದೇವರೂ ಮತ್ತೊಬ್ಬರಿಗೆ ಕಿರುಕುಳ ನೀಡಿ ತನ್ನನ್ನು ಆರಾಧಿಸಬೇಕೆಂದು ಹೇಳುವುದಿಲ್ಲ. ಪುರಾಣಗಳಲ್ಲಿ ಇತರರಿಗೆ ಪೀಡೆ ನೀಡುವ ಅಸುರರ ಕಥೆಗಳನ್ನು ಕೇಳಿದ್ದೇವೆ. ಆದರೆ ಇಂದು ದೇವರ ಹೆಸರಿನಲ್ಲಿ ಮನುಷ್ಯರೇ ಇತರರಿಗೆ ಪೀಡೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸ.

  ಪ್ರತಿವರ್ಷದಂತೆ ಈ ಬಾರಿಯೂ ನಮ್ಮ ಬೀದಿಯಲ್ಲಿ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಬೀದಿಯ ಎರಡೂ ಬದಿಗಳಲ್ಲಿದ್ದ ಮನೆಗಳಿಗೆ ವಿದ್ಯುದ್ದೀಪಗಳ ಮಾಲೆಗಳನ್ನು ಅಳವಡಿಸಲಾಗಿತ್ತು. ನಾಲ್ಕು ದಿನಗಳ ಕಾಲ ಇಡೀ ರಾತ್ರಿ ರಸ್ತೆ ಪ್ರಕಾಶಮಾನವಾಗಿತ್ತು. ಕೊನೆಗೆ ಒಂದು ದಿನ ದೀಪಗಳ ಮಾಲೆಯನ್ನು ತೆಗೆಯಲು ಬಂದ ವ್ಯಕ್ತಿಯನ್ನು, “ಇದಕ್ಕೆ ವಿದ್ಯುತ್ ಸಂಪರ್ಕ ಎಲ್ಲಿಂದ ತೆಗೆದುಕೊಂಡಿದ್ದೀರಿ?” ಎಂದು ಕೇಳಿದೆ. ಆತ ನೀಡಿದ ಉತ್ತರ ಕೇಳಿ ಗಾಬರಿಯಾಯಿತು.

“ಗೊತ್ತಿಲ್ಲ. ಆದರೆ ಎಲ್ಲ ಕಡೆ ವಿದ್ಯುತ್ ಕಂಬದಿಂದ ನೇರವಾಗಿ ಸಂಪರ್ಕ ತೆಗೆದುಕೊಳ್ಳುತ್ತಾರೆ” ಎಂದನು.

ಅಂದರೆ, ದೇವರ ಹೆಸರಿನಲ್ಲಿ ನಡೆಯುವ ಉತ್ಸವದಲ್ಲಿಯೂ ವಿದ್ಯುತ್ ಕಳ್ಳತನ ನಡೆಯುತ್ತಿದೆಯೇ? ದೇವರ ಆರಾಧನೆಗಾಗಿ ಮಾಡುವ ಕೆಲಸದಲ್ಲಿಯೇ ವಂಚನೆಗೆ ಅವಕಾಶವಿದೆಯೇ? ದೇವರನ್ನು ಪೂಜಿಸುವುದಕ್ಕೂ ಅಪ್ರಾಮಾಣಿಕತೆಯ ಹಾದಿ ಹಿಡಿಯಬೇಕೇ?

ಉಳಿದ ಆಡಂಬರಗಳಿಗೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುವಾಗ ಬಳಸಿದ ವಿದ್ಯುತ್‌ಗೆ ನ್ಯಾಯಯುತವಾಗಿ ಹಣ ಪಾವತಿಸುವುದು ಏಕೆ ಕಷ್ಟವಾಗಬೇಕು? ವಿದ್ಯುತ್ ಸಂಪರ್ಕಕ್ಕೆ ನಿಯಮಾನುಸಾರ ಅನುಮತಿ ಪಡೆದು, ಬಳಸಿದ ವಿದ್ಯುತ್‌ಗೆ ಹಣ ಪಾವತಿಸಿ ಉತ್ಸವ ನಡೆಸಲು ಸಾಧ್ಯವಿಲ್ಲವೇ? ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿದರೆ, ಕೊನೆಗೆ ನಾವೇ ಅಪರಾಧಿಗಳಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಆತಂಕವೂ ಇದೆ. ಹೇಳಿಕೇಳಿ ಇದು ದೇವರ ಕೆಲಸ; ಅದಕ್ಕೆ ಅಡ್ಡಿಪಡಿಸಿದರೆ ದೇವರು ಶಾಪ ಕೊಡುತ್ತಾರೆ ಎಂಬ ಭಾವನೆ ಹಲವರಲ್ಲಿದೆ. ಹೀಗಾಗಿ ತಪ್ಪನ್ನು ಪ್ರಶ್ನಿಸುವವರೇ ತಪ್ಪಿತಸ್ಥರಂತೆ ಕಾಣುತ್ತಾರೆ. ನಗರದಲ್ಲಿ ನಡೆಯುವ ಎಲ್ಲ ಉತ್ಸವಗಳಲ್ಲಿಯೂ ಇದೇ ರೀತಿಯಲ್ಲಿ ವಿದ್ಯುತ್ ಬಳಸಲಾಗುತ್ತಿದ್ದರೆ, ವಿದ್ಯುತ್ ಕೊರತೆಯ ಬಗ್ಗೆ ಸರ್ಕಾರ ಮಾಡುವ ಮನವಿಗಳಿಗೆ ಏನು ಅರ್ಥ ಉಳಿಯುತ್ತದೆ? ಇಂತಹ ಅಕ್ರಮಗಳನ್ನು ತಡೆಯಬೇಕಾದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ವ್ಯವಸ್ಥೆಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ನಿಯಮಗಳನ್ನು ಪಾಲಿಸುವವರ ಮೇಲೆಯೇ ಅನ್ಯಾಯವಾಗುವುದಿಲ್ಲವೇ?

ವಾಸ್ತವದಲ್ಲಿ ಯಾವುದಕ್ಕೆ ಭಯಪಡಬೇಕೋ ಅದಕ್ಕೆ ನಾವು ಭಯಪಡುವುದಿಲ್ಲ. ತಪ್ಪು ಮಾಡುವುದು, ಇತರರಿಗೆ ತೊಂದರೆ ಕೊಡುವುದು, ಸಾರ್ವಜನಿಕ ಸಂಪತ್ತನ್ನು ದುರುಪಯೋಗಪಡಿಸಿಕೊಳ್ಳುವುದು ಇವುಗಳ ಬಗ್ಗೆ ನಮಗೆ ಭಯವಿಲ್ಲ. ಆದರೆ ಇಂತಹ ತಪ್ಪುಗಳನ್ನು ಪ್ರಶ್ನಿಸಿದರೆ ದೇವರಿಗೆ ಅಪಚಾರವಾಗುತ್ತದೆ ಎಂಬ ಭಯ ಮಾತ್ರ ನಮ್ಮನ್ನು ಕಾಡುತ್ತದೆ.

ದೇವರಿಗೆ ಬೇಕಾಗಿರುವುದು ಭಕ್ತಿಯೇ ಹೊರತು ಆಡಂಬರವಲ್ಲ

ದೇವರ ಆರಾಧನೆಯಾಗಲಿ, ಹಬ್ಬ ಹರಿದಿನಗಳಾಗಲಿ, ಅವು ಮನುಷ್ಯನನ್ನು ಸನ್ಮಾರ್ಗದತ್ತ ಪ್ರೇರೇಪಿಸುವ ಸಾಧನಗಳಾಗಬೇಕು. ನಮ್ಮ ಮನಸ್ಸನ್ನು ಪರಿಶುದ್ಧಗೊಳಿಸುವ, ಸತ್ಯ ಮತ್ತು ಧರ್ಮದ ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡುವ, ಪರಸ್ಪರ ಪ್ರೀತಿ ಮತ್ತು ಸಹಬಾಳ್ವೆಯನ್ನು ಬೆಳೆಸುವ ಅವಕಾಶಗಳಾಗಬೇಕು. ದೇವರ ಅನುಗ್ರಹವನ್ನು ಬಯಸುವ ನಾವು ಮೊದಲು ನಮ್ಮ ನಡವಳಿಕೆಯನ್ನು ಪರಿಶುದ್ಧಗೊಳಿಸಿಕೊಳ್ಳಬೇಕಲ್ಲವೇ? ದೇವರ ಹೆಸರಿನಲ್ಲಿ ನಡೆಯುವ ಆಚರಣೆಗಳಿಂದಲೇ ಇತರರಿಗೆ ತೊಂದರೆಯಾಗುತ್ತಿದ್ದರೆ, ಸಾರ್ವಜನಿಕ ಸಂಪತ್ತಿನ ದುರುಪಯೋಗವಾಗುತ್ತಿದ್ದರೆ, ಅಪ್ರಾಮಾಣಿಕತೆಗೆ ಪ್ರೋತ್ಸಾಹ ದೊರೆಯುತ್ತಿದ್ದರೆ, ಅಂತಹ ಆಚರಣೆಗಳ ಸಾರ್ಥಕತೆಯಾದರೂ ಏನು?

ಭಕ್ತಿ ಎಂದರೆ ಕೇವಲ ದೇವರ ಪ್ರತಿಮೆಯನ್ನು ಪ್ರತಿಷ್ಠಾಪಿಸುವುದಲ್ಲ. ಧ್ವನಿವರ್ಧಕಗಳನ್ನು ಅಳವಡಿಸುವುದಲ್ಲ. ಬೀದಿಯುದ್ದಕ್ಕೂ ವಿದ್ಯುದ್ದೀಪಗಳನ್ನು ಬೆಳಗಿಸುವುದೂ ಅಲ್ಲ. ಇವೆಲ್ಲಕ್ಕಿಂತ ಮುಖ್ಯವಾದದ್ದು ದೇವರು ಬೋಧಿಸುವ ಸತ್ಯ, ಧರ್ಮ, ದಯೆ, ಶಾಂತಿ ಮತ್ತು ಪ್ರಾಮಾಣಿಕತೆಯನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು.

ದೇವರ ಹೆಸರಿನಲ್ಲಿ ನಡೆಯುವ ಆಚರಣೆಗಳು ಮನುಷ್ಯನನ್ನು ಒಳ್ಳೆಯವನನ್ನಾಗಿ ಮಾಡದಿದ್ದರೆ, ಆ ಆಚರಣೆಗಳ ಉದ್ದೇಶವನ್ನೇ ನಾವು ಪ್ರಶ್ನಿಸಬೇಕಾಗುತ್ತದೆ. ದೇವರನ್ನು ಆರಾಧಿಸುವ ಹೆಸರಿನಲ್ಲಿ ಮನುಷ್ಯನಿಗೆ ವಂಚನೆ ಮಾಡುವುದು, ಸಮಾಜಕ್ಕೆ ತೊಂದರೆ ಕೊಡುವುದು ಮತ್ತು ಸಾರ್ವಜನಿಕ ಸಂಪತ್ತನ್ನು ದುರುಪಯೋಗಪಡಿಸಿಕೊಳ್ಳುವುದು ನಿಜವಾದ ಭಕ್ತಿಯೇ? ದೇವರಿಗೆ ಬೇಕಾಗಿರುವುದು ಆಡಂಬರವೋ, ಪರಿಶುದ್ಧವಾದ ಮನಸ್ಸೋ?

ಈ ಪ್ರಶ್ನೆಗಳಿಗೆ ನಮ್ಮ ಆತ್ಮಸಾಕ್ಷಿಯೇ ಉತ್ತರಿಸಬೇಕು. ದೇವರ ಹೆಸರಿನಲ್ಲಿ ನಡೆಯುವ ಆಚರಣೆಗಳು ದೇವರ ಗುಣಗಳನ್ನು ನಮ್ಮಲ್ಲಿ ಬೆಳೆಸಬೇಕು. ಇಲ್ಲದಿದ್ದರೆ ಅವು ಕೇವಲ ಹೊರಗಿನ ಪ್ರದರ್ಶನಗಳಾಗಿ ಉಳಿಯುತ್ತವೆ. ಆಗ ದೇವರನ್ನು ವಂಚಿಸುವುದಕ್ಕಿಂತ ಹೆಚ್ಚಾಗಿ, ನಮ್ಮ ಆತ್ಮಸಾಕ್ಷಿಯನ್ನೇ ನಾವು ವಂಚಿಸಿದಂತಾಗುತ್ತದೆ.

No comments:

Post a Comment