ದ್ವೈತ ಅದ್ವೈತ ಚರ್ಚೆ ಅಥವಾ ಸಂವಾವಾದರೆ ನಮ್ಮಂತಹವರು ಒಂದಷ್ಟು ವಿಷಯ ಸಂಗ್ರಹ ಮಾಡಿಕೊಳ್ಳಬಹುದು. ಆದರೆ ಇದು ಚರ್ಚೆಯಲ್ಲ, ಸಂಘರ್ಷ.ಅಷ್ಟೇ ಅಲ್ಲ ಒಂದು ಯುದ್ದ. ಬಹುಶಃ ನಮ್ಮ ಧರ್ಮದ ದೇವತೆ ಮಹಾಭಾರತದ ಭೀಷ್ಮನಂತೆ ಕಣ್ಣೀರು ಸುರಿಸಬಹುದು. ಆದರೆ ಇದನ್ನು ಅರ್ಥಮಾಡುವ ಮತ್ತು ಕಾಣುವ ಮನಸ್ಸು ಮಾತ್ರ ಇಲ್ಲವೇ ಇಲ್ಲ.
ಹಿಂದೂ ಧರ್ಮದಲ್ಲಿ ಹಲವಾರು ಪಂಗಡಗಳು ವರ್ಣಗಳು ಇವೆ. ಹಲವು ಜನನ ಸಂಸ್ಕಾರಗಳು ಇವೆ. ಹೊರನೋಟಕ್ಕೆ ಎಲ್ಲವೂ ವಿಭಿನ್ನ ವೈರುಧ್ಯ. ಆದರೆ ವಿವೇಚನೆ ಇದ್ದರೆ ಇದರ ಸಾರ ಗ್ರಹಿಸಿ ಅರ್ಥವಿಸುವುದಕ್ಕೆ ಸಾಧ್ಯ. ಹಿಂದೂ ಧರ್ಮ ಅಂತ ಅಲ್ಲ, ಎಲ್ಲಾ ಧರ್ಮಕ್ಕೂ ಇದು ಅನ್ವಯ, ಆದರೆ ಹಿಂದೂ ಧರ್ಮ ಇದನ್ನು ಚೆನ್ನಾಗಿ ಅಳವಡಿಸಿಕೊಂಡಿದೆ. ಆದರೆ ಇದನ್ನು ಅರ್ಥ ಮಾಡುವುದರಲ್ಲಿ ನಾವು ವಿಫಲಾರಾಗಿದ್ದೇವೆ. ಆದರ ಕಾರಣವೇ ಈ ಸಂಘರ್ಷ. ನಾವು ತತ್ವವನ್ನು ಆಯುಷ್ಯ ಪೂರ್ಣ ಆಧ್ಯಯನಮಾಡುತ್ತೇವೆ. ಆದರೆ ನೀತಿಯನ್ನು ಒಂದಿಷ್ಟೂ ತಿಳಿಯುವುದಕ್ಕೆ ಹೋಗುವುದಿಲ್ಲ. ತತ್ವಕ್ಕಿಂತಲೂ ನೀತಿ ಬಹಳ ಸರಳವಾಗಿರುತ್ತದೆ. ನಾವು ಸಮಷ್ಟಿಯಲ್ಲಿ ಯೋಚಿಸುವುದರಲ್ಲಿ ಎಡವಿಬಿಡುತ್ತೇವೆ.
ಧರ್ಮದ ಚಿಂತನೆಯನ್ನು ನಾವು ಅರ್ಥವಿಸುವುದರಲ್ಲಿ ಎಡವಿದ್ದೇವೆ. ಆದರೆ ನೀತಿಯನ್ನಾದರೂ ಮನುಷ್ಯನಾಗಿ ಅರಿಯಬೇಕು. ಧರ್ಮದ ನೀತಿ ಬಹಳ ಸರವಾಗಿರುತ್ತದೆ. ದೊಡ್ಡದಾದ ಕಲ್ಲೊಂದನ್ನು ಅಥವಾ ದೇವರ ವಿಗ್ರಹವನ್ನು ಎತ್ತ ಬೇಕಿದ್ದರೆ ಒಂದೇ ಕೈಯಲ್ಲಿ ಸಾಧ್ಯವಾಗದೇ ಇರುವಾಗ ಮತ್ತೊಂದು ಕೈಯಿಂದ ಎತ್ತಿಬಿಡುತ್ತೇವೆ. ಕಲ್ಲು ವಿಗ್ರಹ ಎತ್ತಬೇಕಿದ್ದರೆ ಎರಡೂ ಕೈ ಪರಸ್ಪರ ವಿರುದ್ದ ದಿಕ್ಕಿನಿಂದಲೇ ಕಲ್ಲಿನ ಹತ್ತಿರ ಬರಬೇಕು. ಎರಡು ಕೈಗಳು ವಿರುದ್ಧ ದಿಕ್ಕಿನಿಂದ ಹತ್ತಿರ ಬಂದು ಎತ್ತುವುದು ಒಂದೇ ಬಂಡೆಯನ್ನು, ಅದೇ ರೀತಿ ಹೆಬ್ಬೆರಳು ತೋರು ಬೆರಳು ಒಟ್ಟು ಎರಡೂ ಬೆರಳು ಒಟ್ಟು ಸೇರಿ ಒಂದೇ ವಸ್ತುವನ್ನು ಎತ್ತಿಬಿಡುತ್ತವೆ. ಅದೇ ರೀತಿ ಎರಡು ಧರ್ಮಗಳು ಅಥವಾ ಎರಡು ಪಂಗಡಗಳು ಒಟ್ಟು ವಿರುದ್ದ ದಿಕ್ಕಿನಿಂದ ಬಂದು ಒಂದೇ ಭಗವಂತನ್ನು ಸೇರಿಬಿಡುತ್ತದೆ. ವಿವಿಧ ಶಾಖೆಗಳ ಸಾರವಿದು.
ಹಲವು ಶಾಖೆಗಳು, ಅದರಲ್ಲಿ ಒಂದು ಬ್ರಾಹ್ಮಣರು, ಅದಕ್ಕೂ ಮತ್ತೂ ಒಂದಷ್ಟು ಶಾಖೆಗಳು. ಎಲ್ಲಾ ಶಾಖೆಗಳು ಒಂದೇ ಗಾಯತ್ರಿಯನ್ನು ಪಠಿಸುವುದು. ದೇವರು ರೂಪ ಹಲವು ಮಂತ್ರಗಳು ಹಲವು. ಅದರೆ ಮೂಲ ಸ್ವರೂಪ ಒಂದೇ. ಬ್ರಾಹ್ಮಣರಲ್ಲೆ ಸ್ಮಾರ್ತರು ವೈಷ್ಣವರು..ಹೀಗೆ..ನಿಜಕ್ಕಾದರೆ ಇದರ ಅರ್ಥ ತಿಳಿದು ವ್ಯವಹರಿಸುವವರು ನಿಜವಾದ ಬ್ರಾಹ್ಮಣ. ಸ್ಮೃತಿ ಶಾಸ್ತ್ರದಲ್ಲಿ ಹೇಳಿದಂತೆ ಅನುಸರಿಸಿ ನಡೆಯುವವರೆಲ್ಲರೂ ಯಾವ ಬ್ರಾಹ್ಮಣ ಪಂಗಡವಾದರೂ ಅದು ಸ್ಮಾರ್ತ. ಆದರೆ ನಮಗೆ ಸಮಷ್ಠಿಯಲ್ಲಿ ಸ್ವೀಕರಿಸುವುದು ಕಷ್ಟವಾಗುತ್ತದೆ. ಹೇಗೆ ಬೇಕೋ ಹಾಗೆ ವಿಭಾಗಿಸಿಬಿಡುತ್ತೇವೆ. ಹೋಗಲಿ ವಿಭಾಗಿಸಿದರೂ ಭಾವದಲ್ಲಿ ಒಂದಾಗಿರಬೇಕು. ಎಲ್ಲವನ್ನೂ ಸೇರಿಸಿ ತುತ್ತು ತುತ್ತು ಉಂಡರೂ ಎಲ್ಲವೂ ಒಂದೇ ಹೊಟ್ಟೆಗೆ ಸೇರುವಂತೆ. ಗಮ್ಯದಲ್ಲಿ ಎಲ್ಲವೂ ಒಂದಾಗಿಬಿಡುತ್ತವೆ. ಕರಗಿ ಸಾರ ದೇಹಕ್ಕೆ ಸೇರಿಬಿಡುತ್ತದೆ. ಯಾವ ಶಾಸ್ತ್ರದಲ್ಲಿ ಮದುವೆಯಾದರೂ ಗಂಡು ಹೆಣ್ಣು ಒಂದಾಗಿ ಸಂಸಾರವಾದಂತೆ ಈ ಸಾರ ಅರ್ಥವಿಸಿಕೊಳ್ಳಬೇಕು.
ಹಿಂದೂ ಧರ್ಮದಲ್ಲಿ ಹಲವು ಜಾತಿ ಪಂಗಡಗಳಿರಬಹುದು. ಯೋಚಿಸಿ ನೋಡಬೇಕು. ಒಂದೇ ಜಾತಿಯಲ್ಲಾದರೂ ಏಕಮತದ ಸಾಮರಸ್ಯ ಇರಬೇಕು. ಆದರೆ ಒಂದು ಮಠದವರನ್ನು ಕಂಡರೆ ಮತ್ತೊಂದು ಮಠಕ್ಕೆ ಮತ್ಸರ. ದ್ವೈತವೋ ಅದ್ವೈತವೋ ಮೊದಲು ಅಂತರಂಗದಲ್ಲಿ ಒಂದಾಗಬೇಕು. ಅದಲ್ಲವಾದರೆ ಶಾಖೆ ಉಪಶಾಖೆಗಳು ಹುಟ್ಟಿಕೊಂಡರೂ ಮರಕ್ಕೆ ಅದು ಭಾರ. ಯಾರಿಗೋ ತೊಂದರೆ. ಕೊನೆಗೆ ಆ ಶಾಖೆಯನ್ನು ತುಂಡರಿಸಬೇಕು. ಇಲ್ಲವಾದರೆ ಮರಕ್ಕೆ ಉಳಿಗಾಲವಿಲ್ಲ. ಬಿರುಗಾಳಿಯ ಧಾಳಿಗೆ ಬುಡಸಹಿತ ಧರೆಗೆ ಮರ ಉರುಳಬಹುದು.
ಒಂದು ಮನೆಯೊಳಗೆ ಅಥವಾ ಕುಟುಂಬದೊಳಗೆ ನಮಗೆ ಹತ್ತಿರದವರಲ್ಲಿ ಏನೋ ಒಂದು ದೌರ್ಬಲ್ಯ ಕುಂದು ಕೊರತೆ ಇರಬಹುದು. ಆದರೆ ಅದನ್ನು ನಾವು ಹೇಳದೇ ಇರಬಹುದು. ಹೇಳಿಯೇ ತೀರುವ ಅನಿವಾರ್ಯತೆ ಇಲ್ಲ. ಆದರೂ ಅವರ ದೌರ್ಬಲ್ಯವನ್ನು ಆ ಕುಂದು ಕೊರತೆಯನ್ನು ಹೇಳುವ ಉದ್ದೇಶ ಒಂದೇ ಸಂಘರ್ಷ. ನಮಗೆ ಅವರಲ್ಲಿ ಸರಿ ಹೋಗುವುದಿಲ್ಲ ಎಂಬ ಭಾವನೆಯೇ ಅಧಿಕವಾಗಿರುತ್ತದೆ. ಮನಸ್ಸಿನಲ್ಲಿ ಹೀಗೆ ವೈಷಮ್ಯವಿದ್ದರೆ ಯಾವ ಸಮಷ್ಟಿಯ ಚಿಂತನೆಯೂ ಹತ್ತಿರ ಸುಳಿಯಲಾರದು. ಯರದೊ ತಪ್ಪು ದೌರ್ಬಲ್ಯಗಳನ್ನು ಅವರಿಗೆ ನೋವಾಗಬಹುದು ಎಂದು ತಿಳಿದೂ ಹೇಳುವುದರಿಂದ ಉದ್ದೇಶ ಒಂದೇ ಅವರಿಗೆ ನೋವು ಕೊಡಬೇಕು. ಪರೋಕ್ಷವಾಗಿ ದ್ವೇಷ ವೈಷಮ್ಯ ಸಾಧನೆಯಾಗಬೇಕು. ಈ ಭಾವನೆಯಲ್ಲಿ ಎರಡು ಕೈಗಳು ವಿರುದ್ಧದಿಕ್ಕಿನಿಂದಲು ಒಂದಾಗದು. ಎತ್ತಬೇಕಾದ ಕಲ್ಲು ಅಲ್ಲೇ ಬಿದ್ದಿರುತ್ತದೆ. ಯಾರೋ ಯಾವುದೋ ಕಾಲದಲ್ಲಿ ಹೇಳಿದರು ಅಥವ ಬರೆದರು ಎಂದುಕೊಂಡು ಪ್ರಸ್ತುತ ಅದನ್ನು ಹೇಳುವುದರಿಂದ ಏನಾದರೂ ಜೀವನಕ್ಕೆ ಲಾಭ ಇರಬೇಕಲ್ಲ. ಅದು ಹೇಳದೇ ಇದ್ದರೆ ಜೀವನ ಸಾಗದೇ ಉಳಿದುಕೊಂಡಿಲ್ಲ. ಆ ಕಾಲದಲ್ಲಿ ನಮ್ಮ ಅಸ್ತಿತ್ವವೇ ಇರುವುದಿಲ್ಲ ಎಂದಿರುವಾಗ ಏನಿದ್ದರು ತರ್ಕ ಊಹೆಗೆ ನಿರ್ಣಯ ಅವಲಂಬಿಸುತ್ತದೆ. ಯಾಕೆಂದರೆ ಆಗ ನಾವು ಬಿಟ್ಟು ನಮ್ಮ ಹಿರಿಯರಿಂದ ಹಿರಿಯರು ಜೀವಿಸಿರುವುದಿಲ್ಲ. ಹಾಗಿರುವಾಗ ಅದನ್ನು ಉಲ್ಲೇಖಿಸಿ ಆಗಬೇಕಾದದ್ದು ಒಂದೇ ಅಸಮಾಧಾನ ದ್ವೇಷ ಸಾಧನೆ. ಹಲವು ಸಲ ಕಳೆದು ಹೋದ ಘಟನೆ ನಮಗೆ ಹಿತವಲ್ಲದೇ ಇರುವುದನ್ನು ನಾವು ಪ್ರಸ್ತುತ ಬದುಕಿನ ಕ್ಷೇಮಕ್ಕೋಸ್ಕರ ಮರೆಯುತ್ತೇವೆ.
ಪರಧರ್ಮವನ್ನು ನಿಂದಿಸುವುದು ಇಂದು ಮೊದಲಲ್ಲ. ಮೊದಲಿನಿಂದಲೂ ಅದು ಎಲ್ಲೋ ಒಂದು ಕಡೆ ನಿರಂತರವಾಗಿ ನಡೆಯುತ್ತಿತ್ತು. ಆಗ ಅದು ಸಾರ್ವಜನಿಕವಾಗಿ ಅರಿವಿಗೆ ಬರುತ್ತಿರಲಿಲ್ಲ. ಯಾರೋ ಒಬ್ಬ ಅರಸನೋ ಮಹನೀಯನೋ ಹೇಳಿದರೂ ಯಾರೋ ಅದನ್ನು ದಾಖಲೀಕರಣ ಮಾಡಿದ್ದರೆ ಕೆಲವರಿಗಾದರೂ ತಿಳಿದು ಬಿಡುತ್ತಿತ್ತು. ಈಗ ಹಾಗಿಲ್ಲ. ಕನಿಷ್ಠ ಒಬ್ಬ ಹುಲು ಮಾನವ ಹೇಳಿದರೂ ಅದು ಸಾರ್ವಜನಿಕ ಜಗತ್ತಿಗೆ ಪ್ರಕಟವಾಗುತ್ತದೆ. ನಾವು ಯಾರನ್ನೋ ವ್ಯಕ್ತಿಗತವಾಗಿ, ಇಲ್ಲ ಧರ್ಮ ಜಾತಿಯಿಂದಲೋ ನಿಂದನೆ ಮಾಡಿದರೆ ಈಗಿನ ಸಾಮಾಜಿಕ ಜಾಲತಾಣದಿಂದ ಮರುಕ್ಷಣವೇ ತಿಳಿದುಬಿಡುತ್ತದೆ. ಯಾವುದೊ ಮಠ ದೇವಾಲಯದ ಗೋಪುರದಲ್ಲಿ ಕುಳಿತು ಏನೋ ಹೇಳಿದ ಎಂದರೂ ಮೊದಲು ಅಲ್ಲೇ ಅದು ಕರಗಿ ಹೋಗುತ್ತಿತ್ತು. ಈಗ ಹಾಗಿಲ್ಲ ಜಾಲತಾಣದಿಂದ ಅದು ಹೊಸ ಚಿಗುರು ಹೊಡೆದು ಹೆಮ್ಮರವಾಗಿ ಬೆಳೆದು ಬಿಡುತ್ತದೆ. ಹಾಗಾಗ ಪರನಿಂದೆ ದೂಷಣೆ ಮಾಡುವಾಗ ಎಚ್ಚರವಿರಬೇಕು. ಇದರ ಅರಿದ್ದೂ ಮಾಡಿದರೂ ಅದರ ಉದ್ದೇಶ ಒಂದೇ ಪರರನ್ನು ನೋಯಿಸುವುದು. ಪರರನ್ನು ನೋಯಿಸಿ ಆ ಹಿಂಸೆಯ ತಳಹದಿಯಲ್ಲಿ ನಮ್ಮ ಧರ್ಮ ಜಾಗೃತವಾಗಬೇಕೆ? ಅದರ ಅನಿವಾರ್ಯ ಯಾವುದೇ ಧರ್ಮಕ್ಕಿಲ್ಲ.
ಭಜಗೋವಿಂದಂ ಅಂತ ಸಾರಿದ ಶಂಕರ ಭಗವತ್ಪಾದರು ಹೇಳಿದ್ದು ಒಂದನ್ನೆ ಎಲ್ಲವನ್ನು ಬಿಡು ಗೋವಿಂದನನ್ನು ಭಜಿಸು. ಈ ಗೋವಿಂದ ನನಗು ನಿನಗೂ ಎಲ್ಲರಿಗೂ ಒಂದೆ. ಯಾವುದೇ ಧರ್ಮವನ್ನೂ ಕೀಳಾಗಿ ಕಾಣಬೇಡ. ನಿನ್ನ ಧರ್ಮವನ್ನು ಅನುಸರಿಸು, ನಿನ್ನ ಕರ್ಮವನ್ನು ಮಾಡು. ಕರ್ತವ್ಯಭ್ರಷ್ಟನಾಗಬೇಡ. ಅಮೂಲ್ಯ ವಾದ ವೇದ ಮಂತ್ರಗಳು ಆಗಮ ಶಾಸ್ತ್ರಗಳು ನಮ್ಮ ಮುಂದೆ ಇದೆ. ಆದರೆ ಅದನ್ನು ಅರಿಯುವುದರಲ್ಲಿ ನಾವು ಸೋಲುತ್ತಿವೆ. ಒಂದು ವೇಳಿ ಅರಿತಿದ್ದರೆ ಈ ಸಂಘರ್ಷವೇ ಇರುತ್ತಿರಲಿಲ್ಲ.
ಕಾನೂನು ನಿಯಮಗಳು ಅನಿವಾರ್ಯವಾಗುವುದು ಜೀವನವೇ ದುರ್ಭರ ಎನಿಸಿದಾಗ. ಆದರೆ ನೀತಿ ಬದುಕಿನಲ್ಲಿ ಪ್ರತಿಕ್ಷಣವೂ ಅನಿವಾರ್ಯವಾಗುತ್ತದೆ. ಕಾನೂನು ನೀತಿ ಎರಡು ವಿಭಿನ್ನ. ನೀತಿ ಮನುಷ್ಯತ್ವದ ತಳಹದಿಯಲ್ಲಿ ನಿರ್ಣಯವಾಗುತ್ತದೆ. ಕಳ್ಳನಾದರೂ ಆತನ ವೃತ್ತಿಯನ್ನು ಕಾನೂನಿನಲ್ಲಿ ಅಪರಾಧ ಎಂದು ಪರಿಗಣಿಸಿದರೂ ನೀತಿಯಿಂದ ವಿವೇಚಿಸುವಾಗ ಆತ ನಿರಪರಾಧಿಯಾಗಬಹುದು. ಹೊಟ್ಟೆ ಪಾಡಿಗೆ ಮಾಡಿದ ಅಪರಾಧ ಕ್ಷಮಿಸಲ್ಪಡುತ್ತದೆ. ಜೀವ ರಕ್ಷಣೆಗೆ ಸುಳ್ಳು ಹೇಳಿದರೂ ನಿಂದಿಸಿದರೂ ನೀತಿಯಿಂದ ಅದು ಅಪರಾಧವಾಗುವುದಿಲ್ಲ.
ಜೀವರಾಶಿಗಳಲ್ಲಿ ಮನುಷ್ಯನಿಗೆ ಮಾತ್ರ ಭಗವಂತ ಮನಸ್ಸನ್ನು ಕೊಟ್ಟಿರುತ್ತಾನೆ. ಹಾಗಾಗಿಯೇ ಆತ ಮನುಷ್ಯ ಎನಿಸಿಕೊಳ್ಳುತ್ತಾನೆ. ಆದರೆ ಮನುಷ್ಯ ಮನಸ್ಸನ್ನು ಮರೆತರೆ ಆತ ದಾನವನಾಗುತ್ತಾನೆ. ಮನಸ್ಸಿದ್ದವನಿಗೆ ಮಾತ್ರವೇ ಮಾನವೀಯ ಸಂಬಂಧಗಳ ಮೌಲ್ಯ ಅರಿವಾಗುತ್ತದೆ. ದೋಣಿ ಚಲಾಯಿಸುವ ಅಂಬಿಗನಲ್ಲಿ ವಿದ್ವಾಂಸ ತತ್ವ ಶಾಸ್ತ್ರ ಮೀಮಾಂಸೆಯನ್ನು ಕೇಳಿದಂತೆ ಕೊನೆಯಲ್ಲಿ ಅಂಬಿಗ ಕೇಳಿದ ಒಂದು ಪ್ರಶ್ನೆಗೆ ಉತ್ತರ ತಿಳಿಯದೇ ಇದ್ದರೆ, ಎಷ್ಟು ತತ್ವ ಶಾಸ್ತ್ರ ಓದಿದರೇನು ಈಜುವುದಕ್ಕೆ ಬಾರದೇ ಇದ್ದರೆ ಅಂಬಿಗ ಹೇಳುವಂತೆ ಎಲ್ಲವೂ ವ್ಯರ್ಥ. ಮಂತ್ರಾಧೀನಂತು ದೇವತ ಅಂತ ಇದ್ದರೂ ದೇವರು ಒಲಿಯುವುದು ಭಕ್ತಿಗೆ. ವಿದ್ಯಾವಂತ ಅನ್ನಿಸುವುದಕ್ಕಿಂತ ನೀತಿವಂತ ಅನ್ನಿಸುವುದರಲ್ಲಿ ಹೆಚ್ಚು ಶಕ್ತಿ ಇದೆ.
ಎಲ್ಲಾ ಧರ್ಮಕ್ಕೂ ಇರುವುದು ಒಂದೇ ಗೀತೆ. ಅದು ಭಗವದ್ಗೀತೆ. ಜಾತಿ ಧರ್ಮಾನುಸಾರ ಭಗವದ್ಗೀತೆ ಎಂದಿಗೂ ಇರುವುದಿಲ್ಲ. ಎಲ್ಲಾ ಧರ್ಮಕ್ಕೂ ಅದು ಅನಿವಾರ್ಯವಾಗಬಹುದು. ಹಾಗಾಗಿ ಪರಧರ್ಮ ನಿಂದನೆ ಯಾವ ಯತಿವರ್ಯರೂ ಹೇಳಲಿಲ್ಲ. ಇದರ ಅರಿವಿದ್ದೂ ಅವರು ನಿಂದಿಸುತ್ತಾರೆ ಎಂದರೆ ಅವರಿಗೆ ಸಹಿಷ್ಟುತೆ ಸೌಹಾರ್ದತೆಯ ಅವಶ್ಯಕತೆ ಇರುವುದಿಲ್ಲ್

No comments:
Post a Comment