ಪ್ರತಿಭೆ ಎಂಬುದು ಮನುಷ್ಯನಲ್ಲಿರುವ ವಿಶಿಷ್ಟ ಗುಣ. ಅದು ಸಾರ್ವತ್ರಿಕವಾಗಿರುವುದಿಲ್ಲ. ಬದಲಾಗಿ ಕೆಲವರಲ್ಲಿ ಮಾತ್ರ ಅದು ಗುಣ ವಿಶೇಷಣವಾಗಿರುತ್ತದೆ. ಕೆಲವರು ಹುಟ್ಟಿನಿಂದಲೇ ರಕ್ತಗತವಾಗಿ ಬಂದ ಪ್ರತಿಭೆ ಇದ್ದರೆ, ಇನ್ನು ಕೆಲವರಲ್ಲಿ ಅವಿರತ ಸಾಧನೆಯಿಂದ ಬಂದಿರುತ್ತದೆ. ರಕ್ತವಾಗಿ ಬಂದ ಪ್ರತಿಭೆಯನ್ನು ಹಿನ್ನೆಲೆಯಿಂದ ತುಲನೆ ಮಾಡಿದರೆ ಅವಿರತ ಸಾಧನೆಯ ಪ್ರತಿಭೆ ಹೋಲಿಕೆ ಇಲ್ಲದೆ ಮಾನ್ಯತೆಯನ್ನು ಗಳಿಸುತ್ತದೆ. ಅವಿರತ ಸಾಧನೆಯ ಪ್ರತೀಕಗಳಲ್ಲಿ ಒಂದು ಅನಂತನಾಗ್ ಎಂಬ ಮಹಾನ್ ಕಲಾವಿದನ ಸಾಧನೆ ಪರಿಗಣನೆಯಾಗುತ್ತದೆ. ಆದರೆ ನಮ್ಮಲ್ಲಿ ಪ್ರತಿಭೆ ಎಂಬುದು ಇತ್ತೀಚೆಗೆ ಮೀಸಲಾತಿಯ ವರ್ಗೀಕರಣದಿಂದ ಅಳೆಯಲ್ಪಡುವುದು ದುರದೃಷ್ಟಕರ.
ಅನಂತನಾಗಿ ಪ್ರಧಾನ ಭೂಮಿಕೆಯಲ್ಲಿ ಅಭಿನಯಿಸಿದ ಒಂದು ಮಲಯಾಳಂ ಸಿನಿಮಾ ಸ್ವಾತಿ ತಿರುನಾಳ್. ಹೆಸರೇ ಹೇಳುವಂತೆ ಸ್ವಾತಿ ತಿರುನಾಳ್ ಎಂಬ ಅರಸ ಮತ್ತು ಸಂಗೀತಕಾರನ ಕಥೆ ಇದು. ಇದರಲ್ಲಿ ಸ್ವಾತಿ ತಿರುನಾಳ್ ಪಾತ್ರದಲ್ಲಿ ಅನಂತ ನಾಗ್ ಅಭಿನಯ ಮನಮುಟ್ಟುವಂತಿದೆ. ಸ್ವಾತಿ ತಿರುನಾಳ್ ಬ್ರಿಟೀಷರ ಕಾಲದ ತಿರುವಾಂಕೂರಿನ ಅರಸ. ಸ್ವತಃ ಸಂಗೀತಗಾರನಾಗಿ ತನ್ನ ಆಸ್ಥಾನದಲ್ಲಿ ಹಲವು ಸಂಗೀತಗಾರರಿಗೆ ಕಲಾವಿದರಿಗೆ ಮನ್ನಣೆಯನ್ನು ಕೊಡುತ್ತಿದ್ದ. ಸ್ವಾತಿ ತಿರುನಾಳರ ಶಾಸ್ತ್ರಿಯ ಸಂಗೀತ ರಚನೆಗಳು ಹಲವು ಈಗಲೂ ಜನಪ್ರಿಯವಾಗಿ ಹಲವು ಗಾಯಕರು ಸಂಗೀತಗಾರರು ಇದನ್ನು ಹಾಡುತ್ತಿದ್ದಾರೆ. ಹೆಚ್ಚಿನ ರಚನೆಗಳು ಸಂಸ್ಕೃತ ಭಾಷೆಯಲ್ಲಿದೆ ಎಂಬುದು ನನ್ನ ಅರಿವು. ಸ್ವಾತಿ ತಿರುನಾಳರ ಹಲವು ಸಂಗೀತ ರಚನೆಗಳು ನನ್ನ ಮೆಚ್ಚಿನ ಹಾಡುಗಳಾಗಿವೆ. ಹಾಗಾಗಿ ಈ ಸಿನಿಮಾದ ಬಗ್ಗೆ ಆಸಕ್ತಿಯಿಂದ ನಾನು ನೋಡಿದ್ದೇನೆ. ಅನಂತನಾಗ್ ಸ್ವಾತಿ ತಿರುನಾಳರ ಅವತಾರವೆಂಬಂತೆ ಮೈದುಂಬಿ ಅಭಿನಯಿಸಿದ್ದಾರೆ. ಒಂದು ರೀತಿಯಲ್ಲಿ ಅನಂತನಾಗ್ ಪ್ರತಿಭೆಯನ್ನು, ಈ ಚಿತ್ರದ ನಿರ್ದೇಶ ಲೆನಿನ್ ರಾಜೇಂದ್ರನ್ ಸಮರ್ಥವಾಗಿ ಬಳಸಿಕೊಂಡಿದ್ದಾರೆ ಎನ್ನಬೇಕು. ಮಲಯಾಳಂ ಚಿತ್ರರಂಗದಲ್ಲಿ ದೈತ್ಯ ಪ್ರತಿಭೆಗಳ ದಂಡೇ ಇದ. ಇದೇ ಸಿನಿಮದಲ್ಲೂ ಹಲವರು ಸಹನಟರಾಗಿ ಅಭಿನಯಿಸಿದ್ದಾರೆ. ಹೀಗಿದ್ದೂ ನಿರ್ದೇಶಕರು ಪರಭಾಷೆಯ ಅನಂತನಾಗ್ ರವರನ್ನು ಬಳೈಕೊಂಡದ್ದು ಅವರಲ್ಲಿರುವ ಪ್ರತಿಭೆ ಸಾಕ್ಷಿ. ಇದನ್ನು ಇಲ್ಲಿ ಹೇಳುವುದಕ್ಕೆ ಕಾರಣ ಯಾವುದೋ ನಟನಿಗೆ ಹೋಲಿಸಿ ಇವರಿಗೆ ಸಿಕ್ಕಿದ ಪ್ರಶಸ್ತಿಯನ್ನು ಪ್ರಶ್ನಿಸುವುದು ಒಂದು ರೀತಿಯ ಅಜ್ಞಾನವನ್ನೂ ಮೂರ್ಖತನವನ್ನೂ ತೋರಿಸುತ್ತದೆ.
ಅನಂತ ನಾಗ್ ಕನ್ನಡ ಚಲನ ಚಿತ್ರಕ್ಕೆ ಬರುವ ಮೊದಲು ಹಿಂದಿ ಭಾಷೆಯ ನಟರಾಗಿದ್ದರು ಎಂದು ಕೇಳಿದ್ದೆ. ಬಾಲಯದಲ್ಲಿ ಇವರ ಕುದುರೆ ಮುಖ ಎಂಬ ಸಿನಿಮಾ ಊರಲ್ಲಿರುವಾಗ ನಮ್ಮಊರ ಸಿನಿಮಾ ಮಂದಿರದಲ್ಲಿ ನಾನು ನೋಡಿದ ಅನಂತ್ ನಾಗ್ ರವರ ಮೊದಲ ಸಿನಿಮಾ. ನನಗೆ ಆಗ ಹಿಂದೀ ನಟರಂತೆ ಇವರನ್ನು ಭಾಸವಾಗಿತ್ತು. ಕಾರಣ ಮೀಸೆ ಇಲ್ಲದ ನಟ. ಅನಂತ ನಾಗ್ ರವರ ಪ್ರತಿಭೆಯ ಬಗ್ಗೆ ಪ್ರಶ್ನಿಸುವಾಗ ಹಿಂದಿಯ ಅಂಕುರ್ ಮತ್ತು ಮೇಲೆ ಹೇಳಿದ ಸ್ವಾತಿ ತಿರುನಾಳ್ ಒಂದು ಬಾರಿ ನೋಡಿ ಬರಬೇಕು. ಅಂಕುರ್ ನಲ್ಲಿ ಪ್ರತಿಭಾವಂತ ಶಬನಾ ಅಜ್ಮಿ ಜತೆಗೆ ಸಮದಂಡಿಯ ಅಭಿನಯ ನೀಡಿದ್ದರು. ಈ ಸಿನಿಮಾದ ನಿರ್ದೇಶಕ ಶ್ಯಾಂ ಬೆನಗಲ್. ಶ್ಯಾಂ ಬೆನಗಲ್ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಭಾರತೀಯ ಸಿನಿಮಾರಂಗದಲ್ಲಿ ಕಲಾತ್ಮಕ ಚಿತ್ರಗಳಿಗೆ ಹೆಸಾರದ ಪ್ರಸಿದ್ದ ನಿರ್ದೇಶಕ. ಲೆನಿನ್ ರಾಜೇಂದ್ರ ಆಗಲೀ ಶ್ಯಾಂ ಬೆನಗಲ್ ಆಗಲಿ ಅನಂತ್ ರವರನ್ನು ಸುಮ್ಮನೇ ಆಯ್ಕೆ ಮಾಡಿಕೊಳ್ಳಲಿಲ್ಲ. ಅವರ ಅವಿರತ ಸಾಧನೆಯ ಪ್ರತಿಭೇಯೇ ಅದಕ್ಕೆ ಸಾಕ್ಷಿ. ಹಾಗಿದ್ದರೆ ಬೇರೆ ಪ್ರತಿಬಾವಂತರೂ ಇಲ್ಲ ಎಂದಲ್ಲ ...ಒಂದು ಪಾತ್ರವಾಗಿ ನೋಡುವಾಗ ಅನಂತ್ ಅದಕ್ಕೆ ಮುಂಚೂಣಿಯಲ್ಲಿ ನಿಂತುಬಿಡುತ್ತಾರೆ.
ಕನ್ನಡದಲ್ಲಿ ಸ್ವಾತಿ ತಿರುನಾಳ್ ಸಿನಿಮಾದಂತೆ ಅನಕೃ ಬರೆದ ಕಾದಂಬರಿ ಆಧಾರಿತ ಹಂಸಗೀತೆಯಲ್ಲು ಅದ್ಭುತವಾಗಿ ಅಭಿನಯಿಸಿದ್ದಾರೆ. ಇದೆಲ್ಲ ಅವರ ಪ್ರತಿಭೆಗೆ ಸಂದ ಮನ್ನಣೆಗಳು. ಸ್ವತಃ ರಂಗ ಕಲಾವಿದರಾಗಿರುವ ಅನಂತ ನಾಗ್ ಗೆ ಯಾವುದೇ ಪಾತ್ರವಾದರೂ ಅದು ಕರತಲಾಮಕ. ಆ ಪಾತ್ರಕ್ಕೆ ಅವರೋಬ್ಬರೇ ಅನ್ವಯ ಅಂತ ಆ ಪಾತ್ರವನ್ನು ಅವಾಹಿಸಿಕೊಳ್ಳುತ್ತಾರೆ. ನನಗೆ ಮೊದಲಿನಿಂದಲೂ ಕನ್ನಡದಲ್ಲಿ ಮೆಚ್ಚಿನ ನಟರರಾಗಿದ್ದವರು ಅನಂತ ನಾಗ್, ಅವರಂತೆ ಕನ್ನಡದಲ್ಲಿ ಲೋಕೇಶ್, ಸುರೆಶ್ ಹೆಬ್ಲಿಕರ್ ಅಭಿನಯಕೂಡ ಮೆಚ್ಚಿದವನು ಯಾಕೆಂದರೆ ಕಲಾತ್ಮಕ ಚಿತ್ರಗಳು ಎನ್ನುವಾಗ ಇವರೆಲ್ಲಾ ಕನ್ನಡದಲ್ಲಿ ಮೊದಲಿಗೆ ನೆನಪಿಗೆ ಬರುತ್ತಾರೆ.
ಹಂಸಗೀತೆಯಂತಹ ಕಾದಂಬರಿ ಆಧಾರಿತ ಸಿನಿಮಾ ಎನ್ನುವಾಗ ಮೊದಲಿಗೆ ಅದಕ್ಕೆ ಹೊಂದಿಕೆಯಾಗುವ ನಟ ಎಂದರೆ ಅನಂತನಾಗ್. ಯಾಕೆಂದರೆ ಇದರ ಪಾತ್ರಕ್ಕೆ ಮೂಲ ಕಥೆಯ ನಾಯಕ ಪಾತ್ರವನ್ನು ಬದಲಿಸುವ ಅವಶ್ಯಕತೆಯೇ ಬರುವುದಿಲ್ಲ. ಯಾವುದೇ ಪಾತ್ರವಾದರೂ ಅದನ್ನು ಅರಿತು ಅದಕ್ಕೆ ಧಕ್ಕೆಯಾಗದಂತೆ ಮೂಲದಲ್ಲಿ ಕಥೆ ಹೇಗಿದೆಯೋ ಅದೇ ರೀತಿ ಕಥಾ ಪಾತ್ರವನ್ನು ಪ್ರದರ್ಶಿಸಿಬಿಡುತ್ತಾರೆ. ಇದೊಂದು ಬಗೆಯಲ್ಲಿ ಆ ಕಥಾ ಲೇಖಕನಿಗೆ ಸಲ್ಲಿಸುವ ನಿಜವಾದ ಗೌರವ. ಸಾಮಾನ್ಯವಾಗಿ ಎಲ್ಲಾ ನಟರು ಇಮೇಜ್ ಒಂದನ್ನು ಬೆಳೆಸಿಕೊಂಡು ಬಿಟ್ಟರೆ ಅವರಿಗಾಗಿ ಪಾತ್ರಗಳು ಬದಲಾಗಿಬಿಡುತ್ತವೆ. ಕಾದಂಬರಿ ಆಧಾರಿತ ಸಿನಿಮಾ ಮಾಡುವಾಗ ಕಥೆಯಲ್ಲಿ ನಾಯಕ ಅಂಜು ಬುರುಕ ಹೇಡಿಯಂತೆ ಇದ್ದರೆ ಆ ಪಾತ್ರ ಮಾಡುವಾಗ ನಾಯಕ ನಟರು ಸಹಜವಾಗಿ ತಮ್ಮ ಇಮೇಜ್ ಗೆ ಧಕ್ಕೆ ಬರದಂತೆ ಪಾತ್ರದ ಸ್ವರೂಪವೆನ್ನೇ ಬದಲಾಯಿಸಿಬಿಡುತ್ತಾರೆ. ಇದೊಂದು ಬಗೆಯಲ್ಲಿ ಮೂಲ ಕಥೆಗೆ ಅಪಚಾರ ಎಸಗಿದಂತೆ. ಹೀಗಾಗಿ ಅನಂತ ನಾಗ್ ಅಭಿನಯಿಸಿದ ಕಾದಂಬರೀ ಅಧಾರಿತ ಚಿತ್ರಗಳು ಜನ ಸಾಮಾನ್ಯರಿಗೆ ಇಷ್ಟವಾಗಿಬಿಡುತ್ತವೆ. ಈ ಗುಣಗಳಿಂದ ಅನಂತ್ ಕನ್ನಡದ ವಿಶಿಷ್ಟ ನಟ ಎನ್ನುವುದರಲ್ಲಿ ಅನುಮಾನವಿಲ್ಲ. ಯಂಡಮೂರಿಯವರ ಬೆಳದಿಂಗಳ ಬಾಲೆ ಕಾದಂಬರಿ ಓದಿ ಆ ಸಿನಿಮಾ ನೋಡಬೇಕು. ಆಗ ಅನಂತನಾಗ್ ಪ್ರತಿಭೆ ಅರಿವಾಗುತ್ತದೆ. ಇಮೇಜ್ ಗಾಗಿ ಹಲವು ಹೆಸರಾಂತ ನಟರು ಇನ್ನಿಲ್ಲದ ಸರ್ಕಸ್ ಮಾಡಿದರೆ ಇವರು ಮೊದಲು ಹೇಗಿದ್ದರೋ ಅದೇ ರೀತಿ ಕೊನೆಯತನಕವೂ ಸಹಜ ನಟರಾಗಿ ಅಭಿನಯಕ್ಕೆ ನಿಜವಾದ ನ್ಯಾಯ ಸಲ್ಲಿಸಿ ಬಿಟ್ಟರು.
ನಾಯಕ ನಟ ಎಂದರೆ ಅದಕ್ಕೊಂದು ಅಲಿಖಿತ ಗುಣಗಳಿವೆ. ಮಾಸ್ ಸಂಬಾಷಣೆ , ನಾಯಕನಾದವನು ಯಾವುದೇ ದೌರ್ಬಲ್ಯ ಇಲ್ಲದ ಸರ್ವಗುಣ ಸಂಪನ್ನ ಹೊಡೆದಾಡಬೇಕು, ಕುಣಿಯಬೇಕು...ಬಹುಶಃ ಅಭಿನಯ ಇಲ್ಲದೇ ಇದ್ದರೂ ಈ ಎಲ್ಲ ಗುಣಗಳಿದ್ದರೆ ಅಭಿಮಾನೀ ಬಳಗ ಸೃಷ್ಟಿಸಿ ಒಂದಷ್ಟು ಯಶಸ್ವೀ ಸಿನಿಮಾ ಮಾಡಿ ಸ್ವತಃ ದುಡ್ಡು ಮಾಡಿಕೊಳ್ಳಬಹುದು. ಈ ಎಲ್ಲ ಬಗೆಯಿಂದ ನೋಡಿದರೆ ಅನಂತ ನಾಗ್ ವಿಶಿಷ್ಟವಾಗಿ ಕಾಣಿಸುತ್ತಾರೆ. ಅವರಿಗಾಗಿ ಅಭಿಮಾನಿ ಬಳಗವಿಲ್ಲ. ಯಾವುದೇ ಇಮೇಜ್ ಇಲ್ಲ, ಹೊಡೆದಾಟ ಬಡಿದಾಟದ ಸವಕಲು ಸರ್ಕಸ್ ಇಲ್ಲ, ಅರ್ಥವಿಲ್ಲದ ಕುಣಿತವೂ ಇಲ್ಲ. ಎಲ್ಲವೂ ಸಹಜ ನಿಜ ಜೀವನದ ಪಾತ್ರಗಳು. ಸಿನಿಮಾ ನೋಡಿ ಹೊರಬಂದಾಗ ನಮ್ಮ ಸುತ್ತು ಮುತ್ತಲಿನ ವ್ಯಕ್ತಿಗಳಂತೆ ಅನಂತ್ ಕಾಣಿಸಿಕೊಳ್ಳುತ್ತಾರೆ. ಇದನ್ನೇ ಗಿಮಿಕ್ ಇಲ್ಲದ ನೈಜತೆ ಎನ್ನುವುದು. ಅಭಿನಯ ಎಂದರೆ ನಿಜವಲ್ಲದೇ ಇರುವುದು. ಅದರಲ್ಲೂ ನೈಜತೆ ಭ್ರಮೆಯನ್ನು ಉಂಟುಮಾಡುವುದೇ ನಿಜವಾದ ನಟನಾದವನ ಅರ್ಹತೆ. ಅನಂತನಾಗ್ ಲೋಕೇಶ್ ರಂತಹ ನಟರು ಈ ಬಗೆಯಲ್ಲಿ ಇಷ್ಟವಾಗುತ್ತಾರೆ.
ಇತ್ತೀಚೆಗೆ ಯಾವ ಪ್ರಶಸ್ತಿ ಪದವಿ ಲಭಿಸಿದರೂ ಅದಕ್ಕೆ ಜಾತಿಯೋ ಪಕ್ಷವೋ ಎಂಬ ಲೆಕ್ಕ ಬರೆದುಬಿಡುತ್ತಾರೆ. ಅನಂತ್ ಗಿಂತ ಪ್ರತಿಭಾವಂತರಿರಬಹುದು. ಅವರಿಗೆ ಪ್ರಶಸ್ತಿ ಸಿಕ್ಕಿಲ್ಲದೇ ಇರಬಹುದು. ಹಾಗಂತ ಅನಂತ್ ಸಿಕ್ಕಿದಾಗ ಅದು ಅಪಮೌಲ್ಯವಾಗಿದೇ ಎಂದು ಭಾವಿಸುವುದು ಪ್ರತಿಭೆಗೆ ತೋರುವ ಅಗೌರವವಾಗುತ್ತದೆ. ಎಲ್ಲದಕ್ಕೂ ಮಾನದಂಡ ಜಾತಿಯೋ ಮತ್ತೊಂದೋ ಇರುವುದಾದರೆ ಇದು ಪ್ರಜಾಪ್ರಭುತ್ವ ಹೇಗಾಗಬಹುದು. ಶಿಕ್ಷಣ ವೃತ್ತಿ ಎಲ್ಲದರಲ್ಲೂ ಇದೇ ಬಗೆಯಲ್ಲಿ ಪರಿಗಣಿಸುತ್ತಾ ಹೋದರೆ ಸಾಮಾಜಿಕ ಮೌಲ್ಯ ಹೇಗೆ ಸಂರಕ್ಷಿಸಲ್ಪಡುತ್ತದೆ. ಜಾತಿ ಆಧಾರದಲ್ಲೆ ಒಬ್ಬ ಚಾಲಕನಾದರೆ ಆ ವಾಹನದಲ್ಲಿ ಸಂಚರಿಸುವುದಕ್ಕೆ ಧೈರ್ಯ ಬರಬಹುದೇ? ಪ್ರಶಸ್ತಿ ಸಿಗಬೇಕಾದವರು ಅದಕ್ಕೆ ಅರ್ಹರಾದವರು ಹಲವರು ಇರಬಹುದು. ಸಿನಿಮಾ ಟಿಕೇಟ್ ಕೊಟ್ಟು ನೋಡುವಂತೆ ಪ್ರಶಸ್ತಿಯೂ ಟಿಕೆಟ್ ಕೊಟ್ಟು ಪಡೆಯಬಹುದಾದರೆ ಅದಕ್ಕೆ ಟಿಕೆಟ್ ಗಿಂತ ಹೆಚ್ಚು ಮೌಲ್ಯ ಸಿಗುವುದಕ್ಕೆ ಸಾಧ್ಯವಿಲ್ಲ. . ಯಾವುದೇ ಬಗೆಯ ಕೊಂಕು ಮನಸ್ಸಿನಲ್ಲಿದ್ದರೆ ಅದು ಸ್ವತಃ ಸ್ವ ಮನಸ್ಸಿನ ಸಂತೋಷವನ್ನು ನಾಶ ಮಾಡುತ್ತದೆ. ಎಲ್ಲವನ್ನೂ ಬದಿಗಿಡಬೇಕು. ಕನ್ನಡಕ್ಕೆ ಮತ್ತೊಂದು ಫಾಲ್ಕೆ ಬಂದಿದೆ ಅದಕ್ಕೆ ಸಂತೋಷ ಪಡೋಣ. ಮುಂದೆ ಇರುವವ ಮನ್ಮಥ ಎನ್ನುವಾಗ ಹಿಂದೆ ಇರುವವನು ಹನುಮಂತ ನಾಗುವುದಿಲ್ಲ. ಒಂದು ವೇಳೆ ಹನುಮಂತನಾದರೂ ಹನುಮಂತನಿಗೂ ಸೌಂದರ್ಯವನ್ನು ಕಲ್ಪಿಸುವ ಪ್ರತಿಭೆಗಳಿವೆ.

No comments:
Post a Comment