Saturday, October 8, 2011

ಯೋಗನಿದ್ರೆ - ಸುಖನಿದ್ರೆ



ಒಂದು ವಸ್ತುವಿಗೆ  ಮೌಲ್ಯವನ್ನು ನಿರ್ಧರಿಸಿ ಅದರ ಹಿಂದೆ ಹೋಗುವುದು ಕೈವಶವಾದಾಗ ಹಿಗ್ಗಿ ಸಂತೋಷಿಸಿದರೆ ಸಿಗದಾಗ ನಿರಾಶನಾಗುವುದು, ಸಾಧ್ಯವಾದರೆ ಮಗುದೊಮ್ಮೆ ಯತ್ನಿಸುವುದು. ಇದು  ಮಾನವನ ಐಹಿಕ ಜೀವನದಲ್ಲಿ ಕಂಡುಬರುವ ಪರಮ ಸತ್ಯ. ಮೌಲ್ಯವನ್ನು ನಿರ್ಧರಿಸುವುದೇ ಐಹಿಕ ಜಗತ್ತು. ಈ  ಮೌಲ್ಯಮಾಪನ ಎಂಬುದು ಆಗದೇ ಇರುತ್ತಿದ್ದರೆ, ಅತ್ಯಂತ ಮೌಲ್ಯಭರಿತ ವಸ್ತುವು ಯಃಕಶ್ಚಿತ್ ವಸ್ತುವಾಗಿಬಿಡುತ್ತದೆ.ಚಿನ್ನವೋ ಅಥವಾ ಇನ್ನಾವುದೋ ಅಮೂಲ್ಯವಸ್ತುವು ಅದು ಅಮೂಲ್ಯವಾಗುವುದು ಮನುಷ್ಯನಿಂದಲೇ. ಒಂದು ವೇಳೆ ಆ ಮೌಲ್ಯ ಅದಕ್ಕೆ ಇಲ್ಲದೇ ಇರುತ್ತಿದ್ದರೆ ಅದು ಬರಿದೇ ಒಂದು ಲೋಹ. ಅದರ ಗುಣದಿಂದಲೋ ಉಪಯೋಗದಿಂದಲೋ ಅದರ ಮೌಲ್ಯ ನಿರ್ಧರಿಸಲ್ಪಟ್ಟರೂ ಆ ಮೌಲ್ಯ ನಿರ್ಧಾರಣೆಯ ಮೂಲ ಇರುವುದು ಮನುಷ್ಯನಲ್ಲೇ.

            ತನಗೆ ಮೌಲ್ಯಯುತವಾದದ್ದು ಇನ್ನೋರ್ವನಿಗೆ ಅಪಮೌಲ್ಯ ಎನಿಸಿಬಿಡಬಹುದು. ಜಗನ್ನಿಯಾಮಕನಾದ ಭಗವಂತನು ಯಾವುದೇ ಒಂದು ವಸ್ತುವಿಗೆ ಕಾರಣೀಭೂತನಾದರೂ.. ಭಗವಂತ ಯವುದನ್ನು ಅಮೂಲ್ಯ  ಎಂದು ಪರಿಗಣಿಸಿರುತ್ತಾನೋ ಅದು ನಮ್ಮ ಅರಿವಿಗೆ  ಬರುವುದಿಲ್ಲ.  ಹೊರಗಿನ ಜಗತ್ತು ಮತ್ತದರ  ಸೃಷ್ಟಿ, ಮನುಕುಲ ಪ್ರಾಣಿ ಸಂಕುಲ ಹೀಗೆ ಬಾಹ್ಯ ಜಗತ್ತಿನ ಸೃಷ್ಟಿ ಕರ್ತ ಭಗವಂತ. ಎಲ್ಲವನ್ನೂ ಸೃಷ್ಟಿಸಿದ ಭಗವಂತ ಆತ್ಮವನ್ನು ಜತೆಗಿರಿಸಿಬಿಡುತ್ತಾನೆ. ಆತ್ಮ ಮೌಲ್ಯಯುತವೆಂದು ನಿರ್ಧರಿಸಿಯೂ ಬಿಡುತ್ತಾನೆ. ಆತ್ಮದ ಮೌಲ್ಯ ಅರಿಯುವುದೇ ಅಧ್ಯಾತ್ಮ . ಬಹುಶಃ  ಆತ್ಮದ ಅಧ್ಯಯನವೇ ಅಧ್ಯಾತ್ಮ ವಾಗಿರಬಹುದು.

            ಮುಂಜಾನೆ ನಸುಕಿನ ವೇಳೆ ಈ ಆತ್ಮವನ್ನು ಅರಿಯುವ ಅಮೃತ ಘಳಿಗೆ. ಏಕಾಂತದ ಧ್ಯಾನಾಸಕ್ತನಾಗಿ ಪ್ರಾಣಾಯಾಮದ ಮೊದಲ ಚರಣದಲ್ಲಿ ನಿಂತಿರುವಾಗ ಬದುಕು ಎಷ್ಟು  ಸುಂದರ ಎನಿಸಿದರೂ ಅದು ನಶ್ವರವಲ್ಲವೇ ಎಂಬ ಜಿಜ್ಞಾಸೆ ಮೂಡುತ್ತದೆ. ಬಹುಶಃ ದ್ವಂದ್ವಗಳ ಉಗಮ ಮೂಲವೇ ಇದು ಅನ್ನಿಸುತ್ತದೆ. ದ್ವಂದ್ವಮಯ ಬದುಕು ಅನಾವರಣಗೊಳ್ಳಲು ಆರಂಭಿಸುವುದು ಇಲ್ಲಿಂದಲೇ. ದೀರ್ಘವಾದ ಹಾಗು ನಿಧಾನವಾದ ಉಸಿರಾಟದಲ್ಲಿ ಚೈತನ್ಯ ಹೃದಯದ ಮೂಲಕ ದೇಹಾದ್ಯಂತ ವ್ಯಾಪಿಸಿದಾಗ....ಆ ಹಾ ಉಸಿರಿನ ಮೌಲ್ಯ ಏನೆಂದು ಅರಿವಾಗುತ್ತದೆ. ಪ್ರಾಣಾಯಾಮದ ಮಜಲುಗಳು ಅವು ಕೊಡುವ ವಿಶಿಷ್ಟ ಅನುಭವಗಳು ಅದರಲ್ಲಿ ತನ್ಮಯರಾಗಿ ಅರ್ಥೈಸಿಕೊಳ್ಳಬೇಕು.


ನಿಧಾನವಾದ ಉಸಿರಾಟದ ಪ್ರಕ್ರಿಯೆಯಲ್ಲಿ ಗಾಳಿಯನ್ನು ಒಳಕ್ಕೆಳೆದು ಹೃದಯ ತುಂಬಿದ ಅನುಭವವಾಗಿ ಅದನ್ನು ನಿಧಾನಾವಾಗಿ ಬಿಡುತ್ತಿದ್ದಂತೆ ಹೊಕ್ಕಳಿನ ಸುತ್ತ ಸುತ್ತಿದ ಕರುಳಿನಲ್ಲಿ ಸಂವೇದನೆಯೊಂದು ಅನುಭವವಾಗುತ್ತದೆ.ಗಾಳಿತೆಗೆದ ಚೆಂಡಿನಂತೆ, ಸತ್ವ ಹೀನ ವಾಹನದ ಗಾಲಿಯಂತೆ ಹೊಟ್ಟೆಯಲ್ಲಿ ಒಳ ಸೆಳೆತ ಆರಂಭವಾಗುತ್ತದೆ. ಆ ನಿರ್ವಾತದ ಅನುಭವ ನಿಧಾನವಾಗಿ ಶರೀರದಾದ್ಯಂತ ವ್ಯಾಪಿಸಿ ಮನಸ್ಸಿನ ಯೋಚನೆಗೆ ಗುರಿಯೊಂದನ್ನು ಕಲ್ಪಿಸಿದ ಅನುಭವಾಗುತ್ತಿದ್ದಂತೆ ಶರೀರ, ಒಳಗಿನ ಆತ್ಮ ಇವುಗಳ ಸಂಬಂಧದ ಅರಿವಾಗುತ್ತದೆ. ಆಗಲೆ ಬದುಕಿನ ಜ್ಞಾನೋದಯದ ಜ್ಯೋತಿಯ ಅತ್ಯಂತ ಸೂಕ್ಷ್ಮ ಅನುಭವಾಗುವುದು. ಎಷ್ಟು ವಿಚಿತ್ರವಲ್ಲವೆ? ಇದುವೇ ಅಧ್ಯಾತ್ಮವಾಗಿರಬಹುದೇ?

ಬೊಜ್ಜು ತುಂಬಿದ ಹೊಟ್ಟೆ, ತನ್ನ ಅಸ್ತಿತ್ವವನ್ನು ಕಳೆದು ಕೊಂಡರೆ, ಜನಿಸಿದಾರಭ್ಯದಿಂದ ಯಾವುದನ್ನು ತುಂಬಿಸುವುದಕ್ಕಾಗಿ ಪ್ರತಿಯೊಂದು ಪ್ರಾಣಿಯೂ ಯತ್ನಿಸುವುದೋ ಅದೆಲ್ಲ ಕ್ಷಣದಲ್ಲಿ ಕ್ಷುಲ್ಲಕ ಎನಿಸಿಬಿಡುತ್ತದೆ. ಹಗುರವಾಗುವ ದೇಹ ಈ ಪಂಚಭೂತಗಳಲ್ಲಿ ಲೀನವಾಗುವುದೋ ಎಂಬ ಭ್ರಮೆ.   ನಿಧಾನವಾದ ದೀರ್ಘವಾದ ಉಸಿರಾಟದಲ್ಲಿ ಶ್ವಾಸ ಒಳಕ್ಕೆಳೆಯುತ್ತಿದ್ದಂತೇ, ಒಳಕ್ಕೆಳೆದ ಗಾಳಿ ನಾಸಿಕದಿಂದ ಶ್ವಾಸಕೋಶಕ್ಕೆ ಇಳಿದರೂ ತೆಲೆಯಿಂದ ಶರೀರದಾಂದ್ಯಂತ ಚೈತನ್ಯದ ವಿದ್ಯುತ್ ಪ್ರವಹಿಸಿದಂತೆ ಭಾಸವಾಗುವುದು. ಕೇವಲ ದೀರ್ಘ ಉಸಿರಾಟದಿಂದ ಹೀಗಾಗುವುದೆಂದರೆ,  ಆವಾಗ ಅನುಲೋಮ ವಿಲೋಮದ ಲೆಕ್ಕಾಚಾರ ಮನಸ್ಸಿನಲ್ಲ್ಲಿ ಮೂಡುವುದು. ಇರುಳಿನ ವಿರಾಮದಿಂದ ಶರೀರ ಕೊಡವಿಕೊಂಡು ಮೇಲೆದ್ದು ದಿನದ ಚಟುವಟಿಕೆಗೆ ಸಜ್ಜಾದಾಗ... ಮನೆಯೊಡತಿ ಅಡುಗೆ ಕೋಣೆ ಹೊಕ್ಕು ಅಹಾರದ ಸಿದ್ದತೆ ತೊಡಗಲು ಬೆಂಕಿ ಹಚ್ಚಿದಂತೆ.. ಪ್ರಾಣಾಯಾಮ ದೀರ್ಘ ಉಸಿರಾಟ ಆರಂಭವಾದಾಗ ಶರೀರದ ಅಡುಗೆ ಕೋಣೆಯಲ್ಲಿ ಬೆಂಕಿ ಹಚ್ಚಿ ಚೈತನ್ಯದ ಆಹಾರ ಸಿದ್ದವಾದಂತೆ.


ಪ್ರಾಣಾಯಾಮ ಮಾಡುತ್ತಿದ್ದಂತೆ ದಿನದಿಂದ ದಿನಕ್ಕೆ ಹೊಸ ಅನುಭವ ಉಂಟಾಗುವುದು ಸಾಮಾನ್ಯ. ಶ್ರದ್ದೆಯನ್ನು ಹೊಂದಿ ಎಕಾಗ್ರತೆ ಬರುತ್ತದೆ. ಅದರ ಜತೆಯಾಗಿ ವಿಬ್ಭಿನ್ನ ಪರಿಣಾಮಗಳು ಶರೀರದಲ್ಲಿ ಆಗತೊಡಗುತ್ತದೆ. ಪ್ರಾಣಾಯಮದ ಉತ್ತುಂಗಕ್ಕೆ ಸನಿಹವಾದಂತೆ ದೇಹ ಬೆವರುದಕ್ಕೆ ಆರಂಭಿಸುತ್ತದೆ. ಸಾಮಾನ್ಯವಾಗಿ ಮೈಗಂಟಿಕೊಂಡ ಬಟ್ಟೆಯನ್ನು ಈ ವೇಳೆಯಲ್ಲಿ ಧರಿಸಬಾರದೆಂದು ಸಲಹೆ ಮಾಡುತ್ತಾರೆ. ಬರಿ ಮೈ ಆದರೆ ಪರಿಣಾಮ ಇನ್ನೂ ಅಧಿಕ. ಶರೀರ ಹೊರ ಪ್ರಪಂಚಕ್ಕೆ ಸುಂದರವಾಗಿ ಸ್ಪಂದಿಸುವುದರ ಅನುಭವ ಆವಾಗ ಆಗುತ್ತದೆ. ಬರೀ ಉಸಿರಾಟ ಕ್ರಿಯೆಯಲ್ಲಿ ಮೈ ಬೆವರುವುದೆಂದರೆ, ವಿಚಿತ್ರ ಅನುಭವ.ಶರೀರ ಸ್ಪಂದಿಸಿದಂತೆಲ್ಲ ಎಕಾಗ್ರತೆ ಅಧಿಕವಾಗಿ ಬಾಹ್ಯಪ್ರಪಂಚದ ಅರಿವು ಕ್ಷೀಣವಾಗುತ್ತ ಹೋಗುತ್ತದೆ. ಉಸಿರಾಟದೊಂದಿಗೆ ಶರೀರ  ಮನಸ್ಸು ಸ್ಥಿರವಾಗಿ ಚಂಚಲತೆ ಮಾಯವಾಗಿ ಶರೀರ ಮತ್ತು ಆತ್ಮದ ಸಂಬಂಧ ಅರಿವು ಉಂಟಾಗುತ್ತದೆ. ಆವಾಗ ದೇಹಕ್ಕೆ ದಣಿವಿನ ಅರಿವಾಗ ತೊಡಗುತ್ತದೆ ಬೆವೆತ ಶರೀರ ಮತ್ತು ಆತ್ಮದ ಸಂಬಂಧ ಒಂದು ಉತ್ತುಂಗ ಶಿಖರಕ್ಕೆ ಒಂದು ಹಂತದವರೆಗೆ ಏರುತ್ತ ನಂತರ  ಇಳಿದು ಈ ಭಾಹ್ಯಪ್ರಪಂಚಕ್ಕೆ ಬಂದಾಗ ದೇಹಕ್ಕೆ ವಿಶ್ರಾಂತಿ ಮತ್ತು ಮನಸ್ಸಿಗೆ ನಿರಾಳತೆಯ ಅವಶ್ಯಕತೆ ಉಂಟಾಗುತ್ತದೆ. ಆ ಸ್ಥಿತಿಯಲ್ಲಿ ಅತಿಮುಖ್ಯವಾದ ಮುಂದಿನ ಹಂತವೇ ಶವಾಸನ.

ನಿದ್ರೆ ಎಂಬುದು ಒಂದು ಪ್ರಜ್ಞಾಹೀನ ಸ್ಥಿತಿ. ನಿಗದಿತ ಸಮಯದಲ್ಲಿ ಮನಸ್ಸು ದೇಹ ಬಳಲಿದಾಗ ಯಾವುದೇ ಜೀವಿ ನಿದ್ರಾ ಸ್ಥಿತಿಗೆ ಜಾರಿಕೊಂಡು ದೈನಿಕ ಬದುಕಿನ ಎಲ್ಲ ಜಂಝುಡಗಳಿಂದ ದೂರವಾದಂತೆ ಅನಿಸಿದರೂ ಕನಸಿನ ಮೂಲಕ ಕೆಲವೊಮ್ಮೆ ಮನಸ್ಸು ಜಾಗೃತವಾಗುವುದು. ಸಂತೋಷ ದುಃಖ ಭಯ ದುಮ್ಮಾನಗಳ ಅನುಭವ ಮನಸ್ಸಿಗೂ ದೇಹಕ್ಕೂ ಆಗಬಹುದು. ನಿದ್ದೆಯಲ್ಲೂ ಕಾಡುವ ಚಿಂತೆ ಯೋಚನೆಗಳು ಮನಸ್ಸಿಗೆ ಆವಶ್ಯವಿರುವ ನಿರಾಳತೆಯನ್ನು ಒದಗಿಸದೇ ಇರಬಹುದು. ಅದಕ್ಕಾಗಿಯೇ ಯೋಗದಲ್ಲಿ  ಶವಾಸನ ಅತ್ಯಂತ ಮಹತ್ವವನ್ನು ಪಡೆಯುತ್ತದೆ. ಶವಾಸನ..!! ಕಾಣುವುದಕ್ಕೆ ಹಾಸ್ಯಸ್ಪದವಾಗಿ ಕಂಡರೂ ಯೋಗಾಭ್ಯಸದ ಯಾವುದೇ ಘಟ್ಟದಲ್ಲೂ ಮಾಡಲೇಬೇಕಾದಂತಹ ಆಸನ ಶವಾಸನ (sleeping posture).

            ನಿದ್ರೆಯಲ್ಲಿ ಮನಸ್ಸು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರೆ, ಯೋಗ ನಿದ್ರೆಯಲ್ಲಿ ದೇಹ ಸ್ತಬ್ಧವಾಗಿ ಚೇತನವು ಜಾಗೃತವಾಗಿರುತ್ತದೆ. ಊರ್ದ್ವಮುಖಿಯಾಗಿ ಮಲಗಿ ಶರೀರದ ಒಂದೋಂದೆ ಭಾಗವನ್ನು ತಮ್ಮ ನಿಯಂತ್ರಣದಿಂದ ದೂರವಿರಿಸುತ್ತಾ ನಿರಾಳತೆಯತ್ತ ಸಾಗುವುದೇ ಶವಾಸನ. ಕಾಲಿನ ಬೆರಳಿನಿಂದ ಆರಂಭಿಸಿ ಒಂದೊಂದನ್ನೆ ನಿಧಾವಾಗಿ ನಮ್ಮ ನಿಯಂತ್ರಣದ ಅರಿವಿನಿಂದ ದೂರವಿರಿಸುತ್ತಾ ಸಾಗಬೇಕು. ಅರಂಭದಲ್ಲಿ ಇದು ಬಹಳ ಕಷ್ಟಕರವಾಗಿ ಕಂಡರೂ ನಂತರ ಸಹಜ ಕ್ರಿಯೆಯಾಗಿ ಬದಲಾಗುತ್ತದೆ. ಕೈಕಾಲು ದೇಹ ಎಲ್ಲವನ್ನು ಸಡೀಲಿಸಿ ಮಲಗಿ ಕಾಲಿನಿಂದ ತೊಡಗಿ ತಲೆಯ ವರೆಗೂ ಒಂದೊಂದೇ ಭಾಗದ ನಿಯಂತ್ರಣವನ್ನು ಕಡಿದು ಕೊಳ್ಳುತ್ತ, ಮನಸ್ಸಲ್ಲಿ ಯಾವುದೇ ಯೋಚನೆ ಮಾಡದೆ ನಿರಾಳವಾಗಿ ಮಲಗಿ ಬಿಡುವುದು. ಸುತ್ತ ಮುತ್ತಲ ಸದ್ದು ಗದ್ದಲವನ್ನು ಗಣ್ಯ ಮಾಡದೆ ಅಲುಗಾಡದೆ ಶವದಂತೆ ಮಲಗಿ ಬಿಡುವುದು. ದೇಹದಲ್ಲಿ ಕೇವಲ ಉಸಿರಾಟ ಒಂದೇ ಕ್ರಿಯಾತ್ಮಕವಾಗಿರುತ್ತದೆ ಮತ್ತು ನಿರಾಳತೆಯ ಸಂಕೇತದಂತೆ ಮುಖದಲ್ಲಿ ಕಿರು ಮಂದಹಾಸ ಮೂಡಬೇಕು. ಉಳಿದಂತೆ ದೇಹ ಮನಸ್ಸು ಎಲ್ಲವೂ ಸ್ಥಭ್ದವಾಗಿಬಿಡಬೇಕು. ಹತ್ತರಿಂದ ಹದಿನೈದು ನಿಮಿಷಗಳ ಕಾಲ ಅದೇ ಸ್ಥಿತಿಯಲ್ಲಿದ್ದಾಗ ಕೆವಲ ಒಂದು ಸರಳ ರೇಖೆಯಲ್ಲಿ ದೇಹವು ಭೂಮಿಯನ್ನು ಸ್ಪರ್ಶಿಸಿದಂತೆ ಭಾಸವಾಗತೊಡಗುತ್ತದೆ.ಎಲ್ಲೆಡೆ ಶೂನ್ಯತೆಯ ಅನುಭವವಾಗುತ್ತದೆ. ನಿಧಾನವಾಗಿ ಮಾಡುತ್ತ ಸಾಗಿದಂತೆ ಆಗುವ ಅನುಭವಗಳು ಬಹಳ ವಿಚಿತ್ರವಾಗಿರುತ್ತದೆ.
           
                        ಶವಾಸನದ ಕೊನೆಯ ಹಂತದಲ್ಲಿ ಮನಸ್ಸು ಪ್ರಫುಲ್ಲತೆಯಲ್ಲಿ ಅರಳಿರುತ್ತದೆ. ದುಃಖವಿದ್ದಲ್ಲಿ ಸುಖ,  ಕತ್ತಲು ಇರುಳು , ಸುಳ್ಳು ಸತ್ಯ ಹೀಗೆ ಜಗತ್ತು ಹೇಗೆ ದ್ವಂದ್ವಮಯವಾಗಿದೆಯೋ ಮನಸ್ಸಿನ ಯೋಚನೆಗಳು ಅಷ್ಟೇ ದ್ವಂದ್ವಮಯವಾಗಿರುತ್ತದೆ. ಅಸತ್ಯದಿಂದ ಸತ್ಯದೆಡೆಗೆ, ತಮಸ್ಸಿನಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತತ್ವದ ಕಡೆಗೆ, ಹೀಗೆ ಚಿಂತನೆಗಳು ಪ್ರಚೋದಿಸಲ್ಪಡುತ್ತದೆ. ಎಲ್ಲ ಬಗೆಯ ದ್ವಂದ್ವಗಳು ಮನಸ್ಸಿನಲ್ಲೇ ಹುದುಗಿರುತ್ತದೆ. ಪ್ರಚೋದನೆಗೆ ಹೊಂದಿಕೊಂಡು  ನಮ್ಮ  ವ್ಯಕ್ತಿತ್ವ ಬದಲಾಗುತ್ತದೆ. ವ್ಯಗ್ರತೆ ದೂರವಾಗಿ ಸೌಮ್ಯತೆ ಪ್ರಚೋದಿಸಲ್ಪಡುತ್ತದೆ.  ಆ ಪ್ರಚೋದನೆಯನ್ನು ಅರಿತು ನಮ್ಮ ಮನಸ್ಸನ್ನು ತೆರೆದಿಟ್ಟು ಸ್ಪಂದಿಸಬೇಕು.  ಆಗಲೆ ಹೊರ ಜಗತ್ತು ಸುಂದರವಾಗಿ ಭಾಸವಾಗುವುದು. ಬದುಕಿನಲ್ಲಿ  ನಾವು ಕಳೆದ ದಿನಗಳ ಘಟನೆಗಳು ಸ್ಮೃತಿ ಪಟಲದಲ್ಲಿ ಮೂಡುವುದು.  ಅಸೂಯೆ ವಂಚನೆ ವೈಶಮ್ಯ ಸಮಸ್ತ ಷಡ್ವೈರಿ ಭಾವನೆಗಳು ಹೇಗೆ ನಮ್ಮ ಬದುಕನ್ನು ಘಾಸಿಗೊಳಿಸಿವೆ ಎಂಬುದು ಅರಿವಿಗೆ ಬರುತ್ತದೆ. ನಮ್ಮ ಸಹವರ್ತಿಗಳು.. ಅದು ಪತ್ನಿ ಯಾಗಿರಬಹುದು ತಾಯಿ ತಂದೆಯೇ ಮಕ್ಕಳೇ ಆಗಿರಬಹುದು, ಅಥವಾ ಪರಕೀಯ ವ್ಯಕ್ತಿಗಳೇ ಆಗಿರಬಹುದು ಅವರೊಂದಿಗಿನ  ನಮ್ಮ ವರ್ತನೆಯನ್ನು ಮನಸ್ಸು ಪರಾಮರ್ಶೆಗೊಳಿಸುತ್ತದೆ. ವ್ಯಗ್ರವಾಗಿಯೋ ಇನ್ನಿತರ ತಾಮಸೀ ಪ್ರವೃತ್ತಿಯ ನಮ್ಮ ವರ್ತನೆಗೆ ನಮ್ಮ ಮನಸ್ಸು ಪರಿತಪಿಸುವ ಹಂತಕ್ಕೆ ಬಂದು ಬಿಡುತ್ತದೆ. ಯಾಕೆ ಸಿಟ್ಟಾದೆ? ಯಾಕಿದೇ ಈ ವೈಷಮ್ಯ?  ಪ್ರತಿಯೊಂದು ಜೀವಿಯೂ ಪರಮಾತ್ಮನ ಪ್ರತಿನಿಧಿಯಾಗಿ ಭಾಸವಾಗಿ,   ಮುಂಬರುವ ಸಮಯವದಲ್ಲಿ ಎಲ್ಲಾ ತಾಮಸೀ ಸ್ವಭಾವದ ವರ್ತನೆ ದೂರಿಕರಿಸುವಂತಹ ಚಿಂತನೆ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಒಟ್ಟಿನಲ್ಲಿ ಮನಸ್ಸಿನ ಚಿಂತನೆಯ ದಿಶೆಯೇ ಬದಲಾಗಿಬಿಡುತ್ತದೆ.

ಒಳಿತಾಗಲಿ ಕೆಡುಕಾಗಲಿ ಅದು ನಮ್ಮೋಳಗಿನ ಭಾವನೆಗಳು. ಅದರ ಹುಟ್ಟಿಗೆ ನಾವೇ ಕಾರಣರು. ಸ್ನೇಹವಾಗಲಿ ವೈಷಮ್ಯವಾಗಲೀ ಎರಡೂ ನಮ್ಮ ಮನಸ್ಸಲ್ಲೇ ನೆಲೆಯಾಗಿರುತ್ತದೆ. ಯಾವ ಭಾವನೆ ಪ್ರಚೋದನೆಗೆ ಒಳಗಾಗುವುದೋ ಅದು ಬಾಹ್ಯದಲ್ಲಿ ಅಭಿವ್ಯಕ್ತೀಕರಿಸಿಕೊಳ್ಳುತ್ತದೆ. ಪರರನ್ನು ಪ್ರೀತಿಸಿದವ ಪರರ ಆತ್ಮವನ್ನು ಗೌರವಿಸಿದಂತೆ,  ಆತ್ಮವನ್ನು ಗೌರವಿಸುವುದು ಪರಮಾತ್ಮನನ್ನು ಗೌರವಿಸಿದಂತೆ. ವಿಶ್ವದ ಶಾಂತಿ ಮಂತ್ರದ ಮೂಲಭೂತ ತತ್ವ ಅಡಗಿರುವುದೇ ಇಲ್ಲಿ.

            ತನ್ನನ್ನು ತಾನರಿಯುವುದು, ಒಂದುರೀತಿಯಲ್ಲಿ ತನ್ನೊಳಗಿನ ಅರಿ ಅಂದರೆ ವೈರಿ ಯನ್ನು ಅರಿಯುವುದು ಅಥವಾ ತನ್ನನ್ನೇ ತಾನು ವೈರಿಯೆಂದು ತಿಳಿಯುವುದು, ಇಲ್ಲಿ ಮನಸ್ಸಿನ ದುರ್ಯೋಚನೆಗಳೇ ವೈರಿಗಳು ಇದನ್ನು ಅರಿತರೆ ಜ್ಞಾನೋದಯವಾದಂತೆ. ಅಸತ್ಯದಿಂದ ಸತ್ಯದೆಡೆಗೆ, ತಮಸ್ಸಿನಿಂದ ಬೆಳಕಿನೆಡೆಗೆ ಮೃತ್ಯುವಿನಿಂದ ಅಮೃತತ್ವದ ಕಡೆಗೆ.. ಇಲ್ಲಿ ಅಮೃತತ್ವ ಹೇರಲ್ಪಡುವುದು ನಮ್ಮ ಸಧ್ಬಾವನೆಯ ಮೇಲೆ. ಸದ್ಭಾವನೆ ಸದ್ವಿನಿಯೋಗವಾಗಿ ಸ್ಥಾಯೀಯಾಗಿ ಉಳಿದಲ್ಲಿ ಅದುವೆ ಅಮರವಾದಂತೆ. ಪರೋಕ್ಷವಾಗಿ ನಮ್ಮ ಭಾವನೆಗಳೇ ಅಮರವಾದಂತೆ ಅಲ್ಲವೆ? ಯೋಗದಿಂದ ಕೇವಲ ದೈಹಿಕ ಮಾತ್ರವಲ್ಲ ಮಾನಸಿಕ ಆರೋಗ್ಯವೂ ಲಭ್ಯವಾಗಿ ಸುಂದರ ಆತ್ಮ ಶರೀರ ಹೊಂದಿ ಸುಂದರ ಪರಿಸರಕ್ಕೆ ನಾಂದಿಯಾಗುವುದು.


            .




Sunday, July 10, 2011

ಪ್ರಾಣಾಯಾಮ

ಇತ್ತೀಚಿನ ಹಲವು ಲೇಖನದಲ್ಲಿ ಯೋಗ ಧ್ಯಾನ ಪ್ರಾಣಾಯಾಮ ಮುಂತಾದ ಸಾಮಾನ್ಯ ವಿಚಾರಗಳ ಪ್ರಸ್ತಾಪ ಮಾಡಿದ್ದೆ. ಹೆಚ್ಚಿನ ವಿಚಾರಗಳು ಸ್ವ ಅನುಭವಳನ್ನೇ ಅವಲಂಬಿಸಿದ್ದುವು. ಎಲ್ಲದಕ್ಕೂ ನನ್ನಾತ್ಮ ಮಾತ್ರ ನನಗೆ ದೃಷ್ಟಾಂತವಾಗಿತ್ತು. ನನ್ನ ಪರಿಧಿಯೊಳಗೆ ಬರುವ ಎಲ್ಲಾ ವ್ಯಕ್ತಿಗಳಲ್ಲಿಯೂ ಯೋಗದ ಬಗೆಗೆ ಸಾಧ್ಯವಾದಷ್ಟು ಪ್ರಚೋದನೆ ಕೊಡುವ ಪ್ರಯತ್ನ ನನ್ನದು ಅದರ ಪರಿಣಾಮ ಏನೇ ಆದರು ಉತ್ತಮ ಒಂದು ನಿದರ್ಶನ ಎನ್ನಬಹುದಾದಂತಹ ಒಂದು ಸ್ಪಂದನವನ್ನು ಅನುಭವಿಸುವ ಪ್ರಮೇಯ ಒದಗಿ ಬಂತು.  
ನೀರಿನ ಕೊಳಕ್ಕೆ ಕಲ್ಲುಗಳನ್ನು ಎಸೆಯುತ್ತಿದ್ದ ಒಬ್ಬಾತ.ಕಾರಣವೇನೆಂದು ಕೇಳಿದಾಗ ಆತ ಹೇಳಿದ ” ಇಷ್ಟೆಲ್ಲ ಕಲ್ಲು ಬಿಸಾಡಿರುವೆನಲ್ಲ ಅದರಲ್ಲಿ ಒಂದಾದರೂ ಮೊಳಕೆ ಬಾರದೆ ಇದ್ದೀತೆ?” ಬಿಸಾಡುತ್ತಿರುವುದು ನೀರಲ್ಲಿ ಕರಗದ ಕಲ್ಲು ಎಂದು ಆತನಿಗೂ ಗೊತ್ತು. ಕಲ್ಲು ಕರಗುವುದೆಲ್ಲಿ? ಅಥವಾ ಮೊಳಕೆ ಬರುವುದೆಲ್ಲಿ.? ಹುಚ್ಚುತನದ ಕೆಲಸ ಎಂದು ಮೇಲ್ನೋಟಕ್ಕೆ ಅನಿಸಿದರೂ ಕಲ್ಲನ್ನೂ ಕರಗಿಸುವ ಆತನ ಪ್ರಯತ್ನ !!!!  ಹಾಗೆ ಪ್ರತಿಯೊಬ್ಬರಲ್ಲಿ ಯೋಗ ಪ್ರಾಣಾಯಾಮದ ಬಗ್ಗೆ ಪುಕ್ಕಟೆಯ ಸಲಹೆ ಕೊಡುತ್ತಿದ್ದೆ. ಪ್ರೇರೆಪಿಸುತ್ತಿದ್ದೆ. ಪ್ರಯತ್ನ ಮಾತ್ರ ಶೂನ್ಯ ಅಂತಲೆ ಹೇಳಬಹುದು. ನಿತ್ಯವೂ ನೆಗಡಿ ಕೆಮ್ಮು ಜ್ವರ ಎಂದು ಪಾಡು ಪಡುತ್ತಿದ್ದವರಲ್ಲಿ ಹಲವು ಸಲ ವಿನಂತಿಸಿಕೊಂಡೆ ಯೋಗ ಪ್ರಾಣಾಯಾಮ ಮಾಡಿ ನೋಡು. ನಾಸಿಕದ ಸೊಂಕಿನಿಂದ (ಸೈನೆಸ್) ಬಳಲಿ ಒಂದು ಬಾರಿ ಶಸ್ತ್ರಚಿಕಿತ್ಸೆಗೂ ಒಳಗಾದವರಿಗೆ ನನ್ನ ಸಲಹೆಯಾಗಿತ್ತು ಅದು. ಯಥಾ ಪ್ರಕಾರ ನನ್ನದು ಹುಚ್ಚು ಮಾತಾಗಿಯೇ ಪರಿಣಮಿಸಿತು.ಬದಲಾಗಿ  ಒಂದು ಪ್ರಶ್ನೆ. “ಯೋಗ ಮಾಡುವುದಿದ್ದರೆ.. ಆ ಮಂತ್ರ ಎಲ್ಲ ಹೇಳಲೇ ಬೇಕೆ?”  ಬಹಳ ಬಾಲಿಶವಾಗಿ ಕಂಡಿತ್ತು. ಹೀಗೆ ಮತ್ತೊಬ್ಬರಲ್ಲಿ ಇದೇ ತರಹ ಕೇಳಿದಾಗ ವಿಚಿತ್ರ ಅನ್ನಬಹುದಾದ ಪ್ರತಿಕ್ರಿಯೆ ಬಂದಿತ್ತು.

“ ಇಲ್ಲ ನಾನು ಯೋಗ ಅಲ್ಲ ಬ್ರೀಥಿಂಗ್ ಟ್ರೀಟ್ ಮೆಂಟ್ ಮಾಡ್ತಾ ಇದ್ದೆನೆ”

ಎಂತಹ ವಿಚಿತ್ರ. ಇದೊಂದು ತರಹ ಮಾಂಸಾಹಾರಿ ಹೋಟೆಲ್ ಗೆ ಶಾಖಾಹಾರಿ ಹೋಗಿ “ ಹೋಳು ಬೇಡ ರಸಮಾತ್ರ ಸಾಕು” ಎಂದು ಹೇಳಿದಂತೆ ಕಂಡಿತು. ಮಂತ್ರ ಶ್ಲೋಕ ಹೇಳುವುದಕ್ಕೆ ಮಡಿವಂತಿಕೆ.

ಇವೆಲ್ಲದರ ನಡುವೆ ಸಿಕ್ಕಿದ ಒಂದು ಪ್ರತಿಕ್ರಿಯಿಂದ ನಾನು ತುಂಬ ಪ್ರಭಾವಿತನಾದೆ. ನಿತ್ಯ ಕಾಣುವ ಮಿತ್ರರೊಬ್ಬರು ಮೊನ್ನೆ ಒಂದು ದಿನ ಕಾಣುತ್ತಿದ್ದಂತೆ ಯೋಗದ ಬಗ್ಗೆ ವಿಚಾರಿಸಿದರು. ನಿತ್ಯವೂ ಛೇಡಿಸುವ ಅವರು ಈ ಬಾರಿ ಹೇಳಿದ್ದು ಮಾತ್ರ ಆಶ್ಚರ್ಯವನ್ನುಂಟು ಮಾಡಿತ್ತು. ನನ್ನ ಸಹೋದರ ಇತ್ತಿಚೆಗೆ ಯೋಗ ತರಬೇತಿಗೆ ಸೇರಿದ್ದ. ಶೀತ ಕಫ ಖೆಮ್ಮು ಎಂದು ಬಳಲುತ್ತಿದ್ದವ ಸೇರಿದ ಒಂದೆರಡುವಾರದಲ್ಲೇ ಮಿತ್ರರಲ್ಲಿ ಪ್ರತಿಕ್ರಿಯಿಸಿದ್ದ ಬಗೆ,

“ ಬೆಳಗ್ಗೆ ಎದ್ದು ಬನ್ನಿ ಸಾರ್. ಚೆನ್ನಾಗಿರುತ್ತದೆ. ಒಂದು ವರ್ಷ ಒಂದು ದಿನವನ್ನು ಬಿಡದೆ ನೀವು ಬಂದ್ರೆ ಅಲ್ಲಿಯ ತಿಂಗಳ ಫೀಸು ನಾನು ಕೊಡ್ತೇನೆ. ಒಂದು ದಿನವೂ ರಜೆ ಹಾಕದೆ ನಿತ್ಯ ಬರಬೇಕು ಸಾಧ್ಯವೆ?”

ಈ ಮಾತಿನ ಅಂತರಾರ್ಥ ಎಷ್ಟು ವಿಶಾಲವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ಆರಂಭದಲ್ಲಿ ಇದ್ದ ಉತ್ಸಾಹ ನಂತರ ಇರುವುದಿಲ್ಲ. ಇಂತಹ ಕೆಲಸಗಳಲ್ಲಿ ಅಂತಹ ಔದಾಸಿನ್ಯ ಅಧಿಕ ಅಂತಲೇ ಹೇಳಬಹುದು. ಬೆಳಗ್ಗಿನ ವಾಕಿಂಗ್ ಗೆ ಪಾರ್ಕ್ ಗಳಲ್ಲಿ ಇಂತಹ ಸಂದರ್ಭ ನಿತ್ಯವೂ ಕಾಣಬಹುದು. ಇವತ್ತಿದ್ದ ಆಸಕ್ತಿ ನಾಳೆ ಇರುವುದಿಲ್ಲ. ಯಾರೋ ವ್ಯಾಯಾಮ ಮಾಡುತ್ತಿರುವುದನ್ನು ಕಂಡು ಕ್ಷಣಿಕ ಉತ್ತೇಜನಗೊಂಡು, ಅರೋಗ್ಯದ ಪ್ರಜ್ಞೆ ಜಾಗೃತವಾದ ಹಾಗೆ ಕೈ ಕಾಲು ಕುಣಿಸಿ ವ್ಯಾಯಾಮ ಮಾಡುತ್ತಾರೆ ಅದು ಕೇವಲ ಒಂದೇ ದಿನಕ್ಕೆ ಮೀಸಲು ಮರುದಿನ ನೋಡಿದರೆ ಆತ ಇರುವುದೇ ಇಲ್ಲ.ಇಂತಹ ಕೆಲಸಗಳಲ್ಲಿ  ಮುಖ್ಯವಾಗಿ ಇರಬೇಕಾದ ಬದ್ದತೆ ಇರುವುದೇ ಇಲ್ಲ. ಯಾವುದೋ ಆರೋಗ್ಯದ ತೊಂದರೆಗೆ ಸಲಹೆ ಕೇಳಿದಾಗ ತಿಳಿದವರು ಹೇಳಿದರು ಪ್ರಾಣಾಯಾಮ ಮಾಡು ಕಡಿಮೆಯಾಗುತ್ತದೆ. ಆವಾಗ ಆತನ ಪ್ರಶ್ನೆ ಎಷ್ಟು ಮೌಢ್ಯವನ್ನು ತೋರಿಸುತ್ತದೆ ಎಂದರೆ ಆತ- ಪ್ರಾಣಾಯಾಮವಾ? ಅದು ಎಷ್ಟುದಿನ ಮಾಡಬೇಕು.? ಏನು ಹೇಳಬಹುದು? ಪ್ರಾಣಾಯಾಮವನ್ನು ಚಿಕಿತ್ಸೆ ಎಂದು ತಿಳಿದುಕೊಳ್ಳಬಹುದೇ? ಯಾವಾಗಿನವರೆಗೆ ಉಸಿರಾಟ ಇರುತ್ತದೋ ಆವಾಗಿನ ವರೆಗೆ ಪ್ರಾಣಾಯಾಮ ಮಾಡಲೇಬೇಕು.

ಪ್ರಾಣಾಯಾಮದ ಸರಳವಾದ ಹಲವು ವಿಧಾನಗಳು ಇಂದು ಬಳಕೆಯಲ್ಲಿವೆ.ಪ್ರಾಣಾಯಾಮ ಎಂಬುದು ಪ್ರಧಾನವಾದ ಭಾಗ. ಯೋಗಾಸನ ಅಥವಾ ಸೂರ್ಯನಮಸ್ಕಾರ ಯಾವುದೇ ಆಗಲಿ ಅದರ ಗರಿಷ್ಠ ಪ್ರಯೋಜನ ಪಡೆಯಬೇಕಾದರೆ ಪ್ರಾಣಾಯಾಮ ಕಡ್ಡಾಯವಾಗಿ ಮಾಡಲೇಬೇಕು.

ಧ್ಯಾನ ಪ್ರಕ್ರಿಯೆ ಮುಗಿಸಿದಾಗ ಮನಸ್ಸು ಒಂದೆಡೆ ಕೇಂದ್ರೀಕೃತವಾಗಿ ನಿಶ್ಚಿಂತೆಯಿಂದ ನಿರಾಳವಾಗಿ ಉಸಿರಾಟ ಸಾಗುತ್ತಿರುತ್ತದೆ. ದೀರ್ಘ ಶ್ವಾಸೋಛ್ಚಾಸ ಎಂಬುದೂ ಒಂದು ಯೋಗ ಅthಥವಾ ಪ್ರಾಣಾಯಮ ಎಂದು ಕರೆಸಲ್ಪಡುತ್ತದೆ. ಯಾವುದೇ ಆಸನದಲ್ಲಿ ನೇರವಾಗಿ ಕುಳಿತು. ತಡೆಯಿಲ್ಲದೆ ನಿರಾಳವಾಗಿ  ಹತ್ತರಿಂದ ಹದಿನೈದು ಬಾರಿ ಮನಸ್ಸನ್ನು ಕೇಂದ್ರೀಕರಿಸಿ ಉಸಿರಾಟ ನಡೆಸಿ. ಅದರ ಅನುಭವ ಸ್ವತಹ ಅನುಭವಿಸಬಹುದು. ಈ ದೀರ್ಘ  ಹಾಗೂ ನಿರಾಳವಾದ ಉಸಿರಾಟದ ಪರಿಣಾಮ ಅನುಭವಿಸಬೇಕಾದರೆ, ರಾತ್ರಿ ನಿದ್ದೆಯ ಸಮಸ್ಯೆಇದ್ದು ನಿದ್ದೆ ಬಾರದೇ ಇದ್ದಲ್ಲಿ ನೇರವಾಗಿ ಮೇಲ್ಮುಖವಾಗಿ ಮಲಗಿ, ತಲೆದಿಂಬು ಇಲ್ಲವಾದರೆ ಒಳ್ಳೆಯದು. ತಲೆದಿಂಬು ಉಪಯೋಗ ನಿರಾಳವಾದ ಉಸಿರಾಟಕ್ಕೆ ಸೂಕ್ತವೂ ಅಲ್ಲ. ನೇರವಾಗಿ ಮಲಗಿ ಇಪ್ಪತ್ತೊಂದು ಬಾರಿ ಎಣಿಕೆ ಮಾಡಿ ಉಸಿರಾಡಿದರೆ, ಇಪ್ಪತ್ತೊಂದನೇ ಬಾರಿಯ ಉಸಿರಾಟ ಜ್ಞಾಪಕವೇ ಇರುವುದಿಲ್ಲ. ಇದು ದೀರ್ಘ ಉಸಿರಾಟದ ಮಹತ್ವವನ್ನು ತೋರಿಸುತ್ತದೆ.ನಿದ್ರಾಹೀನತೆ ಯೋಗಕ್ಕಿಂತ ಉತ್ತಮ ಚಿಕಿತ್ಸೆ ಇನ್ನೊಂದು ಇರಲಾರದು.

          ಒಂದೆರಡು ನಿಮಿಷದ ಧ್ಯಾನದ ತರುವಾಯ ಪ್ರಾಣಾಯಾಮ ಆರಂಭಿಸಬೇಕು. ಧ್ಯಾನದಲ್ಲಿ ಏಕಾಗ್ರತೆ  ಹೊಂದಿಕೊಂಡ ಮನಸ್ಸನ್ನು ಅದೆ ನಿಶ್ಚಲ ಸ್ತಿಥಿಯಲ್ಲಿರಿಸಿ ನಾಲ್ಕೈದು ಬಾರಿ ದೀರ್ಘಶ್ವಾಸ ಏಕ ರೂಪದಲ್ಲಿ ತೆಗೆದು ಕೊಳ್ಳಬೇಕು. ಆರಂಭದಲ್ಲಿ ಶ್ವಾಸ ಒಳಕ್ಕೆಳೆದುಕೊಳ್ಳುವಾಗ ಮನಸ್ಸಿನಲ್ಲೇ ಒಂದು ಏರಡು ಎಂದು ಮನಸ್ಸಿನಲ್ಲೆ ಎಣಿಕೆ ಮಾಡುತ್ತಾ ಉಸಿರು ಬಿಡುವಾಗಲೂ ಅಷ್ಟೇ ಸಂಖ್ಯೆಯನ್ನು ಎಣಿಸಿ ಒಂದೇ ರೀತಿಯ ಸಮಯವನು ಪಾಲಿಸಿಕೊಳ್ಳಬೇಕು. ನಾಲ್ಕೈದು ಬಾರಿಯ ಉಸಿರಾಟದ ಪ್ರಾಣಾಯಮದ ಮೊದಲ ಹಂತ ಆರಂಭವಾಗಿಬಿಡುತ್ತದೆ.

ಕಪಾಲ ಭಾತೀ ಪ್ರಾಣಾಯಾಮ: ಮೊದಲು ನೇರವಾಗಿ ನಿಶ್ಚಲವಾಗಿ ಕುಳಿತು ಭಂಗಿಯಲ್ಲೇ  ಉಸಿರನ್ನು ರಭಸವಾಗಿ ನಾಸಿಕದ ರಂಧ್ರದಿಂದ ಹೊರ ಹಾಕುವುದು. ಉಸಿರನ್ನು ಹೊರಹಾಕುವುದರಲ್ಲೇ ಮನಸ್ಸನ್ನು ಕೇಂದ್ರೀಕರಿಸಬೇಕು. ಒಳಬರುವ ಉಸಿರು ತಾನೇ ತಾನಾಗಿ ಒಳಬರುತ್ತದೆ.ರಭಸದಲ್ಲಿ ಉಸಿರನ್ನು ಉಸಿರನ್ನು ಹೊರ ಹಾಕುವಾಗ ಹೊಟ್ಟೆಯನ್ನು ಒಳಕ್ಕೆ ಎಳೆದುಕೊಂಡರೆ ಉಸಿರನ್ನು ಹೊರಹಾಕುವಾಗ ಬಲ ತುಂಬಲು ಅನುಕೂಲವಾಗುವುದು. ಈ ಪ್ರಕ್ರಿಯೆಯನ್ನು ಇಪ್ಪತ್ತರಿಂದ ಎಷ್ಟು ಸಾಧ್ಯವೋ ಅಷ್ಟು ಬಾರಿ ಮಾಡಿದ ನಂತರ ಉಸಿರನ್ನು ಬಿಗಿ ಹಿಡಿದು ಕೇವಲ ಕುಂಭಕ ಇದು ಒಂದು ಪ್ರಾಣಾಯಾಮ ಉಸಿರನ್ನು ಬಿಗಿಹಿಡಿಯುವುದು.ಇದರಲ್ಲಿ ಉಸಿರು ಒಳಗೂ ಹೊರಗೂ ಹೊಗದೆ ತಟಸ್ಥವಾಗಿರುವುದು ಇದರ ಅವಧಿ ಎರಡು ನಿಮಿಷ ಕಾಲ ಮಾಡಬಹುದು. . ಕಪಾಲ ಭಾತೀ ಪ್ರಾಣಾಯಾಮ ಪರಿಣಾಮದಿಂದ  ಕೇವಲ ಕುಂಭಕವು ಅಪ್ರಯತ್ನವಾಗಿ ಮಾಡಬಹುದು. ಇದನ್ನು ಎರಡರಿಂದ ಮೂರು ಬಾರಿ ಮಾಡಬೇಕು. ಈ ಪ್ರಾಣಾಯಾಮ ಉಸಿರಾಟದ ತಡೆಗಳನ್ನು ನಿವಾರಿಸುತ್ತದೆ ಮಾತ್ರವಲ್ಲ ಶೀತ ನೆಗಡಿ ಖೆಮ್ಮು ಕಫ ಮುಂತಾದ ಹಲವು ಸಮಸ್ಯೆ ನಿವಾರಣಗೆ ಬಹಳ ಅನುಕೂಲವಾಗುವುದು. ನಿಯಮಿತವಾಗಿ ಇದನ್ನು ಮಾಡುತ್ತಿದ್ದರೆ ಶೀತ ಕಫ ಸಂಬಂಧೀ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ.  ಕಪಾಲ ಭಾತಿ ಪ್ರಾಣಾಯಾಮ ಮಾಡಿದೊಡನೆ ಕಫದ ತೊಂದರೆ ಇದ್ದಲ್ಲಿ ಗಂಟಲದ್ವಾರದಲ್ಲಿ  ಕೆಲವೊಮ್ಮೆ ಅದರ ಪ್ರಭಾವ ಅರಿವಿಗೆ ಬರುತ್ತದೆ. ಆವಾಗ ಧೋತಿ ಪ್ರಾಣಾಯಾಮ ಮಾಡಿದಲ್ಲಿ ನಿರಾಳತೆಯ ಅನುಭವವಾಗಿ ಕಪಾಲ ಭಾತಿಯನ್ನು  ಒಂದೆರಡು ಸಲ ದೀರ್ಘ ಶ್ವಾಸೋಚ್ಛಾಸ ಉಸಿರಾಡಿ ಮುಂದುವರೆಸಬಹುದು. ಈ ರೀತಿ ಮಾಡುವುದರಿಂದ ಶೀತ, ಖೆಮ್ಮು , ತಲೆನೋವು ಮುಂತಾದ ಸಮಸ್ಯೆಯಿಂದ ಶಾಶ್ವತವಾಗಿ ದೂರವಾಗಬಹುದು ಮಾತ್ರವಲ್ಲ ಉಸಿರಾಟ ಸರಾಗವಾಗಿ ಮತ್ತು ನಿರಾಳವಾಗಿ ಉಸಿರಾಡುವಲ್ಲಿ ಸಹಾಯಕವಾಗುವುದು.

ಧೌತಿ ಪ್ರಾಣಾಯಾಮ:  ಇದು ಬಹಳ ಸುಲಭವಾಗಿ ಮಾಡಬಹುದಾದ ಪ್ರಾಣಾಯಾಮ ಮಾತ್ರವಲ್ಲ ಅಷ್ಟೇ ಪರಿಣಾಮಕಾರಿ  ಪ್ರಾಣಾಯಾಮ. ಪ್ರಾಣಾಯಾಮದ ಆಸನದಲ್ಲೆ ಕುಳಿತು ಎರಡು ಕೈಯನ್ನು ನೆಲದಲ್ಲಿ ಊರಿ ದೀರ್ಘ ಶ್ವಾಸ ತೆಗೆದು ಕೊಂಡು ಆ ಶ್ವಾಸವನ್ನು ಭಾಯಿ ಮೂಲಕ ಬಲವಾಗಿ ಹೊರ ಹಾಕಬೇಕು. ಮಾತ್ರವಲ್ಲ ಹೀಗೆ ಶ್ವಾಸ ಹೊರಹಾಕುವಾಗ ತಲೆಯನ್ನು ರಭಸದಲ್ಲಿ ಅದಕ್ಕೆ ತಕ್ಕಂತೆ ಬಾಗಿಸಬೇಕು ಹಾಗೆ ಗಂಟಲೊಳಗಿಂದ ರಭಸವಾಗಿ ಗಾಳಿಯನ್ನು ಹೊರಹಾಕಬೇಕು. ಐದಾರು ಬಾರಿ ಈ ಪ್ರಕ್ರಿಯ ಮಾಡುತ್ತಿದ್ದರೆ ಗಂಟಲೊಳಗಿನ ಸಮಸ್ಯೆ ನಮಗರಿವಿಲ್ಲದೇ ಮಾಯವಾಗಿಬಿಡುತ್ತದೆ.

ಶೀತಲೀ ಪ್ರಾಣಾಯಾಮ:  ಪ್ರಾಣಾಯಾಮದಿಂದ ಅಧಿಕ ಉಷ್ನತೆಯ ಅನುಭವಾದಲ್ಲಿ ಈ ಪ್ರಾಣಾಯಾಮ ಮಾಡುವುದು ಬಹಳ ಪರಿಣಾಮಕಾರಿ. ಇದು ಮಾಡುತ್ತಿದ್ದಂತೆ ಬಿಸಿಯಾಗುವ ದೇಹಕ್ಕೆ ತಂಪಾದ ಮತ್ತು ನಿರಾಳತೆಯ ಅನುಭವಾಗಿಬಿಡುತ್ತದೆ. ನಾಲಗೆಯನ್ನು ತುಟಿಯಂಚಿನಲ್ಲಿ ಕೊಳವೆಯಂತೆ ಮಾಡಿ ಆ ನಾಲಿಗೆಯ ಕೊಳವೆಯ ಮುಖಾಂತರ ಶ್ವಾಸವನ್ನು ದೀರ್ಘವಾಗಿ ಒಳಕ್ಕೆಳೆದು ಅದೇರೀತಿ ದೀರ್ಘವಾಗಿ ಮೂಗಿನ ಮೂಲಕ ಬಿಡಬೇಕು. ಐದಾರು ಬಾರಿ ಈ ರೀತಿ ಮಾಡಿದಾಗ,  ಮೂಗಿನಿಂದ ಬಿಡುವ ಆ ಶ್ವಾಸ ತಂಪಾಗಿದ್ದು ದೇಹಕ್ಕೆ ತಂಪಿನ ಅನುಭವವನ್ನು ನೀಡುತ್ತದೆ. ಕಪಾಲಭಾತಿಯಲ್ಲಿ ಉಷ್ಣತೆಯನ್ನು ಹೇಗೆ ಹೆಚ್ಚಿಸುತ್ತೇವೋ ಅದೇ ರೀತಿ ಇದು ಅದಕ್ಕೆ ವಿರುದ್ದವಾಗಿ ದೇಹವನ್ನು ತಂಪಾಗಿಸುತ್ತದೆ. ಒಟ್ಟಿನಲ್ಲಿ ದೇಹದ ಉಷ್ಣತೆಯ ಮಟ್ಟವನ್ನು ಕಾಪಾಡುವಲ್ಲಿ ಬಹಳ ಸಹಾಯಕವಾಗುತ್ತದೆ.

ಈ  ಪ್ರಾಣಾಯಾಮ ಮಾಡುವ ವೇಳೆಗೆ ದೇಹದಲ್ಲಿ ಮನಸ್ಸಿನಲ್ಲಿ ಅಗುವ ಪ್ರಭಾವ ಅದು ಅನುಭವಿಸಿಯೇ ಅರಿಯಬೇಕು. ಮುಂಜಾನೆಯ ಹಿತವಾದ ವಾತಾವರಣ, ತಂಪಾದ ಪ್ರಕೃತಿ ಈಗ ನಮ್ಮ ದೇಹ ಪ್ರಕೃತಿಯ ಸಂವೇದನೆ ಸ್ಪ್ಂದಿಸಿ ಆ ಪ್ರಕೃತಿಯಲ್ಲಿ ಒಂದಾಗತೊಡಗುತ್ತದೆ. ದೇಹ ಮತ್ತು ಮನಸ್ಸಿಗೆ ಆಗುವ ಈ ವಿಶಿಷ್ಟ ಅನುಭವ ಮಾನಸಿಕ ಮತ್ತು ದೈಹಿಕ ಸ್ಥಿತಿಯ ಸತ್ಯದರ್ಶನವನ್ನು ಉಂಟುಮಾಡತೊಡಗುತ್ತದೆ. ನಾವೇನು ನಮ್ಮ ಇರುವಿಕೆ ಎಂದರೇನು . ಆತ್ಮವೆಂದರೇನು ಮುಂತಾದ ಪಾರಮಾರ್ಥಿಕ ದರ್ಶನದ ಹಾದಿಯನ್ನು ತೋರಿಸುತ್ತದೆ. ಆ ಹಾದಿಯನ್ನು ಕ್ರಮಿಸುವುದು ನಮ್ಮ ಪ್ರಯತ್ನವನ್ನು ಅವಲಂಬಿಸಿರುತ್ತದೆ. ನಮ್ಮ ಪ್ರಯತ್ನ ಮತ್ತು ಬದ್ದತೆಗೆ ಅನುಸಾರವಾಗಿ ದರ್ಶನದ ಪ್ರಾಪ್ತಿಯಾಗ ತೊಡಗುತ್ತದೆ. ಇದೇ ಪಾರಾಮಾರ್ಥಿಕ ಬದುಕಿನ ಚಿಂತನೆಯಾಗಬಹುದು.

ವಿಶಿಷ್ಟ ಅನುಭವ ಸೂಚ್ಯವಾಗಿಯೇ ಇಲ್ಲಿಯ ತನಕ ಮನವರಿಕೆಯಾಗತೊಡಗಿದರೆ ಪ್ರಾಣಾಯಾಮದ ಮುರ್ಧನ್ಯತೆಯ ಅನುಭವ ಸಿದ್ದಿಸುವುದು ಅನುಲೋಮ ವಿಲೋಮ ಪ್ರಾಣಾಯಾಮ ಮಾಡಿದಾಗಲೇ. ಇದರಲ್ಲಿ ಹಲಾವಾರು ವಿಧಗಳು ಬಳಕೆಯಲ್ಲಿದ್ದರೂ ಅದರ ಒಂದು ಮಾದರಿ ಹೀಗಿದೆ.

 ಹಲವಾರು ಬಾರಿ ದೀರ್ಘವಾದ ಶ್ವಾಸೋಚ್ಛಾಸ  ಕ್ರಿಯೆಯೂ ಪ್ರಾಣಾಯಾಮ ಅಂತಲೇ ಹೇಳಬಹುದು. ಈ ರೀತಿಯ ಶ್ವಾಸೋಚ್ಛಾಸ ಮಾಡಿ ಬಲಗೈಯ ಹೆಬ್ಬೆರಳಿಂದ ಮೂಗಿನ ಬಲ ಹೊಳ್ಲೆಯನ್ನು ಬಿಗಿಯಾಗಿ ಅದುಮಿ ಹಿಡಿಯಬೇಕು. ಮತ್ತು ಎಡಭಾಗದ ಹೊಳ್ಳೆಯಿಂದ ಸರಾಗಾವಾಗಿ, ಮತ್ತು ಅಡೆ ತಡೆಯಿಲ್ಲದ ನಿರಾಳವಾದ ಗಾಳಿಯನ್ನು ಒಳಕ್ಕೆಳೆದು ಮತ್ತೆ ಅದೇ ಮೂಗಿನಿಂದ ನಿಧಾನವಾಗಿ ಹೊರಗೆ ಬಿಡಬೇಕು. ಹೀಗೆ ಏಳೆಂಟು ಬಾರಿ ಮಾಡಿದಾಗ ತಲೆ ಬುರುಡೆಯ ಬಲಭಾಗದಲ್ಲಿ ವಿಶಿಷ್ಟ  ಸಂವೇದನೆಯ ಅನುಭವಾಗುತ್ತದೆ. ಮಾತ್ರವಲ್ಲ ದೇಹ ತಂಪಾಗತೊಡಗುತ್ತದೆ. ಮನಸ್ಸು ಮತ್ತು ಏಕಾಗ್ರತೆಯತ್ತ ಜಾರಿಕೊಳ್ಳುತ್ತದೆ. ನಮ್ಮ ಎಲ್ಲಾ ಗಮನವನ್ನು ಅದರಲ್ಲಿ ಕೇಂದ್ರಿಕರಿಸಬೇಕು ಇದು ಒಮ್ಮಿಂದೊಮ್ಮೆಲೇ ಸಿದ್ದಿಸುವಂತಹುದಲ್ಲವಾದರೂ ಅಸಾಧ್ಯವಾದುದಂತೂ ಅಲ್ಲವೇ ಅಲ್ಲ. ಏಕಾಗ್ರತೆ ಎಂದರೇನು ಎಂಬುದರ ನಿಜ ಅರಿವಾಗುವುದು ಈಗಲೇ. ಐದಾರು ಇದೇ ರೀಗಿ ಶ್ವಾಸೋಚ್ಛಾಸ ಮಾಡಿದ ನಂತರ ಕೈಯನ್ನು ಕೆಳಗಿರಿಸಿ ಚಿನ್ಮುದ್ರೆಯಲ್ಲಿ ನಾಲ್ಕೈದು ಬಾರಿ ದೀರ್ಘಶ್ವಾಸವನ್ನು ಎರಡು ಮೂಗಿನ ಹೊಳ್ಳಗಳಿಂದ ಉಸಿರಾಡಿ ಮೊದಲಿನ ಪ್ರಕ್ರಿಯನ್ನು ಸರೀ ವಿರುದ್ಧವಾಗಿ ಅಂದರೆ ಮೂಗಿನ ಬಲ ಹೊಳ್ಳೆಯಿಂದ  ಗಾಳಿಯನ್ನು ಒಳಕ್ಕೆಳೆದು ಅದೇದ್ವಾರದಲ್ಲೇ ಪುನಃ ಹೊರಬಿಡಬೇಕು. ಈಗ ಮೊದಲಿನ ಕ್ರಮಕ್ಕೆ ವಿರುದ್ದವಾದ ಅನುಭವ ಆಗತೊಡಗುತ್ತದೆ. ತಲೆಯ ಎಡಭಾಗದಲ್ಲಿ ಸಂವೇದನೆ ಉಂಟಾಗತೊಡಗುತ್ತದೆ. ದಿನಾ ನಿರಂತರವಾಗಿ ಮಾಡುತ್ತಿದ್ದಂತೆ ನಮ್ಮ ಶ್ವಾಸನಾಳ ತೆರೆದುಕೊಂಡು ಅಗಲವಾಗುತ್ತಿರುವ ಅನುಭವಾಗುತ್ತದೆ.  ಮೊದಲಿನ ಪ್ರಾಣಾಯಾಮ ಅನುಲೋಮ ಎಂದು ಅದಕ್ಕೆ ವಿರುದ್ಧವಾದದ್ದು ವಿಲೋಮ ಎಂದು ಕರೆಯುತ್ತಾರೆ. ಹೀಗೆ ಅನುಲೋಮ ವಿಲೋಮ ಪ್ರಾಣಾಯಾಮ ವಾದನಂತರ  ಪ್ರಾಣಾಯಾಮದ ಅಂತಿಮ ಹಂತಕ್ಕ್ ಮತ್ತು ಆಷ್ಟೆ ಪರಿಣಾಮಕಾರೀ ಭಾಗಕ್ಕೆ ಹೋಗಬೇಕು. ಕ್ರಮವಾಗಿ ದೀರ್ಘವಾದ ಶ್ವಾಸ ಐದಾರು ಬಾರಿ ಮಾಡಿ ಎಡ ಮೂಗಿನ ಹೊಳ್ಳೆಯಿಂದ ಗಾಳಿಯನ್ನು ಒಳಕ್ಕೆ ಎಳೆದು ಬಲ ಮೂಗಿನ ಹೊಳ್ಳೆಯಿಂದ ಹೊರಬಿಡಬೇಕು. ಮತ್ತದೇ ದ್ವಾರದಿಂದ ಶ್ವಾಸ ಒಳಕ್ಕೆಕೆಳೆದು ಎಡಭಾಗದ ಹೊಳ್ಳೆಯಿಂದ ಹೊರ ಬಿಡಬೇಕು. ಇದೇಕ್ರಮವನ್ನು ಹತ್ತರಿಂದ ಹನ್ನೆರಡು ಮಾರಿ ಮಾಡಬೇಕು. ಮನಸ್ಸನ್ನು ಕೇಂದ್ರಿಕರಿಸಿ ಅಡೆತಡೆ ಯಿಲ್ಲದೆ ಉಸಿರಾಡಬೇಕು. ಅಲುಗಾಡದೆ ನೆಟ್ಟಗೆ ಶರೀರವನ್ನು ಸೆಟೆದು ಕುಳಿತು ಈ ಪ್ರಾಣಾಯಾಮ ಮಾಡಿದಲ್ಲಿ ಇದರ ಪರಿಣಮ ಅತ್ಯಂತ ಪ್ರಭಾವಕಾರಿಯಾಗಿರುತ್ತದೆ. ಮೂಗಿನ ಅಡೆತಡೆ ನಿವಾರಣೆಯಾಗುವುದು ಮಾತ್ರವಲ್ಲ ದೇಹಾದ್ಯಂತ ಹೊಸ ಚೈತನ್ಯ ಹುಟ್ಟಿಕೊಳ್ಳುತ್ತದೆ. ನಿರಂತರ ಪ್ರಾಣಾಯಾಮ ಮಾಡಿದೊಡನೆ ಜೀರ್ಣಶಕ್ತಿಯ ವೃದ್ಧಿಯಾದುದಕ್ಕೆ ಪುರಾವೆ ಎಂಬಂತೆ ಬಾಯಾರಿಕೆ ಅಧಿಕವಾಗತೊಡಗುತ್ತದೆ. ಅಧಿಕವಾಗಿ ನೀರು ತನ್ನಿಂತಾನಾಗಿ ದೇಹವನ್ನು ಸೇರುತ್ತದೆ. ತುಂಬ ಸರಳವಿಧಾನದಿಂದ ಎಂತಹ ಅದ್ಭುತ ಪರಿಣಾಮ.!!! ಅತ್ಯಂತ ಸರಳವಾದ ಪ್ರಾಣಾಯಾಮದ ಕ್ರಮವಿದು.

ಭ್ರಾಮರೀ ಪ್ರಾಣಾಯಾಮ: ಇದು ಭ್ರಮರದಂತೆ ಅದೇ ತತ್ವವನ್ನು ಅನುಸರಿಸಿ ಇರುವ ಪ್ರಾಣಾಯಾಮ. ನೆಟ್ಟಗೆ ಸ್ಥಿರವಾಗಿ ಕುಳಿತು ಎರಡೂ ಕೈ ತುದಿಯಿಂದ ಎರಡು ಕಣ್ಣನ್ನು  memmmಮುಚ್ಚಿ ಹಿಡಿದು ಕೊಳ್ಳಬೇಕು. ಕೈ ಹೆಬ್ಬೆರಳಿಂದ ಕಿವಿಯನ್ನು ಬಲವಾಗಿ ಮುಚ್ಚಿಕೊಳ್ಳಬೇಕು. ಶ್ವಾಸ ಒಳಕ್ಕೆಳೆದು ಬಿಡುವಾಗ ಕಿವಿ ಮೇಲಿನ ಹೆಬ್ಬೆರಳನ್ನು ಬಿಗಿಗೊಳಿಸುತ್ತಾ ಮೂಗಿನಲ್ಲಿ ಭ್ರಮರದಂತೆ , ಅನುಸ್ವರದಲ್ಲಿ ಶಬ್ದವನ್ನುಂಟು ಮಾಡುತ್ತಾ ಉಸಿರನ್ನು ನಿಧಾನವಾಗಿ ಬಿಡಬೇಕು ಹತ್ತರಿಂದ ಹನ್ನೆರಡು ಬಾರಿ ಮೂರು ನಾಲ್ಕು ನಿಮಿಷಗಳ ಕಾಲ ಈ ಪ್ರಾಣಾಯಾಮ ಮಾಡಬೇಕು. ನಂತರ ನಿಧಾನವಾಗಿ ಕಣ್ಣು ಕಿವಿಯಿಂದ ಕೈತೆಗೆಯುತ್ತಿದ್ದಂತೆ ಅದ್ಭುತ ದಿವ್ಯದರ್ಶನ ಅನುಭವವಾಗುತ್ತದೆ. ಶ್ವಾಸ ನಿರಾಳವಾಗುತ್ತಾ ಸಂಪೂರ್ಣ ದೇಹ ಹಗುರವಾದ ಅನುಭವಾಗುತ್ತದೆ. ಕುಳೀತ ಭಂಗಿಯಲ್ಲಿ ನೆಟ್ಟಗೆ ಅದೇ ಭಂಗಿಯನ್ನು ಮುಂದುವರೆಸಿ ಬಿಗಿಯಾಗಿ ಚಿನ್ಮುದ್ರೆಯನ್ನು ಬಲಗೊಳಿಸುತ್ತಾ ಮನಸ್ಸನ್ನು ವಿಚಿತ್ರ ಅನುಭವದಲ್ಲೇ ಲೀನ ಗೊಳಿಸಬೇಕು. ಹೆಬ್ಬೆರಳು ಮತ್ತು ತೋರುಬೆರಳಿನ ಹಿಡಿತ ಬಿಗಿಯಾಗಿಸುತ್ತ ಹೋದಂತೆ ದೇಹವಿಡೀ ಸುಖ ಚೈತನ್ಯದ ಉತ್ಪತ್ತಿಯಾದಂತೆ ದೇಹ ಆತ್ಮ ಪ್ರಕೃತಿಯಲ್ಲಿ ಲೀನವಾದ ಅನುಭವಾಗತೊಡಗುತ್ತದೆ. ಇದು ಸಾಮಾನ್ಯವಾಗಿ ಯಾರೂ ಮಾಡಬಹುದಾದ ಪ್ರಾಣಾಯಾಮ. ನಮ್ಮ ದೇಹದಲ್ಲಿ ಸಂಚರಿಸುವ ಪ್ರಾಣವಾಯುವಿಗೆ ನಿತ್ಯವೂ ಹೊಸ ಆಯಾಮವನ್ನೆ ಉಂಟುಮಾಡುವ ಪ್ರಕ್ರಿಯೆ ಇದು.