Thursday, August 18, 2022

ಹೀಗೂ ಒಂದು ಅನುಭವ.

 ಇದು ನಡೆದು ಬಹಳ ದಿನವಾಗಿತ್ತು.  ಅದು ಕೆನರಾ ಬ್ಯಾಂಕ್ ನ ಕಛೇರಿ. ಅದರ ತಿಂಗಳ ಆಡಿಟ್ ಕೆಲಸಕ್ಕೆ ನಾನು ಹೋಗುತ್ತಿದ್ದೆ.  ಅಂದು ಸ್ವಲ್ಪ ಹಣ ಬ್ಯಾಂಕ್ ಖಾತೆಯಿಂದ ತೆಗೆಯಬೇಕಿತ್ತು.  ಬ್ಯಾಂಕ್ ಪಕ್ಕದಲ್ಲೇ ಇದ್ದ ಎಟಿಎಂ ಗೆ ಹೋದೆ. ಹೊತ್ತು ಮಧ್ಯಾಹ್ನವಾಗಿತ್ತು. ಎಟಿಎಂ ಬಾಗಿಲ ಬಳಿಗೆ ಬರುವಾಗ ಒಳಗೆ ವೃದ್ದೆಯೊಬ್ಬಳಿದ್ದಳು. ಸರಿ ಹೊರಗೆ ಕಾಯುತ್ತಿದ್ದೆ. ಬೇರೆ ಯಾರೂ ಇರಲಿಲ್ಲ. ಬಹಳ ಹೊತ್ತಾಯಿತು, ವೃದ್ದೆ ಹೊರಗೆ ಬರುತ್ತಿಲ್ಲ. ಎಟಿಎಂ ಯಂತ್ರವನ್ನು ನೋಡುತ್ತಾ ಇದ್ದಾಳೆ. ಇನ್ನು ತಡವಾಗುತ್ತದೆ ಎಂದುಕೊಂಡು ನಿಧಾನವಾಗಿ ಬಾಗಿಲು ತಳ್ಳಿ "ಏನಮ್ಮಾ? ಆಯ್ತಾ?" ಎಂದು ಕೇಳಿದೆ.  ವಯಸ್ಸಾದ ವೃದ್ಧೆಯಾದರೂ ಅಮ್ಮ ಎಂದು ಕರೆಯುವುದು ನನ್ನ ರೀತಿ. ಅಜ್ಜಿ ಎಂದು ಕರೆಯಬಹುದು. ಆದರೆ ಹಾಗೆ ಕರೆಯುವುದು ವೃದ್ಧೆಯ ಆತ್ಮಬಲವನ್ನು ಕುಗ್ಗಿಸಿದಂತೆ ನನಗೆ ಭಾಸವಾಗುತ್ತದೆ. ವಯಸ್ಸಾಗುತ್ತದೆ.  ಪ್ರತಿಕ್ಷಣ ಕಳೆದಂತೆ ನಾವು ವೃದ್ದರಾಗುತ್ತೇವೆ. ಅಜ್ಜಿ ಎಂದು ಕರೆದಾಗ ಕೆಲವೊಮ್ಮೆ ವಯಸ್ಸಾಯಿತು. ನಾವು ಅಶಕ್ತರಾಗುತ್ತಿದ್ದೇವೆ ಎಂಬ ಮನೋಭಾವದಿಂದ ಸಹಜವಾಗಿ  ಆತ್ಮ ಬಲ ಕುಂಠಿತವಾಗುತ್ತದೆ. 

ವೃದ್ದೆ ತಿರುಗಿ ನೋಡಿ ಅಸಹಾಯಕ ದೃಷ್ಟಿಯಿಂದ ನೋಡಿದಳು. ಯಾಕೋ ಹಣ ಬರುತ್ತಿಲ್ಲ. ಎಂದು ಅಲವತ್ತುಕೊಂಡಳು. ನಾನು ನೋಡಬಹುದೇ ಎಂದು ಕೇಳಿದಾಗ ಎಟಿಎಂ ಕಾರ್ಡ್ ಕೈಗಿತ್ತಳು. ನಾನು ಕಾರ್ಡ್ ಯಂತ್ರದೊಳಗೆ ತಳ್ಳಿ ನೋಡಿದರೆ, ಕಾರ್ಡ್ ಬ್ಲಾಕ್ ಆಗಿತ್ತು!  

ಅಮ್ಮಾ  ನೀವು ಪಿನ್ ನಂಬರ್ ತಪ್ಪಾಗಿ ಒತ್ತಿದ್ದೀರಾ ಬ್ಲಾಕ್ ಅಗಿದೆ.  ಆಕೆ ಗಾಬರಿಯಿಂದ ನೋಡಿದಳು. ಏನು ಮಾಡಲಿ ಅಂತ ನನ್ನನ್ನು ಕೇಳಿದಳು. ನಾನು ಹೇಳಿದೆ ಅಮ್ಮ ಮನೆಯಲ್ಲಿ ಬೇರೆ ಮಕ್ಕಳು ಯಾರು ಇಲ್ಲವೇ? ಯಾರನ್ನಾದರೂ ಕರೆದುಕೊಂಡು ಬರಬೇಕು. ಆಕೆ ಒಂದು ಮಾತು ಆಡಲಿಲ್ಲ.ಹಾಗೆ ಗಾಬರಿಯಿಂದ ನೋಡಿದಳು. ನಾನು ಬ್ಯಾಂಕ್ ಗೆ ಹೋಗಿ ಕೇಳುವಂತೆ ಹೇಳಿದೆ. ಆಕೆ ಮತ್ತೂ ಗಾಬರಿಯಿಂದ ನೋಡುತ್ತಿದ್ದಳು. ನಾನು ಆಕೆಯನ್ನು ಕರೆದುಕೊಂಡು ಅಲ್ಲೆ ಇದ್ದ ಬ್ಯಾಂಕ್ ಶಾಖೆಯ ಒಳಗೆ ಹೋದೆ. ಅದೇ ಬ್ಯಾಂಕ್ ನ ಆಡಿಟ್ ಮಾಡುವುದರಿಂದ ಎಲ್ಲರ  ಪರಿಚಯ ಇತ್ತು. ನಾನು ಹೋಗಿ ಅದನ್ನು ಸರಿ ಮಾಡಿಕೊಡುವಂತೆ ಹೇಳಿ ವೃದ್ಧೆಯ ಅಸಹಾಯಕತೆಯನ್ನು ವಿವರಿಸಿದೆ. ಬ್ಯಾಂಕ್ ಸಿಬ್ಬಂದಿ ಗೌರವಯುತವಾಗಿ ಕಾರ್ಡ್ ಬ್ಲಾಕ್ ಅದುದನ್ನು ನಿವಾರಿಸಿ ಮತ್ತೊಮ್ಮೆ ಪರೀಕ್ಷಿಸುವಂತೆ ಹೇಳಿದರು. ಹಾಗೆ ಎಟಿಎಂ ಗೆ ಬಂದು ಅದರ ಪಿನ್ ಬದಲಿಸಿ ಆಕೆಗೆ ಎಷ್ಟು ಹಣ ಬೇಕು ಎಂದು ಕೇಳಿದಾಗ ಸಾವಿರ ರೂಪಾಯಿ ತೆಗೆದು ಆಕೆಯ ಕೈಗೆ ಇತ್ತೆ. ಆಕೆ ವೃದ್ದಾಪ್ಯ ವೇತನ ಬಂದಿದಾ ನೋಡುವುದಕ್ಕೆ ಹೇಳಿದಳು.  ನೋಡಿದಾಗ ಅದೂ ಬಂದಿತ್ತು. ಅಕೆಗೆ ಸಂತೋಷವಾಯಿತು. ಆಕೆಯ ಖಾತೆಯಲ್ಲಿ ಸುಮಾರು ಎಂಭತ್ತು ಸಾವಿರ ಹಣವಿತ್ತು. ನಾನು ಕೇಳಿದೆ ಅಮ್ಮ  ಯಾಕೆ ಯಾರನ್ನೂ ಕರೆದು ತರಲಿಲ್ಲ. ಹೀಗೆ ಒಬ್ಬರೆ ಬಂದರೆ ಕೆಲವೊಮ್ಮೆ ತೊಂದರೆ ಅನುಭವಿಸಬೇಕಾಗುತ್ತದೆ. ಎಲ್ಲರೂ ಒಳ್ಳೆಯವರಲ್ಲ. 

ಆಕೆಯ ಕಥೆ ಹೇಳಿದಳು. ಆಕೆಯದ್ದೂ ಒಂದು ಕಥೆ. 

ಆಕೆಗೆ ವಯಸ್ಸಾದ ಮಗನಿದ್ದ. ಮಗಳೂ ಇದ್ದಾಳೆ. ಮಗನಿಗೆ ಮಗಳಿಗೆ ಮಕ್ಕಳಾಗಿ ಮೊಮ್ಮಕ್ಕಳ ಅಜ್ಜಿಯವಳು. ಇಷ್ಟೆಲ್ಲಾ ಇದ್ದರೂ ಆಕೆ ಕರೆದು ತರಲಿಲ್ಲ. ಕಾರಣ ಇಷ್ಟೆ ಆಕೆಯ ಬ್ಯಾಂಕ್ ನಲ್ಲಿ ಎಷ್ಟು ದುಡ್ಡಿದೆ ಎಂದು ಅವರಿಗೆಲ್ಲ ತಿಳಿಯುವುದು ಆಕೆಗೆ ಇಷ್ಟವಿರಲಿಲ್ಲ. ಒಂದು ವೇಳೆ ಅದು ತಿಳಿದರೆ ಮಗನೂ ಮಗಳೂ ಅದನ್ನು ಏನೋ ಕಷ್ಟ ಹೇಳಿ ಅದನ್ನು ಕಸಿದುಕೊಂಡು ಬಿಡುತ್ತಿದ್ದರು. ಇನ್ನು ಮಗ ಆತನ ಬಗ್ಗೆ ಹೇಳದಿರುವುದೇ ಉತ್ತಮ. ಆಕೆ ಆ ಪ್ರದೇಶದ ಪುಡಿ ರೌಡಿ. ಅಬ್ಭಾ ಎಂದುಕೊಂಡೆ. ಯಾವುದೇ ತಾಯಿಗಾದರೂ ತನ್ನ ಮಗ ರೌಡಿ ಎನ್ನುವಾಗ ಆತಂಕವಾಗುತ್ತದೆ. ಆಕೆಯ ಮೊಗದಲ್ಲೂ ಅದನ್ನು ಗುರುತಿಸಿದೆ. ಯಾವುದೆ ಹೆಣ್ಣಾದರೂ ತನ್ನ ಮಗ ರೌಡಿಯಾಗಲಿ ಎಂದು ಹೆರುವುದಿಲ್ಲ. ಅದೆಲ್ಲ ಪುರಾಣಕಾಲದ ಕಥೆಗಳು. ಮಹಿಷಾಸುರನನ್ನು ಆತನ ತಾಯಿ ತಪಸ್ಸು ಮಾಡಿ ವರ ಬೇಡಿ ಹೆತ್ತಿದ್ದಳು. ಈಕೆಯ ಮಗ ರೌಡಿ. ಆತನ ಕೈಕಾಲು ಮುರಿದು ಗಾಯಗೊಂಡಾಗ ಮಾತ್ರವೇ ಆತನನ್ನು ಮನೆಯಲ್ಲಿ ಕಾಣುತ್ತಾಳೆ. ಆಕೆ ಎಂದಳು ಹಲವು ಸಲ ಆತನಿಗೆ ಹಾಗೇ ಏನಾದರೂ ಆಗಲಿ ಮನೆಯಲ್ಲಾದರೂ ಬಿದ್ದುಕೊಂಡಿರುತ್ತಾನೆ , ಊರಿಗೆ ಯಾಕೆ ತೊಂದರೆ? ಅಂತ ಭಾವಿಸಿದ್ದು ಇದೆ. ಛೇ...ತಾಯಿಯಾಗಿ ಆಕೆಯ ನೋವು ಎಂಬುದು ಅರ್ಥವಾಗಬೇಕದರೆ ಸ್ವತಃ ಅದನ್ನು ಅನುಭವಿಸಬೇಕು. ಆತ ಶಾಲೆಗೆ ಹೋಗುವಾಗ ಕಷ್ಟ ಪಟ್ಟು ಕಲಿಸಿದ್ದೆ. ಆದರೆ ಆತ ವಿದ್ಯೆ ಕಲಿಯಬೇಕಲ್ಲ. ಬೇಡದೆ ಇದ್ದ ಸಹವಾಸ ಮಾಡಿದ ಈಗ ಸಂಪೂರ್ಣ ಕೆಟ್ಟು ಹೋಗಿದ್ದಾನೆ. ಮನೆಯಲ್ಲಿ ಇರುವುದೇ ಅಪರೂಪ. ಇನ್ನು ತನ್ನ ಬಳಿಯಲ್ಲಿ ಬ್ಯಾಂಕ್ ಖಾತೆ ಇದೆ ಎಂದು ತಿಳಿದರೆ ಆತ ಪೀಡಿಸುತ್ತಾನೆ. ಮನೆಯಲ್ಲಿದ್ದ ಮೊಮ್ಮಕ್ಕಳೋ ಅವರು ಅವರಮ್ಮ ಹೇಳಿದಂತೆ ಕೇಳುವವರು. ಅವರದೂ ಒಂದು ಬದುಕು. ಹಲವು ಸಲ ತನ್ನ ವೃದ್ದಾಪ್ಯ ವೇತನವೇ ಅವರ ಹೊಟ್ಟೆ ತುಂಬಿಸುವುದು. 

ಬೇಜವಾಬ್ದಾರಿ ಸಂಸಾರ. ಅದನ್ನು ಕಟ್ಟಿಕೊಂಡು ಬದುಕಬೇಕಾದ ಅನಿವಾರ್ಯತೆ. ನಾನು ಆಕೆಯನ್ನು ಕರೆದುಕೊಂಡು ಪುನಃ ಬ್ಯಾಂಕ್ ನೊಳಗೆ ಹೋದೆ. ಆಕೆಯಲ್ಲಿ ಕೇಳಿದೆ ನಿನಗೆ ತಿಂಗಳಿಗೆ ಎಷ್ಟಾದರು ಹತ್ತು ಸಾವಿರಕ್ಕಿಂತ ಹೆಚ್ಚು ಖರ್ಚು ಬರುವುದಿಲ್ಲ. ಉಳಿದ ದುಡ್ಡನ್ನು ಫಿಕ್ಸೆಡ್ ಡಿಪಾಸಿಟ್ ಇಡುವಂತೆ ಹೇಳಿದೆ.  ಅದೆಲ್ಲ ತನಗೆ ಗೊತ್ತಿಲ್ಲ ಎಂದು ಅಮಾಯಕಳಾಗಿ ಹೇಳಿದಳು. ನಾನು ಬ್ಯಾಂಕ್ ನವರಲ್ಲಿ ಐವತ್ತು ಸಾವಿರ ಎಫ್ ಡಿ ಮಾಡುವಂತೆ ಹೇಳಿದೆ. ಆಕೆಯಲ್ಲಿ ಹೇಳಿದೆ, ಇನ್ನುಆಕೆಯ ಖಾತೆಯಲ್ಲಿ ಎಷ್ಟು ದುಡ್ಡಿದೆ ಎಂದು ಮನೆ ಮಂದಿಗೆ ತಿಳಿಯಲಾಗದು. ಅದನ್ನು ಎಟಿಎಂ ನಲ್ಲಿ ಪಡೆಯುವುದಕ್ಕೂ ಸಾಧ್ಯವಾಗದು. ತೀರ ಆವಶ್ಯಕತೆ ಬಿದ್ದರೆ ಬ್ಯಾಂಕ್ ಬಂದು ಹೇಳಿದರೆ ಅವರು ಅದನ್ನು ಒದಗಿಸಿಕೊಡುತ್ತಾರೆ ಎಂದು ಹೇಳಿದೆ. ಬ್ಯಾಂಕ್ ನವರು ಆಕೆಯಿಂದ ಬೇಕಾದ ಸಹಿಯನ್ನು ಪಡೆದು ಐವತ್ತು ಸಾವಿರ ಆಕೆಯ ಹೆಸರಲ್ಲಿ ಫಿಕ್ಶೆಡ್ ಡಿಪಾಸಿಟ್ ಇಟ್ಟರು.  ಏನೋ ಒಂದಷ್ಟು ಹೆಚ್ಚು ಬಡ್ಡಿ ಬ್ಯಾಂಕ್ ಖಾತೆಗೆ ಬಂದು ಬೀಳುತ್ತದೆ.  

ಇದೆಲ್ಲ ಆಕೆಗೆ ವಿವರಿಸಿ ಹೇಳಿ ಅಂದು ತೆರಳಿದ್ದೆ. ಇಂದು ಅದೇ ಬ್ಯಾಂಕ್ ಗೆ ಹೋದಾಗ ಅದೇ ವೃದ್ದೆ ಸಿಕ್ಕಿದಳು. ಆಕೆಯೇ ಕರೆದು ಪ್ರೀತಿಯಿಂದ ಮಾತನಾಡಿಸಿದಳು. ಅದರನಂತರ ಮತ್ತಷ್ಟು ಹಣ ಫಿಕ್ಸೆಡ್ ಡಿಪಾಸಿಟ್ ಗೆ ಹಾಕಿ ಈಗ ಎರಡು ಲಕ್ಷದಷ್ಟು ಹಣ ಉಳಿತಾಯದಲ್ಲಿತ್ತು. ಆಕೆ ಹೇಳಿದಳು ಎಲ್ಲ ನಿಮ್ಮ ಉಪದೇಶ. ಆ ಉಪಕಾರ ಎಂದಿಗು ಮರೆಯಲ್ಲ. ಈಗ ನನ್ನ ಖಾತೆಯಲ್ಲಿ ಎಷ್ಟಿದೆ ಎಂದು ಮಕ್ಕಳಿಗೆ ಮೊಮ್ಮಕ್ಕಳಿಗೆ ಗೊತ್ತಾಗುವುದಿಲ್ಲ. ಅವರನ್ನು ಕರೆದುಕೊಂಡೇ ಬರುತ್ತೇನೆ. ಖಾತೆಯಲ್ಲಿ ದುಡ್ದು ಇರುವುದಿಲ್ಲ ಎನ್ನುವಾಗ ಅವರು ಕಸಿದುಕೊಳ್ಳುವುದು ಸಾಧ್ಯವಾಗುವುದಿಲ್ಲ. 

ಆಕೆ ಹೀಗೆ ಹೇಳುವಾಗ ಆಕೆಯ ಮುಖದಲ್ಲಿ ಒಂದು ಕೃತಜ್ಜತೆ ಇದ್ದರೆ, ನನ್ನ ಮುಖದಲ್ಲಿ ಒಂದು ಧನ್ಯತೆ ಇತ್ತು.  ಆಕೆಯ ಫೋಟೊ ಹಾಕುವ ಅಂತ ಇತ್ತು. ಆದರೆ ಅದೂ ಆಕೆಗೆ ತೊಂದರೆಯಾಗಬಹುದು ಎಂದು ಸುಮ್ಮನಾದೆ. 




Monday, August 15, 2022

ಕೆಸುವಿನ ದಂಟಿನ ಪಲ್ಯ

 ಕೆಸುವು ಯಾರಿಗೆ ಗೊತ್ತಿಲ್ಲ ಹೇಳಿ. ಮಲೆನಾಡು ಕರಾವಳಿ ಜಿಲ್ಲೆಗಳಲ್ಲಿ ಹೇರಳವಾಗಿ ಎಲ್ಲೆಂದರಲ್ಲಿ ಸಿಗುತ್ತದೆ. ಇದರ ಹಲವಾರು ಉಪಯೋಗಗಳು ಅಡುಗೆಯಲ್ಲಿ ಬಳಕೆಯಾಗುತ್ತವೆ. ಕೆಸುವಿನ ಎಲೆಯ ಪತ್ರೋಡೆ ಅತ್ಯಂತ ಜನಪ್ರಿಯ ತಿಂಡಿ. ಪತ್ರೋಡೆ ಸವಿಗೆ ಮನಸೋಲದವರಿಲ್ಲ. ಒಂದು ವೇಳೆ ತುರಿಸುತ್ತಿದ್ದರೂ ಲೆಕ್ಕವೇ ಇಲ್ಲ ಎಂಬಂತೆ ತಿಂದೇ ಶುದ್ದ ಅಂತ ತಿಂದು ಬಿಡುವವರು. ಇಲ್ಲಿ ಇಗ ಕೆಸುವಿನ ದಂಟಿನ ಪಲ್ಯದ ಬಗ್ಗೆ  ಹೇಳುತ್ತೇನೆ. ಕೆಸುವಿನ ದಂಟು ಕೂಡ ಹಲವಾರು ವಿಧದಲ್ಲಿ ಬಳಕೆಯಾಗುತ್ತಿದೆ. ಇದರ ಸಾಸಿವೆ ರಸಾಯನ ಸಾರು ಸಾಂಬಾರು...ಇದರ ಪಲ್ಯ ಅದೂ ಬಹಳ ಸುಲಭ ಮತ್ತು ಬೇಗನೇ ಕೇವಲ ಹತ್ತು ನಿಮಿಷದಲ್ಲಿ ತಯಾರಿಸಬಹುದು. ಮೊದಲಿಗೆ ಕೆಸುವನ್ನು ಉದ್ದಕ್ಕೆ ಕತ್ತರಿಸಬೇಕು. ಇದರ ಸಿಪ್ಪೆ ತೆಗಿಯುವ ಅಗತ್ಯವಿಲ್ಲ.  



ಹಾಗೆ ಅದನ್ನು ಒಂದು ಪಾತ್ರೆಗೆ ಹಾಕಿ, ಅದಕ್ಕೆ ಉಪ್ಪು ಹುಳಿ ಮೆಣಸಿನ ಪುಡಿ ಅರಶಿನ ಪುಡಿ ಬೆಲ್ಲ ಹಾಕಿ ಬೇಯುವುದಕ್ಕೆ ಇಡಿ. ಕೇವಲ ಐದಾರು ನಿಮಿಷದಲ್ಲಿ ಇದು ಬೆಂದು ಬಿಡುತ್ತದೆ. ಹುಳಿ ಮೆಣಸು  ಸಾಕಷ್ಟು ಹಾಕಬೇಕು.  ನೀರು ಹಾಕುವ ಅವಶ್ಯಕತೆ ಇಲ್ಲ. ಐದಾರು ನಿಮಿಷಗಳಲ್ಲಿ ಬೆಂದು ಬಿಡುತ್ತದೆ. 


ಆನಂತರ ಎಣ್ಣೆ ಒಣ ಮೆಣಸು ಸಾಸಿವೆ ಹಾಕಿ ಒಗ್ಗರಣೆ ಹಾ



ಕಬೇಕು. ಕೊನೆಯಲ್ಲಿ ಒಂದೆರಡು ಬೆಳ್ಳುಳ್ಳಿ ಎಸಳು ಹಾಕಿ ಕೆಂಪಗೆ ಕಾಯಿಸಿ ಪಲ್ಯಕ್ಕೆ ಹಾಕಿದರೆ ಹತ್ತು ನಿಮಿಷದಲ್ಲಿ ರುಚಿಯಾದ ಪಲ್ಯ ಸಿದ್ದ. ಅನ್ನ ದೋಸೆ ಇಡ್ಲಿಯೊಂದಿಗೆ ಸವಿಯುವುದೇ ಮಜ. 

Wednesday, August 10, 2022

ಲಾಡು ಎಂಬ ಚಿನ್ನದುಂಡೆ…!


ಲಡ್ಡು ಅಥವಾ ಲಾಡು…ನಮ್ಮೂರಿನ ಅತ್ಯಂತ ಜನಪ್ರಿಯ ಸಿಹಿತಿಂಡಿ. ಸಮಾರಂಭದ ಘನತೆಯನ್ನು ಹೆಚ್ಚಿಸುವ ಈ ಸಿಹಿ ಮುದ್ದೆ ಅತ್ತ ತಿರುಪತಿ ತಿಮ್ಮಪ್ಪನವರೆಗೂ ಜನಪ್ರಿಯ. ಆದರೆ ನಮ್ಮೂರಿನ ಲಡ್ಡು ಅದು ಬಹಳ ಬಹಳ ನೆನಪಲ್ಲಿ ಉಳಿದು ಬಿಟ್ಟು ಅಚ್ಚು ಮೆಚ್ಚಿನ ಸಿಹಿತಿಂಡಿಯಾಗಿ ಇನ್ನೂ ಅಭಿಮಾನವನ್ನು ಉಳಿಸಿಕೊಂಡಿದೆ.



ನಮ್ಮಜ್ಜ ನನ್ನ ಸೋದರ ಮಾವ ಅದ್ಭುತ ಎನ್ನಿಸುವ ಬಾಣಸಿಗರು. ಅಪ್ರತಿಮ ಪ್ರತಿಭಾವಂತರು. ಇದು ಸಹಜವಾಗಿ ನಮ್ಮಲ್ಲಿ ರಕ್ತಗತವಾಗಿ ಬಂದ ಕಲೆ. ನನ್ನಲ್ಲೂ ತೀರ ಕ್ಷೀಣವಾಗಿ ಉಳಿದುಕೊಂಡು ನನ್ನ ಸಿಹಿ ಸ್ವಾದದ ಹಸಿವನ್ನು ನೀಗಿಸುತ್ತದೆ. ಅಜ್ಜ ಸೋದರ ಮಾವ ಮಾಡುತ್ತಿದ್ದ ಲಡ್ಡು ಆ ರೀತಿ ಮಾಡುವವರು ಇಂದು ಬಹಳ ಕಡಿಮೆ. ಈಗ ಲಡ್ಡು ಸಿಗುತ್ತದೆ ಅದರಲ್ಲಿ ಕಟ್ಟುವುದಕ್ಕೆ ಸುಲಭವಾಗುವಮ್ತೆ ಸಕ್ಕರೆಯ ಅಂಶವೇ  ಲೆಕ್ಕಕ್ಕಿಂತ ಹೆಚ್ಚಾಗಿ ಇರಿಸುತ್ತಾರೆ. ಇನ್ನು ಬೇಕರಿ ಅಥವಾ ಅಂಗಡಿಯಲ್ಲಿ ಲಡ್ಡು ತೂಕ ಮಾಡಿ ಕೊಡುವುದರಿಂದ ಸಕ್ಕರೆಯನ್ನು ಮತ್ತೂ ಹೆಚ್ಚಾಗಿ ಹಾಕುತ್ತಾರೆ. ಕಾರಣ ಇಷ್ಟೇ ನಲ್ವತ್ತು ರೂಪಾಯಿಯ ಸಕ್ಕರೆ ಇನ್ನೂರು ರುಪಾಯಿಗೆ ಮಾರಾಟ ಮಾಡಿ ಜನರನ್ನು ಮೂರ್ಖರನ್ನಾಗಿಸುತ್ತಾರೆ!! ಈ ಲಡ್ಡು ಒಂದೆರಡು ತಿನ್ನುವಾಗಲೇ ಮತ್ತೆ ತಿನ್ನುವ ಮನಸ್ಸಾಗುವುದಿಲ್ಲ.ಆದರೆ ನಮ್ಮಜ್ಜನ ಪಾಕ....ಅಬ್ಬ ಒಂದು ಸಲ ಐದಾರು ಲಡ್ಡು ಸವಿದಿದ್ದೇನೆ.

ನನ್ನ ಬಾಲ್ಯದ ಒಂದು ಘಟನೆ, ಅದು ಪೈವಳಿಕೆ ಕಾಯರ್ ಕಟ್ಟೆಯ ಹೈಸ್ಕೂಲು. ಬಹುಶಃ ಆ ಕಾಲದಲ್ಲಿ ಅಂದರೆ ಎಪ್ಪತ್ತು ಎಂಭತ್ತರ ದಶಕದವರೆಗೂ ಜಿಲ್ಲೆಗೆ ಖ್ಯಾತಿಯನ್ನು ಹೊಂದಿತ್ತು. ಅದಾಗ ನಾನಿನ್ನೂ ಮೊದಲ ತರಗತಿಯಲ್ಲಿ ಮತ್ತೊಂದು ಶಾಲೆಗೆ ಹೋಗುತ್ತಿದ್ದೆ. ಕಾಯರ್ ಕಟ್ಟೆ ಹೈಸ್ಕೂಲು ಕೇವಲ ಹೈಸ್ಕೂಲು ಆಗಿ ಆರನೇ ತರಗತಿಯಿಂದ ಆರಂಭವಾಗುತ್ತಿತ್ತು

. ನಮ್ಮ ಮನೆ ಕಾಯರ್ ಕಟ್ಟೆ ಹೈಸ್ಕೂಲು ಬಳಿಯಲ್ಲೇ ಇತ್ತು. ಮೈಲು ದೂರದಿಂದ ಮಕ್ಕಳು ಶಾಲೆಗೆ ಬರುತ್ತಿದ್ದರು. ದೂರದ ಪೆರ್ಮುದೆ ಧರ್ಮತ್ತಡ್ಕ ಇತ್ತ ಹತ್ತು ಮೈಲಿ ದೂರದ  ಉಪ್ಪಳದಿಂದಲೂ ಮಕ್ಕಳು ಆ ಶಾಲೆಗೆ ಬರುತ್ತಿದ್ದರು.  ಅದೊಂದು ಸುಮಾರು ದೂರದವರೆಗೂ ಇದ್ದ ಒಂದೇ  ಹೈಸ್ಕೂಲು ಎಂದಾದರೆ,  ಇನ್ನೊಂದು ಇಲ್ಲಿ ಸಿಗುತ್ತಿದ್ದ ಶಿಕ್ಷಣ. ಮುಂದೆ ನನ್ನ ಹೈಸ್ಕೂಲು ಜೀವನವೂ ಇಲ್ಲೆ ಕಳೆದುಹೋದದ್ದು ನನ್ನ ಪಾಲಿಗೆ  ಒಂದು ಸ್ಮರಣೀಯ  ಇತಿಹಾಸ.ದೂರದಿಂದ ಬರುತ್ತಿದ್ದ ಮಕ್ಕಳು ಹಲವರು ನಮ್ಮ ಮನೆಯಲ್ಲೇ ಮಧ್ಯಾಹ್ನದ ಊಟದ ಬುತ್ತಿಯನ್ನು ಇಟ್ಟು ಬಿಡುವಿನ ವೇಳೆಯಲ್ಲಿ ಊಟಕ್ಕೆ ಬರುತ್ತಿದ್ದರು.

ಅದೊಂದು ದಿನ, ಆ ಶಾಲೆಯ ಹತ್ತನೆ ತರಗತಿಯ ಶಿಕ್ಷಣವರ್ಷದ ಕೊಟ್ಟ ಕೊನೆಯ ದಿನ. ಹತ್ತನೆ ತರಗತಿಯ ಮಕ್ಕಳಿಗೆ ವಿದಾಯ ಹೇಳುವ ಸೆಂಡ್ ಅಫ್ ಮೀಟಿಂಗ್.  ಟೀಪಾರ್ಟಿ….ನನಗೆ ಮೀಟಿಂಗ್ ಅಂದರೆ ಏನೆಂದೇ ತಿಳಿಯದು. ಟೀ ಪಾರ್ಟಿ ಎಂದರೆ ಒಂದು ಹೊಸ ವಿಷಯ. ಅದು ಹೇಗಿರಬಹುದು ಎಂಬ ಕುತೂಹಲ.  ಹಾಗಾಗಿ  ಸಾಯಂಕಾಲ ನಾನು ಪುಟ್ಟ ಬಾಲಕ ಶಾಲೆಯ ಜಗಲಿಯಲ್ಲಿ ಕುಳಿತು ಅಲ್ಲಿನ ಚಟುವಟಿಕೆಗಳನ್ನು ನೋಡುತ್ತಿದ್ದೆ. ಆವಾಗ ಆ ಶಾಲೆಯ ಜಗಲಿ ಎಂದರೆ ನಮಗೆಲ್ಲಾ ಪಕ್ಕದ ಮನೆಯಂತೆ. ಅಲ್ಲಿನ ಅಧ್ಯಾಪಕ ವೃಂದ. ಅಚ್ಚುತ ಶೆಣೈ ಮುಖ್ಯೋಪಾಧ್ಯಾಯರಾದರೆ, ಶಾಂಭಟ್ಟ ಮಾಸ್ತರ್, ಮೂಡಿತ್ತಾಯ ಮಾಸ್ತರ್, ಹೀಗೆ ಘನವೆತ್ತ ಅಧ್ಯಾಪಕವೃಂದ.  ಹೆಚ್ಚಿನವರು ಅಲ್ಲೇ ಇದ್ದ  ನಮ್ಮಜ್ಜನ ಹೋಟೇಲಿಗೆ ಊಟ ತಿಂಡಿಗೆ ಉಪಾಹಾರಕ್ಕೆ ಬರುತ್ತಿದ್ದರು.

            ಆಗ ಸಾಯಂಕಾಲ. ಟಿಪಾರ್ಟಿ ಶಾಲೆಯ ಒಳಗೆ ನಡೆಯುತ್ತಿದ್ದರೆ, ಹೊರಗೆ ಶಾಲೆಯ ಆವರಣದಲ್ಲಿ ಫೋಟೋ ತೆಗೆಯುವ ಸಿದ್ಧತೆ ನಡೆಯುತ್ತಿತ್ತು. ಎಲ್ಲಿಂದಲೋ ಬಂದ ಸ್ಟುಡಿಯೋದವರು ಒಂದು ಸಲ ಆಕಾಶ ನೋಡಿ ಇನ್ನೊಂದು ಕಡೆ ಕ್ಯಾಮರ ಇಟ್ಟು ಸಿದ್ದತೆಯಲ್ಲಿ ತೊಡಗಿದ್ದರು. ಶಾಲೆಯ ಒಳಗೆ ಸಡಗರದಲ್ಲಿ ವಿದಾಯ ಸಭೆ ನಡೆಯುತ್ತಿತ್ತು. ಅಂತೂ ಅದೊಂದು ವಿಚಿತ್ರ ಸನ್ನಿವೇಶವಾಗಿ ಅದು ಜೀವನದ ಮೊದಲ ಅನುಭವವಾಗಿತ್ತು. ಸಭೆಯ ಕೊನೆಯಲ್ಲಿ ಟೀ ಪಾರ್ಟಿ ಆರಂಭವಾಗಿಯೇ ಬಿಟ್ಟಿತು. ಒಳಗೆ ತಿಂಡಿ ಪಾನಿಯ ಗಡಿಬಿಡಿಯಲ್ಲಿ ಕೊಂಡು ಹೋಗುವುದು ಕಂಡು ಬರುತ್ತಿತ್ತು. ನಾನಿನ್ನೂ ದೂರದ ಜಗಲಿಯಲ್ಲಿ ಅದನ್ನೇಲ್ಲಾ ನೋಡುತ್ತಾ ನಿಂತಿದ್ದೆ. ಟೀ ಪಾರ್ಟಿ ಅಂದರೆ ಇಷ್ಟೇ….ಅದರಲ್ಲೂ ಲಾಡಿನ ಡಬ್ಬ ಹಿಡಿದು ಸೋಂಪಣ್ಣ ಅತ್ತಿತ್ತ ಓಡಾಡುತ್ತಿದ್ದರು. ಸೋಂಪಣ್ಣ ಆ ಶಾಲೆಯ ಫ್ಯೂನ್ ವಾಚ್ ಮನ್ ಹೀಗೆ ಎಲ್ಲವೂ ಆಗಿದ್ದ ವೃದ್ಧ. ಸದಾ ತಲೆಯಲ್ಲಿ ಒಂದು ಬಿಳಿ ಟೊಪ್ಪಿ ಇಟ್ಟು ಕೊಂಡು  ಘಂಟೆ ಬಡಿಯುವುದು ಶಾಲೆಯ ಮುಖ್ಯೋಪಾಧ್ಯಾಯರಿಗೆ ಚಹ ಪಾನೀಯ ತರುವುದು, ಅಂಚೆ ಕಛೇರಿಗೆ ಹೋಗಿ ಬರುವುದು ಎಲ್ಲ ಮಾಡುತ್ತಿದ್ದರು. ಅವರು ಚಹ ಕೊಂಡೊಯ್ಯುತ್ತಿದ್ದುದು ನಮ್ಮ ಹೋಟೇಲಿನಿಂದಲೇ, ಒಂದು ಸ್ಟೀಲ್ ಪಾತ್ರೆ ಅದಕ್ಕಾಗಿ ಹಿಡಿದುಕೊಂಡು ಬರುತ್ತಿದ್ದರು. ಆ ಶಾಲೆಗೆ ಹೋಗದೇ ಇದ್ದರೂ ಸೋಂಪಣ್ಣ ನಮಗೆ ಬಹಳ ಪರಿಚಯದ ವ್ಯಕ್ತಿ ಎಂದು ಬೇರೆ ಹೇಳಬೇಕಿಲ್ಲ.



             ಎಲ್ಲರೂ ತಿಂಡಿ ತೀರ್ಥ ಸವಿಯುತ್ತಿದ್ದರೆ ಇನ್ನು ಅಲ್ಲಿ ನಿಲ್ಲುವುದಕ್ಕೆ ಮನಸ್ಸಾಗಲಿಲ್ಲ. ಹಾಗೆ ಜಗಲಿಯಲ್ಲೆ ಮುಂದಕ್ಕೆ ಬಂದು ಹೆಬ್ಬಾಗಿಲ ಹೊರಗೆ ಬರುತ್ತೇನೆ. ಇನ್ನೇನು ಹೊರ ಬರಬೇಕಾದರೆ ಸೋಂಪಣ್ಣ ಚಪ್ಪಾಳೆ ತಟ್ಟಿ ಕರೆಯುತ್ತಾರೆ. ಕೈಯಲ್ಲಿ ಬಾಳೆ ಎಲೆ ತುಂಡು ಇದೆ. ಅದರಲ್ಲಿ ಲಡ್ಡು ಅವಲಕ್ಕಿ ತಂದು ನನ್ನ ಕೈಗೆ ಇಡುತ್ತಾರೆ. ಕಣ್ಣು ಅರಳುತ್ತದೆ. ಚಿನ್ನದ ಬಣ್ಣದ ಲಡ್ಡು.ಬಾಯಲ್ಲಿ ನೀರು ತೊಟ್ಟಿಕ್ಕುತ್ತದೆ. ಅದುವರೆಗೆ ಹೋಟೇಲಿನಲ್ಲಿ ಅಂಗಡಿಯಲ್ಲಿ ಬರಣಿಯಲ್ಲಿ ಸುಂದರಾವಾಗಿ ಇಟ್ಟ ಲಡ್ಡನ್ನಷ್ಟೇ ಕಂಡಿರುವುದು. ಕೊಂಡುಕೊಳ್ಳುವುದಕ್ಕೆ ಹಣವೆಲ್ಲಿದೆ? ಒಂದು ವೇಳೆ ಮನೆಯಲ್ಲಿ ತಂದರು ಕೆಲವಷ್ಟು ಕಾಳುಗಳನ್ನಷ್ಟೇ ಕೈಯಲ್ಲಿಡುತ್ತಿದ್ದರು. ಇದೀಗ ಇಡೀ ಲಡ್ಡು ನನ್ನದೆ. ಅಲ್ಲೆ ಬಾಗಿಲ ಬಳಿಯ ಚಿಟ್ಟೆಯ ಮೇಲೆ ಕುಳಿತು ಲಾಡನ್ನು ಸವಿಯುತ್ತಿದ್ದರೆ ಕನಸೇ ಇದು? ಆಗಿನ ಭಾವನೆಗಳು ಈಗ ಅಳೆಯುವುದಕ್ಕೆ ಸಾಧ್ಯವಿಲ್ಲ. ಆದರೆ ಜೀವನದಲ್ಲಿ ಮೊದಲು ಒಂದು ಲಾಡು ಸವಿದ ಅನುಭವ ಮರೆಯುವುದಕ್ಕಿಲ್ಲ. ಆನಂತರ ನಾನು ಹತ್ತನೆಯ ತರಗತಿ ಮುಗಿಸಿ ಹೈಸ್ಕೂಲು ಅಧ್ಯಯನ ಅದೇ ನನ್ನ ಮೆಚ್ಚಿನ ಕಾಯರ್ ಕಟ್ಟೆ ಹೈಸ್ಕೂಲ್ ನಲ್ಲಿ ಮುಗಿಸಿ ಭಾವನಾತ್ಮಕವವಾಗಿ ವಿದಾಯ ಹೇಳುವಾಗ ಈ ಸೋಂಪಣ್ಣನ ನೆನಪಾಗಿತ್ತು. ಅದಿನವೂ ಲಡ್ಡು ಸವಿದಾಗ ಅದೇ ಸವಿ ಸಿಗಬಹುದೇ ಎಂದು ಮನಸ್ಸು ತಡಕಾಡಿತ್ತು.  ಆನಂತರ ಅದೆಷ್ಟೋ ಲಡ್ಡು ಸವಿದಿದ್ದೇನೆ. ಈಗಲೂ ಸ್ವತಃ ಮಾಡಿ ಸವಿಯುತ್ತೇನೆ. ಆದರೆ ಅಂದಿನ ನೆನಪು ಭಾವನಾತ್ಮಕವಾಗಿ ಅಂಟಿಕೊಂಡುಬಿಟ್ಟಿದೆ. ಅದನ್ನು ಕೈಗೆ ತಂದಿತ್ತ ಸೋಂಪಣ್ಣ ಎಂಬ ಸಜ್ಜನಿಕೆಯ ವ್ಯಕ್ತಿಯೂ ಅದೇ ನೆನಪನ್ನು ಬಿತ್ತನೆ ಮಾಡಿ ಹೋಗಿದ್ದಾರೆ. ಸೋಂಪಣ್ಣ ಆನಂತರದ ನಮ್ಮ ಮನೆ ಲಾಲ್ ಭಾಗ್ ನ ಪಕ್ಕದಲ್ಲೇ ಮನೆ ಮಾಡಿದ್ದರು. ಆದರೆ ಅವರು ನಿವೃತ್ತಿ ಹೊಂದಿದ ಮೇಲೆ ಊರು ಬಿಟ್ಟರೂ ಆ ಮನೆ ಹಾಗೇ ಉಳಿಯಿತು. ಈಗ ಅದರ ಯಜಮಾನ ಬೇರೆಯಾದರೂ ಆ ಮನೆಯ ಅಲ್ಪಸ್ವಲ್ಪ ಅವಶೇಷ ಉಳಿದಿದೆ. ಮತ್ತೆ ಆ ಸೋಂಪಣ್ಣ ಮತ್ತು ಆ ಲಡ್ಡು ಎಂಬ ಚಿನ್ನದುಂಡೆ ನೆನಪಾಗುತ್ತಿದೆ.

 

 

 

 

 

 

 

 

 

 

 

 

 

.

 

Thursday, August 4, 2022

ಹುಳಿ ಮರ ಮತ್ತು.....ಪದವಿನ ಮಾರ್ಗ


 

ಏಳು ವರ್ಷದ ಬಾಲಕನಾಗಿದ್ದಾಗ ಒಂದು ಘಟನೆ ಈಗಲೂ ನೆನಪಾಗುತ್ತದೆ. ಏಳು ವರ್ಷ ವಯಸ್ಸಿನ ನೆನಪಿನಲ್ಲಿರುವುದಕ್ಕೆ ಕಾರಣ ಆಗ ನಾನಿನ್ನೂ ಎರಡನೇ ತರಗತಿಯಲ್ಲಿ ಓದುತ್ತಿದ್ದೆ. ಆಗ ನಮ್ಮ ಮನೆ ಪೈವಳಿಕೆಯ  ಕಾಯರ್ ಕಟ್ಟೆಯಲ್ಲಿತ್ತು. ಆಗಲೇ ನಾನು ಏಕಾಂಗಿಯಾಗಿ ಅಕ್ಕ ಪಕ್ಕದದಲ್ಲೆ ಇದ್ದ ಬಾಯಾರು, ಉಪ್ಪಳಕ್ಕೆ ಬಸ್ಸಿನಲ್ಲಿ ಹೋಗುತ್ತಿದ್ದೆ. ಬಸ್ಸಿನಲ್ಲಿ ಹೆಚ್ಚಿನ ಕಂಡಕ್ಟರ್ ಡ್ರೈವರ್ ಗಳು ನಮಗೆಲ್ಲ ಪರಿಚಯ ಇದ್ದುದರಿಂದ ಇದೊಂದು ಸಹಜ ಕೆಲಸವಾಗಿತ್ತು. ಇಂತಹ ಒಂದು ದಿನ ನಾನು ಸಾಯಂಕಾಲ ಕಾಯರ್ ಕಟ್ಟೆಯಿಂದ ನಾಲ್ಕು ಕಿಲೋ ಮೀಟರ್ ದೂರದ ಬಾಯರು ಪದವಿಗೆ ಹೋಗಬೇಕಿತ್ತು. ಆಗ ಎರಡು ಮೂರು ಶಂಕರ್ ವಿಟ್ಠಲ್ ಬಸ್ಸು ಬಿಟ್ಟರೆ ಬೇರೆ ಯಾವ ವಾಹನ ಸೌಕರ್ಯವೂ ಇಲ್ಲ. ಎಲ್ಲೋ ಕೆಲವೊಮ್ಮೆ ಕಪ್ಪು ಬಿಳಿ ಬಣ್ಣದ ಅಂಬಾಸಿಡರ್ ಕಾರು ಓಡಾಡುವುದು ಬಿಟ್ಟರೆ ಸಂಚರಿಸುವುದಕ್ಕೆ ಶಂಕರ್ ವಿಟ್ಠಲ್ ಬಸ್ಸೇ ಗತಿ. ಹಲವು ವ್ಯಾಪಾರದವರು ಎತ್ತಿನಗಾಡಿ ಉಪಯೋಗಿಸುತ್ತಿದ್ದರು. ಇನ್ನು ಶಂಕರ್ ವಿಟ್ಠಲ್ ಬಸ್ಸು ಬೆಳಗ್ಗೆ ಒಂದೆರಡು ಓಡಿದರೆ ನಂತರ ಮಧ್ಯಾಹ್ನ ನಂತರ ಸಾಯಂಕಾಲ ಬಿಟ್ಟರೆ ಬಸ್ಸುಗಳು ಇರುತ್ತಿರಲಿಲ್ಲ. ಆಗ ಆರುಗಂಟೆಗೆ ಪುತ್ತೂರಿನಿಂದ ಬರುವ ಶೆಟ್ರ ಬಸ್ಸು ಉಪ್ಪಳಕ್ಕೆ ಹೋಗುವ ಕೊನೆಯ ಬಸ್ಸು. ನಾನು ಆದಿನ ಬಾಯಾರು ಪದವಿನಲ್ಲಿ ಅಮ್ಮ ಚೀಲದಲ್ಲಿ ತುಂಬಿಸಿ ಕೊಟ್ಟ ಚಕ್ಕುಲಿಯನ್ನು ಬಾಯರಿನ   ಹೆಂಡದಂಗಡಿಗೆ  ಕೊಟ್ಟು ದುಡ್ಡು ತರಬೇಕಿತ್ತು. ಆದಿನ ಬಾಯಾರು ಪದಿವಿನಲ್ಲಿ ಇಳಿಯಬೇಕಾದರೆ ಶೆಟ್ಟರ ಬಸ್ಸು ಹೋಗಿಯಾಗಿತ್ತು. ಇನ್ನು ನಾಲ್ಕು ಕಿಲೋಮಿಟರ್ ನಡೆಯಬೇಕು. ನಾನು ಪುಟ್ಟ ಬಾಲಕ. ನಿಜಕ್ಕೂ ನನಗೆ ಭಯ ಆಗಿಬಿಟ್ಟಿತು. ಚಕ್ಕುಲಿ ಕೊಟ್ಟು ಖಾಲಿ ಚೀಲ ಹೆಗಲಿಗೆ ಹಾಕಿ ಅಂಗಡಿಯವರು ಕೊಟ್ಟ ಹಣ ಕೈಯಲ್ಲಿ ಹಿಡಿದು ನಡೆಯುವುದಕ್ಕೆ ಆರಂಭಿಸಿದೆ. ಅದಾಗಲೇ ನಸು ಗತ್ತಲೆ ಆವರಿಸುವುದಕ್ಕೆ ತೊಡಗಿತ್ತು. ಆಗ ಪದವಿನಿಂದ ಕಾಯರ್ ಕಟ್ಟೆ ತನಕವೂ ಒಂದು ಮನೆಯೂ ಇಲ್ಲ ಬರೀ ಬಯಲು. ಜನಸಂಚಾರವೂ ಇಲ್ಲ. ಈಗ ಅಲ್ಲಿ ಅಡಿದೂರಕ್ಕೆ ಒಂದು ಮನೆ ಇದೆ. ಬಾಯಾರು ಪದವಿನಿಂದ ಒಂದು ತಿರುವು ಕಳೆದು ರಸ್ತೆ ನೇರವಾಗಿ ಸಾಗುತ್ತದೆ. ಬೀಡಿ ಮಹಮ್ಮದ್ ಬ್ಯಾರಿಯವರ ಕಟ್ಟಡ ಆನಂತರವಾಗಿತ್ತು. ಅಲ್ಲೆ ಬರೀ ಮುಳಿ ಹುಲ್ಲಿನ ಗುಡ್ಡೆ. ತಿರುವಿನ ತುದಿಗೆ ಒಂದು ಹುಣಸೇ ಮರದ ಇತ್ತು. ಅದೊಂದೇ ಮರ ದೊಡ್ಡದಾಗಿ ಬೆಳೆದಿತ್ತು. ಆ ಮರ ಭಯಾನಕವಾಗಿತ್ತು. ಆ ಮರದ ಬಗ್ಗೆ ಭಯ ಹುಟ್ಟುವುದಕ್ಕೆ ಒಂದು ಕಾರಣ ಇದೆ. 

 

ಹುಣಸೇ ಹಣ್ಣಿನ ಮರ, ನಮ್ಮೂರಲ್ಲಿ ಹುಳಿ ಮರ ಅಂತಲೇ ಹೇಳುವುದು. ಅಲ್ಲಿ ದೆವ್ವ ಇದೆ ಅಂತ ಹೇಳುತ್ತಿರುವುದು ಅದು ಹೇಗೋ ನನ್ನ ಕಿವಿಗೆ ಬಿದ್ದಿತ್ತು. ಮಾತ್ರವಲ್ಲ ಹಿರಿಯರು ಹೇಳುವ ಕಥೆಗಳಲ್ಲಿ ಹುಳಿ ಮರ ಎಂದರೆ ಅಲ್ಲಿ ದೆವ್ವಗಳು ಅಲ್ಲಿ ಇದ್ದೇ ಇರುತ್ತವೆ ಎಂಬ ಕಲ್ಪನೆ. ಬಾಯಾರು ಪದವಿನಿಂದ ನಡೆದುಕೊಂಡೆ ಬಂದೇ. ದೂರದಲ್ಲಿ ಹುಳಿ ಮರ ಕಂಡಿತು. ಒಂದೇ ಒಂದು ಜನ ಸಂಚಾರವಿಲ್ಲ. ಸುತ್ತಮುತ್ತ ಮನೆ ಇಲ್ಲ. ಯಾವುದೇ ವಾಹನ ಸಂಚಾರವೂ ಇಲ್ಲ. ಭಯ ಮತ್ತಷ್ಟು ಹೆಚ್ಚಾಯಿತು. ಇನ್ನೂ ಮುಸ್ಸಂಜೆಯ ನಸು ಬೆಳಕು ಇತ್ತು. ಹುಳಿ ಮರ ಹತ್ತಿರ ಬರುತ್ತಿದ್ದಂತೆ ಅದನ್ನು ಹೇಗೆ ದಾಟಿ ಹೋಗುವುದು ಎಂಬ ಆತಂಕ ಭಯದಲ್ಲಿ ಜೋರಾಗಿ ಅಳು ಬಂದು ಬಿಟ್ಟಿತು. ಜೋರಾಗಿ ಅತ್ತುಬಿಟ್ಟಿ. ಕೇಳುವುದಕ್ಕೆ ಹತ್ತಿರದಲ್ಲಿ ಯಾರೂ ಇಲ್ಲ. ಹಾಗೇ ಅಳುತ್ತಾ ಮರ ಹತ್ತಿರ ಬರುತ್ತಿದ್ದಂತೆ ಓಡತೊಡಗಿದೆ. ಅಲ್ಲಿಂದ ದಾಟಿ ಮುಂದೆ ಬರಬೇಕಾದರೆ ರಸ್ತೆ ಒಂದು ಸಣ್ಣ ತಿರುವು ತೆಗೆದುಕೊಳ್ಳುತ್ತದೆ. ಅಲ್ಲೇ ಕೆಳಗೆ ಇಳಿದು ಹೋದರೆ ಕುರುವೇರಿ. ನಾನು ಅಳುತ್ತಾ ಬರಬೇಕಾದರೆ ನಸು ಕತ್ತಲೆಯಲ್ಲಿ ಯಾರೋ ಬರುವ ಹಾಗೆ ಭಾಸವಾಯಿತು. ನಾನು ಹಾಗೆ ನಿಂತು ಬಿಟ್ಟೆ.

 

ಆ ವ್ಯಕ್ತಿ ಹತ್ತಿರ ಬಂದಾಗ ಗೊತ್ತಾಯಿತು. ಅದೇ ಪರಿಚಯದ ಮುಖ. ಅದು ಬಸ್ ಏಜಂಟ್ ಗೋವಿಂದಣ್ಣ. ಆಗ ಶಂಕರ್ ವಿಟ್ಠಲ್ ಬಸ್ ಗೆ ಬಾಯಾರು ಪದವಿನಲ್ಲಿ ಟಿಕೆಟ್ ಕೊಡುವುದಕ್ಕೆ ಒಬ್ಬರು ಏಜಂಟ್ ಇದ್ದರು. ಅವರೇ ಗೋವಿಂದಣ್ಣ. ಕೊನೆಯಲ್ಲಿ ಹೋದ ಶೆಟ್ರ ಬಸ್ಸಿನಲ್ಲಿ ಟಿಕೆಟ್ ಕೊಟ್ಟು ಅದೇಲ್ಲೋ ಇಳಿದು ಅವರು ವಾಪಾಸು ಬಾಯಾರು ಪದವಿಗೆ ನಡೆದುಕೊಂಡು ಬರುತ್ತಿದ್ದರು. ಅವರಿಗೆ ಅದು ರೂಢಿ. ಅವರು ಬಹಳ ಸಾಧು ಮನುಷ್ಯ. ನನ್ನ ಪರಿಚಯವಿದೆ. ದಿನವೂ ಕಾಣುತ್ತೇನಲ್ಲ? ಹತ್ತಿರ ಬಂದವರೇ ಏನು ಅಂತ ಕೇಳಿದರು.?

 

ನಾನಿನ್ನೂ ನಡುಗುತಿದ್ದೆ. ನನ್ನ ಕಣ್ಣಿಂದ ನೀರು ಹರಿಯುವುದು ಅವರಿಗೆ ಕಂಡಿತು. ಹತ್ತಿರ ಬಂದವರು ಕೈ ಹಿಡಿದು “ಏನಾಯಿತು?”  ಅಂತ ಕೇಳಿದರು.

 

            ನಾನು ಶೆಟ್ರ ಬಸ್ಸು ತಪ್ಪಿ ಹೋದದ್ದು ಹೇಳಿದೆ. ನಾನು ಹೆದರಿಕೊಂಡದ್ದು ಅವರಿಗೆ ಗೊತ್ತಾಯಿತು. ಅವರು ಬಾ ಹೋಗೊಣ ಅಂತ ನನ್ನ ಕೈ ಹಿಡಿದು ನನ್ನ ಜತೆ ಬಂದರು. ಅಲ್ಲಿಂದ ಕಾಯರ್ ಕಟ್ಟೆಗೆ ಇನ್ನೂ ದೂರವಿತ್ತು. ಕೆಲವು ತಿರುವು ಕಳೆದರೆ ದೇವಪ್ಪನಾಯಕರ ಮನೆ ಸಿಗುತ್ತದೆ. ಅಲ್ಲೊಂದು ದೊಡ್ಡ ತಿರುವು. ಅದು ಕಳೆದರೆ ಕಾಯರ್ ಕಟ್ಟೇ ಮಸೀದಿ ಮತ್ತೆ ಕೆಲವು ಅಂಗಡಿ ಸಿಗುತ್ತದೆ. ಗೋವಿಂದಣ್ಣ ನನ್ನ ಜತೆ ಅಲ್ಲಿ ತನಕ ಬಂದು ಇನ್ನು ಹೋಗು ಹೆದರ ಬೇಡ ಅಂತ ಹೇಳಿ ವಾಪಾಸು ಬಾಯಾರು ಪದವಿನ ಕಡೆಗೆ ನಡೆದುಕೊಂಡು ಹೋದರು. ಅವರಿಗೆ ನಡೆಯುವುದಕ್ಕೆ ಇನ್ನೂ ದೂರವಿತ್ತು. ಅಲ್ಲಿಂದ ನಮ್ಮ ಮನೆ ಹತ್ತಿರವೇ ಇತ್ತು. ಅಲ್ಲಲ್ಲಿ ಅಂಗಡಿ ಜನಗಳು ಇರುವುದರಿಂದ ನನಗೆ ಮತ್ತೆ ಭಯವಾಗಲಿಲ್ಲ. ನಾನು ಮನೆಗೆ ಬಂದೆ. ಅಮ್ಮ ಮನೆ ಜಗಲಿಯಲ್ಲಿ ನನ್ನ ದಾರಿ ನೋಡುತ್ತಿದ್ದರು. ಪುಟ್ಟ ಬಾಲಕನನ್ನು ಆ ಹೊತ್ತಿನಲ್ಲಿ ಕಳುಹಿಸಿದ ಆತಂಕ ಅವರಲ್ಲಿ ಇತ್ತು. ಆದರೇನು ಮಾಡುವುದು? ಬಡತನ ಎಲ್ಲವನ್ನುಸಹಿಸಿಕೊಳ್ಳುವ ಔಷಧವಾಗಿ ಕೆಲಸ ಮಾಡುತ್ತದೆ.

 

             ಈಗಲೂ ಬಾಯಾರು ಪದವಿಗೆ ಹೋಗುವಾಗ ಆ ಸ್ಥಳ ಸಿಗುತ್ತದೆ. ಈ ಘಟನೆ ನೆನಪಾಗುತ್ತದೆ. ಆನಂತರ ಆ ಜಾಗದಲ್ಲಿ ಅದೆಷ್ಟು ಸಲ ಸಂಚರಿಸಿದ್ದೇನೋ ನೆನಪಿಲ್ಲ. ಆದರೆ ಈ ಘಟನೆ ಮಾತ್ರ ಇನ್ನೂ ನೆನಪಿದೆ. ಆ ಗೋವಿಂದಣ್ಣನನ್ನು ಈಗಲೂ ನೆನಪಿಸಿಕೊಳ್ಳುತ್ತೇನೆ. ಈಗ ಅಂತಹ ವ್ಯಕ್ತಿಗಳು ಸಿಗಬಹುದೇ? ನನಗಾಗಿ ಬಹುದೂರ ನನ್ನ ಜತೆ ನಡೆದುಕೊಂಡು ಬಂದು ನನ್ನನ್ನು ಸುರಕ್ಷಿತ ಸ್ಥಳಕ್ಕೆ ಸೇರಿಸಿ ಹೋದ ಅವರ ಹೃದಯವಂತಿಕೆ ಎಂದಿಗೂ ಮರೆಯಲಾರೆ.

 

 

           

  

Thursday, July 14, 2022

ಹಂಪನ ಕಟ್ಟೆ ಸಿಗ್ನಲ್......








ಹಂಪನ ಕಟ್ಟೆ ಸಿಗ್ನಲ್...... 

ಮಂಗಳೂರು ನಗರ, ತುಳುವರ ಬಾಯಿಯಲ್ಲಿನ ಕುಡ್ಲ ಬಾಲ್ಯದಲ್ಲಿ ಅದು ಕನಸಿನ ನಗರವಾಗಿತ್ತು. ನಗರವೆಂದರೆ ಅದು ನಮ್ಮ ಮಂಗಳೂರು. ಮಂಗಳೂರಿಗೆ ಹೋಗುವುದೆಂದರೆ ಅದೊಂದು ಸಂಭ್ರಮ, ಮೂರು ಚಕ್ರದಲ್ಲಿ ಓಡುವ ಆಟೋರಿಕ್ಷಾ, ನಂಬರಿನ ಸಿಟಿ ಬಸ್ಸುಗಳು, (ನಂಬರಿಲ್ಲದ ನಮ್ಮೂರಿನ ಬಸ್ಸುಗಳ ಎದುರು ಇದೊಂದು ಅದ್ಭುತ) ಯಾವ ಯಾವ ಊರಿಗೆ ಯಾವ ಯಾವ ನಂಬರು ಬಸ್ಸುಗಳು ಹೋಗುತ್ತವೆ ಎಂಬುದೇ ಒಂದು ಮಹಾ ಜ್ಞಾನವಾಗಿತ್ತು. ನಗರದಿಂದ ನಮ್ಮೂರಿನ ತಲಪಾಡಿ ಗಡಿಗೆ  42 43 ನಂಬರಿನ ಬಸ್ಸುಗಳಂತೆ ನಮ್ಮ ಮಾವನ ಮನೆ ಇದ್ದ ಉರ್ವ ಸ್ಟೋರು ಕೊಟ್ಟಾರ ಕ್ಕೆ ಹೋಗುವ 13 ನಂಬರಿನ ಸಿ ಪಿ ಸಿ ಬಸ್ಸುಗಳು ಎಲ್ಲವೂ ಅದ್ಭುತ ಜಗತ್ತಿನ ಸಂಗತಿಗಳು. ಆ ಕಾಲಾದಲ್ಲಿ ಎಲ್ಲ ನಂಬರಿನ ಸಿಟಿ ಬಸ್ಸುಗಳು ಸ್ಟೇಟ್ ಬ್ಯಾಂಕ್ ಗೆ ಹೋಗಿ ಬರುತ್ತಿದ್ದವು. ಸ್ಟೇಟ್ ಬ್ಯಾಂಕ್ ಗೆ ಹೋಗದ ಸಿಟಿ ಬಸ್ಸುಗಳೇ ಇರುತ್ತಿರಲಿಲ್ಲ.  ಉರ್ವಸ್ಟೋರ್ ಕೊಟ್ಟಾರ ಕೂಳೂರ್ ಪಣಂಬೂರ್ ಸುರತ್ಕಲ್......ರೈಟ್ ಪೋಯಿ ಹೇಳುವ ಕಂಡಕ್ಟರ್ ಗಳು  ಆದರೆ ಈಗ....? ಬಸ್ಸುಗಳೆಲ್ಲ ಅಂಡೆ ಪಿರ್ಕಿಗಳಂತೆ ಸಂದು ಗೊಂದು ಗಳೆಲ್ಲಾ ಸಂಚರಿಸುತ್ತವೆ. ಯಾವುದು ಎಲ್ಲಿಗೆ ಹೋಗುತ್ತದೆ ಎಂದೇ ತಿಳಿಯುವುದಿಲ್ಲ.  ಸರಕಾರಿ ಕಾಲೇಜಿನ ಹತ್ತಿರದ ಗಡಿಯಾರ ಕಂಭದಿಂದ ನೆಹರು ಮೈದಾನ್ ಗೆ ಒಂದು ಸುತ್ತು ಹೊಡೆದು ಸ್ಟೇಟ್ ಬ್ಯಾಂಕ್ ಲೇಡಿ ಗೋಷನ್ ಆಗಿ ವಾಪಾಸು ಬರುವಾಗ ನಮಗೆಲ್ಲ ನಗರ ಪ್ರದಕ್ಷಿಣೆ ಹಾಕಿದ ಅನುಭವವಾಗುತ್ತಿತ್ತು. ಈ ನಗರದ ಹಲವು ಭಾಗಗಳಲ್ಲಿ ಬಾಲ್ಯದ ನೆನಪು ಇನ್ನೂ ಹಸಿರಾಗಿದೆ. ಲೇಡಿಗೋಷನ್  ಹತ್ತಿರದ ಸೆಂಟ್ರಲ್ ಮಾರುಕಟ್ಟೆ, ಮಾರ್ಕೆಟ್ ರಸ್ತೆ, ಸುತ್ತಮುತ್ತಲಿನ ಹೋಟೆಲ್ ಗಳು ಹಾಗೇ ಮುಂದೆ ಬಂದರೆ ಶರವು ದೇವಸ್ಥಾನ ಮತ್ತೆ ಸಂದಿಯಲ್ಲಿ ಹತ್ತಿ ಮುಂದೆ ಬಂದರೆ ವಿಶ್ವಭವನ, ಇಲ್ಲಿನ ಇಡ್ಲಿ ಸಾಂಬಾರ್, .....ನಾಲ್ಕು ಜನರಿಗೆ ಸೀಮಿತವಾಗಿದ್ದ ಸ್ಲಾಬ್ ಹಾಕಿದ  ಟೇಬಲ್ ಚಯರ್, ಕಪ್ ಸಾಸರ್ ನಲ್ಲಿನ ಕಾಫಿ ಚಹ, ( ಮರದ ಬೆಂಚಿನ ನಮ್ಮೂರಿನ ಹೋಟೆಲ್ ಎದುರು ಇದು ಸ್ವರ್ಗದಂತೆ ಭಾಸವಾಗುತ್ತಿತ್ತು !!! ) ತಿಂಡಿ ಚಹಾ ತಿಂದು ಸಪ್ಲೈಯರ್ ಕೊಟ್ಟ ಚೀಟಿ ಕೊಟ್ಟು ಕ್ಯಾಶಿಯರ್ ನಲ್ಲಿ ದುಡ್ದುಕೊಟ್ಟು ಗತ್ತಿನಿಂದ ಹೊರಬರುತ್ತಿದ್ದೆವು. ಇದು ನಮ್ಮೂರಿನ ಹೋಟೆಲ್ ನಲ್ಲಿ ಸಿಗುತ್ತಿರಲಿಲ್ಲ. 


ಒಂದು ಬಾರಿ ಸಿಗ್ನಲ್ ಬಳಿ ಇರುವ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋಗಿದ್ದೆ. ಬಾಲ್ಯದಲ್ಲಿ ಯಾವುದೋ ಕಾಯಿಲೆ ಬಂದು ಇಲ್ಲಿ ಒಂದು ತಿಂಗಳು ಎಡ್ಮಿಟ್ ಆಗಿದ್ದೆ. ನಮ್ಮೂರಿನ ಶಂಕರ ಡಾಕ್ಟರ್ ಕ್ಲೀನಿಕ್ ಅಷ್ಟೇ ಆಸ್ಪತ್ರೆ ಎಂದು ತಿಳಿದುಕೊಂಡಿದ್ದ ನನಗೆ ಒಳಗೆ ಸುತ್ತಾಡಿದಷ್ಟೂ ತೆರೆದುಕೊಳ್ಳುತ್ತಿದ್ದ ವೆನ್ಲಾಕ್ ಆಸ್ಪತ್ರೆ ನೋಡಿದಾಗ ಗಾಬರಿಯಾಗಿತ್ತು. ಚಕ್ರದಲ್ಲಿ ತಳ್ಳಿಕೊಂಡು ಹೋಗುತ್ತಿದ್ದ ಕುರ್ಚಿ ಚಯರ್ ಗಳು ಅದ್ಬುತ ಲೋಕದ ಪರಿಚಯ ಮಾಡಿಕೊಟ್ಟಿತ್ತು. 


ಮೊನ್ನೆ ಮೊನ್ನೆ ಮಂಗಳೂರಿನ ಹಂಪನ್ ಕಟ್ಟೇ ಸಿಗ್ನಲ್ ನಿಂದ ಹಾದು ಹೋಗುವಾಗ, ಹಳೆಯ ಘಟನೆಯೊಂದು ನೆನಪಾಯಿತು. ಹಂಪನ್ ಕಟ್ಟೆ ಸಿಗ್ನಲ್, ನಾವು ನೋಡಿದ ಪ್ರಥಮ ಸಿಗ್ನಲ್. ಕೆಂಪು ಹಸಿರು ಲೈಟಿಗೆ ಶಿಸ್ತಾಗಿ ಹೋಗುವ ವಾಹನಗಳನ್ನು ಕಂಡಾಗ ಹೀಗೂ ಉಂಟೆ ಅನ್ನಿಸುತ್ತಿತ್ತು. ಅಗಲವಾದ ರಸ್ತೆಯನ್ನು ಹೇಗೆ ದಾಟುವುದು ಎಂದು ನಮ್ಮ ಮಾವ ಹೇಳಿ ಕೊಟ್ಟದ್ದು ಇದೇ ಸಿಗ್ನಲ್ ನಲ್ಲಿ.   ನಮ್ಮೂರಿನ ರಸ್ತೆ ಗುಡ್ಡೆಯಲ್ಲಿ ಸೈಕಲ್ ಓಡಿಸುತ್ತಿದ್ದ ನನಗೆ ಮಂಗಳೂರು ರಸ್ತೆಯಲ್ಲಿ ಸೈಕಲ್ ಓಡಿಸುವುದೆಂದರೆ ಯಾವುದೋ ವಿಶೇಷವನ್ನು ಸಾಧಿಸಿದ ಹಾಗೆ. ಒಂದು ಬಾರಿ ಮಾರ್ಕೆಟ್ ರಸ್ತೆಯಲ್ಲಿ ಸೈಕಲ್ ಓಡಿಸುತ್ತಿರಬೇಕಾದರೆ ಊರಿನವರೊಬ್ಬರು ಸಿಕ್ಕಿ ಹೆದರಿಕೆ ಆಗುವುದಿಲ್ಲವೇ ಎಂದು ಕೇಳಿದ್ದರು. 


ಒಂದು ಬಾರಿ ಸೈಕಲ್ ಏರಿ ಮಾರ್ಕೆಟ್ ರಸ್ತೆಯಿಂದ ಬಾವುಟ ಗುಡ್ಡೆ ರಸ್ತೆ ಕಡೆಗೆ ಹೋಗುತ್ತಿದ್ದೆ. ಅದಾಗಲೇ ಸಿಗ್ನಲ್ ನಲ್ಲಿ ಕೆಂಪು ಉರಿದು  ವಾಹನಗಳು ನಿಂತಿದ್ದರೂ ನಾನು ಅಲ್ಲೆ ರಸ್ತೆದಾಟುತ್ತಿದ್ದವರ ಜತೆಗೆ ಸೈಕಲ್ ಏರಿ ಹೋಗಬೇಕಾದರೆ ಪೋಲಿಸಿನ ತಡೆದು ನಿಲ್ಲಿಸಿದ. ಮೊತ್ತ ಮೊದಲ ಬಾರಿಗೆ ಪೋಲೀಸಿನವನು ನಿಲ್ಲಿಸಿದ ಘಟನೆ ಇದು. ಗಾಬರಿ ಭಯದಿಂದ ಬದಿಯಲ್ಲೇ ನಿಲ್ಲಿಸಿದೆ. ಕಂಬೈ ಸುತ್ತಿ ಹಳೆಯ ಅಂಗಿ ಹಾಕಿಕೊಂಡ ನನ್ನ ಕೈಯಲ್ಲಿ ಬಿಡಿಗಾಸು ಕೂಡ ಇಲ್ಲ. ಸುತ್ತ ಮುತ್ತಲು ನಡೆದಾಡುತ್ತಿದ್ದವರು ನನ್ನನ್ನೆ ನೋಡುತ್ತಿದ್ದಾರೆ ಎಂಬ ನಾಚಿಕೆಯಲ್ಲಿ ಅಲ್ಲೇ ಬದಿಯಲ್ಲಿ ನಿಂತಿದ್ದೆ. ಸುಮಾರು ಹೊತ್ತು ನಿಲ್ಲಿಸಿದ ಮೇಲೆ ಪೋಲೀಸಿನವನು ಬಂದು . ಸೈಕಲ್ ಗೆ ಲೈಟ್ ಇಲ್ಲ ಎಂದ,  ಹಗಲಲ್ಲಿ ಲೈಟು ಯಾಕೆ ಬೇಕು ಎಂದು ಕೇಳುವ ಗಟ್ಟಿ ಮನಸ್ಸು ಇರಲಿಲ್ಲ. ಸೈಕಲ್ ನ ಬೀಗ ಕೇಳಿದ ....ಕೇವಲ ಎರಡು ಚಕ್ರ, ಮತ್ತು ಅಸ್ತಿಪಂಜರದಂತಿದ್ದ ಹಳೆಯ ಸೈಕಲು.....ಬೀಗ ಎಲ್ಲಿದೆ?  ಇಲ್ಲ ಮತ್ತೂ ಸ್ವಲ್ಪ ಹೊತ್ತು ನಿಲ್ಲಿಸಿದ ಮೇಲೆ..ಪೋಲಿಸಿನವ ಹೋಗು ಹೋಗು ಅಂತ ಕಳುಹಿಸಿದ. ಬದುಕಿದೆಯಾ ಬಡಜೀವ ಎಂದು ಕೊಂಡು ಅಲ್ಲಿಂದ ತುಳಿದ ಸೈಕಲ್ ಮತ್ತೆ ನಿಂತದ್ದು ಮಾವನ ಮನೆ ಅಂಗಳದಲ್ಲಿ.  


ಈಗ ಮಂಗಳೂರು ನಗರ ಮಹಾನಗರವಾಗಿದೆ.  ಪ್ರತಿ ರಸ್ತೆಗೆ ಹೋದಾಗಲೂ ಒಂದಲ್ಲ ಒಂದು ಘಟನೆ ನೆನಪಾಗುತ್ತದೆ. ಮಧ್ಯ ರಾತ್ರಿ ಸಿನಿಮಾ ನೋಡಿ  ಕೆ ಎಸ್ ರಾವ್ ರಸ್ತೆಯಲ್ಲಿ ಎರಡೂ ಕೈ ಬಿಟ್ಟು ಸೈಕಲ್ ಓಡಿಸಿ  ಏನೋ ಸಾಹಸ ಮಾಡಿದ ಅನುಭವ ಮರೆಯುವುದಕ್ಕಿಲ್ಲ. ಬಲ್ಲಾಳ್ ಭಾಗಿನ ಚಡವು ಇಳಿಯದೇ  ಏದುಸಿರು ಬಿಟ್ಟುಕೊಂಡು ಸೈಕಲ್ ಹತ್ತಿಸುತ್ತಿದ್ದ ನೆನಪು ಮರೆಯುವುದಕ್ಕಿಲ್ಲ.  ಬೆಂಗಳೂರಿಗೆ ಬಂದು ದಶಕಗಳು ಕಳೆದರೂ ಮಂಗಳೂರಿಗೆ ಹೋಗಿ ಇಳಿದಾಗ ಇದು ನಮ್ಮದು ಎಂಬ ಅಭಿಮಾನದಲ್ಲಿ ಪರಕೀಯ ಭಾವನೆ ಎಲ್ಲೋ ಕಳೆದು ಹೋಗುತ್ತದೆ. 




 

Tuesday, July 12, 2022

ಸಾಂತಾಣಿ ಎಷ್ಟು ಜನರಿಗೆ ತಿಳಿದಿದೆ?


 ಸಾಂತಾಣಿ ಎಷ್ಟು ಜನರಿಗೆ ತಿಳಿದಿದೆ? 

        ಇದು ಏನು? ನೋಡಿದರೆ ಹಲಸಿನ ಬೀಜ. ಅಷ್ಟೇ ಅಲ್ಲ. ಇದಕ್ಕೆ ಸಾಂತಾಣಿ ಎಂದು ಹೇಳುತ್ತಾರೆ. ಸಾಂತಾಣಿ.......ಇದು ನಮ್ಮ ಬಾಲ್ಯವನ್ನು ನೆನಪಿಸುತ್ತದೆ. ನಮ್ಮೂರಿನ ಹಲವು ಮನೆಗಳಲ್ಲಿ ಮೊದಲು ಮಾಡಿ ಡಬ್ಬಗಳಲ್ಲಿ ಸಂಗ್ರಹಿಸಿಡುತ್ತಿದ್ದರು. ಹಲಸಿನ ಸೊಳೆ ಉಪ್ಪಿನಲ್ಲಿ ಹಾಕಿ ಮಂಡೆಗಳಲ್ಲಿ ಮಳೆಗಾಲದ ಉಪಯೋಗಕ್ಕೆ ಸಂಗ್ರಹಿಸಿಡುತ್ತಿದ್ದರು. ಅದರ ಜತೆಯಲ್ಲಿ ಈ ಹಲಸಿನ ಬೀಜವನ್ನು ಬಿಸಾಡದೆ ಅದನ್ನು ಉಪ್ಪಿನೊಂದಿಗೆ ಬೇಯಿಸಿ ಬಿಸಿಲಲ್ಲಿ ಒಣಗಿಸಿ ಸಂಗ್ರಹಿಸಿಡುತ್ತಿದ್ದರು. ಒಣಗಿದ ಸಾಂತಾಣಿ ತಿಂದೇ ಹಸಿವನ್ನು ನೀಗಿಸಿಕೊಳ್ಳುವ ಕಾಲವಿತ್ತು. ಈಗ ಜಂಕ್ ಪುಡ್ ಯುಗದಲ್ಲಿ ಇದು ಬಹುತೇಕ ಮೂಲೆಗೆ ಸೇರಿ ಹೋಗಿದೆ. ಏನೂ ಖರ್ಚಿಲ್ಲದೆ ಎಸೆಯುವ ವಸ್ತುವಿನಿಂದ ಮಾಡುತ್ತಿದ್ದ ಸಾಂತಾಣಿ ನಿಜಕ್ಕೂ ಬಡವನ ಆಹಾರ. 

        ಮೊದಲೆಲ್ಲ ತೋಟದ ಮನೆಯಿಂದ ದೂರದ ಅಂಗಡಿಗೆ ಹೋಗಿ ಮಿಕ್ಚರ್ ಚಿಪ್ಸ್ ಬಿಸ್ಕತ್ತು ತರುವ ಹಾಗಿಲ್ಲ. ಆಗೆಲ್ಲ ಮನೆಯಲ್ಲಿ ತಿನ್ನುತ್ತಿದ್ದ ಈ ಸಾಂತಾಣಿ, ಹುಣೆಸೆ ಬೀಜದ ಪುಳಿಂಕೊಟೆ ಇದೇ ಜಗಿದು ತಿನ್ನುವ ಜಂಕ್ ಫುಡ್. ಎಣ್ಣೆಯ ಅಗತ್ಯವಿಲ್ಲ. ಯಾವಾಗ ಬೇಕೋ ಆವಾಗ ಡಬ್ಬಕ್ಕೆ ಕೈ ಹಾಕಿ ಬೊಗಸೆ ತುಂಬ ಬಾಚಿಕೊಂಡು ಮನೆಯ ಜಗಲಿಯಲ್ಲಿ ಕುಳಿತು ಸುರಿಯುವ ಮಳೆಗೆ ಜಗಿದಷ್ಟು ಮುಗಿಯದ ಸಾಂತಾಣಿ ಪುಳಿಂಕೊಟೆಗಳನ್ನು ತಿನ್ನುವುದೇ  ಮಜ.  ಮೊದಲೆಲ್ಲ ಮಳೆಗಾಲ ಎಂದರೆ ಹೀಗೆ ಹಲಸಿನ ಹಪ್ಪಳ ಬಾಳೆಕಾಯಿ ಹಪ್ಪಳ ಹೀಗೆ ಹಲವು ತಿಂಡಿಗಳಿದ್ದರೆ ಅದಕ್ಕೆ ಸಮಾನಾಗಿ  ಹಲಸಿನ ರುಚಿಯೋಂದಿಗೆ ಉಪ್ಪಿನ ಸ್ವಾದ ಬೆರಸಿ ಕೊಡುವ ಈ ಸಾಂತಾಣಿ ಮರೆಯುವುದಕ್ಕಿಲ್ಲ. 

        ಶಾಲೆಗೆ ಹೋಗುವಾಗ ಪುಸ್ತಕದ ಚೀಲದಲ್ಲಿ ಅಥವಾ ಬುತ್ತಿಯ ಪಾತ್ರೆಯಲ್ಲಿ ಒಂದಿಷ್ಟು ಸಾಂತಾಣಿ ಪುಳಿಂಕೊಟೆ ಇದ್ದೇ ಇರುತ್ತಿತ್ತು. ಅದರಲ್ಲು ಯಾವುದೇ ಮಕ್ಕಳ ಕೈಯಲ್ಲಿ ಈ ಸಾಂತಾಣಿ ಕಂಡರೆ ಆತನ ಹತ್ತಿರ ಹೋಗಬೇಡ ಮಾರಾಯ, ಘರ್ನಾಲು ಹೊಟ್ಟಿಸುತ್ತಾನೆ ಅಂತ ತಮಾಷೆ ಮಾಡುವುದಿತ್ತು. ಹಲಸಿನ ಬೀಜದ ಸಾಂತಾಣಿ ತಿಂದು ಯಾರಾದರೂ ಪ್ರಾಣಾಯಾಮ ಮಾಡಿದರೆ ಅಲ್ಲಿ ನಡೆಯಬಾರದ್ದು ನಡೆದಿದೆ ಎಂದು ತಿಳಿದುಕೊಳ್ಳಬೇಕು. ಇದನ್ನು ತಿಂದು ಮೂಗಿನಜತೆ ಇನ್ನೇಲ್ಲೋ ಉಸಿರಾಡಿ ಪ್ರಾಣಾಯಾಮ ಮಾಡಿದರೆ.................. ಈಗ ನೆನಸಿಕೊಂಡರೆ ಕಿರುನಗುವೊಂದು ಹಲವರಿಗೆ ಬರಬಹುದು. ಆ ಬಾಲ್ಯವೇ ಸುಂದರ. ಹೇಳಿ ಎಷ್ಟು ಜನರಿಗೆ ಈ ಸಾಂತಾಣಿ ನೆನಪಿದೆ. 

Saturday, June 18, 2022

ನಿದ್ದೆಯಿಂದ ದೂರ

  ನಿದ್ದೆ ವಿಶ್ರಾಂತಿಯ ಸಂಕೇತ. ಆರೋಗ್ಯದ ಮೊದಲ ಲಕ್ಷಣ ನಿದ್ದೆ. ನಿದ್ದೆಯನ್ನು ವಿಶ್ರಾಂತಿ ಎಂದು ತಿಳಿದರೂ ಯೋಗ ಜೀವನದಲ್ಲಿ ಅದು ಪೂರ್ಣ ವಿಶ್ರಾಂತಿ ಎಂದಾಗುವುದಿಲ್ಲ. ವಿಶ್ರಾಂತಿ ಬೇಕು ಅಂತ ನಿದ್ದೆ ಮಾಡಿದರೆ ದೇಹ ಮನಸ್ಸು ಎರಡು ಸಕ್ರಿಯವಾಗಿರುತ್ತದೆ. ಒಂದು ವೇಳೆ ದೇಹ ವಿಶ್ರಮಿಸಿದರೂ ಮನಸ್ಸು ಸುಪ್ತವಾಗಿರುವುದಿಲ್ಲ ನಿದ್ದೆಯಲ್ಲೂ ಮನಸ್ಸು ಕನಸನ್ನು ಕಂಡು ಮನಸ್ಸು ಎಚ್ಚರವನ್ನೇ ಅನುಭವಿಸುತ್ತದೆ, ದುಃಖದಲ್ಲಿ ಮರುಗಿ ಸುಖದಲ್ಲಿ ನಕ್ಕು, ಭಯದಲ್ಲಿ ಗಾಬರಿಯನ್ನೂ ಅನುಭವಿಸುತ್ತದೆ. ನಿದ್ದೆ ಎಂಬುದು ದೇಹದ ಒಂದು ಕ್ರಿಯೆ.  ಈ ನಿದ್ದೆ  ಬೇಕಾದಾಗ ಬರುವುದೂ ಇಲ್ಲ. ಬರುವಾಗ ಬೇಡ ಅಂತ ತಳ್ಳಿ ಹಾಕುವುದಕ್ಕೂ ಆಗುವುದಿಲ್ಲ. ನಿದ್ದೆ ಸಕ್ರಿಯವಾಗಿದ್ದ ದೇಹಕ್ಕೆ ಒಂದು ವಿಶ್ರಾಂತಿಯ ಅವಕಾಶ. 


ನಿದ್ದೆ ಎಂದರೆ ರಾತ್ರಿಯ ಸಹಚರ. ಆದರೆ ಹಲವು ಸಲ ಈ ಸಹಚರ ಬೇಕಾದಾಗ ಬರದೇ ಇರುವುದೇ ಹೆಚ್ಚು. ಈತ ಬರಬೇಕಾದರೆ ಸುಮ್ಮನೇ ಬರುವುದಿಲ್ಲ. ಹಲವು ಸಲ ಹಗಲಿನಲ್ಲಿ ಬಂದು ತೊಂದರೆ ಕೊಡುತ್ತದೆ. ಎಲ್ಲವನ್ನು ಮರೆಸುವ ನಿದ್ದೆ ಅಮೂಲ್ಯವೆನಿಸುವುದು ಅದು ಬರದೇ ಇದ್ದಾಗ. ಹಲವರಿಗೆ ನಿದ್ದೆ ಕೂಡ ಹಗಲು ಕನಸಿನಂತೆ. ಬರುವುದೇ ಇಲ್ಲ. ಇಂದು ಬಹುತೇಕರಿಗೆ ನಿದ್ರೆ ಎಂಬುದು ಹಗಲು ಕನಸು !  ಯಾಕೆ ಇದು ಕನಸಾಗುತ್ತದೆ. ಕನಸಿನಲ್ಲೂ ನಿದ್ದೆ ಸುಳಿಯುವುದಿಲ್ಲ ಯಾಕೆ?   ಉದ್ರೇಕ ಉದ್ವೇಗ ಮಾನಸಿಕ ಒತ್ತಡ ನಿದ್ದೆಯ ದೊಡ್ಡ ವೈರಿಗಳು. ನಿದ್ದೆ ಬರಬೇಕಿದ್ದರೆ ಇವುಗಳಿಂದ ಹೊರಬರುವ ಪ್ರಯತ್ನ ಮಾಡಬೇಕು. 

ನಿದ್ದೆ ಜಡತ್ವದ ಸಂಕೇತ. ನಿದ್ದೆಯನ್ನು ಅಸುರೀ ಸ್ವಭಾವ ಎನ್ನುವುದುಂಟು. ಬೇಡದೇ ಇದ್ದಾಗ ಅಪರ ಹೊತ್ತಿನಲ್ಲಿ ನಿದ್ದೆ ಮಾಡುವುದು ಒಂದು ಶಾಪ ಎಂದು ಪರಿಗಣಿಸುತ್ತಾರೆ. ಹೀಗಿದ್ದರೂ ನಿದ್ದೆ ಬರಬೇಕಾದಾಗ ಬರದೇ ಇದ್ದರೆ ಮನುಷ್ಯ ದುರ್ವ್ಯಸನಗಳಿಗೆ ತುತ್ತಾಗುತ್ತಾನೆ. ವಾಸ್ತವದಲ್ಲಿ ಇದು ಮನಸ್ಸಿನ ಆತಂಕವೇ ಹೊರತು ದೇಹದ ಲಕ್ಷಣವಲ್ಲ. ಆರೋಗ್ಯವಂತ ದೇಹಕ್ಕೆ ನಿದ್ದೆ ಒಂದು ಸಹಜ ಕ್ರಿಯೆ. 

ನಿದ್ದೆಗೆ ಸೂಕ್ತ ಸಮಯ ರಾತ್ರಿ. ಹಗಲು ನಿದ್ದೆ ಆರೋಗ್ಯದ ದೃಷ್ಟಿಯಿಂದ ಸೂಕ್ತವಲ್ಲ. ಇದಕ್ಕೆ ಕಾರಣ ಹಲವಿದೆ. ಹಗಲಲ್ಲಿ ವಾತಾವರಣದಲ್ಲಿ ಆಮ್ಲಜನಕದ ಮಟ್ಟ ಕಡಿಮೆ ಇರುತ್ತದೆ. ನಿದ್ದೆಯಲ್ಲಿ ಸಹಜವಾಗಿ ದೀರ್ಘ ಉಸಿರು ಉಸಿರಾಡುವಾಗ ಸಾಕಷ್ಟು ಆಮ್ಲಜನಕ ಹೃದಯಕ್ಕೆ ಸೇರುವುದಿಲ್ಲ. ಹಾಗಾಗಿಯೇ ರಾತ್ರಿ ನಿದ್ದೆ ಮಾಡಿ ಎದ್ದಾಗ ಇರುವಷ್ಟು ಉತ್ಸಾಹ ಹಗಲು ನಿದ್ದೆ ಮುಗಿಸಿದಾಗ ಇರುವುದಿಲ್ಲ. ದೇಹ ಬಹಳಷ್ಟು ಸುಸ್ತಾದಂತೆ ಅನುಭವವಾಗುತ್ತದೆ. ಹಾಸ್ಯಕ್ಕೆ ಹೇಳುವುದುಂಟು ರಾತ್ರಿಯ ನಿದ್ದೆ ಪತ್ನಿಯಂತೆ ಬೇಕಾದಾಗ ಬಿಟ್ಟು ಬಿಡುತ್ತಾಳೆ, ಹಗಲಿನ ನಿದ್ದೆ ಮೋಹಿನಿಯಂತೆ ಒಂದು ಸಲ ಹಿಡಿದರೆ ಬಿಡುವುದೇ ಇಲ್ಲ. ಇದು ಕೇವಲ ಹಾಸ್ಯಕ್ಕೆ ಹೇಳುವುದು. 

ನನ್ನ ಮಿತ್ರರೊಬ್ಬರು ಇದ್ದಾರೆ , ಯಾವಾಗ ಬೇಕೋ ಆವಾಗ ಎಲ್ಲೆಂದರಲ್ಲಿ ನಿದ್ದೆ ಮಾಡಬೇಕು ಎನ್ನಿಸಿದರೆ ಮೈ ಮರೆತು ನಿದ್ದೆ ಮಾಡಿಬಿಡುತ್ತಾರೆ. ಹಾಗಂತ ಅವರ ಆರೋಗ್ಯ ಸ್ಥಿರವಾಗಿದೆ ಎಂದಲ್ಲ, ಗಂಭೀರವಾದ ಆರೋಗ್ಯ ಸಮಸ್ಯೆ ಅವರನ್ನು ನಿತ್ಯ ಬಾಧಿಸುತ್ತದೆ. ಆದರೂ ನಿದ್ದೆಯ ವಿಚಾರದಲ್ಲಿ ಅವರದು ಸ್ಥಿರವಾದ ಚಟುವಟಿಕೆ. ನಮ್ಮ ಸಂಬಂಧಿಗಳು ಒಬ್ಬರಿದ್ದರು ಹತ್ತು ಪೆಟ್ರೋ ಮ್ಯಾಕ್ಸ್ ಸುತ್ತಲೂ ಉರಿಸಿಟ್ಟರು ಮಲಗಿದ ಕೆಲವೇ ಕ್ಷಣಗಳಲ್ಲಿ ಗಾಢನಿದ್ದೆಗೆ ಜಾರಿಬಿಟ್ಟು ಗೊರಕೆ ಎಳೆಯುತ್ತಿದ್ದರು. ನಿದ್ದೆ ಆರೋಗ್ಯದ ಲಕ್ಷಣವಾದರು ಮಿತಿ ಮೀರಿದರೆ ಅದು ಜಾಡ್ಯ ಆವರಿಸಿ ರೋಗವಾಗಿ ಬದಲಾಗುತ್ತದೆ. 

ನಿದ್ದೆ ಬಾರದಿದ್ದರೆ ಹಲವರು ದುರ್ವ್ಯಸನಕ್ಕೆ ತುತ್ತಾಗುತ್ತಾರೆ. ನನಗೂ ಈ ಒಂದು ದುರ್ವ್ಯಸನ ಒಂದು ಕಾಲದಲ್ಲಿ ಬಾಧಿಸಿತ್ತು. ರಾತ್ರಿ ಮಲಗಬೇಕಾದರೆ, ಎಲೆ ಅಡಿಕೆ ಒಂದಷ್ಟು ತಂಬಾಕು ಹಾಕದಿದ್ದರೆ ನಿದ್ದೆಯೇ ಬರುತ್ತಿರಲಿಲ್ಲ. ಅದು ಇಲ್ಲದೇ ಇದ್ದರೆ ನಿದ್ದೆಯೇ ಬರುವುದಿಲ್ಲವೇನೋ ಎಂಬ ಆತಂಕದಲ್ಲಿ ಅದು ಬಿಡದೇ ಹಿಂಬಾಲಿಸಿ ಚಟವಾಗಿ ಬದಲಾಗಿತ್ತು. ಊರಲ್ಲಿ ಹೊರಗೆ ಸುತ್ತಾಡಿ ಕೆಲಸ ಮಾಡುವಾಗ ತನ್ನಷ್ಟಕ್ಕೆ ಅಂಟಿಕೊಂಡ ಚಟವದು.  ಮಳೆಯಲ್ಲಿ ನೆನೆದು ಮಾಡುವಂತಹ ತೋಟದ ಗದ್ದೆಯ ಕೆಲಸದಲ್ಲಿ ಎಲೆ ಅಡಿಕೆ ಚರ್ವಣ ತುಂಬ ಆಹ್ಲಾದವನ್ನು ಕೊಡುತ್ತಿತ್ತು. ಅದು ಲಹರಿ ಎಂಬ ಭ್ರಮೆ ಎಂದು ಅರಿವಾಗಬೇಕಾದರೆ ಬಹಳಷ್ಟು ಸಮಯ ಬೇಕಾಯಿತು.   ಯಾವಾಗ ಯೋಗಾಭ್ಯಾಸ ಆರಂಭವಾಯಿತೋ ನನ್ನ ಹಲವಾರು ದುರಭ್ಯಾಸಗಳೂ ದುಶ್ಚಟಗಳೂ ಅನಿವಾರ್ಯ ಅಲ್ಲವೆಂಬಂತೆ ಭಾಸವಾಗತೊಡಗಿತು. ಹಲವು ಜನಗಳು ಇದೇ ರೀತಿ ದುರಭ್ಯಾಸಕ್ಕೆ ಅಂಟಿಕೊಂಡುಬಿಡುತ್ತಾರೆ. ವಾಸ್ತವದಲ್ಲಿ ದುಶ್ಚಟದಿಂದಲೇ ಸಹಜವಾಗಿ ಬರುವ ನಿದ್ದೆ ದೂರಾಗಿ ಬಿಡುತ್ತದೆ.  ನಿದ್ದೆ ಬರುವುದಿಲ್ಲ ಎಂದು ನಿದ್ದೆ ಮಾತ್ರೆ ತೆಗೆದುಕೊಂಡದ್ದೂ ಇದೆ.   ಇಂತಹ ಸಂದರ್ಭಗಳಲ್ಲಿ  ಮೈಮರೆತು ನಿದ್ದೆ ಬಂದರೂ ನಿಶೆಯಲ್ಲಿ ಮಾಡಿದ ನಿದ್ದೆ ಅದು ನಿದ್ದೆಯಾಗದೆ ಸಹಜವಾಗಿ ಬರಬೇಕಾದ ನಿದ್ದೆ ಶೇಖರಣೆಯಾಗಿ,  ನಶೆ ಕಡಿಮೆಯಾದ ಮೇಲೆ ಆ ನಿದ್ದೆ ಮತ್ತೆ ಬರುತ್ತದೆ. ಮತ್ತು ಇದು ಬಿಡದೆ ಮತ್ತಷ್ಟು ಜಡತ್ವವನ್ನು ತರುತ್ತದೆ.  ನಿಜಕ್ಕೂ ನಿದ್ದೆ ಬರುವುದಿಲ್ಲ ಎಂಬ ಭ್ರಮೆಯೇ ನಿದ್ದೆಯನ್ನು ದೂರ ಮಾಡುತ್ತದೆ. ದುಶ್ಚಟದಿಂದ ಒಂದಷ್ಟು ದಿನ ದೂರವಾಗಿ ಇಟ್ಟು ನೋಡಿ. ಒಂದೆರಡು ದಿನ ಕಷ್ಟವಾದರು ನಿದ್ದೆಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬುದು ಅರಿವಾಗುತ್ತದೆ.  ದುಶ್ಚಟವೆಂದರೆ ಕೇವಲ ಮದ್ಯ ಧೂಮಪಾನ ತಂಬಾಕು ಸೇವನೆ ಎಂಬ ತಪ್ಪು ಕಲ್ಪನೆ ಹಲವರಿಗಿದೆ. ಚಹ ಕಾಫಿಯೂ ಅಕಾಲಿಕ ಆಹಾರ ಸೇವನೆಯೂ ದುಶ್ಚಟವಾಗುತ್ತದೆ. ಮನಸ್ಸು ಉದ್ರೇಕಗೊಂಡು ಸಿಟ್ಟಾಗುವುದು ಸಹ ದುಶ್ಚಟ ಎನಿಸಲ್ಪಡುತ್ತದೆ.  ಒಂದಷ್ಟು ದಿನ ಚಹ ಕಾಫಿ ಸೇವನೆ ಬಿಟ್ಟು ನೋಡಿ ಇದರ  ಅರಿವಾಗುತ್ತದೆ.  ಚಹ ಕಾಫಿ ಮದ್ಯ ಧೂಮ ಪಾನ ಎಲ್ಲವು ಅನಿವಾರ್ಯ ವಸ್ತುಗಳಲ್ಲ. ಕೇವಲ ಭ್ರಮೆಯನ್ನು ಹುಟ್ಟಿಸುವ ಲಹರಿ ವಸ್ತುಗಳು. 

ಮಲಗಿದ ಕೂಡಲೇ ನಿದ್ದೆ ಬರದೇ ಇದ್ದರೆ ಏನೆಲ್ಲ ಯೋಚನೆಗಳು. ಕಳೆದ ದಿನಗಳು ಮುಂದೆ ಬರುವ ದಿನಗಳು ಯೋಚನೆಗಳಿಗೆ ಕೇಳಬೇಕೆ. ಈ ಯೋಚನೆಯ ನಡುವೆ ನಿದ್ದೆಗೆ ಜಾಗವೇ ಇಲ್ಲ. ಸಾಮಾನ್ಯವಾಗಿ ನಿದ್ದೆ ಬರುವುದಿಲ್ಲ ಎಂದಾಗ ದುಶ್ಚಟಗಳು ತನ್ನಿಂತಾನೇ ಇಷ್ಟವಾಗುತ್ತದೆ.  ನಾವು ಇವುಗಳಿಂದಲೇ ನಿದ್ದೆ ಬರುತ್ತದೆ ಎಂದು ತಿಳಿಯುತ್ತೇವೆ. ಕೆಲವರಿಗೆ  ನಿದ್ದೆ ಬರಬೇಕಾದರೆ ಏನಾದರೂ ಓದಬೇಕು. ನಾಲ್ಕು ಪುಟ ಓದಿದಕೂಡಲೇ ನಿದ್ದೆಗೆ ಜಾರಿಬಿಡುವವರಿದ್ದಾರೆ. ಶಾಲೆಗೆ ಹೋಗುವಾಗ ಪಾಠ ಓದುವಾಗ ಕೇಳುವಾಗ ನಿದ್ದೆ ಬರುವುದು ಸಹಜ. ನಂತರ ಬದುಕಿನಲ್ಲೂ ಅದೇ ಮುಂದುವರಿಯುತ್ತದೆ. ಓದಿ ನಿದ್ದೆ ತರಿಸುವುದು ಒಂದು ರೀತಿಯಲ್ಲಿ ಒಳ್ಳೆಯ ಹವ್ಯಾಸ ಎನ್ನಬಹುದು. ಆದರೆ ದುಶ್ಚಟಗಳು, ಅದರಲ್ಲಿ ಕೆಲವು ಗಂಭೀರವಾಗಿ ಇರುತ್ತವೆ, ಇನ್ನು ಕೆಲವು ಅದರ ಗಂಭೀರತೆಯನ್ನು ತೋರಿಸದೇ ಇದ್ದು ಮತ್ತೆ ಅದು ಗಂಭೀರವಾಗುತ್ತದೆ. ಯಾವುದೇ ಒಂದು ಹವ್ಯಾಸ ಚಟ ಅಂತ ಅನ್ನಿಸುವುದು ಅದು ಇಲ್ಲದೇ ಆಗುವುದಿಲ್ಲ ಎಂಬಂತಿರುವಾಗ. ಅದು ಎನೂ ಆಗಬಹುದು. ಕಾಫಿ ಚಹ ಸೇವನೆಯೂ ಒಂದು ದುಶ್ಚಟವಾಗುತ್ತದೆ. ಇವುಗಳೆಲ್ಲ ಲಹರಿ ವಸ್ತುಗಳು.  ಲಹರಿ ವಸ್ತುಗಳು ಬದುಕಿಗೆ ಅನಿವಾರ್ಯವಲ್ಲ.  ಹಲವರು ಅದನ್ನು ಒಪ್ಪಿಕೊಳ್ಳುವುದಿಲ್ಲ ಅಷ್ಟೆ. ದುಶ್ಚಟ ಎಂದು ಅರಿವಾಗಬೇಕಾದರೆ ಒಂದಷ್ಟು ಸಮಯ ಅದರಿಂದ ದೂರವಿದ್ದು ನೋಡಿದರೆ ಅರಿವಾಗುತ್ತದೆ.  

  ಮೊದಲು ಊರಲ್ಲಿ ಮಳೆಗೆ ಕೆಲಸ ಮಾಡುವಾಗ ತಾಂಬೂಲ ಚರ್ವಣ ಅಭ್ಯಾಸವಾಯಿತು. ಬರೀ ತಾಂಬೂಲವಾದರೆ ಅರೋಗ್ಯದಾಯಕ ಅಂಶಗಳಿದ್ದರೂ ಚಿಟಿಕೆ ತಂಬಾಕು ಸೇವಿಸುವಾಗ ಲಹರಿಯಾಗುತ್ತದೆ.  ಮಳೆಯಲ್ಲಿ ಹೊಗೆಸೂಪ್ಪು ಹಾಕಿ ಎಲೆ ಅಡಿಕೆ ಜಗಿಯುವುದರಲ್ಲಿ ಒಂದು ಆಹ್ಲಾದತೆ ಇರುತ್ತದೆ. ಎಲ್ಲರೂ ಹೇಳುವಂತೆ ಅದರ ಮಜವೇ ಬೇರೆ.  ಮೊದಲು ಎಲ್ಲಿಗಾದರೂ ಹೋದಾಗ ಬಸ್ಸು ಬಾರದೇ ಇದ್ದರೆ ಅಲ್ಲಿ ಚೀಲದಲ್ಲಿದ್ದ ತಾಂಬೂಲ ಪೆಟ್ಟಿಗೆಯನ್ನು ತೆರೆದು ತಾಂಬೂಲ ಹಾಕಿಕೊಳ್ಳುತ್ತಿದ್ದದ್ದು ರೂಢಿ.  ಎಲೆ ಅಡಿಕೆ ತಿನ್ನುವುದು ಸಮಯ ಕಳೆಯುವ ಒಂದು ಹವ್ಯಾಸ. ಎಲ್ಲಿಗಾದರೂ ನೆಂಟರಾಗಿ ಅಥವ ಹೀಗೆ ಹೋದರೂ ನಾವು ತಾಂಬೂಲ ಅಭ್ಯಾಸ ವಿದ್ದರೆ, ಸತ್ಕಾರಕ್ಕೆ ಸುಲಭವಾದ ಒಂದು ವಿಧಾನ ಎಂದರೆ ಎಲೆ ಅಡಿಕೆಯ ಪೆಟ್ಟಿಗೆ ತಂದಿಡುವುದು. ಅದರಲ್ಲೂ ಎಲ್ಲಿಂದಲೋ ಕಷ್ಟ ಪಟ್ಟು ತಂದ ಕುಣಿಯ ಹೊಗೆಸೊಪ್ಪು ಇದೆ ಅಂತ ಸತ್ಕರಿಸುವವನು ಹೆಗ್ಗಳಿಕೆ ತೋರಿಸಿದರೆ ಒಂದಿಷ್ಟು ತಿಂದು ಗಾಳಿಯಲ್ಲಿ ತೇಲುವ ಅನುಭವ ಯಾರಿಗೆ ಬೇಡ?  ತಂದ ಹೊಗೆಸೊಪ್ಪು ಚೆನ್ನಾಗಿದ್ದರೆ ಅದಕ್ಕಾಗಿ ಎಲೆ ಅಡಿಕೆ ಜಗಿಯುವ ಖಯಾಲಿಯೂ ಇರುತ್ತಿತ್ತು.  ಹಸಿವಾದರೂ, ಹಸಿವಾಗುವುದಕ್ಕೂ ತಾಂಬೂಲ ಪರಿಹಾರವನ್ನು ಕಂಡುಕೊಳ್ಳುವವರಿದ್ದಾರೆ.  ಸಂದರ್ಭಾನುಸಾರ ಇರುವವುಗಳು ಅನಿವಾರ್ಯ ಅನ್ನಿಸುವ ಸೀಮೆ ದಾಟಿದಾಗ ಬಿಡದ ಭೂತವಾಗಿ ಕಾಣುತ್ತದೆ. ಈ ಭೂತವನ್ನು ಉತ್ತಮ ಜೀವನ ಶೈಲಿಯಿಂದ ದೂರ ಮಾಡಬಹುದು. 

ತಾಂಬೂಲ ಸೇವನೆ ಅಷ್ಟೊಂದು ಗಂಭೀರ ಹವ್ಯಾಸ ಅಲ್ಲ ಅಂತ ಅನಿಸಿದರೂ ನನಗೆ ಅದೆಷ್ಟು ಗಂಭೀರ ಅಂತನ್ನಿಸಿದ್ದು ಅದು ಇಲ್ಲದೇ ಆಗುವಾಗ. ರಾತ್ರಿ ಪ್ರಯಾಣವಿದ್ದರಂತೂ ಒಂದೆರಡು ಬಾರಿ ಇದನ್ನು ಸೇವಿಸಿಯಾಗುತ್ತದೆ. ರಾತ್ರಿ ಮಲಗುವಾಗ ಒಂದಷ್ಟು ತಂಬಾಕಿನ ನಶೆ ಏರಿಸಿ ಎಲ್ಲವನ್ನೂ ಮರೆತಂತೆ ಅನುಭವವಾಗಿ ನಿದ್ದೆ ಬರುತ್ತದೆ ಎಂಬ ಕ್ಷುಲ್ಲಕ ಭ್ರಮೆಯಲ್ಲಿದ್ದೆ. ಈ ಚಟ ಹಲವಾರು ತೊಂದರೆಯನ್ನೇ ಕೊಡುವಷ್ಟು  ರೀತಿಯಲ್ಲಿ ಅಂಟಿಕೊಂಡಿದ್ದರೂ ಇದು ಒಂದಲ್ವ ಎಂದು ತಾತ್ಸಾರದಿಂದ ಒಂದಾದರೂ ಚಟವಿರಲಿ ಎಂದು ಅಂಟಿಸಿಕೊಂಡೇ ಇದ್ದೆ. ಈ ಚಟದಿಂದಾಗಿ ಹೋದಲ್ಲೆಲ್ಲ ಒಂದಷ್ಟು ತೊಂದರೆಯನ್ನು ಅನುಭವಿಸಿದ್ದಿದೆ. ಈಗಲೂ ಇದೊಂದು ಚಟ ಎಷ್ಟು ಸುಂದರ ಎನಿಸಿಬಿಡುತ್ತದೆ. ಇಲ್ಲಿ ಬೆಂಗಳೂರಲ್ಲಿ ಒಳ್ಳೆ ಹೊಗೆಸೊಪ್ಪು ಸಿಗುವುದಿಲ್ಲ ಎಂದು, ಊರಿಗೆ ಹೋದಾಗಲೆಲ್ಲ,   ಹೊಗೆಸೊಪ್ಪು ಕಟ್ಟಿ ತರುತ್ತಿದ್ದೆ.  ರಾತ್ರಿ ಇದು ಇಲ್ಲದೇ ಇದ್ದರೆ ನಿದ್ದೆಯೇ ಬರುವುದಿಲ್ಲ ಎಂಬ ಭ್ರಮೆಯಲ್ಲೇ ಸೇವನೆ ಮಾಡುತ್ತಿದ್ದದ್ದು ಎಷ್ಟೊಂದು ಭಯಾನಕ ಅಂತ ಅನ್ನಿಸುತ್ತದೆ. ಇದು ಯಾವುದೋ ಕಾರಣಕ್ಕೆ ಅಂಟಿಕೊಂಡಿತ್ತು. ಹಲವು ಸಲ  ಬೆಳಗ್ಗೆ ಎದ್ದಾಗ ಬಾಯಿ ದುರ್ಗಂಧ ಬರುತ್ತದೆ ಎಂದುಕೊಂಡು ತನಗೆ ತಾನೆ ಕಾರಣ ಕಂಡುಕೊಳ್ಳುತ್ತಿದ್ದೆ. 

ತಾಂಬೂಲ ಸೇವನೆ ಅಷ್ಟೊಂದು ಗಂಭೀರವಲ್ಲ ಎಂದುಕೊಂಡು ಬಹಳ ವರ್ಷ ಇದನ್ನು ಬಿಡದೇ ಅಂಟಿಸಿಕೊಂಡಿದ್ದೆ. ಆದರೆ ಯಾವಾಗ ಯೋಗಾಭ್ಯಾಸ ತೊಡಗಿಸಿ ಅದಕ್ಕಾಗಿ ಜೀವನ ಶೈಲಿಯನ್ನು ಬದಲಿಸುವ ಪ್ರೇರಣೆಯಾಯಿತೊ ಈ ಚಟಗಳೆಲ್ಲ, ಸಂಬಂಧವೇ ಇಲ್ಲದ ನೆಂಟರಂತೆ ಜಾಗ ಖಾಲಿ ಮಾಡಿದವು.  ಯೋಗ ಜೀವನ ಶೈಲಿ ಎಂದರೆ ಹಾಗೆ ದೇಹಕ್ಕೆ ಅನಪೇಕ್ಷಿತವಾದದ್ದು ದೂರ ಇಡುವಂತೆ ಪ್ರೇರೇಪಣೆ ಮಾಡುತ್ತಾ ಇರುತ್ತದೆ.  ನಮ್ಮ ಮನಸ್ಸಿನಲ್ಲಿ ನಾವು ಪರಿಪೂರ್ಣರಲ್ಲ ಎಂಬ ಭಾವನೆಯನ್ನು ಹಲವು  ಅಭ್ಯಾಸಗಳು ಪ್ರಚೋದಿಸುತ್ತವೆ. ಅದರಲ್ಲೂ ಯೋಗಾಭ್ಯಾಸ ನಮ್ಮನ್ನು ಪರಿಪೂರ್ಣತೆಯತ್ತ ಕೊಂಡೊಯ್ಯುತ್ತದೆ. ಸದಾ ನಾವು ಪರಿಪೂರ್ಣರಲ್ಲ ಎಂಬ ಭಾವನೆಯೇ ಯೋಗಾಭ್ಯಾಸಕ್ಕೆ ಮುಖ್ಯ ಪ್ರೇರಣೆ. ಈ ಭಾವನೆ ಇದ್ದಾಗ ಮಾತ್ರ ಅಭ್ಯಾಸ ಪರಿಪೂರ್ಣವಾಗುತ್ತದೆ. ಯೋಗ ಜೀವನ ಶೈಲಿ ಅವಶ್ಯವಿಲ್ಲದೇ ಇದ್ದದ್ದನ್ನು ನಮ್ಮಿಂದ ಕಿತ್ತು ಹಾಕುತ್ತದೆ. ಅದಕ್ಕೆ ನಾವು ಎಷ್ಟು ಒಪ್ಪಿಸಿಕೊಳ್ಳುತ್ತೇವೆ ಅದನ್ನು ಹೊಂದಿಕೊಂಡಿರುತ್ತದೆ. 

ಇದು ವರೆಗೆ ನಿದ್ದೆ ಬರುವುದಿಲ್ಲ ಎಂದುಕೊಂಡು ಅಂಟಿಸಿಕೊಂಡಿದ್ದ ದುಶ್ಚಟ ಒಂದು ರೀತಿಯಲ್ಲಿ ಯೋಗ ಜೀವನಕ್ಕೂ ಸವಾಲಾದಂತೆ ಜೀವಂತವಾಗಿತ್ತು. ಸಾಲ ಕೊಟ್ಟ ನೆಂಟನಂತೆ ಅದು ಬಿಟ್ಟು ಹೋಗುವುದಿಲ್ಲ. ಆದರೆ ಒಂದು ಸತ್ಯ  ನಿದ್ದೆ ಬರುವುದಿಲ್ಲ ಎಂದುಕೊಂಡು ದುಶ್ಚಟಕ್ಕೆ ಅವಲಂಬಿತನಾಗಿರುವುದು ಮೂರ್ಖತನ. ಭಗವಂತ ಈ ಭೂಮಿಯಲ್ಲಿ ಹುಟ್ಟಿಸುತ್ತಾನೆ. ಸದಾ ಜಗತ್ತಿನ ಅರಿವಿನೊಂದಿಗೆ ಬದುಕುವುದಕ್ಕೆ ಅವಕಾಶವನ್ನು ಕಲ್ಪಿಸಿಕೊಡುತ್ತಾನೆ. ಆದರೆ  ದುಶ್ಚಟದಲ್ಲಿ  ನಾವು ಕ್ಷಣಿಕವಾದರೂ ಈ ಜಗತ್ತಿನ ಅರಿವಿನಿಂದ ದೂರಾಗುವುದಕ್ಕೆ ಬಯಸುತ್ತೇವೆ. 

ನನಗೂ ತಾಂಬೂಲ ಚರ್ವಣದಿಂದ ಹೊರಬರುವ ಮನಸ್ಸಾಯಿತು. ವಾಸ್ತವದಲ್ಲಿ ಯೋಗಾಭ್ಯಾಸಕ್ಕೆ  ಮುಂಜಾನೆ ನಾಲ್ಕು ಗಂಟೆ ಏಳುವ ಕ್ರಮದಿಂದ ಮತ್ತು ನಿತ್ಯ ಪ್ರಾಣಾಯಾಮ ಮಾಡುವುದರಿಂದ ನಿದ್ದೆಯ ಸಮಸ್ಯೆ ಇರಲೇ ಇಲ್ಲ. ಮಲಗಿದ ಕೂಡಲೇ ನಿದ್ದೆ ಆವರಿಸುತ್ತಿತ್ತು. ಮತ್ತೇಕೆ ತಾಂಬೂಲ. ಮೂವತ್ತು ವರ್ಷಗಳಿಂದ ಜತೆಯಾಗಿ ಇದ್ದ ಒಂದು ಹವ್ಯಾಸವನ್ನು ಒಂದು ದಿನ ಬಿಟ್ಟು ಬಿಟ್ಟೆ. ಅದು ಕೆಟ್ಟ ಹವ್ಯಾಸ ಎಂದನಿಸಿದ್ದು ಅದು ಬಿಟ್ಟ ಮೇಲೆ. ಮುಂಜಾನೆ ಬೇಗನೆ ಏಳುವ ಕಾರಣ ಸಾಯಂಕಾಲ ಏಳು ಘಂಟೆಗೆ ಊಟ ಮುಗಿಸಿಬಿಡುತ್ತಿದ್ದೆ. ಎಂಟು ಗಂಟೆಯಾಗಬೇಕಿದ್ದರೆ ನಿದ್ದೆ ಒತ್ತಿ ಒತ್ತಿ ಬರುತ್ತದೆ. ಒಂಭತ್ತು ಗಂಟೆಗೆ ಮತ್ತೆ ಇರುವುದಕ್ಕೆ ಸಾಧ್ಯ ವಿಲ್ಲ ಎಂದು ಕೊಂಡು ಮಲಗಿದರೆ ಕ್ಷಣದಲ್ಲೇ ನಿದ್ದೆ ಆವರಿಸಿ ಬಿಡುತ್ತದೆ. ಯಾವ ತಾಂಬೂಲ ನಶೆಯ ಅಗತ್ಯವಿಲ್ಲದೇ ನಿದ್ದೆ ಆವರಿಸುವುದು ಮಾತ್ರವಲ್ಲ ಆ ನಿದ್ದೆಯ ಒಂದು ಸ್ವಾದ ಅದರ ಅನುಭವ ಅತ್ಯಂತ ವಿಶಿಷ್ಟವಾಗಿ ಕಂಡಿತ್ತು. ಬಹಳ ಸಮಯವಾಯಿತು  ಇದೀಗ ಎಲ್ಲಾ ದುಶ್ಚಟಗಳಿಂದ ದೂರವಾಗಿದ್ದೆನೆ. ಸಿಹಿನಿದ್ದೆ ಎನೆಂದು ಅನುಭವವಾಗಿದೆ. ಮೊದಲೆಲ್ಲ ನಿದ್ದೆ ಎಂದರೆ ಬಾಡಿಗೆಯ ಮನೆಯಂತೆ. ಎಷ್ಟು ಅಂದವಿದ್ದರೂ ಅದು ನನ್ನದಲ್ಲ ಎಂಬ ಭಾವನೆ ಚುಚ್ಚುತ್ತಾ ಇರುವಂತೆ, ನಿದ್ದೆ ನನ್ನದಲ್ಲ ಎಂಬ ಭಾವನೆ. ಅದಕ್ಕೂ ಬಾಡಿಗೆ ಇದೆ.  ಈಗ ನಿದ್ದೆ ಯಾವ ಬಾಡಿಗೆಯೂ ಕೊಡದೆ ನನ್ನದಾಗುತ್ತದೆ.  ನನ್ನ ಸ್ವಂತ ವಸ್ತುವಿನ ಅನುಭವವನ್ನು ಕೊಡುತ್ತದೆ. ನನಗೆ ಬೇಕು ಎಂದಾಗ ಬಂದು ಬೇಡ ಎಂದಾಗ ಬಿಟ್ಟುಕೊಟ್ಟು ಆತ್ಮೀಯ ಮಿತ್ರನಂತೆ ವರ್ತಿಸುತ್ತದೆ.  ಯೋಚಿಸಿ ನಿದ್ದೆ ಬಾರದಿರುವುದಕ್ಕೆ ನಿದ್ದೆ ಕಾರಣವಲ್ಲ, ನಮ್ಮ ದೇಹವೂ ಕಾರಣವಲ್ಲ. ನಮ್ಮ ಮನಸ್ಸೇ ನಿದ್ದೆಯ ಮೊದಲ ವೈರಿ. 

ಕಲ್ಮಶಗಳು, ಜೀವನದ ಒಂದು ಅಂಗ. ದುಶ್ಚಟಗಳು ಪರಿಸರದ ಭಾಗವಾಗಿ ಕೆಲವೊಮ್ಮೆ ಅಂಟಿಕೊಂಡು ಬಿಡುತ್ತವೆ. ದುಶ್ಚಟಗಳಿಂದ ದೂರವಾಗುವುದು ಹೊಸ ಲೋಕದ ಮುಖವನ್ನು ಕಂಡಂತೆ. ಕಮಲ ಕೆಸರಲ್ಲಿ ಹುಟ್ಟಿದರೂ ಅದು ಹೊರಗೆ ಬಂದ ಮೇಲೆ ಕೆಸರಿನಿಂದ ದೂರವಾಗಿ ಶುಭ್ರವಾದ  ಅನುಭವವನ್ನು ನೀಡುತ್ತದೆ. ಕಮಲದಂತೆ ನಮ್ಮ ಬದುಕನ್ನು ರೂಪಿಸಿ ಪರಿಶುದ್ದತೆಯತ್ತ ಸಾಗುವುದೇ ಜೀವನದ ಲಕ್ಷ್ಯ. ಅರಳಿದ ಕಮಲ ತನ್ನ ಎಲ್ಲಾ ದಿಕ್ಕುಗಳಿಗೆ ದಳಗಳನ್ನು ಹರಡಿಸಿದಂತೆ ದುರ್ವ್ಯಸನದಿಂದ ಹೊರಬಂದಾಗ ಬದುಕಿನ ಅವಕಾಶಗಳಿಗೆ ಕೈಚಾಚಿ ವಶಪಡಿಸುವ