ಊರಲ್ಲಿ ನನ್ನ ಮಿತ್ರರೊಬ್ಬರು ಇದ್ದರು. ನಾವೆಲ್ಲ ಎಲ್ಲಾದರೂ ಪ್ರವಾಸ ಹೋದರೆ ಇವರು ಜನಿವಾರ ಮನೆಯಲ್ಲಿ ಬಿಟ್ಟು ಬರುತ್ತಿದ್ದರು. ಕಾರಣ ಇಷ್ಟೆ ಹೊರಗೆ ಯಾವುದಕ್ಕೂ ನಿಬಂಧನೆ ನಿಯಂತ್ರಣ ಇರುತ್ತಿರಲಿಲ್ಲ. ಏನೂ ತಿನ್ನಬಹುದು. ಹೇಗೂ ಇರಬಹುದು. ವೃತ್ತಿಯಲ್ಲಿ ಚಾಲಕರಾಗಿದ್ದ ಇವರು ಈ ರೀತಿಯ ಜೀವನ ಶೈಲಿ ಅಳವಡಿಸಿಕೊಂಡಿರುವುದರಲ್ಲಿ ತಪ್ಪಾಗಲೀ ವಿಶೇಷವಾಗಲೀ ಏನೂ ಅನ್ನಿಸಲಿಲ್ಲ. ಯಾಕೆಂದರೆ ಬಹಳಷ್ಟು ಸಮಯ ಮನೆಯಿಂದ ಹೊರಗೇ ಇರಬೇಕಾದ ವೃತ್ತಿ ಇದು. ಎಲ್ಲಿ ಯಾವ ಬಗೆಯಲ್ಲಿ ಪರಿಸ್ಥಿತಿ ಇರುತ್ತದೆ ಎಂಬುದು ನಿರೀಕ್ಷಿಸುವುದು ಬಹಳ ಕಷ್ಟ. ಕೆಲವು ಕಡೆ ಸ್ನಾನ ಶೌಚಕ್ಕೂ ವ್ಯವಸ್ಥೆ ಇರುವುದಿಲ್ಲ. ಇದ್ದರೂ ನಿತ್ಯ ಅನುಷ್ಠಾನ ಮಾಡುವುದಕ್ಕೆ ಪೂರಕವಾಗಿರುವುದಿಲ್ಲ. ಇನ್ನು ಜತೆಯಲ್ಲಿರುವ ಒಡನಾಡಿಗಳೂ ಅಷ್ಟೇ. ಹೀಗಿರುವಾಗ ಎಲ್ಲದಕ್ಕೂ ಸಮಯ ಒದಗಿಬರದೇ ಕ್ರಮೇಣ ಅದರ ಬಗ್ಗೆ ಅಸಡ್ಡೆ ಬೆಳೆಯುವುದು ಸಾಮಾನ್ಯ. ಈಗ ಇದೇ ಸ್ನೇಹಿತರು ಸಂಧ್ಯಾವಂದನೆ ಮಾಡುತ್ತಾ ನಿತ್ಯ ಯೋಗಾಭ್ಯಾಸವನ್ನೂ ಮಾಡುತ್ತಾರೆ. ಜೀವನದಲ್ಲಿ ಎದುರಾಗುವ ಅನುಭವಗಳು ಇದಕ್ಕೆ ಕಾರಣ. ತಪ್ಪುಗಳು ದುರ್ವ್ಯಸನ ಇದೆಲ್ಲ ಸರ್ವೇಸಾಮಾನ್ಯ....ಆದರೆ ಅದರಿಂದ ಹೊರಗೆ ಬರುವುದು ನಿಜಕ್ಕೂ ಒಂದು ದೊಡ್ಡ ತಪಸ್ಸಿನಂತೆ. ತಪ...ಎಂದರೆ ಬೆಂಕಿ, ಆ ತಪಸ್ಸಿನಲ್ಲಿ ಬೆಂದು ಪರಿಶುದ್ದವಾಗಿ ಹೊರಬಂದಂತೆ.
ಅದೇ ಸ್ನೇಹಿತರ ಮನೆಗೆ ಒಂದು ಸಲ ಹೋಗಿದ್ದೆ. ಹೀಗೆ ಮನೆಯವರೊಂದಿಗೆ ಮಾತನಾಡುತ್ತ ಅಲ್ಲಿ ಸಾಯಂಕಾಲವಾಗುತ್ತಿದ್ದಂತೆ ನನಗೆ ಸ್ನಾನ ಮಾಡಿ ಜಪ ಮಾಡುವ ಸಮಯವಾಯಿತು. ನಾನು ಅದನ್ನು ಹೇಳಿಕೊಂಡಾಗ ಅವರ ತಾಯಿಗೆ ಬಹಳ ಸಂತೋಷವಾಯಿತು. ನನಗೆ ಸ್ನಾನಕ್ಕೆ ವ್ಯವಸ್ಥೆ ಮಾಡಿ ಉಡುವುದಕ್ಕೆ ವಸ್ತ್ರ ಕೊಟ್ಟರು. ಸ್ನಾನ ಮಾಡಿ ಬಂದಾಗ ಜಪ ಮಾಡಬೇಕಾದ ನನಗೆ ಬೇಕಾಗಿ ನೆಲ ಗುಡಿಸಿ ಸಾರಿಸಿ ಸ್ವಚ್ಛ ಗೊಳಿಸಿದ್ದರು. ನಂತರ ಹೇಳಿದರು ನಮ್ಮಲ್ಲಿ ಯಾರೂ ಮಾಡುವವರಿಲ್ಲ. ನೀವು ಮಾಡಿದರೆ ಈ ಮನೆಯೇ ಪಾವನ ಅದಂತೆ. ಸಂಧ್ಯಾವಂದನೆಯ ಮಹತ್ವ ಆಕೆಗೆ ಅರಿವಿತ್ತು. ಆ ತಾಯಿಗೆ ಇದ್ದ ಗೌರವ ಕಂಡು ನಿಜಕ್ಕೂ ಸಂತೋಷವಾಯಿತು. ಜನಿವಾರ ಎಂಬುದು ನಿತ್ಯ ಕರ್ಮದ ಪರಿಧಿ ಎಳೆದಂತೆ. ಅದರ ಒಳಗೆ ಎಲ್ಲಾ ಭಾವನೆಗಳು ರೂಪುಗೊಳ್ಳಬೇಕು. ಉತ್ತಮ ತಂದೆ ತಾಯಿ ಇದ್ದರೂ ಉತ್ತಮ ಸಂಸ್ಕಾರ ಬರುವ ನಿರೀಕ್ಷೆ ಇಲ್ಲ. ಯಾಕೆಂದರೆ ಈಗಿನ ಪರಿಸರ ಜೀವನ ಕ್ರಮ ಬದಲಾಗಿದೆ. ಮಗು ಶಾಲೆಗೆ ಹೋಗುವುದಕ್ಕೆ ತೊಡಗಿದಾಗ, ಸಾಕಷ್ಟು ವಿದ್ಯಾಭ್ಯಾಸದ ಒತ್ತಡವಿರುತ್ತದೆ. ಶಾಲೆಯಲ್ಲಿನ ಓದು ಬರಹಕ್ಕಿಂತಲೂ ಶಾಲೆ ಬಿಟ್ಟಮೇಲಿನ ಶಿಕ್ಷಣ ಅಧಿಕವಾಗಿರುತ್ತದೆ. ಮನೆಕೆಲಸ ಅಭ್ಯಾಸ ಜತೆಗೆ ಈಗ ಟ್ಯೂಷನ್ ಇವುಗಳ ನಡುವೆ ಸಂಧ್ಯಾವಂದನೆಗೆ ಸಮಯವೇ ಸಿಗುವುದಿಲ್ಲ. ಬೆಳಗ್ಗೆ ಮುಂಜಾನೆ ಐದು ಘಂಟೆಗೆ ಕೆಲವು ಕಡೆ ಟ್ಯೂಷನ್ ಆರಂಭವಾಗುತ್ತದೆ. ಎಂಟು ಗಂಟೆಯ ತನಕ ಟ್ಯೂಷನ್ ಮುಗಿಸಿ ಮನೆಗೆ ಬಂದು ಸ್ನಾನ ಮಾಡಿ ಉಪಹಾರ ಸೇವಿಸಿ ಶಾಲೆಗೆ ಹೋಗಬೇಕು. ಈ ನಡುವೆ ಸಂಧ್ಯಾವಂದನೆ ಎಂದರೆ ಅದು ದೊಡ್ಡ ಶಿಕ್ಷೆಯಾಗುತ್ತದೆ. ಒಂದು ದಿನ ಅಲ್ವ...ಅಂತ ಬಿಟ್ಟ ನಿತ್ಯ ಕರ್ಮ ಕ್ರಮೇಣ ಬದುಕಿನಿಂದಲೇ ಮಾಯವಾಗಿಬಿಡುತ್ತದೆ.
ಜನಿವಾರ ಕಳಚುವ ವಸ್ತ್ರವಾಗಿ.. ಹೊರಗಿನ ವಸ್ತ್ರ ಉಡುವಾಗ ಇದನ್ನು ಕಳಚಿ ಇಡುವುದು. ವಿಚಿತ್ರ ಎನಿಸುತ್ತದೆ. ಬೇಕಾದಾಗ ಧರಿಸುವ ಆಭರಣದಂತೆ. ಕೆಲವರು ಬ್ರಾಹ್ಮಣರ ಕಾರ್ಯಕ್ರಮಕ್ಕೆ ಹೋಗುವಾಗ ಮಾತ್ರ ಅದನ್ನು ಧರಿಸುತ್ತಾ ಒಂದು ರೀತಿಯ ಪಾತ್ರಧಾರಿಯಾಗಿಬಿಡುತ್ತಾರೆ. ಅದೆಲ್ಲ ತೀರ ವೈಯಕ್ತಿಕ ಅನ್ನಿಸಿದರೂ ಶ್ರದ್ಧೆಯಿಂದ ನಿಯಮ ಪಾಲಿಸಿ ಗೌರವದಿಂದ ಕಾಣುವವರಿಗೆ ಇದು ಆತಂಕದ ವಿಷಯವಾಗುತ್ತದೆ. ಯಜ್ಞೋಪವೀತ ಎಂಬುದು ಶರೀರದಿಂದ ಅದನ್ನು ತೆಗೆಯಬೇಕಾದರೆ ಹೊಸದನ್ನು ಹಾಕಿದ ನಂತರವೇ ಅದನ್ನು ವಿಸರ್ಜಿಸಬೇಕು. ಇಂದು ಹಲವರು ಇದರ ಬಗ್ಗೆ ಗಂಭೀರವಾಗಿರುವುದಿಲ್ಲ. ಅದಕ್ಕೆ ಹಲವಾರು ಕಾರಣಗಳಿರಬಹುದು. ಆದರೆ ಯಜ್ಞೋಪವಿತ ಧಾರಣೆ....ಇದೊಂದು ಧಾರಣೆ ಅಂದರೆ, ಅಷ್ಟಾಂಗ ಯೋಗದಲ್ಲಿ ಹೇಳುವಂತೆ ಧಾರಣಾ ಶಕ್ತಿ ಅದು ಏಕಾಗ್ರತೆ. ಅದುವರೆಗೆ ಚಂಚಲವಾಗಿದ್ದ ಬದುಕು ಇಲ್ಲಿಂದ ಒಂದು ಗುರಿಯತ್ತ ಚಿತ್ತ ಹರಿಸುವುದಕ್ಕೆ ತೊಡಗಬೇಕು. ವಿಚಲಿತವಾಗಿದ್ದ ಬದುಕು ಒಂದು ಗುರಿಯತ್ತ ಸಾಗಬೇಕು. ಹಾಗಾಗಿಯೆ ಬ್ರಹ್ಮೋಪದೇಶ, ಯಜ್ಞೋಪವಿತ ಧಾರಣೆ ಎಂಬುದು ಬದುಕಿನಲ್ಲಿ ಉಪನಯನ ಅಂದರೆ ಮತ್ತೊಂದು ಜನ್ಮವಾಗಿ ದ್ವಿಜತ್ವ ಆರಂಭವಾಗುತ್ತದೆ. ತಾಯಿಯ ಮಡಿಲಿನಿಂದ ಹೊರಬರುವಾಗ ಹೆಗಲಲ್ಲಿರುವ ಜನಿವಾರ ಅದಕ್ಕೆ ಪ್ರಚೋದನೆಯನ್ನು ಕೊಡುತ್ತಾ ಜೀವನದ ಆಹಾರ, ವಸ್ತ್ರ ವ್ಯಸನಾದಿಗಳಲ್ಲಿ ಎಚ್ಚರಿಕೆಯನ್ನು ಕೊಡುತ್ತಾ ಇರುತ್ತದೆ. ಉಪವೀತ ಎಂದರೆ ಉಪವಸ್ತ್ರ. ಅದು ಸದಾ ಜತೆಯಲ್ಲಿರಬೇಕು. ಆದರೆ ನಮ್ಮ ಪರಿಸರ ಹೇಗಾಗಿದೆ ಎಂದರೆ ಈ ಅನುಷ್ಠಾನ ನಿಯಮಗಳನ್ನು ಪಾಲಿಸುವವನಿಗೆ ಪ್ರತಿಕ್ಷಣವೂ ಸವಾಲನ್ನು ಎದುರಿಸುವಂತೆ ಇರುತ್ತದೆ. ಅದಕ್ಕೆ ಪೂರಕವಾದ ವಾತಾವರಣ ಲಭ್ಯವಾಗುವುದೇ ಇಲ್ಲ. ಒಂದು ಮದುವೆ ಮನೆಯಲ್ಲಿ ಉಳಿದುಕೊಳ್ಳುವುದಿದ್ದರೂ ಸಂಧ್ಯಾವಂದನೆ ಪೂರೈಸಬೇಕಾದರೆ ಪಕ್ಕದಲ್ಲಿ ಇರುವ ಬಂಧುಗಳ ಮನೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ಮದುವೆ ಮನೆಯಲ್ಲೂ ಅದಕ್ಕೆ ವ್ಯವಸ್ಥೆ ಇರುವುದಿಲ್ಲ. ನಾವೇ ಇದರ ಬಗ್ಗೆ ಗಂಭೀರವಾಗಿಲ್ಲ ಎಂದರೆ ಉಳಿದ ಧರ್ಮದಿಂದ ಇದಕ್ಕೆ ಗೌರವವನ್ನು ನಿರೀಕ್ಷಿಸುವುದು ಮೂರ್ಖತನ. ಎರಡೂ ಹೊತ್ತು ಸಂಧ್ಯೆ ಮಾಡಬೇಕಾದರೆ , ನೀವು ಪುರೋಹಿತರೋ ಅಂತ ಕೇಳಿದವರೂ ಇದ್ದಾರೆ.
ಜನಿವಾರ ಮೂರು ಎಳೆ ಕೇವಲ ದಾರವಲ್ಲ. ಅದು ನಮ್ಮಲ್ಲಿ ಇಛ್ಚಾ ಕ್ರಿಯಾ ಜ್ಞಾನ ಇವುಗಳಿಗೆ ಪ್ರಚೋದೆನೆಯನ್ನು ಒದಗಿಸುತ್ತದೆ. ಬ್ರಾಹ್ಮಣನಿಗೆ ವಾಕ್ ಚಿತ್ತ ದೇಹ ಈ ತ್ರಿಕರಣಗಳ ಶುದ್ಧಿಗೆ ಕಾರಣವಾಗುತ್ತದೆ. ಜನಿವಾರಕ್ಕೆ ಮೊದಲು ನಮ್ಮ ಗೌರವ ಶ್ರದ್ದೆಯನ್ನು ಸಲ್ಲಿಸಬೇಕು. ಆನಂತರ ಉಳಿದವರಿಂದ ಅದನ್ನು ನಿರೀಕ್ಷಿಸಬಹುದು. ನಾವೇ ಅದರ ಬಗ್ಗೆ ಗಂಭೀರವಲ್ಲದಿದ್ದರೆ ಹೊರಗಿನ ಪ್ರಪಂಚ ಅದನ್ನು ಗೌರವಿಸಬೇಕು ಎಂದು ನಿರೀಕ್ಷಿಸುವುದಕ್ಕೆ ಸಾಧ್ಯವೇ? ಸಂಭ್ರಮದಿಂದ ವರ್ಷಕ್ಕೊಮ್ಮೆ ತರ್ಪಣ ಬಿಟ್ಟು ಉಪಾಕರ್ಮ ಆಚರಿಸುತ್ತೇವೆ. ಬ್ರಾಹ್ಮಣ್ಯ ಆವೇಶಗೊಂಡವರಂತೆ ವರ್ತಿಸುತ್ತೇವೆ. ಉಪಾಕರ್ಮ ಎಂದರೆ ಕರ್ಮದ ಬಳಿಗೆ ಸೆಳೆಯುವ ಕ್ರಿಯೆಯಾಗಬೇಕು. ಆದರೆ ನಿಜ ಜೀವನಕ್ಕೆ ಬಂದಾಗ ಜನಿವಾರ ಕೇವಲ ಧರಿಸುವ ತೆಗೆದಿಡುವ ಅಲಂಕಾರದ ದಾರವಾಗುತ್ತದೆ. ಜನಿವಾರವೂ ಭಾರವಾಗುತ್ತದೆ. ಉಪಾಕರ್ಮವಾಗಲಿ ಇತರ ಸಂಸ್ಕಾರವಾಗಲೀ ಅದು ಉತ್ತಮ ಬದುಕಿಗೆ ಪ್ರಚೋದನೆಗಳು. ಅದರ ಅನುಷ್ಠಾನದಲ್ಲಿ ಇಹಪರದ ಚಿಂತನೆ ಇರುತ್ತದೆ. ಬ್ರಾಹ್ಮಣನಾಗಿ ಬದುಕುವುದು ಪ್ರಸ್ತುತ ಸವಾಲಾಗುವಾಗ ನಮಗೆ ಇವುಗಳೆಲ್ಲ ಪ್ರಚೋದನೆಯಾಗಬೇಕು. ಬಾಲ್ಯದಲ್ಲಿ ಉಪನಯನದ ನಂತರ ಅಥವಾ ಶಾಲೆಗೆ ಹೋಗುವಾಗ ನಾಮ ಅಳಿಸಿ ಹೋಗುತ್ತಿದ್ದೆವು. ಹೊರಗಿನ ಪ್ರಪಂಚದಲ್ಲಿ ಧರಿಸುವುದು ಒಂದು ಅಪಹಾಸ್ಯಕ್ಕೆ ಕಾರಣವಾಗುತ್ತದೆ. ಎಲ್ಲರೂ ಅವರವರ ಧರ್ಮವನ್ನು ಯಾವುದೇ ಹಿಂಜರಿಕೆ ಇಲ್ಲದೇ ಅನುಸರಿಸುವಾಗ ನಮಗೆ ಅದರೆ ಬಗ್ಗೆ ಹಿಂಜರಿಕೆ ಏಕಿರಬೇಕು. ಇದಕ್ಕೆ ಮೊದಲ ಗೌರವ ನಮ್ಮಿಂದಲೇ ಸಲ್ಲುವುದರಲ್ಲಿ ನಮ್ಮ ಆತ್ಜಾಭಿಮಾನ ವ್ಯಕ್ತವಾಗುತ್ತದೆ.

No comments:
Post a Comment