Thursday, March 17, 2011

ಸ್ಥಿರೆಯು ಸ್ಥಿರವಲ್ಲವಾದರೆ?


ಸ್ಥಿರೆಯು ಸ್ಥಿರವಲ್ಲವಾದರೆ?
 ಅಸ್ಥಿರ ಬದುಕಿನ ನಿದರ್ಶನವಾಯಿತು ಜಪಾನ್. ಸಂವತ್ಸರದ ಅಂತ್ಯದಲ್ಲಿ ಬಂದೆರಗಿದ ಜಾಗತಿಕ ಮಹಾದುರಂತ. ಅಂದು ಎರಡನೇ ಜಾಗತಿಕ ಮಹಾಸಮರದಲ್ಲಿ ನಲುಗಿ ಹೋದ ದೇಶದ ಭಾಗಗಳಾದ ಹಿರೋಶಿಮಾ ನಾಗಸಾಕಿ ಗಳಿಂದ ಅದ್ಭುತವಾಗಿ ಚೇತರಿಸಿಕೊಂಡ ಜಪಾನ್ ಜನತೆಗೆ ಮತ್ತೋಂದು ದುರ್ಘಟನೆಯನ್ನು ನೇರ ಸಂಧಿಸುವಂತಾದುದು ಅತ್ಯಂತ ವಿಷಾದನೀಯ ಮತ್ತು ದುರದೃಷ್ಟಕರ ಎಂದೇ ಹೇಳಬೇಕು. ಮನುಷ್ಯ ತನ್ನ ಅಸ್ಥಿರ ಬದುಕಿನ ಬಗ್ಗೆ ಯೋಚಿಸಬೇಕು. ಇಂದು ಕಂಬನಿ ತುಂಬಿ ವಿಷಾದ ಬಿಂಬಿಸಿ ನಾಳೆ ಮರೆತು ಬಿಡುವ ಘಟನೆಯಲ್ಲ. ನಲುಗಿ ಹೋದ ಜೀವರಾಶಿಗೆ ಯಾವ ಸಾಂತ್ವನವನ್ನು ತೋರಬಹುದು? ಕಲ್ಪನೆಗೆ ನಿಲುಕದ ಬವಣೆಯನ್ನು ಎದುರಿಸುವ ಬಗೆಯನ್ನು ಕಲ್ಪಿಸುವುದು ಹೇಗೆ. ಮನಸ್ಸಲ್ಲಿ ಒಂದು ಘಳಿಗೆಯಾದರೂ ಮನಸ್ಸು ತುಂಬಿ ಭಗವಂತನಲ್ಲಿ ಮೊರೆಯಿಡೋಣ.. “ ಹೇ ಭಗವಂತ ಜಪಾನ್ ವಾಸಿಗಳು ನಿನ್ನ ಕರುಣೆಯಿಂದ ವಂಚಿಸಲ್ಪಡಲು ಅವರೇನು ಅಂತಹ ಅಪಾರಾಧಿಗಳೇ? ಅವರ ಅಪರಾಧವಾದರೂ ಏನು? ಒಂದು ಕ್ಷಣದಲ್ಲೆ ತನ್ನದೆಲ್ಲವನ್ನು ಕಳೆದು ಬರಿಗೈ ಬರಿ ಮೈ ಆದ ಬದುಕಿನ್ನೆಂತು ಬದುಕಾದೀತು.? ಜಪಾನಿಗರು ಕಟ್ಟಿಕೊಂಡ ಮನೆ ಊರು ಬದುಕು ಎಲ್ಲವೂ ಕ್ಷಣದಲ್ಲಿ ಬಿಸುಟು ಬಿಡುವ ಆಟಿಕೆಯಾಗಿ ಕಂಡಿತೆ? ಇನ್ನಿನ್ನ ಬದುಕೆಂತು ಹೇಗೆ ಊಹಿಸಲಿ ? ಅವರಿಗಾಗಿ ನಿನ್ನಲ್ಲಿ ಏನು ಬೇಡಲಿ?”

ಸ್ಥಿರವಾದ ಭೂಮಿ ಹೀಗೆ ನಲುಗಿದರೆ ಮನುಷ್ಯ ತನ್ನ ನಿಯಂತ್ರಣದ ಪರಿಧಿಯನ್ನರಿಯಬೇಕು. ಬದುಕಿನುದ್ದಕ್ಕೂ ಸ್ವಾರ್ಥಿಯಾಗುವ ಮನುಷ್ಯನ ಜೀವನವನ್ನು ಅವಲೋಕಿಸಿದರೆ ಸಾಲದೇ? ಹುಟ್ಟಿಸಿದವ ಮೇವನ್ನು ತೋರಿಸಿಯಾನು ಎಂಬ ಮಾತನ್ನು ನಂಬುವ ಸ್ಥಿತಿಯಲ್ಲಿ  ಮಾನವನಿಂದು ಇಲ್ಲ. ತನಗೆಷ್ಟು ಬೇಕೋ ಅದನ್ನು ಯೋಚಿಸುವ ಬದಲು ತನಗೆಷ್ಟು ಬರಬಹುದು ಎಂಬ ಸ್ವಾರ್ಥ ಚಿಂತನೆ ಎಲ್ಲಿ ಅಂತ್ಯ ಕಾಣಬಹುದು?

ಪ್ರತಿ ದಿನವು ಹೊಸ ಹೊಸ ಹಗರಣಗಳಿಂದ ಪ್ರಸಿದ್ದಿ ಪಡೆಯುವ ಮಂತ್ರಿಗಳು, ರಾಜಕಾರಿಣಿಗಳು. ಇವರ ಸ್ವಾರ್ಥಕ್ಕೆ ಒಂದು ಪರಿಮಿತಿ ಎಂಬುದು ಇದೆಯೆ? ಓರ್ವರು ವಿದೇಶಿ ಬ್ಯಾಂಕ್ ನಲ್ಲಿ ಠೇವಣಿ ಇಟ್ಟ ಹಣ...ಕೇಳಿದರೆ ದಿಗಿಲಾಗುತ್ತದೆ. ಅಬ್ಬಾ...!!!! ಮೂರು ಸಾವಿರ ಕೋಟಿ ರೂಪಾಯಿ!!! ಎಲ್ಲಿಂದ ಬಂತು ಈ ಹಣ.? ಇಲ್ಲಿ ಮೂರು ಸಾವಿರ ಕೋಟಿ ಬಿಡಿ  ಮೂರು ಸಾವಿರ ರೂಪಾಯಿಗೆ ಜನಸಾಮಾನ್ಯ ಇರುಳು ನಿದ್ದೆಗೆಟ್ಟು ಅಥವಾ ಬಿಸಿಲ ಝಳಕ್ಕೆ ಬೆಂದು, ಧೂಳು ತಿಂದು ದುಡಿದರೂ ಗಿಟ್ಟದ ಹಣ ಇವರಿಗೆ ಸಾವಿರಾರು ಕೋಟಿ ಅದು ಹೇಗೆ ಸಂಗ್ರಹವಾಗುತ್ತದೆ? ಅತಿಯಾದ ಆಶೆ. ಸುಮ್ಮನೇ ಕೂತುಂಡರೂ ಮುಗಿಯದ ಈ ಸಂಪತ್ತು ಭೂಮಿಯ ಇಂತಹ ಒಂದು ನಲುಗಾಟಕ್ಕೆ ಬೆಲೆಯೇ ಇಲ್ಲದ ಹಾಗೆ ಆಗಿಬಿಡುವುದಲ್ಲ. ಆದರೂ ಸ್ವಾರ್ಥ ಬಿಡುವುದಿಲ್ಲ. ಆಶೆ ತೀರುವುದಿಲ್ಲ.ನೋಡಬಾರದೆ ಜಪಾನಿನಲ್ಲಿ ಕೋಟ್ಯಾಧಿಪತಿ ಕ್ಷಣವೊಂದರ ಅವನಿಯ ಮುನಿಸಿಗೆ ಬೀದಿ ಪಾಲಾಗಿ ಬಿಟ್ಟದ್ದು? ನಾನು ನನ್ನ ಮಕ್ಕಳು ನನ್ನ ಕುಟುಂಬ ಹೀಗೆ ಪ್ರತಿಯೊಂದರಲ್ಲು ಸ್ವಾರ್ಥ.ಒಬ್ಬನಿಗೆ ಸಾಮಾನ್ಯ ಸುಖ ಜೀವನಕ್ಕೆ ಅವಶ್ಯವಿರುವ ಸಂಪಂತ್ತು ತಾನು ತನಾಗಾಗಿ ವಿನಿಯೋಗಿಸಬಹುದಾದುದಕ್ಕೆ ಒಂದು ಮಿತಿ ಎಂಬುದಿದೆ. ಅದರೆ ಮಿತಿ ಮೀರಿದ ಸಂಪತ್ತಿನ ಅಗತ್ಯ ಇಲ್ಲವಾದರೂ ಮತ್ತೂ ಬೇಕೆಂಬ ಈ ಸ್ವಾರ್ಥ .. ಇದು ಏನನ್ನು ತೋರಿಸುತ್ತದೆ? ಇವರ ಭೂಮಿದಾಹ ಎಷ್ಟೊಂದು ಅರ್ಥಹೀನ ಎಂದು ಭಾಸವಾಗುವುದಿಲ್ಲವೇ? ಯಾರನ್ನೋ ಹಿಂಸಿಸಿ ಏನೇನೋ ವಶೀಲಿ ಮಾಡಿ ಯಾವುದೋ ಹಾದಿಯಿಂದ ಗಳಿಸಿಟ್ಟ ಭೂಮಿ ಇಂತಹ ಒಂದು ನಲುಗಾಟಕ್ಕೆ ಕಾದಿರುವುದೇ?

 ಪ್ರಕೃತಿಯ ಇಂತಹ ಒಂದು ಮುನಿಸಿಗೆ ಯಾವುದೆ ಮೌಲ್ಯವನ್ನು ತರಲಾರದ ಈ ಸಂಪತ್ತು ಕಾಣಬಾರದೆ.? ಕುಸಿದು ಬಿದ್ದ ಕಟ್ಟಡಗಳು? ರಾಶಿ ರಾಶಿಯಾಗಿ ಮೂಲೆ ಸೇರಿದ ವಾಹನಗಳು ಎಲ್ಲವೂ ಒಂದು ಸಮಯದ ಬೆಲೆ ಬಾಳುವ ಸಂಪತ್ತು. ಅದನ್ನು ಗಳಿಸುವುದಕ್ಕಾಗಿ ವಿನಿಯೋಗವಾದ ದುಡಿಮೆ ಎಂತಹುದು? ಎಲ್ಲವೂ ಮೌಲ್ಯವನ್ನು ಕಳೆದು ಕೊಂಡು ತಮ್ಮ ಸತ್ವವನ್ನು ಬಹಿರಂಗ ಪಡಿಸಿದರೂ ಜ್ಞಾನೋದಯವಾಗಲಾರದು.  

ಈ ಅಸ್ಥಿರ ಬದುಕಿನ ಅರಿವಿದ್ದೂ ಈ ಬಗೆಯ ಸ್ವಾರ್ಥಿಗಳಾಗುವುದು ಸೋಜಿಗ. ಬೇಡದೆ ಇದ್ದರೂ ಕೂಡಿಸಿಡುವ ಸಂಪತ್ತು ಇಲ್ಲಿ ವಿನಿಯೋಗವಾಗಬಹುದೇ? ಭೂಮಿಯ ಕ್ಷಣ ಮುನಿಸಿಗೆ ನಲುಗಿದ ಬದುಕಿಗೆ ಆಸರೆಯಾಗಬಲ್ಲುದೇ?

ಶರೀರದಲ್ಲಿ ಜೀವ ಚೇತನ ಇರುವ ತನಕ ಅದು ಬೇಕು ಇದು ಬೇಕು ಎಂಬ ಪರಿಮಿತಿಯಿಲ್ಲದ ಬಯಕೆಗಳು. ಸ್ವಾರ್ಥ ದ್ವೇಶ ಅಸೂಯೆಯ ನಿತ್ಯ ದರ್ಶನ. ಪ್ರತಿಯೊಂದು ಜೀವವೂ ಬದುಕನ್ನು ಸವಿಸುವುದಕ್ಕಾಗಿಯೇ ಭುವಿಯಲ್ಲಿ ಜೀವಿಸಿವೆ ಎಂಬ ಸತ್ಯವನ್ನು ಅರಿಯುವುದೇ ಇಲ್ಲ.

ಪಾಠವಾಗಲಿ ಈ ದುರಂತ.ನಶಿಸಿ ಹೋಗಲಿ ದ್ವೇಶ ಅಸೂಯೆ ಸ್ವಾರ್ಥದ ದಳ್ಳುರಿ. ಬೆಳೆಯಲಿ ಜೀವ ಜೀವದ ನಡುವೆ ಸಾಮರಸ್ಯ. ನಾವು ನಿಂತ ನೆಲ ಎಂದು ಅದುರುವುದೋ ಬಲ್ಲವರಾರು. ಈ ಸತ್ಯದ ಅರಿವನ್ನು ಮನದಲ್ಲಿ ಇರಿಸಿದರೆ ಮೂಡದು ಸ್ವಾರ್ಥ ದ್ವೇಶ ಅಸೂಯೆಗಳು. ಒಂದೊಂದು ಹೆಜ್ಜೆಗೂ ಭಯ ಹುಟ್ಟಿಸುವಂತೆ ಭೂಮಿ ಮನುಷ್ಯನಿಗೆ ಪಾಠ ಕಲಿಸಿದೆ. ಅಸ್ಥಿರ ಬದುಕಿನ ಅರಿವನ್ನು ಮೂಡಿಸಿದೆ.ದ್ವೇಶ ರಹಿತ ಸ್ವಾರ್ಥ ರಹಿತ ಜಗತ್ತು ನಮ್ಮದಾಗಲಿ ಎಂಬ ಹಾರೈಕೆಯೊಂದಿಗೆ, ಸರ್ವಸ್ವವನ್ನು ಕಳೆದುಕೊಂಡ ಜಪಾನಿಗರ ಬದುಕಿಗೆ ನಾಶದ ಉರಿಯನ್ನು ಶಮನಮಾಡುವ ಚೈತನ್ಯವನ್ನು ಭಗವಂತನು ಅನುಗ್ರಹಿಸಲಿ ಮನದಾಳದಿಂದ ಬಯಸುವುದೇ ನಮ್ಮ ನಿಶ್ಚಯವಾಗಲಿ.

Thursday, February 24, 2011

ಬಾಬೇಗ ಚಂದಮಾಮ.


ವ್ಯಕ್ತಿತ್ವ ವಿಕಸನಕ್ಕೆ ಅಥವಾ ಅದು ರೂಪುಗೊಳ್ಳುವುದಕ್ಕೆ ಪ್ರತಿಯೊಬ್ಬರಿಗೂ ಯಾವುದಾದರು ವ್ಯಕ್ತಿ ಕಾರಣಿಭೂತರಾಗಿ, ಅಥವಾ ಪ್ರೇರಕ ಶಕ್ತಿಯಾಗಿ ಶಿಲ್ಪಿಯಂತೆ ಶಕ್ತಿರೂಪವಾಗಿರುತ್ತಾರೆ. ಅದು ಯಾವ ರೂಪದಲ್ಲೊ ಭಾವದಲ್ಲೊ ನಿರ್ವಚನ ಅಸಾಧ್ಯ. ಹೇಳಲಸಾಧ್ಯವಾದ ಭಾವನಾರೂಪಿಗಳು ಹಲವರ ಬದುಕಿನಲ್ಲಿ ನಿರೂಪಿಗಳಾಗಿಬಿಡುತ್ತಾರೆ. ಅದರಂತೆ ನನ್ನದಾದ ವ್ಯಕ್ತಿತ್ವ ಏನಿದೆಯೋ ಅದನ್ನು ನಾನು ರೂಢಿಸಿಕೊಂಡ ಬಗೆ ಏನಿದೆಯೋ ಅದಕ್ಕೆ ಪ್ರೇರಕರಾಗಿ ರೂಪಕರಾಗಿದ್ದದ್ದು ನನ್ನ ಸೋದರ ಮಾವ, ನನ್ನ ಅಮ್ಮನ ಒಡ ಹುಟ್ಟಿದ ತಮ್ಮನಾದ ಪೂಜ್ಯರಾದ ಶ್ರೀ ರಾಮ ಚಂದ್ರ ಭಟ್ ಆವಳ ಮಠ. ನಮ್ಮ ಮನೆತನಗಳಲ್ಲಿ ಪ್ರಸಿದ್ದವಾದ ಮಠದ ಕುಟುಂಬದವರಾದ  ಹಾಗು ನನ್ನ ಅಜ್ಜ ಪರಮಪೂಜ್ಯ  ಶ್ರೀ ಅಚ್ಚುತ ಭಟ್ (ಅಚ್ಚಣ್ಣ ಭಟ್ಟ) ಆವಳ ಮಠ ಇವರ ಮಗನಾದ ಇವರು ನನ್ನ ತಾಯಿಯವರ ಸಹೋದರ.

ಮೊನ್ನೆಯ ಸೋಮವಾರದ ದಿನಾಂಕ  21.02.2011 ರ ರಾತ್ರಿ ಬಂದ ಕರೆ ನನಗೆ ತೀವ್ರ ಅಘಾತವನ್ನು ಕೊಟ್ಟುಬಿಟ್ಟಿತು. ಮಾವ ಬ್ರೈನ್ ಹೇಮರೇಜ್ ಆಗಿ ಇನ್ನು ಅಸಾಧ್ಯ ಅಂತ ವೈದ್ಯರಿಂದ ತಿರಸ್ಕರಿಸಲ್ಪಟ್ಟು ಮನೆಗೆ ಬಂದ ವಾರ್ತೆ ನನ್ನ ಮನಸ್ಸಲ್ಲಿ ತಲ್ಲಣವನ್ನುಂಟು ಮಾಡಿತು. ಕಳೆದ ದಿನಗಳ ನೆನಪಿನ ಅಲೆಗಳ ಭೋರ್ಗರೆತಕ್ಕೆ ಸಂಪೂರ್ಣ ಶರಣಾದೆ, ಹೃದಯ ಬಡಿತ ನನ್ನ ನಿಯಂತ್ರಣ ವಿಲ್ಲದಂತೆ ವರ್ತಿಸಿತು. ನನ್ನ ಮನಸ್ಸಿನ ಪ್ರತಿ ಮಿಡಿತಗಳಿಗೆ ಹೃದಯದ ಬಡಿತಗಳಿಗೆ ಜನನಿಯಂತೆ ನಿಮಿತ್ತವಾದ ಮಾವ ರುಗ್ಣ ಶಯ್ಯೆಯಲ್ಲಿ . ಮನಸ್ಸು ತಾಳಿಕೊಳ್ಳುವ  ಶಕ್ತಿಯನ್ನು ಅರಸುವ ಯತ್ನ ಮಾಡಿತು.

ಮಂಚದಲ್ಲಿ ಎದ್ದು ಕುಳಿತು ಭಗವಂತನನ್ನು ಸ್ಮರಿಸಿದೆ. ಬೇಡುವುದಕ್ಕೇನು ತೋಚಲಿಲ್ಲ. ವೇಗವಾಗಿ ಬಡಿಯುತ್ತಿದ್ದ ಫ್ಯಾನ್ ಗಾಳಿ ಇದ್ದರೂ ವಾತಾವರಣ ಸ್ಥಬ್ಧವಾದಂತೆ ಭಾಸವಾಯಿತು. ದೋ ಎಂಬ ಅಕಾಲಿಕ ಮಳೆ ಬೇರೆ. ಅಸಹಜ ವಾತಾವರಣ. ಮಲಗಿದ್ದ ಅಮ್ಮನನ್ನು ಎಬ್ಭಿಸುವ ಯೋಚನೆ ಬಂದರೂ ಎಬ್ಭಿಸುವ ಬಗ್ಗೆ ಯೋಚಿಸ ಹತ್ತಿತ್ತು. ಏನೂ ಮಾಡಲು ತೋಚದ ಸನ್ನಿವೇಶ. ಯಾವುದನ್ನೂ ಯೋಚಿಸದ ಮನ ನಗಾರಿಯಂತೆ ಬಡಿದುಕೊಳ್ಳುತ್ತಿದ್ದ ಎದೆಯನ್ನು ನಿಯಂತ್ರಿಸುವಂತೆ ಪ್ರೇರೇಪಿಸಿ ಹಾಗೆ ಸ್ವಲ್ಪ ಅಂಗಾತನೆ ಮಲಗಿದೆ. ಮನಸ್ಸನ್ನು ಶಾಂತವಾಗಿಸುವ ಯತ್ನ. ನಾನು ನಾನಲ್ಲ ಎಂಬ ದಿವ್ಯತೆಯ ಅನುಭವವನ್ನು ಹೊಂದುವ ಯತ್ನ. ಹಾಗೆ ನಿಶ್ಚಲ ನಾಗಿ ಸ್ವಲ್ಪ ಹೊತ್ತು ಅದೇ ಸ್ಥಿತಿಯಲ್ಲಿ ಕಳೆದೆ. ಯಾವ ಕ್ಷಣದಲ್ಲೂ ಮೊಬೈಲ್ ರಿಂಗಾಗಬಹುದು. ಇದನ್ನೇ ನಿರೀಕ್ಷಿಸುತ್ತಾ ಭಹುಶಃ ಅಲ್ಲಿಗೆ ಸಣ್ಣ ಜೊಂಪು ಬಡಿಯಿತೋ ಏನೋ ?

ಸ್ಪುರದ್ರೂಪಿ ಮಾಮ
ಪಕ್ಕನೆ ಜೊಂಪು ಬಿಟ್ಟೆದ್ದೆ.. ಹೊರಗೆ ಮಳೆ ನಿಂತು ಶುಭ್ರ ಆಕಾಶ, ಬೆಳದಿಂಗಳ ನೀರವ ಮೌನದಲ್ಲೂ ವಿಚಿತ್ರವಾಗಿ ಕಾಗೆಗಳು ಕಿರುಚುವ ಸದ್ದು. ಒಂದೇ ಸವನೆ ಕಾ.. ಕಾ.. ಗುಟ್ಟುವಿಕೆಗೆ ಮನಸ್ಸು ನಾರಯಣ ಧ್ಯಾನವನ್ನು ಮಾಡಿತು. ಮೈ ಪೂರ ಬೆವರಿದ ಅನುಭವ. ಮೈ ಮನ ಕಟ್ಟಿ ಹಾಕಿದ ಬಂಧನದ ಹಾಗೆ ಭಾಸವಾಯಿತು. ಗಂಟೆ ಸರಿ ಸುಮಾರು ಒಂದಾಗಿರಬಹುದು.ಕಾಗೆಗಳು ಯಾಕೆ ಕಿರುಚಿತ್ತಿವೆ? ಮನಸ್ಸು ಮತ್ತಷ್ಟು ಕ್ಷೋಭೆಗೆ ಒಳಗಾಯಿತು. ಸ್ವಲ್ಪ ಹೊತ್ತಿಗೆ ಎಲ್ಲವೂ ಶಾಂತವಾಯಿತೋ ಎನ್ನುವಾಗ ಮೊಬೈಲ್ ರಿಂಗಾಯಿತು. ಧಿಗ್ಗನೆ ಎದ್ದೆ...ಬಾವನ ಹೆಸರು ಮೂಡಿತ್ತು. “ ಹಲೋ...” ಎಂದೆ ನನ್ನ ಧ್ವನಿ ನನಗೆ ಕೇಳಿಸಿಲ್ಲ ... “ ಬಾವ .. ಎಲ್ಲ ಮುಗೀತು .. ಈಗ ಐದು ನಿಮಿಷ ಆಯಿತಷ್ಟೇ....” ಮತ್ತೆ ಮಾತಿಲ್ಲ.
ಒಂದೆ ಬಾರಿಗೆ ಬಂಧಮುಕ್ತ ವಾತಾವಾರಣ ..ಎಲ್ಲಿತ್ತೋ ತಂಗಾಳಿ ಬೀಸತೊಡಗಿತು. ಮೈಯಲ್ಲಿ ಒಂದು ಬಗೆ ಚಲನೆಯ ಚುರುಕುತನ ಹೊಮ್ಮಿತು. ಎದ್ದೆ. ಹೊರಬಂದೆ ದೇವರಿ ನಮಸ್ಕರಿಸಿದೆ. ಮನಸ್ಸೆಂದಿತು“ ಭಗವಂತ ದಿವ್ಯಾ ಅತ್ಮಕ್ಕೆ ಸದ್ಗತಿಯನ್ನು ನೀಡು”
ಮತ್ತೂ ಒಂದು ಪ್ರಶ್ನೆ ಕಾಗೆ ಹಾಗೆ ಅರಚಿತ್ತೇ. ...? ಹೌದು ನಿಜ .


ಅಮ್ಮನನ್ನು ಎಬ್ಬಿಸಿದೆ ಅದಾಗಲೇ ಸತಿ ಎದ್ದು ಅಗಿತ್ತು. ಅಮ್ಮನಿಗೆ ನಿದ್ದೆಯೇ ಬಂದಿರಲಿಲ್ಲ. ರಾತ್ರಿ ಮಲಗಿದ್ದಾಗ ಹಿರಿಯ ಮಾವನ ನೆನಪೌ ಅದ್ಯಾಕೋ ಕಾಡಿತ್ತು. ಅದರೆ ಕಾಗೆಯ ಅರಚಾಟ ಅವರಿಗೂ ಕೇಳಿಸಿತ್ತು. ಮೆತ್ತೆಗೆ ಹೇಳಿದೆ.  “ ಬಾವ ಫೋನ್ ಮಾಡಿದ್ದ.. ಚಂದಮಾಮ ತೀರಿ ಹೋದರು...” ನನ್ನ ಅಳುವನ್ನು ಕಷ್ಟಪಟ್ಟು ತಡೆ ಹಿಡಿದೆ ಹಿರಿಯ ಜೀವ ಉದ್ವಿಗ್ನವಾಗಬಾರದಲ್ಲ?


ಮತ್ತೆ ಎಲ್ಲ ಕ್ಷಣದಲ್ಲಿ ಚುರುಕಾದೆವು. ತಮ್ಮ ಕಾರ್ ಸ್ಟಾರ್ಟ್ ಮಾಡಿದ. ಇದ್ದುದನ್ನು ಕೈಯಲ್ಲಿ ಹಿಡಿದು ಆ ರಾತ್ರಿಯೇ ಮಂಗಳೂರಿನತ್ತ ಹೊರಟೆವು.

ದಾರಿಯುದ್ದಕ್ಕೂ ಮಾವನ ನೆನಪುಗಳು ಮಾತಿನ ಮುಖದಲ್ಲಿ ಹರಿದಾಡಿತು.  ನನ್ನ ಮಾವ  ನನ್ನ ವ್ಯಕ್ತಿತ್ವದ ಸರ್ವ ರೂಪಕ್ಕೂ ಕಾರಣರಾದ ಮಾವ ಎಷ್ಟೊಂದು ಘಟನೆಗಳು. ಸಂದ ದಿನಗಳು. ಒಮ್ಮೆಲೆ ಮಾತು ನಿಲ್ಲಿಸಿ ಅಳುತ್ತಾ ಕಣ್ಣೀರು ಹಾಕಿದೆ. ಮಾವ .....ನನ್ನ ಮಾವ ಎಂತಹ ಅದ್ಭುತ ವ್ಯಕ್ತಿ...!!! 


ಅಷ್ಟೇನೂ ವಿದ್ಯಾವಂತರಲ್ಲದ ಮಾವ ಮಹಾಜ್ಞಾನಿಯಂತೆ ಮಾತನಾಡ ಬಲ್ಲರು. ತತ್ವಾದರ್ಶವನ್ನು ತಾವು ಕಂಡ ಬಗೆಯಲ್ಲಿ ಹೇಳಬಲ್ಲರು. ನನ್ನಲ್ಲಿ ನಿಸ್ವಾರ್ಥತೆಯ ಭಾವವನ್ನು ಬೆಳೆಸಿದ ಪರಮ ಗುರುವಾಗಬಲ್ಲರು. ಚಂದಮಾಮ ಎಂದಿಗೂ ಚಂದಮಾಮನೇ ನಿಸ್ವಾರ್ಥಿ. ಪವಿತ್ರ ಚಂದ್ರನ ಬೆಳಗಿನ ಶುಭ್ರಮನಸ್ಸಿನವ್ಯಕ್ತಿ.


ನನ್ನ ಬಾಲ್ಯ ... ತುಂಬ ಸಣ್ಣ ಮಗುವಾಗಿರುವಾಗಲೇ ಅಕ್ಕನ ಮಕ್ಕಳೆಂದರೆ ಅಕ್ಕರೆ. ಅದೆಂತಹ ಅಕ್ಕರೆ. ಇಂದೂ  ಮಾವನ ಮಕ್ಕಳಲ್ಲಿ ನಾನು ಹೇಳುವುದಿದೆ. “ನಿಮಗೆ ಗೊತ್ತಿಲ್ಲದ ನಿಮ್ಮ ಅಪ್ಪನನ್ನು ನಾನು ಕಂಡಿದ್ದೇನೆ ಅವರಲ್ಲಿ. ನಿಮಗೆ ಕೊಡದಂತಹ ಪ್ರೀತಿ ಮಮತೆಯನ್ನು ನಾನು ಉಂಡಿದ್ದೇನೆ. ನಿಮ್ಮನ್ನು ಎತ್ತಿ ತಿರುಗಾಡಿದ್ದು ನಿಮಗೆ ನೆನಪಿಲ್ಲದಷ್ಟು ಕಡಿಮೆ ... ಅದರೆ ನನ್ನನ್ನು ಎತ್ತಿ ತಿರುಗಾಡಿದ್ದು ನನಗಿನ್ನೂ ನೆನಪಿದೆ.”


ಪ್ರತೀ ಯೊಬ್ಬರಲ್ಲೂ ಅಗಾಗ ಹೇಳುವ ಮಾತಿದೆ ಆ ಅಕ್ಕನ ಮಕ್ಕಳು ಈ ತೋಳಿಂದ ಎತ್ತಿ ಬೆಳೆದವುಗಳು. ನನ್ನ ಮಡಿಲಲ್ಲಿ ಉಚ್ಚೆ ಹೊಯಿದು ಒದ್ದೆ ಮಾಡುವ ಮೊದಲೇ ನನ್ನ ಪ್ರೀತಿಯ ಕಣ್ಣೀರಧಾರೆ ಅವರನ್ನು ತೋಯಿಸಿ ಆಗಿದೆ. ಹೌದು ಅಲ್ಲಿಗೆ ನಾವು ಪವಿತ್ರಪಾಣಿಗಳಾಗಿದ್ದೆವು.

ಬಸವಳಿದ ದೇಹ..
ಹಲವು ಸಲ ನಾನು ಹೇಳಿದ್ದಿದೆ, ನನ್ನ ಬಾಲ್ಯದ ಸಂಗತಿಗಳು. ಅದೆಲ್ಲದಕ್ಕೂ ಅಧಿಕ ನಂಟು ಇರುವುದು ನನ್ನ ಚಂದಮಾಮನಿಗೆ. ಕಣ್ಣಿಗೆ ಅಗಸದಲ್ಲಿ ಕಾಣುವ ಚಂದ ಮಾಮ ಈ ರೂಪದಲ್ಲಿ ಅನ್ವರ್ಥವಾಗಿದ್ದ. ಬಾಲ್ಯದಿಂದಲೆ...!!
ನನಗೆ ರಾಜ್ ಕುಮಾರ್ ಎಂದು ನಾಮಕರಣ ಮಾಡಿದವರೇ ನನ್ನ ಮಾವ. ಹಲವು ವಿಧದಲ್ಲಿ ಚಿತ್ರ ನಟ ರಾಜ್ ಕುಮಾರ್ ಗೆ ಹೋಲುವಂತಿದ್ದ ಸ್ಪುರದ್ರೂಪಿ ಮಾವ ನನಗೇ ಪ್ರೀತಿಯಿಂದ ಆ ಹೆಸರಿಟ್ಟಿದ್ದರು. ಮಾತ್ರವಲ್ಲ ಆವಾಗ ಕಾರ್ ಸ್ಟ್ರೀಟ್ ನಲ್ಲಿ ತಾನು ನಡೆಸುತ್ತಿದ್ದ ಹೋಟೇಲ್ ಗೆ ರಾಜಾಮಹಲ್ ಎಂದು ನನ್ನದೆ ಹೆಸರು ಇಟ್ಟಿದ್ದರು.   ಒಂದು ಸಲ ಅವರು ಚಲನಚಿತ್ರಕ್ಕೂ ಆಯ್ಕೆಯಾಗಿದ್ದರು ಎಂದು ಹಲವರು ನಮ್ಮಲ್ಲಿ ಹೇಳುತ್ತಿದ್ದರು. ನಮ್ಮ ಅಜ್ಜ ಯಾವುದಕ್ಕೂ ಅವರನ್ನು ಬಿಟ್ಟಿರಲಿಲ್ಲ. ಬ್ರಾಹ್ಮಣರಿಗೆ ಸಲ್ಲುವದ್ದು ಅಲ್ಲ ಎಂದೆ ಬೈದು ತಡೆದರು. ಹಾಗೆ ನೋಡಿದರೆ ಮಾವ ಸ್ವತಃ ಉತ್ತಮ ಕಲಾವಿದ, ಗಾಯಕ, ಆದರೆ  ದುರ್ದೈವ ಯಾವುದೂ ಬಹಿರಂಗವಾಗಲೇ ಇಲ್ಲ. “ಗುಮ್ಮನ ಕರೆಯದಿರೆ ಅಮ್ಮಾ ನೀನು ” ಎಂಬ ಪುರಂದರ ದಾಸರ ಭಜನೆ ಈಗಲೂ ನನ್ನ ಕಿವಿಯಲಿ ಗುಂಯ್ ಗುಡುತ್ತಿದೆ.ಯಕ್ಷಗಾನದ ಅಭಿರುಚಿಯನ್ನು ನನ್ನಲ್ಲಿ ಬೆಳೆಸಿದ ಮೂಲ ಇರುವುದು ಮಾವನಲ್ಲೇ. ಎಷ್ಟೊಂದು ಯಕ್ಷಗಾನ ಬಯಲಾಟ  ತಾಳಮದ್ದಲೆಗಳಿಗೆ ನನ್ನನ್ನು ಕರೆದುಕೊಂಡು ಹೋಗಿದ್ದಾರೆ. ಬಲಿಪ ನಾರಾಯಣ ಬಾಗವತರು ಆಗಾಗ ಮನೆಗೆ ಬೇಟಿ ಕೊಟ್ಟಾಗಲು ಅಪಾರ ಕಾಳಜಿಯಿಂದ ಅವರ ಅತಿಥ್ಯವಹಿಸುತ್ತಿದ್ದರು. ಕಳೆದ ವರ್ಷ ನನ್ನ ಭಾವನ ಮದುವೆ ಸಂದರ್ಭದಲ್ಲಿ ನನ್ನ ಮೊಬೈಲ್ ನಲ್ಲಿದ್ದ ಬಲಿಪ್ಪಜ್ಜನ ಭೀಷ್ಮಪರ್ವ ಯಕ್ಷಗಾನವನ್ನು ಮಾವ ಆಸಕ್ತಿಯಿಂದ ಆಲಿಸಿದಾಗ ನನಗೆ ಗತಕಾಲದ ಮಾವನ ನೆನಪಾಗಿತ್ತು. ಅವರ ಬಾಲ್ಯದಲ್ಲಿ ಒಂದು ಸಲ ಯಕ್ಷಗಾನದಲ್ಲಿ ಸ್ತ್ರೀ ವೇಶ ಮಾಡಿದ್ದನ್ನೂ ಹಲವುಸಲ ನೆನಪಿಸುತ್ತಿದ್ದರು. ಮಹಾವಿಷ್ಣುವಿನ ಜತೆ ಲಕ್ಷ್ಮಿಯ ಪಾತ್ರ. ವಿಷಯ ತಿಳಿದ ಅವರ ಅಪ್ಪ ನನ್ನಜ್ಜ ಅವರನ್ನು ವೇದಿಕೆಯಿಂದಲೇ ಎಳೆದುಕೊಂಡು ಬಂದಿದ್ದರಂತೆ. ಇದನ್ನು ಯಾವ ಭಾವನೆಯಲ್ಲಿ ಹೇಳುತ್ತಿದ್ದರೋ ಆ ಭಾವನೆಯ ಅರ್ಥ ಈಗಲೂ ನನಗೆ ಆಗಲೆ ಇಲ್ಲ. ಅಳಕೆ ರಾಮ ರೈ ಯ ಪಾತ್ರ ಮತ್ತು ನಟನೆಯನ್ನು ಎಷ್ಟುಸಲ ವಿವರಿಸುತ್ತಿದ್ದರೋ ಲೆಕ್ಕವಿಲ್ಲ. ಶೇಣಿ ಸಾಮಗ ಪೆರ್ಲರ ಹಲವು ಸಂವಾದವನ್ನು ಎಳೆ ಎಳೆಯಾಗಿ ನನಗೆ ವಿವರಿಸುತ್ತಿದ್ದರು. ಪೆರ್ಲರ ಅರ್ಥಗಾರಿಕೆಯ ಸೊಗಸನ್ನು ಅಪಾರವಾಗಿ ಅಭಿಮಾನಿಸುತ್ತಿದ್ದ ಅವರು ಅದರ ತತ್ವ ಸಿದ್ದಾಂತಗಳ ಆಳವನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಿದ್ದರು.

ಹಲವು ದಶಕದ ಹಿಂದಿನ ಮಂಗಳೂರು ನಗರ. ಹಳೆಯ ನೀಲಿ ಕಪ್ಪು ಗೆರೆಯ ಸಿ.ಪಿ.ಸಿ. ಬಸ್ ನಲ್ಲಿ ಅಥವಾ ಶಂಕರ್ ವಿಟ್ಟಲ್ ಬಸ್ ನಲ್ಲಿ ಮಾವನ ಜತೆ ನಗರದಲ್ಲಿ ಓಡಾಡಿದ್ದು , ಮಾತ್ರವಲ್ಲ ಅವರ ಹಳೆಯ ಬಿ.ಎಸ್. ಎ. ಸೈಕಲ್ ನಲ್ಲಿ ಹಂಪನ್ ಕಟ್ಟೇ ಕಾರ್ ಸ್ಟ್ರೀಟು ಟೆಂಪಲ್ ಸ್ಕ್ವೇರ್ ಎಂದೆಲ್ಲ ಓಡಾದ್ದು ಇನ್ನೂ ನನಗೆ ಅಚ್ಚಳಿಯದೆ ಉಳಿದಿದೆ. ವಿಶ್ವಭವನದಲ್ಲಿ ನಾನು ಅವರು ಜತೆಯಾಗಿ ತಿನ್ನುತ್ತಿದ್ದ ಇಡ್ಲೀ ಸಾಂಬಾರ್ ರವಾದೋಸೆಯ ನೆನಪು ಮಾವ ಎಂದೋಡನೆ ನೆನಪಿಗೆ ಬರುತ್ತದೆ. ಹಳೆಯ ಉಡುಪಿ ಕೃಷ್ಣ ಭವನ...(ಈಗಿನ ದೊಡ್ಡ ಐಡಿಯಲ್ ಐಸ್ಕ್ರೀಮ್ ಪಕ್ಕದ ಕಟ್ಟಡದಲ್ಲಿ)ದಲ್ಲಿನ ಉದ್ದಿನ ಬಿಸ್ಕಿಟ್ ಅಂಬಡೆ ಸಾಂಬಾರ್ ಮಾವನ ಪ್ರಿಯವಾದ ತಿಂಡಿ.


ಹತ್ತು ಹಲವು ತಿಂಡಿಗಳನ್ನು ಮಾಡಲು ಬಲ್ಲ ಮಾವ ಚಕ್ಕುಲಿ ಎಳ್ಳುಂಡೆಯ ತಯಾರಿಯಲ್ಲಿ ತನ್ನದೇ ತಂತ್ರಜ್ಞಾನವನ್ನು ತುಂಬುತ್ತಿದ್ದರು. ವ್ಯಾಪಾರಿ ಉದ್ದೇಶಕ್ಕೆ ಇವರ ಅದ್ಭುತ ಟಿಪ್ಸ್ ಗಳು ಮತ್ತು ಇವುಗಳ ತಯಾರಿಯನ್ನು ಅವರಿಂದಲೇ ನಾನು ಕಲಿತದ್ದು ಮಾತ್ರವಲ್ಲ ಪ್ರಥಮದಲ್ಲಿ ಅದೇ ನನ್ನ ಜೀವನ ರೂಪೀಕರಣಕ್ಕೂ ಹಾದಿಯಾಗಿತ್ತು. ಕೆಲಸದಲ್ಲೂ ಹಾಗೆ ಅತ್ಯಂತ ವೇಗವಾದ ಕೆಲಸ ಮಾವನ ಶೈಲಿ. ಯಾವುದೇ ಕೆಲಸವನ್ನಾದರೂ ಬೇಗನೆ ಮುಗಿಸಿ ಮತ್ತೆ ಸುಮ್ಮನೆ ಮಲಗುವುದು ಮಾವನ ಪ್ರಿಯವಾದ ಶೈಲಿ. ಎರಡು ಮೂರು ಜನರ ಕೆಲಸವನ್ನು ಒಬ್ಬರೇ ಮಾಡುವ ಜಾಣತನ ಮಾವನಲ್ಲಿ ಅಪಾರ. ಇತ್ತಿಚೆಗೆ ಹಲವು ತಿಂಡಿ ವ್ಯಾಪಾರಿಗಳು ಇದರ ಲಾಭ ಪಡೆದದ್ದಿದೆ.


ನಾನು ಮರೆಯದ ಹಲವು ಹವ್ಯಾಸಗಳು ಒಂದು ತರಕಾರಿ ಬೆಳೆಯುವುದು ಮತ್ತು ಅಡುಗೆಕೆಲಸ. ಮಂಗಳೂರಿನ ಸ್ಥಳದಲ್ಲಿ ಊರಿನ ಉತ್ತಮ ಬೆಂಡೇಕಾಯಿ ಸ್ವಂತ ಕೃಷಿ ಮಾಡುತ್ತಿದ್ದರು.  ಅದು ಉದ್ದ ತಳವಾರಿನ ಹಾಗೆ ಅಗುತ್ತಿತ್ತು. ಹೀರೆಕಾಯಿ .. ಕೆಸುವು ಮತ್ತು ಹಾಗಲ ಕಾಯಿ ಮಾವನ ಪ್ರಿಯ ತರಕಾರಿಗಳು. ಇವುಗಳ ರುಚಿ ಅಸ್ವಾದನೆಯನ್ನು ನನಗೆ ಕಲಿಸಿದ್ದೇ ಮಾವ. ಇಂದಿಗೂ ನನ್ನ ಅತಿಪ್ರಿಯ ತರಕಾರಿ ಹಾಗಲ. ಹತ್ತು ಹಲವು ರೀತಿಯ ಹಾಗಲಕಾಯಿ ವಿಭವಗಳ ತಯಾರಿಯಲ್ಲಿ ಮಾವ ಸಿದ್ದಹಸ್ತರು.

ಚಂದಮಾವ ಎಂದೊಡನೆ ಅವರೊಂದಿಗೆ ಕಳೆದ ಹಲವು ರಸಘಳಿಗೆಗಳಲ್ಲಿ  ಒಂದು.. ನಾವೆಲ್ಲ ಮಕ್ಕಳು ರಾತ್ರಿ ಬೇಗನೇ ಊಟ ಮಾಡಿ ಮಲಗುತ್ತಿದ್ದೆವು. ತಡ ರಾತ್ರಿಯಲ್ಲಿ ಮನೆಗೆ ಬಂದ ಇವರು ಅತ್ತೆಯಲ್ಲಿ ಊಟಕ್ಕೆ ಏನೇ? ಎಂದು ವಿಚಾರಿಸಿ ಮಾಡಿದ ಅಡುಗೆ ಇಷ್ಟವಿಲ್ಲದೆ ... ಅಂಗಳ ದ ಮೂಲೆಗೆ  ಸ್ವತಹ ಬೆಳೆಸಿದ ಬೆಂಡೇಕಾಯಿ ಅಥವಾ ಪಡುವಲ ಕಾಯಿಯನ್ನು ಅದೂ ಅತ್ಯಂತ ತುಂಬಾ ಎಳೆಯದಾಗಿ ಇರುವದ್ದನ್ನು ಹಸಿ ಹಸಿಯಾಗಿ ಒಂದೆರಡನ್ನು ಕೊಯಿದು ತರುತ್ತಿದ್ದರು. ಆರಾತ್ರಿ ಅವರ ಆಡುಗೆ ಶುರು. ತಂದು ಬೇಗನೆ ಬೇಗನೆ ಹೆಚ್ಚಿ..ಪಲ್ಯತಯಾರಿ. ಅದರ ಪರಿಮಳಕ್ಕೆ ನಮಗೆ ಎಚ್ಚರವಾಗುತ್ತಿತ್ತು. ಆದರು ದೊಡ್ಡಮ್ಮನ ಭಯದಿಂದ ಹಾಗೆ ಮಲಗಿದ್ದರೆ ಊಟ ಮಾಡುತ್ತಿದ್ದ ;ಇವರು...” ರಾಜ ಮಲಗಿದಿಯಾ..? ನಿದ್ದೆ ಬಂತ.. ? “ ಅಂತ ಕರೆದಾರು ನಾನು ದಿಗ್ಗನೆ ಎದ್ದು ಪುನಃ ಪಲ್ಯ ಅನ್ನ ಊಟ ಮಾಡಿ ಮಲಗುತ್ತಿದ್ದೆ. ಯಾವುದು ಮರೆತರು ಇದನ್ನು ಮರೆಯಲಾರೆ. ಅದ್ಭುತ ರುಚಿಯ ಇಂತ ಹಲವು  ಅಡುಗೆ ಮಾವನ ವಿಶೇಷತೆ.  ಊಟದಲ್ಲೂ ಅಷ್ಟೇ ಎಲ್ಲರೂ ಪಲ್ಯದ ಹೋಳು ತೆಗೆದುಕೊಳ್ಳುತ್ತಿದ್ದರೆ ಇವರು ಪಲ್ಯದ ಜತೆಗೆ ಇರುತ್ತಿದ್ದ ಬರೀ ರಸ.. ಅದು ಒಗ್ಗರಣೆ ಮಿಶ್ರಿತವಾಗಿ ಇದ್ದದ್ದನ್ನು ಸಾರಿನಂತೆ ಹಾಕಿ ಊಟ ಮಾಡುತ್ತಿದ್ದರು. ಮತ್ತು ಈ ರುಚಿಯನ್ನು ನನಗೂ ಹಿಡಿಸಿದ್ದರು. ನಮ್ಮಲ್ಲಿ ಸಾಮಾನ್ಯವಾಗಿ ರುಚಿಯಾಗಿ ಅಡುಗೆ  ಮಾಡುವುದರಲ್ಲಿ ಹೆಂಗಸರಿಗಿಂತ  ಗಂಡಸರೇ ಮುಂದು. ಅದರೆ ಮಾವ ಇದರಲ್ಲೂ  ಎತ್ತಿದ ಕೈ. ಅದರಲ್ಲೂ ತನಗೆ ಬೇಕಾದದ್ದನ್ನು ತಾನೆ ಅಚ್ಚುಕಟ್ಟಾಗಿ ಮಾಡಿತಿನ್ನುತ್ತಿದ್ದರು. ಮಧ್ಯಾಹ್ನ ಒಂದು ಗಂಟೆಗೆ ಆಡುಗೆ ಮಾಡಲು ಹೋಗುವ ಇವರು ಒಂದೂವರೆಗೆ ಎಲ್ಲ ಸಿದ್ದಗೊಳಿಸಿ ಊಟಕ್ಕೆ ಕೂರುತ್ತಿದ್ದರು. ಅತ್ಯಂತ ಕ್ಷಿಪ್ರ ಅಷ್ಟೇ ರುಚಿಯಾದ ಅಡುಗೆ. ಇದನ್ನು ನಾನು ಬಹಳ ಇಷ್ಟ ಪಟ್ಟು ನನ್ನಲ್ಲೂ ಅಲವಡಿಸುವ ಪ್ರಯತ್ನ ಮಾಡಿದ್ದೇನೆ. ನನಗೆ ಬೇಕು ಅನ್ನಿಸಿದ್ದು ನಾನೆ ಮಾಡಿ ತಿನ್ನುವ ಗುಣ ನಾನು ಕಲಿತಿದ್ದರೆ ಅದು ಇವರಿಂದ. ಸಾಧ್ಯವಾದಷ್ಟು ಅವರದೇ ಶೈಲಿಯನ್ನು ಅನುಕರಿಸುತ್ತಿದ್ದೇನ. ಮತ್ತು ನನ್ನ ಅತಿಪ್ರಿಯವಾದ ಹವ್ಯಾಸ ವೂ ಆಗಿದೆ. ಇದರಿಂದಾಗಿ ನನ್ನ ಅಡುಗೆ ನನ್ನ ತಮ್ಮನಿಗೆ ಅತ್ಯಂತ ಪ್ರಿಯವಾಗಿ ಪರಿಣಮಿಸಿದೆ.

ಹೀಗೆ ಒಂದೆರಡಲ್ಲ.. ಹಲವು ವೇದ ಮಂತ್ರ ಶ್ಲೋಕಗಳಿಗೆ ಮೊದಲು ನನಗೆ ಮಾವನೇ ಗುರು. ಉತ್ತಮವಾಗಿ ಭಜನೆ ಮಾಡುವ ಗುಣ ಅಲ್ಪಸ್ವಲ್ಪ ನಾನು ಕಲಿತಿದ್ದೆ. ಮಂಗಳೂರಿನ ಪರಿಸರದಲ್ಲಿ ಹಲವು ಕಡೆ ಹೋದದ್ದು ನೆನಪಿದೆ. ಹಲವು ಪ್ರತಿಭೆಗಳ ಜತೆ ಅತ್ಯಂತ ವಿಶಿಷ್ಟ ಗುಣಗಳು ಬಹುಶಃ ಮಾವನ ಮೇರುವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ಅವುಗಳಲ್ಲಿ ಅತ್ಯಂತ ವಿಶಿಷ್ಟವಾದದ್ದು ನಿಸ್ವಾರ್ಥ ಸ್ವಭಾವ ..ತನಗಾಗಿ ಮಾವ ಎನೂ ಮಾಡಲಿಲ್ಲ. ಒಂದು ಪಂಚೆಯಾಗಲಿ ವಸ್ತುವಾಗಲಿ ಮಾವ ಬಯಸಲಿಲ್ಲ. ಅತ್ಯಂತ ತಾಳ್ಮೆಯ ಸ್ವಭಾವ. ಇವರ ನಿಸ್ವಾರ್ಥತೆ ಹಲವು ನಿದರ್ಶನಗಳು ಬದುಕಿನುದ್ದಕ್ಕೂ ಸಿಗುತ್ತದೆ.

ಮಂಗಳೂರಿನ ಮನೆಯಲ್ಲಿ ಉಳಿದುಕೊಂಡು ಕಾಲೇಜು ವಿದ್ಯಾಭ್ಯಾಸ ಮಾಡಿದ ಹಲವು ವ್ಯಕ್ತಿಗಳಿದ್ದಾರೆ. ಉಚಿತವಾಗಿ ಊಟ ಉಂಡು ವಿದ್ಯಾಭ್ಯಾಸ ಮಾಡಿದವರು ಇಂದು ಬದುಕಿನಲ್ಲಿ ತಮ್ಮದೇ ನೆಲೆಗಳನ್ನು ಕಂಡು ಕೊಂಡು ಬ್ಯಾಂಕ್ ಮ್ಯಾನೇಜರ್ ಅಥವಾ ಇನ್ಯಾವುದೊ ಹುದ್ದೆಯಲ್ಲಿದ್ದರೆ ಮಾವ ಮಾತ್ರ ಅದೇ ತುಂಡು ಪಂಚೆ ಬೈರಾಸಿನ ಬೈರಾಗಿಯಾಗಿಯೇ ಕೊನೆವರೆಗೆ ಉಳಿದದ್ದು ಬದುಕಿನ ವಿಚಿತ್ರ. ಎಂತಹ ತ್ಯಾಗ ಮನೋಭಾವ..ಅದು ಮಾತ್ರ ಪ್ರಸಿದ್ದಿಗೆ ಬರಲೇ ಇಲ್ಲ. ಮಾವ ಪ್ರಸಿದ್ಧಿಯ ಹಿಂದೆ ಹೋಗಲೂ ಇಲ್ಲ. ಯಾವತ್ತಿಗೂ ದುಡ್ಡಿನ ಹಿಂದೆ ಹೋಗದ ನಿಸ್ವಾರ್ಥತೆ... ಕೊನೇವರೆಗೂ ಹೇಳಿದ ಮಾತು ದುಡ್ಡು, ಅದು ನಾನು ಮಾಡುತ್ತಿದ್ದರೆ ಕಟ್ಟಿ ಇಡುತ್ತಿದ್ದರೆ ಇಂದು ಈ ಮಾಮ ಬೇರೆಯೆ ಅಗುತ್ತಿದ್ದ. ಸ್ವಂತ ಮಕ್ಕಳಿಗಿಂತ ಪರರಿಗೆ ನೀಡಿದ್ದೇ ಅಧಿಕ. ನನ್ನ ಅರಿವಿನಲ್ಲೇ ಹಲವು ವ್ಯಕ್ತಿಗಳು ಬಂದು ಹೋಗುತ್ತಾರೆ.

ಮೊನ್ನೆಯ ದಿನ ನಿಸ್ತೇಜ ಶರೀರ ಕಂಪನವಿಲ್ಲದೇ ಬದುಕಿನ ಪೂರ್ಣ ವಿರಾಮ ಹಾಕಿ ಮಲಗಿತ್ತು. ನನ್ನನ್ನು ಮುದ್ದಿಸಿ ಬೆಳೆಸಿದ ತುಟಿಗೆ ಹಾಕಿದ ಗಂಗೋದಕ ತೊಟ್ಟಿಕ್ಕುತ್ತಿತ್ತು. ಭಾವನಾರಹಿತ ಮುಖ ಬಡಿತವಿಲ್ಲದ ಎದೆ... ಎಲ್ಲವೂ ನಿಶ್ಚಲ. ಸಾವು ಎಂಬುದು ಎಲ್ಲ ಸಮಸ್ಯೆಗೂ ಪರಿಹಾರವೆಂಬಂತೆ ಪಾರ್ಥಿವಶರೀರ ಸಾಕ್ಷಿಯಾಗಿ ಮಲಗಿತ್ತು. ಯಾವಾಗಲೂ ನನ್ನನ್ನು ಕಂಡಾಗ ಬಿಕ್ಕಿ ಬಿಕ್ಕಿ ಅಳುವ ಭಾವನಾಜೀವಿ , ನನ್ನ ಕೈ ಹಿಡಿದು ತನ್ನ ತೋಳನ್ನು ಮಡಿಲನ್ನು ತೋರಿಸುವ ಮಾವನ ಕೈಗಳು ಎಲ್ಲಿದೆ ಎಂದು ಅರಸಿದೆ. ಕೊನೆಗೊಂದು ಬಾರಿಯಾದರೂ ಮಮತೆಯ ಮಾಮ ಜೀವ ತಳೆದಾರೆ.? ಸೋಮವಾರ , ಸಂಕಷ್ಟಿ.. ಉತ್ತರಾಯಣ..ಕೃಷ್ಣಪಕ್ಷ ಬಂದವರಲ್ಲಿ ಯಾರೋ ಹೇಳುತ್ತಿದ್ದರು ಈ ಆತ್ಮಕ್ಕೆ ಮೋಕ್ಷ ಬರೆದಿಟ್ಟಾಗಿದೆ. ಹೌದು ಪರಮಾತ್ಮ ಈ ಆತ್ಮಕ್ಕೆ ಅಷ್ಟಾದರೂ ದಯಪಾಲಿಸಲಿ ಅಂತರಾತ್ಮ ಕಂಬನಿದುಂಬಿ ಬೇಡಿತು. ಮನಸ್ಸು ಪರಮಾತ್ಮನಲ್ಲಿ ಕೇಳಿತು .. ಹೇ ಪರಮಾತ್ಮ  ನನ್ನ ಚಂದಮಾಮ ನಿನಗೂ ಇಷ್ಟು ಬೇಗ ಪ್ರಿಯವಾದರೆ? ಈ ಚಂದಮಾಮ ಎಂದಿಗೂ ನನ್ನ ಬದುಕಿನಲ್ಲಿ ಹೊಳೆಯುವ ಚಂದಮಾಮನಾಗಲಿ... ಮಾವನ ಹೇಳುತ್ತಿದ್ದ ಹಾಡು ಅಪ್ರಯತ್ನವಾಗಿ ಗುನುಗುನಿಸುತ್ತಿತ್ತು ಮನ...ಅಮರ ಮಧುರ ಪ್ರೇಮ .. ಬಾ ಬೇಗ ಚಂದಮಾಮ ಬಾ ಬೇಗ ಚಂದಮಾಮ..... ಬರಬಹುದೇ?

Saturday, December 25, 2010

ಕಾಡುತ್ತಿರುವ ಕಾಂಡಿಮೆಂಟ್ಸುಗಳು


ಹಿಂದಿನ ಲೇಖನವೊಂದರಲ್ಲಿ ಬೆಂಗಳೂರಿನ ಕರ್ಕಶ ಆಟೋಗಳ ಬಗ್ಗೆ ಬರೆದಿದ್ದೆ. ಇದು ಒಂದು ರೀತಿ ಆ ಬಗೆಯದ್ದೆ.  ಬೆಂಗಳೂರಿನಲ್ಲಿ ಮನೆಯಿಂದ ಹೊರಬಂದು ಒಂದು ಫರ್ಲಾಂಗು ದೂರ ರಸ್ತೆಯಲ್ಲಿ  ನಡೆದರು ಸಾಕು ಕನಿಷ್ಠ ಒಂದೆರಡಾದರೂ ಕಾಂಡಿಮೆಂಟ್ಸ್  ಅಂಗಡಿ ಸಿಗದೆ ಇರಲಾರದು. ಏನು ಈ ಕಾಂಡಿಮೆಂಟ್ಸು ಅಂಗಡಿಗಳ ತೊಂದರೆ ಎಂದು ತಲೆ ಕೆರೆದುಕೊಳ್ಳುವ ಅವಶ್ಯಕತೆ ಇಲ್ಲ. ತೊಂದರೆ ಖಂಡಿತ ಆ ವ್ಯವಹಾರ ಮಾಡುವ ಬಡಪಾಯಿಗಳದ್ದಲ್ಲ ಬಿಡಿ. ಇದು ಇಲ್ಲಿನ ವಿಚಿತ್ರ ಜನಜೀವನದ ರೀತಿಯ ಪರಿಣಾಮ.

ಕಾಂಡಿಮೆಂಟ್ಸು ಅಂಗಡಿಗಳೆಂದರೆ ನಮ್ಮೂರವರಿಗೆ ಹೇಳಿದರೆ ಎಂಥದ್ದೋ ಎಣ್ಣೆಯಲ್ಲಿ ಕರಿದ ತಿಂಡಿ ಮಾರುವ ಅಂಗಡಿ ಇರಬೇಕೆಂದು ಊಹಿಸಿಯಾರು. ಅದರೆ ಇಲ್ಲಿ ಕಂಡವರಿಗೆ ಗೊತ್ತು ಅದು ಕೇವಲ ತಿಂಡಿ ಮಾರುವ ಅಂಗಡಿಯಲ್ಲ. ನಮ್ಮೂರಿನ ಸೋಂಪಣ್ಣನ ಗೂಡಂಗಡಿಯಂತೆ ಸರ್ವ ವ್ಯವಹಾರವೂ ನಡೆಯಬಲ್ಲ ಸ್ಥಳವಿದು. ಗೂಡಂಗಡಿಯಲ್ಲಿದ್ದಂತೆ ಇಲ್ಲಿ ಹಲವು ತಿಂಡಿತಿನಸುಗಳ ಜೊತೆಗೆ ಚಹ ಕಾಫಿ ಮಾತ್ರವಲ್ಲ ಬೀಡಿ ಸಿಗರೇಟು ಅಲ್ಲದೆ ಗುಟ್ಕಾಗಳ ಸರಮಾಲೆ ಕೂಡ ಸಿಗುತ್ತದೆ. ಸಿಕ್ಕರೆ ಸಿಗಲಿ ಬಿಡಿ. ಅದಕ್ಕೇನು? ಬೇಕಾದ ಗಿರಾಕಿಗಳಿದ್ದರೆ ಮಾರುವವರಿಗೇನು? ಗಿರಾಕಿಗಳಿದ್ದರೆ ಸರ್ವಸ್ವವನ್ನು ಮಾರಾಟ ಮಾಡುವ ಪ್ರಪಂಚವಲ್ಲವೇ? ವ್ಯವಹಾರ ಎಂಬುದು ಗ್ರಾಹಕ ಮತ್ತು ಮಾರಾಟಗಾರನ ನಡುವೆ ಮಾತ್ರ ಅದರ ಪ್ರಭಾವ ಇದ್ದರೆ ಪರವಾಗಿಲ್ಲ. ಆದರೆ ಅದಕ್ಕೆ ಸಂಬಂಧಿಸದವನು ತೊಂದರೆ ಅನುಭವಿಸಿದರೆ? ಬಹಳ ವರ್ಷಗಳ ಮೊದಲು ನಮ್ಮ ಬಾಲ್ಯದ ಸಮಯ. ಆವಾಗ ಮಂಗಳೂರಿನಿಂದ ಬಾಯಾರಿಗೆ ನಾವೆ ಸ್ವತಂತ್ರವಾಗಿ ಬಸ್ಸಿನಲ್ಲಿ ಓಡಾಡಿಕೊಂಡಿದ್ದೆವು. ಹೌದು, ಅದೂ ನಮ್ಮ  ಆರು ಏಳನೇ ವಯಸ್ಸಿನಲ್ಲಿ. ಆಗ ಮಂಗಳೂರಿನ ಹಂಪನಕಟ್ಟೆಯಿಂದ ನೇರ ಬಸ್ಸು ಉಪ್ಪಳ ಅಥವಾ ಬಾಯಾರಿಗೆ ಇದ್ದಿಲ್ಲ. ಮನೆಯಿಂದ ಹೊರಡುವಾಗಲೇ ಹಿರಿಯರು ತಾಕೀತು ಮಾಡಿ ಕಳಿಸುತ್ತಿದ್ದರು ಹಂಪನಕಟ್ಟೆಯಿಂದ ಬಸ್ ಹೊರಡುವ ಜಾಗದಿಂದ ಸಿಟಿಬಸ್ ೪೨ ಅಥವಾ ೪೩ ಹಿಡಿದು ಕೊನೆಯ ತಾಣವಾದ ತಲಪಾಡಿಯವರೆಗೆ ಹೋಗಬೇಕು. ಮಧ್ಯೆ ಎಲ್ಲಿಯೂ ಇಳಿಯಬಾರದು. ತಲಪಾಡಿ ಎಂಬ ಕರ್ನಾಟಕ ಕೇರಳದ ಗಡಿ ಭಾಗದ ಪ್ರದೇಶ ಈಗಿನಂತೆ ಗುಡ್ಡದ ತುದಿಯಲ್ಲಿ ಇರಲಿಲ್ಲ ಬದಲಾಗಿ ತಲಪಾಡಿ ಸೇತುವೆಯ ಮೊದಲೇ ಎರಡು ಭಾಗದ ಬಸ್ ಬಂದು ತಿರುಗುತ್ತಿತ್ತು. ನಮಗೂ ಹಾಗೆ ರಾಜ್ಯಗಳ ವೆತ್ಯಾಸ ಅಷ್ಟಾಗಿ ತಿಳಿಯದಿದ್ದರೂ ನಮ್ಮೂರಿಗೆ ಹೋಗುವ ಬಸ್ ಹಿಡಿದು ಹೋಗುವ ಜ್ಞಾನವಂತೂ ಇತ್ತು. ಹಾಗೆ ಮಂಗಳೂರಿನ ಬಸ್ ಇಳಿದು ಕಾಸರಗೋಡಿನತ್ತ ಹೋಗುವ ಬಸ್ ಗಳಲ್ಲಿ ಸ್ವಲ್ಪ ತಡವಾಗಿ ಹೋಗುವ ಬಸ್ಸನ್ನು ನಾವು ಹಿಡಿಯುವುದು ಸ್ವಾಭಾವಿಕ. ಏಕೆಂದರೆ ಕಿಟಿಕೀ ಪಕ್ಕದ ಸೀಟು ಸಿಗುತ್ತಿತ್ತು. ಸಣ್ಣ ಮಕ್ಕಳು ನೋಡಿ ಕಿಟಿಕಿ ಪಕ್ಕದ ಸೀಟು ದೊರಕಿಸಿಕೊಂಡರೂ ಬಸ್ ಹೊರಟು ಜನರಿಂದ ತುಂಬಿದಾಗ ಯಾರಾದರೂ ಹಿರಿಯರು ನಮ್ಮನ್ನು ತಮ್ಮ ಮಡಿಲಲ್ಲಿ ಕೂರಿಸಿ ನಮ್ಮ ಸೀಟು ಆಕ್ರಮಿಸಿಬಿಡುತ್ತಿದ್ದರು. ಇರಲಿ, ಬಸ್ ಅಲ್ಲಿ ಹೊರಡಲು ನಿಂತಿರಬೇಕಾದರೆ ಸಹಜವಾಗಿ ನಾನಾ ವಸ್ತುವನ್ನು ಮಾರಾಟಮಾಡುವವರು ಇದ್ದೇ ಇರುತ್ತಾರೆ ಬಿಡಿ. ಹಣ್ಣು ಅವುಗಳಲ್ಲೂ ಕಿತ್ತಳೆ ಹಣ್ಣು, “ಓ..ರೆಂಜ್.” ಎಂದು ಬೊಬ್ಬಿಡುತ್ತಾ ನಾವಿದ್ದಲ್ಲಿಗೆ ಬಂದಾಗ ನಮ್ಮ ಪಕ್ಕದಲ್ಲಿದ್ದವರು ಕೊಂಡುಕೊಂಡು ನಮ್ಮ ಮಡಿಲಲ್ಲಿ ಏರಿಸಿಬಿಡುತ್ತಿದ್ದರು. ಮಾರುವವ ಯಾರೋ ಗಿರಾಕಿ ಯಾರೋ ನಾವೊಂದು ಮಧ್ಯವರ್ತಿಯಾಗಿಬಿಡುತ್ತಿದ್ದೆವು.

ಓಹ್ ಮಾತು ಎಲ್ಲೇಲ್ಲಿಗೋ ಹೋಯಿತು. ವಿಷಯ ಪ್ರಸ್ತಾಪಿಸುವಾಗ ಒಂದೊಂದೇ ಜ್ಞಾಪಕಕ್ಕೆ ಬಂದು ಬಿಡುತ್ತದೆ. ಯಾವುದೇ ವಿಷಯವಾದರು ಬೆಂಗಳೂರಿಗೂ ನಮ್ಮೂರಿಗೂ ಮೊದಲು ನಾವು ಹೋಲಿಕೆ ಮಾಡಿಬಿಡುತ್ತೇವೆ. ಇಲ್ಲೂ ಅದೇ, ಇರಲಿ ಬಿಡಿ.
ಇಲ್ಲಿನ ಕಾಂಡಿಮೆಂಟ್ಸ್ ಅಂಗಡಿ ಸಾಮಾನ್ಯವಾಗಿ ಅಂಗಡಿ ಚಿಕ್ಕದಾಗಿದ್ದು ಗಿರಾಕಿಗಳೆಲ್ಲ ಪುಟ್ ಪಾತ್ ನಲ್ಲೇ ಟೀ ಕಾಫಿ ಹೀರುತ್ತಾ ಅತ್ತ ಇತ್ತ ಹೋಗುವವರಲ್ಲಿ ಯಾರು ಅಂಗಡಿ ಗಿರಾಕಿ ಯಾರು ಪಾದಾಚಾರಿ ಎಂಬುದೇ ಮೊದಲು ಅರಿವಾಗುದಿಲ್ಲ. ಆದರೇನಂತೆ ? ಇಲ್ಲೇ ಇದೆ ತೊಂದರೆ. ನಾನು ಕಂಡ ಇಲ್ಲಿನ ವಿಚಿತ್ರ ಪದ್ದತಿಯಲ್ಲಿ ಒಂದು ಇದು. ಜನ ಕಾಫಿ ಚಹದ ಜತೆ ಸಿಗರೇಟ್ ಸೇದುವುದು. ಕಾಫಿ ಟೀ ಜತೆ ಸಿಗರೇಟ್ ಹೋಗೆಯನ್ನು ನುಂಗುವ ವಿಚಿತ್ರ ಕ್ರಮ ಇಲ್ಲಿ ನಾನು ಮೊದಲು ಕಂಡದ್ದು. ನಮ್ಮೂರ ಗೂಡಂಗಡಿಯಲ್ಲಿ ಚಹದ ಜತೆ ಎನಾದರೂ ಕುರುಕಲು ತಿಂಡಿಯೊ, ಬ್ರೆಡ್ ಬನ್ನು ಮುಂತಾದುವನ್ನು ತಿಂದರೆ ಇಲ್ಲೇನು ವಿಚಿತ್ರ ಖಯಾಲಿ ಹೊಗೆಯನ್ನು ನುಂಗುವುದೇ? ಪಾನೀಯದ ಜತೆ ಹೊಗೆ ಒಳ ಹೋದರೆ “ಕಿಕ್” ಸ್ವಲ್ಪ ಸಿಗುವುದೇ ಎಂದು ಆಶ್ಚರ್ಯವಾಗುತ್ತದೆ.  ವಿಚಿತ್ರ ಜೀವನ ಕ್ರಮಗಳು.!! ಕಾಪಿ ಹೀರುತ್ತಾ ಹೋಗೆ ಬಿಡುತ್ತಿದ್ದರೆ ಪಾದಾಚಾರಿಯಾಗಿ ನಡೆದಾಡುವ ಧೂಮ ವ್ಯಸನಿಯಲ್ಲದವ ಏನು ಮಾಡಬೇಕು? ಉಸಿರು ಬಿಗಿ ಹಿಡಿಯಬೇಕೆ? ಬೆಂಗಳೂರಿನಲ್ಲಿ ಅತ್ಯಧಿಕ ವಾಹನದಹೊಗೆಯ ಜತೆಗೆ ಈ ಸಿಗರೇಟು ಧೂಮಪಾನದ  ಅನಿವಾರ್ಯತೆಯನ್ನು   ಎಲ್ಲರಿಗೂ  ತಂದಿಡುವ ಈ ಮಂದಿಯನ್ನು ಏನೆನ್ನಬೇಕು? “ಧೂಮ ಪಾನ ಆರೋಗ್ಯಕ್ಕೆ ಹಾನಿಕರ !!!!”  ಇದನ್ನು ಓದುತ್ತಾ ಹೊಗೆಬಿಡುವ ಮಂದಿಗೆ ಈ ಹೊಗೆ ಯಾರ ಆರೋಗ್ಯಕ್ಕೆ ಹಾನಿಕರ ಎಂದು ತಿಳಿಯದೋ ಏನೋ? ಒಂದು ಕೈಯಲ್ಲಿ ಟೀ , ಕಾಫಿ ಲೋಟ ಮತ್ತೋಂದು ಕೈಬೆರಳ ಸಂದಿ ಹೊಗೆಯುಗುಳುವ ಸಿಗರೇಟು. ಪ್ರತೀ ಗುಟುಕಿನೊಂದಿಗೆ ಬುಸು ಬುಸು ಹೊಗೆ ಅಕ್ಕ ಪಕ್ಕದಲ್ಲಿ ಸಂಚರಿಸುವವರ ಮುಖಕ್ಕೆ ಬಿಡುವ ಇವರಿಗೆ ಅಲ್ಪ ಪರಿಜ್ಞಾನವೂ ಇಲ್ಲವಲ್ಲ. ಇದೆಂತಹ ಕ್ರಮ? ಯಾರನ್ನು ಹೇಳಬಲ್ಲೆವು. ಜೀವನೋಪಾಯಕ್ಕೆ ಅಂಗಡಿ ಇಟ್ಟವನನ್ನೆ? ಅಲ್ಲ ಲೋಕವೇ ಹಾಳಾಗಲಿ ಎಂದು ಧೂಮ ಬಿಡುವ ಧೂಮಕೇತುಗಳನ್ನೆ? ಇವರ ಅನಾಗರಿಕ ಚಟಕ್ಕೆ ಮಿಕ್ಕವರನ್ನೇಕೆ ಬಲಿಪಶುವಾಗಿ ಮಾಡಬೇಕು?

ತೊಂದರೆ ಎಂಬುದು ಅತ್ತ ಇತ್ತ ಹೋಗುವವರಿಗೆ , ಸುತ್ತಲ ಪರಿಸರಕ್ಕೆ ಮಾತ್ರವಲ್ಲ , ಈ ಅಂಗಡಿ ಇರುವಲ್ಲೆ ಮೇಲೆ ವಾಸದ ಮನೆ ಇರುತ್ತದೆ ಎಂದಿಟ್ಟುಕೊಂಡರೆ..(ಸಾಮಾನ್ಯವಾಗಿ ಹೀಗೆ ಇರುತ್ತದೆ) ಮೇಲೆ ಮಹಡಿಯಲ್ಲಿ ಮನೆ ಮಾಡಿ ವಾಸಿಸುವ ಮಂದಿಗೆ ಈ ನಿತ್ಯ ಹೋಗೆಯಿಂದ ಮುಕ್ತಿ ಇದೆಯೇ? ಯಾರು ಯೋಚಿಸಬಲ್ಲ? ಸಣ್ಣ ಸಣ್ಣ ಮಗುವಿಗೂ ಹೃದಯ ಬೇನೆ ಶುರುವಾಗುವಾಗ ನಾವು ಇದರ ಬಗ್ಗೆ ಚಿಂತಿಸುವುದೇ ಇಲ್ಲ. ಅಷ್ಟೊಂದು ಅನಿವರ್ಯವೇ ಈ ಧೂಮ ಪಾನ? ತನಗೂ ಪರರಿಗೂ ಪರಿಸರಕ್ಕೂ ಮಾರಕವಾಗುವ ಈ ಚಟವನ್ನು ಅಷ್ಟೇಕೆ ಮೋಹಿಸುತ್ತಾರೆ ಎಂಬುದೇ ಆಶ್ಚರ್ಯ. ಬೆಂಗಳೂರಿನ ಯಾವುದೇ ಗಲ್ಲಿಯಲ್ಲಿ ನೋಡಿ ಹಲವು ಅಂಗಡಿಗಳಿವೆ. ಎಲ್ಲ ಅಂಗಡಿ ಪರಿಸರಕೂಡ ಸಿಗರೇಟು ವಾಸನೆಯಿಂದ ಗಬ್ಬೆದ್ದು ಹೋಗಿರುತ್ತದೆ.  ಈ ಕಾಂಡಿಮೆಂಟ್ಸ್ ಎಂಬ ಧೂಮ ಹಂಚುವ ಕೇಂದ್ರದ ಬಗ್ಗೆ ಯಾರಿಗೂ ಏನೂ ಅನ್ನಿಸುವುದಿಲ್ಲವೇಕೆ?

ಬೆಳಗ್ಗಿನ ಹವಾಸೇವನೆಗಾಗಿ   ವಾಕಿಂಗ್ ಹೋರಟೆವೋ....ಇನ್ನು ವಿಚಿತ್ರ ಕೇಳಿ. ಹತ್ತಿರದ ಪಾರ್ಕ್ ಈ ವಾಕಿಗಳಿಂದ ಭರ್ತಿಯಾಗಿರುತ್ತದೆ. ಮಂಗಳೂರಿನ ಥಿಯೇಟರ್ ಎದುರು ಸಿನಿಮಾ ಬಿಟ್ಟಾಗ ಹೊರಬರುವ ಜನಸಂದಣಿಯಂತೆ ಪಾರ್ಕ್ ನೊಳಗೆ ಜನ ಸಂದಣಿಸಿ ಹೋಗಿರುತ್ತಾರೆ. ನಾನಾ ಕಸರತ್ತು ಮಾಡುತ್ತಾ ತಮ್ಮ ಆರೋಗ್ಯ ಪ್ರಜ್ಞೆ ಜಾಗೃತವಾಗಿದೆ ಎಂದು ಪ್ರದರ್ಶನ ಮಾಡುತ್ತಾರೆ. ಅದರ ಮಧ್ಯೆ ಕೆಲವರು ಸಿಗರೇಟ್ ಸೇದುವುದು ಇರುತ್ತದೆ...!!! ಎಂತಹ ಆರೋಗ್ಯ ಪ್ರಜ್ಞೆ..?!!! ಪಾರ್ಕ್ ಗೆ ಬರುವುದೇ ಅಲ್ಪ ಸ್ವಲ್ವ  ಹದಗೆಡುವ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಡುವುದಕ್ಕಾಗಿ. ಆದರೆ ಅಲ್ಲೂ ಈ ಧೂಮಕೇತುಗಳ ಹಾವಳಿ. ಯಾರನ್ನು ದೂರಬೇಕು?

ಸಾರ್ವಜನಿಕ ಜಾಗಗಳಲ್ಲಿ ಧೂಮ ಪಾನ ನಿಶಿದ್ದ. ಇದು ಸುಪ್ರೀಂ ಕೊರ್ಟ್ ಆದೇಶಿಸಿದ ಕಾನೂನು. ಅದನ್ನು ಊಹಿಸಿಸುವಾಗಲೇ ಎಷ್ಟೊಂದು ಹಾಸ್ಯಾಸ್ಪದವಾಗಿ ಈ ಕಾನೂನುಗಳನ್ನು ಮಾಡಿಬಿಡುತ್ತಾರೆ. ಸ್ವಯಂ ಪ್ರಜ್ಞೆ ಇಲ್ಲವಾದರೆ ಯಾವ ಕಾನೂನು ಇದ್ದು ಏನು ಪ್ರಯೋಜನ?

ಮೊನ್ನೆ ಒಂದು ಪೋಲೀಸ್ ಸ್ಟೇಶನ್ ಎದುರು ನಡೆದು ಕೊಂಡು ಹೋಗುತ್ತಾ ಇದ್ದೆ. ಸ್ಟೇಶನ್ ನಿಂದ ಅನತಿ ದೂರದಲ್ಲೇ ಇದೇ ರೀತಿ ಒಂದು ಅಂಗಡಿ.ಕಾನ್ಸ್ ಟೇಬಲ್ ಒಬ್ಬಾತ ಕೈಯಲ್ಲಿ ಟೀ ಕಪ್ ಹಿಡಿದು ಮತ್ತೊಂದು ಕೈಯಲ್ಲಿ ಸಿಗರೇಟ್ ಸೇದುತ್ತ ಬುಸ ಬಸ ಹೊಗೆಯನ್ನು ಪಾದಾಚಾರಿಗಳಿಗೆ ನೈವೇದ್ಯ ಮಾಡುತ್ತಿದ್ದರೆ.. ಪೋಲಿಸ್ ಸ್ಟೇಶನ್ ಗೋಡಿಯಲ್ಲಿ ಬರೆದ ಬರಹ ಅಣಕಿಸುತ್ತಿತ್ತು    -  “ ಕಾನೂನನ್ನು ಗೌರವಿಸುವವರನ್ನು ನಾವೂ ಗೌರವಿಸುತ್ತೇವೆ ” ಉಚ್ಚ ನ್ಯಾಯಾಲಯದ ಕಾನೂನೇ ಇಲ್ಲಿ ನಗೆ ಪಾಟಲಾಗಿರುವಾಗ ಜನಸಾಮಾನ್ಯನ ಬದುಕು ಅಹವಾಲು ನೋಡುವವರು ಯಾರು?







Thursday, December 2, 2010

ಹೃದಯವೆಂಬ ಸಹಚಹರ



ಮುಂಜಾನೆಯ ಸೂರ್ಯ ಇನ್ನೂ ಉದಿಸಬೇಕಷ್ಟೆ. ಸುತ್ತಲು ನಿಶಭ್ದ ನಸುಕಿನ ವಾತಾವರಣ. ತಣ್ಣನೆಯ ಗಾಳಿ. ಹೊಸತೊಂದು ದಿನ ತೊಡಗುವುದಕ್ಕಾಗಿ ಎದ್ದು ಕತ್ತಲಲ್ಲೆ ಕಣ್ಣು ತೆರೆದು ಮಂಜುಗಣ್ಣಿನಲ್ಲೇ ನೆಟ್ಟನೋಟದಲ್ಲೇ ಭಗವಂತನ ಸ್ಮರಣೆ ಮಾಡಿ ಕೈಗೆಟುಕಿದ ನೀರನ್ನು ಗಟಗಟನೆ ಕುಡಿಯಲಾರಂಬಿಸುತ್ತೇನೆ. ತಣ್ಣನೆಯ ದಹಿಸುತ್ತಿರುವ ಹೊಟ್ಟೆ ಸೇರಿದಾಕ್ಷಣ ಹಾಯೆನಿಸಿ ಸ್ನಾನ ಮುಗಿಸಿ ದೇವರ ಸಾನ್ನಿಧ್ಯದಲ್ಲಿ ಸೂರ್ಯನನ್ನೇ ಧ್ಯಾನಿಸುತ್ತಾ ಪ್ರಾತಃ ಸಂಧ್ಯಾವಂದನೆ ಮುಗಿಸುತ್ತೇನೆ. ಆಗಿನ್ನು ಸೂರ್ಯ ಮೈಕೊಡವಿ ಬರಲು ಸನ್ನಾಹ ನಡೆಸುವಂತೆ ಅನ್ನಿಸಿಬಿಡುತ್ತದೆ. ಇದು ದಿನಚರಿಯ ಮೊದಲ ಘಟ್ಟ,ನಂತರವೇ ಸ್ವರ್ಗದ ಬಾಗಿಲನ್ನು ಬಡಿಯುವ ಮೈಮನಗಳ ಭಾಷೆಯ ಯೋಗಾಭ್ಯಾಸ. ಉಸಿರೆಂದರೆ ಪ್ರಾಣ . ದಿನವೂ ನಮ್ಮ ಇರವನ್ನು ತೋರಿಸುವ ಈ ಪ್ರಾಣವಾಯು ನಿಶಭ್ದವಾಗಿ ನಮಗರಿವಿಲ್ಲದೆ ಹೃದಯದ ಒಳ ಹೊಕ್ಕು ಹೊರಬಂದು ಹೋಗುವುದು ನಮ್ಮ ಅರಿವಿಗೆ ಬರಿಸುವ ಸಮಯ.

ಪದ್ಮಾಸನ ಹಾಕಿ ಕುಳಿತು ಬಿಡುತ್ತೇನೆ. ಸುತ್ತಲು ಕಣ್ಣಿಗೆ ಕಾಣುವ ಅಸ್ಪಷ್ಟ ಬಾಹ್ಯಲೋಕ. ಮನಸ್ಸನ್ನು ಸ್ಥಿರವಾಗಿಸುವ ಪ್ರಯತ್ನ. ದಿನವಿಡಿ ಭಾವನೆಗಳ ಹೊರೆಯನ್ನು ಹೊತ್ತ ಹೃದಯದಿಂದ ಭಾವನೆಗಳ ಹೊರೆಯನ್ನು ಕೆಳಗಿಳಿಸುವ ಪ್ರಯತ್ನ. ನನ್ನ ಹೃದಯವಲ್ಲವೇ.? ಮೊದಲೇ ಅತಿಭಾವುಕ ಮನುಷ್ಯನ ಹೃದಯ ನನ್ನದು. ಪ್ರತಿಘಳಿಗೆಯೂ ಭಾರವನ್ನು ಮತ್ತೂ ಮತ್ತು ಹೆಚ್ಹಿಸುಕೊಳ್ಳುವುದರಲ್ಲೇ ಮಗ್ನ. ಹೊರಗಿನ ಕತ್ತಲು ಕೇವಲ ಕಣ್ಣಿಗೆ. ಆಗ ಅದಾವುದು ನೋಡ ಬಯಸದ ಕಣ್ಣು ಮುಚ್ಹುವ ಪ್ರಯತ್ನ ಮಾಡಿದರೆ ಮನಸ್ಸು ಅಂತರ್ಮುಖಿಯಾಗುವ ಯತ್ನವನ್ನು ಮಾಡುತ್ತದೆ. ಹೊರಗುದಿಸಿದ ಸೂರ್ಯ ನೇರ ಹೃದಯಕ್ಕೆ ಬೆಳಕನ್ನು ಚೆಲ್ಲುವ ಪ್ರಯತ್ನಿಸುತ್ತಾನೆ ಅಥವಾ ಭಾವನೆ ಹೊತ್ತು ಬಸವಳಿದ ಹೃದಯ ತಂಪಾದ ಅಂತರ್ಮುಖಿ ಬೆಳಕನ್ನು ಹೀರಿ ನವ ಚೈತನ್ಯವನ್ನು ಪಡೆಯುವಲ್ಲಿ ಪ್ರಯತ್ನ ನಡೆಸುತ್ತದೆ. ನೀರವ ಮೌನದ ಹೊರಜಗತ್ತು.ಹಕ್ಕಿಗಳಿಂಚರಕ್ಕೊ , ಲೌಕಿಕ ಜಗತ್ತಿನ ಸದ್ದುಗಲಕ್ಕೋ ತೆರೆದುಕೊಳ್ಳುವ ತಕವದಲ್ಲಿದ್ದರೆ, ನಿಮಿರಿ ನಿಂತ ದೇಹದ ಎದೆಗೆ ಸವರಿ ಹೋಗುವ ತಂಗಾಳಿಯ ತಣ್ಣನೆಗೆ ಹಗುರವಾಗುವ ಹೃದಯ.ಸ್ವರ್ಗದ ಬಾಗಿಲ ಹೊಸ್ತಿಲಲ್ಲಿ ನಿಂತು ಮೃದುವಾಗಿ ಕದ ತಟ್ಟುತ್ತ ನಂತರ ಒಳ ಹೆಜ್ಜೆ ಇಡುತ್ತೇನೆ.

ದೀರ್ಘವಾದ ಉಸಿರು ಪ್ರಾಣವಾಯುವನ್ನು  ಹೀರಿದಂತೆ ನಾಸಿಕದ ತುದಿಯಿಂದ ಒಳಹೊಕ್ಕು ಭ್ರೂ ಮಧ್ಯೆ ಸಂವೇದಿಸುತ್ತಾ ಮಸ್ತಿಷ್ಕದಲ್ಲಿ ಸಂಚಲನವುಂಟುಮಾಡಿ ಹೃದಯವನ್ನು ಸೇರುವಾಗ ಏಕಾಂಗಿಯಾದೆ ಎನ್ನುವ ಭಾವ. ಒಳ ಸಂವೇದನೆಯನ್ನುಂಟುಮಾಡಿದ ಪ್ರಾಣವಾಯು ಹೃದಯವನ್ನು ಹಗುರವಾಗಿಸಿದ ಅನುಭವ, ಹೌದು ನಾನು ಸ್ವರ್ಗದೊಳಗಡಿಯಿರಿಸಿದೆನಲ್ಲವೇ? ಸ್ವರ್ಗದ ವಾಯು ಶರೀರವೆಲ್ಲ ತುಂಬಿ ನಿಧಾನ  ನಿಧಾನವಾಗಿ ದೀರ್ಘವಾದ ಉಸಿರು ಒಂದೇ ಹೃದಯದೊಂದಿಗೆ ಮಾತನಾಡಲಾರಂಭಿಸುತ್ತದೆ.  ಅದೇ ಲಬ್ ಡಬ್ ಲಬ್ ಡಬ್......ಈ ತಾಳಕ್ಕೆ ಶೃತಿ ಸೇರಿಸಿ ನಾಭಿಯಿಂದ ಹೊರಬರುವ  ಓಂ...ಓಂಕಾರದ ಧ್ವನಿ, ಹೃದಯ ಹೊತ್ತು ಕೆಳಗಿರಿಸಿದ ಹೊರೆಯನ್ನು ಮತ್ತೂ ದೂರ ಮಾಡಿ ಹೃದಯದ ಸುತ್ತ ಸ್ವಚ್ಚ ಮಾಡುವಲ್ಲಿ ನಿರತವಾಗುತ್ತದೆ. ನನ್ನ ಹೃದಯ ಹೊಸ ಅತಿಥಿ ಬಂದಂತೆ ಪುಳಕಗೊಳ್ಳುತ್ತದೆ. ಪಾಪ ! ನನ್ನ ಹೃದಯವಲ್ಲವೆ? ಗರ್ಭವನ್ನು ಬರಿದಾಗಿಸಿ ಲೌಕಿಕ ಲೋಕಕ್ಕೆ ಬಂದ ಮೊದಲು, ಬಂದ ಪ್ರಾಣ ವಾಯುವನ್ನು ಹೀರಿ ಸಂಭ್ರಮಿಸುವ ಹೃದಯ ದೇಹದೂಂದಿಗಿನ ಪಯಣವನ್ನು ಅಲ್ಲಿಂದಲೇ ಆರಂಭಿಸುತ್ತದೆ. ಅಂತಹ ಹೃದಯ ಬದುಕಿನುದ್ದಕ್ಕೂ ಮಿಡಿವ ಹೃದಯ ಮುಂಜಾವಿನ ಹಿತಾನುಭವದ ದೀಕ್ಷೆಯಲ್ಲಿ ರಾತ್ರಿಯಿಂದಲೇ ಸಜ್ಜಾಗಿರುತ್ತದೆ.ಹೊಟ್ಟೆ ಹಸಿವಿಗಾಗಿ ಮೂರು ಹೊತ್ತು ಆಹಾರ ಹೇಗೊ ಹಾಗೆ ಹೃದಯಕ್ಕೆ ಅವಶ್ಯ ಪ್ರಾಣಾಯಾಮ.ಈ ಹೃದಯದ ಹಸಿವನ್ನು ನೀಗಿಸಿದರೆ, ಉದರ ದೇಹ ಮನಸ್ಸಿನ ಅಥವಾ ಐಹಿಕ ಜಗತ್ತಿನ ಎಲ್ಲ ಹಸಿವಿನ ಮೇಲೆ ನಿಯಂತ್ರಣ ಸಾಧಿಸಬಹುದು. ವಿಪರ್ಯಾಸವೆಂದರೆ ನಮ್ಮ ಹಾದಿ ವಕ್ರವಾಗಿ ವಿರುದ್ದದಿಕ್ಕಿನಲ್ಲಿರುವುದು. ಬೇರೆಲ್ಲ ಹಸಿವನ್ನು ನೀಗಿಸುವ ಭರದಲ್ಲಿ ಈ ಹೃದಯದ ಹಸಿವನ್ನು ಲಕ್ಷಿಸುವುದೇ ಇಲ್ಲ.

ಜಗತ್ತಿನ ಚೈತನ್ಯ ರೂಪ ಉದಿಸುವ ಆ ಮಧುರ ಸಮಯ ನೀರವ ಮೌನದ ಶಾಂತ ವಾತಾವರಣ. ಹೊರಲೋಕದ ಪರಿವೆಯಾಗದಂತೆ ಗಾಢಾಂಧಕಾರದ ಗಾಢತೆಯ ಪ್ರಭಾವ ಅಳಿಯದಂತೆ  ದಿವ್ಯಚೇತನ ಏಕಾಗ್ರತೆಗೆ ಗೋಚರಿಸುವಂತೆ, ನಮ್ಮ  ಮನಸ್ಸೆಂಬ ಅಂತರ್ಯದ ಕನ್ನಡಿಯಲ್ಲಿ ಪ್ರತಿಫಲಿಸಬೇಕು. ಆ ಮೂಲಕ ಸೂಕ್ಷ್ಮ ಜ್ಯೋತಿಸ್ವರೂಪ ತನುವೆಲ್ಲ ವ್ಯಾಪಿಸಿದಾಗ ಐಹಿಕ ಜಗತ್ತಿನ ಎಲ್ಲ ಬಂಧನದಿಂದ ಮುಕ್ತವಾಗುವ ಅನುಭವ.ದೀರ್ಘ ಉಸಿರೊಂದಿಗೆ ಏಕಾಗ್ರವಾಗುವ ಮನಸ್ಸು ಭಗವಂತನ ಉಪಾಸನೆಗೆ ಸಿದ್ದವಾಗುತ್ತದೆ. ತನ್ನ ತನು ಮನ ಎಲ್ಲವೂ ಶೂನ್ಯದಿಂದ ಆರಂಭಿಸಿ ಶೂನ್ಯದಲ್ಲೆ ಅಂತ್ಯವಾದ ಹಾಗೆ, ಶೂನ್ಯತೆಯ ದ್ಯೋತಕದಂತೆ, ಅಂದ್ಯಂತ್ಯವಿಲ್ಲದ ಸ್ಥಿತಿಗೆ ತಂದು ನಿಲ್ಲಿಸುತ್ತದೆ. ನಾನೆಂದರೇನು? ತನುವೆಂದರೇನು? ಮನಸ್ಸೆಂದರೇನು? ಆ ಮನಸ್ಸಿನ ಭಾವನೆಗಳೇನು? ಎಲ್ಲವೂ ಶಾಂತ. ವೈಶಮ್ಯವಿಲ್ಲದ,ಭಾವನೆಗಳ ತೀವ್ರತೆಯಿಲ್ಲದ ಶಾಂತ ಲೋಕ. ....ಧ್ಯಾನ ಲೋಕ. ಅನುಲೋಮ, ವಿಲೋಮ, ಉಸಿರಾಟದ ನಡುವೆ ಭ್ರೂಮಧ್ಯೆ ಅಂತರ್ ದೃಷ್ಟಿಗೆ ಗೋಚರವಾಗುವ ಭಗವಂತ ಸ್ವರೂಪರ ರಹಿತನಾಗಿ ಭವತ್ ಶಕ್ತಿಗೆ ಸಂಕೇತವನ್ನು ನೀಡುತ್ತಾನೆ.
ಹಲವು ಪ್ರಾಣಾಯಾಮದ ಮುದವಾದ ಅನುಭವ ಪಡೆದ ಮೇಲೆ ನಿರಾಳವಾದ ಜಗತ್ತಿನತ್ತ ಒಯ್ಯುವ ಶವಾಸನ. ಧ್ಯಾನದಲ್ಲಿ ಭವಂತನನ್ನು ಕಂಡರೆ ಇಲ್ಲಿ ಭಗವಂತನಲ್ಲಿ ಐಕ್ಯವಾದ ಅನುಭವ. ನಮ್ಮ ದೇಹ ಭೂಮಿ ಮೇಲೆ ಇದೆಯೇ? ಕೇವಲ ಹಗುರವಾದ ಹೃದಯದ ಬಡಿತ ಮಾತ್ರ ಕೇಳುವಾಗ ಶರೀರವೇನು ಒಳಗಿನ ಆತ್ಮವೇನು ಎಂದು ಸ್ಪಷ್ಟವಾದ ಅನುಭವ.ಎಲ್ಲವೂ ಶುಷ್ಕಅನುಭವ.

ಶವಾಸನದಿಂದ ಇಹ ಲೋಕಕ್ಕೆ ಬಂದ ಮೇಲೆ ಹೊಳಪುಗೊಂಡ ಮನಸ್ಸು ಆ ಹೊಳಪನ್ನು ಚಿಮ್ಮಿಸುವ ಮುಖ ದೇಹಕ್ಕೆ ಹೊಸತನದ ಅನುಭವ ದಿನದಂತ್ಯದವರೆಗೂ ನೀಡಿದರೆ ಎಲ್ಲವೂ ಹೊಸತು. ಎಲ್ಲವೂ ಕೋಮಲ.

ನಮ್ಮ ಹೃದಯ ಸುಖವಾಗಲಿ ದುಃಖವಾಗಲಿ ಎದೆ ಮೇಲೆ ಕೈ ಇಟ್ಟಾಕ್ಷಣ ತನ್ನಿರವ ಹೇಳುವ ಇದನ್ನು ನಾವೆಷ್ಟು ಜೋಪಾನ ಮಾಡುತ್ತೇವೆ? ಮನಸ್ಸು- ಹೃದಯ, ಒಂದು ಎಂದೂ ಕಣ್ಣಿಗೆ ಕಾಣದ ಭಾವನೆಯ ಅನುಭವವಾದರೆ ಇನ್ನೋಂದು ಸದಾ ಇರವನ್ನು ಪ್ರತಿನಿಧಿಸುವ ಚೇತನ. ಮನಸ್ಸು ಕಲುಷಿತಗೊಂಡಷ್ಟು ಹೃದಯ ಶ್ರಮಪಡುತ್ತದೆ. ದ್ವೇಷ ಅಸೂಯೆ ಕ್ರೋಧದಿಂದ ಮನಸ್ಸು ಕಲುಷಿತಗೊಂಡರೆ ಪಾಪ ತಮ್ಮ ಹೃದಯದಬಗ್ಗೆ ಒಂದು ಸಲ ಯೋಚಿಸುವ, ನಾವೇನನ್ನು ನಮ್ಮ ಹೃದಯಕ್ಕೆ ನೀಡುತ್ತಿದ್ದೇವೆ? ಹಗಲು ದಣಿದ ದೇಹ ಇರುಳು ವಿಶ್ರಾಂತಿ ಬಯಸಿ ನಿದ್ರೆಗೆ ಜಾರುವ ಸಮಯ, ಒಂದು ಬಾರಿ ಯೋಚಿಸೋಣ, ನನಗೆ ಯಾರಲ್ಲೂ ವೈಷಮ್ಯವಿಲ್ಲ. ದ್ವೇಷ ಅಸೂಯೆಗಳಿಲ್ಲ. ವಂಚನೆಯ ಭಾವದಲ್ಲಿ ಗೆಲುವಿನ ಸಂಭ್ರಮ ಬೇಡ. ಪರರ ಏಳಿಗೆಯಲ್ಲಿ ಈರ್ಷ್ಯೆ ಲವಲೇಷವೂ ಇಲ್ಲ. ತಾನು ಯಾರನ್ನೂ ಹಿಂದಿಕ್ಕುವ ಸ್ಪರ್ಧೆ ಇಲ್ಲ. ಎಲ್ಲವು ಮತ್ತು ಎಲ್ಲರೂ ಜಗತ್ತಿನ ಅನಿವಾರ್ಯ ಅಂಗ. ಸಧ್ಬಾವನೆಯನ್ನು ಹೃದಯಕ್ಕೆ ನೀಡಿ ನಿದ್ರಿಸ ತೊಡಗಿ,ಆಮೇಲಿನ ಅನುಭವವೇ ಬೇರೆ. ಯಾರಲ್ಲೋ ಜಗಳವಾಡಿಯೋ ಬೈದಾಡಿ ಮನಸ್ತಾಪಗೈದು ನಿದ್ರಿಸ ಹೋದರೆ ಆ ರೌದ್ರ ಭಾವವೇ ತುಂಬಿ ಸಧ್ಬಾವನೆ ನಾಶವಾಗುತ್ತದೆ. ಜಗಳವಾಡಿದಾತನ ಜೊತೆ ಸ್ಪರ್ಧಿಸುವ ಭಾವ ಮನಸ್ಸಲ್ಲಿ ಪ್ರಚೋದಿಸಲ್ಪಟ್ಟರೆ, ವಿಶ್ರಾಂತಿ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಸಿಗದು. ನಿದ್ದೆ ಮಾಡಿದರೆ ದೇಹಕ್ಕೆ ವಿಶ್ರಾಂತಿ ಸಿಕ್ಕಂತೆ ಭಾಸವಾದರೂ ಮನಸ್ಸು ಜಾಗ್ರತವಾಗಿ ದುಸ್ವಪ್ನವನ್ನೇ ಕಂಡರೆ ನಿದ್ರೆಯಲ್ಲೂ ವಿಶ್ರಾಂತಿ ಸಿಗಬಹುದೇ? ಹೊಗಳಿಕೆಯ, ಮನ್ನಣೆಯ ಮತ್ತು ಗೆಲುವಿನ ಅತಿಯಾದ ನಿರೀಕ್ಷೆ ಸೋತಾಗ ಹತಾಶವಾಗಿ ಸಧ್ಬಾವನೆ ನಾಶವಾಗುತ್ತದೆ. ಸದ್ಭಾವನೆ ತುಂಬಿದ ಮನಸ್ಸು ಶಾಂತಿಗೆ ಅಲೆಯುವ ಅಗತ್ಯವಿಲ್ಲ. ಎಲ್ಲಿದ್ದರೂ ಶಾಂತವಾಗಿರುವುದು.

ಹೃದಯವನ್ನು ಜೋಪಾನ ಮಾಡುವುದು ಹೃದಯ ವೈದ್ಯನಲ್ಲಿ ಹೋಗಿಅಲ್ಲ. ಅತ ಕೇವಲ ಔಷಧಿಯನ್ನಷ್ಟೇ ತುಂಬಬಲ್ಲ. ಮಾತ್ರವಲ್ಲ ಹೃದಯದಲ್ಲಿ ತೊಂದರೆಯಾದರೆ ಮಾತ್ರವಲ್ಲವೇ ಆತನಲ್ಲಿ ಹೋಗುವುದು. ಕೆಲವೆಲ್ಲ ಸರಳ ಸತ್ಯಗಳು ಅರಿವಾಗುವುದೇ ಇಲ್ಲ.ಎಲ್ಲ ಐಹಿಕ ಹಸಿವನ್ನು ನೀಗಿಸುವಂತೆ ಪ್ರೇರೆಪಿಸುವ ಮನಸ್ಸಿನ ದಿಶೆಯನ್ನು ಬದಲಿಸಬೇಕು. ಆಗ ಹೃದಯನೆಂಬ ಸಹಚರ ನೆಮ್ಮದಿಯಾಗಿ ನಮ್ಮ ಜತೆ ಮಿಡಿಯುತ್ತ ಇರಬಲ್ಲ. 
  
ದ್ವೇಷ ಅಸೂಯೆ ಇಂತಹ ಷಡ್ವೈರಿಯನ್ನು ನಿಯಂತ್ರಿಸಿದವ ತನ್ನ ಹೃದಯವನ್ನು ಪ್ರೇಮಿಸುತ್ತಾನೆ. ತನ್ನ ಹೃದಯವನ್ನು ಪ್ರೇಮಿಸಿದವ ಪರರ ಹೃದಯವನ್ನು ಪ್ರೇಮಿಸುತ್ತಾನೆ. ಅರ್ಥಾತ್ ದ್ವೇಷ ಅಸೂಯೆಯಿಂದ ದೂರವಾಗುತ್ತಾನೆ.ಪ್ರೇಮ ಸ್ನೇಹ ಭಾವ ನೆಲೆನಿಂತಾಗ ಪ್ರಕೃತಿಯಲ್ಲೂ ಅದೆ ಪ್ರತಿಫಲನವಾಗುತ್ತದೆ.  ಸಹನಾವವತು...ಸಹನೌಭುನಕ್ತು ಎಂಬ ದಿವ್ಯ ಮಂತ್ರ ಆಗ ಅರ್ಥಪೂರ್ಣವಾಗುತ್ತದೆ.



Thursday, July 29, 2010

ಕರ್ಕಶ ತ್ರಿಚಕ್ರಿಗಳು

ಆಟೋಗಳು ಬಣ್ಣ ಬದಲಿಸಿ ಹೊಸ ರೂಪದಲ್ಲಿ ಬಂದಾಗ ಹೊಸ ಬದಲಾವಣೆ ಬಂತೆ? ಎಲ್ಲೆಲ್ಲಿ ಬದಲಾವಣೆಯಾಯಿತೋ ಅದರೆ ಬೆಂಗಳೂರಿನಲ್ಲಿ ಬದಲಾವಣೆಗೆ ಯಾವ ಮಹತ್ವವೂ ಇಲ್ಲದಾಗಿ ಹೋಯಿತು. ಕೇವಲ ಆಟೋ ಮಾಲಿಕರ ಜೇಬಿಗೆ ಕತ್ತರಿಯಾಯಿತು ಪರ್ಯಾಯವಾಗಿ ಕೆಲವು ದಿಶೆಯಲ್ಲಿ ಪ್ರಯಾಣಿಕರ ಜೇಬು ಕತ್ತರಿ ಪ್ರಯೋಗಕ್ಕೆ ಒಳಗಾಯಿತು.
ಊರಿನಿಂದ ಮುಂಜಾನೆ ಬಂದು ನವರಂಗ್ ನಲ್ಲಿ ಬಸ್ಸು ಇಳಿವಾಗ ಆಟೋದವರು ಸ್ವಾಗತಿಸುವ ಪರಿ ಕಂಡಾಗ ಮೊದಲು ನನಗೆ ಅಬ್ಬ ಏನು ಕಾಳಜಿ ಇವರಿಗೆ ಎಂದು ಅನ್ನಿಸಿಬಿಡುತ್ತಿತ್ತು. ನಮ್ಮ ಲಗ್ಗೇಜು ಯಾವ ಆಟೋದಲ್ಲಿ ಇದೆಯಪ್ಪಾ ಅಂತಾ ಗಾಬರಿಯಾಗುತ್ತಿತ್ತು. ಮೊದಲೇ ಊರಲ್ಲಿ ಹೆದರಿಸಿ ಬೆಂಗಳೂರಿನ ಬಸ್ಸು ಹತ್ತಿಸಿ ಬಿಡುವ ಸಂಬಂಧಿಕರು ಏನೇ ಆದರೂ ಬ್ಯಾಗ್ ಕೈ ಬಿಡಬೇಡ ಜಾಗ್ರತೆ.. ಹೆಂಡತಿ ಕೈ ಬಿಟ್ಟರೂ ಪರವಾಗಿಲ್ಲ. ಬ್ಯಾಗ್ ಕೈ ಮಾತ್ರ ಭದ್ರ....ಕೊನೆಗೆ ಅದೂ ಕಷ್ಟ ಕೇವಲ ಕೈ ಮಾತ್ರ ನಮ್ಮ ಕೈಗೆ ನೇತಾಡಿಕೊಂಡು ಇರುತ್ತದೆ ಬ್ಯಾಗ್ ಕಳ್ಳರ ಪಾಲಾಗಿರುತ್ತದೆ. ಹೀಗೆ ಹೆದರಿ ಹೆದರಿ ಬ್ಯಾಗ್ ಭದ್ರವಾಗಿ ಹಿಡಿದು ಬಸ್ ಕ್ಲೀನರ್ ನಿಂದ ತಳ್ಳಿಸಿಕೊಂಡು ನವರಂಗ ಸಿಗ್ನಲ್ ಬಳಿ ಇಳಿದೆವೋ.. ಗಾಬರಿಯ ಮೇಲೆ ಗಾಬರಿ. ಆಟೋ ಡ್ರೈವರ್ ಗಳು ಮುಗಿಬಿದ್ದು ನಮ್ಮ ಬ್ಯಾಗ್ ಎತ್ತಿ ಆಟೋದಲ್ಲಿ ಇಟ್ಟು ಬಿಡುತ್ತಾರೆ. ಅತ್ತ ಇತ್ತ ಎತ್ತಲೂ ಆಟೋಗಳು ಮುತ್ತಿಕೊಂಡು ತಬ್ಬಿಬ್ಬಾಗುವ ಸ್ಥಿತಿ. ಬಸ್ಸಿನಲ್ಲಿ ಅರ್ಧ ನಿದ್ದೆಯಾಗಿ ಎದ್ದು ಇಲ್ಲಿ ಇಳೀವಾಗ ಹೊಸಬರಾದರೆ ಗಾಬರಿ ಇನ್ನು ಹೆಚ್ಚು. ಬಸ್ ನಿಂದ ಇಳಿವಲ್ಲಿಗೆ ಬರುತ್ತೇನೆ ಅಂದ ಪರಿಚಿತರನ್ನು ಹುಡುಕುವ ತವಕ.. ಮಧ್ಯೆ ಈ ಆಟೋದವರ ಶೀಘ್ರ ಉಪಚಾರ.. ಒಂದು ಸಲ ವೃದ್ಧರೋರ್ವರು ಬಸ್ ಇಳಿದ ಕೂಡಲೆ ಎರಗಿದ ಆಟೋದವನಿಗೆ ಹೇಳಿದರು “ ತಡೀರಿ ಸ್ವಾಮಿ ನಾನು ಯಾವ ದಿಕ್ಕಿನಲ್ಲಿ ಇದ್ದೇನೆ ಅಂತ ಗೊತ್ತಾಗ್ಲಿ .. ಅ ಮೇಲೆ ನೋಡುವ”. ಬೆಂಗಳೂರಲ್ಲಿ ತಿಳಿಯದ ದಿಕ್ಕಿನ ಜಾಡು ಹಿಡಿವ ಯತ್ನ ಅವರದ್ದು.


ಇದೆಲ್ಲ ಮಾಮೂಲಾದರೂ ಒಂದು ವಿಚಿತ್ರ...ಟೆರೆ .ಟೆರೆ..ಟ್ರ್...ಎಂದು ಗಂಟಲು ಬಿರಿವ ಸದ್ದು ಮಾಡಿಕೊಂಡು ಶರವೇಗದಲ್ಲಿ ಸಾಗುವುದನ್ನು ಕಂಡಾಗ ಅದರಲ್ಲೂ ನಮ್ಮೂರಿನವರು ಗಾಬರಿಯಾಗುವುದು ಸಹಜ. ಬೆಂಗಳೂರಿಗೆ ಬಂದ ಆರಂಭದಲ್ಲಿ  ಈ ಕರ್ಕಶ ಸದ್ದು ಕೇಳಿದಾಗ, ಈ ವಾಹನದ ಸೈಲೆನ್ಸರ್ ಕೆಟ್ಟಿರಬೇಕು ಎಂದು. ಕ್ರಮೇಣ ತಿಳಿದದ್ದು ಇದು ಉದ್ದೇಶಪೂರ್ವಕವಾಗಿ ಪಿಕಪ್ ಮತ್ತು ವೇಗಕ್ಕಾಗಿ ಬದಲಾಯಿಸುತ್ತಾರೆ ಎಂದು. ಊರಲ್ಲಿ ಸಾಕುನಾಯಿಗಳ ಬಾಲ ಕತ್ತರಿಸಿದಂತೆ..


ಊರಲ್ಲಿ ಹತ್ತಿರ ಸದ್ದು ಮಾಡದೆ ಬಂದು ನಿಲ್ಲುವ ರಿಕ್ಷಾಗಳು ಹಾರನ್ ಮಾಡಿದಾಗಲೇ ಅರಿವಾಗುವುದು. ರಿಕ್ಷ ಬಳಿಯಲ್ಲೇ ಇದೆ ಎಂದು. ಒಂದು ಬಾರಿ ಇಲ್ಲಿನ ಒಬ್ಬ ಆಟೋ ಚಾಲಕನಲ್ಲಿ ಕೇಳಿದೆ “ ಆಟೋ ಹೀಗೆ ಸವುಂಡು ಮಾಡ್ತಾ ಪಾಸ್ಟಾಗಿ  ಹೋದ್ರೆ ಡಿಸ್ಟರ್ಬ್ ಆಗಲ್ವೆ.?” ಮುಕ್ಕಾಲುವಾಸಿ ಇಂಗ್ಲೀಷು ಇದ್ದ ಕನ್ನಡವೇ ಇವರಿಗೆ ಸರಿಯಾಗಿ ಅರ್ಥವಾಗುವ ಭಾಷೆ.
“ಇಲ್ಲಾ ಸಾ..ಇದು ನನ್ ಕಿವಿಗೆ ಕೇಳ್ಸಲ್ಲ. ಹಿಂದೆ ಬರೋರಿಗೆ ತಾನೆ?” ಎಂತಹ ಉತ್ತರ...!!


ಈಗ ಬಣ್ಣದೊಂದಿಗೆ ಆಟೋದರವೂ ಬದಲಾಗಿದೆ. ಆದರೆ ಸವುಂಡು ಮಾತ್ರ ಅದೇ ಕರ್ಕಶ. ಜತೆಗೆ  ಎಫ್. ಎಂ. ನ ಕರ್ಕಶವೂ ಸೇರಿಕೊಂಡಿತೊ ಪ್ರಯಾಣಿಕರಿಗೆ ಇನ್ನೇನು ಬೇಕು.  ಸೀಟು ಹರಿದಿರಲಿ, ಮಳೆ ಬಂದರೆ ರಸ್ತೆಯಲ್ಲಿ ನಡೆದು ಹೋದಷ್ಟೇ ನೆನೆದು ತೊಪ್ಪೆ ಯಾದರೂ , ಮೀಟರ್ ನಲ್ಲಿ ಬರೋ ಸಂಖ್ಯೆ ಓದಲು ಅವನೇ ಸಹಾಯ ಮಾಡಬೇಕಾಗಿ ಬಂದರು .. ಈ ಟೆರೆ ಟೆರೆ ಶಬ್ಡ ಅದರ ಜತೆಗೆ ಹಿಂಸೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕೇವಲ ದ್ವಿಚಕ್ರ ವಾಹನದ ಹೋಗೆ ತಪಾಸಣೇ ದಾಖಲೆಗೆ ಕಣ್ಣು ಹಾಕುವ ಪೋಲೀಸರಿಗೆ ಇದನ್ನು ನಿಯಂತ್ರಿಸುವ ಬುದ್ದಿಯಾಕೆ ಬರುವುದಿಲ್ಲವೋ ದೇವರೇಬಲ್ಲ. ಯಾವುದೇ ಸಾರಿಗೆ ಅಧಿಕಾರಿಯಾಗಲಿ  ಮಂತ್ರಿಯಾಗಲಿ ಗಮನಕ್ಕೇ ಬರದ ಈ ಧ್ವನಿಯಿಂದ ಬೆಂಗಳೂರು ಮುಕ್ತವಾಗಬಲ್ಲುದೆ? ಹೀಗೆ ಬೆಂಗಳೂರಿನ ಜನಸಾಮಾನ್ಯ ಗಮನಿಸದೇ ತಾಳಿಕೊಳ್ಳುವ ಹಲವು ಭೂತಗಳಿವೆ. ಮುಂದೊಂದು ದಿನ ಅದರ ಬಗ್ಗೆ ಹೇಳುವ. 

Thursday, January 28, 2010

ಯೋಗಾನುಭವ



ಅನಿಯಂತ್ರಿತ ಆಹಾರ, ಅನಿಯಮಿತ ಜೀವನ ಶೈಲಿ, ದೈಹಿಕ ಆರೋಗ್ಯದ ಕೊರತೆ ಇದರಿಂದಾಗುವ , ಮಾನಸಿಕ ದುಮ್ಮಾನ ಇವೆಲ್ಲವುಗಳು ಕಾಡಿದಾಗ ಬದುಕೇ ಕೆಲವೊಂದು ಸಲ ಹತಾಷೆಗೊಳಗಾಗುವುದು ಸಹಜ.ಮನುಷ್ಯ ಮಾತ್ರವಲ್ಲ ಪ್ರಾಣಿ ಸಹಜ ಜೀವನಕ್ಕೆ , ಆಹಾರ, ನಿದ್ರಾ ಮೈಥುನ ಚಟುವಟಿಕೆಗಳು ಎಷ್ಟು ಆವಷ್ಯಕವೋ ಅಷ್ಟೇ ಅದನ್ನು ನಿಯಮಿತವಾಗಿ ತನ್ನ ನಿಯಂತ್ರಣದಲ್ಲಿರುವುದು ಅಷ್ಟೇ ಅವಶ್ಯಕ. ಮನುಷ್ಯ ಜೀವನಕ್ಕೆ ಇದು ಹೆಚ್ಚು ಅತ್ಯಾವಶ್ಯಕ. ಇದನ್ನು ಹಲವರು ಗುರುತಿಸಿ ಬದುಕಿದ ಜೇವನದ ಸಮಯವನ್ನು ಸಾರ್ಥಕ ಮಾಡಿಸಿಕೊಳ್ಳುತ್ತಾರೆ. ನಿಯಮಿತ ಜೀವನ ಶೈಲಿಗೆ ಸನಾತರು ನೀಡಿದ ಬಳುವಳಿಯೇ ಈ ಯೋಗ. ತನ್ನ ದೇಹದ ಅಂತರಂಗದ ಭಾಷೆಯನ್ನು ಅರ್ಥೈಸಿಕೊಳ್ಳುವುದೇ ಯೋಗ ಅಂತ ನನ್ನ ಭಾವನೆ.


ಬಹುಶಃ ನನ್ನ ಬದುಕಿನಲ್ಲಿ ಇದನ್ನು ಅಳವಡಿಸಿಕೊಂಡಮೇಲೆ ಬದುಕು ಹೆಚ್ಚು ಅರ್ಥ ಪೂರ್ಣವಾದ ಅನುಭವ. ಮೊದಲಿಂದಲೂ ಯೋಗ ಧ್ಯಾನ ಏಕಾಗ್ರತೆ ಇದರ ಬಗ್ಗೆ ಹೆಚ್ಚಿನ ಅರಿವು ಇಲ್ಲದ ನನಗೆ ಕೆಲವು ಸಮಯಗಳಿಂದ ಈಚೆಗೆ ನನ್ನ ದೂರದ ( ಪ್ರಾದೇಶಿಕವಾಗಿ ಮಾತ್ರ ಮಾನಸಿಕವಾಗಿ ತೀರ ಹತ್ತಿರ) ಸ್ನೇಹಿತರ ಸಲಹೆ ಮತ್ತು ಒತ್ತಾಯ ನನ್ನನ್ನು ಯೋಗ ಶಿಕ್ಷಣಕ್ಕೆ ತೊಡಗುವಂತೆ ಮಾಡಿತು.ಅಷ್ಟು ಮಾತ್ರವಲ್ಲ ನನ್ನಲ್ಲಿ ಯೋಗದ ಬಗೆಗಿನ ಜಿಜ್ಞಾಸೆಯನ್ನು ಹುಟ್ಟು ಹಾಕಿದ ಮಹಾನ್ ವ್ಯಕ್ತಿಯೊಬ್ಬರು ಹಿರಿಯ ಯಕ್ಷಗಾನ ಕಲಾವಿದ ಶ್ರೀ ಸೂರಿಕುಮೆರಿ ಗೋವಿಂದ ಭಟ್ಟರು. ಅವರೊಂದಿಗೆ ಕಳೆದ ಕೆಲವು ಗಂಟೆಗಳಲ್ಲಿ ಯೋಗದ ಬಗ್ಗೆ ಸಂಕ್ಷೇಪವಾಗಿ ಮತ್ತು ಅಷ್ಟೇ ಸ್ಥೂಲವಾಗಿ ಮನವರಿಕೆ ಮಾಡಿದ್ದರು. ಅವರ ಜೀವನ ಕ್ರಮ ನಡವಳಿಕೆ ಎಲ್ಲವೂ ಅದಕ್ಕೆ ನಿದರ್ಶನವಾದದ್ದು ನನಗೆ ವೇದ್ಯವಾಗಿಬಿಟ್ಟಿತು. ಮೊದಲು ಇದರ ಬಗ್ಗೆ ಏನೇನೂ ಅರಿವಿಲ್ಲ. ಜಿಮ್, ಜಾಗಿಂಗ್, ವಾಕಿಂಗ್, ಹೀಗೆ ಅಧುನಿಕ ದೈಹಿಕ ದಂಡನೆ ಹಾಗು ಕಸರತ್ತಿನ ಬಗ್ಗೆ ಅಲ್ಪಸ್ವಲ್ಪ ಅರಿವು ಇತ್ತು. ಕೆಲವು ಸಮಯ ಜಿಮ್ ವ್ಯಾಯಾಮ ಶಾಲೆಗೆ ಸೇರಿ ಏದುಸಿರು ಬಿಟ್ಟಿದ್ದೆ, ಬೆವರು ಹರಿಸಿದ್ದೆ. ಆದರೆ ತೀರ ದೈಹಿಕ ದಂಡನೆ ಸಾಧ್ಯವಾಗದೆ ಅದರಲ್ಲಿ ವಿಫಲನೂ ಆಗಿದ್ದೆ. ನನ್ನ ದೈಹಿಕ ವ್ಯಾಯಾಮ ಕೇವಲ ಮುಂಜಾವಿನ ವಾಕಿಂಗ್ ಎಂಬಲ್ಲಿಗೆ ಸೀಮಿತವಾಗಿತ್ತು. ತಕ್ಕ ಮಟ್ಟಿಗೆ ಅದು ಉಲ್ಲಾಸದಾಯಕವಾಗಿದ್ದರು ಏನೋ ಒಂದು ಅಪೂರ್ಣ ಪ್ರಜ್ಞೆ ಮನಸ್ಸಿಗೆ ಕಾಡುತ್ತಿದ್ದುದು ಸುಳ್ಳಲ್ಲ. ನನ್ನ ವಿದೇಶಿ ಸ್ನೇಹಿತ, ವ್ಯಕ್ತಿ ಗತವಾಗಿ ಅಥವಾ ಮೌಖಿಕವಾಗಿ ನಾವು ಇನ್ನೂ ಅಪರಿಚಿತರೇ. ನನ್ನ ಇಂಟರ್ನೆಟ್ ಸ್ನೇಹಿತರಾದ ಹರೀಶ್ ರವರ ತೀವ್ರ ಒತ್ತಾಯ ಹಾಗು ಕೇಳಿಕೆ ಮೇರೆಗೆ ಯೋಗ ತರಗತಿಗೆ ಸೇರುವ ತೀರ್ಮಾನಕ್ಕೆ ಬಂದೆ.


ಹೀಗೆ ಮಲ್ಲೇಶ್ವರಂ ನಲ್ಲಿರುವ ಪ್ರಕೃತಿ ಜೀವನ ಕೇಂದ್ರ ಯೋಗ ಶಾಲೆಗೆ ಒಂದು ಮುಂಜಾನೆ ಹೋದೆ. ಸಾಕ್ಷಾತ್ ಯೋಗ ಗುರುಗಳಾದ ಶ್ರೀ ತಾಡಪತ್ರಿಯವರು ಅಲ್ಲಿಯ ಯೋಗದ ಶಾಲೆಯ ಗುರುಗಳು. ಎಲ್ಲರಂತೆ ನಾನು ಬೆಡ್ ಶೀಟ್ ಹಾಕಿ ವಿಶಾಲವಾದ ಮಂದಿರವೊಂದರಲ್ಲಿ ಕುಳಿತು ಯೋಗ ತರಬೇತಿಗೆ ತೊಡಗಿಕೊಂಡ ಮೊದಲ ದಿನ ಒಂದು ವಿಧದ ಕುತೂಹಲ ಇದ್ದದ್ದು ಸುಳ್ಳಲ್ಲ. ಕೇವಲ ಸರಳ ವ್ಯಾಯಾಮದಿಂದ ದೈಹಿಕ ಆರೋಗ್ಯವನ್ನು ಕಾಪಾಡುವುದು ಸಾಧ್ಯವೇ ಎಂಬ ಕುತೂಹಲ ಇಂದು ಅನುಭವವೇ ತಣಿಸಿದೆ.


ಮೊದಲ ದಿನ ಗುರೂಜಿ (ಎಲ್ಲರೂ ಗೌರವ ಪೂರ್ಣವಾಗಿ ಕರೆಯುವ ರೀತಿ ) ಚುಟುಕಾಗಿ ಯೋಗ ಧ್ಯಾನದ ಬಗ್ಗೆ ಸಂಕ್ಷೇಪವಾಗಿ ಪ್ರಸ್ತಾವನೆಯನ್ನು ಮಂಡಿಸಿದರು. ಉತ್ತಮ ಜೀವನಕ್ಕೆ ಯೋಗಾಭ್ಯಾಸ ಎಷ್ಟು ಸಹಕಾರಿ ನಿಯಮಿತವಾದ ಶಿಸ್ತುಬದ್ದ ಜೀವನ ಶೈಲಿಯಿಂದಾಗುವ ಲಾಭಗಳೇನು. ದಿನದ ಹಲವು ಚಟುವಟಿಕೆಗೆ ನಾವು ಹೇಗೆ ನಮ್ಮ ಸಮಯವನ್ನು ಮೀಸಲಿಡುತ್ತೆವೋ ಅದರಂತೆ ದಿನದ ಒಂದು ತಾಸು ಸೂರ್ಯೋದಯದ ಸಮೀಮಪದ ಅವಧಿಯನ್ನು ಮೀಸಲಿಟ್ಟರೆ ಆ ಜೀವನದ ಶೈಲಿಯನ್ನು ಅನುಭವಿಸಿ ತಿಳಿಯಬೇಕು. ಸರಳವಾದ ಜೀವನ, ಸರಳವಾದ ಆಹಾರದಿಂದ ಕೂಡಿದ ನಮ್ಮ ಜೀವನ ಶೈಲಿಯನ್ನು ನಾವು ರೂಢಿಸಿಕೊಳ್ಳಬೇಕು. ನಿರಾತಂಕವಾದ ಬದುಕು ನಮ್ಮದಾಗುತ್ತದೆ. ಪುರಾತನ ಸನ್ಯಾಸಿ ಜೇವನದಲ್ಲಿ ರೂಢಿಸಿಕೊಂಡ ಈ ಯೋಗ ಎಂಬುದು ಈಗಿನ ಈ ಅಧುನಿಕ ಯುಗದಲ್ಲೂ ಹೇಗೆ ಅರ್ಥ ಪೂರ್ಣವಾಗಿದೆ ಎಂಬುದನ್ನು ತುಂಬಾ ಸರಳವಾಗಿ ಹೇಳಿದರು. ಆದರೂ, ನನಗೆ ತುಂಬಾ ಅಪ್ಯಾಯಮಾನವಾದ ಅವರ ಒಂದು ಮಾತು ಇಂದಿಗೂ ನೆನಪಿದೆ. " ನಿಮ್ಮ ನೆರೆಯ ಅಥವಾ ದೂರದ ಯಾವುದೇ ವೈರಿಯನ್ನು ಮೊದಲು ಯೋಗ ತರಗತಿಗೆ ಸೇರುವಂತೆ ಪ್ರೇರೇಪಿಸಿ. ಆತ ನಂತರ ನಿಮ್ಮ ವೈರಿಯಾಗಿ ಉಳಿಯದೆ ವೈಷಮ್ಯವನ್ನು ದೂರಿಕರಿಸಿ ನಿಮಗೆ ಹತ್ತಿರದವನಾಗಿ ಬಿಡುವನು. " ನಿಜವಾಗಿಯೂ ಎಂತಹ ಅರ್ಥ ಪೂರ್ಣ ಮಾತು. ವಿಶ್ವಶಾಂತಿಯ ಮೂಲ ಸೆಲೆ ಇರುವುದೇ ಈ ತತ್ವದಲ್ಲಿ ಅಲ್ಲವೇ?ಇಂತಹ ವೈಷಮ್ಯ ಮಾತ್ಸರ್ಯ ರಹಿತ ಜೀವನ ಒಂದು ಸಲ ಕಲ್ಪಿಸಿದರೆ ಸಾಕು ಆ ಲೋಕವನ್ನು ಗ್ರಹಿಸಿಯೇ ರೋಮಾಂಚಗೊಳ್ಳದೇ ? ಯೋಗಾಭ್ಯಾಸದ ಮೂಲ ತಿರುಳೇ ಅದು ನಮ್ಮ ಜೀವನ ಶೈಲಿಯನ್ನೇ ಬದಲಿಸಿ ವ್ಯಕ್ತಿತ್ವ ವಿಕಸನಕ್ಕೆ ಇದರಿಂದ ಮಿಕ್ಕಿದ ವಿಧಾನವೇ ಇರದು ಎಂದೆನಿಸುತ್ತದೆ.

ಮೊದಲದಿನ ಕೆಲವು ಯೋಗಾಸನ, ಸೂರ್ಯನಮಸ್ಕಾರ ಪ್ರಾಣಾಯಾಮದ ಪಾಠವಾಯಿತು." ಸಹನಾವವತು ಸಹನೌಭುನಕ್ತು ಸಹವೀರ್ಯಂಕರವಾವಹೈ ತೇಜಸ್ವಿನಾವಧೀತಮಸ್ತು ಮಾವಿದ್ವಿಷಾವಹೈ..ಓಂ ಶಾಂತಿ: ಶಾಂತಿ: ಶಾಂತಿ: " ಎಂಬ ಭೋಜನ ವಿಧಿಯ ಶಾಂತಿ ಮಂತ್ರ ಯೋಗ ಗುರುಗಳ ಕಂಠದಿಂದ ಹೊರಬಿದ್ದು ಎಲ್ಲ ಕಂಠದಿಂದಲೂ ಮರು ಝೆ೦ಕರಿಸಿದಾಗ ಆರಂಭವಾದ ಹೊಸ ಅನುಭವ ಇಂದಿಗೂ ಅದೇ, ನಿತ್ಯವೂ ಅದೇ ಹೊಸತನವನ್ನು ಉಳಿಸಿದೆ ಎಂದರೆ ಈ ಸನಾತನ ಎಷ್ಟು ಭದ್ರವಾಗಿದೆ ಅಲ್ಲವೇ.?

ನನಗಂತೂ ಈ ಅನುಭವ ತುಂಬಾ ವಿಚಿತ್ರ ಸಂವೇದನೆಯನ್ನು ಮನಸ್ಸಿನಲ್ಲಿ ಮೂಡಿಸಿಬಿಟ್ಟಿತು ಎಷ್ಟು ಸರಳ..!!!ಹೀಗೂ ಸಾಧ್ಯವೇ...?!!!

ಯೋಗದಲ್ಲಿ ಪ್ರಾಣಾಯಾಮ ಎನ್ನುವುದು ಪ್ರಮುಖ ಅಂಗ. ಬಹುಶ ಪ್ರತಿಯೊಂದು ಉಸಿರಾಟದ ಜೀವಕ್ಕೆ ಇದು ತೀರ ಅವಶ್ಯಕ. ಮನುಷ್ಯನ ಧಾವಂತದ ವೇಗದ ಬದುಕಿಗೆ ಸಾವಧಾನದ ಮನೋಬಲವನ್ನು ತುಂಬುವ ವಿಧಾನ ಇದರ ಮೂಲ ಸೆಲೆ. ಜಿಮ್ ಆಟೋಟ ಅಥವಾ ಬೆಳಗಿನ ಜಾಗಿಂಗ್ ಎಲ್ಲದರಲ್ಲಿಯೂ ವೇಗದ ಎದುಸಿರೆ ಪ್ರಾಧಾನ್ಯ. ಆದರೆ ಇಲ್ಲಿ ಅದು ತದ್ವಿರುದ್ದ. ನಿಧಾನವಾದ ಅಷ್ಟೇ ಕರಾರುವಕ್ಕಾದ , ದೀರ್ಘ ಉಸಿರಾಟದ ಪ್ರಕ್ರಿಯೆ ಇಲ್ಲಿಯದು. ನಿರಾಳವಾದ ಅಷ್ಟೇ ನಿರಾತಂಕವಾದ ಉಸಿರಾಟ ವಿಧಾನ ಈಪ್ರಾಣಾಯಾಮದ ಮೂಲ ವಿಧಾನ. ಹಲವು ವಿಧದ ಪ್ರಾಣಾಯಾಮ ಅವುಗಳ ವಿಧಾನ ಅವುಗಳನ್ನು ಮಾಡುವುದರಿಂದಾಗುವ ಮಾನಸಿಕ ಹಾಗು ದೈಹಿಕ ಪರಿಣಾಮಗಳು ಮಾಡಿಯೇ ಅನುಭವಿಸಿ ನೋಡಬೇಕು,

ಯೋಗಾಭ್ಯಾಸದ ರೀತಿ ವಿಧಾನಗಳನ್ನು ಹೇಳುವುದು ನನ್ನ ಅರಿವಿಗೆ ಜ್ಞಾನಕ್ಕೆ ಮೀರಿದ ಕ್ರಿಯೆ. ಆದರೆ ಇದನ್ನು ಅಳವಡಿಸಿಕೊಂಡ ಮೇಲೆ ನನ್ನ ಜೀವನ ಶೈಲಿಯೇ ನನಗೆ ಬದಲಾಗಿಬಿಟ್ಟದ್ದು ನನಗಿನ್ನೂ ಸೋಜಿಗದ ವಿಷವೇ ಆಗಿದೆ. ಯೋಗ ತರಗತಿಗೆ ಹೋಗಿ ಒಂದೆರಡು ವಾರದಲ್ಲೇ ಅದರ ಪ್ರಭಾವ ನಿಧಾನವಾಗಿ ಆಗತೊಡಗಿತು. ಸರಿಯಾದ ಜೀರ್ಣ ಕ್ರಿಯೆ ಹಾಗು ಮಿತವಾದ ಹಸಿವು ಇದರಿಂದ ಎಂತಹ ಛಳಿಯ ವಾತಾವರಣದಲ್ಲೂ ಆಗಾಗ ನೀರು ಸೇವಿಸುವಂತೆ ಪ್ರೇರೇಪಣೆ. ಮತ್ತೂ ಮತ್ತು ನೀರು ಕುಡಿಯುತ್ತ ಎಲ್ಲವೂ ನಿಯಂತ್ರಣಕ್ಕೆ ಬಂದ ಭಾವನೆ. ಮೊದಲು ಒಂದರಿಂದ ಒಂದೂ ವರೆ ಲೀಟರ್ ನೀರು ಸೇವಿಸುತ್ತಿದ್ದ ನನಗೆ ದಿನಾ ಐದು ಲೀಟರ್ಗಿಂತಲೂ ಅಧಿಕ ನೀರು ಸೇವಿಸುವಂತೆ ಆದದ್ದು ಕಂಡೆ ಉತ್ಸಾಹ ಅಧಿಕವಾಗತೊಡಗಿತು. ಹಸಿವು ದೈಹಿಕ ಶ್ರಮ ಎಲ್ಲವೂ ಒಂದು ನಿಯಂತ್ರಣದಲ್ಲಿದ್ದ ಭಾವನೆ . ಊದ್ವೆಗ ರಹಿತ ಮನಸ್ಸಿನಿಂದ ದಿನವಿಡೀ ಅಂತರಿಕ ಉತ್ಸಾಹ, ನಿತ್ಯವೂ ದೇಹವನ್ನು ಬಾಧಿಸುತ್ತಿದ್ದ ಕೆಲವು ಶಮನವಾಗದ ರೋಗಗಳು ತಿಲ್ಯದೆ ಮಂಗ ಮಾಯವಾದಾಗ ಆಶರ್ಯವಾಗುತ್ತದೆ. ಯೋಗದ ಹಲವು ವಿಧಾನ , ಹಾಗು ಅವನ್ನು ಕಲಿಯಲು ಹಲವು ವಿಧಾನಗಳಿದ್ದರೂ ಕೆಲವು ತಿಂಗಳು ಗುರು ಮುಖೇನ ಕಲಿತರೆ ಅತ್ಯುತ್ತಮ. ಸರಿಯಾದ ಕ್ರಮದ ಯೋಗ ಅಧಿಕ ಹಾಗು ಪರಿಪೂರ್ಣ ಪರಿಣಾಮವನ್ನು ಕೊಡಬಲ್ಲುದು.

ನಿತ್ಯ ಯೋಗಾಭ್ಯಾಸದಿಂದ ಬದಲಾಗುವ ಜೀವನ ಶೈಲಿ ಆಹಾರ ಶೈಲಿ ಸ್ವತಹ ಅನುಭವಿಸಿದ್ದೇನೆ. ನಗರದಲ್ಲಿ ಅಥವಾ ನವೀನ ಜೀವನ ರೀತಿಯ ಕ್ರಮದಂತೆ ಸಾಯಂಕಾಲದ ಡಿನ್ನರು ಪಾರ್ಟಿಗಳಲ್ಲಿ ಮತ್ತೆ ಉತ್ಸಾಹ ಮೂಡುವುದಿಲ್ಲ. ಅನಗತ್ಯ ಆಹಾರ ತಿನ್ನುವ ಬಯಕೆಯಾಗುವುದಿಲ್ಲ. ಅತ್ಯಲ್ಪ ಆಹಾರದಿಂದ ತುಂಬುವ ಹೊಟ್ಟೆ ಆರೋಗ್ಯದ ಮೂಲ ಲಕ್ಷಣವನ್ನು ಹೇಳತೊಡಗುತ್ತದೆ. ಕೇವಲ ನಿಯಂತ್ರಣ ಭರಿತ ಉಸಿರಾಟದ ಪ್ರಕ್ರಿಯೆಗೆ ದೇಹ ಸ್ಪಂದಿಸುವುದು ನೋಡುವಾಗ ಈ ಜೀವನ ಕ್ರಮಕ್ಕೆ ಮನಸ್ಸು ಸಮಾಧಾನದ ನಿಟ್ಟುಸಿರು ಬಿಡುತ್ತದೆ.

ಎಲ್ಲಕ್ಕಿಂತಲೂ ವಿಶೇಷವಾಗಿ ನಮ್ಮಲ್ಲಿರುವ ದುಶ್ಚಟಗಳು, ದುರ್ವ್ಯಸನಗಳು ನಮ್ಮಿಂದ ಸದ್ದಿಲ್ಲದೇ ದೂರವಾಗಿಬಿದುತ್ತವೆ . ಇದು ಕೇವಲ ಧೂಮಪಾನ ಇನ್ನಿತರ ದುಶ್ಚಟಗಳನ್ನು ಮಾತ್ರವಲ್ಲದೆ ಮನಸ್ಸಿನ ನೆಮ್ಮದಿಯನ್ನು ಹದಗೆಡಿಸುವ ದುಶ್ಚಟಗಳನ್ನು ಬಳಿಗೆ ಸುಳಿಯದಂತೆ ಮಾಡಿಬಿಡುತ್ತವೆ.

ನಿತ್ಯವೂ ಮುಂಜಾನೆಯನ್ನು ಎದಿರು ನೋಡುವ ನನ್ನ ಮನಸ್ಸು ಉದಯಕಾಲದ ಆ ಮಧುರ ಸುಖಾನುಭಾವಕ್ಕೆ ಕಾದಿರುತ್ತದೆ. ನಿದ್ದೆಯನ್ನು ಗೆದ್ದ ತನು ಮನ, ಮುಂಜಾನೆಯ ನೀರವ ಮೌನದೊಂದಿಗೆ ಶ್ರುತಿಯನ್ನು ಸೇರಿಸಿ ಯೋಗ ದೀಕ್ಷೆಗೆ ಸನ್ನದ್ದವಾಗುತ್ತದೆ. ದಿನದಾರಂಭಕ್ಕೆ ಪ್ರಕೃತಿ ಕಾದಿರುವಾಗ ಆ ಏಕಾಂತದ ಪ್ರಶಾಂತ ವಾತಾವರಣದಲ್ಲಿ ಜಮಖಾನವನ್ನು ಹಾಸಿ ಪದ್ಮಾಸನದಲ್ಲಿ ಕುಳಿತು, ಕಣ್ಣು ಮುಚ್ಚಿ ಏಕಾಗ್ರತೆಗೆ ಮನಸ್ಸು ಹೊರಳಿದನಂತರ ಓಂಕಾರದೊಂದಿಗೆ ತನು ಮನ ಸುತ್ತಲಿನ ಇರವನ್ನು ಮರೆಸುತ್ತದೆ. ನಿಡಿದಾದ ಹಾಗು ನಿಧಾನವಾದ ಉಸಿರು ಉಪಕ್ರಮಿಸುವುದರೊಂದಿಗೆ ಮನಸ್ಸು ನಿದ್ಧಾನವಾಗಿ ಯೋಗ ವೆಂಬ ಅದ್ಭುತ ಲೋಕಕ್ಕೆ ಹೊಕ್ಕು ಬಿಡುತ್ತದೆ. ನಾಸಿಕದ ತುದಿಯಿಂದ
ಒಳಬಂದ ಚೈನ್ಯವಾಯು ಹೃದಯದಾಳಕ್ಕೆ ನುಗ್ಗಿ ಅಲ್ಲಿಂದ ದಿವ್ಯ ಚೇತನವನ್ನು ಶರೀರಾದ್ಯಂತ ಹರಡಿಸುತ್ತದೆ. ಪ್ರತಿ ನರಗಳಲ್ಲಿ ಹರಿಯುವ ರಕ್ತಸಂಚಾರದ ಸಂವೇದನೆಯ ಅರಿವಾಗುತ್ತಿದ್ದಂತೆ ಸ್ವರ್ಗ ಸುಖದ ಅದ್ಭುತ ಅನುಭವಕ್ಕೆ ಶರೀರ ಸಾಕ್ಷಿಯಾಗಿಬಿಡುತ್ತದೆ.ಪ್ರಾಣಾಯಾಮದ ಹಲವು ವಿಧಗಳನ್ನು ನಿರಾಳವಾಗಿ ನಿಧಾನವಾಗಿ ಮಾಡಿ ಶವಾಸನಕ್ಕೆ ಜಾರಿದಾಗ ಶರೀರಾದ್ಯಂತ ಅವ್ಯಕ್ತ ಸಂಚಲನೆಯ ಆರಂಭ. ಯಾವುದೊ ಲೋಕಕ್ಕೆ ಜಾರಿದ ಅನುಭವ. ಆರಂಭದಲ್ಲಿ ನಿದ್ರೆ ಬಂದು ಕಿರಿ ಕಿರಿ ಅನುಭವಿಸಿದ್ದರೂ , ಕ್ರಮೇಣ ಸಹಜ ಪ್ರಕ್ರಿಯೆ ಅಭ್ಯಾಸವಾಗಿದೆ. ಅಪಾದ ಮಸ್ತಕವಾಗಿ ದೇಹದ ಪ್ರತಿಯೊಂದು ಅಂಗವನ್ನು ಸ್ವತಂತ್ರವಾಗಿಸಿ ನಿಶ್ಚಲವಾದ ಭಂಗಿಯಲ್ಲಿ ನಿರಾಳ ಹಾಗು ನಿರಾತಂಕವಾಗಿ ಶವದಂತೆ ಮಲಗಿದಾಗ ಉಸಿರಾಟ ಒಂದು ಬಿಟ್ಟು ಮತ್ತೆಲ್ಲವೂ ಸ್ತಬ್ಧತೆಯನ್ನು ಸಾರುತ್ತವೆ. ಶರೀರ ಎಂಬುದು ಎಷ್ಟು ಶುಷ್ಕ ಎಂಬ ಅರಿವಾಗುತ್ತದೆ. ನಾನು ಎಲ್ಲವನ್ನು ಮರೆಸುವಂತೆ ಮಾಡುವ ಈ ಕ್ಷಣ ಸ್ವರಗ ಸುಖದ ಚರಮ ಲಕ್ಷ್ಯವನ್ನು ಭೇದಿಸಿದ ಅನುಭವಾಗಿ ನಿಧಾನವಾಗಿ ಸಹಜ ಲೋಕಕ್ಕೆ ಬಂದು ಬಿಡುವಾಗ ಸುಪ್ರಭಾತದ ಮೂಲಕ ಹೊಸ ಲೋಕ ತೆರೆದು ದಿನದಾರಂಭದಿಂದ ಮನಸ್ಸು ಪುಳಕಗೊಳ್ಳುತ್ತದೆ. .

ನಿತ್ಯ ಯೋಗ ಕರ್ಮದಿಂದ ಉಂಟಾಗುವ ಸಂವೇದನೆ ದಿನವಿಡೀ ತನು ಮನವನ್ನು ಶುಭ ಚಿಂತನೆ , ಪ್ರಚೋದನೆಗೆ ಎಡೆ ಮಾಡಿ ಕೆಳೆಯುವ ಪ್ರತಿಕ್ಷಣವನ್ನು ಅರ್ಥ ಪೂರ್ಣವಾಗಿ ಮಾಡುವಲ್ಲಿ ಅದ್ಭುತ ಸಹಕಾರವನ್ನು ನೀಡಿದರೆ ಬದುಕೆಂಬುದು ಎಷ್ಟು ನಿರಾಳವಲ್ಲವೇ.?