Sunday, July 1, 2012

ಮನದೊಳಗಿನ ಖಾಸಗೀತನ



ಬಹಳ ಅಪರೂಪದ ಸ್ನೇಹಿತ ಸಿಕ್ಕಿದ. ಮಂದಹಾಸದ ವಿನಿಮಯ. ಬದಲಾದ ಪ್ರಕೃತಿಯ ಔಪಚಾರಿಕತೆಯ ವಿನಿಮಯ. ಭಾವ ವೆತ್ಯಾಸ ಇರಬಹುದು. ಅಂತರಂಗದ ನಿಜವಾದ ಸ್ನೇಹ ಪರಿವರ್ತಿಸುವುದಿಲ್ಲ. ಅದೇ ಸ್ನೇಹ. ಮನಸ್ಸು ಪುಳಕಗೊಂಡ ಹಲವು ಅನುಭವಗಳು.
 ಅತ್ಯಂತ ಆಸಕ್ತಿಯಿಂದ ಮನೆಗೆ ಕರೆದ.ಆದರೆ ಅವಕಾಶ ಸಿಗಬೇಕಲ್ಲ. ಮತ್ತೆ ನನಗನಿಸಿತು ನಾನೂ ಮನೆಗೆ ಕರೆಯ ಬೇಕಿತ್ತು, ಕರೆದಿದ್ದೆ ಆದರೆ ಆ ಕರೆಯೊಲೆಯ ಅಕ್ಷರಗಳನ್ನು ದಪ್ಪಗಾಗಿಸಲಿಲ್ಲ(BOLD)ವಲ್ಲ ಎಂದುಕೊಂಡೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಉಪಚಾರಗಳಂತಹ ವಿಷಯದಲ್ಲಿ ನಾನು ಬಹಳ ಹಿಂದೆ. ಇಂತಹ ಔಪಚಾರಿಕ ಸಾಂಪ್ರದಾಯದಲ್ಲೂ ತೋರಿಕೆಯ ವರ್ತನೆಯನ್ನು ಅಭಿನಯಿಸಲು ಮನಸ್ಸು ಒಪ್ಪಿಕೊಳ್ಳುವುದಿಲ್ಲ. ಇವುಗಳನ್ನು ಅದಷ್ಟು ಮಿತವಾಗಿ ಉಪಯೋಗಿಸುವ ಸ್ವಭಾವ ನನ್ನದು.  ಏನಿದ್ದರೂ ಅದು ಮನಸ್ಸಿನೊಳಗೇ ಹೃದಯ ಪ್ರಾಮಾಣಿಕವಾಗಿ ವ್ಯವಹರಿಸುವಾಗ ಬಹಿರಂಗ ಮಾತು ದೇಹ ಅದರ ಸಂಕೇತವಾಗಿದ್ದರೆ ಸಾಲದೇ?
ಮಿತ್ರ ಆಮಂತ್ರಿಸಿಯಾಗಿದೆ. ಅದೂ ಮನೆಯಲ್ಲಿನ ಒಂದು ಸಮಾರಂಭಕ್ಕೆ. ಪ್ರಥಮ ಭೇಟಿಯಲ್ಲಿ ಮಾತನಾಡಲಾಗದೇ ಉಳಿದ್ದು ಬಹಳಷ್ಟು ಇತ್ತು. ಅನಿರೀಕ್ಷಿತ ಭೇಟಿ ಹಾಗಿರುವಾಗ ಜ್ಞಾಪಕಕ್ಕೆ ಸಿಲುಕದೇ ಉಳಿಯುವಂತಹ ವಿಚಾರಗಳೇ ಜಾಸ್ತಿ. ಮಿತ್ರನ ಆಮಂತ್ರಣ ಮನ್ನಿಸುತ್ತ  ಅವನ ಮನೆಗೆ ಭೇಟಿ ಇತ್ತಾಗ  ಮನಸ್ಸಿನ ಲೆಕ್ಖಾಚಾರದ ಮಾತುಗಳ ಗಂಟನ್ನು ಬಿಚ್ಚುವ ಪ್ರಮೇಯವೇ ಬರಲಿಲ್ಲ. ಬಂದ ಬಂಧು ಬಾಂಧವರು ಮಿತ್ರರು... ಒಟ್ಟಿನಲ್ಲಿ ಮಿತ್ರ ಅದರತೆಯನ್ನು ತನ್ನ ಸ್ನೇಹದ ತಟ್ಟೆಯಿಂದ ಸ್ವಲ್ಪ ಸ್ವಲ್ಪವೇ ಹಂಚುತ್ತಾ ಬಹಳ ಗಡಿಬಿಡಿಯಲ್ಲೇ ಇದ್ದ. ಕೊನೆಯಲ್ಲಿ ಆದಿನದ ಕಾರ್ಯಕ್ರಮ ಮುಗಿದು ಎಲ್ಲರೂ ಹೊರಟಾಗ ನಾನು ಹೊರಟು ಮಿತ್ರನಿಗೆ ವಿದಾಯ ಹೇಳುವಾಗ ಬಹಳ ಮಂದಹಾಸದಿಂದ ಮಿತ್ರನೆಂದ
“ಇವತ್ತು ಮಾತಾಡುವುದಕ್ಕೆ ಸಾಧ್ಯವಿಲ್ಲ ಎಲ್ಲ ಗಡಿಬಿಡಿ ಮುಗೀಲಿ ಒಂದು ದಿನ ಇಬ್ಬರೂ ಕುಳಿತುಬಿಡುವ”
ನಮ್ಮೊಳಗಿನ ಖಾಸಗೀತನ ಎಂದರೆ ಇದೇ ಅಲ್ಲವೇ?  ಅಪರೂಪದ ಮಿತ್ರನಿಗೆ ಒಂದಿನಿತು ಮಾತಿಗೂ ಸಮಯ ವಿಲ್ಲವೆಂದರೆ ಅದು ಯಾರ ತಪ್ಪು ಅಲ್ಲ ವ್ಯವಹಾರಿಕ ಜೀವನದ ಸಂದರ್ಭಗಳು ನಮಗರಿಯದೇ ನಮ್ಮನ್ನು ನಿಯಂತ್ರಿಸಿಬಿಡುತ್ತವೆ. ಹೌದು, ಇಂದು ಈ ಜನಜಂಗುಳಿ ಸದ್ದುಗದ್ದಲದ ನಡುವೇ ನಮ್ಮದೇನನ್ನೋ ಕಳೆದುಕೊಂಡ ಅನುಭವವಾಗುವಿದಿಲ್ಲವೇ? ಆದರೂ ಅದೇ ಅನಿವಾರ್ಯತೆ ಎಂಬಲ್ಲಿಗೆ ಮಹತ್ವವನ್ನು ಪಡೆಯುತ್ತದೆ. ಹೀಗಾಗಿ ನಾನು ವಿಶೇಷವಿಲ್ಲದ ದಿನಗಳನ್ನೆ ಬಯಸುವಂತಾಗಿದ್ದೇನೆ. ಅವಿತುಕೊಂಡ ಸಹಜವಾದ ಲೋಕ ತೆರೆದುಕೊಳ್ಳುವುದು ಇಲ್ಲೇ. ಸಡಗರದ ಸಂತಸದ ಕ್ಷಣಗಳಲ್ಲಿ ಆ ಸಂಭ್ರಮ ಸವಿಯಲು ಎಲ್ಲರೂ ಇರಬೇಕೆನ್ನುವುದು ಸಹಜ. ಆದರೆ ನನಗೆ ಅಂತರಂಗದ ತನ್ನತನ ಎಲ್ಲೋ ತೆಗೆದಿಟ್ಟ ಅನುಭವಾಗುತ್ತಿದೆ. ಇಂತಹ ವಾತಾವರಣದಲ್ಲೂ ಒಂದು ಅಸಹನೀಯತೆ ಬೇಡವೆಂದರೂ ಸುಳಿಯುತ್ತದೆ. ಎಲ್ಲವೂ ಬಲವಂತದಿಂದ ಶಿಷ್ಟಾಚಾರದ ಸೆರಗಿನೊಳಗೆ ಅವಿತಿರಿಸಲ್ಪಡುತ್ತವೆ. ರಂಗದ ಮೇಲಿನ ವೇಷಗಳಂತೆ ಎಲ್ಲವೂ ಅಭಿನಯದ ಕ್ಷಣಗಳಾಗುತ್ತವೆ.
ಯಾವಾಗಲೂ ಭಿನ್ನ ಮುಖದಲ್ಲಿ ಚಿಂತಿಸುವವ ವಿಶಿಷ್ಟ ವ್ಯಕ್ತಿ ಎನಿಸಲ್ಪಡುತ್ತಾನೆ. ಇದು ನನ್ನಲ್ಲಿನ ವಿಶಿಷ್ಟತೆಯೆಂದು ಅನಿಸುವುದಿಲ್ಲ. ಹಲವರ ಅಂತರಂಗದ ಒಳಗೆ ಇದೇ ತಳಮಳಿಸುತ್ತಿರಬಹುದು. ಇದು ಅದರ ಒಂದು ಸಣ್ಣ ರೂಪ. ಮೃಗಾಲಯದ ಕತ್ತಲೆಯ ಕೋಣೆಯೊಳಗಿನ ವಿಚಿತ್ರ ಮೃಗ ಅವಿತುಕೊಂಡು ತನ್ನನ್ನು ಸ್ವಲ್ಪ ಮಾತ್ರವೇ ತೋರಿಸಿಕೊಂಡ ಹಾಗೆ. ಕೂತೂಹಲದಿಂದ ಚಿಂತನೆಯನ್ನು ಗಮನಿಸುವ ಮನಸ್ಸಿದ್ದರೆ ಗಮನಿಸಬಹುದು.
ನಾನು ಮನಸ್ಸು ಬಯಸಿ ಹಾರ್ದಿಕವಾಗಿ ಹೋಗುವುದು ಇಂತಹ ಸಹಜ ಲೋಕಕ್ಕೆ. ಅದು ನೆಂಟರ ಮನೆಯೇ ಆಗಲೀ...ಸ್ನೇಹಿತರ ಮನೇಯೇ ಆಗಲಿ ನಿತ್ಯದ ಬದುಕು ನಿಜವಾದ ಜೀವನ ದರ್ಶನವನ್ನೂ ಸಜತೆಯೊಂದಿಗೆ ಮಾಡುತ್ತದೆ. ಸಹಜ ದಿನಗಳಲ್ಲಿ ಯಾರ ಮನೆಗೆ ಹೋದರೂ ಅಲ್ಲಿ ಸಹಜತೆಯ ಅನುಭವವಾಗುತ್ತದೆ. ಅತ್ಮೀಯರಾದರೆ ಸ್ನೇಹದ ಸಿಂಚನ ಅತಿಯಾಗಿ ಅನುಭವಕ್ಕೆ ಬರುತ್ತದೆ.ಆದರ ಉಪಚಾರ ಮಾತುಕತೆಗೆ ಇಲ್ಲಿ ಪಾಲುದಾರಿಕೆ ಇರುವುದಿಲ್ಲ. ಅತ್ಮೀಯರು ಮತ್ತಷ್ಟೂ ಹತ್ತಿರವಾಗುತ್ತಾರೆ ಮತ್ತು ಖಾಸಗಿಯಾಗಿ ತೆರೆದುಕೊಳ್ಳುತ್ತಾರೆ ಎಂದು ನನ್ನ ಅನಿಸಿಕೆ. ಬಂಧುಗಳಾಗಲೀ ಮಿತ್ರರಾಗಲಿ ನಮ್ಮ ಬೇಟಿಯನ್ನು ಬಹಳಷ್ಟು ಜ್ಞಾಪಿಸುವಂತೆ ಸ್ಮರಣೀಯವಾಗಿಸುತ್ತಾರೆ. ವಿಶೇಷ ದಿನಗಳಲ್ಲಿ ಎಲ್ಲೋ ಕಳೆದು ಹೋದದ್ದು, ಮರೆಯಾಗಿ ಉಳಿದದ್ದು ಇಲ್ಲಿ ಗೋಚರವಾಗುತ್ತವೆ.
ಪಕ್ವಾನ್ನದ ಷಡ್ರಸ ಭೋಜನಕ್ಕಿಂತ ನಿತ್ಯದ ಕುಚ್ಚಿಲಕ್ಕಿ ತಂಬುಳಿ ಚಟ್ನಿಯ ರುಚಿ ಮರೆಯದಂತಹ  ಸವಿಯ ಲೇಪನವನ್ನು  ನಾಲಗೆಯಮೇಲೆ ಪಸರಿಸಿಬಿಡುತ್ತದೆ. ಉಣ್ಣುವುದರಲ್ಲಿ ಯಾವುದೇ ಗೊಂದಲವಿಲ್ಲದೆ ತೃಪ್ತಿಯ ಊಟ ತಿಂಡಿಯನ್ನು ಸವಿಯುತ್ತೇವೆ. ಅತಿಥಿ ಮತ್ತು ಅತಿಥೇಯ ಸಂಕ್ಯೆಯಲ್ಲಿ ಆದಷ್ಟು ಕಡಿಮೆ ಇದ್ದಷ್ಟು ಅಲ್ಲಿ ಸ್ನೇಹ ಹೆಚ್ಚಾಗಿ ಬಳಕೆಯಾಗುತ್ತದೆ ಎಂದು ನನ್ನ ನಂಬಿಕೆ. ಸ್ವಚ್ಚಂದ ವಿಹರಿಕೆ ಕ್ಷೇತ್ರ  ಹೆಚ್ಹು ಅನುಕೂಲವಾಗಿರುತ್ತದೆ. ನಾವು ಅತಿಥಿ ಯಾ ಅತಿಥೇಯರಾದಾಗಲೂ ಮೂರನೆಯದಾಗಿ ಒಂದು ಪಾತ್ರ ಅಲ್ಲಿದ್ದರೆ ಒಂದು ರೀತಿಯ ಅನಗತ್ಯ ಅಸಹಜ ಸನ್ನಿವೇಶ ಒದಗಿಯೇ ಒದಗುತ್ತದೆ. ಹಾಗಾಗಿ ಎಲ್ಲವಿಧದಲ್ಲೂ ಜನಜಂಗುಳಿಯಿಂದ ದೂರ ಉಳಿದು ಖಾಸಗೀತನವನ್ನು ಮುಕ್ತವಾಗಿ ಅನುಭವಸಲು ಉದ್ಯುಕ್ತನಾಗುತ್ತೇನೆ.
ಇದು ವ್ಯಕ್ತಿವಿಚಾರದ ಭೇಟಿಯಾಗಿ ಮಾತ್ರವಲ್ಲ ಒಂದು ಸಾರ್ವಜನಿಕ ಪ್ರದೇಶಕ್ಕೆ ಹೋದಾಗಲೂ ಖಾಸಗೀ ವಲಯವನ್ನೇ ಆರಿಸಿಕೊಳ್ಳುವುದು ಹೆಚ್ಚು. ದೇವಸ್ಥಾನಗಳಿಗೆ ಹೋದಾಗ ಇದು ಬಹಳ ಅರ್ಥಪೂರ್ಣವಾಗಿ ಪರಿಣಾಮ ಬೀರುತ್ತದೆ. ದೊಡ್ಡ ದೊಡ್ಡ ಕ್ಷೇತ್ರ ದರ್ಶನಕ್ಕಿಂತ ಹಳ್ಳಿಯಲ್ಲಿರುವ ಪುಟ್ಟ ಗುಡಿ ಅಥವ ಅದಷ್ಟು ನಿಶ್ಯಬ್ದವಾಗಿರುವ ದೇವಾಲಯಗಳ ದರ್ಶನ ಮತ್ತು  ಪರಿಸರ ಅತ್ಯಂತ ಭಾವಪೂರ್ಣವಾಗಿರುತ್ತದೆ. ಇಲ್ಲಿ ಭಗವಂತನ ಸಾಮಿಪ್ಯ ಅತ್ಯಂತ ಹತ್ತಿರವಾದ ಅನುಭವ.. ಸರತಿಯ ಸಾಲಿನಲ್ಲಿ ಗಂಟೆ ಗಟ್ಟಲೆ ನಿಲ್ಲುವ ಜಂಝಾಟವಿಲ್ಲ. ದೇವರ ದರ್ಶನ ಮನದುಂಬಿ ಮಾಡಿ ಆ ಪ್ರಸನ್ನತೆಯನ್ನು ಸಾಕ್ಷಾತ್ಕರಿಸಿಕೊಳ್ಳಬಹುದು. ದೇವರ ದೃಷ್ಠಿ ಏಲ್ಲರ ಮೇಲೆ ಸಮಾನವಾಗಿದ್ದರೂ, ಯಾರೂ ಇಲ್ಲದ ಶಾಂತ ಪರಿಸರದಲ್ಲಿ ಮನಸ್ಸಿನ ಭಾವ ಭಿನ್ನವಾಗಿರುತ್ತದೆ. ನಮ್ಮ ದುಗುಡ ದುಮ್ಮಾನಗಳ ಮನವಿಗೆ ದೇವನ ಕಿವಿ ತೆರೆದುಕೊಂಡಿರುವ ಅನುಭವಾಗುತ್ತದೆ. ನಮ್ಮದೆಲ್ಲವನ್ನು ಹೃದಯದಿಂದ ಅರ್ಪಿಸುವ ಮನೋಭಾವ ಬರುತ್ತದೆ. ಕ್ಷೇತ್ರ ದೊಡ್ಡದಾದಂತೆ ನಮ್ಮ ದೇವರ ನಡುವಿನ ಖಾಸಗೀತನದ ಭಾವ ಕಡಿಮೆಯಾಗುತ್ತದೆ. ಇದು ಒಂದು ಭಾವ ಆದರೂ... ಮನಸ್ಸು ಹಾತೋರೆಯುವುದು ಶಾಂತ ಪರಿಸರದ ಶಾಂತ ಮೂರ್ತಿಯ ದರ್ಶನವನ್ನು.
ನಮ್ಮೂರಿನ ದೇವಾಲಯದಲ್ಲಿ ಜನಜಂಗುಳಿಯ ಜಾತ್ರೆ ಸೇರುವುದು ವರ್ಷದ ಒಂದೆರಡು ದಿನದ ಉತ್ಸವದಲ್ಲಿ. ಆದಿನಗಳಲ್ಲಿ ಬಾಹ್ಯ ಸಂಭ್ರಮ ಸಡಗರ ಇದ್ದರೂ ಮನಸ್ಸು ಭಕ್ತಿಯಿಂದ ಸ್ಪಂದಿಸುವುದು ಅಲ್ಲಿಗೆ ನಿತ್ಯದ ಪೂಜಾದರ್ಶನಕ್ಕೆ ಹೋದಾಗ. ಹಾಗಾಗಿ ನಮ್ಮ ಬಾಯಾರಿನ  ಆವಳ ಮಠದ ದುರ್ಗಾ ಪರಮೇಶ್ವರಿಯ ಸನ್ನಿಧಿಗೂ ನಾನು ಹೋಗಬಯಸುವುದು ನಿತ್ಯ ದಲ್ಲಿ. ಸರಳವಾದ ಭೋಜನ ಪ್ರಸಾದದ ಅದ್ಭುತ ಸ್ವಾದಾನುಭವದ ಜತೆಗೆ ಯಾವುದೇ ಆಡಂಬರ ಔಪಚಾರಿಕತೆಗೆ ಅತೀತವಾಗಿರುವ ಭಕ್ತಿ ಭಾವದಲ್ಲಿ ಪ್ರತೀ ಸಲ  ದೇವರ ಎದುರು ಒಂದು ಘಳಿಗೆ ನಿಂತಾಗಲೂ ಹೃದಯ ತುಂಬಿ ಕಣ್ಣುಗಳು ಭಾರವಾಗುತ್ತವೆ. ಈ ಭಾವ ಬೇರೆಲ್ಲೂ ಬಾರದಿರುವ ಕಾರಣವಾದರೂ ಏನು ಅದೇ ಮನದೊಳಗಿನ ಖಾಸಗೀತನ.
ಆವಳ ಮಠದ ಸುಂದರ ಪರಿಸರ 
 ನಮ್ಮೂರಿನ ದೇವಾಲಯಕ್ಕೆ ನಿತ್ಯದಲ್ಲಿ ಹೋಗುವಾಗ ಬರುವ ಭಕ್ತಿಭಾವ ಪ್ರಸಿದ್ದ ದೊಡ್ಡ ಕ್ಷೇತ್ರ ಹೋದಾಗ ಬರುವುದೇ ಇಲ್ಲ. ಆ ಜನಜಂಗುಳಿಯಲ್ಲಿ ಸಿಕ್ಕಿ ಹಾಕಿದ ಭಕ್ತಿಭಾವ ಮನಸ್ಸಲ್ಲಿ ಮೂಡಿಸಿವುದು ಬಹಳ ಶ್ರಮದಾಯಕ. ಊರ ಸಣ್ಣ ದೇವಾಲಯದಲ್ಲಿ ಸಿಕ್ಕಿದ ಸಂತೃಪ್ತಿ  ಎಲ್ಲೂ ಸಿಗದಿರುವ ಕಾರಣವಾದರೂ ಏನು ಅದೇ ಮನದೊಳಗಿನ ಖಾಸಗೀತನ. ಪರಿಶುದ್ದ ಪ್ರಶಾಂತ ಪರಿಸರದಲ್ಲಿ ಕೇವಲ ನಾವುಗಳೇ ಇದ್ದಾಗ ಭಗವಂತನಲ್ಲಿ ನಡೆಸುವ ಮೌನದ ಸಂಭಾಷಣೆ ಹೊರಜಗತ್ತಿಗೆ ಕೇಳಿಸದೇ ಇದ್ದರೂ ಅದು ಮನದಾಳಕ್ಕೆ ಇಳಿದುಬಿಡುತ್ತದೆ.




Monday, June 25, 2012

ಮನೆಯು ಚಿಕ್ಕದಾಗಿರಬೇಕು ಮನವು ದೊಡ್ಡದಾಗಿರಬೇಕು



“ಮನೆ ಚಿಕ್ಕದಾದರೂ ಪರವಾಗಿಲ್ಲ ಮನಸ್ಸು ದೊಡ್ಡದಾಗಿರಬೇಕು” ಎಂಬ ಮಾತು ಜನ ಜನಿತ. ಬಹಳ ಸರಳವಾದ ತತ್ವವಾದರೂ ಅದರ ಆಶಯ ಬಹಳ ಹಿರಿದು. ದೊಡ್ಡದಾದ ಮನೆಯಿದೆ.... ಅದರಲ್ಲಿ ವಾಸವಾಗಿದ್ದೇವೆ,  ಬದುಕು ಎಷ್ಟು ಯಾಂತ್ರಿಕವಾಗಿರುತ್ತದೆ ಎಂದು ಕಲ್ಪಿಸಿ.  ಮನೆಯ ಮಂದಿ ಪರಸ್ಪರ ಭೇಟಿಯಾಗುವುದೇ ಬಹಳ ಅಪರೂಪವಾಗಿರುತ್ತದೆ. ದೊಡ್ಡ ಮನೆಯ ಆ ತುದಿಯ ಕೊಣೆಯಲ್ಲಿ ಅಕ್ಕನೋ ತಮ್ಮನೋ ಇದ್ದು ಇನ್ನೋಂದು ತುದಿಯ ಕೋಣೆಯಲ್ಲಿ ಅಪ್ಪ ಮಾವ ಹೀಗೆ ಬಹಳ  ಚಿಕ್ಕದಾದರೂ  ಅಂತರದಲ್ಲೇ ಅಥವಾ ಒಂದು ರೀತಿಯ ಮರೆಯಲ್ಲೇ ದಿನ ಕಳೆಯುತ್ತಿದ್ದೇವೆ. ಪರಸ್ಪರ ಭೇಟಿ ಬಹಳ ಕಡಿಮೆಯಾಗಿರುತ್ತದೆ. ಮಾತ್ರವಲ್ಲ ಕೆಲವು ಸಲ  ಮನೆಯೊಳಗೆ ಮೊಬೈಲ್ ಮೂಲಕವೇ ಮಾತನಾಡುವ ಸಂದರ್ಭಗಳನ್ನು ಕಲ್ಪಿಸಿ ಮನೆಯೊಳಗೆ ಇದ್ದು ಒಂದು ರೀತಿಯ ಅಂತರದಲ್ಲೇ ದಿನಕಳೆಯುತ್ತಿದ್ದೇವೆ.
ಅದೇ ಚಿಕ್ಕದಾದ ಮನೆಯನ್ನು ಕಲ್ಪಿಸಿ.. ಪರಸ್ಪರ ಮುಖದರ್ಶವನ್ನು ತಪ್ಪಿಸಿಕೊಳ್ಳುವ ಹಾಗಿಲ್ಲ.. ದೇಹಾಂತರವಿದ್ದರೂ ಬಹಳ ಹತ್ತಿರದಲ್ಲೇ ಪಿಸುದನಿಯ ಅಂತರದಲ್ಲೇ ಇರುತ್ತೇವೆ. ಇಲ್ಲಿ ಹತ್ತಿರ ಹತ್ತಿರ ಎಲ್ಲವೂ ಹತ್ತಿರ ಕೊನೆಗೆ ಮನಸ್ಸು ಮನಸ್ಸಿನ ನಡುವೆ ಕಡಿಮೆಯ ಅಂತರ. ಬಾಲ್ಯದಲ್ಲಿ ನಾವು ಆಟವಾಡುತ್ತಾ  ನೆಲದಲ್ಲಿ ಸ್ವಲ್ಪ ನೀರನ್ನು ವೃತ್ತಾಕಾರ ಇರುವಂತೆ ಚೆಲ್ಲಿ... ಸ್ವಲ್ಪ ಅಂತರ ವಿದ್ದು ಇನ್ನೊಂದು ವೃತ್ತಾಕರದಲ್ಲಿ ಚೆಲ್ಲಿ ಮಧ್ಯೆ ಬೆರಳಿನಿಂದ ಅದೇ ನೀರಿನ ಗೆರೆಯನ್ನು ಎಳೆಯುತ್ತಿದ್ದೆವು. ಸ್ವಲ್ಪ ಹೊತ್ತಿನಲ್ಲೇ ಎರಡು ನೀರಿನ  ವೃತ್ತಾಕಾರ.. ಪರಸ್ಪರ ಒಂದಾಗಿ ಬಿಡುತ್ತಿದ್ದವು. ಇದೊಂದು ಆಟ ಆದರೆ ಬದುಕಿನ ಸತ್ಯ ಇದರಲ್ಲಿ ಅಡಗಿದೆ. ನೀರೆಂದರೆ ಮನಸ್ಸಿನ ಹಾಗೆ ಅಂತರ ಕಡಿಮೆಯಾದಾಗ ಮನಸ್ಸು ಒಂದಾಗಿ ಆ ಮನಸ್ಸು ದೊಡ್ಡದಾಗುತ್ತದೆ. ಒಂದರ್ಥದಲ್ಲಿ ಸಣ್ಣ ಮನೆಯಲ್ಲಿ ದೇಹ ದೇಹಗಳ ನಡುವೆ ಮನಸ್ಸು ಮನಸ್ಸಿನ ನಡುವೆ ಅಂತರ ಕಡಿಮೆ ಇದ್ದು  ಮನಸ್ಸು ಒಂದೇ ಆಗಿ ದೊಡ್ಡದಾಗಿರುತ್ತದೆ. ದೊಡ್ಡ ಮನೆಯಲ್ಲಿ.... ಮನೆ ದೊಡ್ಡದಾಗಿರುತ್ತದೆ .. ಸಹಜವಾಗಿ ಎಲ್ಲವೂ ಅಂತರದಲ್ಲೇ ಇದ್ದು .. ಮನಸ್ಸು ಚಿಕ್ಕದಾಗಿರುತ್ತದೆ..
ನೀರು...ಇದು.. ಯಾವುದೇ ಆಕಾರದಲ್ಲಿ ಇರಬಹುದು... ಮನಸ್ಸು ಹಾಗೇ ಯಾವುದೇ ಆಕಾರದಲ್ಲಿ ಇರಬಹುದು.. ಅದಕ್ಕೆ ಆಕಾರ ಕೊಡುವುದು ಸುತ್ತಲಿನ ಪರಿಸರ. ಎರಡು ನೀರಿನ ನಡುವಣ ಅಂತರ ಕಡಿಮೆಯಾದರೆ .. ಕೊನೆಗೆ ಎರಡು  ಇದ್ದದ್ದು ಒಂದಾಗುತ್ತದೆ. ಹಾಗೇ...
 ಮನಸ್ಸಿನ ನಡುವೆ ಅಂತರ ಕಡಿಮೆಯಾದಷ್ಟು ಪರಸ್ಪರ ಸೇರಿದ ಮನಸ್ಸು ದೊಡ್ಡದಾಗಿರುತ್ತದೆ. 

Friday, May 25, 2012

ಉಸಿರೇ ಉಸಿರಾಗುವಾಗ



ದರ್ಶನ ನಿದರ್ಶನವಾದ ಅನುಭವ. ಆದರೆ ನಿದರ್ಶನವಾಗಬೇಕಿದ್ದರೆ ದರ್ಶನವಾಗಬೇಕಿಲ್ಲ. ಅನುಭವವಾದರೂ ಅದು ನಿದರ್ಶನವಾಗಿಬಿಡುತ್ತದೆ. ಗಾಳಿ ಬೀಸುತ್ತದೆ. ದೇಹಕ್ಕೆ ಅದರ ಅನುಭವ. ಇಲ್ಲಿ ದರ್ಶನವಿಲ್ಲ. ಆದರೆ ಗಾಳಿ ಬೀಸುವಿಕೆಗೆ ಒಂದು ನಿದರ್ಶನವಾಗುತ್ತದೆ. ಉಸಿರು ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ದೇಹಕ್ಕೆ ಅದರ ಅನುಭವ ಆಗದಿರುತ್ತದೆಯೇ? ಉಸಿರ ಅನುಭವ ದೇಹಕ್ಕೆ ಆಗಬೇಕು. ಆದರೆ ಪರರಿಗಲ್ಲ. ತನ್ನ ಉಸಿರಾಟದ ಅನುಭವ ಪರರಿಗಾದರೆ ಅದು ಒಂದೋ ಬಿಸಿ ಉಸಿರು ಅಥವಾ ಅದು ಉಸಿರೆಂದೆಣಿಸದೆ ಗೊರಕೆ ಎನಿಸಲ್ಪಡುತ್ತದೆ.
ನಮ್ಮ ಉಸಿರು ನಮಗೆ ಕೇಳಿಸದಂತಿದ್ದರೆ ಅದು ಅರೋಗ್ಯವಂತ ಉಸಿರು... ನಮ್ಮ ಉಸಿರ ಸದ್ದು ನಮಗೆ ಕೇಳಿಸಿದರೆ ಸ್ವಲ್ಪ ಸಮಸ್ಯೆ ಇದೆ ಎಂದು ಅರ್ಥ. ಅದೇ ನಮ್ಮ ಉಸಿರು ಇನ್ನೊಬ್ಬರಿಗೆ ಕೇಳುವಂತಿದ್ದರೆ ಆಗ ಚಿಕಿತ್ಸೆ ಬೇಕು ಎಂಬ ಅರ್ಥ.ನಮ್ಮ ಉಸಿರು ಪರರಿಗೆ ತೊಂದರೆಯನ್ನು ಕೊಡುತ್ತಿದ್ದರೆ ಇದು ಗೊರಕೆ ಎನಿಸಿ ಚಿಕಿತ್ಸೆ ಅನಿವಾರ್ಯವಾಗುತ್ತದೆ
ನಮ್ಮ ಸುತ್ತಲು ಗಾಳಿ ಇದೆ. ಆದರೆ ಅನುಭವದ ರೀತಿ ಹಲವಿದೆ.ಸ್ತಬ್ಧ ವಾತಾವರಣದಲ್ಲೂ  ಬಾಹ್ಯ ಶರೀರಕ್ಕೆ ಅನುಭವಾಗದೇ ಇದ್ದರು ಉಸಿರ ಚಲನೆಯ ಮೂಲಕ ದೇಹಕ್ಕೆ ಅನುಭವವಾಗುತ್ತದೆ. ಸ್ವಲ್ಪ ತಣ್ಣನೆಯ ಗಾಳಿ ದೇಹಕ್ಕೆ ಪರಿಸರಕ್ಕೆ ಹಿತವಾದ ಅನುಭವವನ್ನು ನೀಡಿದರೆ ಬಿರುಗಾಳಿ ಸುತ್ತಲ ಪರಿಸರದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸುತ್ತದೆ. ಅದೇ ಬಗೆಯಲ್ಲಿ ನಮ್ಮ ಉಸಿರು. ಹೃದಯಕ್ಕೆ ರಭಸವಾಗಿ ಸೇವಿಸಿದರೆ ಇದೇ ರೀತಿಯ ಅಲ್ಲೋಲ ಕಲ್ಲೋಲಕ್ಕೆ ಹೃದಯವು ಒಳಗಾಗುತ್ತದೆ. ಹೃದಯದ ಕ್ರಿಯೆಗಳ  ಮೇಲೆ ತೀವ್ರವಾದ ಒತ್ತಡ  ಹೇರಲ್ಪಡುತ್ತದೆ. ಶಭ್ದದಿಂದ ಕೂಡಿದ ಹಾಗೂ  ವೇಗದ ಉಸಿರಾಟ ಹೃದಯಕ್ಕೆ ಘಾಸಿಯನ್ನೇ ಉಂಟುಮಾಡುತ್ತದೆ.  ನಿಧಾನವಾದ ಮತ್ತು ಕ್ರಮಬದ್ದ ಉಸಿರಾಟ ನಿಶಃಬ್ದ ವಾಗಿದ್ದು ಹೃದಯವನ್ನು ಸುಸ್ಥಿತಿಯಲ್ಲಿಡುತ್ತದೆ. ತಾಳ...ಜಾಗಟೆ..ಘಂಟೆ ಇದನ್ನು ಮೆಲುವಾಗಿ ಬಾರಿಸಿದಾಗ ಹೊರಡುವ ನಿನಾದ ಗಮನಿಸಿ...ಆ ಕಂಪನದ ಅನುಭವದ ಅವಧಿ ಎಷ್ಟಿರುತ್ತದೆ. .. ಅದೇ ರೀತಿ ಅದನ್ನು ಜೋರಾಗಿ ಬಡಿದಾಗ ಅದರಿಂದ ಹೊರಡುವ ಕರ್ಕಶ ದ್ವನಿಯ ಕಂಪನದ ಅವಧಿ ಏಷ್ತಿರುತ್ತದೆ.. ... ಮೆಲುವಾದ ಸಾವಧಾನವಾದ ದೀರ್ಘ ಉಸಿರೂ ಹೃದಯಕ್ಕೆ ಬಡಿದಾಗ ಇದೇ ಅನುಭವಾಗುತ್ತದೆ. ಅದರ ಪರಿಣಾಮ ಆ ಕಂಪನ ದೇಹಾದ್ಯಂಬ ಬಹಳ ಸಮಯ ಇರುತ್ತದೆ.. ಪ್ರಾಣಾಯಾಮದ ಪರಿಣಾಮವೂ ಇದೇ ರೀತಿಯಲ್ಲಿ ಆಗುತ್ತದೆ.
ನಿದ್ರಿಸುವಾಗ ಗೊರಕೆಯಿಂದ ಕೂಡಿದ ಉಸಿರಾಟಕ್ಕೆ ಶ್ವಾಸ ನಾಳಗಳ ತಡೆಗಳೇ ಕಾರಣ. ಸ್ವಚ್ಚವಾದ ವಾಯು ಯಾವುದೇ ತಡೆಗಳಿಲ್ಲದೇ    ಶ್ವಾಸಕೋಶಕ್ಕೆ ಸೇರಬೆಕು. ಪ್ರಾಣಾಯಾಮ ಮೊತ್ತ ಮೊದಲ ಆದ್ಯತೆಯೇ ಇದು.  ನಿಧಾನವಾದ ಮತ್ತು ದೀರ್ಘವಾದ ಉಸಿರಾಟ ಹೃದಯವು ಒತ್ತಡ ರಹಿತವಾಗಿ ಕೆಲಸ ಮಾಡುವುದನ್ನು ಪ್ರೇರೆಪಿಸುತ್ತದೆ. ದೇಹ ದಣಿದಾಗ ಅಯಾಚಿತವಾಗಿ ನಿಟ್ಟುಸಿರು ಹೊರಬರುವುದು ಇದೇ ಕಾರಣದಿಂದ. ಅದಕ್ಕಾಗಿ ದಣಿದಾಗ ಐದಾರು ಬಾರಿ ದೀರ್ಘ ಉಸಿರಾಟವನ್ನು ನಡೆಸಿದರೆ ಅಮ್ಲಜನಕ ಹೃದಯಕ್ಕೆ ಸೇರಿ ದೇಹದ ರಕ್ತ ಪರಿಚಲನೆ ಚುರುಕಾಗಿ ದೇಹದಲ್ಲಿ ಹೊಸಚೈತನ್ಯ ತುಂಬಿ ಆಯಾಸ ಪರಿಹಾರವಾಗುತ್ತದೆ.
ವಾಕಿಂಗ್ ಜಾಗಿಂಗ್ ವ್ಯಾಯಾಮಗಳು ದೇಹಕ್ಕೆ ಉತ್ತಮವಾದರೂ ವೇಗವಾದ ಉಸಿರಾಟ ಉತ್ತಮವಲ್ಲ. ಪ್ರಾಣಾಯಾಮದೊಂದಿಗೆ ಇವುಗಳನ್ನು ರೂಡಿಸಿಕೊಂಡರೆ ಮೊದಲಾಗುವ ಪರಿಣಾಮದಿಂದ ಹತ್ತರಷ್ಟು ಪರಿಣಾಮವನ್ನು ಪಡೆಯಬಹುದು. ಅಂದರೆ ಪ್ರಾಣಾಯಾಮ ಮಾಡಿ  ಹತ್ತು ನಿಮಿಷ ನಡಿಗೆಯನ್ನು ಮಾಡಿದರೆ ಒಂದು ಘಂಟೆಯ ನಡಿಗೆಯ ಪರಿಣಾಮವನ್ನು ಪಡೆಯಬಹುದು. ಕ್ರಮ ಬದ್ದ ಉಸಿರಾಟವೇ ಇದಕ್ಕೆ ಕಾರಣ. ಪ್ರತಿ ದಿನ ಹದಿನೈದರಿಂದ ಇಪ್ಪತ್ತು ನಿಮಿಷಗಳಷ್ಟು ಸಮಯವನ್ನು ಪ್ರಾಣಾಯಮಕ್ಕೆ ಮೀಸಲಿರಿಸಿ ಅಭ್ಯಾಸವನ್ನು ಮಾಡಿದರೆ ಉಸಿರಾಟದಲ್ಲಿ ಗಮನಾರ್ಹ ಬದಲಾವಣೆಯೊಂದಿಗೆ ದೈಹಿಕ  ಮತ್ತು ಮಾನಸಿಕ ಆರೋಗ್ಯ ಸಹಜವಾಗಿ ಉತ್ತಮಗೊಳ್ಳುತ್ತದೆ.  
          ಶಬ್ದದಿಂದ ಕೂಡಿದ ಉಸಿರಾಟ ಇದೆ ಎಂದರೆ ಖಂಡಿತವಾಗಿಯೂ ಆತನ ಅರೋಗ್ಯ ಸರಿಯಾಗಿಲ್ಲ ಎಂದು ತಿಳಿಯಬಹುದು.  ಆ ವ್ಯಕ್ತಿ ಹೃದಯ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಶ್ವಾಸ ಕೋಶದ ಕಾಯಿಲೆಯಿಂದ ಬಳಲುತ್ತಿದ್ದಾನೆ ಇಲ್ಲವೇ ಅದರ ಹತ್ತಿರವೇ ಇದ್ದಾನೆಂದು ತಿಳಿದುಕೊಳ್ಳಬಹುದು. ಪ್ರಾಣಾಯಾಮದಿಂದ ಇದರಲ್ಲಿ ಗಮನಾರ್ಹ ಬದಲಾವಣೆಯನ್ನು ತರಬಹುದು. ಉಬ್ಬಸ ಅಸ್ತಮದಂತಹ  ಅಲರ್ಜಿಯಂತಹ ಕಾಯಿಲೆ  ಇದಕ್ಕೆ ಉತ್ತಮ ನಿದರ್ಶನ.  ಇದು ಉಸಿರಾಟದ ಮೇಲೇಯೆ ಪರಿಣಾಮವನ್ನು ಬೀರುತ್ತದೆ ಹಾಗಾಗಿ ಜೀವನವೇ ದುಸ್ತರವೆನಿಸಿ ವ್ಯಕ್ತಿ ಖಿನ್ನತೆಯಿಂದಲೂ ಮತ್ತು ನಂತರ ಬರುವ ಇತರ ದೈಹಿಕ ಕಾರಣಗಳಿಂದ ಬಳಲಬಹುದು. ಸರಳವಾದ ಪ್ರಾಣಾಯಾಮ ಯಾವ ರೀತಿಯಲ್ಲಿ ಪರಿಣಾಮವನ್ನು ಉಂಟು ಮಾಡುತ್ತದೆ ಎಂಬುದನ್ನು ಅನುಭವಿಸಿ ತಿಳಿಯಬಹುದಾಗಿದೆ. ಮುಖ್ಯವಾದುದನ್ನು ಉಸಿರಿಗೆ ಹೋಲಿಸುವುದುಂಟು. ಅದು ನನ್ನ ಉಸಿರು ಎಂದು. ಆದರೆ ಆ ಉಸಿರು ಪ್ರಧಾನವಾಗುವುದು ಅದರ ಬಗ್ಗೆ ಗಮನ ಹರಿಸಿದಾಗ. ಉಸಿರೇ ಉಸಿರಾಗುವುದು ಎನ್ನಬಹುದೇ?
         







Sunday, March 25, 2012

ಶೂನ್ಯಾಂತರ




ಶೂನ್ಯದಿಂದ ಶೂನ್ಯದೆಡೆಗೆ
ಭೂಮಿಯಲ್ಲಿರುವ ಯಾವುದೇ ಜೀವಿಯಾದರೂ ಉಗಮ ಮತ್ತು ಅಸ್ತಮದಲ್ಲಿ ಏಕ ಸ್ಥಿತಿಯಲ್ಲೇ ಇರುತ್ತವೆ. ಸೂರ್ಯ ಉದಯಿಸುವಾಗ ಮತ್ತು ಅಸ್ತಮಿಸುವಾಗ ದಿಕ್ಕು ಬದಲಾದರೂ ಸ್ಥಿತಿಯಲ್ಲಿ ಬದಲಾಗಿರುವುದಿಲ್ಲ. ಭ್ರೂಣ ರೂಪದಲ್ಲಿ ಗರ್ಭಾಶಯದಲ್ಲಿ ಹುಟ್ಟು ಪಡೆದು ಆಶ್ರಯಿಸುವಾಗ ಅಲ್ಲೂ ಕತ್ತಲೂ. ಆ ನಂತರ ಬೆಳಕಿನ ಪ್ರಪಂಚಕ್ಕೆ ಜನ್ಮವೆತ್ತಿ ಪ್ರವೇಶಿಸುವುದು.ನಂತರ ಕೊನೆಯಲ್ಲು ಕಣ್ನು ಮುಚ್ಚಿ ಅಂಧಕಾರಕ್ಕೆ ಜಾರುವಾಗ ಪುನಃ ಕತ್ತಲಿಗೆ ತೆವಳು ಈ ಬದುಕಲ್ಲಿ ಕತ್ತಲು ಎಂಬುದು ಯಾಕೆ ಪ್ರಾಮುಖ್ಯತೆ ಪಡೆದುಕೊಂಡಿದೆ? ಬೆಳಕನ್ನೇ ಹಪ ಹಪಿಸಿ ಬಯಸುವ ನಾವು ಕತ್ತಲಿನ ಮಹತ್ವವನ್ನೇ ಅರಿಯದೇ ಹೋಗುತ್ತೇವೆ. ತಮ್ಮನ್ನು ತಾವು ಅರಿಯುವುದೇ ಕತ್ತಲಲ್ಲಿ. ಮನುಷ್ಯನ ಗಾಢವಾದ ಹಲವು ವಿಷಯಗಳ  ಅರಿವಾಗುವುದೂ ಕತ್ತಲಲ್ಲೇ. ಕತ್ತಲಲ್ಲೇ ಅರಿವಿನ ಜ್ಞಾನವನ್ನು ಪಡೆದು ಬೆಳಕಿನೆಡೆಗೆ ಬರುತ್ತೇವೆ. ಕತ್ತಲಿಂದ ಬೆಳಕಿನೆಡೆಗೆ ಎಂಬುದರ ಸಂಕೇತವು ಇದಾಗಿರಬಾರದೇಕೆ.  ಆ ಕತ್ತಲನ್ನು ಮರೆಯದಂತೆ ಮಾಡುವುದೇ ಧ್ಯಾನ.

ತನ್ನನ್ನು ತಾನು ಅರಿತುಕೊಳ್ಳುವುದೇ  ಧ್ಯಾನ ಎಂದು  ಸರಳವಾಗಿ ವ್ಯಾಖ್ಯಾನಿಸಬಹುದು. ಜ್ಞಾನಿಗಳ ವಚನದಂತೆ ಧ್ಯಾನ ಎಂದರೆ ಮೂಲ ಸ್ಭಭಾವಕ್ಕೆ ಹಿಂತಿರುಗುವುದು ಎಂದು ಅರ್ಥ. ತನ್ನನ್ನು ತಾನು ಅರಿತುಕಳ್ಳದೇ ಮೂಲ ಸ್ಭಭಾವಕ್ಕೆ ಹಿಂತಿರುಗುವುದು ಅಸಾಧ್ಯ. ನಾನು ಏನು? ನನ್ನ ಈ ಭಾವನೆ ಏನು ? ಯೋಚಿಸುತ್ತ ಹೋದಂತೆ ಅನಂತವಾದ ಗುಹೆಯೊಳಗೆ ಹೊಕ್ಕಂತೆ ಮತ್ತೂ  ಮತ್ತು ಕತ್ತಲಿನೆಡೆಗೆ ..  ಕತ್ತಲಾದರೂ.. ಕತ್ತಲ ರೂಪದಲ್ಲಿರುವ ಬೆಳಕಿನೆಡೆಗೆ. ತನ್ನನ್ನು  ತಾನು ಅರಿಯುವುದು ಕತ್ತಲಲ್ಲೆ ಎಂಬುದರ ಸೂಚ್ಯಾರ್ಥ ಇದುವೇ. ನಿಜಕ್ಕಾದರೂ ಯೋಚಿಸಿ ಒಂದು ಕತ್ತಲ ಕೋಣೆಯೊಳಗೆ ಹೊಕ್ಕಾಗ ಅಗುವ ಅನುಭವ ಏನು? ಅಲ್ಲಿ ತಮ್ಮ ಇರವನ್ನು ಮೊದಲು ಅರಿಯುತ್ತೇವೆ. ಧ್ಯಾನ ಎಂದರೆ ಕಣ್ಣು ಮುಚ್ಚುವುದು ಅದಕ್ಕಾಗಿಯೇ  ಕಣ್ಣು ಮುಚ್ಚಿ ಅಂತರಂಗದ ಗುಹೆಯೊಳಗೆ ಹೊಕ್ಕುವುದು. ಕಣ್ಣು ಮುಚ್ಚಿ ಆಳವಾದ ಉಸಿರನ್ನು ಎಳೆದು ಕೊಂಡಾಗಲೇ ಅಂತರಂಗದ ಅರಿವಿಗೆ ಜಾರಿ ಬಿಡುತ್ತೇವೆ.  ನಿರಂತರವಾಗಿ ಇದನ್ನು ಆವರ್ತಿಸಿದಾಗ ಸ್ವಲ್ಪ ಸ್ವಲ್ಪವೇ ನಿಧಾನವಾಗಿ ತಡವರಿಸುತ್ತಾ ಒಳಗೆ ಹೋಗುತ್ತೇವೆ. ಹಾಗೆ ತನ್ನನ್ನು ತಾನು ಅರಿತುಕೊಳ್ಳುವ ಬಗೆ. ಇದನ್ನೇ ಇನ್ನೊಂದು ರೂಪದಲ್ಲಿ ಯೋಗ ಅಂತ ಕರೆಯುವುದು.

ಯೋಗ ಎಂದರೆ ದೈಹಿಕ ವ್ಯಾಯಾಮ ಕಸರತ್ತು ಇನ್ನಿತರ ವಿಶೇಷ ಭಾವಗಳ ನೆನಪಾದರೆ ಅದೆಲ್ಲ ಯೋಗಕ್ಕೆ ಪೂರಕವಾಗಿ ಇರುತ್ತದೆ ಹೊರತು ಅದನ್ನೇ ಯೋಗವೆಂದು ಅರ್ಥೈಸಿಕೊಳ್ಳುವುದು ತಪ್ಪಾಗುತ್ತದೆ. ಆದುದರಿಂದ ಯೋಗ ಎಂಬುದು ಪ್ರತಿಯೊಂದು ಜೀವಾತ್ಮಕ್ಕೂ ಸಿದ್ಧಿಸಬಹುದಾದ ಸ್ಥಿತಿ ( ಸ್ಥಿತಿ  ಹಾಗೆಂದರೆ ಸೂಕ್ತ) . ಬಹಳ ಸರಳವಾದ ವಿಚಾರಗಳು ನಿಗೂಢವಾದ ವಿಶಾಲವಾದ ಅರ್ಥವನ್ನು ಹೊಂದಿರುತ್ತದೆ. ಯಾರೂ ಸಾಧಿಸ ಬಹುದಾದ ಈ ಸರಳ ಸಾಧನ ಅದರ ಅನುಭವವೇ ವಿಚಿತ್ರ.

 ಕಣ್ಣು ಕಿವಿ ಮೂಗು ನಾಲಿಗೆ ಮತ್ತು ಚರ್ಮ ಈ ಪಂಚೇಂದ್ರಿಯಗಳನ್ನು ಶರೀರ ಹೊಂದಿರುವುದು ಬಾಹ್ಯ ಲೋಕದ ಸಂವಹನಕ್ಕೆ.ಆದರೆ ಈ ಇಂದ್ರಿಯಗಳ ಸಂವಹನಕ್ಕೆ ಸಿಗದೇ ಆ ಅನುಭವದ ಅರಿವಾಗದೇ ಇರುವಂತಹ ಒಂದು ವಸ್ತುವಿದೆ.ಕಣ್ಣಿಂದ ಕಾಣಲಾಗದ,  ಕಿವಿಯಿಂದ ಕೇಳಲಾಗದ, ಮೂಗಿನಿಂದ ಅಘ್ರಾಣಿಸಲಾಗದ,  ನಾಲಿಗೆಯಿಂದ ಸ್ವಾದನೆ ಮಾಡಲಾಗದ ಹಾಗೆ ಚರ್ಮದ ಸಂವೇದನೆಗೆ ನಿಲುಕದ ವಸ್ತುವಿದೆ. ಅದು ಮನಸ್ಸಿನ ಅರಿವು. ಅದನ್ನು ಗ್ರಹಿಸುವ ಸಂವಹನ ಮಾರ್ಗದ ಇಂದ್ರಿಯ ರೂಪವೇ ಮೊದಲು ಹೇಳಿದಂತಹ ಯೋಗ. ಯೋಗಾನುಭವ ಅಂದರ ಯೋಗ ಸ್ಥಿತಿಯ ಅನುಭವ ಅದು ಯಾವ ಭೌತಿಕ ಪ್ರಪಂಚದ ಬಾಹ್ಯ ಇಂದ್ರಿಯಗಳಿಗೆ ಸಂವೇದಿಸಲ್ಪಡುವುದಿಲ್ಲ. ಅದು ಕೇವಲ ಅನುಭವ ಮಾತ್ರ. ಆನುಭವವನ್ನು ವಿವರಿಸುವುದಾಗಲಿ ಆ ಆತ್ಮಾನಂದದ ಭಾವ ವಿಕಾರಗಳ ನಿರ್ವಚನೆಯನ್ನು ಮಾಡುವುದು ಅಸಾಧ್ಯ. ನಿರಾಕಾರ, ಸ್ವಭಾವ ರಹಿತ, ಸಿಹಿಯೂ ಇಲ್ಲ ಕಹಿಯೂ ಯಾವ ಸ್ವಾದವೂ ಇಲ್ಲದ, ಬಿಸಿಯೂ ಇಲ್ಲ,  ತಂಪೂ ಇಲ್ಲದ ಈ ವಸ್ತುವನ್ನು ಹೀಗೆ ಎಂದು ವಿವರಿಸುವುದು ಅಸಾಧ್ಯ. ಅದನ್ನು ಸ್ವ ಆ ಇಂದ್ರಿಯಗಳ ಮೂಲಕ ಅನುಭವಿಸಿಯೇ ಅರಿಯಬೇಕು.

ಯೋಗಾನುಭವದ ಹಲವು ವೆತ್ಯಾಸಗಳು ಅದು ಭೌತಿಕವಾಗಿ  ಹೊರಲೋಕಕ್ಕೆ ಕಾಣಬಹುದು.  ಇದೆಲ್ಲ ಪ್ರಾಕೃತಿಕ ವೆತ್ಯಾಸಗಳು. ಆದರೆ ಅಂತರಂಗದ ವೆತ್ಯಾಸ ಮಾತ್ರ ಇದಕ್ಕಿಂತ ಗಣನೀಯವಾಗಿರುತ್ತದೆ. ವ್ಯಕ್ತಿತ್ವದ ರೂಪವನ್ನೇ ಬದಲಾಯಿಸುವ ಯೋಗಾನುಭವದ ಅನುಭವದ ಸ್ವರೂಪವನ್ನು ವಿವರಿಸುವುದು ಸಾಧ್ಯವಿಲ್ಲ. ಅದನ್ನು ಸಹಜವಾಗಿ ಅನುಭವಿಸಿ ಮೊದಲು  ಹೇಳಿದ ಇಂದ್ರಿಯದ ಸಂವಹನದ ಮೂಲಕವೆ ತಿಳಿಯಬೇಕು. ಬಾಹ್ಯ ಪ್ರಪಂಚದಿಂದ ಈ ಪಂಚೇಂದ್ರಿಯಗಳ ಪರಿಧಿಯಿಂದ ಹೊರಬಂದು ಅದನ್ನು ಅನುಭವಿಸಬೇಕು ಇದೆಲ್ಲ ಅನುಭವಕ್ಕೆ ಬರಲು ಯಾವ ಯಾವ ದಾರ್ಶನಿಕನಾಗುವ ಅಗತ್ಯವಿಲ್ಲ. ಯೋಗಿಯಾಗಿ ಹಠಸಾಧನೆಯ ಅಗತ್ಯವೂ ಇಲ್ಲ. ಬಹಳ ಸರಳ ಹಾಗು ಸುಲಭದ ವಿಧಾನವೇ ಈ ಯೋಗಾನುಭವವನ್ನು ಹೊಂದುವುದು.

ಆರಂಭದಲ್ಲಿ ಏಕಾಗ್ರತೆಯ ಬಗ್ಗೆ ಯೋಚಿಸಬಾರದು. ಅದಕ್ಕಾಗಿ ಖಿನ್ನನಾಗಿ ಅದರಿಂದ ವಿಮುಖನಾಗಬಾರದು. ಇಲ್ಲಿ ಸೋಲು ಎಂಬುದಿಲ್ಲ. ನಿರಾಶೆ ಅನುಭವಿಸಬೇಕಾಗಿಲ್ಲ. ಅನಪೇಕ್ಷಿತ ಪ್ರೇರಣೆಯ ಕಿಂಚಿದಂಶ ಸಾಕು. ರೋಗಿಯಾದವನಿಗೆ ಆಹಾರ ರುಚಿಸುವುದಿಲ್ಲ. ಊಟ ಎಂದಾಗ ಬೇಡ ಎನ್ನುವವನಿಗೆ ಬಲವಂತವಾಗಿ ಉಣ ಬಡಿಸುವಂತೆ. ಬಾಯಿಗೆ ರುಚಿಸದೇ ಇದ್ದರೂ ಹೊಟ್ಟೆಗೆ ಬೇಡದೇ ಇದ್ದರೂ ಅಪ್ರಯತ್ನವಾಗಿಯಾದರೂ ಊಟ ಮಾಡಲೇಬೇಕು. ಔಷಧಿ ಸೇವಿಸುವ ಕಾರಣಕ್ಕಾಗಿಯಾದರು ಒಂದೆರಡು ತುತ್ತು ಅನಿವಾರ್ಯ. ಆವಾಗ  ನಿಧಾನವಾಗಿ ಸ್ವಲ್ಪ ಸ್ವಲ್ಪವಾಗಿ ಬೇಡದೆ ಇದ್ದ ಆಹಾರವನ್ನು ಸೇವಿಸ ಬೇಕು.  ಕ್ರಮೇಣ ತಿನ್ನಬೇಕೆಂಬ ಇಚ್ಚಾಶಕ್ತಿಯೇ ಬೆಳೆದುಬಿಡುತ್ತದೆ. ಇದರಲ್ಲೂ ಹಾಗೆ ನಿಧಾನವಾಗಿ ಒಂದೊಂದೇ ಹೆಜ್ಜೆಯ ಕಾಲುಭಾಗವಾದರೂ ಮುಂದೆ ಇಡುವ ಪ್ರಯತ್ನ ಮಾಡಬೇಕು. ಹಸಿದ ಹೊಟ್ಟೆಗೆ ಆಹಾರವನ್ನು ಯಾವ ಮುತುವರ್ಜಿಯಿಂದ ತಯಾರಿಸಿ ದಿನ ಮೂರು ಹೊತ್ತು ಉಣ್ಣುತ್ತೇವೆಯೋ ಆ ಇಚ್ಚಾ ಶಕ್ತಿಯನ್ನೇ ಇಲ್ಲಿ ಉಪಯೋಗಿಸುವುದು. ಬೆಳಗಿನ ಉಪಾಹಾರದಂತೆ ಮಧ್ಯಾಹ್ನದ ಊಟದಂತೆ ದಿನದ ಒಂದು ಭಾಗವಾಗಿ ಅದನ್ನು ಬಳಕೆ ತರಬೇಕು. ನಿರಾಸಕ್ತಿಯಲ್ಲೂ ಕಿಂಚಿತ್ ಆಸಕ್ತಿಯನ್ನು ತಾಳಿ ಸಾಧನೆಯತ್ತ ಮುಖಮಾಡಬೇಕು.

ಇಂದು ಆಗದಿದ್ದದ್ದಕ್ಕೆ ನಾಳೆ ಪ್ರಯತ್ನ ಮಾಡಬೇಕು. ಆ ನಿರೀಕ್ಷೆಯನ್ನು ಇಟ್ಟುಕೊಂಡು ಪರಿಣಾಮದತ್ತ ಗಮನ ಹರಿಸಬಾರದು. ಇಂದು ಇಟ್ಟ ಕಾಲು ಭಾಗದ ಹೆಜ್ಜೆ ಏನಿದೇಯೋ ಅದೇ ಹೆಜ್ಜೆ ಮಹತ್ವವಾಗಿರುತ್ತದೆ. ಯಾಕೆಂದರೆ  ನಿಮ್ಮಪ್ರಯತ್ನ ದಲ್ಲಿ ಇಂದು ಇಟ್ಟ ಒಂದು ಹೆಜ್ಜೆ ಮುಂದೆ ನಿಮ್ಮ ಯತ್ನವಿಲ್ಲದೇ ನಿಮ್ಮನ್ನು ಹತ್ತಾರು ಹೆಜ್ಜೆಯಷ್ಟನ್ನು ಎಳೆದು ಕೊಂಡು ಹೋಗುತ್ತದೆ. ಇಲ್ಲಿ ಕೇವಲ ನಿಷ್ಟೆ ಮತ್ತು ಪ್ರಾಮಾಣಿಕತೆ ಮಾತ್ರ ಬೇಕಾಗಿರುವುದು. ಇಂದು ಮೊದಲು ಹೇಳಿದ ರೋಗಿಯ ಭಾವದಲ್ಲಿ ಔದಾಸಿನ್ಯದಿಂದ ಹತ್ತು ನಿಮಿಷ ಪ್ರಾಣಾಯಾಮ ಮಾಡಿದರೆ ಮುಂದೆ ನೀವು ಊಹಿಸದೇ ಇದ್ದ ಫಲ ನಿಮ್ಮದಾಗುತ್ತದೆ. ಒಂದು ಹೆಜ್ಜೆ ಮುಂದೆ ಇರಿಸಿದ್ದೀರಿ ಎಂದರೆ ಆ ಯೋಗಾನುಭವ ನಿಮ್ಮ ಹತ್ತಿರದಲ್ಲಿ ಇದೆ ಎಂದೆ ಅರ್ಥ.

ಸ್ವಾನುಭವ ಹೇಳುವುದಾದರೆ  ಮೊದಲ ದಿನ ನನ್ನ ಅನುಭವ ದೊಡ್ಡ ಶೂನ್ಯವಾಗಿ ಭಾಸವಾಗಿತ್ತು. ಹಾಗಾಗಿ ಒಂದು ರೀತಿಯ ಔದಾಸಿನ್ಯ ಹಲವು ದಿನ ಜಡವಾಗಿಸಿದ್ದರೂ ಯಾವುದೋ ಪ್ರೇರಣೆಯಿಲ್ಲ ಅನೈಚ್ಚಿಕ ಕ್ರಿಯೆಯಂತೆ ನಡೆದು ಕೊಂಡು ಹೋಯಿತು. ಎಲ್ಲಿವರೆಗೆ ಎಂದರೆ ಆ ಒಂದು ದಿನ.ದೇಹದೊಳಗೆ ಮತ್ತು ಉಸಿರಾಟದ ರೀತಿಯಲ್ಲಿ ಆದ ಸ್ವಲ್ಪ ಬಹಳ ಸೂಕ್ಷ ಬದಲಾವಣೆಯೇ ಜಡವಾಗಿದ್ದ ಮನಸ್ಸನ್ನು ಮೆಲುವಾಗಿ ತಟ್ಟಿ ಎಬ್ಬಿಸಿಬಿಟ್ಟಿತು. ಮೊದಲ ಶೂನ್ಯತೆ ಏನಿದೆಯೊ ಅದಕ್ಕಿಂತ ತೀರ ಭಿನ್ನವಾದ ಶೂನ್ಯತೆಯ ದರ್ಶನಕ್ಕೆ ಮುಖ ಮಾಡಿದಂತೆ ಭಾಸವಾಗುತ್ತದೆ. ಒಂದು ಶೂನ್ಯದಿಂದ ಇನ್ನೊಂದು ಶೂನ್ಯೆಕ್ಕ. ಒಂದುರೀತಿಯ ಶೂನ್ಯಾಂತರ.

          ಹೊರ ಜಗತ್ತಿನ ಸಂವೇದನೆಯನ್ನು ಅನುಭವಿಸುವ ಪಂಚೇದ್ರಿಯದ ಅನುಭವವನ್ನು ಬದಿಗಿರಿಸಿ  ಆರಂಭದಲ್ಲಿ ಬರೀ ಕತ್ತಲಲ್ಲೆ ತಡಕಾಡುವ ಅನುಭವವಾದರು ನಂತರ ಸಹಜವಾಗಿ ಆ ಕತ್ತಲಲ್ಲೂ ನಮ್ಮ ಗುರಿಯ ಅರಿವು ನಮಗಾಗುತ್ತದೆ. ಮತ್ತು ನಮ್ಮ ಗಮ್ಯ ಏನು?  ಅದು ಎಲ್ಲಿದೆ? ಎಂಬುದನ್ನು ನಾವು ಕತ್ತಲಲ್ಲೇ ಬಹಳ ಸುಲಭದಲ್ಲಿ ಅಭ್ಯಾಸಬಲದಂತೆ ಹೊಂದಿಕೊಳ್ಳುತ್ತೇವೆ. ಇದುವೇ ಯೋಗಾನುಭವ. ಕತ್ತಲಲ್ಲೆ ಇದನ್ನು ಅರಿತುಕೊಳ್ಳುವುದು. ಅದಕ್ಕೆ ನಿದರ್ಶನವೆಂಬಂತೆ ಧ್ಯಾನದಿಂದ ಅಂತರ್ಮುಖಿಯಾಗಲು ಕತ್ತಲನ್ನು ನಿರ್ಮಿಸುವುದಕ್ಕಾಗಿ ಕಣ್ನನ್ನು ಮುಚ್ಚಿಕೊಳ್ಳುತ್ತೇವೆ. ಕಣ್ಣು ದೇಹದ ಮಹಾದ್ವಾರ ಇದ್ದಂತೆ. ಕಣ್ಣು ಮುಚ್ಚಿ ಒಂದು ಸಲ ಕತ್ತಲ ಅನುಭವಾವಾಯಿತೋ ನಂತರ ಒಂದೊಂದೇ ದ್ವಾರಗಳು ಅಂದರೆ ಇತರ ಇಂದ್ರಿಯಗಳು ಮುಚ್ಚಿಕೊಳ್ಳುತ್ತವೆ. ವಿಚಿತ್ರವೆಂದರೆ ಇದಕ್ಕೆ ಇಛ್ಚಾಶಕ್ತಿಯ ಕಿಂಚಿದಂಶ ಸಾಕು. ಶೂನ್ಯದಿಂದ ಶೂನ್ಯದೆಡೆಗೆ ಹೆಜ್ಜೆ ಇಡೋಣ ಅಲ್ಲವೇ?

Wednesday, February 1, 2012

ಮುಂಜಾನೆಯ ಶಿಶು




ತಾಯಿ ತಾನು ಹೆತ್ತ ಮಗುವಿಗೆ ತಾನೇ ಬಯಸಿ ಪೂರ್ಣ ಮನಸ್ಸಿನಿಂದ ಎದೆಹಾಲನ್ನು ಕೊಡುವ ಸಮಯವೆಂದು, ಒಂದು ಇರುತ್ತದೆ. ಮಗು ಸ್ವತಃ ಹಠಮಾಡಿ ಅಥವಾ ಅತ್ತುಕರೆದಾಗ ಹಾಲನ್ನು ಕೊಡುವ ಸಮಯವೇ ಪ್ರತ್ಯೇಕ..   ಇದಲ್ಲದೆ ಬೇರೆ ಹಲವಾರು ಬಾರಿ ಬೇರೆ ಬೇರೆ ಕಾರಣಗಳಿಂದ ಹಾಲುಣಿಸಿದರೂ ಆಗ ಮೊದಲ ಅಪ್ಯಾಯ ಮಾನ ಲಭ್ಯವಾಗುವುದೇ ಇಲ್ಲ. ಆಗ ತಾಯಿಯ ಕ್ರಿಯೆಯಲ್ಲಿ ಯಾಂತ್ರಿಕತೆ ಬಿಂಬಿಸಲ್ಪಡುತ್ತದೆ. ಆದರೆ ಶಿಶುವಿಗೆ ತೃಪ್ತಿಯಾಗುವಷ್ಟು ಹಾಲನ್ನುಣಿಸಿ ಅದರಲ್ಲಿ ತಾಯಿ ಅನುಭವಿಸುವ ಸಂತೃಪ್ತಿ  ಮಾತ್ರವಲ್ಲ ತಾಯಿ ಮಗು ಜತೆಯಲ್ಲೇ ಅನುಭವಿಸುವ ಸಾನ್ನಿಧ್ಯ ಸುಖ ಅತ್ಯಂತ ವಿಶಿಷ್ಟ, ಮಗುವಿಗೆ ಬೇರೆ ಆಹಾರ ಎಷ್ಟೂ ಸಿಗಬಹುದು ಆದರೆ ಎದೆ ಹಾಲಿಗಿರುವ ಮಹತ್ವ ಬಹಳ ಶ್ರೇಷ್ಠ. ಯಾವುದೇ ಕಾರಣ ವಿರಲಿ ಮೊದಲ ಪರಿಹಾರ ಸ್ತನ್ಯಪಾನದಿಂದ. ಹಾಗಾಗಿ ತಾಯಿ ಸ್ವತಃ ಮನತುಂಬಿ ಮಮತೆಯಿಂದ ಹಾಲುಣಿಸುವ ಆ ವೇಳೆಯ ಮಹತ್ವ ಎಷ್ಟಿರಬಹುದು? ಮಗುವು ಆ ಹೊತ್ತಿನಲ್ಲಿ ಎಷ್ಟು ಸಾಧ್ಯವೋ ಆಷ್ಟು ಹೀರಿಕೊಳ್ಳಬೇಕು. ಇದು ಮಗುವಿನ ಪೋಷಣೆಯಲ್ಲೂ ಪ್ರಾಮುಖ್ಯವಾಗಿರುತ್ತದೆ. ಕರುಣೆದುಂಬಿ ಜನನಿಯ ಜೀವರಸ ಹೀರಿ ಪುನೀತವಾಗದ ಶಿಶುವಿದ್ದರೆ ಅದು ಪ್ರಕೃತಿಗೆ ವ್ಯತಿರಿಕ್ತವಾದದ್ದು. ಭಗವಂತನನ್ನು  ಪ್ರಕೃತಿರೂಪದಲ್ಲಿ ಕಂಡಾಗ ಪ್ರಕೃತಿಯೂ ಜನನಿ ಸಮಾನ. ಹಾಗಾಗಿ ಪ್ರತೀ ದಿನವು ಮನುಷ್ಯ ಶಿಶುವಾಗುತ್ತಾನೆ. ಶೈಶವದ ಬಾಲ್ಯಾವಸ್ಥೆಯಲ್ಲಿ  ಜನನಿಯ ಎದೆ ಹಾಲನ್ನು ಹೀರಿ ದಿನವಾರಂಭಿಸುತ್ತಾನೆ.
 ಕಣ್ಣಿಗೆ ಪ್ರತ್ಯಕ್ಷ ಕಾಣುವ ಪ್ರಕೃತಿ ಭಗವಂತ ರೂಪ. ಹಾಗಾಗಿ ಇದನ್ನು ತಾಯಿಗೆ ಹೋಲಿಸುತ್ತೇವೆ. ಶ್ರೇಷ್ಠವಾದದ್ದು ನಮ್ಮ ಜೀವನಾಡಿಯಾಗಿ ಜೀವನಕ್ಕೆ ರೂಪ ಕೊಡುವಂತಹುದು ಯಾವುದೇ ಆಗಿರಲಿ ನಾವು ಅದನ್ನು ಜನನಿಯ ಸ್ಥಾನದಲ್ಲೆ ಕಾಣುತ್ತೇವೆ.  ಅದು ನಮ್ಮ ಸಂಸ್ಕಾರ. ಅತೀ ಶ್ರೇಷ್ಠವಾದ ವಸ್ತುವನ್ನು ಹೋಲಿಸಲು ಸುಲಭವಾದ ಉಪಮೆ ಎಂದರೆ ಅದು ಮಾತೃ ಸ್ಥಾನ. ಪ್ರತಿಯೊಂದು ಜೀವರಾಶಿಯನ್ನೂ ಮಕ್ಕಳಾಗಿ ಸಲಹುವ ಪ್ರಕೃತಿ   ಮಹಾತಾಯಿಯಾಗಿಬಿಡುತ್ತಾಳೆ. ಪ್ರಕೃತಿಯಲ್ಲಿ ತಾಯಿಯನ್ನು ಕಂಡಾಗ ಪ್ರಕೃತಿಗೆ ಪೂರಕವಾದ ಭಾವನೆಗಳೇ ಪ್ರಚೋದಿಸಲ್ಪಡುತ್ತವೆ. ಹಸಿದ ಹೊಟ್ಟೆಗೆ ಆಹಾರದಂತೇ ನೊಂದ ಮನಕೆ ಸಾಂತ್ವಾನ ನೀಡುವ ಪ್ರಕೃತಿ ಮಾತೆ ಮುಂಜಾನೆ ಸುಂದರವಾಗಿ ಕಂಗೊಳಿಸುವಾಗ ಪೂರ್ಣವಾದ ದಿನವೊಂದು ನಮ್ಮ ಮುಂದಿಡುತ್ತಾಳೆ.
  ಪೂರ್ಣವಾದ ದಿನವೊಂದನ್ನು ಒಂದು ಮಾನವ ಜೀವಮಾನ ಎಂದು ಕಲ್ಪಿಸಿದರೆ ದಿನದ ಹಲವು ಯಾಮಗಳಲ್ಲಿ ಮನುಷ್ಯ ಜೀವನವನ್ನೇ ಕಾಣಬಹುದು.  ನಿದ್ರಾಪೊರೆಯನ್ನು ಹರಿದು ಹೊರಬಂದಾಗ ಹೊಸ ಜನ್ಮವೆತ್ತಿದ ಮಗುವಿನಂತೆ,  ಮುಂಜಾನೆಯ ಆ ಘಳಿಗೆ ಬಾಲ್ಯಾವಸ್ಥೆಯಾದರೆ,  ಬೆಳಗಿನ ನಸು ಬಿಸಿಲಿನ ದಿನದ ಮುಖ್ಯ ಚಟುವಟೆಕೆಗೆ ಕಾರ್ಯೊನ್ಮುಖವಾಗುವ ಹೊತ್ತು ಯೌವನ ನಂತರ ಸಮಯ ಕಳೆಯುತ್ತಿದ್ದಂತೆ ವೃದ್ದಿ ಹೊಂದಿ ಬಿಡುತ್ತೇವೆ. ಸೂರ್ಯಾಸ್ತಮಾನವಾಗಿ ದಿನ ಮುಗಿದಂತೆ ನಾವು ವೃಧ್ಧರಾಗಿ ನಿದ್ರಾವಸ್ಥೆಗೆ ಜಾರಿಬಿಡುತ್ತವೆ. ಒಂದು ಜೀವನಾಂತ್ಯದಂತೆ  ಇಲ್ಲು ನಿದ್ರಾವಸ್ಥೆಯೇ ಸಂಕೇತವಾಗಿಬಿಡುತ್ತದೆ.    ಹಾಗಾದರೆ  ನಮ್ಮ ತಾಯಿಯ ಮುಖವನ್ನು ನಾವು ಕಾಣುವ  ಮತ್ತು ಒಂದಾಗುವ ಘಳಿಗೆ ಒಂದಿರಬೇಕಲ್ಲ. ಅದು ಮುಂಜಾನೆ. ಆವಾಗಲೇ ಪ್ರಕೃತಿ ಮಾತೆಯ ಸುಂದರ ಹಾಗು ಶಾಂತ ಮುಖವನ್ನು ನೋಡುವುದಕ್ಕೆ ಸಾಧ್ಯ. ಉದಿಸುವ ಸೂರ್ಯ ಮುಖವಾಗಿ ಮಮತೆಯಿಂದ ಮೈದಡವಲು ಬರುತ್ತಾಳೆ. ಆ ಮೈದಡವುವಿಕೆಯ ಅರಿವಾಗಬೇಕು ಅಷ್ಟೇ.
ಶಿಶುವಿಗೆ ಸ್ತನ್ಯ ಪಾನ ಜೀವನಕ್ಕೆ ಹೇಗೆ ಅಮೃತ ಸೇಚನವನ್ನು ಮಾಡುತ್ತದೋ ಅದೇ ಬಗೆಯಲ್ಲಿ ಪ್ರಕೃತಿಯಲ್ಲಿ ಆಮೃತವಾಗಿ ವಾತಾವರಣದ ಆಮ್ಲ ಜನಕ. ಮುಂಜಾನೆ ಪ್ರಕೃತಿ ತಾಯಿಯಾಗಿ  ಹೃದಯತುಂಬಿ ಉಣಿಸಲು ಬರುತ್ತಾಳೆ.  ನಿದ್ರಿಸಿದ ಮಗುವನ್ನು ಮೆಲುವಾಗಿ ಮೈದಡವಿ ಎಚ್ಚರಿಸಲು ಯತ್ನಿಸುತ್ತಾಳೆ. ಆ ಕರೆಯ ಅರಿವಾಗಿ ಮಗು ಎದ್ದರೆ ಹೊಟ್ಟೆತುಂಬ ಅಮೃತ ರೂಪದ ಹಾಲನ್ನು  ಅಂದರೆ ಆಮ್ಲಜನಕವನ್ನು ಉಣಿಸುತ್ತಾಳೆ. ಒಂದುವೇಳೆ ಆ ಮಗು ನಿದ್ದೆ ಬಿಟ್ಟೇಳದೆ ಇದ್ದರೆ, ಎದ್ದಾಗ ನೋಡೋಣವೆಂದು ಆ ಕಡೆ ಸರಿದು ತನ್ನ ನಿತ್ಯಕಾಯ್ಕದಲ್ಲಿ ಮಗ್ನವಾಗುತ್ತಾಳೆ. ನಂತರ. ಹೊತ್ತು ಕಳೆದಂತೆ ಅನ್ಯಕಾರ್ಯದಲ್ಲಿದ್ದಾಗ ಹಾಲುಣಿಸಿದರೂ ಸಿಗಬೇಕಾದ ಸಂತೃಪ್ತಿ ಆಲ್ಲಿ ಮೂಡುವುದೇ ಇಲ್ಲ. ಎಲ್ಲವೂ ಅವಸರದಲ್ಲಿ ಯಾಂತ್ರಿಕವಾಗಿಬಿಡುತ್ತದೆ.
ಪ್ರಕೃತಿ ಹೃದಯ ತುಂಬಿದ ಅಮ್ಮನಾಗುವಾಗ ಓಂ... ಓಂ.. ಎಂದು  ಓಂಕಾರ ರೂಪಿಂದ  ಅಮ್ಮಾ ಎಂದು ಕರೆಯುವ ಮಗುವು ನಾವಾಗಬೇಕು. ಮುಂಜಾನೆಯ ಧ್ಯಾನ ಮತ್ತು ಯೋಗ ಪ್ರಕೃತಿಯ ಮುಂದೆ ನಮ್ಮನ್ನು ಮಗುವಾಗಿಸುತ್ತದೆ.ಎಲ್ಲವನ್ನು ಮರೆತು ಮಗುವಿನ ಮನಸ್ಸನ್ನು ರೂಪಿಸಲು ಯೋಗದಿಂದ ಮಾತ್ರ ಸಾಧ್ಯ. ಅಮ್ಮನಿಂದ ಮೊದಲು ಎಚ್ಚರವಾಗಿ ಧ್ಯಾನ ಮುದ್ರೆಯಲ್ಲಿ ಕುಳಿತು ಏಕೋಭಾವದಿಂದ ಓಂಕಾರದಿಂದ  “ ಅಮ್ಮಾ...” ಎಂದಾಗ ಆ ಮಾತೆ ಹೃದ್ಯದುಂಬಿ ಮಮತೆಯ ಅಮೃತವರ್ಷವನ್ನೆ ಸುರಿಸಿಬಿಡುತ್ತಾಳೆ.   ನಮ್ಮೆಲ್ಲಾ ನೋವು ದುಮ್ಮಾನಗಳಿಗೆ ಮಮತೆಯಿಂದ ಮೈದಡವಿ ಸಾಂತ್ವಾನ ನೀಡುತ್ತಾಳೆ. ಮೈಮನಗಳಿಗಾದ ಗಾಯಗಳನ್ನು ಮೃದುವಾಗಿ ಸ್ಪರ್ಶಿಸಿ ಮಧುರವಾದ ಅನುಭವವನ್ನು ನೀಡುತ್ತಾಳೆ. ಆದರೆ ಹೊತ್ತು ಮೀರಿದಂತೆ ಅಮ್ಮನಿಗೂ ಸಮಯವಿಲ್ಲ. ಆ ಕರುಣಾಮೃತವನ್ನು ಸವಿಯುವುದಕ್ಕೆ ನಮಗೂ ಅವಕಾಶವಿರುವುದಿಲ್ಲ. ಮುಂಜಾನೆ ಅಮ್ಮನ ಮುಖ ದರ್ಶನವಾಗುವ ಮೊದಲೇ ಅಂದರೆ ಸೂರ್ಯ ಉದಿಸುವ ಮೊದಲೇ ಎದ್ದು ಅಮ್ಮನ ಬರವನ್ನು ಕಾಯಬೇಕು. ಏಕೋಭಾವದಿಂದ ಕಪಟವರಿಯದ ಮಗುವಿನಂತೆ ಶಾಂತ ಚಿತ್ತದಿಂದ ಅಮ್ಮಾ.... ಎಂದು ಕರೆಯೋಣ. ನಮ್ಮ ಅಮ್ಮ ಮಮತೆಯಿಂದ ಮಡಿಲಲ್ಲಿ ಮಲಗಿಸಿ ಉಣಿಸುವ ಆ ಎದೆಹಾಲನ್ನು ಹೀರಬೇಕು ಎಷ್ಟು ಸಾಧ್ಯವೋ ಅಷ್ಟು.  ಮುಂಜಾನೆಯ ಅಮೃತಪಾನಕ್ಕೆ ನಾವು ಶಿಶುವಾಗೋಣ.


Saturday, January 7, 2012

ನಂಬಿಕೆಗೆಳು ವಿಪರ್ಯಾಸಗಳು



ನಂಬುಗೆ ವಿಶ್ವಾಸ ಎಂಬ ಭಾವವನ್ನು ಮನುಷ್ಯ ಹುಟ್ಟಿದ ಕೂಡಲೇ ಬೆಳೆಸಿಕೊಳ್ಳುತ್ತಾನೆ. ಹುಟ್ಟಿದ ಮಗು ಮೊದಲು ತಾಯಿಯ ಎದೆಹಾಲನ್ನು ಚೀಪುತ್ತ ತನ್ನ ಕೈಗಳನ್ನೇ ಚೀಪತೊಡಗುತ್ತದೆ. ಆ ಕೈಗಳಲ್ಲೇ ತಿನ್ನುವ ಆಹಾರ ಸಿಗುವುದೆಂಬ ವಿಶ್ವಾಸ. ತನ್ನವ್ವ ತೋರಿದ ವ್ಯಕ್ತಿಯನ್ನು ಇವನು  ಆಪ್ಪ ಇವನು ಬಂಧು ಎಂದು ವಿಶ್ವಾಸದಿಂದ ನಂಬಿಕೆಯನ್ನು ಬೆಳೆಸುತ್ತದೆ. ಈ ನಂಬಿಕೆ ಎಂಬುದು ಹುಟ್ಟಿದಂದಿನಿಂದ ಬೆಳೆದು ಗಟ್ಟಿಯಾಗಿ ಶಿಖರವಾಗಿರುತ್ತ, ಅದರ ಕಾಠಿಣ್ಯ ಅವರವರ ಮನೋಭಾವಕ್ಕೆ ಹೊಂದಿಕೊಂಡಿರುತ್ತದೆ. ಆದರೆ ಅದು ಶಿಥಿಲಗೊಂಡು ಕುಸಿದಾಗ ಬದುಕಿನ ಅರ್ಥವೇ ಕಳೆದುಕೊಂಡಂತೆ ಭಾಸವಾಗುತ್ತದೆ.

ಈಗೀಗ ಇಂತಹ  ನಂಬಿಕೆ ವಿಶ್ವಾಸಗಳ ಗೋಡೆಗಳು ವಿವಾದದ ಗಾಳಿಯಿಂದ ಅಲುಗಾಡಿ ಕುಸಿಯತೊಡಗುತ್ತದೆ. ಇಂದು ಗಾಢವಾಗಿ ನಂಬಿ ಅಚಲವಾದದ್ದು ನಾಳೆ ಶಿಥಿಲವಾಗಿಬಿಡುತ್ತದೆ. ಜನ್ಮದಾತ ಜನಕನನ್ನು ನಂಬುವುದು ಅಮ್ಮನ ಮಾತಿನಿಂದ. ಇಂತಹ ನಂಬಿಕೆಗಳು ಕೇವಲ ನಂಬಿಕೆಗಳಲ್ಲ. ಅದು ಮೌಢ್ಯವೆಂದು ಹಾಸ್ಯಾಸ್ಪದವೆಂದು ಪರಿಗಣಿಸಿದರೆ ಬದುಕಿನ ಅರ್ಥಕ್ಕೆ ಬೇರೆಯೇ ವ್ಯಾಖ್ಯಾನವನ್ನು ಕೊಡಬೇಕಾಗುತ್ತದೆ.

ಮನಸ್ಸಿನ ಭಾವನೆಗೆಳು ಸಂಘರ್ಷಕ್ಕೆ ತುತ್ತಾದಾಗ ವಿವಾದಗಳು ಹುಟ್ಟಿಕೊಳ್ಳುತ್ತವೆ. ಅದು ಹುಟ್ಟಿಕೊಳ್ಳುವುದು ದೊಡ್ಡದಲ್ಲ ಅದನ್ನು ಬೆಳೆಸುವ ರೀತಿ ವಿಚಿತ್ರ.  ಆದರೆ ಅದು  ಮಾನವ ಸಹಜತೆಯನ್ನು ಮೀರಿ ನಿಲ್ಲುವಾಗ ಮಾತ್ರ ಕಳವಳವಾಗುತ್ತದೆ. ವೈಷಮ್ಯ ಹೆಡೆಯೆತ್ತಿ ಪೂತ್ಕರಿಸುತ್ತ ಮನುಷ್ಯ ಜೀವಗಳೊಳಗಿನ ಸಂಬಂಧಗಳೇ ಕಲುಷಿತವಾಗುತ್ತದೆ. ಹುಟ್ಟು ಸಾವಿನ ನಡುವಿನ ದಿನಗಳನ್ನು ಈ ವೈಷಮ್ಯದ ನೆರಳೂ ಮಸುಕಾಗಿಸುತ್ತದೆ. ಸತ್ತ ನಂತರ ಅಸ್ತಿತ್ವವೇ ಇಲ್ಲದ ಬದುಕು , ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿ ಸತ್ತನಂತರ ಏನು? ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದು ಬಿಡುವಾಗ, ಬದುಕಿದ ಅಷ್ಟು ದಿನ ಈ ನೆರಳಿನಲ್ಲೇ ಕಳೆಯಬೇಕೆ? ಸಾವಿನ ನಂತರ ಎಲ್ಲಾ ವಾದಗಳು ಅರ್ಥವನ್ನು ಕಳೆದುಕೊಳ್ಳುತ್ತದೆ. 

ಆಚರಣೆಯೊಂದು ಮೂಢತನದ್ದೋ ಹಾಸ್ಯಾಸ್ಪದವೋ ಅದು ಪ್ರಶ್ನೆ ಬೇರೆ. ಆದರೆ ಅದನ್ನು ಆರೋಪಿಸುವಲ್ಲಿ ಸಮಸ್ಯಾ ಪರಿಹಾರಕ್ಕೆ ಎಲ್ಲಿ ಮೀಟಬೇಕೋ ಅಲ್ಲಿ ಮೀಟದೆ ಯಾರನ್ನೋ ಗುರಿಯಾಗಿಸಿ, ವೈಷಮ್ಯದ ಕಿಚ್ಚನ್ನು ಹೆಚ್ಚಿಸುತ್ತ ಮಾನವ ಸಂಬಂಧಗಳನ್ನು ಜಟಿಲಗೊಳಿಸುವುದು ಸರಿಯೇ? ವೀಣೆಯಲ್ಲಿ ತಂತಿ ಉದ್ದವಾಗಿ ಅದರ ದೇಹ ತುಂಬ ಚಾಚಿಕೊಂಡಿರುತ್ತದೆ. ಮೀಟಬೇಕಾದ ಜಾಗದಲ್ಲಿ ಮೀಟಿದಾಗ ಸಂಗೀತದ ರಾಗ ಮಾಧುರ್ಯ ಹೊರಡುತ್ತದೆ. ಇನ್ನೇಲ್ಲೋ ಮಿಟಿದಾಗ  ಅದು ಅಪಸ್ವರವನ್ನೇ ಹೊರಡಿಸಬಲ್ಲುದು. ವಾಸ್ತವದಲ್ಲಿ ಘಟನೆಗಳು ಘಟಿಸಿ,  ವಿವಾದಗಳು ಬೆಳೆಯುವುದು  ಇದೇ ಕಾರಣದಿಂದ.

ಇಂದು ಸಮಾಜ ಹೆಚ್ಚು ಹೆಚ್ಚು ವಿದ್ಯಾವಂತ ಸಮಾಜವಾಗುತ್ತಿದೆ.  ತಿಳುವಳಿಕೆ ಅಥವ ಲೋಕ ಜ್ಞಾನವೆಂಬುದು ಕೇವಲ ಒಂದು ಕಡೆಗೆ ಅಥವಾ ಯಾರಿಗೋ ಮೀಸಲಾಗಿರುವುದಿಲ್ಲ. ಇಂದು ಜ್ಞಾನದ ಪರಿಮಳವನ್ನು ಅವರವರ ಸಾಮಾರ್ಥ್ಯಕ್ಕನುಸಾರ ಆಘ್ರಾಣಿಸಲು ಪ್ರಪಂಚ ಮುಕ್ತವಾಗಿ ತೆರೆದುಕೊಂಡಿದೆ. ತಿಳಿವಳಿಕೆ ಇಲ್ಲದಲ್ಲಿ ಅದನ್ನು ತುಂಬಿಸಿ ವಂಚಿತರಾದವರಿಗೆ ಅದನ್ನು ನೀಡಬೇಕು. ಅದಕ್ಕೆ ಇನ್ನೊಬ್ಬರನ್ನು ಹೊಣೆಯಾಗಿಸುವ ಕಾಲಮಾನ ಈಗ ಸಾಕಷ್ಟು ಬದಲಾಗಿದೆ. ಆಚರಣೆಯೊಂದು ಬಲವಂತವಾಗಿ ಹೇರಲ್ಪಟ್ಟರೆ ಅದು ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಂಡಂತೆ ಎಂಬುದು ಸರಿ. ಯೋಚಿಸುವ ಬಲವಂತವಾಗಿ ಹೇರುವ ಪರಿಸ್ಥಿತಿ ಈಗ ಇದೆಯೇ?

        ಇಂದು ಹಳ್ಳಿಕಡೆ ಒಂದು ಬಾರಿ ಹೋಗಿ ನೋಡಿದರೆ ಅರಿವಾಗುತ್ತದೆ. ಕೃಷಿಕ ಜೀವನ ಎಷ್ಟೊಂದು ದುರ್ಭರವಾಗಿದೆ ಎಂದು. ಸಾಕಷ್ಟು ದಿನಗೂಲಿ ಸಂಬಳ ಮುಂಗಡವಾಗಿ ಕೊಟ್ಟರೂ ತನ್ನ ತೋಟದ ಕೆಲಸಕ್ಕೆ, ಮಣ್ಣು ಹೊರುವುದಕ್ಕೋ, ಗೊಬ್ಬರ ಹಾಕುವುದಕ್ಕೋ, ಮರ ಹತ್ತುವುದಕ್ಕೋ ಔಷಧಿ ಸಿಂಪಡಿಸುವುದಕ್ಕೋ ಇಂದು ಯಾವ ವರ್ಗದವರೂ ಬಾರದಂತಹ ಪರಿಸ್ಥಿತಿ. ಬಂದರೂ ಇಲ್ಲಿ ಸಂಬಳ ಕೊಡುವ ಯಜಮಾನ ಕಾರ್ಮಿಕನಿಗಿಂತ ದಯನೀಯ ಸ್ಥಿತಿಗೆ ತಲಪುವಂತಶ ಸನ್ನಿವೇಶ ಇರುತ್ತದೆ.  ಸಮಯಾನುಸಾರ ಮಾಡಬೇಕಾದ ಕೆಲಸ ಸಮಯಮೀರಿ ಮಾಡಿ ನಷ್ಟ ಅನುಭವಿಸುವುದು ಮಾತ್ರವಲ್ಲ ಕೃಷಿಕ ಜೀವನವೇ ಬೇಡ ಎಂದು ವೈರಾಗ್ಯ ತಾಳುವವರು ಹಲವರು.ಬಲವಂತದಿಂದ ಅಧಿಕಾರದರ್ಪದಿಂದ ಕೆಲಸವನ್ನು ಮಾಡಿಸಿಕೊಳ್ಳಲು ಅಸಮರ್ಥನಾಗಿ ಕೈಕಟ್ಟಿ ಕುಳಿತಿರುವ  ಪರಿಸ್ಥಿತಿಯಲ್ಲಿ ಒಂದು ಆಚರಣೆ ಬಲವಂತವಾಗಿ ಹೇರಲ್ಪಟ್ಟಿದೆ ಎಂದು ಒಂದು ವರ್ಗವನ್ನು ಬೊಟ್ಟು ಮಾಡುವುದು ಎಷ್ಟು ಸರಿ? ದುಡ್ಡುಕೊಟ್ಟು ಅಥವ ಬಲವಂತದಿಂದ ಹಿಂಸೆಕೊಟ್ಟು ಇಂತಹ ಆಚರಣೆ ಮಾಡು ಎಂದು ಅಧಿಕಾರ ಚಲಾಯಿಸಿದರೆ ಇಂದಿನ ಪ್ರಜ್ಞಾವಂತ ಸಮಾಜದಲ್ಲಿ ಕೇಳುವವರು ಯಾರು?  ಒಂದುವೇಳೆ ಈ ಪ್ರಾಥಮಿಕ ತಿಳುವಳಿಕೆಯಿಂದ, ಜ್ಞಾನದ ಪರಿಧಿಯಿಂದ ಯಾರಾದರೂ ಹೊರಗಿದ್ದು ತನ್ನ ಮಾನಸಿಕ ಗುಲಾಮತನದಿಂದ  ಆ ನ್ಯೂನವಾದ ಅರಿವನ್ನು ಅವರಲ್ಲಿ ಮೂಡಿಸಬೇಕಾದ್ದು ನ್ಯಾಯ. ಯಾವುದೇ ಜ್ಞಾನದಿಂದ ಯಾರೂ ವಂಚಿತರಾಗಬಾರದು. ಬದಲಾದ ಸಮಾಜದಲ್ಲಿ ಈಗ ತುಳಿತಕ್ಕೊಳಗಾವವರು ಬದಲಾಗಿಬಿಟ್ಟಿದ್ದಾರೆ. ವಿದ್ಯೆ ಉದ್ಯೋಗ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲು ಪರೋಕ್ಷವಾಗಿ ಪ್ರತ್ಯಕ್ಷವಾಗಿ ತುಳಿತಕ್ಕೆ ಒಳಗಾಗುತ್ತಿದ್ದಾರೆ ಇದು ಕಂಡೂ ಕಾಣದಂತಿರುವ ಪರಮ ಸತ್ಯ.

        ವಿಪರ್ಯಾಸಗಳು  ಹಲವಿದೆ. ದುರಂತವೆಂದರೆ ನಂಬಿಕೆಗಳು ಹೀಗೆ  ಒಂದೊಂದಾಗಿ ಮೂಢತನದ್ದಾಗಿ ಕಂಡು ಬರುತ್ತವೆ. ಹೋಮ ಹವನಗಳನ್ನು ನಂಬಿಕೆಯಿಂದ ಮಾಡುವ ಹಾಗೆ ಇಲ್ಲ. ಹೋಮ ಹವನಗಳ ಮಾತಿರಲಿ ಅಗರಬತ್ತಿ ಹಚ್ಚಿಟ್ಟರೂ ವಾಯುಮಾಲಿನ್ಯ ಆಗಬಹುದೆಂದು ವಿವಾದವನ್ನು ಹುಟ್ಟು ಹಾಕುವ ದಿನ ದೂರವಿಲ್ಲ. ಪ್ರತಿಯೊಂದಕ್ಕೂ ವೈಜ್ಞಾನಿಕ ಕಾರಣಗಳನ್ನು ರಹಸ್ಯಗಳನ್ನು ಹುಡುಕುವ ನಾವು ಈ ಜಲ ಈ ಭೂಮಿ ಈ ಸೂರ್ಯ ಈ ರಹಸ್ಯದ ಆಳವನ್ನು ಎರಡು ಶತಮಾನ ಕಳೆದರೂ ತಿಳಿಯಲಾಗಲಿಲ್ಲ.ಯಾವ ಕಾರಣದಿಂದ ಈ ಪ್ರಪಂಚವಿದೆ?

ನಮ್ಮ ಆಚರಣೆಗೆಳು, ನಂಬಿಕೆಗಳು. ಆಚರಿಸಲ್ಪಡಬೇಕು. ಅದರಿಂದ ಪರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಹಾಗೆ ತೊಂದರೆಯಾಗುವ ಅದೆಷ್ಟು ಆಚರಣೆಗಳಿವೆ ಅದರ ವಿರುದ್ದ ಪ್ರತಿಭಟನೆಯ ಅರಿವು ಮೂಡಿಸಬೇಕು. ಯಾವುದೇ ದೇವರು ಪರರಿಗೆ ತೊಂದರೆ ಕೊಟ್ಟು ತನ್ನನು ಪೂಜಿಸುವುದನ್ನು ಬಯಸುವುದಿಲ್ಲ. ಹಿಂಸೆಯನ್ನೂ, ವೈಷಮ್ಯವನ್ನು ಮಾತ್ರವಲ್ಲ ಗುಂಪುಗಾರಿಕೆಯನ್ನು ಪ್ರಚೋದಿಸುವ ಅದೆಷ್ಟು ಆಚರಣೆಗಳಿಲ್ಲ.  ಈ ರೂಪದಲ್ಲಿ ನಡೆಯುವ  ಸಾರ್ವಜನಿಕ ಕಾರ್ಯಕ್ರಮಗಳು ಅದೆಷ್ಟು ತೊಂದರೆಗಳನ್ನು ಜನ ಜೀವನಕ್ಕೆ ಕೊಡುತ್ತಿಲ್ಲ? ಪ್ರಾಣಿಹಿಂಸೆ ನಡೆಯುವ ಅದೆಷ್ಟು ಆಚರಣೆಗಳಿವೆ. ಅದರ ವಿರುದ್ಧ ನಮ್ಮ ಪ್ರತಿಭಟನೆಯಿಲ್ಲ. ಅದು ನಮಗೆ ಭೀಭತ್ಸವಾಗಿ ಕಾಣುವುದಿಲ್ಲ. ಉದಾಹರಣೆಗೆ ನಗರಗಳಲ್ಲಿ ನಡೆಯುವ  ಸಾರ್ವಜನಿಕ ಉತ್ಸವಗಳು ರಸ್ತೆಯನ್ನು ತಡೆದು ನಿತ್ಯ ಜನಜೀವನಕ್ಕೆ ಅದೆಷ್ಟು ತೊಂದರೆಯನ್ನು ತರುವುದಿಲ್ಲ. ಬೆಂಗಳೂರಿನ ಸಾರ್ವಜನಿಕ ಉತ್ಸವಗಳು ಇದಕ್ಕೆ ಉತ್ತಮ ನಿದರ್ಶನ.  ರಸ್ತೆಗಳ ಸಂಚಾರವನ್ನೆ  ತಡೆದು ರಸ್ತೆಯಲ್ಲೇ ನಡೆಯುವ ಇಂತಹ ಉತ್ಸವಗಳ ವಿರುದ್ದ ನಮ್ಮ ಪ್ರತಿಭಟನೆಯಿಲ್ಲ. ಅವುಗಳೆಲ್ಲ ಯಾವ ರೂಪದ ನಂಬಿಕೆಗಳು? ಒಂದು ಸಾರ್ವಜನಿಕ ಕಾರ್ಯಕ್ರಮದ ಯಶಸ್ಸು ಅದು ಎಷ್ಟು ಜನರಿಗೆ ತೊಂದರೆ ಕೊಟ್ಟಿದೆ ಎಂಬ ಮಾನದಂಡದಿಂದ ಲೆಕ್ಕಹಾಕುವ ಹಾಗಿರುವಾಗ ಇದರ ವಿರುದ್ದ ನಮ್ಮ ಪ್ರತಿಭಟನೆಯಿಲ್ಲ. ಇದಲ್ಲವೇ ವಿಪರ್ಯಾಸ.

        ಆದರೂ ಇನ್ನೂ ಒಂದು ವಿಚಾರವಿದೆ ಇಂದು ಅನಾದಿಕಾಲದಿಂದಲೂ ನಡೆದು ಬಂದ ಹಲವು ಆಚರಣೆಗಳು ಅದೇ ರೂಪದಲ್ಲಿ ಉಳಿದು ಕೊಂಡೂ ಇಲ್ಲ. ಕೆಲವು ಜೀವಂತವಾಗಿ ಪೂರ್ಣವಾಗಿ ಅಪೂರ್ಣವಾಗಿ ಉಳಿದರೆ, ಇನ್ನು  ಕೆಲವು ಇಲ್ಲವಾಗಿ ಹೋಗಿದೆ. ಬಹಳಷ್ಟು  ಕ್ರಮಗಳಾಗಲಿ ವಿಧಾನಗಳಾಗಲೀ  ಅನುಕೂಲಕ್ಕೆ ತಕ್ಕಂತೆ ಸಾಂಕೇತಿಕ ವಿಧಾನಗಳಾಗಿ ಅನುಕೂಲ ಶಾಸ್ತ್ರಗಳಾಗಿ, ಕಾಲಕ್ಕನುಸಾರ ಯಾರ ಭಯವೂ ಇಲ್ಲದೆ ಬದಲಾವಣೆ ಕಂಡಿದೆ. ಎಲ್ಲವೂ ಅವರವರ ಮನೋಭಾವದ ಮತ್ತು ಅತ್ಮ ಸಂತೃಪ್ತಿಯ ಸಂಕೇತಗಳಾಗಿ ಉಳಿದಿವೆ. ನಂಬಿಕೆ ವಿಶ್ವಾಸಗಳು ಪ್ರತಿಯೊಬ್ಬನದ್ದು ಗೌರವಾರ್ಹವೇ  ಹಾಗೆಯೇ ಚಿಂತನೆಗಳಲ್ಲಿ ವೈವಿಧ್ಯತೆ ಇರುವುದು ಸಹಜ. ಮನೋಭಾವಕ್ಕೆ ಹೊಂದಿಕೊಂಡು ಹಲವು ವೆತ್ಯಾಸಗಳಿದ್ದರೂ ಒಂದು ಸಮಾಜದ ಮುಖ್ಯವಾಹಿನಿಯಲ್ಲಿ ಅದೆಲ್ಲವೂ ಒಂದಾಗಿ ಸೇರಿಕೊಳ್ಳಬೇಕು. ಒಂದು ಸ್ವಸ್ಥ ಸಮಾಜಕ್ಕೆ ಇದು ಅವಶ್ಯ. ಜ್ಞಾನಿಗಳು ತಿಳಿದವರು ನಿಸ್ವಾರ್ಥದಿಂದ ತಮ್ಮದೇ ಸಮಸ್ಯೆ ಎಂಬಂತೆ ಮುಕ್ತ ಮನಸ್ಸಿನಿಂದ ಪರಿಹಾರ ಕಾಣುವಂತಾಗಬೇಕು


        ನಮ್ಮ ಚಿಂತನೆಗಳು ನಿಸ್ವಾರ್ಥವಾಗಿರಬೇಕು. ಅದು ಪರಸ್ವಾರ್ಥಕ್ಕೋ ಇನ್ನಾವುದೋ ಪ್ರತಿಫಲಕ್ಕೋ ಅದು ಮಾಧ್ಯಮವಾಗಬಾರದು. ಸಮಾಜದ ಮುಖಗಳಾಗಿರಬೇಕಾದವರು ನಾಯಕರು ವಿಪರ್ಯಾಸವೆಂದರೆ, ಇವರು ಸಮಸ್ಯೆಯನ್ನು ಉಂಟುಮಾಡಿಯೋ,  ತೋರಿಸಿಕೊಟ್ಟೊ, ಇದನ್ನು  ತಮ್ಮ ಸ್ವಾರ್ಥದಿಂದ ತಮ್ಮ ವ್ಯವಹಾರಕ್ಕೆ ಭಂಡವಳವನ್ನಾಗಿ ಪರಿವರ್ತಿಸಿಕೊಳ್ಳುತ್ತಾರೆ. ಇಂತಹ ಸ್ವಾರ್ಥಗಳಿಂದ ಮುಕ್ತವಾಗಿ   ಈ ಸಮಸ್ಯೆಗಳು ಕಷ್ಟಗಳು ಸೌಹಾರ್ದ ರೀತಿಯಿಂದ ಬಗೆಹರಿಸಬೇಕು. ಪ್ರತಿಯೋಬ್ಬ ಮನುಷ್ಯನೂ ಮಾತ್ರವಲ್ಲ ಎಲ್ಲ ಜೀವ ಸಂಕುಲಗಳು ಬದುಕುವುದಕ್ಕಾಗಿ ಭೂಮಿಮೇಲೆ ಜನ್ಮ ತಳೆಯುತ್ತವೆ. ಯಾವುದೇ ದೇವರೂ ವೈಷಮ್ಯದ ರೂಪದ ದಾರಿಯಲ್ಲಿ ಸಾಕ್ಷಾತ್ಕರಿಸಿಕೊಳ್ಳುವುದಿಲ್ಲ. ದ್ವೇಷ ಅಸೂಯೆ ಮೋಸ ಸ್ವಾರ್ಥ ನೆಲೆಯಾದ ಮನಸ್ಸಲ್ಲಾಗಲೀ ಪ್ರದೇಶದಲ್ಲಾಗಲಿ ಭಗವಂತ ನೆಲೆಯಾಗಲಾರ.








Sunday, November 13, 2011

ಓಂಕಾರ






  
ಓಂ ....ಓಂ.. ..ಭಗವಂತನ ಓಂಕಾರ ಸ್ವರೂಪದ ಈ ಆದಿ ಮಂತ್ರದ ಪೂರ್ಣ ಮಹತ್ವದ ಅರಿವಾದದ್ದು ಇತ್ತೀಚೆಗೆ. ಧ್ಯಾನ ಯೋಗದಲ್ಲಿ ಅತ್ಯಂತ ಮಹತ್ವವಿರುವ ಈ ಮಂತ್ರ ಹಲವು ರೀತಿಯಲ್ಲಿ ಉಚ್ಚರಿಸಲ್ಪಡುತ್ತದೆ. ಸಹಜವಾಗಿ ವೇದ ಮಂತ್ರಗಳಲ್ಲಿ ಗುರು ಉಪದೇಶವಾದಂತೆ ನೇರವಾಗಿ ಕುಳಿತು ನಾಭಿಯಿಂದ ಉಚ್ಚರಿಸಲ್ಪಡುವ ಓಂಕಾರ ಕೇವಲ ಉಚ್ಚಾರಕ್ಕೆ ಮಾತ್ರವೇ ಸೀಮಿತವಾದಂತೆ ಈ ಮೊದಲು ಕಂಡಿತ್ತು. ಸ್ವಲ್ಪ ಮಟ್ಟಿಗೆ ಯೋಗಾಭ್ಯಾಸ ಆರಂಭಿಸಿದ ಮೇಲೆ ಧ್ಯಾನದಲ್ಲಿ ಏಕಾಗ್ರತೆಯನ್ನು ಸಾಧಿಸಿ ಭಗವಂತನ ಧ್ಯಾನದಲ್ಲಿ ಲೀನವಾಗುವಾಗ ಓಂಕಾರ ಮಹತ್ವವನ್ನು ಪಡೆಯುತ್ತಿತ್ತು. ಯೋಗ ಮಾಡುತ್ತಿದ್ದಂತೆ ಪ್ರತೀ ಬಾರಿಯೂ ಒಂದು ವಿಶಿಷ್ಟ ಅನುಭವಕ್ಕೆ ನಾನು ಒಳಗಾಗುತ್ತೆದ್ದೆ. ಅದೇ ರೀತಿ ಈ ಬಾರಿಯೂ ವಿಚಿತ್ರವಾದ ಅನುಭವ Ooಓಂಕಾರ ಧ್ಯಾನದ ಮೂಲಕ ಆದಾಗ ಅದರ ನೆನಪು ಮತ್ತೂ ಮತ್ತೂ ಮರುಕಳಿಸುತ್ತದೆ.
ಧ್ಯಾನಕ್ಕೆ ತೊಡಗುವಾಗ ಆರಂಭದಲ್ಲಿ ಸಹಜವಾಗಿ ಪದ್ಮಾಸನದಲ್ಲಿ ನೇರವಾಗಿ ಕುಳಿತು ಒಂದೇ ಕಡೆಗೆ ಮೇಲ್ಮುಖವಾಗಿ ದಿಟ್ಟಿಸಿ ನಿಧಾನವಾಗಿ ಕಣ್ಣು ಮುಚ್ಚಬೇಕು. ನಿಧಾನವಾದ ದೀರ್ಘವಾದ ಉಸಿರಾಟ ಕೆಲವು ಬಾರಿ ಮಾಡಿದಾಗ  ಮನಸ್ಸು ಮತ್ತು ದೇಹ ಒಂದು ಸ್ಥಿರತೆಯನ್ನು ಪಡೆದು ಕೊಳ್ಳುತ್ತದೆ. ಆ ಸ್ಥಿರತೆಯಲ್ಲೆ ಎಲ್ಲವೂ ಲೀನವಾದ ಅನುಭವ. ಬಾಹ್ಯ ಜಗತ್ತಿನ ಸದ್ಧು ಗದ್ದಲ ಕೇಳುತ್ತಿದ್ದರೂ,  ನಿಧಾನವಾಗಿ ನಮ್ಮ ಅರಿವಿನ ವರ್ತುಲದಿಂದ ದೂರವಾಗುತ್ತದೆ ಆ ಅವ್ಯಕ್ತ ಅನುಭವವೇ ಯೊಗ. ಯೋಗವೆಂದರೆ ಒಟ್ಟು ಸೇರುವುದು. ಎಲ್ಲಾ ಪ್ರಚೋದನೆಗಳಜತೆಗೆ  ದೇಹ ಮತ್ತು ಮನಸ್ಸನ್ನು ಒಂದೇ ಕೇಂದ್ರದಲ್ಲಿ ಒಟ್ಟು ಸೇರಿಸುವುದು.   
ಇದರ ಆರಂಭವೇ ಉಸಿರಾಟದಿಂದ. ಎಲ್ಲವನ್ನೂ ಉಸಿರಾಟದ ಮೂಲಕ ಕೇಂದ್ರಿಕರಿಸುವ ಪ್ರಯತ್ನದಿಂದಲೇ ಶುರು ಮಾಡಬೇಕು.   ನಾಸಿಕಾಗ್ರದಿಂದ ಒಳ ಸೇರಿದ ಗಾಳಿ ಅದೇ  ಗಮನದಲ್ಲಿ ಗಂಟಲು ಎದೆ ಕೊನೆಗೆ ನಾಭಿಯ ಸುತ್ತಲೂ ವ್ಯಾಪಿಸಿ ಮತ್ತು ಕೆಳಗೆ ಹೋಗಿ ದೇಹದ ತುಂಬೆಲ್ಲ ವ್ಯಾಪಿಸ ತೊಡಗಿ ನಿಧಾನವಾಗಿ ಉಸಿರು ಬಿಟ್ಟಾಗ ನಾಭಿಯ ಸುತ್ತ ನಿರ್ವಾತವಾದ ಅನುಭವವಾಗುತ್ತದೆ. ಇದು ಅಲ್ಪ ಸಮಯದಲ್ಲಿ ಉಂಟಾಗುವ ಪರಿಣಾಮವಲ್ಲ. ನಿರಂತರ ಸಾಧನೆಯಿಂದ ಮಾತ್ರ ಸಾಧ್ಯ. ಹೀಗೆ ಅನುಲೋಮ ವಿಲೋಮ ಆವರ್ತನೆಯಾದಂತೆ ಅದರ ಜತೆಯಲ್ಲೇ ಓಂ... ಓಂ ಎಂದು ಓಂಕಾರವನ್ನು  ಎಷ್ಟು ಸಾಧ್ಯವೋ ಅಷ್ಟು ದೀರ್ಘವಾಗಿ ಉಚ್ಚರಿಸುತ್ತಾ ಹೋಗಬೇಕು. ಹಾಗೆ ಉಚ್ಚರಿಸಿದಾಗ ಓ...ದಿಂದ ತೊಡಗಿ ಮಕಾರದಲ್ಲಿ  ಉಚ್ಚಾರ ನಿಧಾನವಾಗಿ ಪೂರ್ಣವಾದಾಗ ನಾಭಿ ಪ್ರದೇಶ ಒಳಕ್ಕೆ ಸೆಳೆಯಲ್ಪಡುತ್ತದೆ. ಘಂಟಾ ನಿನಾದದಲ್ಲಿ ಗಂಟೆಯ ನಿರಂತರ ಕಂಪನಸ್ವರ ಹೇಗೆ ಆವರ್ತಿಸುತ್ತ ತನ್ನ ಸುತ್ತ ಕಂಪನಾವಲಯವನ್ನು ನಿರ್ಮಿಸುತ್ತದೋ ತದ್ರೀತಿ ಓಂಕಾರದ ಕಂಪನ ದೇಹದ ಸುತ್ತ ತನ್ನ ಕಂಪನದವಲಯವನ್ನು ನಿರ್ಮಿಸುತ್ತಾ.. ಆ ವಲಯಕ್ಕೆ ಕೇಂದ್ರವು ನಾಭಿಯಾಗಿಬಿಡುತ್ತದೆ.ಹೊಟ್ಟೆಯ ಕರುಳು ತೀವ್ರವಾಗಿ ಕಂಪನದ ಪರಿಣಾಮವನ್ನು ಅನುಭವಿಸುತ್ತದೆ. ಇದು ಹೊಟ್ಟೆಯ ಒಳಗಿನ ಸರ್ವ ಕ್ರಿಯೆಗಳಿಗೂ ಚೈತನ್ಯ ವನ್ನು ಪ್ರಚೋದನೆಯನ್ನು ಒದಗಿಸುತ್ತದೆ. ಹೀಗೆ ನಿರಂತರವಾದ ದೀರ್ಘವಾದ ಓಂಕಾರದ ಉಚ್ಚಾರ ಹಲವು ಸಲ ಆವರ್ತನೆಯಾದಂತೆ ಉದರದೊಳಗೆ ವಿಶಿಷ್ಟವಾದ ಅನುಭವ  ಉಂಟಾಗುತ್ತದೆ. ಹೊಟ್ಟೆಯ ಕೇಂದ್ರವಾದ ನಾಭಿಯಿಂದ ತೊಡಗಿ ದೇಹದ ತುಂಬೆಲ್ಲ ಈ ಕಂಪನ ಪಸರಿಸಿದಂತೆ ನಮ್ಮ ಅಂತರ್ ದೃಷ್ಟಿಯನ್ನು ಭ್ರೂ ಮಧ್ಯ ಇರುವ ನಿರ್ವಾತ ಪ್ರದೇಶದಲ್ಲಿ ಕೇಂದ್ರೀಕರಿಸಲ್ಪಟ್ಟರೆ  ಯಾವ ರೂಪದಲ್ಲಿ ನಾವು ಭಗವಂತನನ್ನು ಕಲ್ಪಿಸುತ್ತೇವೊ ಆ ರೂಪದ ಪ್ರತ್ಯಕ್ಷ ಅನುಭವ ಭ್ರೂ ಮಧ್ಯದಲ್ಲಿ ಆಗುತ್ತದೆ. ಆವಾಗ  ಕೇವಲ ಅಕ್ಷರ ಮಾತ್ರದ ಓಂಕಾರದ ಮಹತ್ವದ ಅರಿವಾಗುತ್ತದೆ. ಭಗವಂತನನ್ನು ಓಂಕಾರ ಸ್ವರೂಪಿ ಎನ್ನುವುದು ಇದಕ್ಕಾಗಿಯೇ ಇರಬೇಕು ಸರ್ವ ಚೈತನ್ಯರೂಪವೂ ಇದೇ ಅಲ್ಲವೆ?  
ಕೆಲವು ಸಮಯದ ಮೊದಲು ಓರ್ವರು ಹೀಗೆ ಚರ್ಚಿಸುವಾಗ ಹೇಳೀದ್ದರು ... “ ಪ್ರಾಣಾಯಾಮ ಅಥವಾ ಧ್ಯಾನ ಯೋಗದಲ್ಲಿ ಕ್ಯಾಲೊರಿ ಉರಿಸಲ್ಪಡುವುದಿಲ್ಲ. ಕೇವಲ ಪ್ರಾಣಾಯಾಮ ಒಂದೇ ಸಾಕಾಗುವುದಿಲ್ಲ ಎಂದು.” ಆವಾಗ ನನಗೂ ಹೌದೇನೋ ಅನ್ನಿಸಿತ್ತು. ಆದರೆ ಆ ಮಾತು ಇಂದು ನಿಜವಲ್ಲ ಎಂದನಿಸುತ್ತದೆ. ನಿರಂತರ ಓಂಕಾರ ಉಚ್ಚಾರದಿಂದ ನಾಭಿವಲಯದಲ್ಲಿ ಕಂಪನವು ನಿರಂತರವಾಗಿ ಪ್ರಚೋದಿಸಲ್ಪಟ್ಟರೆ, ದೈಹಿಕವಾದ ಕ್ರಿಯೆಗಳ ಮೇಲೂ ಅದರ ಪ್ರಭಾವ ಬೀರದೆ ಇರಲಾರದು. ನಿರಂತರವಾದ ಕಂಪನವು ಹೊಟ್ಟೆ;ಯೊಳಗಿನ ಜೀರ್ಣಾಂಗ ವಿಸರ್ಜನಾಂಗ ಮಾತ್ರವಲ್ಲದೆ ಶ್ವಾಸ ಕೋಶ ಸೇರಿದಂತೆ ದೇಹದ ಎಲ್ಲಾ ಭಾಗದಲ್ಲೂ ಆವಶ್ಯಕ ಪ್ರಭಾವವನ್ನು ಬೀರಬಲ್ಲುದು. ಏನೂ ಅರಿವಿಲ್ಲದೆ ಇದು ಪ್ರಾಯೋಗಿಕವಾಗಿ ಸಿದ್ಧಿಸುವಾಗ ಆಗುವ ಅನುಭವವೇ ವಿಶಿಷ್ಟವಾದುದು.
ಈ ಪ್ರಕೃತಿ ಎಷ್ಟೊಂದು ವೈವಿಧ್ಯಮಯವಾಗಿದೆ. ಪರಮಾತ್ಮನೇ ಲೀನವಾಗಿ ಪರಮಾತ್ಮನಲ್ಲೇ ಒಂದಾಗಿ  ಯಾವ ಬಗೆಯಲ್ಲೂ ಕಾಣಬಹುದಾದ ವೈವಿಧ್ಯತೆ ಅಚ್ಚರಿಪಡುವಂತಹುದು. ಇದಕ್ಕೆ ಅತಿ ಸುಲಭದ ಮಾರ್ಗವೇ ಈ ಧ್ಯಾನ ಯೋಗ .