Monday, December 4, 2023
ಪ್ರಜ್ಞಾಹೀನ
Saturday, December 2, 2023
ಸ್ವಾಭಿಮಾನ
ಬೀರೂರಿನಿಂದ ಶಿವಮೊಗ್ಗಕ್ಕೆ ಹೋಗುವ ಕರ್ನಾಟಕ ಸಾರಿಗೆ ಬಸ್ಸಿನಲ್ಲಿ ಮುಂದಿನ ಭಾಗದಲ್ಲಿ ಕುಳಿತಿದ್ದೆ. ಪಕ್ಕದ ಸೀಟಿನಲ್ಲಿ ಅರುವತ್ತರ ವೃದ್ಧೆಯೊಬ್ಬಳು ಬಂದು ಕುಳಿತಳು. ಜತೆಗೆ ಪುಟ್ಟ ಹುಡುಗನೊಬ್ಬ ಇದ್ದ. ಕಂಡಕ್ಟರ್ ಟಿಕೇಟ್ ಗಾಗಿ ಹತ್ತಿರ ಬಂದ. ವೃದ್ದೆ ತರೀಕೆರೆ ಅಂತ ಹೇಳಿ ಕೈಯಲ್ಲಿದ್ದ ನೋಟೊಂದನ್ನು ಕೊಟ್ಟಳು. ಆತ ಆಧಾರ್ "ವೋಟರ್ ಇಲ್ವೇನಮ್ಮ?" ಎಂದು ಗೊಣಗುತ್ತಾ ಹಣ ಪಡೆದು ಟಿಕೇಟ್ ಕೊಟ್ಟ. ನಾನು ಆಕೆಯಲ್ಲಿ ಕೇಳಿದೆ " ಅದೇನು ಇಲ್ಲ ಆಧಾರ್ ಇದ್ರೆ ಫ್ರೀಯಾಗಿ ಹೋಗಬಹುದಿತ್ತಲ್ವ?"
" ಹೌದು, ಆದರೆ ನನಗೆ ಫ್ರೀ ಬೇಡ. ವಯಸ್ಸು ಇಷ್ಟಾಯಿತು. ಇದುವರೆಗೆ ನನಗೆ ಬೇಕಾದ್ದನ್ನು ದುಡಿದು ಮಾಡ್ತಾ ಇದ್ದೇನೆ. ಒಂದು ಬಸ್ಸಿನ ದುಡ್ಡೂ ಕೊಡುವಷ್ಟೂ ದುಡಿದು ಸಂಪಾದಿಸುವದಕ್ಕೆ ಸಾಧ್ಯವಿಲ್ಲದೇ ಇದ್ದರೆ ಈ ಜನ್ಮ ಏನಕ್ಕೆ ಬೇಕು? ಇಷ್ಟು ವರ್ಷ ದುಡ್ದುಕೊಡದೇ ಹೋಗಿಲ್ಲ ಈಗ ಯಾಕೆ ಹೋಗಬೇಕು? ಉಚಿತ ಎಲ್ಲವೂ ಸಿಗಬಹುದು ಆದರೆ, ಒಂದು ತುತ್ತು ಅನ್ನ ಅದನ್ನು ಸ್ವಂತ ದುಡಿಮೆಯಿಂದ ತಿನ್ನುವುದಕ್ಕೆ ಸಾಧ್ಯವಿಲ್ಲದೇ ಇದ್ದರೆ ಈ ಮನುಷ್ಯ ಜನ್ಮ ಯಾಕೆ ಬೇಕು? "
ಆಕೆ ಹೇಳಿದ್ದನ್ನು ಕೇಳಿ ಗಾಬರಿಯಾಗುವ ಸರದಿ ನನ್ನದು. ಸ್ವಂತ ದುಡಿಮೆಯ ರುಚಿ ಅದನ್ನು ಅನುಭವಿಸುವ ಆಕೆಯ ಸ್ವಾಭಿಮಾನ ಇಷ್ಟುವರ್ಷ ಅದನ್ನೇ ಪಾಲಿಸಿಕೊಂಡು ಬಂದ ನಿಷ್ಠೆ ಈಗ ಯಾವುದೋ ಕಾರಣಕ್ಕೆ ಉಚಿತವಾಗಿ ಸಿಗುತ್ತದೆ ಎಂದು ಅದನ್ನು ಅನುಭವಿಸುವುದಕ್ಕೆ ಅಕೆಯ ಈ ಅಭಿಮಾನ ಅಡ್ಡಬಂತು. ಸರಳವಾಗಿ ಆಕೆ ಹೇಳಿದ್ದಳು. ನಮಗೆ ಬೇಕಾಗಿರುವುದನ್ನು ನಾವು ದುಡಿದು ಸಂಪಾದಿಸಬೇಕು. ಅದು ಸಾಧ್ಯವಿಲ್ಲದೇ ಇದ್ದರೆ ಅದೊಂದು ಜೀವನವಲ್ಲ. ದುಡಿಯುವುದಕ್ಕೆ ಆರಂಭಿಸುವಾಗ ನನ್ನದೇ ಒಂದು ಐದು ರೂಪಾಯಿ ನೋಟು ನನ್ನ ಕೈಗೆ ಸಿಕ್ಕಿದಾಗ ಆಗ ನಾನು ಅನುಭವಿಸಿದ ಸಂತೋಷ ನೆನಪಾಯಿತು. ನನ್ನದಲ್ಲದ ವಸ್ತುವನ್ನು ನಮಗೆ ಅನುಭವಿಸುವ ಹಕ್ಕು ನಮಗಿಲ್ಲ. ಭಿಕ್ಷುಕನಿಗೆ ಅನುಕಂಪದಿಂದ ಕೊಡುವ ಭಿಕ್ಷೆಯೂ ಆತನನ್ನು ಸಾಲಗಾರನನ್ನಾಗಿ ಮಾಡುತ್ತದೆ. ಆತ ತೀರಿಸಲಿ ಬಿಡಲಿ...ಆತ ಅದರಿಂದ ಋಣ ಮುಕ್ತನಾಗುವುದಕ್ಕೆ ಸಾಧ್ಯವಿಲ್ಲ. ಉಚಿತವಾಗಿ ಎಲ್ಲವೂ ಸಿಗಬಹುದು, ಆದರೆ ಸ್ವಾಭಿಮಾನ ಅದು ಉಚಿತವಾಗಿ ಸಿಗುವುದಕ್ಕೆ ಸಾಧ್ಯವಿಲ್ಲ. ಇಂದು ಎಲ್ಲವೂ ಉಚಿತವಾಗಿ ಸಿಗಬಹುದು. ಅದನ್ನು ಅನುಭವಿಸುತ್ತಾ ಇರುವಾಗ ಮುಂದೊಂದು ದಿನ ಅದು ಸಿಗದಂತಹ ಪರಿಸ್ಥಿತಿ ಬರಬಹುದು. ಯಾಕೆಂದರೆ ಅದಕ್ಕೂ ಒಂದು ಪರಿಮಿತಿ ಇರುತ್ತದೆ. ಆಗ ಅದು ಸಿಗದೇ ಇದ್ದಾಗ ಕದಿಯುವುದಕ್ಕೆ ಕಸಿಯುವುದಕ್ಕೆ ತೊಡಗಬಹುದು. ಯಾಕೆಂದರೆ ದುಡಿಮೆಯನ್ನೇ ಮರೆತಿರುವಾಗ ಮತ್ತೆ ಪಡೆಯುವ ಬಗೆ ಹೇಗೆ?
ಮೊನ್ನೆ ಯಾರೋ ಒಬ್ಬರು ಹೇಳಿದರು. ಮಹಿಳೆಯರ ಉಚಿತ ಪ್ರಯಾಣದ ಬಗ್ಗೆ ಆಕ್ಷೇಪಿಸಿದರೆ ಅದು ಸ್ತ್ರೀಯರಿಗೆ ಅವಮಾನ ಮಾಡಿದಂತೆ. ಮಾನ ಎಂಬುದು ಕೇವಲ ಸ್ತ್ರೀಯರಿಗೆ ಸೀಮಿತವಾಗಿರುತ್ತದೆ ಎಂಬುದನ್ನು ಸುಸಂಸ್ಕೃತ ಸಮಾಜ ಒಪ್ಪುವುದಿಲ್ಲ. ಸ್ತ್ರೀಯಾಗಲೀ ಪುರುಷನಾಗಲೀ ಮಾನ ಅದು ಸಮಾನವಾಗಿರುತ್ತದೆ. ಯಾರು ಹೆಚ್ಚೂ ಅಲ್ಲ ಕಡಿಮೆಯೂ ಅಲ್ಲ. ಅದು ಅವರವರು ಉಳಿಸಿಕೊಂಡು ಅವರಿಗೆ ಅವರೇ ಮೌಲ್ಯವನ್ನು ತರುವಂತೆ. ಹೆಣ್ಣು ಪ್ರಕೃತಿ ಸಹಜ ಅಬಲೆಯಾಗಿರಬಹುದು, ಆದರೆ ಆಕೆ ಬುದ್ಧಿವಂತೆಯಾಗಿರುತ್ತಾಳೆ. ಅದು ಅನಿವಾರ್ಯ.
ಅತೀ ಕೆಟ್ಟದ್ದನ್ನು ಸಹ ಉಚಿತವಾಗಿ ಕೊಡಿ....ಅದಕ್ಕೆ ಹಾತೊರೆಯುತ್ತಾರೆ. ಒಳ್ಳೆ ಮೌಲ್ಯಯುತವಾದದ್ದನ್ನು ಯಾರೂ ಬಯಸುವುದಿಲ್ಲ
Sunday, November 12, 2023
ನಂಬಿಕೆಗಳು ಸಂಸ್ಕೃತಿಯೂ
ಮೊನ್ನೆ ನವರಾತ್ರಿ ಸಮಯದಲ್ಲಿ ಊರಿಗೆ ಹೋಗಿದ್ದೆ. ನಮ್ಮೂರು ತಲುಪಿದಂತೆ ಅಲ್ಲಲ್ಲಿ ಸಾರ್ವಜನಿಕ ಶಾರದೋತ್ಸವ ನಡೆಯುತ್ತಿರುವುದನ್ನು ನೋಡಿದೆ. ಬಹುಶಃ ಸಾರ್ವಜನಿಕ ಶಾರದೋತ್ಸವ ಆಚರಿಸುವ ಪರಿಪಾಠವಿರುವುದು ನಾನು ಕಂಡ ಹಾಗೆ ನಮ್ಮೂರಲ್ಲಿ ಮಾತ್ರ. ಎಲ್ಲದಕ್ಕೂ ಮಹತ್ವ ಕೊಡುವಾಗ ಇಲ್ಲಿವಿದ್ಯೆ ಜ್ಞಾನಕ್ಕೂ ಮಹತ್ವ ಕೊಡುವ ಬಗೆ ಇದು. ಅದು ಗಣೇಶೋತ್ಸವ ಆಗಿರಲಿ ಶಾರದೋತ್ಸವ ಆಗಿರಲಿ ಇಲ್ಲಾ ಸಾರ್ವಜನಿಕ ಸಾಮೂಹಿಕ ಸತ್ಯನಾರಾಯಣ ಪೂಜೆಯೇ ಆಗಲಿ ಇಲ್ಲಿ ಉತ್ಸವದ ಆಚರಣೆಯ ವೈಶಿಷ್ಟ್ಯಗಳು ಹಲವು. ಹಲವು ಕಡೆಯಲ್ಲಿ ಅತ್ಯಂತ ಶಿಸ್ತುಬದ್ಧವಾಗಿರುತ್ತದೆ. ಡಿ ಜೆ ಯಂತಹ ಪಾಶ್ಯಾತ್ಯ ಸಂಸ್ಕೃತಿಯ ಪ್ರಭಾವ ಇರುವುದಿಲ್ಲ. ಶಾಸ್ತ್ರೀಯ ಸಂಗೀತ ಭಜನೆ ಯಕ್ಷಗಾನದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಇದಕ್ಕೆ ಪ್ರತೀಕ. ಹಲವು ಕಡೆಯಲ್ಲಿ ಒಂದು ಕಾರ್ಯಕ್ರಮ ಹೇಗೆ ಸಂಸ್ಕೃತಿಯನ್ನು ಪ್ರತಿನಿಧಿಸಬೇಕೋ ಆ ರೀತಿಯಲ್ಲೇ ಇರುತ್ತದೆ. ಪೂಜೆ ಪುನಸ್ಕಾರಗಳು ಜನರಲ್ಲಿ ಭಕ್ತಿಯನ್ನು ಜಾಗೃತಗೊಳಿಸಬೇಕು. ನಿಸ್ವಾರ್ಥ ಪ್ರೀತಿಯ ಸಂದೇಶವನ್ನು ಸಾರಬೇಕು. ಮುಖ್ಯವಾಗಿ ಹಿನ್ನೆಲೆಯ ಭಾವ ಉದಾತ್ತವಾಗಿರಬೇಕು. ಪೂಜೆ ಪುನಸ್ಕಾರ ಉತ್ಸವಾದಿಗಳು ಭಕ್ತರನ್ನು ಮೆಚ್ಚಿಸುವ ಬದಲಾಗಿ ಪರಮಾತ್ಮನನ್ನು ಮೆಚ್ಚಿಸುವ ಉದ್ದೇಶದಲ್ಲಿರಬೇಕು. ಆದರೆ ಇಂದು ಸಾರ್ವಜಿನಿಕ ಆಚರಣೆಗಳು ಭಕ್ತಿ, ಶ್ರದ್ಧೆಯ ಉದ್ದೇಶದಿಂದ ಬಹಳ ದೂರದಲ್ಲಿರುತ್ತದೆ ಎಂಬುದು ಅಷ್ಟೇ ಸತ್ಯ.
ಇತ್ತೀಚೆಗೆ ಗಣೇಶೋತ್ಸವದ ಬಗ್ಗೆ ಸ್ವಾಮೀಜಿಯೊಬ್ಬರು ಹೇಳಿದ ಮಾತು, ಅವರು ಯಾಕೆ ಹಾಗೆ ಹೇಳಿದರು? ಅದರ ತಪ್ಪು ಒಪ್ಪುಗಳು ಏನು ಎಂಬುದರ ಬಗ್ಗೆಯಲ್ಲ. ಅವರ ಚಿಂತನೆಯ ಬಗ್ಗೆ ಅದನ್ನು ವಿಮರ್ಶಿಸುವುದರ ಬಗ್ಗೆ ನನಗೆ ಆಸಕ್ತಿ ಇಲ್ಲ. ಆದರೆ ಇದೇ ಬಗೆಯ ಸಾಧ್ಯತೆಗಳು ದಟ್ಟವಾಗಿದೆ. ನಮ್ಮಲ್ಲಿ ಮೌಢ್ಯಕ್ಕೂ ಸಂಸ್ಕೃತಿಗೂ ಪರಿಧಿ ಅತ್ಯಂತ ಸೂಕ್ಷ್ಮವಾಗಿದೆ. ಒಂದು ಕಾಲದಲ್ಲಿ ಸತೀ ಪದ್ದತಿ ಎಂಬುದು ಸಂಸ್ಕೃತಿಯಾಗಿತ್ತು . ಅದು ಮೌಢ್ಯ ಎಂದು ಅರಿತಾಗ ಅದು ಸಮಾಜದಿಂದ ದೂರವಾಗಬೇಕಾಯಿತು. ನಾವು ಜೀವನದ ಮೌಲ್ಯಗಳನ್ನು ನಂಬಿಕೆಗಳನ್ನು ಈ ದೃಷ್ಟಿಕೋನದಿಂದಲೇ ಗಮನಿಸಬೇಕು. ಜಾತಕ ನೋಡಿ ಮದುವೆಯಾಗಬೇಕು ಸತ್ಯ. ವಿಪರ್ಯಾಸ ಎಂದರೆ ಜಾತಕ ಹೊಂದಿಕೆಯಾಗದೇ ಬ್ರಹ್ಮಚಾರಿಗಳಾಗಿ ಉಳಿದವರ ದೊಡ್ಡ ಪಟ್ಟಿಯೇ ಸಿಕ್ಕಿಬಿಡುತ್ತದೆ. ಹಾಗಂತ ಜಾತಕನೋಡುವುದು ತಪ್ಪು ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ವಾಸ್ತವ ಎಂಬುದು ಇದೆಲ್ಲದಕ್ಕಿಂತ ಮೀರಿ ನಿಲ್ಲುತ್ತದೆ. ಮುಖ್ಯವಾಗಿ ನಮ್ಮ ನಂಬಿಕೆಗಳು ಮೌಢ್ಯವನ್ನು ಆಶ್ರಯಿಸುವಂತಾಗಬಾರದು. ಸತ್ಯ ಧರ್ಮ ನ್ಯಾಯ ಪ್ರಾಮಾಣಿಕತೆಯನ್ನು ಬದಿಗಿಟ್ಟು ವ್ಯವಹರಿಸಿದಾಗ ಅದು ಮೌಢ್ಯವಾಗುತ್ತದೆ. ಕಳ್ಳನೋ ಕೊಲೆಗಾರನೋ ಅಪರಾಧವನ್ನು ಮಾಡುವುದಕ್ಕೆ ಹೊರಟಾಗ ದೇವರಿಗೆ ಹರಕೆ ಹಾಕಿ ಪ್ರಾರ್ಥನೆ ಮಾಡಿ ಹೋದರೆ ಮಾಡುವ ದುಷ್ಕೃತ್ಯ ಸಮ್ಮತವಾಗುವುದಿಲ್ಲ. ನಿಜವಾದ ಸತ್ಯ ಏನು ಎಂದು ಆತನಿಗೆ ತಿಳಿಯುವುದಿಲ್ಲ. ದೇವರ ಬಗ್ಗೆ ಆತನಿಗೆ ಮೌಢ್ಯವೇ ಆವರಿಸಿರುತ್ತದೆ. ನಮ್ಮ ಅನ್ಯಾಯ ಅಪ್ರಾಮಾಣಿಕತೆ ವಂಚನೆ ಅಪರಾಧಗಳಿಗೆ ದೇವರು ಅನುಗ್ರಹಿಸಬೇಕು ಎಂಬುದು ಮೌಢ್ಯವಲ್ಲದೇ ಬೇರೆನೂ ಅಲ್ಲ. ದೇವರಲ್ಲಿನ ದೈವತ್ವವನ್ನು ಗೇಲಿ ಮಾಡುವ ಪ್ರವೃತ್ತಿ ಇದು. ಇದು ಪರಿಶುದ್ದ ಭಕ್ತಿಯಲ್ಲ. ಯಾವುದೆ ಪಾಪ ಕರ್ಮಗಳಿಗೆ ಅಪರಾಧಗಳಿಗೆ ಕ್ಷಮೆ ಎಂಬುದು ಇರುವುದಿಲ್ಲ. ಆಗಿ ಹೋದ ಅಪರಾಧಕ್ಕೆ ಪಶ್ಚಾತ್ತಾಪ ಪರಿಹಾರ ಎಂಬುದು ಕೇವಲ ನಮ್ಮ ನಂಬಿಕೆ. ಆದರೆ ಸತ್ಯ ಅದಲ್ಲ. ಅಪರಾಧ ಆದ ನಂತರ ಅದು ಅಪರಾಧವೇ. ಅದು ಸತ್ಕಾರ್ಯವಾಗುವುದಕ್ಕೆ ಅದನ್ನು ನಾಶ ಮಾಡುವುದಕ್ಕೆ ಸಾಧ್ಯವಿಲ್ಲ.
ಈಗ ಗಣೇಶ ಎಂದ ತಕ್ಷಣ ಅದು ದೇವರಲ್ಲದೇ ಆಗುವುದಿಲ್ಲ. ಅಥವಾ ದೇವರು ಎಂಬುವುದು ಗಣೇಶ ಎನ್ನುವುದಕ್ಕೆ ಅಷ್ಟೇ ಸೀಮಿತವಾಗುವುದಿಲ್ಲ. ರಾಮ ಶಿವ ಸುಬ್ರಹ್ಮಣ್ಯ ಕೃಷ್ಣ ಹೆಚ್ಚೇಕೆ ಅಲ್ಲಾ ಅಥವಾ ಏಸು ಎಲ್ಲವೂ ಒಂದೇ ಎನ್ನುವ ತತ್ವದಲ್ಲಿ ಹೆಸರಿಗೆ ಮಹತ್ವವೇ ಇರುವುದಿಲ್ಲ. ಹಾಗಿರುವಾಗ ಗಣೇಶ ಎನ್ನುವುದು ದೇವರಲ್ಲ ಎನ್ನುವುದು ಹೇಗೆ ಸಾಧ್ಯ? ಅಕ್ಕಿಯನ್ನು ಅನ್ಯ ಭಾಷೆಯಲ್ಲಿ ಚಾವಲ್ ರೈಸ್ ಎನ್ನುವ ಹಾಗೆ ಗಣೇಶ. ಅದೊಂದು ಹೆಸರಿನ ರೂಪ. ದೇವರನ್ನು ನಂಬುವಾಗ ಅಲ್ಲಿ ಆಸ್ತಿಕ ನಾಸ್ತಿಕ ಎನ್ನುವುದಷ್ಟೇ ಮುಖ್ಯವಾಗುತ್ತದೆ.
ಹಿಂದೂ ಸಂಸ್ಕೃತಿಯಲ್ಲಿ ದೇವರು ಆರಾಧನೆ ಎಂಬುದರ ವ್ಯಾಪ್ತಿ ಅದರ ರೂಪ ಬಹಳ ವಿಶಾಲವಾಗಿದೆ. ಅತ್ಯಂತ ಸರಳವಾಗಿಯೂ ಅತ್ಯಂತ ಆಡಂಬರದಲ್ಲಿಯೂ ಇಲ್ಲಿ ಆರಾಧನೆ ಇರುತ್ತದೆ. ಇಲ್ಲಿ ಭಾವನೆಗಳಿಗೆ ಮಾತ್ರ ಮಹತ್ವ. ದೇವರ ಪೂಜೆ ಎಂಬುದರಲ್ಲಿ ಕ್ರಿಯೆಯೂ ವಿಭಿನ್ನವಾಗಿ ಇರುವಾಗ ಹೆಸರು ಎಂಬುದು ಗೌಣವಾಗಿರುತ್ತದೆ. ಹಲವು ಕಡೆ ದೇವರು ಎಂದು ಅರಿತಾಗ ಅಲ್ಲಿ ಒಳಗೆ ಯಾವ ದೇವರು ಎಂದು ಯೋಚಿಸುವುದಿಲ್ಲ. ಅದಕ್ಕೆ ನಮಸ್ಕರಿಸುವುದು ಮಾತ್ರ ಮಹತ್ವವಾಗಿರುತ್ತದೆ. ದೇವರ ರೂಪ ಭಾವ ಹೆಸರು ಎಲ್ಲವೂ ಮನುಷ್ಯ ಕಲ್ಪನೆಗೆ ಸೀಮಿತ. ಕಾಂತಾರ ಸಿನಿಮಾದಲ್ಲಿ ದೈವವನ್ನು ನೋಡುವಾಗ ಅದು ಕೇವಲ ದೈವ ಬೂತವಾಗಿ ಕಾಣುತ್ತದೆ ಹೊರತು ಅಲ್ಲಿ ಹೆಸರಿನ ಬಗ್ಗೆ ಯೋಚಿಸುವುದಿಲ್ಲ. ಆದರೆ ದೇವರು ಹೆಸರಿಗೆ ಅಷ್ಟಕ್ಕೇ ಸೀಮಿತವಾದರೆ ಅದು ದೇವರಾಗುವುದಿಲ್ಲ. ಕಲ್ಪನಾತೀತ ಭಾವನಾತೀತ ಎಂಬುದು ದೇವರು. ಹಾಗಿರುವಾಗ ಇಲ್ಲಿ ಹೆಸರು ಎಂಬುದು ಗೌಣವಾಗಿರುತ್ತದೆ. ಯಾವುದೂ ಇಲ್ಲದೆಯೂ ದೇವರನ್ನು ಪೂಜಿಸುವುದಕ್ಕೆ ಭಜಿಸುವುದಕ್ಕೆ ಅವಕಾಶ ನಮ್ಮ ಸಂಸ್ಕೃತಿಯಲ್ಲಿದೆ. ಕೇವಲ ಬೆರಳ ತುದಿಯಲ್ಲಿ ಹಿಡಿದ ಅಕ್ಷತೆಯನ್ನು ಸಮರ್ಪಿಸಿ ಸರ್ವ ಸಮರ್ಪಣಾ ಭಾವದಿಂದ ಆರಾಧಿಸಿ ತೃಪ್ತರಾಗುವ ಅವಕಾಶವಿದೆ. ಒಂದು ತುಳಸೀ ದಳ ಅರ್ಪಿಸಿ ಶ್ರೀಕೃಷ್ಣನನ್ನು ಒಲಿಸಿಕೊಂಡ ಕಥೆ ಪುರಾಣದಲ್ಲಿದೆ. ನಾವು ಹೊರಾವರಣದಲ್ಲಿ ಏನು ಮುಖ್ಯ ಎಂದು ತಿಳಿದಿರುತ್ತೇವೆಯೋ ದೇವರಿಗೆ ಅದು ಯಾವುದೂ ಮುಖ್ಯವಲ್ಲ. ಅದು ನಮ್ಮ ಭಾವನೆಗಳಿ ಮಾತ್ರ ಅವಶ್ಯಕವಾಗಿರುತ್ತದೆ. ನಾವು ಹೆಸರಿಲ್ಲದೇ ಕೇವಲ ಓಂ ಕಾರದಿಂದ ದೇವರನ್ನು ಕಾಣುವಾಗ ಯಾವ ದೇವರನ್ನೂ ಕಲ್ಪಿಸಬಹುದು. ಓಂಕಾರದಲ್ಲೇ ಎಲ್ಲವನ್ನು ಕಾಣುವಾಗ ಗಣೇಶ ಕೃಷ್ಣ ದುರ್ಗೆ ಎಲ್ಲವು ಒಂದೇ ಆಗಿ. ದೇವರು ಹೆಣ್ಣೂ ಅಗಬಹುದು ಗಂಡು ಅಗಬಹುದು. ಅದು ಕೇವಲ ಮಾನಸಿಕ ತೃಪ್ತಿ.
ನಮ್ಮ ಪ್ರಾಚೀನ ಸಂಸ್ಕೃತಿಯನ್ನು ಗಮನಿಸಬೇಕು. ಋಷಿಗಳು ತಪಸ್ಸು ಮಾಡುವುದಕ್ಕೆ ಯಾಕೆ ಕಾಡನ್ನು ಆಯ್ಕೆ ಮಾಡುತ್ತಿದ್ದರು? ಕೇವಲ ಅವರ ಏಕಾಗ್ರತೆಗಾಗಿ ಅಲ್ಲ. ಎಲ್ಲವನ್ನೂ ಬಿಟ್ಟು ಕೇವಲ ಮನಸ್ಸನ್ನು ಅರ್ಪಿಸುವುದಕ್ಕೆ ಕಾಡು ಪ್ರಶಸ್ತ. ಅವರ ತಪಸ್ಸಿನಿಂದ ಉಳಿದವರಿಗೆ ತೊಂದರೆಯಾಗುವುದಿಲ್ಲ. ಎಲ್ಲೋ ಒಂದು ಕಾಡಿನ ಭಾಗದಲ್ಲಿ ಅಲ್ಲಿರುವ ಪ್ರಾಣಿ ಪಕ್ಷಿ ಗಿಡ ಮರಗಳಿಗೂ ತೊಂದರೆಯಾಗದಂತೆ ಅವರು ತಪಸ್ಸು ಮಾಡುವ ಉದ್ದೇಶ ಸ್ಪಷ್ಟ ಯಾರಿಗೂ ತೊಂದರೆ ಕೊಡುವುದರಿಂದ ದೈವಾರಾಧನೆ ಸಾಧ್ಯವಾಗುವುದಿಲ್ಲ. ಯಾರಿಗೋ ತೊಂದರೆ ಕೊಟ್ಟು ಅವನ ಸಂಪತ್ತನ್ನು ಸೂರೆ ಮಾಡಿ ನಾವು ದೇವರನ್ನು ಪೂಜಿಸುತ್ತೇವೆ ಎಂದರೆ ಅದು ಮೌಢ್ಯದ ಭಕ್ತಿಯಾಗುತ್ತದೆ. ಸರ್ವೇಷಾಮ ಅವಿರೋಧೇನ ಎಂದು ಸಂಕಲ್ಪ ಮಾಡುವಾಗ ಪ್ರತಿಯೊಬ್ಬರ ಕ್ಷೇಮ ಸಮ್ಮತಿ ಅದಕ್ಕೆ ಸಂಪೂರ್ಣ ವಿನಿಯೋಗವಾಗಬೇಕು. ಅದಿಲ್ಲವಾದರೆ ಅದು ದೈವಾರಾಧನೆಯಾಗುವುದಿಲ್ಲ.
ನಮ್ಮ ಮನಸ್ಸಿನ ಅಹಂಕಾರಗಳ ವಿಕಾರವನ್ನು ನಿಯಂತ್ರಿಸುವಾಗ ಪರಿಪೂರ್ಣ ಪರಮಾತ್ಮ ಸ್ವರೂಪ ಅರಿವಿಗೆ ಬರುತ್ತದೆ. ಹಾಗಾಗಿ ಯಾರೋ ಒಬ್ಬರು ಗಣೇಶ ಕಾಲ್ಪನಿಕ ಎಂದು ಹೇಳುವಾಗ ಪರಮಾತ್ಮ ಸ್ವರೂಪ ಅರಿವಿದ್ದವನಿಗೆ ಏನೂ ಅನಿಸುವುದಿಲ್ಲ. ಯಾಕೆಂದರೆ ಅವನ ಮನಸ್ಸಿನಲ್ಲಿ ಗಣೇಶ ಎಂಬುದು ಕೇವಲ ಹೆಸರು ಮಾತ್ರ ಅದರಿಂದ ಆಚೆಗೆ ಪರಮಾತ್ಮ ಸ್ವರೂಪವಿದೆ. ಆತನಲ್ಲಿದ್ದ ಭಕ್ತಿ ಅದನ್ನು ತೋರಿಸುತ್ತಾ ಇರುತ್ತದೆ. ದೇವರು ಪ್ರಸನ್ನನಾಗುವುದು, ಅಥವಾ ದೇವರು ದೇವರಾಗಿ ಉಳಿಯುವುದು ಭಕ್ತಿ ಇದ್ದರೆ ಮಾತ್ರ. ಹಾಗಾಗಿ ಇಲ್ಲಿ ಎಲ್ಲದಕ್ಕೂ ಮೂಲವಾಗುವುದು ದೇವರನ್ನು ಏನು ಕರೆಯುವುದು ಎನ್ನುವುದಕ್ಕಿಂತಲೂ ಭಕ್ತಿಯೇ ಮುಖ್ಯವಾಗುತ್ತದೆ. ಭಕ್ತಿ ಇಲ್ಲದೇ ಇದ್ದರೆ ಉಳಿದವುಗಳಿಗೆ ಯಾವ ಪ್ರಾಶಸ್ತ್ಯವೂ ಇರುವುದಿಲ್ಲ. ಪುರಾಣದ ಬಗ್ಗೆ ಅರಿವಿಲ್ಲದವನಿಗೆ ಪುರಾಣದ ವ್ಯಕ್ತಿ ಪಾತ್ರಗಳು ಕೇವಲ ಹೆಸರಿಗಷ್ಟೇ ಸೀಮಿತವಾಗುತ್ತದೆ. ಹೆಸರು ಎಂಬುದು ಭಕ್ತಿಯ ಮುಂದು ಗೌಣವಾಗುತ್ತದೆ.
ಗಣೇಶೋತ್ಸವವನ್ನು ಸಂಸ್ಕೃತಿಗೆ ತಳುಕು ಹಾಕಲಾಗುತ್ತದೆ. ಆದರೆ ಗಣೇಶೋತ್ಸವ ಹುಟ್ಟಿಕೊಂಡಿರುವುದು ಸಂಸ್ಕೃತಿಯಿಂದಲೇ ಹೊರತು ಅದುವೇ ಸಂಸ್ಕೃತಿಯಾಗುವುದಕ್ಕೆ ಸಾಧ್ಯವಿಲ್ಲ. ಅದಲ್ಲದೇ ಇದ್ದ ಸಂಸ್ಕೃತಿಗಳು ಬೇಕಾದಷ್ಟು ಇವೆ ಅದು ಎಷ್ಟು ಗೌರವಿಸಲ್ಪಟ್ಟಿದೆ ಎಂಬುದು ಮುಖ್ಯವಾಗುತ್ತದೆ. ಅದರಂತೆ ದೀಪಾವಳಿಗೆ ಪಟಾಕಿಯ ಆವಶ್ಯಕತೆ ಎಷ್ಟು ಎಂಬುದು ಕೂಡ ಪ್ರಶ್ನೆಯಾಗುತ್ತದೆ. ಅದನ್ನು ಬೇಡ ಎಂದರೆ ಸಂಸ್ಕೃತಿಗೆ ವಿರೋಧವಾಗುತ್ತದೆ ಎಂಬುದು ಸರಿಯಲ್ಲ. ದೀಪಾವಳಿಯಲ್ಲೇ ಇರುವ ಸಂಸ್ಕೃತಿ ನಮಗೆ ಬೇಡವಾಗಿ ಕೇವಲ ಪಟಾಕಿಯಷ್ಟೇ ದೀಪಾವಳಿಯಾದರೆ ಅದು ಸಂಸ್ಕೃತಿ ಹೇಗಾಗುತ್ತದೆ? ನಮ್ಮ ರಸ್ತೆಯಲ್ಲಿ ಸುಮಾರು ಐವತ್ತು ಮನೆಗಳಿವೆ. ಅದರಲ್ಲಿ ಹೆಚ್ಚಿನ ಎಲ್ಲ ಮನೆಗಳು ಪಟಾಕಿ ಉರಿಸಿದರೆ, ಮನೆ ಎದುರು ದೀಪ ಹಚ್ಚಿಡುವ ಮನೆಗಳು ಒಂದೋ ಎರಡೋ ಮನೆಗಳ ಮುಂದೆ ದೀಪ ಹಚ್ಚಿಡುತ್ತಾರೆ. ದೀಪಾವಳಿಯಲ್ಲಿ ಮುಖ್ಯವಾಗಿ ಹಚ್ಚಿಡಬೇಕಾದ ದೀಪಗಳು ಬೇಡ. ಪರಮಾತ್ಮನ ಭಜನೆ ಸ್ಮರಣೆಗಳು ಬೇಡ. ಇವುಗಳೆಲ್ಲ ಸಂಸ್ಕೃತಿಯ ಅಂಗಗಳು. ಅದು ಬೇಡದೆ ಕೇವಲ ಪಟಾಕಿ ಬೇಕು ಎನ್ನುವಾಗ ಅದರಿಂದಾಗುವ ದುಷ್ಪರಿಣಾಮದ ಬಗ್ಗೆ ಯೋಚಿಸುವುದಿಲ್ಲ. ಪಟಾಕಿ ಬೇಡವೇ ಬೇಡ ಎಂದುಕೊಂಡು ಮನೆಯೊಳಗೆ ಕುಳಿತ ಅಮಾಯಕನ ಕಣ್ಣು ತೆಗೆದ ಪಟಾಕಿ ಬೇಕು ಎಂದರೆ ಶೋಚನೀಯ ಎನ್ನಬೇಕು. ಪಟಾಕಿಯ ಬಗ್ಗೆ ಪುಂಗಿ ಊದುವಾಗ ಕಣ್ಣು ಕಾಣುವುದಿದ್ದರೆ ಒಂದು ಸಲ ಕಣ್ಣಿನ ಆಸ್ಪತ್ರೆಗಳಿಗೆ ಭೇಟಿ ಕೊಡಿ. ಪಟಾಕಿಯಿಂದ ಕಣ್ಣು ಕಳೆದ ಮನೆಯಯವರನ್ನು ನೋಡಬೇಕು. ಗಣೇಶೋತ್ಸವದಲ್ಲು ಹೀಗೆ ಬೇಡದೇ ಇರುವ ಅಂಶಗಳು ಸಾಕಷ್ಟು ಇವೆ. ಹಣ ಸಂಗ್ರಹಿಸುವಾಗ ದರೋಡೆ ಮಾಡಿದಂತೆ ಕಿತ್ತುಕೊಳ್ಳುವುದನ್ನೂ ಕಾಣಬಹುದು. ಇನ್ನು ಅಲ್ಲಿ ಉತ್ಸವದ ಹೆಸರಲ್ಲಿ ಆಗುವ ಅಪಸವ್ಯಗಳನ್ನು ನೋಡುತ್ತಾ ಹೋದರೆ ಅದು ಬೇಡವೇ ಬೇಡ ಎಂಬಂತಹ ಸನ್ನಿವೇಶವನ್ನು ಕಾಣಬಹುದು. ದೇವರ ಯಾವುದೇ ಕ್ರಿಯೆಗಳು ಯಾರಿಗೂ ತೊಂದರೆ ಕೊಡದೇ ಆಚರಿಸಲ್ಪಡಬೇಕು. ಹಾಗಿದ್ದರೆ ಮಾತ್ರ ಅದು ದೇವರ ಪೂಜೆಯಾಗುತ್ತದೆ.
ನಮ್ಮ ರಸ್ತೆಯಲ್ಲಿ ಈಬಾರಿ ಮೂರು ಸಲ ಗಣೇಶ ಇಟ್ಟು ಐದಾರು ದಿನ ಪೂಜೆ ಮಾಡಿದ್ದಾರೆ. ಇನ್ನು ಪೂಜೆಯ ಪವಿತ್ರತೆ ನೋಡಿದರೆ ಗಣೇಶ ಇಷ್ಟು ಅಗ್ಗವಾಗಿ ಹೋದನೇ ಎಂದನಿಸುತ್ತದೆ. ನಮ್ಮದು ಒಂದು ಕಡೆ ಮಾತ್ರ ತೆರೆದುಕೊಂಡ ಏಕ ಮುಖ ರಸ್ತೆ. ನಡುವಿನಲ್ಲಿ ಚಪ್ಪರ ಹಾಕಿ ರಸ್ತೆ ತಡೆ ಮಾಡಿ ಪೂಜೆ ಮಾಡುವಾಗ ಒಂದು ಬದಿಯ ಒಂದಷ್ಟು ಮನೆಮಂದಿಗಳು ಪಡುವ ಕಷ್ಟ ಬೇರೆಯೇ ಆಗಿರುತ್ತದೆ. ಮನೆಯ ಯಾರೋ ಒಬ್ಬನಿಗೆ ಹೃದಯಾ ಘಾತವೋ ಮತ್ತೊಂದೋ ಆಗಿ ತುರ್ತು ಚಿಕಿತ್ಸೆ ಬೇಕು ಎನ್ನುವಾಗ ಮನೆ ಬಾಗಿಲಿಗೆ ವಾಹನವೇ ಬಾರದಂತಹ ಸ್ಥಿತಿ ಬಂದರೆ ಗಣೇಶನೇ ಕಾಪಾಡುತ್ತಾನೆ ಎಂದು ಕುಳಿತರೆ ಅದು ಮೌಢ್ಯವಾಗುತ್ತದೆ.
ಹಲವು ಕಡೆಯಲ್ಲಿ ಗಣೇಶೋತ್ಸವ ಮಾಡಿ ಗಣೇಶನ ಮೌಲ್ಯವನ್ನು ನಾವು ಕಳೆಯುತ್ತಿದ್ದೇವೆ ಎಂದನಿಸುತ್ತದೆ. ಭಕ್ತಿ ಇದ್ದರೆ ಮಾತ್ರ ಸಾಲದು ಭಕ್ತಿಯ ಸ್ವರೂಪವೂ ಅತೀ ಮುಖ್ಯ. ಗರ್ಭದ ಗುಡಿಯ ಒಳಗೆ ಸರ್ಪ ಬಂದು ಕುಳಿತರೆ ಜೀವ ಭಯವೇ ಪ್ರಧಾನವಾಗುತ್ತದೆ. ಅಲ್ಲಿ ಸಂಸ್ಕೃತಿಗೆ ಯಾವ ಬೆಲೆಯೂ ಇರುವುದಿಲ್ಲ. ಸಂಸ್ಕೃತಿ ಎಂಬುದು ಉತ್ತಮ ಜೀವನವನ್ನು ಬಿಂಬಿಸುತ್ತದೆ. ಸತ್ಯ ಪ್ರಾಮಾಣಿಕತೆ ಮತ್ತು ಪಾವಿತ್ರ್ಯತೆ ಇದು ಇಲ್ಲದೇ ಇದ್ದರೆ ಯಾವ ಸಂಸ್ಕೃತಿಯೂ ಗೌರವಿಸಲ್ಪಡುವುದಿಲ್ಲ.
Monday, November 6, 2023
ಹೊಟ್ಟೆ ತುಂಬಿದರೂ ಇಂಗದ ಹಸಿವು
ಪ್ರತೀ ಸಲ ನನಗೆ ಊಟ ಮಾಡಿ ಏಳುವಾಗ ಬೇಡವೆಂದರೂ ನಮ್ಮ ನಾರಾಯಣ ಎಂಬ ವೃದ್ದರ ನೆನಪಾಗುತ್ತದೆ. ಈ ವೃದ್ದ ಹಣ್ಣು ಹಣ್ಣು ಮುದುಕ ಅಲ್ಲದೇ ಇದ್ದರೂ ಒಂದಷ್ಟು ಪ್ರಾಯ ಸಂದು ಹೋಗಿತ್ತು. ಅವರ ಊಟ ನನಗೆ ಹಲವಾರು ಅರ್ಥಗರ್ಭಿತ ವಿಷಯಗಳು ಅಡಕವಾಗಿದ್ದಂತೆ ಭಾಸವಾಗುತ್ತದೆ. ಇಂದು ಈ ಊಟವೆಂಬ ಕ್ರಿಯೆ ಅದರ ಉದ್ದೇಶ ಕೇವಲ ಹಸಿವನ್ನು ನೀಗಿಸುವುದಕ್ಕೆ ಎಂದು ಅನಿಸುವುದಿಲ್ಲ.
ಹಿಂದೆ ಮಂಗಳೂರಲ್ಲಿರುವಾಗ ಈ ವಯೋ ವೃದ್ಧರು ಊಟಕ್ಕೆ ಕುಳಿತರೆ ಅವರ ತನ್ಮಯತೆ ನಮಗೆ ಅಚ್ಚರಿಯನ್ನು ತರುತ್ತಿತ್ತು. ಆ ತನ್ಮಯತೆ ಊಟದ ಮೇಲಿನ ಅತ್ಯಾಗ್ರಹವಾಗಿರಲಿಲ್ಲ. ಬದಲಿಗೆ ಹಸಿವೆಯನ್ನು ತಣಿಸುವ ಒಂದು ಪವಿತ್ರ ಕಾರ್ಯವಾಗಿತ್ತು. ನಾರಾಯಣ ಕೂದಲು ನೆರೆಗಟ್ಟಿದ ಕೃಶ ಶರೀರದ ವ್ಯಕ್ತಿಯಾಗಿದ್ದರು. ಅವರು ನಮ್ಮಲ್ಲಿ ಅನಧಿಕೃತವಾಗಿ ಕೆಲಸಕ್ಕಿದ್ದರು. ಅವರು ಇದ್ದಾರೆ ಎಂದರೆ ನಮಗೆ ಕೆಲವೆಲ್ಲ ಕೆಲಸದಿಂದ ಮುಕ್ತಿಯಾಗುತ್ತಿತ್ತು. ಅದು ಯಾವ ಕೆಲಸವಾದರೂ ಸಮಯದ ಮಿತಿ ಇಲ್ಲದೆ ಮಾಡುತ್ತಿದ್ದರು. ನೀಳಕಾಯದ ವ್ಯಕ್ತಿಯಾಗಿದ್ದರು. ಅವರಿಗೆ ಕೌಟುಂಬಿಕವಾಗಿ ಮಗಳು ಮಗ ಸೊಸೆ ಎಲ್ಲರೂ ಅನುಕೂಲ ಸ್ಥಿತಿಯಲ್ಲಿದ್ದರೂ ಅವರು ನಮ್ಮ ಮನೆಯಲ್ಲಿ ಕೆಲಸಕ್ಕಿದ್ದರು. ಕಾರಣ ಸ್ವಾಭಿಮಾನ ಒಂದೆಡೆಯಾದರೆ ಕೌಟುಂಬಿಕ ಅಸಮಾಧಾನ ಇನ್ನೊಂದು. ಒಂದು ರೀತಿಯಲ್ಲಿ ವಿರಕ್ತಿಯಾಗಿ ಸನ್ಯಾಸಿಯಂತೇ ಬದುಕುತ್ತಿದ್ದರು. ನಮ್ಮ ಮನೆಯಲ್ಲಿ ಅದೂ ಇದೂ ಚಾಕರಿ ಮಾಡುತ್ತಾ ತನ್ನ ಹಸಿವನ್ನು ನೀಗುವ ದುಡಿಮೆ ಅವರದ್ದು. ಹಾಗೆ ನೋಡಿದರೆ ಒಂದು ಕಾಲದಲ್ಲಿ ಬಹಳ ಅನುಕೂಲವಂತರಾಗಿ ತುಂಬು ಕುಟುಂಬದೊಂದಿಗೆ ಇದ್ದರು. ಅದು ಎಪ್ಪತ್ತರ ದಶಕ, ಮಂಗಳೂರಿನ ರಥಬೀದಿ (ಕಾರ್ ಸ್ಟ್ರೀಟ್) ಯಲ್ಲಿ ಸ್ವಂತವಾದ ಒಂದು ಉದ್ಯಮದಲ್ಲಿ ಚಕ್ಕುಲಿ ಮುಂತಾದ ತಿಂಡಿ ವ್ಯಾಪಾರವನ್ನು ಮಾಡುತ್ತಿದ್ದರು. ನಮ್ಮ ಮಾವಂದಿರು ಅವರ ಕೆಳಗೆ ಕೆಲಸಕ್ಕಿದ್ದರು. ಅದೇನು ಸಂಭವಿಸಿತೋ ಸರಿಯಾಗಿ ಗೊತ್ತಿಲ್ಲ , ನಂತರ ಎಲ್ಲವನ್ನು ಕಳೆದುಕೊಂಡ ಸನ್ಯಾಸ ಸ್ಥಿತಿಗೆ ತಲುಪಿದರು. ಅತ್ತ ಮನೆಯವರಿಂದ ದೂರಾಗಿ ಒಂದು ರೀತಿಯ ಅನಾಥತ್ವ.
ನಾರಾಯಣ ಅವರ ಮತ್ತೊಂದು ಗುಣವೆಂದರೆ ಎಲ್ಲೂ ಶಾಶ್ವತವಾಗಿ ನಿಲ್ಲುವ ವ್ಯಕ್ತಿಯಲ್ಲ. ಸದಾ ತಿರುಗಾಡುತ್ತಾ ಇರುವವರು. ಅದು ಯಾರದೋ ಮನೆಗಲ್ಲ, ಬದಲಿಗೆ ಪ್ರಸಿದ್ದ ತೀರ್ಥ ಕ್ಷೇತ್ರ ಪರ್ಯಟನೆ. ಭಾರತದಲ್ಲಿ ಅವರು ಹೋಗದ ಪ್ರಸಿದ್ಧ ಕ್ಷೇತ್ರಗಳೇ ಇಲ್ಲ . ಒಂದು ಜೋಳಿಗೆಯಂತಹ ಚೀಲ ಅದರಲ್ಲಿ ಒಂದೆರಡು ಅತ್ಯಾವಶ್ಯ ಪಂಚೆ ಅಂಗಿ ಅದೂ ಕಾವಿ ಬಣ್ಣದ ವಸ್ತ್ರ ಇಷ್ಟೇ ಇರುತ್ತಿತ್ತು. ಅಗೀಗ ಬೀಡಿ ಎಳೆಯುವುದು ಬಿಟ್ಟರೆ ಅವರಿಗೆ ಬೇರೆ ದುಶ್ಚಟಗಳಿರಲಿಲ್ಲ. ಬಹುಶಃ ಕೈಯಲ್ಲಿ ಕಾಸಿಲ್ಲದೆಯೂ ರೈಲಿನ ಸಾಮಾನ್ಯ ಭೋಗಿಯ ಪ್ರಯಾಣ ಮಾಡುತ್ತಿದ್ದರು ಎಂದು ನನಗೆ ಅನುಮಾನ. ಅತ್ತ ಉತ್ತರ ಭಾರತದ ಬದರಿನಾಥ ಕೇದಾರನಾಥ ಹರಿದ್ವಾರ ವಾರಣಾಸಿ ಗಯಾ ಪ್ರಯಾಗ ಪಂಡರಾಪುರ ರಾಮೆಶ್ವರ ಅಯೋಧ್ಯೆ ಹೀಗೆ ಸುತ್ತಾಡುತ್ತಿದ್ದ ಪರಮ ದೈವ ಭಕ್ತ. ಸದಾ ಪರಮಾತ್ಮನ ನಾಮ ಸ್ಮರಣೆಯಲ್ಲಿ ತನ್ನ ಹೆಸರನ್ನೆ ಉಚ್ಚರಿಸುತ್ತಿದ್ದರು. ಮುಂಜಾನೆ ನಾಲ್ಕುಗಂಟೆಗೆ ಎಚ್ಚರವಾದರೆ ಇವರು ನಾರಾಯಣ ನಾರಾಯಣ ಹರೇ ರಾಮ ಎನ್ನುವ ನಾಮೋಚ್ಚಾರಣೆ ಕೇಳುತ್ತಿತ್ತು. ಪಂಡರಾಪುರದ ಪಾಂಡುರಂಗನ ಅನನ್ಯ ಭಕ್ತ. ಸಾಯಂಕಾಲ ಪುರಂದರದಾಸರ ಭಜನೆಯನ್ನು ಹೇಳುವುದಲ್ಲದೆ ವರ್ಷಕ್ಕೆ ಒಂದು ಬಾರಿಯಾದರೂ ಪಂಡರಾಪುರ ಹೋಗಿ ಬರುತ್ತಿದ್ದರು. ಹಾಗೆ ಹೋಗಿ ಬಂದಾಗ ತಂದ ಪುಂಡರಿಕಾಕ್ಷನ ಶಿಲಾ ವಿಗ್ರಹ ತಂದು ನಮ್ಮ ಮನೆಯಲ್ಲಿಟ್ಟಿದ್ದರು. ಅಂತಹ ದೈವ ಭಕ್ತನ ಊಟ ಪ್ರತಿ ಬಾರಿಯೂ ನೆನಪಿಗೆ ಬರುವುದಕ್ಕೆ ಒಂದು ವಿಶೇಷತೆ ಇದೆ.
ನಾರಾಯಣ ಅಜ್ಜ....ನಾವು ಅವರನ್ನು ಕರೆಯುತ್ತಿದ್ದ ಹೆಸರು, ಅವರು ಯಾವ ಜಾತಿಯೋ ಗೊತ್ತಿಲ್ಲ. ಅವರು ನಮ್ಮ ಮನೆಯ ಜಗಲಿಯ ಒಂದು ಮೂಲೆಯಲ್ಲಿ ಊಟಕ್ಕೆ ಕುಳಿತುಕೊಳ್ಳುತ್ತಿದ್ದರು. ಅವರ ತನ್ಮಯತೆಯನ್ನು ನಾನು ಈಗ ನೆನಪಿಸಿಕೊಳ್ಳುತ್ತೇನೆ. ತಿನ್ನುವ ಪ್ರತಿಯೊಂದು ತುತ್ತೂ ಅವರಿಗೆ ಪರಮಾತ್ಮನ ಪ್ರಸಾದದಂತೆ ಭಾಸವಾಗುತ್ತಿತ್ತು. ಆ ಭಕ್ತಿ ಅವರ ಕಣ್ಣಿನ ನೋಟದಲ್ಲಿ ಮುಖದ ಭಾವನೆಯಲ್ಲಿ ವ್ಯಕ್ತವಾಗುತ್ತಿತ್ತು. ಊಟದ ಮೊದಲು ಕಣ್ಣು ಮುಚ್ಚಿ ದೇವರನ್ನು ಪ್ರಾರ್ಥಿಸುತ್ತಿದ್ದರು. ಆನಂತರ ಒಂದು ತುತ್ತು ಅಂಗಳದಲ್ಲಿ ಕಾಗೆಗೆ ಇಡುತ್ತಿದ್ದರು. ಆನಂತರ ಏನು ಬಳಸಿದರೂ ಅದನ್ನು ಹಸಿವಾಗಿ ಊಟಮಾಡುತ್ತಿದ್ದರು. ಇಷ್ಟೇ ಅದರೆ ಅದರಲ್ಲಿ ವಿಚಿತ್ರವಿಲ್ಲ, ಊಟದ ಕೊನೆಯಲ್ಲಿ ತಟ್ಟೆಗೆ ಒಂದಷ್ಟು ನೀರನ್ನು ಸುರಿದು ಆ ತಟ್ಟೆಯನ್ನುಚೆನ್ನಾಗಿ ತೊಳೆದು ಅದನ್ನು ಕುಡಿದು ಬಿಡುತ್ತಿದ್ದರು. ಆಗ ನಮಗೆ ಇದೊಂದು ಅತಿಯಾಶೆಯಂತೆ ಹಾಸ್ಯವಾಗಿ ಕಂಡಿತ್ತು.ಆದರೆ ಈಗ ಅದರ ಮೌಲ್ಯ ಅನುಭವಕ್ಕೆ ಬರುತ್ತದೆ. ಒಂದಿಷ್ಟನ್ನೂ ವ್ಯರ್ಥ ಮಾಡದ ಆಹಾರದ ಮೇಲಿನ ಅವರ ಭಕ್ತಿ ನಿಜಕ್ಕೂ ಶ್ರೇಷ್ಠ.
ಊಟ ಎಂದರೆ ಈ ವಯೋವೃದ್ಧನ ನೆನಪಾಗುವುದು ಇದಕ್ಕೆ. ನಾವು ಕೊನೆಯಲ್ಲಿ ಎಂಜಲು ಮಾಡಿ ಎಸೆಯುವುದನ್ನು ಅವರು ತನ್ಮಯತೆಯಲ್ಲಿ ಸೇವಿಸುತ್ತಿದ್ದರು.
ಮಧ್ಯಾಹ್ನ ದೇವಸ್ಥಾನಕ್ಕೆ ಹೋದರೆ ಹಲವು ಸಲ ದರ್ಶನಕ್ಕಿರುವ ಮಹತ್ವಕ್ಕಿಂತಲೂ ಭೋಜನ ಪ್ರಸಾದಕ್ಕೆ ಆದ್ಯತೆ ನಮಗರಿವಿಲ್ಲದೇ ಒದಗಿಬರುತ್ತದೆ. ಯಾವಾಗ ದರ್ಶನ ಆಗಿಬಿಡುತ್ತದೋ, ಯಾವಾಗ ಭೋಜನ ಶಾಲೆಗೆ ಹೋಗಿಬಿಡುತ್ತೇವೆ ಎಂಬ ತವಕ ಉಂಟಾಗುತ್ತದೆ. ಭೋಜನ ಕೇವಲ ದೇವಸ್ಥಾನದಲ್ಲಿ ಮಾತ್ರ ಆದ್ಯತೆಯನ್ನು ಕಾಣುವುದಲ್ಲ....ಅದು ಎಲ್ಲ ಸಮಾರಂಭಗಳಲ್ಲೂ ಅತಿಥಿ ಸತ್ಕಾರದ ಬಹಳ ಮುಖ್ಯ ಅಂಗ. ಭೋಜನ ಸತ್ಕಾರ ಅತ್ಯಂತ ಗೌರವಯುತ ಸತ್ಕಾರ. ಯಾವ ಸಮಾರಂಭದಲ್ಲೂ ಊಟಕ್ಕೆ ಕೊಡುವ ಪ್ರಾಮುಖ್ಯತೆ ಹೆಚ್ಚು. ಊಟದ ಹೊತ್ತು ಸನಿಹವಾಗುವಾಗ ಅವಸರ ಅಸಹನೆ ತನ್ನಿಂತಾನೆ ಹುಟ್ಟಿಕೊಳ್ಳುತ್ತದೆ.
ಇತ್ತೀಚೆಗೆ ಕ್ಷೇತ್ರವೊಂದಕ್ಕೆ ಹೋಗಿದ್ದೆ. ಮಧ್ಯಾಹ್ನ ಊಟದ ಹೊತ್ತು. ಊಟಕ್ಕೆ ಕುಳಿತಾಗ ನನ್ನೆದುರು ಪುರೋಹಿತರೊಬ್ಬರು ಕುಳಿತಿದ್ದರು. ಅವರ ಉಡುಗೆ ತೊಡುಗೆ ನೋಡುವಾಗ ಹಾಗೇ ಅನಿಸಿತ್ತು. ಮೊದಲಿನಿಂದಲೂ ನಾನು ಅವರನ್ನು ಗಮನಿಸುತ್ತಿದ್ದೆ. ದೇವರ ದರ್ಶನದಿಂದ ತೊಡಗಿ ಅವರ ಅವಸರ ಪ್ರವೃತ್ತಿ. ಊಟಕ್ಕೆ ಕುಳಿತಾಗಲೂ ಮುಂದುವರೆದಿತ್ತು. ಕೊನೆಗೆ ಬಂದ ಅನ್ನಾಹಾರವನ್ನು ಅವಸರದಲ್ಲೇ ಊಟ ಮಾಡಿದರು. ಊಟದ ನಡುವೆ ಸಾಂಬಾರ್ ಬಂತು. ಬಡಿಸುವವರು ಅವಸರವಸರದಿಂದ ಬಡಿಸಿ ಮುಂದೆ ಹೋದರು. ಇವರು ಮುಂದೆ ಹೋದ ಅವರನ್ನು ಹಿಂದೆ ಕರೆದು ಸಾಂಬಾರ್ ನ ಹೋಳು ಬಡಿಸುವಂತೆ ಬೇಡಿ ಹಾಕಿಸಿಕೊಂಡರು. ಆದರೆ ಆರಂಭದಲ್ಲಿ ಇದ್ದ ಆತ್ಯಾಗ್ರಹ ಕೊನೆಯಲ್ಲಿ ಇರಲಿಲ್ಲ. ಬಡಿಸಿದ ಅಷ್ಟೂ ಹೋಳುಗಳು ಮಾತ್ರವಲ್ಲದೆ ಒಂದಷ್ಟು ಅನ್ನ ಪಲ್ಯ ಪಾಯಸ ಬಿಟ್ಟು ಊಟಮುಗಿಸಿ ಎದ್ದರು. ಅವರ ವರ್ತನೆ ಬಹಳ ಅಸಹನೆಯನ್ನು ಉಂಟು ಮಾಡಿತು. ನಾನೆಂದೆ ಏನು ಸ್ವಾಮಿ ಕೇಳಿ ಹಾಕಿದ್ದನ್ನೂ ಬಿಟ್ಟು ಎದ್ದಿರಲ್ಲ. ಅವರು ಕೇವಲ ನಕ್ಕರು. ಇಂತಹ ವ್ಯಕ್ತಿಗಳಿಗೆ ಏನು ಹೇಳಬೇಕು. ನಾನು ಅಷ್ಟು ಕೇಳಿದ್ದೇ ಹೆಚ್ಚು ಅನಿಸಿತು. ವಯಸ್ಸಾಗಿ ಹೋದರೂ ತಮ್ಮ ತಮ್ಮ ಹೊಟ್ಟೆಯ ಸಾಮಾರ್ಥ್ಯ ಅರಿವಾಗುವುದಿಲ್ಲ. ಹಸಿವಿನ ಪ್ರಮಾಣ ಗೊತ್ತಾಗುವುದಿಲ್ಲ. ಇವರೆಲ್ಲ ಊಟಕ್ಕೆ ಕುಳಿತರೆ ಸಾಕು ಬೇಕು ಎನ್ನುವುದಕ್ಕೆ ಅರ್ಥವೇ ಇರುವುದಿಲ್ಲ. ಸಾಕು ಎಂದು ಹೇಳುವುದಕ್ಕು ಬೇಕು ಎಂದು ಬೇಡುವುದಕ್ಕೂ ಅರ್ಹತೆಯೇ ಇಲ್ಲ.
ಸಾಮಾನ್ಯವಾಗಿ ಸಮಾರಂಭಗಳಲ್ಲಿ ನಾನು ಊಟಕ್ಕೆ ಕುಳಿತಾಗ ಗಮನಿಸುತ್ತೇನೆ. ಊಟದ ಆರಂಭದಲ್ಲಿ ಹಲವು ಭಕ್ಷ್ಯ ಆಹಾರಗಳನ್ನು ಬಡಿಸಿ ಎಲೆಯನ್ನು ಅಲಂಕರಿಸುತ್ತಾರೆ. ಎಲೆಯ ಅಲಂಕಾರಕ್ಕೆಂದೇ ಹಲವಾರು ತಿಂಡಿಗಳನ್ನು ಮಾಡುತ್ತಾರೆ. ಊಟದ ಆರಂಭದಲ್ಲಿ ಇವುಗಳಿಗೆಲ್ಲ ಎಷ್ಟು ಆಸಕ್ತಿ ವಹಿಸುತ್ತೇವೋ ಊಟದ ನಂತರ ಇವುಗಳು ಅದಕ್ಕಿಂತ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗುತವೆ. ನಾವು ಊಟಮಾಡಿದ ಬಾಳೆ ಎಲೆಯಾದರೂ ನಾವು ಊಟ ಮಾಡಿ ಕುಳಿತಲ್ಲಿಂದ ಎದ್ದನಂತರ ಅದು ಹೇಸಿಗೆ ಎನಿಸುತ್ತದೆ. ಊಟದ ಆರಂಭದಲ್ಲಿ ಇದ್ದ ಆಗ್ರಹ ಊಟವಾದನಂತರ ಇರುವುದಿಲ್ಲ. ತಿನ್ನುವ ಆಹಾರದಲ್ಲಿ ನಿರ್ಲಕ್ಷ್ಯ. ಕುಳಿತ ನೂರು ಮಂದಿಯಲ್ಲಿ ಎಲೆಯಲ್ಲಿ ಒಂದಗುಳೂ ಇಲ್ಲದಂತೆ , ಯಾವ ತಿಂಡಿ ಪದಾರ್ಥಗಳನ್ನೂ ಉಳಿಸದೆ ಊಟಮಾಡುವವರು ಕೇವಲ ಐದಾರು ಮಂದಿ. ಪ್ರತಿಯೊಬ್ಬರ ಎಲೆಯಲ್ಲೂ ಒಂದಲ್ಲ ಒಂದು ಆಹಾರ ಉಳಿಸಿ ಏಳುವಾಗ ಹಸಿವು ಮರೆತು ಹೋಗಿರುತ್ತದೆ. ದಾನೆ ದಾನೆಪೆ ಲಿಖಾಹೈ ಖಾನೆವಾಲಾ ಕಾ ನಾಮ್ ಎಂದು ಹೇಳುತ್ತಾರೆ. ಪ್ರತಿಯೊಂದು ಧಾನ್ಯದಲ್ಲೂ ಭಗವಂತ ತಿನ್ನುವವರ ಹೆಸರನ್ನು ಬರೆದಿರುತ್ತಾನೆ. ಆದರೆ ಭಗವಂತನ ಕಲ್ಪನೆಯನ್ನು ಹುಸಿ ಮಾಡುವ ನಮ್ಮ ಪ್ರವೃತ್ತಿ ಇದೆಯಲ್ಲ, ಭಗವಂತನ ಮೇಲಿನ ನಂಬಿಕೆಯನ್ನು ಹುಸಿಗೊಳಿಸುತ್ತದೆ.
ವರ್ಷ ಸಂದು ಇಷ್ಟು ದೊಡ್ಡವರಾಗುತ್ತೇವೆ. ನಮ್ಮ ಹೊಟ್ಟೆಯ ಪ್ರಮಾಣ ನಮಗೆ ಅರಿವಿಲ್ಲ ಎಂದರೆ ವಿಚಿತ್ರಎನಿಸುತ್ತದೆ. ಆಹಾರವಿಲ್ಲದೇ ಸಾಯುವುದಕ್ಕಿಂತಲೂ ತಿಂದು ಸಾಯುವವರು ಹೆಚ್ಚಂತೆ. ನಮ್ಮ ನಡುವೆ ಇಂದು ತಿನ್ನುವುದಕ್ಕೆ ಹಲವು ಅರ್ಥಗಳು ಇರುತ್ತವೆ. ಪ್ರಾಣಿಗಳು ಕೇವಲ ಹಸಿವಿಗಾಗಿ ತಿನ್ನುತ್ತವೆ. ನಮಗದರೆ ಪರಿವೆ ಇಲ್ಲ. ಚಪಲಕ್ಕಾಗಿ ಹೊಟ್ಟೆ ತುಂಬಿದರೂ ಇಳಿಸಿಕೊಳ್ಳುತ್ತೇವೆ. ಕೆಲವೊಮ್ಮೆ ಆಹಾರ ಉಳಿತದೆ ಎಂದು ಕಸದ ಬುಟ್ಟಿಗೆ ಎಸೆಯುವುದನ್ನು ತಿಂದು ತೇಗುತ್ತೇವೆ. ಅರ್ಥಾತ್ ಕಸದ ಬುಟ್ಟಿ ನಮ್ಮ ಹೊಟ್ಟೆ. ಹಲವು ಸಲ ನಾಗರಿಕ ಜೀವನ ಶೈಲಿಯಲ್ಲಿ ಹಿರಿಮೆಗಾಗಿ ತಿನ್ನುತ್ತೇವೆ. ಯಾರೋ ಒತ್ತಾಯ ಮಾಡಿ ಬಡಿಸಿದರೂ ಎಂದು ಬೇಡದೇ ಇದ್ದರೂ ಯಾರಿಗಾಗಿಯೋ ತಿಂದುಬಿಡುತ್ತೇವೆ. ಯಾರೋ ತಿನ್ನಬೇಕಾದ ಆಹಾರ ಬೇಡದೇ ಇದ್ದರೂ ನಮ್ಮ ಹೊಟ್ಟೆ ಸೇರುತ್ತದೆ. ಭೂಮಿ ಮೇಲೆ ಉಚಿತವಾಗಿ ಗಾಳಿ ಇದೆ. ನಮಗೆ ಎದೆ ತುಂಬ ಉಸಿರಾಡಬೇಕು ಎಂದನಿಸುವುದಿಲ್ಲ. ಆದರೆ ಆಹಾರ ಯಾಕೆ ತಿನ್ನಬೇಕು ಎಂದು ಅರ್ಥವಿಲ್ಲದೆ ತಿಂದು ತೇಗಿಬಿಡುತ್ತೇವೆ.
ನಾನಂತೂ ಊಟಕ್ಕೆ ಕುಳಿತರೆ ಒಂದಗುಳೂ ಉಳಿಯದೇ ಊಟಮಾಡುತ್ತೇನೆ. ಊಟದಲ್ಲಿ ಕೈ ನೀರು ತೆಗೆಯುವಾಗ ಚಿತ್ರಾವತಿ ಇಟ್ಟ ಒಂದೆರಡು ಕಾಳು ಬಿಟ್ಟರೆ ನಾನು ಯಾವುದೇ ಆಹಾರವನ್ನು ಉಳಿಸುವುದಿಲ್ಲ. ಎಷ್ಟು ಬೇಕೋ ಅಷ್ಟನ್ನೇ ಹಾಕಿಸಿಕೊಳ್ಳುತ್ತೇನೆ. ಊಟದಲ್ಲಿ ಒತ್ತಾಯದ ಮೇಲೆ ಒತ್ತಾಯ ಮಾಡಿ ಬಡಿಸುವುದನ್ನು ಕಂಡರೆ ನನಗೆ ಸಿಟ್ಟು ಬರುತ್ತದೆ. ಎಷ್ಟು ಆತ್ಮೀಯರಾದರೂ ನನಗೆ ಅದು ಅಸಹನೆಯನ್ನು ತರುತ್ತದೆ. ನನಗೆ ಬೇಕೋ ಯಾವುದೇ ಸಂಕೋಚವಿಲ್ಲದೆ ಕೇಳಿ ತಿನ್ನುತ್ತೇನೆ. ಆದರೆ ಹೊಟ್ಟೆ ತುಂಬಿದರೂ ಸ್ವಲ್ಪ ಸ್ವಲ್ಪ ಎಂದು ಒತ್ತಾಯ ಮಾಡಿದರೆ ಬಹಳ ಅಸಹನೆಯಾಗುತ್ತದೆ. ಹಲವುಕಡೆ ನಾನು ಎಲೆ ಸ್ವಚ್ಛ ಮಾಡಿ ಏಳುವಾಗ ನನಗೆ ಬಡಿಸಿದ್ದು ಸಾಕಾಗಲಿಲ್ಲವೋ ಏನೋ ಎಂದು ಅನುಮಾನಿಸಿ ಎಲೆ ಖಾಲಿಯಾದ ತಕ್ಷಣ ಒತ್ತಾಯ ಮಾಡಿ ಪುನಃ ಬಡಿಸುವುದಕ್ಕೆ ಬರುತ್ತಾರೆ. ಎಲ್ಲವನ್ನೂ ತಿಂದರೂ ಕಷ್ಟ. ಎಲೆಯಲ್ಲಿ ಒಂದಷ್ಟು ಉಳಿಸಿಯೇ ಹೋದರೆ ಅದು ತೃಪ್ತಿಯ ಸಂಕೇತವಾಗುತ್ತದೆ. ವಾಸ್ತವದಲ್ಲಿ ಹಾಗಲ್ಲ ಎಲೆ ಸ್ವಚ್ಛ ಮಾಡಿ ಊಟ ಮಾಡಿದರೆ ಅವರು ರುಚಿಯಿಂದಲೂ ಹಸಿವಿನಿಂದಲೂ ತೃಪ್ತರಾಗಿದ್ದಾರೆ ಎಂದರ್ಥ. ಆಹಾರ ತಿನ್ನಬೇಕು. ಅದು ಆರೋಗ್ಯದ ಸಂಕೇತ. ಆಹಾರ ಸೇವಿಸಲು ಸಾಧ್ಯವಾಗದೇ ಇದ್ದರೆ ಅದು ರೋಗ ಲಕ್ಷಣ. ಹಾಗಿದ್ದು ಬೇಡದೇ ಇರುವುದನ್ನು ತಿನ್ನುವುದು ರೋಗಿಯಾಗುವ ಲಕ್ಷಣ. ಯಾರೇ ಆಗಲಿ ಅತಿಯಾಗಿ ಒತ್ತಾಯ ಮಾಡಿ ಬಡಿಸುವುದು ನನಗೆ ಸರಿಬರುವುದಿಲ್ಲ. ಒಂದು ತಪ್ಪಿದರೆ ಎರಡು ಸಲ ಕೇಳಬಹುದು. ಆದರೆ ಬೇಡದೇ ಇದ್ದರೂ ಹಿಡಿಯದ ಚೀಲದಲ್ಲಿ ಸಾಮಾನು ತುಂಬಿಸಿದಂತೆ ಆಹಾರ ಇಕ್ಕುವುದು ಭಗವಂತನನ್ನು ಅಗೌರವಿಸಿದಂತೆ. ಅನ್ನ ಎಂದರೆ ಬ್ರಹ್ಮ. ಅದನ್ನುಬೇಡ ಎಂದು ಎಲೆಯಲ್ಲಿ ಬಿಟ್ಟು ಏಳುವುದು ಭಗವಂತನನ್ನು ತಿರಸ್ಕರಿಸಿದಂತೆ. ಊಟದ ಕೊನೆಯಲ್ಲಿ ಶ್ಲೋಕ ಹೇಳಿ ಭಗವಂತನನ್ನು ಸ್ಮರಿಸಿ ಮಾದೇವ ಎನ್ನುವುದಕ್ಕೆ ಅರ್ಥವಿಲ್ಲ.
ಊಟದಿಂದ ಏಳುವಾಗ ಎಲ್ಲರ ಎಲೆಯನ್ನು ಗಮನಿಸುತ್ತೇನೆ. ಎಲ್ಲವನ್ನು ತಿಂದು ಏಳುವವರು ಬಹಳ ಕಡಿಮೆ. ಊಟಕ್ಕೆ ಕುಳಿತುಕೊಳ್ಳುವಾಗ ಇರುವ ಆಗ್ರಹ ಊಟದ ಕೊನೆಯಲ್ಲಿ ಇರುವುದಿಲ್ಲ. ಯಾರೂ ತಿನ್ನದ ಎಂಜಲನ್ನು ಸೃಷ್ಟಿ ಮಾಡಿ ಆಹಾರದ ಮೌಲ್ಯವನ್ನು ಮರೆತವರನ್ನು ಕಾಣುತ್ತೇನೆ. ಹೊಟ್ಟೆ ತುಂಬಿದರೂ ಇಂಗದ ಹಸಿವನ್ನು ಕಾಣುತ್ತೇನೆ. ಎಲ್ಲೆಂದರಲ್ಲಿ ಚಪಲಕ್ಕೋ ಇನ್ನಾವುದೋ ಕಾರಣಕ್ಕೋ ತಿನ್ನುವವರನ್ನು ಕಾಣುತ್ತೇನೆ. ಆಗ ನನಗೆ ನಾರಾಯಣ ಎಂಬ ವೃದ್ದನ ನೆನಪಾಗುತ್ತದೆ. ಒಂದಗುಳು ಅನ್ನಕ್ಕೆ ಆ ಮುದುಕ ಕೊಟ್ಟ ಮೌಲ್ಯ ನೆನಪಾಗುತ್ತದೆ. ತಟ್ಟೆ ತೊಳೆದು ಆ ನೀರನ್ನು ಕುಡಿದು ತೃಪ್ತಿಯಿಂದ ತೇಗುವ ಅವರ ಸಂತೃಪ್ತ ಮುಖ ಕಣ್ಣೆದುರು ಬರುತ್ತದೆ.
Saturday, November 4, 2023
ನಮ್ಮ ಚಿನ್ನು ಇನ್ನಿಲ್ಲ.
ನಮ್ಮ ಚಿನ್ನು ಇನ್ನಿಲ್ಲ. ಸುಮಾರು ಹನ್ನೆರಡು ವರ್ಷಗಳ ಹಿಂದೆ ನಮ್ಮ ಮನೆಗೆ ಬಂದ ಪುಟ್ಟ ಅತಿಥಿ.. ಚಿನ್ನು ಎಂಬ ಲಾಬ್ರಡರ್ ಹೆಣ್ಣು ನಾಯಿ. ಆದರೆ ಅದು ಕೇವಲ ನಾಯಿಯಾಗಿ ಅಲ್ಲ ಮನೆಯ ಚಿನ್ನುವಾಗಿ ಬೆಳೆಯಿತು. ಅವಳ ಚಟುವಟಿಕೆಗಳು ನಮ್ಮ ಚಟುವಟಿಕೆಗಳಾಗಿ ಅವಳು ನಮ್ಮೊಂದಿಗೆ ಬೆಳೆದು ಬಂದಳು. ಆ ಚಿನ್ನು ಇನ್ನು ನೆನಪು ಮಾತ್ರ ಎನ್ನುವಾಗ ನಾವು ಗದ್ಗದರಾಗುತ್ತಿದ್ದೇವೆ. ಕಣ್ಣು ತೇವವಾಗುತ್ತದೆ. ಛೇ....ಸಂದು ಹೋಯಿತೇ? ಇನ್ನು ಬರಲಾರದೇ?
ಚಿನ್ನು ನಮ್ಮೊಂದಿಗೆ ಈಗ ಇಲ್ಲ ಎಂದರೆ ಅದೊಂದು ಶೂನ್ಯತೆಯ ಅನುಭವ. ಮನೆಯ ಸಂದಿಗೊಂದಿಗಳಲ್ಲಿ ಆಕೆ ಇನ್ನೂ ಮುದುರಿ ಮಲಗಿದಂತೆ ಅನುಭವಾಗುತ್ತದೆ. ಆಕೆಯ ಬಿಸಿಯುಸಿರು ಇನ್ನೂ ಮಾರ್ದನಿಸುತ್ತದೆ. ಆಕೆಯ ಪ್ರೀತಿ ಸಲುಗೆ ಅದೊಂದು ಮರೆಯಲಾಗದ ಬಂಧನವಾಗುತ್ತದೆ. ಆಕೆಯ ಬಾಯಿಯಲ್ಲಿ ಕೈ ಇಟ್ಟರೂ ಸುಮ್ಮನಿರುತ್ತಿದ್ದ ಆಕೆಯ ಪ್ರೀತಿ ಮಮಕಾರ....ನೀ ಎನೂ ಮಾಡು ನಾನು ನಿನ್ನೊಂದಿಗೆ ಇರುತ್ತೇನೆ ಎನ್ನುವ ಅರ್ಪಣಾ ಭಾವ ಎಲ್ಲ ತಿರಸ್ಕಾರವನ್ನು ತಿರಸ್ಕರಿಸಿ ದೂರಮಾಡುವಂತೆ ಪ್ರೇರೆಪಿಸಿಬಿಡುತ್ತಿತ್ತು. ಆಕೆ ಕೈ ಬಿಟ್ಟು ಹೊದಳು ಎಂದರೆ ಹೃದಯದ ಒಂದು ಭಾಗ ಕಳಚಿಕೊಂಡಂತೆ. ಮರೆಯಲಾಗದ ಈ ನೆನಪುಗಳನ್ನು ಹೇಗೆ ಮರೆಯಲಿ? ಆಕೆ ನಮಗಾಗಿ ಇದ್ದಳೋ ನಾವು ಆಕೆಗಾಗಿ ಇದ್ದೆವೋ ಒಂದೂ ಅರ್ಥವಾಗುವುದಿಲ್ಲ. ಆಕೆಯಿಂದ ಏನು ಪಡೆದಿದ್ದೇವೋ ಅವೆಲ್ಲವೂ ಭಾವನೆಗಳ ವ್ಯಾಪಾರ. ಲಾಭವಿಲ್ಲದ ವ್ಯಾಪಾರ. ಇಲ್ಲಿ ಪ್ರೀತಿ ಭಾವನೆಗಳೇ ಸರಕುಗಳು. ಅದಕ್ಕೆ ಮೌಲ್ಯ ತೂಕ ಯಾವುದು ನಿರ್ಧರಿಸಲಾಗುವುದಿಲ್ಲ.
ನನ್ನ ದೊಡ್ಡ ಮಗ ಆಗಿನ್ನು ವ್ಯಾಸಂಗ ಮಾಡುತ್ತಿದ್ದ, ಆತನ ಅತೀವ ಆಸಕ್ತಿಯ ಮುಖಾಂತರ ಈ ಅತಿಥಿ ಮನೆಯ ಸದಸ್ಯನಾಯಿತು. ಅವನೂ ಅಷ್ಟೇ ನಮ್ಮ ಮನೆಯ ಮೂರನೆ ಮಹಡಿಯಲ್ಲಿ ಅವಳಿಗಾಗಿ ಜಾಗವನ್ನು ಮೀಸಲಿರಿಸಿ ಅಲ್ಲಿ ಆತನದ್ದೇ ಸಾಮ್ರಾಜ್ಯ. ಚಿನ್ನುವಿನ ಬೆಳವಣಿಗೆ ಪ್ರತೀ ಹಂತವೂ ಆತನಿಗೆ ಒಂದು ಅಧ್ಯಯನವಾಗಿತ್ತು. ಅದು ಯಾವಾಗ ಎದ್ದು ಬರ್ತದೆ, ಅದು ಹೇಗೆ ನಿದ್ರೆ ಮಾಡುತ್ತದೆ, ಯಾವುದನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದು, ಅದರ ಬಯಕೆಗಳು ಯಾವಾಗ ಯಾವರೀತಿ ಇರುತ್ತದೆ ಹೀಗೆ ಅದರ ವರ್ತನೆಯನ್ನೆಲ್ಲಾ ಗೂಗಲ್ ಮಾಡಿ ಅಂತರ್ಜಾಲದಲ್ಲಿ ಜಾಲಾಡಿ ಅದನ್ನು ಅಳವಡಿಸಿಕೊಳ್ಳುತ್ತಿದ್ದ. ಮೊದಲ ದಿನ ಮೂರನೆ ಮಹಡಿಗೆ ಹೋದಾಗ ಪುಟ್ಟ ಮರಿ ಚಿನ್ನು ಎಲ್ಲಾ ಕಡೆ ಉಚ್ಚೆ ಹೊಯ್ದು ಎಲ್ಲ ಕಡೆ ಅದರದ್ದೆ ವಾಸನೆ. ಆಗ ನಾವು ಹತಾಶರಾಗಿದ್ದೆವು. ಊರಲ್ಲಿಯಾದರೆ ಇಂತಹ ವಿಷಯಗಳಿಗೆ ಸಾಕಷ್ಟು ಸೌಕರ್ಯ ಇರುತ್ತದೆ. ಆದರೆ ಇಲ್ಲಿ ಮೂವತ್ತು ಚದರದಲ್ಲಿ ಇದನ್ನು ಸುಧಾರಿಸುವುದೆಂತು? ನಮ್ಮಲ್ಲಿ ಹಲವರಿಗಂತು ಚಿನ್ನುವಿನ ಆವಶ್ಯಕತೆ ಇರಲಿಲ್ಲ. ಆದರೆ ಮಗನ ಇರಾದೆ ಬೇರೆಯದೇ ಆಗಿತ್ತು. ಚಿನ್ನು ಅವನ ಕೈಯಲ್ಲಿ ಪಳಗತೊಡಗಿದಳು. ಮುದ್ದಾದ ಆಕೆ ಬುದ್ದಿ ಕಲಿಯತೊಡಗಿದಳು. ಮೊದಲೇ ಲಾಬ್ರಡಾರ್ ತಳಿ ಅದು ಮನೆಯವರಿಗೆ ಬೇಗ ಹೊಂದಿಕೊಳ್ಳುತ್ತದೆ. ಅದರಲ್ಲೂ ಮಕ್ಕಳ ಮನಸ್ಸನ್ನು ಸೆಳೆಯುವುದು ಅದರ ರಕ್ತಗತ ಗುಣ. ಅದಕ್ಕೆ ನಿಗದಿತ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡುವುದಕ್ಕೆ ಕಲಿಸಿದ. ಅಚ್ಚುಕಟ್ಟಾಗಿ ಊಟ ತಿಂಡಿಯನ್ನು ಒದಗಿಸಿದ. ಅದಕ್ಕಾಗಿ ರಾಯಲ್ ಚಿನ್ ಬಿಸ್ಕಟ್ ತರಿಸಿದ. ಹೀಗೆ ಅದರದ್ದೇ ಒಂದಷ್ಟು ವಸ್ತುಗಳು ಮನೆಯ ಅಂಗವಾಗಿ ಹೋದವು.
ಮಗನ ಭಾವನೆಯ ಮೌಲ್ಯಗಳನ್ನು ತೋರಿಸಿಕೊಟ್ಟವಳು ಚಿನ್ನು. ಆತನೊಂದಿಗಿನ ಅವಳ ಸಂಭಂಧದ ಆಳ ವಿಸ್ತಾರ ಕಲ್ಪಿಸುವುದಕ್ಕೆ ಸಾಧ್ಯವಿಲ್ಲ. ಮನೆಯ ರಸ್ತೆಯತುದಿಯಲ್ಲಿ ಆತನ ಬೈಕಿನ ಸದ್ದು ಕೇಳಿಸಿದರೆ ಮನೆಯ ಯಾವುದೋ ಮೂಲೆಯಲ್ಲಿದ್ದ ಇವಳ ಕಿವಿ ನಿಗುರಿ ಬಿಡುತ್ತಿತ್ತು. ಒಂದೇ ನೆಗೆತಕ್ಕೆ ಹೊರಬಂದು ಮೂರನೇ ಮಹಡಿಯಿಂದ ಕೆಳಗೆ ನೋಡಿ ಬೊಗಳತೊಡಗುತ್ತಿದ್ದಳು. ಆತ ಬರಬೇಕಾದರೆ ಆತನ ಭುಜದೆತ್ತರಕ್ಕೆ ಹಾರಿ ಆತನ ಮುಖವನ್ನೆಲ್ಲ ಮುದ್ದಿಸಿ ತೇವ ಮಾಡುತ್ತಿದ್ದಳು. ಆತ ಎಸೆದ ಚೆಂಡನ್ನು ಓಡಿ ಹೋಗಿ ಕಚ್ಚಿ ತಂದುಕೊಡುತ್ತಿದ್ದಳು. ಹಿಂದೆ ಅಲುಗಾಡುವ ಬಾಲ ಎಲ್ಲಿ ಕಳಚಿ ಬೀಳುವುದೋ ಎಂದನಿಸುತ್ತಿತ್ತು.
ಪ್ರಾಣಿಗಳಲ್ಲಿ ನಾಯಿ ಎಂಬುದು ಒಂದು ವಿಚಿತ್ರ ಸ್ವಭಾವದ ಪ್ರಾಣಿ. ಬಹುಶಃ ಭಾವನೆಗಳನ್ನು ಇದರಂತೆ ವ್ಯಕ್ತ ಪಡಿಸುವ ಪ್ರಾಣಿ ಬೇರೆ ಇಲ್ಲ. ನೋವು ನಲಿವು ಎಲ್ಲವನ್ನೂ ಬಹಿರಂಗ ಪಡಿಸುವ ನಾಯಿಗೆ ಮಾತು ಒಂದು ಬರುವುದಿಲ್ಲ....ಆದರೆ ಅದು ವ್ಯಕ್ತ ಪಡಿಸುವ ಭಾಷೆಗೆ ಮಾತಿನ ಅಗತ್ಯವೇ ಇರುವುದಿಲ್ಲ. ಕಣ್ಣು ಅಗಲಿಸಿ ಕಿವಿನಿಮಿರಿಸಿ ಬೇಕಾದಲ್ಲಿ ಬಾಲ ಅಲ್ಲಡಿಸಿ ಶರೀರವನ್ನು ಕುಣಿಸಿ...ಯಾವ ನಟ ಸಾರ್ವಭೌಮನಿಗೂ ಕಡಿಮೆ ಇಲ್ಲ ಜನ್ಮ ಜಾತ ಪ್ರತಿಭೆ. ಸ್ವಭಾವತಃ ನಾಯಿ ಅತ್ಯಂತ ಹೆದರಿಕೆಯ ಸ್ವಭಾವದ ಪ್ರಾಣಿ. ಪ್ರತೀಕ್ಷಣವೂ ಅದಕ್ಕೆ ಏನೋ ಆಗಿಬಿಡುತ್ತದೆ ಎಂಬ ಆತಂಕವಿರುತ್ತದೆ. ಹಾಗಾಗಿ ಹೊಸದು ಕಂಡಕೂಡಲೇ ಅದು ಜಾಗೃತವಾಗುತ್ತದೆ. ಬೊಗಳುತ್ತದೆ. ಆದರೆ ಅದು ತನ್ನದೂ ಎಂಬ ಭಾವನೆ ಬಂತೋ ಅದಕ್ಕಾಗಿ ಪ್ರಾಣ ಕೊಡಲೂ ಹಿಂಜರಿಯುವುದಿಲ್ಲ. ಈ ಎಲ್ಲ ಸ್ವರೂಪಗಳು ಚಿನ್ನುವಿನಲ್ಲಿತ್ತು. ಈಕೆಯ ವಿಚಾರಗಳು ಹೇಳುವುದಕ್ಕೆ ತೊಡಗಿದರೆ ಸ್ವರ ಕಂಪಿಸುತ್ತದೆ. ಬೆರೆಯುವುದಕ್ಕೆ ತೊಡಗಿದರೆ ಕೈ ನಡುಗುತ್ತದೆ. ಭಾವನೆಗಳ ಮಹಾಪೂರ ಪುಟ್ಟ ಹೃದಯದಲ್ಲಿ ನಿಲ್ಲಲಾಗದೆ ಹೊರ ಚಿಮ್ಮುತ್ತದೆ. ಅದರಲ್ಲಿನ ಭಾವನೆಗಳನ್ನು ಹೆಕ್ಕಿ ತೆಗೆಯುವುದೇ ಒಂದು ಸಾಹಸ.
ವಾರಗಳ ಹಿಂದೆ ವಯೋ ಸಹಜವಾಗಿ ಆಕೆಯ ದೇಹ ಕೃಶವಾಗತೊಡಗಿದವು. ಮೊದಲಿನಂತೆ ಆಕೆ ಓಡಾಡುವುದನ್ನು ನಿಲ್ಲಿಸಿ ಬಹಳ ಸಮಯಗಳು ಕಳೆಯಿತು. ಹೆಚ್ಚಾಗಿ ಮಲಗಿಕೊಂಡೇ ಇರುತ್ತಿದ್ದಳು. ಮಗ ಬಿಟ್ಟರೆ ಪತ್ನಿ ಆಕೆ ಅತ್ಯಂತ ಹತ್ತಿರದ ಜೀವಗಳು. ಆಕೆಯಂತೂ ಅದರ ಚಾಕರಿಯಲ್ಲಿ ತನ್ನನ್ನೇ ತಾನು ತೇದುಕೊಂಡಳು. ಕೊನೆಯ ಉಸಿರಿನ ತನಕವೂ ಅದನ್ನು ಪ್ರೀತಿಯಿಂದ ಕಾಣಬೇಕು. ಸಾಧ್ಯವಾದಷ್ಟು ಉಪಚರಿಸಬೇಕು ಇದೊಂದೇ ನಿರ್ಧಾರ. ಒಂದು ತುತ್ತು ಆಹಾರ ತಿಂದರೂ ತೊಟ್ಟು ನೀರು ಕುಡಿದರೂ ತನ್ನ ದೇಹಕ್ಕೆ ಸೇರಿಬಿಟ್ಟಿತೋ ಎನ್ನುವ ತೃಪ್ತಿ ಅವಳದು. ದಿನಾ ಆಸ್ಪತ್ರೆಯ ಅಲೆದಾಟದಲ್ಲಿ ಬಸವಳಿದರೂ ಚಿನ್ನುಗಾಗಿ ಎಂಬ ಭಾವನೆ ದೃಢವಾಗಿರುತ್ತಿತ್ತು. ಅಲ್ಲಿ ದಣಿವೆಂಬುದು ಅರಿವಿಗೆ ಬರುತ್ತಿರಲಿಲ್ಲ. ಮೊನ್ನೆ ರಾತ್ರಿ ಹೋದಾಗಲೇ ವೈದ್ಯರು ಒಂದು ರಾತ್ರಿ ನಿಗಾವಹಿಸೋಣ ನಾಳೆ ಬೆಳಗ್ಗೆ ತೀರ್ಮಾನಿಸಿದರಾಯಿತು ಎಂದರು.
ನಿನ್ನೆ ವೈದ್ಯರು ಬೆಳಗ್ಗೆಯೇ ಹೇಳಿದ್ದರು ಇನ್ನು ಇದರ ಬಗ್ಗೆ ನಿರೀಕ್ಷೆ ಇಲ್ಲ. ಯಾಕೆ ಅದಕ್ಕೆ ನರಕ ಯಾತನೆ , ಇಂಜಕ್ಷನ್ ಕೊಟ್ಟು ಮುಗಿಸಿ ಬಿಡೋಣ ಎಂದರು. ನಮಗಂತೂ ಹೃದಯವನ್ನೇ ಚುಚ್ಚಿದ ಅನುಭವ. ಚುಚ್ಚಿ ಮುಗಿಸುವುದೆಂದರೆ ನಾವು ಚಿನ್ನುವನ್ನು ಬೇಡ ಎಂದಂತೇ ಅಲ್ಲವೇ? ಅದು ಹೇಗೆ ಸಾಧ್ಯ.
ಕೊನೆಗೆ ಸಮ್ಮತಿಸಬೇಕು. ಇನ್ನು ಆಕೆಗೆ ನರಕ ಯಾತನೆ ಯಾಕೆ. ಎಲ್ಲರೂ ನೀರು ಕುಡಿಸಿದೆವು. ಎಲ್ಲರೂ ಕೊಟ್ಟ ನೀರನ್ನು ಪ್ರಜ್ಞೆ ಇಲ್ಲದೇ ಇದ್ದರು ಆಕೆ ಕುಡಿದಳು. ಅದು ವರೆಗೆ ಇದ್ದ ಮಗ ಮನೆಗೆ ಹೋಗಿದ್ದ. ನಾವೆಲ್ಲ ವೈದ್ಯರ ಬರುವುಕೆಯನ್ನು ಕಾಯುತ್ತಿದ್ದೆವು. ಚಿನ್ನು ಪ್ರಜ್ಞಾಹೀನಳಾಗಿ ಕೇವಲ ಏದುಸಿರುಬಿಡುತ್ತಾ ಮಲಗಿದ್ದಳು. ಮೊದಲಾದರೆ ನಾವು ಬಂದಾಗ ಏನಿಲ್ಲ ಎಂದರೂ ಬಾಲ ಅಲ್ಲಾಡಿಸಿಬಿಡುತ್ತಿದ್ದಳು. ಈಗ ಸಂವೇದನೆಯೇ ಇಲ್ಲ. ತಾಸು ಕಳೆದು ಮಗ ಹೆಂಡತಿ ಜತೆಗೆ ಬಂದ. ಆತ ಬಂದಾಗ ಹೊಸತೊಂದು ಚೆಂಡನ್ನು ಕೊನೆಯ ಕೊಡುಗೆಯಾಗಿ ಚಿನ್ನುವಿಗಾಗಿ ತಂದಿದ್ದ. ಅದನ್ನು ಕೊಟ್ಟು ಮೈತಡವಿದ ಅದೊಮ್ಮೆ ಕಣ್ಣು ಬಿಟ್ಟಳು. ಮಗನ ಜತೆಗಿನ ಬಾಂಧವ್ಯ ಅದನ್ನು ಎಚ್ಚರಿಸಿತ್ತು. ಆತ ನೀರು ಕುಡಿಸಿದ. ಕುಡಿದಳು. ಹಾಗೆ ಎತ್ತಿದ ಕೊರಳು ಬಾಗಿತು ಒಂದೆರಡು ನಿಡಿದಾದ ಉಸಿರು ಹೊರಹಾಕಿದಳು. ಕಣ್ಣು ಸುತ್ತಲೂ ತಿರುಗಿಸಿ ಕೊನೆಯ ಯಾತ್ರೆಯನ್ನು ಮುಗಿಸಿದಳು. ಒಂದು ವಾರದ ನರಕ ಯಾತನೆ ಅನುಭವಿಸಿದಳು. ಆಸ್ಪತ್ರೆ ಬೆಡ್ ಮೇಲೆ ತನ್ನ ಉಸಿರನ್ನು ಚೆಲ್ಲಿ ಬಿಟ್ಟು ನಿಶ್ಚಲಳಾದಳು. ತಬ್ಬಿಕೊಂಡಾಗ ಬಿಸಿಯನ್ನು ಉಣಿಸುತ್ತಿದ್ದ ಆ ಮೈ ತಣ್ಣಗಾಯಿತು. ಚಿನ್ನು ಬಾರದ ಲೋಕಕ್ಕೆ ಸರಿದು ಹೋದಳು. ಇನ್ನು ಚಿನ್ನು ನೆನಪು ಮಾತ್ರ ಎಂದುಕೊಂಡಾಗ ಹೃದಯ ಭಾರವಾಗುತ್ತದೆ. ಕಣ್ಣು ಮಂಜಾಗುತ್ತದೆ. ಆಕೆಯ ಪ್ರೀತಿ ಇನ್ನೆಲ್ಲಿ ಸಿಗಬಹುದು. ನಮಗೆಲ್ಲ ವಿದಾಯ ಹೇಳಿ ಸುಖವಾಗಿರಿ.....ನನ್ನನ್ನು ಅಗಾಗ ನೆನಪಿಸುತ್ತಾ ಇರಿ. ಮರೆಯಬೇಡಿ ಎಂದಂತೆ ಭಾಸವಾಗುತ್ತದೆ. ಆಕೆ ಕೊಟ್ಟ ಪ್ರೀತಿಗೆ ನಾವು ಅಷ್ಟಾದರೂ ಮಾಡಲೇಬೇಕು. ಚಿನ್ನು...ಮತ್ತೊಮ್ಮೆ ಹುಟ್ಟಿ ಬಂದರೆ.......ಈ ಹೃದಯಗಳಲ್ಲಿ ತುಂಬಿಕೊಳ್ಳುವುದಕ್ಕೆ ಇನ್ನೂ ಜಾಗವಿದೆ.
Sunday, October 29, 2023
ವೈದಿಕ ಭೋಜನ
ಕಳೆದ ವಾರ ಜಯನಗರದಿಂದ ಮೆಟ್ರೋದಲ್ಲಿ ಬರುವಾಗ ಬಸವನಗುಡಿಯಿಂದ ಒಬ್ಬರು ವೃದ್ದರು ಹತ್ತಿದವರು ನನ್ನ ಬಳಿಯೇ ಕುಳಿತರು. ನೋಡಿದರೆ ಬ್ರಾಹ್ಮಣ ಎಂಬುದರಲ್ಲಿ ಅನುಮಾನವಿಲ್ಲ. ವೃದ್ಧರಾದರೂ ಶರೀರದಲ್ಲಿ ಬಹಳ ಕಾಠಿಣ್ಯ ವಿತ್ತು. ಒಂದು ರೀತಿಯ ದೃಢತೆ ಇತ್ತು. ಬಿಳಿ ಪಂಚೆ ಒಂದು ಶಲ್ಯ ಮುಸುಕಾದ ಒಂದು ಶರ್ಟು ಕೈಯಲ್ಲಿ ಒಂದು ಚಿಕ್ಕ ಚೀಲ ಇತ್ತು. ಬಳಿಯಲ್ಲಿ ಕುಳಿತ ನನ್ನಲ್ಲಿ ಮಾತನಾಡುವುದಕ್ಕೆ ತೊಡಗಿದರು. ಅದು ಪಿತೃ ಪಕ್ಷ, ಅದೇ ಕಾರ್ಯಕ್ರಮಕ್ಕೆ ಹೋಗಿ ಬರುತ್ತಿದ್ದರು. ಮೊದಲೆಲ್ಲ ಇಂತಹ ಕಾರ್ಯಕ್ರಮಕ್ಕೆ ಹೋದವರು ಒಂದು ರೀತಿಯ ತಾತ್ಸಾರವನ್ನು ಅನುಭವಿಸುವುದನ್ನು ಕಣ್ಣಾರೆ ಕಂಡಿದ್ದೇನೆ. ಮನೆಯ ಕತ್ತಲೆಯಲ್ಲಿ ಊಟ ಮಾಡಿ ಅಲ್ಲಿಂದಲೇ ಎಲ್ಲೋ ಕರಗಿ ಕಣ್ಮರೆಯಾಗುತ್ತಿದ್ದರು. ಒಂದು ರೀತಿಯಲ್ಲಿ ಮುಖ ತೋರಿಸುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ, ಅಂದರೆ ಗೌರವ ಸಿಗುತ್ತದೆ ಎಂದಲ್ಲ, ಹೀಗೆ ಹೋಗುವವರ ಸಂಖ್ಯೆ ಬಹಳಷ್ಟು ಲುಪ್ತವಾಗಿ ಇಲ್ಲವೇ ಇಲ್ಲ ಎನ್ನುವಂತಹ ಸ್ಥಿತಿ. ಈಗ ಶಾಸ್ತ್ರಕ್ಕೆ ಏನೋ ಒಂದು ಪರಿಹಾರವನ್ನು ಕಂಡುಕೊಂಡು ಸೀಯಾಳ ಎಲೆ ವಸ್ತ್ರ ಇಟ್ಟು ಬ್ರಾಹ್ಮಣ ಆವಾಹನೆಯಾಗಿಬಿಡುತ್ತದೆ.
ನಮ್ಮ ಬಾಲ್ಯದಲ್ಲಿ ಯಾವುದಾದರೇನು ಹೊಟ್ಟೆ ತುಂಬ ಊಟ ಸಿಗುತ್ತದಲ್ಲಾ ಎಂದು ಮೈಲು ಗಟ್ಟಲೆ ಇಂತಹ ಕಾರ್ಯಕ್ರಮಕ್ಕೆ ನಡೆದು ಹೋಗುತ್ತಿದ್ದದ್ದು ನೆನಪಾಗುತ್ತದೆ. ಅದೆಷ್ಟು ಸಲ ಗುಂಪೆ ಗುಡ್ಡೆ ಹತ್ತಿ ಇಳಿದಿದ್ದೇವೋ ಗೊತ್ತಿಲ್ಲ. ಬೆಳಗ್ಗೆ ಮನೆಯಲ್ಲಿ ಇದ್ದರೆ ಉಂಟು ಇಲ್ಲದಿದ್ದರೆ ಇಲ್ಲ ಎಂದು ಸಿಕ್ಕಿದ್ದು ತಿಂದು ನಡೆಯುವುದಕ್ಕೆ ತೊಡಗಿದರೆ ಮೈಲಿ ನಡೆದು ವೈದಿಕ ಕ್ರಿಯೆ ನಡೆಯುವಲ್ಲಿಗೆ ತಲಪುವಾಗ ಮಧ್ಯಾಹ್ನವಾಗುತ್ತಿತ್ತು. ನಾವು ಬಾಲಕರು. ಯಾರ ಪರಿಚಯವೂ ಇರುತ್ತಿರಲಿಲ್ಲ. ಸಮಯವಾದಾಗ ಎಲ್ಲರ ಜೊತೆ ಊಟಕ್ಕೆ ಕುಳಿತುಬಿಡುವುದು. ಯಾರ ಪರಿಚಯ ಇಲ್ಲದಿದ್ದರೆ ಏನು, ಹೊಟ್ಟೆ ತುಂಬ ಊಟದ ಪರಿಚಯವಂತೂ ಆಗಿಬಿಡುತ್ತಿತ್ತು. ಅದೂ ....ಸಾಕು ಸಾಕು ಎನ್ನುವಷ್ಟು ಊಟ. ಮತ್ತೆ ಕೈಯಲ್ಲಿ ಒಂದಷ್ಟು ಚಿಲ್ಲರೆ ನಾಣ್ಯಗಳು. ನಾವೆಲ್ಲಆ ಪ್ರಾಯದಲ್ಲಿ ಕೈಯಲ್ಲಿ ನಮ್ಮದೇ ಆದ ಕಾಸು ಕಂಡವರೇ ಅಲ್ಲ. ಒಂದು ವೇಳೆ ಕೈಯಲ್ಲಿ ಹಣ ಇದ್ದರೆ ಅದು ಚಿಲ್ಲರೆ ಕಾಸಾದರೂ ಹಿರಿಯರ ತನಿಖೆ ಇರುತ್ತಿತ್ತು. ಸರಕಾರ ಆದಾಯ ತೆರಿಗೆ ಪರೀಕ್ಷೆ ಮಾಡಿದ ಹಾಗೆ. ಈ ಕಾಸು ಮನೆಗೆ ಬಂದು ಹಳೆಯ ಡಬ್ಬದಲ್ಲಿ ತೆಗೆದಿಟ್ಟು ದಿನಕ್ಕೆ ಹತ್ತು ಬಾರಿ ಎಣಿಕೆ ಮಾಡುತ್ತಿದ್ದೆವು. ಆದರೆ ಮೊದಲು ನಮಗೆ ಹೊಟ್ಟೆ ತುಂಬ ಆಹಾರವೇ ಪ್ರಧಾನವಾಗಿತ್ತು. ಆದರೂ ಎಡಕೈಗೆ ಸಿಗುವ ಚಿಕ್ಕಾಸು ನಾಣ್ಯ ಬಹಳ ಖುಷಿಯನ್ನುಕೊಡುತ್ತಿತ್ತು. ಇತ್ತೀಚೆ ಯಾರದೋ ವೈದಿಕ ಕಾರ್ಯಕ್ರಮಕ್ಕೆ ಯಾವುದೋ ಕೈವಲ್ಯ ಧಾಮಕ್ಕೆ ಹೋಗಿದ್ದೆ. ಊಟ ಮಾಡಿ ಹೊರಗೆ ಬರುವಾಗ ಯಾರೋ ಒಬ್ಬರು ಹಲವರು ಕೈ ಒಡ್ಡುತ್ತಿದ್ದರು. ಇಲ್ಲಿ ಊಟಕ್ಕಿಂತಲೂ ಕಾಸು ಪ್ರಧಾನವಾದಂತೆ ಅನಿಸಿತ್ತು. ಕ್ರಿಯಾ ಭಾಗದಲ್ಲಿ ಅಷ್ಟೋ ಇಷ್ಟೊ ದಾನ ಸಿಕ್ಕಿದರೂ ಹೀಗೆ ಭಿಕ್ಷೆ ಬೇಡುವುದು ಕಾಣುವಾಗ ಭಿಕ್ಷೆ ದಾನವಾಗುವುದು ಹೇಗೆ ಎಂಬ ಯೋಚನೆ ಬರುತ್ತದೆ.
ವೃದ್ದರಲ್ಲಿ ನನ್ನ ಅನುಭವ ಹೇಳಿದೆ. ಕಾಲ ಬದಲಾಗಿದೆ ಎನ್ನುವುದಕ್ಕಿಂತಲೂ ಮನುಷ್ಯ ಬದಲಾಗಿದ್ದಾನೆ ಎನ್ನುವುದು ಸರಿ. ಅವರು ಹೇಳಿದರು, ಬದಲಾಗಬೇಕು, ಎಲ್ಲವೂ ಅಂದರೆ ಎಲ್ಲವೂ ಮೊತ್ತ ಬದಲಾಗಬೇಕು, ಯಾಕೆಂದರೆ ಈಗ ಉಳಿದಿರುವಂತಹುದು ಒಂದೂ ಇಲ್ಲ. ಎಲ್ಲವನ್ನು ನಾವು ಕಳೆದುಕೊಂಡಾಗಿದೆ. ಬದಲಾಗಬೇಕು ಎಂಬುದೇನೋ ಸತ್ಯ . ಆದರೆ ನಾವು ಹೇಗೆ ಬದಲಾಗಬೇಕು ಎಂಬುದೇ ಮರೆತು ಹೋಗಿದೆ. ಸ್ಮರಣೆಗೆ ಬರಲಾದಷ್ಟು ಬದಲಾಗಿ ಹೋಗಿದ್ದೇವೆ. ಮೊದಲು ಯಾವುದಾದರೇನು ಊಟ ಎಂದರೆ ಸಾಕು ಎಂದುಕೊಂಡಿದ್ದರೆ ಈಗ ಊಟದಲ್ಲೂ ಆಯ್ಕೆ ಮಾಡುತ್ತಿದ್ದೇವೆ. ವೈದಿಕವೋ ತೀರ ಹತ್ತಿರದ ಕುಟುಂಬದೊಳಗಿದ್ದರೆ ಮಾತ್ರ ಹೋಗುತ್ತಿದ್ದೇವೆ. ವಿಚಿತ್ರವೆಂದರೆ ಊಟದ ವೈವಿಧ್ಯತೆಯೋ ಹಸಿವಿನ ವೆತ್ಯಾಸವೋ ಅರಿವಾಗುವುದಿಲ್ಲ.
Wednesday, October 4, 2023
ಭ್ರಮರಾಂಬಿಕೆಯ ಮಡಿಲಲ್ಲಿ ಭ್ರಮರವಾಗಿ
ಬಹಳ ಸಮಯದಿಂದ ಬೆಂಗಳೂರಲ್ಲಿ ಕುಳಿತು ಯೋಚಿಸುತ್ತಿದ್ದೆ. ಊರಿಗೆ ಹೋದರೆ ಕಟೀಲು ಭ್ರಮರಾಂಬಿಕೆಯ ಸನ್ನಿಧಿಗೆ ಹೋಗಬೇಕು ಅಂತ. ಯಾಕೆಂದರೆ ಕಟೀಲು ದೇವಸ್ಥಾನದ ಜೊತೆಗಿರುವ ಭಾವನಾತ್ಮಕ ಸಂಬಂಧಗಳು ಹಲವಿದೆ. ಅದನ್ನೆಲ್ಲ ನೆನಪಿಸಿಕೊಳ್ಳಬೇಕು. ಆದರೆ ಪ್ರತಿ ಸಲ ಊರಿಗೆ ಹೋದಾಗ ಸಮಯ ಹೊಂದಾಣಿಕೆಯಾಗದೆ ಹೋಗುವ ಅವಕಾಶ ಸಾಧ್ಯವಾಗುತ್ತಿರಲಿಲ್ಲ. ಆದರೆ ಈ ಸಲ ಎಲ್ಲ ಕೆಲಸದ ಜೊತೆಗೆ ಇದನ್ನೂ ಪ್ರಧಾನವಾಗಿಸಿ ಮಂಗಳೂರಿನಿಂದ ಕಟೀಲಿನ ಬಸ್ಸು ಹತ್ತಿದೆ.
ಚಿತ್ರ ಕೃಪೆ: ವಿಕಿಪೀಡಿಯಬಸ್ಸು ನಗರದಾಟಿ ಕುಂಟಿಕಾನ ದೇರೇಬೈಲು ಚರ್ಚ್ ದಾಟುತ್ತಿದ್ದಂತೆ ಬಾಲ್ಯದ ನೆನಪುಗಳು ಒತ್ತೊತ್ತಿ ಬರುವುದಕ್ಕೆ ತೊಡಗಿತು. ದೇರೇಬೈಲಿನ ಸೋದರ ಮಾವನ ಮನೆ ಎಂದರೆ ಅದು ನನ್ನ ಮನೆ ಎಂಬ ಪ್ರೀತಿ ಬಾಲ್ಯದಿಂದಲೇ ಬೆಳೆದು ಬಂದಿತ್ತು. ಇಲ್ಲಿರುವಾಗಲೇ ನನ್ನಮ್ಮ ನನ್ನನ್ನು ಹೆತ್ತದ್ದು. ಹೀಗೆ ದ್ವಾರಕೆ ನಂದಗೋಕುಲ ಇದ್ದಂತೆ ನನಗೆ ಪೈವಳಿಕೆ ಮತ್ತು ದೇರೇಬೈಲು. ಎರಡು ಅವಿನಾಭಾವದ ಸಂಬಂಧಗಳು.
ದೇರೆಬೈಲಿನ ಗುಡ್ಡ ಇಳಿದು ಕೆಳಗೆ ಇಳಿದರೆ ಕೊಂಚಾಡಿ. ಚರ್ಚ್ ನಿಂದ ಒಂದು ತಿರುವು ಕೆಳಗೆ ಇಳಿಯುತ್ತಿದ್ದಂತೆ ಎರಡೂ ಕಡೆ ಚಾಚಿನಿಂತ ಗದ್ದೆ. ಸದಾ ಹಸಿರು ಪೈರನ್ನು ಹಾಸಿದ್ದು ಬೇಸಗೆಯಲ್ಲಿ ಬಯಲಾಟಗಳ ಮೈದಾನವಾಗುತ್ತಿದ್ದವು. ಒಂದು ಬದಿಗೆ ಮಾಂಕಾಳಿ ಸನ್ನಿಧಾನ ಅದರೊತ್ತಿಗೆ ಶ್ರೀ ರಾಮ ಭಜನಾಮಂದಿರ. ಕೊಂಚಾಡಿಯ ಗದ್ದೆಯ ಈ ತುದಿಯಲ್ಲಿ ನಿಂತರೆ ಅತ್ತ ಕೂಳೂರಿನ ತನಕ ಗೋಚರಿಸುತ್ತಿತ್ತು. ಗದ್ದೆಯ ನಡುವೆ ಸಾಲಾಗಿ ಬೆಳೆದು ನಿಂತ ತೆಂಗಿನ ಮರಗಳು. ಈ ಗದ್ದೆಗಳ ನಡುವೆ ಒಂದು ಕೆರೆ ಇತ್ತು. ಆ ಕೆರೆಯಲ್ಲಿ ಲಾಗ ಹಾಕುತ್ತಿದ್ದ ನೆನಪು, ಆದರೆ ಈಗ ಸಂಪೂರ್ಣ ಬದಲಾಗಿ ಹಲವಾರು ಬಡವಾಣೆಗಳು ನಗರ ಎಂಬ ಹೆಸರಿನೊಂದಿಗೆ ಕರೆಯಲ್ಪಡುತ್ತದೆ. ಕೊಂಚಾಡಿಯ ರಸ್ತೆಯ ಎರಡೂ ಬದಿಗೆ ಇದ್ದ ಮಾವು ಹಲಸು ಗೋಳಿ ಮರಗಳು ಮರೆಯಾಗಿವೆ.
ಮೊದಲು ಮಂಗಳೂರಿನಿಂದ ಕಟೀಲಿಗೆ ಹನುಮಾನ್ ಅಥವಾ ಸಿಪಿಸಿ ಬಸ್ ಹತ್ತಿದರೆ ಸರಿ ಸುಮಾರು ಎರಡು ಘಂಟೆಯ ಪಯಣ.ಬಸ್ಸು ಕೂಡ ಕಿಕ್ಕಿರಿದು ತುಂಬಿರುತ್ತಿತ್ತು. ಪ್ರತಿ ಸ್ಥಳಗಳಲ್ಲಿ ಒಂದೈದು ನಿಮಿಷವಾದರೂ ಬಸ್ಸು ನಿಂತು ಬಿಡುತ್ತಿತ್ತು. ಸಾಮಾನ್ಯವಾಗಿ ಮಧ್ಯಾಹ್ನದ ನಂತರ ಬಸ್ಸು ಹತ್ತಿದರೆ ಮುಸ್ಸಂಜೆ ದಾಟಿ ಕಟೀಲು ತಲುಪುತ್ತಿದ್ದೆವು. ಅಲ್ಲಿ ಕಟೀಲಿನ ದೇವಾಲಯದ ಸುತ್ತ ಹರಿಯುವ ನದಿಯಲ್ಲಿ ಮುಳುಗಿ ಸ್ನಾನ ಮಾಡಿದ ಆದಿನಗಳದ್ದೇ ಒಂದು ಸುಮಧುರ ನೆನಪು. ನದಿಯಲ್ಲಿ ಸ್ನಾನ ಮಾಡಿ ರಾತ್ರಿ ದೇವಾಲಯದ ಗೋಪುರದಲ್ಲಿ ಕುಳಿತು ಭಜನೆ ಪಾರಾಯಣ ಮಾಡಿದ ನೆನಪು ಇದೆ.
ನಿನ್ನೆ ಹಾಗೇ ಕಟೀಲು ಬಸ್ಸು ಹತ್ತಿದೆ ಕೇವಲ ನಲ್ವತ್ತು ನಿಮಿಷದಲ್ಲಿ ಕಟೀಲು ತಲುಪಿದಾಗ ಅಚ್ಚರಿಯಾಯಿತು. ಮೊದಲಿನ ಬಸ್ಸು ಪಯಣದ ಅನುಭವಕ್ಕೂ ಈಗಿನ ಅನುಭವಕ್ಕೂ ಅಜಗಜಾಂತರ . ಹಳೆಯ ಅನುಭವದ ನೆನಪಿಗೆ ಬಸ್ಸಿನ ಪ್ರಯಾಣದ ಪ್ರತೀ ಕ್ಷಣ ಸುತ್ತಲಿನ ಪರಿಸರವನ್ನು ನೋಡುತ್ತ ಸಾಗಿದೆ. ನಾಲ್ಕು ದಶಕಗಳ ಹಿಂದಿನ ರಸ್ತೆ ತಿರುವುಗಳು ಮರಗಿಡಗಳು ಎಲ್ಲವೂ ಬದಲಾಗಿ ಆ ನೆನಪುಗಳು ಮಾತ್ರ ಬಹಳಷ್ಟು ಕಾಡಿತು. ಮೊದಲಿಗಿಂತಲೂ ತೀರ ಭಿನ್ನವಾದ ಪರಿಸರ. ಕಟೀಲಿನ ದುರ್ಗಾ ಭವನ ಹೋಟೇಲಿನ ಜಾಗ ಈಗ ವಾಹನ ನಿಲುಗಡೆಗೆ ಎರವಾಗಿದೆ. ಶಾಲೆಯ ಮೈದಾನದ ಒಂದಷ್ಟು ಭಾಗವೂ ಮಾಯವಾಗಿದೆ. ದೇವಸ್ಥಾನದ ಹೊರಬಂದು ಮೆಟ್ಟಲು ಹತ್ತಿ ಶಾಲೆಯ ಜಗಲಿಯಲ್ಲಿ ಹಲವಾರು ಜನ ವಿಶ್ರಮಿಸುತ್ತಿದ್ದರು. ಹಲವು ಸಲ ನಾನೊಬ್ಬನೇ ಬಾಲ್ಯದಲ್ಲಿ ಕಟೀಲಿಗೆ ಹೋಗುತ್ತಿದ್ದೆ. ರಾತ್ರಿ ಅಲ್ಲಿ ಹರಿಯುವ ನದಿನೀರಲ್ಲಿ ಸ್ನಾನ ಮಾಡಿ, ದೇವರ ದರ್ಶನ ಪೂಜೆ ಮುಗಿಸಿ ಪ್ರಸಾದ ಉಂಡು ಈ ಶಾಲೆಯ ಜಗಲಿಯಲ್ಲಿ ಮಲಗಿ ರಾತ್ರೆಯನ್ನು ಕಳೆದು ಮರುದಿನ ಮುಂಜಾನೆ ಎದ್ದು ಸ್ನಾನ ಜಪ ಮುಗಿಸಿ ದೇವಾಲಯದ ಸುತ್ತ ಮುತ್ತ ಸುತ್ತಾಡುತ್ತಿದ್ದ ದಿನಗಳು ಮತ್ತೆ ಬರಲಾರದು. ದೇವಸ್ಥಾನದ ಹೆಬ್ಬಾಗಿಲು ಕ್ರಮಿಸಿ ಒಳ ಪ್ರವೇಶಿಸುವಾಗ ಹೊಳೆಯನ್ನು ದಾಟುವುದಕ್ಕೆ ಎರಡು ಸೇತುವೆ. ಮೊದಲು ಈ ಸೇತುವೆ ನಡುವೆ ನಿಂತು ಕೆಳಗೆ ಭೋರ್ಗರೆದು ದುಮ್ಮಿಕ್ಕಿ ಹರಿಯುವ ನೀರಿನಲ್ಲಿ ಹಾರಿ ಹಾರಿ ಮೇಲೆ ಬರುತ್ತಿದ್ದ ಮೀನುಗಳನ್ನು ನೋಡುತ್ತಿದ್ದೆವು.
ದೇವಸ್ಥಾನದ ಒಳಾಂಗಣವನ್ನು ಪ್ರವೇಶಿಸಿದರೆ ಪ್ರಶಾಂತವಾದ ದೇವ ಸನ್ನಿಧಿ. ಹೊರಗೆ ನದಿ ಭೋರ್ಗರೆಯುವ ಶಬ್ದ ಅದರೆ ಒಳಗೆ ಪ್ರಶಾಂತವಾದ ಘಂಟಾನಾದಾದದ ಕಲರವ ಎರಡನ್ನೂ ಜತೆಯಲ್ಲೇ ಅನುಭವಿಸುವ ಕಟೀಲಿನ ದುರ್ಗಾ ಪರಮೇಶ್ವರಿಯ ಪ್ರಸನ್ನ ಮುಖ ದರ್ಶನವಾದರೆ ಅದೊಂದು ವಿಸ್ಮಯ ಅನುಭವ. ದೇವಾಲಯ ಹಿಂಭಾಗದಲ್ಲಿ ಮೊದಲು ಪಂಜಕಜ್ಜಾಯ ಪ್ರಸಾದವನ್ನು ತಯಾರಿಸುತ್ತಿದ್ದರು. ಅದರ ಘಮ ಘಮ ಪರಿಮಳ ಚಿತೋಹಾರಿಯಾಗಿರುತ್ತಿತ್ತು. ಈಗ ಸಾಕಷ್ಟು ಬದಲಾಗಿದೆ. ದೇವಸ್ಥಾನದ ಒಳಗೋಪುರದ ಎಡಭಾಗದಲ್ಲಿ ಪುಟ್ಟ ಮೇಜು ಇಟ್ಟುಕೊಂಡು ನೆಲದಲ್ಲಿ ಕುಳಿತು ಪ್ರಸಾದ ರಶೀದಿಗಳನ್ನು ಕೊಡುತ್ತಿದ್ದರು. ಆನಂತರ ಅದು ದೊಡ್ಡದಾಗಿ ಹೊರಬಂದು ಈಗ ದೇವಸ್ಥಾನದ ರಸ್ತೆಯ ಬದಿಯಲ್ಲೇ ಇದನ್ನು ವ್ಯವಸ್ಥಿತವಾಗಿ ನಿರ್ಮಿಸಿದ್ದಾರೆ. ಈಗ ಈ ಗೋಪುರದಲ್ಲಿ ಕುಳಿತುಕೊಳ್ಳುವುದಕ್ಕೂ ಅವಕಾಶವಿಲ್ಲ. ಕೊನೆ ಪಕ್ಷ ಇಲ್ಲಿ ಮಹಾಮಂಗಳಾರತಿ ತನಕು ಕುಳಿತುಕೊಳ್ಳುವ ಅವಕಾಶ ಭಕ್ತರಿಗೆ ಲಭ್ಯವಾಗಬೇಕು. ಗೋಪುರದಲ್ಲಿ ಕುಳಿತು ನಾಮಸ್ಮರಣೆ ಮಾಡುವ ಮಧುರವಾದ ಅವಕಾಶ ಇಲ್ಲವಾಗಬಾರದು. ಇದೇ ಗೋಪುರದಲ್ಲಿ ಕುಳಿತು ಸಂಧ್ಯಾವಂದನೆ ಪಾರಾಯಣ ಮಾಡಿದ ದಿನಗಳು, ಇಲ್ಲೇ ಕುಳಿತು ಭೋಜನ ಪ್ರಸಾದ ಉಂಡ ನೆನಪುಗಳು ನಿನ್ನೆ ಮತ್ತೆ ಕಾಡಿತು. ಹಿರಿಯ ವೇದಮೂರ್ತಿ ಶ್ರೀ ಗೋಪಾಲ ಕೃಷ್ಣ ಅಸ್ರಣ್ಣರು ಕುಳಿತುಕೊಳ್ಳುತ್ತಿದ್ದ ಜಾಗ ಎಲ್ಲವೂ ಬಾಲ್ಯದ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತಿದ್ದವು.
ದೇವಸ್ಥಾನದ ಒಳಾಂಗಣದಲ್ಲಿ ಸಾಕಷ್ಟು ಭಕ್ತರು ನೆರೆದಿದ್ದರು. ಈಗ ಕೆಲವರು ಭದ್ರತಾ ಸಿಬ್ಬಂದಿಗಳು ಭಕ್ತರಿಗೆ ಮಾರ್ಗ ದರ್ಶನ ಕೊಟ್ಟು ನಿಯಂತ್ರಿಸುತ್ತಿದ್ದರು. ಮೊದಲಿನಂತೆ ಕುಳಿತುಕೊಳ್ಳುವುದಕ್ಕೆ ಸಾಧ್ಯವಾಗದೆ ಕೆಲವು ವೃದ್ದೆಯರೂ ಸಹ ಮಹಾಪೂಜೆಗೆ ನಿಲ್ಲಲಾಗದೆ ನಿಂತುಕೊಂಡಿದ್ದರು. ಅಂದಿನ ಕಾಲಕ್ಕೂ ಇಂದಿನ ಕಾಲಕ್ಕೂ ಬರುವ ಭಕ್ತರಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಅದರಲ್ಲೂ ಬಯಲು ಸೀಮೆ ಘಟ್ಟದ ಮೇಲಿನ ಭಕ್ತಗಣಗಳ ಸಂಖ್ಯೆ , ಪರ ಊರಿನವರ ಸಂಖ್ಯೆ ಕಟೀಲಿನ ಮಟ್ಟಿಗೆ ಬಹಳಷ್ಟು ಹೆಚ್ಚಾಗಿದೆ. ಮೊದಲು ಸುಬ್ರಹ್ಮಣ್ಯ ಧರ್ಮಸ್ಥಳ ಯಾತ್ರೆ ಮುಗಿಸಿ ಘಟ್ಟ ಹತ್ತುತ್ತಿದ್ದವರ ಪಟ್ಟಿಯಲ್ಲಿಈಗ ಕಟೀಲು ಕೂಡ ಸೇರ್ಪಡೇಯಾಗಿದೆ. ಮಧ್ಯಾಹ್ನ ರಾತ್ರಿ ಎಲ್ಲಿ ಹೋದರೂ ಊಟ ಇದೆ ಎಂಬುದು ಹಲವರ ಸೌಕರ್ಯ. ಬೆಂಗಳೂರಲ್ಲಿ ಮೊನ್ನೆ ಮೊನ್ನೆ ನನ್ನ ಪರಿಚಿತರೊಬ್ಬರು ಕರಾವಳಿಯ ಯಾವ ದೇವಸ್ಥಾನಗಳಲ್ಲಿ ಊಟವಿದೆ ಎಂದು ಪಟ್ಟಿಮಾಡಿಕೊಂಡು ಹೋಗಿದ್ದರು. ಅದು ಯಾಕೆ ಎಂದು ಇಲ್ಲಿ ನೋಡಿದಾಗ ಅರಿವಾಯಿತು. ಮೊದಲು ಕಟೀಲಿನಲ್ಲಿ ಕೇವಲ ಇಲ್ಲಿನ ಸುತ್ತಮುತ್ತಲಿನವರು ಹೆಚ್ಚೆಂದರೆ ಉತ್ತರ ಕಾಸರಗೋಡಿನ ಕೆಲವರು ನಿಯಮಿತವಾಗಿ ಬರುತ್ತಿದ್ದರು. ಈಗ ಸುತ್ತಮುತ್ತಲಿನ ದೇವಸ್ಥಾನಗಳ ಆದಾಯ ವೃದ್ಧಿಗೆ ಇದೂ ಮುಖ್ಯ ಕಾರಣವಾಗಿದೆ. ನಿನ್ನೆ ಪೂಜೆ ಮುಗಿಸಿ ಗೋಪುರದ ಒಂದು ಬದಿ ನಿಂತುಕೊಂಡಿದ್ದೆ. ಆಗ ಇದೇ ಘಟ್ಟದ ಮೇಲಿನ ಒಬ್ಬರು ಬಂದು ಅವರ ಕೈಯಲ್ಲಿ ಗಂಧ ಪ್ರಸಾದ ಇತ್ತು. ಹಣೆಗೆ ಹಚ್ಚಿಕೊಂಡ ನಂತರ ಸಾಕಷ್ಟು ಉಳಿದಿತ್ತು. ಪುಣ್ಯಾತ್ಮ ಅದನ್ನು ಯಾವುದೇ ಕಂಬಕ್ಕೆ ಉಜ್ಜದೆ ನನ್ನ ಬಳಿಗೆ ಬಂದು ಕೇಳಿದ ಇದನ್ನು ಏನು ಮಾಡಬೇಕು? ಎಲ್ಲಿ ಎಸೆಯಬೇಕು? ಅವನಿಗೆ ಗಂಧಪ್ರಸಾದವೇ ವಿಚಿತ್ರವಾಗಿ ಕಂಡಿತ್ತು. ಯಾಕೆಂದರೆ ಹೂವಿನೊಂದಿಗೆ ಗಂಧಪ್ರಸಾದವನ್ನು ಕೊಂಡುವುದು ಕೇವಲ ದಕ್ಷಿಣ ಕನ್ನಡ ಹಾಗೂ ಕರಾವಳಿಯಲ್ಲಿ ಮಾತ್ರ. ಮಧೂರು ಉಳಿದಂತೆ ಕಾಸರಗೋಡಿನ ದೇವಸ್ಥಾನಗಳಲ್ಲೂ ಈ ಕ್ರಮವಿದೆ. ಆದರೆ ಉಳಿದಂತೆ ಘಟ್ಟದ ಮೇಲಿನ ದೇವಸ್ಥಾನಗಳಲ್ಲಿ ಇದು ಬಳಕೆಯಲ್ಲಿ ಇಲ್ಲ. ಹಾಗಾಗಿ ಆತನಿಗೆ ಇದು ವಿಚಿತ್ರವಾಗಿ ಕಂಡಿತು. ನಾನೆಂದೆ ಅಲ್ಲಿ ಅದಕ್ಕೆಂದು ಕಾಗದದ ಚೂರುಗಳನ್ನು ಇಟ್ಟಿದ್ದಾರೆ ಕಟ್ಟಿಕೊಂಡು ಮನೆಗೆ ಹೋಗು ಸ್ನಾನ ಮಾಡಿ ಶುದ್ದ ನೀರು ಬೆರೆಸೆ ಮನೆಯ ಉಳಿದ ಮಂದಿಗಳಿಗೂ ಕೊಡಬಹುದು ಎಂದೆ. ಮತ್ತೂ ಎಚ್ಚರಿಸಿದೆ ಕಂಭಗಳಿಗೆ ಹಚ್ಚಬೇಡ.
ಕಟೀಲಿನ ಜತೆಗೆ ನನಗೆ ಅತ್ಯಂತ ಭಾವನಾತ್ಮ ಸಂಭಂಧ ಎಂದರೆ ಇಲ್ಲೇ ನನಗೆ ಬ್ರಹ್ಮೋಪದೇಶವಾಗಿತ್ತು. ಸುಮಾರು ನಲವತ್ತು ವರ್ಷಗಳ ಹಿಂದಿನ ನೆನಪು. ದೇವಾಲಯದ ಎದುರಿನ ಹೊರಾಂಗಣದಲ್ಲಿ ನದಿಯ ದಡದಲ್ಲಿ ಉಪನಯನ ಕರ್ಮಗಳಾಗಿತ್ತು. ಆಗ ಪ್ರತಿವರ್ಷವೂ ಸಾಮೂಹಿಕ ಬ್ರಹ್ಮೋಪದೇಶವಾಗುತ್ತಿತ್ತು.ಬೆಳಗ್ಗೆ ಹೋಗಿ ಒಂದು ಚೀಟು ಬರೆಸಿದರೆ ಉಪನಯಕ್ಕೆ ಬೇಕಾದ ವಸ್ತ್ರ ಹೋಮ ದ್ರವ್ಯ ಪುರೋಹಿತ ದಕ್ಷಿಣೆ ತನಕ ಎಲವನ್ನೂ ಒದಗಿಸಿಕೊಡುತ್ತಿದ್ದರು. ಆಗ ನನಗೆ ಒಂದು ಪಂಚೆ ಸಿಕ್ಕಿತ್ತು. ಬಹಳಷ್ಟು ಖುಷಿಯಾಗಿತ್ತು. ಸಾಮಾನ್ಯವಾಗಿ ಒಂದು ಚಡ್ಡಿ ತಪ್ಪಿದರೆ ಎರಡು ಎಂಬಂತೆ ಇದ್ದವನಿಗೆ ಈ ಪಂಚೆ ಉಟ್ಟುಕೊಳ್ಳುವುದಕ್ಕೆ ನಾಂದಿ ಹಾಡಿತ್ತು. ಅಂದಿನಿಂದ ದೊಡ್ಡವರಂತೆ ಪಂಚೆ ಉಟ್ಟು ತಿರುಗುವುದು ಬಹಳ ಹೆಮ್ಮೆ ಅನಿಸಿತ್ತು. ನಂದಿನೀ ದಡದ ಮೇಲೆ ಸೋದರಮಾವನ ಮಡಿಲಲ್ಲಿ ಕುಳಿತು ಗುರು ಅಜ್ಜನ ಮುಖಾಂತರ ಉಪದೇಶವಾದ ಗಾಯತ್ರಿಮಂತ್ರ ನನ್ನ ಮಟ್ಟಿಗೆ ಭ್ರಮರಾಂಭಿಕೆಯ ಆಶೀರ್ವಾದ. ಈಗ ಪ್ರತಿಸಲ ಯಜ್ಞೋಪವೀತಕ್ಕೆ ಕೈ ಹಾಕುವಾಗ ಕಟೀಲಿನ ಅಮ್ಮ ನೆನಪಾಗುತ್ತಾಳೆ. ಮಾವನ ಮಡಿಲಲ್ಲಿ ಕುಳಿತ ಜಾಗದಲ್ಲಿ ಅದೇ ನೆನಪಿಗೋಸ್ಕರ ಒಂದಷ್ಟು ಹೊತ್ತು ಕುಳಿತೆ. ಆ ನೆನಪು ಮತ್ತೆ ಮತ್ತೆ ಬಂದು ಮೈ ಪುಳಕಗೊಂಡಿತು. ಇಂದಿಗೂ ಸಂಧ್ಯಾವಂದನೆ ಬಿಡದೆ ಅನುಷ್ಠಾನ ಗೊಳಿಸುವಾಗ ಕಟೀಲು ದುರ್ಗಾ ಪರವೇಶ್ವರಿಯ ಅನುಗ್ರಹವಾದಂತೆ ಭಾಸವಾಗುತ್ತದೆ. ಕಟೀಲಿನ ಸಾಮೂಹಿಕ ಬ್ರಹ್ಮೋಮದೇಶ ಎಂಬುದು ಇಲ್ಲದೇ ಇರುತ್ತಿದ್ದರೆ ನನಗೆ ಬಡತನದ ಕಾರಣ ಉಪನಯನ ಎಂಬುದು ಆಗುತ್ತಲೇ ಇರುತ್ತಿರಲಿಲ್ಲವೇನೋ ಎಂದು ಅನ್ನಿಸುತ್ತದೆ. ಬಹಳಷ್ಟು ಮಕ್ಕಳಿಗೆ ನನ್ನ ಜತೆ ಬ್ರಹ್ಮೋಪದೇಶವಾಗಿತ್ತು. ಕೊನೆಯಲ್ಲಿ ಎಲ್ಲರೂ ಶ್ರೀ ಗೋಪಾಲಕೃಷ್ಣ ಅಸ್ರಣ್ಣರ ಜತೆಯಲ್ಲಿ ನಿಂತು ಫೋಟೋ ತೆಗೆಸಿಕೊಂಡಿದ್ದೆವು. ಇದೇ ನೆನಪಿನಲ್ಲಿ ಊಟವಾದರೂ ಬಹಳಷ್ಟು ಹೊತ್ತು ಕಟೀಲಿನಲ್ಲೇ ಉಳಿದೆ. ಸೇತುವೆ ನಡುವೆ ಬಂದು ನಿಂತು ಹರಿಯುವ ನದಿಯನ್ನು ನೋಡುತ್ತಾ ಆ ಸದ್ದಿನಲ್ಲಿ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದೆ. ಕಟೀಲು ನನ್ನ ಪಾಲಿಗೆ ಕೇವಲ ದೇವಾಲಯವಲ್ಲ. ಬದುಕಿನ ಉತ್ಕರ್ಷಕ್ಕೆ, ಆಧ್ಯಾತ್ಮದ ಚಿಂತನೆಗೆ ನಾಂದಿ ಹಾಡಿದ ಪವಿತ್ರ ಕ್ಷೇತ್ರ. ಇಲ್ಲೇ ನನ್ನ ಬ್ರಹ್ಮ ಚರ್ಯ ಆರಂಭವಾಯಿತು. ಇಂದು ಎಲ್ಲವನ್ನು ಮರೆತು ಮುಂಜಾನೆ ಸೂರ್ಯನಿಗೆ ಅರ್ಘ್ಯ ಬಿಟ್ಟು ಪರಮಾತ್ಮನನ್ನು ಕಾಣುವುದಿದ್ದರೆ ಈ ಕ್ಷೇತ್ರದ ಅನುಗ್ರಹ ಮರೆಯುವಂತಹುದಲ್ಲ. ಆ ಒಂದು ಚೈತನ್ಯ ಬೆನ್ನ ಹಿಂದೆ ಸದಾ ಸತ್ಪ್ರೇರಣೆಯನ್ನು ಒದಗಿಸುತ್ತದೆ.
ಓಂ ನಮೋ ಭ್ರಮರಾಂಬಿಕೆ.


