Friday, October 30, 2026

ವಾಲ್ಮೀಕಿ ರಾಮ

ಪ್ರತೀ ವರ್ಷದಂತೆ ಈ ವರ್ಷವೂ ವಾಲ್ಮೀಕಿ ಜಯಂತಿ ಬಂತು ಮಾತ್ರವಲ್ಲ ಆದಿನ ಸರಕಾರಿ ರಜೆಯೂ ಇತ್ತು. ನಮ್ಮ ಮನೆ ಹುಡುಗ ಕುತೂಹಲಕ್ಕೆ ಕೇಳಿದ, ರಾಮನವಮಿಗೆ ಇಲ್ಲದ ಸರಕಾರಿ ರಜೆ ವಾಲ್ಮೀಕಿ ಜಯಂತಿಗೆ ಇದೆಯಲ್ಲ? ಯಾಕೆ ರಾಮ ನವಮಿಗೆ ಸರಕಾರಿ ರಜೆ ಇಲ್ಲ? ವಾಲ್ಮೀಕಿ ಜಯಂತಿಗೆ ರಜೆ ಇರುವುದಕ್ಕೆ ಆಕ್ಷೇಪದ ಕೊಂಕು ಇಲ್ಲ. ಆದರೆ ರಾಮನವಮಿಗೆ ಯಾಕೆ ಇಲ್ಲ ಎಂಬುದೇ ಪ್ರಶ್ನೆ. ವಾಲ್ಮೀಕಿ ಜಯಂತಿಗೆ ಏನೆಲ್ಲ ಖಾಸಗಿಯಾಗಿ ಮನೆಯಲ್ಲಿ, ಅಥವಾ ಸಾರ್ವತ್ರಿಕವಾಗಿ ಸಾರ್ವಜನಿಕವಾಗಿ ಏನಿರುತ್ತದೆಯೋ ತಿಳಿಯದು, ಆದರೆ ರಾಮನವಮಿಗೆ, ಹನುಮ ಜಯಂತಿಗೆ ಸಾಕಷ್ಟು ಮನೆಯಲ್ಲೂ ಊರಿನಲ್ಲೂ ಕಾರ್ಯಕ್ರಮ ಇರುವುದನ್ನು ಕಾಣಬಹುದು. 


 

ಸದಾ ವೃತ್ತಿ ನಿರತರಾಗಿ ಕಾರ್ಯ ಪ್ರವೃತ್ತರಾಗಿ ವೃತ್ತಿಯೇ  ದೈವ ಅಂತ ತಿಳಿದವರಿಗೆ ಒಂದು ದಿನದ ರಜೆ ಎಂಬುದು ಅಷ್ಟು ಮಹತ್ವವಲ್ಲ. ರಾಮನ ಹೆಸರಲ್ಲಿ ಒಂದು ದಿನ ಕೆಲಸ ಮಾಡುವುದರಿಂದ ರಾಮನಿಗೂ ಅದು ಪ್ರಿಯವಾಗಬಹುದು. ಒಂದು ರಜೆಯಿಂದ ಯಾವುದೂ ಮುಖ್ಯವಾಗುವುದಿಲ್ಲ. ಆಚರಣೆಯಿಂದ ಮುಖ್ಯವಾಗುತ್ತದೆ. ದುಡಿಯುವ ಶ್ರಮ ಜೀವಿಗೆ ರಜೆ ಎಂಬುದು ಮುಖ್ಯವಾಗುವುದಿಲ್ಲ. ಆದರೆ...ನಮ್ಮ ವ್ಯವಸ್ಥೆಯ  ದ್ವಂದ್ವನೀತಿ ಮಾತ್ರ ಅಣಕಿಸುವಂತೆ ಭಾಸವಾಗುತ್ತದೆ. ಮಹರ್ಷಿ ವಾಲ್ಮೀಕಿ ಎನ್ನುವಾಗ, ಮಹರ್ಷಿಯಾಗಲು ಕಾರಣವೇ ಶ್ರೀರಾಮ ನಾಮ ಸ್ಮರಣೆ. ವಾಲ್ಮೀಕಿಗೆ ಜೀವಾಳವಾದ ಶ್ರೀರಾಮನನ್ನು ವ್ಯವಸ್ಥೆ ಮಾತ್ರ ಅಂಗೀಕರಿಸುವುದಿಲ್ಲ.   ವಾಲ್ಮೀಕಿಗೆ ರಾಮ ದರ್ಶನವನ್ನು ಮಾಡಿಸಿದವರು ನಾರದ ಮಹರ್ಷಿಗಳು ಎಂದು ಕಥೆ ಇದೆ. ನಾರದ ಎಂದರೆ ನಾರಂ ದದಾತಿ.  ನಾರಂ ಎಂದರೆ ಮೋಕ್ಷ. ದದಾತಿ ಎಂದರೆ ಕೊಡಿಸುವವನು ಎಂದರ್ಥ. ವ್ಯಾಧ ನಾರದರ ದರ್ಶನದಿಂದ ವಾಲ್ಮೀಕಿಯಾದ. ಆದರೆ  ಪ್ರಸ್ತುತ ಸಮಾಜದ ದೃಷ್ಟಿಕೋನದಂತೆ, ಹೆತ್ತು ಬೆಳೆಸುವುದಕ್ಕೆ ಬೇಕಾಗುವ ಅಪ್ಪ ಅಮ್ಮ ಆನಂತರ ಹೊರೆಯಾಗಿಬಿಡುತ್ತಾರೆ.  

ರಾಮ ನವಮಿಯ ರಜೆಯೋ ಪ್ರಾಮುಖ್ಯತೆಯೋ ವಿಷಯವಲ್ಲ. ರಾಮನ ಬಗ್ಗೆ ಗೌರವ ಆದರ ಇಲ್ಲದೇ ಇದ್ದಲ್ಲಿ ಅಲ್ಲಿ ವಾಲ್ಮೀಕಿಯ ಪ್ರಾಮುಖ್ಯತೆಯೂ ಇರುವುದಿಲ್ಲ. ಪೂರ್ವಾಶ್ರಮದ ವ್ಯಾಧ  ವಾಲ್ಮೀಕಿಯಾಗಿ ವಾಲ್ಮೀಕಿ ಆರಾಧಿಸಲ್ಪಡುವುದಿಲ್ಲ. ರಾಮನಾಮ ಸಾಕ್ಷಾತ್ಕಾರದಿಂದ ಬದಲಾದ ವ್ಯಾಧನಾಗಿ ಆರಾಧಿಸಲ್ಪಡುತ್ತಾನೆ. ರಾಮನಾಮದ ಮಹತ್ವವನ್ನು ಸಾರಬೇಕಾದ್ದಲ್ಲಿ ರಾಮ ಅವಗಣನೆಯಿಂದ ವಾಲ್ಮೀಕಿಗೆ ಗೌರವ ಪ್ರಾಪ್ತವಾಗುವುದಕ್ಕೆ ಸಾಧ್ಯವಿಲ್ಲ. ಬಹುಶಃ ವಾಲ್ಮೀಕಿಗೂ ಇದು ಪ್ರಿಯವೆನಿಸಲಾರದು. ರಾಮ ದೇವರಾಗಿರುವುದು ವಾಲ್ಮೀಕಿಯಿಂದ ಅಲ್ಲ. ವ್ಯಾಧ ವಾಲ್ಮೀಕಿಯಾಗಿರುವುದು ಶ್ರೀರಾಮನಿಂದ. 

ರಾಮನೆಂದರೆ ಕೋಮುವಾದವಾಗುತ್ತದೆ. ವಾಲ್ಮೀಕಿ ಎಂದರೆ ಜಾತ್ಯಾತೀತವಾಗುತ್ತದೆ. ಇದು ಯಾವ ಸಿದ್ದಾಂತದ ಪ್ರತಿಪಾದನೆ ಎಂದು ಅರ್ಥವಾಗುವುದಿಲ್ಲ. ನಿಜಕ್ಕೂ ವಾಲ್ಮೀಕಿ ಪೂಜನೀಯ ಸ್ಥಾನ ಪಡೆಯುವುದು ಆದಿಕವಿಯಾಗಿ, ಅತ್ಯಂತ ಪುರಾತನ ರಾಮಾಯಣವನ್ನು ಬರೆದುದರಿಂದ. ಅದನ್ನು ಆತ ಸ್ವತಃ ಕಂಡು ಅನುಭವಿಸಿ ಅದರ ಒಂದು ಭಾಗವಾಗಿ ರಚಿಸಿದ್ದಾನೆ. ಮತ್ತದು ಸಾಕ್ಷ್ಯ ರೂಪದಲ್ಲಿ ಇಂದಿಗೂ ನಮ್ಮ ಮುಂದಿದೆ.  ವಾಲ್ಮೀಕಿ ರಾಮಾಯಣವನ್ನು ರಚಿಸಿದ. ಆದಿಕವಿ ಎನ್ನಿಸಿಕೊಂಡ. ರಾಮಾಯಣದಿಂದ ವಾಲ್ಮೀಕಿಗೆ ಹೆಸರು ಬಂತು. ರಾಮಾಯಣಕ್ಕೆ ಅಥವಾ ಶ್ರೀರಾಮನನ್ನು ಗೌರವಿಸುವುದೆಂದರೆ ವಾಲ್ಮೀಕಿಯನ್ನು ಗೌರವಿಸಿದಂತೆ.

ಕಾವ್ಯದಿಂದ ಕವಿಗೆ ಅಸ್ತಿತ್ವ ಮತ್ತು ಪ್ರಸಿದ್ಧಿ ಲಭ್ಯವಾಗುತ್ತದೆ. ಕಾವ್ಯದಿಂದಲೇ ಕವಿ ಪರಿಚಿತನಾಗುತ್ತಾನೆ. ರಾಮಾಯಣ ದರ್ಶನದಂತಹ ಕಾವ್ಯದಿಂದ ಕುವೆಂಪುರವರಿಗೆ ಹೆಸರು ಬಂತೋ ಅಲ್ಲ ಕುವೆಂಪುರವರಿಂದ ರಾಮಾಯಣಕ್ಕೆ ಹೆಸರು ಬಂತೋ. ನಿಜಕ್ಕಾದರೆ ಕವಿ ಕಾವ್ಯ ಎರಡೂ ಮುಖ್ಯವಾಗುತ್ತದೆ. ಅಂಬೇಡ್ಕರ ಬರೆದುದಕ್ಕೆ ಭಾರತದ ಸಂವಿಧಾನಕ್ಕೆ ಹೆಸರು ಬಂತೋ ಇಲ್ಲ ಸಂವಿಧಾನವನ್ನು ಅಂಬೇಡ್ಕರ್ ಬರೆದುದರಿಂದ ಸಂವಿಧಾನ ಶ್ರೇಷ್ಠವೆನಿಸಿತೋ ಅರ್ಥವಾಗುವುದಿಲ್ಲ. ಸಂವಿಧಾನವೆಂಬುದು ಭಾರತದ ಪ್ರಜಾಪ್ರಭುತ್ವದಲ್ಲಿ ಶ್ರೇಷ್ಠವಾಗಿದೆ. ಕೆಲವರಿಗೆ ಮಾತ್ರ ಅಂಬೇಡ್ಕರ್ ಬರೆದುದರಿಂದ ಸಂವಿಧಾನ ಮುಖ್ಯವಾಗುತ್ತದೆ. ಬಹುಶಃ ಬೇರೆ ಯಾರೋ ಬರೆದಿದ್ದರೆ ಹೇಗಿರುತ್ತಿತ್ತೊ ಊಹಿಸುವುದು ಕಷ್ಟ.  ಕನ್ನಡಕ್ಕೆ ಅಷ್ಟೊಂದು ಜ್ಞಾನ ಪೀಠ ಪ್ರಶಸ್ತಿ ಬಂದಿತ್ತು. ಎಲ್ಲವು ಅವರವರ ಕಾವ್ಯ ಸಾಹಿತ್ಯವನ್ನು ಅರಸಿ ಬಂದವುಗಳೇ ಹೊರತು ವ್ಯಕ್ತಿಯನ್ನು ಅರಸಿ ಬಂದವುಗಳಲ್ಲ. 

ದ್ವಂದ್ವನೀತಿ ಅಥವಾ ದ್ವಿಮುಖ ನೀತಿ ಇಂದಿನ ತತ್ವ ಸಿದ್ದಾಂತಗಳ ಮೊದಲ ಸೋಲನ್ನು ತೋರಿಸುತ್ತದೆ. ವಂದೇ ಮಾತರಂ ವಿವಾದ. ಯಾವುದೋ ಕಾರಣಕ್ಕೆ ಕೆಲವರ ವಿಶ್ವಾಸ ನಂಬಿಕೆಗಳಿಗೆ ಅದು ತೊಂದರೆ ಕೊಡಬಹುದು. ಎಲ್ಲರ ವಿಶ್ವಾಸ ನಂಬಿಕೆಗಳು ಗೌರವಿಸಲ್ಪಡಬೇಕು ಎಂಬುದೇನೋ ಸತ್ಯ. ಆದೇ  ರೀತಿ ನಮ್ಮ ಕನ್ನಡದ ನಾಡಗೀತೆ.  ರಾಷ್ಟ್ರ ಕವಿ ಕುವೆಂಪುರವರು ರಚಿಸಿದ ಈ ನಾಡಗೀತೆ ಜಯ ಜನನಿಯ ತನುಜಾತೆ, ಭಾರತ ಮಾತೆಯನ್ನು ಉಲ್ಲೇಖಿಸುವ ಈ ಗೀತೆ ನಾಡಗೀತೆಯಾಗಿದೆ ಮಾತ್ರವಲ್ಲ  ಇದರಲ್ಲಿ ಉಲ್ಲೇಖವಾಗುವ ಕರ್ನಾಟಕದ ಚರಿತ್ರೆಯ  ಶ್ರೇಷ್ಠ ವ್ಯಕ್ತಿಗಳ ಸಾಲಿನಲ್ಲಿ ವಿದ್ಯಾರಣ್ಯರ ಹೆಸರೂ ಬರುತ್ತದೆ.  ವಿದ್ಯಾರಣ್ಯರ ಚರಿತ್ರೆ ತೆಗೆದು ನೋಡಿದರೆ, ವಿದ್ಯಾರಣ್ಯರು  ನಿಜಾಮರ ವಿರುದ್ದ ಹೋರಾಡಿ ವಿಜಯನಗರ ಸಾಮ್ರಾಜ್ಯ ಕಟ್ಟಿದ್ದರು. ಇದೊಂದು ಬಗೆಯಲ್ಲಿ ಕರ್ನಾಟಕದ ಸ್ವಾತಂತ್ರ್ಯ ಹೋರಾಟವೆಂದು ಪರಿಗಣಿಸಬಹುದು. ಬಹುಶಃ ಈ ನಾಡಗೀತೆಯಲ್ಲಿ ಈ ವಿದ್ಯಾರಣ್ಯ ಜನನಿ ಪದವೂ ಆಕ್ಷೇಪಾರ್ಹವಾಗಬಹುದು. ಅಥವಾ ಇದು ನಾಡಗೀತೆಯಾಗಬಹುದು ಎಂದಾದರೆ, ವಂದೇ ಮಾತರಂ ರಾಷ್ಟ್ರ ಗೀತೆಯಾಗುವುದರಲ್ಲಿ ಆಕ್ಷೇಪ ಯಾಕೋ ತಿಳಿಯದು. ಮೂಲತಃ ಆಕ್ಷೇಪ ಯಾರಿಗೂ ಇರುವುದಿಲ್ಲ, ಆದರೆ ಆಕ್ಷೇಪ ಹುಟ್ಟುವುದೇ ರಾಜಕೀಯ ಕಾರಣಗಳಿಗೆ ಎಂಬುದು ವಿಪರ್ಯಾಸ. ಇದುವೇ ರಾಜಕೀಯದ ದ್ವಂದ್ವ ನಿಲುವು. 

ವಿಷಯಗಳಿಂದ ತತ್ವಸಿಧ್ದಾಂತಗಳಿಂದ ವ್ಯಕ್ತಿ ಶ್ರೇಷ್ಠವಾಗುತ್ತಾನೆ ಹೊರತು, ವ್ಯಕ್ತಿಯಿಂದ ಅವುಗಳು ಮುಖ್ಯವಾಗುವುದಿಲ್ಲ. ಆದರೆ ವಿಪರ್ಯಾಸವೆಂದರೆ ಇಲ್ಲಿ ವ್ಯಕ್ತಿಗಳೇ ಮುಖ್ಯವಾಗಿ ತತ್ವ ಸಿದ್ದಾಂತಗಳು ಗೌಣವಾಗಿಬಿಡುತ್ತವೆ. ರಾಮಾಯಣಕ್ಕಿಂತಲೂ ರಾಮನಿಗಿಂತಲೂ ವಾಲ್ಮೀಕಿಯೇ ಶ್ರೇಷ್ಠವಾಗುವುದು ವಿಪರ್ಯಾಸ ಎನ್ನಬೇಕು.  

ಒಬ್ಬ ಕಲಾವಿದ ತನ್ನಲ್ಲಿರುವ ಕಲೆಯಿಂದ ಪ್ರಸಿದ್ಧನಾಗುತ್ತಾನೆ. ಹೊರತು ಕಲಾವಿದನಿಂದ ಕಲೆ ಪ್ರಸಿದ್ಧವಾಗುವುದಿಲ್ಲ.  ವಿಪರ್ಯಾಸವೆಂದರೆ ಕಲೆಗಿಂತಲೂ ಕಲಾವಿದನೇ ಮುಖ್ಯವಾಗುತ್ತಾನೆ. ಸಿನಿಮಾಕ್ಕಿಂತಲೂ ಸಿನಿಮಾ ನಟ ಪೂಜಿಸಲ್ಪಡುತ್ತಾನೆ. ಆದುದರಿಂದಲೇ ಸಿನಿಮಾ ಮುಖ್ಯವಾಗುತ್ತದೆ. ಇದು ವಾಸ್ತವ.

ಸತ್ಯವನ್ನೇ ನುಡಿಯುತ್ತಿದ್ದ ಗಾಂಧೀಜಿಗೆ ಹೆಸರು ಪ್ರಾಪ್ತವಾಯಿತು. ಹೊರತು ಗಾಂಧೀಜಿಯಿಂದ ಸತ್ಯಕ್ಕೆ ಹೆಸರು ಬರಲಿಲ್ಲ. ಅಥವಾ ಗಾಂಧೀಜಿ ಹೇಳಿದುದರಿಂದ ಸತ್ಯ ಸತ್ಯವಾಗಲಿಲ್ಲ.  ಯಾರು ಹೇಳಿದರೂ ಸತ್ಯ ಸತ್ಯವೇ ಆಗಿ ಉಳಿಯುತ್ತದೆ. 




 

No comments:

Post a Comment