Friday, March 17, 2017

ಅರ್ಥವಾಗದ ಸಂಬಂಧಗಳು

“ಇದನ್ನು ವಾಸ್ತವದಲ್ಲಿನ ಸತ್ಯ ಕಥೆ ಎಂದು ಹೇಳುವುದಕ್ಕೆ ಅತೀವ ವಿಷಾದವಾಗುತ್ತದೆ.”

 

ಮಲಯಾಳಂ ಸಿನಿಮಾ ಒಂದರ ಹಾಸ್ಯ ಸನ್ನಿವೇಶ. ಅದು ಮದುವೆಯಾದ ಗಂಡು ಹೆಣ್ಣಿನ ಮೊದಲರಾತ್ರಿ ಕಳೆದಿರುತ್ತದೆ. ಬೆಳಗ್ಗೆ ಗಂಡನಿಗೆ ಮೊದಲು ಎಚ್ಚರವಾಗುತ್ತದೆ. ಎಚ್ಚರಗೊಳ್ಳುತ್ತಲೇ ತಡಬಡಿಸಿ ಎದ್ದು ಗಡಿಯಾರದಲ್ಲಿ ಸಮಯ ನೋಡುತ್ತಾನೆ. ಗಡಿಬಿಡಿಯಲ್ಲಿ ಅಲ್ಲೇ ಕಳಚಿಟ್ಟ ಅಂಗಿಯಿಂದ ಒಂದಷ್ಟು ಹಣವನ್ನು ಕೈಯಲ್ಲಿ ತೆಗೆದು ಹತ್ತಿರದಲ್ಲೇ ಮಲಗಿದ ಹೆಂಡತಿಯ ಕೈಯಲ್ಲಿರಿಸುತ್ತಾನೆ.  ಆಕೆ ಎದ್ದು ಕುಳಿತು ಎಲ್ಲಾ  ಉಂಟಲ್ಲಾ?  ಎಂದು ಮುಲುಗುಟ್ಟುತ್ತಾ ಆ ಹಣವನ್ನು ಕುಪ್ಪುಸದಲ್ಲಿ  ಬಚ್ಚಿಡಲು ನೋಡುತ್ತಾಳೆ.  ಅಷ್ಟೇ. ಕ್ಷಣದಲ್ಲಿ ಇಬ್ಬರಿಗೂ ತಾವು ಮಾಡಿದ ತಪ್ಪು ಏನೆಂದು ಅರಿವಾಗುತ್ತಾ ಗಾಬರಿಯಲ್ಲಿ ಪರಸ್ಪರ ನೋಡಿಕೊಳ್ಳುತ್ತಾರೆ.

 ಮನುಷ್ಯ ಸಂಬಂಧಗಳೇ ಹೀಗೆ. ಮನುಷ್ಯ ಅದರ ಸಂಕೀರ್ಣತೆಯನ್ನು ವಿಶ್ವಾಸದ ಪರಿಧಿಯನ್ನು ಅರ್ಥ ಮಾಡಿಕೊಳ್ಳದೆ ಯಾವೂದೋ ಭಾವನೆಯಲ್ಲಿ ಮರೀಚಿಕೆಯನ್ನು ಹಿಂಬಾಲಿಸುತ್ತಾನೆ.  ಸಂಬಂಧಗಳ ಅತೀ ಸೂಕ್ಷ್ಮ ಅಂತರಾಳದ ಅರ್ಥ ತಿಳಿಯದೇ ಇನ್ನೇಲ್ಲೋ ಅಲೆಯುತ್ತಾನೆ.



            ನೋಡುವುದಕ್ಕೆ ಇದು ಹಾಸ್ಯ ಸನ್ನಿವೇಶ, ಒಂದಿಷ್ಟು ಅಶ್ಲೀಲತೆ ಹೀಗೆ ಇನ್ನೇನೋ ಹೇಳಿ ಇದನ್ನು ತಳ್ಳಿ ಹಾಕಬಹುದು. ಆದರೆ ಮನುಷ್ಯ ಸಂಬಂಧಗಳು ಸಂಕೀರ್ಣವಾಗುತ್ತಾ ಶೂನ್ಯತೆಯತ್ತ ಸಂಚರಿಸುವುದು ನೋಡುವಾಗ ಗಂಭೀರ ಚಿಂತನೆ ಮೊಳಕೆಯೊಡೆಯುತ್ತದೆ.  ಸಂಬಂಧಗಳು ಮನುಷ್ಯನ ಹುಟ್ಟಿನಿಂದ ನಂತರ ಅರ್ಥಕಂಡುಕೊಂಡು ಬೆಸೆಯಲ್ಪಡುತ್ತವೆ. ಮಾನಸಿಕ ಭಾವನೆಗಳನ್ನು ಹೊಂದಿಕೊಂಡು ಇದು ಗಾಢವಾಗುತ್ತ ಹೋಗುತ್ತದೆ. ಸಂಬಂಧಗಳಲ್ಲಿ ಮೊದಲ ಸಂಬಂಧ ಬೆಸೆಯಲ್ಪಡುವುದು ತಾಯಿಯೊಂದಿಗಿನ ಕರುಳ ಸಂಬಂಧ. ತಾಯಿ ಮಕ್ಕಳ ಸಂಬಂಧ ಅದು ಹುಟ್ಟಿನಿಂದ ಬಂದರೂ ನಂತರವೂ ಸಮಾನಾಂತರ ಸಂಬಂಧಗಳು ನೆಲೆನಿಲ್ಲುವುದುಂಟು. ಎಲ್ಲವೂ ದೇಹದೊಂದಿಗೆ ಹುಟ್ಟಿಕೊಂಡ ಸಂಬಂಧಗಳು ದೇಹದೊಂದಿಗೆ ಅಂತ್ಯ ಕಂಡು ಕೊಂಡು ಮಧ್ಯೆ ಒಂದಷ್ಟು ಬದುಕಿಗೆ ಅರ್ಥವನ್ನು ಕಲ್ಪಿಸುತ್ತವೆ. ಹೀಗೆ ಇರುವ ಸಂಬಂಧದ ಬಗೆಗಿನ ಒಂದು ಕಥೆಯೇ ಈ ಲೇಖನ.  ಮೇಲೆ ಹೇಳಿದಂತೆ ಇದೊಂದು ಸತ್ಯಕಥೆಯಾಗಿರುವುದು ಬಹಳ ದೊಡ್ಡ ವಿಪರ್ಯಾಸ

            ಆಕೆ ಕುಟುಂಬದ ಅತ್ಯಂತ ಹಿರಿತಲೆಯ ವ್ಯಕ್ತಿ.  ಈ ಪಾತ್ರಕ್ಕೊಂದು ಹೆಸರು  ಕಾಲ್ಪನಿಕ ಹೆಸರು ಕಲ್ಪಿಸುವಾಗ ’ಗಂಗಮ್ಮ’  ಎಂದು ಮೊದಲು ಸ್ಮೃತಿ ಪಟಲದಲ್ಲಿ ಅಮರಿಕೊಳ್ಳುತ್ತದೆ. ನನಗೇಕೋ ಹೆಣ್ಣು ಪಾತ್ರದ ಬಗ್ಗೆ ಹೆಸರು ಕಲ್ಪಿಸುವಾಗ ಪವಿತ್ರ ಗಂಗೆಯ ಹೆಸರೇ ಮೊದಲಿಗೆ ಬರುವುದು. ಗಂಡು ಹೊರಗೆ ಅದೆಷ್ಟೊ ಅಪರಾಧಗಳನ್ನು ಮಾಡಿ ಮನೆಯೊಳಗೆ ಬಂದಾಗ ಕ್ಷಮಯಾ ಧರಿತ್ರಿಯಂತೆ ಹತ್ತಿರ ಸೆಳೆದುಕೊಂಡು ಅಪರಾಧಗಳಿಗೆ ವಿಮೋಚನೆಯನ್ನು ಸೂಚಿಸುತ್ತಾಳೆ. ಅದು ತಾಯಿಯಾಗಿಯೋ ಸತಿಯಾಗಿಯೋ ಮಗಳಾಗಿಯೋ ಪಾತ್ರಗಳು ಹಲವು ಆದರೆ ಕ್ರಿಯೆ ಒಂದೇ ಆಗಿರುತ್ತದೆ.

            ಹಲವು  ಸಂಸಾರಗಳಲ್ಲಿ ಹೀಗೆ ಒಂದೊಂದು ಹಿರಿಯ ವ್ಯಕ್ತಿತ್ವ ಇರುತ್ತದೆ. ಗುರಿ ಸಾಧನೆ ಅವರ ಬದುಕಿನ ದಾರಿಯಲ್ಲಿಲ್ಲ. ಆದರೆ  ಸಾಧಿಸಬೇಕೆಂಬ  ಯಾವುದೇ ನಿರ್ದಿಷ್ಟ ಗುರಿ  ಇಲ್ಲದೇ ಇದ್ದರೂ ತಮ್ಮ ಸಾಧನೆಯಲ್ಲಿ ಗುರಿಯೊಂದು ಸಿದ್ದವಾಗಿಸುತ್ತಾರೆ. ಆ ಗುರಿಯೇ ಸಂಸಾರದಲ್ಲಿ ಇತರರಿಗೆ ದಾರಿದೀಪವಾಗಿರುತ್ತದೆ. ಸಾಧಿಸಬೇಕು ಎಂಬ ಗುರಿಗಿಂತಲೂ ಬದುಕಿನ ದಾರಿಯಲ್ಲಿ ಸಾಗುವುದೇ ದುಸ್ಸಾಹಸವಾಗಿಬಿಡುತ್ತದೆ. ಗಂಗಮ್ಮನ ವ್ಯಕ್ತಿತ್ವ ಈ ಮಾದರಿಯಲ್ಲಿ ರೂಪುಗೊಳ್ಳುತ್ತದೆ.

            ಗಂಗಮ್ಮ ಹುಟ್ಟಿ ಬೆಳೆದದ್ದು ಬಡ ಬ್ರಾಹ್ಮಣನ ಮಗಳಾಗಿ.  ಈಕೆಯಂತೆ ತಂದೆಗೆ ಹಲವು ಮಕ್ಕಳಿದ್ದರು. ಅಣ್ಣ ತಮ್ಮ ಅಕ್ಕ ತಂಗಿ. ಹೀಗೆ ಕುಟುಂಬ ದೊಡ್ಡದೆ. ಆ ಕಾಲದಲ್ಲಿ ಇದು ಸಾಮಾನ್ಯ. ಬಡತನದಲ್ಲಿ ಮಕ್ಕಳ ಹೊಟ್ಟೆ ಹೊರೆಯುವುದೇ ಕಷ್ಟವಾಗಿರುವಾಗ ಇನ್ನು ಹೆಣ್ಣು ಮಕ್ಕಳಿಗೆ ಮದುವೆ ಹೇಗೆ?  ಮದುವೆಯ ಕನಸನ್ನು ಕಾಣೂವುದೂ ದುಸ್ಸಾಹಸ. ಆಗ ಗೋವ ಎಂದರೆ ಬ್ರಾಹ್ಮಣ  ಹೆಣ್ಣುಮಕ್ಕಳಿಗೆ ಗಲ್ಪ್ ರಾಜ್ಯ ವಿದ್ದಂತೆ. ಅದೇಕೋ  ಅಲ್ಲಿ ಪುರೋಹಿತರಿಗೆ ಹೆಣ್ಣು ಸಿಗುವುದು  ದುರ್ಲಭ. ಆಗ ಅವರ ಕಣ್ಣು ಹಾಯುವುದು ಇಲ್ಲಿಗೆ. ಗಂಗಮ್ಮನಂತಹ ಬಡ ಸಂಸಾರಗಳ ಹೆಣ್ಣುಗಳು ಪುರೋಹಿತರ ಮನೆಬೆಳೆಗುವ  ಕಾಯಕಕ್ಕೆ ನೆರವಾಗುತ್ತವೆ. ಅದೇ ರೀತಿ ಗಂಗಮ್ಮನ ಮದುವೆಯು ಪುರೋಹಿರೊಬ್ಬರೊಂದಿಗೆ ಧಾರ್ಮಿಕವಾಗಿ ನೆರವೇರಿಬಿಡುತ್ತದೆ. ಬಡತನದಲ್ಲಿ ಬೆಂದು ಹೋದ ಹೆಣ್ಣು ಸುಂದರವಾಗಿಯೇ ಸಂಸಾರ ಆರಂಭಿಸುತ್ತಾಳೆ. ಬಡತನದ ಬೇಗೆ ಕಡಿಮೆಯಾಗಿ ಮೈಯಲ್ಲಿ ಚರ್ಮದ ಜತೆಗೆ ಚಿನ್ನ ಬಣ್ಣ ಎಲ್ಲ ತುಂಬಿಕೊಳ್ಳುತ್ತದೆ. ಗೋವದಲ್ಲಿ ಪುರೋಹಿತರಿಗೆ ಸಾಕಷ್ಟು ಯಥೇಚ್ಛ ಸಂಪಾದನೆ ಇರುವುದೇ ಇದಕ್ಕೆ ಕಾರಣ.

            ಗಂಗಮ್ಮನ ಅನುಕೂಲತೆ ಕಂಡು ಊರಲ್ಲಿ ಹಲವರು ಇಲ್ಲಿನ ಪುರೋಹಿತರ ಜಾತಕಕ್ಕೆ ಒತ್ತಾಸೆಯಾಗುತ್ತಾರೆ. ಇಲ್ಲಿಯೂ ಗಂಗಮ್ಮ ಉದಾರಿಯಾಗಿ ವ್ಯವಹರಿಸುತ್ತಾಳೆ. ತನ್ನ ಸಂಬಂಧಿಗಳ, ಹಿತೈಷಿಗಳ ಹೆಣ್ಣು ಮಕ್ಕಳಿಗೆ ಅಲ್ಲಿ ಬದುಕು ಕಟ್ಟಿಕೊಡುವ ಸತ್ಕಾರ್ಯಕ್ಕೆ ಮುಂದಾಗುತ್ತಾಳೆ. ಇದರಲ್ಲಿ ವೈಯಕ್ತಿಕ ಲಾಭವೇನೂ ಇರುವುದಿಲ್ಲ. ಇಲ್ಲಿಯ ಬಡತನದ ಅನುಭವ ಒಂದೇ ಈ ಮಹತ್ಕಾರ್ಯಕ್ಕೆ ನಿಮಿತ್ತವಾಗುತ್ತದೆ.

            ಈ ಕನ್ಯಾಮಣಿಗಳ ಮದುವೆಯೊಂದಿಗೆ ಹಲವು ಸಲ ಹಲವು ಸಮಸ್ಯೆಗಳಿಗೂ ಗಂಗಮ್ಮ ತಲೆಕೊಡುವುದು ಅನಿವಾರ್ಯವಾಗುತ್ತದೆ.  ಒಂದೇ  ಕೈ ಯ ಬೆರಳೂ ವಿವಿಧ  ಗಾತ್ರವಾಗಿರುವ ಈ ಸೃಷ್ಟಿಯಲ್ಲಿ ಎಲ್ಲರೂ ಒಂದೇ ತರನಾಗಿ ಇರುವುದಕ್ಕೆ ಸಾಧ್ಯವೆ? ಹಾಗಾಗಿ ಹಲವು ಸಲ ತಂದ ಹೆಣ್ಣು ಮಕ್ಕಳಿಗೆ ಜೀವನಾಧಾರವನ್ನು ಕಲ್ಪಿಸುವ ಜವಾಬ್ದಾರಿಯೂ ಗಂಗಮ್ಮನ ಹೆಗಲ ಮೇಲೆರುತ್ತದೆ. ಒಂದೆರಡು ಹೆಣ್ಣುಗಳು ಮದುವೆಯಾದ ನಂತರ ಮಗುವಾಗುತ್ತಿದ್ದಂತೆ ಹಲವು ಕಾರಣಗಳಿಂದ ಗಂಡನ ಮನೆಯಿಂದ ತಳ್ಳಲ್ಪಡುತ್ತಾರೆ. ಅಂತಹ ಹಲವು ಹೆಣ್ಣು ಮಕ್ಕಳನ್ನು ಬೀದಿಗೆ ಬೀಳದಂತೆ ಬೆಂಗಾವಲಾಗಿ ಗಂಗಮ್ಮ ಹೆಗಲು ಕೊಡುತ್ತಾಳೆ. ಜೀವನದ ಮಾರ್ಗ ಕಲ್ಪಿಸುತ್ತಾಳೆ. ಮನೆಯಿಲ್ಲದೇ ಯಾರದೋ ಮನೆಯಲ್ಲಿ ಆಳಾಗಿ ದುಡಿಯುವ ಪ್ರಮೇಯ ಬಂದಾಗ ಅವರ ಮಕ್ಕಳನ್ನು ಮನೆಗೆ ತಂದು ಸಲಹುತ್ತಾಳೆ. ತನ್ನ ಮಕ್ಕಳಲ್ಲಿ ಒಬ್ಬರಾಗಿ ಅವರನ್ನು ಪೋಷಿಸುತ್ತಾಳೆ.  ಹೀಗೆ ಯಾರದೊ ಮಕ್ಕಳಿಗೆ  “ಆಯೀ....ಮೌಶಿ ...ನಾನೀ..” ಆಗಿಬಿಡುವ ಗಂಗಮ್ಮ, ಆ ಪುಟ್ಟ ಮಕ್ಕಳಿಗೆ ಹೆತ್ತತಾಯಿಗಿಂತಲೂ ಹತ್ತಿರವಾಗಿ ಅನಿವಾರ್ಯವಾಗುತ್ತಾಳೆ.  ಸಹಜವಾಗಿ ಆಕೆಯ ಕೈಯ ಆರೈಕೆಯಲ್ಲಿ ಬೆಳೆದ ಮಕ್ಕಳು ಅಮ್ಮನ ಮಾತಿಗಿಂತಲೂ ಈ “ಆಯೀ” ಮಾತಿಗೆ ಹೆಚ್ಚು ಬೆಲೆಗೊಡುತ್ತಾರೆ. ಸಲುಗೆಯಿಂದ ಕಾಣುತ್ತಾರೆ. ಇದಕ್ಕೆ ಯಾರ ಆಕ್ಷೇಪವೂ ಇಲ್ಲ. ಯಾಕಂದರೆ ಗಂಗಮ್ಮನಿಂದ ಉಂಡವರೇ ಹೆಚ್ಚು.

            ಹೀಗೆ ತನ್ನ ಆರೈಕೆಯಲ್ಲಿ ಬೆಳೆದ ಮಕ್ಕಳು ದೊಡ್ದವರಾಗುತ್ತಾರೆ. ಕೆಲವರಂತೂ ದೊಡ್ಡ ಆಫೀಸರ್ ಗಳಾಗಿ ಕಾರಲ್ಲಿ ಭುರ್ರೋ ಎಂದು ಬರುವಾಗ ಗಂಗಮ್ಮನ ಕಣ್ಣು ಅರಳುತ್ತದೆ. ಮಕ್ಕಳಿಗೆ ಮಕ್ಕಳಾಗಿ ಗಂಗಮ್ಮ ಹಿರಿಯಜ್ಜಿಯಾಗಿ ಸಂಸಾರದ ಹಿರಿಯ ಪೀಠವನ್ನು ಅಲಂಕರಿಸಿಯಾಗುತ್ತದೆ. ಇದರ ಜತೆಯಲ್ಲಿ ತನ್ನ  ಸಂಸಾರವನ್ನು ಬೆಳೆಸಿಯಾಗಿರುತ್ತದೆ. ತನ್ನ ಮಗಳು ಮಗಂದಿರು ಅವರ ಮಕ್ಕಳು ಹೀಗೆ ಗಂಗಮ್ಮನಿಗೆ ಮಗುವನ್ನು ಸಾಕುವುದು ಎಂದರೆ ಜನ್ಮ ಪರ್ಯಂತದ ಕಾಯಕವಾಗುತ್ತದೆ. ಅದರಲ್ಲೆ ಗಂಗಮ್ಮನಿಗೆ ಸಂತೃಪ್ತಿ.  ಆರಂಭದಲ್ಲಿ ಹಿರಿಯಮ್ಮನ್ನ ಸ್ಥಾನ ಕೊನೆಯಲ್ಲಿ ಹಿರಿಯಜ್ಜಿಯ ಸ್ಥಾನ. ಎಲ್ಲದರಲ್ಲೂ ಗಂಗಮ್ಮ ತನ್ನ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತಾಳೆ.

            ಹೀಗೆ ಎಲ್ಲರ ಸಂಸಾರದ ಬೇರಾಗಿ ಆ ಬೇರು ಬೆಳೆದು ಬಿಳಲಾಗಿ ಗಂಗಮ್ಮನಿಗೆ ವೃದ್ದಾಪ್ಯ ಅಮರಿಕೊಂಡು ಬಿಡುತ್ತದೆ. ಮೊದಲಿನಂತೆ ದೇಹದಲ್ಲಿ ಚೈತನ್ಯ ವಿಲ್ಲದೇ ಇದ್ದರೂ ಗಂಗಮ್ಮ ಸುಧಾರಿಸುವ ಕೆಲಸಕ್ಕೆ ಎಲ್ಲ ಹೆಣ್ಣು ಮಕ್ಕಳೂ ಬೆರಗಾಗಬೇಕು. ವೃದ್ದಾಪ್ಯದ ಸಹಜತೆಯಂತೆ ರಕ್ತದ ಒತ್ತಡ ಸಕ್ಕರೆ ಖಾಯಿಲೆ ಗಂಗಮ್ಮನನ್ನು ಕಾಡುತ್ತವೆ. ಅದಕ್ಕಾಗಿ ಚಿಕಿತ್ಸೆ ತೆಗೆದುಕೊಳ್ಳುವಾಗ ಗಂಗಮ್ಮನಿಗೆ ಅನ್ನಿಸುವುದುಂಟು ಈ ಮಕ್ಕಳ ಪೋಷಣೆಯಲ್ಲಿ ತನ್ನನ್ನು ನಾನು ಮರೆತೆನೇ ಎಂದು.

            ಹೀಗೆ ಬೆಳೆದು ನಿಂತ ಸಂಸಾರವೃಕ್ಷ ಕಾಣುವಾಗ ಗಂಗಮ್ಮ ಸಂತಸ ಪಡುತ್ತಾಳೆ. ಬಾಲ್ಯದ ಕಡು ಬಡತನ ನೆನಪಾಗುತ್ತದೆ. ಅಲ್ಲಿಂದ ಇಲ್ಲಿವರೆಗೆ ಸಾಗಿಬಂದ ಬದುಕನ್ನು ಹಿಂತಿರುಗಿ ನೋಡುತ್ತಾಳೆ. ಹೀಗಿರುವಾಗಲೇ ಒಂದು ಬರಸಿಡಿಲು ಗಂಗಮ್ಮನ ತಾಯಿಬೇರನ್ನೇ ಅಲುಗಾಡಿಸಿಬಿಡುತ್ತದೆ. ಭದ್ರವಾಗಿ ಆಳಕ್ಕೆ ಇಳಿದ ಬೇರಿಗೂ ಅಭದ್ರತೆಯ ಬಿಸಿ ತಟ್ಟುತ್ತದೆ.
             ಅದೊಂದು ದಿನ ಯಾವೂದೋ ಚಿಕಿತ್ಸೆಗಾಗಿ ರಕ್ತ ಪರೀಕ್ಷೆಗೆ ರಕ್ತ ನೀಡಿ ಗಂಗಮ್ಮ ಮನೆಗೆ ಬರುತ್ತಾಳೆ. ಅದರ ಮರುದಿನ ಮಗ ರಿಪೋರ್ಟ್ ತಂದು ಸೊಸೆಯೊಂದಿಗೆ ಗುಸು ಗುಸು ಮಾತನಾಡುತ್ತಿರುವುದು ಗಮನಕ್ಕೆ ಬರುತ್ತದೆ. ಗಂಗಮ್ಮ ಗಂಭೀರವಾಗಿ ಯೋಚಿಸಲಿಲ್ಲ. ಆದರೆ ಆಕೆ ಗಂಭೀರವಾಗುವ ಘಳಿಗೆ ಅದಾಗಲೇ ಬಂದಿತ್ತು. ಕೊನೆಯಲ್ಲಿ ಮಗ ಬಂದು ಭಾರವಾದ ಧ್ವನಿಯಲ್ಲಿ ಉಸುರುತ್ತಾನೆ. ಹೆಚ್ ಐ ವಿ ಪಾಸಿಟಿವ್ ಇದೆ. ಗಂಗಮ್ಮನಿಗೆ ಹಾಗಂದರೆ ಏನೆಂದು ಮೊದಲು ತಿಳಿದೇ ಇರಲಿಲ್ಲ. ಅದೊಂದು ಮಾರಕ ರೋಗದ ಚಿಹ್ನೆಯೆಂದು ಆನಂತರ ತಿಳಿಯಿತು.
            ಅರಂಭದಲ್ಲಿ ಒಂದು ರೀತಿಯ ನಿರ್ಲಕ್ಷ್ಯದಿಂದಲೇ ಗಂಗಮ್ಮ ಕಂಡಳು. ಬದುಕಿನಲ್ಲಿ ಅನುಭವಿಸುವಂತಹುದೆಲ್ಲ ಅನುಭವಿಸಿಯಾಗಿದೆ. ಇನ್ನು ಹೋಗುವ ಕಾಲಕ್ಕೆ ಅನುಭವಿಸದೆ ವಿಧಿಯಿಲ್ಲ. ಬಂದದ್ದನ್ನು ಎದುರಿಸುವ ಧೈರ್ಯದಲ್ಲೇ ಇದ್ದಳು. ತಾನು ಆತ್ಮ ಸ್ಥೈರ್ಯ ತಂದುಕೊಂಡರೂ ತನ್ನ ಮನೋಬಲವನ್ನು ಹಿಂಡುವ ಘಟನೆಗಳು ಒಂದೊಂದಾಗಿ ಘಟಿಸಿದಾಗ ಗಂಗಮ್ಮ ಅಧೀರಳಾದಳು.
            ಮಗ ಒಂದು ವೈದ್ಯರ ಸಲಹೆ ಕೇಳಿಬಂದಿದ್ದರೆ, ಸೊಸೆ ಇನ್ನೊಂದು ವೈದ್ಯೆಯ ಸಲಹೆ ಕೇಳಿ ಬಂದಳು. ಒಬ್ಬೊರು ಒಂದೊಂದು ವೈದ್ಯರ ಸಲಹೆ ತಂದು ಅದನ್ನು ಪ್ರಯೋಗಕ್ಕೆ ತಂದರು. ಎಲ್ಲದರ ಮತಿತಾರ್ಥ ಒಂದೇ....ಗಂಗಮ್ಮ ಮನೆ ಮಂದಿಗೆ ಅಸ್ಪೃಶ್ಯಳಾಗಿಬಿಟ್ಟಳು. ಇದು ಕೇವಲ ಒಂದು ದಿನದೊಳಗೆ ನಡೆದಾಗ ಗಂಗಮ್ಮನ ಮುಂದೆ ಬರೀ ಕತ್ತಲು ಹಬ್ಬಿದ ಅನುಭವ. ಆದರೂ ಮಗಳ ಮನೆಯಿದೆಯಲ್ಲವ ಎಂಬ ಒಂದು ಆಶಾಕಿರಣ. ಮಗನೂ ಮೆಲ್ಲನೆ ಮಗಳ ಮನೆಗೆ ಸಾಗ ಹಾಕಿದ.
ಆದರೆ ಮಗಳ ಮನೆಯಲ್ಲಿ ಒಂದು ರೀತಿಯ ಸಮಾಧಾನಕರ ವಾತಾವರಣ. ಎಷ್ಟೆಂದರೂ ನನ್ನಂತೆ ಹೆಣ್ಣು, ಮೇಲಾಗಿ ನನ್ನ ಮಗಳು. ನನ್ನ ಖಾಸಗೀತನದಿಂದ ಹಿಡಿದು ಎಲ್ಲವನ್ನು ಬಲ್ಲವಳು ಆಕೆ. ಗಂಗಮ್ಮ ತುಸು ಸಮಾಧಾನ ಹೊಂದಿದಳು. ಆದರೆ ಅದು ಕೇವಲ ಒಂದು ರಾತ್ರಿ ಕಳೆಯುವಲ್ಲಿಗೆ ಸೀಮಿತವಾಯಿತು.  
ಮುಂಜಾನೆ ಎಲ್ಲರೂ ಏಳುವ ಮೊದಲು ವಾಡಿಕೆಯಂತೆ ನಿದ್ದೆ ಬಿಟ್ಟು ಏಳುತ್ತಾಳೆ. ಅದು ಹಳೆಯ ಮನೆ. ಮನೆಯಿಂದ ದೂರದಲ್ಲಿರುವ ಬಚ್ಚಲ ಮನೆಗೆ ಹೋಗುವಲ್ಲೇ  ಮೊದಲ ದಿನ ತಾನು ಊಟಮಾಡಿದ ನೀರು ಕುಡಿದ ತಟ್ಟೆ ಲೋಟಗಳು ಪ್ರತ್ಯೇಕವಾಗಿರಿಸಿದ್ದಾಳೆ.  ಕಣ್ಣಿಗೆ ಕತ್ತಲು ಕವಿದಂತಾಯಿತು. ಮತ್ತೆ ಒಂದಂಗುಲ ಕದಲುವ ಮನಸ್ಸಾಗಲಿಲ್ಲ. ಕದಲಿದರೆ....ಅದೂ ಅಪರಾಧವಾಗಿಬಿಟ್ಟರೆ....... ಆ ಘಳಿಗೆಯಿಂದ ಒಂದೊಂದೆ ನಿಬಂಧನೆಗಳು ಪ್ರಯೋಗಕ್ಕೆ ಬಂದವು. ಸಮಾಧಾನದಲ್ಲಿ ಮಗಳು ಹೇಳಿದರೂ ಅದು ಕರ್ಣ ಕಠೋರದ ದ್ವನಿಯಂತೆ ಇರಿಯುತ್ತಿತ್ತು. ತನ್ನ ಕೈಯ ಪೋಷಣೆಯಲ್ಲಿ ಬೆಳೆದ ಮೊಮ್ಮಕ್ಕಳು ಹತ್ತಿರ ಬರುವುದಿಲ್ಲ. ಎಲ್ಲರೂ ಅವ್ಯಕ್ತ ದೂರವನ್ನು ಕಾಯುತ್ತಿರುವಂತೆ ಭಾಸವಾಗುತ್ತಿದ್ದಂತೆ ಮತ್ತದು ವಾಸ್ತವದ ಸತ್ಯವಾಯಿತು.
ಅರ್ಧ ದಿನ ಕಳೆಯುವಷ್ಟರಲ್ಲಿ ಬದುಕಿನ ಬಹುಪಾಲನ್ನು ಕಳೆದೆನೋ ಅನ್ನಿಸಿತು. ಅದಷ್ಟರಲ್ಲೇ “ ನೀನು ಯಾವಾಗ ಬರುತ್ತಿ?”  ಎಂದು ತನ್ನ ಪ್ರೀತಿಯ ಮಗಳು ತಮ್ಮನಿಗೆ ಕರೆ ಮಾಡಿ ಕೇಳಿದ್ದಳು  ಅದು ಯಾಕೆ ಎಂದು ಅರ್ಥವಿಸದಷ್ಟು ನಿಗೂಢ ಸತ್ಯವಲ್ಲ. ಸ್ವಾಭಿಮಾನಿಯಾಗಿ ಎಲ್ಲಾದರೂ ಎದ್ದು ಹೋಗಲೇ ಎಂದು ಯೋಚಿಸಿದರೂ ತನ್ನ ಮಕ್ಕಳನ್ನು ಬಿಟ್ಟು ಹೋಗುವುದರಲ್ಲಿ ಅರ್ಥವಿಲ್ಲ ಎನಿಸಿತು. ತನ್ನ ಮತ್ತು ಮಕ್ಕಳ ಕರುಳ ಸಂಬಂಧ ಅಷ್ಟಕ್ಕೇ ಸೀಮಿತವಾಗಬಹುದೇ? ಸಾಧ್ಯವಿಲ್ಲ.
ಅದೇ ದಿನ ಬಂದ ಮಗನೊಡನೆ ಪುನಃ ಮನೆಗೆ ಬಂದಳು. ಆದರೆ ಮನೆಯ ಅಡುಗೇ ಮನೆ ಎಂದು ಕೆಲವು ಕಡೆಗೆ ಹೋಗದಂತೆ ಸೊಸೆ ನಯವಾಗಿ ಹೇಳಿದಳು. ಎಲ್ಲಿ ಕುಳಿತರೆ ತಪ್ಪು ಎಲ್ಲಿ ನಿಂತರೆ ತೊಂದರೆ ಯೋಚಿಸುವಷ್ಟೂ ಶಕ್ತಿ ಇಲ್ಲದಂತಹಾ ಪರಿಸ್ಥಿತಿ. ಇದನ್ನೆಲ್ಲ ಮಕ್ಕಳಿಗಾಗಿ ಸಹಿಸಬಹುದೇನೋ ಆದರೆ ಮೊನ್ನೆ ಮೊನ್ನೆ ಹುಟ್ಟಿದ ಮೊಮ್ಮಗು ದೂರದಲ್ಲೇ ವಿಚಿತ್ರವನ್ನು ನೋಡುವಂತೆ ನಿಂತಿತ್ತು. ತಾಯಿ ಅದಕ್ಕೂ ತರಬೇತಿ ಕೊಟ್ಟಿದ್ದಳು. ಸೊಸೆ ತನ್ನ ತವರುಮನೆಯ ಹಾಗು ಇತರ ಸಂಬಂಳು ದೂರ ಮಾಡುವ  ಬಗ್ಗೆ ಚುಚ್ಚಿ ಮಾತನಾಡ ತೊಡಗಿದಳು.
ಈ ನಡುವೇ ಯಾರೋ ಸಲಹೆ ಕೊಟ್ಟಿದ್ದರು. ಸ್ಪರ್ಶನ  ಬಟ್ಟೆ ಮುಂತಾದವುಗಳಲ್ಲಿ ಹೆಚ್ ಐ ವಿ
ಹರಡುವುದಿಲ್ಲ. ಅದು ಕೇವಲ ರಕ್ತದಲ್ಲಿ ಮಾತ್ರ ಹರಡುತ್ತದೆ. ಆದರೆ ಅದನ್ನು ಕೇಳಿ ಸುಮ್ಮನಿರುವ ಧೈರ್ಯ ಯಾರಿಗೂ ಬರಲಿಲ್ಲ. ಇದೇ ರೀತಿ ದಿನವೆರಡು ಕಳೆಯಿತು. ಯಾರಿಗೂ ಬೇಡವಾದ ಬದುಕು ಬದುಕಿರುವುದರಲ್ಲಿ ಅರ್ಥವೇನಿದೆ ಎಂದು ಹಲವು ಸಲ ಯೋಚಿಸಿದಳು. ಹೀಗೆ ನಂತರ ಒಂದು ಮಧ್ಯಾಹ್ನ ಆಸ್ಪತ್ರೆಯಿಂದ ಕರೆಬಂತು.
            ಮಗನೊಂದಿಗೆ ಆಸ್ಪತ್ರೆ ಸೇರಿದಾಗ ವೈದ್ಯರು ಹೊಸತೊಂದು ರಿಪೋರ್ಟ್ ಹಿಡಿದು ಕುಳಿತಿದ್ದರು. ಹೆಚ್ ಐ ವಿ ಪರೀಕ್ಷೆಯಲ್ಲಿ ಮೊದಲು ಪ್ರಾಥಮಿಕ ಪರೀಕ್ಷೆ ಇರುತ್ತದೆ. ಅದನ್ನು ಹೆಚ್ ಐ ವಿ ಎಲಿಸಾ ಎಂದು ಕರೆಯುತ್ತಾರೆ. ಆನಂತರ ಹೆಚ್ ಐ ವಿ ಇದೆ ಎಂದು ಬಂದರೆ ನಂತರ ಪುನಹ ಮತ್ತೊಂದು ಪರೀಕ್ಷೆಯನ್ನು ಮಾಡಲಾಗುತ್ತದೆ. ಈಗ ಆ ಪರೀಕ್ಷೆಯ ವರದಿ ವೈದ್ಯರ ಕೈಯಲ್ಲಿತ್ತು. ವಿಚಿತ್ರವೆಂದರೆ ಅದರಲ್ಲಿ ಹೆಚ್ ಐ ವಿ ನೆಗೆಟಿವ್ ಎಂದು ಬಂದಿತ್ತು. ಮಾತ್ರವಲ್ಲ ಎಲ್ಲವೂ ನಾರ್ಮಲ್ ಎಂದು ಬಂದಿತ್ತು.  ಗಂಗಮ್ಮನಿಗೆ ಭಾವನೆ ನಿಯಂತ್ರಿಸುವುದಕ್ಕೆ ಸಾಧ್ಯವಾಗಲಿಲ್ಲ. ಬರುವ ದುಃಖದಲ್ಲಿ ಕಪಾಳಕ್ಕೆ ಹೊಡೆದು ಬಿಡುವಷ್ಟು ಉದ್ವೇಗ ಉಂಟಾದರೂ ತಡೆ ಹಿಡಿದಳು. ವೈದ್ಯರ ಕೊಠಡಿಯಿಂದ ಹೊರಬಂದವಳೆ ಆಸ್ಪತ್ರೆಯ ಹೊರಬಂದು ಆಕಾಶ ನೋಡುತ್ತ ನಿಂತು ಬಿಟ್ಟಳು. ಈ ಎರಡು ದಿನದಲ್ಲಿ ಅದೆಂತಹಾ  ಘಳಿಗೆಗಳನ್ನು ಕಂಡಿದ್ದಳು. ಯಾರಿಗೆಲ್ಲ ತನ್ನ ರಕ್ತ ಮಾಂಸ ಹಂಚಿ ಬೆಳೆಸಿದ್ದೆನೋ ಅವರು ಸತ್ವ ಪರೀಕ್ಷೆಯಲ್ಲಿ ಬೆತ್ತಲಾಗಿ ಹೋಗಿದ್ದರು.  ಆದರೂ ಏನೂ ಮಾಡಲಾಗದ ಬಂಧನ ಆಕೆಗಿದೆ. ಇಷ್ಟೆಲ್ಲ ಅವಗಣಿಸಲ್ಪಟ್ಟರೂ ಈಗ ಅವರ ಜತೆಗೇ ಬದುಕುವ ಅನಿವಾರ್ಯತೆ ಆಕೆಯದ್ದು. ಮಾರಕ ರೋಗ ತನಗಿಲ್ಲ ಎಂಬ ಸಂತೋಷವೇ ಆ  ಅನಿವಾರ್ಯತೆಯನ್ನು ಎದುರಿಸುವ ಬಲವನ್ನು ಕೊಟ್ಟಿತು.
            ಕಟು ಸತ್ಯದ ಈ ಕಥೆಯನ್ನು ಯಾವುದೇ ರಂಜನೆಗಾಗಿ ಹೇಳಿರುವುದಲ್ಲ. ಮನುಷ್ಯ ತಾನು ಬದುಕಿರುವಾಗ ಬಂಧು ಬಳಗ ಎಂದು ಒಂದು ಕಾಲ್ಪನಿಕ ಭದ್ರತೆಯಲ್ಲಿರುತ್ತಾನೆ. ಆದರೆ ಆ ಭದ್ರತೆ ಅದೆಷ್ಟು ಕ್ಷುಲ್ಲಕ ಎಂದನಿಸುವುದಕ್ಕೆ ಈ ಕಥೆ ಸಾಕು. ಮನುಷ್ಯ ಸಂಭಂಧದ ಮಿಥ್ಯೆಯಲ್ಲೇ ಬದುಕುತ್ತಾನೆ. ದೇಹದೊಂದಿಗೆ ಅಂತ್ಯವಾಗುವ ಜಗದ ಈ  ಸಂಬಂಧಗಳಿಂದ ಬಂಧಿಸಲ್ಪಡುತ್ತಾನೆ. ತಂದೆ ತಾಯಿ ಗಂಡ ಹೆಂಡತಿ ಮಕ್ಕಳು ಹೀಗೆ ಸಂಭಂಧಗಳ ಮೂಲ ತತ್ವ ಏನು? ಅದನ್ನು ತಿಳಿಯದೇ ಯಾವೂದೋ ಸಾಧನೆಗಾಗಿ ಇನ್ನೇಲ್ಲೋ ಅಲೆಯುತ್ತಿರುತ್ತಾನೆ. ಸಂಭಂಧಗಳ ಮೂಲ ಭಾವನೆ ಅರ್ಥವಾಗುವಾಗ ನಾವು ದ್ವೇಷ ಅಸೂಯೆಯಿಂದ ನಾವಾಗಿಯೇ ದೂರ ಹೋಗಿಬಿಡುತ್ತೇವೆ. ನಾನು ನನ್ನದು ಬಂಧು ಬಳಗ ಎಂದು ತಿಳಿಯುವಲ್ಲಿ ಕಟು ಸತ್ಯ ವನ್ನು ಮರೆತುಬಿಡುತ್ತೇವೆ. ಇಲ್ಲಿ ಮನುಷ್ಯನ ಸ್ಥಾನ ಏನು ಎಂದು ತಿಳಿಯುವುದಕ್ಕಾಗಿ ಮಾತ್ರ ಈ ಕಥೆ ಕಥೆಯಾಗಲಿ ಎಂಬುದೊಂದೇ ಆಶಯ.
            ಸ್ಥಿತ ಪ್ರಜ್ಜತೆ ನಾವು ಕಲಿಯದಿದ್ದರೆ ಪರಿಸ್ಥಿತಿ ತಾನಾಗಿ ಕಲಿಸುತ್ತದೆ. ಆವಾಗ ಸಮಯ ಮಾತ್ರ ಮೀರಿಹೋಗಿರುತ್ತದೆ.  ಈ ಸಂಕೀರ್ಣತೆ ಅರ್ಥವಾದಲ್ಲಿ ಈ ಕಥೆ ಸಾರ್ಥಕವಾದಂತೆ.


Monday, March 13, 2017

ಸವಿನೆನಪಾಗಿ ಕಾಡುವ ಬಾಲ್ಯ.....


ಬಾಲ್ಯವೆಂದರೆ ಜೀವನದ ಪುಟಗಳಲ್ಲಿ ಸುಂದರ ಬಣ್ಣದ ಚಿತ್ರಗಳನ್ನು ಬಿಡಿಸುತ್ತವೆ. ಇದಕ್ಕೆ ಬಡವ ಶ್ರೀಮಂತ ಎಂಬ ಭೇದವಿಲ್ಲ. ಕೆಳೆಯುವ ಘಳಿಗೆಗಳು ಸುಂದರ ಎಂಬ ಪರಿವೆ ಇಲ್ಲದೇ ಒಂದೊಂದೇ ಹೆಜ್ಜೆಗಳನ್ನು ಪ್ರೌಢಿಮೆಯತ್ತ ಇಡುವಾಗ ಬಾಲ್ಯ ಸಂದುದರ ಅರಿವಾಗುವುದಿಲ್ಲ.

ನಮ್ಮದು ಬಡತನದ ಬಾಲ್ಯ. ಹಾಗಿದ್ದರೂ  ಆ ಸುಂದರ ಬಾಲ್ಯ ಈಗಲೂ ನೆನಪಾಗುತ್ತದೆ. ಈಗಿನ ಮಾಗಿದ ಬದುಕಲ್ಲಿ ನಿಂತಾಗ  ಬಾಲ್ಯದ ಬದುಕಿನ ಬಣ್ಣಗಳು  ಗಾಢವಾಗಿ ಗೋಚರಿಸುತ್ತದೆ. ಅಥವಾ ಈಗಿನ ಬದುಕು ಬಾಲ್ಯದ ಬಣ್ಣ ಬಣ್ಣನೆಯ ಬದುಕಿನ ಬಣ್ಣಗಳನ್ನು ಗಾಢವಾಗಿಸುತ್ತವೆ ಎಂದರೂ ಸರಿ. ಆ ಬಾಲ್ಯವೆಂದರೆ ಅಡೆತಡೆ  ಮತ್ತು ಮುಚ್ಚು ಮರೆಯಿಲ್ಲದ  ಭಾವನೆಗಳು. ಬಡತನ ಬದುಕನ್ನು ಕಷ್ಟವಾಗಿಸಬಹುದು. ಆದರೆ ಬದುಕಿನ ಸುಂದರ ಬಣ್ಣಗಳನ್ನು ಅಳಿಸುವುದಿಲ್ಲ. ಹಸಿವು ಗಾಢವಾದಷ್ಟು ತಿಂಡಿಯ ರುಚಿ ಅಧಿಕವಾಗುತ್ತದೆ. ಹಾಗೇನೆ ಬಾಲ್ಯದ ಕೊರತೆಗಳು ಬದುಕಿಗೆ ಮತ್ತಷ್ಟು ಬಣ್ಣವನ್ನು ಕೊಡುತ್ತವೆ.

ನಮ್ಮದು ಒಂದಷ್ಟು ದೊಡ್ಡ ಕುಟುಂಬ. ಅಮ್ಮ , ಮಾವ ಅಜ್ಜ , ಮತ್ತವರ ಮಕ್ಕಳು ಅವರ ಒಡನಾಟ ಹೀಗೆ ಬಡತನ ಹಂಚಿಕೊಳ್ಳುವುದಕ್ಕೆ ಬಳಗದ ಗಾತ್ರವೂ ವಿಶಾಲವಾಗಿಯೇ ಇರುತ್ತದೆ. ಬಾಲ್ಯದ ಒಂದಷ್ಟು ದಿನಗಳು ಮಂಗಳೂರಿನ ಉರ್ವಸ್ಟೋರ್, ದೇರೆಬೈಲು ನೆಕ್ಕಿಲಗುಡ್ಡೆ ಹೀಗೆ ಕಳೆದರೆ ಬಹಳಷ್ಟು ದಿನಗಳು  ಕಾಸರಗೋಡಿನ ಬಾಯಾರು ಪೈವಳಿಕೆ ಕಾಯರ್ ಕಟ್ಟೆಗಳಲ್ಲಿ ಕಳೆದುಹೋಯಿತು.  ಬಾಲ್ಯವನ್ನು ಕಳೆದು ಹೋಯಿತು ಎನ್ನುವುದೇ ಅರ್ಥ ಪೂರ್ಣ. ಯಾಕೆಂದರೆ ಅದು ಮತ್ತೆಂದೂ ಸಿಗದ ಕಳೆದು ಹೋದ ವಸ್ತುವಿಗೆ ಸೇರಿ ಹೋಗುತ್ತದೆ.

ಅದು ಕಾಯರ್ ಕಟ್ಟೆಯ ಹೈಸ್ಕೂಲ್ ಬಳಿ ಇದ್ದ ದಿನಗಳು. ಆಗ ಈಗಿನಷ್ಟು ಜನವಸತಿ ಇಲ್ಲ. ಆಗಲೋ ಈಗಲೋ ಒಡಾಡುವ ವಾಹನಗಳನ್ನೇ ನಾವು ವಿಚಿತ್ರ ಕಣ್ಣುಗಳಿಂದ ನೋಡುತ್ತಿದ್ದೇವು. ಬಾಯಾರು ಉಪ್ಪಳ ರಸ್ತೆಯಲ್ಲಿ ಗಂಟೆಗೊಮ್ಮೆ ಅಥವಾ ಬೆಳಗ್ಗೆ ಮಧ್ಯಾಹ್ನ ಸಂಜೆ ಎಂದು ಸಂಚರಿಸುತ್ತಿದ ಬಿಳಿಯ ಡಬ್ಬಿ ಬಣ್ಣದ ಶಂಕರ್ ವಿಟ್ಠಲ್ ಬಸ್ಸು. ಅಂದು ನಾಲ್ಕೇ ನಾಲ್ಕು ಬಸ್ಸು ಸಂಚರಿಸುತ್ತಿದ್ದ ಕಾಲವದು. ಫೀರ್ ಸಾಯಿಬರ ಪುತ್ತೂರು ಬಸ್ಸು, ಮುಂಜಾನೆ ಎಲ್ಲರನ್ನೂ ಎಬ್ಬಿಸಿಕೊಂಡು ಬಂದು ನಿದ್ದೆಯ ಮಂಪರಿನಲ್ಲೇ ಹಾದು ಹೋಗುತ್ತಿದ್ದ ಗೋಪಾಲಣ್ಣನ ಬಸ್ಸು ಬೆಳಗ್ಗೆ ಹೋದರೆ ಮತ್ತೆ ಸಾಯಂಕಾಲವೇ ಬರುವ ಶೆಟ್ರ ಬಸ್ಸು. ಡ್ರೈವರ್ ಹೆಸರೇ ಬಸ್ಸಿಗೆ. ಹಾಗಾಗಿ ಶಂಕರ್ ವಿಟ್ಠಲ್ ಹೆಸರು ನಮಗೆ ಬರುವುದೇ ಇಲ್ಲ. ನಮ್ಮಗಳ ಪಾಲಿಗೆ ಈ ಡ್ರೈವರುಗಳೇ ದೈವಾಂಶ ಸಂಭೂತರು.   ರಸ್ತೆಯಲ್ಲಿ ಬಸ್ಸು ಹೋಗುತ್ತಿರಬೇಕಾದರೆ ರಸ್ತೆಯ ಬದಿ ನಿಂತು ಕೈಬೀಸುತ್ತಿದ್ದೆವು. ಹಲವು ಸಲ ಡ್ರೈವರು ಮುಗುಳು ನಗುತ್ತಾ ಕೈ ಬೀಸಿದರೆ ನಮಗೆ  ಲೋಕವನ್ನೇ ಗೆದ್ದ ಖುಷಿ.  ಅದರಲ್ಲೂ ಸಾಯಿಬರು ಮತ್ತು ಗೋಪಾಲಣ್ಣ ಮಕ್ಕಳ ಜತೆಗೆ ಸ್ನೇಹದಿಂದ ವರ್ತಿಸುತ್ತಿದ್ದರು.
ಛಾಯಾ ಚಿತ್ರ ಕೃಪೆ : ಅಂತರ್ಜಾಲದ ಅನಾಮಿಕ ಮಿತ್ರ.

  ಮನೆಯ ಹಿರಿಯರು ಹೊರಗೆ ಎಲ್ಲಾದರೂ ಹೋಗುತ್ತಿದ್ದರೆ , ಬಸ್ಸಿಗೆ ಕೈ ತೋರಿಸಿ ಬಸ್ಸು ನಿಲ್ಲಿಸುವ ಜವಾಬ್ದಾರಿಯನ್ನು ನಾವೇ ಸ್ವತಃ ಹೆಗಲಿಗೇರಿಸಿಕೊಳ್ಳುತ್ತಿದ್ದೆವು.    ಕೇವಲ ಲಂಗೋಟಿಯಲ್ಲೇ  ಆಟವಾಡುತ್ತಿದ್ದ ನಾವು ಅದೇ ದ್  ಡ್ರೆಸ್ಸ್ ನಲ್ಲೇ  ಹೋಗಿ ಬಸ್ಸಿಗೆ ಕೈ ಅಡ್ಡ ಹಿಡಿಯುತ್ತಿದ್ದೆವು.  ಬಸ್ಸು ಬಂದು ನಿಂತಾಗ ನಮ್ಮ ಸಾಮಾರ್ಥ್ಯದ ಮೇಲೆ ನಮಗೇ ಅಭಿಮಾನ ಬರುತ್ತಿತ್ತು.  ಹಲವು ಸಲ ಡ್ರೈವರ್ ಹೇಳುತ್ತಿದ್ದರು  “ಇಷ್ಟು ಸಣ್ಣ ಪಿಟ್ಟೀಸ್ ಇಷ್ಟು ದೊಡ್ಡ ಬಸ್ಸು ನಿಲ್ಲಿಸುದಾ?”
ನಮ್ಮ ಬಾಲ್ಯವೆಂದರೆ ಅದು ಲಂಗೋಟಿ ಬಾಲ್ಯ ಎನ್ನುವುದೇ ಸೂಕ್ತ. ಅಜ್ಜನಿಗೆ ದಾನವಾಗಿ ಸಿಕ್ಕಿದ್ದ ಬೈರಾಸುಗಳ ಅಂಚುಗಳು ನಮಗೆ ಲಂಗೋಟಿಗಳಾಗಿಬಿಡುತ್ತಿದ್ದವು. ಅದರಲ್ಲು ಹಳೆಯದು  ಹೋಗಿ ಹೊಸದು ಬಂದಾಗ ಅಲ್ಲೂ ಸಂಭ್ರಮ ವಿರುತ್ತಿದ್ದವು.   ಕೆಲವೊಮ್ಮೆ ಇದರ ಮೆಲೆ ತುಂಡು ಬೈರಾಸು ಬರುತ್ತಿತ್ತು. ತುಂಡು ಲಂಗೋಟಿಯಲ್ಲಿ ಕಾಯರ್ ಕಟ್ಟೇಯ ಪಾದೆಕಲ್ಲುಗಳಲ್ಲಿ ಸುತ್ತಾಡುವುದು ಮಾತ್ರವಲ್ಲ ದೂರದ ಆವಳದ ಮಠಕ್ಕೆ ಅದರಲ್ಲೇ ಹೋಗಿ ಬರುತ್ತಿದ್ದೆವು. ಇಂತಹ ದಿನದಲ್ಲೇ  ಮನೆ ಹತ್ತಿರ ಟೈಲರ್ ಮಾಮ ಉಳಿದ ಬಟ್ಟೆಯಲ್ಲಿ ಒಂದು ಅಂಡರ್ ವೇರ್ ಹೊಲಿಸಿಕೊಡುತ್ತಾನೆ. ಅದಕ್ಕೆ ಕೇವಲ ಲಾಡಿ ಮಾತ್ರವೇ ಇರುತ್ತದೆ. ವಾರದಲ್ಲಿ ಒಂದು ದಿನ ಮಾತ್ರವೇ ಈ ಚಡ್ಡಿ ಧರಿಸುವುದಕ್ಕೆ ಅವಕಾಶ. ವಿಚಿತ್ರವೆಂದರೆ ಲಾಡಿಯ ಅಂಡರ್ ವೇರ್ ಧರಿಸಿದ ದಿನದಂದೇ  ಲೂಸ್ ಮೋಷನ್ ಆಗಿ ಭೇದಿ ಸುರುವಾಗಿರುತ್ತದೆ.  ದೂರದ ಗುಡ್ಡದಲ್ಲಿ ಹೋಗಿ ಕುಳಿತುಕೊಳ್ಳುವಾಗ ಈ ದಾರ ಬಿಡಿಸಲಿಕ್ಕಾಗದೇ ಪಟ್ಟ ಶ್ರಮ ಈಗಲೂ ಕಣ್ಣಿಗೆ ಕಟ್ಟಿದಂತೆ ಇದೆ.  ಒಂದು ಕೈ ಚಡ್ಡಿಗೆ ಹಿಡಿದು ಇನ್ನೊಂದು ಕೈ ಹಿಂದಕ್ಕೆ ಒತ್ತಿ ಹಿಡಿದು ಗುಡ್ಡೆ ಬದಿಗೆ ಓಡುತ್ತಿರಬೇಕಾದರೆ ನಮ್ಮ ಮನೆಯ ಕಾಳು ಟಾಮಿಗಳು ಸೆಕ್ಯುರಿಟಿ ಗಾಗಿ ಹಿಂದೇ ಬರುತ್ತಿದ್ದವು. ನಾವು ಪಾದೆಗಳ  ಬಂಡೆ ಸಂದಿಯಲ್ಲಿ ಕುಳಿತಿದ್ದರೆ ನಾಯಿ ಒಂದಷ್ಟು ದೂರ ನಮ್ಮನ್ನೇ ನೋಡುತ್ತಾ ಬ್ಲಾಕ್ ಕಮಾಂಡೋ ರೀತಿಯಲ್ಲಿ ರಕ್ಷಣೆ ಕೊಡುತ್ತಿದ್ದವು.  ಹಲವು ಸಲ ಗುಡ್ಡಬದಿಗೆ ಓಡುವಾಗ ಬಸ್ಸು ಬಿಟ್ಟುಕೊಂಡು..ಪೀ ಪೀ ಅಂತ ಶಬ್ದ ಮಾಡಿಕೊಂಡು ಹೋಗುತ್ತಿದ್ದೆವು.
ಇವುಗಳೆಲ್ಲ ಅಶ್ಲೀಲವೆಂದು ಅನ್ನಿಸುತ್ತಿದೇಯೇ? ಸಹಜವಾಗಿ ಎಲ್ಲರ ಬಾಲ್ಯದಲ್ಲೂ ಇದೇ ಸಾಮ್ಯತೆಯಿರುತ್ತದೆ. ಬಾಲ್ಯದ ಜೀವನ ಕಲ್ಪಿಸುವಾಗ ’ಶೀಲ ಅಶ್ಲೀಲ’ ವೆಂಬುದು ನಮ್ಮ ಕಲ್ಪನೆ ಎಂಬಂತೆ ಭ್ರಮೆಯಾಗುತ್ತದೆ. ಕೇವಲ ಲಂಗೋಟಿಯಲ್ಲೇ ದಿಗ್ವಿಜಯಕ್ಕೆ ಹೋಗುತ್ತಿದ್ದ ನಮಗೆ ಅಶ್ಲೀಲತೆಯ ಅರಿವಾದರೂ ಎಲ್ಲಿ ಬರಬೇಕು? ಮಕ್ಕಳು ಹದಿ ಹರಯ ತಲಪುವ ತನಕ ಅಶ್ಲೀಲ ಕೆಟ್ಟದ್ದು ಎಂದು ನಿರ್ಬಂಧಿಸುವ ಹೆತ್ತವರು ಮದುವೆಯಾಗಿ ಮಕ್ಕಳಾಗದೇ ಇದ್ದಾಗ ಅದೇ ಅಶ್ಲೀಲತೆಯನ್ನೇ ಮತ್ತೂ ಮತ್ತು ಕೆದಕುತ್ತಾರೆ. ಅದರೂ ಬದುಕು ಒಂದೊಂದನ್ನೇ ಕಲಿಸುತ್ತಾ ಬರುತ್ತದೆ. ಕಲಿಸುತ್ತಾ ಬಂದಂತೆ ಸಂಸ್ಕಾರ ಬೆಳೆಯುತ್ತದೆ ಶೀಲ ಅಶ್ಲೀಲತೆಯ ನಡುವೆ ಗೆರೆಯೊಂದು ಎಳೆದಾಗಿರುತ್ತದೆ. ಮನೆಯ ಹೊಸ್ತಿಲಿನ ಒಳಗೆ ಕಲಿಯುವ ಪಾಠ  ಗಟ್ಟಿಯಾಗುತ್ತಿದ್ದಂತೆ ಸಂಸ್ಕಾರ ಬಲಿಯುತ್ತಾ ಸಾಗುತ್ತದೆ.

ಬದುಕಿನಲ್ಲಿ ಬಾಲ್ಯ ಸುಂದರವೋ ಯೌವನ ಸುಂದರವೋ ಎಂದು ಪ್ರಶ್ನೆ ಹಲವು ಸಲ ಎದುರಾಗುತ್ತದೆ. ಆದರೆ ಬಾಲ್ಯವನ್ನೇ ಸುಂದರ ಎಂದು ಪರಿಗಣಿಸುತ್ತಾರೆ. ಯಾಕೆಂದರೆ ಬಾಲ್ಯ ಸುಂದರವಾಗುವಾಗ ಅಲ್ಲಿ ಯಾವು ಕಟ್ಟುಪಾಡುಗಳಿರುವುದಿಲ್ಲ. ಬಡವ ಶ್ರೀಮಂತ ಎಂಬ ಭೇದವಿರುವುದಿಲ್ಲ. ಶ್ರೀಮಂತ ಮನೆಯ ಮಗು ಅಂಗಳದಲ್ಲಿ ಚೆಂಡಾಟವಾಡುತ್ತಿದ್ದರೆ ಅದೇ ಮನೆಯ ಕೆಲಸದಾಳಿನ ಮಗು ತೋಟಾದಲ್ಲಿ ತೆಂಡೆಲ್ ನೊಂದಿಗೆ  (ತೆಂಗಿನ ಮರದ ಎಳೆಯ ಕಾಯಿಗಳು) ಆಟವಾಡುತ್ತಿರುತ್ತವೆ. ಎರಡೂ ಕಡೆಯಲ್ಲೂ ಅವುಗಳು ಪಡೆಯುವ ಆನಂದ ಸಂತೃಪ್ತಿಗೆ ಬೆಲೆ ಕಟ್ಟುವುದಕ್ಕೆ ಸಾಧ್ಯವಾಗುವುದಿಲ್ಲ.  ಬಾಲ್ಯ ಸುಂದರವಾದಂತೆ ಯೌವನ ಸುಂದರವಾಗುವಲ್ಲಿ ಹಲವು ಅನಿವಾರ್ಯತೆಗೆಳು ಎದುರಾಗುತ್ತವೆ.  ಅವುಗಳು ಸಿಕ್ಕಿದರೆ ಮಾತ್ರ ಯೌವನ ಸುಂದರವಾಗುತ್ತದೆ. ಆದರೂ ಬಾಲ್ಯದ ಸೌಂದರ್ಯ  ನಿತ್ಯ ಯೌವನದ ಹುರುಪನ್ನು ತರುತ್ತದೆ. ಆ ನೆನಪೇ ಮಧುರ. ಆ ನೆನಪಿನಲ್ಲಿ ಅಮ್ಮನೆದುರು ಹೋದಾಗ ನಾವು ಇನ್ನೂ ಆ ಎಳೆ ಕಂದಮ್ಮಗಳೇ ಎಂದು ಭಾಸವಾಗುತ್ತಿರುತ್ತದೆ.
ಈ ಲೇಖನಕ್ಕೆ ಇಲ್ಲಿ ಹಾಕಿದ ಛಾಯಾಚಿತ್ರವೇ ಸ್ಫೂರ್ತಿ. ಅನಾಮಿಕ ಮಿತ್ರನಿಗೆ ಹೃದಯ ತುಂಬಿದ ನಮಸ್ಕಾರಗಳು.   

Friday, February 17, 2017

ಕಟ್ಟೆಯಲ್ಲೊಂದು ಗುರುಕುಲ ಅದೇ ಕಾಯರ್ ಕಟ್ಟೆ ಶಾಲೆ


“ಬಣ್ಣ ಮಾಸಿದೆ ಆದರೆ ನೆನಪು ಮಾಸಲೇ ಇಲ್ಲ ಇನ್ನೂ ಅಚ್ಚ ಹಸಿರಾಗಿ ನಳ ನಳಿಸುತ್ತಿದೆ. “
ಅಂದು ಬೆಳಗ್ಗೆ ಏಳುವುದು ಕೊಂಚ ತಡವಾಗಿತ್ತು. ಅನಿವಾರ್ಯ ಕೆಲಸವೇ ಅಧಿಕವಾಗಿ ಮೊದಲದಿನ ಮಲಗುವುದು ತಡವಾಗಿಬಿಟ್ಟಿತು. ಆದರೂ ಎದ್ದ ಕೂಡಲೇ ಊರಾಚೆ ಕಣಿವೆಯಲ್ಲಿರುವ ಕೆರೆಗೆ ಹೋಗಿ ಶೌಚ ಸ್ನಾನಾದಿಗಳನ್ನು ಮುಗಿಸಿ ಬರುವುದು ನಿತ್ಯ ರೂಢಿಗತವಾದ ಕರ್ಮ. ಶೌಚಕ್ಕೆ ಊರಾಚೆ ಹೋಗುವುದೇ? ಆಶ್ಚರ್ಯ ಬೇಡ. ಇದು ಕೆಲವು ದಶಕಗಳ ಹಿಂದಿನ ಕಥೆ. ಎಪ್ಪತ್ತು ಎಂಭತ್ತರ ದಶಕದ ಕಥೆ. ಅಂದಿನ ಕಾಲ ಶೌಚಾಲಯ,  ಅದು ಸಿರಿವಂತರಿಗಷ್ಟೇ ಮೀಸಲು. ನಾವಿನ್ನೂ ಜೋಪಡಿವಾಸಿಗಳು ಇನ್ನೇಲ್ಲಿಯ ಶೌಚಾಲಯ?

 ನಮ್ಮೂರ ಕೆರೆ ಎಂದರೆ ಚಿಪ್ಪಾರು ರಸ್ತೆಯಲ್ಲಿ ಒಂದೆರಡು ಹೆಜ್ಜೆ ನಡೆದು ಎಡಭಾಗದ ಪ್ರಪಾತಕ್ಕೆ ಇಳಿದರೆ ಕಂಗು ತೆಂಗು ತೋಟದ ಒತ್ತಿಗೆ ಗುಡ್ಡದ ಕೆಳಗೆ ಒಂದು ಚಿಕ್ಕ ಎಂದರೆ ಅತೀ ಚಿಕ್ಕದಾದ ಕೊಳ. ಕಂಗು ತೆಂಗು ತೋಟದ ನೀರಡಿಕೆ ಇದೇ ಪುಟ್ಟ ಒರತೆಯಿಂದ ಸಾಧ್ಯವಾಗಬೇಕು. ಅಲ್ಲೊಂದು ಪುಟ್ಟ ಸುರಂಗ, ಅದರಲ್ಲಿ ಒರತೆಯಾಗಿ ಬರುವ ಪುಟ್ಟ ಜಲಧಾರೆಯನ್ನು ಹಿಡಿದಿಡಲು ಒಂದು ಒಡ್ಡು ಕಟ್ಟಿದ್ದಾರೆ. ಅದೇ ನಮ್ಮೆಲ್ಲರ ಸ್ನಾನದ ಮನೆ. ಸುತ್ತ ರಮಣೀಯ ಪ್ರಕೃತಿಯಲ್ಲಿ ನಮ್ಮ ಸ್ನಾನ.  ಅಲ್ಲಿ ನನ್ನಂತೆ ಹಲವರು ಬೆಳಗ್ಗೆ ಇದೇ ಕೆಲಸಕ್ಕೆ ಒಂದು ಬಕೆಟು ಸಾಬೂನು ಜತೆಗೆ ಬರುತ್ತಾರೆ. ಬೆಳಗ್ಗೆ ಅದು ಇದು ಲೋಕಾಭಿರಾಮದ ನಮ್ಮ ಜಾಗ.  ಮಳೆಗಾಲದಲ್ಲಿ ಕೊಳದ ನೀರು ತುಸು ಬಿಸಿಯಾಗಿರುತ್ತದೆ, ಅದು ನೀರಿಗಿಳಿದು ಸ್ನಾನ ಮಾಡಿದಾಗಲೇ ಅರಿವಿಗೆ ಬರುವುದು.  ಅದೇ ಬೇಸಗೆಯ ಬಿಸಿಲಲ್ಲಿ ಸುರಂಗದ ತಂಪಾದ ಧಾರೆ ನೀರು ಮೊಗೆ ಮೊಗೆದು ಸ್ನಾನ ಮಾಡುವುದೇ ಸ್ವರ್ಗಾನುಭವ.

ರಜತ ಭವನ ಈ ಇಪ್ಪತ್ತೈದು ವರ್ಷ ಹಳೆಯದು 

ಕೆರಯ ಪರಿಸರದಲ್ಲೇ ಇರುವ ಸಂದು ಗೊಂದಿಗಳೇ ನಮ್ಮ ಸಾಮೂಹಿಕ ಶೌಚಾಲಯ ಎನ್ನುವುದಕ್ಕೆ ನಾಚಿಕೆಯಾಗುತ್ತಿಲ್ಲ. ಯಾಕೆಂದರೆ ಅದೆಲ್ಲ ಮರೆಯಲಾಗದ  ನೆನಪುಗಳು.  ಸಂದಿಯಲ್ಲಿ ಬಂಡೆಯ ಪೊದೆಯ ಮರೆಯಲ್ಲಿ  ಬೀಡಿಯ ಹೋಗೆಯೋ ನೇತು ಹಾಕಿದ ಬೈರಾಸು ಇವೆಲ್ಲ ಇದ್ದರೆ ಅಲ್ಲಿ ಯಾರಾದರೊಬ್ಬರು ಇದ್ದಾರೆಂದೇ ತಿಳಿದುಕೊಳ್ಳಬೇಕು. ಕೆಲವರಂತು ದೊಡ್ಡದಾಗಿ ಶಿಳ್ಳೆ ಹಾಕುತ್ತಾ ಹಾಡು ಹೇಳುತ್ತಾ ಆನಂದಿಸುವುದರ ಜತೆಗೆ ತಮ್ಮ ಇರವನ್ನೂ ಹೊರಗೆ ಸಾರುತ್ತಾರೆ. ಹಳ್ಳಿ ಜೀವನ ಕಲ್ಪಿಸುವುದಕ್ಕೂ ಸಾಧ್ಯವಿಲ್ಲ...ಆದರೂ ನಗರದ ರೈಲ್ವೆ ಹಳಿಗಳಿಂತ ಇದೆಷ್ಟೋ ವಾಸಿ.

ಅಂದು ತಡವಾದುದರಿಂದ ನಿಯಮಿತವಾಗಿ ಬರುವವರೆಲ್ಲ ಸ್ನಾನಾದಿಗಳನ್ನು ಪೂರೈಸಿ ತೆರಳಿದ್ದರು. ಸ್ನಾನ ಮಾಡಿ ಮನೆಗೆ ಬಂದು ಕಣ್ಣ ಚಹವನ್ನು ಕುಡಿದು ಮೂರು ಕಿಲೋ ಮೀಟರ್ ದೂರದ ಪೈವಳಿಕೆ ನಗರಕ್ಕೆ ಹೋಗಿ ಆದಿನಕ್ಕೆ ಬೇಕಾದ ಅಕ್ಕಿಯನ್ನು ಚೀಲದಲ್ಲಿ ಹೊತ್ತು ತರಬೇಕು. ಆವಾಗೆಲ್ಲ ಅಕ್ಕಿ ತರಬೇಕೆಂದಿದ್ದರೆ ಮನೆಯಿಂದಲೆ ಅದಕ್ಕೆ ಬೇಕಾದ ಚೀಲ ಕೊಂಡೊಯ್ಯಬೇಕು. ಈಗಿನಂತೆ ಪ್ಲಾಸ್ಟಿಕ್ ಕವರ್ ಇಲ್ಲ. ಕಾಲ ಬದಲಾದಂತೆ ಸೌಕರ್ಯವೂ ಹೆಚ್ಚಾಗುತ್ತದೆ. ಜತೆಯಲ್ಲಿ ಕಸವೂ ಹೆಚ್ಚಾಗಿ ಮನುಷ್ಯನೇ ಕಸವಾಗಿ ಬದಲಾಗುತ್ತಾನೋ ಎಂಬ ಅನುಮಾನ.

 ಅದಿನಕ್ಕೆ ಬೇಕಾದ ಅಕ್ಕಿ ಆದಿನವೇ ತರುವುದು ಎಂದರೆ ಸರಿ. ಆಕಿ ತರುವುದು ಊಟ ಮಾಡುವುದಕ್ಕಲ್ಲ. ಬಾಲ್ಯದಲ್ಲಿ ನಮ್ಮನ್ನೆಲ್ಲ ಸಾಕಿ ಸಲಹಿದ ಅಮ್ಮ ಕಷ್ಟ ಪಟ್ಟು ಮಾಡುವ ಒಂದು ಉದ್ಯಮವಿದೆ. ಅದೇ ಚಕ್ಕುಲಿ ತಯಾರಿ. ನಮ್ಮೂರಲ್ಲಿ ಅದು ಬಹಳ ಫೇಮಸ್ಸು ಮಾರಾಯರೆ.  ಕಾಯರ್ ಕಟ್ಟೆ ಅಥವಾ ಲಾಲ್ ಭಾಗ್ ತುಂಬೆಲ್ಲ ಕಾದ ತೆಂಗಿನೆಣ್ಣೆಯ ಘಮ ಘಮ ಹರಡಿದ್ದರೆ...ಅದು ನಮ್ಮ ಮನೆಯ ಬಾಣೆಲೆಯಿಂದ.

ಹೀಗೆ ಆ ದಿನ ಐದೋ ಹತ್ತೋ ಕಿಲೋ ಅಕ್ಕಿ ಹೊತ್ತು ತಂದು ಮನೆಯಲ್ಲಿಟ್ಟು ಶಾಲೆಯ ಪುಸ್ತಕಗಳನ್ನು ಹೆಗಲಿಗೇರಿಸಿ ಹೊರಡುವಾಗ ಅದಾಗಲೇ ಒಂಬತ್ತು ವರೆಯ ಗೋಪಾಲಣ್ಣನ ಶಂಕರ್ ವಿಠಲ್ ಬಸ್ ಹೋಗುತ್ತಿತ್ತು. ಬೆಳಗಿನ ಹದವಾದ ಬಿಸಿಲಿಗೆ ಏದುಸಿರುಬಿಡುತ್ತಾ ಕಾಯರ್ ಕಟ್ಟೆಯ ಗುಡ್ಡದ ತುದಿಯ ಶಾಲೆಗೆ ಬಂದಾಗ ಶಾಲೆ ಆರಂಭದ ಲಾಂಗ್ ಬೆಲ್ ದೂರಕ್ಕೆ ಕೇಳಿಸಿತು. ಇನ್ನು
ತಡ ಹೊತ್ತಿನಲ್ಲಿ ಬಂದರೆ ಪ್ರಾರ್ಥನೆ ಮುಗಿವ ತನಕ ಇಲ್ಲೇ ನಿಂತುಬಿಡುವುದು.

 ತಡವಾದರೆ ಶಾಲೆಯ ಹೆಬ್ಬಾಗಿಲ ಬಳಿಯಲ್ಲೇ ತುಸು ಈ ಕಡೆಗೆ ರಾಷ್ಟ್ರಗೀತೆ ಮುಗಿಯುವ ತನಕ ನಿಲ್ಲುವುದು ರೂಢಿ. ಹಲವು ಸಲ ನನ್ನಂತೆ ಬಹಳ ಹುಡುಗರು ತಡವಾಗಿ ಬಂದವರು ನಿಂತಿರುತ್ತಾರೆ. ಅಂದು ಯಾರೂ ಇಲ್ಲ ನಾನೋಬ್ಬನೇ ...... ನಾನೊಬ್ಬನೇ .....ನಿಂತಿದ್ದೆ.  ಸಹಜವಾಗಿ ಹೆಬ್ಬಾಗಿಲ ಬಳಿಯಲ್ಲೇ ಮುಖ್ಯೋಪಧ್ಯಾಯರ ಕಛೇರಿ. ಅಲ್ಲೇ ಕಿಟಕಿಯಿಂದ ಅವರು ಇಣುಕುತ್ತಿರಬೇಕಾದರೆ ನನ್ನನ್ನು ಕಂಡಿರಬೇಕು. ಹಾಗೇ ಹೊರಗೆ ಬಂದವರೆ ಕಣ್ಣಲ್ಲೇ ಗದರಿದರು. ಒಳಗೆ ಹೋಗುವಂತೆ ಸೂಚಿಸಿದರು.  ನಾನು ಬೇಗನೆ ಬೇಗನೆ ಹೆಜ್ಜೆಹಾಕಿ ಒಳಗೆ ವಿದ್ಯಾರ್ಥಿಗಳ ಸಾಲಿನಲ್ಲಿ ಜತಯಾದೆ. ಒಕ್ಕೊರಲಿನಿಂದ ಜನಗಣ ಮನ ಅಧಿನಾಯಕ ಜಯ ಹೇ ....ರಾಷ್ಟ್ರಗೀತೆ ಮೊಳಗಿತು.

ಈ ಘಟನೆ ಮೊನ್ನೆ ಮೊನ್ನೆ ಕಾಯರ್ ಕಟ್ಟೆ ಹೈಸ್ಕೂಲು ಪರಿಸರ ಹೊಕ್ಕಾಗ ನೆನಪಾಯಿತು. ಅನಿವಾರ್ಯ ಕೆಲಸ ಒಂದರ ನಿಮಿತ್ತ ಅಲ್ಲಿಗೆ ಹೋಗಿದ್ದೆ. ಆಗ ಹಲವು ನೆನೆಪುಗಳ ಕೋಟೆಯೊಳಗೆ ಹೊಕ್ಕ ಅನುಭವ. ಯಾವ ಗೋಡೆ ಯಾವ ಕಿಟಕಿ ಬಾಗಿಲು ಸಂದಿಗೊಂದಿಗಳನ್ನು ನೋಡಿದರೂ ಅಲ್ಲೊಂದು ನೆನಪು ಇದೆಯೋ ಎಂದು ಭಾಸವಾಗಿತ್ತು.  ಕಿಟಿಕಿ ಗೋಡೆಗಗಳ ಬಣ್ಣ ಮಾಸಿದೆ. ಹಲವು ಕಡೆ ಹಳೆಯ ಕಟ್ಟಡ ಶಿಥಿಲವಾಗಿದೆ.  ಇಲ್ಲಿ ಗೋಡೆಯ ಬಣ್ಣ ಮಾಸಿದೆ ಆದರೆ ನೆನಪು ಮಾಸಲೇ ಇಲ್ಲ ಇನ್ನೂ ಅಚ್ಚ ಹಸಿರಾಗಿ ನಳ ನಳಿಸುತ್ತಿದೆ.

ಈ ಶಾಲೆಯನ್ನು ಕಂಡಾಗ ಶಾಲೆ ಪರಿಸರವೆಂದರೆ ಹೀಗಿರಬೇಕು ಎಂದನಿಸುತ್ತದೆ. ರಸ್ತೆಯ ಸದ್ದುಗದ್ದಲದಿಂದ ಒಂದಷ್ಟು ದೂರ,  ಗುಡ್ಡದ ತುದಿಯಲ್ಲಿ ಊರೆಲ್ಲಾ ಕಾಣುವಂತೆ ಗಂಭೀರವಾಗಿ ಸೆಟೆದು ನಿಂತ ಶಾಲೆಯನ್ನು ಕಾಣುವುದೇ ಒಂದು ಸೊಗಸು. ರಸ್ತೆಯಿಂದ ಗುಡಿಯ ಮೆಟ್ಟಲು ಹತ್ತಿದಂತೆ ಒಂದೊಂದೇ ಹೆಜ್ಜೆ ಇಡುತ್ತಾ ಶಾಲೆಯ ಪರಿಸರಕ್ಕೆ ಹೋಗಬೇಕು. ಅಲ್ಲಿ ಹೊರಗಿನ ಸದ್ದುಗದ್ದಲವಿಲ್ಲದ ಪ್ರಶಾಂತವಾದ ಸ್ಥಳ ಅನುಭವಕ್ಕೆ ಬರುತ್ತದೆ.  
ವಿಶಾಲವಾದ ಆಟದ ಮೈದಾನ

ಶಾಲೆಯ ಹಿಂಭಾಗದಲ್ಲಿ ವಿಶಾಲವಾಗಿ ಹರಡಿದ ಆಟದ ಮೈದಾನ. ಇಲ್ಲಿಅದೆಷ್ಟು ಧೂಳು ಮೆತ್ತಿಸಿಕೊಂಡ ನೆನಪುಗಳು? ದೇಹಕ್ಕಂಟಿದ ಧೂಳು ಎಂದೋ ತೊಳೆದು ಹೋಗಿರಬಹುದು. ಆ ಧೂಳಿನ ನೆನಪು ಇನ್ನೂ ಅಂಟಿಕೊಂಡಿದೆ. ಒಳಗೆ ನಾನು ಕಳೆದ ಹಲವು ತರಗತಿ ಕೋಣೆಗಳನ್ನು ನೋಡಿದೆ ಕೆಲವು ಖಾಲಿಯಾಗಿದ್ದರೆ ಇನ್ನು ಕೆಲವಲ್ಲಿ ಈಗಿನ ವಿದ್ಯಾರ್ಥಿಗಳಿದ್ದರು. ಜ್ಞಾನಕ್ಕೆ ಮಾಧ್ಯಮವಾದ ಕರಿಹಲಗೆಯ ಬೆಳ್ಳಿ ಅಕ್ಷರಗಳು ಮತ್ತು ಚಿತ್ತಾರಗಳು ಹಲವು ಮನಸ್ಸಿನಾಳಕ್ಕೆ ಇಳಿದಿದ್ದರೆ ಈಗ ಖಾಲಿಯಾಗಿ ಕಪ್ಪಗಾದ ಕರಿ ಹಲಗೆ ತನಗೇನೂ ತಿಳಿದಿಲ್ಲವೆಂಬಂತೆ ನಿರ್ವಿಕಾರವಾಗಿ ಗೋಡೆಗೆ ಅಂಟಿಕೊಂಡಿತ್ತು.

 ಶಾಲೆಯ ಜಗಲಿಯ  ಕಾಡುವ ನೆನಪುಗಳು
 ಹೊರಗೆ ಉದ್ದಕ್ಕೂ ಚಾಚಿಕೊಂಡ ಶಾಲೆಯ ಜಗಲಿ.....ಇಲ್ಲಂತೂ ನೆನಪುಗಳು ಭದ್ರವಾಗಿ ಮುದ್ರೆಯೊತ್ತಿವೆ. ಹಾಗೆ ನೋಡಿದರೆ ಶಾಲಾ ಜೀವನದಲ್ಲಿ ಶಾಲೆಯ ಜಗಲಿ ಎಂಬುದು ಎಲ್ಲರ ಜೀವನದಲ್ಲೂ ಅಚ್ಚಳಿಯದ ನೆನಪುಗಳನ್ನು ಇತ್ತಿವೆ. ಯಾವೂದೋ ಕಾರಣಕ್ಕೆ ತರಗತಿಯಿಂದ ಹೊರಗಾದಾಗ ನಿಲ್ಲುವ ಈ ಸ್ಥಳ,  ಹಲವು ದುಃಖ ದುಮ್ಮಾನಗಳಿಗೆ ಜಗಲಿಯಂಚಿನಲ್ಲಿ ಕುಳಿತು ಕಂಬನಿ ಮಿಡಿಯುವ ಈ ಸ್ಥಳವಿದು.  ಈ ಶಾಲಾ ಜಗಲಿಯಂತೂ ನನಗೆ ಅತ್ಯಂತ ಪ್ರಿಯವಾದ ಜಾಗವಾಗಿತ್ತು. ಬಿಡುವಿನ ಸಮಯದಲ್ಲಿ ಜಗಲಿಯಂಚಿಗೆ ನಿಂತು ಸುತ್ತಲಿನ ಚಟುವಟಿಕೆಗಳನ್ನು ನೋಡುವುದು ಕಾಲ ಯಾಪನೆಯ ಸುಲಭ ವಿಧಾನವಾಗಿತ್ತು.  ಕಾರಣಂತರಗಳಿಂದ ಮನಸ್ಸಿನ ಬೇಗುದಿಯಿಂದ ಬೇಸರದಿಂದ ನೋವಾದಾಗ  ಜಗಲಿಯಂಚಲ್ಲಿ ಕುಳಿತು ಸುರಿಸಿದ ಕಂಬನಿ ಮುತ್ತಾಗಿ ಅಲ್ಲೇ ಆ ಮಣ್ಣಲ್ಲೇ ಮುತ್ತಾಗಿ ಆಳಕ್ಕೆ  ಸೇರಿಹೋಯಿತೋ ಎನ್ನುವಂತೆ  ಭಾಸವಾಗುತ್ತಿತ್ತು. ಇದೇ ಜಗಲಿಯಲ್ಲಿ  ಹತ್ತನೇ ತರಗತಿಯ ವಿದಾಯದ ದಿನ ಎಲ್ಲ ವಿದ್ಯಾರ್ಥಿ ಮಿತ್ರರುಗಳು ಅಧ್ಯಾಪಕರುಗಳು ಒಟ್ಟಿಗೇ ಕುಳಿತು ಅವಲಕ್ಕಿ ಲಡ್ಡು ಶರಬತ್ತು ಸವಿದ ಆ ಸಂತಸದ ಕ್ಷಣ ಮರೆಯುವುದಕ್ಕುಂಟೆ?

ಶಾಲೆಯ ನೆನಪಿನ ಬುತ್ತಿಯನ್ನು ತೆರೆದು ನೋಡಿದರೆ ಅಲ್ಲಿ ಸಿಗುವ ಮತ್ತೊಂದು ವಿಭವ ಶಾಲೆಯ ರಜತ ಭವನ. ನಮ್ಮ ಅವಧಿಯಲ್ಲೇ ಶಾಲೆ  ಇಪ್ಪತ್ತೈದರ  ರಜತ ಸಂಭ್ರಮವನ್ನು ಎರಡುದಿನ ಸಡಗರದಿಂದ ಆಚರಿಸಿತ್ತು. ಅಂದು ರಾತ್ರಿ ಹಗಲೆನ್ನದೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಊರಿಗೆ ಊರೇ ಸಂಭ್ರದಿಂದ ಆಚರಿಸಿದ್ದಕ್ಕೆ ಅಂದು ಸೇರಿದ ಜನಸಂದಣಿಯೇ ಸಾಕ್ಷಿ.  ಈ ಅವಧಿಯಲ್ಲಿ ಕಟ್ಟಿದ ರಜತಭವನದ ನೆನಪು ಇನ್ನೂ ಹಸಿರು. ಅದರ ಒಂದೊಂದು ಕಲ್ಲು ಕೆತ್ತಿ ಕಟ್ಟುವಾಗ ದಿನವೂ ಅದರ ಒಂದೊಂದು  ರೂಪವನ್ನು ಕಂಡವರು ನಾವು. ಅದರ ತಾರಸೀಗೆ ನಾವೆಲ್ಲ ಮಿತ್ರರು ಹೊತ್ತು ಹಾಕಿದ ನೀರು ಹೊತ್ತ ಕಲ್ಲು ಮಣ್ಣು ಇನ್ನೂ ಅದರ ಗಂಧ ಮಾಸಲಿಲ್ಲವೆಂದು ಅನಿಸುತ್ತದೆ. ಇಂದಿಗೂ ರಜತ ಭವನ ಹೋಸ ರೂಪದೊಂದಿಗೆ ಅದೇ ವೈಭವದ ನೆನಪನ್ನು ತರುತ್ತದೆ.
ಶಾಲೆಗೆ ರಜೆ ಎಂದೊಡನೆ ಹಲವು ಸಲ ಬೇಸರವಾಗುತ್ತಿತ್ತು. ರಜಾದಿನದಲ್ಲೂ ಇಲ್ಲಿ ನಾವು ಒಂದಷ್ಟು ಮಿತ್ರರು ಬಂದು ಆಟವಾಡಿ ನಲಿದು ಹೋದ ನೆನಪುಗಳಿವೆ. ಈ ಎಲ್ಲ ನೆನಪುಗಳು ಸವಿ ನೆನಪುಗಳಾಗುವಂತೆ ಕಾಣುವಲ್ಲಿ ಶಾಲಾ ಅಧ್ಯಾಪಕ ವರ್ಗದ ಸ್ನೇಹ ಅತ್ಯಂತ ಆಹ್ಲಾದಮಯ. ಮಾಸ್ತರ್ ಗಳು ಟೀಚರ್ ಗಳು ಎಲ್ಲರೂ ನನ್ನಲ್ಲಿ ಕೇವಲ ಗುರು ಶಿಷ್ಯ ಸಂಬಂಧವಲ್ಲ ಉತ್ತಮ ಸ್ನೇಹಿತರಂತೆ ಪ್ರೀತ್ಯಾದರ ಸಲುಗೆಯನ್ನು ತೋರಿಸಿದವರು. ಹೀಗಿದ್ದುದರಿಂದಲೇ ಈ ಎಲ್ಲ ನೆನಪುಗಳು ಮಧುರ ನೆನಪುಗಳಾಗಿ ಇಂದಿಗೂ ಹಸಿರಾಗಿ ಉಳಿಯುವುದಕ್ಕೆ ಸಾಧ್ಯವಾಯಿತು.
ಶಾಲೆಯಿಂದ ರಸ್ತೆಯತ್ತ ಒಂದು ವಿಹಂಗಮ ನೋಟ
ಶಾಲೆಯ  ಮಣ್ಣಿಗೆ ಹೆಜ್ಜೆ ಇಡುತ್ತಿದ್ದಂತೇ ಎಲ್ಲವೂ ನಿನ್ನೆಯೋ ಮೊನ್ನೆಯೋ ಘಟಿಸಿದಂತೆ ಅದೇ ಜಾಗ ಅದೇ ನೆನಪುಗಳು ಇಲ್ಲಿ ಅದೆಷ್ಟು ಮನಸ್ಸುಗಳು ಹೀಗೆ ನೆನಪುಗಳನ್ನು ಸಂಗ್ರಹಿಸಿ ತುಂಬಿಸಿಕೊಂಡು ಹೋಗಿರಬಹುದು?  ಶಾಲೆಯ ಪರಿಸರವನ್ನೆಲ್ಲ ಆ ಬಿಸಿಲಿನಲ್ಲೂ ಒಂದು ಸುತ್ತು ಹೊಡೆದೆ. ರಣ ಬಿಸಿಲು ಬಿಸಿಲಾಗಿ ಕಾಣಲಿಲ್ಲ. ಶಾಲೆಯ ಮೂಲೆ ಮೂಲೆಯ್ ನನ್ನ ಕ್ಷೇಮ ಸಮಾಚಾರ ವಿಚಾರಿಸುತ್ತವೆಯೋ ಎಂಬ ಭ್ರಮೆ. ಒಮ್ಮೆ ಗುರುವಾಗಿ ಇನ್ನೊಮ್ಮೆ ತಾಯಿಯಂತೆ ಮತ್ತೊಮ್ಮೆ ಬಾಲ್ಯ ಸಖನಂತೆ ಕಾಣುವ ಈ ಶಾಲೆಯ ಮೆಟ್ಟಲನ್ನು ಇಳಿದು ದೂರ ಬಂದು ನಿಂತು ಒಂದು ಸಲ ತಿರುಗಿ ನೋಡಿದೆ. ಹಾಗೆ ಹೆಜ್ಜೆ ಮೆಲೆ ಹೆಜ್ಜೆ ಇಡುತ್ತಾ ಭಾರವಾದ ಮನಸ್ಸಿನಿಂದ ಗುಡ್ದವನ್ನು ಇಳಿಯುತ್ತಾ ಬಂದೆ. ಹೆಜ್ಜೆಯಿಡುವ ದಾರಿಯನ್ನು ನೋಡುವುದಕ್ಕಿಂತಲೂ ಅಧಿಕವಾಗಿ ಹಿಂತಿರುಗಿ ಶಾಲೆಯನ್ನು ನೋಡುತ್ತಾ ಒಂದೊಂದೇ ಹೆಜ್ಜೆ ಇರಿಸುತ್ತಾ ಮುನ್ನಡೆದೆ. ಹೆಣ್ಣುಮಗಳು ತಾಯಿಮನೆಯಿಂದ ಗಂಡನ ಮನೆಗೆ ತೆರಳುವಾಗ ತಿರು ತಿರುಗಿ ತಾಯಿ ಮನೆಯನ್ನು ನೋಡಿದಂತೆ ಮತ್ತೂ ಮತ್ತೂ ನೋಡಿದೆ.  ಶಾಲೆ ಕೈ ಬೀಸಿ ವಿದಾಯವನ್ನು ಹೇಳಿದಂತೆ ಭಾಸವಾಯಿತು.





Thursday, January 19, 2017

ಬದುಕು ವ್ಯಾಪಾರವಾದಾಗ

ನಮ್ಮ ಮನೆಯ ರಸ್ತೆಯಲ್ಲಿ  ಈ ತುದಿಯಿಂದ ಆ ತುದಿಯವರೆಗೂ ಹಲವು ಅಂಗಡಿಗಳು ಮಂಡಿಗಳು, ತರಕಾರಿ ಗಾಡಿಗಳು,  ಖಾಸಗೀ ಕಛೇರಿಗಳು ಮದ್ಯದಂಗಡಿ ಹೋಟೇಲು ಹೀಗೆ ಹಲವು ವ್ಯವಾಹರಗಳ ಸ್ಥಳಗಳು ಇವೆ. ಈ ನಡುವಲ್ಲಿ ಒಂದೆರಡು ದೇವಸ್ಥಾನಗಳು. ಬೆಳಗ್ಗೆ ಎಲ್ಲ ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದಂತೆ ಈ ದೇವಸ್ಥಾನಗಳ ಬಾಗಿಲುಗಳು ತೆರೆಯಲ್ಪಡುತ್ತವೆ. ಹಲವು ಅಂಗಡಿಗಳಿಗೆ ಗ್ರಾಹಕರು ಸಾಮಾಗ್ರಿಗಳನ್ನು ಖರೀದಿಸಲು ಬರುವಂತೆ  ದೇವಸ್ಥಾನಗಳಿಗೂ ಭಕ್ತಾದಿಗಳು ಬರುತ್ತಾರೆ. ತಮ್ಮ ಕೆಲಸ ಮುಗಿಸಿ ತೆರಳುತ್ತಾರೆ. ಎಲ್ಲಾ ದಿನಗಳು ಇದು ಯಾಂತ್ರಿಕವೆಂಬಂತೆ ನಡೆದುಹೋಗುತ್ತಿರುತ್ತದೆ. ಅಂಗಡಿ ತೆರೆದಾಗ ಈ ದೇವಸ್ಥಾನದ ಬಾಗಿಲುಗಳು ತೆರೆದು ರಾತ್ರಿ ಅಂಗಡಿ ಮುಚ್ಚಿದಾಗ ಇಲ್ಲೂ ಅಷ್ಟೆ ಎಲ್ಲ ಬಾಗಿಲು ಮುಚ್ಚಿ ಬೀಗ ಜಡಿದು ಅರ್ಚಕರು ತೆರಳುತ್ತಾರೆ. ಅಂಗಡಿಗಳ ಮುಚ್ಚಿದ ಬಾಗಿಲುಗಳ ನಡುವೆ ದೇವಸ್ಥಾನದ ಬಾಗಿಲು ಮುಚ್ಚಿದುದನ್ನು ನೋಡಿದರೆ ಅಂಗಡಿಗೂ ದೇವಸ್ಥಾನಕ್ಕೂ ಯಾವುದೇ ವೆತ್ಯಾಸ ಕಾಣುವುದಿಲ್ಲ. ನನಗೇಕೋ ಈ ಬೆಂಗಳೂರಿನ ಬೀದಿಯಲ್ಲಿರುವ ದೇವಸ್ಥಾನವನ್ನು ನೋಡಿದರೆ ಭಯಭಕ್ತಿ ಹುಟ್ಟುವುದಿಲ್ಲ. ನಾನು ನಾಸ್ತಿಕನಲ್ಲ. ಹಾಗೆಂದು ನಾಸ್ತಿಕನನ್ನು ಪರಮ ನಾಸ್ತಿಕನನ್ನಾಗಿ ಮಾಡುವ ಈ ಬೀದಿಯ ವ್ಯವಹಾರಗಳನ್ನು ನಿತ್ಯ ಕಾಣುತ್ತೇನೆ. ಬೆಳಗ್ಗೆ  ಜನಸಂಚಾರ ತೊಡಗುವಾಗ ಕಛೇರಿ ಕಾರ್ಖಾನ ಇನ್ನಿತರ ಕೆಲಸದ ನಿಮಿತ್ತ ಜನರು ರಸ್ತೆಗಿಳಿವಾಗ  ದೇವಸ್ಥಾನದ ಬಾಗಿಲುಗಳು ತೆರೆದು ಹತ್ತು ಘಂಟೆಯಾಗುತ್ತಿದ್ದಂತೆ ಬಾಗಿಲು ಮುಚ್ಚುತ್ತವೆ. ಆನಂತರ  ಸಾಯಂಕಾಲ ಪುನಃ ಜನರು ಕಛೇರಿ ಕಾರ್ಖಾನೆಗಳನ್ನು ಬಿಡುವಾಗ ಪುನಃ ತೆರೆದು ಯಥಾವತ್ ಜನಸಂಚಾರ ವಿರಳವಾಗುತ್ತಿದ್ದಂತೆ ಬಾಗಿಲು ಮುಚ್ಚಲ್ಪಡುತ್ತವೆ. ಹಾಗಾಗಿ ದೇವಸ್ಥಾನ ನೋಡುವಾಗ ಒಂದು ಅಂಗಡಿಯನ್ನು ನೋಡಿದ ಅನುಭವವಾಗುತ್ತದೆ. 

ವ್ಯಕ್ತಿಗೊಂದು ಜನಗಳಿಗೊಂದರಂತೆ ಈ ದೇವಸ್ಥಾನಗಳು. ಕೆಲವೊಮ್ಮೆ ಇದು ದೇವರಿಗಾಗಿ ಇರುವುದೋ ಮನುಷ್ಯರಿಗಾಗಿ ಇರುವುದೋ ಎಂಬ ಜಿಜ್ಜಾಸೆ ಬಹಳವಾಗಿ ಕಾಡುತ್ತದೆ. ನಮ್ಮೂರಿನ ಜನಸಂಚಾರವೇ ಇಲ್ಲದಲ್ಲಿ ಗುಳಿಗನ ಕಲ್ಲು ಅಥವಾ ಭೂತದ ಸ್ಥಾನಗಳು ಕಂಡುಬರುತ್ತವೆ.  ಇದು ದೇವರಿಗಾಗಿ ಅಥವಾ ಭೂತಕ್ಕಾಗಿಯೇ ನಿರ್ಮಾಣಗೊಂಡದ್ದು.  ಅಲ್ಲಿ ತಿಂಗಳಿಗೊಮ್ಮೆಯೋ ವರ್ಷಕೊಮ್ಮೆಯೋ ಸ್ವತಃ ಜನ ಸೇರಿಕೊಂಡು ಪೂಜೆ ಜಾತ್ರೆ ನೇಮಗಳನ್ನು ಆಚರಿಸುತ್ತಾರೆ. ಇಲ್ಲಿ ಜನ ಬಾರದೇ ಇದ್ದರೂ ಇದು ನೆರವೇರಿಯೇ ತೀರುತ್ತದೆ. ನಮ್ಮೂರಿನ ಹಲವು ದೇವಸ್ಥಾನಗಳು ಇವೆ. ಅಲ್ಲಿ ಭಕ್ತರ ಸಂಖ್ಯೆ ಬಹಳಷ್ಟು ವಿರಳ. ಮೂರು ಹೊತ್ತು ಬಾಗಿಲು ತೆಗೆದು ಘಂಟೆ ಬಾರಿಸಿ ಪೂಜೆ ನೆರವೇರುತ್ತದೆ. ಹೆಚ್ಚಿನ ದಿನ ಕೇವಲ ಅರ್ಚಕ ಮಾತ್ರವೇ ಇದ್ದರೂ ಆತ  ಬಂದು ಬಾಗಿಲು ತೆರೆದು ದೀಪ ಹಚ್ಚಿ ಅದೂ ಮೂರು ಹೊತ್ತು ಪೂಜೆ ಮಾಡಿ ರಾತ್ರಿ ಕೊನೆಯ ಪೂಜೆ ಮಾಡಿ ಬಾಗಿಲು ಹಾಕಿ  ಹೋಗಿಬಿಡುತ್ತಾರೆ. ಭಕ್ತರಿಗಾಗಿ ಯಾವ ಅರ್ಚಕನಾಗಲೀ ದೇವರಾಗಲೀ ಕಾಯುತ್ತಿರುವುದಿಲ್ಲ. ಯಾರು ಬಾರದೇ ಇದ್ದರೂ ಪೂಜೆ ಪುನಸ್ಕಾರಗಳು ನಡೆದೇ ನಡೆಯುತ್ತದೆ. ಇದಕ್ಕೆ ಸಾಕ್ಷಿ ಮೂರು ಹೊತ್ತು ಕೇಳುವ ಘಂಟಾನಾದ. 

ವಿಚಿತ್ರವೆಂದರೆ ಭಕ್ತರು ಬೆಂಗಳೂರಿನಲ್ಲಿ ಬಂದಾಗ ದೇವರಿಗೆ ಪೂಜೆ ಸಲ್ಲುತ್ತದೆ. ಭಕ್ತರ ಸಂಖ್ಯೆ ಕರಗುತ್ತಿದ್ದಂತೆ ದೇವರ ಪೂಜೆಯೂ ಮುಗಿಯಿತು. ವಾರಾಂತ್ಯದಲ್ಲಿ ಶನಿವಾರ ಭಾನುವಾರ ಅದು ತಿಥಿ ನಕ್ಶತ್ರ ದಿನಗಳು ಯಾವುದೇ ಇರಲಿ, ವಾರವಿಡೀ ಮುಚ್ಚಿರುವ ದೇವಸ್ಥಾನವು ಅ ದಿನವಿಡೀ ಬಾಗಿಲು ತೆರೆದು ಘಂಟೆಯ ದ್ವನಿ ಹೊರಡಿಸುತ್ತಿರುತ್ತದೆ.  ಇದು ಶನಿವಾರ ಭಾನುವಾರವಲ್ಲದ ರಜಾದಿನವಾದರೂ ಸರಿಯೇ. ವಿಚಿತ್ರವೆಂದರೆ  ಈ ರಜೆಗೆ ಜಾತಿಭೇದವಿಲ್ಲದ ಸರ್ವ ಧರ್ಮ ಸಮನ್ಯಯತೆ ಇದೆ.   ಮುಸ್ಲಿಂ ಕ್ರಿಸ್ಥು ಹಬ್ಬದಂದೂ ಉಳಿದ ರಜೆಯಂತೆ ದೇವಸ್ಥಾನದ ಬಾಗಿಲು ತೆರೆದು ಸರ್ವ ಧರ್ಮ ಸಮನ್ವಯ ಸಿದ್ದಾಂತವನ್ನು ಪ್ರತಿ ಪಾದಿಸುತ್ತದೆ. ಹಾಗಗಿ ಭಕ್ತರು ಬಂದಾಗ ತೆರೆದುಕೊಳ್ಳುವ ದೇವಸ್ಥಾನಗಳು ,  ಇದನ್ನು ನೋಡಿಯೇ ದೇವಸ್ಥಾನಕ್ಕೂ ಅಂಗಡಿಗೂ ವೆತ್ಯಾಸವೇ ತಿಳಿಯುವುದಿಲ್ಲ.  ಗಿರಾಕಿಗಳು ಇಲ್ಲದಾಗ ಗಿರಾಕಿಗಳಿಗೆ ಅಂಗಡಿ ಬಾಗಿಲ ಮುಂದೆ ಕಾದು ಕುಳಿತ ಅಂಗಡಿಯಾತನಂತೆ ಭಕ್ತರಿಲ್ಲದಾಗ ದೇವಸ್ಥಾನದ ಅರ್ಚಕನೂ ಬಾಗಿಲ ಮುಂದೆ ಭಕ್ತ ಗಿರಾಕಿಗಳಿಗೆ ಕಾದುನಿಂತಿರುತ್ತಾನೆ.   ಅಂಗಡಿಯಲ್ಲಿನ ಸಾಮಾನು ದರ ಪಟ್ಟಿಯಂತೆ, ಪಕ್ಕದಲ್ಲೆ ಒಂದು ಸೇವಾಫಲಕ ವೂ ಅಣಕಿಸುತ್ತಿರುತ್ತದೆ. ಕುಂಕುಮಾರ್ಚನೆಗೆ ಇಷ್ಟು, ರುದ್ರಾಭಿಷೇಕಕ್ಕೆ ಇಷ್ಟು...ಛೇ ಮನುಷ್ಯನ ಜೀವನ ಹೀಗೆಕೆ ವ್ಯಾವಹಾರಿಕವಾಗುತ್ತದೆ? ಅರ್ಥವಾಗುವುದಿಲ್ಲ. ಯಾವುದರಲ್ಲಿ ಮನುಷ್ಯ ತೃಪ್ತಿ ಎಂಬ ನಿಧಿಯನ್ನು ಅರಸುತ್ತಾನೆ? ಈ ನಿಧಿಯನ್ನು ಅರಸಿದಂತೆ ಅದೂ ಮತ್ತೂ ಮತ್ತೂ ಆಳಕ್ಕೆ ಇಳಿದು ಒಂದು ರೀತಿಯ ಅತೃಪ್ತಿಯ ಹೊಗೆ ಗಾಢವಾಗುತ್ತಾ ಇರುತ್ತದೆ. ಆಡಂಬರದಿಂದ   ದೇಹಕ್ಕೆ ವಸ್ತ್ರ ಧರಿಸಿದಷ್ಟೂ ನಗ್ನರಾಗುವಂತಹ ಪ್ರವೃತ್ತಿ.  ನಮ್ಮೂರಿನಲ್ಲಿ ಯಾರಿಲ್ಲದೇ ಇದ್ದರೂ ಮೂರು ಹೊತ್ತು ಮಳೆ ಇರಲಿ ಬಿಸಿಲಿರಲಿ ಪೂಜೆ ನಡೆಯುತ್ತಿರುತ್ತದೆ. ಸೂತಕವೋ ಮತ್ತೋಂದೋ ವಿಘ್ನ ಗಳು ಬಂದಾಗ ಬದಲೀ ಅರ್ಚಕರು ಬಂದು ಅದೊಂದು  ಅನಿವಾರ್ಯ ಕರ್ತವ್ಯದಂತೆ ನೆರವೇರಿಸಿ ಹೋಗುತ್ತಾರೆ. ದೇವರಿಗಾಗಿ ಪೂಜೆಯೇ ಭಕ್ತರಿಗಾಗಿಯೇ? ದೇವರ ಅಸ್ತಿತ್ವ ಭಕ್ತರಿಂದಲೇ ಅಂತ ಸಮಾಧಾನಿಸಿಕೊಳ್ಳಬೇಕು. 

ಎಲ್ಲವೂ ವ್ಯಾಪಾರೀಕರಣವಾಗುವಾಗ  ನಮಗೆ ಸಿಗುವ ಶಾಂತಿ ಸಮಾಧಾನಗಳೂ ವ್ಯಾಪಾರಿಕರಣವಾಗಿ ಬೆಲೆ ನಿಗದಿಯಾಗಿಬಿಡುತ್ತದೆ. ಊರಲ್ಲಿ ಯಾವ ಹೊತ್ತಿಗೆ ಬೇಕಾದರೂ ಬೆಟ್ಟದ ತುದಿಯಲ್ಲಿ ನಿರಮ್ಮಳವಾಗಿ ಪ್ರಕೃತಿಯನ್ನು ನೋಡುತ್ತಾ ಶಾಂತಿ ನೆಮ್ಮದಿಯನ್ನು ಯಥಾ ಸಾಧ್ಯ ಪಡೆಯಬಹುದು. ಆದರೆ ನಗರದಲ್ಲಿ ರಸ್ತೆಗಿಳಿದರೆ ಈ ಬಗೆಯ ವ್ಯಾಪಾರಗಳು, ಹೋಗಲಿ ಶುದ್ದ ವಾಯುವಾದರೂ ಅನುಭವಿಸುವ ಎಂದು ಉದ್ಯಾವನದೆಡೆಗೆ ಹೋಗಿ ಕುಳಿತರೆ ಅದಕ್ಕೂ ಸಮಯ ನಿಗದಿಯಾಗಿರುತ್ತದೆ. ಮೀರಿದರೆ ಕಾವಲುಗಾರ ಸೀಟಿ ಹೊಡೆದು ಎಚ್ಚರಿಸುತ್ತಾನೆ. ಜಗತ್ತು ವಿಶಾಲವಾದಷ್ಟು ಮತ್ತೂ ಸಂಕುಚಿತವಾದಂತೆ, ಸಂಕುಚಿತ ಎಂದು ಭಾವಿಸಿ ಕೈಚಾಚಿದರೆ ಎಲ್ಲವೂ ನಮ್ಮಿಂದ ದೂರಾಗಿ ಅಂತರವನ್ನು ಹೆಚ್ಚಿಸಿದಂತೆ ಜಗತ್ತು ಮತ್ತು ವಿಶಾಲವಾದ ಅನುಭವವನ್ನು ತರುತ್ತದೆ. 

Monday, December 19, 2016

ಆತ್ಮ ವಂಚನೆ..

            ಬಹಳ ಹಿಂದೆ ಊರಲ್ಲಿ ಅಂದರೆ ಪೈವಳಿಕೆಯಲ್ಲಿರುವಾಗ ಒಂದು ದಿನ ಮಧ್ಯಾಹ್ನ ನಾನು ಉಪ್ಪಳದಿಂದ ಮನೆ ಕಡೆಗೆ ಹೋಗುವುದಕ್ಕಾಗಿ ಉಪ್ಪಳದಿಂದ ಬಸ್ ಹತ್ತಿದೆ. ಉಪ್ಪಳವೆಂದರೆ ಮಂಗಳೂರಿನಿಂದ ಕಾಸರಗೋಡಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಒಂದು ಪ್ರಾಮುಮುಖ್ಯ ನಗರ. ಬಸ್ಸು ಹೊರಡುವಾಗಲೇ ಕೆಲವು ನಿಮಿಷತಡವಾಯಿತು. ನಮ್ಮೂರಿನ ಖಾಸಗೀ ಬಸ್ಸಿನವರ ಲೆಕ್ಕದಲ್ಲಿ ನಿಮಿಷ ನಿಮಿಷವೂ ಅಮೂಲ್ಯ. ಸಮಯದ ಬೆಲೆ ತಿಳಿಯಬೇಕಾದರೆ ನಮ್ಮೂರಿನ ಖಾಸಗೀ ಬಸ್ಸುಗಳಲ್ಲಿ ಚಾಲಕ ಅಥವ ನಿರ್ವಾಹಕ ಇಲ್ಲವಾದರೆ ಕ್ಲೀನರ್ ನಾಗಿಯೋ ಇರಬೇಕು. ನಿಮಿಷಗಳಷ್ಟು ತಡವಾದ ಬಸ್ಸು ಅವಸರ ಅವಸರವಾಗಿ ಹೊರಡಲು ಸಿದ್ದತೆ ನಡೆಸಿತು. ಅದಾವಾಗಲೇ ಹಿಂದಿನ ಬಸ್ಸಿನ ಕಂಡಕ್ಟರ್ ಬಂದು ರಂಪಾಟ ನಡೇಸಿ ಬಸ್ಸು ದಬ ದಬ ಬಡಿದಾಗಿತ್ತು. ಊಹೂಂ ಅದಾರೋ ಕೆಲವು ಹತ್ತುವುದರಲ್ಲಿದ್ದರೂ ಬಸ್ಸು ಮತ್ತೂ ನಿಧಾನವಾಗಿ ಹೊರಟಿತು.
            ಬಸ್ಸು ನಿಧಾನವಾಗಿ ಹೊರಡುತ್ತಿದ್ದಂತೆ ಹಿಂದಿನ ಬಸ್ಸು ಇದರ ಹಿಂದೆಯೆ ಹೊರಟು ಬಂತು. ಉಪ್ಪಳದಂತೆ ಅದಕ್ಕೆ ಒತ್ತಿಕೊಂಡು ಕಿಲೊಮೀಟರ್ ದೂರದಲ್ಲಿ ಇರುವ ಇನ್ನೊಂದು ಊರು ಕೈಕಂಬ, ಇಲ್ಲಿಂದ ನಂತರ ಪೈವಳಿಕೆ ಬಾಯಾರು ಕಡೆಗೆ ರಸ್ತೆ ತಿರುಗುತ್ತದೆ. ಮಂಗಳೂರಿನಿಂದ ಬರುವಾಗ ಉಪ್ಪಳದಲ್ಲಿ ಬಸ್ಸು ತಪ್ಪಿ ಹೋದರೆ ನೇರ ಕೈಕಂಬದಲ್ಲಿ ಇಳಿದು ಅದೇ ಬಸ್ಸು ಹಿಡಿಯುವುದು ಸಾಮಾನ್ಯ ವಾಡಿಕೆ. ಹಾಗೆ ಕಾಸರಗೋಡಿನಿಂದ ಬರುವವರಿಗೂ ಇದು ಅನೂಕೂಲ ತಾಣ. ನಾನಿದ್ದ ಬಸ್ಸು ಕೈಕಂಬದಲ್ಲಿ ಬಂದು ನಿಂತಾಗ ಹಿಂದಿನ ಬಸ್ಸು ವೇಗವಾಗಿ ಬಂದು ಇದನ್ನು ಹಿಂದಿಕ್ಕಿ ಮುಂದಿನ ಇಕ್ಕಟ್ಟಾದ ಸಂದಿಯಲ್ಲಿ ಅಡ್ಡವಾಗಿ ನಿಂತು ಬಿಟ್ಟಿತು. ನಿಂತೊಡನೇ ಡ್ರೈವರ್ ಕಂಡಕ್ಟರ್ ಗಳ ಜಗಳ ಹತ್ತಿಕೊಂಡಿತು. ನಾವಿದ್ದ ಬಸ್ಸಿನ ಡ್ರೈವರ್ ಸೀಟಲ್ಲಿ ಕುಳಿತೇ ಏನೇನೋ ಸಮಜಾಯಿಷಿ ನೀಡಲಾರಾಂಭಿಸಿದ. ಊಹೂಂ, ಜಗಳ ಮತ್ತೂ ಜೋರಾಯಿತು. ಎರಡೂ ಬಸ್ಸು ನಿಂತಲ್ಲೆ. ಒಳಗೆ ಪ್ರಯಾಣಿಕರಲ್ಲಿ ಕೆಲವರು ಇಳಿದು ಜಗಳ ನೋಡತೊಡಗಿದರು. ಸುತ್ತ ಮುತ್ತಲಿನ ಜನಗಳೆಲ್ಲ ಇದೊಂದು ಸುಲಭದ ಮನರಂಜನೆ ಎಂಬೆಂತೆ, ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದಂತೆ ನಿಂತೇ ನೋಡುತ್ತಿದ್ದರು. ಬಹಳ ಹೊತ್ತು ಕಳೆಯಿತು. ನಮ್ಮ ಬಸ್ಸಿನಲ್ಲಿ ಹಿಂದೆ ಕುಳಿತ ಹಿಂದುಳಿದವನೊಬ್ಬ ಅಂಗಿಯ ತೋಳೆರಿಸಿ ಪಕ್ಕದಲ್ಲಿ ಇದ್ದವರೊಡನೆ ತಾನು ಅಡ್ಡ ಇರಿಸಿದ ಬಸ್ಸು ತೆಗೆಸಿಯೇ ತೀರುತ್ತೇನೆ ಎಂದು ಎದೆ ಮುಂದೆ ಮಾಡಿಕೊಂಡು ಪಂಚೆ ಮೇಲೆರಿಸಿ ಬಸ್ಸಿಳಿದು ಮುಂದೆ ಹೋದ. ಅಷ್ಟೆ ಅರ್ಧದಲ್ಲೇ ವಾಪಾಸು “ ಎಲ್ಲ ಞಮ್ಮಳ ಆಳ್.....” (ಎಲ್ಲಾ ನಮ್ಮದೇ ಜನ)  ಎನ್ನುತ್ತಾ ಸುಮ್ಮನೇ ತನ್ನ ಸೀಟಲ್ಲಿ ಕುಳಿತ.  ಅದುವರೆಗೂ ಎಲ್ಲರನ್ನು ತದುಕಿ ಬಸ್ಸು ಹೊರಡಿಸುತ್ತೇನೆ ಎಂದವನು ಸಮಾಧಾನದಿಂದ ಬಂದು ಕುಳಿತ.  ನಮ್ಮದೇ ಜನ ಅಲ್ಲದೇ ಇರುತ್ತಿದ್ದರೆ, ಈತ ಏನು ಮಾಡಬಹುದಿತ್ತು? ನ್ಯಾಯ ವೆಂಬುದು ನಮ್ಮದೇ ಜನಗಳನ್ನು ಹೊಂದಿಕೊಂಡು ಬದಾಲಾಗಿ ಬಿಡುತ್ತದೆ. ಇದನ್ನೇ ಹೇಳುವುದು ಆತ್ಮವಂಚನೆ ಎಂದು.
            ಪ್ರವಚನ ಒಂದರಲ್ಲಿ ಗುರುಗಳು ಸುಂದರವಾಗಿ ಪ್ರವಚಿಸುತ್ತಿದ್ದರು. ಕೈಯಲ್ಲಿ ಅದಾವುದೋ ಒಂದು ವಸ್ತುವನ್ನು ಹಿಡಿದು ಹೇಳುತ್ತಿದ್ದರು. ಈ ವಸ್ತು ಇದು ತಾತ್ಕಾಲಿಕವಾಗಿ ಬೇರೊಬ್ಬರಿಂದ ಈಗ ಹಿಂದಿರಿಗಿಸುತ್ತೇನೆ ಎಂದು ಎರವಲು ಪಡೆದುಕೊಂಡುದಾಗಿತ್ತು. ಈ ವಸ್ತುವನ್ನು ಒಂದು ಕ್ಷಣವಾದರೂ ಇದು ನನ್ನದಾಗಿದ್ದರೇ ಎಂದು ಮನಸ್ಸಿನ ಗ್ರಹಿಸಿದರೆ. ಈ ವಸ್ತು ನನ್ನದಾದರೆ  ಎಂದು ಆಶಿಸಿದರೆ ಅದು ಮಾನಸಿಕ ವ್ಯಭಿಚಾರವಾಗುತ್ತದೆ. ಬಹಳ ಸುಂದರವಾದ ಕಲ್ಪನೆ. ಕೇವಲ ಯೋಚಿಸುವುದೇ ಮಾನಸಿಕ ವ್ಯಭಿಚಾರ. ವ್ಯಭಿಚಾರ ಅಥವಾ ವೆತ್ಯಸ್ತವಾದ ಅಪಚಾರ ಅದು ಅಪರಾಧವವೇ. ಅದು ಮಾನಸಿಕವಾಗಿ ಅಥವಾ ದೈಹಿಕವಾಗಿ ಹೇಗೆ ಮಾಡಿದರೂ ಅದು ವ್ಯಭಿಚಾರ. ಅಪರಾಧ. ಇದರ ಅರಿವು ಮೂಡಬೇಕಾದರೆ ವಂಚನೆ ಇಲ್ಲದ ಮನಸ್ಸು ನಮ್ಮದಾಗಬೇಕು.

            ಹೌದು , ವ್ಯಭಿಚಾರ ಈಗ ಇದು ಮಾಡುವನಿಂದಲೂ ಅದನ್ನು ನೋಡಿ ತೋರಿಸಿಕೊಡುವವನೇ ಹೆಚ್ಚು ಅಪರಾಧಿಯಾಗುತ್ತಾನೆ. ಕೇವಲ ಮನಸ್ಸಿನಿಂದ ಗ್ರಹಿಸುವುದೇ ವ್ಯಭಿಚಾರ ಎಂದು ಪರಿಗಣಿಸುವ ಭಾರತೀ ಸಂಸ್ಕೃತಿಯಲ್ಲಿ ಹೀಗೂ ಕಂಡವರೂ ತೋರಿಸಿದವರೂ ಅಪರಾಧಿಗಳಾಗುವಾಗ ಆತ್ಮ ವಂಚನೆ ಎಂಬುದು ಅರ್ಥವನ್ನು ಕಳೆದುಕೊಳ್ಳುತ್ತದೆ. ಹೆತ್ತ ತಂದೆ ತನ್ನ ಮಗನ ಅಪರಾಧವನ್ನು ಮುಚ್ಚುವಲ್ಲಿ ಆತನ ವ್ಯಭಿಚರಿಕೆಯನ್ನು ಹಲವು ಕಾರಣ ನೀಡಿ ಸಮರ್ಥಿಸಬಹುದು. ಆದರೆ ವ್ಯಭಿಚಾರ ಅದಕ್ಕಿರುವ ಮಾನದಂಡ ಒಂದೇ  ಅದು ಅಪರಾಧ.  ಇಲ್ಲಿ ಆತ್ಮ ಎನ್ನುವುದರ ಅರಿವಿರಬೇಕು. ಆತ್ಮ ಮನಸ್ಸು ಇವುಗಳ ಕಲ್ಪನೆ ಇರಬೇಕು. ಯಾವಾತ ತನ್ನ ಮನಸ್ಸಿಗೆ ವಂಚನೆ ಮಾಡುತ್ತಾನೋ ಅತನೆಂದಿಗೂ ಪ್ರಾಮಾಣಿಕನಾಗಿ ಇರುವುದಕ್ಕೆ ಸಾಧ್ಯವಿಲ್ಲ. ಒಂದಿಲ್ಲೊಂದು ಬಗೆಯಲ್ಲಿ ಅದು ಸ್ವತಃ ತನಗೇ ಆದರೂ ಅತ ಅಪ್ರಾಮಾಣಿಕ ವ್ಯಕ್ತಿಯಾಗುತ್ತಾನೆ.  ತನಗೆ ತಾನು ವಂಚಿಸುವವನಲ್ಲಿ ಪ್ರಾಮಾಣಿಕತೆ ಇರುವುದಿಲ್ಲ. ಅಲ್ಲಿ ಪ್ರಾಮಾಣಿಕತೆ ಇದ್ದರೆ ಅದಕ್ಕೂ ಒಂದು ಬಣ್ಣವಿರುತ್ತದೆ. ಪ್ರಾಣಿ ಪಕ್ಷಿಗಳು ಆತ್ಮವಂಚನೆ ಎಸಗುವುದಿಲ್ಲ. ಮನುಷ್ಯನ ಅರ್ಹತೆಗಳಲ್ಲಿ ಒಂದು ಅರ್ಹತೆ ಅತ್ಮವಂಚನೆ ಇಲ್ಲದೇ ಬದುಕುವುದು. ಹಾಗಿದ್ದರೆ ಜಗತ್ತಿನಲ್ಲಿ ಪ್ರಾಣಿಗಳ ಸಂಖ್ಯೆಯೇ ಹೆಚ್ಚಾಯಿತು ಎಂದು ತಿಳಿಯಬೇಕು. 

Monday, June 20, 2016

ಸಜ್ಜಿಗೆ ರೊಟ್ಟಿ...ರವಾ ರೋಟಿ ಅಹಾ ಹಾ..!!!




ಇಂದಿನ ವೇಗದ ಆಹಾರ ಪದ್ದತಿಯಲ್ಲಿ ಪರಂಪರೆಯ ಆಹಾರ ಪದ್ದತಿಯೇ ಬದಲಾಗಿ ಹೋಗಿದೆ. ಇಡ್ಲಿ ದೋಸೆ ಕಡುಬು ಶಾವಿಗೆ ಪತ್ರೋಡೆ ಎಂಬುದು ನಮ್ಮ ಬಾಲ್ಯದ ಮುಂಜಾನೆ ಉಪಾಹಾರದ ಸಾಮಾನ್ಯ ತಿಂಡಿಗಳಾಗಿತ್ತು. ಆದರೆ ಅದನ್ನೆಲ್ಲ ತಯಾರಿಸಬೇಕೆಂದರೆ ಮೊದಲ ದಿನ ಬೆಳಗ್ಗೆಯೇ ಯೋಜನೆಯನ್ನು ಸಿದ್ದಪಡಿಸಬೇಕು.
 ಈಗಿನ ವೇಗದ ಯುಗದಲ್ಲಿ ಅದಕ್ಕೆಲ್ಲ ಸಹನೆ ವ್ಯವಧಾನ ಇದ್ದರೂ ಸಮಯ ವೆಲ್ಲಿದೆ ಹೇಳಿ?  ರುಚಿಯಾಗುತ್ತದೆ ಎಂದು ತಿಳೀದರೂ ಮಾಡಲಾಗದ ಅಸಹಾಯಕತೆ ಒಂದೆಡೆಯಾದರೆ ಅದರ ಬಗ್ಗೆ ಸಂಪೂರ್ಣ ತಿಳುವಳಿಕೆಯೂ ಬೇಕಲ್ಲವೇ?  ಹಾಗಾಗಿ ಇಂದು ಏನಿದ್ದರೂ ಕ್ಷಿಪ್ರ ತಿಂಡಿ ತಿನಿಸುಗಳು ಜನಪ್ರಿಯವಾಗುವುದು ಮಾತ್ರವಲ್ಲ ಅನಿವಾರ್ಯವಾಗುತ್ತದೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಯೋಚನೆ ಇಲ್ಲದೆ ಆಭ್ಯಾಸ ಇಲ್ಲದೆ ಎಲ್ಲರು ಮಾಡಬಹುದಾದ ತಿಂಡಿ ಎಂದರೆ ಉಪ್ಪಿಟ್ಟು. ಅಡಿಗೆ ಕಲಿಕೆ ಆರಂಭವಾಗುವುದೇ ಈ ಉಪ್ಪಿಟ್ಟು ತಯಾರಿಕೆಯಿಂದ. ಮಾತ್ರವಲ್ಲ  ಪ್ರಪ್ರಥಮ ಮಾಡಿದ ಉಪ್ಪಿಟ್ಟಿಗೆ ಉಪ್ಪು ಹಾಕುವುದಕ್ಕೆ ಮರೆಯುವುದೂ ಅಷ್ಟೇ ಸಾಮಾನ್ಯ.  ಹಾಗಾಗಿ ಇಂದಿನ ಕಾಲಮಾನಕ್ಕೆ ಹೊಂದಿಕೊಳ್ಳುವ ಒಂದು ರುಚಿಕರ ತಿಂಡಿಯನ್ನು ಇಲ್ಲಿ ತೋರಿಸುವ ಪ್ರಯತ್ನವಿದು.


ಸಜ್ಜಿಗೆ ರೊಟ್ಟಿ, ಇದು ಹಲವರ ಮನೆಯಲ್ಲಿ ರುಚಿಕರವಾಗಿ ತಯಾರಿಸುತ್ತಿರಬಹುದು. ಆದರೂ ನಾನು ತಿಳಿದ ಮಟ್ಟಿಗೆ ಇನ್ನೂ ಬಹಳಷ್ಟು ಪ್ರದೇಶದಲ್ಲಿ ಇದರ ಪರಿಚಯವೇ ಇಲ್ಲ. ಇದು ನೌಕರಿಗೆ ಹೋಗುವ  ಯುವಕ ಯುವತಿಯರು ಮಾತ್ರವೇ ವಾಸಿಸುವ ಮನೆಗಗಳಲ್ಲಿ ಸಿದ್ದಪಡಿಸುವುದಕ್ಕೆ ಅತ್ಯಂತ ಸೂಕ್ತ. ಇದಕ್ಕೆ ಮಿಕ್ಸಿಯ ಅವಶ್ಯಕಗೆ ಇರುವುದಿಲ್ಲ. ಮಾಡಬೇಕಿದ್ದರೂ ಅಷ್ಟೆ ಕೇವಲ ಕೆಲವು ನಿಮಿಷಗಳು ಸಾಕು. ರುಚಿಕರ ರೊಟ್ಟಿಯ ತುಂಡು ನಮ್ಮ ಬಾಯಿಯಲ್ಲಿರುತ್ತದೆ.  ರವೆರೊಟ್ಟಿಗೆ ಬೇಕಾಗುವ ಸಾಮಾಗ್ರಿಗಳು. ರವೆ, ಬನ್ಸಿ ರವೆ ಯಾ ಖಂಡ್ವ ಸಜ್ಜಿಗೆ ಇದಕ್ಕೆ ಅತ್ಯುತ್ತಮ ಮತ್ತು ಗರಿ ಗರಿಯಾಗಿ ರುಚಿಯಾಗಿರುತ್ತದೆ. ಇದು ಇಲ್ಲವಾದರೆ ಚಿರೋಟಿ ಅಥವಾ ಇನ್ನಿತರ ರವೆಯಾದರೂ ಆಗಬಹುದು. ಇದು ಉಪ್ಪಿಟ್ಟಿನಂತೆ. ಉಪ್ಪಿಟ್ಟಿಗೆ ನಾವು ಏನೆಲ್ಲ ಹಾಕುತ್ತೇವೆಯೋ  ಒಗ್ಗರಣೆ ಹೊರತಾಗಿ ಅದನ್ನು ಇಲ್ಲಿ ಹಿಟ್ಟಾಗಿ ಉಪಯೋಗಿಸುವುದು. ಹಾಗಾಗಿ ....ಒಂದಷ್ಟು ರವೆ, ಅದಕ್ಕೆ ಸ್ವಲ್ಪ ಈರುಳ್ಳಿ,  ಹಸಿ ಮೆಣಸು,  ಶುಂಠಿ ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು  ಇದಿಷ್ಟು ಪ್ರಧಾನ ಮತ್ತು ತೀರ ಅಗತ್ಯ. ಮತ್ತೆ ಜತೆಯಲ್ಲಿ ತುರಿದ ಕ್ಯಾರೆಟ್, ಚಿಕ್ಕದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ಮತ್ತು ಟೊಮೆಟೊ ಸ್ವಲ್ಪ ಅರಶಿನ ಪುಡಿ ಎಲ್ಲವನ್ನು ಹಾಕಿ ತಣ್ಣಗಿನ ನೀರು ಹಾಕಿ ಕಲಸಿ ಇಟ್ಟುಕೊಳ್ಳಿ. ಸ್ವಲ್ಪ ಹೊತ್ತಿನಲ್ಲೇ ರವೆ ನೀರಿನೊಂದಿಗೆ ಹಿಗ್ಗಿಕೊಂಡು ಮಿಶ್ರವಾಗುತ್ತದೆ. ಇದನ್ನು ದೋಸೆ ಕಾವಲಿ ಬಿಸಿ ಮಾಡಿ ಬರಿ ಕೈಯಿಂದ ಕಾವಲಿ ಮೇಲೆ ಸಾರಿಸಬಹುದು. ಹೀಗೆ ಮಾಡುವುದಕ್ಕೆ ಸ್ವಲ್ಪ ಅಭ್ಯಾಸ ಬೇಕು.
ಅದಿಲ್ಲವಾದರೆ ಸೌಟಿನಿಂದ ದಪ್ಪ ದೋಸೆ ಎರೆದಂತೆ ಕಾವಲಿಯಲ್ಲಿ ಎರೆಯಬಹುದು.  ಸಣ್ಣ ಉರಿಯಲ್ಲಿ ಸ್ವಲ್ಪ ನಿಧಾನವಾಗಿ ಕಾಯಿಸಿ ತಟ್ಟೆಗೆ ಹಾಕಿದರೆ ಅತ್ಯಂತ ರುಚಿಕರವಾದ ಸಜ್ಜಿಗೆ ರೊಟ್ಟಿ ಎಂಬ ನಮ್ಮೂರಿನ ಜನಪ್ರಿಯ ಖಾದ್ಯ ನಿಮ್ಮ ತಟ್ಟೆಯಲ್ಲಿರುತ್ತದೆ.  ತಿಂದು ನೋಡಿ. 


Saturday, June 11, 2016

ಹಾಗಲ ಸೊಪ್ಪಿನ ಸೊಲಮೀರಿಯಾ ಬೆಂದಿ


            “ಕಂಚಲ ಇತ್ತಿಂಡ ಎಂಚಲ ಉಣೊಲಿ”   ಕಂಚಲ ಎಂದರೆ ಹಾಗಲ ಅದು ಇದ್ದರೆ ಹೇಗೂ ಊಟಮಾಡಬಹುದು್. ಇದು ತುಳು ಗಾದೆ ಮಾತು. ಅದರ ಒಂದು ರೂಪವೇ ಈ ಲೇಖನ.
ಮನೆಯ ಮೆಟ್ಟೆಲ ತನಕವೂ ರಸ್ತೆ ಹಾಸಿ ಮಲಗಿಕೊಂಡರೆ  ಮತ್ತೆ ಅಂಗಳಕ್ಕೆಲ್ಲಿದೆ ಜಾಗ? ಅಂಗಳ ವಿಲ್ಲದಾಗ ನಗರದಲ್ಲಿ ಮನೆಯ ತಾರಸಿಯೇ ಅಂಗಳವಾಗಿ ಬದಲಾಗಿಬಿಡುತ್ತದೆ. ಕಾಲ ಬುಡದಲ್ಲಿರಬೇಕಾದದ್ದು ತಲೆಯ ಮೇಲೆ. ಆದರೂ ನಗರವಲ್ಲವೇ? ಬದುಕು ಅನಿವಾರ್ಯವಾದಾಗ ಮತ್ತೆಕೆಲವು ಅನಿವಾರ್ಯವಾಗಿ ಪರಿಣಮಿಸುತ್ತದೆ.  ಹಾಗಾಗಿ ನಮ್ಮ ಮನೆಯ ತಾರಸಿ ಮೆಲೆ ಒಂದು ಪುಟ್ಟ ಕೈತೋಟವಿದೆ. ಅಲ್ಲಿ ಒಂದಿಷ್ಟು ಹಸಿರು ಕಂಗೊಳಿಸುವಾಗ ಮನಸ್ಸಿಗೆ ಒಂದಷ್ಟು ಆನಂದ. ಕೆಲವು ಹೂವಿನ ಗಿಡ ಬಳ್ಳಿಗಳಾದರೆ ಇನ್ನು ಕೆಲವು ತರಕಾರಿ ಗಿಡಬಳ್ಳಿಗಳು. ಹೂವಿನ ಬಳ್ಳಿ ಹೂ ಬಿಟ್ಟಾಗ ಮನೆಯ ತಲೆಯ ಮೇಲೆ ಹೂ ಅಲಂಖಾರ ಮಾಡಿದರೆ ಈ ಹಸಿರಬಳ್ಳಿಗಳು ತೋರಣವಾಗಿಬಿಡುತ್ತವೆ.
ಹೀಗೆ ಬೆಳೆದ ಸಸ್ಯಗಳ ನಡುವೆ ಒಂದು ಬಳ್ಳಿಯಿದೆ ಹಾಗಲಕಾಯಿ ಬಳ್ಳಿ. ಆಗಲೋ ಈಗಲೋ ಆಗುವ ಒಂದು ಮಿಡಿ ಹಾಗಲದ ಆಶೆಗಾಗಿ ಅಲ್ಲವಾದರೂ ಬಳ್ಳಿ ಬೆಳೆದು ನಿಂತಿದೆ. ಪ್ರತಿಯೋಬ್ಬನೂ ಒಂದಷ್ಟು ಹಸಿರನ್ನು ಬೆಳೆಸಬೇಕು. ಆ ಮೂಲಕ ತಾನು ಸೇವಿಸುವ ಆಮ್ಲಜನಕದ ಋಣವನ್ನು ಪ್ರಕೃತಿಗೆ ಸಲ್ಲಿಸಿದ ಹಾಗಾಗುತ್ತದೆ.  ಹಾಗೆ ಒಂದಷ್ಟು ಹಸಿರ ಕಾಣುವ ಆಶೆಯಾದರೆ ಹಾಗಲದ ಬಳ್ಳಿ ಬೆಳೆಯುವುದಕ್ಕೆ ಮತ್ತೊಂದು ಮುಖ್ಯ ಕಾರಣವಿದೆ.  ಅದುವೇ ಇಲ್ಲಿನ ವಿಶೇಷ.
ಸಾಮಾನ್ಯವಾಗಿ ಹಾಗಲಕಾಯಿಯನ್ನು ಅರೋಗ್ಯದ ದೃಷ್ಟಿಯಿಂದ ಬಹಳ ಜನ ಉಪಯೋಗಿಸುತ್ತಾರೆ. ಮಾತ್ರವಲ್ಲ ಇದರ ರುಚಿ ಸ್ವಾದಕ್ಕೊಸ್ಕರವೂ ಇದನ್ನು ಇಷ್ಟ ಪಡುವವರು ಬಹಳಷ್ಟು ಮಂದಿ. ಇದರ ಕಹಿಯಿಂದ ಬಹಳಷ್ಟು ಜನ ಇದನ್ನು ಇಷ್ಟ ಪಡದವರೂ ಇದ್ದಾರೆ. ಆದರೆ ಸೋಜಿಗವೆಂದರೆ ತರಕಾರಿಗಳಲ್ಲಿ ಅತ್ಯಂತ ಪೌಷ್ಟಿಕ ಮತ್ತು ಆರೋಗ್ಯದಾಯಕ ತರಕಾರಿ ಎಂದರೆ ಅದು ಹಾಗಲಕಾಯಿ.  ಪ್ರಕೃತಿಯೇ ಹಾಗೆ ತೀರ ಬೇಕಾದದ್ದನ್ನು ಬಹಳ ತ್ರಾಸದಾಯಕವಾಗಿ ಮಾಡಿ ಅದರ ಮಹತ್ವವನ್ನು ಹೆಚ್ಚಿಸುತ್ತದೆ. ಅದಕ್ಕೆ ಉದಾಹರಣೆ ಹಾಗಲಕಾಯಿ.  ಇಲ್ಲಿ ಈಗ ನಾನು ಹೇಳುವುದು ಹಾಗಲ ಕಾಯಿ ಉಪಯೋಗವಲ್ಲ. ಬದಲಾಗಿ ಹಾಗಲದ ಸೊಪ್ಪಿನ ಉಂದು ಸ್ವಾದಿಷ್ಟ ಅಡುಗೆಯನ್ನು.
ಹಾಗಲ ಕಾಯಿ ಸೊಪ್ಪಿನ ಬೆಂದಿ ಅಂದರೆ ಸಾಂಬಾರ್, ಅಥವಾ ಹುಳಿ ಹೀಗೆ ಏನಾದರೂ ಕರೆಯಿರಿ. ಆದರೆ ವಾಡಿಕೆಯಂತೆ ನಮ್ಮಲ್ಲಿ ಇದನ್ನು ಕರೆಯುವುದು ಸೋಲ ಮೀರಿ ಬೆಂದಿ.  ಸೋಲ ಅಂದರೆ ಕೆತ್ತೆ ಹುಳಿ, ಮೀರಿ ಎಂದರೆ ಮೆಣಸು. ಹುಳಿ ಮೆಣಸು ಏಕಪ್ರಕಾರವಾಗಿ ಉಪಯೋಗಿಸಿ ಮಾಡುವಂತಹ ಒಂದು ವಿಭವವಿದು. ಮಳೆಗಾಲ ಇದಕ್ಕೆ ಅತ್ಯಂತ ಸೂಕ್ತ.

ಇದಕ್ಕೆ ಬೇಕಾಗುವ ಸಾಮಾಗ್ರಿಗಳು, ಒಂದು ಬೊಗಸೆ ತುಂಬ ಹಾಗಲಕಾಯಿ ಸೊಪ್ಪುಇದು ಹೆಚ್ಚಾದರೂ ಪರವಾಗಿಲ್ಲ. ಒಂದು ವರೆ ಹಿಡಿಯಷ್ಟು ಮೆಣಸು, ಸ್ವಲ್ಪ ಕರಿಮೆಣಸು ಒಂದು ಮುಷ್ಠಿ ಕೆತ್ತೆ ಹುಳಿ, ಬೆಲ್ಲ , ಸ್ವಲ್ಪ ಬೆಲ್ಲ, ಅರಶಿನ ಎರಡು ಮುಷ್ಠಿ ತುರಿದ ತೆಂಗಿನಕಾಯಿ, ಬೆಳ್ಳುಳ್ಳಿ ಒಗ್ಗರಣೆಗೆ ಎಣ್ಣೆ ಸಾಸಿವೆ ಮತ್ತು ರುಚಿಗೆ ಒಂದಷ್ಟು ಉಪ್ಪು.
ಮೊದಲು ಹಾಗಲ ಕಾಯಿ ಸೊಪ್ಪುನ್ನು ಹೆಚ್ಚಿ ಒಂದು ಪಾತ್ರೆಗೆ ಹಾಕಿ ಅದಕ್ಕೆ ಮೇಲೆ ಹೇಳಿದ ಮೆಣಸು ಸ್ವಲ್ಪ ಕರಿಮೆಣಸು ಹುಳಿ ಅರಶಿನ ನುಣ್ಣಗೆ ಅರೆದು ಸೇರಿಸಿ ಬಿಸಿ ಮಾಡಬೇಕು. ಅದಕ್ಕೆ ಬೆಲ್ಲ ಉಪ್ಪು ಹಾಕಿ ಹದಿನೈದು ನಿಮಿಷ ಬೇಯಿಸಬೇಕು. ಸೊಪ್ಪು ಚೆನ್ನಾಗಿ ಉಪ್ಪು ಹುಳಿ ಖಾರವನ್ನು ಹೀರಿಕೊಳ್ಳುತ್ತದೆ. ಆನಂತರ ಅದಕ್ಕೆ ತೆಂಗಿನಕಾಯಿಯನ್ನು ನುಣ್ಣಗೆ ಅರೆದು ಸೇರಿಸಿ ಮತ್ತಷ್ಟು ಹೊತ್ತು ಚೆನ್ನಾಗಿ ಕುದಿಸಬೇಕು. ಆನಂತರ ಸಾಸಿವೆ ಒಗ್ಗರಣೆ ಹಾಕಿ ಅದಕ್ಕೆ ಬೆಳ್ಳುಳ್ಳಿಯನ್ನು( ಬೇಕಾದರೆ)  ಹಾಕಿ ಕರಿದು ಇಲ್ಲಿ ಸೇರಿಸಿದರೆ ರುಚಿಯಾದ ಸೋಲ ಮೀರಿ ಬೆಂದಿ ಸಿದ್ದ.



ಇದನ್ನು ಒಂದು ಸಲ ಮಾಡಿದರೆ ತಿಂಗಳುಗಳಷ್ಟು ಕಾಲ ಉಪಯೋಗಿಸಬಹುದು. ಪ್ರತೀ ದಿನವೂ ಇದನ್ನು ಬಿಸಿ ಮಾಡಿದಂತೆ ಇದರ ರುಚಿ ವೃದ್ದಿಸುತ್ತಾ ಹೋಗುವುದು. ಒಂದು ವಾರ ಕಳೆದ ನಂತರ ಇದು ಪದೇ ಪದೇ ಬಿಸಿಯಾಗುತ್ತಾ ಹಾಗಲ ಕಾಯಿ ಕಹಿ ಹೋಗಿರುತ್ತದೆ. ತಟ್ಟೆಯ ಬದಿಯಲ್ಲಿ ಒಂದಷ್ಟು  ಬಡಿಸಿಕೊಂಡು ಕೊಬ್ಬರಿ ಎಣ್ಣೆಯೊಂದಿಗೆ ನಂಜಿಕೊಳ್ಳುತ್ತಾ ಬಿಸಿ ಬಸಿ ಅನ್ನವನ್ನು ಊಟ ಮಾಡುತ್ತಿದ್ದರೆ ಸ್ವರ್ಗಕ್ಕೆ ಮೂರು ಗೇಣು ಸ್ವಾಮಿ.  ಕರಾಡ ಬ್ರಾಹ್ಮಣರ ವಿಶಿಷ್ಟ ಆಹಾರಗಳಲ್ಲಿ ಇದೂ ಒಂದು. ಬೆಳ್ಳುಳ್ಳಿ ಇಲ್ಲದೆಯೂ ಇದನ್ನು ಬಳಸಬಹುದು.

ನಮ್ಮ ಬಾಲ್ಯದಲ್ಲಿ ನಮ್ಮ ದೊಡ್ಡಮ್ಮ (ತಾಯಿಯ ಅಮ್ಮ) ಇದನ್ನು ಬಹಳ ರುಚಿಯಾಗಿ ಮಾಡಿ ಇಡುತ್ತಿದ್ದರು.  ಮನೆಯಲ್ಲಿ ಯಾವುದಾದರು ಬಾಣಂತನವಿದ್ದರೆ ಅದರ ಆರೈಕೆಯಲ್ಲಿ ಈ ಸೋಲ ಮೀರಿ ಬೆಂದಿ ಕೂಡ ಒಂದು ಪ್ರಧಾನ ಅಂಗ. ಬಾಣಂತಿಯರಿಗೆ ಇದನ್ನು ಆಹಾರದ ಜತೆ ತಪ್ಪದೆ ಕೊಡುತ್ತಿದ್ದರು. ಬಹಳ ಉಷ್ಣ ಆಹಾರವಾದುದರಿಂದ ಎಷ್ಟು ರುಚಿಯಾದರೂ ದಿನದಲ್ಲಿ ಸ್ವಲ್ಪವೇ ನಂಜಿಕೊಂಡು ಸೇವಿಸುವುದು ಹೆಚ್ಚು ಸೂಕ್ತ. ಈಗ ಮಳೆಗಾಲ ಆರಂಭವಾಗಿದೆ,  ನಿಮ್ಮ ಮನೆಯಲ್ಲಿ ಹಾಗಲ ಬಳ್ಳಿ ಇದ್ದರೆ ಒಂದು ಸಲ ಪ್ರಯೋಗ ಮಾಡಿ,