" ಬಾನಲ್ಲೂ ನೀನೆ ಭುವಿಯಲ್ಲು... ನೀನೆ" ನಾವು ನಿದ್ದೆಗೆ ಜಾರುವ ಹೊತ್ತು ರಾತ್ರಿ ಹತ್ತು ಘಂಟೆಗೆ ನೀರವ ಮೌನದಲ್ಲಿ ಪಕ್ಕದ ಮನೆಯ ರೇಡಿಯೋದಿಂದ ಹಾಡು ಬರುವುದು ಕೇಳಿ ಬರುತ್ತಿದ್ದ ನಮ್ಮ ಬಾಲ್ಯದ ಕಾಲ. ಸಿನಿಮಾ ಹಾಡು ಕೇಳಬೇಕೆಂದರೆ ಯಾರದೋ ಮನೆಗೆ ಹೋಗಿ ರೇಡಿಯೋ ಹಾಕಿಸಿ ಕೇಳಬೇಕಿತ್ತು. ಅವರೂ ಹಾಗೆ ರೇಡಿಯೋ ಬ್ಯಾಟರಿ ಖರ್ಚಾಗುತ್ತದೆ ಎಂದು ಅದನ್ನು ಒಂದಿಷ್ಟು ಸಣ್ಣ ಧ್ವನಿಯಲ್ಲೇ ಇಡುತ್ತಿದ್ದರು. ತೀರಾ ಬಡತನದ ಒಂದು ಸಾಮಾನ್ಯ ಸಾಧನವಾದ ರೇಡಿಯೋ ಕೂಡ ನಮ್ಮಲ್ಲಿರಲಿಲ್ಲ.
ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ಮನರಂಜನೆ ವಸ್ತು ಯಾವುದೂ ಇರಲಿಲ್ಲ. ಊರಿಗೆಲ್ಲಾ ವಿದ್ಯುತ್ ಸಹ ಇರಲಿಲ್ಲ. ನಮ್ಮ ಪೈವಳಿಕೆ ಗ್ರಾಮದ ಮನೆಗಳಲ್ಲಿ ವಿದ್ಯುತ್ ದೀಪ ಬೆಳಗಿದ್ದು 1980 ರ ಇಸವಿಯಲ್ಲಿ. ಅದುವರೆಗೆ ಸೀಮೆ ಎಣ್ಣೆಯ ದೀಪ ಲ್ಯಾಂಪ್ ಗಳು ಮಾತ್ರ. ಆನಂತರ ಒಂದಷ್ಟು ಧನಿಕರ ಮನೆಗೆ ವಿದ್ಯುತ್ ಸಂಪರ್ಕ ಬಂದರೂ ನಮ್ಮ ಬಾಡಿಗೆ ಮನೆಯಲ್ಲಿ ಸೀಮೆ ಎಣ್ಣೆ ದೀಪವೇ ಪ್ರಕಾಶ ಮೂಲ. ಇಂತಹ ಸ್ಥಿತಿಯಲ್ಲಿ ಮನರಂಜನ ಸಾಧನ ತರುವುದು ಉಪಯೋಗಿಸುವುದು ನಮ್ಮ ಕೈಗೆಟುವ ವಸ್ತುವಾಗಲಿಲ್ಲ.
ಆಗೆಲ್ಲ ಕೆಲವರು ಸಾಯಂಕಾಲ ಬಜಾರ್ ಗೆ ಬಂದವರು ರೇಡಿಯೋ ತರುತ್ತಿದ್ದರು. ಕೈಯಲ್ಲೊಂದು ರೇಡಿಯೋ ತಂದು ಜಂಭದಿಂದ ಅಂಗಡಿಯ ಜಗಲಿಯ ಬೆಂಚಿನ ಮೇಲೆ ಕುಳಿತು ಬರ ಬರ ಸದ್ದಿನೊಂದಿಗೆ ಮಂಗಳೂರು ಭದ್ರಾವತಿ ಸಿಲೋನ್ ವಿವಿಧ ಭಾರತಿ ಸ್ಟೇಶನ್ ಹುಡುಕುತ್ತಿದ್ದರೆ, ನಾವು ಸುತ್ತ ನೆರೆದು ಆಸಕ್ತಿಯಿಂದ ನೋಡುತ್ತಿದ್ದೆವು. ಪುಟ್ಟ ಪೆಟ್ಟಿಗೆಯಿಂದ ಮಾತನಾಡಿದ ಹಾಡಿದ ಸದ್ದು ಬರುವುದು ಅಚ್ಚರಿಯ ವಿಷಯವಾಗಿತ್ತು. ಯಾರೋ ಎಲ್ಲೋ ರೇಡಿಯೋ ಹಾಕಿ ಹಾಡು ಕೇಳುತ್ತಿದ್ದರೆ, ನಮ್ಮ ಮನೆಯಲ್ಲೂ ಒಂದು ರೇಡಿಯೋ ಅದು ಕನಸಿನ ವೈಭವದ ವಿಷಯವಾಗಿತ್ತು. ಅಂತಹ ಕಾಲದಲ್ಲಿ ಎಲ್ಲೋ ಯಾರದೋ ಒಂದು ರೇಡಿಯೋದಲ್ಲಿ ಆಕಾಶವಾಣಿಯ ಚಿತ್ರಗೀತೆಯಲ್ಲಿ ಹಾಡು ಬರುತ್ತಿದ್ದರೆ ಅದರಲ್ಲಿ ಗಾಯಕರ ಹೆಸರು ಹೇಳುತ್ತಿದ್ದರೆ, ಅದರಲ್ಲಿ ಸಾಮಾನ್ಯವಾಗಿ ಬರುತ್ತಿದ್ದ ಹೆಸರು ಪಿ ಬಿ ಶ್ರೀನಿವಾಸ್, ಘಂಟಸಾಲ, ಎಸ್ ಜಾನಕಿ, ಎಸ್ ಪಿ ಬಾಲ ಸುಬ್ರಹ್ಮಣ್ಯಂ, ಜೇಸುದಾಸ್ ವಾಣಿಜಯರಾಮ್, ಪಿ ಸುಶೀಲ ಹೀಗೆ.... ಯಾವುದೇ ಹಾಡು ಹಾಕಿದರು ಹಾಡಿದವರು ಎ ಸ್ಪಿ ಬಾಲಸುಬ್ರಹ್ಮಣ್ಯಂ ಮತ್ತು ಎಸ್ ಜಾನಕಿ ಈ ಹೆಸರು ಪ್ರತೀ ಹಾಡಿನೊಂದಿಗೆ ಚಿರ ಪರಿಚಿತ.
ಚಿತ್ರ ಬಯಲು ದಾರಿ ಹಾಡಿದವರು ಎಸ್ ಜಾನಕಿ...ರಾತ್ರಿಯ ನೀರವ ಮೌನದಲ್ಲಿ ದೂರದ ರೇಡಿಯೋದಲ್ಲಿ ಎಸ್ ಜಾನಕಿಯ ಮಧುರವಾದ ಸ್ವರ ಗಾಳಿಯಲ್ಲಿ ತೇಲಿಬರುತ್ತಿದ್ದರೆ ನಿಂತಲ್ಲೇ ನಿಂತು ಆ ಹಾಡನ್ನು ಆಲಿಸುತ್ತಿದ್ದದ್ದು ಈಗಲೂ ನೆನಪಿದೆ. ಬಾಲ್ಯದ ಮುಗ್ದ ಮನಸ್ಸಿನ ದಿನಗಳಿಂದ ಎಸ್ ಜಾನಕಿ ಎಂಬ ಗಂಧರ್ವ ಗಾಯಕಿಯ ಮುಖ ಪರಿಚಯವಿಲ್ಲದೇ ಇದ್ದರೂ ಆ ಧ್ವನಿಯ ಪರಿಚಯವಿತ್ತು. ಈಗಿನ ಟಿವಿ ಇಂಟರ್ನೆಟ್ ಯೂಟ್ಯೂಬ ದಿನಗಳಲ್ಲಿ ಆ ದಿನದ ಅನುಭವದ ಕಲ್ಪನೆ ಹೇಳಿದರೂ ಕಲ್ಪಿಸುವುದು ಸಾಧ್ಯವಿಲ್ಲ. ಅದೊಂದು ಕಾಲ. ಆ ಕಾಲದಿಂದ ಪರಿಚಯದ ಜಾನಕಮ್ಮನ ಧ್ವನಿ ಇನ್ನು ಕೇವಲ ಧ್ವನಿ ಮುದ್ರಣಕ್ಕೆ ಸೀಮಿತ. ಈ ಕೋಗಿಲೆ ಸಿನಿಮಾದಲ್ಲಿ ಹಾಡುವುದು ನಿಲ್ಲಿಸಿ ಅದೆಷ್ಟು ಕಾಲವಾಯಿತೋ ತಿಳಿಯದು. ಇಂದಿನ ಚಿತ್ರ ವಿಚಿತ್ರ ಸಂಗೀತದ ನಡುವೆ ಜಾನಕಮ್ಮನ ಧ್ವನಿ ಹಲವಾರು ಸಲ ನೆನಪಿಗೆ ಬಂದರೂ ಕಾಲಗತಿಯನ್ನು ತಳ್ಳುವುದು ಸಾಧ್ಯವಲ್ಲ. ಜಾನಕಮ್ಮನ ಹಾಡುಗಳೆಂದರೆ ಅದು ಆಗಿನ ಗಾಳಿಯಲ್ಲಿ ಕಂಪು ಬೆರೆತಂತೆ. ಅದೆಂದಿಗೂ ಮಾಸಿ ಹೋಗದ ಧ್ವನಿ. ಈಗಲೂ ಆ ಗಾಳಿಯಲ್ಲಿ ಆ ಧ್ವನಿ ಎಲ್ಲಾದರೂ ಅವಿತಿದೆಯೋ ಅಂತ ಪಂಚೆಂದ್ರಿಯಗಳು ಅರಸುತ್ತಿದ್ದರೆ ಆಶ್ಚರ್ಯವಿಲ್ಲ. ಈಗಿನ ಟೀವಿ ಯೂಟ್ಯೂಬ್ ನಲ್ಲಿ ಮುಖತೋರಿಸಿ ಹಾಡುವ ಗಾಯಕರ ಪರಿಚಯ ಮುಂದಿನ ಘಳಿಗಯಲ್ಲಿ ಮರೆತು ಹೋಗುತ್ತಿರುವಾಗ, ಆಗ ಕೇವಲ ಧ್ವನಿಮಾತ್ರದಿಂದ ಚಿರಪರಿಚಿತರಾದ ಜಾನಕಮ್ಮನ ಸ್ವರ ಈಗಲೂ ನೆನಪಿನಲ್ಲಿ ಉಳಿದರೆ ಆ ಧ್ವನಿಯ ಗಾಢ ನೆನಪು ಎಷ್ಟು ಎಂದು ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ಇತ್ತೀಚಿನ ದಿನದವರೆಗೂ ಜಾನಕಮ್ಮನ ಮುಖ ಪರಿಚಯ ಬಹಳಷ್ಟು ಮಂದಿಗೆ ತಿಳಿದಿಲ್ಲ. ಕೇವಲ ಧ್ವನಿಯಿಂದ ಮನೆ ಮನೆಯ ಮನ ಮನದ ಚಿರ ಪರಿತ ಹೆಸರಾದ ಜಾನಕಮ್ಮನ ಸ್ವರದ ಜಾದು ಇಂದು ಕಲ್ಪಿಸುವುದಕ್ಕೂ ಸಾಧ್ಯವಿಲ್ಲ.
ಈಗಿನ್ನು ಜಾನಕಮ್ಮ ಕೇವಲ ನೆನಪಿನ ಲೋಕಕ್ಕೆ ಸರಿದುಹೋದರೆ ಜಾನಕಮ್ಮನ ನೆನಪಿನಲ್ಲಿ ಮನಸ್ಸಿನ್ನೂ ಹಾಡುತ್ತಿದೆ ...ಬಾನಲ್ಲು ನೀನೆ ಭುವಿಯಲ್ಲೂ ನೀನೆ ಎಲ್ಲೆಲ್ಲೂ ನೀನೆ...

No comments:
Post a Comment