ಇತ್ತೀಚೆಗೆ ಶಬರಿಮಲೆ ಯಾತ್ರೆಯಲ್ಲಿ ನಸುಕಿಗೆ ಪಂಪಾ ನದಿ ತೀರಕ್ಕೆ ಬಂದು ತಲುಪಿದೆವು. ಪಂಪಾನದಿಯಲ್ಲಿ ಪವಿತ್ರ ಸ್ನಾನ ಮಾಡಿ ಮಲೆ ಏರುವುದಕ್ಕೆ ತೊಡಗಬೇಕಿತ್ತು. ಪಂಪಾನದಿಯಲ್ಲಿ ಸ್ನಾನ ಮಾಡಬೇಕಲ್ಲ ಎಂಬ ಆತಂಕವೇ ಮನಸ್ಸಿನಲ್ಲಿತ್ತು. ವಾಸ್ತವದಲ್ಲಿ ಈ ಆತಂಕಕ್ಕೆ ಅವಕಾಶ ಇರಬಾರದಾಗಿತ್ತು. ಹಿಂದೆ ಬಂದಾಗ ಇಲ್ಲಿನ ಪರಿಸ್ಥಿತಿ ನೋಡಿದ್ದೆ. ಎಲ್ಲೆಂದರಲ್ಲಿ ಬೇಕಾ ಬಿಟ್ಟಿಯಾಗಿ ಹಾಕಿದ ವಸ್ತ್ರಗಳು, ಅದೂ ಒಳ ವಸ್ತ್ರ ಧೋತಿ ಇನ್ನಿತರ ಚಿಂದಿ ಚಿಂದಿ ವಸ್ತ್ರಗಳು. ಅವುಗಳನ್ನು ತುಳಿದು ಸ್ನಾನ ಮಾಡುವುದೆಂದರೆ ಇನ್ನಿಲ್ಲದ ಮಾನಸಿಕ ಹಿಂಸೆ. ಇದು ಯಾವ ದೇವರಿಗೆ ಪ್ರೀತಿ ಎಂಬಂತೆ ಪ್ರಶ್ನಿಸುವಂತಾಗುತ್ತದೆ. ನಸು ಗತ್ತಲೆಯಲ್ಲಿ ಕಾಲಿಗೆ ವಸ್ತ್ರಗಳು ಸಿಕ್ಕಿಗೊಂಡಾಗ ಅಸಹ್ಯವಾಗುತ್ತದೆ. ಆದರೆ ಪವಿತ್ರರಾಗಬೇಕಾದರೆ ಅಲ್ಲಿ ಸ್ನಾನ ಮಾಡುವುದು ಅನಿವಾರ್ಯ. ಯಾವ ಬಗೆಯಲ್ಲಿ ಪವಿತ್ರರಾಗುವುದು ಎಂದು ಮನಸ್ಸು ಪ್ರಶ್ನಿಸುತ್ತದೆ. ಪವಿತ್ರತೆ ಎಂಬುದು ಒಂದು ಮಾನಸಿಕ ಸ್ಥಿತಿ. ಅದು ಅನುಭವಕ್ಕೆ ಬರಬೇಕು. ಮನಸ್ಸು ಪರಿಶುದ್ದವಾಗದೇ ಇದ್ದರೆ ಪಾವಿತ್ರ್ಯತೆ ಪರಿಪೂರ್ಣವಾಗುವುದಿಲ್ಲ. ಆದರೆ ಇಲ್ಲಿ ಮನಸ್ಸು ಆತಂಕದಿಂದ ಕ್ಷೋಭೆಗೆ ಒಳಗಾಗುತ್ತದೆ.
ನಸುಕಿನ ಕತ್ತಲಲ್ಲಿ ಆತಂಕದಿಂದಲೇ ಹೆಜ್ಚೆ ಇಡುತ್ತಾ ಸ್ನಾನ ಘಟ್ಟದ ಮೆಟ್ಟಲು ನೋಡಿದರೆ ಮೆಟ್ಟಲಲ್ಲೆ ಚೆಲ್ಲಾ ಪಿಲ್ಲಿಯಾಗಿದ್ದ ವಸ್ತ್ರಗಳು ಪೇಸ್ಟ್ ಗುಟ್ಕಾ ಪ್ಯಾಕೆಟ್ ಗಳು. ಮಾಲೆ ಹಾಕಿದ ಮೇಲೆ ಕೆಟ್ಟದ್ದನ್ನು ಯೋಚಿಸಬಾರದು, ಕೆಟ್ಟದ್ದನ್ನು ಮಾತನಾಡಬಾರದು. ಕೆಟ್ಟ ಕಾರ್ಯ ಮಾಡಬಾರದು. ವಾಸ್ತವದಲ್ಲಿ ಇದು ಸಾಧ್ಯವಾಗದಿರುವಾಗ ಒಂದು ಸಲ ಯೋಚಿಸಿದೆ ದೇವರು ವಿಧಿಸುವ ಸತ್ವ ಪರೀಕ್ಷೆಯ ಸ್ವರೂಪ ಇದು ಒಂದು ಆಗಿರಬಹುದು. ಕೆಟ್ಟದ್ದನ್ನು ಅನುಭವಿಸುವುದೂ ಸಹ ಒಂದು ಬಗೆಯ ದೈವ ಪರೀಕ್ಷೆ. ಆದರೆ ಕೆಟ್ಟದನ್ನು ದಯಪಾಲಿಸುವ ಭಕ್ತರ ಮನಸ್ಥಿತಿಯಂತು ಯಾವ ದೇವ ದರ್ಶನದಲ್ಲೂ ಪರಿಹಾರವಾಗದು. ದೇವರು ಪ್ರಹ್ಲಾದನನ್ನು ಸೃಷ್ಟಿಸುವ ಮೊದಲು ಹಿರಣ್ಯಾಕ್ಷ ಹಿರಣ್ಯ ಕಶಿಪುರವರನ್ನು ಸೃಷ್ಟಿಸಿದ್ದ. ಅದು ಪುರಾಣದಲ್ಲಿ, ಆದರೆ ಇಲ್ಲಿ ಕೆಟ್ಟ ಸೃಷ್ಟಿ ಯಾಗಿ ಒಳ್ಳೆಯ ಪ್ರಹ್ಲಾದ ಸೃಷ್ಟಿ ಮಾತ್ರ ಮರೀಚಿಕೆ.
ಎರಡು ವರ್ಷದ ಹಿಂದೆ ಕಾಶಿಗೆ ಹೋದಾಗ ಗಂಗಾಸ್ನಾನಕ್ಕೆ ತೆರಳಿದ್ದೆ. ಅಲ್ಲಿ ಸಾಕಷ್ಟು ಸ್ವಚ್ಛತೆಗೆ ಆದ್ಯತೆ ಇದ್ದರೂ ಎಲ್ಲೆಂದರಲ್ಲಿ ಹೂವು ಕೊಳೆತು ನಾರುವ ಸ್ಥಿತಿಗೆ ತಲುಪಿತ್ತು. ಮುಳುಗು ಹಾಕಿದರೆ ಅವುಗಳೆಲ್ಲ ಮೈಗೆ ಮುತ್ತಿಕೊಳ್ಳುವಾಗ ಗಂಗೆಯಲ್ಲಿ ಪವಿತ್ರರಾಗುವ ಬಗೆ ಹೇಗೆ ಅಂತ ಯೋಚಿಸುತ್ತಿತ್ತು. ಇನ್ನು ವಿಸರ್ಜಿಸಿದ ಪಿಂಡದ ಶೇಷ ಭಾಗಗಳನ್ನು ನೋಡಿದಾಗ ಗಂಗೆಯಲ್ಲೂ ಮೋಕ್ಷ ಸಿಗದ ಪ್ರೇತಾತ್ಮಗಳ ದರ್ಶನವಾದಂತಾಯಿತು. ಬಹುಶಃ ಈ ಪ್ರೇತಾತ್ಮಗಳಂತೆ ನಾವು ಗಂಗೆಯಲ್ಲಿ ಮಿಂದರೂ ಅತೃಪ್ತರಾಗಿಯೇ ಇರಬೇಕು ಅನ್ನಿಸ್ತುತ್ತಿತ್ತು. ಇನ್ನು ವಸ್ತ್ರ ಬದಲಿಸುವ ಕೋಣೆಗಳು ಅಲ್ಲಲ್ಲಿ ಇದ್ದರೂ ಅಲ್ಲಿಯೂ ಬಿಟ್ಟು ಹೋದ ವಸ್ತ್ರಗಳು ಉಡುಪುಗಳು ಸ್ನಾನ ಕೇವಲ ಸಂಕೇತವಾಗುವಂತೆ ಮಾಡಿತ್ತು. ಗಂಗೆಯಲ್ಲೂ ಪವಿತ್ರರಾಗಲು ಬಿಡದ ಜೀವಂತ ಪ್ರೇತಗಳಿಗೆ ಮೋಕ್ಷ ಯಾವಾಗ ಸಿಗಬಹುದು?
ಇಂದು ಹೆಚ್ಚಿನ ಎಲ್ಲಾ ಕ್ಷೇತ್ರಗಳ ದುರವಸ್ಥೆ ಇದು. ಧರ್ಮಸ್ಥಳ ಸುಬ್ರಹ್ಮಣ್ಯ ಮಂತ್ರಾಲಯ ಎಲ್ಲೆಲ್ಲಿ ನದಿ ಸ್ನಾನದ ಅವಕಾಶ ಇದೆಯೋ ಅಲ್ಲೆಲ್ಲ ಮಾನವ ನಿರ್ಮಿತ ಮಾಲಿನ್ಯದ ಅವಶೇಷಗಳದೇ ಪಾರುಪತ್ಯ. ನದಿ ನೀರು ಕಾಣುವಾಗ ಸ್ಫಟಿಕದಂತೆ ಸ್ವಚ್ಛವಿದ್ದರೆ ಅದು ಪರಿಸರದೊಂದಿಗೆ ನಿತ್ಯ ಹೋರಾಟವನ್ನು ನಡೆಸಬೇಕಾಗುತ್ತದೆ. ಧರ್ಮಸ್ಥಳದಲ್ಲಂತೂ ಸ್ವಯಂ ಸೇವಕರು ಪ್ರತೀ ತಿಂಗಳು ಲೋಡುಗಟ್ಟಲೆ ವಸ್ತ್ರಗಳನ್ನು ಹೆಕ್ಕಿ ಸ್ವಚ್ಚ ಮಾಡುತ್ತಾರಂತೆ. ಇಷ್ಟಕ್ಕೆಲ್ಲ ಕಾರಣ ಮತಿಗೆಟ್ಟ ಭಕ್ತರ ಒಂದು ಬಗೆಯ ದೈವ ಸೇವೆ. ಇವರೆಲ್ಲ ಶುಚೀರ್ಭೂತರೆಂದರೆ ತಟ್ಟಿದ ಪಾಪಕ್ಕೆ ಮುಳುಗಿ ಪವಿತ್ರರಾಗುವುದಕ್ಕೆ ಗಂಗೆಯೂ ಸಾಲದು.
ಪಂಪಾ ನದಿಯ ಕಥೆಯೂ ಇದೇ. ಅಲ್ಲಿ ಆಗಾಗ ಸ್ವಚ್ಛ ಮಾಡುತ್ತಾರೆ. ಆದರೆ ಹೋದ ಯಾತ್ರಿಕರು ಮಾಲೆ ಹಾಕಿದರೂ ಮುಗಿಯದ ಪಾಪ ಸೃಷ್ಟಿ ಮಾಡಿ ಪುನೀತರಾಗುತ್ತಾರೆ. ಒಂದಿಷ್ಟೂ ಪಾಪ ಪ್ರಜ್ಞೆ ಇಲ್ಲದ ಈ ಜೀವಂತ ಪಿಶಾಚಿಗಳನ್ನು ಕಾಣುವಾಗ ಇವರ ದೈವ ಭಕ್ತಿಯ ರೂಪವಾದರೂ ಯಾವ ಬಗೆಯದು ಎಂದು ಯೋಚಿಸುವಂತಾಗುತ್ತದೆ. ದೇವರೇ ಮನಸ್ಸನ್ನಾದರೂ ನಾನು ಸ್ವಚ್ಛಗೊಳಿಸಬಲ್ಲೆ ಆದರೆ ಈ ದೇಹ ಪರಿಶುದ್ದವಾಗದು ಎಂದು ಹೇಳಿಕೊಂಡು ಪಂಪೆಯಲ್ಲಿ ಮುಳುಗಬೇಕು. ಇವರೆಲ್ಲ ಯಾಕಾಗಿ ವೃತ ಹಿಡಿಯುತ್ತಾರೋ? ಯಾಕಾಗಿ ಶಬರಿಮಲೆಗೆ ಬರುತ್ತಾರೋ ಗೊತ್ತಿಲ್ಲ. ಅಯ್ಯಪ್ಪನಾದರೂ ಇವರಿಗೆ ಪ್ರಜ್ಞಾ ಬುದ್ದಿಯನ್ನು ಒದಗಿಸದೆ ಯಾಕೆ ಮೌನವಾಗಿದ್ದಾನೆ?
ನಮ್ಮೂರಲ್ಲಿ ಅಲ್ಲಲ್ಲಿ ನಾಗಬನ ಅಂತ ಇರುತ್ತದೆ. ಅಲ್ಲಿ ನಾಗನ ಕಲ್ಲು ನಾಗನ ಅಸ್ತಿತ್ವದ ನಂಬಿಕೆಯಲ್ಲಿ ಅದರ ಸುತ್ತಮುತ್ತ ಮರಗಳನ್ನು ಕಡಿಯದೇ ಹಾಗೇ ಬಿಡುತ್ತಾರೆ. ಆ ಬಗೆಯಲ್ಲಾದರೂ ಒಂದಿಷ್ಟು ಮರಗಳ ಸಂರಕ್ಷಣೆಯಾಗುತ್ತದೆ. ಅಲ್ಲಿನ ನಂಬಿಕೆ ಭಯ ಅದಕ್ಕೆ ಕಾರಣ. ನಾವು ಎಲ್ಲೆಡೆ ಪರಿಸರವನ್ನು ಕೆಡಿಸಿಯಾಗಿದೆ. ಘಟ್ಟ ಪ್ರದೇಶದ ಹೆದ್ದಾರಿಯಲ್ಲಿ ಸಂಚರಿಸುವಾಗ ಬಾಟಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಇಲ್ಲದ ಪ್ರದೇಶವೇ ಸಿಗುವುದಿಲ್ಲ. ಕೊನೆ ಪಕ್ಷ ದೇವರ ಹೆಸರಲ್ಲಾದರು ನದಿಪಾತ್ರಗಳು ಸ್ವಚ್ಚವಾಗಬೇಕಿತ್ತು ಯಾವ ದೈವ ಭಯವೂ ಇವರಿಗಿಲ್ಲ, ಇಲ್ಲಿ ಯಾವ ದೇವ ಭಯವೂ ಇಲ್ಲದ ಭಕ್ತರು ದೇವಾಲಯಕ್ಕೆ ಹೋಗಿ ಕೈಮುಗಿಯುವ ಅವಶ್ಯಕತೆಯೇ ಉಳಿದಿರುವುದಿಲ್ಲ.
ಮನುಷ್ಯ ಜನ್ಮದ ಗುರಿ ಎಂದರೆ ದುರಿತಗಳಿಂದ ಮೋಕ್ಷ ಹೊಂದುವುದು. ನಾನು ನನ್ನದು ಎಂಬ ಚಿತ್ತ ವೃತ್ತಿಯಿಂದ ದೂರಾಗಿ ಮನಸ್ಸು ಪರಿಶುದ್ದಗೊಳಿಸಿ ಪರಮಾತ್ಮನ ಅನುಗ್ರಹಕ್ಕೆ ಪಾತ್ರರಾಗಿ ಮೋಕ್ಷ ಸಂಪಾದಿಸುವುದು. ಆದರೆ ನಮ್ಮ ವೃತ್ತಿ ಹೇಗಿದೆ ಎಂದರೆ . ನೀರು ಇದೆ ಎಂದು ಉಪ್ಪು ತಿಂದ ಹಾಗೆ,
ದೇವರಿಗೆ ನಮಸ್ಕರಿಸಿದರೆ ಪಾಪವೆಲ್ಲ ಪರಿಹಾರ ಎಂಬ ಭಾವನೆ ಇರುತ್ತದೆ. ಪಾಪಕ್ಕೆ ಪರಿಹಾರ ಇದೆ ಎಂದುಕೊಂಡು ಮತ್ತಷ್ಟೂ ಪಾಪ ಮಾಡುತ್ತಾ ಬದುಕನ್ನು ಸವೆಸುತ್ತಾರೆ. ಪಾಪ ಕ್ಷಯ ಇವುಗಳೆಲ್ಲ ನಮ್ಮ ಭಾವನೆಯೋ ಅಲ್ಲಿ ವಾಸ್ತವವೋ ಗೊತ್ತಿಲ್ಲ. ಆದರೆ ಮನುಷ್ಯ ಮತ್ತು ದೈವ ಸಂಬಂಧದ ಪಾರಮಾರ್ಥಿಕ ಅರಿವು ಮನುಷ್ಯನಿಗಿಲ್ಲ. ದೇವರು ನಮ್ಮಿಂದ ಯಾವುದನ್ನೂ ಅಪೇಕ್ಷಿಸುವುದಿಲ್ಲ. ಹೂ ನೈವೇದ್ಯ ಪೂಜೆ ಯಾವುದೇ ಆದರೂ ಅಲ್ಲಿ ಕೊನೆಯದು ನಮ್ಮ ಆತ್ಮ ತೃಪ್ತಿ. ನಮ್ಮ ಕೈ ಮೀರಿದ ಶಕ್ತಿ ಒಂದಿದೆ ಎಂಬ ಭಾವ. ನಮಗೆ ರುಚಿಯಾದದ್ದು ನಮಗೆ ಸಮ್ಮತವಾದದ್ದನ್ನೇ ನಾವು ದೇವರಿಗೆ ಅರ್ಪಿಸುತ್ತೇವೆ.
ಗಂಗೆಯನ್ನು ಶಿರದಲ್ಲಿ ಧರಿಸಿದವನು ಗಂಗಾಧರ. ಪವಿತ್ರ ಗಂಗೆಯನ್ನು ಶಿರದಲ್ಲಿ ಧರಿಸಿದವನಿಗೆ ನಮ್ಮ ಬಾವಿಯ ನೀರಿನಿಂದ ರುದ್ರಾಭಿಷೇಕ ಮಾಡುವ ಅವಶ್ಯಕತೆ ಏನಿದೆ? ಆದರೂ ಆತನ ಅನುಗ್ರಹಕ್ಕಾಗಿ ರುದ್ರಾಭಿಷೇಕ ಮಾಡುತ್ತೇವೆ. ಇಲ್ಲಿ ಅನುಗ್ರಹ ಎಂಬುದು ನಮ್ಮ ಮನಸ್ಸಿನ ಬೇಡಿಕೆಯೇ ಹೊರತು ಅದು ಭಗವಂತನ ಆಗ್ರಹವಲ್ಲ. ಇನ್ನು ನಾವು ಮಾಡುವ ರುದ್ರಾಭಿಷೇಕವೂ ಅದು ಕೇವಲ ನಮ್ಮ ಬಯಕೆಯೇ ಹೊರತು ಭಗವಂತನ ಬಯಕೆ ಇಲ್ಲ. ದೇವರಿಗೆ ಇಷ್ಟಾನಿಷ್ಟಗಳು ಯಾವುದೂ ಇರುವುದಿಲ್ಲ. ಎಲ್ಲದರಿಂದಲೂ ಅತೀತನಾದವನು ಭಗವಂತ. ಆದರೂ ನಮ್ಮ ಮನಸ್ಸಿನ ಬಯಕೆಯಿಂದ ಎಲ್ಲವೂ ಆಗಿರುವ ಭಗವಂತನ ಆಗ್ರಹವನ್ನು ಬಯಸುವುದು ಸಹಜ.
ಯಾವ ಧರ್ಮವೇ ಆದರೂ ಹೇಳುವುದು ಒಂದೇ, ನಾವು ಮನಸ್ಸಿನಿಂದ ಪರಿಶುದ್ದರಾಗಬೇಕು. ಮನಸ್ಸು ಪರಿಶುದ್ದವಾಗಬೇಕಾದರೆ ನಮ್ಮ ಪರಿಸರ, ನಮ್ಮ ಜೀವನ ಪರಿಶುದ್ದವಾಗಬೇಕು. ಈ ಭಾವನೆ ಇದ್ದರೆ ನಮ್ಮ ದೇವರು, ನಮ್ಮ ದೇವಾಲಯ, ನಮ್ಮ ನದಿ ಕಾಡು ಈ ಭೂಮಿ ಸ್ವಚ್ಚವಾಗಿರುತ್ತದೆ. ಅದಲ್ಲದೇ ಇದ್ದರೆ ದೇವರ ಹೆಸರಲ್ಲಿ ನಾವು ಮತ್ತಷ್ಟು ಪಾಪಗಳನ್ನು ಮಾಡುತ್ತಾ ಆ ಪಾಪದಿಂದ ಬಿಡುಗಡೆಯಾಗದೆ ಅತೃಪ್ತ ಆತ್ಮಗಳಂತೆ ಅಲೆದಾಡುತ್ತಾ ಇರುತ್ತೇವೆ.


No comments:
Post a Comment