Saturday, September 29, 2018

ನಮ್ಮ ಬೋಳಂಗಳ


        
            ಪರಮಾತ್ಮನ ನಿಯಮಗಳಿಗೆ ಮನುಷ್ಯ ಬದ್ದನಾಗಿರುತ್ತಾನೋ ಹೇಳುವುದು ಕಷ್ಟ,   ಆದರೆ ಪರಮಾತ್ಮನನ್ನೇ ತನ್ನ ನಿಯಮಗಳಿಗೆ ಒಳಪಡುವಂತೆ ಮಾಡುವಲ್ಲಿ ಮನುಷ್ಯ ಪ್ರಯತ್ನ ನಿರಂತರವಾಗಿರುತ್ತದೆ.  ಒಂದು ಸೇರು ಅನ್ನ ಕೊಡುವಲ್ಲಿ ಒಂದು ಮುಷ್ಟಿ ಅಕ್ಕಿ ಕೊಟ್ಟು ಪರಮಾತ್ಮನನ್ನು ತೃಪ್ತಿ ಪಡಿಸಿ ತಾನು ತೃಪ್ತನಾಗುವಾಗ ಮನುಷ್ಯ ಯೋಚಿಸುವುದು ಎಲ್ಲದಕ್ಕಿಂತಲೂ ಭಕ್ತಿ ಮುಖ್ಯ. ಹಲವು ಸಲ ತನ್ನಲ್ಲಿಲ್ಲದ ವಸ್ತುವಿನ ಮೇಲೆ ಮನುಷ್ಯನಿಗೆ ಅಚಲ ವಿಶ್ವಾಸ.  ಹಾಗಾಗಿ ಭಕ್ತಿಭಾವ ಇಲ್ಲದವನೂ ಸಹ  ಭಕ್ತಿಯೇ ಮುಖ್ಯ ಎಂದುಕೊಂಡು ಒಂದು ಮುಷ್ಟಿ ಅಕ್ಕಿ ಇಟ್ಟು ಭಗವಂತ ನನ್ನಿಂದ ಇಷ್ಟೇ ಸಾಧ್ಯ ಎಂದು ಪರಮಾತ್ಮನನ್ನು ತನ್ನ ನಿಯಮಗಳಿಗೆ ಒಳಪಡಿಸುತ್ತಾನೆ. ದೇವರೇನು ಬಂದು ನಿಂತು ನ್ಯಾಯ ಕೇಳುವುದಿಲ್ಲ. ಆದರೆ ಮನುಷ್ಯ ತನ್ನ ಜೀವನಾನುಭವದಿಂದ ನ್ಯಾಯ ಅನ್ಯಾಯ  ತನ್ನ ತಿಳುವಳಿಕೆಯಲ್ಲಿ ಕಂಡುಕೊಳ್ಳುತ್ತಾನೆ.  ಭಕ್ತಿ ಎಂಬುದು ಆಳ ಅಗಲ ವಿಸ್ತಾರ ವರಿಯದ ಒಂದು ಭಾವ. ಅದರ ಪರೀಕ್ಷೆಯಿರುವು ಅಂತರಂಗದಲ್ಲಿರುವ ಪ್ರಾಮಾಣಿಕತೆಯಲ್ಲಿ
  ಬೋಳಂಗಳ ಭೂತಸ್ಥಾನ  ಚಿತ್ರ ಕೃಪೆ ಹರ್ಷರಾಜ್ 
ಮಾತ್ರ. ಹಾಗೆ ನೋಡಿದರೆ ಭಗವದ್ಗೀತೆಯಲ್ಲಿ ಪರಮಾತ್ಮ ಹೇಳುತ್ತಾನೆ. ಯಾವುದೇ ಭಾವವಿಲ್ಲದೆ ಉದ್ವೇಗ ದುಃಖ ಸಂತೋಷ ರಹಿತ ಮನಸ್ಸಿನಿಂದ ಆರಾಧಿಸಿದಲ್ಲಿ ಮಾತ್ರವೇ ಅಲ್ಲಿ ನನ್ನ ಅನುಗ್ರಹವಿರುತ್ತದೆ. ಭಕ್ತಿ ಭಾವ ಅತಿಯಾಗಿ ಉದ್ವೇಗದಿಂದ ಕಣ್ಣೀರು ಹಾಕಿ ಪರಮಾತ್ಮನಿಗೆ ನಮಸ್ಕರಿಸಿದರೂ ಅದು ಭಕ್ತಿಯೂ ಆಗುವುದಿಲ್ಲ. ನಿಜಾರ್ಥದ ಪರಮಾತ್ಮನ ಸಾಕ್ಷಾತ್ಕರವೂ ಸಾಧ್ಯವಾಗುವುದಿಲ್ಲ.

            ನಮ್ಮೂರು ಪೈವಳಿಕೆ ಗ್ರಾಮದಲ್ಲಿ ಚಿಕ್ಕ ಹಳ್ಳಿಯೊಂದಿದೆ. ಬೋಳಂಗಳ. ಹೆಸರೇ ಸೂಚಿಸುವಂತೆ ಇಲ್ಲಿ ಜನವಾಸವಿಲ್ಲ. ಬೋಳಾದ ದೊಡ್ಡ ಮೈದಾನದಂತಹ ಪ್ರದೇಶ ಅದರಂಚಿಗೆ ತಾಗಿಕೊಂಡಂತೆ ಒಂದು ಭೂತಸ್ಥಾನ. ತೀರ ನಿರ್ಜನ ಪ್ರದೇಶ. ಆಕಡೆ ಈಕಡೆ ಅಡ್ಡಾಡುವವರೂ ಸಹ ಸಿಗುವುದು ಕಡಿಮೆ. ಎಂದಾದರೊಮ್ಮೆ ಇಲ್ಲಿರುವ ಕಾಣಿಕೆ ಡಬ್ಬಿಗೆ ಹರಕೆ ಒಪ್ಪಿಸಲು ಕೆಲವರು ಬರುವುದುಂಟು.  ಅತ್ಯಂತ ಪುರಾತನ ಭೂತಸ್ಥಾನ. ಇದರ ಐತಿಹ್ಯ ಚರಿತ್ರೆಯ ಬಗ್ಗೆ ಅರಿವಿರದಿದ್ದರೂ ಬಾಲ್ಯದಿಂದಲೇ ನಮಗೆ ಭೂತ ಎಂದರೆ ಭಯ ಭಕ್ತಿಯನ್ನು ಹುಟ್ಟುಹಾಕಿಸಿದಂತಹ ಸ್ಥಳವಿದು.  ಉಪ್ಪಳ ಕನ್ಯಾನ ರಸ್ತೆಯಲ್ಲಿ ಕವಲೊಡೆಯುವ ಚಿಪ್ಪಾರು ರಸ್ತೆಯ ಒತ್ತಿನಲ್ಲೇ ಈ ಕ್ಶೇತ್ರ ಸಿಗುತ್ತದೆ.  ಬೋಳಂಗಳವಾದರೂ ಇದು ನಯನ ಮನೋಹರ ಜಾಗವೆಂಬುದರಲ್ಲಿ ಅನುಮಾನವಿಲ್ಲ. ಸಾಯಂಕಲ ಇಲ್ಲ ಮುಂಜಾನೆ ಹೊತ್ತು ಇಲ್ಲಿ ಹೋಗಿ ಪಕ್ಕದಲ್ಲೇ ಇರುವ ಗುಡ್ಡದ ತುದಿಯಲ್ಲಿ ನಿಂತು ದೂರದ ಪಡುವಣ ಕಡಲನ್ನು ಕಾಣುವಾಗ ನಿಜಕ್ಕೂ ಇಲ್ಲಿ ಪರಮಾತ್ಮನ  ಪ್ರಕೃತಿಯ ಅಸ್ತಿತ್ವ ಇದೆ ಅಂತ ಅನ್ನಿಸುತ್ತದೆ.  ಅದು ಭಾವಜೀವಿಗಳಿಗಾದರೆ ಜನ ಸಾಮಾನ್ಯರಿಗೆ ಇರುವ ವಿಶೇಷ ಒಂದಿದೆ.  ಇಲ್ಲಿ ವರ್ಷಕ್ಕೊಮ್ಮೆ ನೇಮ (ಉತ್ಸವ) ಬಿಟ್ಟರೆ ಬಹುತೇಕ ಇಲ್ಲಿ ಚಟುವಟಿಕೆಗಳೇ ಇರುವುದಿಲ್ಲ. ಆದರೂ ಈ ಕ್ಷೇತ್ರದ ಬಗ್ಗೆ ಊರ ಪರ ಊರಿನವರು ಇರಿಸಿಕೊಂಡ ವಿಶ್ವಾಸ ಮಾತ್ರ ಆಶ್ಚರ್ಯ ಹುಟ್ಟಿಸುತ್ತದೆ. ಜಾತಿ ಭೇದವಿಲ್ಲದೆ  ಈ ವಿಶ್ವಾಸ ಇಂದಿಗೂ ನೆಲೆ ನಿಂತಿದೆ. ಅದಕ್ಕೊಂದು ನಿದರ್ಶನವಿದೆ.

            ಬಾಲ್ಯದಲ್ಲಿರುವಾಗ ಭೂತ ಎಂದರೇನು ಎಂಬ ಪ್ರಶ್ನೆಗೆ ನಮಗೆ ಉತ್ತರವಾದದ್ದು ಈ ಬೋಳಂಗಳದ ದೈವ.  ಇದರ ಉತ್ಸವವೂ ಬಹಳ ವಿಚಿತ್ರ. ಇದು ವರ್ಷಕ್ಕೊಮ್ಮೆ ಸಾಮಾನ್ಯವಾಗಿ ಪೆಬ್ರವರಿ ತಿಂಗಳಲ್ಲಿ ಜರಗುತ್ತದೆ. ಊರ ಉತ್ಸವವಾದರೂ ಇದರ ಸರಳತೆ ಅತ್ಯಂತ ವಿಶಿಷ್ಟ. ಎಲ್ಲ ಭೂತ ನೇಮದಂತೆ ಇದಲ್ಲ. ಸಾಯಂಕಾಲ ನಾಲ್ಕುಘಂಟೆಯ ಸುಮಾರಿಗೆ ಆರಂಭವಾಗುವ ಉತ್ಸವ ಸೂರ್ಯಾಸ್ತವಾಗುತ್ತಿದ್ದಂತೆ ಮುಗಿದು ಹೋಗುತ್ತದೆ. ಕೆಲವೇ ಘಳಿಗೆಗಳಷ್ಟು ಹೊತ್ತು ನಡೆಯುವ ಈ ಊರ ಜಾತ್ರೆ ಅತ್ಯಂತ ವಿಶಿಷ್ಟವಾಗುವುದು ಇನ್ನೊಂದು ವಿಚಾರಕ್ಕೆಕ್. ಇದು ಅತ್ಯಂತ ರೋಚಕ ವಿಷಯ. ಬಹುಶಃ ಇದುವೇ  ಬೋಳಂಗಳದ ವಿಶೇಷ ಮತ್ತು ವಿಚಿತ್ರ .
           
            ಉತ್ಸವದ ದಿನ ಮಧ್ಯಾನದ ಸುಡು ಬಿಸಿಲು ಕಡಿಮೆಯಾಗುತ್ತಿದ್ದಂತೆ ಅಕ್ಕ ಪಕ್ಕದ ಊರವರು ಬೋಳಂಗಳದತ್ತ ಆಗಮಿಸುತ್ತಾರೆ. ಸರಿ ಸುಮಾರು ಐನೂರು ಜನ ಸೇರಬಹುದೇನೋ. ಇಲ್ಲಿರುವುದು ಸಣ್ಣದಾದ ಒಂದು ಅವರಣ ಅದರೊಳಗೊಂದು ಗುಡಿ. ಗುಡಿ ಬಹಳ ಹಳೆಯದಾಗಿದೆ. ಸ್ವಲ್ಪ ಶಿಥಿಲವೂ ಆಗಿದೆ.  ಸಾಯಂಕಾಲವಾಗುತ್ತಿದ್ದಂತೆ  ಸಂತೆ ಇಡುವವರು ಜಾತ್ರೆಗೆ ಸೇರುವ ಊರವರು ಬ್ಯಾಂಡು ವಾದ್ಯದ ಗದ್ದಲ ಇಷ್ಟರಲ್ಲೇ ಭೂತದ ನೇಮ ಮುಗಿದು ಹೋದರು ಜನರ ಭಕ್ತಿ ವಿಶ್ವಾಸ ಇದಕ್ಕಿಂತಲೂ ಮಿಕ್ಕಿ ಅಗಾಧವಾದೆ. ಶುರುವಾಗಿ ಕೇವಲ ಎರಡು ಮೂರು ಘಂಟೆಯಲ್ಲಿ ಮುಗಿಯುವ ಉತ್ಸವ ಇಷ್ಟಕ್ಕೆ ಇದರ ಮಹತ್ವ ಸೀಮಿತವಾಗುವುದಿಲ್ಲ. ಇಲ್ಲಿರುವ ಮತ್ತೊಂದು ವಿಚಿತ್ರವೆಂದರೆ ಈಗಿನ ಕಾಲದಲ್ಲೂ ಇದನ್ನು ನಂಬುವುದು ಕಷ್ಟ ಆದರೂ ಇದು ಅಸ್ತಿತ್ವದಲ್ಲಿದೆ.
           
            ಕೆಲವು ಘಳಿಗೆಯ ಉತ್ಸವಕ್ಕೆ ಹೆಂಗಸರು ಅಂದರೆ ಸ್ತ್ರೀಯರು ಹೋಗುವಂತಿಲ್ಲ. ಯಾರೂ ಸಹ ಹೋಗುವುದೂ ಇಲ್ಲ. ಈ ಭೂತದ ನೇಮೋತ್ಸವವನ್ನು ಹೆಂಗಸರು ಹೆಣ್ಣು ಮಕ್ಕಳು ನೋಡುವಂತಿಲ್ಲ. ಹಾಗಾಗಿ ಇಲ್ಲಿ ಕೇವಲ ಪುರುಷರು ಮಾತ್ರವೇ ಬರುತ್ತಾರೆ. ಇದು ಕೇವಲ ಹಿಂದುಗಳ ನಂಬಿಕೆಯಲ್ಲ ಮುಸ್ಲಿಮ್  ಕ್ರಿಶ್ಚನ್ ಎಲ್ಲರೂ ಭಯ ಭಕ್ತಿಯಿಂದ  ಈ ನಿಯಮವನ್ನು ಪಾಲಿಸುತ್ತಾ ಬಂದಿದ್ದಾರೆ. ಹಾಗಾಗಿಯೆ ಉತ್ಸವದ ದಿನ ಬೆಳಗ್ಗಿನಿಂದಲೆ ಇಲ್ಲೇ ಹಾದು ಹೋಗುವ ದಾರಿಯಲ್ಲೂ ಸಹ ಯಾವುದೇ ಸ್ತ್ರೀಯರು ಸಂಚರಿಸುವುದಿಲ್ಲ.  ಹೆಣ್ಣುಗಳು ಈ ಭೂತವನ್ನು ನೋಡಿದರೆ ಏನಾಗುತ್ತದೆ ಎಂದು ಪೆದಂಬು ಪ್ರಶ್ನೆಸುವವರಿಗೆ ಉತ್ತರ ಒಂದೇ ಕಲ್ಲಾಗಿ ಹೋಗುತ್ತಾರೆ. ಬಹಳ ಹಿಂದೆ ಒಬ್ಬಾಕೆ ಭೂತ ಕಟ್ಟುವವನ ಹೆಂಡತಿಯೇ ಕಲ್ಲಾಗಿ ಹೋದ ಕಥೆಯನ್ನು ಊರ ಹಿರಿಯರು ಹೇಳುತ್ತಾರೆ. ಹೆಣ್ಣುಗಳಿಂದ ದೂರವಿರುವ ಈ ದೈವ ವೆಂದರೆ ಬಾಲ್ಯದಿಂದಲೇ ನಮಗೆ ಭಯ ಭಕ್ತಿಯನ್ನು ಮೂಡಿಸಿದ್ದಂತೂ ಸತ್ಯ. ನಮಗೆಂದೇನು ಊರಲ್ಲಿ ಎಲ್ಲರಿಗೂ  ಈ ಭಯ ಭಕ್ತಿ ನಂಬಿಕೆ ಇಂದಿಗೂ ಅಚಲವಾಗಿ ಅಸ್ತಿತ್ವದಲ್ಲಿದೆ.   ಎಷ್ತೇ ಕುತೂಹಲವಿದ್ದರೂ ಇದನ್ನು ಪರೀಕ್ಷಿಸುವ ಸಾಹಸ ಯಾರೂ ಮಾಡಿಲ್ಲ.

            ಇದೀಗ ಶಬರಿಮಲೆಯ ಸ್ತ್ರೀ ಪ್ರವೇಶ ವಿಚಾರ ಬಹಳ ಚರ್ಚಿತ ವಿಷಯ. ಶಬರಿಮಲೆ ಕೇವಲ ಇಷ್ಟಕ್ಕೇ ಅಲ್ಲ ಇಂತಹ ಇನ್ನೂ ಹಲವು ವಿಚಾರಗಳಿಗು ಕಥೆಗಳಿಗೂ ಪ್ರಸಿದ್ದ. ಆದರು ನಂಬುಗೆ ವಿಶ್ವಾಸಗಳು ಅದು ಮನುಷ್ಯನ ಭಾವನೆಗೆ ಸೀಮಿತವಾಗಿರುತ್ತದೆ. ಅದಕ್ಕೆ ನಿದರ್ಶನ ಈ ಸ್ತ್ರೀ ಪ್ರವೇಶ.  ಯಾವುದು ಸರಿ ಯಾವುದು ತಪ್ಪು ಎಂದು ವಿಶ್ಲೇಷಿಸುವುದು ನಮ್ಮ ಜ್ಞಾನಕ್ಕೂ ನಂಬುಗೆಗೂ ಸೀಮಿತವಾಗಿರುತ್ತದೆ. ನ್ಯಾಯಾಲಯ ಇದೀಗ ಎಲ್ಲ ಸ್ತ್ರೀಯರೂ ಪ್ರವೇಶಿಸಬಹುದು ಎಂದು ತೀರ್ಪನ್ನು ಇತ್ತಿದೆ. ಸ್ತ್ರೀಯರಿಗೆ ಪ್ರವೇಶವಿಲ್ಲ ಎಂಬ ನಿಯಮವನ್ನಷ್ಟೇ ನ್ಯಾಯಾಲಯ ತೆಗೆದು ಹಾಕಿದೆ. ಹೊರತು ಯಾವುದೇ ಸ್ತ್ರೀಯನ್ನು ಶಬರಿಮಲೆಯ ಬಾಗಿಲಲ್ಲಿ ನಿಲ್ಲಿಸಿ ಒಳಗೆ ತಳ್ಳಲಿಲ್ಲ. ಇದು ಗಮನಾರ್ಹ. ಅಥವಾ ಸ್ತ್ರೀಗಳು ಹೋಗಲೇ ಬೇಕು ಎಂಬ ನಿಯಮವನ್ನು ಮಾಡಲಿಲ್ಲ .  ಅಥವಾ ಮಾಡುವಂತೆಯೂ ಇಲ್ಲ. ವಿಷಯ ವಿವಾದ ಉಂಟುಮಾಡಿ ರೋಚಕತೆಯನ್ನು ಸೃಷ್ಟಿಸುವಾಗ ಈ ವಿಚಾರಗಳು ಗಮನಾರ್ಹವಾಗುತ್ತದೆ.  ಶಬರಿಮಲೆಯಲ್ಲಿ ಸ್ತ್ರೀ ಯರು ಹೋಗಬಹುದು ಬಿಡಬಹುದು, ಹೋದರೆ ಏನು ಎಂದು ಪರೀಕ್ಷಿಸಲೂ ಬಹುದು. ಬ್ರಹ್ಮಚಾರಿಯಾಗಿಯೇ ಇರುತ್ತೇನೆ ಎಂದ ಅಯ್ಯಪ್ಪನಿಗೆ ಸವಾಲನ್ನೂ ಎಸೆಯಬಹುದು. ಆದರೆ ಪ್ರಕೃತಿಯೇ ವಿಧಿಸುವ ನಿಯಮಗಳನ್ನು ಮನುಷ್ಯ ಅರ್ಥವಿಸಿಕೊಳ್ಳುವುದಿಲ್ಲ. ಅರ್ಥವಿಸಿಕೊಂಡರೂ ಅದು ತನಗೆ ಬೇಕಾದಂತೆ ರೂಪಿಸಿಕೊಳ್ಳುತ್ತಾನೆ.  ಅಂತಾರಾಷ್ತ್ರೀಯವಾಗಿ ಸುದ್ದಿ ಮಾಡಿ ವಿವಾದ ಸೃಷ್ಟಿಸಿದ  ಈ ಎಲ್ಲ  ವಿಚಾರಗಳ ಮಧ್ಯೆಯೂ ನಮ್ಮ ಬೋಳಂಗಳ ನನಗೆ ವಿಚಿತ್ರವಾಗಿ ಕಾಣುತ್ತದೆ.   ಶಬರಿ ಮಲೆ ಪ್ರವೇಶಕ್ಕೆ ಹಾತೊರೆದ ಮಹಿಳಾ ಮಣಿಗಳು ನಮ್ಮ ಬೋಳಂಗಳದ ದೈವಕ್ಕೂ ಪ್ರಶ್ನೆಯಾಗುತ್ತಾರೋ ಗೊತ್ತಿಲ್ಲ. ಆದರೆ ನಮ್ಮ ನಂಬಿಕೆ ವಿಶ್ವಾಸಗಳ ಆವರಣದಲ್ಲೇ ಬದುಕುವ ಮನುಷ್ಯ ಇದರ ಬಗ್ಗೆ ಗಂಭೀವಾಗಿ  ಯೋಚಿಸುವ ಅಗತ್ಯವಿಲ್ಲ. ದೈವೇಚ್ಚೇ ಹೇಗೋ ಯಾರಿಗೆ ಗೊತ್ತು?  ಭೂತ ನೋಡಿ ದೇಹದಿಂದ ಕಲ್ಲಾಗುತ್ತಾರೋ ಗೊತ್ತಿಲ್ಲ. ಆದರೆ ಮನಸ್ಸಿನಿಂದ ಕಲ್ಲಾಗಿ ಮನಸ್ಸೇ ಕಲ್ಲಾಗಿ ಬಿಡುತ್ತಾರೆ.  ಯಾಕೆಂದರೆ ನಂಬಿಕೆಗಳು ನಂಬಿಕೆಗಳಾಗಿ ಮನುಷ್ಯನ ಜೀವನ ದಾರಿಯನ್ನು ನಿರ್ಣಯಿಸುತ್ತವೆ. ಅದನ್ನು ಬದಲಿಸುವುದೆಂದರೆ ಅದು ಕಲ್ಲು ಮನಸ್ಸಿನಿಂದ ಮಾತ್ರ ಸಾಧ್ಯ.  ಯಾಕೆಂದರೆ ಬೋಳಂಗಳದಲ್ಲಿ ಅಂಗಳ ಮಾತ್ರ ಬೋಳಾಗಿರಬಹುದು. ಭಾವನೆಗಳಲ್ಲ ಅದು ಯಥೇಚ್ಛವಾಗಿದೆ.
           

Monday, September 3, 2018

ಸ್ಮರಣೆಯ ದಿವ್ಯಾನುಭವಗಳು




ಹೀಗೆ ಹಲವು ವರ್ಷಗಳ ಹಿಂದೆ ತುಸು ಸಮೀಪದ ಅದೇ ಊರಿನ  ಮನೆಯ ಮಗುವೊಬ್ಬಳು  ನಮ್ಮ ಮನೆಗೆ ಬಂದು ತುಂಡು ಕಾಗದ ಒಂದನ್ನು ಕೊಟ್ಟು ಹೋದಳು. ಕಾಗದದಲ್ಲಿ ಭಟ್ಟರೊಬ್ಬರು  ಸಂಕ್ಷೇಪವಾಗಿ ಹೇಳಿದ್ದರು. ನನ್ನನ್ನು ಕಾಣುವುದಕ್ಕಾಗಿ ಇಬ್ಬರು ಮಹನೀಯರು ಮನೆ ಹುಡುಕಿಕೊಂಡು ನಮ್ಮ ಮನೆಗೆ ಬಂದಿದ್ದಾರೆ. ಅವರನ್ನು ಬಂದು ಕರೆದುಕೊಂಡು ಹೋಗಬಹುದು. ಆ ಮಗುವಿನ ಮನೆಯವರು ಆ ಭಟ್ಟರ ಮನೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಹಾಗೆ ಅವರ ಕೈಯಲ್ಲೇ ಕೊಟ್ಟು ಕಳುಹಿಸಿದ್ದರು. ಸರಿ ನನ್ನ ತಾಯಿ ಹೋಗಿ ಆ ಇಬ್ಬರು ವ್ಯಕ್ತಿಗಳನ್ನು ಕರೆದುಕೊಂಡು ಬಂದರು. ಅದು ನನ್ನ ಮತ್ತು ಆ ವ್ಯಕ್ತಿಗಳ ಪ್ರಥಮ ಭೇಟಿ. ಕೆಲವು ಘಟನೆಗಳು ಬದುಕಿನ ಕಥೆಗಳನ್ನೇ ಬರೆಯುತ್ತವೆ. ಅದು ಆದೇ ರೀತಿಯದಾಗಿತ್ತು. ಬಂದವರು ಹೆಣ್ಣು ಹೆತ್ತ ತಂದೆಯಾದರೆ ಇನ್ನೊಬ್ಬರು ಅವರ ಭಾವ.
ಯಾವುದೋ ಒಂದು ಸಣ್ಣ ಪತ್ರಿಕೆಯಲ್ಲಿ ಸಣ್ಣ ವಿವಾಹವೇದಿಕೆ ಎಂಬ ಸಣ್ಣ ಅಂಕಣವೊಂದಿತ್ತು.  ಸರಳವಾಗಿ ವರದಕ್ಷಿಣೆ ರಹಿತವಾಗಿ ಮದುವೆಯಾಗುವ ಗಂಡು ಹೆಣ್ಣಿಗೆ ಆ ಅಂಕಣ ಮಾಧ್ಯಮವಾಗಿತ್ತು. ಯೌವನದ ಹುರುಪಿನಲ್ಲೋ ಹುಡುಗು ಬುದ್ದಿಯಲ್ಲೋ ಆ ಪತ್ರಿಕೆ ನಾನು ಒಂದಷ್ಟು ಗೀಚಿ ಬರೆದಿದ್ದೆ. ಅದು ಗಂಭೀರತೆಯನ್ನು ಪಡೆದು ನನ್ನನ್ನು ಬೇಟಿಯಾಗುವುದಕ್ಕೆ ಇವರಿಬ್ಬರು ಬಂದಿದ್ದರು. ಇಬ್ಬರೂ ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿಗಳು. ದೂರದ ಮಲೆನಾಡು ಪ್ರದೇಶದಿಂದ ಬಂದಿದ್ದರು ಭಾಷೆ ಸಂಸ್ಕೃತಿ ಅದಿನ ಒಂದಷ್ಟು ನಮಗೆಲ್ಲ ವಿಶೇಷವಾಗಿತ್ತು. ಕಾಣುವುದಕ್ಕೆ ಸಾಕಷ್ಟು ಅನುಕೂಲವಂತರು.  ನಮ್ಮದು ಹುಲ್ಲು ಹಾಸಿನ ಗುಡಿಸಲು ಮನೆ. ಜತೆಯಲ್ಲೇ ಮನೆಯಲ್ಲೇ ಒಂದು ಸಣ್ಣ ವ್ಯಾಪಾರ. ಹಾಗೇ ನನ್ನ ಬಗ್ಗೆ ತಿಳಿದುಕೊಂಡರು, ಮಾತುಕತೆಯಾಡಿ  ನನ್ನನ್ನು ಅವರ ಮನೆಗೆ ಬರುವಂತೆ ಆಮಂತ್ರಿಸಿದರು. ನನಗೆ ನಿರೀಕ್ಷೆಗಳಿರಲಿಲ್ಲ. ಆದರೆ ಆಶೆಗಳಿದ್ದುವು. ಹೇಳಿದಂತೆ ಹೋದೆ. ಭೇಟಿ ಕೊಟ್ಟೆ. ಅದು ನನ್ನ ಬದುಕಿನ ಪ್ರಮುಖ ಬೇಟಿಯಾಗಿ ನಂತರ ಬದಲಾಗಿ ಹೋದದ್ದು ಬದುಕಿನ ಇತಿಹಾಸ. ಇಂದು ಅದೇ ಮನೆಯ ಹೆಣ್ಣು ನನ್ನೊಂದಿಗೆ ಬದುಕು ನಡೆಸುತ್ತಿದ್ದಾಳೆ.  ಇಂದಿಗೂ ಆ ಪ್ರಥಮ ಭೇಟಿ ಅಚ್ಚಳಿಯದೇ ಉಳಿದಿದೆ. ಅಂದು ಅದೇ ಶುಭ್ರ ಪಂಚೆ ಅಂಗಿಯಲ್ಲಿ ಬಂದ ನನ್ನ ಭಾವೀ ಮಾವ ಒಂದು ಸರಳ ಸಜ್ಜನಿಕೆಯ ವ್ಯಕ್ತಿ.
ಅರ್ಹತೆ ಮತ್ತು ಯೋಗ್ಯತೆ ಇವೆರಡೂ ವಿಭಿನ್ನ ಗುಣಗಳು. ಯೋಗ್ಯತೆ ಸ್ವಂತ ಗುಣದಿಂದ ಒದಗಿಬಂದರೆ ಅರ್ಹತೆ ಹಿರಿಯರಿಂದ ಬರುತ್ತದೆ. ಇದು ತಾತ್ವಿಕವಾದ ಸಿದ್ದಾಂತ. ಆದರೆ ಇವೆರಡೂ ಹೊಂದಿರದ ವ್ಯಕ್ತಿತ್ವ ಏನಾದರೂ ಪಡೆಯುವುದಕ್ಕೆ ಸಾಧ್ಯವೇ?   ಆದರೆ ಬದುಕಿನ ಘಟನೆಗಳು ಇವುಗಳನ್ನು ಸಾಧ್ಯವಾಗಿಸುತ್ತವೆ. ಬದುಕನ್ನು ಅವಲೋಕಿಸುವಾಗ ಈ ಸತ್ಯ ಗೋಚರವಾಗುತ್ತದೆ.
ಹೆಣ್ಣು ಹೆತ್ತ ತಂದೆ ಅಂದರೆ ಕನ್ಯಾಪಿತೃ  ತನ್ನ ಮಗಳನ್ನು ಒಬ್ಬಾತನಿಗೆ ಕೊಡುವಾಗ ಇದೇ ಪ್ರಶ್ನೆ ಎದುರಾಗುತ್ತದೆ. ಹುಡುಗನಿಗೇನಿದೆ? ಸಹಜವಾಗಿ ತನ್ನ ಮಗಳ ಬದುಕಿನ ಸಾರ್ಥಕತೆಯನ್ನು ಯಾವೊಬ್ಬ ಹೆಣ್ಣು ಹೆತ್ತ ತಂದೆ ಬಯಸದೇ ಇರುವುದಿಲ್ಲ. ತನ್ನ ಮಗುವಿನ ಭವಿಷ್ಯಕ್ಕಾಗಿ ಕೂಡಿಟ್ಟ ಒಂದಷ್ಟು ಸಂಪತ್ತನ್ನೂ ತನ್ನ ಬದುಕನ್ನೂ ಇದಕ್ಕೆ ವಿನಿಯೋಗಿಸುವ ಹೆಣ್ಣು ಹೆತ್ತ ಮನುಷ್ಯ,  ಹೆಣ್ಣು ಮಗುವಿನ ಬದುಕಿನ ಮೇಲೆ ಅತಿಯಾದ ಆಕಾಂಕ್ಷೆಯನ್ನು ನಿರೀಕ್ಷೆಯನ್ನೂ ಹೊತ್ತಿರುತ್ತಾನೆ. ಹಾಗಾಗಿ ಹೆಣ್ಣು ಪಡೆದ ಗಂಡಿನ ಅರ್ಹತೆ ಯೋಗ್ಯತೆ ಎರಡೂ ಪ್ರಧಾನ ಅಂಶಗಳಾಗುತ್ತವೆ.
ಬಹಳ ಹಿಂದಿನ ದಿನಗಳವು. ದೇಹದಲ್ಲಿ ತೋಳ್ಬಲ ಮನಸ್ಸಿನಲ್ಲಿ ಇಚ್ಛಾಶಕ್ತಿ ಅಲ್ಲದೇ ಬೇರೆ ಭಂಡವಾಳವೇ ಇಲ್ಲ. ಕೈ ಇಕ್ಕುವ ಅಂಗಿಯ ಜೇಬು ಮೇಲಿನಿಂದ ತೆರೆದುಕೊಂಡಂತೆ ಕೆಳಗಿನಿಂದಲೂ ತೆರೆದುಕೊಂಡಿರುತ್ತದೆ.    ಕೈ ಬೆರಳು ಜೇಬಿನಲ್ಲಿ ತಡಕಾಡಿದರೆ ಶೂನ್ಯವೇ ಅನುಭವ. ಅಂತಹ ದಿನಗಳಲ್ಲಿ ಇರುವ ವ್ಯಕ್ತಿತ್ವಕ್ಕೆ ಅರ್ಹತೆಯೂ ಇಲ್ಲ ಯೋಗ್ಯತೆಯೂ ಇಲ್ಲ. ಅಂತಹಾ ದಿನಗಳಲ್ಲಿ ನನ್ನ ಮಡದಿ ನನ್ನ ಕೈ ಹಿಡಿದು ಬದುಕಿನ ಹೆಜ್ಜೆಗೆ ಜತೆಯಾದವಳು. ನನ್ನ ಹೆಜ್ಜೆ ಗುರುತು ಬಿದ್ದೆಡೆಯಲ್ಲಿ ತನ್ನ ಪಾದವನ್ನು ಒತ್ತುವಾಗ ಆಕೆಯಲ್ಲಿದ್ದ ಆತ್ಮವಿಶ್ವಾಸ ಗಂಡನಾದ ನನಗೆ ಅತೀವ ಆತ್ಮ ಸ್ಥೈರ್ಯವನ್ನು ಒದಗಿಸಿತ್ತು. ಆಕೆಯಲ್ಲಿದ್ದ ಆತ್ಮ ವಿಶ್ವಾಸ ಹುಟ್ಟಿಕೊಂಡದ್ದೇ ಹಾಗೆ. ಅದು ಹೆತ್ತ ತಂದೆಯ ಮೇಲಿನ ವಿಶ್ವಾಸ. ಇವೆರಡೂ ಸೇರಿದಾಗ ಗಂಡನಾದವನ ಜವಾಬ್ದಾರಿ ಬಹಳಷ್ಟು ಗುರುತರವಾಗುತ್ತದೆ. ಈ ಅರಿವು ಸದಾ ನನ್ನನ್ನು ಜಾಗ್ರತನನ್ನಾಗಿಸಿತ್ತು.
ಅರ್ಹತೆ ಯೋಗ್ಯತೆ ಎರಡೂ ಇಲ್ಲದ ನನಗೆ ಎಲ್ಲವೂ ನಿನ್ನಲ್ಲಿದೆ ಎಂದು ಅಳಿಯದೇವರಂತೆ ನೋಡಿ,  ದೈವತ್ವವನ್ನು ನನ್ನಲ್ಲಿ ಕಂಡುಕೊಂಡ ನನ್ನ ಮಾವನ ವ್ಯಕ್ತಿತ್ವ ನಿಜಕ್ಕೂ ದೈವೀ ಸಂಭೂತ. ಏನೂ ಇಲ್ಲದ ನನ್ನ ಶೂನ್ಯ ಕೈಗಳಲ್ಲಿ ಹೆಣ್ಣಿನ ಕೈ ಇಟ್ಟು ಮಗಳನ್ನು ಧಾರಾದತ್ತವಾಗಿ ನೀಡಿದಾಗ ಜವಾಬ್ದಾರಿಯ ಭಾರಕ್ಕೆ ಕೈ ಕಂಪಿಸಿದರೂ ಮಾವನ ಆತ್ಮ ವಿಶ್ವಾಸದ ಆಶೀರ್ವಾದ ಮುಂದಿನ ಬದುಕಿನಲ್ಲಿ ಭದ್ರವಾದ ಹೆಜ್ಜೆಯನ್ನು ಊರುವುದಕ್ಕೆ ಸಹಕರಿಸಿತು. ಬಾಸಿಂಗ ಕಟ್ಟಿ ಹೆಣ್ಣಿನ ಹಾರಕ್ಕೆ ಕೊರಳೊಡ್ಡಿದಾಗ ಹಾರದ ಭಾರಕ್ಕೆ ತಲೆ ಬಾಗಲಿಲ್ಲ. ಬದಲಿಗೆ  ಮಾವನ ಹೃದಯವಂತಿಕೆಗೆ  ಶಿರ ಬಾಗಿತ್ತು. ತೋಳು ವಿಶಾಲವಾಗಿ ಹೆಣ್ಣನ್ನು ಬರಸೆಳೆದಿತ್ತು.  ಅಂದಿನಿಂದ ಇಂದಿನವರೆಗೂ ಆ ಪ್ರೀತಿ ಆ ವಿಶ್ವಾಸ ಅ ಮಧುರ ಅನುಭವವನ್ನು ಎಲ್ಲವನ್ನೂ ಉಂಡು ಗ್ರಹಸ್ಥನಾಗಿ ತುಂಬು ಸಂಸಾರಿಯಾಗಿ ಬಾಳುವೆ ನಡೆಸಿದ್ದೇನೆ. ಇದು ಆತ್ಮ ವಿಶ್ವಾಸದ ಹೆಗ್ಗಳಿಕೆಯ ಮಾತು.
ಹೆಣ್ಣು ಮಗಳೆಂದರೆ ಆಕೆ ತಾಯಿಗಿಂತಲೂ ತಂದೆಗೆ ಹೆಚ್ಚು ಹತ್ತಿರವಾಗುತ್ತಾಳೆ.  ಅದು  ಏಕ ಮಾತ್ರ ಹೆಣ್ಣು ಮಗಳೆಂದರೆ ಆ ಬಂಧನ ಇನ್ನೂ ಪಕ್ವವಾಗಿರುತ್ತದೆ. ಇದು ಅತಿಶಯವಲ್ಲ.   ಹೆಣ್ಣುಮಗಳ ಮತ್ತು ಹೆತ್ತ ತಂದೆಯ ಅನುಬಂಧ ಹೆಣ್ಣಿಗೂ ಹೆತ್ತ ತಂದೆಗೆ ಮಾತ್ರ ಅದರ ಆಳದ ಅರಿವಿರುತ್ತದೆ. ಇದೆಲ್ಲವನ್ನೂ  ಮೀರಿಸಿ ಹೆಣ್ಣು ಗಂಡಿನ ಜತೆಯಾಗುತ್ತಾಳೆ ಎಂದಾದರೆ ತಂದೆಯ ಅದೇ ಸುರಕ್ಷೆಯನ್ನು ಪ್ರೀತಿಯನ್ನೂ ಹೆಣ್ಣು ಬಯಸುತ್ತಾಳೆ.   ತಂದೆ ಈ ವಿಶ್ವಾಸವನ್ನು ಮಗಳಲ್ಲಿ ಮೂಡಿಸಿ ನೋಡು ಇದು ನನ್ನ ಅಳಿಯ, ನಿನ್ನ ಬದುಕಿನ್ನು ಅಲ್ಲಿದೆ,   ಎಂದು ತೊರಿಸಿಕೊಡುತ್ತಾನೆ. ಈ ಎರಡು ಕರ್ತವ್ಯವನ್ನು ಅತ್ಯಂತ ಜತನದಿಂದ ನನ್ನ ಮಾವ ಮಾಡಿ ಕೃತಾರ್ಥತೆಯನ್ನೂ ಉದಾರತೆಯನ್ನೂ ತೋರಿದವರು.
ನಾವು ತೋಳ್ಬಲದಿಂದ ಬುದ್ದಿ ಮತ್ತೆಯಿಂದ ಅದೆಷ್ಟನ್ನೋ ಆರ್ಜಿಸಿ ಶ್ರೀಮಂತರಾಗಬಹುದು. ಆದರೆ ಒಳ್ಳೆಯ ವ್ಯಕ್ತಿ ಸಂಬಂಧ ಪಡೆಯುವುದಕ್ಕೆ ಅದೃಷ್ಟವಿರಬೇಕು. ಆ ಅದೃಷ್ಟ ನನ್ನ ಜತೆಗಿತ್ತು. ಸುಮಾರು ಇಪ್ಪತ್ತೆಂಟು ವರ್ಷದ ಸುದೀರ್ಘ ಒಡೆನಾಟದಲ್ಲಿ  ಅ ಮನೆಯ ಅಂಗವಾಗಿ ಬೆಳೆದೆ.  ನನ್ನ ಮಾವನ ಮನೆಗೆ ನಾನೊಬ್ಬನೇ ಒಬ್ಬ ಅಳಿಯ.  ಆ ಸಂಬಂಧ ಮಾಧುರ್ಯ ಅಳಿಯದಂತೆ ಮಾಸದಂತೆ ಉಳಿದುಕೊಂಡಿದೆ ಎಂದರೆ ಇದರಲ್ಲಿ ಮಾವನ ಮನೆಯವರ ಹೃದಯವಂತಿಕೆ ಅತಿ ಹೆಚ್ಚು.
ಅದೆಷ್ಟೋ  ಹೆಣ್ಣು ಹೆತ್ತ ಮನೆಯವರನ್ನು ಕಂಡಿದ್ದೇನೆ. ಹಲವು ಕಡೆ ವ್ಯಾವಹಾರಿಕ ಪ್ರಪಂಚದ ಕಟು ಸತ್ಯದಂತೆ ಸಂಬಂಧಗಳು ಕೇವಲ ಸಂಬಂಧವಾಗಿ ವಿಡಂಬನೆಯ ದ್ವೇಷದ ಅಸೂಯೆಯ ಕಥೆಗಳನ್ನು ಕಂಡಿದ್ದೇನೆ. ಆದರೆ ಇದಾವುದರ ಕಿಂಚಿತ್ ಅನುಭವವೂ ಸೋಕದಂತೆ ಮನೆಯಲ್ಲಿ ನಾನು ಒಬ್ಬನಾಗಿ ಅದೇ ಪ್ರೀತಿ ವಿಶ್ವಾಸ ಉಳಿಸಿಕೊಂಡು ಮನೆಯ ಅಂಗವಾಗಿ ಬದುಕಿರುವುದರಲ್ಲಿ ನನ್ನ ಮಾವನ ವ್ಯಕ್ತಿತ್ವ ಗಾಢವಾದ ಪರಿಣಾಮವನ್ನು ಬೀರಿದೆ.  ನೆನಸಿಕೊಂಡರೆ ಬಿಚ್ಚಿಕೊಳ್ಳುವ ಹಲವು ಘಟನೆಗಳು ಹೃದಯವನ್ನು ಭಾರವಾಗಿಸಿ ಕಣ್ಣನ್ನು ತೇವವಾಗಿಸುತ್ತದೆ. ನಾನೇನು ಮಾಡಿದರೂ ಇದು ನನ್ನ ಮಗಳ ಗಂಡ ಎಂದು ಎದೆಗವಚಿಕೊಳ್ಳುವ  ನಿಸ್ವಾರ್ಥ ಮನಸ್ಸು. ಈ  ಸ್ವಾರ್ಥವಿಲ್ಲದ ಪ್ರೀತಿ ವಿಶ್ವಾಸ ತೋಳ್ಪಲದಿಂದ ಗಳಿಸಲಾಗದೇ ಇದ್ದುದನ್ನು ತೋರಿಸಿಕೊಟ್ಟಿದೆ.  ಒಳ್ಳೆಯ ಗಂಡನ ಮನೆ ತಮ್ಮ ಮನೆಯ ಹೆಣ್ಣು ಮಗಳಿಗೆ ಸಿಗಬೇಕು. ಇದು ಎಲ್ಲ ಹೆಣ್ಣು ಹೆತ್ತವರ ಸಹಜ ಆಶಯ. ಅದು ಒದಗಿ ಬರುವುದು ಅದೃಷ್ಟದಿಂದ. ಅಂತೆಯೇ ಒಳ್ಳೆಯ ಮಾವನ ಮನೆ ಎಂಬುದು ಗಂಡಿನ ಅತ್ಯಂತ ದೊಡ್ಡ ಭಾಗ್ಯ. ಅದನ್ನು ಪಡೆದ ಮಹಾ ಅದೃಷ್ಟ ನನ್ನ ಜತೆಗಿದೆ.
ಏನೂ ಇಲ್ಲದ ನನ್ನಲ್ಲಿ ಎಲ್ಲವನ್ನೂ ಕಂಡು ಎಲ್ಲವನ್ನೂ ತುಂಬಿಕೊಂಡು ಆಶೀರ್ವದಿಸಿದ ಮಾವ ಇನ್ನು ಕೇವಲ ನೆನಪಾಗಿ ಹೋಗಿದ್ದಾರೆ. ನೆನಪಿನ ಪುಟಗಳನ್ನು ಬರೆಯುವುದಕ್ಕೆ ಕೈಗಳು ಓಡುತ್ತಿಲ್ಲ. ಮನಸ್ಸಿನ ಕಲ್ಪನೆಗಳು ನಾಗಾಲೋಟದಿಂದ ಘಟನೆಗಳನ್ನು ಸ್ಮರಿಸುತ್ತವೆ. ಮೊನ್ನೆ ಅಂದರೆ ದಿನಾಂಕ ೨೬.೦೮.೨೦೧೮ ರಂದು ತನ್ನ ಕೊನೆಯ ಉಸಿರನ್ನು ಚೆಲ್ಲಿ ನಮ್ಮನ್ನೆಲ್ಲ ಅಗಲಿದ್ದ ಸತ್ಯವನ್ನು ಮನಸ್ಸು ನಂಬುತ್ತಿಲ್ಲ. ಅಂತಹ ಮಧುರ ನೆನಪುಗಳು ಮಾವ ಉಳಿಸಿ ಹೋಗಿದ್ದಾರೆ. ಜೀವನ ಪರ್ಯಂತ ಯಾರನ್ನೂ ದ್ವೇಷಿಸದ ಎಲ್ಲರಲ್ಲೂ ಒಂದಾಗಿ ಬೆರೆಯುವ ಚಟುವಟಿಕೆಯ ಉತ್ಸಾಹಿ ಮಾವ ಇನ್ನಿಲ್ಲವೆಂದರೆ ನಂಬುವುದಾದರೂ ಹೇಗೆ.?
ಹುಟ್ಟು ಹಲವು ಪ್ರಶ್ನೆಗಳನ್ನು ಹುಟ್ಟಿಸಿದರೆ ಸಾವು ಎಲ್ಲ ಪ್ರಶ್ನೆಗಳಿಗೂ ಉತ್ತರವಂತೆ. ವೇದಾಂತಿಗಳ ಮಾತು. ಉತ್ತರವಿಲ್ಲದ ಪ್ರಶ್ನೆಗಳು ಮಾವನಲ್ಲಿ ಇರಲಿಲ್ಲ.  ಮಾವನ ಪ್ರೀತಿ ಪ್ರಶ್ನೆಗಳಿಲ್ಲದ ಉತ್ತರಗಳಾಗಿದ್ದವು.  ಅದರ ಮಾರ್ದವತೆ ಇನ್ನು ನೆನಪು ಮಾತ್ರ. ಮನೆಯ ಮೂಲೆ ಮೂಲೆಯಲ್ಲೂ ತಡಕಾಡಿದಷ್ಟೂ ನೆನಪುಗಳನ್ನು ಮಾವ ತುಂಬಿಸಿಬಿಟ್ಟಿದ್ದಾರೆ. ಇನ್ನು ಮೂಲೆ ಮೂಲೆ ತಡಕಾಡಿ ಒಂದೊಂದನ್ನೇ  ತೆಗೆದು ಸ್ಮರಿಸಿಕೊಳ್ಳುವುದಷ್ಟೇ ಉಳಿದು ಹೋಗಿದೆ.
ಸುರಿಯುವ  ಒಂದು ತೊಟ್ಟು ಕಂಬನಿ ಸಾವಿರದ ಕಥೆಯನ್ನು ಹೇಳಿದರೆ ಮಾವನ ಬದು ಸಾವಿರದ ನೆನಪನ್ನು ಸಾರುತ್ತದೆ.  ಮಾವನ ಆತ್ಮಕ್ಕೆ ಶಾಂತಿಯನ್ನು ಕೋರುವುದರಲ್ಲಿ ಒಂದು ಕೃತಾರ್ಥತೆ. ಒಂದು ಬದ್ದತೆ ಇದೆ. ಅದೇ ಹಸಿರು . ಅದೇ ಉಸಿರು.


Thursday, June 21, 2018

ಯೋಗವಿದ್ದರೆ ಒಂದೇ ದಿನ



ಶಾಲೆಗೆ ಹೋಗುವ ಪುಟ್ಟ ಕಂದಮ್ಮ ತನ್ನಷ್ಟೇ ಉದ್ದದ ಯೋಗ ಚಾಪೆ ಕಂಕುಳಿಗೆ ನೇತಾಡಿಸಿ ಶಾಲೆಗೆ ಹೊರಟಿತ್ತು.  “ನಾನು ಕೇಳಿದೆ ಏನಮ್ಮ? ಇದು? “
“ ಇವತ್ತು ಶಾಲೆಯಲ್ಲಿ ಯೋಗ ಪ್ರಾಕ್ಟೀಸ್ ಇದೆ. ಯೋಗ ಡೇ  ಗೆ ಶಾಲೆಯಲ್ಲಿ ಪ್ರೋಗ್ರಾಂ ಇದೆ.”
ಕೇವಲ ಯೋಗ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗುವ ಈ ಯೋಗಾಭ್ಯಾಸ ನೋಡಿದರೆ ಖೇದವೆನಿಸುತ್ತದೆ. ಮಕ್ಕಳಿಗೆ ಯೋಗಭ್ಯಾಸ ಮಾಡುವ ಹೊತ್ತಾದರೂ ಯಾವಾಗ? ಮಟ ಮಟ ಮಧ್ಯಾಹ್ನದ ಬಿಸಿಲಿಗೆ ಶಾಲೆಯ ಅಂಗಳದಲ್ಲಿ ಯೋಗ ಪ್ರಾಕ್ಟೀಸ್ ನಡೆಸುತ್ತಿದ್ದರು. ಇನ್ನು ಕಲಿಸುವ ಟೀಚರಮ್ಮನೋ , ಆಕೆಗೆ ಯೋ


ಗದ ಬಗ್ಗೆ ಎಷ್ಟು ಅರಿವಿದೆ ಎಂದು ಆಕೆಯನ್ನು ನೋಡಿದರೆ ಅರ್ಥವಾಗುತ್ತದೆ,. ಯೋಗವೆಂದರೆ ಒಂದು ಡ್ಯಾನ್ಸ್ ಪ್ರೋಗ್ರಾಂ ನಂತೆ ಪರಿಗಣಿಸುವ ಈ ಯೋಗಾಭ್ಯಾಸದ ಉದ್ದೇಶವಾದರೂ ಏನು?
ಈಗಿನ ಅಧುನಿಕ ಶಿಕ್ಷಣ ರೀತಿಯಾಗಲೀ ಜೀವನ ಶೈಲಿಯಲ್ಲೇ ಆಗಲಿ ಯೋಗಭ್ಯಾಸವೆಂದರೆ ಸಮಯ ವಿದ್ದಾಗ ಮಾಡುವ ಡಿಪ್ಲೋಮಾದಂತೆ. ಸರ್ಟಿ ಫಿಕೇಟ್ ಇಲ್ಲದೇ ಇದ್ದರೂ ಪರವಾಗಿಲ್ಲ ಎಂಬಂತಹ ಸ್ಥಿತಿ. 
ದೇಹ,  ಉಸಿರು ಮತ್ತು ಮನಸ್ಸು ಈ ಮೂರನ್ನೂ ತನ್ನ ನಿಯಂತ್ರಣದಲ್ಲಿರಿಸುವುದೇ ಯೋಗ. ನಿಜವಾಗಿಯೂ ಈ ಮೂರು ನಿಯಂತ್ರಣದಲ್ಲಿರಬೇಕಾದರೆ ಯೋಗ ಇರಲೇಬೇಕು.  ಈ ಮೂರು ನಿಯಂತ್ರಣದಲ್ಲಿದ್ದರೆ ಆ ಜೀವನ ಹೇಗಿರಬಹುದು ಎಂದು ಕಲ್ಪಿಸಿದರೆ  ಅದೊಂದು ಸುಯೋಗ. ಹಾಗಾಗಿಯೇ ಭಗವಂತ ಗೀತೆಯಲ್ಲಿ ಹೇಳಿರುವುದು “ಯೋಗಃ ಕರ್ಮಸುಕೌಶಲಂ” ಎಂದು.
ಈಗ ಯೋಗಜೀವನ ಪ್ರಪಂಚದಾದ್ಯಂತ ಜನಪ್ರಿಯವಾಗಿದೆ. ಯೋಗ ದಿನಾಚರಣೆಯನ್ನು ಲೋಕವೇ ಆಚರಿಸುತ್ತದೆ. ಆದರೂ ನಾವು ಯೋಗಾಭ್ಯಾಸವನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಹಲವರು ಹೇಳುವುದಿದೆ, ಯೋಗ ಮಾಡುವುದಕ್ಕೆ ಸಮಯ ಇಲ್ಲ. ಇದೊಂದು ಮೂರ್ಖತನದ ಅಭಿಪ್ರಾಯ. ಸಮಯ ಇಲ್ಲದವನಿಗೆ ಭೂಮಿ ಮೇಲೆ ಬದುಕುವುದಕ್ಕೂ ಸಮಯವಿಲ್ಲ. ಯೋಗಾಭ್ಯಾಸಕ್ಕೆ ಸಮಯ ಬೇಡ. ಮಾಡಬೇಕು ಎಂಬ ಅರ್ಪಣಾಭಾವ ತುಡಿತ ಮನಸ್ಸಿನಲ್ಲಿರಬೇಕಾದದ್ದು ಮುಖ್ಯ. ಬಹಳ ಮಂದಿಗೆ ಇರುವ ಕೊರತೆ ಅದೊಂದೇ. ಮಾಡಲೇ ಬೇಕು ಎಂಬ ಅರ್ಪಣಾ ಭಾವ ಇರುವುದಿಲ್ಲ. ದಿನದ ಇಪ್ಪತ್ತನಾಲ್ಕು ಘಂಟೆಗಳಲ್ಲಿ ಹದಿನೈದು ನಿಮಿಷವೂ ಸಮಯಾವಕಾಶ ಇಲ್ಲದೇ ಇರುವ ಜೀವನವಾದರೂ ಯಾವ ಸಾರ್ಥದಕತೆಗೆ?

ಒಂದು ದಿನ ಕೆಲಸದ ಒತ್ತಡ ತೀವ್ರವಾಗಿರುತ್ತದೆ. ಗಡಿಬಿಡಿಯಲ್ಲಿ ಹಲವು ಕೆಲಸವನ್ನು ಬೇಡ ಎಂದು ಬದಿಗಿಡುತ್ತೇವೆ. ವಿಪರ್ಯಾಸವೆಂದರೆ ಹಲವು ಕೆಲಸದ ಗಡಿಬಿಡಿ ಇದ್ದರೆ  ಯೋಗಭ್ಯಾಸವನ್ನು ನಾವು ಬೇಡ ಅಂತ ಮೊದಲು ಬದಿಗಿಡುತ್ತೇವೆ. ಇವತ್ತು ಆ ಕೆಲಸ ಅಗತ್ಯವಿದೆ. ಹಾಗಾಗಿ ಇವತ್ತಿಗೆ ಯೋಗಾಭ್ಯಾಸ ಬೇಡ.   ಯೋಗವೆಂದರೆ ಅದು ಸಮಯವಿದ್ದರೆ ಮಾತ್ರ ಮಾಡುವ ಸಾಧನ. ಯೋಗಾಭ್ಯಾಸಕ್ಕೆ ನಮ್ಮ ಧೋರಣೆಯನ್ನು ನಾವು ಬದಲಿಸಿಕೊಳ್ಳಬೇಕು.
ಇಷ್ಟು ವರ್ಷಗಳಲ್ಲಿ ಭಾರತ ಮತ್ತು ಹಿಂದೂ ಧರ್ಮ ಪ್ರಪಂಚಕ್ಕೆ ಏನು ಕೊಟ್ಟಿದೆ  ಎಂದು ತಿಳಿಯದೇ ಇರಬಹುದು. ಆದರೆ ವಿಶ್ವ ಯೋಗ ದಿನಾಚರಣೆ ಪ್ರಪಂಚಕ್ಕೆ ಹಿಂದೂ ಧರ್ಮದ ಮತ್ತು ಭಾರತದ ಕೊಡುಗೆ ಏನು ಎಂಬುದನ್ನು ನೆನಪಿಸಿಕೊಡುತ್ತದೆ. ವಿಶ್ವ ಯೋಗ ದಿನಾಚರಣೆ ಅದು ಕೇವಲ ಜಾಗೃತಿಯನ್ನು ಉಂಟು ಮಾಡುವುದಕ್ಕೆ ಮಾತ್ರ ಸೀಮಿತ. ಅದುವೇ ಯೋಗವಲ್ಲ. ಯೋಗವೆಂದರೆ ನಾವು ಕಾಣದ ಪ್ರಪಂಚ. ಆ ಪ್ರಪಂಚದ ರೂಪವನ್ನು ಯಾರೂ ವಿವರಿಸಲು ಸಾಧ್ಯವಿಲ್ಲ.  ಅದನ್ನು ಸಂಚರಿಸಿಯೇ ಅರಿಯಬೇಕು. ಆಗಲೇ ಈ ಪ್ರಪಂಚ ಜ್ಞಾನ ಲಭ್ಯವಾಗುತ್ತದೆ. ಹಾಗಾಗಿ ವಿಶ್ವ ಯೋಗದಿನಾಚರಣೆ ಆ ಯೋಗ ಪ್ರಪಂಚದ ಬಾಗಿಲಿಗೆ ನಮ್ಮನ್ನು ತಂದು ನಿಲ್ಲಿಸಬಹುದು. ಆ ಬಾಗಿಲು ದಾಟಿ ಮುಂದಕ್ಕೆ ಹೊಗಬೇಕಾದರೆ ನಮ್ಮಲ್ಲಿ ಅರ್ಪಣಾ ಮನೋಭಾವ ಮೂಡಬೇಕು.
ಯೋಗವೆಂಬುದು ಪ್ರದರ್ಶನಕ್ಕಾಗಲೀ, ಪ್ರಚಾರಕ್ಕಾಗಲೀ, ಅಥವಾ ಚಾಲೆಂಜ್ ಮಾಡುವುದಕ್ಕಾಗಲೀ ಇರುವ ವಿಷಯವಲ್ಲ. ಅದು ಕೇವಲ ಸ್ವಕೀಯ. ತೀರಾ ಖಾಸಗಿತನವನ್ನು ಅದರಲ್ಲಿ ಅನುಭವಿಸಿದರೆ ಹೆಚ್ಚು ಪರಿಣಾಮಕಾರಿ. ಮತ್ತು ಮನಸ್ಸಿಗೆ ಅತಿ ಹೆಚ್ಚು ಸಂತೋಷವನ್ನೂ ಸಮಾಧಾನವನ್ನು ನೀಡುತ್ತದೆ. ಇಲ್ಲಿ ಬಲವಂತದ ಒತ್ತಡ ಮನೋಭಾವ ಸಂಪೂರ್ಣ ದೂರವಿರಿಸಬೇಕು. ನಾವೆಷ್ಟು ಈ ಗುಣಗಳಿಗೆ ಸ್ಪಂದಿಸುತ್ತೇವೋ ಅದರ ಬಹುಪಾಲು ಪ್ರಭಾವವನ್ನು ಪರಿಣಾಮವನ್ನೂ ಯೋಗಾಭ್ಯಾಸದಿಂದ ಪಡೆಯಬಹುದು. ನಾವು ಮೂರಡಿ ಹೆಜ್ಜೆ ಇರಿಸಿದರೆ ಅದು ನೂರಡಿ ದೂರ ನಮ್ಮನ್ನು ಒಯ್ಯುತ್ತದೆ. ಆ ಮೂರಡಿ ಪ್ರಾರಂಭದಲ್ಲಿ ಇರಿಸುವ ನಿಷ್ಠೆ ನಮ್ಮಲ್ಲಿ ಬರಬೇಕು. ಇದು ಎಲ್ಲಾ ಕೆಲಸದ ನಂತರ ಮಾಡುವ ಕ್ರಿಯೆಯಲ್ಲ. ಎಲ್ಲ ಕೆಲಸಕ್ಕಿಂತಲೂ ಮೊದಲು ಮಾಡಲೇ ಬೇಕಾದ ಕ್ರಿಯೆಯೇ ಯೋಗಾಭ್ಯಾಸ. ಮೂಂಜಾನೆಯ ಅರ್ಧ ತಾಸು ನಿದ್ದೆಯನ್ನು ದೂರವಿರಿಸಿದರೆ ಅದು ದಿನದ ಎಲ್ಲ ಸಮಯವನ್ನು ಒದಗಿಸಿಕೊಡುತ್ತದೆ.  ಸಮಯಕ್ಕಿಂತಲೂ ಮಾಡಲೇ ಬೇಕು ಎನ್ನುವ ತುಡಿತ ಅದೊಂದೇ ಪ್ರಧಾನವಾಗುತ್ತದೆ.
ಯೋಗ ಅದು ಒಂದೇ ದಿನವಾಗಿರುತ್ತದೆ. ನಂತರ ಅದು ನಮ್ಮ ಅರ್ಹತೆಯಾಗಬೇಕು. ನಾವು ಆ ಅರ್ಹತೆಯನ್ನು ಗಳಿಸುವ ಇಚ್ಛಾಶಕ್ತಿಯನ್ನು ತೋರುವ ಸಂಕಲ್ಪಮಾಡಬೇಕು.

Tuesday, May 29, 2018

ಮಂಗಳೂರು ದ್ವೀಪ

                 
                   

ನಾವು ಚಿಕ್ಕವರಿರುವಾಗ ಮಳೆ ಬಂದರೆ, ಜೂನ್ ತಿಂಗಳಿಂದ ತೊಡಗಿ ಸಪ್ಟಂಬರ್ ವರೆಗೂ ಬಿಡದೇ ಸುರಿಯುತ್ತಿತ್ತು. ಶುಕ್ರವಾರ ಮಳೆ ಶುರುವಾದರೆ ಅದು ಮುಂದಿನ ಶುಕ್ರವಾರವೆ ನಿಲ್ಲುವುದು ಎಂಬ ಮಾತು ಇತ್ತು. ಆಟಿ ತಿಂಗಳ ಮಳೆಗೆ ಸಾಮಾನ್ಯ ಎಲ್ಲರೂ ಆಘೋಷಿತ ರಜೆ ಆಚರಿಸುತ್ತಿದ್ದರು. ಹಾಗಾಗಿ ಆಟಿ ತಿಂಗಳ ಸಮಯದಲ್ಲಿ ದುರ್ಗಾನಮಸ್ಕಾರದಂತಹ ಪೂಜಾ ಕಾರ್ಯಕ್ರಮಗಳು ಮನೆಯಲ್ಲಿ ಆಗುತ್ತಿತ್ತು. ಅದು ಸಂಪ್ರದಾಯವೂ ಆಗಿತ್ತು. ನಾನು ಚಿಕ್ಕವನಿರುವಾಗ ಯಾವಗಲೋ ಒಂದೆರಡು ಸಲ ನೆರೆ ಬರುತ್ತಿತ್ತು. ಅದೂ ಹೊಳೆ ಹರಿಯುವಲ್ಲಿ ಮಾತ್ರ. ಒಂದು ಸಲ 1975ನೇ ಇಸವಿಯಲ್ಲಿರಬೇಕು,  ನೇತ್ರಾವತಿ ಉಕ್ಕಿ ಹರಿದು ಜಪ್ಪಿನ ಮೊಗರು ಸುತ್ತ ಮುತ್ತ ಮುಳುಗಡೆಯಾಗಿ ತೆಂಗಿನ ಮರದ ತುದಿ ಮಾತ್ರ ಕಂಡದ್ದು ನೆನಪಿದೆ. ಜನ ದೋಣಿಯಲ್ಲೇ ಸಂಚರಿಸುತ್ತಿದ್ದದ್ದು ನೋಡಿದ ನೆನಪು. ಆನಂತರ ಅಂತಹ ನೆರೆ ಬಂದ ನೆನಪಿಲ್ಲ. ಮತ್ತೊಂದು ತುದಿಯ ಕೂಳೂರು ದೇರೆಬೈಲು ಮುಂತಾದ ಕಡೆಗಳಲ್ಲೂ ಅಷ್ಟೇ ಕೆಲವೊಮ್ಮೆ ನೆರೆ ಬಂದು ಶಾಲೆಗೆ ಬರುವ ಮಕ್ಕಳು  " ಬೊಳ್ಳ ಬಂದು ಶಾಲೆಗೆ ರಜೆ" ಅಂತ ಹೇಳುತ್ತಿದ್ದರು. ಆದರೆ ನಂತರ ಮಳೆಯ ಪ್ರಮಾಣ ಕಡಿಮೆಯಾಗಿ ವಾರಗಟ್ಟಲೆ ತಿಂಗಳು ಗಟ್ಟಲೆ ಸುರಿಯುತ್ತಿದ್ದ ಮಳೆ ಕೆಲವೇ ಗಂಟೆಗೆ ಸೀಮಿತವಾಗಿ ಬಿಟ್ಟಿತು. ಇದೀಗ ಮಂಗಳೂರು ನಗರವೇ ಜಲಾವೃತವಾಗಿರುವುದನ್ನು ನೋಡಿದರೆ ನಾವುಗಳು ಎಲ್ಲೋ ತಪ್ಪಿದ್ದೇವೆ ಎಂದನಿಸುತ್ತದೆ.  ತಿಂಗಳು ಗಟ್ಟಲೆ ಮಳೆಗೆ ಎದೆಯಗಲಿಸಿ ನಿಮಿರಿ ನಿಲ್ಲುತ್ತಿದ್ದ ಮಂಗಳೂರು ಕರಾವಳಿ ಈ ಒಂದು ದಿನದ ಮಳೆಗೆ ಮುಳುಗಬೇಕಿದ್ದರೆ ಇದು ಮಳೆಯ ಅವಾಂತರ ಖಂಡಿತಾ ಅಲ್ಲ. ಮಿತಿ ಮಿರೀದ ಪೂರ್ವ ಯೋಚನೆ ಇಲ್ಲದ ಯೋಜನೆಗಳೇ ಕಾರಣ. ಕೇವಲ ಮಂಗಳೂರು ನಗರ ಪ್ರದೇಶಗಳು ಮುಳುಗುವುದೆಂದರೆ ಇದರ ಹಿಂದೆ ಇರುವ ಅಧಿಕಾರ ದಾಹ ಯಾವ ಬಗೆಯದ್ದು? ಅರ್ಥವಾಗದೇ ಇರುವುದಲ್ಲ? ಜನ ಪ್ರತಿನಿಧಿಗಳಿಗೆ ಒಮ್ಮೆ ಆಯ್ಕೆಯಾದರೆ ಸಾಕು, ಆಯ್ಕೆಯಾದ ಮೇಲೆ ಐದು ವರ್ಷ ನಿಭಾಯಿಸಿ ಒಂದಷ್ಟು ದುಡ್ದು ಮಾಡಿ ಅಧಿಕಾರ ಚಲಾಯಿಸಿದರೆ ಸಾಕು. ಅಧಿಕಾರದಲ್ಲಿರುವಾಗ ತಮ್ಮ ಸಂಬಂಧಿಕರನ್ನು, ಬಳಗವನ್ನು ಕಂಟ್ರಾಕ್ಟರ್ ಗಳನ್ನಾಗಿ ಮಾಡಿ ಒಂದಷ್ಟು ಟೆಂಡರ್ ಗಳನ್ನು ಪಾಸ್ ಮಾಡಿಸಿ ಆ ಕೆಲಸವನ್ನು ತಾವೂ ಮಾಡದೆ ಉಪ ಕಂಟ್ರಾಕ್ಟರ್ ಗಳಿಗೆ ಕಮೀಷನ್ ಗೆ ವರ್ಗಾಯಿಸಿ...ಅಂತೂ ನಗರದ ಬಹುತೇಕ ಭಾಗದ ಎಲ್ಲಾ ಕೆಲಸಗಳೂ ಸಹ ಕಳಪೆ,  ಹಾಗಾಗಿ ಪ್ರಕೃತಿ ಈಗ ಈ ರೂಪದಲ್ಲಿ ತೋರಿಸಿಕೊಟ್ಟಿದೆ. ಹಿಂದಿನ ದುಡ್ಡು ತಿಂದ ಪ್ರತಿನಿಧಿಗಳು ಎಲ್ಲಿದ್ದಾರೋ. ಈಗಿನವರು ಏನು ಮಾಡುತ್ತಾರೋ ಒಂದೂ ಸಹ ಜನ ಸಾಮಾನ್ಯನಿಗೆ ಗೊತ್ತಿಲ್ಲ. ಗೊತ್ತಿದ್ದರೂ ಏನೂ ಮಾಡದ ಅಸಹಾಯಕ ಪಾತ್ರ.  ಬೆಂಗಳೂರಲ್ಲಿ ಎಂದೋ ಆರಂಭವಾಗಿದ್ದ ಸಮಸ್ಯೆ ಈಗ ಮಂಗಳೂರಿಗೂ ಕಾಲಿಟ್ಟಿದೆ. ಇನ್ನು ಮತ್ತೊಂದು ನಗರ ಮಾತ್ರವಲ್ಲ ಸಣ್ಣ ಊರುಗಳಿಗೂ ಕಾಲಿಡಬಹುದು. ದುಡ್ಡು ತಿಂದು ತೇಗುವ ಕಂಟ್ರಾಕ್ಟರ್ ಗಳು ದೊಡ್ಡ ಅಪಾರ್ಟ್ ಮೆಂಟ್ ಕಟ್ಟಿ ತಮ್ಮ ಮಕ್ಕಳೊಂದಿಗೆ ಐಷಾರಾಮಿ ಜೀವನ ನಡೆಸುತ್ತಿರಬಹುದು. ಎಲ್ಲವೂ ಚಕ್ರದೊಳಗಿನ ಬಡಿಗೆಗಳಂತೆ ತಿರುಗುವಾಗ ಒಂದರ ನಂತರ ಇನ್ನೊಂದು ಬರುತ್ತಾ ಇರುತ್ತದೆ. ಆದರೂ ಅದರೂ ವ್ಯವಸ್ಥೆ ಬದಲಾಗುವುದಿಲ್ಲ. ಅದು ಹೀಗೆ ಮುಂದುವರೆಯುತ್ತದೆ. 

Thursday, May 17, 2018

ರಾಜಕಾರಣಗಳು....



ಒಂದು ಸಭ್ಯ ಕುಟುಂಬ, ಅಥವಾ ಸಭ್ಯ ಅಪ್ಪ ಅಮ್ಮ ತಮ್ಮ ಮನೆಯ ಮಕ್ಕಳು ತಾವು ಹೆತ್ತ ಮಗು ಏನು ಆಗ ಬೇಕು ಎಂದು ಕನಸು ಕಟ್ಟಿ ನಿರೀಕ್ಷೆ ಇಟ್ಟುಕೊಳ್ಳುವುದನ್ನು ಗ್ರಹಿಸುವುದು ಕಷ್ಟ. ಒಬ್ಬೊಬ್ಬರದೂ ಒಂದೊಂದು ನಿರೀಕ್ಷೆಗಳು ಇರುತ್ತವೆ. ಅದನ್ನು ಕಲ್ಪಿಸುಕೊಳ್ಳುವುದು ಕಷ್ಟ. ಆದರೆ ತಮ್ಮ ಮಕ್ಕಳು ಏನು ಆಗಬಾರದು ಎಂದು ಬಯಸುತ್ತಾರೋ ಅದಕ್ಕೆ ಒಂದನ್ನಂತೂ ಖಂಡಿತವಾಗಿ  ಹೇಳಬಹುದು. ಏನದು?  ನಮ್ಮ ಮಕ್ಕಳು ಏನಾಗಬಾರದು ಎಂಬುದನ್ನು ಸಭ್ಯರಾದ ಅಪ್ಪ ಅಮ್ಮ ಸುಲಭದಲ್ಲಿ ಹೇಳಬಹುದು. ಅಥವಾ ಒಪ್ಪಿಕೊಳ್ಳಬಹುದು. ಅದೆಂದರೆ ಭಾರತದ “ರಾಜಕಾರಿಣಿ”.  ಹೌದು ನಮ್ಮ ಮಕ್ಕಳು ರಾಜಕಾರಿಣಿಯಾಗಬೇಕೆಂದು ಯಾವೊಬ್ಬ ಅಪ್ಪ ಅಮ್ಮನೂ ಬಯಸಲಾರರು. ಇದು ಒಂದು ಸಭ್ಯ ಸಮಾಜದಲ್ಲಿ ರಾಜ ಕಾರಿಣಿಗೆ ಹಿಡಿದಿರುವ ಕನ್ನಡಿ. ಇದಕ್ಕೆ ಹಲವು ಆಕ್ಷೇಪಗಳು ಸಮಜಾಯಿಷಿಗಳು ಸ್ಪಷ್ಟೀಕರಣಗಳು ಇರಬಹುದು. ಏನಿದ್ದರೂ ರಾಜಕಾರಿಣಿಯಾಗಬಬೇಕೆಂದು ಸ್ವತಹ ಮಗ ಮಗಳು ಬಯಸಬಹುದು. ಆದರೆ ಅಪ್ಪ ಅಮ್ಮ ಬಯಸಲಾರರು. ಇದು ಕಠೋರ ಸತ್ಯ.

ಯಾಕೆ ಹೀಗೆ ಯೋಚಿಸಿದರೆ ಹಲವು ಕಾರಣಗಳು ಸಿಗಬಹುದು. ಅದರೂ ಯಾರೂ ಈ ಕಾರಣದ ಬಗ್ಗೆ ಯೋಚಿಸುವುದಿಲ್ಲ. ಒಮ್ಮೆ ರಾಜಕಾರಿಣಿಯಾದರೆ ಬದಲಾಗುವ ಜೀವನ ಶೈಲಿಯಲ್ಲಿ ಎಲ್ಲ ಕಾರಣಗಳು ಕೆಲವೊಮ್ಮೆ ಮುಚ್ಚಿಹೋಗುತ್ತವೆ. ಸಮಾಜ ಸೇವೆ ಪರೋಪಕಾರ ಹೀಗೆ ತೊಡಗುವುದು ಬಹುತೇಕ ಅಂತ್ಯವಾಗುವುದು ಅಥವಾ  ಗುರಿ ಸೇರುವುದು ಪವಿತ್ರ ಕಡಲಿಗಲ್ಲ,  ರಾಜಕೀಯವೆಂಬ ಕೊಚ್ಚೆಗುಂಡಿಗೆ . ಇದಕ್ಕೆ ಬಹಳಷ್ಟು ನಿದರ್ಶನಗಳು ಸಿಗಬಹುದು. ಒಂದೆರಡು ಅಪವಾದಗಳಿದ್ದರೂ ಅದು ಬಹಳ ಕ್ಷೀಣ.

ಜಗವೇ ನಾಟಕರಂಗ ಅಂತ ಕವಿಯೊಬ್ಬ ಹಾಡಿದರೆ, ನಾಟಕದ ಒಳಗೆ ನಾಟಕವನ್ನು ಆಡುವುದು ರಾಜಕೀಯದಲ್ಲಿ.  ಯಾವ ಕೆಟ್ಟ ದೂರಾಲೋಚನೆ ಇದ್ದರೆ ಅದಕ್ಕೆ ಅಡ್ಡ ಹೆಸರೇ ರಾಜಕೀಯ, ರಾಜ ಕಾರಣ. ಯಾಕೇ ಹೀಗೆ?  ಒಂದು ಪವಿತ್ರವಾದ ಆದರ್ಶಮಯವಾದ ಸಮಾಜ ಮುಖವನ್ನು ಕಲುಷಿತಗೊಳಿಸುವ ಪ್ರಮೇಯ ಯಾಕೆ ಬಂತು? ಊಹಿಸುವುದು ಕಷ್ಟ. ಸ್ವಾತಂತ್ರ್ಯ ಪೂರ್ವದಲ್ಲಿ ರಾಜಕಾರಣವೆಂದರೆ ಅದಕ್ಕೆ ಬಹಳಷ್ಟು ಗೌರವವಿರುತ್ತಿತ್ತು. ಯಾರು ತನ್ನ ನೆಲದ ಬಗ್ಗೆ ದೇಶದ ಬಗ್ಗೆ ಅಭಿಮಾನವಿರುಸುತ್ತಾನೋ ಅಂತಹವನು ಮಾತ್ರವೇ ಪವಿತ್ರವಾದ ರಾಜಕಾರಣಕ್ಕೆ ಅರ್ಹನಾಗಿಬಿಡುತ್ತಿದ್ದ. ವಿದ್ಯಾವಂತನಾದವನು ಮಾತ್ರವೇ ರಾಜಕೀಯಕ್ಕೆ ಇಳಿದು ಬಿಡುತ್ತಿದ್ದ. ಆದರೆ ಇಂದು ವಿದ್ಯಾಭ್ಯಾಸದ ಅಗತ್ಯವೇ ಇರುವುದಿಲ್ಲ.   ಸ್ವಾತಂತ್ರ್ಯ ನಂತರ ಭಾರತದ ಉದ್ದಗಲಕ್ಕೂ ಹರಿಯುವ ಗಂಗೆಯಾಗಲೀ ಕಾವೇರಿಯಾಗಲಿ ಕಲುಷಿತ ಗೊಂಡಿತು. ಅದನ್ನಾದರೂ ಶುದ್ಧೀಕರಿಸಿ ಮನುಷ್ಯ ಜೀವದ ತೃಷೆಯನ್ನು ನೀಗಿಸಬಹುದು. ಆದರೆ ಈ ರಾಜಕಾರಣ ಶುದ್ದವಾಗುವುದು ಕನಸಿನಲ್ಲೂ ಸಾಧ್ಯವಾಗದ ಮಾತು.

ಈಗ ಹಳ್ಳಿಯ ಸರಕಾರಿ ಶಾಲೆಗಳಿಗೆ ಮಕ್ಕಳೇ ಹೋಗುವುದಿಲ್ಲ. ಮಕ್ಕಳಿಲ್ಲದೆ ಶಾಲೆಯ ದೊಡ್ಡ ಕಟ್ಟಡ ಭಿಕೋ ಎನ್ನುತ್ತಿರಬಹುದು. ಆದರೆ ಚುನಾವಣೆ ಬಂತೆಂದರೆ ಆ ಒಂದು ದಿನವಾದರೂ ಊರವರೆಲ್ಲ ಅಲ್ಲಿಗೆ ಹೋಗುತ್ತಾರೆ. ಬಹುಶಃ ಶಾಲೆಯ ಮೆಟ್ಟಲು ತುಳಿಯದ ರಾಜಕಾರಿಣಿಗಳೂ ಸಹ ಇದಕ್ಕಾಗಿಯಾದರೂ ಆ ಒಂದು ದಿನ  ಶಾಲೆಯ ಮೆಟ್ಟಲು ತುಳಿಯುತ್ತಾರೆ. ಉಳಿದಂತೆ ಈ ಶಾಲೆ ಯಾಕಾಗಿ ಇದೆ ಎಂಬುದೇ ಮರೆತು ಹೋಗುತ್ತದೆ. ಇಲ್ಲಿ ವಾಹನ ಪರವಾನಿಗೆ ತೆಗೆದುಕೊಳ್ಳುವುದಕ್ಕೂ....ಎಲ್ಲಾದರೂ ಚಪ್ರಾಸಿ ಕೆಲಸ ಮಾಡುವುದಕ್ಕೂ ಹೋಗಲಿ ಯಾವುದೋ ಕಛೇರಿಯಲ್ಲಿ ಚಹಾ ಕಾಪಿ ತಂದುಕೊಟ್ಟು  ಪರಿಚಾರಕನ ಕೆಲಸ ಮಾಡುವುದಕ್ಕೂ  ಕೊಂಚ ವಿದ್ಯಾಭ್ಯಾಸದ ಅರ್ಹತೆ ಇರಲೇ ಬೇಕು. ಆದರೆ ರಾಜಕಾರಿಣಿಯಾಗುವುದಕ್ಕೆ?  ಸಮಾಜಕ್ಕೆ ತೀರ ಅನಿವಾರ್ಯವಾಗುವುದಕ್ಕೆ ಯಾವ ಅರ್ಹತೆಯೂ ಬೇಡ. ಕೈಯಲ್ಲಿ ದಮ್ಮಡಿ ಇದ್ದರೆ ಸಾಕು.

ಚುನಾವಣೆ ಬಂದಾಗ ರಾಜಕಾರಣಿಗಳು ಪರಮ ಭಕ್ತರಂತೆ ಉದ್ದ ನಾಮ ಬಳೆದು ದೇವಸ್ಥಾನಕ್ಕೆ ಹೋಗುತ್ತಾರೆ. ದೇವರ ಮುಂದೆ ಭಕ್ತಿಯಿಂದ ಕೈ ಮುಗಿಯುತ್ತಾರೆ . ಇದನ್ನು ನೋಡಿದರೆ  ರಾತ್ರಿ ಕದಿಯುವುದಕ್ಕೆ ಹೋಗುವ ಕಳ್ಳನೂ ಸಹ ಊರ ಗುಡಿಯ ಬಾಗಿಲಿಗೆ ಬಂದು ಕೈ ಮುಗಿಯುವ ನೆನಪಾಗುತ್ತದೆ. ಯಾಕೆಂದರೆ ಹೆಚ್ಚು ಕಮ್ಮಿ ಎರಡು ಕಡೆಯ  ಪ್ರಾರ್ಥನೆ ಒಂದೇ ಆಗಿರುತ್ತದೆ. ತಾನು ಮಾಡುವ ಕೆಲಸದಲ್ಲಿ ಜಯ ಸಿಗಲಿ ಎಂದು ಪರಮ ಚೋರನೂ ದೇವರಲ್ಲಿ ಪ್ರಾರ್ಥಿಸಿ ಹರಕೆ ಹೊರುತ್ತಾನೆ. ರಾಜಕಾರಿಣಿಯ ಪ್ರಾರ್ಥನೆ ದೇವರಿಗೂ ಅರ್ಥವಾಗದು.

ಮೈಕ್ ನಲ್ಲಿ ನಿಮ್ಮ ಅಮೂಲ್ಯವಾದ ಮತ, ಮುತ್ತಿನಂತಹ ನವರತ್ನದಂತಹ ಮತ.....ಮತದಾರನ ಬೆರಳ ತುದಿಯ ಕೆಲಸಕ್ಕೆ ಪವಿತ್ರವಾದ ಮೌಲ್ಯವನ್ನು ಕಟ್ಟುವ ರಾಜಕಾರಿಣಿ ಹಿಂಬಾಗಿಲ ಮೂಲಕ ಯಾವುದೇ ನಾಚಿಕೆ ಇಲ್ಲದೇ  ಅದೇ ಮತಕ್ಕೆ ಐನೂರು ಸಾವಿರ ಬೆಲೆ ನಿಗದಿ ಮಾಡುತ್ತಾನೆ.  ಒಬ್ಬ ಸಭ್ಯ ಮನುಷ್ಯ ತನ್ನನ್ನು ಇನ್ನೊಬ್ಬರಿಗೆ ಆಗದೇ ಇದ್ದರೆ  ಅವರ ಹತ್ತಿರ ಸುಳಿಯುವುದಿಲ್ಲ. ಅವರ ಸಹವಾಸಕ್ಕೆ ಹೋಗುವುದಿಲ್ಲ. ತನ್ನ ಪಾಡಿಗೆ ತಾನಿರುತ್ತಾ ತನ್ನನ್ನು ಯಾರು ಒಪ್ಪಿಕೊಳ್ಳುತ್ತಾರೋ ಅವರ ಜತೆಯಲ್ಲಿ ಇರುತ್ತಾನೆ. ಆದರೆ ರಾಜಕಾರಿಣಿ?  ತನ್ನನ್ನು ಯಾರೂ  ಒಪ್ಪದೇ ಇದ್ದರೂ ಪರವಾಗಿಲ್ಲ ಸ್ವಾರ್ಥ ಒಂದೇ ಪರಮ ಗುರಿಯಾಗುತ್ತದೆ.  

ಒಬ್ಬ ರಾಜಕಾರಣಿ ಇಂದು ಒಂದು ಮಾತು ಘಂಟಾ ಘೋಷವಾಗಿ ಸಾರುತ್ತಾನೆ. ಆದರೆ ಆತನಿಗೆ  ಅರಿವಿದೆ, ತನ್ನ ಮಾತು  ಯಾರೂ ನಂಬುವುದಿಲ್ಲ ಎಂದು. ಆದರೂ ಹೇಳಿಬಿಡುತ್ತಾನೆ. ವರ್ತಮಾನದಲ್ಲಿ ಹೇಳಿದ ಮಾತು ಮತ್ತೊಂದು ಕ್ಷಣಕ್ಕೆ ಬದಲಾಗಬಹುದು. ಸುಳ್ಳು  ಸತ್ಯಗಳ ವೆತ್ಯಾಸದ ಗೆರೆಯನ್ನೇ ಇಲ್ಲಿ ಅಳಿಸಲಾಗುತ್ತದೆ. ತನ್ನಲ್ಲೊಬ್ಬನಲ್ಲಿ ಬಿಟ್ಟು ಮಿಕ್ಕುಳಿದವರಲ್ಲಿ ಅರಸುವುದೇ ನೈತಿಕತೆ.

ಎಂತಹ ವಂಚಕನಾದರೂ ತನ್ನ ವಂಚನೆ ಬಯಲಾದಾಗ ಮುಖ ಮರೆಸಿಕೊಳ್ಳುತ್ತಾನೆ. ಪೋಲೀಸರು ಖೈದಿಗಳನ್ನು ಕರೆದುಕೊಂಡು ಹೋಗುವಾಗ ಗಮನಿಸಬಹುದು. ಆದರೆ ರಾಜ ಕಾರಣದಲ್ಲಿ ವಂಚನೆ ಬಯಲಾದರೂ ಅಳುಕಿಲ್ಲದೆ ಮುಖ ತೋರಿಸಿಬಿಡುತ್ತಾರೆ.  ಮುಖವೆಲ್ಲಿಂದ ಬಂತು  ಕ್ಷಣ ಕ್ಷಣಕ್ಕೂ ಆಕಾರ ಬದಲಿಸುವ ಅಮೀಬದ ಶರೀರದಲ್ಲಿ?  ಆತ್ಮ ಕಥೆಯಲ್ಲಿ ಆತ್ಮದ  ಬಗ್ಗೆ  ಹೇಗೆ ಇರುವುದಿಲ್ಲವೋ ಹಾಗೆ ಎಲ್ಲವೂ ಇಲ್ಲಿ ದ್ವಂದ್ವಗಳು. ಅಸಲಿಯತ್ತು ತಿಳಿದೋ ತಿಳಿಯದೆಯೋ ಹೇಗೆ ನಡೆಯಬೇಕೆಂಬ ಅನಧಿಕೃತ ನಿಯತಿಯೊಂದು ಇರುತ್ತದೆ. ಅದೇ ರೀತಿಯಲ್ಲಿ ನಡೆದು ಹೋಗುತ್ತದೆ.  ಸಿನಿಮಾ ನೋಡುವಾಗ ನೈಜವೋ ಏನೋ ಎಂದು ಭ್ರಮಾಧೀನನಾಗುವ ಪ್ರೇಕ್ಷಕ ಚಿತ್ರಮಂದಿರದಿಂದ ಹೊರಗೆ ಬರುತ್ತಿದ್ದಂತೆ ಇದು ನಿಜವಲ್ಲ ಎಂದು ಒಪ್ಪಿಕೊಳ್ಳುತ್ತಾನೆ. ನಿಜವಲ್ಲ ಎಂದು ತಿಳಿದಿದ್ದರೂ ಮತ್ತೂ ಮತ್ತೂ ಸಿನಿಮಾ ಮಂದಿರದಲ್ಲಿ ಹೋಗಿ ಕುಳಿತುಕೊಳ್ಳುವಂತೆ ಮತದಾರ ತಿಳಿದೂ ತಿಳಿದೂ ಮತ್ತೂ ಮತದಾನಿಯಾಗುತ್ತಾನೆ. ಆ ಏಕ್ ದಿನ್ ಕಾ ಬಾದ್ ಷಾ ಆಗುವುದರಲ್ಲೇ ಎನೋ ಸುಖವನ್ನು ಕಾಣುತ್ತಾನೆ.

Saturday, May 12, 2018

“ಜನ ಮರುಳೋ ಜಾತ್ರೆ ಮರುಳೋ...”


            “ಜನ ಮರುಳೋ ಜಾತ್ರೆ ಮರುಳೋ...” ಇದೊಂದು ನಾಣ್ಣುಡಿ ಸಾಮಾನ್ಯವಾಗಿ ಹೇಳುವುದುಂಟು. ಲೋಕಾಭಿರಾಮವಾಗಿ ಹಾಗೆ ಬಂದು ಹೀಗೆ ಹೋಗುವ ಮಾತು ಇದು. ಇದರ ಬಗ್ಗೆ ಯೋಚಿಸುವಾಗ ಗಹನವಾದ ವಿಚಾರಗಳು ಯೋಚನೆಗೆ ಬರುತ್ತವೆ.

            ಮುಖ್ಯವಾಗಿ ಮನುಷ್ಯನಿಗೆ ತನ್ನ ಮೇಲೆ ವಿಶ್ವಾಸ ಇಲ್ಲದಿರುವುದೇ ಇದಕ್ಕೆ ಕಾರಣ.  ಬೇರೆ ಊರಿಗೆ ಪ್ರಯಾಣಿಸುವುದಕ್ಕೆ ಬಸ್ಸು ನಿಲ್ದಾಣದಲ್ಲಿ ಬಂದು ನಿಲ್ಲುತ್ತೇವೆ.  ಆ ಊರಿಗೆ ಹೋಗುವ ಹಲವಾರು ಬಸ್ಸುಗಳು ಬಂದು ನಿಲ್ಲುತ್ತವೆ. ಆದರೆ ಅದರಲ್ಲಿ ಏರುವುದಕ್ಕೆ ಮನಸ್ಸಾಗುವುದಿಲ್ಲ. ಕಾರಣ, ಜನಜಂಗುಳಿ ಕುಳಿತುಕೊಳ್ಳುವುದಕ್ಕೆ ಬಿಡಿ ನಿಲ್ಲುವುದಕ್ಕೂ ಜಾಗವಿಲ್ಲ ಎಂದುಕೊಂಡು ನಂತರದ ಬಸ್ಸಿಗೆ ಕೊರಳುದ್ದ ಮಾಡುತ್ತೇವೆ.  ಎಲ್ಲೋ ಒಂದು ದೇವಸ್ಥಾನವಿದೆ. ಊರು ಪರ ಊರಿನಿಂದ ಹಲವಾರು ಜನರು ಬಂದು ಸೇರುತ್ತಾರೆ. ನಿತ್ಯವೂ ಅಲ್ಲಿ ಜಾತ್ರೆ. ದೇವರ ದರ್ಶನಕ್ಕೆ ಸರತಿಯಲ್ಲಿ ನಿಲ್ಲಬೇಕಾಗುತ್ತದೆ. ಹಾಗಿದ್ದರೂ ಅಲ್ಲಿ ಹೋಗುವ ಕುತೂಹಲ ಮೂಡುತ್ತದೆ. ದೇವರ ದರ್ಶನ ಮಾಡಿಯೇ ತೀರುವ ಎಂದು ಸರದಿಯಲ್ಲಿ ನಿಂತುಬಿಡುತ್ತೇವೆ.

            ಎಲ್ಲೋ ಒಂದು ಮೂಲೆಯ ಅಥವಾ ನಮ್ಮ ಪಕ್ಕದ ಪುಟ್ಟ ಗುಡಿ ಅಥವಾ  ದೇವಾಲಯಕ್ಕೆ ಹೋಗುವುದಕ್ಕೆ ಮನಸ್ಸಾಗುವುದಿಲ್ಲ. ಸರದಿ ಸಾಲಿನಲ್ಲಿ ನಿಲ್ಲುವ ದೇವಾಲಯವೇ ಪ್ರಿಯವಾಗುತ್ತದೆ. ಒಂದೇ ಊರಿಗೆ ಹೋಗುತ್ತಿರುವ ಬಸ್ಸನ್ನು ಜನಜಂಗುಳಿ ಎಂದು ಬಿಟ್ಟು ಬಿಡುತ್ತೇವೆ. ಜನ ಜಂಗುಳಿ ಹೆಚ್ಚಿದೆ ಎಂದು ದೇವಾಲಯದ ಸರದಿಯಲ್ಲಿ ನಿಂತುಬಿಡುತ್ತೇವೆ.  ಎಲ್ಲಾ ಬಸ್ಸುಗಳೂ ಒಂದೇ ಗುರಿಯತ್ತ ನಮ್ಮನ್ನು ಕರೆದೊಯ್ಯುತ್ತವೆ. ಎಲ್ಲಾ ದೇವಾಲಯದ ಮೂಲ ತತ್ವ ಒಂದೇ. ಎಲ್ಲವೂ ನಮ್ಮನ್ನು ಮೋಕ್ಷದೆಡೆಗೆ ಕರೆದೊಯ್ಯುವ ಮಾಧ್ಯಮಗಳು. ಕಾರಣವಿಷ್ಟೇ ನಮ್ಮಲ್ಲಿನ ವಿಶ್ವಾಸದ ಕೊರತೆ. ನಮ್ಮೊಳಗಿನ ಆತ್ಮಕ್ಕೆ ಎಸಗುವ ವಂಚನೆ ಇದು.  ಭಕ್ತರು ಸೇರದ  ನಮ್ಮ ಪಕ್ಕದ ದೇವಾಲಯದ ದೇವರಲ್ಲಿ ಇರದ ವಿಶ್ವಾಸ ದೂರದ ಎಲ್ಲೋ ಜನಜಂಗುಳಿಯ ನಡುವೆ ಇರುವ ದೇವರಲ್ಲಿ ಮೂಡುತ್ತದೆ. ಅದರಂತೆ  ನಮ್ಮೊಳಗಿನ ಆತ್ಮದಲ್ಲಿ ಸ್ಥಿರವಾಗಿ ನಿಂತಿರುವ ಪರಮಾತ್ಮನನ್ನು ಕಾಣುವುದಿಲ್ಲ. ಕಾರಣವಿಷ್ಟೇ  ನಮ್ಮ ಸ್ವಾರ್ಥ. ದೇವರೆಂದರೆ ವರವನ್ನು ಕೊಡುವುದಕ್ಕಾಗಿಯೇ ಇರುವವನು.  ದೂರದ ದೇವಸ್ಥಾನಕ್ಕೆ ಹೋದರೆ ಒಳ್ಳೆಯದಾಗುತ್ತದೆ ಎಂಬ ವಿಶ್ವಾಸ. ಏನನ್ನೋ ಪಡೆದುಕೊಳ್ಳುವ ಹಂಬಲ. ನಮ್ಮಲ್ಲಿ ಇಲ್ಲದೇ ಇರುವುದನ್ನು ಹೊರಗೆ ಹುಡುಕುವುದು ಸಹಜ.

ನಮ್ಮಲ್ಲಿ ಇರದೇ ಇರುವ  ಅಗತ್ಯದ ವಸ್ತುಗಳನ್ನು ನಾವು ಹೊರಗೆ ಅರಸುತ್ತೇವೆ. ಅದಕ್ಕಾಗಿ ಅಲೆಯುತ್ತೇವೆ. ನಮ್ಮಲ್ಲಿ ಇಲ್ಲವಲ್ಲಾ ಎಂದು ಹಪ ಹಪಿಸುತ್ತೇವೆ. ಹಾಗಾಗಿ ಸದ್ಗುಣ ಸನ್ಮಸ್ಸು ಸದ್ಬಾವನೆ ಇವುಗಳನ್ನೇಲ್ಲ ನಾವು ಹೊರಗೆ ಪರರಲ್ಲಿ ಅರಸುವುದು. ನಮ್ಮಲ್ಲಿ ಅದು ಇಲ್ಲ. ನಮಗೆ ಅದರ ಆವಶ್ಯಕತೆ ಇರುವಾಗ ಹೊರಗೆ ಸಿಗಬೇಕೆಂಬ ಹಂಬಲ. ಒಂದು ವೇಳೆ ನಮ್ಮಲ್ಲಿ ಇವುಗಳೆಲ್ಲ ಇದ್ದರೂ ,  ನಮ್ಮಲ್ಲಿರುವ ಒಳ್ಳೆಯ ಗುಣದಿಂದ ಇನ್ನೊಬ್ಬರಿಗೆ ಒಳಿತಾಗುತ್ತದೆ ಎಂದಾಗ ಕೆಲವೊಮ್ಮೆ ಅದನ್ನು ಪ್ರಕಟ ಪಡಿಸಲೂ ಸ್ವಾರ್ಥ ಬಿಡುವುದಿಲ್ಲ.

ಊರೂರು ಸುತ್ತುವ  ಭಕ್ತನೊಬ್ಬ ಮನೆಗೆ ಬಂದಾಗ ಮನೆಯ ಹಿರಿಯ ಅಜ್ಜಿಯೊಬ್ಬಳು ಅಂಗಳದಲ್ಲಿ ಏನನ್ನೋ ಹುಡುಕುತ್ತಿರುತ್ತಾಳೆ. ಬಂದ ಭಕ್ತ ಅಜ್ಜಿಯಲ್ಲಿ ಕೇಳುತ್ತಾನೆ. “ ಏನನ್ನು ಹುಡುಕುತ್ತಿರುವೆ?”  ಅಜ್ಜಿ ಹೇಳುತ್ತಾಳೆ,
“ಚಿನ್ನದ ಮೂಗುತಿ ಕಳೆದು ಹೋಗಿದೆ ಹುಡುಕುತ್ತಿರುವೆ.”
ಭಕ್ತ ಕೇಳುತ್ತಾನೆ...” ಎಲ್ಲಿ ಕಳೆದುಹೋಯಿತು?”
“ ಅಡಿಗೆ ಮನೆಯಲ್ಲಿ ಏನೋ ಕೆಲಸ ಮಾಡುತ್ತಿರಬೇಕಾದರೆ ಬಿದ್ದು ಹೋಯಿತು. ಅದನ್ನು ಹುಡುಕುತ್ತಾ ಇದ್ದೇನೆ ಅಲ್ಲಿ ಕತ್ತಲೆ ಏನೂ ಕಾಣಿಸುವುದಿಲ್ಲ ಅದಕ್ಕೆ ಇಲ್ಲಿ ಹುಡುಕುತ್ತಿದ್ದೇನೆ. ”
ಅಜ್ಜಿಯ ಮೂರ್ಖತನಕ್ಕೆ  ಭಕ್ತನಿಗೆ ನಗು ಬರುತ್ತದೆ. ಆತ ಅಜ್ಜಿಯಲ್ಲಿ ಹೇಳುತ್ತಾನೆ. “ ಒಳಗೆ ಕಳೆದು ಹೋದ  ಮೂಗುತಿಯನ್ನು ಇಲ್ಲಿ ಹೊರಗೆ ಬಂದು ಹುಡುಕುವೆಯಲ್ಲ. ಒಳಗೆ ಬೆಳಕು ಉರಿಸಿ  ಹುಡುಕ ಬಹುದಲ್ಲಾ?”
ಆಗ ಅಜ್ಜಿ ಹೇಳುತ್ತಾಳೆ, “ ನೀನಾದರೂ ಅಷ್ಟೇ ನಿನ್ನೊಳಗಿನ ದೇವರನ್ನು ಕಾಣುವುದಿಲ್ಲ. ಎಲ್ಲೋ ಊರೂರು ಸುತ್ತಿ ಅಲ್ಲಿ ದೇವರನ್ನು ಹುಡುಕುತ್ತಿರುವೆ. ನಿನ್ನೊಳಗಿನ ದೇವರನ್ನು ನೋಡುವುದಕ್ಕೆ ನಿನಗೆ ಸಾಧ್ಯವಾಗುವುದಿಲ್ಲ. ಅದನ್ನು ನೋಡುವುದಕ್ಕೆ ಬೆಳಕು ಇರಬೇಕು.” ಇಲ್ಲಿ ಬೆಳಕು ಅಂದರೆ  ಜ್ಞಾನ. ಆದರೆ ಈ ಜ್ಜಾನ ಮೂಡಬೇಕಾದರೆ ನಮ್ಮಲ್ಲಿ ಸನ್ಮಸ್ಸು ಸದ್ಭಾವನೆ ಮೂಡಬೇಕು. ಅದನ್ನೆಲ್ಲ ಮೂಡಿಸುವ ವಿಶ್ವಾಸವೂ ಜಾಗ್ರತವಾಗಬೇಕು.

Monday, April 2, 2018

ಧರ್ಮಾರ್ಥ(ತ) ಜಿಜ್ಞಾಸೆಗಳು



ಮೊನ್ನೆ ಮೊನ್ನೆ ಗಾಂಧೀ ನಗರದಲ್ಲಿ ಯಾವುದೋ ಕಛೇರಿಯಿಂದ ಹೊರಬರಬೇಕಾದರೆ ರಸ್ತೆಯಲ್ಲಿ ಒಬ್ಬಾತ ನೆಟ್ಟ ನೋಟದಿಂದ ನೋಡುತ್ತಲೇ ಇದ್ದ. ನನಗೂ ಅಷ್ಟೇ ಯಾರೋ ಪರಿಚಿತ ಅಂತ ಅನ್ನಿಸಿತು. ಹೇಳಿ ಕೇಳಿ ಗಾಂಧೀನಗರ, ಒಬ್ಬರಲ್ಲ ಒಬ್ಬರು ಪರಿಚಿತರು ಸಿಕ್ಕೇ ಸಿಗುತ್ತಾರೆ. ಅರೇ ಇದು ಹಾಗಲ್ಲ. ಯಾರಿರಬಹುದು?  ಎಂದು ತಲೆ ಕೆರೆದು ನಾನು ನೆಟ್ಟಿಸಿ ನೋಡಿದೆ. ಆತ ಮುಗುಳು ನಗುತ್ತಾ ಹತ್ತಿರ ಬಂದು "ನಮಸ್ಕಾರ...ರಾಜಣ್ಣ ಅಲ್ವ? "  ಅಣ್ಣಾ ಅಂತ ಹೇಳಿದರೆ,  ಈಗ ಊರಿನವನು ಅಂತ ಪಕ್ಕ ಆಗಿ ಹೋಯಿತು.  ಇಲ್ಲಿನವರ ಸಾರ್ ಸಾರ್ ಗಳ ನಡುವೆ ಅಣ್ಣಅಕ್ಕ ಕಳೆದು ಹೋಗಿ ಬಹಳ ಸಮಯ ಆಗಿತ್ತು.

ಮತ್ತೆ ಆತ ಯಾರು ಅಂತ ಪರಿಚಯ ಬಿಚ್ಚಿಟ್ಟ. ನಾನು ಮೋಣು...ಗೊತ್ತಾಗಿಲ್ವ.  ಈಗ ಗೊತ್ತಾಗಿ ಹೋಯಿತು. ಸರಿ ಸುಮಾರು ಮೂವತ್ತು ವರ್ಷಗಳ ನಂತರ ಕಾಣುವ ಮುಖವಿದು. ಗಡ್ಡ ಮೀಸೆ ಬೇಳೆದದ್ದು ಮಾತ್ರವಲ್ಲ ಅಲ್ಲಲ್ಲಿ ಬೆಳ್ಳಿಗೆರೆಗಳೂ ಎಳೆದಾಗಿದೆ. ಈಗ ಆಶ್ಚರ್ಯದ ಉದ್ಗಾರ ನನ್ನದು.

ಹೌದು ಮೋಣು,  ನಮ್ಮ ಬಾಲ್ಯದ ದಿನಗಳವು.  ನಮ್ಮ ಮನೆಗೆ ಅದೂ ಇದು ಅಂತ ಬರುತ್ತಿದ್ದ. ನಮ್ಮ ನೆರೆ ಮನೆ ಅಲ್ಲದೇ ಇದ್ದರೂ ನಮ್ಮದೇ ಗ್ರಾಮದವನು. ಊರಲ್ಲಿ ಅಷ್ಟೇ ಸಾಕಲ್ವ?  ಗ್ರಾಮದವ ಎಂದೇಕೆ, ಜಿಲ್ಲೆಯವನೇ ಆದರೂ ಪರಿಚಯಸ್ಥರಾಗಿಬಿಟ್ಟು ಮಿತ್ರರಾಗಿಬಿಡುತ್ತಾರೆ. ಈ ಬೆಂಗಳೂರಿನಂತೆ, ಪಕ್ಕದ ಗೋಡೆಯ ಆಚೆಗಿರುವವನೂ ಐದಾರು ವರ್ಷದಿಂದ ನೋಡುತ್ತಿದ್ದರೂ ನಮಸ್ಕಾರ ಬಿಡಿ ಒಂದು ಕಿರು ನಗು ಕೂಡ ಇರುವುದಿಲ್ಲ. ಪರಿಚಯ ಸ್ನೇಹ ಜಗಳ ಏನಿದ್ದರೂ ಅದು ಊರಿನ ಕತೆಯೇ ಬೇರೆ. ಅದೂ ನಮ್ಮೂರು ಕೇಳಬೇಕೆ. ಹಲವು ಭಾಷೆಗಳಿದ್ದರೂ ಇವುಗಳಿಗೆಲ್ಲ ಒಂದೇ ಭಾಷೆಯಾಗಿಬಿಡುತ್ತದೆ.  ಮೋಣು ನಮ್ಮದೇ ಪಕ್ಕದ ಮನೆಯಂತಿದ್ದವನು. ಅವನ ಜತೆ ಬೋಳಂಗಳದ ಗುಡ್ಡೆ ಯ ಮಾವಿನ ಮರಗಳು, ಕಂಡತ್ತಾಡಿನ ಕೆರೆ, ಕಾಯರ್ ಕಟ್ಟೆಯ ಬಳಿಯ ಕುಂಟಲದ ಕಾಡು...ಛೇ ತಿರುಗಾಡುತ್ತಿದ್ದುದ್ದಕ್ಕೆ ಲೆಕ್ಕವಿಲ್ಲ. ಹಾಗೆಂದು ಅಪರಿಮಿತ ಸ್ನೇಹ ಎಂದೇನಲ್ಲ. ಬಾಲ್ಯದ ಹಲವು ಆಟ ಪಾಠಗಳಲ್ಲಿ ಈ ಮೋಣುವಿನದ್ದೂ ಒಂದೆರಡು ಅಕ್ಷರಗಳು ವಾಕ್ಯಗಳೂ ಇವೆ.

ಸಿಕ್ಕವನೇ ಕೇಳಿದ ಅಮ್ಮ ಹೇಗಿದ್ದಾರೆ. ಅಮ್ಮನಿಂದ ಕಣ್ಣ ಚಹ  ಚಕ್ಕುಲಿ ತಿಂದ ನೆನಪು ಹೇಳಿದಾಗ ಮಂದ ಹಾಸ ಮೂಡಿ ಮರೆಯಾಯಿತು. ಎಂದೋ ತಿಂದು ಎಂದೋ ಕರಗಿ ಈ ಪರಿಸರದಲ್ಲಿ ಸೇರಿ ಹೋದ ಕಣ್ಣ ಚಹ ಇಂದೂ ನೆನಪಿದೆ ಎಂದರೆ ಅದು ಚಹದ ಹಿಂದಿರುವ ಭಾವ ಅಷ್ಟೇ. ಮಾತನಾಡುತ್ತಿರುವಂತೆ ಬನ್ನಿ ಹೋಗೋಣ ಅಂತ ಪಕ್ಕದಲ್ಲೇ ಇದ್ದ ಹೋಟಲಿಗೆ ಕರೆದ. ನಾನು ಹಿಂದೆ ನಡೆದು ಒಂದು ಹಣ್ಣಿನ ಜ್ಯೂಸ್ ಗೆ ಹೇಳಿ ಮಾತನಾಡುತ್ತಾ ಕುಳಿತೆವು.

ಮೋಣು ಹೇಳಿ ಕೇಳಿ ಮುಸ್ಲಿಂ ಹುಡುಗ. ಆದರೂ ನಮ್ಮ ಆ ಒಡನಾಟ ಆ ಸ್ನೇಹ ಇಂದೂ ಮರುಕಳಿಕೆಯಾಗಿ ಬಹಳ ಸಂತಸವಾಗಿತ್ತು. ಜಾತಿ ಧರ್ಮಗಳು ಯಾವುದೂ  ನಮ್ಮ ವಿಚಾರಗಳೇ ಅಗಿ ಇರಲಿಲ್ಲ. ಎಷ್ಟೊ ಸಲ ಬಾಯಾರಿನ ಯಕ್ಷಗಾನ ಬಯಲಾಟಕ್ಕೆ ನನ್ನ ಜತೆಯೇ ಬಂದು ನೆಲದಲ್ಲಿ ಒಟ್ಟಿಗೆ ಕುಳಿತು ಬೆಳಗಿನ ವರೆಗೂ ಆಟ ನೋಡಿದ್ದ. ಚರುಂಬುರಿ ಮಸಾಲೆ ಕಡಲೆ ತಿಂದಿದ್ದ. ಭೋಳಂಗಳದ ನೇಮದಲ್ಲಿ ಕಲ್ಲಂಗಡಿ ತುಂಡು ಹಂಚಿ ತಿಂದಿದ್ದ.  ಪೈವಳಿಕೆಯ ಉತ್ಸವಕ್ಕೆ ಉಪ್ಪಳದ ಅಯ್ಯಪ್ಪ ಬೆಳಕಿಗೆ   ಕೇವಲ ಬಾಲ್ಯದ ಸ್ನೇಹ ಸಂಬಂಧದಲ್ಲಿ ಒಟ್ಟಿಗೇ ತಿರುಗಾಡಿದ್ದ.  ಈ ಧರ್ಮ ಜಿಜ್ಞಾಸೆಗಳು ಜನ ಸಾಮಾನ್ಯನ ನಿತ್ಯ ಜೀವನದಲ್ಲಿ ಒಂದು ವಿಷಯವೇ ಅಲ್ಲ. ಎಲ್ಲದರ ಸೀಮೆಯನ್ನು ದಾಟಿ ಅಲ್ಲಿ ಮತ್ತೆಂದೋ ಒಂದು ಇರುತ್ತದೆ.  ಇಂದೂ ಅಷ್ಟೇ.  ವಿಚಿತ್ರವೆಂದರೆ  ಜನ ಸಾಮಾನ್ಯನ ಈ ಸಾಮಾನ್ಯ ವಿಷಯಗಳು ಸಮಾಜದಲ್ಲಿ ಗಂಭೀರವಾಗುವುದೇ ಇಲ್ಲ.

ಊರಿನ ಬಾಲ್ಯದ ಹಲವಾರು ವಿಚಾರಗಳು ಮಾತನಾಡಿದೆವು. ನೆನಪಿಗೆ ಬಂದ ವ್ಯಕ್ತಿಗಳ ಬಗ್ಗೆ ಪರಸ್ಪರ ಕೇಳಿಕೊಂಡೆವು.  ಹೆಂಡತಿ ಮಕ್ಕಳು ಎಲ್ಲ ವಿಚಾರಗಳು ವಿನಿಮಯವಾಯಿತು.  ಒಂದು ಘಂಟೆ ಕಳೆದದ್ದೇ ಅರಿವಿಗೆ ಬರಲಿಲ್ಲ. .  ನಾನು ಜೀವನ ಹಾದಿಯಲ್ಲಿ ಬೇರೆಯಾದಾಗ ಆತ ದೂರದ ಗಲ್ಪ್  ರಾಜ್ಯಕ್ಕೆ ಜೀವನವರಸಿ ಹೋಗಿದ್ದ. ಅಂದಿನಿಂದ ಇಂದೇ ಭೇಟಿ.   ಬೊಂಬಾಯಿ ಬಸ್ಸು ಹತ್ತುವುದಕ್ಕೆ ಹೋದಾಗ ಕೈ ಕುಲುಕಿ ’ಕಾಣುವ’  ಎಂದು ಹೇಳಿದ ಮಾತು ಇಷ್ಟು ದೀರ್ಘ ಸಮಯದವರೆಗೂ ಜ್ಯಾರಿಯಲ್ಲಿರುತ್ತದೆ ಎಂದು ಆಗ ಕೈ ಕುಲುಕಿದಾಗ ಅರಿವಿರಲಿಲ್ಲ.  ಈಗಲೂ ಹಾಗೆ. ಕೊನೆಯಲ್ಲಿ ಸಹಜವಾಗಿ ವಿದಾಯ ಹೇಳುವ ಘಳಿಗೆ. ಈಗ ಕಾಣುವ ಅಂತ ಅದೇ ಮಾತು. ಆಗ ಇದನ್ನೇ ನಾನು ಹೇಳಿದೆ...." ಮಾರಾಯ ಆವತ್ತು ನೀನು ಇದೇ ಹೇಳಿ ಈಗ ಸಿಕ್ಕಿ ಮಾತಾಡ್ತಾ ಇದ್ದಿಯಾ ಅಂತ". ಇದನ್ನು ಅದೇ ಊರಿನ ಬ್ಯಾರಿ ಮಲಯಾಳಂ ನಲ್ಲೇ ಹೇಳಿದೆ. ಆತನಿಗೆ ಕಣ್ಣು ಭಾರವಾದ ಹಾಗೆ ಭಾಸವಾಯಿತು. ಭಾವನೆಗಳು ಕಣ್ಣೀರು ಅದು  ಜಾತಿ ಭಾಷೆಯನ್ನು ಮೀರಿ ಒಂದೇ ರೀತಿ ಇರುತ್ತದೆ. ಭಾರತದವನಾದರೂ ದೂರದ ಅಮೇರಿಕದವನಾದರೂ ದುಃಖವಾದರೆ ಹೃದಯ ಭಾರವಾದರೆ  ಸುರಿಸುವುದು   ಅದೇ ಕಣ್ಣೀರು. ಇಲ್ಲೂ ಹಾಗೆ. ಆತ ಹೇಳಿದ...ಅದೇ ಮಲ್ಲು ಭಾಷೆಯಲ್ಲಿ..." ನೀ ಅದೇ ಪೋಲೆ....ಎಂದೂ ಚೇಂಜ್ ಆಯಿಟ್ಟಿಲ್ಲ" ( ನೀನು ಅದೇ ರೀತಿ ಏನೂ ಬದಲಾಗಿಲ್ಲ).

ಮತ್ತೂ ಮುಂದೆ ಹಲವು ವಿಚಾರ ಮಾತನಾಡುತ್ತಾ ಜಾತಿ ವಿಚಾರ ಬಂದಾಗ ಹೇಳಿದ. ಆಗ ನಾವು ಹುಡುಗರು....ಈಗ ತಿಳುವಳಿಕೆ ಬಂದು ದೊಡ್ಡವರಾಗಿದ್ದೇವೆ. ಜೀವನದ ಅರ್ಧ ಪಾಲು ಕಳೆದಿರಬಹುದು. ಆಗ ಜಾತಿ ಭಾಷೆಯ ಬಗ್ಗೆ ನಾವು ಮಾತಾಡಿರಲಿಕ್ಕಿಲ್ಲ. ಆದರೆ ಈಗ ಹಾಗೆ ಆಗಬೇಕೆಂದೇನೂ ಇಲ್ಲ. ಆದರೂ ನಾನು ಅದೇ ರೀತಿ ಇದ್ದದ್ದು ಆತನಿಗೆ ಆಶ್ಚರ್ಯ ತಂದಿತ್ತು. ನಾನು ಹೇಳಿದೆ,
"ಎಂತದು ಜಾತಿ ಮಾರಾಯ. ನಿಮ್ಮದೇ ಜಾತಿಯವರು ಅದೂ ಊರಿನವರು  ನನಗೆ ಕ್ಲೈಂಟ್ ಆಗಿ ಕೆಲವರಿದ್ದಾರೆ.  ಸ್ನೇಹ ವಿಶ್ವಾಸದಿಂದ  ನನ್ನ ಜತೆ ವ್ಯವಹಾರ ಇರಿಸಿದ್ದಾರೆ.  ನಾನು ಊಟ ಮಾಡುವ ಒಂದು ತುತ್ತಿನಲ್ಲಿ ಅವರದ್ದು ಪಾಲು ಇರಬಹುದು.  ಜಾತಿ ಧರ್ಮ ಎಲ್ಲವೂ ಒಂದು ಪರಿಧಿಯೊಳಗೆ ಮನುಷ್ಯನ ನಡುವೆ ಇರುತ್ತದೆ. ಇರುತ್ತದೆ ಅಲ್ಲ ಇರಬೇಕು. ನಾನು ರಾಮ ಕೃಷ್ಣ ಅಂತ ಹೇಳಿದರೆ ನೀನು ’ಅಲ್ಲಾ’   ಅಂತ ಹೇಳ್ತಿಯಾ. ನೀನು ಅಲ್ಲಾ ಅಂತ ಹೇಳಿದ್ದನ್ನು ನಾನು ಕನ್ನಡದಲ್ಲಿ ಅರ್ಥ ಮಾಡುವುದಕ್ಕೆ ಹೋದರೆ ಅನರ್ಥವಾಗುತ್ತದೆ ಅಲ್ವ. ಧರ್ಮ ಎಂದರೆ ಅಷ್ಟೇ. ಅದನ್ನು ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಇದೆ.  ಧರ್ಮದ ವಿಷಯಗಳು ವಿಪರೀತವಾಗಿ ತಿಳಿದುಕೊಂಡಿದ್ದರೆ ನೀನು ಕರೆದು ನನ್ನನ್ನು ಮಾತಾಡಿಸುತ್ತಿರಲಿಲ್ಲ. ಹೀಗೆ ಜ್ಯೂಸ್ ಕುಡಿಸಿ ಕೈ ಕುಲುಕುತ್ತಿರಲಿಲ್ಲ. ನನ್ನ ಅಮ್ಮ ನನ್ನ ಸಂಸಾರದ ಬಗ್ಗೆ ಕೇಳುತ್ತಿರಲಿಲ್ಲ. ಹೋಗಲಿ ಅಂದು ಕುಡಿದ ಕಣ್ಣ ಚಾಯವೂ ನೆನಪಿರುತ್ತಿರಲಿಲ್ಲ ಅಲ್ವ? ಜಾತಿ ಧರ್ಮ ಯಾವುದೇ ಆಗಲಿ ಅದು ಅವಹೇಳನ ಮಾಡುವ ವಸ್ತುಗಳಾಗಬಾರದು. ನಮ್ಮ ಮಕ್ಕಳು ನಮ್ಮ ಸಂಸಾರ ಬಂಧು ಬಳಗ ಬೇರೆಯವರು ಪ್ರೀತಿಯಿಂದ ಕಾಣಬೇಕೆಂದೇನೂ ಇಲ್ಲ. ಹಾಗೆಂತ ಅವಹೇಳನ ಮಾಡಿದ್ರೆ ಸಹಿಸ್ತೇವಾ? ಇಲ್ಲ ಧರ್ಮವೂ ಹಾಗೆ. "



"ಆಯ್ತು  ರಾಜಣ್ಣ ನಿಮ್ಮಲ್ಲಿ ಮಾತಾಡಿ ತುಂಬ ಖುಷಿಯಾಯಿತು. ಈಗ ಮಂಗಳೂರಲ್ಲಿ ಮನೆ ಮಾಡಿದ್ದೇನೆ. ಊರಿಗೆ ಬಂದರೆ ಮನೆಗೆ ಬನ್ನಿ.  ಖಂಡಿತ ಸಿಗುವ."  ಅಂತ ಹೇಳಿ ಕೈ ಕುಲುಕಿ ಅದೇ ಗಾಂಧೀನಗರದ ಜನಜಂಗುಳಿಯಲ್ಲಿ ಕರಗಿ ಹೋದ.

ನಾನು ಹಿಂದು , ನಿತ್ಯ ಎರಡು ಹೊತ್ತು ಪ್ರಾರ್ಥನೆ ಮಾಡುತ್ತಿದ್ದೇನೆ. ಆದರೂ ನನಗೆ ಬೇರೆ ಯಾವ ಧರ್ಮದ ಬಗ್ಗೆಯೂ ತಾತ್ಸಾರವಿಲ್ಲ. ಹಾಗಂತ ನನ್ನ ಧರ್ಮದ ಅವಹೇಳನ ನನಗೆ ಸಹಿಸುವುದಕ್ಕೂ ಸಾಧ್ಯವಾಗುವುದಿಲ್ಲ. 

ಎಲ್ಲಾ ಧರ್ಮಗಳು ಬೇರೆ ಬೇರೆಯೇ ನೀರು ಬೆಂಕಿ ಗಾಳಿ ಯಂತೆ ಪಂಚ ಭೂತಗಳು ಇದ್ದಹಾಗೆ. ಹಕ್ಕಿ ಪಕ್ಷಿ ಪ್ರಾಣಿಗಳು ಇದ್ದ ಹಾಗೆ.  ಎಲ್ಲದಕ್ಕೂ ಅದರದ್ದೇ ಆದ ಧರ್ಮವಿದೆ.  ಇದೆಲ್ಲ ಜತೆಯಾಗಿ ಕಾಣುವ ಪ್ರಕೃತಿ ಇದೆ. ಮನುಷ್ಯತ್ವ ಇರುವುದು ಇದನ್ನು ಅರ್ಥೈಸುವುದರಲ್ಲಿ. ಭಾರತ ಇದಕ್ಕೆಲ್ಲ ಆಶ್ರಯ ನೀಡಿದೆ. ಹಾಗಾಗಿಯೇ ಎಲ್ಲೂ ಇಲ್ಲದ ವಸುಧೈವ ಕುಟುಂಬಕಂ ಭಾರತದಿಂದಲೇ ಉದಯವಾಗಿದೆ.