Friday, November 27, 2026

ದಂಡಂ ದಶಗುಣಂ

  ಬಾಲ್ಯದಲ್ಲಿ ಶಾಲೆ ಹೋಗುತ್ತಿರುವಾಗ ಕಾರಣಾಂತರದಿಂದ  ತರಗತಿಗೆ ಕೆಲವು ಸಲ  ಅಧ್ಯಾಪಕರು ಬರುತ್ತಿರಲಿಲ್ಲ.  ಆಗ ಯಾರಾದರು ಒಬ್ಬ ವಿದ್ಯಾರ್ಥಿ ಅಥವಾ ವಿದ್ಯಾರ್ಥಿಯನ್ನು ನಿಲ್ಲಿಸಿ ತರಗತಿಯಲ್ಲಿ ಮಾತನಾಡುವವರ ಹೆಸರನ್ನು ಬರೆಯುವಂತೆ ಸೂಚಿಸಲಾಗುತ್ತಿತ್ತು. ಆ ವಿದ್ಯಾರ್ಥಿ ತರಗತಿಯಲ್ಲಿ ಯಾರಾದರೂ ಪಕ್ಕದಲ್ಲಿದ್ದವರಲ್ಲಿ ಪಿಸುಗುಟ್ಟಿದರೂ ಸಾಕು ಒಂದೋ ಕರಿಹಲಗೆಯಲ್ಲಿ ಇಲ್ಲ ಪುಟ್ಟ ಕಾಗದದಲ್ಲಿ ಹೆಸರನ್ನು ಬರೆದು ನಂತರ ನೇಮಿಸಿದ ಅಧ್ಯಾಪಕರಿಗೆ ಸಲ್ಲಿಸುತ್ತಿದ್ದ. ಹಲವು ಸಲ ನಮ್ಮ ಕ್ಲಾಸಿನಲ್ಲಿ ಇದಕ್ಕೆ ನಾನೇ ನಿಲ್ಲುತ್ತಿದ್ದೆ. ಪಾಪ ಮಕ್ಕಳು ಪಿಸುಗುಟ್ಟದೆ ಮೌನವಾಗಿ ಒಂದು ರೀತಿಯ ಸೆರೆವಾಸವನ್ನು ಅನುಭವಿಸುತ್ತಿದ್ದದ್ದು ಈಗ ನೆನಪಿಸಿಕೊಂಡರೆ ನಗು ಬರುತ್ತದೆ. ಆನಂತರ ಅಲ್ಲಿ ಹೆಸರಿದ್ದ ವಿದ್ಯಾರ್ಥಿಗೆ ಒಂದೋ ಏಟು ಇಲ್ಲವಾದರೆ ಏನಾದರೂ ಒಂದು ಶಿಕ್ಷೆ ಕಾದಿರುತ್ತಿತ್ತು. ಇದೊಂದು ರೀತಿಯ ಅಪರಾಧ ಮತ್ತು ಶಿಕ್ಷೆಯ ಪಾಠ ಬಾಲ್ಯದಲ್ಲೆ ಆಗುತ್ತಿತ್ತು.  ಮುಂದಿನ ಜೀವನ ತಪ್ಪು ಶಿಕ್ಷೆ ದಂಡ ಇದರಲ್ಲೇ ಸುತ್ತುವರಿಯುತ್ತದೆ ಎಂಬುದು ಆಗ ಅರಿವಿರುವುದಿಲ್ಲ. ಆದರೆ ಜೀವನ ಎಂಬುದು ಇದೇ ಆಗಿದೆ. ಶಿಕ್ಷೆ ದಂಡ ಇದರಲ್ಲೇ ಸುತ್ತುತ್ತಿರುತ್ತದೆ. 



ಬಾಲ್ಯದಲ್ಲಿ ಶಾಲೆ ಹೋಗುತ್ತಿರುವಾಗ ಕಾರಣಾಂತರದಿಂದ  ತರಗತಿಗೆ ಕೆಲವು ಸಲ  ಅಧ್ಯಾಪಕರು ಬರುತ್ತಿರಲಿಲ್ಲ.  ಆಗ ಯಾರಾದರು ಒಬ್ಬ ವಿದ್ಯಾರ್ಥಿ ಅಥವಾ ವಿದ್ಯಾರ್ಥಿಯನ್ನು ನಿಲ್ಲಿಸಿ ತರಗತಿಯಲ್ಲಿ ಮಾತನಾಡುವವರ ಹೆಸರನ್ನು ಬರೆಯುವಂತೆ ಸೂಚಿಸಲಾಗುತ್ತಿತ್ತು. ಆ ವಿದ್ಯಾರ್ಥಿ ತರಗತಿಯಲ್ಲಿ ಯಾರಾದರೂ ಪಕ್ಕದಲ್ಲಿದ್ದವರಲ್ಲಿ ಪಿಸುಗುಟ್ಟಿದರೂ ಸಾಕು ಒಂದೋ ಕರಿಹಲಗೆಯಲ್ಲಿ ಇಲ್ಲ ಪುಟ್ಟ ಕಾಗದದಲ್ಲಿ ಹೆಸರನ್ನು ಬರೆದು ನಂತರ ನೇಮಿಸಿದ ಅಧ್ಯಾಪಕರಿಗೆ ಸಲ್ಲಿಸುತ್ತಿದ್ದ. ಹಲವು ಸಲ ನಮ್ಮ ತರಗತಿಯಲ್ಲಿ ಇದಕ್ಕೆ ನಾನೇ ನಿಲ್ಲುತ್ತಿದ್ದೆ. ಪಾಪ ಮಕ್ಕಳು ಪಿಸುಗುಟ್ಟದೆ ಮೌನವಾಗಿ ಒಂದು ರೀತಿಯ ಸೆರೆವಾಸವನ್ನು ಅನುಭವಿಸುತ್ತಿದ್ದದ್ದು ಈಗ ನೆನಪಿಸಿಕೊಂಡರೆ ನಗು ಬರುತ್ತದೆ. ಆನಂತರ ಅಲ್ಲಿ ಹೆಸರಿದ್ದ ವಿದ್ಯಾರ್ಥಿಗೆ ಒಂದೋ ಏಟು ಇಲ್ಲವಾದರೆ ಏನಾದರೂ ಒಂದು ಶಿಕ್ಷೆ ಕಾದಿರುತ್ತಿತ್ತು. ಇದೊಂದು ರೀತಿಯ ಅಪರಾಧ ಮತ್ತು ಶಿಕ್ಷೆಯ ಪಾಠ ಬಾಲ್ಯದಲ್ಲೆ ಆಗುತ್ತಿತ್ತು.  ಮುಂದಿನ ಜೀವನ ತಪ್ಪು ಶಿಕ್ಷೆ ದಂಡ ಇದರಲ್ಲೇ ಸುತ್ತುವರಿಯುತ್ತದೆ ಎಂಬುದು ಆಗ ಅರಿವಿರುವುದಿಲ್ಲ. ಆದರೆ ಜೀವನ ಎಂಬುದು ಇದೇ ಆಗಿದೆ. ಶಿಕ್ಷೆ ದಂಡ ಇದರಲ್ಲೇ ಸುತ್ತುತ್ತಿರುತ್ತದೆ. 

    ಈಗ ವಾಹನ ಇರದ ಮನೆ ಒಂದೂ ಇರಲಾರದು. ಬಾಲ್ಯದಲ್ಲಿ ಕೆಲವು ಮನೆಯಲ್ಲಿ ಸೈಕಲು ಇರುತ್ತಿತ್ತು. ನಗರದಲ್ಲಿ ಇದೇ ಸೈಕಲ್ ನಲ್ಲಿ ಎರಡು ಜನ ಸವಾರಿ ಮಾಡಿದರೆ ಇಲ್ಲ ಸೈಕಲ್ ಗೆ ಡೈನಂ ಲೈಟ್ ಇಲ್ಲದೇಯೋ ಹೋಗಿ ದಂಡ ಕಟ್ಟಿಸುವುದೋ ಇಲ್ಲ ಸೈಕಲ್ ಚಕ್ರದ ಗಾಳಿ ತೆಗೆಸುವ ಶಿಕ್ಷೆಯ ಅನುಭವ ಹಲರಿಗೆ ಇರಬಹುದು. ಈಗ ವಾಹನ ಇರದ ಮನೆಯೂ ಇಲ್ಲ, ವಾಹನ ಚಲಾಯಿಸದವರೂ ಇರುವುದು ಅಪರೂಪ. ಹೀಗೆ ವಾಹನ ಚಲಾಯಿಸುವವರಲ್ಲಿ ದಂಡ ಕಟ್ಟದವರು ಯಾರೂ ಇರುವುದಕ್ಕೆ ಸಾಧ್ಯ ಇಲ್ಲ ಅಂತ ನನ್ನ ಅನಿಸಿಕೆ. ಅಷ್ಟಕ್ಕೂ  ಯಾರಾದರೂ ಇದ್ದರೆ ನಿಯಮ ಪಾಲನೆಯಲ್ಲಿ ಅವರನ್ನು ಶ್ರೇಷ್ಠ ವ್ಯಕ್ತಿ ಎನ್ನಬೇಕು. 

ಈಗ ಜೀವನ ಎಂದರೆ ದಂಡ ಕಟ್ಟುವುದೇ ಆಗಿದೆ. ಒಂದು ರೀತಿಯಲ್ಲಿ ನಮ್ಮ ಬದುಕು ದಂಡದ ಬದುಕು ಒಂದರ್ಥದಲ್ಲಿ ದಾಸ ವರೇಣ್ಯರು  ಹೇಳುವಂತೆ ಇದು ವ್ಯರ್ಥ ಬದುಕು. ಮುಟ್ಟಿದ್ದಕ್ಕೆ ತೆಗೆದದ್ದಕ್ಕೆ ಹೋದದ್ದಕ್ಕೆ ಎಲ್ಲ ದಂಡ. ಮೊದಲೆಲ್ಲ ಸರಕಾರದ ಅಢಳಿತ ತೆರಿಗೆಯಲ್ಲಿ ಎಂಬುದು ಇತ್ತು. ಈಗ ತೆರಿಗೆಗಿಂತ ಜಾಸ್ತಿ ಕಟ್ಟಿಸಿಕೊಳ್ಳುವ ದಂಡದ ಮೊತ್ತದಲ್ಲೇ ಸರಕಾರ ನಡೆಯುತ್ತದೆ ಎಂದರೆ ಅತಿಶಯವಲ್ಲ. ಬ್ಯಾಂಕ್ ಖಾತೆ ಇರದವರು ಇರಲಾರರು. ಇದ್ದರೆ, ಅಲ್ಲಿಯೂ ಕನಿಷ್ಠ ಜಮಾ ಮೊತ್ತ (minimum balance)  ಇಲ್ಲದೆ ದಂಡ ಕಟ್ಟಬೇಕಾಗುತ್ತದೆ. ವಾಹನ ಚಲಾಯಿಸುವಾಗ ಸಾರಿಗೆ ನಿಯಮ ಉಲ್ಲಂಘಿಸಿದರೆ, ವಾಹನದ ವಾಯು ಮಾಲಿನ್ಯವೋ ವಿಮೆ ಕಟ್ಟದ್ದಿದ್ದರೆ ಎಲ್ಲದಕ್ಕೂ ದಂಡ...ಒಂದರ್ಥದಲ್ಲಿ ರಸ್ತೆಗೆ ಇಳಿದರೆ ದಂಡ ಕಟ್ಟದೇ ಮನೆಗೆ ಬಂದರೆ ಅದು ಯಾವುದೋ ಭಾಗ್ಯ ಎನ್ನಬೇಕು. 

ನಾವು ಯಾವುದಾದರೂ ವ್ಯಾಪಾರ ಉದ್ದಿಮೆಯೋ ನಡೆಸುತ್ತಿದ್ದರೆ ಮೊದಲು ಒಂದಿಷ್ಟು ನಿಯಮಾನುಸಾರ ತೆರಿಗೆ ಪಾವತಿಸಿದರೆ ಆಯಿತು. ಈಗ ಹಾಗಿಲ್ಲ, ಎಷ್ಟೇ ನಿಯಮ ಪಾಲಿಸಿದರೂ ಎಲ್ಲಾದರೂ ಒಂದು ಲೋಪ ಇದ್ದೇ ಇರುತ್ತದೆ. ಅದಕ್ಕೆ ದಂಡ ಕಟ್ಟಬೇಕಾಗುತ್ತದೆ. ದಂಡ ಮಾತ್ರವಲ್ಲ ಅದಕ್ಕೆ ಬಡ್ಡಿಯೂ ಕಟ್ಟ ಬೇಕು.  ಅದೂ ತೆರಿಗೆಯ ಮೂರು ಪಾಲು. ಕೆಲವು ಕಡೆ ಇನ್ನೂ ಜಾಸ್ತಿ. ಕಾನೂನು ರೀತಿಯಲ್ಲಿ ಎಲ್ಲವೂ ಸರಿ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇ ಬೇಕು. ಆದರೆ ಕಾನೂನು ಎಂಬುದು ನೀತಿಯ ಜತೆಗೆ ಇರುವುದಿಲ್ಲ. ನೀತಿ ಒಂದು ಹೇಳಿದರೆ ಕಾನೂನು ಇನ್ನೊಂದು ಹೇಳುತ್ತದೆ. ನೂರು ರೂಪಾಯಿ ತೆರಿಗೆ ಕಟ್ಟುವಲ್ಲಿ ಸಾವಿರಾರು ರೂಪಾಯಿ ಬಡ್ಡಿ ದಂಡ ಕಟ್ಟುವಲ್ಲಿಗೇ ಹೋದರೆ ಮತ್ತೆ ಲಾಭ ಗಳಿಸಿ ಜೀವನ ಸಾಗುವುವುದಾದರೂ ಹೇಗೆ. ಇಷ್ಟಿದ್ದರೂ ಕೆಲವರು ವ್ಯಾಪಾರ ವ್ಯವಹಾರ ಮಾಡುವುದನ್ನು ನೋಡುವಾಗ ಹೇಗಾದರೂ ಬದುಕಬೇಕು ಎಂಬ ಇವರ ಛಲ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ.  

ಮನುಷ್ಯ ಹುಟ್ಟುವುದೇ ಒಂದು ಅಪರಾಧ, ಹೀಗೆ ಹೇಳುತ್ತಾರೆ. ಯಾವುದೋ ಜನ್ಮದ ಪಾಪಕ್ಕೆ ಈಗ ಹುಟ್ಟಿಬಂದಿದ್ದೇವೆ. ಹುಟ್ಟಿಬಂದ ಮೇಲೆ ಎಲ್ಲ ಅನುಭಸಲೇ ಬೇಕು. ಹಾಗಾಗಿ ಹುಟ್ಟಿ ಬಂದನಂತರ ಮನುಷ್ಯ ತಪ್ಪು ಮಾಡದೇ ಇರಲಾರ. ತಪ್ಪು ಮಾಡದೇ ಇದ್ದ ಮನುಷ್ಯ ಯಾರಾದರೂ ಇದ್ದಾರ ಅಂತ ಕೇಳಿದರೆ ಉತ್ತರಿಸುವುದು ಕಷ್ಟ. ಯಾಕೆಂದರೆ ಒಂದಲ್ಲ ಒಂದು ತಪ್ಪು ತಿಳಿದೋ ತಿಳಿಯದೆಯೋ ತಪ್ಪು  ಮಾಡಿಯೇ ಮಾಡುತ್ತಾರೆ. ಮನೆಯೊಳಗಿನ ಕಸ ಎಸೆಯುವುದಾದರೂ ಸ್ವಲ್ಪ ವೆತ್ಯಾಸವಾದರೂ ಅದಕ್ಕೆ ದಂಡ. ಒಂದು ಸಲ ನಮ್ಮ ಮನೆಯಿಂದ ಯಾರೋ ಒಂದು ಲಕೋಟೆಯನ್ನು ಏನೋ ಕಟ್ಟಿಸಿ ಕೊಂಡೊಯ್ದಿದ್ದರು. ಅವರು ಕಸದ ಜತೆಗೆ ಎಲ್ಲೋ ಅದನ್ನು ಎಸೆದೆದಿದ್ದರು. ಸರಿ, ನಗರ ಪಾಲಿಕೆ ಸಿಬ್ಬಂದಿಗಳಿಗೆ ಕಸದ ಜತೆಗೆ ನಮ್ಮ ಮನೆ ವಿಳಾಸ ಇದ್ದ ಲಕೋಟೆ ಸಿಕ್ಕಿ ಸೀದಾ ನಮ್ಮ ಮನೆಗೆ ಬಂದು ನಾವೇ ಕಸ ಎಸೆದಿದ್ದು ಅಂತ ಎರಡು ಸಾವಿರ ದಂಡ ಪೀಕಿದ್ದರು. ಹೀಗೆ ಮಾಡದ ತಪ್ಪಿಗೆ ಕೆಲವು ಸಲ ದಂಡ ಕಟ್ಟಬೇಕಾಗುತ್ತದೆ.  

ಇಂದು ದಂಡ ಇಲ್ಲದೆ ಬದುಕೇ ಇಲ್ಲ. ನಿಯಮ ಮಾಡುವುದೇ ತಪ್ಪು ಮಾಡುವುದಕ್ಕೆ ಮತ್ತು ದಂಡ ಸಂಗ್ರಹಿಸುವುದಕ್ಕೆ ಎಂಬಂತಾಗಿದೆ.  ಬಸ್ಸಿನಲ್ಲಿ ನಮ್ಮದಲ್ಲದ ಸೀಟಿನಲ್ಲಿ ಕುಳಿತರೂ ದಂಡ. ಬಸ್ಸಿನಲ್ಲಿ ಜಾಗವಿಲ್ಲದೆ ನಿಂತರೂ ದಂಡ...ದಂಡಕ್ಕೆ ಪರಿಧಿ ಎಂಬುದಿಲ್ಲ.  ಸರಕಾರ ಮೊದಲೆಲ್ಲ ಯಾವುದಕ್ಕೆ ತೆರಿಗೆ ಹಾಕಬೇಕು ಎಂದು ಅಧ್ಯಾಯನ ಮಾಡಿದರೆ ಈಗ ಯಾವುದಕ್ಕೆ ದಂಡ ಹಾಕಬೇಕು ಎಂದು ಹುಡುಕುತ್ತದೆ. ದಂಡದ ಉದ್ದೇಶ ತಪ್ಪನ್ನು ತಿದ್ದುವುದೇ ಹೊರತು ತಪ್ಪು ಮಾಡಿದವನನ್ನು ದಂಡಿಸುತ್ತಲೇ ಇರುವುದಲ್ಲ. ಆದರೆ ಇಂದು ದಂಡ ಎಂಬುದು ತಪ್ಪು ತಿದ್ದುವ ಸಾಧನವಾಗಿ ಉಳಿದಿಲ್ಲ; ಅದು ಬದುಕಿನ ಅವಿಭಾಜ್ಯ ಅಂಗವೇ ಆಗಿಬಿಟ್ಟಿದೆ. ಹಿಂದೆ ಅಧಿಕಾರದ ಸಂಕೇತವಾಗಿದ್ದ ದಂಡ ಇಂದು ಜನಸಾಮಾನ್ಯರ ಬದುಕಿನ ಮೇಲೆ ಬೀಳುವ ದಂಡನೆಯ ಸಂಕೇತವಾಗಿದೆ. ಹೀಗಾಗಿ ಇಂದಿನ ಬದುಕಿನಲ್ಲಿ ತಪ್ಪು ಮಾಡದಿರುವುದಕ್ಕಿಂತ ದಂಡದಿಂದ ತಪ್ಪಿಸಿಕೊಳ್ಳುವುದೇ ದೊಡ್ಡ ಸಾಧನೆಯಾಗಿದೆ. ನಿಜಕ್ಕೂ ಇದು ದಂಡಂ ದಶಗುಣಂ!


No comments:

Post a Comment