Friday, August 14, 2026

ಅಹಂ ವೈಶ್ವಾನರೋ ಭೂತ್ವಾ

 ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತ: ।

ಪ್ರಾಣಾಪಾನಸಮಾಯುಕ್ತ: ಪಚಾಮ್ಯನ್ನಂ ಚತುರ್ವಿಧಮ್



ಇದು ಬ್ರಾಹ್ಮಣನಾದವನು ಭೋಜನ ಪೂರ್ವದಲ್ಲಿ ಪರಮಾತ್ಮನ ಸ್ಮರಣೆಯೊಂದಿಗೆ ಪಠಿಸುವ ಮಂತ್ರ. ಇದರಲ್ಲಿ ಬರುವ ವೈಶ್ವಾನರ ಎಂದರೆ ಅಗ್ನಿ. ನಾವು ತಿನ್ನುವ ಆಹಾರ ಅದು ನಮ್ಮ ದೇಹದ ಆಹಾರವಾದರೂ ಅದು ಪರೋಕ್ಷವಾಗಿ ಸಲ್ಲುವುದು ವೈಶ್ವಾನರ ಎಂಬ ಅಗ್ನಿಗೆ. ಹಾಗಾಗಿ ಭೋಜನ ಅಥವಾ ಸೇವಿಸುವ ಆಹಾರ ಅದು ಬ್ರಾಹ್ಮಣನಾದವನಿಗೆ ಯಜ್ಞಕ್ಕೆ ಸಮನಾಗಿರುತ್ತದೆ. ಇದು ಸಾಮಾನ್ಯ ತತ್ವ. ಈ ಅರ್ಥ ತಿಳಿದು ಊಟ ಮಾಡಿದಾಗ ಅದರಲ್ಲಿ ಹೆಚ್ಚು ತಾದಾತ್ಮ್ಯ ಲಭ್ಯವಾಗುತ್ತದೆ. ಹಾಗಾಗಿಯೇ ಬ್ರಾಹ್ಮಣನಾದವನಿಗೆ ಊಟ ಎಂಬುದು ಕೇವಲ ಆಹಾರ ಸೇವಿಸುವುದಾಗಿರುವುದಲ್ಲ. ಹಸಿವಿಗೆ ಆಹಾರ ಸೇವಿಸುವುದು. ಹಸಿವು ಎಂದರೆ ಅದು ವೈಶ್ವಾನರ ಹೇಳುವ ಅಥವಾ ರವಾನಿಸುವ ಸಂದೇಶವಾಗಿರುತ್ತದೆ.  ಹೀಗಾಗಿ ಹಸಿವಾದಾಗ ಮಾತ್ರವೇ ಆಹಾರ ಸೇವಿಸುವುದು ಆಗ್ನಿಯ ಆಜ್ಞೆಯನ್ನು ನೆರವೇರಿಸಿದಂತೆ. ಇಲ್ಲವಾದರೆ ಅದು ಚಪಲಕ್ಕೆ ತಿಂದಂತೆ. ಚಪಲ ಎಂಬುದು ಋಣಾತ್ಮಕವಾಗಿ ಅದು ತಾಮಸೀಗುಣವಾಗಿರುತ್ತಾ  ಅಸುರರ ಬೇಡಿಕೆಯಾಗುತ್ತದೆ. ಅದು ದೇಹದಲ್ಲಿ ದುಷ್ಪರಿಣಾಮವನ್ನು ಬೀರುತ್ತದೆ. 

ಯಾವ ಆಹಾರವು ಪ್ರೋಕ್ಷಣೆಗೆ ಅರ್ಹವೋ ಅದು ಬ್ರಾಹ್ಮಣನಾದವನು ಸೇವಿಸುವುದಕ್ಕೆ ಅರ್ಹವಾಗಿರುತ್ತದೆ. ಹಾಗಾಗಿ ಕೇವಲ ಸಸ್ಯಾಹಾರ ಅದರಲ್ಲೂ ತಮಸ್ಸಿನಿಂದ ರಹಿತವಾದ ಆಹಾರಮಾತ್ರವೇ ಬ್ರಾಹ್ಮಣನಿಗೆ ಯೋಗ್ಯವಾಗಿರುತ್ತದೆ.   ಈರುಳ್ಳಿಯಂತಹ ಆಹಾರವು ಭೋಜನವೆಂಬ ಯಜ್ಞಕ್ಕೆ ಹವಿಸ್ಸು ಆಗಿ ಸ್ವೀಕಾರಾರ್ಹವಲ್ಲ. ಯಾವುದೇ ಜೀವದಲ್ಲಿ ಪ್ರಾಣವಾಯು ಅವಾಹನೆಯಾದಾಗ ಅಗ್ನಿಯ ಸಾನ್ನಿಧ್ಯವು ಒದಗುತ್ತದೆ. ಅಗ್ನಿಯ ಅಸ್ತಿತ್ವ ಎಂಬುದು ಜೀವದ ಸಂಕೇತವಾಗಿರುತ್ತದೆ. ಈ ಅಗ್ನಿ ಯಾವಾಗ ಈ ದೇಹವನ್ನು ಬಿಡುತ್ತದೋ ಆಗ ಜೀವವಿಲ್ಲದೇ ದೇಹವು ಜಡವಾಗಿರುತ್ತದೆ. ಈ ಅಗ್ನಿಗೆ ಒದಗಿಸುವ ಆಹಾರವು ಅದು ಯಜ್ಞಕ್ಕೆ ಸಮನಾಗಿರುತ್ತದೆ. ಈ ಭಾವ ಮನಸ್ಸಿನಲ್ಲಿದ್ದಾಗ ನಾವು ತಿನ್ನುವ ಪ್ರತಿಯೊಂದು ಆಹಾರವೂ ನಮಗೆ ಪರಮಾತ್ಮನ ಸ್ಮರಣೆಯನ್ನು ಪ್ರಚೋದಿಸುತ್ತದೆ. 

ಸಸ್ಯಾಹಾರ ಮತ್ತು ಮಾಂಸಾಹಾರ ಇವೆರಡೂ ಈಗ ಚರ್ಚಿತ ವಿಷಯಗಳು.  ಮಾಂಸಾಹಾರ ಸೇವಿಸುವಾಗ ಅಥವಾ ಅದನ್ನು ಸಿದ್ದಪಡಿಸುವಲ್ಲಿ ಮನುಷ್ಯನಿಗೆ ಒಂದಿಷ್ಟು ಮನಸ್ಸಿನಲ್ಲಿ ಹಿಂಸಾ ಪ್ರವೃತ್ತಿ ಇರಲೇ ಬೇಕು. ಇದು ತಾಮಸೀ ಗುಣವಿದ್ದು ದೈವದ ಅಸ್ತಿತ್ವವನ್ನು ದೂರೀಕರಿಸುತ್ತದೆ. ಹಿಂಸೆ ಎಂಬುದು ರಾಕ್ಷಸ ಸ್ವರೂಪ. 

ಹುಟ್ಟಿದ ಪ್ರತಿಯೊಂದು ಪ್ರಾಣಿ ಸಸ್ಯಗಳಿಗೂ ಆಹಾರ ಎಂಬುದು ಅತ್ಯವಶ್ಯ. ಬುದ್ಧಿ ಮತ್ತು ಚಿಂತನಾಶಕ್ತಿ ಇರುವುದು ಮನುಷ್ಯನಿಗೆ ಮಾತ್ರ. ಬ್ರಾಹ್ಮಣನಾದವನಿಗೆ ಒದಗುವ ಸಂಸ್ಕಾರವು  ಪರಮಾತ್ಮನ ಅರಿವನ್ನು ಒದಗಿಸುತ್ತದೆ. ಬ್ರಾಹ್ಮಣನಾದವನಿಗೆ ಆಹಾರ ಸೇವನೆ ಎಂಬುದು ಕೇವಲ ಹಸಿವನ್ನು ನೀಗಿಸುವ ಕ್ರಿಯೆಯಲ್ಲ. ಅದು ಯಜ್ಞದಂತೆ . ಯಜ್ಞ ಎಂಬುದು ಒಂದು ದೈವ ಕ್ರಿಯೆ. ಹಾಗಾಗಿ ಭೋಜನ ಆರಂಭಕ್ಕೂ ಮುನ್ನ ಹಸ್ತೋದಕ  ಅತ್ಯಂತ ಅವಶ್ಯ. ಹಸ್ತೋದಕ ಕೇವಲ ಶಾಸ್ತ್ರವಲ್ಲ. ಹಸಿವಿನ ಹೊಟ್ಟೆಗೆ ಒಂದಿಷ್ಟು ತುಟುಕು ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮ. ಒಂದು ಪರಿಷೇಚನದಿಂದ ಪರಿಸರ ಶುದ್ದಿಯಾದರೆ, ಒಂದು ಅಪೋಶನದಿಂದ ಮೈ ಮನ ಶುದ್ದಿಯಾಗುತ್ತದೆ. ಸೇವಿಸುವಲ್ಲಿ ದೈವೀ ಭಾವ ಬಂದಾಗ ಅನ್ನವೆಂಬು ಬ್ರಹ್ಮಸ್ವರೂಪವಾಗುತ್ತದೆ. ಹಸಿದವನಿಗೆ ಆಹಾರ ಪರಬ್ರಹ್ಮವಾಗಿ ಗೋಚರಿಸಿದರೆ ಅದರ ಬಗ್ಗೆ ಹೆಚ್ಚು ಗೌರವ ಆರಾಧನಾ ಭಾವ ಪ್ರಚೋದಿಸಲ್ಪಡುತ್ತದೆ. ವೇದಗಳಲ್ಲಿ ಹೇಳಲ್ಪಟ್ಟ ಪತ್ನಿಯ ಗುಣಗಳಲ್ಲಿ ಭೋಜ್ಯೇಷು ಮಾತಾ ಎಂಬುದು ಮಾತೃಸ್ವರೂಪವಾಗುವಾಗ ಭೋಜನ ಯಜ್ಞವಾಗುತ್ತದೆ. ಯಜ್ಞ ಹವನಗಳಲ್ಲಿ  ಮನೆಯ ಒಡತಿಯೇ ಅಗ್ನಿ ಪ್ರತಿಷ್ಠೆಗೆ ವೈಶ್ವಾನರ ಸ್ವರೂಪ  ಅಗ್ನಿಯನ್ನು ಒದಗಿಸಬೇಕು. ಭೋಜ್ಯೆಷು ಮಾತಾದ ಮಾತೃ ಸ್ವರೂಪ ಇದು.  ಭೋಜನ ಎಂಬುದು ಒಂದರ್ಥದಲ್ಲಿ ಅಗ್ನಿಯನ್ನು ಸಾಕ್ಷಾತ್ಕರಿಸುವ ಅಗ್ನಿಕ್ರಿಯೆಯೇ ಆಗಿರುತ್ತದೆ. ತಿಂದ ಆಹಾರ ಜೀರ್ಣವಾಗಬೇಕಾದರೆ ಒಳಗಿನ ವೈಶ್ವಾನರನ ಅನುಗ್ರಹ ಅತ್ಯಂತ ಅವಶ್ಯ. 

ಎಲ್ಲರ ಉದರದಲ್ಲಿ ಮಾತ್ರವಲ್ಲ ದೇಹದಲ್ಲೂ ವೈಶ್ವಾನರ ಸ್ವರೂಪವಿರುತ್ತದೆ.  ಹಾಗಾಗಿ ಯಾರೇ  ಹಸಿದವನು ಮನೆಬಾಗಿಲಿಗೆ ಬಂದಾಗ ಆತನ ಹಸಿವನ್ನು ಆತನಿಗೆ ಆಹಾರವನ್ನು ನೀಡುವುದು ವೈಶ್ವಾನರನನಿಗೆ ಹವಿಸ್ಸನ್ನು ಅರ್ಪಿಸಿದಂತೆ.  ಅನ್ನ ದಾನವೆಂಬುದು ಶ್ರೇಷ್ಠದಾನ ಎಂಬುದಾಗಿ ಪರಿಗಣಿಸಲ್ಪಡುತ್ತದೆ. ಯಾವ ಆಶೆಗಳಿಗೂ ಮಿತಿ ಎಂಬುದಿಲ್ಲ. ಧನ ಕನಕ ಭೂಮಿ ಸುಖ ಎಲ್ಲವನ್ನೂ  ಮತ್ತೂ ಬೇಕು ಮತ್ತೂ ಬೇಕು ಎನ್ನುವಲ್ಲಿ ಮನುಷ ಸದಾ ಅತೃಪ್ತ. ಗಳಿಸಿದಷ್ಟು ಪ್ರಾಪ್ತಿಸಿದಷ್ಟೂ ಮತ್ತೂ ಬೇಕು ಎನ್ನುವ ಹಂಬಲ. ಆದರೆ ಒಬ್ಬ ಮನುಷ್ಯನಿಗೆ ಹೊಟ್ಟೆತುಂಬ ಆಹಾರ ಕೊಟ್ಟು ಆತನ ಉದರಾಗ್ನಿಯನ್ನು ತೃಪ್ತಿಪಡಿಸಿದಾಗ ಆತ ಇನ್ನು ಸಾಕು ಅಂತ ತೃಪ್ತಿಯಿಂದ ಹೇಳಿಬಿಡುತ್ತಾನೆ.  ಹೊಟ್ಟೆ ತುಂಬಿದಲ್ಲಿ ಇನ್ನೂ ಬೇಕು ಎಂಬ ಅತಿಯಾಶೆ ಇರುವುದಿಲ್ಲ.  ಹಾಗಾಗಿ ಒಬ್ಬನ್ನು ಯಾವುದುಕೊಟ್ಟೂ ತೃಪ್ತಿ ಪಡಿಸುವುದು ಆಸಾಧ್ಯವಾದರೆ ಆತನಿಗೆ  ಊಟ ಕೊಟ್ಟು ತೃಪ್ತಿ ಪಡಿಸಬಹುದು. ನಮ್ಮ ಹುಟ್ಟು ಸಾವಿನ ನಡುವೆ ಚೇತನ ಸ್ವರೂಪವಾಗಿ ಆಹಾರವಿರುತ್ತದೆ. ಜನರು ಎಂದರೆ ಜನನ ಮರಣಕ್ಕೆ ಒಳಗಾದವರು. ಇದರ ನಡುವಿನ ಬದುಕು ಎಂದರೆ ಅದು ಯಜ್ಞ ಹವನದಂತೆ, ವೈಶ್ವಾನರ ಉಪಾಸನೆ.

ಮನುಷ್ಯನ ಜೀವನ ಎಂದರೆ ಅದೊಂದು ಯಜ್ಞದಂತೆ. ಹುಟ್ಟಿದನಂತರ ಪ್ರತಿಯೊಂದನ್ನೂ ಭಗವಂತನಿಗೆ ಸಮರ್ಪಿಸುತ್ತಾ ಜೀವನ ಸಾಗಿಸುವುದರಲ್ಲಿ ಒಂದು ಯಜ್ಞತತ್ವವಿದೆ. ಯಜ್ಞ ಎಂದರೆ ಒಂದು ವರ್ತುಲದಂತೆ. ಹುಟ್ಟು ಸಾವು ಮತ್ತೆ ಹುಟ್ಟು. ಪ್ರಕೃತಿಗೆ ಹಳೆಯದನ್ನು ಕೊಟ್ಟು ಹೊಸದನ್ನು ಪಡೆದಂತೆ ನದಿಯ ನೀರು ಕಡಲಿಗೆ ಸೇರಿ ಆವಿಯಾಗಿ ಆಕಾಶ ಸೇರಿ ಮತ್ತೆ ಮಳೆ ಹನಿಯಾದಂತೆ. ಇದು ಪ್ರಕೃತಿಯ ಯಜ್ಞ. ಒಂದು ಕಾಳು ಭೂಮಿಯೋಳಗೆ ಅವಿತು ಮೊಳಕೆ ಒಡೆದು ಹೊರಬರುತ್ತದೆ. ಮತ್ತೆ ಗಿಡವಾಗಿ ಮರವಾಗುತ್ತದೆ. ಹೂವು ಹಣ್ಣಾಗುತ್ತದೆ. ಪುನಃ ಬೀಜ ಭೂಮಿಯನ್ನು ಸೇರುವುದರಲ್ಲಿ ಒಂದು ಯಜ್ಞ ತತ್ವವಿದೆ.  ಜೀವನ ಎಂದರೆ ಯಜ್ಞದಂತೆ. ಯಜ್ಞವನ್ನು ಮಾಡುವವನು ಯಜಮಾನ ಎನಿಸಿಕೊಳ್ಳುತ್ತಾನೆ. ನಮ್ಮ ನಮ್ಮ ಬದುಕಿಗೆ ನಾವೇ ಯಜಮಾನರು. ಯಜ್ಞ ಎನ್ನುವುದಕ್ಕೆ ಹಲವು ವ್ಯಾಖ್ಯಾನಗಳು ವೇದಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಅದು ಯಾವ ಜಾತಿ ಧರ್ಮಕ್ಕೂ ಸೀಮಿತವಲ್ಲ. ಹುಟ್ಟಿದ ಪ್ರತಿಯೊಂದು ಪ್ರಾಣಿ ಪಕ್ಷಿ ಸಸ್ಯಾದಿಗಳಿಗೆ ಹಸಿವು ಎಂಬುದು ಇರುತ್ತದೆ. ಇಲ್ಲಿ  ಆಹಾರ ಸೇವಿಸುವುದು ಒಂದು ಆಧ್ಯಾತ್ಮಿಕ ಚಿಂತನೆಯಾಗುತ್ತದೆ. 

ಯಜ್ಛವೆಂದರೆ ಒಂದು ವೈಶ್ವಾನರ ಆರಾಧನೆ. ಇದಕ್ಕೆ ಶರೀರವೇ ವೇದಿಕೆ. ಉದರವೇ ಅಗ್ನಿಕುಂಡ. ಎಲ್ಲಿ ಅಗ್ನಿ ಪುರುಷ ಇರುತ್ತಾನೋ ಅದು ಅಗ್ನಿವೇದಿಕೆ ಎಂದು ಕರೆಯಲ್ಪಡುತ್ತದೆ. ಹಾಗಾಗಿ ನಾವು ಎಲ್ಲಿಗೆ ಹೋದರೂ ಈ ಯಜ್ಞ ಕ್ರಿಯೆಯಿಂದ ಅತೀತರಾಗುವುದಕ್ಕೆ ಸಾಧ್ಯವಿಲ್ಲ. ಇದೊಂದು ಪ್ರತೀ ಕ್ಷಣವೂ ಮಾಡುವ ತ್ಯಾಗದಂತೆ.   ಶರೀರಕ್ಕೆ ಸೇರಿದ ಆಹಾರ ಪುನಃ  ತರುವುದಕ್ಕೆ ಸಾಧ್ಯವಿಲ್ಲ. ಅದು ಕರಗಿ ಮತ್ತೆ ಭೂಮಿಯನ್ನು ಸೇರುತ್ತದೆ. ಇಲ್ಲಿ ಒಂದು ವರ್ತುಲದಲ್ಲಿ  ಯಜ್ಞ ತತ್ವ ನಿರ್ಮಾಣವಾಗುತ್ತದೆ. ಈ ವರ್ತುಲದಲ್ಲಿ   ಆಹಾರ ಚೈತನ್ಯ ಸ್ವರೂಪವಾಗಿ ದೇಹವನ್ನು ವ್ಯಾಪಿಸುತ್ತದೆ. 


ಭೋಜನವೆಂಬುದು ಅಗ್ನಿಕ್ರಿಯೆಯಾಗಿ ಪೂಜನಿಯವಾಗುವಾಗ ಅದರ ಬಗ್ಗೆ ಅಷ್ಟೇ ಗೌರವ ಪೂರ್ಣವಾಗಿ ವ್ಯವಹರಿಸಿದರೆ ಆ ಅನ್ನಾಹಾರಕ್ಕೆ ಗೌರವವನ್ನು ಸಲ್ಲಿಸಿದಂತೆ. ಇಂದು ಊಟ ಎಂಬುದು ಕೇವಲ ಯಾಂತ್ರಿಕ ಕ್ರಿಯೆಯಾಗಿದೆ.    ವಿಧಿಯುಕ್ತ ಹಸ್ತೋದಕ ತಿಳಿದವರೇ  ಕಡಿಮೆ.  ಹಸ್ತೋದಕ ತೆಗೆದರೂ ಮಂತ್ರ ತಿಳಿಯದೇ ಸುಮ್ಮನೇ ಹಸ್ತೋದಕ ಹಿಡಿದು ಆಪೋಶನ ಮಾಡುತ್ತಾರೆ. ಮಂತ್ರವೂ ತಿಳಿದಿರುವುದಿಲ್ಲ. ಇದು ಕೇವಲ ಅಭಿನಯವಾಗುತ್ತದೆ.  ಮಂತ್ರದೊಂದಿಗೆ ಪ್ರತಿನಿತ್ಯ   ಹಸ್ತೋದಕ ತೆಗೆದುಕೊಳ್ಳದೇ ಎಲ್ಲೋ ಹೇಗೋ ಕುಳಿತು ಊಟ ಮಾಡುವುದನ್ನು ಕಾಣಬಹುದು. ಮನೆಯಲ್ಲಾದರೂ ಸಾವಧಾನವಾಗಿ ಊಟಮಾಡುವ ವ್ಯವಧಾನ ಇಲ್ಲವಾಗಿದೆ.  ನಮಗೆ ದೇವಾಲಯಕ್ಕೆ ಹೋದಾಗ ಬ್ರಾಹ್ಮಣ ಪಂಕ್ತಿ ಹುಡುಕುತ್ತೇವೆ. ಆದರೆ ಹಸ್ತೋದಕದ ಬಗ್ಗೆ ದಿವ್ಯ ನಿರ್ಲಕ್ಷ್ಯ . ಹೇಗಾದರೂ ಸಲ್ಲುತ್ತದೆ ಎಂಬ ಭಾವ. ಮಾತ್ರವಲ್ಲ  ಊಟದ ಸಮಯದಲ್ಲಿ ನಡುವೆ ಎದ್ದು ಹೋಗುವುದು. ಮಾತನಾಡುವುದು ಅದಕ್ಕೆ ಅಗೌರವವನ್ನು ಸಲ್ಲಿಸಿದಂತೆ ಆರಾಮ ಆಸನಗಳಲ್ಲಿ ಅಕ್ಷರಶಃ ಮಲಗಿದಂತೆ ಕುಳಿತು ಊಟ ಅಥವಾ ಆಹಾರ ಸೇವಿಸುವುದು ಅಗ್ನಿಯ ಮೇಲೆ ದೌರ್ಜನ್ಯ ಎಸಗಿದಂತೆ. ತಿಂದ ತಟ್ಟೆಯಲ್ಲಿ ಅಥವಾ ಎಲೆಯಲ್ಲಿ ಆಹಾರವನ್ನು ಉಳಿಸುವುದು ಅಗ್ನಿಯನ್ನು ತಿರಸ್ಕರಿಸಿದಂತೆ. ಇಂದು ಹಲವು ಕಾರ್ಯಕ್ರಮಗಳಿಗೆ ಹೋದಾಗ. ಊಟಕ್ಕೆ ಕುಳಿತ ನೂರು ಜನರಲ್ಲಿ ತೊಂಭತ್ತು ಜನರೂ ಆಹಾರವನ್ನು ಬಿಟ್ಟು ಏಳುತ್ತಾರೆ. ಎಷ್ಟು ವಯಸ್ಸಾದರೂ ತಮ್ಮ ಹೊಟ್ಟೆಗೆ ಎಷ್ಟು ಬೇಕು ಎಂದು ತಿಳಿಯದವರು ಇವರು.  ಯಥೇಚ್ಚ ಹಾಕಿಸಿಕೊಂಡು ನಂತರ ಎಲೆಯಲ್ಲೇ ಬಿಟ್ಟೇಳುವುದು ಭೋಜನದ ಮೇಲಿನ ತಿರಸ್ಕಾರ ಮಾತ್ರವಲ್ಲ, ಯಜ್ಞಸ್ವರೂಪವನ್ನು ತಿರಸ್ಕರಿಸಿದಂತೆ.     ಯಜ್ಞವೆಂಬ ಪ್ರಜ್ಞೆ ಇಲ್ಲದೆ ಅಜ್ಞಾನದಿಂದ ಅಗ್ನಿಗೆ ಸವಾಲು ಎಸೆದಂತೆ ಊಟ ಮಾಡುವುದನ್ನು ನೋಡಬಹುದು. ನಾವು ತಿನ್ನುವ ಆಹಾರಕ್ಕೆ ಗೌರವಕೊಡಬೇಕು.  ಇನ್ನು ನಮ್ಮಲ್ಲಿ ದೇವಾಲಯದಲ್ಲೂ ಸಾವಧಾನವಾಗಿ ಕುಳಿತು ಊಟಮಾಡುವ ಪ್ರವೃತ್ತಿ ಕಡಿಮೆಯಾಗಿದೆ. ಅದಕ್ಕೆ ಜನ ಸಂಖ್ಯೆ, ಸಮಯದ ಕೊರತೆ ಹೀಗೆ ಹಲವು ಕಾರಣಗಳಿರಬಹುದು. ಆದರೆ ನಮ್ಮ ಕರ್ಮದ ಗಂಭೀರತೆಯ ಅರಿವಿಲ್ಲ. ನೆಲದಲ್ಲಿ ಕುಳಿತು ಊಟಮಾಡುವ ಆರೋಗ್ಯವೂ ಉಳಿದಿರುವುದಿಲ್ಲ.  ನಮ್ಮಲ್ಲಿ ಹಸಿವು ಎಂಬ ಪ್ರಕ್ತಿಯೆಗೆ ಮೂಲ ಕಾರಣ ನಮ್ಮೊಳಗಿನ ವೈಶ್ವಾನರ. ಆತನ ಆಗ್ರಹಕ್ಕೆ ತುತ್ತಾದರೆ ತಿಂದ ಅನ್ನವೂ ಪಚನವಾಗದೆ ಇರಬಹುದು. ಇನ್ನು ಹಸಿವಿಗೆ ಆಹಾರವಿಲ್ಲದೇ ಇರುವವರು ಒಂದೆಡೆಯಾದರೆ ತಿನ್ನುವ ಆಹಾರದ ಬಗ್ಗೆ ಗೌರವ ಭಕ್ತಿ ಇಲ್ಲದಿರುವುದು ಇನ್ನೊಂದೆಡೆ. ಉಣ್ಣುವುದು ನಾವೇ ಆದರೂ ಅದು ಉದರಾಗ್ನಿ ದೇವತೆಗೆ ಅರ್ಪಿಸುವ ನೈವೇದ್ಯ. ಪಚನಕ್ರಿಯೆಯಲ್ಲಿ ಸಿಗುವ ಚೈತನ್ಯವೇ ಪ್ರಸಾದ.   ಯಾವುದೇ ಕಾರ್ಯಕ್ರಮದಲ್ಲಿ ಭೋಜನವೆಂಬುದು ಅತ್ಯಂತ ಮಹತ್ವದ ಅಂಗ. ಅದಕ್ಕೊಂದು ಉತ್ತಮ ಸ್ಥಾನವಿದೆ. ಆದರೆ ಇದರ ಅರಿವಿಲ್ಲದೇ ಇದನ್ನು ಅಗೌರವದಿಂದ ಕಾಣುತ್ತೇವೆ. ಒಂದಷ್ಟು ಹೊತ್ತು ಅದಕ್ಕೆ ಗೌರವದಿಂದ ವಿನಿಯೋಗಿಸಿ ಉದರದ ವೈಶ್ವಾನರನನ್ನು ತೃಪ್ತಿಗೊಳಿಸುವಲ್ಲಿ ಜೀವನದ ಸಾರ್ಥಕತೆ ಇದೆ. 


ಗೌರವದಿಂದ ವಿನಿಯೋಗಿಸಿ ಉದರದ ವೈಶ್ವಾನರನನ್ನು ತೃಪ್ತಿಗೊಳಿಸುವಲ್ಲಿ ಜೀವನದ ಸಾರ್ಥಕತೆ ಇದೆ. 

ಅಗ್ನಿ ಎಂದರೆ ಸೂರ್ಯನ ಪ್ರತಿರೂಪದಂತೆ. ಗಾಯತ್ರಿ ಮಂತ್ರದ ಜ್ಯೋತಿಸ್ವರೂಪದಂತೆ. ಈ ಅಗ್ನಿ ಸ್ವರೂಫ  ಕಣ್ಣಿಗೆ ಕಾಣುವ ಮಾತ್ರವಲ್ಲ ದೇಹದ ಅನುಭವ. ಇದು ನಿತ್ಯ ಕಾಣುವ ಅನುಭವಿಸುವ ಅನುಗ್ರಹಿಸುವ ಭಗವನ್ ಸ್ವರೂಪ. 


Tuesday, August 11, 2026

ಗುರುದರ್ಶನ





 ಗುರುದರ್ಶನ


ಶ್ರೀ ಗುರುಭ್ಯೋನಮಃ

 ಶೃತಿ ಸ್ಮೃತಿ ಪುರಾಣಾನಾಂ ಆಲಯಂ ಕರುಣಾಲಯಂ  ನಮಾಮಿ ಭಗವತ್ಪಾದ ಶಂಕರಂ ಲೋಕ ಶಂಕರಂ 

ಗುರು ಎಂದರೆ ಸಕಲ ಪ್ರಚೋದನೆಗೂ ಪ್ರೇರಕ ಶಕ್ತಿ. ಸದ್ಬುದ್ದಿ ಸನ್ಮನಸ್ಸು ಸಚ್ಚಿಂತನೆ ಇರುವ ಜ್ಞಾನ ಜಾಗೃತವಾಗುವುದೇ,  ಮನುಷ್ಯನಲ್ಲಿ ಜಾಗೃತವಾಗಬೇಕಾದರೆ ಗುರುವಿನ ಅನುಗ್ರಹ ಅತ್ಯಂತ ಅವಶ್ಯ. ಗುರುವಿನ ಸಾನ್ನಿಧ್ಯ ಬದುಕಿನಲ್ಲಿ ನಿಯಮಿತವಾಗಿ ಒದಗಿದರೆ ಎಲ್ಲಾ ಸದ್ಗುಣಗಳು ಸುಪ್ತವಾಗಿ ಬಹಿರಂಗವಾಗಿಯೂ ಪ್ರಚೋದಕವಾಗಿರುತ್ತದೆ. ಈ ಬಾರಿಯ ಗುರುದರ್ಶನಕ್ಕೆ ನಮ್ಮ ಕರಾಡ ಸಮಾಜ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪ್ರಥಮ ಬಾರಿಗೆ ಭಾಗಿಯಾಗುವ ಪ್ರಚೋದನೆಯೂ ಅವಕಾಶವೂ ನನಗೆ ಒದಗಿ ಬಂದಿರುವುದಕ್ಕೆ ಭಗವಂತನಿಗೆ ಧನ್ಯವಾದ ಮೊದಲಿಗೆ ಅರ್ಪಿಸಬೇಕು. 


ಈ ವರ್ಷದ ಗುರುಗಳ ಚಾತುರ್ಮಾಸ್ಯದ ಸಂದರ್ಭದಲ್ಲಿ   ಗುರು ದರ್ಶನದ ಅಂಗವಾಗಿ ದಿನಾಂಕ ಮೊನ್ನೆ  ಆಗಸ್ಟ್ ಒಂಭತ್ತರಂದು ಸುಮಾರು ನಲ್ವತ್ತು ಮಂದಿ ಮುಂಜಾನೆ ಬೆಂಗಳೂರಿನಿಂದ ಪ್ರಯಾಣ ಆರಂಭಿಸಿದೆವು. ಮೊದಲೇ ನಿಗದಿಯಾದಂತೆ ಸುಖಾಸೀನ ಬಸ್ಸಿನಲ್ಲಿ ಹೊರಟೆವು. ಹಲವರು ತಿಂಡಿ ತಿನಿಸುಗಳನ್ನು ತೆಗೆದುಕೊಂಡು ಬಂದದ್ದ ವಿಶಿಷ್ಟವಾಗಿತ್ತು. ಅದಕ್ಕಾಗಿ ನಮ್ಮ ಮನೆಯಿಂದ ಕಡಲೇ ಬೇಳೆ ವಡೆ (ಚಟ್ಟಂಬಡೆ) ನಾವೂ ತಯಾರಿಸಿಕೊಂಡು ಹೋಗಿದ್ದೆವು.  ಮಧ್ಯಾಹ್ನದ ಊಟಕ್ಕಾಗಿ  ಶ್ರೀ ಶಂಕರ ಲಿಂಗ ಆಶ್ರಮ ಅರಸೀಕೆರೆಯಲ್ಲಿ ವ್ಯವಸ್ಥೆಗೊಳಿಸಲಾಗಿತ್ತು. ಉತ್ತಮವಾದ ಸ್ವಾದಿಷ್ಟವಾದ ಮಧ್ಯಾಹ್ನದ ಭೋಜನ ಉಂಡು ಸಾಯಂಕಾಲದ ಹೊತ್ತಿಗೆ ಶ್ರೀಂಗೇರಿ ಸನ್ನಿಧಾನವನ್ನು ತಲುಪಿದೆವು. ಬಯಲು ಸೀಮೆ ಕಳೆದು ಮಲೆನಾಡಿನ ಪ್ರವೇಶವಾದಂತೆ ಹನಿ ಹನಿ ಮಳೆ ಸ್ವಾಗತಮಾಡಿ ನಮ್ಮ ಹಾದಿಯನ್ನೂ ಮೈಮನವನ್ನು ಪರಿಶುದ್ದಗೊಳಿಸಿತು. ಇದೊಂದು ಶುಭಸಂಕೇತವಾಗಿ ಭಾಸವಾಯಿತು.  ನಮಗೆ ವಿಶ್ರಾಂತಿಗಾಗಿ ಶ್ರೀ ಭಾರತೀ ವಿಹಾರದಲ್ಲಿ ಉತ್ತಮವಾದ ಕೊಠಡಿಗಳನ್ನು ಕಾದಿರಿಸಲಾಗಿತ್ತು. ತುಂಬ ಅತ್ಯುತ್ತಮವಾದ ಗಾಳಿ ಬೆಳಕು ತುಂಬಿದ ಶುಭ್ರವಾದ ಕೊಠಡಿಗಳು ಸ್ನಾನಾದಿ ಕರ್ಮಗಳಿಗೆ ಅತ್ಯಂತ ಅನುಕೂಲಕರವಾಗಿತ್ತು. ಎಲ್ಲಿಯೂ ಅನನುಕೂಲದ ಸ್ಪರ್ಶವೂ ಒದಗದಂತೆ ಸುವ್ಯವಸ್ಥೆಗೊಳಿಸಲಾಗಿತ್ತು. ನಾನು ಸಾಯಂಕಾಲ ಸ್ನಾನ ಪೂರೈಸಿ ಸಂಧ್ಯಾವಂದನೆ ಮಾಡಿದೆ.  ರಾತ್ರಿ ಹನಿ ಹನಿ ಮಳೆಯಲ್ಲಿ ನೆನೆದು ಪಾವನರಾಗಿ ಶಾರದಾಂಬೆಯ ಕಣ್ತುಂಬ ದರ್ಶನ ಮಾಡಿದೆ. ದೇವಾಲಯದ ಪೌಳಿಯಲ್ಲಿ ಕುಳಿತು ಗಾಯತ್ರಿ ಜಪ ರುದ್ರಪಾರಾಯಣ ಮಾಡಿದೆ. ಮನಸ್ಸಿಗೆ ಮುದ ನೀಡುವ ಘಳಿಗೆಗಳು. 


ಅಂದು ಬೆಳಗ್ಗೆ ಮೂರುಘಂಟೆಗೆ ಎದ್ದಿದ್ದೆ. ಸ್ನಾನ ಸಂಧ್ಯಾ ಧ್ಯಾನ ಯೋಗಭ್ಯಾಸವನ್ನು ಪೂರೈಸಿ ಪ್ರಯಾಣಕ್ಕೆ ಸಜ್ಜಾಗಬೇಕಿತ್ತು. ಹಾಗಾಗಿ ರಾತ್ರಿ ಒಂಭತ್ತು ದಾಟುತ್ತಿದ್ದಂತೆ ಬಹಳ ಆಯಾಸವಾದಂತೆ, ಎಂದಿನಂತೆ ರಾತ್ರಿ ಬೇಗನೇ ನಿದ್ದೆಗೆ ಹೋಗುವ ನನಗೆ ಇರಲಾಗದೇ ಒಂಭತ್ತು ಘಂಟೆಗೆ ಮಲಗಿದೆ. ಹಲವರು ಶ್ರೀ  ಜಗದ್ಗುರುಗಳ ಚಂದ್ರಮೌಳೇಶ್ವರ ಪೂಚಾ ಕಾರ್ಯಕ್ರಮ ವೀಕ್ಷಿಸುವುದಕ್ಕೆ ತೆರಳಿದ್ದರು. ಮುಂಜಾನೆ ಮೂರುವರೆಗೆ ಎಚ್ಚರವಾಗಿತ್ತು. ಸಾಮಾನ್ಯವಾಗಿ ನಾನು ಎಲ್ಲಿ ಹೋಗಿ  ತಂಗುವುದಿದ್ದರೂ ನನ್ನ ನಿತ್ಯ ಕರ್ಮಗಳಾದ ಸಂಧ್ಯಾವಂದನೆ ಧ್ಯಾನ ಯೋಗಾಭ್ಯಾಸಗಳಿಗೆ ಅನುಕೂಲವಿದೆಯೋ ಎಂದು ನೋಡುತ್ತೇನೆ. ಅದರೆಂತೆ ಇಲ್ಲಿ ಒಂದು ಕಡೆ ಸೂಕ್ತವಾದ ಯಾರೂ ಓಡಾಡದ ಹಜಾರದ ಒಂದು ಮೂಲೆ ಸಿಕ್ಕಿತ್ತು.  ಅದು ಅತ್ಯಂತ ಸಂತೋಷವನ್ನು ನೀಡಿತ್ತು. ನಾಲ್ಕು ಘಂಟೆಗೆ ಇಡೀ ಭಾರತೀ ವಿಹಾರ ಸೌಧ ಮಾತ್ರವಲ್ಲ ಶೃಂಗೇರಿ ಪಟ್ಟಣವೇ ಸದ್ದಿಲ್ಲದೇ ಮೌನವನ್ನು ಆವರಿಸಿತ್ತು. ನನ್ನ ಏಕಾಂತ ಧ್ಯಾನಕ್ಕೆ ಇದು ಬಹಳ ಸಹಕಾರಿಯಾಗಿ ತನು ಮನ ಮರೆಯುವಂತೆ ಧ್ಯಾನದಲ್ಲಿ ತಲ್ಲೀನನಾದೆ. ನನ್ನ ಹಲವು ದಿನದ ಕನಸಾಗಿತ್ತು. ಶೃಂಗೇರಿಯ ಪ್ರಕೃತಿಯ ಮಡಿಲಲ್ಲಿ ಧ್ಯಾನ ಯೋಗ ಅಭ್ಯಾಸಗಳನ್ನು ಮಾಡಬೇಂದು ಬಯಸಿದ್ದೆ. ಆದರೆ ಹೋರಗೆ ಮಳೆ ಬರುತ್ತಿರುವುದರಿಂದ  ಒಳಗೆ ಅದನ್ನು ಮಾಡಬೇಕಾಯಿತು. ಆದರೂ ಮನಸ್ಸಿಗೆ ಒಂದು ತೃಪ್ತಿ. 


ಬೆಳಗ್ಗಿನ ತಂಪಾದ ವಾತಾವರಣದಲ್ಲಿ ಅನತಿ ದೂರದಲ್ಲಿದ್ದ ಶಂಕರ ಗಿರಿಗೆ ಭೇಟಿ ಕೊಡುವ ವ್ಯವಸ್ಥೆ ಮಾಡಲಾಗಿತ್ತು. ಎತ್ತರ ಶಂಕರ ಗಿರಿ ಇತ್ತೀಚೆಗಷ್ಟೇ ನಿರ್ಮಾಣವಾಗಿತ್ತು. ಸುಂದರವಾದ ಪರಿಸರ. ಎಲ್ಲಕ್ಕಿಂತಲೂ ಅದನ್ನು ನಿರ್ವಹಿಸಿದ ರೀತಿ ಅತ್ಯದ್ಭುತವಾಗಿತ್ತು. ಎಲ್ಲಿ ನೋಡಿದರೂ ಸ್ವಚ್ಛತೆ. ಎಲ್ಲಿ ಹೆಜ್ಜೆ ಊರಬೇಕಿದ್ದರೂ ಯೋಚಿಸುವಂತೆ ಮಾಡುತ್ತಿತ್ತು. ಮೂಲೆ ಮೂಲೆಯೂ ಕಸಕಡ್ಡಿಗಳು ಇರದಂತೆ ಸುರಿಯುವ ಆ ಮಳೆಗೂ ಎಲ್ಲ ಕಡೆ ಸ್ವಚ್ಛತೆಯನ್ನು ಕಾಪಾಡಿಕೊಂಡು ಬಂದದ್ದು ನಿಜಕ್ಕು ವಿಶಿಷ್ಟವಾಗಿತ್ತು.  

ಶ್ರೀ ಮಠದಲ್ಲೇ  ನಮಗೆಲ್ಲರಿಗೂ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಉಪಹಾರ ಪೂರೈಸಿ ನಾನು ಮತ್ತು ಪತ್ನಿ ಹತ್ತಿರದಲ್ಲೇ ಇದ್ದ ಮಲ್ಲಿಕಾರ್ಜುನ ದೇವಾಲಯಕ್ಕೆ ಭೇಟಿಕೊಟ್ಟೆವು. ಮಳೆಯಲ್ಲೇ ನೆನೆದು ಬೆಟ್ಟದ ಮೆಟ್ಟಲುಗಳನ್ನು ಹತ್ತಿ ಪರಮೇಶ್ವರನ ಧರ್ಶನ ಮಾಡಿದೆವು. ನಾವು ಹೋದಾಗ ಸುಪ್ರಭಾತದ ಪೂಜೆ ಆಗುತ್ತಿತ್ತು. 

ಮಧ್ಯಾಹ್ನದ ಸಮಯಕ್ಕೆ . ಅದಾಗಲೇ ವಿವಿಧ ಊರುಗಳಿಂದ, ಬಾಯಾರು ಅಗಲ್ಪಾಡಿ ಪಡ್ರೆ ಉಡುಪಿ  ಶಿರಸಿ ಮುಂತಾದ ಭಾಗದಲ್ಲಿದ್ದ  ನಮ್ಮ ಸಮಾಜದ  ಬಾಂಧವರು ಬಂದಿದ್ದರು ಗುರುಗಳ ದರ್ಶನಕ್ಕೆ ನದಿಯ ಮತ್ತೊಂದು ದಡದಲ್ಲಿದ್ದ ಗುರುವಿನ ಆಶ್ರಮದ ಸಭಾಂಗಣದಲ್ಲಿ ಎಲ್ಲರೂ ಸೇರಿದೆವು. ಘನ ಗಂಭೀರವಾಗಿ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತಿಯವರ ಘನ ಗಂಭೀರ ಆಗಮನವಾಯಿತು. ಈ ದರ್ಶನದ  ಸುಮೂಹೂರ್ತದಲ್ಲಿ ನಮ್ಮ ಕರಾಡ ಅಭ್ಯದಯ ಸಂಘ (ರಿ) ಅಗಲ್ಪಾಡಿ ಇದರ ಸುವರ್ಣ ಸಂಭ್ರಮದ ಆಮಂತ್ರಣ ಪತ್ರಿಕ ಬಿಡುಗಡೆಯನ್ನು  ಶ್ರೀಗುರುಗಳು ನೆರವೇರಿಸಿದರು.   ನಂತರ ಗುರುಗಳ ಆಶೀರ್ವಚನ ನುಡಿಗಳು.  " ಯಾವುದೇ ಮೂಲವಸ್ತುವಿಗೆ ಸಂಸ್ಕಾರ ಒದಗಿದಾಗ ಅದು ಪ್ರಜ್ವಲಿಸುತ್ತದೆ. ಒಂದು ಶಿಲೆಯಾದರೂ ಅದು ಮೂರ್ತಿಯಾಗಬಹುದು. ಭೂಮಿಯಲ್ಲಿದ್ದ ಮೂಲಭೂತವಾದ ವಸ್ತು ಸಂಸ್ಕಾರ ಒದಗಿದಾಗ ನಮಗೆ ಉಪಯೋಗವಾದ ವಸ್ತುವಾಗಿ ಬದಲಾಗುತ್ತದೆ. ಯಾವುದೇ ಒಂದು ಲೋಹ ಸಿಕ್ಕಿದಾಗ ಅದನ್ನು ಉಪಯೋಗ ಯುಕ್ತವಾಗುವಂತೆ ಮಾಡುವುದಕ್ಕೆ ಅದಕ್ಕೆ ಒಂದು ಪ್ರಕ್ರಿಯೆ ಕಾಲಗಳು ಇರುತ್ತವೆ. ನಮ್ಮ ಶಾಸ್ತ್ರಗಳು ಅದನ್ನು ತೋರಿಸುತ್ತವೆ. .  ಮನುಷ್ಯ ಹುಟ್ಟಿದಾಗ ಸಂಸ್ಕಾರ ಒದಗಿಬಂದರೆ ಆತ ಉತ್ತಮ ಮನುಷ್ಯನಾಗಿ ಸಮಾಜಕ್ಕೆ ಉತ್ತಮ ಕೊಡುಗೆಯಾಗುತ್ತಾನೆ. ಕಣ್ಣು ಕಾಣಬಹುದು ಆದರೆ ಎಲ್ಲವನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಅದರಂತೆ ಪಂಚೇಂದ್ರಿಯಗಳಿಂದ ಗ್ರಹಿಸಲಾಗದೇ ಇರುವುದನ್ನು ನಮ್ಮ ಶಾಸ್ತ್ರಗಳು ತಿಳಿಸಿಕೊಡುತ್ತವೆ." ಇದು ಗುರುಗಳ ಆಶೀರ್ವಚನದ ಸಾರವಾಗಿತ್ತು. ಅದ್ಭುತವಾದ ಗುರು ಸಂದೇಶ. 

ಗುರುಗಳ ಅಮೃತ ಹಸ್ತದಿಂದ ಅನುಗ್ರಹಿಸಿದ ಮಂತ್ರಾಕ್ಷತೆ ಪಡೆದು ದೇವರ ಪ್ರಸಾದ ನೈವೇದ್ಯ ಭೂಜನ ಪೂರೈಸಿದೆವು. ಅಲ್ಪ ಸಮಯದ ಅವಧಿಗೆ ನಮ್ಮ ಬಾಂಧವರ ಸಣ್ಣ ಸಭೆ  ಮಠದ ಆವರಣದಲ್ಲೇ ನಿಗದಿಯಾಗಿತ್ತು. ಅದರಂತೆ ಎಲ್ಲರೂ ಒಟ್ಟು ಸೇರಿ ಒಂದಷ್ಟು ಸಲಹ ಸೂಚನೆ ಪರಿಚಯಗಳನ್ನು ಪೂರೈಸಿಕೊಂಡೆವು. ಎಲ್ಲವೂ ಸೌಹಾರ್ದಾತೆಯ ಸಂಕೇತವಾಗಿತ್ತು. ಸಾಯಂಕಾಲವಾಗುತ್ತಿದ್ದಂತೆ ಎಲ್ಲರೂ ಪ್ರಯಾಣದ ಕೊನೆಯ ಹಂತವನ್ನು ತಲುಪಿ ಎಲ್ಲರಿಗೂ ವಿದಾಯ ಹೇಳಿದೆವು. 

ಪ್ರಯಾಣದಂತಹ ಕಾರ್ಯಕ್ರಮಗಳು ವ್ಯವಸ್ಥೆಗೊಳಿಸುವುದು ಅಷ್ಟು ಸುಲಭವಲ್ಲ. ಅದಕ್ಕೆ ಅನುಭವ ಹಲವಾರು ದಿನದ ಹಲವು ವ್ಯಕ್ತಿಗಳ ಪರಿಶ್ರಮ ಅತೀ ಅವಶ್ಯ. ಜತೆ ಎಲ್ಲರ ಸಹಕಾರ ಒದಗಿ ಬಂದರೆ ಪ್ರಯಾಣ ಸುಖಕರವಾಗಿರುತ್ತದೆ.  ಇದಕ್ಕೆ ಪೂರಕವಾಗಿ ನಮ್ಮ ಗುರು ದರ್ಶನದ ಕಾರ್ಯಕ್ರಮ ಸಾಂಗವಾಗಿ ಯಶಸ್ವಿಯಾಗಿ ನೆರವೇರಿತು. ಯಾವುದೇ ಕಾರ್ಯಕ್ಕು ಉದ್ದೇಶ ಶುದ್ದಿ ಸಂಕಲ್ಪ ಶುದ್ಧಿ ಅತೀ ಅವಶ್ಯ. ಇದು ಇದ್ದರೆ ಕಾರ್ಯಕ್ರಮ ಬಹುವಂಶ ಯಶಸ್ವಿಯಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿ ಪರಿಣಮಿಸಿತು.  ನಿಗದಿಯಾದ ಸಮಯ ಹೊಂದಿಸಿಕೊಳ್ಳುವಲ್ಲಿ ಸ್ವಲ್ಪ ಮಟ್ಟಿಗೆ ಕಾರಣಾಂತರದಿಂದ ವೆತ್ಯಾಸ ವಾಗಿದ್ದು ಬಿಟ್ಟರೆ ಕಾರ್ಯಕ್ರಮ ತುಂಬ ಯಶಸ್ವಿಯಾಗಿತ್ತು. ಸಾಮಾನ್ಯ ದೂರದ ಪ್ರಯಾಣದಲ್ಲಿ ಇದೆಲ್ಲ ಸಾಮಾನ್ಯ. ಪ್ರಯಾಣದಂತಹ ಕಾರ್ಯಕ್ರಮದಲ್ಲಿ ನಮ್ಮ ಉದ್ದೇಶವನ್ನು ನಾವು ಮೊದಲು ಗಮನಿಸಬೇಕು. ಅದರ ಪಾವಿತ್ರ್ಯತೆಯನ್ನು ಮೊದಲು ಕಾಪಾಡಿಕೊಳ್ಳಬೇಕು. ಅದರ ನಡುವೆ ಆತಂಕ ತೊಂದರೆಗಳು ಎದುರಾದರೆ ನಾವೆಲ್ಲ ಏಕ ಮನಸ್ಸಿನಿಂದ ಅದಕ್ಕೆ  ಎಲ್ಲರೂ ಸಹಕರಿಸಬೇಕು. ಸಣ್ಣ ಪುಟ್ಟ ಅಸೌಕರ್ಯ ತೊಂದರೆಗಳನ್ನು ನಮ್ಮ ಉದ್ದೇಶ ಗಮನದಲ್ಲಿರಿಸಿ ಸೌಹಾರ್ದವಾಗಿ ಅದನ್ನು ಸ್ವೀಕರಿಸಬೇಕು. ಅದಕ್ಕೆ ಸಹಕಾರ ಎಂದು ಹೇಳುವುದು. ಆದರೂ ಇಲ್ಲಿ ಅಂತಹ ಹೇಳಿಕೊಳ್ಳುವಂತಹ ಯಾವ ತೊಂದರೆ ಸೌಕರ್ಯ ಕೊರತೆಗಳು ಎದುರಾಗಲಿಲ್ಲ. ಎಲ್ಲವನ್ನು ಬಹಳ ಮುಂದಾಲೋಚನೆಯಿಂದ ವ್ಯವಸ್ಥೆಗೊಳಿಸಲಾಗಿತ್ತು. ಇದಕ್ಕಾಗಿ ಭಾರವಾಹಿಗಳಾದ ಶ್ರೀ ಉಪ್ಪಂಗಳ ನಾಗರಾಜ, ಪಾಂಡುರಂಗ ಗುರ್ಜರ್ ಮತ್ತು ಇತರರ ಯೋಗದಾನವನ್ನು ಕೃತಜ್ಞತೆಯಿಂದ ಸ್ಮರಿಸಬೇಕು. ಎಲ್ಲರಿಗೂ ಧನ್ಯವಾದಗಳು. ಮುಂದೆಯೂ ಇಂತಹ ಕಾರ್ಯಕ್ರಮಗಳು ಆಯೋಜನೆಗೊಂಡು ಅದರಲ್ಲಿ ಭಾಗವಹಿಸಿ ಯೋಗದಾನವನ್ನು ಒದಗಿಸುವ ಅವಕಾಶ ನನಗೂ ಒದಗಿ ಬರಲಿ ಎಂದು ಹಾರೈಸುತ್ತೇನೆ.  ಸಹಕರಿಸಿದ ಎಲ್ಲ ಬಾಂಧವ ಮಿತ್ರರಿಗೆ ಕೃತಜ್ಞತೆಗಳು. 

Saturday, August 8, 2026

ಬ್ರಹ್ಮ ಜ್ಞಾನ

ನಾನು ಬಾಲ್ಯದಲ್ಲಿರುವಾಗ ನಮ್ಮೂರಿನಲ್ಲಿ ಒಂದು ಆಜಾರ್ ಬ್ಯಾರಿಯ ಅಂಗಡಿಗೆ ಎನಾದರು ಸಾಮಾನು ತರಲು ಹೋಗುತ್ತಿದ್ದೆ. ಕೆಲವು ಸಲ ಹೋಗುವಾಗ ಅವರ ನಮಾಜ್ ಪ್ರಾರ್ಥನೆಯ ಸಮಯವಾಗಿರುತ್ತಿತ್ತು. ಹಲವು ಸಲ ಆತ ನಮಾಜ್ ಗೆ ಏಳುವಾಗ ನಾವು ಹೋದರೂ ಅವರು ಪ್ರಾರ್ಥನೆ ಮುಗಿಸಿ ಬರುತ್ತೇನೆ ಅಂತ ನಮ್ಮನ್ನು ಕಾಯುವಂತೆ ಹೇಳಿ ಹೋಗುತ್ತಿದ್ದರು. ಸಾಮಾನ್ಯವಾಗಿ ಆಗ ಹತ್ತು ಹದಿನೈದು ನಿಮಿಷವಾದರೂ ಕಾದು ಕುಳಿತುಕೊಳ್ಳಬೇಕಾಗುತ್ತಿತ್ತು.  ಬೇರೆ ಅಂಗಡಿ ಇಲ್ಲದೇ ಇದ್ದುದರಿಂದ ಅಥವಾ ಯಾವುದೋ ಅನಿವಾರ್ಯತೆಗೆ ನಾವು ಕಾದು ಕುಳಿತುಬಿಡುತ್ತಿದ್ದೆವು.  ಅದೆಷ್ಟು ಜನ ಇದ್ದರೂ ,  ಅವರು ಅಷ್ಟೇ ನಾವು ಕಾಯುತ್ತಿದ್ದೇವೆ ಎಂದು ಯಾವ ಅವಸರವೂ ಮಾಡದೆ ಸಾವಧಾನವಾಗಿ ತಮ್ಮ ನಿತ್ಯವಿಧಿಯನ್ನು ಪೂರೈಸಿ ಬರುತ್ತಿದ್ದರು. ಆವಾಗ ಎಷ್ಟೋ ಸಲ ನನಗಗನಿಸುತ್ತಿತ್ತು ನಾನೊಬ್ಬನೇ ಇದ್ದರೆ, ನನ್ನ ಒಬ್ಬನನ್ನು ಕಳುಹಿಸಬಹುದಿತ್ತಲ್ಲಾ ಎಂದು ಕೊಳ್ಳುತ್ತಿದ್ದೆ. ಯೋಚನೆ ಮಾಡಿದಾಗ ದೈವ ಪ್ರಾರ್ಥನೆ ನಿತ್ಯ ವಿಧಿಗಳಲ್ಲಿ ಅವರಿಗಿರುವ ಬದ್ದತೆ ಆಶ್ಚರ್ಯ ತರಿಸುತ್ತಿತ್ತು. ಅವರ ನಿಯಮಗಳು ಕಠಿಣ ಇರುತ್ತಿತ್ತು. ಇರಲಿ, ನಮ್ಮಲ್ಲಿ ಅಷ್ಟು ಕಠಿಣವಾದ ನಿಯಮಗಳು ಇಲ್ಲವೋ ಅಥವಾ ನಾವು ಪಾಲಿಸುವುದಿಲ್ಲವೋ ಅದು ತಿಳಿಯದು. ನಮ್ಮಲ್ಲೂ ಅದೇ ರೀತಿ ನಾವು ಪಾಲನೆ ಮಾಡಬೇಕು ಅಂತ ಅನ್ನಿಸುತ್ತದೆ.  ಯಾವುದೇ ವಿಧಿ ವಿಧಾನಗಳನ್ನು ಮತ್ತೊಂದಕ್ಕೆ ಹೋಲಿಸಿ ತುಲನೆ ಮಾಡುವುದು ಸರಿಯಲ್ಲ. ನಮ್ಮಲ್ಲೇ ಇದು ಹಲವು ರೀತಿಯಲ್ಲಿ ವೆತ್ಯಾಸವಿರುತ್ತದೆ. ನಿಯಮ ನಿಬಂಧನೆ ಇಲ್ಲ ಎಂದುಕೊಂಡರೂ. ನಾವು ಹೇಗೆ ಆಚರಿಸಿದರೂ ಅದು ಪರವಾಗಿಲ್ಲ ಎಂದು ತಿಳಿದು ಕೊಂಡು ಹೇಗಾದರೂ ಆಚರಿಸುವುದು ಒಂದು ರೀತಿಯ ಅಸಡ್ಡೆಯಾಗುತ್ತದೆ. ಯಾವುದೋ ಕಾಟಾಚಾರವಾಗಿಬಿಡುತ್ತದೆ, ಇದು ನನ್ನ ಭಾವನೆ.  ಹಲವು ಸಲ ಪರಿಹಾರ ಉಂಟು ಎಂದು ತಿಳಿದುಕೊಂಡು ಅಪರಾಧ ಮಾಡುವುದಕ್ಕೆ ಇದು ಪ್ರೇರಣೆಯಾದಂತೆ ಆಗಿಬಿಡುತ್ತದೆ. ಯಾವುದೇ ಪಾಪಕ್ಕೂ ಪರಿಹಾರವಿದೆ ಅಂತ ಒಂದು ಬಗೆಯ ಔದಾಸಿನ್ಯ. ಇಲ್ಲದೆ ಇದ್ದರೆ ನನ್ನಿಂದ ಇಷ್ಟೇ ಸಾಧ್ಯ. ಒಂದು ರೀತಿಯ ಉಡಾಫೆ. 

ಎಲ್ಲರಂತೆ ಮೊದಲೆಲ್ಲ ನಾನು ಅಷ್ಟೇ  ಈ ಆಚರಣೆ ಕರ್ಮಾನುಷ್ಠಾನದಲ್ಲಿ ಗಂಭೀರವಾಗಿರುತ್ತಿರಲಿಲ್ಲ.  ಹೇಗಾದರೂ ಒಂದು ಮಾಡಿದರೆ ಸಾಕು ಎಂಬ ಭಾವನೆ. ಆದರೆ ವ್ಯಕ್ತಿತ್ವ ಜೀವನದಲ್ಲಿ ಒಂದೇ ಬಗೆಯಲ್ಲಿ ಇರುವುದಿಲ್ಲ. ಮನುಷ್ಯ ಅನುಭವದಿಂದ ಬದಲಾಗುತ್ತಾ ಹೋಗುತ್ತಾನೆ. ನಾನು ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಯೋಗಾಭ್ಯಾಸ ಆರಂಭಿಸಿದೆ. ಅಂದಿನಿಂದ ಸಹಜವಾಗಿ ಜೀವನ ಕ್ರಮದಲ್ಲಿ ಅಮೂಲಾಗ್ರ ಬದಲಾವಣೆಯಾಗಿಬಿಟ್ಟಿತು. ನಾನು ಮನುಷ್ಯನಾಗಿ ಬದುಕಿದ್ದು ಆವಾಗಿಂದಲೇ ಅಂತ ಹಲವು ಸಲ ಅಂದುಕೊಳ್ಳುತ್ತೇನೆ. ಯೌವನ ಎಂಬುದು ಮನುಷ್ಯನ ಉಚ್ಛ್ರಾಯ ಸ್ಥಿತಿ , ಎಲ್ಲಾ ಬಗೆಯಿಂದಲು ಸುಖಾನುಭವದ ವಯಸ್ಸು. ಹಾಗಿದ್ದರೂ ಯೋಗಾಭ್ಯಸದ ನಂತರ ಸಮಗ್ರವಾದ ಗ್ರಹಸ್ಥಾನುಭವವೂ ಏನೂ ಅಲ್ಲ ಅಂತ ಯೋಗಾನುಭವ ತಿಳಿಸಿಬಿಟ್ಟಿತು. ಹೀಗೆ ಯೋಗಾಭ್ಯಸ ಮಾಡುವಾಗ ಯೋಗ ಗುರುಗಳು ಮಾರ್ಗ ದರ್ಶಕನಾದ ಮಿತ್ರನೂ ಯೋಗಾಭ್ಯಾಸಕ್ಕೆ ಸ್ನಾನಾದಿಗಳನ್ನು ಮುಗಿಸಿ ಮಾಡುವುದು ಅತ್ಯುತ್ತಮ ಅಂತ ಹೇಳಿದರು. ನನಗೊಂದು ಸ್ವಭಾವ ಎಂದರೆ ಯಾವುದೇ ಕೆಲಸ ಮಾಡಲಿ ಅದಕ್ಕೆ ಸಾಧ್ಯವಾದಷ್ಟು ಬದ್ದತೆಯನ್ನು ಕೊಡಬೇಕು. ಆರೋಗ್ಯದಿಂದಲೂ ಹಲವಾರು ಸಮಸ್ಯೆಗಳನ್ನು ಎದುರಿಸಿತ್ತಿದ್ದ ನನಗೆ ಯೋಗಾಭ್ಯಾಸಕ್ಕೆ ಏನೆಲ್ಲ ಬೇಕೋ ಅದನ್ನೆಲ್ಲ ಮಾಡುವ ಆಸಕ್ತಿ ಹುಟ್ಟಿಕೊಂಡಿತು. ಹಾಗಾಗಿ ಬೆಳಗ್ಗೆ ಸ್ನಾನ ಮಾಡಿ ಯೋಗಾಭ್ಯಾಸಕ್ಕೆ ಹೋಗುತ್ತಿದ್ದೆ. ಅದು ವರೆಗೆ ತಡವಾಗಿ ಏಳುತ್ತಿದ್ದ ನನಗೆ ಇದಕ್ಕಾಗಿ ಬೇಗ ಏಳುವ ಅನಿವಾರ್ಯತೆ ಬಂದು ಬಿಟ್ಟಿತು. ನಮಗೂ ಹಾಗೆ ಸ್ನಾನ ಮಾಡಿದ ನಂತರ, ಸಂಧ್ಯಾವಂದನೆ ಪೂಜೆ ಇವುಗಳನ್ನು ಮುಗಿಸಬೇಕು, ಹಾಗಾಗಿ ಆರುಘಂಟೆಯ ಯೋಗ ತರಗತಿಗೆ ಹೋಗಬೇಕಾದರೆ ಐದು ಘಂಟೆಯ ಮೊದಲೇ ಎದ್ದು ಬಿಡಬೇಕಾಗಿತ್ತು. ಈ ಒಂದು ನಿಬಂಧನೆ ನನ್ನ ಜೀವನದಲ್ಲಿ ಬಹಳ ದೊಡ್ಡ ಬದಲಾವಣೆಯನ್ನು ತಂದಿತು.  

ಐದು ಘಂಟೆಗೆ ಎದ್ದು ಸ್ನಾನ ಮಾಡಿ ಸಂಧ್ಯಾವಂದನೆಗೆ ತೊಡಗ ಬೇಕು ಎನ್ನುವಾಗ, ನಮ್ಮ ಮನೆಯ ಅನತಿ ದೂರದಲ್ಲಿದ್ದ ಮಸೀದಿಯಿಂದ ಬಾಂಗ್ ಕೇಳುತ್ತಿತ್ತು. ಇದೊಂದು ರೀತಿಯಲ್ಲಿ ನನಗೆ ಇದಕ್ಕಿಂತ ಮೊದಲು ನನ್ನ ಸಂಧ್ಯಾವಂದನೆ ಪ್ರಾರ್ಥನೆ ಮುಗಿಸಿಬಿಡಬೇಕು ಎಂಬ ತುಡಿತ ನನ್ನಲ್ಲಿ ಬೆಳೆದು ಬಿಟ್ಟಿತು. ಅವರೆಲ್ಲಾ ಎದ್ದು ಪ್ರಾರ್ಥನೆ ಮಾಡುತ್ತಾರೆ ಅವರಿಗಿಂತ ಒಂದಿಷ್ಟು ಮೊದಲು ನಾನು ತೊಡಗಬೇಕು ಎಂದು ಸಾಕಷ್ಟು ಮೊದಲೇ ಏಳುವ ಪ್ರಚೋದನೆಯಾಯಿತು. ಹಾಗಾಗಿ ಐದು ಘಂಟೆಗೆ ಎದ್ದು ಬಿಡುವವನು ಒಂದು ತಾಸು ಮೊದಲೇ ಎದ್ದು ಸಂಧ್ಯಾವಂದನೆಗೆ ತೊಡಗುತ್ತಿದ್ದೆ. ಇದೊಂದು ರೀತಿಯ ಸತ್ ಪ್ರಚೋದನೆ. ಮತ ಧರ್ಮ ಯಾವುದಾದರೇನು? ಭಗವಂತನ ಪ್ರಾರ್ಥನೆ ಅದು ಸಮಾನ. ಹೀಗೆ ಒಂದು ಸಲ ಸ್ನಾನ ಆಯಿತು ಎಂದರೆ ಅದೊಂದು ಶಿಸ್ತಿನ ಜೀವನದ ಮೊದಲ ಹೆಜ್ಜೆಯಾಗಿಬಿಡುತ್ತದೆ. ಯೋಗಾಭ್ಯಾಸ ಆರಂಭವಾದ ನಂತರ ಇಂದಿನವರೆಗೂ ಒಂದೇ ಒಂದು ದಿನ ನಾನು ತಡವಾಗಿ ಏಳಲಿಲ್ಲ ಎಂಬುದು ನನ್ನ ಪಾಲಿಗೆ ಗಮನಾರ್ಹವೆನಿಸುತ್ತದೆ. ಶಿಸ್ತು ಬದ್ದ ಜೀವನಕ್ಕೆ ಇದೊಂದು ಮೊದಲ ಮೆಟ್ಟಿಲಾಗಿಬಿಟ್ಟಿತು.  ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲೇ ಸೂರ್ಯಾರ್ಘ್ಯ ಜಪ ಪೂಜಾದಿಗಳ ನಿತ್ಯ ಕರ್ಮವನ್ನು ಪೂರೈಸುವ ಅದ್ಭುತ ಅನುಭವ ಮತ್ತು ಅವಕಾಶ ಇದರಿಂದ ಒದಗಿಬಂತು. 

ನಮ್ಮಲ್ಲೂ ನಿಯಮ ನಿಬಂಧನೆಗಳು ಇವೆ. ಆದರೆ ನಾವೇಕೆ ಅದರ ಬಗ್ಗೆ ಅಸಡ್ಡೆಯನ್ನು ತೋರಿಸುತ್ತಿದ್ದೇವೆ ಎಂಬುದೇ ಪ್ರಶ್ನೆ. ಸಂಧ್ಯಾವಂದನೆ ಎಂದರೆ, ಭಗವಂತನನ್ನು ಅರಿಯುವ ಜ್ಞಾನವನ್ನು ಕೊಡು ಅಂತ ಭಗವಂತನಲ್ಲೇ ಪ್ರಾರ್ಥಿಸುವ ಒಂದು ಪವಿತ್ರ ಕಾರ್ಯ. ಬ್ರಾಹ್ಮಣ ಎಂದರೆ ಜ್ಞಾನಿ ಎಂದು ಅರ್ಥ. ಯಾರು ಮುಂಜಾನೆ ಎದ್ದು  ಸಂಧ್ಯಾವಂದನೆ ಧ್ಯಾನದ ಮೂಲಕ ಬ್ರಹ್ಮ  ಜ್ಞಾನವನ್ನು ಪಡೆಯುತ್ತಾನೋ ಆತ ನಿಜವಾದ ಬ್ರಾಹ್ಮಣ. ಇದಕ್ಕಾಗಿ ನಮಗೆ ಕಠಿಣವಾದ ನಿಯಮ ನಿಬಂಧನೆಯ ಅವಶ್ಯಕತೆ ಬೇಕಾಗಿಲ್ಲ. ಜ್ಞಾನದ ಶ್ರಧ್ದೆ ಇದ್ದರೆ ಸಾಕು. ಆದರೆ ನಮಗದು ಬೇಡ. ಸಂಧ್ಯಾವಂದನೆ ಆಚರಿಸುವುದರಲ್ಲೇ ಔದಾಸಿನ್ಯ. ಇನ್ನು ಆಚರಿಸಿದರೂ ಅದು ಕಾಟಾಚಾರ. ಸಂಧ್ಯಾವಂದನೆ ಮಾಡಿದರೂ ಅದರ ನಡುವೆ ಯಾರಲ್ಲೋ ಮೊಬೈಲ್ ನಲ್ಲಿ ಮಾತನಾಡುವುದು,  ಮಂತ್ರ ಹೇಳುತ್ತಾ ಮಂತ್ರದಲ್ಲೇ ದೊಡ್ಡದಾಗಿ ಯಾರಿಗೋ ಗದರುವುದು ಛೇಡಿಸುವುದು, ನಡುವೆ ಎದ್ದು ಹೋಗುವುದು ಅವಸರವವಸರವಾಗಿ ಒಂದು ಮುಗಿಸಿ ಭಾರ ಇಳಿಸಿದರೆ ಸಾಕು ಎಂಬ ಪ್ರವೃತ್ತಿ. ದಿನದ ಸಾವಿರದ ನಾನ್ನೂರ ನಲ್ವತ್ತು ನಿಮಿಷದಲ್ಲಿ ಕೇವಲ   ಹದಿನೈದು ನಿಮಿಷವನ್ನೂ ಮೀಸಲಿಡಲಾಗದ ನಾವು ಬ್ರಾಹ್ಮಣ ಎಂದನಿಸಿಕೊಳ್ಳಲು ಯೋಗ್ಯರೆ ಅಂತ ಯೋಚಿಸಬೇಕು. ಒಂದು ರೀತಿಯಲ್ಲಿ ಬ್ರಾಹ್ಮಣ ವೇಷಕ್ಕೂ ಅರ್ಹರಲ್ಲದವರು ಅಂತ ಅನ್ನಿಸಿಬಿಡುತ್ತದೆ. ಸಂಧ್ಯಾವಂದನಾದಿ ಕಾರ್ಯಗಳು, ನಮ್ಮ ಪಾಪ ಮೋಕ್ಷಕ್ಕಾಗಿ ಆಚರಿಸಲೇ ಬೇಕಾದ ಕರ್ಮಗಳು.  ಮೊದಲು ನಮ್ಮಲ್ಲಿ ಪಾಪ ಪ್ರಜ್ಞೆ ಎಂಬುದು ಬೆಳೆಯಬೇಕು. ಹೀಗಿದ್ದಲ್ಲಿ ನಾವು ಮಾಡುವ ಕಾರ್ಯದಲ್ಲಿ ಶ್ರದ್ಧೆ ಭಕ್ತಿ ತಾನಾಗಿ ಪ್ರಚೋದನೆಯಾಗುತ್ತದೆ. ಸಂಧ್ಯಾವಂದನೆ ಎಂದರೆ ನಮ್ಮನ್ನು ನಾವು ಪರಿಶುದ್ದತೆಯತ್ತ ಕೊಂಡೊಯ್ಯುವುದು. ಆದರೆ ನಮ್ಮ ಮನಸ್ಸು ದೇಹ ನಮ್ಮ ಪರಿಸರ ಪರಿಶುದ್ದವಿಲ್ಲದೇ ಇದ್ದರೆ ಪರಿಶುದ್ದಿ ಎಂಬುದನ್ನು ಪಡೆಯುವುದಕ್ಕೆ ಸಾಧ್ಯವಿಲ್ಲ. ಕೆಸರಿನಲ್ಲಿ ಹುಟ್ಟಿದ ಕಮಲವಾದರೂ ಅರಳಿದನಂತರ ಸೂರ್ಯಾಭಿಮುಖವಾಗಿ ಪರಿಶುದ್ದಿಯಾಗುತ್ತದೆ. ಆದರೆ ನಾವು ಮಾತ್ರ ಕೆಸರಲ್ಲೇ ಇದ್ದು ಪರಮಾತ್ಮನಿಂದ ವಿಮುಖರಾಗಿಬಿಡುತ್ತೇವೆ. 

ನಾವು  ಶ್ರೀರಾಮನನ್ನು ನಂಬುತ್ತೇವೆ. ರಾಜ ಜಪವನ್ನು ಮಾಡುತ್ತೇವೆ. ಆದರೆ ಅದೇ ರಾಮನಲ್ಲಿ ಅನುಮಾನ ವ್ಯಕ್ತಪಡುತ್ತೇವೆ. ರಾಮ ಸೀತೆಯನ್ನು ಕಾಡಿಗೇಕೆ ಅಟ್ಟಿದ? ರಾಮ ಮರೆಯಲ್ಲಿದ್ದು ವಾಲಿಯನ್ನು ಏಕೆ ಸಂಹರಿಸಿದ? ರಾಮಾಯಣ ಅಧ್ಯಯನ ಮಾಡದೇ  ಹೀಗೆಲ್ಲ ಆತನ ವ್ಯಕ್ತಿತ್ವದ ಮೇಲೆ ರೇಖೆಯನ್ನು ಎಳೆದುಬಿಡುತ್ತೇವೆ.  ನಮಗೆ ಅದರಲ್ಲೂ ಹಿಂದುಗಳಿಗೆ ಈ ಅರೆನಾಸ್ತಿಕತೆಯೇ ಬಾಧಿಸುವುದು. ದೇವರನ್ನು ತಿಳಿಯುವುದಕ್ಕೆ ಪ್ರಯತ್ನಿಸುವುದಿಲ್ಲ. ಯಾವುದೋ ಒಂದನ್ನು ದೇವರು ಅಂತ ನಂಬಿಬಿಡುತ್ತೇವೆ. ಅಲ್ಲಿ ಸಾವಿರಾರು ಸಂಶಯಗಳು ಹುಟ್ಟಿಬಿಡುತ್ತವೆ. ಶ್ರೀಕೃಷ್ಣನೇ ಪಾಂಡವರಿಗೆ ಯುದ್ದ ಮಾಡುವಂತೆ ಹೇಳಿದ. ಇದು ಹಿಂಸೆಗೆ ಪ್ರಚೋದಿಸದಂತೆ ಭಾಸವಾಗುತ್ತದೆ. ಆದರೆ ಶ್ರೀಕೃಷ್ಣ ಜ್ಞಾನ ಧ್ವಂಸಿಗಳನ್ನು ಸಂಹರಿಸಿದ. ಯಾರು ಆತನನ್ನು ನಂಬುವವರನ್ನು ಆತ ಸಂಹರಿಸಿಲ್ಲ. ಯಾರು ಜ್ಞಾನವನ್ನು ದೂರ ಮಾಡಿದರೋ ಅವರ ಎದುರು ಯುದ್ದ ಸಾರಿದ. ಮತ್ತೂ ಮುಂದೆ ಯೋಚಿಸಿದರೆ ಆತ ಹಲವರನ್ನು ಸಂಹರಿಸಲಿಲ್ಲ. ಅವರಿಗೆ ಮೋಕ್ಷವನ್ನು ಬಿಡುಗಡೆಯನ್ನು ಕಲ್ಪಿಸಿದ. ಆದರೆ ದೇವರನ್ನು ಅರಿಯದವರು ಅರೆ ನಾಸ್ತಿಕರಾಗಿಬಿಡುತ್ತಾರೆ. ಬದುಕಿಗೆ ಇದು ಅಪಾಯ. 


Saturday, August 1, 2026

ಧಿಯೋಯೋನಃ ಪ್ರಚೋದಯಾತ್

 ಗಾಯತ್ರಿಮಂತ್ರದಲ್ಲಿ ಕೊನೆಯ ಶಬ್ದಗಳು ಧಿಯಃ ಯಃ ನಃ ಪ್ರಚೋದಯಾತ್. ಒಟ್ಟಿಗೆ ಧಿಯೋಯೋನಃ ಪ್ರಚೋದಯಾತ್. ಅಂದರೆ ನಮಗೆ ಜ್ಞಾನವನ್ನು ಕರುಣಿಸು. ಇದು ಗಾಯತ್ರಿ ಮಂತ್ರದ ಅದ್ಭುತ ಸಾಲುಗಳು.  ಮನುಷ್ಯ ದೇವರನ್ನು ಅರಿಯಬೇಕು.  ಆಗ ಅದರಲ್ಲಿ ಅರ್ಪಣಭಾವ ಬರುತ್ತದೆ. ಯಾರೋ ಹೇಳಿದರು ಅನುಸರಿಸಿದರು ಎಂದಲ್ಲ. ಅದನ್ನೇ ಧೀಮಹಿ ಎನ್ನುವುದು. ಧಿಯೋಯೋನಃ ಪ್ರಚೋದಯಾತ್ ಹೇಳುವಲ್ಲಿ ಒಬ್ಬನೇ ಆದರೂ ಆತ ನಮಗೆ ಎಂದು ಹೇಳುತ್ತಾನೆ. ನಮಗೆ ಒಳ್ಳೆ ಬುದ್ದಿಯನ್ನು ಕೊಡು ಎಂದು ಒಬ್ಬನೇ ಕುಳಿತು ಮನಸ್ಸಿನಲ್ಲಿ ಧ್ಯಾನ ಮಾಡುತ್ತಾನೆ.  ಇದು ಗಹನವಾದ ವಿಚಾರವನ್ನು ಹೇಳುತ್ತದೆ. ಬುದ್ದಿಯನ್ನು ಕೇವಲ ನಮಗಾಗಿ ಕೊಟ್ಟರೆ ಮತ್ತೊಬ್ಬನಿಗೆ ಬುದ್ದಿ ಇಲ್ಲದಾಗುತ್ತದೆ. ಪರೋಕ್ಷವಾಗಿ ಅದು ನಮಗೆ ಬಾಧಕವಾಗಬಹುದು. ಹಾಗಾಗಿ ಎಲ್ಲರಿಗೂ ಬುದ್ಧಿಯನ್ನು ಜ್ಞಾನವನ್ನು ಕೊಡು. ಹೊರತು ಸಂಪತ್ತನ್ನು ಕೇಳುವುದಿಲ್ಲ. ಬುದ್ಧಿಗಿರುವ ಮಹತ್ವ ಅದು. ನಾವು ಧನಿಕರಾಗುವಾಗ ನಮ್ಮ ಪಕ್ಕದಲ್ಲಿರುವವನೂ ಧನಿಕನಾಗಲಿ ಎಂದು ಬಯಸುವುದರಲ್ಲಿ ವಿಶ್ವ ಬಂಧುತ್ವವಿದೆ. 

ಬಹುಶಃ ಯಾವುದೇ ಧರ್ಮದಲ್ಲೂ ನನಗೆ ಕೊಡು ಅಂತ ಭಗವಂತನಲ್ಲಿ ಬೇಡುವುದಿರಬಹುದು ಗೊತ್ತಿಲ್ಲ. ನನಗೆ ವರಕೊಡು. ನನಗೆ ಒಳ್ಳೆಯದು ಮಾಡು. ನನ್ನನ್ನು ಉದ್ದರಿಸು ಹೀಗೆ ತನ್ನ ಪರಿಮಿತಿಯಲೇ ಬೇಡಿಕೆ ಇರುತ್ತದೆ.   ನಮಗೆ ಕೊಡು ಅಂತ ಕೇಳುವುದರಲ್ಲಿ ಸನಾತನ ಧರ್ಮದ ಸತ್ವ ಅಡಗಿದೆ ಎನ್ನಬೇಕು. ಹಾಗಾಗಿಯೇ ಭಾರತದ ಆಧ್ಯಾತ್ಮಿಕ ತತ್ವಗಳು ಇಂದು ಜಗತ್ತಿಗೆ ಗುರುಸ್ಥಾನವನ್ನು ಕಲ್ಪಿಸಿದೆ ಎನ್ನಬೇಕು. ನನಗೆ ಎನ್ನುವುದಕ್ಕಿಂತ ನಮಗೆ ಎನ್ನುವುದರಲ್ಲಿ ಸಮಷ್ಟಿಯ ತ್ಯಾಗ ಮನೋಭಾವ ಇದೆ. ಯೋಗ ತರಗತಿಯ ಆರಂಭದ ದಿನಗಳಲ್ಲಿ ನಮ್ಮ ಯೋಗ ಗುರು ತಾಡಪತ್ರಿಯವರು ಒಂದು ಮಾತು ಹೇಳಿದ್ದರು ಈಗಲೂ ನೆನಪಿದೆ. ನಿಮ್ಮ ನೆರೆ ಮನೆಯವನು ನಿಮ್ಮನ್ನು ದ್ವೇಷಿಸುತ್ತಿದ್ದರೆ, ಬೇರೆ ಏನು ಬೇಡ ಆತನನ್ನು ಯೋಗ ತರಗತಿಗೆ ಕರೆದು ಕೊಂಡು ಬನ್ನಿ. ಯೋಗಭ್ಯಾಸ ಮಾಡುವಂತೆ ಪ್ರೇರೇಪಿಸಿ. ನಿಮ್ಮ ಮೇಲಿನ ದ್ವೇಷವನ್ನು ಮಾತ್ರವಲ್ಲ ದ್ವೇಷ ಎಂಬ ವಸ್ತುವನ್ನೇ ಮರೆತು ಬಿಡುತ್ತಾನೆ. ಭಾರತಕ್ಕೆ ಸಮಷ್ಟಿಯ ಈ ನಮ್ಮ ಎನ್ನುವ ಭಾವನೆ ರಕ್ತಗತವಾಗಿರುವುದೇ ಈ ಸನಾತನ ಯೋಗ ಧರ್ಮದಿಂದ ಎನ್ನಬೇಕು. ವಿಶ್ವಕ್ಕೆ ಶಾಂತಿ ಮಂತ್ರವನ್ನು ತೋರಿಸಿಕೊಟ್ಟ ಭಾರತ. ಯಾರೋ ಒಬ್ಬ ಮಹನಿಯರು ಹೇಳಿದ್ದು, ಭಾ ಎಂದರೆ ಬೆಳಕು ರತಿ ಎಂದರೆ ಆಸಕ್ತಿ. ಬೆಳಕಿನಲ್ಲಿ ಆಸಕ್ತನಾಗಿ ಜಗತ್ತಿಗೆ ಜ್ಯೋತಿಯ ಬೆಳಕನ್ನು ತೋರಿಸಿದ ದೇಶವೇ ಭಾರತ. ಇದು ಭಾರತಕ್ಕೆ ಗುರುತ್ವ ವನ್ನು ಕಲ್ಪಿಸಿದೆ. ಗುರುತ್ವ ಎಂದರೆ ಗಮನ, ದರ್ಶನದ ಸ್ಥಾನ. ಇದು ಯಾವುದೋ ವ್ಯಕ್ತಿಗೆ ಸಂಭಂದಿಸಿ ಹೇಳಿದುದಲ್ಲ. ಇಲ್ಲಿ ಹುಟ್ಟಿದ ಮಹನೀಯರೆಲ್ಲ ಈ ಸ್ಥಾನಕ್ಕೆ ಗೌರವವನ್ನು ಕೊಡುವಲ್ಲಿ ಪ್ರಯತ್ನಿಸಿದ್ದಾರೆ. 

ವಿಶ್ವ ಗುರು ಎಂದು ಯಾವುದೋ ವ್ಯಕ್ತಿಯನ್ನು ಅಭಿಮಾನದಿಂದ ಕರೆಯಬಹುದು. ಆದರೆ ಆ ವ್ಯಕ್ತಿ ಎಂದಿಗೂ ಇದನ್ನು ಪ್ರತಿಪಾದಿಸಲಿಲ್ಲ.  ಯಾರದೋ ಅಭಿಮಾನ ಈಬಗೆಯಲ್ಲಿ ವ್ಯಕ್ತವಾಗುತ್ತದೆ.  ಅದು ಆ ಗುರುತ್ವವನ್ನು ಹೃಸ್ವ ಮಾಡಿ ಸಣ್ಣದಾಗಿಸುತ್ತದೆ. ವ್ಯಕ್ತಿಯೊಬ್ಬನಿಂದ ಸಮಷ್ಟಿಯಾಗುವುದಿಲ್ಲ. ನಾವು ನಮ್ಮದು ಎಂದಾಗಲೇ ಶಿಷ್ಯ ಗುರುವಿನ ಸಂಭಂಧ ಏರ್ಪಡುತ್ತದೆ. ಅದು ಭಾರತೀಯತೆ. ಗುಡ್ಡದಲ್ಲಿ ಯಾವುದೋ ಭಾಗದಲ್ಲಿ ಎರಡು ಹೆಗ್ಗಣ ಇದೆ ಎಂದು ಗುಡ್ಡವನ್ನೇ ಜರಿಯುವುದಲ್ಲ. ಇಂದು ಧರ್ಮದ ಅರಿವಿಲ್ಲದೇ ಅದನ್ನು ಜರಿಯುತ್ತಾರೆ. ತಮಗೆ ತಿಳಿಯಲಾಗದ ಹಪಹಪಿಕೆ, ಮತ್ತು ತಮ್ಮ ಅಸಮರ್ಥತೆಗೆ ಇಡೀ ಧರ್ಮವನ್ನು ದೂರುವುದು ಅಜ್ಞಾನದ ಸಂಕೇತ. ಹಾಗಾಗಿಯೇ ನಂಬುವ ನಮಗು ನಂಬದೇ ಇರುವ ಪಾಮರನಿಗೂ ಬುದ್ದಿ ಜ್ಞಾನವನ್ನು ಕರುಣಿಸು ಅಂತ ಧಿಯೋಯೋನಃ ಪ್ರಚೋದಯಾತ್ ಅಂತ ಬೇಡಿಕೊಳ್ಳುವುದು. ಹಾಗಾಗಿಯೇ ಹಿಂದು ಧರ್ಮ ವಿರೋಧಿಗಳನ್ನು ಹೊಟ್ಟೆಯಲ್ಲಿಟ್ಟು ಪೋಷಿಸಿದಂತೆ ಬೇರೆಯಾವ ಧರ್ಮವೂ ವಿರೋಧಿಗಳನ್ನುಇರಿಸಿಕೊಳ್ಳುವುದಿಲ್ಲ. ಯಾವುದೇ ಧರ್ಮವನ್ನು ಇಲ್ಲಿ ಕೀಳಾಗಿ ಕಾಣುವುದಿಲ್ಲ. ನಮ್ಮ ಧರ್ಮವೂ ಪರಧರ್ಮವೂ ಬೆಳೆಯಲಿ. ಭಗವಂತನನ್ನು ಆರಾಧಿಸುವ ಮತ್ತು ಆರಾಧಿಸದೇ ಇರುವ ಎಲ್ಲರೂ ಇಲ್ಲಿ ಸಮಾನರು. ಭಾರತ ಸಾರುವು ವಸುಧೈವ ಕುಟುಂಬಕಂ ತತ್ವವೇ ಇದು. 

Thursday, July 30, 2026

ವಿದ್ಯಾ ವಜನ !


ಗ್ರಾಮೀಣ  ಪ್ರದೇಶದಲ್ಲಿ ಒಂದು ದಿನ ಬ್ಯಾಂಕ್ ಲೆಕ್ಕ ಪರಿಶೋಧನೆ (Audit) ಗೆ ಹೋಗಿದ್ದೆ. ಅಲ್ಲಿ ಒಬ್ಬ ಗ್ರಾಹಕ ಬಹಳ ಧನಿಕ. ಆಗಾಗ  ಹತ್ತು ಬೆರಳಿಗೆ ವಜ್ರದ ಉಂಗುರ, ಕೊರಳಿಗೆ ಚಿನ್ನದ ನಾಯಿ ಸಂಕೊಲೆ ಧರಿಸಿ ಬರುತ್ತಿದ್ದ.  ಅತ್ಯಂತ ಪ್ರತಿಷ್ಠಿತ ವ್ಯಕ್ತಿ ಕಾಣಬೇಕು. ಬಿಳಿ ಬಿಳಿ ಖಾದಿ  ವಸ್ತ್ರ ತೊಟ್ಟವನು, ಮಲಯಾಳಂ ನಲ್ಲಿ ಹೇಳುವಂತೆ ವೆಳ್ಳಿ ಮೂಂಗ  ಅಂದರೆ ಬಿಳಿ ಗೂಬೆ, ಈತ ಒಂದು ರಾಜಕೀಯ ವ್ಯಕ್ತಿ. ಯಾವಾಗಲೂ ಒಂದಿಬ್ಬರು ಜತೆಗೆ ಇರುತ್ತಿದ್ದರು. ಅದಿನ ಆತ ಒಬ್ಬನೇ ಬಂದಿದ್ದ. ಆತನಿಗೆ ದೊಡ್ಡ ಮೊತ್ತದ ನಗದು ಹಣ ಬ್ಯಾಂಕ್ ನಿಂದ ತೆಗೆದುಕೊಳ್ಳುವುದಿತ್ತು. ಮ್ಯಾನೇಜರ್ ಗೆ ಮೊದಲೇ ಕರೆ ಮಾಡಿ ಹೇಳಿರ ಬೇಕು. ಬ್ಯಾಂಕ್ ನಲ್ಲಿ ದೊಡ್ಡ ಮೊತ್ತದ ಹಣ ಇಲ್ಲದೇ ಇದ್ದರೆ ದೊಡ್ಡ ಮೊತ್ತದ ಹಣ ತೆಗೆದುಕೊಳ್ಳುವಾಗ ಮೊದಲೇ ತಿಳಿಸಿರಬೇಕಾಗುತ್ತದೆ. ಹಲವು ಸಲ ಹತ್ತಿರದ ಶಾಖೆಯಿಂದ ಇವುಗಳನ್ನು ವ್ಯವಸ್ಥೆ ಮಾಡುತ್ತಾರೆ.  ಆದಿನ ಬಂದವನಿಗೆ ಚೆಕ್ ಬರೆಯಬೇಕಿತ್ತು. ಹಲವು ಸಲ ಇಂತಹ ವ್ಯಕ್ತಿಗಳಿಗೆ ಸಹಿ ಬಿಟ್ಟು ಇನ್ನೇನು ಬರೆಯುವುದಕ್ಕೆ ಬರುವುದಿಲ್ಲವೋ ಇಲ್ಲ, ಹಾಗೆ ಬರೆಯುವುದು ಪ್ರತಿಷ್ಠೆಗೆ ತೊಂದರೆಯೋ ಗೊತ್ತಿಲ್ಲ. ದೊಡ್ಡ ಮೊತ್ತದ ಚೆಕ್ ಬರೆಯಬೇಕಿತ್ತು. ಬ್ಯಾಂಕ್ ಸಿಬ್ಬಂದಿ ಬರೆಯಬಾರದು. ಮಾತ್ರವಲ್ಲ ಆದಿನ ಸಿಬ್ಬಂದಿಗಳ ಸಂಖ್ಯೆ ತೀವ್ರವಾಗಿ ಕಡಿಮೆ ಇತ್ತು. ಮ್ಯಾನೆಜರ್, ಒಬ್ಬರು ಗುಮಾಸ್ತ ಕ್ಯಾಶಿಯರ್ ಮತ್ತೆ ಜವಾನ ಬಿಟ್ಟರೆ ಯಾರೂ ಇರಲಿಲ್ಲ. ಹಾಗಾಗಿ ಇದ್ದ ಸಿಬ್ಬಂದಿಗಳಿಗೆ ತುರಿಸುವುದಕ್ಕೂ ಸಮಯ ಇಲ್ಲದ ಸ್ಥಿತಿ.  


ಸರಿ ನಾನು ಬ್ಯಾಂಕ್ ಕೌಂಟರ್ ಹತ್ತಿರವೇ ಕಂಪ್ಯೂಟರ್ ನಲ್ಲಿ ಏನೋ ಪರಿಶೋಧನೆಯಲ್ಲಿದ್ದೆ. ಆತ ನನ್ನಲ್ಲಿ ಬಂದು ಬರೆದು ಕೊಡುವಂತೆ ಕೇಳಿದ. ನನಗೂ ಮುಖ್ಯವಾಗಿ ಸಮಯ ಇರಲಿಲ್ಲ. ಬ್ಯಾಂಕ್ ಆಡಿಟ್ ಗೆ ಹೋದಾಗ ಈ ರೀತಿ ಹಲವರು ಕೇಳಿಕೊಂಡು ಬರುವುದುಂಟು. ನಮ್ಮಲ್ಲಿ ಎಷ್ಟು ವಿದ್ಯಾವಂತರಿಗೂ ಕೆಲವರಿಗೆ ಈ ಬಾಂಕ್ ಚಲನ್ ಅಥವಾ ಚೆಕ್ ತುಂಬಿಸುವುದಕ್ಕೆ ಬರುವುದಿಲ್ಲ.  ಚಲನ್ ಬರೆಯುವಾಗ ಹಲವಾರು ತಪ್ಪುಗಳು, ಕೆಲವೊಮ್ಮೆ ಒಂದರಡು ಚಲನ್ ವ್ಯರ್ಥವಾಗುವುದು ಸರ್ವೇ ಸಾಮಾನ್ಯ. ಇಂತಹ ಪ್ರಾಥಮಿಕ ಅರಿವಿಲ್ಲದಿರುವ ವಿದ್ಯಾವಂತರು ಇದ್ದಾರೆ. ಈಗೀಗ ಈ ಚಲನ್ ಬರೆಯುವ ವ್ಯವವಾರ ಕಡಿಮೆಯಾಗಿದೆ. ಹೋಗಲಿ,  ಬ್ಯಾಂಕ್ ಆಡಿಟ್ ಗೆ ಹೋದಾಗ ಹೀಗೆ ಕೇಳಿದರೆ ನಾನು ಬರೆದುಕೊಡುವುದಕ್ಕೆ ಒಪ್ಪುವುದಿಲ್ಲ. ನನ್ನ ಪ್ರಕಾರ ಅದು ನಮ್ಮ ವೃತ್ತಿಗೆ ಸರಿ ಹೊಂದುವುದಿಲ್ಲ. ಇಲ್ಲ ಸರ್ ನಾನು ಬರೆಯಬಾರದು ಎಂದು ನಾನು ನಯವಾಗಿ ತಿರಸ್ಕರಿಸಿದೆ, ನನಗೂ ಈ ರಾಜಕೀಯ  ಬಿಳಿ ಮರಿಗಳು ಅಷ್ಟಕ್ಕಷ್ಟೇ. ಕೊನೆಗೆ ಆತ ನನ್ನ ಪಕ್ಕವೇ ಕುಳಿತು ನನ್ನಲ್ಲಿ ಕೇಳಿ ಬರೆಯುವುದಕ್ಕೆ ತೊಡಗಿದ.   ಬೆಲೆ ಬಾಳುವ ಪೆನ್ನು ಇತ್ತು. ಆದರೆ ಆತನಿಗೆ ಬರೆಯುವಾಗ ಕೈ ಕಂಪಿಸುತ್ತಿತ್ತು. ಪೆನ್ನು ಯಾವ ಕಾರಣಕ್ಕೆ ಇಟ್ಟುಕೊಂಡಿದ್ದಾನೋ ಅಂತ ಅನಿಸಿತು. ಎರಡು ಕೋಟಿ ದೊಡ್ಡ ಮೊತ್ತದ ಹಣ ಪಡೆಯಬೇಕಿತ್ತು. ನಾನು ಹೇಳುತ್ತಾ ಹೋದೆ ದಿನಾಂಕ, ನಂತರ ಹಣ ಪಡೆಯುವಾತನ ಜಾಗದಲ್ಲಿ ಬರೆಯಬೇಕಾದನ್ನು ಹೇಳಿದೆ. ಎರಡು ಕೋಟಿ ಸಂಖ್ಯೆಯನ್ನು ಬರೆಯುವುದಕ್ಕೆ ಹೇಳಿದೆ. ಪುಣ್ಯಾತ್ಮನಿಗೆ ಕೋಟಿಯಲ್ಲಿ ಎಷ್ಟು ಸೊನ್ನೆ ಇದೆ ಅಂತ ಗೊತ್ತಿಲ್ಲ. ಎರಡು ಕೋಟಿಯ ಬದಲು ಇಪ್ಪತ್ತು ಲಕ್ಷ ಬರೆದಿದ್ದ! ಅಷ್ಟಾದ ಮೇಲೆ ಅಕ್ಷರದಲ್ಲಿ ಬರೆಯಬೇಕಾದರೂ ಒದ್ದಾಡಿದ. ಒಂದು ಚೆಕ್  ವ್ಯರ್ಥವಾಗಿ ಪುನಃ ಬರೆಯಬೇಕಾಯಿತು. ಕೊನೇಗೆ ಯಾರೂ ಓದಲಾಗದ ಸಹಿಯನ್ನು ಗೀಚುವುದಕ್ಕೆ ಅದು ಹೇಗೋ ಕಲಿತಿದ್ದ.  ತಮ್ಮಲ್ಲಿರುವ ಸಂಪತ್ತಿನ ಮೌಲ್ಯ ತಿಳಿಯದೇ ಇದ್ದರೆ ಆ ಸಂಪತ್ತಿಗೆ ಬೆಲೆಯೇ ಇಲ್ಲ. ನಾಯಿ ಕೊರಳಿಗೆ ಚಿನ್ನದ ಸಂಕಲೆ ಹಾಕಿ ಕಟ್ಟಿದರೂ ಅದಕ್ಕೆ ಅದು ಕೇವಲ ಸಂಕಲೆ. ಮತ್ತು ಕೇವಲ ಒಂದು ಬಂಧನ. 

ಇಂತಹ ವ್ಯಕ್ತಿಗಳಿಗೆ ಮೈತುಂಬ ಚಿನ್ನ ಇರುತ್ತದೆ. ಬೆಲೆ ಬಾಳುವ ಪೆನ್ನು ಮೊಬೈಲ್  ವಾಚು ಉಡುಪು ಚಪ್ಪಲಿ ಎಲ್ಲಾ ಇರುತ್ತದೆ. ಅದು ಭಾರವಾಗುವುದಿಲ್ಲ. ಅದರೆ ಇವರಿಗೆ ತಲೆಯಲ್ಲಿ ವಿದ್ಯೆಯ ವಜನ್ ಅಂದರೆ ಭಾರ ಇರುವುದಿಲ್ಲ. ಅಷ್ಟಾಗಿ ಈತ ರಾಜಕೀಯ ಗಣ್ಯವ್ಯಕ್ತಿ. ಬಹುಶಃ ಪಂಚಾಯತ್ ಸದಸ್ಯನೋ ಅಧ್ಯಕ್ಷನೋ ಏನೋ ಆಗಿರಬೇಕು. ಯಾರಿಗೆ ಗೊತ್ತು, ಮುಂದೆ ಈತ ಶಿಕ್ಷಣ ಮಂತ್ರಿಯೂ ಆಗಬಹುದು. ಇಲ್ಲ ಮುಖ್ಯಮಂತ್ರಿ ಅಥವಾ ಪ್ರಧಾನಿಯೂ ಆಗಬಹುದು. ನಮ್ಮ ಭಾರತವಲ್ಲವೇ?  ಇವರಿಗೆ ವಿದ್ಯೆಯ ಭಾರ ತಾಳಿಕೊಳ್ಳುವುದು ಕಷ್ಟವಾಗುತ್ತದೆ. ಕೊನೆ ಪಕ್ಷ ವಿದ್ಯೆಗೆ ಬೆಲೆಕೊಡುವ ಮನೋಭಾವವೂ ಇರುವುದಿಲ್ಲ. ವಿದ್ಯಾವಂತರನ್ನು ಕಂಡರೂ ಸಹಿಸುವುದಕ್ಕೆ ಕಷ್ಟವಾಗುತ್ತದೆ. ನಮ್ಮಲ್ಲಿರುವ ಸೊತ್ತಿನ  ಬೆಲೆ ನಮಗೆ ತಿಳಿಯದೇ ಇದ್ದರೆ ಆ ಸೊತ್ತು ಇದ್ದೇನು ಪ್ರಯೋಜನ. ಸುಂದರವಾದ ಹೆಣ್ಣು ಪತ್ನಿ ಇದ್ದರೂ ಧೂಮ ಪಾನ ಮದ್ಯಪಾನದ ವ್ಯಸನದಲ್ಲಿ ಸುಂದರ ಹೆಂಡತಿ ಕೂಡ ಕೇವಲ ಹೆಸರಿಗಷ್ಟೆ ಆಗಿ ಇದ್ದಂತೆ. 


Wednesday, July 22, 2026

ದ್ವೈತ ಅದ್ವೈತ





 

ದ್ವೈತ ಅದ್ವೈತ ಚರ್ಚೆ ಅಥವಾ ಸಂವಾವಾದರೆ ‌ನಮ್ಮಂತಹವರು ಒಂದಷ್ಟು ವಿಷಯ ಸಂಗ್ರಹ ಮಾಡಿಕೊಳ್ಳಬಹುದು. ಆದರೆ ಇದು ಚರ್ಚೆಯಲ್ಲ, ಸಂಘರ್ಷ.‌ಅಷ್ಟೇ ಅಲ್ಲ ಒಂದು ಯುದ್ದ. ಬಹುಶಃ ನಮ್ಮ ಧರ್ಮದ ದೇವತೆ ಮಹಾಭಾರತದ ಭೀಷ್ಮನಂತೆ ಕಣ್ಣೀರು ಸುರಿಸಬಹುದು. ಆದರೆ ಇದನ್ನು ಅರ್ಥಮಾಡುವ ಮತ್ತು ಕಾಣುವ ಮನಸ್ಸು ಮಾತ್ರ ಇಲ್ಲವೇ ಇಲ್ಲ.



ಹಿಂದೂ ಧರ್ಮದಲ್ಲಿ ಹಲವಾರು ಪಂಗಡಗಳು ವರ್ಣಗಳು ಇವೆ. ಹಲವು ಜನನ  ಸಂಸ್ಕಾರಗಳು ಇವೆ. ಹೊರನೋಟಕ್ಕೆ ಎಲ್ಲವೂ ವಿಭಿನ್ನ ವೈರುಧ್ಯ. ಆದರೆ ವಿವೇಚನೆ ಇದ್ದರೆ ಇದರ ಸಾರ ಗ್ರಹಿಸಿ ಅರ್ಥವಿಸುವುದಕ್ಕೆ ಸಾಧ್ಯ. ಹಿಂದೂ ಧರ್ಮ‌ ಅಂತ ಅಲ್ಲ,  ಎಲ್ಲಾ ಧರ್ಮಕ್ಕೂ ಇದು ಅನ್ವಯ, ಆದರೆ ಹಿಂದೂ ಧರ್ಮ‌ ಇದನ್ನು ಚೆನ್ನಾಗಿ ಅಳವಡಿಸಿಕೊಂಡಿದೆ.‌ ಆದರೆ ಇದನ್ನು ಅರ್ಥ ಮಾಡುವುದರಲ್ಲಿ ನಾವು ವಿಫಲಾರಾಗಿದ್ದೇವೆ. ಆದರ ಕಾರಣವೇ ಈ ಸಂಘರ್ಷ.  ನಾವು ತತ್ವವನ್ನು ಆಯುಷ್ಯ ಪೂರ್ಣ ಆಧ್ಯಯನ‌ಮಾಡುತ್ತೇವೆ. ಆದರೆ ನೀತಿಯನ್ನು ಒಂದಿಷ್ಟೂ ತಿಳಿಯುವುದಕ್ಕೆ ಹೋಗುವುದಿಲ್ಲ.  ತತ್ವಕ್ಕಿಂತಲೂ‌ ನೀತಿ ಬಹಳ ಸರಳವಾಗಿರುತ್ತದೆ. ನಾವು ಸಮಷ್ಟಿಯಲ್ಲಿ ಯೋಚಿಸುವುದರಲ್ಲಿ ಎಡವಿಬಿಡುತ್ತೇವೆ. 


ಧರ್ಮದ ಚಿಂತನೆಯನ್ನು ನಾವು ಅರ್ಥವಿಸುವುದರಲ್ಲಿ ಎಡವಿದ್ದೇವೆ. ಆದರೆ ನೀತಿಯನ್ನಾದರೂ ಮನುಷ್ಯನಾಗಿ ಅರಿಯಬೇಕು. ಧರ್ಮದ ನೀತಿ ಬಹಳ ಸರವಾಗಿರುತ್ತದೆ.  ದೊಡ್ಡದಾದ ಕಲ್ಲೊಂದನ್ನು ಅಥವಾ ದೇವರ ವಿಗ್ರಹವನ್ನು ಎತ್ತ ಬೇಕಿದ್ದರೆ ಒಂದೇ ಕೈಯಲ್ಲಿ ಸಾಧ್ಯವಾಗದೇ ಇರುವಾಗ ಮತ್ತೊಂದು ಕೈಯಿಂದ ಎತ್ತಿಬಿಡುತ್ತೇವೆ.  ಕಲ್ಲು ವಿಗ್ರಹ ಎತ್ತಬೇಕಿದ್ದರೆ ಎರಡೂ ಕೈ ಪರಸ್ಪರ ವಿರುದ್ದ ದಿಕ್ಕಿನಿಂದಲೇ ಕಲ್ಲಿನ ಹತ್ತಿರ ಬರಬೇಕು. ಎರಡು ಕೈಗಳು ವಿರುದ್ಧ ದಿಕ್ಕಿನಿಂದ ಹತ್ತಿರ ಬಂದು ಎತ್ತುವುದು ಒಂದೇ ಬಂಡೆಯನ್ನು, ಅದೇ ರೀತಿ ಹೆಬ್ಬೆರಳು ತೋರು ಬೆರಳು ಒಟ್ಟು ಎರಡೂ ಬೆರಳು ಒಟ್ಟು ಸೇರಿ ಒಂದೇ ವಸ್ತುವನ್ನು ಎತ್ತಿಬಿಡುತ್ತವೆ. ಅದೇ ರೀತಿ ಎರಡು ಧರ್ಮಗಳು ಅಥವಾ ಎರಡು ಪಂಗಡಗಳು ಒಟ್ಟು ವಿರುದ್ದ ದಿಕ್ಕಿನಿಂದ ಬಂದು ಒಂದೇ ಭಗವಂತನ್ನು ಸೇರಿಬಿಡುತ್ತದೆ. ವಿವಿಧ ಶಾಖೆಗಳ ಸಾರವಿದು. 


ಹಲವು ಶಾಖೆಗಳು, ಅದರಲ್ಲಿ ಒಂದು ಬ್ರಾಹ್ಮಣರು, ಅದಕ್ಕೂ ಮತ್ತೂ ಒಂದಷ್ಟು ಶಾಖೆಗಳು. ಎಲ್ಲಾ ಶಾಖೆಗಳು ಒಂದೇ ಗಾಯತ್ರಿಯನ್ನು ಪಠಿಸುವುದು. ದೇವರು ರೂಪ ಹಲವು ಮಂತ್ರಗಳು ಹಲವು. ಅದರೆ ಮೂಲ ಸ್ವರೂಪ ಒಂದೇ. ಬ್ರಾಹ್ಮಣರಲ್ಲೆ ಸ್ಮಾರ್ತರು ವೈಷ್ಣವರು..ಹೀಗೆ..ನಿಜಕ್ಕಾದರೆ ಇದರ ಅರ್ಥ ತಿಳಿದು ವ್ಯವಹರಿಸುವವರು ನಿಜವಾದ ಬ್ರಾಹ್ಮಣ. ಸ್ಮೃತಿ ಶಾಸ್ತ್ರದಲ್ಲಿ ಹೇಳಿದಂತೆ ಅನುಸರಿಸಿ ನಡೆಯುವವರೆಲ್ಲರೂ ಯಾವ ಬ್ರಾಹ್ಮಣ ಪಂಗಡವಾದರೂ ಅದು ಸ್ಮಾರ್ತ. ಆದರೆ ನಮಗೆ ಸಮಷ್ಠಿಯಲ್ಲಿ ಸ್ವೀಕರಿಸುವುದು ಕಷ್ಟವಾಗುತ್ತದೆ. ಹೇಗೆ ಬೇಕೋ ಹಾಗೆ ವಿಭಾಗಿಸಿಬಿಡುತ್ತೇವೆ. ಹೋಗಲಿ ವಿಭಾಗಿಸಿದರೂ ಭಾವದಲ್ಲಿ ಒಂದಾಗಿರಬೇಕು. ಎಲ್ಲವನ್ನೂ ಸೇರಿಸಿ ತುತ್ತು ತುತ್ತು ಉಂಡರೂ ಎಲ್ಲವೂ  ಒಂದೇ ಹೊಟ್ಟೆಗೆ ಸೇರುವಂತೆ. ಗಮ್ಯದಲ್ಲಿ ಎಲ್ಲವೂ ಒಂದಾಗಿಬಿಡುತ್ತವೆ. ಕರಗಿ ಸಾರ ದೇಹಕ್ಕೆ ಸೇರಿಬಿಡುತ್ತದೆ. ಯಾವ ಶಾಸ್ತ್ರದಲ್ಲಿ ಮದುವೆಯಾದರೂ ಗಂಡು ಹೆಣ್ಣು ಒಂದಾಗಿ ಸಂಸಾರವಾದಂತೆ ಈ ಸಾರ ಅರ್ಥವಿಸಿಕೊಳ್ಳಬೇಕು. 


ಹಿಂದೂ ಧರ್ಮದಲ್ಲಿ ಹಲವು ಜಾತಿ ಪಂಗಡಗಳಿರಬಹುದು. ಯೋಚಿಸಿ ನೋಡಬೇಕು. ಒಂದೇ ಜಾತಿಯಲ್ಲಾದರೂ ಏಕಮತದ ಸಾಮರಸ್ಯ ಇರಬೇಕು. ಆದರೆ ಒಂದು ಮಠದವರನ್ನು ಕಂಡರೆ ಮತ್ತೊಂದು ಮಠಕ್ಕೆ ಮತ್ಸರ. ದ್ವೈತವೋ ಅದ್ವೈತವೋ ಮೊದಲು ಅಂತರಂಗದಲ್ಲಿ ಒಂದಾಗಬೇಕು. ಅದಲ್ಲವಾದರೆ ಶಾಖೆ ಉಪಶಾಖೆಗಳು ಹುಟ್ಟಿಕೊಂಡರೂ ಮರಕ್ಕೆ ಅದು ಭಾರ. ಯಾರಿಗೋ ತೊಂದರೆ. ಕೊನೆಗೆ ಆ ಶಾಖೆಯನ್ನು ತುಂಡರಿಸಬೇಕು. ಇಲ್ಲವಾದರೆ ಮರಕ್ಕೆ ಉಳಿಗಾಲವಿಲ್ಲ. ಬಿರುಗಾಳಿಯ ಧಾಳಿಗೆ ಬುಡಸಹಿತ ಧರೆಗೆ ಮರ ಉರುಳಬಹುದು. 


ಒಂದು ಮನೆಯೊಳಗೆ ಅಥವಾ ಕುಟುಂಬದೊಳಗೆ ನಮಗೆ ಹತ್ತಿರದವರಲ್ಲಿ ಏನೋ ಒಂದು ದೌರ್ಬಲ್ಯ  ಕುಂದು ಕೊರತೆ ಇರಬಹುದು.  ಆದರೆ ಅದನ್ನು ನಾವು ಹೇಳದೇ ಇರಬಹುದು.  ಹೇಳಿಯೇ ತೀರುವ ಅನಿವಾರ್ಯತೆ ಇಲ್ಲ. ಆದರೂ ಅವರ ದೌರ್ಬಲ್ಯವನ್ನು ಆ ಕುಂದು ಕೊರತೆಯನ್ನು  ಹೇಳುವ ಉದ್ದೇಶ ಒಂದೇ ಸಂಘರ್ಷ. ನಮಗೆ  ಅವರಲ್ಲಿ ಸರಿ ಹೋಗುವುದಿಲ್ಲ ಎಂಬ ಭಾವನೆಯೇ ಅಧಿಕವಾಗಿರುತ್ತದೆ. ಮನಸ್ಸಿನಲ್ಲಿ ಹೀಗೆ ವೈಷಮ್ಯವಿದ್ದರೆ ಯಾವ ಸಮಷ್ಟಿಯ ಚಿಂತನೆಯೂ ಹತ್ತಿರ ಸುಳಿಯಲಾರದು. ಯರದೊ ತಪ್ಪು ದೌರ್ಬಲ್ಯಗಳನ್ನು ಅವರಿಗೆ ನೋವಾಗಬಹುದು ಎಂದು ತಿಳಿದೂ ಹೇಳುವುದರಿಂದ ಉದ್ದೇಶ ಒಂದೇ ಅವರಿಗೆ ನೋವು ಕೊಡಬೇಕು. ಪರೋಕ್ಷವಾಗಿ ದ್ವೇಷ  ವೈಷಮ್ಯ ಸಾಧನೆಯಾಗಬೇಕು. ಈ ಭಾವನೆಯಲ್ಲಿ ಎರಡು ಕೈಗಳು ವಿರುದ್ಧದಿಕ್ಕಿನಿಂದಲು ಒಂದಾಗದು. ಎತ್ತಬೇಕಾದ ಕಲ್ಲು ಅಲ್ಲೇ ಬಿದ್ದಿರುತ್ತದೆ.  ಯಾರೋ ಯಾವುದೋ ಕಾಲದಲ್ಲಿ ಹೇಳಿದರು ಅಥವ ಬರೆದರು ಎಂದುಕೊಂಡು ಪ್ರಸ್ತುತ ಅದನ್ನು ಹೇಳುವುದರಿಂದ ಏನಾದರೂ ಜೀವನಕ್ಕೆ ಲಾಭ ಇರಬೇಕಲ್ಲ. ಅದು ಹೇಳದೇ ಇದ್ದರೆ ಜೀವನ ಸಾಗದೇ ಉಳಿದುಕೊಂಡಿಲ್ಲ. ಆ ಕಾಲದಲ್ಲಿ ನಮ್ಮ ಅಸ್ತಿತ್ವವೇ ಇರುವುದಿಲ್ಲ ಎಂದಿರುವಾಗ ಏನಿದ್ದರು ತರ್ಕ ಊಹೆಗೆ ನಿರ್ಣಯ ಅವಲಂಬಿಸುತ್ತದೆ. ಯಾಕೆಂದರೆ ಆಗ ನಾವು ಬಿಟ್ಟು ನಮ್ಮ ಹಿರಿಯರಿಂದ ಹಿರಿಯರು ಜೀವಿಸಿರುವುದಿಲ್ಲ. ಹಾಗಿರುವಾಗ ಅದನ್ನು ಉಲ್ಲೇಖಿಸಿ ಆಗಬೇಕಾದದ್ದು ಒಂದೇ ಅಸಮಾಧಾನ ದ್ವೇಷ ಸಾಧನೆ.  ಹಲವು ಸಲ ಕಳೆದು ಹೋದ ಘಟನೆ ನಮಗೆ ಹಿತವಲ್ಲದೇ ಇರುವುದನ್ನು ನಾವು ಪ್ರಸ್ತುತ ಬದುಕಿನ ಕ್ಷೇಮಕ್ಕೋಸ್ಕರ ಮರೆಯುತ್ತೇವೆ.


ಪರಧರ್ಮವನ್ನು ನಿಂದಿಸುವುದು ಇಂದು ಮೊದಲಲ್ಲ. ಮೊದಲಿನಿಂದಲೂ ಅದು ಎಲ್ಲೋ ಒಂದು ಕಡೆ ನಿರಂತರವಾಗಿ ನಡೆಯುತ್ತಿತ್ತು. ಆಗ ಅದು ಸಾರ್ವಜನಿಕವಾಗಿ ಅರಿವಿಗೆ ಬರುತ್ತಿರಲಿಲ್ಲ. ಯಾರೋ ಒಬ್ಬ ಅರಸನೋ ಮಹನೀಯನೋ ಹೇಳಿದರೂ ಯಾರೋ ಅದನ್ನು ದಾಖಲೀಕರಣ ಮಾಡಿದ್ದರೆ ಕೆಲವರಿಗಾದರೂ ತಿಳಿದು ಬಿಡುತ್ತಿತ್ತು. ಈಗ ಹಾಗಿಲ್ಲ. ಕನಿಷ್ಠ ಒಬ್ಬ ಹುಲು ಮಾನವ ಹೇಳಿದರೂ ಅದು ಸಾರ್ವಜನಿಕ ಜಗತ್ತಿಗೆ ಪ್ರಕಟವಾಗುತ್ತದೆ. ನಾವು ಯಾರನ್ನೋ ವ್ಯಕ್ತಿಗತವಾಗಿ, ಇಲ್ಲ ಧರ್ಮ ಜಾತಿಯಿಂದಲೋ ನಿಂದನೆ ಮಾಡಿದರೆ ಈಗಿನ ಸಾಮಾಜಿಕ ಜಾಲತಾಣದಿಂದ ಮರುಕ್ಷಣವೇ ತಿಳಿದುಬಿಡುತ್ತದೆ. ಯಾವುದೊ ಮಠ ದೇವಾಲಯದ ಗೋಪುರದಲ್ಲಿ ಕುಳಿತು ಏನೋ ಹೇಳಿದ ಎಂದರೂ ಮೊದಲು ಅಲ್ಲೇ ಅದು ಕರಗಿ ಹೋಗುತ್ತಿತ್ತು. ಈಗ ಹಾಗಿಲ್ಲ ಜಾಲತಾಣದಿಂದ ಅದು ಹೊಸ ಚಿಗುರು ಹೊಡೆದು ಹೆಮ್ಮರವಾಗಿ ಬೆಳೆದು ಬಿಡುತ್ತದೆ. ಹಾಗಾಗ ಪರನಿಂದೆ ದೂಷಣೆ ಮಾಡುವಾಗ ಎಚ್ಚರವಿರಬೇಕು. ಇದರ ಅರಿದ್ದೂ ಮಾಡಿದರೂ ಅದರ ಉದ್ದೇಶ ಒಂದೇ ಪರರನ್ನು ನೋಯಿಸುವುದು. ಪರರನ್ನು ನೋಯಿಸಿ ಆ ಹಿಂಸೆಯ ತಳಹದಿಯಲ್ಲಿ ನಮ್ಮ ಧರ್ಮ ಜಾಗೃತವಾಗಬೇಕೆ? ಅದರ ಅನಿವಾರ್ಯ ಯಾವುದೇ ಧರ್ಮಕ್ಕಿಲ್ಲ. 

ಭಜಗೋವಿಂದಂ ಅಂತ ಸಾರಿದ ಶಂಕರ ಭಗವತ್ಪಾದರು ಹೇಳಿದ್ದು ಒಂದನ್ನೆ ಎಲ್ಲವನ್ನು ಬಿಡು ಗೋವಿಂದನನ್ನು ಭಜಿಸು. ಈ ಗೋವಿಂದ ನನಗು ನಿನಗೂ ಎಲ್ಲರಿಗೂ ಒಂದೆ. ಯಾವುದೇ ಧರ್ಮವನ್ನೂ ಕೀಳಾಗಿ ಕಾಣಬೇಡ.  ನಿನ್ನ ಧರ್ಮವನ್ನು ಅನುಸರಿಸು, ನಿನ್ನ ಕರ್ಮವನ್ನು ಮಾಡು. ಕರ್ತವ್ಯಭ್ರಷ್ಟನಾಗಬೇಡ. ಅಮೂಲ್ಯ ವಾದ ವೇದ ಮಂತ್ರಗಳು ಆಗಮ ಶಾಸ್ತ್ರಗಳು ನಮ್ಮ ಮುಂದೆ ಇದೆ. ಆದರೆ ಅದನ್ನು ಅರಿಯುವುದರಲ್ಲಿ ನಾವು ಸೋಲುತ್ತಿವೆ. ಒಂದು ವೇಳಿ ಅರಿತಿದ್ದರೆ ಈ ಸಂಘರ್ಷವೇ ಇರುತ್ತಿರಲಿಲ್ಲ.

ಕಾನೂನು ನಿಯಮಗಳು ಅನಿವಾರ್ಯವಾಗುವುದು ಜೀವನವೇ ದುರ್ಭರ ಎನಿಸಿದಾಗ. ಆದರೆ ನೀತಿ ಬದುಕಿನಲ್ಲಿ ಪ್ರತಿಕ್ಷಣವೂ ಅನಿವಾರ್ಯವಾಗುತ್ತದೆ. ಕಾನೂನು ನೀತಿ ಎರಡು ವಿಭಿನ್ನ. ನೀತಿ ಮನುಷ್ಯತ್ವದ ತಳಹದಿಯಲ್ಲಿ ನಿರ್ಣಯವಾಗುತ್ತದೆ. ಕಳ್ಳನಾದರೂ ಆತನ ವೃತ್ತಿಯನ್ನು ಕಾನೂನಿನಲ್ಲಿ ಅಪರಾಧ ಎಂದು ಪರಿಗಣಿಸಿದರೂ ನೀತಿಯಿಂದ ವಿವೇಚಿಸುವಾಗ ಆತ ನಿರಪರಾಧಿಯಾಗಬಹುದು. ಹೊಟ್ಟೆ ಪಾಡಿಗೆ ಮಾಡಿದ ಅಪರಾಧ ಕ್ಷಮಿಸಲ್ಪಡುತ್ತದೆ. ಜೀವ ರಕ್ಷಣೆಗೆ ಸುಳ್ಳು ಹೇಳಿದರೂ ನಿಂದಿಸಿದರೂ ನೀತಿಯಿಂದ ಅದು ಅಪರಾಧವಾಗುವುದಿಲ್ಲ. 

ಜೀವರಾಶಿಗಳಲ್ಲಿ ಮನುಷ್ಯನಿಗೆ ಮಾತ್ರ ಭಗವಂತ ಮನಸ್ಸನ್ನು ಕೊಟ್ಟಿರುತ್ತಾನೆ. ಹಾಗಾಗಿಯೇ ಆತ ಮನುಷ್ಯ ಎನಿಸಿಕೊಳ್ಳುತ್ತಾನೆ. ಆದರೆ ಮನುಷ್ಯ ಮನಸ್ಸನ್ನು ಮರೆತರೆ ಆತ ದಾನವನಾಗುತ್ತಾನೆ. ಮನಸ್ಸಿದ್ದವನಿಗೆ ಮಾತ್ರವೇ ಮಾನವೀಯ ಸಂಬಂಧಗಳ ಮೌಲ್ಯ ಅರಿವಾಗುತ್ತದೆ. ದೋಣಿ ಚಲಾಯಿಸುವ ಅಂಬಿಗನಲ್ಲಿ ವಿದ್ವಾಂಸ ತತ್ವ ಶಾಸ್ತ್ರ ಮೀಮಾಂಸೆಯನ್ನು ಕೇಳಿದಂತೆ ಕೊನೆಯಲ್ಲಿ ಅಂಬಿಗ ಕೇಳಿದ ಒಂದು ಪ್ರಶ್ನೆಗೆ ಉತ್ತರ ತಿಳಿಯದೇ ಇದ್ದರೆ, ಎಷ್ಟು ತತ್ವ ಶಾಸ್ತ್ರ ಓದಿದರೇನು ಈಜುವುದಕ್ಕೆ ಬಾರದೇ ಇದ್ದರೆ ಅಂಬಿಗ ಹೇಳುವಂತೆ ಎಲ್ಲವೂ ವ್ಯರ್ಥ. ಮಂತ್ರಾಧೀನಂತು ದೇವತ ಅಂತ ಇದ್ದರೂ ದೇವರು ಒಲಿಯುವುದು ಭಕ್ತಿಗೆ. ವಿದ್ಯಾವಂತ ಅನ್ನಿಸುವುದಕ್ಕಿಂತ ನೀತಿವಂತ ಅನ್ನಿಸುವುದರಲ್ಲಿ ಹೆಚ್ಚು ಶಕ್ತಿ ಇದೆ. 

ಎಲ್ಲಾ ಧರ್ಮಕ್ಕೂ ಇರುವುದು ಒಂದೇ ಗೀತೆ. ಅದು ಭಗವದ್ಗೀತೆ. ಜಾತಿ ಧರ್ಮಾನುಸಾರ ಭಗವದ್ಗೀತೆ  ಎಂದಿಗೂ ಇರುವುದಿಲ್ಲ. ಎಲ್ಲಾ ಧರ್ಮಕ್ಕೂ ಅದು ಅನಿವಾರ್ಯವಾಗಬಹುದು. ಹಾಗಾಗಿ ಪರಧರ್ಮ ನಿಂದನೆ ಯಾವ ಯತಿವರ್ಯರೂ ಹೇಳಲಿಲ್ಲ. ಇದರ ಅರಿವಿದ್ದೂ ಅವರು ನಿಂದಿಸುತ್ತಾರೆ ಎಂದರೆ ಅವರಿಗೆ ಸಹಿಷ್ಟುತೆ ಸೌಹಾರ್ದತೆಯ ಅವಶ್ಯಕತೆ ಇರುವುದಿಲ್ಲ್


Saturday, July 18, 2026

ನಮಗೇನು ಬೇಕಿದೆ?

         ನಮ್ಮಲ್ಲಿ ಜಗತ್ತಿಗೆ ಮಾದರಿಯಾಗುವ ಸಂವಿಧಾನ ಇದೆ. ಆದರೆ ಅದರ ಅರಿವು ಪಾಲನೆ ಅನುಷ್ಠಾನವಿಲ್ಲ. ಮೊನ್ನೆ ನಮ್ಮ‌ಮನೆಯಲ್ಲಿ ಮಗಳೊಂದಿಗೆ ಸ್ವಾರಸ್ಯಕರ ಚರ್ಚೆ ನಡೆಯಿತು, ಇಂದಿನ ಮಕ್ಕಳು ಹೇಳುವಂತೆ ಒಂದು ಪಾಟ್ ಕಾಷ್,.

        ನೀಟ್ ಪರೀಕ್ಷೆಯಲ್ಲಿ ನಡೆದ ಸೋರಿಕೆ ಮತ್ತು ಅದರ ನಂತರದ ದುರಂತಗಳನ್ನು ಪ್ರತಿಭಟಿಸಿ ಯಾರೋ ಒಬ್ಬರು ಉಪವಾಸಕ್ಕೆ ನಿಮ್ಮ ಬೆಂಬಲ ಉಂಟಾ. ನಿಮ್ಮ ಅಭಿಪ್ರಾಯ ಏನು ಅಂತ ಕೇಳಿದಳು. ಮೇಲು ಇದು ಬೆಂಬಲಿಸುವ ವಿ಼ಷಯ. ಹಲವಾರು ಮಕ್ಕಳ ಪ್ರಾಣಕ್ಕೆ ಎರವಾದ ಹಗರಣವಿದು. ಆದರೆ ನಮ್ಮ ಕಾನೂನು, ನಮ್ಮ ಪ್ರಜಾಪ್ರಭುತ್ವದ ಮುಖಗಳನ್ನು ಅರಿವಿದ್ದವನು ಒಂದೇ ಯೋಜನೆಯಲ್ಲಿ ಬೆಂಬಲಿಸುವುದು ಕಷ್ಟ. ಯಾಕೆಂದರೆ ಎಲ್ಲಾ ನಿಯಮ‌ ನಿಬಂಧನೆಗಳನ್ನು ತಮ್ಮ ಸ್ವಾರ್ಥಕ್ಕೆ ತಮ್ಮ ಮೂಗಿನ ನೇರಕ್ಕೆ ಉಪಯೋಗಿಸುವ ರಾಜಕೀಯ ಹುನ್ನಾರಗಳು ಇಂದು ಮೊದಲಲ್ಲ. ಇದರಲ್ಲಿ ಪ್ರಾಮಾಣಿಕತೆಯ ವಿಷಯದಲ್ಲಿ ವಿಶ್ವಾಸ ಕಳೆದು ಹೋಗಿದೆ. ಈ ಘಟನೆಯಲ್ಲಿ ಸತ್ಯವೋ ಸುಳ್ಳೋ ಅದರ ಬಗ್ಗೆ ಹೇಳುವುದಲ್ಲ. ಇದು ಸತ್ಯವೇ ಇರಬಹುದು ಎಂದು ತಿಳಿದರೂ ಯೋಚನೆಗಳು ಹಲವಾರು ಇರುತ್ತದೆ.

          ಸದರಿ ಸಚಿವರ  ರಾಜೀನಾಮೆ ಆಗ್ರಹಿಸಿ ಈ ಸತ್ಯಾಗ್ರಹ ನಡೆಯುತ್ತದೆ. ಆಗ್ರಹವೇನೋ ಸರಿ ಆದರೆ ಫಲಶ್ರುತಿ ಏನು ಅಂತ ಯೋಚಸಿದರೆ ನಮ್ಮ‌ ಪ್ರಜಾಪ್ರಭುತ್ವದ ಇತಿಹಾಸವನ್ನು ಅವಲೋಕಿಸಿದರೆ ನಂಬಿಕೆಯೇ ಹೊರಟು ಹೋಲುತ್ತದೆ. ಒಂದು ವೇಳೆ ನೈತಿಕ ಹೊಣೆ ಹೊತ್ತು ಸಚಿವರು ಪದತ್ಯಾಗ ಮಾಡಿದರೂ ಇನ್ನೊಬ್ನ ಬಂದರೂ ಇದು ಸರಿಯಾಗಬಹುದೇ? ಖಂಡಿತ ಇಲ್ಲ. ಹಾಗಾಗಿ ಇವುಗಳಲ್ಲಿ ರಾಜಕೀಯ ಧೋರಣೆ ಇಲ್ಲ ಎನ್ನುವುದಕ್ಕೆ ಸಾಧ್ಯವಿಲ್ಲ.  ಹಚ್ಚೇಕೆ ಈಗ ಉಪವಾಸ ಮಲಗಿದವರನ್ನ ಅಲ್ಲಿ ತಂದು ಕೂರಿಸಿದರೂ ವ್ಯವಸ್ಥೆ ಸರಿಯಾಗುವ ಭರವಸೆ ಇಲ್ಲ. ಹಾಗಾಗಿ ಹೇಳಬಹುದು  ಶ್ರೇಷ್ಠವಾದ ಕಾನೂನು ಇದೆ ಅನುಷ್ಠಾನ ಇಲ್ಲ. 

          ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳು ಕಳೆದವು. ನಾವು ಗಂಭೀರವಾದ ನಿಯಮ ಮಾಡಿದ್ದೇವೆ ಅದನ್ನು ಗೌರವಿಸುವುದನ್ನು ಅರಿತೇ ಇಲ್ಲ. ಇದುವರೆಗೆ ಆಳಿದವರು ತಂದಿಟ್ಟ ದುರಂತವಿದು. ದೇಶವನ್ನು ಕಾಡುವುದು, ಬಡತನವಲ್ಲ, ಜನ ಸಂಖ್ಯೆಯಲ್ಲ ಪ್ರಕೃತಿ ವಿಕೋಪವಲ್ಲ... ಕಾಡುವುದು ಭ್ರಷ್ಟಾಚಾರ. ಆಳಿದವರು ಇದನ್ನೇ ಕಲಿಸಿದ್ದು ಇದನ್ನೇ ತೋರಿಸಿದ್ದು .  ಒಂದು ಡಾಲರ್ ಒಂದು ರೂ ಇದ್ದದ್ದು ಐವತ್ತು ಆದಾಗ ಅರಿವಾಗಲೂ ಇಲ್ಲ.‌ಪ್ರತಿಭಟಿಸಲೂ ಇಲ್ಲ. ಕಾರಣ ಯಾರು? 

          ಒಂದು ಮಂತ್ರಿಯೋ ಶಾಸಕನೋ ರಾಜೀನಾಮೆ ಕೊಟ್ಟರೆ ವ್ಯವಸ್ಥೆ ಬದಲಾಗುವುದಿಲ್ಲ. ವ್ಯಕ್ತಿ‌ಮಾತ್ರ ಬದಲಾಗುತ್ತಾನೆ. ಕದ್ದು ನೋಡುವವರು ಇರುವ  ತನಕ ಕದಿಯುವವರು ಇರುತ್ತಾರೆ. ಕಾನೂನಿಗಿಂತಲೂ ನಮಗವಶ್ಯವಿರುವುದು ನೀತಿ. ಸಾಮಾಜಿಕ ಪ್ರಜ್ಞೆ. ಅದಿಲ್ಲವಾದರೆ ಯಾವುದೂ ಬದಲಾಗುವುದಿಲ್ಲ. ಎಷ್ಟು ಬಿಗಿಯಾದ ಕಾನೂನು ಇದ್ದರೇನು, ನಮಗೆ ಕಾನೂನಿಗಿಂತಲೂನ ನಮ್ಮ ಜಾತಿ ಧರ್ಮವೇ ಮುಖ್ಯವಾಗಿ ಹಿರಿದಾಗುತ್ತದೆ. ಮಾನವೀಯತೆ ಸಾಯುತ್ತದೆ. ಇಷ್ಟಾದರೂ ಇದು ಹಗರಣದ ಸಮರ್ಥನೆಯಲ್ಲ. ಯಾಕೆಂದರೆ ಹಗರಣ ನಮಗೇನು ಹೊಸತಲ್ಲ. ಅದುವೇ ಸಹಜ ಬದುಕಾಗಿದೆ.

Sunday, July 12, 2026

ಬಾನಲ್ಲೂ ನೀನೆ ಭುವಿಯಲ್ಲು... ನೀನೆ..

" ಬಾನಲ್ಲೂ ನೀನೆ ಭುವಿಯಲ್ಲು... ನೀನೆ"   ನಾವು ನಿದ್ದೆಗೆ ಜಾರುವ ಹೊತ್ತು ರಾತ್ರಿ ಹತ್ತು ಘಂಟೆಗೆ ನೀರವ ಮೌನದಲ್ಲಿ ಪಕ್ಕದ ಮನೆಯ ರೇಡಿಯೋದಿಂದ ಹಾಡು ಬರುವುದು ಕೇಳಿ ಬರುತ್ತಿದ್ದ ನಮ್ಮ ಬಾಲ್ಯದ ಕಾಲ.  ಸಿನಿಮಾ ಹಾಡು ಕೇಳಬೇಕೆಂದರೆ ಯಾರದೋ ಮನೆಗೆ ಹೋಗಿ ರೇಡಿಯೋ ಹಾಕಿಸಿ ಕೇಳಬೇಕಿತ್ತು. ಅವರೂ ಹಾಗೆ ರೇಡಿಯೋ ಬ್ಯಾಟರಿ ಖರ್ಚಾಗುತ್ತದೆ ಎಂದು ಅದನ್ನು ಒಂದಿಷ್ಟು ಸಣ್ಣ ಧ್ವನಿಯಲ್ಲೇ ಇಡುತ್ತಿದ್ದರು.  ತೀರಾ ಬಡತನದ ಒಂದು ಸಾಮಾನ್ಯ ಸಾಧನವಾದ ರೇಡಿಯೋ ಕೂಡ ನಮ್ಮಲ್ಲಿರಲಿಲ್ಲ.

    ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ಮನರಂಜನೆ ವಸ್ತು ಯಾವುದೂ ಇರಲಿಲ್ಲ. ಊರಿಗೆಲ್ಲಾ ವಿದ್ಯುತ್ ಸಹ ಇರಲಿಲ್ಲ. ನಮ್ಮ ಪೈವಳಿಕೆ ಗ್ರಾಮದ ಮನೆಗಳಲ್ಲಿ  ವಿದ್ಯುತ್ ದೀಪ ಬೆಳಗಿದ್ದು 1980 ರ ಇಸವಿಯಲ್ಲಿ. ಅದುವರೆಗೆ ಸೀಮೆ ಎಣ್ಣೆಯ ದೀಪ ಲ್ಯಾಂಪ್ ಗಳು ಮಾತ್ರ. ಆನಂತರ ಒಂದಷ್ಟು ಧನಿಕರ ಮನೆಗೆ ವಿದ್ಯುತ್ ಸಂಪರ್ಕ ಬಂದರೂ ನಮ್ಮ ಬಾಡಿಗೆ ಮನೆಯಲ್ಲಿ ಸೀಮೆ ಎಣ್ಣೆ ದೀಪವೇ ಪ್ರಕಾಶ ಮೂಲ. ಇಂತಹ ಸ್ಥಿತಿಯಲ್ಲಿ ಮನರಂಜನ ಸಾಧನ ತರುವುದು ಉಪಯೋಗಿಸುವುದು ನಮ್ಮ ಕೈಗೆಟುವ ವಸ್ತುವಾಗಲಿಲ್ಲ.

ಆಗೆಲ್ಲ ಕೆಲವರು ಸಾಯಂಕಾಲ ಬಜಾರ್ ಗೆ ಬಂದವರು ರೇಡಿಯೋ ತರುತ್ತಿದ್ದರು. ಕೈಯಲ್ಲೊಂದು ರೇಡಿಯೋ ತಂದು ಜಂಭದಿಂದ ಅಂಗಡಿಯ ಜಗಲಿಯ ಬೆಂಚಿನ  ಮೇಲೆ ಕುಳಿತು ಬರ ಬರ ಸದ್ದಿನೊಂದಿಗೆ ಮಂಗಳೂರು ಭದ್ರಾವತಿ ಸಿಲೋನ್ ವಿವಿಧ ಭಾರತಿ ಸ್ಟೇಶನ್ ಹುಡುಕುತ್ತಿದ್ದರೆ, ನಾವು ಸುತ್ತ ನೆರೆದು ಆಸಕ್ತಿಯಿಂದ ನೋಡುತ್ತಿದ್ದೆವು. ಪುಟ್ಟ ಪೆಟ್ಟಿಗೆಯಿಂದ ಮಾತನಾಡಿದ ಹಾಡಿದ ಸದ್ದು ಬರುವುದು ಅಚ್ಚರಿಯ ವಿಷಯವಾಗಿತ್ತು. ಯಾರೋ ಎಲ್ಲೋ ರೇಡಿಯೋ ಹಾಕಿ ಹಾಡು ಕೇಳುತ್ತಿದ್ದರೆ, ನಮ್ಮ ಮನೆಯಲ್ಲೂ ಒಂದು ರೇಡಿಯೋ ಅದು ಕನಸಿನ ವೈಭವದ ವಿಷಯವಾಗಿತ್ತು. ಅಂತಹ ಕಾಲದಲ್ಲಿ ಎಲ್ಲೋ ಯಾರದೋ ಒಂದು ರೇಡಿಯೋದಲ್ಲಿ ಆಕಾಶವಾಣಿಯ ಚಿತ್ರಗೀತೆಯಲ್ಲಿ ಹಾಡು ಬರುತ್ತಿದ್ದರೆ ಅದರಲ್ಲಿ ಗಾಯಕರ ಹೆಸರು ಹೇಳುತ್ತಿದ್ದರೆ, ಅದರಲ್ಲಿ ಸಾಮಾನ್ಯವಾಗಿ ಬರುತ್ತಿದ್ದ ಹೆಸರು ಪಿ ಬಿ ಶ್ರೀನಿವಾಸ್,  ಘಂಟಸಾಲ,  ಎಸ್ ಜಾನಕಿ, ಎಸ್ ಪಿ ಬಾಲ ಸುಬ್ರಹ್ಮಣ್ಯಂ, ಜೇಸುದಾಸ್ ವಾಣಿಜಯರಾಮ್, ಪಿ ಸುಶೀಲ ಹೀಗೆ....  ಯಾವುದೇ ಹಾಡು ಹಾಕಿದರು ಹಾಡಿದವರು ಎ ಸ್ಪಿ ಬಾಲಸುಬ್ರಹ್ಮಣ್ಯಂ ಮತ್ತು ಎಸ್ ಜಾನಕಿ ಈ ಹೆಸರು ಪ್ರತೀ ಹಾಡಿನೊಂದಿಗೆ ಚಿರ ಪರಿಚಿತ. 

ಚಿತ್ರ ಬಯಲು ದಾರಿ ಹಾಡಿದವರು ಎಸ್ ಜಾನಕಿ...ರಾತ್ರಿಯ ನೀರವ  ಮೌನದಲ್ಲಿ ದೂರದ ರೇಡಿಯೋದಲ್ಲಿ  ಎಸ್ ಜಾನಕಿಯ ಮಧುರವಾದ ಸ್ವರ ಗಾಳಿಯಲ್ಲಿ ತೇಲಿಬರುತ್ತಿದ್ದರೆ ನಿಂತಲ್ಲೇ ನಿಂತು ಆ  ಹಾಡನ್ನು ಆಲಿಸುತ್ತಿದ್ದದ್ದು ಈಗಲೂ ನೆನಪಿದೆ. ಬಾಲ್ಯದ ಮುಗ್ದ ಮನಸ್ಸಿನ ದಿನಗಳಿಂದ ಎಸ್ ಜಾನಕಿ ಎಂಬ ಗಂಧರ್ವ ಗಾಯಕಿಯ ಮುಖ ಪರಿಚಯವಿಲ್ಲದೇ ಇದ್ದರೂ  ಆ ಧ್ವನಿಯ ಪರಿಚಯವಿತ್ತು. ಈಗಿನ ಟಿವಿ ಇಂಟರ್ನೆಟ್ ಯೂಟ್ಯೂಬ ದಿನಗಳಲ್ಲಿ ಆ ದಿನದ ಅನುಭವದ ಕಲ್ಪನೆ ಹೇಳಿದರೂ ಕಲ್ಪಿಸುವುದು ಸಾಧ್ಯವಿಲ್ಲ. ಅದೊಂದು ಕಾಲ. ಆ ಕಾಲದಿಂದ ಪರಿಚಯದ ಜಾನಕಮ್ಮನ ಧ್ವನಿ ಇನ್ನು ಕೇವಲ ಧ್ವನಿ ಮುದ್ರಣಕ್ಕೆ ಸೀಮಿತ. ಈ ಕೋಗಿಲೆ ಸಿನಿಮಾದಲ್ಲಿ ಹಾಡುವುದು ನಿಲ್ಲಿಸಿ ಅದೆಷ್ಟು ಕಾಲವಾಯಿತೋ ತಿಳಿಯದು. ಇಂದಿನ ಚಿತ್ರ ವಿಚಿತ್ರ ಸಂಗೀತದ ನಡುವೆ ಜಾನಕಮ್ಮನ ಧ್ವನಿ ಹಲವಾರು ಸಲ ನೆನಪಿಗೆ ಬಂದರೂ ಕಾಲಗತಿಯನ್ನು ತಳ್ಳುವುದು ಸಾಧ್ಯವಲ್ಲ. ಜಾನಕಮ್ಮನ ಹಾಡುಗಳೆಂದರೆ ಅದು ಆಗಿನ ಗಾಳಿಯಲ್ಲಿ ಕಂಪು ಬೆರೆತಂತೆ. ಅದೆಂದಿಗೂ ಮಾಸಿ ಹೋಗದ ಧ್ವನಿ. ಈಗಲೂ ಆ ಗಾಳಿಯಲ್ಲಿ ಆ   ಧ್ವನಿ ಎಲ್ಲಾದರೂ ಅವಿತಿದೆಯೋ ಅಂತ ಪಂಚೆಂದ್ರಿಯಗಳು ಅರಸುತ್ತಿದ್ದರೆ ಆಶ್ಚರ್ಯವಿಲ್ಲ. ಈಗಿನ ಟೀವಿ ಯೂಟ್ಯೂಬ್ ನಲ್ಲಿ ಮುಖತೋರಿಸಿ ಹಾಡುವ ಗಾಯಕರ ಪರಿಚಯ ಮುಂದಿನ ಘಳಿಗಯಲ್ಲಿ  ಮರೆತು ಹೋಗುತ್ತಿರುವಾಗ,  ಆಗ ಕೇವಲ ಧ್ವನಿಮಾತ್ರದಿಂದ  ಚಿರಪರಿಚಿತರಾದ ಜಾನಕಮ್ಮನ ಸ್ವರ ಈಗಲೂ ನೆನಪಿನಲ್ಲಿ ಉಳಿದರೆ ಆ ಧ್ವನಿಯ ಗಾಢ ನೆನಪು ಎಷ್ಟು ಎಂದು ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ಇತ್ತೀಚಿನ ದಿನದವರೆಗೂ ಜಾನಕಮ್ಮನ ಮುಖ ಪರಿಚಯ ಬಹಳಷ್ಟು ಮಂದಿಗೆ ತಿಳಿದಿಲ್ಲ. ಕೇವಲ ಧ್ವನಿಯಿಂದ ಮನೆ ಮನೆಯ ಮನ ಮನದ ಚಿರ ಪರಿತ ಹೆಸರಾದ ಜಾನಕಮ್ಮನ ಸ್ವರದ ಜಾದು ಇಂದು ಕಲ್ಪಿಸುವುದಕ್ಕೂ ಸಾಧ್ಯವಿಲ್ಲ.


ಈಗಿನ್ನು ಜಾನಕಮ್ಮ ಕೇವಲ ನೆನಪಿನ ಲೋಕಕ್ಕೆ ಸರಿದುಹೋದರೆ ಜಾನಕಮ್ಮನ ನೆನಪಿನಲ್ಲಿ ಮನಸ್ಸಿನ್ನೂ ಹಾಡುತ್ತಿದೆ ...ಬಾನಲ್ಲು ನೀನೆ ಭುವಿಯಲ್ಲೂ ನೀನೆ ಎಲ್ಲೆಲ್ಲೂ ನೀನೆ...



Saturday, July 4, 2026

ಮಿತ್ರನ ಮೈತ್ರಿ

ಸ್ನೇಹ ಸಂಬಂಧಗಳು ಬದುಕಿನ ಅರ್ಥವನ್ನು ಕಲ್ಪಿಸುತ್ತದೆ. ಅದು ರಕ್ತ ಸಂಬಂಧಕ್ಕಿಂತ ಮಿಗಿಲಾಗಿದ್ದರೆ ಅದಕ್ಕೆ ಒಂದು ವೈಶಿಷ್ಟ್ಯವಿರುತ್ತದೆ. ಅಲ್ಲಿ ಯಾವುದೇ ಪರಿಮಿತಿ ಇಲ್ಲದೆ  ಬೆಸೆದುಕೊಂಡಿದ್ದರೆ ಅದರ ಗಾಢವಾದ ಸಂವೇದನೆಯನ್ನು ಅನುಭವಿಸಿಯೇ ತಿಳಿಯಬೇಕು. ನಿನ್ನೆ ಅಂದರೆ ದಿನಾಂಕ 03-07-2026 ರಂದು ನಮ್ಮೂರಿನ ಮಿತ್ರ , ಸದ್ಯ ಮಂಗಳೂರಲ್ಲಿ ವಾಸವಾಗಿರುವ ಜಯಶಂಕರ್ ನ ಮಗಳು ಮೈತ್ರಿಯ ವಿವಾಹ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ಒದಗಿಬಂತು. ನನ್ನ ಮತ್ತು ಜಯಣ್ಣನ ಸ್ನೇಹ ಸರಿಸುಮಾರು ಕಾಲು ಶತಮಾನಕ್ಕಿಂತಲೂ ಮಿಕ್ಕಿದ ಸ್ನೇಹ ಸಂಬಂಧ. ಶಾಲಾದಿನಗಳಲ್ಲಿ ಅಕ್ಕಪಕ್ಕ ಕುಳಿತು ಎರಡಕ್ಷರಗಳನ್ನು ಒಂದಾಗಿ ಕಲಿತವರು. 



ಜಯಣ್ಣ  ನಮ್ಮ ಕುಟುಂಬ ಮಿತ್ರ ಎಂದರೂ ಸರಿಯೇ. ನಾನೂ ಹಾಗೇ ಆತನ ಮನೆಯ ಒಂದು ಅಂಗವಾಗಿ ಸ್ನೇಹ ಬೆಸೆದುಕೊಂಡು ಬಿಟ್ಟಿದೆ. ನಮ್ಮ  ಮನೆಯವರಲ್ಲೂತೀರ ಹೇಳಲಾಗದ ಭಾವನೆಗಳನ್ನು ವೈಯಕ್ತಿ ವಿಷಯಗಳನ್ನು ಮಿತ್ರರಲ್ಲಿ ಹಂಚಿಕೊಂಡು ಬಿಡುತ್ತೇವೆ.  ಸಂಬಂಧಿಕರ ಮನೆಗೆ ಹೋಗುವುದಕ್ಕಿಂತಲೂ  ಮಿತ್ರರ ಮನೆಗೆ ಹೋಗುವುದರಲ್ಲಿ ಔಪಚಾರಿಕತೆಯ ನಿಬಂಧನೆ ಇರುವುದಿಲ್ಲ. ಒಂದು ಸಂಬಂಧಿಗಳ ಮನೆಗೆ ನಡು ರಾತ್ರಿ ಹೋಗುವುದಿದ್ದರೆ. ನೀವು ಹೋಗುವ ಮೊದಲು ಅಲ್ಲವೇ ಹೋದಕೂಡಲೇ  ರಾತ್ರಿಯೇ ಹೋದ ಕಾರಣಗಳನ್ನು ಚರಿತ್ರೆಯನ್ನೂ ವಿವರಿಸಬೇಕಾಗುತ್ತದೆ. ಅಥವಾ ಅಲ್ಲೋಂದು ಪರಿಮಿತಿ ಇರುತ್ತದೆ. ಆದರೆ ಆತ್ಮೀಯ ಮಿತ್ರನಿಗೆ ತಮ್ಮ ಪ್ರತಿಯೊಂದು ಚಲನವಲನ ಅರಿವಿರುತ್ತದೆ. ಅರಿವಿಲ್ಲದೇ ಇದ್ದರೂ ಅದನ್ನು ಹೆಚ್ಚು ವಿವರಿಸುವ ಅವಶ್ಯಕತೆ ಒದಗಿಬರುವುದಿಲ್ಲ. ಆಹಾರ ಉಪಚಾರಗಳಲ್ಲಿ ಯಾವ ಒಣ ಪ್ರತಿಷ್ಠೆಯಾಗಲೀ ನಿಬಂಧನೆಗಳ ಪರಿಮಿತಿ ಬಂಧನವಾಗಲೀ ಇರುವುದಿಲ್ಲ.  ಬಂದವರಿಗೆ ಬಲವಂತವಾಗಿ ತಿನ್ನಿಸಿಯೇ ಬಿಡಬೇಕು ಎನ್ನುವ ಕಡು ಆತಿಥ್ಯ ಇರುವುದಿಲ್ಲ. ಹೋದವನಿಗೂ ಬೇಡದೇ ಇದ್ದರೂ ತಿನ್ನಲೇ ಬೇಕೆಂಬ ದಾಕ್ಷಿಣ್ಯ ಇರುವುದಿಲ್ಲ. ಹಲವು ಸಲ ಬೇಡದೇ ಇದ್ದರೂ ತಿನ್ನಬೇಕಾಗುತ್ತದೆ. ಬೇಡದೇ ಇದ್ದರೂ ಒತ್ತಾಯದಲ್ಲಿ ತಿನ್ನಿಸಬೇಕಾಗುತ್ತದೆ. ನನ್ನದು ಇದೆಲ್ಲದಕ್ಕೂ ತದ್ವಿರುದ್ದ ಸ್ವಭಾವ. ಬೇಡದೇ ಇದ್ದರೆ ಒತ್ತಾಯಕ್ಕೆ ತಿನ್ನುವ ತಿನ್ನಿಸುವ ಉಪಚಾರ ನನಗೆ ಆಗುವುದಿಲ್ಲ. ಹಲವು ಕಡೆ ತಿನ್ನುವುದು ತಿನ್ನಿಸುವುದು ಇಲ್ಲದಿದ್ದರೆ ಬೇಜಾರು ಮಾಡಿಕೊಳ್ಳುತ್ತಾರೆ ಎಂಬ ಆತಂಕ. ಆದರೆ ಮಿತ್ರನ ಆತಿಥ್ಯವೆಂದರೆ  ಅದೊಂದು ಸ್ವಚ್ಛಂದ ಪ್ರವೃತ್ತಿ ಅಲ್ಲಿರುತ್ತದೆ. ನನ್ನ ಮತ್ತು ಜಯಣ್ಣನ ಮಿತ್ರತ್ವದಲ್ಲಿ ಯಾವ ಪರಿಮಿತಿಯೂ ಇರುವುದಿಲ್ಲ. ಏಷ್ಟೋ ಸಲ ಮಧ್ಯರಾತ್ರಿ ಮಂಗಳೂರಿನ ಹತ್ತಿರ ಬರುವಾಗ ಕರೆ ಮಾಡಿ ಹೋದದ್ದಿದೆ. ಮಂಗಳೂರಿಗೆ ಹೋದಾಗಲೇಲ್ಲ ಭೂಸ್ಪರ್ಶವಾಗುವ ಮೊದಲೆ ಜಯಣ್ಣ ನಾನಿರುವಲ್ಲಿಗೆ ಬರುತ್ತಾನೆ ಅದೊಂದು ಬಗೆಯ ಸ್ನೇಹಾದರೆ ವಿವರಿಸುವುದು ಕಷ್ಟ. 


ಜಯಣ್ಣನ ಒಬ್ಬಳೇ ಮಗಳು ಮೈತ್ರಿಯ ವಿವಾಹ ನಿನ್ನೆ ನೆರವೇರಿತು. ಬಹುಶಃ ಜಯಣ್ಣ ಮಿತ್ರತ್ವದ ಮೈತ್ರಿ ಸ್ವಭಾವ ರೂಪವೇ ಮೈತ್ರಿ. ಅಂಬೆಗಾಲಿಕ್ಕುವ ಪುಟ್ಟಶಿಶುವಿನಿಂದ ತೊಡಗಿ ಹೆಗಲೆತ್ತರಕ್ಕೆ ಬೆಳೆಯುವ ತನಕವೂ ಕಣ್ಡೆದುರೇ ಬೆಳೆದು ನಿಂತ ಮೈತ್ರಿಯ ಮದುವೆಗೆ ಮಿತ್ರನಾಗಿ ಕರೆಯದೇ ಇದ್ದರೂ ಹೋಗುವ ಬಂಧನವಿತ್ತು. ಜಯಣ್ಣದಂಪತಿಗಳು, ಮಗಳು ಮೈತ್ರಿ ಎಲ್ಲರೂ ನಮ್ಮ ಮನೆಯವರ ಮೈತ್ರಿ ವರ್ತುಲದ ಬಿಗಿ ಬಂಧನದಲ್ಲಿ ಬೆಸೆದುಕೊಂಡಿದ್ದವರು. ನಮ್ಮ ಎರಡು ಕುಟುಂಬಗಳ ನಡುವೆ ಮರೆಯಲಾಗದ ಹಲವಾರು ರಸನಿಮಿಷಗಳ ಘಳಿಗೆಗಳು ಸ್ವಯಂ (ಸೆಲ್ಫಿ) ಚಿತ್ರಗಳು ಸಾಕಷ್ಟು ಇವೆ.   ಪರಸ್ಪರ ಸಹಾಯಗಳಿಗೆ ಧನ್ಯವಾದದ ಅವಶ್ಯಕತೆಯಿಲ್ಲದ ಗಾಢವಾದ ಆತ್ಮಿಯತೆ ಇಲ್ಲಿದೆ.  ಹಾಗಾಗಿ ಮೈತ್ರಿಯ ವಿವಾಹ ಎಂದಕೂಡಲೇ ನಮ್ಮ ಮನೆಯವರೆಲ್ಲರೂ ಮದುವೆಗೆ ಹಾಜರಾದೆವು. ಮಂಗಳೂರಿನ ಜಿಟಿ ಜಿಟಿ ಮಳೆಯ ತಂಪಾದ ವಾತಾವರಣದಲ್ಲಿ ನಡೆದ ವಿವಾಹ ಮಹೋತ್ಸವ, ಜತೆಗೆ ಪುಷ್ಕಳವಾದ ರುಚಿಯಾದ ಭೋಜನ , ಮಿತ್ರನ ಆದರ ಆತಿಥ್ಯ  ಮರೆಯುವುದಕ್ಕಿಲ್ಲ. ವಿವಾಹ ಕಾರ್ಯಕ್ರಮ ಎಂದರೆ ಇಲ್ಲಿ ಉದ್ವೇಗ, ಒತ್ತಡ ಎಲ್ಲವೂ ಇರುತ್ತದೆ. ತುಂಬಿದ ಜನರನ್ನು ಸಂಪರ್ಕಿಸಿ ಕುಶಲ ವಿಚಾರಿಸಿ ಸತ್ಕರಿಸುವುದು ಸುಲಭದ ಕೆಲಸವಲ್ಲ. ಅಷ್ಟೊಂದು ಗಡಿಬಿಡಿಯಲ್ಲೂ ದೂರದಿಂದ ನಮ್ಮನ್ನು ನೋಡಿದ ಜಯಣ್ಣ ಕೈ ಬೀಸಿ ಅದೇ ಸ್ನೇಹ ಸಲುಗೆಯಿಂದ ಮಾತನಾಡಿಸಿದಾಗ ಬಹಳ ಸಂತಸವಾಯಿತು. ಪ್ರತಿಯೊಬ್ಬರ ಬಳಿಗೆ ಬಂದು ಮಿತ್ರ ದಂಪತಿ ವಿಚಾರಿಸಿ ಸತ್ಕರಿಸಿದಾಗ ಜಯಣ್ಣನ ಗೆಲುವಿನ ನಗೆ ನೋಡುವುದಕ್ಕೆ ಬಹಳ ಹಿತವೆನೆಸಿತ್ತು. ಮುದ್ದಿನ ಮಗಳ ಭವಿಷ್ಯವನ್ನು ಕಟ್ಟಿದ ಗೆಲುವಿನ ನಗೆಯದು. 

ಕೆಲಸದ ಒತ್ತಡದಲ್ಲಿ ಅಲ್ಪ ಸಮಯದ ಅವಧಿಗೆ ಮಾತ್ರವೇ ಕಾರ್ಯಕ್ರಮದ ಭಾಗವಾಗಲು ಸಾಧ್ಯವಾಯಿತು. ಸಾಲಂಕೃತ ವಧೂವರರನ್ನು ಆಶೀರ್ವದಿಸಿ ಮಗಳು ಮೈತ್ರಿಯನ್ನು ಎದೆಗಾನಿಸಿ ಹರಸಿದಾಗ ನನಗರಿವಿಲ್ಲದೇ ಎದೆ ಭಾರವಾಗಿ ಕಣ್ತುಂಬಿ ಬಂತು. ಮೈತ್ರಿ ನಿಶಾಂತ ಹೊಸಬಾಳಿಗೆ ಹೆಜ್ಜೆ ಇರಿಸಿದ  ನವ ದಂಪತಿಗಳು ಸುಖವಾಗಿ ಬಾಳಿ ಬದುಕಲಿ ಮನದಾಳದ ಆಶೀರ್ವಾದಗಳು. 


Friday, June 26, 2026

ಯೋಗದಿನ

 


ಇತ್ತೀಚೆಗೆ ಯೋಗದಿನದಲ್ಲಿ ಹಲವರ ಯೋಗಾಭ್ಯಾಸ ನೋಡಿ ಒಂದೆರಡು ಅನಿಸಿಕೆಗಳು ಹೇಳಬೇಕೆಂದೆನಿಸಿತು. ಯೋಗ ದಿನ ಮೂರ್ಖದಿನವಾಗುವಂತೆ ಆಚರಿಸುವುದನ್ನು ನೋಡಿದಾಗ ವಿಷಾದವಾಗುತ್ತದೆ. ಒಂದು ದಿನ ಸಮವಸ್ತ್ರ ಹಾಕಿ ದೊಡ್ಡ ಬ್ಯಾನರ್ ಕಟ್ಟಿ ಯೋಗಾಭ್ಯಾಸ ಮಾಡುವುದರಲ್ಲಿ ಯಾವ ಪ್ರಯೋಜನವೂ ಇಲ್ಲ. ಒಂದು ದಿನಕ್ಕೆ ಸೀಮಿತವಾಗುವ ಯೋಗಭ್ಯಾಸ ನಿಜಕ್ಕೂ ಅದಕ್ಕೆ ಮಾಡುವ ಅವಮಾನವಾಗುತ್ತದೆ. 

ಯೋಗ, ಅಂತ ಹೇಳಿದ ಕೂಡಲೇ ಕೆಲವು ಆಸನ, ಮತ್ತೆ ಪ್ರಾಣಾಯಾಮ ಅಂತ ತಿಳಿದು ಅದೇ ಭ್ರಮೆಯಲ್ಲಿ ಇದ್ದು ಬಿಡುತ್ತಾರೆ. ಹಲವರು ಇದನ್ನು ಪ್ರದರ್ಶನದ ವಸ್ತುವಾಗಿ ಮಾಡಿ‌ಬಿಡುತ್ತಾರೆ. ಇನ್ನು ಕೆಲವರಿಗೆ ಇದು ಸಮಯ ಸಿಕ್ಕಾಗ ಮಾಡುವ ಕೆಲಸವಾಗಿದೆ. ಆರಂಭದ ದಿನಗಳಲ್ಲಿ ಇದು ಇಷ್ಟೇ ಅಂತ ಅನಿಸಿದರೂ, ಅಷ್ಟಕ್ಕೇ ಸೀಮಿತಗೊಳಿಸಬಾರದು. ಆದರೆ ಇಂದಿನ‌ ಫ್ಯಾಷನ್ ಯುಗದಲ್ಲಿ‌ ಅದಕ್ಕೇ ಸೀಮಿತ ವಾಗಿಸುವುದು ಮೂರ್ಖತನ ಎನ್ನಬೇಕು. 

ಯೋಗ ಮುಖ್ಯವಾಗಿ ಯಾವುದೇ ಧರ್ಮಕ್ಕೆ ಸೀಮಿತವಾಗುವ ಧಾರ್ಮಿಕ ಆಚರಣೆಯಲ್ಲ. ಆದರೆ ಸನಾತನ ಧರ್ಮ‌, ಅಂದರೆ ಅತ್ಯಂತ ಹಳೆಯ ಮನುಷ್ಯ ಜೀವನ ಧರ್ಮ‌ ಇದನ್ನೇ ಅಳವಡಿಸಿಕೊಂಡಿತ್ತು. ಇಂದು ಹಲವು ರೀತಿಯಲ್ಲಿ ಇದನ್ನು ಧಾರ್ಮಿಕ ಕ್ರಿಯೆಗೆ ಸೀಮಿತ ಗೊಳಿಸಿದ್ದೂ ಒಂದು ಬಗೆಯಲ್ಲಿ ವಿಷಾದನೀಯ ಎನ್ನಬೇಕು. ಅದು ಹಾಗೆ ಒಂದು ಧರ್ಮಕ್ಕೆ ಸೀಮಿತವಾಗುವುದಕ್ಕೆ ಕಾರಣ ಇಲ್ಲದಿಲ್ಲ. ಬಾಲ್ಯದಲ್ಲೇ ನಮಗೆ ನಮ್ಮ ಕರ್ತವ್ಯಗಳನ್ನು ಇದೇ ಬಗೆಯಲ್ಲಿ ಖಡ್ಡಾಯಗೊಳಿಸುತ್ತಾರೆ. ಅನ್ನ ಎಂಬದನ್ನು ದೇವರಾಗಿಸಿ ಅದರ ಮೌಲ್ಯವನ್ನು ಗೌರವವನ್ನು ತೋರಿಸುವ ಯತ್ನ ಮಾಡುತ್ತಾರೆ. ಅದೇ ಮುಂದೆ ಧಾರ್ಮಿಕವಾಗುತ್ತದೆ. ಇದೇ ಬಗೆಯಲ್ಲಿ ನಮಗೆ ಹಲವು‌ ಮೌಲ್ಯಗಳ ಪಾಠವಾಗುತ್ತದೆ.  ಅದೇ ಜೀವನ ಧರ್ಮವಾಗುತ್ತದೆ. 

   ಯೋಗ ಎಂದೋ ಒಂದು ದಿನದ ಆಚರಣೆಯಲ್ಲ. ಹಾಗೆ ಮಾಡಿದರೆ ಅದು ಜೀವನವನ್ನು ಅರ್ಥಮಾಡಿಕೊಳ್ಳದ ಅಜ್ಜಾನವಾಗುತ್ತದೆ. ಅಹಾರ ವಿಸರ್ಜನಾದಿಗಳು ಹೇಗೆ ಅನಿವಾರ್ಯವೋ, ಹೊತ್ತು ಹೊತ್ತಿಗೆ ಹೇಗೆ ಊಟವನ್ಮು ಮಾಡುತ್ತೀರೋ ಅದೆ ಬಗೆಯಲ್ಲಿ ಇದು ಜತೆಯಲ್ಲಿರಬೇಕು ಯಾರನ್ನೋ‌ ಮೆಚ್ಚಿಸುವುದಕ್ಕೆ ಯಾರದೋ ಮೇಲಿನ ಅಭಿಮಾನ ದರ್ಶನಕ್ಕೆ ಯೋಗಾಭ್ಯಾಸವಲ್ಲ.  ಅದೊಂದು ಜೀವನ ವಿಧಾನ. ತೆಳ್ಳಗಾಗುವುದಕ್ಕೋ, ದಪ್ಪಗಾಗುವುದಕ್ಕೋ ಅಯುರಾರೋಗ್ಯಕ್ಕೋ ಇದು ಉದ್ದೇಶವಾಗಬಾರದು. ಹಾಗಾದರೆ ಇದರ ಮೂಲ ಉದ್ದೇಶಕ್ಕೆ ಅನ್ಯಾಯವಾಗುತ್ತದೆ. ಜೀವನದ ಪ್ರತಿಯೊಂಕ್ಕೂ ಯೋಗಾಭ್ಯಾಸ ಕಣ್ಣಾಗಬೇಕು.‌ಆಗಲೇ ಜೀವ ಮತ್ತು ಆತ್ಮದ ಸಂಯೋಗವಾಗುತ್ತದೆ.

ಪ್ರತಿ ವರ್ಷವೂ ಯೋಗದಿನ ಆಚರಿಸಲ್ಪಡುತ್ತದೆ.  ನೂರಾರು ಜನ ಸೇರಿ,  ವಿಶೇಷ ಸಮವಸ್ತ್ರ ಧರಿಸಿ,  ಒಂದಷ್ಟು ಕಸರತ್ತು ಮಾಡಿ ನಾವೂ ಆರೋಗ್ಯವಂತರಾದೇವು, ಯೋಗಪಟುಗಳಾಗಿದ್ದೇವೆ ಎಂಬ ಭ್ರಮೆ ಆವರಿಸುತ್ತದೆ.  ಹೆತ್ತವರ ದಿನದಂದು ಅಪ್ಪ ಅಮ್ಮನ ನೆನಪಾದಂತೆ ಯೋಗದಿನ ಯೋಗದ ಆಚರಣೆಯಾಗುತ್ತದೆ. ಮತ್ತೆ ಮುಂದಿನ ವರ್ಷದ ತನಕವೂ ಅದರ ಜ್ಞಾಪಕವೇ ಇರುವುದಿಲ್ಲ. 

ನಿಯಮಬದ್ದವಾದ ಜೀವನಕ್ರಮವೇ ಯೋಗ. ಕಸರತ್ತು ವ್ಯಾಯಾಮ ಮಾಡುವುದಕ್ಕಿಂತಲೂ ಅಲ್ಲಿ ನಿಯಮವನ್ನು ಅನುಸರಿಸುವುದು ಪ್ರಧಾನವಾಗಿಬಿಡುತ್ತದೆ. ಚಿತ್ತವೃತ್ತಿಯಿಂದ ದೂರವಿದ್ದು ಒಂದು ಜೀವನ ಕ್ರಮವನ್ನು ಅನುಸರಿಸಬೇಕು. ಮನಸ್ಸು ನಿಯಂತ್ರಣದಲ್ಲಿರಬೇಕು. ಯೋಗದ ದಿನವೇ ಮನಸ್ಸು ನಿಯಂತ್ರಣವನ್ನು ಮೀರುತ್ತದೆ. ಏನೇನೋ ಚಿತ್ತವಿಕಾರಗಳು ಆವರಿಸಿದ್ದರೆ ಅದು ಯೋಗಾಭ್ಯಾಸವಾಗುವುದಕ್ಕೆ ಸಾಧ್ಯವಿಲ್ಲ. 

ಯೋಗಾಸನ ಅಂದರೆ ಕೆಲವೊಂದು ಭ್ರಮೆಯಿಂದ ಮೊದಲು ಹೊರಗೆ ಬರಬೇಕು. ಕೃತಿಗಿಂತಲೂ  ಶಿಸ್ತು ನಿಯಮ ಪಾಲನೆ ಇಲ್ಲಿ ಅತೀ ಮುಖ್ಯ.  ಕಷ್ಟದ ಆಸನ ಮಾತ್ರ ಯೋಗಾಸನವಲ್ಲ. ಅತ್ಯಂತ ಸರಳವಾದ ಲಘುವಾದ ಆಸನಗಳು ಹಲವು ಸಲ ಹೆಚ್ಚು ಪ್ರಯೋಜನಕಾರಿಯಾಗಿ ಪರಿಣಾಮವನ್ನು ನೀಡುತ್ತದೆ. ಮನಸ್ಸಿಗೆ ನಿರಾಳತೆಯನ್ನು ಒದಗಿಸುತ್ತದೆ.  ಆದರೆ ಕಷ್ಟದ ಆಸನಗಳಿಗೆ ಎಲ್ಲರೂ ಹೆಚ್ಚು ಆಕರ್ಷಿತರಾಗುತ್ತಾರೆ.  ಯಾವುದೋ ಕಷ್ಟದ ಆಸನ ಮಾಡುವಾಗ ಮನಸ್ಸು ಒತ್ತಡವನ್ನು ಅನುಭವಿಸುತ್ತದೆ. ಅದು ಸಾಧ್ಯವಾಗದೇ ಇದ್ದಾಗ ಹತಾಶೆಗೊಳಗಾಗುತ್ತದೆ. ಹಾಗಾಗಿ ಸರಳವಾದ ಲಘು ಆಸನಗಳನ್ನು ನಿತ್ಯ ಮಾಡಬೇಕು.  ಇದರಲ್ಲಿ ಪರಿಣಾಮದ ಜತೆಗೆ ಮಾನಸಿಕ ನೆಮ್ಮದಿ ಇರುತ್ತದೆ. ತುಂಬ ಆಸನ ಮಾಡಿದರೆ ಹೆಚ್ಚು ಪರಿಣಾಮ ಎಂಬ ಭ್ರಮೆ ಸರಿಯಲ್ಲ. ಹತ್ತು ಹದಿನೈದು ನಿಮಿಷ ಆಸನಗಳನ್ನು ಮಾಡಿದರೆ ಧಾರಾಳವಾಗುತ್ತದೆ. ಯೋಗಾಭ್ಯಾಸ ಎಂಬುದು ಶಿಕ್ಷೆಯಲ್ಲ. ಅದು ಒಂದು ಭದ್ರವಾದ ರಕ್ಷೆ. ನಿಯಮ ಮೀರಿ ತಿಳಿಯದೇ ಇದನ್ನು ಮಾಡಿದರೆ ಇದು ಶಿಕ್ಷೆಯಾಗಿ ಪರಿಣಮಿಸುತ್ತದೆ. ಅಂತರ್ಜಾಲವನ್ನು ನೋಡಿ, ಯಾರೋ ಮಾಡಿದ್ದನ್ನು ನೋಡಿ ಯೋಗಾಭ್ಯಾಸ ಮಾಡುವುದು ದೊಡ್ಡ ತಪ್ಪು. ಯಾಕೆಂದರೆ ಪ್ರತಿಯೊಬ್ಬರ ದೇಹ ಪ್ರಕೃತಿ ವೆತ್ಯಸ್ತವಾಗಿರುತ್ತದೆ. ಪ್ರತೀ ದೇಹದ ಆವಶ್ಯಕತೆಗಳೂ ಬೇರೆ ಬೇರೆಯಾಗಿರುತ್ತದೆ. ಇದನ್ನು ತಿಳಿಯದೆ ಮಾಡುವುದು ದೊಡ್ಡ ಮೂರ್ಖತನವಾಗಬಹುದು. ಭುಜಂಗಾಸನ, ಬಾಲಾಸನ ವಜ್ರಾಸನ ಹೀಗೆ ಸರಳವಾದ ಆಸನಗಳನ್ನು ಬಿಡದೆ ಮಾಡಬೇಕು. ಇವುಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. 

ಯೋಗಾಭ್ಯಾಸ ಕೇವಲ ಒಂದೆರಡು ಘಂಟೆಯ ಕ್ರಿಯೆಯಲ್ಲ. ದಿನದ ಇಪ್ಪತ್ತನಾಲ್ಕು ಘಂಟೆಯೂ ಅದರ ಆಚರಣೆಯಾಗಬೇಕು. ಆಸನ ಪ್ರಾಣಾಯಾಮಕ್ಕಿಂತಲು ಯೋಗದ ನಿಯಮಗಳು ಅತೀ ಮುಖ್ಯ . ಯಮ ನಿಯಮ ಆಚರಿಸಿದ ನಂತರೆವೇ ಆಸನ ಪ್ರಾಣಾಯಾಮ. ನಮ್ಮ ದೈನಂದಿನ ಚಟುವಟಿಕೆಗಳು  ಸೇವಿಸುವ ಆಹಾರ ಕ್ರಮಗಳು ಇವುಗಳು ಯೋಗಾಭ್ಯಾಸಕ್ಕೆ ಪೂರಕವಾದ ಸಂಬಂಧ ಹೊಂದಿರಬೇಕು. ಮುಖ್ಯವಾಗಿ ನಾವು ಭ್ರಮೆಯಿಂದ ಹೊರಬರಬೇಕು. ಇತ್ತೀಚೆಗೆ ಯೋಗದಿನದ ಕೆಲವರ ಯೋಗಾಭ್ಯಾಸವನ್ನು ನೋಡಿದಾಗ ಇದು ಪರಮ ಮೂರ್ಖತನ ಅಂತ ಅನ್ನಿಸುತ್ತದೆ. ಮುಖ್ಯವಾಗಿ ನಾವು ಸರಳವಾಗಿರಬೇಕು. ಆಧುನಿಕ ಐಷಾರಾಮ ಜೀವನದಿಂದ ಆದಷ್ಟು ದೂರವಿರಬೇಕು. ಉಡುಗೆ ತೊಡುಗೆ ಎಲ್ಲವೂ ಸರಳವಾಗಿದ್ದಷ್ಟು ಅದು ಜೀವನಕ್ಕೆ ಹತ್ತಿರವಾಗಿ ಮನಸ್ಸಿಗೆ ನಿರಾಳತೆಯನ್ನು ಒದಗಿಸುತ್ತದೆ. 



Thursday, June 4, 2026

ಪರಿಶುದ್ದ

   

ನಮ್ಮಲ್ಲಿರುವ ಕೆಟ್ಟ ದೌರ್ಬಲ್ಯಗಳನ್ನು ದೂರ ಮಾಡುವುದೇ ಪರಿಶುದ್ದಿ

      ಮುಂಜಾನೆ ನಾಲ್ಕು ಘಂಟೆಗೆ ಎದ್ದು ಸ್ನಾನ ಮಾಡಿ ಮಡಿ ಉಟ್ಟು ಪೂಜೆಗೆ ಹೂವಿಗಾಗಿ ಮನೆಯ ಕಂಪೌಡ್ ಗೋಡೆಯ ಪಕ್ಕ ಇರುವ ಹೂವಿನ ಗಿಡದ ಬಳಿಗೆ ನಿತ್ಯದಂತೆ ಬರುತ್ತೇನೆ. ನಮ್ಮ ಬೀದಿ ಹಲವಾರು ಮನೆ ಇರುವ ಒಂದು ಬೀದಿ. ಇದು ಹಗಲಲ್ಲಿ ಸಾಕಷ್ಟು ಚಟುವಟಿಕೆಯಿಂದ ಇರುವ ಬೀದಿ. ಶಾಲೆಗೆ ಹೋಗುವ ಮಕ್ಕಳು ಶಾಲೆ ಮುಗಿಸಿ ಬಂದು ಆಟ ಆಡುತ್ತಾರೆ, ಇನ್ನು ತಳ್ಳುಗಾಡಿಯಲ್ಲಿ ತರಕಾರಿ ಮುಂತಾದವನ್ನು ತಂದು ವ್ಯಾಪಾರ ಮಾಡುವವರು ಓಡಾಡುತ್ತಾರೆ. ಕೆಲಸ ಕಛೇರಿಗೆ ಹೋಗುವವರು ಬರುವವರು, ಅವರ ವಾಹನಗಳ ಸಂಚಾರ ಬೀದಿ ಹಗಲಿಡೀ ಸದ್ದು ಮಾಡುತ್ತಿದ್ದರೆ, ಮುಂಜಾನೆ ಮಲಗಿ ನಿಶ್ಯಬ್ದವಾಗಿ ವಿಶ್ರಾಂತಿ ಮಾಡುತ್ತದೆ. ಯಾರೋಬ್ಬರೂ ಇಲ್ಲದೇ ಇದ್ದರೂ ಕೆಲವೊಮ್ಮೆ ಕೆಲವರು ಓಡಾಡಿ ಬೀದಿಯ ವಿಶ್ರಾಂತಿಯನ್ನು ಕೆಡಿಸುತ್ತಾರೆ. ನಾನು ಮುಂಜಾನೆ ಮಡಿ ಉಟ್ಟು ಹೂ ಕೊಯ್ಯುವುದಕ್ಕೆ ಬುಟ್ಟಿ ಹಿಡಿದು ಬಂದರೆ ಒಂದು ಬಾರಿ ಬೀದಿಯ ಆ ತುದಿಯಿಂದ ಈ ತುದಿಯವರೆಗೂ ನೋಡುತ್ತೇನೆ. ಈಗ ವಿಶ್ರಾಂತಿಯ ಬೀದಿ ಸುಂದರವಾಗಿ ಕಾಣುತ್ತದೆ. ಆ ನಿಶ್ಯಬ್ದ ಶಾಂತ ಪರಿಸರ ಮನಸ್ಸಿಗೆ ಒಂದು ಆಹ್ಲಾದತೆಯನ್ನು ಒದಗಿಸುತ್ತದೆ.  ನಾನು ದೇವರ ಶ್ಲೋಕವನ್ನು ಹೇಳುತ್ತಾ ಹೂವನ್ನು ಕೀಳುತ್ತಿದ್ದರೆ ಆ ಮೌನದಲ್ಲಿ ನಾನು ಮತ್ತು ಆರಧಿಸುವ ಭಗವಂತ ಮಾತ್ರವೇ ಅಂತ ಭಾವನೆ ಬಂದು ಬಿಡುತ್ತದೆ. 

ಬೀದಿ ಶಾಂತವಾದಿದ್ದರೂ ನಮ್ಮ ಮನೆಯ ಪಕ್ಕದ ಮನೆಯಲ್ಲಿ ಕೆಲವೊಮ್ಮೆ ಗದ್ದಲ ಕೇಳಿಸುತ್ತಿರುತ್ತದೆ. ಅ ಮನೆಯಲ್ಲಿ ವಾಸಿಸುವಾತ ಕೆಲವು ಸಲ ಮದ್ಯ ಸೇವಿಸಿ ಬರುವುದೇ ಬೆಳಗಿನ ಜಾವ. ನಾನು ಎದ್ದೇಳುವ ಹೊತ್ತಿಗೆ ತೂರಾಡುತ್ತಾ ದ್ವಿಚಕ್ರವಾಹನದಲ್ಲಿ ಬರುತ್ತಾನೆ. ಆ ಹೊತ್ತಿಗೆ ಮದ್ಯಪಾನ ಪರೀಕ್ಷಿಸುವ ಪೋಲೀಸರು ಯಾರೂ ಇರುವುದಿಲ್ಲ ಅಂತ ಕಾಣುತ್ತದೆ. ಅಥವಾ ಎಲ್ಲಾದರೂ ಕುಡಿದು ಎಲ್ಲೊ ಉಳಿದು ರಾತ್ರಿ ಬರಲಾಗದೇ ಹೀಗೆ ಮುಂಜಾನೆ ಎದ್ದು ಬರುತ್ತಾನೆ. ಬಂದವನು ಮಲಗಿದ್ದ ಮನೆಯಾಕೆಯನ್ನು ಬಾಗಿಲು ಜೋರಾಗಿ ಬಡಿದೇ ಎಬ್ಬಿಸುತ್ತಾನೆ. ಬಾಯಿ ತೆಗೆದರೆ ಸಾಕು ಅವಾಚ್ಯ ಶಬ್ದಗಳ ಬೈಗುಳ ಅದೂ  ಆ ಮುಂಜಾನೆ ಕೇಳಿಸುತ್ತದೆ. ಭಗವಂತನ ಸ್ಮರಣೆಯಲ್ಲಿರಬೇಕಾದ ಹೊತ್ತಿನಲ್ಲಿ ಹೀಗೆ ಅಮಲೇರಿಸಿ ಕೆಟ್ಟದಾಗಿ ಬೈಯುತ್ತಿರುವುದನ್ನು ಕಂಡರೆ ಹಲವು ಸಲ ಮನಸ್ಸು ಮರುಗುತ್ತದೆ. ಮನೆಯೊಳಗೆ ಹೋದವನೇ  ದೊಡ್ಡದಾಗಿ ಸೌಂಡ್ ಬಾಕ್ಸ್ ನಲ್ಲಿ ಸಿನಿಮಾ ಹಾಡುಗಳನ್ನು ಹಾಕುತ್ತಾನೆ. ಇಷ್ಟೂ ಕೆಟ್ಟ ಹಾಡುಗಳು ಇವೆಯೇ ಅಂತ ಅನ್ನಿಸುತ್ತದೆ. ಅದನ್ನು ರಚಿಸಿದವರ ಬಗ್ಗೆ ತಾತ್ಸಾರ ಉಂಟಾಗುತ್ತದೆ ಹಲವು ಸಲ ಇಂತಹ ಸಂದರ್ಭಗಳಲ್ಲಿ ಹಾಡುಗಳು ಕೆಟ್ಟದು ಅಂತ ಅನ್ನಿಸುತ್ತದೆ .  ಇನ್ನು ಯಾರಾದರೂ ಎದ್ದು ನಿದ್ದೆಯ ಮಂಪರಿನಲ್ಲಿ ಹೊರಗೆ ಬಂದು ಸದ್ದು ಕಡಿಮೆ ಮಾಡುವಂತೆ ಹೇಳಿದರೆ ಮುಗಿದು ಹೋಯಿತು. ಬೈಗುಳಗಳ ಸುರಿಮಳೆಯಲ್ಲಿ ಅವರ ವಂಶ ಉದ್ದಾರವಾಗುವಂತೆ ಮಾಡಿಬಿಡುತ್ತಾನೆ. ಬಾಯಿ ತೆಗೆದರ ಅವ್ವನ್ ಅಂತ ಶುರು ಮಾಡುವ ಇವನಿಂದ ಹೆತ್ತ ಅಮ್ಮನಿಗೆ ಕೆಟ್ಟ ಬೈಗುಳಗಳನ್ನು ತಿನ್ನಿಸುವುದೇಕೆ ಅಂತ ಕೆಲವರು ಅಂಜಿ ಸುಮ್ಮನಿರುತ್ತಾರೆ. ಮನೆಯ ಫ್ಯಾನ್ ಜೋರಾಗಿ ಹಾಕಿ ಬಾಗಿಲು ಮುಚ್ಚಿ ಶಬ್ದಕೇಳಿಸದಂತೆ ಪ್ರಯತ್ನಿಸುತ್ತಾರೆ. ಆತನಿಗೆ ಯಾರ ಭಯವೂ ಇಲ್ಲ. ಅವನ ಅನಾಗರೀಕತೆಗೆ ಆತನಿಗೆ ಭಯ ಪಡುವ ಅಗತ್ಯವೂ ಇರುವುದಿಲ್ಲ. ಕೆಸರಿಗೆ ಕಲ್ಲು ಎಸೆಯುವ ಪ್ರಯತ್ನ ಯಾರೂ ಮಾಡದೇ ಆತ ಸ್ಚಚ್ಛಂದವಾಗಿ ಇದ್ದುಬಿಡುತ್ತಾನೆ. 

ಇಂದೂ ಸಹ ಎಂದಿನಂತೆ ಮುಂಜಾನೆ ಮನೆ ಎದುರು ಬಂದೆ. ಬೀದಿಯ ತುದಿಯಿಂದ ಪಕ್ಕದ ಮನೆಯಾತ ಬೈಕ್ ನಲ್ಲಿ ಬರುತ್ತಿದ್ದ. ಆ ರಾತ್ರಿಯೂ ದೊಡ್ಡದಾಗಿ ಹಾರ್ನ್ ಮಾಡುತ್ತಾ ಬಂದು ಮನೆ ಎದುರು ನಿಲ್ಲಿಸಿದ. ಮೊಬೈಲ್ ನಲ್ಲಿ ಯಾರೊಂದಿಗೋ ಅರಚಿ ಮಾತನಾಡುತ್ತಿದ್ದ. ಮಾತನಾಡುತ್ತಿದ್ದುದಕ್ಕಿಂತಲೂ ಜಗಳವಾಡುತ್ತಿದ್ದ. ಆ ಕೆಟ್ಟ ಭಾಷೆ ಆ ಮುಂಜಾನೆ ಕೇಳುವುದೇ  ಒಂದು ದುರ್ದೈವ. ಬೈಕ್ ಸ್ಟಾಂಡ್ ಹಾಕಿ ನಿಲ್ಲಿಸಿದ. ಹೀಗೆ ಹೇಳುವುದಕ್ಕಿಂತ ಬೈಕ್ ತಾನಾಗಿಯೇ ಸಾವರಿಸಿ ನಿಂತುಕೊಂಡಿತು ಎಂದರೆ ಸೂಕ್ತ. ಹಾಗೇ ನಿಂತವನು ಮೊಬೈಲ್ ಸಂಭಾಷಣೆಯಲ್ಲಿ ತಲ್ಲೀನನಾದರೂ ನನ್ನೆಡೆಗೆ ನೋಡುತ್ತಿದ್ದ. ನಾನು ಆತನ ಕಡೆಗೆ ಗಮನ ಹರಿಸುವುದನ್ನು ಬಿಟ್ಟು ನನ್ನ ಕೆಲಸದಲ್ಲಿ ನಿರತನಾದೆ. ಸಾಮಾನ್ಯವಾಗಿ ನಾನು ಆತನಲ್ಲಿ ಮಾತನಾಡುವುದಕ್ಕೆ ಹೋಗುತ್ತಿರಲಿಲ್ಲ. ಏನಿದ್ದರೂ ಪರಿಚಯದ ಕಿರುನಗುವಿಗೆ ಸೀಮಿತ. ಯಾಕೆಂದರೆ ಇಂತಹ ವ್ಯಕ್ತಿಗಳಿಂದ ದೂರವಿರುವುದು ನಮ್ಮ ಸ್ವಾಸ್ಥ್ಯಕ್ಕೆ ಉಚಿತ.  ಅಪ್ಪಿ ತಪ್ಪಿ ಒಂದೆರಡು ಹೆಚ್ಚು ಮಾತನಾಡಿದರೂ ಆತನ ಸಂಸ್ಕಾರ ಹೀನ ಮಾತುಗಳನ್ನು ಅರಗಿಸಿಕೊಳ್ಳುವ ಧೈರ್ಯ ನನ್ನಲ್ಲಿ ಇಲ್ಲ.   ನಾನು ಶ್ಳೋಕ ಪಠಣದಲ್ಲಿ ತಲ್ಲೀನನಾದೆ.

ಇನ್ನೇನು ಹೂ ಕೀಳುವುದು ಮುಗಿಸಿ ಮನೆಯೊಳಗೆ ಹೋಗಬೇಕು ಎನ್ನುವಾಗ ಆತ ಮೊಬೈಲ್ ಜಗಳವನ್ನು ನಿಲ್ಲಿಸಿ ನನ್ನ ಬಳಿಗೆ ಬಂದು ಶಿರ ಸೊಂಟ ಬಗ್ಗಿಸಿ ನಮಸ್ಕರಿಸಿ, "ನಮಸ್ಕಾರ"  ಎಂದ.  ನಾನು ಗಾಬರಿಯಾದೆ. ಇದನ್ನು ನಿರೀಕ್ಷಿಸಿರಲಿಲ್ಲ. ನಾನು ಮತ್ತೂ ದೂರ ಸರಿದು ನಮಸ್ಕಾರ ಎಂದು ಮನೆಯೊಳಗೆ ಕಾಲಿಡುವುದಕ್ಕೆ ಮುಂದಾದೆ. ಆತ ಹೇಳಿದ " ನೀವೆ ಪುಣ್ಯವಂತರು ಸಾರ್, ಬೆಳ್ಳಂ ಬೆಳಗ್ಗೆ ಎದ್ದು ಸ್ನಾನ ಮಾಡಿ ಪೂಜೆ ಮಾಡ್ತೀರಾ. ನಾನು ನೋಡಿ ಜಗಳ ಮಾಡ್ತಾ ಇದ್ದೇನೆ".  ನಾನು ಹೇಳಿದೆ, " ನೀನೂ ಭಗವಂತನ ನಾಮ ಸ್ಮರಣೆ ಮಾಡು ಸಾಕು. ಬದಲಾಗ್ತಿಯಾ. ಪೂಜೆ ಏನೂ ಖಡ್ದಾಯ ಅಲ್ಲ. ಭಕ್ತಿ ಶ್ರದ್ದೆ ಮುಖ್ಯ" ನಾನು ಹೆಚ್ಚಿಗೆ ಉಪದೇಶ ಕೊಡುವ ಕೆಲಸಕ್ಕೆ ಕೈ ಹಾಕುವುದಿಲ್ಲ. ಯಾಕೆಂದರೆ ಅದೆಲ್ಲ ವ್ಯರ್ಥ. ನಾವು ಶ್ರೇಷ್ಠರು ಅಂತ ತೋರಿಸಿಕೊಡುವುದಕ್ಕೆ ಹಲವು ಸಲ ಈ ಉಪದೇಶಗಳು ಬಳಕೆಯಾಗುತ್ತವೆ. ಉಪದೇಶ ಪಡೆದವನೂ ಬದಲಾಗಲ್ಲ, ಕೊಟ್ಟವನೂ ಅತ್ಯುತ್ತಮನೇನೂ ಅಲ್ಲ.  ಇದು ವಾಸ್ತವ. 

ಆತ ನಗುತ್ತ ಹೇಳಿದ, " ಇಲ್ಲ ಸಾರ್, ನಮಗೆ ಅದಕ್ಕೆ ಮನಸ್ಸು ಬರಲ್ಲ ಸಮಯವೂ ಸಿಗೋದಿಲ್ಲ. ನಾವು ಇರೋದೆ ಹೀಗೆ.  ಏನು ಮಾಡೋದು ಹೇಳಿ" ನನಗೆ ನಗು ಬಂತು. ಹೌದು ಹೀಗೆ ಮಾಡುವವರು ಇರೋದೇ ಹೀಗೆ. ಕೆಟ್ಟದ್ದು ಅಂತ ಗೊತ್ತಿದ್ದರೂ ಅದನ್ನೇ ಮಾಡುತ್ತಾರೆ. ;ಮತ್ತದನ್ನೇ ದೊಡ್ಡ ಮನಸ್ಸಿನಿಂದ ಅಂತ ಒಪ್ಪಿಕೊಳ್ಳುತ್ತಾರೆ. ಅದೊಂದು ರೀತಿ ಕರುಣೆ ಹುಟ್ಟಿಸಿ ದುರಂತ ನಾಯಕನಾಗುವ ಮನೋಭಾವ. ಸಿನಿಮಾದಲ್ಲಿ ಸಂಭಾಷಣೆಗಳು ಇರುತ್ತವೆ. " ನಾನೆಷ್ಟು ಕೆಟ್ಟವಾಂತ ಗೊತ್ತಿಲ್ಲ. ತಲೆ ಕೆಟ್ಟರೆ ನಾನು ಏನೂ ಮಾಡುತ್ತೇನೆ. ಸುಮ್ಮನೇ ಕೆಣಕಬೇಡ" ಕೆಟ್ಟದ್ದೂ ಅಂತ ಗೊತ್ತಿದ್ದರೂ ಅದನ್ನು ಮಾಡುವುದಕ್ಕೆ ಯಾರು ಕಾರಣ? ವಂಚನೆ ಮಾಡಿ ವಿಶಾಲ  ಮನಸ್ಸಿನಿಂದ ಅದನ್ನು ಒಪ್ಪಿಕೊಳ್ಳುವುದು ಒಂದು ರೀತಿ ಉಳಿದವರನ್ನೂ ವಂಚಿಸಿದಂತೆ. ಕೆಟ್ಟದ್ದು ಮಾಡುವವರಿಗೆ ಗೊತ್ತಿರುತ್ತದೆ ನಾನು ಕೆಟ್ಟದ್ದನ್ನೇ ಮಾಡುತ್ತೇನೆ ಎಂದು. ಕಳ್ಳನಿಗೆ  ಕದಿಯುವುದು ತಪ್ಪು ಅಂತ ಗೊತ್ತಿರುತ್ತದೆ. ಅದಕ್ಕೆ ಅವನು ಕದಿಯುವಾಗ ಯಾರೂ ಇಲ್ಲದಾಗ ಕದ್ದು,  ಯಾರೂ ನೋಡದಂತೆ ಎಚ್ಚರ ವಹಿಸುತ್ತಾನೆ. ಅದರಂತೆ ಇದು. ಗೊತ್ತಿದ್ದು ಕೆಟ್ಟದ್ದು ಮಾಡುವುದಿದ್ದರೆ ಅದು ಕ್ಷಮಾರ್ಹವಾಗುವುದಿಲ್ಲ. ಆದರೂ ಅದನ್ನು ಒಪ್ಪಿಕೊಂಡು ಒಂದು ರೀತಿಯಲ್ಲಿ ಕಥಾನಾಯಕನಾಗುವ ಹಂಬಲ. 

ನಾನು ಆತನಿಗೆ ಹೇಳಿದೆ ಮನುಷ್ಯ ಒಳ್ಳೆಯವನಾಗಬೇಕಿದ್ದರೆ, ಪೂಜೆ ಹೋಮ ಹವನ ಮಾಡಲೇ ಬೇಕೆಂದೇನೂ ಇಲ್ಲ. ಅದು ವಿಧಾನ ಅಷ್ಟೇ. ವಾಲ್ಮೀಕಿ ಕೇವಲ ರಾಮ ನಾಮ ಹೇಳಿ ಮಹಾ ಋಷಿಯಾದ. ನೀನು ಅಷ್ಟೇ ಭಗವಂತನ ನಾಮ ಸ್ಮರಣೆ ಮಾಡು. ಬದಲಾಗುವ ಪ್ರಯತ್ನ ತನ್ನಿಂತಾನಾಗಿ ಪ್ರಚೋದನೆಯಾಗುತ್ತದೆ. ಅದರೆ ಅದು ಕಳ್ಳ ಕದಿಯುವುದಕ್ಕೆ ಹೋಗುವಾಗ ದೇವರ ಪ್ರಾರ್ಥನೆ ಮಾಡಿದಂತೆ ಆಗಬಾರದು ಅಷ್ಟೇ.  ಹೋಮ ಹವನ ಪೂಜೆ ಮಾಡಿದವರೆಲ್ಲರೂ ಒಳ್ಳೆಯವರು ಆಗುವುದಕ್ಕೆ ಸಾಧ್ಯವಿಲ್ಲ. ರಾಕ್ಷಸರೂ ತಪಸ್ಸು ಮಾಡಿಯೇ ಕೆಟ್ಟವರಾಗುತ್ತಿದ್ದರು. ಅದು ಅಹಂಕಾರದಿಂದ. ಮೊದಲು ನಮ್ಮೊಳಗಿರುವ ಅಹಂ ಎಂಬುದನ್ನು ಬಿಡಬೇಕು. ಅಹಂ ಎಂಬುದು ಕೆಟ್ಟದನ್ನೇ ಪ್ರಚೋದಿಸುತ್ತದೆ. ಮೊದಲು ಸನ್ಮನಸ್ಸು ಇರಬೇಕು. ಮತ್ತೆ ಸದ್ಭಾವನೆ ಇರಬೇಕು. ಮಾಡುವ ಕಾರ್ಯದಲ್ಲಿ ಉದ್ದೇಶ ಶುದ್ಧಿ ಇರಬೇಕು. ಆಗ ಕೆಟ್ಟ ಯೋಚನೆ ನಿನ್ನ ಬಳಿಗೆ ಬರುವುದಕ್ಕೂ ಹಿಂಜರಿಯುತ್ತದೆ. ನೀನು ಬಳಿಗೆ ಬರುವುದಕ್ಕೆ ಅಂಜಿದಂತೆ. ನಾನು ನಿನ್ನ ಸಂಪರ್ಕಕ್ಕೆ ಬಂದರೆ ನಾನು ಕೆಡಬಹುದು. ನನ್ನ ಪರಿಶುದ್ದಕ್ಕೆ ನಾನು ಎಲ್ಲದರಿಂದ ದೂರವಾಗಿ ಉಳಿದಂತೆ ನೀನು ಎಲ್ಲದರಿಂದ ದೂರಾಗಿ ನಿಲ್ಲು. ಪುಣ್ಯವಂತ ನಾಗುವುದಕ್ಕೆ ಬೇರೆ ಅರ್ಹತೆ ಬೇಡ. ಕೆಸರಲ್ಲಿ ಹುಟ್ಟಿದ ಕಮಲವೂ ಕೆಸರಿನಿಂದ ಹೊರಬರುವುದಕ್ಕೆ ಪ್ರಯತ್ನಿಸುತ್ತದೆ. ಆಗ ಅದಕ್ಕೆ ಸೂರ್ಯನ ದರ್ಶನವಾಗುತ್ತದೆ. ಪರಿಶುದ್ಧನಾಗುವುದೆಂದರೆ ಅದು ಭಗವಂತನ ಸಮೀಪಕ್ಕೆ ಹೋಗುವುದು ಎಂದು ಅರ್ಥ. ಹೊರತು ಅದು ಎಲ್ಲರಿಂದ ಪ್ರತ್ಯೇಕವಾಗುವುದಲ್ಲ. 


Saturday, May 23, 2026

ಚಾರ್ಲಿಯ ಹನಿ ಸುಗಂಧ

ಶ್ರಾವಣ ಕಳೆದು ಮಳೆ ವಿರಳವಾಗಿ  ತುಂತುರು ಮಳೆಯ ಶರದೃತುವಿನ ಕಾಲ. ಒಂದು ರೀತಿಯಲ್ಲಿ ಬಿಡದ ಮಳೆಯಿಂದ ಮುಕ್ತರಾಗಿ ಒಂದಷ್ಟು ಉಲ್ಲಸಿತರಾಗಿ ಹಿತವಾದ ವಾತಾವರಣವನ್ನು ಅನುಭವಿಸುವ ಋತುಮಾನ. ಋತುಸ್ನಾತೆಯಾದ ಪ್ರಕೃತಿ ಮಾತೆ ಅವಧಿ ಮುಗಿದು ಸ್ನಾನ ಮಾಡಿ ಶುಭ್ರವಾಗಿ ತಲೆಗೂದಲಿನಿಂದ ತೊಟ್ಟು ತೊಟ್ಟು ಹನಿಯನ್ನು ಸುರಿಸುತ್ತಾ ಬರುವಂತೆ ಮಳೆ ಅಗಲೋ ಈಗಲೋ ಸುರಿಯುವ ಮಳೆ  ಮನಸ್ಸಿಗೆ ಕೊಡುವ ಉತ್ಸಾಹದ ದಿನಗಳು.  ಹದಿಹರೆಯದ ಮನಸುಗಳಾದರೆ ಈ ಶರದೃತು  ಹೊಸ ಕನಸಿನ ಚಿಗುರನ್ನು ಹುಟ್ಟಿಸಿಬಿಡುತ್ತವೆ. ಅದು ಎಂಭತ್ತರ ದಶಕದ ಕೊನೆಯ ವರ್ಷಗಳು. ಅದು ಹದಿಹರಯದ ಹಸಿ ಯೌವನಿಕೆಯ ಕಾಲ. ಬದುಕನ್ನು ಸಿಹಿಯಾಗಿ ಚೂರು ಚುರು ತುಣುಕಾಗಿ ಅನುಭವಿಸುವ ಹಪ ಹಪಿಕೆ ಇದ್ದರೆ ಅದು ಹದಿ ಹರಯದ ಸಹಜ ಬಯಕೆ. 


ಹದಿಹರಯದಲ್ಲಿ ಬಡತನವಿದ್ದರೆ ಕೇವಲ ಬಾಳಸಂಗಾತಿಯ ಕನಸು ಮಾತ್ರ ಇರುವುದಿಲ್ಲ. ಭವಿಷ್ಯತ್ತಿನ ಭದ್ರತೆ ಒಂದಷ್ಟು ಧನ ಸಂಪತ್ತಿನ ಕನಸೂ ಜತೆಯಲ್ಲಿರುತ್ತದೆ. ವೈದ್ಯ ಹೃದಯದ ಬಡಿತವನ್ನು ಅಳೆದರೆ ಸಂಗಾತಿ ಹೃದಯದ ವಿಸ್ತಾರವನ್ನು ಅಳೆಯುತ್ತಾಳೆ. ಕೇವಲ ಹೃದಯದ ವೈಶಾಲ್ಯತೆ ಬದುಕಿಗೆ ಸಾಕಾಗುವುದಿಲ್ಲ.   ಈ ಪ್ರಜ್ಞೆ ಬದುಕಿನ ತಲೆಯ ಮೇಲಿರು ಭಾರವನ್ನು ಹೆಚ್ಚಿಸುತ್ತದೆ.  ತಲೆಯ  ಭಾರ, ಹೃದಯದ ಭಾವನೆ ಕಾಣುವ ಕನಸು ನಡುವಿನ ಈ ದಿನಗಳಲ್ಲಿ ಆಕೆ ಮನೆಗೆ ಬರುತ್ತಾಳೆ ಎಂಬ ಪತ್ರ ಮನೆಗೆ ಬಂದಾಗ ಕನಸು ವಾಸ್ತವದ ನನಸಿನ ಕಡೆಗೆ ಮುಖ ಮಾಡಿತ್ತು. ಕೆಲವು ದಿನಗಳ ಹಿಂದೆ ಆಕೆಯ ಮುಖಾಮುಖಿ ಭೇಟಿಯಾಗಿತ್ತು. ಆಕೆಯ ಮನೆಯನ್ನು ಮನೆ ಮಂದಿಯನ್ನು ನೋಡಿ ಛೇ ಇವುಗಳನ್ನು ತೊರೆದು ಆಕೆ ಬಂದಾಳೆ ಎಂಬ ಸಂದೇಹ ಬಾಧಿಸಿತ್ತು. ಇದೆಲ್ಲ ತೊರೆಯಬೇಕಾದರೆ ಇದಕ್ಕಿಂತ ಅಧಿಕವಾಗಿರುವದ್ದು ಬಂದು ಸೇರುವಲ್ಲಿರಬೇಕು.  ಇಲ್ಲದಿದ್ದರೆ ಅದನ್ನು ಒದಗಿಸಿ ಕೊಡಬೇಕು. ಆಗ ಬಂದ ಯೋಚನೆ, ವಾಸ್ತವವನ್ನು ತೋರಿಸಬೇಕು. ಅದನ್ನು ನೋಡಿಯೂ ಆಕೆ ಬಂದರೆ ಆಕೆಯ ಮನೆಯಲ್ಲಿರುವುದಕ್ಕಿಂತಲೂ ಹೆಚ್ಚಿಗೆ ಇಲ್ಲಿರುತ್ತದೆ ಎಂಬ ವಿಶ್ವಾಸ ಮೂಡುತ್ತದೆ. ಆನಂತರ ಇಲ್ಲಿ ಎನುಂಟು ಏನಿಲ್ಲ ಎನ್ನುವುದಕ್ಕಿಂತಲೂ ಇದ್ದುದನ್ನು ಅನುಭವಿಸುವುದಕ್ಕೆ ಮನಸ್ಸು ಸಿದ್ಧವಾಗಿರುತ್ತದೆ. 

  ಹೀಗಿದ್ದರೂ ತನ್ನ ಮನೆಯಲ್ಲಿ ಎನಿದೆ ಎನ್ನುವುದಕ್ಕಿಂತಲೂ ಎನಿಲ್ಲ ಎಂಬ ಕೊರತೆಯ ಅನ್ವೇಷಣೆಯಲ್ಲಿ ಮನಸ್ಸು ಅವಲೋಕಿಸುತ್ತದೆ. ಕೆಲವೊಮ್ಮೆ ಅದನ್ನು ಮರೆಮಾಚಲು ಪ್ರಯತ್ನಿಸುತ್ತದೆ. ಆದರೆ ಇಲ್ಲಿ ಹಾಗಿಲ್ಲ, ಮನೆ ಹೇಗಿದೆಯೋ ಹಾಗೇ ನೋಡಲಿ. ಬಂದು ಸೇರಬೇಕಾದ ಮನೆಗೆ ಯಾವುದೋ ಭ್ರಮೆಯಲ್ಲಿ ಬಂದು ಸೇರುವುದು ಬೇಡ ಎಂಬ ಪ್ರಾಮಾಣಿಕತೆ ಇಲ್ಲಿರುತ್ತದೆ. ಹಾಗಾಗಿಯೇ ವಿಶೇಷ ಸನ್ನಾಹವೇನೂ ಇರಲಿಲ್ಲ. ಒಂದಷ್ಟು ಸ್ವಚ್ಛತೆ ಬಿಟ್ಟರೆ ಮನೆ ಅದೇ ಗುಡಿಸಲಿನಂತೆ ವಿಶೇಷ ಸೌಲಭ್ಯಗಳು ಇಲ್ಲದಂತೆ.  ಹೌದು ಆಕೆ ಬಂದು ಸೇರಬೇಕು. ಅದು ಮನೆಗಿಂತಲೂ ಮನಸ್ಸಿಗೆ ಬಂದು ಸೇರಬೇಕು. ಮನೆ ನಾಳೆ ಬದಲಾಗಬಹುದು. ಆದರೆ ಮನಸ್ಸು ಅದು ಬದಲಾಗುವುದಿಲ್ಲ. ಕನಸಿನ ಸೌಧಕ್ಕಿಂತಲೂ ಮನಸ್ಸಿನ ಸೌಧ ಗಟ್ಟಿಯಾಗಿರುತ್ತದೆ. ಆಗ ಒಂದು ಅತ್ಮ ವಿಶ್ವಾಸ ಜಾಗೃತವಾಗುತ್ತದೆ. ಆಕೆಗೆ ಎಲ್ಲವನ್ನೂ ಮಿರಿದ ಪ್ರೀತಿಯನ್ನು ಪ್ರಾಮಾಣಿಕವಾಗಿ ಕೊಡಬೇಕು. ಎಲ್ಲಕ್ಕಿಂತಲೂ ಸುಲಭವಾಗಿ ಕೊಡಬಹುದಾದ ಸಾಧನವಿದ್ದರೆ ಅದು ಪ್ರೀತಿ ಮಾತ್ರ. 

ಈಗಿನಂತೆ ಆಗ ಮೌಬೈಲ್ ಇಲ್ಲ. ದೂರವಾಣಿಯಂತೂ ಹತ್ತಿರವಿಲ್ಲ. ಮುಖ್ಯ ಸಂವಹನವೆಂದರೆ ಭಾರತೀಯ ಅಂಚೆ ಮತ್ತು ಟೆಲಿಗ್ರಾಫ ಕಛೇರಿ. ಒಂದು ಪತ್ರ ಬರೆದರೆ ತಲುಪುವುದಕ್ಕೆ ಏನಿಲ್ಲವೆಂದರೂ ಐದು ಆರು ದಿನ ಬೇಕು. ಈಗ ವಿಷಯಗಳು ಬಿಸಿ  ಆರುವ ಮೊದಲೇ ಸೇರುವಲ್ಲಿ ರವಾನೆಯಾಗುತ್ತದೆ. ಆಗ ಅದರೆ ಬಿಸಿ ಆರಿಹೋಗಿ ನಂತರ ಅಲ್ಲಿ ಕೈ ಸೇರಿದಾಗ ಬಿಸಿ ಏರುವುದಿದ್ದರೂ ಸಂಗತಿ ಒಂದು ಕಡೆಗೆ ಹಳೆಯದಾಗಿಬಿಡುತ್ತದೆ. ಹಲವು ಸಲ ಏನು ಬರೆದಿದ್ದೇನೆ ಎಂಬುದೂ ಕೂಡ ಮರೆತು ಹೋಗಿರುವ ಸಂಭವವಿದೆ.  ಹಾಗಿರುವಾಗ ಆಕೆ ಬರುತ್ತಾಳೆ ಎಂಬ ಪತ್ರ ಕೈ ಸೇರಿದಾಗ ಆಕೆ ಬರುವ ತನಕ ಅದರ ಬಿಸಿ ಆರಲೇ ಇಲ್ಲ. ಆ ಭಾವನೆಗಳು ಅದರ ಬಿಸಿ ಆರುವುದಕ್ಕೆ ಬಿಡಲಿಲ್ಲ. ದಿನ ಘಳಿಗೆಯ ಅಂತರ ಕಡಿಮೆಯಾಗುವುದನ್ನೇ ಮನಸ್ಸು ಲೆಕ್ಕ ಹಾಕುತ್ತಾ ಕಳೆಯುವುದೆಂದರೆ ಅದೊಂದು ಮಧುರವಾದ ಅನುಭವ. 

ಅಂತೂ ಆ ದಿನ ಆ ಘಳಿಗೆ ಬಂತು. ಮಧ್ಯಾಹ್ನ. ಸೂರ್ಯ ನೆತ್ತಿಗೆ ಏರಿ ಬಿಸಿಯಾಗುವ ಸಮಯ. ಹೃದಯ ಬಡಿತ ಏರಿ ಶರೀರ ಬಿಸಿಯಾದರೂ ಆ ಬಿಸಿಯಲ್ಲಿ ಒಂದು ಹಿತವಾದ ಅನುಭವ. ಮಧ್ಯಾಹ್ನದ ಬಸ್ಸು...ಆ ಬಸ್ಸಿನಲ್ಲೇ ಆಕೆ ಬರುವ ನಿರೀಕ್ಷೆ ಇರುವ ಕಾರಣ ಬಸ್ಸಿನ ಹಾರನ್ ದೂರದಿಂದಲೇ ಕೇಳಿಸುತ್ತದೆ. ಅದೊಂದು ಸೂಚನೆಯಘಂಟಾನಾದಂತೆ, ಆ ಧ್ವನಿ ಈ ಕಿವಿ ಕೇಳಿದಂತೆ ಆ ಕಿವಿಯೂ ಅದೇ ಹೊತ್ತಲ್ಲಿ ಕೇಳಿರುತ್ತದೆ ಎಂಬ ಭಾವನೆಯೇ ರೋಮಾಂಚನವನ್ನು ಉಂಟು ಮಾಡುತ್ತದೆ. ಆಕೆ ಯಾವ ಯೋಚನೆಯಲ್ಲಿರಬಹುದು? ಮನೆಯ ಬಗ್ಗೆ ಇರಬಹುದೇ? ಇಲ್ಲ ಮನದ ಬಗ್ಗೆ ಇರಬಹುದೇ? ಮನಸ್ಸನ್ನು ಒಂದಷ್ಟು ಮೊದಲೇ ಅರಿತಿರುವುದರಿಂದ ಮನೆಯ ಬಗ್ಗೆ ಪರಿಸರದ ಬಗ್ಗೆ ಒಂದಷ್ಟು ಭಾವನೆಗಳು ಇರಬಹುದು. 

ಅಚ್ಚ ಬಿಳಿಸೀರೆಯಲ್ಲಿ ನಸು ಕಂದು ಹೂವನ್ನು ಚಿತ್ರಿಸಿದ ಸೀರೆಯಲ್ಲಿ ಅಪ್ಪ ಅಮ್ಮನ ಜತೆ ತೆಳು ಬಳುಕಿದ ಶರೀರದಲ್ಲಿ  ಆಕೆ ಇಳಿದು ಬರುತ್ತಿದ್ದರೆ ಆಕೆಯ ಹೆಜ್ಜೆ ಎದೆಯ ಮೇಲಿಟ್ಟಂತಾಗಿ ಹೃದಯ ಭಾರವಾದ ಅನುಭವ.  ಮೊದಲೊಮ್ಮೆ ಅಕೆಯ ಭೇಟಿಯಾಗಿರುವುದರಿಂದ ಮೊದಲ ಭೇಟಿಯ ರೋಮಾಂಚನ ಇಲ್ಲದಿದ್ದರೂ ದೇಹದ ಕಂಪನ ಒಂದಿಷ್ಟು ಅಧಿಕವಾಗಿತ್ತು.  ಅದಾಗಲೇ ಔಪಚಾರದ ಮಾತುಗಳು ಕ್ರಿಯೆಗಳು ನಡೆದು, ಅಕೆ ಮನೆಯನ್ನೇಲ್ಲಾ ಸುತ್ತಾಡಿ ನೋಡಿದಳು. ಏನು ಅನ್ನಿಸಿತೋ ಏನೋ ಅಂದುಕೊಂಡು ಮನಸೋ ಇಚ್ಛೆ ಮಾತನಾಡಬೇಕು ಅನ್ನಿಸಿತ್ತು, ಆದರೆ ಅದಕ್ಕೆ ತತ್ಕ್ಷಣಕ್ಕೆ ಅವಕಾಶ ಇರಲಿಲ್ಲ. ಬಂದ ಅತಿಥಿಗಳ ಊಟ ಉಪಚಾರ ಮುಗಿಸಿ  ಕೊನೆಯಲ್ಲಿ ಆಕೆ ಎಂದಳು ಒಂದಿಷ್ಟು ಖಾಸಗಿಯಾಗಿ  ಮಾತನಾಡಬೇಕು. ಆಕೆಯ ಧೈರ್ಯ ತನಗಿಲ್ಲದೇ ಹೋಯಿತಲ್ಲ ಎಂದನಿಸಿದರೂ ಸಂತೋಷದಿಂದ ಮನೆಯ ಹೊರಗೆ ಒಂದಷ್ಟು ದೂರದಲ್ಲಿ ಒಂದು ಬಂಡೆಯ ಮೇಲೆ ಎದುರು ಬದಿರಾಗಿ ಕುಳಿತು ಮಾತನಾಡಿದಾಗ ಆಕೆಗೆ ಮನೆ ಪರಿಸರ ಎಲ್ಲವೂ ಇಷ್ಟವಾಗಿರಬೇಕು. ಆಡುವುದಕ್ಕೆ ಹಲವಿದ್ದರೂ  ಒಂದೂ ಮಾತೂ ಹೊರಡಲಿಲ್ಲ. ಇಷ್ಟವಾಯಿತಾ ಎಂದ ಒಂದು ಪ್ರಶ್ನೆ ಬಿಟ್ಟರೆ ಆಕೆ ಮತ್ತೇನೂ ಕೇಳಿದ ನೆನಪಿಲ್ಲ.  ಆಕೆಯ ಅಮ್ಮ ಮೊದಲೇ ಹೇಳೀದ್ದರು, ತಿಳಿಗಂಜಿಯಾದರೂ ಪರವಾಗಿಲ್ಲ...ಆದರೆ ಆಕೆಯ ನೆಮ್ಮದಿ ಅತಿ ಮುಖ್ಯ. ಇದು ಅತಿಯಾದ ಆತ್ಮ ವಿಶ್ವಾಸ ತುಂಬಿದ ಮಾತುಗಳಾಗಿದ್ದವು.  ಆಗಲೇ ಮನಸ್ಸು ದೃಢವಾಗಿ ನಿರ್ಧರಿಸಿತು, ಏನೇ ಆದರು ಆಕೆಗೆ ಕಣ್ಣೀರು ಬರುವಂತೆ ಮಾಡುವುದಿಲ್ಲ.ಜೀವನದಲ್ಲಿ ನಿರ್ಧಾರ ಮಾತ್ರ ನಮ್ಮದಾಗಿರುತ್ತದೆ. ಆದರೆ ನಿಯತಿ ಅಂದರೆ ನಡೆಯುವುದು ನಮ್ಮ ವಶವಿರುವುದಿಲ್ಲ. ನಗುವಿನಂತೆ ದುಃಖವೂ ಇರುತ್ತದೆ. ಅದು ನಿಜವಾದ ಜೀವನ.  ಕಣ್ಣೀರು ಇದ್ದರೂ ಇರಬಹುದು...ಇಲ್ಲ  ಶ್ರೀರಾಮ ಪಿತೃವಾಕ್ಯ ಪರಿಪಾಲಿಸಿದಂತೆ ನನಗಾಗಿ ಕಣ್ಣೀರು ಮಿಡಿಯದೇ ಸುರಿಸದೇ ಇರಬಹುದು.  ನನ್ನ ನಿರ್ಧಾರ ಹುಸಿಯಾಗಬಾರದಲ್ಲ.  ಸದಾ ನಗುವಿನಲ್ಲೇ ಇರುವ ಆಕೆಯನ್ನು ಊಹಿಸುವುದು ಕಷ್ಟ.

ಸಾಯಂಕಾಲದ ತನಕ ಹತ್ತು ಹಲವು ಮಾತುಗಳಾದವು. ಕೊನೆಯಲ್ಲಿ ಸಮುದ್ರ ನೋಡಬೇಕು ಅನ್ನಿಸಿತು. ಮಲೆನಾಡ ಹೆಣ್ಣಿಗೆ ಅಲ್ಲಿನ  ನದಿ  ಕೆರೆ ಬಾವಿ ಬಿಟ್ಟರೆ ಬೇರೆ ಜಲರಾಶಿಯ ಪರಿಚಯವಿಲ್ಲ. ಹೊರ ಹೋಗುವುದಕ್ಕೆ ಉಡುಪು ಬದಲಿಸಿ ಹೊರಡುವಾಗ ಆಕೆ ಹತ್ತಿರ ಬಂದಳು,  ಕಸೂತಿಯಲ್ಲಿ ಅಲಂಕರಿಸಿದ ಕರವಸ್ತ್ರವನ್ನು ಕೈಯಲ್ಲಿಟ್ಟಳು. ಮೆಲ್ಲಗೆ ಕಿವಿಯಲ್ಲಿ ಪಿಸುಗುಟ್ಟಿದಳು...ನೆನಪಿಗೆ ಇರಲಿ. ಮರೆಯದ ಮನಸ್ಸಿಗೆ  ನೆನಪಿನ ರಾಶಿಯನ್ನೇ ತುಂಬಿದಾಕೆ ಆ ರಾಶಿಯನ್ನು ಮುಚ್ಚಿಕೊಳ್ಳುವುದಕ್ಕೋ ಎನೋ ಪುಟ್ಟ ಕರವಸ್ತ್ರವನ್ನು ಕೈಯಲ್ಲಿರಿಸಿದಳು. ಹಾಗೇ ಅದನ್ನು ಮುಖದ ಬಳಿಗೆ ತಂದರೆ ಚಾರ್ಲಿ ಸೆಂಟ್ ನ ಮಧುರವಾದ ಪರಿಮಳ. ಅದೆಂತಹ ಮಧುರ ಗಂಧ. ಕೋಣೆಯನ್ನೆಲ್ಲಾ ಆವರಿಸಿತ್ತು. ಮತ್ತೂ ಮತ್ತೂಮುಖದ ಬಳಿಗೆ ತಂದೆ. ಎಲ್ಲಿ ಗಂಧ ಕರಗಿ ಆವಿಯಾಗುವುದೋ ಎಂದು ಕೊಂಡು ಪುಟ್ಟ ಪೆಟ್ಟಿಗೆಯಲ್ಲಿ ಕರವಸ್ತ್ರವನ್ನು ಮುಚ್ಚಿಟ್ಟುಬಿಟ್ಟೆ. 

ಎಲ್ಲರೂ ಸಮುದ್ರಕಿನಾರೆಗೆ ತೆರಳಿದೆವು. ಒಂದು ತಾಸು ಸಾಗರದಂಚಿನ ಅಲೆಗಳ ಭೋರ್ಗರೆತ ಕಿವಿಗೆ ಅಪ್ಪಳಿಸಿದರೂ ಆಕೆಯ ಕಿಲ ಕಿಲ ನಗು ಕಿವಿಯಲ್ಲಿ ಅದು ಹೇಗೋ ಎಲ್ಲವನ್ನೂ ಮೀರಿಸಿ ಕೇಳಿಸುತ್ತಿತ್ತು. ನಂತರ ಎಲ್ಲರನ್ನೂ ಬೀಳ್ಕೊಟ್ಟು ಕತ್ತಲಾಗುತ್ತಿದ್ದಂತೆ ಮನೆಗೆ ಬಂದನಂತರ ಮತ್ತದೇ ಕರವಸ್ತ್ರದ ಪೆಟ್ಟಿಗೆಯನ್ನು ತೆರೆದು ನೋಡುವುದನ್ನು ತೆಡೆ ಹಿಡಿಯಲಾಗಲಿಲ್ಲ.  ತೆರೆದು ನೋಡಿದೆ. ಮತ್ತದೆ ಚಾರ್ಲಿಯ ಹನಿ ಸುಗಂದ....... ಇಂದಿಗೂ ಆ ಚಾರ್ಲಿಯ ಹನಿ ಸುಗಂಧದ ಪರಿಮಳವನ್ನು ಮರೆಯುವುದಕ್ಕಿಲ್ಲ.   ಒಂದು ಮಾತ್ರ ಸತ್ಯ ಬದುಕಿನಾದ್ಯಂತ ಹರಡಿದ ಮಧುರ ಸುಗಂಧಕ್ಕೆ ಆ ಚಾರ್ಲಿಯ ಸುಗಂಧವೇ ತರುಲತೆಯ ಚಿಗುರಾಗಿ ಉಳಿದುಬಿಟ್ಟಿತು. 





Wednesday, May 13, 2026

ಬ್ರಾಹ್ಮಣ

     ಬ್ರಹ್ಮಾಂಡ ಎಂಬ ಶಬ್ದವನ್ನು ಉಪಮೆಯಾಗಿ ಆಗಾಧ ಗಾತ್ರವನ್ನು ಕಲ್ಪಿಸುವುದಕ್ಕೆ ಉಪಯೋಗಿಸುತ್ತಾರೆ. ಬ್ರಹ್ಮಾಂಡ  ಗಾತ್ರ.  ಬ್ರಹ್ಮ ಎಂದರೆ ದೊಡ್ಡದು. ಅದು  ಎಂದಿಗೂ ಸಣ್ಣಗಾಗುವುದಕ್ಕೆ ಸಾಧ್ಯವಿಲ್ಲ. ಸಣ್ಣದಾದರೆ ಅದು ಬ್ರಹ್ಮವಾಗಿ ಉಳಿಯುವುದಿಲ್ಲ. ಬ್ರಹ್ಮದ ರೂಪವೇ ಬ್ರಾಹ್ಮಣ. ಆದರೆ ಇಂದು ಬ್ರಹ್ಮ ಅಥವಾ ಬ್ರಾಹ್ಮಣ ಚಿಕ್ಕದಾಗಿ ಬೆಳೆಯದಂತಹ ಅನಿವಾರ್ಯತೆಗೆ ತುತ್ತಾಗುತ್ತಾನೆ.  ಬ್ರಹ್ಮ ಇದರ ಅರ್ಥ ಏನೆಂಬುದರ ಬಗ್ಗೆ ಯೋಚಿಸುವುದಿಲ್ಲ ಯಾಕೆಂದರೆ ಅದನ್ನು ಅಳೆಯುವ ಸಾಮರ್ಥ್ಯ ಕಳೆದುಹೋಗಿರುವುದಕ್ಕೋ ಅಳೆದರೆ ತಾನು ಚಿಕ್ಕದಾಗುವ ಭಯವೋ ಅಂತೂ ಬ್ರಹ್ಮ ಸ್ವರೂಪವೇ ಸಮಸ್ಯೆ ಮಾತ್ರ ಬೃಹದಾಗಿ ತಲೆಯ ಮೇಲೆ ಕುಳಿತಂತೆ ಎಗರಾಡುವಂತಾಗಿದೆ.  ತಾವು ಸ್ವತಃ ಸಣ್ಣಗಾಗಿರುವುದಕ್ಕೋ ಏನೋ? ಬ್ರಾಹ್ಮಣ ಎಂಬ ಶಬ್ದವೇ ಬಹಿಷ್ಕರಿಸುವ ಮನಸ್ಸಾಗುತ್ತದೆ. 

ಬ್ರಾಹ್ಮಣ ಅದೊಂದು ವಿಶಿಷ್ಟ ಪದವಿ. ಬ್ರಹ್ಮ ತತ್ವ ಅರ್ಥವಾದರೆ ಮಾತ್ರ ಈ ಪದವಿಯ ಅರ್ಥವಾಗಬಹುದು. ಆದರೆ ನಮ್ಮಲ್ಲಿ ಅರ್ಥವಾಗದೇ ಇರುವುದನ್ನು ಅರ್ಥವಿಸುವ ಪ್ರಯತ್ನ ಕಷ್ಟಕರ, ಅದಕ್ಕೆ ಅದನ್ನು ಹುಳಿ ಫಲವನ್ನಾಗಿಸಿದರೆ ಅದರ ಸನಿಹದಿಂದ ದೂರವಾಗಬಹುದೆಂಬ ಭ್ರಮೆ ಆವರಿಸಿಬಿಡುತ್ತದೆ. ಕಾರಣ ಇಷ್ಟೇ ಅದರ ಸನಿಹ ಸುಳಿಯುವ ಅರ್ಹತೆಯೂ ಇಲ್ಲ. ಅದರಬಗ್ಗೆ ಮತ್ತಷ್ಟು ಭಯ ಆವರಿಸಿರುತ್ತದೆ.  ಯಾವುದೋ ಒಂದು ಪದವಿಯೋ ಅರ್ಹತೆಯೋ ಶ್ರೇಷ್ಠ ಎಂದು ಕಂಡರೆ ಒಂದೋ ಅದನ್ನುಕೈವಶ ಮಾಡಿಕೊಳ್ಳಬೇಕು. ಅದಕ್ಕೆ ಸಾಧನೆ ಬೇಕು. ಒಂದು ವೇಳೆ ಅದು ಸಾಧ್ಯವಾಗದೇ ಇರುವಾಗ ತಾನೇನೂ ಕಡಿಮೆಯಲ್ಲ ಎಂದು ತಿಳಿದುಕೊಳ್ಳುವುದು. ಇದು ಕೆಲವೊಮ್ಮೆ ಸ್ವಾಭಿಮಾನದ ಸಂಕೇತವಾದರೆ ಹಲವು ಸಲ ಇದು ಸಾಧ್ಯವಾಗದೇ ಮೈ ಪರಚಿಕೊಳ್ಳುವ ಕೀಳರಿಮೆಯಾಗಿ ಬದಲಾಗುವುದೇ ಅಧಿಕ. 

ಎಲ್ಲಾ ಜಾತಿ  ಬದಲಿಸಿ ಹೊಸ ಜಾತಿಗೆ ಬದಲಾಗಬಹುದು.‌ ಆದರೆ ಬ್ರಾಹ್ಮಣ ಯರೋ ಬಂದು ಬದಲಿಸಿ ಅಗುವುದಲ್ಲ.  ಸ್ವತಃ ಆಗುವುದು. ಅದಕ್ಕೆ ಇಚ್ಛಾ ಶಕ್ತಿ ಬೇಕು.  ಯಾರೋ ಬಂದು ಬ್ರಾಹ್ಮಣ ಮಾಡಿ ಬದಲಿಸಿದರೆ ಅದು ಹೊರಾವರಣದ ವೇಷಗಾರಿಕೆಯಷ್ಟೆ ಸಾಧ್ಯ.  ಯಾರೋ ಮಾಡುವುದಕ್ಕೆ ಅದು ಸಾಧ್ಯವಿಲ್ಲ. ‌ಒಂದು ವೇಳೆ ಮಾಡಿದರೂ ಅದು ಉಳಿಯಬೇಕೆಂದೇನೂ ಇಲ್ಲ. ಬ್ರಾಹ್ಮಣ ಆಗಬೇಕೆಂದಿದ್ದರೆ  ಬ್ರಾಹ್ಮಣನಿಗೆ  ಹೋಲಿಸುವುದಕ್ಕಿಂತ ನಾನು ಬ್ರಾಹ್ಮಣ ಅಂತ ತಿಳಿದುಕೊಳ್ಳಬೇಕು. ಮೊದಲಿಗೆ ತನ್ನಲ್ಲಿರುವ ಕೀಳರಿಮೆಯನ್ನು ಬಿಡಬೇಕು.   ಅದರೊಂದಿಗೆ ಹೋಲಿಸುವ ಕೀಳರಿಮೆ ಯಾಕೆ?  ಬ್ರಾಹ್ಮಣ ಎಂದು ತಿಳಿದು ಆ ಹಾದಿಯಲ್ಲಿ ಕಟ್ಟು ನಿಟ್ಟಾಗಿ ಬದುಕಿ‌ನೋಡಬೇಕು. ಯಾರೋ ಬಂದು ಬ್ರಾಹ್ಮಣ ಮಾಡುವುದಲ್ಲ. ಮಾಡಿದರೂ ಅದು ಬ್ರಾಹ್ಮಣ್ಯ ಆಗುವುದಿಲ್ಲ ಜಾತಿ.. ಅಂದರೆ ಹುಟ್ಟಿನಿಂದ ಬರುವದ್ದು.‌ಜಾತ ಅಂದರೆ ಹುಟ್ಟು, ಧರ್ಮ‌ಆನಂತರ ಅನುಸರಿಸಬೇಕು. ಹಾಗಾಗಿ ಜಾತದಿಂದ ಅಂದರೆ ಹುಟ್ಟಿನಿಂದ ಬಂದಿರುವುದರ ಬಗ್ಗೆ ಯೋಚಿಸದೆ ಆನಂತರ ಸಾಧಿಸಬಹುದಾದ ಧರ್ಮದ ಬಗ್ಗೆ ಯೋಚಿಸಬೇಕು. ಜಾತದಿಂದ ಇರುವುದು ಅದು ನಮ್ಮ ಕೈಯಲ್ಲಿ ಇರುವುದಿಲ್ಲ. ಅದನ್ನೇ ಭಗವಂತ ಎನ್ನುವುದು. 

ಬ್ರಾಹ್ಮಣರಿಗೂ ಬ್ರಾಹ್ಮಣ ಹಾದಿಯಲ್ಲಿ ಸಾಗುವುದು  ವರ್ತಮಾನದಲ್ಲಿ ಸುಲಭವಲ್ಲ. ಅದಕ್ಕೆ ಬದ್ದತೆ ಬೇಕು. ಒಂದು ದಿನವಾದರೂ ಇಂದ್ರನಾಗಬೇಕು, ಅರಸನಾಗಬೇಕು ಈಗಿನ ಕಾಲದಲ್ಲಿ ಒಂದು ದಿನವಾದರೂ ಪ್ರಧಾನಿಯಾಗಬೇಕು ಮಂತ್ರಿಯಾಗಬೇಕು ಎಂದು ಕನಸು ಕಾಣಬಹುದು. ಏನೋ ಅದೃಷ್ಟದಿಂದ ಒಂದು ದಿನ ಹಾಗಾಗಿ ಇರಲೂ ಬಹುದು. ಆದರೆ ಬ್ರಾಹ್ಮಣ ಎಂಬುದು ಹೇಗೋ ಬಯಸುವ ಒಂದು ದಿನದ ಪದವಿಯಲ್ಲ.  ಅದು ಅದೃಷ್ಟದ ಬಲದಿಂದ ಒಲಿಯುವ ಪದವಿಯೂ ಅಲ್ಲ. 

ಬ್ರಾಹ್ಮಣನಾಗುವುದಕ್ಕಿಂತಾ ಬ್ರಾಹ್ಮಣನಾಗಿರುವುದು ಕಷ್ಟ. ಅದಕ್ಕೆ ಪರಿಶ್ರಮ ಬೇಕು. ಬ್ರಹ್ಮ ಎಂದರೇನು ಎಂಬ ಅರಿವಿರಬೇಕು. ಬದುಕಿನ ಅಧ್ಯಯನ ಇರಬೇಕು.ಭೂಮಿಯ ಮೇಲೆ ಸುವಸ್ತು ಅಂತ ಯಾವುದಾದರೂ ಇದ್ದರೆ ಅದು ಬೇಗನೆ ಕೆಡುತ್ತದೆ. ಬ್ರಾಹ್ಮಣನಾಗುವುದಕ್ಕೆ ಒಂದೇ ಹಾದಿ ಇದ್ದರೆ , ಕೆಡುವುದಕ್ಕೆ ಹಲವಾರು ಅವಕಾಶಗಳಿರುತ್ತವೆ. ಅದರೆ ನಮ್ಮಲ್ಲಿ  ಕೆಡುವುದೇ ಶ್ರೇಷ್ಠವಾಗುವಾಗ ಬ್ರಾಹ್ಮಣ ಎಂಬುದೇ ಕೆಡುಕಾಗಿ ಕಂಡರೆ ಆಶ್ಚರ್ಯವಾಗುವುದಿಲ್ಲ. ಪಾವಿತ್ರ್ಯ ಎಂದು ಕಂಡು ಕೇಳದೆ ಅರಿವಿಲ್ಲದಿರುವಾಗ ಅಪವಿತ್ರದ ಅರಿವು ಉಂಟಾಗುವುದಿಲ್ಲ.   

ಬಾಲ್ಯದಲ್ಲಿ ಉಪನಯನ ಎನ್ನುವಾಗ ಮಕ್ಕಳಿಗೆ ತುಂಬ ಉತ್ಸಾಹ ಇರುತ್ತದೆ. ಮನೆಯಲ್ಲಿ ದೊಡ್ಡವರಂತೆ ಮಾಡಿದರೆ, ತಾನೂ ದೊಡ್ಡವನಾದೆ ಎಂದು ಬಾಲಕರು ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಆದರೆ ಉಪನಯನ ಆದ ನಂತರ ಹೊತ್ತು ಹೊತ್ತಿಗೆ ಸ್ನಾನ ಮಾಡಬೇಕು. ಸಂಧ್ಯಾವಂದನೆ ಮಾಡಬೇಕು. ಅಟೋಟಗಳಿಗೂ ನಿಬಂಧನೆ ಇರುತ್ತದೆ. ಎಲ್ಲಕ್ಕಿಂತಲೂ ಬೆಳಗ್ಗೆ ಎದ್ದು ಸ್ನಾನ ಮಾಡಿ ಜಪಮಾಡುವ ನಿಬಂಧನೆಯಲ್ಲಿ ಮಕ್ಕಳಿಗೆ ಈ ಉಪನಯನವೇ ಬೇಡ ಅನ್ನಿಸಿಬಿಡುತ್ತದೆ. ಅದರಂತೆ ಬ್ರಾಹ್ಮಣ್ಯವೂ ಆ ಪದವಿಯನ್ನು ನಿರ್ವಹಿಸುವುದೇ ಕಠಿಣ. ಸಹಪಂಕ್ತಿ ಭೋಜನ ಮಾಡಿ  ಹೆಗಲಿಗೆ ಜತೆಯಾಗಿ ಓಡಾಡಿದರೆ, ಅಥವಾ  ಜನಿವಾರ ಧರಿಸಿದರೆ ಬ್ರಾಹ್ಮಣಗನಾಗಬಹುದು ಎಂಬ ಕಲ್ಪನೆ ಇರುತ್ತದೆ. ಆದರೆ ಬ್ರಾಹ್ಮಣನಾಗುವುದು ಅಷ್ಟು ಸರಳ ಸುಲಭವಾಗಿದ್ದರೆ ಆ ಸ್ಥಾನಕ್ಕೆ ಮಹತ್ವ ಇರುತ್ತಿರಲಿಲ್ಲ. ಜತೆಯಲ್ಲಿ ಊಟ ಮಾಡಿದರೆ ಒಂದು ಹೊತ್ತಿನ ಹಸಿವು ನೀಗಬಹುದು, ಆದರೆ ಮನುಷ್ಯ ಜನ್ಮದ ಹಸಿವಿನ ಅರ್ಥವೂ ಆಗುವುದಿಲ್ಲ. ಅದು ಪರಿಹರಿಸಲ್ಪಡುವುದೂ ಇಲ್ಲ. 

ದಿಗ್ಬಲಂ ಕ್ಷತ್ರಿಯ ಬಲಂ ಬ್ರಹ್ಮ ತೇಜೋ ಬಲಂ ಬಲಂ ಎಂದು ಕೊಂಡು ಕೌಶಿಕ ಬ್ರಹ್ಮ ಋಷಿ ವಿಶ್ವಾಮಿತ್ರನಾದ. ಕ್ಷತ್ರಿಯನಾದ ಕೌಶಿಕ ರಾತ್ರಿ ಬೆಳಗಾಗುವುದರಲ್ಲಿ ಬ್ರಾಹ್ಮಣನಾಗಲಿಲ್ಲ. ಆತನನ್ನು ಯಾರೂ ಬ್ರಾಹ್ಮಣನನ್ನಾಗಿ ಪರಿವರ್ತಿಸಿ ಮತಾಂತರ ಮಾಡಿಲ್ಲ. ಸ್ವತಃ ಪರಿಶ್ರಮದಿಂದ ತಪಃ ಶಕ್ತಿಯಿಂದ ಆತ ಮಹಾ ಬ್ರಾಹ್ಮಣನಾಗಿ  ವಿಶ್ವಾಮಿತ್ರನಾಗಿ  ಬದಲಾದ.  ಆದರೆ ಇಂದು ಬ್ರಾಹ್ಮಣನಾಗಬೇಕು, ಆದರೆ ತಪಸ್ಸು ಬೇಡ , ನಿಯಮ ನಿಷ್ಠೆಗಳು ಬೇಡಾ. ಖಡ್ಡಾಯ ಅನುಷ್ಠಾನ ಬೇಡ. ಆದರೆ ಬ್ರಾಹ್ಮಣನಾಗಬೇಕು. ಇದು ಸಿನಿಮಾ ನಾಟಕದಂತೆ ಕೇವಲ ವೇಶದಿಂದ ಬ್ರಾಹ್ಮಣನಾಗಬಹುದು. ವೇಶದಿಂದ ಬ್ರಾಹ್ಮಣನಾಗುವುದಕ್ಕೂ ಕೆಲವೊಮ್ಮೆ ಅರ್ಹತೆ ಇರಬೇಕಾಗುತ್ತದೆ. 

ಬ್ರಾಹ್ಮಣನಾಗುವುದೆಂದರೆ ಸ್ವತಃ ಬ್ರಹ್ಮನಾಗುವುದು. ಸ್ವತಃ ದೇವನಾಗುವುದು. ದೇವರು ಎಂದರೆ ದೇವಾಲಯದಲ್ಲಿ ಕೇವಲ ಮೂರ್ತಿಯಾಗಿ ಇರುವುದಲ್ಲ. ದೇವರು ಎಂದರೆ ಏನು ಎಂಬುದನ್ನು ಅರಿಯಬೇಕು. ಕಣ್ಣಿಗೆ ಕಾಣದಿರುವುದೇ ದೇವರು. ದೇವರನ್ನು ಯಾರೂ ತೋರಿಸುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ದೇವರನ್ನು ಕಂಡವರು ಯಾರೂ ಇಲ್ಲ. ಕಾಣದೇ ಇರುವುದನ್ನು ತೋರಿಸುವುದಕ್ಕೆ ಹೇಗೆ ಸಾಧ್?  ಇದು ದೇವರು ಅಂತ ದೇವರನ್ನು ತೋರಿಸುವುದಕ್ಕೆ ಸಾಧ್ಯವಿಲ್ಲ. ಚರಾಚರ ವಸ್ತುಗಳಿಗಿಂತ ಅತೀತವಾಗಿರುವುದೇ ದೇವರು. ಮನುಷ್ಯ ತನ್ನ ಬುದ್ಧಿಗೆ ಸೀಮಿತವಾಗಿ ದೇವರನ್ನು ಕಲ್ಪಿಸಿಕೊಳ್ಳಬಹುದು. ಆದರೆ ದೇವರನ್ನು ಅರಿಯಬೇಕಾದರೆ ಜನ್ಮವೇ ಸಾಕಾಗುವುದಿಲ್ಲ.  ಹೊರಗೆಲ್ಲೂ ದೇವರು ಕಾಣದಿರುವಾಗ ಸ್ವತಃ ತನ್ನಲ್ಲಿರುವ ದೇವರನ್ನು ಕಂಡುಕೊಳ್ಳುವುದು. ಬ್ರಾಹ್ಮಣನೆಂದರೆ ಅದುವೆ ತನ್ನಲ್ಲೇ ದೇವರನ್ನು ಕಂಡುಕೊಳ್ಳುವುದು. ಬ್ರಾಹ್ಮಣನಿಗೆ ದೇವರನ್ನು ಅರ್ಚಿಸುವುದಕ್ಕೆ ದೇವಾಲಯ ಬೇಡ, ಮೂರ್ತಿಯ ಅವಶ್ಯಕತೆ ಇರುವುದಿಲ್ಲ. ಯಾವುದರಲ್ಲೂ ದೇವರನ್ನು ಆವಾಹಿಸುವುದಕ್ಕೆ ಸಾಧ್ಯವಿರುತ್ತದೆ. ಅರ್ಥ ಎಲ್ಲದರಲ್ಲೂ ದೇವರನ್ನು ಕಂಡು ಸ್ವತಃ ತನ್ನಲ್ಲೇ ದೇವರನ್ನು ಕಂಡು ತಾನೇ ದೇವರಾಗುವುದು. ಹಾಗಾಗಿಯೇ ಬ್ರಾಹ್ಮಣ ಎಂದರೆ ಭೂಸುರನಾಗುತ್ತಾನೆ.  ಅದು ವೃತನಿಷ್ಠನಾಗಿ ಕಠಿಣವಾದ ಸ್ಥಾನ. 

ಭೂಮಿಯ ಮೇಲೆ ತೆಂಗಿನಮರಮಾತ್ರ ಕಲ್ಪವೃಕ್ಷವಾಗುತ್ತದೆ. ಮಾವಿನ ಮರ ಕಲ್ಪವೃಕ್ಷವಾಗುವುದಿಲ್ಲ. ಅದನ್ನು ಕಲ್ಪವೃಕ್ಷ ಎಂದು ತನ್ನ ಅರಿವಿಗೆ ಸೀಮಿತವಾಗಿ ಕಲ್ಪವೃಕ್ಷ ಎಂಬಂತೆ ಭ್ರಮಿಸಬಹುದು. ಆದರೆ ತೆಂಗಿನಮರ ಕಲ್ಪವೃಕ್ಷವಾಗಿಯೇ ಉಳಿಯುತ್ತದೆ. 

Sunday, May 3, 2026

ಭಕ್ತರ ಸೇವೆ



ಮೊನ್ನೆ ಶಬರಿಮಲೆಯಾತ್ರೆಯಲ್ಲಿ ಮುಂಜಾನೆ ಸೂರ್ಯೋದಯದ ಮೊದಲು ಕತ್ತಲೆಯಲ್ಲೇ   ನಾವು ಮಲೆ ಏರುವುದಕ್ಕೆ ಶುರುಮಾಡಿದೆವು. ಹೆಚ್ಚು ಜನಸಂದಣಿ ಇರದಿದ್ದರೂ ಹಲವಾರು ಜನ ಮಲೆ ಏರುವವರು ಇದ್ದರು. ಕೆಳಗಿನಿಂದ ಮೇಲೆ ಸನ್ನಿಧಾನದವರೆಗೂ ಇದ್ದ ಧ್ವನಿ ವರ್ಧಕದಲ್ಲಿ ಖ್ಯಾತ ಗಾಯಗ ಜೇಸುದಾಸ್ ಅವರ ಭಕ್ತಿ ಗೀತೆ ಇಂಪಾಗಿ ಕೇಳಿಬುರುತ್ತಿದ್ದರೆ, ಮಲೆ ಏರುವುದಕ್ಕೆ ಭಕ್ತಿ ಪ್ರೇರಕ ಶಕ್ತಿಯಂತೆ ಪ್ರಚೋದನೆಯಾಗುತ್ತಿತ್ತು. ಬರಿಗಾಲಲ್ಲಿ ಕಲ್ಲಿನ ರಸ್ತೆಯನ್ನು, ಮೆಟ್ಟಲನ್ನು ಏರುವಾಗ ಪಾದಗಳು ನೋಯುತ್ತಿದ್ದರೂ ಅದೊಂದು ಭಕ್ತಿಯ ಭಾವ ಎಲ್ಲವನ್ನು ಮರೆಸುವಂತೆ ಮಾಡುತ್ತಿತ್ತು. ಎಲ್ಲರೂ ಏರುತ್ತಿದ್ದರೆ ಅಲ್ಲೊಂದು ಇಲ್ಲೊಂದು ಅಯ್ಯಪ್ಪ ಶರಣು ಕೂಗು ಕೇಳಿಸುತ್ತಿದ್ದದ್ದು ಬಿಟ್ಟರೆ ಏದುಸಿರೇ ಅಧಿಕ ಕೇಳಿ ಬರುತ್ತಿತ್ತು. ಮುಂಜಾನೆಯ ತಣ್ಣನೆಗಾಳಿಯನ್ನು ಭೇದಿಸಿ ಮೈಯಿಂದ ಬೆವರು ಸುರಿಯುತ್ತಿತ್ತು. 

ಅಪ್ಪಾಚಿ ಮೇಡು ಹತ್ತಿರ ಇರಬೇಕು  ನಾನು ಒಂದರ ಹಿಂದೆ ಒಂದು ಹೆಜ್ಜೆಯನ್ನು ವೇಗವಾಗಿ ಎತ್ತಿಡುತ್ತಾ ಒಂದಷ್ಟು ದೂರ ಬೇಗ ಏರಿ ಹೋಗಿ ಹಿಂದಿರುಗಿ ನೋಡಿದರೆ ನನ್ನಾಕೆ ಮತ್ತು ಮಗ ತುಂಬ ಹಿಂದುಳಿದಿದ್ದರು. ಸುಸ್ತಾದ ನನ್ನಾಕೆ ಮೆಟ್ಟಲ ಬದಿಯಲ್ಲಿದ್ದ ಕಟ್ಟೆಯಲ್ಲಿ ಸುಸ್ತಾಗಿ ಕುಳಿತಿದ್ದಳು. ಯಾರೋ ಒಬ್ಬರು ಆಕೆಗೆ ಬೀಸಣಿಕೆಯಿಂದ ಗಾಳಿ ಹಾಕುತ್ತಿದ್ದರು. ಒಂದು ಕ್ಷಣ ನೋಡಿದರೆ ಗಾಬರಿಯಾಗಬೇಕು. ಆದರೆ ಹಾಗಲ್ಲ. ಹಾಗೆ ಸುಸ್ತಾಗಿ ಯಾರಾದರೂ ಕುಳಿತರೆ ಕೆಲವರು ಬಂದು  ಗಾಳಿ ಹಾಕುತ್ತಾರೆ. ಇದೊಂದು ಬಗೆಯ ವಿಶಿಷ್ಟ ಸೇವೆ. ಶಬರಿ ಮಲೆ ಯಾತ್ರೆ ಎಂದರೆ ಹೀಗೆ ಅಲ್ಲಿ ಎಲ್ಲವೂ ಭಗವಂತನ ಸೇವೆಯಾಗುತ್ತದೆ. ಭಗವಂತನೆಂದರೆ ಭಕ್ತರ ದಾಸ. ದಾಸರ ದಾಸ ಭಗವಂತ ಎಂಬ ಮಾತು ಇದೆ. ಅದಕ್ಕೆ ಪ್ರತೀಕ ಎಂಬಂತೆ ಇಲ್ಲಿ ಭಕ್ತರ ಸೇವೆ ಮಾಡುವುದನ್ನು ಕಾಣಬಹುದು. ಹತ್ತುವ ಇಳಿಯುವ ಭಕ್ತರ ಸೇವೆ ಮಾಡುವುದು ಕೂಡ ಅಯ್ಯಪ್ಪ ಸ್ವಾಮಿಯ ಸೇವೆಯಾಗುತ್ತದೆ. ಅದರ ಮೂಲಕ ಭಗವಂತನ ಅನುಗ್ರಹ ನಿರೀಕ್ಷೆ ಇರುತ್ತದೆ. 

ಒಂದೆರಡು ಕಡೆ ಕುಡಿಯುವ ನೀರಿನ ಜತೆಗೆ ಬಿಸ್ಕತ್ ಇಟ್ಟಿದ್ದರು. ನೀವು ಎಷ್ಟಾದರೂ ಬಿಸ್ಕತ್ತ ತೆಗೆದುಕೊಂಡು ನೀರು ಕುಡಿಯಬಹುದು. ಇದು ಸಂಪೂರ್ಣ ಉಚಿತ, ಇದೊಂದು ಬಗೆ ಭಕ್ತರ ಸೇವಯ ಮುಖೇನ ದೇವರ ಸೇವೆ. ಬಿಸ್ಕ್ತತ್ತು ಹಾಕಿಟ್ಟ ಪಾತ್ರೆ ಘಳಿಗೆಯಲ್ಲಿ ಖಾಲಿಯಾಗುತ್ತಿತ್ತು ಹಾಗೆ ಅದಕ್ಕೆ ಬಿಸ್ಕತ್ತು ಸುರಿಯುತ್ತಿದ್ದರು. ನಿಜಕ್ಕೂ ಇದೊಂದು ಆಶ್ಚರ್ಯವನ್ನು ಉಂಟು ಮಾಡಿತ್ತು. ಹೀಗೆ ಶಬರಿ ಮಲೆ ಯಾತ್ರೆ ಎಂಬುದು ಹಲವು ಮರೆಯದ ಅನುಭವಗಳನ್ನು ಕಟ್ಟಿಕೊಡುತ್ತಿತ್ತು. ಒಂದು ಸಲ ಹೋಗಿ ಬರೋಣವೆಂದಿದ್ದ ನನ್ನಾಕೆ ಈಗ ಪುನಃ ಯಾವಾಗ ಹೋಗೊಣ ಎಂದು ಕೇಳುತ್ತಾಳೆ. ಶಬರಿಮಲೆ ಯಾತ್ರೆ ಎಂಬುದು ಬದುಕಿನಲ್ಲಿ  ಅನುಭವಿಸಿ ಪಡೆಯಲೇಬೇಕಾದ ಒಂದು ಅನುಭವ. 

ಯಾತ್ರೆಯುದ್ದಕ್ಕೂ ಅದು ಕೇವಲ ಅಯ್ಯಪ್ಪನ ದರ್ಶನದ ಏಕೈಕ ಉದ್ದೇಶವಾಗಿ ಕಾಣುತ್ತದೆ. ಪಂಪದಿಂದ ಮೇಲೆ ಸನ್ನಿಧಾನದ ವರೆಗೂ ಹಲವು ಬಗೆಯ ಭಕ್ತರನ್ನು ಕಾಣ ಬಹುದು. ಅಂಗ ವಿಕಲರೂ ಅಶಕ್ತರು ಒಂದೆಡೆಯಾದರೆ ಪುಟ್ಟ ಮಕ್ಕಳನ್ನೂ ತಮ್ಮ ಇರುಮುಡಿಯೊಂದಿಗೆ ಅವರ ಇರುಮುಡಿಯನ್ನು ಹೊತ್ತುಕೊಳ್ಳುವುದು ಮಾತ್ರವಲ್ಲ ಮಗುವನ್ನೂ ಹೆಗಲಲ್ಲಿ ಹೊತ್ತುಕೊಂಡು ತಮ್ಮ ಮಗುವಿಗೆ ಅಯ್ಯಪ್ಪನ ದರ್ಶನ ಮಾಡಿಸುವ ಉದ್ದೇಶದಲ್ಲಿ ಅವರು ಮಲೆಯ ಒಂದೊಂದೆ ಹೆಜ್ಜೆಗಳನ್ನು ಇಡುವುದನ್ನು ಕಾಣುವಾಗ ಇದು ಕೇವಲ ದೇವರ ದರ್ಶನವಲ್ಲ, ಬದುಕಿನ ಸರ್ವಾಂಗ ದರ್ಶನದಂತೆ ಭಾಸವಾಗುತ್ತದೆ. ಪಂಪೆಯ ನದೀ ತೀರದಲ್ಲಿ ಹಲವಾರು ಜನ ಸಿಕ್ಕ ಸಿಕ್ಕಲ್ಲಿ ನಿದ್ರಿಸುತ್ತಿದ್ದರು. ಕಪ್ಪು ಅಥವಾ ಕಾವಿಲುಂಗಿ ಧರಿಸಿ ಯಾವ ಆಡಂಬರವೂ ಇಲ್ಲದೆ ಎಲ್ಲೆಂದರಲ್ಲಿ ಬಿದ್ದಿರುತ್ತಿದ್ದರು. ತೀರ ಬಡವರು ಎಂದು ತಿಳೀದರೆ ತಪ್ಪಾದೀತು. ಯಾಕೆಂದರೆ ಅದರಲ್ಲಿ ಕೋಟ್ಯಾಧಿಪತಿ ಶ್ರೀಮಂತನೂ ಇರಬಹುದು. ತೀರ ಬಡವನೂ ಇರಬಹುದು. ಧನಿಕ ಶ್ರೀಮಂತ ಎಂಬ ಭೇದವಿಲ್ಲ.ಅಲ್ಲಿ ನಿದ್ರೆ ಹಸಿವಿಗೆ ಪ್ರಾಧಾನ್ಯತೆ ಇಲ್ಲ. ಕೇವಲ ಒಂದೇ ಗುರಿ ಅದು ಅಯ್ಯಪ್ಪ ದರ್ಶನ. ಹಾಗಾಗಿ ಶಬರಿ ಮಲೆ ಹೋಗುವಾಗ ನಿಮಗೆ ಅಲ್ಲಿ ಹಲವು ಅಸೌಕರ್ಯಗಳು ಕಾಣಬಹುದು. ಸ್ನಾನ ನಿದ್ರೆ ಆಹಾರಕ್ಕೆ ಸರಿಯಾದ ವ್ಯವಸ್ಥೆ ಇಲ್ಲದಂತೆ ಇರಬಹುದು. ಬರಿಗಾಲಲ್ಲಿ ನಡೆಯಬಹುದು.  ಎಂತಹ ಶ್ರೀಮಂತನೂ ಮನೆಯಲ್ಲಿ ಹವಾನಿಯಂತ್ರಿತ ಕೊಠಡಿಯಲ್ಲಿ ಮಲಗಿದರೂ ಇಲ್ಲಿ ಬಂದು ಬೀದಿಯಲ್ಲಿ ಮಲಗಿಬಿಡುತ್ತಾನೆ. ಕಾರಣ ಅಲ್ಲಿರುವ ಬಯಕೆ ಒಂದೇ ಅಯ್ಯಪ್ಪ ದರ್ಶನ. ಬೇರೆ ಯಾವ ಕ್ಷೇತ್ರದಲ್ಲೂ ಇದನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಮನಸ್ಸಿನ ಭಾವ ಒಂದೇ ಎಲ್ಲವೂ ನೀನೆ. ಒಂ ತತ್ವಮಸಿ.  ಸಾವಿರ ಗ್ರಂಥವನ್ನು ಅಧ್ಯಯನ ಮಾಡಿದರೂ ಸಿಗದ ಜ್ಞಾನ ಅದರ ತತ್ವ ಕೇವಲ ಒಂದು ಶಬರಿಮಲೆ ಯಾತ್ರೆಯಲ್ಲಿ ಸಿದ್ದಿಸಿಬಿಡುತ್ತದೆ. ಅಧ್ಯಾತ್ಮಿಕ ತತ್ವ ಎಂಬುದು ಸನಾತನ ಧರ್ಮದ ತತ್ವ. ಮನುಷ್ಯನ ಬದುಕಿನ ಗುರಿ ಏನು ಎಂಬುದನ್ನು ತೋರಿಸಿಕೊಡುತ್ತದೆ. ನಮ್ಮ ವಶವಿಲ್ಲದ ಅದೊಂದು ಶಕ್ತಿ ನಮ್ಮನ್ನು ನಿಯಂತ್ರಿಸುತ್ತದೆ. ಈ ಜ್ಞಾನವನ್ನು ಹೆಜ್ಜೆ ಹೆಜ್ಜೆಗೂ ಒದಗಿಸುತ್ತದೆ. ಹಿಂದೂ ಧರ್ಮ ಸನಾತನ ಧರ್ಮ ಎಂದು ಹೀಗಳೆಯುವ ಬುದ್ಧಿಜೀವಿಗಳಿರಬಹುದು. ಒಂದು ಬಾರಿ ಮಾಲೆ ಧರಿಸಿ ವೃತ ಹಿಡಿದು ಯಾತ್ರೆ ಮಾಡಿ ಅಯ್ಯಪ್ಪ ದರ್ಶನ ಮಾಡಬೇಕು. ಆಗ ಈ ತತ್ವದ ಅರಿವಾಗುತ್ತದೆ. 


Thursday, April 30, 2026

ಅತೃಪ್ತ ಆತ್ಮಗಳು


ಚಿತ್ರಗಳು ಮಾತೃಭೂಮಿ ಪುಟಗಳಿಂದ.

ಇತ್ತೀಚೆಗೆ ಶಬರಿಮಲೆ ಯಾತ್ರೆಯಲ್ಲಿ ನಸುಕಿಗೆ ಪಂಪಾ ನದಿ ತೀರಕ್ಕೆ ಬಂದು ತಲುಪಿದೆವು. ಪಂಪಾನದಿಯಲ್ಲಿ ಪವಿತ್ರ ಸ್ನಾನ ಮಾಡಿ ಮಲೆ ಏರುವುದಕ್ಕೆ ತೊಡಗಬೇಕಿತ್ತು. ಪಂಪಾನದಿಯಲ್ಲಿ ಸ್ನಾನ ಮಾಡಬೇಕಲ್ಲ ಎಂಬ ಆತಂಕವೇ ಮನಸ್ಸಿನಲ್ಲಿತ್ತು. ವಾಸ್ತವದಲ್ಲಿ ಈ ಆತಂಕಕ್ಕೆ ಅವಕಾಶ ಇರಬಾರದಾಗಿತ್ತು. ಹಿಂದೆ ಬಂದಾಗ ಇಲ್ಲಿನ ಪರಿಸ್ಥಿತಿ ನೋಡಿದ್ದೆ. ಎಲ್ಲೆಂದರಲ್ಲಿ ಬೇಕಾ ಬಿಟ್ಟಿಯಾಗಿ ಹಾಕಿದ  ವಸ್ತ್ರಗಳು, ಅದೂ ಒಳ ವಸ್ತ್ರ ಧೋತಿ ಇನ್ನಿತರ ಚಿಂದಿ ಚಿಂದಿ ವಸ್ತ್ರಗಳು. ಅವುಗಳನ್ನು ತುಳಿದು ಸ್ನಾನ ಮಾಡುವುದೆಂದರೆ ಇನ್ನಿಲ್ಲದ ಮಾನಸಿಕ ಹಿಂಸೆ. ಇದು ಯಾವ ದೇವರಿಗೆ ಪ್ರೀತಿ ಎಂಬಂತೆ ಪ್ರಶ್ನಿಸುವಂತಾಗುತ್ತದೆ. ನಸು ಗತ್ತಲೆಯಲ್ಲಿ ಕಾಲಿಗೆ ವಸ್ತ್ರಗಳು ಸಿಕ್ಕಿಗೊಂಡಾಗ ಅಸಹ್ಯವಾಗುತ್ತದೆ. ಆದರೆ  ಪವಿತ್ರರಾಗಬೇಕಾದರೆ ಅಲ್ಲಿ ಸ್ನಾನ ಮಾಡುವುದು ಅನಿವಾರ್ಯ. ಯಾವ ಬಗೆಯಲ್ಲಿ ಪವಿತ್ರರಾಗುವುದು ಎಂದು ಮನಸ್ಸು ಪ್ರಶ್ನಿಸುತ್ತದೆ.  ಪವಿತ್ರತೆ ಎಂಬುದು ಒಂದು ಮಾನಸಿಕ ಸ್ಥಿತಿ. ಅದು ಅನುಭವಕ್ಕೆ ಬರಬೇಕು. ಮನಸ್ಸು ಪರಿಶುದ್ದವಾಗದೇ ಇದ್ದರೆ ಪಾವಿತ್ರ್ಯತೆ ಪರಿಪೂರ್ಣವಾಗುವುದಿಲ್ಲ.  ಆದರೆ ಇಲ್ಲಿ ಮನಸ್ಸು ಆತಂಕದಿಂದ ಕ್ಷೋಭೆಗೆ ಒಳಗಾಗುತ್ತದೆ. 

ನಸುಕಿನ ಕತ್ತಲಲ್ಲಿ ಆತಂಕದಿಂದಲೇ ಹೆಜ್ಚೆ ಇಡುತ್ತಾ ಸ್ನಾನ ಘಟ್ಟದ ಮೆಟ್ಟಲು ನೋಡಿದರೆ ಮೆಟ್ಟಲಲ್ಲೆ ಚೆಲ್ಲಾ ಪಿಲ್ಲಿಯಾಗಿದ್ದ ವಸ್ತ್ರಗಳು ಪೇಸ್ಟ್  ಗುಟ್ಕಾ ಪ್ಯಾಕೆಟ್ ಗಳು. ಮಾಲೆ ಹಾಕಿದ ಮೇಲೆ ಕೆಟ್ಟದ್ದನ್ನು ಯೋಚಿಸಬಾರದು, ಕೆಟ್ಟದ್ದನ್ನು ಮಾತನಾಡಬಾರದು. ಕೆಟ್ಟ ಕಾರ್ಯ ಮಾಡಬಾರದು. ವಾಸ್ತವದಲ್ಲಿ ಇದು ಸಾಧ್ಯವಾಗದಿರುವಾಗ ಒಂದು ಸಲ ಯೋಚಿಸಿದೆ ದೇವರು ವಿಧಿಸುವ ಸತ್ವ ಪರೀಕ್ಷೆಯ ಸ್ವರೂಪ ಇದು ಒಂದು ಆಗಿರಬಹುದು. ಕೆಟ್ಟದ್ದನ್ನು ಅನುಭವಿಸುವುದೂ  ಸಹ ಒಂದು ಬಗೆಯ  ದೈವ ಪರೀಕ್ಷೆ. ಆದರೆ ಕೆಟ್ಟದನ್ನು ದಯಪಾಲಿಸುವ ಭಕ್ತರ ಮನಸ್ಥಿತಿಯಂತು ಯಾವ ದೇವ ದರ್ಶನದಲ್ಲೂ ಪರಿಹಾರವಾಗದು. ದೇವರು ಪ್ರಹ್ಲಾದನನ್ನು ಸೃಷ್ಟಿಸುವ ಮೊದಲು ಹಿರಣ್ಯಾಕ್ಷ ಹಿರಣ್ಯ ಕಶಿಪುರವರನ್ನು ಸೃಷ್ಟಿಸಿದ್ದ. ಅದು ಪುರಾಣದಲ್ಲಿ, ಆದರೆ ಇಲ್ಲಿ ಕೆಟ್ಟ ಸೃಷ್ಟಿ ಯಾಗಿ ಒಳ್ಳೆಯ ಪ್ರಹ್ಲಾದ ಸೃಷ್ಟಿ ಮಾತ್ರ ಮರೀಚಿಕೆ. 

ಎರಡು ವರ್ಷದ ಹಿಂದೆ ಕಾಶಿಗೆ ಹೋದಾಗ ಗಂಗಾಸ್ನಾನಕ್ಕೆ ತೆರಳಿದ್ದೆ. ಅಲ್ಲಿ ಸಾಕಷ್ಟು ಸ್ವಚ್ಛತೆಗೆ ಆದ್ಯತೆ ಇದ್ದರೂ ಎಲ್ಲೆಂದರಲ್ಲಿ ಹೂವು ಕೊಳೆತು ನಾರುವ ಸ್ಥಿತಿಗೆ ತಲುಪಿತ್ತು. ಮುಳುಗು ಹಾಕಿದರೆ ಅವುಗಳೆಲ್ಲ ಮೈಗೆ ಮುತ್ತಿಕೊಳ್ಳುವಾಗ ಗಂಗೆಯಲ್ಲಿ ಪವಿತ್ರರಾಗುವ ಬಗೆ ಹೇಗೆ ಅಂತ ಯೋಚಿಸುತ್ತಿತ್ತು. ಇನ್ನು ವಿಸರ್ಜಿಸಿದ ಪಿಂಡದ ಶೇಷ ಭಾಗಗಳನ್ನು ನೋಡಿದಾಗ ಗಂಗೆಯಲ್ಲೂ ಮೋಕ್ಷ ಸಿಗದ ಪ್ರೇತಾತ್ಮಗಳ ದರ್ಶನವಾದಂತಾಯಿತು. ಬಹುಶಃ ಈ ಪ್ರೇತಾತ್ಮಗಳಂತೆ ನಾವು ಗಂಗೆಯಲ್ಲಿ ಮಿಂದರೂ ಅತೃಪ್ತರಾಗಿಯೇ ಇರಬೇಕು ಅನ್ನಿಸ್ತುತ್ತಿತ್ತು. ಇನ್ನು ವಸ್ತ್ರ ಬದಲಿಸುವ ಕೋಣೆಗಳು ಅಲ್ಲಲ್ಲಿ ಇದ್ದರೂ ಅಲ್ಲಿಯೂ ಬಿಟ್ಟು ಹೋದ ವಸ್ತ್ರಗಳು ಉಡುಪುಗಳು ಸ್ನಾನ ಕೇವಲ ಸಂಕೇತವಾಗುವಂತೆ ಮಾಡಿತ್ತು. ಗಂಗೆಯಲ್ಲೂ ಪವಿತ್ರರಾಗಲು ಬಿಡದ ಜೀವಂತ ಪ್ರೇತಗಳಿಗೆ ಮೋಕ್ಷ ಯಾವಾಗ ಸಿಗಬಹುದು?

ಇಂದು ಹೆಚ್ಚಿನ ಎಲ್ಲಾ ಕ್ಷೇತ್ರಗಳ ದುರವಸ್ಥೆ ಇದು. ಧರ್ಮಸ್ಥಳ ಸುಬ್ರಹ್ಮಣ್ಯ ಮಂತ್ರಾಲಯ  ಎಲ್ಲೆಲ್ಲಿ ನದಿ ಸ್ನಾನದ ಅವಕಾಶ ಇದೆಯೋ ಅಲ್ಲೆಲ್ಲ ಮಾನವ ನಿರ್ಮಿತ ಮಾಲಿನ್ಯದ ಅವಶೇಷಗಳದೇ ಪಾರುಪತ್ಯ. ನದಿ ನೀರು ಕಾಣುವಾಗ ಸ್ಫಟಿಕದಂತೆ ಸ್ವಚ್ಛವಿದ್ದರೆ ಅದು ಪರಿಸರದೊಂದಿಗೆ ನಿತ್ಯ ಹೋರಾಟವನ್ನು ನಡೆಸಬೇಕಾಗುತ್ತದೆ. ಧರ್ಮಸ್ಥಳದಲ್ಲಂತೂ ಸ್ವಯಂ ಸೇವಕರು ಪ್ರತೀ ತಿಂಗಳು ಲೋಡುಗಟ್ಟಲೆ ವಸ್ತ್ರಗಳನ್ನು ಹೆಕ್ಕಿ ಸ್ವಚ್ಚ ಮಾಡುತ್ತಾರಂತೆ. ಇಷ್ಟಕ್ಕೆಲ್ಲ ಕಾರಣ ಮತಿಗೆಟ್ಟ ಭಕ್ತರ ಒಂದು ಬಗೆಯ ದೈವ ಸೇವೆ.  ಇವರೆಲ್ಲ ಶುಚೀರ್ಭೂತರೆಂದರೆ ತಟ್ಟಿದ ಪಾಪಕ್ಕೆ ಮುಳುಗಿ ಪವಿತ್ರರಾಗುವುದಕ್ಕೆ  ಗಂಗೆಯೂ ಸಾಲದು. 

ಪಂಪಾ ನದಿಯ ಕಥೆಯೂ ಇದೇ. ಅಲ್ಲಿ ಆಗಾಗ ಸ್ವಚ್ಛ ಮಾಡುತ್ತಾರೆ. ಆದರೆ ಹೋದ ಯಾತ್ರಿಕರು ಮಾಲೆ ಹಾಕಿದರೂ ಮುಗಿಯದ ಪಾಪ ಸೃಷ್ಟಿ ಮಾಡಿ ಪುನೀತರಾಗುತ್ತಾರೆ. ಒಂದಿಷ್ಟೂ ಪಾಪ ಪ್ರಜ್ಞೆ ಇಲ್ಲದ ಈ ಜೀವಂತ ಪಿಶಾಚಿಗಳನ್ನು ಕಾಣುವಾಗ ಇವರ ದೈವ ಭಕ್ತಿಯ ರೂಪವಾದರೂ ಯಾವ ಬಗೆಯದು ಎಂದು ಯೋಚಿಸುವಂತಾಗುತ್ತದೆ.   ದೇವರೇ ಮನಸ್ಸನ್ನಾದರೂ ನಾನು ಸ್ವಚ್ಛಗೊಳಿಸಬಲ್ಲೆ ಆದರೆ ಈ ದೇಹ ಪರಿಶುದ್ದವಾಗದು ಎಂದು ಹೇಳಿಕೊಂಡು ಪಂಪೆಯಲ್ಲಿ ಮುಳುಗಬೇಕು. ಇವರೆಲ್ಲ ಯಾಕಾಗಿ ವೃತ ಹಿಡಿಯುತ್ತಾರೋ? ಯಾಕಾಗಿ ಶಬರಿಮಲೆಗೆ ಬರುತ್ತಾರೋ ಗೊತ್ತಿಲ್ಲ. ಅಯ್ಯಪ್ಪನಾದರೂ ಇವರಿಗೆ ಪ್ರಜ್ಞಾ ಬುದ್ದಿಯನ್ನು ಒದಗಿಸದೆ ಯಾಕೆ ಮೌನವಾಗಿದ್ದಾನೆ? 

ನಮ್ಮೂರಲ್ಲಿ ಅಲ್ಲಲ್ಲಿ ನಾಗಬನ ಅಂತ ಇರುತ್ತದೆ. ಅಲ್ಲಿ ನಾಗನ ಕಲ್ಲು ನಾಗನ ಅಸ್ತಿತ್ವದ ನಂಬಿಕೆಯಲ್ಲಿ ಅದರ ಸುತ್ತಮುತ್ತ ಮರಗಳನ್ನು ಕಡಿಯದೇ ಹಾಗೇ ಬಿಡುತ್ತಾರೆ. ಆ ಬಗೆಯಲ್ಲಾದರೂ ಒಂದಿಷ್ಟು ಮರಗಳ ಸಂರಕ್ಷಣೆಯಾಗುತ್ತದೆ. ಅಲ್ಲಿನ ನಂಬಿಕೆ  ಭಯ ಅದಕ್ಕೆ ಕಾರಣ. ನಾವು ಎಲ್ಲೆಡೆ ಪರಿಸರವನ್ನು ಕೆಡಿಸಿಯಾಗಿದೆ. ಘಟ್ಟ ಪ್ರದೇಶದ ಹೆದ್ದಾರಿಯಲ್ಲಿ ಸಂಚರಿಸುವಾಗ ಬಾಟಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಇಲ್ಲದ ಪ್ರದೇಶವೇ ಸಿಗುವುದಿಲ್ಲ. ಕೊನೆ ಪಕ್ಷ ದೇವರ ಹೆಸರಲ್ಲಾದರು ನದಿಪಾತ್ರಗಳು ಸ್ವಚ್ಚವಾಗಬೇಕಿತ್ತು ಯಾವ ದೈವ ಭಯವೂ ಇವರಿಗಿಲ್ಲ,  ಇಲ್ಲಿ ಯಾವ  ದೇವ ಭಯವೂ ಇಲ್ಲದ ಭಕ್ತರು ದೇವಾಲಯಕ್ಕೆ ಹೋಗಿ ಕೈಮುಗಿಯುವ ಅವಶ್ಯಕತೆಯೇ ಉಳಿದಿರುವುದಿಲ್ಲ. 

ಮನುಷ್ಯ ಜನ್ಮದ ಗುರಿ ಎಂದರೆ ದುರಿತಗಳಿಂದ ಮೋಕ್ಷ ಹೊಂದುವುದು. ನಾನು ನನ್ನದು ಎಂಬ ಚಿತ್ತ ವೃತ್ತಿಯಿಂದ ದೂರಾಗಿ ಮನಸ್ಸು ಪರಿಶುದ್ದಗೊಳಿಸಿ ಪರಮಾತ್ಮನ ಅನುಗ್ರಹಕ್ಕೆ ಪಾತ್ರರಾಗಿ ಮೋಕ್ಷ ಸಂಪಾದಿಸುವುದು. ಆದರೆ ನಮ್ಮ ವೃತ್ತಿ ಹೇಗಿದೆ ಎಂದರೆ . ನೀರು ಇದೆ ಎಂದು ಉಪ್ಪು ತಿಂದ ಹಾಗೆ, 

 ದೇವರಿಗೆ ನಮಸ್ಕರಿಸಿದರೆ ಪಾಪವೆಲ್ಲ ಪರಿಹಾರ ಎಂಬ ಭಾವನೆ ಇರುತ್ತದೆ. ಪಾಪಕ್ಕೆ ಪರಿಹಾರ ಇದೆ ಎಂದುಕೊಂಡು ಮತ್ತಷ್ಟೂ ಪಾಪ ಮಾಡುತ್ತಾ ಬದುಕನ್ನು ಸವೆಸುತ್ತಾರೆ. ಪಾಪ ಕ್ಷಯ ಇವುಗಳೆಲ್ಲ ನಮ್ಮ ಭಾವನೆಯೋ ಅಲ್ಲಿ ವಾಸ್ತವವೋ ಗೊತ್ತಿಲ್ಲ. ಆದರೆ ಮನುಷ್ಯ ಮತ್ತು ದೈವ ಸಂಬಂಧದ ಪಾರಮಾರ್ಥಿಕ ಅರಿವು ಮನುಷ್ಯನಿಗಿಲ್ಲ. ದೇವರು ನಮ್ಮಿಂದ ಯಾವುದನ್ನೂ ಅಪೇಕ್ಷಿಸುವುದಿಲ್ಲ. ಹೂ ನೈವೇದ್ಯ ಪೂಜೆ ಯಾವುದೇ ಆದರೂ ಅಲ್ಲಿ ಕೊನೆಯದು ನಮ್ಮ ಆತ್ಮ ತೃಪ್ತಿ. ನಮ್ಮ ಕೈ ಮೀರಿದ ಶಕ್ತಿ ಒಂದಿದೆ ಎಂಬ ಭಾವ.  ನಮಗೆ ರುಚಿಯಾದದ್ದು ನಮಗೆ ಸಮ್ಮತವಾದದ್ದನ್ನೇ ನಾವು ದೇವರಿಗೆ ಅರ್ಪಿಸುತ್ತೇವೆ.  

ಗಂಗೆಯನ್ನು ಶಿರದಲ್ಲಿ ಧರಿಸಿದವನು ಗಂಗಾಧರ.  ಪವಿತ್ರ ಗಂಗೆಯನ್ನು ಶಿರದಲ್ಲಿ ಧರಿಸಿದವನಿಗೆ  ನಮ್ಮ ಬಾವಿಯ ನೀರಿನಿಂದ   ರುದ್ರಾಭಿಷೇಕ  ಮಾಡುವ ಅವಶ್ಯಕತೆ ಏನಿದೆ? ಆದರೂ ಆತನ ಅನುಗ್ರಹಕ್ಕಾಗಿ ರುದ್ರಾಭಿಷೇಕ ಮಾಡುತ್ತೇವೆ. ಇಲ್ಲಿ ಅನುಗ್ರಹ ಎಂಬುದು ನಮ್ಮ ಮನಸ್ಸಿನ ಬೇಡಿಕೆಯೇ ಹೊರತು ಅದು ಭಗವಂತನ ಆಗ್ರಹವಲ್ಲ.  ಇನ್ನು ನಾವು ಮಾಡುವ ರುದ್ರಾಭಿಷೇಕವೂ ಅದು ಕೇವಲ ನಮ್ಮ ಬಯಕೆಯೇ ಹೊರತು ಭಗವಂತನ ಬಯಕೆ ಇಲ್ಲ. ದೇವರಿಗೆ ಇಷ್ಟಾನಿಷ್ಟಗಳು ಯಾವುದೂ ಇರುವುದಿಲ್ಲ. ಎಲ್ಲದರಿಂದಲೂ ಅತೀತನಾದವನು ಭಗವಂತ. ಆದರೂ ನಮ್ಮ ಮನಸ್ಸಿನ ಬಯಕೆಯಿಂದ ಎಲ್ಲವೂ ಆಗಿರುವ ಭಗವಂತನ ಆಗ್ರಹವನ್ನು ಬಯಸುವುದು ಸಹಜ. 

ಯಾವ ಧರ್ಮವೇ ಆದರೂ ಹೇಳುವುದು ಒಂದೇ, ನಾವು ಮನಸ್ಸಿನಿಂದ ಪರಿಶುದ್ದರಾಗಬೇಕು. ಮನಸ್ಸು ಪರಿಶುದ್ದವಾಗಬೇಕಾದರೆ ನಮ್ಮ ಪರಿಸರ, ನಮ್ಮ ಜೀವನ ಪರಿಶುದ್ದವಾಗಬೇಕು. ಈ ಭಾವನೆ ಇದ್ದರೆ ನಮ್ಮ ದೇವರು, ನಮ್ಮ ದೇವಾಲಯ, ನಮ್ಮ ನದಿ ಕಾಡು ಈ ಭೂಮಿ ಸ್ವಚ್ಚವಾಗಿರುತ್ತದೆ. ಅದಲ್ಲದೇ ಇದ್ದರೆ ದೇವರ ಹೆಸರಲ್ಲಿ ನಾವು ಮತ್ತಷ್ಟು ಪಾಪಗಳನ್ನು ಮಾಡುತ್ತಾ ಆ ಪಾಪದಿಂದ ಬಿಡುಗಡೆಯಾಗದೆ ಅತೃಪ್ತ ಆತ್ಮಗಳಂತೆ  ಅಲೆದಾಡುತ್ತಾ ಇರುತ್ತೇವೆ. 

Monday, April 27, 2026

"ಜನಿವಾರ ಬೇಕೋ? ಶಿಕ್ಷಣ ಬೇಕೋ?"

  "ಜನಿವಾರ ಬೇಕೋ?  ಶಿಕ್ಷಣ ಬೇಕೋ?"  ಎಂತಹ ಮೂರ್ಖತನದ ಅನಾಗರಿಕ ಪ್ರಶ್ನೆ ಇದು. ಯಾಕೆಂದರೆ ಶಿಕ್ಷಣ ಎಂದರೆ ಏನು ಎಂದು ತಿಳಿಯದ ಅವಿವೇಕಿ, ಆದರೂ ಪರವಾಗಿಲ್ಲ, ತಾವೊಬ್ಬರೇ ಮತಿವಂತರು ಎಂದು ತಿಳಿಯುವುದಿದೆಯಲ್ಲ,  ಅದು ಅತಿ ಮೂರ್ಖತನ. ವಾಸ್ತವದಲ್ಲಿ ಇವರಲ್ಲಿ ಅಜ್ಞಾನವೇ ತುಂಬಿರುತ್ತದೆ. ಎಲ್ಲೆಂದರಲ್ಲಿ ಬೆಳೆಯುವ ಕಳೆಗಿಡಕ್ಕೂ, ಹೂದೋಟದಲ್ಲಿ ರಮ್ಯವಾಗಿ ಬೆಳೆಸುವ ಹೂವಿನ ಗಿಡಕ್ಕೂ ವೆತ್ಯಾಸ ತಿಳಿದಿರಬೇಕು. ಹೂದೋಟದಲ್ಲಿ ಶಿಸ್ತಿನಲ್ಲಿ ಬೆಳೆದು,  ಪ್ರಕೃತಿಗೆ ಸೌಂದರ್ಯದ ಕೊಡುಗೆಯನ್ನು ಪರಿಸರವನ್ನು ಸಂರಕ್ಷಿಸುವುದಕ್ಕೂ...ಯಾವುದಕ್ಕೂ ಬೇಡದಾದ, ಮಾತ್ರವಲ್ಲ ತೊಂದರೆಯನ್ನು ಕೊಡುವ ಕಳೆಗಿಡಕ್ಕೂ ಹೋಲಿಕೆ ಸರಿಯೇ? ಒಂದು ಗಿಡ ಹೂದೋಟದಲ್ಲಿ ಬೆಳೆಯುತ್ತದೆ ಎಂದಾದರೆ ಅದಕ್ಕೆ ಹುಟ್ಟಿನಿಂದಲೇ ಸಿಗುವ ಶಿಕ್ಷಣ ಸಂಸ್ಕಾರ ಕಾರಣ. ಅದು ಪರಿಸರದ ಜತೆಗೆ ಬೆಳೆಯುತ್ತದೆ. ಇನ್ನೂ ಬೇಕು ಬೇಕು ಎಂದಾಗುವಾಗ ಅದು ತನ್ನ ಸಾರ್ಥಕ ಬದುಕನ್ನು ಪರಿಸಮಾಪ್ತಿಗೊಳಿಸುತ್ತದೆ. ಶಿಕ್ಷಣದ ನಿಜವಾದ ಅರ್ಥ  ಅದು. 


ಆದರೆ ಬದಲಾದ ಮನುಷ್ಯನ ಜೀವನ ವಿಧಾನದಲ್ಲಿ ಶಿಕ್ಷಣವೂ ಬದಲಾಗಿ ಹೋದದ್ದು ದುರಂತ. ಹಾಗಿದ್ದರೂ ಶಿಕ್ಷಣ ಎಂದರೆ ಜ್ಞಾನ.  ಜ್ಞಾನ ಎಂದರೆ ಕೇವಲ ಒಳ್ಳೆಯದು ಮಾತ್ರವಲ್ಲ. ಬೆಂಕಿಯನ್ನು ತಿಳಿದಂತೆ ನೀರನ್ನೂ ಸಹ ತಿಳಿಯಬೇಕು. ನೀರು ಅಂತ ಬೆಂಕಿಯನ್ನು ಸ್ಪರ್ಶಿಸುವುದಕ್ಕೆ ಹೋದರೆ ಸುಡದೆ ಇರುವುದಿಲ್ಲ.  ಇದುವೇ ಶಿಕ್ಷಣ. ಇದು ಕೆಟ್ಟದು ಇದು ಒಳ್ಳೆಯದು ಎಂದು ತಿಳಿಸುವುದೇ ಶಿಕ್ಷಣ. ಆದರೆ ಮೂರ್ಖರಿಗೆ ಇದರ ವೆತ್ಯಾಸವೇ ತಿಳಿಯದೇ ತಮ್ಮಲ್ಲಿರುವ ಕೆಟ್ಟದನ್ನೇ ಒಳ್ಳೆಯದು ಎಂಬ ಭ್ರಮೆಯಲ್ಲಿ ಮುಳುಗಿ ಬಿಡುತ್ತಾರೆ! ಮನುಷ್ಯ ಹುಟ್ಟಿನಿಂದ ಕಲಿಯುತ್ತಾ ಸಾಗುತ್ತಾನೆ. ತಾಯಿ ತಂದೆ ಎಂಬ ಅರಿವು. ಆ ಅರಿವಿನಲ್ಲೇ ಗುರು ಎಂಬ ಅರಿವು. ಅಲ್ಲಿಂದ ಪರಮಾತ್ಮನೆಂಬ ಅರಿವು, ಜತೆಗೆ ಬದುಕಿನ ಸಾರ್ಥಕತೆಯ ಅರಿವು.  ಆದರೆ ಇದೆಲ್ಲವನ್ನೂ ಕಂದಾಚಾರ ಎಂಬ ಭ್ರಮೆಯಲ್ಲಿ ಅಪ್ಪ ಅಮ್ಮ ಗುರು ಎಂಬ ಅರಿವೇ ಇಲ್ಲದೆ ಭ್ರಮಾಧೀನ ಬದುಕನ್ನೇ ಸರ್ವಸ್ವ ಎಂದು ತಿಳಿದು ಅದರಲ್ಲೇ ಮುಳಿಗಿರುವವರಿಗೆ ಈ ಶಿಕ್ಷಣ ಎಂಬುದರ ಮಹತ್ವವಾಗಲಿ ಅರ್ಥವಾಗಲೀ ತಿಳಿಯುವುದಕ್ಕೆ ಸಾಧ್ಯವಿಲ್ಲ. ಅವರ ಮಟ್ಟಿಗೆ ಯಾವುದೋ ವಿದೇಶದ ಯಾವುದೋ ಬಾಷೆಯ ಶಿಕ್ಷಣವೇ ಸರ್ವ ಶಿಕ್ಷಣ. 

ಜನಿವಾರ ಅಂದರೆ ಯಜ್ಞೋಪವಿತ, ಉಪವೀತ ಎಂದರೆ ಉಪವಸ್ತ್ರದಂತೆ. ಯಜ್ಞ ಎಂದರೆ ತನ್ನನ್ನು ಭಗವಂತನಿಗೆ ಅರ್ಪಿಸುವ ಕ್ರಿಯೆ. ಅದಕ್ಕೊಂದು ಸಂಕೇತವೇ ಯಜ್ಞೋಪವೀತ. ಅದನ್ನು ಧರಿಸುವುದೆಂದರೆ ವೇದಾಧ್ಯಾಯನಕ್ಕೆ ಮಾನಸಿಕವಾಗಿ ಪ್ರೌಢತೆಯಿಂದ  ಸಿದ್ದವಾಗುವುದು. ಆ ವಿಶ್ವಾಸವನ್ನು ಅವಹೇಳನ ಮಾಡುವುದೆಂದರೆ ಭಗವಂತನನ್ನು ಬ್ರಹ್ಮಜ್ಞಾನದ ಶಿಕ್ಷಣವನ್ನು ಅವಹೇಳಿಸಿದಂತೆ.  ಇಷ್ಟಕ್ಕೂ ಬ್ರಹ್ಮಜ್ಞಾನದ ಅರಿವಿಗೆ ಬ್ರಹ್ಮ ಎಂದರೇನು ಎಂಬ ಅರಿವಿರಬೇಕು. ಈ ಭೂಮಿ ಸೂರ್ಯ ಇವುಗಳೆಲ್ಲ ಆ ಪರಬ್ರಹ್ಮ ಕಲ್ಪನೆಯಲ್ಲಿ ನೆಲೆಯಾಗುತ್ತವೆ. ಭೂಮಿ ತನ್ನ ಕಕ್ಶೆಯಲ್ಲಿ ತಿರುಗುತ್ತದೆ, ಅದಕ್ಕೆ ಇರುವ ಆಧಾರ ಯಾವುದು? ನಮಗೆ ತಿಳಿಯದೇ ಇರುವ ನಮಗೆ ಕಾಣದೇ ಇರುವ ಒಂದು ಶಕ್ತಿಗೆ ನಾವು ಪರಬ್ರಹ್ಮ ಎಂದೇ ನಂಬುವುದು. ಒಂದು ಸುಮಧುರ ಸಂಗೀತವನ್ನು ಕಣ್ಣಿಗೆ ಕಾಣದೇ ಇದ್ದರೂ ಅದನ್ನು ಅನುಭವಿಸುತ್ತೇವೆ. ಅದರಂತೆ ಪರಬ್ರಹ್ಮ ಸ್ವರೂಪ ಎಂಬುದು ಆನುಭವ. ಅದರ ಹಾದಿಯಲ್ಲಿ ಸಾಗುವುದಕ್ಕಿರುವ ಶಿಕ್ಷಣ ಮತ್ತದರ ಬಂಧನವೇ ಜನಿವಾರ. ಪರಬ್ರಹ್ಮ ಸ್ವರೂಪವಾದ ರಾಮನನ್ನೇ ಅವಹೇಳನ ಮಾಡುವಾಗ ಇನ್ನು ಜನಿವಾರವನ್ನು ಅವಹೇಳನ ಮಾಡುವುದರಲ್ಲಿ ಅತಿಶಯವಿರುವುದಿಲ್ಲ. ಜನಿವಾರ ಬೇಕೋ ಶಿಕ್ಷಣ ಬೇಕೋ? ಎಂಬ ಪ್ರಶ್ನೆ ಎದುರಾಗುವಾಗ ಒಂದರೊಳಗೆ ಇನ್ನೊಂದು ಇದೆ ಎಂಬ ಅರಿವಿಲ್ಲದ ಮೂರ್ಖತನದ ಪ್ರಶ್ನೆ. 

ಮನುಷ್ಯ ಜನ್ಮದಿಂದ ಅಪ್ಪ ಅಮ್ಮ ಎಂಬ ಸಂಭಂಧದಿಂದಲೇ ತನ್ನ ಬದುಕಲ್ಲಿ ತೊಡಗುತ್ತಾನೆ. ಅಪ್ಪ ಅಮ್ಮ ಎಂಬ ಗೌರವ ಆತನಿಂದಲೇ ಆರಂಭವಾಗಬೇಕು. ಯಾಕೆಂದರೆ ಆತನ ಜನ್ಮದ ಅಸ್ತಿತ್ವಕ್ಕೆ ಅಪ್ಪ ಅಮ್ಮನೇ ಮೂಲ ಕಾರಣ. ಆ ಗೌರವ ಆತನಿಗಿಲ್ಲ ಎಂದರೆ ಹೊರಗಿನಿಂದ ಆ ಗೌರವ ಸಿಗುವುದಕ್ಕೆ ಸಾಧ್ಯವಿಲ್ಲ.  ನಮ್ಮ ಕಾರ್ಯಕ್ಕೆ ನಮ್ಮ ವ್ಯಕ್ತಿತ್ವಕ್ಕೆ ಮೊದಲು ನಮ್ಮ ಗೌರವ ಸಲ್ಲಬೇಕು. ಆ ಗೌರವದಿಂದಲೇ ಅದು ಅನುಸರಿಸಲ್ಪಡಬೇಕು. ಕೇವಲ ಅಪ್ಪ ಅಮ್ಮ ಆಗಿದ್ದಾರೆ ಎಂದು ಅವರನ್ನು ಗೌರವಿಸುವುದಲ್ಲ.  ಅದು ಮಾನಸಿಕ ಸ್ವಭಾವವಾಗಬೇಕು. ಹೊರತು ಕಟ್ಟು ಪಾಡಿಗೆ ಸಿಲುಕಿಕೊಂಡರೆ ಅನಿವಾರ್ಯ ಬಂಧನವಾಗಿ ನಡುವೇ ತಿರಸ್ಕಾರವೂ ಮೂಡಿಬರಬಹುದು.  ಯಜ್ಞೋಪವೀತ ಅಥವಾ ಜನಿವಾರ ಜತೆಗೆ ಬ್ರಾಹ್ಮಣ್ಯ ಇವುಗಳೆಲ್ಲ ಅನಿವಾರ್ಯ ಕಟ್ಟುಪಾಡು ಆಗಬಾರದು. ಅದು ಮಾನಸಿಕ ಸ್ವಭಾವವಾಗಬೇಕು. ಮಾವಿನ ಮರದಲ್ಲಿ ಮಾವು ಮಾತ್ರವೇ ಅದಂತೆ ಅದು ಜನ್ಮ ಜಾತವಾಗಬೇಕು. ಜನಿವಾರದ ಬಗ್ಗೆ ಅಪಸ್ವರ  ಕೇಳುವಾಗ ನಾವು ವ್ಯಗ್ರರಾಗುವ ಮೊದಲು ನಾವೆಷ್ಟು ಅದಕ್ಕೆ ಗೌರವ ಸಲ್ಲಿಸುತ್ತಿದ್ದೇವೆ ಎಂಬ ಆತ್ಮವಂಚನೆ ಇಲ್ಲದ ಪ್ರಶ್ನೆ ಮತ್ತು ಉತ್ತರ ಕಂಡುಕೊಳ್ಳಬೇಕು. ನಮ್ಮ ಜನಿವಾರಕ್ಕೆ ನಾವೇ ಗೌರವ ಕೊಡದೇ ಇದ್ದರೆ ಊರವರಿಂದ ಅದನ್ನು ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ. 

ಮನೆಯಿಂದ ಹೊರಡುವಾಗ ಹಣೆಯ ತಿಲಕವನ್ನು ಅಳಿಸಿ ಹೋಗುವವರನ್ನು ನೋಡಿದ್ದೇನೆ. ತಿಲಕವಿದ್ದ ಮುಖ ಹೊರಗೆ ತೋರಿಸುವುದಕ್ಕೂ ಹಿಂಜರಿಕೆ. ಇನ್ನು ವಾರಾಂತ್ಯದ ಪಾರ್ಟಿಗೆ ಜನಿವಾರ ಮನೆಯ ಗೋಡೆಗೆ ನೇತು ಹಾಕಿ ಹೋಗುವವರಿದ್ದಾರೆ. ಆ ರೀತಿಯ ಪ್ರವೃತ್ತಿಗೆ ಎಲ್ಲಿಂದ ಪ್ರಚೋದನೆ ಲಭ್ಯವಾಗುತ್ತದೆ? ಯಾರು ಹೇಳಿಕೊಡುತ್ತಾರೆ? ಇನ್ನು ಸಂಧ್ಯಾವಂದನೆಯಾಗಲಿ ಪಿತೃಕ್ರಿಯೆ ಅಥವಾ ಇನ್ನಿತರ ಸಂಸ್ಕಾರಗಳನ್ನು ನಿಷ್ಠೆಯಿಂದ ಎಲ್ಲರೂ ಪಾಲಿಸುವುದಿಲ್ಲ. ಹೇಗಿದ್ದರೂ ಆಗುತ್ತದೆ. ಬೆಳಗೂ ರಾತ್ರಿಯೂ ಆಗಿ ದಿನ ಸಂದು ಹೋಗುತ್ತದೆ ಎಂಬ ಅಸಡ್ಡೆಯಿರುತ್ತದೆ. ಮೊದಲಿನಂತೆ ಬ್ರಾಹ್ಮಣ ಮನೆಯಲ್ಲೇ ಇರುವುದಿಲ್ಲ. ತನ್ನ ಮನೆ ಕುಟುಂಬವನ್ನು ಬಿಟ್ಟು ಜೀವನ ನಿರ್ವಹಣೆಗೋಸ್ಕರ ಯಾವುದೋ ವೃತ್ತಿಯಲ್ಲಿ ತೊಡಗಿಕೊಂಡ ಹಲವರು ಬ್ರಾಹ್ಮಣರಾಗಿ ಮಾತ್ರವಲ್ಲ ಬ್ರಾಹ್ಮಣ ವೇಷವನ್ನೂ ಧರಿಸುವುದಿಲ್ಲ. ಅದು ಅನಿವಾರ್ಯ ಅಂತ ಅನಿಸುವುದೇ ಇಲ್ಲ. ಇನ್ನು ಸಂಧ್ಯಾವಂದನೆ ಮಾಡಿದರೂ ಮೂರು ಹೊತ್ತು ಬಿಡಿ ಎರಡು ಹೊತ್ತು ಮಾಡುವವರು ಇಲ್ಲ. ಒಂದೇ ಹೊತ್ತು  ಮಾಡಿದರೂ ಅದರ ಮೇಲೆ ಶ್ರಧ್ದೆ ಇರುವುದಿಲ್ಲ. ಯಾವುದೋ ಕಾಟಾಚಾರಕ್ಕೆ ಒಂದಷ್ಟು ಹೊತ್ತು ಮುಗಿಸಿಬಿಡುವುದನ್ನು ನೋಡಿದ್ದೇನೆ. ಸಂಧ್ಯಾವಂದನೆಯ ಉದ್ದೇಶವೇ ತಿಳಿಯದೆ ಇರುವಾಗ ಅದರ ಬಗ್ಗೆ ಸ್ವ ಗೌರವ ಹುಟ್ಟುವುದಿಲ್ಲ. 

ಸಾಮಾನ್ಯವಾಗಿ ಎರಡು ಹೊತ್ತು ನಾನು ಸಂಧ್ಯಾವಂದನೆ ಕಟ್ಟುನಿಟ್ಟಾಗಿ ಮಾಡಿಬಿಡುತ್ತೇನೆ. ಮನೆಯಲ್ಲಿದ್ದರೆ ಅದು ಹೊತ್ತಿಗೆ ಸರಿಯಾಗಿ ಮಾಡಿದರೂ ಹಲವು ಸಲ ಕೆಲಸದ ಒತ್ತಡದಿಂದ ವೆತ್ಯಾಸವಾಗುವುದಿದೆ. ಅದು ಅಪರೂಪ. ಹೊರಗೆ ಹೋದಾಗಲೂ ಅದಕ್ಕೆ ಆದಷ್ಟು ಅನುಕೂಲವಾಗುವಂತೆ ನೋಡಿಕೊಳ್ಳುತ್ತೇನೆ. ಕೆಲವೊಮ್ಮೆ ಇದೂ ಸಾಧ್ಯವಾಗುವುದಿಲ್ಲ. ಆಗ ಅನುಭವಿಸುವ ಮಾನಸಿಕ ಹಿಂಸೆ ಒಂದು ರೀತಿಯದಾಗಿರುತ್ತದೆ. ಯಾಕೆಂದರೆ ಹಲವು ಸಲ ಪರಿಸರವೇ ಅದಕ್ಕೆ ವಿರುದ್ಧವಾಗಿರುತ್ತದೆ.  ಒಂದು ಸಲ ಯಾವುದೋ ಮದುವೆ ಕಾರ್ಯಕ್ರಮಕ್ಕೆ ಹೋದಾಗ ಮದುವೆ ಮನೆಯಲ್ಲಿ ಎಂದಿನಂತೆ ಸಾಯಂಕಾಲ ಸಂಧ್ಯಾವಂದನೆಗೆ ಅಣಿಯಾದೆ. ಆಗ ಬ್ರಾಹ್ಮಣರೆ ವಿಚಿತ್ರವಾಗಿ ನೋಡಿದ ಅನುಭವವಿದೆ. ಇದೆಲ್ಲ ಮನೆಯಲ್ಲಿ ಮಾತ್ರ ಇಟ್ಟುಕೊಂಡರೆ ಸಾಕಲ್ಲವಾ ಎಂಬ ಭಾವ. ಪರಿಸರ ಹೀಗಿರುವಾಗ ನಮಗೆ ಎದುರಾಗುವ  ಪ್ರಶ್ನೆಗಳಲ್ಲಿ ಇದೂ ಒಂದು ಜನಿವಾರ ಬೇಕೋ?  ಶಿಕ್ಷಣ ಬೇಕೋ? . ಇದನ್ನು ನಾವು ಅನಿವಾರ್ಯವಾಗಿ ಎದುರಿಸಲೇಬೇಕು. ಒಂದು ರೀತಿಯಲ್ಲಿ ಕೇಳಿ ಬೇಡಿಕೆ ಸಲ್ಲಿಸಿ ತರಿಸಿಕೊಂಡಂತೆ. 

ಹಾಗಾಗಿ   ನಮ್ಮ ತನವನ್ನು ಮೊದಲು  ನಾವು ಗೌರವಿಸಿ ಅನುಸರಿಸಿ ಉಳಿಸಿಕೊಳ್ಳಬೇಕು. ನಮ್ಮ ಅನುಸರಣೆಯಲ್ಲಿ ಉಳಿದವರಿಗೆ ಗೌರವ ಬರುವಂತೆ ಮಾಡಬೇಕು. ಊರೆಷ್ಟೇ ತೆಗಳಲಿ, ಅವಹೇಳನ ಮಾಡಲಿ ನಮ ಆತ್ಮ ಗೌರವ ಉಳಿದವರ ಹೇಳಿಕೆ ಅಭಿಪ್ರಾಯದಲ್ಲಿ ಬದಲಾಗಬಾರದು. ಯಾರೋ ಹೇಳಿದಂತೆ ನಾವು ನಡೆಯುವುದಾದರೆ ಜನ್ಮದಿಂದ ಬರುವ ಸಂಸ್ಕಾರ ಅಪ್ಪ ಅಮ್ಮ ಎಂಬ ಭಾವವನ್ನು ನಾವೇ ಬಲಿಕೊಟ್ಟಂತೆ. ಯಾರು ಏನೇ ಹೇಳಲಿ ನಮ್ಮ ಧರ್ಮವನ್ನು ನಮ್ಮ ಸಂಸ್ಕಾರವನ್ನು ಅನುಸರಿಸುವುದಕ್ಕೆ ನಮ್ಮ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಯಾರ ಅವಹೇಳನಕ್ಕೆ ಭರ್ತ್ಸನೆಗೆ ಹೆದರಿ ಅಥವಾ ನಾಜಿಕೆ ಪಟ್ಟು ಅದನ್ನು ಅನುಸರಿಸದೆ ಇರುವುದರಲ್ಲಿ ಅರ್ಥವಿಲ್ಲ. ಮಾನಸಿಕವಾಗಿ ಕಟ್ಟು ನಿಟ್ಟಿನಿಂದ ಅದನ್ನು ಅನುಸರಿಸಿಕೊಂಡರೆ ಇಂತಹ ಮೂರ್ಖತನದ ಪ್ರಶ್ನೆಗಳಿಗೆ ಉತ್ತರ ಹೇಳುವ ಆತ್ಮ ಬಲವಾದರೂ ನಮಗೆ ಒದಗಿ ಬರುತ್ತದೆ. 

Saturday, April 18, 2026

ತತ್ವಮಸಿ ಸ್ವಾಮಿಯೇ ಶರಣಂ ಅಯ್ಯಪ್ಪ

ತತ್ವಮಸಿ ಎಂಬುದು  ಉಪನಿಷತ್ ನಲ್ಲಿ ಬರುವ ವಾಕ್ಯ.  ಇದು  ಭಗವದ್ಗೀತೆಯಲ್ಲಿಯೂ  ಹೇಳಿರುವ ಒಂದು ಮಾತು. ಭಗವಂತ ಸ್ವರೂಪವನ್ನು ಎಲ್ಲವೂ ನೀನೆ ಎಂದು ತಿಳಿಯುವುದೇ ತತ್ವಮಸಿ. ಶಬರಿಮಲೆ ದರ್ಶನ ಮಾಡಿದರೆ ಅಲ್ಲಿ ಸನ್ನಿಧಾನದ ತುತ್ತ ತುದಿಯಲ್ಲಿ ಬರೆದಿರುವುದನ್ನು ಕಾಣಬಹುದು. ಅಲ್ಲಿಗೆ ಯಾತ್ರಾರ್ಥಿಗಳಾಗಿ ಭಕ್ತಿ ವಿಶ್ವಾಸದಿಂದ ಹೋದವರಿಗೆ ಈ ತತ್ವ ಮಸಿಯ ತಾತ್ಪರ್ಯ ಎಷ್ಟು ಅರ್ಥವಾಗುತ್ತದೋ ಗೊತ್ತಿಲ್ಲ, ಆದರೆ ಅವರು ನಡೆದು ಕೊಂಡು ಬಂದ ದಾರಿ, ಇಟ್ಟ ಹೆಜ್ಜೆ ಅದರ ಹಿಂದಿರುವ ವಿಶ್ವಾಸ ಈ ತತ್ವಮಸಿಯನ್ನೇ ಹೇಳುತ್ತದೆ. ಭಗವಂತ ಎಲ್ಲವೂ ನೀನೆ. ನೀನಲ್ಲದೆ ಬೇರೆ ಏನೂ ಇಲ್ಲ.  ಒಂದೆರಡು ಅಕ್ಷರಗಳ ಎಂತಹ ಭಾವನಾತ್ಮಕ ವಾಕ್ಯ?  ನಾನು ಮೊನ್ನೆ ಶಬರಿ ಮಲೆಗೆ ಹೋಗಿ ಇರುಮುಡಿಯ ಮರೆಯಲ್ಲಿ ನೋಡಿದೆ ಅದೇ ತತ್ವ ಮಸಿ. ಅದುವರೆಗೆ ಬಂದ ಹಾದಿಯ ಆಯಾಸ ಉದ್ದೇಶ ಎಲ್ಲವೂ ಫಲಪ್ರದವಾಗುವುದು ಯಾಕೆ ಎಂಬುದು ಈ ಒಂದು ಶಬ್ದದಿಂದ ಅರ್ಥವಾಗಿಬಿಡುತ್ತದೆ. ನನ್ನ ಆತ್ಮವೇ ನೀನು ಅಂದರೆ ಭಗವಂತ, ಬ್ರಹ್ಮ ಆಗಿರುವೆ ಎಂಬುದು ಸಾರಾಂಶ. ಇಲ್ಲಿ ಸರ್ವಸ್ವ ಎಂದರೆ ತುಂಬ ಸರಳ.


ಕೆಲವೆಲ್ಲ ತತ್ವಗಳು ನಮಗೆ ಅರ್ಥವಾಗುವಷ್ಟು ಜ್ಞಾನಿಗಳಾಗಿರುವುದಿಲ್ಲ. ಆದರೆ ನಮ್ಮ ಕೃತಿ ಅದೇ ಆಗಿರುತ್ತದೆ. ಹಲವು ಸಲ ಹರಿಯುವ ನದಿಗೆ  ತಾನು ಎಲ್ಲಿಗೆ ಸಂಚರಿಸುತ್ತೇನೆ, ನನ್ನ ಗಮನ ಯಾವುದು? ಎಂದು ತಿಳಿದಿರುತ್ತದೋ ಇಲ್ಲವೋ, ಆದರೂ ಅದು ಸಮುದ್ರದ ಕಡೆಗೆ ಹರಿಯುವಂತೆ, ನಮ್ಮ   ಪಯಣವೂ ನಮಗೆ ತಿಳಿಯದೆ  ಒಂದು ಗುರಿಯತ್ತ ಸರಿಯುತ್ತಲೇ ಇರುತ್ತದೆ. ನಮ್ಮ ಸನಾತನ ಧರ್ಮದ ತಳಹದಿಯೇ ಇದು.  ಹುಟ್ಟಿದ ಕೂಡಲೇ ನನ್ನ ಉಸಿರು ಅಂತ ಉಸಿರಾಡಿ, ನನ್ನ ಹಸಿವು..ಎಂದು ಅತ್ತು ಕರೆದಾಗ ಎದೆ ಹಾಲು ಕೊಟ್ಟ ಅಮ್ಮನನ್ನು ನನ್ನ ಅಮ್ಮ ಎಂದು ಒಪ್ಪಿಕೊಳ್ಳುವ ವಿಶ್ವಾಸ ಬೆಳೆದು ಬರುತ್ತಾ ಈ ನಾನು ನನ್ನದು ಎಂಬುದರ ವಿಸ್ತಾರ ದೊಡ್ಡದಾಗುತ್ತ ಹೋಗುತ್ತದೆ. ನನ್ನ ಅಮ್ಮ ನನ್ನ ಅಪ್ಪ, ನನ್ನ ಬಳಗ, ನನ್ನ ಮನೆ ನನ್ನ ಊರು ನನ್ನ ಸಂಪತ್ತು ಧನ ಕನಕ...ಎಲ್ಲವೂ ನನ್ನದು ಎಂಬ ವ್ಯಾಪ್ತಿಯಲ್ಲಿ ಬದುಕು ಹುದುಗಿ ಹೋಗುತ್ತದೆ. ಈ ನಾನು ನನ್ನದು ಎಂಬ ಭೂಮಿಯ ಮೇಲಿನ ಸಂಬಂಧದ ಪರಿಧಿ ಅರಿವಾಗುವಾಗ ಈ ತತ್ವ ಮಸಿಯ ಜ್ಞಾನ ಅರಿವಾಗುತ್ತದೆ. ಆನಂತರ ನಾನು ನನ್ನದು ಎಂಬುದು ಇರುವುದಿಲ್ಲ. ಶಬರಿಮಲೆಯ ಯಾತ್ರೆ ಈ ಜ್ಞಾನವನ್ನು ಕೃತಿಯ ಮೂಲಕ ಬೋಧಿಸುತ್ತದೆ. ಬಹುಶ ಜಗತ್ತಿನಲ್ಲಿ ಯಾವ ಧರ್ಮವೂ ಬೋಧಿಸಲಾಗದ ತತ್ವವನ್ನು ಇಷ್ಟು ಸುಲಭವಾಗಿ ಸರಳವಾಗಿ ತೀರಾ ಪಾಮರ ಅಜ್ಞಾನಿಗೂ ತಿಳಿಸುವಂತೆ  ಶಬರಿಮಲೆ ಯಾತರೆ ಮಾಡಿಬಿಡುತ್ತದೆ. ಅಲ್ಲಿ ದೇಹದ ಕಾಮನೆ ಇರುವುದಿಲ್ಲ. ಹಸಿವು ನೀರಡಿಕೆ ಮುಖ್ಯವಾಗುವುದಿಲ್ಲ. ನಿದ್ರೆಯಲ್ಲೂ ಎದೆ ಬಡಿದುಕೊಳ್ಳುತ್ತದೆ ಶರಣಂ ಅಯ್ಯಪ್ಪ. ಅಯ್ಯ ಎಂದರೆ, ಒಡೆಯ. ಅಪ್ಪ ಎಂದರೂ ಅದುವೇ ಎಲ್ಲವೂ ನೀನಾಗುವ ಈ ಅಯ್ಯಪ್ಪ ಶಬ್ದದ ಕಾಂತಿಯ ತುಡಿತ ಇರುತ್ತದಲ್ಲ ಆ ಧ್ವನಿ ಕೇವಲ ಬಾಯಿಯಿಂದ ಉದ್ಗರಿಸಲ್ಪಡುವುದಿಲ್ಲ. ಅದು ಹೃದಯದಿಂದ ಹೊರಬರುತ್ತದೆ. ಎಷ್ಟು ಸಲ ಹೇಳಿದರೂ...ಕಡಿಮೆಯಾಯಿತೆ ಎಂಬ ಭಾವ, ಒಂದು ಸಲ ಹೇಳುವ ನಿರ್ಧಾರವಿದ್ದರೆ ಅಲ್ಲಿ ಹಲವು ಬಾರಿಯ ಉದ್ಗಾರವಿರುತ್ತದೆ. ಶರಣಂ ಅಯ್ಯಪ್ಪ. ಇದನ್ನು ತಿಳಿಯಬೇಕಾದರೆ ಒಂದು ಸಲ ಮಾಲೆ ಹಾಕಿ ಇರುಮುಡಿ ಹೊತ್ತು ವೃತನಿಷ್ಠರಾಗಿ ಮಲೆ ಏರಿದರೆ ಸಾಕು ಬುದ್ದನಿಗೆ ಜ್ಞಾನೋದಯವಾದಂತೆ ಬದುಕಿನ ಜ್ಞಾನ ಅರಿವಾಗಿ ಜ್ಞಾನೋದಯವಾಗುತ್ತದೆ.  


ದೊಡ್ಡ ಗ್ರಂಥಗಳನ್ನು ವೇದ ಉಪನಿಷತ್ ಗಳನ್ನು ಓದಿಯೂ ಗಳಿಸಲಾಗದ ಜ್ಞಾನವನ್ನು ಕೃತಿಯಿಂದ ನಮ್ಮ ಕರ್ಮದಿಂದ ತಿಳಿಯ ಪಡಿಸುವುದೆ ಶಬರಿಮಲೆಯ ಯಾತ್ರೆಯ ಉದ್ದೇಶ. ಯಾವುದೇ ಜ್ಞಾನ ಇಲ್ಲದಿದ್ದರೂ ಇಲ್ಲಿ ಒದಗಿಬರುವ ಪಾರಮಾರ್ಥಿಕ ಅರಿವು ತುಂಬ ಸರಳವಾದರೂ ಬದುಕಿನ ಮರ್ಮವನ್ನು ಹೇಳಿಬಿಡುತ್ತದೆ. 

ಇಪ್ಪತ್ತು ವರುಷಗಳ ಹಿಂದೆ ಶಬರಿ ಮಲೆಗೆ ಹೋಗಿದ್ದೆ. ಆನಂತರ ಹಲವು ಸಲ ಹೋಗಬೇಕು ಎಂದುಕೊಂಡರು ಯಾಕೋ ಒದಗಿಬರುವುದಿಲ್ಲ. ಶಬರಿ ಮಲೆಗೆ ಹೋಗುವುದೆಂದರೆ ಹಾಗೆ ಅಲ್ಲಿ ನಿರ್ಧಾರ ಮಾತ್ರ ನಿಮ್ಮದಾಗಬಹುದು, ಆದರೆ ಆನಂತರ ಅದು ದೈವೇಚ್ಛೆಯಾಗಿಬಿಡುತ್ತದೆ. ಆತ ಕರೆದರೆ ಮಾತ್ರ ನಿಮಗೆ ಎಲ್ಲವೂ ಒದಗಿಬರುತ್ತದೆ. ಏನು ವಿಘ್ನ ಬಂದರು ನೀವು ಶಬರಿಮಲೆ ಮೆಟ್ಟಲು ಏರಬಹುದು. ಇಲ್ಲವಾದರೆ ಎಷ್ಟು ಪ್ರಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ. ಶ್ರೀಮಂತಿಗೆ ದೇಹಬಲ ಧನಬಲ ಯಾವುದೂ ಮುಖ್ಯವಾಗುವುದಿಲ್ಲ. ನನಗೂ ಅದೇ ಬಗೆಯ ಅನುಭವ. ಹಲವರಲ್ಲಿ ಕೇಳಿದರೂ ಇದೇ ಅನುಭವ. 

ನನ ಪತ್ನಿ ವಿಪರೀತ ಕಾಲು ನೋವಿನಲ್ಲಿ


ಕಣ್ಣೀರು ಹಾಕುವಾಗ, ಹಲವು ಚಿಕಿತ್ಸೆಗಳನ್ನು ಮಾಡಿದೆ. ಚಿಕಿತ್ಸೆ ಮಾಡುವುದು ನಮ್ಮ ಕರ್ಮ. ಆದರೆ ಅದು ಅಂತಿಮ ಪರಿಹಾರವಲ್ಲ. ಅಲ್ಲಿ ದೈವಾನುಗ್ರವೂ ಇರಬೇಕಾಗುತ್ತದೆ. ಯಾವುದೂ ಇಲ್ಲ ಎಂದನಿಸುವಾಗ ನಾನು ಹೆಂಡತಿಯಲ್ಲಿ ಹೇಳಿದೆ, ಕಾಲು ನೋವು ಗುಣವಾದರೆ ನಿನ್ನನ್ನು ಕರೆದುಕೊಂಡು ಶಬರಿಮಲೆಗೆ ಹೋಗುತ್ತೇನೆ. ಆ ಪ್ರಚೋದನೆ ಎಲ್ಲಿಂದ ಬಂತೋ ಹೇಗೆ ಬಂತೋ ಗೊತ್ತಿಲ್ಲ. ಅಂತು ಮನದಾಳದಿಂದ ಹೇಳೀದೆ. ಆ ಸಂಕಲ್ಪ ಎಷ್ಟು ನೆರವೇರಿಸಬಲ್ಲೇ ಎಂಬುದೇ ನನಗೆ ತಿಳಿದಿಲ್ಲ. ನಾನೇನು ತಿಳಿದರೂ ಅದು ನನ್ನದಲ್ಲ. ಆ ಶಕ್ತಿ ಏನು ಹೇಳಿಸುತ್ತದೋ ಏನು ಮಾಡಿಸುತ್ತದೋ ಅದೇ ಅಂತಿಮ. ಕೊನೆಗೂ ನನ್ನ ಸಂಕಲ್ಪ ಭಗವಂತ ಇಡೇರಿಸಿಕೊಂಡು ಬಿಟ್ಟ.ಅಲ್ಲಿಗೆ ನನ್ನಲ್ಲಿ ಧನ್ಯತೆ ಇದೆ. 

ಮೊನ್ನೆ ವಿಷು ಸಂಕ್ರಮಣಕ್ಕೆ ಹೊರಡುವುದಕ್ಕೆ ತಿಂಗಳ ಮೊದಲೇ ನಿರ್ಧರಿಸಿ ಬೆಂಗಳೂರಿನ ಜಾಲಹಳ್ಳಿಯ ಅಯ್ಯಪ್ಪ ಟೂರ್ಸ್ ಎಂಡ್ ಟ್ರಾವೆಲ್ಸ್ ನ್ನು ಸಂಪರ್ಕಿಸಿದೆ. ಮಿತ್ರರಾರ ನಿಡುವಜೆ ಗೋಪಾಲಕೃಷ್ಣ ಭಟ್ ವಿವರವನ್ನು ನೀಡಿ ಸಹಕರಿಸಿದ್ದರು. ಮುಂಗಡ ಕೊಟ್ಟು ಆಸನವನ್ನು ಕಾದಿರಿಸಿದರೂ ಹೋಗುವ ತೀರ್ಮಾನ ನಮ್ಮದಲ್ಲ. ಅದು ಭಗವಂತನದ್ದು. ಅಲ್ಲಿಂದಲೇ ತತ್ವಮಸಿಯ ತತ್ವ ಮನದಟ್ಟಾಗಿಬಿಡುತ್ತದೆ.

ಮೊನ್ನೆ ಒಂದು ವೋಲ್ಬೋ ಬಸ್ ನಲ್ಲಿ
ನಲ್ವತ್ತಕ್ಕೂ ಅಧಿಕ ಜನ ಮಾಲೆ ಧರಿಸಿ ಇರುಮುಡಿ ಹೊತ್ತು ಬಂದಿದ್ದರು. ಹೆಚ್ಚಿನವರೆಲ್ಲರೂ ವಯೋ ವೃದ್ದರು. ಅದರಲ್ಲು ಮಹಿಳೆಯರೆ ಅಧಿಕ. ಒಬ್ಬೊಬ್ಬರದು ಒಂದೊಂದು ಕಥೆ. ಅಷ್ಟೂ ಜನರಿಗೂ ಒಳ್ಳೆಯ ವ್ಯವಸ್ಥೆಯನ್ನು ಟ್ರಾವೆಲ್ಸ್ ಸಂಸ್ಥೆ ಮಾಡಿತ್ತು. ಇರುಮುಡಿ ಕಟ್ಟುವಲ್ಲಿಂದ ತೊಡಗಿ ಯಾತ್ರ ನಡುವೆ ಊಟ ಆಹಾರ ಎಲ್ಲವೂ ಉತ್ತಮವಾಗಿತ್ತು. ಈ ಯಾತ್ರೆಯಲ್ಲಿ ಬಹಳ ಅನುಭವ ಇದ್ದ ಸಂಸ್ಥೆ ಇದು. ಎಲ್ಲಿ ಇಳಿಯಬೇಕು? ಎಲ್ಲಿ ಉಳಿಯಬೇಕು?  ಇದೆಲ್ಲದಕ್ಕೂ ಒಂದು ಖಚಿತವಾದ ಯೋಜನೆ ಇತ್ತು. ಸಾವಿರದ ಐನೂರು ಕಿಲೋ ಮೀಟರ್ ಮಾತ್ರವಲ್ಲ ಮೂರು ದಿನದ ದೀರ್ಘವಾದ ಯಾತ್ರೆ. ನಾವು ಮನೆಯ ಒಂದಿಬ್ಬರೂ ಹೋದರೂ ಯಾತ್ರೆಯಲ್ಲಿಅದು ಇದು ಅಂತ ಅಸೌಕರ್ಯ ಅಡಚಣೆಗಳು ಸಾಮಾನ್ಯ. ಇಷ್ಟು ಜನರನ್ನು ಕರೆದುಕೊಂಡು ಸಮರ್ಥರೀತಿಯ ವ್ಯವಸ್ಥೆ ಮಾಡುವುದು ಸುಲಭದ ವಿಷಯವಲ್ಲ. ಆದರೂ ಕೆಲವೆಲ್ಲ ಸಣ್ಣ ಪುಟ್ಟ ತೊಂದರೆಗಳೂ ಇದ್ದರೂ ಅದು ತೀರ ಕಡೆಗಣಿಸಲ್ಪಡುವ ವಿಚಾರಗಳು. ಒಳ್ಳೆಯ ಯಾತ್ರೆ ಒಳ್ಳೆಯ ದರ್ಶನ ಮಾಡಿದ ತೃಪ್ತಿಕೊನೆಗೂ ಲಭ್ಯವಾಗಿದೆ ಎಂಬುದು ಮುಖ್ಯ. 

ಇಲ್ಲಿಂದ ಹೊರಟು ಗುರುವಾಯೂರು, ಆನಂತರ ಚೋಟಾನಿಕ್ಕರ ದೇವಿ ಕ್ಷೇತ್ರ ನಂತರ ಏಟ್ಟುಮಾನ್ನೂರು ಶಿವ ಕ್ಷೇತ್ರ ಅಲ್ಲಿಂದ ನಿಲಕ್ಕಲ್ ಪಂಬ ಶಬರಿ ಮಲ. ಅಲ್ಲಿಂದ ಹಿಂತಿರುಗಿ, ತಮಿಳು ನಾಡಿನ ತ್ರಿಪುರ ಕುಂಡ್ರಮ್ ಸುಬ್ರಹ್ಮಣ್ಯ ಕ್ಷೇತ್ರ, ಮಧುರೆ ಮೀನಾಕ್ಷಿ ದೇವಾಲಯ, ಕೊನೆಗೆ ಪಳನಿ ದರ್ಶನ ಮುಗಿಸಿ ಬೆಂಗಳೂರಿಗೆ.ಇಷ್ಟು ದೀರ್ಘಯಾತ್ರೆ ಮೂರು ದಿನದಲ್ಲಿ ಮುಗಿಸಿದ್ದು ದೇಹಾಯಸಕ್ಕೆ ಬಹಳಷ್ಟು ಕಾರಣವಾಯಿತು. ಒಂದು ಕಡೆಯಲ್ಲಿ ಕೆಲವು ಘಂಟೆಯ ವಿಶ್ರಾಂತಿ ಬಿಟ್ಟರೆ ಮತ್ತೆಲ್ಲವು ಪ್ರಯಾಣದಲ್ಲೇ  ಕಳೆದು ಹೋಯಿತು. ಎಲ್ಲ ಕಡೆಯಲ್ಲೂ ಊಟ ಉಪಚಾರ ಚೆನ್ನಾಗಿ ವ್ಯವಸ್ಥೆ ಮಾಡಿದ್ದರು. ಮುಖ್ಯವಾಗಿ ಅಡುಗೆ ಅನಿಲ ಸಮಸ್ಯೆಯಿಂದ ಹಲವಾರು ಹೋಟೇಲ್ ಗಳು ಮುಚ್ಚಿದ್ದವು. ಹಾಗಿ ಬಹಳ ಪರಿಶ್ರಮ ಪಟ್ಟು ಅನ್ನಾಹಾರದ ವ್ಯವಸ್ಥೆ ಮಾಡಿದ್ದರು. ಅದು ಬಹಳ ಉತ್ತಮವಾಗಿತ್ತು. 

ಎಟ್ಟುಮಾನ್ನೂರು ಮಹಾದೇವ ಕ್ಷೇತ್ರದ ಪ್ರಶಾಂತತೆ ಬಹಳ ಇಷ್ಟವಾಯಿತು.  ಸಾಕಷ್ಟು ಜನಸಂಖ್ಯೆ ಇದ್ದರೂ ಸಾಯಂಕಾಲದ ಹೊತ್ತಿನ ಇಲ್ಲಿನ ವಾತಾವರಣ ಅದ್ಭುತವಾಗಿತ್ತು. ನಮ್ಮ ಕೇರಳ ಶೈಲಿಯಾ ಆರಾಧನ ಕ್ರಮದಂತೆ ಬಾಗಿಲು ಮುಚ್ಚಿ ಮಂಗಳಾರತಿಯಾಗುವಾಗ ಬಾಗಿಲು ತೆರೆದು ದೇವರ ದರ್ಶನವಾಗುವಾಗ ಒಂದು ಅದ್ಭುತ ಭಕ್ತಿಯ ಪ್ರಚೋದನೆಯಾಗುತ್ತದೆ. 

ಈ ಪ್ರಯಾಣದ ಮುಖ್ಯ ಉದ್ದೇಶವೆಂದರೆ ಶಬರಿಮಲೆ ಅರೋಹಣ. ತಲೆಯಲ್ಲಿ ಇರುಮುಡಿ ಕಟ್ಟಿಕೊಂಡು ಮುಂಜಾನೆ ಐದು ಘಂಟೆಗೆ ನಾನು ನನ್ನ ಪತ್ನಿ ಜತೆಯಲ್ಲಿ ನನ್ನ ಎರಡನೆ ಮಗ ಎಲ್ಲರೊಂದಿಗೆ ಮಲೆ ಹತ್ತುವುದಕ್ಕೆ ಆರಂಭಿಸಿದೆವು.  ಕೆಲವುಕಡೆ ಮೆಟ್ಟಲು ಕೆಲವು ಕಡೆ ಇಳಿಜಾರು ರಸ್ತೆ ತಲೆ ಎತ್ತಿ ನೋಡಲಾಗದಷ್ಟು ಎತ್ತರದ ಬೆಟ್ಟ  ಒಂದೊಂದೆ ಹೆಜ್ಜೆಇಡುತ್ತಾ ಆಗಾಗ ಏದುಸಿರಿನೊಂದಿಗೆ  ಶರಣಂ ಅಯ್ಯಪ್ಪ ಎಂದು ಶರಣು ಕರೆಯುತ್ತಾ ಹೋಗುತ್ತಿದ್ದರೆ ಆಯಾಸ ಎನಿಸಿದರೂ ಅದರಲ್ಲೊಂದು ಸುಖ. ಏಳು ಘಂಟೆಯಷ್ಟು ಹೊತ್ತಿಗೆ ಮೇಲೆ ತಲುಪಿ ಇರುಮುಡಿ ಭಕ್ತರಿಗೆ ಮೀಸಲಾದ ಸರದಿಯಲ್ಲಿ ಸುಮಾರು ಒಂದುವರೆ ತಾಸು ನಿಲ್ಲಬೇಕಾಯಿತು. ಎರಡು ದಿನ ರಾತ್ರಿ ಸರಿಯಾಗಿ ನಿದ್ರೆ ಇಲ್ಲದೆ ಕಳೆದಿರುವುದರಿಂದಲೂ ದೇಹ ಸುಸ್ತಾಗಿ ಈಗ ಈ ಬೆಟ್ಟ ಹತ್ತಿ ಬಹಳ ಆಯಾಸ ನಿದ್ರೆ ಬಂದರೂ ಅಯ್ಯಪ್ಪಸ್ವಾಮಿಯ ದರ್ಶನಕ್ಕೆ ಹಾತೊರೆಯುತ್ತಿತ್ತು. ಸರದಿಯಂತೆ ಬಂದು ನಾವು ಮೂರು ಜನ ಹದಿನೆಂಟು ಮೆಟ್ಟಲ ಬುಡದಲ್ಲಿ ನಿಂತೆವು. ನನ್ನಾಕೆಗಂತೂ ಕುತೂಹಲದ ಭಾವನಾತ್ಮಕ ಘಳಿಗೆ,  ಆಕೆಯ ಮುಖದಲ್ಲಿದ್ದ ಉದ್ವೇಗ ಎಲ್ಲವನ್ನೂ ಹೇಗೆ ನಿಗ್ರಹಿಸಬೇಕೋ ಎಂದು ತಿಳಿಯದಂತಾಗಿದ್ದಳು. ಆಕೆಯ ಮುಖದಲ್ಲಿ ಆ ಉದ್ವೇಗವನ್ನು ಕಂಡ ಭಾವನೆ ನನಗೆ. ಕಿಕ್ಕಿರಿದ ಜನ ಜಂಗುಳಿ. ಎಲ್ಲರಿಗೂ ಅವಸರ ಉದ್ವೇಗ. ನಾವು ಹೆಜ್ಜೆ ಇಡುವ ಆ ಮೆಟ್ಟಿಲಿಗೆ ನಮಸ್ಕರಿಸುವುದಕ್ಕೂ ಸಾಧ್ಯವಾಗದಷ್ಟು ಜನ ಜಂಗುಳಿ. ಆದರೂ ಪ್ರಯತ್ನ ಮಾಡಿ , ಮೆಟ್ಟಲನ್ನು ಕಣ್ಣಿಗೊತ್ತಿ ಒಂದೋಂದೇ ಮೆಟ್ಟಲನ್ನು ಹತ್ತುವುದಕ್ಕೆ ತೊಡಗಿದೆವು.  ನಾನು ಬೇಗನೆ ಮೆಟ್ಟಲನ್ನೇರಿ ಮೊದಲು ಮೇಲಕ್ಕೆ ಹೋಗಿ ಹಿಂದಿರುಗಿ ನೋಡಿದೆ. ಕೆಳಗಿನಿಂದ ನನ್ನಾಕೆ ಹಿಂದೆ ನನ್ನ ಮಗ ಏರಿಕೊಂಡು ಬರುವುದನ್ನು ನೋಡಿ ಹೃದಯ ಭಾರವಾಯಿತು. ಇಬ್ಬರನ್ನು ಕರೆ ತಂದ ನನಗೆ ಒಂದು ಧನ್ಯತಾ ಭಾವ. ನನ್ನಾಕೆಯಂತೂ ಏದುಸಿರು ಉದ್ವೇಗ ಭರಿತವಾಗಿ ಒಂದು ಕೈಯಲ್ಲಿ ಇರುಮುಡಿಯನ್ನು ಹಿಡಿದು ಇನ್ನೊಂದು ಕೈಯಲ್ಲಿ ಮೆಟ್ಟಲನ್ನು ಹಿಡಿದೆ ಏರಿ ಹತ್ತಿರ ಹತ್ತಿರ ಬರುತ್ತಿದ್ದರೆ ಅದನ್ನು ನೋಡುವಾಗ ಅದೊಂದು ಭಾವನೆ ವರ್ಣಿಸುವುದಕ್ಕೆ ಸಾಧ್ಯವಿಲ್ಲದಾಯಿತು. ಕೊನೆಯ ಮೆಟ್ಟಲು ಏರಿ ಹತ್ತಿರ ಬಂದು ನಿಂತಾಗ ಜಗತ್ತನ್ನೇ ಮೀರಿದ ಅನುಭವ.  ನಂತರ ದರ್ಶನದ ಸರದಿ...ಅದು ಒಂದಷ್ಟು ಹೊತ್ತು. ಇನ್ನೊಂದು ಉದ್ವೇಗದ ಆರಂಭ ಕೊನೆಗೂ ಆಕೆ ದರ್ಶನ ಮಾಡಿದಾಗ ಆಕೆಯ ಆನಂದ ಸಂತೃಪ್ತಿ ಕಾಣುವುದಕ್ಕೆ ಕಣ್ಣೆರಡು ಸಾಲದಾಯಿತು. ಆಕೆ ಅಯ್ಯಪ್ಪನ ದರ್ಶನ ಮಾಡುತ್ತಿದ್ದರೆ, ನನಗೆ ಅಯ್ಯಪ್ಪನ ಜತೆಗೆ ಈಕೆಯ ಮುಖವನ್ನೂ ನೋಡುವ ಒಂದು ಭಾಗ್ಯ ಅಂತ ತಿಳಿಯಬೇಕು. 

ಎಲ್ಲಾ ಯಾತ್ರೆಗಳಂತೆ ಇಲ್ಲಿ ಹೊಸ ಜನಗಳು ಪರಿಚಯ ಅನುಭವಗಳು ಇದ್ದವು. ಎಲ್ಲವನ್ನೂ ವಿವರಿಸುವುದು ಕಷ್ಟವಾದರೆ ಎರಡು ವಿಚಾರಗಳನ್ನು ಹೇಳುವ ಮನಸ್ಸಾಗುತ್ತದೆ.  ಒಂದಂತು ನನಗೆ ತುಂಬ ಮನಸ್ಸಿಗೆ ತಟ್ಟಿದ ಘಟನೆ. 

ನಮ್ಮ ಬಳಿಯಲ್ಲೇ ಒಬ್ಬರು ವೃದ್ದ ಮಹಿಳೆ ಕುಳಿತ್ತಿದ್ದರು. ಅಂಜಲಿ ಅಂತ ಹೆಸರು. ಮೂಲತಃ ತಮಿಳು ಭಾಷೆಯ ಮಹಿಳೆ.  ನೋಡಿದರೆ ಬಹಳ ಬಡತನದ ಮಹಿಳೆ ಅಂತ ಅನ್ನಿಸುತ್ತದೆ. ತುಂಬ ಒಳ್ಳೆಯ ಮನಸ್ಸಿನ ಹೆಣ್ಣು. ಜಾಲ ಹಳ್ಳಿ ಅಯ್ಯಪ್ಪ ದೇವಸ್ಥಾನದ ಬಳಿಯಲ್ಲೇ ಸಣ್ಣ ಇಡ್ಲಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುವ ವೃತ್ತಿ. ಅಣು ರೇಣು ತೃಣಕಾಷ್ಠ ಎಂಬಂತೆ ನರ ನರದಲ್ಲೂ ಅಯ್ಯಪ್ಪ ಎನ್ನುವ ಈಕೆ ಅಯ್ಯಪ್ಪನ ಪರಮ ಭಕ್ತೆ. ಎಲ್ಲರೂ ಸ್ವಾಮಿಯೇ ಶರಣಂ ಅಯ್ಯಪ್ಪ ಎಂದರೆ...ಈಕೆ ಓ ಸಾಮಿಯೇ ಶರಣಂ ಅಯ್ಯಪ್ಪ ಎನ್ನುವಾಗ ಆ ಮುಗ್ಧ ಕರೆಯ ಆಳ ಅಳಿಯುವುದಕ್ಕೆ ಸಾಧ್ಯವಾಗುವುದಿಲ್ಲ. ತುಂಬ ಕಷ್ಟದ ಬದುಕನ್ನು ನಡೆಸುವ ಮಹಿಳೆ ಅಂತ ನೋಡಿದ ತಕ್ಷಣ ಅರಿವಾಗುತ್ತದೆ. ಎಲ್ಲಕ್ಕಿಂತಲೂ ಇಷ್ಟವಾದ ಗುಣ ಎಂದರೆ, ಏನೆ ಬಂದರೂ ಅದನ್ನು ನಗುತ್ತಾ ಸ್ವೀಕರಿಸುವ ಈಕೆಯ ಮುಖಭಾವ  ಆ ಸಮಚಿತ್ತ ನಿಜಕ್ಕೂ ಆಶ್ಚರ್ಯವಾಗುತ್ತದೆ. ಸ್ಥಿತ ಪ್ರಜ್ಞತೆ ವಿದ್ಯೆಯಿಂದ ಶ್ರೀಮಂತಿಗೆಯಿಂದ ಬರುವುದಿಲ್ಲ. ಅದು ಬದುಕಿನ ಅನುಭವದಿಂದ ಬರುತ್ತದೆ. ಆ ಬಗೆಯ ಬದುಕನ್ನು ಸಾಗಿಸಿದವಳು. ಇಷ್ಟೆ ಆದರೆ ಏನು ಅಂತೀರ, ಅಲ್ಲಿಯೂ ಒಂದು ಮುಖ್ಯ ಘಟನೆ ಇದೆ. ನಾವೆಲ್ಲ ಮಲೆ ಏರಿ ದೇವರ ದರ್ಶನ ಮಾಡಿ ಇರುಮುಡಿಯನ್ನು ಅರ್ಪಿಸುವುದಕ್ಕೆ ದೇವಾಲಯದ ಪಕ್ಕದಲ್ಲೇ ಅನ್ನದಾನ ಭವನದಲ್ಲಿ ವ್ಯವಸ್ಥೆ ಮಾಡಿದ್ದರು. ಅಲ್ಲಿಯೇ ಒಂದಷ್ಟು ತಾತ್ಕಾಲಿಕ ವಿಶ್ರಾಂತಿಯೂ ಇದ್ದ ಕಾರಣ ಎಲ್ಲರೂ ಅಲ್ಲಿ ತಂಗಿದ್ದರು. ಎಲ್ಲ ಮುಗಿಸಿ ಮಲೆ ಇಳಿದು ಎಲ್ಲರೂ ಕೆಳಗೆ ಇಳಿದು  ಪಂಪ ಬಳಿಗೆ ಬಂದಾಗ ಈಕೆ ತನ್ನ ಬ್ಯಾಗ್ ನ್ನು ಅನ್ನದಾನ ಮಂಟಪದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಲ್ಲೇ ಮರೆತು ಬಂದಿದ್ದಳು. ಅದರಲ್ಲಿ ಆಕೆಯ ಮೊಬೈಲು ಒಂದಷ್ಟು ನಗದು ಹಣ ವಸ್ತ್ರ ಇನ್ನೂ ಏನೇನು ಇತ್ತೋ ಆಕೆಗೇ ಗೊತ್ತು. 


ಪಂಪೆಯಿಂದ ಸನ್ನಿದ್ಧಾನಕ್ಕೆ ಮಲೆ ಏರುವುದೆಂದರೆ ಅದೊಂದು ದೊಡ್ಡ ಸತ್ವ  ಪರೀಕ್ಷೆ. ಬರಿಗಾಲಲ್ಲಿ ಕಣ್ಣಿಗೆ ನಿಲುಕದ ಗಿರಿಪರ್ವತವನ್ನು ಹತ್ತಬೇಕು. ಸುಡುವ ಬಿಸಿಲಲ್ಲಿ ಬರಿಗಾಲಲ್ಲಿ ಸುಡುವ ನೆಲವನ್ನು ತುಳಿದು ಹತ್ತುವುದೆಂದರೆ ಬಹಳ ಕಠಿಣ. ಸುಮಾರು ನಾಲ್ಕು ಕಿಲೋ ಮೀಟರ್ ದೂರದ ಏರುವ ಹಾದಿ. ಇದಕ್ಕೆ ಕಡಿಮೆ ಎಂದರು ಎರಡು ಘಂಟೆ ತೆಗೆದುಕೊಳ್ಳುತ್ತದೆ.  ಈಗ ಅಲ್ಲಿ ಮೆಟ್ಟಲು ಇನ್ನಿತರ ಸೌಕರ್ಯ ಮಾಡಿದರೂ ಹತ್ತುವುದು ಅಷ್ಟು ಸುಲಭವಲ್ಲ. ಧನಿಕರು ಇದಕ್ಕೆ ಢೋಲಿಯನ್ನು ಮಾಡಿಕೊಂಡರೆ, ಎಲ್ಲರೂ ನಡೆದುಕೊಂಡು  ಹೋಗಿ ಸಾರ್ಥಕತೆಯನ್ನು ಕಾಣುತ್ತಾರೆ. ನಾವು ಐದು ಘಂಟೆಗೆ ಪಂಪೆಯಿಂದ ಏರುವುದಕ್ಕೆ ಆರಂಭಿಸಿದ್ದರಿಂದ ಬಿಸಿಲ ಶಾಖ ಇಲ್ಲದೇ ಇದ್ದರೂ ತುಂಬ ದೇಹಾಯಸವಾಗಿ ಕಾಲು ನೋವು ಎದೆನೋವು ಎಲ್ಲವೂ ಕಣಿಸಿಕೊಂಡಿತ್ತು. ಎಲ್ಲವೂ ಮುಗಿಸಿ ಕೆಳಗೆ ಬಂದಾಗ ಬ್ಯಾಗ್ ಮರೆತು ಬಂದಳೆಂದರೆ ಏನು ಮಾಡಬೇಕು?  ಆಕೆ ಧೃತಿ ಗೆಡಲ್ಲಿಲ್ಲ. ಪುನಃ ಮಲೆ ಹತ್ತಿ ಅನ್ನದಾನ ಮಂಟಪದ ವಿಶ್ರಾಂತಿ ಜಾಗಕ್ಕೆ ಹೋದಾಗ ಆಕೆಯ ಬ್ಯಾಗ್ ಸುರಕ್ಷಿತವಾಗಿ ಆಕೆ ಹೇಗೆ ಇಟ್ಟಿದ್ದಳೋ ಅದೇ ರೀತಿ ಒಂದಿಷ್ಟು ಅಲುಗಾಡದೆ ಹಾಗೆ ಉಳಿದಿತ್ತು. ಅದರಲ್ಲಿ ಮೊಬೈಲ್ ಹಣ ಎಲ್ಲವೂ ಇತ್ತು. ಎಲ್ಲರಿಗೂ ಆಕೆಯ ಮೇಲೆ ಒಂದು ಬಾರಿಗೆ ಸಿಟ್ಟು ಅನುಕಂಪ ಎಲ್ಲವೂ ಬಂದಿರಬಹುದು. ಆದರೆ ಏನು ಮಾಡುವುದಕ್ಕೆ ಸಾಧ್ಯ. ಆಕೆ ನಗುಮುಖವನ್ನೇ ತೋರಿಸುವುದಲ್ಲದೇ ಬೇರೆ ಯಾವ ದುಃಖವನ್ನೂ ನೋವನ್ನು ಪ್ರಕಟಿಸಲಿಲ್ಲ. ನನಗೆ ಅದು ಬಹಳ ಅಚ್ಚರಿಯಾಗಿ ಕಂಡಿತ್ತು. ನಾನಂತೂ ಇಂತಹ ಪರಿಸ್ಥಿತಿಯಲ್ಲಿ  ಪುನಃ ಹೋಗುವ ಧೈರ್ಯವನ್ನು ಮಾಡುತ್ತಿರಲಿಲ್ಲ. ಏನು ಮಾಡುತ್ತಿದ್ದೇನೋ ಗೊತ್ತಿಲ್ಲ. ಮತ್ತೊಂದು ವಿಚಿತ್ರವೆಂದರೆ ಸಾವಿರಾರು ಗಟ್ಟಲೆ ಜನ ಓಡಾಡುವ ಜಾಗ. ಅಲ್ಲಿದ್ದ ಬ್ಯಾಗ್ ಇಟ್ಟ ರೀತಿಯಲ್ಲೇ ಇರಬೇಕೆಂದರೆ, ಅದಕ್ಕೆ ಕಾರಣ ಯಾರು?  ಅಲ್ಲಿದ್ದ ಪೋಲೀಸ್ ಸೆಕ್ಯೂರಿಟಿಯಂತೂ ಖಂಡಿತ ಅಲ್ಲ. ಅದನ್ನು ಸುರಕ್ಷಿತವಾಗಿ ಕಾದುಕೊಂಡ ಆ ಶಕ್ತಿ ಯಾವುದು? ಬೇರೆ ಯಾವುದೂ ಅಲ್ಲ, ಎಲ್ಲರಲ್ಲೂ ಇದ್ದ  ಎಲ್ಲವೂ ನೀನೆ ಎಂಬ ಭಾವವೇ ಅಲ್ಲಿ ರಕ್ಷಣೆಗೆ ಬಂತು. ಮೋಸ ವಂಚನೆ ಎಲ್ಲವನ್ನೂ ಬಿಟ್ಟು ಪರಿಶುದ್ದ ಆತ್ಮವಾಗುವ ಪ್ರಯತ್ನೆವೇ ಅಲ್ಲಿ ರಕ್ಷಣೆ ನೀಡಿತ್ತು. ಒಂದು ಕ್ಷಣಕ್ಕೆ ಆಕೆಯ ಮರೆವಿಗೆ ಸಿಟ್ಟು ಬಂದರೂ ಈ ಘಟನೆಯನ್ನು ನಾನು ಕಂಡ ಬಗೆಯೇ ಬೇರೆ. ಆಕೆಯಿಂದ ಸುಮಾರು ನಾಲ್ಕು ಘಂಟೆಯಷ್ಟು ಪ್ರಯಾಣ ವಿಳಂಬವಾದರೂ ಆಕೆಯ ಸೊತ್ತು ಸುರಕ್ಷಿತವಾಗಿ ಆಕೆಗೆ ಸಿಕ್ಕಿದ್ದು ವಿಶೇಷ ಎನಿಸಿತ್ತು. 


ಯಾತ್ರೆಯುದ್ದಕ್ಕೂ ನಮಗೆ ಮಾರ್ಗದರ್ಶಕರಾಗಿ, ಎಲ್ಲ ಸಹಕಾರವನ್ನು ನೀಡುತ್ತಾ ಜತೆಗೆ ಇದ್ದವರು ಗುರುಸ್ವಾಮಿಗಳಾದ ನಾರಾಯಣ ಸ್ವಾಮಿಯವರು. ಬಹಳ ಶಾಂತ ಸ್ವಭಾವದ ವ್ಯಕ್ತಿ. ಅಯ್ಯಪ್ಪನ ಮೇಲಿನ ಭಕ್ತಿ ಅವರ ಕೃತಿಯಲ್ಲಿ ಕಂಡು ಬರುತ್ತಿತ್ತು. ಪ್ರತಿಯೊಬ್ಬರ ಸಮಸ್ಯೆಗೂ ತಮ್ಮಿಂದಾ ಪರಿಹಾರವನ್ನು ಒದಗಿಸಿ ತಮ್ಮ ಪ್ರಯತ್ನ ಮೀರಿ ಸಹನೆಯಿಂದ ವರ್ತಿಸುತ್ತಿದ್ದರು. ಅಲ್ಲಲ್ಲಿ ಉಪಯುಕ್ತ ಸಲಹೆಗಳನ್ನು ನೀಡುತ್ತಿದ್ದರು. ಎಲ್ಲಕ್ಕಿಂತ ನಾನು ಗಮನಿಸಿದ ಗುಣವೆಂದರೆ, ಊಟವಾಗಲಿ ಉಪಹಾರವಾಗಲೀ ಎಲ್ಲರು ಮುಗಿಸಿದ ನಂತರ ತಾವು ಉಣ್ಣುವುದಕ್ಕೆ ಕುಳಿತುಕೊಳ್ಳುತ್ತಿದ್ದರು. ಪ್ರತಿಯೊಬ್ಬರನ್ನೂ ಸಹನೆಯಿಂದ ಕಾಯುತ್ತಿದ್ದರು. ಪ್ರತಿಯೊಬ್ಬ ಯಾತ್ರಾರ್ಥಿಯ ಕೊನೆಯ ತುತ್ತು ಉಂಡ ಮೇಲೆ ಇವರು ಮೊದಲ ತುತ್ತು ಬಾಯಿಗೆ ಇಡುತ್ತಿದ್ದರು. ಈ ಬದ್ದತೆ ಅತ್ಯಂತ ಶ್ರೇಷ್ಠ ಎನಿಸಿತು. 


ಅಂತೂ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದೆವು. ಮುಖ್ಯವಾಗಿ ನಾನು ದೂರದ ಯಾತ್ರೆ ದೊಡ್ಡ ದೊಡ್ಡ ದೇವಾಲಯಕ್ಕೆ ಹೋಗುವುದನ್ನು ಅಷ್ಟೊಂದು ಇಷ್ಟಪಡುವುದಿಲ್ಲ. ಕಾರಣ, ಸರಿಯಾದ ದರ್ಶನವಾಗುವುದಿಲ್ಲ. ಜನ ಜಂಗುಳಿ ಉದ್ದ ಸರದಿ ಇವುಗಳನ್ನೆಲ್ಲ ನಿಭಾಯಿಸುವುದು ತುಂಬ ಕಷ್ಟವಾಗುತ್ತದೆ. ಮುಕ್ತವಾಗಿ ಪ್ರಾರ್ಧನೆ ಸಾಧ್ಯವಾಗುವಿಲ್ಲ. ಪ್ರತಿಯೊಂದಕ್ಕೂ ಸರದಿ ನಿಲ್ಲುವ ಅನಿವಾರ್ಯತೆ ಇರುತ್ತದೆ. ಸ್ನಾನ ಸಂಧ್ಯಾದಿ ವಂದನೆಗಳು ಸಾಧ್ಯವಾಗುವುದಿಲ್ಲ. ಹಾಗಾಗಿ ಶಬರಿಮಲೆಗೆ ದೀಪಾವಳಿ ಸಮಯದಲ್ಲಿ ಅಂದರೆ ಕಾರ್ತಿಕ ಮಾಸದಲ್ಲಿ ಹೋಗಬೇಕೆಂದುಕೊಂಡಿದ್ದೆ. ಆದರೂ ಬೇಗ ಹೋಗಿ ಬರುವ ಅಂತ ನನ್ನಾಕೆಯ ಒತ್ತಾಸೆಯಿಂದ ವಿಷು ಸಂಕ್ರಮಣದ ಜನದಟ್ಟನೆಯ ಅರಿವಿದ್ದೂ ಇದೇ ಸಮಯದಲ್ಲಿ ಯಾತ್ರೆ ಮಾಡಿ ಬಂದೆವು. ನಿರೀಕ್ಷೆಯಷ್ಟು ಕಷ್ಟವಾಗಲಿಲ್ಲ. ಎಲ್ಲವೂ ಸುಗಮವಾಗಿ ನೆರವೇರಿತು. ದೇವರನ್ನು ಒಂದೆರಡು ಘಳಿಗೆ ನೋಡುವುದಕ್ಕೆ ಮಾತ್ರ ಸಾಧ್ಯವಾದರೂ ಅದೊಂದು ದೊಡ್ಡ ಸಂತೃಪ್ತಿಯನ್ನು ಒದಗಿಸಿದ ಕ್ಷಣವಾಗಿತ್ತು.  ನಿಜಕ್ಕೂ ಪರಮಾತ್ಮನನ್ನು ಹೃದಯದಲ್ಲಿ ದರ್ಶನ ಮಾಡುವ ನನ್ನ ಪ್ರವೃತ್ತಿಯಲ್ಲಿ ಈ ದೇವಾಲಯದ ಮೂರ್ತಿ ದರ್ಶನ ಕೇವಲ ಸಾಂಕೇತಿಕ. ಒಂದು ಭಕ್ತಿ ಗೌರವದ ಪ್ರತೀಕ.   ಇನ್ನು ದೇವರಲ್ಲಿ ನನಗೆ ಬೇಡುವುದಕ್ಕೇ ಏನೂ ಇರುವುದಿಲ್ಲ. ದೇವರ ಮುಂದೆ ನಿಂತಾಗ ಏನು ಬೇಡಬೇಕೆಂಬುದೇ ತಿಳಿಯುವುದಿಲ್ಲ. ಎಲ್ಲವನ್ನು ಒದಗಿಸಬಲ್ಲ ಪರಮಾತ್ಮನಲ್ಲಿ  ಬೇಡುವುದೇನುಂಟು. ನನಗೇನು ಬೇಕೋ ಅದು ಭಗವಂತನಿಗೆ ತಿಳಿದಿದೆ. ನಾನು ಅದು ಕೊಡು ಇದು ಕೊಡು ಎಂದು ಕೇಳಿದರೆ ಆ ಭಗವಂತನಲ್ಲಿ ನನಗೆ ವಿಶ್ವಾಸ ಇಲ್ಲವೇ ಎಂಬ ಅನುಮಾನ ಬಂದು ಬಿಡುತ್ತದೆ. ದೇವರಲ್ಲಿ ಇಂತಹದನ್ನು ಬೇಡುವುದೆಂದರೆ ಆ ದೇವರಲ್ಲಿ ಅವಿಶ್ವಾಸವನ್ನು ಪ್ರಕಟಿಸಿದ ಭಾವ ಉಂಟಾಗುತ್ತದೆ. ಹೇಗಿದ್ದರೂ ನನಗೆ ಕೊಡಬೇಕಾದ್ದನ್ನು ಭಗವಂತ ಕೊಡುತ್ತಾನೆ. ಅದು ಈಗಲೋ ಆಗಲೋ ತಡವಾಗಿಯಾದರೂ ಕೊಡದೆ ಇರಲಾರ. ಒಂದು ವೇಳೆ ಕೊಡಲಿಲ್ಲ ಎಂದಾದರೆ, ಆ ಭಗವಂತನಿಗೆ ಕೊಡುವುದಕ್ಕೆ ಮನಸ್ಸಿಲ್ಲದೇ ಇದ್ದದ್ದು ನನಗೆ ಬೇಡವೇ ಬೇಡ. ನನಗದರ ಅವಶ್ಯಕತೆಯೇ ಇಲ್ಲ. ಹೀಗೆ ಭಾವಿಸಿದಾಗ ಎಲ್ಲವನ್ನೂ ಪಡೆದ ಸಂತೃಪ್ತ ವ್ಯಕ್ತಿಯಾಗುತ್ತೇನೆ. ಇದಕ್ಕಿಂತ ಹೆಚ್ಚಿನದ್ದು ನನಗೇನು ಬೇಕು. ಆ ವಿಶ್ವಾಸ ಒಂದೇ ಸಾಕು. ಆಯ್ಯಪ್ಪ ದರ್ಶನವೂ ಹೀಗೆ. ಆಯ್ಯಪ್ಪನಿಗೆ ಈಯಪ್ಪನ ಮನಸ್ಸು ತಿಳಿದಿದೆ. ಅದನ್ನು ಒದಗಿಸುತ್ತಾನೆ.